ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಇಪ್ಪತ್ತೈದು
ಅಧ್ಯಾಯ ಐವತ್ತೇಳು

ಹನ್ನೆರಡು ಗಂಟೆಗೆ ನಾವು ಕುದುರೆಮುಖದ ಕೊನೆಯೂಟ ಮುಗಿಸಿದೆವು.

ಮಲಗು ಮಗುವೆ! ಮಲಗು
ಕುದುರೆಮೊಗವೆ
ಅಲುಗದಿರು ಅಗಲದಿರು ಇ-
ನ್ನೊಮ್ಮೆ ಬರುವವರೆಗೆ

ಎಂದು ಸಾಮೂಹಿಕ ಗಾನ ಹಾಡಿದೆವು. ಮತ್ತೆ ಅವರೋಹಣ, ಕಡಿಮೆ ಭಾರ. ನ್ಯೂಟನ್ನನ ಸಹಕಾರ, ಸಾಯಂಕಾಲದ ೬ ಗಂಟೆಗೆ ಮೊದಲೇ ನಾವೂರು ಬಂಗ್ಲೆಯ ಸರಹದ್ದು ತಲಪಿದೆವು. ಇಳಿಯುವಾಗಲೂ ಗಂಟೆ ಗಂಟೆಗೆ ಟೀ ತಿಂಡಿಗಳ ಸಮಾರಾಧನೆ, “ಇನ್ನು ಬೇಡ ನಮಗೆ” ಎಂದು ಹುಡುಗರು ಹೇಳುವವರೆಗೂ ಸರದಿ.

ನಾವೂರು ಬಂಗ್ಲೆ ಸಮೀಪವಾದಂತೆ ಕುಶಾಲುತೋಪು ಹೊಟ್ಟಿಸಿದೆವು. ಹೊಗೆ ಬಾಂಬು ಎಸೆದೆವು. ಜಯಕಾರ ಕೂಗಿದೆವು. ನಮ್ಮ ಗೂಡ್ಸ್ ಬಂಡಿಯೀಗ ಏರೋಪ್ಲೇನ್ ವೇಗದಲ್ಲಿ ಮನ್ನುಗ್ಗುತ್ತಿದ್ದುದರಿಂದ ಲೈನು ಮುರಿಯಿತು. ಹಿಂದೆ ಇದ್ದ ನಾನು ಲಗುಬಗೆಯಿಂದ ಕಾಲು ಚಾಚಿ ನಡೆಯುತ್ತಿದ್ದೆ. ಶಿಬಿರ ಸೇರಿದ ಮೇಲೆ ಹುಡುಗರ ಲೆಕ್ಕ ತೆಗೆದುಕೊಳ್ಳಬೇಕಷ್ಟೆ. ಆಗಲೇ ನನ್ನ ಬೆನ್ನನ್ನು ವಿಶ್ವಾಸದಿಂದ ತಡವಿ, “ಅಭಿನಂದನೆಗಳು. ಬಹಳ ಸಂತೋಷ” ಎಂದರು. ಹಿಂತಿರುಗಿ ನೋಡುತ್ತೇನೆ: ಸಾಕ್ಷಾತ್ ದೊರೆಗಳು ಅವತರಿಸಿದ್ದರು! ಅವರ ವಿಶ್ವಾಸದ, ಪ್ರೇಮದ ವಿದ್ಯುದಾಲಿಂಗನದಲ್ಲಿ ನಾವೆಲ್ಲರೂ ಅಯಸ್ಕಾಂತಗಳಾಗಿ ಎಲ್ಲರನ್ನೂ ಆಕರ್ಷಿಸಿದೆವು.

“ಬೆಂಗಳೂರಿಗೆ ಹೋದೆ, ನಿದ್ರೆ ಬರಲಿಲ್ಲ. ತಂದೆಯವರನ್ನು ಪುನಃ ಕೇಳಿದೆ. ‘ಹೋಗಿ ಅವರ ಜೊತೆಯಲ್ಲಿ ತಿರುಗಿ ಬಾ. ಅಲ್ಲಿವರೆಗೂ ನನಗೇನೂ ಆಗುವುದಿಲ್ಲ’ ಎಂದರು. ಬಂದುಬಿಟ್ಟೆ. ನಿಮ್ಮ ಗುರುರಾಜರಾಯರೂ ಬಂದಿದ್ದಾರೆ, ನೋಡಿ ಅವರಿಗೆಷ್ಟು ಪ್ರೇಮ ಹುಡುಗರ ಮೇಲೆ.” ಕರ್ತವ್ಯ, ಸ್ವಹಿತ ಇವುಗಳ ನಡುವೆ ಪೈಪೋಟಿ ಉಂಟಾದಾಗ ಕರ್ತವ್ಯದ ಕಠಿಣ ಮಾರ್ಗ ಅನುಸರಿಸುವುದರಿಂದ ಮಾತ್ರ ಮಹಾಕಾರ್ಯ ಸಾಧ್ಯ. ಅವರೇ ನಿಜವಾದ ಧುರೀಣರು. ಅವರು ಬಂದುದರಿಂದ ಅಭಿಮಾನದ ಸೌಧಕ್ಕೆ ಗೋಪುರವಿಟ್ಟಂತಾಯಿತು. ಅವರೊಡನೆ ಪ್ರೊ. ಗುರುರಾಜರಾಯರು ಬಂದದ್ದು, ಪ್ರಿನ್ಸಿಪಾಲ್ ಉಮರ್ಜಿಯವರ ಶುಭಾಶಯ ತಂದದ್ದು ನಮಗೆ ಬಲು ಹೆಮ್ಮೆಯ ಮತ್ತು ಸಂತಸದ ಸಂಗತಿ.

ನಿಸಾರ್ ಮತ್ತು ಸ್ವಾಮಿ – ನಾವೂರಾಧಿಪತಿಗಳು ನಮ್ಮ ವಿಶಿಷ್ಟಾವಶ್ಯಕತೆಗಳನ್ನೂ ಪೂರೈಸಿದ್ದರು. ಇಂಥ ಒಂದು ಸಾಹಸದಲ್ಲಿ ಎಲ್ಲರಿಗೂ ಶಿಖರ ಸೇರುವುದು ಸಾಧ್ಯವಿಲ್ಲ. ಬೇರೆ ಹೊಣೆಗಾರಿಕೆ ಹೊತ್ತವರು ಅವುಗಳಿಂದ ಬಂಧಿತರಾಗಿ ನಿಲ್ಲಬೇಕಾಗುತ್ತದೆ. ಮೇಲೆ ಬಂದು, ನಮಗಿಂತೆಲ್ಲ ಚೆನ್ನಾಗಿ ಸೃಷ್ಟಿ ಸೌಂದರ್ಯ ನೋಡಿ ಅನುಭವಿಸಿ ಸಂತೋಷಪಡಲು ಅರ್ಹತೆಯಿದ್ದ ಈ ಮಿತ್ರರು ಮಾಡಿದ ತ್ಯಾಗ ಸಾಮಾನ್ಯವಾದದ್ದಲ್ಲ.

ಆ ರಾತ್ರಿ ನಾವು ನಿದ್ರಿಸಲಿಲ್ಲ: ಹಾಡಿದ್ದು, ಕುಣಿದದ್ದು, ವನಭೋಜನ ಉಂಡದ್ದು, ಮರುದಿವಸದ ಧರ್ಮಸ್ಥಳದ ಕಾಲ್ನಡಿಗೆಯ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿದ್ದು. . . ಮರುದಿನ – ೧೮ನೆಯ ತಾರೀಕು, ಶಿಬಿರದ ಎಂಟನೆಯ ದಿವಸ – ಡೇರೆಗಳನ್ನು ಕಿತ್ತು ಪ್ಯಾಕ್ ಮಾಡಿದಾಗ, ಗಂಟು ಮೂಟೆಗಳನ್ನು ಲಾರಿಯಲ್ಲಿ ಓರಣವಾಗಿ ಜೋಡಿಸಿಟ್ಟಾಗ, ಕೊನೆಯ ಟೀ ತಿಂಡಿ ಸೇವಿಸಿ ನಾವೂರು ಬಂಗ್ಲೆಯಿಂದ ಹೊರಟಾಗ, ಕುದುರೆಮುಖದ ನೆರಳಿನಿಂದ ದೂರ ದೂರ ಸರಿದಾಗ, ಮನಸ್ಸಿನಲ್ಲಿ ಮೂಡಿದ ಹಿರಿಯ ಭಾವ ಕೃತಜ್ಞತೆ, ಸಮರ್ಪಣ ಭಾವ. ಬಂಗ್ಲೆಯ ಆವರಣದ ಚೂತವನಕ್ಕಾಗಮಿಸಿದ್ದ ಚೈತ್ರ ಮಾಸವಿನ್ನೆಂದು ಪುನರಾಗಮಿಸುವುದೋ?

ಸಾಗರಂ ಸಾಗರೋಪಮಂ
ಅಧ್ಯಾಯ ಐವತ್ತೆಂಟು

೧೪ ಮಾರ್ಚ್ ೧೯೬೭, ಕಾಲೇಜಿನಲ್ಲಿ ಅತಿ ಸಂಭ್ರಮದ ದಿವಸ. ವಿಶ್ವವಿದ್ಯಾಲಯದ, ಕಾಲೇಜಿನ, ಎನ್‌ಸಿಸಿಯ ಇತಿಹಾಸದಲ್ಲಿ ಅಂದು ‘ಕುದುರೆಮುಖ ದಿವಸ.’ ಆ ವೀರರಿಗೆ ಪದವೀಪ್ರದಾನ ಮಾಡುವ ಶುಭ ದಿವಸ. ತುಂಬಿದ ಸಭೆಯ ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಆರ್.ಆರ್. ಉಮರ್ಜಿಯವರು ವಹಿಸಿದ್ದರು. ಪದವೀಪ್ರದಾನ ಮಾಡಲು ಮುಖ್ಯ ಅತಿಥಿಗಳಾಗಿ ಕುಲಪತಿ ವಿ.ಕೆ ಗೋಕಾಕರು ದಯಮಾಡಿಸಿದ್ದರು. ಮಾಜಿ ಕುಲಪತಿ ಟಿ.ಆರ್ ಜಯರಾಮನ್, ಎನ್‌ಸಿಸಿ ಡೈರೆಕ್ಟರ್ ಏರ್ ಕಮ್ಮೊಡೋರ್ ಎಸ್.ಕೆ. ಭಕ್ಷಿ ಮೊದಲಾದ ಸೇನಾಗಣ್ಯರು ಉಪಸ್ಥಿತರಿದ್ದರು. ಡಾಕ್ಟರ್ ಗೋಕಾಕರು ತಮ್ಮ ಕವಿವಾಣಿಯಿಂದ ಕುದುರೆಮುಖ ಸಾಹಸಕ್ಕೆ ಒಂದು ನೂತನ ಆಯಾಮ ನೀಡಿದರು, “ನಿಮ್ಮ ಸಾಹಸದ ಇತಿಹಾಸ ಒಂದು ಸುಂದರ ಕಾವ್ಯದಂತಿದೆ. ಎಲ್ಲಿ ಶ್ರದ್ಧಾಸಕ್ತಿಯುತ ಪರಿಶ್ರಮವಿದೆಯೋ ಅಲ್ಲಿ ಸೌಂದರ್ಯವಿದೆ. ವಿದ್ಯಾರ್ಥಿ ಜೀವನದ ಈ ನೂತನಾಧ್ಯಾಯವನ್ನು ನೀವು ಬರೆದು ಪುಸ್ತಕ ರೂಪದಲ್ಲಿ ತಂದರೆ ಅದನ್ನು ವಿಶ್ವವಿದ್ಯಾಲಯ ಸಂತೋಷದಿಂದ ಪ್ರಕಟಿಸುವುದು.

“ಬೆಟ್ಟವನ್ನೇರಿದ್ದೀರಿ. ಅಡೆತಡೆಗಳನ್ನು ನಿವಾರಿಸಿ ಹತ್ತಿದ್ದೀರಿ. ಮೇಲೆ ಹೋದಂತೆ ನಿಮ್ಮ ದೃಷ್ಟಿ ದಿಗಂತ ವಿಸ್ತಾರವಾಗುವುದು. ಜೀವನದ ಪ್ರತಿ ರಂಗದಲ್ಲಿಯೂ ಹೀಗೆಯೇ. ರಸಾಯನ ವಿಜ್ಞಾನದಲಿ ಒಂದು ಸಂಶೋಧನೆ ನಡೆಸುವಾಗ, ಗಣಿತದಲ್ಲಿ ಒಂದು ಸಮೀಕರಣ ಬಿಡಿಸುವಾಗ ಎದುರಾಗುವ ಜಟಿಲ ಸಮಸ್ಯೆಗಳು ಅವೆಷ್ಟೋ. ಅವನ್ನು ಬಗೆಹರಿಸಿಕೊಂಡು ಮುಂದುವರಿದರೆ ನೀವು ಕೃತಕೃತ್ಯರಾಗುತ್ತೀರಿ. ಜ್ಞಾನ ಶಿಖರ ತಲಪುತ್ತೀರಿ. ಇಲ್ಲಿಯೂ ಹಾಗೆಯೇ.

“ನಿಮ್ಮ ಈ ಮಹಾಸಾಧನೆ straight from the horse’s mouth ಎಂಬಂತೆ ಕುದುರೆಮುಖದಿಂದಲೇ ಬಂದಿರುವ ಈ ಸಾಹಸದ ವರ್ಣನೆ ನಮಗೆಲ್ಲ ಹೆಮ್ಮೆ ತಂದಿದೆ. ನೀವು ಮುಂದೆಯೂ ಇಂಥ ಸಾಹಸ ನಡೆಸಬೇಕು. ವಿಶ್ವವಿದ್ಯಾಲಯಕ್ಕೆ, ದೇಶಕ್ಕೆ ಕೀರ್ತಿ ತರಬೇಕು.” “ಕಾಲೇಜಿನ ಪ್ರಗತಿಯಲ್ಲಿ ಕುದುರೆಮುಖ ಸಾಹಸ ಬಲು ದೊಡ್ಡ, ದಿಟ್ಟ ಹೆಜ್ಜೆ. ನಿಮ್ಮ ಈ ಸ್ತುತ್ಯರ್ಹ ಕಾರ್ಯ ಕಾಲೇಜಿಗೂ ನನಗೂ ಬಹಳ ಸಂತೋಷ ನೀಡಿದೆ. ಕಾಲೇಜು ಸದಾ ನಿಮ್ಮ ಬೆಂಬಲಕ್ಕಿದೆ” ಎಂದು ಪ್ರೊ. ಆರ್.ಆರ್. ಉಮರ್ಜಿ ಹರಸಿದರು.

ಚಾರಣಿಗರೆದುರಿನಲಿ ತೆರೆದಿಹವು ನೂರೆಂಟು
ದಾರಿಗಳು ಕಡು ಕಠಿಣವಾದುದನ್ನಾಯುವನು
ಧೀರ, ಗುರಿ ಸೇರಿದೊಡೆ ನವಮಾರ್ಗವೊದಗುವುದು
ಸೇರದಿರೆ ಸಾಹಸಕೆ ಚ್ಯುತಿಯುಂಟೆ? ಅತ್ರಿಸೂನು||

ಗಣಿತ ವಿಭಾಗ: ಕಾಲೇಜಿನೊಳಗಿನ ಜೇನುಗೂಡು
ಅಧ್ಯಾಯ ಐವತ್ತೊಂಬತ್ತು

೧೯೬೦ರ ದಶಕಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿತು. ಇದರ ಆಡಳಿತ ಕಚೇರಿ ನಮ್ಮ ಕಾಲೇಜ್ ಎದುರಿಗಿದ್ದ ಸೆಂಟ್ರಲ್ ಕಾಲೇಜಿನ ವಿಶಾಲ ಹರವಿನ ಒಂದು ಭವ್ಯ ಸೌಧದಲ್ಲಿತ್ತು. ಆಧುನಿಕ ಕನ್ನಡದ ಹಿರಿಚೇತನ ಮತ್ತು ಇಂಗ್ಲಿಷ್ ವಿದ್ವಾಂಸ ವಿ.ಕೃ. ಗೋಕಾಕರು (ಪ್ರಾಯಶಃ ೧೯೬೬ರ ವೇಳೆಗೆ) ಇದರ ಕುಲಪತಿಗಳಾಗಿ ನೇಮನಗೊಂಡರು. ಆಗ ಕನ್ನಡದಲ್ಲಿ ಕಾಲೇಜ್ ಪಠ್ಯಪುಸ್ತಕಗಳನ್ನು ವಿಶ್ವವಿದ್ಯಾಲಯ ಪ್ರಕಟಿಸುವ ವಿಷಯ ಬಿಸಿ ಬಿಸಿ ಚರ್ಚೆಯ ವಸ್ತು. ವಿಜ್ಞಾನ ಪಠ್ಯಪುಸ್ತಕಗಳನ್ನು ಬರೆಯುವವರು ಯಾರು? ಅವು ಯಾರಿಗೆ ಬೇಕಾಗಿವೆ? ಪ್ರಕಾಶಕರೆಲ್ಲಿ? ಕಾಲೇಜ್ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಿರುವಾಗ ಇವುಗಳಿಗೆ ಬೇಡಿಕೆ ಇದೆಯೇ? ಇಂಥ ಪ್ರಶ್ನೆಗಳು ಸಾಕಷ್ಟು ರಾಜಕೀಯ ಮತ್ತು ಜಾತೀಯ ರಂಗು ಕೂಡ ಪಡೆದು ಜನಮನಗಳಿಗೆ ಕ್ಷೆಭೆ ಉಂಟುಮಾಡಿದ್ದುವು.

ಕನ್ನಡದ ಅಭಿವೃದ್ಧಿ ಬಗ್ಗೆ ತೀವ್ರ ಕಳಕಳಿಯಿದ್ದ ಕುಲಪತಿಗಳು ವಿಶ್ವವಿದ್ಯಾಲಯದ ಎಲ್ಲ ವಿಜ್ಞಾನಾಧ್ಯಾಪಕರ ಸಭೆ ಏರ್ಪಡಿಸಿ “ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ತರಗತಿಗಳಿಗೆ, ಮುಖ್ಯವಾಗಿ ವಿಜ್ಞಾನ ವಿಭಾಗಗಳಲ್ಲಿ, ವಿಶ್ವವಿದ್ಯಾಲಯವೇ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಪ್ರಕಟಿಸಲಿದೆ” ಎಂಬ ಹೇಳಿಕೆ ಘೋಷಿಸಿದರು. ವಿಶ್ವವಿದ್ಯಾಲಯದ ಗಣಿತ ಮುಖ್ಯಸ್ಥ ಎಫ಼್.ಜೆ. ನರೊನ್ನಾ ಇದಕ್ಕೆ ದನಿಗೂಡಿಸಿ, “ಪಿಯುಸಿ ಗಣಿತ ಪಠ್ಯಪುಸ್ತಕವನ್ನು ದ್ವಿಭಾಷಿಕವಾಗಿ ರಚಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ” ಎಂದು ಆಶ್ವಾಸಿಸಿದರು ಕೂಡ. ಇವೆಲ್ಲ ಸಂಗತಿಗಳೂ ಪತ್ರಿಕೆಗಳ ಮೂಲಕ ನನಗೆ ತಿಳಿದುಬಂದುವು (೧೯೬೭ರ ಆರಂಭ).

ಅದೇ ಸಂಜೆ ನರೊನ್ನಾರಿಂದ ನನಗೆ ಬುಲಾವ್ ಬಂದಿತು. ಅವರೆಂದರು, “ನಮ್ಮ ವಿಭಾಗದ ವತಿಯಿಂದ ಒಂದು ಪಠ್ಯಪುಸ್ತಕ ಸಮಿತಿಯನ್ನು ರಚಿಸಿದ್ದೇವೆ. ಇದರ ಒಬ್ಬ ಸದಸ್ಯರಾಗಿ ನಿಮ್ಮನ್ನು ಆಹ್ವಾನಿಸಬೇಕೆಂದು ಸಿಎನ್‌ಎಸ್ ಅವರು ಒತ್ತಾಯಿಸಿದ್ದಾರೆ. ಅವರಿಗೆ ನಿಮ್ಮ ಪರಿಚಯ ಹೇಗೆ? ನೀವು ಅವರ ಒಬ್ಬ ಮಾಜಿ ವಿದ್ಯಾರ್ಥಿಯೇ?”
ನನಗೆ ರೋಮಾಂಚನವಾಯಿತು. ಅಂತಾರಾಷ್ಟ್ರೀಯ ಖ್ಯಾತಿವೇತ್ತ ಡಾಕ್ಟರ್ ಸಿ.ಎನ್.ಶ್ರೀನಿವಾಸ ಅಯ್ಯಂಗಾರ್ ಎಂಬ ಗಣಿತ ಪ್ರಚಂಡರಿಗೆ ನನ್ನ ಇರವು ಹೇಗೆ ಗೊತ್ತು? ನಾನು ಓದಿದ್ದು ಮದ್ರಾಸಿನಲ್ಲಿ, ಅವರು ಸೇವೆ ಸಲ್ಲಿಸಿ ನಿವೃತ್ತರಾದದ್ದು ಮೈಸೂರು ಸಂಸ್ಥಾನದಲ್ಲಿ. ನಾನೇನೂ ಸಂಶೋಧನೆ ಮಾಡಿರಲಿಲ್ಲ, ನಾವಿಬ್ಬರೂ ಎಂದೂ ಭೇಟಿ ಆಗಿರಲಿಲ್ಲ — ಆದರೂ ಅವರು ನನ್ನ ಹೆಸರು ಸೂಚಿಸಿದ್ದಾರೆ! ಇದರ ರಹಸ್ಯವೇನು?

ಮೊದಲ ಸಭೆ. ಸಕಾಲದಲ್ಲಿ ಹಾಜರಾದೆ. ಸಿಎನ್‌ಎಸ್‌ರನ್ನು ನೋಡಲು ನಾನೆಷ್ಟು ಉತ್ಸುಕನಾಗಿದ್ದೆನೋ ಅಷ್ಟೇ ಕುತೂಹಲಿ ಅವರೂ ಆಗಿದ್ದರು ನನ್ನನ್ನು ಕಾಣಲು. ಅರುವತ್ತು ದಾಟಿದ್ದ ಆ ಜ್ಞಾನ ವಯೋವೃದ್ಧ ಗಣಿತಮೇರುವನ್ನು ಕಂಡಾಗ ನನ್ನಲ್ಲಿ ಮೊಳೆತದ್ದು ಪೂಜ್ಯಭಾವ, ಭಯವಲ್ಲ. ನನ್ನ ಎರಡೂ ಕೈಗಳನ್ನು ಗಾಢವಾಗಿ ಹಿಡಿದುಕೊಂಡು, “ಇನ್ನು ನಮ್ಮ ಕೆಲಸ ಸಕಾಲದಲ್ಲಿ ಸುಂದರವಾಗಿ ಆಗಿಯೇ ಆಗುತ್ತದೆ” ಎಂದು ಉದ್ಗರಿಸಿದರು! ಮುಂದುವರಿಯುತ್ತ ಅವರೇ ವಿವರಣೆ ಕೂಡ ನೀಡಿದರು, “ನೀವು ಪ್ರಕಟಿಸುತ್ತಿರುವ ಜನಪ್ರಿಯ ವಿಜ್ಞಾನ ಲೇಖನಗಳನ್ನು ‘ಕಸ್ತೂರಿ,’ ‘ಸಂಯುಕ್ತಕರ್ನಾಟಕ,’ ‘ಪ್ರಜಾವಾಣಿ,’ ‘ಸುಧಾ’ ಮುಂತಾದ ಪತ್ರಿಕೆಗಳಲ್ಲಿ ಆಸಕ್ತಿಯಿಂದ ಓದಿ ನಿಮ್ಮ ಬಗೆಗಿನ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿದ್ದೇನೆ.”

೧೯೬೭-೬೮ರ ಶೈಕ್ಷಣಿಕ ವರ್ಷಾರಂಭದಲ್ಲೇ ಪಿಯುಸಿ ಗಣಿತಪಠ್ಯ ಪ್ರಕಟವಾಯಿತು. ಇದರಲ್ಲಿ ಇಂಗ್ಲಿಷ್ ಪಾಠ ಎಡಪುಟಗಳಲ್ಲಿಯೂ ಸಂವಾದೀ ಕನ್ನಡ ಪಾಠ ಬಲಪುಟಗಳಲ್ಲಿಯೂ ಮುದ್ರಣವಾಗಿತ್ತು. ಗಣಿತ ಪರಿಕಲ್ಪನೆಗಳ ವ್ಯಾಖ್ಯೆಯಲ್ಲಿ ಸ್ಪಷ್ಟತೆ, ಪಾರಿಭಾಷಿಕ ಪದಗಳ ಬಳಕೆಯಲ್ಲಿ ಶಿಷ್ಟತೆ ಹಾಗೂ ಶೈಲಿಯಲ್ಲಿ ಲವಲವಿಕೆ ತರಲು ಸಮಿತಿಯ ಸದಸ್ಯರೆಲ್ಲರೂ ಪ್ರತಿ ದಿನವೂ ಸಿಎನ್‌ಎಸ್‌ಅವರ ಸಮಕ್ಷಮ ಚರ್ಚಿಸಿ ಮುನ್ನಡೆದೆವು. ಆ ಮೊದಲೇ ಮುದ್ರಣಕಾರ್ಯದಲ್ಲಿ ಸಾಕಷ್ಟು ಅನುಭವ ಗಳಿಸಿದ್ದ ನಾನು ಮುದ್ರಣಾಲಯ-ಸಮಿತಿ ಸದಸ್ಯರ ನಡುವಿನ ಸೇತುವೆಯೂ ಮುಖ್ಯ ಕರಡು ತಿದ್ದಕನೂ ಆದೆ.

೧೯೬೫ರ ಮಾರ್ಚಿಯಲ್ಲಿ ನಾನು ಬೆಂಗಳೂರು-ನಿವಾಸಿಯಾದದ್ದು ಸರಿಯಷ್ಟೆ. ಆಕಾಶಯುಗದ ಉಷಃಕಾಲವದು. ಯಾವುದೇ ಕ್ಷಣದಲ್ಲಿ ಮಾನವ ಚಂದ್ರನ ಮೇಲೆ ಕಾಲಿಡಬಹುದು ಎಂದು ಇಡೀ ಪ್ರಪಂಚ ನಿರೀಕ್ಷಿಸುತ್ತಿದ್ದ ದಿನಗಳವು. ಇನ್ನು ಆಕಾಶವಿಜ್ಞಾನ ನನ್ನ ಪರಮಾಸಕ್ತಿಯ ವಿಷಯ. ಎಂದೇ ಅಂದು ನಾನು ಆಕಾಶಯಾನ, ನಕ್ಷತ್ರಲೋಕ, ಈ ಕ್ಷೇತ್ರಗಳಲ್ಲಿಯ ವಿಜ್ಞಾನಿಗಳ ಜೀವನಚಿತ್ರ ಮುಂತಾದವುಗಳ ಬಗ್ಗೆ ವಿಪುಲವಾಗಿ ಕನ್ನಡದಲ್ಲಿ ಲೇಖನಗಳನ್ನು ಬರೆಯುತ್ತಿದ್ದೆ, ಗ್ರಾಮೀಣ ಪ್ರದೇಶಗಳಿಗೆ ಹೋಗಿ ಭಾಷಣಗಳನ್ನೂ ಮಾಡುತ್ತಿದ್ದೆ. ಅಲ್ಲದೇ ಶಿವರಾಮ ಕಾರಂತರು ‘ವಿಜ್ಞಾನಪ್ರಪಂಚ’ದ ನಾಲ್ಕು ಬೃಹತ್ಸಂಪುಟಗಳನ್ನು ಕನ್ನಡದಲ್ಲಿ ಬರೆದು ಮುದ್ರಣಕ್ಕೆ ಸಿದ್ಧಪಡಿಸುತ್ತಿದ್ದ ದಿನಗಳಂದು (೧೯೫೯-೬೪) ಅವರ ಬಗೆಗಿನ ಗೌರವದಿಂದ (ನನ್ನ ತಂದೆಯವರ ಸಹಪಾಠಿಯಾಗಿ ಕಾರಂತರು ನಮ್ಮ ಕುಟುಂಬ ಮಿತ್ರರಾಗಿದ್ದರು) ಮತ್ತು ಈ ವಿನೂತನ ಮಹಾಸಾಹಸದ ಬಗೆಗಿನ ಅಭಿಮಾನದಿಂದ, ಖುದ್ದು ನನ್ನ ಅಪೇಕ್ಷೆ ಮೇರೆಗೆ, ಅವರ ಒಬ್ಬ ಆಪ್ತ ಸಹಾಯಕನಾಗಿ ಕೆಲಸಮಾಡಿ ಅಪಾರ ಅನುಭವ ಕೂಡ ಗಳಿಸಿದ್ದೆ. ಸಿಎನ್‌ಎಸ್‌ರಂಥ ಹಿರಿ ಚೇತನ ಎಲ್ಲ ರೀತಿಗಳಲ್ಲಿಯೂ ಕಿರಿಯನಾಗಿದ್ದ ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ಅವರ ಔದಾರ್ಯಕ್ಕೆ ಹಿಡಿದ ಕನ್ನಡಿ — “ಕರುಣೆಗೊಂದು ಕೋಡವನ್ ಎದೆಯೊಲುಮೆಗೆ ತಾಣವನ್” (ಕುವೆಂಪು).

ಆರ್. ಗುರುರಾಜರಾವ್ ನಮ್ಮ ಇಲಾಖೆಯ ಮುಖ್ಯಸ್ಥರು. ಬಹುಮುಖ ವ್ಯಕ್ತಿತ್ವದ ಹಿರಿಯರಿವರು: ಗಣಿತಪಟು, ಉತ್ತಮ ಬೋಧಕ, ಆಡಳಿತೆಯಲ್ಲಿ ಪ್ರಾಂಶುಪಾಲರ ಬಲಗೈ, ಆಡಳಿತೆಯ ಜಟಿಲತೆಗಳನ್ನು ಲೀಲಾಜಾಲವಾಗಿ ಪರಿಹರಿಸಬಲ್ಲ ಕುಶಲಿ, ಎಲ್ಲಕ್ಕೂ ಮಿಗಿಲಾಗಿ ಸಹೃದಯ. ಆಗ ಮಧ್ಯವಯಸ್ಕನಾಗಿದ್ದ ನನಗಿವರು ಹಿರಿಯಣ್ಣ, ಹೊಸತಾಗಿ ಸೇವೆಗೆ ಸೇರಿದ ಟಿ. ಶ್ರೀವೆಂಕಟರಮಣ, ಟಿ.ಪಿ. ಸುಬ್ಬ ಪಕ್ಕಾಲ, ಎಂ.ಕೆ. ಇಂದಿರಾದೇವಿ ಮೊದಲಾದವರಿಗೆ ಮಾರ್ಗದರ್ಶಕ. ಇಲಾಖೆಯಲ್ಲಿ ಒಟ್ಟು ಸುಮಾರು ೧೦ ಮಂದಿ ಉಪನ್ಯಾಸಕರಿದ್ದೆವು.

ದಿನಾಂಕ ೩೧-೩-೧೯೬೫ರಂದು ನಾನು ರಾಯರ ಮುಂದೆ ಮೊದಲ ಬಾರಿಗೆ ಅಧಿಕೃತವಾಗಿ ಹಾಜರಾದೆ. ಮುಂದಿನ ಶೈಕ್ಷಣಿಕ ವರ್ಷ (೧೯೬೫-೬೬) ನನಗೆ ನಿಗದಿಸಲಾಗಿರುವ ತರಗತಿ-ಪಾಠ ವಿವರಗಳು ಬೇಕೆಂದು ಕೋರಿದೆ. “ಎರಡನೆಯ ಮೇಜರ್ ಗಣಿತ ತರಗತಿಯ ಬಿ ವಿಭಾಗದ ವಿದ್ಯಾರ್ಥಿಗಳು ತುಂಟರು, ಸಿ ವಿಭಾಗದವರು ನಿರಾಸಕ್ತರು. ಇವರಿಗೆ ಸ್ಟ್ಸ್ಯಾಟಿಕ್ಸ್, ಡೈನಮಿಕ್ಸ್ ಮತ್ತು ಅಸ್ಟ್ರಾನಮಿ ಎಂಬ ಉಕ್ಕಿನ ಕಡಲೆಗಳನ್ನು ಪಾಠಮಾಡಬಲ್ಲಿರಾ?”

“ನೀವು ‘ಮಾಡಬಲ್ಲಿರಾ’ ಎಂದು ಕೇಳಬಾರದು, ‘ಮಾಡಿ’ ಎನ್ನಬೇಕು. ಅಂಥ ಮಕ್ಕಳೇ ನನಗೆ ಬಲು ಪ್ರೀತಿಯವರು. ಇನ್ನು ಆ ವಿಷಯಗಳಂತೂ ನನಗೆ ಬಲು ಪ್ರಿಯವಾದವು.” ನಾವು ಭಾರತೀಯರು ಪ್ರೀತಿಸಿ ಮದುವೆಯಾಗುವುದಲ್ಲ, ಮದುವೆಯಾಗಿ ಪ್ರೀತಿಸುವುದು. ಎಂದೇ ನಮ್ಮ ಕುಟುಂಬಗಳು ವಿವಾಹವಿಚ್ಛೇದನವನ್ನು ಎದುರಿಸುವುದು ವಿರಳಾತಿವಿರಳ. ನನ್ನದು ಇದೇ ತತ್ತ್ವ ವೃತ್ತಿ ಕುರಿತಂತೆ ಕೂಡ. ಜೂನ್ ಆಖೈರಿನಲ್ಲಿ ಆ ತರಗತಿಗಳನ್ನು ನಾನು ಮೊದಲ ಬಾರಿಗೆ ಭೇಟಿ ಆದಾಗ ಗುರುರಾಜರಾಯರ ವಿವರಣೆ ನಿಜವೆಂಬುದು ಗೊತ್ತಾಯಿತು. ಅವರೆಲ್ಲರೂ ತೀಕ್ಷ್ಣ ಮತಿಗಳು, ಮಾಮೂಲೀ ಪಾಠಗಳು ಅವರಿಗೆ ಹಿಡಿಸುತ್ತಿರಲಿಲ್ಲ, ಹೀಗಾಗಿ ಮೇಷ್ಟ್ರುಗಳನ್ನು ಗೋಳುಹೊಯ್ದುಕೊಳ್ಳುತ್ತಿದ್ದರು ಎಂಬುದು ಶೀಘ್ರದಲ್ಲಿ ಅರಿವಿಗೆ ಬಂತು. ತದನುಗುಣವಾಗಿ ಬೋಧನ ಕ್ರಮವನ್ನು ಮಾರ್ಪಡಿಸಿದೆ ಸುಹಾಸ ಮತ್ತು ಗಣಿತ ಪರಿಕಲ್ಪನೆಗಳ ಇತಿಹಾಸ ಸಹಿತ. ಮೂರನೆಯ ದಿನದಿಂದ ಅವರೆಲ್ಲರೂ ನನ್ನ ನೆಚ್ಚಿನ ಬಂಟರಾದರು. ಅನೇಕರು ಗಣಿತದ ವಿವಿಧ ಪ್ರಕಾರಗಳಲ್ಲಿ ಉನ್ನತ ಸಂಶೋಧನೆ ಮಾಡಲು ಕೂಡ ಹೋದರು.

ಬಿಎ ವಿದ್ಯಾರ್ಥಿಗಳಿಗೆ ಜನರಲ್ ಸೈನ್ಸ್ ಎಂಬ ವಿಷಯ ಕಡ್ಡಾಯವಾತ್ತು. ಸಾಧಾರಣವಾಗಿ ಆರ್ಟ್ಸ್ ಮತ್ತು ಕಾಮರ್ಸ್ ವಿದ್ಯಾರ್ಥಿಗಳು ಮಾಮೂಲೀ ತರಗತಿ ಶಿಸ್ತಿಗೆ ಮಣಿಯುವವರಲ್ಲ. ಜೊತೆಗೆ ಈ ಜನರಲ್ ಸೈನ್ಸ್ ಎಂಬ ವೃಥಾ ಹೊರೆಯನ್ನು ಸರ್ವಥಾ ಇಷ್ಟಪಡದವರು. ವಿಜ್ಞಾನ ಅಧ್ಯಾಪಕರೇ ಆ ಪಾಠಗಳನ್ನು ಬೋಧಿಸಬೇಕಾಗಿತ್ತು. ಯುವ ಉಪನ್ಯಾಸಕರಿಗೆ ಆ ಕ್ಲಾಸುಗಳು ಸಿಂಹ ಸ್ವಪ್ನಗಳಾಗಿರುತ್ತಿದ್ದುವು. ಇಂಥ ‘ರೌಡಿ’ಗಳ ತರಗತಿಗೆ ನನ್ನನ್ನು ಖಗೋಳ ವಿಜ್ಞಾನದ ಮೂಲಪಾಠಗಳನ್ನು ಕಲಿಸಲು ನಿಯೋಜಿಸಿದರು.

ಸುಮಾರು ೬೦ ಮಂದಿ ಒಲ್ಲದ ವಿದ್ಯಾರ್ಥಿಗಳ ಗಡಣ, ಅವರಿಗೆ ಬೇಡವಾದ ವಿಷಯದ ಬಗ್ಗೆ ಅರ್ಥವಾಗದ ಭಾಷೆಯಲ್ಲಿ (ಇಂಗ್ಲಿಷ್) ತಿಳಿಯಹೇಳಲು ನಾನು! ನೇರ ಕನ್ನಡದಲ್ಲಿ ಒಂದು ಕತೆ ಹೇಳಿದೆ. “ಇರುಳ ಆಗಸದಲ್ಲಿ ಮಿನುಗುವ ಅರಿಲುಗಳ ಸಂಖ್ಯೆ ಎಷ್ಟು?” ಮಂತ್ರಿ ಬೀರಬಲನಿಗೆ ಅರಸ ಅಕ್ಬರ್ ಹಾಕಿದ ಪ್ರಶ್ನೆ. “ಈ ರಾತ್ರಿ ಪೂರ್ತಿ ಎಣಿಸಿ ನಾಳೆ ಬೆಳಗ್ಗೆ ತಮಗೆ ಅರಿಕೆ ಮಾಡುತ್ತೇನೆ, ಪ್ರಭು!” ಬೀರಬಲ್ ಅಂದು ರಾತ್ರಿ ತುಸು ಬೇಗನೆ ಮಲಗಿ ಮರುಮುಂಜಾನೆ ತಡವಾಗಿ ಎದ್ದು ಆಸ್ಥಾನಕ್ಕೆ ಸಕಾಲದಲ್ಲಿ ಹೋದ. ಆತನ ಹಿಂದೆ ನಾಲ್ವರು ಪಟುಭಟರು ಹಿರಿಭಾರದ ಭಾರೀಮೂಟೆ ಹೊತ್ತು ತಂದು ದರ್ಬಾರಿನಲ್ಲಿ ಭಯಭಕ್ತಿ ಸಹಿತ ಪ್ರತಿಷ್ಠಾಪಿಸಿದರು. “ನಕ್ಷತ್ರಸಂಖ್ಯೆ ಬಲು ಹಿರಿದು, ಮಹಾರಾಜ! ಅದನ್ನು ಈ ಮೂಟೆಯೊಳಗೆ ಹಿಡಿದಿಟ್ಟಿದ್ದೇನೆ. ತಾವೇ ಪರಾಂಬರಿಸೋಣವಾಗಲಿ” ಬೀರಬಲ್ ವಿವರಣೆ ನೀಡಿದ. ಹಾಗೆ ಮಾಡಿದಾಗ ರಾಜ ಕಂಡದ್ದೇನು? ತುಂಬಿ ಬಿರಿವ ಮರಳ ಕಣಗಳ ನಿಬಿಡ ರಾಶಿ! ಕಣಗಳ ಎಣಿಕೆ ಹೇಗೆ ಅಸಾಧ್ಯವೋ ನಕ್ಷತ್ರಗಳ ಎಣಿಕೆ ಕೂಡ ಹಾಗೆ ಎಂಬುದು ಧ್ವನಿ.

ಬಿಎ ಕ್ಲಾಸಿನ ‘ರೌಡಿ’ಗಳು ಮಂತ್ರಮುಗ್ಧರಾಗಿ ಆಲಿಸಿದರು. “ಇದು ಬರೀ ಮಾತಿನ ಚಮತ್ಕಾರ” ಎಂದನೊಬ್ಬ. “ಹಾಗಾದರೆ ಖುದ್ದು ನೀವೇ ಏಕೆ ಈ ಸಾಹಸ ಪ್ರದರ್ಶಿಸಬಾರದು? ಹಿಂದೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಾಗಿದ್ದ ನಾನು ಮತ್ತು ನನ್ನ ಓರಗೆಯವರು ಇದನ್ನು ಮಾಡಿ ಗೆದ್ದಿದ್ದೇವೆ. ನಿಮ್ಮಂಥ ವೀರಾಧಿವೀರರಿಗೆ ಇದೊಂದು ಆಟ. ಆಡಲು ಧೈರ್ಯವುಂಟೇ?” ಇಡೀ ಕ್ಲಾಸ್ “ಯೆಸ್ ಸರ್! ಖಂಡಿತ” ಎಂದು ಘೋಷಿಸಿತು. ಮುಂದೆ ಅವರು ಖುದ್ದು ಸೈನ್ಸ್ ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ವಿಧೇಯರಾದರು. ಅವರ ಸಾಲಿನಲ್ಲಿ ಡಿ. ವೀರೇಂದ್ರಕುಮಾರ್ ಎಂಬ ಒಬ್ಬ ತರುಣ ತೇಜಸ್ವಿಯೂ ಕೆ. ಭೀಮಪ್ಪ ನಾಯಕ ಎಂಬ ಧಡೂತಿಕಾಯನೂ ಇದ್ದರೆಂಬುದು ಭವಿಷ್ಯದ ಎರಡು ಭಿನ್ನ ಸಂದರ್ಭಗಳಲ್ಲಿ ಎರಡು ವಿಭಿನ್ನ ನೆಲೆಗಳಲ್ಲಿ ಅಕಸ್ಮಾತ್ತಾಗಿ ಪ್ರಕಟವಾದಾಗ ನನಗೊಂದು ಬಗೆಯ ಧನ್ಯತಾಭಾವ ಬಂತು. ಯುಕ್ತ ವೇಳೆಯಲ್ಲಿ ಅವನ್ನು ವಿವರಿಸುತ್ತೇನೆ.

ನನ್ನ ಈ ‘ಯಶಸ್ಸು’ ಕಾಲೇಜ್ ಡೈರೆಕ್ಟರ್ ಜಯಲಕ್ಷಮ್ಮಣ್ಣಿಯವರ ವರೆಗೂ ಹರಡಿತೆಂಬುದು ಅವರಿಂದ ನನಗೊಂದು ಅನಿರೀಕ್ಷಿತ ಕರೆ ಬಂದಾಗ ತಿಳಿಯಿತು. ನನ್ನಿಂದೇನಾದರೂ ತಪ್ಪಾಗಿದೆಯೋ ಎಂಬ ಅಳುಕಿನಿಂದ ಹೋದೆ. ಇಲ್ಲ! ಅವರು ನನ್ನ ಪ್ರಯೋಗ ವಿಧಾನವನ್ನು ಹೊಗಳಿ ಇದೇ ಪ್ರಯೋಗವನ್ನು ಆರ್‌ಸಿಕಾಲೇಜ್ ಆಫ಼್ ಕಾಮರ್ಸ್‌ನಲ್ಲಿಯೂ ಮಾಡಬೇಕೆಂದು ಆದೇಶಿಸಿದರು. ಅದು ಕೂಡ ಸರ್ಕಾರೀ ಕಾಲೇಜೇ. ಹೊಸ ಉತ್ಸಾಹದಿಂದ ಹೋದೆ. ಆದರೆ ಆ ಅರುವತ್ತಕ್ಕೂ ಹೆಚ್ಚು ಶ್ರೀಮಂತ ಬುದ್ಧಿವಂತ ಆದರೆ ನಿರಂಕುಶ ಮಂಗಗಳು ನನ್ನನ್ನು — ಪೂರ್ತಿ ಅಪರಿಚಿತನನ್ನು –‘ಸ್ವಾಗತಿಸಿದ’ ಪರಿ ನನ್ನ ಮಿಲಿಟರಿ ವ್ಯಕ್ತಿತ್ವಕ್ಕೂ ಹಿರಿ ಸವಾಲಾಯಿತು:

ಏರಿರದ ಬಂಡೆಗಳು ಧರೆಯೊಳಗೆ ನೂರಾರು
ಏರಲಾಗದ ಬಂಡೆ ಸೃಷ್ಟಿಯೊಳಗಿಲ್ಲವೋ!
ಧೀರನಿದನೆದುರಿಸುತ ಬಂಡೆಮಂಡೆಯ ತುಳಿದು
ಹಾರಿಸುವ ವಿಜಯದ ಪತಾಕೆಯನು ಅತ್ರಿಸೂನು

ನಗುನಗುತ್ತ ತರಗತಿಯನ್ನು ಪ್ರವೇಶಿಸಿದೆ. ಒಕ್ಕೊರಲಿನಿಂದ ಅವರು ಕೂಗಿದರು, “Down with general science. Go back GTN!” ಮತ್ತೆ ಈ ಘೋಷಣೆ ತಾರಸ್ಥಾಯಿಯಲ್ಲಿ ಮುಂದುವರಿಯಿತು. ಅಷ್ಟು ಹೊತ್ತೂ ನಾನು ಹಸನ್ಮುಖನಾಗಿಯೇ ಅವರೆದುರು ನಿಂತಿದ್ದೆ. ಅವರಿಗೆ ಕೂಗಿ ಕೂಗಿ ಬಚ್ಚಿದಾಗ ನಾನು ದನಿಗೂಡಿಸಿದೆ, “Friends, RCC-yans and my dear children! Lend me your ears.” “You’ve twisted Mark Antony’s funeral speech!” “No, not at all. Listen to me further. I come to bury superstitions, not to praise general science. The evil that teachers do lives after them….” ಇಷ್ಟು ಹೇಳುವಾಗ ಅವರು ಸುಸ್ತು, “ಅಳುವ ಕಡಲಿನಲಿ ತೇಲಿ” ಬಂದಿತಾ ಮಂದಹಾಸಾ! ಮುಂದೆ ಅವರನ್ನು ನನ್ನ ವಶಕ್ಕೆ ತೆಗೆದುಕೊಂಡು ಇಡೀ ಪಠ್ಯ ಪಟ್ಟಿಯನ್ನು ಆತ್ಮೀಯ ವಾತಾವರಣದಲ್ಲಿ ಪೂರೈಸಿದೆ. ವರ್ಷದ ಕೊನೆಯ ಪಾಠ. ಇಡೀ ಕ್ಲಾಸ್ ಏಕವ್ಯಕ್ತಿಯಂತೆ ಎದ್ದು ನಿಂತು ನನಗೆ ಪ್ರೀತಿಯ ಶುಭ ವಿದಾಯ ಹೇಳಿತು, ನೆನಪಿನ ಕಾಣಿಕೆಯನ್ನೂ ನೀಡಿತು.

ಸರ್ಕಾರೀ ಕಾಲೇಜಿನ ನರಕೇಂದ್ರ ಅಂತೆಯೇ ಪ್ರಾಂಶುಪಾಲರ ಮಂತ್ರಿಸಂಪುಟ ಆ ಮೂರು ವರ್ಷ (೧೯೬೫-೬೮) ಗಣಿತ ವಿಭಾಗವಾಗಿತ್ತು. ನಿಸ್ಪೃಹ ಮತ್ತು ಪ್ರೀತಿಯ ಈ ಭಾಂಡದಲ್ಲಿ ನಾವೆಲ್ಲರೂ ಕೂಡಿ ಮಾಡಿದ ಪ್ರಯೋಗಗಳು ಮತ್ತು ಕಲಿತ ಜೀವನ ಮೌಲ್ಯಗಳು ಅವೆಷ್ಟೊ. ಮುಖ್ಯವಾದ ಕೆಲವನ್ನು ಹೆಸರಿಸುವುದಾದರೆ: ಉಪಾಧ್ಯಾಯರಲ್ಲಿ ಶ್ರೇಷ್ಠರು, ಮಧ್ಯಮರು ಅಥವಾ ಕನಿಷ್ಠರು ಇರಬಹುದು, ಆದರೆ ಕೆಟ್ಟ ವಿದ್ಯಾರ್ಥಿ ಹುಟ್ಟಲೇ ಇಲ್ಲ (ಕುವಿದ್ಯಾರ್ಥಿ ನಜಾಯತಿ). ಸಮಷ್ಟಿಹಿತಕ್ಕೆ ಬದ್ಧವಾದ ವ್ಯಷ್ಟಿಯೂ ವ್ಯಷ್ಟಿಹಿತವನ್ನು ರಕ್ಷಿಸುವ ಸಮಷ್ಟಿಯೂ ಒಟ್ಟಾಗಿ ಬೆಳಗುತ್ತವೆ. ಕನಿಷ್ಠ ವ್ಯಷ್ಟಿಯ ತ್ರಾಣಮಾನಕವೇ ಸಮಷ್ಟಿಯ ನಿಜ ತ್ರಾಣ. ಋಷಿವಾಕ್ಯ ವಿಜ್ಞಾನಕಲೆಯೊಡನೆ ಸೇರಿರಲು ಜಸವು ಜನಜೀವನಕೆ ಮಂಕುತಿಮ್ಮ. ನಮ್ಮ ಪ್ರಾಚೀನ ಚಿಂತಕರಾದರೂ ನೀಡಿದ ಧ್ಯೇಯವಾಕ್ಯ ಇದೇ ಅಲ್ಲವೇ? “ಸಹನಾವವತು ಸಹನೌ ಭುನಕ್ತು ಸಹವೀರ್ಯಂಕರವಾವಹೈ ತೇಜಸ್ವಿನಾವಧೀತಮಸ್ತುಮಾವಿದ್ವಿಷಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ.”

ಇನ್ನು ಕಾಲೇಜಿನ ಪಾಠೇತರ ವಿಭಾಗಗಳಲ್ಲಿ ನಾವು ಕೈಗೊಂಡ ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ಹೆಸರಿಸಬೇಕಾದವು: ಅಧ್ಯಾಪಕ ಸಂಘದ (ಸ್ಟಾಫ಼್ ಕ್ಲಬ್) ಮೂಲಕ ಏರ್ಪಡಿಸಿದ ವಿವಿಧ ಶೈಕ್ಷಣಿಕ ಕ್ರಿಯಾಕಲಾಪಗಳು, ಆಸಕ್ತ ಅಧ್ಯಾಪಕರಿಗೆ ತುಪಾಕಿ ತರಬೇತಿ ನೀಡಲು (ಎನ್‌ಸಿಸಿ ನೆರವಿನಿಂದ) ರೈಫ಼ಲ್ ಕ್ಲಬ್‌ನ ಸ್ಥಾಪನೆ, ಆಯ್ದ ವಿದ್ಯಾರ್ಥಿ ಘಟಕಗಳ ಮೂಲಕ ಸಮಾಜಸೇವೆ, ನಾಟಕ, ಸಂಗೀತ ಮುಂತಾದ ಕಲಾಪ್ರದರ್ಶನಗಳು, ಕಾಲೇಜ್ ವಾರ್ಷಿಕ ಸಂಚಿಕೆಯ ಸಂಪಾದನೆ ಮತ್ತು ಮುದ್ರಣ, ಸಾವನದುರ್ಗ, ನಂದಿಬೆಟ್ಟ, ರಾಮನಗರದ ಗುಹೆಗಳು ಮುಂತಾದೆಡೆಗಳಿಗೆ ಶೈಕ್ಷಣಿಕ ಪ್ರವಾಸಗಳು ಇತ್ಯಾದಿ. “ಕಾಲೇಜ್ ಕುರಿತು ಯಾವುದೇ ಪ್ರಶ್ನೆ, ವಿಚಾರಣೆ ಅಥವಾ ಸಮಸ್ಯೆ ಇದ್ದರೆ ಗಣಿತ ವಿಭಾಗವನ್ನು ಸಂಪರ್ಕಿಸಿ” – ಇದು ಅಂದು ವಿದ್ಯಾರ್ಥಿಗಳಲ್ಲಿ ಪ್ರಚಲಿತವಾಗಿದ್ದ ಘೋಷಣೆ.

ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಸದಾ ಉತ್ಸರ್ಪಿಣೀ ಪರ್ವದಲ್ಲಿಯೇ ಇರುವುದಿಲ್ಲ. ೧೯೬೮-೬೯ನೆಯ ಶೈಕ್ಷಣಿಕ ವರ್ಷಾರಂಭದಲ್ಲಿ ಪ್ರಾಂಶುಪಾಲ ಉಮರ್ಜಿಯವರು ಸರ್ಕಾರೀ ಸೇವೆ ಬಿಟ್ಟು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸ್ಟ್ಸ್ಯಾಟಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರಾಗಿ ತೆರಳಿದರು, ಹೊಸ ಪ್ರಾಂಶುಪಾಲರು ಬಂದರು, ಇತ್ತ ಗುರುರಾಜರಾಯರಿಗೆ ವರ್ಗವಾಯಿತು. ಹೀಗಾಗಿ ನಮ್ಮ ನರಕೇಂದ್ರ ವಿಘಟಿತವಾಯಿತು. ಹೊಸ ಪ್ರಾಂಶುಪಾಲರಿಗೆ ನಮ್ಮಂಥ ‘ಹಳೆಹುಲಿ’ಗಳ ಬಗ್ಗೆ ವಿಶ್ವಾಸವಿರಲಿಲ್ಲ (ಪೂರ್ವಗ್ರಹ), ಇನ್ನು ಇತರರನ್ನು ಸಂಘಟಿಸಿ ಆಡಳಿತೆಯನ್ನು ಸುಸೂತ್ರವಾಗಿ ನಿರ್ವಹಿಸುವ ಚಾಕಚಕ್ಯ ತಿಳಿದಿರಲಿಲ್ಲ. ಫಲ? ‘ಮಾರಿಗೌತಣ’ವಾಯಿತೆಮ್ಮಯ ಒಲುಮೆ ನಲ್ಮೆಯ ಜೇನುಗೂಡು. ಈ ಅರಾಜಕತೆಗೆ ಖುದ್ದು ಪ್ರಾಂಶುಪಾಲರೇ ತಲೆದಂಡ (ಅವರನ್ನೊಬ್ಬ ಅತೃಪ್ತ ವಿದ್ಯಾರ್ಥಿ ಕೊಲೆಗೈದ) ತೆರಬೇಕಾಯಿತು (೧೯೬೯-೭೦). ಆದರೆ ಆ ವೇಳೆಗೆ ನಾನು ವಿಶ್ವಕೋಶವೆಂಬ ಹರಿಗೋಲು ಏರಿದ್ದೆ.

ಜಿಟಿನಾ ಸ್ವತಂತ್ರವಾಗಿ ಬರೆದ `ಕುದುರೆಮುಖದೆಡೆಗೆ’ ಪುಸ್ತಕ ಕಾಲಾನುಕ್ರಮದಲ್ಲಿ ಎನ್ ಸಿಸಿ ದಿನಗಳು, ಸವಾಲನ್ನೆದುರಿಸುವ ಛಲ ಮತ್ತೆ ಇಲ್ಲಿ ಮುಕ್ತಾಯ ಕಾಣುವ ಕಂತಿನೊಡನೆ ಮುಗಿಯದ ಪಯಣದಲ್ಲೂ ಅನಿವಾರ್ಯವಾಗಿ ಸೇರಿ ಹರಿದಿದೆ. ಅದರ ಐತಿಹಾಸಿಕ ಅಗತ್ಯಗಳಿಗಾಗಿ ಅದನ್ನೀಗ ಸ್ವತಂತ್ರ ವಿ-ಪುಸ್ತಕವಾಗಿಯೂ ರೂಪಿಸಿ ಇಲ್ಲೇ ಜಾಲತಾಣದ ಪುಸ್ತಕ ವಿಭಾಗದಲ್ಲಿ ಒಗ್ಗೂಡಿಸಿ ಕೊಟ್ಟಿದ್ದೇವೆ. ಓದಲು, ನಿಮ್ಮ ಸಲಕರಣೆಗಳಿಗೆ ಯಾವುದೇ ರೂಪದಲ್ಲಿ ಇಳಿಸಿಕೊಳ್ಳಲು ಇದು ನಿಶ್ಶುಲ್ಕ ಮುಕ್ತ. (ಮುಂದೆ ಮುಗಿಯದ ಪಯಣದ ಭಾಗವಾಗಿಯೂ ಇದೇ ಆವೃತ್ತಿ ಲಭ್ಯ,.)

http://issuu.com/abhayasimha/docs/kuduremukhadhedege

(ಮುಂದುವರಿಯಲಿದೆ)