ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹದಿನೈದನೇ ಅಧ್ಯಾಯ
[ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಏರ್ಪಪಡಿಸಿದ್ದ ಕನ್ನಡ ಕಾದಂಬರಿ ನೂರು ವರ್ಷ ಗೋಷ್ಠಿಯಲ್ಲಿ ೧೯-೧೨-೧೯೯೮ರಂದು ಓದಿದ ಪ್ರಬಂಧ]

ಪುಸ್ತಕೋದ್ಯಮದಲ್ಲಿ ನನ್ನದು ೨೫ ವರ್ಷಗಳ ಅಖಂಡ ಅನುಭವ. ಮುಖ್ಯವಾಗಿ ನಾನು ಪುಸ್ತಕ ಮಾರಾಟಗಾರ, ಸಣ್ಣ ಮಟ್ಟದಲ್ಲಿ ಪ್ರಕಾಶಕ ಮತ್ತು ವಿತರಕ, ಇನ್ನೂ ಸಣ್ಣ ಮಟ್ಟದಲ್ಲಿ ಲೇಖಕ. ಇವುಗಳ ಮುನ್ನೆಲೆಯಲ್ಲಿ ಕನ್ನಡ ಕಾದಂಬರಿಯನ್ನು ಪ್ರತ್ಯೇಕಿಸಿ ಕಾಣಲು, ವಿಶ್ಲೇಷಿಸಲು ಪ್ರಯತ್ನಿಸಿದ್ದೇನೆ.

ಯಾವುದೇ ಉದ್ಯಮದ ಮೂಲದಲ್ಲಿ ಹಲವು ವೃತ್ತಿಗಳ ಸಂಗಮ ಅಥವಾ ಹಲವು ಭಿನ್ನ ಆಸಕ್ತಿಗಳ ಸಂಯೋಜನೆ ಕಾಣುತ್ತೇವೆ. ಬಿಡಿಸಿ ಹೇಳುವುದಿದ್ದರೆ, ಪುಸ್ತಕೋದ್ಯಮದ ಎರಡು ಕೊನೆಯಲ್ಲಿರುವ ಲೇಖಕ ಮತ್ತು ಓದುಗರನ್ನು ಹವ್ಯಾಸಿಗಳೆಂದು ಬಾವಿಸಿದರೂ ನಡುವಣ ಮುದ್ರಕ, ಪ್ರಕಾಶಕ, ಮಾರಾಟಗಾರ, ಗ್ರಂಥಪಾಲ ಮುಂತಾದವರು ವೃತ್ತಿಪರರಾಗಲೇಬೇಕು. ಎರಡನೆಯದಾಗಿ, ಪುಸ್ತಕೋದ್ದಿಮೆಯ ಯಶಸ್ಸು ಯಾವುದೇ ವಾಣಿಜ್ಯ ವಹಿವಾಟಿನಂತೆ ಕಡಿಮೆ ಹಣ ಹೂಡಿ, ಹೆಚ್ಚು ಹಣ ತೆಗೆಯುವುದನ್ನೇ ಅವಲಂಬಿಸಿದೆ. ಸಾಮಾಜಿಕ ಉಪಯುಕ್ತತೆ ಮತ್ತು ಬದ್ಧತೆ, ಮೌಲ್ಯಗಳ ರಕ್ಷಣೆ ಮತ್ತು ಪೋಷಣೆ ವ್ಯಕ್ತಿ ಸಂಸ್ಕಾರದ ಮೇಲೆ ಹಿಂಬಾಲಿಸುವ ಆಕಸ್ಮಿಕಗಳು, ಹೆಚ್ಚಿನ ಸಂದರ್ಭಗಳಲ್ಲಿ ಜಾಣರು ಹೊಸೆದ ಆದರ್ಶಗಳು.

ಇವನ್ನೀಗ ಕನ್ನಡ ಕಾದಂಬರಿಗೆ ಸಂಬಂಧಿಸಿದಂತೆ ಪುಸ್ತಕೋದ್ಯಮಕ್ಕೆ ಅನ್ವಯಿಸಿ ನೋಡೋಣ. ಲೇಖಕ ಎಂಬ ಉತ್ಪಾದಕನಿಂದ ವಾಚಕ ಎಂಬ ಗ್ರಾಹಕನವರೆಗೆ ಹರಿಯುವ ಅಕ್ಷರ ಸಂಪತ್ತು ಇಲ್ಲಿ ಮಾಲು. ಇದು ಗದ್ಯ ಪದ್ಯವಿರಬಹುದು, ಭಾಷಾ ವಿಷಯಕವಿರಬಹುದಾದರೂ ಸದ್ಯಕ್ಕೆ ಸಾಹಿತ್ಯ ಎಂದಿಟ್ಟುಕೊಳ್ಳೋಣ. ಸಾಹಿತಿಯನ್ನು ನೈಜ ಸೆಲೆ ಎಂದು ಪರಿಭಾವಿಸಿದರೆ ಸಾಹಿತ್ಯ ಅಲ್ಲಿ ಬುದ್ಬುದಿಸುವ ಜಲಧಾರೆ. ಉದ್ಯಮ ಅದನ್ನು ಸಂಗ್ರಹಿಸಿಡುವ ಪಾತ್ರೆಯಾದರೆ ಓದುಗ ಪರಿಗ್ರಹಿಸುವ ದಾಹಿ. ಇದು ಇಲ್ಲಿನ ಪ್ರಕೃತಿ. ಮನುಷ್ಯ ಸ್ವಭಾವ ಪ್ರಕೃತಿಯನ್ನು ಆಶಿಸಿದರೂ ಆತನ ಬುದ್ಧಿ ತುಡಿಯುವುದು ಸಂಸ್ಕೃತಿಯೆಡೆಗೆ. ಪುಸ್ತಕೋದ್ಯಮ ಸೆಲೆಯ ಕಣ್ಣು ಬಿಡಿಸಿ, ಧಾರೆಗೆ ಒಡ್ಡು ಕಟ್ಟಿ, ಕಾಲುವೆಗಳಲ್ಲಿ ಹಂಚಿ ಊಡುತ್ತದೆ. ಒಂದು ಪಾಲು ಹೆಚ್ಚಿನ ಶಕ್ತಿ ಉತ್ಪಾದನೆಗಾಗಿ ತಿರುಗಣೆಗೊಡ್ಡಿಕೊಳ್ಳುತ್ತದೆ; ಪಠ್ಯ, ಪೂರಕ ಪಠ್ಯ ಪುಸ್ತಕಗಳು ಪುಸ್ತಕೋದ್ಯಮದ ಅನಿವಾರ್ಯ ಭಾಗ. ಇನ್ನೊಂದು ಪಾಲು ಕೃಷಿಗೆ, ಅಂದರೆ ಸಂಶೋಧನಾತ್ಮಕ, ವೈಚಾರಿಕ ರಚನೆಗಳಿಗೇ ಮೀಸಲಾಗುತ್ತದೆ. ಮತ್ತಿನದು ಸಾಮಾನ್ಯ ಬಳಕೆಗೆ, ಅಂದರೆ ಕತೆ ಕಾದಂಬರಿ. ಇಂಥ ವಿಂಗಡಣೆಗಳು ಇಂದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿವೆ. ಸಾಹಿತಿ ಎಂಬ ಬಹುರೂಪಿ ಇಂದು ಕಳೆದು ಹೋಗಿ ಕವಿ, ಕಾದಂಬರಿಕಾರ, ವಿಮರ್ಶಕ, ಅಂಕಣಕಾರ, ಹಾಸ್ಯಸಾಹಿತಿ, ಚುಟುಕುಕವಿ ಇತ್ಯಾದಿ ವೈಶಿಷ್ಟ್ಯಗಳೇ ಪ್ರಚಾರದಲ್ಲಿರುವಂತಾಗಿರುವುದು ಉದ್ಯಮದ ಜಾಣ್ಮೆ ಎಂದೇ ಗುರುತಿಸಬಹುದು. ಮುದ್ದಣನಂತೆ ಪದ್ಯ ಕೊಡಲೋ ಗದ್ಯ ಕೊಡಲೋ ಎಂದಾಗಲೀ ಪಂಪನಂತೆ ಒಂದು ತತ್ತ್ವ ಒಂದು ಕತೆ ಎಂಬೆಲ್ಲ ಕಟ್ಟುಪಾಡುಗಳೊಡನೆ ಸಾಹಿತ್ಯ ರಚನೆಗಿಳಿದರೆ ಉದ್ಯಮ ಒಪ್ಪಿಕೊಳ್ಳಬೇಕೆಂದಿಲ್ಲ. ಬರೆದದ್ದಕ್ಕೇ ವ್ಯಾಖ್ಯಾನವನ್ನು ಬಾಗಿಸಿಕೊಂಡು ಮುಂದುವರಿಯುವ ಸ್ವಾತಂತ್ರ್ಯವನ್ನೂ ಉದ್ಯಮ ಒಪ್ಪುವುದು ಕಷ್ಟ. ಓದುಗ, ಗಿರಾಕಿ, ಪ್ರಶಂಸೆ, ಪ್ರಶಸ್ತಿ ಎಲ್ಲ ಸ್ಪಷ್ಟ ವಿಭಾಗೀಕರಣವನ್ನೇ ಬಯಸುತ್ತವೆ. ಈ ಸಾಹಿತ್ಯ ಉದ್ಯಾನವನದ ಬಹು ಜನಪ್ರಿಯ ಫಲವೆಂದರೆ ಕಾದಂಬರಿ. ಕಾದಂಬರಿಗಳಲ್ಲಿ ಜಾತಿಗಳು ಹಲವು – ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಪತ್ತೇದಾರಿ ಇತ್ಯಾದಿ. ಅವುಗಳಲ್ಲೂ ತಳಿ ಭೇದಗಳಿವೆ. ಉದಾ: ಸಾಯಿಸುತೆ, ತರಾಸು, ತ್ರಿವೇಣಿ, ಭೈರಪ್ಪ, ಕಾರಂತ, ಅನಂತರಾಂ, ತೇಜಸ್ವಿ, ಸಾರಾ, ಗಟ್ಟಿ ಇತ್ಯಾದಿ. ವರ್ಣ ಸಂಕರ ಫಲಗಳಾದ ಇಂಗ್ಲಿಷ್, ತೆಲುಗು, ಬಂಗಾಳಿ ಮೊದಲಾದವುಗಳ ಅನುವಾದ, ಮೂಲ ಗೋಪ್ಯವಾಗಿಟ್ಟು ವಿಷಯ ಸ್ವಲ್ಪ ಆಚೀಚೆ ಮಾಡಿ ಬರುವ ಕಳ್ಳ ಮಾಲುಗಳು ಉಪೇಕ್ಷಿಸುವಂಥವೇನೂ ಅಲ್ಲ. ನೂರು ವರ್ಷ ಸಂದ ಈ ಪ್ರಕಾರದ ಕಂಪು, ಬಣ್ಣ, ರಚನೆ, ರುಚಿಗಳ ವಿಶ್ಲೇಷಣೆಗೆ ಇಲ್ಲಿ ಶ್ರೀಮಂತರು, ವಿಜ್ಞಾನಿಗಳು ಬಂದಿದ್ದಾರೆ. ಸುಮಾರು ಕಾಲುಶತಮಾನ ಕಾಲ ನಾನು ಮಳಿಗೆಯಲ್ಲಿ ಕಾದಂಬರಿಯನ್ನೂ ಚೆನ್ನಾಗಿಯೇ ನಿಭಾಯಿಸಿದ್ದೇನೆಂಬ ಮಿತಿಯಲ್ಲಿ ಕೆಲವು ಟಿಪ್ಪಣಿಗಳನ್ನು ಮಾತ್ರ ಇಲ್ಲಿ ಕೊಡುತ್ತೇನೆ.

ವಿಂಗಡಣೆ ಹೇಗೆ? ಯಾವ ಬುಟ್ಟಿಯಲ್ಲಿ ಯಾವ ಹಣ್ಣು?
ಪ್ರಕಾಶಕ, ವಿತರಕರಿಗೆ ಒಂದೊಂದು ಕೃತಿಯ ನೂರಾರು ಪ್ರತಿಗಳು ಒಮ್ಮೆಗೆ ಬರುತ್ತವೆ. ಅದರ ಸ್ಪಷ್ಟ ನಿರೀಕ್ಷೆ ಮತ್ತು ಅದಕ್ಕೆ ತಕ್ಕ ತಯಾರಿಯೂ ಅವರಲ್ಲಿ ಇರುತ್ತವೆ. ಮಳಿಗೆಗಾದರೋ ಅಂಥ ಹತ್ತು ನೂರು ಪ್ರಕಾಶಕ ವಿತರಕರಿಂದ ಸಾವಿರಾರು ಶೀರ್ಷಿಕೆಗಳು ವರ್ಷ ಪೂರ್ತಿ ಬರುತ್ತಲೇ ಇರುತ್ತವೆ. ನಿರ್ವಹಣೆಯ ಜಾಣ್ಮೆಯಲ್ಲಿ ಆತ ಯಾವುದೇ ಕಾದಂಬರಿಯನ್ನು ಒಮ್ಮೆಗೆ ಪೂರ್ಣ ತಿರಸ್ಕಾರದಿಂದ ತೊಡಗಿ, ಗರಿಷ್ಠ ಐವತ್ತು ಪ್ರತಿಗಳವರೆಗೂ ಬೇಡಿಕೆ ಸಲ್ಲಿಸುವುದಿದೆ. ಆತನಿಗೆ ಅದೆಷ್ಟೇ ಪ್ರತಿಗಳು ಬರಲಿ, ಬಂದ ಮೇಲೆ ಎಲ್ಲ ಕೃತಿಗಳೂ ಸಮಾನ. ಅವುಗಳಿಗೆ ಒಂದೇ ತೆರನ ಪ್ರದರ್ಶನಾವಕಾಶ ಕೊಡಲೇಬೇಕು. ಸಹಜವಾಗಿ ಮಾರಾಟಾಂಕಣದಲ್ಲಿ ಒಮ್ಮೆಗೆ ಒಂದೋ ಎರಡೋ ಪ್ರತಿಗಳಿಗೆ ಮಾತ್ರ ಸ್ಥಳಾವಕಾಶ ದೊರಕೀತು. ಇಲ್ಲಿ ಸ್ವಲ್ಪ ಮಟ್ಟಿಗೆ ಸಮಾನ ಭಾವದ (ನಿರ್ಭಾವದ?) ಗ್ರಂಥಪಾಲರನ್ನು ನೆನೆಯಬಹುದು. ಅವರ ಆಯ್ಕೆಯ ಮಾನದಂಡ ಶೀರ್ಷಿಕೆಗಳಿಗೆ ಹೆಚ್ಚು ಉದಾರವಿರುತ್ತದೆ. ಆದರೆ ಸಂಖ್ಯೆಯಲ್ಲಿ ಮಾತ್ರ ಸಣ್ಣದಿರುತ್ತದೆ. ಇವರು ಸಾಮಾನ್ಯವಾಗಿ ಕಾದಂಬರಿಗಳೆಲ್ಲದರ ಒಂದೊಂದು ಪ್ರತಿಯನ್ನಷ್ಟೇ ಕೊಂಡಾರು. ಆದರೂ ಗ್ರಂಥಪಾಲಕನಿಗೆ ಪ್ರತಿ ಪುಸ್ತಕ ಎಂದರೆ ದಾಖಲೆ ಪುಸ್ತಕ, ಗ್ರಂಥಸೂಚಿ ಮತ್ತು ಕಪಾಟಿನಲ್ಲಿ ಒಂದು ಖಾಯಂಸ್ಥಾನ ಹೆಚ್ಚುತ್ತಲೇ ಇರುತ್ತದೆ. ಹಾಗಾಗಿ ಗ್ರಂಥಾಲಯ ಹಳತಾದಷ್ಟೂ (ಒಳ್ಳೇ ಆಡಳಿತದಲ್ಲಿ) ಕಟ್ಟಡ, ಕಪಾಟು, ನಿರ್ವಹಣ ವೆಚ್ಚ ವಿಸ್ತರಿಸುತ್ತಲೇ ಇರುತ್ತವೆ.

ಮಾರಾಟಗಾರ ಪ್ರತಿಯೊಂದು ಶೀರ್ಷಿಕೆಯ ದಾಸ್ತಾನು ಮುಗಿದಾಗ ಮಳಿಗೆಯ ಅಗತ್ಯಗಳನ್ನು ವಿಮರ್ಶಿಸಿ ಮರಳಿ ತರಿಸದ, ಪ್ರಕಾಶಕರ ಸ್ಥಿತಿಯಲ್ಲಿ ತರಿಸಲಾಗದ ಸ್ಥಿತಿಯನ್ನೂ ಅಂದರೆ ಮುದ್ರಿತ ಪ್ರತಿಗಳೆಲ್ಲ ಮುಗಿದ ಹಂತವನ್ನು ತಲಪಬಹುದು. ಮಾರಾಟಗಾರನಲ್ಲಿ ಇಂದಿಲ್ಲದ ತ್ರಿವೇಣಿ ಕೃತಿಗಳ ಸ್ಥಾನವನ್ನು ಹಿಗ್ಗುತ್ತಿರುವ ವೈದೇಹಿ ಕೃತಿಗಳು ಸಹಜವಾಗಿ ತುಂಬಬಹುದು. ಈ ಚಲನಶೀಲತೆ, ಅಂದರೆ ಬಂದವು ಮುಗಿಯುತ್ತ, ಹೊಸವು ಬರುತ್ತಿರುವ ಸ್ಥಿತಿ ನಮ್ಮ ವಿಂಗಡಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತಲೇ ಇರುತ್ತದೆ.

ಮೊದಮೊದಲು ನನ್ನ ಅಂಗಡಿಯಲ್ಲಿ ಲೇಖಕರ ಅಕಾರಾದಿ ವಿಂಗಡಣೆಯಲ್ಲಿ ಕಪಾಟು ನಿರ್ವಹಿಸಿದೆವು. ಆದರೆ ಹೆಚ್ಚಿನ ಲೇಖಕರು ಸಾಹಿತ್ಯದ ಒಂದೇ ಪ್ರಕಾರಕ್ಕೆ ತಗುಲಿಕೊಳ್ಳದಿರುವುದು ನಮಗೆ ತೊಂದರೆ ತಂದಿತು. ಶಿವರಾಮ ಕಾರಂತರದೇ `ಚೋಮನದುಡಿ’ ಮತ್ತು `ಅಳಿದಮೇಲೆ’ ಎಂಬೆರಡು ಕಾದಂಬರಿಗಳ ನಡುವೆ `ಬಾಳ್ವೆಯೇ ಬೆಳಕು’ ಎಂಬ ಜೀವನಶೈಲಿ ನಿರೂಪಕ ಕೃತಿ ಸಿಕ್ಕುವುದನ್ನು ಗಿರಾಕಿ ಎಂದೂ ಪುರಸ್ಕರಿಸಲಿಲ್ಲ. `ಕಾನೂರು ಹೆಗ್ಗಡಿತಿ’ಯ ಪಕ್ಕದಲ್ಲಿ ಶೂದ್ರ ತಪಸ್ವಿಗೇನು ಕೆಲಸ ಎಂದರು ಕೆಲವರು. ವಂಶವೃಕ್ಷದ ಕವಲಿನಲ್ಲಿ ಭೈರಪ್ಪನವರು ನಾನೇಕೆ ಬರೆಯುತ್ತೇನೆ ಎಂದದ್ದನ್ನು ಕೇಳಿಸಿಕೊಂಡವರೇ ಇಲ್ಲ. ಹಾಗಾಗಿ ವೈವಿಧ್ಯಮಯವಾಗಿ ವಿಪುಲವಾಗಿ ಬರೆದೂ ಬರೆದದ್ದೆಲ್ಲಕ್ಕೂ ಮಾರುಗುಣ ಕಂಡುಕೊಂಡ ಕುವೆಂಪು, ಕಾರಂತ, ಮಾಸ್ತಿ, ಡಿವಿಜಿ ಮುಂತಾದ ಕೆಲವು ಲೇಖಕರನ್ನು ಬಿಟ್ಟು ಉಳಿದವರನ್ನು ವಿಷಯಕ ವಿಂಗಡಣೆಗೆ ಒಳಪಡಿಸುವುದು ಅನಿವಾರ್ಯವಾಯ್ತು. ಹೀಗೆ ಪ್ರತ್ಯೇಕಿಸಲ್ಪಟ್ಟ ಕಾದಂಬರಿಗಳಲ್ಲಿ ನಮ್ಮಲ್ಲಿ ಮೂರು ಮುಖ್ಯ ವಿಭಾಗಗಳಿವೆ. ಶುದ್ಧ ಪತ್ತೇದಾರಿ, ಪುರುಷ ಲೇಖಕರು ಮತ್ತು ಮಹಿಳಾ ಲೇಖಕರು. ಅವನ್ನು ಮೀರಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಎಂಬಿತ್ಯಾದಿ ಒಳಗುಂಪುಗಳೊಡನೆ ಅಲ್ಪಸ್ವಲ್ಪ ರಾಜೀ ಮಾಡಿಕೊಳ್ಳುವುದು ಕಷ್ಟದ ಮಾತಲ್ಲ. ಹಿಂದೆ ನ್ಯಾಷನಲ್ ಬುಕ್ ಟ್ರಸ್ಟ್ ಅಂತರ ಭಾರತಿ ಹೆಸರಿನಲ್ಲಿ ಇತರ ಭಾರತೀಯ ಭಾಷಾ ಕೃತಿಗಳನ್ನು ಕನ್ನಡದಲ್ಲಿ ಧಾರಾಳ ಪ್ರಕಟಿಸುತ್ತಿತ್ತು. ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳಲ್ಲೂ ಹಲವು ಸೃಜನಶೀಲ ಮಹಾಕೃತಿಗಳ ಅನುವಾದ ಸೇರಿ ಓದುಗರಲ್ಲಿ ವಿಶೇಷ ರುಚಿ ಪ್ರಚುರಿಸುತ್ತಿದ್ದುವು. ಸಹಜವಾಗಿ ಇವುಗಳಿಗೆ ಕಪಾಟಿನಲ್ಲಿ ಎರಡು ಸಾಲುಗಳನ್ನೇ ಮೀಸಲಿಟ್ಟಿದ್ದೆವು. ಈಚೆಗೆ ಸಾಮಾನ್ಯ ಸಾಲು ಬಿಟ್ಟು, ಕಪಾಟನ್ನೇ ಕೇಳಲು ನ್ಯಾಬುಟ್ರದೊಡನೆ ಹಲವು ಸರಕಾರಿ, ಅರೆ ಸರಕಾರಿ ಸಂಸ್ಥೆಗಳು ಹಣಕಾಸಿನ ಆಮಿಷಗಳನ್ನೂ ಒಡ್ಡುತ್ತಿದ್ದಾವೆ. ಆದರೆ ಅವನ್ನು ಸಮರ್ಥವಾಗಿ ತುಂಬುವ ಪ್ರಕಟಣೆಗಳು ಬರುತ್ತಿಲ್ಲ, ಎಷ್ಟೋ ಬಾರಿ ಇದ್ದವುಗಳ ವಿತರಣೆ ಸರಿಯಿಲ್ಲ ಮತ್ತು ಅಂತಿಮವಾಗಿ ಜನ ಮನ್ನಿಸುತ್ತಾರೆಂಬ ವಿಶ್ವಾಸವಿಲ್ಲ; ಮೀಸಲಾತಿ ಎಲ್ಲಕ್ಕೂ ಪರಿಹಾರವಲ್ಲ.

ಪ್ರಚಾರದ ಅಲೆಯಲ್ಲಿ ಇರುವಂಥವು ಸ್ವಲ್ಪ ಎದ್ದು ಕಾಣಬೇಕು. ತುಂಬ ಕಾಲ ಅಂಗಡಿಯ ದೂಳು ಹೊತ್ತವು ಬೇಗ ಓಡುವಂತಾಗಬೇಕು, ಸಕಾಲಿಕ ತಿದ್ದುಪಡಿಗೂ ಅವಕಾಶವಾಗಬೇಕು. ಈ ಕಲೆಯನ್ನು ನಿರಂತರ ಪುಸ್ತಕಗಳೊಂದಿಗಿನ ಒಡನಾಟದಿಂದ ನನ್ನ ಸಹಾಯಕ ಶಾಂತಾರಾಮ ಸಿದ್ಧಿಸಿಕೊಂಡಿದ್ದಾನೆ. ಅದಕ್ಕೆ ನಾನಾತನನ್ನು subject expert ಎಂದೇ ತಮಾಷೆಗೆ ಹೇಳುವುದಿದ್ದರೂ ವಾಸ್ತವದಲ್ಲಿ ಅದು ಗಂಭೀರ ವಿಚಾರವೇ ಆಗಿದೆ. ದಿನಕ್ಕೆ ಸಂದುಹೋದ, ಆದರೆ ನನ್ನ ನೆನಪಿನಲ್ಲಿ ಗಟ್ಟಿಯಾಗಿರುವ ಅಂಥ ಮೂವರನ್ನು ಇಲ್ಲಿ ಹೆಸರಿಸುವುದು ಅಪ್ರಸ್ತುತವಲ್ಲ. ಸಂತ ಅಲೋಶಿಯಸ್ ಕಾಲೇಜಿನ ಗ್ರಂಥಪಾಲ ಆಳ್ವಾರೀಸ್, ಗೀತಾಬುಕ್ ಹೌಸಿನ ಅಶ್ವತ್ಥನಾರಾಯಣ, ಸಾಹಿತ್ಯ ಭಂಡಾರದ ಕಾರಂತ.

ಕೆಲವು ಕಾದಂಬರಿಗಳು ಅಮೃತ ಕುಡಿದು ಹುಟ್ಟಿದವು. ಅಂದರೆ, ಜಾಗ ಬಿಡುವುದೇ ಇಲ್ಲ. ಇಂಥವನ್ನು ಶಾಶ್ವತ ಸಾಹಿತ್ಯ ಎಂದು ಗೇಲಿ ಮಾಡುವವರೂ ಇದ್ದಾರೆ. ನಮಗಾದರೋ ಪುನರಪಿ ಜನನಂ ಪುನರಪಿ ಮರಣಮ್ ತತ್ತ್ವದ ಮೇಲೆ ಪ್ರೀತಿ ಹೆಚ್ಚು. ಹೀಗೆ ಮಾರಾಟದ ನಿರಂತರತೆಯನ್ನು ಕಾಯ್ದುಕೊಳ್ಳುವ ಕೃತಿಗಳನ್ನು ಒಮ್ಮೆಗೆ ತುಸು ಹೆಚ್ಚಿನ ಸಂಖ್ಯೆಯಲ್ಲಿ ತರಿಸಿಕೊಂಡರೂ ಮುಂದೆ ಅನ್ಯ ಬೇಡಿಕೆಗಳೊಡನೆ ಐದು ಹತ್ತೆಂದು ಸೇರಿಸಿ ತರಿಸಿಕೊಳ್ಳುವಲ್ಲಿ ನಾವೆಂದೂ ಹಿಂದೆ ಬಿದ್ದಿಲ್ಲ.

ಪತ್ರಿಕೋದ್ಯಮದ ಪ್ರಭಾವ ಪುಸ್ತಕೋದ್ಯಮದ ಮೇಲೆ ಹೇಗಿದೆ?
ಇಂದು ಕಾದಂಬರಿಗಳನ್ನು ಧಾರಾವಾಹಿಯಾಗಿಸದ ನಿಯತಕಾಲಿಕ ಪತ್ರಿಕೆಗಳೇ ಇಲ್ಲ ಎನ್ನಬಹುದು. ಅವುಗಳ ಅಥವಾ ಒಟ್ಟಾರೆ ಪತ್ರಿಕೋದ್ಯಮದ ಪ್ರಭಾವ ಪುಸ್ತಕೋದ್ಯಮದ ಮೇಲೆ ಹೇಗಿದೆ ಎನ್ನುವುದು ಒಂದು ಕುತೂಹಲದ ಪ್ರಶ್ನೆ. ಕನ್ನಡ ಪತ್ರಿಕೋದ್ಯಮ ತುಂಬ ಸ್ವಕೇಂದ್ರಿತ ಮತ್ತು ವ್ಯಾವಹಾರಿಕವಾಗಿದೆ. ಪುಸ್ತಕೋದ್ಯಮದೊಡನೆ ಇದರದು ತೋರಿಕೆಯ ಸಾಹೋದರ್ಯ ಮಾತ್ರ. ವಿತರಣಾಜಾಲದಲ್ಲಿ ಇವು ಒಂದನ್ನೊಂದು ಪ್ರಭಾವಿಸಿಯೇ ಇಲ್ಲ. ಈ ಮಾತನ್ನು ಕಾದಂಬರಿ ಮೀರಿ, ಎಲ್ಲ ಸಾಹಿತ್ಯ ಮುಖಗಳಿಗೂ ಅನ್ವಯಿಸಬಹುದು. ದಿನಪತ್ರಿಕೆಗಳು ಪುಸ್ತಕಗಳಿಗೆ ವಾರಕ್ಕೊಮ್ಮೆ ಅರ್ಧಪುಟದ `ಸ್ಥಳದಾನ’ ನೀಡುವುದಿದೆ. ಅದರಲ್ಲಿ ಸಾದರ ಸ್ವೀಕಾರ, ವಿಮರ್ಶೆಯ ಶಾಸ್ತ್ರ ಮುಗಿಸಿಬಿಡುತ್ತಾರೆ. ಇದಕ್ಕಾಗಿ ಎರಡು ಉಚಿತ ಪ್ರತಿಗಳನ್ನು ಸ್ವಂತ ಖರ್ಚಿನಲ್ಲಿ ಕಳಿಸಿಕೊಟ್ಟ ಪ್ರಕಾಶಕ ಅಥವಾ ಲೇಖಕನಿಗೆ ಸ್ವೀಕೃತಿ ಮತ್ತು ವಿಮರ್ಶೆ ಬಂದ ಸಂಚಿಕೆಗಳ ಒಂದೊಂದು ಪ್ರತಿ ಕಳಿಸುವ ಸೌಜನ್ಯ ಇಲ್ಲ. ಇನ್ನು ಆ ಕುರಿತು ಪ್ರತಿಕ್ರಿಯೆ ಮತ್ತು ಚರ್ಚೆಗೆ ಅವಕಾಶ ಸಾಮಾನ್ಯವಾಗಿ ಕೊಟ್ಟದ್ದಿಲ್ಲ. ಎಷ್ಟೋ ಬಾರಿ ತಿಂಗಳಾನುಗಟ್ಟಳೆ ಕಾದರೂ ವಿಮರ್ಶೆ ಬಿಟ್ಟು, ಒಂದು ಗೆರೆ ಪರಿಚಯವನ್ನೂ ಹಾಕದೇ ದಕ್ಕಿಸಿಕೊಳ್ಳುವಷ್ಟು ಹಮ್ಮು ಬೆಳೆಸಿಕೊಂಡಿವೆ ಪತ್ರಿಕಾ `ಡೆಸ್ಕು’ಗಳು!

ಕೃಷಿ, ಕ್ರೀಡೆ, ಸಿನೆಮ, ಹಣಕಾಸು ಇತ್ಯಾದಿಗಳ ಬಗ್ಗೆ ಸ್ವತಂತ್ರ ಮತ್ತು ವಾಣಿಜ್ಯ ಮಟ್ಟದಲ್ಲಿ ಯಶಸ್ಸು ಪಡೆದ ನಿಯತಕಾಲಿಕಗಳು ಇದ್ದಾಗಲೂ ಸಾಮಾನ್ಯ ಪತ್ರಿಕೆಗಳು ಆ ವಿಚಾರಗಳಿಗೆ ಮೀಸಲು ಪುರವಣಿಗಳನ್ನೇ ಕೊಟ್ಟು ಕೃತಾರ್ಥವಾಗುತ್ತವೆ. ಅದೇ ಸಾಹಿತ್ಯಕ್ಕೆ, ಮುಖ್ಯವಾಗಿ ಪುಸ್ತಕೋದ್ಯಮವನ್ನು ದಾಯಾದಿ ಮಾತ್ಸರ್ಯದಲ್ಲೇ ನೋಡುತ್ತವೆ, ತೀರಾ ಔಪಚಾರಿಕವಾಗಿ ನಡೆಸಿಕೊಂಡು ಅಂತರ ಕಾಪಾಡಿಕೊಳ್ಳುತ್ತವೆ. ಯಾರಾದರೂ ಅಂಕಣಕಾರನ ಖಯಾಲಿಯಲ್ಲೋ ಪತ್ರಿಕೆಯ ವಿಶಿಷ್ಟ ದೃಷ್ಟಿಕೋನಕ್ಕೆ ಹೊಂದಿಕೊಳ್ಳುವ ಭಾಗ್ಯ ನಿರ್ದಿಷ್ಟ ಪುಸ್ತಕದ ಹುಟ್ಟಿನ ಆಕಸ್ಮಿಕದಲ್ಲೋ ಬಂದದ್ದಿದ್ದರೆ ಅದನ್ನು ಅಯಾಚಿತ ಲಾಭ ಎಂದಷ್ಟೇ ಹೇಳಬಹುದು. ಪುಸ್ತಕಗಳ ಬಗ್ಗೆ ಪತ್ರಿಕಾ ಜಾಹೀರಾತು ಅಥವಾ ಅಸಾಹಿತ್ಯಕ ಗದ್ದಲವೆದ್ದರೆ ತಮ್ಮ ವಾಣಿಜ್ಯ ಅಥವಾ ಪ್ರಸಾರ ಲಾಭದ ಮೇಲೆ ಕಣ್ಣಿಟ್ಟು ದಿಢೀರ್ ವಿಮರ್ಶೆ, ಚರ್ಚೆ ನಡೆಯುವುದಿದೆ. ತಮಾಷೆ ಎಂದರೆ, ಆ ವಾತಾವರಣ ನೇರ ಪುಸ್ತಕ ಪ್ರಸರಣವನ್ನು ಪ್ರಭಾವಿಸುವುದು ಕಡಿಮೆ. ಇದಕ್ಕೆ ಉದಾಹರಣೆಯಾಗಿ ಪಿವಿ ನಾರಾಯಣರ ಧರ್ಮಕಾರಣವನ್ನು ಹೆಸರಿಸಬಹುದು. ಅದಕ್ಕೆ ನಿಷೇಧ ಉಂಟು ಇಲ್ಲಗಳ ಬಿಸಿ ಪತ್ರಿಕೆಗಳಲ್ಲಿ ಏರಿದ್ದಾಗಲೂ ಮಳಿಗೆಗಳಲ್ಲಿ ಅದರ ಪ್ರತಿಗಳ ಮಾರಾಟ ವಿಶೇಷ ಏರಲೇ ಇಲ್ಲ!

ಹೀಗೆ ಯಾಕಾಯ್ತು? ಸಂಪರ್ಕ ಮಾಧ್ಯಮಗಳೆಲ್ಲ ವಿಷಯ ವೈವಿಧ್ಯಕ್ಕೆ ರಾಜಕೀಯದ ಅಗತ್ಯಗಳಿಗೆ ಕನ್ನಡ ಲೇಖಕರನ್ನು ತಮ್ಮವರಂತೇ ಕಾಣುತ್ತವೆ. ಅದೇ ಲೇಖಕರು ಸ್ವತಂತ್ರವಾಗಿ ಅಭಿವ್ಯಕ್ತಿ ಪ್ರಕಟಿಸಿದಲ್ಲಿ, ಅಂದರೆ ಪುಸ್ತಕ ರೂಪದಲ್ಲಿ ಸಾರ್ವಜನಿಕರಿಗೆ ಒದಗುವಂತಾದಾಗ ಅದೇ ಮಾಧ್ಯಮಗಳು ಸಮರ್ಥವಾಗಿ ಪ್ರತಿನಿಧಿಸಲು, ಕನಿಷ್ಠ ಪ್ರಬಲವಾಗಿ ವಿರೋಧಿಸಲೂ ನಿಲ್ಲುವುದಿಲ್ಲ. ಸಿನಿಮಾ ನಿರ್ದೇಶಕನ ಮಾಧ್ಯಮ ಎಂದಷ್ಟೇ ಸಹಜವಾಗಿ, ಪತ್ರಿಕಾ ಮಾಧ್ಯಮವನ್ನು ಸಂಪಾದಕನ ಸ್ವಾತಂತ್ರ್ಯಕ್ಕೆ ಜಾರಿಸುವುದು ಸರಿಯಾಗದು. ಸಿನಿಮಾದಲ್ಲಿ ಸಂಯೋಜನೆಗೊಳಗಾದ ವಿವಿಧ ಅಂಶಗಳಿಗೆ ಸ್ವತಂತ್ರ ಅಭಿವ್ಯಕ್ತಿ ತುಂಬ ಕಡಿಮೆ ಇರುತ್ತದೆ. ಸಾಹಿತ್ಯವಾದರೋ ಪುಸ್ತಕಗಳಲ್ಲಿ, ಮಾತಿನ ವಿವಿಧ ರೂಪಗಳಲ್ಲಿ ಸದಾ ಸ್ವತಂತ್ರವೂ ಸೃಜನಶೀಲವೂ ಆಗಿರಬಲ್ಲುದು. ಬಹುಶಃ ಇದನ್ನೊಪ್ಪುವಲ್ಲಿ ಸಂಪರ್ಕ ಮಾಧ್ಯಮಗಳಿಗೆ ಕೀಳರಿಮೆ ಕಾಡುತ್ತದೆ. ಹಾಗಾಗಿ ಪತ್ರಿಕಾಲಯಗಳೇ ಪ್ರಕಾಶನವನ್ನು ನಡೆಸಿದಾಗಲೂ ವಿತರಣ ಜಾಲದಲ್ಲಿ ಪುಸ್ತಕಗಳ ಹರಿವು ಯಶಸ್ವಿಯಾದದ್ದು ಇಲ್ಲ ಎಂಬುದು ಗಮನಾರ್ಹ ಸಂಗತಿ. ಮಲ್ಲಿಗೆ ಮಾಸ ಪತ್ರಿಕೆಯ ಪ್ರಕಾಶಕರಾಗಿದ್ದ ಬಾಪ್ಕೋ ಪ್ರಕಾಶನ, ಪ್ರಜಾವಾಣಿ ಬಳಗದ ಪ್ರಿಂಟರ್ಸ್ ಪ್ರಕಾಶನ, ಲಂಕೇಶರ ಪತ್ರಿಕೆ ಪ್ರಕಾಶನ, ವೈಕುಂಠರಾಜುರವರ ಪುಸ್ತಕ ಪ್ರಕಟಣೆಗಳು ಎಂದೆಲ್ಲ ದೂರದೂರ ನೋಡುವುದೇಕೆ, ಉದಯವಾಣಿಯದೇ ಪುಸ್ತಕ ಪ್ರಕಟಣೆಗಳೂ ಬಹುತೇಕ ಸೋತ ಕತೆಗಳೇ ಮತ್ತು ಉಳಿದಿರುವಂಥವೂ ಮಾರುಕಟ್ಟೆಯನ್ನು ಆಳಿದ್ದು ಕಡಿಮೆ. ಅವುಗಳ ಏಜಂಟರುಗಳ ಜಾಲ ಎಷ್ಟು ದೊಡ್ಡ ಮತ್ತು ಬಲಯುತವಿದ್ದರೂ ಸೋತು ಹಿಮ್ಮೆಟ್ಟಿದ್ದನ್ನು ಕಾಣಬಹುದು.

ಕಾದಂಬರಿಗಳ ಫಸಲಿನಲ್ಲಿ ಜೊಳ್ಳು ಹೆಚ್ಚುತ್ತಿದೆ!
ಸಮಾಜ ಪುಸ್ತಕಾಲಯದ ಪ್ರತಿನಿಧಿ, ಐಬಿಎಚ್ ಪ್ರಕಾಶನದ ಪ್ರತಿನಿಧಿ ಹಲವು ಪತ್ತೇದಾರಿ ಪ್ರಕಾಶಕರು ವರ್ಷಕ್ಕೆ ನಾಲ್ಕೆಂಟು ಬಾರಿಯಾದರೂ ಊರೂರು ತಿರುಗಿ ಬಂದು ಪುಸ್ತಕ ವಿತರಣೆ ಉಳಿಸಿ ಬೆಳೆಸಲು ಪ್ರಯತ್ನಿಸುತ್ತಿದ್ದರು. ಇಂದು ಉಳಿದಿರುವ ತಿರುಗಾಡಿಗಳು ಇನ್ನೂ ಸರಕಾರೀಕರಣಕ್ಕೊಳಪಡದ ಅಧ್ಯಾತ್ಮ, ಜ್ಯೋತಿಷ್ಯ ಇತ್ಯಾದಿ ಪ್ರಕಾರಗಳನ್ನೇ ನೆಚ್ಚಿರುವವರು. ಕನ್ನಡ ಕಾದಂಬರಿ ಲೋಕವಂತೂ ಸರಕಾರೀಕರಣದ ಅನೈಜ ಪ್ರೋತ್ಸಾಹದಲ್ಲಿ ತೀರಾ ಕಳೆಗುಂದಿದೆ. ನನ್ನ ಪ್ರಕಾಶನದ ಮೊದಲ ದಿನಗಳಲ್ಲಿ ನಾನು ಹಂಸಧ್ವನಿ ಪ್ರಕಾಶನದವರನ್ನು ಕನ್ನಡ ಮಾರುಕಟ್ಟೆಯ ಮಾರಾಟಗಾರರ ವಿಳಾಸ ಕೇಳಿದ್ದೆ. ರಾಜ್ಯ ಹೊರರಾಜ್ಯಗಳದ್ದೂ ಸೇರಿ ನೂರಕ್ಕೂ ಮಿಕ್ಕು ದೊಡ್ಡ ಪಟ್ಟಿ ಕಳಿಸಿದ್ದರು. ಅವರಲ್ಲಿ ಹೆಚ್ಚಿನವರು ಬರಿಯ ಕಾದಂಬರೀಪ್ರಿಯರು ಎನ್ನುವುದು ಗಮನಾರ್ಹವಾಗಿತ್ತು. ನಾನೇ ವಾರ, ಹತ್ತು ದಿನಕ್ಕೊಂದೆರಡಾದರೂ ಹೊಸ ಕಾದಂಬರಿ ನೋಡುತ್ತಲೇ ಇದ್ದೆ. ಆ ದಿನಗಳಲ್ಲಿ ಘನತೆಯೊಂದಿಗೆ ವ್ಯಾಪಾರ ಎಂದುಕೊಂಡವರೆಲ್ಲ ಇಂದು ಕಾದಂಬರೀ ಪ್ರಕಟಣೆಗಳಲ್ಲಿ ನಿಧಾನಿಗಳೂ ಉದಾಸರೂ ಆಗಿದ್ದಾರೆ.

ಹುಸಿ ಪ್ರಕಾಶಕರು ವಿವಿಧ ಸ್ಕೀಮುಗಳ ಮುಖ ನೋಡಿ ಪ್ರಕಟಿಸುವ, ವಾರದಲ್ಲಿ ಡಜನ್ ಪ್ರೊಡ್ಯೂಸ್ ಮಾಡಿ ಅಚ್ಚಿನ ಮನೆಯಿಂದ ಸರಕಾರೀ ಗುದಾಮು ದಾರಿ ಮಾತ್ರ ತಿಳಿದವರಾಗಿದ್ದಾರೆ. ಸಹಜವಾಗಿ ಬೆಲೆ ಮುದ್ರಿಸುವಾಗ ಓದುಗರನ್ನು ಅರ್ಥಾತ್ ಸಾಮಾನ್ಯ ಕೊಳ್ಳುಗರನ್ನು ಲೆಕ್ಕಕ್ಕೇ ಇಡುತ್ತಿಲ್ಲ. ಅಂಥವರಿಗೆ ನನ್ನ ಸುಲಭ ಬೆಲೆಯ ಪ್ರಕಟಣೆಗಳನ್ನು ಒಡ್ಡಿ ಛೇಡಿಸಿದರೆ, ಮುಖ ದಾಕ್ಷಿಣ್ಯಕ್ಕೆ “ನೀವು ಹ್ಯಾಗಿಡ್ತೀರೋ ಗೊತ್ತಾಗಲ್ಲ. ನಮಗಂತೂ ಗಿಟ್ಟೋದೇ ಇಲ್ಲ” ಎಂದು ತೇಲಿಸಿಬಿಡುತ್ತಾರೆ. ಕಾರಣ ಸುಲಭ – ಈಚಿನ ಪುಸ್ತಕೋದ್ಯಮದ ಚರಮಗುರಿ ಸರಕಾರೀ ಗುದಾಮು! ಸಗಟು ಖರೀದಿ ಇದರ ಒಂದು ಸಣ್ಣ ಅವಲಕ್ಷಣ ಮಾತ್ರ. ಸರಕಾರಿ ನಿಯಮದಂತೆ ಮುದ್ರಿತ ಬೆಲೆಯ ಮೇಲೆ ಇವರು ಶೇಕಡಾ ೨೬ರಿಂದ ೪೦ರವರೆಗೆ ರಿಯಾಯಿತಿ ಕೊಡಲು ಅಥವಾ ಕಡಿತ ಅನುಭವಿಸಲು ಸಿದ್ಧರಿರಬೇಕು. ಮೇಲಿನಿಂದ ಮಾಮೂಲೀ ಉಪಚಾರದ್ದೆಲ್ಲ ಕಳೆದ ಮೇಲೆ ಇವರೂ ಸಾಕಷ್ಟು ಬಾಚಿಕೊಳ್ಳಬೇಡವೇ? ಸಹಜವಾಗಿ ಬಿಡಿ ಮಾರಾಟವನ್ನೇ ನೆಚ್ಚಿದ ನನ್ನಂಥವರು ಕಡಿಮೆಯಾಗುತ್ತಾ ಹೋಗಿದ್ದಾರೆ. ಉಳಿದ ಕೆಲವರು ಹಠಕ್ಕೆ ಬಿದ್ದು ಹತ್ತಿಪ್ಪತ್ತು ಪ್ರತಿ ತರಿಸಿಕೊಂಡರೆ ಅವನ್ನು ಮೇಲ್ಖರ್ಚಿಗೆ ಎಂಬಂತೆ ನಡೆಸಿಕೊಳ್ಳುತ್ತಾರೆ! ಇಂದು ಸಗಟು ಖರೀದಿಯಿಂದ ತೊಡಗಿ ಪಠ್ಯ ಆಯ್ಕೆ, ಬಹುಮಾನ, ಪ್ರಶಸ್ತಿ ಇತ್ಯಾದಿ ಸಾಹಿತ್ಯ ಮಥನದಲ್ಲಿ ಏಳುತ್ತಿರುವುದು ಬರಿಯ ಕಸ, ಕೆಸರು. ಪ್ರತಿಭಟನೆ, ನ್ಯಾಯಕ್ಕೆ ಹೋರಾಟ ಘೋಷಿಸುವ ಸಂಘಟಣೆಗಳಿಗೂ ಕಾಣುವುದು ಒಂದೇ “ಮೋಹಿನಿ ನಮ್ಮನ್ನು ವಂಚಿಸಿದಳು.” ಅಯ್ಯೋ ಇಲ್ಲಿ ಕಡೆದಿರುವುದು ಕ್ಷೀರಸಾಗರವನ್ನಲ್ಲ, ಎದ್ದಿರುವುದು ಅಮೃತವೂ ಅಲ್ಲ ಎನ್ನುವವರೇ ಇಲ್ಲವಾಗುತ್ತಿದ್ದಾರೆ!

ಎರಡು ಅನಾರೋಗ್ಯದ ಮತ್ತು ಒಂದು ಆರೋಗ್ಯಕರ ಉದಾಹರಣೆ ಕೇಳಿ: ೧೯೮೪ರಲ್ಲಿ ಬೆಂಗಳೂರಿನ ಭಾರೀ ಪ್ರಕಾಶನ ಸಂಸ್ಥೆಯೊಂದು ಗೋರೂರು ರಾಮಸ್ವಾಮಿ ಅಯ್ಯಂಗಾರ್ಯರ ಬಹುಶಃ ೧೯೫೧ನೇ ಇಸವಿಯ ಅಂದರೆ ಹೆಚ್ಚು ಕಡಿಮೆ ಎಲ್ಲರ ಮರವೆಗೆ ಸಂದ ಕಾದಂಬರಿ `ಮೆರವಣಿಗೆ’ಯನ್ನು ಮರುಮುದ್ರಿಸಿತು. ಆಗ ಸಗಟುಖರೀದಿ ನಿಯಮ ಮೊದಲ ಮುದ್ರಣಗಳನ್ನು ಮಾತ್ರ ಕೊಳ್ಳುವಂತಿತ್ತು. ಸಹಜವಾಗಿ ಪುಸ್ತಕದ ಕಾನೂನು ತೊಡಕು ತರಬಹುದಾದ ಮುದ್ರಣ ಇತಿಹಾಸ ನಮೂದಾಗಬೇಕಾದ ಪುಟವನ್ನು ಖಾಲೀ ಉಳಿಸಿದ್ದರು! ಮುಂದೆ ಇಂಥಾ ಜಾಣತನದ ಹಲವು ರೂಪಗಳನ್ನು ನಾನು ನೋಡಿದ್ದೇನೆ. ಬಿಡಿ, ಎರಡನೇ ಉದಾಹರಣೆ – ಸಗಟು ಖರೀದಿ ಮತ್ತು ಪಠ್ಯ ಆಯ್ಕೆ ಯಾವುದೇ ಪ್ರಕಾಶಕರ ಏಕಸ್ವಾಮ್ಯವಾಗದಂತೆ ನೋಡಿಕೊಳ್ಳಲು ಸಂಸ್ಥೆಯೊಂದರ ಖರೀದಿ ಮೊತ್ತದ ಮೇಲೆ ಮಿತಿ ಹೇರುವ ಸ್ಪಷ್ಟ ನಿಯಮ ಬಂತು. ಜಾಣರು ಕೂಡಲೇ ತಮ್ಮದೇ ವಿಳಾಸದಡಿಯಲ್ಲಿ ವಿವಿಧ ಹೆಸರಿನ ಲೆಟರ್ ಹೆಡ್ ಮತ್ತು ಬಿಲ್ ಪುಸ್ತಕಗಳ `ಸಂಸ್ಥೆ’ಗಳನ್ನು ರೂಪಿಸಿಕೊಂಡು ಸರಕಾರೀ ಖಜಾನೆ ಕೊಳ್ಳೆಹೊಡೆದರು. ವಿಳಾಸಗಳನ್ನು ಗಮನಿಸುವ ನಿಯಮ ಬಂದಾಗ ಬೇವಾರ್ಸಿಗಳು, ಕ್ಷಮಿಸಿ, ಇಲ್ಲದ ವಿಳಾಸವನ್ನು ನಮೂದಿಸಿದವರು ಚಾಲ್ತಿಗೆ ಬಂದರು. ಅವನ್ನು ವಾಣಿಜ್ಯ ಕರ ಇಲಾಖೆಯಲ್ಲಿ ನೋಂದಾಯಿಸಬೇಕು ಎಂದಾಗಲೂ ಕಳ್ಳಪ್ರಕಾಶಕರು ಹಿಂದೆ ಬೀಳಲಿಲ್ಲ. ಇಂಥಲ್ಲೆಲ್ಲ ಇಲಾಖೆ ಮತ್ತು ಹುಸಿ-ಉದ್ಯಮ ಎಷ್ಟೊಂದು ಅನ್ಯೋನ್ಯವೆಂದರೆ ಸನಾಮಿಗಳಿಗಿಂತಲೂ ಬೇನಾಮಿಗಳಿಗೆ ಮಾಹಿತಿ, ಆದೇಶ, ಪಾವತಿಗಳು ಚುರುಕಾಗಿ ಮುಟ್ಟುತ್ತಿದ್ದುವು. ದಿವಂಗತ ಮುಳಿಯ ತಿಮ್ಮಪ್ಪಯ್ಯನವರ `ವೀರಬಂಕೆಯ’ ಈಚೆಗೆ ಒಮ್ಮೆ ಪಠ್ಯವಾಗಿತ್ತು. ಪ್ರಕಾಶಕ ಯಾರೇ ಇರಲಿ, ಖ್ಯಾತ ವಿತರಣಕಾರರಿಂದ ಇನ್ನೂ ಮೂರು ನಾಲ್ಕು ಪಠ್ಯಗಳೊಡನೆ ಇದರ ಪ್ರತಿಗಳು ನನಗೂ ಬಂದಿದ್ದುವು. ಮುದ್ರಣ ಹೊಸತು ಎನ್ನುವುದು ಸ್ಪಷ್ಟವಿದ್ದರೂ ಮುದ್ರಣ ಇತಿಹಾಸದ ನಮೂದು ಹಳೆಯದೇ ಇದ್ದದ್ದನ್ನು ನಾನು ಹಗುರಾಗಿ ಕೆದಕಿದೆ. ವಿತರಣಕಾರ ಎಂದೇ ಪರಿಚಿತನಾದ ಬೇನಾಮೀ ಪ್ರಕಾಶಕ “ಪ್ರಕಾಶಕರಲ್ಲಿ ಹಳೇ ಪ್ರಿಂಟೇ ತುಂಬಾ ಉಳಿದುಬಿಟ್ಟಿತ್ತಂತೆ ಸಾರ್” ಎಂದು ಜಾರಿಕೊಂಡ. ಕೃತಿಯ ಹಕ್ಕುದಾರರು – ಮುಳಿಯ ಮಹಾಬಲ ಭಟ್ಟರು, ಇದನ್ನು ಸ್ವಲ್ಪ ತಡವಾಗಿಯೇ ಗಮನಿಸಿದರು. ಸ್ವತಃ ವಕೀಲರಾದ ಅವರಿಗಿದು ಮೂಲದಲ್ಲಿ ಪಠ್ಯವಾದ ಸುದ್ದಿಯೇ ತಿಳಿದಿರಲಿಲ್ಲ. ಪದವಿ ತರಗತಿಯ ಪಠ್ಯ ಎಂದರೆ ಕನಿಷ್ಠ ಮೂರರಿಂದ ನಾಲ್ಕು ಸಾವಿರ ಪ್ರತಿ ಬೇಕಾಗುತ್ತಿತ್ತು. ಅಷ್ಟೂ ಹಳೆ ಪ್ರತಿಗಳು ಉಳಿದಿತ್ತೆಂದರೆ ಹಿಂದೆ ಮುದ್ರಿಸಿದ ಪ್ರತಿಗಳು ಎಷ್ಟು? ಅದಕ್ಕಾದರೂ ಅನುಮತಿಸಿದವರು ಯಾರು? ಎಂದಿತ್ಯಾದಿ ವಕೀಲರ ನೋಟೀಸು ಹೋಯ್ತು. `ವಿಳಾಸದಾರ ನಾಪತ್ತೆ’ ಎಂಬ ಷರಾ ಹೊತ್ತು ಪತ್ರ ವಾಪಾಸಾದಾಗ “ಮಣ್ಣು ಹಾಕ್ಲಿ!” ಎಂದುಬಿಟ್ಟರು, ಯುದ್ಧೋತ್ಸಾಹವೇ ಇಳಿದು ಹೋಗಿತ್ತು.

ಇವಕ್ಕೆಲ್ಲ ವ್ಯತಿರಿಕ್ತವಾದ ಒಂದೇ ಉದಾಹರಣೆ ಸಾಹಿತ್ಯ ಭಂಡಾರದ್ದು. ಓದುಗ, ಅಂಗಡಿ ಮತ್ತು ಗ್ರಂಥಾಲಗಳಲ್ಲೆಲ್ಲ ಖಾಯಂ ಬೇಡಿಕೆಯುಳ್ಳ ಎಸ್.ಎಲ್. ಭೈರಪ್ಪನವರ ಕೃತಿಗಳೆಲ್ಲ ಇವರವೇ ಪ್ರಕಟಣೆಗಳು. ಪುಸ್ತಕೋದ್ಯಮದ ಒಳ್ಳೆಯ ಮೌಲ್ಯಗಳಿಗೆ ಇನ್ನೂ ಗಟ್ಟಿಯಾಗಿಯೇ ತಗುಲಿಕೊಂಡವರು ಇವರು. ಸಹಜವಾಗಿ ಹೊಸ ಗ್ರಂಥಾಲಯ ಮಹಾಪೂರದಲ್ಲಿ ಭೈರಪ್ಪನವರ ಕಾದಂಬರಿಗಳು ಸರಾಗ ಹರಿಯುತ್ತಿರಲಿಲ್ಲ. ಯಾರೋ ಬೆಪ್ಪು ಆದರ್ಶವಾದಿ ಗ್ರಂಥಪಾಲನೊಬ್ಬ ಇದನ್ನು ಗುರುತಿಸಿ, ಪ್ರಶ್ನಿಸಿದ. ಮುದ್ರಿತ ಬೆಲೆಯಿಂದ ಕೆಳಗಿಳಿಯದ, ಗ್ರಂಥಾಲಯ ರಿಯಾಯ್ತಿ ಶೇಕಡಾ ಹತ್ತರಿಂದ ಹೆಚ್ಚು ಕೊಡದ, ತಿಂಗಳೊಳಗೆ ಪಾವತಿ ಕಡ್ಡಾಯವಾಗಿ ನಿರೀಕ್ಷಿಸುವ ಸಾಹಿತ್ಯಭಂಡಾರದ `ಅಪ್ರಾಯೋಗಿಕ’ ವ್ಯವಹಾರನೀತಿ ತಿಳಿಯಿತಂತೆ. ಆ ಅಧಿಕಾರಿ ಆದರ್ಶವಾದಿಯಾದ್ದರಿಂದ ಸಾಹಿತ್ಯ ಭಂಡಾರದ ನಿಯಮಗಳನ್ನು ಒಪ್ಪಿ, ಸಾಕಷ್ಟು ಭೈರಪ್ಪ ಕಾದಂಬರಿಗಳನ್ನು ಇಲಾಖೆಗೆ ಖರೀದಿಸಿಯೇಬಿಟ್ಟನಂತೆ! ಆತನ ಅದೃಷ್ಟಕ್ಕೆ ಮುಂದೆ ಇದನ್ನು ಯಾರೂ ವಿಚಾರಣೆಗೆಳೆಯಲಿಲ್ಲ. ಹಾಗಾಗಿದ್ದರೆ ಕೃತಿಗಳ ಸಾಹಿತ್ಯಗುಣವೊಂದು ಬಿಟ್ಟು ಉಳಿದೆಲ್ಲ ಸಂಗತಿಗಳೂ ನಿಯಮಬಾಹಿರವಾಗಿ ಕಾಣಿಸಿ, ಆದರ್ಶ ಅಧಿಕಾರಿ ಮಹಾಭ್ರಷ್ಟನಾಗಿ ಬಿಂಬಿತವಾಗುವುದರಲ್ಲೇನೂ ಸಂಶಯವಿರಲಿಲ್ಲ!

ಹೆಚ್ಚು ಮಾರಿಹೋಗುವ ಕಾದಂಬರಿಗಳು ಅರ್ಥಾತ್ ಬೆಸ್ಟ್ ಸೆಲ್ಲರ್ಸ್ ಯಾವುವು?
ವರ್ಷಾ ವರ್ಷ ಜನವರಿಯಲ್ಲಿ ಮುರಳೀಧರ ಉಪಾಧ್ಯರು ಉದಯವಾಣಿ ಪುಸ್ತಕ ಸಮೀಕ್ಷೆಯೊಡನೆ ಕೊಡುವ ಸಣ್ಣ ಬಾಕ್ಸ್ ಗಮನಿದವರಿಗೆಲ್ಲ ಗೊತ್ತು ನಿರ್ವಿವಾದವಾಗಿ ಅವು ಮಹಿಳಾ ಕಾದಂಬರಿಗಳು! ನಾನು ಲಘುವಾಗಿ ಹೇಳುವುದುಂಟು, “ಸಾಯಿಸುತೆ ನಮ್ಮನ್ನು ಬದುಕಿಸುತ್ತೆ.” ಸಾಯಿಸುತೆಯವರ ಕಾದಂಬರಿಗಳು ಈಗಲೂ ತಿಂಗಳಿಗೆ ಎರಡು ಬಂದರೂ ನಾನು ಕಣ್ಣು ಮುಚ್ಚಿ ತಲಾ ಐವತ್ತು ತರಿಸಬಲ್ಲೆ. ತ್ರಿವೇಣಿ, ವಾಣಿ, ಅನುಪಮಾ ನಿರಂಜನ, ಕಾಕೋಳು ಸರೋಜರಾವ್, ಉಷಾ ನವರತ್ನರಾಮ್, ರಾಧಾದೇವಿ, ಅಶ್ವಿನಿ, ಚಿತ್ರಲೇಖ, ಎಂ.ಕೆ ಇಂದಿರಾ, ಎಂಕೆ ಜಯಲಕ್ಷ್ಮೀ, ವಿಜಯಶ್ರೀ, ಈಚನೂರು, ಮಾಲತಿ, ಪ್ರೇಮಾ ಭಟ್ ಹೀಗೇ ಸಾಗುತ್ತದೆ ಬಿಸಿ ಮಾರಾಟದ ಲೇಖಕರ ಹೆಸರ ಪಟ್ಟಿ, ಗಂಡು ಹೆಸರ ಸೋಂಕಿಲ್ಲದೆ! ಡಿವಿಕೆ ಮೂರ್ತಿ, ಗೀತಾ ಏಜೆನ್ಸೀಸ್, ಪ್ರಕಾಶ ಸಾಹಿತ್ಯ, ಹೇಮಂತ ಸಾಹಿತ್ಯ, ಹಂಸಧ್ವನಿ, ಗೀತಾ ಬುಕ್ ಹೌಸ್, ಎಸ್ ಆರ್ ಪ್ರಕಾಶನ ಇತ್ಯಾದಿ ಪ್ರಕಾಶಕರು ವ್ಯವಸ್ಥಿತವಾಗಿ ಇಂಥ ಸಾಹಿತ್ಯವನ್ನು ಪೂರೈಸುತ್ತಿರುವುದನ್ನೂ ನಾವು ಕಾಣುತ್ತೇವೆ. ಬರಿದೇ ಕಾಲಹರಣಕ್ಕೆ, ಬಿಡು ಸಮಯದ ಸಂತೋಷಕ್ಕೆ, ಹೊರನಾಡಿನಲ್ಲಿ ಕಾಡುವ ಊರ, ಬಾಲ್ಯದ ಭಾವಗಳ ನೆನಪಿಗೆ ಕಾದಂಬರಿ ಓದನ್ನು ನೆಚ್ಚಿದವರು ತುಂಬ ಇದ್ದರು. ವಿದ್ಯುನ್ಮಾನ ಮಾಧ್ಯಮದ ಕ್ರಾಂತಿಯೊಡನೆ ಮುದ್ರಿತ ಪುಸ್ತಕಗಳ ಕೊಳ್ಳುಗರು ಕಡಿಮೆಯಾದರು. ಮತ್ತೆ ಬರುವವರೂ ಆಯ್ಕೆಯಲ್ಲಿ ಜಾಣರಾದರು.

ಸುಂದರ ಮುಖಪುಟ, ಆಕರ್ಷಣೆಯ ಶೀರ್ಷಿಕೆ, ರುಚಿ ನಿರ್ದೇಶಿಸಲು ಲೇಖಕರ ಹೆಸರು ನೋಡಿ ಒಯ್ಯುತ್ತಿದ್ದ ಕಾಲವಿತ್ತು. ಆಗ ಜನಪ್ರಿಯ ಮಾಲೆಯೆಂದರೆ ಎರಡು – ಮಹಿಳಾ ಕಾದಂಬರಿ ಅಥವಾ ಲಘು ಪ್ರೇಮ ಸಂಘರ್ಷಗಳ ಸಾಮಾಜಿಕ ಚಿತ್ರಣ. ಮತ್ತೊಂದು ಕಾಮ, ಸಾಹಸಗಳ ಪತ್ತೇದಾರಿ ಶೈಲಿಯವು. ಆಗ ಹಲವು ವೃತ್ತಿಪರ ಬರಹಗಾರರು ಕಳ್ಳ ಹೆಸರುಗಳಲ್ಲಿ ಮಹಿಳಾಮಣಿಗಳಾಗಿ ಪ್ರಕಟವಾದದ್ದುಂಟು. ನನಗೆ ಪೂರ್ವಪರಿಚಿತರಾದ ಮೈಸೂರಿನ ಸೋದರರಿಬ್ಬರು ನವ್ಯ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದವರು, ಇಂಥದ್ದೆ ದಂಧೆ ನಡೆಸಿದ್ದದ್ದು ನನಗೆ ಚೆನ್ನಾಗಿ ಗೊತ್ತು. ಅವರು ಗೀತಾ, ಶ್ರೀದೇವಿ ಮುಂತಾದ ಹೆಸರುಗಳಲ್ಲಿ ತಿಂಗಳಿಗೆ ಒಂದೋ ಎರಡೋ ಹೃದಯಸ್ಪರ್ಷೀ ಮಾಲನ್ನೂ ಚೈತನ್ಯ, ಪ್ರಶಾಂತ ಮುಂತಾದ ಹೆಸರಿನಲ್ಲಿ ಬೆವರು ಕೀಳುವ ಸಾಹಿತ್ಯವನ್ನೂ ಹೊರಹಾಕುತ್ತಿದ್ದರು. ಇಂಗ್ಲಿಷಿನಲ್ಲಿ ರೊಮಾನ್ಸ್ ಮತ್ತು ಥ್ರಿಲ್ಲರ್ಸ್ ಎಂಬ ವೈಶಿಷ್ಟ್ಯಗಳೊಂದಂದನ್ನೇ ಪೂರ್ಣ ನೆಚ್ಚಿದ ಲೇಖಕ ಮತ್ತು ಸಾಹಿತ್ಯಮಾಲೆ ಅಥವಾ ಪ್ರಕಾಶನ ಸಂಸ್ಥೆಗಳೇ ಇವೆ. ಬಾರ್ಬರಾ ಕಾರ್ಟ್ ಲ್ಯಾಂಡ್, ಅನ್ನಾ ಮಾಥುರ್, ಜೇನೆಟ್ ಡೇಲಿ ಒಂದು ವರ್ಗವಾದರೆ ಛೇಸ್, ಲ್ಯಾಮೂರ್, ಹೆರಾಲ್ಡ್ ರಾಬಿನ್ಸ್ ಇನ್ನೊಂದು ಬಣ. ಮಿಲ್ಸ್ ಅಂಡ್ ಬೂನ್ಸ್, ಸಿಲ್ಹೂಟ್ ರೋಮಾನ್ಸ್ ಮೊದಲ ವರ್ಗಕ್ಕೆ ಸೇರಿದ ವಿಶಿಷ್ಟ ಪ್ರಕಾಶಕರು. ರೋಮಾನ್ಸಿನವರು ತಿಂಗಳಿಗೆ ಎಂಟು ಹತ್ತು ಶೀರ್ಷಿಕೆಗಳನ್ನು ನಿಯತವಾಗಿ ಕೊಡುತ್ತಾರೆ. ಇದೇ ಮಟ್ಟದಲ್ಲಲ್ಲದಿದ್ದರೂ ಕನ್ನಡಕ್ಕೆ ತುಂಬ ಗಟ್ಟಿಯಾಗಿಯೇ ಅಂಥದ್ದೇ ಕಾದಂಬರಿ ಅಲೆ ಎಬ್ಬಿಸಿ ಬಹುಕಾಲ ನಡೆಸಿದ ಖ್ಯಾತಿ ಸಲ್ಲುವುದು ಒಬ್ಬರಿಗೇ – ಅದು ಗೀತಾ ಏಜನ್ಸೀಸ್!

ಐತಿಹಾಸಿಕವಾಗಿ ಕಾದಂಬರಿ, ಸಾಹಿತ್ಯಗಳಲ್ಲಿ ಮೊದಲು ತೊಡಗಿಕೊಂಡವರು ಪುರುಷರೇ. ಮತ್ತೆ ನಮ್ಮ ಸಮಾಜವಾದರೂ ಪುರುಷ ಪ್ರಧಾನವೇ ಆದ್ದರಿಂದ ಇವರ ಕೃತಿಗಳಲ್ಲಿ ವಸ್ತು ವೈವಿಧ್ಯ, ಪ್ರಯೋಗ ನಾವೀನ್ಯ ಜಾಸ್ತಿ ಬೆಳೆದಿದೆ. ಸಹಜವಾಗಿ ಮಹಿಳಾ ಕಾದಂಬರಿ ಎಂದು ಗುರುತಿಸುವಲ್ಲಿ ಕನಿಷ್ಠ ಎಂಬ ಭಾವ ಇಂದೂ ಉಳಿದಿದೆ. ಆದರೆ ಚಲಾವಣೆ ದೃಷ್ಟಿಯಲ್ಲಿ ಪುರುಷ ವರ್ಗ ತೀರ ಈಚಿನವರೆಗೂ ಹಿಂದೆಯೇ ಉಳಿದಿತ್ತು. ಅನಕೃ, ತರಾಸು, ಕಟ್ಟೀಮನಿ, ವಿಶು ಕುಮಾರ್, ಕೆಟಿ ಗಟ್ಟಿ, ಟಿಕೆ ರಾಮರಾವ್, ಡಿವಿ ರಾವ್, ತಪು ವೆಂಕಟರಾಮ್ ಮುಂತಾದವರನ್ನು ಮಹಿಳಾ ಕಾದಂಬರಿಕಾರರಿಗೆ ಸಂವಾದಿಯಾಗಿ ಹೆಸರಿಸಬಹುದಿತ್ತಾದರೂ ಮಾರಾಟದ ದೃಷ್ಟಿಯಿಂದಲ್ಲ. ಎನ್. ನರಸಿಂಹಯ್ಯ, ಮ.ರಾಮಮೂರ್ತಿ, ಜಿಂದೆ ನಂಜುಂಡಸ್ವಾಮಿ, ಜಿ. ಪ್ರಕಾಶ್, ಬಿವಿ ಅನಂತರಾಮ್ ಮುಂತಾದವರು ತುಂಬಾ ಚಾಲ್ತಿ ಪಡೆದವರೇ ಆದರೂ ಅವರ ಸ್ತರ ಬೇರೇ.

ಉಷಾ ನವರತ್ನರಾಂ ಅವರ ನಾಯಕತ್ವದಲ್ಲಿ ಎಂಬಂತೆ ಪೂರ್ಣ ಕಾದಂಬರಿಗಳ ನಿಯತಕಾಲಿಕೆಗಳು ಕನ್ನಡದಲ್ಲಿ ಕೆಲವು ಬರುತ್ತಿವೆ. ಮೇಲೆ ಹೇಳಿದ ಪತ್ತೇದಾರಿಕಾರರು ಈ ನಿಯತಕಾಲಿಕ ಕಾದಂಬರಿ ಒದಗಿಸುವ ಸಾಧ್ಯತೆಯನ್ನು ಶೋಧಿಸುವಂತೆ ಮೊದಮೊದಲು ತಿಂಗಳಿಗೆ ಮೂರ್ನಾಲ್ಕು ಕಾದಂಬರಿ ತಂದರು. ಅನಂತರ ಮುಂದುವರಿದ ಸಾಹಸಗಳ ಹೆಸರಿನಲ್ಲಿ ಭಾಗಗಳನ್ನು ಮಾಡಿ ನೋಡಿದರು. ಈಚೆಗೆ ಅವರೂ ಪೂರ್ಣಪ್ರಮಾಣದಲ್ಲಿ ನಿಯತಕಾಲಿಕೆಗಳಿಗೇ ತಗುಲಿಕೊಂಡಿದ್ದಾರೆ.

ಇಂಗ್ಲಿಷಿನಲ್ಲಿ ಒಂದು ಕಾದಂಬರಿ ಅಥವಾ ಕೃತಿ ಪ್ರಸಿದ್ಧವಾದರೆ ಮಾರುಕಟ್ಟೆಯ ಹರಹು ತುಂಬ ದೊಡ್ಡದಿರುವುದರಿಂದ ಹಲವು ಪ್ರಕಾಶಕರಿಂದ ಹಲವು ರೂಪದ ಮತತು ಬೆಲೆಯ ಆವೃತ್ತಿಗಳು ಏಕಕಾಲಕ್ಕೆ ಬರುತ್ತವೆ. ಯುಕೆ, ಯುಎಸ್, ಭಾರತೀಯ ಆವೃತ್ತಿಗಳೂ ಇದ್ದದ್ದೇ. ಮುಂದುವರಿದು ಇದರ ಸಂಗ್ರಹ ರೂಪ, ಕಿರಿಯರ ರೂಪ, ನಾಟಕ ರೂಪ ಇತ್ಯಾದಿಗಳೂ ಪ್ರಕಟವಾಗುವುದಿದೆ. ಅವಕ್ಕೆ ಕ್ಲಾಸಿಕ್ ಎಂಬ ಹಿರಿತನದೊಡನೆ ಗ್ರಂಥಸ್ವಾಮ್ಯದ ವಯೋಮಿತಿ ಮೀರಿದರಂತೂ ಮುಗಿದೇ ಹೋಯ್ತು. ಕನ್ನಡ ಕಾದಂಬರಿಗಳು, ಅಷ್ಟೇ ಏಕೆ ಒಟ್ಟಾರೆ ಸಾಹಿತ್ಯವೇ ಈ ಭಾಗ್ಯ ಪಡೆಯುವಷ್ಟು ಬೆಳೆದಿಲ್ಲ. ಪೀಯೂಸೀ ಪಠ್ಯದ ಅಗತ್ಯಕ್ಕೆ ತೇಜಸ್ವಿಯವರ ಕಾದಂಬರಿಯೊಂದು ಸಂಗ್ರಹಗೊಂಡದ್ದು ನೋಡಿದ್ದೇನೆ. ಸಾಮಾನ್ಯ ಓದುಗರು ಪಾಠ ಪಟ್ಟಿಯ ಅನುಕೂಲಕ್ಕಾಗಿ ಪ್ರಕಟವಾಗುವ ಪಂಪಭಾರತವನ್ನೋ ಹರಿಶ್ಚಂದ್ರ ಕಾವ್ಯವನ್ನೋ ಸ್ವಾಗತಿಸಿದಷ್ಟೇ ನಿರಪೇಕ್ಷವಾಗಿ ಇದನ್ನೂ ಕಂಡರು, ಮುಗಿಯಿತು. ಖ್ಯಾತ ಪುಸ್ತಕಗಳ ಸಂಗ್ರಹ ರೂಪಗಳನ್ನು ಕಸ್ತೂರಿ ಮಾಸಿಕ ಹಲವು ದಶಕಗಳಿಂದ ನಡೆಸಿಕೊಂಡು ಬರುತ್ತಿದೆ. ಅದರಲ್ಲಿ ಭಾರೀ ಕೆಲಸ ಮಾಡಿದ ಶ್ರೀನಿವಾಸ ಹಾವನೂರರು ಪುಸ್ತಕ ಲೋಕದಲ್ಲೂ ಕಾದಂಕಥನ ಎಂಬ ವರ್ಗವನ್ನೇ ಪ್ರಚುರಪಡಿಸಲು ನೋಡಿದರು. ಆದರೆ ಅವರ ಮಾತಂಗಿ ಮತ್ತು ಇತರ ಕಾದಂಕಥನಗಳು ವಿಶೇಷ ಜನಮನ್ನಣೆ ಪಡೆಯಲಿಲ್ಲ. ಪುರಾಣಗಳ ಲೋಕದಿಂದ ಹೊರಗೆ ನಮ್ಮಲ್ಲಿ ಗಣನೀಯವಾಗಿ ಯಶಸ್ವಿಯಾಗಿ ರೂಪಾಂತರಗೊಂಡ ಕೃತಿಗಳೇ ಇಲ್ಲದಿರುವಾಗ ಕಾದಂಬರಿಯನ್ನಷ್ಟೇ ನಿರೀಕ್ಷಿಸುವುದಾದರೂ ಯಾಕೆ?

ಕನ್ನಡದಲ್ಲಿ ಏನೂ ಏಳ್ಗೆ ಕಾಣದ ಇನ್ನೊಂದು ಪ್ರಕಾರವೆಂದರೆ ಕಿರಿಯರ ಕಾದಂಬರಿಗಳು. ಇಂಗ್ಲಿಶಿನಲ್ಲಿ ಎನಿಡ್ ಬ್ಲೈಟನ್, ನಾನ್ಸಿ ಡ್ರ್ಯೂ, ಕೆರೊಲಿನ್ ಕೀನ್, ಹಿಚ್ ಕಾಕ್ ಮುಂತಾದ ಲೇಖಕರ ಒಂದೆರಡಲ್ಲ ನೂರಾರು ಕಾದಂಬರಿಗಳು, ವಿವಿಧ ವಯೋಮಾನದ ರುಚಿ ಗ್ರಹಿಸುವ ಮಕ್ಕಳನ್ನೇ ಉದ್ದೇಶಿಸಿ ಬರುತಲೇ ಇವೆ. ನನ್ನ ಅಂಗಡಿಯಲ್ಲಿ ಒಟ್ಟಾರೆ ಕನ್ನಡ ಕಾದಂಬರಿಗಳ ಸುಮಾರು ಅರೆವಾಸಿ ಜಾಗವನ್ನು ಈ ಮಕ್ಕಳ ಇಂಗ್ಲಿಶ್ ಕಾದಂಬರಿಗಳು ಮಾರಾಟ ಯೋಗ್ಯತೆಯಿಂದಲೇ ಪಡೆದಿವೆ. ಸುಧಾ ವಾರಪತ್ರಿಕೆ ತನ್ನ ವಾರ್ಷಿಕ ಕಾದಂಬರಿ ಸ್ಪರ್ಧೆಯಲ್ಲೊಮ್ಮೆ, ಮಕ್ಕಳ ವರ್ಷದಲ್ಲಿ, ಇನ್ನೆಲ್ಲೋ ಒಂದೆರಡು ಕಡೆ ಮಕ್ಕಳ ಕಾದಂಬರಿಗಳ ಕುರಿತು ಅರೆಮನಸ್ಸಿನ ಪ್ರಯೋಗ ನಡೆಸಿದ್ದುಂಟು. ಹಾಗೇಂತ ಬೇಡಿಕೆ ಇಲ್ಲ ಎಂದು ಸಾರ್ವತ್ರೀಕರಿಸುವುದು ಅವರಸರದ ತೀರ್ಮಾನವಾಗಬಹುದು. ಇಂಗ್ಲಿಷಿನ ಲಾರ ಇಂಗಲ್ಸ್ ವೈಲ್ಡರಳ ಹಲವು ಸ್ವತಂತ್ರ ಸಂಪುಟಗಳ ಮಕ್ಕಳ ಕಾದಂಬರಿ ಸರಣಿಯನ್ನು ಎಸ್. ಅನಂತನಾರಾಯಣರು ಅಪೂರ್ಣವಾಗಿ ಕನ್ನಡಿಸಿ ಪ್ರಕಟಿಸಿದರು. ಆ ಆರು ಸಂಪುಟಗಳು ಮುಗಿದು ವರ್ಷ ಹತ್ತಿಪ್ಪತ್ತಾದರೂ ಅಂದಿನ ಮಕ್ಕಳು ಅಪ್ಪ, ಅಜ್ಜಂದಿರಾದರೂ ಕೇಳುತ್ತಲೇ ಇರುತ್ತಾರೆ – “ಏಳನೇದು ಬಂತಾ? ಉಳಿದವು ಮುದ್ರಣವಾದುವೇ? ನಗಬೇಡಿ ಸ್ವಾಮಿ, ನಂಗಲ್ಲ, ಮಗನಿಗೆ, ಮೊಮ್ಮಗನಿಗೆ” ಎಂದು ಸಜಾಯಿಸುವಷ್ಟು ಅವು ಮೋಡಿ ಹಾಕಿವೆ. ನೂರು ತುಂಬಿದ ಕನ್ನಡ ಕಾದಂಬರಿಲೋಕಕ್ಕೆ ಈ ಭಾಗ್ಯ ಎಂದಾದರೂ ಬಂದೀತೇ?

ಸರ್ಕ್ಯುಲೇಟಿಂಗ್ ಲೈಬ್ರೆರಿಗಳು
ಮೇಲಿನೆಲ್ಲ ವಿವರಣೆಗಳು ಪುಸ್ತಕ ಮತ್ತು ಓದುಗ ಎಂಬ ಕೊಳ್ಳುಗರ ನಡುವಣ ಮುಖಾಬಿಲೆಯಲ್ಲಿ ನನಗೆ ದಕ್ಕಿದ ಅನುಭವ. ಆ ಕಾಲದಲ್ಲೇ ಕೊಳ್ಳುಗರಾಗಲಾಗದ ಓದುಗ ವರ್ಗವೂ ತೀವ್ರವಾಗಿ ಬೆಳೆದಿದ್ದುದರಿಂದ, ಖಾಸಗಿ ಗ್ರಂಥಾಲಯ ಬೆಳೆವಣಿಗೆ ಸಾಕಷ್ಟು ತುರುಸಿನಲ್ಲಿತ್ತು. ನನಗೇ “ಅಂಗಡಿಯ ಅಟ್ಟದಲ್ಲಿ ನೀವ್ಯಾಕೆ ಸರ್ಕ್ಯುಲೇಟಿಂಗ್ ಲೈಬ್ರರಿ ಸುರುಮಾಡಬಾರದು” ಎಂದು ಕೇಳಿದವರು ಸಾಕಷ್ಟಿದ್ದರು. ಮಂಗಳೂರಿನಲ್ಲಿ ಹತ್ತೆಂಟು, ದಕ್ಷಿಣಕ್ಕೆ ನೋಡಿದರೆ ತೊಕ್ಕೊಟ್ಟು, ತಲಪಾಡಿ, ಮಂಜೇಶ್ವರ, ಉಪ್ಪಳ, ಕುಂಬಳೆ, ಪೆರ್ಲ, ಕಾಸರಗೋಡುವರೆಗೂ ಉತ್ತರಮುಖಿಗಳಾದರೆ ಕುಂದಾಪುರ ಬೈದೂರಿನವರೆಗೂ ಖಾಯಂ ಬಂದು ಕಾದಂಬರಿಗಳನ್ನೇ ಒಯ್ದು ಖಾಸಗಿ ಗ್ರಂಥಾಲಯ ನಡೆಸುವ ವ್ಯಕ್ತಿಗಳಿದ್ದರು. ವಿವಿಧ ಆಫೀಸುಗಳ ನೌಕರರ ಮನರಂಜನಾ ಕೂಟಗಳಿಗೆ ಜನಪ್ರಿಯ ಕಾದಂಬರಿಗಳ ಸಂಗ್ರಹ ಅನಿವಾರ್ಯವಾಗಿತ್ತು. ಸಿಂಡಿಕೇಟ್ ಬ್ಯಾಂಕ್ ಪ್ರಧಾನ ಕಛೇರಿ, ಜೀವವಿಮಾನಿಗಮದ ಪ್ರಾದೇಶಿಕಕಛೇರಿ, ಅಂಚೆ ಕಛೇರಿ ಮುಂತಾದೆಡೆಗಳಿಂದ ಖಾಯಂ ದೊಡ್ಡ ಮೊತ್ತದ ಕೊಳ್ಳುವಿಕೆ ಆಗುತ್ತಿತ್ತು. ವಿಜಯಾ ಕಾಲೇಜು ಕನ್ನಡ ಅಧ್ಯಾಪಕರು ಗಂಭೀರ ಸಾಹಿತ್ಯದ ಅನುದಾನ ಸಾರ್ವತ್ರಿಕ ಬೇಡಿಕೆಯ ಕಾದಂಬರಿಗಳ ಹುಯ್ಯಲಿನಲ್ಲಿ ಕರಗಿ ಹೋಗುವುದನ್ನು ತೀವ್ರವಾಗಿ ಪ್ರತಿಭಟಿಸಿದರಂತೆ. ಸಹಜವಾಗಿ ಗ್ರಂಥಪಾಲರು ಅವಕ್ಕೆ ಬೇರೇ ವ್ಯವಸ್ಥೆ ಮಾಡಿದ್ದರಿಂದ ನಾನು ಲಾಭ ಪಡೆದಿದ್ದೆ! ಆ ಕೆಲವು ವರ್ಷಗಳಲ್ಲಿ ಜನಪ್ರಿಯ ಕಾದಂಬರಿಗಳನ್ನು ರಾಶಿ ರಾಶಿ, ಕೆಲವು ಶೀರ್ಷಿಕೆಗಳನ್ನಂತೂ ದ್ವಿಪ್ರತಿಗಳಲ್ಲಿ ಅವರಿಗೆ ತುಂಬಿದ್ದೇನೆ. ಮತ್ತೆ ಮಹಾತ್ಮ ಗಾಂಧೀ ಮೆಮೊರಿಯಲ್ ಕಾಲೇಜು ಎನ್ನೆಸ್ಸೆಸ್ ಬಳಗ ತಾನೇ ನಿಧಿ ಸಂಚಯಿಸಿ ಪ್ರತ್ಯೇಕ ಜನಪ್ರಿಯ ಗ್ರಂಥಾಲಯ ನಡೆಸುತ್ತಿರುವುದು ಇಲ್ಲಿ ಉಲ್ಲೇಖನಾರ್ಹ. ವಿಟ್ಠಲ ಪದವಿಪೂರ್ವ ಕಾಲೇಜು ಹಲವು ವರ್ಷಗಳಿಂದ ಜನಪ್ರಿಯ ಸಾಹಿತ್ಯದ ಈ ಅಂಗಕ್ಕೆ ಸ್ಪಷ್ಟ ದೊಡ್ಡ ಹಣವನ್ನೇ ಹೂಡುತ್ತಿರುವುದು ಎಲ್ಲ ವಿದ್ಯಾಸಂಸ್ಥೆಗಳು ಅನುಸರಿಸಬಹುದಾದ ಆದರ್ಶ ಎಂದೇ ನನ್ನ ಭಾವನೆ.

ಏನು, ಜನಪ್ರಿಯ ಸಾಹಿತ್ಯವನ್ನು ಉನ್ನತ ವ್ಯಾಸಂಗ ಕೇಂದ್ರಗಳು ಪ್ರೋತ್ಸಾಹಿಸುವುದೇ ಎಂಬ ಮಡಿವಂತಿಕೆ ಬಿಟ್ಟು ನೋಡಿ. ಕಾದಂಬರಿ ಬಿಟ್ಟು ಅನ್ಯ ಓದುಗಳ ಅರಿವೇ ಇಲ್ಲದವರು ಯಂಡಮೂರಿ ಬರೆದರೆಂದು ಯಶಸ್ಸಿನತ್ತ ಪಯಣ, ನಿಮ್ಮನ್ನು ನೀವು ಗೆಲ್ಲಬಲ್ಲಿರಿ ಇತ್ಯಾದಿ ಕೊಂಡಿದ್ದರು. ಇವೆಲ್ಲ ಲಘು ವೈಚಾರಿಕ, ಕಲ್ಪನಾ ಲಹರಿಯ ಸುಂದರ ನಿರೂಪಣೆಗಳು. ಆತನ `ವಿಜಯಕ್ಕೆ ಐದು ಮೆಟ್ಟಿಲು’ ಎಂಬುದು ಉದಯವಾಣಿಯಲ್ಲಿ ಧಾರಾವಾಹಿಯಾಗಿ ತೊಡಗಿದಾಗ, ವೃತ್ತಿ ಅಮಲಿನಲ್ಲಿ ನಾನೇ ಇದು ಪುಸ್ತಕವಾದರೆ ನೆಲ ಕಚ್ಚುವುದು ನಿಶ್ಚಿತ ಎಂದುಕೊಂಡಿದ್ದೆ. ಆದರೆ ಅದು ರೂ ೧೭೦ರ ಭಾರೀ ಪುಸ್ತಕವಾಗಿ ಬಂದ ಮೇಲೆ ನನ್ನೆಲ್ಲ ವಾದಗಳನ್ನು ಮೀರಿ ಕೆಲವೇ ತಿಂಗಳಲ್ಲಿ ನಾನೇ ಸುಮಾರು ಎರಡು, ಮೂರು ನೂರುಪ್ರತಿಗಳನ್ನು ಮಾರಿದ್ದೇನೆ. ಓದುವ ಅಭ್ಯಾಸ ಬಲಗೊಳ್ಳಲು ಕಾದಂಬರಿ ಅವಶ್ಯ.

ಶ್ಲೀಲಾಶ್ಲೀಲ ಓದಿನ ಸ್ತರಗಳು, ಹಣಕಾಸಿನ ಮಿತಿ ಇತ್ಯಾದಿ ಸಬೂಬು ಕೇಳುತ್ತಲಿರುತ್ತವೆ. ಆದರದು ನಿಜವಲ್ಲ. ಒಯ್ದ ಗಂಭೀರ ಸಾಹಿತ್ಯವನ್ನೇ ಆದರೂ ಬಳಸುವವರೆಷ್ಟು, ಅಗ್ಗದ ಸಾಹಿತ್ಯ ಓದಿ ಹಾಳಾಗುವವರೆಷ್ಟು ಎಂದು ಅಳೆಯಹೋದರೆ ನಮ್ಮ ವಿದ್ಯಾವ್ಯವಸ್ಥೆಯ ಬುಡವೇ ಸಡಿಲಬಹುದು ಎಂಬುದು ನನ್ನ ಖಚಿತ ನಂಬಿಕೆ. ಆದರೆ ಅದನ್ನು ವಿಸ್ತರಿಸಲು ಇದು ವೇದಿಕೆ ಅಲ್ಲ.

ಕಾದಂಬರಿ ಬೆಳೆವಣಿಗೆಗೆ ಪ್ರಕಾಶಕರ ಕೊಡುಗೆ ಏನು?
ಏಕವ್ಯಕ್ತಿ ಉದ್ದಿಮೆ ಎಂದೇ ಪ್ರಸಿದ್ಧರಾಗಿದ್ದ ಗಳಗನಾಥ, ಶಿವರಾಮ ಕಾರಂತ ಮುಂತಾದವರ ಮೊದಲ ಕಾದಂಬರಿಗಳ ಕಾಲದಿಂದ ಸ್ವಲ್ಪ ಮುಂದೆ ಬನ್ನಿ. ಲೇಖಕರಿಗೊಂದೊಂದು ಬಣ್ಣದ ಪಟ್ಟಿಯ ಶಿಸ್ತಿನೊಡನೆ ಹಲವು ಕಾದಂಬರಿಕಾರರನ್ನು ಬೆಳಕಿಗೆ ತಂದವರು ಮೈಸೂರಿನ ಡಿವಿಕೆ ಮೂರ್ತಿ. ಕಾವೀಪಟ್ಟಿಯ ತ್ರಿವೇಣಿ, ಹಸುರುಪಟ್ಟಿಯ ವಾಣಿ, ಕಂದುಪಟ್ಟಿಯ ನಿರಂಜನ, ಕೆಂಪು ಪಟ್ಟಿಯ ಅನುಪಮಾ ನಿರಂಜನ ಇತ್ಯಾದಿ, ಇಟ್ಟು ಮಾರುವವರಿಗೆಷ್ಟೋ ಓದುವುದನ್ನೂ ಮರೆತು ಕೊಂಡು ಸಂಗ್ರಹಿಸುವವರಿಗೂ ಅಷ್ಟೇ ಪ್ರಿಯವಾಗಿದ್ದುವು. ಬಹುವರ್ಣಚಿತ್ರ, ಹೊಳಪಿನ ಹೊದಿಕೆ, ನಿರಂತರತೆಗಳಿಗೆ ಕಾದಂಬರಿ ಪ್ರಪಂಚದಲ್ಲಿ ಬಹಳ ದೊಡ್ಡ ಹೆಸರಾದವರು ಬೆಂಗಳೂರಿನ ಗೀತಾ ಏಜನ್ಸೀಸ್. ಇವರ ವ್ಯವಹಾರ ಸೂಕ್ಷ್ಮಗಳಲ್ಲಿ ಪ್ರಕಾಶನದ ಹೆಸರುಗಳು ರಾಜಲಕ್ಷ್ಮಿ, ಧವನ, ದರ್ಪಣ, ಕರ್ನಾಟಕ ಮುಂತಾಗಿ ಏನಿದ್ದರೂ `ಏಕೈಕ ವಿತರಣೆಗಾರರು’ ಹೆಸರಿನಡಿಯಲ್ಲಿ ಗೀತಾ ಏಜನ್ಸೀಸ್ ಮಾತ್ರ ಕಾಣುತ್ತಿದ್ದರು ಸಾಮಾನ್ಯ ಓದುಗರು. ಹೊಸ ಲೇಖಕ ಶೋಧ ಅಥವಾ ಕನ್ನಡ ಕಾದಂಬರಿ ಪ್ರಕಟಣಾ ಇತಿಹಾಸದ ಮೊದಲ ಪುಟಗಳನ್ನು ಮಗುಚಿದರೆ ಇಂದಿನ ಬಹುತೇಕ ಖ್ಯಾತನಾಮರ ಚೊಚ್ಚಲ ಹೆರಿಗೆಯ ಸೂಲಗಿತ್ತಿಯಾಗಿ ಕಾಣಿಸುವ ಹೆಸರು – ಮನೋಹರ ಗ್ರಂಥಮಾಲಾ, ಧಾರವಾಡ! ಎಂ. ಗೋವಿಂದರಾವ್ ಅರ್ಥಾತ್ ಸಾಹಿತ್ಯ ಭಂಡಾರದ ಮೂಲಶಕ್ತಿಯೇ ಆಗಿದ್ದವರ ಜೀವನ ಚರಿತ್ರೆ ನೋಡಿದವರಿಗೆ, ಎಸ್.ಎಲ್ ಭೈರಪ್ಪನವರ ಯಶಸ್ಸಿನ ಬಲುದೊಡ್ಡ ಅಂಶವೇ ಇಲ್ಲಿ ಹಾಸುಹೊಕ್ಕಾಗಿರುವುದು ಕಾಣಿಸುತ್ತದೆ. ಇಂಥ ಯೋಚನೆಗಳೊಡನೇ ಶಿವರಾಮ ಕಾರಂತ, ಅನಕೃ, ತರಾಸು ಮುಂತಾದವರನ್ನು ನೆನೆಯುವಾಗ ನಮಗೆ ನಿರಾಶೆ ಸಹಜವಾಗುತ್ತದೆ. ಕಾರಣಗಳೇನೇ ಇರಲಿ, ಈ ಲೇಖಕರುಗಳಿಗೆ ದೃಢ ಪ್ರಕಾಶಕರೊಬ್ಬರ ಸಾಂಗತ್ಯ ಸಿಗದೇ ಕನ್ನಡ ಸಾಹಿತ್ಯ ಬಡವಾಯ್ತು, ಓದುಗರು ವಂಚಿತರಾದರು. ಕಾರಂತರು ಸ್ವಂತದ ಹರ್ಷ ಪ್ರಕಟಣಾಲಯ ಮುಚ್ಚಿದ ಮೇಲೆ ರಾಜಲಕ್ಷ್ಮಿ, ಐಬಿಎಚ್, ಸಪ್ನಾ ಎಂದೆಲ್ಲ ಪ್ರಕಟಣೆಗಳು ಹಂಚಿಹರಿದು ಬಹುತೇಕ ಅನಾಥವಾಗಿ ಹೋದವು. ಆ ನಿಟ್ಟಿನಲ್ಲಿ ನನ್ನ ತಿಳುವಳಿಕೆಗೆ ನಿಲುಕಿದಷ್ಟು ಸಲಹೆಯನ್ನು, ಅಯಾಚಿತವಾಗಿ ಕಾರಂತ ಕೃತಿಗಳ ಉತ್ತರಾಧಿಕಾರಿ ಮಾಲಿನಿ ಮಲ್ಯರಿಗೆ ನಾನು ಕೊಟ್ಟಿದ್ದೇನೆ ಎಂದು ಇಂದು ಕಾರಂತರ ಮಣ್ಣಿನಲ್ಲೇ ನಿಂತಿರುವುದರಿಂದ ಹೇಳಲಿಚ್ಚಿಸುತ್ತೇನೆ. (ಅಂಥ ಒಂದು ಪತ್ರವನ್ನು ಮುಂದೆ ಇಲ್ಲೇ ಪುಸ್ತಕ ಮಾರಾಟ ಹೋರಾಟ ಪುಸ್ತಕದ ಭಾಗವಾಗಿ ಪ್ರಕಟಿಸಲಿದ್ದೇನೆ – ಗಮನಿಸಿ)

ಎನ್.ನರಸಿಂಹಯ್ಯನವರ ಪತ್ತೇದಾರಿ ಓದದ ಕನ್ನಡಿಗನಿಲ್ಲ ಎಂಬ ಮಾತು ಸುಮಾರು ಎರಡು ಮೂರು ದಶಕಗಳ ಕಾಲ ನಿಜವೇ ಇತ್ತು. ಇವರು ಕೆಲವು ಶತಕಗಳ ಸರದಾರರಾದದ್ದು ಪತ್ತೇದಾರಿ ಕಾದಂಬರಿಗಳಲ್ಲೇ. ಅವನ್ನು ಮೀರಿ ವಯಸ್ಕರಿಗೆ ಮಾತ್ರ, ವಾಮಾಚಾರಕ್ಕೆ ಸಂಬಂಧಿಸಿದ ಕಾದಂಬರಿಗಳನ್ನೂ ನರಸಿಂಹಯ್ಯ ಬರೆದು ಖ್ಯಾತರಾಗಿದ್ದರು. ಇವರು ಸಣ್ಣಪುಟ್ಟ ಪ್ರಕಾಶಕರನ್ನು ಹುಟ್ಟು ಹಾಕಿದ ಹಾಗೇ ಪ್ರಕಾಶಕರ ಆರ್ಥಿಕ ತಾಕತ್ತನ್ನು ಗಮನದಲ್ಲಿಟ್ಟುಕೊಂಡು ವಿವಿಧ ಗಾತ್ರಗಳಲ್ಲಿ ಪುಸ್ತಕಗಳನ್ನು ಬರೆದು ಕೊಡುತ್ತಿದ್ದುದನ್ನೂ ನಾನು ಕೇಳಿದ್ದೇನೆ. ಬಗಲಲ್ಲಿ ಎರಡು ಮೂರು ಹಸ್ತಪ್ರತಿಗಳ ಗಂಟು ಇಟ್ಟುಕೊಂಡು “೧೦೦ ಪುಟದ ಪತ್ತೇದಾರಿ ಬೇಕೇ, ಇನ್ನೂರು ಪುಟದ ಕಾಮಕಸ್ತೂರಿ ಬೇಕೇ” ಎಂದೇ ನರಸಿಂಹಯ್ಯ ಪ್ರಕಾಶಕರನ್ನು ಬಂದು ಕೇಳುತ್ತಿದ್ದರಂತೆ! ಇಂದು ನರಸಿಂಹಯ್ಯನವರಷ್ಟೇ ಅವರ ಪ್ರಕಾಶಕರೂ ಗುರುತಿಗೆ ಸಿಕ್ಕದಂತಾಗಿದ್ದರೂ ಅವರ ಕಾರ್ಯ ನಗಣ್ಯವಲ್ಲ ಎಂದು ದಾಖಲಿಸುವುದು ನನಗೆ ಕರ್ತವ್ಯವೇ ಆಗುತ್ತದೆ.

ಜನಪ್ರಿಯತೆ ವರವೂ ಹೌದು, ಶಾಪವೂ ಹೌದು. ಕಾದಂಬರಿಯಲ್ಲಿ ದುಡ್ಡುಂಟು. ಅದರಲ್ಲೂ ಮಹಿಳಾ ಕೃತಿಗೆ ವಿಶೇಷ ಮಣೆಯುಂಟೆಂದು ನುಗ್ಗಿದವರ ಕತೆ ಹಿಂದೆಯೇ ಹೇಳಿದ್ದೇನೆ. (ಒಂದು ಉದಾಹರಣೆ ಮೈಸೂರು ಸೋದರರದು!) ಮುಂದುವರಿದು ಮಾರುಕಟ್ಟೆಯುಂಟು, ಮಾಲಿಲ್ಲ ಎಂಬ ಸ್ಥಿತಿಯಲ್ಲಿ ಆಮದಿತ ಸಾಹಿತ್ಯದ ಭರಾಟೆ ಸುರುವಾಯ್ತು. ಕೃತಿಚೋರರು ಕನ್ನಡದ್ದೇ ಎಂಬಂತೆ ಹಲವನ್ನು ಕೊಡುತ್ತಿದ್ದರೆ ಕೆಲವರು ಈಗಾಗಲೇ ಮೂಲ ಖ್ಯಾತಿ ಸಾಕಷ್ಟು ಇದ್ದ ಚೇಸ್, ಕಾನನ್‍ಡಾಯ್ಲ್, ಎಲ್ಲಕ್ಕೂ ಮಿಗಿಲಾಗಿ ತೆಲುಗು ಅನುವಾದಗಳ ಹುಚ್ಚುಹೊಳೆ ಹರಿಸಿದರು. ಯಂಡಮೂರಿ, ಮಲ್ಲಾದಿ, ಸೂರ್ಯದೇವರಮೋಹನ ರಾವ್, ಕೊಮ್ಮನಾಪಲ್ಲಿ, ಯುದ್ಧನಪೂಡಿ, ಮಾಗಂಟಿ, ಚಲ್ಲಾ ಇತ್ಯಾದಿಗಳು ಇನ್ನೂ ತೆಲುಗಿನಲ್ಲಿ ಬರೆಯುತ್ತಿದ್ದಂತೇ ಇಲ್ಲಿ ಕನ್ನಡ ಅನುವಾದವನ್ನು ಧಾರಾವಾಹಿಯಾಗಿಸುವಲ್ಲಿ ಖ್ಯಾತ ದಿನಪತ್ರಿಕೆಗಳೂ ನಿಯತಕಾಲಿಕಗಳೂ ವ್ಯಸ್ತವಾಗಿದ್ದುವು! ಧಾರಾವಾಹಿ ಮುಗಿಯುವ ಮೊದಲೇ ಪುಸ್ತಕ ತರಲೂ ಪ್ರಕಾಶಕರು ಹೋರಾಡುತ್ತಿದ್ದರು. ಕೆಲವೊಮ್ಮೆ ಅನ್ಯಭಾಷಾ ಮೂಲಕೃತಿಯನ್ನು ಪತ್ರಿಕೆಗೊಬ್ಬ, ಪುಸ್ತಕಕ್ಕೊಬ್ಬ ಅನುವಾದಿಸಿದ್ದುಂಟು. ಹಾಗೇ ಒಂದೇ ಮೂಲಕೃತಿಯ ಧಾರಾವಾಹಿ ಕಂತುಗಳನ್ನೇ ಒಬ್ಬ ಪ್ರಕಾಶಕರ ಒಂದು ಹೆಸರಿನಲ್ಲಿ ಪುಸ್ತಕವಾಗಿಸಿದರೆ, ನೇರ ಅನುವಾದವನ್ನು ಇನ್ನೋರ್ವ ಪ್ರಕಾಶಕ ಬೇರೊಂದೇ ಹೆಸರಿನಲ್ಲಿ ಬೆಳಕು ಕಾಣಿಸಿದ್ದೂ ಉಂಟು. ಜನಪ್ರಿಯತೆಯ ಉತ್ತುಂಗದಲ್ಲಿ ಅನಾಮಧೇಯರ ಬರವಣಿಗೆಗಳಿಗೆ ತಮ್ಮ ಹೆಸರನ್ನು ದತ್ತು ಕೊಟ್ಟ ಖ್ಯಾತನಾಮರೂ ಇದ್ದರು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗದಿರದು.

‘ಜನಪರ ಸರಕಾರ’ ಎಂಬುದು ಸಂಸ್ಕಾರವಿಲ್ಲದ ಜನನಾಯಕರ ಕೈಗೆ ಸಿಕ್ಕು `ಜನಪ್ರೀಯ ಸರಕಾರ’ ಎಂಬ ಕೆಟ್ಟರೂಪ ತಳೆಯಿತು. ಪ್ರಚಾರ, ಪ್ರಶಂಸೆಗಳನ್ನು ಮರೆತು ಸಾರ್ವಜನಿಕ ಹಿತಕ್ಕೆ ಕೆಲಸ ಮಾಡಬೇಕಾದವರು ಸ್ತುತಿಪರರನ್ನು ಅಥವಾ ಕೇವಲ ಸುಲಭ ಪ್ರಚಾರಗಿಟ್ಟಿಸಬಲ್ಲ ಕೆಲಸಗಳನ್ನಷ್ಟೇ ಆಯ್ದುಕೊಳ್ಳತೊಡಗಿದರು. ಅಂಥ ಒಂದು ಕ್ರಮದಲ್ಲಿ ಜನಪ್ರಿಯ ಕಾದಂಬರಿಗಳ ಖರೀದಿಯ ಹೆಸರಿನಲ್ಲಿ ಗ್ರಂಥಾಲಯ ನಿಯಮಗಳನ್ನು ಸರಕಾರವೇ ಜಗ್ಗಾಡಿಸಿತು. ಇಲಾಖೆ ಇಲಾಖೆಗಳಲ್ಲಿ ಪುಸ್ತಕಗಳಿಗಾಗಿ ದುಡ್ದು ದೊಡ್ಡ ಮೊತ್ತದಲ್ಲಿ ಹರಿಯುತ್ತಿದ್ದಂತೆ ಕೆಲಸದ ಮೇಲಿನ ಪ್ರೀತಿ ಹೋಗಿ ಪರಿಣಾಮದ ಮೇಲೆ ಗಮನ ಹರಿದು ಒಳದಾರಿಗಳು ಅಸಂಖ್ಯವಾದುವು. ಕನಿಷ್ಠ ಜಿಲ್ಲಾ ವಿಕೇಂದ್ರೀಕರಣ ಇದ್ದದ್ದೂ ಕಳಚಿ ಎಲ್ಲ ಬೆಂಗಳೂರು ಸೇರಿತು. ಪೋಷಕನ ನೆಲೆಯಿಂದ ಸರಕಾರ ಖರೀದಿದಾರನ ನೆಲೆಗೆ ತಾನೇ ಏರಿತು. ಪ್ರಾದೇಶಿಕತೆಯನ್ನು ಗೌರವಿಸುವ ವ್ಯಾಪಕ ಪುಸ್ತಕೋದ್ಯಮ ಸರಕಾರೀಕರಣದಲ್ಲಿ ಪೂರ್ಣ ಕೇಂದ್ರೀಕರಣಗೊಂಡಿತ್ತು. ಅಮಿತ ಅಧಿಕಾರದಂತೆ ಹಣವೂ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಹಾಳು ಮಾಡುತ್ತದೆ. ಇಲ್ಲಿ ಕೇವಲ ರಿಯಾಯಿತಿ ದರದಲ್ಲಿ ಕಾಗದ, ಮುದ್ರಣ ಸಹಾಯ, ಸಾಲಸವಲತ್ತು , ಸಗಟು ಖರೀದಿ ಮುಂತಾದವುಗಳ ಬಗ್ಗೆ ಹೇಳುತ್ತೇನೆ. ಇವು ಅಕ್ಷರಶಃ ಕನ್ನಡ ಕಾದಂಬರಿಯ ಆರೋಗ್ಯಪೂರ್ಣ ಬೆಳವಣಿಗೆಯನ್ನು ಹಾಳುಗೆಡವಿದೆ. ಇದು ಗುಣ ನಿರಪೇಕ್ಷತೆಯನ್ನು ಎಷ್ಟು ರೂಢಿಸಬಹುದು ಎಂಬುದಕ್ಕೆ ಒಬ್ಬ ಅನುವಾದ ಬ್ರಹ್ಮನ ಹೇಳಿಕೆ ನೋಡಿ “ನಾನು ಎಲ್ಲಿಗೇ ಹೋಗಬೇಕಾದರೂ ಒರಿಜಿನಲ್ ಸ್ಕ್ರಿಪ್ಟ್ ಹಿಡೊಂಡಿರ್ತೀನಿ. ಕೂತಲ್ಲಿ ನಿಂತಲ್ಲಿ ಅನುವಾದ ಮಾಡ್ತೀನಿ. ಒಂದೇ ವಾರದಲ್ಲಿ ಬುಕ್ ಪ್ರೊಡ್ಯೂಸ್ ಮಾಡ್ತೀನಿ. ಆದ್ರೆ ಪುಸ್ತ್ಕ ಪ್ರಾಧಿಕಾರ ಬಲ್ಕ್ ಪರ್ಛೇಶಿಗೆ ಸೆಲೆಕ್ಷನ್ ಕಮಿಟಿ ಮಾಡ್ತಾರೇಂತ ಕೇಳ್ದೆ. ಕ್ವಾಲಿಟಿ ಡಿಸೈಡ್ ಮಾಡೋಕೆ ಇವರ್ಯಾರು? ಬುಕ್ ಇಂಡಸ್ಟ್ರೀ ಅಂದ್ಮೇಲೆ ನಾವು ಪ್ರೊಡ್ಯೂಸರ್ಸ್. ಸರಕಾರ ಪರ್ಚೇಸರ್ಸು – ಅಷ್ಟೇ ಅಲ್ವಾ?” (ಇದರ ಕುರಿತೂ ಹೆಚ್ಚಿನ ಮಾಹಿತಿ ಮುಂದಿನ ಅಧ್ಯಾಯವೊಂದರಲ್ಲಿ ಕೊಡುತ್ತಿದ್ದೇನೆ – ಗಮನಿಸಿ)

ಬೆಂಗಳೂರಿನ ಯುವ ಉತ್ಸಾಹೀ ಪುಸ್ತಕೋದ್ಯಮಿಯೊಬ್ಬರು ನಮ್ಮ ಜಿಲ್ಲೆಗೆ ಬಂದು ಪುಸ್ತಕ ಪ್ರಕಾಶನದ ಬಗ್ಗೆ ಮಾಹಿತಿ ಶಿಬಿರ ನಡೆಸಿದರು. ಅಯಾಚಿತವಾಗಿ ಅವರು ನನ್ನ ಅಂಗಡಿಗೂ ಭೇಟಿ ಕೊಟ್ಟಾಗ ತಿಳಿಯಿತು, ಇವರ ಪಾಠವೆಲ್ಲ ಸರಕಾರೀ ಕೃಪಾಪೋಷಣೆಯ ಸುತ್ತಮುತ್ತವಷ್ಟೇ ಸುಳಿದಿತ್ತು. ವಾಸ್ತವದಲ್ಲಿ ಪ್ರಕಾಶನವನ್ನೇ ದೊಡ್ಡದು ಎಂದು ನಂಬಿದವರಿಗೆ ಇವರಲ್ಲಿ ಇಂಬಿರಲಿಲ್ಲ. ಇಪ್ಪತ್ತಕ್ಕೂ ಮಿಕ್ಕು ಕನ್ನಡ ಕಾದಂಬರಿಗಳನ್ನು ಸ್ವತಃ ಬರೆದು, ಶಾರದಾ ಪ್ರೆಸ್ಸಿನಂಥ ಒಳ್ಳೆಯ ಅಚ್ಚುಕೂಟದಲ್ಲಿ ಮುದ್ರಿಸಿ, ಪ್ರಕಟಿಸಿ, ರಾಜ್ಯಾದ್ಯಂತ ವಿತರಣೆ ಮಾಡಿಯೂ ಮಾರುಕಟ್ಟೆಯಲ್ಲಿ ಸೋತ, ಈಗ ದಿವಂಗತರೂ ಆಗಿರುವ ರಮಾನಂದ ಅಮೀನರಂಥವರಿಗೆ ಸಾಹಿತ್ಯಲೋಕದಲ್ಲಿ ಮೋಕ್ಷ ಸಿಕ್ಕಿಯೇ ಇಲ್ಲ. ಕಬ್ಬಿಣದ ಟ್ರಂಕಿನಲ್ಲಿ ತಮ್ಮ ನಾಲ್ಕೆಂಟು ಕಾದಂಬರಿಗಳ ಐದು ಹತ್ತು ಪ್ರತಿ ತುಂಬಿಸಿಕೊಂಡು ಮಂಗಳೂರು, ಉಡುಪಿ ಅಲೆದು ನಿವೃತ್ತ ಜೀವನದಲ್ಲಿ ಮತ್ತಷ್ಟು ನಿವೃತ್ತರೇ ಆದ ವಿಠಲ ಶೆಣೈ ಅಂತವರ ಯೋಗ್ಯತೆಗೆ ನಿಜ ಒರೆಗಲ್ಲು ಸಿಕ್ಕಲೇ ಇಲ್ಲ. ಕಳೆದ ವರ್ಷ ಶೆಣೈ ಅವರು ತಾಲೂಕು ಸಮ್ಮೇಳನಾಧ್ಯಕ್ಷ ಪದವಿಯನ್ನು ಅಲಂಕರಿಸಿದ್ದುಂಟು. ಆದರಿದು ಅವರ ಬೆನ್ನು ಚಪ್ಪರಿಕೆಯ ಕ್ರಿಯೆಗಿಂತ ಹೆಚ್ಚು, `ಇನ್ನು ನೀವು ಬರೆದದ್ದು ಸಾಕು’ ಎನ್ನುವ ಅಣಕವಾಗಿಯೇ ನನಗೆ ಕಾಣಿಸಿತು. ವಾಲ್ಟರ್ ಡಿಸೋಜಾ ಎನ್ನುವ ಕಾರಕೂನರೊಬ್ಬರು ಅಮಿತ ಉತ್ಸಾಹದಿಂದ ಕನ್ನಡ ಎಂ.ಎ.ಮಾಡಿದರು. ಅದೇ ಉತ್ಸಾಹದ ಮುಂದುವರಿಕೆಯಾಗಿ ಒಂದು ಕಾದಂಬರಿಯನ್ನೂ ಬರೆದರು. ನನ್ನೆಲ್ಲ ನಿರುತ್ತೇಜಕ ಮಾತುಗಳನ್ನು ಉಪೇಕ್ಷಿಸಿ, ಸ್ವಂತ ಖರ್ಚಿನಲ್ಲಿ ಅದನ್ನು ಮುದ್ರಿಸಿ ಪ್ರಕಟಿಸಿಯೂ ಬಿಟ್ಟರು. ಕಂಡ ಕಂಡ ದೈವಕ್ಕೆಲ್ಲ ಹರಕೆ ಹೇಳುವುದು ಎನ್ನುತ್ತಾರಲ್ಲ, ಹಾಗೇ ಗೌರವಾನ್ವಿತರಿಗೆ, ವಿತರಕ, ಮಾರಾಟಗಾರರಿಗೆಲ್ಲ ಮಾಹಿತಿ, ಒಂದೊಂದು ಪ್ರತಿ ಕಳಿಸಿಕೊಟ್ಟರು. ಆದರೂ ಇವರು ನನ್ನಲ್ಲಿಟ್ಟ ನೂರುಪ್ರತಿಗಳಲ್ಲಿ ಮಾರಾಟ ಸಂಖ್ಯೆ ದಶಕವನ್ನೂ ತಲಪಿಲ್ಲ. ಈ ಮೇಲಿನ ಉದಾಹರಣೆಗಳಲ್ಲೆಲ್ಲ ನನ್ನ ದುಃಖ ಕೃತಿಗಳ ಗುಣಾವಗುಣಗಳ ಮಾಪನದಿಂದ ಬಂದದ್ದಲ್ಲ.

ಓದುಗರು ಕೊಳ್ಳಲೇಬೇಕಿತ್ತು ಎಂಬ ಜುಲುಮೆಯೂ ನನ್ನದಲ್ಲ. ಅಹವಾಲು ಇಷ್ಟೆ: ಉದ್ಯಮ ಕಾಳು ಜಳ್ಳನ್ನು ನಿರ್ಧರಿಸುವ ಸಮಾನ ವೇದಿಕೆಯನ್ನು ಇವರಿಗೆ ವಂಚಿಸಿದೆ. ಕವನ ಸಂಕಲನ, ಸಣ್ಣ ಕಥಾ ಸಂಕಲನಗಳು ತೆಗೆದ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ತೀವ್ರ ಸೋಲುತ್ತವೆ. ತಾನು ಕವಿಯಾದ್ದಕ್ಕೆ ಕವನ ಸಂಕಲನಕ್ಕೆ ಅಥವಾ ಕತೆಗಾರನಾದ್ದಕ್ಕೆ ಕಥಾಸಂಕಲನಕ್ಕೆ ದೊಡ್ಡ ಮಾರುಕಟ್ಟೆ ಉಂಟೆಂದು ಭ್ರಮಿಸುವ ಹೆಚ್ಚಿನವರು, ತಾವೇ ಇನ್ನೊಂದು ಕವಿತಾ ಅಥವಾ ಕಥಾಸಂಕಲನ ಕೊಂಡು ಪ್ರಮಾಣಿಸಲು ಸೋಲುತ್ತಾರೆ. ಆದರೂ ದುಂಡೀರಾಜರಂಥವರು, ನಾಗತಿಹಳ್ಳಿ ಚಂದ್ರಶೇಖರ್ ಅಂಥವರು ಚಿಗುರಿ ಬೆಳೆದದ್ದು ನೋಡುತ್ತೇವೆ. ಪ್ರಕಾಂಡರ ಬಾಳ್ವೆಯೇ ಬೆಳಕೋ ಸಂಸ್ಕೃತಿಯೋ ನಿಧಾನಕ್ಕೆ ನಡೆಯುವುದನ್ನು ನೋಡಿ ವೈಚಾರಿಕ ಬರಹಗಾರರು ಪ್ರಕಟಗೊಳ್ಳಲು ಸಂಶಯಿಸುತ್ತಿರುವಂತೆ `ಬದುಕಲು ಕಲಿಯಿರಿ’ ನೂರರ ಸಂಖ್ಯೆಯಲ್ಲಿ ಖಾಲಿಯಾಗುತ್ತಲೇ ಇದೆ. ಹೀಗೆ ಎಲ್ಲ ಬೆಳೆಯಲಿ ಸ್ವಾಮೀ, ಎಡೆ ಎಡೆಯಲ್ಲಿ ನೈಜ ಮಾಮರಗಳು ಇದ್ದಾವು. ಹುಟ್ಟಿಗೂ ಮುನ್ನ ಭವಿಷ್ಯ ನಿರ್ಧರಿಸುವ ಕ್ರಿಯೆ ಜೀವ ಪ್ರಪಂಚದಲ್ಲಿ ಅಸಮತೋಲನ ತಂದಂತೆ ಸೃಜನಾತ್ಮಕ ಕ್ರಿಯೆಯೇ ಆದ ಕಾದಂಬರಿಗಳಿಗೂ ಶಾಪವಾಗುವುದು ಬೇಡ.

(ಮುಂದುವರಿಯಲಿದೆ)