“ಆಜಾರೇಏಏಏಏಏ….” ಎಂದು ಮೆಲುಧ್ವನಿಯಲ್ಲಿ, ಕಂಪನ ಕಂಠದಲ್ಲಿ ಹಾಡಿನ ಪಲುಕೊಂದು ಗಾಳಿಯಲ್ಲಿ ತೇಲಿ ಬರುವಾಗ ನಾನು – ಇನ್ನೂ ಐದಾರು ವರ್ಷದ ಬಾಲಕ (ಸುಮಾರು ೧೯೫೭-೫೮). ಅಜ್ಜನ ಮನೆಯಂಗಳದಲ್ಲಿ ಗಿರಿಗಿಟ್ಟಿಯಾಡುತ್ತ ನೆಲಕ್ಕಿಳಿಯುತ್ತಿದ್ದ ಇರಿಪು ಬೀಜಗಳನ್ನು ಹಿಡಿಯುವಲ್ಲಿ ಕುಪ್ಪಳಿಸುತ್ತ ಕಳೆದು ಹೋಗಿದ್ದವ, ಪುರಾಣಖ್ಯಾತ ಗೋವಿಂದನ ಬಿದಿರಸೀಳಿನ ಉಲಿಗೆ ಮರವಟ್ಟ ಗೋಸಮೂಹದ ಸಮ್ಮೋಹಕ್ಕೊಳಗಾಗಿದ್ದೆ. ಅದು ಪುತ್ತೂರಿನಿಂದ ನಾಲ್ಕು ಮೈಲಾಚಿನ ಪಕ್ಕಾ ಹಳ್ಳಿಮನೆ ಮರಿಕೆ. ಅದರ ಉಯ್ಯಾಲೆ ಜಗಲಿಯ ಒಳಗಿನ ಕೋಣೆ, ಅಂದರೆ ಅಡುಗೆಮನೆಯ ಒತ್ತಿನ ಕೋಣೆಯ, ತೆಂಗಿನ ಅಟ್ಟದ, ಮೂಲೆಯ ತಗ್ಗು ಕಿಟಕಿಯ ಒತ್ತಿನ ನೆಲ ವರ್ತಮಾನದ (ಎ.ಪಿ) ಗೋವಿಂದ, ಅಂದರೆ ನನ್ನ ಎರಡನೇ ಸೋದರಮಾವನ (ಸುಮಾರು ಇಪ್ಪತ್ತರ ತರುಣ) ವಿರಾಮ ತಾಣ.

ಅಂದು ಅಡುಗೆ ಸೌದೆ ಒಲೆಯದ್ದೇ. ಹಾಗೆ ಆಗೀಗ ಅಡುಗೆಯ ಕಂಪು ತೇಲಿ ಬಂದರೂ ಪಕಾಸುಗಳ ಎಡೆಯಿಂದ ಪಕ್ಕದ ಹೊಗೆಯಟ್ಟದ ವಿಸ್ತರಣೆಯೇ ಆಗುತ್ತಿತ್ತು ಇದು. ಅಲ್ಲದೇ ತುಸು ದೂರ ನೂಕಿಟ್ಟ ತೆಂಗಿನ ಕಾಯಿ ಮಕ್ಕು, ಗೋಣಿ ರಾಶಿಯ ದೂಳು, ತಗ್ಗು ಮಾಡಿನ ಸೆಕೆ, ನೇಲುವ ಜೇಡನ ಬಲೆ, ಬಡ್ಡು ಚೌಕಟ್ಟಿನ ಕಿಟಕಿ, ತುಕ್ಕುಮುಕ್ಕಿದ ಸರಳು, ಋತುಮಾನದಲ್ಲಿ ಇರಿಚಲು, ಚಳಿಗಾಳಿ ಬಂತೆಂದು ಎಳೆದರೆ ಮಣ್ಣುಗಟ್ಟಿದ ಕನ್ನಡಿಯ ಪಡಿ ಏನಿದ್ದರೂ ಅದು ಗೋವಿಂದನ ಖಾಸಾ ಸ್ಥಳ; ಬೃಂದಾವನ! ನೆಲದಲ್ಲಿ ಎರಡು ದಪ್ಪ ಗೋಣಿ ಹಾಸಿ, ಒರಗಲೊಂದು ಜಿಡ್ಡು ಹಿಡಿದ ದಿಂಬು ಗೋಡೆ ಮೂಲೆಗೆ ಇರುಕಿ, ಯಾವುದೋ ಸಾಹಿತ್ಯದೋದಿನಲ್ಲಿ ‘ಗೋವಿಂದ’ ಕಳೆದುಹೋಗುತ್ತಿದ್ದ. ನಾನು, ದಡಬಡ ಮರದ ಏಣಿ ಹತ್ತಿ, ಪೀಡಿಸಿದರೆ ಅಷ್ಟೇ ಪ್ರೀತಿಯಲ್ಲಿ ಫ್ಯಾಂಟಮನ ಕತೆ ಹೇಳುತ್ತಿದ್ದ. ಹಾಗೆ ಮುಂದೆಯೂ ಅಪ್ಪಟ ಸಂಸಾರಿ, ಕೃಷಿಕ, ಸಾಮಾಜಿಕನಾಗಿದ್ದರೂ ತನ್ನ ಏಕಾಂತವನ್ನು ಹುಡುಕಿಕೊಳ್ಳುತ್ತ, ಸಂಪರ್ಕಕ್ಕೆ ಬಂದ ಮಕ್ಕಳ ಮನಕ್ಕೆ ವೈವಿಧ್ಯಮಯ ಕತೆಗಳನ್ನು ಹೆಣೆಯುತ್ತ, ಎಡೆ ಸಿಕ್ಕಲ್ಲಿ ರಾಗಗಳನ್ನು ಪಲುಕುತ್ತ, ಕೆಲವೊಮ್ಮೆ ನಲಿಹೆಜ್ಜೆಗಳನ್ನೂ ಇಡುತ್ತಲೇ ಎಂಬತ್ತೈದರ ಅಟ್ಟಕ್ಕೇರಿ ಮೊನ್ನೆ (೨೩-೧೦-೨೦೧೭) ಹಾಡು ಮುಗಿಸಿದ, “……. ಮೇಂ ಪರದೇಸೀ”. ಪರದೇಶವಲ್ಲ, ಪರ‘ಲೋಕ’ಕ್ಕೇ ಹೋಗಿಬಿಟ್ಟ!

ಮೊದಲಿಗೊಂದು ಸ್ಪಷ್ಟೀಕರಣ: ಹಿಂದಿನೆರಡು ಪ್ರಕರಣಗಳಲ್ಲಿ (ನೋಡಿ ೧. ಅಸಮ ಸಾಹಸಿ ಮರಿಕೆಯ ಅಣ್ಣ ೨. ಛಲದೊಳ್ ದುರ್ಯೋದನಂ) ನಾನು ಹೇಳಿಕೊಂಡಂತೆ, ಗೋವಿಂದನೂ ಪ್ರಾಯದಲ್ಲಿ ನನಗೆ ಇಪ್ಪತ್ತು ವರ್ಷಗಳಿಂದ ಹಿರಿಯ, ಸಂಬಂಧದಲ್ಲಿ ಖಾಸಾ ಎರಡನೇ ಸೋದರಮಾವನಾದರೂ ರೂಢಿಯ ಏಕವಚನ ಮತ್ತು ಸಂಬೋಧನೆಯನ್ನೇ ಮುಂದುವರಿಸಿದ್ದೇನೆ; ಯಾರೂ ತಪ್ಪು ತಿಳಿಯಬಾರದು. ವಿಂದನಿಗೆ ಕೊಡಗು ಬಲು ಪ್ರಿಯ. ಮೂಲತಃ ನನ್ನೆರಡೂ ಅಜ್ಜಂದಿರು ಕೊಡಗಿನವರೇ. ಅಲ್ಲದೆ ಗೋವಿಂದ ಕಾಲೇಜು ಕಲಿತದ್ದು, ಮೊದಲ ತಾಬೇದಾರಿ (ವೃತ್ತಿಜೀವನದ ಮೊದಲ ಕೆಲವು ವರ್ಷಗಳು ಮಡಿಕೇರಿಯಲ್ಲಿ ಶಾಲಾ ಶಿಕ್ಷಕನಾಗಿದ್ದ) ನಡೆಸಿದ್ದೂ ಮಡಿಕೇರಿಯಲ್ಲೇ. ಇವೆಲ್ಲ ಸೇರಿದ್ದಕ್ಕೇ ಬಹುಶಃ ಈತ ಕೆಲವೊಮ್ಮೆ ತನ್ನನ್ನು ಕೊಡಗಿಗೊಪ್ಪುವಂತೆ ‘ಗೋವಿಂದಯ್ಯ’ ಎಂದುಕೊಳ್ಳುವುದಿತ್ತು. ಆದರೆ ಮುಂದುವರಿದಂತೆ ದಕಜಿಲ್ಲೆಯ ಕೃಷಿಕನೇ ಆಗಿ ನೆಲೆಸಿದ್ದನ್ನು ನೆನಪಿಸಿಕೊಳ್ಳುವಂತೆ ‘ಗೋವಿಂದ ಭಟ್ಟ’ನೆಂದೂ ಕರೆಸಿಕೊಳ್ಳುವುದಿತ್ತು. ಗೋಕುಲ ನಿರ್ಗಮಿಸಿದ ಪುರಾಣಖ್ಯಾತ ಗೋವಿಂದನಂತಲ್ಲದೆ, ಈತ ಕೊನೆಯವರೆಗೂ ಯಾವುದೇ ನೆಪ ಸಿಕ್ಕರೂ ಮಡಿಕೇರಿಗೆ (ಗೋಕುಲಕ್ಕೆ!) ಹೋಗಿಬರುವ ಉತ್ಸಾಹ ಉಳಿಸಿಕೊಂಡಿದ್ದ! ಅಲ್ಲಿನ ಕೊರೆಯುವ ಚಳಿಗೆ, ಒಲೆಕಟ್ಟೆಯ ಎದುರು ಸ್ವೆಟ್ಟರ್-ಕುಪ್ಪೆಯಾಗಿ ಕುಳಿತು, ಕೈಯಲ್ಲಿ ತಟ್ಟಿದ ಸಣ್ಣಕ್ಕಿ ರೊಟ್ಟಿ ತಿಂದು, ಕಡು-ಕಾಫಿ ಹೀರಿ ಮರಳುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.

ಗೋವಿಂದ, ಮಡಿಕೇರಿಯಲ್ಲಿ ನನ್ನಪ್ಪ (ಜಿಟಿನಾ) ಅಧ್ಯಾಪಕರಾಗಿದ್ದ ಸರಕಾರೀ ಕಾಲೇಜಿನ ವಿದ್ಯಾರ್ಥಿ. ಕಾಲೇಜಿನ ಹಾಸ್ಟೆಲ್ಲಿನಲ್ಲಿ ‘ಮಾಂಸಾಹಾರ’ದ ವಾಸನೆ ಗೋವಿಂದನಿಗೆ ಒಗ್ಗುತ್ತಿರಲಿಲ್ಲ. ಆಮೇಲಾದರೂ ಕಾಲದ ರೂಢಿಯಂತೆ ಆತ ಅಕ್ಕನ (ನನ್ನಮ್ಮ) ಮನೆ ಸೇರಬೇಕಿತ್ತು. ಆದರೆ ನನ್ನಜ್ಜ ಅದರಲ್ಲೆಲ್ಲ ಭಾರೀ ಶಿಸ್ತಿನವರು. ತಮ್ಮದೇ ಮನೆಯನ್ನು (ಅವರು ಪುತ್ತೂರು ಪೇಟೆಯಲ್ಲಿದ್ದರು) ದೂರದೂರದ ಸಂಬಂಧಿಕರ ಆಪತ್ತಿನ ಕಾಲದ ವಾಸ್ತವ್ಯಕ್ಕೆ ಮುಕ್ತವಾಗಿಯೇ ಇಟ್ಟವರು. ಇದನ್ನೇ ನಮ್ಮ ಕುಟುಂಬದೊಳಗೆ ತಮಾಷೆಯಾಗಿ ‘ಪಾರ್ವತೀ (ನನ್ನ ಅಜ್ಜಿಯ ಹೆಸರು) ಆರೋಗ್ಯಧಾಮ’ ಎಂದೇ ಆಗಾಗ ಹೇಳುವುದಿತ್ತು. ಆದರೆ ತನ್ನನ್ನು ಹೇರಿಕೊಳ್ಳುವಲ್ಲಿ ಈ ಅಜ್ಜ ಎಷ್ಟೇ ಹತ್ತಿರದವರಿಗೂ (ನಿಗದಿತ ಸನ್ನಿವೇಶಕ್ಕೆ ಅತಿಥಿಯಾಗುವುದನ್ನು ಮೀರಿ) ಹೊರೆಯಾಗಬಾರದೆಂಬ ಸ್ಪಷ್ಟ ತಿಳುವಳಿಕೆಯವರು. ಹಾಗಾಗಿ ಗೋವಿಂದ ನಮ್ಮ ಮನೆಯಿಂದ ತುಸು ದೂರವೇ ಇದ್ದ, ಯಾವುದೋ ಮನೆಯ ಒಂದು ಪುಟ್ಟ ಕೋಣೆಯನ್ನು ಬಾಡಿಗೆಗೆ ಹಿಡಿದುಕೊಂಡಿದ್ದ. ಅದರ ಹತ್ತಿರದಲ್ಲೆಲ್ಲೂ ಹೋಟೆಲ್ಲಿರಲಿಲ್ಲ. ಮತ್ತೆ ಮನೆಯೂಟ ಕೊಡುವ ‘ಮೆಸ್ಸು’ಗಳ ಕಲ್ಪನೆ ಬಹುಶಃ ಅಂದಿನ ಮಡಿಕೇರಿಗೇ ಇರಲಿಲ್ಲ. ಸಹಜವಾಗಿ ಗೋವಿಂದನದು ನಳಪಾಕ! ಆಗೊಮ್ಮೆ ಈಗೊಮ್ಮೆ ನನ್ನಮ್ಮನಿಗೆ, ತಮ್ಮನಿಗೇನಾದರೂ ಕಳಿಸುವ, ತಿಳಿಸುವ ಉಮೇದು ಬಂದರೆ ಸಾಕು, ‘ಪಣಂಬೂರಿಗೆ ಹೋದ ವೆಂಕು’ವಿನದೇ (ಅಥವಾ ಕುಂದಾಪುರಕ್ಕೆ ಹೋದ ಕುಟ್ಟಿಯಂತೆ!) ಉತ್ಸಾಹದಲ್ಲಿ ನಾನು ಮೈಲು ದೂರವನ್ನು ನೆರೆಮನೆಯೋ ಎಂಬಷ್ಟು ವೇಗದಲ್ಲಿ ಓಡಿ ಕಳೆಯುತ್ತಿದ್ದೆ. ಅಲ್ಲೂ ತುಸು ಬಳಸಿನ ಕಚ್ಚಾದಾರಿ ಬಿಟ್ಟು, ಗೊಸರಗದ್ದೆಯ ಕಾಲುದಾರಿಯಲ್ಲೇ ಓಡಿ, ಗೋವಿಂದನ ಕೋಣೆ ಸೇರುತ್ತಿದ್ದೆ. ಅಲ್ಲಿ ಗೋವಿಂದ ನನಗೋಸ್ಕರ ಸೀಮೆ ಎಣ್ಣೆಯ ಪ್ರೈಮಸ್ ಸ್ಟವ್ ಹಚ್ಚಿ, ಕಾವಲಿಯಿಟ್ಟು, ಅಕ್ಕಿಹಿಟ್ಟು ಕರಡಿ, ತುಸು ಸಾರಿನ ಹುಡಿ, ಉಪ್ಪು ಹಾಕಿ ಮಾಡಿಕೊಡುತ್ತಿದ್ದ ದೋಸೆ ನನಗೆ ಪಂಚಪ್ರಾಣ; ನೆನೆಸಿದರೆ ಇಂದು ನಗೆ ಬರುತ್ತದೆ. ಬ್ರಹ್ಮಚಾರಿ ಬಿಡಾರದ ಅವ್ಯವಸ್ಥೆ, ಸೀಮೆ ಎಣ್ಣೆಯ ಘಾಟು, ದೋಸೆಯ ರೂಪ, ರುಚಿ ಒಂದೂ ನನ್ನ ಗಮನಕ್ಕೆ ಬಂದದ್ದೇ ಇಲ್ಲ. ಗೋವಿಂದನ ಪ್ರೀತಿ ಮತ್ತು ಆತ ಅದಕ್ಕಿಟ್ಟ ರಮ್ಯ ಹೆಸರು – ಗರಂ ದೋಸೆ, ನನಗೆ ಸಾಕಾಗುತ್ತಿತ್ತು ಸ್ವರ್ಗಕ್ಕೆ ಕಿಚ್ಚು ಹಚ್ಚಲು!

ಗೋವಿಂದನ ಹಾಸ್ಯ ಪ್ರಜ್ಞೆ ದೊಡ್ಡದು. ಆತನ ಅಪಾರ ಓದು ಮತ್ತು ಮನೋಭೂಮಿಕೆ ಎಷ್ಟೋ ಬಾರಿ ಹಿಂದುತ್ವದ ಘಾಟು ಹೊಡೆಯುತ್ತಿತ್ತು. ಆದರೆ ಮಾನವೀಯತೆಯನ್ನು ಮೀರಿದ, ವಾಸ್ತವತೆಯನ್ನು ಮರೆತ, ಸಾರ್ವಜನಿಕದಲ್ಲಿ ಮೆರೆಯುವ ಚಟಗಳೊಂದೂ ಅದಕ್ಕಿರಲಿಲ್ಲ. ಹಾಗಾಗಿ ಈಚಿನ ವರ್ಷಗಳಲ್ಲಿ ಹೆಚ್ಚು ಕಡಿಮೆ ಪ್ರತಿದಿನವೆಂಬಂತೆ ಪರಸ್ಪರ ಪ್ರೀತಿಯಿಂದಲೇ ಭೇಟಿ ಮಾತುಕತೆ ನಡೆಸುತ್ತಿದ್ದ ಎ.ಪಿ. ರಮಾನಾಥರಾವ್ (ಗೋವಿಂದನ ತಮ್ಮ, ನನ್ನ ನಾಲ್ಕನೇ ಸೋದರಮಾವ) ಜತೆಗೋ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದ ನನ್ನಂಥವರ ಜತೆಗೋ ಖಾಡಾಖಾಡಿ ವಾಗ್ಯುದ್ಧ ನಡೆಸುತ್ತಲಿದ್ದ. ಆದರೆ ಮರುಕ್ಷಣದಲ್ಲಿ ಅದೇ ಗೋವಿಂದ (ತನ್ನದೇ ಶೈಲಿಯಲ್ಲಿ ಮೂಗಿನ ಮೇಲೆ ಕೈಯಿಟ್ಟು) ಮುಸಿಮುಸಿ ನಗುತ್ತ, ತನ್ನನ್ನೇ “ಕೋಮುವಾದಿ” ಎಂದುಕೊಳ್ಳುತ್ತಿದ್ದ. ಮುಂದುವರಿದು, “ಸಂಟ್ಯಾರಿನ ಖೊಮೇನಿ” ಎಂದೇ ನಿರ್ವಂಚನೆಯಿಂದ ಹೆಸರಿಸಿಕೊಳ್ಳುತ್ತಿದ್ದ. ಹೇಳಿಕೊಳ್ಳುವ ತತ್ತ್ವಗಳಿಗಿಂತ ಮನುಷ್ಯಪ್ರೀತಿ ದೊಡ್ಡದು ಎಂದೇ ಮೆರೆಯುತ್ತಿದ್ದ. ‘ಹೆಸರಿಸಿಕೊಳ್ಳುವುದು’ ಎಂದಾಗ ನೆನಪಾಯ್ತು – ಗೋವಿಂದ ಮಕ್ಕಳಿಗೆ ಕತೆ ಕಟ್ಟುತ್ತಿದ್ದಷ್ಟೇ ಚಂದಕ್ಕೆ ನಿತ್ಯಜೀವನದ ಸಂಗತಿಗಳನ್ನು ಹೆಸರಿಸುತ್ತಿದ್ದ. ಅಗತ್ಯ ಬಂದಲ್ಲಿ ಅವನ್ನು ಸಾರ್ವಜನಿಕಗೊಳಿಸುವ (ಬೋರ್ಡು ಬರೆಯುವಲ್ಲಿ) ಆತನ ಉತ್ಸಾಹ ನಿಜಕ್ಕೂ ಸಾಂಕ್ರಾಮಿಕ! ನಾನು, ದೇವಕಿ ಮೊಂಟೆಪದವಿನ ಸಮೀಪ ಒಂದೆಕ್ರೆ ಹಾಳುನೆಲವನ್ನು ಪ್ರಕೃತಿ-ಪ್ರಯೋಗಭೂಮಿಯಾಗಿ ಮಾಡಲು ತೊಡಗಿದಾಗ, ವಠಾರಕ್ಕೆ ‘ಅಭಯಾರಣ್ಯ’, ಮನೆಗೆ ‘ಕಾಡ್ಮನೆ’, ಬಾವಿಗೆ ‘ಮೃಗಜಲ’ ಎಂದಿತ್ಯಾದಿ ಹೆಸರಿಸಿದ್ದು ಗೋವಿಂದನಾಮಸ್ಮರಣೆಯೊಂದಿಗೇ. ಸದ್ಯ ಗೋವಿಂದನ ಲೆಕ್ಕದಲ್ಲಿ, ನನಗೆ ನೆನಪಿಗೆ ಬರುವ ಒಂದೇ ಉದಾಹರಣೆ – ಅನ್ನದಾತ! ಗೋವಿಂದ ಪಾಲಿನಲ್ಲಿ ಬಂದ ಕೃಷಿಯಲ್ಲಿ ಮನೆ ಕಟ್ಟಿ (ಹೆಸರು – ಚೇತನ) ನೆಲೆಸಿದ್ದ ಜಾಗ – ಮೂಲ ಮರಿಕೆಯ ಸಂಟ್ಯಾರ್ ಮುಖ. ಇಲ್ಲಿನ ಮುಖ್ಯ ಮತ್ತು ಮನೆಯಂಗಳದ ಗೇಟುಗಳಲ್ಲಿ, ಕಟ್ಟೆ ಕೊಟ್ಟಿಗೆಗಳಲ್ಲಿ ಕಾಲಕಾಲಕ್ಕೆ ಬರೆಸುತ್ತಿದ್ದ ಹೆಸರುಗಳು ಮತ್ತು ವಿವಿಧ ‘ಶಾಸನ’ಗಳ ವೈವಿಧ್ಯ ಅಪಾರ. ಅವುಗಳಲ್ಲಿ ಒಂದು ಈ ಅನ್ನದಾತಾ – ಗೋವಿಂದ ಸ್ವಂತಕ್ಕೆ ಸಣ್ಣದಾಗಿ ನಡೆಸಿದ್ದ ಹಲ್ಲರ್ (ಭತ್ತವನ್ನು ಅಕ್ಕಿಮಾಡುವ ಮಿಲ್ಲು ಎನ್ನಿ) ಕೊಟ್ಟಿಗೆಯಲ್ಲಿ ಮೂಟೆಗಳನ್ನು ಅತ್ತಿಂದಿತ್ತ ಮಾಡಲು ಬಳಸುತ್ತಿದ್ದ ಕೈಗಾಡಿ!

‘ತಿಮ್ಮಪ್ಪಯ್ಯ ಅಥವಾ ಕುಟುಂಬದ ಎಲ್ಲರಿಗೂ (ತಮ್ಮ ತಂಗಿಯರಲ್ಲದೆ, ಸೋದರಳಿಯಂದಿರು, ಭಾವಂದಿರು ಮುಂತಾದವರಿಗೂ) ರೂಢಿಯ ‘ಅಣ್ಣ’ನಲ್ಲಿದ್ದ ಸಾಹಸೀ ಮನೋಭಾವ ಗೋವಿಂದನದ್ದಲ್ಲ. ಆದರೆ ತಾರುಣ್ಯದ ಒಂದು ಅನಿವಾರ್ಯ ಸಂದರ್ಭದಲ್ಲಿ ಆತ ಸೈಕಲ್ ಓಡಿಸಿದ್ದು ನನಗಂತೂ ಮರೆಯುವಂತದ್ದೇ ಅಲ್ಲ. ಆ ಕಾಲದಲ್ಲಿ ಕುಟುಂಬದ ಕೃಷಿಭೂಮಿಯನ್ನೆಲ್ಲ ಅಲ್ಲಿನದೇ ಮನೆಯಲ್ಲಿದ್ದುಕೊಂಡು ‘ಅಣ್ಣ’ ನೋಡಿಕೊಳ್ಳುತ್ತಿದ್ದ. ಅಜ್ಜ ಇತರ ಮಕ್ಕಳ ಓದು ಮತ್ತು ತನ್ನ ಸೂಕ್ಷ್ಮ ದೇಹಪ್ರಕೃತಿಯನ್ನು ಸಂಭಾಳಿಸಿಕೊಂಡು, ಪುತ್ತೂರಿನಲ್ಲಿ ಬಿಡಾರ ಹೂಡಿದ್ದರು. ಅಂದು ಪುತ್ತೂರಿನಾಚಿನ ಹಳ್ಳಿಮೂಲೆಯ ಬಡೆಕ್ಕಿಲದಲ್ಲೊಂದು ರಾತ್ರಿ ಮೂಹೂರ್ತದ ಮದುವೆಗೆ ಗೋವಿಂದ ಮರಿಕೆಯಿಂದಲೇ ಸೈಕಲ್ಲೇರಿಕೊಂಡು ಹೊರಟಿದ್ದ. ಪುತ್ತೂರಿನ ಬಿಡಾರದಲ್ಲೊಂದು ಹಾಜರು ಹಾಕುವಾಗ, ರಜೆಯಲ್ಲಿ ಬಂದಿದ್ದ ನಾನು (ಆರೇಳರ ಪೋರ) ತಗುಲಿಕೊಂಡೆ. ಮಕ್ಕಳ ಮೇಲಿನ ಪ್ರೀತಿಯಲ್ಲಿ ಅವನಾದರೂ ಇಲ್ಲವೆನ್ನಲಿಲ್ಲ. ಹಿಂದಿನ ಕ್ಯಾರಿಯರಿನಲ್ಲಿ ನನ್ನನ್ನು ಕೂರಿಸಿ, ಮಣ್ಣಿನ ಕಚ್ಚಾ ರಸ್ತೆಯಲ್ಲಿ ಸೈಕಲ್ ಓಡಿಸಿಯೇಬಿಟ್ಟ. ಮದುವೆ, ಊಟ ಮುಗಿಸಿ ನಡುರಾತ್ರಿಯಲ್ಲಿ, ಸೈಕಲ್ಲಿನ ಡೈನಮೋ ದೀಪ ಬೆಳಗಿಕೊಂಡು ಮತ್ತೆ ಮನೆ ದಾರಿ ಹಿಡಿದಿದ್ದೆವು. ಮದುವೆಯ ಊಟ, ನಿದ್ರೆಯ ಹೊತ್ತು, ಸೈಕಲ್ಲಿನ ಕುಲುಕು, ಗಾಢಾಂಧಕಾರ ಎಲ್ಲ ಸೇರಿ ನಾನು ನಿದ್ರಾವಶನಾದದ್ದು ಗೋವಿಂದನಿಗೆ ತಿಳಿಯಲಿಲ್ಲ. ಒಂದು ದಡಬಡ ಇಳಿಜಾರಿನಲ್ಲಿ ನನ್ನ ಸ್ವಾಧೀನವಿಲ್ಲದ ಕಾಲು ಚಕ್ರಕ್ಕೆ ಸಿಕ್ಕಿ, ಸೈಕಲ್ ಸಮೇತ ಇಬ್ಬರೂ ನೆಲಕ್ಕುರುಳಿದೆವು. ದೀಪ ಹುಡಿಯಾಗಿತ್ತು. ಗೋವಿಂದನಿಗೆ ಸಾಕಷ್ಟು ತರಚಲು ಗಾಯಗಳೂ ಆಗಿರಬೇಕು. ಅದನ್ನು ಮರೆತು ಸಣ್ಣ ಅಳುವಿನ ನನ್ನನ್ನು ಎತ್ತೋಣವೆಂದರೆ ನನ್ನ ಕಾಲು ಒಂದೆರಡು ಕಡ್ಡಿ ಮುರಿದು ಚಕ್ರ ಮತ್ತು ಚೌಕಟ್ಟಿನ ನಡುವೆ ಸಿಕ್ಕಿಬಿದ್ದಿತ್ತು. ನಾವು ಬಿದ್ದ ಸದ್ದು ಮತ್ತೆ ಗೋವಿಂದ ಸಹಾಯಕ್ಕಾಗಿ ಹಾಕಿದ ಬೊಬ್ಬೆಗೆ ಸಮೀಪದ ಬಡಮನೆಯೊಂದರ ನಾಯಿಗಳೂ ಧ್ವನಿ ಸೇರಿಸಿದ್ದವು. ಅದರ ಒಕ್ಕಲು – ಬಹುಶಃ ಬಡಕೂಲಿಯವ ಎದ್ದು, ಟಾರ್ಚು ಬೆಳಗಿಕೊಂಡು ಓಡಿ ಬಂದ. ಅವರಿಬ್ಬರು ಸೇರಿ ನನ್ನ ಕಾಲು ಹೊರತೆಗೆದರು. ಅದೃಷ್ಟಕ್ಕೆ ಯಾರದ್ದೂ ಮೂಳೆ ಮುರಿತವಾಗಿರಲಿಲ್ಲ. ಮತ್ತೆ ಏನೋ ಪ್ರಥಮೋಪಚಾರ ಮಾಡಿ, ನನ್ನನ್ನು ಸೈಕಲ್ ಕ್ಯಾರಿಯರ್ ಮೇಲೆ ಪುನಃಸ್ಥಾಪನೆ ಮಾಡಿದರು. ಕೆಲವು ಕಡ್ಡಿ ಮುರಿದು, ಚಕ್ರ ಓರೆಯಾಗಿದ್ದ ಸೈಕಲ್ ಸವಾರಿ ಯೋಗ್ಯವಾಗಿರಲಿಲ್ಲ. ಆದರೆ ಧೃತಿಗೆಡದ ಗೋವಿಂದ, ಆ ಆಪತ್ಬಾಂಧವನ ಟಾರ್ಚ್ ಎರವಲು ಪಡೆದು, ಸೈಕಲ್ಲನ್ನು ಕಷ್ಟದಲ್ಲಿ ಮೈಲುಗಟ್ಟಲೆ ನೂಕಿದ. ಉದ್ದಕ್ಕೂ ನನ್ನನ್ನು ಎಚ್ಚರದಲ್ಲೂ ಸಮಾಧಾನದಲ್ಲೂ ಉಳಿಸಿಕೊಂಡು, ಪುತ್ತೂರಿನ ಅಜ್ಜನ ಮನೆಗೆ ಮುಟ್ಟಿಸಿದ್ದು ನೀವೇ ಹೇಳಿ, ಯಾವ ಸಾಹಸಕ್ಕೆ ಕಡಿಮೆ?!

ಗೋವಿಂದನ ಮದುವೆ ನನ್ನ ಪಾಲಿಗೆ ಮಾತ್ರವಲ್ಲ, ಅಂದಿಗೂ ಮುಂದಕ್ಕೂ ಇಡಿಯ ಮರಿಕೆ ಕುಟುಂಬಕ್ಕೆ ಒಂದು ಅವಿಸ್ಮರಣೀಯ ಆದರೆ ಮಧುರ ಘಟನೆ. ದಕ ಜಿಲ್ಲೆಯ ಪುತ್ತೂರಿನಿಂದ ಉಕ ಜಿಲ್ಲೆಯ ಹೊನ್ನಾವರಕ್ಕೆ, ನಮ್ಮ ದಿಬ್ಬಣ ಹೆಚ್ಚುಕಮ್ಮಿ ಇಪ್ಪತ್ನಾಲ್ಕು ಗಂಟೆ ಪಯಣಿಸಿದ್ದು ಒಂದು ಲಟಾರಿ ವ್ಯಾನಿನಲ್ಲಿ. ಆ ಕಾಲದಲ್ಲಿ ಕರಾವಳಿಯ ಅಂಚಿನಲ್ಲಿ ಹೆಚ್ಚಿನ ಯಾವ ನದಿಗಳಿಗೂ ಸೇತುವೆಗಳಿರಲಿಲ್ಲ, ದೋಣಿ ಕಡವಿನ ಕಟ್ಟೆಗಳಷ್ಟೇ. ಈ ಅವ್ಯವಸ್ಥೆ ನೀಗಲು ಹಲವು ನದಿಗಳನ್ನು ನಿವಾರಿಸಲು ಮೂಲ ಪಶ್ಚಿಮ ಘಟ್ಟದೆತ್ತರಕ್ಕೇರಿ (ಆಗುಂಬೆ, ತೀರ್ಥಳ್ಳಿ), ಅತ್ತ ಗಂಗೊಳ್ಳಿ ಕಡವಿಗಿಳಿದಿದ್ದೆವು. ಮುಂದೆಯೂ ಯಾವ್ಯಾವುದೋ ಕಾಡುಮೇಡು ಸುತ್ತಿದರೂ ಎರಡೆರಡು ಮಹಾನದಿಗಳನ್ನು ವಾಹನಸಮೇತ ದೋಣಿಗಳಲ್ಲಿ ದಾಟಬೇಕಾಯ್ತು. ರಾತ್ರಿಯ ಕಾಡಿನಲ್ಲಾದ ಹುಲಿ ದರ್ಶನ, ಮದುವೆಯ ತಂಡವೆಂದ ಮೇಲೆ ಇರಲೇಬೇಕಾದ ಆಭರಣಗಳು ಮತ್ತು ಅವಕ್ಕಂಟಿದ ಕಳ್ಳರ ಭಯ, ವ್ಯಾನಿನ ಅವ್ಯವಸ್ಥೆಗಳನ್ನೆಲ್ಲ ಮೀರಿ, ಒಳಗೆ ತುಂಬಿದ ನಾಕೆಂಟು (ನಾನೂ ಸೇರಿದಂತೆ) ಮಕ್ಕಳು, ಹತ್ತಾರು ಮಹಿಳೆಯರು, ಆರೆಂಟು ಗಂಡಸರು, ಅಷ್ಟೂ ಮಂದಿಗಳ ಬಟ್ಟೆಬರಿಗಳೆಲ್ಲದರ ದಿಬ್ಬಣ, ಮದುವೆ ಮುಹೂರ್ತಕ್ಕೆ ಮುಟ್ಟಿದ್ದು, ಮರಳಿದ್ದು ಬರೆದಿದ್ದರೆ ಒಂದು ಮಹಾ ಕಾದಂಬರಿಯೇ ಆಗುತ್ತಿತ್ತು. ಇಂದು ಬರೆಯದ ಆ ಕಥಾನಕದ ನಾಯಕ – ಗೋವಿಂದನೂ ಇಲ್ಲವಾಗಿದ್ದಾನೆ!

‘ಗೋವಿಂದನ ಮದುವೆ’ ಕಾದಂಬರಿಯಾಗದಿದ್ದರೂ ಹಾಗೆ ಬಂದ (ಪತ್ನಿ) ಮೋಹಿನಿ, ಅಥವಾ ತಿದ್ದಿದ ಹೆಸರಿನ (ಎ.ಪಿ) ಮಾಲತಿ, ಖ್ಯಾತ ಕಾದಂಬರಿಕಾರ್ತಿಯಾದದ್ದರಲ್ಲಿ ಏನೋ ಒಂದು ‘ದಿವ್ಯ ನ್ಯಾಯ’ವಿದೆ. ಮದುವೆಗೆ ಮುನ್ನವೇ ಸಾಹಿತ್ಯ ಗರಡಿಯಲ್ಲಿ ಒಂದೆರಡು ಪಟ್ಟು ಹಾಕಿದ್ದ ಮಾಲತಿಗೆ (ನನ್ನ ನೆನಪು ಸರಿಯಾದಲ್ಲಿ ಆಘಾತ – ಈಕೆಯ ಮೊದಲ ಕಾದಂಬರಿ, ಮದುವೆಗೂ ಮುನ್ನವೇ ಪ್ರಕಟವಾಗಿತ್ತು) ಸ್ವತಃ ಸಾಹಿತ್ಯ ಲಲಿತ ಕಲೆಗಳ ಮೋಹಿಯಾಗಿದ್ದ ಗೋವಿಂದ, ಅಮಿತ ಬೆಂಬಲ ಕೊಟ್ಟದ್ದು, ಮಿಗಿಲಾಗಿ ನಿರ್ಮತ್ಸರದ ಸಂಗಾತಿಯಾಗಿ ಒದಗಿದ್ದು ಅಪರೂಪ ಮತ್ತು ಅನುರೂಪ. ಈ ಸಾಂಗತ್ಯಕ್ಕೆ ಕೇವಲ ಲೌಕಿಕ ಅಳತೆಗೋಲಿಟ್ಟು ನೋಡಿದರೆ ಫಲಸ್ವರೂಪಿಗಳಾಗಿ ರಾಧಾಕೃಷ್ಣ (ಮಗ), ಲಲಿತ (ಮಗಳು), ಸೀತಾ (ಸೊಸೆ), ಅನುಷಾ (ಮೊಮ್ಮಗಳು), ಗೌತಮ (ಮೊಮ್ಮಗ), ಅಪೂರ್ವ (ಲಲಿತಳಿಂದ ಮೊಮ್ಮಗ) ಮತ್ತು ಚೇತನ ಮನೆಗೆ ತಗುಲಿದಂತೆ ಹರಡಿದ ನೂರೆಂಟು ಜೀವಾಜೀವವೈವಿಧ್ಯ ಕಾಣಬಹುದು. ಆದರೆ ಸಾಹಿತ್ಯಕ ನ್ಯಾಯದಲ್ಲಿ, ಕಾಲನಿಯಮದ ಗೋವಿಂದನ ಅಗಲಿಕೆ ತೋರಿಕೆಯ ವ್ಯಾಪ್ತಿಯನ್ನು ಮೀರಲು ಒಂದು ನೆಪವಾಗಿ ಕಾಣುತ್ತದೆ. ಪ್ರಿಯಭೂಮಿ ನಮ್ಮದು. ಆದರೆ ಗಗನದ ಅನಂತಕ್ಕೆ ಉಡಾವಣೆಗೊಳ್ಳುವ ನಮ್ಮ ಶೋಧಗಳಿಗೆ ಭೂಮಿಯ ಗುರುತ್ವವೇ ಮಿತಿಯಾಗುತ್ತದೆ. ಗೋವಿಂದನ ಅಗಲಿಕೆ ಭೂಮಿಯ ಪ್ರೀತಿ ಮರೆಯದ, ಅನಂತದ ಮೋಹ ಹಿಂಗದ ಅವಕಾಶವಾಗಲಿ; ಸಣ್ಣ ಕುಟುಂಬದ ಮಿತಿಯನ್ನು ಮೀರಿದ ಹೆಚ್ಚಿನ ಶಕ್ತಿಯಾಗಿ ಎಲ್ಲರಲ್ಲೂ ಪಸರಿಸಲಿ ಎಂದಷ್ಟೇ ಹಾರೈಸಬಲ್ಲೆ.