(ಕರೆದೇ ಕರೆಯಿತು ಕಾಶ್ಮೀರ ಭಾಗ ನಾಲ್ಕು)
ಲೇಖನ – ವಿದ್ಯಾಮನೋಹರ
ಚಿತ್ರ – ಮನೋಹರ ಉಪಾಧ್ಯ

ಎಪ್ರಿಲ್ ೧೮ ರ ಬೆಳಗು ಶುಭ್ರವಾಗಿತ್ತು. ಚುಮುಚುಮು ಚಳಿಗೆ ಅಡ್ಡಾಡಲು ಮನಸ್ಸಿದ್ದರೂ, ಉದಾಸೀನ ಬಿಡಲೇ ಇಲ್ಲ. ಹೋಟೆಲಿನ ಕಿಟಿಕಿಯಿ೦ದಲೇ ಕಾಣುವಷ್ಟು ಆಕಾಶವನ್ನು ದಿಟ್ಟಿಸಿದೆ. ಎಲ್ಲಿಯೂ ಮೋಡದ ಕುರುಹೂ ಸಹ ಕ೦ಡು ಬರಲಿಲ್ಲ. ಕೆಲವು ದಿನಗಳ ಹಿ೦ದೆಯೇ ನಮ್ಮ ಪ್ರವಾಸದ ತಯಾರಿಯ ಭಾಗವಾಗಿ, ಹವಾ ಮುನ್ಸೂಚನೆಗಳನ್ನು ಗಮನಿಸಿದ್ದೆ. ಪ್ರವಾಸದ ಅವಧಿಯ ಕೆಲ ದಿನಗಳಲ್ಲಿ ಶುಭ್ರಾಕಾಶ, ಕೆಲ ದಿನ ತು೦ತುರು ಮಳೆ, ಕೆಲವು ದಿನ ಗುಡುಗು ಸಹಿತ ಮಳೆ ಎ೦ದೆಲ್ಲಾ ಮುನ್ಸೂಚನೆ ಕ೦ಡು ಮನ ಗೊ೦ದಲಭರಿತವಾಗಿತ್ತು. ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಕಾರ್ಯಕ್ರಮ ಪಟ್ಟಿಯ ಚೀಟಿಯೊ೦ದಿತ್ತು. ಅದರಲ್ಲಿ ಆಯಾ ದಿನದ ಹವಾ ಮುನ್ಸೂಚನೆಯನ್ನು ಬರೆದು ತ೦ದಿದ್ದೆ. ಆ ಪ್ರಕಾರ, ಈ ದಿನ ತು೦ತುರು ಮಳೆಯ ಸೂಚನೆ ಇತ್ತು.

ಬೆಳಿಗ್ಗೆ ೯ಕ್ಕೆ ಸರಿಯಾಗಿ ನಾವೆಲ್ಲಾ ತಯಾರಾಗಿ ನಿ೦ತೆವು. ಮೆಹ್ರಾಜ್ ಅರ್ಧ ಗ೦ಟೆ ತಡವಾಗಿ ಬ೦ದರು. ನಾವು ಸುಮಾರು ೯೦ ಕಿ.ಮೀ ದೂರದ ಸೋನಾಮಾರ್ಗ್ ಗೆ ಹೋಗುವವರಿದ್ದೆವು. ಹಿ೦ದಿನ ಕಾಲದಲ್ಲಿ ಪೂರ್ವ ಏಷ್ಯಾದ ಚೀನಾ ದೇಶದಿ೦ದ ಬೆಲೆಬಾಳುವ ರೇಷ್ಮೆಯನ್ನು ಪಶ್ಚಿಮ ಏಷ್ಯಾದ ಅರೇಬಿಯಾ ದೇಶಕ್ಕೆ ಸಾಗಿಸಲು ಬಳಸುತ್ತಿದ್ದ ಸಿಲ್ಕ್ ರೂಟ್ ಈ ಕಣಿವೆ ಪ್ರದೇಶದಲ್ಲಿ ಹಾದು ಹೋಗುತ್ತಿದ್ದದರಿ೦ದ ಚಿನ್ನದ ಬೆಲೆಯುಳ್ಳ ಸೋನಾಮಾರ್ಗವೆ೦ಬ ಹೆಸರು ಬ೦ತ೦ತೆ.ವ್ಯಾನೇರಿದ್ದೇ ನಾವು ಹೆ೦ಗಸರು ಮು೦ದಿನ ಸೀಟುಗಳನ್ನು ಅಲ೦ಕರಿಸಿದೆವು. ‘ಹಿ೦ದಿನ ಸಾಲಿನ ಹುಡುಗರು ನಾವು’ ಎ೦ದು ಗ೦ಡಸರೆಲ್ಲಾ ಹಿ೦ದಕ್ಕೆ ಹೋದರು. ಊರ ಹೊರಗಿನ ಚೆಲುವನ್ನು ಸವಿಯುವ ಖುಷಿಯಲ್ಲಿ ಕಿಟಿಕಿ ಬದಿ ಕುಳಿತು ಮೈಯೆಲ್ಲಾ ಕಣ್ಣಾದೆ. ವ್ಯಾನ್ ಕಿರಿದಾದ ರಸ್ತೆಗಳಲ್ಲಿ ನಿಧಾನಕ್ಕೆ ಚಲಿಸುತ್ತಿತ್ತು. ನಾವಿನ್ನೂ ಊರು ಬಿಟ್ಟಿರಲಿಲ್ಲ. ಆಗಷ್ಟೇ ಒ೦ದೆರಡು ಅ೦ಗಡಿಗಳು ಬಾಗಿಲು ತೆರೆಯುತ್ತಿದ್ದವು. ಜನರ ಓಡಾಟ ಶುರುವಾಗಿತ್ತಷ್ಟೆ.

ಅಲ್ಲಲ್ಲಿ ತಳ್ಳುಗಾಡಿಗಳು ತೆವಳಲು ಶುರುಮಾಡಿದ್ದವು. ಫಕ್ಕನೆ ಒ೦ದು ಗಾಡಿ ಗಮನ ಸೆಳೆಯಿತು. ಅರೆ, ಇದೇನು?ಅಡಿಕೆಯಾ?ಎ೦ದು ಪುನಃ ನೋಡುವಷ್ಟರಲ್ಲಿ ವ್ಯಾನ್ ಮು೦ದಕ್ಕೆ ಹೋಗಿತ್ತು. ತಲೆಗೆ ಮುಸ್ಲಿಮ್ ಟೋಪಿ ಧರಿಸಿದ್ದ ವರ್ತಕ ಗಾಡಿ ಬಳಿ ನಿ೦ತದ್ದು ಗಮನಿಸಿದೆ. ಕೆ೦ಪು ಕೆ೦ಪು ಬಣ್ಣದ, ನಮ್ಮೂರ ಹಣ್ಣಡಿಕೆಗಿ೦ತ ಸ್ವಲ್ಪ ಚಿಕ್ಕದಾದ ಹಣ್ಣುಗಳ ಒ೦ದು ರಾಶಿ ಆ ಗಾಡಿಯಲ್ಲಿತ್ತು. ಅದೇನಿರಬಹುದು? ಎ೦ದು ಯೋಚಿಸುತ್ತಲೇ ಇದ್ದೆ. ಅಡಿಕೆಯಾಗಿರಲಿಕ್ಕಿಲ್ಲವೆ೦ದು ಅನಿಸುತ್ತಿತ್ತು.

ಸ್ವಲ್ಪ ಹೊತ್ತಿನಲ್ಲಿ ದಾಲ್ ಸರೋವರದ ಅ೦ಚಿನ ರಸ್ತೆಗೆ ಬ೦ದಿದ್ದೆವು. ಮು೦ದೆ ಸುಮಾರು ಅರ್ಧ ಗ೦ಟೆ ಈ ಸರೋವರದ ಚೆಲುವನ್ನೇ ಹೀರುತ್ತಾ ಪ್ರಯಾಣಿಸಿದೆವು.

ನಿಧಾನಕ್ಕೆ ಹೊರಗಿನ ಪ್ರಕೃತಿ ಬದಲಾಗುತ್ತಿತ್ತು. ಅ೦ಗಡಿ, ಮು೦ಗಟ್ಟು,ಜನ, ವಾಹನ ಸ೦ದಣಿ ಕಳೆದು, ದಟ್ಟ ಹಸಿರು, ಅಲ್ಲಲ್ಲಿ ಸಣ್ಣ ಸಣ್ಣ ಹಳ್ಳಿಗಳ ದೃಶ್ಯ ಕ೦ಡು ಬ೦ತು. ರಸ್ತೆ ಸಾಧಾರಣವಾಗಿದ್ದು, ತಿರುವುಗಳೂ ಇದ್ದದ್ದರಿ೦ದ ಮೆಹ್ರಾಜ್ ನಿಧಾನಕ್ಕೇ ಚಲಾಯಿಸುತ್ತಿದ್ದರು.

ಹೆ೦ಗಸರು ಒಟ್ಟು ಸೇರಿದ ಮೇಲೆ ಕೇಳಬೇಕೆ? ನಮ್ಮ ನಮ್ಮೊಳಗಿನ ಪಟ್ಟಾ೦ಗದ ಒ೦ದು ಹ೦ತವನ್ನು ಇಷ್ಟರಲ್ಲೇ ಮುಗಿಸಿದ್ದೆವಾದ್ದರಿ೦ದ, ನಮ್ಮ ಮು೦ದೆ ಇದ್ದ ಮೆಹ್ರಾಜ್ ರನ್ನು ಮಾತಿಗೆಳೆದೆವು. ಅವರಿಗೂ ಇದೇ ಬೇಕಿತ್ತೆನಿಸುತ್ತದೆ. ತಕ್ಷಣ ಉತ್ತರ ಕೊಡಲು ಆರ೦ಭಿಸಿದರು. ” ಮೆಹ್ರಾಜ್, ನಿಮ್ಮ ಊರಿನ ವಿಶೇಷಗಳೇನೇನು?”
“ತಿರುಗಾಡುವುದಕ್ಕಾ? ಖರೀದಿಸುವುದಕ್ಕಾ?” ನಮ್ಮ ಮನದ ಇ೦ಗಿತವನ್ನು ಒ೦ದೇ ಕ್ಷಣದಲ್ಲಿ ಅರ್ಥಮಾಡಿಕೊ೦ಡ ಚುರುಕಿಗೆ ಬೆರಗಾದೆ!
“ನೋಡುವುದಕ್ಕೆ ಏನೇನಿದೆ ಅ೦ತ ಗೊತ್ತು. ನೀವು ಹೇಗೂ ಅಲ್ಲಿಗೆಲ್ಲಾ ಕರಕೊ೦ಡು ಹೋಗುವವರೇ ತಾನೇ?”
“ಹೌದೌದು. ನಾನು ನಿಮ್ಮನ್ನೆಲ್ಲಾ ಚೆನ್ನಾಗಿ ತಿರುಗಾಡಿಸಬಲ್ಲೆ. ನೀವು ಜಮ್ಮುವಿಗೆ ತೆರಳುವವರೆಗೂ ಜತೆಗಿದ್ದು ಎಲ್ಲಾ ತೋರಿಸುತ್ತೇನೆ. ಏನೂ ಯೋಚನೆ ಮಾಡಬೇಡಿ” ಮು೦ದುವರಿಸಿ ಮೆಹ್ರಾಜ್ “ಇಲ್ಲಿ ಅ೦ಗಡಿಯವರು ತು೦ಬಾ ಮೋಸ ಮಾಡುತ್ತಾರೆ. ಪ್ರವಾಸಿಗರನ್ನು ಸುಲಿದು ಬಿಡುತ್ತಾರೆ. ಹಾಗಾಗಿ ಸಿಕ್ಕಸಿಕ್ಕಲ್ಲಿ ಏನನ್ನೂ ಖರೀದಿಸಬೇಡಿ. ನಿಮಗೆ ಏನೇನು ಬೇಕು ಹೇಳಿ, ನಾನು ಸರಿಯಾದ ಅ೦ಗಡಿ ತೋರಿಸುತ್ತೇನೆ.” ನಮ್ಮ ಉತ್ಸಾಹ ಒಮ್ಮೆಗೇ ಹೆಚ್ಚಾಗಿ ” ಏನೇನು ಸಿಗುತ್ತವೆ?” ಎ೦ದು ಕೇಳಿದೆವು. “ಸ್ವೆಟರ್, ಶಾಲ್, ಡ್ರೆಸ್, ಸೀರೆ ಎಲ್ಲಾ ಸಿಗುತ್ತವೆ. ಡ್ರೈಫ್ರುಟ್ಸ್, ಕೇಸರಿಯ೦ತೂ ನಿಮಗೆ ಗೊತ್ತೇ ಇದೆ” ಎ೦ದರು.

ಸುಮಾರು ಎರಡು ಗ೦ಟೆ ಪ್ರಯಾಣಿಸಿದ್ದೆವೋ ಏನೊ. ರಸ್ತೆಯ ಎರಡೂ ಕಡೆ ನೋಡುತ್ತಲೇ ಇದ್ದೆ. ಥಟ್ಟನೆ ಹಳದಿ ಪೈ೦ಟ್ ಬಳಿದ ಗದ್ದೆಗಳು ಸಿಕ್ಕವು! ಅವೇ, ಸಾಸಿವೆ ಗಿಡಗಳು ಹೂ ತು೦ಬಿಕೊ೦ಡಿದ್ದವು. ನನ್ನ ಊಹೆ ಸರಿಯಾಗಿದ್ದಕ್ಕೆ ಖುಷಿ ಪಟ್ಟೆ!

“ಚಹಾ ಕುಡಿಯುವ ಸ್ಥಳ ಬ೦ತು, ನಿಲ್ಲಿಸಲಾ?” ಮೆಹ್ರಾಜ್ ಪ್ರಶ್ನೆಗೆ ಎ೦ಟೂ ಧ್ವನಿಗಳು ‘ಹೂ೦’ ಅ೦ದವು. ವ್ಯಾನಿನಿ೦ದ ನಾವೆಲ್ಲಾ ಇಳಿಯುತ್ತಲೇ ಮೆಹ್ರಾಜ್, “ಆ ಚಹಾ ಹೋಟೆಲ್ಲಿನ ಪಕ್ಕದ ಅ೦ಗಡಿಯಲ್ಲಿ ನೀವು ಶಾಪಿ೦ಗ್ ಮಾಡಬಹುದು. ಅವರದು ಪ್ರಾಮಾಣಿಕ ವ್ಯಾಪಾರ” ಎ೦ದರು. ಇದನ್ನು ಕೇಳಿಸಿಕೊ೦ಡ ಗ೦ಡಸರು, “ಕಳ್ಳ, ಆಯಕಟ್ಟಿನ ಜಾಗದಲ್ಲಿ ನಿಲ್ಲಿಸಿದ್ದಾನೆ ” ಎ೦ದು ಗೊಣಗಿದರು. “ನೋಡಿ, ಅಲ್ಲೇ ಹಿ೦ದೆ ಹೆ೦ಗಸರ ಶೌಚಾಲಯ ಇದೆ, ಅದಕ್ಕೇ ಇಲ್ಲಿ ನಿಲ್ಲಿಸಿರಬಹುದು” ಎ೦ದು ಆಗಷ್ಟೆ ಇಷ್ಟವಾಗತೊಡಗಿದ್ದ ಮೆಹ್ರಾಜ್ ಪರ ವಕಾಲತ್ತು ಮಾಡಿದೆವು.

ಚಾ ತಯಾರಾಗುವಷ್ಟರಲ್ಲಿ ಒ೦ದು ಸುತ್ತಿನ ಅ೦ಗಡಿ ವೀಕ್ಷಣೆ ಮಾಡಿ ಎಲ್ಲಾ ವಸ್ತುಗಳ ದರ ವಿಚಾರಿಸಿಕೊ೦ಡು ಬ೦ದೆವು. ೫೦೦ ರೂಪಾಯಿಗಳಿಗೆ ಪ್ರಿ೦ಟೆಡ್ ಸಿಲ್ಕ್ ಸೀರೆ ಇತ್ತು. ಕಾಶ್ಮೀರಿ ಎ೦ಬ್ರಾಯ್ಡರಿ ಮತ್ತು ಉಣ್ಣೆ ಬಟ್ಟೆಗಳ ದರವೂ ಪರವಾಗಿಲ್ಲವೆನಿಸಿತು. ಸೋನಾಮಾರ್ಗದಿ೦ದ ವಾಪಾಸು ಬರುವಾಗ ಇಲ್ಲಿಯೇ ನಿಲ್ಲಿಸುತ್ತೇನೆ, ಆವಾಗ ಖರೀದಿಸಿ ಎ೦ದು ಮೆಹ್ರಾಜ್ ಆಶ್ವಾಸನೆ ಕೊಟ್ಟರು.

ಈಗ ನಮ್ಮ ಪ್ರಯಾಣದುದ್ದಕ್ಕೂ ತಿಳಿ ಹಸಿರು ಬಣ್ಣದ ನೀರಿನ ಸಿ೦ಧ್ ನದಿ ಒಮ್ಮೆ ರಸ್ತೆಯ ಎಡಕ್ಕೆ, ಒಮ್ಮೆ ಬಲಕ್ಕೆ ಸಿಗುತ್ತಲೇ ಇತ್ತು. ಆ ನದಿ ತಟದಲ್ಲಿ ಮಕ್ಕಳು ಆಟವಾಡುವುದು, ಹೆ೦ಗಸರು ಏನಾದರೂ ಕೆಲಸ ಮಾಡುತ್ತಿರುವುದು ಕಾಣುತ್ತಿತ್ತು. ಪಕ್ಕದಲ್ಲೇ ಗದ್ದೆಗಳಲ್ಲಿ ಕುರಿ, ಕುದುರೆ, ದನಗಳು ಹಾಯಾಗಿ ಮೇಯುತ್ತಿದ್ದವು. ಆ ಎತ್ತರದ ಪರ್ವತಗಳ ಬುಡದಿ೦ದ ಮಧ್ಯದವರೆಗೆ, ಕೆಲವು ಕಡೆ ತುದಿಗಳಲ್ಲೂ ಪುಟ್ಟ ಪುಟ್ಟ ಮನೆಗಳಿದ್ದವು. ಯಾವುದೇ ಗಟ್ಟಿ ಆಧಾರವಿಲ್ಲದೆ ಬುರುಬುರನೆ ಬೀಳುವ ಕಲ್ಲುಗಳನ್ನೇ ಆಧರಿಸಿ ಹೇಗೋ ಮನೆ ಕಟ್ಟಿದ್ದರು. ಆ ಕಲ್ಲುಗಳ ಕೊರಕಲಿನೆಡೆಯಲ್ಲೇ ತಮ್ಮ ಸಾಮಾನು, ಮೂಟೆಗಳನ್ನು ಹೊತ್ತೊಯ್ಯುತ್ತಿದ್ದರು. ನದಿಯ ಪ್ರವಾಹ ಹೆಚ್ಚಾದರೆ ಪರ್ವತ ಕುಸಿದು ಹಳ್ಳಿಗೆ ಹಳ್ಳಿಯೇ ಹೂತು ಹೋಗುವುದರಲ್ಲಿ ಆಶ್ಚರ್ಯವಿಲ್ಲವೆನಿಸಿತು.

ದಾರಿ ಮಧ್ಯದಲ್ಲಿ ಮೆಹ್ರಾಜ್, ಈ ರಸ್ತೆಯೇನೋ ಚೆನ್ನಾಗಿದೆ, ಆದರೆ ನಾವು ನಾಡಿದ್ದು ಹೋಗಲಿರುವ ಶ್ರೀನಗರ – ಜಮ್ಮು ಹೆದ್ದಾರಿಯಲ್ಲಿ ಪ್ರಯಾಣಿಸುವುದು ತು೦ಬಾ ತ್ರಾಸದಾಯಕವೆ೦ದೂ, ನಾವು ನಮ್ಮ ಜಮ್ಮುವಿನ ಪ್ರಯಾಣವನ್ನು ರಸ್ತೆ ಬಿಟ್ಟು ವಿಮಾನದಲ್ಲಿ ಮಾಡುವುದು ಒಳಿತೆ೦ದೂ ಸೂಚಿಸಿದರು. ನಾವು ಆದಷ್ಟು ಬೇಗನೆ ಬುಕ್ ಮಾಡಿದರೆ ಕಡಿಮೆ ದರದಲ್ಲಿ ಟಿಕೆಟ್ ಸಿಗಬಹುದೆ೦ದೂ ತಿಳಿಸಿದರು.

ಇನ್ನೂ ಒ೦ದು ಗ೦ಟೆ ಕಾರ್ಗಿಲ್, ಲೇಹ್, ಲಡಾಕ್ ಗಳಿಗೂ ಹೋಗಬಹುದಾದ ರಾಷ್ಟ್ರೀಯ ಹೆದ್ದಾರಿ ೧ಡಿ ಯಲ್ಲಿ ಪ್ರಯಾಣ ಮಾಡಿದೆವು. ಚಳಿಗಾಲದಲ್ಲಿ ಹಿಮಪಾತದಿ೦ದ ಎಲ್ಲವೂ ಮುಚ್ಚಿಹೋಗುವ ಕಾರಣ ನಮ್ಮ ಸೈನಿಕರ ಹೊರತು ಮತ್ಯಾರೂ ಈ ಜಾಗಗಳಲ್ಲಿರುವುದಿಲ್ಲ. ರಸ್ತೆ ನಿಧಾನಕ್ಕೆ ಎತ್ತರವಾಗುತ್ತಿತ್ತು. ದೂರದಲ್ಲಿ ಕಾಣುತ್ತಿದ್ದ ಹಿಮಚ್ಛಾದಿತ ಬೆಟ್ಟಗಳು ಈಗ ಸ್ಪಷ್ಟವಾಗತೊಡಗಿದ್ದವು.

ಸೋನಾಮಾರ್ಗ್ ಗೆ ೧೦-೧೫ ಕಿ.ಮೀಗಳಿವೆ ಎನ್ನುವಾಗ ರಸ್ತೆಯ ಬದಿಯಲ್ಲೇ ದೊಡ್ಡ ಬರ್ಫದ ತು೦ಡು ಬಿದ್ದದ್ದು ಕ೦ಡಿತು. ಆಹಾ! ಎಲ್ಲರೂ ಉತ್ಸಾಹದಿ೦ದ ನೋಡಿದೆವು. ಮು೦ದೆ ಹೋದರೆ ಎಲ್ಲೆಲ್ಲೂ ಈ ರೀತಿಯ ತು೦ಡುಗಳೇ! ರಸ್ತೆಯ ಎರಡೂ ಬದಿಗೆ, ಕಲ್ಲು ಬ೦ಡೆ ಮೇಲೆ, ಗಟ್ಟಿಗಟ್ಟಿ ಹಿಮದ ರಾಶಿಯೇ ಇತ್ತು. ಅರ್ಧ೦ಬರ್ಧ ಕರಗಿ ನೀರಾಗಿ, ಝರಿಯಾಗಿ, ತೊರೆಯಾಗಿ ಹರಿದು ಹೋಗುವುದನ್ನು ನೋಡಿದೆವು.

ಈವರೆಗೆ ಹಿಮದ ರಾಶಿಯನ್ನೇ ಕಾಣದವರಿಗೆ, ಹೀಗೆ ಬಿಳಿಬಿಳಿ ನೀರಿನ ಗಟ್ಟಿಗಳನ್ನು ಒಮ್ಮೆಲೆ ಕ೦ಡಾಗ ಆಶ್ಚರ್ಯವಾಗುತ್ತದೆ. ಅದನ್ನು ಮುಟ್ಟಬೇಕು, ಆಟವಾಡಬೇಕು ಎ೦ಬ ಆಸೆಯಾಗುತ್ತದೆ.

ಈಗ ಸೋನಾಮಾರ್ಗದ ಆದಾಯವಿಡೀ ಮನುಷ್ಯನ ಈ ಆಸೆಯ ಮೇಲೆಯೇ ನಿ೦ತಿದೆ.

(ಮುಂದುವರಿಯಲಿದೆ)