(ಚಕ್ರವರ್ತಿಗಳು ಸುತ್ತು ಇಪ್ಪತ್ತಾರು)
ದಕ್ಷಿಣಾಪಥದ ಚಕ್ರವರ್ತಿಗಳು ಭಾಗ ಮೂರು

ಶಾಲೆ ಕಾಲೇಜುಗಳಲ್ಲಿ ಶೈಕ್ಷಣಿಕ ಪ್ರವಾಸ ಎನ್ನುವ ಒಂದು ಪಠ್ಯೇತರ ಚಟುವಟಿಕೆ ಎಷ್ಟೋ ಬಾರಿ ಸಂಘಟಕರ (ಹೆಚ್ಚಾಗಿ ಅಧ್ಯಾಪಕರು) ದೌರ್ಬಲ್ಯದ ಮೇಲೆ ಕೇವಲ ತೀರ್ಥಯಾತ್ರೆಯಾಗುವ ದುರವಸ್ಥೆಯನ್ನು ನಾನು ತಿಳಿದಿದ್ದೇನೆ. (ಮಂಗಳೂರು ವಿವಿನಿಲಯದ ಸ್ನಾತಕೋತ್ತರ ಸಂಶೋಧನೆಯ ಕ್ಷೇತ್ರಾಧ್ಯಯನದ್ದೇ ಅಂಥಾ ಒಂದು ಉದಾಹರಣೆಯನ್ನು ಇಲ್ಲಿ ನೋಡಬಹುದು.) ಮತ್ತೆ ಸಾರ್ವಜನಿಕ ಸಾಂಪ್ರದಾಯಿಕ ಪ್ರವಾಸಯೋಜನೆಗಳಲ್ಲಂತೂ ತೀರ್ಥಕ್ಷೇತ್ರಗಳದ್ದು ಸಿಂಹಪಾಲೇ ಇರುತ್ತದೆ. ದಾರಿಯಲ್ಲಿ ಅಯಾಚಿತವಾಗಿ ಸಿಗಬಹುದಾದ ಇತರ ಆಕರ್ಷಣೆಗಳನ್ನು ಅಂಥವರು ಸೇರಿಸಿಕೊಂಡರೂ ಕಾಲಮಿತಿ ತುಂಬಾ ಬಿಗಿಯಿರುತ್ತದೆ. ಆದರೆ ನನ್ನ ಪ್ರವಾಸೀ ಲಕ್ಷ್ಯವಾದರೋ ಪ್ರಾಕೃತಿಕ ಮತ್ತು ಐತಿಹಾಸಿಕ ವೈಶಿಷ್ಟ್ಯಗಳು. ಅಯಾಚಿತವಾಗಿ ಮಾರ್ಗಕ್ರಮಣದಲ್ಲಿ ಒದಗುವ ಭಾರೀ ಪೇಟೆ, ಪುಣ್ಯಕ್ಷೇತ್ರಗಳಿಗೆ ಯಾವ ಪೂರ್ವಾಗ್ರಹಗಳನ್ನಿಟ್ಟುಕೊಳ್ಳದೇ ಭೇಟಿ ಕೊಡುತ್ತೇನಾದರೂ ಸಂಗ್ರಹಿಸುವುದು ಮನುಷ್ಯ ಸಂಬಂಧಗಳನ್ನು ಮಾತ್ರ. (ಇಲ್ಲೇ ಹಿಂದಿನ ಕಂತಿನಲ್ಲಿನ ಗುರುವಾಯೂರು ಭೇಟಿಯನ್ನು ಗಮನಿಸಬಹುದು) ಆ ನಿಟ್ಟಿನಲ್ಲಿ ಬಿಟ್ಟ ಮೇಲೆ ನಾವು ಹಾದು ಹೋಗುವ ಸ್ಥಳ ಕಾಲಡಿ – ಶಂಕರಾಚಾರ್ಯರ ಜನ್ಮ ಸ್ಥಳ.

 

ಕಾಲಡಿಯಲ್ಲಿ ಹೆದ್ದಾರಿ ಬಿಟ್ಟು ಸ್ವಲ್ಪ ತಿರುಗಾಡಿದರೆ ಶಂಕರಾಚಾರ್ಯರಿಗೆ ಸಂಬಂಧಿಸಿದ ಹಳಗಾಲದ ರಚನೆಗಳನ್ನು ನೋಡಬಹುದಿತ್ತು; ನಾವದಕ್ಕೆ ವೇಳೆಗಳೆಯಲಿಲ್ಲ. ಹೆದ್ದಾರಿಯಂಚಿನಲ್ಲೇ ಕಂಚಿ ಪೀಠಾಧಿಪರು ಕಟ್ಟಿಸಿದ, ಆಧುನಿಕ ಎಂಟು ಮಹಡಿಗಳ ಶಂಕಾರಾಚಾರ್ಯ ಕೀರ್ತಿಸ್ತಂಭಕ್ಕೆ ಮಾತ್ರ ಚುರುಕಿನ ಭೇಟಿ ಕೊಟ್ಟೆವು. ನಮ್ಮೆಲ್ಲ ಅಧ್ಯಾತ್ಮ ಕೇಂದ್ರಗಳಂತೆ ಇಲ್ಲೂ ದುಡ್ಡೇ ದೊಡ್ಡಪ್ಪ. ಬರಿಯ ಭಕ್ತಿ, ಆಧ್ಯಾತ್ಮಿಕ ಜಿಜ್ಞಾಸೆ ಪ್ರವೇಶ ಕಲ್ಪಿಸುವುದಿಲ್ಲ. (ದುರ್) ದಾನವೊಂದೇ ಪ್ರವೇಶ ಯೋಗ್ಯತೆ. ಒಟ್ಟು ಕಟ್ಟಡ ದೀಪ ಸ್ತಂಭವನ್ನೇ ಸ್ವಲ್ಪ ವಿಸ್ತರಿಸಿ ಕಟ್ಟಿದಂತಿದೆ. ಒಳಗೆ ಭೂ ಮಟ್ಟದಲ್ಲಿ ಪೂಜಾ ಸ್ಥಾನ, ಉಳಿದಂತೆ ಮಹಡಿಗಳಲ್ಲಿ ಶಂಕರ ಸ್ಮೃತಿಗೆ ಸಲ್ಲುವ ಚಿತ್ರ, ವಿಗ್ರಹೇತ್ಯಾದಿಗಳ ಪ್ರದರ್ಶನ (ಸ್ಮರಣಿಕೆಗಳ ಮಾರಾಟವೂ ಇದ್ದಿರಬಹುದು, ನನಗೆ ನೆನಪಿಲ್ಲ). ಈಚೆಗೆ ನಾನು ಕಂಡಂತೆ, ಇಸ್ಕಾನಿನವರು ಭಾರೀ ಅಬ್ಬರದಲ್ಲಿ ನಡೆಸುವ ಭಕ್ತ್ಯೋದ್ದಿಮೆಯ (ಕೃಷ್ಣ ಥೀಂ ಪಾರ್ಕ್!) ಒರಟು ಮಾದರಿ ಇಲ್ಲಿತ್ತು. ಶಂಕರ ಸ್ತಂಭ ಏರಿ, ಬಲುದೂರದ ದೃಶ್ಯಗಳನ್ನು ನೋಡಿ ಮೈಮರೆಯಬಹುದು. ಪ್ರದರ್ಶಿಕೆಗಳೂ ಹಾಗೇ – ಗತಯುಗದ ದೂರಕ್ಕೆ ನಮ್ಮ ಯೋಚನಾಲಹರಿಯನ್ನು ಹರಿಯಬಿಡುತ್ತದೆ. ಆದರೆ ನಮ್ಮ ನಿಜ ಕಾಲ ಅಡಿಯಲ್ಲಿನ, ಅಂದರೆ ವರ್ತಮಾನ ಕಾಲದ ಜೀವನ ಮೌಲ್ಯ ಹೆಚ್ಚಿಸುವ ಪ್ರಯತ್ನಗಳೇನೂ ಇಲ್ಲಿ ಕಾಣದೆ ಹತಾಶೆಯಾಯ್ತು. (ಇಡಿಯ ಪರಿಸರವನ್ನೇ ಉನ್ನತಿಕೆಗೆ ಒಯ್ಯುವ ಪ್ರಯತ್ನದಲ್ಲಿ ಇಂದು ತಿರುಪತಿಯ ಬೆಟ್ಟದ ಮೇಲಿನ ಕೆಲಸಗಳು ನಿಜಕ್ಕೂ ಗಮನಾರ್ಯ)

ನಮಗೂ ಒಬ್ಬ ಶಬರಿ?!

ನನ್ನಂಗಡಿ – ಅತ್ರಿಯ ಪಕ್ಕದಲ್ಲಿದ್ದ ಫಾರ್ಮ್ ಸ್ಟೋರ್ಸಿನ ಮಾಲಿಕ ಜಾರ್ಜ್ – ಕೇರಳ ಮೂಲದವರು. (ಕ್ಷಮಿಸಿ, ಇವರ ಪೂರ್ಣ ಹೆಸರು ನೆನಪಿಲ್ಲ. ಕಾಲಾಂತರದಲ್ಲಿ ಇವರ ದೊಡ್ಡ ಮಗ ಆ ಮಳಿಗೆಯನ್ನು ತನಿಷ್ಕ್ ಪಾಲುದಾರಿಕೆ, ಇನ್ನೇನೋ ದುಬಾರಿ ಸಿದ್ಧ ಉಡುಪುಗಳ ಮಳಿಗೆಗಳಿಗೆಲ್ಲ ಪ್ರಯೋಗಮಾಡುತ್ತ ಇಂದು ನನಗೆ ಒಟ್ಟಾರೆ ಕುಟುಂಬದ ಸಂಪರ್ಕವೇ ಕಡಿದುಹೋಗಿದೆ.) ಕೇರಳದಲ್ಲಿ ಇವರದು ಬಹುದೊಡ್ಡ ಜಮೀನ್ದಾರಿಕೆಯ ಅವಿಭಕ್ತ ಕುಟುಂಬ. ಸಹಜವಾಗಿ ಇಲ್ಲಿನ ಮಳಿಗೆ ಮತ್ತೂ ಅನೇಕ ವಹಿವಾಟುಗಳು ದೊಡ್ಡ ಗಾತ್ರದವೇ ಇದ್ದುವು. ಹಾಗಾಗಿ ಜಾರ್ಜ್ ಅಂಗಡಿಯ ಪರಿಸರದಲ್ಲಿ ಇರುತ್ತಿದ್ದುದು ಕಡಿಮೆ, ಅಂದರೆ ನನ್ನ ಹೊಕ್ಕು ಬಳಕೆಗೆ ಒದಗಿದು ಕಡಿಮೆ. ಮಳಿಗೆಯಲ್ಲೇ ನಿಂತು ನಡೆಸುತ್ತಿದ್ದದ್ದು ಅವರ ಹೆಂಡತಿ. ಸಹಜವಾಗಿ ಅವರು, ಇನ್ನೂ ಪ್ರಾಥಮಿಕ, ಪ್ರೌಢಶಾಲಾ ಮಟ್ಟದಲ್ಲಿದ್ದ ಅವರ ಮಕ್ಕಳು ನನ್ನಂಗಡಿಯ ದೊಡ್ಡ ಗಿರಾಕಿಗಳೂ ಆತ್ಮೀಯ ಸಂವಾದದ ಸಂಗಾತಿಗಳೂ ಆಗಿದ್ದರು. ನಮ್ಮ ಬೈಕ್ ಯಾನದ ಸೂಚನೆ ಸಿಕ್ಕ ಕೂಡಲೇ ಇವರು ತಮ್ಮೂರಿನ ಮನೆಗಳಿಗೆ ಒತ್ತಾಯದ ಆಮಂತ್ರಣ ಕೊಟ್ಟರು. ನಮ್ಮ ದಾರಿಯಲ್ಲೇ ಬರುವ ಪಾಲೈ ಎಂಬ ಊರಿನ ಇವರ ಮೂಲ ಮನೆಯಲ್ಲೂ ಮುಂದುವರಿದು ಮುಂದೆಲ್ಲೋ ಬರುವ ಶ್ರೀಮತಿ ಜಾರ್ಜ್ ಅವರ ತವರ್ಮನೆಯಲ್ಲೂ ಆತಿಥ್ಯ ಸ್ವೀಕರಿಸಲೇಬೇಕು! ದೂರ ಮತ್ತು ಗಂಟೆಗಳ ಲೆಕ್ಕ ಹಾಕಿ, ಎರಡನೇ ದಿನದ ಮಧ್ಯಾಹ್ನದ ಊಟಕ್ಕೆ, ಅದೂ ಇವರ ಪಾಲೈ ಮನೆಯನ್ನಷ್ಟೆ ನಿಶ್ಚಯಿಸಿಕೊಂಡಿದ್ದೆವು.

ಕಾಲಡಿ ಬಿಟ್ಟ ಸ್ವಲ್ಪದರಲ್ಲೇ ನಾವು ಹೆದ್ದಾರಿಯನ್ನು ಬಲಕ್ಕೆ ಬಿಟ್ಟು ತುಸು ವಿಸ್ತರಿಸುತ್ತಾ ಒಳನಾಡಿನಲ್ಲೇ ನೇರ ಮಲೆಯ ತಪ್ಪಲಿನಲ್ಲೇ ಓಡುವ ದಾರಿಯನ್ನನುಸರಿಸಿದೆವು. ಗುಡ್ಡ ಬೆಟ್ಟಗಳ ಏಣು ಕಣಿವೆಗಳೆಂದರೆ ದಾರಿಯಲ್ಲಿ ಏರುಪೇರು, ಅಂಕುಡೊಂಕು. ಇದು ಸವಾರಿಯ ಏಕತಾನತೆಯನ್ನು ನಿವಾರಿಸುತ್ತಿತ್ತು. ಹೆದ್ದಾರಿಯಲ್ಲಿ ತಲೆತೂತಾಗುವ ಬಿಸಿಲಿದ್ದರೆ ಇಲ್ಲಿ ರಬ್ಬರ್ ತೋಟದ ಚಪ್ಪರ ಬರಿಯ ಮನಕ್ಕಲ್ಲದೆ ನೋಟಕ್ಕೂ ನಮಗೆ ತಣ್ಪನ್ನು ನೀಡಿತು. ರಬ್ಬರ್ ಕೃಷಿಗೆ ಸಹಜವಾಗಿಯೇ ಏನೋ ದೂರ ದೂರಕ್ಕೊಮ್ಮೆ ಕೆಲವೇ ಅಂಗಡಿ, ಒಂದೆರಡು ಮನೆಗಳ ಹಳ್ಳಿಯಷ್ಟೇ ಸಿಗುತ್ತಿತ್ತು. ಅಂಥಲ್ಲೆಲ್ಲಾ ಕಂಗೊಳಿಸುತ್ತಿದ್ದ ವೈವಿಧ್ಯಮಯ ಹೊರನೋಟದ ಒಂದೊಂದು ಇಗರ್ಜಿಯೂ ಒಮ್ಮೆ “ಆ!” ಎಂದು ನಿಂತು ನೋಡುವಂತೆಯೇ ಇರುತ್ತಿದ್ದುವು. ಇವೆಲ್ಲ ನಮ್ಮ ಓಟಕ್ಕೆ ವಿಹಾರದ ರುಚಿಯನ್ನೇ ಕೊಟ್ಟವು.

ಪಾಲೈ ಪುಟ್ಟ ಪೇಟೆ. ಅಲ್ಲಿನ ಭಾರೀ ವಠಾರದೊಳಗಿನ ಹಳಗಾಲ-ಹೊಸಗಾಲದ ಕಸಿಯೊಡನೆ ವಿಸ್ತಾರಕ್ಕೆ ಹರಡಿದ್ದ ಜಾರ್ಜರ ಮೂಲ ಮನೆಯನ್ನು ಮನೆಗಳ ಸಂಕೀರ್ಣ ಎನ್ನುವುದೇ ಸರಿ. ಯಾವುದೋ ಬಾಲಗ್ರಹದಿಂದ ಊನ ನಡಿಗೆಯಲ್ಲಿದ್ದ ಜಾರ್ಜರ ತಮ್ಮ ಮತ್ತವರ ಕುಟುಂಬ ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿತು. ಬೆವರು, ದೂಳು, ಒರಟು ಸವಾರಿಗೆ ಸಜ್ಜಾದ ನಮ್ಮ ದಿರುಸಿನೊಡನೆ ಅವರ ಅತಿಥಿ ಅಂಕಣಕ್ಕೆ ಕಾಲಿಡುವುದು, ಅಲ್ಲಿನ ಸ್ವಚ್ಛ ಬಿಳಿಯ ಆಸನಗಳನ್ನು ಸ್ವೀಕರಿಸುವುದು ನಮಗೆ ಬಹಳ ಮುಜುಗರದ ಸಂಗತಿಯೇ ಆಗಿತ್ತು. ಪ್ರಾಥಮಿಕ ತೊಳೆ, ಕುಡಿಗಳೆಲ್ಲ ಮುಗಿದ ಮೇಲೆ ಊಟದ ಮನೆಗೆ ಒಯ್ದರು. ಪಾಪ ನಮ್ಮ ಮುನ್ಸೂಚನೆಯನ್ನು ಬಹು ಗಂಭೀರವಾಗಿಯೇ ಪರಿಗಣಿಸಿ ಅಂದಿನೆಲ್ಲಾ ಅಡುಗೆಗಳನ್ನು ಸಸ್ಯಾಹಾರಿಯೇ ಮಾಡಿದ್ದರು. ನಮಗೆ ಪುಷ್ಟಿದಾಯಿಯಾಗಿ ಹೊಟ್ಟೆ ತುಂಬಿಸುವುದಕ್ಕೇನೂ ಕೊರತೆಯಾಗಲಿಲ್ಲ. ಆದರೆ ನಮ್ಮ ಪ್ರಾದೇಶಿಕ ಅಥವಾ ಸಾಂಪ್ರದಾಯಿಕ ರುಚಿಬೇಧಗಳನ್ನು ಮೀರಿ ಅವರ ಮನಸ್ಸಿಗೆ ತೃಪ್ತಿ ಕೊಡುವಂತೆ ತಿನ್ನಲಾಗಲಿಲ್ಲ ಎಂಬ ಕೊರತೆ ಉಳಿದೇ ಹೋಯ್ತು! ಅದರಲ್ಲೂ ಮುಖ್ಯವಾಗಿ, ಚಿನ್ನದ ಬಣ್ಣದ ಪುಟ್ಟ ಗುಡಾಣದಂತೇ ಪಕ್ವಗೊಂಡು ಹಬೆಯಾಡುತ್ತ ಕಂಗೊಳಿಸಿದ ಮೊಟ್ಟೆರಹಿತ ಕೇಕಿನಂಥ ತಿನಿಸು ದೇವಕಿಗೆ ವಾಕರಿಕೆಯನ್ನೇ ತರಿಸಿತ್ತು. ಆತಿಥೇಯರ ಮನನೋಯದಂತೆ ಅವನ್ನೆಲ್ಲ ಸುಧಾರಿಸಿಕೊಂಡು, ಮುಂದಿನ ದಾರಿಗಿಳಿದೆವು. ಜಾರ್ಜರ ಕುಟುಂಬಕ್ಕೆ ಹಾರ್ದಿಕ ಕೃತಜ್ಞತೆ ಹೇಳುವಾಗ, ಶಬರಿಯಂತೆ ಪ್ರೀತಿಯೊಂದೇ ಕಾರಣವಾದ ಅವರ ಉಪಚಾರಕ್ಕೆ ರಾಮರಾಗದ ನಮ್ಮ ಬಗ್ಗೇ ಬೇಸರ ಉಳಿದಿತ್ತು.

ಶಬರಿಮಲೆಯತ್ತ

ಮೈಸೂರಿನ ನನ್ನ ವಿದ್ಯಾರ್ಥಿ ದೆಸೆಯಲ್ಲಿ ನಾನು ಶಬರಿಮಲೆ ಕೇಳಿಯೂ ಇರಲಿಲ್ಲ. ಮಂಗಳೂರಿನಲ್ಲಿ ನಿಂತ ಮೊದಲ ದಿನಗಳಲ್ಲಿ ನಾನು ಚಾರಣ, ಕಾಡು, ಬೆಟ್ಟ ಎಂದಾಗ ಆಗೊಮ್ಮೆ ಈಗೊಮ್ಮೆ ಕೇಳತೊಡಗಿತು ಶಬರಿಮಲೆಯ ಹೆಸರು. ವರ್ಷವರ್ಷೇ ನವೆಂಬರ್ ಡಿಸೆಂಬರ್ ತಿಂಗಳುಗಳಲ್ಲಿ ಇಲ್ಲಿನ ನಸುಚಳಿಯನ್ನು ಧಿಕ್ಕರಿಸಿ ಸೂರ್ಯೋದಯಕ್ಕೂ ಮುನ್ನ ಕೇವಲ ಕರಿಮುಂಡು ಉಟ್ಟುಕೊಂಡು ಮೇಲ್ಮೈಯಲ್ಲಿ ತೆಳು ಮಂಜಿನ ಪರಿಯಾಡಿಸುವ ಕೆರೆ ನದಿಗಳಲ್ಲಿ ಮುಳುಗು ಹಾಕಿ “ಅಯ್ಯಪ್ಪಾ” ಎನ್ನುವವರ ಸಂಖ್ಯೆ ಏರತೊಡಗಿತು. ದಿನಗಟ್ಟಳೆ (ವಿವಿಧ ವರ್ಗಬೇಧಗಳಲ್ಲಿ ನಲ್ವತ್ತರವರೆಗೂ ಭಕ್ತಿಭಾವದಿಂದ ಅನುಭವಿಸುವವರಿದ್ದಾರೆ) ಮಾತೆತ್ತಿದರೆ `ಸ್ವಾಮಿ’ ಉಸಿರುಬಿಟ್ಟರೆ `ಅಯ್ಯಪ್ಪ’ ಎನ್ನುವ ಮಂದಿಯ ಅಂತಿಮಗುರಿ ಕೇರಳದ ದಟ್ಟ ಮಲೆಗಳಲ್ಲಿತ್ತು. ನೂರೆಂಟು ನೇಮಗಳ ಹಿಡಿದು, ಕೊನೆಯಲ್ಲಿ ಬರಿಗಾಲಿನಲ್ಲಿ, ಸ್ವಂತಕ್ಕೂ ಭಕ್ತಿಗೂ ಬೇಕಾದ ಸಾಮಗ್ರಿಗಳನ್ನೆಲ್ಲ ತಲೆಹೊರೆ ಮಾಡಿ ನಲ್ವತ್ತಕ್ಕೂ ಮಿಕ್ಕು ಕಿಮೀ ಕಾಡುಬೆಟ್ಟದ ಕಾಲ್ದಾರಿ ಸವೆಯಿಸಿ `ಸ್ವಾಮಿ’ ದರ್ಶನ ಹಾಗೂ ದಿವ್ಯ ದರ್ಶನ ಮಾಡಿಬರುವವರ ಹುಯ್ಲು ನನ್ನ ಪರ್ವತಾರೋಹಿ ಸಾಧನೆಯನ್ನು ಪರೋಕ್ಷವಾಗಿ ಕೆಣಕುತ್ತಲೇ ಇತ್ತು; ಶಬರಿಮಲೆ ನನಗೆ ಕೇವಲ ಪರ್ವತಾರೋಹಣ ಸವಾಲಾಗಿತ್ತು. ಹಾಗೆಂದು ದೇವ ಮಹಿಮೆ, ಪವಾಡಗಳನ್ನು ಒಪ್ಪಿ ನಡೆಯುವುದು ನನಗೆ ಅಸಾಧ್ಯವಿದ್ದುದರಿಂದ ಕ್ಷೇತ್ರದ ಬಿಡುವಿನ ದಿನವನ್ನೇ ಲಕ್ಷಿಸಿ ನಮ್ಮ ಯಾತ್ರಿ ತೊಡಗಿತ್ತು. ಬಹುತೇಕ ಅನ್ಯ ದೇವಳಗಳಂತೆ ಶಬರಿಮಲೆಯ ದೇವಾಲಯ ಸರ್ವ ಋತುವಿನದ್ದಲ್ಲ. ಅದರ ತೆರೆ (ಮುಕ್ತವಾಗುವ), ದರ್ಶನ ಮತ್ತೆ ತೆರೆಗಳ (ಮುಚ್ಚಿಕೊಳ್ಳುವ) ಪಂಚಾಂಗದಲ್ಲಿ ಮಕರ ಸಂಕ್ರಮಣ ಒಂದು ಶೃಂಗವಾದರೆ ವಿಶು ಸಂಕ್ರಮಣ ಇನ್ನೊಂದು. ವಿಶು ಕಳೆದ ಎರಡನೇ ದಿನಕ್ಕೆ, ಅಂದರೆ ಶಬರಿಮಲೆಯ ದೇವ ಸನ್ನಿಧಾನದ ಗರ್ಭಗುಡಿಯ ಬಾಗಿಲು ಮುಚ್ಚಿರುವಂದು ಅಲ್ಲಿರುವಂತೆ ನಾವು ಬೈಕ್ ಯಾನ ನಡೆಸಿದ್ದೆವು. ನಮ್ಮಲ್ಲೂ ಇರುವ ಪಶ್ಚಿಮಘಟ್ಟದ ಈ ದಕ್ಷಿಣ ಕೊನೆಯಲ್ಲಿ ಎರಡು ಮೂರು ದಿನಗಳ, ಅಂದರೆ ನಲ್ವತ್ತು ಕಿಮೀ ಉದ್ದದ ಚಾರಣದಲ್ಲಿ ಅನುಭವಿಸುವ ಅಗತ್ಯ ನನಗೇನೂ ಕಾಣಲಿಲ್ಲ. ಬದಲು ದಟ್ಟ ವನಾಂತರ್ಗತವೇ ಇರುವ ಖ್ಯಾತಿಯ ದೇವಳದ ಪರಿಸರವನ್ನಷ್ಟೇ ಕಂಡು ಬಂದರೆ ಸಾಕೆಂದೇ ಈ ಯೋಜನೆ ಹಾಕಿದ್ದೆ.

ಕರಾವಳಿಯ ಹೆದ್ದಾರಿ ಕೊಟ್ಟಾಯಂ ಮುಟ್ಟಿದಲ್ಲಿಂದ ಲಂಬಕ್ಕೆ ಒಂದು ಸಾಕಷ್ಟು ದೊಡ್ಡ ಕವಲೊಂದು ಪೂರ್ವಕ್ಕೂ ಓಡುತ್ತದೆ; ಲಕ್ಷ್ಯ ಮಧುರೈ. ಮೊದಲೇ ಹೇಳಿದಂತೆ, ತುಸು ಒಳನಾಡಿನಿಂದಾಗಿ ಘಟ್ಟದ ತಪ್ಪಲಿನಲ್ಲೇ ಬಂದ ನಾವು ಈ ದಾರಿಯನ್ನು ಕಾಂಜೀರಪಲ್ಲಿ ಎಂಬಲ್ಲಿ ಅಡ್ಡ ಹಾಯ್ದು ಪೊನ್ನುಕುನ್ನಂ, ಮಣಿಮಾಲ ಎಂಬಿತ್ಯಾದಿ ಸಣ್ಣ ಊರುಗಳನ್ನು ಕಳೆದು ರಾಣ್ಣಿ ಎಂಬಲ್ಲಿ ತುಸು ವಿಶ್ರಮಿಸಿದೆವು. ಆ ದಿನಗಳಲ್ಲಿ ಶಬರಿಮಲೆ ದಾರಿಯಲ್ಲಿ ಅದು ಕೊನೆಯ ಪೆಟ್ರೋಲ್ ಲಭ್ಯ ಊರು. ನಾವು ಬೈಕ್ ಹಾಗೂ ನಮ್ಮ ಹೊಟ್ಟೆಗಳನ್ನೂ ಭರ್ತಿ ಮಾಡಿಕೊಂಡು ಮುಂದುವರಿದೆವು.

ಮುಂದಿನ ದಾರಿಯಲ್ಲಿನ ಚಟುವಟಿಕೆಗಳ ಮುಖ್ಯ ಲಕ್ಷ್ಯ ಶಬರಿಮಲೆ ಎಂಬ ವಿಸ್ತಾರದೊಳಗಿನ, ನೀಲಿಮಲೆಯಲ್ಲಿ ಸ್ಥಿತವಾದ, ಅಯ್ಯಪ್ಪ ಸನ್ನಿಧಾನ. ಉದ್ದಕ್ಕೂ ಕೃಷಿ ಭೂಮಿ, ಹಳ್ಳಿಪೇಟೆಗಳು ಇದ್ದರೂ ಇಲ್ಲಿನ ಉಬ್ಬರ, ಇಳಿತಗಳ ನಿರ್ಧಾರವಾಗುವುದು `ಅಯ್ಯಪ್ಪ ಪ್ರವಾಹ’ದಿಂದ. ಇಲ್ಲಿ ಮುಖ್ಯ ವಾಹನಗಳ ಮಿತಿಯನ್ನು ಸೂಚಿಸುವಂತೆ ಪಂಬಾ ನದಿ ತೀರ ಅಥವಾ ಚಾಲಕ್ಕಾಯಂ ನಮೂದಷ್ಟೇ ಕಿಮೀ ಕಲ್ಲುಗಳಲ್ಲಿ ತೋರುತ್ತಿತ್ತು. ಮೊದಮೊದಲು ಸುಮಾರು ದೂರ ದಾರಿಯ ಬಲ ಪಕ್ಕದಲ್ಲೆಂಬಂತೆ ಒಂದು ಹೊಳೆ ಜತೆಗೊಟ್ಟಿತು. ನೀರು ಹೆಚ್ಚು ಕಮ್ಮಿ ಬತ್ತಿ ಹೋಗಿ ಬಿಳಿ ಮರಳು, ಬಂಡೆಗುಂಡುಗಳದೇ ಹಾಸಿನಂತೆ ತೋರುತ್ತಿತ್ತು. (ಇಲ್ಲಿನ ಹೊಳೆ ನೇತ್ರಾವತಿಯಷ್ಟು ವಿಸ್ತಾರವಿಲ್ಲದಿದ್ದರೂ ನಮ್ಮಲ್ಲಿ ಬಂಟ್ವಾಳದಿಂದ ವಗ್ಗದತ್ತ ಹೋಗುವಾಗಿನದೇ ನೋಟ) ರಸ್ತೆಯೆಂಬ ಕಾಳಸರ್ಪ ಹೊಳೆಯೆಂಬ ಬಿಳಿಹಾವಿಗೆ `ನೃತ್ಯ’ದಲ್ಲಿ ತಳುಕು ಹಾಕಿಕೊಂಡಂಥ ಓಟ ನಮ್ಮದು! ಮುಂದೆ ರಬ್ಬರ್ ತೋಟದ ನೆರಳು ಬರುತ್ತಿದ್ದಂತೆ ಘಟ್ಟದ ಏರಿಳಿತಗಳೂ ಬಳುಕಾಟಗಳೂ ಹೆಚ್ಚಿದುವು. ಪೂರ್ವಾಹ್ನ – ಪಾಲೈ ಮಾರ್ಗದಲ್ಲಿ ಸಿಕ್ಕಂತೇ ಒಂದೆರಡು ಮನೆ ಮತ್ತು ಅಂಗಡಿಯ ಪೇಟೆಗಳು, ಸಣ್ಣಪುಟ್ಟ ಕವಲು ದಾರಿಗಳು ಸಿಗುತ್ತಿದ್ದವು. ಆದರೆ ಆಗೀಗ ಎದುರಾಗುತ್ತಿದ್ದ ವಾಹನಗಳು, ಹಾದಿಬದಿಯ ಕಾಡುಕಲ್ಲುಗಳ ಮೇಲಿನ `ನಗರ ಜಾನಪದ’ ಘೋಷಣೆಗಳು ಮತ್ತು ನಾಗರಿಕ ಕಸ ಸ್ಪಷ್ಟವಾಗಿ ಒಂದೇ ಜಪ ಮಾಡುತ್ತಿದ್ದುವು – ಸ್ವಾಮಿಯೇ ಶರಣಂ ಅಯ್ಯಪ್ಪ.

ದಾರಿ ಆ ಘಟ್ಟ ವಲಯದ ಅತ್ಯುನ್ನತ ತಾಣವನ್ನು ಸಮೀಪಿಸುತ್ತಿದ್ದಂತೆ ಕೃಷಿ ದೂರವಾಗಿ, ಶುದ್ಧ ಪ್ರಾಕೃತಿಕ ಕಾಡು ಕಾಣಿಸತೊಡಗಿತು (ಪೆರಿಯಾರ್ ವ್ಯಾಘ್ರಧಾಮ). ದಾರಿಯ ಅಭಿವೃದ್ಧಿ, ಮುಂದೆ ಪಂಬಾ ಹೊಳೆಯ ಬಳಕೆ, ಅಯ್ಯಪ್ಪ ಕ್ಷೇತ್ರದ ಅನಿವಾರ್ಯ ವಿಸ್ತರಣೆಗಳೆಲ್ಲ (ಅಧಿಕೃತ ಮತ್ತು ಅನಧಿಕೃತ) ಅಂದಿನಿಂದಿಂದಿನವರೆಗೂ ಮುಗಿಯದ ಕತೆಯಾಗಿ ಬೆಳೆದೇ ಇದೆ. ಈ ರಾಮಾಯಣದಲ್ಲಿ ಒಂದು ಪಿಟ್ಕಾಯಣದಂತೆ ಆ ನಿರ್ಜನವಸತಿಯ ಘನಾರಣ್ಯದಲ್ಲಿ ಒಂದು ಇಗರ್ಜಿಯೂ ಸಾಕಷ್ಟು ಕಾನೂನು ಸಮರ ನಡೆಸಿದೆ. ಇಗರ್ಜಿಯ ಸಮೀಪದಲ್ಲೇ ಸಿಗುವ ಒಂದು ಕವಲು ರಸ್ತೆ (ಬಹುಶಃ ಆ ಕಾಲಕ್ಕೆ ಕೊನೆಯ ಕವಲು ರಸ್ತೆ) ಈ ಮೊದಲೇ ಹೇಳಿದ ಕೊಟ್ಟಾಯಂ-ಮಧುರೈ ರಸ್ತೆಯನ್ನು ಇನ್ನೂ ಪೂರ್ವದಲ್ಲಿ ವಂಡಿಪೆರಿಯಾರ್ ಎನ್ನುವಲ್ಲಿ ಸಂಧಿಸುತ್ತದೆ ಎಂದು ನಾವು ನಕ್ಷೆಯಲ್ಲಿ ಕಂಡುಕೊಂಡಿದ್ದೆವು. ಕ್ಷೇತ್ರ ದರ್ಶನ ಮುಗಿಸಿದ ಮೇಲೆ ನಮ್ಮ ಪ್ರಯಾಣ ಆ ದಿಸೆಯಲ್ಲೇ ಇದ್ದುದರಿಂದ ಅದನ್ನು ವಿಶೇಷವಾಗಿ ಒಳದಾರಿಯಂತೇ ಗುರುತಿಸಿಕೊಂಡು, ನಾವು ಚಾಲಕ್ಕಾಯಂನತ್ತ ಮುಂದುವರಿದೆವು.

ಕಾಡುದಾರಿಯ ಸೆಡವು ಹೆಚ್ಚಿತ್ತು. ಅಲ್ಲಲ್ಲಿ ಪಕ್ಕದ ದರೆ, ಮರ ಕುಸಿದು ಮುಚ್ಚಿತ್ತು. ತತ್ಕಾಲೀನವಾಗಿ ಒಮ್ಮೆಗೆ ಒಂದು ವಾಹನವಷ್ಟೇ ದಾಟುವಷ್ಟು ಬಿಡಿಸಿದ್ದು ಕಾಣುತ್ತಿತ್ತು. (ಇಂದಾದರೋ ಗಂಟೆಗಳ ಅಂತರದಲ್ಲಿ ವೈವಿಧ್ಯಮಯ ಯಂತ್ರಗಳು ಸ್ಥಳ ತಲಪಿ, ಮಿನಿಟುಗಳ ಲೆಕ್ಕದಲ್ಲಿ ಪೂರ್ಣ ಮುಗಿಸಬಹುದಾದ ಕೆಲಸ!). ಕಲ್ಲೆದ್ದ, ಹೊಂಡಬಿದ್ದ ತೀವ್ರ ತಿರುವುಗಳು, ವಾಹನಗಳನ್ನು ನುಂಗಲು ಹೊಂಚುವಂಥ ಕಂದರಗಳು ಸಾಕಷ್ಟು ಇದ್ದವು. ಹೀಗೆ ಗಡಬಡಿಸಿ ಸಾಗುತ್ತಿದ್ದವರಿಗೆ ಹೆಂಬೇಡಿಯ ಮೇಲಿ ಹಾವು ಬಿದ್ದ ಅನುಭವ; ಒಂದೆಡೆ ಪಾತಾಳಕ್ಕೇ ಹಾರಿಕೊಂಡ ಬಸ್ಸೊಂದನ್ನು ಕೂಲಿಗಳು ರಾಟೆ ಕಟ್ಟಿ ತೆಗೆಯುವಲ್ಲಿ ನಿರತರಾಗಿದ್ದರು.

ಚಾಲಕ್ಕಾಯಂ ತಲಪುವಾಗ ಸಂಜೆ ಐದು ಗಂಟೆ. ಮುಂದಿನ ನಾಲ್ಕೈದು ಕಿಮೀ ಅಂದರೆ ಸನ್ನಿಧಾನಕ್ಕೆ ಬೈಕ್ ಯೋಗ್ಯ ದಾರಿಯಿರುವ, ಮತ್ತದನ್ನು ಸುಲಭದಲ್ಲಿ ನಿಭಾಯಿಸಿ ಕತ್ತಲೆಗೆ ಮುನ್ನ ತಲಪುವ ಅಂದಾಜು ನಮ್ಮದು. ಆದರೆ ಅಲ್ಲಿದ್ದ ಕ್ಷೇತ್ರ ಹಿತರಕ್ಷಕರು ಅಪ್ಪಟ ಮಲಯಾಳದಲ್ಲಿ ಹೊರಡಿಸಿದ ಫರ್ಮಾನನ್ನು ನಮ್ಮ ಅಲ್ಪಬುದ್ಧಿಯಲ್ಲಿ ಇಷ್ಟು ಅರ್ಥ ಮಾಡಿಕೊಂಡೆವು – “ಹಿಂದೆ ಯಾವ ವಾಹನವೂ ಹೋಗಿಲ್ಲ, ಮುಂದೆ ಹೋಗುವುದೂ ಇಲ್ಲ.” ಕಾಡಜಾಡುಗಳಲ್ಲಿ ಬೈಕ್ ನುಗ್ಗಿಸಿದ ನಮ್ಮ ಅನುಭವವನ್ನು ಮುಗ್ದವಾಗಿ ಪ್ರಯೋಗಿಸುವ ಉತ್ಸಾಹದಲ್ಲಿ ಬಂದಿದ್ದ ನಮಗೆ ಇದು ಅನಿರೀಕ್ಷಿತ. ನನ್ನ ಮಾಹಿತಿದಾರ ಭಕ್ತಾದಿಗಳು ಕೊಟ್ಟ ದುರ್ಗಮ, ಅಸಾಧ್ಯ ಮುಂತಾದ ವಿಶೇಷಣಗಳಿಗೆ ಪ್ರಾಕೃತಿಕ ಆಯಾಮದ ಬದಲು, ಮನುಷ್ಯ ಕಟ್ಟುಪಾಡುಗಳು ಕಾರಣವೆಂದೂ ಅರ್ಥವಾಯಿತು. ಸುಮಾರು ಇಪ್ಪತ್ತು ಮೂವತ್ತು ಕತ್ತೆಗಳ ಗುಂಪೊಂದು ಏನೋ ಕಟ್ಟಡ ಸಾಮಗ್ರಿಗಳ ಹೊರೆ ಹೊತ್ತು ಸಜ್ಜುಗೊಂಡದ್ದೇನೋ ನೋಡಿದ ನೆನಪು. ಆದರೆ ಮುಂದೆ ಸಿಕ್ಕ ಭಾರೀ ರಚನೆಗಳನ್ನೆಲ್ಲ ಲೆಕ್ಕ ಹಾಕಿದಾಗ, ಬರಿಯ ಕತ್ತೆ ಚಾಕರಿಯಲ್ಲ, `ಮಡಿ’ ಇಲ್ಲಿ ಪಕ್ಷಪಾತಿ ಎಂದು ಅಂದಾಜಾಯಿತು. ಭಕ್ತಿ ಮೀರಿದ ದಂಡ ದೊಡ್ಡದಾಗಿ ಕಾಣಿಸಿದ್ದಕ್ಕೆ ಕ್ಷೇತ್ರ ಮರ್ಯಾದೆಯನ್ನು ಧಿಕ್ಕರಿಸದೆ ಶರಣು ಹಾಕಿದೆವು. ಬೈಕುಗಳಿಗೆ ಸೂಕ್ತ ರಕ್ಷಣೆ ಕಲ್ಪಿಸಿ, ನಡೆದು ಹೋಗಲದು ಸಮಯವಲ್ಲ ಅನ್ನಿಸಿದ್ದಕ್ಕೆ, ನೆಲೆಸಲು ನಿರ್ಧರಿಸಿದೆವು.

[ಮನವಿ: ಹಿಂದೆ ಲೇಖನ ಅಥವಾ ಪುಸ್ತಕ ಮಾಡುವ ಕಾಲಕ್ಕೆ ವರ್ತಮಾನದ ಮಾಧ್ಯಮಗಳ ಮಿತಿಯೇ ನನ್ನ ಮಿತಿಯಾಗಬೇಕಾಗುತ್ತಿತ್ತು. ನೂರೆಂಟು ಒಸರುಗಳ ಜಿನುಗು, ತೊರೆಗಳ ಕಲರವ, ಸಂಗಮಗಳ ವೈಭವವನ್ನೆಲ್ಲ ಮೇಳೈಸಿಯೇ ಬರುತ್ತಿತ್ತು ನನ್ನ ಹರಿವು. ಆದರೆ ಪ್ರಕಟಣೆಗೆ ಕಳಿಸುವ ಮೊದಲು ಭಯವಾಗುತ್ತಿತ್ತು. ದೈನಿಕಕ್ಕೆ ಉದ್ದವಾಯಿತು. ವಾರಪತ್ರಿಕೆಯೆಂದರೆ ಧಾರಾವಾಹಿಯೇ ಆಗಬೇಕು. ಇನ್ನು ಆಕಾಶವಾಣಿಯೋ ದೇವರೇ ಗತಿ! ಆದರೆ ಮಾಧ್ಯಮಗಳ ಸರ್ವಜ್ಞರಿಗೆ ಧಾರಾವಾಹಿಯಲ್ಲಿ ಕಾದಂಬರಿ ಬಿಟ್ಟು ಇನ್ನೊಂದನ್ನು ಬಳಸುವುದೆಂದರೆ ತಮ್ಮ (ಕೂಪಮಂಡೂಕಕ್ಕೆ) ಬಾವಿಕಟ್ಟೇ ಒಡೆದು ಹೋಗುವ ಭಯ – “ಜನರು ಮೆಚ್ಚೋಲ್ಲ!” (ಸಾಯಿನಾಥ್ ಉವಾಚ – ಜನಪ್ರಿಯವಾದದ್ದನ್ನಷ್ಟೇ ಕೊಡುವುದಲ್ಲ, ಜನರು ತಿಳಿಯಲೇ ಬೇಕಾದ್ದನ್ನು ಪ್ರಿಯವಾಗುವಂತೆ ಕೊಡಿ. ಕಸ್ತೂರಿಯನ್ನು ಕನ್ನಡದ ಡೈಜೆಸ್ಟ್‍ ಆಗಿ ಬೆಳೆಸುವಲ್ಲಿ ಪಾವೆಂ ಆಚಾರ್ಯರು ದಶಾವತಾರ ತಾಳಿ ನಡೆಸಿದ್ದು ಇದನ್ನೇ) ನನಗೋ ಮೂರಾರು ಸಲ ಬರೆದು, ತಿದ್ದಿ, ಮೂಡಿದ ಮೂರ್ತಿ (ಕಥನ) ಯಾರ್ಯಾರದೋ ಹದವಿಲ್ಲದ ಹೊಡೆತಕ್ಕೆ ಸಿಕ್ಕುವುದು, ಕಸದ ಬುಟ್ಟಿಯ ಹೆಮ್ಮೆಯಾಗುವುದು ಒಗ್ಗುತ್ತಿರಲಿಲ್ಲ; ತಪ್ಪಿಸಲು ಮತ್ತೆ ತಿದ್ದುತ್ತಿದ್ದೆ. ಅನ್ಯ ಜಲಕಣ್ಣುಗಳನ್ನು ನಿಗಿದು, ಉಪತೊರೆಗಳನ್ನು ನಿರ್ಬಂಧಿಸಿ, ಮೂರೂ ದಿಕ್ಕಿಗೆ ಸ್ಪಷ್ಟ ಕಾಂಕ್ರೀಟ್ ಹಲಗೆಗಳನ್ನು ಬಿಗಿದು ರಚಿಸಿ ಏಕಧಾರೆಗೆ ಸುಂದರ ಕಾಲುವೆ ಕೊಡುತ್ತ ಬಂದೆ. ಕೆಸರು-ಕಮಲ ಇಲ್ಲ, ಮೀನು- ಜೇಡಗಳೂ ಇಲ್ಲ – ಶುದ್ಧ ನೀರು. ಈಗ – ಕ್ಷಮಿಸಿ, ಕಾಲದ ಅಂತರದಲ್ಲಿ ನನ್ನ ಟಿಪ್ಪಣಿಗಳು ಕಳೆದುಹೋಗಿವೆ – ತೊರೆಗಳು ತಿರುಗಿವೆ! ನೆನಪಿನ ವಿವರಗಳು ಹಳಸಿವೆ – ಒರತೆಯಕಣ್ಣು ಬತ್ತಿದೆ – ಕಾಲುವೆ ಮೋರಿಯಾಗಿದೆ! `ಚಕ್ರವರ್ತಿಗಳು’ ಪುಸ್ತಕದ ಈ ಪರಿಷ್ಕರಣ ಕೆಲಸ ಅಂದರೆ `ಗಂಗಾಶುದ್ಧೀಕರಣ’, ಎನ್ನಬಹುದು ಅಥವಾ ಐತಿಹಾಸಿಕ ರಚನೆಯೊಂದರ `ಜೀರ್ಣೋದ್ಧಾರ’ ಎಂದೂ ಹೇಳಬಹುದಾದ ಈ ಪ್ರಯತ್ನಗಳಲ್ಲಿ ಕೊರತೆ, ತಪ್ಪುಗಳಾಗಿದ್ದರೆ ನೀವೇ ತುಂಬಿಕೊಳ್ಳಿ, ನನ್ನ ಪ್ರಾಂಜಲ ಕ್ಷಮಾಯಾಚನೆಯನ್ನೂ ಒಪ್ಪಿಸಿಕೊಳ್ಳಿ.]

(ಮುಂದುವರಿಯುವುದು)