(ತಪೋಮಣೆಯಿಂದ ಸರ್ವಜ್ಞನ ಪೀಠಕ್ಕೆ ಭಾಗ-೨ ಚಕ್ರವರ್ತಿಗಳು ಸುತ್ತು ೧೫)

ಮಳೆಗಾಲದಲ್ಲಿ ಮೂರು ಹಗಲು, ಎರಡು ರಾತ್ರಿಗಳ ಸಾಹಸೀ ಪ್ರಾಕೃತಿಕ ಒಡನಾಟದ ಮೊದಲ ಭಾಗ ೬-೧೨-೨೦೧೩ರಂದು ಇಲ್ಲೇ ಪ್ರಕಟವಾಗಿದೆ ಗಮನಿಸಿ. ಹಾಗೇ ಚಕ್ರವರ್ತಿಗಳು ಪುಸ್ತಕದ ವಿ-ಧಾರಾವಾಹಿಯ ಹಿಂದಿನ ಎಲ್ಲ ೧೪ ಸುತ್ತುಗಳನ್ನೂ ಇಲ್ಲೇ ಆಯ್ದುಕೊಂಡು ನೋಡಲೂಬಹುದು.

ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು, ತನ್ನ ವಿವಿಧ ದಿಕ್ಕಿನ ಓಟಗಳ ಅನುಕೂಲಕ್ಕೆ ಕೆಲವು ಹೋಟೆಲುಗಳನ್ನು ಖಾಯಂ ಆಗಿ ನೆಚ್ಚುವುದಿತ್ತು. ಹಾಗೆ ಉಡುಪಿ ದಾರಿಯಲ್ಲಿ ಪಡುಬಿದ್ರೆ ಪೇಟೆಗೂ ತುಸು ಮೊದಲು ಹೆದ್ದಾರಿಯಂಚಿನಲ್ಲಿ ನಮಗೆ ಒಗ್ಗಿದ ಶುದ್ಧ ಸಸ್ಯಾಹಾರಿ ಹೋಟೆಲ್ ನಾಗರಾಜ ಶೆಟ್ಟಿ ಎಸ್ಟೇಟಿನದ್ದು. ಅದರ ಅವನತಿಯಲ್ಲಿ ಪಡುಬಿದ್ರೆ ಪೇಟೆಯದ್ದೇ ವಿಜಯ ವಿಹಾರಕ್ಕೆ ಬದಲಿದೆವು. ಹೆದ್ದಾರಿಯಲ್ಲಿ ಮುಂದುವರಿಯುವುದೇ ಇದ್ದರೆ, ಕುಂದಾಪುರದ ಶೆರೋನ್ ತುಂಬಾ ಕಾಲ ಬಳಸಿದ್ದೆವು. ಆದರೆ ಸಾಲಿಗ್ರಾಮದಲ್ಲಿ ಮಂಟಪ ಹೊಟೆಲ್ ಬಂದ ಮೇಲೆ ಆ ಕುಟುಂಬದ ಒಡನಾಟದ ನೆನಪೂ ಬೆಸೆದು ಶೆರೋನ್ ಬಿಟ್ಟಿದ್ದೇವೆ. ಕಾರ್ಕಳದಲ್ಲಿ ನಮಗೆ ಆಯ್ಕೆಯಿಲ್ಲದೆ ಕೆಲವು ಕಾಲ ಬಸ್ ನಿಲ್ದಾಣದ ಹೋಟೆಲಿಗೆ ಹೋಗುವುದಿತ್ತು. ಅಲ್ಲಿನ ರುಚಿ ಸಾಮಾನ್ಯ, ಶುಚಿ ಅಷ್ಟಕ್ಕಷ್ಟೆ. ಆದರೆ ಮೂಡಬಿದ್ರೆಯಲ್ಲಿ ಹೋಟೆಲ್ ಪಡಿವಾಳ್ ಬಂದ ಮೇಲೆ ನಮಗೆ ರುಚಿಶುಚಿಗೆ ನೆಲೆ ಸಿಕ್ಕಿದಂತಾಗಿತ್ತು. ಈಚೆ ಸುಮಾರು ಹತ್ತು ವರ್ಷಗಳಿಂದ ಕಾರ್ಕಳದ ಅನಂತಶಯನದ ಬಳಿಯ ಹೊಸ ಹೋಟೆಲ್ ಪ್ರಕಾಶ್ ತನ್ನ ಸಾಹಿತ್ಯಕ ಕಾರ್ಯಕ್ರಮಗಳಿಗೆ ಆಶ್ರಯ ಕೊಡುವ ಕಂಪು ಸೇರಿ, ಶುಚಿ ಮತ್ತು ಜೈನರುಚಿಯೊಡನೆ ನಮ್ಮಂಥ ‘ತಿರುಗೂಳಿಗಳ ಮನ ಗೆದ್ದಿದೆ.

ಏನೇ ಇರಲಿ, ಅಂದು ನಮ್ಮ ಬೆಳಗಿನ ಉಪಾಹಾರಕ್ಕೆ ನಾಗರಾಜಶೆಟ್ಟಿ ಎಸ್ಟೇಟ್ ಹೋಟೆಲ್‌ನಲ್ಲಿ ನಿಂತೆವು. ಅದು ಹೆದ್ದಾರಿಹೋಕರ ಅಗತ್ಯಗಳನ್ನು ಸರಿಯಾಗಿ ಗ್ರಹಿಸಿ ದಿನದಲ್ಲಿ ಹೆಚ್ಚು ಕಡಿಮೆ ಹದಿನಾರು ಗಂಟೆಯೂ ಸೇವಾತತ್ಪರವಾಗಿಯೂ ಇರುತ್ತಿತ್ತು. ಎಸ್ಟೇಟಿನ ನೇರ ಮುಂಬಯಿ ಸಂಪರ್ಕದಿಂದ ಮುಂದುವರಿದ ದಿನಗಳಲ್ಲಿ ಹೋಟೆಲಿನ ಆಡಳಿತ ಒತ್ತಿನಲ್ಲಿ ಭಾರೀ ಸ್ಟೇಯಿನ್‌ಲೆಸ್ ಸ್ಟೀಲ್ ಪಾತ್ರೆಗಳ ಮಳಿಗೆಯನ್ನೂ ತೆರೆದಿತ್ತು. ಆ ಕಾಲಕ್ಕೆ ಮದುವೆ ಮುಂಜಿಗಳ ಜವುಳಿಗೆ ಗುರುಪುರಕ್ಕೆ ಹೋಗುತ್ತಿದ್ದ ಜಿಲ್ಲೆಯ ಜನ ಸ್ಟೀಲ್ ಸಾಮಾನುಗಳಿಗೆ ಪಡುಬಿದ್ರೆ ಇದು ಖ್ಯಾತವೂ ಆಗಿತ್ತು. ಕಾಲಾನುಕ್ರಮದಲ್ಲಿ ಕೇಳಿಬಂದಂತೆ (ನನಗೆ ತೀರಾ ಅಪರಿಚಿತರಾದ) ನಾಗರಾಜ ಶೆಟ್ಟರ ಕೌಟುಂಬಿಕ ಕಲ್ಲೋಲಗಳಲ್ಲಿ ಎಲ್ಲ ವಹಿವಾಟೂ ಬಂದಾಗಿ ಇಂದು (೨೦೧೪) ಸಾಂಪ್ರದಾಯಿಕ ಬಾರ್ ಅಂಡ್ ರೆಸ್ಟೂರಾ ಮಟ್ಟದಲ್ಲಿ ಮಸಕಾಗಿದೆ! ಆದರೆ ಅಂದು ನಮಗೆ ರುಚಿಕರ ಉಪಾಹಾರವನ್ನು ಅದು ಧಾರಾಳ ಕೊಟ್ಟಿತ್ತು. ತಿಂಡಿ ತಿನ್ನುವ ಬಿಡುವು, ಬೈಕಿನಲ್ಲಿ ಗಂಟುಮೂಟೆ ಕಟ್ಟುವ ಕಲೆಯಲ್ಲಿ ಪಳಗದವರಿಗೆ ಸಾವರಿಸಿಕೊಳ್ಳಲೂ ಅವಕಾಶ ಚೆನ್ನಾಗಿ ಒದಗಿಸಿತ್ತು.

ಮಂಗಳೂರಿಗರಿಗೂ ಮೂಡಬಿದ್ರೆ-ಕಾರ್ಕಳ ಹತ್ತಿರದ ಮಾರ್ಗವೇ ಆಗಿತ್ತು. ಆದರೆ ನಾವು ಅಂದಿನ ಯೋಗ್ಯತಾ ಮಾನದಂಡದಲ್ಲಿ ತುಸು ಸುತ್ತಿನ ಉಡುಪಿಯ ಹೆದ್ದಾರಿ ಅನುಸರಿಸಿ, ಪಡುಬಿದ್ರೆಗಾಗಿಯೇ ಕಾರ್ಕಳ ತಲಪಿದ್ದೆವು. ಅಲ್ಲಿಗೆ ನೇರ ಬಂದಿದ್ದ ಬಿಸಿ ರೋಡಿನ ಮಿತ್ರರನ್ನು ಕೂಡಿಕೊಂಡು ತಂಡ ಆರು ಬೈಕ್ ಮತ್ತು ಹದಿಮೂರು ಜನರ ಪರಿಪೂರ್ಣತೆಯನ್ನು ಪಡೆಯಿತು. ಮುಂದಿನ ಕುದುರೆಮುಖ ದಾರಿಯಲ್ಲಿ ಆ ದಿನಗಳಲ್ಲಿ ಬಜಗೋಳಿಯೊಂದೇ ಸಣ್ಣ ಪೇಟೆ (ಅಲ್ಲೂ ದಾರಿ ಊರ ಹೊರವಲಯದಲ್ಲೇ ಹಾದು ಹೋಗುತ್ತದೆ). ಸಾಲದ್ದಕ್ಕೆ ಮಳೆಗಾಲವಾದ್ದರಿಂದ ಜನ, ವಾಹನ ಸಂಚಾರ ಇರಲಿಲ್ಲವೆಂದೇ ಹೇಳಬೇಕು. ನೇರ ಮತ್ತು ಹೆಚ್ಚುಕಡಿಮೆ ಮಟ್ಟವಾಗಿಯೇ ಹರಿವ ದಾರಿ ಲಂಬಕೋನದಲ್ಲಿ ಘಟ್ಟಮಾಲೆಗೆ ಘಟ್ಟಿಸುವ ಲಕ್ಷ್ಯ ಇಟ್ಟುಕೊಂಡಂತಿದೆ. ಆದರೆ ಮಳೆಗಾಲದ ಮಹಿಮೆಯಲ್ಲಿ ಹಿಂಜಿದ ಭಾರೀ ಅರಳೆಯ ರಾಶಿಗೇ ನುಗ್ಗುತ್ತಿದ್ದೇವೆ ಎಂಬ ಮೋಜು ನಮ್ಮದು. ಆಗಿನ್ನೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಿತವಾಗಿರಲಿಲ್ಲ. ಸಹಜವಾಗಿ ಮಾಳ-ಕವಲಿನಲ್ಲಿ ಇಂದಿರುವ ತನಿಖಾಠಾಣೆಯ ಅಂಕುಶವೂ ಇರಲಿಲ್ಲ. ತುಸು ಮುಂದುವರಿದಂತೆ ಸ್ಪಷ್ಟ ಏರುದಾರಿ ತೊಡಗಿದರೂ ನಮ್ಮ ಸವಾರಿಗೆ ಅಕ್ಷರಶಃ ವನ್ಯ ವಿಹಾರದ ಲಹರಿಯೇ ಬಂದಿತ್ತು. ಆವರಿಸಿ ಬರುವ ನಿತ್ಯ ಹಸಿರು, ನೀರಿನ ನೂರೆಂಟು ನಲಿವಿನ ಹೆಜ್ಜೆಗೌಜುಗಳು. ಒಮ್ಮೆಗೇ ತಿರುಗುವ ಕುರುಡು ಕೋನಗಳಿಲ್ಲ; ಶುದ್ಧ ರೇಶಿಮೆಯ ನವುರು ನಿರಿಗೆಗಳು. ನಮ್ಮ ಬೈಕುಗಳ ಓಟ ತತ್ತರಗುಟ್ಟಿ ಶ್ರುತಿ ಕರ್ಕಶವಾಗುವ ಕ್ಷಣಿಕ ಏರು ಇಲ್ಲಿಲ್ಲ. ನಾವೇ ತಪ್ಪಿ ಕೆಳ ಗೇರುಗಳಲ್ಲಿ ಹೋಗುತ್ತಿದ್ದೇವೋ ಬೈಕಿನ ಎಳೆ-ಶಕ್ತಿಯಲ್ಲೇ ಕೊರತೆ ಬಂತೋ ಎಂದು ಭ್ರಮಿಸುವಂತೆ ನಾವು ಘಾಟಿ ಏರುತ್ತಿರುತ್ತೇವೆ. ರಸ್ತೆಯ ಬಲ ಅಂಚಿನಾಚೆಗೆ ಮಾಳದ ಹರವು ನಮ್ಮ ಅರಿವಿಗೇ ಬಾರದಂತೆ ಕೊಳ್ಳದಾಳಕ್ಕೆ ಜಾರುತ್ತಲಿದೆಯೋ ಎಂಬ ಭಾವ ಕಾಡುತ್ತದೆ. ಮಳೆಯ ಹೊಡೆತವಿರಲಿಲ್ಲ. ಆದರೆ ಮಂಜಿನ ತೆರೆ ತೆರೆ ಸರಿಯುವಾಗ ದೀರ್ಘ ಸುತ್ತುಗಳನ್ನು ತೆಗೆಯುತ್ತ, ಹದಿನೈದು – ಮೂವತ್ತು ಮೀಟರ್‌ವರೆಗೂ ಆಳವಾಗಿಯೂ ವಿಸ್ತಾರವಾಗಿಯೂ ಕಡಿದ ಸೀಳುಗಳಲ್ಲಿ, ಬೆಟ್ಟದ ನೆರಳಲ್ಲಿ ಬೈಕ್ ಓಡಿಸುತ್ತಿದ್ದದ್ದು ನಿಜಕ್ಕೂ ಸುಂದರ ಅನುಭವ.

ಆ ಕಾಲಕ್ಕೆ ಅಷ್ಟೇನೂ ಪರಿಚಿತವಲ್ಲದ ರಸ್ತೆಯ ಓಟವನ್ನು ಮುನ್ಸೂಚಿಸುವ ಸಂಙ್ನಾಫಲಕಗಳು ಅಲ್ಲಿ ಹೆಜ್ಜೆಗೊಂದರಂತೆ ಸಿಗುತ್ತಿದ್ದು, ನಮ್ಮ ಸವಾರಿಯ ನಿಶ್ಚಿಂತೆಯನ್ನು ಹೆಚ್ಚು ಖಾತ್ರಿಪಡಿಸಿತ್ತು. ಅಷ್ಟಕ್ಕೇ ಮುಗಿಸದೆ, ಪ್ರಾಕೃತಿಕ ವೈಶಿಷ್ಟ್ಯಗಳನ್ನು ಎತ್ತಿ ತೋರುವ, ಕಗ್ಗಾಡ ಮೂಲೆಯಾದರೂ ಸಣ್ಣ ಪುಟ್ಟ ಭಾವನಾತ್ಮಕ ಕೇಂದ್ರಗಳನ್ನು ಫಲಕ ನೆಟ್ಟು ಹೆಸರಿಸುವ ಮೂಲಕ ತಂತ್ರ ಕೌಶಲದೊಡನೆ ಬೆರೆತ ಸೌಂದರ್ಯ ಪ್ರಜ್ಞೆ ಅಥವಾ ಸಾಮಾಜಿಕ ಕಳಕಳಿಯನ್ನೂ ರಸ್ತೆ ನಿರ್ಮಾಣದವರು ಪ್ರದರ್ಶಿಸಿದ್ದರು. ಆದರೆ ಕಾಲಾಂತರದಲ್ಲಿ (೨೦೧೪ರವರೆಗೆ) ಪ್ರವಾಸೋದ್ದಿಮೆ, ಧರ್ಮೋದ್ದಿಮೆಗಳು ಇವನ್ನು ವನ್ಯಕ್ಕೆ ಮಾರಕವಾಗುವ ದಿಕ್ಕಿನಲ್ಲಿ ಎಳೆದದ್ದನ್ನು ನಾನು ಇಲ್ಲೇ ಎರಡು ಉದಾಹರಣೆಗಳೊಂದಿಗೆ ತುಸುವೇ ವಿಸ್ತರಿಸುತ್ತೇನೆ. (ದಾರಿ ತಪ್ಪಿದ್ದಕ್ಕೆ ಕ್ಷಮೆಯಿರಲಿ)

ಹನುಮಾನ್ ಗುಂಡಿ: ಇಲ್ಲೇ ಹಿಂದಿನ ಅಧ್ಯಾಯ ಪ್ರಕೃತಿ ಸಂಸ್ಕೃತಿಯಲ್ಲಿ ಇದರ ಕುರಿತು ಸಾಂದರ್ಭಿಕವಾಗಿ ನಾನೇ ಕೊಟ್ಟ ಟಿಪ್ಪಣಿಯನ್ನು ನೀವು ಗಮನಿಸಬೇಕು. ವಾಸ್ತವದಲ್ಲಿ ವರಾಹತೀರ್ಥ, ಗಂಗಾಮೂಲಗಳಂತೆ ಇದು ‘ಬೋರ್ಡಿಗೂ ಬಿದ್ದಿರಲಿಲ್ಲ. ಮಲೆಯ ಎಲ್ಲಾ ಕಣಿವೆಗಳಲ್ಲು ಯಥಾನುಶಕ್ತಿ ಹುಟ್ಟಿ, ಹತ್ತೆಂಟನ್ನು ಸೇರಿ ಸೊಕ್ಕಿ ತಪ್ಪಲಿನ ದೊಡ್ಡ ಹೆಸರಿನಲ್ಲಿ ಕರಗಿಹೋಗುವ ಒಂದು ನೀರ ಝರಿಯಿದು. ಕೇವಲ ಗಣಿಗಾರಿಕೆಯ ಮಹಾದಾರಿ ಇದರ ಒತ್ತಿನಲ್ಲಿ ಬಂದ ಆಕಸ್ಮಿಕಕ್ಕೆ ಅಲ್ಲೊಂದು ವೀಕ್ಷಣಾ ದಿಬ್ಬದ ರಚನೆ ಕೊಟ್ಟಿದ್ದರು. ಆದರೆ ದಾರಿಹೋಕ ಸಾಹಸಿಗಳು ಆ ದಿಬ್ಬದ ಒತ್ತಿನಿಂದ ಝರಿಯನ್ನು ಸಮೀಪಿಸಲು ಮಾಡಿದ ತೀರ ಅಪಾಯಕಾರಿಯಾದ ಸವಕಲು ಜಾಡು ಆ ಝರಿಗೊಂದು ಪ್ರದರ್ಶನ ಮುಖವನ್ನೂ ನಿಧಾನಕ್ಕೆ ಕಥನದ ಬಲವನ್ನೂ ಕೊಟ್ಟಿತು. ನಿರ್ವಿವಾದವಾಗಿ ನಮ್ಮ ಜನಪದ ಸಂಪತ್ತು ಅದನ್ನು ಸೂತನಬ್ಬಿ ಎಂದು ಗುರುತಿಸಿತು, ಹನುಮಾನ್ ಗುಂಡಿ ಎಂದೂ ಹೆಸರಿಸಿ ಪ್ರಚುರಿಸಿತು. ಅಷ್ಟಾಗಿಯೂ ಮಳೆಗಾಲದಲ್ಲಿ ಅದರ ಜಾಡು ದುರ್ಗಮವಾಗುತ್ತಿತ್ತು, ಉಳಿದಂತೆ ಪ್ರಾಕೃತಿಕ ಸ್ಥಿತಿಯೇ ಸಾಮಾನ್ಯರನ್ನು ದೂರವೇ ಉಳಿಸಿತ್ತು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಸರಿಯಾದದ್ದೇ. ಆದರೆ ‘ಕಾಡಿರುವುದು ಮನುಷ್ಯನ ಉಪಯೋಗಕ್ಕೇ ಇನ್ನೂ ಬಿಡಿಸಿ ಹೇಳುವುದಿದ್ದರೆ, ಐಶಾರಾಮಕ್ಕೆ, ಮೋಜುಮಸಲತ್ತಿಗೆ ಎಂದೇ ಆಚರಣೆಯಲ್ಲಿ ತೋರುವ ಸಾಂಪ್ರದಾಯಿಕ ಅರಣ್ಯ ಇಲಾಖೆಯ ಇಅಯಲ್ಲೇ ಉಳಿದದ್ದು ದೊಡ್ಡ ದುರಂತ. (ನಾನು ಇದು ಅಥವಾ ಯಾವುದೇ ವನ್ಯ ರಕ್ಷಿತ ತಾಣಗಳ ಖಾಸಗೀಕರಣದ ಬಗ್ಗೆ ಮಾತಾಡುತ್ತಿಲ್ಲ, ಸ್ಪಷ್ಟ ವನ್ಯ ಸಂರಕ್ಷಣೆಯ ಕಲ್ಪನೆಯಿರುವ ಇಲಾಖೆಯನ್ನು ರೂಪಿಸಬೇಕಿತ್ತು ಎಂಬ ಕೊರಗನ್ನು ತೋಡಿಕೊಳ್ಳುತ್ತಿದ್ದೇನೆ.) ಇಲಾಖೆ ಗಿರಾಕಿಗಳಿಗೆ ಕೊಡುತ್ತಿದ್ದ ‘ಮೆನು ಕಾರ್ಡಿನಲ್ಲಿ ಹನುಮಾನ್ ಗುಂಡಿ ಬಹಳ ರುಚಿಯ ಐಟಂ! ಕೊಳ್ಳಕ್ಕಿಳಿಯಲು ಮೆಟ್ಟಿಲ ಸಾಲು, ಝರಿ ಪಾತ್ರೆಯ ‘ಅವ್ಯವಸ್ಥೆಯನ್ನು ‘ಯೂಸರ್ ಫ್ರೆಂಡ್ಲಿ ಮಾಡುವ ವಿವಿಧ ಪ್ರಯತ್ನಗಳು, ಪ್ರವೇಶದ್ವಾರ, ಸಿಬ್ಬಂದಿ, ಘೋಷಣಾ ಫಲಕಗಳು, ಟಿಕೆಟ್, ‘ಯೂಸ್ ಮಿ ಗೊರಿಲ್ಲಾಗಳು (ಇವಕ್ಕೆ ಸದಾ ಅಜೀರ್ಣ, ‘ಅಬ್ಯೂಸ್ ಮಿ ಆಗುತ್ತಲೇ ಇರುತ್ತದೆ!) ಇತ್ಯಾದಿ ಸದಾ ಸಂತೆಯಾದ ದಿನಗಳಿತ್ತು. ಪ್ರಾಮಾಣಿಕ ವನ್ಯಪ್ರೇಮಿಗಳ ಬಹುತರದ ಒತ್ತಡಕ್ಕೆ ಮಣಿದೋ ಇನ್ನೂ ವಿಸ್ತೃತ ಅನರ್ಥಯೋಜನೆಗೆ ಕಾವು ಕೊಡುವ ವಿರಾಮದಲ್ಲೋ ಸದ್ಯ ಹನುಮಾನ್ ಗುಂಡಿಯ ಪ್ರವೇಶದ್ವಾರದ ಬೀಗಕ್ಕೆ ತುಕ್ಕು ಹಿಡಿಯುತ್ತಿದೆ! ಕೊಳ್ಳದಾಳದ ನೀರಶಬ್ದ ಮೀರಿದ ಜಲಕ್ರೀಡೆಯ ಹುಯ್ಲು ನಿಂತಿದೆ. ಘೋಷಣಾ ಫಲಕಗಳನ್ನು ಬಿಸಿಲು ಗಾರೆಬ್ಬಿಸಿ, ಗಾಳಿ ಅಡ್ಡ ಕೆಡಹಿ, ವಾಕ್ಯಗಳ ಹುಸಿಯನ್ನು ಮಳೆ ಪಾಚಿ ಒರೆಗೆ ಹಚ್ಚುತ್ತಿವೆ. ಚೆಲ್ಲಿದ ಅಸಂಗತ ನಾಗರಿಕ ಕೊಳಕನ್ನು ಮುಳ್ಳಬಲ್ಲೆಗಳು ಒತ್ತಿಟ್ಟು, ಹುಲ್ಲು ಪೊದರುಗಳು ಮುಚ್ಚಿಟ್ಟು ಮತ್ತೆ ಭೂಮಿಕಾಯುವ ಕಾರ್ಯ ಮೌನವಾಗಿ ನಡೆದಿದೆ. ಜೈ ಹನುಮಾನ್!

ನಾಗತೀರ್ಥ: ಇದು ಮೋಜಿನ ತಾಣವಲ್ಲ, ಭಾವ-ಶೋಷಣೆಯ ಹುನ್ನಾರ, ತುಸು ಗಂಭೀರ! ಸಾಮಾನ್ಯವಾಗಿ ಎಲ್ಲಾ ಘಟ್ಟ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳು (ತಡೆರಹಿತ ಸರ್ಕಾರಿ ಬಸ್ಸುಗಳೂ ಸೇರಿ) ಅಘೋಷಿತ ನಿಲುಗಡೆಗೆ ಬರುವಂತೆ ಒಂದು ‘ದೇವಸಾನ್ನಿಧ್ಯ ಹಾಜರಿರುತ್ತದೆ. ಭಕ್ತನ ಬಳಿ ಬರುವ ಭಗವಂತನಂತೆ ಕುಂಕುಮಪ್ರಸಾದಾದಿ ಹೊತ್ತ ಆರತಿ ತಟ್ಟೆಗಳು ವಾಹನಗಳ ಕಿಟಕಿಗಳನ್ನು ತಡಕಾಡುವುದು ಮಾಮೂಲು! ಭಗವತಿ ಘಾಟಿ ರಸ್ತೆಯಲ್ಲಿ ಈ ‘ಕೊರತೆಯನ್ನು ನೀಗಿಸುವಂತೆ, ಕೆಲವು ವರ್ಷಗಳ ಹಿಂದೆ ಅದುವರೆಗೆ ಬರಿಯ ನಾಮಫಲಕದಲ್ಲಿದ್ದ ನಾಗತೀರ್ಥ ಅರಳಿತ್ತು. ಇದು ರಾತ್ರಿ ಕಳೆದ ಹಗಲಿನಲ್ಲಿ ಎದ್ದದ್ದಲ್ಲ. ಕಗ್ಗಾಡಿನ ಯಾವುದೋ ಅಗೋಚರ ಮೂಲೆಯಲ್ಲಿ, ಪವಾಡದಂತೆ ಉದ್ಭವಿಸಿದ್ದೂ ಅಲ್ಲ. ರಾಷ್ಟ್ರೀಯ ಉದ್ಯಾನವನದ ಮುಖ್ಯ ದಾರಿಯ ಬದಿಯಲ್ಲೇ ಪೂರ್ಣ ಅಕ್ರಮವಾಗಿ ನೆಲ ಹಿಡಿದು, ಕಟ್ಟಡ ಸಾಮಗ್ರಿ ನೆರಹಿ, ಅಲ್ಲಿನದೇ ನೀರು ಶಾಂತಿ ಕದಡಿ ತಿಂಗಳುಗಳ ಅಂತರದಲ್ಲಿ ಎದ್ದುನಿಂತ ರಚನೆ; ವನ್ಯ ಇಲಾಖೆಯ ಬೇಜವಾಬ್ದಾರಿಗೆ ಸ್ಪಷ್ಟ ಹಿಡಿದ ಕನ್ನಡಿ. ಅದರ ಉದ್ಘಾಟನೆಯೂ ಸಾಕಷ್ಟು ಧಾಂಧೂಂಗಳೊಡನೆ ನೆರವೇರಿದ ಹಂತದಲ್ಲಿ ವನ್ಯಪ್ರಿಯರ ಕ್ರಮಬದ್ಧವಾದ ಅಹವಾಲುಗಳು ಫಲಿಸಿತು. ಅಲ್ಲಿ ವರ್ತಮಾನದಲ್ಲಿ ಮನುಷ್ಯ ನೆಲೆ ಅಥವಾ ನಿಯತಕಾಲಿಕವಾಗಿಯಾದರೂ ಯಾವುದೇ ಸಾಮಾಜಿಕ ನಡಾವಳಿಗಳು ಇದ್ದುದಿಲ್ಲ. ಮುಂದೆ ನಿತ್ಯ-ನೈಮಿತ್ತಿಕ ಆರಾಧನೆಯ ನೆಪಗಳಲ್ಲಿ ಮನುಷ್ಯ ವಸತಿ ಮತ್ತು ಚಟುವಟಿಕೆಗಳು ವನಗೆಡಿಸದಂತೆ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕಾಯಿತು. ಆ ರಚನೆಗಳನ್ನು ತೆಗೆಯುವ ಅಪ್ರಿಯ ಕೆಲಸ ಬಿಟ್ಟು, ರಸ್ತೆಯ ಎರಡೂ ಬದಿಗೆ ಭದ್ರ ಬೇಲಿಬಿಗಿದಿದೆ. (ಕೆಟ್ಟ ಮೇಲೆ ಬುದ್ಧಿ ಬಂತು?) ಇಂದು ಸಹಜವಾಗಿ ಮನುಷ್ಯ ಚಟುವಟಿಕೆಗಳು ಇಲ್ಲವಾದ್ದರಿಂದ ತೆರವಾದ ಸ್ಥಳವನ್ನು ಮತ್ತೆ ಕಾಡು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕಾರ್ಯ ನಿಧಾನವಾಗಿ ನಡೆದಿದೆ. (ಮತ್ತೆ ನಮ್ಮ ಮೂರು ದಶಕಗಳ ಹಿಂದಿನ ಬೈಕೋಟಕ್ಕೆ ಮರಳೋಣ)

ಘಾಟಿದಾರಿ ಮೊದಲಲ್ಲಿ ಬಲಕ್ಕೆ ಮಾಳ ಕಣಿವೆಯನ್ನು ತೋರುತ್ತದೆ. ಮತ್ತೆ ಬೆಟ್ಟ ಸಾಲಿನ ಇನ್ನೊಂದು ಮಗ್ಗುಲಿಗೆ ನುಸುಳಿ ಪುಟ್ಟ ಕಣಿವೆಯೊಂದರ ಅಂಚಿನಲ್ಲಿ ಸಾಗುತ್ತದೆ. ಅಲ್ಲಿ ಸಿಕ್ಕ ಮೊದಲ ವೀಕ್ಷಣಾಕಟ್ಟೆ ನಮಗೆ ಐದು ಮಿನಿಟಿನ ವಿರಾಮತಾಣ. ಆ ಕೊಳ್ಳದಲ್ಲಿನ ಪುಟ್ಟ ಜಲಪಾತ – ಅವರಿವರ ಬಾಯಿಯಲ್ಲಿ ಕೇಳಿದಂತೆ ಜಗ್ ಫಾಲ್ಸ್. ಅದನ್ನು ಬೇಸಗೆಯಲ್ಲೂ ಕಂಡಿದ್ದೆ. ಆಗ ಝರಿಯೊಂದು ದಟ್ಟ ಪೊದೆಗಳ ಗುಹೆಯಿಂದ ಸೌಮ್ಯವಾಗಿ ಕಲಕಲಿಸುತ್ತ ಬೆಳಕಿಗೆ ಬರುತ್ತಿತ್ತು. ಹಾಸುಗಲ್ಲಿನ ಮೇಲೆ ತೆಳುವಾಗಿ ಹರಡಿ ಜಾರುತ್ತ ಕೊನೆಗೆ ಸ್ಪಷ್ಟ ಕಡೆದಿಟ್ಟ ಚರಂಡಿಯಂತೇ ತೋರುವ ಸವಕಲು ಓಣಿಯಲ್ಲಿ ಒಂದಾಗಿ ಕಂಗಿನ ಕಂಬದಂತೆ ನಾಲ್ಕೈದು ಮೀಟರ್ ಆಳದ ಕಿರು ಮಡುವಿಗೆ ಸಶಬ್ದ ಬಿದ್ದುಕೊಂಡಿತ್ತು. ಅದರ ವೀಕ್ಷಣ ಕಟ್ಟೆಯಿಂದ ತುಸು ಮೇಲಕ್ಕೆ ನಡೆದು, ವಾಟೆ ಪೊದರುಗಳ ನಡುವೆ ನುಸಿದು ಇಳಿದರೆ ಜಲಪಾತದ ನೆತ್ತಿ ಸೇರಬಹುದಿತ್ತು. ಹಾಗೇ ಕಣಿವೆಯ ಓರೆಯಲ್ಲಿ ಪೊದರನ್ನು ತುಸು ನುಗ್ಗಿನುರಿ ಮಾಡಿ ಜಾರಿಳಿದರೆ ತೊರೆಯ ಕೆಳಪಾತ್ರೆಯನ್ನೂ ಸೇರಬಹುದಿತ್ತು. ಧಾರೆಗೆ ತಲೆಮೈ ಕೊಟ್ಟು ತಾಡನ ಚಿಕಿತ್ಸೆಯನ್ನೂ ಪಡೆಯಬಹುದಿತ್ತು. (ಇಂದು ಈ ದಾರಿಯಲ್ಲಿ ವಾಹನದಿಂದಿಳಿದು ಮಾಡುವ ಯಾವ ಚಟುವಟಿಕೆಯೂ ರಾಷ್ಟ್ರೀಯ ಉದ್ಯಾನವನದ ನಿಯಮೋಲ್ಲಂಘನೆಯಾಗುತ್ತದೆ ನೆನಪಿರಲಿ!) ನೀರಿನ ಬೀಳಂಚಿನ ಕೊನೆಯಲ್ಲಿ ಕಲ್ಲು ಹೂಜಿಮೂತಿಯನ್ನು (ಜಗ್) ಹೋಲುವುದರಿಂದ, ನೀರಕಂಬ ಕೆಳಗಿನ ಮಡುವನ್ನು ಮಿದಿಯುವ ಸದ್ದಿನ ಅನ್ವರ್ಥನಾಮ, ಖ್ಯಾತ ‘ಜೋಗನ ತಮ್ಮನೆಂದು ಇಂವಾ ‘ಜಗ ಎಂದಿತ್ಯಾದಿ ಅಂದಾಜುಗಳು ಹರಿದದ್ದಿತ್ತು. ಆದರೆ ಇಂದು…

ಮಳೆಗಾಲದ ಜಗ್ಗನ ನಡೆಯೇ ಬೇರೆ. ಅಬ್ಬರತಾಳ ಕೇಳಿದ ಪುಂಡುವೇಷ ಹಸಿರ ತೆರೆಯನ್ನು ಕರೆಗೊತ್ತರಿಸಿ, ಮೇಲಿನಿಂದಿಳಿಬಿದ್ದ ಗೆಲ್ಲು ಬಳ್ಳಿಗಳ ಸೋಗೋಲೆಯನ್ನು ಚಿಮ್ಮುತ್ತ ನೊರೆನೀರ ಧೂಮವನ್ನೇ ಎಬ್ಬಿಸುತ್ತ ಧಾವಿಸುತ್ತಾನೆ. ಹಾಸುಗಲ್ಲಿನ ರಂಗವಷ್ಟೂ ಸಾಲದೆಂಬಂತೆ ಆಳೆತ್ತರಕ್ಕೆ ಸೊಕ್ಕಿ, ಬೀಳಿನಾಳವನ್ನು ಪೂರ್ಣ ಮರೆಸಿ ಭೋರ್ಗರೆಯುತ್ತಾನೆ. ಬೇಸಗೆಯ ಪುಟ್ಟ ಮಡು, ಮುಂದುವರಿದ ಬಳಕುಪಾತ್ರೆಗಳೆಲ್ಲದರ ಮಿತಿಯನ್ನು ಮೀರಿ, ಎಲ್ಲವನ್ನೂ ಒಂದು ಮಾಡಿ ಪ್ರೇಕ್ಷಕರೆದೆ ತಲ್ಲಣಿಸುವಂತೆ, ನಿಂತ ನೆಲ ಗದಗುಟ್ಟುವಂತೆ ಧೀಂಗಣಿಸಿದ್ದ ಜಗ್ಗ. ಜಲಪಾತದ ರಭಸಕ್ಕೆದ್ದ ನೀರಹನಿಗಳ ಮೊತ್ತವೇ ದಟ್ಟ ಹೊಗೆಯಂತೆ ಮೇಲಕ್ಕೇರಿ ಮೋಡವಾಗುವುದಿರಬೇಕು ಎಂದು ನಾವು ಭ್ರಮಿಸುವ ಹಾಗಿತ್ತು ದೃಶ್ಯ. ಅಲ್ಲದಿದ್ದರೂ ಅದುವರೆಗೆ ವಿರಾಮದಲ್ಲಿದ್ದ ನಿಜ ಮೋಡಗಳು ಪ್ರತಿಧಾಳಿ ಸಂಘಟಿಸಿದಂತೆ ವಾಸ್ತವದ ಮಳೆಯೇ ಸುರಿಯತೊಡಗಿದಾಗ ನಾವು ಮತ್ತೆ ಪಯಣ ಮುಂದುವರಿಸಿದೆವು.

ಬೆಟ್ಟರಾಯರ ಮಂಡೆ ಸುತ್ತಿದ್ದ ಮೂವತ್ತು ಮೊಳದುದ್ದದ ಕರಿಮುಂಡಾಸು ಅಲ್ಲಲ್ಲಿ ಜಾರಿದ್ದು, ನೂಲು ನೇಲುತ್ತಿದ್ದದ್ದು ಕಾಣುತ್ತಿತ್ತು. ಅದರಳವಿಗೆ ಬಂದಲ್ಲೆಲ್ಲ ನಮ್ಮನ್ನು ಮಾರು ದೂರ ದಿಟ್ಟಿ ಹರಿಯದಂತೆ ಮೋಡವೋ ಮಳೆಯೋ ಕವಿದುಬಿಡುತ್ತಿತ್ತು. ಇಲ್ಲಿ ಮಳೆ ಬರುವುದಲ್ಲ, ನೀರಕೋಲುಗಳಿಂದ ಬಾರಿಸಿಯೇಬಿಡುತ್ತದೆ. ಭರ್ಜರಿ ಮಳೆಗೆ ಸಾಮಾನ್ಯವಾಗಿ ಹೇಳುವ ಒನಕೆ ಗಾತ್ರದ ಹನಿ, ಧಾರೆ ಕಡಿಯದ ಹನಿ ಇಲ್ಲಿ ಸಾಕಾಗುವುದಿಲ್ಲ – ತುಂಬಿದ ಬಾನ ಬಾನಿಯೇ ಮಗುಚಿತ್ತು!

ಎಸ್ಕೆ ಬಾರ್ಡರ್ ಅಥವಾ ದಕ ಜಿಲ್ಲಾಗಡಿ ಎನ್ನುವ ಜಾಗ ಮೊದಲೇ ಹೇಳಿದಂತೆ ‘ಎಲ್ಲೂ ಅಲ್ಲದ ಸ್ಥಳ, ಬರಿಯ ಮೂರು ದಿಕ್ಕಿನ ಕೂಡುರಸ್ತೆ. ಇತ್ತ ಕಾರ್ಕಳ, ಎಡಕ್ಕೆ ಶೃಂಗೇರಿ, ನೇರ ಮಲ್ಲೇಶ್ವರ. ಇದಕ್ಕೆ ಚೌಕಿಯ (ನಾಲ್ಕರ ಸಂಗಮ) ಮಹತ್ವ ಒದಗಿಸಿದ್ದು ಅಲ್ಲೇ ಬಲದಿಕ್ಕಿನ ಕೊಳ್ಳವೇರಿ ಬರುವ ವಿದ್ಯುತ್ತಿನ ಉನ್ನತ ಶಕ್ತಿಯ ತಂತಿಸಾಲು (ಗಣಿಗಾರಿಕೆಯ ಆವಶ್ಯಕತೆಗಾಗಿ, ಬಹುಶಃ ವಾರಾಹಿಯಿಂದ ಬರುವ ಹೈ ಟೆನ್ಶನ್ ವಿದ್ಯುತ್). ಸುಮಾರು ನೂರು ಮೀಟರ್ ಅಗಲಕ್ಕೆ ಕುರುಚಲು ಪೊದೆಯೂ ಉಳಿಯದಂತೆ ಕಾಡು ಹೆರೆಸಿ ನಡುವೆ ಭೀಮಗಾತ್ರದ ಕಬ್ಬಿಣದ ಪಂಜರ-ಸ್ತಂಭ ನಿಲ್ಲಿಸಿ, ತೋಳುದಪ್ಪದ ತಂತಿ ಹರಿದಿತ್ತು. (ಈಚೆಗೆ ಅಲ್ಲಿಗೆ ಹೋಗಿದ್ದಾಗ ಗಣಿಗಾರಿಕೆ ನಿಂತ ಪರಿಣಾಮವಾಗಿ ಒಂದು ದಿಕ್ಕಿನಿಂದ ತಂತಿ ಕಳಚಿರುವ ಸ್ತಂಭ ಕಾಣಿಸಿತು. ಚಿತ್ರ ಗಮನಿಸಿ) ಅಲ್ಲಿ ಹೀಗೇ ನಿಂತು ಕಣಿವೆಯತ್ತ ವಿಹಂಗಮ ದಿಟ್ಟಿಯಟ್ಟುವುದನ್ನೂ ಓಣಿಯುದ್ದಕ್ಕೆ ಏರಿ ಬರುವ ಮೋಡಗಳಲ್ಲಿ ಮುಖ ತೊಳೆದು, ಶೀತಲಗಾಳಿಯಲ್ಲಿ ಆರಿಸಿಕೊಳ್ಳುವುದು ನಮ್ಮ ಮಾಮೂಲೀ ಅಭ್ಯಾಸ! ಆದರೆ ಈ ಬಾರಿ ಮಳೆ, ಚಳಿಯ ಒತ್ತಡದಲ್ಲಿ ಅರೆಮನಸ್ಸಿನಿಂದಲೇ ಕಟ್ಟೆ ಏರಿದೆವು. ತಂತಿ ಗಾಳಿಯನ್ನು ಸೀಳಿ ಎಬ್ಬಿಸುತ್ತಿದ್ದ ಗಂಭೀರ ನಾದವೂ ಅಪ್ಪಳಿಸುತ್ತಿದ್ದ ಮೋಡದಲೆಯಾಟದಲ್ಲಿ ನಾವು ನಿಂತ ಕಟ್ಟೆಯೇ ಹಾರುತಟ್ಟೆಯಾದ ಅನುಭವವೂ ನಿಜಕ್ಕು ವಿಶಿಷ್ಟ. ಮುಂದೆ ಹೋಗಬೇಕಿದ್ದ ಸ್ಥಳಗಳ ಪಟ್ಟಿಯಿಲ್ಲದಿರುತ್ತಿದ್ದರೆ ನಮ್ಮ ತಂಡ ಆ ಆನಂದದಲ್ಲೇ ಕಳೆದುಹೋಗುತ್ತಿತ್ತೋ ಏನೋ!

ಶೃಂಗೇರಿ ದಾರಿಯ ಮೊದಲ ಆರು ಕಿಮೀ ವಿಸ್ತಾರ ಜಲ್ಲಿ ಹಾಸಿನ ಅಡಿಗಟ್ಟು ಹೊಂದಿ ಡಾಮರು ಕಾಯುವಂತಿತ್ತು. ಆದರೆ ವಾಹನ ಸಂಚಾರದಿಂದ ಜಲ್ಲಿ ಎದ್ದು, ಕೆದರಿ, ಮಳೆನೀರಿಗೆ ಮಣ್ಣು ತೊಳೆದುಹೋಗಿ ನಮಗೆ ಹಲವು ಕಡೆಗಳಲ್ಲಿ ಬಿಗಿ ಉಸಿರಿನ ಸವಾರಿ ಸಿಕ್ಕಿತು. ಆ ಜಾಡು ಘಟ್ಟದ ಮೇಲಂಚಿನಲ್ಲಿ ಸಾಗಿದ್ದುದರಿಂದ ವನ್ಯದ ಅನುಭವ ದಟ್ಟವಾಗಿಯೇ ಇದ್ದರೂ ಬೋಳುಮಂಡೆಯ (ಶೋಲಾ ಕಾಡಿನ ಅಂಗವೇ ಆದ ಹುಲ್ಲುಗಾವಲು) ಗುಡ್ಡಗಳ ದರ್ಶನವೇ ಪ್ರಧಾನ ದೃಶ್ಯವಾಗಿತ್ತು. ಮುಂದೆ ಹಳೆದಾರಿ ಡಾಮರಿನದ್ದೇ ಆದರೂ ಅಗಲ ಕಿರಿದಾಗಿದ್ದು, ಹೊಸ ಅಗತ್ಯಗಳಿಗೆ ಯುಕ್ತ ಕಾಯಕಲ್ಪ ಕಾಣಲು ಬಾಕಿಯಿತ್ತು. ಇಕ್ಕೆಲಗಳ ಕೃಷಿ ಹಲವು ತಲೆಮಾರುಗಳಿಂದಲೇ ರೂಢಿಸಿದ್ದುದರಿಂದ ಮಲೆನಾಡಿಗೆ ತಕ್ಕುದಾಗಿ, ವನ್ಯದ್ದೇ ಇನ್ನೊಂದು ರೂಪವಾಗಿಯೇ ಶೋಭಿಸಿತ್ತು. ಗಾಳಿ, ಮಳೆಯ ಹೊಡೆತಕ್ಕೆ ಉರುಳಿದ ತಿರುಚಿದ ದರೆಮರಗಳ ಅಪ್ಪುಗೆಗೆ ವಿದ್ಯುತ್ ಕಂಬಗಳೂ ಸಿಕ್ಕಿ ಕಂಗಾಲಾದದ್ದು, ತಂತಿಗಳು ಕಡಿದು ಗೋಜಲಾಗಿದ್ದುವೆಲ್ಲ ಇನ್ನೂ ಅಧಿಕೃತರು ಬಂದು ನೋಡಿರದಷ್ಟು ಪ್ರಾಕೃತಿಕ ಹೊಸ ಸಾಹಸಗಳು! ದಾರಿಯಂಚಿನ ತೋಡು, ಹೊಳೆ ವ್ಯಸ್ತ ಪರಿಸರದ (ಗಣಿಗಾರಿಕೆ) ಸಂಕೇತವಾಗಿ, ಗಾಸಿಗೊಂಡ ಭೂಮಿಯ ರುಧಿರಧಾರೆಯೇ ಆಗಿ, ಕಡುಕೆಂಪಾಗಿ ಹರಿದಿತ್ತು. ಅವಿಚಾರಿ ಕೃಷಿಕರು ಗುಡ್ಡೆ ಕಡಿದು ತಟ್ಟು ಮಾಡುವುದು ಅಥವಾ ಗದ್ದೆ ಮಾಡುವುದು ಎಂದಾಗೆಲ್ಲ ಹೆಚ್ಚಿನ ಮಣ್ಣನ್ನು ತೋಡು, ಹೊಳೆಗಳ ಅಂಚಿನಲ್ಲಿ ಸುರಿದುಬಿಡುತ್ತಾರೆ. ಅವು ಮಳೆಗಾಲದ ಮಹಾಹರಿವಿನಲ್ಲಿ ‘ಚೊಕ್ಕವಾಗುವುದು ತಪ್ಪು ಎಂಬ ಅಪಕಲ್ಪನೆ ಅವರದ್ದು. ಆದರೆ ಕುದುರೆಮುಖ ಗಣಿಗಾರಿಕೆಯ ಮಹಾದುರಂತದ ಅಧ್ಯಯನ ನಡೆದಾಗ ಇಂಥ ಪ್ರತಿಯೊಂದೂ ಕ್ರಿಯೆ ಎಷ್ಟು ಪರಿಸರವಿರೋಧೀ ಎನ್ನುವುದು ಪ್ರಮಾಣೀಕೃತವಾಯಿತು. ಕಂಪೆನಿ ತನ್ನ ಪ್ರಚಾರಪತ್ರದಲ್ಲಿ ಹೇಳಿಕೊಂಡಂತೆ ಯಾವುದೇ ಮಣ್ಣನ್ನು ನದಿಗೆ ಬಿಡದಿರುವ ನಿಲುವಿನ ಮೇಲೂ ಆ ವಲಯದ ತೋಡು ಹೊಳೆಗಳ ನೀರು ಯಾಕಿಷ್ಟು ಕೆಂಪು, ಈಚಿನ ದಿನಗಳಲ್ಲಿ ಕೆಳವಲಯದ ಮಳೆಗಾಲದ ಪ್ರವಾಹಗಳು ದಂಡೆ ಮೀರುವುದು ಹೆಚ್ಚಿದ್ದು ಯಾಕೆ, ಮತ್ತೂ ಕೆಳವಲಯಗಳ ಅಣೆಕಟ್ಟುಗಳಲ್ಲಿ ಹೂಳಿನ ಪ್ರಮಾಣ ವಿಪರೀತವಾಗಿ ಲೆಕ್ಕ ಮೀರಿದ್ದು ಹೇಗೆ ಎಂದೆಲ್ಲಾ ತನಿಖೆ ಮಾಡಿದಾಗ ಅನಾವರಣಗೊಂಡ ಅಂಕಿಸಂಕಿಗಳು ಭಯ ಹುಟ್ಟಿಸುವಂತಿದ್ದುವು. ಸಹಜವಾಗಿ ಮುಂದೊಂದು ದಿನ ಕುದುರೆಮುಖ ಗಣಿಗಾರಿಕೆಯನ್ನು ನಿರ್ವಿವಾದವಾಗಿ ಪರಿಸರ ವೈರಿ ಎಂದು ಘೋಷಿಸಿ ಮುಚ್ಚಿಸಲು ಬಲವಾದ ಸಾಕ್ಷಿಯೂ ಆಯ್ತು. (ಹಾಗೇ ಇಂದು ಹೊಳೆಪಾತ್ರೆಗೆ ಯಾರೂ ಮಣ್ಣು ಕಸ ತುಂಬುವುದು ಶಿಕ್ಷಾರ್ಹ ಅಪರಾಧವಾಗುತ್ತದೆ!)

ಶೃಂಗೇರಿಗೆ ನಾಲ್ಕು ಕಿಮೀ ಮೊದಲೇ ಎಡಕ್ಕೊಂದು ಕವಲುದಾರಿ. ಅದರಲ್ಲೇ ಕಗ್ಗಾಡಮೂಲೆಗೆ ನುಗ್ಗಿದ ನಾಗರಿಕತೆಗೆ ಪ್ರಕೃತಿಯನ್ನು ಪಳಗಿಸಲಾಗದ ಮಿತಿ ಕಂಡು ನಿಂತ ಜಾಗದ ಹೆಸರು ಕಿಗ್ಗ. ಆ ಪುಟ್ಟ ಪೇಟೆಯ ಎರಡೂ ಬದಿಗೆ ಸಾಲುಮಲಗಿದ ಹಳೆಗಾಲದ ಮನೆಗಳು. ಅದರಲ್ಲೇ ಸ್ವಲ್ಪ ಮುಖ ಎತ್ತಿದಂತೆ ಒಂದೆರಡು ನಿತ್ಯಾವಶ್ಯಕ ವಸ್ತುಗಳ ಮಳಿಗೆಗಳು. ಕೊನೆಗೊಂದು ದೇವಾಲಯ. ಅದರ ಹಿತ್ತಲಿನ ಕಿರುಕಾಡು, ಅನತಿ ದೂರದ ಗುಡ್ಡೆಯಂತೇ ತೋರುವ ಶಿಖರಾಗ್ರ ಪಶ್ಚಿಮಘಟ್ಟದ ಈ ವಲಯ ಪ್ರಧಾನಿ ನರಸಿಂಹ ಪರ್ವತ (೧೧೫೩ ಮೀ.ಸ.ಮ). ಬಿಸಿಲ ದಿನಗಳಲ್ಲಿ ಅದನ್ನೇರಿ ನಿಂತರೆ ಪಡು ಕರಾವಳಿಯ ನೋಟ ಬಲು ಆಳದಲ್ಲಿ ಬಿಡಿಸಿದ ಚಿತ್ತಾರ. ಮಳೆಗಾಲದ ದರ್ಶನಕ್ಕೆ ಅದು ದಕ್ಕದು. ಆದರೂ ಮಳೆಗಾಲದ್ದೂ ಒಂದು ಚಿತ್ರವಿರಬೇಕಲ್ಲ ಮತ್ತದು ವಿರಳವರ್ಣಿತವೂ ಇರಬೇಕಲ್ಲಾ ಎನ್ನುವುದು ನಮ್ಮ ತರ್ಕ. ಅದಕ್ಕೆ ಬಾಯಿಯಾಗುವ ಛಲ ಹೊತ್ತು, ಬೈಕ್ ಬಿಟ್ಟು, ಕಾಡು ನುಗ್ಗಲು ಸಜ್ಜಾದೆವು.

ಕಿಗ್ಗದ ಪುಟ್ಟ ಅಂಗಡಿಯೊಂದರ ಮಾಲಿಕ ಕಾಡಪ್ಪಯ್ಯ. ಅರ್ಧ ಶತಕದ ಆಚೀಚಿನ ಹರಯ. ಸ್ಥೂಲಕಾಯರಾದರೂ ಚ್ಟುವಟಿಕೆಯಲ್ಲಿ ಲಘುದೇಹಿ. ವರ್ಷದ ಯಾವುದೇ ದಿನ ದಿನದ ಯಾವುದೇ ಹೊತ್ತು ‘ದಾರಿಯಾವುದಯ್ಯಾ ನರಸಿಂಹ ಪರ್ವತಕ್ಕೆ ಎಂದವರಿಗೆ ಕಾಡಪ್ಪಯ್ಯನೇ ಮಾರ್ಗದರ್ಶಿ. ಪೇಟೆಯವರ (ನಮ್ಮ) ಬಯಕೆಗೇನೂ ಹೊಂದದ ಮಳೆ, ಗಾಳಿ, ಮಂಜು, ಚಳಿ, ಜಿಗಣೆ ಎಲ್ಲ ವಿವರಿಸಿ, ಕಾಡಪ್ಪಯ್ಯನವರ ಅನುಭವ ನಮ್ಮನ್ನು ನಿರುತ್ತೇಜನಗೊಳಿಸಲು ನೋಡಿತು. ಮಹಿಳೆ (ದೇವಕಿ) ಮತ್ತು ಕಿರಿಸದಸ್ಯರನ್ನು (ಅಭಯ) ಗಮನಿಸಿದ ಮೇಲಂತೂ ಸ್ಪಷ್ಟವಾಗಿಯೇ ಬೇಡ ಎಂದರು. ಆದರೆ ನಮಗಿದೆಲ್ಲ ಹೊಸತಲ್ಲ ಎಂದು ನಾವೂ ಪುರಾವೆ ಕೊಟ್ಟು ಒಪ್ಪಿಸಿದೆವು. ಹೆಚ್ಚುಕಡಿಮೆ ನಮ್ಮ ಒತ್ತಾಯಕ್ಕೇ ಮಣಿದು ಶರಟೇರಿಸಿ, ಚಿರಿಚಿರಿ ಮಳೆಗೆ ಕೊಡೆಬಿಡಿಸಿ ಕಾಡುನುಗ್ಗಿಸಿದರು ಕಾಡಪ್ಪಯ್ಯ.

ದೇವಸ್ಥಾನದ ಒತ್ತಿನ ಗದ್ದೆಯ ಹುಣಿಯಲ್ಲಾಗಿ, ವಿಶಾಲ ಕೆರೆ ಏರಿ ಮೇಲೆ ಸಾಗಿ ಬೋಳುಗುಡ್ಡೆಯ ಜಾರುದಾರಿ ಹಿಡಿದೆವು. ಊರ ಜನಜಾನುವಾರಿನ ನಿತ್ಯ ಓಡಾಟದ ಅಳವಿ ಮೀರುತ್ತಿದ್ದಂತೆ ಪೊದರು, ಗಿಡ, ಮರ ಬಲಿಯುತ್ತ ಹೋಯಿತು. ಸಹಜವಾಗಿ ಬೇರುಗಟ್ಟೆಗಳು, ಮಿದು ತರಗೆಲೆ ಹಾಸಿನೊಡನೆ ಜಿಗಣೆ ಜಿಮಿಜಿಮಿಸಿತು. ಅವು ನಮ್ಮ ಹೆಜ್ಜೆಗೆ ಹತ್ತರಂತೆ ನೆಲದಲ್ಲಿ ನಿಮಿರಿ ನಿಂತು, ‘ಸ್ಪರ್ಶ ಸುಖ ಬಯಸಿ ಓಲಾಡುತ್ತಲಿದ್ದುವು. ಆ ವಾಮನಾಕೃತಿಗಳು ನಮ್ಮ ಪಾದವನ್ನೇ ‘ಬಲಿ ಹಾಕಲು ಹೊಂಚಿದ್ದರಲ್ಲಿ ಯಾವ ಗಂಭೀರ ಪೌರಾಣಿಕ ಸಂಚೂ ಇರಲಿಲ್ಲ! ಮುಟ್ಟಿದರೆ ಸ್ಪಂಜು, ಕಿತ್ತರೆ ಹಿಡಿದಲ್ಲಿಗೇ ಅಂಟುವ ಹಲಸಿನ ಮೇಣ, ಎಳೆದರೆ ರಬ್ಬರ್, ರಕ್ತಹೀರುವಲ್ಲಿ ಅತೀವ ನಾಜೂಕು, ಬಿಟ್ಟ ಗಾಯಗಳಂತೂ ಭಯಾನಕ ದೃಶ್ಯ, ಒಟ್ಟಾರೆ ಹೊಸಬರಿಗಂತೂ ಜಿಗಣೆ ಸದಾ ದುಃಸ್ವಪ್ನ. ನಮ್ಮವರಲ್ಲಿ ಗುಲ್ಲು ನಡೆದಿತ್ತು. ಪೂರ್ವಭಾವೀ ತಯಾರಿಯಲ್ಲೂ ಬಳಕೆಯಲ್ಲೂ ಅನೇಕ ವಿಚಾರ, ಕ್ರಮಗಳು ಬಂದರೂ ಅಂತಿಮವಾಗಿ ಉಳಿದದ್ದು ಚುರುಕು ನಡಿಗೆ ಮಾತ್ರ. ಒಂದು ಕಳೆಯಲು ನಿಂತರೆ ಮತ್ತೆಂಟು ತಗಲುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದುವರಿದೆವು.

ಕಾಡು ಕಳೆದು ಬೋಳು ನೆತ್ತಿ ತಲಪಿದೆವು. ಅದರಲ್ಲೇ ಮತ್ತೂ ಪಶ್ಚಿಮಕ್ಕೆ ಸಾಮಾನ್ಯ ಏರಿಕೆಯಲ್ಲೇ ಸರಿದೆವು. ಹನಿಯುತ್ತಿದ್ದ ಮಳೆಗಿಲ್ಲಿ ಸೊಕ್ಕಿನ ಗಾಳಿಯ ನೆಂಟು ಕೆಚ್ಚು ತಂದಿತ್ತು. ನಾವು ಮಳೇಕೋಟು ಧರಿಸಿದ್ದರೂ ಗುಂಡಿಪಟ್ಟಿ, ಕತ್ತಿನಪಟ್ಟಿಯ ಸಂದುಗಳಲ್ಲೆಲ್ಲ ಬಲವಂತದಿಂದ ನೀರು ನುಗ್ಗಿ ಅಂತರಂಗ ಬಹಿರಂಗಗಳನ್ನು ಏಕಪ್ರಕಾರ ತಣ್ಣಗಿರಿಸಿತ್ತು. ಮೋಡಗಳ ಲೋಕಕ್ಕೇ ನುಗ್ಗಿದ್ದ ನಮಗೆ ಮದುವೆ ಮನೆಯ ಕಾರುಭಾರಿಗಳಂತೆ ತೀವ್ರವಾಗಿ ಓಡಾಡುತ್ತಿದ್ದ ಮೋಡಗಳ ಎಡೆಯಲ್ಲಿ ಕಣಿವೆಯ ದೃಶ್ಯ ಬಿಟ್ಟು ತಂಡದವರೇ ಪರಸ್ಪರ ಸಂಪರ್ಕ ಕಳೆದುಹೋಗುವ ಅಪಾಯವಿತ್ತು. ಸವಕಲು ಜಾಡು ಮಾತ್ರ ತುಂಬ ಸ್ಪಷ್ಟವಿದ್ದುದರಿಂದ, ಹನಿ-ಹಲ್ಲೆ ನಿವಾರಿಸುವಂತೆ ಮುಂಬಾಗಿ, ಓರೆ ನೋಟದಲ್ಲಷ್ಟೇ ಕಾಡಪ್ಪಯ್ಯನ ಬಾಲಂಗೋಚಿಗಳಾಗಿದ್ದೆವು. ಹಾಗೆ ಸುಮಾರು ಒಂದೂಕಾಲು ಗಂಟೆಯ ನಡಿಗೆಯ ಕೊನೆಯಲ್ಲಿ ಎಲ್ಲೂ ಅಲ್ಲ ಎಂಬಲ್ಲಿ ಕಾಡಪ್ಪಯ್ಯ ಸಾಕ್ಷಿಯಾಗಿ ನಾವು ಶಿಖರ ಮುಟ್ಟಿದ್ದೆವು.

ನರಸಿಂಹ ಪರ್ವತದ ಶಿಖರ ವಿಸ್ತಾರ ಮೈದಾನ. ಒಂದಂಚಿನಲ್ಲಿ ಮೋಟುಗೋಡೆಯಷ್ಟೇ ಉಳಿದಿದ್ದ ಮನೆಯ ಅವಶೇಷವಿತ್ತು. ಹಿಂದೆ ಅಲ್ಲಿ ಯಾರೋ ವೃದ್ಧ ಸಾಧ್ವಿ ನೆಲೆಸಿ ಮೂರು ವರ್ಷ ಕಾಲ ತಪಸ್ಸು ಮಾಡಿದ್ದರಂತೆ. ಆಕೆಗೆ ಜೀವನಾವಶ್ಯಕತೆಗಳ ಪೂರೈಕೆಯನ್ನು ಇದೇ ಕಾಡಪ್ಪಯ್ಯನವರು ಅವಿರತ ನಡೆಸಿದ್ದರಂತೆ. ಆಗದವರು ಯಾರೋ ಇದನ್ನು ‘ಕಳ್ಳನೋಟು ಛಪಾವಣೆ ಮತ್ತು ಚಲಾವಣೆ ಎಂದೆಲ್ಲಾ ಗುಲ್ಲೆಬ್ಬಿಸಿದ್ದರಂತೆ. ಅದು ಕೊನೆಯಲ್ಲಿ ಠುಸ್ಸಾಯ್ತು ಎನ್ನುವುದನ್ನು ಹೇಳುವಾಗ ಕಾಡಪ್ಪಯ್ಯನವರ ಮುಖದ ಮೇಲೆ ಮಹಾಯುದ್ಧ ಗೆದ್ದ ಗೆಲುವಿತ್ತು. ಆದರೆ ಇಂಥಾ ಆಧುನಿಕ ಸ್ಥಳಪುರಾಣಗಳೆಲ್ಲ ನಿಜಸುಳ್ಳುಗಳ ಸರಹದ್ದಿನಲ್ಲೇ ಇರುವುದು ನನ್ನ ಅನುಭವಕ್ಕೆ ಬಂದ ಸತ್ಯ ಮತ್ತು ವಿಷಾದದ ಸಂಗತಿ. ಪುರಾಣಗಳಲ್ಲೆಲ್ಲ ಪ್ರಾಕೃತಿಕ ಏಕಾಂತವನ್ನು ಬಯಸಿ ಹೋಗುವವರು ಆದರ್ಶಗಳ ಬೆನ್ನು ಹತ್ತಿದವರು, ಸಾಮಾಜಿಕ ಹಿತ ಚಿಂತಕರು ಇದ್ದಿರಬಹುದು. ಇಂದು ಅಮಲು ಪದಾರ್ಥಗಳ ಬೆಳೆ (ಗಾಂಜಾ) ಮತ್ತು ತಯಾರಿ (ಕಳ್ಳಭಟ್ಟಿ), ಅಕ್ರಮ ಲೈಂಗಿಕತೆ, ಕಳ್ಳನೋಟು, ಭಯೋತ್ಪಾದನೆ ಮುಂತಾದವುಗಳಿಗೆ ಕಾಡು ಆಶ್ರಯ ತಾಣಗಳಾಗುತ್ತಿರುವುದನ್ನು ನಿರಾಕರಿಸುವಂತಿಲ್ಲ.

ಶಿಖರದ ತಗ್ಗಿನಲ್ಲೊಂದು ಸಣ್ಣ ಕೆರೆ; ಸ್ಥಳಪುರಾಣ ಪ್ರಕಾರ ಪಂಚನದಿಗಳ ಉದ್ಭವ ಕುಂಡ. ಸರ್ವೇಕ್ಷಣ ಭೂಪಟದ ಪ್ರಕಾರ ಸೀತಾನದಿಯ ಅಸಂಖ್ಯ ಮೂಲ ಸೀಳುಗಳಲ್ಲಿ ಇದು ನಿರ್ವಿವಾದವಾಗಿ ಒಂದು ಅಷ್ಟೆ. ಮತ್ತೆ ಅಂದಿನ ಸ್ಥಿತಿ ನೆನೆಸಿದರೆ, ಎಲ್ಲಕ್ಕೂ ಮೂಲ ತಾನೆಂದು ನಭೋಮಂಡಲ ಗರ್ಜಿಸಿ ಹೇಳಿ, ಮುಸಲಧಾರೆಗಳಲ್ಲಿ ನಮ್ಮನ್ನು ಕುಟ್ಟುವಾಗ ಪಂಚನದಿಯೇನು ಸಪ್ತ ಸಾಗರಗಳ ಮೂಲವೂ ಇಲ್ಲೇ ಇದೆ ಎಂದು ಯಾರೂ ಒಮ್ಮೆ ಒಪ್ಪುವಂತಿತ್ತು. ಮಳೆಯ ವಿಪರೀತಕ್ಕೆ ಗಾಳಿಮಂಜಿನ ಕೊಂಡಾಟ ಸೇರಿ ನಮ್ಮ ಶಿಖರದ ಭೇಟಿಯನ್ನು ಚುಟುಕಾಗಿ ಮುಗಿಸಬೇಕಾಯ್ತು. ಅಲ್ಲಿನ ಪುಟ್ಟ ದಿಬ್ಬವೇರಿ ತುಸು ಮುಂದುವರಿದರೆ ಪ್ರಪಾತದಂಚಿನಲ್ಲೊಂದು ಹಾಸು ಬಂಡೆಯಿತ್ತು. ಅದೇ ಋಷ್ಯಶೃಂಗನ ತಪೋಮಣೆಯಂತೆ. ಪುರಾಣಗಳು ಮಹಾತಪಸ್ವಿ ಋಷ್ಯಶೃಂಗನನ್ನು ‘ಮಳೆರಾಜನೆಂದೂ ಬಿಂಬಿಸಿರುವುದು ಅಂದಿನ ಅನುಭವದಲ್ಲಿ ತುಂಬ ಅನ್ವರ್ಥಕವಾಗಿಯೇ ಕಾಣಿಸಿತು. ವಿಶ್ವಾಸಿಗಳಿಗೆ ಬಂಡೆಯ ಮೇಲೆ ಮೂಡಿದ್ದ ಪಾದಗಳ ಅಚ್ಚು, ಅದರ ಮರೆಯಲ್ಲೇ ತೋರುತ್ತಿದ್ದ ಕೆಲವು (ಉದ್ಭವಮೂರ್ತಿಗಳೆಂದು ಸ್ಥಳಪುರಾಣ ಹೇಳುವ) ವಿಗ್ರಹಗಳು ಋಷ್ಯಶೃಂಗನದೇ ಪೂಜಾರ್ಹ ಸಂಕೇತಗಳು. ಘಟ್ಟಮಾಲೆಯನ್ನೇ ಅನುಭವಿಸಿ ಧನ್ಯರಾಗುವ ನಮಗೆ ಸಂಕೇತಗಳ ಹಂಗೇನೂ ಇಲ್ಲವಾದ್ದರಿಂದ ಹಾಗೇ ಮರಳಿದೆವು. ಪುಟ್ಟ ಕುಂಡದ ಬಳಿ ಐದೇ ಮಿನಿಟು ವಿರಮಿಸಿ ಲಘೂಪಹಾರ ಮಾಡಿ, ಕೆರೆನೀರನ್ನೇ ಧಾರಾಳ ಕುಡಿದು (ಬೇಸಗೆಯಂತೆ ದಾಹದ ಅನುಭವವಾಗದಿದ್ದರೂ ಚಳಿಮಳೆ ನಿರುತ್ತೇಜನಗೊಳಿಸಿದರೂ ಚಾರಣದಲ್ಲಿ ಕಾಲಕಾಲಕ್ಕೆ ನೀರು ಸೇವಿಸುವುದು ತುಂಬಾ ಅವಶ್ಯ), ಮರಳಿ ಕಿಗ್ಗದ ದಾರಿ ಹಿಡಿದೆವು.

ಕಿಗ್ಗದಲ್ಲಿ ‘ಹೋಟೆಲ್ ಇಲ್ಲ (ಆ ದಿನಗಳ ಮಾತು, ಈಗ ಇರಬಹುದು). ಆದರೆ ಫಣಿಯಪ್ಪಯ್ಯನವರ ಮನೆ ಕಾರ್ಯತಃ ಅದೇ ಕೆಲಸ ಮಾಡುತ್ತಿತ್ತು. ವಯೋವೃದ್ಧರೂ ಬಿಳಿಚಿಕೊಂಡು (ವಿ-ರಕ್ತರೋ ತೊನ್ನಿನ ಪರಿಣಾಮವೋ ಇಂದು ನೆನಪಾಗುತ್ತಿಲ್ಲ) ಅತ್ಯಂತ ಕೃಶರೂ ದುರ್ಬಲರೂ ಆಗಿದ್ದ ಫಣಿಯಪ್ಪಯ್ಯನವರನ್ನು ನಾವು ಶಿಖರದತ್ತ ಹೊರಡುವ ಮೊದಲೇ ಕಂಡು ತಲೆ ಲೆಕ್ಕ ಸಹಿತ ಊಟಕ್ಕೆ ಹೇಳಿಯೇ ಹೋಗಿದ್ದೆವು. ಹಾಗಾಗಿ ಮೂರು ಗಂಟೆಯ ಸುಮಾರಿಗೆ ಚಂಡಿ, ಚಳಿ ತೊಪ್ಪೆಯಾಗಿದ್ದ ನಮ್ಮನ್ನು ಕಿಗ್ಗ ಅಕ್ಷರಶಃ ಬಿಸಿಯೂಟದೊಡನೇ ಸ್ವಾಗತಿಸಿತು! ಮನೆಯ ಹೆಂಗಸರೇ ಸಾಂಪ್ರದಾಯಿಕ ಕ್ರಮದಂತೆ ನೆಲದಲ್ಲಿ ಚಾಪೆ, ಎಲೆ ಹಾಕಿ, ಬಡಿಸಿ, ಬಳಿದು, ನಾವು ಕೊಟ್ಟದ್ದನ್ನು ತೆಗೆದುಕೊಂಡರು. ಊರ ದೇವಸ್ಥಾನ ತುಸು ಐತಿಹಾಸಿಕ, ತುಸು ಕಾರಣಿಕಕ್ಕೂ ಹೆಸರಾಗಿದ್ದರೂ ನಮ್ಮ ಪ್ರಾಕೃತಿಕ ಲಕ್ಷ್ಯದ ಆದ್ಯತೆಯ ಪಟ್ಟಿಯಲ್ಲಿ ಸ್ಥಾನ ಗಳಿಸಿರಲಿಲ್ಲ. ಹಾಗಾಗಿ ಅದರ ದರ್ಶನದ ಉಪಚಾರಗಳನ್ನು ರದ್ದುಪಡಿಸಿ, ಮುಂದಿನೂರು – ಶೃಂಗೇರಿಯತ್ತ ಹೊರಟೆವು. ಅಲ್ಲಿಂದ ಹದಿನೈದೇ ಮಿನಿಟಿನ ದಾರಿ.

ಕ್ಷೇತ್ರ ಪ್ರಾಬಲ್ಯದಲ್ಲಿ ಶೃಂಗೇರಿ ಕಿಗ್ಗಗಳ ತುಲನೆ ಮಾಡುವ ಪ್ರಯತ್ನ ನನ್ನಿಂದಾಗದು. ಆದರೆ ಜನಪ್ರಿಯತೆಯಲ್ಲಿ ನಿರ್ವಿವಾದವಾಗಿ ಶೃಂಗೇರಿ ದೊಡ್ಡದು. ನರಸಿಂಹಪರ್ವತದ ದರ್ಶನದಲ್ಲಿ (ಚಾರಣಕ್ಕೆ ಹಿಡಿಯುವ ಸಮಯದ ಅಂದಾಜು ನಮಗಿರಲಿಲ್ಲ) ಹಗಲು ಕಳೆದುಹೋದರೆ ಮಾತ್ರ ಅಂದು ಶೃಂಗೇರಿವಾಸ ಎಂದಷ್ಟೇ ನಾನು ಲೆಕ್ಕ ಹಾಕಿದ್ದೆ. ಇಲ್ಲವಾದರೆ ನಮ್ಮ ತಂಡಕ್ಕದು ದಾರಿಯಂಚಿನ ಒಂದೂರು ಮಾತ್ರ. (ನಾನು ಸುಬ್ರಹ್ಮಣ್ಯಕ್ಕೆ ಕೊಟ್ಟ ಭೇಟಿಗಳಿಗೆ ಲೆಕ್ಕವಿಲ್ಲ. ಅದರಲ್ಲಿ ಕೆಲವು ಕುಮಾರಪರ್ವತಕ್ಕೆ ಹೋಗುವ ದಾರಿಯ ಅನಿವಾರ್ಯತೆ. ಮತ್ತು ಬಹುತೇಕ ಆ ವಲಯದ ಒಳ್ಳೆ ಹೋಟೆಲ್ ಭೇಟಿಗೆ ಮಾತ್ರ. ಅಲ್ಲಿನ ದೇವಸ್ಥಾನದ ಅಂಗಳಕ್ಕಿಳಿದ ಸಂದರ್ಭ ಎರಡೋ ಮೂರೋ ಬಾರಿ, ಗರ್ಭ ಗುಡಿಯ ಬಾಗಿಲಲ್ಲಿ ದೇವಬಿಂಬದ ದರ್ಶನಕ್ಕೆ ನಿಂತದ್ದು ಒಮ್ಮೆ ಮಾತ್ರ!) ನಾವು ಶೃಂಗೇರಿ ತಲಪಿದಾಗ ಹಗಲಿನ ಬೆಳಕು ಮತ್ತೂ ಕನಿಷ್ಠ ಎರಡು ಗಂಟೆಯಾದರೂ ದಕ್ಕುವಂತಿತ್ತು. ಹಾಗಾಗಿ ಅಲ್ಲಿ ತಂಗುವುದನ್ನು ರದ್ದುಪಡಿಸಿದೆವು. ಆದಷ್ಟು ಚುರುಕಾಗಿ ಸುಪ್ರಸಿದ್ಧ ದೇವಾಲಯ ಹಾಗೂ ಸೊಕ್ಕಿನ ತುಂಗಾ ಪ್ರವಾಹದ ಮೇಲೊಂದು ನೋಟ ಹಾಕುವ ಕೆಲಸ ನಡೆಸಿದೆವು. ಮಳೆಗಾಲದ ಆರ್ಭಟೆಗೆ ದೇವರೂ ಹೆಚ್ಚು ಒಳಗಿರಲು ಬಯಸಿದನೋ ಅರ್ಚಕರು ಭುಂಜಿತಾಯಾಸವನ್ನು ಲಂಬಿಸಿದರೋ ಆಲಯಗಳು ಮುಚ್ಚಿಯೇ ಇದ್ದುವು. ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎನ್ನುವ ಪೈಕಿ ನಾವಲ್ಲವಾದ್ದರಿಂದ ಕೇವಲ ತುಂಗಾದರ್ಶನ ಮಾಡಿಕೊಂಡೆವು. ಆ ಮೊದಲೇ ಬೆಳಿಗ್ಗೆ ನಾವು ಕಂಡಿದ್ದ ತುಂಗೆ ಇಲ್ಲೂ ರುದ್ರೆ, ರುಧಿರ ಸದೃಶೆ. ಅದರ ಎದುರು ದಂಡೆಯ ಮೇಲಿದ್ದ ಖ್ಯಾತ ಶಂಕರ ಮಠದತ್ತ ಚಾಚಿದ್ದ ಅಪೂರ್ಣ ಸೇತುವೆಯನ್ನು ಗಮನಿಸಿದೆವು. (ಒಂದೊಮ್ಮೆ ಪೂರ್ತಿಯಾಗಿದ್ದರೂ ನಮಗೆ ದಾಟುವ ಆಸಕ್ತಿ ಇರಲಿಲ್ಲ, ಬಿಡಿ.) ಪೇಟೆಯಲ್ಲಿ ಅವಸರವಸರವಾಗಿ ಹೋಟೆಲೊಂದರಲ್ಲಿ ರಾತ್ರಿಗೆ ಬುತ್ತಿಯನ್ನು ಕಟ್ಟಿಸಿಕೊಂಡು, ಮತ್ತೆ ಚಕ್ರವರ್ತಿಗಳಾದೆವು.

(ಮುಂದುವರಿಯಲಿದೆ)