`ಪುಸ್ತಕ ಮಾರಾಟ ಹೋರಾಟ’, ಪುಸ್ತಕದ ಧಾರಾವಾಹಿಯಲ್ಲಿ
ಅಧ್ಯಾಯ – ನಾಲ್ಕು

[ಜಿ.ಟಿ. ನಾರಾಯಣರಾಯರ ಸಂಪಾದಕೀಯ ಟಿಪ್ಪಣಿ: ಪುಸ್ತಕಗಳಲ್ಲಿ ಎರಡು ಬಗೆ ಎಂದಿದ್ದಾನೆ ರಸ್ಕಿನ್: ಸಾರ್ವಕಾಲಿಕಗಳು, ತಾತ್ಕಾಲಿಕಗಳು. ಅಭಿಜಾತ ವಾಙ್ಮಯ ಮೊದಲಿನ ಬಗೆಗೂ ವಾಚಕನ ಸದ್ಯದ ಜ್ಞಾನದಾಹ ಹಿಂಗಿಸುವ ಇತರ ಎಲ್ಲ ವಾಙ್ಮಯ ಎರಡನೆಯ ಬಗೆಗೂ ನಿದರ್ಶನ. ಹಾಗೆಂದು ಜೀವಸತ್ತ್ವಗಳನ್ನು (ವೈಟಮಿನ್ಸ್) ಮಾತ್ರ ತಿಂದು ಬದುಕಲಾದೀತೇ? ಆಹಾರದ ಭಾಗವಾಗಿಯೇ ಅದು ಕುಕ್ಷಿ ತಲಪಬೇಕು. ಹಾಗೆಯೇ ವಾಙ್ಮಯ ಕೂಡ, ಅಂದರೆ ಸಾಹಿತ್ಯ ಪ್ರಕಾರ ಯಾವುದೇ ಇರಲಿ ಅದು ಅಭಿಜಾತ ತತ್ತ್ವಗಾಮಿ ಆಗಿರಲೇಬೇಕು. ಇಂಥ ಕೃತಿ ಪ್ರತಿಭಾನ್ವಿತ ಲೇಖಕ, ಸದಭಿರುಚಿಯ ಪ್ರಕಾಶಕ, ಸೇವಾಪರಾಯಣ ಮಾರಾಟಗಾರ ಮತ್ತು ರುಚಿ ನಿರ್ಣಾಯಕ ಸಾಮರ್ಥ್ಯವಿರುವ ಜೀವಂತ ವಾಚಕ ಇವರ ಸುಂದರ ಮಿಲನದಿಂದ ಮಾತ್ರ ಸಾಧ್ಯ. “ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ” ಎಂದ ಸರ್ವಜ್ಞ. ಆದರೆ ಆ ದಿಶೆಯತ್ತ ಸತತ ಪ್ರಯತ್ನಶೀಲರಾಗಿ ಎಲ್ಲರೂ ಬಲ್ಲಿದರಾಗಬೇಕೆಂಬ ಆಶಯ ಮಾತ್ರ ಸದಾ ಪ್ರಸ್ತುತ.

(ದಿನಾಂಕ೧೩-೭-೧೯೯೮ರಂದು ಆಕಾಶವಾಣಿಯಲ್ಲಿ ಪ್ರಸಾರವಾದ ಭಾಷಣ)

ಪುಟಿಯುವ ಚಂಡಿನಂತೆ ಪುಟ್ಟ ಹುಡುಗಿ ಅಂದು ಬಂದು ಕೇಳುತ್ತಿತ್ತು “ಅಂಕಲ್ ಡುಲ್ ಡುಲ್ ಬಂದಿದೆಯಾ?” ಅವಳ ಓದುವ ಹವ್ಯಾಸಕ್ಕೆ ನಿಲುಕಿದ ನಾಯಿಮರಿ ಡುಲ್ ಡುಲ್ಲಿನ ಸಾಹಸ ಕಥೆ ಮರುಮುದ್ರಣಗೊಳ್ಳಲೇ ಇಲ್ಲ. ಅದರ ನಿರಾಶೆ ಇಂದು ಸ್ವತಃ ಪುಟ್ಟ ಹುಡುಗಿಯೊಂದರ ತಾಯಿಯಾದರೂ ಅಂದಿನ ಹುಡುಗಿಗೆ ಮರೆತಿಲ್ಲ. ಕೆಲವೊಮ್ಮೆ ಪರಿಚಿತ ವೃದ್ಧರೊಬ್ಬರಿಂದ ನನಗೆ ಫೋನು ಬರುವುದಿದೆ “ಸ್ವಾಮೀ Song Celestial ಎಷ್ಟಿದೆಯೋ ಅಷ್ಟೂ ತಂದು ಕೊಡ್ತೀರಾ? ಎಂಥಾ ಪುಸ್ತಕ ಸ್ವಾಮೀ ಅದು! ನೀವು ದಯವಿಟ್ಟು ಓದಬೇಕು….” ಆ ಪುಸ್ತಕದ ಒಳ್ಳೇತನದ ಹಾಡಿಕೆ ಅವರ ಬಾಯಲ್ಲಿ ಎಂದೂ ಮುಗಿದದ್ದೇ ಇಲ್ಲ. ಓಡಾಡಲಾಗದ, ಕೆಲಸಕ್ಕೊದಗುವ ಸಹಕಾರಿಗಳಿಲ್ಲದ ಅವರಿಗೆ ನಾನು ವಿಶೇಷವಾಗಿ ಪುಸ್ತಕ ಮನೆಗೊಯ್ದು ಕೊಟ್ಟು ಹಣ ಪಡೆಯುತ್ತಿದ್ದೆ. ಅವರದನ್ನು ದಾನ ಕೊಟ್ಟೋ ಒತ್ತಾಯದಲ್ಲಿ ಯಾರ್ಯಾರಿಗೋ ಓದಿಸಿಯೋ ಸಂತೋಷಪಡುತ್ತಿದ್ದರು. ಅವರ ಧ್ವನಿ, ಪುಸ್ತಕ ಕಾಯುವ ಕಾತರ ಎಂದೂ ನಾನು ಮರೆಯಲಾರೆ. ಪೂರ್ಣ ಶಕ್ತವಲ್ಲದ ಒಕ್ಕಣ್ಣು. ಅದಕ್ಕೂ ಭೂತಗಾಜು. ಆದರೂ ಅವರು ಅಂಗಡಿಗೆ ಬಂದರೆ, ರುಚಿಯರಿತು ಪುಸ್ತಕ ಕೊಡುವ ಶಾಂತಾರಾಮನ (ಮಳಿಗೆಯಲ್ಲಿ ನನ್ನ ಸಹಾಯಕ) ಉತ್ಸಾಹಕ್ಕೆ ಅಧಿಕ ಬಲಬರುತ್ತದೆ. ಅಧ್ಯಾತ್ಮ, ಅಡುಗೆ, ಆರೋಗ್ಯ, ಸಾಹಿತ್ಯ, ಇತಿಹಾಸ, ನಿಘಂಟು, ಇತ್ಯಾದಿ ಇವರ ಆಸಕ್ತಿಯ ಹರಹು ವಿಸ್ತಾರವಾಗಿದೆ. ಜೊತೆಗೆ ಇಂಗ್ಲಿಷ್, ಕನ್ನಡ, ತುಳು, ಕೊಂಕಣಿ ಇತ್ಯಾದಿ ಇವರ ಭಾಷಾಜ್ಞಾನವೂ ಅಸೀಮವಾದದ್ದು. ಪುಸ್ತಕದ ಬಾಹ್ಯ ಸೌಂದರ್ಯದಿಂದ ಹಿಡಿದು ಪ್ರಕಾಶಕ, ಲೇಖಕ, ವಿಷಯಗಳವರೆಗೂ ಇವರ ಇಣುಕು ನೋಟದ ಗ್ರಹಿಕೆಗಳು ಸ್ಪಷ್ಟ ಮತ್ತು ಖಚಿತ. ಇವರು ಗಂಟೆಗಳನ್ನೇ ನನ್ನಲ್ಲಿ ಕಳೆಯುತ್ತಾರೆ. ಹಾಗೇ ಪುಸ್ತಕದ ಗಂಟುಗಳನ್ನೇ ಒಯ್ಯುತ್ತಿರುತ್ತಾರೆ. ಅವರ ಬ್ಯಾಂಕಿನವರು ಒಮ್ಮೆ ಕೇಳಿದ್ದಿತ್ತಂತೆ “ಅದೇನು ನಿಮ್ಮ ಚೆಕ್ಕುಗಳು ಹೆಚ್ಚಾಗಿ ಪುಸ್ತಕದಂಗಡಿ ಹೆಸರಿನಲ್ಲೇ ಇರುತ್ತದೆ”!

ಇವರೊಬ್ಬ ಗಿಡ್ಡ ಆಳು, ಹಿಡಿದಿರುತ್ತಾರೆ ಉದ್ದ ಜೋಳಿಗೆ. ಮನೆಯಲ್ಲೋ ಜೋಡಿಸಿದ್ದಾರೆ ಸಾಲು ಕಪಾಟು, ತುಂಬಿದ್ದಾರೆ ಪುಸ್ತಕ ಸಪಾಟು. ಆದರೂ ಮುಗಿದಿಲ್ಲ ಅವರ ಬೇಟೆ. ಕಥೆ ಕಾದಂಬರಿ ಎಂದರೆ, ಕೋಸಂಬರಿ ಎಂದೇ ಅಣಕಿಸುತ್ತಾರೆ; ಇವರಿಗೆ ವರ್ಜ್ಯ. ನಮ್ಮಲ್ಲಿ ಆಕರ ಸ್ವರೂಪದ ಬೃಹದ್ಗ್ರಂಥಗಳೇನೇ ಬರಲಿ, ಇವರಿಗೆ ಹಾಕುತ್ತೇವೆ ಪ್ರಥಮ ಆಜ್ಯ. ಓದುವ ಹವ್ಯಾಸಕ್ಕೆ ಪ್ರಾಥಮಿಕ ಆವಶ್ಯಕತೆ ಪುಸ್ತಕ ಸಂಗ್ರಹ ಎನ್ನುವುದೇ ನಿಜವಾದರೆ ಇವರಲ್ಲದು ಸಿದ್ಧಿಸಿದೆ!

ನಿವೃತ್ತ ಬ್ಯಾಂಕ್ ಅಧಿಕಾರಿ ಒಬ್ಬರಿಗೆ ಪ್ರವಾಸ ಕಥನಗಳಲ್ಲಿ ವಿಹರಿಸುವ ಖಯಾಲಿ. ಹೋಟೇಲ್ ಉದ್ಯಮಿ ಒಬ್ಬರಿಗೆ ಚೌಚೌ ಪ್ರೀತಿ! ಕ್ಷಮಿಸಿ, ಅಕಾಡೆಮಿ, ವಿವಿ ನಿಲಯಗಳಂಥವರು ಪ್ರಕಟಿಸುವ ಸಾಹಿತ್ಯ ಸಂಕಲನಗಳ ಪ್ರೀತಿ. ಇನ್ನು ವಾಸ್ತುಬ್ರಹ್ಮ, ನಾಟಕಕೋರ, ರೇಖೀತಜ್ಞ, ಜ್ಯೋತಿಷ್ಯ ಮಾರ್ತಾಂಡ, ವೇದಾಂತಿ, ಹಾಸ್ಯರತ್ನ, ಪುರಾಣಲೋಲ, ಅನುವಾದಪ್ರಿಯ, ವಾದಭಯಂಕರ ಇತ್ಯಾದಿ ಪಟ್ಟಿ ಮಾಡಿದಷ್ಟೂ ಮುಗಿಯದ ಜನ ಕಣ್ಣರಳಿಸಿ ಬರುತ್ತಿರುತ್ತಾರೆ. ಸಾಯಿಸುತೆ, ಉಷಾನವರತ್ನರಾಂ, ಯಂಡಮೂರಿ, ಬಿವಿ ಅನಂತರಾಂ, ಚಿತ್ತಾಲ, ಭೈರಪ್ಪ, ಎಂದಿತ್ಯಾದಿ ಕಣ್ಗಾಪು ಕಟ್ಟಿ ಬರುವವರು ಸಾಕಷ್ಟಿದ್ದಾರೆ. ಭಾವ ಅರ್ಥಗಳ ಗೋಜುಹಚ್ಚಿಕೊಳ್ಳದೆ, ಕೇವಲ ಬಡಬಡಿಕೆ ಬಲದಲ್ಲಿ ಮೋಕ್ಷ ಸಾಧಿಸ ಹೊರಟವರಿಗೆ ಅನುನಾಯಿಗಳಿದ್ದಾರೆ. ಅದೇ ಗೊಂದಲ ಮುದ್ರಣದಲ್ಲಿ ಬಂದಾಗ ಮುಗಿಬೀಳುತ್ತಾರೆ. ಮುದ್ರಿಸಿದ್ದೆಲ್ಲವೂ ಪರಮ ಸತ್ಯ ಎಂದೇ ಭ್ರಮಿಸುತಾರೆ. ನಾಸ್ಟ್ರಡಾಮಸ್ಸಿನ ಪ್ರಳಯ ಘೋಷಣೆಯ ಬಗೆಗೋ ಅವಿಚಾರಿಗಳ ಜಾತಿ ಮಹತ್ತ್ವದ ಬಗೆಗೋ ಅಕ್ಷರಕ್ಷರ ನಂಬಿ, ಸ್ವಂತ ದೌರ್ಬಲ್ಯವನ್ನೂ ಅದರ ಮೇಲೆ ಹೇರಿ ತಲೆ ಕೆಡಿಸಿಕೊಳ್ಳುವವರು ಸಾಕಷ್ಟು ಇದ್ದಾರೆ. ಜಾತಕ ನಿರ್ಮಾಣ ಜನ್ಮ ದಾಖಲೀಕರಣದ ಕ್ರಿಯೆ. ಆದರೆ ಅದನ್ನಾಧರಿಸಿದ ಫಲ-ಭವಿಷ್ಯ ಢೋಂಗಿ ಎಂದೇ ವೈಜ್ಞಾನಿಕವಾಗಿ ವಿಶ್ಲೇಷಿಸಿದವರನ್ನು (ಕೊಂಡು ಓದಿ: ಜಾತಕ ಭವಿಷ್ಯ, ಲೇಖಕ ಜಿ.ಟಿ.ನಾರಾಯಣ ರಾವ್, ಬೆಲೆ ರೂ ಹದಿನೈದು. ಪ್ರತಿಗಳು ನನ್ನಲ್ಲಿ ಲಭ್ಯ) ಕಳ್ಳ ಹೆಸರಿನಲ್ಲಿ ಭಂಗಿಸಿದವರಿದ್ದಾರೆ. ಪುಸ್ತಕ ನಿಷೇಧ, ಪ್ರತಿಗಳ ಧ್ವಂಸ ಕಾರ್ಯಗಳಿಗೂ ಮುಂದಾಗುವುದಿದೆ. ಆದರೆ ಈ ವಿಪರೀತಗಳಿಗೆ ಪ್ರೇರಣೆಯಾದರೂ ಇನ್ಯಾವುದೋ ಓದಿನದ್ದು ಎಂಬುದನ್ನು ಮರೆತೇ ಬಿಡುತ್ತಾರೆ. ಕಾಲಹರಣಕ್ಕಾಗಿ ಓದಿ ಅರ್ಥಗ್ರಹಿಸಿದರೂ ಏನೂ ಹಚ್ಚಿಕೊಳ್ಳದವರಿಂದ ತೊಡಗಿ ಪದ ಅರ್ಥಗಳ ಸೂಕ್ಷ್ಮಕ್ಕಿಳಿದು ಲೇಖಕ ಊಹಿಸದ್ದನ್ನೂ ಹಿಂಜುವವರನ್ನು ಕಾಣಬಹುದು. ಅತೀವ ಅಭಿಮಾನದಿಂದ ಲೇಖಕನನ್ನೇ ತಿದ್ದಿಕೊಳ್ಳಲು ಒತ್ತಾಯಿಸುವ, ತಮ್ಮ ಸೀಮಿತ ಗ್ರಹಿಕೆಯ ಚೌಕಟ್ಟಿನೊಳಗೆ ಒತ್ತಿಡಲು ಭ್ರಮಿಸುವ ಓದುಗರಿರಲಿಲ್ಲವಾದರೆ `ಚಿಕವೀರರಾಜೇಂದ್ರ’, `ಮಹಾಚೈತ್ರ’ ಇತ್ಯಾದಿ ಇಂದು ಪಡೆದಿರುವ ಅಸಾಹಿತ್ಯಕ ಪ್ರಚಾರ ಪಡೆಯುತ್ತಲೇ ಇರಲಿಲ್ಲ. ಇದಕ್ಕೆ ಪೂರಕವಾಗಿ ನನ್ನ ಅನುಭವಕ್ಕೆ ಒದಗಿದ ಒಂದು ಘಟನೆ: ಶಿವರಾಮ ಕಾರಂತರ ಅಣ್ಣ ವಾಸುದೇವ ಕಾರಂತ. ಅವರು ದೇವರು, ಪಾಪ, ಪುಣ್ಯ, ಪುನರ್ಜನ್ಮ ಇತ್ಯಾದಿ ಸನಾತನ ಮೌಲ್ಯಗಳ ಉಗ್ರ ಪ್ರತಿಪಾದಕ. ಅವರೊಮ್ಮೆ ನನ್ನ ಅಂಗಡಿಗೆ ಬಂದಿದ್ದಾಗ ಶಿವರಾಮ ಕಾರಂತರ `ಭಾರತೀಯ ಶಿಲ್ಪ’ ಎಂಬ ಪುಸ್ತಕ ತೋರಿಸಿದೆ. ಎರಡು ಚಿತ್ರ ನೋಡಿ, ನಾಲ್ಕು ಪುಟ ಮಗುಚಿ ದುರ್ದಾನ ಪಡೆದವರಂತೆ ಪುಸ್ತಕವನ್ನು ಮರಳಿಸಿದರು. ಜೊತೆಗೆ “ಎಲ್ಲ ಶಿಲ್ಪ ಪ್ರವರ್ತಕರೂ ದೇವರ ಅಸ್ತಿತ್ವವನ್ನು ಒಪ್ಪಿದುದರ ಬಗ್ಗೆ ಒಂದು ವಾಕ್ಯ ಇವನು ಯಾಕೆ ಸೇರಿಸುವುದಿಲ್ಲ” ಎಂದು ಬುಸುಗುಟ್ಟಿದರು.

ಇದುವರೆಗೆ ಹೇಳಿದ್ದೆಲ್ಲವೂ ಓದುಗರ ಕಥೆಯಾಯ್ತು. ಅದಕ್ಕೆ ಪೂರ್ವಭಾವಿಯಾಗಿ ಇರಲೇಬೇಕಾದ ಪುಸ್ತಕದ ಬಗ್ಗೇ ಸ್ವಲ್ಪ ಗಮನ ಹರಿಸೋಣ. ಲೇಖಕ ಎಳೆಯುವ ಗಾಡಿಯ ಕೊನೆಯ ಬಂಡಿ ಓದುಗ. ಪ್ರಕಾಶಕ, ಮುದ್ರಕ, ಮಾರಾಟಗಾರ ಅಥವಾ ಗ್ರಂಥಾಲಯ ಇತ್ಯಾದಿಗಳು ನಡುವಣ ಬಂಡಿಗಳು. ಇವು ಪ್ರತಿ ಪುಸ್ತಕದ ಹಿನ್ನೆಲೆಯ ಅನಿವಾರ್ಯ ಹಾಗೂ ಕನಿಷ್ಠ ವ್ಯಾವಹಾರಿಕ ಅಂಗಗಳು. ಇದನ್ನು ಗ್ರಹಿಸದ ಓದುಗ ಒಟ್ಟಾರೆ ಉದ್ಯಮಕ್ಕೂ ತನಗೂ ಅನ್ಯಾಯ ಮಾಡಿಕೊಳ್ಳುತ್ತಾನೆ. ಇದೊಂದು ಗಿರಾಕಿ ಉವಾಚ ಕೇಳಿ “ಗೃಹ ಸಂಗಾತಿ ಕೊಡಿ. ಬೆಲೆ ಎಷ್ಟು?” ವ್ಯಾಪಾರಿ “ನೂರಾಹತ್ತು ರೂಪಾಯಿ” ಅನ್ನುತ್ತಿದ್ದಂತೆ ಗಿರಾಕಿಯ ಸಲಹಾ ಸರಣಿ ಹೊರಡುತ್ತದೆ “ಡಿಸ್ಕೌಂಟ್ ಎಷ್ಟು? ೭೫ ರೂಪಾಯಿ ಸಾಲದಾ? ಹಂಪನಕಟ್ಟೆಯವರು ಕಡಿಮೆಗೆ ಕೊಡ್ತಾರೆ. ಕಡಿಮೆ ಬೆಲೆಯ ಹಳೆ ಪ್ರಿಂಟಿದ್ದರೆ ಕೊಡಿ…” ಇತ್ಯಾದಿ. ಇಂಥವಕ್ಕೆ ಅವಕಾಶವಾದದ್ದು ಪುಸ್ತಕಗಳ ಮುದ್ರಿತ ಬೆಲೆಯ ಗೌರವವನ್ನು ಹಾಳು ಮಾಡಿದ ಕೆಲವು ವೃತ್ತಿಪರ ಪುಸ್ತಕೋದ್ಯಮಿಗಳಿಂದಲೇ! ಇವರಿಗೆ ಅಕ್ಕಿ, ಸೋಪು, ಟೀವಿಗಳಂತೆ ಪುಸ್ತಕವೂ ಒಂದು ಮಾಲು. ಮೂಲದಲ್ಲಿ ಪುಸ್ತಕದ ಬೆಲೆ ನಿಗದಿಗೆ ಒಂದು ಸುಸಂಬದ್ಧ ತರ್ಕವಿತ್ತು. ಇದರಲ್ಲಿ ಕೊಳ್ಳುಗನಿಗೆ ಹೊರೆಯಾಗಬಾರದು ಎಂಬ ಕಾಳಜಿಯಿದ್ದಂತೆ, ಅನಿವಾರ್ಯ ಮಧ್ಯವರ್ತಿಗಳಿಗೆ, ಅಂದರೆ ವ್ಯಾಪಾರಿಗಳಿಗೆ ಡಿಸ್ಕೌಂಟ್ ಅಥವಾ ವಟ್ಟಾದ ನಿಗದಿಯೂ ಇರುತ್ತಿತ್ತು. ವ್ಯಾಪಾರಿಗಳಿಗೆ ದಕ್ಕುತ್ತಿದ್ದದ್ದು ಲಾಭವಲ್ಲ, ನ್ಯಾಯಬದ್ಧ ಆದಾಯ ಎಂಬ ತಿಳುವಳಿಕೆ ಸ್ಪಷ್ಟವಿತ್ತು. ಒಂದಕ್ಕೆ ಹತ್ತುಪಾಲು ಬೆಲೆ ಇಟ್ಟು, ವಿನಾ ಕಾರಣ ಮಧ್ಯವರ್ತಿಗಳನ್ನು ಬಿಟ್ಟು, ಗಿರಾಕಿಗಳಿಗೆ ರಿಯಾಯ್ತಿಯ ಆಮಿಷ ಒಡ್ಡಿ, ನಿಜ ಉದ್ಯಮ ಹಾಳುಮಾಡಿದವರ ವಿವರ ಹೇಳಹೊರಟರೆ ಅದೇ ಒಂದು ರಾದ್ಧಾಂತವಾದೀತು. ಪುಸ್ತಕ ಪ್ರಕಟಣೆಯ ಎಲ್ಲ ವಿವರಗಳಲ್ಲದಿದ್ದರೂ ಸ್ವಲ್ಪ ತಿಳಿದ ಓದುಗ ಹೇಗಿರುತ್ತಾನೆಂಬುದಕ್ಕೊಂದು ಉದಾಹರಣೆ ಕೇಳಿ: ಮಡಿಕೇರಿಯ ಪ್ರೊ| ಜನಾರ್ದನ ಬಾಳಿಗ – ನನ್ನ ತಂದೆಯ ಆತ್ಮೀಯ ಗೆಳೆಯರಿಗೆ, ನಾನು ಕೇವಲ ಗೌರವ ಭಾವದಲ್ಲಿ ನನ್ನ ಪ್ರಕಟಣೆ `ನೃತ್ಯಲೋಕ’ವನ್ನು (ಲೇಖಕ ಕೆ.ಮುರಳೀಧರ ರಾವ್. ಪ್ರತಿಗಳು ಈಗಲೂ ನನ್ನಲ್ಲಿ ಲಭ್ಯ) ಕಳಿಸಿದೆ. ಆದರೆ ಅವರು ಮರು ಟಪಾಲಿನಲ್ಲಿ ಅಂಚೆ ವೆಚ್ಚವೂ ಸೇರಿದಂತೆ ಪುಸ್ತಕದ ಮೌಲ್ಯವನ್ನು ನನಗೆ ಕಳಿಸಿದರು. ಜೊತೆಗೊಂದು ಚುಟುಕು ಒಕ್ಕಣೆ “ಹಣ ಕಳಿಸಿದ್ದಕ್ಕೆ ಕ್ಷಮಿಸಿ. ಆ ಪುಸ್ತಕವನ್ನು ನನ್ನ ಹಾಸ್ಟೆಲ್ಲಿನ ಗ್ರಂಥಾಲಯಕ್ಕೆ ಸೇರಿಸಿದ್ದೇನೆ, ರಸೀದಿ ಕಳಿಸಿ.” ಬಾಳಿಗರು ಮಡಿಕೇರಿಯಲ್ಲೇ ದುಡಿಯುವ ಮಹಿಳೆಯರಿಗೊಂದು ವಸತಿಗೃಹವನ್ನು ಸೇವಾಭಾವದಲ್ಲಿ ನಡೆಸಿದ್ದರು. ಒಳ್ಳೆಯ ಪುಸ್ತಕ ಸೇರಬೇಕಾದಲ್ಲಿಗೆ, ಸಕಾಲಕ್ಕೆ ಒದಗಿಸುವುದೇ ದೊಡ್ಡ ರಿಯಾಯಿತಿ ಎಂಬುದನ್ನವರು ಸೂಚ್ಯವಾಗಿ ಹೇಳಿದ್ದರು.

ವಿಶ್ವ ಮಾರುಕಟ್ಟೆಯ ಇಂಗ್ಲಿಷ್ ಪ್ರಕಟಣೆಗಳು ಅದರಲ್ಲೂ ಹಳೆಗಾಲದ ಖ್ಯಾತನಾಮರ ಕೃತಿಗಳು ಅಂದರೆ ಕ್ಲಾಸಿಕ್ಸ್, ವಿವಿಧ ರೂಪಗಳಲ್ಲೂ ಏಕಕಾಲಕ್ಕೆ ಕೆಲವು ಆವೃತ್ತಿಗಳಲ್ಲೂ ಮಾರಾಟದಲ್ಲಿರುತ್ತವೆ. ಸೀಮಿತ ಮಾರುಕಟ್ಟೆಯ ಕನ್ನಡ ಪ್ರಕಟಣೆಗಳಿಗೆ ಈ ಸೌಭಾಗ್ಯ ಅಸಾಧ್ಯ. ನವಿಲು ನೋಡಿ ಕೆಂಬೂತ ಗರಿ ಕಟ್ಟಿದಂತೆ, ಸರಕಾರಿ ಅಥವಾ ಇನ್ನೆಲ್ಲಿಯದೋ ಸಹಾಯಧನದಲ್ಲಿ ಬಂದ ಪ್ರಕಟಣೆಗಳು, ಕನ್ನಡ ಪುಸ್ತಕ ಮಾರಾಟ ಮೇಳಗಳು ಇಂದು ವಿಪರೀತವಾಗಿವೆ. ಇವು ಉಪಕಾರಕ್ಕಿಂತ ಆರೋಗ್ಯಪೂರ್ಣ ಓದುವ ಉತ್ಸಾಹಕ್ಕೆ ಧಕ್ಕೆ ಮಾಡಿದ್ದೇ ಜಾಸ್ತಿ! ಶೇಕ್ಸ್‍ಪಿಯರನ ಒಂದು ನಾಟಕ ತೆಗೆದುಕೊಳ್ಳಿ. ಅದನ್ನು ಯಾರೂ ಎಷ್ಟೂ ಮುದ್ರಿಸಬಹುದು, ಮಾರಬಹುದು. ಮುನ್ನುಡಿ, ಹಿನ್ನುಡಿ, ಅರ್ಥ, ಅನರ್ಥ, ಭಾಷಾಂತರ, ರೂಪಾಂತರ ಎಂದೇನೆಲ್ಲ ಅವತಾರ ಅವಾಂತರ ತಾಳಿಯೂ ಅದರ ನಿಜ ಯೋಗ್ಯತೆ ಬೆಳಗುತ್ತಲೇ ಇದೆ. ಕನ್ನಡದ ಕುಮಾರವ್ಯಾಸನಿಗೋ ಪಂಪನಿಗೋ ಈ ಯೋಗವಿಲ್ಲ. ಮಹಾಕೃತಿಗಳ ಪ್ರಕಟಣ ಯೋಗ್ಯತೆ ಮತ್ತು ಮಾರಾಟದ ಅವಕಾಶಗಳೆಲ್ಲ ಸರಕಾರದ್ದೇ ಎಂಬ ನಿರ್ವೀರ್ಯತೆ ಕನ್ನಡ ಪುಸ್ತಕೋದ್ಯಮವನ್ನು ಕಾಡುತ್ತಲೇ ಇದೆ.

ಸರಕಾರಿ ಕೃಪಾಪೋಷಣೆಗೆ ಎಂದೂ ಕಡೆಗಣ್ಣನೋಟ ಕೂಡ ಹಾಯಿಸದಿರುವ ಬಲುಹಿರಿಯ ಪ್ರಕಾಶಕ ಡಿವಿಕೆ ಮೂರ್ತಿ, ತೀರ ಈಚೆಗೆ (೧೯೯೮) `ಜ್ಞಾನವಿಜ್ಞಾನ ಕೋಶ’ ತಂದ ನವಕರ್ನಾಟಕ ಪಬ್ಲಿಕೇಶನ್ಸ್, ಸಾಮಾನ್ಯ ಸಮಾಜವನ್ನುದ್ದೇಶಿಸಿಯೇ ಪ್ರಕಾಶನ ಮತ್ತು ಮಾರಾಟಗಳಲ್ಲಿ ತೀವ್ರ ತೊಡಗಿರುವ ಸಮಾಜ ಬುಕ್ ಡಿಪೋ ಇತ್ಯಾದಿ ಇಲ್ಲಿ ನಿಜ ಕನ್ನಡ ಪುಸ್ತಕೋದ್ಯಮದ ದೃಷ್ಟಿಯಲ್ಲಿ ಉಲ್ಲೇಖನಾರ್ಹರು. ಒಂದು ಜಿಲ್ಲಾ ಕೇಂದ್ರವೂ ಅಲ್ಲದ ಪುತ್ತೂರಿನಿಂದ ಬೃಹತ್ ಗ್ರಂಥ ಮಾಲಿಕೆಯನ್ನೇ ಪ್ರಕಟಿಸುತ್ತಿರುವ ಬೋಳಂತಕೋಡಿ ಈಶ್ವರ ಭಟ್ಟರು ಈಚೆಗೆ ಶತಾವಧಾನಿ ರಾ. ಗಣೇಶರ `ಕನ್ನಡದಲ್ಲಿ ಅವಧಾನ ಕಲೆ’ಯನ್ನೂ ಪ್ರಕಟಿಸಿದರು. ಆಗ ಅವರು ಕೆಚ್ಚಿನಿಂದ ಹೇಳಿದ ಮಾತು “ನಾವು, ಅಂದರೆ ಪುತ್ತೂರು ಕರ್ನಾಟಕ ಸಂಘ, ಯಾವುದೇ ಸರಕಾರಿ ಸಹಾಯವನ್ನು ಕೇಳಿ, ನೆಚ್ಚಿ ಹೋಗುವುದೇ ಇಲ್ಲ.” ಇವರೆಲ್ಲರ ಆಶಯ, ಒಟ್ಟಾರೆ ಪುಸ್ತಕೋದ್ಯಮದ ಸಾಮಾನ್ಯ ಬಂಧದ ತಿಳುವಳಿಕೆಯನ್ನು ಓದುಗರು ಮನದಟ್ಟುಮಾಡಿಕೊಳ್ಳುವುದು ಅವಶ್ಯ. ಹಾಗಿಲ್ಲದವರು ರಿಯಾಯ್ತಿಗಳಿಗೆ ಗಿಂಜುತ್ತಾರೆ, ಬಿಟ್ಟಿ ಸಲಹೆಗೆ ದುಡುಕುತ್ತಾರೆ, ಗಂಭೀರ ವೃತ್ತಿಪರರಿಗೆ ಹಿಂಸೆಯಾಗುತ್ತಾರೆ. ಒಬ್ಬ ಬಡಪಾಯಿ ವಿದ್ಯಾರ್ಥಿ ಒಮ್ಮೆ ನನ್ನಲ್ಲಿಗೆ ಬಂದಿದ್ದ. ಆತ ಶಾಲಾ ಗ್ರಂಥಭಂಡಾರದಿಂದೊಯ್ದ ಹಳೇ ಪುಸ್ತಕವೊಂದನ್ನು ಕಳೆದುಕೊಂಡಿದ್ದ. ಬದಲಿ ಪ್ರತಿಗಾಗಿ ಅಂಗಡಿ ಅಂಗಡಿ ತಿರುಗಿ ಬಸವಳಿದಿದ್ದ. ನನ್ನನ್ನು ಪರೋಕ್ಷವಾಗಿ ಛೇಡಿಸಿದ “ಒಂದು ಪ್ರತಿ ಪ್ರಿಂಟಾದರೂ ಮಾಡಿಸಿ ಕೊಡಿ ಸಾರ್.” ಅವನ ಅನುಭವದ ಕೊರತೆಯನ್ನು ನಾನು ತುಂಬಿಕೊಟ್ಟಿರಬೇಕು. “ಮಗುವೇ ಮರುಮುದ್ರಣಕ್ಕೆ ಮೊದಲು ಲೇಖಕನ ಅನುಮತಿ ಬೇಕು. ಪ್ರಕಾಶಕನೆಂಬ ಹಣ ತೊಡಗಿಸುವ ಸಂಘಟಕ ಬೇಕು. ಕನಿಷ್ಠ ಐನೂರು, ಸಾವಿರ ಪ್ರತಿಗಳ ಬೇಡಿಕೆಯಾದರೂ ಇರಬೇಕು. ಮತ್ತೆ ಅಚ್ಚಿನಮನೆ, ವಿತರಣಜಾಲ ಸರಿಯಾದ ಕೊನೆಯಲ್ಲಿ ನಿನ್ನ ಒಂದು ಪ್ರತಿ ಖಂಡಿತ ಸಿಗುತ್ತೆ.”

ಹೀಗಲ್ಲದೆ ಇಲ್ಲದ ಪುಸ್ತಗಳನ್ನು ಒತ್ತಾಯಿಸುವವರು. ಸಲ್ಲದ ಜಂಭ ಮೆರೆಯುವವರು ಅಂಟಿಕೊಳ್ಳುತ್ತಾರೆ. ಇವರು ಒಂದೋ ತೀರಾ ಮರೆಗುಳಿಗಳಾಗಿರಬೇಕು ಅಥವಾ ಓದುವ ಹವ್ಯಾಸಕ್ಕೆ ಅಪಚಾರಿಗಳಾಗಿರಬೇಕು. ಸರಳ ಉದಾಹರಣೆಯೊಡನೆ ಹೇಳುವುದಾದರೆ ಲೇಖಕ ಮತ್ತು ಕೃತಿಯನ್ನು ಅದಲು ಬದಲು ಮಾಡಿಕೊಂಡು ಹಠ ಸಾಧಿಸುವವರದೊಂದು ದೊಡ್ಡ ಗುಂಪು. ಇಂಥವರು ಹಾಸ್ಯಸಾಹಿತ್ಯಕ್ಕೆ ವಿಷಯಪೂರಕರು. `ಕಾರಂತ ಪ್ರಪಂಚ’ ದ ಒಂದು ಆಖ್ಯಾನಕವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶಿವರಾಮ ಕಾರಂತರನ್ನು ಬೆಂಗಳೂರು ವಿವಿನಿಲಯದ ಆವರಣದಲ್ಲೊಬ್ಬ ಅಧ್ಯಾಪಕ-ಅಭಿಮಾನಿ ಭೇಟಿಯಾದರಂತೆ. ಆತ ಉತ್ಸಾಹದಲ್ಲಿ “ನಿಮ್ಮ ಕಾದಂಬರಿ ಅಂದ್ರೆ ನಮ್ಮ ಮನೆಯವರಿಗೆಲ್ಲಾ ತುಂಬ ಪ್ರೀತಿ ಸಾರ್. ಅದರಲ್ಲೂ `ತಾಯಿ ಕರುಳು’ ಕಾದಂಬರಿಯನ್ನಂತೂ ನಮ್ಮ ತಾಯಿ ಬಹಳ ಹಚ್ಕೊಂಡಿದ್ದಾರೆ.” ವಾಸ್ತವವಾಗಿ ತಾಯಿ ಕರುಳಿನ ಲೇಖಕ ಅನಕೃ.

ಸೀಮಿತ ಸ್ವಾರ್ಥಕ್ಕೆ ಪುಸ್ತಕೋದ್ಯಮಿ ಕಣ್ಣು ತೆರೆಯದಿರುವ ಬಗ್ಗೆ ಕಿಡಿ ಕಾರುವವರ ಗುಂಪು ಇನ್ನೊಂದು. ಏನೋ ವಿಶೇಷ ಸಂದರ್ಭಕ್ಕೆ, ಯಾರೋ ಸ್ಪರ್ಧೆಗೆ ಸೂಚಿಸಿದ ವಿಷಯ `ನೆಹರೂ ಕಂಡಂತೆ ಮಹಿಳೆ’. ಎಷ್ಟೊ ಸ್ಪರ್ಧಾಪ್ರವೀಣರು ಆ ಶೀರ್ಷಿಕೆಯಲ್ಲೇ ನೆಹರು ಬರೆದ ಪುಸ್ತಕಕ್ಕಾಗಿ ಹುಡುಕಾಟ ನಡೆಸಿದ್ದರು. ಅದನ್ನು ತರಿಸದ್ದಕ್ಕೆ ನನ್ನಂಥವರಲ್ಲಿ ಕೋಪಿಸಿದರು. ಕೆಲವರು ಅಂಚೆ ವೆಚ್ಚ ಮತ್ತು ಪುಸ್ತಕದ ಪೂರ್ಣ ಮೊಬಲಗು ಎಷ್ಟೇ ಆದರೂ ಮುಂಗಡ ಕೊಡಲೂ ಸಿದ್ಧರಿದ್ದರು. ಅದೃಷ್ಟವಶಾತ್ ಅಂದು ನೆಹರೂ ಬದುಕಿರಲಿಲ್ಲ. ಇಲ್ಲವಾದರೆ ಇವರು ಅವರಿಂದ ಹಾಗೊಂದು ಪುಸ್ತಕ ಬರೆಸಿಯೂ ಬಿಡುತ್ತಿದ್ದರೋ ಏನೋ!

ಸಾಹಿತ್ಯಕ ಅದರಲ್ಲೂ ಕನ್ನಡ ಎಂಎ ವಿದ್ಯಾರ್ಥಿಗಳ ಅನುಭವವಂತೂ ನಮಗೆ ವರ್ಷಂಪ್ರತಿ ಹೊಸ ಹೊಸ ನಗುವಿಗೆ ಗ್ರಾಸವಾಗುತ್ತದೆ. ಎಂದೂ ಪುಸ್ತಕದ ಅಂಗಡಿಗೆ ಕಾಲಿಡದ ಇವರಲ್ಲಿ ಕೆಲವರು ಧಿಮಾಕಿನಲ್ಲೇ ಕೇಳುವುದಿದೆ “ಕನ್ನಡದಲ್ಲಿ ಹೊಸದೇನಿದೆ?” ಗುಳ್ಳೆ ಒಡೆಯಲು ನಾನು ಪ್ರತಿ ನುಡಿಯುವುದುಂಟು “ನಿಮ್ಮ ಹಳತು ಎಲ್ಲಿಗೆ ನಿಂತಿದೆ?”

ಒಬ್ಬ ನಿವೃತ್ತ ಪ್ರೊಫೆಸರರ ಹೆಚ್ಚು ಕಡಿಮೆ ಒಂದೇ ಒಕ್ಕಣೆಯ ಕಾರ್ಡು ನನಗೆ ಹಲವು ಬಾರಿ ಬಂದದ್ದಿದೆ. ಆತ ಬಹುಶಃ ಯಾವುದೋ ಪತ್ರಿಕಾ ನವಪ್ರಕಾಶನ ಕಾಲಂ ನೋಡಿ ಬರೆಯುವುದಿರಬೇಕು. “ಸ್ವಾಮೀ ನಿಮ್ಮ ಪುಸ್ತಕದಲ್ಲಿ ನಾನು ಆಸಕ್ತ. ಅದರ ಒಂದು ಗೌರವ ಪ್ರತಿಯನ್ನು ನನಗೆ ಕಳಿಸಿಕೊಡಿ. ನಾನು ತುಂಬಾ ಪ್ರಭಾವಶಾಲಿಯಾದ್ದರಿಂದ ಅದರ ಹೆಚ್ಚಿನ ವ್ಯಾಪಾರಕ್ಕೆ ಕಾರಣನಾಗಬಲ್ಲೆ.” ಈ ಉಚಿತ ಪ್ರತಿ, ಹಾಗೇ ರಿಯಾಯಿತಿ ದರದ ಆವೃತ್ತಿ, ಇಳಿಸಿದ ಬೆಲೆ ಮಾರಾಟ ಎಂಬಿತ್ಯಾದಿ ಅವ್ಯಾವಾಹಾರಿಕ ರೂಢಿಗಳು ಕನ್ನಡ ಪುಸ್ತಕೋದ್ಯಮವನ್ನು ಇಂದು ಭಾರೀ ಕಲಕುತ್ತಿವೆ. ಪರೋಕ್ಷವಾಗಿ ಇದು ಓದುವ ಹವ್ಯಾಸವನ್ನೇ ಕುಲಗೆಡಿಸುವುದು ನಿಶ್ಚಯ. ಅದಕ್ಕಿನ್ನೊಬ್ಬ ಪ್ರೊಫೆಸರರ ಕತೆ ಕೇಳಿ. ಇವರು ತಮ್ಮ ಕಳಪೆ ಮಹಾಪ್ರಬಂಧವನ್ನು ತಮ್ಮ ಸ್ಥಾನಬಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೇ ಪ್ರಕಟಣೆಗೊಪ್ಪಿಸಿದರು. ಮುಂದೆಲ್ಲ ನಿಯಮಾನುಸಾರವೇ ನಡೆದಂತಿತ್ತು. ಪ್ರಸಾರಾಂಗದ ಬೆಲೆ ನಿಗದಿ ಸಮಿತಿ ಪುಸ್ತಕಕ್ಕೆ ಉದಾರವಾಗಿ ಭಾರೀ ಬೆಲೆಯನ್ನೇ ಮುದ್ರಿಸಿತು. ವಿವಿನಿಲಯ ಲೇಖಕನ ಗೌರವಧನವನ್ನು ಮುದ್ರಿತ ಬೆಲೆಯ ಆಧಾರದಲ್ಲೇ ನಿಷ್ಕರ್ಷಿಸುವುದರಿಂದ ಪ್ರೊಫೆಸರರ ಆರ್ಥಿಕ ಬರ ಚೆನ್ನಾಗಿಯೇ ನಿವಾರಣೆಯಾಗಿರಬೇಕು. ಆದರೆ ಅವರು ಅಷ್ಟಕ್ಕೇ ತೃಪ್ತರಾಗಿ ಕೂರಲಿಲ್ಲ. ಪುಸ್ತಕ ಹತ್ತು ಜನರ ಕೈ ಸೇರಿದರೆ ಬರಬಹುದಾದ ಕೀರ್ತಿಮೋಹ ತಗುಲಿಕೊಂಡಿತು. (ವಾಸ್ತವದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಉದಯವಾಣಿಯ ಪುಸ್ತಕ ವಿಮರ್ಶೆಯ ಅಂಕಣದಲ್ಲಿ ಈ ಕೃತಿಯ ಕಳಪೆತನವನ್ನು ಜಾಹೀರುಮಾಡಿದ್ದರು.) ಮತ್ತೆ ತನ್ನ ಸ್ಥಾನಮಹಿಮೆಯಲ್ಲಿ ಪುಸ್ತಕಕ್ಕೊಂದು ಬಿಡುಗಡೆ ಸಮಾರಂಭವನ್ನು ವಿವಿನಿಲಯದಲ್ಲಿ ಮಾಡಿಸಿದರು. ಮತ್ತದರ ದಿನಾಂಕವನ್ನೂ ರಾಜ್ಯೋತ್ಸವದ ಮಾಸಕ್ಕೇ (ನವೆಂಬರ್) ಹೊಂದಿಸಿಟ್ಟರು. ನೆನಪಿರಲಿ, ಆ ದಿನಗಳಲ್ಲಿ ವಿವಿನಿಲಯ ತನ್ನೆಲ್ಲ ಪ್ರಕಟಣೆಗಳನ್ನು ಶೇಕಡಾ ಐವತ್ತರ ರಿಯಾಯ್ತಿ ದರದಲ್ಲಿ ಮಾರುತ್ತಿತ್ತು! ಹೊಸ ಪುಸ್ತಕ, ಅದೂ ಶೇಕಡಾ ಐವತ್ತರ ರಿಯಾಯಿತಿ ದರದಲ್ಲಿ ಸಿಗುತ್ತದೆ ಎಂದಾಗ ಜನ ಮುಕುರಿದರು. ಎಂದಿನಂತೆ “ಛೆ! ಇದು ಪೇಪರ್ ಬೈಂಡಿನ ಬೆಲೆಯೂ ಅಲ್ಲ” ಎಂದೇ ಪ್ರಚಾರವನ್ನೂ ಕೊಟ್ಟರು. ಪುಸ್ತಕೋದ್ಯಮದ ವೃತ್ತಿನಿರತರಿಗೆ ಮತ್ತೂ ಕಂಡದ್ದು ಇಷ್ಟೆ – ಆ ಪುಸ್ತಕವನ್ನು ಶೇಕಡಾ ೭೫ರ ರಿಯಾಯ್ತಿ ದರದಲ್ಲಿ ಕೊಟ್ಟಿದ್ದರೂ ನಿಜ ತಯಾರಿ ಖರ್ಚಿಗೇನೂ ತೊಂದರೆಯಾಗುತ್ತಿರಲಿಲ್ಲ! ಬೆಕ್ಕಿನ ಕಂಠಕ್ಕೆ ಗಂಟೆ ಕಟ್ಟುವವರಾರು?

ಇಲ್ಲಿಯವರೆಗೆ ಓದುವ ಹವ್ಯಾಸ ಮತ್ತು ಪ್ರಕಟಣ ಪ್ರಪಂಚದ ಆರ್ಥಿಕ ಮುಖಾಮುಖಿಯನ್ನಷ್ಟೇ ಕಂಡೆವು. ಮುಂದುವರಿದು ಇನ್ನೂ ಸ್ವಲ್ಪ ವಿಷಯಕ ಆಯಾಮವನ್ನು ತಡವಿ ನೋಡೋಣ. ಶೈಕ್ಷಣಿಕ ಅಗತ್ಯಕ್ಕೆ ಅಂದರೆ ಯಾವುದೋ ಪರೀಕ್ಷೆ ಅಥವ ಪದವಿಗಾಗಿ ಪುಸ್ತಕ ಓದುವವರ ಸಂಖ್ಯೆ ಬಲು ದೊಡ್ಡದು. ಇವರ ಪುಸ್ತಕ ಅಗತ್ಯಗಳೂ ಖಚಿತ – ರೈಲ್ವೇ ಹಳಿಗಳಂತೆ. ಇವರ ಪುಸ್ತಕ ಪ್ರಕಟಿಸುವವರಂತು ಅಪ್ಪಟ ಉದ್ಯಮಿಗಳು. ಇದಕ್ಕೆ ಇನ್ನೊಂದೇ ರೈಲಿನ ಉದಾಹರಣೆ ನೋಡಿ. ಪುಸ್ತಕ ನೇರ ಪರೀಕ್ಷೆಯನ್ನೇ ಕುರಿತದ್ದಿದ್ದರೆ ನ್ಯಾರೋ ಗೇಜ್, ಅಂದರೆ ಗೈಡು, ಇದು ಅಲ್ಪಾಯುಷಿ. ಸ್ವಲ್ಪ ವಿಸ್ತೃತ ರೂಪದಲ್ಲಿ ತತ್ತ್ವಗಳ ವಿವರಣೆ ಸಹಿತವಾದರೆ ಮೀಟರ್ ಗೇಜ್ ಅಂದರೆ, ಪಠ್ಯ. ವಿವಿನಿಲಯ ಪಾಠಪಟ್ಟಿ ಅಥವಾ ಸಿಲೆಬಸ್ಸನ್ನು ವರ್ಷಂಪ್ರತಿ ಬದಲಿಸುವುದಿಲ್ಲವಾದ್ದರಿಂದ ಪಠ್ಯ ತುಸು ಹೆಚ್ಚು ಬಾಳುತ್ತದೆ. ಸಾಂಸ್ಥಿಕ ವಹಿವಾಟಿನಲ್ಲಿ ಅಂತಿಮ ಹಂತ ಬ್ರಾಡ್ ಗೇಜ್ ಅಂದರೆ ಆಕರಗ್ರಂಥಗಳು, ದೀರ್ಘಾಯುಷಿಗಳು. ವಿಷಯ, ಭಾಷೆ, ಬೆಲೆ ಹೇಗೇ ಇರಲಿ, ವಿದ್ಯಾಸಂಸ್ಥೆಗಳ ಮಾರ್ಗದರ್ಶೀ ಸೂತ್ರಗಳನ್ನು ತದ್ವತ್ತು ನಕಲಿಸಿ ಬರುತ್ತವೆ ಈ ಆಕರಗ್ರಂಥಗಳು. ಇಂದು ಬಹುತೇಕ ವಿದ್ಯಾಸಂಸ್ಥೆಗಳೂ ಗುರುವೃಂದವೂ ತಮ್ಮ ಮೆದುಳನ್ನು ಮೇಲಿನ ಇಲಾಖೆಗಳ ಆದೇಶಗಳಿಗೆ ಒತ್ತೆ ಇಟ್ಟುಕೊಂಡಿವೆ. ಇಲಾಖೆ ಪಾಠಪಟ್ಟಿಯೊಡನೆ ಆಕರ ಗ್ರಂಥಗಳ ಪಟ್ಟಿಯನ್ನು ಕೊಡದಿದ್ದರೆ ಗ್ರಂಥಾಲಯಗಳಿಗೆ ಲಕ್ಷಾಂತರ ಮೌಲ್ಯದ ಪುಸ್ತಕ ಆಯುವುದರಲ್ಲೇ ಸೋಲುತ್ತಾರೆ. ಹಳಿಯ ಮೇಲೋಡುವ ಬಂಡಿ, ಅಂದರೆ ಓದುಗ ಕುಂಟುವ ಪ್ಯಾಸೆಂಜರ್ರೋ ಧಾವಿಸುವ ಎಕ್ಸ್‍ಪ್ರೆಸ್ಸೋ ಅಸಂಬದ್ಧ ಹೊರುವ ಗೂಡ್ಸೋ ಐಶಾರಾಮಗಳ ಆಗರವೇ ಆದ ಹಳಿಯ ಮೇಲಿನ ಅರಮನೆಯೋ ಇರಬಹುದು. ಅದೇನೇ ಇದ್ದರೂ ಎಷ್ಟು ಹೆಚ್ಚಿದರೂ ಈ ಪ್ರಕಟಣೋದ್ಯಮಕ್ಕೆ ಹಳಿಯ ಮಿತಿ ಅರ್ಥಾತ್ ಸೀಮಿತ ಪದವಿಯ ಲಕ್ಷ್ಯ ಮೀರಿದ ಆಯಾಮವಿಲ್ಲ.

ಅದೊಂದು ನೈಜ ವನ. ಅಲ್ಲೊಂದು ಸಲಗ. ಈ ಪ್ರಬಂಧದ ಮೊದಲಲ್ಲೇ ಸೂಚಿಸಿದ ಅಂಗಡಿಯಂಥ ವ್ಯವಸ್ಥೆ ಮತ್ತು ಹೆಸರಿಸಿದಂಥ ವ್ಯಕ್ತಿಗಳಿಗೆ ಅನ್ವಯಿಸಿಕೊಳ್ಳಿ. ಇಲ್ಲಿ ಹಸುರು ಕೇವಲ ಮನೋಸಂಸ್ಕಾರ ಬಲದಿಂದ, ಅಪ್ಪಟ ಜೀವನಾನುಭವದಿಂದ ವೈವಿಧ್ಯಮಯವಾಗಿ ಹಬ್ಬಿದೆ. ಚಿಗುರಿನ ರುಚಿ ಕೊಡುವ ಕತೆ ಕಾದಂಬರಿ, ರಸಪೂರಿಯಂಥ ಕಾವ್ಯ, ಬಲಿತ ದಿಂಡಿನಂಥ ಹಲಬಗೆಯ ವೈಚಾರಿಕ ಕೃತಿಗಳೂ ಆಸ್ವಾದನೆಗೆ ಕಾದಿವೆ. ಜೀವನದಿಯಲ್ಲೋ ಅನುಭವಸರಸಿಯಲ್ಲೋ ದಾಹ ನೀಗಬಹುದು, ಮಿಂದು ಸುಖಿಸಬಹುದು. ತರ್ಕದ ಹುಡಿ ಸ್ನಾನಕ್ಕೂ ಇಲ್ಲಿ ಧಾರಾಳ ಅವಕಾಶಗಳಿವೆ. ಈ ಪುಂಡುತನವೇ ನಿಜ ಓದು.

ಓದುವ ಹವ್ಯಾಸಕ್ಕೆ ಗ್ರಂಥಾಲಯದ ಪಾಲು ದೊಡ್ಡದು. ಕೊಂಡು ಓದುವವನನ್ನು ಆರ್ಥಿಕ ಮಿತಿಗಳು ಕಾಡುವುದಿರಬಹುದು. ಆದರೆ ಗ್ರಂಥಾಲಯದ ಓದುಗನಿಗೆ ಸಮಯದ್ದೊಂದೇ ಕಟ್ಟುಪಾಡು. ಅಂಥಾ ಓದುಗನ ಪರವಾಗಿ ಪುಸ್ತಕ ಆಯುವ ಗ್ರಂಥಪಾಲಕನ ಜವಾಬ್ದಾರಿ ದೊಡ್ಡದು. ಆದರೆ ನನ್ನ ಅನುಭವಕ್ಕೆ ನಿಲುಕಿದಂತೆ ಕನ್ನಡವೇ ಏಕೆ ಭಾರತೀಯ ಸಂದರ್ಭದಲ್ಲೇ ಇಂದು ಗ್ರಂಥಾಲಯಗಳಲ್ಲಿ ಕೊಳ್ಳುವ ಕೊನೆಯಲ್ಲಿ ಆ ಸಾಮರ್ಥ್ಯ ದಿನೇ ದಿನೇ ವಿರಳವಾಗುತ್ತಿದೆ. ಅತಿ ವಾಣಿಜ್ಯೀಕರಣದ ಮತ್ತು ಸ್ವಾರ್ಥ ರಾಜಕಾರಣದ ದುಷ್ಪ್ರರಿಣಾಮ ಇದು. ಲೇಖಕ ಮತ್ತು ಪ್ರಕಾಶಕ ಇಂದು ಓದುಗನನ್ನೇ ಮರೆತು ಭಾರಿಯಾಗಿ ಬೆಳೆಯುತ್ತಿದ್ದಾರೆ. ಇರುವ ಒಳ್ಳೆ ಗ್ರಂಥಪಾಲಕರೂ ಕೇವಲ ನಿರ್ವಾಹಕರ ಮಟ್ಟದಲ್ಲೇ ಉಳಿಯುವ ವ್ಯವಸ್ಥೆ ಬಲಿತಿದೆ. ಪರಿಶ್ರಮವಿಲ್ಲದ ಬರವಣಿಗೆ, ಬರೆದದ್ದೆಲ್ಲ ಪ್ರಕಟವಾಗಬೇಕೆಂಬ ಚಪಲ, ಪ್ರಕಟವಾದದ್ದೆಲ್ಲ ನಗದಾಗಬೇಕೆಂಬ ದುರಾಸೆ, ಇದಕ್ಕೇ ದುಡಿಯುವ ಸಮರ್ಥ ವ್ಯವಸ್ಥೆ ಕಣ್ಣಿಗೆ ಹೊಡೆದು ತೋರುತ್ತಿದೆ. ಅಡಿಪಾಯವಿಲ್ಲದ ಬಹುಮಹಡಿ ಕಟ್ಟಡದಂತೆ ಮಾರ್ಮಲೆತಿದೆ. ಅನುದಾನದ ಪ್ರವಾಹದಲ್ಲಿ ದಂಡೆ ಕೊರೆದು, ಕಸ ಸೆಳೆದು ಕಪಾಟುಗಳೇನೋ ಭರ್ಜರಿ ತುಂಬುತ್ತವೆ. ಅವುಗಳೆಡೆಯಲ್ಲಿ ಓದುವ ಹವ್ಯಾಸಿಗೆ ಜಳ್ಳು ತೂರುವುದೇ ಮುಖ್ಯ ಕಾಯಕವಾಗುತ್ತದೆ, ಎಷ್ಟೋ ಬಾರಿ ದಾಹ ನೀಗುವುದೇ ಇಲ್ಲ. ಗ್ರಂಥಾಲಯ ಬೆಳವಣಿಗೆಯಲ್ಲಿ ಜ್ಞಾನದ ಭ್ರಮೆಗೆ ಪೋಲಾಗುತ್ತಿರುವುದು ಸಾರ್ವಜನಿಕ ಹಣ ಎಂಬುದು ವಿಚಾರವಂತರನ್ನೆಲ್ಲ ಸದಾ ಕಾಡಬೇಕು. ಯಾವುದೇ ಒಂದು ವಿವಿನಿಲಯ ಅಥವಾ ಅಕಾಡೆಮಿ, ಎಷ್ಟೇ ಬುದ್ಧಿವಂತನಾದ ಮುಖ್ಯಸ್ಥ ಬಂದ ಮಾತ್ರಕ್ಕೆ ಸಾರ್ವತ್ರಿಕ ಓದುವ ಹವ್ಯಾಸ ಹೆಚ್ಚಿಸುವುದು ಸುಲಭವಲ್ಲ, ಪ್ರಕಟಣೆಗಳ ಯೋಗ್ಯತೆ ಒಮ್ಮೆಲೆ ಎತ್ತರಿಸುವುದೂ ಸಾಧ್ಯವಿಲ್ಲ. ನಾನು ನಿರಾಶಾವಾದಿ ಅಲ್ಲ. ಆದರೂ ಹೇಳಲೇಬೇಕಾಗಿದೆ – ಇಂದಿನ ಪುಸ್ತಕೋದ್ಯಮ, ಸುಂದರ ಪಂಚರದೊಳಗೆ ಬಂಧಿಯಾದ ವ್ಯಾಘ್ರ. ನೈಜನೆಲೆಗೆ ಹೆಣಗುತ್ತಿರುವ ಅಳಿವಿನಂಚಿನ ಪ್ರಾಣಿ.

ಡಿವಿಜಿ ಉವಾಚ: ಲೇಖಕರಲ್ಲಿ ಅನೇಕ ಅಂತಸ್ತುಗಳು ಸ್ವಭಾವಸಿದ್ಧವಾಗಿ ಇದ್ದೇ ಇರುತ್ತವೆ. ಎಲ್ಲರೂ ಮೊದಲನೆಯ ಅಂತಸ್ತಿಗೇ ಕೈ ಹಾಕುವುದರಿಂದ ನಮ್ಮಲ್ಲಿರುವ ಶಕ್ತಿಗೆ ಪೂರ್ಣ ಪತ್ರಿ ಫಲ ದೊರೆವಂತಾಗುವುದಿಲ್ಲ. ಎರಡನೆಯ ಅಂತಸ್ತು ಮೂರನೆಯ ಅಂತಸ್ತುಗಳ ಲೇಖಕರಿಗೂ ನಾಡಿನ ಬಾಳಿಕೆಯಲ್ಲಿಯೂ ನಾಡಿಗರ ನೆನಪಿನಲ್ಲಿಯೂ ಬೇಕಾದಷ್ಟು ಸ್ಥಳವಿದೆ. ಮೊದಲ ದರ್ಜೆಯ ಪ್ರಯತ್ನದಲ್ಲಿ ಅರ್ಧ ಜಯವನ್ನೋ ಸಂದಿಗ್ದ ಜಯವನ್ನೋ ಪಡೆವುದಕ್ಕಿಂತ ಎರಡನೆಯ ದರ್ಜೆಯಲ್ಲಿ ಪೂರ್ಣ ಜಯವನ್ನು ಪಡೆಯುವುದು ಲೇಖಕನಿಗೆ ಹೆಚ್ಚು ಯಶಸ್ಕರವೆಂದೂ ದೇಶಕ್ಕೆ ಹೆಚ್ಚು ಪ್ರಯೋಜನಕರವೆಂದೂ ಭಾವಿಸಿದ್ದೇನೆ. ನ್ಯಾಯವಾಗಿ ನೋಡಿದರೆ ಸರಸ್ವತಿಯ ಊಳಿಗದಲ್ಲಿ ಮೇಲು ಕೀಳುಗಳ ಎಣಿಕೆಯಿರಬಹುದೇ!