ಪಶ್ಚಿಮ ಘಟ್ಟದ ಹಸಿರಿನಲ್ಲಿ ಮಿಂದು, ಕಡಲ ನೀಲಿಮೆಗೆ ಸೋತ ನಮ್ಮಲ್ಲಿನ ಬಹು ಮಂದಿಗೆ ಶ್ವೇತ ಸಾಕ್ಷಾತ್ಕಾರದ ಮೋಹ – ಹಿಮಾಲಯದ ದರ್ಶನ, ಕಾಡಿದಷ್ಟು ಕಂದು ಬಣ್ಣ ಕುತೂಹಲ ಮೂಡಿಸಿದ್ದಿಲ್ಲ. ರಾಜಸ್ತಾನ ಎಂದ ಕೂಡಲೇ ಸುಲಭ ನಿರ್ಧಾರದಲ್ಲಿ ರಣಗುಡುವ ಬಿಸಿಲು, ಏಕತಾನತೆಯ ಮರಳನ್ನೇನು ನೋಡುವುದು ಎಂದು ತಳ್ಳಿ ಹಾಕುವವರಿಗೇನೂ ಕೊರತೆಯಿಲ್ಲ. ಆದರೆ ನೋಡುವ ಕಣ್ಣು, ಅನುಭವಿಸುವ ಸಾಮರ್ಥ್ಯವಿರುವವರಿಗೆ ಪ್ರಾಕೃತಿಕ ಸತ್ಯಗಳು ಅತಿ ಚಳಿಯ ಹಿಮಾಲಯದಷ್ಟೇ ಅತಿ ಉರಿಯ ಮರುಭೂಮಿಯಲ್ಲೂ ಇದೆ. ಅದಕ್ಕೂ ಮಿಗಿಲಾಗಿ ಐತಿಹಾಸಿಕ ಮತ್ತು ಸಾಮಾಜಿಕ ವೈವಿಧ್ಯಗಳು, ಸ್ಥಿತ್ಯಂತರಗಳು ಈ ರಾಜಸ್ತಾನದಲ್ಲಿ ತುಂಬಾ ಇವೆ. ಇವನ್ನು ಗುರುತಿಸಿಯೇ ಮಿತ್ರ ಮನೋಹರ ಉಪಾಧ್ಯರ ಕುಟುಂಬ ರಾಜಸ್ತಾನ ಪ್ರವಾಸಕ್ಕೆ ಹೋಗಿದ್ದರು. ಅವರು ಸಿದ್ಧ ತಿನಿಸಿನಂಥಾ ಪ್ಯಾಕೇಜ್ ಟೂರನ್ನು ನಿರಾಕರಿಸಿ, ಗಟ್ಟಿ ಮನೆಗೆಲಸ ಮಾಡಿದ್ದಾರೆ, ಅಲ್ಲಿಗೆ ಹೋದ ಮೇಲೆ ಮನವಿಟ್ಟು ಅನುಭವಿಸಿದ್ದಾರೆ. ಸಹಜವಾಗಿ ಅದು ಕಥನಕ್ಕಿಳಿದಾಗ ಗಂಟೆ ಕಿಮೀಗಳ ಪಟ್ಟಿ, ತಿಂಡಿತೀರ್ಥಗಳ ಯಾದಿ, ಸ್ವಂತ ಕಷ್ಟ ಸುಖಗಳ ಒಣ ವರದಿಯಾಗಿಲ್ಲ. ಸಾರ್ವತ್ರಿಕ ಓದಿನ ಸುಖಕ್ಕೆ, ಅನುಸರಣೀಯ ಉತ್ಸಾಹಿಗಳ ಸಖ್ಯಕ್ಕೆ ಸ್ವಾರಸ್ಯಕರ ಸಾಹಿತ್ಯವಾಗಿಯೇ ಬಂದಿದೆ.

ಮರುಭೂಮಿಯಲ್ಲೂ ಬಿಸಿಲು ಕಾಯಿಸುವ ದಿನಗಳಿವೆ. ಅದು ಬರಿಯ ಮುಳ್ಳು ಕಂಟಿಗಳ ಬರಡು ನೆಲವಲ್ಲ. ಅಲ್ಲಿನ ಜೀವವೈವಿಧ್ಯವೆಂದರೆ ಒಂಟೆ, ಕತ್ತೆಗಳಿಗೇ ಮುಗಿಯಲಿಲ್ಲ. ಅಲ್ಲಿ ನೀರು ಭ್ರಮಾತ್ಮಕ ಮೃಗಜಲಕ್ಕಷ್ಟೇ ಸೀಮಿತವಲ್ಲ… ಹೀಗೆ ನೇತಿ ನೇತಿ ಉದ್ಗರಿಸಿಹೋಗುತ್ತದೆ ಇವರ ಅನುಭವ ಕಥನದ ಸಾಕ್ಷಾತ್ಕಾರದಲ್ಲಿ! ವೈಯಕ್ತಿಕವಾಗಿ ನಾನು ಪ್ರವಾಸ ಕಥನಗಳಲ್ಲಿ ಕಂಡದ್ದನ್ನು ಹೇಳುವುದರೊಡನೆ ನನಗೆ ನಿಲುಕಿದಷ್ಟು ಅದರ ಅವಸ್ಥಾಂತರಗಳ ಕುರಿತು ವಿಷಾದಿಸುವುದು, ಕಾರಣಕರ್ತರನ್ನು ಕುಟುಕುವುದನ್ನು ಬುದ್ಧಿಪೂರ್ವಕವಾಗಿ ಮಿಳಿತಗೊಳಿಸುತ್ತೇನೆ. (ಇದನ್ನು ಅವಗುಣವೆಂದು ಭಂಗಿಸಿದವರೂ ಇದ್ದಾರೆ) ಆದರೆ ಪ್ರಸ್ತುತ ಪ್ರವಾಸ ಕಥನವನ್ನು ಕೊಟ್ಟ ವಿದ್ಯಾ ಎಲ್ಲವನ್ನೂ ಬಹಳ ಸಂಯಮದಿಂದ ನಿಭಾಯಿಸಿದ್ದಾರೆ.

`ಸವಿಯೆಲ್ಲ ನಿನಗಿರಲಿ, ಕಹಿ ಮಾತ್ರ ನನಗಿರಲಿ’ (- ಸಿನಿಗೀತೆಯೊಂದರ ಚರಣ) ಎಂಬ ಔದಾರ್ಯ ಮೆರೆದಿದ್ದಾರೆ. ಕ್ರಿಯೆಯಲ್ಲಿ ಅಸುಖವಿದ್ದರೂ (ಹಲ್ಲಿಗೆ ಭೈರಿಗೆ ಹಾಕುವುದು, ಅವಶ್ಯವಾದರೆ ಕಳಚುವುದು ವಿದ್ಯಾರ ವೃತ್ತಿ) ಪರಿಣಾಮದಲ್ಲಿ ನಗುವಿನ ಸ್ಪರ್ಷ ಕಾಣಿಸುವ ವೈದ್ಯೆಯ ನಾಜೂಕು ಇಲ್ಲಿ ವೇದ್ಯವಾಗುತ್ತದೆ. ಒಂದು ಉದಾಹರಣೆ ಗಮನಿಸಿ: ವಿಮಾನ ಯಾತ್ರಿಗಳಿಗೆ ಕೊಡುವ ಆಹಾರದ ಗುಣಮಟ್ಟದ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಸಂದೇಹ ಬರಬಾರದು. ಆದರೆ (ಆಹಾರಕ್ಕೂ ಸೇರಿದಂತೆ) ಅಕ್ಷರಶಃ ಗಗನದೆತ್ತರದ ಬೆಲೆ ಕೊಟ್ಟ ಇವರಿಗೆ ಪ್ರಯಾಣದಲ್ಲಿ ದಕ್ಕಿದ ತಿನಿಸು ಹಳಸಿತ್ತು. ಸಹಜವಾಗಿ ತಿಂದ ತಾಯಿ, ಮಗನ ಆರೋಗ್ಯ ಕೆಟ್ಟಿತು. ಅದೃಷ್ಟವಶಾತ್ ತಿನ್ನದ ಮನೋಹರ್ ಮಾತ್ರ ಸ್ವಸ್ಥ ಉಳಿದಿದ್ದರು. ಆದರೆ ವಿದ್ಯಾ ಅನಾನುಕೂಲವನ್ನೂ ತಾವು ಅದಕ್ಕೆ ಹೋಮಿಯೋಪತಿಯಲ್ಲಿ ಉಪಶಮನ ಕಂಡುಕೊಂಡದ್ದನ್ನೂ ಸೂಚ್ಯವಾಗಿ ಹೇಳಿ ಜಾರುತ್ತಾರೆ. ಆ ತಿನಿಸನ್ನು ಪರೋಕ್ಷವಾಗಿ (ಸ್ಯಾಂಡ್-witch) ಮಾಟಗಾತಿ ಎಂದು ತಮಾಷೆ ಮಾಡಿ ಮುಂದುವರಿಯುತ್ತಾರೆ. ಹಾಗೆಂದು ಒಟ್ಟಾರೆ ಪ್ರವಾಸದಲ್ಲಿ ಆಹಾರದ ಹೆದರಿಕೆ ಉಳಿಸಿಕೊಂಡು, ಪ್ರದೇಶದ ಲಘು ರುಚಿಗಳನ್ನು ಇವರು ಕಳೆದುಕೊಳ್ಳಲೂ ಇಲ್ಲ; ಅಗತ್ಯ ಬಂದಂತೆ ದಾರಿ ಬದಿಯ ಜೂಶ್ ಹೀರಿ ಸಂತಸಪಡುವಲ್ಲಿ ಯಾವ ಹಿಂಜರಿಕೆಯನ್ನೂ ತಾಳುವುದಿಲ್ಲ.

ದೊಡ್ಡ ಅಪ್ರಿಯವನ್ನೇ ಆದರೂ ವೈಯಕ್ತಿಕವೆಂದುಕೊಳ್ಳುತ್ತಾ ಸಣ್ಣ ಗುಣವೇ ಕಂಡರೂ ಸಾರ್ವತ್ರಿಕಗೊಳಿಸುವ ಇವರ ಭಾವ ಇನ್ನೊಂದೆಡೆಯಲ್ಲೂ ಸ್ಪಷ್ಟವಾಗುತ್ತದೆ. ಊರಿಗೆ ಮರಳಿದ ಮೇಲೆ ಯಾರಿಗಾದರೂ ತಮ್ಮ ಪ್ರವಾಸದ ಸ್ಮರಣಿಕೆಯಾಗಿ ಕೊಡಲು ಬಂದೀತೆಂದು ಒಂಟೆ ಚರ್ಮದ್ದೇನೋ ಸಾಮಾನು ಕೊಳ್ಳುತ್ತಾರೆ. ಊರಿಗೆ ಮರಳಿದ ಹೊಸದರಲ್ಲೇ ಅದು `ಊಂಟ್ ಚಮ್ಡಾ’ದ ಸ್ವಭಾವದಲ್ಲೋ ಹದ ಬರಿಸಿದ ಕೊರತೆಯಲ್ಲೋ ನಾರುತ್ತಾ ದುರ್ವಾಸನೆ ಬಿಡುತ್ತದೆ. ಆಗ ವಿದ್ಯಾ ಮೊದಲು ತಾವು ಅದನ್ನು ಇನ್ನೂ ಅನ್ಯರಿಗೆ `ಉಡುಗೊರೆ’ಯಾಗಿ ಕೊಡದ ಬಗ್ಗೆ ಸಮಾಧಾನ ಪಟ್ಟುಕೊಳ್ಳುತ್ತಾರೆ. ಮತ್ತೆ ಉತ್ಪನ್ನದ ತಯಾರಿಕೆಯ ಕುರಿತು ಬಳಕೆದಾರನ ಜಾಗೃತಿಯ ಟೀಕೆ ಬಿಟ್ಟು, ಪರಿಮಳಕಾರಕದ ನೆನಪು ಮಾಡಿಕೊಳ್ಳುತ್ತಾರೆ. ಮಹಾಭಾರತದಲ್ಲಿ ಮತ್ಸ್ಯಗಂಧಿಯನ್ನು ಯೋಜನಗಂಧಿಯನ್ನಾಗಿಸಿ ಸ್ವಾರ್ಥಕ್ಕೆ ಬಳಸಿದ ಮುನಿಯನ್ನು ಯಃಕಶ್ಚಿತ್ `ವಾಸನಕಾರಕ’ಕ್ಕೆ ಸಮೀಕರಿಸಿ ಕುಶಾಲಿನಲ್ಲೇ ಸಾಮಾಜಿಕ ನ್ಯಾಯಸೂಚನೆಯನ್ನೂ ನೀಡಿ ಮುಗಿಸುತ್ತಾರೆ.

ಅಕ್ಷರ ಮತ್ತು ವ್ಯಾಕರಣಜ್ಞಾನವಷ್ಟೇ ಸಾಹಿತ್ಯವಾಗದು. ಅಂತೇ ಕ್ಯಾಮರಾ-ಸಲಕರಣೆಗಳ ಮೊತ್ತ ಯಶಸ್ವೀ ಚಿತ್ರ ಕೊಡಬೇಕೆಂದಿಲ್ಲ, ನಮಗೆಲ್ಲ ತಿಳಿದದ್ದೇ ಇದೆ. ಪಳೆಯುಳಿಕೆಗಳ ಉದ್ಯಾನ, ಮರಳಿನ ಮೇಲೆ ಸೂರ್ಯರಶ್ಮಿಯ ಲಾಸ್ಯ, ಲೆಕ್ಕಕ್ಕೆ ಮರುಭೂಮಿಯೇ ಆದರೂ ಅಲ್ಲಿನ ಚಳಿಗಾಲದ ರಾತ್ರಿಗಳ ತೀವ್ರತೆ, ಸೀಮಾಗ್ರಾಂ ಎಂಬ ಹೆಸರಿನ ಮಾಯೆ, ಕುಲ್ಧಾರಾ ಎಂಬ ಎಂಬತ್ನಾಲ್ಕು ಹಳ್ಳಿಗಳ ಪೂರ್ಣ ಒಕ್ಕಲು ಹೋದದ್ದೆಲ್ಲಿಗೆ ಎಂಬ ಪ್ರಶ್ನೆ, ನಾಲ್ಕು ಗೋಡೆಗಳ ನಡುವಣ ಶಿಕ್ಷಣವೆಂಬ ಕಲ್ಪನೆಯ ಟೊಳ್ಳು… ಎಂದಿತ್ಯಾದಿ ಸಾಗುವ ವಿದ್ಯಾಲಹರಿ ಕಟ್ಟುವ ಅರ್ಥ ಪರಂಪರೆ ದೊಡ್ಡದು. ಅವಕ್ಕೆಲ್ಲ ಸಾಂಗತ್ಯ ಕೊಡುವ ಮನೋಹರ ಚಿತ್ರಗಳು ನಿಸ್ಸಂದೇಹವಾಗಿ ಪೂರಕವಾಗುತ್ತವೆ. ಆದರವು ಕೇವಲ ಉಪಾಧಿಯಷ್ಟೇ ಆಗಿ ಉಳಿಯದೇ ಸ್ವತಂತ್ರ ಕತೆಗಳನ್ನೂ ಬಿತ್ತರಿಸುವಂತಾಗಿರುವುದು ಚಿತ್ರಕಾರನೂ ಮನೋಹರನೇ ಆಗಿರುವುದಕ್ಕೆ. ಉದಾಹರಣೆಗೆ ದಿನ ಒಂದರ ಕೊನೆಯ ಸೂರ್ಯಾಸ್ತದ ಚಿತ್ರ ನೋಡಿ: ಬರಡು ಬಯಲಿನ ಮರುಭೂಮಿ, ಸಾಮಾನ್ಯವಾಗಿ ಎಲ್ಲೆಡೆಯೂ ಕಾಣುವ ಸೂರ್ಯಾಸ್ತ ಎಂಬ ನಮ್ಮ ನಿರೀಕ್ಷೆಯೂ ಇವರ ಕಾರಿನ ಚಾಲಕನ ಮಾತೂ ಓದಿದಾಗ ದಕ್ಕುತ್ತದೆ. ಆದರೆ ಇವರ ಚೌಕಟ್ಟು ನಮ್ಮ ಘಟ್ಟಗಳ ಏರಿಳಿತ, ವನಗಳ ಛಾಯಾರೂಪ ಸೇರಿದಂತೆಯೇ ರೂಪುಗೊಂಡಿರುವಾಗ ಚಿತ್ರ ದಿನಾಂತ್ಯದ ಸೂಚನೆಯೊಡನೆ ಮುಂದಿನ ಕಥನದ ಬಗ್ಗೆ ಅಪಾರ ಕುತೂಹಲವನ್ನೂ ಹುಟ್ಟಿಸುತ್ತದೆ. ವಿದ್ಯಾಕಲೆಗೆ ಮನೋಹರ ಕುಸುರಿ ಯಾವುದೇ ಉತ್ತಮ ಸಂಗೀತ ಕಛೇರಿಯಲ್ಲಿನ ಕಲಾವಿದರ ನಡುವಣ ಸವಾಲ್ ಜವಾಬ್ ಗಳಿಗೆ ಸಾಟಿಯಾಗಿದೆ.

ನಮ್ಮಲ್ಲಿ ಸಾಮಾನ್ಯವಾಗಿ ಪ್ರವಾಸವೆಂದರೆ ತೀರ್ಥಯಾತ್ರೆ. ಯಾವುದೇ ಪ್ರವಾಸೀ ಸಂಸ್ಥೆಗಳ ಪಟ್ಟಿ ತೆಗೆದರೆ ಪ್ರಥಮಾದ್ಯತೆಯಲ್ಲಿ ಸಿಕ್ಕುವುದು ಒಂದಷ್ಟು ದೇವಸ್ಥಾನಗಳು. ಪ್ರವಾಸ ನಿರ್ವಾಹಕರೂ ತೀರ್ಥ ಕ್ಷೇತ್ರಗಳ ಅವ್ಯವಸ್ಥೆಗಳನ್ನು ಸುಧಾರಿಸಿಕೊಂಡು `ಗಿರಾಕಿ-ಭಕ್ತಾಭೀಷ್ಟ’ ಪೂರೈಸಲು ತೋರುವ ಉತ್ಸಾಹವನ್ನು ನಿಜ ಮೌಲ್ಯ ಸಾರುವ ಪ್ರದರ್ಶಕಗಳೆಡೆಗೆ ಹರಿಸುವುದೂ ಇಲ್ಲ; ಕಾರಣ ಸುಲಭ – “ಡಿಮಾಂಡಿಲ್ಲ ಸಾರ್.” (ನಾನು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಕಾಲದಲ್ಲಿ ಇತರ ಪುಸ್ತಕ ವ್ಯಾಪಾರಿಗಳಿಂದ ಹೆಚ್ಚಾಗಿ ಕೇಳಿಬರುತ್ತಿದ್ದ ಮಾತೂ ಇದೇ!) ಉಪಾಧ್ಯ ಕುಟುಂಬಕ್ಕೂ ಸಿಕ್ಕ ಚಾಲಕ/ ಮಾರ್ಗದರ್ಶಿ ಹೇಮ್ಜೀಯ ಮನೋಸ್ಥಿತಿಯಾದರೂ ಇದೇ. ಪ್ರವಾಸಕ್ಕೂ ವಾರಗಳ ಮೊದಲೇ ವಿದ್ಯಾ ಮತ್ತು ಮನೋಹರ್ ಪುಸ್ತಕ, ಅಂತರ್ಜಾಲ ಮತ್ತು ಗೆಳೆಯರ ಮೂಲಕ ಸಾಕಷ್ಟು ಮನೆಗೆಲಸ ಮಾಡಿ ತೀರ್ಥಯಾತ್ರೆ ಕಳಚಿಕೊಂಡೇ ಹೊರಟಿದ್ದರು, ನಡುವೆ ಎಲ್ಲೋ ತುಸು ಬಿಡು ಸಮಯ ತುಂಬಲು ಹೇಮ್ಜೀಯಲ್ಲಿ ಇವರು ಕೇಳಿಕೊಂಡಾಗ ಆತ ಭಕ್ತಿಯಲ್ಲಿ `ರಾಮ್ದೇವ್ರಾ’ ದರ್ಶನ ಮಾಡಿಸುತ್ತಾನೆ.

ಪ್ರಾಕೃತಿಕ, ಅಂದರೆ ಮುಖ್ಯವಾಗಿ ಮರುಭೂಮಿಯದ್ದೇ ಭೌಗೋಳಿಕ ಸತ್ಯಗಳು ಅಲ್ಲಿಗೆ ಹೋದವರಿಗೆಲ್ಲ ಸಹಜವಾಗಿ ದಕ್ಕುತ್ತದೆ. ಐತಿಹಾಸಿಕ ರಾಜಾಸ್ತಾನವನ್ನು ಅನುಭವಿಸುವಲ್ಲಿ ಅಲ್ಲಿನ ನವ-ನಾಗರಿಕತೆಯ ಪರಿಚಯವೂ ಆಗುತ್ತದೆ. ಹಾಗೆ ವಾಸ್ತವ್ಯ ಮಾಡಿದಲ್ಲಿ ಹೋಟೇಲಿನವರೇ ವ್ಯವಸ್ಥೆ ಮಾಡುವ ಜನಪದ ಝಲಕ್ಕುಗಳಾದರೋ ಪ್ರದರ್ಶನಕ್ಕೆ ಚೂಪುಗೊಂಡು ಔಪಚಾರಿಕ ಸತ್ಯಗಳನ್ನಷ್ಟೇ ಕಾಣಿಸುತ್ತದೆ. ವಿದ್ಯಾ ಅವೆಲ್ಲವನ್ನು ತುಸು ಕಳಚಿಕೊಂಡು, ಪ್ರಾಕೃತಿಕ – ಅದರಲ್ಲೂ ವನ್ಯ ಪರಿಸರದ ಸ್ಪರ್ಷದೊಡನೆ, ಸಾಂಪ್ರದಾಯಿಕ ಜಾನಪದಲೋಕವನ್ನು ಕಂಡುಕೊಳ್ಳುವುದನ್ನು ತುಂಬ ಪ್ರೀತಿಯಿಂದಲೇ ಅನಾವರಣಗೊಳಿಸುತ್ತಾರೆ. ಪ್ರಾದೇಶಿಕ ಸತ್ಯಗಳ ನಡುವೆ ಇದ್ದೂ ಇರಬಾರದಂತೆ (ನಮ್ಮ ಪುಡಾರಿಗಳ ಗ್ರಾಮವಾಸ್ತವ್ಯದ ಢೋಂಗಿಯಂತೆ,) `ಹೋಂ ಅವೇ ಫ್ರಂ ಹೋಂ’ ಎಂಬ ಅಪಕಲ್ಪನೆಯನ್ನು ಕೊಡುವ ರಿಸಾರ್ಟ್‍ಗಳಿಗೆ ವ್ಯತಿರಿಕ್ತವಾದ ವಸತಿ ಸೌಕರ್ಯದಲ್ಲಿ, ಅದೂ ಪ್ರಾಣಿ-ಸ್ನೇಹಕ್ಕೆ ಜಗದ್ವಿಖ್ಯಾತಿ ಗಳಿಸಿದ ಬೈಷ್ಣೋಯೀ ಗ್ರಾಮ ವಾತಾವರಣದಲ್ಲೇ ಇವರು ಸಣ್ಣ ಅವಧಿಗೇ ಆದರೂ ನೆಲೆ ಕಂಡಿರುವುದು ತುಂಬ ಕುತೂಹಲಕರವಾಗಿದೆ. ಸುಮಾರು ಎರಡೂವರೆ ದಶಕಗಳ ಹಿಂದಿನ ನನ್ನ ಪ್ರಥಮ `ಬೈಕೇರಿ ಭಾರತ ಸುತ್ತು’ವಿನ ಆಧಾರದಲ್ಲಿ “ನಾನೂ ರಾಜಾಸ್ತಾನಕ್ಕೆ ಹೋಗಿದ್ದೆ” ಎಂದುಕೊಳ್ಳುತ್ತಿದ್ದುದು ಎಷ್ಟು ಸ್ವಲ್ಪ ಎನ್ನುವಂತೆ ಮಾಡಿಬಿಡುತ್ತಾರೆ ವಿದ್ಯಾ. ಬಹುಮತದ ಪ್ರವಾಸೀ ತಾಣಗಳಲ್ಲಿ ನಿರ್ಮಮ ಪ್ರವಾಸಿಯಾಗಿ ಸಂಯಮದ ನಿರೂಪಣೆಯಲ್ಲೇ ಇದ್ದ ವಿದ್ಯಾ ಬೈಷ್ಣೋಯಿಗಳ ಸಂಗಕ್ಕೆ ಬಂದಾಗ ಅನಿವಾರ್ಯವಾಗಿ ಸಹಜ ಒಲವಿನ ಪರಿಸರಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಾರೆ. ಇವರು, ಪ್ರದರ್ಶನ ಮೀರಿದ ಬೈಷ್ಣೋಯಿಗಳ ಜೀವನಕ್ರಮದ ಕುರಿತು ಬರೆಯುವಾಗ, ವಿಶ್ವಯಾನಿ ಗೆಳೆಯ ಗೋವಿಂದನ ಒಂದು ಉಲ್ಲೇಖ ನೆನಪಾಗುತ್ತದೆ. ಇಂದು ವಿಶ್ವಾದ್ಯಂತ ಆಧುನಿಕರ ಕಲ್ಪನೆಯಲ್ಲಿ ಅಮೆರಿಕ ಭುವಿಯ ಸ್ವರ್ಗ. ಆದರೆ ಅದರ ಹೃದಯಭಾಗದಲ್ಲೇ ಇದ್ದೂ ಹದಿನೆಂಟನೇ ಶತಮಾನದಿಂದ ಮುಂದಿನ ಜೀವನಕ್ರಮವನ್ನು ಬುದ್ಧಿಪೂರ್ವಕವಾಗಿ ನಿರಾಕರಿಸಿದ ಒಂದು ಸಮುದಾಯವೇ ಇದೆ. ಬೈಷ್ಣೋಯಿಗಳಾದರೂ ಹಾಗೇ ಇದ್ದಾರೆ! ಬೈಷ್ಣೋಯಿಗಳೆಂದರೆ ಒಂದು ಜೀವನಕ್ರಮವನ್ನು ಸೂಚಿಸುವ ಲೆಕ್ಕ; ನಮ್ಮ ವೈಷ್ಣವ ಪಂಥದವರೇನೂ ಅಲ್ಲ ಎನ್ನುವುದು ನನಗಂತೂ ಮೊದಲು ಕೇಳಿಯೇ ಗೊತ್ತಿರಲಿಲ್ಲ! (ಬೇಕಾದರೆ ಮೂರು `ಅ’ಕಾರ ಸೇರಿ ರೂಪುಗೊಂಡ ನಮ್ಮ `ಅತ್ರಿ’ ಇದ್ದ ಹಾಗೆ!), ಮಾಯಾದೀಪದ ರಕ್ಕಸ ಕ್ಷಣಾರ್ಧದಲ್ಲಿ ನಭೂತೋ ಎನ್ನುವ ಅರಮನೆ ಮಾಡಿಕೊಡುವಾಗ ಒಂದು ಕಿಟಕಿ ಮಾತ್ರ ಕಚ್ಚಾ ಉಳಿಸಿದ ಎಂದು ಕಥೆಯಲ್ಲಿ ಓದಿದ್ದು ನೆನಪಾಗುತ್ತದೆ. ಇದು ಪರೋಕ್ಷವಾಗಿ ಪರಿಪೂರ್ಣತೆ ಎಂಬುದಿಲ್ಲ ಎಂದೂ ಸೂಚಿಸುತ್ತದೆ. ಹಾಗೇ ಮರುಭೂಮಿಗೆ ಮಾರುಹೋಗಿ ಆರು ಕಂತುಗಳಲ್ಲಿ ಸಾಕಷ್ಟು ವಿವರವಾಗಿಯೇ ಕಥಿಸಿದ ವಿದ್ಯಾ, ಇದು ಮುಗಿಯುವಂತದ್ದಲ್ಲ “ಮತ್ತೆ ಹೋಗಬೇಕು” ಎನ್ನುವುದನ್ನು ಕೊನೆಯಲ್ಲಿ ನವಿರಾಗಿ ಸೂಚಿಸುತ್ತಾರೆ. ಆ ಸನ್ನಿವೇಶ ನೋಡಿ…

ಉಪಾಧ್ಯರ ಕುಟುಂಬ ವಿಮಾನದಿಂದಿಳಿದ ಮೊದಲಲ್ಲಿ ಕಾಣಿಸಿದ ದಾರಿ ಬದಿಯ ಕೆಲವು ಭಿತ್ತಿ ಚಿತ್ರಗಳನ್ನು ವಿದ್ಯಾ ಬಯಸುತ್ತಾರೆ. ಮನೋಹರ್ “ಹೋಟೆಲಿಗೆ ಹೋದ ಮೇಲೆ, ಡಿಕ್ಕಿಯ ಸೂಟ್ ಕೇಸಿನಿಂದ ಕ್ಯಾಮರ ಹೊರ ತೆಗೆಯಬೇಕಷ್ಟೆ” ಎಂದು ನಿಜವನ್ನೇ ಹೇಳುತ್ತಾರೆ. ಆದರೆ “ಹಿಂದೆ ಬರುವಾಗ ಹಿಡಿಯುವ” ಆಶ್ವಾಸನೆ ಕೊಡುವುದರಲ್ಲಿ ನಮ್ಮ ರಾಜಕಾರಣಿಗಳಿಗೆ ಸಾಟಿಯಾಗುತ್ತಾರೆ. ಅಂದರೆ, ಪ್ರವಾಸ ಮುಗಿಸಿದ ಕೊನೆ ಸವಾರಿಯಲ್ಲಿ ಮತ್ತೆ ಆ ಭಿತ್ತಿ ಚಿತ್ರಗಳೆದುರು ಇವರ ಕಾರು ಓಡುವಾಗ, ವಿದ್ಯಾ ಇನ್ನೊಮ್ಮೆ ಕಿವಿ ಕಚ್ಚುತ್ತಾರೆ. ಆದರೆ ಈಗಲೂ ಕ್ಯಾಮರಾ ಸೂಟ್ ಕೇಸಲ್ಲಿ ಪ್ಯಾಕಾಗಿ ಡಿಕ್ಕಿಯೊಳಗಿತ್ತು; ಮನೋಹರ ಸೋಲುತ್ತಾರೆ. ಆದರೆ ಬರಿಯ ಆ ಫೋಟೋ ಒಂದರ ನೆಪಕ್ಕಾದರೂ “ಮತ್ತೆ ಜೋಧಪುರಕ್ಕೆ ರೆಡಿ” ಎನ್ನುವ ಒಂದು ನುಡಿಯೊಡನೆ ಇವರ ಪ್ರವಾಸದ ಯಶಸ್ಸು, ಸಂತೋಷಗಳು ನನ್ನನ್ನು ಗಾಢವಾಗಿ ತಟ್ಟಿತು.

`ಮರುಭೂಮಿಗೆ ಮರುಳಾದವರು’ ಈ ಬರೆಹ ಈಗ ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಲಭ್ಯ. ಇದು ಒಟ್ಟು ರೂಪುಗೊಂಡ ಹಿನ್ನೆಲೆಯನ್ನೂ ನಾನಿಲ್ಲಿ ತುಸು ವಿವರದಲ್ಲಿ ಹೇಳಲೇಬೇಕು. ನಮ್ಮ ಕುಟುಂಬ ಮಿತ್ರರಾದ ಡಾ| ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅವರ ಹೆಂಡತಿ ಡಾ| ವಿದ್ಯಾ (ದಂತ ವೈದ್ಯೆ) ಮತ್ತು ಅವರ ಮಗ ಸುಧನ್ವ (ಕಲಿಕೆಯಲ್ಲಿರುವ ಪಶುವೈದ್ಯ) ಕೆಲವು ತಿಂಗಳ ಹಿಂದೆ ತಮ್ಮ ವಿಭಿನ್ನ ಜವಾಬ್ದಾರಿ ಮತ್ತು ಬಿಡುವುಗಳೊಡನೆ ತುಂಬಾ ಕೊಸರಾಡಿ ವಾರ ಕಾಲ ರಾಜಸ್ತಾನದ ಕೆಲವೊಂದು ಭಾಗ ತಿರುಗಾಡಿ ಬಂದ ಸುದ್ಧಿ ಸಿಕ್ಕಿತು. ಈ ಕುಟುಂಬ ಕಲೆ, ಸಾಹಿತ್ಯ, ಸಾರ್ವಜನಿಕ ಪ್ರೀತಿಗಳೊಡನೆ ಒಳ್ಳೇದನ್ನೆಲ್ಲಾ ಗ್ರಹಿಸಿ ಸಂತೋಷಿಸುವ ಮುಕ್ತ ಮನಸ್ಸೂ ಹೊತ್ತವರಾದ್ದರಿಂದ ಮಾಮೂಲೀ ಭಾಷೆಯಲ್ಲಿ “ಮಝಾ ಮಾಡಿ ಬಂದ್ರಾ” ಎಂದು ನಾನು ಕೇಳಲಿಲ್ಲ. “ಮನೋಹರ್ ಹೇಗೂ ಒಳ್ಳೆಯ ಛಾಯಾ ಚಿತ್ರಗ್ರಹಣ ಮಾಡಿಯೇ ಇರುತ್ತಾರೆ. ಸಾಹಿತ್ಯ ಪಾಕ ನಿಮ್ಮದಾಗಲೇಬೇಕು. ಸುಧನ್ವನದ್ದು ಒಗ್ಗರಣೆ ಅವಶ್ಯ ಸೇರಿಸಿ” ಎಂದು ವಿದ್ಯಾರನ್ನು ಒತ್ತಾಯಪೂರ್ವಕವಾಗಿಯೇ ಕೇಳಿಕೊಂಡೆ. ವಿದ್ಯಾರಿಗೆ ಮೂರು ಮನೆ. ಗಂಡ, ಮಗನೊಡನೆ ನಿತ್ಯದ ಒಡನಾಟ, ವಾಸ ಇತ್ಯಾದಿಗಳ ಮೂಲ ಮನೆ – ಮಧ್ಯಮಾವತಿ, ಮಂಗಳೂರಿನಲ್ಲೇ ಇದೆ.

ಅಲ್ಲೇ ಅಂಗಳದಲ್ಲಿ ಇವರ ಅಚ್ಚುಕಟ್ಟಾದ ದಂತವೈದ್ಯ ಚಿಕಿತ್ಸಾಲಯವೂ ಇದೆ. ದೂರವಾಣಿಸಿ ಸಮಯಾನುಕೂಲ ಕೇಳಿಕೊಂಡಷ್ಟೇ ಬರುವ `ದಂತ ಭಗ್ನ’ರಿಗೆ ವಿದ್ಯಾ ಬಹಳ ಮುತುವರ್ಜಿಯಿಂದ `ನಗೆ’ ನೀಡುತ್ತಿರುತ್ತಾರೆ. ವಿದ್ಯಾ ಮಂಗಳೂರಿನ ವಿವಿಧ, ಕೇರಳಾದಿ ಹೊರರಾಜ್ಯಗಳಲ್ಲೂ ಹಲವು ದಂತವೈದ್ಯ ವಿದ್ಯಾ ಸಂಸ್ಥೆಗಳಲ್ಲಿ ಅಧ್ಯಾಪನ ಪ್ರಧಾನವಾದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಇರುತ್ತಾರೆ. ಅಂತಲ್ಲಿಗೆ ಆಗೀಗ ಒಂದು ದಿನದ ಮಟ್ಟಿಗೆ ಮನೋಹರ್ ಜತೆಗೊಟ್ಟದ್ದಿದೆಯಾದರೂ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ಹೊರ ಊರುಗಳಲ್ಲಿ ಸ್ವತಂತ್ರವಾಗಿ ನಿಂತು ಕೆಲಸ ಪೂರೈಸುವ ವಿದ್ಯಾರಿಗೆ ಅಲ್ಲೆಲ್ಲ `ಎರಡನೇ ಮನೆ’ ಅನಿವಾರ್ಯ ಕೂಡಾ.

ಇವರ ಮಗರಾಯ `ವೀರ’ ಸುಧನ್ವ ಅಪ್ಪನ ಕೆಲಸವನ್ನು ಪ್ರೀತಿಸಿದವ. ಪದವಿಪೂರ್ವ ಓದಿನ ಕಾಲದಲ್ಲೇ ಸುಲಭ ದುಡ್ಡು (-ಅಂದರೆ), ಸುಂದರ ಕನಸು, ವಿದೇಶೀಮೋಹ ಮುಂತಾಗಿ ಅನೇಕ ದಾರಿಗಳಿದ್ದರೂ ಅವನ್ನನುಸರಿಸಲು ಅಂಕಪಟ್ಟಿಯ ಯೋಗ್ಯತೆ ಇದ್ದರೂ (ಅಲ್ಲದಿದ್ದರೂ ಹಣಕಾಸಿನಲ್ಲಿ ಉಪಾಧ್ಯರು ಕೈ ಕಟ್ಟಿ ಕುಳಿತವರಲ್ಲ) ಈತ ಆರಿಸಿದ್ದು ಮತ್ತು ಯೋಗ್ಯತೆಯಿಂದಲೇ ಗಳಿಸಿದ್ದು ಪಶುವೈದ್ಯಕೀಯದ ಕಲಿಕೆ. ಹೇಳುವವರಿಗೆ “ಓ ಬೆಂಗಳೂರು ಕಾಲೇಜು ಅಲ್ವಾ. ದೊಡ್ಡಪ್ಪ – ಮಂಟಪ ಪ್ರಭಾಕರ ಉಪಾಧ್ಯರ ಮನೆ ಇದೆ.” ಪ್ರಭಾಕರರ ಕುಟುಂಬ ಪ್ರೀತಿಯೂ ಕಡಿಮೆಯದ್ದೇನಲ್ಲ. ಆದರೆ ನಗರದ ಅಂತರ ಹಾಗೂ ಓಡಾಟದ ಅವ್ಯವಸ್ಥೆಗಳು ತಿಳಿದವರು ಯಾರೂ ನಿತ್ಯ ಬೆಂಗಳೂರಿನ ಎರಡು ಧ್ರುವಗಳ ನಡುವಣ ಪ್ರಯಾಣವನ್ನು ಬಯಸರು. “ಸರಿ, ಕಾಲೇಜಿಗೆ ಹಾಸ್ಟೆಲ್ ಇದೆಯಲ್ಲಾ” ಎಂದರೆ ಸುಧನ್ವ `ನೇತಿ’ ಎನ್ನುವ ಜಾತಿ! ಆತನಿಗೆ ಸೋದರ ಮಾವ – ಡಾ| ಚಕ್ರಪಾಣಿಯವರ ಆದರ್ಶ (ಗುರುತ್ವ ಕೂಡಾ ಇರಬೇಕು), “ಹಾಸ್ಟೆಲ್ಲಿನಲ್ಲಿ ಸಂಗೀತ ಕಲಿಕೆ ಮುಂದುವರಿಸುವುದು ಕಷ್ಟ” ಅನಿಸಿತು. ಹಾಗಿರುವಾಗ ಪೀಜಿ (ಪೇಯಿಂಗ್ ಘೋಸ್ಟ್!) ಎಚ್ಚೆಸ್ (ಹೋಮಿಷ್ಟೇ) ಹುಡುಕುವ ಪ್ರಶ್ನೆಯೂ ಇಲ್ಲ. ಕಾಲೇಜಿನಿಂದ ಕೂಗಳತೆ ದೂರದಲ್ಲೇ ಪುಟ್ಟ ಮನೆ ಮಾಡಿದ್ದಾರೆ. ಹುಡುಗ ಸ್ವಯಂಪಾಕ ನಡೆಸಿದ್ದಾನೆ. ಅವಶ್ಯ ಓಡಾಟಗಳಿಗಾಗಿ ಡೊಂಕು ಬೆನ್ನಿನ ಯಮನಂಥ ಬೈಕೋ ಕನಿಷ್ಠ ಸ್ಕೂಟಿಯೋ ಕೇಳುವುದು ಬಿಟ್ಟು ಸಾಮಾನ್ಯ ಸೈಕಲ್ ಇಟ್ಟುಕೊಂಡಿದ್ದಾನೆ. ಆದರೂ ಆತನ ಸಣ್ಣಪುಟ್ಟ ಅನಾರೋಗ್ಯ, ಪರೀಕ್ಷೆ ಮುಂತಾದವಕ್ಕೆ ಮಾತೆ-ವಿದ್ಯಾ ಆ ಮನೆಯಲ್ಲಿ ಮೊಕ್ಕಾಂ ಮಾಡುವುದು ಇದ್ದೇ ಇದೆ.

ಈ ಎಲ್ಲಾ ಸಂಭಾಳಿಕೆಯ ನಡುವೆ ವಿದ್ಯಾ ನನ್ನ ಮಾತನ್ನು ಗಂಭೀರ ಸವಾಲಾಗಿ ಸ್ವೀಕರಿಸಿ ಸುಂದರ ಕಥನ ಹೆಣೆದು ಕೊಟ್ಟಿದ್ದಾರೆ. ನಿರೀಕ್ಷೆಯಂತೆ ಮನೋಹರ(ರ)ವಾದ ಅಸಂಖ್ಯ ಚಿತ್ರ, ಚಲಚಿತ್ರಗಳ ಸಾಂಗತ್ಯವೂ ಸಿಕ್ಕಿತು. ಅವನ್ನು ಇಲ್ಲೇ ಕಳೆದ ಆರು ಶುಕ್ರವಾರಗಳ ಧಾರಾವಾಹಿಯಾಗಿ ಹರಿಸಿದ್ದಾಯಿತು. ಈಗ ಅದನ್ನೇ ಹೆಚ್ಚಿನ ಚಿತ್ರಗಳ ಸಹಿತ ವಿ-ಪುಸ್ತಕವಾಗಿಯೂ ಇಲ್ಲಿ ಮಡುಗಟ್ಟಿಸಿದ್ದೇವೆ. (ನಿಮಗೆ ಗೊತ್ತಲ್ಲಾ – ನನ್ನ ಜಾಲತಾಣದಿಂದ ಹಿಡಿದು ಎಲ್ಲ ವಿದ್ಯುನ್ಮಾನ ಸರ್ಕಸ್ಸಿನ ಸಂಪೂರ್ಣ ನಿರ್ವಾಹಕ, ಮಗ ಅಭಯಸಿಂಹ.) ಹೀಗೆ ಪ್ರಕಟಿಸಲು ಅವಕಾಶ ಕೊಟ್ಟು, ಉಚಿತ ಜ್ಞಾನ ಪ್ರಸರಿಸುವ ನಮ್ಮ ಕೈಂಕರ್ಯಕ್ಕೆ ಬಲ ಕೊಟ್ಟ ಅವರೆಲ್ಲರಿಗೂ ಕೃತಜ್ಞ. ಇದನ್ನು ಇಲ್ಲೇ ಅಂತರ್ಜಾಲದಲ್ಲೇ ಅಥವಾ ನಿಮ್ಮ ಯಾವುದೇ ಸಮರ್ಥ ಸಲಕರಣೆಗಳಿಗೆ ಇಳಿಸಿಕೊಂಡು ವಿರಾಮದಲ್ಲೇ ಓದಬಹುದು. ಇತರ ಓದುಗರ ಕಾಲಿಕ ಪ್ರತಿಕ್ರಿಯೆ ಸಹಿತ ನೋಡುವ ಆಸೆಯಿರುವವರಂತೂ ಎಂದೂ ನನ್ನ ಜಾಲತಾಣದ ಹಿಂದಿನ ನಮೂದುಗಳಲ್ಲಿ ವಿಹರಿಸಲು ಸ್ವತಂತ್ರರೇ.

ಈಗ ನಿಮ್ಮ ಚೌತಿ ವಿಶೇಷಾಂಕಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ.