ಎ.ವಿ. ಗೋವಿಂದರಾವ್

[ಸಂಪಾದಕೀಯ: ಎರಡು ತಿಂಗಳ ಹಿಂದೆ ರವೀಂದ್ರ ಭಟ್ಟ ಮಾವಖಂಡ ಕರ್ನಾಟಕ ಸರ್ಕಾರ ಪ್ರಣೀತ `ಕಣಜ’ದ ಸೇತು ಕೊಟ್ಟು, “ಇಲ್ಲಿರುವ ಜಿಟಿನಾ (ನನ್ನ ತಂದೆ) ಹುಟ್ಟಿದ ದಿನಾಂಕ ತಪ್ಪಲ್ಲವೇ” ಎಂದು ವಿಚಾರಿಸಿದರು. “ಹೌದು” ಎನ್ನುವುದರೊಡನೆ ಆ ಟಿಪ್ಪಣಿಯಲ್ಲಿದ್ದ ಇನ್ನಷ್ಟು ತಪ್ಪುಗಳನ್ನು ಗುರುತಿಸಿ, ಒಪ್ಪೋಲೆ ತಯಾರಿಸಿ ಕಣಜಕ್ಕೇ ಪ್ರತಿಕ್ರಿಯಿಸಿದೆ. (ತಿದ್ದುಪಡಿ ಇಂದಿನವರೆಗೂ ಆಗಿಲ್ಲ 🙁 ಅದಂತಿರಲಿ.) ಹಾಗೆ ಆ ಲೇಖನ ಶುದ್ಧ ಮಾಡುವ ಜಾಲಾಟದಲ್ಲಿ ಒಂದಾನೊಂದು ಕಾಲದಲ್ಲಿ ತಂದೆಯ ಶಿಷ್ಯ (ಸಂಬಂಧಿಯೂ ಹೌದು), ಮುಂದೆ ಆತ್ಮೀಯ ಗೆಳೆಯನಾಗಿಯೂ ಒದಗಿದ ಎ.ವಿ. ಗೋವಿಂದ ರಾವ್ ಅವರ ಜಾಲತಾಣಕ್ಕೆ (ಎವಿಜಿ ವಿಚಾರಲಹರಿ) ಆಕಸ್ಮಿಕವಾಗಿ ಮರುಭೇಟಿ ಕೊಟ್ಟೆ. ಅಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ಎರಡು ಕಂತಿನಲ್ಲಿ ಗೋವಿಂದರಾಯರು ತಂದೆಯ ಬಗ್ಗೆ ಬರೆದ ಸ್ಮೃತಿ-ಟಿಪ್ಪಣಿಗಳನ್ನು ಮತ್ತೆ ಓದಿ ಸಂತಸಪಟ್ಟೆ. ಜತೆಗೆ ಅವರ ಜಾಲತಾಣದ ಸಂದರ್ಶಕ ಬಳಗಕ್ಕಿಂತಲೂ ಭಿನ್ನವಾದ ಮತ್ತು ತುಸು ಹೆಚ್ಚೂ ಇರುವ ನನ್ನ ಜಾಲತಾಣದಲ್ಲಿ ಯಾಕೆ ಮರುಪ್ರಕಟಿಸಬಾರದು ಎಂಬ ಯೋಚನೆ ಬಂತು, ಕೇಳಿದೆ, `ಗೋವಿಂದನ ದಯೆ ತಥಾಸ್ತು’ ಎಂದಿತು! ಎರಡು ದಿನ ಬಿಟ್ಟು ಮತ್ತೆ ನಾಲ್ಕು ಹೊಸ ನೆನಪಿನ ತುಣುಕುಗಳನ್ನೂ ನಾನು ಬಯಸಿದಂತೆ ಕೆಲವು ಹಳಗಾಲದ ಚಿತ್ರಗಳನ್ನೂ ಸೇರಿಸಿ ಗೋವಿಂದರಾಯರು ಕಳಿಸಿಕೊಟ್ಟರು. ಅಲ್ಲರಳಿದ ಅಲರುಗಳನ್ನು ಇಲ್ಲಿ ಸೂಡುವ ಸಂತೋಷ ನನ್ನದು. ಇನ್ನು ಆಘ್ರಾಣಿಸುವ ರಸಿಕರು – ನಿಮಗೆ, ಬಿಟ್ಟಿದ್ದೇನೆ – ಅಶೋಕವರ್ಧನ]

ಅದೇಕೋ ಗೊತ್ತಿಲ್ಲ. ಜೀವನ ಪಯಣದಲ್ಲಿ ನಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಪೈಕಿ ಕೆಲವರ ನೆನಪುಗಳು ಪದೇಪದೇ ಅಗುತ್ತಲೇ ಇರುತ್ತದೆ. ಅಂಥವರಲ್ಲಿ ಒಬ್ಬರು ಜಿ ಟಿ ಎನ್ ಎಂದೇ ಪರಿಚಿತರು ಉಲ್ಲೇಖಿಸುತ್ತಿದ್ದ ದಿವಂಗತ ಜಿ ಟಿ ನಾರಾಯಣ ರಾವ್. ಸಂಬಂಧದಲ್ಲಿ ಅವರು ನನಗೆ ಭಾವ. ಸ್ನಾತಕ ಪದವಿ ತರಗತಿಯಲ್ಲಿ ಗಣಿತದ ಉಪನ್ಯಾಸಕ. ನಾನು ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿದ್ದು ೧೯೭೦ ರಲ್ಲಿ. ೧೯೭೬ ರಲ್ಲಿ ಬರೆದ ‘ಶೈಕ್ಷಣಿಕ ಮನೋವಿಜ್ಞಾನ’ ಪುಸ್ತಕದ ಮೊದಲ ಅಧ್ಯಾಯ ಓದಿ ಯುಕ್ತ ಸಲಹೆ ಮುಖೇನ ನನ್ನ ಬರವಣಿಗೆಯನ್ನು ಪ್ರಭಾವಿಸಿದ ಮಾರ್ಗದರ್ಶಿ. ಮೈಸೂರಿನ ಗಾನಭಾರತೀ ಸಂಗೀತಸಭೆಯ ಆಡಳಿತ ಮಂಡಲಿಯಲ್ಲಿ ನಾನು ಸಕ್ರಿಯ ಸದಸ್ಯನಾಗಿದ್ದಾಗ ಸಹವರ್ತಿ. ನಾವೀರ್ವರೂ ನಮ್ಮ ನಮ್ಮ ವೃತ್ತಿಯಿಂದ ನಿವೃತ್ತರಾದ ಬಳಿಕ ೭ ತಿಂಗಳ ಕಾಲ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ಕನ್ನಡ ವಿಶ್ವಕೋಶದ ಕೊನೆಯ ಸಂಪುಟದ ವಿಜ್ಞಾನ ವಿಭಾಗದ ಗೌರವ ಸಂಪಾದಕರಾಗಿ ಸಹೋದ್ಯೋಗಿ. ಅಂದ ಮೇಲೆ ನೆನಪುಗಳು ಇರಲೇ ಬೇಕಲ್ಲವೇ? ಇವುಗಳ ಪೈಕಿ ಆಯ್ದ ಕೆಲವನ್ನು ಪುನಃ ಮೆಲುಕು ಹಾಕಲು ಪ್ರಚೋದಿಸಿದ್ದು ಅವರ ಸೊಸೆಯ ಜಾಲತಾಣದಲ್ಲಿ (ಮಾಲಾ ಲಹರಿ) ಪ್ರಕಟವಾಗಿರುವ ಮೊಮ್ಮಗಳು ಅಕ್ಷರಿ ಮಹೇಶ್ ಅವಳ ‘ಅಜ್ಜನ ನೆನಪುಗಳು’ ಲೇಖನ.

೧ ಹೆಂಡತಿಯ ಹೆಸರು ಹೇಳದ ವ್ರತ: ನನ್ನ ನೆನಪಿನಲ್ಲಿ ಇರುವಂತೆ ಜಿಟಿಎನ್ ಅವರನ್ನು ನಾನು ಮೊದಲಸಲ ನೋಡಿದ್ದು ಕೊಡಗಿನ ಸುಂಟಿಕೊಪ್ಪದಲ್ಲಿ. ನನ್ನ ತಂದೆಯವರು ಸರ್ಕಾರೀ ಆಸ್ಪತ್ರೆಯ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಊರು. ನನಗಾಗ ೯-೧೦ ವರ್ಷ ವಯಸ್ಸು. ಆಗ ತಾನೇ ವಿವಾಹವಾಗಿದ್ದ ಜಿ ಟಿ ಎನ್ ದಂಪತಿಗಳನ್ನು ನಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದರು. ಭೋಜನಾನಂತರ ಒಂದು ಕೋಣೆಯಲ್ಲಿ ನಮ್ಮ ತಂದೆ ಮತ್ತು ಜಿಟಿಎನ್, ಇನ್ನೊಂದು ಕೋಣೆಯಲ್ಲಿ ನನ್ನ ಚಿಕ್ಕಮ್ಮ (ಮಲತಾಯಿ, ದಿ ಗೌರಮ್ಮ) ಮತ್ತು ಶ್ರೀಮತಿ ಜಿಟಿಎನ್ (ಲಕ್ಷ್ಮೀದೇವಿ, ಅರ್ಥಾತ್ ಲಕ್ಷ್ಮಿ ಅಕ್ಕ) ಅವರ ಲೋಕಾಭಿರಾಮವಾದ ಮಾತುಕತೆ ನಡೆದಿತ್ತು. ನನ್ನದು ಮೂಕಪ್ರೇಕ್ಷಕನ ಪಾತ್ರ. ಸುಮಾರು ೧ ತಾಸು ಸಮಯವಾದ ಬಳಿಕ ಜಿಟಿಎನ್ ಅವರು ಹೆಂಗಸರು ಮಾತನಾಡುತ್ತಿದ್ದಲ್ಲಿಗೆ ಬಂದು ಎದುರಿನ ಗೋಡೆಗೆ ‘ನಾವಿನ್ನು ಹೊರಡೋಣವೇ’ ಎಂದು ಕೇಳಿದ್ದು, ‘ಹೇಳಬೇಕಾದವರಿಗೆ ಮುಖನೋಡಿ ಹೇಳದೆಯೇ ಗೋಡೆಗೆ ಹೇಳಿದರೆ ಅದು ಅವರ ಪರವಾಗಿ ಉತ್ತರಿಸುತ್ತದೆಯೇ’ ಎಂದು ನನ್ನ ಚಿಕ್ಕಮ್ಮ ತಮಾಷೆ ಮಾಡಿದ್ದು ಅದೇಕೋ ಇನ್ನೂ ನೆನಪಿನಿಂದ ಮಾಸಿಲ್ಲ. ಅಂದಹಾಗೆ ಶ್ರೀಯುತರು ಮಾತನಾಡುವಾಗ ಪತ್ನಿಯ ಹೆಸರು ಹೇಳಿದ್ದನ್ನು ನಾನು ಕೇಳಿಯೇ ಇಲ್ಲ.

೨ ಡಿಟೇಲ್ಡ್ ಗಾರ್ಡಿಯನ್: ಪ್ರೌಢಶಾಲಾ ವ್ಯಾಸಂಗಕ್ಕಾಗಿ ನಾನು ಮಡಿಕೇರಿಯಲ್ಲಿ ಇದ್ದ ದೊಡ್ಡಪ್ಪ ದಿ ಎ ಪಿ ಶ್ರೀನಿವಾಸ ರಾವ್ ಅವರ ಮನೆಯಲ್ಲಿ ಠಿಕಾಣಿ ಹೂಡಿದ್ದೆ. ಪ್ರೌಢಶಾಲೆಯ ಮೊದಲನೆಯ ವರ್ಷಕ್ಕೆ ಜಿಟಿಎನ್ ಬರೆದಿದ್ದ ಪುಟ್ಟಪುಟ್ಟ ಕಥೆಗಳ ಸಂಗ್ರಹ ‘ವನಸುಮ’ ಎಂಬ ಪುಸ್ತಕ ‘ನಾನ್ ಡಿಟೇಲ್ಡ್ ಟೆಕ್ಸ್ಟ್’ ಆಗಿತ್ತು. ಅದೊಂದು ದಿನ ದೊಡ್ಡಪ್ಪನ ಮಗ ಲಲಿತಮೋಹನ ‘ನೋಡೋ ನೋಡೋ ನಿನ್ನ ‘ನಾನ್ ಡಿಟೇಲ್ಡ್ ಟೆಕ್ಸ್ಟ್’ ಬರೆದವರು ಹೋಗ್ತಾ ಇದ್ದಾರೆ’ ಎಂದು ಬೊಬ್ಬೆ ಹೊಡೆದ. ನಾನೂ ಈ ಅದ್ಭುತ ವ್ಯಕ್ತಿಯನ್ನು ನೋಡಲೋಸುಗ ಗೇಟಿನ ಬಳಿ ಓಡಿದೆ. ಕಂಡದ್ದೇನು? ಬಿಳಿ ಪ್ಯಾಂಟ್ ಮತ್ತು ಬಿಳಿ ಷರ್ಟು ಧರಿಸಿ ಎದೆಗೆ ತಗಲುವಂತೆ ಮಡಚಿದ ಬಲಗೈನಲ್ಲಿ ಕೆಲವು ಪುಸ್ತಕಗಳನ್ನು ಹಿಡಿದುಕೊಂಡು ಸೈನಿಕನೋರ್ವನ ಶಿಸ್ತಿನ ನಡಿಗೆಯನ್ನು ನೆನಪಿಸುವ ನಡಿಗೆಯಲ್ಲಿ ಹೋಗುತ್ತಿದ್ದ, ಗೇಟಿನ ಬಳಿ ನನ್ನನ್ನು ಕಂಡಾಗ ‘ಹೈಸ್ಕೂಲಿಗೆ ಬಂದಾಯಿತೋ’ ಅನ್ನುತ್ತಾ ಮುಂದೆ ಸಾಗಿದ ಜಿಟಿಎನ್. ಉಡುಗೆ ಮತ್ತು ನಡಿಗೆಯಲ್ಲಿನ ವಿಶಿಷ್ಟತೆಯನ್ನು ಹೊರತುಪಡಿಸಿದರೆ ಅವರು ಇತರ ಮನುಷ್ಯರಂತೆಯೇ ಇದ್ದರೇ ವಿನಾ ‘ಇವರು ವನಸುಮ ಪುಸ್ತಕ ಬರೆದವರು’ ಎಂದು ಘೋಷಿಸುವ ಯಾವ ವಿಶಿಷ್ಟ ಲಕ್ಷಣವೂ ನನಗೆ ಆಗ ಗೋಚರಿಸಲಿಲ್ಲ.

ಶ್ರೀಯುತರೊಡನೆ ನಿಕಟ ಸಂಪರ್ಕ ಏರ್ಪಟ್ಟದ್ದು ನಾನು ಕಾಲೇಜು ಮೆಟ್ಟಿಲು ಹತ್ತಿದ ಮೇಲೆಯೇ. ಮಡಿಕೇರಿಯ ಸರ್ಕಾರೀ ಕಾಲೇಜಿನಲ್ಲಿ ಪಿ ಯು ಸಿ ತರಗತಿಯಿಂದ ಮೊದಲ್ಗೊಂಡು ಸ್ನಾತಕ ಪದವಿ ಮುಗಿಸುವ ತನಕ ಕಾಲೇಜಿನ ವಿದ್ಯಾರ್ಥಿನಿಲಯವಾಸಿಯಾಗಿದ್ದ ನನಗೆ ಶ್ರೀಯುತರು ‘ಸ್ಥಳೀಯ ರಕ್ಷಕ’ರು. ನಾನು ಎನ್ ಸಿ ಸಿ ಕೆಡೆಟ್, ಶ್ರೀಯುತರು ಎನ್ ಸಿ ಸಿ ಕ್ಯಾಪ್ಟನ್. ಗಣಿತ ನನ್ನ ಐಚ್ಛಿಕ ವಿಷಯಗಳ ಪೈಕಿ ಒಂದು, ಶ್ರೀಯುತರು ಗಣಿತದ ಉಪನ್ಯಾಸಕರು. ಮಡಿಕೇರಿ ಕಾಲೇಜಿನ ಏಕಮೇವಾದ್ವಿತೀಯ ‘ಸಹಕಾರೀ ಮಳಿಗೆ’ಯ ಸೂತ್ರಧಾರಿ ಅವರು, ನನಗೆ ಅಗತ್ಯವಿದ್ದ ಪದಾರ್ಥಗಳನ್ನು ಅಲ್ಲಿಂದಲೇ ಖರೀದಿಸಬೇಕೆಂಬುದು ನನ್ನ ತಂದೆಯವರ ಕಟ್ಟಾಜ್ಞೆ. ಅದಕ್ಕೆ ಅಗತ್ಯವಿರುವ ಹಣವನ್ನು ತಂದೆಯವರು ಜಿಟಿಎನ್ ಅವರಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಇತ್ತು, ಹುಡುಗನ ಕೈಗೆ ಹಣ ಕೊಟ್ಟರೆ ಈ ಸತ್ಪುತ್ರ ದುಂದುವೆಚ್ಚ ಮಾಡಿಯಾನು ಎಂಬ ಭಯ ಅವರಿಗಿದ್ದದ್ದರಿಂದ. ಎಂದೇ, ಪದೇಪದೇ ಅವರನ್ನು ಭೇಟಿಯಾಗಲೇ ಬೇಕಾದ ಅನಿವಾರ್ಯತೆಯೂ ಇತ್ತು.

೩ ಸಮಯ, ಶಿಸ್ತು: ಜಿಟಿಎನ್ ತರಗತಿಗೆ ೧/೨ ನಿಮಿಷ ತಡವಾಗಿ ಬಂದದ್ದೇ ಆಗಲಿ ತರಗತಿಯನ್ನು ೧/೨ ನಿಮಿಷ ತಡವಾಗಿ ಬಿಟ್ಟದ್ದೇ ಆಗಲಿ ನನಗೆ ನೆನಪಿಲ್ಲ. ತರಗತಿಯ ಒಳಕ್ಕೆ ಶ್ರೀಯತರು ಪ್ರವೇಶಿದ ತಕ್ಷಣ ಎದ್ದು ನಿಲ್ಲುತ್ತಿದ್ದ ನಮ್ಮನ್ನು ಉದ್ದೇಶಿಸಿ ತಕ್ಷಣವೇ ‘ಸಿಟ್ ಡೌನ್’ ಹೇಳಿ ತಮ್ಮ ಟೇಬಲ್ ಬಳಿ ಬರುವ ಮುನ್ನವೇ ಪಾಠ ಆರಂಭಿಸುತ್ತಿದ್ದದ್ದನ್ನೂ ‘ಬೆಲ್’ ಆದ ತಕ್ಷಣ ಪಾಠದ ಮುಕ್ತಾಯದ ವಾಕ್ಯ ಉದ್ಗರಿಸುತ್ತಲೇ ಬಾಗಿಲಿನಿಂದ ಹೊರನಡೆಯತ್ತಿದ್ದದ್ದನ್ನೂ ಮರೆಯಲು ಸಾಧ್ಯವೇ ಇಲ್ಲ. ಅಂತೆಯೇ, ಪಾಠ ಮಾಡುತ್ತಲೇ ಒಳಬಂದವರು ಮೊದಲು ಕಪ್ಪುಹಲಗೆಯನ್ನು ಸ್ವಚ್ಛಗೊಳಿಸುತ್ತಿದ್ದದ್ದನ್ನೂ ಪಾಠ ಮಾಡುತ್ತಲೇ ಹೊರನಡೆಯುವ ಮುನ್ನ ಕಪ್ಪುಹಲಗೆಯನ್ನು ಸ್ವಚ್ಛಗೊಳಿಸುತ್ತಿದ್ದದ್ದನ್ನೂ ಮರೆಯಲು ಸಾಧ್ಯವಿಲ್ಲ.

೪ ಒಂದು ಚಾರಣ: ನಾನು ಪಿ ಯು ಸಿ ವಿದ್ಯಾರ್ಥಿ ಆಗಿದ್ದಾಗಿನ ಒಂದು ಮರೆಯಲಾಗದ ಅನುಭವ – ‘ರೂಟ್ ಮಾರ್ಚ್’ ಎಂಬ ಎನ್ ಸಿ ಸಿ ಕಾರ್ಯಕ್ರಮ. ಕಾಲೇಜಿನಿಂದ ಬೆಳಗ್ಗೆ ನಡಿಗೆ ಆರಂಭಿಸಿ, ನಿಶಾನಿಮೊಟ್ಟೆ ಎಂಬ ಬೆಟ್ಟವೇರಿ, ಏರಿದ್ದಕ್ಕೆ ವಿರುದ್ಧ ದಿಕ್ಕಿನಲ್ಲಿ ಇಳಿದು ಮಡಿಕೇರಿ-ಸಂಪಾಜೆ ರಸ್ತೆಯ ಜೋಡುಪಾಲ ಎಂಬ ಸ್ಥಳ ತಲುಪಿ, ತದನಂತರ ರಸ್ತೆಯಲ್ಲೇ ನಡೆದು ‘ರಾಜಾ ಸೀಟ್’ ಮೂಲಕವಾಗಿ ಕಾಲೇಜೆಗೆ ಬಂದು ಸೇರಬೇಕಿತ್ತು. ಒಬ್ಬರ ಹಿಂದೆ ಒಬ್ಬರಂತೆಯೇ ಸಾಗಬೇಕಿದ್ದ ಅಗಲಕಿರಿದಾದ ಕಾಲು ಹಾದಿ (ಯಾವ ಮಹಾನುಭಾವರು ಇಲ್ಲಿ ಓಡಾಡಿ ಈ ಹಾದಿ ಉಂಟಾಗಿತ್ತೋ ಗೊತ್ತಿಲ್ಲ). ಸುಮಾರು ೩೫-೪೦ ಕಿಮೀ ದೂರವನ್ನು ಎನ್ ಸಿ ಸಿ ಬೂಟು ಧರಿಸಿ ಕ್ರಮಿಸಲು ನಮಗಿದ್ದ ವಿಶೇಷ ಸೌಲಭ್ಯ – ೧ ಮಿಲಿಟರಿ ಬಾಟಲ್ ನೀರು ಮತ್ತು ಜೋಡುಪಾಲದಲ್ಲಿ ಕೊಟ್ಟ ‘ಪ್ಯಾಕೆಟ್ ಮೀಲ್ಸ್’. ಮಾರ್ಗ ಮಧ್ಯದಲ್ಲೆಲ್ಲೂ ಬಾಟಲ್ ಮರುಭರ್ತಿ ಮಾಡುವಂತಿಲ್ಲ ಎಂದು ತಿಳಿದಿದ್ದರೂ ೧/೨ ಕ್ಕಿಂತಲೂ ಕಮ್ಮಿ ದೂರ ಕ್ರಮಿಸುವಷ್ಟರಲ್ಲಿಯೇ ಅನೇಕರ ನೀರು ಖಾಲಿಯಾಗಿತ್ತು. ಇದ್ದವರ ಕೈನಿಂದ ಬೇಡಿ ಗುಟುಕು ನೀರು ಕುಡಿಯುವ ಪರಿಸ್ಥಿತಿ ಅವರದ್ದು. ಅನತಿ ದೂರ ಕ್ರಮಿಸುವಷ್ಟರಲ್ಲಿಯೇ (ನಾನೂ ಸೇರಿದಂತೆ) ಅನೇಕರಿಗೆ ‘ಶೂ ಕಡಿತ’ವಾಗಿದ್ದರಿಂದ ಅವನ್ನು ಕಳಚಿ ‘ಲೇಸ್’ನ ನೆರವಿನಿಂದ ಎರಡನ್ನೂ ಜೋಡಿಸಿ ಮಾಲೆಯಂತೆ ಧರಿಸಿ ಬರಿಗಾಲಿನಲ್ಲಿಯೇ ಪಯಣದ ಮುಂದುವರಿಕೆ. ನಮ್ಮ ಈ ಮೆರವಣಿಗೆಯ ಅಗ್ರಸ್ಥಾನದಲ್ಲಿ ಜಿಟಿಎನ್, ಕೊನೆಯಲ್ಲಿ ಭಾರತದ ಭೂಸೈನ್ಯದಿಂದ ನಿಯೋಜಿತರಾಗಿದ್ದ ಕ್ಯಾಪ್ಟನ್. ಇವರೀರ್ವರು ಮಹನೀಯರು ಆದಿಯಿಂದ ಅಂತ್ಯದ ತನಕವೂ ನಡೆದ ಹೆಚ್ಚುಕಮ್ಮಿ ಸಮವೇಗದ ಮಿಲಟರಿ ನಡಿಗೆಯನ್ನೇ ಆಗಲಿ, ಪಯಣದ ಅಂತ್ಯದಲ್ಲಿ ತಮ್ಮ ಬಾಟಲ್ ಗಳಲ್ಲಿ ೧/೨ ಕ್ಕಿಂತ ತುಸು ಹೆಚ್ಚು ನೀರು ಉಳಿದಿದ್ದನ್ನು ತೋರಿಸಿದ್ದನ್ನೇ ಆಗಲಿ ಮರೆಯುವುದು ಹೇಗೆ?

೫ ತೋರಿಕೆ, ವಾಸ್ತವ: ಸ್ನಾತಕ ಪದವಿ ವಿದ್ಯಾರ್ಥಿಯಾಗಿದ್ದಾಗಿನ ಅವಧಿಯಲ್ಲಿ ನಾನು ಪ್ರಾಧಾನ್ಯ ನೀಡುತ್ತಿದ್ದದ್ದು ಇವಕ್ಕೆ: ಚರ್ಚಾ ಸ್ಪರ್ಧೆಗಳು, ಭಾಷಣ ಸ್ಪರ್ಧೆಗಳು, ನಾಟಕಗಳಲ್ಲಿ ಅಭಿನಯ, ಟೇಬಲ್ ಟೆನ್ನಿಸ್ ಮತ್ತು ಕನ್ನಡ ಕಾದಂಬರಿಗಳ ಓದು. ಇವುಗಳ ನಡುವೆ ಬಿಡುವಾದಾಗ ತರಗತಿ. (ಈ ಅವಧಿಯಲ್ಲಿ ಕಾಲೇಜು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ಗಳಿಸಿದ ಪ್ರಥಮ/ದ್ವಿತೀಯ ಬಹುಮಾನಗಳ ಮತ್ತು ಪ್ರಶಸ್ತಿ ಪತ್ರಗಳ ಪೈಕಿ ಕೆಲವು ಇಂದೂ ನನ್ನ ಮನೆಯಲ್ಲಿ ಎಲ್ಲಿಯೋ ಇರಬೇಕು) ಅಂದ ಮೇಲೆ ತರಗತಿಯ ಪರೀಕ್ಷೆಗಳಲ್ಲಿ ‘ಜೀವನಾಂಶ’ ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಂಗತಿಯಾಗಿತ್ತು. ಒಂದು ಬಾರಿ ಒಂದೂ ಪೀರಿಯಡ್ ತಪ್ಪಿಸಿಕೊಳ್ಳದೆಯೇ ೧-೨ ತಿಂಗಳು ತರಗತಿಗೆ ಹಾಜರಾಗಿದ್ದೆ (ಬೇರೆ ಯಾವ ಸ್ಪರ್ಧೆಗಳೂ ಇರಲಿಲ್ಲವಾದ್ದರಿಂದ). ಆ ಬಾರಿಯ ತರಗತಿ ಮಟ್ಟದ ಕಿರು ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬಂದಿದ್ದವು. ಅದನ್ನು ನೋಡಿದ ಜಿಟಿಎನ್ ಉವಾಚ – “ನೀನು ತರಗತಿಗೆ ತಪ್ಪಿಸಿಕೊಳ್ಳದೆ ಹಾಜರಾಗುತ್ತಿದ್ದರೆ ಸಾಕಲ್ಲ ಮಾರಾಯ. ಒಳ್ಳೇ ‘ಮಾರ್ಕ್ಸ್’ ಬರುತ್ತದಲ್ಲ”. ಆಗ ಪ್ರಾಶುಪಾಲರಾಗಿದ್ದ ಎಮ್ ಎ ರಾಮಚಂದ್ರ ರಾವ್ ಉವಾಚ – “ಗೋವಿಂದ ನಿನ್ನ ಭಾಷಣ ಸಾಮರ್ಥ್ಯ ಇತ್ಯಾದಿ ಇತ್ಯಾದಿಗಳು ಈಗ ಕೀರ್ತಿ ತಂದುಕೊಟ್ಟಂತೆ ತೋರಿದರೂ ಮುಂದೆ ಅನ್ನ ನೀಡಲಾರವು”. ಆಗ ಇವಕ್ಕೆಲ್ಲ ಮಾನ್ಯತೆ ನೀಡುವ ಮನಃಸ್ಥಿತಿಯಲ್ಲಿ ನಾನಿಲ್ಲದಿದ್ದರೂ ಮುಂದಿನ ಜೀವನಾನುಭವಗಳು ಇವನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಷ್ಟೇ ಅಲ್ಲ ಈಗಲೂ ಇವು ಮನಃಪಟಲದ ಮುಂದೆ ಹಾದುಹೋಗುತ್ತಿರುತ್ತವೆ.

೬ ಹಾ ವಿಧಿಯೇ!: ಒಂದು ವರ್ಷ ಎನ್ ಸಿ ಸಿ ಯ ವಾರ್ಷಿಕ ಕ್ಯಾಂಪ್ ಉಪ್ಪಿನಂಗಡಿಯ ನೇತ್ರಾವತೀ ನದಿಗೆ ತಾಗಿಕೊಂಡಿದ್ದ ಬಯಲೊಂದರಲ್ಲಿ ಎಂದು ತೀರ್ಮಾನಿಸಿದ್ದರು. ನಿಗದಿತ ದಿನದಂದು ನಮ್ಮ ಎನ್ ಸಿ ಸಿ ದಳ ಬಸ್ಸೊಂದರಲ್ಲಿ ಉಪ್ಪಿನಂಗಡಿಯತ್ತ ಜಯಘೋಷ. . . ಇತ್ಯಾದಿ ಇತ್ಯಾದಿಗಳೊಂದಿಗೆ ಪಯಣಿಸುತ್ತಿತ್ತು. ಅಧಿಕಾರೀ ವರ್ಗದವರು ಪೂರ್ವಸಿದ್ಧತೆ ಮಾಡಲೋಸುಗ ಮುಂದಾಗಿಯೇ ಉಪ್ಪಿನಂಗಡಿ ತಲುಪಿದ್ದರು. ನಮ್ಮ ಬಸ್ಸಿನ ಬ್ರೇಕ್ ಕೆಟ್ಟು, ಘಾಟಿ ರಸ್ತೆಯಲ್ಲಿ ಜೋಡುಪಾಲಕ್ಕೂ ಮುನ್ನ ಇರುವ ರಬ್ಬರ್ ತೋಟದ ಸಮೀಪದಲ್ಲಿ, ಪಕ್ಕದ ಬರೆಗೆ ಢಿಕ್ಕಿ ಹೊಡೆದು ನಿಂತಿತು. ಬಸ್ಸಿನ ನಿರ್ವಾಹಕನಿಗೆ ಮಾತ್ರ ಬಲು ಪೆಟ್ಟಾಗಿತ್ತು, ಬೇರೆಯವರಿಗೆ ಯಾರಿಗೂ ಏನೂ ಆಗಿರಲಿಲ್ಲ. ಅಪಘಾತ ಸುದ್ದಿ ಬೇರೆ ಬಸ್ಸಿನವರ ಮೂಲಕ ಮಡಿಕೇರಿಗೂ ಉಪ್ಪಿನಂಗಡಿಗೂ ತಲುಪಿ ಇನ್ನೊಂದು ಬಸ್ ಬರುವ ತನಕ ಅಲ್ಲಿಯೇ ಇದ್ದೆವು (ಕೆಲವರು ರಬ್ಬರ್ ತೋಟದೊಳಗೆ ನುಸುಳಿ ಒಂದಷ್ಟು ರಬ್ಬರ್ ಹಾಲು ಕದ್ದು ತಂದು ಅದರಿಂದ ಚೆಂಡು ಮಾಡಲು ಸಾಧ್ಯವೇ ಎಂಬ ಸಂಶೋಧನೆಯಲ್ಲಿ ಮಗ್ನರಾಗಿದ್ದರು). ಏತನ್ಮಧ್ಯೆ, ಕೆಲವರು ಆಘಾತಕ್ಕೊಳಗಾದವರಂತೆಯೂ ಕೆಲವರು ಮೈಕೈ ನೋವಿನಂದ ನರಳುತ್ತಿರುವಂತೆಯೂ ನಟಿಸಿ ಕ್ಯಾಂಪಿನ ಚಟುವಟಿಕೆಗಳಿಂದ ಒಂದು ದಿನದ ಮಟ್ಟಿಗಾದರೂ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಯೋಜನೆ ರೂಪಿಸಿದ್ದೆವು. ಶಿಬಿರಕ್ಕೆಂದು ನಿಗದಿಯಾಗಿದ್ದ ಸ್ಥಳ ತಲುಪಿದ್ದಾಯಿತು. ಸ್ವಾಗತಿಸಲು ಜಿಟಿಎನ್ ಸ್ವತಃ ಹಾಜರಾಗಿದ್ದರು. ನಾವೆಲ್ಲ ಯೋಜನೆಯನ್ವಯ ನಟಿಸುತ್ತಾ ಬಸ್ಸಿನಿಂದ ಕೆಳಗಿಳಿದೆವು. ಎಲ್ಲರ ಮೇಲೆ ಒಮ್ಮೆ ಕಣ್ಣು ಹಾಯಿಸಿದ ಜಿಟಿಎನ್ ಘರ್ಜಿಸಿದರು – ‘ಯೆಸ್. ಆಲ್ ಆಫ್ ಯು ಫಾಲ್ ಇನ್ ಎ ಲೈನ್. ಕ್ವಿಕ್. ವಿ ಆರ್ ಅಲ್ರೆಡಿ ಲೇಟ್’ ನಮ್ಮ ನಟನೆ ಎಲ್ಲವೂ ಮಾಯವಾಗಿ ದಡದಡನೆ ‘ಫೆಲ್ ಇನ್ ಎ ಲೈನ್’. ಪುನಃ ಮೊಳಗಿತು ಜಿಟಿಎನ್ ವಾಣಿ – ‘ನೌ ದ ಟೈಮ್ ಈಸ್ ಎಲೆವೆನ್ ತರ್ಟಿಫೈವ್ ಅವರ್ಸ್. ಲಂಚ್ ಈಸ್ ಎಟ್ ೧೩೦೦ ಅವರ್ಸ್. ಬೈ ದೆಟ್ ಟೈಮ್ ಯು ಶುಡ್ ಹ್ಯಾವ್ ಕಂಪ್ಲೀಟೆಡ್ ದ ಟಾಸ್ಕ್ ಆಫ್ ಪಿಚ್ಚಿಂಗ್ ಯುವರ್ ಟೆಂಟ್ಸ್. ಅಫ್ ಕೋರ್ಸ್ ಆಫ್ಟರ್ ಹ್ಯಾಂಡಿಂಗ್ ಓವರ್ ಯುವರ್ ರೈಫಲ್ಸ್ ಎಟ್ ದ ಸ್ಟೋರ್ಸ್. ಅದರ್ ವೈಸ್ ಯು ಮೇ ಹ್ಯಾವ್ ಟು ಸ್ಲೀಪ್ ಇನ್ ದ ಓಪನ್ ಫೀಲ್ಡ್. ಡಿಸ್ಸಮಿಸ್ಡ್’ ಅವರು ಅದೆಲ್ಲಿಗೋ ಹೋದರು, ನಾವು ಅವರನ್ನೂ ಇಂಥ ನಿಷ್ಕರುಣಿ ಆಫಿಸರ್ ಅನ್ನು ಪಡೆಯುವಂತೆ ಮಾಡಿದ ನಮ್ಮ ಹಣೆಬರೆಹವನ್ನೂ ಶಪಿಸುತ್ತ ಕಾರ್ಯೋನ್ಮುಖರಾದೆವು.

೭ ಉಪಯುಕ್ತತೆ: ಅದೇ ಅವಧಿಯಲ್ಲಿ ಯಾವುದೋ ಸಂದರ್ಭದಲ್ಲಿ ೨-೩ ಬಹುಮಾನಗಳು ನನಗೆ ಏಕಕಾಲದಲ್ಲಿ ಲಭಿಸಿದವು. ಕಾಲೇಜಿನಲ್ಲಿ ಕೊಡುತ್ತಿದ್ದ ಬಹುಮಾನಗಳು ಪೂರೈಕೆ ಆಗುತ್ತಿದ್ದದ್ದು ಜಿಟಿಎನ್ ಸಾರಥ್ಯದಲ್ಲಿ ಮುನ್ನಡೆಯುತ್ತಿದ್ದ ಸಹಕಾರೀ ಮಳಿಗೆಯಿಂದ. ಎಂದೇ, ನನ್ನನ್ನು ಕರೆಸಿ “ನಿನಗೆ ಬಂದಿರುವ ಬಹುಮಾನಗಳ ಮೌಲ್ಯ ಗಣನೀಯವಾಗಿದೆ. ಈ ಹಣದಿಂದ ಒಳ್ಳೆಯ ಪುಸ್ತಕಗಳನ್ನು ಪಡೆಯಬಹುದು. ನಮ್ಮಲ್ಲಿ ಇರುವ ಪುಸ್ತಕಗಳ ಪೈಕಿ ನಿನಗೆ ಇಷ್ಟವಾದವನ್ನು ಆಯ್ಕೆ ಮಾಡಿಕೊಟ್ಟರೆ ಅವುಗಳ ಪೈಕಿ ಬಹುಮಾನದ ಮೊಬಲಗಿಗೆ ಸರಿದೂಗುವ ಪುಸ್ತಕಗಳನ್ನು ಬಹುಮಾನವಾಗಿ ಕೊಡಿಸುತ್ತೇನೆ” ಅಂದದ್ದನ್ನೂ ಮರೆಯುವಂತಿಲ್ಲ.

೮ ನುಡಿದರೆ ಮುತ್ತಿನಂತಿರಬೇಕು: ಜಿಟಿಎನ್ ಅವರ ಸಹೋದರ ಜಿ ಟಿ ರಾಘವೇಂದ್ರನ ಮದುವೆಯ ಅಥವ ತತ್ಸಂಬಂಧಿತ ವಧೂಗೃಹ ಪ್ರವೇಶದ ಸಮಾರಂಭ (ಯಾವುದೆಂಬುದು ಸರಿಯಾಗಿ ನೆನಪಿಲ್ಲ), ಮೋದೂರಿನ ಮನೆಯಲ್ಲಿ. ಆ ದಿನಗಳಲ್ಲಿ ಇಂಥ ಸಮಾರಂಭಗಳಲ್ಲಿ ಇಂದಿನಂತೆ ಜಾತ್ರೆಯೋಪಾದಿಯಲ್ಲಿ ಜನಜಂಗುಳಿ ಇರುತ್ತಿರಲಿಲ್ಲ. ಆಪ್ತೇಷ್ಟರನ್ನು ಮಾತ್ರ ಆಹ್ವಾನಿಸುತ್ತಿದ್ದ ದಿನಗಳವು. ವಧೂವರರಿಗೆ ಆಹ್ವಾನಿತರು ಮಂತ್ರಾಕ್ಷತೆ ಹಾಕಿ ಉಡುಗೊರೆ ನೀಡಿ ಆಶೀರ್ವದಿಸುವುದು ಕೊನೆಯ ಕಾರ್ಯಕ್ರಮ. ಮೊದಲು ಹಿರಿಯರು ಒಬ್ಬೊಬ್ಬರಾಗಿ ಹೋಗಿ (ಸರತಿ ಸಾಲಿನಲ್ಲಿ ನಿಂತು ಹೋಗುವ ಕ್ರಮ ಇರಲಿಲ್ಲ) ಆಶೀರ್ವದಿಸಿ ಹಿಂದಿರುಗುವಾಗ ಪುರೋಹಿತರು ‘ಏನಯ್ಯಾ, — ಅವರೇ, ನೀವು ನಮ್ಮ ಆಹ್ವಾನವನ್ನು ಮನ್ನಿಸಿ, ಸಮಾರಂಭಕ್ಕೆ ಆಗಮಿಸಿ, ವಧೂವರರನ್ನು ಆಶೀರ್ವದಿಸಿ ಉಡುಗೊರೆ ನೀಡಿದ್ದೀರಿ. ಇದರಿಂದ ನಮಗೆ ಮಹದಾನಂದವಾಗಿದೆ. ನಮ್ಮ ಆತಿಥ್ಯದಲ್ಲಿ ಯಾವ ಕೊರತೆಯೂ ಆಗಿಲ್ಲವೆಂದು ನಂಬಿದ್ದೇನೆ. ಅಕಸ್ಮಾತ್ ಏನಾದರೂ ಅಪಚಾರವಾಗಿದ್ದರೆ ಸಹೃದಯಿಗಳಾದ ತಾವು ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆಯೇ ಮನ್ನಿಸಿದ್ದೇರೆಂದು ನಂಬುತ್ತೇವೆ. ತಮ್ಮ ಆಗಮನಕ್ಕೆ ನಾನೂ ನನ್ನ ಕುಟುಂಬದವರೂ ಋಣಿಗಳಾಗಿದ್ದೇವೆ ಎಂಬುದಾಗಿ ಯಜಮಾನರು ಹೇಳುತ್ತಾರೆ’ ಎಂದು ಹೇಳುವ ವಾಡಿಕೆ ಇತ್ತು. ಅವರ ಹೇಳಿಕೆ ಮುಗಿದಾಗ ತಮ್ಮ ಎದುರು ಮನೆಯವರು ಹಿಡಿಯುತ್ತಿದ್ದ ತಾಂಬೂಲದ ತಟ್ಟೆಯನ್ನು ಸ್ಪರ್ಶಿಸಿ ಆ ಹಿರಿಯರು ಸ್ವಸ್ಥಾನ ಸೇರುತ್ತಿದ್ದರು. ಬಹಳಷ್ಟು ಸಂದರ್ಭಗಳಲ್ಲಿ ಪುರೋಹಿತರ ಹೇಳಿಕೆ ಬಲು ಕೃತಕವಾಗಿಯೂ ವ್ಯಾಕರಣ ದೋಷಯುಕ್ತ ವಾಕ್ಯಗಳಿಂದ ಮುಜುಗರವಾಗುವಷ್ಟು ಉದ್ದವಾಗಿಯೂ ಇರುತ್ತಿತ್ತು, ಇದನ್ನು ಕೇಳಿ ಕೇಳಿ ಜಿಟಿಎನ್ ಅವರಿಗೆ ರೋಸಿಹೋಯಿತೋ ಏನೋ. ಇದ್ದಕ್ಕಿದ್ದಂತೆ ರಂಗಪ್ರವೇಶ ಮಾಡಿ ತಮ್ಮ ವಿಶಿಷ್ಟ ಭಾಷಾಶೈಲಿಯಲ್ಲಿ ಪುರೋಹಿತರನ್ನು ಅನುಕರಿಸುವ ಧ್ವನಿಯಲ್ಲಿ ‘—ಆಭಾರಿಯಾಗಿದ್ದೇವೆ’ ಹೇಳಿಕೆ ನೀಡತೊಡಗಿದರು. ಆ ಸನ್ನಿವೇಶದಲ್ಲಿ ಪುರೋಹಿತರ ಮತ್ತು ಅಲ್ಲಿದ್ದವರ ಮುಖಭಾವ ಮರೆಯಲು ಸಾಧ್ಯವೇ ಇಲ್ಲ.

೯ ಸಮಯಪರಿಪಾಲನೆ: ಗೃಹಶಾಂತಿ ಕಾಯ್ದುಕೊಳ್ಳಲೋಸುಗವೋ ಏನೋ, ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲು (!) ಜಿಟಿಎನ್ ಅನುಮತಿ ನೀಡಿದ್ದರು (ಇಸವಿ ಮರೆತು ಹೋಗಿದೆ)! ನಮಗೆ (ನನಗೂ ನನ್ನ ಹೆಂಡತಿಗೂ) ಶ್ರೀಯುತರೇ ಖುದ್ದಾಗಿ ಬಂದು ಮೌಖಿಕ ಆಹ್ವಾನ ನೀಡಿ, ‘ಬೆಳಿಗ್ಗೆ ೮ ಗಂಟೆಗೇ ಪೂಜೆ ಆರಂಭ, ಮಧ್ಯಾಹ್ನ ೧೨.೩೦ ಕ್ಕೆ ಭೋಜನ. ತಪ್ದೇ ಬನ್ನಿ ಎರಡನೆಯದಕ್ಕೆ’ ಅಂದಿದ್ದರು. ಜಿಟಿಎನ್ ಅವರ ಸಮಯನಿಷ್ಠೆಯ ಪರಿಚಯವಿದ್ದದ್ದರಿಂದ ನಿಗದಿತ ದಿನದಂದು ಮಧ್ಯಾಹ್ನ ಸುಮಾರು ೧೨ ಗಂಟೆಯ ಹೊತ್ತಿಗೆ ಅವರ ಮನೆಗೆ ಹೋಗೋಣ ಎಂದು ನನ್ನ ಹೆಂಡತಿಗೆ ಹೇಳಿದ್ದೆ. ಅವಳು ೧೨.೩೦ ಕ್ಕೆ ಊಟಕ್ಕೆ ಬಡಿಸಲಾರರು, ಅಷ್ಟು ಬೇಗನೆ ಯಾರು ತಾನೇ ಊಟ ಮಾಡುತ್ತಾರೆ ಅಂದಿದ್ದಳು. ಅಂತೂ ಇಂತೂ ನಾವು ಅವರ ಮನೆ ತಲುಪಿದಾಗ ಗಂಟೆ ೧೨.೪೦. ಮನೆಯ ಗೇಟಿನ ಬಳಿಯೇ ಇದ್ದ ಜಿಟಿಎನ್ ಸ್ವಾಗತಿಸಿದ್ದು ಹೀಗೆ: “ಬರಬೇಕು ಬರಬೇಕು. ಬಲು ದೂರದಿಂದ ಬಂದಿದ್ದೀರಿ (ನಮ್ಮ ಮನೆಯಿಂದ ಅವರ ಮನೆಗೆ ನಡೆಯಲು ೫ ನಿಮಿಷ ಧಾರಾಳ ಸಾಕು), ಸುಖಪ್ರಯಾಣವಾಯಿತೇ? ಪ್ರಯಾಣದ ದಣಿವಾರಿಸಿಕೊಳ್ಳಿ. ಅಷ್ಟು ಹೊತ್ತಿಗೆ ಈಗಾಗಲೇ ಶುರುವಾಗಿರುವ ಮೊದಲನೇ ಪಂಕ್ತಿಯ ಭೋಜನ ಮುಗಿದಿರುತ್ತದೆ.” ಶ್ರೀಯುತರ ಸ್ವಭಾವದ ಪರಿಚಯವಿದ್ದ ನನಗೇನೂ ಅನ್ನಿಸಲೇ ಇಲ್ಲ. ನನ್ನ ಹೆಂಡತಿಗಾದರೋ ——-.

೧೦ ಸಿಹಿಪ್ರಿಯ: ಜಿಟಿಎನ್‌ ಅವರ ನೇರ ನಡೆನುಡಿ ಅನೇಕರಿಗೆ ನಗು ಬರಿಸುತ್ತಿದ್ದರೂ ಕೆಲವೊಮ್ಮೆ ಕೆಲವರಿಗೆ ಮುಜುಗರ ಉಂಟುಮಾಡುತ್ತಿದ್ದದ್ದೂ ಉಂಟು. ನನ್ನ ತಂದೆಯವರ ಮರಣಾನಂತರ ನನ್ನ ತಮ್ಮನ ಮನೆಯಲ್ಲಿ ವಾರ್ಷಿಕ ಶ್ರಾದ್ಧಾವಿಧಿಗಳನ್ನು ಶಾಸ್ತ್ರೋಕ್ತವಾಗಿ ಮಾಡುತ್ತಿದ್ದಾಗ ನಡೆದ ಘಟನೆ ಇದು. ನಮ್ಮ ಸಮುದಾಯದ ಸಂಪ್ರದಾಯದಂತೆ ಭೋಜನಕ್ಕೆ ಮಾಡಿದ್ದ ಶುಂಠಿ ತಂಬುಳಿ ತುಸು ಹೆಚ್ಚು ಅನ್ನಬಹುದಾದಷ್ಟು ಸಿಹಿಯಾಗಿತ್ತು. ಜಿಟಿಎನ್ ಅವರಿಗೆ ಅದು ಬಹಳ ರುಚಿಸಿರಬೇಕು. ಈ ಸಂದರ್ಭದಲ್ಲಿ ಜಿಟಿಎನ್‌ ಉವಾಚ: “ತಂಬುಳಿ ಅಂಬೋ ಪಾಯಸ ಬರಲಿ!” ಊಟ ಮಾಡುತ್ತಿದ್ದವರು ನಕ್ಕರೂ ಮುಜುಗರವಾದದ್ದು ಯಾರಿಗೆ ಎಂಬುದನ್ನು ನೀವೇ ಊಹಿಸಬಹುದಲ್ಲವೆ?

೧೧ ಆಹಾರದಲ್ಲಿ ಶಿಸ್ತು: ನನ್ನ ಚಿಕ್ಕಮ್ಮ (ಮಲತಾಯಿ) ವಿಧಿವಶರಾದಾಗ ಉತ್ತರಕ್ರಿಯೆಗಳನ್ನು ಮಾಡಿದ್ದು ಗೋಕರ್ಣದಲ್ಲಿ. ತದಂಗವಾಗಿ ಮೈಸೂರಿನ ಶ್ರೀಕೃಷ್ಣಧಾಮದಲ್ಲಿ ಆಪ್ತೇಷ್ಟರಿಗೆ ಭೋಜನಕೂಟದ ವ್ಯವಸ್ಥೆ ಮಾಡಿದ್ದೆವು. ಅಲ್ಲಿ ಮಧ್ಯಾಹ್ನದ ಮಹಾಮಂಗಳಾರತಿ ಆಗುವ ಮುನ್ನ ಭೋಜನಾರಂಭಿಸುವಂತಿಲ್ಲ. ಆ ದಿನ ಅದೇನೋ ಕಾರಣಕ್ಕಾಗಿ ಅಪರಾಹ್ನ ೧ ಗಂಟೆಯಾದರೂ ಮಹಾಮಂಗಳಾರತಿ ಜರಗುವ ಸೂಚನೆಯೇ ಇರಲಿಲ್ಲ. ೧೨.೩೦ ರಿಂದಲೇ ಚಡಪಡಿಸುತ್ತಿದ್ದ ಜಿಟಿಎನ್ “ಸರಿ, ಮಧ್ಯಾಹ್ನ ನಿಗದಿತ ಸಮಯದಲ್ಲಿ ಊಟ ಮಾಡದೇ ಇದ್ದರೆ ನನಗೆ ತೊಂದರೆ ಆಗುತ್ತದೆ, ಮನೆಯಲ್ಲಿ ಅನ್ನ ಮೊಸರು ಇದ್ದೇ ಇರುತ್ತದೆ. ನಿಮಗೆ ಶುಭವಾಗಲಿ” ಎಂದು ಹೇಳಿ ನಡೆದೇ ಬಿಟ್ಟರು. ಅವರ ಈ ಕಠಿನ ನಿಲುವಿಗೆ ಕಾರಣ ಅವರ ಆರೋಗ್ಯಸ್ಥಿತಿಯೇ ಆಗಿದ್ದರೂ ಅಲ್ಲಿ ಸೇರಿದ್ದ ಮಂದಿಗೆ ಮುಜಗರವಾದದ್ದಂತೂ ನಿಜ.

೧೨ ಚಳಿಬಿಡಿಸಿದ್ದು: ನಾವೀರ್ವರೂ ನಿವೃತ್ತರಾದ ಬಳಿಕದ ಘಟನೆ ಇದು. ಒಂದು ಸಂಜೆ ಏನನ್ನೋ ಆಲೋಚಿಸುತ್ತಾ ತಲೆ ಬಾಗಿಸಿಕೊಂಡು ನಿಧಾನವಾಗಿ ಸರಸ್ವತೀಪುರಂನ ಪಾರ್ಕ್ ಬಳಿ ‘ವಾಕಿಂಗ್’ ಹೋಗುತ್ತಿದ್ದೆ. “ಏನಾಗಿದೆ? ಆರೋಗ್ಯ ಕೆಟ್ಟಿದೆಯೇ?” ಎಂಬ ಜಿಟಿಎನ್ ತನ್ನದೇ ಆದ ಶೈಲಿಯಲ್ಲಿ ಕೇಳಿದ್ದು ನನ್ನ ಕಿವಿಗಪ್ಪಳಿಸಿದಾಗ ತಬ್ಬಿಬ್ಬಾಗಿ ತಲೆ ಎತ್ತಿ ನೋಡಿದೆ. ಮಾಮೂಲಿನ ಬಿಳಿ ದಿರಿಸಿನಲ್ಲಿ ‘ಮಂಕಿಕ್ಯಾಪ್’ ಮತ್ತು ‘ವಾಕಿಂಗ್ ಸ್ಟಿಕ್’ಧಾರೀ ಜಿಟಿಎನ್ ದರ್ಶನವಾಯಿತು (ಆಗ ಅವರ ವಯಸ್ಸು ೮೦ ರ ಆಸುಪಾಸಿನಲ್ಲಿ, ನನ್ನದು ೬೦ ರ ಆಸುಪಾಸಿನಲ್ಲಿ). “ಏನೂ ಆಗಿಲ್ಲ, ಚೆನ್ನಾಗಿಯೇ ಇದ್ದೇನೆ” ಅಂದೆ. “ಮತ್ತೇಕೆ ಹೀಗೆ ರೋಗಗ್ರಸ್ತನ ನಡಿಗೆ? ಕೊಡಗಿನಲ್ಲಿ ಹುಟ್ಟಿಬೆಳೆದವರು, ಎನ್ ಸಿ ಸಿ ತರಬೇತಿ ಪಡೆದವರು ಸುಮ್ಮಸುಮ್ಮನೆ ಹೀಗೆ ನಡೆಯುವುದುಂಟೇ?” ಅಂದು ಮುಂದೆ ನಡೆದರು. ಅಂದಿನಿಂದ ಆ ರಸ್ತೆಗಳಲ್ಲಿ ‘ವಾಕಿಂಗ್’ ಹೋಗುವುದೇ ಅಪಾಯ ಅಂದುಕೊಂಡು ಬೇರೆ ರಸ್ತೆಗಳನ್ನು ಆಯ್ಕೆ ಮಾಡಿಕೊಂಡೆ. ಆ ರಸ್ತೆಯಲ್ಲಿ ಹೋಗುವಾಗ ಎಲ್ಲಾದರೂ ಜಿಟಿಎನ್ ಕಾಣಿಸುತ್ತಾರೋ ಎಂಬುದರ ಕಡೆ ಗಮನವಿಟ್ಟಿರುತ್ತಿದ್ದೆ.

೧೩ ಗುಣಪಕ್ಷಪಾತಿ: ೮೦ರ ದಶಕದಲ್ಲಿ ನಡೆದದ್ದು. ಶ್ರೀಯುತರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ವಿಭಾಗದಲ್ಲಿ ಸಂಪಾದನಾ ವಿಭಾಗದ ಮುಖ್ಯಸ್ತರಾಗಿದ್ದ ಅವಧಿಯಲ್ಲಿ ಒಂದು ದಿನ (ನಿಖರವಾದ ಇಸವಿ ನೆನಪಿಲ್ಲ) ಬೆಳಗ್ಗೆ ಸುಮಾರು ೯-೯.೩೦ ಗಂಟೆಗೆ ನಾನು ಕಾಲೇಜಿಗೆ ಹೋಗಲು ಸ್ಕೂಟರ್ ಹೊರತೆಗೆಯುತ್ತಿದ್ದೆ. “ಕಾಲೇಜಿಗೆ ಹೊರಟೆಯೋ? ಒಂದೈದು ನಿಮಿಷ ಮಾತನಾಡುವುದಿದೆ, ತೊಂದರೆ ಇಲ್ಲ ತಾನೇ” ಅನ್ನುತ್ತಲೇ ಗೇಟ್ ಒಳಗೆ ಬಂದರು ಜಿಟಿಎನ್. ಮನೆಯೊಳಕ್ಕೆ ಬಂದು ಮುಂದಿನ ವರಾಂಡದಲ್ಲಿದ್ದ ಕುರ್ಚಿಯಲ್ಲಿ ಕುಳಿತವರೇ ಕೈನಲ್ಲಿದ್ದ ಬ್ಯಾಗಿನಿಂದ ಕೆಲವು ಕಾಗದದ ಹಾಳೆಗಳನ್ನು ತೆಗೆದು ನನ್ನ ಕೈಯಲ್ಲಿಟ್ಟು, “ಇದನ್ನು ಓದಿ ಏನಾದರೂ ಅರ್ಥವಾಗುತ್ತದೆಯೋ ನೋಡು. ನನಗೇನೂ ಅರ್ಥವಾಗಲಿಲ್ಲ. ನಿನಗೇನಾದರೂ ಅರ್ಥವಾದರೆ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಬರೆದು ಕೊಡಲು ಸಾಧ್ಯವೇ” ಅಂದರು. ಅಂದಿನ ಕಾಲದಲ್ಲಿ ‘ಮನೋವಿಜ್ಞಾನಿ’ ಎಂದು ಖ್ಯಾತನಾಮರಾಗಿದ್ದವರೊಬ್ಬರು ಕನ್ನಡ ವಿಶ್ವಕೋಶಕ್ಕಾಗಿ ಬರೆದಿದ್ದ ‘ಮನೋವಿಜ್ಞಾದ ಇತಿಹಾಸ’ ಎಂಬ ಲೇಖನವಾಗಿತ್ತು. ಏನು ಹೇಳುವುದೆಂದು ಆಲೋಚಿಸಲು ಸಮಯಾವಕಾಶ ನೀಡದೆಯೇ ‘ಅರ್ಜೆಂಟ್ ಏನಿಲ್ಲ. ನಿಧಾನವಾಗಿ ಓದಿ ಅಭಿಪ್ರಾಯ ತಿಳಿಸು. ನಾಳೆ ಇದೇ ಹೊತ್ತಿಗೆ ತಿಳಿಸಿದರೆ ಸಾಕು (!)” ಅಂದರು. “ನಾಳೆಯೇ” ನಾನು ರಾಗ ಎಳೆದೆ. “ಬೇಡ, ನಾಡಿದ್ದು ಬರುತ್ತೇನೆ” ಅಂದು ಎದ್ದು ಹೊರಟೇಹೋದರು. ಆ ಲೇಖನವೋ ೧೯೩೩ ರಲ್ಲಿ ಪ್ರಕಟವಾಗಿದ್ದ ‘ಎ ಹಂಡ್ರಡ್ ಇಯರ್ಸ್ ಆಫ್ ಸೈಕಾಲಜಿ ೧೮೩೩-೧೯೩೩’ ಎಂಬ ಪುಸ್ತಕದಲ್ಲಿ ಇದ್ದ ಮಾಹಿತಿಯನ್ನು ಬೇಕಾಬಿಟ್ಟಿ ಸಂಕ್ಷೇಪಿಸಿ ಮಾಡಿದ ಕೆಟ್ಟ ಭಾಷಾಂತರವಾಗಿತ್ತು. ತದನಂತರ ತೀವ್ರಗತಿಯಲ್ಲಿ ಆಗಿದ್ದ ಬೆಳೆವಣಿಗೆಗಳ ಉಲ್ಲೇಖವೇ ಇರಲಿಲ್ಲ. ಪೂರ್ವನಿಗದಿತ ದಿನದಂದು ಬಂದ ಜಿಟಿಎನ್ ಅವರಿಗೆ ನನ್ನ ಅಭಿಪ್ರಾಯ ತಿಳಿಸಿ, ಆ ಲೇಖನವನ್ನು ಸರಿಪಡಿಸುವ ಬದಲು ಹೊಸದಾಗಿ ಬರೆಯುವುದೇ ಸುಲಭವೆಂದು ಹೇಳಿದೆ. “ಆಯಿತು, ಹಾಗೆಯೇ ಮಾಡು. ಒಂದು ತಿಂಗಳು ಸಮಯ ಕೊಡುತ್ತೇನೆ” ಅಂದು ಹೊರಟೇ ಹೋದರು. ನೀನು ಬರೆದುಕೊಡಬಲ್ಲೆಯಾ ಅಂದೇನಾದರೂ ಕೇಳಿದ್ದರೆ ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಇರಾದೆ ನನ್ನದಾಗಿತ್ತು. ಏಕೆಂದರೆ ಆ ಶೀರ್ಷಿಕೆಯಲ್ಲಿ ಲೇಖನ ಬರೆಯುವುದು ಸುಲಭದ ವಿಷಯವಲ್ಲ. ಅಂತೂ ಇಂತೂ ಲೇಖನ ಸಿದ್ಧಪಡಿಸಿ ನಿಗದಿತ ಸಮಯದ ಒಳಗೆ ಅವರ ಕಛೇರಿಗೆ ಹೋಗಿ ತಲುಪಿಸಿದೆ. ಅವರು ತಕ್ಷಣವೇ ಅದನ್ನು ಸಂಬಂಧಿತ ಸಂಪಾದಕರಿಗೆ ರವಾನಿಸಿ ನನಗೆ ಧನ್ಯವಾದ ಹೇಳಿ ಕಳುಹಿಸಿದರು. ತದನಂತರ ಅದೇನಾಯಿತೆಂದು ನಾನೂ ಕೇಳಲಿಲ್ಲ, ಅವರೂ ಹೇಳಲಿಲ್ಲ. ಅದೆಷ್ಟೋ ವರ್ಷ ಕಳೆದ ಬಳಿಕ (ಅವರು ಸೇವೆಯಿಂದ ನಿವೃತ್ತರಾಗಿದ್ದರು, ನಾನು ನಿವೃತ್ತಿಯ ಅಂಚಿನಲ್ಲಿದ್ದೆ), ಒಂದು ದಿನ ವಿಶ್ವವಿದ್ಯಾನಿಲಯದಿಂದ ರಿಜಿಸ್ಟರ್ಡ್ ಅಂಚೆಯಲ್ಲಿ ಲಕೋಟೆಯೊಂದು ಬಂದಿತು. ಒಡೆದು ನೋಡಿದರೆ ಇದ್ದದ್ದೇನು? ವಿಶ್ವಕೋಶದಲ್ಲಿ ನನ್ನ ಹೆಸರಿನಲ್ಲಿಯೇ ಪ್ರಕಟವಾಗಿದ್ದ ‘ಮನೊವಿಜ್ಞಾನದ ಇತಿಹಾಸ’ ಲೇಖನದ ಕ್ಸಿರಾಕ್ಸ್ ಪ್ರತಿ, ರೂ ೬೨೫ ಗೌ ಸಂಭಾವನೆಯ ಚೆಕ್, ಒಂದು ಧನ್ಯವಾದ ಅರ್ಪಿಸುವ ಪತ್ರ. ಅಂದಮೇಲೆ, ಮೊದಲೇ ಉಲ್ಲೇಖಿಸಿದ್ದ ‘ಖ್ಯಾತನಾಮರ’ ಲೇಖನ ತಿರಸ್ಕೃತವಾಗಿ (ಹೀಗೆ ಮಾಡಲು ಸಾಮಾನ್ಯರಿಂದ ಸಾಧ್ಯವಿಲ್ಲ) ಖ್ಯಾತನಾಮನಲ್ಲದ ನನ್ನ ಲೇಖನ ಸ್ವೀಕೃತವಾಗಿದ್ದಿರಬೇಕಲ್ಲವೇ?

೧೪ ಮಹಾನಾಸ್ತಿಕ?: ಶ್ರೀಯುತರು ಜಾತಕ, ಫಲಜ್ಯೋತಿಷ್ಯ, ಸಾಂಪ್ರದಾಯಿಕ ಮತೀಯಾಚರಣೆಗಳನ್ನು ಕಟುವಾಗಿ ಟೀಕಿಸುತ್ತಿದ್ದದ್ದರಿಂದಲೋ ಏನೋ ಸಂಪ್ರದಾಯವಾದಿಗಳು ‘ಮಹಾನಾಸ್ತಿಕ’ ಎಂದೇ ಅವರನ್ನು (ಅವರ ಬೆನ್ನ ಹಿಂದೆ ತಗ್ಗಿದ ದನಿಯಲ್ಲಿ) ಉಲ್ಲೇಖಿಸುತ್ತಿದ್ದರು. ಅವರು ನಿಜವಾಗಿಯೂ ನಾಸ್ತಿಕರೇ?

ನಮ್ಮಿಬ್ಬರಿಗೂ ಪರಿಚಯವಿದ್ದವರೊಬ್ಬರು ಧರ್ಮ, ಆಧ್ಯಾತ್ಮ ಮುಂತಾದವುಗಳ ಕುರಿತಾಗಿ ಅವರ ಪ್ರಾಮಾಣಿಕ ಅಭಿಪ್ರಾಯ ತಿಳಿಯಬಯಸಿದರು (ಬಹುಮಂದಿ ‘ವಿಚಾರವಾದಿಗಳು’ ತಮ್ಮ ಸಾರ್ವಜನಿಕ ಜೀವನದಲ್ಲಿ ಮಾತ್ರ ವಿಚಾರವಾದಿಗಳಾಗಿರುವುದರಿಂದ ಜಿಟಿಎನ್ ಅವರ ಕುರಿತೂ ಆ ಪರಿಚಯಸ್ಥರಿಗೆ ಸಂಶಯ ಇದ್ದಿರಬೇಕು). ಅವರಿಗೆ ಜಿಟಿಎನ್ ಉತ್ತರ – “ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಗಳನ್ನೂ ಓದಿ. ನನ್ನ ಪ್ರಾಮಾಣಿಕ ಅಭಿಪ್ರಾಯ ಏನೆಂಬುದು ನಿಮಗೇ ತಿಳಿಯುತ್ತದೆ”. ಈ ಉತ್ತರದ ಅರ್ಥ ನಿಮಗಾಗ ಬೇಕಾದರೆ ನೀವೂ ಅಂತೆಯೇ ಮಾಡಬೇಕು! ಜೊತೆಯಲ್ಲಿ ಡಿ ವಿ ಜಿ ಯವರ ‘ಮಂಕು ತಿಮ್ಮನ ಕಗ್ಗ’ವನ್ನೂ ಅರಗಿಸಿಕೊಳ್ಳಿ!!.
ಅವರು ನಿಜವಾಗಿಯೂ ನಾಸ್ತಿಕರಾಗಿದ್ದರೇ?
ಅಂದಹಾಗೆ. ದೇವರ ಅಸ್ತಿತ್ವದ ಕುರಿತಾದ ಚರ್ಚೆಗಳಲ್ಲಿ ಶ್ರೀಯುತರು ಭಾಗವಹಿಸಿದ್ದನ್ನು ನಾನು ಗಮನಿಸಿಲ್ಲ.

೧೫ ಪರಮತ ಗೌರವ: ಯಾವುದೇ ಮತೀಯಾಚರಣೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಅಂದಮಾತ್ರಕ್ಕೆ (ತೋರಿಕೆಗಾಗಿಯೋ, ಪಾಪಪ್ರಜ್ಞೆ ಕಾಡುತ್ತಿರುವುದರಿಂದಲೋ ಅಂಧಶ್ರದ್ಧೆಯಿಂದಲೋ ನಿಜವಾದ ಭಕ್ತಿಯಿಂದಲೋ) ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುವವರನ್ನು ವೈಯಕ್ತಿಕವಾಗಿ ಹೀಗಳೆದದ್ದಾಗಲೀ ಬೇರೆಯವರು ತಮ್ಮ ಮನೆಯಲ್ಲಿ ಮಾಡುತ್ತಿದ್ದ ಮತೀಯಾಚರಣೆಗಳ ಸಂದರ್ಭದಲ್ಲಿ ಆಹ್ವಾನಿಸಿದಾಗ ಅವರನ್ನು ಅಪಹಾಸ್ಯ ಮಾಡಿದ್ದಾಗಲೀ ನನ್ನ ಗಮನಕ್ಕೆ ಬಂದಿಲ್ಲ. ಅಂಥ ಸನ್ನಿವೇಶಗಳಲ್ಲಿ ಆತಿಥೇಯರ ಮನನೋಯುವಂಥದ್ದೇನನ್ನೂ ಮಾಡುತ್ತಲೂ ಇರಲಿಲ್ಲ.

ಉದಾ: ನನ್ನ ತಮ್ಮನ ಮನೆಯಲ್ಲಿ ಪ್ರತೀ ವರ್ಷ ನವರಾತ್ರಿಯ ಅವಧಿಯಲ್ಲಿ ಅದ್ದೂರಿಯಾಗಿ (ಮಾಡಿಸುವ ಪುರೋಹಿತರ ಪ್ರಕಾರ) ಶಾಸ್ತ್ರೋಕ್ತವಾಗಿ ದುರ್ಗಾಪೂಜೆ ಮಾಡಿಸುವ ಸಂಪ್ರದಾಯ ಇತ್ತೀಚಿನ ಕೆಲವು ವರ್ಷಗಳಿಂದ ರೂಢಿಯಲ್ಲಿದೆ. ಅಂಥದ್ದೊಂದು ಸಂದರ್ಭದಲ್ಲಿ ನಾನು ಗಮನಿಸಿದ್ದು – ಪೂಜೆ, ಮಹಾಮಂಗಳಾರತಿ ಇತ್ಯಾದಿಗಳೆಲ್ಲವೂ ಸಾಂಗವಾಗಿ ನಡೆಯಿತು. ಮನೆಯ ಹೊರಗೆ ಕುಳಿತಿದ್ದ ಜಿಟಿಎನ್, ನಾನು ಹಾಗೂ ಇತರ ೪-೫ ಮಂದಿಗೆ ಇದು ತಿಳಿದದ್ದು ಶಂಖ ಜಾಗಟೆಗಳ ಅಬ್ಬರದ ಘೋಷದಿಂದಾಗಿ. ಒಂದೆರಡು ನಿಮಿಷದ ಬಳಿಕ ಜಿಟಿಎನ್ ಎದ್ದು ಮನೆಯೊಳಕ್ಕೆ ಹೊರಟರು. “ಒಳಗೆ ತೀರ್ಥ ಪ್ರಸಾದ ವಿನಿಯೋಗಿಸುತ್ತಿರುವುದರಿಂದ ಜನದಟ್ಟಣೆ ಇದೆ. ಈಗೇಕೆ ಹೋಗುತ್ತೀರಿ” ಅಂದೆ ನಾನು. “ಪೂಜೆಗೆ ಬಂದು ತೀರ್ಥ ಪ್ರಸಾದ ತೆಗೆದುಕೊಳ್ಳದೇ ಇರುವುದು ಹೇಗಯ್ಯಾ?” ಅಂದು ಒಳನುಗ್ಗಿದರು.

೧೬ ಭಾವಶ್ರೀಮಂತಿಕೆ: ಅವರು ಸೇವೆಯಿಂದ ನಿವೃತ್ತರಾದ ಬಳಿಕ ಒಂದು ಬಾರಿ ನಾನು ಸೇವೆಯಲ್ಲಿ ಇದ್ದ ಕಾಲೇಜಿಗೆ ‘ಅತಿಥಿ-ಉಪನ್ಯಾಸ’ ನೀಡಲು ಅವರನ್ನು ಆಹ್ವಾನಿಸಿದ್ದೆ. ವಿಷಯ – ‘ಶಿಕ್ಷಕರಾಗಲಿರುವವರಿಗೆ ನಿವೃತ್ತ ಶಿಕ್ಷಕನ ಸ್ವಾನುಭವದಿಂದ ಮೂಡಿಬಂದ ಕಿವಿಮಾತು’. ಕಾರ್ಯಕ್ರಮ ಮುಗಿದ ಬಳಿಕ ಆಡಳಿತ ಮಂಡಲಿಯವರ ಕಛೇರಿಯಲ್ಲಿ ಅನೌಪಚಾರಿಕ ಹರಟೆ ಹೊಡೆಯುತ್ತಾ ಕಾಫಿ ಕುಡಿದಿದ್ದಾಯಿತು. ಕಛೇರಿಯ ಗುಮಾಸ್ತರು “ಸಾರ್, ಇದನ್ನು ಸ್ವೀಕರಿಸ ಬೇಕು” ಅಂದು ಒಂದು ಲಕೋಟೆಯನ್ನು ಅವರಿಗಿತ್ತು, “ಇಲ್ಲೊಂದು ಸಹಿ ಹಾಕಿ ಸಾರ್” ಅಂದು ಕಾಗದವೊಂದನ್ನು ಇಟ್ಟರು. ಏನಪ್ಪಾ ಇದು ಅನ್ನುತ್ತಾ ಕಾಗದ ಓದಿ, “ಓಹೋ ಈ ಘನಕಾರ್ಯಕ್ಕೆ ಗೌರವ ಸಂಭಾವನೆ ಬೇರೆ ಇದೆಯೋ” ಅಂದು ಸಹಿ ಹಾಕಿದರು. “ಇದು ಅನಿರೀಕ್ಷಿತವಾಗಿ ಅಯಾಚಿತವಾಗಿ ಬಂದ ಧನ. ನೇರ ಅಂಗಡಿಗೆ ಹೋಗಿ ಒಂದು ಒಳ್ಳೆಯ ಪುಸ್ತಕ ಖರೀದಿಸುತ್ತೇನೆ” ಅನ್ನುತ್ತಾ ಹೊರನಡೆದರು.

ನಾವು ಅಂದು ಕೊಟ್ಟದ್ದು ರೂ ೧೦೦ (ಅಂದಿನ ದಿನಗಳಲ್ಲಿ ಅದನ್ನು ಅತೀ ಕಮ್ಮಿ ಎಂದಾಗಲೀ ಅತೀ ಹೆಚ್ಚು ಎಂದಾಗಲೀ ಅನ್ನುವಂತಿರಲಿಲ್ಲ). ಮೊಬಲಗು ಎಷ್ಟು ಅನ್ನುವುದಕ್ಕಿಂತ ಅದನ್ನು ಸ್ವೀಕರಿಸುವಾಗ ಶ್ರೀಯುತರು ಅಭಿವ್ಯಕ್ತಿಸಿದ ಭಾವನೆ ಪ್ರಶಂಶಾರ್ಹ.

೧೭ `ವಿಜ್ಞಾನಿ’ ಪದವಿ!: ಇದೂ ಜಿಟಿಎನ್ ಸೇವೆಯಿಂದ ನಿವೃತ್ತರಾದ ನಂತರ ನಡೆದದ್ದು. ಇಸವಿ ನೆನಪಿಲ್ಲ. ಬೆಳಗ್ಗೆ ಬೆಳಗ್ಗೆ ಸುಮಾರು ೯-೯.೩೦ ಗಂಟೆಗೆ ಮನೆಗೆ ಬಂದವರೇ “ನಿನ್ನಿಂದ ಒಂದು ಉಪಕಾರ ಆಗಬೇಕಲ್ಲ” ಅಂದರು. “ಹೇಳಿ, ನನ್ನಿಂದ ಆಗುವಂತಿದ್ದರೆ ಮಾಡುತ್ತೇನ”. “ಆಗುತ್ತೆ ಅಂತ ನನ್ಗೊತ್ತು. ಆದ್ದರಿಂದಲೇ ನಿನ್ನ ಪರವಾಗಿ ನಾನೇ ಸಮ್ಮತಿ ಸೂಚಿಸಿದ್ದಾಗಿದೆ”. ಸಂಗತಿ ಇಂತಿತ್ತು: ಸರ್ಕಾರೀ ಇಲಾಖೆಯೊಂದು ಧಾರವಾಡದಲ್ಲಿ ಶಾಲಾ ಮಕ್ಕಳಿಗಾಗಿ ‘ಬೇಸಿಗೆ ಶಿಬಿರ’ ಸಂಘಟಿಸಿದ್ದರು. ಅದರ ಒಂದು ಕಾರ್ಯಕ್ರಮಕ್ಕೆ ಶ್ರೀಯುತರನ್ನು ಆಹ್ವಾನಿಸಿದ್ದರು – ರಾತ್ರಿಯ ವೇಳೆ ನಕ್ಷತ್ರ ವೀಕ್ಷಣೆಗೆ ಮಾರ್ಗದರ್ಶನ ಯಾವುದೋ ಕ್ರೀಡಾಂಗಣದಲ್ಲಿ. ಈ ಕಾರ್ಯಕ್ರಮದಲ್ಲಿ ಮಾತ್ರ ಸಾರ್ವಜನಿಕರೂ ಭಾಗವಹಿಸಬಹುದಿತ್ತು. ಶ್ರೀಯುತರಿಗೆ ಹೋಗಲು ಇಷ್ಟವಿರಲಿಲ್ಲ. ಬಲು ಒತ್ತಾಯ ಮಾಡಿದಾಗ “ನೋಡಿ, ಅಷ್ಟು ದೂರ ಬಸ್ಸು ರೈಲು ಪ್ರಯಾಣ ನನ್ನಿಂದ ಸಾಧ್ಯವಿಲ್ಲ. ನೀವು ಮೈಸೂರಿನಿಂದ ಕಾರಿನಲ್ಲಿ ಕರೆದುಕೊಂಡು ಹೋಗಿ ಹಿಂದಕ್ಕೆ ಕರೆದುಕೊಂಡು ಬಂದು ಬಿಡಬೇಕು. ಅಲ್ಲಿ ಊಟ ವಸತಿಯ ವ್ಯವಸ್ಥೆ ನೀವೇ ಮಾಡಬೇಕು” ಅಂದರಂತೆ, ಸರ್ಕಾರೀ ಇಲಾಖೆಯಾದ್ದರಿಂದ ಅಷ್ಟೆಲ್ಲ ಮಾಡಲು ಅವರ ಕೆಂಪುಪಟ್ಟಿ ಅಡ್ಡಿಯುಂಟು ಮಾಡುತ್ತದೆ ಎಂಬ ನಂಬಿಕೆಯಿಂದ. ಜಿಟಿಎನ್ ರವರ ದುರದೃಷ್ಟ, ಇಲಾಖೆಯವರು ಒಪ್ಪಿ “ಹಾಗಾದರೆ ಸಾರ್, ನೀವು ಅಲ್ಲಿಂದಲೇ ಟ್ಯಾಕ್ಸಿ ಮಾಡಿಕೊಂಡು ಬನ್ನಿ, ವೆಚ್ಚ ನಾವು ಭರಿಸುತ್ತೇವೆ. ಒಳ್ಳೆಯ ಹೋಟೆಲಿನಲ್ಲಿ ಊಟ ವಸತಿ ವ್ಯವಸ್ಥೆಯನ್ನೂ ಮಾಡುತ್ತೇವೆ” ಅಂದರಂತೆ. ಶ್ರೀಯುತರು ಈ ಸಂಕಟದಿಂದ ಪಾರಾಗಲು ಇನ್ನೊಂದು ಬಾಣ ಪ್ರಯೋಗಿಸಿದರಂತೆ – “ನೋಡಿ. ನಾನು ಒಬ್ಬನೇ ಬರುವುದು ಕಷ್ಟ. ಜೊತೆಗೆ ಒಬ್ಬರು ಬೇಕಾಗುತ್ತದೆ”. “ಅದೇನೂ ತೊಂದರೆ ಇಲ್ಲ ಸಾರ್. ಮಾರನೇ ದಿನ ಪೂರ್ವಾಹ್ನ ವಿಜ್ಞಾನ ಕುರಿತಾದ ಸಂವಾದ ಆಯೋಜಿಸೋಣ. ಅದರಲ್ಲಿ ಭಾಗವಹಿಸಬಲ್ಲ ಗಣ್ಯರೊಬ್ಬರನ್ನು ನೀವೇ ಮೈಸೂರಿನಿಂದಲೇ ಕರೆತನ್ನಿ. ನೀವೂ ಭಾಗವಹಿಸಿ. ಅವರ ಊಟ ವಸತಿ ವ್ಯವಸ್ಥೆಯನ್ನೂ ಮಾಡುವುದಲ್ಲದೆ ಗೌರವ ಸಂಭಾವನೆಯನ್ನೂ ಕೊಡೋಣ” ಎಂದುತ್ತರಿಸಬೇಕೇ ಇಲಾಖೆಯವರು. ಪ್ರಯೋಗಿಸಿದ ಎಲ್ಲ ಬಾಣಗಳೂ ಗುರಿ ತಲುಪದಿದ್ದ ಮೇಲೆ ಮಾಡುವುದೇನು? “ಸರಿ, ನನ್ನ ಜೊತೆ ಬರುವವರು ಯಾರು ಎಂಬುದನ್ನು ನಿಗದಿ ಪಡಿಸಿ ನಿಮಗೆ ತಿಳಿಸುತ್ತೇನೆ. ಅವರಿಗೆ ಸಾಂಪ್ರದಾಯಿಕ ಆಹ್ವಾನ ನೀಡುವ ಜವಾಬ್ದಾರಿ ನಿಮ್ಮದು” ಅಂದು ನನ್ನ ಹತ್ತಿರ ಬಂದಿದ್ದರು. “ಆಕಾಶ ವೀಕ್ಷಣೆಯ ಭಾಗ, ಸಂವಾದದಲ್ಲಿ ಖಗೋಲ ಶಾಸ್ತ್ರ ಮತ್ತು ಗಣಿತ ಸಂಬಂಧಿತ ಪ್ರಶ್ನೆಗಳು ಬಂದರೆ ನಾನು ನೋಡಿಕೊಳ್ಳುತ್ತೇನೆ, ಉಳಿದವನ್ನು ನೀನು ನಿಭಾಯಿಸು” ಅಂದಾಗ ಅರೆಮನಸ್ಸಿನಿಂದ ಒಪ್ಪಿದೆ. ನಿಗದಿತ ದಿನದಂದು ಸಂಜೆ ಸುಮಾರು ೫.೩೦ರ ವೇಳೆಗೆ ದಾರವಾಡದಲ್ಲಿ ನಮಗೆಂದು ಕೊಠಡಿ ಕಾಯ್ದಿರಿಸಿದ್ದ ಹೋಟೆಲ್ ತಲುಪಿದೆವು. ಅಂದು ನನಗೇನೂ ಕೇಲಸವಿರಲಿಲ್ಲ.

ಆಕಾಶ ವಿಕ್ಷಣೆಗೆ ಸಂಘಟಕರು ಆಯ್ಕೆ ಮಾಡಿದ್ದ ಸ್ಥಳ ಯಾವುದೋ ದೊಡ್ಡ ಕ್ರೀಡಾಂಗಣ. ಪೂರ್ವನಿಗದಿತ ಸಮಯಕ್ಕೆ ನಾವು ಅಲ್ಲಿಗೆ ತಲುಪಿದಾಗ ಸಾವಿರಾರು ಜನ ಅಲ್ಲಿ ಜಮಾಯಿಸಿದ್ದರು. ಕ್ರೀಡಾಂಗಣದ ಒಂದು ತುದಿಯಲ್ಲಿ ಇದ್ದ ವೇದಿಕೆಯೊಂದರ ಮೇಲೆ ನಿಂತ ಜಿ ಟಿ ಎನ್ ಅವರ ಮಾಮೂಲೀ ಶೈಲಿಯಲ್ಲಿ ಕೈನಲ್ಲಿದ್ದ ಟಾರ್ಚ್ ನೆರವಿನಿಂದ ತಮ್ಮ ವಿವರಣೆ ಕೊಡಲಾರಂಭಿಸಿದರು. ಧ್ವನಿವರ್ಧಕ ವ್ಯವಸ್ಥೆ ಇದ್ದದ್ದರಿಂದ ಅವರ ವಿವರಣೆ ಸೂಚನೆ ಎಲ್ಲರಿಗೂ ಕೇಳುತ್ತಿತ್ತು. ತಾವು ಹೇಳಿದ್ದು ಕೇಳುಗರಿಗೆ ಅರ್ಥವಾಯಿತೇ ಅಥವ ತಮ್ಮ ಸೂಚನೆಗಳನ್ನು ಕೇಳಿ ಅದರಂತೆ ಜನ ತಾರೆಗಳನ್ನು ವೀಕ್ಷಿಸಿದರೇ ಇಲ್ಲವೇ ಎಂಬುದನ್ನು ತಿಳಿಯುವ ಅವಕಾಶ ಇಲ್ಲದ ವ್ಯವಸ್ಥೆ ಅದಾಗಿದ್ದರಿಂದ ‘ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು’ ಎಂದು ಸಂಘಟಕರು ವರದಿ ಮಾಡಲು ಅಡ್ಡಿ ಇರಲಿಲ್ಲ. ನನ್ನ ಪ್ರಕಾರ ಶ್ರೀಯುತರ ಸೂಚನೆಗಳನ್ನು ಗ್ರಹಿಸಿ ಎಲ್ಲವನ್ನೂ ವೀಕ್ಷಣೆ ಮಾಡಿದವರ ಸಂಖ್ಯೆ ಶೇ ೧ ರಷ್ಟು ಇದ್ದಿರಬಹುದೋ ಏನೋ.

ಇದರಿಂದ ನಮಗೆ ಅರ್ಥವಾದದ್ದು ಇಷ್ಟು: ೧. ಶಿಬಿರ ಯಶಸ್ವಿಯಾಯಿತು ಎಂದು ಬಿಂಬಿಸಲು ಜಿಟಿಎನ್ ಅವರಿಗಿದ್ದ ‘ತಾರಾ ಮೌಲ್ಯ (ಸ್ಟಾರ್ ವ್ಯಾಲ್ಯೂ)’ದ ಲಾಭ ಪಡೆಯುವುದೇ ಕಾರ್ಯಕ್ರಮದ ಉದ್ದೇಶ. ೨. ಈ ಉದ್ದೇಶ ಈಡೇರಬೇಕಾದರೆ ‘ಜನಸಾಮಾನ್ಯರಲ್ಲಿ ವೈಜ್ಞಾನಿಕತೆ ಹೆಚ್ಚಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವವರೂ, ಜನಪ್ರಿಯ ಶಿಕ್ಷಕರೂ ಉತ್ತಮ ವಾಗ್ಮಿಗಳೂ’ (ಇದು ಸಂಘಟಕರು ನನ್ನನ್ನು ಪರಿಚಯಿಸಿದ ರೀತಿ) ಆಗಿರುವ ಎವಿಜಿ ಗೂ ಅನಿವಾರ್ಯವಾಗಿ ಒಂದು ವೇದಿಕೆ ಸೃಷ್ಟಿಸಬೇಕಾದ್ದರಿಂದ ‘ವಿಜ್ಞಾನಿಗಳೊಡನೆ ಸಂವಾದ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ತತ್ಪರಿಣಾಮವಾಗಿ ನಮ್ಮಿಬ್ಬರಿಗೂ ‘ವಿಜ್ಞಾನಿ’ ಎಂಬ ಬಿರುದು ದೊರೆತಿತ್ತು. ಅದೇನೇ ಇರಲಿ, ಶಿಬಿರದಲ್ಲಿದ್ದ ಮಕ್ಕಳು ಮುಗ್ಧರಾಗಿದ್ದರಿಂದ ‘ಸಂವಾದ’ ಕಾರ್ಯಕ್ರಮ ನಿಜವಾಗಿಯೂ ಬಲು ಸೊಗಸಾಗಿತ್ತು. [ಮಂಡ್ಯದವರು ಯಾರೋ ಜಿಟಿಎನ್ ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸಿದಾಗ ತಪ್ಪಿಸಿಕೊಳ್ಳಲು ಇದೇ ತಂತ್ರ ಪ್ರಯೋಗಿಸಿ ಅಯಶಸ್ವಿಗಳಾದ ನಂತರ ಈ ತಂತ್ರ ಪ್ರಯೋಗ ನಿಲ್ಲಿಸಿದರು.]

೧೮ ಜನಪ್ರಿಯತೆ: ನಾನು ಮೈಸೂರಿನಲ್ಲಿ ಕ ರಾ ವಿ ಪ ಘಟಕದ ಸಕ್ರಿಯ ಕಾರ್ಯಕರ್ತನಾಗಿದ್ದ ದಿನಗಳ ನೆನಪಿದು. ಬಾಲವಿಜ್ಞಾನದ ಸಂಪಾದಕ ಮಂಡಲಿಯ ಸದಸ್ಯನೂ ಆಗಿದ್ದೆ. ಕ ರಾ ವಿ ಪ ದಲ್ಲಿ ನಾನೊಂದು ಸಂಗತಿ ಗಮನಿಸಿದ್ದೆ – ಜಿಟಿಎನ್ ಅವರನ್ನು ಕ ರಾ ವಿ ಪ ದ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಹ್ವಾನಿಸುತ್ತಿರಲಿಲ್ಲ. ಕಾರಣ ತಿಳಿಯಲು ಪ್ರಯತ್ನಿಸಿದಾಗ ಯಾರಿಂದಲೂ ಖಚಿತ ಉತ್ತರ ದೊರೆಯದೇ ಇದ್ದರೂ ನಾನು ಅಂದಾಜಿಸಿದ ಕಾರಣ – ಆಡಳಿತ ಮಂಡಲಿಯ ಸೂತ್ರದಾರರಿಗೆ ಜಿಟಿಎನ್ ಕುರಿತಾಗಿ ಇದ್ದ ವೈಯಕ್ತಿಕ ಅಸಮಾಧಾನ.

ಜನಪ್ರಿಯ ವಿಜ್ಞಾನ ಸಾಹಿತ್ಯದ ಯುವ ಬರೆಹಗಾರರಿಗೆಂದು ತೀರ್ಥಹಳ್ಳಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ತರಬೇತಿ ಶಿಬಿರವೊಂದನ್ನು ಆಯೋಜಿಸಿತ್ತು (ಇಸವಿ ನೆನಪಿಲ್ಲ). ಶ್ರೀ ಜೆ ಆರ್ ಲಕ್ಷ್ಮಣರಾವ್ ಅವರ ನೇತೃತ್ವದಲ್ಲಿ ಶ್ರೀ ಅಡ್ಯನಡ್ಕ ಕೃಷ್ಣಭಟ್ಟರು ಮತ್ತು ನಾನು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸುವ ಆಡಳಿತ ಮಂಡಲಿಯ ನಿರ್ಧಾರ ತಿಳಿಸುವ/ಒಪ್ಪಿಗೆ ಸೂಚಿಸ ಬೇಕೆಂಬ ಕೋರಿಕೆಯ ಪತ್ರ ನನ್ನ ಕೈಸೇರಿದಾಗ ಒಪ್ಪಿಗೆ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ನೀಡಿದ ಬಳಿಕ “ಈ ಬಾರಿ ವಿಶೇಷ ಉಪನ್ಯಾಸಕ್ಕೆಂದು ಜಿಟಿಎನ್ ಅವರನ್ನು ೧-೨ ದಿನಗಳ ಮಟ್ಟಿಗೆ ಏಕೆ ಆಹ್ವಾನಿಸಬಾರದು?” ಎಂದು ಶಿಬಿರದ ಸೂತ್ರಧಾರಿಗಳನ್ನು ಕೇಳಿದೆ. ಅವರು ಉತ್ತರ ಕೊಡುವ ಮೊದಲೇ “ಶ್ರೀಯುತರ ಕುರಿತಾಗಿ, ಅವರ ಆಚಾರವಿಚಾರಗಳ ಕುರಿತಾಗಿ, ಅವರ ಬರೆವಣಿಗೆಯ ಶೈಲಿ ಭಾಷೆಗಳ ಕುರಿತಾಗಿ ನಮ್ಮ ಅಭಿಪ್ರಾಯ ಏನೇ ಇರಲಿ. ಅವರೊಂದಿಗಿನ ವೈಯಕ್ತಿಕ ಸಂಬಂಧದಲ್ಲಿ ಆದ ಅನುಭವಗಳು ಏನೇ ಇರಲಿ. ಅವರ ಅನುಭವದ ಲಾಭ ಇತರರಿಗೆ ಆಗಲು ವೇದಿಕೆ ಒದಗಿಸಬೇಕಾದದ್ದು ಕ ರಾ ವಿ ಪದ ಕರ್ತವ್ಯ ಎಂಬುದು ನನ್ನ ಅಭಿಮತ” ಅಂದು ಅಲ್ಲಿಂದ ಹೊರಟೆ. ತದನಂತರ ಏನು ನಡೆಯಿತೋ ನನಗೆ ಗೊತ್ತಿಲ್ಲ. ಒಂದೆರಡು ದಿನಗಳ ಬಳಿಕ ದಾರಿಯಲ್ಲಿ ಸಿಕ್ಕ ಜಿಟಿಎನ್ “ಏನಯ್ಯಾ ಇದು ಪವಾಡ” ಅನ್ನುವ ಮುನ್ನುಡಿಯೊಡನೆ ತರಬೇತಿ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಲು ಕ ರಾ ವಿ ಪ ದವರು ಆಹ್ವಾನಿಸಿದ ವಿಷಯ ತಿಳಿಸಿದರು, “ಇದರಲ್ಲಿ ನಿನ್ನ ಕೈವಾಡ ಏನೂ ಇಲ್ಲ ತಾನೆ?” ಎಂಬ ಒಗ್ಗರಣೆಯೊಂದಿಗೆ. ಯುಕ್ತ ಪೂರ್ವಸಿದ್ಧತೆಯೊಂದಿಗೆ ಅವರು ಅಲ್ಲಿ ಮಾಡಿದ ವಿಶೇಷ ಉಪನ್ಯಾಸಕ್ಕೆ ಶಿಬಿರವಾಸಿಗಳಷ್ಟೇ ಮಂದಿ ಅಲ್ಲದೆ, ಸ್ಥಳೀಯ ಆಸಕ್ತ ಮಂದಿ ಆಹ್ವಾನ ಇಲ್ಲದೇ ಇದ್ದರೂ ಬಹುಸಂಖ್ಯೆಯಲ್ಲಿ ಆಗಮಿಸಿ ಸುಮಾರು ೧.೩೦ ಗಂಟೆ ಅವಧಿಯ ಉಪನ್ಯಾಸವನ್ನು ತದೇಕಚಿತ್ತದಿಂದ ಕೇಳಿದ್ದನ್ನು ಮರೆಯುವಂತಿಲ್ಲ.

೧೯ ಸಾರ್ವಜನಿಕ ಯಾಚನೆಗಿಲ್ಲದ ಸಂಕೋಚ: ಮೈಸೂರಿನ ಗಾನ ಭಾರತೀ ಸಂಸ್ಥೆಯ ಕಾರ್ಯದರ್ಶಿಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದ ಅವಧಿ. ಸಂಸ್ಥೆಗೆ ಮಂಜೂರಾಗಿದ್ದ ನಿವೇಶನದಲ್ಲಿ ಸಭಾಂಗಣ ನಿರ್ಮಿಸಲೋಸುಗ ಹಣ ಸಂಗ್ರಹಿಸಲು ಆಡಳಿತ ಮಂಡಲಿಯ ಸದಸ್ಯರು ಹೆಣಗಾಡುತ್ತಿದ್ದಾಗ ಒಮ್ಮೆ ನೋಡಿದ್ದು. ಆಗ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಜಿಟಿಎನ್ ರಸ್ತೆಯಲ್ಲಿ ಎಲ್ಲಿಗೋ ನಡೆದುಕೊಂಡು ಹೋಗುತ್ತಿದ್ದರು. ನಾನೂ ಅವರೊಂದಿಗಿದ್ದದ್ದು ಆಕಸ್ಮಿಕ. ಪರಿಚಯಸ್ಥರೊಬ್ಬರು ದಾರಿಯಲ್ಲಿ ಸಿಕ್ಕರು. ಬಹು ದಿನಗಳ ನಂತರ ಆದ ಆಕಸ್ಮಿಕ ಭೇಟಿ ಅದು. ಉಭಯ ಕುಶಲೋಪರಿ ಆದ ಬಳಿಕ ಅವರು ಜಿಟಿಎನ್ ಅವರ ಆಕಾಶವೀಕ್ಷಣೆ ಕಾರ್ಯಕ್ರಮಗಳ ಕುರಿತು ತುಸು ಹೆಚ್ಚೇ ಹೊಗಳಿದರು. ಅದನ್ನೆಲ್ಲ ಮೌನವಾಗಿ ಕೇಳಿಸಿಕೊಂಡ ಜಿಟಿಎನ್ ಗಾನ ಭಾರತೀ ಕರಪತ್ರವನ್ನು ಅವರಿಗೆ ಕೊಟ್ಟು ಸಂಕ್ಷಿಪ್ತವಾಗಿ ಉದ್ದೇಶ ವಿವರಿಸಿ “ನಿಮ್ಮಿಂದ ನಾವು ಎಷ್ಟು ಧನಸಹಾಯ ನಿರೀಕ್ಷಿಸಬಹುದು” ಎಂದು ಯಾವ ಸಂಕೋಚವೂ ಇಲ್ಲದೆ ಕೇಳಿಯೇಬಿಟ್ಟರು. ಈ ಅನಿರೀಕ್ಷಿತ ಕೋರಿಕೆಯಿಂದ ಆ ಪರಿಚಿತರಿಗೂ ಆಘಾತವಾಗಿತ್ತು ಎಂಬುದನ್ನು ಅವರ ಮುಖಭಾವವೇ ಸಾರುತ್ತಿತ್ತು. ಏನು ಉತ್ತರ ಕೊಡಬೇಕೆಂದು ಅವರು ತೊಳಲಾಡುತ್ತಿದ್ದಾಗ “ವಿ ರಿಸೀವ್ ವಿತ್ ಗ್ರ್ಯಾಟಿಟ್ಯೂಡ್ ಈವನ್ ಸ್ಮಾಲ್ ಅಮೌಂಟ್ಸ್. ಈವನ್ ೫೦ ಪೈಸ” ಅಂದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಜಿಟಿಎನ್ ಅವರಿಂದ ತಪ್ಪಿಸಿಕೊಳ್ಳುವ ಅನ್ಯಮಾರ್ಗ ಕಾಣದೆ ರೂ ೧೦೦ ಅನ್ನು ತೆತ್ತು ರಸೀತಿ ಪಡೆದು ಕಾಲ್ಕಿತ್ತರು. ಅವರು ಹೋದ ಬಳಿಕ ಜಿಟಿಎನ್ ಉವಾಚ – “ಭಿಕ್ಷೆ ಬೇಡಲು ಹೊರಟವನಿಗೆ ಸಂಕೋಚ ಯಾಕೆ? ಅಷ್ಟಕ್ಕೂ ಈ ಭಿಕ್ಷಾಟನೆ ಮಾಡುತ್ತಿರುವುದು ಸದುದ್ದೇಶಕ್ಕೆ ತಾನೇ?” (ಜಿಟಿಎನ್ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿದವರಲ್ಲಿ ಒಬ್ಬರು)

೨೦ ನಿರ್ಮೋಹ ಪರೋಪಕಾರಿ: ಇದು ನನ್ನ ಇನ್ನೊಬ್ಬ ಹಿರಿಯ ಮಿತ್ರರು ಹೇಳಿದ್ದು. ಅವರು ಶಿವರಾಮ ಕಾರಂತರ ಕುರಿತು ಲೇಖನವೊಂದನ್ನು ಬರೆಯಬೇಕಾಗಿತ್ತಂತೆ. ಅದಕ್ಕಾಗಿ ಅಗತ್ಯವಿರುವ ಸಾಮಗ್ರಿ ಸಂಗ್ರಹಿಸುತ್ತಿದ್ದ ವಿಷಯ ಜಿಟಿಎನ್ ಅವರಿಗೆ ಹೇಗೋ ತಿಳಿದು ಅವರ ಮನೆಗೇ ಹೋಗಿ “ನೀವು ಮಾಡುತ್ತಿರುವ ಕಾರ್ಯದ ಬಗ್ಗೆ ತಿಳಿಯಿತು. ನಿಮಗೆ ಬಲು ಉಪಯುಕ್ತವಾಗ ಬಹುದಾದ ಮಾಹಿತಿ ಕೊಡಬಲ್ಲವರು ಕೊಡಗಿನ ಸುಂಟಿಕೊಪ್ಪದಲ್ಲಿ ಜಿ ಎಮ್ ಮಂಜನಾಥಯ್ಯ (ಇವರು ನನಗೆ ಸಂಬಂಧದಲ್ಲಿ ಅಜ್ಜ. ಅವರ ಪತ್ನಿ ನನ್ನ ತಂದೆಯ ತಾಯಿಯ ತಂಗಿ. ಕಾರಂತರು ಇವರ ಮನೆಯಲ್ಲಿ ತಿಂಗಳುಗಟ್ಟಲೆ ಇದ್ದು ಕಾದಂಬರಿಗಳನ್ನು ಬರೆಯುತ್ತಿದ್ದದ್ದನ್ನು ನಾನು ನೋಡಿದ್ದೇನೆ) ಎಂಬ ಕಾಫಿ ಎಸ್ಟೇಟ್ ಮಾಲೀಕರೊಬ್ಬರಿದ್ದಾರೆ. ನನಗೆ ಅವರ ಪರಿಚಯ ಚೆನ್ನಾಗಿದೆ. ಬನ್ನಿ ನಾನು ಕರೆದುಕೊಂಡು ಹೋಗುತ್ತೇನೆ” ಅಂದು ಬಲವಂತವಾಗಿ ಕರೆದುಕೊಂಡು ಹೋಗಿದ್ದರಂತೆ.

ಇದರಲ್ಲಿ ಒಂದು ವೈಶಿಷ್ಟ್ಯವೂ ಇರುವುದರಿಂದ ನನ್ನ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಆ ಹಿರಿಯ ಮಿತ್ರರಿಗೆ ಜಿಟಿಎನ್ ಕುರಿತಂತೆ ವೈಯಕ್ತಿಕವಾಗಿ ಬಹಳ ಅಸಮಾಧಾನ ಇತ್ತು. ಅದನ್ನವರು ತಮ್ಮ ಆಪ್ತರೊಂದಿಗೆ ಹೇಳುತ್ತಲೂ ಇದ್ದರು. ಜಿಟಿಎನ್ ಅವರು ನನಗೆ ಬಂಧುಗಳು ಎಂಬುದು ತಿಳಿದಿದ್ದರೂ ಅನೇಕ ಬಾರಿ ನನ್ನೊಂದಿಗೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಜಿಟಿಎನ್ ಅವರಿಗೆ ತಿಳಿದೂ ಇತ್ತು. ಆದರೆ ಎಂದೂ ಜಿಟಿಎನ್ ಅವರ ಕುರಿತಾಗಿ “ಹೇಗಿದ್ದಾರಪ್ಪಾ ಗುರುಗಳು. ಈಗ ಏನು ಕೆಲಸ ಮಾಡ್ತಾ ಇದ್ದಾರೆ” ಎಂದು ಕೇಳುವುದನ್ನು ಬಿಟ್ಟರೆ ಬೇರೇನೂ ಟೀಕೆ ಮಾಡುತ್ತಿರಲಿಲ್ಲ.

೨೧ ಕನ್ನಡದ ಕೆಲಸ?: ಅದೊಂದು ದಿನ, ಅನಿರೀಕ್ಷಿತವಾಗಿ ಜಿಟಿಎನ್ ಅವರಿಂದ ದೂರವಾಣಿ ಕರೆ ಬಂದಿತು. ಮಾರನೇ ದಿನ ಬೆಳಗ್ಗೆ ೧೦.೩೦ ರ ನಂತರ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತಮ್ಮನ್ನು ಕಾಣಬೇಕೆಂಬುದು ಕರೆಯ ತಿರುಳು. ಏತಕ್ಕೆಂದು ಕೆದಕಿದಾಗ ನನಗೆ ಅರ್ಥವಾದದ್ದು ಇಷ್ಟು: ಕನ್ನಡ ವಿಶ್ವಕೋಶವನ್ನು ಪರಿಷ್ಕರಿಸಿ ಡಿಜಿಟಲ್ ರೂಪು ಕೊಡಲು ವಿಶ್ವವಿದ್ಯಾಲಯ ನಿರ್ಧರಿಸಿದ್ದನ್ನು ತಿಳಿದ ಜಿಟಿಎನ್ ಯಾವುದೇ ಸಂಭಾವನೆ ಪಡೆಯದೇ ಪರಿಷ್ಕರಣಾ ಕಾರ್ಯದಲ್ಲಿ ನೆರವು ನೀಡುವುದಾಗಿ ಸ್ವಯಂಪ್ರೇರಿತ ಭರವಸೆ ನೀಡಿದ್ದರು. ‘ಈ ಕನ್ನಡದ ಕೆಲಸ’ದಲ್ಲಿ ನೆರವು ನೀಡಲು ನನ್ನಿಂದ ಸಾಧ್ಯವೇ ಎಂಬುದನ್ನು ತಿಳಿಯಬೇಕಿತ್ತು. ಅಡ್ಯನಡ್ಕ ಕೃಷ್ಣಭಟ್ಟರ ನೆರವು ಕೋರಿರುವ ವಿಷಯವನ್ನೂ ತಿಳಿಸಿದರು. ಮರುದಿನ ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಅವರನ್ನು ಹುಡುಕಿದೆ. ಎಲ್ಲಿಯೂ ಗೋಚರಿಸಲಿಲ್ಲ. ನನಗೆ ಪರಿಚಯವಿದ್ದ ಪ್ರಾಧ್ಯಾಪಕರೊಬ್ಬರನ್ನು ಹಿಡಿದು ವಿಚಾರಿಸಿದೆ. “ಜಿ ಟಿ ಎನ್ನಾ, ಓ ಅಲ್ಲಿ ಸೆಲ್ಲಾರ್ ನಲ್ಲಿ ಇದ್ದಾರೆ ನೋಡಿ” ಅಂದರು. ಅವರ ಮಾತಿನ ಧಾಟಿ, ದೇಹಭಾಷೆ ಇವೆರಡೂ ‘ಇಲ್ಲೇನೋ ತಪ್ಪಾಗಿದೆ’ ಅನ್ನುವುದನ್ನು ಸಾರುತ್ತಿದ್ದವು. ಅಲ್ಲೊಂದು ಸೆಲ್ಲಾರ್ ಇರುವ ವಿಷಯವೇ ನನಗೆ ಗೊತ್ತಿರಲಿಲ್ಲ. ಸೆಲ್ಲಾರ್ ಗೆ ಹೋದೆ. ಬಲು ದೊಡ್ಡ ನೆಲಮಾಳಿಗೆ ಅದು. ಸುಮಾರು ೧೦-೧೫ ಪುಟ್ಟಪುಟ್ಟ ಮರದ ಮೇಜುಗಳು (ಶಾಲಾ ತರಗತಿಗಳಲ್ಲಿ ಅಂಥ ಮೇಜುಗಳು ಈಗಲೂ ಇವೆ), ಪ್ರತೀ ಮೇಜಿಗೊಂದು ಕಬ್ಬಿಣದ ಮಡಚುವ ಕುರ್ಚಿ, ಪ್ರತೀ ಮೇಜಿನ ಮೇಲೂ ಮುದ್ರಿತ ಹಾಳೆಗಳನ್ನು ಜೋಡಿಸುತ್ತಲೋ, ಮಡಚುತ್ತಲೋ ಇದ್ದ ಯುವಕರು. ವಿದ್ಯುತ್ಪಂಖದ ಸೌಲಭ್ಯವೂ ಇಲ್ಲ. ಆ ಕೊಠಡಿಯ ಒಂದು ಕೊನೆಯಲ್ಲಿ ಒಂದು ಅಂಥದ್ದೇ ಕುರ್ಚಿ-ಮೇಜು ಶ್ರೀಯುತರ ಕಾರ್ಯಾಲಯ. ಇದನ್ನು ನೋಡಿದ ತಕ್ಷಣ ನನಗನ್ನಿಸಿದ್ದು – ಛೆ ಇದೆಂಥ ವಿಶ್ವವಿದ್ಯಾನಿಲಯ. ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ಅನೇಕ ಅಯಾಚಿತ ಪ್ರಶಸ್ತಿಗಳನ್ನು ಪಡೆದ ಹಿರಿಯರೊಬ್ಬರು ಸ್ವಪ್ರೇರಣೆಯಿಂದ ನೆರವು ನೀಡಲು ಬಂದಾಗ ಅವರೊಂದಿಗೆ ನಡೆದುಕೊಳ್ಳುವ ರೀತಿಯೇ ಇದು? ನನ್ನನ್ನು ಕಂಡೊಡನೆ ಜಿಟಿಎನ್ “ಬಂದದ್ದು ಒಳ್ಳೇದಾಯಿತು” ಅಂದು ಆಗಬೇಕಾದ ಕಾರ್ಯ ವಿವರಿಸಿದ್ದಲ್ಲದೆ ಇದಕ್ಕೆ ಯಾವುದೇ ಸಂಭಾವನೆ ದೊರೆಯುವುದಿಲ್ಲವೆಂದೂ “ಇಷ್ಟವಿದ್ದರೆ ಒಪ್ಪಿಕೋ. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಆಗುವುದಿಲ್ಲ ಅಂದರೆ ನನಗೇನೂ ಬೇಸರವಿಲ್ಲ” ಅಂದರು. ಒಟ್ಟಾರೆ ಸನ್ನಿವೇಶದಿಂದ ನಾನು ಊಹಿಸಿದ್ದು – ವಿಶ್ವವಿದ್ಯಾನಿಲಯಕ್ಕೆ ಶ್ರೀಯುತರ ಸೇವೆಯನ್ನು ಪಡೆಯುವ ಯಾವುದೇ ಉದ್ದೇಶವು ಇರಲಿಲ್ಲವಾದರೂ ‘ಸ್ವಪ್ರೇರಣೆಯಿಂದ ಉಚಿತ ಸೇವೆ ಸಲ್ಲಿಸುತ್ತೇನೆಂದು ಬಂದವರನ್ನು ಬೇಡ ಅಂದು ಹಿಂದಕ್ಕೆ ಕಳುಹಿಸುವುದು ಹೇಗೆ. ವಿಶೇಷ ಮರ್ಯಾದೆ ಕೊಡದೇ ಇದ್ದರೆ ಅವರಾಗಿಯೇ ಬಿಟ್ಟು ಹೋದಾರು’ ಎಂಬುದು ವಿಶ್ವವಿದ್ಯಾನಿಲಯದ ಧೋರಣೆ ಆಗಿರಬೇಕು. ನಾನೇನೋ ನಯವಾಗಿ “ಇದಕ್ಕೆ ನಾನು ಸಿದ್ಧನಿಲ್ಲ” ಎಂದು ಹೇಳಿ ಹೊರಬಂದೆ. ಜಿಟಿಎನ್ ಅವರೂ ವಿಶ್ವವಿದ್ಯಾನಿಲಯಕ್ಕೆ ಕೈಮುಗಿದು ಹೊರಬರುವಂತೆ ಮಾಡುವುದು ಹೇಗೆ? ಎಂಬ ಚಿಂತೆ ನನ್ನನ್ನು ಕಾಡತೊಡಗಿತು. ಅದೃಷ್ಟವಶಾತ್, ಯಾವುದೋ ಸಮಾರಂಭದಲ್ಲಿ ಶ್ರೀ ಅಡ್ಯನಡ್ಕ ಕೃಷ್ಣಭಟ್ಟರ ಭೇಟಿ ಆಯಿತು. ಅವರಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ತಿಳಿಸಿದೆ. ಬೇಸರವಾದರೂ ನೇರವಾಗಿ ಅವರೇನನ್ನೂ ಮಾಡುವಂತಿರಲಿಲ್ಲ. ಜಿಟಿಎನ್ ಕೃಷ್ಣಭಟ್ಟರ ನೆರವನ್ನೂ ಕೋರಿದ್ದ ವಿಷಯ ಈ ಮೊದಲೇ ಹೇಳಿದ್ದೇನಲ್ಲವೇ? ಆ ವಿಷಯದ ಕುರಿತು ವಿಚಾರಿಸುವ ನೆಪದಲ್ಲಿ ಕೃಷ್ಣಭಟ್ಟರು ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಜಿಟಿಎನ್ ಕಾರ್ಯನಿರ್ವಹಿಸುತ್ತಿದ್ದ ಸನ್ನಿವೇಶ ಮತ್ತು ಕಾರ್ಯದ ಅಗಾಧತೆಯನ್ನು ಅರ್ಥಮಾಡಿಕೊಂಡು ಬಲು ಜಾಣತನದಿಂದ ಈ ಕಾರ್ಯಕ್ಕೆ ಕೈಹಾಕದೇ ಇರುವುದೇ ಲೇಸೆಂದು ಅವರಿಗೆ ತಿಳಿಸಿದರಂತೆ. ಕೆಲ ದಿನಗಳ ಬಳಿಕ ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಸಿಕ್ಕ ಜಿಟಿಎನ್ “ಯೂನಿವರ್ಸಿಟಿ ಕೆಲಸ ನನ್ನ ಕೈಲಿ ಆಗುವುದಿಲ್ಲ ಎಂದು ಬಿಟ್ಟು ಬಂದೆ. ನನಗೂ ವಯಸ್ಸಾಯಿತು ನೋಡು (ಸಧ್ಯ, ಈಗಲಾದರೂ ತಿಳಿಯಿತಲ್ಲ – ಇದು ನನ್ನ ಸ್ವಗತ)” ಅಂದರು. ನೆರವು ನೀಡಲು ನಾನು ನಿರಾಕರಿಸಿದ್ದು ಮತ್ತು ಕೃಷ್ಣಭಟ್ಟರ ಕಿವಿಮಾತು ನಾವು ಅಪೇಕ್ಷಿಸಿದ ಪರಿಣಾಮ ಉಂಟುಮಾಡಿತ್ತು.

೨೨ ಪರಗುಣವನ್ನು ಪರ್ವತ ಮಾಡಿ: ಒಂದು ದಿನ ನನ್ನ ಮನೆಗೆ ಬಂದವರೇ ಕೇಳಿದರು “ಈ ರಸ್ತೆಯಲ್ಲಿ ಒಬ್ಬರು ನಿವೃತ್ತ ಫಿಸಿಕ್ಸ್ ಪ್ರೊಫೆಸರ್ ಇದ್ದಾರಂತಲ್ಲ. ಯಾವುದು ಅವರ ಮನೆ?”. “ಎಸ್ ಎನ್ ಪ್ರಸಾದ್ ಮನೆಯೇ?” “ಅಲ್ಲ, ಇನ್ನೊಬ್ಬರು ಇದ್ದಾರಂತೆ, ಅವರದ್ದು ಪುಸ್ತಕ ಪ್ರಕಾಶನವೂ ಇದೆ” ನಮ್ಮ ಮನೆಯ ಎದುರಿನ ರಸ್ತೆಯಲ್ಲಿ ಸವಂತ ನಿವಾಸದಲ್ಲಿ ಇರುವ ಶ್ರೀ ಶಿವಾನಂದ ಅನ್ನುವವರ ಮನೆ ಹುಡುಕುತ್ತಿದ್ದಾರೆಂದು ತಿಳಿದು, ಮನೆ ತೋರಿಸಿದೆ. ನೇರವಾಗಿ ಅಲ್ಲಿಗೆ ಹೋದರು. ಅಂದು ಸಂಜೆಯ ವಾಕಿಂಗ್ ವೇಳೆಯಲ್ಲಿ ಶ್ರೀ ಶಿವಾನಂದ ಅವರು “ಜಿಟಿಎನ್ ನಮ್ಮ ಮನೆಗೆ ಬಂದಿದ್ದರು. ನೀವು ಮನೆ ತೋರಿಸಿದರಂತೆ” ಅಂದರು. ನಾನು ಕೇಳಿದೆ “ತೋರಿಸಿದ್ದು ನಿಜ. ವಿಷಯ ಏನು?”. ನಮ್ಮ ಪ್ರಕಾಶನದ ಪುಸ್ತಕವೊಂದನ್ನು ಓದಿದಾಗ ಅದು ಅವರಿಗೆ ಬಹಳ ಮೆಚ್ಚುಗೆಯಾಯಿತಂತೆ. “ಇಂಥ ಒಳ್ಳೆಯ ಪುಸ್ತಕ ಪ್ರಕಾಶನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಲು ಬಂದಿದ್ದರು” ಅಂದು ಜಿಟಿಎನ್ ರ ‘ದೊಡ್ಡತನ’ವನ್ನು ಶ್ಲಾಘಿಸಿದರು. ಮೆಚ್ಚಿದ್ದನ್ನು ನೇರವಾಗಿ (ಕೆಲವೊಮ್ಮೆ ಅತಿಯಾಗಿ) ಹೊಗಳುವುದೂ, ಮೆಚ್ಚದ್ದನ್ನು ನೇರವಾಗಿ ಖಂಡಿಸುವುದೂ ಅವರ ಜಾಯಮಾನ. ಎರಡನೆಯದ್ದು ಅವರಿಗೆ ಕೆಲವು ವೈರಿಗಳನ್ನೂ ಸೃಷ್ಟಿಸಿತ್ತು.

೨೩ `ತಾರಾವಲೋಕನ’ ರೂಪುಗೊಂಡದ್ದು: ಅವರ ಜೀವನಪಯಣದ ಕೊನೆಯ ವರ್ಷದಲ್ಲಿ ನಡೆದದ್ದು. “ಮನೆಯಲ್ಲಿಯೇ ಇದ್ದೀಯಲ್ಲ. ೧೦ ನಿಮಿಷ ಮಾತನಾಡುವುದಿತ್ತು, ಈಗ ಬಂದರೆ ಏನೂ ತೊಂದರೆ ಇಲ್ಲ ತಾನೇ” ಎಂದು ದೂರವಾಣಿ ಮುಖೇನ ಕೇಳಿ ಮಾಮೂಲಿನಂತೆ ಬೆಳಗ್ಗೆ ಸುಮಾರು ೯.೩೦ ಕ್ಕೆ ಬಂದರು. ಬಂದವರು ಹೇಳಿದ್ದರ ತಿರುಳು ಇಂತಿದೆ: “ಅಶೋಕ ಹೇಳಿದ. ನಕ್ಷತ್ರ ವೀಕ್ಷಣೆಗೆ ಸಂಬಂಧಿಸಿದಂತೆ ನಾನು ಬರೆದ ಪುಸ್ತಕಗಳ ಪ್ರತಿಗಳು ಮುಗಿದು ಹೋಗಿವೆಯಂತೆ. ಪರಿಷ್ಕರಣೆ ಮಾಡುವಂತಿದ್ದರೆ ಮಾಡಿ ಕೊಟ್ಟರೆ ಪುನಃ ಮುದ್ರಿಸುತ್ತಾನಂತೆ. ನನಗೆ ವಯಸ್ಸಾಯಿತು. ಮೊದಲಿನಂತೆ ಕೆಲಸ ಮಾಡಲಾಗುತ್ತಿಲ್ಲ. ನಾನು ಬರೆದ ಅಷ್ಟೂ ಸಂಬಂಧಿತ ಪುಸ್ತಕಗಳ ಪ್ರತಿಗಳನ್ನು ನಿನಗೆ ಕೊಡುತ್ತೇನೆ. ಅದನ್ನು ಪರಿಷ್ಕರಿಸಿ ಬರೆದರೂ ಸರಿ, ಭಾಗಶಃ ಅಥವ ಪೂರ್ಣವಾಗಿ ಬದಲಿಸಿದರೂ ಸರಿ. ಸೀ ವಾಟ್ ಬೆಸ್ಟ್ ಕ್ಯಾನ್ ಬಿ ಡನ್. ಡೂ ಇಟ್. ಯೂ ಆರ್ ಫ್ರೀ ಟು ಟೇಕ್ ಎನಿ ಡೆಸಿಷನ್”. ನನ್ನ ಶೈಲಿಯೇ ಬೇರೆ, ಅವರ ಶೈಲಿಯೇ ಬೇರೆ, ಅವರ ಕಾರ್ಯವೈಖರಿಯೇ ಬೇರೆ. ಏನು ಮಾಡುವುದೆಂದು ತಿಳಿಯಲಿಲ್ಲ, “ಈ ಕ್ಷೇತ್ರದಲ್ಲಿ ನಿಮ್ಮಲ್ಲಿರುವಷ್ಟು ಸರಕು ನನ್ನಲ್ಲಿ ಇಲ್ಲ. ಬಹುಶಃ ಈ ಕಾರ್ಯ ನನ್ನಿಂದ ಆಗಲಾರದು” ಅಂದೆ. “ವಿಷಯ ಗೊತ್ತಿಲ್ಲ ಅನ್ನುವುದು ಸುಳ್ಳು ಅನ್ನುವುದು ನಿನಗೂ ಗೊತ್ತು ನನಗೂ ಗೊತ್ತು. ನಿನ್ನಿಂದ ಸಾಧ್ಯ ಎಂದು ನನಗೆ ಖಾತರಿ ಇರುವುದರಿಂದ ಬಂದೆ” ಹೀಗೆ ತುಸು ಸಮಯ ವಾದ ಪ್ರತಿವಾದಗಳಾಯಿತು. ಕೊನೆಗೆ “ಆಯಿತು ಮಾಡುತ್ತೇನೆ. ಆದರೆ ನನ್ನದು ಕೆಲವು ಷರತ್ತುಗಳಿಗೆ ನೀವು ಒಪ್ಪಿದರೆ” ಅಂದೆ. “ಏನವು?” “ಮೊದಲನೆಯದು, ಪುಸ್ತಕ ಇಬ್ಬರ ಹೆಸರಿನಲ್ಲಿಯೂ ಪ್ರಕಟವಾಗಬೇಕು. ಮೊದಲನೆಯದ್ದು ನಿಮ್ಮದಾಗಿರಬೇಕು. ಎರಡನೆಯದು, ನನಗೆ ಸರಿ ಎಂದು ಅನ್ನಿಸಿದ ರೀತಿಯಲ್ಲಿ ಯಾವ ಅಧ್ಯಾಯದಲ್ಲಿ ಏನಿರಬೇಕು, ಎಷ್ಟಿರಬೇಕು ಎಂಬುದನ್ನು ತೀರ್ಮಾನಿಸಿ ನನ್ನದೇ ಶೈಲಿಯಲ್ಲಿ ಬರೆದು ಕೊಡುವ ಕೆಲಸ ನನ್ನದು, ಅದನ್ನು ಓದಿ ಅಗತ್ಯವಿದ್ದೆಡೆ ಪರಿಷ್ಕರಿಸಿ, ಮಾರ್ಪಡಿಸಿ ಮುದ್ರಣಕ್ಕೆ ಸಿದ್ಧಪಡಿಸುವ ಕೆಲಸ ನಿಮ್ಮದು. ಬೆರಳಚ್ಚಿಸುವ ಕಾರ್ಯ ನಾನೇ ಮಾಡುತ್ತೇನೆ.” “ಒಪ್ಪಿದೆ. ನಾಳೆ ಮನೆಗೆ ಬಾ, ಕೆಲವು ಆಕರ ಗ್ರಂಥಗಳನ್ನೂ ನಾನು ಬರೆದವುಗಳನ್ನೂ ಕೊಡುತ್ತೇನೆ. ತ್ಯಾಂಕ್ಸ್ ಫಾರ್ ಅಗ್ರೀಯಿಂಗ್” ಅಂದು ಹಿಂದಿರುಗಿದರು. ಮಾರನೇ ದಿನ ಅವರ ಮನೆಗೆ ಹೋಗಿ ಅಗತ್ಯವಿದ್ದ ಪುಸ್ತಕಗಳನ್ನು ತಂದು ಕಾರ್ಯಾರಂಭಿಸಿದೆ. ಇಷ್ಟಾಗಿ ೧ ವಾರವೂ ಆಗಿರಲಾರದು. ಒಂದು ದಿನ ಬೆಳಗ್ಗೆ ಸುಮಾರು ೭ ಗಂಟೆಗೆ ದೂರವಾಣಿ ಮುಖೇನ “ಏನಿಲ್ಲ. ಕೆಲಸ ಶುರುಮಾಡಿದ್ದೀ ತಾನೆ. ಎಲ್ಲಿಯ ವರೆಗೆ ಬಂತು?” ವಿಚಾರಿಸಿದರು. “(ಮನಸ್ಸಿನಲ್ಲಿಯೇ ಅಂದುಕೊಡದ್ದು – ಕುತ್ತಿಗೆಗೆ ಬಂದಿದೆ) ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿರಬೇಕು, ಯಾವ ಅಧ್ಯಾಯದಲ್ಲಿ ಏನಿರಬೇಕು ಇವೇ ಮೊದಲಾದವಕ್ಕೆ ಸಂಬಂಧಿಸಿದಂತೆ ರೂಪುರೇಷೆಯೊಂದನ್ನು ಸಿದ್ಧಪಡಿಸಿದ್ದೇನೆ. ನಿಮ್ಮೊಂದಿಗೆ ಚರ್ಚಿಸಿದ ನಂತರ ಮುಂದುವರಿಯುತ್ತೇನೆ” “ಚರ್ಚಿಸುವದಕ್ಕೇನಿದೆ. ನಿನಗೇ ಆ ಸ್ವಾತಂತ್ರ್ಯ ಕೊಟ್ಟಿದ್ದೇನಲ್ಲ. ಬರೆಯಲು ಶುರು ಮಾಡು, ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ” ಎಂದು ಅಪ್ಪಣೆಯಾಯಿತು. ಅದಾಗಿ ಒಂದೆರಡು ದಿನಗಳಲ್ಲಿ ಎಂದಿನಂತೆ ತಿಳಿಸಿ ಬರುವುದಕ್ಕೆ ಬದಲಾಗಿ ತೀಳಿಸದೆಯೇ ಮನೆಗೆ ಬಂದು “ಕೆಲಸ ಮುಂದುವರಿಯುತ್ತಿದೆ ತಾನೆ?. ಈಗ ನಾನು ಬಂದದ್ದು ನನ್ನ ಸಹಾಯ ಇದ್ದರೂ ಪುಸ್ತಕ ನಿನ್ನೊಬ್ಬನ ಹೆಸರಿನಲ್ಲಿಯೇ ಬರಲಿ ಎಂದು ಹೇಳುವುದಕ್ಕೆ. ಮೊದಲಿನಷ್ಟು ಕೆಲಸ ಮಾಡಲು ಆಗುತ್ತಿಲ್ಲ. ನಿನಗೆ ಎಷ್ಟು ಸಹಾಯ ಮಾಡುತ್ತೇನೋ ಅದೂ ಗೊತ್ತಿಲ್ಲ” ಅಂದು ನನಗೆ ಮಾತನಾಡಲು ಅವಕಾಶ ಕೊಡದೆಯೇ ತೆರಳಿದರು. ಆನಂತರ ನಾನು ಅವರನ್ನು ಜೀವಂತವಾಗಿ ನೋಡಲೇ ಇಲ್ಲ. (ಅವರಿಂದ ಪ್ರೇರಿತನಾಗಿ ಬರೆದು ಅವರಿಗೇ ಅರ್ಪಿಸಿದ ‘ತಾರಾವಲೋಕನ’ ಪುಸ್ತಕವನ್ನು ಅವರ ಮರಣಾನಂತರ ಅಶೋಕವರ್ಧನ ಪ್ರಕಟಿಸಿದ. ಶ್ರೀಯುತರು ಇದ್ದಿದ್ದರೆ ಪುಸ್ತಕ ಇನ್ನೂ ಸುಂದರವಾಗಿರುತ್ತಿತ್ತು ಅನ್ನುವುದರಲ್ಲಿ ಸಂಶಯವಿಲ್ಲ)

[ಸಂಪಾದಕೀಯ: ತಾರಾವಲೋಕನ ಈಗ ಮತ್ತಷ್ಟು ಪರಿಷ್ಕೃತವಾಗಿ, ವಿ-ಪುಸ್ತಕವಾಗಿ, ಉಚಿತವಾಗಿ ಇಲ್ಲೇ ಪುಸ್ತಕ ವಿಭಾಗದಲ್ಲಿ ಸಾರ್ವಜನಿಕರಿಗೆ ಲಭ್ಯ. ಜೊತೆಗೇ ಗೋವಿಂದರಾಯರ ಇನ್ನೂ ಕೆಲವು ವಿ-ಪುಸ್ತಕಗಳೂ ಅಲ್ಲಿ ಉಚಿತವಾಗಿಯೇ ಲಭ್ಯ.]

೨೩. ಭಾಷಾಸಮೃದ್ಧಿ: ಸಾಮಾನ್ಯವಾಗಿ ಬಹು ಮಂದಿ ಮಾಡದೇ ಇರುವ ಪದಪ್ರಯೋಗ ಮಾಡುವುದು ಜಿಟಿಎನ್‌ ಅವರ ಜಾಯಮಾನ. ಇದರಿಂದ ಕೆಲವೊಮ್ಮೆ ಅಹಿತಕರ ಸನ್ನಿವೇಶಗಳು ಸೃಷ್ಟಿಯಾಗುತ್ತಿದ್ದದ್ದೂ ಉಂಟು. ಅದಕ್ಕೊಂದು ಉದಾಹರಣೆ ಇಂತಿದೆ: ಮೈಸೂರಿನ ಸಂಗೀತ ಸಭಾಗಳಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳ ಕುರಿತಾದ ವಿಮರ್ಶಾತ್ಮಕ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಬರೆದು ಮೈಸೂರಿನ ‘ಸ್ಟಾರ್‌ ಆಫ್‌ ಮೈಸೂರು’ ದಿನಪತ್ರಿಕೆಯಲ್ಲಿ ಜಿಟಿಎನ್‌ ಪ್ರಕಟಿಸುತ್ತಿದ್ದರು. ಒಮ್ಮೆ ಸ್ಥಳೀಯ ಕಲಾವಿದರು ಗಾನಭಾರತೀ ಸಂಗೀತಸಭಾದಲ್ಲಿ ನೀಡಿದ ಕಛೇರಿಯ ಕುರಿತು ಬರೆಯುವಾಗ ‘ಮ್ಯೂಸಿಕ್‌ ವಾಸ್‌ ಆಫ್‌ ವೆರಿ ಪೆಡೆಸ್ಟ್ರಿಯನ್ ಸ್ಟೈಲ್‌‌’ ಎಂಬುದಾಗಿ ಬರೆದಿದ್ದರು. ಇದರಿಂದ ಕೋಪಗೊಂಡ ಆ ಕಲಾವಿದರು ಸ್ಥಳೀಯ ಕಲಾವಿದರುಗಳನ್ನು ಸಂಘಟಿಸಿ ಜಿಟಿಎನ್‌ ಪತ್ರಿಕಾ ಪ್ರಕಟಣೆ ಮುಖೇನ ಅವರು ಪದಾಧಿಕಾರಿಗಳಾಗಿರುವ ಗಾನಬಾರತೀ ಸಂಗೀತಸಭಾವನ್ನೇ ಬಹಿಷ್ಕರಿಸುವುದಾಗಿ ಘೋಷಿಸಿದರು. ‘ಪೆಡೆಸ್ಟ್ರಿಯನ್’ ಪದಕ್ಕೆ ಪಾದಚಾರಿ ಎಂಬ ಅರ್ಥ ಮಾತ್ರವಲ್ಲದೆ ಶುಷ್ಕ, ನೀರಸ ಶೈಲಿಯ ಎಂಬ ಅರ್ಥಗಳೂ ಇವೆ ಎಂಬ ಅಂಶ ಕಲಾವಿದರಿಗೆ ತಿಳಿದಿರಲಿಲ್ಲವಾದ್ದರಿಂದ ಈ ಸನ್ನಿವೇಶ ಸೃಷ್ಟಿಯಾಗಿತ್ತು. ಸನ್ನಿವೇಶವನ್ನು ತಿಳಿಯಾಗಿಸಲು ಗಾನಭಾರತೀಯ ಹಿರಿಯ ಸದಸ್ಯರು ತುಸು ಶ್ರಮಪಡಬೇಕಾಯಿತು.

೨೪ ಮೃದಂಗ ವಾದಕ!: ಬಹುಮಂದಿಗೆ ಜಿಟಿಎನ್‌ ಮೃದಂಗ ನುಡಿಸಲು ಕಲಿತಿದ್ದರೂ ಅದನ್ನು ಹವ್ಯಾಸವಾಗಿ ಮುಂದುವರಿಸಲಿಲ್ಲ ಎಂಬ ಅಂಶ ಬಹುಶಃ ತಿಳಿದಿರಲಾರದು. ಈ ರಹಸ್ಯ ನನಗೆ ತಿಳಿದಿದ್ದಾದರೂ ಹೇಗೆ? ನಾನು ಮಡಿಕೇರಿಯ ಸೆಂಟ್ರಲ್‌ ಹೈಸ್ಕೂಲಿನಲ್ಲಿ ಫೋರ್ತ್ ಫಾರ್ಮ್‌ ವಿದ್ಯಾರ್ಥಿಯಾಗಿದ್ದಾಗ ನೋಡಿದ ಪ್ರಸಂಗ ಇದು. ಮಡಿಕೇರಿಯ ಬ್ರಾಹ್ಮಣರ ಕೇರಿಯಲ್ಲಿ ಇರುವ ರಾಮಮಂದಿರದಲ್ಲಿ ರಾಮನವಮಿ ಪ್ರಯುಕ್ತ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭ. ಪ್ರತೀ ದಿನ ಜಿಟಿಎನ್‌ ಮುಂದಿನ ಸಾಲಿನಲ್ಲಿ ಕುಳಿತಿರುತ್ತಿದ್ದರು. (ನಾನು ಹಾಗೂ ನನ್ನ ಸಹವರ್ತಿಗಳೂ ಇರುತ್ತಿದ್ದೆವು, ಪ್ರಸಾದದ ಹೆಸರಿನಲ್ಲಿ ದೊನ್ನೆ ತುಂಬ ಕೊಡುತ್ತಿದ್ದ ತಿನಿಸಿಗಾಗಿ)

ಯಾರದೋ ಹಾಡುಗಾರಿಕೆಯ ಒಂದು ಕಛೇರಿಗೆ ಮೃದಂಗ ನುಡಿಸುವವರು ಗೈರುಹಾಜರಾಗಿದ್ದರು. ಮುಂದೇನು ಎಂಬ ಚರ್ಚೆ ನಡೆಯುತ್ತಿದ್ದಾಗ ಅದಾರೋ ಹೇಳಿದರು, “ಜಿಟಿಎನ್‌ ಅವರು ಮೃದಂಗ ನುಡಿಸಲು ಕಲಿತಿದ್ದಾರಲ್ಲ. ಅವರೇ ನಿಭಾಯಿಸಬಹುದೋ ಏನೋ.” ಗಾಯಕರು ತುಸು ಸಂಶಯದಿಂದ ಜಿಟಿಎನ್ ಅವರ ಮುಖ ನೋಡಿದರು. “ಕಛೇರಿಯಲ್ಲಿ ನುಡಿಸಿ ಅಭ್ಯಾಸವಿಲ್ಲ. ಆದರೂ ಗಾಯಕರಿಗೆ ಅಭ್ಯಂತರವಿಲ್ಲದಿದ್ದರೆ ಪ್ರಯತ್ನಿಸುತ್ತೇನೆ,” ಅಂದರು ಜಿಟಿಎನ್. ಕಛೇರಿ ಆರಂಭವಾಗಿ ಸುಮಾರು ೧೦ ನಿಮಿಷ ಆಗಿರಬಹುದೋ ಏನೋ. ಗಾಯಕರು ಜಿಟಿಎನ್‌ ಅವರಿಗೆ ಕೈಮುಗಿದು ಹೇಳಿದರು, “ಮೃದಂಗ ವಾದಕರ ಗೈರುಹಾಜರಿಯಿಂದ ಕಛೇರಿ ನಿಂತು ಹೋಗಬಾರದೆಂಬ ನಿಮ್ಮ ಕಾಳಜಿಯನ್ನು ಮೆಚ್ಚುತ್ತೇನೆ. ನಿಮಗೆ ಅಭ್ಯಂತರವಿಲ್ಲದಿದ್ದರೆ ಮೃದಂಗದ ಸಾಥ್‌ ಇಲ್ಲದೆಯೇ ಹಾಡುತ್ತೇನೆ.” ಜಿಟಿಎನ್‌ ಅಷ್ಟೇ ಸೌಜನ್ಯದಿಂದ ತಮಗೇನೂ ಬೇಸರವಿಲ್ಲವೆಂಬುದನ್ನು ತಿಳಿಸಿ ಎದ್ದು ಬಂದು ಶ್ರೋತೃಗಳೊಂದಿಗೆ ಮುಂದಿನ ಸಾಲಿನಲ್ಲಿ ಕೊನೆಯವರೆಗೂ ಕುಳಿತು ಹಾಡುಗಾರಿಕೆಯ ರಸಾಸ್ವಾದನೆ ಮಾಡುತ್ತಿದ್ದರು. ಅವರು ಮೃದಂಗ ಹಿಡಿದಿದ್ದನ್ನು ನಾನು ನೋಡಿದ್ದು ಅದೇ ಮೊದಲು, ಅದೇ ಕೊನೆಯ ಸಲ.

[ಸಂಪಾದಕೀಯ: ಮಡಿಕೇರಿ ಕಾಲೇಜು ಸಮೀಪದ ಮನೆಯ ನನ್ನ ನೆನಪು: ಸುಮಾರು ಆ ದಿನಗಳಲ್ಲೇ ಕಾಲೇಜಿನ ಯಾವುದೋ ಹಾಡಿಕೆಗೆ ಅಪ್ಪ (ಜಿಟಿನಾ) ಕೋಟು, ಟೈಯುಕ್ತರಾಗಿಯೇ ನೆಲದಲ್ಲಿ ಕುಳಿತು ಮೃದಂಗ ನುಡಿಸುತ್ತಿದ್ದ ಕಪ್ಪು ಬಿಳುಪಿನ ಚಿತ್ರವೊಂದು ನಮ್ಮ ಮನೆಯ ಸಂಗ್ರಹದಲ್ಲಿ ನೋಡಿದ್ದೆ. ಆಗ ನನ್ನದು ಒಂಬತ್ತು – ಹತ್ತರ ಹರಯ, ನಮ್ಮಲ್ಲೇ ಇದ್ದ ಚಿಕ್ಕಪ್ಪ ದಿವಾಕರ ಐದು ವರ್ಷ ಹಿರಿಯ. ಒಂದೆರಡು ಬಾರಿ ಯಾವುದೋ ಬಿಡುವಿನ ಸಮಯದಲ್ಲಿ ನಮ್ಮಿಬ್ಬರನ್ನು ಅವರು ಎದುರು ಕೂರಿಸಿ “ತಾಳ ಹಾಕ್ರೋ” ಎಂದು ಆಜ್ಞೆ ಮಾಡಿ, ಮೃದಂಗ ಅಭ್ಯಾಸ ನಡೆಸಿದ್ದೂ ನೆನಪಾಗುತ್ತದೆ. ದಿವಾಕರನ ಮನೋಸ್ಥಿತಿ ಹೇಗಿತ್ತೋ ಗೊತ್ತಿಲ್ಲ, ನಾನಂತೂ ತಾಳ ಹಾಕದಿದ್ದರೆ `ಶಿಕ್ಷಾರ್ಹ ಅಪರಾಧ’ವಾದೀತೆಂಬ ಭಯದಲ್ಲೇ ತೊಡೆ ತಟ್ಟಿದ್ದೆ! ಅಪ್ಪನ ಅಧ್ಯಯನದ ಮೇಜು, ಅದರ ಎದುರು ಅಂಚಿನಲ್ಲಿ ಕುಳಿತಿರುತ್ತಿದ್ದ ಬುಶ್ ರೇಡಿಯೋ, ರಜಾದಿನಗಳಲ್ಲಿ ಮರಿಕೆಯ ಅಜ್ಜನ ಮನೆಯಲ್ಲಿದ್ದ ತಬ್ಲಾ ಅಪ್ಪನ ಪೆಟ್ಟುಗಳಿಗೆ ನಡುಗುತ್ತಿದ್ದದ್ದು ನಾನು ನೋಡಿರಲಿಲ್ಲವೇ! – ಅಶೋಕವರ್ಧನ]