ದಕಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಮೂಲದಲ್ಲೇ (ಜಲಾನಯನ ಪ್ರದೇಶದಲ್ಲೇ) ಪೂರ್ಣ ಕುಲಗೆಡಿಸುವ ಕೆಲಸಕ್ಕೆ ಹೊಸ ಮತ್ತು ದೊಡ್ಡ ಹೆಸರು – ‘ಎತ್ತಿನಹೊಳೆ (ಎತ್ತು ನೀರಾವರಿ) ತಿರುವು ಯೋಜನೆ. ‘ನೇತ್ರಾವತಿ ನದಿ ತಿರುವು ಎಂಬ ಮಹಾಯೋಜನೆ ನಾಡಿನಾದ್ಯಂತ ಪರಿಸರಾಸಕ್ತರು ಮತ್ತು ಸ್ವಲ್ಪ ಹೆಚ್ಚೇ ದಕ ಜಿಲ್ಲೆಯ ವಿಚಾರಪರರು ಒಡ್ಡಿದ ಪ್ರಾಥಮಿಕ ಪರೀಕ್ಷೆಗಳನ್ನು ಎದುರಿಸಲು ಹೆಣಗುತ್ತಲೇ ಇದೆ. ಏತನ್ಮಧ್ಯೆ ಮತ-ಮಾರುಕಟ್ಟೆಯಲ್ಲಿ ಬಯಲುಸೀಮೆಯ ಸಾಮಾನ್ಯರನ್ನು ಮರುಳುಗೊಳಿಸಲು, ಮುಖ್ಯವಾಗಿ ಭಾಜಪ ಸರಕಾರದ ಮುಖ್ಯಮಂತ್ರಿಗಳು (ಯಡ್ಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರು ಅಲ್ಲದೆ ಜನತಾದ ಕುಮಾರಸ್ವಾಮಿಯೂ) ನಮ್ಮ ಜಿಲ್ಲೆಯವರಿಗೆ ಅಪರಿಚಿತ ಹೆಸರಿನ ಮುಸುಕು ಕೊಟ್ಟು ಘೋಷಿಸಿ, ಪೋಷಿಸಿದ ಯೋಜನೆಯ ಹೆಸರು ಎತ್ತಿನಹೊಳೆ ತಿರುವು. ವಾಸ್ತವದಲ್ಲಿ ಎತ್ತಿನಹೊಳೆಯ ಹೆಸರಿನಡಿಯಲ್ಲಿ ಇಲ್ಲಿ ಸೇರಿಕೊಳ್ಳುವ ಹಳ್ಳಗಳೆಲ್ಲ (ಕಾಡುಮನೆ, ಕೇರೀಹಳ್ಳ, ಹೊಂಗಡಳ್ಳ) ನೇತ್ರಾವತಿ ನದಿಯ ಮೂರು ಮುಖ್ಯ ಜಲಾನಯನ ಪ್ರದೇಶಗಳಲ್ಲಿ ಒಂದಾದ ಸಕಲೇಶಪುರ-ಶಿರಾಡಿ ವಲಯದಲ್ಲಿರುವವೇ ಆಗಿವೆ. (ಉಳಿದೆರಡು ವಲಯಗಳು ೧. ಬೆಳ್ತಂಗಡಿ-ಚಾರ್ಮಾಡಿ ೨. ಕುಮಾರ ಪರ್ವತ-ಸುಬ್ರಹ್ಮಣ್ಯ.) ಸರಕಾರ ಕಾಂಗ್ರೆಸಿನದು ಬಂತು. ಆದರೆ ಮತಗಟ್ಟೆಯ ಭ್ರಮೆ, ಇನ್ನೂ ಮುಖ್ಯವಾಗಿ ಹಣ-ಹೊಳೆಯ ಮೋಹ ಪ್ರಜಾಸತ್ತೆಯಲ್ಲಿಂದು ಪಕ್ಷಾತೀತವಾಗಿ ಮೆರೆಯುತ್ತಿರುವ ಮಹಾರೋಗ. ಕಾಂಗ್ರೆಸ್ ಸರಕಾರವೂ ತಾತ್ತ್ವಿಕ ಬಲ, ವೈಜ್ಞಾನಿಕ ಬಲವಿಲ್ಲದ ಈ ಯೋಜನೆಗೆ ಬರಿಯ ಹೇಳಿಕೆಯ ಢಾಂಬಿಕತೆಯನ್ನು ಪ್ರದರ್ಶಿಸುತ್ತ ಬಲಪಡಿಸುತ್ತಲೇ ಇದೆ. ಪ್ರಜಾಸತ್ತಾತ್ಮಕ ಸರಕಾರ ನಡೆಸುತ್ತಿರುವ ಈ ಜನದ್ರೋಹವನ್ನು ಬರಿಯ ಪ್ರತಿ ಹೇಳಿಕೆಗಳಿಂದ, ಮೆರವಣಿಗೆ ಧರಣಿ ನಿರಶನ ಮುಂತಾದ ಜನಪ್ರಿಯ ಆವುಟಗಳಿಂದ ನಿಲ್ಲಿಸುವುದು ಅಷ್ಟೇನೂ ಯಶಸ್ಸು ತಾರದ ಹೆಣಗಾಟವಾಗುತ್ತದೆ. ಬದಲು, ಶುದ್ಧ ವಿಚಾರ ಬಲದಿಂದ, ಕಾನೂನು ಕ್ರಮಗಳಿಂದ ಸರಕಾರವನ್ನು ನಿರ್ದೇಶಿಸುವ ಅನಿವಾರ್ಯತೆ ಜನತೆಯಲ್ಲಿದೆ. ಎತ್ತಿನಹೊಳೆ ವಲಯದ ಮಳೆನೀರ ಮೊತ್ತ ಎಷ್ಟು, ಅದರ ಪ್ರವಾಹ ಪಾತ್ರೆಯುದ್ದಕ್ಕೆ ಬೀರುವ ಪ್ರಭಾವ ಎಂತದ್ದು, ಅಂತಿಮವಾಗಿ ಅದು ಸಮುದ್ರ ಸೇರುವಲ್ಲಿನ ಔಚಿತ್ಯ ಏನು ಎಂಬಿತ್ಯಾದಿ ಸಂಪನ್ಮೂಲವನ್ನು ವಸ್ತುನಿಷ್ಠವಾಗಿ ಸ್ಪಷ್ಟಪಡಿಸಿಕೊಳ್ಳಲು ದೇಶಾದ್ಯಂತ ವಿವಿಧ ಪರಿಣತರು ಒಟ್ಟು ಸೇರುವ ಒಂದು ವಿಚಾರ ಕೂಟ – ನೇತ್ರಾವತಿ ನದಿ ತಿರುವು ಯೋಜನೆಯ ಪರಿಣಾಮಗಳ ಕುರಿತು ರಾಷ್ಟ್ರೀಯ ವಿಚಾರ ಕಮ್ಮಟ, ಇದೇ ಫೆಬ್ರುವರಿ ಐದರಂದು ಮಂಗಳೂರಿನಲ್ಲಿ ನಡೆಯಲಿದೆ.

ಈ ರಾಷ್ಟ್ರೀಯ ಕಮ್ಮಟವನ್ನು ಎನ್.ಐ.ಟಿ.ಕೆ ಸುರತ್ಕಲ್, ಇದರ ಆನ್ವಯಿಕ ಬಲ ಹಾಗೂ ಚರದ್ರವ ವಿಜ್ಞಾನ ವಿಭಾಗ ಆಯೋಜಿಸುತ್ತಿದೆ. ಕೆನರಾ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಕುದುರೆಮುಖ ವನ್ಯಜೀವಿ ಪ್ರತಿಷ್ಠಾನ, ಜಿಲ್ಲೆಯ ವಿವಿಧ ಮೀನುಗಾರಿಕಾ ಸಂಘಟನೆಗಳು, ಮತ್ತು ಶ್ರೀ ಧ.ಮ ಆಡಳಿತ ನಿರ್ವಹಣಾ ಶಾಸ್ತ್ರದ ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ, ಮಂಗಳೂರು ಇವರು ಕಮ್ಮಟಕ್ಕೆ ಸಕ್ರಿಯ ಸಹಯೋಗ ಕೊಡುತ್ತಿದ್ದಾರೆ. ಹತ್ತಕ್ಕೂ ಮಿಕ್ಕು ಪರಿಣತರು (ಉದ್ಘಾಟನೆ ಮುಂತಾದ ಔಪಚಾರಿಕತೆಯ ಕಾಲಹರಣ ಇರುವುದಿಲ್ಲ) ನೇರ ನೇತ್ರಾವತಿ ನದಿ ತಿರುವಿನ ಪರಿಣಾಮಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸೂಕ್ಷ್ಮವಾಗಿ ಬಿಡಿಸಿಟ್ಟು, ವ್ಯಾಪಕ ಚರ್ಚೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರಿಂದ ದಿನದ ಕೊನೆಯಲ್ಲಿ ನೇತ್ರಾವತಿ ತಿರುವಿನ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಲೇಬೇಕಾದಂಥ ವೈಜ್ಞಾನಿಕ ಮಾಹಿತಿಕೋಶ ಸಿದ್ಧವಾಗಲಿದೆ. ಯಾವುದೇ ಪ್ರಾದೇಶಿಕ ಸ್ವಾರ್ಥಗಳಿಲ್ಲದ ಸ್ಪಷ್ಟ ಜನಾಭಿಪ್ರಾಯ ಹಾಗೂ ಹೋರಾಟದ ಮಾರ್ಗವೂ ನಿಚ್ಚಳವಾಗುವ ಹಾರೈಕೆಯಿದೆ. ಇದು ಖಚಿತ ನಿಲುವು ರೂಪಿಸುವ ಕಮ್ಮಟವಾದ್ದರಿಂದ ದಿನ ಒಂದಕ್ಕೇ ಸೀಮಿತಗೊಳಿಸಲಾಗಿದೆ. [ಕ್ಷಮಿಸಿ, ಕಮ್ಮಟ ಅನಿರ್ದಿಷ್ಟ ಮುಂದೂಡಲಾಗಿದೆ – ೧-೨-೨೦೧೪]

ದಿಲ್ಲಿ, ಮುಂಬೈ ಮುಂತಾಗೆ ದೇಶದ ವಿವಿಧೆಡೆಗಳಿಂದ ಪರಿಣಿತರು ಬರುತ್ತಿರುವುದರಿಂದ ದಿನ ಪೂರ್ತಿ ನಡೆಯುವ ಕಮ್ಮಟದ ಕಲಾಪಗಳೆಲ್ಲ ಅನಿವಾರ್ಯವಾಗಿ ಇಂಗ್ಲಿಷಿನಲ್ಲೇ ನಡೆಯುತ್ತವೆ. ಗಹನ ಅಂಕಿಸಂಕಿಗಳನ್ನು, ಭಾವಾವೇಶವನ್ನು ನಿವಾರಿಸಿದರೂ ಶುದ್ಧ ವೈಜ್ಞಾನಿಕ ಮಟ್ಟದಲ್ಲಿ ಕಮ್ಮಟ ನಡೆಯಲಿರುವುದರಿಂದ ಭಾಗವಹಿಸುವವರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ದಿನಪೂರ್ತಿ ಭಾಗಿಯಾಗುವ ಇಚ್ಛೆಯಿದ್ದವರು ಕೂಡಲೇ ತಮ್ಮ ಹೆಸರನ್ನು ಕೆಳಕಾಣಿಸಿದ ಮೂಲಗಳಲ್ಲಿ ನೋಂದಾಯಿಸಿ (ಉಚಿತ, ಯಾವುದೇ ಶುಲ್ಕವಿಲ್ಲ), ಸಂಘಟಕರಿಂದ ‘ಅನುಮೋದನೆ ಪಡೆದೇ ಬರಬೇಕಾಗಿ ಕೇಳಿಕೊಳ್ಳುತ್ತೇವೆ (ಸಂಘಟಕರ ಪರವಾಗಿ).

ಹಾಗೇ ಕಮ್ಮಟಕ್ಕೆ ಪೂರಕವಾಗಿ ಜನಾಭಿಪ್ರಾಯ ಸಂಕಲಿಸಲು ಸಹಾಯಕವಾಗುವ ಪ್ರಶ್ನಾವಳಿಯೊಂದನ್ನು ಲಗತ್ತಿಸಿದೆ. ಇದು ಸಾರ್ವಜನಿಕರಿಗೆ ಮುಕ್ತವಿದೆ. ಅಂದರೆ, ಕಮ್ಮಟದಲ್ಲಿ ಭಾಗಿಗಳಾಗಲು ಅನುಕೂಲವಿಲ್ಲದವರೂ ಇದನ್ನು ಇಲ್ಲೇ ಧಾರಾಳ ತುಂಬಿಸಿ, ಹೀಗೇ ಕಳಿಸಬೇಕಾಗಿ ವಿನಂತಿ. ಹೆಚ್ಚಿನ ಮುನ್-ಮಾಹಿತಿಗಾಗಿ ಕಮ್ಮಟದ ಕುರಿತು ಸಮಿತಿ ಹೊರಡಿಸಿದ ಅಧಿಕೃತ ಕರಪತ್ರದ ಅನುವಾದ:
ನೇತ್ರಾವತಿ ನದಿ ತಿರುವು ಯೋಜನಾ ಪರಿಣಾಮಗಳ ಕುರಿತು ರಾಷ್ಟ್ರೀಯ ವಿಚಾರ ಕಮ್ಮಟ

ಕಮ್ಮಟ ಮತ್ತದರ ನಿರೀಕ್ಷೆಗಳು:

ಪಶ್ಚಿಮ ಘಟ್ಟದಲ್ಲಿ ಹುಟ್ಟಿ, ಶೇಕಡಾ ನಲ್ವತ್ತಕ್ಕೂ ಮಿಕ್ಕು ಹರಿವನ್ನು ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳಲ್ಲೇ ಕಳೆಯುವ ನದಿ ನೇತ್ರಾವತಿ. ಈ ಪ್ರಾಕೃತಿಕ ವ್ಯವಸ್ಥೆ ಮಾನ್ಸೂನ್ ಮಳೆಯನ್ನು ಧಾರಾಳವಾಗಿ ಆಕರ್ಷಿಸುವುದರೊಡನೆ ಅಸಂಖ್ಯ ಪ್ರಾಣಿ ಪಕ್ಷಿಗಳಾದಿ ಜೀವವೈವಿಧ್ಯವನ್ನು ಪೋಷಿಸುತ್ತಿದೆ. ಇದನ್ನು ನಾಗರಿಕತೆಯ ಸುಸ್ಥಿರ ಭವಿಷ್ಯಕ್ಕಾಗಿ ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.

ಭಾರತ ಪರ್ಯಾಯದ್ವೀಪದ ಜಲಸಂಪನ್ಮೂಲ ನಕ್ಷೆಯಲ್ಲಿ ಪಶ್ಚಿಮಘಟ್ಟದ ಪಶ್ಚಿಮ ಮೈ, ಅಂದರೆ ಕರಾವಳಿಯ ಮುಖ ವಿಶಿಷ್ಟ ಸ್ಥಾನವನ್ನೇ ಪಡೆಯುತ್ತದೆ. ಮುಖ್ಯ ನೆಲದಿಂದ ಈ ಸಪುರ ನೆಲವನ್ನು ಅಸಂಖ್ಯ ಏಳುಬೀಳುಗಳೊಡನೆ (ಏಣು, ಕೊರಕಲುಗಳು, ನೆತ್ತಿಯಲ್ಲಿ ಶಿಖರ ಕಣಿವೆಗಳು) ಪ್ರತ್ಯೇಕಿಸುವ ಘಟ್ಟಮಾಲೆಯ ಮುಖ್ಯ ಭೂಸ್ಥಿತಿ ಮುರಕಲ್ಲಿನದು (ಲ್ಯಾಟಿರೈಟ್). ಸಾಲದ್ದಕ್ಕೆ ಘಟ್ಟದ ಪೂರ್ವಕ್ಕೆ ಹರಿಯುವ ತೊರೆ, ನದಿಗಳಿಗೆ ಹೋಲಿಸಿದರೆ ಇತ್ತ ಹರಿಯುವವೆಲ್ಲ ತೀವ್ರ ಇಳುಕಲನ್ನೂ ಕಾಣುತ್ತವೆ. ಇದರಿಂದ ನದಿಮುಖಜ ಭೂಮಿಗಳಲ್ಲಿ ಮೆಕ್ಕಲುಮಣ್ಣನ್ನು ಕಾಣುವ ಸ್ಥಿತಿ ತೀರಾ ಕಡಿಮೆ. ಕರಾವಳಿ ವಲಯ ಮಾನ್ಸೂನು ಅವಧಿ ಅಂದರೆ, ಸುಮಾರು ಒಂದುನೂರು ದಿನಗಳ ಧಾರಾಳ ಮಳೆಯನ್ನು ಕಂಡರೂ ಚಳಿಗಾಲದ ಕೊನೆ ಹಾಗೂ ಬೇಸಗೆಯ ದಿನಗಳನ್ನು ಸೇರಿಸಿ ಸುಮಾರು ೧೫೦ ರಿಂದ ೧೮೦ ದಿನಗಳ ಕಾಲ ತೀವ್ರ ನೀರ ಕೊರತೆಯನ್ನೇ ಅನುಭವಿಸುತ್ತದೆ. ಪ್ರತಿ ಮಳೆಗಾಲದಲ್ಲೂ ನೆಲದ ಮೇಲ್ಪದರದ ಜಲಧಾರಣ ಸ್ಥಿತಿ ಸಂತೃಪ್ತವಾದರೂ ಋತು ಮುಗಿಯುತ್ತಿದ್ದಂತೇ ಅಷ್ಟೇ ಚುರುಕಾಗಿ ಇಳಿದುಹೋಗುತ್ತದೆ. ಮಳೆಗಾಲದಲ್ಲಿ ಅಬ್ಬರದ ಹರಿವನ್ನು ಕಾಣಿಸುವ ತೊರೆ, ನದಿಗಳು ಉಳಿದಂತೆ, ಹೆಚ್ಚು ಕಡಿಮೆ ಆರೇಳು ತಿಂಗಳ ಕಾಲ ಬಹಳ ಕಡಿಮೆ ಹರಿಯುತ್ತವೆ, ಪೂರ್ತಿ ಒಣಗಿಯೇ ಹೋಗುತ್ತವೆ.

ನೇತ್ರಾವತಿ ನದಿ ದಕ್ಷಿಣ ಕನ್ನಡ ಜಿಲ್ಲೆಯ ಗೃಹ, ಕೃಷಿ ಹಾಗೂ ಔದ್ಯಮಿಕ ಅಗತ್ಯಗಳ ಬಹುಮುಖ್ಯ ಜಲಸಂಪನ್ಮೂಲ. ಮಳೆಯ ಕಾಲಿಕ ಮತ್ತು ಪ್ರಾದೇಶಿಕ ವ್ಯತ್ಯಯ, ಜನಸಂಖ್ಯಾ ವೃದ್ಧಿ, ನಗರೀಕರಣ, ಔದ್ಯಮೀಕರಣ ಮತ್ತು ಭೌಗೋಳಿಕ ಪರಿಸರದಲ್ಲಿನ ಏರುಪೇರುಗಳು ಮುಖ್ಯವಾಗಿ ನೇತ್ರಾವತಿ ನೀರಿನ ಲಭ್ಯತೆಯನ್ನು ಅನಿಶ್ಚಿತಗೊಳಿಸಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆತಂಕವುಂಟು ಮಾಡಿದೆ. ಶುದ್ಧನೀರಿನ ಬೇಡಿಕೆ ಮತ್ತು ಪೂರೈಕೆಗಳ ನಡುವಣ ಅಂತರ ದಿನೇದಿನೇ ತೀವ್ರವಾಗಿ ಹೆಚ್ಚುತ್ತಿರುವುದರೊಡನೆ ಆಧಾರಶ್ರುತಿಯಾಗಿರುವ ಮಳೆಯ ಕೊರತೆ ಕಾಡುತ್ತಿದೆ. ಉಷ್ಣವಲಯದಲ್ಲಿರುವ ಭಾರತ ತನ್ನ ಜಲಸಮೃದ್ಧಿಗೆ ಮುಖ್ಯವಾಗಿ ಅಸ್ಥಿರ ಮಾನ್ಸೂನ್ ಮಳೆಯನ್ನೇ ಅವಲಂಬಿಸುತ್ತದೆ. ಇದರಿಂದಾಗಿ ನೇತ್ರಾವತಿ ನದಿ ಜನವರಿಯಿಂದ ಮೇ ತಿಂಗಳವರೆಗೆ ಹೆಚ್ಚು ಕಡಿಮೆ ನೀರ ಹರಿವಿಲ್ಲದ ಒಣ ದಿನಗಳನ್ನೇ ಕಾಣುವಂತಾಗಿದೆ. ಹಾಗಾಗಿ ಲಭ್ಯ ನೀರನ್ನು ಜೋಪಾನ ಮಾಡಿ, ನಿತ್ಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಡೆಯುಂಟಾಗದಂತೆ ಬಳಸುವುದು ಅನಿವಾರ್ಯವಾಗಿದೆ.

ಸರಕಾರ ಈಗ ನೇತ್ರಾವತಿ ಕೊಲ್ಲಿಯ ನೀರನ್ನು ಪಶ್ಚಿಮಘಟ್ಟದ ಪೂರ್ವಮೈಗೆ ಹೊರಳಿಸಿ, ಚಿಕ್ಕಬಳ್ಳಾಪುರ, ಕೋಲಾರ ಮುಂತಾದೆಡೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಹಾಕಿಕೊಂಡಿದೆ. ಕಾರ್ಯಸಾಧ್ಯತಾ ವರದಿ ನೇತ್ರಾವತಿಯ ಉಪನದಿಗಳಾದ ಎತ್ತಿನ ಹೊಳೆ, ಕಾಡುಮನೆ ಹೊಳೆ, ಹೊಂಗಡಳ್ಳ, ಕೇರಿಹಳ್ಳ ಮುಂತಾದವುಗಳಿಗೆ ವಿವಿಧೆಡೆಗಳಲ್ಲಿ ಎಂಟು ಅಣೆಕಟ್ಟುಗಳನ್ನು ರಚಿಸಿ, ಸುಮಾರು ೨೪ ಟಿ.ಎಂ.ಸಿ ನೀರು ಎತ್ತುವುದನ್ನು ಮುಂಗಾಣುತ್ತಿದೆ. ಯೋಜನೆ ಒಂದು ನೂರು ಕಿಮೀಗೂ ಮಿಕ್ಕು ಉದ್ದಕ್ಕೆ ಕೊಳವೆಗಳನ್ನು ಹಾಸುವ, ಹಲವೆಡೆಗಳಲ್ಲಿ ಪಂಪ್‌ಹೌಸ್‌ಗಳನ್ನು ರಚಿಸಿ ಇನ್ನೂರು ಮೀಟರಿಗೂ ಮಿಕ್ಕು ಎತ್ತರಕ್ಕೆ ನೀರನ್ನೆತ್ತುವ, ಹರಿನೀರಿನಲ್ಲಿ ವಿದ್ಯುಚ್ಛಕ್ತಿ ತಯಾರಿಸುವ, ವಿದ್ಯುಚ್ಛಕ್ತಿ ಸಾಗಣಾ ತಂತಿಗಳನ್ನು ಎಳೆಯುವ ಸಾಕಷ್ಟು ಕೆಲಸಗಳನ್ನು ಪಶ್ಚಿಮಘಟ್ಟದ ವಲಯದಲ್ಲೇ ಮಾಡಿ ಇನ್ನಷ್ಟು ಅರಣ್ಯನಾಶವನ್ನು ಒಳಗೊಳ್ಳುತ್ತದೆ. ಪೂರ್ಣ ಯೋಜನೆ ೩೭೦ ಮೆ.ವಾ ವಿದ್ಯುಚ್ಛಕ್ತಿಯನ್ನೂ ೨೩೩ ಕಿಮೀ ಉದ್ದದ ಕಾಲುವೆಯನ್ನೂ ೨೫೦ ಕಿಮೀ ಉದ್ದದ ಕೊಳವೆ ಸಾಲನ್ನೂ ಹೊಂದಲಿದೆ. ಕಾರ್ಯಸಾಧ್ಯತಾ ವರದಿಯ ಆಧಾರದ ಮೇಲೆ ಅಂದಾಜಿಸಿದ ಒಟ್ಟು ವೆಚ್ಚ ೮೬೦೦ ಕೋಟಿ ರೂಪಾಯಿಗಳನ್ನು ಮೀರಲಿದೆ.

ನೀರನ್ನು ಕಣಿವೆ ಪಲ್ಲಟಿಸುವ ಯೋಜನೆ (ಇಂಟರ್ ಬೇಸಿನ್ ವಾಟರ್ ಟ್ರಾನ್ಸ್ ಫರ್ – ಐ.ಬಿ.ಡಬ್ಲ್ಯು.ಟಿ) ಇದಾಗಿರುವುದರಿಂದ ನದಿತಿರುವಿನ ಫಲಾನುಭವವನ್ನು ಲೆಕ್ಕ ಹಾಕುವ ಮೊದಲು ಮೂಲ ಕಣಿವೆಯ ನೀರಿನ ಅಗತ್ಯವನ್ನು ಅವಶ್ಯ ಪರಿಗಣಿಸಬೇಕಿತ್ತು. ಕಾರ್ಯಸಾಧ್ಯತಾ ವರದಿಯ ಆಧಾರದಲ್ಲಿ ಆಗಬೇಕಿದ್ದ ಕಾರ್ಯ ವಿವರಗಳ ವರದಿ (ಡಿಟೇಯ್ಲ್ಡ್ ಪ್ರಾಜೆಕ್ಟ್ ರಿಪೋರ್ಟ್ ಅಥವಾ ಡಿ.ಪಿ.ಎ), ಅಂದರೆ ಪಾರಿಸರಿಕ ಪ್ರಭಾವದ ವಿಶ್ಲೇಷಣೆ, ಆರ್ಥಿಕ ವಿಶ್ಲೇಷಣೆ ಮತ್ತು ಮೂಲ ಕಣಿವೆಯ ಅಗತ್ಯ ಮತ್ತು ಪೂರೈಕೆಯ ವರದಿಗಳು ಇಲ್ಲದೇ ಯೋಜನೆ ಜ್ಯಾರಿಗೆ ಬರುತ್ತಿದೆ. ಇಡಿಯ ಯೋಜನೆ ಒಂದು ನಕಾರಾತ್ಮಕ ಪ್ರಭಾವಬೀರುತ್ತದೆ. ಅದಕ್ಕೂ ಮಿಗಿಲಾಗಿ ಭ್ರಮಾತ್ಮಕವಾದ, ಸಂದೇಹಾಸ್ಪದವಾದ ಇದು ಉದ್ದೇಶಿಸಿದ ಲಕ್ಷ್ಯವನ್ನೇ ಕಳೆದುಕೊಳ್ಳುವಂತೆಯೂ ಇದೆ. ಮೂಲದಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆಂದೇ ಪ್ರಚಾರಪಡೆದ ಯೋಜನೆ ಇಂದು ತನ್ನ ಬಹ್ವಂಶವನ್ನು ನೀರಾವರಿ, (ಇಂಗುವಿಕೆಯಿಂದ) ಭೂಸಮೃದ್ಧಿ ಹಾಗೂ ಔದ್ಯಮಿಕ ಪೂರೈಕೆಗಳನ್ನೇ ಲಕ್ಷಿಸುತ್ತಿದೆ.

ಈಚಿನ ಜಾಗತಿಕ ಸಂಶೋಧನೆಗಳು ಹೇಳುತ್ತವೆ, ಯಾವುದೇ ನದಿಯಲ್ಲಿ ಋತುಮಾನಗಳ ಬದಲಾವಣೆಯೊಡನೆ ಬರುವ ಉಕ್ಕು, ಸೊರಗುಗಳು ವಿಶಿಷ್ಟ ಪಾರಿಸರಿಕ ಸೇವೆಗಳನ್ನೇ ಮಾಡಿ, ಪಾತ್ರೆಯುದ್ದಕ್ಕೂ ಮಿಲಿಯಾಂತರ ಜನಗಳ ಜೀವನವನ್ನು ಹಸನುಗೊಳಿಸುತ್ತವೆ. ಅದರ ವ್ಯತ್ಯಯದಲ್ಲಿ ಕಡಲು ಹಾಗೂ ಅದರ ಕಿನಾರೆಗೆ ಹರಿದು ಬರುವ ಸಿಹಿನೀರ ಕೊರತೆಯ ಪ್ರಭಾವದಲ್ಲಿ ಜಾಗತಿಕ ಉತ್ಪಾದಕತೆಗೇ ಸಂಚಕಾರ ಉಂಟಾಗಿದೆ. ಹಾಗಾಗಿ ಇಂದು ನದಿಮುಖಜ ಭೂಮಿ, ಅಳಿವೆ ಮತ್ತು ಸಮುದ್ರಕ್ಕೆ ಜೀವಪೋಷಕ ಸತ್ತ್ವಗಳನ್ನೂ ಮೆಕ್ಕಲು ಮಣ್ಣನ್ನೂ ಹೊತ್ತು ತರುವ ಪ್ರವಾಹವನ್ನು ‘ವ್ಯರ್ಥ ಎಂದು ಹೇಳುವುದು ತಪ್ಪಾಗುತ್ತದೆ. ರಾಷ್ಟ್ರೀಯ ಜಲನೀತಿಯ ಕರಡಿನಲ್ಲಿ ನದಿಹರಿವಿನ ಋತುಮಾನಗಳ ವ್ಯತ್ಯಯಗಳನ್ನು ತದ್ವತ್ ಅನುಸರಿಸುವುದು ಕಡ್ಡಾಯವೆಂದೇ ಉಲ್ಲೇಖಗೊಂಡಿದ್ದರೂ ಆನುಷ್ಠಾನಿಕ ನಿಯಮಗಳಲ್ಲಿ ಅದಿನ್ನೂ ಅರ್ಥ ಕಂಡುಕೊಂಡಿಲ್ಲ. ‘ವ್ಯರ್ಥಗೊಳ್ಳುವ ನೀರು ಎಂಬ ಅವಿಚಾರ ಪ್ರಾಕೃತಿಕವಾಗಿ ರೂಪುಗೊಂಡ ಕಣಿವೆಗಳನ್ನೇ ಅವಹೇಳನ ಮಾಡುತ್ತದೆ. ಪ್ರಾದೇಶಿಕವಾಗಿ ಏರುತ್ತಿರುವ ನೀರಿನ ಅಗತ್ಯಗಳನ್ನು ಪರಿಗಣಿಸಿ, ನಿರ್ವಹಣೆಯ ರೂಪರೇಖೆಗಳನ್ನು ಹಾಕುವಲ್ಲಿ ನದಿ ತಿರುಗಿಸುವುದರಿಂದಾಗುವ ದುಷ್ಪ್ರಭಾವವನ್ನು ಮರೆಯಬಾರದು. ತೊರೆ, ನದಿಗಳಲ್ಲಿನ ನೀರ ಹರಿವು ‘ವ್ಯರ್ಥವಲ್ಲ ಎನ್ನುವುದು ಸಮಾಜ ಮತ್ತು ಸರಕಾರ ಮನಗಂಡರೆ ಪರ್ಯಾಯ ವ್ಯವಸ್ಥೆಯನ್ನು ಯೋಚಿಸಲು ಮನಸ್ಸು ಮುಕ್ತವಾಗುತ್ತದೆ.

ಈ ಕೆಲವು ಹಾಗೂ ಇಂಥವೇ ಇನ್ನಷ್ಟು ಕಾರಣಗಳಿಗಾಗಿ ಸಹಜವಾಗಿ ನೇತ್ರಾವತಿ ನದಿಯನ್ನು ಗೃಹೋಪಯೋಗಗಳಿಗಾಗಿಯೇ ಅವಲಂಬಿಸಿ, ಅದರಲ್ಲೂ ಸುಮಾರು ಏಳು ತಿಂಗಳ ಕೊರತೆಯನ್ನೇ ಅನುಭವಿಸುತ್ತಿರುವವರು ನದಿ ತಿರುವಿನ ಯೋಜನೆಯನ್ನು ಬದ್ಧ ವಿರೋಧಿಸುತ್ತಾರೆ. ಅದು ಪಶ್ಚಿಮ ಘಟ್ಟ ಪರಿಸರಕ್ಕೆ ಉಂಟು ಮಾಡುವ ಖಾಯಂ ಹಾನಿಯ ಬಗ್ಗೆ ಆತಂಕಿತರೂ ಆಗಿದ್ದಾರೆ.

ಘಟ್ಟದ ಮೇಲಿನ ಹುಲ್ಲ ಹಾಸು ಮತ್ತು ದಟ್ಟ ಕಾಡು ಶುದ್ಧ ನೀರನ್ನು ಹಿಡಿದಿಟ್ಟು ನೇತ್ರಾವತಿಗೆ ಬಿಡುತ್ತಾ ಬೇಸಗೆಯ ಉದ್ದವನ್ನು ನಿರ್ವಹಿಸುತ್ತಿರುವ ಅಮೋಘ ಸೇವೆಯನ್ನು ನಾವು ಮನಗಾಣಲೇಬೇಕು. ನೇತ್ರಾವತಿ ಜಲಾನಯನ ಪ್ರದೇಶದ ವನ್ಯ ಪರಿಸರವನ್ನು ಅಭಿವೃದ್ಧಿಯ ಅಪಕಲ್ಪನೆಗಳಿಂದ ಕಾಪಾಡಲೇಬೇಕಾದ ತುರ್ತು ಈಗ ಬಂದಿದೆ.

ನದಿಹರಿವಿನ ಕಣಿವೆ ಪಲ್ಲಟಿಸುವ ಯೋಜನೆ, ಅದರಿಂದ ಮೂಲ ಕಣಿವೆಯ ಮೇಲಾಗುವ ಪರಿಣಾಮಗಳು, ಉಷ್ಣವಲಯ ಹಾಗೂ ನಿತ್ಯ ಹರಿದ್ವರ್ಣ ಕಾಡಿಗುಂಟಾಗುವ ಹಾನಿ, ಘಟ್ಟ ಮಾತ್ರವಲ್ಲದೆ ಕರಾವಳಿಯ ಪಾರಿಸರಿಕ ಅಸಮತೋಲನಗಳೆ ಮುಂತಾದ ವಿಚಾರಗಳ ಕುರಿತು ವಿವಿಧ ಸಂಘಟನೆಗಳ ಮತ್ತು ಪರಿಣತರ ಅಭಿಪ್ರಾಯಗಳನ್ನು ಕ್ರೋಢೀಕರಿಸುವಂತೆ ಈಗ ಒಂದು ದಿನದ ವಿಚಾರ ಕಮ್ಮಟವೊಂದು ಮಂಗಳೂರಿನಲ್ಲಿ ನಡೆಯುವುದಿದೆ. ಇದರ ಉದ್ದೇಶ ನೇತ್ರಾವತಿಯ ನದಿ ತಿರುವಿಗೂ ಮೊದಲೇ ಸಹಜ ಫಲಾನುಭವಿಗಳನ್ನು ಎಚ್ಚರಿಸುವುದೇ ಆಗಿದೆ. [ಕ್ಷಮಿಸಿ, ಕಮ್ಮಟ ಅನಿರ್ದಿಷ್ಟ ಮುಂದೂಡಲಾಗಿದೆ – ೧-೨-೨೦೧೪]

ಚರ್ಚೆಗೆ ಬರುವ ಮುಖ್ಯ ವಿಚಾರಗಳು:

ಚರದ್ರವ ವಿಜ್ಞಾನ, ಭೂ ವೈಜ್ಞಾನಿಕ ಮತ್ತು ಮಣ್ಣಿನ ಮೇಲಿನ ಪಾರಿಸರಿಕ ಪರಿಣಾಮಗಳು.
ನೀರಿಗೆ ಸಂಬಂಧಪಟ್ಟಂತೆ ಪಾರಿಸರಿಕ ವಿಚಾರಗಳು.
ಜೀವವೈವಿಧ್ಯ, ವನ್ಯ ಸಂರಕ್ಷಣೆ ಹಾಗೂ ಮತ್ಸ್ಯ ಪರಿಸರ.
ನಗರ ಹಾಗೂ ಗ್ರಾಮೀಣ ಯೋಜನೆಗಳ ಮೇಲುಂಟಾಗುವ ಸಾಮಾಜಿಕ ಪರಿಣಾಮಗಳು.

ಕಮ್ಮಟದಲ್ಲಿ ಭಾಗವಹಿಸುವವರು:

ಅಧ್ಯಯನಶೀಲರು, ಸಂಶೋಧಕರು, ಸಮಾಜ ಸೇವಾ ಸಂಸ್ಥೆಗಳ ಮುಖ್ಯರು ಮತ್ತು ವಿವಿಧ ಸ್ತರಗಳ ನೇತ್ರಾವತಿಯ ಸಹಜ ಫಲಾನುಭವಿಗಳು.

ಕಮ್ಮಟದಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ನಿಶ್ಚಿತಗೊಳಿಸುವುದಕ್ಕಾಗಿ (ಉಚಿತ) ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಭಾಗಿಗಳಿಗೆ ಆಹಾರ ಪಾನೀಯಗಳ ಕನಿಷ್ಠ ಆವಶ್ಯಕತೆಯನ್ನು ಸ್ಥಳದಲ್ಲೇ ಉಚಿತವಾಗಿ ಕೊಡಲಾಗುತ್ತದೆ. ಭಾಗವಹಿಸಲು ಇಷ್ಟಪಡುವವರು ಕೂಡಲೇ ಸಂಘಟನಾ ಸಮಿತಿಯ ಜಾಲತಾಣವನ್ನು ಇಲ್ಲಿ ಸಂಪರ್ಕಿಸಿ: www.netravathiworkshop.blogspot.in ಹೆಚ್ಚಿನ ವಿವರಗಳಿಗೆ ಸಮಿತಿಯನ್ನು ವಿದ್ಯುನ್ಮಾನ ಅಂಚೆಯ ಮೂಲಕ (ಅರ್ಥಾತ್ ಮಿಂಚಂಚೆ ಅಥವಾ ಇ-ಮೇಲ್) ಸಂಪರ್ಕಿಸ ಬಯಸುವವರಿಗೆ: netravathi.workshop@gmail.com ಅಂತರ್ಜಾಲದಲ್ಲೇ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸಲ್ಲಿಸಿ. ಮತ್ತೆ ಸಮಿತಿಯ ಅನುಮೋದನೆಯನ್ನು ಪಡೆದುಕೊಂಡು ಭಾಗವಹಿಸಿ. ಹೆಚ್ಚಿನ ಅವಕಾಶವಿದ್ದಲ್ಲಿ ಮಾತ್ರ ಕಮ್ಮಟದಂದೇ (೫-೨-೨೦೧೪) ಬೆಳಗ್ಗೆ ಎಂಟು ಗಂಟೆಯಿಂದ ಒಂಬತ್ತರೊಳಗೆ ನೋಂದಾವಣೆಗೆ ಅವಕಾಶ ತೆರೆದಿರುತ್ತದೆ. ಅವಶ್ಯ ಗಮನಿಸಿ: ಕಮ್ಮಟ ಒಂಬತ್ತು ಗಂಟೆಗೆ ಸರಿಯಾಗಿ, ಔಪಚಾರಿಕ ಸಭೆಯ ಹಂಗಿಲ್ಲದೆ ಶುರುವಾಗಲಿದೆ.