[ಖ್ಯಾತ ನಾಟ್ಯಗುರು ಕೆ. ಮುರಲೀಧರ ರಾವ್ ಈಚೆಗೆ (ಮೇ ೧, ೨೦೧೭) ನಿಧನರಾದರು. ಮುರಲೀಧರರಾಯರು ನಾಟ್ಯಕೆ ಗುರುವೆನಲು ಬರೆದ ಮತ್ತು ರೂಪಿಸಿದ (ರೇಖಾಚಿತ್ರ ಹಾಗೂ ಛಾಯಾಚಿತ್ರಗಳೂ ಅವರವೇ) ‘ನೃತ್ಯಲೋಕ’ದ ಪ್ರಕಾಶಕ ನಾನು. ಅವರ ಗಣ್ಯ ಶಿಷ್ಯವರ್ಗದಲ್ಲಿ ಹೆಸರಾಂತ ಶ್ರೀವಿದ್ಯಾಮುರಲೀಧರ್ ಈಚೆಗೆ (೨-೯-೨೦೧೭) ಮಂಗಳೂರ ಪುರಭವನದಲ್ಲಿ ‘ಗುರುಸ್ಮರಣೆ’ಯನ್ನು ತುಂಬ ಅರ್ಥಪೂರ್ಣವಾಗಿ ನಡೆಸಿದರು. ಆ ಕಲಾಪದ ದೊಡ್ಡ ಹಾಸಿನಲ್ಲಿ ಅಯಾಚಿತವಾಗಿ ನನಗೂ ಒಂದು ಸಣ್ಣ ಅಭಿಪ್ರಾಯ ಮಂಡನೆಗೆ ಅವಕಾಶ ಒದಗಿದ ಬಲದಲ್ಲಿ, ಇಲ್ಲಿ ಮುರಳೀಧರರಾಯರ ಸ್ಮರಣೆಗೊಂದು ದಾಖಲೀಕರಣದ ನೆಲೆ ಕೊಡಲು ಪ್ರಯತ್ನಿಸಿದ್ದೇನೆ.]

ದ್ರೋಣರ ಪಾದಕ್ಕೆ ಬಾಣ ಹೊಡೆದಂತೆ….

ಹದಿನೈದು ದಿನಗಳ ಹಿಂದೆ ಶ್ರೀವಿದ್ಯಾ ಮುರಲೀಧರ್ ನನಗೆ ದೂರವಾಣಿಸಿ “ಗುರುಸ್ಮರಣೆ ಮಾಡ್ತಾ ಇದ್ದೇವೆ, ನೀವೂ ಭಾಗವಹಿಸಬೇಕು” ಎಂದು ಕರೆದರು. ಆಗ ನನ್ನ ಮನಸ್ಸು ೧೯೯೮ರ ಮೇ ೨೮ರಷ್ಟು ಹಿಂದಕ್ಕೆ ಜಾರಿತು. ಅಂದು ನನಗೆ ಅಷ್ಟೇನೂ ಪರಿಚಯವಿಲ್ಲದ ನಾಟ್ಯಾಚಾರ್ಯ ಕಾಸರಗೋಡು (ಕೆ.) ಮುರಲೀಧರರಾವ್ ಎನ್ನುವವರು, ಮೈಸೂರಿನಲ್ಲಿದ್ದುಕೊಂಡು ಬರೆದ, ಮಂಗಳೂರಿನ ನನ್ನ ಬಡ-ಪ್ರಕಾಶನ ವ್ಯವಸ್ಥೆ – ಅತ್ರಿಗೆ, ಬೃಹತ್ ಗ್ರಂಥವೇ ಆದ ನೃತ್ಯಲೋಕದ ಲೋಕಾರ್ಪಣೆ. ಆಗ “ಈಕೆ ಮಡಿಕೇರಿಯ ಕಾಲೇಜ್ ಹುಡುಗಿ, ಮುರಳೀಧರರಾಯರ ಶಿಷ್ಯೆ, ಪುಸ್ತಕದಲ್ಲಿ ಪ್ರಕಟವಾದ ಚಿತ್ರಗಳ ರೂಪದರ್ಶಿ” ಎಂದು ನನ್ನ ತಂದೆ (ಜಿಟಿನಾ) ಪರಿಚಯಿಸಿದ್ದು ಶ್ರೀವಿದ್ಯಾರಾಮನ್ನರನ್ನು (ಹೆಸರಿನ ಉತ್ತರಾರ್ಧ ಆಕೆಯ ತಂದೆಯದ್ದು). ಅಂದು ಸಭಾಕಲಾಪದ ಬೆನ್ನಿಗೆ ಗುರುವಿನ ಪ್ರತಿಭಾ ಅಭಿವ್ಯಕ್ತಿಯಾಗಿ ರಂಗದಲ್ಲಿ ನೃತ್ಯ ಕಲಾಪದೊಂದಿಗೆ ಮೆರೆದವರೂ ಈಕೆಯೇ. ಅನಂತರದ ದಿನಗಳಲ್ಲಿ ಶ್ರೀವಿದ್ಯಾ ಮಂಗಳೂರು ವಿವಿನಿಲಯದ ಸ್ನಾತಕೋತ್ತರ ವಿದ್ಯಾರ್ಥಿನಿ, ಸಂಶೋಧನಪಟು, ಎಲ್ಲೋ ಅಧ್ಯಾಪಿಕೆ ಎಂದೆಲ್ಲಾ ಕಾಣುತ್ತಿದ್ದಂತೆ ಗೃಹಿಣಿಯಾಗಿ ಶ್ರೀವಿದ್ಯಾಮುರಲೀಧರ್ (ಈಗ ಹೆಸರಿನ ಉತ್ತರಾರ್ಧ ಆಕೆಯ ಪತಿಯದ್ದು) ಅನ್ನಿಸಿಕೊಂಡದ್ದೂ ಆಯ್ತು. ಮತ್ತೆ ಪತಿಯನ್ನನುಸರಿಸಿ ವಿದೇಶದಲ್ಲಿ ಕೆಲಕಾಲ ಇದ್ದದ್ದು, ಮರಳಿ ಮಂಗಳೂರನ್ನೇ ಕಾರ್ಯಕ್ಷೇತ್ರವಾಗಿ ಆರಿಸಿಕೊಂಡದ್ದೂ ಆಯ್ತು.

ಶ್ರೀವಿದ್ಯಾ ಮುರಲೀಧರ್ ಅವರ ನೇತೃತ್ವದ ಸೌರಭ ಸಂಗೀತ ನೃತ್ಯ ಕಲಾ ಪರಿಷತ್ತಿನ ತಾಯಿಬೇರು ಮಡಿಕೇರಿಯಲ್ಲಿದ್ದರೆ ದಟ್ಟ ಶಾಖೆಗಳು ಮಂಗಳೂರನ್ನು ವ್ಯಾಪಿಸಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮೊನ್ನೆ (೨-೯-೨೦೧೭, ಮಂಗಳೂರ ಪುರಭವನ) ನೂರಕ್ಕೂ ಮಿಕ್ಕು ಎಳೆವರೆಯದ ‘ಮುಗುಳುಗಳು’ ವೇದಿಕೆಯ ಮುಂಚೂಣಿಯಲ್ಲಿ ಸ್ಥಿತರಾಗಿ, ಪದಚಲನೆಯಿಲ್ಲದೆ, ಗುರು ಅಷ್ಟಕಕ್ಕೆ ನೀಡಿದ ಸಾಭಿನಯ ಉಲಿತ, ನಾಟ್ಯಾಚಾರ್ಯ ಕೆ. ಮುರಲೀಧರ ರಾವ್ ಸ್ಮರಣ ಕಲಾಪಕ್ಕೆ ನಿಜದ ಚಾಲನೆ ನೀಡಿತು. (ವಿಡಿಯೋ ತುಣುಕು ನೋಡಿ) ಹಿಂಬಾಲಿಸಿದಂತೆ ಮುಖ್ಯ ಗುರುಸ್ಮರಣಾ ಕಲಾಪವನ್ನು ಮುರಲೀಧರರಾಯರ ನೇರ ಶಿಷ್ಯೆ, ಶ್ರೀವಿದ್ಯಾಮುರಲೀಧರ್ ಸುಮಾರು ಎರಡು ಗಂಟೆಗಳ ಕಾಲ ಅಮೋಘ ನಾಟ್ಯದ ಮೂಲಕವೇ ಮಾಡಿದ್ದು ಹೃದಯಸ್ಪರ್ಷಿಯಾಗಿತ್ತು. (ಎರಡು ವಿಡಿಯೋ ತುಣುಕುಗಳನ್ನು ನೋಡಿ) ಮಹಾಭಾರತದಲ್ಲಿ ವೀರಧನಂಜಯ ಕೋಲಗುರು ದ್ರೋಣರ ಪಾದಗಳಿಗೆ ಶರಪ್ರಯೋಗಿಸಿ ‘ವೀರವಂದನೆ’ ಕೊಟ್ಟಂತೆ ಇಲ್ಲಿ ಕೆ. ಮುರಲೀಧರ ರಾವ್ ಎನ್ನುವ ನಾಟ್ಯಗುರುವಿಗೆ ಶಿಷ್ಯೆಯಿಂದ ನಾಟ್ಯವಂದನೆ! ಇವರಿಗೆ ಹಿಮ್ಮೇಳದಲ್ಲಿ ಸಂಗೀತದಲ್ಲಿ ಪಾಲಕ್ಕಾಡಿನ ಅನಿಲ್ ಕುಮಾರ್, ನಟ್ಟುವಾಂಗದಲ್ಲಿ ಪಾಲಕ್ಕಾಡಿನ ದಿವಾಕರನ್ ನಾಯರ್, ಮೃದಂಗದಲ್ಲಿ ಪಾಲಕ್ಕಾಡಿನ ಟಿ.ಆರ್. ಪರಮೇಶ್ವರನ್ ಅಯ್ಯರ್, ಕೊಳಲಿನಲ್ಲಿ ಉಡುಪಿಯ ಮುರಲೀಧರ್ ಮತ್ತು ಪಿಟಿಲಿನಲ್ಲಿ ಉಡುಪಿಯ ಪ್ರದೇಶ್ ಆಚಾರ್ ಸಹಕರಿಸಿದರು.

ಮುರಲೀಧರ ರಾವ್ ಸ್ಮರಣೆಯ ಕಲಾಪ ನಿರ್ವಹಣೆ (ಮಂಜುಳಾ ಶೆಟ್ಟಿ) ಮತ್ತು ನಾಟ್ಯ ವೈವಿಧ್ಯಗಳಿಗೆ ವಿವಿಧ ನಾಟ್ಯ-ಶಿಕ್ಷಕ ಮಿತ್ರರಿಂದಲೇ (ನನ್ನ ಪರಿಚಯ ಬಲದಲ್ಲಿ ಹೆಸರಿಸುವುದಾದರೆ ರಾಧಿಕಾ ಶೆಟ್ಟಿ, ದೀಪಕ್ ಕುಮಾರ್, ಸೌಮ್ಯ ಸುಧೀಂದ್ರ, ಭ್ರಮರಿ ಶಿವಪ್ರಕಾಶ್ ಅಲ್ಲದೆ, ಪ್ರತಿಮಾ ಹೊಳ್ಳ, ವಿದ್ಯಾ ಮನೋಜ್, ಶೈಲಜಾ ಶಿವಶಂಕರ್) ವಿವರಣೆಗಳನ್ನು ಕೊಡಿಸಿದ್ದು ತುಂಬ ಅರ್ಥಪೂರ್ಣವಾಗಿತ್ತು. ಮೊದಲಲ್ಲಿ ಗಣ್ಯರಿಂದ (ಕಮಲಾಕ್ಷ ಆಚಾರ್, ರಾಜಶ್ರೀ ಉಳ್ಳಾಲ್, ಗೀತಾ ಸರಳಾಯ, ಚಂದ್ರಶೇಖರ ನಾವಡ, ಶಾರದಾಮಣಿ ಶೇಖರ್) ಔಪಚಾರಿಕ ದೀಪೋಜ್ವಲನ, ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ನಡುವಿನ ಸಣ್ಣ ವಿರಾಮದಲ್ಲಿ ಪುಟ್ಟ ಸಭಾಕಲಾಪ (ಕಮಲಾಕ್ಷ ಆಚಾರ್, ಪ್ರತಿಭಾ ಸಾಮಗ ಮತ್ತು ನಾನು), ಗಣ್ಯರ ಸಮ್ಮಾನಗಳು ಸಾರ್ವಜನಿಕ ಕಲಾಪವೊಂದರ ಅನಿವಾರ್ಯ (?) ಸಂಗಾತಿಗಳಂತೆ ಹಾದುಹೋದವು. ಅಲ್ಲಿನ ನನ್ನ ಮಾತುಗಳು ತೂಕ ತಪ್ಪದ ಎಚ್ಚರದಲ್ಲಿ ಬರೆದು ಓದಿದ್ದೆ. ಇಲ್ಲಿ ಅದನ್ನು ತುಸು ಪರಿಷ್ಕರಿಸಿ, ನಿಮ್ಮ ನಿಕಷಕ್ಕೆ ಒಡ್ಡಿಕೊಳ್ಳುತ್ತಿದ್ದೇನೆ.

ಪ್ರಕಾಶಕನ ಮಾತುಗಳು

ಮಿತ್ರರೇ,

ಮುರಲೀಧರರಾಯರ ಅದ್ವಿತೀಯ ಪುಸ್ತಕ – ನೃತ್ಯಲೋಕ. ಇದು ಲೋಕಾರ್ಪಣವಾಗುವ ನಿಟ್ಟಿನಲ್ಲಿ ಹಣಹಾಕಿದವನೆಂಬ ನೆಲೆಯಲ್ಲಿ ನಾನದರ ಪ್ರಕಾಶಕ. ಯಾವುದೇ ಶಾಸ್ತ್ರೀಯ ಕಲಾಪ್ರಕಾರದಲ್ಲೂ ಪ್ರವೇಶವಿಲ್ಲದ ನಾನು ಕೇವಲ ನೃತ್ಯಲೋಕದ ಪ್ರಕಾಶಕನೆಂಬ ಬಲದಲ್ಲಿ, ಈ ನಾಟ್ಯಗುರು ಸ್ಮರಣೆಯ ಸಂದರ್ಭದಲ್ಲಿ ನಾಲ್ಕು ಮಾತಾಡಲು ನಿಂತಿದ್ದೇನೆ.

ವಾಸ್ತವದಲ್ಲಿ ನೃತ್ಯಲೋಕದ ನಿಜ ಪ್ರಕಾಶಕರು ನನ್ನ ತಂದೆ – ಜಿಟಿ ನಾರಾಯಣ ರಾವ್. ೧೯೭೦-೮೦ರ ದಶಕಗಳಲ್ಲಿ ಜಿಟಿನಾ ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸುತ್ತಿದ್ದ ಕನ್ನಡ ವಿಶ್ವಕೋಶದ ಸಂಪಾದಕರಾಗಿದ್ದರು. ವಿಶ್ವಕೋಶಕ್ಕೆ ಅವರು ಬಿಡಿಗೆಲಸದ ಚಿತ್ರಕಾರರನ್ನು ತೊಡಗಿಸಿಕೊಳ್ಳುತ್ತಿದ್ದರು. ಆಗ ಯಾವ ಪೂರ್ವ ಪರಿಚಯವೂ ಇಲ್ಲದೆ ಸಿಕ್ಕವರು ಈ ರಾಯರು. ಈ ಪುಣ್ಯಾತ್ಮನಾದರೂ ಎಂದೂ ತನ್ನ ಬಣ್ಣಿಸದ ತುಂಬಿದ ಕೊಡ. ಆದರೆ ಅವರ ರೇಖೆಗಳು “ಎಲ್ಲರಂತವನಲ್ಲ ಈತ” ಎಂದು ಸಾರುತ್ತಲೇ ಇದ್ದವು. ಆ ಕಾರಣದಿಂದ ತಂದೆ ಪತ್ತೇದಾರಿ ಮಾಡಿದಾಗ, ಸ್ವಲ್ಪೇ ಸಮಯದಲ್ಲಿ ಇವರೊಬ್ಬ ಅಸಾಮಾನ್ಯ ನಾಟ್ಯಗುರು, ಬಹುಶ್ರುತ ವಿದ್ವಾಂಸ ಎಂದೆಲ್ಲಾ ಕಂಡುಕೊಂಡರು. ಮತ್ತೆ ಇವರ ಸಂಬಂಧಗಳು ವಿಕಸಿಸಿದ್ದನ್ನು ತಂದೆ, ನೃತ್ಯಲೋಕದ ಮುನ್ನುಡಿಯಲ್ಲಿ ಮತ್ತು ತಮ್ಮ ಆತ್ಮಕಥೆ – ಮುಗಿಯದ ಪಯಣದಲ್ಲಿ ಸಾಂದರ್ಭಿಕವಾಗಿ ಹೇಳಿಕೊಂಡಿದ್ದಾರೆ. ಮುಂದುವರಿದು ತಮ್ಮ ಇಂಗ್ಲಿಷ್ ಪುಸ್ತಕ With the great mindsನಲ್ಲಂತೂ ೧೩ ಪುಟಗಳುದ್ದಕ್ಕೆ ವಿಸ್ತಾರವಾಗಿಯೇ ಬರೆದಿದ್ದಾರೆ.

ಆ ದಿನಗಳಲ್ಲಿ ಮೈಸೂರಿನ ನಮ್ಮ ಮನೆ – ಅತ್ರಿ, ಇದರ ಕಾರ್ ಶೆಡ್, ಹಗಲಿನಲ್ಲಿ ಬಹುತೇಕ ಖಾಲಿಯಾಗಿರುತ್ತಿತ್ತು. ಅದನ್ನು ‘ನಾಟ್ಯಶಾಲೆ’ಯಾಗಿಸಲು ತಂದೆ ಮುರಲೀಧರ ರಾಯರಿಗೆ ಉಚಿತವಾಗಿ ಬಿಟ್ಟುಕೊಟ್ಟಿದ್ದರು. ಹೀಗೆ ಇಂದಿನ ಅಸಂಖ್ಯ ಖ್ಯಾತ ನಾಟ್ಯಗುರುಗಳು (ಉದಾಹರಣೆಗೆ ಶಾರದಾಮಣಿಶೇಖರ್, ಕೃಪಾಫಡ್ಕೆ, ಶ್ರೀವಿದ್ಯಾಮುರಲೀಧರ್ ಮುಂತಾದವರು) ಅಂದು ಪರೋಕ್ಷವಾಗಿ ನಮ್ಮ ಮನೆಯವರೇ ಆಗಿ, ಮುರಲೀಧರರಾಯರಲ್ಲಿ ಶಿಷ್ಯವೃತ್ತಿ ನಡೆಸಿದವರು ಎಂದು ಗುರುತಿಸುವಲ್ಲಿ ನನಗೆ ಹೆಮ್ಮೆ ಇದೆ. ಮುರಲೀಧರರಾಯರ ಓದು ಅಪಾರ, ಅನುಭವ ಮತ್ತು ತಿಳುವಳಿಕೆ ವೈವಿಧ್ಯಮಯ. ರಾಯರ ದಿನದ ಶಿಕ್ಷಣ ಕಲಾಪ ಮುಗಿದ ಮೇಲೆ, ಹೆಚ್ಚಾಗಿ ತಂದೆಯೊಡನೆ ಕಾಫಿ ಹೀರುತ್ತಾ ಮುಖ್ಯವಾಗಿ ನಾಟ್ಯ, ಸಂಗೀತಾದಿ ಕಲಾವಿಚಾರ ದೀರ್ಘ ಚರ್ಚೆ ನಡೆಸುತ್ತಿದ್ದರು. “ಇಂದಿನದು ಸರಿಯಿಲ್ಲ” ಎನ್ನುವ ಸಾಮಾನ್ಯೀಕರಣಕ್ಕೆ ನಿಲ್ಲುವುದು ನನ್ನ ತಂದೆಯ ಜಾಯಮಾನವಲ್ಲ, ಅದನ್ನು ಉತ್ತಮೀಕರಿಸುವಲ್ಲಿ ಮುರಲೀಧರರಾಯರ ಸಾಮರ್ಥ್ಯ ಸೊರಗಿದ್ದೂ ಇಲ್ಲ. ಇದರ ಪುಣ್ಯಫಲವಾಗಿ ಮುರಲೀಧರರಾಯರು ೫೦೪ ಪುಟಗಳ ಹೆಬ್ಬೊತ್ತಗೆ ನೃತ್ಯಲೋಕವನ್ನು ಬರೆದರು. ಅದರಲ್ಲಿನ ೩೪೫ ರೇಖಾಚಿತ್ರಗಳು ರಾಯರದೇ ಕುಂಚಕೌಶಲಕ್ಕೂ ೬೩ ಛಾಯಾಚಿತ್ರಗಳು ರಾಯರದೇ ಕ್ಯಾಮರಾ ಚಳಕಕ್ಕೂ ಸಾಕ್ಷಿ. ಇನ್ನೂ ಒಂದು ಸಣ್ಣ ಸ್ಪಷ್ಟನೆ – ಪುಸ್ತಕದ ಮುಖಪುಟವೂ ಸೇರಿದಂತೆ ಬಹುತೇಕ ಛಾಯಾಚಿತ್ರಗಳ ರೂಪದರ್ಶಿ ಶ್ರೀವಿದ್ಯಾರಾಮನ್ ಅರ್ಥಾತ್ ಇಂದಿನ, ಇಲ್ಲಿನ ಶ್ರೀವಿದ್ಯಾಮುರಲೀಧರ್!

ಕಾಸರಗೋಡು ಮೂಲದ, ಅಂದರೆ ಕೆ. ಮುರಲೀಧರರಾಯರು, ವಿದ್ಯಾರ್ಜನೆ, ವೃತ್ತಿ ಅವಕಾಶಗಳಿಗೆ ವಿವಿಧ ಊರುಗಳನ್ನು ಸುತ್ತಿದರು. ಬಾಳ ಸಂಜೆಗೆ ಮಂಗಳೂರಿನಲ್ಲಿ ಉಳಿದು ಮತ್ತೆ ಕೆ, ಅಂದರೆ ಕರಾವಳಿಯ ಮುರಲೀಧರರಾಯರೇ ಆಗಿಹೋದರು. ರಾಯರದು ಮನೆ, ಕುಟುಂಬವೆಂದು ಹಚ್ಚಿಕೊಳ್ಳದ ಸ್ವತಂತ್ರ ಪ್ರವೃತ್ತಿ. ಆದರೆ ಉರುಳಿದ ವರ್ಷಗಳು ಏಳು ದಶಕಗಳನ್ನೂ ಮೀರಿದ ಮೇಲೆ ಪ್ರಾಯ ಸಹಜವಾದ ಸಂಕಟಗಳು, ಮುಖ್ಯವಾಗಿ ಗಂಟುನೋವು, ಇವರಿಗೆ ಪರಾವಲಂಬನೆ ಅನಿವಾರ್ಯ ಮಾಡಿತ್ತು. ನನಗೆ ತಿಳಿದಂತೆ, ಕುದ್ರೋಳಿಯ ಆತ್ಮೀಯರ ಮನೆಯಲ್ಲಿ, ಮಂಗಳೂರಿನ ಹೊರವಲಯದ ಹಳ್ಳಿಮೂಲೆಯ ಬಿ. ರಾಮಭಟ್ಟರಲ್ಲಿ, ಮತ್ತೆ ರಾಮಭಟ್ಟರ ಸೊಸೆ – ಅಂದರೆ ಇವರ ಶಿಷ್ಯೆ ವಿದ್ಯಾಶ್ರೀ ಹಾಗೂ ಆಕೆಯ ಪತಿ ರಾಧಾಕೃಷ್ಣರ ಮಂಗಳೂರ ಮನೆಯಲ್ಲಿ, ಕೊನೆಗೆ ಇನ್ನೋರ್ವ ಶಿಷ್ಯೆ ಶಾರದಾಮಣಿ ಹಾಗೂ ಚಂದ್ರಶೇಖರ ಶೆಟ್ಟರ ಮನೆಯಲ್ಲಿ ಇದ್ದದ್ದು ನಿಮಗೆಲ್ಲ ತಿಳಿದೇ ಇದೆ. ನಡುವೆ ಒಂದೆರಡು ಬಾರಿ ಅಸ್ವಾಸ್ಥ್ಯ ಹೆಚ್ಚಿದಾಗ ಮಗುದೋರ್ವ ಶಿಷ್ಯೆ ನಂದಿನಿ ರಂಗನ್ ಅವರ ತಂಗಿ – ಭಾರತೀ ಸೊರಕೆ, ಕೇವಲ ಪ್ರೀತಿ ಗೌರವಗಳಿಗಾಗಿ ಇವರನ್ನು ತಮ್ಮ ಆಸ್ಪತ್ರೆಯಲ್ಲಿ ಅನಿರ್ದಿಷ್ಟ ಉಳಿಸಿಕೊಂಡು ಆರೈಕೆ ಕೊಟ್ಟದ್ದೂ ಇತ್ತು.

ರಾಯರ ಓದಿನ ಹಸಿವು ವಿಪರೀತ. ಅವರ ವಾಸ್ತವ್ಯ ಎಲ್ಲಿದ್ದರೂ ಏನೋ ಬಂಡಾಟ ನಡೆಸಿ ನನ್ನಂಗಡಿಗೆ ಬರುತ್ತಿದ್ದರು, ಇತರ ಪುಸ್ತಕ ಮಳಿಗೆಗಳಿಗೂ ಹೋಗುತ್ತಿದ್ದರು. ಕನಿಷ್ಠ ಒಂದು ಗಂಟೆಯಾದರೂ ಕಪಾಟುಗಳ ನಡುವೆ ಓಡಾಡಿ, ಪುಸ್ತಕ ಹೆಕ್ಕೆಕ್ಕಿ, ರುಚಿ ನೋಡಿ, ಕುತೂಹಲ ವಾಲಿದಂತೆಲ್ಲ ಒಲಿದು ಕಲಾಸಂಬಂಧಿ ಗಂಭೀರ ಕೃತಿಯಿಂದ ಹಿಡಿದು ಅನಾಮಧೇಯ ಕಾದಂಬರಿಯವರೆಗೆ ಕನ್ನಡವೇ ಬೇಕೆಂದಿಲ್ಲ, ಇಂಗ್ಲೀಷಾದರೂ ಖರೀದಿಸಿ ಒಯ್ಯುತ್ತಿದ್ದರು, ಓದುತ್ತಿದ್ದರು. ಆ ದಿನಗಳ ಅವರ ಕನ್ನಡ ಓದಿಗೆಲ್ಲ ಬಹಳ ದೊಡ್ಡ ಸಾಂಗತ್ಯ ಸುಖ ಕೊಟ್ಟವರು ನಿಸ್ಸಂದೇಹವಾಗಿ ವಿದ್ಯಾಶ್ರೀಯವರ ಮಾವ ಬಿ. ರಾಮ ಭಟ್ಟರು.

“ಓದು, ಬರಹದ ಶತ್ರು” ಎನ್ನುವ ಮಾತೊಂದಿದೆ. ಮುರಲೀಧರರಾಯರು ನೃತ್ಯಲೋಕಕ್ಕೂ ಹಿಂದೆ ಪುಸ್ತಕ ಬರೆದವರಲ್ಲ. ಮುಂದೆಯೂ ರಾಜ್ಯ ಸರಕಾರದ ನೃತ್ಯ ಸಂಬಂಧೀ ಪಠ್ಯ ಪುಸ್ತಕ ತಯಾರಿಯಲ್ಲಿ ಕೆಲಸವೇನೋ ಮಾಡಿದರು. ಆದರೆ ನಿಜ ಅರ್ಥದ ಪುಸ್ತಕ ಬರೆದದ್ದಲ್ಲ, ಬಿಡಿ. ಹಾಗಾಗಿ ನೃತ್ಯಲೋಕ ಪುಸ್ತಕದ ಕಲ್ಪನೆಯಿಂದ ತೊಡಗಿ, ರೂಪಣೆಯ ಉದ್ದಕ್ಕೂ ಅವರಿಗೆ ವಿಷಯದ ಕುರಿತ ಸವಾಲುಗಳನ್ನು ಜಿಟಿನಾ ಕೊಡುತ್ತಾ ಹೋದರು. ರಾಯರು ವಿರಾಮದಲ್ಲಿ ಮತ್ತು ಕಂತುಕಂತಿನಲ್ಲಿ ಅದನ್ನು ಪರಿಹರಿಸುವಂತೆ ಬರೆದು ತರುತ್ತಿದ್ದರು. ಆ ಪುಟಗಳನ್ನು ಇಬ್ಬರೂ ಕುಳಿತು ಚರ್ಚಿಸಿದ ಮೇಲೆ, ರಾಯರೇ ಮತ್ತವನ್ನು ಪರಿಷ್ಕರಿಸುತ್ತ ಅಂತಿಮ ರೂಪಕ್ಕಿಳಿಸುತ್ತಿದ್ದರು. ನನ್ನ ತಂದೆ, ಮುಂದೆ ನನ್ನೆಲ್ಲ ಪ್ರಕಟಣೆಗಳಂತೇ ನೃತ್ಯಲೋಕದ್ದೂ ಕರಡಚ್ಚು ತಿದ್ದುವುದರಿಂದ ತೊಡಗಿ ಅಂತಿಮ ಪುಸ್ತಕ ರೂಪ ಬರುವವರೆಗೆ ಮುದ್ರಣಾಲಯದ ಜವಾಬ್ದಾರಿಯನ್ನೂ ಕೇವಲ ಸಾಹಿತ್ಯ ಪ್ರೀತಿಯ ಕೆಲಸವಾಗಿ ನಡೆಸಿದ್ದರು.

ನಾನು ಎಂದೂ ದೊಡ್ಡ ಗಂಟಿನ, ಅಥವಾ ಖ್ಯಾತನಾಮದ ಪ್ರಕಾಶಕ ಆಗಿರಲಿಲ್ಲ. ಬಹಳ ದೊಡ್ಡ ಹೂಡಿಕೆಯ ನೃತ್ಯಲೋಕಕ್ಕಾಗುವಾಗ ಮುರಲೀಧರರಾಯರ ಅಭಿಮಾನಿಗಳು ವಿಶ್ವಾಸದಿಂದ ಕೊಟ್ಟ ಪ್ರಕಟಣಪೂರ್ವ ಹಣವನ್ನೂ ಸೇರಿಸಿ ಲೇಖಕ, ಮುದ್ರಕರಾದಿಗಳಿಗೆ ಸಲ್ಲಬೇಕಾದ ಯುಕ್ತ ಸಂಭಾವನೆಗಳೆಲ್ಲವನ್ನು ಪೂರ್ಣವಾಗಿ ಮೊದಲಲ್ಲೇ ಮುಟ್ಟಿಸಿದ್ದೆ. ಇನ್ನು ಮುರಲೀಧರರಾಯರಿಗೆ ವಿದ್ವತ್ ಸಮ್ಮಾನ ಏನಿದ್ದರೂ ಕನ್ನಡ ಸಾರಸ್ವತಲೋಕ ಕೊಡುತ್ತದೆಂದು ಭಾವಿಸಿದ್ದೆ. ಜನ ಮುಗಿಬಿದ್ದು ಪುಸ್ತಕ ಕೊಂಡು ಓದಿ, ಅದರ ಸವಿಚಾರ ಅನುಸರಿಸಿ, ಪ್ರಚಾರ ಕೊಟ್ಟು ಹಲವು ಮುದ್ರಣಗಳನ್ನೂ ಕಾಣಿಸುತ್ತಾರೆಂದೂ ಭ್ರಮಿಸಿದ್ದೆ. ವರ್ಷಂಪ್ರತಿ ನೃತ್ಯ ಪರೀಕ್ಷೆಗೆ ಸಜ್ಜುಗೊಳ್ಳುವ ನೂರಾರು ಗುರುವೃಂದ ಮತ್ತು ಸಾವಿರಾರು ಶಿಷ್ಯಮಂದೆ ನನ್ನ ಅಂಗಡಿಗೆ ಬರುತ್ತಲೇ ಇದ್ದರು. ಬೇಡಿಕೆಗೆ ಅನುಸಾರವಾಗಿ ಎಲ್ಲೆಲ್ಲಿನದೋ ನೂರಾರು ಪಠ್ಯಪುಸ್ತಕ, ಗೈಡುಗಳನ್ನೂ ಮಾರುತ್ತಿದ್ದೆ. ಆದರೆ ೧೯೯೮ರಲ್ಲಿ ಪ್ರಕಟವಾದ ಕೇವಲ ರೂ ಮುನ್ನೂರರ ಬೆಲೆಯ ಈ ಹೆಬ್ಬೊತ್ತಗೆ – ನೃತ್ಯಲೋಕದ ಮೊದಲ ಮುದ್ರಣದ ಪ್ರತಿಗಳು ಮಾತ್ರ ಇಂದಿಗೂ ಅಂದರೆ ಹತ್ತೊಂಬತ್ತು ವರ್ಷಗಳ ಮೇಲೂ ಪೂರ್ಣ ಮಾರಾಟವಾಗಿಲ್ಲ!

 

 

ಇಂದಿನ ನೆಲದೂರವಾದ ಶಿಕ್ಷಣ ಮಾಧ್ಯಮಕ್ಕೆ ಹೊಂದಿಕೊಳ್ಳುವಂತೆ, ರಾಯರ ಹಿರಿಯ ಶಿಷ್ಯವರ್ಗ ಇದರ ಇಂಗ್ಲಿಷ್ ಅನುವಾದವನ್ನು ತರುತ್ತಿರುವ ಮಾತು ಕೇಳಿದ್ದೆ, ನಾನು ನೋಡಿಲ್ಲ. ಅದಾದರೂ ಬಹುಸಂಖ್ಯೆಯಲ್ಲಿ ಪ್ರಸಾರ ಕಂಡು, ನಿಜ ವಿದ್ವತ್ ಸಮ್ಮಾನ ರಾಯರಿಗೆ ಸಲ್ಲಲಿ.

ಯಾವುದೇ ಮೃತರ ಪಟಕ್ಕೆ ಹೂ ಚೆಲ್ಲುವುದನ್ನೋ ಉತ್ಪ್ರೇಕ್ಷೆಗಳನ್ನು ಹೊಸೆಯುವುದನ್ನೋ ಯೋಗ್ಯ ಸ್ಮರಣೆ ಎಂದು ನಾನು ಒಪ್ಪಲಾರೆ. ನನ್ನನ್ನು ಈ ಕಲಾಪಕ್ಕೆ ಶ್ರೀವಿದ್ಯಾ ಕೇಳಿಕೊಂಡಾಗಲೂ ನಾನು ಮೊದಲು ಶುದ್ಧ ನಿರಾಕರಿಸಿದ್ದೆ. ಅನಂತರ ಇದು ಸಾರ್ವಜನಿಕದಲ್ಲಿ ನನಗೆ ಸ್ಪಷ್ಟೀಕರಣ ಕೊಡಲು ಸಣ್ಣ ಅವಕಾಶ ಎಂದನ್ನಿಸಿದಾಗ ಸಂಕೋಚದಲ್ಲೇ ಶ್ರೀವಿದ್ಯಾರನ್ನು ಮರುಸಂಪರ್ಕಿಸಿದಾಗ ಹೇಳಿದ್ದೆ – “ಹತ್ತರಿಂದ ಹದಿನೈದು ಮಿನಿಟಷ್ಟೇ ಮಾತಾಡುತ್ತೇನೆ.” ಆಕೆ ಅದಕ್ಕೆ ಪೂರಕವಾಗಿಯೇ “ಸರಿಯಾಗಿದೆ. ನಾವಾದರೂ ಸಭಾಕಲಾಪವನ್ನು ಅರ್ಧ ಗಂಟೆಗೆ ಮಿತಿಗೊಳಿಸುವ ಉತ್ಸಾಹಿಗಳು.” ನಾಟ್ಯ ಕಲಾಪವೇ ಮುರಲೀಧರ ರಾಯರಿಗೆ ಯುಕ್ತ ಸ್ಮರಣಿಕೆ. ವ್ಯಕ್ತಿಗೆ ಜೀವಮಿತಿ ಇದೆ, ಆದರೆ ಆತನ ಕೃತಿ ಅಮರ ಎಂದು ಗುರುತಿಸುವುದು ನಿಜಸ್ಮರಣೆ. ಇಂದು ನಾನು ಪುಸ್ತಕೋದ್ಯಮದಿಂದಲೇ ನಿವೃತ್ತನಾಗಿದ್ದೇನೆ. ಹಾಗಾಗಿ ಹೆಚ್ಚು ಧೈರ್ಯದಿಂದ ಹೇಳಬಲ್ಲೆ, ನೃತ್ಯಲೋಕ ಅಥವಾ ಅದರ ಇಂಗ್ಲಿಷ್ ಅನುವಾದವಾದರೂ ಹಲವು ಮುದ್ರಣಗಳನ್ನು ಕಾಣುವಂತಾಗಲಿ, ಮುರಲೀಧರರಾಯರು ಔಪಚಾರಿಕ ಸಮಾರಂಭಗಳ ಮಾತಿನಲ್ಲಿ ಅಲ್ಲ, ಎಲ್ಲರ ಸ್ಮರಣೆಯಲ್ಲಿ ಜೀವಂತವಾಗಲಿ ಎಂದಷ್ಟೇ ಹಾರೈಸಬಲ್ಲೆ.

ಸ್ಮರಣೆಗೆ ಅನುಬಂಧ

[ಮೇ ೨೫, ೧೯೯೮ರಂದು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ‘ನೃತ್ಯಲೋಕ’ ಲೋಕಾರ್ಪಣ ಮತ್ತು ಅದರ ಲೇಖಕ ಕೆ. ಮುರಲೀಧರ ರಾವ್ ಸನ್ಮಾನ ನಡೆಯಿತು. ಅದರ ಅಂಗವಾಗಿ ಜೂನ್ ೮, ೧೯೯೮ರಂದು ಸನ್ಮಾನ ಸಮಿತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರುಗಳ ಶುಭಹಾರೈಕೆ, ೨೩ ಜಾಹೀರಾತುಗಳ, ೨೪ ಪುಟಗಳ ಉಚಿತ ಪುಸ್ತಿಕೆ – ಸವಿಸಂಚಿಕೆಯೊಂದನ್ನು ಪ್ರಕಟಿಸಿತು. ಅದರ ಐದು ಲೇಖನಗಳು ಮತ್ತು ಕೆಲವು ಉದ್ದೃತ ಮಹಾನುಡಿಗಳನ್ನು ಮಾತ್ರ ಕೆಳಗೆ ಕೊಡುತ್ತಿದ್ದೇನೆ.

ಸನ್ಮಾನ ಸಮಿತಿಯ ಪದಾಧಿಕಾರಿಗಳು: President – K.V. Murthy, Secretary – K. Ramamurthy Rao, Treasurer – G.T. Narayana Rao, Joint Secretary – M.S. Narayan, Publisher – G.N.Ashokavardhana, Members: Anupama (Kulai), Bharathi Jeevaraja Sorake, Chandramathi A, Guru R, Himamshu CR, Kripa Phadke, Lakshminarayana (Babu) SK, Lakshminarayan M, Manochchaya (France), Nandini Rangan (US), Nandini Shekhar, Rajan PM, Raja Rao MH, Shailaja Shivashankar, Sharadamani Shekhar, Sheela Shridhar, Srividya Raman, Vani Ramesh (US), Vasundhara Doreswami, Vidyashree, Vijaya Murthy, Yamuna Rani HK (US).]

ಅಧ್ಯಕ್ಷರ ನುಡಿಗಳು

Between You and Us

Natyacharya K. Muralidhara Rao Sanmana Samiti came into existence towards the end of 1997. Muralidhara Rao, a distinguished Bharata Natya Guru and exponent had just then completed writing his magnum opus Nirityaloka in Kannada. Athree Book Centre of Mangalore had lovingly undertaken the challenging task of publishing and marketing the book.

Who is Muralidhara Rao? “His research and experimentation in this art (of Bharatha Natya) have given it a new dimension. In his continuous pursuit of beauty he draws inspiration from classics, different forms of arts, and ultimately from life itself. Publicity-shy, wedded to art only, an external wanderer sojourning where Bharatha Natya calls him, Muralidhara Rao has grown into an institution – confluence of the best in tradition and modernity”. (Quoted from the appeal issued by the Samiti seeking donation for presenting a purse to him on the occasion of the release of Nrityaloka) Art and culture play a very significant role in our lives: culture is the essence of art and art is the expression of culture. Our ancient and rich heritage of art and culture had found royal patronage in the earlier times. Gradually Sabhas and Centres, Organised by select rasikas moved into the arena and made art and culture truly a people’s movement and concern.

Thus arose our Samiti: the admirers, friends and students of the Natyacharya decided to celebrate the event (of the release of Nrityaloka) on a grand, dignified and purposeful manner; the event should have two complementary functions – purse presentation to the Natyacharya and a Bharatha Natya recital by one of his pupils.

I am privileged to record here that the function at the Jaganmohana Palace on 25 May 1998 made history in our cultural life: Sri R. Guru released Nrityaloka, honoured the Natyacharya with a purse of Rs. 1,03,500, presented him Rs. 50,000 as royalty on the book paid by the publishers Athree Book Centre and felicitated him. Sri Sri Shivarathri Deshikendra Mahasvamigalu, in his unavoidable absence at the function, had sent his written message which was read out to audience. Sri G.N.Ashokavardhana, the publisher, and Sri R.V. Sreenivasa Murthy and Sri R.S. Mohan Murthy, the printers, were specially honoured on the occasion.

The Bharatha Natya recital by Kumari Srividya Raman, Madikeri, with the Natyacharya as Nattuvanar, sri L Ramashesha (vocal), Sri A.V. Prakash (flute), Sri A.P. Srinivas (violin) and Sri Mysore M.A. Krishnamurthy (mridanga) came as a fitting climax to the grand and unique function.

We are grateful to the donors, advertisers and other well wishers who have willingly cooperated with the Samiti and thus expressed their love and regards to Natyacharya K. Muralidhara Rao.

– K.V. Murthy

ಕೋಶಾಧಿಕಾರಿಯವರ ನುಡಿಗಳು

Pandanallur With a Difference

Natyacharya Kasargod Muralidhara Rao (1924), an eminent exponent of the Pandanallur school of Bharata Natya, has given it a new dimension through his research and experiments. In his continuous pursuit of beauty he draws inspiration from classics, other forms of arts, and finally from life itself. Publicity-shy, wedded to art only (“I was too busy to think of marriage at any time!”), a loner, and an eternal wanderer having no home anywhere, he has grown into a phenomenon.

The following four episodes typically give an insight into Rao’s multifaceted personality. Bangalore Ravindra Kalakshetra, 1962. A series of Bharata Natya recitals had been arranged in succession to commemorate the annual Nritya Sammelana. Here Rao presented two of his very promising students Vasundhara, aged 12 (now Dr. Vasundhra Doraswami in Mysore), and Chitrakala, 15. When the item “Krishna nee begane baaro” was announced, there sprang from the facing greenroom an elderly lady, who stood statue-still watching the ever green drama of life unfolding elegantly. Her spontaneous remark was very significant: “You’ve open’d yet another fragment of the frontiers of beauty!” That was Rao’s first encounter with the legendary T. Balasaraswati (1918-85), Queen of Bharatha Natya.

Karnataka Sangeeta Nritya Academy with the Hindustani Vocal maestro Gagubai Hanagal as President decided to celebrate the Purandara aradhanotsava at Mysore on a grand scale and in a novel way (1984). Is there anyone to enact the Saint’s life and message through the dance medium choreographing Purandara-kritis only? Rao accepted the challenge with humility, worked with assiduous tenasity and forged a new technique for the show: in the simultaneous three-tier presentation, Purandara would stand witness to the unfolding drama, the meaning of the text would be enacted in the second tier and the spiritual overtones dovetailed to it in the third tier. Gangubai remarked “Only a visionary backed by pragmatism and life’s experinece could produce such a miracle. In those four odd hours the Saint and his message elevated us to transcendental heights.”

Katia Legeret, a french girl, saw in Paris, the Bharatha Natya performance of Amaladevi, also French a deciple and accompanying dancer of Ramagopal. Hypnotized, she wanted to get to the core of this ancient Indian art. Katiya, 26 came to India in search of a Guru who would quench her intellectual thirst. Mere reference to standard texts or traditional dicta would not satiate her curiosity. With an assumed Indian name – Manochchaya, she roamed in the south Indian states and finally landed at Mysore (1985). As luck would have it she stumbled on Muralidhara Rao whose midas touch turned this base metal into a golden ornament. I have seen this foreign damsel dancing with other senior deciples of Rao exuding confidence and elegance. “The mechanical perfection one can achieve in the Western classical dance leaves one spiritually blank. Not so in Bharata Natya: it is the dance of the soul, the external manifestation of the internal joy” she says.

It was a conventional Bharata Natya recital at the Ravinda Kalakshetra (1990). The teenager Nandini (now Nandini Rangan in the US) displayed there such refreshing originality, that it made the doyenne of the Pandanallur school, UK Chandrabhaga Devi, to rush to the Nattuvanga-Guru Muralidhara Rao and exclaim “The announcement says the girl is groomed in the Pandanallur style. But here I have witnessed a new and welcome offshoot ot it. Sure, it needs to be named after you.”

That is precisely the way Rao trains his pupils; creative and inspiring, introducing the soul of Bharatha Natya into new themes and situations, drawing out the best in the disciples, and strictly traditional yet inspiringly innovative. For example the way he teaches the well known ragamalike varna “Swamiye araittodiva Sakhiye” (K.N. Dandayudhapani) varies from student to student depending upon their natural potential and artisitic sesitivity. Once he presented five of them in succession: each dancer was excellent but different. “There is no patenting or manufacturing here!” he chuckles.

Q: “What is the speciality about the Pandanalluru style?”

A: “In jatis – the rhythmic structures as defined by the mridanga beats which trigger and nourish nritta movements – we insist on variety. Repetitions are completely avoided. While depicting emotion gentle and elegant suggestions (dhwani) are hinted. Vulgar shows, telling effects and clap-evoking poses are forbidden.”

Q: “What is wrong with poses?”

A: “While presenting a pose the artist becomes audience-conscious and to that extent creativity suffers. Sensational high jumps and rough movements have no place here. Face being the index of the mind expression is the very manifestation of creativity. Bharata Natya is not doll dance!”

Q: “Future of Bharata Natya”?

A: “Its potential is rich. It is in a parental position to all Indian dances. With great Gurus emanating it can unravel new treasures of art and explore new vistas of creativity. Until then it may mark time. But it will never die. Because the very soul of Indian culture has shaped this complete form of art.”

Q:”Message to young aspirants?”

A:”Total devotion to art at all times, intense practice throughout, imbibe life’s message from all sources, utter humility at peaks of success and firm faith in our culture at moments of depair – follow these dicta prescribed by our elders. Forsake not art, for art is life.”

From Kasargod (home of Yakshagana) to Mysore (home of Bharatha Natya) via so many places and professions have made Muralidhar Rao a complete Guru. Bharatha Natya teaching, choreographing new items, music, literature, painting, line-drawing and yoga are among his interests.

When commercialisation, vulgarization and selling Bharatha Natya to nincompoup moneybags through cosmetic dressing have gripped this ancient art and are eroding its vitals, he stands aloof as a referee, and arbiter and an authority who can give it proper motivation, meaning and direction. His solid contribution Nrityaloka serves as a watershed for the Bharatha Natya stream.

– G.T. Narayana Rao

ಪ್ರಕಾಶಕನ ನುಡಿಗಳು

ಅತ್ರಿ ಬುಕ್ ಸೆಂಟರ್ ಆರೋಹಣ

ಇಸವಿ ೧೯೭೩, ಮೈಸೂರಿನಲ್ಲಿ ನಾನು ಪ್ರಥಮ ಎಂ.ಎಯ ಬೇಸಗೆ ರಜೆಗೆ ಕರ್ನಾಟಕ ಸೈಕಲ್ ಪ್ರವಾಸದ ಬಗ್ಗೆ ಯೋಚನೆಯಲ್ಲಿದ್ದೆ. ಕುಟುಂಬ ಮಿತ್ರ ಶ್ರೀ ಡಿ.ವಿ.ಕೆ ಮೂರ್ತಿಯವರು ಬದಲಿ ಸಾಹಸದ ಸವಾಲನ್ನೇ ಕೊಟ್ಟರು. ಮುಂಬೈ ಕನ್ನಡಿಗರ ಮನೆ ಮನೆಗೆ ಕನ್ನಡ ಪುಸ್ತಕ ಮಾರುವ ಯೋಜನೆ; ವೀಳ್ಯ ಸ್ವೀಕರಿಸಿದೆ. ಡಿವಿಕೆಯವರ ಯೋಜನೆಯಂತೆ ಮುಂಬೈ ಪುಣೆಗಳಲ್ಲಿ ಹತ್ತು ಹದಿನೈದು ಭಾರೀ ಕಟ್ಟುಗಳ ಪುಸ್ತಕಗಳನ್ನು ಬಿಡಿಬಿಡಿಯಾಗಿ ಅಂದರೆ ಅಂದಾಜು ರೂಪಾಯಿ ಹದಿನೈದು ಸಾವಿರದ ವ್ಯಾಪಾರ ದಿಗ್ವಿಜಯವನ್ನು ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಏಕಾಂಗಿಯಾಗಿ ನಡೆಸಿದೆ. ಮೈಸೂರಿಗೆ ಮರಳಿದ ಮೇಲೂ ಆ ಮಹಾನಗರಗಳ ಕೆಲವು ಸಂಬಂಧಗಳನ್ನು ಅಂಚೆಯಲ್ಲಿ ಸಣ್ಣದಾಗಿ ಪೋಷಿಸಿಕೊಂಡು ಎಮ್ಮೆ ಮುಗಿಸಿದೆ. ಅನ್ಯವೃತ್ತಿಯ ಆಕರ್ಷಣೆಗಳನ್ನು ಕಳಚಿಕೊಂಡು ಮಂಗಳೂರಿನಲ್ಲಿ ಮಳಿಗೆ ತೆರೆದೆ. ಪುತ್ತೂರಿನ ನನ್ನ ಅಜ್ಜನ ಮನೆಯ ಬಳಗ ಮತ್ತು ಮಂಗಳೂರಿನಲ್ಲಿ ನಮ್ಮ ಕುಟುಂಬದ ಹಿರಿಯ ಮಿತ್ರ ಪ್ರೊ| ಬಿ.ವಿ ಕೆದಿಲಾಯರು ನನ್ನನ್ನೆಂದೂ ಸೋಲಲು ಬಿಡಲಿಲ್ಲ. ೧೯೭೫ ಅಕ್ಟೋಬರ್ ಮಂಗಳೂರಿನಲ್ಲಿ ಅತ್ರಿ ಬುಕ್ ಸೆಂಟರ್ ವೃತ್ತಿಪರವಾಗಿ ನೆಲಸಿತು. ಅದರ ವಿಕಾಸವನ್ನು ಸಣ್ಣದಾಗಿ ಗುರುತಿಸುವುದಾದರೆ….

೧೯೭೬ – ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಒಂದು ಪ್ರಚಾರಪ್ರಿಯ ಸರಕಾರೀ ಯೋಜನೆ – ಸ್ವೋದ್ಯೋಗಕ್ಕೆ ಸಹಾಯ. ನಾನು ಯಾವ ಸರಕಾರೀ ಸಹಾಯ ಬಯಸಿದವನೂ ಅಲ್ಲ, ಪಡೆದವನೂ ಅಲ್ಲ. ಆದರೆ ಆಕಾಶವಾಣಿ ನನ್ನನ್ನು ‘ಸ್ವೋದ್ಯೋಗದಲ್ಲಿ ಯಶಸ್ವಿ’ ಎಂದು ಗುರುತಿಸಿ, ನನ್ನ ಸಂದರ್ಶನ ನಡೆಸಿ, ಎರಡೆರಡು ಬಾರಿ ಪ್ರಸಾರ ಮಾಡಿತು; ಯಶಸ್ಸಿಗೆ ನೂರೆಂಟು ತಂದೆಯರು!

ಅಂಗಡಿ ತೆರೆಯುವ ಮುನ್ನ ಹಲವು ಸಣ್ಣಪುಟ್ಟ ಪ್ರದರ್ಶನ/ಮಾರಾಟ ನಡೆಸಿದ್ದರೂ ಸರಿಯಾದ ಹೊರ ಅನುಭವ ದಕ್ಕಿದ್ದು ೧೯೭೯ರ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ. ಶ್ರಮ, ಖರ್ಚು, ಪುಸ್ತಕ ದೂಳಾಗುವುದು, ಹಾಳಾಗುವುದು, ಕದ್ದು ಹೋಗುವುದು, ಸಾಲದ್ದಕ್ಕೆ ರಿಯಾಯಿತಿಯ ಮೇಲಾಟ ನೋಡಿ ಇನ್ನೆಂದೂ ‘ಸಾಹಿತ್ಯ ಜಾತ್ರೆ’ಗಳಲ್ಲಿ ಭಾಗವಹಿಸಬಾರದೆಂದು ನಿಶ್ಚೈಸಿದೆ.

ನನ್ನ ಹವ್ಯಾಸಿ ಆಸಕ್ತಿಗಳಾದ ಪರ್ವತಾರೋಹಣ ಮತ್ತು ತತ್ಸಂಬಂಧೀ ಸಾಹಸ ಕ್ರೀಡೆಗಳು, ಯಕ್ಷಗಾನ, ನಾಟಕ, ಸಂಗೀತ ಇತ್ಯಾದಿ ನೋಡುತ್ತಿದ್ದೆ, ಅಂಗಡಿಯಲ್ಲಿ ಮುಕ್ತ ಚರ್ಚೆಗೆ ತರುತ್ತಿದ್ದೆ, ಒಳ್ಳೆಯದೆನ್ನಿಸಿದ್ದಕ್ಕೆ ಪ್ರಚಾರವನ್ನೂ ಕೊಡುತ್ತಿದ್ದೆ. ಇಲ್ಲೆಲ್ಲ ಪರಿಣಾಮ, ಪ್ರತಿಫಲಗಳ ನಿರೀಕ್ಷೆ ನಾನೆಂದೂ ಇಟ್ಟುಕೊಳ್ಳಲಿಲ್ಲ. ಆದರೂ ಇದು ಅಂಗಡಿಗೆ ಹೊಸ ಗೆಳೆಯರನ್ನೂ ಹೊಸ ಆಯಾಮವನ್ನೂ ತಂದುಕೊಟ್ಟಿತು.

ವೃತ್ತಿ ಒಂದರಲ್ಲುಳಿದು ಇತರತ್ರ ದುಡ್ಡು ಮಾಡದ ನಿಲವು, ನಮ್ಮ ವೃತ್ತಿ ಹವ್ಯಾಸಕ್ಕೆ ಇತರರ ದಾನವನ್ನು ನಿರೀಕ್ಷಿಸದ ಧೋರಣೆ ನನಗೆ ತುಂಬ ಗೌರವವನ್ನು ತಂದುಕೊಟ್ಟಿತು. ೧೯೮೦ರಲ್ಲಿ ಆರ್ಥಿಕವಾಗಿ ಬಲಗೊಂಡೆ. ಸಹಜವಾಗಿ ಮದುವೆಯಾದೆ, ಬೈಕ್ ಕೊಂಡೆ, ಮನೆ ಕಟ್ಟಿಸಿದೆ. ಪರ್ವತಾರೋಹಣ ಸಪ್ತಾಹ ಜಿಲ್ಲೆಯ ವಿವಿಧ ಕಾಲೇಜುಗಳನ್ನು ಮುಟ್ಟಿ ಒಟ್ಟಾರೆ ನನಗೆ ದೊಡ್ಡ ಪದೋನ್ನತಿ ನೀಡಿತು: “ಬರಿಯ ವ್ಯಾಪಾರಿಯಲ್ಲ!” ಇದು ಪರೋಕ್ಷವಾಗಿ ವ್ಯಾಪಾರವನ್ನು ಬಲಗೊಳಿಸಿತು.

೧೯೮೩ ಮೈಸೂರು ವಿವಿನಿಲಯ ಪ್ರಸಾರಾಂಗದ ಸ್ವರ್ಣ ಮಹೋತ್ಸವದಲ್ಲಿ, ಪುಸ್ತಕೋದ್ಯಮ ಗೋಷ್ಠಿಯಲ್ಲಿ ಮೊದಲ ಬಾರಿಗೆ (‘ಮಾರಾಟಗಾರನ ಸಮಸ್ಯೆಗಳು’) ಪ್ರಬಂಧ ಮಂಡಿಸಿದೆ. ಅದರದೇ ಪರಿಷ್ಕೃತ ಆವೃತ್ತಿಯನ್ನು ೧೯೮೫ರಲ್ಲಿ ಮೈಸೂರಿನಲ್ಲೇ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲೂ ಮಂಡಿಸಿದೆ. ಇದು ಮುಂದೆ ಇಂಥ ಹಲವು ಪುಸ್ತಕೋದ್ಯಮ ವಕ್ತಾರಿಕೆಯನ್ನು ನನಗೆ ತಂದುಕೊಡುವುದರೊಡನೆ, ‘ವಿಚಾರದೊಂದಿಗೆ ವ್ಯಾಪಾರ’ ಎಂದೇ ಅತ್ರಿಯನ್ನು ಎಲ್ಲ ಗುರುತಿಸುವಂತಾಯ್ತು.

ಆದರ್ಶಗಳನ್ನು ಬಳಕೆಯಲ್ಲಿ ಹೆಚ್ಚು ಸ್ಫುಟವಾಗಿ ತೋರಲು ಅವಕಾಶ ಒದಗಿದ್ದು ಪ್ರಕಾಶನರಂಗದಲ್ಲಿ. ೧೯೯೦ರಿಂದ ತೊಡಗಿದ ನನ್ನ ಪ್ರಕಟಣೆಗಳು ಆದರ್ಶ ವಿಜ್ಞಾನಸಾಹಿತ್ಯದೊಡನೆ ವೈಚಾರಿಕತೆಯ ಪ್ರಸರಣವನ್ನು ಲಕ್ಷ್ಯವಾಗಿರಿಸಿಕೊಂಡಿತ್ತು. ಸಗಟು ಖರೀದಿ, ಅನುದಾನ, ಸಹಾಯಧನ, ವಶೀಲಿ ಮನ್ನಣೆಗಳ ಹಿಂದೆ ಬೀಳದೆ ಅಪ್ಪಟ ಓದುಗಸ್ನೇಹೀ ಬೆಲೆಯಲ್ಲೇ ಆದರೂ ಒಟ್ಟಾರೆಯಲ್ಲಿ ಐವತ್ತಕ್ಕೂ ಮಿಕ್ಕು ಯೋಗ್ಯ ಗ್ರಂಥಗಳನ್ನು ಪ್ರಕಟಿಸಿದೆ. ಸ್ವಂತ ಪ್ರಕಾಶನಗಳನ್ನು ನಡೆಸಿದ ಮಾಸ್ತಿ, ಕಾರಂತ, ಕುವೆಂಪು ಮೊದಲಾದ ಘನ ಲೇಖಕರನ್ನು ನಿಕಟವಾಗಿ ಕಾಣುವ ಅವಕಾಶ ನನಗೆ ವಿದ್ಯಾರ್ಥಿ ದೆಸೆಯಲ್ಲೇ ಒದಗಿತ್ತು. ಮುಂದೆ ವ್ಯಾವಹಾರಿಕವಾಗಿಯೂ ನೆಲೆಗೊಂಡ ಕಾಲದಲ್ಲಿ ಅವರೊಡನೆ ವ್ಯವಹಾರ ಸಂಬಂಧ ಆಪ್ತವಾಗಿ ಮುಂದುವರಿದಿತ್ತು. ಎಲ್ಲಕ್ಕೂ ಮುಖ್ಯವಾಗಿ ಡಿವಿಕೆ ಮೂರ್ತಿ – ವ್ಯಕ್ತಿ, ಲೇಖಕ, ಪ್ರಕಾಶಕ ಮತ್ತು ವಿತರಕನಾಗಿ ನನಗೆ, ಅಷ್ಟೇ ಅಲ್ಲ ಕನ್ನಡಕ್ಕೇ ಬಲು ದೊಡ್ಡ ಆದರ್ಶವನ್ನೇ ಕಟ್ಟಿಕೊಟ್ಟ ಮಹಾತ್ಮ ಸದಾ ನನ್ನ ಪೂರ್ಣ ಬೆಂಬಲಕ್ಕಿದ್ದರು. ಶುದ್ಧ ಸಾಹಿತ್ಯದಲ್ಲಿ ಪ್ರಾಮಾಣಿಕ ವ್ಯವಾಹಾರ ನಡೆಸಿದರೆ, ಸರಸ್ವತೀ ಸೇವೆಗೆ ಲಕ್ಷ್ಮಿ ಖಂಡಿತಾ ಒಲಿಯುವಳು ಎಂಬುದಕ್ಕೆ ಈಗ ಪ್ರತ್ಯಕ್ಷ ನಿದರ್ಶನವಾಗಿ ನನ್ನ ಪ್ರಕಾಶನದಲ್ಲಿ ಅರಳಿ ನಿಂತಿದೆ ನೃತ್ಯಲೋಕ!

– ಜಿ.ಎನ್.ಅಶೋಕ ವರ್ಧನ

‘ಸುಧಾ’ದ ವಾರದ ವ್ಯಕ್ತಿ (೨೪-೫-೧೯೯೮)

ಕೆ. ಮುರಲೀಧರ ರಾವ್

ಭಾವ, ರಾಗ, ತಾಳಗಳ ಸಂಲಗ್ನವಾದ ಭರತನಾಟ್ಯ ನಮ್ಮ ಅತ್ಯಂತ ಪ್ರಾಚೀನ ಕಲಾಪ್ರಕಾರ. ಇದು ನಿಂತ ನೀರಲ್ಲ, ನಿರ್ಜೀವವೂ ಅಲ್ಲ, ಮೌಲ್ಯಗಳ ಮೊತ್ತ. ಸಂಸ್ಕೃತಿಯ ನಿರಂತರ ಧಾರೆ. ಸಂಗೀತ, ಸಾಹಿತ್ಯ, ಶಿಲ್ಪ, ಧರ್ಮ, ದರ್ಶನ – ಎಲ್ಲವುಗಳ ಸಮಾವೇಶ. ಇವುಗಳ ಹಿನ್ನೆಲೆಯಲ್ಲಿ ಆಂಗಿಕ ವಾಚಿಕ ಆಹಾರ್ಯ ಸಾತ್ತ್ವಿಕ ಅಭಿನಯಗಳ ಆನಂದ ರಸೋತ್ಪತ್ತಿಯೇ ಉದ್ದೇಶ.

ಭರತನಾಟ್ಯದ ವಿಕಾಸದ ಪರಾಕಾಷ್ಠೆ ಮುಟ್ಟಿರುವ ಪಂದನಲ್ಲೂರು ಶೈಲಿಯ ಶ್ರೇಷ್ಠ ಸಾಧಕರು ಕಾಸರಗೋಡು ಮುರಲೀಧರರಾವ್. ಪಡುವಣ ಕಡಲಿನ ಭೋರ್ಗರೆತ, ತೆಂಗಿನ ಮಡಲಿನ ಮರ್ಮರ ನಾದ, ನೋಡಿದಲ್ಲೆಲ್ಲ ಸೊಬಗಿನ ಸೋನೆ. ಕಲೆ ಧರ್ಮ ಸಂಸ್ಕೃತಿಗಳ ನಿತ್ಯ ಜೋಕಾಲೆ. ಇಂಥಲ್ಲಿ ಕಣ್ದೆರೆದು ಬೆಳೆದ ಕಲಾವಿಸ್ಮಯವೇ ಕೆ. ಮುರಲೀಧರರಾವ್. ಬದುಕೆಲ್ಲ ಯಾವಾಗಲೂ ಕಲೆಯೇ ಆಗಿರುವುದಿಲ್ಲ. ಕಲೆಯ ನೆಲೆ ತಲಪಲು ನೂರೆಂಟು ಅಡಚಣೆ. ಬಡತನ, ತಂದೆಯ ಸಾವು, ಸಂಸಾರದ ಹೊರೆ, ಬೆರಳಚ್ಚು, ಶೀಘ್ರಲಿಪಿ, ಚಿತ್ರಲೇಖನ, ಛಾಯಾಗ್ರಹಣ ಎಲ್ಲವೂ ಸೈ. ಅಲೆದಾಟ, ತಾಬೇದಾರಿ, ಗಲಿಬಿಲಿಯ ನಡುವೆಯೂ ಏಕಾಂತ ಸಾಧನೆ. ಆತ್ಮದೊಂದಿಗೆ ಸಂಭಾಷಣೆ. ಪುಸ್ತಕಗಳ ಸಹವಾಸ, ಸುಪ್ತವಾಗಿ ಬೆಳೆಯುತ್ತಿದ್ದ ಮನೋಲೋಕಕ್ಕೆ ಕಲಾ ಪ್ರಪಂಚ.

ಪ್ರವಾಹದ ಗುಂಟ ತೇಲಾಡುತ್ತ ಮುಂಬೈ ಸೇರ್ಪಡೆ. ರಾಜನ್ ಅಯ್ಯರ್ ಎಂಬ ನೃತ್ಯ ಕಲಾವಿದರ ಪರಿಚಯ. ಅವರಿಂದಾಗಿಯೇ ನೃತ್ಯ ಸಾಮ್ರಾಜ್ಯಕ್ಕೆ ಮುರಲೀಧರರಾಯರ ಪ್ರಥಮ ಪ್ರವೇಶ. ಇಬ್ಬರೂ ಸೇರಿ ಮಂಗಳೂರಿನಲ್ಲಿ ತೆರೆದ ಕಲಾಶಾಲೆಯಲ್ಲಿ ಶಿಷ್ಯರಿಗೆ ಪಾಠ, ಪುಸ್ತಕಗಳಿಗೆ ಚಿತ್ರ ಭೂಪಟ ಬರೆದುಕೊಟ್ಟು ನಡೆಸಿದ ಜೀವನ. ಅಂತರಾಳದಲ್ಲಿ ಅಂಕುರಾರ್ಪಣ ಮಾದಿದ ನಾಟ್ಯಕಲೆ ಅವರನ್ನು ಸುಮ್ಮನಿರಗೊಡಲಿಲ್ಲ. ಪರಿಪೂರ್ಣತೆಯ ಹಂಬಲ, ಚೆನ್ನೈಯಲ್ಲಿ ಚೊಕ್ಕಲಿಂಗಮ್ ಆರಾಧನೆ. ಕೊಚ್ಚಿಯಲ್ಲಿ ರಾಜರತ್ನಮ್ ಅವರ ಬಳಿ ಅಭ್ಯಾಸ. ಗುರುವಿನ ಅನುಗ್ರಹ. ಲಕ್ಷ್ಯ-ಲಕ್ಷಣಗಳ ಏಕೀಭಾವ. ಕಲೆಕೌಶಲಗಳ ಸಂಲಗ್ನ. ಭರತನಾಟ್ಯದ ಪರಿಪೂರ್ಣಾವತಾರ. ಕಲೆಗೆ ತಮ್ಮನ್ನು ಸಂಪೂರ್ಣವಾಗಿ ತೆತ್ತುಕೊಂಡ ಮುರಲೀಧರರಾಯರು ಅದನ್ನು ಜತನಗೊಳಿಸುತ್ತ ಬದುಕು ಸಾಗಿಸಿದರು. ಅಲ್ಲಿ ಇಲ್ಲಿ ತುಂಡು ಕೆಲಸ. ಚಿತ್ರರಚನೆ ಪ್ರಧಾನ. ಕುಣಿದು ಹಾಡಿದ ಹಾಡಿ ಕುಣಿದ ದಾಸಶ್ರೇಷ್ಠರು ಅವರ ಮನೋಲೋಕದಲ್ಲಿ ಸದಾ ಕಂಗೊಳಿಸುತ್ತಿದ್ದರು.

ಬದುಕು ಅವರನ್ನು ಕೊನೆಗೆ ಮೈಸೂರಿಗೆ ಸೆಳೆದು ತಂದಿತು. ಇಲ್ಲಿ ಸಹೃದಯ ಶ್ರೇಷ್ಠರೊಂದಿಗೆ ಸಮಾಗಮ. ಕಲೆಗೆ ಬೆಡಗಿನ ಮುಖ. ಅವಕುಂಠನವತಿಯಾಗಿದ್ದ ನಾಟ್ಯ ಸರಸ್ವತಿಯ ಸೌಂದರ್ಯದ ಬೆರಗು, ನೃತ್ಯ ನಾಟಕ, ಶಿಷ್ಯ ಸಂಪಾದನೆ, ನಲ್ ಊರಿನ ಚೆಲುವು ಈಗ ಅವರ ಶಿಷ್ಯ ಶಿಷ್ಯೆಯರ ಮೂಲಕ ಲೋಕಕ್ಕೆಲ್ಲ ಪರಿಚಿತ.

ಎಪ್ಪತ್ನಾಲ್ಕರ ಬ್ರಹ್ಮಚಾರಿ ರಾಯರು ಇದೀಗ ನೃತ್ಯಲೋಕ ಎಂಬ ಸುಮಾರು ಐನೂರು ಪುಟಗಳ ಗ್ರಂಥ ರಚಿಸಿದ್ದಾರೆ. ಧನ್ಯ ಅಭಿಮಾನಿ ಶಿಷ್ಯ ಸಹೃದಯ ಬಳಗದಿಂದ ಅವರಿಗೀಗ ಲಕ್ಷ ರೂಪಾಯಿಗಳ ಹಮ್ಮಿಣಿ ಅರ್ಪಣೆ.

– ಎಚ್ಚೆಸ್ಕೆ

ಮುರಲೀಧರ ರಾಯರ ನುಡಿಗಳು

ಕೃತಜ್ಞತಾ ಸಮರ್ಪಣೆ

೧೯೭೦ರ ಕಾಲಕ್ಕೆ – ಅಂದರೆ ೨೮ ವರ್ಷಗಳ ಹಿಂದಿನ ವಿಷಯ ಹೇಳುತ್ತಿದ್ದೇನೆ. ಭರತನಾಟ್ಯದ ಕುರಿತು ಕನ್ನಡದಲ್ಲಿ ಸಾಹಿತ್ಯ ರಚನೆ ಆದದ್ದು ಕಡಿಮೆ. ನರ್ತನ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಇದ್ದುದರಿಂದ ನಾನೇಕೆ ನಾಟ್ಯದ ಕುರಿತು ಬರೆಯಬಾರದೆಂದು ಯೋಚಿಸಿ ಲೇಖನಿ ಕೈಗೆತ್ತಿಕೊಂಡೆ. ಬರೆಯುತ್ತ ಬರೆಯುತ್ತ ಸಾಧಾರಣ ೨೫೦ಕ್ಕಿಂತ ಹೆಚ್ಚಿನ ಪುಟಗಳನ್ನು ತುಂಬಿಸಿದೆ. ಆದರೆ ಅದು ಭರತನಾಟ್ಯದ ಬದಲಾಗಿ ದೇಶದ ಚಾರಿತ್ರಿಕ ಗ್ರಂಥವಾಗುವ ಲಕ್ಷಣ ಕಾಣಿಸಿತು. ನಾಟ್ಯವಿಚಾರ ಬರೆಯಲು ಹೆಚ್ಚಿನ ಅನುಭವ ಬೇಕು. ನಿಮಿಷ ನಿಮಿಷ ಹೊಸ ವಿಷಯಗಳು ಪ್ರಾಪ್ತವಾಗುವುದನ್ನು ಕಂಡೆ. ಬರೆವ ಕಾಲ ಇದಲ್ಲ, ಮುಂದೆ ಒಂದು ದಿನ ಬಂದಾಗ ಬರೆಯೋಣ ಎಂದು ಲೇಖನಿ ಕೆಳಗಿಟ್ಟೆ.

ಈಗ ಪ್ರಾಯ ಸಲ್ಲುತ್ತ ಬಂದಿದೆ. ಆದರೆ ನಾಟ್ಯಕಲೆ ನನ್ನನ್ನು ಸುಮ್ಮನಿರಗೊಡಲಿಲ್ಲ. ಒಬ್ಬ ಗುರುವಾಗಿ ನಾನು ನೃತ್ಯಜೀವನದಲ್ಲಿ ಕಂಡುದನ್ನು ಬರೆಯಬೇಕು, ಅನಿಸಿದ್ದನ್ನು ಹೇಳಬೇಕು. ಅದಕ್ಕೆ ಈಗಲೆ ಉತ್ತಮ ಕಾಲ ಎಂದು ನೆನಸಿದೆ. ಮಾತು ಮತ್ತು ಸಾಹಿತ್ಯ ಸದಾ ವ್ಯಾಯಾಮವಿದ್ದರೇ ಜೀವ ಹಿಡಿಯುತ್ತದೆ. ನನ್ನ ಉದ್ಯೋಗದಲ್ಲಿ ಮಾತು ಕಡಿಮೆ. ಸಾಹಿತ್ಯ ಓದುತ್ತಿದ್ದರೂ ಬರೆವ ಅಭ್ಯಾಸ ಹೆಚ್ಚಿಲ್ಲ. ಆದರೂ ಬರೆಯಬೇಕೆಂಬ ಹಠ ಗೆದ್ದಿತು. ಸ್ವಾಧ್ಯಾಯ ಒಂದೇ ಇದಕ್ಕೆ ಸಾಲುವುದಿಲ್ಲ. ಬರೆಯಬೇಕಾದ ಪುಸ್ತಕದ ವಿಚಾರ ನನ್ನಲ್ಲೆದ್ದಾಗ ಇದು ನನ್ನೊಬ್ಬನಿಂದ ಸಾಧಿಸುವ ಕೆಲಸವಲ್ಲ, ಅವೆಲ್ಲ ಕಾರ್ಯಗಳನ್ನು ತಿಳಿದವರು ಬೇಕು. ನಮ್ಮ ಒತ್ತಾಸೆಗೆ ನಿಂತು ನಮ್ಮ ಕೈ ಹಿಡಿದು ನಡೆಸುವವರು ಬೇಕು…. ಸ್ವಾಭಿಮಾನ ತುಸು ಹೆಚ್ಚಗಿರುವ ನನ್ನಿಂದ ಅಂಥ ಸಹಾಯ ಕೇಳುವುದು ಅಸಾಧ್ಯವೆನ್ನುತ್ತಿದಂತೆ ದೈವಾನುಕೂಲವೆಂಬಂತೆ ಅದಕ್ಕೆ ಬರೆಯಬೇಕಾದ ಸಹಾಯ ಒದಗಿಬಂತು. ಸಂಗೀತ, ಸಾಹಿತ್ಯ, ವಿಜ್ಞಾನಗಳಲ್ಲದೆ ಇನ್ನೂ ಹೆಚ್ಚಿನ ಲೋಕವಿಷಯ ಅನುಭವಿಯಾದವರು ಹಾಗೂ ನಿಸ್ವಾರ್ಥ ಮನಸ್ಸಿನ ಮಿತ್ರರಾಗಿ ಶ್ರೀ ಜಿ.ಟಿ. ನಾರಾಯಣರಾಯರು ನನ್ನನ್ನು ಕಂಡರು, ಮಾತನಾಡಿಸಿದರು, ನನ್ನ ಹಾಗೂ ನನ್ನ ಶಿಷ್ಯೆಯರ ನೃತ್ಯಪ್ರದರ್ಶನ ನೋಡಿ ಮೆಚ್ಚಿದರು, ಉತ್ತಮ ಅಭಿಪ್ರಾಯ ಕೊಟ್ಟರು. ಕಲಾಗಾರರಿಗೆ ಇರಬೇಕಾದ ಸ್ವಾಭಿಮಾನ, ಎಂದರೆ ಗರ್ವ ನಮ್ಮಲ್ಲಿ ಬೀಗುವಂತೆ ಮಾಡಿದರು. ಅದೂ ಸಾಲದೆ ನಾನೀಗ ಬರೆದ ನೃತ್ಯಲೋಕಕ್ಕೆ ಪ್ರಕಾಶಕರಾಗಿ ತಮ್ಮ ಸುಪುತ್ರ, ಮಂಗಳೂರಿನ ಅತ್ರಿ ಬುಕ್ ಸೆಂಟರಿನ ಶ್ರೀ ಜಿ.ಎನ್. ಅಶೋಕವರ್ಧನರನ್ನು ಗೊತ್ತು ಮಾಡಿದರು. ಈಗ ನಾನು ಇವರಿಗೆ ಆಭಾರ ಸಲ್ಲಿಸುತ್ತಿದ್ದೇನೆ.

ನನ್ನ ಮನೋಮೂಸೆಯಲ್ಲಿದ್ದ ನೃತ್ಯಾನುಭವೀಗ ಮುದ್ರಿತ ಗ್ರಂಥವಾಗಿ ನೃತ್ಯಲೋಕವೆಂಬ ಹೆಸರು ಹೊಂದಿ ನಿಮ್ಮ ಕೈಸೇರುತ್ತಲಿದೆ. ಈ ಕೈಂಕರ್ಯವನ್ನು ನನ್ನಿಂದ ಆಗಗೊಳಿಸಿದ ಎಲ್ಲ ಚೇತನಗಳಿಗೂ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ನೃತ್ಯಲೋಕದ ಬಿಡುಗಡೆಯ ಸಂದರ್ಭದಲ್ಲಿ – ಅಂದರೆ ಇಂದು, ನನಗೊಂದು ಹಮ್ಮಿಣಿ ಹರಸಬೇಕೆಂದು ಶ್ರೀ ಕೆ.ವಿ. ಮೂರ್ತಿಯವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರೂಪುಗೊಂಡು ಕಾರ್ಯೋದ್ಯುಕ್ತವಾಯಿತು. ನನ್ನ ಹಿರಿಯ ಪ್ರಿಯಶಿಷ್ಯರಾದ ಶ್ರೀ ಕೆ. ರಾಮಮೂರ್ತಿರಾಯರು ಸಮಿತಿಯ ಕಾರ್ಯದರ್ಶಿಯವರಾಗಿ ಪ್ರೀತಿಪೂರ್ವಕ ಸೇವೆ ಸಲ್ಲಿಸಿದ್ದಾರೆ. ಕೆ.ವಿ. ಮೂರ್ತಿಯವರನ್ನು ನಾನೀಗ ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ. ನನಗೂ ಅವರಿಗೂ ಪರಸ್ಪರ ಪರಿಚಯವಿಲ್ಲವಾದರೂ ಸಂಗೀತ ಹಾಗೂ ನೃತ್ಯಕ್ಕೆ ಕೊಡುಗೈದಾನಿಗಳೆಂಬ ವಿಶೇಷ ಕೀರ್ತಿಗೆ ಭಾಜನರಾದ ಅವರ ಧೀಮಂತ ಧುರೀಣತ್ವ ಹಾಗೂ ರಾಮಮೂರ್ತಿರಾಯರ ಶಕ್ತಿಶಾಲಿ ಕಾರ್ಯದರ್ಶಿತ್ವ ಸೇರಿ ಈ ಪ್ರೀತಿಪೂರ್ವಕ ಮಹಾಕಾರ್ಯ ಸಾಧ್ಯವಾಗಿದೆ ಎಂಬ ಅರಿವು ನನ್ನಲ್ಲುಂಟು. ನಾನು ಏನು ಕಲಿಸಿದೆನೋ ಕಲಿಸಲಿಲ್ಲವೋ ಶಿಷ್ಯರು ಅಭಿಮಾನಿಗಳೂ ದಾನಿಗಳೂ ಮುಂದುಬಂದು ಈ ಹಮ್ಮಿಣಿಗೆ ದೇಣಿಗೆ ಸಲ್ಲಿಸಿ ನನಗೆ ಈ ಇಳಿವಯಸ್ಸಿನಲ್ಲಿ ಸಾರ್ಥಕತೆಯ ತೃಪ್ತಿ ತಂದುಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಹಾಗೂ ಪೂಜ್ಯ ರಾಜಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್‍ವಚನ ನನಗೆ ಲಭಿಸಿರುವುದು ನನ್ನನ್ನು ಧನ್ಯನಾಗಿಸಿದೆ. ನೃತ್ಯಲೋಕವನ್ನು ಶ್ರೀಮಾನ್ ಆರ್. ಗುರು ಅವರು ಉದ್ಘಾಟಿಸಿ ನನ್ನ ಬಗ್ಗೆ ಕಳಕಳಿ ಸವಿನುಡಿ ಆಡಿ ನನ್ನಲ್ಲಿ ಅಪರಿಮಿತ ಉತ್ಸಾಹ ತುಂಬಿದ್ದಾರೆ. ಬರೆವ ಕೆಲಸ ಮುಂದುವರಿಸಲೀ ಎಂಬ ಭಾವ ನನ್ನಲ್ಲಿ ಉದಯವಾಗುವಂತಿದೆ.

ಸಮಿತಿಯ ಜೊತೆಗೆ ಭಾರತೀಯ ನೃತ್ಯಕಲಾಪರಿಷತ್ತಿನ ಗೌರವಾನ್ವಿತ ಸದಸ್ಯರೆಲ್ಲರೂ ಇದು ತಮಗೆ ಸಂದಿರುವ ಗೌರವವೆಂದು ಭಾವಿಸಿ ಪ್ರೀತಿಯಿಂದ ದುಡಿದು ಇಂದಿನ ಸಭೆಯನ್ನು ಏರ್ಪಡಿಸಿದ್ದಾರೆ.

ಶ್ರೀ ಶಕ್ತಿ ಎಲೆಕ್ಟ್ರಿಕ್ ಪ್ರೆಸ್ಸಿನ ಶ್ರೀ ರಾ.ವೆಂ. ಶ್ರೀನಿವಾಸಮೂರ್ತಿ ಹಾಗೂ ಇವರ ಸುಪುತ್ರ ಶ್ರೀ ರಾ.ಶ್ರೀ ಮೋಹನಮೂರ್ತಿ ಖುದ್ದು ಲೇಖಕನಾದ ನನಗಿಂತ ಹೆಚ್ಚು ಆಸ್ಥೆವಹಿಸಿ ಈ ಕೃತಿಯನ್ನು ಸರ್ವಾಂಗಸುಂದರವಾಗಿ ಮುದ್ರಿಸಿದ್ದಾರೆ.

ಧರ್ಮೋರಕ್ಷತಿ ರಕ್ಷಿತಃ ಎಂಬಂತೆ ಕಲೋ ರಕ್ಷತಿ ರಕ್ಷಿತಃ ಎಂಬ ಮಾತು ಎಷ್ಟು ಅರ್ಥಪೂರ್ಣವಾದದ್ದು ಎಂಬುದರ ಅರಿವು ನಮಗಾಗುವುದು ಇಂಥ ಹೃದಯಸ್ಪರ್ಶಿ ಸಂದರ್ಭಗಳಲ್ಲಿ. ನಿಮಗೆಲ್ಲರಿಗೂ ನನ್ನ ಅನಂತ ನಮನಗಳನ್ನು ಸಲ್ಲಿಸುತ್ತ ಕಲಾಕೈಂಕರ್ಯವನ್ನು ಇದೇ ರೀತಿ ಮುಂದುವರಿಸುತ್ತೇನೆ ಎಂಬ ಆಶ್ವಾಸನೆ ನೀಡುತ್ತ ವಿರಮಿಸುತ್ತೇನೆ.

ಸವಿಸಂಚಿಕೆಯಲ್ಲಿ ಉದ್ಧೃತ ಮಹಾನುಡಿಗಳು:

The prosperity of a country depends, not on the abundance of its resources, nor on the strength of its fortifications, nor on the beauty of its public buildings, but it consists in the number of its cultivated citizens, in its men of education, enlightnment and character; here are to be found its true interest, its chief strength, its real power. – Martin Luther

You came down from your throne and stood at my cottage door.
I was singing all alone in a corner,
and the melody caught your ear.
You came down and stood at my cottage door.
Masters are many in your hall, and
songs are sung there at all hours. But
the simple carol of this novice struck
at your love. Our plaintive little
strain mingled with the great music
of the world, and with a flower for
a price you came down and stopped
at my cottage.
– Rabindranath Tagore in Gitanjali

Politicians may differ, our economic interests may clash, but when we stand before the masterpieces of art and literature, we donot ask to what country an artist belongs or what nationality he comes from. – Dr.S. Radhakrishnan

(ಮುಗಿಯಿತು)