(ಪುಸ್ತಕ ಮಾರಾಟ ಹೋರಾಟ. ಲೇಖಕ ಜಿ.ಎನ್.ಅಶೋಕವರ್ಧನ. ೧೯೯೫ರಲ್ಲಿ ಪ್ರಕಟವಾದ ಪುಸ್ತಕದ ಪರಿಷ್ಕೃತ ಎರಡನೇ ಅಧ್ಯಾಯ)

[೨-೧೨-೧೯೯೨ರಂದು ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಅಂದರೆ ಈಗಿನ ಮಣಿಪಾಲ ವಿವಿನಿಲಯದ ಮಾತೃ ಸಂಸ್ಥೆ, ಇದರ ಚಿನ್ನದ ಹಬ್ಬ ನಡೆದಿತ್ತು. ಅದರ ಅಂಗವಾಗಿ ನಡೆದ ಪುಸ್ತಕ ಜಿಜ್ಞಾಸೆಗೋಷ್ಠಿಯಲ್ಲಿ ನಾನು ಮಂಡಿಸಿದ ಪ್ರಬಂಧ. ನೆನಪಿರಲಿ, ಅಂದು ಮತ್ತು ಇಂದಿಗೂ ನಾನು ಸಂಘಟಕರ ಒಲವು ಮತ್ತು ಕೇಳುಗರ ಪ್ರಯೋಜನ ಗಣಿಸಿಯೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತೇನೆ. ಅಂದು ಕುಶಿ ಹರಿದಾಸ ಭಟ್ಟರ ವಿನಂತಿಯನ್ನು ನಾನು ಆದೇಶವೆಂದೇ ಪಾಲಿಸಿದ್ದೆ!]

[ಸಂಪಾದಕೀಯ ಟಿಪ್ಪಣಿ: ಸಭ್ಯ ವ್ಯಾಪಾರದ ಸುಸಂಸ್ಕೃತ ನೀತಿ: ತನ್ನ ಉತ್ಪನ್ನ ಗ್ರಾಹಕೋಪಯುಕ್ತವಾಗುವುದರಲ್ಲೇ ಉತ್ಪಾದನೆಯ ಯಶಸ್ಸು ಅಡಗಿದೆ ಎಂಬುದನ್ನು ಉತ್ಪಾದಕ ಅರ್ಥಾತ್ ಪ್ರಕಾಶಕ ಅರಿತು ತದನುಸಾರ ವರ್ತಿಸಬೇಕು – ಶಬರಿಯಂತೆ. ಉತ್ಪಾದಕನ ಪ್ರದರ್ಶನಮುಖವೂ ಗ್ರಾಹಕನ ಸೇವಾಕೇಂದ್ರವೂ ತಾನಾಗಿರಬೇಕೆಂದು ಮಾರಾಟಗಾರ ತನ್ನ ವೃತ್ತಿ ನಿರತನಾಗಿರಬೇಕು – ಧರ್ಮವ್ಯಾಧನಂತೆ. ಗ್ರಾಹಕ? ಈತ ತಾನು ಮಾರಾಟಗಾರನಿಗೆ ಪ್ರತ್ಯಕ್ಷವಾಗಿ ಮತ್ತು ಉತ್ಪಾದಕನಿಗೆ ಪರೋಕ್ಷವಾಗಿ ಏನೂ ಅನುಗ್ರಹ ಮಾಡುತ್ತಿಲ್ಲ. ಬದಲು, ಅವರು ತನಗೆ ಉತ್ತಮ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ತಾನು ಕೃತಜ್ಞನಾಗಿರಬೇಕು ಎಂಬ ಪ್ರಜ್ಞಾದೀಪ್ತನಾಗಿರಬೇಕು – ಪುರಂದರದಾಸರಂತೆ (“ದಂಡಿಗೆ ಬೆತ್ತ ಹಿಡಿಸಿದರಯ್ಯ!”) ಇಂಥ ವ್ಯವಹಾರದಲ್ಲಿ ಪ್ರೀತಿ ಆಧಾರಶ್ರುತಿ ಆಗಿರುತ್ತದೆ, ನೀತಿ ವ್ಯಾಪಾರಗತಿಯನ್ನು ನಿರ್ಧರಿಸುತ್ತದೆ – ಜಿ.ಟಿ.ನಾ]

ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾನು ಪ್ರಬಂಧ ಮಂಡಿಸಿ [೧೯೮೫, ಹಿಂದಿನ ಅಧ್ಯಾಯ] ಏಳು ವರ್ಷಗಳ ಮೇಲಿನ ಪ್ರಬಂಧ ಇದಾಗಬೇಕಿತ್ತು. ಆದರೆ ವಿಷಾದಪೂರ್ವಕವಾಗಿ ಹೇಳುತ್ತೇನೆ – ಪರಿಸ್ಥಿತಿ ತಿಳಿಯಾಗಿಲ್ಲ, ಬದಲು ಇನ್ನಷ್ಟು ಬಿಗಡಾಯಿಸಿದೆ. ಹಾಗಾಗಿ ಹಳೆಯ ಪ್ರಬಂಧವನ್ನು ಓದುವುದು ಬಿಟ್ಟು, ನನ್ನೀ ವಿಷಾದವನ್ನೇ ವಿಷದೀಕರಿಸುವ ಕೆಲವು ಟಿಪ್ಪಣಿಗಳನ್ನಷ್ಟೇ ಜೋಡಿಸಿ ತಂದಿದ್ದೇನೆ.

***

ಕನ್ನಡದಲ್ಲಿ ಬೆಸ್ಟ್ ಸೆಲ್ಲರ್ಸ್!

ಇಂಗ್ಲಿಷ್ ಪುಸ್ತಕ ಲೋಕದಲ್ಲಿ ಸಾಮಾನ್ಯ ಓದುವಣಿಗೆಯ ಪುಸ್ತಕಗಳ ಬಿಡಿ ಮಾರಾಟ ಸೂಚ್ಯಂಕ ಸಾಧಾರಣ ಖಚಿತವಾಗಿಯೇ ಪ್ರಕಟಗೊಳ್ಳುತ್ತದೆ. ಅದಕ್ಕಾಗಿಯೇ ಪತ್ರಿಕೆಗಳು, ಪತ್ರಿಕಾ ವಿಶೇಷಾಂಕಗಳು ತೊಡಗಿಕೊಂಡು, ವ್ಯಾವಹಾರಿಕವಾಗಿ ಯಶಸ್ವಿಯಾಗಿಯೇ ನಡೆಯುವುದನ್ನು ಕೇಳಿದ್ದೇನೆ. ಆದರೆ ಕನ್ನಡ ಬಿಡಿ, ಭಾರತೀಯ ಪುಸ್ತಕ ಪ್ರಪಂಚದಲ್ಲೂ ಈ ತೆರನ ಪ್ರಯತ್ನಗಳು ಯಶಸ್ವಿಯಾದದ್ದು ಇಲ್ಲ. ಬರಿಯ ಕನ್ನಡ ಪುಸ್ತಕಗಳಿಗೆಂದು ತೊಡಗಿದ ಮೈಸೂರಿನ ಚೇತನ ಕನ್ನಡ ಸಂಘದ ಪುಸ್ತಕ ಪುರವಣಿಯೋ ಆರೆಲ್ ಅನಂತರಾಮಯ್ಯನವರ ಏಕಾಂಗೀ ಸಾಹಸದ ಗ್ರಂಥಲೋಕವೋ ಅಥವಾ ಭಾರತೀಯ ಮಟ್ಟದಲ್ಲಿ ಹಲವು ಖಾಸಗಿ ಪ್ರಕಾಶಕರು ನಡೆಸಿದ ಮತ್ತು ನಡೆಸುತ್ತಿರುವ ಪುಸ್ತಕ ಪರಿಚಯದ ನಿಯತಕಾಲಿಕೆಗಳೋ ಸಾರ್ವಜನಿಕ ಅಗತ್ಯವಾಗಿ ಪ್ರಸಾರ ಗಿಟ್ಟಿಸುವಲ್ಲಿ ಸೋತಿವೆ. ಉದ್ಯಮದ ಮುಖವಾಣಿಯಾಗಲು ಹೊರಟು ಆರ್ಥಿಕ ಯಶಸ್ಸಿಗೋಸ್ಕರ ಸ್ವಂತ ಅಥವಾ ಕೆಲವೇ ಪ್ರಕಾಶಕರ ಮುಖವಾಣಿಯಷ್ಟೇ ಆಗಿ ದಿನಗಣನೆ ಮಾಡುತ್ತಿವೆ. ದಿನಪತ್ರಿಕೆಗಳ ವಿಶೇಷಾಂಕಗಳು ಮತ್ತು ನಿಯತಕಾಲಿಕೆಗಳ ಲೇಖನಗಳು ಬಿತ್ತುವ ಮತ್ತು ಬೆಳಗುವ ಬಣ್ಣ ನಿಜ ಮಾರುಕಟ್ಟೆಯ ಮೇಲೆ ಮಾಡುವ ಪರಿಣಾಮ ಕಡಿಮೆ. [ಇಂದು ಎಷ್ಟೋ ದೈನಿಕ ಹಾಗೂ ನಿಯತಕಾಲಿಗಳಲ್ಲಿ ಪುಸ್ತಕಗಳನ್ನು ವಿಮರ್ಶೆಗೆ ಸ್ವೀಕರಿಸುವ ಅಂಕಣವೇ ಇಲ್ಲ. ಇರುವ ಕೆಲವಕ್ಕೂ ಕ್ರಮವಾಗಿ ವಿಮರ್ಶೆ ಮಾಡಿಕೊಡುವವರ ಕೊರತೆಯಿದೆ. ಮತ್ತೆಷ್ಟೋ ಪತ್ರಿಕೆಗಳಿಗೆ ಹಾಗೆ ಕೊಟ್ಟರೂ ಪ್ರಕಟಿಸುವ ಸ್ಥಳ ವ್ಯರ್ಥವೆನ್ನುವ ಭಾವವಿದೆ.]

ಕನ್ನಡ ಪುಸ್ತಕೋದ್ಯಮದಲ್ಲಿ ಲೇಖಕರ ಸಂಖ್ಯೆ, ಪ್ರಕಾಶಕರ ಸಂಖ್ಯೆ, ಶೀರ್ಷಿಕೆಗಳ ವೈವಿಧ್ಯ, ಮುದ್ರಣದ ಅಂದ ಇಂದು ಯಾವುದೇ ಮಳಿಗೆಯನ್ನು ನಿಸ್ಸಂದೇಹವಾಗಿ ಇಡಿಯಾಗಿ ಆವರಿಸುವಷ್ಟಿವೆ. ಹಾಗೆಯೇ ಪುಸ್ತಕ ಒಯ್ಯುವವರ ಸಂಮರ್ದ, ಸರಕಾರೀ ಸಗಟು ಯೋಜನೆಗಳ ಹೊರತಾಗಿಯೂ ಧಾರಾಳವೇ ಇದೆ. ಉದಾಹರಣೆಗೆ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರ ಕೇಂದ್ರದವರೆಗೂ ಇರುವ ವಿದ್ಯಾಸಂಸ್ಥೆಗಳ ನಿಶ್ಚಿತ ವಾರ್ಷಿಕ ಗ್ರಂಥಾಲಯ ಅನುದಾನವನ್ನೇ ಲೆಕ್ಕ ಹಿಡಿದರೂ ಸಾಕು. ಆದರೆ ಈ ಅಂಕೆ ಸಂಖ್ಯೆಗಳ ಹಾವಳಿಯಲ್ಲಿ ಸಾಹಿತಿ, ಸಾಹಿತ್ಯದ ಗಂಧ ದಿನೇ ದಿನೇ ಲುಪ್ತವಾಗುತ್ತಿರುವುದು ಮಾತ್ರ ಎದ್ದು ಕಾಣುತ್ತದೆ. ಅವಸರದ ಅನುವಾದಗಳು, ಸ್ಫೂರ್ತಿಯ ಹೆಸರಿನಲ್ಲಿ ಕೃತಿ ಚೌರ್ಯಗಳು, ಸಾರ್ವಕಾಲಿಕ ಭ್ರಮೆ ಹೊತ್ತು ಬರುವ ಸಾಮಯಿಕಗಳ ಸಂಕಲನಗಳು, ಯಾವುದೇ ಪಾಠ ಪಟ್ಟಿಯನ್ನೋ ಸಿದ್ಧಮಾರುಕಟ್ಟೆಯನ್ನೋ ಉದ್ದೇಶಿಸಿ ಬರುವ ವಿದ್ವದ್ಗ್ರಂಥಗಳ ಮಹಾಪೂರ ವಿತರಕರನ್ನೂ ಮಾರಾಟಗಾರರನ್ನೂ ದಿಕ್ಕೆಡಿಸುತ್ತವೆ. ಆರೋಗ್ಯಪೂರ್ಣ ವಾಚನಕ್ಕಾಗಿ ಮಳಿಗೆಗೆ ಬರುವ ಸಾಹಿತ್ಯ ಪ್ರೇಮಿಯ ಹಣ, ವೇಳೆ ಮತ್ತು ತಾಳ್ಮೆಗಳನ್ನು ಇವು ಹಾಳು ಮಾಡಿಬಿಡುತ್ತವೆ. ಸಮ್ಮೇಳನಗಳು, ಸಂಕಿರಣಗಳು ಎಂದು ಹಬ್ಬದಿಂದ ಹಬ್ಬಕ್ಕೆ ಜಾರುವ ಜಂಬ್ರದಲ್ಲಿ ಇಂದು ಬಡಿಸುವ ಸಾರಿನಲ್ಲಿ ಮೂಲ ದ್ರವ್ಯ ಮರೆಯಾಗುತ್ತಿದೆ; ಉಪ್ಪು ಮತ್ತು ನೀರೇ ಎಲ್ಲವಾಗುತ್ತಿದೆ. ಇಂಥಲ್ಲಿ ಗಂಭೀರ ಓದಿಗೆ ಕೈಮರವಾಗಬಹುದಾಗಿದ್ದ ಗ್ರಂಥೋದ್ಯಮಕ್ಕೇ ಮೀಸಲಾದ ನಿಯತಕಾಲಿಗಳ, ಸಾರ್ವಜನಿಕ ಮಾಧ್ಯಮಗಳಲ್ಲಿನ ವಿಮರ್ಶಾ ಅಂಕಣಗಳ ಕೊರತೆಯನ್ನು ಸ್ಮರಿಸಲೇಬೇಕಾಗಿದೆ.

[೨೦೧೫ರ ಕಾಲಘಟ್ಟದಲ್ಲಿ ನಿಂತು ಇಲ್ಲೆರಡು ಮಾತು ಸೇರಿಸಬೇಕು. ೧. ಗ್ರಂಥಲೋಕ, ಪುಸ್ತಕ ಪುರವಣಿಗಳಂಥ ಖಾಸಗಿ ಪ್ರಾಮಾಣಿಕ ಪ್ರಯತ್ನಗಳೆಲ್ಲ ಸೋತು ಕೈ ಚೆಲ್ಲಿದ ಮೇಲೆ ಕನ್ನಡ ಪುಸ್ತಕ ಪ್ರಾಧಿಕಾರ (ಬಹುಶಃ ಎಸ್. ಜಿ. ಸಿದ್ಧರಾಮಯ್ಯನವರ ಅವಧಿಯಿರಬೇಕು) ಪುಸ್ತಕೋದ್ಯಮದ ಕುರಿತೊಂದು ನಿಯತಕಾಲಿಕವನ್ನು ತರತೊಡಗಿತು. ಇದು ಮೊದಲ ಸಂಚಿಕೆಯಲ್ಲೇ ಎಲ್ಲ ಸರಕಾರೀ ದುರಹಂಕಾರದ ಪ್ರತಿನಿಧಿಯಂತೆ ತಾನೇ ಪ್ರಥಮ ಮತ್ತು ಉದ್ದಿಮೆಯ ಉದ್ಧಾರಕ ಎಂಬಂತೇ ಸಾರಿಕೊಂಡಿತು. ತಮಾಷೆ ಎಂದರೆ ಅದರ ಒಂದೆರಡು ಸಂಚಿಕೆ ಬರುವುದರೊಳಗೆ ಆಗಿನ ಅಧ್ಯಕ್ಷರು ನಿವೃತ್ತರಾದರು. ಜತೆಗೆ ಪತ್ರಿಕೆ ಬಾಲಗ್ರಹ ಬಡಿದು ಸತ್ತೇಹೋಯ್ತು. ಇನ್ನೂ ದೊಡ್ಡ ತಮಾಷೆ ಎಂದರೆ ಅನಂತರ ಬಂದ ಅಧ್ಯಕ್ಷ (ಬಹುಶಃ ಸಿದ್ಧಲಿಂಗಯ್ಯನವರಿರಬೇಕು), ಮತ್ತೆ ಅಂಥದ್ದೇ ಒಂದು ನಿಯತಕಾಲಿಕ ಹೊರಡಿಸಿದರು. ಅದೂ ತಾನೇ ಪ್ರಥಮ, ತಾನೇ ತಾರಕ ಎಂದೇ ಘೋಷಿಸಿಕೊಂಡರೂ ದೀರ್ಘಾಯುಷಿಯಾಗೇನೂ ಉಳಿಯಲಿಲ್ಲ! ಅವೆಲ್ಲಕ್ಕಿಂತ ಹೆಚ್ಚಿಗೆ ಈ ಸರ್ಕಾರೀ ಪ್ರಯೋಗಗಳು ಸಾರ್ವಜನಿಕರಿಗೆ ಮುಟ್ಟುವುದಕ್ಕಿಂತ ಹೆಚ್ಚಿಗೆ ಅದನ್ನು ಹೊರಡಿಸಿದ ಅಧ್ಯಕ್ಷರ `ಪುಣ್ಯ ಪಟ್ಟಿ’ ದೊಡ್ಡದು ಮಾಡುವುದಾಗಿತ್ತು. ಮತ್ತೆ ವಿನಿಯೋಗಾವಕಾಶ ಹೆಚ್ಚಿದಷ್ಟೂ ಉಪ-ಆದಾಯಗಳು ಹೆಚ್ಚುತ್ತವೆ ಎನ್ನುವ ಸರಕಾರೀ ಅಘೋಷಿತ ನಿಯಮವನ್ನು ನಾನು ವಿಸ್ತರಿಸ ಹೋಗುವುದಿಲ್ಲ. (ಪ್ರಸಾರಾಂಗವೊಂದರ ನಿರ್ದೇಶಕನಿಗೆ ಮುದ್ರಕನೊಬ್ಬ ಅವರ ಖಾಸಗಿ ಪ್ರಕಾಶನದ ಪುಸ್ತಕಗಳನ್ನು ಕಾಗದದ ಖರ್ಚೂ ಕೇಳದೆ `ಉಚಿತ’ವಾಗಿ ಮುದ್ರಿಸಿಕೊಡುತ್ತಿದ್ದ!)
೨. ಮೊದಲೆಲ್ಲ ದಿನಪತ್ರಿಕೆಗಳು ತಮ್ಮ ಸಾದರಸ್ವೀಕಾರ ಮತ್ತೆ ಪುಸ್ತಕ ವಿಮರ್ಶಾ ಅಂಕಣಗಳನ್ನು ತುಂಬ ಗಂಭೀರವಾಗಿ ನಡೆಸಿಕೊಂಡು ಬರುತ್ತಿದ್ದುವು. ಆ ಕಾಲಕ್ಕೆ ಈ ವಲಯದಲ್ಲಿ ಏಕಮೇವಾದ್ವಿತೀಯ ಎಂದೇ ಮೆರೆಯುತ್ತಿದ್ದ ಉದಯವಾಣಿಯ ಸಂಪಾದಕೀಯ ಬಳಗದಲ್ಲಿ ಗೆಳೆಯ ನಿತ್ಯಾನಂದ ಪಡ್ರೆ ಈ ಅಂಕಣಗಳನ್ನು ಸ್ವಾರಸ್ಯಪೂರ್ಣಗೊಳಿಸಲು ಹೆಣಗುತ್ತಿದ್ದರು.

ಕೇವಲ ಪುಸ್ತಕ ಪ್ರೀತಿಯಲ್ಲಿ ಇನ್ನೋರ್ವ ಗೆಳೆಯ, ಕನ್ನಡ ಪ್ರಾಧ್ಯಾಪಕ ಹಿರಿಯಡಕ ಮುರಳೀಧರ ಉಪಾಧ್ಯರು ಬಹಳ ದೊಡ್ಡ ಮಟ್ಟದಲ್ಲಿ ನಿತ್ಯಾನಂದರಿಗೆ ಸಹಾಯಕ್ಕೆ ಒದಗುತ್ತಿದ್ದರು. ವರ್ಷದ ಕೊನೆಯಲ್ಲಿ ಅವರು ಬಹಳ ವಿವರಗಳಲ್ಲಿ ಮಾಡಿಟ್ಟುಕೊಂಡ ಅಂಕಿಸಂಕಿ, ಟಿಪ್ಪಣಿಗಳನ್ನೆಲ್ಲ ಸೇರಿಸಿಕೊಂಡು, ವರ್ಷದ ಅತ್ಯುತ್ತಮ ಮಾರಾಟದ ಪುಸ್ತಕ ಎಂದೂ ಪಟ್ಟಿ ಘೋಷಿಸುವುದಿತ್ತು. ಆ ಕಾಲಕ್ಕೆ ಮರೆಯದೆ ನನ್ನನ್ನು, ಮುಂದುವರಿದ ದಿನಗಳಲ್ಲಿ ನವಯುಗ ಪುಸ್ತಕ ಭಂಡಾರದ ಶಾಂಭವಿಯನ್ನೂ ಮುಕ್ತ ಸಮಾಲೋಚನೆಗೆ ಬಳಸಿಕೊಳ್ಳುತ್ತಿದ್ದರು. ನಾನು ಸಹಾಯಕರೊಡನೆ ವಿಚಾರಿಸಿ, ಚರ್ಚಿಸಿಯೇ ಅಂಕಿಸಂಕಿ, ವಿಮರ್ಶೆ ಕೊಡುತ್ತಿದ್ದೆ. ಆದರೂ `ಸಂಖ್ಯಾಶಾಸ್ತ್ರ’ದ ಕುರಿತಿರುವ ಬಹುತೇಕ ವಾಸ್ತವವೇ ಆದ ಹಾಸ್ಯೋಕ್ತಿ – ಸುಳ್ಳುಗಳಲ್ಲಿ ಮೂರು ವಿಧ – ಸುಳ್ಳು, ಮಹಾ ಸುಳ್ಳು ಮತ್ತು ಸಂಖ್ಯಾಶಾಸ್ತ್ರ, ನೆನಪಾಗುತ್ತಿತ್ತು. ಯಾಕೆಂದರೆ ಹೀಗೆ ನಾವು ಕೊಡುತ್ತಿದ್ದ ಪಟ್ಟಿ ಮುಂದಿನ ಒಂದು ವರ್ಷದಲ್ಲಿ ತಂತಮ್ಮ ಸಮಯದಲ್ಲಿ ಬರುತ್ತಿದ್ದ ಶಾಲಾ ಕಾಲೇಜು ಗ್ರಂಥಾಲಯ ಖರೀದಿದಾರರಿಗೆ ಕಡ್ಡಾಯ ಖರೀದಿ ಪಟ್ಟಿಯೇ ಆಗುತ್ತಿತ್ತು. ಇದು ಸಹಜವಾಗಿ ನಮಗೆ ಅನುಕೂಲವಿರುವ ಪುಸ್ತಕಗಳನ್ನು ಸೇರಿಸಿ ಸುಳ್ಳು ಪಟ್ಟಿಯನ್ನು ಕೊಡಲು ಪ್ರೇರಿಸುತ್ತಿತ್ತು. (ನಾನು ಮಾಡಿಲ್ಲ.) ಇಂದು ವಾರವಾರ ಕೆಲವು ಪತ್ರಿಕೆಗಳಲ್ಲಿ ಬರುವ `ಬೆಸ್ಟ್ ಸೆಲ್ಲರ್’ ಪಟ್ಟಿಯಾದರೂ ಇಂಥ ಜಾಣ ಸುಳ್ಳಿಗೆ ಹೊರತಲ್ಲ! ಪುಸ್ತಕಗಳನ್ನು ಜಾಣ ಓದುಗ ತನ್ನ ವಿವೇಚನೆಯಿಂದ ಆಯ್ದುಕೊಳ್ಳಬೇಕೇ ಹೊರತು ಅನ್ಯ ಸೂಚಿಗಳಿಂದಲ್ಲ.]

***

ಯೋಜನೆಗಳ ಹಿಂದಿನ ಹುನ್ನಾರಗಳು!

“ಅಂಥಾ ಮಹಾಕೃತಿಯನ್ನು ಸರಕಾರ ಅಚ್ಚಿಸಲೇಬೇಕು, ಇಂಥಾ ಮೇರುಕೃತಿಯನ್ನು ಸರಕಾರ ಕೊಳ್ಳಲೇಬೇಕು” ಎಂಬ ಮಾತು ಧಾರಾಳ ಕೇಳಿಬರುತ್ತದೆ. ಸರಕಾರವೂ ಕಾರಣಗಳೇನೇ ಇರಲಿ ಬೊಬ್ಬೆ ದೊಡ್ಡದಾದ್ದಕ್ಕೆ ಓಗೊಡುತ್ತಲೇ ಬಂದಿದೆ. ಇಲ್ಲಿ ಸರಕಾರ ಎಂದರೆ ಸಾರ್ವಜನಿಕ ಹಣವ್ಯಯ ಮಾಡುವ ವಿಶ್ವವಿದ್ಯಾಲಯ, ಪರಿಷತ್ತು, ಅಕಾಡೆಮಿಗಳು, ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ಯಾದಿ ಸೇರುತ್ತವೆ. ನಿರ್ವಿವಾದವಾಗಿ ಇವು ಎಷ್ಟೋ ಮಹತ್ಕಾರ್ಯಗಳನ್ನು ಪುಸ್ತಕ ಲೋಕಕ್ಕೆ ಮಾಡಿವೆ. ಆದರೆ ಇವುಗಳಲ್ಲೆಲ್ಲ ತೊಡಗಿಸಿದ ಹಣಕ್ಕೂ ದೊರೆಯುವ ಫಲಕ್ಕೂ ಏನೇನೂ ತಾಳೆ ಇರುವುದಿಲ್ಲ.

ಹತ್ತು ಹೆರುವ ಕಾಲ ಇದಲ್ಲ. ಹೆತ್ತ ಒಂದನ್ನೇ ಆದರು ಸಾಮಾಜಿಕವಾಗಿ ಸಮರ್ಥಿಸಿಕೊಳ್ಳಬೇಕಾದ ಕಾಲ. ಸಾರ್ವಜನಿಕ ಹೆಸರು ಮತ್ತು ಹಣದೊಡನೆ ಇವು ಎಷ್ಟರಲ್ಲಿ ತೊಡಗಿವೆ ಎಂಬುದು ಮುಖ್ಯವಲ್ಲ. ಎಷ್ಟು ಉಪಯುಕ್ತ ಮತ್ತು ಎಷ್ಟನ್ನು ಚೊಕ್ಕವಾಗಿ ಮುಗಿಸಿಕೊಟ್ಟಿವೆ ಎನ್ನುವುದರ ಗಣನೆಯಾಗಬೇಕು. ಉದಾಹರಣೆಗೆ: ದೇಜಗೌ ಅವರ ಅದಮ್ಯ ಕಾರ್ಯರೂಪೀ ಕನ್ನಡ ಪ್ರೀತಿಯಿಂದ ೧೯೬೮ರ ಸುಮಾರಿನಲ್ಲಿ ಕನ್ನಡ ವಿಶ್ವಕೋಶ ಯೋಜನೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಿಕ್ಕಿತು. ೧೯೭೦ರ ದಶಕದ ಮೊದಲ ಅರ್ಧದಲ್ಲಿ ವಿಶ್ವಕೋಶದ ಸಂಪಾದನೆ, ಮುದ್ರಣ, ಪ್ರಕಾಶನ, ವಿತರಣೆ ಎಷ್ಟು ಚುರುಕಿತ್ತೆಂದರೆ ಎಂಟು ಸಂಪುಟಗಳೇ ಹೊರಬಿದ್ದುವು. ಅದೇ ಗತಿಯಲ್ಲಿ ಮುಂದುವರಿದಿದ್ದರೆ ೧೯೮೦ರ ಒಳಗೆ ೧೪ ಸಂಪುಟಗಳ ಗುರಿ ಸೇರಿ ವಿವಿನಿಲಯ ಕೃತಕೃತ್ಯವಾಗಬಹುದಿತ್ತು. ಹಾಗಾಗಲಿಲ್ಲ. ಮುಂದೆ ಎರಡು ಮೂರು ವರ್ಷಕ್ಕೆ ಒಂದರಂತೆ ಎಳೆದೂ ಎಳೆದೂ ಈಗ ಆರು ವರ್ಷಗಳಿಂದ (೧೯೯೨) ಅಂದರೆ, ಹನ್ನೆರಡನೇ ಸಂಪುಟದಿಂದೀಚೆಗೆ ಏನು ಬಂದಿಲ್ಲ. ಹಾಗೆಂದು ಸುದ್ದಿಯೇ ಇಲ್ಲ ಎಂದಲ್ಲ. ಎರಡು ಸುದ್ದಿ ಇದೆ:

ಸುದ್ದಿ ೧. ಹದಿನಾಲ್ಕು ಸಂಪುಟಗಳ ಪ್ರಕಟಣಾ ಪೂರ್ವ ಹಣ ಕೊಟ್ಟ ಗ್ರಾಹಕರು ಯಾರೋ ಬಳಕೆದಾರರ ನ್ಯಾಯಾಲಯಕ್ಕೆ ದೂರು ಒಯ್ದಿದ್ದಾರಂತೆ. ಸುದ್ದಿ ೨. ಕೆಲವು ತಿಂಗಳ ಹಿಂದೆ ೧೩ನೆಯ ಸಂಪುಟ ಬಿಡುಗಡೆಯ ಔಪಚಾರಿಕ ಸುದ್ದಿ ಪತ್ರಿಕೆಗಳಲ್ಲಿ ಬಂತು. ಆದರೆ ವಾಸ್ತವದ ಬಿಡುಗಡೆ, ಅಂದರೆ ಪ್ರಸಾರಾಂಗದ ವಿತರಣ ಅಡ್ಡೆಗೆ ಪ್ರತಿಗಳು ಇನ್ನೂ ಮುಟ್ಟಿಲ್ಲ. ಎಂದು ತಲಪಿಯಾವು ಎಂಬ ಮಾಹಿತಿಯೂ ಸಿಗುತ್ತಿಲ್ಲ.

[ಇಂದು, ೨೦೧೫ರ ಕಾಲಘಟ್ಟದಲ್ಲಿ ನಿಂತು ನಾನು ಕನ್ನಡ ವಿಶ್ವಕೋಶದ ಕುರಿತು ಐತಿಹಾಸಿಕ ದಾಖಲೆಯನ್ನು ತುಸುವಾದರೂ ಸರಿಪಡಿಸಬೇಕಾಗಿದೆ. ಪ್ರಸ್ತುತ ಉಡುಪಿ ಪ್ರಬಂಧ ಮಂಡಿಸಿ ಆರು ವರ್ಷಗಳನಂತರ `ಪುಸ್ತಕ ಮಾರಾಟ ಹೋರಾಟ’ ಸಂಕಲನ ಬರುವವರೆಗೂ ಅಂದರೆ ಹನ್ನೆರಡು ವರ್ಷಗಳ ವಿಳಂಬದಲ್ಲೂ ಹದಿಮೂರನೇ ಸಂಪುಟ ಪ್ರಕಟವಾಗಿರಲಿಲ್ಲ. ಅದನ್ನು ಮುನ್ನುಡಿವಂತೆ, ಉಡುಪಿಯ ಗೋಷ್ಠಿಯಲ್ಲಿದ್ದ ಹಾಮಾನಾಯಕರು ವೈಯಕ್ತಿಕವಾಗಿ ನನಗೊಂದು ಮಾತು ಹೇಳಿದ್ದರು. “ನನಗೆ ತಿಳಿದ ಮಟ್ಟಿಗೆ ಅದು ಅಚ್ಚುಕೂಟವನ್ನೇ ಸೇರಿಲ್ಲ!” ಇಲ್ಲಿ ಹಾಮಾನಾ ಮುಖದಲ್ಲಿ ಒಂದು ಸಣ್ಣ ವ್ಯಂಗ್ಯ ನಗುವಿತ್ತು. ನನ್ನ ತಂದೆ ವಿಶ್ವಕೋಶದ ಸಂಪಾದಕರೇ ಆಗಿದ್ದುದ್ದರಿಂದ ಇಲ್ಲಿ ತುಸು ವಿವರಣೆ ಅವಶ್ಯ.

ವಿಶ್ವಕೋಶ ಯೋಜನೆಯನ್ನು ಕನ್ನಡ ಅಧ್ಯಯನ ಸಂಸ್ಥೆಗೆ ತಂದವರು ದೇಜಗೌ. ಮುಂದೆ ಅವರು ಮೈವಿವಿ ನಿಲಯದ ಕುಲಪತಿಯಾಗಿ ಹೋಗಿ, ನಿವೃತ್ತರಾಗುವವರೆಗೂ ಅದನ್ನು ಅದೇ ಪ್ರೀತಿ ಅಭಿಮಾನದಿಂದ ನಡೆಸಿಕೊಂಡರು. ಆದರೆ ಅಧ್ಯಯನ ಸಂಸ್ಥೆಯ ನಿರ್ದೇಶಕತ್ವಕ್ಕೆ ಅವರ ಉತ್ತರಾಧಿಕಾರಿಯಾಗಿ, ಅದರಲ್ಲೂ ತಮ್ಮೊಳಗಿನ ಆಪ್ತತೆಯಲ್ಲಿ ಸ್ವತಃ ದೇಜಗೌ ಅವರೇ ಬಯಸಿ ನೇಮನಗೊಂಡವರು ಹಾಮಾನಾ. ಬ್ರೂಟಸ್ ಒಂದು ಲೋಕ ಸತ್ಯ. ಅನಂತರದ ದಿನಗಳಲ್ಲಿ ಹಾಮಾನಾ ಸಾರ್ವಜನಿಕವಾಗಿ ಕಾಣುವಂತೆಯೇ ದೇಜಗೌ ಮತ್ತು ಅವರ ಕಾಲದ ಯೋಜನೆಗಳನ್ನು ಮಲತಾಯಿ ಧೋರಣೆಯಲ್ಲಿ ನಡೆಸಿಕೊಂಡರು. ವಿಶ್ವಕೋಶದ ನಿಧಾನದ್ರೋಹದಲ್ಲಿ ಹಾಮಾನಾಯಕರ ಪಾಲು ಬಹಳ ದೊಡ್ಡದು. ವಿಶ್ವಕೋಶದ ಆರಂಭದಿಂದಲೂ ಸಂಪಾದಕರಾಗಿದ್ದ ನನ್ನ ತಂದೆಯ ಆಪ್ತವಾಕ್ಯಗಳೇ ನನ್ನ ಈ ಮಾತಿಗೆ ಆಧಾರ.]

ಮೈಸೂರು ವಿವಿನಿಲಯ ವಿಶ್ವಕೋಶದ ಓದುಗರಿಗೆ ಮಾಡಿದ ನಿಧಾನದ್ರೋಹಕ್ಕೆ ವ್ಯತಿರಿಕ್ತವಾಗಿ ಎರಡು ಉದಾಹರಣೆಗಳನ್ನು ಕೊಡುತ್ತೇನೆ. ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ ಸುಮಾರಿಗೆ ಅದೇ ಕಾಲದಲ್ಲಿ ಸರಕಾರೀ ಅನುದಾನದೊಡನೆ ಕಿರಿಯರ ವಿಶ್ವಕೋಶದ ಯೋಜನೆ ಕೈಗೆತ್ತಿಕೊಂಡಿತು. ನಿರಂಜನರ ಮುಖ್ಯ ಸಂಪಾದಕತ್ವದಲ್ಲಿ ಏಳು ಮಹಾಸಂಪುಟಗಳ ಈ ಕಾರ್ಯಕ್ರಮವನ್ನು ಸಕಾಲದಲ್ಲಿ ಚೊಕ್ಕವಾಗಿ ಸಂಪೂರ್ಣಗೊಳಿಸಿದರು. ನಿರಂಜನರು ಮುಂದುವರಿದು, ಇನ್ನೊಂದೆ ಖಾಸಗಿ ಪ್ರಕಾಶನ – ನವಕರ್ನಾಟಕ ಪಬ್ಲಿಕೇಶನ್ಸ್, ಇವರ ವಿಶ್ವ ಕಥಾಕೋಶದ ಇಪ್ಪತ್ತೈದು ಸಂಪುಟಗಳ ಯೋಜನೆಯನ್ನು ಕೈಗೆತ್ತಿಕೊಂಡು, ಅದನ್ನೂ ಸಾಂಗಗೊಳಿಸಿದರು. ಇನ್ನೊಂದು ಬಹಳ ದೊಡ್ಡ ಉದಾಹರಣೆ ಬೆಂಗಳೂರಿನ ಭಾರತ ದರ್ಶನ ಪ್ರಕಾಶನದವರದು. ಇವರಂತೂ ಪೂರ್ವಾನುಭವ, ಸಾಂಸ್ಥಿಕ ಮತ್ತು ಆರ್ಥಿಕ ಬಲಗಳೂ ಇಲ್ಲದೆ ಭಾರತೀಯ ಪುರಾಣಪ್ರಪಂಚವನ್ನು ವ್ಯವಸ್ಥಿತವಾಗಿ ಕನ್ನಡೀಕರಿಸುವ ಸಾಹಸ ಕೈಗೊಂಡವರು. ೧೯೭೩ರಿಂದ ತೊಡಗಿದಂತೆ, ಮೊದಲು ಆಯ್ದ ಮೂಲ ಶ್ಲೋಕಗಳೊಡನೆ ಪೂರ್ಣ ವ್ಯಾಸಭಾರತವನ್ನು ಮೂವತ್ತೆರಡು ಸಂಪುಟಗಳಲ್ಲಿ ಕೊಟ್ಟರು. ಅನಂತರ ಪೂರ್ಣ ಮೂಲಶ್ಲೋಕ ಸಹಿತ ವಾಲ್ಮೀಕಿ ರಾಮಾಯಣವನ್ನು ಹನ್ನೊಂದು ಸಂಪುಟಗಳಲ್ಲಿ ಪೂರೈಸಿದರು. ಬೆನ್ನಿಗೆ ಅನಿರ್ದಿಷ್ಟ ಸಂಖ್ಯೆಯಲ್ಲಿ ಭಾಗವತದ ಪೂರ್ಣ ಶ್ಲೋಕ ಮತ್ತು ಅನುವಾದದ ಮಾಲಿಕೆಯನ್ನು ಪ್ರಕಟಿಸುತ್ತಲೇ ಇದ್ದಾರೆ. ಒಂದೊಂದೂ ಸಂಪುಟವೂ ಸುಮಾರು ಆರ್ನೂರು ಪುಟಗಳ ಘನಕೃತಿಗಳು. ಜತೆಗೇ ಹಿಂದಿನ ಮುದ್ರಣಗಳ ಪ್ರತಿಗಳು ಮುಗಿದಂತೆಲ್ಲ ಸಕಾಲದಲ್ಲಿ ಮರುಮುದ್ರಣಗಳನ್ನೂ ನಡೆಸುತ್ತಲೇ ಬಂದಿದ್ದಾರೆ. ಅತೀವ ಶ್ರದ್ಧಾಳುಗಳಾದ ಅದರ ಸಂಪಾದಕ ಮಂಡಲಿ, ಅಂದರೆ ಇಡಿಯ ಅನುವಾದ, ಮುದ್ರಣ ಮತ್ತು ಪ್ರಕಾಶಕ ನಡೆಸುವ ಬಳಗ ಎಂದೂ ಇದನ್ನು ಒಂದು ಆರ್ಥಿಕ ವಹಿವಾಟಾಗಿ ಕಂಡದ್ದೇ ಇಲ್ಲ! ಇವುಗಳನ್ನೆಲ್ಲ ನೋಡುವಾಗ ಸರಕಾರೀ ಪ್ರಕಾಶನರಂಗವನ್ನು ಪೂರ್ಣ ಮುಚ್ಚುವುದೇ ಸರಿಯಾದ ಕ್ರಮ. ವ್ಯಾವಹಾರಿಕ ನ್ಯಾಯ ಗೊತ್ತಿರದ ಯಾವುದೇ ಸಂಸ್ಥೆ, ವ್ಯಕ್ತಿ ಅಳಿಸಿಹೋಗುವಂಥ ನೈಜ ಕ್ರಿಯೆಗೆ (survival of the fittest) ಸರಕಾರೀ ಪ್ರಕಾಶನವನ್ನು ಒಡ್ಡಲೇಬೇಕು.

***

ಆದಾಯ, ಲಾಭಗಳ ಜಿಜ್ಞಾಸೆ

ಅಂಗಡಿಗೆ ಬರುವ ಪ್ರತಿ ಗಿರಾಕಿಯೂ ಪುಸ್ತಕಗಳ ಬೆಲೆ ಏರಿಕೆಯ ಬಗ್ಗೆ ಉದ್ಗಾರ ತೆಗೆಯುವುದೂ ಪ್ರತಿ ಎರಡನೆಯ ಗಿರಾಕಿ ಮುದ್ರಿತ ಬೆಲೆಯ ಮೇಲೆ ರಿಯಾಯಿತಿ ಕೇಳುವುದೂ ನನಗೆ ಮಾಮೂಲಾಗಿ ಹೋಗಿದೆ, ಇದು ಸರಿ ಅಲ್ಲ. ವಸ್ತುಗಳ ಮೌಲ್ಯ ಮತ್ತು ಖರೀದಿದಾರನ ಆದಾಯ ಏತಾಪಾತಾ ಅಗುವುದು ಲೋಕ ಸತ್ಯ. ತನ್ನ ಆದಾಯದಲ್ಲಿ ಹೆಚ್ಚನ್ನು ಮಿಗಿಸುವ ಆಸೆಯಿಂದ ವ್ಯಕ್ತಿ ರಿಯಾಯಿತಿ ಕೇಳುವುದೂ ತಪ್ಪಲ್ಲ.

ಆದರೆ ಪುಸ್ತಕ ಮಾರಿ ಗಳಿಸಿದ ಮೊತ್ತದಲ್ಲಿ ಒಂದಂಶವನ್ನಷ್ಟೇ ತನ್ನ `ಆದಾಯ’ವಾಗಿ ದಕ್ಕಿಸಿಕೊಳ್ಳುವ ಮಾರಾಟಗಾರನನ್ನು ಲಾಭಕೋರನಂತೆ ನಡೆಸಿಕೊಳ್ಳುವುದು ದೊಡ್ಡ ತಪ್ಪು. ಇಲ್ಲಿ `ಲಾಭ’ ಎನ್ನುವಲ್ಲೇ ಒಂದು ಕೀಳೆಣಿಕೆ ಇದೆ. ಸಾಮಾನ್ಯ ಉದ್ಯೋಗಿಗಳ ಪ್ರತಿಫಲಗಳು ಎಷ್ಟು ಮೇಲೆ ಹೋದರೂ ಆದಾಯ ಎಂದೆ ಪರಿಗಣಿಸುತ್ತಾರೆ. ಅದೇ ವ್ಯಾಪಾರಿಗಳ ಪ್ರತಿಫಲ ಎಷ್ಟು ಕನಿಷ್ಠವಿದ್ದರೂ ಲಾಭ ಎನ್ನುವುದು ಲೋಕರೂಢಿಯಾಗಿದೆ. ಹಾಗಾಗಿ ರಿಯಾಯ್ತಿ ಕೇಳುವವರು, ಸುಲಭ ಬೆಲೆ ನಿರ್ಧರಿಸುವವರು ಎಲ್ಲ ತೊಡಗುವುದು “ವ್ಯಾಪಾರಿಗಳ ಲಾಭಾಂಶಕ್ಕೆ ಕತ್ತರಿಯಿಂದ.” ಸಾಮಾನ್ಯವಾಗಿ ಎಲ್ಲ ವಸ್ತುಗಳ ಬೆಲೆ ಏರುಮುಖದಲ್ಲೇ ಇರುವಾಗ ಪುಸ್ತಕ ಮಾತ್ರ ಸುಲಭ ಬೆಲೆಯಲ್ಲಿ ದಕ್ಕಬೇಕೆನ್ನುವುದು ನ್ಯಾಯವಲ್ಲ.

ಒಂದು ಲೀಟರ್ ಪೆಟ್ರೋಲಿಗೆ ರಿಕ್ಷಾ ೨೫ ಕಿಮೀ ಓಡುತ್ತದೆ ಎಂದಿಟ್ಟುಕೊಳ್ಳಿ. ಪೆಟ್ರೋಲ್ ದರ ಲೀಟರಿಗೆ ಕೆಲವು ಪೈಸೆ ಏರಿದರೆ ಹೆಚ್ಚಿನ ರಿಕ್ಷಾವಾಲಾಬುದ್ಧಿ ಪ್ರತಿ ಕಿಮೀಗೆ ರೂಪಾಯಿಯನ್ನೇ ಹೆಚ್ಚಿಸುತ್ತದೆ. ಈ ಕೊಳಕು ಬುದ್ಧಿ ಪುಸ್ತಕ ಪ್ರಕಾಶನ ರಂಗದಲ್ಲಿ ಧಾರಾಳ ಇದೆ. ಆದರೆ ಪುಸ್ತಕ ವ್ಯಾಪಾರಿಗೆ ಸಾಮಾನ್ಯವಾಗಿ ದಕ್ಕುವುದು ಪೂರ್ವ-ನಿಗದಿತ ಶೇಕಡವಾರು ಆದಾಯ ಮಾತ್ರ. ಪ್ರಕಾಶಕನ ಪಾಪಕ್ಕೆ ಪುಸ್ತಕ ವ್ಯಾಪಾರಿಯನ್ನು ಬಲಿ ಹಾಕುವುದು ಸರಿಯಲ್ಲ.

ಬೆಲೆ ನಿರ್ಧಾರದ ನಾಲ್ಕು ಘಟಕಗಳೆಂದರೆ ಮುದ್ರಣ ವೆಚ್ಚ, ಲೇಖಕನ ಸಂಭಾವನೆ (ಇದಕ್ಕೆ ಯಾಕೋ ಗೌರವಧನ ಎಂಬ ಮೇಲಂತಸ್ತು!), ಪ್ರಕಾಶಕನ ಆದಾಯ ಮತ್ತು ವಿತರಣೆಗಾರನ ಆದಾಯ ಅಥವಾ ರಿಯಾಯಿತಿ. “ಜನ ಕೇಳುತ್ತಾರೆ, ಒತ್ತಾಯಿಸುತ್ತಾರೆ” ಎಂಬ ಕಾರಣಕ್ಕಾಗಿ ಗಿರಾಕಿಗೂ ರಿಯಾಯಿತಿ ಎಂಬ ಅಂಶ ಬೆಲೆ ನಿರ್ಧಾರದಲ್ಲಿ ಪಂಚಮಾಂಶವಾಗಿ ಪಾಲ್ಗೊಂಡರೆ ಉದ್ಯಮ ನಿಸ್ಸಂದೇಹವಾಗಿ ತಪ್ಪು ಅಡಿಪಾಯದ ಮೇಲೆ ನಿಂತಂತಾಗುತ್ತದೆ, ನಗೆಪಾಟಲಾಗುತ್ತದೆ. ಕೇರಳದಲ್ಲಿ ಸಾಮಾನ್ಯ ಗಿರಾಕಿಯೂ ಮಲೆಯಾಳೀ ಪ್ರಕಟಣೆಗಳ ಮೇಲೆ ಶೇಕಡಾ ಹದಿನೈದರಿಂದ ಇಪ್ಪತ್ತು ರಿಯಾಯ್ತಿ ಪಡೆಯುವ ವಿಪರೀತ ಪರಿಸ್ಥಿತಿ ಉಂಟು. ಇದು ನಮ್ಮ ಪ್ರಕಾಶಕರಿಗೂ ವಿತರಣೆಗಾರರಿಗೂ ಎಲ್ಲಕ್ಕೂ ಮುಖ್ಯವಾಗಿ ಅಂತಿಮ ಕೊಳ್ಳುಗರಿಗೂ ಕೆಟ್ಟ ಉದಾಹರಣೆಯಾಗಿ ನೆನಪಿನಲ್ಲಿರುವುದು ಅವಶ್ಯ. ಸಾಮಾನ್ಯವಾಗಿ ಸುಲಭ ಬೆಲೆಯ ಆವೃತ್ತಿಗಳು ಬರುವುದಿದ್ದರೆ ಪ್ರಕಾಶಕರು ವಿತರಣೆಗಾರರ ಲಾಭಾಂಶದಲ್ಲಿ ಕಡಿತ ತರುತ್ತಾರೆ. ಉದಾಹರಣೆಗ ಪಠ್ಯ ಪುಸ್ತಕಗಳು. ಇಲ್ಲಿಯ ವ್ಯವಹಾರ ಚುರುಕು ಹಾಗೂ ದೊಡ್ಡ ಸಂಖ್ಯೆಯದು. ಹೀಗಾಗಿ ಮೇಲ್ಖರ್ಚು ನಿಭಾಯಿಸಲು ವ್ಯಾಪಾರಿಗಳಿಗೆ ಕಡಿಮೆ ರಿಯಾಯ್ತಿ ದರ ಸಾಕಾಗುತ್ತದೆ. ಆದರೆ ಸಾಮಾನ್ಯ ಪುಸ್ತಕಗಳೂ ಯಾವ್ಯಾವುದೋ ಸಹಾಯಧನದೊಡನೆ ಸುಲಭ ಬೆಲೆಯ ಪುಸ್ತಕಗಳಾಗುತ್ತಿರುವುದು ಈಚೆಗೆ ಹೆಚ್ಚಿದೆ. ನಿಘಂಟಿನಂಥ ಅನಿವಾರ್ಯ ಸಾಹಿತ್ಯ ಸಂಗಾತಿಗಳಿಗೋ ವಿಶ್ವಕೋಶದಂಥ ಸಾರ್ವಕಾಲಿಕ ಸಾರ್ವಜನಿಕ ಆವಶ್ಯಕತೆಗಳಿಗೋ ಕುಮಾರವ್ಯಾಸ ಭಾರತದಂಥ ಸಾಂಸ್ಕೃತಿಕ ಅಗತ್ಯದ ಹೆಬ್ಬೊತ್ತಗೆಗಳಿಗೋ ಬೆಲೆ ಇಳಿಸುವ ದಾನ ಕ್ರಮ ಸಮರ್ಥನೀಯ. ವಿಶ್ವ ಕನ್ನಡ ಮಾಲೆಯೆಂದು ಮೊದಲು ಮುನ್ನೂರು, ಅನಂತರ ಐವತ್ತು, ತದನಂತರ ಗಾಳಿ ಬೀಸಿದಂತೆ ಸಿಕ್ಕಿದ್ದೆಲ್ಲವನ್ನು ತರುತ್ತಿರುವ ಕ್ರಮ ಮಾತ್ರ ಸರಿಯಲ್ಲ. ಸುಲಭ ಬೆಲೆಯ ಆವೃತ್ತಿಗಳು ಸಂಗ್ರಾಹಕರನ್ನು ಆಕರ್ಷಿಸುವಷ್ಟು ಸಹೃದಯೀ ಗ್ರಾಹಕರನ್ನು ಮುಟ್ಟುವುದಿಲ್ಲ. ಇಂದು ಪ್ರದರ್ಶನಪ್ರೇಮಿಗಳ, ಉಡುಗೊರೆ ಸಾಹಿತ್ಯಪ್ರಿಯರ ದಾಸ್ತಾನಿನಲ್ಲಿರಬಹುದಾದಷ್ಟು ಸುಲಭ ಬೆಲೆಯ ಪುಸ್ತಕಗಳು ನಿಜ ಓದುಗರ ಕಪಾಟುಗಳಲ್ಲಿಲ್ಲ. ಸಾಮಾನ್ಯರಿಗೆ ಸುಲಭಗ್ರಾಹ್ಯವಲ್ಲದ ಶ್ರೀರಾಮಾಯಣ ದರ್ಶನಂ ಆರ್ನೂರಕ್ಕೂ ಮಿಕ್ಕು ಪುಟಗಳ ಮಹಾಕಾವ್ಯವನ್ನು ಡಜನ್ನಿನ ಲೆಕ್ಕದಲ್ಲಿ ಕೊಂಡ ಜನ ನೋಡಿದ್ದು ಅದರ ಬೆಲೆ – ಕೇವಲ ಆರು ರೂಪಾಯಿ. ಅದೇ ಕುವೆಂಪು, ಶಾಲಾ ಬಾಲರಿಗೂ ಸುಲಭ ಗ್ರಾಹ್ಯವಾದ ಗದ್ಯದಲ್ಲಿ ಬರೆದ ಸುಮಾರು ಮುನ್ನೂರು ಪುಟಗಳ ಕೃತಿ ಜನಪ್ರಿಯ ವಾಲ್ಮೀಕಿ ರಾಮಾಯಣವನ್ನು ಕಡಿಮೆ ಬಯಸಿದ್ದು ಅದರ ಬೆಲೆ (ಅದೂ ರಿಯಾಯ್ತಿ ದರವೇ ಆದರೂ) ಇಪ್ಪತ್ತೈದು ರೂಪಾಯಿ ಎನ್ನುವ ಕಾರಣಕ್ಕಾಗಿ!

ಇನ್ನು ಇಟ್ಟ ಬೆಲೆಯನ್ನೇ ಇಳಿಸಿ ಮಾರುವ ತಂತ್ರ ಅಥವಾ ಜನಪ್ರಿಯ ಭಾಷೆಯಲ್ಲಿ ಹೇಳುವಂತೆ ಡಿಸ್ಕೌಂಟ್ ಸೇಲ್ ಕಡೆ ಸ್ವಲ್ಪ ದೃಷ್ಟಿ ಹರಿಸೋಣ. ಸಾಹಿತ್ಯಕ ಹಬ್ಬದ ಕೊಡುಗೆಯಾಗಿಯೋ ದಾಸ್ತಾನು ತೀರುವಳಿಯ ಮಾರಾಟವಾಗಿಯೋ ಇತರ ವೃತ್ತಿ ಬಾಂಧವರೊಡನೆ ಅನೈತಿಕ ಸ್ಪರ್ಧೆಯ ಭರದಲ್ಲೋ ರಿಯಾಯಿತಿ ಕೊಡುವುದನ್ನು ಕಂಡಿದ್ದೇನೆ. ಕೆಲವು ಖ್ಯಾತ ಪ್ರಕಾಶಕ ವಿರತರಣೆಗಾರರಂತೂ ನಿಯತ ರಿಯಾಯಿತಿ ಮಾರಾಟವನ್ನೇ ತಮ್ಮ ವ್ಯವಹಾರ ನೀತಿಯಾಗಿಯೇ ಸ್ವೀಕರಿಸಿದ್ದಾರೆ. ಇವೆಲ್ಲ ದರಕಡಿತದ ಬೋರ್ಡು ಬೀಳದೆ ಜವಳಿ ವ್ಯಾಪಾರವೇ ಇಲ್ಲ ಎಂಬ ರೋಗವನ್ನು ಪುಸ್ತಕೋದ್ಯಮಕ್ಕೂ ಹಬ್ಬಿಸುವ ಕ್ರಮ. ದರ ಕಡಿತ = ಆ-ದರ ಕುಸಿತ!

ಬೆಲೆ ಇಳಿಕೆಯ ಘೋಷಣೆಯಲ್ಲಿಯ ವಿಚಿತ್ರ ತರ್ಕಕ್ಕೆ ಮತ್ತೆ ಮೈಸೂರು ವಿವಿನಿಲಯವನ್ನೇ ಉದಾಹರಿಸುತ್ತೇನೆ. ಪ್ರಸಾರಾಂಗದ ಆದಾಯ ಬಲಪಡಿಸುವಂತೆ ಬೆಬೆ ನಿರ್ಧಾರ ಸಮಿತಿ ಒಂದು ಸಾಮಾನ್ಯಮುದ್ರಣದ ಪುಸ್ತಕಕ್ಕೆ ರೂಪಾಯಿ ೧೨೦/- ರ ಭಾರೀ ಬೆಲೆಯನ್ನು ಹೇರಿ ಪ್ರಕಟಿಸಿತು. ಅದು ಮಾರುಕಟ್ಟೆ ಹೆಟ್ಟುವಂದೇ ಏನೋ ನೆಪ ಹಿಡಿದು ವಿವಿನಿಲಯ ತನ್ನೆಲ್ಲ ಪ್ರಕಟಣೆಗಳಿಗೆ ೫೦% ರಿಯಾಯಿತಿ ಘೋಷಿಸಿತು. ಜನರಿಗೇನು, ರೂಪಾಯಿ ನೂರಿಪ್ಪತ್ತರ ಹೊಸ ಪುಸ್ತಕ ಅರವತ್ತಕ್ಕೆ ಸಿಕ್ಕಿದ ಸಂತೋಷ. ಇಲ್ಲಿ ಸಾಮಾನ್ಯರಿಗೆ ತಿಳಿಯದ ಸೂಕ್ಷ್ಮ ಇಷ್ಟೇ: ರಿಯಾಯಿತಿಯ ಬಲದಲ್ಲಿ ದಾಸ್ತಾನು ಕರಗುತ್ತದೆ ನಿಜ. ಆದರೆ ಉದಾತ್ತ ಆಶಯದ ವಿವಿನಿಲಯದ ಆದಾಯಕ್ಕೆ ಅದು ನಷ್ಟದ ಮಾಲಾಗುತ್ತದೆ. ಗಾಯದ ಮೇಲೆ ಬರೆ ಎಂಬಂತೆ, ಅತ್ತ ಆ ಗ್ರಂಥಕರ್ತನಿಗೆ ವಿವಿನಿಲಯದ ನಿಯಮಗಳ ಪ್ರಕಾರ ಮುದ್ರಿತ ಬೆಲೆಯ ಶೇಕಡಾವಾರು ಗೌರವಧನವೂ ಸಂದಾಯವಾಗುವುದರಿಂದ ನಷ್ಟದ ಹೊರೆ ಹೆಚ್ಚುತ್ತದೆ. ಪ್ರಸಾರಾಂಗ ಅರವತ್ತಕ್ಕೂ ಮಿಕ್ಕು ವರ್ಷ ಬೆಳೆದಿದ್ದರೂ ಸದಾ ಆರ್ಥಿಕ ಬಿಕ್ಕಟ್ಟಿನಲ್ಲಿ, ಹೊಸ ಪ್ರಕಟಣೆಗಳಿಗೆ ಸ್ವತಂತ್ರ ಅನುದಾನದ ಹುಡುಕಾಟ ನಡೆಸುವುದರ ಕಾರಣ ಬೇರೆ ಹುಡುಕಬೇಕೇ!

ಕಸಾಪ ಇಂಥದ್ದೇ ದಂಧೆಯಲ್ಲಿ ಹಿಂದುಳಿಯದಂತೆ ೧೨೦-೧೫೦ ಪುಟದ ಕಳಪೆ ದರ್ಜೆಯ (ಕ್ಷಮಿಸಿ, ನಾನಿಲ್ಲಿ ವಿಚಾರ ವಿಮರ್ಶೆ ಮಾಡುತ್ತಿಲ್ಲ. ಕೇವಲ ಕಾಗದ ಮುದ್ರಣಗಳ ಭೌತಿಕ) ಪುಸ್ತಕವನ್ನು ರೂಪಾಯಿ ಐವತ್ತಕ್ಕೆ ಹೊರತಂದು ದಿಟ್ಟ ಹೆಜ್ಜೆಯಿರಿಸಿದೆ. ಇಂಥ ಉದ್ಯಮ ವಿರೋಧೀ ನೀತಿಗಳು ಪುಸ್ತಕ ಪ್ರೇಮಿಯನ್ನಿರಲಿ, ಬರಿಯ ಮಧ್ಯವರ್ತಿಯಾದ ನನ್ನಂಥವರನ್ನೂ ಕಂಗೆಡಿಸುತ್ತವೆ. [ಇಂದು ಅನಿವಾರ್ಯ ಪುಸ್ತಕಗಳ ಪುಸ್ತಕದ ಬೆಲೆ ಹೆಚ್ಚಾದಷ್ಟೂ ದಕ್ಕುವ ಲಾಭಾಂಶ ಹಿರಿದು ಎನ್ನುವುದರತ್ತವೇ ಮಧ್ಯವರ್ತಿಗಳ ಗಮನ ಹರಿಯುತ್ತಿದೆ. ಗಿರಾಕಿಗಳಲ್ಲಂತೂ ಹೆಚ್ಚು ಬೆಲೆ ತೆತ್ತದ್ದೆಲ್ಲ ಉತ್ತಮ ದರ್ಜೆಯವು ಎಂಬ ಭ್ರಮೆ ಸದಾ ಇದ್ದದ್ದೇ! ನಾನು Scientific Temperನ್ನು ಕೇವಲ ರೂ ಹದಿನೈದರ ಬೆಲೆಯಲ್ಲಿ ಪ್ರಕಟಿಸಿದೆ. ವ್ಯಾಪಾರಿಗಳು ಸ್ವಂತಕ್ಕೇನು ಕಳೆದುಕೊಳ್ಳದಿದ್ದರು (೩೩% ರಿಯಾಯಿತಿ ದರದಲ್ಲೇ ಕೊಡುತ್ತಿದ್ದೆ), ಕೇವಲ ಐದು ರೂಪಾಯಿ ಲಾಭಕ್ಕೆ ಆ ಪುಸ್ತಕ ದಾಸ್ತಾನಿಡುವುದು ತಮಗೆ ಅಪೇಕ್ಷಣೀಯವಲ್ಲ ಎಂದೇ ಸ್ಪಷ್ಟಪಡಿಸಿ ದೂರವುಳಿಸಿದ್ದಾರೆ. ದಿಲ್ಲಿಯ ವಿತರಕನೊಬ್ಬ ಅದನ್ನು ಪೂರ್ಣ ಮುದ್ರಿತ ಬೆಲೆಗೇ ಖರೀದಿಸಲು ಮುಂದಾದ. ಆತನ ಷರತ್ತು: ನನ್ನ ಬೆಲೆ ನಮೂದಿನ ಹೊರ ಹೊದಿಕೆ ಮಾತ್ರ ಬದಲಿಸಿ, ಅಂದರೆ ಒಂದು ನೂರು ರೂಪಾಯಿ ಬೆಲೆ ಮುದ್ರಿಸಿ ಮಾರುಕಟ್ಟೆಗೆ ಹಾಕುತ್ತೇನೆ; ನಾನು ಒಪ್ಪಲಿಲ್ಲ. ಈ ವ್ಯವಹಾರದ ಒಳಸುಳಿಗಳನ್ನು ಸಣ್ಣದಾಗಿ ಬಿಡಿಸಿ ನೋಡಿ: ನನ್ನ ದರದಿಂದ ವ್ಯಾಪಾರಿಗೆ ಕೇವಲ ಐದು ರೂಪಾಯಿ ದಕ್ಕುತ್ತಿದ್ದಲ್ಲಿ ಈಗ ಕನಿಷ್ಠ ಮೂವತ್ಮೂರು ರೂಪಾಯಿ ಬರುತ್ತದೆ. ಮತ್ತೆ ಇಂಥ ಪ್ರಕಾಶಕರು ವ್ಯಾಪಾರಿಗಳು ಕೊಳ್ಳುವ ಪ್ರತಿಗಳ ಸಂಖ್ಯೆಯ ಮೇಲೆ ರಿಯಾಯ್ತಿ ದರವನ್ನು ಅವಶ್ಯ ಹೆಚ್ಚಿಸುತ್ತಾರೆ; ಕ್ವಾಂಟಿಟಿ ಡಿಸ್ಕೌಂಟ್! ಹಾಗೇ ಇದರ ಪ್ರಕಾಶಕನ ಮುಖವೂ ಹೆಚ್ಚು ಭರವಸೆದಾಯಕ. ಮೂಲಸ್ಥಿತಿಯಲ್ಲಿ ಪ್ರತಿಯೊಂದರ ಮೇಲೆ ನಿವ್ವಳ ಹತ್ತೋ ಹನ್ನೊಂದೋ ರೂಪಾಯಿಯಷ್ಟೇ ಆದಾಯವಿತ್ತು. ಇಲ್ಲಿ ಶೇಕಡಾ ಐವತ್ತು ರಿಯಾಯಿತಿ ಕೊಟ್ಟರೂ ನಿವ್ವಳ ಐವತ್ತು ರೂಪಾಯಿ ಆದಾಯ! ಹಿಂದೆ ಒಂದು ಮುದ್ರಣ – ಸುಮಾರು ಸಾವಿರ ಪ್ರತಿ, ಮುಗಿಸಲು ಕನಿಷ್ಠ ಎರಡು ವರ್ಷ ಬೇಕಾಗುತ್ತಿತ್ತು. ಈಗ ದಾಖಲೆ ಸಮಯದಲ್ಲಿ ಮರುಮುದ್ರಣಕ್ಕೆ ಬೇಡಿಕೆ! ಈ ವಿಷವೃತ್ತದಲ್ಲಿ ನಿಜವಾದ ಬಲಿಪಶು – ಕೊಳ್ಳುಗ. ತಮಾಷೆ ಎಂದರೆ ಗಿರಾಕಿಯೂ ಶೇಕಡಾ ಹತ್ತೋ ಇಪ್ಪತ್ತೋ ದರದ ರಿಯಾಯ್ತಿ ಗಿಟ್ಟಿಸಿಕೊಂಡೆನೆಂಬ ಭ್ರಮಾ ಸಂತೋಷದಲ್ಲಿರುತ್ತಾನೆ! ತೀರಾ ಹೊಸ ಹೋಲಿಕೆ ಕೊಡುವುದಾದರೆ ಮುಖವಿಲ್ಲದ ಫೇಸ್ ಬುಕ್ ಉಚಿತವಾಗಿ ಪಡೆದು, ಅಂತರ್ಜಾಲವನ್ನೇ ಪಡೆಯುತ್ತಿರುವೆವೆಂದು ಸಂಭ್ರಮಿಸುವ ಹಾಗೆ!]

ಈ ಹಿನ್ನೆಲೆಯಿಂದ ನಾನು ಮತ್ತೊಮ್ಮೆ ಹೇಳಬಯಸುತ್ತೇನೆ – ತಮ್ಮ ಉಪಯುಕ್ತತೆಯ ದಿನಾಂಕವನ್ನು (expiry date) ಎಂದೋ ಮೀರಿದ ಸರಕಾರೀ ಪ್ರಕಟಣಾಂಗಗಳನ್ನು ಪೂರ್ತಿ ಮುಚ್ಚಿ. ಸರ್ಕಾರಿ ಪುಸ್ತಕೋದ್ಯಮವನ್ನೇ ಪೂರ್ಣ ತಿರಸ್ಕರಿಸಿ. ಇಲ್ಲವಾದರೆ ಇವು ಮಹಾ ಆಲದಂತೆ, ಕಾಂಡದ ಪರಿಮಿತಿ ಮೀರಿ ಬೀಳಲುಗಳ ಹೀರ್ಗೊಳವೆ ಊರಿ ಎಲ್ಲ ನೆಲ, ಜಲ, ಸಾರವನ್ನೂ ಬತ್ತಿಸಿ ವ್ಯಾಪಿಸುತ್ತವೆ. ಇವನ್ನು ಬಿಟ್ಟರೆ ಸಾಹಿತ್ಯಕ್ಕೆ ಉಳಿಗಾಲವಿಲ್ಲ, ಎಂಬ ಭ್ರಮೆಗಳೇ ಆಳುತ್ತವೆ. ಭಾವನಾತ್ಮಕ ಸಂಬಂಧಗಳನ್ನು ಕಡಿದು, ಇವನ್ನು ಅಳಿಸಿದರಷ್ಟೇ ನಿಜ ಪುಸ್ತಕ ಪ್ರಪಂಚ ಮರು ಹುಟ್ಟು ಪಡೆದೀತು.