`ವೈದಿಕ’ ಲೆಕ್ಕಾಚಾರಗಳ ಪ್ರಕಾರ ಮೊನ್ನೆ ೮-೩-೧೫ರಂದು ನನ್ನ ಮರಿಕೆಯ `ಅಣ್ಣ’ನ ವರ್ಷಾಂತಿಕ. ನನ್ನ ತಾಯಿಯ ತಂದೆ, ಅಜ್ಜ ಎ.ಪಿ. ಸುಬ್ಬಯ್ಯನವರ (೧೯೦೧-೧೯೭೭) ಹತ್ತು ಮಕ್ಕಳಲ್ಲಿ ಹಿರಿಯನಾದ್ದಕ್ಕೆ ಎ.ಪಿ.ತಿಮ್ಮಪ್ಪಯ್ಯ (೧೯೨೮-೨೦೧೪) ಮನೆಮಂದಿಗೆಲ್ಲಾ `ಅಣ್ಣ’. ಆತನ ಪ್ರಥಮ ತಂಗಿ, ನನ್ನಮ್ಮ – ಲಕ್ಷ್ಮೀ ದೇವಿ. ಸಂಬಂಧದಲ್ಲಿ ತಿಮ್ಮಪ್ಪಯ್ಯ ನನಗೆ ಸೋದರಮಾವನಾದರೂ ಬಳಕೆಯ ಬಲದಲ್ಲಿ ನನಗೆ ಅಣ್ಣನೇ. ಇಲ್ಲಿ ನಾನೊಂದು ಸ್ಪಷ್ಟೀಕರಣ ಕೊಡುವುದು ಅವಶ್ಯ. ನಾನು ಅಣ್ಣನಿಗೆ ಪ್ರಥಮ ಸೋದರಳಿಯ, ಸಲುಗೆ ಹೆಚ್ಚು. ಹಾಗೆ ರೂಢಿಸಿದ ಸಂಬೋಧನೆಯ ಏಕವಚನವನ್ನು ಇಲ್ಲಿಯೂ ಪ್ರೀತಿಪೂರ್ವಕವಾಗಿಯೇ ಮುಂದುವರಿಸಿದ್ದೇನೆ. ಅನಂತರ ಬಂದ ಸೋದರ ಅಳಿಯಂದಿರು ನನ್ನಷ್ಟು ಸ್ವಾತಂತ್ರ್ಯವಹಿಸದೇ ಬಹುವಚನದಲ್ಲೇ `ಅಣ್ಣಮಾವ’ ಎನ್ನುತ್ತಿದ್ದರು. ಮತ್ತೆ ಅಣ್ಣನ ಹೆಂಡತಿ, ಮನೆಮಂದಿಗೆಲ್ಲ ಅತ್ತಿಗೆಯಾದಾಕೆ – ರಮಾದೇವಿ, ನನಗೂ ಬಳಕೆಯ ಬಲದಲ್ಲಿ `ಅತ್ತಿಗೆ’ಯೇ.

ಅಂದಿನ ನನ್ನ ಬಾಲಮನಸ್ಸು ಆಕೆಯನ್ನು `ಹೊರಗಿನಾಕೆ’ಯೆಂದು ಗುರುತಿಸಿಯೋ ಏನೋ ಬಹುವಚನ ಬಳಸಿದ್ದಿರಬೇಕು, ಇಂದಿಗೂ ಅದೇ ರೂಢಿ. ಅದನ್ನು ಇಲ್ಲೂ ಮುಂದುವರಿಸಿದ್ದೇನೆ! ಲೇಖನದಲ್ಲಿ ಸಂಬಂಧಿಕರೆಲ್ಲರ ಕುರಿತು ಅದದೇ ರೂಢಿಯ, ಸಲುಗೆಯ ಸಂಬೋಧನೆಯನ್ನು ಬಳಸಿದ್ದೇನೆ – ಯಾರೂ ತಪ್ಪು ತಿಳಿಯಬಾರದು.

ಇನ್ನೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸದ ಹಂತದಲ್ಲಿ ಅಣ್ಣ ಒಂಟಿಯಾಗಿ ಕುಟುಂಬದ ವಿಸ್ತಾರ ನೆಲವನ್ನು ಸಾಹಸಿಕವಾಗಿ ಕೃಷಿಭೂಮಿಯಾಗಿ ಕುದುರಿಸುವಲ್ಲಿ ನೆಲೆ ನಿಂತ, ಯಶಸ್ವಿಯಾದ. ಇಂದಿಗೂ ಆತನ ಮೂರು ತಮ್ಮಂದಿರು, ಆರು ತಂಗಿಯರು, ಇಪ್ಪತ್ಮೂರು ಮುಂದಿನ ತಲೆಮಾರು (ತಮ್ಮ ತಂಗಿಯರ ಮಕ್ಕಳು. ಮತ್ತಿನವರು ಮಾತ್ರ ಆತನಲ್ಲಿ ಅಜ್ಜನನ್ನು ಕಂಡರು), ಸಮಾಜ ಇವನನ್ನು ಜೀವನದುದ್ದಕ್ಕೂ ಗುರುತಿಸಿದ್ದು ಸಾಹಸಿಯಾಗಿಯೇ. ಬಾಲ್ಯದಲ್ಲಿ ದೇಹದಾರ್ಢ್ಯದ ಕುರಿತು ಈತನಿಗೆ ಒಮ್ಮೆಯಷ್ಟೇ ದರ್ಶನಕೊಟ್ಟು ಪ್ರಭಾವಿಸಿದವರು ಕೆವಿ ಅಯ್ಯರ್. ಅವರ ಇಂಗ್ಲಿಷ್ ಪುಸ್ತಕ ಈ ಏಕಲವ್ಯನಿಗೆ ದ್ರೋಣ ಬಿಂಬ. ಹಾಗೆಂದು ಆಹಾರದಲ್ಲಿ ವಂಶಾಚಾರದ ಶುದ್ಧ ಸಸ್ಯಾಹಾರ ಬಿಟ್ಟು ಇನ್ನೊಂದನ್ನು (ಮಾಂಸಾಹಾರ) ಈತ ಯೋಚಿಸಲಿಲ್ಲ. ಹಣ್ಣು ಹಾಲಾದಿ ಪೌಷ್ಠಿಕವಾದ್ದನ್ನೆಲ್ಲ ತನ್ನ ಮಿತಿಯಲ್ಲೇ ಒದಗಿಸಿಕೊಂಡು, ಯಥೇಚ್ಛ ತಿಂದು, ಮೈ ಬರಲು ಈತ ಮಾಡದ ಕಸರತ್ತಿಲ್ಲ. ಫಲಿತಾಂಶ – ಆನುವಂಶಿಕ ಕೊಡುಗೆಯಲ್ಲಿ ಮೈಕಟ್ಟೇನೂ ಉತ್ತಮವಾಗಲಿಲ್ಲ, ಆದರೆ ಸಹಜ ನೀಳ ಕಾಯದೊಡನೆ ದೃಢ ಆರೋಗ್ಯ, ಎಂಥ ಪರಿಶ್ರಮಕ್ಕೂ ಜಗ್ಗದ ತಾಕತ್ತು ಧಾರಾಳ ಸಿದ್ಧಿಸಿತು. ಕಠಿಣ ಶಿಸ್ತಂತೂ ಕೊನೆಯುಸಿರಿನವರೆಗೂ ಈತನ ಜೀವನಕ್ರಮವೇ ಆಗಿಹೋಯ್ತು.

ಅಣ್ಣನ ನಿಯತ ವ್ಯಾಯಾಮದ `ಛಲ’ ಹೆಚ್ಚು ಕಡಿಮೆ ಕೊನೆಯ ದಿನದವರೆಗೂ ಉಳಿದಿತ್ತು. ಸಣ್ಣ ಉದಾಹರಣೆ: ಎರಡು ವರ್ಷದ ಹಿಂದೊಮ್ಮೆ ಮರಿಕೆಯಲ್ಲೇ ಈತನನ್ನು ಕಂಡಿದ್ದೆ. ಆತನ ವೃದ್ಧಾಪ್ಯದ ಬೇನೆಗಳಾದ ಮೈಮಾಲುವಿಕೆ, ಮರೆವುಗಳ ಹಲವು ಘಟನೆಗಳನ್ನು ತಿಳಿದ ಮುನ್ನೆಲೆಯಲ್ಲಿ “ಹೇಗಿದ್ದೀ” ಎಂದು ವಿಚಾರಿಸಿದ್ದೆ. ಪ್ರಾಯ ಎಂಬತ್ತನ್ನು ಮೀರಿತ್ತು. ಸಹಜವಾಗಿ ಮನೋವ್ಯಾಪಾರಗಳು ಶಿಥಿಲಗೊಂಡಿದ್ದುವು. ಆದರೂ ನನ್ನೆದುರು (ವಿಚಾರಿಸಿದ ಪರಿಚಿತರೆಲ್ಲರೆದುರೂ ಹಾಗೇ ಇತ್ತಂತೆ) ತನ್ನನ್ನು ಶ್ರುತಪಡಿಸಿಕೊಳ್ಳುವ ಗೀಳು ಜಾಗೃತವಾಗಿರಬೇಕು. ಪ್ರಾಣಾಯಾಮ, ಭಸ್ಕಿ ಇತ್ಯಾದಿ ಪ್ರದರ್ಶನಕ್ಕಿಳಿದುಬಿಟ್ಟ. ವಿಷಾದದಲ್ಲಿ ನಾನೇ ಮಾತು ತಪ್ಪಿಸಿ, ಆತನ ಬುದ್ಧಿಬಲಕ್ಕೆ ಆ ವೃದ್ಧ ದೇಹ ದಂಡನೆಗೊಳಗಾಗುವುದನ್ನು ನಿಲ್ಲಿಸಬೇಕಾಯ್ತು! ಮರಿಕೆಯಲ್ಲಿ, ಮಂಗಳೂರಿನ ಮಗಳ (ನಳಿನಿ) ಮನೆಗೆ ಬಂದಲ್ಲಿ, ಮೈಸೂರಿನ ಮಗನ (ಚಂದ್ರಶೇಖರ) ಮನೆಯಲ್ಲೆಲ್ಲಾ ಈತನ `ಕನಿಷ್ಠ ವಾಕಿಂಗ್’ ಸಾಹಸಗಳು ಉಂಟು ಮಾಡಿದ ಆತಂಕಗಳನ್ನು ಲೆಕ್ಕ ಹಾಕಿದರೆ ಅದೇ ಪುಟಗಟ್ಟಳೆ ಬೆಳೆದೀತು!

ಕೃಷಿ ಹಾಗೂ ತತ್ಸಂಬಂಧೀ ಕಾರ್ಯಗಳಲ್ಲಿ ಅಣ್ಣ ಮಾಡದ ಪ್ರಯೋಗಗಳಿಲ್ಲ, ಸಾಧಿಸದ ಗುರಿಗಳಿಲ್ಲ ಎಂದರೆ ಅತಿಶಯೋಕ್ತಿಯಾಗದು. ಆದರೆ ಆತ ಅದನ್ನು ಅಯಾಚಿತವಾಗಿ ಪರೋಪದೇಶಕ್ಕೆ ಬಳಸಲಿಲ್ಲ, ತನ್ನದು ಸಮಾಜೋದ್ಧಾರ ಎಂಬ ಭ್ರಮಾಲೋಕದೊಳಗೂ ಬೀಗಲಿಲ್ಲ. ತಾನಾಯ್ತು, ತನ್ನನ್ನು ನಂಬಿದ ಕುಟುಂಬ, ಆಳುಕಾಳು, ಜಾನುವಾರು, ನೆಲವಾಯ್ತು ಎಂಬಷ್ಟೇ ಮಿತಿಯಲ್ಲಿ, ಸಂತೋಷದಲ್ಲಿ, ಸಾಮಾಜಿಕ ದ್ರೋಹವಾಗದ ಎಚ್ಚರದಲ್ಲಿ ಯೋಜನೆ, ದುಡಿಮೆಯೆಂದು ಕೊನೆಯ ಉಸಿರಿನವರೆಗೂ ದುಡಿದಿದ್ದ. ಈ ಶಿಸ್ತೇ ಆತನ ಅರಿವಿನ ಪರಿಧಿಯ ಹೊರಗೆ, ಕೊನೆಗಾಲದಲ್ಲಿ ಆತನ ದೇಹವನ್ನೇ ಬಳಲಿಸುತ್ತಿತ್ತು. “ಬಿದ್ದ ಅಡಿಕೆ ಹೆಕ್ಕುತ್ತೇನೆ, ಹಸುಗಳಿಗೆ ಹುಲ್ಲು ಹೆರೆಯುತ್ತೇನೆ” ಎಂದು ತನ್ನಷ್ಟಕ್ಕೇ ಹೇಳಿಕೊಂಡು, ಯಾರಿಗೂ ತಿಳಿಸದೆ ಹೋಗಿ ಸ್ವತಃ ಆತನಿಗೇ ಮಾಡಿಕೊಂಡ ಆಘಾತಗಳು, ಮನೆಯವರಿಗೆ ಉಂಟು ಮಾಡಿದ ಆತಂಕಗಳೇನಿದ್ದರೂ ಇಂದು ಆತನ ಕೆಲಸದ ಬಗೆಗಿನ ಪ್ರೀತಿಯೊಂದನ್ನೇ ಸಾರುತ್ತವೆ. ಆತ ಕೊನೆಯುಸಿರೆಳೆದದ್ದು ಮೈಸೂರಿನಲ್ಲಿದ್ದ ಚಂದ್ರಶೇಖರನ ಇಂದ್ರಪ್ರಸ್ಥದ ಮನೆಯಲ್ಲಿ. ಅದಕ್ಕೂ ಸ್ವಲ್ಪ ಮೊದಲು ಆತ ಮರಿಕೆಯ ಲೆಕ್ಕದಲ್ಲಿ ಬಾಕಿಯುಳಿದ ಎರಡು ಕೆಲಸವನ್ನು ಮನೆಯವರಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದನಂತೆ, “ಮರಿಕೆಯ ದನುವಿನ ಕೊಟ್ಟಿಗೆಯ ಅಟ್ಟದಲ್ಲಿ ಬೈ ಹುಲ್ಲು ಕಡಿಮೆಯಾಗಿದೆ. ಸದಾಶಿವನಿಗೆ (ಮೂರನೇ ಮಗ) ತರಿಸಲು ಹೇಳಬೇಕು. ಮನೆಯಂಗಳದ ತೋಡಿನ ಬದಿಯಲ್ಲಿ ಕಟ್ಟಿಕೊಟ್ಟ ಕಲ್ಲಿನಗೋಡೆಗೆ ಮರಗಳ ಬೇರು ಬಂದು ಶಿಥಿಲವಾಗಿದೆ. ಮಳೆಗಾಲಕ್ಕೂ ಮೊದಲೇ ಅದನ್ನು ಸದಾಶಿವ ಸರಿಪಡಿಸಬೇಕು.”

ಅಜ್ಜನ ಕಾಲದಲ್ಲಿ ಮರಿಕೆಮನೆ ಎದುರಿನ ತೋಡಿನ ಬದಿಯಲ್ಲಿ ಇರಿಪು ಮುಂತಾದ ಮರಗಳು ದಂಡೆ ನಿರ್ಧಾರ ಮಾಡಿದ್ದುವು. ಅದರ ಮೇಲಂಚಿನಲ್ಲಷ್ಟೇ ಮಣ್ಣಿನ ಕಟ್ಟೇ ಕಟ್ಟಿ ಅಂಗಳವಿತ್ತು. ಇದು ಮಳೆಗಾಲದಲ್ಲಿ ಆಂಶಿಕವಾಗಿ ಕುಸಿಯುವುದು, ಮರಗಳ ಬೇರು ಬಲಿತಂತೆ ಬಿರುಕು ಬಿಟ್ಟು ಆತಂಕ ಹೆಚ್ಚಿಸುವುದು ಎಲ್ಲ ಇದ್ದೇ ಇತ್ತು. ಇದನ್ನು ಖಚಿತಗೊಳಿಸುವಂತೆ ಅಲ್ಲಿನೆಲ್ಲಾ ಮರಗಳನ್ನು ನಿವಾರಿಸಿ, ಸ್ವತಃ ಅಣ್ಣನೇ ಮುಖ್ಯ ಕಲ್ಲು ಕಟ್ಟುವ ಮೇಸ್ತ್ರಿಯಾಗಿ ಹಗಲೆಲ್ಲ ದುಡಿದು ಪೂರ್ಣಗೊಳಿಸಿದ್ದನ್ನು ಸ್ವತಃ ನಾನೂ ಕಣ್ಣಾರೆ ಕಂಡವ.

ಒಳ್ಳೆಯ ಹಾಲಿಗಾಗಿ ಅಣ್ಣ ಆ ಕಾಲದಲ್ಲಿ ಅನನ್ಯ ಎಂಬಂತೆ ಹೈನುಗಾರಿಕೆಯಲ್ಲಿ ತೊಡಗಿಕೊಂಡ. ಅದು ಕೃಷಿ ಅಗತ್ಯಗಳಿಗೂ ಅನಿವಾರ್ಯ ಎಂಬುದರಿಂದ ಈತ ಅದನ್ನು ತನ್ನ ಮಿತಿಯಲ್ಲಿ ಬಹು ದೊಡ್ಡ ಮಟ್ಟಕ್ಕೇರಿಸಿ ವಾಣಿಜ್ಯ ಸಾಫಲ್ಯವನ್ನೂ ಕಂಡಿದ್ದ. ಬ್ಯಾಂಕೋ ಮತ್ತೊಂದೋ ಕೊಡುವ ಸಿದ್ಧ ಮಾದರಿಗಳನ್ನು ಹಿಡಿದು, ಹೈನುಗಾರಿಕೆಗೆ ಹಣಹಾಕುವುದರಲ್ಲಿ ಯಶಸ್ಸಿದೆ ಎಂದು ನುಗ್ಗಿ “ಹೈನುಗಾರಿಕೆ ನಷ್ಟದ ಲೆಕ್ಕ” ಎಂದು ಗೋಳಾಡುವವರಿಗೆ ಅಣ್ಣ ಸದಾ ಪರಿಹರಿಸಲಾಗದ ಸವಾಲಾಗುತ್ತಿದ್ದ. ಹಾಗೆ ಮಾಡುವಲ್ಲಿ ಪ್ರಾದೇಶಿಕ ಅಗತ್ಯ ಮತ್ತು ತಮ್ಮ ತೊಡಗುವಿಕೆ ಯಾವ ಮಟ್ಟದಲ್ಲಿರಬೇಕೆಂಬುದನ್ನು ಅಣ್ಣ ಸಾಧಿಸಿದ ಬಗೆಗೆ ಇಲ್ಲಿ ನನ್ನಮ್ಮನ ನೆನಪನ್ನು ಸ್ವಲ್ಪ ಉದ್ಧರಿಸಬೇಕು.

ಇಲ್ಲಿ ಜೊತೆಗಿರುವವನು ಗೋವಿಂದ ಒಂದೆರಡೇ ವರ್ಷಗಳ ವ್ಯತ್ಯಾಸದಲ್ಲಿ `ತಂಗಿ’ಯಾದ ನನ್ನಮ್ಮನನ್ನು (ಆತ ಸಂಬೋಧಿಸುತ್ತಿದ್ದದ್ದೂ `ತಂಗಿ’ ಎಂದೇ) ಆತ ಸದಾ ಸಮರ್ಥ ಸಂಗಾತಿ ಎಂದೇ ಕಂಡವನು (ಹೆಣ್ಣು, ಕಿರಿಯಳು ಎಂಬ ಭಾವ ತೋರಿದ್ದಿಲ್ಲ.). ಈ ಅಣ್ಣತಂಗಿ ಜೋಡಿ ಖಾಲಿ ಸೈಕಲ್ ಚಕ್ರವನ್ನು ಹೊಡೆದುಕೊಂಡು ಮಡಿಕೇರಿ ದಾರಿಯಲ್ಲಿ ಸಂಟ್ಯಾರಿನಿಂದ ಕುಂಬ್ರ ಸಮೀಪದ ಆ ಕಾಲದ ಮಹಾ ಸೇತುವೆಯವರೆಗೂ ಹೋಗುವುದಿತ್ತೆಂದು ಅಮ್ಮನಿಗೆ ಹೇಳಿದಷ್ಟು ಸಾಲದು. ಅಂಥಾ ತಂಗಿಯನ್ನು ತನ್ನ ಹೈನು ಸಾಕಣೆಯಲ್ಲಿ ತೊಡಗಿಸಿಕೊಂಡ ಒಂದು ರೋಚಕ ಸನ್ನಿವೇಶವಿದು. ಅಂದು ದನವೊಂದು ಕರು ಹಾಕಿದ್ದಲ್ಲದೆ ಗರ್ಭಕೋಶವನ್ನೂ ಹೊರಗೆ ಚೆಲ್ಲಿ, ಕಂಗಾಲಾಗಿ ಬಿದ್ದುಕೊಂಡಿತ್ತಂತೆ. ಸಹಜ ಹೆರಿಗೆಗಳನ್ನು ಸುಧಾರಿಸುವಷ್ಟು ಪಳಗಿದ್ದ ಅಣ್ಣನಿಗೆ ಆಗ ನಾಲ್ಕು ಮೈಲು ದೂರದ ಪುತ್ತೂರಿನಲ್ಲಿದ್ದ ಗೋಡಾಕ್ಟರರನ್ನು (= ಪಶುವೈದ್ಯ) ಕರೆತರುವ ತುರ್ತು. ಚರವಾಣಿ ಬಿಡಿ, ಫೋನು ಅಂದರೇನೆಂದೇ ತಿಳಿಯದ ಕಾಲವದು. ದೂತವಾಕ್ಯವೇ ಮುಂತಾದ ಪರೋಕ್ಷ ಮಾರ್ಗಗಳನ್ನು ನಂಬಿಕೂರುವ ಮಾಣಿಯಲ್ಲ ಈತ. ಪ್ರಥಮ ಚಿಕಿತ್ಸೆಯಷ್ಟು ಮಾಡಿ, “ತಂಗೀ ಈ ದನ ನೋಡಿಕೊಂಡು ಕೂತಿರು, ಕಾಗೆ ಒಕ್ಕೀತು ಜಾಗ್ರತೆ” ಎಂದವನೇ ಸೈಕಲ್ಲೇರಿ ಪುತ್ತೂರಿಗೆ ಧಾವಿಸಿದ್ದ. ಬೈಪಣೆಯ (= ಜಾನುವಾರುಗಳಿಗೆ ಹುಲ್ಲು ಹಾಕುವ ಜಗುಲಿ) ಮೇಲೆ ಕುಕ್ಕುರುಗಾಲಿನಲ್ಲಿ ಕುಳಿತ ತಂಗಿಯೂ ನಿರ್ಯೋಚನೆಯಿಂದ ಪಹರೆ ನಡೆಸಿದ್ದಳು. ದನ ಏದುಸಿರುಬಿಡುತ್ತಾ ಬಿದ್ದುಕೊಂಡಿದೆ. ಸೆಗಣಿ, ರಕ್ತಗಳ ಕಲಸುಪಾಕದಲ್ಲಿ ಅದರ ಗರ್ಭಚೀಲ, ನಾಳ ಎಲ್ಲಾ ಹರಡಿಕೊಂಡು ಭೀಕರವಾಗಿ ಜಿಮಿಗುಟ್ಟುತ್ತಿತ್ತು. ತಂಗಿಗೆ ಅರಿವಿಲ್ಲದಂತೇ ಹೇವರಿಕೆ ಆವರಿಸಿಕೊಂಡು ಬಂದಿರಬೇಕು. ಅತ್ತ ಅಣ್ಣ ಪುತ್ತೂರು ತಲಪಿ, ಬಾಡಿಗೆ ಕಾರು ಮಾಡಿ ವೈದ್ಯರನ್ನು ಕೂಡಿಕೊಂಡು ಬರುವಾಗ ಇಲ್ಲಿನ ಸಮಸ್ಯೆ ಎರಡಾಗಿತ್ತು! ದನದ ಆರೈಕೆಯನ್ನು ಗೋಡಾಕ್ಟಾರಿಗೆ ಬಿಟ್ಟು, ಬೈಪಣೆಯ ಮೇಲೆ ಸ್ವಯ ತಪ್ಪಿ ಬಿದ್ದಿದ್ದ ತಂಗಿಯನ್ನು ಸ್ವತಃ ಅಣ್ಣನೇ ಸುಧಾರಿಸಬೇಕಾಯ್ತಂತೆ!

ಅಣ್ಣ ಸಾಕಿದ್ದ ಬೀಜದ ಹೋರಿ – ಬುದ್ಧ, ಅದಕ್ಕೊಂದು ಪ್ರತ್ಯೇಕ ಕೋಣೆಯೇ ಇತ್ತು. ಆ ಕೊಣೆಯತ್ತ ಸುಳಿದರೂ ಸಾಕು, ಆ ಮಹಾಜೀವಿ ಭುಸುಗುಡುತ್ತ ಹಗ್ಗ ಹರಿದು ನನ್ನ ಮೇಲೆ ಹಾರೀತು ಎಂಬ ಭಯ ನನಗೆ. ಅಣ್ಣ ಅದರ ಮೂಗುದಾರ ಹಿಡಿದು ನಡು ಅಂಗಳಕ್ಕೆ ತಂದನೆಂದರೆ ಭೀಮ – ಬಕಾಸುರ, ಫ್ಯಾಂಟಮ್ – ಮಹಾದೈತ್ಯ ಮುಂತಾದ ಚಿತ್ರಗಳು ನನ್ನಂಥವರ ಕಣ್ಣ ಮುಂದೆ ಕುಣಿಯುತ್ತಿದ್ದುವು. ಆ ದಿನಗಳಲ್ಲಿ ಕೃಷ್ಯುತ್ಪನ್ನಗಳ ಸಾಗಣೆಗೆ ಅನಿವಾರ್ಯ ಸಂಗಾತಿ ಜೋಡೆತ್ತಿನ ಗಾಡಿ. ನಮ್ಮ (ಮಕ್ಕಳ) ರಜಾದಿನಗಳಲ್ಲಿ ಆ ಗಾಡಿಯಲ್ಲಿ ಸ್ವತಃ ಅಣ್ಣನದೇ ಸಾರಥ್ಯದಲ್ಲಿ ವಿಹಾರ ಹೋಗುವುದೆಂದರೆ ಮಕ್ಕಳಿಗಂತೂ ಎಲ್ಲಿಲ್ಲದ ಸಂತೋಷ. ನಾನು ಕಂಡಂತೆ, ಕಬ್ಬಿಣದ ಪಟ್ಟಿಯ ಮರದ ಚಕ್ರ, ಅದನ್ನೊತ್ತಿ ವೇಗತಡೆಯುವ ಬಿರಿ, ಕೇವಲ ಅಕ್ಷದಲ್ಲಿ ಆಚೀಚೆ ಓಲಾಡುತ್ತ ಸಾಗುವ ಅನಾವಶ್ಯಕ ಭಾರ ಮತ್ತು ಕಡಿಮೆ ಸ್ಥಳದ ಸಾಂಪ್ರದಾಯಿಕ ಗಾಡಿಯ ವಿನ್ಯಾಸ ಬದಲಿದ್ದನ್ನು (ಟಯರು ಗಾಡಿ) ಮೊದಲು ಸ್ವಾಗತಿಸಿದವನೇ ಅಣ್ಣ. ಈತ ಮನುಷ್ಯ ಮಿತಿಯ ವಿಸ್ತರಣೆಗೆ ಯಂತ್ರಗಳನ್ನು ಬಯಸಿದನೇ ಹೊರತು ಸವಲತ್ತುಗಳ ಹುಚ್ಚು ಓಟದಲ್ಲಿ ಎಂದೂ ಬಳಲಲಿಲ್ಲ.

ಅಣ್ಣ ಮಂದ ಹಾಲಿಗೆ ಮುರಾ ಎಮ್ಮೆ, ಧಾರಾಳ ಹಾಲಿಗೆ ಸಿಂಧೀ ಹಾಲ್ಸ್ಟೈನ್, ಜೆರ್ಸಿ ಜಾತಿಯ ದನಗಳು, ದುಡಿಮೆಗೆ ಸಮರ್ಥ ಎತ್ತಿನ ಜೋಡಿಗಳ ಮೇಲೆಲ್ಲ ಕಣ್ಣಿಟ್ಟೇ ಇರುತ್ತಿದ್ದ. ಅದರಲ್ಲೆಲ್ಲ ಆತನಿಗೆ ಒಳ್ಳೆಯ ತೈನಾತಿ – ಪುತ್ತಪ್ಪ ಬ್ಯಾರಿ. ಸುಬ್ರಹ್ಮಣ್ಯದ ಜಾನುವಾರು ಜಾತ್ರೆಯ ಸಮಯದಲ್ಲಿ ಈ ಜೋಡಿಯ ಸಾಹಸ ಈ ಹಿಂದೆಯೇ ನಾನು ಹೇಳಿದ್ದಾಗಿದೆ. (ಚಿಟಿಕೆ ಹೊಡೆದು ಓದಿ: ಘಾಟಿಯೊಂದರ ಸಾಚಾ ವೃತ್ತಾಂತ) ಆ ಕಾಲದಲ್ಲಿ ಜಾನುವಾರುಗಳನ್ನು ಲಾರಿಯಲ್ಲಿ ಸಾಗಿಸುವುದು ಸಾಮಾನ್ಯರ ಕಲ್ಪನೆಗೆ ಬರುತ್ತಲೇ ಇರಲಿಲ್ಲ. ಕೇವಲ ಒಂದು ಒಳ್ಳೆಯ ನಾಯಿಮರಿಗಾಗಿ ಮಡಿಕೇರಿಯಿಂದ ಮರಿಕೆಗೆ (ಐವತ್ತು ಮೈಲು) ಹೊತ್ತು ನಡೆದ ಅಣ್ಣನಿಗೆ ಸುಬ್ರಹ್ಮಣ್ಯ-ಮರಿಕೆ ಒಂದು ದೂರವೇ ಅಲ್ಲ!

ಅಣ್ಣ ಬಹುತೇಕ ಕೃಷ್ಯುತ್ಪನ್ನಗಳ ರವಾನೆ ಹಾಗೂ ಹಿಂಡಿ ತೌಡು ಗೊಬ್ಬರಾದಿ ಆವಶ್ಯಕತೆಗಳ ಪೂರೈಕೆಯನ್ನು, ಇಂದಿನ ಭಾಷೆಯಲ್ಲಿ ಹೇಳುವುದಿದ್ದರೆ ಪುತ್ತಪ್ಪ ಬ್ಯಾರಿಗೆ ಔಟ್ ಸೋರ್ಸಿಂಗ್ ಮಾಡುತ್ತಿದ್ದ. ಗಾಡಿ, ಎತ್ತುಗಳು ಅಣ್ಣನವೇ. ಇನ್ನು ಅದರ ಚಾಲನಾ ಸಾಮರ್ಥ್ಯದ ಕೊರತೆಯಾಗಲೀ ಸಾಮಾಜಿಕ ಸೋಗುಗಳ ಸಂಕೋಚವಾಗಲೀ ಅಣ್ಣನನ್ನೆಂದೂ ಕಾಡಿದ್ದಿಲ್ಲ. ಆದರೆ ತೋಟ ಪೇಟೆಗಳ ನೂರೆಂಟು ವಹಿವಾಟುಗಳ ನಡುವೆ ಪ್ರತಿಸಲವೂ ಇಡೀ ದಿನ ಗಾಡಿ ಸುಧಾರಿಸುವ ಕೆಲಸವನ್ನು ಕಡಿಮೆ ಮಾಡಲಷ್ಟೇ ಅಣ್ಣ ಪುತ್ತಪ್ಪನನ್ನು (ಕೆಲವೊಮ್ಮೆ ಮನೆಗೆಲಸದ ಕತ್ತೋಡಿಯನ್ನೂ) ದುಡಿಸಿಕೊಳ್ಳುತ್ತಿದ್ದ. ಹಾಗೆಂದು ನಿತ್ಯದ ಜಾನುವಾರುಗಳ ದೇಖರೇಖೆಯಲ್ಲಿ ಅಣ್ಣನ ಪಾತ್ರ ಎಂದೂ ಕಡಿಮೆಯಾದದ್ದಿಲ್ಲ.

ಮಳೆ, ಚಳಿ, ಬೇಸಗೆಯೆಂದಿಲ್ಲ – ಬೆಳಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಅಣ್ಣನ ದಿನಚರಿ ಶುರುವಾಗುತ್ತಿತ್ತು. ಆತನ ಶಿಸ್ತು ಮನೆಮಂದಿಗೆಲ್ಲಾ ಕಡ್ಡಾಯವಾಗಿ ವ್ಯಾಪಿಸುತ್ತಿತ್ತು. ಅತ್ತಿಗೆ ಆ ಹೊತ್ತಿಗೇ ಮನೆಗೆಲಸಕ್ಕಿಳಿಯುತ್ತಿದ್ದರು. ಮಕ್ಕಳು ಓದಿನ ದಿನಗಳ ವಿನಾಯ್ತಿ ಬಿಟ್ಟರೆ ಮನೆ, ತೋಟ, ಜಾನುವಾರು ಕೆಲಸಗಳಲ್ಲಿ ಸಕ್ರಿಯ ಪಾಲುಗೊಳ್ಳಲೇ ಬೇಕಿತ್ತು. ಇವೆಲ್ಲದರ ಫಲವಾಗಿಯೇ ಆಸಕ್ತಿಯಿಂದಲೆ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಪ್ರಾವೀಣ್ಯವನ್ನು ಉತ್ತಮ ದರ್ಜೆಯಲ್ಲೇ ಗಳಿಸಿದ್ದ ಚಂದ್ರಶೇಖರನೂ ನೆಲೆಸಿದ್ದು ಸಾವಯವ ಕೃಷಿಕನಾಗಿ!

ದೇಹದಾರ್ಢ್ಯದ ಪಾಠದಲ್ಲಿ ಕೇಳಿದ್ದ ಹಣ್ಣುಗಳ (ತರಕಾರಿ, ಜೇನು, ಧಾನ್ಯ ಇದ್ದದ್ದೇ) ವೈವಿಧ್ಯಗಳ ಬಗ್ಗೆ ಅಣ್ಣನಿಗೆ ವಿಶೇಷ ಮೋಹವಿತ್ತು. ಈತ ಎಲ್ಲೆಲ್ಲಿಂದಲೋ ಬೀಜ, ಸಸಿ, ಕಸಿ ಎಂದು ಒದ್ದಾಡಿ ಹಲವು ಹಣ್ಣುಗಳನ್ನು ಬೆಳೆಸುತ್ತಿದ್ದ. ಸಾಂಪ್ರದಾಯಿಕ ಕೃಷಿಕರು ಮೂಗುಮುರಿಯುವಂತೆ ಪ್ರತ್ಯೇಕ ಮಾವಿನ ತೋಟವನ್ನೇ ಮಾಡಿದ್ದ. ಹಣ್ಣುಗಳ ಶ್ರಾಯದಲ್ಲಿ ಮರಿಕೆಗೆ (ಅಥವಾ ಪುತ್ತೂರು ಕೂಡಾ) ಹೋಗುವುದೆಂದರೆ ನನಗಂತೂ ಭಾರೀ ಹಬ್ಬ. ಕಾಡುಮಾವಿನಿಂದ ತೊಡಗಿ ಆನೆತಲೆ ಮಾವಿನವರೆಗಿನ ಮಾವನ್ನು ಅಮಿತ ತಾನು ತಿನ್ನಬೇಕು, ತನ್ನವರೆಲ್ಲರಿಗೂ ತಿನ್ನಿಸಬೇಕು ಎನ್ನುವ ಉತ್ಸಾಹ ಅಣ್ಣನಲ್ಲಿ ಎಂದೂ ಕುಗ್ಗಿದ್ದಿಲ್ಲ.

ಅಣ್ಣನಿಗೆ ಪ್ರವಾಸ ಹೋಗಿ ಇತರ ಊರು, ಸ್ಥಳ ನೋಡುವ ಉತ್ಸಾಹವೇನೂ ಇರಲಿಲ್ಲ. ಆದರೂ ಅನಿವಾರ್ಯತೆಯಲ್ಲಿ ಬೆಂಗಳೂರಿಗೆ ಬಂದಿದ್ದದ್ದು ನನಗೀಗಲೂ ನೆನಪಿದೆ. ಇದ್ದಷ್ಟು ದಿನ ಒಳ್ಳೇ ಹಾಲಿನ ದನ ಮಾರಾಟಕ್ಕೆಲ್ಲಿದೆ ಎಂದು ಕೊಪ್ಪಲುಗಳ ಗಲ್ಲಿ ಸುತ್ತಿದ್ದು, ಅದರ ಕರಾವಿನ ವೇಳೆಗೆ ಹಾಜರಾದದ್ದು, ಅದನ್ನು (ಮುಂದುವರಿದ ಕಾಲವಾದ್ದಕ್ಕೋ ದೂರ ವಿಪರೀತವಾದ್ದಕ್ಕೋ ನಡೆಸುವ ಯೋಚನೆ ಬಿಟ್ಟು) ಖರೀದಿಸಿ ಲಾರಿಗೇರಿಸಲು ತಿಣುಕಿದ್ದೇ ಮೊದಲಾದ ವಿವರಗಳನ್ನು ಬಿಟ್ಟು ಇನ್ನೊಂದನ್ನು ಆತ ನೋಡಿದ್ದು ಅಥವಾ ಮಾತಾಡಿದ್ದು ನನಗೆ ನೆನಪಿಲ್ಲ. ಪುಸ್ಸೀಕ್ಯಾಟ್ ಲಂಡನ್ ಅರಮನೆಗೆ ಹೋದರೂ ಕಂಡದ್ದು ರಾಣೀಮಂಚದ ಕೆಳಗಿನ ಚಿಲಿಪಿಲಿ ಇಲಿಯನ್ನೇ!

ತಿರುಗಾಟದ ವಿಚಾರದಲ್ಲಿ ನನ್ನ ಇನ್ನೊಂದು ನೆನಪು. ಆಗಿನ್ನೂ ಶಿರಾಡಿ ಘಾಟಿಯಲ್ಲಿ ಮೀಟರ್ ಗೇಜಿನ ರೈಲು ಹಳಿಗಳನ್ನು ಇಡುತ್ತಿದ್ದರು. ನನಗಲ್ಲಿನ ಕಾಡು, ಬೆಟ್ಟ, ಝರಿ, ಜಲಪಾತ ನೋಡುವ ಉತ್ಸಾಹ. ಆಶ್ಚರ್ಯಕರವಾಗಿ ಅಣ್ಣನೂ ಹೊರಟುಕೊಂಡ. (ನಡೆದುನೋಡೈ ನೀಂ ಶಿರಾಡಿ ಸೊಬಗಂ – ಚಿಟಿಕೆ ಹೊಡೆದು ಓದಿ ನೋಡಿಂ) ದಿನದ ಕೊನೆಯಲ್ಲಿ ನಮಗೆ ದೇಹ ಹುಡಿ ಮಾಡಿದ, ಅಪಾರ ಸಾಹಸಾನುಭವ ಗಳಿಸಿದ ಸಾರ್ಥಕ್ಯವಿದ್ದರೆ ಅಣ್ಣನದ್ದು ಬೇರೆಯೇ. ಪ್ರಾಕೃತಿಕ ವೈವಿಧ್ಯ ಅವನು ಧಾರಾಳ ಕಂಡವನೇ. ಬದಲು ಅತ್ಯಂತ ಎತ್ತರದ ಸೇತು, ಬೆಟ್ಟದ ಹೊಟ್ಟೆಗೇ ಕನ್ನವಿಕ್ಕಿದ ಸುರಂಗ, ಪಾತಾಳದಂಚು ಮತ್ತು ಭಾರೀ ದರೆಯ ನೆರಳಿನಲ್ಲಿ ನೆಲ ಹಿಡಿದುಕೊಳ್ಳುವ ತಂತ್ರ, ನಿಯಂತ್ರಿತ ತಿರುವು ಹಾಗೂ ಏಕರೂಪಿನ ಏರು ಸಾಧಿಸುವ ತಂತ್ರಗಳು, ನೀರಿನ ನಿರ್ವಹಣೆ ಇಂಥವೆಲ್ಲ ಅಣ್ಣನ ಕೋಶ ಸೇರಿದ್ದಿರಬೇಕು. ಅವುಗಳಲ್ಲಿ ಎಷ್ಟೆಲ್ಲ ತಂತ್ರಗಳನ್ನು ತನ್ನ ಕೃಷಿ ಕಾರ್ಯಗಳಿಗೆ ಅಳವಡಿಸಿಕೊಳ್ಳಬಹುದು ಎನ್ನುವುದಕ್ಕದು ಸಿದ್ಧ ಮಾದರಿಯಾಗಿಯೇ ಆತನಿಗೆ ಕಂಡಿದ್ದರೆ ಆಶ್ಚರ್ಯವಿಲ್ಲ!

ಅಣ್ಣನ ಕೃಷಿಕತನದಲ್ಲಿ ಬರಿಯ ಯಾಜಮಾನ್ಯ ಎಂದೂ ಕಂಡದ್ದಿಲ್ಲ. ತಂಗಿಗೆ ಮೆಟ್ಟುಕತ್ತಿ ಬೇಕೆಂದರೆ ಉಳಿ ಸುತ್ತಿಗೆ ಹಿಡಿದ ಆಚಾರಿ ಇವನು. ತೋಡಿಗೆ ವಾರ್ಷಿಕ ಕಟ್ಟ ಕಟ್ಟುವಲ್ಲಿ, ಆಗಲೇ ಹೇಳಿದಂತೆ ನುರಿತ ಮೇಸ್ತ್ರಿ. ಕೋಮಳೆ ಕೆರೆಯ ಡೀಸೆಲ್ ಪಂಪು ಕೈ ಕೊಟ್ಟರೆ ಅಹೋ ರಾತ್ರಿ ನಖಶಿಖಾಂತ ಕಪ್ಪೆಣ್ಣೆ ಮೆತ್ತಿಕೊಂಡು ಸರಿಪಡಿಸುವ ಮೆಕ್ಯಾನಿಕ್. ಜಾನುವಾರುಗಳಿಗೆ ಸೂಜಿ ಮದ್ದು ಕೊಡುವುದರಿಂದ ಹಿಡಿದು ಸಣ್ಣ ಪುಟ್ಟ ಕಾಯಿಲೆ ಕಸಾಲೆಗಳಿಗೆಲ್ಲ ಇವ ಡಾಕ್ಟರ್ ತಿಮ್ಮಪ್ಪಯ್ಯ! ಅಜ್ಜ ದೈಹಿಕ ಮಿತಿಗಳಲ್ಲಿ ಪುತ್ತೂರಿನಲ್ಲೇ ಕುಟುಂಬ ಸಹಿತ ನೆಲೆಸಿದ್ದರು. ಸಣ್ಣವರೆಲ್ಲಾ ವಿದ್ಯಾನ್ವೇಷಣೆ ಮತ್ತು ಪ್ರಾಯಗಳ ಮಿತಿಯಲ್ಲಿ ಪುತ್ತೂರಿನಲ್ಲೇ ಉಳಿದು ಮರಿಕೆಯಲ್ಲಿ ಅಣ್ಣನ ಸಹಾಯಕ್ಕೊದಗಿದ್ದು ಬಹಳ ಕಡಿಮೆ. ಆದರೂ ವಿಸ್ತಾರ ನೆಲವನ್ನು ಕೃಷಿಯೋಗ್ಯ, ಪ್ರಾಯಕ್ಕೆ ಬರುವ ತಮ್ಮಂದಿರ ಪಾಲುಯೋಗ್ಯ, ಅಲ್ಲಲ್ಲಿ ಅವರಿಗೆ ವಾಸಯೋಗ್ಯ, ಮೂಲಮನೆಯ ಜವಾಬ್ದಾರಿಯಲ್ಲಿ ಹಲವು ವಿಧದ ಸಾಮಾಜಿಕ ಆಚರಣೆಗಳಿಗೆ (ಚೌತಿ, ಅನಂತನವ್ರತ, ನವರಾತ್ರಿಗಳ ವಿಶೇಷ ಪೂಜೆಯಿಂದ ತೊಡಗಿ ಉಪನಯನ, ಮದುವೆಯಾದಿ ಅನಿವಾರ್ಯ ಕ್ರಿಯೆಗಳವರೆಗೆ) ಆತಿಥ್ಯಯೋಗ್ಯವಾಗಿ (ಸ್ವಂತದ ಕುಟುಂಬ ಗಟ್ಟಿಯಾಗುತ್ತಿದ್ದಂತೆಯೇ) ನಿರ್ವಹಿಸಿದ ಕರ್ಮಕುಶಲಿ ಅಣ್ಣ. ಅಣ್ಣ ಧೈರ್ಯಸ್ಥ, ಪರಮಸಾಹಸಿ ಎನ್ನುವುದನ್ನು ಕುಟುಂಬದ ಇತರೆಲ್ಲ ಸದಸ್ಯರೂ ಇಂದಿಗೂ ಒಕ್ಕೊರಲಿನಿಂದ ಹೇಳುವಂತೆ ಬಾಳಿದ್ದು ಅಣ್ಣನ ದೊಡ್ಡಸ್ಥಿಕೆ.

ಅಣ್ಣನ ಧೈರ್ಯದ ಕುರಿತು ನನ್ನ ಒಂದೆರಡು ನೆನಪುಗಳು. ಈತ ತೋಟದೊಳಗೆ ನೀರಾವರಿಗೆ ಹಲವು ಕೆರೆಗಳನ್ನು ತೋಡಿಸಿದ್ದ. ಈ ಕೆರೆಗಳಲ್ಲೆಲ್ಲ ಪಂಪಿನ ನೀರು ಹೀರುವ ಕೊನೆ ಮುಳುಗುವ ಜಾಗದಲ್ಲಿ ತಗ್ಗು ಒಂದೆರಡು ಅಡಿ ಹೆಚ್ಚೇ ಆಳವಿರುತ್ತಿತ್ತು. ಆಗ ನಾನಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದೆ, ಈಜು ಬರುತ್ತಿರಲಿಲ್ಲ. ನನ್ನ ಕಿರಿಯ ಸೋದರಮಾವ – ರಾಮನಾಥ, ಅಂದು ಉತ್ಸಾಹದಲ್ಲಿ ನನಗೆ ಈಜು ಕಲಿಸಲು ಒಂದು ಕೆರೆಗೆ ಒಯ್ದಿದ್ದ. ನೆಲ ಮಟ್ಟದಿಂದ ಸುಮಾರು ಹತ್ತಡಿ ಆಳದಲ್ಲಿ ನೀರಿತ್ತು. ತಳದಲ್ಲಿ ಶಿಲೆ ಸಿಕ್ಕಿದ್ದರಿಂದ ಮುಂದೆ ಪರಿಸ್ಥಿತಿ ನೋಡಿಕೊಂಡು ಆಳ ಮಾಡಿದರಾಯ್ತೆಂದು ಬಿಟ್ಟಿದ್ದರು. ಮೆಟ್ಟಿಲೋಣಿಯಲ್ಲಿ ಇಳಿದು `ಪಾಠ’ ಶುರುವಾಗಿತ್ತು. ರಾಮನಾಥ ಸೊಂಟದಾಳದ ನೀರಿನಲ್ಲಿ ನಿಂತುಕೊಂಡು ಎರಡು ತೋಳು ಚಾಚಿದ. ನಾನು ಆ ತೋಳಿನ ಮೇಲೆ ಮೈಚಾಚಿ ಕೈಕಾಲು ಬಡಿದಂತೆಲ್ಲ ಆತ ಮೆಲ್ಲನೆ ನನ್ನನ್ನು ಕೆರೆ ಸುತ್ತಿಸಿದ. ಇನ್ನೊಬ್ಬ ಮಾವ – ಗೋವಿಂದ, ಈಜುವ ಮಹಾ ಉಮೇದಿಲ್ಲದಿದ್ದರೂ ಬೇಸಗೆಯ ಉರಿ ತಣಿಸಲು ತುಸು ಆಚೆ ಹಕ್ಕಿ ಸ್ನಾನ ನಡೆಸಿದ್ದ. ಅಣ್ಣನಂತೆ ರಾಮನಾಥ, ಗೋವಿಂದರು ಭಾರೀ ಈಜುಗಾರರೇನೂ ಅಲ್ಲ. ಆಚೆ ತೋಟದ ಯಾವುದೋ ಕೆಲಸದ ತುರ್ತಿನಲ್ಲಿ ನಡೆಯುತ್ತಿದ್ದ ಅಣ್ಣನಿಗೆ ಕೆರೆಯೊಳಗಿನ ಏರು ದನಿಯ ಮಾತು, ದಡಬಡ ಸದ್ದು ಕೇಳಿ, ಮೇಲಂಚಿಗೆ ಬಂದು ಇಣಿಕಿದ. ಅಣ್ಣ ಪುತ್ತೂರಿನ ದೇವಳದ ಮಹಾಕೆರೆಗೆ ಹತ್ತು ಸುತ್ತು ಸರಾಗ ಈಜುತ್ತಿದ್ದ ಪರಿಣತ. ನನ್ನ ಹೊಡಚಾಟಕ್ಕೆ ನಗಾಡಿ, ತಮ್ಮಂದಿರಲ್ಲಿ ಎರಡು ಮಾತಾಡಿ ಮುಂದೆ ನಡೆದಿದ್ದ. ಹೆಚ್ಚು ಕಡಿಮೆ ಮರುಕ್ಷಣದಲ್ಲಿ ಎಂಬಂತೆ ಈ ಘಟನೆ ಆಯ್ತು. ರಾಮನಾಥ ನನ್ನ ಹೊತ್ತು ಕೆರೆ ಆಯನ ಮುಂದುವರಿಸಿದ್ದ.

ಕಂಬಳಕೋಣದ ಹಾಗೆ ನೀರನ್ನು ಅಪ್ಪಳಿಸಿದಷ್ಟು ಬೇಗ ಈಜು ಬರುತ್ತದೆಂಬ ಭ್ರಮೆ ನನ್ನದಿದ್ದಿರಬೇಕು. ರಾಮನಾಥ ಮುಖಕ್ಕೆ ಹಾರುತ್ತಿದ್ದ ನೀರನ್ನು ತಪ್ಪಿಸುವಂತೆ ಅಡ್ಡ ತಲೆ ಹಾಕಿ ನಡೆಯುವಲ್ಲಿ ಅಂದಾಜು ತಪ್ಪಿದ. ಪಂಪಿನ ಗುಂಡಿಗೇ ಕಾಲು ಹಾಕಿಬಿಟ್ಟ. ಸಹಜವಾಗಿ ಅವನಿಗೆ ಮುಳುಗಿದ ಅನುಭವಾದಾಗ ಕೈಯ ಹೊರೆಯನ್ನು (ನಾನು) ಅತ್ತ ನೂಕಿ ಸ್ವಂತ ಕೈಕಾಲು ಬಡಿದು ಮೇಲೆ ಬಂದು ನೋಡುತ್ತಾನೆ – ನಾನು ಗುಂಡಿಯೊಳಗೆ ತಳಬುಳಂಕ ಒದ್ದಾಡುತ್ತಿದ್ದೆ. ರಾಮನಾಥನಿಗೆ ಇದು ತನ್ನಳವಿಗೆ ಮೀರಿದ್ದು ಅನಿಸಿ ಕೂಡಲೇ ಬೊಬ್ಬೆ ಹೊಡೆದ “ಅಣ್ಣಾ ಅಶೋಕ ಮುಳುಗ್ತಾ ಇದ್ದಾನೆ.” ಹತ್ತೆಜ್ಜೆ ಅತ್ತ ಹೋಗಿದ್ದ ಅಣ್ಣ ಥಟ್ಟನೆ ತಿರುಗಿ ಬಂದು, ಚಪ್ಪಲಿ ಗಾಳಿಗೆ ತೂರಿ ದಂಡೆಯ ಹತ್ತಡಿ ಎತ್ತರದಿಂದ ಕೆರೆಗೆ ಹಾರಿದ. ಪಂಪಿನ ಗುಂಡಿಯ ಸಣ್ಣ ಆಳವಲಯದಲ್ಲಿ ನನ್ನ ಒದ್ದಾಟ, ಉಳಿದಂತೆ ಗರಿಷ್ಠ ನಾಲ್ಕಡಿ ಆಳದ ನೀರಿದ್ದರೂ ತಳದಲ್ಲಿ ಏರು ತಗ್ಗುಗಳ ಕಲ್ಲು. ಅಣ್ಣನಿಗೇನೂ ಆಗಲಿಲ್ಲ ಎನ್ನುವುದು ಮೊದಲ ಅದೃಷ್ಟ. ಮತ್ತೆ ಆತ ನನ್ನ ನೀರ ದಾಂಧಲೆಯಲ್ಲಿ ಕಾಣಿಸಿದ ಕೈಯನ್ನೇ ಹಿಡಿದು ಎಳೆಯಲು ಪ್ರಯತ್ನಿಸಿದ. ನನ್ನ ಪ್ರಾಣಾಂತಿಕ ಎಳೆತಕ್ಕೆ ಆತನೇ ಅಡಿ ತಪ್ಪಿ, ನನ್ನ ತಬ್ಬಿನೊಳಗೆ ಸಿಕ್ಕಿ ಸ್ವಲ್ಪ ನೀರು ಕುಡಿದ. ಆದರೆ ಸಮಯಪ್ರಜ್ಞೆಯಲ್ಲಿ ನನ್ನಿಂದ ಹೇಗೋ ಕಳಚಿಕೊಂಡು ನನ್ನ ಬೆಂಬದಿಗೆ ಸರಿದ. ಮತ್ತೆ `ಮುಳುಗುವವನ ಕೈಯ ಹುಲ್ಲುಕಡ್ಡಿ’ಯಾಗದೆ, ನಾನು ಚಡಪಡಿಸುತ್ತ ತುಸು ಮೇಲೆ ಬಂದಾಗ ನನ್ನ ಬೆನ್ನಿಗೆ ಕಾಲು ಕೊಟ್ಟು ಆಳ ಕಡಿಮೆಯಿರುವ ವಲಯದತ್ತ ನೂಕಿದ. ನಾನು ಹೊಟ್ಟೆ ತುಂಬಾ ನೀರುಕುಡಿದರೂ ಕಾಲಿಗೆ ನೆಲತಾಕಿದ್ದೇ ತಲೆ ಎತ್ತಿ ದೊಡ್ಡ ಉಸಿರು ತೆಗೆದು, ಮುಗ್ಗರಿಸಿ ದಂಡೆಗೆ ಬಂದಿದ್ದೆ. ಅಂದು ಅಣ್ಣನಿಲ್ಲದಿದ್ದರೆ ನಾನು ಮಾತ್ರವಲ್ಲ, ಮತ್ತೆ ಅಸಹಾಯಕ ಶೂರತನ ತೋರಲು ಪ್ರಯತ್ನಿಸಬಹುದಾಗಿದ್ದ ರಾಮನಾಥನದ್ದೂ ಜಲವಾಸ ಖಾಯಂ ಆಗುತ್ತಿತ್ತು.

ಅಣ್ಣನಿಗೆ ಔಪಚಾರಿಕ ನಡವಳಿಕೆಗಳು, ಅನಾವಶ್ಯಕ ದಾಕ್ಷಿಣ್ಯಗಳೆಲ್ಲ ಹಿಡಿಸುತ್ತಿರಲಿಲ್ಲ. ಮೈಸೂರಿನಲ್ಲಿದ್ದ ನನ್ನಮ್ಮ “ಅಶೋಕನಿಗೆ ಹುಡುಗಿಯಾಗಬೇಕಲ್ಲ ಅಣ್ಣಾ” ಅಂದದ್ದೇ ಸಾಕಾಯ್ತು. ತನ್ನ ಕೊಟ್ಟಿಗೆಗೆ ಉತ್ತಮ ಹಸು ತರುವ ಸಂಭ್ರಮದಲ್ಲೇ ಈತ ಪರಿಚಯಗಳಲ್ಲೆಲ್ಲ ತಲಾಶ್ ನಡೆಸಿ, ಮೂರು ನಾಲ್ಕು `ಹುದ್ದರಿ’ಗಳನ್ನು ಪಟ್ಟಿ ಮಾಡಿದ್ದ. ಅದೊಂದು ರಜಾದಿನ ನಾನು, ಅಮ್ಮನೂ ಮರಿಕೆಗೆ ಹೋದಾಗ “ತಂಗೀ ಮೊದಲು ಆ ಮನೆ, ಮತ್ತೆ ಈ ಮನೆ, ಆಮೇಲೆ ಇನ್ನೊಂದು ಮನೆ” ಎಂದು ಕೇವಲ ಪೂರ್ವಾಹ್ನಕ್ಕೆ ಅಂತರ್ವ್ಯೂಹಗಳ ಕಾರ್ಯಕ್ರಮ ಪಟ್ಟಿ ಕೊಟ್ಟ. ಆತ ಒಂಟಿಯಾಗಿ ಸ್ಕೂಟರ್ ಏರಿ ಮುಂದೆ ಮುಂದೆ, ನಾವಿಬ್ಬರು ಬೈಕಿನಲ್ಲಿ ಹಿಂದೆ ಹಿಂದೆ. ಅಡ್ಯನಡ್ಕ, ಉಪ್ಪಿನಂಗಡಿ, ಕನ್ಯಾನ, ವಿಟ್ಲ ಎಂದೆಲ್ಲೆಲ್ಲೋ ಸುತ್ತಿದ್ದೆವು. ಉಳಿದವು ಬಿಡಿ, ಪಟ್ಟಿಯಲ್ಲೊಂದಾಗಿದ್ದ ಕೊಂದ್ಲಕಾನದ ದೇವಕಿಯನ್ನು ನೋಡಿ ಈಚೆ ಮುಖ್ಯ ದಾರಿಯಲ್ಲಿ ಒಂದು ಕಿಮೀ ಕಳೆದಿರಲಿಲ್ಲ. ಎಂದಿನಂತೆ, ಅಣ್ಣ ಅಲ್ಲೇ ಯಾವುದೋ ಮರವೊಂದರ ಕೆಳಗೆ ಸ್ಕೂಟರ್ ನಿಲ್ಲಿಸಿ ಹುಡುಗಿಯ ವಿಮರ್ಶೆ ಮಾಡಿ ತನ್ನ ಒಪ್ಪಿಗೆ ಕೊಟ್ಟ. ನಮ್ಮಿಬ್ಬರ ಅಭಿಪ್ರಾಯವೂ ಹೆಚ್ಚು ಕಡಿಮೆ ಅದೇ ರೀತಿಯದ್ದಿತ್ತು. ಅಣ್ಣ ಕೂಡಲೇ ಸ್ಕೂಟರ್ ತಿರುಗಿಸಿಬಿಟ್ಟ – “ನಮಗಾಗಬಹುದು” ಎಂದು ತಿಳಿಸಿಬರಲು! ನಮ್ಮ ಅವಸರ ನೋಡಿ ಅವರೇನು ತಿಳಿದಾರು ಎಂಬ ಗಾಬರಿಯಲ್ಲಿ ಅಮ್ಮ ತಡೆಯದಿದ್ದರೆ, ಬಹುಶಃ ಈ ಪುಣ್ಯಾತ್ಮ ಮಾರಣೇ ದಿನಕ್ಕೆ ಮುಹೂರ್ತವನ್ನೂ ನಿಶ್ಚಯಿಸಿ, ಹಾಗೇ ನಡೆಸಿಯೂ ಬಿಡುತ್ತಿದ್ದ! ನನ್ನಪ್ಪನೂ ಅಣ್ಣನಿಗೆ ಸರಿಜತೆ. ಹಾಗಾಗಿ ಜೂನ್ ತಿಂಗಳ ಜಡಿಮಳೆಗಾಲದಲ್ಲೇ ಮುಂದೆ (ಸುಮಾರು ಮೂರೇ ವಾರಗಳ ಅಂತರದಲ್ಲಿ) ಮದುವೆ ಕೊಂದ್ಲಕಾನದಲ್ಲಿ ಆದರೂ ವಧೂಗೃಹಪ್ರವೇಶವನ್ನು ಮರಿಕೆಯಲ್ಲೇ ಅಣ್ಣ ನಡೆಸಿಕೊಟ್ಟ. ಹೀಗಾಗಿ ನಾನು ಆಗಾಗ ಮರಿಕೆ ಮಕ್ಕಳಲ್ಲಿ ನನಗೂ ಅಲ್ಲಿ `ಮನೆಯ ಹಕ್ಕಿದೆ’ ಎಂದು ತಮಾಷೆ ಮಾಡುವುದಿದೆ.

ಅಣ್ಣನ ನಿರ್ದಾಕ್ಷಿಣ್ಯ ಅಥವಾ ಕೆಲವು ವಿಚಾರಗಳಲ್ಲಿನ ಭೋಳೇತನದ ಬಗ್ಗೆ ಎಷ್ಟೂ ಉದಾಹರಣೆಗಳಿವೆ. ಅಣ್ಣ ಯಾವುದೇ ಮನೆಯ ಮಂಗಳ ಕಾರ್ಯಗಳಿಗೆ ಆಮಂತ್ರಣ ಕೊಡುತ್ತಾನೆಂದರೆ ಆತ್ಮೀಯರು ನಗುವುದಿತ್ತು. ಈತ ಪ್ರಾಮಾಣಿಕವಾಗಿ ಅವರ ಬರವನ್ನು ನಿರೀಕ್ಷಿಸುತ್ತ ಪತ್ರ ಕೊಟ್ಟು, “ಕಷ್ಟಪಟ್ಟುಕೊಂಡು ಬರಬೇಡಿ” ಎಂದೇ ಹೇಳುತ್ತಿದ್ದ! ಟೆಲಿಫೋನ್ ಪುತ್ತೂರು ಪೇಟೆಯಲ್ಲಿ ಆಗಷ್ಟೇ ನಿಧಾನಕ್ಕೆ ಬಳಕೆಗೆ ಬರುತ್ತಿತ್ತು. ಅಣ್ಣ ಅನಿವಾರ್ಯದಲ್ಲಿ ಯಾರದ್ದೋ ಫೋನ್ ಬಳಸಿ ಇನ್ಯಾರಿಗೋ ಸಂದೇಶ ಕೊಡುವುದಿತ್ತಂತೆ. ಅತ್ತಣವರು “ಹೋ ತಿಮ್ಮಪ್ಪಯ್ಯನವರೇ ನಮಸ್ಕಾರ” ಎಂದಾಗ, ಅಣ್ಣ ರಿಸೀವರ್ ಕೈ ಬಿಟ್ಟು “ನಮಸ್ಕಾರ” ಎಂದು ಎರಡು ಕೈ ಜೋಡಿಸಿದ್ದನಂತೆ!

ಅಣ್ಣನಿಗೆ ಸ್ವಂತ ಮಕ್ಕಳ ಮೇಲೆ ಪ್ರೀತಿಯೊಡನೆ ಅವರನ್ನು ತಂದೆಯಾಗಿ ಸತ್ಪ್ರಜೆಗಳನ್ನಾಗಿಸಬೇಕೆಂಬ ಕರ್ತವ್ಯದ ಒತ್ತಡ ಕಾಡಿದ್ದಿರಬಹುದು. ಆದರೆ ತಂಗಿ, ತಮ್ಮರ ಮಕ್ಕಳ ಮೇಲೆಲ್ಲ ಶುದ್ಧ ಪ್ರೀತಿ ಮತ್ತು ಕೀಟಲೆಗಳು ಕೂಡಿ ಹರಿಯುತ್ತಿತ್ತು. ನಾನಿನ್ನೂ ಚಿಕ್ಕವನಾಗಿದ್ದಾಗ ಒಮ್ಮೆ ದನದ ಕೊಟ್ಟಿಗೆಯ ಹಿಂದಿನ ಗುಡ್ಡದಲ್ಲಿ, ಮುಸ್ಸಂಜೆಯ ಹೊತ್ತು ಅಣ್ಣನನ್ನು ಹಿಂಬಾಲಿಸಿ ನಡೆದಿದ್ದೆ. ಅಲ್ಲಿದ್ದ ತಾಳೆಮರದ ಮೇಲಿನ ಒಣಗರಿ ಒಮ್ಮೆಲೆ `ಗಲಗಲ’ ಸದ್ದು ಮಾಡಿದಾಗ ಈತ “ಅಕೋ ಭೂತ” ಎಂದು ತುಸು ದೂರ ಓಡಿ, ನನ್ನನ್ನು ಹೈರಾಣಗೊಳಿಸಿದ್ದು ನನಗೆಂದೂ ಮರೆಯದು. ನವರಾತ್ರಿಯ ಒಂಬತ್ತೂ ದಿನ ಮಧ್ಯಾಹ್ನ ವ್ರತಸ್ಥನಾದ ಅಣ್ಣನಿಗೆ ಅತ್ತಿಗೆ ಬಿಸಿಬಿಸಿ ಗೋಧಿ ದೋಸೆ, ತುಪ್ಪ ಬೆಲ್ಲರವೆ ಮಾಡಿಕೊಡುತ್ತಿದ್ದರು. ವಿನಾಕಾರಣ ತಿಂಡಿಯ ವ್ರತಸ್ಥನಾದ ನನಗೆ ಅಣ್ಣ ಎಂದೂ ಬಯಕೆಯನ್ನು ತಪ್ಪಿಸಿದ್ದಿಲ್ಲ. ಅದೇ ನಾನು ಒಮ್ಮೆ ಊಟದಲ್ಲಿ ಹೆಚ್ಚಿನ ಪಾಯಸಕ್ಕೆ ಅವಸರಿಸಿದ್ದೆ. ಆಗ ಅಣ್ಣನೇ ಪುಟ್ಟ ಪಾತ್ರೆ ತುಂಬಾ ಪಾಯಸ ತುಂಬಿಸಿ ತಂದಿಟ್ಟು “ತಿನ್ನು. ಇದನ್ನು ಖಾಲಿ ಮಾಡದೆ ಎದ್ದರೆ ಜಾಗ್ರತೆ” ಎಂದಿದ್ದ. ಅವನ ಧ್ವನಿ, ಮುಖದ ಕಾಠಿಣ್ಯಕ್ಕೆ ಹೆದರಿ ನಾನು ಅಂದು ಪಾಯಸ ಖಾಲಿ ಮಾಡಿದ್ದೆ. ಬಿಸಿಹಾಲಿಗೆ ಮುಸುಡಿಕ್ಕಿ ಮುಂದೆ ಹಾಲಿಗೆ ಹೆದರಿದ ತೆನಾಲಿರಾಮನ ಬೆಕ್ಕಿನಂತೆ ಮುಂದೆ ನನಗೆ ಪಾಯಸಗಳಲ್ಲಿ ಖಾಯಸ್ಸು ಬಿಟ್ಟೇ ಹೋಯ್ತು! ನನ್ನ ತಮ್ಮ ಆನಂದನಿಗೆ ಬಾಲ್ಯದಲ್ಲಿ ತಿನ್ನುವುದರಲ್ಲಿ ಯಾವ ಕಡಿವಾಣವೂ ಇರಲಿಲ್ಲ (ಈಗಲೂ ಸ್ವಲ್ಪ ಹಾಗೆಯೇ!). ಅದಕ್ಕೆ ಒಮ್ಮೆ ಅಣ್ಣ ಗಂಭೀರ ಮುಖ ಮಾಡಿ ಹೇಳಿದ್ದ – “ನಾರಾಯಣನಿಗೆ ಈ ಸಲ ನಿನ್ನ ಲೆಕ್ಕದಲ್ಲಿ ದೊಡ್ಡ ಬಿಲ್ಲು ಕಳಿಸ್ತೇನೆ.” ಆನಂದನ ಮರ್ಯಾದೆಗೆ ಕುಂದಾಗಿ “ಇನ್ನು ಯಾವತ್ತೂ ಮರಿಕೆಗೆ ಬರುವುದಿಲ್ಲ” ಎಂದು ಉಗ್ರ ಶಪಥವನ್ನೇ ಮಾಡಿದ್ದ. ಆದರೆ ಮುಂದಿನ ರಜೆ ಬಂದಾಗ ನಮಗೆಲ್ಲರಿಗಿಂತ ಮೊದಲು ಆನಂದ ಮರಿಕೆಯಲ್ಲಿದ್ದ, ಮೊದಲಿಗಿಂತ ನಾಲ್ಕು ರೊಟ್ಟಿ ಹೆಚ್ಚು ಅಣ್ಣನೇ ಅವನಿಗೆ ತಿನ್ನಿಸಿದ್ದ.

ಅಣ್ಣನಿಗೆ ಕೊನೆಗಾಲದಲ್ಲಿ ಕೃಷಿಕರ ಬವಣೆಗಳು ಏರುತ್ತಿರುವುದರ ವಿರುದ್ಧ ಸ್ವಾವಲಂಬನೆಯನ್ನು ಸಾಧಿಸಲು ಮಾನಸಿಕ ತೊಳಲಾಟ ಕಾಡುತ್ತಿದ್ದಿರಬೇಕು. ಆ ನಿಟ್ಟಿನಲ್ಲಿ ಕೃಷಿಕನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ (ಪರಾವಲಂಬಿಯಾಗುವ ಅಲ್ಲ) ಯಂತ್ರಗಳ ಕುರಿತು ಗೀಳು ಹತ್ತಿದಂತಿತ್ತು. ತನಗೆ ಹುಲ್ಲು ಹೆರೆಯುವ ಯಂತ್ರ ಬೇಕು, (ಮಗಳು ಶಾರದೆಯ ತೋಟಕ್ಕೆ ಕೆಲಸದವರ ಕೊರತೆ ತಪ್ಪಿಸಲು?) ಯಂತ್ರಮಾನವ ಬೇಕು ಎನ್ನುವುದಂತೂ ಪಾತ್ರಾಪಾತ್ರ, ಸನ್ನಿವೇಶಗಳ ಪರಿವೆಯಿಲ್ಲದೆ ಅಣ್ಣ ಸಿಕ್ಕವರಲ್ಲೆಲ್ಲ ಕೇಳುತ್ತಲೇ ಇದ್ದ. ಅಮೆರಿಕವಾಸಿ ಆನಂದನ ಮಗಳು, ಅಳಿಯ ಮರಿಕೆಗೆ ಬಂದಾಗಲೂ ಅಣ್ಣ ಕೇಳಿದ್ದು ಹುಲ್ಲು ಹೆರೆಯುವ ಕತ್ತಿ, ಕೃಷಿ ಕೆಲಸಕ್ಕೆ ಒದಗುವ ರೊಬೋಟು. ಅಣ್ಣ ತೀರಿಹೋಗುವ ಕೆಲವೇ ವಾರಗಳ ಮೊದಲು ನಾನು ಆಕಸ್ಮಿಕವಾಗಿ ಚಂದ್ರನ ಮನೆಗೆ ಹೋಗಿದ್ದೆ. ಹೊರ ಜಗುಲಿಯಲ್ಲಿ ಅಣ್ಣ ನಿಸ್ಪಂದವಾಗಿ ಕುಳಿತಿದ್ದ. ಆತ ನನ್ನನ್ನು ನೋಡಲಿಲ್ಲ ಎಂದು ಊಹಿಸಿ, ನಾನು ಮೆಲ್ಲಗೆ ಆತನ ಹಿಂದೆ ಹೋಗಿ “ತಿಮ್ಮಪ್ಪಯ್ಯನವರೇ ನನ್ನ ಗುರ್ತುಂಟಾ” ಎಂದು ಕೇಳಿದ್ದೆ. ಆತ ಕತ್ತೂ ತಿರುಗಿಸದೆ, ಅದೇ ನಿರ್ಭಾವದ ಮುಖದಲ್ಲೇ “ಅಶೋಕ ಅಲ್ವಾ. ಆನಂದನ ಅಳಿಯ ಹುಲ್ಲು ಹೆರೆಯುವ…..” ಎನ್ನತೊಡಗಿದ್ದ. ಸುಮಾರು ಎಪ್ಪತ್ತೈದು-ಎಂಬತ್ತರ ಪ್ರಾಯದವರೆಗೂ ಜೀವನೋತ್ಸಾಹ ಅದರಲ್ಲೂ ನಮ್ಮನ್ನೆಲ್ಲಾ ಕಂಡಾಗ ಉಕ್ಕುತ್ತಿದ್ದ `ಅಣ್ಣ’ ಎಂಬಾತ್ಮದ ಲವಲವಿಕೆ, ಅನಂತರ ಬತ್ತಿಯೇ ಹೋಗಿತ್ತು. ಮತ್ತೇನಿದ್ದರೂ ಜೀವ ಹೋಗುವ ದಿನಗಳ ಎಣಿಕೆಯೇ ಆದದ್ದು, ಅದು ಎಂಬತ್ತಾರರ ಪ್ರಾಯದವರೆಗೂ ಎಳೆದದ್ದು ಒಂದು ಲೆಕ್ಕದಲ್ಲಿ ಪ್ರಾಕೃತಿಕ ಅನ್ಯಾಯ. ನನ್ನಪ್ಪ, ಚಿಕ್ಕಪ್ಪ – ಈಶ್ವರ, ಇವರಿಗೆಲ್ಲ ಸಿಕ್ಕಿದ ನಿರಾಯಾಸೇನ ಮರಣಂ ಅಣ್ಣನಿಗೂ ದಕ್ಕಬೇಕಿತ್ತು ಎನ್ನುವುದು ಮನೆಯವರೆಲ್ಲರ ಆಶಯದಲ್ಲೇ ಉಳಿದುಬಿಟ್ಟಿತು.

ವರ್ಷಾಂತಿಕದಂದು ಬಂದವರಿಗೆಲ್ಲ ಸ್ಮರಣಿಕೆಯಾಗಿ ಚಂದ್ರ `ಅಪ್ಪ, ಅಮ್ಮ ಮತ್ತು ನಮ್ಮ ಜಗದಾತ್ಮ’ ಎನ್ನುವ ಅವನ ಹೊಸ ಪುಸ್ತಕವನ್ನು ಸ್ಮರಣಿಕೆಯನ್ನಾಗಿ ಕೊಟ್ಟ. ಈ ಪುಸ್ತಕವನ್ನು ಇನ್ನೊಂದೆರಡರೊಡನೆ ಔಪಚಾರಿಕವಾಗಿ ಇದೇ ೨೯ರಂದು ಆತನ ಮೈಸೂರಿನ ಕೃಷಿಕ್ಷೇತ್ರ – ಇಂದ್ರಪ್ರಸ್ಥದಲ್ಲಿ, ಲೋಕಾರ್ಪಣಗೊಳಿಸುವ ಕಾರ್ಯಕ್ರಮದ ಆಮಂತ್ರಣವನ್ನೂ ಕೊಟ್ಟ. ಅದು ಪ್ರೇರಣೆಯಾಗಿ ನನ್ನೊಳಗಿನ ಅಣ್ಣನ ಸ್ಮರಣೆ ಉಕ್ಕಿದ್ದನ್ನಿಷ್ಟು ಹಂಚಿಕೊಂಡಿದ್ದೇನೆ. ನನ್ನೊಳಗಿನ ಅಣ್ಣ ಶಾಶ್ವತ.