‘ಕ್ಷಮಿಸಿ, ನಾವು ಚೀಲ ಕೊಡುವುದಿಲ್ಲ. ಪರಿಸರದ ಉಳಿವಿಗಾಗಿ ಪ್ಲ್ಯಾಸ್ಟಿಕ್ ಬೇಡ ಎನ್ನಿ. ಕಾಡಿನ ರಕ್ಷಣೆಗಾಗಿ ಕಾಗದ ಮಿತವಾಗಿ ಬಳಸಿ. ನಿಮ್ಮ ಪುಸ್ತಕಕ್ಕಾಗಿ ನೀವೇ ಚೀಲ ತನ್ನಿ!’ ಇದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ, ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಮುದ್ರಿಸಿ ನನ್ನ ಅಂಗಡಿಯ ಮೇಜಿನ ಮೇಲೆ ಹಲವು ವರ್ಷಗಳಿಂದ ಹಾಕಿಕೊಂಡೇ ಇದ್ದೇನೆ, ಆಚರಿಸುತ್ತಲೂ ಇದ್ದೇನೆ. ದುರ್ದಾನ ಪಡೆದವರಂತೆ ಮುಖಭಾವ, ಅವಹೇಳನಕಾರಿ ನಡೆ, ಖರೀದಿಸಿದ್ದನ್ನೇ ತಿರಸ್ಕರಿಸಿ ಹೋಗುವ ಕ್ರಮಗಳೂ ಇಲ್ಲದಿಲ್ಲ! ತಮ್ಮ ಪರಿಸರಪ್ರೇಮದ ಬಗ್ಗೆ ಕೊರೆದು, “ನನಗೆ ಬೇಡಾ ಆದರೇ…” ಎಂದು ಮತ್ತೆ ನನಗೆ ಏನೇನೂ ಹೊಸದಲ್ಲದ, ಸರಕಾರ ಪ್ಲ್ಯಾಸ್ಟಿಕ್ ಕುರಿತು ನಿಗದಿಪಡಿಸಿದ ಬಣ್ಣ ಮತ್ತು ದಪ್ಪದ ಬಗ್ಗೆ ವಿವರಣೆ (ಇದೂ ಪ್ರಕೃತಿಪರವೇನೂ ಅಲ್ಲ, ಸಮಾಜಕ್ಕೊಂದು ರಿಯಾಯ್ತಿ), ಮರುಬಳಕೆಗೆ ಪ್ರೇರಿಸುವ ದಪ್ಪದ ಮತ್ತು ಅಂದದ ಪ್ಲ್ಯಾಸ್ಟಿಕ್, ಬಯೋ ಡಿಗ್ರೇಡಬಲ್ ಪ್ಲ್ಯಾಸ್ಟಿಕ್, ಹತ್ತಿಯದೋ ಸೆಣಬಿನದೋ ಚೀಲಗಳು, ಹಳೆಂii ಪತ್ರಿಕೆಗಳನ್ನೇ ಸಾಕಷ್ಟು ಅಂಟು, ಬಲಯುತವಾದ ಹಿಡಿಕೆಗಳನ್ನೊದಗಿಸಿ ಮಾಡಿದ ‘ಪರಿಸರಪ್ರೇಮಿ’ ಚೀಲ ಇತ್ಯಾದಿ ನೂರೆಂಟು ಸಲಹೆ ಕೊಡುವ ಜನಗಳಿಗೆ (ನಮ್ಮೊಡನಿದ್ದೂ ನಮ್ಮಂತಾಗದವರು) ಕೊರತೆ (ಕೊರೆತ?) ಎಂದೂ ಆದದ್ದಿಲ್ಲ (ಮುಗಿದದ್ದಿಲ್ಲ!). ಅಂಗಡಿ ಮತ್ತು ಪರಿಸರಪ್ರೇಮವನ್ನು ಜಾಹೀರುಗೊಳಿಸುವ ಚೀಲಗಳನ್ನು “ಕ್ರಯಕ್ಕೇ ಕೊಡಿ” ಎಂದು ಸಜೆಸ್ಟುವವರಿಗೂ ಕೊರತೆಯಿಲ್ಲ. ಇವೆಲ್ಲ ನನಗೆ ತಿಳಿಯದ್ದೇನೂ ಅಲ್ಲ. ನಾನು ಕೇವಲ ನಕ್ಕು ಸುಮ್ಮನಿರುತ್ತೇನೆ.

ಜಿಪುಣತನವೋ ಸೇವೆಯಲ್ಲಿ ಅಸೌಜನ್ಯವನ್ನೋ ಆರೋಪಿಸುವವರು ಈಗಲೂ ಇದ್ದಾರೆ (ಆದರೆ ಮೊದಲಿನಷ್ಟುಹೆಚ್ಚಲ್ಲ). ಅಂಥಲ್ಲಿ ತಡೆಯದೆ ನಾನು “ಪ್ಲ್ಯಾಸ್ಟಿಕ್ ಪ್ರಸಾರದ ಒಂದು ಮೂಲವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ನಿಮ್ಮ ಪಾಲೇನು (ಬಳಕೆದಾರ ಸಮಾಜದ ಪಾಲುಗಾರಿಕೆ)” ಎಂದು ಒಮ್ಮೊಮ್ಮೆ ಕೇಳಿಬಿಡುವುದು ಅನೇಕರಿಗೆ ಉದ್ಧಟತನವೆಂದೇ ಅನಿಸುತ್ತದೆ. ಕೆಲವರು “ಎಲ್ಲ ಕೊಡ್ತಾರೆ, ನಿಮ್ಮದೊಂದು ಏನು ಮಹಾ” ಎಂಬ ಪ್ರಶ್ನೆಗೆ (ಹನಿಗೂಡಿದರೆ ಹಳ್ಳ – ಗಾದೆ. ಸವಲತ್ತುಗಳನ್ನು ಕೊಟ್ಟವರಿಗೆ ಹಿಂದೆ ತೆಗೆದುಕೊಳ್ಳುವ ಸ್ವಾತಂತ್ರ್ಯ ಎಂದು ಹರಣವಾಯ್ತು?), “ಇದೇ ನನ್ನ ಕೊನೆಯ ಭೇಟಿ” ಎಂದು ಕಾಲು ಝಾಡಿಸಿ ಹೋಗುವವರಿಗೆ (ಅವರೇ ಇನ್ನೊಮ್ಮೆ ಬಂದರೆ, ನಾನು ಜ್ಞಾಪಕವಿಟ್ಟು ಖಂಡಿತಾ ತಳ್ಳುವವನಲ್ಲ), “ದೊಡ್ಡದಾಗಿ ಹೊರಗೆ ಬೋರ್ಡು ಹಾಕಿ” ಎನ್ನುವವರಿಗೆ ನನ್ನದು ಮತ್ತೆ ಮೌನವೇ ಉತ್ತರ. ಇಲ್ಲದ್ದರ ಬಗ್ಗೆ ಬೋರ್ಡು ಬರೆಸಿದವರುಂಟೇ? ಮತ್ತೆ ಒಳಗೆ ಬಂದವರಿಗೆಲ್ಲಾ ಕಡ್ಡಾಯ ಪುಸ್ತಕ ಕೊಳ್ಳಬೇಕೆಂದು ನಾನು ಬಿಡಿ, ಯಾವ ಅಂಗಡೀಯಾತನೂ ಒತ್ತಾಯಿಸಲಾರ. ಹಾಗೆ ಬರೆಸಿ ಹಾಕಿದಾಗಲೂ ಜನ ಅರ್ಥೈಸಿಕೊಳ್ಳುವ ಪರಿಗೆ ನಾನು ಈಚೆಗೆ ಸ್ಕೂಲ್ ಬುಕ್ ಕಂಪನಿಯಲ್ಲಿ ಕಂಡದ್ದನ್ನು ಹೇಳಬೇಕು. ಅವರ ಪುಸ್ತಕ ವಿಭಾಗಕ್ಕೆ ಹವಾನಿಯಂತ್ರಣವನ್ನು ಜೋಡಿಸಿರುವುದರಿಂದ ಕನ್ನಡಿ ಬಾಗಿಲು ಮುಚ್ಚಿಕೊಂಡಿರುತ್ತದೆ. ಅದನ್ನು ನೂಕಿ ಒಳ ಬರುವ ಕೆಲವರು ಸಂಶಯಚಿತ್ತರಾಗಿ ಪಾದರಕ್ಷೆಗಳನ್ನು ಹೊರಬಿಟ್ಟು ಬರುತ್ತಿದ್ದರಂತೆ ಮತ್ತೆ ಕೆಲವರು ಅನಂತರ ಅವನ್ನು ಕಳೆದುಕೊಂಡು ದೂರಿದ್ದೂ ಇತ್ತಂತೆ. ಅವರೀಗ ಬಾಗಿಲ ಮೇಲೆ ದೊಡ್ಡದಾಗಿ ಬರೆಸಿದ್ದಾರೆ “ನಿಮ್ಮ ಪಾದರಕ್ಷೆಗಳನ್ನು ಬಿಡಬೇಡಿ, ಧರಿಸಿಕೊಂಡೇ ಬನ್ನಿ.” ಈಗ ಚಪ್ಪಲಿ ಬಿಡುವವರ ಸಂಖ್ಯೆ ಹೆಚ್ಚಿದೆಯಂತೆ!

ಆಧುನಿಕ ಸರ್ವಸರಕುಗಳ ಬೃಹತ್ ಮಳಿಗೆಗಳಂತೂ ಮುಟ್ಟಿದ್ದಕ್ಕೆ, ಬಿಟ್ಟದ್ದಕ್ಕೆ ಪ್ಲ್ಯಾಸ್ಟಿಕ್ ಲಕೋಟೆಗಳ ಭಾರೀ ಸುರುಳಿಗಳನ್ನೇ ಬಿಡಿಸಿ, ಹಿಡಿಸುತ್ತದೆ; ನಿರಾಕರಿಸಿದವರು ಗಮಾರರು! ಸ್ಪಾರ್, ಮೋರಿನ ನೌಕರಂತೂ ಹಾಗೇ ಸಾಮಾನುಗಳನ್ನು ಒಯ್ಯುವ ಉತ್ಸಾಹಿಗಳು, ತಮ್ಮದೇ ಚೀಲ ತಂದು ಬಳಸುವ ಗಿರಾಕಿಗಳನ್ನು ತಮ್ಮ ಸುಲಭ ಕಾರ್ಯನಿರ್ವಹಣೆಗೆ ತೊಂದರೆ ಮಾಡುವವರೂ ಎಂದೇ ಕಾಣುತ್ತಾರೆ.

ಒಳ್ಳೆಯ ಪುಸ್ತಕ ಕೇಳುವುದಕ್ಕಿಂತಲೂ ಮಿಗಿಲಾಗಿ ನಾನು ಕೊಡುವ ಪುಸ್ತಕವನ್ನು ಹೇಗೆ ಕೊಡುತ್ತೇನೆ, ಕೊಡಬೇಕು ಎಂಬುದನ್ನು ನಿರ್ಧರಿಸುವ ಬಾಹ್ಯ ಶಕ್ತಿಗಳು ಹೆಚ್ಚಿದಂತೆಲ್ಲ ನನ್ನ ಹಠ ಹೆಚ್ಚಿತು. “ನಾನು ಬೈಕಿನಲ್ಲಿ ಬಂದೆ, ಪುಸ್ತಕವನ್ನು ಹಿಡಿದುಕೊಳ್ಳುವುದು ಹೇಗೆ”, “ನಾನು ಹೀಗೇ ಬಂದವ ಪುಸ್ತಕ ಕೊಂಡೆ, ಈಗ ಒಯ್ಯುವುದು ಹೇಗೆ” ಎಂದಿತ್ಯಾದಿ ಕೇಳುವವರಿಗೆ ಕೊರತೆಯಿಲ್ಲ. ಯಾವುದೇ ವಾಹನ ವಿನ್ಯಾಸದಲ್ಲೂ ವ್ಯಕ್ತಿ ಮತ್ತಾತನ ಕನಿಷ್ಠ ಆವಶ್ಯಕ ಸಾಮಗ್ರಿ ಸಾಗಿಸಲೊಂದು ವ್ಯವಸ್ಥೆ ಇದ್ದೇ ಇರುತ್ತದೆ. ಬೈಕುಗಳಲ್ಲಿನ ಟ್ಯಾಂಕಿನ-ಚೀಲ, ಕೆಲಬಲಗಳ ಸಂಚಿ (saddle bag), ಆಸನದ ಕೊನೆಯಲ್ಲಿ ಹೊರೆಗಾಗಿಯೇ ಇರುವ ಕ್ಯಾರಿಯರ್ರು, ಲೋಹ/ ಫೈಬರ್ಗಳ ಬಹು ನಮೂನೆಯ, ವರ್ಣದ ಡಬ್ಬಿ, ತನ್ನದೇ ಬೆನ್ನಿಗೋ ಬಗಲಿಗೋ ನೇತಾಡಿಸಿಕೊಳ್ಳಬಹುದಾದ ಸಾವಿರಾರು ನಮೂನೆಯ ಚೀಲಗಳೆಲ್ಲ ಇಂಥವರ ಕಣ್ಣು ತಪ್ಪಿದ್ದಿರಬಹುದೇ? ಸ್ಕೂಟರ್ ಜಾತಿಯ ವಾಹನಗಳಲ್ಲಂತೂ ಮಿನಿ ಲಾರಿಯ ಹೊರೆಯನ್ನೇ ಹೇರಿ ನಿರುಮ್ಮಳವಾಗಿ ಸಾಗುವ ಸೌಕರ್ಯವಿರುವಾಗ ಒಂದೋ ನಾಲ್ಕೋ ಪುಸ್ತಕಕ್ಕೆ ಅವಕಾಶವಿಲ್ಲದೇ ಹೋಯ್ತೇ? ಅದು ಬಿಡಿ, ಇವರು ಹೇಗೆ ಬಂದರು, ಹೇಗೆ ಒಯ್ದರು ಎನ್ನುವುದನ್ನೇ ಮುಂದುವರಿಸಿದರೆ ಮತ್ತದನ್ನು ಏನು ಮಾಡಿದರು ಎನ್ನುವುದೆಲ್ಲ ‘ನನ್ನ (ವ್ಯಾಪಾರಿಯ) ಕಾಳಜಿ ಯಾಕಾಗಬೇಕು’ ಎಂದು ಮರುಪ್ರಶ್ನಿಸಿದರೆ ಬಲು ಕುರುಡು (Crudeನ ತದ್ಭವ) ಪೆಟ್ಟಾಗದೇ?

ನಾನು ಅಂಗಡಿ ತೆರೆದ ಹೊಸತರಲ್ಲಿ (೧೯೭೫) ಹಳೆ ಪತ್ರಿಕೆಗಳಿಂದ ವಿವಿಧ ಗಾತ್ರದ ಲಕೋಟೆಗಳನ್ನು ಮಾಡಿ (ಗೃಹ ಕೈಗಾರಿಕೆಗಳು ಎನ್ನಿ), ಮುಕ್ತ ಮಾರುಕಟ್ಟೆಯಲ್ಲಿ ಒದಗಿಸುವ ವ್ಯವಸ್ಥೆ ಇತ್ತು, ಆಗ ನಾನು ವರ್ಷಕ್ಕೊಮ್ಮೆಯಾದರೂ ಎರಡು ಗಾತ್ರಗಳಲ್ಲಿ ಸಾವಿರಾರು ಲಕೋಟೆಗಳನ್ನು ಕೊಳ್ಳುವುದು ನಡೆದೇ ಇತ್ತು. ಆ ಪತ್ರಿಕೆಗಳ ಮಸಿ ಕೈ ಮತ್ತು ತೊಟ್ಟ ಬಟ್ಟೆಗಳಿಗೆ ಹತ್ತುತ್ತಿತ್ತು. ಬೇಸಗೆಯ ದಿನಗಳಲ್ಲಿ ಬೆವರಿಗೆ ಮಳೆಯ ದಿನಗಳಲ್ಲಿ ನೀರಿಗೆ ಲಕೋಟೆ ಪಿಸಿದು ‘ಪುಸ್ತಕಗಳು ಬೆತ್ತಲೆಯಾಗುತ್ತಿದ್ದದ್ದು’ (ತಮಾಷೆ ಅಲ್ಲ ಸ್ವಾಮಿ, ಹಲವರಿಗೆ ‘ಪುಸ್ತಕವನ್ನು ಹೀಗೇ ಹಿಡಿದುಕೊಂಡು ಹೋಗುವುದೇ’ ಪ್ರಾಮಾಣಿಕವಾಗಿ ಸಂಕೋಚದ ಸಂಗತಿ, ಬಗೆಹರಿಯದ ಪ್ರಶ್ನೆ!) ನನ್ನನ್ನು ಮತ್ತೆ ಮೊದಲು ಹೇಳಿದ ಪರಿಸ್ಥಿತಿಗೇ ತಳ್ಳುತ್ತಿತ್ತು. ಜಿಪುಣತನ ಮತ್ತು ಸೇವೆಯಲ್ಲಿ ಅಸೌಜನ್ಯದ ಆರೋಪ ಪಟ್ಟಿ… “ನನಗೆ ಬೇಡಾ ಆದರೇ…” ಗಳು, ವಾಸ್ತವವಾಗಿ ಎಲ್ಲಾ ಯುಗಕ್ಕೂ ಪಲ್ಲವಿಯಾಗುವಂತೆ ನಾನು ಕೇಳಲು ತೊಡಗಿದ್ದೇ ಅಂದು. Possiblity (ಸಾಧ್ಯತೆ) + facility (ಸೌಕರ್ಯ, ಅನುಕೂಲಗಳು) ಅಥವಾ ability (ಸಾಮರ್ಥ್ಯ) = feasibility (ಸಂಭವನೀಯ? ಕಾರ್ಯಸಾಧ್ಯ?) ಎಂದೇ ಉದ್ಭವಿಸಿರಬಹುದಾದ ಶಬ್ದಕ್ಕೆ ಅರ್ಥ ನನ್ನ ಕೆಲಸದಲ್ಲಿ ಹುಡುಕುತ್ತಿದ್ದೆ. ನನ್ನ ಪೂರೈಕೆದಾರತನಕ್ಕೆ ಗಡಿರೇಖೆಯನ್ನು ಸಾರ್ವಜನಿಕ ಆವಶ್ಯಕತೆ ಮತ್ತು ನನ್ನ ಆರ್ಥಿಕತೆಗಳ ಸಮತೋಲನದಲ್ಲಷ್ಟೇ ಕಂಡುಕೊಂಡಿದ್ದೆ. ಆ ಸಮಯದಲ್ಲಿ ನನಗೆ ಬಿಲ್ಲು ಪುಸ್ತಕಗಳನ್ನೆಲ್ಲ ಮುದ್ರಿಸಿ ಕೊಡುತ್ತಿದ್ದ ಸಲ್ಲಕ್ ಪ್ರಿಂಟರ್ಸಿನ ಮಾಲಿಕ, ವಿಚಾರವಂತ ಲೇಖಕ, ಹಿರಿಯ ಗೆಳೆಯ ವೇಗಸ್ (ಈಚೆಗೆ ಇನ್ನಿಲ್ಲವಾದರು) ಕೊಟ್ಟ ಸಲಹೆ ಅಪ್ಯಾಯಮಾನವಾಯ್ತು. ಸಗಟಿನಲ್ಲಿ ನಾಲ್ಕೈದು ಪೈಸೆಗೊಂದು ಬರುತ್ತಿದ್ದ ದುರ್ಬಲ, ಕೊಳಕು, ಜಾಹೀರಾತುರಹಿತ ಕಾಗದದ ಲಕೋಟೆಗಳಿಗಿಂತ ಎರಡು ಮೂರು ಪೈಸೆ ಕಡಿಮೆಗೇ ದಕ್ಕುತ್ತಿದ್ದ ತೆಳು, ಅಚ್ಚಬಿಳುಪಿನ ಮೇಲೆ ನನಗೆ ಬೇಕಾದಂತೆ ‘ಅತ್ರಿ’ ಸಾರುವ, ದೀರ್ಘ ಬಾಳ್ತನವಿರುವ ಪ್ಲ್ಯಾಸ್ಟಿಕ್ ಲಕೋಟೆಗಳನ್ನು ಒಮ್ಮೆಗೆ ಅಪ್ಪಿಕೊಂಡೆ (ನಿಖರ ಬೆಲೆಗಳಲ್ಲಿ ನಾನು ತಪ್ಪಿರಬಹುದು).

ಸುಲಭದಲ್ಲಿ ಹರಿಯದ, ಪುಸ್ತಕಕ್ಕೆ ನೀರು, ಬೆವರುಗಳ ರಕ್ಷಣೆ ಕೊಡುವುದರೊಡನೆ ಹಗುರವಾಗಿಯೂ ಇರುವ ಪ್ಲ್ಯಾಸ್ಟಿಕ್ ಚೀಲಗಳು ಬಂದು ಗಿರಾಕಿಗಳ ಪಲ್ಲವಿ ಬದಲಿಂದು ತಿಳಿದಿರಾ? ಇಲ್ಲ – ಅಸಹನೆ, ಗೊಣಗುವಿಕೆ, ಜಗಳಕಾಯುವುದು ಎಷ್ಟೋ ಬಾರಿ ವ್ಯಕ್ತಿಗಳ ಮನಃಸ್ಥಿತಿಯೇ ಹೊರತು ಒದಗುವ ಸೌಕರ್ಯಗಳ ಕೊರತೆಯಲ್ಲ. ಬನಿಯನ್ ಬ್ಯಾಗ್, ಗಿಫ್ಟ್ ಪ್ಯಾಕಿಂಕ್, ಅದೂ ಸಣ್ಣ ಮಕ್ಕಳ ಬರ್ತ್ ಡೇ ಪಾರ್ಟಿ ಅಂದರಂತೂ ಅತಿಥಿಗಳಾಗಿ ಬರುವ ಎಲ್ಲ ಪುಟಾಣಿಗಳಿಗೂ ಕೊಡುವ ಸಂಕಟಕ್ಕೆ, ಚಿಲ್ಲರೆ ಚಿಲ್ಲರೆ ಪುಸ್ತಕಗಳಿಗೂ ಸೆಪ್-ಸೆಪ್ರೇಟ್ ಕನಿಷ್ಠ ಕಲರ್ ಪೇಪರ್ ರ‍್ಯಾಪಿಂಗ್ ಎನ್ನುವುದೆಲ್ಲಾ ಹಕ್ಕೊತ್ತಾಯಗಳೇ! ಭರ್ಜರಿ ಯೂನಿಫಾರ್ಮ್-ಮಕ್ಕಳ ಶಾಲೆಯಲ್ಲಿ ಹತ್ತೋ ನೂರೋ ಮಂದಿಯನ್ನು ಪುರಸ್ಕಾರ ಯೋಗ್ಯರೆಂದು ಆರಿಸುತ್ತಾರೆ. ಆದರೆ “ನಮ್ಮ ಬಜೆಟ್ಟು (ಚೀಪಾಗಬೇಕು) ಹತ್ತು ರೂಪಾಯಿಯ ರತ್ನ ಕೋಶ, ಹದಿನೈದು ರೂಪಾಯಿಯ ಜನರಲ್ ನಾಲೆಜ್, ಇಪ್ಪತ್ತು ರೂಪಾಯಿಯ ಪಾಕೆಟ್ ಕೋಶಗಳು.” ಈ ಯೂನಿಫಾರ್ಮ್ ಬಹುಮಾನಗಳನ್ನು ಆಯ್ದುಕೊಳ್ಳುವ ಚೀಟರುಗಳು (ಇವರು ಟೀಚರುಗಳಿರಬಹುದೇ?) ಎಲ್ಲದರ ಬೆಲೆ ನಮೂದನ್ನು ಅಳಿಸಿ, ಫಸ್ಟೂ ಸೆಕೆಂಡೂ ಥರ್ಡೂಂತ ಕನಿಷ್ಠ ಮೂರು ವರ್ಣದ ಲಕ್ಕೋಟೆಗಳಿಗೆ (ಉಚಿತವಾಗಿ) ಹಕ್ಕೊತ್ತಾಯ ಮಂಡಿಸುವುದನ್ನೂ ಸಾಕಷ್ಟು ಕಂಡಿದ್ದೇನೆ. ಮುದ್ರಿತ ಪುಟಗಳನ್ನು ಒಟ್ಟು ಹಿಡಿದಿಟ್ಟುಕೊಳ್ಳಲು, ರಕ್ಷಿಸಿಕೊಡಲು, ಪುಸ್ತಕದ ಭಾಗವಾಗಿಯೇ ಮುದ್ರಣಗೊಂಡು, ಬಂಧದಲ್ಲಿ ಒಂದಾಗಿ ಬರುವ ಗಟ್ಟಿ, ಸುಂದರ ಹೊದಿಕೆ ಇಂದು ಅರ್ಥವನ್ನೇ ಕಳೆದುಕೊಂಡಿರುವುದು ಈ ಯೂನಿಫಾರ್ಮ್‌ಗಳಿಂದ; ಬ್ರಹ್ಮಾಸ್ತ್ರದ ಕಟ್ಟಿನ ಮೇಲೆ ಬಡಕಲು ಹಗ್ಗ ಬಿಗಿಯುವ ಮೂರ್ಖಮತಿಗಳಿಂದ. ಈಚೆಗೆ ನಮ್ಮ ವಸುಧೇಂದ್ರ ತಮ್ಮ ಪುಸ್ತಕ – ನಮ್ಮಮ್ಮ ಎಂದರೆ ನನಗಿಷ್ಟ, ಇದರ ಸಂಗ್ರಾಹಕ ಪ್ರತಿಯನ್ನು ಪ್ರಕಟಿಸಿದರು. ಈ ರೀತಿಯಲ್ಲಿ ವಿದೇಶೀ ಪ್ರಕಟಣೆಗಳು ಬಹಳ ಮೊದಲೇ ಬರುತ್ತಿತ್ತು. ಈಚೆಗೆ ಭಾರತೀಯ ಇಂಗ್ಲಿಶ್ ಪ್ರಕಾಶಕರಂತೂ ಪುಸ್ತಕದ ಹೊದಿಕೆಗೆ ಲ್ಯಾಮಿನೇಶನ್ (ಪ್ಲ್ಯಾಸ್ಟಿಕ್ ಹಾಳೆ ಅಂಟಿಸುವುದು) ಇದ್ದರೂ ಸಾಲದೆಂಬಂತೆ ಪ್ರತಿ ಪುಸ್ತಕವನ್ನೂ ಬಿಗಿ ಪ್ಲ್ಯಾಸ್ಟಿಕ್ ಕವರಿನಲ್ಲಿ ತುಂಬಿ ಸೀಲು ಮಾಡಿಯೇ ಕಳಿಸುತ್ತಾರೆ. ಕೆಲವು ಸಂಪುಟಗಳ ಒಂದು ಕಟ್ಟು ಇದ್ದರಂತೂ ಗಟ್ಟಿ ರಟ್ಟಿನ ಡಬ್ಬಿಯಲ್ಲಿ ಒಟ್ಟು ತುಂಬಿ ಕೊಡುವುದೂ ಸಾಕಷ್ಟು ಹಿಂದಿನಿಂದ ಚಾಲ್ತಿಯಲ್ಲಿದೆ. ಕನ್ನಡ ವಾಲ್ಮೀಕಿ ರಾಮಾಯಣದ ಎರಡು ಸಂಪುಟಗಳನ್ನು ೧೯೭೨ಕ್ಕೂ ಹಿಂದೆಯೇ ಡಿವಿಕೆ ಮೂರ್ತಿಯವರು ಅಂದವಾಗಿ ಮುದ್ರಿಸಿ, ಬಿಗುವಾಗಿ ಹಿಡಿದಿಟ್ಟುಕೊಳ್ಳುವ ರಟ್ಟಿನ ಡಬ್ಬಿಯಲ್ಲಿ ಕೊಡಲು ಸುರು ಮಾಡಿದ್ದು ಈಗಲೂ (ನಾಲ್ಕನೇ ಮರುಮುದ್ರಣದಲ್ಲೂ) ಮುಂದುವರಿದಿದೆ. ಆದರೆ ಅತಿ ಬುದ್ಧಿಯವರು ಹೊದಿಕೆಯ ಮೇಲಿನ ಈ ಹೊದಿಕೆಗೂ ಒಂದು ಪ್ಯಾಕಿಂಗ್, ಒಂದು ಪ್ಲ್ಯಾಸ್ಟಿಕ್ ಕ್ಯಾರೀ ಬ್ಯಾಗ್ ಕೇಳುವಾಗ ನನಗಂತೂ ಮೈ ಉರಿದೇ ಹೋಗುತ್ತದೆ!

ಮಿಜಾರು ಸದಾನಂದ ಪೈ – (ನಗರದ ಹಿರಿಯ ಉದ್ಯಮಿ, ಚಿಂತಕ, ಕೆನರಾ ವಿದ್ಯಾ ಸಂಸ್ಥೆಗಳ ಸದಸ್ಯ, ಎಲ್ಲಕ್ಕೂ ಮಿಗಿಲಾಗಿ) ಭಾರೀ ಪುಸ್ತಕ ಪ್ರೇಮಿ, ಸ್ಟೇಪ್ಲರ್ ಪಿನ್ನು ಬಳಸುವುದನ್ನು ವಿರೋಧಿಸುತ್ತಿದ್ದರು! “ಲಕೋಟೆಗೆ ಅಂಟು ಬಳಸಿ, ಹಗ್ಗದಲ್ಲಿ ಕಟ್ಟಿ, ಕೊನೆಗೆ ಹಾಗೇ ಬಿಡಿ ಆದರೆ ಪಿನ್ನು ಮಾತ್ರ ಕೂಡದು” ಅವರ ವಾದ. ಎರಡಕ್ಕೂ ಮಿಕ್ಕ ಹಾಳೆಗಳನ್ನು ಒಟ್ಟು ಹಿಡಿಯುವ ಗುಂಡುಸೂಜಿಯ ಜಾಗದಲ್ಲಿ ಈ ಪಿನ್ನು ಕಂಡರಂತೂ ಮರುಬಳಕೆಯನ್ನು ನಿರಾಕರಿಸುವ ವ್ಯವಸ್ಥೆಯ ವಿರುದ್ಧ ಅವರು ಕೆಂಡಾಮಂಡಲವಾಗುತ್ತಿದ್ದರು. ಕಾಗದದ ಲಕ್ಕೋಟೆಯಿರಲಿ, ಪ್ಲ್ಯಾಸ್ಟಿಕ್ಕಿನದ್ದೇ ಬರಲಿ “ಇದಕ್ಕೊಂದು ಪಿನ್ನು ಹೊಡೀರೀ” ಎನ್ನುವವರಿಗೆ ಕೊರತೆಯಿಲ್ಲ. ಮಾಲ್, ದೊಡ್ಡ ಬಝಾರ್‌ಗಳಲ್ಲಂತೂ ಪುಟ್ಟ ಹೆಬ್ಬೆರಳು ಗಾತ್ರದಿಂದ ಮಾರುದ್ದದವರೆಗಿನ ತರಹೇವಾರಿ ಸ್ಟೇಪ್ಲರುಗಳಲ್ಲಿ ಪಿನ್ನು ಒಂದೇನು ಡಜನ್ನ್ ಒತ್ತುವ ಧಾರಾಳಿಗಳಿದ್ದಾರೆ. ಯಾವುದೇ ಕೊರಿಯರ್ ಕವರ್ ಗಮನಿಸಿ, ಕನಿಷ್ಠ ಮೂರು ಪಿನ್ನು ಹೊಡೆದಿರುತ್ತಾರೆ. ಉದಾಸೀನದಲ್ಲೋ ಕೆಲಸದ ಒತ್ತಡದಲ್ಲೋ ಅವನ್ನು ಕ್ರಮವಾಗಿ ಬಿಡಿಸಲು ತಪ್ಪಿ ಉಗುರು ಸಂದಿನಲ್ಲಿ ಗಾಯ ಮಾಡಿಕೊಳ್ಳುವುದು, ಬಂದ ಸಾಮಾನ್ಯ ಪತ್ರವಿರಲಿ ಎಷ್ಟೋ ಬಾರಿ ಅಮೂಲ್ಯ ದಾಖಲೆ, ಬ್ಯಾಂಕ್ ಡ್ರಾಫ್ಟ್ ಅಂಥವುಗಳನ್ನೇ ಹರಿದುಕೊಳ್ಳುವುದು ನಡೆದೇ ಇರುತ್ತದೆ. ಅವೆಲ್ಲವನ್ನು ಅವಗಣಿಸಿಯೂ ಕೇವಲ ಕಳಚಿ ಎಸೆಯುವ (ಎಲ್ಲಿಗೆ, ಎಷ್ಟು ಎಂದು ಬಹುಶಃ ಯಾರೂ ಲೆಕ್ಕ ಇಟ್ಟದ್ದಿಲ್ಲ) ಪಿನ್ನು ಪಿನ್ನುಗಳ ಲೆಕ್ಕ ತೆಗೆದರೆ ಎಷ್ಟೊಂದು ಪುನಃ ಸೃಷ್ಟಿ ಸಾಧ್ಯವಿಲ್ಲದ ಲೋಹಸಂಪತ್ತು ವ್ಯರ್ಥವಾಗುತ್ತಿದೆ ಎಂದು ಭಯವಾಗುತ್ತದೆ. ಸುಮ್ಮನೆ ನಗಾಡಬೇಡಿ, ಗಮನವಿಟ್ಟು ನೋಡಿ. ನಿಮ್ಮಲ್ಲಿರುವ ಸ್ಟೇಪ್ಲರ್ ಪಿನ್ನು ಪ್ಯಾಕೇಟ್ ಉತ್ತಮ ದರ್ಜೆ ಹಾಗೂ ಕಡಿಮೆ ಬೆಲೆಯದೇ ಆಗಿದ್ದರೆ ಅದು ಮೇಡಿನ್ ಜಪಾನ್! ಕರ್ನಾಟಕ ರಾಜ್ಯದಷ್ಟೂ ಭೂಭಾಗವಿಲ್ಲದ ಆದರೆ ಜಗತ್ತಿನ ಮುಂಚೂಣಿಯ ರಾಷ್ಟ್ರಗಳಲ್ಲಿ ಒಂದಾದ ಜಪಾನ್ ಇದನ್ನು ದಾನಕ್ಕೆ ಕೊಟ್ಟದ್ದಲ್ಲ ಎನ್ನುವುದನ್ನು ಮನಸ್ಸಿಗೆ ತಂದುಕೊಳ್ಳಿ. ಮನೆ, ಅಂಗಡಿಗಳಲ್ಲಿ ಬಿಡಿ, ರಾಜ್ಯ ದೇಶಗಳಲ್ಲಿ ಸಗಟಾಗಿ ವಾರ್ಷಿಕ ಸ್ಟೇಪ್ಲರ್ ಪಿನ್ನಿನ ಲೆಕ್ಕ (ಜಾಣ ಜಾಲಿಗರು ತೆಗೆದು ಹೇಳಬಹುದೋ ಏನೋ) ತೆಗೆದರೆ ಖಂಡಿತವಾಗಿ ನಾವು ಅರಿವಿಲ್ಲದೇ ಮಾಡುತ್ತಿರುವ ಪ್ರಾಕೃತಿಕ ಸಂಪತ್ತಿನ ಅವಹೇಳನ ಅಗಾಧವಿರುತ್ತದೆ. (ಇನ್ನೂ ಮುಂದುವರಿದು ಯೋಚಿಸಿದ್ದೇ ಆದರೆ ನಮ್ಮದೇ ಕುದುರೆಮುಖ ವಲಯದಲ್ಲೋ ಬಳ್ಳಾರಿಯಲ್ಲೋ ನಾವೇ ಕಾಡು ತಿಂದು, ಪರಿಸರಕ್ಕೆ ಹೂಳು, ಮಣ್ಣು ತುಂಬಿ, ಒಕ್ಕಿ ಕಳಿಸಿದ ಖನಿಜವೇ ಪರಿಷ್ಕಾರಗೊಂಡು ಮರಳಿ ಮಣ್ಣಿಗೆ ಸೇರಲು ಬಂದದ್ದೂ ಇರಬಹುದು!) ಈ ಕ್ಷುದ್ರಕ್ಕೆ ಹೋಲಿಸಿದರೆ ಎಷ್ಟೋ ಮೇಲಿನ ಪ್ಲ್ಯಾಸ್ಟಿಕ್ ಪ್ಯಾಕಿಂಗ್ ಅದಿನ್ನೆಷ್ಟು ಪರಿಸರ ಕೆಡಿಸುತ್ತಿದೆ ಎಂದು ಯೋಚಿಸುವ ವಿವೇಚನೆ ಇಂದು ಬೆಳೆಯಬೇಡವೇ?

ಕೆಲವು ವರ್ಷಗಳ ಹಿಂದೆ, ನನ್ನಜ್ಜನ ಮನೆಯ ಬಳಿಯಲ್ಲಿ ಬ್ರೆಡ್ ಕಾರ್ಖಾನೆಯೊಂದು ಎಸೆದ ಹಳೇ ಬ್ರೆಡ್ಡಿನ ಪರಿಮಳದಿಂದ ಆಕರ್ಶಿತವಾಗಿ ನಾಲ್ಕು ಹಸುಗಳು ಬಲಿಯಾದವು. ಮರಣೋತ್ತರ ಪರೀಕ್ಷೆಯಲ್ಲಿ ಎಲ್ಲಕ್ಕೂ ಹೊಟ್ಟೆಯಲ್ಲಿ ಗಡ್ಡೆ ಕಟ್ಟಿದ ಬ್ರೆಡ್ ಸುತ್ತಿದ್ದ ಪ್ಲ್ಯಾಸ್ಟಿಕ್ ಕಾರಣವೆಂದು ತಿಳಿದು ಬಂತು. ಮುಂಬೈಯಲ್ಲಿ ಮೇಘಸ್ಫೋಟವಾದದ್ದು ನಿಜ. ಆದರೆ ಅಂದು ಅಷ್ಟೂ ನೀರಿನ ಸಹಜ ಓಟಕ್ಕೆ ಭಂಗ ತಂದು ಸಾಮಾಜಿಕ ಅತಂತ್ರ ಮೂಡಿಸಿದ್ದು ಚರಂಡಿ ಚರಂಡಿಯಲ್ಲಿ ಕಟ್ಟಿದ ‘ನಾವೇ ಎಸೆದ’ ಪ್ಲ್ಯಾಸ್ಟಿಕ್! ಅವೆಲ್ಲಾ ಪ್ರಕಟವಾಗುವ ಕಾಲಕ್ಕೆ ನನಗೆ ಅಂಗಡಿಯಲ್ಲಿ ಒಟ್ಟಾರೆ ಔಪಚಾರಿಕ ‘ಪ್ಯಾಕಿಂಗ್’ ಬಗ್ಗೆಯೇ ಹೇವರಿಕೆ ಬಂದಿತ್ತು. ನಾನೇ ಮಾಡಿಸಿದ್ದ ಎರಡು ಗಾತ್ರದ ಪ್ಲ್ಯಾಸ್ಟಿಕ್ ಲಕೋಟೆಗಳೇನೋ ಮತ್ತೂ ಕೆಲವು ತಿಂಗಳು ವಿತರಣೆಗೆ ಬರುತ್ತಿದ್ದರೂ ಎಲ್ಲರೂ ಮಲಗಿರಲು ಧಿಗ್ಗನೆದ್ದ ಬುದ್ಧನಂತಲ್ಲದಿದ್ದರೂ ಘೋಷಿಸಿಬಿಟ್ಟೆ “ನಾನು ಚೀಲ ಕೊಡುವುದಿಲ್ಲ. Sorry, No Packing.” ಉಳಿದಷ್ಟೂ ಲಕೋಟೆಗಳನ್ನು ಉತ್ಪಾದಕರಿಗೇ ಮರಳಿಸಲು (ರಿಯಾಯ್ತೀ ದರದಲ್ಲಿ, ಕೊನೆಗೆ ಉಚಿತವಾಗಿಯೂ!) ಪ್ರಯತ್ನಿಸಿ ಸೋತೆ. ಕೊನೆಗೆ ಗುಜರಿಯವನಿಗೆ ತೂಕಕ್ಕೆ ಕೊಟ್ಟು ಮುಗಿಸಿದೆ. ಎಲ್ಲ ವಿವರಿಸಿ ಆ ಕಾಲಕ್ಕೇ ಉದಯವಾಣಿಯಲ್ಲಿ ನಾನೊಂದು ಲೇಖನವನ್ನೂ ಬರೆದೆ. (ಈ ಸಲ ಬ್ಲಾಗಿಗೆ ಅದನ್ನು ಉದ್ಧರಿಸಿ, ಕಾಲಕ್ಕೆ ತಕ್ಕಂತೆ ಪರಿಷ್ಕರಿಸಿ, ವಿಸ್ತರಿಸಬೇಕೆಂದೇ ಹೊರಟವನಿಗೆ ಹಳೇ ಕತ್ತರಿಕೆ ಸಿಕ್ಕದೇ ಹೋಯ್ತು)

ಓದುವ ಪುಸ್ತಕಕ್ಕೆ ಕರ ಭಾರವಿಲ್ಲ, ಚೀಲಕ್ಕಿದೆ. ಚೀಲದ ಸೌಲಭ್ಯವೋ ಪರಿಸರ ಪ್ರೀತಿಯ ಪ್ರಸಾರದ ನೆಪದಲ್ಲೋ ಎಂದೂ ವಾಣಿಜ್ಯ ಕರ ಕೊಡದ ನಾನು ಅದರಲ್ಲಿ ಸಿಕ್ಕಿಕೊಳ್ಳಲು ಸಿದ್ಧನಿಲ್ಲ. ಅದೇ ಸಾರ್ವಜನಿಕರು ಅಯಾಚಿತವಾಗಿ ಅನ್ಯ ಮೂಲಗಳಿಂದ ಸಂಗ್ರಹವಾದ ಚೀಲಗಳನ್ನು ಮರುಬಳಸಲು ಇಲ್ಲೊಂದು ಅವಕಾಶವಿದೆ ಎಂದು ಉತ್ತೇಜಿತರಾಗುವುದು ಮೊದಮೊದಲು ಇರಲೇ ಇಲ್ಲ. ಆದರೆ ಈಚಿನ ದಿನಗಳಲ್ಲಿ ಮಾತ್ರ ಜಾಗೃತಿ ಹೆಚ್ಚಿದೆ. ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಮಂಗಳೂರು ಮಹಾನರಕ ಪಾಲಿಕೆಂ ಕಮಿಶನರ್ ಆಗಿದ್ದ ವೇಳೆಯಲ್ಲಂತೂ (ಸ್ವರ್ಗ ಮಾಡುವ ಕ್ರಮದಲ್ಲಿ) ನನ್ನಿಂದ ಯಾವ ಸೂಚನೆಯೂ ಇಲ್ಲದೆ ತಮ್ಮ ಪ್ಲ್ಯಾಸ್ಟಿಕ್ ನಿಯಂತ್ರಣ ಸಭೆಗಳಲ್ಲಿ ಆದರ್ಶಕ್ಕೆ ನನ್ನ ಅಂಗಡಿಯನ್ನು ಹೆಸರಿಸಿ, ಪರೋಕ್ಷ ಸಮ್ಮಾನವನ್ನೇ ಮಾಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸಲೇ ಬೇಕು. ನಾನು ಬಿಲ್ಲು ಮಾಡುತ್ತಿರುವಾಗಲೇ ತಾವು ಮಡಿಚಿ ತಂದ ಪ್ಲ್ಯಾಸ್ಟಿಕ್ ಚೀಲಗಳನ್ನು ಬಿಡಿಸಿ ಒಡ್ಡುವವರು ಸಾರ್ವಜನಿಕರಲ್ಲಿ ಹೆಚ್ಚಿದ ಪ್ರಜ್ಞಾವಂತಿಕೆಗೆ ಸಾಕ್ಷಿಗಳು. ಇನ್ನೂ ಕೆಲವರು ಬಟ್ಟೆಯ, ಹೆಚ್ಚಿನ ಭದ್ರತೆಯ ಚೀಲಗಳನ್ನು ತರುವುದಲ್ಲದೆ, “ನಿಮ್ಮ ಪ್ರೇರಣೆಯಲ್ಲಿ…” ಎಂದು ಹೇಳುವ ಮಾತುಗಳು ನನಗೆ ಧನ್ಯತೆಯಿಂದ ಎದೆದುಂಬುವ ಕ್ಷಣಗಳು!

‘ಅಭಯಾರಣ್ಯ’ ಮಾಡಿದ ಹೊಸತರಲ್ಲಿ ಕೇವಲ ಒಂದೆಕ್ರೆ ಜಾಗವಾದರೂ ಹಲವು ವಾರಾಂತ್ಯಗಳನ್ನು ಅಲ್ಲಿನ ನೆಲದಿಂದ ಗುಟ್ಕಾ ಚೀಟಿ, ತೊಟ್ಟೆ, ಒಡಕು ಬಾಲ್ದಿಯೋ ಡಬ್ಬಿಗಳದೋ ಚೂರು ಹೆಕ್ಕುವ ಕೆಲಸ ಮಾಡಿದ್ದೇವೆ. ‘ಅಶೋಕವನ’ದ ಪರಿಸರ ಇಷ್ಟು ಕೆಟ್ಟು ಹೋಗಿಲ್ಲ. ಆದರೂ ಕುಕ್ಕೇ ಸುಬ್ಬನನ್ನು ನೋಡಲು ಹೋಗಿ ಬರುವ ಭಕ್ತರು ಕ್ವಚಿತ್ತಾಗಿ ‘ವನವಿಹಾರಕ್ಕೆ’ ನುಗ್ಗಿ ಎಸೆದ ಬಿರ್ಯಾಣಿ ಪಾರ್ಸೆಲ್ಲಿನ ತೊಟ್ಟೆ, ಟೈಗರ್ ಬಿಸ್ಕತ್ತಿನ ಪಾಲಿಪ್ಯಾಕ್, ಅಂತಾರಾಷ್ಟ್ರೀಯ ಮಟ್ಟದ ಪರಿಶುದ್ಧ ಮಿನರಲ್ ವಾಟರ್ರೋ ಶಕ್ತಿಪೇಯಗಳನ್ನೋ ದುಡ್ಡೆಸೆದವರಿಗೆ ಕೊಟ್ಟು ಉಳಿದ ಶತಾಯುಷ್ಯವನ್ನು ಕಳೆಯಲು ಬಿದ್ದ ಪರ್ಲ್‌ಪೆಟ್ ಬಾಟಲುಗಳೋ ನಮಗೆ ಹೆಕ್ಕಲು ಧಾರಾಳ ಸಿಕ್ಕುತ್ತಲೇ ಇರುತ್ತವೆ! ಅಲ್ಲಿನ ನಮ್ಮ ಅಸಂಖ್ಯ ಪ್ರಕೃತಿ ಶೋಧದ ಚಾರಣಗಳಲ್ಲಿ ಜೊತೆಗೊಡುವ ಸ್ಥಳಿಯ ಮಾರ್ಗದರ್ಶಿಗಳಿಗೆ ನಾವು ಆಹಾರ ಸೇವಿಸಿದ ಮೇಲೆ ತೊಟ್ಟೇ ಬಾಟಲು ಎಸೆಯುವುದಿರಲಿ, ಯಾರೋ ಯಾವಾಗಲೋ ಎಸೆದದ್ದು ಕಂಡರೂ ಹೆಕ್ಕಿ ತರುವುದು ಭಾರೀ ತಮಾಷೆ. ಇಷ್ಟುದ್ದಕ್ಕೆ ತೂಕಡಿಸದೆ ಓದಿದ ನಿಮಗೂ ಹಾಗನ್ನಿಸುತ್ತದೆಯೇ? ನಿಮ್ಮನುಭವ ಕೋಶ ಸೂರೆಗೊಳ್ಳಲು ಕೆಳಗೆ ಪ್ರತಿಕ್ರಿಯಾ ಅಂಕಣ ತೆರೆದಿಟ್ಟಿದ್ದೇನೆ – ಜಾಗ್ರತೆ! ಹತ್ತೆಣಿಸುವುದರೊಳಗೆ ತುಂಬಲು ಸುರು ಮಾಡಬೇಕು ರೆಡೇ, ಒನ್, ಟೂ, ಥ್ರೀ…