(ಮರಣೋತ್ತರ ನುಡಿನಮನಗಳು ೧)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)
(ಭಾಗ ೧೬)

– ಕು.ಶಿ. ಹರಿದಾಸಭಟ್ಟ

ಮಿತ್ರ ಬಾಗಲೋಡಿ ದೇವರಾಯರು ಇಷ್ಟು ಬೇಗನೆ ನಮ್ಮ ಸ್ಮೃತಿಪಟಲಕ್ಕೆ ಸೇರುವರೆಂದು ಕಳೆದ ತಿಂಗಳು ತಾನೇ ಅವರನ್ನು ಉಡುಪಿ ಮಣಿಪಾಲಗಳಲ್ಲಿ ಕಂಡು ಮಾತನಾಡಿದ ಯಾರೂ ಊಹಿಸಲಾರರು. ಇಷ್ಟಮಿತ್ರ ಬಂಧುಬಳಗವನ್ನು ಕಂಡು ವಿದಾಯ ಹೇಳುವುದಕ್ಕಾಗಿಯೇ ಈ ಸಾರೆ ಅವರು ಬಂದ ಹಾಗಿತ್ತು. ಮರೆಯದೆ ಅವರು ನೋಡಿದವರ ಪೈಕಿ ಅವರ ಪ್ರಾಥಮಿಕ ಶಾಲಾ ಉಪಾಧ್ಯಾಯರೂ ಪ್ರೌಢಶಾಲಾ ಉಪಾಧ್ಯಾಯರೂ ಸೇರಿದ್ದು ಅವರ ಮನೋಧರ್ಮ ಹಾಗೂ ಜೀವನಧರ್ಮದ ದ್ಯೋತಕವಾದ್ದಾಗಿದೆ. ಸ್ವಾತಂತ್ರ್ಯಾನಂತರ ಸಿಕ್ಕ ಹಕ್ಕುಗಳ ಭರಾಟೆಯಲ್ಲಿ ಕೃತಜ್ಞತೆಯೆಂಬ ಕರ್ತವ್ಯ ಭಾಗವನ್ನು ಮರೆತುಬಿಡುವ ಈ ಕಾಲದಲ್ಲಿ ಶ್ರೀ ದೇವರಾಯರು ಭಾರತೀಯ ಸಂಸ್ಕೃತಿಯ ಒಂದು ಸಲ್ಲಕ್ಷಣವನ್ನು ಪ್ರತಿನಿಧಿಸಿದಂತೆ ತೋರುವುದು ಇಂಥ ಗುಣಗಳಿಂದ. ಶೈಕ್ಷಣಿಕ ವಲಯದಲ್ಲಿ ರ್ಯಾಂಕುಗಳಿಗೆ ಮಣೆ ಹಾಕಿದ್ದರಿಂದಲೋ ಗುಣಶೀಲಗಳನ್ನು ಅಳೆಯಲು ಅಂಕಗಳ ಮಾನದಂಡ ನಿರುಪಯುಕ್ತವೆಂಬುದರಿಂದಲೋ ಇತ್ತೀಚೆಗೆ ರ್ಯಾಂಕಿನಿಂದಲೇ ಒಬ್ಬ ವ್ಯಕ್ತಿ, ಒಂದು ಸಂಸ್ಥೆಯನ್ನು ಅಳೆಯುವುದು ರೂಢಿಯಾಗಿದೆ. ಇದು ಸರಿಯಲ್ಲ, ಮನುಷ್ಯನ ಚಾರಿತ್ಯದಲ್ಲಿ ಬೆಳೆಸಿಕೊಳ್ಳಬೇಕಾದ ಸದ್ಗುಣಗಳು ಹಲವುಂಟು – ಕೃತಜ್ಞತೆ ಅವುಗಳಲ್ಲಿ ಪರಮಶ್ರೇಷ್ಠವಾದದ್ದು ಎಂಬುದೇ ದೇವರಾಯರ ಸಾರ್ಥ ಬದುಕಿನ ಸಂದೇಶವೆನಿಸಬಹುದು.

ದಕ ಜಿಲ್ಲೆಯ ಶೈಕ್ಷಣಿಕ-ಸಾಂಸ್ಕೃತಿಕ ಪರಂಪರೆಯ ಶ್ರೇಷ್ಠ ಪ್ರತಿನಿಧಿಯಾಗಿ ದೇವರಾಯರನ್ನು ಮುಂದಿನ ದಿನಗಳಲ್ಲಿ ಸ್ಮರಿಸಬಹುದಾಗಿದೆ. ಅವರಷ್ಟು ಧೀಮಂತರು ಈ ಜಿಲ್ಲೆಯಲ್ಲಿ ಬಹಳ ಮಂದಿ ಜನಿಸಿಲ್ಲ; ಅವರಷ್ಟು ಸಜ್ಜನಿಕೆಯುಳ್ಳವರೂ ಹುಟ್ಟಿಲ್ಲ. ಪ್ರಾಥಮಿಕ ಶಾಲೆಯಿಂದ ತೊಡಗಿ ಮದರಾಸಿನಲ್ಲಿ ಶಿಕ್ಷಣ ಮುಗಿಸುವ ತನಕವೂ ದೇವರಾಯರು ಧೀಮಂತ ವಿದ್ಯಾರ್ಥಿಯಾಗಿ ಅಂಕಗಳ ದೃಷ್ಟಿಯಿಂದ ಮೊದಲಿಗರಾಗಿಯೇ ತೇರ್ಗಡೆಯಾದವರು. ಓದಿದ್ದನ್ನು ಕೂಡಲೇ ಗ್ರಹಿಸಿ ಸ್ಮರಣೆಯಲ್ಲಿಟ್ಟುಕೊಳ್ಳುವ ಅವರ ಶಕ್ತಿ ಎಲ್ಲ ವಿಷಯಗಳಿಗೂ ಸಂಬಂಧಿಸಿದ್ದಾದರೂ ಭಾಷಾವಿಷಯದಲ್ಲಿ ಇದು ಅವರಿಗೆ ಅಸಾಮಾನ್ಯ ಪ್ರಭುತ್ವವನ್ನು ದೊರಕಿಸಿಕೊಟ್ಟಿತು. ಇದನ್ನು ಅವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಾಪಕರು ಗಮನಿಸಿ ಪ್ರೋತ್ಸಾಹಿಸಿದ್ದನ್ನೂ ಅದರಿಂದಲೇ ತನ್ನ ಬದುಕಿನ ಭಾಗ್ಯೋದಯವಾದದ್ದನ್ನೂ ಅವರು ಎಂದೂ ಮರೆಯಲಿಲ್ಲ. ತನಗೆ ಮಾಡಿದ ಯಾವೊಂದು ಚಿಕ್ಕ ಉಪಕೃತಿಯನ್ನೇ ಆದರೂ ತಾನು ಮಾಡುವ ದೊಡ್ಡ ಪ್ರತ್ಯುಪಕಾರದಿಂದ ಋಣ ತೀರುವೆ ಮಾಡಿಕೊಳ್ಳಬೇಕೆಂಬುದು ಅವರ ಜೀವನದ ಧ್ಯೇಯ. ಹಾಗಾಗಿ ಭಾರತದ ವಿದೇಶಾಂಗ ಖಾತೆಯನ್ನು ಸೇರಿ, ರಾಯಭಾರಿಗಳಂಥ ಘನತರ ಹುದ್ದೆಗೇರಿದಾಗಲೂ ಮಂಗಳೂರಿನ ವಿಮಾನ ನಿಲ್ದಾಣದಲ್ಲಿಳಿದ ಕೂಡಲೇ ಅವರು ಸಂದರ್ಶಿಸಿ ಗೌರವ ನಮನ ಸಲ್ಲಿಸುತ್ತಿದ್ದುದು ಅವರ ಕಿನ್ನಿಕಂಬಳ ಪ್ರಾಥಮಿಕ ಶಾಲಾಧ್ಯಾಪಕ ಸದಾಶಿವರಾಯರಿಗೆ.

********

ಬಾಗಲೋಡಿ ಎಂಬ ಹೆಸರಿನ ದೊಡ್ಡ ಕುಟುಂಬಕ್ಕೆ ಸೇರಿದ ದೇವರಾಯರು ೫೮ ವರ್ಷಗಳ ಹಿಂದೆ ಜನಿಸಿದಾಗ ಅಲ್ಲಿಯ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿರಲಿಲ್ಲ. ದೇವರಾಯರ ತೀರ್ಥರೂಪರು ಊರಿನ ಪ್ರಾಥಮಿಕ ಶಾಲೆಯ ಉಪಾಧ್ಯಾಯರು, ಮುಖ್ಯೋಪಾಧ್ಯಾಯರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿದ ಬಳಿಕ ಮದರಾಸಿನಲ್ಲಿ ಆನರ್ಸ್ (ಇಂಗ್ಲಿಷ್ ಸಾಹಿತ್ಯ) ಮಾಡಲು ಅವರ ಬಂಧುಗಳನೇಕರು ನೆರವಿಗೆ ನಿಂತರು. ಅವರಲ್ಲಿ ಒಬ್ಬರು ಏಕಾಂಗಿಯಾಗಿ ಪೆರಾರಿನಲ್ಲಿ ವಾಸ ಮಾಡುತ್ತಿದ್ದರು. ವಿದೇಶದಿಂದ ಬಂದ ಕೂಡಲೆ ದೇವರಾಯರು ಕಂಡು ಆಶೀರ್ವಾದ ಪಡೆಯುವವರಲ್ಲಿ ಇವರೂ ಮುಖ್ಯರು. ಒಂದು ರೀತಿಯಲ್ಲಿ ದೇವರಾಯರೂ ನಾನೂ ಕ್ರಿಶ್ಚಿಯನ್ ಕಾಲೇಜಿನ ಸಹಪಾಠಿಗಳು. ನನ್ನ ವಿಷಯ ಸಾಹಿತ್ಯವಲ್ಲವಾದರೂ ನಾನು ಕಾಲೇಜು ಸೇರುವ ಮೊದಲೇ ಸಾಹಿತ್ಯ ಅಂಟಿಸಿಕೊಂಡದ್ದರಿಂದ, ಅವರಿಗಿಂತ ಮೊದಲೇ ಕನ್ನಡದಲ್ಲಿ ಬರೆಯುವ ಗೀಳನ್ನು ಹಚ್ಚಿಕೊಂಡದ್ದರಿಂದ, ಅವರು ಕ್ರಿಶ್ಚಿಯನ್ ಕಾಲೇಜಿನಲ್ಲಿ ತೋರಿಸಿದ ಸಾಹಿತ್ಯಶಕ್ತಿ ಮತ್ತು ಆಸಕ್ತಿ ನನ್ನ ಲೋಪದೋಷಗಳನ್ನು ನನಗೆಯೇ ದರ್ಶನ ಮಾಡಿಸಿತ್ತು. ನನ್ನಂತೆ ಸೇವ ನಮಿರಾಜ ಮಲ್ಲರೂ ಕ್ರಿಶ್ಚಿಯನ್ ಕಾಲೇಜಿನ ಅನರ್ಸ್ ಸಮಕಾಲೀನ ಸಹಪಾಠಿ. ಮಲ್ಲರ ಬರೆವಣಿಗೆಯ ಕಾಯಕ – ಅದೂ ಸಣ್ಣ ಕಥೆಯ ಕ್ಷೇತ್ರದಲ್ಲಿ ದಿವಾ-ರಾತ್ರಿ ಎಂಬಂತೆ ನಡೆಯುತ್ತಿತ್ತು. ನಾನು ೧೯೪೯ರ ಹೊತ್ತಿಗೇನೇ – ಅಂದರೆ ಕಾಲೇಜಿಗೆ ಹೋಗುವಾಗಲೇ – ಒಂದು ಸಣ್ಣ ಕಥಾಸಂಗ್ರಹ ಪ್ರಕಟಿಸಿದ್ದೆ. ಹೀಗಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೇವರಾಯರು ತಮ್ಮನ್ನು ತೊಡಗಿಸಿಕೊಂಡಾಗ ಸಣ್ಣ ಕಥೆಯ ಬಾಗಿಲಿನಿಂದಲೇ ಪ್ರವೇಶ ಮಾಡಿದ್ದರೆ ಅದಕ್ಕೆ ನಾವೇ ಕಾರಣರೋ ಎಂಬ ಸಂದೇಹ! ಹುಚ್ಚ ಮುನಸೀಫ ಮತ್ತು ಇತರ ಕತೆಗಳು ಎಂಬುದು ಕನ್ನಡದ ಒಂದು ಶ್ರೇಷ್ಠ ಕಥಾಸಂಗ್ರಹ. ಇದನ್ನು ಪೂಜ್ಯ ಮಾಸ್ತಿಯವರೇ ಮೆಚ್ಚಿದರೆಂದ ಮೇಲೆ ಬೇರೆ ಮಾತಿಲ್ಲ. ಮಾಸ್ತಿಯವರ ಜೀವನ ಪತ್ರಿಕೆಯಲ್ಲೇ ಮೊದಲು ಬೆಳಕು ಕಂಡ ಕತೆಗಳನ್ನು ಆ ಪತ್ರಿಕೆ ತನ್ನ ಪ್ರಕಟಣೆಯಾಗಿ ಮಾಡುವಷ್ಟು ಮಾಸ್ತಿ ಅವನ್ನು ಮೆಚ್ಚಿದರೆಂದು ಅರ್ಥ. ಮಾಸ್ತಿಯವರ ಸುಕುಮಾರ ಶೈಲಿಯನ್ನೇ ಹೋಲುವ ದೇವರಾಯರ ಕತೆಗಳಲ್ಲಿ ಅಲ್ಲಿಯಂತೆಯೇ ಸನ್ನಿವೇಶದಿಂದ ಉತ್ಪನ್ನವಾಗುವ ನವುರಾದ ಹಾಸ್ಯ, ವಿನೋದಪರತೆಯ ಜತೆಗೆ ವಿಲಕ್ಷಣವಾದ, ದೇವರಾಯರದ್ದೇ ಸ್ವಂತಿಕೆ ಎನಿಸುವ ಭಾಷಾ ಶೈಲಿಯೂ ಸೇರಿಕೊಂಡಿದೆ. ಇದು ಅವರ ಸ್ವಭಾವದಲ್ಲಿ ಬದುಕನ್ನು ನೋಡುವ ದೃಷ್ಟಿಕೋನದಲ್ಲಿ, ಒಂದು ಕಾಲಕ್ಕೆ ಅವಿನಾಭಾವದಿಂದ ಸ್ಥಿರವಾಗಿದ್ದ ಉಲ್ಲಾಸವನ್ನು ಸಂಕೇತಿಸುತ್ತದೆ. ಇತ್ತೀಚೆಗೆ ಅವರು ಮತ್ತೊಮ್ಮೆ ಕನ್ನಡದ ಲೇಖನಿ ಹಿಡಿದಾಗಲೂ ಅದೇ ೩೦ ವರ್ಷಗಳ ಅದೇ ಹಿಂದಿನ ಶೈಲಿಯನ್ನೂ ವಸ್ತುವಿನ ಆಯ್ಕೆಯನ್ನೂ ನೆನಪಿಟ್ಟು ಮುಂದುವರಿಸಿದರು. ಹಿಂದಿನ ಕತೆಯಾಗಲೀ ಇಂದಿನದಾಗಲೀ ಅದರಲ್ಲಿ ಒಡಮೂಡುವುದು ಸಾಂಸಾರಿಕ ಜೀವನದ ಸಂಕೀರ್ಣ ಸನ್ನಿವೇಶದಲ್ಲಿ ವ್ಯವಹರಿಸುವ ವ್ಯಕ್ತಿಗಳ ಮೇಲೆ ಲೇಖಕರ ಕರುಣೆ (pity), ಮಾನವೀಯ ದೃಷ್ಟಿ. ಈ ಕತೆಗಳಿಗೆ ನವ್ಯ, ಸವ್ಯ, ಅಪಸವ್ಯ ಇತ್ಯಾದಿ ಹಣೆಪಟ್ಟಿ ಹಚ್ಚುವುದು ಅಸಾಧ್ಯ. ಇದು ಮನುಷ್ಯರ ಕತೆ, ಮನುಷ್ಯತ್ವದ ಚಿತ್ರಣ.

ಎರಡು ವರ್ಷ ಹಿಂದೆ ಬಲ್ಗೇರಿಯಾಕ್ಕೆ ನಾನು ಹೋದಾಗ ಅಲ್ಲಿ ದೇವರಾಯರು ರಾಯಭಾರಿಗಳು. ಅಲ್ಲಿ ನಮ್ಮ ಚರ್ಚೆ ಸಾಹಿತ್ಯಕ್ಕೆ ತಿರುಗಿದಾಗ ಅವರು ಮುಂದೆ ತಾವು ಮಾಡಲಿರುವ ಸಾಹಿತ್ಯ ಕೃಷಿಯ ಬಗ್ಗೆ ಚರ್ಚಿಸಿದ್ದರು. ಸಣ್ಣ ಕತೆ ಹೇಗೂ ಇದೆಯಲ್ಲವೇ. ಅಲ್ಲಿಂದ ಜಿಗಿದು ಕಾದಂಬರಿ ಕ್ಷೇತವನ್ನು ಪ್ರವೇಶಿಸುವ ಯೋಚನೆ ಮಾಡಿದ್ದರು. ಖಚಿತ ಇತಿಹಾಸ ಪ್ರಜ್ಞೆಯುಳ್ಳ ಅವರಿಗೆ ಭಾರತದ ಇತಿಹಾಸವನ್ನು – ಮೊಹಂಜೋದಾರದಿಂದ ಇಂದಿನವರೆಗೆ – ಕಾದಂಬರೀ ರೂಪದಲ್ಲಿ ಬರೆಯುವ ಯೋಚನೆ ಇತ್ತು. ಕನ್ನಡ ಕಾದಂಬರಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡುವ ಮನಸ್ಸಿತ್ತು. ಕಾರಂತರ ಮುಗಿದ ಯುದ್ಧ ಅವರ ಮೇಲೆ ಭಾರೀ ಪರಿಣಾಮ ಬೀರಿದ ಒಂದು ಕೃತಿ. ಅದರ ಅನುವಾದ ಆರಂಭಿಸಿಬಿಡಿ ಎಂದು ನಾನೇ ಅವರಿಗೆ ಹೇಳಿದ್ದುಂಟು. ಕಾರಣ: ನಮ್ಮ ಕನ್ನಡ ಕೃತಿಗಳು ತುಲನಾತ್ಮಕವಾಗಿ ಭಾರತೀಯ ಸಾಹಿತ್ಯದಲ್ಲಿ ಮತ್ತು ವಿಶ್ವ ಸಾಹಿತ್ಯದಲ್ಲಿ ಕೂಡ ಮೇರುಕೃತಿಗಳೆನಿಸಬಲ್ಲವಾದರೂ ಅವುಗಳನ್ನು ಸಮರ್ಥವಾಗಿ ಇಂಗ್ಲಿಷ್ ಅನುವಾದ ಮಾಡುವವರು ಬರಲೇ ಇಲ್ಲ. ದೇವರಾಯರು ಆ ಕೆಲಸಕ್ಕೆ ಮಾಡಿಸಿಟ್ಟಂಥ ಶಕ್ತಿವಂತರಾಗಿದ್ದರೆಂದು ನನ್ನ ಊಹೆ. ಪರರಾಷ್ಟ್ರದಲ್ಲಿಯ ಅವರ ಕರ್ತವ್ಯಗಳ ಬಗ್ಗೆ ಬರೆದರೂ ಅದೊಂದು ಕನ್ನಡಕ್ಕೆ ಅಪೂರ್ವ ಕೊಡುಗೆಯಾಗುತ್ತಿತ್ತು. ಏಕೆಂದರೆ ರಾಯಭಾರಿಯಾದವನು ಮತ್ತೆ ತನ್ನ ಭಾಷೆಯ ಕಡೆಗೆ ತಿರುಗಿದ್ದು ನಾನು ಕಾಣೆ. ಹೆಚ್ಚೆಂದರೆ ಆತ ಬರೆಯುವುದು ತನ್ನ ಸೇವಾವಧಿಯ ಶುಷ್ಕ ವರದಿ. ತಾನು ಯಾವ ರ್ಯಾಂಕ್ ಪಡೆದೆ, ಸಮ್ಮಿಳನ ಏರ್ಪಾಡು ಮಾಡಿದೆ, ಪ್ರಧಾನಮಂತ್ರಿಯವರಿಗೆ ಎಷ್ಟು ಸಮೀಪದಲ್ಲಿ ನಿಂತೆ ಇತ್ಯಾದಿ ನೀರಸ ಅಂಶಗಳನ್ನು ಮಾತ್ರ. ಸಾಹಿತ್ಯದ ರಸಗಂಧದ ಸ್ಪರ್ಶವುಳ್ಳ ರಾಯಭಾರಿಗಳು ವಿರಳರಷ್ಟೇ. ದೇವರಾಯರು ಬರೆಯುವುದೆಲ್ಲವೂ – ಅವರ ಪತ್ರಗಳು ಕೂಡ – ಸಾಹಿತ್ಯವೇ ಆಗಿರುತ್ತಿತ್ತು. ಸಾಹಿತ್ಯಜ್ಞಾನ ಮನುಷ್ಯನನ್ನು ಉದಾರಚರಿತನನ್ನಾಗಿ ಮಾಡಬೇಕೆಂದು ಪಾಠ ಹೇಳುವ ಸಾಹಿತಿಗಳೇ ಹೃದಯದ ಶುಷ್ಕತೆಯನ್ನೂ ಸಂಕೋಚವನ್ನೂ ತೋರಿಸುವ ಸನ್ನಿವೇಶದಲ್ಲಿ ದೇವರಾಯರು ಒಂದು ಅಪೂರ್ವ ಉದಾಹರಣೆ. ಈಚೆಗೆ ನಮ್ಮ ಲೇಖಕರು ಬರೆದ ಕೆಲವೇ ಕೃತಿಗಳನ್ನು ಓದಿ ಅವರು ಆಶ್ಚರ್ಯಚಕಿತರಾಗಿ ನಮ್ಮ ಸಾಹಿತ್ಯ ಯಾವ ದೇಶದ ಸಾಹಿತ್ಯಕ್ಕೂ ಕಮ್ಮಿಯಾಗಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದರು. ಪರ್ವದ ಹಾಸು ಮತ್ತು ಆ ವಸ್ತುವನ್ನು ನಿರ್ವಹಿಸಿದ ಕೌಶಲ ಅಗಾಧವೆಂದು ವಿಸ್ಮಿತರಾದ್ದುಂಟು. ತಮ್ಮ ಓದು ಹೆಚ್ಚಿಸಬೇಕು – ೩೦ ವರ್ಷಗಳ ಕಂದಕವನ್ನು ದಾಟಿ – ಅರ್ವಾಚೀನ ಸಾಹಿತ್ಯದ ಪ್ರವಾಹದಲ್ಲಿ ತಾನು ಈಸಬೇಕೆಂಬ ಮಹತ್ತ್ವಾಕಾಂಕ್ಷೆ ಅವರ ಮನೋರಂಗವನ್ನೆಲ್ಲ ವ್ಯಾಪಿಸಿತ್ತು. ದೇವರಾಯರನ್ನು ಬಲ್ಲವರಿಗೆಲ್ಲ ಅವರ ಮಾನಸೋಲ್ಲಾಸದ ತೀವ್ರತೆ ಎಷ್ಟು ಪ್ರಾಮಾಣಿಕ, ಎಷ್ಟು ಗಹನವಾದ್ದೆಂದು ತಿಳಿದಿದೆ. ಬರೆವಣಿಗೆ ಅವರ ಸೃಜನಶೀಲ ಸಾಹಿತ್ಯೋತ್ಸಾಹದ ಒಂದು ಸಣ್ಣ ಸಾಕ್ಷಿ. ಅಂತರಂಗದ ವೈಶಾಲ್ಯ ಇದಕ್ಕಿಂತ ಎಷ್ಟೋ ಹಿರಿದು. ಬುದ್ಧಿಯನ್ನೂ ಭಾವವನ್ನೂ ಸಮನ್ವಯ ಭಾವದಿಂದ ಹೊಸೆಯುವ ಮನೋಧರ್ಮ ಅವರಿಗೆ ಎಂದೋ ಸಿದ್ಧಿಸಿತ್ತು. ಸಾಹಿತ್ಯದ ಕೃಷಿಗೆ ಇದಕ್ಕಿಂತ ಫಲವತ್ತದ ನೆಲ ಬೇರಾವುದು? ಇನ್ನು ಇದೆಲ್ಲ ಕತೆಯೇ ಹೊರತು ಚರಿತಾರ್ಥವಾಗುವಂಥಾದ್ದಲ್ಲ. ‘ತಾನು ಪ್ರೀತಿಸುವವರನ್ನು ದೇವರು ಬೇಗನೆ ಕೊಂಡೊಯ್ಯುತ್ತಾನೆಂಬ’ ಒಂದು ಆಂಗ್ಲ ವಾಕ್ಯದಂತೆ ಆಗಿದೆ ದೇವರಾಯರ ಕತೆ ಕೂಡ.

ದೇವರಾಯರು ರಾಯಭಾರಿಗಳಾಗಿ ಭಾರತದ ವಿದೇಶಾಂಗ ಖಾತೆಯಲ್ಲಿ ಸೇವೆ ಸಲ್ಲಿಸಿದ ರೀತಿಯೂ ಅವರಿಗೇ ಸ್ವಂತದ್ದೆನಿಸುವ ಶೈಲಿ, ಅದರಲ್ಲೂ ಮಾನವೀಯತೆಗೆ ಆದ್ಯ ಸ್ಥಾನ. ಭಾರತದ ಸೆಕ್ಯುಲರ್ ತಳಹದಿಯನ್ನು ತಾನು ಹೋದ ದೇಶಗಳಲ್ಲೆಲ್ಲ ಸೋದಾಹರಣವಾಗಿ ನಿರೂಪಿಸುವುದಕ್ಕೆ ಅವರು ಎತ್ತಿದ ಕೈ. ಅವರ ವಾಗ್ಮಿತೆಗೂ ಮಾತುಗಾರಿಕೆಗೂ ಮರುಳಾಗದವರಿಲ್ಲ. ರಶಿಯಾ, ಇಟಲಿ, ನೈಜೀರಿಯಾ, ನೇಪಾಳ, ಫಿಲಿಪ್ಪೀನ್ಸ್, ಲಾವೋಸ್, ನ್ಯೂಝೀಲ್ಯಾಂಡ್, ಬಲ್ಗೇರಿಯಾ ಇಷ್ಟು ದೇಶಗಳಲ್ಲಿ ಸೇವೆ ಸಲ್ಲಿಸಿದಾಗಲೂ ಧೋರಣೆ ಒಂದೇ. ಭಾರತೀಯ ದೂತಾವಾಸದ ಮೂಲಕ ಭಾರತದ ರಾಜನೀತಿಯ ಪ್ರಚಾರ ಆಗಬೇಕು; ಅಲ್ಲಿಗೆ ಬಂದ ಭಾರತೀಯರಿಗೆ ನೆರವು ನೀಡಬೇಕು. ಡಿನ್ನರ್ ಉಣ್ಣುವುದು, ಡಿನ್ನರ್ ಕೊಡುವುದು – ಇಷ್ಟೇ ರಾಯಭಾರಿಯ ಕೆಲಸವಲ್ಲವೆಂದು ದಿನವೆಲ್ಲ ಕರ್ತವ್ಯಮಗ್ನರಾಗಿರುತ್ತಿದ್ದರು. ನಮ್ಮ ಜಿಲ್ಲೆಯಿಂದ ಅಂತಾರಾಷ್ಟ್ರೀಯ ರಂಗದಲ್ಲಿ ಸೇವೆ ಸಲ್ಲಿಸಿದ ಬಿ.ಎನ್. ರಾವ್ ಅಂತವರ ಶ್ರೇಷ್ಠ ಪರಂಪರೆಯನ್ನು ಎತ್ತಿ ಹಿಡಿದ ದೇವರಾಯರು ಇಷ್ಟು ಬೇಗನೆ ದೈವಾಧೀನರಾದದ್ದು ಅವರನ್ನು ಹತ್ತಿರದಿಂದ ಬಲ್ಲವರಿಗೆ ತೀರ ದುಃಖದ ಪ್ರಸಂಗವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಒಂದು ದೊಡ್ಡ ನಷ್ಟವಾಯಿತು ಎಂಬುದನ್ನು ಸೂಚಿಸಿ ಶ್ರದ್ಧಾಂಜಲಿ ಅರ್ಪಿಸುವುದಕ್ಕಾಗಿ ಮಾತ್ರ ಈ ಲೇಖನ ಬರೆದಿದ್ದೇನೆ. ಬರೆದುದಕ್ಕಿಂತ ಬರೆಯದೆ ಇರುವ, ಬರೆಯಲಾಗದ ಭಾವಗಳು ಹೆಚ್ಚು. ಇನ್ನುಳಿದದ್ದು ನೆನಪು ಮಾತ್ರ. ಸ್ಮರಣಕ್ಕೆ ಮರಣವಿಲ್ಲ ಎನ್ನುತ್ತಾರೆ. ಮನಸಿನಂಗಳದಲ್ಲಿ ನಿತ್ಯಸ್ಮರಣೆಗೆ ಬರುವ ಒಂದು ಚೇತನ ಬಾಗಲೋಡಿ ದೇವರಾಯರು – ನನಗೆ, ನನ್ನಂತೆ ಅನೇಕರಿಗೆ.

ಉದಯವಾಣಿ ಜುಲೈ ೨೮, ೧೯೮೫

(ಮುಂದುವರಿಯಲಿದೆ)