ಪುಸ್ತಕ ಮಾರಾಟ ಹೋರಾಟ (೧೯೯೯) ಪುಸ್ತಕದ ಹತ್ತೊಂಬತ್ತನೇ ಅಧ್ಯಾಯ
[ಅತ್ರಿ ಬುಕ್ ಸೆಂಟರಿನ ಪ್ರಕಾಶನ ವಿಭಾಗದೆಲ್ಲ ಪ್ರಕಟಣೆಗಳಿಗೂ ಅಘೋಷಿತ ಸಂಪಾದಕರೇ ಆಗಿದ್ದ ನನ್ನ ತಂದೆ ಜಿ.ಟಿ. ನಾರಾಯಣರಾವ್ ಪುಸ್ತಕ ಮಾರಾಟ ಹೋರಾಟಕ್ಕೆ ಬರೆದ ಸಂಪಾದಕೀಯ. ]

ಪ್ರಸ್ತುತ ಪುಸ್ತಕಕರ್ತೃವಿನ ತಂದೆಯಾಗಿ ಮತ್ತು ತನ್ನ ವೃತ್ತಿ ಜೀವನದ ದಿನಗಳಂದು ಒಬ್ಬ ಗೌರವ-ಪುಸ್ತಕ ವ್ಯಾಪಾರಿಯಾಗಿ ನಾನು ಈ ನಾಲ್ಕು ಸೂತ್ರವಾಕ್ಯಗಳನ್ನು ಪೋಣಿಸುವುದು ಉಚಿತ ಮತ್ತು ಅಪೇಕ್ಷಣೀಯ ಎಂದು ಭಾವಿಸಿದ್ದೇನೆ. `ಸವಾಲನ್ನು ಎದುರಿಸುವ ಛಲ’ ಎಂಬ ನನ್ನ ಪುಸ್ತಕದಲ್ಲಿ [೧೯೯೩ರ ಅತ್ರಿ ಬುಕ್ ಸೆಂಟರಿನ ಪ್ರಕಟಣೆ. ಸದ್ಯ ಅಭಿನವ ಪ್ರಕಾಶನ, ಬೆಂಗಳೂರು ಮರುಮುದ್ರಣ ತಂದಿದೆ] ಪ್ರಕಟವಾಗಿರುವ ಒಂದು ಶೀರ್ಷಿಕೆ: ಸಹಕಾರದಲ್ಲಿ ಒಂದು ಪ್ರಯೋಗ – ಮೌಲ್ಯ – ವಾಸ್ತವತೆ ಸಂಘಟ್ಟನೆ. ಈ ಲೇಖನ ಬರೆದ ವರ್ಷವೇ – ೧೯೭೫, ನಮ್ಮ ಮಗನ `ಅತ್ರಿ ಬುಕ್ ಸೆಂಟರ್’ ಪುಸ್ತಕ ಮಳಿಗೆ ಪ್ರಾರಂಭವಾದದ್ದು ಕೇವಲ ಆಕಸ್ಮಿಕ. ಆ ಲೇಖನದ ಸಮಾರೋಪ: ವ್ಯಾಪಾರಪ್ರಪಂಚದಲ್ಲಿ ಗಿರಾಕಿ ಅನುಭವಿಸುವ ಬಗೆಬಗೆಯಾದ ಬವಣೆ ಮೋಸ ವಂಚನೆ ಕೋಟಲೆಗಳ ಎದುರಾಗಿ ಅವನಿಗೆ ರಕ್ಷಣೆ ಕೊಡುವ ದಿವ್ಯ ಮಂತ್ರ ಯಾ ರಕ್ಷಕ ಅಸ್ತ್ರ ಯಾವುದೂ ನನಗೆ ತಿಳಿದಿಲ್ಲ. ಅಂಥಾದ್ದು ಒಂದು ಎಲ್ಲಿಯಾದರೂ ಇದ್ದರೆ ಅದು `ಸಹಕಾರ’ವಂತೂ ಖಂಡಿತ ಅಲ್ಲ.

ಮನುಷ್ಯನ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳನ್ನು ಅರಸುವಾಗ ಸಮಕಾಲೀನ ಪರಿಸರವನ್ನು ಗಣನೆಗೆ ತೆಗೆದುಕೊಳ್ಳಲೇಬೇಕು. ಇಂಗ್ಲೆಂಡಿನ ಅಂದಿನ ಪರಿಸರದಲ್ಲಿ (ಔದ್ಯಮಿಕ ಕ್ರಾಂತಿ, ೧೮ನೆಯ ಶತಮಾನದ ಕೊನೆಭಾಗ) ಉದ್ಭವಿಸಿದ ಸಹಕಾರ ತತ್ತ್ವ, ಇಂದಿನ ಭಾರತದ ವಿಭಿನ್ನ ಪರಿಸರದಲ್ಲಿ ತಾರಕ ಮಂತ್ರವಾದೀತೆಂಬ ನಂಬಿಕೆ ಅವೈಜ್ಞಾನಿಕವೆಂದು ನನ್ನ ಭಾವನೆ.

ಮನುಷ್ಯ ಮನಸ್ಸಿನ ವಿಚಿತ್ರ ವ್ಯಾಪಾರಗಳು ವಿಧಿನಿಯಮ ಪುಸ್ತಕಾತೀತವಾದವು. ಪ್ರಾಮಾಣಿಕತೆ ಅಪ್ರಾಮಾಣಿಕತೆ ಇದರ ಎರಡು ಮುಖಗಳು. ವ್ಯಕ್ತಿ ಪ್ರಾಮಾಣಿಕನಾದಲ್ಲಿ ದಫ್ತರಗಳು ಅನಾವಶ್ಯಕ ಹೊರೆಗಳಾಗುತ್ತವೆ. ಅಪ್ರಾಮಾಣಿಕನಾದಲ್ಲಿ ಅವು ನಿಷ್ಪ್ರಯೋಜಕವಾಗುತ್ತವೆ ಅಥವಾ ಅಪ್ರಾಮಾಣಿಕ ವ್ಯವಹಾರಗಳಿಗೆ ಪ್ರಾಮಾಣಿಕತೆಯ ಸೋಗಿನ ಮೊಗವಾಡವನ್ನು ತೊಡಿಸುವ ರಕ್ಷಾಕವಚಗಳಾಗುತ್ತವೆ. ಆದ್ದರಿಂದ ಬೆಳೆಯುತ್ತಿರುವ ಒಂದು ಜೈವಿಕ ವ್ಯವಸ್ಥೆಯಲ್ಲಿ ಪ್ರಧಾನ ಲಕ್ಷ್ಯ ಇರಬೇಕಾದದ್ದು ವ್ಯಕ್ತಿಗಳ ಪ್ರಾಮಾಣಿಕತೆ, ನಿಷ್ಠೆ, ಶ್ರದ್ಧೆ ಮುಂತಾದ ಜೀವಂತ ಸದ್ಗುಣಗಳೆಡೆಗೆ, ಜೀವರಹಿತ ವಿಧಿ ನಿಯಮ ನಿರ್ಬಂಧಗಳೆಡೆಗಲ್ಲ.

ಜೈವಿಕವಾಗಿ ಅಭಿವರ್ಧಿಸುತ್ತಿರುವ ಒಂದು ಸಂಸ್ಥೆಯ ಆರೋಗ್ಯ ಹದಗೆಡದಷ್ಟು ಪ್ರಮಾಣದಲ್ಲಿ ಮಾತ್ರ ವಿಧಿ ನಿಯಮ ನಿರ್ಬಂಧಗಳು ಇರಬೇಕು – ಭೂಮಿಯ ಗುರುತ್ವ ಬಲ ನಮ್ಮ ಮೇಲಿರುವಂತೆ – ಹೊರತು, ಸಾಕ್ಷಾತ್ ಅದರ ಬೆಳವಣಿಗೆಯನ್ನೇ ಕುಂಠಿಸುವ ಪಂಜರಗಳು ಅವು ಆಗಬಾರದು.

ನಗದು ಪುಸ್ತಕದ ವಿಚಾರ ಎಚ್ಚರ ವಹಿಸಿದರೆ ಖಾತೆ ಪುಸ್ತಕಗಳು ತಂತಾವೇ ಶುದ್ಧವಾಗಿರುತ್ತವೆ. ನಮ್ಮ ಯಾವುದೇ ವ್ಯವಹಾರದಲ್ಲಿ ಉದ್ದೇಶ ಶುದ್ಧವಾಗಿದ್ದು, ದೈನಂದಿನ ನಡವಳಿಕೆ ನೇರವಾಗಿದ್ದರೆ ನಾವು ಸಾಕ್ಷಾತ್ ಪರಬ್ರಹ್ಮನಿಗೆ ಕೂಡ ಅಂಜಬೇಕಾಗಿಲ್ಲ.

ಯಾವುದೇ ಸಂಘದ ಅಭಿವರ್ಧನೆ ಎಂದೂ ಹಣದ ಕೊರತೆಯಿಂದ ನಿಲ್ಲಲಾರದು; ಅದು ಸ್ಥಗಿತವಾಗುವುದು ಅಥವಾ ಇಳಿಮೊಗವಾಗುವುದು ನಿಸ್ಪೃಹತೆಯಿಂದ ದುಡಿಯಬಲ್ಲ ವ್ಯಕ್ತಿಗಳ ಅಭಾವದಿಂದ. ಆದ್ದರಿಂದ ಆದ್ಯ ಗಮನ ಹರಿಸಬೇಕಾದದ್ದು ನಿಷ್ಠಾವಂತ ಕರ್ತವ್ಯಪರಾಯಣರ ಸಂಚಯನದತ್ತ. ಆರ್ಥಿಕ ಸಂಪನ್ಮೂಲಗಳ ಸಂಗ್ರಹದತ್ತ ಅಲ್ಲ.
*** *** ***
ಮೈಸೂರಿನ ಚೇತನ ಕನ್ನಡ ಸಂಘ (ಅಧ್ಯಕ್ಷರು – ಜಿ.ಎಚ್.ನಾಯಕ್, ಪ್ರಧಾನ ಸಂಪಾದಕರು ಸ.ರ. ಸುದರ್ಶನ) ಪ್ರಕಟಿಸಿದ ಸವಿ ಸಂಚಿಕೆ `ಸಾಹಿತ್ಯ ಚೇತನ’ದಲ್ಲಿ (೧೯೭೬) ಮುದ್ರಣವಾಗಿರುವ ನನ್ನ ಲೇಖನ `ಕನ್ನಡಿಗರಲ್ಲಿ ಕನ್ನಡ ಪುಸ್ತಕ ಕೊಳ್ಳುವ ಹವ್ಯಾಸ’, ಇಂದಿಗೂ ಪ್ರಸ್ತುವಾಗಿದೆ ಎಂದೇ ಅದರ ಪೂರ್ಣ ಪಾಠ:

ನಾನೂ ಒಬ್ಬ ಪುಸ್ತಕ-ಕೊಳ್ಳಬಹುದಾದ ಕನ್ನಡಿಗ ಆಗಿರುವುದರಿಂದ ನನ್ನಲ್ಲಿ ಈ ಹವ್ಯಾಸ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಮೊದಲು ವಿಮರ್ಶಿಸುವುದು ಸರಿಯಾದ ಹಾದಿ. ನನ್ನ ಆಸಕ್ತಿಗೆ ಉಣಿಸನ್ನು ಊಡುವ ವಿವಿಧ ಬಗೆಯ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ನಾನು ಕೊಳ್ಳುತ್ತೇನೆ. ಆದರೆ ಈ ಪೈಕಿ ಕನ್ನಡದ ಪಾಲು ಶೇಕಡಾ ೧೦ಕ್ಕಿಂತ ಕಡಿಮೆ. ಕಾರಣ: ನನಗೆ ಬೇಕಾಗುವ ಪುಸ್ತಕ ಕನ್ನಡದಲ್ಲಿ ದೊರೆಯುತ್ತಿಲ್ಲ; ಕನ್ನಡದಲ್ಲಿ ದೊರೆಯುವ ಪುಸ್ತಕ ನನಗೆ ಬೇಕಾಗುತ್ತಿಲ್ಲ.

ಕೆಲವು ವರ್ಷಗಳ ಹಿಂದೆ ನಾನು ಮಡಿಕೇರಿ ಕಾಲೇಜಿನ ವಿದ್ಯಾರ್ಥಿ ಸಹಕಾರ ಸಂಘದ ಗೌರವ ಕಾರ್ಯದರ್ಶಿ ಆಗಿದ್ದೆ (೧೯೫೪-೬೩). ಸಂಘದ ಪ್ರಧಾನೋದ್ದೇಶ ಪುಸ್ತಕ ಮಾರಾಟ. ಆದರೆ ವ್ಯಾಪಾರದ ಹೊನಲು ಇದನ್ನು ಕ್ರಮೇಣ ಸರ್ವವಸ್ತು ಭಂಡಾರವಾಗಿ ಮಾರ್ಪಡಿಸಿ, ಪುಸ್ತಕಗಳನ್ನು ಗೌಣ ಸ್ಥಾನಕ್ಕೆ ತಳ್ಳಿತು. ಕೇವಲ ಪುಸ್ತಕ ವ್ಯಾಪಾರ ಆ ಪರಿಸರದಲ್ಲಿ ಆರ್ಥಿಕ ಯಶಸ್ಸು ತರಲಿಲ್ಲ. ಪುಸ್ತಕ ಕೀಟಗಳ ಕಣಜವಾಗಬೇಕಿದ್ದ ಕಾಲೇಜಿನಲ್ಲಿ ಕೂಡ ಪುಸ್ತಕ ವ್ಯಾಪಾರ ಒಂದರಿಂದಲೇ ಸಂಘ ಉಳಿಯುವುದು ಸಾಧ್ಯವಿಲ್ಲ ಎಂದು ಇದರಿಂದ ತಿಳಿಯುತ್ತದೆ.

ಇನ್ನು ಅದೇ ಸಂಘದಲ್ಲಿ ಮಾರಾಟವಾದ ಪುಸ್ತಕಗಳ ವಿತರಣೆ ಹೇಗಿತ್ತು? ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಮಾರ್ಗದರ್ಶೀ ಪುಸ್ತಗಳ ವಿನಾ ಉಳಿದವೆಲ್ಲವೂ ಸದೃಶ ಧ್ರುವಗಳೇ. (ಕಾಂತಗಳಲ್ಲಿ ಸದೃಶ ಧ್ರುವಗಳು ವಿಕರ್ಷಿಸುತ್ತವೆ) ಅಧ್ಯಾಪಕರು ಇಂಗ್ಲಿಷ್ ಭಾಷೆಯಲ್ಲಿ ತಮ್ಮ ಆಸಕ್ತ ವಿಷಯಗಳ ಮೇಲಿನ ಪುಸ್ತಕಗಳನ್ನು ಅವು ಕಡಿಮೆ ಬೆಲೆಯವಾಗಿದ್ದು, ಗ್ರಂಥಭಂಡಾರದಲ್ಲಿ ದೊರೆಯದವಾಗಿದ್ದಾಗ, ಅಪರೂಪಕ್ಕೆ ಕಡವಾಗಿ ಕೊಂಡದ್ದುಂಟು. ಕಾಲೇಜಿನ ವಾರ್ಷಿಕೋತ್ಸವದಂದು ಬಹುಮಾನ ಹಂಚಲೋಸ್ಕರ ಖರೀದಿಸಿದ ಪುಸ್ತಕಗಳು, ಕನ್ನಡ ವಿಭಾಗಕ್ಕೆ ಮೀಸಲಾದವುಗಳ ಹೊರತಾಗಿ ಇತರ ಎಲ್ಲವೂ ಇಂಗ್ಲಿಷ್ ಭಾಷೆಯವೇ ಆಗಿದ್ದುವು. ಇಂಗ್ಲಿಷ್ ವ್ಯಾಮೋಹ ಮತ್ತು ಕನ್ನಡ ತಾತ್ಸಾರ ಮಾತ್ರ ಇದರ ಕಾರಣ ಅಲ್ಲ. ಕನ್ನಡದಲ್ಲಿ ಆಯಲು ವಿಭಿನ್ನ ಶೀರ್ಷಿಕೆಗಳು ಆಗ ಲಭ್ಯ ಇರಲಿಲ್ಲ. ಪುಸ್ತಕಗಳು ಆಕರ್ಷಕವೂ ಆಗಿರಲಿಲ್ಲ. ಕೊಡಗಿನ ಹಲವಾರು ಶಾಲೆಗಳವರು ಮಾತ್ರ ಬಹುಮಾನ ವಿತರಣೆಗಾಗಿ ಕನ್ನಡ ಪುಸ್ತಕಗಳನ್ನೇ ಕೊಂಡೊಯ್ಯುತ್ತಿದ್ದುದು ವಾಡಿಕೆ ಆಗಿತ್ತು. ನಗರ ಜನ ಇಂಗ್ಲಿಷಿನಿಂದ `ಕಲುಷಿತ’ರಾದಷ್ಟು ಗ್ರಾಮಾಂತರ ಜನ ಆಗಿರಲಿಲ್ಲ ಎಂದು ನನ್ನ ಭಾವನೆ (ಇದು ಈಗಲೂ – ೧೯೭೬, ಹಾಗೆಯೇ ಇದೆ.) ಮಡಿಕೇರಿಯ ಹಾಗೂ ಕೊಡಗಿನ ಇತರ ಎಡೆಗಳ ಪ್ರತಿಷ್ಠಿತರು ಅಂದರೆ ದುಡ್ಡುಳ್ಳವರು, ನಮ್ಮ ಅಂಗಡಿಗೆ ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಅವರ ಆದ್ಯ ಲಕ್ಷ್ಯ ಮಿದುಳುಣಿಸಿನ ಉಗ್ರಾಣದ ಎಡೆಗಲ್ಲ, ಒಡಲ ಸಿಂಗಾರದ ಕೋಠಿಯತ್ತ!

೧೯೭೬ ರ ವೇಳೆಗೆ ಪರಿಸ್ಥಿತಿ ಬದಲಾಗಿರಬಹುದೆಂದು ಭಾವಿಸಿ ಈ ವಿಷಯವನ್ನು ವಿವಿಧ ಮೂಲಗಳಲ್ಲಿ ನಾನು ಆಗ ಈಗ ಪ್ರಸ್ತಾವಿಸಿದ್ದುಂಟು. ಕೆಲವೊಂದು ಪ್ರಾತಿನಿಧ್ಯಾತ್ಮಕ ಉತ್ತರಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.
ಪ್ರಶ್ನೆ: ಕನ್ನಡಿಗರಲ್ಲಿ ಕನ್ನಡ ಪುಸ್ತಕಕೊಳ್ಳುವ ಹವ್ಯಾಸ ಉಂಟೇ?
ಪುಡಾರಿಯ ಉಡಾಫೆ ನುಡಿ – “ಖಂಡಿತವಾಗಿಯೂ ಉಂಟು. ಇಲ್ಲವಾದರೆ ಪುಸ್ತಕ ವ್ಯಾಪಾರಿಗಳ ಮತ್ತು ಮಾರಾಟಗಾರರ ಬುಡಕಟ್ಟು ಎಂದೋ ನಶಿಸಿ ಹೋಗಿರುತ್ತಿತ್ತು. ವಾಸ್ತವವಾಗಿ ಇವರೆಲ್ಲರೂ ಉಚ್ಛ್ರಾಯ ಸ್ಥಿತಿಯಲ್ಲಿಯೇ ಇದ್ದಾರೆ. ಉದಾಹರಣೆಗೆ……”
ಪ್ರಕಾಶಕನ ಅನುಭವ ಸಿದ್ಧ ಮಾತು – ”ಗಂಭೀರ ಮತ್ತು ಚಿರಕಾಲಿಕ ಮೌಲ್ಯ ಇರುವ ಶೀರ್ಷಿಕೆಗಳನ್ನು ಪ್ರಕಾಶಿಸುವುದು ದಿವಾಳಿಕೋರತನವನ್ನು `ಆಹ್ವಾನಿಸಿದಂತೆ.’ [ಮೂಲದಲ್ಲಿ `ಇಸ್ತಕಬಾಲಿಸಿದಂತೆ’ ಎಂಬ ಪ್ರಯೋಗವಿದೆ. ಇದು ಕೇವಲ ಮುದ್ರಣದೋಷವಿರಲಾರದು. ಅರ್ಥ ಅಥವಾ ಸಮೀಪದ ಅರ್ಥಪೂರ್ಣ ಪದವನ್ನು ಬಲ್ಲವರು ತಿಳಿಸಬೇಕು] ಕತೆ, ಕಾದಂಬರಿ, ಪತ್ತೇದಾರಿಗಳು ಮುಂತಾದವನ್ನು ಎಚ್ಚರಿಕೆಯಿಂದ ಪ್ರಕಟಿಸುತ್ತಿದ್ದರೆ ಮಾತ್ರ ಈ ಗೊಂಡಾರಣ್ಯದಲ್ಲಿ ಹಾದಿ ತಪ್ಪದೆ ಕೊರಕಲಿಗೆ ಕೆಡೆಯದೆ ಬಾಳಬಹುದು ಅಷ್ಟೆ.”
ಪುಸ್ತಕ ಅಂಗಡಿಕಾರನ ನೀಳುಲಿ “ಪಠ್ಯಪುಸ್ತಕಗಳ ಹಾಗೂ ಮಾರ್ಗದರ್ಶಿಗಳ ಮಾರಾಟ ಮತ್ತು ಗ್ರಂಥಭಂಡಾರಗಳಿಗೆ ಸರಬರಾಜು ಇವುಗಳ ಭದ್ರ ನೆಲಗಟ್ಟು ಇಲ್ಲದೆ ಕೇವಲ ಸಾರ್ವಜನಿಕ ಗ್ರಾಹಕರನ್ನೇ ನಂಬಿ ನಾನು ಇರುವುದಾದರೆ ಯಾವಾಗಲೋ ಲಾಗ ಹೊಡೆದುಬಿಟ್ಟಿರುತ್ತಿದ್ದೆ. ಇನ್ನು ಸಾರ್ವಜನಿಕ ಮಾರಾಟ ವಿಭಾಗದಲ್ಲಾದರೋ ಕೇವಲ ಕನ್ನಡ ಪುಸ್ತಕಗಳನ್ನೇ ನಂಬಿದರೆ ಕೆಟ್ಟೆ. ಭೂರಿ ಗಾತ್ರದಲ್ಲಿ ಪ್ರದರ್ಶಿಸಿರುವ ಇಂಗ್ಲಿಷ್ ಹೊತ್ತಗೆಗಳೇ ಗಿರಾಕಿ ಪತಂಗಗಳಿಗೆ ಆಕರ್ಷಕ ಮಕರಂದಾಕರಗಳು.”
ನಿವೃತ್ತ ಕನ್ನಡ ಪ್ರಾಧ್ಯಾಪಕರ ಉದ್ಗಾರ “ಆಧುನಿಕ ಕತೆ, ಕಾವ್ಯ ಕಾದಂಬರಿ ಒಂದೂ ನನಗೆ ಅರ್ಥವಾಗುವುದಿಲ್ಲ. ಆನ್ವಿತ ವಿಮರ್ಶೆ, ಭಾಷಾವಿಜ್ಞಾನ, ಜಾನಪದ ಮುಂತಾದವುಗಳ ಮೇಲೆ ವಿಪುಲವಾಗಿ ಮತ್ತು ಹಿಂದೆಂದೂ ಬರದಷ್ಟು ವ್ಯಾಪಕವಾಗಿ ಈಗ ಪುಸ್ತಕಗಳು ಬರುತ್ತಿವೆ. ಆದರೆ ಇವುಗಳ ಬೆಲೆ ಬಲು ದುಬಾರಿ. ಇನ್ನು ಸಾಚಾ ಎಷ್ಟು, ಬೂಸಾ ಎಷ್ಟು ಎಂದು ತೂಗಲು ತಕ್ಕಡಿಯೇ ಇಲ್ಲ. ಕೆಲವುಗಳ ಅಕನ್ನಡವಂತೂ ನಾನೇ ಅಕನ್ನಡಿಗನೋ ಎಂಬ ಸಂಶಯವನ್ನು ಮೂಡಿಸುತ್ತದೆ.”

ಮುಂಬಯಿಯಲ್ಲಿ ಸಾಕಷ್ಟು ಮಂದಿ ಕನ್ನಡಿಗರು ಇದ್ದಾರೆ. ಅವರ ಕನ್ನಡಾಭಿಮಾನ, ತಾಯಿ ನಾಡಿನಿಂದ ದೂರ ಹೋದ ಎಲ್ಲರಿಗೂ ಸಾಮಾನ್ಯವಾಗಿ ಇರುವಂತೆ, ವಿಶೇಷ ತೀವ್ರತೆಯದು. ಇದನ್ನು ನಗದಿಸಬೇಕು ಎನ್ನುವ ಖಚಿತ ಉದ್ದೇಶದಿಂದ ನನ್ನ ಮಗ (ಅವನಾಗ ಎಂಎ ವಿದ್ಯಾರ್ಥಿ, ೧೯೭೩) ಕೆಲವು ಸಾವಿರ ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳ ಸಮೇತ ಅಲ್ಲಿ `ಅವತರಿಸಿದ!’ ಹೊಸ ಕಸಬು, ಹೊಸ ಊರು – ಆದರೆ ರಾಗ ಹಳೆಯದೇ, ಕನ್ನಡದ “ಕಲ್ಲು ಸಕ್ಕರೆ ಕೊಳ್ಳಿರೋ!” ಇವನ ಒಂದು ತಿಂಗಳ ಮುಂಬಯಿ ವಾಸ್ತವ್ಯದ ವೇಳೆ ಆ ಎಲ್ಲ ಪುಸ್ತಕಗಳನ್ನೂ ಮಾರಿ ಹೊಸ ಹುರುಪಿನಿಂದ ಮತ್ತು ನವ ಅನುಭವದಿಂದ ಮರಳಿದ. ನೀತಿ: ಹೊರ ಊರಿನ ಕನ್ನಡಿಗರಲ್ಲಿ ಕನ್ನಡ ಪುಸ್ತಕ ಕೊಳ್ಳುವ ಹವ್ಯಾಸ ಖಂಡಿತ ಉಂಟು. ಒಳನಾಡಿನವರಲ್ಲೋ?

ಮುಂಬೈ ಒದಗಿಸಿದ ಪಾಥೇಯದಿಂದ ಇವನು ಅದೆಷ್ಟು ನೂಕುಬಲ ಪಡೆದನೆಂದರೆ ಇವನ ಜೀವನ ವೃತ್ತಿಯೇ ಪುಸ್ತಕ ವ್ಯಾಪಾರವಾಯಿತು. ಉದ್ಯಮಶೀಲರ ನಾಡು, ವಿದ್ಯಾವಂತರ ಬೀಡು ಮತ್ತು ಬಿರುಸು ಪೈಪೋಟಿ ವ್ಯಾಪಾರಿಗಳ ಜೇನುಗೂಡು ಆದ ಮಂಗಳೂರಿನಲ್ಲೇ ತನ್ನ ಪುಸ್ತಕ ವ್ಯಾಪಾರದ ಕೇಂದ್ರವನ್ನು ತೆರೆದ (೧೯೭೫). ಮೊದಲಿಗೆ ಇವನ ಉದ್ದೇಶ ಕೇವಲ ಕನ್ನಡ ಪುಸ್ತಕಗಳ ಮಾರಾಟ ಎಂದಿದ್ದರೂ (ಮುಂಬಯಿಯಲ್ಲಿ ಸಂದದ್ದು ಮಂಗಳೂರಿನಲ್ಲಿ ಹೆಚ್ಚು ಸಲ್ಲಬೇಡವೇ?) ವಾಸ್ತವಿಕತೆ ಕೈ ತೋರಿಸಿದ್ದು ಮಿಶ್ರಪ್ರದರ್ಶನದೆಡೆಗೆ. ಇಂಗ್ಲಿಷ್ ಮತ್ತು ಕನ್ನಡ ಪುಸ್ತಕಗಳು ಸಮ ಪ್ರಮಾಣದಲ್ಲಿ ಇರುವ ಈ ಅಂಗಡಿಯ ದೈನಂದಿನ ಆಗುಹೋಗುಗಳು ತಿಳಿಸಿರುವ ಪಾಠಗಳಿವು. ಸಾರ್ವಜನಿಕ ಗ್ರಾಹಕರೂ ಪುಸ್ತಕ ಭಂಡಾರಗಳೂ ಸಮ ಪ್ರಮಾಣದಲ್ಲಿ ಎರಡೂ ಭಾಷೆಯ ಪುಸ್ತಕಗಳನ್ನು ಕೊಳ್ಳುತ್ತಾರೆ. ಆಧುನಿಕ ಕನ್ನಡ ಕಾದಂಬರಿಗಳೂ ಶ್ರೀ ರಾಮಕೃಷ್ಣಾಶ್ರದ ಪ್ರಕಟಣೆಗಳೂ ಸದಾ ಮಾರಾಟವಾಗುವ ಕನ್ನಡ ಪುಸ್ತಕಗಳು. ಪೇಟೆಯ ಗ್ರಾಹಕರಿಗಿಂತಲೂ ಹೆಚ್ಚು ಹಳ್ಳಿಯ ಗ್ರಾಹಕರೇ ಕನ್ನಡ ಪುಸ್ತಕಗಳನ್ನು ಖಾಯಿಸುಪಟ್ಟು ಖರೀದಿಸುವವರು. ಸಕಾಲದಲ್ಲಿ ಸರಿಯಾದ ಪುಸ್ತಕಗಳನ್ನು ಒದಗಿಸಿದರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕನ್ನಡ ಪುಸ್ತಕಗಳನ್ನು ಕೊಳ್ಳುವ ಹವ್ಯಾಸವನ್ನು ಇನ್ನೂ ಹೆಚ್ಚು ಅಭಿವರ್ಧಿಸುವುದು ಸಾಧ್ಯ.

ಕನ್ನಡಿಗರಲ್ಲಿ ಕನ್ನಡ ಪುಸ್ತಕಗಳನ್ನು ಕೊಳ್ಳುವ ಹವ್ಯಾಸ ಇದೆಯೇ ಇಲ್ಲವೇ ಎನ್ನುವ ಸರಳ ಪ್ರಶ್ನೆಗೆ ನೇರವಾದ ಉತ್ತರ ಪ್ರಾಯಶಃ ಎಂದೂ ದೊರೆಯದು. ಇದನ್ನು ಅರಸಲು ಮಾಡುವ ಪ್ರಯತ್ನ ವಿಫಲ ಸಾಹಸವಾದೀತು. ಏಕೆಂದರೆ ಕನ್ನಡಿಗರು ಎಂದರೆ ಬಹು-ಆರ್ಥಿಕ ಸ್ತರಗಳ ಮತ್ತು ಬಹು-ಆಸಕ್ತಿ ವರ್ಗಗಳ ಒಂದು ಕೂಟ. ಇತ್ತ ಪುಸ್ತಕ ಪ್ರಕಾಶಕರೂ (ಅಂತಿಮವಾಗಿ ಮಾರಾಟಗಾರರೂ ಸೇರಿದಂತೆ) ಹಾಗೆಯೇ. ಇವೆರಡು ಕೊಡು ಕೊಳು ಆಸಕ್ತಿಗಳ ಯುಕ್ತ ಸೇರ್ಪಡೆಯೇ ಪುಸ್ತಕ ಖರೀದಿ ಯಾ ಮಾರಾಟ. ಆದರೆ ಈ ಸಂಕೀರ್ಣ ಕ್ರಿಯೆ ಎಂದೂ ಅಳತೆಗೆ ಸಿಗದು.

ಆದ್ದರಿಂದ ಸ್ಥೂಲವಾಗಿ ಇಷ್ಟು ಹೇಳಬಹುದು. ಕನ್ನಡಿಗರಿಗೆ ಆಸಕ್ತಿ ಇರುವಂಥ ಅಥವಾ ಅವರಲ್ಲಿ ಆಸಕ್ತಿಯನ್ನು ಕುದುರಿಸುವಂಥ ಉತ್ತಮ ಪುಸ್ತಕಗಳು ಆಕರ್ಷಕವಾಗಿ ತೀರ ದುಬಾರಿ ಅಲ್ಲದ ದರಗಳಲ್ಲಿ, ಸುಲಭವಾಗಿ ದೊರೆಯುವಂಥ ವ್ಯವಸ್ಥೆಗಳು ಇದ್ದರೆ ಖಂಡಿತವಾಗಿಯೂ ಕನ್ನಡಿಗರು ಅವುಗಳಿಗೆ ಹತಾಶೆ ಉಂಟುಮಾಡಲಾರರು.
*** *** ***
`ಪುಸ್ತಕ ಮಾರಾಟ ಹೋರಾಟ’ವನ್ನು ನನ್ನ ಈ ಮೇಲಿನ ಐತಿಹಾಸಿಕ ನಿರೂಪಣೆಯನ್ನೂ ಓದುವ ಸಹೃದಯರಲ್ಲಿ ಮಿಡಿಯುವ ಭಾವಗಳು:
ಮಂದರದಿ ಮಿಡಿಯುತಿದೆ ನನ್ನ ಹೃದಯ – ಬಿಂದು ಬಿಂದುವಾಗಿಯೆ ಹರಿವ ಕಂಬನಿಯ ವಿಷಾದ
ಅಳುವ ಕಡಲೊಳೂ ತೇಲಿಬರುತಲಿದೆ ನಗೆಯ ಹಾಯಿದೋಣಿ ಆಶಾವಾದ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದು ಜೀವನ? ಸಾಹಸ
ಕವಿ ಗೋಪಾಲಕೃಷ್ಣ ಅಡಿಗರ ಈ ನುಡಿಗಳು ಕುಂಚಿಸುವುದು ವಿಷಾದ (ಭೂತ), ಆಶಾವಾದ (ವರ್ತಮಾನ) ಮತ್ತು ಸಾಹಸ (ಭವಿಷ್ಯ) ಎಂಬ ತ್ರಿಗುಣಗಳ ಮಧುರ ಸಂಗಮ. ನಿಜ ಬದುಕೆಂದರೆ ಇದೇ ಅಲ್ಲವೇ? ಭೂತದಿಂದ ಸತ್ತ್ವಹೀರಿ ವರ್ತಮಾನದಲ್ಲಿ ಋಜುಜೀವನ ನಡೆಸಿ, ಭವಿಷ್ಯಕ್ಕೆ ಟಿಸಿಲೊಡೆಯುವ ನಿರಂತರ ಜೀವಂತ ಪ್ರಕ್ರಿಯೆ. ಕುವೆಂಪು ಅವರ ಅಮರ ಸಂದೇಶ ಬಿತ್ತರಿಸುವುದೂ ಇದೇ ಸಂವೇದನೆಯನ್ನು
ಓ ನನ್ನ ಚೇತನ
ಆಗು ನೀ ಅನಿಕೇತನ!
ರೂಪರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಬಿರಿಯೆ ಭಾವದೀಟಿ
ಓ ನನ್ನ ಚೇತನ
ಆಗು ನೀ ಅನಿಕೇತನ!

ಶಿವರಾಮ ಕಾರಂತರೊಂದಿಗೆ ಸುದೀರ್ಘ ಮತು ನಿಕಟ ಸಾಹಚರ್ಯವಿದ್ದ (ನೋಡಿ: `ವಿಜ್ಞಾನ ಪ್ರಪಂಚ’ದ ಮುನ್ನುಡಿ) ನಾನು ಅವರನ್ನೊಮ್ಮೆ ಪ್ರಶ್ನಿಸಿದ್ದೆ “ನಿಮ್ಮ ಕೃತಿಗಳು ಉಪನ್ಯಾಸಗಳು ಅಥವಾ ನಿಮ್ಮೊಂದಿಗಿನ ಮಾತುಕತೆಗಳು ನಮ್ಮಲ್ಲಿ ಮೂಡಿಸುವ ಭಾವನೆ ವಿಷಾದ. ನೀವು ಶೂನ್ಯವಾದಿ ಆಗಿರಬಹುದೇ ಎಂಬ ಸಂದೇಹ?”
ಥಟಕ್ಕನೆ ಕಾರಂತರ ಚಾಟೂಕ್ತಿ ಸಿಡಿಯಿತು “ನಿಷ್ಕ್ರಿಯಾವಂತನ ಪ್ರಥಮ ಆಶ್ರಯ ತತ್ತ್ವಮಂಡನೆ. ಅಂತಿಮಧಾಮ ಶೂನ್ಯವಾದ. ನನ್ನ ಬಗ್ಗೆ ನೀವೇ ತೀರ್ಮಾನಿಸಿ.”
ಕಾರ್ಯಮೇರು ಕಾರಂತರಿಗೂ ನಿಷ್ಕ್ರಿಯಾಕೂಪಮಂಡೂಕ ಶೂನ್ಯವಾದಿಗೂ ಸಂಬಂಧ ಏನು? ಅವರು ಹಗಲು ಇವನು ಇರುಳು.

ಪುಸ್ತಕ ಮಾರಾಟ ಹೋರಾಟದ ನಿಜದನಿ:
ಸಂಕಲ್ಪ – ನಿರ್ವಹಣೆ ಬ್ರಹ್ಮಗಿರಿ – ಕಾವೇರಿ
ಶಂಕರತೆ – ಕಾಳಿತ್ವ ಸಂತುಲತೆಯಲ್ಲಿರಲು
ಪಂಕದಿಂ ಚಿಗುರುವುದು ಸೌಗಂಧ್ಯ ಜಡತಾತ್ರಿ-
ಶಂಕುತ್ವ ಚೈತನ್ಯವಾಗುವುದು ಅತ್ರಿಸೂನು

ಚಿಂತನೆಯ ಮೇರೆಯರಿಯದ ಕಡಲುಗಳ ನೇರ
ಮಂಥನವ ಮನದೊಳಗೆ ಘೂರ್ಣಿಸುತ ಲಂಘಿಸಿದ
ಸಾಂತದಿಂದನಂತಕೆ ವಾಲ್ಮೀಕಿಪುಂಗವಂ
ಸಂತಪದವೊಂದೇ ಋತಂ ಕಣಾ ಅತ್ರಿಸೂನು

ಹಾಗಾದರೆ ಹೋರಾಟ, ತತ್ಪರಿಣಾಮವಾದ ಹತಾಶೆ, ಭ್ರಮನಿರಸನ ಮುಂತಾದವು ಈ ಪುಸ್ತಕದಲ್ಲಿ ಅನುರಣಿಸುವುದು ನಿಜವಲ್ಲವೇ? ಹೌದು. ಸಾಮಾಜಿಕವಾಗಿ ಪ್ರಸ್ತುತವಾಗುವ ಕಾರ್ಯನಿರ್ವಹಣೆಯಲ್ಲಿ ಸದಾ ಮಗ್ನನಾಗಿರುವಾತ ಮತ್ತು ಪ್ರೀತಿ – ನೀತಿ ಪಾತಳಿಯಲ್ಲಿ ನಿರಂತರ ಕ್ರಿಯಾಶೀಲನಾಗಿರುವಾತ ಅನುಭವಿಸುವ ಸಂವೇದನೆಗಳಿವು – ಹಾಲಾಹಲ ಬುದ್ಬುದಿಸಿದ ಹೊರತು ಅಮೃತ ಉದ್ಭವಿಸೀತೇ? ಎಂದೇ

ಎಡಬಿಡದೆ ನಡೆವಾತ ತಲಪದಿಹ ನೆಲೆಯಿಲ್ಲ
ಎಡಹಿದರೆ ಕಾರಣವ ಶೋಧಿಪನು; ಹೊಸಹಾದಿ
ಸಡಗರದಿ ಕಾಣುವನು; ಜ್ಞಾನಮೇರುವನೇರು-
ವೊಡೆ ಸತತ ಪಥಿಕನಾಗಿರು ನೀನು ಅತ್ರಿಸೂನು

ಸತತ ಪಥಕ್ರಮಣದಲ್ಲಿ ಅಶೋಕ ಕಂಡು ಅನುಭವಿಸಿದ ವರ್ಣಮಯ ದೃಶ್ಯಗಳ ಕುಂಚನ ಪ್ರಸಕ್ತ ಪುಸ್ತಕ. ಇಂದಿನ ಮೌಲ್ಯಛೇದಿತ ದಿನಗಳಲ್ಲಿಯೂ ಮೌಲ್ಯಪಾಲನೆಯೊಂದೇ ವಾಣಿಜ್ಯಾತ್ಮಕವಾಗಿಯೂ ಯಶಸ್ಸನ್ನು ತರಬಲ್ಲ ಏಕೈಕ ಮಾರ್ಗ ಎಂಬುದರ ವ್ಯಾಖ್ಯಾನ ಅತ್ರಿ ಬುಕ್ ಸೆಂಟರ್. ಕೊನೆಯದಾಗಿ ಅತ್ರಿಸೂನು ಯಾರು?

ಅತ್ರಿಸೂನೆಂಬಾತ ಮಂಕುತಿಮ್ಮನಿಗೇನು
ಪುತ್ರನೇ? ಭ್ರಾತೃವೇ? ಕುಲಜನೇ? ನಕಲಿಯೇ?
ಚಿತ್ರಭಾನುವು ತಿಮ್ಮ, ಬರಿಕಿರಿ ಸೊಡರು ಸೂನು
ಶತ್ರುಗಳುಭಯರೂ ತಮಂಧಕ್ಕೆ ಅತ್ರಿಸೂನು

ಅತ್ರಿ ಬುಕ್ ಸೆಂಟರ್ ಗಲ್ಲಾದಲ್ಲಿ ಗಳಿಸಿದ ಜೀವನಾನುಭವ
ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಸುರೇಶಾನಂದರು ೧೯೯೦ರ ತರುಣದಲ್ಲಿ ನನಗೊಂದು ಅತಿ ವಿಶಿಷ್ಟ ಕೃತಿ ಓದಲು ಕೊಟ್ಟರು: The song of the Bird. ಲೇಖಕರು – ಅಂತೋನಿ ಡಿಮೆಲ್ಲೋ ಎಸ್.ಜೆ, ಪ್ರಕಾಶಕರು ಗುಜರಾತ್ ಸಾಹಿತ್ಯ ಪ್ರಕಾಶ್, ಆನಂದ್. ೧೯೮೨ರಲ್ಲಿ ಮೊದಲ ಆವೃತ್ತಿ ಕಂಡ ಈ ಪುಸ್ತಕ ೧೯೮೮ರ ವೇಳೆಗೆ ಹತ್ತನೆಯ ಆವೃತ್ತಿಗೆ ಜಿಗಿದಿತ್ತು. ಒಟ್ಟು ಪ್ರತಿಗಳ ಸಂಖ್ಯೆ ೫೦,೦೦೦! ಬರೆದವರು ಪಾದ್ರಿ – ಇದು ಆಕಸ್ಮಿಕ. ಪ್ರಕಾಶಿಸಿದವರು ಕ್ರಿಶ್ಚಿಯನ್ ಪೀಠ – ಇದು ಆನುಷಂಗಿಕ. ಇದರಲ್ಲಿ ವಿಜೃಂಭಿಸುತ್ತಿದ್ದ ಜೀವನ ಮೌಲ್ಯಗಳು ಸಾರ್ವಕಾಲಿಕ ಮತ್ತು ಸಾರ್ವದೈಶಿಕ – ಬೈಬಲ್ಲಿನಲ್ಲಿಯ ನೀತಿಕಥೆಗಳಂತೆ. ಸ್ವಂತ ಕ್ರಿಶ್ಚಿಯನ್ ಧರ್ಮವನ್ನೂ ಒಳಗೊಂಡಂತೆ ಪ್ರಪಂಚದ ವಿವಿಧ ಧರ್ಮಗಳಲ್ಲಿ ಇವುಗಳ ವ್ಯಾಖ್ಯಾನಕಾರರ ಅವಜ್ಞೆ ಸ್ವಾರ್ಥಗಳ ಕಾರಣವಾಗಿ ಕಶ್ಮಲಗಟ್ಟಿದ ಕುರುಡು ನಂಬಿಕೆಗಳನ್ನು ಪ್ರೀತಿ ಶಸ್ತ್ರದಿಂದ ವೇದನಾರಹಿತ ನಿವಾರಿಸಿ ಋಜುಸಂದೇಶವನ್ನು ಬಿತ್ತರಿಸುವ ಈ ಲೇಖಕರ ಶೈಲಿ ಸರ್ವಧರ್ಮ ಸಮನ್ವಯದ ಅದ್ಭುತ ನಿದರ್ಶನ – ಮಾನವೀಯತೆ ಮೊದಲು, ಸದಾ ಮತ್ತು ಎಲ್ಲೆಲ್ಲಿಯೂ ವ್ಯಕ್ತಿಯ ಜನ್ಮ-ಆಕಸ್ಮಿಕತೆಯ ದೆಸೆಯಿಂದ ಆತನಿಗೆ ತೊಡಿಸಲ್ಪಟ್ಟ ಧರ್ಮ ಮಾನವೀಯತೆಗೆ ಅಧೀನವಾಗಿರತಕ್ಕದ್ದು. ಸದಾ ಮತ್ತು ಎಲ್ಲೆಲ್ಲಿಯೂ.
ಎರಡು ನಿದರ್ಶನಗಳು:
Amend the scriptures
Someone said to Buddha, “The things you teach, sir, are not to be found in Scripture.”
“Then put them there” said Buddha.
After an embarrassed pause the man went on to say “May I dare to suggest, sir, that some of the things you teach actually contradict the Scriptures?”
“Then the Scriptures need amending” said Buddha.

A proposal was made at the United Nations that the scripture of every religion be revised; everything in them that leads to intolerance or cruelty should be deleted; everything that damages the dignity of human beings should be destroyed.
When it was found that the author of the proposal was Jesus Christ, reporters rushed to his residence. His explanation was simple “Scripture, like the Sabbath, is for human beings and not human beings for Sabbath.”
The World Fair of Religions
My friend and I went to the World Fair of Religions. Not a trade fair. But the competetion was fierce, the propaganda loud.
The hand-outs of the Jewish stall said that God was All-Compassionate and the Jews were his chosen people. The Jews, No other people were as chosed as they.
At the Moslem stall we learnt that God was All-merciful and Mohammad his only Prophet. Salvation comes from listening to God’s Prophet.
The message of the Christian stall was: God is love and there is no salvation outside the Church. Join the Church or risk damnation forever.
On the way out I asked my friend what he thought of God. He replied, “He’s bigoted, fanatical and cruel.”
Back home, I said to God “How do you put up with this sort of thing? Don’t you see they have been giving you a bad name for centuries?”
God said, “It wasn’t I who organized the Fair. In fact, I’d be too ashamed to visit it.”

ಇಂಥ ಅಮೃತ, ನಾನೃತ, ಮತ್ತು ಘನಿತ ಜೀವನ ಮೌಲ್ಯರಸಪಾನದಿಂದ ಉದ್ದೀಪಿತನಾಗಿ ಒಡನೆ ಪ್ರಕಾಶಕರಿಗೆ ನನಗೊಂದು ಪ್ರತಿಯನ್ನು ವಿಪಿಪಿ ದ್ವಾರ ಕಳಿಸಿಕೊಡಿ ಎಂದು ಪತ್ರ ಬರೆದೆ. ಪುಸ್ತಕ ನೇರ ಅಂಚೆಯಲ್ಲಿ ಬಂದಿತು (೧೧-೯-೧೯೯೦). ಅದರ ಬೆಲೆ ರೂ ೩೦ನ್ನು ಮನಿಯಾರ್ಡರ್ ಮೂಲಕ ಕಳಿಸಬೇಕೆಂಬ ಸೂಚನೆ ಲಗತ್ತಾಗಿತ್ತು. ನನಗೆ ತುಸು ಅಚ್ಚರಿ: ನಾನು ಹಣ ಕಳಿಸದಿದ್ದರೆ ಅವರೇನೂ ಮಾಡುವಂತಿರಲಿಲ್ಲ. ದೂರದ ಊರಿನ, ಅರಿಯದ ಒಬ್ಬ ವ್ಯಕ್ತಿಯನ್ನು ಅವರು ನಂಬಿದ್ದರು! ಹಣ ರವಾನಿಸುವಾಗ ಅವರ ಪ್ರಕಟಣೆಗಳ ಪೂರ್ಣ ಯಾದಿ ಬೇಕೆಂಬ ಕೋರಿಕೆ ಸಲ್ಲಿಸಲು ಮರೆಯಲಿಲ್ಲ.

ಮುಂದಿನ ಬೇಸಗೆಯಲ್ಲಿ (ಏಪ್ರಿಲ್-ಮೇ) ನಾನು ಅತ್ರಿ ಬುಕ್ ಸೆಂಟರಿನ ತಾತ್ಕಾಲಿಕ ಒಡೆಯನಾದೆ – ಮಗ ಮತ್ತು ಸೊಸೆ ಇತರ ಮಿತ್ರರ ಜೊತೆ ಉತ್ತರ ಭಾರತಕ್ಕೆ ಬೈಕ್ ಪ್ರವಾಸ ಹೋದದ್ದರಿಂದ. ಆಗ ಮೊದಲು ಮಾಡಿದ ಕೆಲಸವೆಂದರೆ ಗುಜರಾತ್ ಸಾಹಿತ್ಯ ಪ್ರಕಾಶಕ್ಕೆ ಸುಮಾರು ರೂ ೨೫೦೦ ನಿವ್ವಳ ಮೊತ್ತದ ಪುಸ್ತಕಗಳಿಗಾಗಿ ಲಿಖಿತ ಕೋರಿಕೆ ಸಲ್ಲಿಸಿದ್ದು. ತತ್ಸಂಬಂಧವಾದ ರವಾನೆ ಪತ್ರಗಳನ್ನು ನಮ್ಮ ಬ್ಯಾಂಕಿನ ಮೂಲಕ ಕಳಿಸಬೇಕೆಂದು ಸೂಚಿಸಿದ್ದೆ, ಅಂದರೆ ನೇರ ನಗದು ವ್ಯವಹಾರ.
ಹತ್ತು ದಿನ ಸಲ್ಲುವಾಗ ಅವರಿಂದ ನನಗೆ ರವಾನೆ ಪತ್ರಗಳು ನೇರ ಬಂದುವು. ರೂ ೨೫೦೦ಕ್ಕೂ ಮಿಕ್ಕಿದ ಮೊಬಲಗನ್ನು ತಮಗೆ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ದ್ವಾರಾ ಕಳಿಸಬೇಕೆಂದು ಸೂಚಿಸಿದ್ದರು. ಅತಿ ದೂರದ ಊರಿನ ಅರಿಯದ ಒಂದು ಪುಸ್ತಕ ಮಳಿಗೆಯನ್ನು ಬಿಲ್ಲಿನ ಮೊತ್ತ ಏನೇ ಇದ್ದರೂ ಅವರು ನಂಬಿದ್ದರು! “ನಂಬಿ ಕೆಟ್ಟವರಿಲ್ಲವೋ!” ಎಂಬ ಸಂತವಾಣಿಯನ್ನು ಅನುಷ್ಠಾನಕ್ಕೆ ತಂದಿದ್ದರು. ಡಿಮಾಂಡ್ ಡ್ರಾಫ್ಟ್ ಕಳಿಸುತ್ತ ಒಂದು ಕಾಗದ ಬರೆದೆ. “ಅಂದು ಒಬ್ಬ ವ್ಯಕ್ತಿಯಾಗಿ ನನ್ನನ್ನು ನೀವು ರೂ ೩೦ಕ್ಕೆ ನಂಬಿದ್ದಿರಿ. ಇಂದು ಒಂದು ಮಳಿಗೆಯನ್ನು ರೂ ೨೫೦೦ರಂಥ ಹಿರಿ ಮೊಬಲಗಿಗೆ ಕೂಡ ನಂಬಿದ್ದೀರಿ. ನಿಮ್ಮ ಔದಾರ್ಯಕ್ಕೆ ನಮೋ ಎನ್ನುತ್ತೇನೆ. ಆದರೆ ನಿಮ್ಮ ಈ ಧೋರಣೆ ನಿಮಗೆ ನಷ್ಟ ಉಂಟು ಮಾಡಿರಲಾರದೇ? ಯಾರೂ ಮೋಸ ಮಾಡಿಲ್ಲವೇ? ನಿಮ್ಮ ವ್ಯವಹಾರನೀತಿ ಮತ್ತು ಜೀವನಧರ್ಮ ತಿಳಿಯುವ ಕುತೂಹಲ ಉಂಟು.”
ಒಂದು ಗೆರೆ ಮಾರೋಲೆ ಬಂತು: ಪ್ರಾಯಶಃ ೫% ಮಂದಿ ಅಪ್ರಾಮಾಣಿಕರು ಇರಬಹುದೆಂಬ ಕಲ್ಪನೆಗೆ ಹೆದರಿ ೯೫% ಮಂದಿ ಪ್ರಾಮಾಣಿಕರನ್ನು ಸಂದೇಹಿಸುವುದು ಅಪರಾಧ!

ಮುಂದಿನ ಕೆಲವೇ ದಿನಗಳಲ್ಲಿ ಖುದ್ದು ನನ್ನೆದುರೇ ಸದೃಶ ಸನ್ನಿವೇಶವೊಂದು ಎದ್ದು ನಿಲ್ಲಬೇಕೇ!
ಸಂಜೆ ೭ ಸಂದಿದೆ. ೮ ಗಂಟೆಗೆ ಕದ ಮುಚ್ಚುವ ಹೊತ್ತು ಹತ್ತಿರವಾಗುತ್ತಿದೆ. ಬಂದರು ಇಬ್ಬರು ಬಲು ಸುಟಿ ಯುವಕರು: “ನಾವು ಕೆಯಂಸಿ ಮಣಿಪಾಲದಿಂದ ಬರುತ್ತಿದ್ದೇವೆ. ನಮ್ಮ ವಿದ್ಯಾರ್ಥಿ ನಿಲಯದ ಗ್ರಂಥಾಲಯಕ್ಕೆ ಪುಸ್ತಕಗಳು ಬೇಕಾಗಿವೆ. ಆಯಬಹುದೇ?”
“ಮಕ್ಕಳೇ! ಅದಕ್ಕಾಗಿಯೇ ಕೂತಿದ್ದೇವೆ. ನಮ್ಮ ಬಂಟ ಶಾಂತಾರಾಮ ಮತ್ತು ನನ್ನ ಹೊರತಾಗಿ ನೀವು ಇಡೀ ಮಳಿಗೆಯನ್ನೇ ಕೊಂಡೊಯ್ಯಬಹುದು – ಆದರೆ ೮ ಗಂಟೆಗೆ ಮೊದಲೇ”.

ಮಾನವ-ಕಂಪ್ಯೂಟರ್ ಶಾಂತಾರಾಮನ ನೆರವಿನಿಂದ ಅವರು ನೂರಾರು ಗ್ರಂಥಗಳನ್ನು ಆಯ್ದರು. “ರೂ ೩೦೦೦ ಮೀರದಷ್ಟು ಬೆಲೆಯ ಪುಸ್ತಕಗಳಿಗೆ ಬಿಲ್ ಮಾಡಿ. ನಗದು ಹಣ ಪಾವತಿಸಿ ಈಗಲೇ ಭಾಂಗಿಗಳನ್ನು ಒಯ್ಯುತ್ತೇವೆ” ಎಂದರು.

ಬಿಲ್ ತಯಾರಿಸಿ ಅವರ ಕೈಗೆ ಕೊಟ್ಟೆ. ಶಾಂತಾರಾಮ ಭಾಂಗಿಗಳನ್ನು ಕಟ್ಟಿ ಮುಗಿಸಿದ. ಅವರೇನೋ ಮಾತಾಡಿಕೊಂಡದ್ದು ಕಂಡೆ. ಒಬ್ಬನೆಂದ “ಅಂಕಲ್! ಈ ಭಾಂಗಿಗಳನ್ನು ಇಲ್ಲೇ ಇಟ್ಟಿರಿ. ನಾವು ನಾಳೆ ಬಂದು ನಗದು ಕೊಟ್ಟು ಬಿಡಿಸಿಕೊಳ್ಳುತ್ತೇವೆ.”
ನಾನು ಕೇಳಿದೆ “ಏನು ತೊಂದರೆ ಆಗಿದೆ?”
“ನಾವು ಮಣಿಪಾಲದಿಂದ ಹೊರಡುವ ಗಡಿಬಿಡಿಯಲ್ಲಿ ಸಂಚಿ ತರಲು ಮರೆತೆವು. ಚೆಕ್ ಪುಸ್ತಕವನ್ನೂ ತಂದಿಲ್ಲ.”
ನನ್ನ ಮನದೊಳಗೆ ಗುಜರಾತ್ ಮೆಲುದನಿ ಮಿಡಿಯಿತು “ನಂಬಿ ಕೆಟ್ಟವರಿಲ್ಲವೋ!” ಎರಡನೆಯ ಯೋಚನೆ ಮಾಡದೆ ಹೇಳಿದೆ “ಮಕ್ಕಳೇ! ಭಾಂಗಿಗಳನ್ನು ನೀವು ಈಗಲೇ ತೆಗೆದುಕೊಂಡು ಹೋಗಿ. ಬಿಲ್ ಮೊಬಲಗನ್ನು ಚೆಕ್ಕಿನಲ್ಲಿ ಅಂಚೆ ಮೂಲಕ ಕಳಿಸಿ ಸಾಕು.”
“ಏನು? ದುಡ್ಡು ಕೊಡದೆ ಮಾಲು ಒಯ್ಯುವುದೇ?”
“ಹೌದು! ಮಾಲು ಮೊದಲು ದುಡ್ಡು ಬಳಿಕ.”
“ನಾವು ಹಣ ಕೊಡದೆ ಮೋಸ ಮಾಡಿದರೆ?”
“ಅತ್ಯಂತ ಅಸಂಭಾವ್ಯ ಘಟನೆ. ಏಕೆಂದರೆ ನೀವಿನ್ನೂ ವಿದ್ಯಾರ್ಥಿಗಳು. ಇಷ್ಟಾಗಿಯೂ ನೀವು ಮೋಸ ಮಾಡಿಬಿಟ್ಟರೆ ಏನಾದೀತು? ನಾನು ಕುಚೇಲನಾಗಲಾರೆ. ನೀವು ಕುಬೇರರೂ ಆಗಲಾರಿರಿ. ಹೀಗಲ್ಲದೇ ಪರಮ ಸಂಭಾವ್ಯವಾಗಿ ನೀವು ಹಣ ಪಾವತಿಸಿದರೆ ನಾವಿಬ್ಬರೂ ಕುಬೇರರಾಗುತ್ತೇವೆ. ಭಾರತಕ್ಕೆ ಇಬ್ಬರು ಪ್ರಾಮಾಣಿಕ ವೈದ್ಯರು ಒದಗುವರೆಂದು ಸಂತೋಷ ತಳೆಯುತ್ತೇನೆ. ಈಗ ಭಾಂಗಿ ಸಹಿತ ಹೊರಡಿ, ನಿಮಗೆ ಸುಖ ಪ್ರಯಾಣವಾಗಲಿ.”

ಬಂದರು ಬಂದೇ ಬಂದರು, ಮರುದಿನ, ಹಣ ಪಾವತಿಸಿದರು. ಇನ್ನಷ್ಟು ಪುಸ್ತಕಗಳನ್ನು ಖರೀದಿಸಿ ಹಕ್ಕಿಯಂತೆ ಹಾಡುತ್ತ ಹಾರಿ ಹೋದರು. ನಿಜ “ಶ್ರುತಗಾನಮಭಿರಾಮಂ ಅಶ್ರುತಗಾನಮಭಿರಾಮತರಂ” (Heard melodies are sweet, unheard sweeter- ಎಂಬುದರ ಡಿವಿಜಿ ಅನುವಾದ)

ಜ್ಞಾನಗಜಗಮನದಲಿ ವೈಫಲ್ಯವಿಲ್ಲ – ನಡೆ
ಮಾನಾಪಮಾನಗಳ ಲೆಕ್ಕಿಸದೆ, ಶೃಂಗಾಭಿ-
ಯಾನ ನವದೃಶ್ಯಗಳ ತೆರೆಯುತ್ತ ನಿನ್ನನು ಸ-
ದಾ ನೇವರಿಪುದು ಭರವಸೆಯಲಿ ಅತ್ರಿಸೂನು

ಕೆಲಸವನು ಮಾಡುತ್ತ ಸಂತೋಷ ತಳೆವಾತ
ಸುಲಭ ಜಾಡನು ತೊರೆದು ನವಮಾರ್ಗ ತುಳಿವಾತ
ಗೆಲವು ಸೋಲುಗಳನ್ನು ಲೆಕ್ಕಿಸದೆ ದುಡಿವಾತ
ತಿಳಿಯೊ ಜೀವನ್ಮುಕ್ತ ಸಂತೃಪ್ತ ಅತ್ರಿಸೂನು

(ಪುಸ್ತಕ ಮಾರಾಟ ಹೋರಾಟ ಪುಸ್ತಕ ಮುಗಿಯಿತು.)