ವಿದ್ಯಾ ಮನೋಹರ ಉಪಾಧ್ಯ ಇವರ ಪ್ರವಾಸ ಕಥನ
ಒಡಿಶಾದ ಒಡಲೊಳಗೆ ಅಧ್ಯಾಯ (೬)

ಪೂರ್ವ ಕರಾವಳಿ, ಸಮುದ್ರ ತೀರದಲ್ಲೇ ವಸತಿಗೃಹ, ಅದೂ ಪೂರ್ವಕ್ಕೆ ತೆರೆದ ಬಾಲ್ಕನಿಯೆಂದ ಮೇಲೆ ಕೇಳಬೇಕೆ? ಅರುಣೋದಯಕ್ಕೂ ಮುಂಚಿನ ತಂಪು ಕಿರಣಗಳು ಎಂತಹ ಸೂರ್ಯವಂಶಿಯನ್ನೂ ಹಾಸಿಗೆಯಿಂದ ಸೀದಾ ಸಮುದ್ರ ತೀರಕ್ಕೇ ಎಳೆದೊಯ್ಯಬಲ್ಲವು.

ಪುರಿಯ ಸಮುದ್ರ ತೀರ ‘ಗೋಲ್ಡನ್ ಬೀಚ್’ ಎಂದೇ ಕರೆಸಿಕೊಳ್ಳುವ ಪ್ರಕೃತಿ ಸಂಪತ್ತು. ದಿನಕರನ ಕಿರಣ, ಶುಭ್ರ, ಮೃದು, ನಯವಾದ ಮರಳಿಗೆ ಬಿದ್ದು ಹೊಂಬಣ್ಣದ ಚಿತ್ತಾರ ರಚಿಸಿದರೆ, ಅಲೆಅಲೆಯಾಗಿ ನೊರೆನೊರೆಯಾಗಿ ಹೊಳೆಯುವ ರತ್ನಾಕರನ ತಂಪುತಂಪು ನೀರು ಕಾಲಿಗೆ ಮುತ್ತಿಕ್ಕಿ ಹಿಂದೆ ಸರಿಯುವ ಲೀಲೆ ಉತ್ಸಾಹದ ಚಿಲುಮೆಯನ್ನೇ ಹರಿಸುತ್ತದೆ. ಸುಪ್ರಭಾತದ ಈ ಆನಂದವನ್ನು ಅನುಭವಿಸುತ್ತಾ ಸಮುದ್ರ ತೀರದಲ್ಲಿ ಸಾಕಷ್ಟು ಹೊತ್ತು ಕಳೆದೆವು. ಅದಾಗಲೇ ಮನೋಹರ್ ಅಲ್ಲಿನ ಬೆಸ್ತನೊಬ್ಬನ ಸಾಂಪ್ರದಾಯಿಕ ಮೀನುಗಾರಿಕೆ, ಯಾರೋ ಹೋಟೆಲ್ ಸಿಬ್ಬಂದಿಯೊಂದಿಗೆ ಏನೇನೋ ಮಾತು, ಸ್ನೇಹ, ಫೋಟೋ ಕಾರ್ಯಕ್ರಮಗಳನ್ನೆಲ್ಲಾ ಕ್ಯಾಮರಾಕ್ಕೆ ಉಣಿಸಿಯಾಗಿತ್ತು. ಎಲ್ಲರ ಕಣ್ಮನಗಳು ತುಂಬಿ ತಣಿದವು; ಹೊಟ್ಟೆ ಮಾತ್ರ ಖಾಲಿಯಾಗಿ ಚುರುಗುಟ್ಟುತ್ತಿತ್ತು. ಜತೆಗೇ ೮ ಗಂಟೆಯೊಳಗೆ ಹೋಟೆಲ್ಲಿನಿಂದ ಗಂಟುಮೂಟೆ ಕಟ್ಟಬೇಕೆಂಬ ಎಚ್ಚರಿಕೆ ನಮ್ಮನ್ನು ಅಲ್ಲಿಂದ ಏಳುವಂತೆ ಮಾಡಿತು.

ಅಂದು ನಾವು ಪುರಿಯಿಂದ ವಾಪಾಸು ಭುವನೇಶ್ವರಕ್ಕೆ ಪ್ರಯಾಣಿಸುವವರು. ಈ ದಾರಿಯಲ್ಲಿ ಕೆಲವು ಪ್ರೇಕ್ಷಣೀಯ ಸ್ಥಳಗಳಿರುವುದನ್ನು ಗುರುತುಹಾಕಿಕೊಂಡಿದ್ದೆವು. ಅವುಗಳಲ್ಲಿ ಮೊದಲನೆಯದು ರಘುರಾಜಪುರ.

ಕ್ರಿಸ್ತಶಕ ೨೦೦೦ದಲ್ಲಿ ಕಲಾವಿದರ ಗ್ರಾಮವೆಂದು ರೂಪುಗೊಂಡ ರಘುರಾಜಪುರ ಪುರಿಯಿಂದ ೧೦ ಕಿ.ಮೀ ದೂರದಲ್ಲಿದೆ. ಒಡಿಶಾದ ಸಾಂಪ್ರದಾಯಿಕ ಕಲೆಗಳಾದ ಪಟಚಿತ್ರಗಳು, ತಾಳೆ ಎಲೆಚಿತ್ರಗಳು, ಕಲ್ಲಿನ ಕೆತ್ತನೆ, ಮರ, ಸೆಗಣಿ, ಕಾಗದದ ತಿರುಳು ಮುಂತಾದವುಗಳಿಂದ ಮಾಡಿದ ಆಟಿಕೆಗಳು, ಟಸ್ಸರ್ ಚಿತ್ರಗಳು, ಗಂಜೀಫಕಾರ್ಡುಗಳು, ತೆಂಗು, ಅಡಿಕೆಗಳ ಕರಕುಶಲ ವಸ್ತುಗಳು ಮುಂತಾದವುಗಳನ್ನು ಈಗಲೂ ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದಿರುವ ಸುಮಾರು ೧೨೩ ಕಲಾವಿದ ಕುಟುಂಬಗಳು ಇಲ್ಲಿ ವಾಸಿಸುತ್ತವೆ. ಪ್ರವಾಸಿಗರಿಗೆ ಕಲಾವಿದರನ್ನು ನೇರವಾಗಿ ಕಂಡು, ಅವರ ಕೆಲಸವನ್ನು ವೀಕ್ಷಿಸುವ, ಮೆಚ್ಚುವ, ತಮಗೆ ಇಷ್ಟವಾದದ್ದನ್ನು ಖರೀದಿಸುವ ಅವಕಾಶವಿದೆ. ಇಲ್ಲಿನ ಕಲಾವಿದರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವರು. ಒಡಿಸ್ಸೀ ನೃತ್ಯದ ಆಧುನಿಕ ರೂಪರೇಷೆಗಳ ಕರ್ತೃ ದಿವಂಗತ ಶ್ರೀ ಕೇಳುಚರಣ ಮಹಾಪಾತ್ರ, ಗೋಟಿಪುವಾ ನೃತ್ಯದ ಗುರು ದಿವಂಗತಶ್ರೀ ಮಾಗುಣಿದಾಸ್ ಮುಂತಾದವರೆಲ್ಲಾ ಇಲ್ಲಿಯವರೇ. ಪುರಿ ಜಗನ್ನಾಥನಿಗೆ ಅಗತ್ಯವಾದ ಬಟ್ಟೆ ತಯಾರಿ, ಕಸೂತಿ, ಪಟಚಿತ್ರಗಳೇ ಮುಂತಾದವುಗಳನ್ನು ಪೂರೈಸುವವರೂ ಇಲ್ಲಿನವರೇ.

ಸುಮಾರು ಒಂದು ಕಿ.ಮೀ.ನಷ್ಟಿರುವ ಹಳ್ಳಿರಸ್ತೆಯಲ್ಲಿ ನಡೆಯುತ್ತಾ ಸಾಗಿದರೆ, ರಸ್ತೆಯ ಇಕ್ಕೆಲಗಳಲ್ಲೂ ಕಲಾವಿದರ ಮನೆಗಳೇ. ಪುಟ್ಟಪುಟ್ಟ ಮನೆಗಳು, ಕಾಲಿಟ್ಟಲ್ಲೆಲ್ಲಾ ಕಲಾಕೃತಿಗಳು. ಮನೆಗಳ ಗೋಡೆಗಳು, ಅಂಗಳ, ಕಂಬಗಳು ಎಲ್ಲೆಲ್ಲೂ ಚಿತ್ರಗಳೇ. ಅಡಿಕೆ, ತೆಂಗು, ಮರ, ಬಟ್ಟೆ, ತಾಳೆ, ಮಣ್ಣು, ಕಲ್ಲು, ಲೋಹ ಹೀಗೆ ಎಲ್ಲವುಗಳಲ್ಲೂ ಕಲಾಕೃತಿಗಳನ್ನು ರಚಿಸಬಲ್ಲವರು.

ಹಳ್ಳಿಯು ಸುರುವಾಗುವಲ್ಲೇ ಒಂದು ದೇವಸ್ಥಾನ, ಹಳ್ಳಿಗರು ಒಟ್ಟುಗೂಡುವ ಕಟ್ಟೆಗಳಿವೆ. ನೃತ್ಯ ಕೇಂದ್ರವಿದೆ. ಅಂದು ಕಾರ್ತಿಕ ಮಾಸದ ಲಕ್ಷ್ಮೀ ಪೂಜೆಯ ದಿನವಾದ್ದರಿಂದ ಹೆಂಗಸರು ವಿಶೇಷ ಪೂಜೆಗಳಲ್ಲಿ ನಿರತರಾಗಿದ್ದರು. ಅವರ ಮನೆಗಳಿಂದ ಶಂಖಧ್ವನಿ, ಒರಿಯಾ ಮತ್ತು ಬಂಗಾಳೀ ಹೆಂಗಸರು ತಮ್ಮ ನಾಲಿಗೆಯನ್ನು ಹೊರಳಿಸುತ್ತಾ ಕೂಗುವ ವಿಚಿತ್ರ ಮಂಗಳ ಧ್ವನಿಗಳು ಕೇಳುತ್ತಿದ್ದವು. ಲಕ್ಷ್ಮಿಯ ಪುಟ್ಟ ಪಾದಗಳಿಂದ ಮನೆಯ ನೆಲ ಅಲಂಕೃತವಾಗಿತ್ತು. ಹೆಂಗಸರು ಕಚ್ಚೆಸೀರೆ, ಆಭರಣಗಳನ್ನು ಧರಿಸಿ ಪಾದಗಳಿಗೆ ಕೆಂಪು ರಂಗಿನ ಗೆರೆ ಎಳೆದುಕೊಂಡಿದ್ದರು. ತುಳಸಿಕಟ್ಟೆಗಳೆಲ್ಲಾ ಶುಭ್ರವಾಗಿ ಅಲಂಕರಿಸಲ್ಪಟ್ಟಿದ್ದವು. ಒಂದು ಸುಂದರ, ಮುಗ್ಧ, ಪ್ರಶಾಂತ ಹಳ್ಳಿಯ ವಾತಾವರಣವಿತ್ತು. ನಾವೆಲ್ಲ ಬೇಕು ಬೇಕಾದ ಕಲಾಕೃತಿಗಳನ್ನು ಉತ್ಸಾಹದಿಂದ ಕೊಂಡೆವು. ಮೇಲ್ನೋಟಕ್ಕೆ ಎಲ್ಲವೂ ಚೆಂದವೆಂದು ಕಂಡ ಈ ಹಳ್ಳಿಯಲ್ಲೂ ಮೋಸದಾಟವೊಂದು ತಣ್ಣಗೆ ನಡೆಯುತ್ತಿರುವುದು ಮೆಲ್ಲ ಗೊತ್ತಾಯಿತು. ಈ ಹಳ್ಳಿಯ ಆರಂಭವಾಗುವುದು ಒಂದು ದೇವಸ್ಥಾನದಿಂದ. ಆದರೆ ಅದಕ್ಕೂ ಅರ್ಧ ಕಿ.ಮೀ ಮೊದಲೇ ವಾಹನಗಳ ನಿಲುಗಡೆ. ಅಲ್ಲೇ ನಮಗೆ ಹಲವಾರು ಮನೆಗಳೂ ಕಲಾಕೃತಿಗಳನ್ನು ಹರಡಿಟ್ಟ ಜನರೂ ಕಾಣಸಿಗುತ್ತಾರೆ. ಇವರಲ್ಲಿ ಹಲವರು ನಿಜವಾದ ಕಲಾವಿದರುಗಳಲ್ಲ, ಮಾರಾಟದ ದಲ್ಲಾಳಿಗಳಂತೆ. ಫಕ್ಕನೆ ಗೊತ್ತಾಗುವುದಿಲ್ಲ. ಹೆಚ್ಚಿನ ಪ್ರವಾಸಿಗರು ವಾಹನವನ್ನು ನಿಲ್ಲಿಸಿದ ಕೂಡಲೇ ಸಿಗುವ ಹತ್ತಿರದ ಮನೆಗಳಿಗೇ ಭೇಟಿಕೊಟ್ಟು ಅವರಿಂದಲೇ ಖರೀದಿಸಿ ವಾಪಾಸಾಗುತ್ತಾರೆ. ನಾವೂ ಹಾಗೇ ಮಾಡುತ್ತಿದ್ದೆವೋ ಏನೋ. ೯ ಜನರ ದೊಡ್ಡ ದಂಡು ಬಂದಿದೆ ಎಂಬ ಸುದ್ದಿ ಕಲಾವಿದರಿಗೆ ಹೇಗೆ ಮುಟ್ಟಿತೋ ತಿಳಿಯದು. ಯಾರೋ ಒಬ್ಬರು ಬಂದು ಮುಂದೆ ಹೋಗಿ, ಕಲಾವಿದರ ಮನೆಗಳು ಮುಂದೆ ಇವೆ ಎಂದು ತಿಳಿಸಿದ್ದರಿಂದ ನಿಜವಾದ ರಘುರಾಜಪುರಕ್ಕೆ ತಲಪಲು ಸಾಧ್ಯವಾಯಿತು. ಆಗ ಕಲಾವಿದರು ತಮಗಾಗುತ್ತಿರುವ ಅನ್ಯಾಯವನ್ನು ಹೇಳಿದರು. ಹಿಂದಿನ ದಿನ ವಿದೇಶಿ ದಂಪತಿ ಬಂದು ಸುಮಾರು ೯೦,೦೦೦/-ರೂಪಾಯಿಗಳ ವ್ಯಾಪಾರವನ್ನು ದಲ್ಲಾಳಿಗಳ ಬಳಿ ಮಾಡಿ ಹೋದದ್ದನ್ನು ಹೇಳಿ ಬೇಸರಿಸಿದರು.

“ಈ ಮೋಸದ ವಿಷಯ ಗೊತ್ತಿದ್ದೂ ನಮಗೆ ಏಕೆ ಹೇಳಲಿಲ್ಲ” ಎಂದು ಸಂತೋಷನನ್ನು ಕೇಳಿದೆವು. “ನಾನು ನಿಮಗೆ ನಿಜ ಸಂಗತಿ ಹೇಳಿದ್ದೇನೆಂದು ಯಾರಿಗಾದರೂ ಗೊತ್ತಾಗಿದ್ದರೆ ನೀವು ವ್ಯಾಪಾರ ಮುಗಿಸಿ ವಾಪಾಸು ಬರುವಾಗ ವ್ಯಾನಿನ ಚಕ್ರಗಳಲ್ಲಿ ಒಂದರಲ್ಲೂ ಗಾಳಿಯೇ ಇರುತ್ತಿರಲಿಲ್ಲ, ಮುಂದಿನದನ್ನು ನೀವೇ ಊಹಿಸಿ” ಎಂದ ಸಂತೊಷ. ರಘುರಾಜಪುರದಿಂದ ಹೊರಟು ಹೆದ್ದಾರಿಯಲ್ಲಿ ಮತ್ತೆ ೨೮ ಕಿ.ಮೀ ಪ್ರಯಾಣ ಬೆಳೆಸಿದೆವು. ರಸ್ತೆ ಬದಿಯಲ್ಲಿ ಯಾವುದೇ ಊಟದ ಹೋಟೆಲ್ಲುಗಳಿರಲಿಲ್ಲ. ಇಂತಹ ಸಂದರ್ಭಗಳಲೆಲ್ಲಾ ಅಲ್ಲಲ್ಲಿ ಸಿಗುವ ಎಳೆನೀರು, ಮಜ್ಜಿಗೆ, ಶರಬತ್ತುಗಳ ಗೂಡಂಗಡಿಗಳಿಗೆ ಲಗ್ಗೆ ಇಡುತ್ತಿದ್ದೆವು. ಸಿಹಿಸಿಹಿಯಾದ ಎಳೆನೀರು ಕುಡಿದು, ರುಚಿಯಾದ ಬೊಂಡವನ್ನು ಕೆರೆದು ತಿಂದರೆ ಊಟಕ್ಕೆ ಸಮನಲ್ಲವಾದರೂ ಸಮಕ್ಕೆ ಹತ್ತಿರದ್ದಾಗುತ್ತಿತ್ತು.

ಒಡಿಶಾದ ಕಸೂತಿಕಲೆಗಳಲ್ಲಿ ಆಪ್ಲಿಕ್ ಎಂದು ಕರೆಸಿಕೊಳ್ಳುವ ಚಿಂದಿಬಟ್ಟೆಗಳನ್ನು ಜೋಡಿಸಿ ಹೊಲಿಯುವ ಕಸೂತಿ ಪ್ರಸಿದ್ಧವಾದುದು. ಜಗನ್ನಾಥನಿಗೂ ಇಂತಹದ್ದೇ ಬಟ್ಟೆಗಳು ಬೇಕಾಗುವುದರಿಂದ ತಲೆತಲಾಂತರಗಳಿಂದ ಜೀವಂತವಾಗಿದೆ. ಇಂತಹ ಬಟ್ಟೆಗಳದ್ದೇ ಬೆಡ್ಶೀಟ್, ಸೀರೆ, ಚೂಡಿದಾರ್, ಬ್ಯಾಗ್, ಪರ್ಸ್, ಕೊಡೆಗಳೆಲ್ಲಾ ತಯಾರಾಗಿ ಮಾರಾಟವಾಗುವ ಪುಟ್ಟ ಊರು – ಪೀಪ್ಲಿ. ಈ ಊರಿನ ರಸ್ತೆಯ ಎರಡೂ ಕಡೆ ಅಂಗಡಿಗಳಿವೆ. ಈ ಅಂಗಡಿಗಳ ತುಂಬಾ ಆಪ್ಲಿಕ್ ಬಟ್ಟೆಗಳು ಮತ್ತು ಇನ್ನಿತರ ಕಸೂತಿ, ಕಲಾಕೃತಿಗಳ ಸಂಗ್ರಹವಿದೆ. ಈ ಪುಟ್ಟ ಊರಿನಲ್ಲೊಂದು ಪುಟ್ಟ ಜೈನ್ ಹೋಟೆಲ್ಲಿತ್ತು. ಅಲ್ಲಿ ಒಂದು ಸುಂದರ ಚಿತ್ರದ ಪೈಟಿಂಗ್ ಗೋಡೆಯಲ್ಲಿತ್ತು. ಇದರಲ್ಲಿ ಹಲವು ಪ್ರಾಣಿಗಳನ್ನು ಸೇರಿಸಿ ಕಲ್ಪಿಸಿದ ಜೀವಿಯೊಂದು ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿದ್ದು, ಒಬ್ಬ ರಾಜ ಅದಕ್ಕೆ ನಮಸ್ಕರಿಸುತ್ತಿರುವುದು ಕಾಣುತ್ತದೆ. ಅದಕ್ಕೆ ನವಗುಂಜರ ಎಂದು ಹೆಸರು. ವಿಷ್ಣುವು ಅರ್ಜುನನಿಗೆ ಆ ವೇಷದಲ್ಲಿ ಪ್ರತ್ಯಕ್ಷನಾಗಿದ್ದನೆಂಬ ಕತೆಯಿದೆ. ಊಟಕ್ಕೆ ಸಮನಾದುದನ್ನು ಇಲ್ಲಿ ಉಂಡೆವು.

ಪೀಪ್ಲಿಯಿಂದ ಹೊರಟು ಕತ್ತಲಾಗುವುದರೊಳಗೆ ಭುವನೇಶ್ವರಕ್ಕೆ ಹತ್ತಿರದ ಧೌಲಿಗೆ ಬಂದೆವು. ಧೌಲಿಯಲ್ಲಿ ಅಶೋಕನ ಶಾಸನ, ಇಂಡೋ-ಜಪಾನ್ ಸಹಯೋಗದಲ್ಲಿ ನಿರ್ಮಾಣವಾದ ಬೌದ್ಧ ಮಂದಿರಗಳಿವೆ. ಅಶೋಕನ ಶಾಸನವನ್ನು ಧೌಲಿ ಬೆಟ್ಟವನ್ನು ಏರುವ ಮೊದಲೇ ಸಿಗುವ ಉದ್ಯಾನವನದಲ್ಲಿ ಗಾಜಿನ ಪೆಟ್ಟಿಗೆಯ ಕವಚದಲ್ಲಿ ರಕ್ಷಿಸಿ ಇಟ್ಟಿದ್ದಾರೆ. ಸಾಮಾನ್ಯವಾಗಿ ಪ್ರವಾಸಿಗರು ಇತಿಹಾಸದ ಪುಟಗಳನ್ನೆಲ್ಲಾ ತಿರುವುವ ಆಸಕ್ತಿಹೊಂದಿರುವುದಿಲ್ಲ. ಹಾಗಾಗಿ ಬೀಗ ಹಾಕಿ ಸಂರಕ್ಷಿಸಲ್ಪಟ್ಟ ಶಾಸನ ಯಾರ ಕಣ್ಣಿಗೂ ಬೀಳುವುದಿಲ್ಲ. ಶಾಸನದ ಬಗೆಗೆ ಇದ್ದ ಬೋರ್ಡನ್ನು ಮಾತ್ರ ಎಲ್ಲರಿಗೂ ಕಾಣುವಂತೆ ಹಾಕಿದ್ದಾರೆ. ಓದುವ ಆಸಕ್ತರು ಮಾತ್ರ ಕೆಲವೇ ಕೆಲವರು. ಈ ಕಲ್ಲಿನ ಶಾಸನವನ್ನು ಒಂದು ದೊಡ್ಡ ಬಂಡೆಯ ಮೇಲೆ ಪ್ರಾಕೃತ ಮಾಗಧಿ ಭಾಷೆಯಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಕೆತ್ತಲಾಗಿದೆ. ಬ್ರಾಹ್ಮೀ ಲಿಪಿಯ ಅಕ್ಷರಗಳು ನೇರ ಗೆರೆ ಎಳೆದಂತೆ ಕಾಣುತ್ತವೆ. ಕನ್ನಡ ಅಥವಾ ಒರಿಯಾಗಳಂತೆ ದುಂಡಗಿನ ಅಕ್ಷರಗಳಲ್ಲ. ಶಾಸನವಿರುವ ಬಂಡೆಯ ಎದುರು ಭಾಗದಲ್ಲಿ ಒಂದು ಮರಿಯಾನೆಯನ್ನು ಕೆತ್ತಲಾಗಿದೆ. ಇದು ಬುದ್ಧನ ಸಂಕೇತವಂತೆ.

ಧೌಲಿಯಲ್ಲಿ ದಯಾನದಿಯು ಹರಿಯುತ್ತಿದ್ದು ಇದನ್ನು ಬೆಟ್ಟದ ಮೇಲಿನಿಂದ ನೋಡಬಹುದು. ಚರಿತ್ರೆಯ ಕತೆಗಳ ಪ್ರಕಾರ ಕಳಿಂಗ ಯುದ್ಧದಲ್ಲಿ ಹರಿದ ನೆತ್ತರಿನಿಂದ ಈ ನದಿ ನೀರು ಕೆಂಪಾಯಿತಂತೆ. ಧೌಲಿಯ ಬುದ್ಧ ದೇವಾಲಯ ಬಿಳಿಯ ಮಾರ್ಬಲ್ಲಿನಿಂದ ಕಟ್ಟಲ್ಪಟ್ಟಿದೆ. ಈ ಕಲ್ಲಿನ ಗೋಪುರದ ಮೇಲೇ ಬೆಳಕು ಹಾಯಿಸಿ ತೋರಿಸುವ ಲೈಟ್ ಎಂಡ್ ಸೌಂಡ್ ಶೋ ನೋಡಲು ಕುಳಿತೆವು. ತಲೆಗೆ ೨೫ ರೂಪಾಯಿಗಳ ಟಿಕೇಟು. ಈ ೪೫ ನಿಮಿಷಗಳ ಸಿನಿಮಾದಲ್ಲಿ ಮೌರ್ಯ ರಾಜರುಗಳ ಅದರಲ್ಲೂ ಅಶೋಕನ ರಕ್ತಪಿಪಾಸುತನ, ರಾಜ್ಯ ವಿಸ್ತರಣೆಯ ಮಹಾತ್ವಾಕಾಂಕ್ಷೆಗಳ ಬಗ್ಗೆ ಸುಮಾರು ವಿಷಯಗಳನ್ನು ತಿಳಿದೆವು. ಅದುವರೆಗೆ ಅಶೋಕ ಸಾಲುಮರಗಳನ್ನು ನೆಡಿಸಿದ ಒಬ್ಬ ಆದರ್ಶ ರಾಜನೆಂದು ಶಾಲಾ ಪಠ್ಯ ಪುಸ್ತಕದಲ್ಲಿದ್ದದ್ದನ್ನು ಉರು ಹೊಡೆದು ಪರೀಕ್ಷೆಗೆ ಬರೆದದ್ದು ಮಾತ್ರ ನೆನಪಿತ್ತು. ಅವನ ಕ್ರೂರ ಮುಖದ ಅರಿವೇ ಇರಲಿಲ್ಲ.

ಧೌಲಿಯಲ್ಲಿ ಇನ್ನೂ ಒಂದು ಬೌದ್ಧ ಮಂದಿರವಿದೆ. ಅದಕ್ಕೂ ಭೇಟಿ ಕೊಟ್ಟೆವು. ಅಲ್ಲಿ ನಮ್ಮನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಸಂಜೆಯ ಧ್ಯಾನದ ಸಮಯವನ್ನು ಅಲ್ಲಿ ಕಳೆದೆವು. ದಯಾ ನದೀ ತಟವೂ ಒಂದು ಸುಂದರ ಪಿಕ್ನಿಕ್ ತಾಣ. ಶಕ್ತಿರೂಪಿಣಿ ದೇವಿಯ ದೇಗುಲವೂ ಅಲ್ಲಿತ್ತು. ಒಡಿಶಾದಲ್ಲಿ ಸಾಮಾನ್ಯವಾಗಿ ಶೈವ, ಶಾಕ್ತ, ವೈಷ್ಣವ, ಜೈನ, ಬೌದ್ಧ ಹೀಗೆ ಹಲವು ಮತಗಳ ಗುಡಿಗಳೂ ಆಚರಣೆಗಳೂ ಧಾರಾಳವಾಗಿ ಒಟ್ಟೊಟ್ಟಿಗೇ, ಕೆಲವೊಮ್ಮೆ ಒಂದರೊಳಗೊಂದು ಬೆಸೆದಂತೆಯೂ ಕಾಣಸಿಗುತ್ತವೆ. ಈ ಭಾಗದಲ್ಲಿ ಆನೆ ಮತ್ತು ಸಿಂಹಗಳ ಸಂಕರವಾದ ವ್ಯಾಲಶಿಲ್ಪ ತುಂಬಾ ಸಂಖ್ಯೆಯಲ್ಲಿ ಕಾಣಸಿಗುವುದು, ಮತಗಳ ಬೆಸುಗೆಯ ಸಂಕೇತವಿರಬಹುದೆಂದು ಅಂದುಕೊಂಡೆ.

(ಮುಂದುವರಿಯಲಿದೆ)