(ಚಕ್ರೇಶ್ವರ ಪರೀಕ್ಷಿತ ೧೪)

ಮಂಗಳೂರಲ್ಲ, ಮೈಸೂರು ಯಾಕೆ?

ನನಗೆ ಹೇಳ್ಕೊಳ್ಳೋಕ್ ಒಂದೂರು ಮಡಿಕೇರಿ. ಅದು ನನ್ನ ಹುಟ್ಟೂರು. ಅಲ್ಲಿ ನಾನಿದ್ದದ್ದು ಮೊದಲ ಸುಮಾರು ಹತ್ತು ವರ್ಷ ಮಾತ್ರ. ಮತ್ತೆ ಎರಡು ವರ್ಷ ಬಳ್ಳಾರಿ, ಐದು ವರ್ಷ ಬೆಂಗಳೂರು, ಮತ್ತಷ್ಟೇ ವರ್ಷ ಮೈಸೂರು. ಅಲ್ಲಿಗೆ ನನ್ನ ವಿದ್ಯಾರ್ಥಿ ದೆಸೆ ಮುಗಿದಿತ್ತು. ಪ್ರಸ್ತುತ ನಲ್ವತ್ತಕ್ಕೂ ಮಿಕ್ಕು ವರ್ಷಗಳ ವೃತ್ತಿ ಹಾಗೂ ವಾಸದ ಬಲದಲ್ಲಿ ನಾನು ನಿಸ್ಸಂದೇಹವಾಗಿ ಮಂಗಳೂರಿಗ. ಆದರೂ ನನ್ನ ಮೂಲ ಕುಟುಂಬ ಮೈಸೂರಿನಲ್ಲಿ ಖಾಯಂ ನೆಲೆ ನಿಂತದ್ದರಿಂದ ನನ್ನ ಜೀವನದಲ್ಲಿ ಅದಕ್ಕೆ ಮಹತ್ವ ಹೆಚ್ಚು. ಪ್ರಾಸಂಗಿಕವಾಗಿ ಮೈಸೂರು ನನಗೆ ಶೈಕ್ಷಣಿಕ ಉನ್ನತಿಯನ್ನು ಮಹಾರಾಜ ಕಾಲೇಜು ಹಾಗೂ ಮಾನಸಗಂಗೋತ್ರಿಯಲ್ಲಿ ಒದಗಿಸಿತು. ಇಲ್ಲೇ ಎನ್ಸಿಸಿ ಮತ್ತು ದಖ್ಖಣ ಪರ್ವತಾರೋಹಣ ಸಂಸ್ಥೆಯ ಹವ್ಯಾಸೀ ಚಟುವಟಿಕೆಗಳು ನನ್ನ ಮನೋಭೂಮಿಕೆಯನ್ನು ವೃತ್ತಿ ಸಾಹಸಕ್ಕೆ ಸಜ್ಜುಗೊಳಿಸಿದವು. ಎಲ್ಲಕ್ಕೂ ಮುಖ್ಯವಾಗಿ ತನ್ನ ಸಮೃದ್ಧ ಮತ್ತು ಸಹಜ ಪುಸ್ತಕ ಸಂಸ್ಕೃತಿಯಿಂದ, ನನ್ನ ವೃತ್ತಿಜೀವನಕ್ಕೆ ದೃಢ ಉಡ್ಡಯನ ಕೇಂದ್ರವಾಗಿ ನಿಂತದ್ದು ಮೈಸೂರು.

ವಿಸ್ತಾರ ಗಗನದಲ್ಲಿ ಖಾಯಂ ನೆಲೆಗೊಳಿಸಲ್ಪಟ್ಟ ಕೃತಕ ಉಪಗ್ರಹಗಳು ನಿರ್ದೇಶನ ಮತ್ತು ಉಪಯುಕ್ತತೆಯ ಮೂಲಕ ನಿಜ ಧನ್ಯತೆಯನ್ನು ಕಾಣುವುದು ತನ್ನ ಭೂನೆಲೆಯ ಸಂಬಂಧದಿಂದ. ತಂದೆ (೧೯೨೬-೨೦೦೮) ಮತ್ತು ಡಿವಿಕೆ ಮೂರ್ತಿ (೧೯೨೬-೨೦೦೯) ಇರುವಲ್ಲಿಯವರೆಗೆ ನನಗೆ ಭೂನೆಲೆಯ ಬಂಧವನ್ನು ಉಳಿಸಿಕೊಟ್ಟಿತ್ತು ಮೈಸೂರು. ಅವರಿಬ್ಬರ ಕೊನೆಯೊಡನೆ ಬಹುತೇಕ ನನ್ನ ಪುಸ್ತಕೋದ್ಯಮವೂ ಕಳಚಿಕೊಂಡಿತು (೨೦೧೨). ಇಂದು ನನಗೆ ಅಮ್ಮನಿರುವ ಆಪ್ತತೆಯಲ್ಲಿ ಮೈಸೂರು ತವರೂರು. ದಕ ಜಿಲ್ಲೆಯ ರೂಢಿಯಲ್ಲಿ, ಒಬ್ಬ ತಂದೆ ತಾಯಿಯರ ಮನೆ ತೊರೆದು ಬೇರೆಡೆ ಎಂಥಾ ಮನೆ ಮಾಡಿದರೂ ಅದಕ್ಕೆ ಬಿಡಾರ, ಅಂದರೆ ತತ್ಕಾಲೀನ ವಾಸಸ್ಥಳ ಎನ್ನುವುದುಂಟು. ಮನೆಯೆಂಬ ಆಪ್ತತೆ ಸಲ್ಲುವುದು ಆತನ ತಂದೆತಾಯಿಯರ ನೆಲೆಗೇ. ಬಹುಶಃ ಆ ಲೆಕ್ಕದಲ್ಲೇ ನಲ್ವತ್ತೆರಡು ವರ್ಷಗಳ ಉದ್ದದ ನನ್ನ ಮಂಗಳೂರು ವಾಸ, ಇಲ್ಲಿನ ಮನೆ, ಸಾಧನೆ, ಸಂಪತ್ತುಗಳ ಮೇಲೂ ನಾನು ಮೈಸೂರ ಹೆಸರು ಹೇಳಿದರೆ ಸಾಕು, ಪರಿಚಿತರು ಉದ್ಗರಿಸುತ್ತಾರೆ “ಓ ಮನೆಗೆ ಹೋಗಿದ್ರಾ!” ವಿವಿಧ ಪರ್ವ ಕಾಲಗಳಲ್ಲಿ, ಕೌಟುಂಬಿಕ ಕೂಟಗಳಲ್ಲಿ ನನ್ನ ಮೈಸೂರಿನ ಬಂಧ ನವೀಕರಣಗೊಳ್ಳುತ್ತಿರುತ್ತದೆ, ಬಲಗೊಳ್ಳುತ್ತಲೂ ಇರುತ್ತದೆ. ಅಂಥ ಎರಡು ಅವಕಾಶ ಈಚೆಗೆ ನಮಗೆ ಕಡಿಮೆ ಸಮಯದ ಅಂತರದಲ್ಲಿ ಒದಗಿತು. ಹಾಗೆ ಮೈಸೂರಿನಲ್ಲಿದ್ದಾಗ ಸೈಕಲ್ಲೇರಿಯೋ ನಡೆದೋ ನಾನು ಹೊಸದುಗೊಳಿಸಿಕೊಂಡ ನೆನಪಿನ ಚಿತ್ರವನ್ನು ಅಂದಂದೇ ಫೇಸ್ ಬುಕ್ಕಿನಲ್ಲಿ ಟಿಪ್ಪಣಿಗಳಾಗಿ ಪ್ರಕಟಿಸಿದ್ದೆ. ಅವನ್ನು ಪರಿಷ್ಕರಿಸಿ ಇಲ್ಲಿ ಸಂಗ್ರಹಿಸಿದ್ದೇನೆ.

ಮೈಸೂರಿನ ನೀರಗೋಳಿಗೊಂದು ಸಂಕೇತ – ಕುಕ್ಕರಳ್ಳಿ ಕೆರೆ!

ಮೊದಲ ಕಂತಿನಲ್ಲಿ ಮೈಸೂರಿನಲ್ಲಿದ್ದ ಮೂರು ದಿನಗಳಲ್ಲಿ (೪,೫,೬-೧೧-೨೦೧೭) ಎರಡು ಸೈಕಲ್ ಸರ್ಕೀಟ್ ನಡೆಸಿದ್ದೆ. ತುಸು ಹೊರವಲಯಕ್ಕೆ ಹೋದಂತೆ ಎಲ್ಲಾ ತಗ್ಗುಗಳೂ ನೀರ ಸಮೃದ್ಧಿ, ಹಸಿರ (ಕೆಲವು ಕೃಷಿಬೆಳೆಗಳೂ ಸೇರಿದಂತೆ) ಉಲ್ಲಾಸ ಕಂಡು ಮನ ತುಂಬುತ್ತಿತ್ತು. ಆದರೆ ಹಡಿಲು ಬಿದ್ದ ಜಾಗಗಳು, ನಗರ ವಿಸ್ತರಣೆಯ ಚುರುಕು ಮೈಸೂರಿನಲ್ಲೂ ಕಡಿಮೆಯಿಲ್ಲ. ಹಾಗಿರುವಾಗ ಇಲ್ಲಿ ಕಾಣುವ ನೀರ ಆಳದ ಗೋಳು (ಹೂಳು) ನಾ ಹೇಳಬೇಕೇ? ಮತ್ತೆ ಬರಲಿರುವ ಬಿಸಿಲ ದಿನಗಳಲ್ಲಿ ಒಮ್ಮೆಲೆ ಕೆರೆ ಪಾತ್ರೆ ಕಾಣುವಾಗ (ನೀರೇ) “ತಾಳು” ಪ್ರಾರ್ಥನೆ ತಪ್ಪುವುದುಂಟೇ?

ನಮ್ಮ ಮಂಗಳೂರು ಬಸ್ ಮೈಸೂರು ಪ್ರವೇಶಿಸುತ್ತಿದ್ದಂತೆ, ಪ್ರಸಾರಾಂಗದೆದುರು ದಿಕ್ಕು ಬದಲಿಸಿ ವಿವಿಪುರದ ಬಳಸು ದಾರಿ ಹಿಡಿದಾಗಲೇ “ಎಲ್ಲ ಸರಿಯಿಲ್ಲ” ಎಂದನ್ನಿಸಿತ್ತು. ವಿರಾಮದಲ್ಲಿ ಸ್ಥಳೀಯ ಪತ್ರಿಕಾ ವರದಿ, ಮತ್ತೆ ಪ್ರತ್ಯಕ್ಷ ದರ್ಶನಕ್ಕೆ ಸಿಕ್ಕಾಗ, ವಿಖ್ಯಾತ ಕುಕ್ಕರಳ್ಳಿ ಕೆರೆಯ ದುರಂತ ಕಂಡುಕೊಂಡೆ. ಕೆರೆಯ ಪ್ರಧಾನ ಜಲ ಪೂರೈಕೆ ನಾಲೆ ಪಡುವಾರಳ್ಳಿ ದಿಕ್ಕಿನಲ್ಲಿದೆ. ಅಲ್ಲಿ ಮೈಸೂರು-ಮಡಿಕೇರಿಯ ಮುಖ್ಯ ದಾರಿಯನ್ನು, ಹಿಂದೇನೋ ಅನಿವಾರ್ಯತೆಗೆ ದೊಡ್ಡ ಸೇತುವೆ ಮಾಡಿ, ಕೆರೆ ಕತ್ತರಿಸಿಯೇ ಸಾಗಿಸಿದ್ದರು. ನೀರು ಕಡಿಮೆಯಾದಾಗಲೂ ಕೆರೆ ಪ್ರಭಾವದಲ್ಲಿ ದಾರಿಯ ಇಕ್ಕೆಲಗಳಲ್ಲಿ ವಿಸ್ತಾರ ಜವುಗುನೆಲ ಸೊಂಪಾಗಿ ಹುಲ್ಲು ಬೆಳೆಸಿಕೊಂಡು ಶೋಭಿಸುತ್ತಿತ್ತು. ಆದರಿಂದು ಆ ಮೇಲ್ಬದಿಯ ಪೂರ್ಣ ಪ್ರದೇಶದಲ್ಲಿ ಏನೂ ಉಳಿಯದಂತೆ ನೆಲ ಎತ್ತರಿಸಿ, ದೇವಾಲಯದಿಂದ ತೊಡಗಿ ಮಹಾವಿದ್ಯಾಲಯದವರೆಗೆ ಮಹಾ ಅಕ್ರಮ ನಡೆಸಿದ್ದಾರೆ. ಈಚೆಗೆ ಒಂದು ದೊಡ್ಡ ಮಳೆ ಬಂತು. ಆಗ ವಿವಿಪುರಂ ವಲಯದಿಂದ ಬಂದ ಭಾರೀ ನೀರಿಗೆ ಸೇತುವೆ ಕಿರಿದಾಯ್ತು. ಇತ್ತ ಹಿನ್ನೀರಿಗೆ ಹರಡಿಕೊಳ್ಳಲು ನೆಲೆಯಿಲ್ಲದೆ, ಮೊದಲು ಎತ್ತರದ ಪ್ರದೇಶವಾಗಿದ್ದ ಪಡುವಾರಳ್ಳಿಗೇ ನುಗ್ಗುವ ಅಪಾಯ ಕಾಣಿಸಿತು. ಸ್ಥಳೀಯಾಡಳಿತ ಇತಿಹಾಸ ಅಗೆಯದೇ ತತ್ಕಾಲೀನ ‘ಸಮನ್ವಯ’ ಎನ್ನುವಂತೆ ದಾರಿ, ಸೇತುವೆಯನ್ನೇ ಕತ್ತರಿಸಿಬಿಟ್ಟರು! ಆದರೆ ಈ ವ್ಯಾಧಿ ಸರಳ ಕಡಿತಕ್ಕೆ ಜಗ್ಗುವಂತದ್ದಲ್ಲ. ಕಳೆದಲ್ಲೇ ಉಲ್ಬಣಿಸಿದೆ. ಇಷ್ಟು ಕೊಟ್ಟರೆ ಅಷ್ಟು ಕೇಳುವ, ಕೆರೆಯನ್ನೇ ನುಂಗುವ ಮಹಾವ್ರಣವಾಗಿದೆ (ಅರ್ಬುದ ಅಥವಾ ಕ್ಯಾನ್ಸರ್)! ಈಗ ಸೇತುವೆಯನ್ನು ಎತ್ತರಿಸುವ ಅಥವಾ ವಿಸ್ತರಿಸುವ ಯೋಚನೆಗಿಂತ, ಆದ್ಯತೆಯಲ್ಲಿ ಇನ್ನಷ್ಟು ಕೆರೆಯೊಳಕ್ಕೇ ದಾರಿ ನುಗ್ಗಿಸುವ ‘ಜನಪರ ಯೋಜನೆ’ ಹೊಸೆಯುತ್ತಿದ್ದಾರೆ!

ಅತ್ತ ರಂಗಾಯಣ-ಜಲದರ್ಶಿಯಿಂದ ತೊಡಗಿ, ಇತ್ತ ಪಡುವಾರಳ್ಳಿ ಕವಲಿನವರೆಗೆ ರಸ್ತೆ ನೇರ ಮಾಡಿ, ಅಪಘಾತ ಗುಂಡ್ಯಕ್ಕೆ ಗುಮ್ಮ ಬರುತಿದೆ, ಗಡಗಡೆನುತಿದೆ!), ಎತ್ತಿನಹೊಳೆ ತಿರುವು ಯೋಜನೆಗೆ ಸದಾನಂದ ಗೌಡ (ನೋಡಿ: ಎತ್ತಿನ ಹೊಳೆಯಲ್ಲಿ ಸುಳ್ಳಿನ ಪ್ರವಾಹ ) ಅಡಿಗಲ್ಲು ಹಾಕಿದ್ದಕ್ಕೆಂತ ಸಾಮ್ಯ!! ಹೀಗೂ ದೇಶಭಕ್ತಿ ಇರಬಹುದಲ್ಲವೇ? ಮುಕ್ತವಲಯ ಮಾಡುತ್ತಾರಂತೆ. ಇದಕ್ಕೆ ಪರಿಸರ ಪ್ರೇಮಿಗಳ ತೀವ್ರ ಪ್ರತಿಭಟನೆ ನಡೆದಿದೆ. ಇದು ದಾರಿಗಿರುವ ಪಾರಂಪರಿಕ ಮೌಲ್ಯ ರಕ್ಷಣಾ ನಿಯಮಗಳ ಸ್ಪಷ್ಟ ಉಲ್ಲಂಘನೆ. ರಾಜ್ಯ ಹಾಗೂ ನಗರಪಾಲಿಕೆಗಳ ಸ್ವಾಮ್ಯವನ್ನೂ ಧಿಕ್ಕರಿಸುವಂತೆ, ಇಲ್ಲಿನ ಬಿ.ಜೆ.ಪಿ ಸಂಸದ ಪ್ರತಾಪ್ ಸಿಂಹ ಪೊಲಿಸ್ ಬಂದೋಬಸ್ತಿನೊಡನೆ ಅಡಿಗಲ್ಲನ್ನೇ ಹಾಕಿದ್ದಾರೆ! ಹಿಂದೆ ಗುಂಡ್ಯ ೨೦೦ ಮೆಗಾವಾಟ್ ಜಲವಿದ್ಯುತ್ ಯೋಜನೆಗೆ ಯಡ್ಯೂರಪ್ಪ (ನೋಡಿ: ಕುಕ್ಕರಳ್ಳಿಯ ಅಂಚಿನ ಕೆರೆಯಾದ್ದರಿಂದ ಕುಕ್ಕರಳ್ಳಿ ಕೆರೆ ಎಂದೇ ಹೆಸರು ಬಂದದ್ದಿರಬೇಕು. ೧೯೬೯ರಲ್ಲಿ ನಾನಿದನ್ನು ಮೊದಲ ಬಾರಿಗೆ ಕಂಡಿದ್ದೆ. (ನನ್ನ ವಿದ್ಯಾರ್ಥಿ ದೆಸೆ, ಸರಸ್ವತಿಪುರ ವಾಸ.) ಆಗ ಇದನ್ನು ಕೆರೆ ಮಾಡಿದ ಕಟ್ಟೆಯೊಂದೇ (ದಕ್ಷಿಣ ದಂಡೆ) ವ್ಯವಸ್ಥಿತ ನಡೆದಾಟಕ್ಕೊದಗುತ್ತಿದ್ದ (ನಡೆದಾಡ್able) ದಂಡೆಯಾಗಿತ್ತು. ಅದರ ನಡುವಲ್ಲಿ ಕೆರೆಗೆ ನುಗ್ಗಿದಂತೊಂದು ಪುಟ್ಟ ಮಂಟಪ, ಬಹುಶಃ ತೂಬು ವ್ಯವಸ್ಥೆ. ಅಲ್ಲೇ ಒಂದೆರಡು ದೋಣಿಗಳು – ಅಷ್ಟೇನೂ ಸುವ್ಯವಸ್ಥೆ ತೋರದೆ ಬಿದ್ದುಕೊಂಡಿದ್ದದ್ದೂ ನೆನಪು. ಕೆರೆಕಟ್ಟೆಯ ಆಕರ್ಷಣೆಗೆ “ಮಹಾಕವಿ ಕುವೆಂಪೂ ಇಲ್ಲಿ ವಾಕ್ ಬರ್ತಾರೆ” ಎನ್ನುವುದನ್ನು ನಾನಾಗ ಕೇಳಿದ್ದೆ (ನೋಡುವ ಪ್ರಯತ್ನ ಮಾಡಲಿಲ್ಲ ಬಿಡಿ). ಹಾಗೇ ಕಟ್ಟೆಯ ಕೆಳಮಗ್ಗುಲ ದೋಬೀ ಘಾಟ್ ಬಿಟ್ಟು, ಕೆರೆನೀರ ಘನ ಉಪಯೋಗ ಏನೆಂದು ನಾನು ಚಿಂತಿಸಿಯೂ ಇರಲಿಲ್ಲ! ಆದರಿಂದು ಕುರಿತು ಗಮನಿಸಿದಾಗ, ಕೆರೆ ನಾಮಕಾವಸ್ಥೆಗಷ್ಟೇ ಕುಕ್ಕರಳ್ಳಿಯದು. ಹಿಂದಾದರೂ ಹಳ್ಳಿಯ ಕೃಷಿಗೋ ನಗರದ ನೀರಡಿಕೆಗೋ ಈ ಕೆರೆ ಆಸರೆಯಾದದ್ದು ನಾನು ಕಂಡಿಲ್ಲ. ಆದರೀಗ ಮಹಾನಗರಗಳು ಎಲ್ಲೆಡೆ ಮಾಡುವಂತೆ, ಅದರ ಸುತ್ತಣ ದಂಡೆಯಲ್ಲಿ ತೋರಿಕೆಗೆ ಉದಾತ್ತ ಹೆಸರಿನ ನೂರೆಂಟು ಯಜಮಾನರು, ಯಥಾನುಶಕ್ತಿ ಭರ್ಜರಿ ಕಟ್ಟಡ, ಸಿಬ್ಬಂದಿಯೊಡನೆ ನೆಲೆಸಿರುವುದು ಕಾಣುತ್ತದೆ. ಉದಾಹರಣೆಗೆ – ತೋಟಗಾರಿಕೆ, ಮೈವಿವಿನಿಲಯ, ಸಸ್ಯಾಭಿವೃದ್ಧಿ ಕ್ಷೇತ್ರ, ಕಾಫಿ ಮಂಡಳಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಇವರದೇ ಅತಿಥಿಗೃಹ, ಕೊಳಚೆ ಮಂಡಳಿ, ಮಹಾನಗರಪಾಲಿಕೆ, ರಂಗಾಯಣ….. ಇತ್ಯಾದಿ ಪಟ್ಟಿ ಬೆಳೆಯುತ್ತದೆ. ಹಿಂದೊಮ್ಮೆ ಇದರಲ್ಲಿ ಜಲಕಳೆ ವಿಪರೀತ ತುಂಬಿದಾಗ ಸ್ವಯಂಸೇವಾ ಸಂಸ್ಥೆಗಳು ‘ಕುಕ್ಕರಹಳ್ಳಿ ಕೆರೆ ಉಳಿಸಿ’ ಹೋರಾಟ ನಡೆಸಿದ್ದರು; ಕಳೆಮುಕ್ತಿಯೂ ಆಗಿತ್ತು. ಅದು ಬಿಟ್ಟರೆ, ಸ್ವತಂತ್ರವಾಗಿ ಕೆರೆಯದೇ ಅಸ್ತಿತ್ವ ಎಲ್ಲೂ ಜಾಹೀರಾಗಿಯೇ ಇಲ್ಲ.

ಆರೋಗ್ಯಕ್ಕಾಗಿ ಸುತ್ತ ಓಡಿದವರು, ಜೀವವೈವಿಧ್ಯಕ್ಕಾಗಿ ಕೊಕ್ಕರೆ ಕತ್ತಾದವರು, ಕೆರೆಯ ನೀರಿನಲ್ಲಿ ಮುಳುಗಿ ಸತ್ತವರ ಹೆಣ ಎತ್ತಿದವರು, ಕೆರೆಗೆ ಕೊಳಚೆಪ್ರವಾಹವೇ ‘ಶಕ್ತಿ’ ಎಂದಾದಾಗ ಪ್ರತಿಭಟಿಸಿ ಜಾಗೃತಿ ಉಂಟು ಮಾಡಿದವರು, ನೀರಿನಲ್ಲಿ ಜಲಕಳೆ ಬೆಳೆದು ಕೆರೆಯೇ ಸಾಯುವಂತಾದಾಗ ಸ್ವತಃ ಕೈಜೋಡಿಸಿ ಕಳೆ ಕಳೆದವರು, ಉದ್ದಕ್ಕೂ ಕೆರೆಕೆರೆ ಎಂದೇ ಒರಲಿದ, ಬರೆದ ವ್ಯಕ್ತಿಗಳು, ಪ್ರಕಟಿಸಿದ ಮಾಧ್ಯಮಗಳೆಲ್ಲಾ ಇಂದು ಯಃಕಶ್ಚಿತ್ ಕುರಿಮಂದೆ. ಪಕ್ಷ ಗೋಠಾಳೆಗಳ, ಅಭಿವೃದ್ಧಿ ಯೋಜನೆಗಳ ಮೇಲಾಟದಲ್ಲಿ ಪ್ರದಕ್ಷಿಣಾಪಥ (ಇದೂ ಮಡಿಕೇರಿ ರಸ್ತೆಗೆ ಸಮಾನಾಂತರವಾಗಿ ಸಾಗುವಲ್ಲಿ ಕೆರೆಯ ಇನ್ನಷ್ಟು ಮೇಲ್ಭಾಗವನ್ನು ಕತ್ತರಿಸಿ ಪ್ರತ್ಯೇಕಿಸಿದೆ. ದಾರಿ ನೇರ ಮಾಡುವ ಯೋಜನೆಯವರು ಈ ನೆಲದ ಮೇಲೇ ಕಣ್ಣಿಟ್ಟಂತಿದೆ!), ಉದ್ಯಾನವನ, ಕಾರಂಜಿ, ದೋಣಿವಿಹಾರ ಎಂಬಿತ್ಯಾದಿ ಹಣ ಮುಕ್ಕಿ ಸರಿಯಾಗಿ ಬಾಯಿ ಒರೆಸಿಕೊಳ್ಳದ ಕಟುಕರು (ಇವರು ಪಕ್ಷಾತೀರರು!), ಮಹಾಸೇತು, ಅಲಂಕಾರ, ಪ್ರವಾಸೋದ್ಯಮ, ಮೈಸೂರ ಪರಂಪರೆ ಎಂದು ಕತ್ತಿ ಸಾಣೆಹಿಡಿಯುತ್ತ, ಮುಂದುವರಿಯುವುದು ಖಾತ್ರಿ. ಆ ಕೊನೆಯಲ್ಲಿ ಕೆರೆಯೇ ಮುಳುಗಿ ಹೋದರೆ ಆಶ್ಚರ್ಯವಿಲ್ಲ.

ಒಂದು ಕೊಸರು – ಕಂಡಿರೇ ನೀವು ಕಂಡಿರೇ….

ಸೈಕಲ್ ಸರ್ಕೀಟ್ ನಡೆಸಿ (೪-೧೨-೨೦೧೭), ಉಸ್ಸಪ್ಪಾಂತ ಮನೆ ತಲಪಿ, ಕಿಸೆ ತಡಕಿದರೆ ಕ್ಯಾಮರಾ ನಾಪತ್ತೆ! ಗಡಿಬಿಡಿಯಲ್ಲಿ ಅಂಗಿಯ ಮೂರೂ ಪ್ಯಾಂಟಿನ ಮೂರೂ ಕಿಸೆ ತನಿಖೆ ಮಾಡಿದೆ. ಅದೃಷ್ಟಕ್ಕೆ ಕ್ಯಾಮರಾ ಒಂದು ಕಿಸೆಯಲ್ಲಿ, ಬಹುತೇಕ ಮೌನವೇ ಇರುವ ನನ್ನ ಚರವಾಣಿಯೊಡನೆ ಚಕ್ಕಂದ ನಡೆಸಿತ್ತು. ಅದರ ಪುಟ್ಟ ರೆಗ್ಸಿನ್ ಕವರ್ ಮಾತ್ರ ಇರಲಿಲ್ಲ. ತಲೆಯೊಳಗೆ ಕಳೆದರ್ಧ ಗಂಟೆಯ ಕಲಾಪಗಳ ರೀ-ಪ್ಲೇ ಹಾಕಿ ನೋಡಿಕೊಂಡೆ. …..ಕುಕ್ಕರಹಳ್ಳಿ ಕೆರೆ ದಂಡೆಯ ಮೈ.ವಿವಿನಿಲಯದ ಪಾಲಿನ ಗೇಟಿನ ಎದುರು ಚಿತ್ರ ಹಿಡಿವ ಮುನ್ನ ವೆಲ್ಕ್ರೋ ಚರಕ್ ಎನ್ನಿಸಿದ್ದೆ. ಮತ್ತೆ ತುಸು ಮುಂದೆ ಇನ್ನೂ ನಾಲ್ಕೈದು ಚಿತ್ರ ತೆಗೆಯುವುದಿರಬಹುದು ಎಂಬ ಅಂದಾಜಿನಲ್ಲಿ, ಖಾಲಿ ಕವರನ್ನು ಎಡ ಕಿಸೆಗೂ ಕ್ಯಾಮರವನ್ನು ಬಲ ಕಿಸೆಗೂ ಸೇರಿಸಿದ್ದೆ. ಮುಂದೆ ದಾರಿಯ ಎಡ ಮಗ್ಗುಲುಗಳಲ್ಲೇ ಸವಾರಿ ಬಂದಿದ್ದೆ. ಅಲ್ಲೆಲ್ಲೋ ಬಿದ್ದಿರಬೇಕು…..

ಕಡೆಯ ಸುಮಾರು ಐದೇ ಮಿನಿಟಿನ ದಾರಿಯನ್ನು ಹುಡುಕಿ ನೋಡದ್ಲೆಂದು, ತೊಟ್ಟು ನೀರೂ ಬಾಯಿಗೆ ಬಿಡದೆ ಹೊರಟೆ. ಈಗ ದಾರಿಯ ಬಲಮಗ್ಗುಲನ್ನು ನೋಡುತ್ತಾ ಸಾಗಬೇಕಿದ್ದುದರಿಂದ ಸವಾರಿಗಿಂತ ನಡಿಗೆ ಉತ್ತಮವೆಂದು ಆಯ್ದುಕೊಂಡೆ. “ಮನೆಗೇಟಿನ ಒತ್ತಿನ ಗಂಧದ ಗಿಡವೇ, ದೀಪಕಂಬವನ್ನಪ್ಪಿದ್ದ ಕಾಟುಬಳ್ಳಿಯೇ, ಸೈಕಲ್ಲನ್ನು ಎತ್ತಿ ಕುಕ್ಕಿದ ಆಳುಗುಂಡಿಯ ಒತ್ತಿನ ರಸ್ತೆಯಂಚೇ, ೧೪ನೇ ಮುಖ್ಯರಸ್ತೆಗೆ ತಿರುಗುವ ಓರೆಯಂಚಿನ ಹರಕೇ, ಮತ್ತೆ ತಿರುಗಿದ ೭ನೇ ಅಡ್ಡ ರಸ್ತೆಯ ಕವಲೇ, ಮುಂದೆ ಬಳಸಿದ ೧೬ನೇ ಮುಖ್ಯರಸ್ತೆಯ ತಿರುವೇ, ಚತುಷ್ಪಥಗೊಂಡ ೫ನೇ ಅಡ್ಡ ರಸ್ತೆಯೇ ಕಂಡಿರೇ? ನೀವು ಕಂಡಿರೇ…” ಎಂದು ಪಲ್ಲವಿಸುತ್ತ ನಡೆದೆ. ಸಂಕೇತ ದೀಪಗಳ ಬಳಿ ಹೆಚ್ಚಿನ ವಾಹನ ಸಮ್ಮರ್ದವಿರುವ ವಿಶ್ವಮಾವನ (>ಯಾರದ್ದೋ ಮಾವನ ಹೆಸರು ವಿಶ್ವ ಇದ್ದಿರಬೇಕು!!) ರಸ್ತೆ, ಕುಕ್ಕರಳ್ಳಿ ಕೆರೆಯ ಪಶ್ಚಿಮದಂಡೆಯೇ ಆದ ಕ್ಯಾಂಪಸ್ ರಸ್ತೆಗಾಗುವಾಗ (ಬಯಲು ರಂಗಮಂದಿರದ ರಸ್ತೆ) “ಕೆಂಗಣ್ಣು ಕೆಕ್ಕರಿಸಿದ ಕಂದೀಲುಗಳೇ ಕುಕ್ಕರಳ್ಳಿ ಒತ್ತಿನ ನಾಲೆಯೇ ಸೇತುವೇ ಲಲಿತಕಲೆಗಳ ಕಾಲೇಜಿನ ಮಹಾದ್ವಾರವೇ ನೀವೂ ಕಾಣಿರೇ ನನ್ನ ಕ್ಯಾಮರಾ ಕವರ್ರೂ?” ಎಂದು ಹೊಸ ಚರಣವನ್ನೇ ನಿರ್ವಹಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಅಧ್ಯಯನ ಕೇಂದ್ರದ ದಾರಿ ನುಗ್ಗಿದೆ, ಸಾವಿರ ಬೀಳಲಿನ ಮರ ಸುತ್ತಿದೆ, ಕೆರೆದಂಡೆಯ ಕಟಕಟೆಯ ಅಂಚುಗಳಲ್ಲೂ ಇಣುಕಿದೆ. ಕೊನೆಗೆ ಅಲ್ಲೆಲ್ಲ ನಾ ಸೈಕಲ್ಲಿನಲ್ಲಿ ಬಂದಾಗ ಇದ್ದ ಕಾವಲಿನ ಭಟನನ್ನೇ ವಿಚಾರಿಸಿದೆ. “ಈಗ ನಾಕ್ ಜನ ಹೋದ್ರಲ್ಲಾ ಸಾರ್. ಆ ಗಂಡ್ಸು ಕೆರೆದಂಡೇಲೆ ಏನೋ ಹೆಕ್ಕಿದ್ ನೋಡ್ದೇ! ಅವರ್ದೇ ಏನೋ ಬಿದ್ದಿರ್ಬೇಕು, ಅನ್ಕಂಡೆ. ಹೋಗಿ ಕೂಡ್ಲೇ ವಿಚಾರ್ಸೀ ಸಾ….” ಆತನ ಮಾತು ಮುಗಿವ ಮೊದಲು ನಾನು ಮತ್ತೆ ಮುಖ್ಯ ದಾರಿಗೆ ದಾಪುಗಾಲು ಹಾಕಿದೆ. ಆ ನಾಕು ಮಂದಿ ಪಡುವಾರಳ್ಳಿ ಕಡೆಗೆ ನಡೆದಿದ್ದರು. ನನಗೆ ಅಲ್ಲಿ ಮಿಂಚಿದ ರೇಸ್ ಬೈಕೇ ಸ್ಫೂರ್ತಿ – ‘ಜೂಊಊಂ’ ಎಂದು ಹೋಗಿ ‘ಕ್ರೀಈಈಚ್’ ಎಂದು ಆ ಗಂಡಸಿನ ಬಳಿ ನಿಂತೆ. ಆತನನ್ನು ನಾನು ವಿಚಾರಿಸುವ ಅಗತ್ಯವೇ ಇಲ್ಲವೆನ್ನುವಂತೆ ಆತ ಹೆಕ್ಕಿದ್ದು ಅವನ ಕೈಯಲ್ಲೇ – ಕ್ಯಾಮರಾ ಕವರ್…. ಅಲ್ಲ, ಆಲದ ಮರದಿಂದುರಿದ ಸುಂದರ ಒಣ ಬಂದಣಿಕೆ! ಆತನಿಗೆ ಬೇರೇನೂ ಸಿಕ್ಕಿರಲಿಲ್ಲ. ಹುಡುಕಾಟಕ್ಕೆ ಹೊರಟ ತಪ್ಪಿಗೆ, ವಿವಿನಿಲಯದ ಪಾಲಿನ ಗೇಟಿನವರೆಗೂ ಹೋಗಿ, ಅಲ್ಲಿನ ಕಾವಲಿನ ಭಟನನ್ನೂ ಕೇಳಿ, ನಿರಾಶೆ ಹೊತ್ತು ಮತ್ತೆ ಮನೆಯತ್ತ ಮುಖ ಮಾಡಿದೆ.

ಈಗ ಕಲ್ಪನಾಸ್ವರಗಳ ಸರದಿ. ಅವರಿವರು ಕಂಡಂತೆ ಕವರ್ ಹೇಗೆ ಕಾಣಿಸಿರಬಹುದು – ಪುಟ್ಟ ಪರ್ಸ್, ತುಂಬಾಹಣ, ಇಲ್ಲಾ ಆಭರಣ, ಅಥವಾ ಅಮೂಲ್ಯ ದಾಖಲೆಗಳು….? ಯಾರೋ ಹೆಕ್ಕಿದ್ದಾರೆ, ಬಾಯಿ ಚರಕ್ ಮಾಡಿ ತೆರೆದಿದ್ದಾರೆ, ಖಾಲಿ ಕಂಡು ನಿರಾಶೆಯಾಗಿರಬೇಕು. ಪುಟಕೋಸಿ (೪ಇಂಚು ೩ ಇಂಚು ಅಳತೆ) ರೆಗ್ಸಿನ್ ಕವರ್ ಯಾರಿಗೆ ಬೇಕು, ಎಳೆದು ದಾರಿಯಾಚೆ ಬಿಸಾಡಿರಬೇಕು! ಅದುವರೆಗೆ ಕೇವಲ ಸೈಕಲ್ ಜಾಡಿನ ಅಕ್ಕಪಕ್ಕದಲ್ಲಷ್ಟೇ ತೊನೆದಾಡುತ್ತಿದ್ದ ದೃಷ್ಟಿ ಪುಟ್ಟಪಥದಾಚಿನ ಕುರುಚಲುಗಳಿಗೆ ತೊಡರಿಕೊಳ್ಳತೊಡಗಿತು, ಚರಂಡಿಗಳಲ್ಲೂ ಮುಳುಗೆದ್ದಿತು! ಕತ್ತುಕೊಂಕಿದ ಯಾರದೋ ದಪ್ಪ ಕತ್ತಿನಪಟ್ಟಿ, ಟಾಪು ಕಳಚಿಕೊಂಡ ಸಸ್ತ ಪೆನ್ನು, ಗುಟ್ಕಾ ಚೀಟಿ, ಮಾಝಾ ತೊಟ್ಟೆ….. ನನ್ನಿಂದ ನೂರುಪಟ್ಟು ಅವಸರದವನ್ಯಾರೋ ಹೆಲ್ಮೆಟ್ಟೂ ಇಲ್ಲದೇ ರಕ್ಕಸ ಬೈಕೇರಿ ಎರಡು ಬಾರಿ ಇತ್ತಿಂದತ್ತ, ಅತ್ತಿಂದಿತ್ತ ಭೋರ್ಗರೆದೋಡಿದ. ಆನೆ ತೊಡೆಗಾತ್ರದ ಆ ಚಕ್ರದ ಸುಳಿಗೆ ಸಿಕ್ಕ ಯಾವುದೋ ಅನಾಥ ಪರ್ಲ್ಪೆಟ್ ಬಾಟಲ್ ಚಕ್ಕುಚಿಂದಿಯಾಗಿ ಹಾರಿತು. ನನ್ನ ಕವರೂ ಹೀಗೇ ಆಗಿದ್ದರೆ? ಆಚೀಚೆ ಬಿದ್ದಿದ್ದ ಕಸಗಳಲ್ಲೂ ನನ್ನ ಕವರಿನ ಚಿಂದಿ ಗುರುತಿಸುವ ಸಂಕಟ; ಕಂಡಿದ್ದರೆ ಹೆಕ್ಕುತ್ತಿದ್ದೆನೆಂದಲ್ಲ, ನಿಸ್ಸಂದೇಹವಾಗಿ ಮರೆಯಬಹುದೆಂದು – ಅಷ್ಟೆ.

ಮೂಲೆ ಜೋತುಬಿದ್ದ, ಮಾಸಲು ‘ಸ್ವಚ್ಛ ಭಾರತ’ದ ಪೋಸ್ಟರ್ ದಪ್ಪಕ್ಷರಗಳಲ್ಲಿ ಗದರಿದಂತನ್ನಿಸಿತು. ನಾನು ವಿನೀತನಾಗಿ “ಇಲ್ಲ, ನಾ ಕಸ ಹಾಕಿದ್ದಲ್ಲ! ಅದು ಬಿದ್ದು ಹೋದ್ದು. ಅದನ್ನು ತೋರಿಕೊಟ್ಟರೆ ಈಗಲೂ ಹೆಕ್ಕಿಯೇನು” ಗುಣುಗುಣಿಸಿದೆ. ನಡೆದಷ್ಟೂ ಅಂತರವನ್ನು ವ್ಯತ್ಯಾಸವೇನೂ ಇಲ್ಲದೆ ನಡೆದು ಮುಗಿಸುತ್ತಿದ್ದಂತೆ ದಿವ್ಯಜ್ಞಾನ ಬಂದಿತ್ತು: ಅದಕ್ಕೆ ನಾನು ಕೊಟ್ಟದ್ದಾದರೂ ಎಷ್ಟು? – ಐವತ್ತೋ ನೂರು ರೂಪಾಯಿ. ಈಗ ಕಳೆದದ್ದಲ್ಲ, ಕಸಹಾಕಿದ್ದು ಎಂದೇ ಯಾರಾದರೂ ಗುರುತಿಸಿದರೆ? ಅದಕ್ಕೆ ದಂಡ ಎಂದು ಐನೂರು ರೂಪಾಯಿ ಚೀಟಿ ಕೊಟ್ಟರೆ? ಕಳೆದದ್ದಕ್ಕಿಂತ ಉಳಿಸುವುದು ಮೇಲೆಂದು ಸಮಾಧಾನದಲ್ಲಿ ಮನೆ ಸೇರಿಕೊಂಡೆ. ಗಿಡಮರನವಿಲುಗಳೆಂದೆಣಿಸದೆ ಚೆನ್ನಮಲ್ಲಿಕಾರ್ಜುನನ್ನು ವಿಚಾರಿಸಿದ ಆತ್ಮಕ್ಕೂ ಕೊನೆಗೆ ದಕ್ಕಿದ್ದು ಹುಡುಕಿದ ಸಂತೋಷ ಮಾತ್ರ ಇರಬೇಕಲ್ಲವೇ ?

ಮಾರ್ಗದೂಳಿಯನು ಶಿರದಲ್ಲಿ ಧರಿಸಿ!

ಸಾಗರದಲ್ಲೆದ್ದ ಚಂಡಮಾರುತ ಓಖಿಯ ಬಾಲ ಲೀಲೆಯಿಂದ ಕವಿದ ಮೋಡ ಇತ್ತು. ಮೈಸೂರು ತಂಪಾಗಿದೆ ಎಂದಷ್ಟೇ ಯೋಚಿಸಿ, ಸಂಜೆ (೧-೧೨-೨೦೧೭) ನಾನು ಸೈಕಲ್ಲೇರಿ ಭೋಗಾದಿ ದಾರಿಯ ಉದ್ದಳತೆ ತೆಗೆಯತೊಡಗಿದ್ದೆ. ಮೋಡ ಘನಸ್ಥಿಕೆ ಉಳಿಸಿಕೊಳ್ಳಲಿಲ್ಲ, ಆಗೀಗ ತುಂತುರ ಅಲೆಗಳನ್ನು ಅಟ್ಟಿ ಕೀಟಲೆ ನಡೆಸಿತು. ನಾನು ಹಠ ಸಾಧಿಸುವವನಂತೆ ಸಾಲುಮರಗಳ ಮೊರೆಹೊಗುತ್ತ, ದೊಡ್ಡ ಅಲೆಗಳನ್ನು ತಪ್ಪಿಸಿಕೊಳ್ಳುತ್ತ ಉಂಗುರದಾರಿ, ಭೋಗಾದಿ ದಾಟಿದೆ.

ಮುಂದೆ ಮರ್ಟಿಕ್ಯಾತನಳ್ಳಿ ವಲಯ ಕಳೆದರೂ ‘ತುಂತುರು-ಪೀಡೆ’ ಕಳಚಿಕೊಳ್ಳದಾಗ, ನಾನು ಉತ್ಸಾಹ ಕಳೆದುಕೊಂಡು ಹಿಮ್ಮುಖನಾದೆ. ಒಮ್ಮೆಲೆ ಏನೋ ದಯೆ ತೋರುವಂತೆ ಪೂರ್ತಿ ಮಳೆ ಬಿಟ್ಟಿತು. ನಾನೂ “ಅಬ್ಬ” ಎಂದು, ಎಡಕ್ಕೆ ಕಾಣಿಸಿದ ಜೆಟ್ಟಿಹುಂಡಿ ಕವಲಿನ ಶೋಧಕ್ಕೆ ಹೊರಳಿದೆ, ಮರಗಳೇ ಇಲ್ಲದ ಬಯಲಿನಲ್ಲಿ ಮುಂದುವರಿದಿದ್ದೆ. ಇಲಿ ಬೇಟೆಯಾಡಿದ ಬೆಕ್ಕು ಒಮ್ಮೊಮ್ಮೆ ಬಲಿಯ ಮೇಲೆ ಹುಸಿ ಕರುಣೆ ತೋರುವುದಿದೆ. ಬಡಪಾಯಿ ಇಲಿ “ಬದುಕಿದೆ” ಎಂದು ಎರಡು ಪುಟಿಯುವಾಗ ಬೆಕ್ಕಿನ ಪಂಜದೇಟು ಒಮ್ಮೆಲೆ ಬಿದ್ದಂತೆ, ಮತ್ತೆ ತುಂತುರ ಅಲೆ ನನ್ನ ಮೇಲೆರಗಿತು. ಸಾಕಷ್ಟು ನೀರಿಳಿಸುತ್ತ ನಾನು ದೂರದೂರದ ಮರ, ಒಂದು ಮಾರಮ್ಮನ ದೇವಳದಲ್ಲೆಲ್ಲ ಸ್ವಲ್ಪ ಸ್ವಲ್ಪ ನಿಲ್ಲುತ್ತ, ಮತ್ತೆ ಭೋಗಾದಿ ದಾರಿಗೆ ಮರಳಿ, ಮನೆ ಸೇರಿಕೊಂಡೆ.

“ಶುದ್ಧ ನೀರು, ಸ್ವಲ್ಪ ಮಾತ್ರ ಚಂಡಿ….” ಎಂದು ಮನೆಗೆ ಸ್ವಾಗತಿಸುತ್ತ ಬೆರಗಿನ ಕಣ್ಣು ಹಾಕಿದ ದೇವಕಿಗೆ ನಾನು ಸಮಜಾಯಿಷಿ ಕೊಟ್ಟೆ. ಅವಳದು ಬೊಬ್ಬೆ “ಅಯ್ಯೋ ನಿಮ್ಮ ಹಿಂಬದಿ ನೋಡಿಕೊಳ್ಳೀ. ಬಚ್ಚಲಿಗೆ ಹೋಗದೇ ಮನೆಯೊಳಗೆ ಬರಬೇಡೀ….” ಕೆಸರತಡೆ ಇಲ್ಲದ ಹಿಂದಿನ ಚಕ್ರದ ಕಂಬಳದಾಟಕ್ಕೆ ನನ್ನ ಬೆನ್ನು, ತಲೆ ಪೂರ್ತಿ ನಿಶಾನಿಯಾಗಿತ್ತು; ಚಕ್ರದುರುಳಿಗೆ ಸಿಕ್ಕ ದಾರಿಯ ಕೆಸರೆಲ್ಲವನ್ನು ನಾನು ಶಿರದಲ್ಲಿ ಧರಿಸಿದ್ದೆ!

ಮಹಿಷಪುರದಿಂದ ಕ್ವಾಣನ ಬೆಟ್ಟಕ್ಕೆ

ನಿತ್ಯ ಭವಿಷ್ಯದಲ್ಲಿ ‘ಭಾರೀ ಕೇಡು’ ಎಂದು ಕೇಳಿದವ, ಹೋಗ್ತಾ ಬ್ಯಾರೀಕೇಡಿಗೇ ಗುದ್ದಿದನಂತೆ. ಹಾಗೇ ಓಖಿಗೂ (ಚಂಡಮಾರುತ) ಸೈಕಿ(ಲ್)ಗೂ ಸಂಬಂಧ ಕಲ್ಪಿಸಿ, ಮೊನ್ನೆ (೨-೧೨-೧೭) ಮನೇಲೇ ಉಳಿದೆ. ನಿನ್ನೆ ಬೆಳಿಗ್ಗೆ ಸ್ವಸ್ತಾಕಾಶ ನೋಡಿದ ಮೇಲೇ ಸೈಕಲ್ಲೇರಿದ್ದೆ. ಕುವೆಂಪು ನಗರದುದ್ದಕ್ಕಾಗಿ ಶ್ರೀರಾಂಪುರದ ಗಲ್ಲಿಯ ಕುರುಡು ಕೊನೆಯವರೆಗೂ ಹೋದೆ. ಅಲ್ಲಿ ಮುಳ್ಳು ಪೊದರು ಬೆಳೆದ ದಿಬ್ಬದಾಚೆ ಮುಖ್ಯದಾರಿಯೊಂದರ ಸೂಚನೆ ಸ್ಪಷ್ಟವಿದ್ದುದರಿಂದ ಸವಕಲು ಜಾಡಿನಲ್ಲಿ ಸೈಕಲ್ ನೂಕಿದೆ. ದಿಬ್ಬವೇರುವಲ್ಲಿ ಚಪ್ಪಲಿ ಜಾರಿ ಮುಗ್ಗರಿಸಿದಾಗ, ಸೈಕಲ್ ಹಿಡಿಗೆ ಜುಬ್ಬಾದ ಕಿಸೆ ಸಿಕ್ಕಿ ಕಿಸಿದುಹೋಯ್ತು. (ಮನೆ ತಲಪಿದ ಮೇಲೆ ರಿಪೇರಿಗೆ ದೇವಕಿಯ ಬಳಿ ಹಲ್ಲು ಕಿಸಿಯುವುದಷ್ಟೇ ಉಳಿಯಿತು!)

ಮೈಸೂರು – ಹೆಗ್ಗಡೆದೇವನ ಕೋಟೆ ರಸ್ತೆ ಅಥವಾ ಮಾನಂತವಾಡಿ ರಸ್ತೆಯಲ್ಲಿ ಸೈಕಲ್ಲಿನ ಉರುಳು ಸೇವೆ ಮುಂದುವರಿಸಿದೆ. ಕಳಲವಾಡಿ ಕವಲು ಬರುವಾಗ ಎ.ಪಿ. ಚಂದ್ರಶೇಖರನ ಇಂದ್ರಪ್ರಸ್ಥದ (ನನ್ನ ದೊಡ್ಡ ಸೋದರಮಾವನ ಮಗ. ನೋಡಿ: ) ಆಕರ್ಷಣೆಯೇನೋ ಸ್ವಲ್ಪ ಕಾಡಿತು. ಹಿಂದೆ ಬರುವಾಗ ಚಾ ವಿರಾಮಕ್ಕೆ ನುಗ್ಗೋಣ ಎಂದುಕೊಂಡೇ ಮುಂದುವರಿದೆ. ಉದ್ಭೂರು ಕವಲು ಕಳೆದು, ಸಾಲುಂಡಿಯಲ್ಲಿ ನೀರು ಕುಡಿಯಲು ನಿಂತೆ. ಆಗ ಹಿಂದೆ ಅಭಿಜಿತ್ (ಚಂದ್ರನ ಮಗ) ಇಲ್ಲೆಲ್ಲೋ ಹಕ್ಕಿ ಹುಡುಕಿಕೊಂಡು, ಯಾವುದೋ ದೊಡ್ಡ ಕೆರೆ ಕರೆಗೆ ಹೋದ ಕುರಿತು ಮಾತಾಡಿದ್ದು, ಮಸುಕಾಗಿ ನೆನಪಾಗಿ ವಿಚಾರಿಸತೊಡಗಿದೆ. ಕೆರೆ ಸಿಗಲಿಲ್ಲ. ಆದರೆ ಹಳ್ಳಿಗರು ಏನೇನೋ ವಿವರಗಳೊಡನೆ ಕೈ ಮಾಡಿ ತೋರುವಾಗ ತುಸು ಪಶ್ಚಿಮ-ಉತ್ತರಕ್ಕೆ, ಸಾಕಷ್ಟು ಹಸಿರಿನ ನಡುವೆ ಎರಡು ಗುಡ್ಡೆ ಕಾಣಿಸಿತು. ಮಬ್ಬು ಕವಿದ ವಾತಾವರಣದಲ್ಲಿ ಅದರಲ್ಲೊಂದರ ನೆತ್ತಿಯ ಮೇಲೆ ಏನೋ ಗೋಪುರ ಕಾಣುವಾಗಂತೂ ದೇವಳವೇ ಇರಬೇಕು, ಸೈಕಲ್ ಯೋಗ್ಯ ದಾರಿ ಇರಬಹುದು ಎಂದೆಲ್ಲ ಯೋಚನೆ ಬಂತು. ನಾನು ಆ ಗುಡ್ಡೆಗಳ ಪತ್ತೆಗೇ ಇಳಿದೆ. ಮುರುಡ ಬಸವೇಶ್ವರಸ್ವಾಮಿ ದೇವಳದ ನಾಗನ ಮಂಟಪಕ್ಕೆ ನೇಪಥ್ಯ ಭಿತ್ತಿಯಂತೆ, ಮುಂದೊಂದು (ಬಹುಶಃ ಶನಿ) ದೇವಳಕ್ಕೆ ಬೆಂಬಲ ಕೊಟ್ಟಂತೆ, ಹೊಲದ ಹುಲ್ಲ ಬಣವೆಯ ಹಿಗ್ಗಿದ ರೂಪದಂತೆ, ಕಮ್ಮಿನಿಶ್ಟ್ ಬಲ್ಲೆಯ ರಾಶಿಯಿಂದ ದಿಗಂತವೇ ಎದ್ದು ನಿಂತಂತೆ ಆ ಜೋಡಿ ಗುಡ್ಡ ಸಾಲು ನಾನು ಹೋದಂತೆಲ್ಲ ಆಕರ್ಷಿಸಿ, ಹತ್ತಿರ ಎಳೆದಿತ್ತು. ಸಾಲುಂಡಿ ಕಳೆದು ದೀರ್ಘ ಇಳಿಜಾರೊಂದು ಸಿಕ್ಕಿದಾಗಂತೂ ‘ಇಳಿದವ ಏರಲೇಬೇಕು’ ಗಾದೆ ಮರೆತಂತೆ, ದಾರಿಯಲ್ಲಿ ಮಿಂಚಾದೆ! (ಆದರೆ ಪರ್ವತಾರೋಹಣ ಪಾಠ – ಮರಳುವ ಎಚ್ಚರ ಇದ್ದರೆ, ಎಷ್ಟೂ ನುಗ್ಗಬಹುದು, ನೆನಪಿತ್ತು!) ಜಯನಗರ, ಮಹದೇವಪುರ ಕಳೆದ ಮೇಲೆ ಬಲಕ್ಕೆ ಬೆಟ್ಟದಬೀಡು ಕವಲು ಅನುಸರಿಸಿದೆ. ಇದರಲ್ಲಿ ಸುಮಾರು ನಾಲ್ಕು ಕಿಮೀ ತುಳಿದಲ್ಲಿಗೆ ಹರಕು ಡಾಮರ್ ದಾರಿ ಕೂಡಾ ಮುಗಿದಿತ್ತು. ಇಷ್ಟರಲ್ಲಾಗಲೇ ಸಂಗ್ರಹಿಸಿದ್ದ ಆ ಗುಡ್ಡೆಗಳ ಸ್ಥಳಪುರಾಣ ಸ್ವಾರಸ್ಯಕರವಾಗಿಯೇ ಇತ್ತು.

“ಆ ಸ್ವರ್ಣೀ (ಸರಣಿ) ಕ್ವಾಣನ್ ಬೆಟ್ಟ….” ಮಹಿಷಪುರದ ಒತ್ತಿನಲ್ಲೇ ಕೋಣನ ಬೆಟ್ಟ! ಜೋಡಿಯಲ್ಲಿ ದಾರಿಗೆ ಸಮೀಪ ಕಾಣುವ ಶಿಖರದ ಮೇಲಿದ್ದದ್ದು ದೇವಳದ ಗೋಪುರವಲ್ಲ, ಅರಣ್ಯ ಇಲಾಖೆಯ ವೀಕ್ಷಣಾ ಗೋಪುರದ ಅವಶೇಷ. ವಾಸ್ತವವಾಗಿ ಅಲ್ಲಿ ಇನ್ನೇನೂ ಮನುಷ್ಯ ರಚನೆ ಇಲ್ಲ. ಪಕ್ಕದ ಗುಡ್ಡದಲ್ಲೆಲ್ಲೋ ದೇವಸ್ಥಾನ ಅಡಗಿ ಕೂತಿದೆಯಂತೆ. ಇಷ್ಟು ವರ್ಷಗಳಿಂದ ಅದನ್ನು ಹುಡುಕಿ ಸೋತ ಜನಪದ ಅಲ್ಲಿನೆರಡು ಕಾಡು ಕಲ್ಲುಗಳನ್ನೇ ಸಾಂಕೇತಿಕವಾಗಿಟ್ಟುಕೊಂಡು, ಶನಿವಾರಗಳಲ್ಲಿ ಆರಾಧಿಸುತ್ತದಂತೆ. ಚಿರತೆಗಳಿರುವ ಆ ಕಾಯ್ದಿಟ್ಟ ಅರಣ್ಯದೊಳಗೆ ಕಚ್ಚಾ ಮಾರ್ಗವಿದ್ದರೂ ಸೈಕಲ್ ಅಸಾಧ್ಯವಂತೆ. ಹಾಗಾಗಿ ಹಿಂದುಳಿಯುವ ಸೈಕಲ್ಲಿನ ‘ಆರೋಗ್ಯ ರಕ್ಷಣೆ’, ಅರಣ್ಯ ಇಲಾಖೆಯ ಅನುಮತಿ, ಮಾರ್ಗದರ್ಶಿ- ಅಲ್ಲದಿದ್ದರೂ ಒಬ್ಬ ಜತೆಗಾರನ ಕೊರತೆ, ನನ್ನ ಸಮಯಮಿತಿಗಳೆಲ್ಲ ಇಂದು ಮುಹೂರ್ತವಿಲ್ಲ ಎಂದೇ ಸೂಚಿಸಿದವು. ಅವಕ್ಕೂ ಮುಖ್ಯವಾಗಿ ಕಂಬಳ ಮತ್ತು ಜಲ್ಲಿಕಟ್ಟುಗಳನ್ನು ನಿಷೇಧಿಸಿದ ಪರಮೋಚ್ಛ ನ್ಯಾಯಾಲಯ ‘ಕ್ವಾಣನ್ ಏರೋದ್’ ಎರಡರ ಸಂಯುಕ್ತ ಕ್ರೀಡೆ ಎಂದು ಶಿಕ್ಷಿಸಿಬಿಟ್ಟರೆ ಎಂದೂ ಹೆದರಿಕೆಯಾಯ್ತು. ಡಾಮರ್ ಮಾರ್ಗದ ಕೊನೆಯ ಆಲದ ಮರಕ್ಕೇ ಏಕಮುಖ ಸಂಚಾರ ಮುಗಿಸಿದೆ. ‘ಹೊಲ ನೋಡ್ಕಳಕ್ಬಂದಿದ್ದ ಪಡ್ಡೆ ಹೈಕ್ಳು’ ಸೈಕಲ್ ಸವಾರಿ ಬಯಸಿದಾಗ, ಪೂಸಿ ಹೊಡೆದು ಫೋಟೋಕ್ಕಷ್ಟೇ ಒಲಿಸಿ ಹಿಮ್ಮುಖನಾದೆ.

ಹಿಂದಿರುಗುವ ದಾರಿಯಲ್ಲಿ, ಆಗ ಮಿಂಚಾದ ದಾರಿ ಈಗ ದೀರ್ಘದಂಡ ನಮಸ್ಕಾರ ಬಯಸಿದಂತಿತ್ತು. ಅದನ್ನು ಯಶಸ್ವಿಯಾಗಿ ಉತ್ತರಿಸಿದಲ್ಲಿ ಈ ಬಸವೇಶ್ವರ ಟೀ ಸ್ಟಾಲ್ ಮೋಹಕವಾಗಿ ಕಾಣಿಸಿತು. ಒಂದು ಚಾ, ಒಂದು ದೊಡ್ಡ ಬಾಳೇಹಣ್ಣು ಹಿಡಿದು ಕುಳಿತೆ. ಆಶ್ಚರ್ಯಕರವಾಗಿ ಅಂಗಡಿಯಾತ ಕೇವಲ ರೂ ಹನ್ನೆರಡು ಕೇಳಿ ಪಡೆದ. ಆತ ಒಂದೋ ನನ್ನ ಹರಕು ಕಿಸೆ ನೋಡಿ ಕನಿಕರಿಸಿರಬೇಕು. ಅಲ್ಲದಿದ್ದರೂ ಜೀಎಸ್ಟೀ ವಂಚನೆ ನಡೆಸಿದ ದೇಶದ್ರೋಹಿ ಖಂಡಿತ; ನಾನು ನಗದು ತೆಗೆದದ್ದು ನೋಡಿ ಬಿಲ್ ಕೊಡಲೇ ಇಲ್ಲ! ಆ ಐದು ಮಿನಿಟಿನಲ್ಲಿ ಸೋಮಾರಿ ಕಟ್ಟೆಯಲ್ಲಿದ್ದ ನಾಲ್ಕು ಮಂದಿಯ ಮಾತಿಗೆ ಕೀಕೊಟ್ಟೆ. ಟೀ ಕೊಟ್ಟ ಪೇಪರ್ ಕಪ್ ತೋರಿಸಿ “ಇದು ಆರೋಗ್ಯಕ್ಕೂ ಪರಿಸರಕ್ಕೂ ಹಾಳು, ಸ್ಟೀಲ್ ಲೋಟ ಬಳಸಿ” ಎಂದೆ. ಟೋಪಿ ಯಜಮಾನರು “ಪ್ಯಾಟಿಯವರ್ಗೆ ಅರ್ಥಾಯ್ಕಿಲ್ಲಾ….” ಅಂತ ನೇರ ಹಳ್ಳಿಯ ಜಾತಿ ಲೆಕ್ಕಾಚಾರವನ್ನೇ ಬಿಡಿಸಿಟ್ಟರು. ಎಲ್ಲೋ ಕೃಷ್ಣ ಮಠದ ಮೌಢ್ಯ ಕಳೆಯಲು ಹೊರಟವರು ಈ ಹಳ್ಳಿ ಹಳ್ಳಿಯ ಜಾಡ್ಯ ಮರೆತರೇ?

ತಲೆಗೂದಲು, ಗಡ್ಡ, ದಿರುಸುಗಳಲ್ಲೆಲ್ಲ ಬಿಳಿಯಾಗಿದ್ದ ಯಜಮಾನರು ನನ್ನ ಸೈಕಲ್ಲಿನ ಬೆಲೆ, ಅದರ ವಿಶೇಷ, ನನ್ನ ಪ್ರಾಯ ವಿಚಾರಿಸಿದರು. ಕೊನೆಯಲ್ಲಿ ತಾನು ನಾಕು ವರ್ಷ ಸಣ್ಣವ, ಮಹಾತ್ರಾಣಿ ಎಂದೆಲ್ಲ ಪೋಸು ಕೊಟ್ಟರು. “ಮೊದ್ಲೆಲ್ಲ ಎದುರ್ ಚಕ್ರ ತಿರುಗ್ದಂಗೆ ಸೊಪ್ಪ್ ಹೇರ್ಕಂಡು ಎಲ್ಲೂ ಇಳೀದೆ” ಸೈಕಲ್ ಮೆಟ್ಟುತ್ತಿದ್ದ ತನ್ನ ಸಾಹಸ ಕೊಚ್ಚಿಕೊಂಡರು. “ಈಗ್ಲೂ ನಿಮ್ಮಂಗ್ ಗೇರು ಪಾರು ಇಲ್ದಿರೋ ಸೈಕಲ್ಲಲೀ ನಿಮ್ನೂ ಕೂರಸ್ಕಂಡ್ ಮೆಟ್ತೋರ್ಸೋವೆ…” ಅಂದುಬಿಟ್ಟರು. ಅಷ್ಟು ದೂರಕ್ಕೇ ಸಿಗರೇಟು ವಾಸನೆ ಹೊಡೆಯುತ್ತಿದ್ದ ಯಜಮಾನರ ತೋಳತೆಕ್ಕೆಯಲ್ಲಿ ನಾನು ಬಂಧಿಯಾಗಿ, ಸೈಕಲ್ ಸಮೇತ ಅಡ್ಡಬಿದ್ದ ಚಿತ್ರ ಕಲ್ಪಿಸಿ ನಡುಗಿಬಿಟ್ಟೆ. ನನ್ನ ಪೂರ್ವಜನ್ಮದ ಸುಕೃತಕ್ಕೇ ಇರಬೇಕು, ಅವರಿಂದು ‘ಸೈಕಲ್ ಸನ್ಯಾಸ (?)’ ತಗೊಂಡಾಗಿದೆಯಂತೆ! “ಬಚಾವ್” ಅಂದುಕೊಳ್ಳುತ್ತ ನಾನು ಜಾಗ ಖಾಲಿ ಮಾಡಿದೆ. ಚಾ ಚಿಂತೆ ಮುಗಿದದ್ದೂ ಸಮಯ ಸಾಲದ್ದೂ ದೇಹ ಬಳಲಿದ್ದೂ ಸೇರಿಸಿ, ‘ಚಂದ್ರಪ್ರಸ್ಥ’ದತ್ತ ಹೊರಳಲಿಲ್ಲ. ಒಟ್ಟಾರೆ ಮೂರು ಗಂಟೆಯ ಸವಾರಿಯನ್ನು (ಕಿಮೀ ಕಲ್ಲು ಹೇಳಿದಂತೆ ೪೨ಕಿಮೀ) ನಮ್ಮದೇ ಮನೆಯಲ್ಲಿ ಮುಗಿಸಿದೆ. (೫-೧೨-೨೦೧೭)

ರಂಗನತಿಟ್ಟು, ಪಶ್ಚಿಮವಾಹಿನಿ

ವಿದ್ಯಾರ್ಥಿ ದೆಸೆಯಲ್ಲಿ ನಾನು ಹೆಚ್ಚು ಸಂತೋಷ ಕಂಡದ್ದು (ಎನ್ಸಿಸಿ ಮತ್ತು) ಪರ್ವತಾರೋಹಣದಲ್ಲಿ. ಪಾಂಡವಪುರದ ಕುಂತಿಬೆಟ್ಟ ಮತ್ತು ಕರಿಘಟ್ಟದ ಬಂಡೆಗಳನ್ನೇರಲು ನಮ್ಮ ಬಳಗ ಸರಳ ಸೈಕಲ್ಲೇರಿ ಹೋಗುತ್ತಿದ್ದ ನೆನಪಿನ ದಾರಿಯ ಸ್ಮರಣೆಯಲ್ಲಿ ನಿನ್ನೆ ಬೆಳಿಗ್ಗೆ (೫-೧೨-೧೭) ‘ವಿಶೇಷ’ ಸೈಕಲ್ಲೇರಿದ್ದೆ. ಅಂದಿನದೇ – ರಾಮ್ಸಾಮಿ, ಸಯ್ಯಾಜಿರಾವ್, ಹೆಡ್-ಪೋಷ್ಟಾಫೀಸ್, ಫಿಲೊಮಿನಾ ಇಗರ್ಜಿಗಾಗಿ ಬೆಂಗಳೂರು ದಾರಿಗಿಳಿದೆ. ನಗರಾಭಿವೃದ್ಧಿಯ ಪರ್ಯಾಯ ಪದಗಳೇ ಕುಟ್ಟು, ಕಟ್ಟು. ಹಾಗಿರುವಾಗ ನಗರದೊಳಗಿನ ದೃಶ್ಯಗಳನ್ನು ನೆನಪಿನ ಚಿತ್ರಗಳಿಗೆ ತಾಳೆ ಹಿಡಿಯುವುದು ವ್ಯರ್ಥ ಶ್ರಮ, ಬಿಡಿ. ಮುಂದೆ….

ಹಳೆಗಾಲದ ಸುಂಕದಕ್ರಮ ನೆನಪಿಸುವಂತೆ ತೀರಾ ಈಚಿನವರೆಗೆ ಉಳಿದೇ ಇದ್ದ ‘ಟೋಲ್ಗೇಟ್’ ಇಂದು ಚತುಷ್ಪಥೀಕರಣದ ಲೆಕ್ಕದಲ್ಲಿ ಅಳಿಸಿ ಹೋಗಿದೆ. ದಾರಿ ಬದಿಯ ಹಳ್ಳ ತುಂಬುವಲ್ಲಿ ನಗರದ ಹಾಳಮೂಳಗಳನ್ನೇ ಗುಡ್ಡೆ ಹಾಕಿದಂತಿತ್ತು. ಅಂದರೆ ನಗರದ ಘೋಷಿತ ಸೌಂದರ್ಯ – ‘ತಿಪ್ಪೆ ಸಾರಿಸು’ವುದೇ? ಹಿಂದೆ ಸುಂಕದ ಕಟ್ಟೆ ನಿರೂಪಿಸುತ್ತಿದ್ದ ನಗರದ ಗಡಿಯನ್ನು ಇಂದು ತುಸು ಮುಂದೆ ಸಿಗುವ ಉಂಗುರ ರಸ್ತೆಯ ಕತ್ತರಿ ವಹಿಸಿಕೊಳ್ಳುತ್ತಿದೆ.

ಹಿಂದಿನ ಬೆಂಗಳೂರು ದಾರಿ ಎಂದರೆ ಕಬ್ಬಿಣಪಟ್ಟೆಯ ಎತ್ತಿನ ಗಾಡಿಗಳಿಂದ ಒರಟೊರಟಾಗಿದ್ದ ಸರಳ ಡಾಮರು ಮಾರ್ಗ (ದ್ವಿಪಥ). ಇಂದು ಅದು ಮೂರುಮೂರು ಪದರುಗಳ ನುಣ್ಣನೆ ಡಾಮರು ಹೊದ್ದು ಚತುಷ್ಪಥವೇ ಆಗಿದೆ; ಅದಕ್ಕೊಪ್ಪುವ ವಾಹನಸಮ್ಮರ್ದವೂ ಇದೆ. ಸಾಕಷ್ಟು ಹಳತೇ ಆಗಿರುವ ಹೆದ್ದಾರಿಯ ವರುಣಾ ನಾಲೆಯ ತೋರಣ, ನನ್ನ ವಿದ್ಯಾರ್ಥಿ ದಿನಗಳಲ್ಲಿರಲಿಲ್ಲ. ದಾರಿ ಬದಿಯ ಗುಡಿ, ದೇವಳಗಳು ಮುಖತೊಳೆದದ್ದೋ ಹೊಸತೇ ಉದ್ಭವಗಳೋ – ಅಂತೂ ಕಣ್ಣುಕುಕ್ಕುವ (ಕೆಲವು ದಾರಿಗರ ಬಗಲಿಗೂ ಕುಕ್ಕುವಂತೇ ಇವೆ!) ಬಣ್ಣ, ರಚನೆಗಳ ಹೊತ್ತು ಮೆರೆದಿವೆ. ಹಳಗಾಲದಲ್ಲಿ ಕೆಲವು ಕಾರ್ಮಿಕ ಸಂಘರ್ಷಗಳಿಂದ ಆಗೀಗ ಬಳಲುತ್ತಿದ್ದರೂ ದೊಡ್ಡ ಉದ್ದಿಮೆಯಾಗಿಯೇ ಕಾಣುತ್ತಿದ್ದ, ನನ್ನ ನೆನಪು ಸರಿಯಾದರೆ – ಕೆ.ಆರ್. ಮಿಲ್ಸ್, ಇಂದು ಪೂರ್ಣ ಮುಚ್ಚಿ, ಅನಾಥಶವದಂತೆ ಬಿದ್ದಿರುವುದು ಕಂಡು ವಿಷಾದವಾಯ್ತು. ಹರ್ಯಾಣದ ಮಹಾಕೊಳಕ ‘ದೇವಮಾನವ’ನ (ಡೇರಾ ಸಚ್ಚಾ ಸೌದಾ) ಶಾಖೆಯೊಂದು ಈ ದಾರಿಯಲ್ಲಿ ನಿಗೂಢವಾಗಿ ಕಾರ್ಯಾಚರಣೆಗಿಳಿದ ಕತೆ ಹಿಂದೆ ಪತ್ರಿಕೆಗಳಲ್ಲಿ ಓದಿದ್ದೆ. ಅದೇ ಇದಿರಬೇಕು, ಎಂದು ವರ್ಣಮಯ, ಅಣಕು ಕೋಟೆಯಂಥಾ ರಚನೆಯೊಂದನ್ನು ನಾನು ಹೋಗುವ ದಾರಿಯಲ್ಲೇ ಗುರುತಿಸಿದ್ದೆ. ಹಿಂದಿರುಗುವ ದಾರಿಯಲ್ಲಿ ಚಿತ್ರ ಹಿಡಿದುಕೊಂಡೆ. ಆದರೆ ಬೋರ್ಡು ಓದಿದ ಮೇಲೆ ತುಸು ನಿರಾಳನಾದೆ. ಹೀಗೆಲ್ಲ ನಗರದ ಕರಾಳ ಕೈಗಳು ಒತ್ತುತ್ತಲೇ ಇದ್ದರೂ ನಡುನಡುವೆ ಕಣ್ಣು ನಿಲುಕುವವರೆಗೆ ಹರಡಿದಂತೆ ಕಾಣುವ ಹಸಿರು ಗದ್ದೆ, ಕಾವಲಿಗೆ ನಿಂತ ಭಟರಂತೆ ಸಾಲು ತೆಂಗು ಮರಗಳು, ಕಾಲುವೆಗಳ ಪಾವಟಿಗೆಗಳಲ್ಲಿ ಕೆಲವಾದರೂ ಹಳ್ಳಿಗರು ‘ಜಲಸಂಸ್ಕೃತಿ’ಯನ್ನು (ಪಾತ್ರೆ, ಬಟ್ಟೆ ತೊಳೆಯುವುದು) ಮುಂದುವರಿಸಿರುವುದು ಮನಕ್ಕೆ ಮುದ ನೀಡಿತು. ಅಷ್ಟರಲ್ಲೊಂದು ಕೈಕಂಬ “ಎಡಕ್ಕೆ ರಂಗನತಿಟ್ಟು” ಎಂದದ್ದೇ ನನ್ನ ದಿಕ್ಚ್ಯುತಿಯಾಯ್ತು! ಸಮಯಮಿತಿಯ ಅರಿವಿನೊಡನೆ ಕುಂತಿಬೆಟ್ಟ, ಕರಿಘಟ್ಟಗಳ ಯೋಚನೆ ಬಿಟ್ಟು ಎಡ ಹೊರಳಿದೆ.

ಪಾಲಳ್ಳಿ ದಾರಿಯ ಮಗ್ಗುಲುಗಳಲ್ಲಿ ತರಕಾರೀ ಕೃಷಿ ನಡೆದಿತ್ತು. ರೈಲ್ವೇ ಮೇಲ್ಸೇತು ಕಳೆದು ಒಂದೆರಡು ಕಿಮೀಯಲ್ಲಿ ರಂಗನತಿಟ್ಟು ಕವಲು ಬಂತು. ಪಕ್ಷಿಧಾಮಕ್ಕೆ ಇನ್ನೂ ಒಂದು ಕಿಮೀ ಇದ್ದರೂ ಇಲ್ಲೇ ಸರಕಾರೀ ಅತಿರೇಕ ಎದ್ದು ಕಾಣುತ್ತಿತ್ತು. ಕಾಂಕ್ರೀಟ್ ಬಸ್ ಸ್ಟಾಪಿಗೆಲ್ಲ ಸಸ್ಯ ಚಿತ್ತಾರಗಳನ್ನು ಹೊಸೆದು, ಮೇಲೆ ಮತ್ತಷ್ಟು ಕಾಂಕ್ರೀಟ್ ಸುರಿದು ದಿಬ್ಬ, ಕಾಂಕ್ರೀಟ್ ಹಕ್ಕಿಗಳನ್ನೂ ಹೇರಿದ್ದರು. ಸ್ವಾಗತ ಕಮಾನಂತೂ ಪೂರ್ತಿ ಕಾಂಕ್ವುಡ್ಡಿನ ವನ್ಯ ಸಂದೋಹವನ್ನೇ ಹೊತ್ತಿತ್ತು. ಇದಕ್ಕೆ ಕೊರೆಯಾಗದಂತೆ ಬಹುಶಃ ಹಳ್ಳಿಗರು, ಒತ್ತಿನ ಜಲನಾಲೆಯ ನಡುವೆ (ಖಂಡಿತಕ್ಕೂ ಅಕ್ರಮವೇ) ಕಾಂಕ್ರೀಟಿನ ನೀಲಕಂಠನನ್ನು ಕೂರಿಸಿದ್ದರು. ಆ ಮೂರ್ತಿಗೆ ಕಾಲಕಾಲಕ್ಕೆ ಎಣ್ಣೇ ದೀಪ ಉರಿಸುವ ಅನುಕೂಲಕ್ಕಾಗಿ ಒಂದು ಕಾಂಕ್ರೀಟ್ ವಿದ್ಯುತ್ ಕಂಬವನ್ನೇ ಅಡ್ಡ ಹಾಕಿ ಸೇತು ಬೇರೆ ಮಾಡಿಕೊಂಡಿದ್ದರು! ಮುಂದಿನ ಒಂದು ಕಿಮೀಯ ದಾರಿ ಬಳುಕುವ ನಾಲೆಗೆ ಜತೆಗೊಟ್ಟು ಸವಾರಿ ಹೊಸದೇ ಕುಶಿಕೊಟ್ಟಿತು.

ಪಕ್ಷಿಧಾಮದ ಅವಾಸ್ತವಗಳನ್ನು ಪಟ್ಟಿ ಮಾಡ ಹೊರಟರೆ ಈ ಲೇಖನ ಗ್ರಂಥವಾದೀತು. ಚಿತ್ರ, ವಿಡಿಯೋ ತುಣುಕುಗಳನ್ನು ನೋಡಿ ನೀವೇ ವಿವೇಚಿಸಿಕೊಳ್ಳಿ. ಅವನ್ನು ಮೀರಿದ ಒಂದೆರಡು ಮಾತುಗಳು. ಪ್ರವೇಶ ಹಾಸಲು ವ್ಯಕ್ತಿಯೊಬ್ಬನಿಗೆ ರೂ ಎಪ್ಪತ್ತು (ಸೈಕಲ್ಲಿಗೆ ಪ್ರತ್ಯೇಕ ಐದು), ಅಧಿಕೃತ ರಸೀದಿ ಸಹಿತವೇ ಆದರೂ ದುಬಾರಿ. ಆದರೆ ಇದೇ ಅವಕಾಶ ವಿದೇಶೀಯರಿಗಾಗುವಾಗ ಸುಮಾರು ಆರು ಪಟ್ಟು ಹೆಚ್ಚು (ರೂ ನಾನೂರು!) ಎಂದು ಕೇಳಿದಾಗ, ನನ್ನ ಭಾರತೀಯತೆಗೆ ಗೌರವ ಬಂತು?! ಈ ತಾರತಮ್ಯ ಮುಂದೆ ದೋಣಿ ಸವಾರಿಯಲ್ಲೂ ಇದೆ ಎಂದು ಕೇಳಿಯೇ ‘ಸಂತೋಷಿಸಿದೆ’; ಭಾರತೀಯತೆಯ ‘ಲಾಭ’ ಪಡೆಯಲಿಲ್ಲ! ಅಷ್ಟೇ ಅಲ್ಲ, ಒಳಗೆ ‘ಅನುಮತಿ ಮೇರೆಗೆ’ ಮಾರುವ (ಒಂದಕ್ಕೆ ನಾಲ್ಕು ಬೆಲೆ) ಯಾವ ತಿನಿಸು, ಪಾನೀಯವನ್ನೂ ಮುಟ್ಟಲಿಲ್ಲ. ಅರಣ್ಯ ಇಲಾಖೆ ನಿಜ ಕಾಡು ಕಾಯುವಲ್ಲಿ ಎಂದೂ ತೋರದ ಮುತುವರ್ಜಿಯಿಂದ ಇಲ್ಲಿ ನೆರಹಿದ ಐಟಮ್ಮುಗಳು – ಸಲೀಂ ಅಲಿ ಭವನ, ಕಛೇರಿ, ವಾಹನ ತಂಗುದಾಣ, ವಿವಿಧ ತಿನಿಸುಗಟ್ಟೆ. ಕೆಲವು ನಮೂನೆಯ ನೆರಳಿನ ಚಪ್ಪರಗಳು, ಇಂಟರ್ಲಾಕಿನ ದಾರಿಗಳು, ಅಲಂಕಾರಿಕ ಕೊಳ, ಹುಲ್ಲ ಹಾಸು ಸಮೇತ ಅಲಂಕಾರಿಕ ಉದ್ಯಾನ, ತೂಗು ಸೇತುವೆ, ವೀಕ್ಷಣಾ ಸ್ತಂಭ, ದೋಣಿಗಟ್ಟೆ….. ಎಲ್ಲ ಚುರುಕಾಗಿ ಸುತ್ತು ಹಾಕಿ ಮುಗಿಸಿದೆ. ನೀರ ನಡುವಿನ ದೂರದ ಬಂಡೆಯೊಂದರಲ್ಲಿ ಒಂದು ಮೊಸಳೆಯ ಮುಸುಡು ಅಸ್ಪಷ್ಟವಾಗಿ ಕಂಡೆ. ಉಳಿದಂತೆ, ಇಲಾಖೆಯ ಯಾವ ಹೆಚ್ಚುಗಾರಿಕೆಯೂ ಇಲ್ಲದೆ ಸೇರಿದ್ದ ಹಕ್ಕಿ ವೈವಿಧ್ಯದ ಮೇಲೆ ಎರಡೇ ಮಿನಿಟು ಕಣ್ಣು ಹಾಕಿ ಮತ್ತೆ ಸೈಕಲ್ಲೇರಿದ್ದೆ.

ರಂಗನತಿಟ್ಟಿಗೆ ನಾನು ಹೋಗುವಾಗ ಅನುಸರಿಸಿದ್ದ ದಾರಿ ಹರಕು ಮುರುಕು; ಪ್ರವಾಸಿಗರ ಹೆಚ್ಚು ಬಳಕೆಯದ್ದಲ್ಲ. ಹಿಂದಿರುಗುವಲ್ಲಿ ನಾನು ಇನ್ನೊಂದೇ ದಾರಿ, ಅಂದರೆ ‘ಪಶ್ಚಿಮವಾಹಿನಿ ಕವಲು’ ಹಿಡಿದೆ. ಈ ದಾರಿ ಮೈಸೂರಿಗೆ ತುಸು ಬಳಸಾದರೂ ನುಣ್ಣಗಿತ್ತು. ಪಶ್ಚಿಮವಾಹಿನಿ ಎಂಬುದೊಂದು ಕಾವೇರಿಯದೇ ಸಣ್ಣ ಉಪಹೊಳೆ. ಇದು ಪೂರ್ವವಾಹಿನಿಯಾದ ಕಾವೇರಿಗೆ ವಿರುದ್ಧ ದಿಕ್ಕಿನಲ್ಲಿ ಹರಿದು ಬಂದು ಸೇರುವುದರಿಂದ ಹೆಸರನ್ನು ಅನ್ವರ್ಥನಾಮವಾಗಿಯೇ ಪಡೆದಿದೆ. ಇದು ಶ್ರೀರಂಗಪಟ್ಟಣದ ಹೊರವಲಯದಲ್ಲಿ ಇನ್ಯಾವುದೋ ಸಣ್ಣ ತೊರೆಯೊಂದರೊಡನೆ ಸಂಗಮಿಸುತ್ತದೆ. ಆ ಸ್ಥಳವನ್ನು ಇತಿಹಾಸ ಕಾಲದಲ್ಲೇ ಜನಪದ ಪುಣ್ಯಕ್ಷೇತ್ರವಾಗಿ ಕಂಡು, ಸ್ಥಳಕ್ಕೂ ಪಶ್ಚಿಮವಾಹಿನಿ ಎಂಬ ಹೆಸರನ್ನೇ ಕೊಟ್ಟು, ಸಣ್ಣ ದೇವಳ ಇಟ್ಟಿದೆ. ಮೈಸೂರರಸರ ಮನೆಗೂ ಸೇರಿದಂತೆ ಪಶ್ಚಿಮವಾಹಿನಿ ಅಸ್ಥಿಸಂಚಯನಾದಿ ಮರಣೋತ್ತರ ಕ್ರಿಯೆಗಳಿಗೆ ಧಾರಾಳ ಬಳಕೆಯಾಗುತ್ತದೆ.

ವಿದ್ಯಾರ್ಥಿ ದಿನಗಳ ನಮ್ಮ ಸೈಕಲ್ ಸವಾರಿ ಪಶ್ಚಿಮವಾಹಿನಿಯನ್ನು ಶುದ್ಧ ಪ್ರಾಕೃತಿಕ ತಾಣವಾಗಿ ಮಾತ್ರ ಕಂಡಿತ್ತು. ನಮ್ಮ ಸೈಕಲ್ ಸೈನ್ಯ ದ್ವಾರ, ಖಾಲೀ ಮಂಟಪಗಳನ್ನು ಹಾಯ್ದು ನೇರ ಸ್ನಾನ ಘಟ್ಟಕ್ಕೆ ದಾಳಿಯಿಡುತ್ತಿತ್ತು. ಎಲ್ಲ ಬಹುತೇಕ ನಿರ್ಜನವೇ ಇರುತ್ತಿತ್ತು. ಎದುರು ದಂಡೆಯ ದಟ್ಟ ಕಾಡಿನ ಕಪ್ಪು ಪ್ರತಿಫಲನದಲ್ಲಿ ಸೆಳವು ಸೊಕ್ಕಿನ ನದಿ ಕಾಳಿಂದಿಯಂತೇ ತೋರುತ್ತಿತ್ತು. ನಿಜದಲ್ಲಿ, ಮೆಟ್ಟಿಲಿಳಿದರೆ ನೀರು ಸ್ಫಟಿಕ ನಿರ್ಮಲ. ನಾವು ಬೂಟುಗಾಲು ಒದ್ದೆಯಾಗದಂತೆ ಮೆಟ್ಟಿಲಲ್ಲೇ ಕುಳಿತು, ಶೀತಲಜಲವನ್ನಷ್ಟು ಕೈ, ಮುಖಗಳಿಗೆ ತಳಿದು, ಬೊಗಸೆಯಲ್ಲಿ ಮೊಗೆದು ಹೊಟ್ಟೆ ತುಂಬುವಷ್ಟು ಕುಡಿದು, ನೀರಂಡೆಗಳಲ್ಲೂ ತುಂಬಿಕೊಂಡು ಮುಂದುವರಿಯುತ್ತಿದ್ದೆವು. ಈಗ ನೋಡಿದರೆ ಪರಿಸ್ಥಿತಿ ಭೀಕರ. ದೇವಳದ ರಚನೆಗಳು, ಸೋಪಾನಗಳು ಮುಕ್ಕಾಗಿವೆ. ಎದುರು ದಂಡೆಯಲ್ಲಿ ಕಾಡು ಮುಕ್ಕಾಗಿ, ಯದ್ವಾತದ್ವಾ ಕಾಂಕ್ರೀಟು ಸುರಿದು, ದಂಡೆ ಹೊಲಿದು, ಮೂರು ನಾಲ್ಕು ಅರ್ಥವಿಲ್ಲದ ಬಾಗು ಸೇತುವೆಗಳನ್ನು ಅರ್ಧಂಬರ್ಧ ಮಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಜನರ ದುರ್ಬಳಕೆಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದಾರೆ, ತಮ್ಮದೇ ಕೊಳಕಿನ ಸಿಂಹಪಾಲು ಸೇರಿಸಿದ್ದಾರೆ. ನದಿ ಕೊಚ್ಚಿ ತರುವ ಬಹುನಮೂನೆಯ ಕಸಕೊಳಕಿಗೆ, ಇಲ್ಲಿ ಅಪರಕರ್ಮಗಳನ್ನು ಮಾಡುವವರು ತಮ್ಮ ಪಾಲನ್ನೂ ನಿರ್ಭಿಡೆಯಾಗಿ ಸೇರಿಸುತ್ತಲೇ ಇದ್ದರು. ನಾನು ಕಂಡಂತೆ, ಇಬ್ಬರು ಕೆಲಸಗಾರರು ಯಥಾನುಶಕ್ತಿ ಕಸ ಒಟ್ಟು ಮಾಡುತ್ತಲೇ ಇದ್ದರು. ಈ ವಿಚಿತ್ರಕ್ಕೆ ರೋಸಿ ನಾನೊಮ್ಮೆ “ಬೆಳಗಾಗೆದ್ದು ಮನೆಮುಂದೆ ನೀರು ತಳಿದು, ರಂಗೋಲಿ ಇಡುವ ಸಂಪ್ರದಾಯ ಕಂಡಿದ್ದೇನೆ. ಈಚಿನ ದಿನಗಳಲ್ಲಿ ಸ್ವಂತ ಮುಖವನ್ನೂ ತೊಳೆಯದೆ, ಮನೆ ಮುಂದೆ ಕಸಕೊಳಚೆಯ ಕಟ್ಟು ಇಡುವುದಕ್ಕೆ ಬದಲಿದೆ” ಎಂದು ನಾನೊಮ್ಮೆ ಗೇಲಿ ಮಾಡಿದ್ದೆ. ಆದರೆ ಅದನ್ನು ಕೇಳಿಸಿಕೊಂಡ ಗೌರವಾನ್ವಿತ ನಾಗರಿಕರೊಬ್ಬರು ಠಪ್ಪೆಂದು ಉದ್ಗರಿಸಿದ್ದರು “ಮತ್ತೆ ಕಾರ್ಪೊರೇಶನ್ ಸಂಬಳ ಕೊಟ್ಟು ಕಸ ಕಳೆಯುವವರನ್ನಿಟ್ಟಿರೋದು ಯಾಕೆ?” ‘ಎಂಪ್ಲಾಯ್ಮೆಂಟ್ ಜನರೇಟ್ ಮಾಡುವುದು’ ಎಂದರೆ ಇದೇ ಇರಬೇಕು! ಇಂದೂ ಸೈಕಲ್ಲೇರಿ, ಬೆವರು ಸುರಿಸುತ್ತ ನಾನು ಪಶ್ಚಿಮವಾಹಿನಿಯ ತಟ ಸೇರಿದ್ದೆ. ಆದರೆ ಅಲ್ಲಿನ ನೀರನ್ನು ಮುಟ್ಟುವ ಧೈರ್ಯವೂ ಮಾಡದೆ ಮುಂದಿನ ದಾರಿ, ಅಂದರೆ ಹೆದ್ದಾರಿಯ ಪ್ರವಾಹದಲ್ಲಿ ಸಂಗಮಿಸಿದೆ.

ಫೇಸ್ ಬುಕ್ಕಿಗೆ ಪರೀಕ್ಷೆ ಕೊಡಲು ಹೋಗುವವನಂತೆ, ಹೋಗು-ದಾರಿಯಲ್ಲಿ ಕಂಡ ವಿವರಗಳನ್ನು ಪುನರ್ಮನನ ಮಾಡುತ್ತ ನಗರ ಪ್ರವೇಶಿಸಿದೆ. ಫಿಲೊಮಿನಾ ಇಗರ್ಜಿಯ ಎದುರಿನ ನಸು ಏರಲ್ಲಿ ಪೆಡಲುತ್ತಿದ್ದಾಗ ರಿಕ್ಷಾವೊಂದು ನನ್ನ ಮಗ್ಗುಲಿಗೆ ಬಂದು, ಚಾಲಕ ವಿಚಾರಿಸಿದ “ನಿಮ್ನ ಬೆಳ್ಗೆ ನೋಡಿದ್ದೆ. ಎಲ್ಗೋಗ್ಬಂದ್ರಿ?” “ರಂಗನ್ತಿಟ್ಟು, ಪಶ್ಚಿಮ್ವಾಹಿನಿ” ನನ್ನ ಸಹಜ ಉತ್ತರ. ಆತ “ನೀವು ಗ್ರೇಟ್” ಎನ್ನಬೇಕೇ! ಈಚೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಸಿದ ಕುರುಹಾಗಿ, ಅಲ್ಲಲ್ಲಿ ಭಾರೀ ಗಾತ್ರದ ಗೋವಿಂದ ಪೈ, ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ್ ಮುಂತಾದವರ ಭಿತ್ತಿ ಚಿತ್ರಗಳನ್ನು ಕಂಡಾಗ ನನಗೆ ಕನ್ನಡ ಸಂಸ್ಕೃತಿಯ ನೆನಪಾಗುವುದಿಲ್ಲ. ಕೆಲವರ ಡಂಭಕ್ಕಾಗಿ ಪೋಲಾದ ಸಾರ್ವಜನಿಕ ಹಣದ ಬಗ್ಗೆ ವ್ಯಥೆಯಾಗುತ್ತದೆ. ದೂಳು ಸೇರಿ, ಮಳೆಗೆ ನೆಂದು, ಗಾಳಿಗೆ ಹರಿದು, ಊರ ಕಸವಾಗುವ, ಚೌಕಟ್ಟು ಗಟ್ಟಿಯಿದ್ದರೆ ಮೇಲಿನ್ನೊಂದೇ ಭಿತ್ತಿಚಿತ್ರ ಹೇರಿಸಿಕೊಳ್ಳುವ ವಾಸ್ತವಷ್ಟೇ ಕಾಣುತ್ತದೆ. ಬದಲಿಗೆ ತೀರಾ ಅಪರಿಚಿತನೊಬ್ಬನ ಪ್ರಶಂಸನೀಯ ಚಟುವಟಿಕೆಯನ್ನು ಗುರುತಿಸಿ, ಸಹಜವಾಗಿ ಮೆಚ್ಚಿಕೊಂಡ ರಿಕ್ಷಾಚಾಲಕನ ಜೀವಂತ ಸಂಸ್ಕೃತಿಯ ಪ್ರತೀಕ ಎಂದೇ ನನಗೆ ಕಾಣುತ್ತದೆ. ಅದರಿಂದ ಹೆಚ್ಚಿದ ಉತ್ಸಾಹದಲ್ಲಿ ನಾನು ಮನೆ ಸೇರಿದೆ.\

ಚಂಡಿ ಬೇಕು, ಚಾಮುಂಡಿಯಲ್ಲ

ಇಂದು ಸೈಕಲ್ಲೇರಿದ್ದು ನೆಪಕ್ಕಷ್ಟೇ – ಚಾಮುಂಡೀಪುರಂನಲ್ಲಿರುವ ಗೆಳೆಯ ಪಂಡಿತಾರಾಧ್ಯರ ಮನೆ ಮತ್ತು ವಾಪಾಸಿಗೆ ಮಾತ್ರ. ಆದರೆ ನಡುವೆ, ನಾನು ಪಂಡಿತರ ಮೋಟಾರ್ ಸೈಕಲ್ಲಿನಲ್ಲಿ ಅವರ ಬೆಂಗಡೆಗೆ (ಅವರು ದೊಡ್ಡ ಮನಸ್ಸು ಮಾಡಿ ಬೆಂಬಲ ಎಂದರಪ್ಪ J) ಕುಳಿತು ಚಾಮುಂಡೀ ಬೆಟ್ಟದ ಪಾದ ಸೇರಿದೆವು. ಅಲ್ಲಿಂದ ಬೈಕ್ ಬಿಟ್ಟು ಮೆಟ್ಟಿಲೇರೋಣ. ಅಲ್ಲಿ ನನಗೆ ದಖ್ಖಣ ಪರ್ವತಾರೋಹಣ ಸಂಸ್ಥೆಯ ದಿನಗಳ ರೀಲು ತಲೆಯೊಳಗೆ ಓಡುತ್ತಿತ್ತು. ಪಂಡಿತರಿಗೆ (ಬಹುಶಃ) ಬಹುಕಾಲದ ಮೇಲೆ ಮೆಟ್ಟಿಲೇರೋಣಕ್ಕಿಳಿದ ಕುರಿತ ಆತಂಕಗಳು ಸುಳಿಯುತ್ತಿದ್ದಿರಬೇಕು. ಸಹಜವಾಗಿ ನಿಧಾಆಆಅನಕ್ಕೆ ಏರುತ್ತ ಹೋದೆವು.

ಮೊದಲ ಮೆಟ್ಟಿಲ ಬಳಿಯಿದ್ದ ಮರ್ಕಟಮಿತ್ರರಲ್ಲಿ ಒಬ್ಬಿಬ್ಬರು, ಕುಳಿತಲ್ಲಿಂದಲೇ ಪಂಡಿತರ ಚೀಲದ ಕುರಿತು ತುಸು ಆಸಕ್ತಿ ತೋರಿದಂತೆ ಹುಬ್ಬು ಹಾರಿಸಿದರು, ಅಷ್ಟೆ. ಆದರೆ ಡೊಂಕುಬಾಲದ ನಾಯಕನೊಬ್ಬ ಆಶಾವಾದಿ. ಇಲ್ಲಲ್ಲದಿದ್ದರೂ ಮುಂದೆಲ್ಲಾದರೂ ನಾವೇನಾದರೂ ತಿನಿಸುಗಳನ್ನು ಹಂಚಿಕೊಂಡೇವು, ತನಗೂ ನಾಲ್ಕು ತುಂಡು ಎಸೆದಾರು, ಎಂಬಂತೆ ಜೊತೆಗೊಟ್ಟ. ಅದಕ್ಕೇನು ಗೊತ್ತು, ನಾವು ಶುಷ್ಕ ವಿಚಾರಗಳನ್ನು ಮಾತ್ರ ಹಂಚಿಕೊಳ್ಳುತ್ತೇವೆಂದು! ಶಿಖರದವರೆಗೂ ಬಲು ತಾಳ್ಮೆಯಿಂದ ನಮ್ಮ ಹಿಂದುಮುಂದಾಡಿತು. ನಮ್ ಕಣ್ಣುಗಳು ಭೇಟಿಯಾದಗೆಲ್ಲ ಓದು, ಅರ್ಥೈಸಿಕೆ ಇಲ್ಲದೇ ಲೈಕ್ ಹೊಡೆಯುವವರಂತೆ ಬಾಲ ಅಲ್ಲಾಡಿಸುತ್ತಿತ್ತು. ಅಲ್ಲಿಲ್ಲಿ ನಾನು ಮೆಟ್ಟಿಲು ಬಿಟ್ಟು ಆಚೀಚೆ ಸ್ವಲ್ಪೇ ಓಡಾಡಿದರೂ ಇದು ಗೌರವ ರಕ್ಷೆ ಕಲ್ಪಿಸುವಂತೆ ಅನುಸರಿಸಿ ಬರುತ್ತಿತ್ತು. ಅದರೊಡನೆ ಬಿಟ್ಟಿ ಸವಾರಿಗೆ ಹೊರಟ ಚಿಗಟಗಳನ್ನು ಕಚ್ಚಿ ಕಳೆಯುವ ಉರುಬಿನಲ್ಲಿ ಗುರುಗುಟ್ಟಿದರೂ ಮರುಕ್ಷಣದಲ್ಲಿ “ಹೇ ನಿಮಗಲ್ಲ” ಎನ್ನುವ ದೈನ್ಯ ದಿಟ್ಟಿ ನಮ್ಮ ಮೇಲೆ ಬೀರುತ್ತಿತ್ತು. ಕೊನೆಯಲ್ಲಿ, ಅಂದರೆ ಶಿಖರದಲ್ಲೂ ನಾವು ಸಂತೆಯೊಡನೆ ಒಂದಾದ ಮೇಲೂ ತಿನಿಸು ತುಣುಕುಗಳನ್ನು ಉದುರಿಸದಾಗ “ಎಲ್ಲರಂತವರಲ್ಲ ಇವ ದಂಡ” ಎಂದು (ಎಲ್ಲರಂತವನಲ್ಲ ನನ ಗಂಡ – ರಾಗದಲ್ಲಿ) ಹಾಡಿ, ಸಂಬಂಧ ಕಡಿದುಕೊಂಡಿತು. ಪಾಂಡವ ಸ್ವರ್ಗಾರೋಹಣದ ಕೊನೆ ಹಂತದಲ್ಲಿ ಹಿಂಬಾಲಿಸಿದ ಶ್ವಾನರೂಪೀ ಯಮನೇ ಇದಾಗಿರಬಾರದೇಕೆ? ಎಂದೊಂದು ಕುಶಾಲು ನಮ್ಮ ಮನದಲ್ಲಿ ಮೊಳೆತಿತ್ತು. ಆಗ ಧರ್ಮಸತ್ತ್ವ ಮತ್ತು ಭೀಮಬಲಗಳನ್ನು ಯಾರಿಗನ್ವಯಿಸುವುದು? ಹಿರಿತನದ ಲೆಕ್ಕ ಹಾಕಿದರೆ ಸತ್ತು ಸ್ವರ್ಗ ಸೇರುವ ಯೋಗ ನನ್ನದಾದರೂ ಇದ್ದಾಗ ಭೀಮತನದ ಹೆಮ್ಮೆಯೂ ನನ್ನದೇ! ಹೀಗೆ ಉತ್ತರೋತ್ತರ ಪರಿಣಾಮಗಳ ಗೊಂದಲ ಮೂಡುವುದು ಕಂಡು, ವಿಷಯಾಂತರ ಮಾಡಿದೆವು.

ಮೆಟ್ಟಿಲುಗಳ ಮೇಲಿನ ಸಂಖ್ಯಾ ನಮೂದಿನಿಂದ ತೊಡಗಿ ಶಾಸನಗಳವರೆಗೆ ಮಾತು ನಮ್ಮೊಳಗೆ ಬಂತು. ಕನ್ನಡ ಸ್ನಾತಕೋತ್ತರ ಅಧ್ಯಾಪರಾಗಿದ್ದ ಪಂಡಿತರಲ್ಲಿ, ವಿದ್ಯಾರ್ಥಿಗಳಿಗೆ ಶಾಸನಗಳ ಪ್ರಾಯೋಗಿಕ ಅನುಭವವನ್ನು ಕೊಡಿಸುವ ಸಲುವಾಗಿ ಬೆಟ್ಟ ಹತ್ತಿಳಿಸಿದ ಕೆಲವು ಕಥನಗಳಿದ್ದವು. ಗಜಗಾತ್ರದ ಎಪಿಗ್ರಾಫಿಯಾ ಕರ್ನಾಟಿಕಾ ಸಂಪುಟ ಹೊರುವುದಕ್ಕಾಗಿ ಬೈಕ್ ಒಯ್ದದ್ದು, ಅದರಲ್ಲಿ ಸೇರದಿದ್ದ ಶಾಸನಗಳನ್ನು ಪತ್ತೆ ಮಾಡಿದ್ದು, ಪರಿಣತರನ್ನು ತಂದು ನಕಲು ತೆಗೆಸಿದ್ದು, ಉಪೇಕ್ಷೆಗೊಳಗಾಗಿದ್ದ ಶಾಸನ-ಶಿಲೆಯನ್ನು ಬೈಕಿಗೇರಿಸಿ ಇಲಾಖೆಯ ವಶಕ್ಕೆ ಕೊಟ್ಟದ್ದು, ಅವರದನ್ನು ದಿವ್ಯ ನಿರ್ಲಕ್ಷ್ಯದಲ್ಲಿ ಕಳೆದು ಹಾಕಿದ್ದು, ಮೆಟ್ಟಿಲ ಜಾಡಿನಲ್ಲಿ ಬಂದವರಿಗೆ ನಂದಿನಿ ಹಾಲು ಹೆಚ್ಚು ರುಚಿಸಿದ್ದು ಇತ್ಯಾದಿ ಪಂಡಿತ ಕೆಲಸಗಳ ಉಲ್ಲೇಖಗಳೆಲ್ಲ ಸ್ವಾರಸ್ಯಕರವಾಗಿದ್ದವು. ಅದರ ಜತೆಗೇ ಪಾಮರ ಮಂಡೆಯೊಳಗೆ……

ನಮ್ಮ ‘ಬೇಸ್ ರಾಕಿ’ಗೆ ಹೋಗುವ ಜಾಡು ಮರೆಯಾಗಿದೆಯಲ್ಲಾ, ಚಾರಣಕ್ಕಿದ್ದ ಜಾಡು ದುರ್ನಾತ ಹೊಡೆಯುತ್ತಿದೆಯಲ್ಲಾ, ನಂದಿಯಿಂದ ಮೇಲೆ ಹೋಗುವ ‘ಥಂಬ್ ರಾಕ್’ ಜಾಡಿಗೆ ಅರಣ್ಯ ಇಲಾಖೆಯ ‘ಪ್ರವೇಶ ನಿಷೇಧ’ ಬೋರ್ಡು ಬಿದ್ದಿದೆಯಲ್ಲಾ, ‘ಈಗಲ್ಸ್ ರಾಕ್’ ಬುಡದ ಕಸಗಳು ಹದ್ದಿನವಲ್ಲ – ಹದ್ದುಮೀರಿದ ಮನುಷ್ಯರು ಹಾಕಿದ್ದಲ್ಲವೇ, ‘ನಲ್ವತ್ತಡಿ-ಚಿಮ್ಣಿ’ಯ ಸಂದು ಪೂರ್ಣ ಪೊದರು ನುಂಗಿರಬಹುದೇ ಎಂಬಿತ್ಯಾದಿ ಲಕ್ಷಣ, ಸೂಚನೆಗಳ ಗ್ರಹಿಕೆಯಾಗುತ್ತಲೇ ಇತ್ತು. ಪರಿಣಾಮದಲ್ಲಿ ಮೈಸೂರಿನ ಪರ್ವತಾರೋಹಣ ಉತ್ಸಾಹವೇ ಇಂಗಿ ಹೋಗಿರಬೇಕು ಎಂಬ ತುಸು ಬೇಸರ ನನ್ನಲ್ಲಿ ಸೇರಿಕೊಂಡಿತು. ಆ ಕುರಿತು ಹೆಚ್ಚಿನ ಬೆಳಕು ಚೆಲ್ಲಲು ಪರ್ವತಾರೋಹಣ ಸರಣಿಯೋಟದ ಮೈಸೂರು ದಂಡಧಾರಿಗಳಲ್ಲಿ ಒಬ್ಬರಾಗಿ, ಸದ್ಯ ನನ್ನ ಸಂಪರ್ಕದಲ್ಲಿರುವ ಇಂಗ್ಲಿಷ್ ಅಧ್ಯಾಪಕ ರವಿಚಂದ್ರರಿಗೆ ಕರೆ ಕೊಡುತ್ತೇನೆ.

ಈಚೆಗೆ ಪತ್ರಿಕೆಗಳಲ್ಲಿ ನಂದಿಗೆ ವರ್ಷಾವಧಿ ವರ್ಣಮಯ ಅಭಿಷೇಕಗಳನ್ನು ಮಾಡಿದ್ದರ ಚಿತ್ರಗಳನ್ನು ಕಂಡಿದ್ದೆ. ಆದರೆ ಅಭಿಷೇಕಪೂರ್ವ, ಇದೇ ಮೊದಲೆಂಬಂತೆ ವಾಟರ್-ಜೆಟ್ಟಿನಿಂದ ಶುದ್ಧಿಮಾಡಿದ್ದರಂತೆ. ಆ ಕ್ರಮ ಸರಿಯಲ್ಲ, ಸವಕಳಿಯಲ್ಲಿ ವಿಗ್ರಹದ ರೂಪನಷ್ಟವೇ ಆಗಬಹುದೆಂಬ ಚರ್ಚೆಯನ್ನೂ ಕೇಳಿದ್ದೆ. ಬಹುಶಃ ಅದರ ಪರಿಣಾಮವೆಂಬಂತೆ, ನಾವಿಬ್ಬರೂ ಇದೇ ಮೊದಲು, ನಂದಿಯ ಅಚ್ಚ ಬಿಳಿ ರೂಪ ಕಂಡೆವು. ಅಲ್ಲೇ ಪಕ್ಕದಲ್ಲಿ ಹರಿಕೆಗೋ ಸ್ಮರಣಿಕೆಗೋ ತಿಳಿಯೆ, ಮಾರಾಟಕ್ಕೆ ಹರವಿಕೊಂಡಿದ್ದ ಪುಟ್ಟಪುಟ್ಟ ಹಿತ್ತಾಳೆ ವಿಗ್ರಹಗಳ ಸಂಗ್ರಹ ಚೆನ್ನಾಗಿತ್ತು. ಮುಖ್ಯ ದಾರಿಯಿಂದ ನಂದಿಯ ಆವರಣದ ಪ್ರವೇಶದವರೆಗೆ ದಿಬ್ಬದ ದಾರಿ ಅಭಿವೃದ್ಧಿಯ ನಿಧಾನದ್ರೋಹದಲ್ಲಿ ಜಲ್ಲಿ ಕಿತ್ತುಕೊಂಡಿದ್ದದ್ದು ನಾಚಿಕೆಗೇಡೇ ಸರಿ.

ಶಿಖರದಲ್ಲಿ ಚಾಮುಂಡೀ ದರ್ಶನಕ್ಕೆ ನಿಂತ ದೊಡ್ಡ ಸರತಿ ಸಾಲು ನೋಡಿಯೇ ನಾವು ತೃಪ್ತರಾದೆವು; ಒಳ ಹೋಗುವ ಕಷ್ಟ ಪಡಲಿಲ್ಲ. ಅದರ ಒತ್ತಿನ ಮಹಾಬಲೇಶ್ವರ ದೇವಳಕ್ಕೆ ಉನ್ನತ ಗೋಪುರದ ಭವ್ಯತೆಯಿಲ್ಲ. ಆದರೆ ಸೌಂದರ್ಯದಲ್ಲಿ ಇದು ಕಡಿಮೆಯದ್ದೇನೂ ಅಲ್ಲ. (ಅದರ ಕೈಮರದ ಕಾಗುಣಿತದ ಚಂದ ನೋಡಿ, ಕನ್ನಡಕ್ಕೊಂದು
ಇಂಗ್ಲಿಷಿಗೊಂದು!)

ನಿಜದಲ್ಲಿ ನಮ್ಮ ಸಂತೋಷಕ್ಕೆ ಬೆಟ್ಟದ ಪ್ರಾಕೃತಿಕತೆ ಮುಖ್ಯ, ಐತಿಹಾಸಿಕತೆ ಅಡ್ಡಿಯಿಲ್ಲ. ಆರೋಗ್ಯ ಮತ್ತು ಆರಾಧ್ಯತೆಯ (ಈ ಆರಾಧ್ಯದಲ್ಲಿ ಪನ್-ಡಿತರಿಗೇನೂ ಪನ್ ಇಲ್ಲ!) ದೃಷ್ಟಿಯಲ್ಲಿ ಬೆಟ್ಟದ ಚಾಮುಂಡಿಗಿಂತ ಚಂಡಿ, ಅರ್ಥಾತ್ ಬೆವರು ಚಂಡಿಯೇ ನಮಗೆ ಬಲುಪ್ರಿಯ. ಬೆವರಿಳಿಸಿ ಶಿಖರ ದರ್ಶನ ಮಾಡಿ ನಾವು ಧನ್ಯರಾದೆವು. ಅಷ್ಟೇ ವಿರಾಮದಲ್ಲಿ ಬೆಟ್ಟ ಇಳಿದು, ಬಂದಂತೆಯೇ ಮನೆ ಸೇರಿಕೊಂಡೆವು.

ಚೂರೇ ಚೂರು ನನೋಮೈ!

ಕೆಸರಟ್ಟಿಸಿ ಬಸ್ ನಿಲ್ದಾಣದವರೆಗೆ ಸಣ್ಣ ವಿಚಾರಣೆಗೆ ನಿನ್ನೆ ಬೆಳಿಗ್ಗೆ ಸೈಕಲ್ ಏರುವವನಿದ್ದೆ. ಆದರೆ ಮೊನ್ನೆ ನಾನು, ಚಾಮುಂಡಿ ಬೆಟ್ಟದ ಪಾದದಲ್ಲಿ ಸೈಕಲ್ ಬಿಡುತ್ತೇನೆಂದಾಗ ತಮ್ಮ, ಮತ್ತೆ ಪಂಡಿತಾರಾಧ್ಯ ಎಚ್ಚರಿಸಿದ್ದು ನೆನಪಾಯ್ತು – “ಬೆಲೆ ಬಾಳುವ ಸೈಕಲ್ಲುಗಳಿಗೆ ವಿಶ್ವಾಸಾರ್ಹ ತಂಗುದಾಣಗಳಿಲ್ಲ!” ಹಾಗಾಗಿ ಬಸ್ ನಿಲ್ದಾಣದಲ್ಲಿ ಸೈಕಲ್ ಕಳೆದುಕೊಳ್ಳುವ ಪ್ರಮೇಯವೇ ಬೇಡವೆಂದು ಪಾದಯಾತ್ರೆ ಹೊರಟೆ. ಕಳೆದೆರಡು ವರ್ಷಗಳಿಂದ ‘ಮೈಸೂರು ದಸರಾ ಕಲಾಪ ಪಟ್ಟಿ’ಯಲ್ಲಿ ನಗರದ ಪ್ರಾಚ್ಯ ಸಂಗತಿಗಳ ನಡುವೆ ‘ನಡೆದು ನೋಡಿ ಮೈಸೂರು’ (ನನೋಮೈ!) ಎಂದೊಂದು ಹೆಸರೂ ಕಂಡಿದ್ದೆ. ನಾನು ಅದನ್ನು ಇಂದು ನನ್ನದೇ ಖಯಾಲಿಗೆ ಅಳವಡಿಸಿಕೊಂಡೆ.

ಧ್ರುವ ಸಮೀಪದ ಹಕ್ಕಿಗೆ ವಲಸೆ ಹೊರಡುವ ಕಾಲದಲ್ಲಿ ಭೂಮಧ್ಯದ ಕನ್ನಾಡಿನ ಕುಕ್ಕರಳ್ಳಿ ಕೆರೆ ಅನುಸಂಧಾನಗೊಂಡಂತೆ, ನಾನು ಸರಸ್ವತೀಪುರದ ಎಂಟನೇ ಮುಖ್ಯ ರಸ್ತೆಯಿಂದ ತೊಡಗಿದರೂ ತಲೆಯೊಳಗೆ ಕೇಂದ್ರ ಬಸ್ ನಿಲ್ದಾಣದ ದಿಕ್ಕು ನಿಶ್ಚಿತವಿತ್ತು. ಕುತೂಹಲ ಎಳೆದಂತೆ ಅಡ್ಡ ನೀಟ ರಸ್ತೆಗಳಲ್ಲಿ ಹೊರಳುತ್ತ ನಡೆದೆ. ಬಹುಶಃ ನಾಲ್ಕನೇ ಮುಖ್ಯ ರಸ್ತೆಯ ಕುರುಡು ಕೊನೆಯಲ್ಲಿ, ಕುಕ್ಕರಳ್ಳಿ ಕೆರೆನೀರನ್ನಾಶ್ರಯಿಸಿದ ದೋಭೀ ಘಾಟ್ ನನ್ನನ್ನು ತಡೆದು ನಿಲ್ಲಿಸಿತು. ಕಳೆದೆರಡು ದಿನಗಳಲ್ಲಿ ಪತ್ರಿಕಾವರದಿಗಳು ಕೆರೆ ನೀರನ್ನು ಆಶ್ರಯಿಸಿದ ಹೆಜ್ಜಾರ್ಲೆ ಹಕ್ಕಿಗಳು ಅಸ್ವಸ್ಥಗೊಳ್ಳುತ್ತಿರುವುದು (ಒಂದು ಸತ್ತ ವರದಿಯೂ ಇಂದು ಬಂದಿದೆ), ತಜ್ಞರು ನೀರಿನ ಕೊಳಚೆ ಸಾಂದ್ರತೆ ಹೆಚ್ಚಿದ್ದು, ಸೂಕ್ಷ್ಮಾಣು ಸೋಂಕು ತಗುಲಿದ್ದನ್ನೆಲ್ಲ ಬೊಟ್ಟುಮಾಡುತ್ತಲೇ ಇದ್ದಾರೆ. ಆದರೆ ಅದ್ಯಾವುದೂ ಇಲ್ಲಿನ ಬಡಪಾಯಿ ದೋಭಿಗಳಿಗೆ ಮುಟ್ಟಿದಂತೇ ಇಲ್ಲ! ಅದೇ ಕೆರೆಯಿಂದ ನಿಯಂತ್ರಿತವಾಗಿ ಇಳಿದು ಬರುವ ಕಂದು ಬಣ್ಣದ ತೊಡೆಮಟ್ಟದ ನೀರಿನಲ್ಲಿ ನಿಂತುಕೊಂಡ ಅಗಸರು ರಾಶಿ ರಾಶಿ ಬಟ್ಟೆಗಳನ್ನು ನೆನೆಸಿ, ಸಾಬೂನು ಹಚ್ಚಿ ತೀಡಿ, ಬಿಡಿಬಿಡಿಸಿ ಬ್ರಷ್ ಉಜ್ಜಿ, ಎತ್ತೆತ್ತಿ ಬಡಿದು, ನೀರು ಚಿಮುಕಿಸಿ ಕುಸುಕಿ, ಅಲುಬಿ, ನೀರು ಬಳಿಯುವಂತೆ ತಿರುಟಿ, ನಿರಿಗೆ ಕಳೆಯುವಂತೆ ಝಾಡಿಸಿ, ಅತ್ತ ಸಾಲೋಸಾಲು ಕಟ್ಟಿದ್ದ ಹಗ್ಗಗಳಲ್ಲಿ ಒಣಗಲು ಹರಗುತ್ತಲೇ ಇದ್ದರು. ಊರ ಬಟ್ಟೆಯ ಮಡಿ ನೋಡಿಕೊಳ್ಳುವವರ (ಮಡಿವಾಳ) ಆರೋಗ್ಯ, ಪರೋಕ್ಷವಾಗಿ ಆ ಬಟ್ಟೆಗಳನ್ನು ಬಳಸುವವರ ಆರೋಗ್ಯ ಮತ್ತು ಅವುಗಳ ನೈಜ ಸ್ವಚ್ಛತೆ ಕೇಳುವವರಿದ್ದಾರೆಯೇ?

ದೋಭೀಘಾಟಿನಿಂದ ಹಿಂಬಂದು, ಈಜುಕೊಳದ ದಾರಿ ಹಿಡಿದೆ. ಅಲ್ಲಿ ‘ಅಭಿವೃದ್ಧಿ ಮಹಾಯಾಗ’ದ ಬೀಜ ಮಂತ್ರ “ಕುಟ್ಟು, ಕಟ್ಟು” ಜಪ ನಡೆದಿತ್ತು. ಈಜುಕೊಳದ ಭಾರೀ ನವೀಕರಣ ಕಾಮಗಾರಿ ಅರೆಬರೆಯಾಗಿ, ನೆನೆಗುದಿಗೆ ಬಿದ್ದಂತಿತ್ತು. ನಮ್ಮ ಕುಟುಂಬ ಮೈಸೂರಿಗೆ ಬಂದ ಹೊಸತರಲ್ಲಿ, ಅಂದರೆ ಸುಮಾರು ೧೯೭೦ರ ದಶಕದ ಮೊದಲಭಾಗದಲ್ಲಿ “ನಗರದ ಪ್ರಥಮ ಪರಿಪೂರ್ಣ ಸಾರ್ವಜನಿಕ ಈಜುಕೊಳ”ವೆಂದೇ ಇದರ ಜನನವಾಗಿತ್ತು. ಕಳೆದ ಸುಮಾರು ನಾಲ್ಕೂವರೆ ದಶಕದ ಅವಧಿಯಲ್ಲಿ ಇದು ನಗರಪಾಲಿಕೆಯಿಂದ ವಿವಿನಿಲಯಕ್ಕೆ ಹಸ್ತಾಂತರವಾದ ಅವಧಿಯೂ ಸೇರಿ, ಲೆಕ್ಕವಿಲ್ಲದಷ್ಟು ದುರಸ್ತಿ, ನವೀಕರಣ, ವಿಸ್ತರಣೆಗಳೆಂದು ನಿಷ್ಕ್ರಿಯವಾಗಿದ್ದ ದಿನಗಳೇ ಜಾಸ್ತಿ. ಆ ನಡುವಿನ ವಿಲಂಬಿತ ಅಪಸ್ವರದ ಬೆಲೆ, ಅದಕ್ಕೂ ಮಿಗಿಲಾಗಿ ಅದು ಪ್ರತಿ ಬಾರಿ ಪುನಶ್ಚೇತನಗೊಳ್ಳಲು ಮಾಡಿದ ಸಾರ್ವಜನಿಕ ವೆಚ್ಚಗಳ ಮೊತ್ತಕ್ಕೆ ಬಹುಶಃ ಈ ವೇಳೆಯಲ್ಲಿ ಕನಿಷ್ಠ ಇನ್ನೆರಡು ಸ್ವತಂತ್ರ ಈಜುಕೊಳವನ್ನೇ ಕಟ್ಟಬಹುದಿತ್ತು ಖಂಡಿತ.

ಈಜುಕೊಳದಿಂದ ‘ರಾಧಾಕೃಷ್ಣನ್ ಸಾಲ್ಮರ ರಸ್ತೆ’ಗೊಂದು ತೀರಾ ಕೆಟ್ಟ ರಸ್ತೆಯಿದೆ. ಅದರ ಬಲ ಪಕ್ಕದಲ್ಲಿ ಆಯುರ್ವೇದೀಯ ಉದ್ಯಾನದ (ಚಂದ್ರವನ) ಮತ್ತು ಶನಿದೇವರ ಬೋರ್ಡು, ಬೇಲಿ, ಮಂದಿರ ಶೋಭಿಸುತ್ತಿವೆ. ‘ವನ’ದೊಳಗೊಂದು ಕೊಳೆತ ಕೊಳ, ಹಾಳಮೂಳ, ಜಲ್ಲಿ ರಾಶಿಗಳೇ ಪ್ರಧಾನವಾಗಿ ಕಾಣುವುದು ನನ್ನ ದೃಷ್ಟಿದೋಷವೇ ಇರಬೇಕು, ಬಿಡಿ. ದಾರಿಯ ಎಡ ಮಗ್ಗುಲಿನಲ್ಲೂ ಒಂದು ಕೊಳೆತ ನೀರಿನ ಹಳ್ಳವಿದೆ. ವಾಸ್ತವದಲ್ಲಿ ಇವೆಲ್ಲ ಕುಕ್ಕರಳ್ಳಿ ಕೆರೆಯ ಉಪೋತ್ಪನ್ನಗಳೇ ಆದ್ದರಿಂದ, ಅದೇ ‘ನೈರ್ಮಲ್ಯ’ ಇವಕ್ಕೂ ವ್ಯಾಪಿಸಿದೆ. ಈ ತಗ್ಗಿಗೆ ಮಳೆನೀರೂಡುವ ಕೊರಕಲು ಚರಂಡಿಯ ಕಸ ಸಾಮ್ರಾಜ್ಯಕ್ಕೆ ‘ಗೌರವಾನ್ವಿತ’ರೊಬ್ಬರ ಚೌಕಟ್ಟೂ ಕಳೆಯದ ಚಿತ್ರ (ಚಿತ್ರ ನೋಡಿ) ‘ಅಧಿಪತಿ’ಯಂತೆ ಬಿದ್ದಿತ್ತು! ಆ ಚಿತ್ರದ ಮೂಲದಲ್ಲಿ ಯಾರ ಮಧುರ ಭಾವವಿತ್ತೋ ತಿಳಿಯದು, ಆದರೆ ಕಾಲಾನುಕ್ರಮದಲ್ಲಿ ಅದು ಒಂದು ಗುಜರಿ ಮೌಲ್ಯವನ್ನೂ ಗಳಿಸದ ತಿರಸ್ಕಾರಕ್ಕೊಳಗಾದದ್ದು ನಿಜಕ್ಕೂ ದುರಂತ.

ರೈಲ್ವೇ ಹಳಿಗೆ ಸಮಾನಾಂತರದಲ್ಲೋಡುವ ರಂಗಮಂದಿರ ರಸ್ತೆ ಆರಿಸಿಕೊಂಡೆ. ಅಲ್ಲಿ ತಿರುವಿನಲ್ಲೇ ಟ್ರಿನ್, ಟ್ರಿನ್ ಸೈಕಲ್ ಸ್ಟ್ಯಾಂಡೂ ಟಾಂಗಾ ನಿಲ್ದಾಣವೂ ಅಕ್ಕಪಕ್ಕದಲ್ಲಿರುವುದು ಆಧುನಿಕ ಬದುಕು ಮತ್ತು ಸಾಂಪ್ರದಾಯಿಕ ಮೌಲ್ಯಗಳ ಪೋಷಣಾ ದ್ವಂದ್ವಕ್ಕೊಂದು ಉತ್ತಮ ಉದಾಹರಣೆಯಂತೇ ಕಾಣಿಸಿತು. ಇದು ರಾಜಾಶಾಹಿಯ ನೆರಳು ಕಳಚಿಕೊಳ್ಳದ ಮೈಸೂರಿನಲ್ಲಿ ತುಂಬ ಕಾಣಸಿಗುತ್ತದೆ. ಬೆಟ್ಟದ ಮೇಲೆ ಅಬ್ಬರದ ಮಹಿಷಾಸುರನನ್ನು ನೋಡಲು ನಿಶ್ಶಬ್ದ ವಿದ್ಯುತ್ ಕಾರ್ ಓಡುವುದು, ಅರಮನೆಯ ಎದುರಿನ ತಾರಾಶ್ರೇಣಿಯ ವೈಸ್ರಾಯ್ ಹೋಟೆಲಿನ ಪಕ್ಕದಲ್ಲೇ ಹುಲ್ಲು ಕಂಟಿಗಳ ಬಾಲ್ಕನಿಯ ಕಟ್ಟಡ, ಚುನಾವಣಾ ಸಮರ ಸನ್ನಾಹದೊಡನೆ ಹುಣಸೂರಿನ ಹನುಮಜ್ಜಯಂತಿಯ ಕೋಲಾಹಲ, ಪ್ರಜಾ ಪರಮಾಧಿಕಾರದ ಮಾತು ಮೆರೆಸುತ್ತಲೇ ‘ಮೈಸೂರರಸರ ಶಾಪವಿಮೋಚನೆ’ಯ ಸಂಕೇತದ (ಯದುವೀರನಿಗೆ ಪುತ್ರೋತ್ಸವ) ಸಂಭ್ರಮ…..

ರಂಗಾಯಣ ಕಳೆದು, ವಿನೋಬಾರಸ್ತೆ ಅಥವಾ ‘ಮೆಟ್ರೋಪೋಲ್’ ನೇರಕ್ಕೇ, ಅಂದರೆ ಶಿವರಾಂಪೇಟೆ ಮೂಲಕ ಕೇಂದ್ರ ಮಾರುಕಟ್ಟೆಯವರೆಗೂ ಪಾದ ಬೆಳೆಸಿದೆ. ಒಂದು ಕಾಲದ ಗಲ್ಲಿ ದಾರಿ ಇಂದು ವಿಸ್ತರಣೆಗೊಂಡಂತಿದೆ. ಆದರೂ ಮೈಸೂರಿಗೆ ಬಂದ ಹೊಸತರಲ್ಲಿ ನಾನೂ ಆನಂದನೂ ಆ ದಾರಿಯಲ್ಲಿ ಸಿನಿಮಾ ನೋಡಲು ಬಂದಿದ್ದ ರಾಜಕಮಲ್ ಟಾಕೀಸ್ ಮುಖಗೇಡಿಯಾದರೂ ಉಳಿದಿರುವುದು ಕಂಡೆ. ಹಿಂದೆ ಅಲ್ಲಿ ನೋಡಿದ ಸಿನಿಮಾ ಯಾವುದೋ ನೆನಪಿಲ್ಲ. ಆದರೆ ಗಂಟೆ ಮೊದಲು ಅಲ್ಲಿನ ಕ್ಯೂ ಕಟಕಟೆಯ ಮುಂಚೂಣಿಯಲ್ಲಿ ನಿಂತ ನಮ್ಮನ್ನು ಟಿಕೇಟ್ ಕೊಡುವ ಐದೋ ಹತ್ತೋ ಮಿನಿಟಿನ ಮೊದಲು ಬಂದ ಬ್ಲ್ಯಾಕಿನವರು ಬೆದರಿಕೆ ಹಾಕಿ ಹಿಂದೆ ನೂಕಿದ್ದು ಮಾತ್ರ ಮರೆಯಲಾರೆ. ಇಂದು ಅಂತರ್ಜಾಲದ ಸಹಾಯದಲ್ಲಿ ಥಿಯೇಟರ್ ಟಿಕೆಟ್ ಖರೀದಿಯಿಂದ ತೊಡಗಿ, ಅಂಗೈಯೊಳಗಿನ ಚರವಾಣಿಯಲ್ಲೂ (ಕಳ್ಳಮಾಲೇ ಇರಬಹುದು) ಚಲಚಿತ್ರ ನೋಡುವ ಸೌಕರ್ಯ ಬಂದಿದೆ. ಆದರೂ ಥಿಯೇಟರಿನ ಎದುರು ಮೂರು ಮಾಳಿಗೆ ಎತ್ತರದ ಕಟೌಟಿನಿಂದ ತೊಡಗಿ ಹಾರತುರಾಯಿ, ಕ್ಷೀರಾಭಿಷೇಕ, ಪಟಾಕಿ ಬ್ಯಾಂಡ್ ಗದ್ದಲ! ಈ ಎಲ್ಲ ಸಿನಿಮಾ ವೈಭವಗಳ ಕುರುಹು ನನ್ನ ನಡಿಗೆಯಲ್ಲಿ ಮುಂದೆ ಸಿಕ್ಕ ಸಂಗಮ್, ವುಡ್‍ಲ್ಯಾಂಡ್ಸ್ ಟಾಕೀಸುಗಳೂ ಸಾರಿದುವು. ಇವೆಲ್ಲ ಎಷ್ಟು ನಿಜ? ಎಷ್ಟು ಪೈಡ್-ಅಭಿಮಾನದ ತೋರಿಕೆ?

ದೇವರಾಜ ಮಾರ್ಕೆಟ್ ಅಥವಾ ಕೇಂದ್ರ ಮಾರುಕಟ್ಟೆಯ ಎದುರಿನ ಚಿಕ್ಕ ಗಡಿಯಾರದ ಆವರಣ ಹಿಂದೆಲ್ಲ ದ್ವಿಚಕ್ರಿಗಳ ತಂಗುದಾಣವಾಗಿ ಗಜಿಬಿಜಿಯಾಗಿರುತ್ತಿತ್ತು. ಇಂದು ಅವೆಲ್ಲವನ್ನು ನಿವಾರಿಸಿ, ನೆಲ ಎತ್ತರಿಸಿ, ಹಸಿರಿನ ಸಂತಾನ ಬರದಂತೆ ಮಾಡಿ, ಆರಾಮಾಸನ ಹಾಕಿದ್ದಾರೆ. ಸುತ್ತ ಸಂತೆಯ ಗದ್ದಲ, ದೂಳು, ಹೊಗೆ, ಬಿಸಿಲಿದ್ದೂ ಇಲ್ಲಿ ಆರಾಮವಾಗಿ ಕೂರುವವರನ್ನು ನೆನೆಸಿ ನಗೆ ಬಂತು. ಮುಂದೆ ನನಗೆ ಪ್ರಥಮ ಸೈಕಲ್ ಕೊಟ್ಟ (೧೯೭೦ರ ಸುಮಾರಿಗೆ) ಬಾಹುಸಾರ್ ಮಳಿಗೆಯೂ ಇದ್ದ ಖ್ಯಾತ ಮಕ್ಕಾಜಿ ಚೌಕ ವಠಾರವೆಲ್ಲ ನೆಲಸಮವಾಗಿ – ಅಳುವಾಗಿ, ದೂಳೊಂದೇ ಆಳುತ್ತಿರುವುದು ಕಂಡೆ. ಇದರಂತೇ ಸ್ವಲ್ಪ ಆಚೆಗಿರುವ ಇನ್ನೊಂದು ‘ಪರಂಪರಾ’ ವಠಾರ – ಲ್ಯಾಂಡ್ಸ್‍ಡೌನ್ ಕಟ್ಟಡಗಳು. ಇವೆಲ್ಲ ರಚನೆಯಾದದ್ದು, ಇಂದಿಗೆ ಉಳಿದು ಬಂದಿರುವುದೂ ದೈನಂದಿನ ವಾಣಿಜ್ಯ ವಹಿವಾಟುಗಳಿಗಾಗಿಯೇ. ಅವು ಕಾಲಧರ್ಮದಲ್ಲಿ ಶಿಥಿಲಗೊಂಡು, ಅಪಾಯಕಾರಿಯಾದಾಗ ಕಳಚಿ ಸ್ಪಷ್ಟ ಇಂದಿನ ಅಗತ್ಯಗಳಿಗೆ ಮರುರಚನೆಗೊಳ್ಳುವುದು ಆಗಬೇಕಿತ್ತು. ಅದು ಬಿಟ್ಟು ವರ್ತಮಾನದ ವಣಿಕ ಹಿತಾಸಕ್ತಿಗೆ ಪರಂಪರೆಯ (ಸಂಸ್ಕೃತಿ) ಮುಖವಾಡ ಹಾಕಿ ಉಳಿಸಿಕೊಳ್ಳುವುದು ಎಷ್ಟು ಸರಿ?

ದೊಡ್ಡ ಗಡಿಯಾರ ಕಳೆದು ಬಸ್ ನಿಲ್ದಾಣ ಸೇರಿ ವಿಚಾರಣೆ ಮುಗಿಸಿದೆ. ಕಾಲಮಿತಿ ಮುಗಿಯುತ್ತಿರುವುದನ್ನು ಗಮನಿಸಿ ನಡಿಗೆ ಬೆಳೆಸುವುದನ್ನು ಬಿಟ್ಟೆ. ವುಡ್‍ಲ್ಯಾಂಡ್ಸ್ ಥಿಯೇಟರ್, ಹರ್ಷರಸ್ತೆಯ ಉದ್ದ, ಅರಮನೆಯ ಎದುರು ಹಾಯ್ದು ನಗರ ಸಾರಿಗೆ ನಿಲ್ದಾಣ ಸೇರಿದೆ. ಸಾವಕಾಶವಾಗಿ ಬಂದ ಸರಸ್ವತೀಪುರ ಬಸ್ಸು ಹಿಡಿದು, ಹಿರಿಯ ನಾಗರಿಕನ ಬಲದಲ್ಲಿ ಎಂಟೇ ರೂಪಾಯಿ ಟಿಕೆಟ್ಟಿನಲ್ಲಿ ಮನೆ ಸೇರಿದೆ. (೬-೧೨-೨೦೧೭)

ಮಾನಸ ಗಂಗೆ ಮತ್ತು ಗಂಗಾ ಶುದ್ಧಿ!

ಮಾನಸ ಗಂಗೋತ್ರಿಯೊಳಗೇ ಎಚ್.ಎಚ್. ಅಣ್ಣೇಗೌಡರು ಶೇಕ್ಸ್‍ಪಿಯರ್ ಪಾಠ ಮಾಡುವ ನೆಪದಲ್ಲಿ, ಏವನ್ ನದೀ ಕಡವಿನ ಬೀದಿಯಲ್ಲಿ (ಸ್ಟ್ರಾಟ್ಫರ್ಡ್ ಅಪಾನ್ ಏವನ್) ವಿಹಾರ ನಡೆಸಿದ್ದರು (೧೯೭೩). ನಮ್ಮ ಇಂಗ್ಲಿಶ್ ವಿಭಾಗವಿದ್ದ ಎರಡು ಮಾಳಿಗೆಯ ಕೆಳಗಿನ ದಾರಿಯಲ್ಲೊಂದು ಆಟೋರಿಕ್ಷಾ ಮುಷ್ಕರ ಹೂಡಿತ್ತು. ಇಲ್ಲಿ ಗಳಿಗೆಗೊಮ್ಮೆ “ಐ ಸೇ ‘ಏನಾದರೂ ಶೇಕ್ಸ್‍ಪಿಯರ್’ ಉದ್ಧರಿಸು”, ತಿಣುಕಿದವರಿಗೆ “ಸ್ಟುಪಿಡ್” ಆಶೀರ್ವಚನ! ಅಲ್ಲಿ ಚಾಲಕ ಹ್ಯಾಂಡಲ್ ಹೊಡೀತಿದ್ದ “ಗೊಟರ್… ಗೊಟರ್ರ್…. ಗೋಟರ್ರ್‍ರ್ರ್‍ರ್ರ್… ಠಸ್”. ಮೊದಲೇ ಪಾಠದಲ್ಲಿ ಮನಸ್ಸು ನಿಲ್ಲದಿದ್ದ ನಾನು, ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಹಾಸನದ ರಾಜಾರಾಯರನ್ನು ನೆನೆಯುತ್ತ, ನನ್ನದೇ ಲಘುಧಾಟಿಯ ಟಿಪ್ಪಣಿಗೆ ಶೀರ್ಷಿಕೆ ಬರೆದದ್ದು – The Autorickshaw and Shakespeare (ರಾಜಾರಾವ್ ಒಂದು ಕೃತಿಯ ಹೆಸರು The Cat and Shakespeare!). ಇದು ನೆನಪಿಗೆ ಬಂದದ್ದು – ನಿನ್ನೆ (೭-೧೨-೨೦೧೭), ಪತ್ರಿಕಾ ಅಗ್ರವಾರ್ತೆ “ಮಾನಸ ಗಂಗೋತ್ರಿಯೊಳಗೆ ವಾಹನ ಸಂಚಾರ ನಿಷಿದ್ಧ” ನೋಡಿದಾಗ! ಮಾನಸಗಂಗೋತ್ರಿ ಎಂಬ ವಿಸ್ತಾರ ಬಂಜರು ಬಿಟ್ಟ ನೆಲಕ್ಕೆ ಹೀಗೆ ನಿರ್ಬಂಧ ಹೇರುವ ವ್ಯವಸ್ಥೆ ನೋಡಲು ಸಂಜೆ ಅತ್ತ ಕಾಲು ಬೀಸಿದೆ.

ಸರಸ್ವತೀಪುರದ ಅತ್ಯುನ್ನತಿಯ ಜೋಡಿರಸ್ತೆಗೆ ಬಂದಿದ್ದೆ. ಒಮ್ಮೆಲೆ ಸಂಚಾರೀ ದೀಪಗಳನ್ನು ಧಿಕ್ಕರಿಸಿ ಪೋಲೀಸಪ್ಪ ರಸ್ತೆಯ ನಡುವಿಗೇ ಹಾರಿಬಿದ್ದು, ಎಲ್ಲ ದಿಕ್ಕಿನ ವಾಹನ ಸಂಚಾರ ಸ್ಥಗಿತಗೊಳಿಸಿದ. ಮಿನಿಟು ಕಳೆದು, ಹುಯ್ಯಲಿಕ್ಕುತ್ತ ಪೋಲೀಸ್ ಜೀಪು ಹಿಂಬಾಲಿಸಿದಂತೆ ಹತ್ತೆಂಟು ಪರಿವಾರ ವಾಹನಗಳೊಡನೆ ಕರ್ನಾಟಕ ರಾಜ್ಯಶ್ರೀಶ್ರೀಗಳು ಅದೆತ್ತಲೋ ಬಿಜಯಂಗೈದರು. ದೂಳು, ಹೊಗೆ ಕಳೆಯುತ್ತಿದ್ದಂತೆ ಪೋಲಿಸಪ್ಪನ ನಿಟ್ಟುಸಿರಿನಂತೆ ಬಿಗಿಲು; ಗರಬಡಿದ ವಠಾರದಲ್ಲಿ ಮತ್ತೆ ವಾಹನ (ಜೀವ) ಸಂಚಾರ!

ಸ್ಟ್ರಾಟ್‍ಫರ್ಡ್ ಅಪಾನ್ ಕುಕ್ಕರಳ್ಳಿಗಾಗಿ, ಹಳೇ ಲಲಿತಕಲೆಗಳ ಕಾಲೇಜು ಕಳೆದು, ಬೆರಗುವಟ್ಟು ನಿಂತಂಥಾ ಸ್ಥಳ – ಮೈವಿವಿ ನಿಲಯದ ಸ್ನಾತಕೋತ್ತರ ಕೇಂದ್ರ ಮಾನಸಗಂಗೋತ್ರಿಯ ಮಹಾದ್ವಾರ. ಶ್ವೇತ ಭವ್ಯ ಮಹಾ ಮುಕುಟಗಳನ್ನು ಹೊತ್ತ ದ್ವಾರವೆರಡರ (ಅದರಲ್ಲೇ ದೊಡ್ಡ ನಾಯಿಗಳಿಗೆರಡು ಸಣ್ಣ ನಾಯಿಗಳಿಗೆರಡು ಪ್ರತ್ಯೇಕತೆ ಇವೆ) ಮುಂದೆ, ಸ್ವತಃ ಕನಸಿಗ ಕುವೆಂಪು, ತನ್ನದೇ ತತ್ತ್ವಸಾರಗಳ ಪೀಠದೆತ್ತರದಲ್ಲಿ ಕರಿಪುತ್ಥಳಿಯಾಗಿ ವಿರಾಜಮಾನರಾಗಿದ್ದರು. ಒಟ್ಟು ವಠಾರಕ್ಕೆ ಸ್ಟೀಲ್ ಗೂಟಗಳ ಬೇಲಿ, ಕುವೆಂಪು ಪದತಳದಲ್ಲಿ ಪುಟ್ಟ ಕಾರಂಜಿ ಕೊಳ (ಸದ್ಯ ‘ಮಲ’ ತುಂಬಿದೆ, ಕ-ಮಲ ಬೇಗ ಅರಳೀತು?), ಭಾರೀ ಸಾಲಂಕೃತ ಕಪ್ಪನ್ನ ಪಡಿಗಳಿಗೆ ಚಿನ್ನದ್ದೇ ಬೂಟ, ಚೂಪು, ವಾಘಾ ಗಡಿಠಾಣೆಯ ಸರದಾರರಿಗೆ ಕಡಿಮೆ ಎನಿಸದ ಪೋಷಾಕಿನ ಕಾವಲುಗಾರರು ಎಲ್ಲಾ ಕಂಡು ನನಗೆ ನಿಜಕ್ಕೂ ದಿಗ್ಭ್ರಮೆ. ಎಲ್ಲಿ ಹಿಡಿದು ನಿಲ್ಲಿಸುತ್ತಾರೋ ಎಂದು ಕಳ್ಳನಂತೆ ಒಳ ನಡೆದೆ.

ವಾಣಿಜ್ಯ, ಗಣಿತ ವಿಭಾಗಗಳ ಕಟ್ಟಡದಾಚಿನದು – ಮಾನವಿಕ ಶಾಸ್ತ್ರಗಳ ಕಟ್ಟಡ, ನಲ್ವತ್ನಾಲ್ಕು ವರ್ಷಗಳ ಹಿಂದೆ ‘ನನ್ನದು’; ಸುಣ್ಣಬಣ್ಣದಲ್ಲಿ ಚೆನ್ನಾಗಿತ್ತು. ಮುಂದೆ ಗ್ರಂಥಾಲಯದೆದುರು, ಸಂವಿಧಾನ ಕರ್ತೃವನ್ನೇ ಸ್ವರ್ಣಲೇಪಿಸಿ ನಿಲ್ಲಿಸಿಬಿಟ್ಟಿದ್ದರು! (ಕುವೆಂಪು ಯಾಕೆ ಕಪ್ಪು? ಅಂಬೇಡ್ಕರ್ ಯಾಕೆ ಚಿನ್ನ? ಎಂದರೆ ಜಿಜ್ಞಾಸೆಯೋ ವಿವಾದವೋ?) ನೆಗ್ಗಿನ ಮುಳ್ಳಿನ ಮೈದಾನಗಳೆಲ್ಲ ಹಸಿರುಗಂಬಳಿ ಹೊದ್ದು, ಬಡಕಲು ಸಸಿಗಳೆಲ್ಲ ಬಲವಾದ ಮರಗಳಾಗಿ, ಕಾಡಪೊದರುಗಳೆಲ್ಲ ಅಲಂಕಾರಿಕ ಉದ್ಯಾನಗಳಾಗಿದ್ದವು. ಮೈದಾನದಲ್ಲಿ ರಾತ್ರಿ ಬೆಳಗು ಮಾಡುವ ಭಾರೀ ಸ್ತಂಭಗಳನ್ನೇರಿದ ದೀಪಸಂಯುಕ್ತ, ಅಸಂಖ್ಯ ಅಲಂಕಾರಿಕ ಬೀದಿ ದೀಪ, ಸಮಯದ ಮಹತ್ವ ತಿಳಿಸುವ ಗಡಿಯಾರಗೋಪುರ, ಅಟ್ಟಳಿಗೆ ಎತ್ತರದಲ್ಲಿ ಕುಳಿತ ಮಹಾ ನೀರ ಟಾಂಕಿಗಳು, ನುಣ್ಣನೆ ವಿಸ್ತಾರ ದಾರಿಗಳು, ವಾಹನ ತಂಗುದಾಣಗಳು, ಪುಟ್ಟಪಥಗಳು……..

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯನ್ನೂ ಹೊಕ್ಕು ಹೊರಟೆ, ಮುಖ ತೊಳೆದ ಪ್ರಾಚೀನ ಅರಮನೆಯೊಳಗೂ ಒಂದು ಗಸ್ತು ಹೊಡೆದೆ. ವಿಶ್ವದ ಅನೂಹ್ಯ ವಿಷಯಗಳೆಲ್ಲವಕ್ಕೂ ಇಲ್ಲಿದೆ ಪೀಠವೆನ್ನುವಂತೆ ಏನೇನೋ ಕಟ್ಟಡಗಳನ್ನು ಹಾಯುತ್ತಾ “ಓ ಓ ಓ ಸವಲತ್ತುಗಳ ವೈಭವಕ್ಕೆ ಮಿತಿಯುಂಟೇ” ಎಂದು ಮನಸ್ಸಲ್ಲೇ ಉದ್ಗರಿಸುತ್ತಾ ನಡೆದೆ. ದೊಡ್ಡ ಸುತ್ತು ಮುಗಿಸಿ, ‘ಕರ್ನಾಟಕ ಮುಕ್ಕುತ್ತ ವಿವಿನಿಲಯ’ದ ಇನ್ನೊಂದೇ ವೈಭವೋಪೇತ ಮಹಾದ್ವಾರದ ಬಳಿ ಮಡಿಕೇರಿ ದಾರಿ ಸೇರಿದಾಗ ಉಪಚಾರಕ್ಕೆ ಹೇಳುವಂತೆ – ‘ಮಾತೃ ಸಂಸ್ಥೆ’ಯ ಕುರಿತು ಉಳಿದ ಭಾವಸಾರ ಇಷ್ಟೇ:

ಮೈವಿವಿಯ ಕುಲಪತಿ ಪೀಠವೇ ಬರಿದಾಗಿ ತಿಂಗಳು ಹನ್ನೊಂದಾಗಿದೆ. ಇಲಾಖೆಗಳ ನಿಜ ಚರಿತ್ರೆ ಒಂದೂ ಸುಭಗವಿಲ್ಲ. ನನಗೆ ಕನಿಷ್ಠ ಮೂವತ್ತಾರು ವರ್ಷಗಳ ನಿಕಟ ಒಡನಾಟವಿದ್ದ ಪ್ರಸಾರಾಂಗ ಒಂದರ ಕಡತ ಬಿಚ್ಚಿದರೂ ಸಾವಿರಾರು ಕಳ್ಳ ಬಸಿರುಗಳು. ಪ್ರತ್ಯಕ್ಷ ತಂದೆಯನ್ನು, ಪರೋಕ್ಷವಾಗಿ ನಮ್ಮನ್ನೆಲ್ಲ ಮೈಸೂರಿಗಂಟಿಸಿದ ಸಂಸ್ಥೆ – ಇಂದು ವಠಾರ, ಕಟ್ಟಡ, ಯೋಜನೆಗಳ ವೈವಿಧ್ಯತೆಯಲ್ಲಿ ಭಾರೀ ಕಳೆಗಟ್ಟಿದೆ ನಿಜ. ಆದರೆ ಸಮೀಪ ದರ್ಶನದಲ್ಲಿ ಈ ಸವಲತ್ತುಗಳ ಸೋಂಕೂ ಇಲ್ಲದ ಕಾಲದಲ್ಲಿ ಬೆಳಗಿದ ಮಹಾಮಹಿಮರುಗಳ ದೂಳು ಹಿಡಿದ ದುರ್ಬಲ ನಕಲಿನಂತೇ ಕಾಣಿಸಿತು. (ಅಧ್ಯಯನ ಸಂಸ್ಥೆಯ ಗ್ರಂಥಾಲಯದ ಒಳ ಉಪ್ಪರಿಗೆಯ ಕಿಷ್ಕಿಂಧೆಯಂಥಾ ಕೋಣೆಗಳು ನನ್ನ ತಂದೆ ಕೆಲಸ ಮಾಡಿದ ವಿಶ್ವಕೋಶದ ಜೀವ ಕೇಂದ್ರವಾಗಿತ್ತು, ಇಂದು ಅಲ್ಲಿ ಯಾವ ಬೋರ್ಡೂ ಇಲ್ಲ, ಕೆಲಸದ ವೇಳೆಯಾದರೂ ಬಹುತೇಕ ನಿಸ್ಪಂದ) ವಿದ್ಯಾಸಂಸ್ಥೆಗಳಿಗೆ ಅಮಿತ ಸವಲತ್ತುಗಳು ಸರಿ, ಶಬ್ದಮಾಲಿನ್ಯದ ತಡೆಗೆ ಶಾಸನವೂ ಸರಿ. ಇಂದು ಯಾವುದೇ ‘ಮೌಲ್ಯಯುತ’ ವಿದ್ಯಾಸಂಸ್ಥೆಯ ವಠಾರವೆಂದರೆ ನಿರಂತರ ಭೌತಿಕ ರಚನೆ ಮತ್ತು ಸಲಕರಣೆಗಳ ಒಟ್ಟಣೆ. ಆದರೆ ಯಾವ ಶಾಸನವೂ ಹಿಡಿದಿಡಲಾಗದ ಬೌದ್ಧಿಕ ರಚನೆ, ಸಾಧನೆಗಳ ಸಂಪತ್ತನ್ನು (ನೈಜ ಶ್ರದ್ಧೆ, ಶ್ರಮ, ಮಿತವ್ಯಯ, ಸರಳತೆ ಇದರ ಆವಶ್ಯಕತೆ) ವಿದ್ಯಾಸಂಸ್ಥೆಗಳು ರೂಢಿಸಿಕೊಳ್ಳುವುದು ಎಂದು?

ಮಡಿಕೇರಿ ದಾರಿಯಲ್ಲೇ ನಗರದತ್ತ ಹೆಜ್ಜೆ ಹಾಕಿದೆ. ತಿಂಗಳ ಹಿಂದೆ ಅನಿವಾರ್ಯತೆಯಲ್ಲಿ ಭೀಕರವಾಗಿ ಕಡಿದು ಹಾಕಿದ್ದ ಕುಕ್ಕರಳ್ಳಿ ಕೆರೆದಂಡೆಯ ಸೇತುವೆ ನಿಧಾನವೇ ಪ್ರಧಾನವಾಗಿ ಪ್ರಗತಿಯಲ್ಲಿತ್ತು. ಕಾನೂನು, ಹೇಳಿಕೆಗಳಿರಲಿ ಪರಿಣಾಮವೂ (ಹೆಜ್ಜಾರ್ಲೆಗಳ ಸಾವು) ಸ್ಪಷ್ಟವಿದ್ದರೂ ಅಸಹ್ಯ ಕೊಳಚೆ ಹರಿದು ಕೆರೆಗೆ ಸೇರುತ್ತಲೇ ಇತ್ತು. ವಿವಿಧ ಹಕ್ಕಿ ಬಳಗ ಮುಗ್ಧವಾಗಿ ಹೊಟ್ಟೆಪಾಡು ನೋಡುತ್ತಲೇ ಇತ್ತು. ಪ್ರಾಚ್ಯ ಮತ್ತು ಪರಿಸರ ಪ್ರೇಮಿಗಳ ವಿರೋಧದ ನಡುವೆ ಸಂಸದ ಪ್ರತಾಪಸಿಂಹ ನೇರಗೊಳಿಸುತ್ತೇನೆಂದು ಶಿಲಾನ್ಯಾಸ ಮಾಡಿದ್ದ ದಾರಿಯ ತಿರುವು ಯಾವ ಬದಲಾವಣೆಯನ್ನೂ ಕಾಣಿಸಲಿಲ್ಲ.

ಸರಸ್ವತೀಪುರದಲ್ಲಿ ನನ್ನ ಕಣ್ಣು ಕುಕ್ಕಿದ್ದ ಕರ್ನಾಟಕ ಮುಖ್ಯಮಂತ್ರಿ ಬಳಗ ರಂಗಮಂದಿರದಲ್ಲಿ ಯಾವುದೋ ಪುಸ್ತಕ ಬಿಡುಗಡೆಯ ಕುಂಟು ನೆಪದಲ್ಲಿ ಚುನಾವಣೆ-ಘೋಷಣೆಪೂರ್ವ ಭಾರೀ ಪ್ರಚಾರ ಸಭೆ ನಡೆಸಿದ್ದರು. ಅಲ್ಲಿ ನೆರೆದ ವಾಹನಕ್ಕೊಂದರಂತೆ ಮತ ಪಕ್ಷಕ್ಕೆ ಬಿದ್ದರೂ ಗೆಲುವು ಖಂಡಿತ!

ರಂಗಮಂದಿರದ ಒಳದಾರಿಯಲ್ಲೇ ನಡೆದು, ರಂಗಾಯಣದ ‘ಶಿಕಾರಿ’ ಮತ್ತೊಂದೆರಡು ನಾಟಕಗಳ ಪ್ರಚಾರ ಭಿತ್ತಿಯನ್ನಷ್ಟೇ ನೋಡಿ ತೃಪ್ತನಾದೆ. ಅಲ್ಲೇ ಅನಿರೀಕ್ಷಿತವಾಗಿ “ನೀವು ಅತ್ರಿಯವರಲ್ಲವೇ” ಭೇಟಿ. ಅವರು ಹಿಂದೆ ಜೋಡುಮಾರ್ಗದ ಸರಕಾರೀ ಶಾಲೆಯ ಉಪಾಧ್ಯಾಯರಂತೆ. ಸದ್ಯ ಮಂಡ್ಯದಲ್ಲಿ ವೃತ್ತಿ ಮುಂದುವರಿಸಿದ್ದಾರಂತೆ. ಸ್ವಲ್ಪ ಮುಂದೆ ಇನ್ನೊಬ್ಬರೂ ಹೀಗೇ ಸಿಕ್ಕರು. ಸರಳವಾಗಿ ಹೇಳುವುದಿದ್ದರೆ ಇಂಥವರೆಲ್ಲರು ನನ್ನಂಗಡಿಯ ‘ಪುಸ್ತಕ ಗಿರಾಕಿ’ಗಳು. ಆದರೆ ಅವರ ಲೆಕ್ಕದಲ್ಲಿ ವರ್ಷಗಳು ಹಲವು ಸಂದರೂ ಸ್ವತಃ ನಾನೇ ಅಂಗಡಿ ಮುಚ್ಚಿ ವರ್ಷ ಏಳಾದರೂ ಅನಿರೀಕ್ಷಿತ ಸ್ಥಳ, ಸಮಯದಲ್ಲಿ ನನ್ನನ್ನು ಗುರುತು ಹಿಡಿದು ಮಾತಾಡಿಸಿದ ವಿಶ್ವಾಸಕ್ಕೆ ‘ಆತ್ಮೀಯರು’ ಎನ್ನುವುದೇ ಹೆಚ್ಚು ಸರಿ. ಯಾವುದೇ ಫಲಾಪೇಕ್ಷೆ ಅಥವಾ ನಿರೀಕ್ಷೆ ಇಲ್ಲದೆ ನನ್ನ ಮನದಂಗಳದ ಉಪೇಕ್ಷಿತ ಮೂಲೆಯಿಂದರಳಿದ ಈ ಎರಡೂ ಆತ್ಮೀಯ ಮುಖಗಳ ಹೆಸರು, ಗುರುತು ನನಗೆ ನೆನಪಿಲ್ಲ, ಸಂಕೋಚದಲ್ಲಿ ಕೇಳುವುದೂ ಆಗಲಿಲ್ಲ!

ದಿಗಂತ ಕಳೆದರೂ ದಿನಾಂತ್ಯಕ್ಕೆ ಶೇಷಪ್ರಭೆಯುಳಿಸಿದವನ ಕೃಪೆಯಲ್ಲಿ ಕ್ಯಾಮರಾ ಒಮ್ಮೆ ಚಿಟಿಕಿಸಲಷ್ಟೇ ನೇರ ಕುಕ್ಕರಳ್ಳಿ ಕೆರೆ ದಂಡೆಗೆ ನುಗ್ಗಿದ್ದೆ. ಪ್ರವೇಶದಿಂದ ಬಲಕ್ಕೆ ತುಸು ದೂರಕ್ಕಿದ್ದ ಮತ್ಸ್ಯಾಕಾರದ ಮತ್ಸ್ಯ ನಿಗಮದ ಮಳಿಗೆಯಿಂದ ಘಮ ಬರುತ್ತಿತ್ತು. ಅದು ನನ್ನ ತುತ್ತಲ್ಲವಾದರೂ ಮೀನು ಈ ಕೆರೆಯದ್ದಾಗದಿರಲಿ ಎಂದು ಹಾರೈಸಿದೆ! ನಾನಲ್ಲಿದ್ದ ಕೆಲವೇ ಕ್ಷಣಗಳಲ್ಲಿ ಗ್ರಹಿಸಿದ್ದಿಷ್ಟು – ಕೊಳಚೆಯ ದುರ್ನಾತದಲ್ಲೂ ಕೇವಲ ತೋರಿಕೆಯ ವಿಸ್ತಾರ ನೀರ ಸಾನ್ನಿಧ್ಯಕ್ಕೆ, ದಂಡೆಯನ್ನಾವರಿಸಿದ ಹಸಿರಿನ ಭ್ರಮೆಗೆ ಅದೆಷ್ಟು ನಡಿಗೆ, ಓಟ, ಧ್ಯಾನ, ಹರಟೆ, ಚರವಾಣಿ, ಚರ್ವಣ, ವ್ಯಾಯಾಮ, ಸಾಂಗತ್ಯಸುಖ, ಮಕ್ಕಳಾಟ…… ಕೊಳ ಶುದ್ಧವೂ ಇದ್ದಿದ್ದರೆ?! ಅಗ್ನಿಶಾಮಕ ದಳದೆದುರಿನ ದಾರಿಯಲ್ಲಾಗಿ ಮನೆ ಸೇರಿಕೊಂಡೆ.

ಸಂಸ್ಕೃತಿ, ಜೇಡ, ಕೃಷಿಕ

“ಮೈಸೂರಿಗೆ ಇನ್ನೊಂದು ಹೊಸ ಸಾರ್ವಜನಿಕ ಈಜುಕೊಳವೂ ಆಗಿತ್ತು. ಆದರೆ ವೈಜ್ಞಾನಿಕ ನಿರ್ವಹಣೆ ಸಾಲದೇ….” ಎಂದು ಮೊನ್ನೆ ತಮ್ಮ ಹೇಳಿದ್ದ. ಅದನ್ನು ನೋಡುವ ಉತ್ಸಾಹದಲ್ಲಿ ಇಂದು (೧೧-೧೨-೨೦೧೭) ಬೆಳಿಗ್ಗೆ ಸೈಕಲ್ಲೇರಿದ್ದೆ. ಬಲ್ಲಾಳ ವೃತ್ತದಿಂದ ಹೆಗ್ಗಡದೇವನ ಕೋಟೆಯತ್ತಣ ರಸ್ತೆಯನುಸರಿಸಿದೆ. ರೈಲ್ವೇ ಕೆಳಸೇತಿಗೂ ಸ್ವಲ್ಪ ಮೊದಲು ಎಡದ ಕವಲು ಹಿಡಿದೆ. ಹಾಗೇ “ನೇರ ಹೋದರೆ ಕಾಣುತ್ತೆ. ಇಲ್ಲಾಂದ್ರೆ ಯಾರನ್ನು ಕೇಳಿದರೂ….”

ಅನಂತನ ಮಾತಿಗೆ ನಾನು ಪೂರ್ಣ ಕಿವಿ ಕೊಟ್ಟಿರಲಿಲ್ಲ. ಮುಂದೆಲ್ಲೋ ಸಮಸೇತಿನಲ್ಲಿ ರೈಲ್ವೇ ಹಳಿ ಕಳೆದು, ಕೆಳಸೇತಿನಲ್ಲಿ ಉಂಗುರ ರಸ್ತೆಯನ್ನೂ ದಾಟಿದೆ. ಮತ್ತೆ ವಿವರಗಳನ್ನು ಗಮನಿಸದೆ, ಅವರಿವರನ್ನು ಕೇಳದೆ ಪೆಡಲ್ ಸುತ್ತುತ್ತಲೇ ಇದ್ದೆ. ಸ್ವಲ್ಪದರಲ್ಲಿ ತಿಳಿಯಿತು, ಹಳೇ ನೆನಪು ನನ್ನನ್ನು ದೂಳಿದೂಸರಿತ, ಕಚ್ಚಾ, ಆದರೆ ಒಳದಾರಿಯಲ್ಲಿ ಕಳಲವಾಡಿಯತ್ತ, ಅಂದರೆ ಮೊನ್ನೆ ಬಿಟ್ಟುಹೋದ ಚಂದ್ರನ ಇಂದ್ರಪ್ರಸ್ಥದತ್ತ ಒಯ್ದಿತ್ತು. ನಿರ್ಯೋಚನೆಯಿಂದ ಮುಂದುವರಿದೆ.

ಅದೊಂದು ದಿಬ್ಬದ ಎತ್ತರದಲ್ಲಿ ಎಡಕ್ಕೊಂದು ಬೋರ್ಡು – ಶ್ರೀ ಕೋಡಿ ಹುಚ್ಚೂರಾಯಪ್ಪನ ದೇವಸ್ಥಾನ. ನಿಜದಲ್ಲಿ ಅಲ್ಲಿದ್ದದ್ದು ಆಧುನಿಕ ಆದರೆ ಅಪೂರ್ಣ ಎತ್ತರಿಸಿದ ಮಾಡು ಮಾತ್ರ. ದಾರಿಯ ಬಲಬದಿಯಲ್ಲಿ ಅಬ್ಬರದ ಶಿಲ್ಪ, ಬಣ್ಣಗಳೊಡನೆ ೨೦೧೬ರಲ್ಲಿ ನವೀಕೃತಗೊಂಡ ಶ್ರೀ ನಾರಾಯಣಸ್ವಾಮಿ ದೇವಸ್ಥಾನವಿತ್ತು. ಅಲ್ಲಿನ ಹಳ್ಳಿಗನೊಬ್ಬನಲ್ಲಿ “ಕೋಡಿ ಹುಚ್ಚೂರಾಯಪ್ಪ ಯಾರು? ಎಲ್ಲಿ?” ಕೇಳಿದೆ. ಆತ ನಾರಾಯಣಸ್ವಾಮಿಯತ್ತಲೇ ಕೈಮಾಡಿದ. ಮತ್ತೆ ಆತ ಕೊಟ್ಟ ಸ್ಥಳಪುರಾಣ ನನಗಂತೂ ವಸಾಹತುಶಾಹಿ ಕಥನದಂತೆ ಕೇಳಿತು: “ಪುರಾತನ ಕಾಲದಲ್ಲಿ ಅದ್ಯಾರೋ ದೇವರನ್ನು ಎತ್ತಿಕೊಂಡು ಬರುತ್ತಿದ್ದ. ಉಸ್ಸಪ್ಪಾಂತ ಒಂದ್ಕಡೆ ಇಟ್ಟ. ಮುಂದುವರಿಯಲು ಹೊರಟಾಗ ದೇವಬಿಂಬ ನೆಲ ಕಚ್ಚಿಕೊಂಡಿತ್ತು. ಈತ ಅದನ್ನು ಕಾಲಮಟ್ಟದಲ್ಲಿ ಕತ್ತರಿಸಿ, ಮೇಲ್ಬಾಗವನ್ನಷ್ಟೇ ಹೊತ್ತು ಇಲ್ಲಿಗೆ ಬಂದ. ಇಲ್ಲಿ ಕೆರೆಕೋಡಿ ಪಕ್ಕದಲ್ಲೇ ಇನ್ನೊಮ್ಮೆ ವಿಶ್ರಾಂತಿಗೆ ನಿಂತ. ಮತ್ತೆ ಹೊರಡುವಾಗ ಇಲ್ಲೂ ಬಿಂಬ ನೆಲ ಬಿಡಲಿಲ್ಲ. ಆತ ಮತ್ತೆ ಕತ್ತಿ ಪ್ರಯೋಗಿಸಿ ಶಿರವನ್ನಷ್ಟೇ ಒಯ್ದು ಕೊಡಗಿನಲ್ಲಿ ಸ್ಥಾಪಿಸಿದ. ಬಿಂಬದ ಮೂರೂ ತುಂಡುಗಳು ಇಂದು ಪುಣ್ಯಕ್ಷೇತ್ರಗಳೇ. ಅಂತಿಮ ಭಾಗ ಕೊಡಗಿನ ತಿಮ್ಮಪ್ಪ ಎಂದೇ ಪ್ರಸಿದ್ಧ – ನಾ ನೋಡಿಲ್ಲ. ಹಾಗೇ ಪಾದಕ್ಷೇತ್ರದ ಹೆಸರು, ಪರಿಚಯವೂ ನನಗಿಲ್ಲ. ಇಲ್ಲಿ ಕೋಡಿ ಪಕ್ಕದವನು, ಹುಚ್ಚೂರಾಯಪ್ಪಾಂತ ಯಾಕಾದ್ನೋ ನನಗೆ ತಿಳಿದಿಲ್ಲ. ಆದರೆ ಪೂಜಾರಪ್ಪ ಹೇಳ್ತಾರೆ ಎಲ್ಲ ಶ್ರೀನಾರಾಯಣ ಸ್ವಾಮೀನೇ. ಮೊದ್ಲು ನಮಗ್ಗೊತ್ತಿಲ್ದೇ ದೇವರಿಗೆ ಇಲ್ಲೇ ಕುರಿ ಕೋಳಿ ಕಡೀದು ಅಶುದ್ಧ ಮಾಡುತ್ತಿದ್ದೆವು, ಈಗ ಇಲ್ಲ. (ಕಡಿದವರಿಗೆ ರೂ ೫೦೦೦ ದಂಡ ಹಾಕಲಾಗುತ್ತದೆ ಎಂದು ಗೋಡೆ ಬರಹ ಸಾರುತ್ತದೆ.) ಈಗಲೂ ದೇವರಿಗೆ ಮರಿಬಿಟ್ಟವರು (ಹರಕೆಯ ಕುರಿ), ಇಲ್ಲಿ ತೀರ್ಥ ತೆಗೆದುಕೊಂಡು, ಅಲ್ಲಿ (ಎದುರು ರಚನೆಯಾಗುತ್ತಿರುವ ಚಪ್ಪರದತ್ತ ಕೈ ಮಾಡಿ) ಕಡಿದು, ಊಟ ಮಾಡುತ್ತಾರೆ.” ಆತನ ಆಡು ಭಾಷೆಯ ಚಂದದಲ್ಲಿ ಕಥನವನ್ನು ನನಗೆ ಹಿಡಿದಿಡಲಾಗದ್ದಕ್ಕೆ ಕ್ಷಮೆಯಿರಲಿ.

ಮುಂದೆ ದಾರಿ ವಿಸ್ತಾರ ಜವುಗುಪ್ರದೇಶದ ನಡುವೆ ತುಸು ದೂರ ಹಾಯುತ್ತದೆ. ಇದು ನೋಟಕ್ಕೆ ನೀರು ಹಸಿರ ಸಮೃದ್ಧಿ, ವಾಸ್ತವದಲ್ಲಿ ಮೈಸೂರ ಕೊಳಚೆಯ ವಿಸ್ತರಣೆ. ಸ್ವಲ್ಪ ಮುಂದೆ ಅಲ್ಲಿಂದ ಬಸಿದ ನೀರೇ ಎಣ್ಣೆಹೊಳೆಯಾಗಿ ಹರಿಯುತ್ತದೆ. ಅಲ್ಲಿ ದುರ್ನಾತ, ಕೊಳೆಗೆಸರಲ್ಲದೆ ಬುರುಗಿನ ಗೆಡ್ಡೆಗಳು ನಿರಂತರ ತೇಲುತ್ತ ಹೋಗುತ್ತವೆ. ಪರಿಸ್ಥಿತಿಯನ್ನು ಅಂದಾಜಿಸಲಾಗದವ ಇಲ್ಲಿಗೆ ಮೂಗು ಕಟ್ಟಿಕೊಂಡು ಬಂದರೆ, ಅಥವಾ ಬರಿಯ ವಿಡಿಯೋ ನೋಡಿದರೆ ಹಿಮನದಿಯೋ ಎಂದು ಭ್ರಮಿಸಿದರೆ ಆಶ್ಚರ್ಯವಿಲ್ಲ! ಕಸತೊಟ್ಟಿಯ ಬುಡದಲ್ಲಿ ಅರಿವಿಲ್ಲದೇ ಪ್ಲ್ಯಾಸ್ಟಿಕ್ ಮೂಟೆಗಳನ್ನು ತಿಂದು ಹೊಟ್ಟೆ ಗಂಟಿಕ್ಕಿಕೊಳ್ಳುವ ನಾಯಿ ಜಾನುವಾರುಗಳಂತೇ ಇಲ್ಲಿ ಹಕ್ಕಿಗಳು ತುತ್ತು ಹೆಕ್ಕುವಂತಾಗಿರುವುದು ನಿಜಕ್ಕೂ ಚಿಂತಾಜನಕ.

ಕಳಲವಾಡಿ ಕವಲಿನಲ್ಲಿ ಎಡ ಹೊರಳಿ ಸುಖ್ಯಾತ ಇಂದ್ರಪ್ರಸ್ಥ ಸಸ್ಯವಾಟೀ – ನನ್ನ ಹಿರಿಯ ಸೋದರಮಾವನ ಮಗ ಎ.ಪಿ. ಚಂದ್ರಶೇಖರ ಮತ್ತವನ ಕುಟುಂಬದ ಕೃಷಿಕ್ಷೇತ್ರ ಸೇರಿದೆ. ಚಂದ್ರನ ಮಗ – ಅಭಿ (ಅಭಿಜಿತ್ ಎ.ಪಿ.ಸಿ., ಮೈಸೂರಿನಲ್ಲಿ ಹೋಮಿಯೋ ವೈದ್ಯ) ಇಲ್ಲಿನ ವಾಸ ಮತ್ತು ಆಗುಹೋಗುಗಳ ಭಾಗೀದಾರಿಕೆ ಎಂದೂ ಕಳಚಿಕೊಂಡವನಲ್ಲ. ಸಾಲದ್ದಕ್ಕೆ ಅಪ್ಪನ ಸಸ್ಯಪ್ರೀತಿಗೆ, ತನ್ನ ಜೀವವೈವಿಧ್ಯ ಪ್ರೀತಿಯನ್ನು ಫೋಟೋಗ್ರಫಿ ಮತ್ತು ಲೇಖನಗಳ ಮೂಲಕ ವೈಜ್ಞಾನಿಕವಾಗಿ ದಾಖಲಿಸುತ್ತ ಸರಿಯಾಗಿಯೇ ಬೆಸೆದವ. ನಾನು ಹೋಗುತ್ತಿದ್ದಂತೆ ಅಭಿ ತನ್ನ ಮಗನನ್ನು ಬಾಲವಾಡಿಗೆ ಬಿಟ್ಟು, ತಾನು ಕ್ಲಿನಿಕ್ ತೆರೆಯಲು ಮೈಸೂರಿನತ್ತ ಧಾವಿಸಿದ.

ಇಂದ್ರಪ್ರಸ್ಥ ಮನೆಯ ಅಂಗಳದಲ್ಲಿ ನಾನು ಸ್ವಲ್ಪ ಕಾಲಾಡಿಸಿದೆ. ಅಲ್ಲಿ ತುಸು ಹೆಚ್ಚೇ ಬಿಸಿಲಾಡುತ್ತಿದ್ದ ಜಾಗದಲ್ಲಿ, ಮೂರು ನಾಲ್ಕು ಕುಂಡಗಳಲ್ಲಿ ಕೆಲವು ಮುಳ್ಳಕಳ್ಳಿಗಿಡಗಳಿದ್ದುವು. ಅವುಗಳನ್ನು ಬುಡಕ್ಕಿಟ್ಟು, ಸುತ್ತಲಿನ ಇತರ ಗಿಡಮರಗಳ ಆಧಾರದಲ್ಲಿ ಭಾರೀ ಜೇಡರಬಲೆ ರಾಶಿ ನೇತುಬಿದ್ದಿತ್ತು. ಈಚೆಗೆ ಅಭಿ ಸಮಾನಾಸಕ್ತರನ್ನು ಜತೆಮಾಡಿಕೊಂಡು, ಯಶಸ್ವಿಯಾಗಿ ‘ಜೇಡ ಗುರುತಿಸಿ’ ಕಮ್ಮಟ ನಡೆಸಿದ್ದ. ಅದರ ಅರಿವಿನಲ್ಲೇ ನಾನು ಚಂದ್ರನನ್ನು ಕೆಣಕಿದೆ “ಅಭಿಯ ಜೀವವೈವಿಧ್ಯದ ಗಲಾಟೆಯಲ್ಲಿ ಈ ಕಳ್ಳಿಗೆ ಬಲೆ ಮುಕ್ತಿ ಇಲ್ವಾ ಮಾರಾಯಾ?” ನಮ್ಮೊಳಗೆ ಇಂಥ ಹುಸಿ ಕೊಸರಾಟ ಮಾಮೂಲು. ಚಂದ್ರ (ಪುಟ್ಟಪುಳ್ಳಿಯನ್ನು ಎತ್ತಿಕೊಂಡಿದ್ದಂತೆ) ನಸುನಕ್ಕು, ಕನಿಷ್ಠ ಮೂರು ವರ್ಷ ಹಳತಾದ ಆ ಅಸಂಖ್ಯ ಜೇಡಗಳ ಕಾಲನಿಯ ಪರಿಚಯವನ್ನು ಸೂಕ್ಷ್ಮವಾಗಿ ಮಾಡಿದ. ಅಭಿ ಇದುವರೆಗೆ ಅವುಗಳ ಕುರಿತು ಸಂಗ್ರಹಿಸಿದ ಚಿತ್ರ, ವಿಡಿಯೋ ಅಸಂಖ್ಯ. ಬೆಳಗು ಸಂಜೆಗಳಲ್ಲಿ ಆ ಜೇಡಸಂದೋಹ ‘ಅಂಗಡಿ’ ಬಿಡಿಸಿ ಮಡಚಿ ನಡೆಸುವ ಕಲಾಪಗಳು ಅಪಾರ. ಋತುಮಾನ ಮತ್ತು ಬಲಿವೈವಿಧ್ಯಕ್ಕನುಗುಣವಾಗಿ ಅಲ್ಲಿನ ಬಲೆಯ ವಿನ್ಯಾಸವೂ ವೈವಿಧ್ಯಮಯ. ಈ ಜೇಡಗಳು ಬಂದದ್ದೆಲ್ಲಿಂದ, ಪ್ರಸರಿಸುವುದು ಹೇಗೆ ಎಂಬುದಿನ್ನೊಂದೇ ಪತ್ತೇದಾರಿ ಕತೆ. ಇವು ಇದ್ದ ನೆಲೆಗೇನೂ (ಮುಳ್ಳಕಳ್ಳಿ ತನ್ನ ಪಾಡಿಗೆ ಬೆಳೆಯುತ್ತಲೇ ಇದೆ.) ಬಾಧೆ ತಾರವು. ಅದಕ್ಕೂ ಮಿಗಿಲಾಗಿ ತನ್ನ ಕೊಳ್ಳೆಯಲ್ಲಿ ಅನ್ಯ ಜೀವಿಗಳಿಗೆ ‘ಪಾಲೂ’ ಕೊಡುವ ಉದಾರಿಗಳು. ಕೊನೆಯಲ್ಲಿ, ಹೀಗೆಲ್ಲ ಅಭಿ ಟಿಪ್ಪಣಿಸಿದ ವರ್ತನಾ ವಿವರಗಳು, ಧಾರಾವಾಹಿಯಾಗಿಯೋ ಪುಸ್ತಕವಾಗಿಯೋ ಶೀಘ್ರ ಬೆಳಕು ಕಾಣಲಿ ಎಂದು ಹಾರೈಸುವುದಷ್ಟೇ ನನಗುಳಿಯಿತು.

ನಮ್ಮ ಲೋಕಾಭಿರಾಮಕ್ಕೆ ಶ್ರೀಲತಾ (ಅಭಿಯ ಹೆಂಡತಿ) ಕೊಟ್ಟ ಚಾ, ಬಾಳೆಹಣ್ಣು ಸೇವನೆ ಏನೂ ಅಡ್ಡಿ ಮಾಡಲಿಲ್ಲ. ಬದಲು, ನಗರದಿಂದ ಬಂದ ಕೊಯ್ಲು ಕಂತ್ರಾಟು ಮಂದಿಗೆ ಮರ ತೋರಿಸಲು ಚಂದ್ರ ಹೋಗಬೇಕಾಯ್ತು. ಮರದಿಂದ ಕಾಯಿ ಇಳಿಸಿ, ನೆಲದಿಂದ ಸಂಗ್ರಹಿಸಿ, ಮಾರುಕಟ್ಟೆಗೆ ಸಾಗಿಸಿ, ಕೊನೆಯಲ್ಲಿ ಬೆಲೆ ನಿಗದಿಸಿ ಮಾರಿಕೊಳ್ಳುವುದೆಲ್ಲ ಕಂತ್ರಾಟುದಾರನದೇ ಖರ್ಚು, ಜವಾಬ್ದಾರಿ. ಬೆಳೆಗಾರನಿಗೇನಿದ್ದರೂ ಪೂರ್ವನಿಶ್ಚಯದಂತೆ ಕಾಯಿಗಿಷ್ಟು ಎಂಬ ಹಣ. ಚಂದ್ರ ಮೊದಲಿನಿಂದಲೂ ಪೂರ್ಣ ಸಾವಯವ ಕೃಷಿಯೊಡನೆ, ಪರಿಪೂರ್ಣ ಸ್ವಾವಲಂಬಿ ರೈತತನದ (ಮಧ್ಯವರ್ತಿ ತಪ್ಪಿಸುವ) ಹಪಹಪಿಯವ; ಬಹುತೇಕ ಯಶಸ್ವಿಯೂ ಆದವ. ನಾನು ವಿಚಾರಿಸಿದೆ “ಇದೇನು ತೆಂಗು ಕಂತ್ರಾಟು”? ಮಗ್ಗುಲಿನ ವಿಷಯುಕ್ತ ಎಣ್ಣೆಹೊಳೆ, ಸದಾ ವಿಸ್ತರಿಸುವ ನಗರದ ನೆಲ ಹಸಿವುಗಳ ಮೇಲೆ ಇದು – ಇಂದು ವಿಶ್ವಸಮಸ್ಯೆಯೇ ಆಗಿರುವ ಕೃಷಿ ಸಹಾಯಕರ ಕೊರತೆ. ಕೆಲವೊಂದು ತುರ್ತು ಪರಿಸ್ಥಿತಿಗಳಲ್ಲಿ ‘ವಿಧಿ ವಾದ’ (– ಆದದ್ದಾಗ್ತದೆ) ಒಂದೇ ಇವರ ಮನೋಸ್ವಾಸ್ಥ್ಯಕ್ಕೆ ದಾರಿಯಂತೆ! ಹಿಂದಿರುಗುವ ದಾರಿಯಲ್ಲಿ ನಾನು ಒಳದಾರಿ ಬಿಟ್ಟು, ನೇರ ಹೆಗ್ಗಡದೇವನ ಕೋಟೆ ದಾರಿಯನ್ನೇ ಅನುಸರಿಸಿದೆ. ನಗರ ಸಮೀಪಿಸಿದಾಗ ಉಂಗುರ ರಸ್ತೆಯನ್ನನುಸರಿಸಿ ದಟ್ಟಗಳ್ಳಿ, ಕುವೆಂಪುನಗರಕ್ಕಾಗಿ ಮನೆ ಸೇರಿದೆ.

ಭರತ ವಾಕ್ಯ

ಸ್ವಾನುಭವದ ನೆಲೆಯಲ್ಲಿ ತುಲನಾತ್ಮಕ ಚಿತ್ರಕ್ಕೆ ಇಲ್ಲಿ ‘ಮೈಸೂರು’ ಒಂದು ಹೆಸರು. ವಾಸ್ತವದಲ್ಲಿ ಇದು ಇಂದು ನಾನು ಕಂಡ ಭಾರತದ ಊರೂರುಗಳದೇ ಚಿತ್ರ ಎನ್ನುವ ವಿಷಾದಕ್ಕೆ ಇಲ್ಲಿ ಹಂಚಿಕೊಂಡಿದ್ದೇನೆ.