ಸಿನಿಮಾವಲ್ಲ, ದಾಖಲೀಕರಣ!
(ನೀನಾಸಂ ನಾಟಕಗಳ ದಾಖಲೀಕರಣ, ಹಿಂದೆ, ಮುಂದೆ – ೨)

ನೀಲಕಂಠೇಶ್ವರ ನಾಟ್ಯ ಸಂಘ, ಕಿರಿದರಲ್ಲಿ ನೀನಾಸಂ, ತನ್ನ ವರ್ಷ ಪೂರ್ಣ ರಂಗ ಶಿಕ್ಷಣ, ಅಕ್ಷರ ಪ್ರಕಾಶನದ ಮೂಲಕ ಸಾಹಿತ್ಯ ಸೇವೆ ಮತ್ತು ವೈಚಾರಿಕ ಚಿಂತನೆಗಳಿಗೊಂದು ದೊಡ್ಡ ಸಾರ್ವಜನಿಕ ಭಾಗೀದಾರಿಕೆಗೆ ಕೊಡುವ ಅವಕಾಶಕ್ಕೆ ಸದ್ಯದ ಹೆಸರು ಸಂಸ್ಕೃತಿ ಶಿಬಿರ.

ಇದು ವರ್ಷಾವಧಿ ಜಾತ್ರೆಯಂತೆ ನಡೆಸಲೇ ಬೇಕಾದ ಹರಕೆ ಏನು ಅಲ್ಲ. ಅನುಲ್ಲಂಘನೀಯ ವಿಧಿ ನಿಷೇಧಗಳು, ಔಪಚಾರಿಕ ಉದ್ಘಾಟನೆ ಸಮಾರೋಪ ಸಮಾರಂಭಗಳು, ಸಾವಿರದೊಂದು ಋಣಸಂದಾಯಕ್ಕೆಂದೇ ಮಂತ್ರಿ, ಉದ್ಯಮಿಗಳಿಗೆ ವೇದಿಕೆಯ ಮೇಲೆ ಸ್ಥಾನ ಅಥವಾ ಮಾತಿಗವಕಾಶ, ಸಮ್ಮಾನ ಇತ್ಯಾದಿ ಏನೂ ಇಲ್ಲಿ ಸಲ್ಲುವುದಿಲ್ಲ. ಆದರೂ ಮೂರು ದಶಕಗಳಿಗೂ ಮಿಕ್ಕು ಕಾಲದಿಂದ ನಿರಂತರವಾಗಿ, ಇತಿಹಾಸದ ಭಾರ ತಲೆಯ ಮೇಲೆ ಹೊತ್ತುಕೊಳ್ಳದೇ ಪ್ರತಿ ಸಲವೂ ಹೊಸತೆಂಬ ಭಾವದಿಂದಲೇ ನಡೆದು ಬಂದಿದೆ. ತೀರಾ ಮೊದಲು ಸಿನಿಮಾ ರಸಗ್ರಹಣದಿಂದ ತೊಡಗಿದ ಈ ಶಿಬಿರಸರಣಿ, ನಾಟಕ, ಸಾಹಿತ್ಯ, ಸಂಗೀತ ಎಂದಿತ್ಯಾದಿ ಹಾಯ್ದು ಇಂದು `ಸಂಸ್ಕೃತಿ’ ಹೆಸರಿನಲ್ಲಿ, ಆದರೆ ಎಂದೂ ಮನೋವಿಕಾಸದ ಉಪಯುಕ್ತತೆಗೆ ಎರವಾಗದಂತೆ ಗಂಭೀರವಾಗಿ ನಡೆಯುತ್ತಲೇ ಬಂದಿದೆ. ಈ ವರ್ಷದ ಸಂಸ್ಕೃತಿ ಶಿಬಿರಕ್ಕೆ ನೀನಾಸಂ ಮನೆ ಹಬ್ಬದಂತೇ ಅಣಿಗೊಳ್ಳುತ್ತಿತ್ತು.

ಇನ್ನೇನು ಏಳೇ ದಿನದಲ್ಲಿ ಕರ್ನಾಟಕದ ಮೂಲೆಮೂಲೆಗಳಿಂದ ಗಂಭೀರ ಆಸಕ್ತಿಯ ಜನ, ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೆಲವು ನೂರುಗಳ ಸಂಖ್ಯೆಯಲ್ಲಿ ಬಂದು, ಹೆಚ್ಚು ಕಡಿಮೆ ಒಂದು ವಾರ ಇಲ್ಲೇ ಠಿಕಾಣಿ ಹೂಡಿ ಕಲಾಪಗಳ ಶರಧಿಯಲ್ಲಿ ಮುಳುಗಿ ಪುನೀತರಾಗಲಿದ್ದಾರೆ ಎನ್ನುವ ಸ್ಥಿತಿ. ಬಹುತೇಕ ಸಮ್ಮೇಳನ, ಗೋಷ್ಠಿಗಳಂತೆ ಇಲ್ಲಿ ಭೋಜನ ಸಾಹಿತ್ಯದ ವಿವರಗಳು (ಮೆನು ಕಾರ್ಡ್) ಕಲಾಪದ ಯಶಸ್ಸಿನ ವಿಷಯ ಆಗುವುದೇ ಇಲ್ಲ. ಬದಲಿಗೆ ನೋಡಿದ ನಾಟಕಾದಿ ಕಲಾಪ್ರಕಾರಗಳು, ಕೇಳಿದ ಭಾಷಣಗಳು, ತೀಡಿದ ಮಾತುಗಳ ಆಯಾಮ, ಸ್ವಾಂಗೀಕರಿಸಿಕೊಂಡ ವೈಚಾರಿಕತೆಯ ಸ್ತರಗಳು, ಭೇಟಿಯಾದ ವ್ಯಕ್ತಿಗಳ ಆಳ ಎತ್ತರಗಳೇ ಮನಸ್ಸು ತುಂಬಿಕೊಳ್ಳುತ್ತವೆ; ಬಹುಕಾಲ ಪ್ರಭಾವಿಸುವ ನೆನಪುಗಳಾಗಿಬಿಡುತ್ತವೆ. ಮುಖ್ಯ ಉದ್ದೇಶದಿಂದ ಕವಲೊಡೆಯುವ ಯಾವುದೇ ಆಮಿಷಗಳಿಗೆ ಎಡೆಯಿಲ್ಲದ ಒಂದೇ ಸೂತ್ರದ ಬಂಧ ಇಲ್ಲಿನ ಶಿಬಿರಗಳದ್ದು. ಕಲಾಪಗಳನ್ನು ಹತ್ತು ಕೇಂದ್ರಗಳಿಗೆ ಚದುರಿಸಿ, ಊರ ದೇವರ ಜಾತ್ರೆಯ ಮಳಿಗೆಗಳನ್ನೆಲ್ಲ ನೆರಹಿ, ನೂರೆಂಟು ಕಲಾಪಗಳ ದೊಡ್ಡ ಪಟ್ಟಿ ಮಾಡಿ ಅಂತಿಮವಾಗಿ ಒಂದು ವ್ಯಕ್ತಿ ಕೇಂದ್ರಿತವಾಗಿ ಪ್ರಚಾರ ಗಿಟ್ಟಿಸುವ ಚಪಲ ಇಲ್ಲಿನ ಸಂಘಟನೆಗಿಲ್ಲ. ಬದಲಿಗೆ ಎಲ್ಲ ಒಂದೇ ದಿಕ್ಕಿನಲ್ಲಿ ದುಡಿಯುವ, ಆದರೆ ಭಾವ ವಿಶ್ವತೋಮುಖವಾಗುವ ಸಂಕೀರ್ಣತೆ ಈ ಶಿಬಿರಗಳದ್ದು. ಅಬ್ಬರ, ವೈಭೋಗಗಳ ಹೊನಲಿನಲ್ಲಿ ಬೆರಗು, ದಾಖಲೆ ಹುಟ್ಟಿಸುವ ಹುಚ್ಚಿಗೆ ಇದು ಸದಾ ದೂರ. ಅದಕ್ಕೆ ಸರಿಯಾದ ಅಪ್ಪಟ ಹಳ್ಳಿಮೂಲೆ ಹೆಗ್ಗೋಡು – ಇಲ್ಲಿಗೆ ಬಂದು, ಕಲಾಪಗಳನ್ನು ಕಳಚಿಕೊಂಡು ಹೊರಬಿದ್ದವರಿಗೊಂದು ಸೋಮಾರಿ ಕಟ್ಟೆಯೂ ಇಲ್ಲಿ ದೊರಕದು!

ಶಿಬಿರಕ್ಕೆ ಆವಶ್ಯಕವಾದ ವಠಾರ, ಸೌಕರ್ಯಗಳ ಸಜ್ಜಿಕೆಗಳು ಇಳಿಯೆಣಿಕೆಯೊಡನೆ ನಡೆದಂತಿತ್ತು. ಸರಳತೆ ಮತ್ತು ಉಪಯುಕ್ತತೆ ನೀನಾಸಂನ ಯಾವುದೇ ಚಟುವಟಿಕೆಗಳ ತೋರ್ಕೆ. ದೀರ್ಘ ಕಾಲೀನ ಪ್ರಭಾವ ಮತ್ತು ಪ್ರೇರಣೆ ಇದರ ಕಾಣ್ಕೆ. ಕೆಲವು ಗೇಟು, ಮೆಟ್ಟಿಲು ಹೊಸದಾಗಿ ಸಿಮೆಂಟ್ ಕಂಡಿತ್ತು. ಉಳಿದಂತೆ ಅಂಗಳಗಳ ನೆಲ, ಪೌಳಿಗಳಲ್ಲಿ ಬೆಳೆದ ಮಳೆಗಾಲದ ಪಾಚಿ ಕೆರೆದು ಶುದ್ಧವಾಗುತ್ತಿತ್ತು. ಕೆಲ ವಿದ್ಯಾರ್ಥಿಗಳು ಪೌಳಿ, ಗೋಡೆಗಳಿಗೆ ಕಾವಿ ಬಳಿದು, ಸರಳ ಜನಪದ ಅಂಚುಕಟ್ಟು, ಚಿತ್ರಗಳನ್ನು ಮೂಡಿಸುತ್ತಿದ್ದರು.

ಇನ್ನೊಂದು ಬಳಗ ಬಿದಿರಿನ ಸ್ವಾಗತ ಕಮಾನು ಮತ್ತಿತರ ಅಲಂಕಾರಗಳನ್ನು ನಿಲ್ಲಿಸುವುದರಲ್ಲಿ ನಿರತರಾಗಿದ್ದರು. ಶಿಬಿರದ ಹೂರಣವಾದರೋ ಕೆಲವು ತಿಂಗಳ ಹಿಂದೆಯೇ ಬೀಜಾರೋಪಣೆಗೊಂಡು ವಿಕಸಿಸುತ್ತಿತ್ತು. ಅದರಲ್ಲಿ ವೇದಿಕೆಯ ಮೇಲಿನಿಂದ ಸಭೆಯನ್ನುದ್ದೇಶಿಸಲಿದ್ದ ಸಂಪನ್ಮೂಲ ವ್ಯಕ್ತಿಗಳಂತೇ ಮೊದಲ ಪ್ರದರ್ಶನ ಕಾಣಲಿದ್ದ (ಈ ವರ್ಷ) ಮೂರು ನಾಟಕಗಳ ಆಯ್ಕೆ ಮತ್ತು ತಾಲೀಮು ಕೂಡಾ ನಡೆದಿತ್ತು.

ನಾಟಕಗಳಲ್ಲಿ ಎರಡು, ಪರೋಕ್ಷವಾಗಿ ವೃತ್ತಿ ತಂಡದಂತೇ ಕಾರ್ಯ ನಿರ್ವಹಿಸುವ ತಿರುಗಾಟ ತಂಡದ್ದು. ಇವು ಸಂಸ್ಕೃತಿ ಶಿಬಿರದ ಪ್ರಥಮ ಪ್ರದರ್ಶನದನಂತರ ರಾಜ್ಯಾದ್ಯಂತ ತಿರುಗಿ, ಅವೇ ನಾಟಕಗಳನ್ನು ನೂರಕ್ಕೂ ಮಿಕ್ಕು ಬಾರಿ ಪ್ರದರ್ಶಿಸುತ್ತದೆ. ಇನ್ನೊಂದು ನಾಟಕ ಸ್ಥಳೀಯ ಕಲಾವಿದರದ್ದು. ಇದು ಬಹುತೇಕ ಶಿಬಿರಾವಧಿಯ ಒಂದೇ ಪ್ರದರ್ಶನಕ್ಕೇ ಮೀಸಲು. ಸಂಚಿ ಟ್ರಸ್ಟಿನ ದಾಖಲೀಕರಣದ ಆದ್ಯತೆಯಿದ್ದುದಾದರೂ ಈ ಮೂರು ನಾಟಕಗಳಿಗೇ.

ನೀನಾಸಂ ತಿರುಗಾಟಕ್ಕೆ ಮೂರು ದಶಕಗಳಿಗೂ ಮಿಕ್ಕ ರಂಗ ಇತಿಹಾಸವಿದೆ. ಇದು ಆಯ್ದುಕೊಂಡ ನಾಟಕ-ಪಠ್ಯಗಳ, ಬಳಸಿಕೊಂಡ ನಿರ್ದೇಶಕರ ಮತ್ತು ನಟರ, ಪ್ರದರ್ಶನ ಕೊಟ್ಟ ಊರುಗಳ, ಆಯಾಕಾಲದಲ್ಲಿ ಬಂದ ವಿಮರ್ಶೆಗಳ, ಖರ್ಚುವೆಚ್ಚಗಳ ದಾಖಲೆಗಳೆಲ್ಲ ಒಂದು ಸಾರ್ವಜನಿಕ ಸಂಸ್ಥೆಯ ನೆಲೆಯಲ್ಲಿ ನೀನಾಸಂ ಚೆನ್ನಾಗಿಯೇ ಇಟ್ಟಿರುತ್ತದೆ. ಆದರೆ ಆ ಎಲ್ಲವೂ ಕೃತಾರ್ಥವಾಗುವ ಪ್ರದರ್ಶನವನ್ನು ಮಾತ್ರ ವ್ಯವಸ್ಥಿತವಾಗಿ ಹಿಡಿದಿಡುವ ಪ್ರಯತ್ನ ಆಗಲೇ ಇಲ್ಲ. ನಾಟಕಕಾರನ, ಮೂಲ ಕನ್ನಡದ್ದಲ್ಲದಿದ್ದರೆ ಅನುವಾದಕನ, ನಿರ್ದೇಶಕನ ಆಶಯಗಳು ಮತ್ತು ನಟರ ಸಾಮರ್ಥ್ಯ ನಾಟಕಗಳನ್ನು ಪ್ರದರ್ಶನದಿಂದ ಪ್ರದರ್ಶನಕ್ಕೆ ಉತ್ತಮಿಸುವ, ಸವಕಲಾಗಿಸುವ ಸಾಧ್ಯತೆ ಧಾರಾಳ ಇದೆ. ಕನಿಷ್ಠ ಒಂದು ಆದರ್ಶಮಯ ವಾತಾವರಣದಲ್ಲಿ ಮೂಡಿದ ಪ್ರದರ್ಶನವನ್ನಾದರೂ ಯಾವ ಕಾಲಕ್ಕೂ ಒದಗುವಂತೆ ಸಮರ್ಥವಾಗಿ ವಿಡಿಯೋದಲ್ಲಿ ಹಿಡಿದಿಡುವ ಆಶಯ ಸಂಚಿ ಟ್ರಸ್ಟಿನದು. ಹಾಗೆಂದು ಇಂದು ಬಹುತೇಕ ರಂಗಕ್ರಿಯೆಗಳು ನಡೆಯುವಲ್ಲೆಲ್ಲ ಎದುರು ಮುಗ್ಗಾಲೂರಿ ಕುಳಿತ ವಿಡಿಯೋ ಕ್ಯಾಮರಾಗಳೆಲ್ಲ ದಾಖಲೀಕರಣವನ್ನೇ ನಡೆಸುತ್ತಿವೆ ಎಂದು ಭಾವಿಸಿದರೆ, ಅದು ತಪ್ಪು. ಹೇಗೆ ನಾಟಕ ಲಿಖಿತ ಮಾಧ್ಯಮದಿಂದ ರಂಗ ಮಾಧ್ಯಮಕ್ಕೆ ಒಬ್ಬ ನಿರ್ದೇಶಕನಿರುತ್ತಾನೋ ಹಾಗೇ ರಂಗ ಮಾಧ್ಯಮದಿಂದ ಸಿನಿಮಾ ಮಾಧ್ಯಮಕ್ಕೆ ದಾಟಿಸುವಲ್ಲೂ ಸ್ಪಷ್ಟ ನಿರ್ದೇಶನ ಬೇಕೇ ಬೇಕು. ನೆನಪಿರಲಿ, ವಿಡಿಯೋಗ್ರಹಣ ದಾಖಲೀಕರಣದ ಒಂದು ಅಂಗ. ಪ್ರಸ್ತುತ ದಾಖಲೀಕರಣದ ನಿರ್ದೇಶಕತ್ವವನ್ನು ಅಭಯ ವಹಿಸಿಕೊಂಡರೆ, ಸಮರ್ಥ ಸಹಾಯಕನಾಗಿ ಒದಗಿದವರು ಗೆಳೆಯ ಇಸ್ಮಾಯಿಲ್.

ದಿನದುದ್ದಕ್ಕೆ ಉಪಾಧ್ಯ ಬ್ರದರ್ಸ್, ಕುಂಭಾಸಿ, ಕಮಲಶಿಲೆ, ಮುಳುಗಡೆ, ಬಿದನೂರಕೋಟೆ ಎಂದು ತಿರುಗಿ ಬಂದವರು ನಾವು. ನೀನಾಸಂ ನಮ್ಮನ್ನೂ ಸೇರಿಸಿದಂತೆ ದಾಖಲೀಕರಣದ ತಂಡಕ್ಕಾಗಿಯೇ ಹಲವು ಹಾಸಿಗೆಗಳಿದ್ದ ಮೂರು ವಿಸ್ತಾರ ಕೋಣೆಗಳನ್ನೇ ಒದಗಿಸಿದ್ದರು. ಮೂರಕ್ಕೂ ಸ್ವತಂತ್ರ ಪಾಯಖಾನೆ, ಅನಿಲಾಧಾರಿತ ಬಿಸಿನೀರ ವ್ಯವಸ್ಥೆ ಚೊಕ್ಕವಾಗಿತ್ತು. ಹಳ್ಳಿಯಲ್ಲಿನ ವಿದ್ಯುತ್ ಪೂರೈಕೆಯ ಅವ್ಯವಸ್ಥೆಗಳನ್ನು ಒಪ್ಪಿಯೇ ನೀನಾಸಂ ತನ್ನ ಇಡೀ ವಠಾರಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಶಕ್ತ ವಿದ್ಯುಜ್ಜನಕಗಳನ್ನು ಹೊಂದಿತ್ತು. ಮೊದಲೇ ಹೇಳಿದ `ಆಹಾರ್ಯ’, ಒಟ್ಟಾರೆ ನೀನಾಸಂ ಬಳಗಕ್ಕೆಲ್ಲ ಹೇಗೋ ಹಾಗೇ ನಮಗೂ – ತಿಂಡಿ, ತೀರ್ಥ, ಊಟಕ್ಕೆ ಮುಕ್ತವಿತ್ತು. ನಾವು ಚುರುಕಾಗಿಯೇ ಪುನಶ್ಚೇತನರಾಗಿ, ಅಲ್ಲಿನ ಕಾರ್ಯಕ್ರಮ ಪಟ್ಟಿಗೆ ಒಪ್ಪಿಸಿಕೊಂಡೆವು.

`ಆಹಾರ್ಯ’ದಲ್ಲಿ ಸಂಜೆಯ ಉಪಾಹಾರವಾಗಿ ಚಿತ್ರಾನ್ನ, ಕಾಫಿ ಹಾಕುತ್ತಿದ್ದಂತೆ ಅಭಯ ರಶ್ಮಿಯರ ಜತೆಗೇ ಬಂದಿದ್ದ ಮುಖ್ಯ ಕ್ಯಾಮರಾಮ್ಯಾನ್ ವಿಷ್ಣು ಮತ್ತು ಸಂಕಲನಕಾರ ಪ್ರಶಾಂತ್ ಪಂಡಿತ್ ಮರುಪರಿಚಯಗೊಂಡರು. ಜತೆಗೇ ಬಂದಿದ್ದ ಶಬ್ದಗ್ರಹಣ ತಜ್ಞ ಜೆಮಿ ಡಿಸಿಲ್ವ ನಮಗೆ ಹೊಸ ಪರಿಚಯ. ಈ ವರ್ಷ ಗುಣಮುಖ, ತಾರ್ತೂಫ್ ಮತ್ತು ಒರೆಸ್ತಿಸ್ ಪುರಾಣ – ಮೂರು ನಾಟಕಗಳು ರಂಗವೇರಲಿದ್ದುವು. ಅದರಲ್ಲಿ ಮೊದಲೆರಡು ನಾಟಕಗಳು ತಿರುಗಾಟದ ತಂಡದ್ದಾದರೆ ಮತ್ತಿನದು ಕೆಲವು ಊರ ಹಿರಿಯರನ್ನೂ ಒಳಗೊಂಡ ನೀನಾಸಂ ತಂಡದ್ದೇ. ತಿರುಗಾಟ ತಂಡದಲ್ಲೂ ಹಲವರು ನೀನಾಸಂನ ಹಳೆಯ ವಿದ್ಯಾರ್ಥಿಗಳು ಇದ್ದರು. ಅವರಿಗೆ ತಾರ್ತೂಫ್ ಪಠ್ಯವಾಗಿಯೂ ಹೆಚ್ಚು ಪರಿಚಿತವೇ ಇತ್ತು. ಹಾಗಾಗಿ ಅದರ ತಾಲೀಮನ್ನು ತಿಂಗಳ ಹಿಂದೆಯೇ ಚೊಕ್ಕ ಮಾಡಿಕೊಂಡಿದ್ದರು. ಇನ್ನೇನಿದ್ದರೂ ಸಂಸ್ಕೃತಿ ಶಿಬಿರಕ್ಕೂ ವಾರ ಮೊದಲೇ ನವೀಕರಿಸಿಕೊಳ್ಳುವುದಿತ್ತು. ಅನಂತರ ಗುಣಮುಖದ ತಾಲೀಮಿಗಿಳಿದವರು, ನಾವು ತಲಪಿದ ಸಂಜೆಗೇ ಕೊನೆಯ ತಾಲೀಮು ನಿಶ್ಚೈಸಿದ್ದರು. ವಾಸ್ತವದಲ್ಲಿ ಅದು ವೇಷಭೂಷಣ ಸಹಿತವಾದ ಪರಿಪೂರ್ಣ ಪ್ರದರ್ಶನವೇ ಆಗಿತ್ತು. ಅದಕ್ಕೆ ಕಲಾವಿದರ ಕುಟುಂಬದವರೂ ಸೇರಿದಂತೆ ನೀನಾಸಂ ಆತ್ಮೀಯ ಬಳಗವೆಲ್ಲ ಹಾಜರಾಗುವುದಿತ್ತು. ದಾಖಲೀಕರಣದ ತಂಡಕ್ಕಂತೂ ಅದು ಅಯಾಚಿತ `ಟ್ರಯಲ್ ರನ್’, ಮರುದಿನದ ನಿಜ ಪ್ರದರ್ಶನಕ್ಕೆ ಸಜ್ಜುಗೊಳ್ಳಲು ಹೆಚ್ಚಿನ ಅವಕಾಶ. ಇವೆಲ್ಲ ಅಭಯನಿಂದ ತಿಳಿಯುತ್ತಿದ್ದಂತೆ ಚಿತ್ರಾನ್ನವನ್ನು ಅಗುಳುಳಿಯದಂತೆ ಮುಗಿಸಿ, ಚಟಾಕು ಲೋಟೆಯಲ್ಲಿ ಒಂದು ಸಾಲದೆಂದು ಎರಡು ಕಾಫಿ ಏರಿಸಿದ್ದೆ. ಆಗ ಸಾಂಪ್ರದಾಯಿಕ ಯಕ್ಷಗಾನದ `ಸಾರ್ವಜನಿಕ ಕರೆ’ಯಂತೆ (ಕೇಳಿ ಹೊಡೆಯುವುದು) ಅಲ್ಲೇ ಆಚಿನ ವಲಯದಿಂದ ಚಂಡೆ ಶಬ್ದ ಕೇಳಿದ ಮೇಲೆ ಸುಮ್ಮನೆ ಕೂರುವುದುಂಟೇ.

ಮುಖ್ಯ ಕಟ್ಟಡದ ಹಿತ್ತಿಲಿನಲ್ಲಿ ಸ್ವಲ್ಪ ಉದ್ದಕ್ಕೆ ಸಿಮೆಂಟ್ ಶೀಟಿನ ಮಾಡಿಳಿಸಿ, ವೆಲ್ಡ್ ಮೆಶ್ಶಿನ ಕೋಣೆ ಮಾಡಿದ್ದರು. ಅದರ ಒಳಗೊಂದಷ್ಟು ಜನ – ಎಲ್ಲ ಪ್ರಾಯದವರು, ಮೂಲೆಗಳಲ್ಲಿ ಹೀಗೇ ಗುಂಪು ಕೂಡಿದಂತಿದ್ದರು. `ಚಂಡೆ ಮಾಷ್ಟ್ರು’ ಮುಂದಿನ ನುಡಿತಗಳನ್ನು ಕೊಡುತ್ತಿದ್ದಂತೆ ಯಾರೋ ಮೂವರು, ಖಾಲಿ ಸ್ಥಳದಲ್ಲಿ ಹರಡಿ ಬಿದ್ದಿದ್ದ ಒಂದು ತುಕ್ಕು ಹಿಡಿದ ಕಬ್ಬಿಣದ ಅಟ್ಟಳಿಗೆ, ಒಂದು ಮೇಜು ಎಂದೆಲ್ಲಾ ವಿಶಿಷ್ಟ ನಡೆಗಳಲ್ಲಿ ಏರಿ, ಅವರ ಸಮಕಾಲೀನ ವೇಷಕ್ಕೆ ಏನೂ ಒಪ್ಪದ ಸಂಭಾಷಣೆಗಳನ್ನು ಒಪ್ಪಿಸತೊಡಗಿದರು. ನೋಡನೋಡುತ್ತಿದ್ದಂತೆ ನಮ್ಮನ್ನು ಅವರು ಗ್ರೀಕ್ ಪುರಾಣಗಳ ಕಾಲಕ್ಕೊಯ್ಯುವ ಕೆಲಸ ನಡೆಸಿದ್ದರು. ಅದು ಪ್ರದರ್ಶನಗಳ ಮೂರನೇ ನಾಟಕ – ಒರೆಸ್ತಿಸ್ ಪುರಾಣ, ಅದರ ತಾಲೀಮು ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಅದನ್ನು ಹೇಗೂ ಮರುದಿನ ಯುಕ್ತ ಆವರಣ, ವೇಷ, ರಂಗು, ಹಿಮ್ಮೇಳ ಸಹಿತ ನೋಡಲಿದ್ದುದರಿಂದ ಹಾಗೇ ಬಿಟ್ಟು, ಹಿತ್ತಿಲಿನ ಸಣ್ಣ ಬಾಣೆಯತ್ತ ನಡೆದೆ.

ಯಾರದೋ ಮನೆಯಿಂದ ಕಡಿದು ತಂದ ನಾಲ್ಕೆಂಟು ಹಳದಿ ಬಿದಿರನ್ನು ಅಲ್ಲೆರಡು ಯುವ ಬಳಗ ಏನೋ ಅಲಂಕಾರಕ್ಕೆ ಹದಗೊಳಿಸುತ್ತಿದ್ದರು. ಒಂದೆರಡು ವಸತಿ ಸೌಕರ್ಯಗಳು, ತಗ್ಗುಮಾಡಿನ ಆಪ್ತ ರಂಗಭೂಮಿಯಂಥ ಒಂದು ಕಟ್ಟಡ, ಒರಟು ಮರದ ಬೊಡ್ಡೆಗಳನ್ನೇ ವ್ಯವಸ್ಥಿತವಾಗಿ ಹಾಕಿ ಮರಗಳ ನೆರಳಿನಲ್ಲಿ ಬಯಲು ತರಗತಿ ಸಜ್ಜುಗೊಳಿಸಿದ್ದೆಲ್ಲ ವಿರಾಮದಲ್ಲಿ ನೋಡುತ್ತಿದ್ದಂತೆ ಸಮಯ ಜಾರಿದ್ದು ತಿಳಿಯಲೇ ಇಲ್ಲ.

ದಾಖಲೀಕರಣದಲ್ಲಿ ರಂಗದ ಹಿಂದಿನ ಕಲಾಪಗಳೂ ತುಸು ಸೇರುವುದು ಅವಶ್ಯ. ಹಾಗೆಂದು ಒರೆಸ್ತಿಸ್ ತಾಲೀಮನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ ವಿಷ್ಣು, ಶಿವರಾಮ ಕಾರಂತ ರಂಗ ಮಂದಿರದಲ್ಲಿ ಕಲಾವಿದರು ಬಣ್ಣದ ಮನೆ ಸೇರಿದ್ದಾರೆಂದು ತಿಳಿದು ಅತ್ತ ಹೋದರು. ಸಂಜೆಯ `ಗುಣಮುಖ’ ಪ್ರದರ್ಶನದ ಸಮಯ ಹತ್ತಿರವಾಗುತ್ತಿದ್ದಂತೆ, ಪ್ರೇಕ್ಷಕವರ್ಗದ ಜನರೂ ಬರತೊಡಗಿದ್ದರು, ನಾವೂ ಶಿವರಾಮ ಕಾರಂತ ರಂಗಮಂದಿರ ಸೇರಿಕೊಂಡೆವು.

ಬಹಳ ವರ್ಷಗಳ ನಂತರ ಕೆ.ವಿ ಅಕ್ಷರರನ್ನು ಮತ್ತೆ ಮುಖತಃ ಕಂಡು ಮಾತಾಡಿಸಿದೆ. ಎರಡೂವರೆ ದಶಕದ ಹಿಂದೆ – ನಾನು ಮೊದಲ ಬಾರಿಗೆ ಹೆಗ್ಗೋಡಿಗೆ ಬಂದಾಗ, “ಅಕ್ಷರನ ಮಗು” ಎಂದೇ ಸುಬ್ಬಣ್ಣ ಪರಿಚಯಿಸಿದ್ದು ನೆನಪಿತ್ತು. ಈಗ ಆ ಮಗು – ಶಿಶಿರ, ಆಳೆತ್ತರಕ್ಕೆ ಬೆಳೆದು ತನ್ನನ್ನೇ ಪರಿಚಯಿಸಿಕೊಳ್ಳುವುದರೊಡನೆ, “ಇಂವ ನನ್ನ ಮಗ” ಎಂದು ಇನ್ನೊಂದೇ ಪುಟ್ಟಜೀವವನ್ನು ಪರಿಚಯಿಸುವಂತಾದ್ದು ನನಗೆ ವಿಶಿಷ್ಟ ಅನುಭವ!

ಟಿ.ಪಿ ಅಶೋಕ ಎದುರಾಗುತ್ತಿದ್ದಂತೆ ನನ್ನ ನೆನಪು ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದಕ್ಕಂತೂ (೧೯೯೩) ನಿಖರವಾಗಿ ಹೋಗುತ್ತದೆ. ಅಂದು, ನನ್ನ ತಂದೆಯ ಪುಸ್ತಕ – ಸವಾಲನ್ನು ಎದುರಿಸುವ ಛಲ, ಮೈಸೂರಿನ ಮುದ್ರಣ, ನನ್ನದೇ ಪ್ರಕಾಶನದಿಂದ ಹೊರಬೀಳುವುದಿತ್ತು. ಆ ಕಾಲದಲ್ಲೇ ವಸ್ತುನಿಷ್ಠ ಪುಸ್ತಕ ಸಮೀಕ್ಷೆಗೆ ಖ್ಯಾತರಾಗಿದ್ದ ಇದೇ ಅಶೋಕರನ್ನು ನಾನು ಕೇಳಿಕೊಂಡೆ. ಆ ವೇಳೆಗೆ ಅವರು ಪುತ್ತೂರಿನಲ್ಲಿ ತುರ್ತಾಗಿ ಮುದ್ರಣಗೊಳ್ಳುತ್ತಿದ್ದ ಯಾವುದೋ ಒಂದು ಪುಸ್ತಕದ ಕರಡು ತಿದ್ದುವ ಸಲುವಾಗಿಯೇ ಸಾಗರದಿಂದ ರಜೆಮಾಡಿ ಬಂದು, ಪುತ್ತೂರಿನಲ್ಲಿ ಮೊಕ್ಕಾಂ ಹೂಡಿದ್ದರು. ಅಶೋಕರು ಒಪ್ಪಿಗೆ ಸೂಚಿಸುವ ಜತೆಗೇ ಪುತ್ತೂರಿನ ಬಹುಖ್ಯಾತ ಕನ್ನಡ ಕಿಂಕರ ಬೋಳಂತಕೋಡಿ ಈಶ್ವರಭಟ್ಟರಿಗೆ ಸುದ್ದಿ ಮುಟ್ಟಿತು. ಅವರು ಕೂಡಲೇ “ಪುತ್ತೂರಿನ ಅಳಿಯನ (ಜಿಟಿನಾ) ಪುಸ್ತಕದ ಸಭೆ ಸಂಯೋಜಿಸುವ ಜವಾಬ್ದಾರಿ ನಮ್ಮ ಕರ್ನಾಟಕ ಸಂಘಕ್ಕಿರಲಿ” ಎಂದು ಒತ್ತಾಯಪೂರ್ವಕವಾಗಿಯೇ ವಹಿಸಿಕೊಂಡರು. ಹಾಗೆ ಆತ್ಮೀಯವಾದ ಟಿ.ಪಿ. ಅಶೋಕರ ಸಂಬಂಧ ವರ್ಷಕ್ಕೊಂದೆರಡು ಬಾರಿಯಾದರೂ ನವೀಕರಣಗೊಳ್ಳುತ್ತಲೇ ಇತ್ತು. ಅವರು ಮಂಗಳೂರಿಗೆ ಯಾವ್ಯಾವುದೋ ಸಾಹಿತ್ಯಕ ಕಾರಣಗಳಲ್ಲಿ ಬಂದಷ್ಟು ಸಲವೂ ನನ್ನಂಗಡಿಗೆ ಭೇಟಿ ಕೊಡುತ್ತಿದ್ದರು, ಸಾಕಷ್ಟು ಸಮಯವನ್ನು ಕಪಾಟುಗಳ ಸಂಗದಲ್ಲಿ ಕಳೆದು, ಕೊನೆಗೆ ಒಂದಷ್ಟು ಪುಸ್ತಕವನ್ನು ಸ್ವಂತಕ್ಕೂ ತಮ್ಮ ಕಾಲೇಜಿಗೂ – ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜು, ಸಾಗರ, ನಗದು ಕೊಟ್ಟೇ ಒಯ್ಯುತ್ತಿದ್ದರು. ಮಿತ ಮಾತುಗಳ ಅವರ ಆತ್ಮೀಯತೆಯ ಚಂದ, ಈಗ `ಗುಣಮುಖ’ದ ನೆಪದಲ್ಲಿ ನನಗೆ ಮತ್ತೆ ಒದಗಿತ್ತು.

`ಗುಣಮುಖ’ ನಾಟಕದ ನಿರ್ದೇಶಕ ಮಂಜು ಕೊಡಗು ಹೊಸ ಹೆರಿಗೆಯನ್ನು ಸಾರ್ವಜನಿಕಕ್ಕೊಪ್ಪಿಸುವ ಸಂಭ್ರಮದಲ್ಲಿದ್ದರು. ತಾರ್ತೂಫಿನ ನಿರ್ದೇಶಕ ಗಣೇಶ್ ಹಾಗೂ ಒರೆಸ್ತಿಸ್ ಪುರಾಣದ ನಿರ್ದೇಶಕ ವೆಂಕಟರಮಣ ಐತಾಳರು ನಮ್ಮದೇನಿದ್ದರೂ ನಾಳೆ ಎನ್ನುವ ನಿಶ್ಚಿಂತ ಭಾವದಲ್ಲಿದ್ದರು. ಯಾವ ಔಪಚಾರಿಕತೆಗಳು, ಅಂದರೆ ಬತ್ತಿ ಹಚ್ಚಿ ಎಣ್ಣೆ ಸುಡುವುದು, “ಅವರೆ…ಅವರೆ” ಜಗಿಯುತ್ತಾ ಎರಡೆಂದೇ ತೊಡಗಿ ಇಪ್ಪತ್ತೆರಡಾದರೂ ಹಳಿಗೆ ಬಾರದ ಮಾತುಗಳು, ಹಾರ ತುರಾಯಿಗಳು ಇತ್ಯಾದಿ, ಇಲ್ಲದೆ ನಿಗದಿತ ಸಮಯದಲ್ಲಿ ಮೂರನೇ ಗಂಟಾವಾದನಕ್ಕೆ ನಾಟಕ ಪ್ರಾರಂಭವಾಯ್ತು.

ಪಿ. ಲಂಕೇಶರ ಗುಣಮುಖ ನಾಟಕದ ಪ್ರದರ್ಶನವನ್ನು ನಾನು ಹಿಂದೆ ರಂಗಾಯಣದ ತಿರುಗಾಟದ ತಂಡ ಮಂಗಳೂರಿಗೇ ಬಂದು ಕೊಟ್ಟದ್ದನ್ನು ನೋಡಿದ್ದೆ. ಇಲ್ಲಿ ಮಂಜು ಕೊಡಗು ಅವರ ನಿರ್ದೇಶನದಲ್ಲಿ ಮತ್ತದು ನನ್ನನ್ನು ದಟ್ಟವಾಗಿ ಪ್ರಭಾವಿಸಿತು. ಅಸುರೀಬಲದ ಆಕ್ರಮಣಕಾರೀ ಅರಸ, ಒಂದೆಡೆ ತನ್ನ ಕ್ರೌರ್ಯಲೀಲೆ ಅನಾವರಣಗೊಳಿಸುತ್ತಿದ್ದಂತೆ, ಇನ್ನೊಂದೆಡೆ ತನ್ನ ಆರೋಗ್ಯವನ್ನು ಹರಿದು ಮುಕ್ಕುತ್ತಿದ್ದ ಪತ್ತೆಯರಿಯದ ಖಾಯಿಲೆಯಲ್ಲಿ ನರಳುತ್ತ ಹೋಗುತ್ತಾನೆ. ಕೇವಲ ಭೌತಿಕ ರಾಜ್ಯ ವಿಸ್ತರಣೆಯಲ್ಲಿದ್ದವನು ಅನಿವಾರ್ಯತೆಯಲ್ಲಿ ಮನೋರಾಜ್ಯಕ್ಕೆ ಪ್ರವೇಶ ಪಡೆದಾಗ ಎರಡೂ ವಿಪರೀತಗಳಿಂದ `ಗುಣಮುಖ’ನಾಗುತ್ತಾನೆ. ಅದರ ರಂಗಪ್ರಸ್ತುತಿ ಅಂದೂ ಮಾರಣೆಯ ದಿನದ ಮೊದಲ ನಾಟಕವಾಗಿ ಮತ್ತೊಮ್ಮೆಯೂ ತುಂಬ ಚೆನ್ನಾಗಿಯೇ ಬಂತು. ಮೊದಲೇ ಹೇಳಿದಂತೆ ಮೂರೂ ನಾಟಕಗಳ ಆಶಯ, ತಯಾರಿ ಮತ್ತು ಪೂರ್ಣ ಮಟ್ಟದ ಪ್ರದರ್ಶನವನ್ನು ಸಂಚಿ ಟ್ರಸ್ಟ್ ಮತ್ತು ನೀನಾಸಂ ಸಾರ್ವಜನಿಕರಿಗೆ ಅಂತರ್ಜಾಲದಲ್ಲಿ ಮುಕ್ತವಾಗಿ ದೊರಕುವಂತೆ ಮಾಡಲಿದೆ. ಹಾಗಾಗಿ ಹೆಚ್ಚಿನ ನನ್ನ ವಿಮರ್ಶಾ-ಪರಿಚಯದ ಅಗತ್ಯವಿಲ್ಲ.

ನೀನಾಸಂನ ಸಂಸ್ಕೃತಿ ಶಿಬಿರದ ವೈಶಿಷ್ಟ್ಯವಿರುವುದೇ ಅಲ್ಲಿನ ವೈಚಾರಿಕ ವಾತಾವರಣದಲ್ಲಿ. ಇತರೆಡೆಗಳಲ್ಲಿ, ಅಂದರೆ ಕನ್ನಡ ಸಾಹಿತ್ಯ ಸಮ್ಮೇಳನದಿಂದ ತೊಡಗಿ ಯಾವುದೇ ಸಾಹಿತ್ಯಕ ಅಥವಾ ಕಲಾ ಗೋಷ್ಠಿಗಳಲ್ಲಿ ಬಹುತೇಕ ಈ `ರುಚಿ’ ಪೂರ್ಣ ಕಳೆದುಹೋಗಿರುವುದನ್ನು ನಾನು ಉಲ್ಲೇಖಿಸದಿರಲಾರೆ! ನಾಟಕ ಮುಗಿದ ಮೇಲೆ `ಆಹಾರ್ಯ’ದತ್ತ ನಡೆಯುವಲ್ಲಿ, ಬಣ್ಣ ಬಿಚ್ಚಿ ಬಂದ ಕಲಾವಿದರೊಡನೇ ಊಟ ಮಾಡುವಲ್ಲಿ ಅದು ಮತ್ತೆ ಸ್ಪಷ್ಟವಾಯ್ತು. ಇಲ್ಲಿ ಉದ್ದಿಷ್ಟ ಕಲಾಪಕ್ಕೆ ಹೊರತಾಗಿ ಇನ್ನೊಂದು ಆಸಕ್ತಿಗೆ ಅವಕಾಶವೇ ಇಲ್ಲ. ಹಾಗೆಂದು ಇಲ್ಲಿ ಅನ್ಯ ವಿಚಾರಗಳು, ಮಾತುಗಳಿಗೆ ಯಾವ ನಿರ್ಬಂಧವೂ ಇಲ್ಲ. ಆದರೆ ಸ್ವಪ್ರಚಾರ, ಸಾಧನಾ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಸಾಕ್ಷ್ಯ (ಸರ್ಪಿಟಿಕೇಟ್!), ಪರೋಕ್ಷ ಲಾಭಗಳ ಲಕ್ಷ್ಯಕ್ಕೆಲ್ಲ ಇಲ್ಲಿ ಸೊಪ್ಪು ಹಾಕುವವರೇ ಇಲ್ಲ. ಉಚಿತ ರಜೆ, ಆರ್ಥಿಕ ಸವಲತ್ತು ಮತ್ತು ಸೇವಾದಾಖಲೆಗಳಲ್ಲಿ ಸಿಗುವ ಗುಣಾಂಕಗಳನ್ನು ಉದ್ದೇಶಿಸಿ ಸಮ್ಮೇಳನಗಳಿಗೆ ಹೋಗುವ ಬಹುತೇಕ ಮಂದಿ ಅಧಿಕೃತ ಕಲಾಪಗಳಿಗೂ ಮಿಕ್ಕು ಊರು ತಿರುಗುವುದು, ಸಾಹಿತಿ-ರಾಜಕಾರಣಿಗಳ ಚೇಲಾಗಿರಿಯಲ್ಲಿ ವೇಳೆ ಕಳೆಯುವುದು ಯಾರಿಗೆ ತಿಳಿದಿಲ್ಲ!

ಅಭಯಾದಿಗಳಿಗೆ ಹಿಂದಿನ ರಾತ್ರಿಯ ನಿದ್ದೆಗೇಡಿತನದೊಡನೆ ದಿನವಿಡೀ ಮರುದಿನಕ್ಕೆ ಸಜ್ಜುಗೊಳ್ಳುವ ಶ್ರಮ ಸೇರಿತ್ತು. ನಮಗೋ ಪ್ರಯಾಣದ ಬಳಲಿಕೆ. ಆದರೂ ಮಲಗಿ ನಿದ್ರೆ ಆವರಿಸುವವರೆಗೂ ಬಹುಶಃ ಎಲ್ಲರಿಗು ಸುಂದರ ಪಲ್ಲವಿಯಂತೆ ಮರುಕಳಿಸುತ್ತಿದ್ದದ್ದು ನೀನಾಸಂ, ನೀನಾಸಂ.

ಎರಡನೇ ತಾರೀಕಿನಂದು ಯೋಜನೆಯಂತೇ ಮೂರು ನಾಟಕಗಳ ಪ್ರದರ್ಶನ. ವಿಶ್ರಾಂತಿ ಮತ್ತು ರಂಗಸಜ್ಜಿಕೆಗಳ ಬದಲಾವಣೆಗೆ ಸಮಯ ಹೊಂದಿಸಲು, ಊಟ ತಿಂಡಿಗಳ ಸಮಯವನ್ನೂ ತುಸು ಬದಲಿಸಿದ್ದರು. ನಾವು ಅಭ್ಯಾಸದಂತೆ ಬೇಗ ಎದ್ದದ್ದಕ್ಕೆ, ಹೆಗ್ಗೋಡಿನ ಮೂರೂಮುಕ್ಕಾಲು ಅಂಗಡಿಗಳ ಪೇಟೆಗಾಗಿ ಒಂದು ಸಣ್ಣ ಸುತ್ತು ಹಾಕಿದೆವು. ಹಾಗೇ ಅಲ್ಲಿನ ಗೂಡು ಹೋಟೆಲಿನಲ್ಲಿ ತಿಂಡಿ ಶಾಸ್ತ್ರ ಮುಗಿಸಿಯೇ ಸಜ್ಜಾದೆವು. ಬೆಂಗಳೂರಿನ ರಾತ್ರಿ ಬಸ್ ಮಾಮೂಲಿನಂತೆ ಏಳು ಗಂಟೆಯ ಸುಮಾರಿಗೆ ಬಂತು. ಅದರಲ್ಲಿ ಇಸ್ಮಾಯಿಲ್, ಓಂಶಿವಪ್ರಕಾಶ್, ಅವರ ಹೆಂಡತಿ – ಪವಿತ್ರ, ಸಂಚಿ ಟ್ರಸ್ಟಿನ ಭಾಗವಾಗಿಯೇ ಬಂದರು. ಜತೆಗೆ ಅಂತರ್ಜಾಲದ ಮುಖೇನ ಉಚಿತ ಜ್ಞಾನವಿಸ್ತರಣೆಯನ್ನು ಹಮ್ಮಿಕೊಂಡ ಸಂಸ್ಥೆಯ (ಸಿಐಎಸ್) ಪ್ರಾದೇಶಿಕ ಪ್ರತಿನಿಧಿಯಾದ ತನ್ವೀರ್ ಹಸನ್, ಹೆಚ್ಚುವರಿ ಕ್ಯಾಮರಾಗಳೊಡನೆ ಲಕ್ಷಣ್ ನಾಯಕ್, ಸೋಮನಾಥ ಮತ್ತು ಕ್ಯಾಮರಾ ಸಹಾಯಕನಾಗಿ ಅವಿನಾಶ್ ಇನ್ನಷ್ಟು ಸಲಕರಣೆಗಳೊಡನೆ ಬಂದರು.

ಬೆಳಿಗ್ಗೆ ಎಂಟೂವರೆಯ ಸುಮಾರಿಗೆ ನಾಟಕ ಪ್ರದರ್ಶನ ಶುರುವಾಯ್ತು. ಇವು ದಾಖಲೀಕರಣದ ವಿಶೇಷ ಪ್ರದರ್ಶನವಾದ್ದರಿಂದ ಗಮನಿಸಬೇಕಾದ ಸಣ್ಣ ಒಂದೆರಡು ವಿಚಾರಗಳು. ಪ್ರದರ್ಶನಗಳೇನೋ ನಿತ್ಯದ ರಂಗಮಂದಿರದಲ್ಲೇ ವೇದಿಕೆಯಲ್ಲೇ ಎಂದಿನಂತೇ ನಡೆಯಿತು. ಸಭಾಂಗಣ ಮಾತ್ರ ಖಾಲಿ. ಅಲ್ಲಿ ನಡು ಓಣಿಯ ಸುಮಾರು ಮಧ್ಯಂತರದಲ್ಲಿ ಅಗತ್ಯಕ್ಕೆ ಒಂದೆರಡು ಕುರ್ಚಿಗಳನ್ನು ನಿವಾರಿಸಿಯೇ ಮೂರು ಕ್ಯಾಮರಾಗಳು ನಿರ್ದೇಶಕನ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಂಡಿದ್ದುವು. ನೇರ ಬೆಂಗಾವಲಿಗೆ ವಿಷ್ಣು, ಲಕ್ಷ್ಮಣ್ ಮತ್ತು ಸೋಮನಾಥ ನಿಂತರೆ ಎಲ್ಲರಿಗು ಸಹಾಯಕನಾಗಿ ಅವಿನಾಶ್ ಒದಗಲಿದ್ದರು. ಸಾಮಾನ್ಯವಾಗಿ ನೇಪಥ್ಯದಲ್ಲೋ ಎದುರಿನ ಬಾವಿಯಲ್ಲೋ ಹುಗಿದು ಹೋಗುವ ಹಿಮ್ಮೇಳ ಶುದ್ಧ ಧ್ವನಿಗ್ರಹಣಕ್ಕಾಗಿ, ಕ್ಯಾಮರಾವಲಯ ತಪ್ಪಿಸಿ ಪ್ರೇಕ್ಷಾಂಗಣದಲ್ಲೇ ಬೀಡುಬಿಟ್ಟಿತ್ತು. ಸಹಜವಾಗಿ ಅದರೊಡನೆ ಶಬ್ದಗ್ರಹಣದ ಮುಖ್ಯಸ್ಥನಾಗಿ ಜೆಮಿ ತಮ್ಮ `ಸಂಸಾರ’ ಹರಡಿಕೊಂಡು ನೆಲೆಸಿದ್ದರು.

ಇವರಿಗೆ ಸಹಾಯಕನಾಗಿ, ಧ್ವನಿಗ್ರಹಣದಲ್ಲೇ ವಿಶೇಷ ಪರಿಣತಿ ಗಳಿಸಿದ್ದ ಶಿಶಿರ ಖುದ್ದು ನಿಂತಿದ್ದರು. ಶಿಶಿರ ಒಟ್ಟಾರೆ ನಾಟಕ ಹಾಗೂ ಚಿತ್ರಗಳ ಸಮನ್ವಯಕಾರನಾಗಿಯೂ ಸಹಕರಿಸಿದ್ದರು. ಪ್ರೇಕ್ಷಾಂಗಣದ ಮೈಕ್ ಹಾಗೂ ಪಾತ್ರಧಾರಿಗಳಿಗೆ ಮರುಕೇಳಿಕೆಯ ಸೌಕರ್ಯಗಳನ್ನು ನಿವಾರಿಸಿದ್ದರು. ಧ್ವನಿಗ್ರಹಣದವರ ಮೂಲೆಯಲ್ಲೇ ಸಂಕಲನಕಾರ ಪ್ರಶಾಂತ್ ಕೂಡಾ ಗಣಕ ಸ್ಥಾಪಿಸಿ ಕಾರ್ಯನಡೆಸಿದ್ದರು. ದಾಖಲೀಕರಣದ ನಿರ್ದೇಶಕ ಅಭಯ, ಕ್ಯಾಮರಾ ಹಿಡಿದವರಿಗೂ ಹಿಂದೆ ಇದ್ದುಕೊಂಡು “ಸೈಲೆನ್ಸ್, ರೋಲಿಂಗ್, ‍ಯಾಕ್ಷನ್, ಕಟ್” ಹೇಳುತ್ತಿದ್ದ, ಕ್ಯಾಮರಾಗಳ ಪ್ರಗತಿಯಲ್ಲಿ ಕೆಲವೊಮ್ಮೆ ಸೂಚನೆಗಳನ್ನು ಪಿಸುಗುಡುತ್ತಿದ್ದ. ಪ್ರೇಕ್ಷಾಂಗಣ ಪೂರ್ಣ ಕತ್ತಲಿರುವುದು, ನಿಶ್ಶಬ್ದವಿರುವುದು ಮತ್ತು ಕ್ಯಾಮರಾ ವಲಯದಲ್ಲಿ ರಂಗೇತರ ವ್ಯಕ್ತಿ/ಚಟುವಟಿಕೆ ಏನೂ ಕಾಣದಿರುವುದು ದಾಖಲೀಕರಣದ ಪ್ರಾಥಮಿಕ ಆವಶ್ಯಕತೆಗಳು. ನಾಟಕದ ದೀಪ ವ್ಯವಸ್ಥೆಯಲ್ಲಿ ಅಥವಾ ಒಟ್ಟಾರೆ ಪ್ರದರ್ಶನದಲ್ಲಿ ಚಿತ್ರೀಕರಣದವರ ಹಸ್ತಕ್ಷೇಪವೇನೂ ಇರಲಿಲ್ಲ. ನಾಟಕ ವಿಡಿಯೋ ದಾಖಲೆಯಲ್ಲಿ ಸಿಕ್ಕರೂ ಸಹಜ ಓಟದಲ್ಲಿ, ಅಪ್ಪಟ ನಾಟಕವಾಗಿಯೇ ದಾಖಲಾಗುವ ಎಚ್ಚರ ಉಳಿಸಿಕೊಂಡಿದ್ದರು. ಹಾಗಾಗಿ ದಿನಪೂರ್ತಿ, ಅಲ್ಲ ಸುಮಾರು ಹತ್ತೊಂಬತ್ತು ಗಂಟೆಗಳ ಉದ್ದಕ್ಕೆ ನಡೆದ ನಾಟಕ ಮತ್ತು ಪೂರಕ ಕಲಾಪಗಳು, ನಿರ್ದೇಶಕ ಹಾಗೂ ದಾಖಲೀಕರಣದ ನಿರ್ದೇಶಕರ ಮಿತಿ ಮತ್ತು ಜವಾಬ್ದಾರಿಗಳ ಸಮತೋಲನವಾಗಿತ್ತು. ಇದನ್ನು ತಿಳಿದುಕೊಳ್ಳುವ ಸಂತೋಷದಲ್ಲಿ, ಏನೂ ಕೆಲಸವಿಲ್ಲದ ಪ್ರೇಕ್ಷಕರಾಗಿದ್ದ ನಮ್ಮಂಥ ಕೆಲವೇ ಜನರಿಗೂ ಒಟ್ಟು ಕಲಾಪ ಮಧುರ ಅನುಭವವೇ ಆಯ್ತು.

ಮೊದಲ ನಾಟಕ ಹಿಂದಿನ ದಿನ ಪ್ರದರ್ಶನವಾದ ಗುಣಮುಖವೇ. ಅದು ಸಹಜ ಓಟದಲ್ಲಿ ಮತ್ತು ಸಂಭ್ರಮದಲ್ಲೇ ಮುಗಿದಿತ್ತು. ಎರಡನೇ ನಾಟಕ – ತಾರ್ತೂಫ್, ಮತ್ತದೇ ಕಲಾವಿದರು ಆಡಬೇಕಿತ್ತು.

ರಂಗಸಜ್ಜಿಕೆ ಪೂರ್ಣ ಭಿನ್ನ ಮತ್ತು ತುಸು ಜಟಿಲವಾದದ್ದೇ ಇತ್ತು. ಬೆಳಗ್ಗಿನ ಉಪಾಹಾರ, ವಿಶ್ರಾಂತಿಗಳೊಡನೆ ರಂಗಸಜ್ಜಿಕೆಯನ್ನೂ ನಟರೇ ಮಾಡಿ ಪ್ರದರ್ಶನಕ್ಕಿಳಿಯಬೇಕಿತ್ತು. ಹಾಗಾಗಿ ಸುಮಾರು ಎರಡು ಗಂಟೆಗಳ ಬಿಡುವು ಕೊಡಲಾಗಿತ್ತು. ವಾಸ್ತವದ ತಿರುಗಾಟದಲ್ಲಿ ದಿನಕ್ಕೊಂದೇ ನಾಟಕ ಮತ್ತದೂ ತಡ ಸಂಜೆಗೆ ಬರುತ್ತಿರುತ್ತದೆ. ಹಾಗಾಗಿ ನಾಟಕದಿಂದ ನಾಟಕಕ್ಕೆ ನಟರು ಹಗಲಿಡೀ ಬಳಸಿಕೊಂಡು ವಿರಾಮದಲ್ಲಿ ರಂಗಸಜ್ಜಿಕೆ ಬದಲಿಸಿಕೊಳ್ಳುತ್ತಾರೆ. ಹೀಗಾಗಿ ಸಜ್ಜಿಕೆಗೆ ಸ್ಪಷ್ಟ ಕಾಲಮಿತಿಯ ಅಂದಾಜು ಯಾರಿಗೂ ಇದ್ದಂತಿರಲಿಲ್ಲ. ಅದರಿಂದ ವಿಶ್ರಾಂತಿ ತುಸು ಹೆಚ್ಚಿ, ಸಜ್ಜಿಕೆ ಕಾಲ ಹಿಡಿತಕ್ಕೆ ಸಿಗದೆ, ತಾರ್ತೂಫ್ ಪ್ರದರ್ಶನ ನಿಗದಿತ ವೇಳೆಗೂ ಮೂರು ಗಂಟೆ ತಡವಾಗಿ ಆರಂಭವಾಯ್ತು.

ಮತ್ತೆ ಮೊದಲೇ ಹೇಳಿದಂತೆ ತಿಂಗಳ ಹಿಂದೆಯೇ ಇದರ ತಾಲೀಮು ನಿಲ್ಲಿಸಿದ್ದರು. ಅಧಿಕೃತ ಪ್ರದರ್ಶನಕ್ಕೆ (೯-೧೦-೧೫) ನಾಲ್ಕೈದು ದಿನ ಮೊದಲು ಒಂದೆರಡು ತಾಲೀಮು ನಡೆಸಿದರೆ ಸಾಕು ಎನ್ನುವ ಅಂದಾಜಿತ್ತು. ಆ ಯೋಜನೆಯಂತೇ ಗುಣಮುಖದ ತಾಲೀಮೇ ನಡೆದು ಬಂದಿದ್ದುದರಿಂದ, ಈ ಪ್ರದರ್ಶನಕ್ಕೆ ಮುನ್ನ ತಾರ್ತೂಫ್‍ನ ಒಂದು ಓದು ಕೊಟ್ಟುಕೊಳ್ಳುವುದಕ್ಕೂ ತಂಡಕ್ಕೆ ಆಗಲೇ ಇಲ್ಲ.

ಸಹಜವಾಗಿ ಪ್ರದರ್ಶನದಲ್ಲಿ ನಟರಿಗೆ ಮಾತು ನಾಲ್ಕೈದು ಕಡೆ ಕೈ ಕೊಟ್ಟಿತು. ದಾಖಲೀಕರಣಕ್ಕೆ ಇದು ಭಾರೀ ಎಡವಟ್ಟೇನೂ ಅಲ್ಲ. ಇದಕ್ಕೆ ನಾಟಕದವರು ಪಟ್ಟಷ್ಟು ಮುಜುಗರ ಸಿನಿಮಾದವರು ಖಂಡಿತಾ ಪಡಲಿಲ್ಲ! ಆದರೆ ಹಾಗೆ ನಿಂತಾಗೆಲ್ಲ ಹತ್ತಿಪ್ಪತ್ತು ಮಿನಿಟಿನಂತೆ ಪ್ರದರ್ಶನಾವಧಿ ಲಂಬಿಸುತ್ತ ಹೋಗಿ, ದಿನದ ಕಲಾಪವನ್ನೇ ಪ್ರಭಾವಿಸಿಬಿಟ್ಟಿತು!

ಫೆಂಚ್ ಮೂಲದಲ್ಲಿ ಮೊಲಿಯೇರ್ ಬರೆದ, ಒಂದು ಮಧ್ಯಮವರ್ಗ ಕುಟುಂಬದ, ಅಷ್ಟೇನೂ ವಿಶಿಷ್ಟವಲ್ಲದ ಕಥನವಿರುವ ನಾಟಕ – ತಾರ್ತೂಫ್. ತಮಾಷೆ ಎಂದರೆ ಈ ವೈಶಿಷ್ಟ್ಯರಾಹಿತ್ಯವನ್ನೇ ಸಾರ್ವಕಾಲಿಕ ಸತ್ಯವಾಗಿ ಹಿಡಿದಿಟ್ಟದ್ದಕ್ಕೇ ಈ ನಾಟಕ ದೇಶ ಕಾಲ ಮೀರಿ ಜನಪ್ರಿಯವೂ ಆಗಿದೆ. ಎ.ಎನ್. ಮೂರ್ತಿರಾಯರು ಬಹಳ ಹಿಂದೆಯೇ `ಆಷಾಢಭೂತಿ’ ಹೆಸರಿನಲ್ಲಿ ಕನ್ನಡ ರೂಪಾಂತರಿಸಿದ, ಅಷ್ಟೇ ಹಿಂದೆ `ಸುಬ್ಬಾ ಶಾಸ್ತ್ರಿ’ ಎಂಬ ಹೆಸರಿನಲ್ಲಿ ಕನ್ನಡ ಸಿನಿಮಾ ಕೂಡಾ ಆಗಿ ಬಂದ ತಾರ್ತೂಫ್ ಇಲ್ಲಿ ಗಣೇಶ್ ಎಂ ಇವರ ನಿರ್ದೇಶನದಲ್ಲಿ ಮನೋರಂಜಕ ಮತ್ತು ಲವಲವಿಕೆಯ ನಾಟಕವಾಗಿಯೇ ಮೂಡಿದೆ.

ಮೂರನೇ ನಾಟಕ – ಒರೆಸ್ತಿಸ್ ಪುರಾಣ, ಸಂಜೆ ಆರು ಗಂಟೆಗೆ ಪ್ರದರ್ಶನ ಶುರುವಾಗಬೇಕಾದ್ದು ಸುಮಾರು ಐದು ಗಂಟೆ ವಿಳಂಬಿತವಾಗಿ ತೊಡಗಿತು. (ಇದರ ಅರೆಬರೆ ತಾಲೀಮನ್ನು ನಾನು ಹಿಂದಿನ ಸಂಜೆ ನೋಡಿದ್ದನ್ನು ಆಗಲೇ ಹೇಳಿದ್ದೇನೆ.) ಇದು ಪೂರ್ಣ ರಂಗವಿಸ್ತಾರವನ್ನೂ ಬಹು ಸಂಖ್ಯೆಯ ಕಲಾವಿದರನ್ನೂ ಬಳಸಿಕೊಂಡಿತ್ತು.

ಪ್ರದರ್ಶನದಲ್ಲಿ ರಂಗ ಸಾಮಗ್ರಿ ಮಿತವಾಗಿದ್ದರೂ ಬೆಳಕಿನ ವಿನ್ಯಾಸ ತುಂಬ ಜಟಿಲವಾಗಿತ್ತು. ಅದನ್ನು ನಿರ್ವಹಿಸುವ ಜವಾಬ್ದಾರಿ ಆಗಲೇ ಎರಡು ಪ್ರದರ್ಶನಗಳಲ್ಲಿ ಬಳಲಿದ ತಿರುಗಾಟದ ಕಲಾವಿದರದೇ ಇತ್ತು! ಒಂದೊಂದೂ ದೀಪದ ಬಣ್ಣ, ಕೋನ ಮತ್ತು ವಲಯದೊಳಗಿನ ಸ್ಥಾನವೆಲ್ಲ ಕಾಗದದಲ್ಲೂ ಕಾರ್ಯರೂಪಕ್ಕೆ ತರುವ ಕಲಾವಿದರ ತಿಳಿವಿನಲ್ಲೂ ಸ್ಪಷ್ಟವಾಗಿಯೇ ಇದ್ದುವು. ಆದರೆ ಅದಕ್ಕೆ ತಗಲುವ ಶ್ರಮ ತನ್ನದೇ ವೇಳಾಪಟ್ಟಿಯನ್ನು ಹೇರಿತ್ತು.

ಈ ಬಿಡು ಹೊತ್ತಿನಲ್ಲಿ ನಾನು ರಂಗದ ಹಿಂದೆಲ್ಲಾ ಅಡ್ಡಾಡಿದೆ. ಪ್ರೇಕ್ಷಾಂಗಣದ ಹಿಂದೆ ಮೇಲಿದ್ದ ಬೆಳಕು ನಿಯಂತ್ರಣ (ಅಥವಾ ಹಳೆಗಾಲದ ಸಿನಿಮಾ ಕಲಾಪವಾದರೆ ಚಿತ್ರ-ಪ್ರೇಷಕ ಕೊಠಡಿ – ಪ್ರೊಜೆಕ್ಷನ್ ರೂಂ) ಗೂಡನ್ನೂ ನೋಡಿದೆ. ಪುಣೆಯಲ್ಲಿ ಅಭಯ ಕಲಿಯುತ್ತಿದ್ದಾಗ ಎಫ್ಟಿಐಐ ಕೊಡುತ್ತಿದ್ದ ಸ್ಟುಡಿಯೋ ಸೌಕರ್ಯಗಳೆಲ್ಲವನ್ನೂ ಈ ಗ್ರಾಮೀಣ ಮೂಲೆಯಲ್ಲಿ ಮೂರುನಾಲ್ಕು ದಶಕಗಳ ಹಿಂದೆಯೇ ಸ್ವಂತ ಬಲದಲ್ಲಿ, ಸರಳವಾಗಿ ಒದಗಿಸಿಕೊಂಡ ಖ್ಯಾತಿ ನೀನಾಸಂನದ್ದು. ಅಲ್ಲಿಗೇ ಅದನ್ನು ನಿಲ್ಲಬಿಡದೆ, ಕಾಲದ ಹರಿವಿನೊಡನೆ ಪರಿಷ್ಕರಿಸಿಕೊಳ್ಳುತ್ತಲೂ ಬಂದ ಕೆವಿ ಸುಬ್ಬಣ್ಣಾದಿಗಳ ಬುದ್ಧಿಶಕ್ತಿಯನ್ನು ಕೊಂಡಾಡಿದಷ್ಟೂ ಸಾಲದು. [ಅದರ ಎದುರು ಯಾವ ಸಂಕೀರ್ಣ ವ್ಯವಸ್ಥೆಗಳೂ ಇಲ್ಲದ, ಲಕ್ಷಾಂತರ ಬಾಡಿಗೆ ಹಾಗೂ ಅನುದಾನಾದಾಯಗಳಿರುವ ಮಂಗಳೂರು ಪುರಭವನದ ದುರವಸ್ಥೆಯನ್ನು ನೆನೆಸಿದರೆ ಮೈ ರೋಸಿಹೋಗುತ್ತದೆ]

ನಿಯಂತ್ರಣ ಗೂಡಿನೊಳಗೆ ನೂರೆಂಟು ಸ್ವಿಚ್ಚು, ನಿಯಂತ್ರಕ ಮತ್ತು ಪ್ಲಗ್ಗುಗಳನ್ನು ಹಾಕುವ, ತಿರುಪುವ, ಜೋಡಿಸುವ ಕೆಲಸಕ್ಕೆ ಇಬ್ಬರು ನಿರತರಾಗಿದ್ದರು. ದೀಪಗಳು ನೇರ ರಂಗದ ಮತ್ತು ಪ್ರೇಕ್ಷಾಂಗಣದ ಎರಡು ಭಿನ್ನ ಅಟ್ಟಗಳಲ್ಲಿದ್ದುವು. ರಂಗದಿಂದ ಬಂದ ಸೂಚನೆಗಳನ್ನು ಪಾಲಿಸಲು ಆ ಎತ್ತರದಲ್ಲಿ ಕೆಲವರು ಓಡಾಡುತ್ತಿದ್ದರು. ರಂಗದ ಅಭಿನಯ ವಲಯಗಳಲ್ಲಿ ಯೋಜನಾಸೂಚಿ ಕಾಗದ ಹಿಡಿದು ನಿಂತು, ನಿಯಂತ್ರಣ ಗೂಡಿಗೆ ಸ್ವಿಚ್ಚುಗಳ ಆದೇಶ ಕೊಡುತ್ತ, ಅಟ್ಟಗಳ ಮೇಲಿನವರಿಗೆ ಕೋನಗಳ ಸೂಚನೆ ದಾಟಿಸುತ್ತ ಓಡಾಡುವವರು ಇನ್ನು ಕೆಲವರು. ಅಗತ್ಯಕ್ಕೆ ತಕ್ಕಂತೆ ವಿವಿಧ ವರ್ಣಗಳ ಪಾರದರ್ಶಕ ಹಾಳೆಗಳನ್ನು ಕತ್ತರಿಸಿ, ಬಲ್ಬುಗಳ ಎದುರಿನ ಚೌಕಟ್ಟಿಗೆ ಹೊಂದಿಸಿಕೊಡುವವರ ಬಳಗ ಬೇರೊಂದು. ಕೇವಲ ಪ್ರದರ್ಶನಾವಧಿಗೆ ಸಾಕ್ಷಿ ಹಾಕುವ ಪ್ರೇಕ್ಷಕನ ಜವಾಬ್ದಾರಿಯನ್ನು ಹೆಚ್ಚಿಸುವಲ್ಲಿ ಈ ರಂಗಸಜ್ಜಿಕೆಯ ವೀಕ್ಷಣೆ ಬಹಳ ದೊಡ್ಡ ಪಾಠವಾಗಬಹುದು. ದಾಖಲೀಕರಣದಲ್ಲಂತೂ ಇದು ಅವಶ್ಯ ಸ್ಥಾನ ಪಡೆದಿದೆ.

ಒರೆಸ್ತಿಸ್ಸಿಗೆ ಪೌರಾಣಿಕ ಆಯಾಮವಿರುವುದರಿಂದ ನಿರ್ದೇಶಕರು ನಮ್ಮ ಸಂಸ್ಕಾರಕ್ಕೆ ಒಗ್ಗುವಂತೆ ಕೆಲವು ಜನಪದ ವಾದ್ಯಗಳ ಮೇಳವನ್ನೂ ಸಂಯೋಜಿಸಿದ್ದರು. ದಾಖಲೀಕರಣದಲ್ಲಿ ಅವುಗಳ ಸದ್ದನ್ನು ಯಂತ್ರಗ್ರಹಿಸುವಲ್ಲಿ ಸಮತೋಲನ ಸಾಧಿಸಲು ಕ್ಯಾಮರಾಗಳ ಪಕ್ಕದಲ್ಲೇ ಮತ್ತಷ್ಟು ಆಸನಗಳನ್ನು ತೆರವುಗೊಳಿಸಿ ಪ್ರತ್ಯೇಕ ಸ್ಥಳ ಮಾಡಿಕೊಂಡಿದ್ದರು. ಈ ನಾಟಕಕ್ಕೆ ಬಣ್ಣದ ಮನೆಯಲ್ಲೂ ಸಾಕಷ್ಟು ದೊಡ್ಡ ಬಳಗವೇ ಸಜ್ಜುಗೊಳ್ಳುತ್ತಿತ್ತು.

ಹೀಗೆ ತಾರ್ತೂಫ್ ರಂಗಸಜ್ಜಿಕೆಯನ್ನು ವ್ಯವಸ್ಥಿತವಾಗಿ ಕಳಚುವಲ್ಲಿಂದ ತೊಡಗಿ, ಒರೆಸ್ತಿಸ್ ಅಗತ್ಯಗಳನ್ನು ಪೂರೈಸಿ ಪ್ರದರ್ಶನಾರಂಭವಾಗುವಾಗ ರಾತ್ರಿ ಹನ್ನೊಂದು ಗಂಟೆಯೇ ಕಳೆದಿತ್ತು! ಪೂರ್ವಯೋಜನೆಯಂತೆ ಒಂಬತ್ತೂವರೆಯಂದಾಜಿಗೆ ಎಲ್ಲ ಮುಗಿದು, ದೊಡ್ಡ ತಾಂತ್ರಿಕ ಬಳಗ ಬೆಂಗಳೂರಿಗೆ ಮರಳುವುದೆಂದು ಮಾಡಿದ್ದ ನಿರ್ಧಾರ, ಅದಕ್ಕೆ ಸರಿಯಾಗಿ ಹನ್ನೊಂದು ಗಂಟೆಯ ಬಸ್ಸಿಗೆ ಮಾಡಿದ್ದ ರಿಸರ್ವೇಶನ್ ಮಾತ್ರ ವ್ಯರ್ಥವಾಯ್ತು.

ಒರೆಸ್ತಿಸ್ ನಾಟಕ ಪ್ರದರ್ಶನ ಯಾವ ಅಡೆತಡೆಗಳಿಲ್ಲದೆ ಮುಗಿಯುವಾಗ ಅಪರಾತ್ರಿ ಮೂರು ಗಂಟೆ ಕಳೆದಿತ್ತು. ಬೆಳಗ್ಗಿನಿಂದಲೂ ದಾಖಲೀಕರಣದ ಅವಧಿಯಲ್ಲಿ ನಾವು ನಾಲ್ಕೆಂಟು ಮಂದಿ ಮಾತ್ರ ಕ್ಯಾಮರಾಗಳಿಂದಲೂ ಹಿಂದಿನ ಆಸನಗಳಲ್ಲಿ ಶುದ್ಧ ಪ್ರೇಕ್ಷಕರಾಗಿ ಕುಳಿತಿರುತ್ತಿದ್ದೆವು. ದಾಖಲೀಕರಣದ ಅವಧಿಯಲ್ಲಿ ಸದ್ದಾಗುವ ಓಡಾಟ, ಆಕಸ್ಮಿಕವಾಗಬಹುದಾದ ಶೀನು ಕೆಮ್ಮು, ಚರವಾಣಿ, ಎಲ್ಲ ಬಿಟ್ಟು ಪರಸ್ಪರ ಪಿಸುಮಾತಿಗೂ ಅವಕಾಶವಿಲ್ಲದ ನಿರ್ಬಂಧ ನಮ್ಮ ಮೇಲಿತ್ತು. ಇದು ವೇಳೆ ಮೀರಿದ ಒರೆಸ್ತಿಸ್ ಪುರಾಣದ ಪ್ರದರ್ಶನ ಕಾಲದಲ್ಲಿ ನನ್ನನ್ನಂತೂ ತುಂಬಾ ಪ್ರಭಾವಿಸಿತು. ಸರಳವಾಗಿ ಹೇಳುವುದಾದರೆ, ನಾಟಕದ ಅಬ್ಬರದ ನಡುವೆಯೂ ಎಷ್ಟೋ ಸನ್ನಿವೇಶಗಳು ನನ್ನ ತೂಕಡಿಕೆಯಲ್ಲೇ ತೇಲಿಹೋದವು. ನಿರ್ದೇಶಕ ವೆಂಕಟ್ರಮಣ ಐತಾಳರು ಗ್ರೀಕ್ ಪುರಾಣದ ಮೂರು ನಾಟಕಗಳನ್ನು ಒಂದಾಗಿಸಿ ರಂಗ ವೈಭವವನ್ನೇ ಕಟ್ಟಿಕೊಟ್ಟಿದ್ದರು ಎಂದು ನಾನು ಕಂಡಷ್ಟೂ ದೃಶ್ಯಗಳು ಸಾರುತ್ತಿದ್ದುವು.

ಆದರೆ ಖಚಿತವಾಗಿ ಗ್ರಹಿಸಿ, ಪ್ರತಿಕ್ರಿಯಿಸುವಲ್ಲಿ ಸೋಲುವಂತಾಗಿರುವುದು ಕೇವಲ ನನ್ನ ಬಳಲಿಕೆಯ ಪರಿಣಾಮ ಎಂದು ತುಸು ಲಜ್ಜೆಯಿಂದಲೇ ಹೇಳಿಕೊಳ್ಳಬೇಕಾಗಿದೆ. ನೀನಾಸಂ ತನ್ನ ಕರಪತ್ರದಲ್ಲಿ ಈ ನಾಟಕದ ಕುರಿತಾಗಿ ಹೇಳಿದ ಮಾತುಗಳನ್ನೇ ಉದ್ಧರಿಸುತ್ತೇನೆ. “ನೆಲ ಮಣ್ಣಿನ ಸತ್ಯದ ಮೇಲೆ ಗಂಡು ದರ್ಪದ ನ್ಯಾಯವು ನೆಲೆಗೊಂಡ ಕತೆಯಾಗಿ ಒರೆಸ್ತಿಸ್ ಪುರಾಣದ ವಸ್ತು ಇತಿಹಾಸದಲ್ಲಿ ದಾಖಲಾಗಿದೆ.” ಅದೇ ಉಸಿರಿನಲ್ಲಿ ಹೇಳಿಬಿಡುತ್ತೇನೆ – ಈ ಪ್ರಯೋಗವನ್ನು ಹೆಚ್ಚು ವಿರಾಮದಲ್ಲಿ ಮತ್ತೊಮ್ಮೆ ನೋಡುವ ಭಾಗ್ಯ ನನಗೆ ಮಾತ್ರವಲ್ಲ ಯಾರಿಗೂ ಒದಗಲಿದೆ, ಪ್ರಸ್ತುತ ದಾಖಲೀಕರಣದಿಂದ! ಕೆಲಸದ ಒತ್ತಡ, ವಿಶ್ರಾಂತಿಯ ಕೊರತೆ, ತಿನಿಸು ಪಾನೀಯಗಳ ಅನಿವಾರ್ಯ ತಟವಟದಲ್ಲಿ ಕಾರ್ಯನಿರತರಿದ್ದವರಷ್ಟೇ ನಾವೂ ದೈಹಿಕವಾಗಿ ಬಳಲಿದ್ದೆವು. ಆದರೆ ಭಾವುಕರು ಹೇಳುವಂತೆ ಒಂದು ಮಹಾಯಜ್ಞವನ್ನು ಸಾಂಗವಾಗಿ ಪೂರೈಸಿದ ಧನ್ಯತೆ ಎಲ್ಲರ ಮನದಲ್ಲಿತ್ತು.

ಪ್ರದರ್ಶನ ಮುಗಿಯುತ್ತಿದ್ದಂತೆ ನಾವೇನೋ ಹೊಟ್ಟೆಪಾಡು ನೋಡಿಕೊಂಡು ಸುಲಭದಲ್ಲಿ ನಿದ್ರೆಗೆ ಜಾರಿದ್ದೆವು. ದಾಖಲೀಕರಣದ ಬಳಗ, ಮೊದಲು ರಾತ್ರಿ ಬಸ್ಸಿನಲ್ಲೇ ಹೋಗಬೇಕಿದ್ದ ಹೆಚ್ಚುವರಿ ತಂತ್ರಜ್ಞರು ಮತ್ತು ಸಲಕರಣೆಗಳನ್ನು ವಿಶೇಷ ಕಾರಿನಲ್ಲಿ ಬೆಂಗಳೂರು ದಾರಿ ಹಿಡಿಸಿತು. ಮತ್ತೆ ಒಂದು ಕ್ಯಾಮರಾದೊಡನೆ (ವಿಷ್ಣು) ಮರುದಿನ ನಡೆಸಬೇಕಿದ್ದ ಸಂದರ್ಶನದ ವೇಳಾಪಟ್ಟಿಯನ್ನು ಅಭಯ ಮತ್ತು ಇಸ್ಮಾಯಿಲ್, ನೀನಾಸಂ ಬಳಗದೊಡನೆ ಖಾತ್ರಿಪಡಿಸಿಕೊಂಡ ಮೇಲಷ್ಟೇ ಹಾಸಿಗೆ ಹೆಟ್ಟಿದರು!

(ಮುಂದುವರಿಯಲಿದೆ)

[ಹೊಸದಿನದ ಕತೆಯಲ್ಲಿ ದಾಖಲೀಕರಣದ ಇನ್ನೊಂದು ಹಂತ ನಡೆಯುವುದಿತ್ತು. ಆದರೆ ಮೊದಲೇ ಯೋಜಿಸಿದಂತೆ ರಶ್ಮಿಯನ್ನು ಸೇರಿಸಿಕೊಂಡ ನಾವು ಮೂವರು, ಮಂಗಳೂರಿನತ್ತ ಇನ್ನೊಂದೇ ದಾರಿಯಲ್ಲಿ ಮರುಪಯಣಿಸಿದೆವು. ಈ ಮಾರ್ಗಕ್ರಮಣದ ಕಥನವನ್ನು ಮಾಲಿಕೆಯ ಮೂರನೇ ಮತ್ತು ಅಂತಿಮ ಕಂತಾಗಿ ಶೀಘ್ರದಲ್ಲೇ ನಿರೀಕ್ಷಿಸಿ :)]