[೧೯೯೯ರಲ್ಲಿ ಪ್ರಕಟವಾಗಿ ಬಹುಕಾಲದಿಂದ ಅಲಭ್ಯವಾಗಿರುವ ನನ್ನ ಪುಸ್ತಕೋದ್ಯಮ ಕುರಿತ ಸಂಕಲನ – `ಪುಸ್ತಕ ಮಾರಾಟ ಹೋರಾಟ’ವನ್ನು ಈಗ ಅನಿಯತ ಧಾರಾವಾಹಿಯಾಗಿ ಪ್ರಕಟಣೆಗೆ ಎತ್ತಿಕೊಂಡಿದ್ದೇನೆ. ಅದಕ್ಕೆ ಪ್ರವೇಶಿಕೆಯಾಗಿ ಆ ಕಾಲದ್ದೇ ಅರಿಕೆಯನ್ನು ಮೊದಲು ಪ್ರಕಟಿಸುತ್ತಿದ್ದೇನೆ. ಇದರಲ್ಲಿ ತೀರಾ ಅವಶ್ಯವಿದ್ದಲ್ಲಿ ೨೦೧೫ರ ಸಂವಾದಿ ಟಿಪ್ಪಣಿಗಳನ್ನು […] ಕಂಸದೊಳಗೆ ಕೊಡುತ್ತಿದ್ದೇನೆ – ದಯವಿಟ್ಟು ಗಮನಿಸಿ.] ನನ್ನ ಸುಮಾರು ೨೫ ವರ್ಷಗಳ ಪುಸ್ತಕೋದ್ಯಮ ಜೀವನದ ವಿಭಿನ್ನ ಕಾಲ ಘಟ್ಟಗಳಲ್ಲಿ ಪ್ರತಿಕ್ರಿಯೆ, ಟಿಪ್ಪಣಿ, ಲಿಖಿತ ಭಾಷಣಗಳೆಂದು ಪ್ರಕಟವಾದ ನನ್ನ ಅಭಿಪ್ರಾಯಗಳನ್ನಿಲ್ಲಿ ಸಂಕಲಿಸಿದ್ದೇನೆ. ಪುಸ್ತಕೋದ್ಯಮದ ಬಗ್ಗೆ ಒಟ್ಟಾರೆ ಅನುಭವವಿರುವವರು ಇಂದು ಒಂದೋ ದ್ರೌಪದಿ ವಸ್ತ್ರಾಪಹರಣದ ದುಷ್ಟ ಸನ್ನಿವೇಶದಲ್ಲಿಯ ಭೀಷ್ಮರಂತೆ ಮೌನಿಗಳು. ಇಲ್ಲವೇ ಉರಿಯುವ ಮನೆಯ ಗಳು ಹಿರಿಯುವ ಸ್ವಾರ್ಥಿಗಳು ಆಗಿದ್ದಾರೆ. ಗೋಷ್ಠಿಗಳು, ಚರ್ಚೆಗಳು ಬಹುತೇಕ ತೋರಿಕೆಗಾಗಿ ಇಲ್ಲವೇ ಸೀಮಿತ ಸ್ವಾರ್ಥ ಸಾಧನೆಗಾಗಿ ನಡೆಯುತ್ತಿವೆ. ಇವುಗಳಲ್ಲಿ ಮಿಂಚಿನ ಸೆಳಕುಗಳು ಧಾರಾಳವಿದ್ದರೂ ಅವನ್ನು ಅಂದಂದಿನ ಸಭೆ ಮೀರಿ ಉಳಿಸಿದವರಿಲ್ಲ, ಬೆಳೆಸಿದವರಿಲ್ಲ. “ಸೋರುತಿಹುದು ಮನೆಯ ಮಾಳಿಗಿ!” ಆ ನಿಟ್ಟಿನಲ್ಲಿ ಕೇವಲ ನನ್ನ ಅನುಭವಕ್ಕೆ ನಿಲುಕಿದವಾದರೂ ಇತರರಿಗೆ ಮೌಲಿಕ ನಿರ್ದೇಶನ ನೀಡಬಹುದೆಂದು ಅನ್ನಿಸಿದವನ್ನು ಮಾತ್ರ ಇಲ್ಲಿ ಸಂಕಲಿಸಿದ್ದೇನೆ. ಅದಕ್ಕೂ ಮೊದಲು, ಹಿನ್ನೆಲೆಯಾಗಿ, ಪುಸ್ತಕೋದ್ಯಮಿಯಾಗಿ ನಾನು ಬೆಳೆದ ಪರಿಯನ್ನು ಸಂಕ್ಷಿಪ್ತವಾಗಿ ಹೇಳುವ ಅನಿವಾರ್ಯತೆ ಕಾಣುತ್ತದೆ. ಹಾಗಾಗಿ ೧೯೭೩, ಮೈಸೂರಿನಲ್ಲಿ ನಾನು ಪ್ರಥಮ ಎಂಎಯ ಬೇಸಗೆ ರಜೆಯಲ್ಲಿ ಕರ್ನಾಟಕ ಸೈಕಲ್ ಪ್ರವಾಸ ಹೊರಡುವ ಯೋಚನೆಯಲ್ಲಿದ್ದೆ. ಕುಟುಂಬದ ಹಿರಿಯ ಮಿತ್ರ ಡಿವಿಕೆ ಮೂರ್ತಿಯವರು ನನ್ನೆದುರು ಬದಲಿ ಸಾಹಸದ ಸವಾಲು ಎಸೆದರು.

ಮುಂಬೈ ಕನ್ನಡಿಗರ ಮನೆ ಮನೆಗೆ ಕನ್ನಡ ಪುಸ್ತಕ ಮಾರುವ ಯೋಜನೆ. ವೀಳ್ಯ ಸ್ವೀಕರಿಸಿದೆ. ಮನೆಯ ಹೆಸರು (ಅತ್ರಿ), ಪುಸ್ತಕ ಸೂಚನೆ (ಬುಕ್) ಮತ್ತೆ ಹೃಸ್ವರೂಪದಲ್ಲಿ ಅಕ್ಷರಮಿತಿಯ ಎಲ್ಲವನ್ನು ಒಳಗೊಂಡಿದೆ ಎಂಬ ಸೂಚನೆಯೂ ದಕ್ಕುವಂತೆ (ABC) ಮಳಿಗೆ ಸೂಚಕ ಶಬ್ದ (ಸೆಂಟರ್) ಸೇರಿ ಅತ್ರಿ ಬುಕ್ ಸೆಂಟರ್ ಹುಟ್ಟಿತು. ಇದಕ್ಕೊಂದು ಆಶಯ ವಾಕ್ಯ – ವಿಶ್ವಜ್ಞಾನದ ಸೇವಾ ಕೇಂದ್ರ (Service Centre for the wisdom of ages). ಪ್ರಾಥಮಿಕ ಅನುಭವಕ್ಕಾಗಿ ಪುಸ್ತಕ ಹೊತ್ತು ಮಂಡ್ಯ, ಹುಣಸೂರು ಮತ್ತು ಮೈಸೂರಿನದೇ ಕೆಲವು ಬೀದಿಗಳಲ್ಲಿ ತಿರುಗಾಡಿದೆ. ಅಲ್ಲೆಲ್ಲ ನನ್ನಷ್ಟೇ ಉತ್ಸಾಹದಲ್ಲಿ ಜೊತೆಗೊಟ್ಟ ಇನ್ನಿಬ್ಬರು – ಗೆಳೆಯ ಗಿರೀಶ ಪುತ್ರಾಯ ಮತ್ತು ತಮ್ಮ ಆನಂದವರ್ಧನ.ಡಿವಿಕೆಯವರ ಯೋಜನೆಯಂತೆ ಹತ್ತು ಹದಿನೈದು ಭಾರೀ ಕಟ್ಟುಗಳ ಪುಸ್ತಕಗಳನ್ನು ಬಿಡಿಬಿಡಿಯಾಗಿ, ಅಂದರೆ ಸುಮಾರು ರೂ. ೧೫೦೦೦ ವ್ಯಾಪಾರ ದಿಗ್ವಿಜಯವನ್ನು ಮುಂಬೈ ಪುಣೆಗಳಲ್ಲಿ ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಏಕಾಂಗಿಯಾಗಿ ನಡೆಸಿದೆ.ಮೈಸೂರಿಗೆ ಮರಳಿದ ಮೇಲೂ ಗಳಿಸಿದ ಕೆಲವು ಸಂಬಂಧಗಳನ್ನು ಅಂಚೆಯಲ್ಲಿ ಸಣ್ಣದಾಗಿ ಪೋಷಿಸಿಕೊಂಡು ಎಂಎ ಮುಗಿಸಿದೆ. ನನಗೆ ಅನ್ಯವೃತ್ತಿಯ (ಮುಖ್ಯವಾಗಿ ಐಪೀಯೆಸ್!) ಕೆಲವು ದುರ್ಬಲ ಆಕರ್ಷಣೆಗಳು ಉಳಿದಿದ್ದುವು. ಅವನ್ನು ಪೂರ್ತಿ ಕಳಚಿಕೊಳ್ಳಲು ಕೆಲವು ತಿಂಗಳು ವ್ಯರ್ಥಗೊಳಿಸಿದೆ.

ಅನಂತರ ಡಿವಿಕೆಯವರ ಸೂಚನೆಯಂತೆ ಮಂಗಳೂರನ್ನು ಆಯ್ದುಕೊಂಡು ಸಂಬಂಧಗಳನ್ನು ಬೆಳೆಸುತ್ತ ಮಳಿಗೆ ಶೋಧಕ್ಕಿಳಿದೆ. ಪುತ್ತೂರಿನ ನನ್ನ ಅಜ್ಜನ ಮನೆಯ ಬಳಗ (ಮರಿಕೆ), ಮಂಗಳೂರಿನ ನಮ್ಮ ಕುಟುಂಬದ ಹಿರಿಯ ಮಿತ್ರ ಬಿವಿ ಕೆದಿಲಾಯರು ಮತ್ತು ಉಡುಪಿಯ ಕುಶಿ ಹರಿದಾಸ ಭಟ್ಟರು ನನ್ನನ್ನೆಂದೂ ಸೋಲಲು ಬಿಡಲಿಲ್ಲ. ಆ ದಿನಗಳಲ್ಲಿ ಜಿಲ್ಲೆಯ ಹಲವು ಶಾಲೆ ಕಾಲೇಜುಗಳಿಗೆ ಭೇಟಿಕೊಟ್ಟು ಕೆಲವೆಡೆ ಅಲ್ಪಸ್ವಲ್ಪ ಪುಸ್ತಕ ಮಾರಿಯೂ ಸಂಬಂಧ ಕುದುರಿಸಿಕೊಂಡೆ. ಅಂದಿನ ಎರಡು ಸಂಗತಿಗಳು ನನಗೆ ಸದಾ ಸ್ಮರಣೀಯ. ಧರ್ಮಸ್ಥಳದ ಡಾ| ಡಿ. ವಿರೇಂದ್ರ ಹೆಗ್ಗಡೆಯವರು ಒಂದೇ ಭೇಟಿಯಲ್ಲಿ ಒಲಿದು ಭಾರೀ ಮೊತ್ತದ ನಗದು ವ್ಯಾಪಾರ ಕೊಟ್ಟರು – ಮೊದಲನೆಯದು. ಎರಡನೆಯದಾಗಿ ಪುತ್ತೂರಿನ ವಿವೇಕಾನಂದ ಕಾಲೇಜು. ಧಾರಾಳ ಪುಸ್ತಕ ಬೇಡಿಕೆ ಕೊಟ್ಟಿತು. ಪುಸ್ತಕಗಳು ಬ್ಯಾಂಕ್ ಮೂಲಕ ಬಂದವು. ಆದರೆ ನಾನು ಕುಚೇಲ. ನನ್ನ ಬಿಲ್ ಹಿಡಿದು ಪ್ರಾಂಶುಪಾಲ ಪ್ರೊ| ಎಂ. ಸೂರ್ಯನಾರಾಯಣಪ್ಪನವರ ಎದುರು ನಿಂತೆ. ಅತೀವ ವಿಶ್ವಾಸದಲ್ಲಿ ಪಾವತಿ ಮೊದಲು, ಪುಸ್ತಕ ಅನಂತರ ಸೌಲಭ್ಯ ಕಲ್ಪಿಸಿದರು. ಮುಂದೆ ಅಂಗಡಿ ತೆರೆದು, ನಡೆದು ಬಂದ ಈ ಉದ್ದಕ್ಕೆ ಆ ವಿಶೇಷ ವ್ಯವಸ್ಥೆ ಬೇಕಾಗಲಿಲ್ಲ. ಆದರೆ ನಿಃಸ್ವಾರ್ಥ ವ್ಯಾವಹಾರಿಕ ಸಂಬಂಧ ಮಾತ್ರ ವಿವೇಕಾನಂದ ಕಾಲೇಜಿನೊಂದಿಗೆ ಅಷ್ಟೇ ಗಟ್ಟಿಯಾಗಿ ಉಳಿದಿದೆ, ಬೆಳೆಯುತ್ತಲೇ ಬಂದಿದೆ.೧೯೭೫ ಅಕ್ಟೋಬರ್ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರಿನೊಡನೆ ವೃತ್ತಿಪರವಾಗಿ ನೆಲಸಿದೆ. ೧೯೭೬ರಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ ಕಾಲ. ಆಗ ಸರಕಾರ ತೇಲಿಬಿಟ್ಟ ಪ್ರಚಾರಪ್ರಿಯ ಯೋಜನೆಗಳಲ್ಲಿ ಒಂದು – ಸ್ವೋದ್ಯೋಗಕ್ಕೆ ಸಹಾಯ. ವಾಸ್ತವದಲ್ಲಿ ನಾನು ಯಾವ ಸರಕಾರೀ ಸಹಾಯ ಬಯಸಿದವನೂ ಅಲ್ಲ, ಪಡೆದವನೂ ಅಲ್ಲ. ಆದರೆ ಆಕಾಶವಾಣಿ ನನ್ನನ್ನು `ಯಶಸ್ವಿ ಸ್ವೋದ್ಯೋಗಿ’ ಎಂದು ಗುರುತಿಸಿ ಸಂದರ್ಶನ ನಡೆಸಿತು, ಎರಡೆರಡು ಬಾರಿ ಪ್ರಸಾರ ಮಾಡಿತು; ಯಶಸ್ಸಿಗೆ ನೂರೆಂಟು ತಂದೆಯರು! ಅಂಗಡಿ ತೆರೆಯುವ ಮುನ್ನ ಹಲವು ಸಣ್ಣಪುಟ್ಟ ಪ್ರದರ್ಶನ ಮಾರಾಟ ನಡೆಸಿದ್ದೆ. ಆದರೆ ಸರಿಯಾದ ಅನುಭವ ದಕ್ಕಿದ್ದು ೧೯೭೯ರ ಕನ್ನಡ ಸಾಹಿತ್ಯ ಸಮ್ಮೇಳನ – ಧರ್ಮಸ್ಥಳದಲ್ಲಿ. ಶ್ರಮ, ಖರ್ಚು, ಪುಸ್ತಕ ಧೂಳಾಗುವುದು, ಹಾಳಾಗುವುದು, ಕಳುವಾಗುವುದು, ಸಾಲದ್ದಕ್ಕೆ ರಿಯಾಯಿತಿಯ ಮೇಲಾಟ ನೋಡಿ ಇನ್ನೆಂದೂ ಭಾಗವಹಿಸಬಾರದೆಂದು ನಿಶ್ಚೈಸಿಕೊಂಡೆ.

ನನ್ನ ಹವ್ಯಾಸಿ ಆಸಕ್ತಿಗಳಾದ ಪರ್ವತಾರೋಹಣ ಮತ್ತು ತತ್ಸಂಬಂಧೀ ಸಾಹಸ ಕ್ರೀಡೆಗಳು, ಯಕ್ಷಗಾನ ನಾಟಕ ಸಂಗೀತ ಇತ್ಯಾದಿಗಳನ್ನು ಅಂಗಡಿಯಲ್ಲಿ ಮುಕ್ತವಾಗಿ ಚರ್ಚೆಗೆ ತರುತ್ತಿದ್ದೆ. ಒಳ್ಳೆಯದು ಅನ್ನಿಸಿದ್ದಕ್ಕೆ ಧಾರಾಳ ಪ್ರಚಾರ ಕೊಡುತ್ತಿದ್ದೆ. ಇಲ್ಲೆಲ್ಲ ಯಾವುದೆ ಪರಿಣಾಮ, ಪ್ರತಿಫಲ, ಅಂಗಡಿ ಪ್ರಚಾರ, ಮುಂತಾದ ನಿರೀಕ್ಷೆಗಳನ್ನು ನಾನು ಇಟ್ಟುಕೊಂಡದ್ದಿಲ್ಲ. ಆದರೂ ಇದು ನನಗೆ ಹೊಸ ಗೆಳೆಯರನ್ನೂ ಮತ್ತು ಮಳಿಗೆಗೆ ಆಯಾಮವನ್ನೂ ತಂದುಕೊಟ್ಟಿತು [ಬಹಳ ತಡವಾಗಿ ತಿಳಿದಂತೆ, ವೈರಿಗಳನ್ನೂ ಸೃಷ್ಟಿಸಿತ್ತು!] ವೃತ್ತಿ ಒಂದರಲ್ಲುಳಿದು ಇತರತ್ರ ದುಡ್ಡು ಮಾಡದ ನಿಲವು, ನನ್ನ ಹವ್ಯಾಸಕ್ಕೆ ಇತರರ ದಾನ ನಿರೀಕ್ಷಿಸದ ಧೋರಣೆಗಳು ನನಗೆ ತುಂಬ ಗೌರವವನ್ನೇ ತಂದುಕೊಟ್ಟವು.

ಕೇವಲ ಹವ್ಯಾಸಾಸಕ್ತಿ ಮತ್ತು ಅನೌಪಚಾರಿಕ ಗೆಳೆಯರ ಕೂಟವಾಗಿ ನಾನು ಕಟ್ಟಿದ ಸಂಸ್ಥೆ ಆರೋಹಣ ಪರ್ವತಾರೋಹಿಗಳು ಸಾಹಸಿಗಳು. ೧೯೮೦ರಲ್ಲಿ ನಾವು ಜಿಲ್ಲೆಯೊಳಗೆ ಪರ್ವತಾರೋಹಣ ಸಪ್ತಾಹ ನಡೆಸಿದೆವು. ಇದಂತೂ ಜಿಲ್ಲೆಯ ವಿವಿಧ ಕಾಲೇಜುಗಳ ಮಟ್ಟದಲ್ಲಿ ನನಗೆ ದೊಡ್ಡ ಪದೋನ್ನತಿ ನೀಡಿತ್ತು. `ಬರಿಯ ವ್ಯಾಪಾರವಲ್ಲ’ ಎಂಬ ಮಾತು ವ್ಯಾಪಾರವನ್ನು ಬಲಗೊಳಿಸಿತ್ತು!

೧೯೮೬ ಮೈಸೂರು ವಿವಿ ನಿಲಯದ ಪ್ರಸಾರಾಂಗದ ಸ್ವರ್ಣ ಮಹೋತ್ಸವದಲ್ಲಿ, ಪುಸ್ತಕೋದ್ಯಮ ಗೋಷ್ಠಿಯಲ್ಲಿ, `ಮಾರಾಟಗಾರನ ಸಮಸ್ಯೆಗಳು’ ಎಂಬ ಪ್ರಬಂಧ ಮಂಡಿಸಿದೆ. (೧೯೯೭ – ಅರವಿಂದ ಮಾಲಗತ್ತಿ ಸಂಪಾದಕತ್ವದ `ಕನ್ನಡ ಗ್ರಂಥೋದ್ಯಮ’ ಸಂಕಲನದಲ್ಲಿದೆ). ಅದರ ಪರಿಷ್ಕೃತ ಆವೃತ್ತಿಯನ್ನು ೧೯೮೫ರಲ್ಲಿ ಮೈಸೂರಿನಲ್ಲೇ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲೂ ಮಂಡಿಸಿದೆ. (೧೯೮೬ – ಎನ್.ಎಸ್ ರಾಮಪ್ರಸಾದ್ ಸಂಪಾದಕತ್ವದ `ವಿಶ್ವ ಕನ್ನಡ’ದ ಎರಡನೇ ಸಂಪುಟದಲ್ಲಿದೆ.

ಪ್ರಸಕ್ತ ಪುಸ್ತಕದಲ್ಲಿ ಅದೇ ಮೊದಲ ಲೇಖನ.) ಆಕಾಶವಾಣಿಯ ಚರ್ಚಾಗೋಷ್ಠಿಗಳು, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಾಥಮಿಕ ಸಲಹಾಗೋಷ್ಠಿ, ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ, ಈಚೆಗೆ ದೂರದರ್ಶನದಲ್ಲೂ ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶಗಳು ಒದಗಿವೆ. [ಸಲಹಾಗೋಷ್ಠಿಯಲ್ಲಿ ಕನ್ನಡಕ್ಕಿನ್ನೊಂದು ಸರಕಾರೀ ಸಂಸ್ಥೆ ಬೇಕಾಗಿಲ್ಲ ಎನ್ನುವುದನ್ನು ಕಟುವಾದ ಮಾತುಗಳಲ್ಲಿ, ಆದರೆ ಸ್ಪಷ್ಟ ಸಾಕ್ಷಿಗಳೊಡನೆ ಹೇಳಿದ್ದೆ. ಆಗಿನ್ನೂ ಅಷ್ಟಾವಧಾನಿಯಾಗಿದ್ದ ವಿದ್ವನ್ ಮಿತ್ರ ರಾ. ಗಣೇಶ್, ಸ್ವಯಂ ಪ್ರೇರಿತರಾಗಿ ಬಂದು, ಅಷ್ಟೇ ಬಲವಾಗಿ ಬೆಂಬಲಿಸಿದ್ದು ಮರೆಯಲಾಗದ ಅನುಭವ. ಆದರೂ ಇಂದು ಅನ್ನದಂಡಕ್ಕಷ್ಟೇ ಉಳಿದಿರುವ ಕನ್ನಡ ಪುಸ್ತಕ ಪ್ರಾಧಿಕಾರ ಕಟ್ಟಿಯೇ ಬಿಟ್ಟರು!] ಪ್ರೇರಿತ ಪತ್ರಿಕಾ ಲೇಖನಗಳು, ಅಸಂಖ್ಯ ಟಿಪ್ಪಣಿಗಳು, ಎಲ್ಲಕ್ಕೂ ಮಿಗಿಲಾಗಿ ವಿವಿಧ ಪುಸ್ತಕೋದ್ಯಮ ಸಮಸ್ಯೆ ಸಂಬಂಧೀ ಪತ್ರ ವ್ಯವಹಾರ ನಿರ್ಭಿಡೆಯಾಗಿ ನಡೆಸಿದೆ. ಇವು ಅತ್ರಿಯನ್ನು ಎಲ್ಲ ವಲಯಗಳಲ್ಲೂ `ವಿಚಾರದೊಂದಿಗೆ ವ್ಯಾಪಾರ’ ಎಂಬುದಕ್ಕೆ ಉದಾಹರಣೆಯಾಗಿಯೇ ಗುರುತಿಸುವಂತಾಯಿತು.ಆದರ್ಶಗಳನ್ನು ಬಳಕೆಯಲ್ಲಿ ಹೆಚ್ಚು ಸ್ಫುಟವಾಗಿ ತೋರಲು ನನಗೆ ಅವಕಾಶ ಒದಗಿದ್ದು ಪ್ರಕಾಶನರಂಗದಲ್ಲಿ. [ಈ ಅಭಿಪ್ರಾಯದ ವಿಸ್ತರಣೆ ಸಂಕಲನದ ಮುಂದಿನ ಲೇಖನಗಳಲ್ಲಿ ಬರುವುದರಿಂದ ಇಲ್ಲಿ ನಿವಾರಿಸಿದ್ದೇನೆ.]

ಈ ಸಂಕಲನವೂ ಸೇರಿದಂತೆ ನನ್ನೆಲ್ಲ ಪ್ರಕಟಣೆಗಳ ಸಂಪಾದನೆಯಿಂದ ತೊಡಗಿ ಮುದ್ರಣದ ಜವಾಬ್ದಾರಿಗಳವರೆಗೆ ನಿರ್ವಹಿಸುವವರು ನನ್ನ ತಂದೆ – ಜಿ.ಟಿ. ನಾರಾಯಣ ರಾವ್ (ಈ ಪುಸ್ತಕದಲ್ಲಿ ಭಾವಸ್ಫುಟಗೊಳ್ಳುವಂತೆ ಟಿಪ್ಪಣಿ, ಉಪಸಂಹಾರ, ಹಿನ್ನುಡಿ ಸೇವೆಗಳೂ ಅವರವೇ).ಮಾರಾಟದ ಧೋರಣೆ ಮತ್ತು ಹಣ ಹೂಡಿ ತೆಗೆಯುವ ಜವಾಬ್ದಾರಿಗಳಷ್ಟೇ ನನ್ನವು. ಅತ್ರಿಯಿಂದ ದತ್ತವಾದದ್ದು ಎಂಬರ್ಥದಲ್ಲಿ ದತ್ತಾತ್ರೇಯ ಪ್ರಕಾಶನ ಎಂದೇ ಪ್ರಕಾಶನರಂಗದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೆ. ೧೯೯೦ರಲ್ಲಿ ಮೊದಲ ಪ್ರಕಟಣೆಯಾಗಿ ತಂದೆಯ `ನೋಡೋಣು ಬಾರಾ ನಕ್ಷತ್ರ’ ಪ್ರಕಟವಾಯಿತು. ಎರಡು ಹೆಸರು ವ್ಯಾವಹಾರಿಕ ಕಿರುಕುಳಗಳಿಗೆ ಎಡೆ ಮಾಡಿದ್ದರಿಂದ ಮುಂದೆ ದತ್ತಾತ್ರೇಯ ಬಿಟ್ಟು, ಪ್ರಕಾಶನಕ್ಕೂ ಅತ್ರಿಯನ್ನೇ ನೆಚ್ಚಿದೆ. ವರ್ಷಕ್ಕೆ ಎರಡು, ಮೂರರ ನಿಧಾನಗತಿಯಲ್ಲಿ ಪ್ರಕಟಣೆಗಳು ಬರುತ್ತಲೇ ಇದ್ದುವು. ಪಾವೆಂ ಆಚಾರ್ಯರ `ಪದಾರ್ಥ ಚಿಂತಾಮಣಿ’ – ಪದ ವ್ಯುತ್ಪತ್ತಿ ಮತ್ತು ಇತಿಹಾಸದ ಕುರಿತ ಸಂಕಲನವನ್ನು, ನಭೂತೋ ಎಂಬಂತೆ ಕನ್ನಡಿಗರು ಸ್ವೀಕರಿಸಿದರು.`ಶ್ರುತಗಾನ’ ಕಲೆ ಕಲಾವಿದರ ಪರಿಚಯ ಹಾಗೂ ವಿಮರ್ಶೆಗಳ ಸಂಕಲನ, ಚಕ್ರವರ್ತಿಗಳು ಸಾಹಸ ಪ್ರವಾಸ ಕಥನವಾಗಿ ತಮ್ಮ ವೈಶಿಷ್ಟ್ಯದಿಂದ ಮೆರೆದುವು.

`ಕೊಡಗಿನ ಸುಮಗಳು’ (ಕಥಾ ಸಂಕಲನ) ಏಕೈಕ ಸೃಜನಶೀಲ ಕೃತಿ. `ಸವಾಲನ್ನು ಎದುರಿಸುವ ಛಲ’ ಮತ್ತು ಎನ್ಸಿಸಿ ದಿನಗಳು’ ಸೀಮಿತ ಜೀವನ ವೃತ್ತಗಳೇ ಆದರೂ ಜೀವನ ಕಲೆಯ ಅಪೂರ್ವ ಕೈಪಿಡಿಗಳು.ಬಾಲ ಸಾಹಿತ್ಯಕ್ಕೆ ಚಿಕ್ಕ ಕೊಡುಗೆ `ಅಕ್ಷಮಾಲಾ.’ ಇತರ ಎಲ್ಲ ಪ್ರಕಟಣೆಗಳು, ಅಂದರೆ `ಪ್ಲಾಂಕ್ ಐನ್ಸ್‍ಟೈನ್ ಬೋರ್’, ಬೈಜಿಕ ವಿದ್ಯುತ್ತು, ಸೂರ್ಯನ ಸಾಮ್ರಾಜ್ಯ, ಜಾತಕ ಮತ್ತು ಭವಿಷ್ಯ, ಭವಿಷ್ಯ ವಾಚನ, ಭವಿಷ್ಯ ವಿಜ್ಞಾನ, ಗಣಿತ ಗಗನ ಗಮನ, ರಾಮಾನುಜನ್ ಬಾಳಿದರಿಲ್ಲಿ, ಸುಬ್ರಹ್ಮಣ್ಯನ್ ಚಂದ್ರಶೇಖರ್, ಸೂಪರ್ನೋವಾ, ಆಲ್ಬರ್ಟ್ ಐನ್ಸ್‍ಟೈನ್, ಆಲ್ಬರ್ಟ್ ಐನ್ಸ್‍ಟೈನ್ ಮಾನವೀಯ ಮುಖ, ಉಲ್ಲೇಖನೀಯ ಐನ್ಸ್‍ಟೈನ್, ಗ್ರಹಣಗಳು, ಕೃಷ್ಣ ವಿವರ ಹಾಗೂ ಏಕೈಕ ಇಂಗ್ಲೀಶ್ ಪ್ರಕಟಣೆಯಾದ Scientific temperಗಳು ಶುದ್ಧ ವಿಜ್ಞಾನ ಮತ್ತು ವೈಜ್ಞಾನಿಕ ತಿಳಿವಿನ ಪ್ರಸಾರದ ಹೊಣೆಯನ್ನು ಗಂಭೀರವಾಗಿ ಹೊತ್ತೇ ಬಂದಿರುವಂಥವು. ಭರತನಾಟ್ಯ ಶಾಸ್ತ್ರವನ್ನು ಸಚಿತ್ರ ವಿವರಿಸುವ ಸಮೃದ್ಧ ಕೃತಿ `ನೃತ್ಯಲೋಕ’ (೧೯೯೮). [ಈ ಸಂಕಲನದನಂತರದ ಪ್ರಕಟಣೆಗಳನ್ನು ಇಲ್ಲಿ ಉಲ್ಲೇಖಿಸಲಿಲ್ಲ.] ನನ್ನೆಲ್ಲ ಸತ್ಯ ಮತ್ತು ವಸ್ತುನಿಷ್ಠ ನಡೆಗೆ ಏಕೈಕ ಪ್ರೇರಣೆ ಮತ್ತು ನಿಕಷವಾಗಿರುವವರು ತಂದೆ. ಲೋಕಮುಖಕ್ಕೆ ಇವರು ಒಬ್ಬ ವ್ಯಕ್ತಿಯಾದರೂ ನನಗೆ ಅಮ್ಮ ಲಕ್ಷ್ಮೀದೇವಿಗಿಂತ ಭಿನ್ನರಲ್ಲ.

ನನ್ನ ಆರ್ಭಟೆಗಳಿಗೆಲ್ಲ ತನ್ನ ಗೊಣಗಿನ ವಿಮರ್ಶೆಯಿಂದ ಹೆಚ್ಚಿನ ಅರ್ಥವಂತಿಕೆ ಕೊಡುವ ಹೆಂಡತಿ ದೇವಕಿ.ಈ ಮೂವರಿಗೆ ನಾನು ಕೃತಜ್ಞ. ನನ್ನ ಬರವಣಿಗೆಯುದ್ದಕ್ಕೂ ಉಂಟಾಗುತ್ತಿದ್ದ ಗಣಕ ಸಮಸ್ಯೆಗಳಿಗೆಲ್ಲ ಅತ್ಯುತ್ಸಾಹಿ ಚಿಕಿತ್ಸಕನಾಗಿ ಒದಗುತ್ತಿದ್ದ ಮತ್ತು ಅವಕಾಶ ಕೊಟ್ಟಿದ್ದರೆ ಈ ಪುಸ್ತಕವನ್ನು ಇನ್ನೂ ಚಿತ್ರಮಯವನ್ನಾಗಿಸುವ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಬಹುದಾಗಿದ್ದ ಮಗ ಅಭಯಸಿಂಹನಿಗೆ ಶುಭಾಶಯಗಳು.ಇನ್ನೇನೋ ಆಗಬಹುದಾಗಿದ್ದವನಿಗೆ ಪುಸ್ತಕಲೋಕ ಮೀಸಲು ಕ್ಷೇತ್ರ ಎಂದು ತೋರಿಸಿ, ಎರಡಿಲ್ಲದ ಪ್ರೀತಿಯಿಂದ ಬೆಳೆಸಿದ ಡಿವಿಕೆ ಮೂರ್ತಿಯವರಿಗೇ ಈ ಕೃತಿ ಸಮರ್ಪಿತ. ತಾತ್ತ್ವಿಕವಾಗಿ ನನಗೆ ಅಂಗಡಿ ಸಹಾಯಕನಾಗಿ ಸೇರಿದವನೇ ಆದರೂ ತನ್ನ ಶ್ರದ್ಧೆ, ಕಾರ್ಯತತ್ಪರತೆಯಲ್ಲಿ ಅಂಗಡಿಯ ಜೀವಾಳವೇ ಆಗಿರುವ ಶಾಂತಾರಾಮನಿಗೆ ಶುಭ ಹಾರೈಕೆಗಳು.ನನ್ನ ಈಚಿನ ಎಲ್ಲ ಪ್ರಕಟಣೆಗಳ ಮುದ್ರಣಕ್ಕೆ ಮಾತ್ರವಲ್ಲ ಸರಳ ಸೌಂದರ್ಯಕ್ಕೂ ಸುಲಭ ಬೆಲೆಗೂ ಅಘೋಷಿತ ಪಾಲುದಾದರರೇ ಆಗಿರುವ ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್ಸಿನ ಎಲ್ಲ ಮಿತ್ರರಿಗೂ ಅನಂತ ವಂದನೆಗಳು.

ಹಸ್ತಪ್ರತಿಯನ್ನು ಸುಂದರವಾಗಿ ಬೆರಳಚ್ಚಿಸಿದ ಕು. ಸಿಕೆ ದೇವಿಕಾ, ಕರಡು ತಿದ್ದಿದ ಸೌ| ಜಿಎ ರುಕ್ಮಿಣಿಮಾಲಾ, ಮುದ್ರಣ ವಿನ್ಯಾಸದ ಸೌಂದರ್ಯಕ್ಕೆ ಕಾರಣರಾದ ಶ್ರೀ ಆರ್.ಎಸ್ ಮೋಹನಮೂರ್ತಿ ಮತ್ತು ಇವರ ತಂದೆ ಶ್ರೀ ಆರ್.ವಿ ಶ್ರೀನಿವಾಸ ಮೂರ್ತಿ, ಹೊದಿಕೆಯ ಚಿತ್ರ ವಿನ್ಯಾಸಗಳಿಗೆ ಕಲಾವಿದರಾದ ಶ್ರೀ ವಿ.ಎಂ ಸೋಲಾಪುರ್ಕರ್ ಹಾಗೂ ಶ್ರೀ ಎನ್.ಎಸ್. ರಾಮಗೌತಮ್ ಮತ್ತು ಹೊದಿಕೆಯ ನಾಲ್ಕನೆಯ ಪುಟದ ಛಾಯಾಚಿತ್ರಕಾರರಾದ ಶ್ರೀ ಯಜ್ಞ – ಇವರೆಲ್ಲರಿಗೂ ಹಾರ್ದಿಕ ನಮನಗಳು.ಕೊನೆಯದಲ್ಲದ ಮಾತು:ಈ ಪುಸ್ತಕದನಂತರ ಏನು? ನನ್ನ `ಜಗಳಗಂಟ ಕಡತ’ಕ್ಕೆ (ಹೋರಾಟದ ದಾಖಲೆಗಳ ಸಂಗ್ರಹ) ಹೊಸ ಆಖ್ಯಾಯಿಕೆಗಳು ಬರುತ್ತಲೇ ಇವೆ. ಅನುಭವದ ಮಾಳಿಗೆ ಏರುತ್ತ ಹೋದರೆ ಅಡಿಪಾಯ ತಾಳೀತೇ? ಹಾಗಾಗಿ ಮುಂದೆ ನಾನು ಇಂಥದ್ದೇ ಇನ್ನೊಂದು ಪುಸ್ತಕ ತಂದರೆ ಶೀರ್ಷಿಕೆ ನಿಶ್ಚಯಿಸಿದ್ದೇನೆ – ಪುಸ್ತಕ ಶೇವೆ, ಹತಾಶೆ! [ವ್ಯಂಗ್ಯದ ಪರಾಕಾಷ್ಠೆ ಎನ್ನುವಂತೆ ಇಂದು ನಾನು ಮುದ್ರಿತ ಪುಸ್ತಕೋದ್ಯಮಕ್ಕೇ ವಿದಾಯ ಹೇಳಿದ್ದಾಗಿದೆ]

೪ ಫೆಬ್ರುವರಿ ೧೯೯೯,
ಅತ್ರಿ ಬುಕ್ ಸೆಂಟರ್, ಬಲ್ಮಠ, ಮಂಗಳೂರು

(ಮುಂದುವರಿಯಲಿದೆ)