(ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ ಭಾಗ ೧) (ಚಕ್ರವರ್ತಿಗಳು ಸುತ್ತು ಹದಿನಾಲ್ಕು)

[ವಾಗ್ರೂಪದಮಲಲ್ಲಿ ವಾಸ್ತವವನಾಮೂಲಾಗ್ರ
ಮರೆತು ಕುಳಿತರೆ ಭಾರಿ ಆರಾಮು:
ಕೈಕಾಲನಾಡಿಸುವ ಅಗತ್ಯ, ಬೆವರಿನ ಅಸಹ್ಯ
ಇಲ್ಲ. ಕುಳಿತಲ್ಲೆ ಬೇಕಾದಷ್ಟು ಮಂಡಿಗೆಯನಾಕಂಠ
ಮನಸಿನಲ್ಲೇ ತಿಂದು ತೇಗಬಹುದು -ಗೋಪಾಲಕೃಷ್ಣ ಅಡಿಗ
ಭಾರತ ಹಳ್ಳಿಗಳ ನಾಡು ಎನ್ನುವುದು ಉಕ್ತಿ ಸೌಂದರ್ಯಕ್ಕೆ ನಿಜ. ವಾಸ್ತವದಲ್ಲಿ ಭಾರತ ನಗರ ನರಕದ ಕಾಡು – ಜಿಟಿನಾ ಸಂಪಾದಕೀಯ ಟಿಪ್ಪಣಿ]

ಋತುಮಾನಗಳು ಪ್ರಕೃತಿಯ ಪುಟಗಳಲ್ಲಿ ಬರೆಯುವ ಅಸಂಖ್ಯ ಟಿಪ್ಪಣಿ, ಮಹಾಪ್ರಬಂಧಗಳನ್ನು ಓದುವ ಹುಮ್ಮಸ್ಸು ನಮ್ಮಲ್ಲಿ ಆ ಬಾರಿ (೧೯೮೯ ಆಗಸ್ಟ್ ೧೩ರಿಂದ ೧೫) ಮಳೆಗಾಲದಲ್ಲೇ ಉಕ್ಕಿತು. ಬೆಳಿಗ್ಗೆ ಆರೂವರೆ ಗಂಟೆಗೆ, ತಿಳಿ ವಾತಾವರಣದಲ್ಲೇ ಮುಖ್ಯ ತಂಡ – ಬಾಲ ಅಭಯ ಸೇರಿ ಹನ್ನೊಂದು ಮಂದಿ, ಐದು ಬೈಕುಗಳಲ್ಲಿ ಮಂಗಳೂರು ಬಿಟ್ಟಿತು. ತತ್ಕಾಲೀನ ಲಕ್ಷ್ಯ ಉಡುಪಿಯತ್ತ ಸಾರುವ ರಾಷ್ಟ್ರೀಯ ಹೆದ್ದಾರಿ ಮೂಲಕ ಕಾರ್ಕಳ. ಮತ್ತೊಂದು ಬೈಕ್ ಹಾಗೂ ಎರಡು ಮಂದಿ ಜೋಡುಮಾರ್ಗದಿಂದ ಮೂಡಬಿದ್ರೆ ಮಾರ್ಗವಾಗಿ ಬಂದು ಕಾರ್ಕಳದಲ್ಲಿ ನಮ್ಮನ್ನು ಸೇರಲಿತ್ತು. ಯೋಜನೆಯಂತೆ ಎರಡು ರಾತ್ರಿ ಮೂರು ದಿನಗಳ ಕಾಲ ಮಳೆಯೊಡನೆ ಸವಾರಿ, ಚಾರಣಗಳೊಡನೆ ವನ್ಯ ಸದೃಶ ತಾಣಗಳ ಭೇಟಿ ಮತ್ತು ವಾಸವಾದ್ದರಿಂದ ಚಳಿ ಮಳೆ ಗಾಳಿ ಬಾಧಿಸದಂತೆ ಸೂಕ್ತ ಬಂದೋಬಸ್ತನ್ನು ದೇಹಕ್ಕೂ ಸರಂಜಾಮುಗಳಿಗೂ ಮಾಡಿಕೊಂಡಿದ್ದೆವು.

ನಮ್ಮ ಮೊದಲ ಲಕ್ಷ್ಯ ಕುದುರೆಮುಖ ಗಣಿ ಯೋಜನಾ ನಗರದತ್ತ ಸಾರುವ ಭಗವತಿ ಘಾಟಿ. ಪಡುಬಿದ್ರೆಯಿಂದ ಮಲ್ಲೇಶ್ವರದವರೆಗಿನ ಈ ದಾರಿಯನ್ನು ಮೂರು ಅವಸ್ಥೆಗಳ ಪರಿಷ್ಕೃತ ಸಂಕಲನ ಎಂದೇ ಹೇಳಬಹುದು! ಪಡುಬಿದ್ರೆಯಿಂದ ಹಳ್ಳಿಯೂರುಗಳನ್ನು ಸುತ್ತಿಕೊಂಡು ಕಾರ್ಕಳ ತಲಪುವ ಅರೆಬರೆ ಡಾಮರಿನದ್ದು ಒಂದು ದಾರಿ. ಇನ್ನೊಂದು ಕಾರ್ಕಳದಿಂದ ಮಾಳ ಎಂಬ ಕುಗ್ರಾಮದತ್ತ ಸಾಗುತ್ತ ಅರೆಬರೆ ಡಾಮರು, ಕೊನೆ ಕೊನೆಗೆ ಕಚ್ಚಾ ಮಣ್ಣಿನದ್ದೇ ಆದರೂ ಘಟ್ಟವನ್ನುತ್ತರಿಸಲಾಗದೆ ಕುರುಡು ಕೊನೆ ಕಾಣುವ ದಾರಿ. ಕೊನೆಯದು, ಅಕಸ್ಮಾತ್ ತತ್ಕಾಲೀನ ಅಗತ್ಯಗಳಿಗೆ ಕಡಿದು, ಕೆತ್ತಿ ಮಾಡಿದರೂ ಹೆಚ್ಚುಕಾಲ ಸವಕಲು ಜಾಡಾಗಿಯೂ ಉಳಿಯುವುದು ಕಷ್ಟವೆನ್ನಿಸುವ ಕಗ್ಗಾಡು, ಕಡಿದಾದ ಬೆಟ್ಟದ ಮೈಯಲ್ಲಿ ಪೂರ್ಣ ಹೊಸದಾಗಿ ಮೂಡಿಸಿದ್ದು – ಭಗವತಿ ಘಾಟಿದಾರಿ. ಇಂದಿಗೆ ಸುಮಾರು ಮೂರೂವರೆ ದಶಕಗಳ ಹಿಂದೆ ಹೀಗೆ ಹಳತೆರಡನ್ನು ಪುನಾರಚಿಸಿ, ಹೊಸದನ್ನು ದೃಢವಾಗಿ ರೂಪಿಸಿ, ಒಂದಾಗಿಸಿದ್ದು ಕುದುರೆಮುಖ ಗಣಿಗಾರಿಕಾ ಯೋಜನೆ. ಮಾಳದಿಂದ ಘಟ್ಟವೇರಿ ಗಣಿ ಯೋಜನೆಯ ನಗರಕ್ಕೆಂದೇ ಆರಿಸಲ್ಪಟ್ಟ ಅತ್ಯತಿ ಕುಗ್ರಾಮ ಮಲ್ಲೇಶ್ವರ ಈ ದಾರಿಯ ಪರಮ ಲಕ್ಷ್ಯ.

ಕುದುರೆಮುಖ ಗಣಿ ಯೋಜನೆ ಈ ವಲಯದ ಘಟ್ಟವನ್ನು ಮುಖ್ಯವಾಗಿ ಮೂರು ಸೀಳಾಗಿಸಿತು. ಭಾರೀ ವಿದ್ಯುತ್ ಸಂಪರ್ಕ, ದ್ರವರೂಪೀ ಅದಿರನ್ನು ಮಂಗಳೂರಿಗೆ ಮುಟ್ಟಿಸುವ ಬಹುತೇಕ ಭೂಗತ ಕೊಳವೆಸಾಲು ಮತ್ತು ಹೆದ್ದಾರಿಯ ಮಟ್ಟದ (ವಾಸ್ತವವಾಗಿ ಆ ಕಾಲದಲ್ಲಿ ಹೆದ್ದಾರಿಗಿಂತ ಎಷ್ಟೋಪಾಲು ಉತ್ತಮವಾಗಿದ್ದ) ದಾರಿ. ಹೆದ್ದಾರಿ ಮೂಲಕ ಬರಲಿದ್ದ ಗಣಿ ಯೋಜನೆಯ ಬೃಹತ್ ಯಂತ್ರ ಸಾಮಗ್ರಿಗಳು ಈ ಘಾಟಿ ದಾರಿಯಲ್ಲೇ ಹರಿದವು. ಮುಂದುವರಿದಂತೆ ಅಲ್ಲಿನ ಉತ್ಪನ್ನದ ಏಕೈಕ ವಿತರಣಾಮುಖ ಮತ್ತು (ವಿಮಾನ, ಬಂದರು, ರೈಲು ಸೇರಿದಂತೆ) ಎಲ್ಲಾ ತೆರನ ಆಧುನಿಕ ಸಂಪರ್ಕ ಸವಲತ್ತುಗಳಿಗೆ ಸಮೀಪ ಹಾಗೂ ಸೂಕ್ತವಾದ ಮಂಗಳೂರಿನ ನಡುವಣ ಚುರುಕಿನ ಸಂಚಾರಕ್ಕೂ ಈ ದಾರಿ ಆವಶ್ಯಕವೇ ಆಗಿ ಉಳಿದಿತ್ತು. ಅದುವರೆಗೆ ಅತ್ತ ಶೃಂಗೇರಿಯಿಂದ ಹಳ್ಳಿಗಾಡುಗಳನ್ನು ಸುತ್ತಿ ಎಲ್ಲೂ ಅಲ್ಲದಲ್ಲಿ ಮುಗಿಯುತ್ತಿದ್ದ ಒಂದು ದಾರಿಯನ್ನೂ ಇತ್ತ ಕಳಸದಿಂದ ಸಂಸೆಯವರೆಗೆ ಬೆಳೆದಿದ್ದ ಇನ್ನೊಂದೇ ನಗಣ್ಯ ಮಾರ್ಗವನ್ನೂ ಈ ದಾರಿಗೆ ‘ಉಪೋತ್ಪನ್ನ’ವಾಗಿ ಜೋಡಿಸಿದ್ದರು. ಸಹಜವಾಗಿ ಗಣಿಗಾರಿಕೆಯ ಉತ್ಕರ್ಷದಲ್ಲಿ ಮಲ್ಲೇಶ್ವರವೆಂಬ ಕುಗ್ರಾಮಕ್ಕೆ ನಗರದ ಜೀವವೂಡಿದ್ದು, ತುಸು ಪ್ರಕೃತಿಪ್ರಿಯರನ್ನೂ ಮೂರೂ ದಿಕ್ಕುಗಳಿಂದ ಆಕರ್ಷಿಸುತ್ತಿದ್ದದ್ದು ಈ ದಾರಿಗಳೇ.

ಕುದುರೆಮುಖ (ಅದಿರು ಯೋಜನಾ) ನಗರದ ದಾರಿ ಅಥವಾ ಮಲ್ಲೇಶ್ವರದ ದಾರಿ ಅಥವಾ ಭಗವತೀ ಕಾಡಿನೊಳಗೆ ಹಾದುಹೋಗುತ್ತ ಪಶ್ಚಿಮ ಘಟ್ಟವನ್ನುತ್ತರಿಸುವುದರಿಂದ ಭಗವತೀ ಘಾಟೀ ಆ ಕಾಲಕ್ಕೆ ನಮ್ಮ ಪರಿಸರದಲ್ಲಿ (ಉಳಿದ ಘಾಟಿಗಳಂತಲ್ಲದ) ಒಂದು ವಿಶಿಷ್ಟ ರಚನೆ. ಸವಕಲು ಜಾಡು ವಿಸ್ತರಿಸಿ ಗಾಡಿದಾರಿಯಾದ್ದನ್ನೇ ತುಸು ಕೆತ್ತಿ, ತಟ್ಟಿ, ಬಡಕಲು ಮೋರಿ, ಸಪುರ-ಸೊಟ್ಟ ಸೇತುವೆಗಳೊಡನೆ ಡಾಮರು ಕಾಣಿಸಿದರಾಗುತ್ತಿತ್ತು ವಾಹನಯೋಗ್ಯ ಮಾರ್ಗ! ಆದರಿಲ್ಲಿ ಲಘು ತಿರುಗಾಸುಗಳು (ಹಿಮ್ಮುರಿ ತಿರುವು ಅಥವಾ ಇಂಗ್ಲಿಷಿನ ಯು-ತಿರುಗಾಸು) ಬಾರದಂತೆಯೂ ಏರುಕೋನದಲ್ಲಿ ತೀವ್ರ ಬದಲಾವಣೆಗಳು ಕಾಡದಂತೆಯೂ ಕಾಲಖತಿಯಲ್ಲಿ ತುಂಬಿಕೊಟ್ಟ ಪ್ರಪಾತದಂಚುಗಳು ಕುಸಿದು, ಕಡಿದುಬಿಟ್ಟ ಭಾರೀ ದರೆಗಳು ಜರಿದು ಕೂರದಂತೆಯೂ ರಚಿಸಿದ್ದರು. ಹಳಗಾಲದಂತಲ್ಲದೆ ಅಂಚುಗಟ್ಟಿದ ಚರಂಡಿ, ಮೋರಿ, ಸೇತುವೆಗಳು ನುಣ್ಣನೆ ದಾರಿಯ ಓರೆ ಮತ್ತು ಬಾಗುಬಳಕುಗಳನ್ನು ಅನುಸರಿಸಿ ಬಂದಿದ್ದವು. ಸಹಜವಾಗಿ ಇಷ್ಟು ವರ್ಷಗಳಲ್ಲಿ ಈ ದಾರಿಯಲ್ಲಿ ನಡೆದ (ಎಂಥದ್ದೇ ಆಕಸ್ಮಿಕ) ಅಪಘಾತಗಳಲ್ಲಿ ವಾಹನಗಳು ಸೇತುವೆಯಂಚು ಒರೆಸಿದ್ದು, ರಕ್ಷಣಾ ಗೋಡೆ ಮುರಿದು ಕೊಳ್ಳ ಹಾರುವಂಥಾದ್ದು ನಾನು ಕೇಳಿದ್ದಿಲ್ಲ! ಪಡುಬಿದ್ರೆಯಿಂದ ಮಾಳದವರೆಗಿನ ಇದರ ಓಟ ಹೆಚ್ಚು ಬಯಲುಗಳಲ್ಲೇ ಆದ್ದರಿಂದ ವಾಹನಚಾಲಕರಿಗೆ ಸವಾರಿ ಸುಖದ ಪರಿಣಾಮ ಅರಿವಿಗೆ ಬಾರದಿರಬಹುದು. ಆದರೆ ಮುಂದೆ ಆ ಚಾಲನೆ ಒಂದು ಸ್ವತಂತ್ರ ಕಾವ್ಯ.

ಏರುದಾರಿಯಲ್ಲಿ ಎಸ್ಕೆಬಾರ್ಡರ್ (ಅವಿಭಜಿತ ದಕ ಜಿಲ್ಲಾ ಗಡಿ) ಎಂದೇ ಖ್ಯಾತವಾದ ಶೃಂಗೇರಿ ಕವಲುದಾರಿಯ ಸ್ಥಳದವರೆಗೆ ಎಡಕ್ಕೆ ದರೆ, ಬಲಕ್ಕೆ ಮಾಳದ ಕಣಿವೆ. ಮುಂದೆ ದಾರಿ ಘಟ್ಟದ ಒಳಮೈಗೆ ಸರಿಯುವುದರಿಂದ ಮೊದಮೊದಲು ಬಲಕ್ಕೆ ಅನತಿ ಅಂತರದಲ್ಲೇ ಶ್ರೇಣಿಯ ಉನ್ನತ ಸಾಲಿನ ಏರಿಳಿತಗಳು (ಆ ವೇಳೆಗೆ ನಾವೂ ಗಳಿಸಿದ ಔನ್ನತ್ಯದಿಂದ ಅವು ಬಹುತೇಕ ಹುಲ್ಲು ಹೊದ್ದ, ಸೌಮ್ಯ ಗುಡ್ಡಗಳಂತೇ ಕಾಣುತ್ತವೆ) ಎಡಕ್ಕೆ ಘನ ವೃಕ್ಷರಾಜೀಯುತ ಕಣಿವೆಯ ಹರಹೂ ಮೈದಳೆಯುತ್ತವೆ. ಮೊದಲ ಭೇಟಿ: ಅದು (೧೯೭೫ರ ಸುಮಾರಿಗೆ) ಮಂಗಳೂರಿನಲ್ಲಿ ನಾನು ವೃತ್ತಿಯಲ್ಲಿ ನೆಲೆಸುತ್ತಿದ್ದ ಕಾಲ. ಓದೆಲ್ಲ ಬಯಲು ಸೀಮೆಗಳಲ್ಲಿ ಕಳೆದು ಘಟ್ಟದ ತಪ್ಪಲಿಗೆ ಬಂದ ಸಂಭ್ರಮ, ಬೆರಗು ತೀವ್ರ ಕಾಡುತ್ತಿದ್ದ ಕಾಲ. ಅದಕ್ಕೆ ಸರಿಯಾಗಿ ಕುತೂಹಲ ಕೆರಳಿಸಿತ್ತು ಈ ಯೋಜನೆ – ‘ಕಡಿದಷ್ಟು ಮುಗಿಯದ ವನ’ ಹಾಗೂ ‘ಮೊಗೆದಷ್ಟು ಖಾಲಿಯಾಗದ ಖನಿಜಸಂಪತ್ತ’ನ್ನು ‘ಪಳಗಿಸುವ’ ಮನುಷ್ಯ ಸಾಹಸ! ಅಂಥವನ್ನು ನೋಡುವುದು ನನ್ನ ಲೆಕ್ಕಕ್ಕೊಂದು ಕೃತಕೃತ್ಯತೆಯ ಅನುಭವ (ಹೀಗೇ ಶಿರಾಡಿ ರೈಲು ಹಳಿ ಹಾಕುತ್ತಿದ್ದಾಗಿನ ನನ್ನ ಅನುಭವಗಳನ್ನೂ ಇಲ್ಲಿ ಗಮನಿಸಬಹುದು.) ಆಗಿನ್ನೂ ನನಗೆ ಮದುವೆಯೂ ಆಗಿರಲಿಲ್ಲ, ಸ್ವಂತ ವಾಹನವೂ ಇರಲಿಲ್ಲ. ನನ್ನ ವಸತಿ ತಂದೆಯ ಹಿರಿಯ ಗೆಳೆಯ ಬಿ.ವಿ. ಕೆದಿಲಾಯರ ಕೃಪೆಯಿಂದ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ನಿಲಯ. ಅಲ್ಲೇ ನನ್ನಂತೆ ಇನ್ನೂ ಸುಮಾರು ಹದಿನೈದು ಇಪ್ಪತ್ತು ಮಂದಿ – ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲದವರು, ವಿವಿಧ ಕಾರಣಗಳಿಗಾಗಿ ತತ್ಕಾಲೀನ ಬಿಡಾರ ಹೂಡಿದ್ದರು. ಆಗ ಪರಿಚಯವಾಗಿ ಆತ್ಮೀಯತೆ ಬೆಳೆದ ಪಶು ವೈದ್ಯ ಗೆಳೆಯ ರಾಘವೇಂದ್ರ ಉರಾಳರು “ಕುದುರೆಮುಖ ನೋಡಲು ನಾನೂ ಇದ್ದೇನೆ” ಎಂದದ್ದಲ್ಲದೆ ಅವರ ಎರಡು ಬಾಗಿಲಿನ ಸ್ಟ್ಯಾಂಡರ್ಡ್ ಕಾರನ್ನು ಹೊರಡಿಸಿಯೇ ಬಿಟ್ಟರು. ಅಂದಿನ ನನ್ನ ಬಹುತೇಕ ಚಟುವಟಿಕೆಗಳೆಲ್ಲವಕ್ಕೂ ಅನಿವಾರ್ಯ ಸಂಗಾತಿಯಾಗುತ್ತಿದ್ದ ಮಂಗಳಗಂಗೋತ್ರಿಯ ಕನ್ನಡ ಅಧ್ಯಾಪಕ ಪಂಡಿತಾರಾಧ್ಯ, ತರಬೇತಿನವಧಿಯಲ್ಲಿದ್ದ ಅಸಿಸ್ಟೆಂಟ್ ಕಮೀಶನರ್ (ನನ್ನ ಬೀಯೆ ಎಮ್ಮೇಗಳ ಸಹಪಾಠಿ) ಗೆಳೆಯ ಶಂಕರಲಿಂಗೇ ಗೌಡ, ಕೆನರಾ ಪೀಯೂ ಕಾಲೇಜಿನ ರಸಾಯನಶಾಸ್ತ್ರಾಧ್ಯಾಪಕ ಜನಾರ್ದನ ಪೈ ಕಾರಿನ ಸೀಟಿನ ಲೆಕ್ಕದಲ್ಲಿ ಸದಸ್ಯರು. ಸ್ಟ್ಯಾಂಡರ್ಡ್ ಕಾರಿಗೆ ಗೇರ್ ಲಿವರ್ ಎದುರಿನ ಎರಡು ಸೀಟುಗಳ ನಡುವೆ ನೆಲದಿಂದಲೇ ಏಳುತ್ತಿತ್ತು. ಅಲ್ಲಿ ಹಲಗೆ ತುಂಡೊಂದನ್ನು ಇಟ್ಟು, ಅತ್ತಿತ್ತ ಕಾಲು ಹಂಚಿ ಕೂರಲು ಮಾಡಿದ ಹೆಚ್ಚುವರಿ ವ್ಯವಸ್ಥೆಯಲ್ಲಿನ ಸದಸ್ಯ ಸ್ನಾತಕೋತ್ತರ ವಿದ್ಯಾರ್ಥಿ ಯೇತಡ್ಕ ಸುಬ್ರಹ್ಮಣ್ಯ. ಹಾಸ್ಯಕ್ಕೆ ‘ಇಲಿಯ ಮೇಲೆ ಗಣಪ’ ಎನ್ನುವುದುಂಟು, ಆದರಿಲ್ಲಿ ಬಡಕಲು ಕಾರಿನಲ್ಲಿ ‘ಗಣಪ’ ಓರ್ವನಲ್ಲ, ಆರು ಹೇರಿ ಹೋಗಿಬಂದಿದ್ದೆವು!! ಉಳಿದಂತೆ ಅಂದಿನ ನನ್ನ ದುರ್ಬಲ ನೆನಪಿನ ಚಿತ್ರವನ್ನು ಹಿಂಜುವುದು ಬಿಟ್ಟು ಕೇವಲ ಅಚ್ಚಳಿಯದುಳಿದ ವೈಶಿಷ್ಟ್ಯಗಳನ್ನಷ್ಟೇ ಸೂಕ್ಷ್ಮವಾಗಿ ದಾಖಲಿಸುತ್ತೇನೆ.

ಉರಾಳರು ‘ಭಯಂಕರ’ (ಈ ಶಬ್ದವನ್ನು ನಾನು ಮಾತಿನಲ್ಲಿ ‘ತುಂಬಾ’ ಎಂಬರ್ಥದಲ್ಲೂ ಬಳಸುವುದು ಉರಾಳರಿಗೆ ಸದಾ ಮೋಜುಂಟುಮಾಡುತ್ತಿತ್ತು!) ಪ್ರಾಯೋಗಿಕ ಮನುಷ್ಯ. ನಿರ್ಮಾಣ ಹಂತದಲ್ಲಿರುವ ಸ್ಥಳವೀಕ್ಷಣೆಗೆಂದು ಹೊರಡುವಾಗ ಯಾನ ಸೌಖ್ಯದ ಬಗ್ಗೆ ಯಾರಿಗೂ ಧೈರ್ಯವಿರಲಿಲ್ಲ. ಆದರೆ ಉರಾಳರು ಕಾರಿರುವುದು ನಮ್ಮ ಸೌಕರ್ಯಕ್ಕೆ. ಅದರ ತೋರಿಕೆಯ ಸೌಂದರ್ಯಕ್ಕಾಗಿ ಉಪಯುಕ್ತತೆಯನ್ನು ನಿರಾಕರಿಸಬಾರದು ಎಂದುಕೊಂಡೇ ಹೊರಟಿದ್ದರು. ಮತ್ತು ತಂಡಕ್ಕೆ ಆರನೆಯ ‘ಸೀಟ’ನ್ನು ಅವರೇ ಒತ್ತಾಯಪೂರ್ವಕವಾಗಿ ಅಳವಡಿಸಿದ್ದರು. ಲಾರಿಗಳಷ್ಟೇ ಓಡಾಡಿದ ಹಲವೆಡೆಗಳಲ್ಲಿ ಕಾರಿನ ಅಡಿ ಮಣ್ಣೋ ಕಲ್ಲೋ ಒರೆಸಿದ್ದಿತ್ತು. ಕೆಲವೆಡೆಗಳಲ್ಲಿ ನೆಲ ಹಂತಹಂತವಾಗಿ ಕಡಿದಂತೆಯೂ ದೂಳು ಗೊಸರಿನ ಹೂಳು ತುಂಬಿದ ಹರಹುಗಳೂ ಎದುರಾಗುತ್ತಿತ್ತು. ಅಲ್ಲೆಲ್ಲ ನಾವು ಐವರು (ದಾಂಡಿಗರು) ಇಳಿದು, ಅಗತ್ಯಕ್ಕೆ ತಕ್ಕಂತೆ ಕಾರನ್ನು ಅನಾಮತ್ತಾಗಿ ನೂಕು, ಎತ್ತು ಪ್ರಯೋಗಗಳಿಗೆ ಒಳಪಡಿಸಿದ್ದೆವು. ಉರಾಳರು ನಿರ್ಯೋಚನೆಯಿಂದ ಚಾಲನ ದಂಡ ಹಿಡಿದು “ನಡೆ ಮುಂದೆ ನಡೆ ಮುಂದೆ” ಹಾಡುತ್ತಿದ್ದರು. ಇಂದು ನಗರ ಸಮ್ಮರ್ದದಲ್ಲಿ ಕಾರಿನ ಮೈಯಲ್ಲಿ ಮೂಡಿದ ಒಂದು ಗೀಚಿಗೆ ಗೋಳಿಡುವವರು, ವೇಗಡುಬ್ಬಗಳ ಅವೈಜ್ಞಾನಿಕತೆ ತಿಳಿಯದೆ ಅಡಿ ತಟ್ಟಿಸಿಕೊಂಡು ಇಲಾಖೆಯನ್ನು ಶಪಿಸುವವರು, ಹೆದ್ದಾರಿ ಹೆಸರಿಗೆ ಅವಮಾನವಾಗುವಂಥ ಜಾಡಿನಲ್ಲಿ ಹೊಂಡಬಿದ್ದು ವಾಹನದ ಮುಖ್ಯ ಗುಂಬವೇ ಮುರಿದೋ ಮುಸುಕಿನ ಕಲ್ಲೇಟು ತಿಂದು ಚಕ್ರ ನಿಡುಸುಯ್ದೋ ಸಿಕ್ಕಿಬಿದ್ದಾಗ ಮೂರುಕಾಸಿನವನಿಂದ ಹಿಡಿದು ಪ್ರಧಾನಮಂತ್ರಿಯವರೆಗೆ ಜಾತಕ ಜಾಲಾಡುವವರಿಗೆಲ್ಲ ಉರಾಳರ ಸ್ಥಿತಪ್ರಜ್ಞೆ, ಅರ್ಥವಾಗದು ಬಿಡಿ.

ಯೋಜಿತ ನಗರ ಪ್ರದೇಶ ತಲಪುವಾಗ ನಾವೆಲ್ಲ ಸಾಕಷ್ಟು ಮೈಹುಡಿ ಮಾಡಿ ಬಳಲಿದ್ದೆವು, ಇನ್ನೂ ಹೆಚ್ಚಾಗಿ ಹಸಿದಿದ್ದೆವು. ಆಗ ತುಸು ವ್ಯವಸ್ಥಿತವಾಗಿ ನಮಗೆ ಕಾಣಿಸಿದ್ದು ‘ಭದ್ರಾ…’ ಹೆಸರಿನ ಒಂದೇ ಹೋಟೆಲ್. ತತ್ಕಾಲೀನ ಕಾಫಿಯಿಂದ ತೊಡಗಿ, ಊಟ ಮುಗಿಸಿ ಮನಸ್ಸೂ ತಣಿದ ಮೇಲೆ ತಿಳಿಯಿತು ಹೊಟೆಲಿನ ಮುಖ್ಯಪಾಲುದಾರ ದೇವೇಂದ್ರ ಪೆಜತ್ತಾಯ. ನಾನು ಸಿಂಡಿಕೇಟ್ ಬ್ಯಾಂಕಿನ ಗಿರಾಕಿಯಾಗಿದ್ದ ಕಾಲಕ್ಕೆ ಇವರನ್ನು ಉಡುಪಿಯಲ್ಲಿ ಕುಶಿ ಹರಿದಾಸ ಭಟ್ಟರು ನನಗೆ ವಿಶೇಷವಾಗಿ ಪರಿಚಯಿಸಿದ್ದರು. ಇಂದು ನನ್ನ ಜಾಲತಾಣ ಹಾಗೂ ಮುಖಪುಸ್ತಕದ ಹಿರಿಗೆಳೆಯ ಮಧುಸೂದನ ಪೆಜತ್ತಾಯರ ಅಣ್ಣ, ಬ್ಯಾಂಕ್ ನಿವೃತ್ತಿಯ ಎರಡು ದಶಕಗಳನ್ನೇ ಮೀರಿದರೂ ಇಂದಿಗೂ ಅಂತರ್ಜಾಲದಲ್ಲಿ ಚೋದ್ಯಗಳನ್ನು ಶೋಧಿಸಿಕೊಂಡು ಪ್ರಚುರಿಸುವ ಉತ್ಸಾಹಿ!

ಯೋಜಿತ ನಗರ ಪ್ರದೇಶದ ಒಂದು ಪಾರ್ಶ್ವದ ಅಂದರೆ ವಾಸ್ತವ ಕುದುರೆಮುಖ ಶಿಖರದತ್ತ ಸಾರುವ ಮಹಾ ಬೆಟ್ಟದ ಮೈಯಲ್ಲಿ ಬಲು ಎತ್ತರದಲ್ಲಿ ಹಲವು ಮಾರಿಹಲಿಗೆಗಳು (ಬುಲ್‌ಡೋಜರ್) ಭರ್ಜರಿ ಕೆಲಸ ನಡೆಸಿದ್ದವು. ನಾನೂ ಪಂಡಿತಾರಾಧ್ಯರೂ ಅಡಿಮೇಲಾದ ನೆಲದ ಗೊಂದಲಗಳನ್ನು ಸುಧಾರಿಸಿಕೊಂಡು, ಉಸಿರು ಕಟ್ಟಿ ಆ ಎತ್ತರಕ್ಕೂ ಏರಿದ್ದೆವು. ಬೀಸುಗಾಳಿಗೆ ಮೈಯೊಡ್ಡಿ ಒಂದು ದರೆಯಂಚಿನಲ್ಲಿ ನಿಂತು ನಾನು ಬುಲ್‌ಡೋಜರ್ ಕೆಲಸ ನೋಡುತ್ತಿದ್ದೆ. ಆರಾಧ್ಯರು ಜೊತೆಗೆ ತಂದಿದ್ದ ದೂರದರ್ಶಕದಲ್ಲಿ ವಿಸ್ತಾರ ಕೊಳ್ಳದ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ನಮ್ಮ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಒಂದು ಯಂತ್ರದ ಚಾಲಕ ನಮ್ಮ ಬಳಿಗೇ ಅದನ್ನು ತಂದು, ನಿಲ್ಲಿಸಿ ಕೆಳಕ್ಕಿಳಿದ. ಚಂದ್ರ ಅವತರಣ ನೌಕೆಯಿಂದಿಳಿದು, ಸ್ವತಃ ನೀಲ್ ಆರ್ಮ್ ಸ್ಟ್ರಾಂಗೇ ಅಸಮ ನೆಲದ ಮೇಲೆ, ತಪ್ಪಡಿಯಿಡುತ್ತಾ ಬಳಿ ಸಾರಿ, ಹಸನ್ಮುಖದಿಂದ ಆರಾಧ್ಯರತ್ತ ಕೈ ಚಾಚಿದ. ಪಂಡಿತರು ನಿರ್ಯೋಚನೆಯಿಂದ ಎರಡು ಹೆಜ್ಜೆ ಮುಂದುವರಿದು ಆತನ ಕೈ ಬಾಚಿ ಬೆಚ್ಚನೆಯ ಹಸ್ತಾಂದೋಲನ ಕೊಟ್ಟರು. ಆದರೆ ಆತ ಅದಲ್ಲ ಎನ್ನುವಂತೆ ಸಣ್ಣದಾಗಿ ತಲೆಕೊಡಹಿ, ಕೈ ಬಿಡಿಸಿಕೊಂಡು, ಸಣ್ಣದಾಗಿ ನಕ್ಕು ಮತ್ತೆ ಕೈಚಾಚಿ “ಅದು – ದೂರದರ್ಶಕ, ಸ್ವಲ್ಪ ಕೊಡಿ, ಕಣಿವೆಯಲ್ಲಿ ನಮ್ಮ ವಾಸದ ಶೆಡ್ಡು ಹ್ಯಾಗೆ ಕಾಣುತ್ತೇಂತ ನೋಡ್ತೀನಿ!”

ಕಾಲಾಂತರದಲ್ಲಿ ಭಗವತೀ ಘಾಟಿಯನ್ನು ನಾನು ಹಲವು ಬಳಗಗಳನ್ನು ಕಟ್ಟಿಕೊಂಡು ವಿವಿಧ ವಾಹನಗಳಲ್ಲಿ, ಚಾರಣದಲ್ಲೂ ಹಾದು ಹೋದದ್ದಕ್ಕೆ, ನಿಂತು ಅನುಭವಿಸಿದ್ದಕ್ಕೆ, ಶಿಖರ ಕಾಡು ಸುತ್ತಿದ್ದಕ್ಕೆ ಲೆಕ್ಕವಿಲ್ಲ. ಅವುಗಳಲ್ಲಿ ನನ್ನ ಅನ್ಯ ಕಥನಗಳಲ್ಲಿ ದಾಖಲಾಗದ ಒಂದೆರಡು ಮುಖ್ಯ ನೆನಪುಗಳನ್ನಷ್ಟೇ ಮತ್ತೇ ಇಲ್ಲಿ ಸ್ವಾರಸ್ಯಗೆಡದಂತೆ ಟಿಪ್ಪಣಿಸಿ ಮುಖ್ಯ ಕಥನಕ್ಕೆ ಬರುತ್ತೇನೆ.

ಭಗವತೀ ಘಾಟಿಯೇನೋ ಮುಕ್ತವಾಗಿತ್ತು, ಗಣಿಗಾರಿಕೆ ಇನ್ನೂ ಪ್ರಾಯೋಗಿಕ ಮಟ್ಟದಲ್ಲೇ ಇತ್ತು. ಅದೊಂದು ಭಾರೀ ಮಳೆಗಾಲದ ಆದಿತ್ಯವಾರ. ನಾನು ಪುತ್ತೂರಿನ ಅಜ್ಜನ ಮನೆಯಲ್ಲಿದ್ದಂತೆ ಸುದ್ಧಿ ಸಿಕ್ಕಿತು, “ಕುದುರೆಮುಖದಲ್ಲಿ ಭಾರೀ ಭೂಕುಸಿತ.” ನನ್ನ ಸೋದರಮಾವ – ತಿಮ್ಮಪ್ಪಯ್ಯನವರ ಅಳಿಯ ವೆಂಕಟ್ರಮಣನಿಗೆ ಗಾಳಿ ಹಾಕಿ ಯೆಜ್ದಿ ಬೈಕ್ ಹೊರಡಿಸಿದೆ. ಆತನ ಬೆನ್ನಿಗೆ ಆತನ ಭಾವ ಎ.ಪಿ. ಸದಾಶಿವ – ಇನ್ನೂ ಎಳೆಹರೆಯದವ. ನಾನು ಇನ್ನೋರ್ವ ಸೋದರಮಾವ ಗೌರಿಶಂಕರರ ಲ್ಯಾಂಬ್ರೆಟಾ ಸ್ಕೂಟರ್ ಕಡ ಪಡೆದೆ; ಒಂಟಿಭೂತ. ಮೂವರಲ್ಲೂ ಸರಿಯಾದ ಮಳೆಕೋಟುಗಳಿಲ್ಲ, ತಲೆಗೆ ಶಿರಸ್ತ್ರಾಣ ಕಾಲಿಗೆ ಬೂಟು ಕೇಳಬೇಡಿ. ಹೆಚ್ಚೇಕೆ ಕರಾವಳಿಯ ಬಿಸಿ ಕಳೆದು ಘಟ್ಟ ಏರುವಾಗ ಬೆಚ್ಚನೆಯ ಉಡುಪುಗಳ ಅಗತ್ಯ ಬಂದೀತು ಎಂದು ಯೋಚನೆಯೂ ಬರಲಿಲ್ಲ. ಅಲ್ಲಿ, ಬೆಟ್ಟದೆತ್ತರದಲ್ಲಿ ನೆಲ ಸ್ಫೋಟಿಸಿ ಸಂಗ್ರಹಿಸುವ ಭಾರೀ ಕಲ್ಲುಮಣ್ಣುಗಳ ಮಿಶ್ರಣವನ್ನು ತಪ್ಪಲಿನ ಅರೆಯುವ ಯಂತ್ರಗಳಿಗೆ ಸಾಗಿಸಲು ಮಾಡಿದ್ದ ಭಾರೀ ಸಾಗಣೆಪಟ್ಟಿ (ಕನ್ವೇಯರ್ ಬೆಲ್ಟ್) ಹಲವು ಕಡೆ ಕುಸಿದು ಕುಳಿತಿತ್ತು. ವಾತಾವರಣದ ಪ್ರತಿರೋಧ ಇನ್ನೂ ಮುಗಿದಿರಲಿಲ್ಲವಾಗಿ ಕೆಲಸಗಳೆಲ್ಲ ಸ್ಥಗಿತಗೊಂಡಿದ್ದವು ಮತ್ತು ಹೊರಗಿನವರ ವೀಕ್ಷಣೆ ನಿರ್ಬಂಧಿಸುವ ಭದ್ರತಾ ವ್ಯವಸ್ಥೆಗಳೂ ಶಿಥಿಲವಾಗಿತ್ತು. ನಾವು ಎಲ್ಲೆಂದರಲ್ಲಿ ಸುತ್ತಿ ಸುಳಿದು ಮರಳಿದೆವು. ಅಂದಿನ ಗಾಳಿ, ಮಂಜು, ಮಳೆಯಲ್ಲಿ ನಖಶಿಖಾಂತ ಒದ್ದೆಯಾಗುತ್ತ, ಶೀತಕ್ಕೆ ಹೊಟ್ಟೆಯಲ್ಲಿ ನಡುಗುತ್ತ, ಮಳೆನೀರ ಊದುತ್ತ ಮತ್ತು ಆಗಾಗ ಮುಖದಿಂದೊರೆಸಿಕೊಳ್ಳುತ್ತ ಕಳೆದಿದ್ದೆವು. ಅಲ್ಲಿ ಕೆಸರು ಕೊರಕಲೆಂದು ನೋಡದೆ ಹತ್ತಿಳಿದು, ಸುತ್ತಿದ್ದರ ಕೊನೆಯಲ್ಲಿ ಸರಿಯಾದ ಹೋಟೆಲ್, ತಿನಿಸು ಸಿಗದ ಸಂಕಟ ಒಂದು ಕಡೆ. ಮತ್ತೆ ಬಿಳಿಚಿ ಸೆಟೆಗೊಳ್ಳುತ್ತಿದ್ದ ಕೈಬೆರಳುಗಳಲ್ಲೂ ಸುಮಾರು ಇನ್ನೂರಕ್ಕೂ ಮಿಕ್ಕು ಕಿಮಿ ದೂರ ಪಯಣಿಸಿ, ಅದರಲ್ಲೂ ಕೊನೆಗೆ ಕತ್ತಲಾವರಿಸಿದಾಗ ಸ್ಕೂಟರಿನ ಹೆದ್ದೀಪ ಕೆಟ್ಟರೂ ಎಲ್ಲರೂ ಒಂದೇ ‘ತುಂಡಿ’ನಂತೆ ಮನೆ ತಲಪಿದ್ದು ನಿಜಕ್ಕೂ ಪವಾಡವೇ! (ಬೈಕನ್ನು ಮುಂದೋಡುವಂತೆ ಮಾಡಿ ನಾನು ಅನುಸರಿಸಿದ್ದೆ. ಇನ್ನೇನು ಪುತ್ತೂರು ಬಂತು, ದಾರಿ ಎಲ್ಲ ಅಂಗೈ ರೇಖೆಗಳು ಎನ್ನುವಾಗ ಕಬಕದ ಬಳಿ ಪೋಲಿ ದನವೊಂದು ಬೈಕ್ ದಾಟಿದ ಮೇಲೆ ನನ್ನ ಅಂದಾಜಿನ ಕತ್ತಲ ವಲಯಕ್ಕೆ ನುಗ್ಗಿದರೂ ಕೂದಲಂತರದಲ್ಲಿ ನಾನು ತಪ್ಪಿಸಿಕೊಂಡಾಗಲಂತೂ ನಿಜಕ್ಕೂ ‘ನೀರೊಳಗಿರ್ದು ಬೆಮರ್ದನ್’ ಅನುಭವವಾಗಿತ್ತು!)

ಕರಾವಳಿಯ ಬೇಸಗೆಯ ಉರಿಯಲ್ಲಿ ಸೈಕಲ್ ಸವಾರಿ ಶಿಕ್ಷೆಯೇ ಸರಿ. ಬದಲಿಗೆ ಮಳೆಗಾಲದಲ್ಲಿ ಊದ್ದ ಸವಾರಿ ಹುಟ್ಟಿಸುವ ‘ಬಿಸಿ’ಯನ್ನು ಸಹಜವಾಗಿ ‘ವಾಟರ್ ಕೂಲ್ಡ್’ ಮಾಡಿಕೊಳ್ಳುತ್ತಾ ಸಂತೋಷಿಸಬಹುದೆಂದು ಒಮ್ಮೆ ಯೋಚನೆ ಬಂತು. ಅದೂ ನನ್ನ ಪಡ್ಡೆ ಯುಗವೇ (ಮದುವೆಗೂ ಮುನ್ನ). ನಾನೂ ಸಮೀರನೂ ಸೈಕಲ್ಲೇರಿ ಪಡುಬಿದ್ರಿ-ಕುದುರೆಮುಖ ದಾರಿ ಹಿಡಿದಿದ್ದೆವು. ತಲೆಗೊಂದು ಟೊಪ್ಪಿ ಬಿಟ್ಟರೆ ಉಳಿದಂತೆ ಮಾಮೂಲೀ ಬಟ್ಟೆ. ದಿನವೆಲ್ಲ ಈಜುವವರಿಗಿಲ್ಲದ ಶೀತ, ಜ್ವರ ನಮ್ಮನ್ನೂ ಕಾಡಲಾರದೆಂಬ ಧೈರ್ಯ ನಮ್ಮದು. ಮಧ್ಯಾಹ್ನಕ್ಕೊಂದು ಗಟ್ಟಿ ಬುತ್ತಿಯೂಟ ಕಟ್ಟಿಸಿಕೊಂಡದ್ದನ್ನು ಚೀಲದಲ್ಲಿಟ್ಟುಕೊಂಡು ನಿಶ್ಚಿಂತರಾಗಿ ಸೈಕಲ್ ತುಳಿದದ್ದೇ ತುಳಿದದ್ದು. ಭಗವತಿ ಘಾಟಿಯಲ್ಲೂ ಸೈಕಲ್ ಇಳಿದು ನೂಕದ ಅಥವಾ ಪೆಡಲಿಗೆದ್ದು ತುಳಿಯದ ಛಲ ನಮ್ಮದು. ಮಧ್ಯಾಹ್ನ ಸುಮಾರು ಒಂದು ಗಂಟೆಯ ಸುಮಾರಿಗೆ, ದಕ ಗಡಿಗೂ ಮುನ್ನ ಒಂದು ಸೇತುವೆಯ ಬಳಿ ನಮ್ಮ ಪ್ರಯಾಣ ನಿಲ್ಲಿಸಿದೆವು (ಸುಮಾರು ಎಪ್ಪತ್ತು ಕಿಮೀ ಹೋಗಿದ್ದೆವು).

ಸೇತುವೆ ಮಾಡುವ ಕಾಲದ ಒಂದು ಜೋಪಡಿ ಇನ್ನೂ ಸಾಕಷ್ಟು ಚೆನ್ನಾಗಿಯೇ ಮಳೆ ಮರೆ ಮಾಡಿತ್ತು. ಅದರೊಳಗೆ ಸೇರಿಕೊಂಡು ಬುತ್ತಿಯೂಟ ಮುಗಿಸಿದೆವು. (ನಾವು ನೀರು ಒಯ್ದಿರಲಿಲ್ಲ, ಎಲ್ಲಿ ಆಗಸದತ್ತ ಮುಖ ಮಾಡಿ ಬಾಯಿ ತೆರೆದರೂ ಬಾಯಿ ತುಂಬುತ್ತಿದ್ದಳು ಆಕಾಶಗಂಗೆ! ಘಟ್ಟವಲಯದಲ್ಲಂತೂ ಯಾವ ತೊರೆ, ಝರಿಯೂ ನಿಜ ಚೈತನ್ಯದಾಯೀ ಪಾನಕ) ನಮ್ಮ ಸವಾರಿಗೆ ನಿಖರ ಗುರಿಯಿರಲಿಲ್ಲ; ಇದದ್ದು ಸಮಯಮಿತಿ ಮಾತ್ರ. ಹಾಗಾಗಿ ಅಪರಾಹ್ನ ಅಲ್ಲಿಂದಲೇ ವಾಪಾಸು ಹೊರಟೆವು. ಯಂತ್ರ ವಾಹನಗಳಲ್ಲಿನ ಒಂದು ಸಾಮಾನ್ಯ ತಿಳುವಳಿಕೆ (ಹೆಚ್ಚಿನ ಯಾರೂ ಅನುಷ್ಠಾನಿಸುವುದಿಲ್ಲ) ಏರಿದ ಗೇರಿನಲ್ಲೇ ಇಳಿಸಬೇಕು. ಅದು ಇಲ್ಲಿ ಸೈಕಲ್ ಸವಾರಿಗೆ ಅನ್ವಯಿಸಬೇಕಾದದ್ದು ನಮ್ಮ ನಿರೀಕ್ಷೆಯಲ್ಲೇ ಇರಲಿಲ್ಲ. ಇನ್ನೇನು ಕನಿಷ್ಠ ಹತ್ತು ಕಿಮೀಯಂತೂ ನಿಶ್ಶ್ರಮದಲ್ಲಿ, ಸುಖಸವಾರಿಯಲ್ಲಿ ಕಳೆಯುತ್ತೇವೆ ಎಂದುಕೊಂಡಿದ್ದೆವು. ಆದರೆ ಹೊರಟ ಮಿನಿಟೊಂದರಲ್ಲೇ ಸೈಕಲ್ ನಮ್ಮ ಹತೋಟಿ ಮೀರಿದ ವೇಗೋತ್ಕರ್ಷಪಡೆಯುತ್ತಿರುವ ಅರಿವಾಯ್ತು. ಒತ್ತಿದ ಬಿರಿಗೆ ಮಳೆನೀರು ‘ಕೀಲೆಣ್ಣೆ’ಯಂತೆ ಒದಗಿ ನಮ್ಮನ್ನು ಗಾಬರಿಗೆಡಿಸಿತು. ಹಿಡಿತಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಒಂದು ಸೈಕಲ್ಲಿನ ಹಿಂದಿನ ಬಿರಿರಬ್ಬರ್ (ಬ್ರೇಕ್ ಶೂ) ಒಂದು ಒತ್ತಡ ತಡೆಯಲಾರದೆ ಕಿತ್ತು ರಟ್ಟಿದಾಗಂತೂ ನಮಗೆ ಅರ್ಧ ಜೀವವೇ ಹೋದ ಹಾಗಾಗಿತ್ತು. ಅವ್ಯವಸ್ಥಿತ ದಾರಿಗಳಲ್ಲಾದರೋ ಡಾಮಾರು ಕಳೆದ ನೆಲದಲ್ಲಿ ಮಣ್ಣದಿಬ್ಬಗಳೋ ಭಾರೀ ಆಘಾತ ನೀಡದ ಪೊದರು ಚರಂಡಿಗಳೋ ಸಿಕ್ಕಿಯೇ ಸಿಗುತ್ತವೆ. ಇಲ್ಲಿ ಒಂದೋ ಪಕ್ಕಾ ಕಾಂಕ್ರೀಟ್ ಚರಂಡಿ ಇಲ್ಲವೇ ಗಟ್ಟಿ ಮೋಟು ಗೋಡೆ; ಹಾಯ್ದರೆ ಅಸ್ಥಿ ದಂಡ ಖಚಿತ! ಇತರ ವಾಹನಸಂಚಾರದ ನಿರೀಕ್ಷೆ ಬಹಳವಿರಲಿಲ್ಲವಾದ್ದರಿಂದ ಗಾಬರಿಗೆಡದೆ ದಾರಿಯ ಅಗಲವನ್ನಷ್ಟೂ ಅಡ್ಡತಿಡ್ಡ ಚಲನೆಗೆ ಬಳಸಿ, ಕಡಿತಗೊಂಡ ವೇಗದಲ್ಲಿ ಕಾಲು ನೆಲಕ್ಕೆ ಕೊಟ್ಟು ಸೈಕಲ್ ನಿಲ್ಲಿಸಿದಾಗ ಪುನರ್ಜನ್ಮವೇ ಬಂದಂತಾಗಿತ್ತು. (ಹಿಂದಕ್ಕೋಡಿ ಕಳಚಿ ಬಿದ್ದ ಬಿರಿರಬ್ಬರನ್ನು ಪತ್ತೆಮಾಡಿ ಮತ್ತೆ ಸೈಕಲ್ಲಿಗೆ ಅಳವಡಿಸಿಕೊಂಡೆವು) ಮತ್ತೆ ಮೇಲೇರಿ ಬಂದ ವೇಗಕ್ಕಿಂತಲೂ ಕಡಿಮೆ ವೇಗದಲ್ಲಿ, ಅದೂ ಹೆಚ್ಚಿನ ಆತಂಕದಲ್ಲಿ ಸವಾರಿ ಮಾಡುತ್ತಾ ಮಾಳ-ಕವಲು ತಲಪುವವರೆಗೆ ನಮಗೆ ಸುಖವಾಗಿ ಮಂಗಳೂರು ಸೇರುವ ಧೈರ್ಯವೇ ಕಳೆದುಹೋಗಿತ್ತು.

ನೀಲಬಣ್ಣದ ಕುರುಂಜಿ ಹೂಗಳು ಪಶ್ಚಿಮಘಟ್ಟದ ಉದ್ದಕ್ಕೆ ಅಪರೂಪದವೇನಲ್ಲ. (ಇವೇ ಉದಕಮಂಡಲ ವಲಯಕ್ಕೆ ‘ನೀಲಗಿರಿ’ ಎಂಬ ಅನ್ವರ್ಥನಾಮ ಕೊಟ್ಟದ್ದು ಇಲ್ಲಿ ಸ್ಮರಣಾರ್ಹ) ಆದರೆ ಅದೇಕೋ ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆಂಬ ಪ್ರತೀತಿ ದೊಡ್ಡದೋ ಆ ಒಂದು ವರ್ಷ ಪ್ರಚಾರ ದೊಡ್ಡದೋ ನಾನರಿಯೆ. ಆದರೂ ಒಮ್ಮೆ ಎರಡು ರಾತ್ರಿ ಕುದುರೆಮುಖ ನಗರದ ‘ಅತಿಥಿಗೃಹ’ದಲ್ಲಿ (ಇದನ್ನು ಪರೋಕ್ಷವಾಗಿ ಹೋಟೆಲಿನಂತೆಯೇ ನಡೆಸುತ್ತಿದ್ದರು) ನಾವು ಕೆಲವರು ಉಳಿದು ಸುತ್ತುವರಿದ ಗಿರಿಪಙ್ತಿಗಳನ್ನು ಸುತ್ತಿ ಸಂತಸಪಟ್ಟದ್ದಂತೂ ಸುಳ್ಳಲ್ಲ. ಅದು ಹಾಗಿರಲಿ, ಆಗ ನಾವು ಹೋಗಿದ್ದದ್ದು ಮತ್ತು ಅಲ್ಲಿನ ಒಳ ದಾರಿಗಳಲ್ಲಿ ಓಡಾಡಿದ್ದೆಲ್ಲ ನಮ್ಮದೇ ಎರಡೋ ಮೂರೋ ಮೋಟಾರ್ ಸೈಕಲ್ಲುಗಳಲ್ಲೇ. ಕೊನೆಗೆ ಮಂಗಳೂರು ದಾರಿ ಹಿಡಿದು ಎಂಟು ಹತ್ತು ಕಿಮೀ ಕಳೆದಾಗ ರೋಹಿತ್‌ಗೆ ಜ್ಞಾನೋದಯವಾಯ್ತು; ಬೈಕ್‌ನ ಪೆಟ್ರೋಲ್ ಇನ್ನೇನು ಮುಗಿಯಲಿದೆ! ಆತನ ಯಮಹಾ ಗಾಡಿಗೆ ಪೆಟ್ರೋಲ್ ದಾಹವೂ ಹೆಚ್ಚು. ಆಗ ನಮ್ಮ ಸಹಾಯಕ್ಕೊದಗಿದ್ದು ಏಕರೂಪಿನ ಇಳಿಜಾರಿನಲ್ಲಿ ಬಹುತೇಕ ತಪ್ಪಲು ತಲಪಿಸುವ ಭಗವತಿ ಘಾಟಿದಾರಿಯೇ. ಹೆಚ್ಚುಕಡಿಮೆ ಇಪ್ಪತ್ತು ಕಿಮೀಗೂ ಮಿಕ್ಕು ಇಂಜಿನ್ ಚಲಾಯಿಸದೆಯೂ ಉಳಿದ ಬೈಕ್‌ಗಳ ಜೊತೆಗೂಡಿ ಘಟ್ಟ ಇಳಿಯುವುದು ಸಾಧ್ಯವಾಯ್ತು. ಇಂಥ ಮಾರ್ಗಕ್ರಮಣದ ಅನೇಕ ವಿವರಗಳನ್ನು ಹೇಳುವುದು ಬಿಟ್ಟು ವರ್ತಮಾನದ ಮುಖವನ್ನೊಂದಿಷ್ಟು ಹೇಳಿ ಸದ್ಯ ವಿರಮಿಸುತ್ತೇನೆ.

ಕುದುರೆಮುಖ ಗಣಿಗಾರಿಕೆಯ ಆಯುಷ್ಯ ಮುಗಿದು ಕೆಲಕಾಲವಾಯಿತು. ಪುನರುಜ್ಜೀವನದ ಎಲ್ಲಾ ಪ್ರಯತ್ನಗಳು ಈಚಿನ ಐದಾರು ವರ್ಷಗಳಲ್ಲಿ ಪೂರ್ಣ ವಿಫಲವಾಗಿವೆ. ಜನ (ನೌಕರರು) ಊರು ಬಿಟ್ಟಿದ್ದಾರೆ, ಸಹಜವಾಗಿ ಶಾಲೆ, ಮಳಿಗೆಗಳು, ವಸತಿ ಸೌಕರ್ಯಗಳೆಲ್ಲಾ ಮುಚ್ಚುತ್ತ ಬಂದು ನಗರ ಬಹುತೇಕ ಖಾಲಿಯಾಗಿದೆ. ಭಾರೀ ವಿದ್ಯುತ್ ಸಂಪರ್ಕದ ವ್ಯವಸ್ಥೆಗಳನ್ನು (ಭಾರೀ ಸ್ತಂಭಗಳು, ಉಕ್ಕಿನ ಮಿಣಿ ಇತ್ಯಾದಿ) ಕಳಚಿದ್ದೂ ಆಗಿದೆ. ಕೊಳವೆ ಸಾಲು ಸವಕಳಿಯಿಂದಲೂ ಆಯುಷ್ಯ ಮಿತಿಯಿಂದಲೂ ಹೆಚ್ಚು ಕಡಿಮೆ ಒಂದು ದಶಕದಿಂದಲೇ ಪೂರ್ಣ ನಿಶ್ಶಕ್ತಿಯಲ್ಲಿ ಬಳಲುತ್ತಿದ್ದದ್ದು ಈ ವೇಳೆಗೆ ಪೂರ್ಣ ಮುಕ್ಕಾಗಿರುವುದನ್ನು ಯಾರೂ ಊಹಿಸಬಹುದು. ದಾರಿಯ ಆರೈಕೆ ಅಲಕ್ಷಿತವಾಗಿದೆ, ಜನವಾಹನ ಸಂಚಾರ ತುಂಬ ವಿರಳವಾಗಿದೆ, ‘ಮಹಾ ದಾರಿ’ ಪಟ್ಟಕ್ಕೆ ತಕ್ಕಂತೆ ಉಳಿಸಿಕೊಳ್ಳುವ ಕಾಮಗಾರಿಗಳಿಗೆ ಅರ್ಥವೇ ಇಲ್ಲವಾಗಿದೆ. ಗಣಿಯೋಜನೆ ಮೊದಲ್ಗೊಳ್ಳುವ ಕಾಲದಲ್ಲಿ ಈ ‘ವ್ಯರ್ಥ ಕಾಡಿ’ನಲ್ಲಿ ಗಣಿಯ ಅಭಿವೃದ್ಧಿಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲ. ಆದರೆ ಇಂದು ಈ ವಲಯ ಅಕ್ಷರಶಃ ಉದುರು ಕಡ್ಡಿಯನ್ನೂ ಮನುಷ್ಯ ಮಾತ್ರದವನು ಕದಲಿಸಲಬಾರದ ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನ’ದ ಸ್ಥಾನೋನ್ನತಿ ಪಡೆದಿದೆ. ಮನುಷ್ಯ ಇತಿಹಾಸದ ರಚನೆಗಳನ್ನು ಆದಷ್ಟು ಪ್ರಾಕೃತಿಕ ಶಕ್ತಿಗಳಿಗೆ ಸ್ನೇಹಿಯಾಗಿ ಪರಿವರ್ತಿಸಿ ಬಿಡುವುದು, ಮುಂದುವರಿದಂತೆ ವನ್ಯ ವಿಕಾಸವನ್ನು ಬಾಧಿಸಬಹುದಾದ ಎಲ್ಲ ಮನುಷ್ಯ ಕ್ರಿಯೆಗಳಿಂದ ರಕ್ಷಿಸುವುದು ವರ್ತಮಾನದ ಶಿಸ್ತು.

ಘಟ್ಟದ ಕೆಳಗಿನ ನಾಗರಿಕ ವಲಯದಲ್ಲಾದರೂ ಈ ದಾರಿಯನ್ನು ಸುವ್ಯವಸ್ಥಿತವಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ ಅದಕ್ಕೆ (ಅನೈತಿಕವಾಗಿಯೇ ಆದರೂ) ಪ್ರೇರಣೆ ಕೊಡುವ ‘ಮತಬ್ಯಾಂಕ್’ನ್ನು ಅವಿಭಜಿತ ದಕವಲಯದಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ಉಳಿಸಿಕೊಂಡಿಲ್ಲ. ಅದಕ್ಕೆ ಮುಖ್ಯ ಕಾರಣ – ಉಡುಪಿ ಉಷ್ಣ ವಿದ್ಯುತ್ ಸ್ಥಾವರ! ಇದನ್ನು ಪಕ್ಷಾತೀತವಾಗಿ ಸರಕಾರಗಳು ಒಳದಾರಿಗಳಲ್ಲಿ (ಬಹು ಮುಖ್ಯವಾಗಿ ಇದು ಪರಿಸರಪ್ರಿಯ ಎಂದು ಪ್ರಚುರಿಸಿದ್ದು) ಇಲ್ಲಿ ಸ್ಥಾಪಿಸಿ, ಹುಸಿ ಸಮರ್ಥನೆಗಳಲ್ಲಿ ಕಾಲ ಕಳೆಯುತ್ತಿದೆ. ಸ್ಥಾವರದ ನಿರ್ಮಾಣ ಮತ್ತು ನಿರ್ವಹಣೆ ಪ್ರಧಾನವಾಗಿ ವಾಹನ ಸಂಚಾರ ಒಂದಕ್ಕೆ ನಾಲ್ಕೋ ಎಂಟೋ ಪಾಲು ಏರಿದೆ. ಪ್ರಾಕೃತಿಕ ಶಕ್ತಿಗಳ ಸವಕಳಿಯ ಬಲ ಎಂದಿನಂತೆಯೇ ಇದೆ. ಇದೇ ಮಳೆಗಾಲಕ್ಕೂ ಮೊದಲು ನಾನು ವಿದ್ಯುತ್ ಸ್ಥಾವರವನ್ನು ಹೊರವಲಯದಿಂದಲೇ ಕಣ್ತುಂಬಿಕೊಳ್ಳಲು ಹೋಗಿದ್ದಾಗ ಕೇವಲ ಬೈಕ್ ಸಂಚಾರವೂ ತಡವರಿಸುವಷ್ಟು ರಸ್ತೆ ಕುಲಗೆಟ್ಟಿತ್ತು. ಅಂದರೆ ಈಗ ಹೇಗಿರಬಹುದು ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ.

ಸುಮಾರು ಇಪ್ಪತ್ನಾಲ್ಕು ವರ್ಷಗಳ ಹಿಂದೆ ಕಂಡ ಆ ಪರಿಸರ ನಮಗೆ ಕೊಟ್ಟ ಒಂದು ‘ಸಾಹಸಸುಖ’ದ ಕಥನದಲ್ಲಿ ಮುಂದುವರಿಯಲು ನಿಮ್ಮ ವಾರ ಕಾಲದ ಬಿಡುವನ್ನು, ತಾಳ್ಮೆಯನ್ನು ಕೋರುತ್ತೇನೆ.

(ಮುಂದುವರಿಯಲಿದೆ)