ತಪೋಮಣೆಯಿಂದ ಸರ್ವಜ್ಞ ಪೀಠಕ್ಕೆ – ನಾಲ್ಕು
ಚಕ್ರವರ್ತಿಗಳು – ಸುತ್ತು ಹದಿನೇಳು

ಕಲ್ಲು ಚೂರುಗಳ ಮೇಲಿನ ಉರುಡು, ಹಾವಂದಾರಿಯ ಸವಾರಿಸುಖ – ಅನುಭವಿಸಿದವನೇ ಬಲ್ಲ ಬೆಲ್ಲದ ಸವಿ!! ಸಡಿಲ ಕಲ್ಲುಗಳು ಮಗುಚಿದವು, ಪುಟ್ಟ ಕಲ್ಲುಗಳು ಆಚೀಚೆ ಸಿಡಿದು ಸರಿದು ಸಂದುಳಿಸಿ ಅಸ್ಥಿರತೆಯುಂಟು ಮಾಡಿ ಚಕ್ರ ನೆಲ ಕಚ್ಚಿ ಸವಾರಿಗಳು ಅಸ್ಥಿರವಾದುವು. ಕಲ್ಲು ಹಾಸಿನ ಹೊರ ಅಂಚಿನಲ್ಲಿ ಬಹುತೇಕ ಉಳಿಯದ ಹಸನಾದ ನೆಲವನ್ನು ಹುಡುಕಿ ಬಲು ನಿಧಾನಗತಿಯಷ್ಟೇ ಸಾಧ್ಯವಾಯ್ತು. ಕೆಲವೆಡೆಗಳಲ್ಲಿ ಚಕ್ರಕ್ಕಾಗುವ ಆಘಾತವನ್ನೂ ಪರಿಗಣಿಸಿ ಸಹವಾರರನ್ನು ಚಾರಣ ಸಾಹಸಕ್ಕಿಳಿಸಿ ಸವಾರರು ಸವಾರಿ ಸಾಹಸವನ್ನು ನಡೆಸಬೇಕಾಯ್ತು! ಇಲ್ಲಿ ನಿಧಾನವೇ ಪ್ರಧಾನ, ಅವಸರ ಸಲ್ಲ. ಹೆಚ್ಚೆಂದರೆ ಒಂದೆರಡು ಚಕ್ರಗಳು ಪಂಚೇರ್ ಆಗಬಹುದಿತ್ತು. ಆದರೆ ನಾವು ಚಕ್ರ ಮತ್ತು ಟ್ಯೂಬ್ ಕಳಚುವ ಕಲೆ, ಹೆಚ್ಚುವರಿ ಟ್ಯೂಬ್, ತೇಪೆ ಸಾಮಗ್ರಿ ಸಜ್ಜಿತರೇ ಇದ್ದುದರಿಂದ ನಿರಾತಂಕರಿದ್ದೆವು. ವೇಳೆ ಅಪರಾಹ್ನದ ಮೂರು ಗಂಟೆಯಾದ್ದರಿಂದ ಕಾಲವೂ ನಮ್ಮ ಪಕ್ಷದಲ್ಲೇ ಇತ್ತು. ‘ಮುಳ್ಳೆದ್ದ ದಾರಿಯ ಮೇಲೆ ಸುಮಾರು ಮೂರು ಕಿಮೀ ಗಡಬಡಿಸಿದ ಮೇಲೆ ತುಸು ವಿರಮಿಸಿದೆವು. ಅಲ್ಲಿ ಬಲದಿಂದೊಂದು ಹೆಚ್ಚು ಬಳಕೆಯ ದಾರಿ – ಕೊಲ್ಲೂರು ಬದಿಯಿಂದ ಶಿಖರಗಾಮಿ ವಾಹನಗಳು ಅನುಸರಿಸುವ ನಿಟ್ಟೂರು ದಾರಿ, ನಮ್ಮದನ್ನು ಕೂಡಿತ್ತು. ನಾವು ನಿಟ್ಟೂರ ಒಳದಾರಿಯನ್ನು ಮಾರಣೇ ದಿನದ ಮರು-ಯಾನಕ್ಕೆ ಮನದಲ್ಲೇ ಗುರುತು ಮಾಡಿಕೊಂಡೆವು. (ಸಂಪೆಕಟ್ಟೆ ಮುರ್ಕಾಯಿಯಲ್ಲಿ ಅಂದು ನಾವು ಅನುಸರಿಸಿದ ಎಡ ಕವಲನ್ನು ಅವಗಣಿಸಿದರೆ ನಿಟ್ಟೂರು ಎಂಟೂವರೆ ಕಿಮೀ ಮಾತ್ರ. ವಾಸ್ತವದಲ್ಲಿ ಆ ದಿನಗಳಲ್ಲಿ ಶೃಂಗೇರಿ (ಹೊಸನಗರ) – ಕೊಲ್ಲೂರ ಯಾತ್ರಿಗಳ ರಾಜಮಾರ್ಗದಲ್ಲಿ ಕೊಡಚಾದ್ರಿಗೆ ಕವಲು ಮತ್ತು ಲಕ್ಷ್ಯ ಬಹುಮಾನ್ಯವಾಗಿರಲೇ ಇಲ್ಲ.)

ಮುಂದಿನ ಒಂದು ಕಿಮೀ ಕೂಲಿಗಳು ಮುನ್ನುಡಿದಂತೆ ದೊಡ್ಡ ಕಲ್ಲ ಹಾಸಿನ ಜಾಡು. ಸಾಲದ್ದಕ್ಕೆ ಅದುವರೆಗೆ ಸಮತಟ್ಟಾಗಿದ್ದ ದಾರಿ ಏರುಮುಖವನ್ನು ತೋರತೊಡಗಿತ್ತು. ಸಹಜವಾಗಿ ಮಾರ್ಗದ ಹೊರ ಅಂಚಿನಲ್ಲಿ ಆತಂಕಕಾರಿ ಕೊಳ್ಳ ಕಾಣಿಸತೊಡಗಿತು. ಉಳಿದಂತೆ ಒಳ ಅಂಚಿನಿಂದ ತೊಡಗಿ ಮಾರ್ಗಕ್ಕೇ ಅಡ್ಡಹಾಯುವ ದಿಬ್ಬ-ಹಳ್ಳಗಳು (ಮಾರ್ಗದುದ್ದಕ್ಕೆ ಮಳೆನೀರ ಕೊರೆತ ತಡೆಯಲು ಇದು ಅನಿವಾರ್ಯ) ಕಾಡತೊಡಗಿದವು. ಇವುಗಳಿಂದ ನಾವು ಹಲವು ಬಾರಿ ಉದ್ದೇಶಪೂರ್ವಕವಾಗಿ, ಕೆಲವೊಮ್ಮೆ ತಳ್ಳಿಹೋದಂತೆಯೂ ಕಲ್ಲಚೂರುಗಳ ಮೇಲೆ ಬೈಕೋಡಿಸುವ ಅಪಾಯ ತಂದುಕೊಂಡೆವು. ಬೈಕಿನ ಹ್ಯಾಂಡಲ್ ಎಷ್ಟು ಬಿಗಿ ಹಿಡಿದರೂ ಕೆಲವೊಮ್ಮೆ ಕಲ್ಲಿನ ಆಘಾತಕ್ಕೆ ಅಡ್ಡ ಹೊಡೆದು ಮಗುಚುವುದು ಎಲ್ಲರನ್ನೂ ಕಾಡಿತು. ಅಂಚಿನ ಮಣ್ಣ ದಿಬ್ಬಗಳಲ್ಲಿ ಆಗೀಗ ಚಕ್ರ ಹೂತು ತೂರಾಡಿ ಬೀಳುವುದೂ ಅಷ್ಟೇ ಮಾಮೂಲೀ ಸಂಗತಿಯಾಗಿತ್ತು. ಸವಾರಿ ನಿಧಾನಗತಿ ಮತ್ತು ಅತಿ ಎಚ್ಚರದ್ದೇ ಆದ್ದರಿಂದ ವಾಹನ ಮತ್ತು ಸವಾರರಿಗೆ ಇದರಿಂದ ಹಾನಿಯೇನೂ ಸಂಭವಿಸಲಿಲ್ಲ. ಕಲ್ಲ ಹಾಸು ಮುಗಿಯುವ ಕೊನೆಯಲ್ಲೊಂದು ಸೇತುವೆಯಿಲ್ಲದ ತೊರೆ ದಾಟುವ ಪ್ರಸಂಗ. (ಹಿಂದೆ ಬೇಸಗೆಯ ಸವಾರಿಯಲ್ಲಿ ಶರತ್ ಬೈಕ್ ಸಿಕ್ಕಿಬಿದ್ದ ಸ್ಥಳ.) ಹಿಂದಿನ ದಿನದಂತೆ ಮಳೆ ಸುರಿಯುತ್ತಿದ್ದರೆ ಅಥವಾ ಮರುದಿನ ಮರಳುವ ದಾರಿಯಲ್ಲಿ ಮಳೆ ಆರ್ಭಟಿಸಿದರೆ ಇದರ ಸೊಕ್ಕು ಬಿನ್ನಾಣಗಳು ಹೇಗೋ ಎಂಬ ಯೋಚನೆ ಬಂದರೂ ವರ್ತಮಾನದಲ್ಲಿ ತೀವ್ರವಾಗಿ ತೊಡಗುವ ಉತ್ಸಾಹದಲ್ಲಿ, “ಬಂದದ್ದೆಲ್ಲಾ ಬರಲೀ ‘Go’ ಎಂದನ ಜೊತೆ ಸಾಗ್ಲೀ” ಹಾಡಿಕೊಳ್ಳುತ್ತ ಮುಂದುವರಿದೆವು.

ಕಾಡುಹೊಳೆ ದಾಟಿ ನೂರಡಿಗೆ ಕಲ್ಲು ಹಾಸು ಮುಗಿದಿತ್ತು. ನಿಜವಾದ ಸವಾಲು – ಘಾಟೀದಾರಿ, ಎದುರು ಮಲಗಿತ್ತು. ಸುಂದರರಾಯರಿಗೆ ಒರಟು ಸವಾರಿ ಒಗ್ಗುವುದೇ ಇಲ್ಲ. ಆದರೂ ಕಾಡು ಸುತ್ತುವ ನೋಡುವ ಸಂತೋಷಕ್ಕೆ ಅನಿವಾರ್ಯವಾಗಿ ಬೈಕು ತಂದಿದ್ದರು. ಅಲ್ಲಿ ನಮ್ಮ ಮುಂದಿನ ದಾರಿ, ಸಮಯಗಳ ತುಲನೆ ಮಾಡಿ ರಾಯರು ಬೈಕಿಳಿದರು! ಅಂದರೆ ಕಾಡುಹೊಳೆ ದಾಟಿದ್ದೇ ಸಿಗುವ ಆ ವಲಯದ ಕೊನೆಯ ರೈತನ ಮನೆಯಂಗಳದಲ್ಲಿ ಬೈಕ್ ಬಿಟ್ಟು ನಡೆದೇ ಹೊರಟರು. ಅವರ ಸಹವಾರ ವಿಷ್ಣು ನಾಯಕ್ ಅವರಿಗೆ ಅನಿವಾರ್ಯವಾಗಿ ಜೊತೆಗೊಟ್ಟರು. ಉಳಿದೈದು ಬೈಕುಗಳು ನಿರ್ಯೋಚನೆಯಿಂದ ಮುಂದುವರಿದುವು.

ಕೊಡಚಾದ್ರಿಗೆ ಹಿಂದೊಮ್ಮೆ ಬೇಸಗೆಯಲ್ಲಿನಾನೊಂದು ಬೈಕ್ ತಂಡ ತಂದಿದ್ದೆನಲ್ಲ. ಅದರಲ್ಲಿ ನನ್ನ ಬೈಕಿನ ಎಲ್ಲರು ಮತ್ತು ಅರವಿಂದರು ಮಾತ್ರ ಭಾಗವಹಿಸಿದ್ದೆವು. ಇಂದಿನ ತಂಡದ ಉಳಿದೆಲ್ಲ ಬೈಕ್ ಹಾಗೂ ಸವಾರರಿಗೆ ಈ ಅತಿ-ಕಾಲವೇ ಕೊಡಚಾದ್ರಿಯ ಪ್ರಥಮ ಅನುಭವ! ಕಷ್ಟದ ಸಂದರ್ಭಗಳಲ್ಲಿ ‘ಅನುಭವ ಸಹಜಸ್ಪಂದನವಿತ್ತು ಪರಿಹಾರ ಕೊಡುವ ಆಕರ. ಜತೆಗೇ ಆ ಗಳಿಕೆಯ ಸಂದರ್ಭದ ನೋವುಗಳ ಒಟ್ಟಣೆಯಾಗಿ ಹಿಂದೆ ಜಗ್ಗುವ ಹೊರೆಯೂ ಆಗುವುದುಂಟು! ಹಾಗಾಗಿಯೋ ಏನೋ ಅನುಭವದ ಹೊರೆಯಿಲ್ಲದ, ಸಾಹಸ ಓಟದಲ್ಲಿ ಅರ್ರಂಗೇಟ್ರಂ (ಮೊದಲ ರಂಗಪ್ರವೇಶ) ನಡೆಸುತ್ತಿದ್ದ ಮೂರು ಬೈಕುಗಳು ಒಂದು ಗುಂಪಾಗಿ ಮುಂದೆ ಧಾವಿಸಿದವು. ನನ್ನ ಮತ್ತು ಅರವಿಂದರ ಬೈಕ್ ಜಾರಿಕೆ, ಮಗುಚಿಕೆ, ಅಡ್ಡಬಿದ್ದರೂ ಹಾನಿಯಾಗದ ಪಟ್ಟು, ದಾರಿಯೊಳಗಿನ ಅತ್ಯುತ್ತಮ ಜಾಡು ಎಂದರಸುತ್ತ ಸಹಜ ಹಾವಂದಾರಿಯಲ್ಲೂ ಹೆಚ್ಚುವರಿ ಬಳಕು ಬಳಸುತ್ತ, ನಿಧಾನವಾಗಿಯೇ ಹಿಂಬಾಲಿಸಿದೆವು.

ಅರವಿಂದ ಹಳಗಾಲಕ್ಕೂ ಹಳತಾದ ಜಾವಾ ಬೈಕನ್ನಿಟ್ಟುಕೊಂಡಿದ್ದಾಗ (ಜಂಕೂಸ್!) ಭಾರೀ ಬಯಕೆ ಕಟ್ಟಿಕೊಂಡು ಕೊಂಡ ಹೊಸ ಬೈಕ್ – ಯೆಜ್ದಿ ರೋಡ್ ಕಿಂಗ್, ಒಂದು ಕಾಲಘಟ್ಟದಲ್ಲಿ ನಿಜದ ರಸ್ತೆರಾಜ. ಆದರೆ ಆಗಲೇ ಜಪಾನೀ ತಂತ್ರಜ್ಞಾನದ ಹೊಸ ತಲೆಮಾರಿನ ಬೈಕ್‌ಗಳು (ಹೀರೋ ಹೊಂಡಾ, ಇಂಡ್ ಸುಝುಕಿ, ಕವಾಸಾಕೀ ಬಜಾಜ್‌ನಂಥವು) ಭಾರತಕ್ಕೆ ಮಿಂಚಿನ ಆಕ್ರಮಣ ಮಾಡಿದ್ದವು. ನನ್ನದು ಹೀರೋಹೊಂಡಾ. ಅರವಿಂದರ ೧೫೦ ಸೀಸಿ ಬೈಕಿನೆದುರು ನನ್ನದು ಬಡಪಾಯಿ ೧೦೦ ಸೀಸಿ. ಆದರೆ ಹೋಲಿಕೆಯಲ್ಲಿ ಯೆಜ್ದಿಯ ಬಹುಪಾಲು ಶಕ್ತಿ ಅದರ ಸ್ಥೂಲದೇಹವನ್ನು (ಬೀಡು ಕಬ್ಬಿಣ) ಹೊರುವಲ್ಲೇ ವ್ಯರ್ಥವಾಗುವಂತಿತ್ತು. ಸಾಲದ್ದಕ್ಕೆ ದೃಢಶರೀರಿ ಸಮೀರ ಮತ್ತು ಇಬ್ಬರ ಸ್ವತಂತ್ರ ಗಂಟುಗದಡಿಗಳ ಮೇಲೆ ಗುಂಪಿನ ಅನುಕೂಲಕ್ಕಾಗಿ ಕೊಡಲಿ, ಪಂಪುಗಳ ಹೇರು. ಇಷ್ಟರ ಮೇಲೂ ಏಕವೇಗದಲ್ಲಿ ಓಡಿಸುವ ಅನುಕೂಲವಿದ್ದಿದ್ದರೆ ರಸ್ತೆರಾಜ ತಡವರಿಸುತ್ತಿರಲಿಲ್ಲ. ಮಳೆನೀರಿಗೆ ಕೊರಕಲು ಬಿದ್ದ ರಸ್ತೆ, ಉದುರು ಕೋಲು ಕಲ್ಲುಗಳ ಎಡೆಯಲ್ಲಿ ನಿಧಾನಿಸುವುದು ಅನಿವಾರ್ಯ. ಹಿಮ್ಮುರಿ ತಿರುವುಗಳ ಒಳಸುತ್ತುಗಳಂತೂ ಕೆಲವೆಡೆ ಚರಂಡಿಗಳೊಡನೆ ಸಾಯುಜ್ಯವನ್ನೇ ಕಂಡಂತಿತ್ತು. ಅಲ್ಲೆಲ್ಲ ತುಸು ಉತ್ತಮ ಜಾಡು ಸೇರುವವರೆಗೆ ಸಮೀರ ಇಳಿಯುವುದು, ಕೆಲವೆಡೆ ನೂಕಿ ಕೊಡುವುದೂ ನಡೆದಿತ್ತು. ಅಂಥಲ್ಲೆಲ್ಲಾ ಹೀರೋಹೊಂಡಾದ ಲಘುದೇಹ (ಅಲ್ಯೂಮಿನಿಯಂ ಮಿಶ್ರಲೋಹಿ), ಚತುರ್ಘಾತ ಯಂತ್ರದ ಗರಿಷ್ಠ ಕಾರ್ಯಕ್ಷಮತೆ ಜಗ್ಗದೆಯೆ, ಕುಗ್ಗದೆಯೆ ಹಿಗ್ಗಿ ನಡೆಸುತ್ತಿತ್ತು ನಮ್ಮನ್ನು ಮುಂದೆ ಮುಂದೆ! ನಮ್ಮ ಜನಸಂಖ್ಯೆ ಮೂರು, ಹಿಂದಿನ ಗಂಟು ಸಾಕಾಗದೆಂದು ಮುಂದೆ ಟ್ಯಾಂಕಿಗೂ ಅಡ್ಡ ಚೀಲ ಬಿಗಿದು ಸಾಮಾನು ಹೇರಿದ್ದೆ. ಬೈಕ್ ಹಗುರವಾಗಿ ನೆಲ ಕಚ್ಚದು, ಎದುರು ಚಕ್ರ ಎತ್ತಿಹೋಗಿ (ವೀಲೀಯಾಗುವುದು) ಸವಾರಿ ಪಲ್ಟಿಹೊಡೆಯುವ ಅಪಾಯವಿದೆ ಎಂದು ಹೆದತುವಂಥಲ್ಲೆಲ್ಲ ಬಹುಶಃ ಈ ಮುಂದಿನ ಹೇರು ಸರಿದೂಗಿಸಿಕೊಟ್ಟಿರಬೇಕು. ದೇವಕಿ ಅಭಯರು ಇಳಿಯುವುದಾಗಲೀ ಬೈಕನ್ನು ನೂಕುವುದಾಗಲೀ ಬೇಕಾಗಲೇ ಇಲ್ಲ. ನಮ್ಮೆರಡು ಬೈಕ್ ಪರಸ್ಪರ ಕಣ್ಣಳವಿಯಲ್ಲಿ ಇದ್ದುಕೊಂಡೇ ಘಾಟಿ ಹತ್ತಿದುವು.

ದಟ್ಟ ಕಾಡಿನೆಡೆಯಲ್ಲಿ, ಬೆಟ್ಟದ ಓರೆಯಲ್ಲಿ ಏಣು, ಕಿರುಕಣಿವೆಗಳನ್ನು ಅನುಸರಿಸಿ ಏಕಮುಖವಾಗಿ ಏರುತ್ತ ಬಲುಬೇಗನೆ ತೆರೆಮೈ ಸೇರಿದೆವು. ದಾರಿಯಂಚಿನಲ್ಲಿ ಬಿಡಿ ಕಿರುಮರ, ಪೊದರುಗಳಿದ್ದರೂ ಉಳಿದಂತೆ ಹುಲ್ಲುಹೊದ್ದ ಬೆಟ್ಟದ ವಿಸ್ತಾರ ನೋಟಕ್ಕೇನೂ ಅಡ್ಡಿಯಿರಲಿಲ್ಲ. ಇಲ್ಲಿ ಬೆಟ್ಟದ ಒಂದೇ ಮುಖದಲ್ಲಿ ಅಸಂಖ್ಯ ಎಡಬಲ ಹಿಮ್ಮುರಿ ತಿರುವುಗಳು. ದಾರಿಯ ಅಗಲ ಕಡಿಮೆ. ಗಟ್ಟಿಯಿಲ್ಲದ ಪದರುಶಿಲೆಗಳ ದರೆ, ಕಲ್ಲು ಮರಳುಮಿಶ್ರಿತ ನೆಲವಾಗಿ ಮಳೆನೀರ ಚರಂಡಿ ಬೇಕಾಬಿಟ್ಟಿ ಕೊರೆದು, ಪುಡಿಗಲ್ಲುಗಳ ಗುಪ್ಪೆಯಿಟ್ಟು ನಮ್ಮನ್ನೇ ಹೊಂಚಿದಂತಿತ್ತು. ಹಿಮ್ಮುರಿ ತಿರುವುಗಳಲ್ಲಂತೂ ಸವಾರಿಯೇ ಅಸಾಧ್ಯ ಎನ್ನುವ ಪರಿಸ್ಥಿತಿ. ಔನ್ನತ್ಯ ಗಳಿಸಿದಂತೆಲ್ಲ ಪೊದರುಗಳೂ ಇಲ್ಲವಾಗಿ, ದೃಷ್ಟಿ ಮುಕ್ತವಾಗುತ್ತಿತ್ತು. ಎಲ್ಲಿ ರಸ್ತೆಯಂಚಿಗೆ ನಿಂತು ನೋಡಿದರೂ ಬಂದ ಲೆಕ್ಕ ಸಿಗದಂತೆ, ಉಳಿದಿರುವ ಎತ್ತರ ಕೊಡಿ ಮುಟ್ಟದಂತೆ, ದಾರಿಯ ಮೇಲೆ ದಾರಿ ಪೇರಿಸಿಟ್ಟಂತೆ, ಉದ್ದ ಹಗ್ಗವನ್ನು ಅಸಂಖ್ಯ ಬಳುಕಿನೊಡನೆ ಬೆಟ್ಟದ ಮೈಯಲ್ಲಿ ಇಳಿಬಿಟ್ಟಂತೆ, ಜಿಗಿತಂತಿಯನ್ನು ಒತ್ತಿಟ್ಟಂತೆ, ರಾಕ್ಷಸನ ಮೆಟ್ಟಿಲ ಸಾಲಿನಂತೆ, ಬಿಚ್ಚಿಟ್ಟ ಪರ್ವತರಾಯರ ಕಡತದಂತೆ ಎಷ್ಟೂ ವಿವರಣೆಗಳನ್ನು ಪ್ರೇರಿಸುವಂತಿತ್ತು ದೃಶ್ಯ. ಕೆಲವೆಡೆ ಆಂಶಿಕವಾಗಿ ದರೆ ಕುಸಿತ ಕಾಣುತ್ತಿತ್ತು. ಮೇಲಿನ ಸುತ್ತಿನಲ್ಲಿ ಅದೇ ದಾರಿಯ ಅಂಚಿನ ಜರೆತ! ಒಂದೆರಡು ಕಡೆಯಷ್ಟೇ ಇಲಾಖೆ ಮಣ್ಣು ತೆರವುಗೊಳಿಸುವ ಕೆಲಸ ನಡೆಸಿತ್ತು. ಅಲ್ಲವಾದರೂ ನಮ್ಮ ಬೈಕುಗಳ ಪ್ರಗತಿಗೆ ಅಡ್ಡಿಯಾಗುವ ಸಮಸ್ಯೆ ಎಲ್ಲೂ ಇರಲಿಲ್ಲ.

ಶಿಖರಸಾಲಿನ ನೆತ್ತಿ ವಲಯ ತಲಪುತ್ತಿದ್ದಂತೆ ಮೇಘಪುರಿಗೇ ಲಗ್ಗೆಯಿಟ್ಟ ಅನುಭವ. ದಾರಿಯ ಹಿಮ್ಮುರಿ ತಿರುವುಗಳು ವಿರಳವಾಗಿ ಶುದ್ಧ ಹುಲ್ಲುಗಾವಲಿನ ದೃಶ್ಯ ಕಣ್ಣು ತುಂಬುವಂತಿತ್ತು. ಕೆಳಗಿನ ಹಳ್ಳಿಗಳಿಂದ ಬಂದ ನಾಲ್ಕೆಂಟು ಗೋವಳಿಗರು, ಕಂಬಳಿಕುಪ್ಪೆ ಹೊದ್ದುಕೊಂಡು ಮೇಯಲು ಬಿಟ್ಟ ಜಾನುವಾರು ಕಾವಲು ನಡೆಸಿದ್ದವರು ಮಳೆಗಾಲದಲ್ಲಿ ಈ ಪರಿ ಕಂಡದ್ದಿಲ್ಲ ಎಂದು ಬೆರಗುವಟ್ಟು ಬೈಕುಗಳನ್ನು ನೋಡುತ್ತ ನಿಂತಿದ್ದರು. ನಮ್ಮಿಂದ ಮುಂದೋಡಿದ ಮೂರು ಬೈಕುಗಳು ಸದ್ದೂ ಕೇಳದಷ್ಟು ದೂರವಾಗಿದ್ದರೂ ಅವರ ಕ್ಷೇಮವಾರ್ತೆಗೆ ಸಾಕ್ಷಿ ಇವರಾದರು.

ಜನಪ್ರಿಯವಾಗಿ ಸೂರ್ಯೋದಯ ಬೆಟ್ಟವೆಂದೇ ಖ್ಯಾತವಾದ ಕೊಡಚಾದ್ರಿ ಶ್ರೇಣಿಯ ಆ ಉತ್ತುಂಗದಿಂದ ಹಿಮ್ಮೈಗೆ ತುಸು ಇಳಿದು ಮತ್ತಷ್ಟು ಹಿಮ್ಮುರಿ ತಿರುವುಗಳ ಏರುದಾರಿ ಹಿಡಿದೆವು. ಈ ಪುಟ್ಟ ಕಣಿವೆಯ ರಕ್ಷಣೆಯಲ್ಲಿ ಕೆಲವು ಮರಗಳು ದೂರದೂರಕ್ಕೆ ರಸ್ತೆಗಂಚುಗಟ್ಟಿದ್ದವು. ಶಿಖರವಲಯದ ವಾತಾವರಣಕ್ಕೆ ಸಹಜವಾಗಿ ಅವು ಮೈಪೂರಾ ಜೊಂಡಿನ ಕಂಬಳಿಯನ್ನೇ ಹೊದ್ದುಕೊಂಡು ಶೀತಗಾಳಿಗೆ ಗದಗುಟ್ಟುವಂತೆಯೇ ತೋರುತ್ತಿತ್ತು. ಮೋಡದಲೆಗಳಲ್ಲಿ ಈ ಮರಗಳು ಒಮ್ಮೆ ಅದೃಶ್ಯವಾಗಿ ಮತ್ತೆ ಛಾಯಾರೂಪದಲ್ಲಿ ತೋರಿ ನಮ್ಮ ಪಯಣವನ್ನು ಅನೂಹ್ಯಲೋಕಕ್ಕೇ ಒಯ್ದವು. ಮಳೆಗಾಳಿಯ ಬಿರುಸಿಗೆ ಒಂದೆರಡು ಕಡೆ ಭಾರೀ ಮರಗಳೇ ದಾರಿಗಡ್ಡ ಬಿದ್ದಿದ್ದುವು. ಒಂದರ ಕೊಂಬೆಗಳೆಡೆಯಲ್ಲಿ ಬೈಕುಗಳನ್ನು ನೂಕಿ ದಾಟಿಸಿಕೊಂಡೆವು. ಇನ್ನೊಂದು ಕೆಲವು ದಿನಗಳ ಹಿಂದಿನ ಕುಸಿತದ್ದಿರಬೇಕು, ಕತ್ತಿ ಕೊಡಲಿ ಪ್ರಯೋಗ ನಡೆಸುವವರು ಕಾರ್ಯನಿರತರಾಗಿದ್ದರು ಮತ್ತು ಬೈಕು ದಾಟಿಸುವಷ್ಟು ಜಾಡು ಮುಕ್ತಗೊಳಿಸಿಯೂ ಆಗಿತ್ತು. ಅದನ್ನುತ್ತರಿಸಿ, ಒತ್ತರಿಸುತ್ತಿದ್ದ ಸಂಜೆಗತ್ತಲೊಡನೆ ಮೇಘಾವಳಿಯ ದಾಳಿಗೆ ಬೈಕಿನ ಹೆದ್ದೀಪ ಬೆಳಗಿ, ಕಣ್ಣೆವೆ ಚೂಪು ಮಾಡಿ ಏರೇರುತ್ತಿದ್ದಂತೆ. . . .

ಅಂತರಿಕ್ಷದಿಂದ ಜಯಘೋಷ ಕೇಳಿತು, ಇನ್ನೇನು ದೇವಗಡಣವೇ ನಮ್ಮ ಮೇಲೆ ಪುಷ್ಪವೃಷ್ಟಿ ಮಾಡಿ ಆ ಲೋಕಕ್ಕೆ ಸೇರಿಸಿಕೊಳ್ಳುತ್ತದೆ ಎಂದು ಭ್ರಮಿಸುವ ಹಂತದಲ್ಲಿ ದಾರಿಯೇ ಮುಗಿದಿತ್ತು. ನಾವು ಶಿಖರವಲಯದ ವಸತಿ ತಾಣವನ್ನು ತಲಪಿದ್ದೆವು. ಮುಂದಾಗಿ ತಲಪಿದ್ದ ಆರು ಮಂದಿಗಳ ಉತ್ಸಾಹ, ಉಘೇಗಳಿಗೆ ಲಗಾಮಿರಲಿಲ್ಲ, ಭೂಲೋಕದ ಮಿತಿಯೂ ಸಾಕಾಗುವಂತಿರಲಿಲ್ಲ! ಅವರ ಬೊಬ್ಬೆ, ಹಸ್ತಲಾಘವ, ಆಲಿಂಗನ, ಓಡಾಟದ ಹುರುಪುಗಳೆಲ್ಲ ವಾತಾವರಣದ ಶೀತ, ಅಕಾಲಿಕ (ಸಂಜೆ ನಾಲ್ಕು ಗಂಟೆ) ಕಾವಳವನ್ನೇ ಮರೆಸಿಬಿಟ್ಟಿತ್ತು. ಆರೋಹಣದುದ್ದಕ್ಕೂ ನಮ್ಮನ್ನು ನೋಡುವುದರಲ್ಲೇ ಮೈಮರೆತ ಮೋಡ ಗಂಟಲು ಶುದ್ಧ ಮಾಡಿ, ಇನ್ನೇನು ಋತುಗಾನದ ಮುಂದಿನ ಚರಣದ ಹಾಡಿಕೆಗಿಳಿಯುವುದಿತ್ತು. ನಾವು ಬಿಡಾರ ಸೇರಿಕೊಳ್ಳುವುದನ್ನು ಅವಸರಿಸಿದೆವು.

ಕೊಡಚಾದ್ರಿ ಶಿಖರವಲಯದಲ್ಲಿ ಮೂರು ಊಟವಸತಿ ಸೌಕರ್ಯಗಳಿದ್ದುವು. ದಾರಿಯಲ್ಲಿ ಬಂದವರು ನುಗ್ಗುವುದೇ ಸರಕಾರಿ ಬಂಗ್ಲೆಯ ಅಂಗಳಕ್ಕೆ. ಕೆಲವು ದಶಕಗಳ ಹಿಂದೆ ಈ ಶಿಖರವಲಯದಲ್ಲಿ ಮ್ಯಾಂಗನೀಸ್ (/ಕಬ್ಬಿಣ) ಅದಿರು ಮಾದರಿಯನ್ನು ಪರಿಶೀಲಿಸಲು ಇಲಾಖೆ ಕೆಲಸ ನಡೆಸಿದ್ದಾಗ ಪ್ರಥಮತಃ ವಾಹನಯೋಗ್ಯ ದಾರಿ ಕಡಿದಿದ್ದರು, ವಾಸಯೋಗ್ಯ ಬಂಗ್ಲೆಯನ್ನೂ ರಚಿಸಿದ್ದರು. ನಿಜ ಶಿಖರದ ಒತ್ತಿನಲ್ಲಿ ಇಂದೂ ಇವರು ಒಕ್ಕಿದ ಭಾರೀ ಹೊಂಡಗಳು, ಪಕ್ಕದಲ್ಲೇ ಸ್ಪಷ್ಟ ಆಯತಾಕಾರದ ಹಾಸುಗಳಂತೆ ಬಿಗಿಯಾಗಿ ಜೋಡಿಸಿದ ಅದಿರುಯುಕ್ತ ಕಲ್ಲುಗಳನ್ನು ನೋಡಬಹುದು. ಯೋಜನೆಯನ್ನು ಯಾಕೆ ಕೈಬಿಟ್ಟರೋ ಅಥವಾ ತಳುವಿದರೋ ತಿಳಿಯದು. ಆದರೆ ಕಾಲಾನುಕ್ರಮದಲ್ಲಿ ಶಿಖರ ಭಕ್ತಿ ಪ್ರವಾಸದಲ್ಲಿ ಹೆಚ್ಚೆಚ್ಚು ಜನಾಕರ್ಷಣೆ ಪಡೆಯುತ್ತಿದ್ದಂತೆ ಬಂಗ್ಲೆಯನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಂಡು, ಜೀರ್ಣೋದ್ಧಾರ ನಡೆಸಿದ್ದು ಕಾಣುತ್ತದೆ. [ನಮ್ಮ ಪ್ರಸ್ತುತ ಬೈಕ್ ಯಾತ್ರೆಗಿಂತಲೂ ಈಚೆಗೆ, ಅಂದರೆ ಬಂಗಾರಪ್ಪ ಮುಖ್ಯಮಂತಿಯಾಗಿದ್ದ ಕಾಲದಲ್ಲಿ ಪೂರ್ತಿ ಹೊಸತೇ ಬಂಗ್ಲೆ ರಚನೆಗೊಂಡು, ಒಟ್ಟಾರೆ ಶಿಖರವಲಯ ಭೀಕರ ಅಭಿವೃದ್ಧಿಪಥ ಹಿಡಿಯಿತು. ಕಳೆದ ಬೇಸಗೆಯಲ್ಲಿ (೨೦೧೩) ನನ್ನ ಕೆಲವು ಮಿತ್ರರು ಕಾರೇರಿ ಕೊಡಚಾದ್ರಿಗೆ ಪಕ್ಷಿವೀಕ್ಷಣೆಗೆ ಹೋಗಿದ್ದರು. ಅಂದು ಶಿಖರವಲಯದಲ್ಲಿ ವಾಹನಸಂದಣಿ ವಿಪರೀತವಾಗಿ ಬಂಗ್ಲೆಗಿಂತ ಒಂದು ಕಿಮೀ ಹಿಂದಿನವರೆಗೂ ದಾರಿ ಬದಿಯನ್ನೇ ಪ್ರವಾಸೀ ವಾಹನ ತಂಗುದಾಣ ಮಾಡಿಕೊಂಡದ್ದು ಕಾಣಿಸಿತ್ತು! ಅಲ್ಲಿ ಹಾಗೆ ಇಳಿದು/ ಉಳಿದು ‘ಎನ್ಜಾಯ್ ಮಾಡುವವರ ಪರಿಣಾಮಗಳ ಕುರಿತು ನಾನು ಹೊಸತೇನೂ ಹೇಳಲುಳಿದಿಲ್ಲ. ಇಲ್ಲಿ ಬಹುಮುಖ್ಯ ಗಮನಾರ್ಹ ಸಂಗತಿ: ಕೊಡಚಾದ್ರಿ ಶಿಖರ ಇಂದು ಮೂಕಾಂಬಿಕಾ ವನಧಾಮದ ಅಂಗ ಎನ್ನುವುದನ್ನು ಇಲಾಖೆ ಮರೆಯಬಾರದು. ದೈವೀಭಾವ ಪರಿಸರಭಾವದ ಛಾಯಾನುವರ್ತಿ!]

ಬಂಗ್ಲೆಯ ಹಿತ್ತಿಲಿನಲ್ಲಿ ಇಲಾಖೆಯದೇ ಬಿಡಾರದಲ್ಲಿರುವ ಮೇಟಿಯ ಕುಟುಂಬ ಪ್ರವಾಸಿಗಳ ಕನಿಷ್ಠ ಅಗತ್ಯಗಳನ್ನು ಪೂರೈಸಲು ಪ್ರಯತ್ನವೇನೋ ಮಾಡುತ್ತದೆ. ನಮ್ಮ ತಂಡದಲ್ಲಿ ಮುಂದಾಗಿ ಬಂದವರು ಮೇರೆವರಿಯದ ಉತ್ಸಾಹ ಮತ್ತು ಅನನುಭವದಲ್ಲಾಗಲೇ ಮೇಟಿಗೆ ಉಪ್ಪಿಟ್ಟು, ಚಾ ಆದೇಶ ಕೊಟ್ಟದ್ದಾಗಿತ್ತು. ಆದರೆ ಪರಿಸರಕ್ಕೆ ಏನೇನೂ ಒಗ್ಗದ ಬಂಗ್ಲೆಯ ಆಯ, ರಚನೆಯ ಶೈಥಿಲ್ಯ, ಉಸ್ತುವಾರಿಯ ಕೊರತೆ (ಸರಕಾರೀ ರಚನೆಗಳೆಂದ ಮೇಲೆ ಹೊಸದಾಗಿ ವಿವರಿಸುವಂತವೇನಲ್ಲ, ಬಿಡಿ) ಅಲ್ಲಿನ ಮಳೆಗಾಲಕ್ಕೆ ಏನೇನೂ ಹೊಂದುವಂತೆ ಇರಲಿಲ್ಲ. ಗಾಳಿಯ ಹೊಡೆತಕ್ಕೆ ಪುಡಿಯಾಗಿದ್ದ ಕಿಟಕಿಯ ಕನ್ನಡಿಗಳಿಗೆ ಮರೆ ಕಟ್ಟಿದ್ದರೂ ಸೋರುತ್ತಿದ್ದ ಮಾಡಿಗೆ ತೇಪೆ ಕೊಟ್ಟಿದ್ದರೂ ಆಗ ತಾನೇ ತೊಳೆದು ಬಿಟ್ಟ ನೆಲದಂತೆ ನೀರೇ ನೀರಾದ ಕೋಣೆಯ ನೆಲದಲ್ಲಿ ರಾತ್ರಿ ಕಳೆಯುವುದು ಅಸಾಧ್ಯವೇ ಇತ್ತು. ಹಾಗಾಗಿ ‘ಪ್ರಥಮ ಚಿಕಿತ್ಸೆಗಷ್ಟೇ ಅಲ್ಲಿ ನಿಂತದ್ದಾಯಿತು.

ಬಂಗ್ಲೆಯ ಇನ್ನೊಂದು ಮಗ್ಗುಲಿನ ಸುಮಾರು ಐವತ್ತಡಿ ತಗ್ಗಿನಲ್ಲಿ ನಾಗೋಡಿಯಿಂದ ಗಿರಿಯೇರಿ ಬರುವ ಕಾಲುದಾರಿ ಹಾಯುವುದು, ಮತ್ತಲ್ಲಿ ಮೊದಲು ಸಿಗುವ ಜೋಗಿಯ ಮನೆಯನ್ನು ನಾವು ಸಸ್ಯಾಹಾರದ ಕಾರಣ ನಿವಾರಿಸಿ ಮತ್ತೆ ಸಿಗುವ ಪರಮೇಶ್ವರ ಭಟ್ಟರ ಮನೆಯನ್ನು ಬಳಸುವುದೂ ಇಲ್ಲೇ ಹಿಂದಿನ ಕಂತುಗಳನ್ನು ಓದಿದವರಿಗೆ ತಿಳಿದೇ ಇದೆ. ಹಾಗೇ ನಾವು ಬೈಕುಗಳನ್ನು ಭಟ್ಟರ ಮನೆಯತ್ತ ಇಳಿಸಿದೆವು. ಭಟ್ಟರ ಉಸ್ತುವಾರಿಗೇ ಸೇರಿದ ಅಮ್ಮನವರ ಗುಡಿಯಂಗಳದಲ್ಲಿ ಬೈಕ್ ಬಿಟ್ಟೆವು. ಮತ್ತೆ ತುಸು ತಗ್ಗಿನಲ್ಲಿ ಪುಟ್ಟ ಕೆರೆ. ಅದರ ಎದುರಂಚಿನಲ್ಲಿ ಎತ್ತರಿಸಿದ ನೆಲದಲ್ಲಿನ ಭಟ್ಟರ ಮನೆ ನಮ್ಮ ಊಟವಾಸ್ತವ್ಯಕ್ಕೆ ಒಡ್ಡಿಕೊಂಡಿತು.

ದಿನದ ಕಡೆಯ ಗಳಿಗೆಗೆ ಲೆಕ್ಕ ಭರ್ತಿ ಮಾಡುವಂತೆ ಮಳೆ ಹೊಡೆಯತೊಡಗಿತು (‘ಮಳೆಬರುವುದು, ಅಲ್ಲಿಗೊಪ್ಪದ ತುಂಬ ಮಿದುಮಾತು!). ನಡೆದು ಹೊರಟಿದ್ದ ಸುಂದರ್ರಾವ್ ನಾಯಕರ ಜೋಡಿ ಇನ್ನೂ ತಲಪಿರಲಿಲ್ಲ. ಆದರೆ ಅವರನ್ನು ಕಾದುಕೂತರೆ ಕತ್ತಲೆಗೆ ಮುನ್ನ ನಿಜ ಶಿಖರ ದರ್ಶನ ಅಸಾಧ್ಯವೆಂದುಕೊಂಡು ನಾವಷ್ಟೇ ಮಂದಿ ಹೊರಬಿದ್ದೆವು. ಗುಡಿಯ ಒತ್ತಿನ ಹಾಸುಗಲ್ಲಿನಾಚೆಗೆ ಸಾಗಿದ್ದ ಕೇವಲ ಸವಕಲು ಜಾಡು ಮುಂದಿನ ದಾರಿ. ತುಸು ಮೇಲೇರುತ್ತಿದ್ದಂತೆ ಸಿಗುವ ಬಲಗವಲು ಶಿಖರಕ್ಕೆ ಒಳದಾರಿ. ಆದರೆ ಅದು ಕುರುಚಲು ಕಾಡಿನೊಳಗೆ ಸಾಗುತ್ತಿದ್ದುದರಿಂದ ಸಹಜವಾಗಿ ಜಿಗಣೆ ಹೆಚ್ಚಿತ್ತು; ನಾವು ಎಡದ ಜಾಡು ಅನುಸರಿಸಿದೆವು. ಆದರೂ ಜಿಗಣೆ ಭಯಕ್ಕೆ ಕೊಸರಾಡತೊಡಗಿದ ಅಭಯನ ಬಾಲಬುದ್ಧಿಯನ್ನು ಸಮಾಧಾನಿಸುವಲ್ಲಿ ಸೋತ ದೇವಕಿ ಅವನೊಡನೆ ಭಟ್ಟರ ಮನೆಗೇ ಮರಳಿದಳು. ಅವರಿಬ್ಬರೂ ಶಿಖರವನ್ನು ಬೇಸಗೆಯ ದಿನಗಳಲ್ಲಿ ಕಂಡವರೇ ಇದ್ದುದರಿಂದ ನಾನು ಉಳಿದವರನ್ನಷ್ಟೇ ನಡೆಸಿಕೊಂಡು ಮುಂದುವರಿದೆ.

ಐದೇ ಮಿನಿಟಿನಲ್ಲಿ ಶ್ರೇಣಿಯ ನೆತ್ತಿ ಸೇರಿ, ಬಲಕ್ಕೆ ಹೊರಳಿ ಅದರ ಉನ್ನತ ಕೇಂದ್ರ, ಎಂದರೆ ನಮ್ಮ ಅಂದಿನ ಪರಮ ಲಕ್ಷ್ಯ ಸರ್ವಜ್ಞಪೀಠದತ್ತ ಪಾದ ಬೆಳೆಸಿದೆವು. ಸೊಂಯ್‌ಗುಟ್ಟುವ ಗಾಳಿ, ಅದರಲ್ಲಿ ಸವಾರಿ ಹೊರಟ ಮಳೆಹನಿಗಳ ಪೆಟ್ಟನ್ನು ತಗ್ಗಿಸಿದ ತಲೆಯೊಡನೆ ಸಹಿಸಿಕೊಳ್ಳುತ್ತ, ದೇಹ ಮಾತ್ರ ಒಲೆದಾಡದಂತೆ ಎಚ್ಚರವಹಿಸಿ ಗಟ್ಟಿಹೆಜ್ಜೆಗಳನ್ನೇ ಇಡುತ್ತ ನಡೆದೆವು. ಎಡವಿದರೆ ಸಾಕು ಹಾರಿಸಿಕೊಂಡು ಹೋಗುತ್ತೇನೆ ಎನ್ನುವಂತಿತ್ತು, ಎಡಮಗ್ಗುಲಿನ ನಿಗೂಢ ಆಳದ ಕಣಿವೆ ತುಂಬಿ, ಆಕಾಶದೊಡನೆ ಕಲೆತು ಸಾಗಿದ್ದ ಭಾರೀ ವೇಗದ ಮಂಜುಮೋಡದ ಗಾಡಿ! ನೆಲ್ಲಲ್ಲಾ ಭಯದ ಸೊಲ್ಲು ಎದೆಯೊಳಗೆ ಮಿದಿಯುತ್ತಿತ್ತು! ಹೀಗೊಂದು ಐದು ಮಿನಿಟಿನ ಜಾಡು ಕಳೆದಲ್ಲಿಗೆ ಬಲ ಮಗ್ಗುಲಿನ ಕಾಡೂ ಬಯಲಾಗಿ, ಒಳದಾರಿ ಒಂದಾಗಿ ಶಿಖರ ನಮ್ಮ ಕಣ್ಣಳವಿಯೊಳಗೇ ಬಂತು. ಸಪುರ ಜಾಡು ಕಳೆದು ಐವತ್ತು-ನೂರಡಿಯ ಹರಹು ಸಿಕ್ಕಿ ಎಲ್ಲ ನಿರುಮ್ಮಳರಾಗುವ ಸಂದರ್ಭ. ಆದರೆ. . .

ಇಲ್ಲಿ ಮಾನವಕೃತ ಅಪಾಯದ ಕುರಿತು ತುಸು ಎಚ್ಚರ ಅವಶ್ಯ. ನಾನು ಮೊದಲೇ ಹೇಳಿದ ಮ್ಯಾಂಗನೀಸ್ ಅದಿರಿನ ಪರಿಶೀಲನಾ ಹೊಂಡಗಳು ಇಲ್ಲಿದ್ದವು. ಪ್ರಕೃತಿ ಮಾನವಕೃತ ಎಲ್ಲ ಗಾಯಗಳನ್ನೂ ನಿಧಾನವಾಗಿ ಗುಣಪಡಿಸುವ ತನ್ನ ದಿವ್ಯ ಚಮತ್ಕೃತಿಯನ್ನು ಇಲ್ಲಿ ಮೆರೆದಿತ್ತು. ಎರಡಾಳು ಆಳದ ಹೊಂಡಗಳ ಆಳದಲ್ಲಿ ಹುಲ್ಲು ಬಲ್ಲೆಗಳಿದ್ದರೂ ಅಂಚು ಉಕ್ಕಿಸುವ ಸ್ಫಟಿಕ ನಿರ್ಮಲ ಕೊಳಗಳಾಗಿದ್ದುವು (ಅರಿಯದವರಿಗೆ, ಮಂಜಿನ ಪರದೆಯ ಮಾಯದಲ್ಲೂ ಅವು ಯಾತ್ರಿಗಳಿಗೆ ಮೃತ್ಯುಕೂಪವಾಗುವ ಅಪಾಯ ಮರೆಯುವಂತದ್ದಲ್ಲ!). ಒತ್ತಿನಲ್ಲೇ ಅಚ್ಚುಕಟ್ಟಾಗಿ ಜೋಡಿಸಿದ್ದ ಒರಟು ಕಲ್ಲ ಪಾತಿಗಳು ಇಷ್ಟೂ ರೂಕ್ಷತೆ ಕಾಣದಂತೆ (ಆ ಎತ್ತರ ಮತ್ತು ವಾತಾವರಣಕ್ಕೆ ಸಹಜವಾದ) ಯಾವುದೋ ಸಸ್ಯಾವಳಿ ಹಸುರು ಮಕ್ಮಲ್ ಚಾದರ್ ಹೊದ್ದಿತ್ತು. ಅದರಲ್ಲೂ ನೇರಿಳೆ, ಗುಲಾಲು ಬಣ್ಣಗಳ ಹೂವರಳಿಸಿ, ನೀರ ಹನಿಗಳ ಚಮಕ್ ಎಬ್ಬಿಸಿ ಮನೋಹರವಾಗಿತ್ತು, ಭಕ್ತಿಭಾವ ಪ್ರಚೋದಿಸುವಂತಿತ್ತು!

ಆದಿಶಂಕರರು ಸ್ಥಾಪಿಸಿದರೆನ್ನಲಾಗುವ ಕಗ್ಗಲ್ಲ ಕಿರುಮಂಟಪ – ಸರ್ವಜ್ಞಪೀಠ, ಇದು ನಿಸ್ಸಂಕೇತ ಜ್ಞಾನಪೀಠ. ನಾನು ಕಂಡ ಮೊದಲ ದಿನಗಳಲ್ಲಿ ಇಲ್ಲಿ ಮಂಟಪದೊಳಗೆ ಅರ್ಥಸಂಕೋಚಿಸುವ ಮೂರ್ತಿ, ಭಯಾನಕ ಪೂಜಾರಿ ಮತ್ತು ಅರ್ಚನೆಯ ಕಟ್ಟುಪಾಡುಗಳು ಇರಲಿಲ್ಲ. ಆದರೆ ಅಜ್ಞರಿಂದ ರಚನೆಯ ಅವಹೇಳನ, ಶೈಥಿಲ್ಯಕ್ಕೆ ಉತ್ತೇಜವಂತೂ ಧಾರಾಳ ನಡೆದದ್ದಕ್ಕೆ ಸಾಕ್ಷಿಯಿತ್ತು. ಅವರವರ ‘ಪ್ರಕೃತಿ ಪಾಠಕ್ಕನುಗುಣವಾಗಿ ಅಲ್ಲಿನ ಗೋಡೆ ಅಕ್ಷರಾಭ್ಯಾಸದಿಂದ ತೊಡಗಿ, ಪ್ರಣಯಯಾಚನೆಯವರೆಗೆ ಮಸಿ, ಆಯಿಲ್ ಪೇಂಟ್, ಕೆತ್ತು ಶಿಲ್ಪವೇ ಮೊದಲಾದ ವೈವಿಧ್ಯಮಯ ಪ್ರಯೋಗಗಳಿಂದ ಇಡಿಕಿರಿದಿತ್ತು! [ಅನಂತರದ ದಿನಗಳಲ್ಲಿ ಸರ್ವಜ್ಞಪೀಠ ಜೀರ್ಣೋದ್ಧಾರವಾಗದಿದ್ದರೂ ‘ಧಾರ್ಮಿಕ ದಂಧೆಯವರು ಮೂರ್ತಿ ಸ್ಥಾಪಿಸಿದ್ದು ಆಗಿದೆ, ಅ‘ವ್ಯವಸ್ಥೆಯ ಭಾಗವಾಗಿ ಪೂಜಾರಿಯೂ ಇರುವುದನ್ನು ಕಂಡಿದ್ದೇನೆ. ಬರುವ ದಿನಗಳು ಇಲ್ಲಿಗೆ ಇನ್ನೇನೇನು ತರಲಿದೆಯೋ ಎಂದು ನಿಸ್ಸಹಾಯಕವಾಗಿ ನಿರುಕಿಸುವುದೊಂದೇ ನನ್ನಂಥವರಿಗುಳಿದಿದೆ]

ಸುತ್ತಣ ದೃಶ್ಯದ ಬಗ್ಗೆ ನರಸಿಂಹ ಪರ್ವತದಿಂದ ಭಿನ್ನವಾದ್ದೇನೂ ದಾಖಲಿಸುವಂತದ್ದಿರಲಿಲ್ಲ; ಮಳೆ, ಮೋಡ, ಗಾಳಿಯ ಸಾರ್ವಭೌಮತ್ವ ಅಂದು ಘಟ್ಟದುದ್ದಕ್ಕೂ ಪ್ರಶ್ನಾತೀತವೇ ಇತ್ತು. ಸಾರ್ವಕಾಲಿಕವಾಗಿ ಅನುಭವಕ್ಕೆ ಬರುವ ನೆಲದ ಮಿತಿಯೊಂದೇ ಕೊಡಚಾದ್ರಿಯನ್ನು ನರಸಿಂಹಪರ್ವತ ಅಥವಾ ಬಹುತೇಕ ಇತರ ಶಿಖರಾಗ್ರಗಳಿಂದ ಭಿನ್ನ ಎಂಬುದನ್ನು ನೆನಪಿಸುತ್ತದೆ. ಶಿಖರದಿಂದಲೇ ಮುಂದುವರಿದು ಚಿತ್ರಮೂಲ, ಮರಳುವ ದಾರಿಯಲ್ಲಿ ಕಾಡಿನೊಳಗಿನ ಒಳದಾರಿ ಅನುಸರಿಸಿದರೆ ಸಿಗುವ ಗಣಪತಿ ಗುಹೆ ಮತ್ತಿತರ ವಿವರಗಳನ್ನು ನೋಡುವ ಸಮಯವದಾಗಿರಲಿಲ್ಲ. ಹಾಗಾಗಿ ಹೆಚ್ಚು ವಿಳಂಬಿಸದೆ, ಏರಿದ ಜಾಗ್ರತೆಯಲ್ಲೇ ಭಟ್ಟರ ಮನೆಗೆ ಮರಳಿದೆವು. ಸುಂದರ, ನಾಯಕರು ಬಂದಿದ್ದರು. ಹಗಲಿಡೀ ಅಟಕಾಯಿಸಿದ್ದ ಮೋಡ ಈಗ ಬೆಳಕನ್ನು ರಾತ್ರಿಗೆ ಬಲಿಯೊಪ್ಪಿಸಿತ್ತು; ಕತ್ತಲ ಸಾಮ್ರಾಜ್ಯ ಬಲಿದಿತ್ತು.

(ಮುಂದುವರಿಯಲಿದೆ)

[ಕಳೆದ ರಾತ್ರಿಯ ನಿದ್ದೆಗೇಡಿಗಳು, ದಿನದ ಸವಾರಿಯಲ್ಲಿ ಬಸವಳಿದವರು, ಕೊಡಚಾದ್ರಿಯ ಔನ್ನತ್ಯದ ಶೈತ್ಯಕ್ಕೊಡ್ಡಿಕೊಂಡವರು ಮುಂದೇನು ಮಾಡಿದರು? ಹೆಚ್ಚಿನ ವಿವರಗಳನ್ನು ಚಕ್ರವರ್ತಿಯ ಮುಂದಿನ ಕಂತಿನಲ್ಲಿ ಆನಂದಿಸಿರಿ 🙂 ]