ಅರಿವಿಲ್ಲದ ಪರಿಸರಪ್ರೇಮ, ಸಂಶೋಧನಾರಹಿತ ವನ್ಯ ಸಂರಕ್ಷಣೆಗಳೆಲ್ಲ ಬರಿಯ ಬೊಬ್ಬೆ ಎನ್ನುವ ಬಳಗ ನಮ್ಮದು. ಸಹಜವಾಗಿ ಪುಡಾರಿಗಳು ಎತ್ತಿನಹೊಳೆ ಎಂದಾಗ, ಅಲ್ಲ, ನೇತ್ರಾವತಿ ಎನ್ನುವಲ್ಲಿ ನಮ್ಮ ಮಾತು ಸ್ಪಷ್ಟವಿತ್ತು (ಧ್ವನಿ ದೊಡ್ಡದು ಮಾಡಿದವರೂ ಇದ್ದಾರೆ, ಆದರೆ ಗಾದೆ ಹೇಳುತ್ತದೆ – ಖಾಲಿ ಡಬ್ಬ ಹೆಚ್ಚು ಸದ್ದು ಮಾಡುತ್ತದೆ!). ಅದಕ್ಕೆ ಹಿನ್ನೆಲೆಯಲ್ಲಿ ನಮ್ಮಲ್ಲಿನ ಕೆಲವು ದಶಕಗಳ ಏಕ ನಿಷ್ಠೆಯ ವನ್ಯಸಂರಕ್ಷಣೆಯ ಸ್ವಯಂಸೇವೆ, ಮೇಲಿನಿಂದ ಮಾಹಿತಿ ಹಕ್ಕಿನಲ್ಲಿ ಕಾಲಕಾಲಕ್ಕೆ ತರಿಸಿದ ದಾಖಲೆಗಳು ನಕ್ಷೆಗಳು. ಸಾಲದೆಂಬಂತೆ ಎತ್ತಿನಹೊಳೆಯ ಮೊದಲ ಉಲ್ಲೇಖ ಪ್ರಕಟವಾದ ಹೊಸತರಲ್ಲೇ ನಮ್ಮೊಂದು ತಂಡ ಅದನ್ನು ವಾಸ್ತವದಲ್ಲೂ ಕಣ್ಣು ತುಂಬಿಕೊಂಡು ಬರುವುದಕ್ಕೆ ಕಾರೇರಿ ಸಕಲೇಶಪುರದತ್ತ ಧಾವಿಸಿದ್ದೆವು.

ಯಡಿಯೂರಪ್ಪ, ಸದಾನಂದ ಗೌಡ (ಜಗದೀಶ ಶೆಟ್ಟರ್, ಸಿದ್ಧರಾಮಯ್ಯ) ಎಂದು ದಿನಕ್ಕೊಂದು ಮೆಟ್ಟಿಲು ಜಾರುತ್ತ ಸಾಗಿದ್ದ ಕರ್ನಾಟಕ ಸರಕಾರದಲ್ಲಿ ತೀರಾ ಅನಿರೀಕ್ಷಿತವಾಗಿ ಮತ್ತು ಅಷ್ಟೇ ಚುರುಕಾಗಿ ಸಾರ್ವಜನಿಕಕ್ಕೆ ಕೇಳಿದ ಹೆಸರು ಎತ್ತಿನಹೊಳೆ ಎತ್ತಂಗಡಿ ಯೋಜನೆ. ಅದು ಸುಲ್ತಾನ್ ಯಡಿಯೂರಪ್ಪನವರ ಅವನತಿಯ ಕೊನೆಯ ದಿನಗಳು. ಅವರು ಧಿಢೀರೆಂದು ಈ ಯೋಜನೆಯ ಹೆಸರು ಮತ್ತದರ ಪೂರ್ವಭಾವೀ ಸಿದ್ಧತೆಗಳಿಗೆ ಕೇವಲ ಇನ್ನೂರು ಕೋಟಿ ರೂಪಾಯಿಯನ್ನು ಯುಕ್ತ ಜನಪ್ರತಿನಿಧಿಗೆ (ಇದು ಯಡಿಯೂರಪ್ಪನವರ ಮಗನೇ ಎನ್ನುವುದು ಆಕಸ್ಮಿಕವಿರಬಹುದು!) ಬಿಡುಗಡೆ ಮಾಡಿದ್ದು ಸುದ್ದಿಮಾಧ್ಯಮಗಳಲ್ಲಿ ಅಷ್ಟೇನೂ ದೊಡ್ಡದಲ್ಲವೆಂಬಂತೆ ಬಯಲಾಯ್ತು. ಆದರೆ ಪಶ್ಚಿಮವಾಹಿನಿಗಳನ್ನೆಲ್ಲ ಒಳನಾಡಿಗೆ ತಿರುಗಿಸುವಲ್ಲಿ, ಅದರಲ್ಲೂ ಪ್ರಾಥಮಿಕವಾಗಿ ನೇತ್ರಾವತಿಯನ್ನೇ ಬಲಿಗೊಡಲು ಉದ್ದೇಶಿಸಿದ್ದ ಪರಮಶಿವಯ್ಯನವರದು ದೊಡ್ಡ ಕಾಗದದ ದೋಣಿ; ಗಾಂಧಾರಿ ಗರ್ಭ. ಅನಾಮಧೇಯರು ಆ ದೋಣಿ ಬಿಡಿಸಿ, ಆರೆಂಟು ಹಳ್ಳಗಳ ‘ಎತ್ತಿನಹೊಳೆ ಯೋಜನೆ ಎಂಬ ಪುಟ್ಟ ದೋಣಿ ತೇಲಿಬಿಟ್ಟಿದ್ದರು. ಪರಮಶಿವಯ್ಯ ಇದನ್ನು ಸಾರ್ವಜನಿಕವಾಗಿಯೇ ‘ಕಳ್ಳಬಸಿರು’ ಎಂಬಂತೇ ಗ್ರಹಿಸಿ, ಮುನಿಸಿಕೊಂಡಿದ್ದರು! ಪುಡಾರಿಗಿರಿಯಲ್ಲೇ ಬೆಳಕು ಕಾಣುವ ಬಹುತೇಕ ಸುದ್ದಿ ಮಾಧ್ಯಮಗಳು ಅಲ್ಲೂ ಎರಡು ಬಾರಿ ಇಲ್ಲೂ ಎರಡು ಬಾರಿ ಡೋಲು ಗುದ್ದಿದವು. ಆದರೆ ನನ್ನ ಹಲವು ಪರಿಸರಾಸಕ್ತ ಗೆಳೆಯರ ಗಮನ ವಿಚಲಿತವಾಗಲಿಲ್ಲ. ಎತ್ತಿನಹೊಳೆಯನ್ನೂ ನಕ್ಷೆಯಲ್ಲಿ ಗುರುತಿಸಿದರು, ಮಾಹಿತಿ ಹಕ್ಕಿನಲ್ಲಿ ದಾಖಲೆಗಳ ಬೇಟೆಯಾಡುತ್ತ ಹೋದರು.(ನೋಡಿ: ಸುಂದರರಾಯರ ಜಾಲತಾಣ) ಎರವಲು ಗರ್ಭದಲ್ಲಾದರೂ ಎತ್ತಿನಹಳ್ಳದ ಯೋಜನಾ ಶಿಶು ಜನಿಸಿದ್ದನ್ನು ಘೋಷಿಸಿ, ತಂದೆಯ ಸ್ಥಾನದಲ್ಲಿ ಹಲ್ಲು ಕಿಸಿದವರು ಸದಾನಂದ ಗೌಡ. ಎತ್ತು ಈಂದಿತು ಎಂದರೆ ಚಿಕ್ಕಬಳ್ಳಾಪುರದ ಕೊಟ್ಟಿಗೇಲಿ ಕಟ್ಟು ಎಂದು ಮತ್ತೆ ಮಾತು ಸೇರಿಸಿದವರು ಮಹಾಕವಿ ವೀರಪ್ಪ ಮೊಯ್ಲಿ! (೨೪ ಟಿಎಂಸಿ ನೀರಿಗೆ, ೨೦೧೪ಕ್ಕೆ ಪರಿಷ್ಕೃತ ಯೋಜನಾ ವೆಚ್ಚ ಹನ್ನೆರಡು ಸಾವಿರ ಕೋಟಿ ರೂಪಾಯಿ ಮೀರಿದೆ. ಇನ್ನು ಯೋಜನೆ ಮುಗಿಯುವಾಗ ಎಷ್ಟೋ! ಜನಪದರು ಮಾತ್ರ ಡೋಲು ಬಡಿದು ಹಾಡಲಿದ್ದಾರೆ “ಬೆಟ್ಟ ಕಡಿದು ಇಲಿ ಹಿಡಿಯುವ ಮೊ-ಇಲಿ.”)

ನಮ್ಮ ಪರಿಸರಾಸಕ್ತ ಬಳಗಕ್ಕೆ ಯೋಜನೆ ಕುರಿತಂತೆ ಲಭ್ಯ ಮಾಹಿತಿಗಳೊಡನೆ ಭೂವಿವರಗಳನ್ನು ತಾಳೆ ಹಚ್ಚಿ, ಪರಿಣಾಮಗಳನ್ನು ಕಂಡುಕೊಳ್ಳುವ ಉತ್ಸಾಹ ಬಂತು. ಸುಮಾರು ಹತ್ತು ಮಂದಿ ನಮ್ಮದೇ ವಾಹನಗಳಲ್ಲಿ ಶಿರಾಡಿಘಾಟಿ ಏರಿದೆವು. ಸಕಲೇಶಪುರಕ್ಕೆ ಸುಮಾರು ಹತ್ತು ಕಿಮೀ ಮೊದಲೇ ಎತ್ತಿನಹಳ್ಳ ದಾರಿಯನ್ನು ಅಡ್ಡ ಹಾಯುತ್ತದೆ. ಅದರ ಮುಖ್ಯ ಜಲಾನಯನ ಪ್ರದೇಶ ಹೆದ್ದಾರಿಯ ಉತ್ತರ ಮಗ್ಗುಲಿನಲ್ಲಿರಬೇಕೆಂದು ನಿರ್ಧರಿಸಿ, ಮಾರನ ಹಳ್ಳಿಯಲ್ಲಿ ಎಡದ ದಾರಿಗೆ ಹೊರಳಿದೆವು. ತುಸು ಅಂತರದಲ್ಲಿ ಸಿಕ್ಕ ಒಂದು ಪುಟ್ಟ ಕಣಿವೆಯಲ್ಲಿ ಇಣುಕಿದೆವು. ಮತ್ತೂ ಮುಂದುವರಿದು ವಲಯಕ್ಕೆ ತುಸು ಪ್ರಮುಖವಾಗಿಯೇ ಕಾಣುವ ಗುಡ್ಡ ಶ್ರೇಣಿಯೊಂದರ ಶಿಖರ ಸಾಲಿನಲ್ಲೂ ಚಾರಣಿಸಿದೆವು. ಒಂದೆರಡು ಗಂಟೆ ನಡೆದು ಮತ್ತಷ್ಟು ಕಣಿವೆ, ತೊರೆಗಳ ದರ್ಶನದಲ್ಲಿ ಅಂದಾಜನ್ನು ಬೆಳೆಸಿದೆವು. ಕೊನೆಯಲ್ಲಿ ಹಾನುಬಾಳಿನೊಂದು ಹಳ್ಳಿಮೂಲೆಯವರೆಗೂ ಸಾಗಿ ಇದೇ ಎತ್ತಿನಹಳ್ಳದ ಉಗಮಸ್ಥಾನ ಎನ್ನುವ ತಾರ್ಕಿಕ ಅಂತ್ಯವನ್ನೇ ಕಂಡು ಮರಳಿದೆವು. ಅದುವರೆಗೆ ನಮ್ಮ ಬಳಗಕ್ಕೆ ಲಭಿಸಿದ್ದ ಮಾಹಿತಿಗಳ ಆಧಾರದಲ್ಲಿ ಎಲ್ಲೆಲ್ಲಿ ಕಟ್ಟೆಗಳು ಬರಬಹುದು, ಎತ್ತುವರಿ ವ್ಯವಸ್ಥೆಯ ಶಕ್ತಿ ಅಗತ್ಯಗಳೆಷ್ಟಾಗಬಹುದು, ಧರಿಸುವ ಕೊಳವೆ ಸಾಲಿನ ಉದ್ದ ದಪ್ಪ ಏನು ಇತ್ಯಾದಿ ಕಾಗದದ ಮಾಹಿತಿಗಳನ್ನು ಭೂಮಿಯ ಮೇಲೆ ಬಗೆಗಣ್ಣಿನಲ್ಲಿ ಕಂಡುಕೊಳ್ಳುತ್ತಲೇ ಇದ್ದೆವು. ಯೋಜನೆಯ ತಂತ್ರಜ್ಞಾನದ ಗೋಜಲನ್ನು ಎಳೆಯೆಳೆಯಾಗಿ ಬಿಡಿಸಿಡುವ ಇಂಥ ಪ್ರಯತ್ನವನ್ನು ಚುರುಕುಗೊಳಿಸಿದೆವು.

ಮನೆಯ (ಸರಕಾರ) ಯಜಮಾನಿಕೆ (ಪಕ್ಷ) ಬದಲಾದಾಗ ಕಸ (ನೇಮಕಾತಿ ಪದವಿಗಳು) ಹೊಡೆದು, ಥಳಕು ಪಳಕು (ತಿಪ್ಪೆ ಶೃಂಗಾರ) ಹೆಚ್ಚಿಸುವುದಿದೆ. ಆದರೆ ಕರಾವಿನ ಹಸುಗಳನ್ನು (‘ಅಭಿವೃದ್ಧಿ ಯೋಜನೆಗಳು) ಮಾತ್ರ ತಮ್ಮದನ್ನಾಗಿಸಿಕೊಳ್ಳುತ್ತಾರೆ. ಹೊಸದಾಗಿ ಬಂದ ಕಾಂಗೈಯ ಕರ್ನಾಟಕ ಸರಕಾರದಲ್ಲೂ ಹೀಗೇ ಆಯ್ತು. ಎತ್ತಿನಹೊಳೆ ಯೋಜನೆ ಹಳ್ಳ ಹಿಡಿಯಲಿಲ್ಲ. ಬದಲಾಗಿ ಅದರ ಫಲಪ್ರದತೆಯ ಅನ್ಯ ಆಯಾಮಗಳು ಹೆಚ್ಚು ಆಕರ್ಷಕವಾಗತೊಡಗಿತು. ಹಣದ ಹೊಳೆಯೊಡನೆ ಮತರಾಜಕೀಯದ ವಾಸನೆ ಗಾಢವಾಯ್ತು. ಕೊಳ್ಳೆಯ ಗಾತ್ರದೊಡನೆ ಹೊಂಚುವ ಮಂದಿಯ ಸಂಖ್ಯೆ ಪಕ್ಷಾತೀತವಾಗಿ ಏರಿತ್ತು. ಲೆಕ್ಕಕ್ಕೆ ಇಲ್ಲಿನವರೇ ಆದರೂ ಮತಪಾತ್ರೆಯೊಳಗಿನ ಬೇಳೆ ಬೇಯಿಸಿಕೊಳ್ಳಲು ಹೊರಜಿಲ್ಲೆಗೆ ಹೊರಟ ಭಾಜಪದ ಸದಾನಂದ ಗೌಡ ಒಂದು ಮರವೂ ಹೋಗುವುದಿಲ್ಲ ಎಂದರೆ, ಕಾಂಗೈಯ ವೀರಪ್ಪ ಮೊಯ್ಲಿ ಎತ್ತಿನಹೊಳೆ ನೇತ್ರಾವತಿಯೇ ಅಲ್ಲ ಎಂದು ಬಿಟ್ಟರು. ಕೂಡುರಸ್ತೆಯಲ್ಲಿ ನಿಂತ ನಾಯಕಮಣಿಗಳು ದಿಕ್ಕಿಗೊಂದು, ದಿನಕ್ಕೊಂದು ಬೊಬ್ಬೆಹೊಡೆಯುತ್ತಲೇ ಇದ್ದಾರೆ; ತಮ್ಮ ಕೋಳಿ ಕೂಗಿದರೇ ಬೆಳಿಗ್ಗೆಯಾಗುತ್ತದೆ ಎಂಬ ದಿಕ್ಕೇಡಿಗರು.

ನದಿ ಬರಿದೇ ನೀರು ಹರಿಸುವ ಪಾತ್ರೆಯಲ್ಲ, ಕುಶಿ ಬಂದಂತೆ ಭೂಮೇಲ್ಮೈ ಗೀರಿದರೆ ದಕ್ಕುವ ಚರಂಡಿ, ಕಾಲುವೆಯೂ ಅಲ್ಲ. ಅದರ ಆಯ ಅಳತೆಗೆ ಬಾಹ್ಯ ಲೆಕ್ಕಾಚಾರ ಸಾಕಾಗುವುದಿಲ್ಲ, ಸೊಕ್ಕು ಸೊರಗಿಗೆ ಪೂರ್ಣ ಅರ್ಥ ಇನ್ನೂ ಕಟ್ಟಿದವರಿಲ್ಲ, ಹೆಚ್ಚೇಕೆ ನದಿಯಲ್ಲಿ ಹರಿಯುವುದು ಬರಿಯ ನೀರೂ ಅಲ್ಲ! ಸರಳವಾಗಿ ಹೇಳುವುದಿದ್ದರೆ ಭೂಮಿಯ ವಿಭಿನ್ನ ಒತ್ತಡಗಳಿಗೆ ಎದ್ದ ಬೆಟ್ಟಗಳಂತೆ, ಬಿದ್ದ ಕೊರಕಲುಗಳು ನದಿಪಾತ್ರೆಗಳಾದವು. ಕಾಣುವ ಹತ್ತಿಪ್ಪತ್ತು ಮೀಟರ್ ಆಳದ ತೊರೆ, ನದಿಗಳ ರೂಪ ನೂರಾರು ಕಿಮೀಗಳ ಆಳದಲ್ಲಿ ನಿರ್ಧಾರವಾಗುತ್ತದೆ. ಇಲ್ಲಿ ಕಾಣುವ ಹರಿವು ಅಲ್ಪ, ಕಾಣದ ಅರಿವು ಅಪಾರ. ಇದಕ್ಕೆ ಸಾಕ್ಷಿಗಳನ್ನು ವಿಜ್ಞಾನದ ವಿವಿಧ ಶಾಖೆಗಳಲ್ಲಿ ಅರಸುವ ಪ್ರಯತ್ನಕ್ಕೆ ನಮ್ಮ ಗೆಳೆಯರ ಬಳಗ ತೊಡಗಿತು. ಹೈಡ್ರಾಲಜಿ – ೧೯೫೫ರಿಂದೀಚೆಗೆ ಬೆಳೆದು ನಿಂತ ವಿಶಿಷ್ಟ ವಿಜ್ಞಾನ ಶಾಖೆ – ಚರದ್ರವ ವಿಜ್ಞಾನ, ನದಿಗಳನ್ನೇ ಕುರಿತದ್ದು. ಮತ್ತೆ ಭೂವಿಜ್ಞಾನ, ಜೀವವಿಜ್ಞಾನಗಳೇ ಮೊದಲಾದ ಶಿಸ್ತುಗಳ ಪರಿಣತರನ್ನು ಸುರತ್ಕಲ್ಲಿನ ಎನ್.ಐ.ಟಿ.ಕೆ ನಾಯಕತ್ವದಲ್ಲಿ ಒಗ್ಗೂಡಿಸಿ ವಿಚಾರ ಕಮ್ಮಟವನ್ನೇ ಹಮ್ಮಿಕೊಂಡರು. ಜವಾಬ್ದಾರಿಯುತ ಸರಕಾರ ಮಾಡಬೇಕಿದ್ದ (ಆದರೆ ಮಾಡದ ಎನ್ನುವುದಕ್ಕಿಂತ ಉಡಾಫೆಯಲ್ಲೇ ಸುಧಾರಿಸಲು ಯತ್ನಿಸುತ್ತಿರುವ) ನೇತ್ರಾವತಿ ಪಾತ್ರೆಗೆ ಸಂಬಂಧಿಸಿದ ವಸ್ತುನಿಷ್ಠ (ಪಕ್ಷಪಾತರಹಿತವಾಗಿ) ಮಾಹಿತಿಕೋಶವನ್ನೇ ಕಟ್ಟುವ ಕೆಲಸ ಇದಾಗಲಿತ್ತು. ದಿನ, ಸಂಪನ್ಮೂಲ ವ್ಯಕ್ತಿ, ಕಲಾಪಗಳ ವಿವರಗಳೆಲ್ಲಾ ನಿಗದಿಗೊಂಡು ಆಮಂತ್ರಣಗಳೂ ವಿತರಣೆಗಿಳಿದ ದಿನ ತೀರಾ ಅನಿರೀಕ್ಷಿತವಾಗಿ ಎನ್.ಐ.ಟಿ.ಕೆ ಕಮ್ಮಟದಿಂದ ಹಿಂದೆ ಸರಿಯಿತು. ರಾಜಕೀಯದ ಒಳಸುಳಿಗಳ ಪರಿಚಯವಿರುವವರಿಗೆ ಎನ್.ಐ.ಟಿ.ಕೆಗೆ ಕೇಂದ್ರ ಸರಕಾರದ ಹಂಗು ಮತ್ತು ಆ ಸರಕಾರದ ಮೇಲೆ ಸಚಿವ ಮೊಯ್ಲಿಯವರ ಒತ್ತಡಗಳ ವಾಸನೆಯಷ್ಟೇ ಸಿಕ್ಕಿತು; ಹರ ಕೊಲ್ಲಲ್ ಪರ ಕಾಯ್ವನೇ!

ಬರಿಯ ಅಡಿಕೋಲು ಹಿಡಿದು ನಕ್ಷೆಗಳ ಮೇಲೆ ಓಡಾಡುವವರು, ತೂತು ಕಿಸೆಯ ತುಂಬಾ ಝಣಝಣ ಹಣ ಹೇರಿಕೊಂಡವರು ಕಾಣದ ನೇತ್ರಾವತಿ ನದಿಯ ಮಹತ್ತ್ವವನ್ನು ತಿಳಿಯಲು ಪರಿಣತರು ತೊಡಗಬೇಕು, ಪುಡಾರಿಗಳಲ್ಲ. ಭೂಪಟ ಪ್ರವೀಣ ಎಂದೇ ಖ್ಯಾತರಾದ ಪರಮಶಿವಯ್ಯ ನೀರಲ್ಲಿ ತೇಲುವ ಮಂಜುಗಡ್ಡೆಯ ತುದಿಯನ್ನಷ್ಟೇ ನೋಡಿ ಕನಸು ಕಟ್ಟಿದರು. ಇವರು ಕಡತ ತುಂಬಿದ್ದರಲ್ಲಿ ತಾಂತ್ರಿಕ ವಿವರಗಳಿಗಿಂತ, ಕೊನೆಯಲ್ಲಿ ಸಿಗುವ ನೀರಿನ ವಿಲೇವಾರಿಯ (ಅನಾವಶ್ಯಕ) ವಿವರಗಳೇ ಅಧಿಕ. ನೀರಿನ ಲಭ್ಯತೆ, ಪ್ರಾಕೃತಿಕ ಮೂಲವ್ಯವಸ್ಥೆಯ ತಿಳುವಳಿಕೆ, ವ್ಯತ್ಯಸ್ತಗೊಳಿಸುವುದರ ಎರಡೂ ದಿಕ್ಕುಗಳ ಪಾರಿಸರಿಕ ಮತ್ತು ಸಾಮಾಜಿಕ ಪರಿಣಾಮ, ಖರ್ಚು-ಆದಾಯಗಳ ಲೆಕ್ಕಾಚಾರ ಇತ್ಯಾದಿ ಒಂದೊಂದು ಇಟ್ಟಿಗೆಯನ್ನೂ ಯೋಜನಾಕರ್ತೃ ಬಳಸುವ ಕ್ರಮ ತಲೆಕೆಳಗಾದ ಪಿರಮಿಡ್ಡಿನ ರಚನೆಗೆ ಯೋಗ್ಯವಾಗಿತ್ತು! [ಪರಮಶಿವಯ್ಯನವರಿಗೆ ಗೊತ್ತೇ ಇಲ್ಲದ ಬೆಟ್ಟದ ಕತೆಯ ಒಂದು ಚಂದದ ಚಿತ್ರ ಇಲ್ಲಿ ನೋಡಿ, ಸುಳುಹಿನ ಕೃಪೆ: ಡಾ| ಕೃಷ್ಣಮೋಹನ ಪ್ರಭು ಮತ್ತು ಕೆ.ಎಸ್. ಶೇಷಾದ್ರಿ.

ಬೇರಜಾಲ ಬಲಿದು, ಬೋಳು ಬೆಟ್ಟದ ಮಣ್ಣಿನ ಕಣವೂ ಚಲಿಸದಂತೆ ಬಿಗಿಹಿಡಿಯುವ ಹುಲ್ಲ ಹರಹುಗಳು, ಕಣಿವೆಯ ಮರೆಯಲ್ಲಿ ನಿಂತ ಭಾರೀ ಮರ ಪೊದರುಗಳು ಸೇರಿದ ವೈಶಿಷ್ಟ್ಯಕ್ಕೆ ಹೆಸರು ಶೋಲಾಕಾಡು. ಪ್ರತಿ ಮಳೆಗಾಲದಲ್ಲಿ ಆರ್ಭಟಿಸುತ್ತ ಅವತರಿಸುವ ಗಂಗೆಯನ್ನು (ಪುರಾಣ ಕಲ್ಪನೆಯ ಶಿವಜಟಾಜೂಟದಂತೇ) ತಲ್ಲಣಿಸದೆ ತಣಿಸಿ, ಧರಿಸುವ ಈ ಹುಲ್ಲುಗಾವಲು ಪರಮಶಿವಯ್ಯನವರ ವರದಿಯಲ್ಲಿ ಪಾಳುಭೂಮಿ. ಅದು ಸುಸ್ಥಿಯಲ್ಲಿದ್ದರಷ್ಟೇ ಕಣಿವೆಗಳಲ್ಲಿ ವರ್ಷಪೂರ್ತಿ ನಿಯಮಿತವಾಗಿ ನೀರು ಹರಿಯುತ್ತದೆ ಎಂಬ ಸರಳ ಸತ್ಯವನ್ನವರು ಅರ್ಥಮಾಡಿಕೊಳ್ಳಲೇ ಇಲ್ಲ. ಹಾನುಬಾಳಿನ ಒಂದು ಮಹಾಬೆಟ್ಟವಂತೂ ಇದನ್ನು ಸುಂದರವಾಗಿ ಪ್ರತ್ಯಕ್ಷೀಕರಿಸುವುದನ್ನು ಚಿತ್ರದಲ್ಲೂ ನೋಡಬಹುದು. ಎತ್ತಿನ ಹೊಳೆಯ ಒಂದು ಮೂಲ ಈ ಬೆಟ್ಟದ ತಪ್ಪಲಿನಲ್ಲಿ ಹೊರಡುವುದನ್ನು ವರ್ಷಪೂರ್ತಿ ನೋಡಬಹುದು.

ನೇತ್ರಾವತಿ ನದಿ ತಿರುವು ಹೇಳುತ್ತದೆ: ಹುಲ್ಲ ಹರಹು ನಗಣ್ಯ. (ಜಟೆಗೆ ಬೆಂಕಿ ಹಚ್ಚಿ) ಬೆಟ್ಟಗಳ ಎದೆಯಿಂದ ನಡುವಿಗೆ ಮಾಲಾ ಕಾಲುವೆ ಕೊರೆದು, ಕಣಿವೆಯಲ್ಲಿ ದಿಕ್ಕು ತಪ್ಪಿಸಿ. ಈ ಕಾಮಗಾರಿ ನಡೆಸುವ ಮತ್ತು ಊರ್ಜಿತಲ್ಲಿಡಲು ಬೇಕಾದ ಮನುಷ್ಯ ಮತ್ತು ಯಂತ್ರಗಳ ಸಾರಿಗೆ, ವಾಸ್ತವ್ಯ ಸೌಕರ್ಯಗಳಿಗಾಗಿ ಅಳಿಯುವ ವನ್ಯಪರಿಸರದ ಕುರಿತು ಯೋಜನಾ ವರದಿ ಪ್ರಸ್ತಾವಿಸುವುದೇ ಇಲ್ಲ! (ಕಾಡಳಿದರೆ ನಾಡುಳಿದೀತು?!)

ಎತ್ತಿನಹೊಳೆ ಯೋಜನೆಯದ್ದು ಇನ್ನೊಂದೇ ಚಿತ್ರ: ಇಲ್ಲಿ ಪ್ರಾಕೃತಿಕ ತೊರೆಗಳಿಗೇ ಕಟ್ಟೆಕಟ್ಟಿ, ವಿವಿಧ ಹಂತಗಳಲ್ಲಿ ಪಂಪುಹೊಡೆಯುತ್ತ, ಮತ್ತೆ ಕಟ್ಟೆ ನಿರ್ಮಿಸುತ್ತ ವಿರುದ್ಧ ದಿಕ್ಕಿಗೆ ಸಾಗಿಸಬೇಕು. ಇಲ್ಲಿ ನೆಲ, ಮರಗಳ ಮುಳುಗಡೆಯೊಡನೆ ಸಾಮಾಜಿಕ ಪುನರ್ವಸತಿಯ ಅಗತ್ಯವೂ ಸೇರಿಕೊಳ್ಳುತ್ತದೆ. ಸಾಲದ್ದಕ್ಕೆ ಪಂಪಿಂಗಿಗೆ (ಸುಮಾರು ಮುನ್ನೂರಮೂವತ್ತು ಮೆಗಾವಾಟ್ ವಿದ್ಯುಚ್ಛಕ್ತಿ) ಈಗಾಗಲೇ ವಿದ್ಯುತ್ ಕೊರತೆ ಎದುರಿಸುತ್ತಿರುವ ಕರ್ನಾಟಕದಲ್ಲಿ ಪೂರೈಕೆ ಎಲ್ಲಿಂದ ಎಂಬ ಸವಾಲನ್ನು ಅನಾಥವಾಗಿಸುತ್ತದೆ. ಇದರ ಉಪೋಪ ಯೋಜನಾ ಶಾಖೆಗಳಲ್ಲಿ ಮಿನಿ ವಿದ್ಯುತ್, ಹರಿನೀರಿನ ವಿದ್ಯುತ್ ಬಸಿಯುವಿಕೆಗಳನ್ನೆಲ್ಲ ಹೆಸರಿಸಿದ್ದಾರೆ. ಆದರೆ ಎಲ್ಲಾ ಕೂಸು ಹುಟ್ಟುವ ಮೊದಲಿನ ಕುಲಾವಿಗಳೇ ಸೈ.

ಯಡ್ಯೂರಪ್ಪನವರ ಪುಣ್ಯಗರ್ಭದಲ್ಲಿ ಉದಿಸಿದ ಇನ್ನೂ ಒಂದು ಯೋಜನೆ, ಎತ್ತಿನ ಹಳ್ಳದ್ದಕ್ಕಿಂತ ಐದಾರು ವರ್ಷ ಹಿರಿಯದು – ೨೦೦ ಮೆಗಾವಾಟ್ ಗುಂಡ್ಯ ಜಲವಿದ್ಯುತ್ ಯೋಜನೆ, ಕುರಿತೂ ಒಂದೆರಡು ಮಾತು ಇಲ್ಲೇ ಹೇಳಬೇಕು. ಅದನ್ನು ಹೊಸೆದದ್ದೂ ಇದೇ ನೆಲಕ್ಕೆ. ಎತ್ತಿನಹಳ್ಳ ಯೋಜನೆಯಲ್ಲಿ ಹೆಸರಿಸಿರುವ ಹೊಂಗಡಳ್ಳ ಮತ್ತು ಕೆಲವು ಆಸುಪಾಸಿನ ಹರಿವುಗಳಿಗೆ ಕಟ್ಟೆ ಕಟ್ಟಿ, ಒಟ್ಟುಮಾಡಿ, ಭಾರೀ ಸುರಂಗಮಾರ್ಗದಲ್ಲಿ ಅಧಃಪತನ ಕೊಟ್ಟು ವಿದ್ಯುತ್ ಬಸಿಯುವುದು. ಅದರಲ್ಲಿ ಸಾಮಾಜಿಕ ಹಾಗೂ ಕೃಷಿ ಸ್ಥಳಾಂತರದ ಸಮಸ್ಯೆಗಳಿದ್ದುವು. ಅವು ಘಟ್ಟದ ಮೇಲಿನವರನ್ನಷ್ಟೇ ಕಾಡುವುದರಿಂದ, ಅಲ್ಲಿನವರನ್ನು ಯಾಮಾರಿಸಲು ಸರಕಾರ ಕೊನೆಯಲ್ಲಿ ನೀರು ಮುಟ್ಟುವ ಸ್ಥಳ – ಗುಂಡ್ಯದ ಹೆಸರು, ಕೊಟ್ಟರು. ಹೊಸ ಯೋಜನೆಯಲ್ಲಿ, ಘಟ್ಟದ ಕೆಳಗಿನವರಿಗೆ ಗುಂಡ್ಯಹೊಳೆಯ ಮೂಲದ್ದೇ ನೀರು ವಂಚಿಸುವಾಗ, ಕರಾವಳಿಯವರನ್ನು ಯಾಮಾರಿಸಲು ಹೆಸರು ಎತ್ತಿನಹೊಳೆ ಎಂದರು!

ವಾಸ್ತವದಲ್ಲಿ ಗುಂಡ್ಯ ೨೦೦ ಮೆಗಾವಾಟಿನ ಜಲವಿದ್ಯುತ್ ಯೋಜನೆಯೇ ಅವಸರದ ಕೂಸು. (ವಿವರಗಳಿಗೆ ಇಲ್ಲಿ ಚಿಟಿಕೆಹೊಡೆಯಿರಿ – ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡ ಎನುತಿದೆ) ಅದರ ವಿವರವಾದ ಯೋಜನಾ ವರದಿ ಎಂದೋ ಯಾವುದಕ್ಕೋ ಬರೆದ ಆದರೆ ಯಾವುದೇ ಯೋಜನೆಗೆ ಹೊಂದಿಸಿಕೊಳ್ಳಬಹುದಾದ ಅಭಾಸದ ಕಂತೆ. (ಇಲ್ಲಿನ ವನ್ಯಜೀವಿ ಪಟ್ಟಿಯಲ್ಲಿ ಇಲಿ, ಜಿಗಣೆಯಾದಿಗಳನ್ನು ಹೆಸರಿಸಿದ್ದಾರೆ, ಎಲ್ಲರಿಗೂ ನಿತ್ಯ ತಲೆನೋವಾಗಿರುವ ಆನೆಯ ಸುದ್ದಿಯೇ ಇಲ್ಲ!!) ಆ ಯೋಜನೆಗಾಗಿ ಜಿಲ್ಲಾಧಿಕಾರಿ ಅನಿವಾರ್ಯವಾಗಿ ನಡೆಸಿದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯಲ್ಲಿ ನಮ್ಮ ಬಳಗ ಭಾಗವಹಿಸಿತ್ತು. ಸಭೆಯಲ್ಲಿ ನಮಗೆ ಕೇಳಿಸಿದ ಬಹುಮತದ ಯೋಜನಾ ವಿರೋಧೀ ಮಾತುಗಳೆಲ್ಲ (ನಮ್ಮವನ್ನೂ ಸೇರಿಸಿ) ಅಂತಿಮ ವರದಿಯಲ್ಲಿ (ಕೆಲವು ತಿಂಗಳು ಬಿಟ್ಟು ಮಾಹಿತಿ ಹಕ್ಕಿನಲ್ಲಿ ತರಿಸಿಕೊಂಡಾಗ) ಇಲ್ಲದಂತಾಗಿಸಿದ್ದು ಸರಕಾರದ ಪಕ್ಷಪಾತೀ ಮತ್ತು ಬಹು ನೀಚ ಕ್ರಮವೇ ಸರಿ. ಈಚೆಗೆ ಚುನಾವಣಾ ಅವಸರದಲ್ಲಿ, ಎರಡೆರಡು ಜಿಲ್ಲಾ ಬಂದ್‌ಗಳೊಡನೆ ಎತ್ತಿನಹೊಳೆ ಯೋಜನೆ ಅನುಸಂಧಾನ ಮಾಡಿದಂತೇ ಅಂದಿನ ಭಾಜಪ ಸರಕಾರವೂ ಭಾರಿ ಪೋಲೀಸ್ ಬಂದೋಬಸ್ತಿನಲ್ಲಿ ಗುಂಡ್ಯ ಯೋಜನೆಗೆ ಅಡಿಗಲ್ಲು ಹಾಕಿತ್ತು (ಯಾವಡ್ಡಿ ಬಂದರೂ ಯಡ್ಡಿ ಬಿಡ!). ಆದರೆ ಸ್ವಲ್ಪೇ ಕಾಲದಲ್ಲಿ ಕೇಂದ್ರ ಪರಿಸರ ಇಲಾಖೆ (ಸ್ವಸ್ಥಚಿತ್ತದ ಸಚಿವ ಜೈರಾಂರಮೇಶ್) ಉರಿಗಣ್ಣು ಬಿಟ್ಟಾಗ, ರಾಜ್ಯ ಸರಕಾರ ರಾತೋರಾತ್ರಿ ಅಡಿಗಲ್ಲೂ ಸೇರಿದಂತೆ ಎಲ್ಲ ಕುರುಹುಗಳನ್ನು ಬಾಚಿಕೊಂಡೋಡಿತ್ತು!

ಸೋತ ಜಲವಿದ್ಯುತ್ ಯೋಜನೆಯ ಪ್ರಾಥಮಿಕ ಸರ್ವೇಕ್ಷಣಾ ಟಿಪ್ಪಣಿ ಮತ್ತು ಪರಮಶಿವಯ್ಯನವರ ನದಿತಿರುವಿನ ವರದಿಯನ್ನಿಟ್ಟುಕೊಂಡು ಇಲ್ಲಿ ಚಿಕ್ಕಬಳ್ಳಾಪುರಕ್ಕೊಂದು ಪಂಪಿನ ಕೊಟ್ಟಿಗೆ ಕಟ್ಟುತ್ತಿದ್ದಾರೆ. ‘ಕುಡಿಯುವ ನೀರು ಪೂರೈಕೆಗೆ ಎಂದು ನಾಲಗೆಯ ಒಂದೆಳೆಯಲ್ಲಿ ಹೇಳಿದರೆ (ಕೇಂದ್ರದ ಪರಿಸರ ಇಲಾಖೆಯ ವ್ಯಾಪ್ತಿಯಿಂದ ಹೊರಗುಳಿಯುವ ದಾರಿ!!) ಅನುಷ್ಠಾನಕ್ಕೆ ವಹಿಸಿ ಕೊಟ್ಟದ್ದು (ಕೃಷಿ) ನೀರಾವರಿ ನಿಗಮಕ್ಕೇ. ಅದೇನಿದ್ದರೂ ಸದ್ಯ ಚುನಾವಣಾ ಘೋಷಣೆಯಾಗಿದೆ. ಮುಂದೆ ಬರಬಹುದಾದ ಅಥವಾ ಉಳಿಯಬಹುದಾದ ಸರಕಾರ ಏನೇ ಇರಲಿ, ನಿರ್ಮಾಣವಂತು ಎಲ್ಲ ಸಾರ್ವಜನಿಕ ಕಾಮಗಾರಿಗಳಂತೆ ಪ್ರತಿಭಟನೆ, ನ್ಯಾಯಾಲಯ ಹೋರಾಟಗಳ ಎಡೆಯಲ್ಲಿ ಅವಕಾಶ ಸಿಕ್ಕರೆ ಸರಕಾರೀ ನಿಧಾನದ್ರೋಹವನ್ನೂ ಸೇರಿಸಿ ವಿಳಂಬಿಸಲಿದೆ ಖಂಡಿತ. ಅದರೊಳಗೆ ದೊಡ್ಡ ಕಮ್ಮಟವಲ್ಲದಿದ್ದರೂ ನಮ್ಮ ಮಾಹಿತಿ ಕೋಶವನ್ನು ವಿವಿಧ ಕೋನಗಳಿಂದ ಸಮೃದ್ಧವಾಗಿಸುವ ಪ್ರಯತ್ನವಂತೂ ನಡೆಯಲೇಬೇಕಾಗಿದೆ.

ವಿಜಯಕುಮಾರ ಶೆಟ್ಟಿಯವರು ಎತ್ತಿನಹೊಳೆ ಯೋಜನೆಯ ವಿರುದ್ಧ ಉಚ್ಚನ್ಯಾಯಾಲಯದ ಹೊಸ್ತಿಲಿನಲ್ಲಿದ್ದಾರೆ. ಹಾಗೇ ಭಾರತದಲ್ಲಿ ಅರಣ್ಯ ರಕ್ಷಣೆಗೆ ಸಂಬಂಧಿಸಿದಂತೆ ತಡೆ ಮತ್ತು ಯುಕ್ತ ವಿಚಾರಣೆಯೊಡನೆ ತೀರ್ಮಾನ ಕೊಡುವ ಇನ್ನೆರಡು ಸಂವಿಧಾನದತ್ತ ಪೀಠಗಳದ್ದೂ ಮೊರೆಹೊಗುವ ವಿಚಾರಗಳಲ್ಲಿ ಹಲವರು ಸಜ್ಜಾಗುತ್ತಿದ್ದಾರೆ. ಹಾಸನದಲ್ಲಿ ವಕೀಲೀ ವೃತ್ತಿಯಲ್ಲಿರುವ ತರುಣ ವಕೀಲ ಕಿಶೋರ್ ಕುಮಾರ್ ಗುಂಡ್ಯ ಯೋಜನೆಯ ಕಾಲದಿಂದಲೇ ಬಹುಶ್ರಮ ಮತ್ತು ಪ್ರಾಮಾಣಿಕತೆಯಿಂದ ಸಾರ್ವಜನಿಕ ಜಾಗೃತಿ ನಡೆಸಿಯೇ ಇದ್ದಾರೆ. ಅವರು ಸ್ವತಃ ಪತ್ರಕರ್ತರನ್ನು ಕರೆಸಿಕೊಂಡು, ಯುಕ್ತ ಮಾಹಿತಿಗಳ ಸಹಿತ ಯೋಜನಾ ಪ್ರದೇಶಗಳ ಸಂದರ್ಶನವನ್ನೂ ವ್ಯವಸ್ಥೆ ಮಾಡಿದ್ದರು. ಮತ್ತೆ, ಅವರೇ ಕಟ್ಟಿದ ಸ್ವಯಂಸೇವಾ ಸಂಸ್ಥೆ – ಮಲೆನಾಡು ಯೂತ್ ಅಸೋಸಿಯೇಶನ್, ಊರಿನ ವ್ಯಾಪ್ತಿ ಮೀರಿ ಮಂಗಳೂರಿಗೂ ಬಂದು ಜಾಗೃತಿ, ಪ್ರತಿಭಟನೆಗಳಲ್ಲಿ ತೊಡಗಿಕೊಂಡಿತ್ತು.

ಲಭ್ಯ ಶಾಸನಗಳ ಪರಿಧಿಯಲ್ಲೇ ನದಿಗಳು ತಮ್ಮ ದಂಡೆಯ ಗ್ರಾಮಾಡಳಿತಗಳ ಅಧಿಕಾರಕ್ಕೊಳಪಡುತ್ತವೆ. ಇದು ರಾಜ್ಯ ಅಥವಾ ಕೇಂದ್ರ ಸರಕಾರದ ಹಸ್ತಕ್ಷೇಪವನ್ನೂ ಮೀರಿದ ಪರಮಾಧಿಕಾರ ಎಂಬುದನ್ನು ರವೀಂದ್ರನಾಥ ಶ್ಯಾನುಭಾಗರಂಥವರು ಜಾಗೃತಗೊಳಿಸುವತ್ತಲೂ ತೊಡಗಿದ್ದಾರೆ. ಮಾಧ್ಯಮ ಜಾಗೃತಿ ಹಾಗೂ ಜನಾಂದೋಳನಗಳ ಮಾರ್ಗವೂ ಉಪೇಕ್ಷಣೀಯವಲ್ಲ ಎನ್ನುವಂತೆ ಭಾಷಣ, ವಿವಿಧ ತೆರನ (ಬಂದ್, ಜಾಥಾ, ಮಾನವ ಸರಪಳಿ, ಹೊಳೆಯಲ್ಲಿ ಅರೆಮುಳುಗಿ ಘೋಷಣೆ ಹಾಕುವುದು ಇತ್ಯಾದಿ ಈಗಾಗಲೇ ಪ್ರಯೋಗವಾಗಿವೆ) ಪ್ರತಿಭಟನಾ ಕಲಾಪಗಳೂ ಹಲವು ಮುಖಗಳಲ್ಲಿ ನಡೆಯುತ್ತಲೇ ಇವೆ. ಏತನ್ಮಧ್ಯೆ ಯಾವುದೇ ಒಂದು ಯೋಜನೆಯ ಪರ ವಿರೋಧಗಳ ಗೋಜಿಗಿಳಿಯದೇ ನಮ್ಮ ನೆಲದ ನಿಜ ಸತ್ತ್ವದ ಸಮೀಕ್ಷೆ ಮತ್ತು ಆ ಆಧಾರದ ಮೇಲೆ ಸಂರಕ್ಷಣೆಯ ಸೂತ್ರಗಳನ್ನು ಹೆಣೆಯುವ ಬಹುಶಿಸ್ತಿನ ಕೆಲಸ ಯಾವುದೇ ಪ್ರಚಾರದ ಆವುಟಗಳಿಲ್ಲದೇ ನಡೆಯುತ್ತಲೇ ಇದೆ ಎನ್ನುವುದನ್ನು ನೆನಪಿಸುವಂತೆ ನನಗೊಂದು ಕರೆ ಬಂತು.

ಈಗಾಗಲೇ ನಮ್ಮ ಗೆಳೆಯರ ಬಳಗ ಡಾ| ಕೆ.ವಿ. ಗುರುರಾಜರನ್ನು ಮುಂದಿಟ್ಟುಕೊಂಡು ಬಿಸಿಲೆಯ ಕಾಡಿನಲ್ಲಿ ಎರಡು ಕಪ್ಪೆ ಶಿಬಿರ ನಡೆಸಿದ್ದು ಇಲ್ಲಿನ ಓದುಗರಿಗೆಲ್ಲ ತಿಳಿದದ್ದೇ ಆಗಿದೆ. ಅದರಲ್ಲಿ ಭಾಗಿಯಾಗಿದ್ದ ಅನೂಪ್, ಸುಮನ್ ಮತ್ತು ಶಿಶಿರ್ ಈಚೆಗೆ ಖಾಸಗಿ ಸಂಶೋಧನಾ ಕೇಂದ್ರವೊಂದರ ಆಶ್ರಯದಲ್ಲಿ ಪಶ್ಚಿಮ ಘಟ್ಟದ ನಮ್ಮ ವಲಯದಲ್ಲೇ ಹೊಸದೇ ಸರ್ವೇಕ್ಷಣೆಯೊಂದನ್ನು ನಡೆಸಲು ತೊಡಗಿದ್ದಾರೆ. ಅವರು ಕೇವಲ ಪ್ರೀತಿಯಿಂದ ತಮ್ಮ ಕಲಾಪಗಳಿಗೆ ಜೊತೆಗೊಡುವುದಕ್ಕೆ ನನ್ನನ್ನು ಕರೆದ ಮೇಲೆ ತಡ ಮಾಡುವುದುಂಟೇ! ಬರಿಯ ಶಿಖರಾರೋಹಿಯಾಗಿದ್ದ ನನಗೆ ಉಲ್ಲಾಸ ಕಾರಂತರ ಹುಲಿ ಸರ್ವೇಕ್ಷಣೆ ಇಂಥ ಕಲಾಪಗಳ ಕುರಿತು ನನಗೆ ವನ್ಯಸಂರಕ್ಷಣೆಯ ಪ್ರೇರಣೆಯನ್ನೇ ಕೊಟ್ಟದ್ದು ಮರೆಯಲಾರೆ. ಉಲ್ಲಾಸರ ಬಹುವ್ಯಾಪ್ತಿಯ ಅಧ್ಯಯನದ ಮುಂದುವರಿಕೆಯಲ್ಲಿ ಮುಂದೊಂದು ಕಾಲದಲ್ಲಿ ನನಗಿನ್ನೊಂದೇ ಸರ್ವೇಕ್ಷಣೆಯಲ್ಲಿ ಪಾಲುಗೊಳ್ಳುವ ಸಣ್ಣ ಅವಕಾಶವೂ ಒದಗಿತ್ತು. ಸದ್ಯ ಅದರ ಅನುಭವವನ್ನು ನಾನು ಇಲ್ಲಿ ಪೀಠಿಕಾರೂಪದಲ್ಲಿ ಸೂಕ್ಷ್ಮವಾಗಿ ಹೇಳಿ ಮುಗಿಸುತ್ತೇನೆ.

ಶೇಕಡವಾರಿನಲ್ಲಿ ಎಂಬತ್ತರಿಂದ ಎರಡಕ್ಕಿಳಿದ ಭಾರತದ ವನ್ಯ ಸ್ಥಿತಿ ಬಗ್ಗೆ ನಾನು ಹೊಸದಾಗಿ ಏನೂ ಹೇಳುವುದುಳಿದಿಲ್ಲ. ಆದರೆ ಸಂಶೋಧನಾಧಾರಿತ ವನ್ಯ ಸಂರಕ್ಷಣಾ ಹೊಣೆಯನ್ನು ಹೊತ್ತ ಉಲ್ಲಾಸರ ಬಳಗದ ಆಶಾವಾದ ದೊಡ್ಡದು. ಅದರದು ರಮ್ಯ ಕನಸಾಗಿ ಉಳಿಯದಂತೆ ಆ ಬಳಗ ಆರೇಳು ವರ್ಷಗಳ ಹಿಂದೆ ಹೊಸದೊಂದು ಸರ್ವೇಕ್ಷಣೆ ನಡೆಸಿತು. ಉಪಗ್ರಹಾಧಾರಿತ ಹಸಿರು ವಲಯಗಳಲ್ಲಿ ಸಂರಕ್ಷಿತ ಅರಣ್ಯವಲಯಗಳನ್ನು ಮೀರಿದಂತಿರುವ ನೆಲಗಳಲ್ಲಿ ವನ್ಯಪ್ರಾಣಿಗಳ ಬಳಕೆಯ ಕುರುಹುಗಳನ್ನು ಅಂದಾಜಿಸುವುದು ಇದರ ಪ್ರಾಥಮಿಕ ಹಂತ. ಸರಕಾರೀ ಯೋಜನೆಗಳಂತೆ ಭಾರೀ ಹಣಕಾಸಿನ ವಹಿವಾಟು ಇದಲ್ಲ. ಕೇವಲ ಸ್ವಯಂಸೇವಕರ ಉತ್ಸಾಹದಲ್ಲಿ, ಬಿಡು ಸಮಯದಲ್ಲಿ ನಡೆಯಬೇಕಿತ್ತು. ಅವಿಭಜಿತ ದಕ ವಲಯದ ಹೊಣೆ ವಹಿಸಿಕೊಂಡ (ಕುದುರೆಮುಖ ವೈಲ್ಡ್ ಲೈಫ್ ಫೌಂಡೇಶನ್ನಿನ ಬಹುಕ್ರಿಯಾವಂತ ಸಂಚಾಲಕ) ಗೆಳೆಯ ನಿರೇನ್ ಜೈನ್ ನಮ್ಮೆಲ್ಲರ ಸಹಕಾರವನ್ನು ಬಯಸಿದ್ದರು. ನನ್ನ ಅಂಗಡಿಯ ಮಿತಿಯಲ್ಲಿ ಕೇವಲ ಎರಡು ಜಾಡುಗಳಲ್ಲಷ್ಟೇ ನನಗೆ ಭಾಗಿಯಾಗುವ ಅವಕಾಶ ಒದಗಿತ್ತು.

ಮೊದಲ ಅವಕಾಶದಲ್ಲಿ ಕುಮಾರ ಪರ್ವತದ ಸುಮಾರಿಗೆ ಪಶ್ಚಿಮ-ದಕ್ಷಿಣ ಮೈ ನೋಡಿದೆ. ಇದು ಪುಷ್ಪಗಿರಿ ವನಧಾಮದ ಒಂದು ಅಂಚು. ಅಲ್ಲಿ ತಪ್ಪಲನ್ನು ಆವರಿಸಿಕೊಂಡು ಸಾಕಷ್ಟು ಖಾಸಗಿ ಕೃಷಿ ಭೂಮಿ ಇದೆ. ಅಲ್ಲಿನ ಕೃಷಿ ಹಾಗೂ ಮನುಷ್ಯ ಚಟುವಟಿಕೆಗಳು ವನಧಾಮದ ಮೇಲೆ ಪ್ರಭಾವ ಬೀರುತ್ತವೆ. ವನ್ಯಮೃಗಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರವಿರಲು ಬಯಸುವುದು ಎಲ್ಲರಿಗೂ ತಿಳಿದ ವಿಷಯವೇ ಇದೆ. ಆದರೂ ಈ ಗಡಿಭಾಗಗಳ ಆಯ್ದ ಜಾಡುಗಳಲ್ಲಿ ನಡೆದು, ಅಲ್ಲಿ ಲಭ್ಯವಿರುವ ವನ್ಯಮೃಗಗಳನ್ನು (ಪ್ರತ್ಯಕ್ಷ ದರ್ಶನದಿಂದ ಅಲ್ಲ) ಪರೋಕ್ಷ ಸಾಕ್ಷಿಗಳ ಆಧಾರದಲ್ಲಿ ಪಟ್ಟಿ ಮಾಡುವುದು ನಮ್ಮಕೆಲಸ. ಬೆಂಗಳೂರಿನಿಂದ ರಾತ್ರಿ ಬಸ್ಸಿನಲ್ಲಿ ಬಂದಿದ್ದ (ಬಹುಶಃ ಗಣಕ ತಂತ್ರಜ್ಞರು) ಐದಾರು ಮಂದಿ ಅತ್ಯುತ್ಸಾಹೀ ತರುಣರಿಗೆ ಪ್ರತ್ಯೇಕಪ್ರತ್ಯೇಕವಾಗಿ ಸ್ಥಳಪರಿಚಯವಿರುವ ಮಾರ್ಗದರ್ಶಿಯಗಳನ್ನು ಜೊತೆ ಮಾಡಿಕೊಟ್ಟು ವಿವಿಧ ಜಾದುಗಳಿಗೆ ಸರ್ವೇಕ್ಷಣೆಗೆ ಬಿಟ್ಟರು. (ಕೊನೆಯಲ್ಲಿ ಸ್ವತಃ ನಿರೇನ್ ಒಂದು ಜಾಡು ಅನುಸರಿಸಿದ್ದರು.) ಹಾಗೆ ನಾನೂ ಒಬ್ಬ ತರುಣನಿಗೆ ರಕ್ಷಕ, ಮಾರ್ಗದರ್ಶಿ. ಜಿಪಿಎಸ್ ಹಿಡಿದು ಯೋಜಿತ ಜಾಡು ಅನುಸರಿಸುವುದರಲ್ಲಿ ಆತ ಪ್ರವೀಣ. ಪ್ರಾಣಿಗಳ ಮಲ, ತಿಂದುಳಿದ ಕೊಳ್ಳೆ ಅಥವಾ ಮೂಳೆ, ಗರಿ, ಪಾದಗುರುತು ಇತ್ಯಾದಿ ಸಾಕ್ಷ್ಯ ಸಂಗ್ರಹ ಮತ್ತು ಲಭ್ಯವಾದರೆ ಪ್ರತ್ಯಕ್ಷ ದರ್ಶನದ ಲಿಖಿತ ವರದಿಗೆ ನಾವಿಬ್ಬರೂ ಜವಾಬ್ದಾರರು. ಮಧ್ಯಾಹ್ನಕ್ಕೆ ಬುತ್ತಿ, ಕುಡಿಯುವ ನೀರಿನ ಅಂಡೆಯೊಡನೆ ಸಜ್ಜಾದ ನಮ್ಮನ್ನು ಜಾಡಿನ ಆರಂಭ ಬಿಂದುವಿಗೆ (ಸುಬ್ರಹ್ಮಣ್ಯ ಪೇಟೆಯಿದ ಸುಮಾರು ಹದಿನಾಲ್ಕು ಕಿಮೀ ಕಚ್ಚಾ ದಾರಿಯ ಕೊನೆಯ ಒಂದು ಕಗ್ಗಾಡ ಮೂಲೆ) ನಿರೇನ್ ಜೀಪಿನಲ್ಲಿ ಬಿಡುವಾಗ ಗಂಟೆ ಸುಮಾರು ಹತ್ತಾಗಿತ್ತು.

ಬಕಾಸುರನ ಡೊಳ್ಳಿನಂತೆ ಕಡಿದಾಗಿ ಏರು ತೋರುವ ಬೆಟ್ಟದ ಮೈಯೂ ಮಾರ್ಚ್-ಏಪ್ರಿಲ್ಲಿನ ರಣಗುಡುವ ಬಿಸಿಲೂ ನಮ್ಮನ್ನು ಸ್ವಾಗತಿಸಿತು. ಅಲ್ಲೇ ಸಾಗಿದ್ದ ಭಾರತ ಸರ್ವೇಕ್ಷಣಾ ಇಲಾಖೆಯ ಡಿ-ಲೈನ್ ನಮಗೆ ಪರೋಕ್ಷ ಮಾರ್ಗದರ್ಶಿಯಾಗುವುದಿತ್ತು. (ಡಿ-ಲೈನ್ ಬಗ್ಗೆ ನನಗೆ ತಿಳಿದಷ್ಟು: ಇವು ನಕ್ಷೆಯಲ್ಲೂ ನಮೂದುಗೊಳ್ಳುವ ವಿವಿಧ ಗಡಿಗಳ ವಾಸ್ತವ ರೂಪ. ಅದಕ್ಕಿರುವ ನಿಯಮಗಳಂತೆ ಅಲ್ಲಲ್ಲಿ ಸಿಗುವ ಕಾಡುಕಲ್ಲುಗಳನ್ನು ಬುಡದಲ್ಲಿ ಸುಮಾರು ನಾಲ್ಕೈದು ಅಡಿಯೂ ನೆತ್ತಿಯಲ್ಲಿ ಎರಡು-ಮೂರಡಿಯೂ ವ್ಯಾಸವಿರುವಂತೆ ವೃತ್ತಾಕಾರವಾಗಿ, ಸುಮಾರು ಐದಾರು ಅಡಿ ಎತ್ತರಕ್ಕೆ ಭದ್ರವಾಗಿ ಜೋಡಿಸಿ ಗುಪ್ಪೆ ಮಾಡುತ್ತಾರೆ. ಸ್ಥಳ ಸನ್ನಿವೇಶ ನೋಡಿ ಗುಪ್ಪೆಗಳ ಅಂತರ ಹೆಚ್ಚು ಕಡಿಮೆಯಾಗುತ್ತವೆ. ಕುಮಾರ ಪರ್ವತದ ತೆರೆಮೈಯಲ್ಲಿ ಪರಸ್ಪರ ಅಂತರ ಸುಮಾರು ಐದುನೂರು ಮೀಟರ್ ಇದ್ದಿರಬೇಕು ಎಂದು ನನ್ನ ನೆನಪು. ಆ ಉದ್ದಕ್ಕೂ ಅಷ್ಟಗಲಕ್ಕೆ ದೊಡ್ಡ ಮರ, ಪೊದರುಗಳ ಕಾಡು ಕೀಸಿ, ಸಾಮಾನ್ಯವಾಗಿ ದೃಷ್ಟಿಯೂ ನಡಿಗೆಯೂ ಸುಲಭವಾಗುವಂತೆ ಮಾಡಿರುತ್ತಾರೆ. ನಮಗೆ ಸಿಕ್ಕಿದ್ದು ದಕ – ಕೊಡಗುಗಳ ಜಿಲ್ಲಾ ಗಡಿ ಇದ್ದಿರಬೇಕು. ಹಳೆ ಲೆಕ್ಕಾಚಾರದ ಪ್ರಕಾರ – ಎರಡು ವರ್ಷಕ್ಕೊಮ್ಮೆ ಗುಪ್ಪೆಯಿಂದ ಗುಪ್ಪೆಯುದ್ದಕ್ಕೆ ಬೆಳೆದ ಹಸಿರು ಸವರಿ, ಗುಪ್ಪೆಗಳನ್ನು ಬಿಗಿ ಮಾಡಿ, ಸುಣ್ಣ ಬಳಿದು ಸುಲಭ ದೃಗ್ಗೋಚರವಾಗುವಂತೆ ನೋಡಿಕೊಳ್ಳುತ್ತಿದ್ದರು. ಆದರಿಂದು ಉಪಗ್ರಹಗಳ ನೆರವಿನಲ್ಲಿ, ಎಲ್ಲೇ ಕುಳಿತು ಎಲ್ಲವನ್ನೂ ಖಚಿತವಾಗಿ ಕಾಣಬಲ್ಲ ಸ್ಥಿತಿಯಲ್ಲಿ ಬದಲಾಗಿರಬಹುದಾದ ಶಾಸನ ಮತ್ತು ಅನುಷ್ಠಾನ ನನಗೆ ತಿಳಿದಿಲ್ಲ.)

ಮರಗಳು ಹೋದಲ್ಲಿ ಯುಪಟೋರಿಯಂ ಹಬ್ಬಿತ್ತು. ನಾವು ಅಲ್ಲಿಲ್ಲಿ ತುಸು ಜಾಡು ಬಿಡಿಸಿಕೊಳ್ಳುತ್ತ ಏರಿದೆವು. ಮುಂದುವರಿದಂತೆ ವಿಸ್ತಾರ ಹುಲ್ಲಹರಹು. ಅದೃಷ್ಟವಶಾತ್ ಆ ವಲಯದಲ್ಲಿ ಬೆಂಕಿ ಕಾಡಿರಲಿಲ್ಲ. ಆದರೆ ಗಾಳಿ ಮತ್ತು ಪ್ರಾಣಿಗಳ ಸಂಚಾರದಿಂದಲೋ ಹುಲ್ಲು ಸಾಕಷ್ಟು ಹುಡಿಯಾಗಿದ್ದುದರಿಂದ ನಮ್ಮ ಕೆಲಸ ಮಾತ್ತು ಪ್ರಗತಿಗೆ ಸಹಕಾರಿಯೇ ಆಯ್ತು. ಚುರುಗುಟ್ಟುವ ಬಿಸಿಲು, ಗರಿಕೆ ಅಲ್ಲಾಡದ ಹವೆ, ಅತ್ಯಂತ ಕಡಿದಾದ ಏರು ನಮ್ಮನ್ನು ಅಕ್ಷರಶಃ ಕಂಗಾಲು ಮಾಡಿತು. ಗಿರಿಯಲ್ಲಿ ಝರಿ ನೀರು ಅಲ್ಲಲ್ಲಿ ಸಿಕ್ಕಿಯೇ ಸಿಗುತ್ತದೆ ಎಂಬ ನನ್ನ ಕಲ್ಪನೆ ಹುಸಿಯಾಯ್ತು. (ನಮ್ಮ ಜಾಡು ಕಣಿವೆಗಳಿಗೆ ಇಳಿಯುತ್ತಿರಲಿಲ್ಲ.) ಇಬ್ಬರೂ ಒಯ್ದಿದ್ದ ನೀರಿನಲ್ಲಿ ತುರ್ತುಪರಿಸ್ಥಿತಿಗೆಂದು ಒಂದೊಂದು ಮುಕ್ಕುಳಿ ಮಾತ್ರ ಉಳಿಸಿಕೊಳ್ಳುವಂತಾಗಿತ್ತು. ನಮ್ಮ ಸುಟ್ಟ ಚರ್ಮ, ಹರಿದ ಬೆವರು, ಸಿಕ್ಕಿದ ಉಸಿರೆಲ್ಲ ಕಂಡು ಕನಿಕರಿಸಿ ಆಗ ಎಲ್ಲಾದರೂ ದೇವರು ಪ್ರತ್ಯಕ್ಷನಾಗಿದ್ದರೆ ಕರುಣಿಸೋ ರಂಗಾ ಬಾಲ್ದಿ ನೀರೂ ಎಂದು ಗೋಗರೆಯುವ ಸ್ಥಿತಿ.

ಕುಮಾರಪರ್ವತ ಏರುವವರಿಗೆ ಗಿರಿಗದ್ದೆ ದಾಟಿದ ಮೇಲೆ ಸಿಗುವ ಕಲ್ಲಚಪ್ಪರ ಗೊತ್ತೇ ಇದೆ. ಅದರ ಒತ್ತಿನಲ್ಲಿ ಹೆಚ್ಚು ಕಡಿಮೆ ಸಾರ್ವಕಾಲಿಕ, ಪ್ರಾಕೃತಿಕ ಝರಿಯೂ ಇದೆ. ಆದರೆ ಇನ್ನೇನು ಒಂದು ಸಣ್ಣ ಏಣಿನಾಚೆ, ಅಂದರೆ ಹೆಚ್ಚು ಕಡಿಮೆ ನಾನೂರು ಐನೂರು ಮೀಟರ್ ಅಂತರದಲ್ಲೇ ಕಲ್ಲಚಪ್ಪರವಿದೆ ಎನ್ನುವಲ್ಲಿಗೆ ನಮಗೆ ನಿಗದಿಸಿದ್ದ ಏರು ಜಾಡು ಮುಗಿದಿತ್ತು. ಮುಂದಿನ ನಮ್ಮ ಸರ್ವೇಕ್ಷಣಾ ಜಾಡು ಬಹುಶಃ ಶಿಖರ ಏರುವವರ ಸಾಂಪ್ರದಾಯಿಕ ಜಾಡಿಗೂ ಒಂದು ಏಣು ಈಚೆ ಇಳಿಯುವುದಿತ್ತು. ಮಧ್ಯಾಹ್ನ ಒಂದೂವರೆ ಗಂಟೆಯ ಸಮಯ. ಬೆಳಿಗ್ಗೆ ಸೊಂಟಪಟ್ಟಿ ಬಿರಿಯುವಂತೆ ತಿಂದಿದ್ದ ಇಡ್ಲಿ, ವಡೆ, ದೋಶೆಗಳೆಲ್ಲಾ ಹೇಳಹೆಸರಿಲ್ಲದಂತೆ ನಾಶವಾಗಿತ್ತು. ತಂದಿದ್ದ ಬುತ್ತಿ ನಮ್ಮ ರಾಕ್ಷಸ ಹಸಿವಿನ ತುತ್ತೊಂದಕ್ಕೂ ದಕ್ಕಲಿಲ್ಲ. ಕಟ್ಟಿದ ಗಂಟಲಿಗೆ ಉಳಿದಿದ್ದ ಕೊನೆ ಹನಿಯನ್ನೇ ಸೋಕಿಸಿ, ಮುಂದುವರಿದೆವು. ಸಂಜೆ ನಾಲ್ಕೂವರೆಯಂದಾಜಿಗೆ ಸರಿ ಸುಮಾರು ತಪ್ಪಲನ್ನೇ ಸೇರಿದೆವೆನ್ನುವಲ್ಲಿ ಕೊನೆಗೂ ನಮಗೆ ನೀರ ತೊರೆ ಸಿಕ್ಕಿತು. ನಾವು ಸಾಕ್ಷಾತ್ ಅಗಸ್ತ್ಯನಂತೆ ತೊರೆಯನ್ನು ಕುಡಿದೇ ಮುಗಿಸಿಬಿಟ್ಟೆವು ಎಂದರೆ ಖಂಡಿತ ಅತಿಶಯೋಕ್ತಿಯಲ್ಲ! ಮತ್ತೆ ಅನತಿ ದೂರದಲ್ಲೇ ಕೃಷಿಭೂಮಿಯೂ ನಾಗರಿಕ ಜಾಡು ಸಿಕ್ಕಿ, ಕಾಲರ್ಧ ಗಂಟೆಯಲ್ಲಿ ನೇರ ಸುಬ್ರಹ್ಮಣ್ಯ ಪೇಟೆಯನ್ನೇ ಸೇರಿ ಕೃತಕೃತ್ಯರಾದೆವು. ಉದ್ದಕ್ಕೂ ನಮಗೆ ಯಾವುದೇ ಘನಪ್ರಾಣಿಯ ದರ್ಶನ ಅಥವಾ ಇತರ ಬಲವತ್ತರವಾದ ಸಾಕ್ಷ್ಯಗಳು ಸಿಗಲಿಲ್ಲ. ಆದರೆ ಕೊನೆಯಲ್ಲಿ ಸಿಕ್ಕ ಸ್ಫಟಿಕ ನಿರ್ಮಲ ತೊರೆ, ಕಿರಿದಂತರದಲ್ಲೇ ಪುಣ್ಯಕ್ಷೇತ್ರದ ಪಾಪರಾಶಿಯನ್ನು ಹೊತ್ತು ಮುಟ್ಟಲೂ ಆಗದ ಸ್ಥಿತಿಗೆ ಬದಲಿದ್ದನ್ನು ಮಾತ್ರ ಮರೆಯಲಾರೆ. [ಇಂದಿಗೂ ಸುಬ್ರಹ್ಮಣ್ಯದಲ್ಲಿ ಮಾಸ್ಟರ್ ಪ್ಲ್ಯಾನ್ ಜಪ ಕೇಳುತ್ತೇವೆ, ಪರಿಸ್ಥಿತಿ ಉತ್ತಮಿಸುವುದು ಬಿಟ್ಟು ಮತ್ತಷ್ಟು ಕೆಳ ಕುಸಿದಿದೆ ಎನ್ನುವುದನ್ನು ತೀವ್ರ ವಿಷಾದದೊಡನೆ ದಾಖಲಿಸಲೇಬೇಕಾಗಿದೆ.]

ನನ್ನ ಎರಡನೇ ಸರ್ವೇಕ್ಷಣೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉತ್ತರಮಗ್ಗುಲಿನಲ್ಲಿ ನಡೆಯಿತು. ಗುಂಡ್ಯಕ್ಕೂ ತುಸು ಹಿಂದಿನ ಊರಿನಿಂದ ಆರೇಳು ಕಿಮೀ ಕಚ್ಚಾದಾರಿಯಲ್ಲಿ ಜೀಪು ಸವಾರಿ ಕೊಟ್ಟು ಕಾಡಮೂಲೆಗೆ ನಮ್ಮನ್ನು ಗೆಳೆಯ ಕೃಶಿ ಬಿಟ್ಟು ಹೋದರು. ಇದು ದಟ್ಟ ಕಾಡಿನ ಅಸಂಖ್ಯ ಗುಡ್ಡೆ ಕಣಿವೆಗಳ ಅಸ್ಪಷ್ಟ ಜಾಡು. ಆದರೆ ಆಚೆ ಕೊನೆಯಲ್ಲಿ ನಾವು ಶಿಶಿಲವನ್ನು ಸೇರಬೇಕಿತ್ತು. ಇದಕ್ಕೆ ನಾನು ನಿರೇನ್ ಜೋಡಿಯಾಗಿದ್ದರೂ ಹೆಚ್ಚಿನ ಅನುಕೂಲಕ್ಕೆ ಸ್ಥಳೀಯನೊಬ್ಬನನ್ನು ಸಂಬಳಕ್ಕೂ ಇಟ್ಟುಕೊಂಡಿದ್ದೆವು. (ಇದೇ ಸಮಯಕ್ಕೆ, ಇನ್ನೊಂದು ಜಾಡಿನಲ್ಲಿ ಸರ್ವೇಕ್ಷಣೆಗೆ ದಿನೇಶಹೊಳ್ಳ ಮತ್ತೊಬ್ಬ ಗೆಳೆಯನೊಡನೆ ನಡೆದಿದ್ದರು) ಇಲ್ಲಿನ ಚಾರಣ ವೈವಿಧ್ಯಮಯವಾಗಿತ್ತು. ಒಂದೆರಡು ಕಡೆ ಕಾಡು ಮಾವಿನ ಹಣ್ಣಿನ ಉಪಚಾರ ಸಿಕ್ಕಿದ್ದು, ಪುಟ್ಟ ಮರಿಯೊಂದಿಗಿದ್ದ ಐದಾರು ಆನೆಗಳ ಹಿಂಡನ್ನು ಅನಿವಾರ್ಯವಾಗಿ ತುಸು ದೂರ ಅವಕ್ಕೆ ಅರಿವಿಗೆ ಬಾರದಂತೆ ಎಚ್ಚರವಹಿಸಿ ಅನುಸರಿಸಿದ್ದು ಇಂದಿಗೂ ನನಗೆ ಸ್ಮರಣೀಯವೇ ಆಗುಳಿದಿದೆ.

(ಮುಂದುವರಿಯಲಿದೆ)

[ಮುಂದಿನವಾರ, ಸದ್ಯ ನನ್ನ ಗೆಳೆಯರ ಬಳಗ ನಡೆಸುತ್ತಿರುವ ಹೊಸ ವನ್ಯ ಸರ್ವೇಕ್ಷಣೆಯ ಪ್ರತ್ಯಕ್ಷ ದರ್ಶನಾನುಭವದೊಂದಿಗೆ ಇಲ್ಲಿ ಮತ್ತೆ ಹಾಜರಾಗುತ್ತೇನೆ. ಅದುವರೆಗೆ ಇಂಥವೇ ನಿಮ್ಮ ಅನುಭವಗಳ ಸುವಿಸ್ತಾರ ಪ್ರತಿಕ್ರಿಯೆಯನ್ನು ಬರೆದು ಉತ್ತೇಜನ ಕೊಡುತ್ತೀರಲ್ಲಾ?]