ಕಲಂಕ್‍ದ ನೀರ್

೧೯೭೦ರ ದಶಕದ ಮೊದಲ ಭಾಗದಲ್ಲೆಲ್ಲೋ ನನ್ನ ಮನೋಭಿತ್ತಿಗೆ ಹತ್ತಿದ ಚಿತ್ರಕ್ಕೆ ಒಪ್ಪಕೊಡುತ್ತಿದ್ದೇನೆ. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮುಗ್ಧಗಣ್ಣಿನ ಪ್ರೇಕ್ಷಕ ನಾನು. ಸರಸ್ವತೀಪುರಂ ಮಧ್ಯದ ತೆಂಗಿನ ತೋಪಿನ (ಸಮತೆಂತೋ) ಹವ್ಯಾಸಿ ಕಲಾವಿದರ ಬಳಗದ ಪ್ರಸ್ತುತಿ. ಭಾರತದ ಸ್ವಾತಂತ್ರ್ಯ ಹೋರಾಟದ ನೆನಪುಗಳಿನ್ನೂ ದಟ್ಟವಾಗಿದ್ದ ದಿನಗಳು. ಜಿ.ಬಿ. ಜೋಶಿಯವರು ಬರೆದು, ಪ್ರಕಟಿಸಿ, ಪ್ರದರ್ಶಿಸಿಯೂ ಇದ್ದ ನಾಟಕ – ಕದಡಿದ ನೀರು. ಗೂಳಪ್ಪ (ಗುಂಡಪ್ಪ) – ಸಿಂಧುವಳ್ಳಿ (ಅಥವಾ ಸುರುಚಿ) ಅನಂತಮೂರ್ತಿ, ರಂಗಕ್ಕೆ ನುಗ್ಗುವ ಅಬ್ಬರಕ್ಕೆ ನಾನು ನಡುಗಿದ್ದೆ. ವೃದ್ಧಾಪ್ಯದ ಬೇನೆಗಿಂತಲೂ ಪರಿಸ್ಥಿತಿಯ ಒತ್ತಡಕ್ಕೆ ಬಸವಳಿದು ಕೂತ ಗಾಂಧಿವಾದಿ (ಶಿವಪ್ಪ) – ಬಹುಶಃ ಡಾ| ನ. ರತ್ನ, ಪಡುತ್ತಿರುವ ಪಾಡಿಗೆ ಹನಿಗಣ್ಣನಾಗಿದ್ದೆ. ಪಾತ್ರ-ಪಾತ್ರಧಾರಿಯ ಪತ್ತೆ ಸ್ಫುಟವಾಗದಿದ್ದರೂ ಆಗಿಂದಾಗ್ಗೆ ಅವಧೂತನಂತೆ “ಉಗ್ರ, ಅತ್ಯುಗ್ರ, ಮಹೋಗ್ರ” ಎಂದು ಬೊಬ್ಬಿರಿಯುತ್ತ, ನಾಟಕದ ಪಲ್ಲವಿಯೇ ಇದೋ ಎಂಬ ಭಾವ ಮೂಡಿಸುತ್ತಿದ್ದ ಹುಚ್ಚನೂ ನಿಚ್ಚಳವಾಗುತ್ತಾನೆ; ಅಷ್ಟೆ! ಇದಕ್ಕೆಲ್ಲಾ ಕಾರಣ, ಮೊನ್ನೆ ಮಂಗಳವಾರ ಮಂಗಳೂರು ಪುರಭವನದಲ್ಲಿ ತುಂಬಿದ ಗೃಹಕ್ಕೆ ಪ್ರದರ್ಶನಗೊಂಡ ಅದೇ ನಾಟಕದ ತುಳು ರೂಪಾಂತರ – ಕಲಂಕ್‍ದ ನೀರ್!

ಶಾಲಾ ವಾರ್ಷಿಕೋತ್ಸವಗಳ ಕೊನೆಗೊಂದು ಅನಿವಾರ್ಯ ಹರಕೆ – ಅದೂ ಮಾತಿನ ಚಮತ್ಕಾರ, ವಿಪರೀತ ಚಟುವಟಿಕೆಗಳ ಕಂತೆಗೊಂದು ಸುಖಾಂತವೇ ನಾಟಕವೆಂದು ಭಾವಿಸಿಕೊಂಡು ಬಂದಿದ್ದೆ. ಪುತ್ತೂರು ಜಾತ್ರೆಗೊಮ್ಮೆ ಮೊಕ್ಕಾಂ ಹೂಡಿದ್ದ ಹಿರಣ್ಣಯ್ಯ ಮಿತ್ರ ಮಂಡಲಿಯ `- ಆಚಾರ’ (ಲಂಚ, ಭ್ರಷ್ಟ, ಅನಾ ಇತ್ಯಾದಿ) ಸರಣಿಯ ವೃತ್ತಿಪರ ನಾಟಕಗಳು ರುಚಿಸಿದಾಗ ಸಾಮಾಜಿಕ ಜಾಗೃತಿಯ ಅಸ್ತ್ರವಾಗಿಯೂ ಕಂಡದ್ದುಂಟು. ಆದರೆ ಅದಕ್ಕೆ ಒಂದು ಬಹುದೊಡ್ಡ ವೈಚಾರಿಕ ಆಯಾಮವೂ ಉಂಟೆಂದು ನನಗೆ ಬಹುಶಃ ಮೊದಲು ಕಾಣಿಸಿದ್ದು ಮೇಲೆ ಹೇಳಿದ ಕದಡಿದ ನೀರು.

ನಿರ್ಮಲ ನಗೆಯಲೆಗಳ ನಲಿದಾಟದಲ್ಲೇ ಕಳೆದು ಹೋಗಿದ್ದ ತುಳು ನಾಟಕರಂಗಕ್ಕೆ, ಸದಾನಂದ ಸುವರ್ಣರ ತುಳು ರೂಪಾಂತರ ಮತ್ತು ನಿರ್ದೇಶನದ ಕಲೆಂಕ್‍ದ ನೀರ್, ಮುಂಗಾರಿನೊಡಗೂಡಿದ ಹೆದ್ದೆರೆಯಾಗಿ ಅಪ್ಪಳಿಸುವ ನಿರೀಕ್ಷೆಯಿತ್ತು. ಸುವರ್ಣ ಪ್ರತಿಷ್ಠಾನದ ಸದಭಿರುಚಿಯ ಬಗ್ಗೆ ಎರಡು ಯೋಚನೆಯಿಲ್ಲದೆ, ಮನತೊಯ್ದುಕೊಳ್ಳಲು ಭವನ ತುಂಬಿ ಬಂದ ನಾಟಕಾಸಕ್ತರಿಗೆ ಭಿನ್ನ ಬಣ್ಣವೇನೋ ಕಾಣಿಸಿತು, ದಕ್ಕಿದ್ದು ತುಸು `ಕಲಂಕ್‍ದ ನೀರ್’; ತಳಮಟ್ಟದ ಕಲಕು ಆಗಲಿಲ್ಲ.

ನಾಟಕ ಪ್ರಕಟವಾದ ಹೊಸತರಲ್ಲೇ ಮುಂಬೈಯಲ್ಲಿದ್ದ ತರುಣ ಸದಾನಂದ ಸುವರ್ಣರನ್ನು ಇದು ತಟ್ಟಿತ್ತಂತೆ. ಅವರು ಆಗಲೇ ಅದನ್ನು ತನ್ನವರ ಬಳಗದಲ್ಲಿ ನಿರ್ದೇಶಿಸಿ, ಪ್ರದರ್ಶಿಸಿದ್ದರು. ಅನುಭವ ಮತ್ತು ಪ್ರಾಯದಲ್ಲಿ ಪಕ್ವಗೊಂಡ ಸುವರ್ಣರು ಸುಮಾರು ಎಂಟು-ಹತ್ತು ವರ್ಷದ ಹಿಂದೆ ಮರಳಿಮಣ್ಣಿಗೆ (ಮಂಗಳೂರಿನಲ್ಲೇ ನೆಲೆಸಿದ್ದಾರೆ) ಬಂದಿದ್ದರು. ಹಾಗೆಂದು ಸುವರ್ಣರು ತನ್ನ ಬಹುಮುಖೀ ಆಸಕ್ತಿಯನ್ನು ಸುಪ್ತವಾಗಿಟ್ಟುಕೊಳ್ಳಲಿಲ್ಲ. ಅವರು ಮಂಗಳೂರಿನಲ್ಲಿ ಗಂಭೀರ ಕನ್ನಡ ನಾಟಕಗಳ ಪ್ರಯೋಗಗಳಿಗೆ ಕೈ ಹಾಕಿದರು. ಅವರ ಯಶಸ್ಸನ್ನು ಸಾರುವುದಕ್ಕೆ ಕೋರ್ಟ್ ಮಾರ್ಶಲ್, ಉರುಳು, ಮಳೆನಿಲ್ಲುವತನಕ ಮುಂತಾದ ಪ್ರಯೋಗಗಳು ಧಾರಾಳ ಸಾಕ್ಷಿ ನುಡಿಯುತ್ತವೆ. ಸುವರ್ಣರು ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತಾಯ್ನುಡಿ ಮತ್ತು ಮಣ್ಣಿನ ಭಾಷೆ ತುಳುವನ್ನೇ ಆಯ್ದುಕೊಂಡಿದ್ದಾರೆ. ಸಹಜವಾಗಿ ನಮ್ಮ ನಿರೀಕ್ಷೆಗಳು ಮುಟ್ಟಿದ ಎತ್ತರ ದೊಡ್ಡದು. ಬಹುಶಃ ಹೀಗಾಗಿ ಪ್ರದರ್ಶನ ಆಭಾಸಕರವಾಗದಿದ್ದರೂ ಪ್ರಭಾವಿಯಾಗಲಿಲ್ಲ ಎನ್ನುವುದನ್ನು ಸಖೇದ ಗುರುತಿಸುವಂತಾಗಿದೆ. ಕಲಾವಿದರು ರಂಗ ತಾಲೀಮಿಗೆ ಶಿಸ್ತುಬದ್ಧವಾಗಿ ಒಡ್ಡಿಕೊಂಡಿರಬಹುದು. ಆದರೆ `ಪಾಠ’ವನ್ನು ಸ್ವತ್ವದಿಂದ ಕಲಾಭಿವ್ಯಕ್ತಿಯಾಗಿಸುವಲ್ಲಿ ನೀರಸವಾದದ್ದು ಪ್ರದರ್ಶನದ ಮುಖ್ಯ ಸೋಲು.

ನನ್ನ ತಿಳಿವಳಿಕೆಯಂತೆ, ಪ್ರದರ್ಶನದ ಸೋಲು ಸದಾನಂದ ಸುವರ್ಣರ ಅರಿವನ್ನು ಮೀರಿದ್ದಲ್ಲ ಮತ್ತು ಭಾಗವಹಿಸಿದ ಕಲಾವಿದರ ಬಗೆಗಣ್ಣು ಕಾಣದ್ದೂ ಅಲ್ಲ ಎಂಬ ಅರಿವಿನೊಡನೇ ನನ್ನ ಮಿತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಆರೋಗ್ಯಪೂರ್ಣ ಚರ್ಚೆಗೆ ನಾಂದಿಯಾದರೆ, ಈ ಪ್ರಯೋಗದ ಮುಂದಿನ ಉತ್ತಮಿಕೆಗೆ ಪುಟ್ಟ ಸಲಕರಣೆಯಾದರೆ ನಾ ಧನ್ಯ.

ಭಾಷೆಗೆ ತಕ್ಕ ಭಾವದೀಪ್ತಿಸಲು ಅನುವಾದ ಅಥವಾ ರೂಪಾಂತರ ದುಡಿದದ್ದು ಸಾಲದು. ಧಾರವಾಡ ವಲಯದಿಂದ ಕರಾವಳಿಯ ಭಾಷೆಯೊಡನೆ ಆಚಾರಕ್ಕೆ ಇದು ಇಳಿದು ಬರುವಾಗ ಹೆಸರಿನಲ್ಲಿ – ಶಂಕ್ರು, ವಿಷಯದಲ್ಲಿ – ಶೇಂಗಾ ಎಣ್ಣೇ (ಅಥವಾ ನೆಲಗಡಲೆ ಎಂದು ಅರ್ಥವನ್ನೂ ಪಾತ್ರ ಕೊಡಬೇಕಾಯ್ತು! ತೆಂಗಿನೆಣ್ಣೆ ಅಥವಾ ಬರಿಯ ಎಣ್ಣೆಮಿಲ್ಲು ಎಂದಿದ್ದರೂ ಸಾಕಿತ್ತು) ನಂಬಿಕೆಗಳಲ್ಲಿ – ಸಿದ್ಧಪ್ಪ (ಇಲ್ಲಿನ ಇಷ್ಟೊಂದು ದೈವ, ದೇವಸ್ಥಾನಗಳು ದಾಸಪ್ಪನಿಗೆ ದಕ್ಕಲಿಲ್ಲವೇ?) ವೇಷಭೂಷಣಗಳಲ್ಲಿ ಇತ್ಯಾದಿ ಗಳಿಸಿದ್ದೇನು ಎನ್ನುವಾಗ ನಿರಾಶೆಯೇ ಹೆಚ್ಚಿತ್ತು.

ರಂಗ ಪರಿಕರಗಳಲ್ಲಿ ಅಸಹಜತೆ ಕಾಡಿತು. ಮನೆಯ ಮುಖ್ಯ ಬಾಗಿಲನ್ನು ದಾಟಿ ಸ್ನಾನದ ಕೊಟ್ಟಿಗೆ, ಗಾಂಧಿಯ ಪಟದ ಪಕ್ಕದಲ್ಲೇ ಎದ್ದು ಕಾಣುವಂತೆ ಕೋವಿ, ಹೊತ್ತು ಗೊತ್ತುಗಳ ಔಚಿತ್ಯ ತಿಳಿಸದ ಎರಡು ನಂದಾ ದೀಪಗಳು (ಅದರಲ್ಲೊಂದರ ಒಂದು ಬತ್ತಿಯನ್ನು ಒಮ್ಮೆ ಹೊಸದಾಗಿ ಹಚ್ಚಿದ್ದು ಅರ್ಥವಾಯ್ತು, ಮತ್ತೆ ಆರಿಸಿದ್ದು ಯಾಕೆಂದುತಿಳಿಯದಾಯ್ತು.) ಇತ್ಯಾದಿ. ಬಂಗಾರ ಶೆಟ್ಟಿ ಮದುವಣಿಗನಂತೆ ಶೃಂಗಾರದಲ್ಲಿ ಬಂದಾಗ, ಜಗುಲಿಯಲ್ಲಿ ಕಿಟಕಿಗೊರಗಿಸಿ ಬಿಟ್ಟ ಕೊಡೆ, ಅವನು ಸುಮಾರು ಹದಿನೈದು ದಿನಗಳ ಅಂತರದಲ್ಲಿ ಜೈಲಿನಿಂದ ಬಿಡುಗಡೆಗೊಂಡು ವಾಪಾಸು ಬರುವಾಗಲೂ `ಜಗುಲಿಯ ಕಿಟಕಿ’ಗೇ ಆನಿಕೊಂಡೇ ಉಳಿದಿತ್ತು!

ಉಡುಪಂತೂ ತೀರಾ ನಗಣ್ಯ ಪರಿಕರದಂತೆ ನಿರ್ವಹಣೆಗೊಂಡಿದೆ. ಹೀಗೇ ಉದಾಹರಿಸುವುದಾದರೆ – ಸುಮಾರು ನಾಲ್ಕು ದಶಕಗಳ ಹಿಂದೆ, ರೈತಾಪಿ ಹಿನ್ನೆಲೆಯ ತರುಣ – ಶಂಕ್ರು, ಮನೆಯುಡುಗೆಯಾಗಿ (ಮುಂಡು, ಬರಿಮೈ ಬಿಟ್ಟು) ಪ್ಯಾಂಟ್, ಬನಿಯನ್ನು ಧರಿಸುವುದು ಎಷ್ಟು ಸರಿ? ಮೊದಮೊದಲು ಮೈಮುಚ್ಚಿ ಸೆರಗು ಹೊದ್ದ ಹಿರಿಯ ಹೆಂಗುಸು, ಕೊನೆಗಾಗುವಾಗ ಆತಂಕ ದುಃಖಗಳಲ್ಲಿ ಮುಸುಕಿಕ್ಕಿಕೊಳ್ಳುವ ಹಂತದಲ್ಲಿ ಸೆರಗು ಬೀಸಬಿಟ್ಟು, ಅರೆಬೆನ್ನು ತೋರಿಸಿದ್ದು (ಅಭಿನಯದಷ್ಟೇ) ಉಡುಪಿನ ಕೊರತೆಯೆಂದೇ ಕಂಡಿತು.

ಪರಿಸರದ ಸದ್ದುಗಳು (ರಾತ್ರಿಯ ನೀರವತೆಗಾಗಿ ಬಿಬ್ಬಿರಿ, ಉದಯಕಾಲದ ಸಂಕೇತವಾದ ಹಕ್ಕಿಗಳ ಕಲರವ) ಎಲ್ಲಕ್ಕೂ ಮುಖ್ಯವಾಗಿ `ಕಾಳ’ ನಾಯಿಯ ಬೊಬ್ಬಾಟ (ಧ್ವನಿಮುದ್ರಣ) ನಾಟಕದ ಒಟ್ಟಂದದ ಭಾಗವಾಗಿರಲಿಲ್ಲ. ನಾಯಿ ಹಳ್ಳಿಮನೆಯ ವಾಸ್ತವವಾಗಿ ಬೇರೆ ಬೇರೆ ಪಾತ್ರ ಪ್ರವೇಶಗಳೊಡನೆ, ಬೊಗಳಿಕೆಯ ವೈವಿಧ್ಯವನ್ನು – ಗುರುತು, ಪ್ರೀತಿ, ಕೋಪ, ನೋವು ಇತ್ಯಾದಿ ಕೊಡಬೇಕಿತ್ತು. ಆಗ ಕೊನೆಯಲ್ಲಿ ದೊಡ್ಡ ಸಂಕೇತವೂ ಆಗಿ (ದಾಸಪ್ಪನಂತೆ ಅಥವಾ ತುಸು ಹೆಚ್ಚೇ) ಹೆಚ್ಚು ಧ್ವನಿಸುತ್ತಿತ್ತು. ಅದು ಸ್ವತಂತ್ರ ಪಾತ್ರಧಾರಿಯಂತೆ ಒಂದೆರಡು ಬಾರಿಯಷ್ಟೇ ಪ್ರಕಟವಾಗಿ, ಆಗಲೂ ನಾಟಕದ ಶ್ರುತಿಗೆ ಒಗ್ಗದ ಹದದಲ್ಲಿ (ದೂರದ ಬಾವಿಕಟ್ಟೆಯ ಬೊಗಳು ಮನೆಮಂದಿಯ ಮಾತಿನ ಹದಕ್ಕೂ ಮೀರಿ) ಪ್ರಸ್ತುತಗೊಂಡಿತು.

ಕಥಾಕ್ರಮದಲ್ಲಿ ಗುಂಡಪ್ಪ – ಕಾಳ ನಾಯಿ, ಶಿವಪ್ಪರ ಮರಣ, ಶಂಕ್ರುವಿನ ಬಂಧನದೊಡನೆ (ಬಂಗಾರಶೆಟ್ಟಿ – ಮಗಳ ವರಣ?) ಕಥೆಯೇನೋ ಕೊನೆಗಂಡಿತು. ಆದರೆ ಆ ದುರಂತವನ್ನು ಮನಗಾಣಿಸಬೇಕಾದ ನಾಟಕೀಯತೆ ತಡವರಿಸುವ ದೃಶ್ಯಗಳ ಜೋಡಣೆಯಲ್ಲಿ ಬಳಲಿತು. ತೋಟ ಗದ್ದೆಯ ದುಡಿಮೆ ಮುಗಿಸಿ ಬಂದವ, ತುರ್ತು ಪರಿಸ್ಥಿತಿಯಲ್ಲಿ ಒಂದು ಸಂದೇಶ ರವಾನೆಗೂ ಒದಗದಷ್ಟು ಬಳಲಿದವನಂತೆ ಕಾಣಲೇ ಇಲ್ಲ. ಅದಕ್ಕೂ ಮಿಗಿಲಾಗಿ ಆತನಲ್ಲಿ ಶೋಷಣೆಯ ವಿರುದ್ಧ ಕೆರಳುವ ಭಾವ ಕೊಲೆ ಮಾಡುವ ಮಟ್ಟಕ್ಕೆ ಬೆಳೆದದ್ದಾಗಲೀ ಆನಂತರ ಕೊಲೆಗಾರನಾಗಿ ಹದಿನೈದು ದಿನಗಳ ಕಾಲ ಮನಸ್ಸಾಕ್ಷಿಯಲ್ಲಿ ಬೆಂದದ್ದಾಗಲೀ ನಮ್ಮನ್ನು ಮುಟ್ಟಲೇ ಇಲ್ಲ. ಖಳನೆದುರು ತರುಣಿಯ ಸಿಡಿಮಿಡಿ, ಪರಿಸ್ಥಿತಿಗೆ ಸ್ಪಂದಿಸುವ ಛಲದಲ್ಲಿ ಕಾರಿರುಳಿನಲ್ಲೂ ಖಳನಲ್ಲಿಗೆ ಹೋಗಲು ಅಂಜದಿರುವ ನಿಲುವು, ಮುಂದೆ ಶೋಷಿತಳಾಗಿ ಮರಳುವ ಸ್ಥಿತಿಗಳೆಲ್ಲ ಚೆನ್ನಾಗಿಯೇ ಬಂತು, ಮತ್ತದು ನಾಟಕೀಯತೆಗೆ ಅವಶ್ಯವೇ ಸರಿ. ಆದರೆ ಅದನ್ನು ಪ್ರೇಕ್ಷಕರು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಇತರ ಪಾತ್ರಗಳು ಮತ್ತು ಪರಿಸರ ವಿಫಲವೇ ಆಯ್ತು. ಗೃಹಕೃತ್ಯದಲ್ಲಿ ದೈಹಿಕವಾಗಿ ಬಳಲಿದ ಹಿರಿಯನನ್ನುಳಿದು, ಇತರರು ತೊಡಗಿಕೊಳ್ಳುವಲ್ಲಿ ಸಹಜತೆ ಮತ್ತು ಸಾತತ್ಯ ಕಾಣಿಸುವ ಅಂಶಗಳ ಕೊರತೆ ತುಂಬಾ ಕಾಡುತ್ತಿತ್ತು.

ಶಿವಪ್ಪನ ಗಾಂಧೀವಾದ ಚಲಾವಣೆ ಕಳೆದುಕೊಂಡ ನಾಣ್ಯ. ಬದಲಾದ ಕಾಲದ ಪೆಟ್ಟುಗಳಲ್ಲಿ ನುಗ್ಗಾಗಿ, ಸ್ವತಃ ಆತನೇ ಅದನ್ನು ಅಪಮೌಲ್ಯಕ್ಕೊಳಪಡಿಸುವಂತೆ ಆತನ ಪುತ್ರವ್ಯಾಮೋಹ ಕಾಣಿಸುತ್ತದೆ. ಆದರೆ ವಾಸ್ತವದಲ್ಲಿ ನಮ್ಮ ಮನಸ್ಸಿನಲ್ಲಿ ಆ ಮೌಲ್ಯಗಳ ಅವನತಿ ಕಾಣಿಸುವ ಪ್ರಯತ್ನ, ಅಥವಾ ಬದಲಾವಣೆಯ ಬಳ್ಳಿ ವಿಸ್ತರಿಸಲು ಪ್ರದರ್ಶನ ಕಟ್ಟಿಕೊಟ್ಟ ತಾರ್ಕಿಕ ಹಂದರ ದುರ್ಬಲ ಅನ್ನಿಸಿತು.

ಗುಂಡಪ್ಪನ ಗತ್ತು, ಬಂಗಾರಶೆಟ್ಟಿಯ ಉತ್ತರಕುಮಾರತ್ವ, ದಾಸಪ್ಪನ ಮರುಳು, ಅಂಚೆಯಣ್ಣನ ದೈನ್ಯ ಚೆನ್ನಾಗಿತ್ತು. ಶಿವಪ್ಪನ ಸತ್ತ್ವ ಮಾತ್ರ ನೀರಸ ಮಾತುಗಳಷ್ಟೇ ಆಗುಳಿಯಿತು. ಮಗಳು ಅಡ್ದಿಯಿಲ್ಲ. ಅಮ್ಮ ಮತ್ತು ಶಂಕ್ರು ಅಭಿನಯದಲ್ಲಿ ಶ್ರಮಿಸಬೇಕಾದ ದಾರಿ ಇನ್ನು ತುಂಬಾ ದೀರ್ಘವಿದೆ. (ಇದನ್ನು ಬರೆಯುತ್ತಾ ಪ್ರದರ್ಶನದಲ್ಲಿ ನಾನೇ ತೆಗೆದ ಚಿತ್ರಗಳನ್ನು ನೋಡುವಾಗಷ್ಟೇ ನೆನಪಾಯ್ತು,) ನಾಟಕದ ಮೊದಲಲ್ಲಿ ಸನ್ಯಾಸಿಯಂತೆ ಕಾಣಿಸಿದ ಪಾತ್ರ ನನಗಂತು ಗ್ರಹಿಕೆಗೇ ಸಿಗಲಿಲ್ಲ. ನಿತ್ಯ ನೂತನ ಪ್ರಯೋಗವೇ ಆಗುವ ನಾಟಕರಂಗದಲ್ಲಿ, ಅದೂ ಸದಾನಂದ ಸುವರ್ಣರಂಥ ಅನುಭವಿಗಳ ಗರಡಿಯಲ್ಲಿ, ಮತ್ತು ಅನುಭವೀ ನಟರುಗಳ ಮೇಳದಲ್ಲಿ ಹುರಿಗೊಂಡು ಕಲಂಕ್‍ದ ನೀರ್ ಇನ್ನಷ್ಟು ಶಕ್ತವಾಗಿ ಮರುಪ್ರದರ್ಶನಕ್ಕೆ ಬರಲಿ ಎಂದು ಮನಸ್ವೀ ಹಾರೈಸುತ್ತೇನೆ.

[ನಾಟಕ ನೋಡದವರಿಗಾಗಿ ಕಥಾ ಸಾರಾಂಶ: ಸ್ವಾತಂತ್ರ್ಯ ಹೋರಾಟಗಾರ ಶಿವಪ್ಪ ಗಾಂಧೀ ಆದರ್ಶದೊಡನೆ, ಸ್ವತಂತ್ರ ಭಾರತದಲ್ಲಿ ತನ್ನ ಪೂರ್ವವೃತ್ತಿ – ಕೃಷಿಯಲ್ಲಿ, ನೆಲೆಸಲು ಹೆಣಗುತ್ತಿದ್ದಾನೆ. ನಿರೀಕ್ಷೆಯಂತೆ ಹೊರಗಿನಿಂದ ಬರಬೇಕಾದ ಆರ್ಥಿಕ ಸಹಾಯ ಬಂದಿಲ್ಲ. ಕೃಷಿ ಹೂಡಿಕೆ, ಸ್ವಂತದ ವೃದ್ಧಾಪ್ಯದ ಬೇನೆ, ಪತ್ನಿ, ಕಲಿಕೆ ತಪ್ಪಿಸಿ ದುಡಿಮೆಗುಳಿಸಿಕೊಂಡ ಮಗ, ಮದುವೆಯ ಪ್ರಾಯಕ್ಕೆ ಬಂದ ಮಗಳ ಜವಾಬ್ದಾರಿಗಳೆಲ್ಲ ಒತ್ತಡ ಹೇರುತ್ತಿವೆ. ಸಹಜವಾಗಿ ಸಾಲದ ಸುಳಿಯಲ್ಲಿ ಬಿದ್ದು, ಮನೆ ಭೂಮಿಗಳೆಲ್ಲ ಗೂಂಡಾನಿಗೆ ವಜಾ ಆಗುವ ಹಂತ ಬಂದಿದೆ. ಇಲ್ಲಿ ಸಣ್ಣ ಆಶಾಕಿರಣ – ಮಗಳನ್ನು ಮದುವೆಯಲ್ಲಿ ಕೊಟ್ಟರೆ ಸಾಲಮುಕ್ತಿಗೆ ಸಹಕರಿಸಲು ಮುಂದಾದ ಇನ್ನೊಬ್ಬ ಧನಿಕ – ವ್ಯಾಪಾರಿ. ಆದರೆ ಆತನಿಗೆ ವರ-ಯೋಗ್ಯತೆ ಇಲ್ಲ ಎನ್ನುವ ಇಬ್ಬಂದಿ. ಗೊಂದಲದ ಶಿಖರದಲ್ಲಿ ಮಗಳು ಅತ್ಯಾಚಾರಕ್ಕೀಡಾಗಿ, ಮಗ ಗೂಂಡಾನ ಕೊಲೆಗಾರನಾಗಿ, ಅಳಿಯನಾಗಬಹುದಿದ್ದ ವ್ಯಾಪಾರಿ ಮಿಥ್ಯಾರೋಪದಲ್ಲಿ ದೂರನಾಗಿ, ಶಿವಪ್ಪ ಅಸುನೀಗುತ್ತಾನೆ. ನಿರೀಕ್ಷಿತ ಹೊರಗಿನ ಆರ್ಥಿಕ ಸಹಾಯ ಬಂದು, ನಿಷ್ಪಾಪಿ ಮಗಳನ್ನು ವ್ಯಾಪಾರಿ ವರಿಸಲು ಒಪ್ಪಿಕೊಂಡು, ಗೂಂಡಾನ ಹಂಗೂ ಉಳಿದಿಲ್ಲವೆಂದೆಲ್ಲ ಕದಡಿದ ನೀರು ಹಣಿಯಾಗುವ ಹಂತದಲ್ಲಿ ಅನುಭವಿಸಲು ಶಿವಪ್ಪ ಉಳಿದಿಲ್ಲ ಎನ್ನುವುದು ಇಲ್ಲಿನ ದುರಂತ!]