ಗೆಳೆಯ ಕಾವೂರು ಪ್ರಸನ್ನನಿಗಿರುವ (ಗೊತ್ತಲ್ಲಾ ಸರ್ವೋ ಕೀಲೆಣ್ಣೆಗಳ ಪ್ರಾದೇಶಿಕ ವಿತರಕ) ಕಲ್ಲೆಣ್ಣೆ ಕಂಪೆನಿಗಳ ಸಂಪರ್ಕ ಬಲದಲ್ಲಿ `ಮಂಗಳೂರು ಬೆಂಗಳೂರು ಸೈಕಲ್ ಓಟ’ಕ್ಕೆ ಕರೆ ಕೊಟ್ಟ. ಮಾರ್ಚ್ ೧೪ ಶನಿವಾರ ಬೆಳೀಈಈಗ್ಗೆ ಶಿರಾಡಿ ದಾರಿಯಲ್ಲಿ ಗುಂಡ್ಯ (೯೩ ಕಿಮೀ). ಅಲ್ಲಿಂದ ಸಕಲೇಶಪುರದವರೆಗೆ ಹೆದ್ದಾರಿ ಬಂದಾಗಿರುವ ಕಾರಣ ಎಲ್ಲರನ್ನೂ ಎಲ್ಲವನ್ನೂ ಮೋಟಾರು ವಾಹನಗಳಲ್ಲೇರಿಸಿ ಪಾರುಗಾಣಿಸುತ್ತಾರಂತೆ. ಮುಂದೆ ದಿನದ ಕೊನೆಯ ಲಕ್ಷ್ಯ ಚನ್ನರಾಯಪಟ್ಟಣ (೭೭ ಕಿಮೀ). ಅಂದರೆ ಸುಮಾರು ೧೭೦ ಕಿಮೀ ಸವಾರಿಯ ಕೊನೆಯಲ್ಲಿ, ಹೋಟೆಲ್ ವಾಸ. ಮರುದಿನ ಮತ್ತೆ ಬೆಳೀಈಗ್ಗೆ (೧೪೬ ಕಿಮಿಯಾದ್ದರಿಂದ ಒಂದು ದೀರ್ಘ ಕಮ್ಮಿ!) ಬೆಂಗಳೂರು ಚಲೋ. ವಿಧಾನಸೌಧದಲ್ಲಿ ಆರೋಗ್ಯಮಂತ್ರಿಯ ಭೇಟಿ ಮಾಡಿ `ಮೂರು-ಉ ಮನವಿ’ ಸಲ್ಲಿಕೆ. ಅಂದರೆ, ಉಳಿತಾಯ – ಕಲ್ಲೆಣ್ಣೆಯದು, ಉತ್ತಮಿಕೆ – ಪರಿಸರದ್ದು ಹಾಗೂ ಉತ್ಥಾನ – ಸಾರ್ವಜನಿಕ ಸ್ವಾಸ್ಥ್ಯದ್ದು. ಇವನ್ನು ಸುಲಭದಲ್ಲಿ ಸಾಧಿಸುವ ಸೈಕಲ್ ಪ್ರೋತ್ಸಾಹಿಸಿ – ಮನವಿಯ ಸಾರಾಂಶ. ರಾತ್ರಿ ಬಸ್ಸಿನಲ್ಲಿ ಜನ, ಪ್ರತ್ಯೇಕ ವಾಹನದಲ್ಲಿ ಸೈಕಲ್ ಮಂಗಳೂರಿಗೆ ವಾಪಾಸು. ಸಕಲ ವ್ಯವಸ್ಥೆ ಮತ್ತು ವೆಚ್ಚವನ್ನು ವಹಿಸಿಕೊಳ್ಳುತ್ತಿರುವವರು _ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿ., ಮಂಗಳೂರ ಪ್ರಾದೇಶಿಕ ವಿಭಾಗ – ಸ್ವತಃ ಪುನರುತ್ಪಾದಿಸಲಾಗದ ಇಂಧನದ ಬಹು ದೊಡ್ಡ ವ್ಯಾಪಾರೀ ಸಂಸ್ಥೆ.

ದಿನ ಕಳೆದು ಪ್ರಸನ್ನ, ಮಂಗಳೂರು ಬೆಂಗಳೂರು ಸೈಕಲ್ ಸವಾರಿಗೆ ಮಸೈಸಂ (ಮಂಗಳೂರು ಸೈಕಲ್ಲಿಗರ ಸಂಘ) ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ಸಂತೋಷದ ಸಂಗತಿ ಬಿತ್ತರಿಸಿದ. ಅದರಲ್ಲಿ ಆಗೊಮ್ಮೆ ಈಗೊಮ್ಮೆ ಹೆದ್ದಾರಿಯುದ್ದಕ್ಕೆ ಹತ್ತಿಪ್ಪತ್ತು ಕಿಮೀ ಸವಾರಿ ನಡೆಸಿ ತಮ್ಮ ಸರಾಸರಿಯನ್ನು ಗಂಟೆಗೆ ನಲ್ವತ್ತು ಕಿಮೀಯೆಂದು ನಂಬಿದವರಿದ್ದಾರೆ. ಆದರೆ ಮುನ್ನೂರು ಕಿಮೀಗೂ ಮಿಕ್ಕ ವಾಸ್ತವದ ಮಾರ್ಗಕ್ರಮಣ ಕಾಗದದ ಮೇಲಿನ ಲೆಕ್ಕದಷ್ಟು ಹಗುರವಲ್ಲ! (ಮುನ್ನೂರು ಭಾಗಿಸು ನಲ್ವತ್ತು ಎಂದಷ್ಟು ಸುಲಭವಲ್ಲ.) ಹಾಗಾಗಿ ಅವರೇ `ಪರೀಕ್ಷಾ ಓಟ’ ನಡೆಸುತ್ತಾರೆಂದು ಪ್ರಸನ್ನನಿಗೆ ತಿಳಿಯಿತು. ನಾವು ಮೂವರೂ (ಪ್ರಸನ್ನ, ಅಶೋಕ್ ರಾಜಪುರೋಹಿತ್ ಮತ್ತು ನಾನು) ನಮ್ಮಷ್ಟಕ್ಕೇ ಗಟ್ಟಿಗೊಳ್ಳಲು, ಅದೇ ದಿನ, ತುಸು ತಡವಾಗಿ, ಅದೇ ದಾರಿ ಹಿಡಿದೆವು. ತೆಳು ಮಂಜಿನ ಮುಸುಕಿನ ಮರೆಯಲ್ಲಿ ಅರುಣ ಕೆಂಪು ಪ್ರಸರಿಸುವಾಗ ನಾವು (ಮಂ-ಬೆಂ ದಾರಿಯಲ್ಲಿ ನಂತೂರು, ಮರೋಳಿ, ಪಡೀಲು ಕಳೆದು) ತುಂಬೆ ಸಮೀಪಿಸಿದ್ದೆವು. ಅದೇ ಸಹಜತೆಯಲ್ಲಿ ಬಂಟ್ವಾಳ ಹೊರಮಾರ್ಗ (ಅಥವಾ ಜೋಡುಮಾರ್ಗ ಯಾನೆ ಬೀಶೀ ರೋಡು), ಪಾಣೆಮಂಗಳೂರು ಹೊರಮಾರ್ಗ ಕಳೆಯುವಾಗ ಆಶ್ಚರ್ಯಕರವಾಗಿ ಮಸೈಸಂನ ಇಬ್ಬರು ಸದಸ್ಯರು ಎದುರಾದರು. ಅದರಲ್ಲೂ ಒಬ್ಬರು ನಾನು ಬಹುಕಾಲದಿಂದ ನೋಡದಿದ್ದ ನನ್ನಂಗಡಿಯ ಹಳೆ ಗಿರಾಕಿ-ಗೆಳೆಯ ಕಿಶನ್.

ಕಿಶನ್ ಕುಮಾರ್ ರೈಲ್ವೇ ನೌಕರ, ಹಲವು ಸ್ಪರ್ಧೆ, ಪ್ರಶಸ್ತಿ ಗಳಿಸಿದ ಉತ್ತಮ ದೇಹದಾರ್ಢ್ಯಪಟು. ಇವರು ನನ್ನಲ್ಲಿಗೆ ಕ್ರೀಡೆಗೆ ಸಂಬಂಧಿಸಿದ ವಿದೇಶೀ ನಿಯತಕಾಲಿಕ ಹಾಗೂ ಪುಸ್ತಕಗಳನ್ನು ಖರೀದಿಸಲು ಖಾಯಂ ಬರುತ್ತಿದ್ದರು. ಗಿರಾಕಿಗಳೆಲ್ಲ ಮಿತ್ರರೂ ಹೌದೆನ್ನುವಂತಿಲ್ಲ. ಆದರೆ ಸಾಹಸಕ್ರೀಡೆಗಳ ನನ್ನೊಲವು ಅವರತ್ತ ಸೆಳೆದಿತ್ತು. ವೃತ್ತಿತಃ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿದ್ದ ಅವರ ಸ್ನೇಹಶೀಲತೆ, ನಮ್ಮೊಳಗೆ ಮೈತ್ರಿಯನ್ನೇ ಸಿದ್ಧಿಸಿತ್ತು. ಹಿಂದೊಮ್ಮೆ ನನ್ನ ಮೋಟಾರ್ ಸೈಕಲ್ ತಂಡವೊಂದನ್ನು ಗೋವಾದವರೆಗೆ ರೈಲಿನಲ್ಲಿ ನಮ್ಮ ಜೊತೆಗೇ ಒಯ್ಯಬೇಕಾದ ಸಂದರ್ಭ ಬಂದಾಗ ಮಂಗಳೂರಿನ ಮಲಯಾಳೀಕೃತ ರೈಲ್ವೆಯಲ್ಲಿನ ತಣ್ಪೀವ ಕನ್ನಡ ಮಾರುತವಾಗಿ ಒದಗಿದವರು ಇದೇ ಕಿಶನ್. (ನೋಡಿ: ದೂದ್ಸಾಗರ್) ನೆನಪುಗಳ ಅಲೆಯಲ್ಲಿ ಸೈಕಲ್ ಸರ್ಕೀಟ್ ಬಳಲದಂತೆ ಚುರುಕಾಗಿ ಅವರನ್ನು ವಿಚಾರಿಸಿಕೊಂಡೆವು. ಅವರೂ ಮಂ-ಬೆಂ ಸವಾರಿಗೆ ಮೈ ಹುರಿಗೊಳಿಸಲು ಮಸೈಸಂ ಜೊತೆ ಹೊರಟವರೇ. ಆದರೆ ಕಲ್ಲಡ್ಕದ ಖ್ಯಾತ ರಿಂಜಿಂ ಕಾಫಿ ಜತೆಗೆ, ಪೈಪೋಟಿಗೆ ನಿಂತ ನೀರುದೋಸೆ ಎರಡು ಬಿದ್ದ ಮೇಲೆ, ಇವತ್ತಿಗಿಷ್ಟು ಸಾಕೆನಿಸಿತಂತೆ. ಹಾಗೆ ಹಿಮ್ಮುಖ ಹಾಕಿದವರಿಗೆ ದಾರಿ ಬದಿಯ ಬೆಟ್ಟದ ಮೇಲೆ ಕುಳಿತ ನರಹರಿಯನ್ನು ನೋಡುವ ಕುತೂಹಲ ಮೂಡಿತ್ತು. ಅದನ್ನು ತೀರಿಸಿ ಕೊಳ್ಳುವಾಗ ನಮ್ಮ ದರ್ಶನ. ಅವರನ್ನು ಬೀಳ್ಕೊಂಡು…

ನಾವಂತೂ ಲಕ್ಷ್ಯವನ್ನು ರಿಂಜಿಂ ಕಾಫಿ, ಅಲ್ಲಲ್ಲ ಕಲ್ಲಡ್ಕವೆಂದೇ ಇಟ್ಟು ಹೊರಟವರು. ಆದರೆ ಅಲ್ಲಿಗೆ ತಲಪುವಾಗ ಪ್ರಸನ್ನನ ಉತ್ಸಾಹ ತುಸು ಮೀರಿತು. “ಅಶೋಕೆರೇ ಕಳೆದವಾರ ತಣ್ಣೀರುಬಾವಿ – ಪಣಂಬೂರು ಸರ್ಕೀಟಿನಲ್ಲಿ ಐವತ್ತು ಕಿಮೀ ಮಾಡಿದ್ದೆ. ಇಂದು ಮಿನಿಮಮ್ ಎಪ್ಪತ್ತೈದಾದರೂ ಮಾಡಲು ಇನ್ನೊಂದೈದಾರು ಕಿಮೀ ಪೋಯಿ” ಎಂದ. ಆತನಿಗೂ ಕಿಶನ್ನರಂತೆ ಹೊಟ್ಟೆಗಟ್ಟಿಯಾದರೆ ಸರ್ಕೀಟ್ ಸೋಲುವ ಭಯ! ಪುತ್ತೂರಿನತ್ತ ಮುಂದುವರಿದೆವು. ಸೂರಿಕುಮೇರು ಕಳೆದು ಮಾಣಿ ಇನ್ನೇನು ಒಂದು ಕಿಮೀ ಎನ್ನುವಾಗ ಅಶೋಕರ ಚರವಾಣಿಯ ವಿಶಿಷ್ಟ ತಂತ್ರಾಂಶ ಮೂವತ್ತೇಳು ಕಿಮೀ ಕಳೆದದ್ದನ್ನು ಸಾರಿತು. ಅಂದರೆ ವಾಪಾಸು ಮಂಗಳೂರು ತಲಪುವಲ್ಲಿ ಎಪ್ಪತ್ತೈದು ಗಟ್ಟಿ, ಎಂದುಕೊಂಡು ಕಲ್ಲಡ್ಕಕ್ಕೆ ಮರಳಿದೆವು.

ನಾವೇನೋ ಹೋಟೆಲ್ ಮುಗಿಸುವ ಉತ್ಸಾಹದಲ್ಲೇ ಒಳ ನುಗ್ಗಿದ್ದೆವು. ಆದರೆ ಅಲ್ಲಿ ಮೇಜೊಂದೂ ಖಾಲಿಯುಳಿಯದಂತೆ ವ್ಯಾಪಿಸಿ ಕಾದಿದ್ದವರ, ಮೆಲುಕುತ್ತಿದ್ದವರ ಹಸಿವು ಕಂಡು ಅಪಾರ ಕರುಣೆ ಬಂತು. ಅಷ್ಟೂ ಇನ್ನು ಬರುವಷ್ಟೂ ಜನರ ಹೊಟ್ಟೆಗೆ ಹೊಡೆಯುವ ಅನ್ಯಾಯಕ್ಕಿಳಿಯದೆ ಕೇವಲ ಒಂದೊಂದೇ ತಿನಿಸು ಹಾಗೂ ಪಾನೀಯಕ್ಕೆ ತೃಪ್ತರಾಗಿ ಮಂಗ(ಳೂರು)-ಮುಖಿಗಳಾದೆವು. (ದೇವರನಾಜೆಯಾಗಿ ಹೇಳ್ತೇನೆ, ಮನೆಯಲ್ಲಿ ತಿಂಡಿ ಮಾಡಿ ಕಾದ ಹೆಂಡತಿಯರ ಹೆದರಿಕೆಯೇನೂ ನಮಗಿರಲಿಲ್ಲ 🙂 )

ನಡೆದ ದಾರಿ ಬರಿದೆ ತಿರುಗಿ ನೋಡುವಾಗ ಸಿಗುವ ಸಂತೋಷ, ಮತ್ತದನ್ನು ನಡೆಯಲೇ ಬೇಕಾದವರಿಗೆ ಬರಲಾರದು! ಒಯ್ದ ನೀರೆಲ್ಲ ಹೊಟ್ಟೆಯಲ್ಲಿ ಇಂಗುತ್ತಲೇ ಇದ್ದಂತೆ, ಹರಿವ ಬೆವರೆಲ್ಲ ಮೂಲದಲ್ಲೇ ಬಾಷ್ಪೀಕರಣವಾಗುವಂತೆ, ಉಸಿರು ತೆಗೆಯಲು ಮೂಗು ಸಾಲದಾಗಿ ಬಾಯಿ ಬಿಟ್ಟದ್ದಕ್ಕೆ ಗಂಟಲೊಣಗಿ ಉರಿಯುವಂತೆ, ನಮ್ಮ ನಿಟ್ಟುಸಿರೇ ನಮ್ಮನ್ನು ಹಿಂತಳ್ಳುತ್ತಿದೆಯೇ (ರಿಟ್ರೋ ರಾಕೆಟ್!) ಎಂದು ಭ್ರಮಿಸುತ್ತ, ಪೆಡಲುತ್ತ ಬಂದೆವು. ಪ್ರಸನ್ನನ ಲೆಕ್ಕಾಚಾರದ ಪ್ರೀತಿಗಾಗಿ ನಂತೂರಿನಲ್ಲಿ ಕುಂಟಿಕಾನದತ್ತ ಹೊರಳಿ ಮತ್ತೊಂದಷ್ಟು ಜೀವ ಹಿಂಡಿ ಮನೆ ಸೇರಿದೆವು.

*** *** ***

ನಿರೀಕ್ಷೆಯಂತೆ ಮತ್ತಿನ ಆದಿತ್ಯವಾರಕ್ಕೆ ಪ್ರಸನ್ನನ ಗುರಿ ಕಿಮೀ ಶತಕೋತ್ತರ ಸಾಧನೆಯದ್ದೇ ಇತ್ತು. ಈ ಬಾರಿ ಲಕ್ಷ್ಯ – ಮಲ್ಪೆ. ಬೆಳಿಗ್ಗೆ ಆರು ಗಂಟೆಗೇ ನಾವು (ಮತ್ತದೇ ಮೂರುಜನ) ಹೆದ್ದಾರಿ ಹಿಡಿದಿದ್ದೆವು. ಕತ್ತಲು ಹರಿಯದ ಸ್ಥಿತಿಯಲ್ಲಿ ಎದುರು ಮಾರ್ಗದರ್ಶಕ ಬಿಳಿ, ಹಿಂದೆ ಅಸ್ತಿತ್ವಸೂಚಕ ಕೆಂಪು ದೀಪ ಬೆಳಗಿಕೊಂಡಿದ್ದೆವು. ಸಾಮಾನ್ಯರ ನಸು ಚಳಿ, ನಮಗೆ ಸೈಕಲ್ ತುಳಿಯಲಂತೂ ಅಪ್ಯಾಯಮಾನ ತಂಪಾಗಿಯೇ ಒದಗಿತ್ತು. ಕೂಳೂರು ಬೈಕಂಪಾಡಿಯ ದೂರ ಎಂದಿನಂತೆ ಸರ್ವಿಸ್ ರಸ್ತೆಯಲ್ಲಿ ಮುಗಿಸಿದೆವು. ಮುಂದೆಲ್ಲಾದರೂ ಹೆದ್ದಾರಿ ವಾಹನಸಂಚಾರ ವಿಪರೀತವಿದ್ದರೆ ಕಡಲ ಕರೆಗೆ ಹೋಗಿ, ಮೀನುಗಾರಿಕಾ ದಾರಿ ಅನುಸರಿಸುವುದೆಂದು ಮೊದಲು ನಿಶ್ಚಯಿಸಿದ್ದೆವು; ಅಗತ್ಯ ಕಾಣಲಿಲ್ಲ. ಸುರತ್ಕಲ್ಲಿಗಾಗುವಾಗ ಮುಂಬೆಳಕು ಧಾರಾಳವಾಗಿ ದೀಪವಾರಿಸಿದೆವು. ಪಡುಪಣಂಬೂರಿನ ಎತ್ತರದಲ್ಲಿ ಸೂರ್ಯನಿಗೇ ಸ್ವಾಗತ ಹೇಳಿದೆವು.

೧೯೮೧ರ ಸುಮಾರಿಗೆ ಅಂದಿನ ಕೇಯಾರೀಸಿಯಲ್ಲಿ (ಇಂದಿನ ಎನ್ನೈಟಿಕೆ) ವಿದ್ಯಾರ್ಥಿ ಗೆಳೆಯ ಗೋಪಾಲಕೃಷ್ಣ ಬಾಳಿಗರ ಉತ್ಸಾಹದಲ್ಲಿ ಪರ್ವತಾರೋಹಣ ಸಂಘ ಕಟ್ಟಿದ್ದರು. ಅವರಿಗೆ ದರೆಯಿಳಿಯುವ (ವಾಸ್ತವಾಗಿ ಬಂಡೆಯಿಳಿಯುವ) ತಂತ್ರಗಳ ತರಬೇತಿ ಕೊಡಲು ಸಮೀಪದ ಎತ್ತರದ ಸ್ಥಳ ಎಂದು ಇದೇ ಮಾರ್ಗದಂಚು ಆರಿಸಿಕೊಂಡಿದ್ದೆ. ಇಂದು ದರೆ ಹಳೆ ಎತ್ತರಕ್ಕೊಂದು ಸ್ಮಾರಕವನ್ನಷ್ಟೇ ಉಳಿಸಿ ಬಯಲಾಗಿದೆ.

ಮೂಲ್ಕಿ ಸೇತುವೆಗೆ ಮುನ್ನ ಕಂಡ ವಿಶೇಷ ಪೋಲಿಸ್ ತಪಾಸಣೆ ನಮಗೆ ದಿನದ ಮಹತ್ತ್ವವನ್ನು (ಮಂಗಳೂರಿನ ಹಿಂದೂ ಸಮಾಜೋತ್ಸವ!) ನೆನಪಿಸಿತು. ನಾವು ತುಸು ಮೇಲಿದ್ದ, ಇನ್ನೂ ವಾಹನ ಸಂಚಾರಕ್ಕೆ ಮುಕ್ತವಾಗದ ನುಣ್ಣನೇ ಹೊಸಸೇತುವೆ ರಸ್ತೆಯಲ್ಲಿ ಸಾಗಿದ್ದೆವು. ತನಿಖಾಠಾಣೆಯ ಪೋಲಿಸ್ ಒಬ್ಬರು ನಮ್ಮ ಮೇಲಿನ ಕರುಣೆಯಲ್ಲಿ ಕೂಗಿ ಎಚ್ಚರಿಸಿದರು “ಸೇತುವೆ ಪೂರ್ಣಗೊಂಡಿಲ್ಲಾ.” ನಿಜ, ಸೇತುವೆ ನೆಲವನ್ನು ಸಂಪರ್ಕಿಸುವ ಸುಮಾರು ಮೂರಡಿ ಅಗಲದಲ್ಲಿ ಇನ್ನೂ ದಟ್ಟ ಸರಳುಗಳಷ್ಟೇ ಇದ್ದುವು. ಆದರೆ ನಮ್ಮದು ಸರಳ ಸೈಕಲ್ ಆದ್ದರಿಂದ ನೂಕಿ ಮುಂದುವರಿಯಲೇನೂ ತೊಂದರೆಯಾಗಲಿಲ್ಲ.

ಪಡುಬಿದ್ರೆಯ ವಿಜಯವಿಹಾರ ನಮ್ಮ ರುಚಿಗೂ ಹೊಟ್ಟೆಗೂ ಒದಗಿಬಂತು. ಅಲ್ಲಿ ಗಲ್ಲಾದ ಮೇಲೆ ಅಪರಿಚಿತರಿಗೆ ಅವರ ಬೆನ್ನ ಬದಿಯಲ್ಲಿ ಮೇಲಿದ್ದ ಫೋಟೋ ತೋರಿಸಿ, ಹೋಟೆಲಿನ ಸ್ಥಾಪಕ (ದಿವಂಗತ) ವಿಜಯಕುಮಾರ್ ಶೆಟ್ಟಿಯವರಿಗೂ ನನಗೂ ಇದ್ದ ಪುಸ್ತಕ ಸಂಬಂಧವನ್ನು ನೆನಪಿಸಿದೆ. ತಮಾಷೆ ಎಂದರೆ, ಈಗಿನವರೂ ಅತ್ರಿಗೆ ಹಲವು ಭೇಟಿ ಕೊಟ್ಟವರು ಮತ್ತೂ ಅದು ನವಕರ್ನಾಟಕವಾಗಿರುವುದನ್ನೂ ಕಂಡವರೇ ಆಗಿದ್ದರು.

ಪಡುಬಿದ್ರೆ ಹೆಸರಿನೊಡನೇ ತಳುಕು ಹಾಕುವ ಇನ್ನೊಂದು ಹೆಸರು ವ್ಯಂಗ್ಯಚಿತ್ರಕಾರ ಗೆಳೆಯ ಮಹಮ್ಮದರದ್ದು. ಅವರಿಗೊಂದು ಚರವಾಣಿ ಕರೆಹಾಕಿ “ನೀವೇನೂ ಪ್ರೋಜನವಿಲ್ಲ, ನಾವು ನಿಮ್ಮೂರಿನಲ್ಲಿದ್ದರೂ ಒಂದು ಕಾಫಿಗೆ ಕರೆಯಲಿಲ್ಲ” ಎಂದು ಕುಶಾಲು ಮಾಡಿದ್ದೂ ಆಯ್ತು. ಇಲ್ಲಿಂದ ಮುಂದೆ ಚಕ್ರಾಯಣ ಬೆಳೆಸುವ ಮೊದಲು ಸ್ವಲ್ಪ ಹಿನ್ನೋಟ ಹಾಕುವುದು ಅವಶ್ಯ.

ನಾವು ಕಯಾಕಿಂಗ್ (ದೋಣಿ ಚಲಾವಣೆಯ ಒಂದು ಪ್ರಕಾರ) ತೊಡಗಿದಂದಿನಿಂದ ನನ್ನ ಗೂಗಲ್ ನಕ್ಷೆಯಲ್ಲಿ ಕಾಡು, ಬೆಟ್ಟಗಳಿಗಿಂತ ಹೆಚ್ಚು ಒಳನಾಡಿನ ಜಲಜಾಲಗಳು ಹರಿದಾಡುತ್ತಿದ್ದುವು. ಕರಾವಳಿಯ ಹೆದ್ದಾರಿಯಲ್ಲಿ ಮರವಂತೆ ಬಹುಖ್ಯಾತ ಸ್ಥಳ. ಅಲ್ಲಿ ಒಂದೆರಡು ಕಿಮೀ ಉದ್ದಕ್ಕೆ ಹೆದ್ದಾರಿಗೆ ಇಕ್ಕೆಲಗಳಲ್ಲಿ ಹೊಳೆ ಮತ್ತು ಸಮುದ್ರದ ಸಾಂಗತ್ಯವಿದೆ. ಆದರೆ ನಕ್ಷೆ ನನಗೆ ಮರವಂತೆಯನ್ನು ಮೀರುವಂಥ ಸ್ಥಳ ಪಡುಬಿದ್ರೆಯಿಂದ ಉತ್ತರಕ್ಕೆ ಕಾಣಿಸಿತ್ತು. ಪಡುಬಿದ್ರೆಯಲ್ಲೆ ಹೆದ್ದಾರಿ ಬಿಟ್ಟು ಎಡಗವಲು ಹಿಡಿದರೆ ಅನತಿ ಅಂತರದಲ್ಲೇ ಕಡಲ ಕಿನಾರೆಯ (ನದಿಪಟ್ನ) ಮೀನುಗಾರಿಕಾ ರಸ್ತೆ ಇದೆ. ಅದರ ದಕ್ಷಿಣ ಕೊನೆ ಶಾಂಭವಿ ಮತ್ತು ನಂದಿನಿ ನದಿಗಳ ಮುಖಜಭೂಮಿಗೆ ಕೊನೆಗೊಳ್ಳುತ್ತದೆ. ಆದರೆ ಉತ್ತರಕ್ಕೆ ಸಾಗಿದಂತೆ ಹೆದ್ದಾರಿ ಮಾನದಲ್ಲಿ ಗುರುತಿಸುವುದಾದರೆ ಎರ್ಮಾಳ್, ಬಡ, ಉಚ್ಚಿಲ, ಪಡು ಮುಂತಾದೆಡೆಗಳಿಂದ ದಾರಿಗಳು ಬಂದು ಇದಕ್ಕೆ ಸೇರುತ್ತಲೇ ಇರುತ್ತವೆ. ಅವುಗಳಲ್ಲಿ ಉಳಿಯಾರಗೋಳಿ ಕಳೆದು ಸಿಗುವ ಎಡಗವಲು – ಬಹುಶಃ ಕೊತ್ಲಗುತ್ತುವಿನ ದಾರಿ, ಕೊನೆಯದು. ಅದಕ್ಕೆ, ಹೆಚ್ಚು ಕಮ್ಮಿ ಹೆದ್ದಾರಿ ಬಿಡುವಲ್ಲೇ ಪಾಂಗಾಳದ ಸೇತುವೆಯಡಿಯಿಂದ ನುಸಿದು ಬಂದ ಪೂರ್ವದ ಬಳಕು ಬಾಲೆ – ಪಾಂಗಾಳ ಹೊಳೆ, ಜೊತೆಗೊಡುತ್ತದೆ. ಕಡಲ ಕಿನಾರೆ ದಾರಿ ಕಾಣುವಾಗ ಆ ಚಪಲೆ ನಿಷ್ಠೆ ಬದಲಿಸುತ್ತಾಳೆ. ಸ್ಪಷ್ಟ ಬಲ ತಿರುವು ತೆಗೆದು (ಉತ್ತರಮುಖಿಯಾಗಿ), ಕಿನಾರೆ ದಾರಿಗೆ ಸಮರೇಖೆಯಲ್ಲಿ ನಡೆಹೊಂದಿಸುತ್ತಾಳೆ. ಈ ಹೊಳೆ ಮುಂದೆ ಉದ್ಯಾವರಹೊಳೆಯಲ್ಲಿ ಲೀನವಾದರೂ ಜಲಸ್ನೇಹ ನೆಲಕ್ಕೆ ಮುಳುವಾಗುವುದು ಮಲ್ಪೆಯಲ್ಲೇ! ಅತ್ತ ಅರಬ್ಬೀ ಸಮುದ್ರ ಇತ್ತ ಉದ್ಯಾವರಹೊಳೆಗಳ ನಡುವೆ ಕಡಿಮೆಯೆಂದರೂ ಸುಮಾರು ಹತ್ತು ಕಿಮೀ ಉದ್ದಕ್ಕೆ ಸಿಕ್ಕಿಬಿದ್ದ ನೆಲ ಮತ್ತು ಆ ಕೊನೆಯಲ್ಲಿ ಕೂಗಳತೆ ದೂರದ ಮಲ್ಪೆಗೆ ದೋಣಿ ಸವಾರಿ ನಾವು ಮೊದಲೇ ನಿಶ್ಚೈಸಿಕೊಂಡಿದ್ದೆವು.

ಪಡುಬಿದ್ರೆ ಸೇತುವೆ ದಾಟುವಾಗ ಎಲ್ಲ ಜಲಮೂಲಗಳಂತೆ ನನ್ನ ಮೂಗು ತಿರಸ್ಕಾರದಲ್ಲಿ ನೇರ ಉಳಿದಿದ್ದರೂ ದೃಷ್ಟಿ `ಏನಾದರೂ ಒಳ್ಳೆಯದು ಕಾಣಿಸೀತೇ’ ಎಂಬಂತೆ ನೀರಿನತ್ತ ಓರೆ ಹರಿದಿತ್ತು. ಅಂಚಿನ ಗಿಡಗಂಟಿಗಳ ಮೇಲೆ ಹೊಂಚಿ, ನೀರಿನತ್ತ ಮಿಂಚಬೇಕಿದ್ದ ಮಿಂಚುಳ್ಳಿಯ ಬದಲು ಹದ್ದುಗಳು ಹಾರುವುದು ಕಂಡು ವಿಚಲಿತನಾದೆ. ಮೊಸಳೆ, ನೀರುನಾಯಿಗಳ ಆವಾಸವಾಗಬೇಕಿದ್ದಲ್ಲಿ ಕೊಳಚೆ ಕೆನೆಗಟ್ಟಿದ ನೀರು, ಅಂಚಿನಲ್ಲಿ ಹೆದ್ದಾರಿಯಲ್ಲಿ ಕರುಳು ಕಳಚಿಕೊಂಡ ನಾಯಿ ಬಿದ್ದಿತ್ತು.

ಕಾಪು ಕಳೆದು, ಪೊಲಿಪು ದಾರಿಯಲ್ಲಿ ಹೊರಳಿ ಮೀನುಗಾರಿಕಾ ದಾರಿ ಸೇರಿದೆವು. ಮತ್ತಿನ ಸುಮಾರು ಅರ್ಧ ಮುಕ್ಕಾಲು ಗಂಟೆಯ ನಮ್ಮ ಸವಾರಿ ತುಂಬ ಮಧುರವಾಗಿತ್ತು. ಎಡೆ ಎಡೆಯಲ್ಲಿ ಅತ್ಯಾಧುನಿಕ ವಿನ್ಯಾಸಗಳ ಭಾರೀ ಬಂಗಲೆಗಳು (ಉಳ್ಳವರ ಬೀಚ್ ಹೌಸುಗಳಿರಬಹುದು, ಉತ್ತಮ ಕಮಾಯಿಯ ಅಘೋಷಿತ ರಿಸಾರ್ಟ್ ಮಾದರಿಯ ಮನೆಗಳೂ ಇರಬಹುದು) ಇದ್ದರೂ ಬಹುತೇಕ ಮನೆ ಮಂದಿರಗಳೆಲ್ಲ ಮೀನುಗಾರರವೇ ಇದ್ದುವು.

ಪಶ್ಚಿಮಕ್ಕೆ ಎದೆ ಸೆಟೆಸಿ ಬಾಗಿ ನಿಂತ ತೆಂಗಿನ ಮರಗಳ ನೆರಳಿನಲ್ಲಿ ನಿರಂತರ ಗಾಳಿಯಾಡಿಸುವ ಅಲೆಗಳಾಟವನ್ನು ಕಾಣುತ್ತಾ ಸವಾರಿ ನಡೆಸಿದೆವು. ಕಡಲ ಕಿನಾರೆಯಲ್ಲಿ ಅಸ್ಥಿಸಂಚಯನದ ಕ್ರಿಯೆ ನಡೆಸಿದ್ದವರು, ರಾತ್ರಿಯುದ್ದಕ್ಕೆ ಅಲೆಗಳ ಶ್ರುತಿಗೂ ಹೊಂದಿಕೊಂಡು ಮೆರೆದ ದೇವಲೋಕ ಬರಿಯ ಕನಸೆಂಬಂತೆ ನೀರಸ ಕಾಣುತ್ತಿದ್ದ ಯಕ್ಷಗಾನರಂಗಮಂಚ, ಮೊದಲ ಸುತ್ತಿನ ನಲಿಕೆಗಳನ್ನು ಮುಗಿಸಿ ಮುಂದಿನ ದರ್ಶನಕ್ಕೆ ಸಜ್ಜಾಗುತ್ತಿದ್ದ ಬಹುಪುಷ್ಪಾಲಂಕೃತ ದೊಂಪ, ತಮ್ಮೂರಿನ ಚಂದವನ್ನು ಹೊರಗಿನವರಿಗೆ ಹೆಚ್ಚಿಸಿ ಕಾಣಿಸಲು ಏನೇನೋ ಹೇರಿಕೊಂಡ ಯುವಕಮಂಡಲ, ದೈವಸ್ಥಾನಕ್ಕೊಂದು ಗುಜ್ಜಾರಿ ರಥ, ಕಡಲಕೊರೆತ ತಡೆಗೆ ಹೇರಿದ ತುಂಡುಬಂಡೆಗಳ ಗೋಡೆ ನೋಡನೋಡುತ್ತಾ ಇನ್ನು ದಾರಿಯಿಲ್ಲ ಎನ್ನುವವರೆಗೂ ರುಮುರುಮು ಚಕ್ರ ತಿರುಗಿದ್ದು ತಿಳಿಯಲೇ ಇಲ್ಲ.

ಪೊಲಿಪಿನಲ್ಲಿ ಕಡಲ ಮೊದಲ ದರ್ಶನವಾದಲ್ಲಿಂದಲೇ ಅನತಿ ದೂರದಲ್ಲಿ ನಲಿಯುವ ಅಲೆಗಳಲ್ಲಿ ನೆತ್ತಿಯನ್ನಷ್ಟೇ ಮುಳುಗೇಳಿಸುತ್ತಿದ್ದ ಬಂಡೆಯಿಂದ ತೊಡಗಿ ಪುಟ್ಟ ದ್ವೀಪದಂತ ಬಂಡೆ ಮೊಳಕೆಗಳು ಸರಣಿಯಲ್ಲಿ ತೋರುತ್ತಲೇ ಇದ್ದುವು. ಒಂದು ಹಂತದಲ್ಲಿ ನಮ್ಮ ನೆಲ ಬಿಲ್ಲಿನಾಕಾರದಲ್ಲಿ ಪಶ್ಚಿಮಕ್ಕೆ ಬಾಗಿ ಮುಗಿಯುವ ಕೊನೆಯ ಮಸಕು ದೃಶ್ಯವೂ ಕಾಣಸಿಕ್ಕಿತು. ಅಲ್ಲಿಂದಾಚೆ ಸಮುದ್ರದಲ್ಲಿದ್ದ ಸಾಕಷ್ಟು ದೊಡ್ಡದೇ ಎನ್ನುವ ಬಂಡೆದ್ವೀಪ ಬಾದರಗಡ. ಅದರ ಮೇಲೆ ಸಾಕಷ್ಟು ಹಸಿರೂ ಬಿಳಿಯ ಒಂದು ಮನುಷ್ಯ ರಚನೆಯೂ ಇತ್ತು. ಅದರನ್ನು ಗುರುತಿಸುವಲ್ಲಿ ನನ್ನ ಹಳೆಯ ನೆನಪು ಸರಿಯಾದರೆ, ಅದರಿಂದಲೂ ತುಸು ಆಚೆ ಸಂತ ಮೇರಿದ್ವೀಪವೂ ಇದ್ದಿರಬೇಕು, ನನಗೆ ಗುರುತಿಸಲಾಗಲಿಲ್ಲ.

ದಾರಿ ಮುಗಿದಲ್ಲಿ ಸೈಕಲ್ಲುಗಳನ್ನು ನೂಕಿಕೊಂಡು ನೇರ ಅಲೆತೊಳೆವ ಮರಳ ಹಾಸಿಗೇ ನಡೆದೆವು. ತುಸು ಮೊದಲೆಲ್ಲೋ ಕಡಲಕ್ಕಿಗಳ ದೊಡ್ಡ ಹಿಂಡು ಹೀಗೇ ಹಸಿ ಮರಳ ಹಾಸಿನ ಮೇಲೆ ಅದೇನೋ ಧ್ಯಾನ ಮಾಡುವವಂತೆ ಸುಮ್ಮನೆ ವಿರಮಿಸಿದ್ದು ಕಂಡಿದ್ದೆವು. ಏಡಿ ಹೆಕ್ಕುವುದಾಗಲೀ ನೀರಾಟಕ್ಕೆ ಮನಮಾಡಿದ್ದಾಗಲೀ ಕಾಣಲೇ ಇಲ್ಲ. ಕೆಲವಂತೂ ನಿಲ್ಲಲೂ ಉದಾಸವಾದಂತೆ ಕಾಲು ಮಡಚಿ ಕುಳಿತೇ ಬಿಟ್ಟಿದ್ದುವು. ಈ ಕೊನೆಯಲ್ಲಿ ಬೇರೊಂದು ವಿಚಿತ್ರ. ಪುಟ್ಟ ಏಡಿಗಳ ಓಡಾಟ, ಮಾಟೆಗಳೊಂದೂ ಕಾಣಲಿಲ್ಲ. ಸಮುದ್ರ ಇಳಿತವನ್ನನುಭವಿಸುತ್ತಿತ್ತು. ತೆಳ್ಳಗಿನ ಅಲೆಗಳು ಬಂದು ಹೋದಂತೆಲ್ಲ ಮರಳಿನ ಕರಿ ಹಾಸಿನ ಮೇಲೆ ಬಿಳಿ ಮರಳಿನ ರೇಖೆಯುಳಿಸಿ ಹೋಗುತ್ತಿತ್ತು.

ಒಟ್ಟಾರೆ ಮರಳ ಹಾಸು ಸಪಾಟಾಗಿದ್ದರೂ ಉತ್ತಮ ಚಿತ್ರಕಾರ ಕರಿಹಲಗೆಯ ಮೇಲೆ ನಸು ಬಿಳಿಹುಡಿಯಲ್ಲಿ ಶೇಡಿಂಗ್ ಕ್ರಿಯೆ ನಡೆಸಿದಂತೆ, ಮುಟ್ಟಿ ನೋಡದಿದ್ದರೆ ಏರುತಗ್ಗುಗಳೇ ಏರ್ಪಟ್ಟಿವೆಯೇನೋ ಎಂದು ಭ್ರಮಿಸುವಷ್ಟು ಸ್ಪಷ್ಟ ಬಳಕು ರೇಖೆಗಳನ್ನು ಮೂಡಿಸಿತ್ತು. ಎರಡು ವಾರದ ಹಿಂದೆ ಸುಧಾದಲ್ಲಿ ವಾಸುದೇವ್ ಅವರು ಬರೆದ ಜೈವಿಕ ಮರಳು – ಮಾಮೂಲೀ ಸಿಲಿಕಾಧಾತುವಿನ ಕಣಗಳಲ್ಲ, ಚಿಪ್ಪಿನ ಹುಡಿಯರಾಶಿ, ನೆನಪು ಮಾಡಿಕೊಂಡೆ. ನನ್ನ ತಿಳುವಳಿಕೆಯಲ್ಲಿ ಸಂತ ಮೇರಿ ದ್ವೀಪದ ಪುಟ್ಟ ಲಗೂನಿನ (ಸಮುದ್ರದ ಒಳಗೈ) ಕಿನಾರೆ ಇಂಥದ್ದೇ ರಚನೆ. ಸಿಲಿಕಾಮರಳಿನ ಹಾಸಿನ ಮೇಲೆ ಹಗುರದ ಚಿಪ್ಪಿನಮರಳಿನ ರೇಖಾಚಿತ್ರ ನಿಜಕ್ಕೂ ಅವಿಸ್ಮರಣೀಯ. ಕಿನಾರೆಯ ಉತ್ತೇಜಕ ಅಲೆಯಾಟ, ಗಾಳಿ, ದೃಶ್ಯಗಳ ವೈಭವದಲ್ಲಿ ಪ್ರಸನ್ನನಂತೂ ಮರುಳಾಗಿ ಹೋಗಿದ್ದ.

ಅದುವರೆಗೆ ನಿರಂತರ ಪೆಡಲ್ ಮಾಡಿದ್ದನ್ನು ಮರೆತವನಂತೆ ಸೈಕಲ್ಲನ್ನು ಹಸಿಮರಳಿನ ಗಟ್ಟಿ ಸ್ತರಕ್ಕೆ ತಂದು, ಏರಿ, ನೆಲದ ಕೊನೆಯವರೆಗೂ ಅಂದರೆ ನಮ್ಮ ಕಣ್ಮರೆಯಾಗುವವರೆಗೂ ಸವಾರಿ ಹೋಗಿ ಬಂದ. ನಾಗರಿಕ ಕೊಳಕುದೂರವೇ ಎನ್ನಬಹುದಾದ ಆ ಸುಂದರ ಸ್ಥಳವನ್ನು ಸಮಯದ ಒತ್ತಡವೊಂದಲ್ಲದಿದ್ದರೆ ನಾವಂದು ಬಿಡುತ್ತಲೇ ಇರಲಿಲ್ಲವೋ ಏನೋ!

ದಾರಿಯ ಕೊನೆ ನೋಡಲು ಹೋಗುವಲ್ಲೇ ಮೊದಲು ಬಲಕ್ಕೆ ಭಾರೀ ಸೇತುವೆಯ ರಚನೆಯಾಗುವುದನ್ನು ಗಮನಿಸಿದ್ದೆವು. ಅದರ ಒತ್ತಿಗೇ ಕೆಲವು ದ್ವಿಚಕ್ರ ವಾಹನಗಳೂ, ಸರ್ವೀಸ್ ರಿಕ್ಷಾಗಳು ನಿಂತದ್ದು ನೋಡಿ ದೋಣಿಗಟ್ಟೆ ಇರುವುದನ್ನು ನಿಶ್ಚೈಸಿಕೊಂಡಿದ್ದೆವು. ಅಲ್ಲಿಗೆ ಮರಳಿ ಐದೇ ಮಿನಿಟಿನ ಮೋಟಾರ್ ದೋಣಿಯ (ಎರಡು ಮುಖ ಸವಾರಿಗೆ ಐದೇ ರೂಪಾಯಿ. ಸೈಕಲ್ಲನ್ನು ಒಂದು `ಲಗ್ಗೇಜ್’ ಎಂದು ಅವರು ಗಣಿಸಲೇ ಇಲ್ಲ!) ಸವಾರಿಯಲ್ಲಿ ನಾವು ಮಲ್ಪೆಯ ಮೀನುಗಾರಿಕಾ ಬಂದರದಲ್ಲಿದ್ದೆವು. ಸುಮ್ಮನೆ ಉದ್ದಕ್ಕೆ ವಡಬಾಂಡೇಶ್ವರದವರೆಗೆ ಚಕ್ರ ಉರುಳಿಸಿ ಉಡುಪಿ ಜಿಲ್ಲಾ ಕರಾವಳಿ ಉತ್ಸವದ ದುಂದುವೆಚ್ಚವನ್ನಷ್ಟು ಕಿರಿದರಲ್ಲಿ ಕಂಡು ಕೃತಾರ್ಥರಾದೆವು.

ಉಪ್ಪಿನಸಾಗರದಂಚಿನಲ್ಲಿ ಸವಾರಿ ಮಾಡಿ ಬಂದ ಶ್ರಮವನ್ನು ಹೋಟೆಲ್ ಶಿವಸಾಗರದ ಬಿಸಿಬಿಸಿ ಬನ್, ಚಾದಲ್ಲಿ ತಣಿಸಿದವು. ನಾವು ಪ್ರತಿಯೊಬ್ಬರೂ ಪ್ರತ್ಯೇಕ ಒಯ್ದಿದ್ದ ಒಂದೆರಡು ಲೀಟರಿನ ನೀರ ಬಾಟಲ್ಲುಗಳು ಎಂದೋ ಖಾಲಿಯಾಗಿದ್ದುವು. ಬೆಳಗ್ಗಿನ ಕೊರತೆಗೂ ಮುಂದಿನ ಹಾದಿಯ ಅರಕೆಗೂ ಒದಗುವಂತೆ ಧಾರಾಳ ನೀರು ತುಂಬಿಕೊಂಡೆವು. ಏರಿದ ಬಿಸಿಲು, ಕೆಂಪೇರಿದ ಹೆದ್ದಾರಿಯ ಬಿಸಿ ಮತ್ತು ವಾಹನಸಂದೋಹದ ಗದ್ದಲವೆಲ್ಲ ಲೆಕ್ಕ ಹಾಕಿ ವೇಳೆಗಳೆಯದೇ ಬಂದ ದಾರಿಯನ್ನೇ ಅನುಸರಿಸಿದೆವು.

ಕಡಲಕಿನಾರೆಯ ದಾರಿಯುದ್ದಕ್ಕೂ ಅಸಂಖ್ಯ ಸಣ್ಣ ಸ್ಥಳನಾಮಗಳೋ ಗುರುತಿನ ಚಹರೆಗಳೋ ಆಡುನುಡಿಯಲ್ಲಿವೆ. ಆದರೆ ಭೌಗೋಳಿಕ ಲಕ್ಷಣವನ್ನೇ ಆಧರಿಸಿದ `ಪಡುಕರೆ’ (ಮಲ್ಪೆ ಪಡುಕರೆ, ಉದ್ಯಾವರ ಪಡುಕರೆ ಇತ್ಯಾದಿ) ಬಹುಶಃ ಈ ಸಪುರದ ಭೂಭಾಗಕ್ಕೆ ಸಾರ್ವತ್ರಿಕವಾಗಿ ಅನ್ವಯವಾಗುತ್ತದೆ ಎಂದು ನನಗನ್ನಿಸಿತು. ನಾವು ಮರಳಿ ಆ ಕೊನೆ ತಲಪಿದಾಗ ನಮ್ಮ ಸಂತೋಷವನ್ನು ಸ್ಥಳೀಯರೊಬ್ಬರು ತಪ್ಪಾಗಿ ಗ್ರಹಿಸಿದರು. “ಆಯ್ತು, ಇನ್ನೇನು ವರ್ಷಕಾಲದಲ್ಲಿ ಸೇತುವೆ ಪೂರ್ತಿ ಆದ ಮೇಲೆ ಈ ಕಷ್ಟ ಇರುವುದಿಲ್ಲ” ಎಂದು ಸಮಾಧಾನಿಸುವಂತೆ ಹೇಳಿದರು. ಅವರ ಉತ್ಸಾಹ ಕಂಡು ನನಗೆ ಅಳುವುದೋ ನಗುವುದೋ ಗೊತ್ತಾಗಲಿಲ್ಲ!

ಸೇತುವೆ ಸಾರ್ವಕಾಲಿಕ ಸುಲಭ ಸಂಪರ್ಕ ಸಾಧನ ಹೌದು. ಅದರಲ್ಲೂ ಮುಖ್ಯವಾಗಿ ಮಳೆಗಾಲದ ರೌದ್ರದಲ್ಲಿ ಪರಮ ಜೀವರಕ್ಷಕ ಸಂಪರ್ಕವಾಗಿ ಅದು ಪಾತ್ರವಹಿಸುವುದೂ ನಿಜ. ಆದರೆ ಹಾಗೇ ನಗರದ ಎಲ್ಲಾ ಅವಗುಣಗಳೂ ಈ ಪುಟ್ಟ ನೆಲದ ಮೇಲೆ ಸುಲಭವಾಗಿ ಕವುಚಿ ಬೀಳುವಾಗ ಈ ಶುಚಿ, ಶಾಂತಿ ಉಳಿದೀತೇ? ಕಾಲಾಯ ತಸ್ಮೈ ನಮಃ ಎಂದುಕೊಂಡು ನಾವು ಮನೆಯತ್ತ ಪೆಡಲಿದೆವು. ಹೋಗುವಾಗ ಕಂಡಿದ್ದ ದೈವಸ್ಥಾನದಲ್ಲಿ ದರ್ಶನದ ಸಮಯವಾಗಿತ್ತು. ನಾವು ಜನಸಾಗರದ ನಡುವೆ ತೇಲಿಹೋದೆವು. ಆ ಉದ್ದಕ್ಕೂ ಬಾವಿ, ಕೈಪಂಪು ಕಂಡಲ್ಲೆಲ್ಲ ಕುಡಿಯುವ ನೀರಿನ ಭರವಸೆಯುಳಿಸಿಕೊಂಡಿದ್ದೆವು. ನಿಜಕ್ಕೂ ಬೇಕಾದಾಗ ಒಂದು ದೈವಸ್ಥಾನದ ಬಾವಿಗೆ ಹಗ್ಗ ಇಳಿಸಿದೆವು.

ಹತ್ತಿರದ ಮನೆಯ ಜನ ಬಂದು “ಇಲ್ಲ, ಅದು ಉಪ್ಪು ನೀರು. ಕುಡಿಯಲು ಹೊಳೆಯಾಚೆ ಉದ್ಯಾವರದಿಂದ ಬರುವ ನಲ್ಲಿನೀರೇ ನಮಗೆ ಗತಿ, ತೆಗೊಳಿ” ಎಂದು ಕೊಡ ತುಂಬ ಕೊಟ್ಟು ಉಪಕರಿಸಿದರು. ಕಾಪು ದೀಪಸ್ತಂಭಕ್ಕೆ ದೂರದಿಂದಲೇ ಬಾಯ್ ಹೇಳಿ, ಗೆಳೆಯರೊಬ್ಬರ ರಜಾಮನೆಯನ್ನು ಹೊಕ್ಕುಹೊರಟು ಮತ್ತೆ ಹೆದ್ದಾರಿ ಸೇರಿದೆವು. ಒಂದು ಗಂಟೆಯ ಸುಮಾರಿಗೆ ಊಟಕ್ಕೆ ಮತ್ತೆ ಪಡುಬಿದ್ರೆ.

ರಣಬಿಸಿಲಿಗೆ ಸುಟ್ಟು ಕರಿಕಾದ ಬಯಲಿನಂಥಾ ಹೆದ್ದಾರಿಯಲ್ಲಿ, ಉದ್ದಕ್ಕೂ ಪೂರ್ಣ ಎದುರುಗಾಳಿಯ ತಡೆಯನ್ನು ಉತ್ತರಿಸುತ್ತ ನಿಧಾನಕ್ಕೆ ಸಾಗಿದೆವು. ಜೈಕಾರ ಹಾಕುವ ಮಂದೆ ತುಂಬಿದ ವಾಹನಗಳ ನಿರಂತರ ದೌಡು ನಡೆದಿತ್ತು. ಮೂಲ್ಕಿ ಸೇತುವೆಯ ಬಳಿಯ ಪೋಲಿಸ್ ಚೌಕಿಯವರು ನಮ್ಮನ್ನು ಗುರುತಿಸಿ, ಮೆಚ್ಚಿದಂತೆ ಚಪ್ಪಾಳೆ ತಟ್ಟಿದರು. ಪಡುಪಣಂಬೂರು ಬಳಿ ತಲೆಗೆ ಒಂದೆಲೆಯ ನೆರಳು, ಕ್ಷಣಾರ್ಧಕ್ಕಾದರೂ ಅಂಡೂರಲು ಒಂದು ನಾಯಿಕಟ್ಟೆಯೂ ಇಲ್ಲದಲ್ಲಿ ಬೆಳಗಿನಿಂದಲೂ ಒಣಗುತ್ತ ವಾಹನ ಸಂಚಾರದ ಮೇಲೆ ನಿಗಾವಹಿಸಿದ್ದ ಇಬ್ಬರು ಪೋಲಿಸರ ಮೇಲೆ ಅನುಕಂಪದಿಂದ ವಿಚಾರಿಸಿಕೊಂಡೆ – “ಇದ್ಯಾವ ಧರ್ಮ?” ಭದ್ರತೆಯ ಬಿಗಿಯೋ ಆಡಳಿತ ಪಕ್ಷದ ಪರೋಕ್ಷ ಸೇಡೋ – ಮಂಗಳೂರು ಸಮೀಪಿದಂತೆ ಹಸಿವು ಬಾಯಾರಿಕೆಗಳಿಗೆ ಹೋಟೆಲು, ಗೂಡಂಗಡಿ ಬಿಟ್ಟು, ಮರಗಟ್ಟೆಗಳ ನೆರಳಲ್ಲಿ ಬೊಂಡ ಮಾರುವವರೂ ಉಳಿದಿರಲಿಲ್ಲ! ಪಾವಂಜೆಯಲ್ಲಿ ಮುಚ್ಚಿದ್ದ ಗೂಡಂಗಡಿಯ ನೆರಳಿನಲ್ಲಿ ಐದು ಮಿನಿಟು ವಿಶ್ರಮಿಸಿದ್ದೆವು. ಬಿಜಾಪುರದ ಎರಡು ತರುಣ ಪೋಲಿಸರು ಅಲ್ಲಿ ನಿಯುಕ್ತರಾಗಿದ್ದರು.

`ಬಲಪ್ರದರ್ಶನ’ದ ಪರಿಣಾಮಗಳು ನಾಳೆಗೂ ಶಾಂತಿಯುತವಾಗಿಯೇ ಇದ್ದರೆ ನಾಡಿದ್ದು ತಾವು ಸುಖವಾಗಿ ಮನೆ ತಲಪುವ ಆಶಯದಲ್ಲಿದ್ದರು. ನಮ್ಮದೇನಿದ್ದರೂ ಇನ್ನು ಅರ್ಧ-ಮುಕ್ಕಾಲು ಗಂಟೆ ಎಂಬ ಯೋಚನೆಯ ಬಲದಲ್ಲೇ ಬಲಸಂಚಯಿಸಿ ನಾಲ್ಕು ಗಂಟೆಗೆ ಮನೆ ಸೇರಿದೆವು. ಪುರಾಣಕಥನಗಳಲ್ಲಿ ಓದಿದ್ದು ನಿಜವಾದಂತೆ ಆಗ ಜುಂಪರು ಮಳೆಯಾಗಿ ನಮ್ಮನ್ನು ಆಕಾಶ ಸಮ್ಮಾನಿಸಿತ್ತು! ಒಟ್ಟಾರೆ ಸಾಧನೆ ೧೨೪ ಕಿಮೀಯಾದರೂ ಸಮಯದ ಹರಹು (ವೀಕ್ಷಣೆ, ವಿಶ್ರಾಂತಿ, ತಿಂಡಿ, ಊಟ ಇತ್ಯಾದಿ ಸೇರಿ) ಎಂಟು ಗಂಟೆಯನ್ನು ಮೀರಿದರೂ ಗಳಿಸಿದ ಅನುಭವ ಅದಕ್ಕೂ ಮಿಗಿಲಾಗಿ ಸ್ಥೈರ್ಯ ನಮ್ಮನ್ನು ನಾಳೆ (೧೪-೩-೨೦೧೫) ಬೆಳಗ್ಗಿನಿಂದ ತೊಡಗುವ ಎರಡು ದಿನಗಳ ಮಜಲೋಟದಲ್ಲಿ ಯಶಸ್ವಿಯಾಗಿ ಬೆಂಗಳೂರು ಮುಟ್ಟಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.