(ಜಿ.ಎನ್.ಅಶೋಕವರ್ಧನನ `ಪುಸ್ತಕ ಮಾರಾಟ ಹೋರಾಟ’

(೧೯೯೯) ಪುಸ್ತಕದ ಅಧ್ಯಾಯ ಏಳು)

[ಜಿ.ಟಿ. ನಾರಾಯಣ ರಾಯರ ಸಂಪಾದಕೀಯ ಟಿಪ್ಪಣಿ: ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಖರೀದಿಸುವಲ್ಲಿ ಇಂದು ರೂಪ, ಗಾತ್ರ, ಬಣ್ಣ ಎಂಬ ಮೂರು ಬಾಹ್ಯ ಗುಣಗಳು ಅತಿಶಯ ಪ್ರಾಮುಖ್ಯ ಪಡೆದಿವೆ. ತಿರುಳು, ಪಕ್ವತೆ, ಶ್ರಾಯ ಎಂಬ ಆವಶ್ಯಕ ಮತ್ತು ಅನಿವಾರ್ಯ ಆಂತರಿಕ ಗುಣಗಳಿಗೆ ಮನ್ನಣೆ ಇಲ್ಲ. ಸಿಪ್ಪೆ ಮೆಚ್ಚಿ ಹಣ್ಣು ಕೊಳ್ಳುವಾತ ಗುಳ ಕಳೆದುಕೊಂಡಿರುತ್ತಾನೆ. ಗುಳ ಆಯ್ದುಕೊಳ್ಳುವವನಾದರೋ ಎರಡನ್ನೂ ಗಳಿಸಿರುತ್ತಾನೆ. ರಾಸಾಯನಿಕ ಕೃಷಿಯ ಅತಿ ಬಳಕೆಯ ದುಷ್ಪಲ ಈಗ ಸರ್ವವ್ಯಾಪಿ ಆಗಿದೆ. ಕೃಷಿಗೆ ಹೇಗೆ ರಾಸಾಯನಿಕ ಪೂರಣ ಮಾರಣ ಹೋಮವೋ ಪುಸ್ತಕೋದ್ಯಮಕ್ಕೆ ಹಾಗೆ ಸರಕಾರೀ ಅನುದಾನ. ಇದರ ವಿಷಫಲವೇ ಪುಸ್ತಕೋದ್ಯಮದ ಅಪಮೌಲೀಕರಣ. ಈ ಉದ್ಯಮ ಸ್ವಾವಲಂಬಿಯಾಗಿಯೂ ಸರ್ವಾಂಗ ಸುಂದರವಾಗಿಯೂ ಬೆಳೆಯ ಬೇಕಾದರೆ ಸರಕಾರ ಈ ಕ್ಷೇತ್ರದಿಂದ ದೂರ ಸರಿದು ತನ್ನ ಏಕೈಕ ಮುಖ್ಯ ಕರ್ತವ್ಯ ನಿರ್ವಹಿಸುವುದೊಂದೇ ಮಾರ್ಗ; ದಕ್ಷ, ಜನಪರ ಮಾತ್ತು ಪ್ರಾಮಾಣಿಕ ಆಡಳಿತ.]

[ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇನ್ನೇನು ಹುಟ್ಟಲಿದ್ದ ಕನ್ನಡ ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕೋದ್ಯಮ ಕಮ್ಮಟದಲ್ಲಿ ನಾನು ಮಂಡಿಸಿದ ಟಿಪ್ಪಣಿಗಳು ಮತ್ತು ಅದಕ್ಕೇ ಸಂಬಂಧಿಸಿದಂತೆ ಸುಧಾ ವಾರಪತ್ರಿಕೆಯ ೭-೧೧-೧೯೯೩ರ ನನ್ನದೇ ಲೇಖನದ ಆಯ್ದ ಭಾಗಗಳ ಪರಿಷ್ಕೃತ ಸಂಕಲನ.]

ವ್ಯಕ್ತಿ ತನ್ನ ಜೀವನಯಾಪನೆಗೆ ತೊಡಗಿಕೊಳ್ಳುವುದು ವೃತ್ತಿ. ಹಲವು ವೃತ್ತಿಗಳಾದ ಲೇಖನ, ಮುದ್ರಣ, ಪ್ರಕಾಶನ, ವಿತರಣೆ ಇತ್ಯಾದಿಗಳ ಅರ್ಥಪೂರ್ಣ ಸಂಯೋಜನೆ ಓದುಗನೆಂಬ ಕೊನೆಯನ್ನು ಮುಟ್ಟುವಂತೆ ದುಡಿಯುವ ವ್ಯವಸ್ಥೆ ಪುಸ್ತಕೋದ್ಯಮ. ಮೊದ ಮೊದಲು ಕುಮರಿ ಕೃಷಿಯಂತೆ ಸೀಮಿತ ಅನುಕೂಲಗಳಲ್ಲಿ ವಿರಳವಾಗಿ ಪುಸ್ತಕದ ಬೆಳೆ ಕಾಣಿಸುತ್ತಿತ್ತು. ಆ ನಿಟ್ಟಿನಲ್ಲಿ ಮೈಸೂರು ಸಂಸ್ಥಾನದ ಗೌರವ ಹೆಚ್ಚಳಕ್ಕಾಗಿ ಅರಮನೆಯ ಪ್ರಕಟಣೆಗಳು, ಲೇಖಕ ಪ್ರಧಾನವಾಗಿ `ಜೀವನ’ (ಮಾಸ್ತಿಯವರದು) ಹರ್ಷ (ಕಾರಂತರದು) ಉದಯರವಿ (ಕುವೆಂಪು ಅವರದು) ಮುಂತಾದ ಪ್ರಕಾಶನಗಳು, ಸಾರ್ವಜನಿಕವಾಗಿ ಡಿವಿಕೆ ಮೂರ್ತಿ, ಮನೋಹರ ಗ್ರಂಥಮಾಲಾ, ಸಮಾಜ ಬುಕ್ ಡಿಪೋ ಮುಂತಾದ ಪ್ರಕಟಣ ಸಂಸ್ಥೆಗಳು, ವಿದ್ಯಾ ವಿಸ್ತರಣೆಯ ಅಗತ್ಯಗಳಿಗೆ ಪೂರಕವಾಗಿ ವಿವಿನಿಲಯಗಳ ಪ್ರಸಾರಾಂಗಗಳು ಹೀಗೆ ಹೆಸರಿಸುತ್ತಾ ಹೋಗಬಹುದು. ಅಂದು ಮಾಸ್ತಿಯವರು ಅಸಂಖ್ಯ ಲೇಖಕರನ್ನು ಪೋಷಿಸಿದ್ದು, ಗಳಗನಾಥರು ಪುಸ್ತಕ ಹೊತ್ತು ಊರೂರು ಅಲೆದು ಮನೆ ಮನೆಗೆ ಮುಟ್ಟಿಸಿದ್ದು, ರಾಜರತ್ನಂ ಸ್ವತಃ `ಸಾಹಿತ್ಯ ಪರಿಚಾರಕ’ ಎಂದೇ ಹೆಸರಿಸಿಕೊಂಡು ಕಡ್ಡಾಯ ಪುಸ್ತಕ ಮಾರಾಟ ಮಾಡಿದ್ದು ಮುಂತಾದ ಅಸಾಮಾನ್ಯ ಯೋಚನೆಗಳು ಇಂದು ವಿಕಸಿಸಿವೆ. ವಿದ್ಯಾವಂತರ ಸಂಖ್ಯಾವೃದ್ಧಿಯೊಡನೆ ಸಾಹಿತ್ಯಕ ಸಂಘಟನೆಗಳು ಹಳ್ಳಿಗಲ್ಲಿಗೂ ವ್ಯಾಪಿಸಿವೆ. ಎಲ್ಲ ಸಂಪರ್ಕ ಮಾಧ್ಯಮಗಳೂ ಪುಸ್ತಕ ಕೈಂಕರ್ಯಕ್ಕೆ ಬದ್ಧವಾಗಿ, ಒಟ್ಟಾರೆ ಪುಸ್ತಕೋದ್ಯಮ ಬಲಗೊಂಡಿದೆ. ಇಂದು ಪುಸ್ತಕೋದ್ಯಮ ನೇಜಿಮಡಿಯಿಂದ ಹಸನಾದ ಗದ್ದೆಗಿಟ್ಟ ಹಸಿರು. ಈಗ ಏನಾದರೂ ಬರಲಿ, ಹೇಗಾದರೂ ಬೆಳೆಯಲಿ ಎಂಬ ಧೋರಣೆ ಸಲ್ಲ.

ವಿದ್ಯಾವಂತಿಕೆಯ ಸಮರ್ಥನೆಗೆ, ಮೈಗೂಡಿಸಿಕೊಳ್ಳಲಾಗದ ಅನುಭವಗಳಿಗೆ ಇಂದು ಪುಸ್ತಕದ ನಂಟು ಅನಿವಾರ್ಯವಾಗುತ್ತಿದೆ. ಆದರೆ ಇಂಥ ಓದುವ ಅಗತ್ಯಗಳನ್ನೇ ಮರೆತು, ಅತಿಯಾದ ಸರಕಾರೀ ಹಸ್ತಕ್ಷೇಪದಿಂದ ಪುಸ್ತಕೋದ್ಯಮ ಬೆಳೆಯುತ್ತಿರುವುದು ಸರಿಯಲ್ಲ. ಪುಸ್ತಕೋದ್ಯಮ ಅಂದರೆ ಸರಕಾರೀ ಪುಸ್ತಕೋದ್ಯಮ ಎನ್ನುವಂತಾಗಿದೆ. ಯಾವುದೇ ಉದ್ಯಮದ ಮೂಲ ಮಂತ್ರವೇ ಆಗಬೇಕಾದ ಸ್ವತಂತ್ರವಾಗಿ ನಿಲ್ಲುವ ತಾಕತ್ತನ್ನೂ ಮತ್ತು ಹಾಗೆ ನಿಲ್ಲುವುದಕ್ಕೆ ದೃಢ ನೆಲೆಯಾಗಿ ಒದಗುವ ಸಮಾಜಕ್ಕೆ ತನ್ನ ಜವಾಬ್ದಾರಿತನವನ್ನೂ ಇಂದು ಪುಸ್ತಕೋದ್ಯಮ ಮರೆಯುತ್ತಿದೆ. ತಯಾರಿಗೆ ಮತ್ತು ವಿತರಣೆಯ ಎಲ್ಲ ಹಂತಗಳಲ್ಲಿ ಈ ನೀತಿ ಸಂಹಿತೆಯನ್ನು ರೂಢಿಸಿದರೆ ಪುಸ್ತಕೋದ್ಯಮಕ್ಕೆ ನಿಜವಾದ ಭವಿಷ್ಯವಿದೆ. ಅನುದಾನ, ಸಹಾಯಧನಗಳಿಂದಲೇ ಪ್ರಕಟಣೆ ಸಾಧ್ಯ. ಮತ್ತು ಸಗಟು ಕೊಳ್ಳುವಿಕೆ, ಗ್ರಂಥಾಲಯ ಪೂರಣೆಯಂಥ ಕಡ್ಡಾಯ ಗಿರಾಕಿಗಳಿಂದಲೇ ವಿತರಣೆ ಸಾಧ್ಯ ಎನ್ನುವುದು ಪುಸ್ತಕೋದ್ಯಮದ ನೈಜ ಸಾರ್ಥಕತೆಗೇ ಕುತ್ತು ತರುವುದು ನಿಶ್ಚಿತ.

ಮುದ್ರಣ ಕ್ರಾಂತಿಯಿಂದ ಪುಸ್ತಕ, ಅಂದರೆ ವಿದ್ಯೆ, ಸಾಮಾನ್ಯರಿಗೆ ಎಟುಕದೆತ್ತದರದಿಂದ ಇಳಿದು, ಜೀವನಾವಶ್ಯ ಆಗುತ್ತಲಿತ್ತು. ದಾರಿಯಲ್ಲಿ ಸಾಹಿತ್ಯೇತರ ಆಶಯಗಳ ಅಕ್ಷರಶಃ ಆರಾಧನಾ ನಿಲುವು ಇದರ ಹಳಿ ತಪ್ಪಿಸಿತು. ಭಕ್ತಿ ಇದ್ದಲ್ಲಿ ವಿಮರ್ಶೆ ಇಲ್ಲ. ವಿಮರ್ಶೆ ಇಲ್ಲದಲ್ಲಿ ಮೌಢ್ಯ ಇರಲೇಬೇಕು. ಇಂದು ಮೌಢ್ಯ ನಿಜ ಉದ್ಯಮವನ್ನು ನಾಶ ಮಾಡಿ, ವಂಚಕರನ್ನು ಬೆಳೆಸುತ್ತಿದೆ. ಕನ್ನಡದ ಸಂದರ್ಭದಲ್ಲಂತೂ ವಂಚಕತೆಗೆ ಸಂಕುಚಿತತೆಯೂ ಸೇರಿ ಹೋಗಿದೆ. ಇಂದು ಕನ್ನಡ ಎನ್ನುವುದೆಲ್ಲ ಮಾನ್ಯವಾಗಿ, ಜಿಜ್ಞಾಸೆ ದ್ರೋಹವಾಗಿ ಪರಿಗಣಿತವಾಗುತ್ತಿದೆ. ತತ್ಪರಿಣಾಮವಾಗಿ ಒಂದು ಕಾಲದಲ್ಲಿ ಜನ-ವಿದ್ಯಾಲಯಗಳೇ ಆಗಿದ್ದ ಸರಕಾರೀ (ಹಾಗೂ ಹಲವು ಖಾಸಗಿ) ಪುಸ್ತಕೋದ್ಯಮ ಕುಳಗಳು ಇಂದು ತಮ್ಮ ಉಪಯುಕ್ತತೆಯ ಅವಧಿಯನ್ನು (expiry date) ಮೀರಿದಂತಿವೆ. ಗತವೈಭವದ ಮುನ್ನೆಲೆಯಲ್ಲಿ ಹುಸಿ ಅಬ್ಬರವನ್ನಷ್ಟೇ ಪ್ರದರ್ಶಿಸುತ್ತಿವೆ. ಇದಕ್ಕೆ ಸರಕಾರಿ ಮುದ್ರಣಾಲಯ, ವಿವಿನಿಲಯಗಳ ಪ್ರಸಾರಾಂಗಗಳ, ವಿವಿಧ ಅಕಾಡೆಮಿಗಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ, ಕನ್ನಡ ಸಾಹಿತ್ಯ ಪರಿಷತ್ತಿನ ಎಷ್ಟೂ ಪ್ರಕಟಣೆಗಳನ್ನು ಉದಾಹರಿಸಬಹುದು. ಈ ಒಂದರಿಂದೊಂದು ಮಹಾಕಾಯರು ಧಾರಾಳ ಸಾರ್ವಜನಿಕ ಹಣ ನುಂಗಿ, ಇನ್ನಷ್ಟು ಮತ್ತಷ್ಟು ಕನ್ನಡ ಸೇವೆಗೆ (ಕಾರಾಸೇವು?) ರಿಂಗಣಿಸುತ್ತಿದ್ದಾವೆ. ಅವುಗಳಲ್ಲಿ ಈಗಾಗಲೇ ತೊಡಗಿಸಿದ ಹಣ, ಉದ್ದೇಶಬಾಧ್ಯತೆಯಿರದ ನಡೆಗಳನ್ನು ಒರೆಗೆ ಹಚ್ಚಬೇಕು. ಅವುಗಳ ಸೋಲು ಸ್ಪಷ್ಟವಿದ್ದರೂ ತೊಡಗಿದ ವ್ಯಕ್ತಿಗಳ ಹಕ್ಕುಗಳಿಗೆ ಬಾಧಕವಿಲ್ಲದ ಈ ಸಂಘಟನೆಗಳನ್ನು ತೀವ್ರ ಮೌಲ್ಯಮಾಪನಕ್ಕೊಳಪಡಿಸಬೇಕು; ಬರ್ಖಾಸ್ತುಗೊಳಿಸುವುದು ಉತ್ತಮ ಪರಿಹಾರವೂ ಆಗಬಹುದು. ಆ ಬೆಳಕಿನಲ್ಲೇ ಈಗ ರಂಗಪ್ರವೇಶಕ್ಕೆ ತಾರಸ್ಥಾಯಿಯಲ್ಲಿ ಹಿಮ್ಮೇಳ ದುಡಿಸುತ್ತಿರುವ ಹೊಸ ಅತ್ಯತಿಕಾಯ – ಕನ್ನಡ ಪುಸ್ತಕ ಪ್ರಾಧಿಕಾರವನ್ನು ಕಾಣುವಂತಾಗಬೇಕು. ಅಮೆರಿಕಾದಲ್ಲಿ ಬೇರೊಂದೇ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಉಕ್ತಿ – “ಪ್ರಕಟಿಸು ಇಲ್ಲವೇ ಮರಣಿಸು,” ಇದನ್ನು ಮುಖ್ಯವಾಗಿ ಸರಕಾರೀ ಪುಸ್ತಕೋದ್ಯಮಕ್ಕೆ ಹೇರಲೇಬೇಕು. ಅಲ್ಲದಿದ್ದರೆ ಸರಕಾರೀ ಆರ್ಥಿಕ ಕೃಪೆಗಳನ್ನು ಕಳಚಿ, ಸ್ವಾಯತ್ತ ಸಂಸ್ಥೆಯಾಗಿ ಮುಂದುವರಿಯುವ ಅವಕಾಶ ಕಲ್ಪಿಸಬೇಕು. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ, ಅಲ್ಲಿನ ನೌಕರರ ವೇತನಾನುದಾನಗಳನ್ನು ನಿಲ್ಲಿಸಿ. ಈಗಾಗಲೇ ವಿವಿಧ ಕಾಲಘಟ್ಟಗಳಲ್ಲಿ ಹೂಡಿಕೆಗೆ ಅನುದಾನವಾಗಿ ಕೊಟ್ಟ ಹಣವೆಲ್ಲ ಪ್ರಕಟಣೆಗಳಲ್ಲಿ ತೊಡಗಿಕೊಂಡಿವೆಯಲ್ಲ. ಅವನ್ನು ಮಾರಿ ಮುಂದಿನ ವೇತನ ಹಾಗೂ ಹೂಡಿಕೆಗಳನ್ನು ಕಂಡುಕೊಳ್ಳಲು ಬಿಡಬೇಕು.

ಇಂದು ಸಹಾಯಧನದಿಂದ ಪ್ರಕಟಣೆ, ಸಗಟು ಕೊಳ್ಳುವಿಕೆಯಿಂದ ಪರಿಮಾರ್ಜನೆ ಎಂಬ ಧೋರಣೆ ಪುಸ್ತಕದ ಉಪಯುಕ್ತತೆಯನ್ನೇ ಹಾಳು ಮಾಡಿದೆ. ಹೆಸರು, ವಿಷಯ, ಪುಟ, ಬೆಲೆ ಇಷ್ಟನ್ನು ಯಾವುದೇ ಇಲಾಖೆ ಇಂದು ಘೋಷಿಸಿ ಸಿದ್ಧಮಾರುಕಟ್ಟೆ, ಅರ್ಥಾತ್ ಸಗಟು ಖರೀದಿಗೆ ಆಹ್ವಾನಿಸಿದರೆ ಸಾಕು. ಮರುಕ್ಷಣದಲ್ಲಿ ನಿಬಂಧನೆಗಳನ್ನು ಪೂರೈಸಿ, ನೂರಾರು ಪುಸ್ತಕಗಳನ್ನು ರಾಶಿ ಹಾಕುವ ಶಕ್ತಿ ಇಂದು ಪುಸ್ತಕೋದ್ಯಮಕ್ಕೆ ಬಂದಿದೆ. ಇಲ್ಲಿ ಪುಸ್ತಕ ಒಂದು ಮಾಲು, ಪುಸ್ತಕೋದ್ಯಮ ದೊಡ್ಡ ಲೇವಾದೇವಿ! ಇದಕ್ಕೆ ಅಂತಾರಾಷ್ಟ್ರೀಯ ಮಕ್ಕಳ ವರ್ಷದ ಸಣ್ಣ ಎರಡು ಉದಾಹರಣೆ ನೋಡಿ. ಅಲ್ಲಿ ಪುಸ್ತಕಗಳಿಗೆ ದೊಡ್ಡ ಹಣವಿರುವ ಸುದ್ದಿ ಬಂತು. ಆ ಸಮಯಕ್ಕೆ ತನ್ನ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳಲ್ಲಿ ಮುಳುಗಿದ್ದ ಕಸಾಪ ಒಮ್ಮೆಲೇ ಮೈಮುರಿದೆದ್ದಿತು. ಹಿಂದೆಂದೋ ತಾನೇ ತಲಾ ೭೫ ಪೈಸೆಗೆ ಪ್ರಕಟಿಸಿದ್ದ ಹಲವು ಕಿರು ಪುಸ್ತಕಗಳನ್ನು ತಲಾ ಮೂರು ರೂಪಾಯಿಗೆ ಮರುಮುದ್ರಿಸಿದ್ದು ಹೊರಹಾಕಿತ್ತು. ಹಾಗೇ, ಕನ್ನಡದಲ್ಲಿ ಬಾಲಸಾಹಿತ್ಯ ಪ್ರಕಟಿಸುವುದನ್ನು ಮರೆತೇ ಬಿಟ್ಟಿದ್ದ ಸಿಬಿಟಿ (Children’s Book Trust) ರಾತ್ರಿ ಹಗಲಾಗುವುದರೊಳಗೆ ತನ್ನ ಹಳೆಯ ಇಪ್ಪತ್ತಕ್ಕೂ ಮಿಕ್ಕು ವರ್ಣಮಯ ಕನ್ನಡ ಪುಸ್ತಕಗಳನ್ನು ಮರುಮುದ್ರಿಸಿ ಹಿಡಿದುಕೊಂಡು ದಿಲ್ಲಿಯಿಂದ ಧಾವಿಸಿ ಬಂದಿತ್ತು.

ಮೇಲೆ ಉದಾಹರಿಸಿದಂಥ ಸನ್ನಿವೇಶಗಳಲ್ಲಿ ಇಲಾಖಾ ಅಗತ್ಯಗಳಿಗೆ ಹೊಂದಿಕೆಯಾಗುವಂತೆ, ಒಂದೇ ವ್ಯಕ್ತಿ ಹಲವು ಲೆಟರ್ ಹೆಡ್ ಮತ್ತು ಬಿಲ್ಲುಗಳ ಪ್ರಕಾಶನ ಸಂಸ್ಥೆಗಳಾಗುವುದು, ಒಬ್ಬನೇ ಲೇಖಕ ಹಲವು ಪ್ರಕಾಶಕರಿಗೆ, ಏಕಕಾಲಕ್ಕೆ `ವೈವಿಧ್ಯಮಯ’ ಪುಸ್ತಕಗಳನ್ನು `ಬರೆದು’ ಕೊಡುವುದೆಲ್ಲ ಮಾಮೂಲು. ಅವಾಸ್ತವಿಕ ಪ್ರಮೇಯಗಳಂತೆ (ಬಾಲನುಂಗುವ ಹಾವು!) ಇಂಥ ಸನ್ನಿವೇಶಗಳಲ್ಲಿ ಅನ್ಯ ಸರಕಾರೀ ಪ್ರಕಟಣಾಂಗಗಳು ಮೊದಲು ಪುಸ್ತಕ ಮುದ್ರಿಸಿ ಪ್ರಕಟಿಸಿದ್ದಕ್ಕೆ ಖರ್ಚಿನ ಲೆಕ್ಕ, ಅನಂತರ ಅವನ್ನು ಸುಲಭ ಬೆಲೆಯಲ್ಲಿ ಅಥವಾ ಮುಂದುವರಿದು ಉಚಿತವಾಗಿಯೇ ವಿತರಿಸಿ ನಷ್ಟ ಮಾಡಿಕೊಂಡದ್ದಕ್ಕೆ ಪರಿಹಾರ ಕೋರಿ ದಕ್ಕಿಸಿಕೊಂಡ ಪ್ರಸಂಗಗಳೂ ಧಾರಾಳ ಇವೆ. ಮತ್ತೆ ಕಡಿಮೆ ಪ್ರತಿಗಳನ್ನು ಮುದ್ರಿಸಿ ಹೆಚ್ಚಿನವಕ್ಕೆ ಬಿಲ್ಲು ತಯಾರಿಸುವುದು, ಉಚಿತ ವಿತರಣೆಯ ಲೆಕ್ಕ ಬರೆದು ಕಾಳ ಸಂತೆ ಖಾತೆ ನಡೆಸುವುದು, ಕೃತಿ ಚೌರ್ಯ ಮೊದಲಾದ ಒಳದಾರಿಗಳಂತೂ ಈ ರಂಗದಲ್ಲಿ ಹಲವು ನೂರು!

ಸರಕಾರಿ ಉದ್ದಿಮೆಗಳಲ್ಲೆಲ್ಲ ಸಿಬ್ಬಂದಿಯ ಅನುದಾನ ಮತ್ತು ಕಾರ್ಯಾನುದಾನ ಎಂಬ ಸ್ಪಷ್ಟ ವಿಂಗಡಣೆ ಇರುತ್ತದೆ. ಇದರಿಂದ ಇಂದು ಎಷ್ಟೋ ಇಲಾಖೆಗಳಲ್ಲಿ ಕೆಲಸವೇನೂ ನಡೆಯದಿದ್ದರೂ `ಮಾನವೀಯ ನೆಲೆ’ ಎಂದು ಅರ್ಥಶೈಥಿಲ್ಯಕ್ಕೊಳಗಾದ ಮೌಲ್ಯದ ಹೆಸರಿನಲ್ಲಿ ಸೋಮಾರಿತನ, ಅದಕ್ಷತೆ ರೂಢಿಸಿದೆ. ಸಂಪಾದಕ ಬಳಗ ಏನೂ ಪ್ರಕಟಿಸದೆ, ಮುದ್ರಣಾಲಯ ಏನೂ ಅಚ್ಚಿಸದೆ, ಮಾರಾಟ ವಿಭಾಗ ಏನೂ ವಿಕ್ರಯಿಸದೆ ಕೇವಲ ನೆಪಗಳ ಕಡತವನ್ನಷ್ಟು ವ್ಯವಸ್ಥಿತವಾಗಿಟ್ಟುಕೊಂಡರೆ ವರ್ಷಾನುಗಟ್ಟಳೆ ಸಂಬಳ ಸವಲತ್ತು ಅನುಭವಿಸಿಕೊಂಡು ಅಬಾಧಿತವಾಗಿ ಇರಬಹುದು. ಸಾಲದ್ದಕ್ಕೆ ಸಾರ್ವಜನಿಕ ನಿಯಮಾನುಸಾರ ಬದಲಾದ ಕಾಲಗಳಿಗೆ ತಕ್ಕಂತೆ ಅಧಿಕಾರದಲ್ಲಿ ಬಡ್ತಿ, ಸಂಬಳ ಸವಲತ್ತುಗಳ ಏರುಮುಖವನ್ನೂ ಕಾಣುತ್ತಲೇ ಇರಬಹುದು. ಸರಕಾರಿ ಪುಸ್ತಕೋದ್ಯಮ ಅಸಮ ಗಾಲಿಗಳ ಬಂಡಿ. ಏನನ್ನೂ ಹೊರಲಾರದು, ಹೊತ್ತರೂ ನಿಶ್ಚಿತ ಗುರಿ ಮುಟ್ಟಲಾರದು. ಈ ಹಿನ್ನೆಲೆಯಲ್ಲಿ ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆ ಅಳಿಸಿಹೋಗುವಂಥ ಕ್ರಿಯೆಗೆ ಸರಕಾರಿ ಉದ್ಯಮವನ್ನೂ ಒಡ್ಡಬೇಕು. ಸರಕಾರಿ ಪುಸ್ತಕೋದ್ಯಮ ಇಂದು ಮಹಾ ಆಲದಂತೆ ಮೂಲ ಕಾಂಡದ ಪರಿಮಿತಿ ಮೀರಿ, ಬೀಳಲುಗಳ ಹೀರುಗೊಳವೆ ಊರಿ, ಎಲ್ಲ ನೆಲ ಜಲ ಸಾರವನ್ನು ಬತ್ತಿಸಿ ವ್ಯಾಪಿಸುತ್ತಿದೆ. ಪ್ರಕೃತಿ ಪಾಠದ ಹಾಳೆಗಳನ್ನು ಮುಚ್ಚಿ, ಇದನ್ನು ಕಡಿದರಷ್ಟೇ ಪುಸ್ತಕೋದ್ಯಮ ಮರುಹುಟ್ಟು ಕಾಣಬಹುದು, ಸಶಕ್ತ ಬೆಳೆಯಲೂಬಹುದು. ಬೆಕ್ಕಿಗೆ ಗಂಟೆ ಕಟ್ಟಲೇಬೇಕು!

೨. ಇಂಥ ಮಕ್ಕಳಿರಲವ್ವ ಮನೆ ತುಂಬ

ಖಾಸಗಿ ಪ್ರಕಾಶನದ ಗುಣಾತ್ಮಕ ಮೂರು ಉದಾಹರಣೆಗಳು:

೧. ದಿ. ನಿರಂಜನರ ಸಂಪಾದಕ ಮಂಡಳಿ, ಸರಕಾರೇತರ ವ್ಯವಸ್ಥೆಯಲ್ಲಿ (ಕರ್ನಾಟಕ ಸಹಕಾರಿ ಪ್ರಕಾಶನ) ಏಳು ಸಂಪುಟಗಳ ಕಿರಿಯರ ವಿಶ್ವಕೋಶ ಅಥವಾ ಜ್ಞಾನಗಂಗೋತ್ರಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು (೧೯೬೯). ಪೂರ್ವ ನಿಶ್ಚಿತ ಅವಧಿ ಆರು ವರ್ಷವಾದರೆ ಇವರು ೪ ವರ್ಷ ೯ ತಿಂಗಳಲ್ಲಿ ಚೊಕ್ಕವಾಗಿ ಕೆಲಸ ಮುಗಿಸಿಕೊಟ್ಟರು. ಅಷ್ಟೇ ಅಲ್ಲ, ಸರಕಾರ ಕೊಟ್ಟ (ಅನುದಾನ ಅಲ್ಲ) ಸಾಲ ರೂ ೯ ಲಕ್ಷವನ್ನು ಅವಧಿಗಿಂತ ೧೫ ತಿಂಗಳು ಮೊದಲೇ ಪೂರ್ಣ ಸಂದಾಯವೂ ಮಾಡಿದರು!

೨. ಭಾರತ ದರ್ಶನ ಪ್ರಕಾಶನವೆಂಬ ಪೂರ್ಣ ಖಾಸಗಿ ಸಂಸ್ಥೆ, ಮೊದಲು ೩೨ ಸಂಪುಟಗಳಲ್ಲಿ ಸಂಸ್ಕೃತ ವ್ಯಾಸ ಭಾರತದ ಸಂಪೂರ್ಣ ಕನ್ನಡ ಗದ್ಯಾನುವಾದವನ್ನು ಕಂತುಗಳಲ್ಲಿ ಕೊಟ್ಟಿತು. ಅವುಗಳಲ್ಲಿ ಪ್ರಸಂಗೌಚಿತ್ಯ ನೋಡಿ ಕೆಲವು ಮೂಲ ಶ್ಲೋಕಗಳನ್ನೂ ಸೇರಿಸಿದ್ದರು. ಮುಂದೆ ೧೦ ಸಂಪುಟಗಳಲ್ಲಿ ಪೂರ್ಣ ಶ್ಲೋಕ ಮತ್ತು ಅನುವಾದದೊಡನೆ ವಾಲ್ಮೀಕಿ ರಾಮಾಯಣ ಕನ್ನಡಿಸಿದರು. ಸದ್ಯ ಪೂರ್ಣ ಶ್ಲೋಕ ಮತ್ತು ಕನ್ನಡ ಗದ್ಯದೊಡನೆ ಭಾಗವತದ ಕೆಲಸ ನಡೆಸುತ್ತ ನಾಲ್ಕನೆಯ ಸಂಪುಟದ ಹಂತದಲ್ಲಿದ್ದಾರೆ. ಜೊತೆಗೆ ಹಿಂದಿನೆಲ್ಲ ಸಂಪುಟಗಳ ಕ್ರಮಬದ್ಧವಾದ ಮರುಮುದ್ರಣವನ್ನೂ ನಿಭಾಯಿಸುತ್ತಿದ್ದಾರೆ. ಇನ್ನಿವರ ಬೆಲೆಯಾದರೋ ಯಾರೂ ಊಹಿಸಲಾಗದಷ್ಟು ಅಗ್ಗ – ೬೦೦ ಪುಟಗಳ, ಗಟ್ಟಿ ರಟ್ಟಿನ, ಮುದ್ರಣದೋಷಗಳಿಲ್ಲದ ಚೊಕ್ಕ ಸಂಪುಟ ಒಂದರ ಬೆಲೆ ಕೇವಲ ರೂ ಇಪ್ಪತ್ತು. ಇವರ ವಿತರಣಾ ಸೇವಾಜಾಲ ರಾಜ್ಯಾದ್ಯಂತ ಪಸರಿಸಿದೆ. ಇವರು ಯಾವುದೇ ಸ್ಪಷ್ಟ ಅನುದಾನವನ್ನು ನಂಬಿ ತೊಡಗಿದವರಲ್ಲ, ಸಿದ್ಧ ಮಾರುಕಟ್ಟೆಯನ್ನು ಎದುರಿಟ್ಟುಕೊಂಡು ಕಳಕ್ಕಿಳಿದವರೂ ಅಲ್ಲ.

೩. ಸಮಾಜ ಪುಸ್ತಕಾಲಯ – “ವಿಷಯ ಯಾವುದೇ ಇರಲಿ, ಪ್ರಕಟಣೆ ನಮ್ಮದು” ಎನ್ನುವ ಅನುಕ್ತ ಧೋರಣೆ ಇವರದು. ಇವರು ಪಠ್ಯೇತರ ಮತ್ತು ಸರಕಾರೀ ಯೋಜನೇತರ ಪುಸ್ತಕಗಳನ್ನೇ ಪ್ರಕಟಿಸಿ, ಸಾರ್ವಜನಿಕ ಓದುಗರನ್ನಷ್ಟೇ ಉದ್ದೇಶಿಸಿ ಗಟ್ಟಿಗೊಂಡವರು. ಯಾವುದೇ ಅನುದಾನ ಬಯಸದೆ, ಸರಕಾರಿ ಸಗಟು ವ್ಯವಹಾರ ನೆಚ್ಚದೆ, ಪೂರ್ಣ ಸ್ವಂತ ತಾಕತ್ತಿನಲ್ಲಿ ವಿಶ್ವಾಸ ಇಟ್ಟವರು. ಇವರ ಯಶಸ್ಸಿನ ಗುಟ್ಟು – ವಿಷಯ ವೈವಿಧ್ಯ ಮತ್ತು ವಿತರಣಾ ಸಾಮರ್ಥ್ಯಗಳಲ್ಲಿದೆ. ಬಹುಶಃ ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಪ್ರಥಮವಾಗಿ ಮತ್ತು ಪೂರ್ಣಕಾಲಿಕವಾಗಿ ಪ್ರವಾಸೀ ಪ್ರತಿನಿಧಿಯನ್ನು ಇಟ್ಟು, ನಿಯತವಾಗಿ ಕನ್ನಡ ನಾಡಿನ ಮೂಲೆ ಮೂಲೆಯ ಪುಸ್ತಕ ಮಾರುಕಟ್ಟೆಯನ್ನು ಶೋಧಿಸಿ, ರೂಢಿಸಿದ ಖ್ಯಾತಿ ಸಮಾಜ ಪುಸ್ತಕಾಲಯಕ್ಕೇ ಸಲ್ಲುತ್ತದೆ.

ವಿಕಲಾಂಗ ವಿತರಣೆ

ಸರಕಾರೀ ಪುಸ್ತಕೋದ್ಯಮದಲ್ಲಿ ಹಣ ಹುಡಿ ಹಾರಿಸುವ ಹೊಸ ಯೋಜನೆಗಳಿಗೆ ಯಾವತ್ತೂ ಬರವಿಲ್ಲ. ಇರುವುದರ ದಕ್ಷ ಮುಂದುವರಿಕೆ, ಅದರಲ್ಲೂ ವಿತರಣೆಯಿಂದ ಸಾಮಾಜಿಕ ಬಾಧ್ಯತೆಯನ್ನು ನಿರ್ವಹಿಸುವ ಜವಾಬ್ದಾರಿ ಇವರಿಗೆಂದೂ ಬಂದದ್ದಿಲ್ಲ. ಬಹುಶಃ ಇವರ ಪ್ರಕಟಣೆಗಳ ವಿತರಣೆ ಪರಿಪೂರ್ಣವಾದರೆ, ಅಂದರೆ ಸಾರ್ವಜನಿಕಕ್ಕೆ ಮುಟ್ಟಿದರೆ, ಉದ್ಯಮದ ಹೆಸರಿನಲ್ಲಿ ನಡೆದಿರಬಹುದಾದ ಅವ್ಯವಹಾರದ ವಾಸನೆ ವ್ಯಾಪಕವಾಗುವ ಭಯವೂ ಇರಬಹುದು. ಇದು ತಾನೇ ಪ್ರಕಟಿಸಿದ್ದನ್ನು ಖಾಸಗಿ ವಲಯದಿಂದ ಕೊಂಡದ್ದನ್ನು ಏಕಪ್ರಕಾರವಾಗಿ ಕೊಳೆಸುತ್ತದೆ ಅಥವಾ ಅತಾರ್ಕಿಕವಾಗಿ ಚೆಲ್ಲಿ ಕೈತೊಳೆಯುತ್ತದೆ. ಎರಡು ಸಣ್ಣ ಉದಾಹರಣೆಗಳು. ೧. ಕವಿ ಗೌರವದ ಹೆಸರಿನಲ್ಲಿ ಕಯ್ಯಾರ ಕಿಞ್ಞಣ್ಣ ರೈಗಳ ಸಮಗ್ರ ಕವಿತೆಯನ್ನು ಸರಕಾರ ಭಾರಿ ಸಮಾರಂಭದಲ್ಲಿ ದೊಡ್ಡ ಸಂಖ್ಯೆಯಲ್ಲೇ ಕೊಂಡಿತು. ಅನಂತರ ವರ್ಷಗಟ್ಟಳೆ ಆ ಪುಸ್ತಕಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಗಳೂರು ಶಾಖಾ ಕಛೇರಿಯ ನೆಲದಲ್ಲಿ ಬಿದ್ದು ಹೊರಳುತ್ತಿದ್ದುವು. ಕನಿಷ್ಠ ಒಪ್ಪವಾಗಿಟ್ಟುಕೊಳ್ಳಲು ಅಲ್ಲಿ ಕಪಾಟಿಗೂ ಗತಿಯಿರಲಿಲ್ಲ! ಉದಾಹರಣೆ ೨. ಕರ್ನಾಟಕ ಸಹಕಾರಿ ಪ್ರಕಾಶನದಿಂದ ಸರಕಾರ ಮೊದಲೇ ಮಾಡಿಕೊಂಡ ಒಪ್ಪಂದದ ಮೇರೆಗೆ, ಕಿರಿಯರ ವಿಶ್ವಕೋಶದ (ಏಳು ಸಂಪುಟಗಳು) ನೂರಾರು ಪ್ರತಿಗಳನ್ನು ಖರೀದಿಸಿತು. ಅನಂತರ ಅವನ್ನು ತನ್ನ ಅಧೀನ ಶಾಲೆಗಳ ಗ್ರಂಥಾಲಯ ಅನುದಾನಕ್ಕೆ ವಜಾ ಮಾಡಿಕೊಂಡು ಎಲ್ಲ ಪ್ರತಿಗಳನ್ನು ಖಾಲಿ ಏನೋ ಮಾಡಿತು. ಆದರೆ ಹೆಚ್ಚಿನ ಶಾಲೆಗಳಿಗೆ ಒಂದೋ ಎಲ್ಲ ಸಂಪುಟಗಳು ಸಿಗಲಿಲ್ಲ, ಇಲ್ಲಾ ಕೆಲವು ಸಂಪುಟಗಳು ಹೆಚ್ಚುವರಿ ಪ್ರತಿಗಳಾಗಿ ಸಿಕ್ಕವು. ಪ್ರಕಾಶಕರು ಸರಿಯಾಗಿಯೇ ಕೊಟ್ಟಿದ್ದರೂ ವಿತರಣೆಯಲ್ಲಿ ಕ್ರಮವಾಗಿ ಒಂದರಿಂದ ಏಳು ಸಂಪುಟದವರೆಗೆ ನೋಡಿ ಕೊಡುವಲ್ಲಿ ಅದಕ್ಷತೆಯನ್ನು ಇಲಾಖೆ ಮೆರೆದಿತ್ತು. ಸರಿಪಡಿಸಲು ಕೇಳಿ ಬಂದವರಿಗೆ ಅಧಿಕೃತ ಬೆದರಿಕೆ ಬೇರೆ!

ನೇರ ಸರಕಾರೀ ಪ್ರಕಟಣೆಗಳಿಗೆ ಬೆಂಗಳೂರಿನ ಹೊರಗೆ ಮಾರಾಟ ವ್ಯವಸ್ಥೆಯೇ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಲೆಕ್ಕಕ್ಕೆ ತನ್ನ ಜಿಲ್ಲಾ ಶಾಖೆಗಳ ಮೂಲಕ ಸಾರ್ವಜನಿಕ ವಿತರಣೆ ನಡೆಸುತ್ತದೆ. ವಾಸ್ತವದಲ್ಲಿ ಇವರ ಎಲ್ಲ ಪ್ರಕಟಣೆಗಳು ಈ ಶಾಖೆಗಳನ್ನು ಮುಟ್ಟುವುದೇ ಇಲ್ಲ. ಮುಟ್ಟಿದರೂ ಅವುಗಳನ್ನು ದಾಸ್ತಾನಿಡುವ ವ್ಯವಸ್ಥೆ ಇಲ್ಲ. ಮತ್ತೆ ಬಿಲ್ಲು ಮಾಡುವ, ಕಟ್ಟುವ, ಕಳಿಸುವ ಅಥವಾ ಉಚಿತ ಹಂಚುವ ಆದೇಶ ಒಂದೂ ಶಾಖೆಗಳಿಗೆ ಸ್ಪಷ್ಟವಾಗಿ ಇರುವುದೇ ಇಲ್ಲ. ಪ್ರಾದೇಶಿಕ ಒಲವುಗಳಿಗೆ ಅನುಸಾರವಾಗಿ ವಿಶೇಷ ಬೇಡಿಕೆ ಸಲ್ಲಿಸಿದರೆ ಇವರಲ್ಲಿ ಪೂರೈಕೆಯೂ ಖಾತ್ರಿ ಇಲ್ಲ. ಸಣ್ಣ ಉದಾಹರಣೆ – ಮೇಲೆ ಹೇಳಿದ ಕಿಞ್ಞಣ್ಣ ರೈಗಳ ಸಮಗ್ರ ಕವಿತೆ ಇಲ್ಲಿನ ಯಾವ ಗ್ರಂಥಾಲಯಕ್ಕೂ ದಕ್ಕಿಲ್ಲ!

ಸರಕಾರಿ ಪ್ರಕಾಶನದ ಯಾವತ್ತೂ ಬೆಲೆ ಮತ್ತು ವ್ಯಾಪಾರಿ ರಿಯಾಯಿತಿ ನಿಷ್ಕರ್ಷಿಸುವವರು ವ್ಯವಹಾರಜ್ಞಾನಶೂನ್ಯರು. ತಮ್ಮ ಆದಾಯವನ್ನು ದುಡಿಮೆಗೆ ತಕ್ಕ ಸಂಬಳ, ಸವಲತ್ತು ಎಂದು ಗಣಿಸುವ ಇವರೇ ವೃತ್ತಿ ವ್ಯಾಪಾರಿಗಳ ಆದಾಯವನ್ನು ಲಾಭ ಎಂದೇ ಪರಿಗಣಿಸಿ ಕೈ ಬಿಗಿ ಹಿಡಿಯುತ್ತಾರೆ. ಇದು ಸ್ಪಷ್ಟವಾಗಿ ಒಂದು ವೃತ್ತಿಧರ್ಮದ ನಿರಾಕರಣೆ. ಪ್ರಜಾಪ್ರಭುತ್ವ ನಡೆಯುವಲ್ಲಿ ವೃತ್ತಿ ವ್ಯಾಪಾರಿಯ ನಷ್ಟದೊಡನೆ ಯಾವುದೇ ವಿತರಣೆ ಅಥವಾ ಉದ್ದಿಮೆ ಯಶಸ್ವಿಯಾಗುವುದು ಸಾಧ್ಯವಿಲ್ಲ. ಬದಲು ಯೋಗ್ಯ ಆದಾಯ ನಿಶ್ಚಯವಾದರೆ, ಗಲ್ಲಿ ಹಳ್ಳಿಯಲ್ಲಿ ತಲೆ ಎತ್ತುವ ಗಡಂಗು, ಲಾಟರಿ ಅಡ್ಡೆಯಂತಲ್ಲವಾದರೂ ಕನಿಷ್ಠ ಪ್ರತಿ ಜಿಲ್ಲಾ ಕೇಂದ್ರಕ್ಕೆ ಒಂದಾದರೂ ಸಮರ್ಥ ಪುಸ್ತಕ ಮಳಿಗೆ ಬಂದೀತು.

ಕೊನೆ ಕಿಡಿ: ಒಂದು ಮುಕ್ತ (ಮುಕ್ಕುತ್ತ) ಆಮಂತ್ರಣ: ಜಾನಪದ ಅಕಾಡೆಮಿ ಹಲವು ಪುಸ್ತಕಗಳನ್ನು ಪ್ರಕಟಿಸಿದೆ. ಅವುಗಳ ವಿತರಣೆ ಬಿಡಿ, ಸ್ವತಃ ಲೇಖಕರಿಗೇ ೨೫ ಪ್ರತಿಗಳ ಮೇಲೆ ಖರೀದಿಗೂ ದೊರೆಯದ ವಿಶೇಷ ವ್ಯವಸ್ಥೆ ಇಲ್ಲುಂಟು. ಅಂದರೆ, ಕೀಟ ಲೋಕಕ್ಕೆ ಸಾಕ್ಷರತೆ ಮುಟ್ಟಿಸುವ ಮಹಾಯೋಜನೆಯಲ್ಲಿ ಇವರದು ಶತಾಂಶ ಸಾಧನೆಯಾಗಲಿದೆ. ಬೆಳ್ಳಿಮೀನು, ಗೆದ್ದಲು, ಜಿರಳೆಗಳ ಕೀಟ ಪ್ರಪಂಚಕ್ಕಿದು ಮುಕ್ತ ಆಹ್ವಾನ… ಓ ಬನ್ನಿ, ಬನ್ನಿ, ಬನ್ನಿ!

(ಅನಿಯತವಾಗಿ ಮುಂದುವರಿಯಲಿದೆ)