– ಕೆ.ಪಿ.ರಾವ್‌ ಕಂಡಂತೆ

ಎಂಟನೆಯವಯಸ್ಸಿನದೇವರಾಯರುತಂದೆಬಾಗಲೋಡಿಕೃಷ್ಣರಾಯರೊಡನೆ. (ಚಿತ್ರಕೃಪೆ: ನರಸಿಂಗರೈ, ಕಿನ್ನಿಕಂಬಳ. 1935ರ ಗ್ರೂಪ್ಫೋಟೋದಿಂದ.)

ಅರುವತ್ತು ತಲಪುವ ಮೊದಲೇ, ಜುಲೈ1985 ರಲ್ಲಿ ನಮ್ಮನ್ನಗಲಿದ ಬಾಗಲೋಡಿ ದೇವರಾವ್‌ ಕನ್ನಡ ಸಣ್ಣ ಕಥೆಗಳ ಲೋಕದಲ್ಲಿ ತನ್ನದೇ ವಿಶಿಷ್ಟ ಛಾಪನ್ನು ಉಳಿಸಿಹೋದವರು. ಪ್ರಖರ ವೈಚಾರಿಕತೆಯೊಂದಿಗೆ ಉತ್ಕಟ ಮಾನವ ಪ್ರೇಮವನ್ನು ಅವಲಂಬಿಸಿದ, ಕರಾವಳಿಯ ಮಾತುಗಾರಿಕೆಯಲ್ಲಿ ಸಾಮಾನ್ಯವಾದ ವ್ಯಂಗ್ಯಮಿಶ್ರಿತ ಹಾಸ್ಯ ಪ್ರಜ್ಞೆಯ ಅವರ ಕಥೆಗಳು ಕನ್ನಡದ ಸಾರಸ್ವತ ಲೋಕಕ್ಕೆ ಪ್ರಮುಖ ಕೊಡುಗೆಯೆಂದು ನಾನು ಭಾವಿಸಿದ್ದೇನೆ. ಎಳವೆಯಲ್ಲಿ ಪಂಜೆಯವರಿಂದ ಕಥಾ ರಚನೆಯ ಸ್ಫೂರ್ತಿ ಪಡೆದು, ಮಾಸ್ತಿಯವರ ಪ್ರೋತ್ಸಾಹದಿಂದ ಕನ್ನಡ ಕಥೆಗಳ ಬರವಣಿಗೆಗೆ ಮೊದಲಿಟ್ಟ ದೇವರಾಯರು ಮರೆಯಲಾಗದ ಸಾಹಿತ್ಯ ಸೃಷ್ಟಿ ಮಾಡಿದರು. ಭಾಗ್ಯವಶಾತ್‌ ದೇವರಾಯರೂ ನಾನೂ ಒಂದೇ ಊರಿಗೆ ಸೇರಿದವರು, ಪ್ರತ್ಯಕ್ಷ ಮತ್ತು ಪರೋಕ್ಷ ಗುರುವಾಗಿ ನನಗೆ ಕಲಿಕೆಯ ದಾರಿತೋರಿಸಿದವರು.

ಬಾಗಲೋಡಿ ದೇವರಾಯರ ಜನ್ಮ ದಿನ 28 ಫೆಬ್ರುವರಿ 1927 ಅಂದರೆ 1927, ಫೆಬ್ರುವರಿಯ ಕೊನೆಯ ದಿನ. ಹುಟ್ಟಿದ ಜಾಗ ಕಿನ್ನಿಕಂಬಳ. ಅವರ ತಂದೆ ಬಾಗಲೋಡಿ ಕೃಷ್ಣರಾಯರಿಗೆ ಅವರು ಎರಡನೆಯ ಗಂಡು ಮಗ. ದೇವರಾಯರು ಜನ್ಮ ತಳೆದ ಸ್ಥಳದಿಂದ ಇನ್ನೂರು ಗಜ ದೂರದ ಬಾಡಿಗೆ ಮನೆಯಲ್ಲಿ ಕಿನ್ನಿಕಂಬಳ ವೆಂಕಟರಾಯರ ಎರಡನೆಯ ಮಗನಾಗಿ 1940 ಫೆಬ್ರುವರಿಯ ಕೊನೆಯ ದಿನ ಅಂದರೆ 29ನೆಯ ಫೆಬ್ರುವರಿಗೆ ನಾನು ಜನಿಸಿದೆ. ನನಗೆ ಬುದ್ಧಿ ತಿಳಿಯುವ ಮೊದಲೇ ದೇವರಾಯರು ಹೈಸ್ಕೂಲ್‌ ಸೇರಲು ಮಂಗಳೂರಿಗೆ ಹೋಗಿದ್ದರು. ದೇವರಾಯರ ಅಣ್ಣ ಶ್ರೀಶರಾಯರು ಮಂಗಳೂರಿನ ಮಣೇಲ್‌ ಶ್ರೀನಿವಾಸ ನಾಯಕ್‌ ಎಂಬವರಿಗೆ ಸೇರಿದ ಹಾರ್ಡ್‌ ವೇರ್‌ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದರು. ಅವರೊಡನಿದ್ದು ದೇವರಾಯರು ಗಣಪತಿ ಹೈಸ್ಕೂಲಿಗೂ ಮುಂದೆ ಅಲೋಸಿಯಸ್‌ ಕಾಲೇಜಿಗೂ ಹೋಗುತ್ತಿದ್ದರು. ಕಿನ್ನಿಕಂಬಳದಲ್ಲಿ ಪುಟ್ಟ ಅಂಗಡಿ ನಡೆಸುತ್ತಿದ್ದ ಪುರುಷೋತ್ತಮ ಕಾಮತ್‌ ಮತ್ತು ದೇವರಾಯರು ಕಿನ್ನಿಕಂಬಳದ ಶಾಲೆಯಲ್ಲಿ ಸಹಪಾಠಿಗಳಾಗಿದ್ದರಂತೆ. ಪೋಲಿಯೋ ಪೀಡಿತನಾಗಿ ವಿಕಲಾಂಗನಾದುದರಿಂದ ಹೊರ ಹೋಗಲಾರದೆ ಕಿನ್ನಿಕಂಬಳದಲ್ಲೇ ಉಳಿದ ಪುರುಷೋತ್ತಮ ಕಾಮತ್‌ ದೇವರಾಯರ ಬುದ್ಧಿವಂತಿಕೆಯ ಕಥೆಗಳನ್ನು ನಮಗೆ ಹೇಳುತ್ತಿದ್ದರು. ಅವರಿಂದ ನಾನು ದೇವರಾಯರ ಹೆಸರನ್ನು ಆಗಾಗ ಕೇಳುತ್ತಾ ಬಂದಿದ್ದೆ. ದೇವರಾಯರು ಕಿನ್ನಿಕಂಬಳದಲ್ಲಿ ಕಲಿಯುತ್ತಿದ್ದ ಕಾಲದಲ್ಲಿ ಸುತ್ತ ಮುತ್ತಲಿನ ಊರಿಗೆ ಅದೊಂದೇ ಕನ್ನಡ ಶಾಲೆಯಾಗಿತ್ತು. ಪಂಜೆ ಮಂಗೇಶರಾಯರ ಸಹಪಾಠಿಯಾಗಿದ್ದ ಬಾಗಲೋಡಿ ರಾಮರಾಯರು ಮತ್ತು ಅವರ ಅಣ್ಣನ ಮಗ ಬಾಗಲೋಡಿ ಕೃಷ್ಣರಾಯರು (ದೇವರಾಯರ ತಂದೆಯವರು) ಕಿನ್ನಿಕಂಬಳದ ಶಾಲೆಯ ಸ್ಥಾಪಕರು.

ಪಂಜೆ ಮಂಗೇಶರಾಯರು ತಮ್ಮ ಸಹಪಾಠಿ ಬಾಗಲೋಡಿ ರಾಮರಾಯರನ್ನು ಮಾತನಾಡಿಸಿ ಹೋಗಲು ಆಗಾಗ ಕಿನ್ನಿಕಂಬಳಕ್ಕೆ ಬರುತ್ತಿದ್ದರು. ಶಾಲೆಯ ಬೆಳವಣಿಗೆಯಲ್ಲಿ ತಾವೂ ಕೈಜೋಡಿಸುತ್ತಿದ್ದರು. ದೇವರಾಯರಂತಹ ಕಿನ್ನಿಕಂಬಳದ ವಿದ್ಯಾರ್ಥಿಗಳ ಮೇಲೆ ಪಂಜೆಯವರ ಪ್ರಭಾವ ಗಾಢವಾಗಿತ್ತು. ಮಂಗಳೂರಿನಲ್ಲಿ ಕಲಿಯುತ್ತಿದ್ದಾಗ ದೇವರಾಯರು ಆಗಾಗ ಕಿನ್ನಿಕಂಬಳಕ್ಕೆ ಬರುತ್ತಿದ್ದರು. ಅವರ ಮನೆಯವರನ್ನೆಲ್ಲಾ ಸೇರಿಸಿಕೊಡು ಕಥೆ ಹೇಳುವುದು, ಅವರ ಮನೆಯ ಗೇಟಿನ ಸಿಮೆಂಟ್‌ ಸೀಟುಗಳ ಮೇಲೆ ಕುಳಿತು ಅಂಗೈಯಲ್ಲಿ ತುಳಸಿಯ ಬೀಜಗಳನ್ನು ತುಂಬಿಸಿಕೊಂಡು ಪುರುಷೋತ್ತಮರ ಮಾತಿನಲ್ಲಿ ಹೇಳುವುದಾದರೆ ‘ಗುಬ್ಬಚ್ಚಿ ಸುಲಿಯುವಂತೆ ಉದ್ದ ಬೆಳೆಸಿದ ಉಗುರುಗಳಿಂದ ಸುಲಿದು’ ತಿನ್ನುತ್ತಿದ್ದರಂತೆ. ಎಲಿಮೆಂಟರಿ ಕ್ಲಾಸಿನಲ್ಲಿ ಎಲ್ಲೋ ನೋಡುತ್ತಾ ಇದ್ದರೂ ಮಾಸ್ತರು ಹೇಳಿದುದನ್ನೆಲ್ಲಾ ಬಿಡದೆ ಕೇಳಿಸಿಕೊಂಡು ಒಮ್ಮೆಲೆ ಪ್ರಶ್ನೆ ಕೇಳಿ ಎಲ್ಲರನ್ನೂ ಗಾಬರಿ ಪಡಿಸುತ್ತಿದ್ದರಂತೆ. ಒಂದು ಹೇಳಿದರೆ ಹತ್ತು ತಿಳಿಯುತ್ತಾನೆ ಎಂದು ಎಲ್ಲರೂ ಹೊಗಳಿ ಹರಸುತ್ತಿದ್ದರಂತೆ. ಎಲ್ಲಿ ಕೋಲ, ಜಾತ್ರೆ, ಉತ್ಸವ, ಉರೂಸುಗಳಾದರೂ ಬಿಡದೆ ಹೋಗಿ ನೋಡಿ ಹೊರ ಹೋಗಲಾರದ ಪುರುಷೋತ್ತಮರಿಗೆ ವಿವರವಾಗಿ ಕಥೆ ಹೇಳುತ್ತಿದ್ದರಂತೆ. ಪ್ರಾಥಮಿಕ ಶಾಲೆಯಲ್ಲಿಯ ಎಲ್ಲಾ ಪಠ್ಯ ಪುಸ್ತಕದ ಪದ್ಯಗಳಿಗೂ ಅಣಕು ಪದ್ಯಗಳನ್ನು ಮಾಡಿಕೊಂಡು ನಟಿಸಿ ನಗಿಸುತ್ತಿದ್ದರಂತೆ. ಯಕ್ಷಗಾನದಲ್ಲಿ ಭಾಗವಹಿಸುತ್ತಿರಲಿಲ್ಲವಂತೆ. ತಾನೇ ನಾಟಕಗಳನ್ನು ಬರೆದು ಶಾಲೆಯ ತಿಂಗಳ ಹಬ್ಬದಲ್ಲಿ ಪ್ರದರ್ಶನ ಮಾಡುತ್ತಿದ್ದರಂತೆ. ಶಾಲೆಯ ಕೈಬರಹದ ವಾರ್ಷಿಕ ಪತ್ರಿಕೆಯಲ್ಲಿ ಪ್ರತಿ ವರ್ಷವೂ ಕಥೆಗಳನ್ನೋ ಪದ್ಯಗಳನ್ನೋ ಬರೆಯುತ್ತಿದ್ದರಂತೆ. ಏಳನೆಯ ತರಗತಿಯಲ್ಲಿದ್ದಾಗ ಒಂದು ಇಂಗ್ಲಿಶ್‌ ಕವಿತೆ ಬರೆದಿದ್ದರಂತೆ. (ನಾನು ಎಂಟನೆಯ ತರಗತಿಗೆ ಬಂದಾಗ ಶಾಲೆಯ ಲೈಬ್ರರಿಯನ್ನು ನೋಡಿಕೊಳ್ಳುತ್ತಿದ್ದೆ. ಆಗ ಅಂತಹ ಒಂದು ಕೈ ಬರಹದ ಪತ್ರಿಕೆಯನ್ನು ನೋಡಿದ್ದೆ. ಅದರಲ್ಲಿ ದೇವರಾಯರು ಸ್ವಹಸ್ತ ಬರೆದ ಬಾಗಿಲಕೋಡಿ ಎಂಬ ಪ್ರಬಂಧ/ಕಥೆ ಇತ್ತು. ಬಾಗಲೋಡಿ ಎಂಬ ತಮ್ಮ ಹೆಸರಿನ ಅಣಕವಾದ ಬಾಗಿಲಕೋಡಿ ಎಂದರೆ ಬಾಗಿಲಮೂಲೆಯಲ್ಲಿರುವ ಕಸಬರಿಕೆ/ಹಿಡಿಸೂಡಿಯ ಹಾಗೆ ತಾವು ಸಮಾಜದ ಕೊಳೆಗಳನ್ನು ಗುಡಿಸಿ ನಿವಾರಿಸಬೇಕು ಎಂಬ ಆಶಯವಿದ್ದ ಬರಹ. ಇಪ್ಪತ್ತು ವರ್ಷಗಳ ಹಿಂದೆ ವಿಚಾರಿಸಿದಾಗ ಅಲ್ಲಿದ್ದ ಇತರ ಪುಸ್ತಕಗಳಂತೆ ಆ ಪುಸ್ತಕವೂ ಹುಳಗಳಿಗೆ ಆಹಾರವಾಗಿ ಕಸವಾಯಿತು ಎಂದು ಕೇಳಿದೆ)

ದೇವರಾಯರು ಮಂಗಳೂರಿನಲ್ಲಿ ಯಾವುದೋ ತಮಿಳು ಸಿನೆಮಾ ನೋಡಿಕೊಂಡು ಬಂದವರು ಎರಡು ಗಂಟೆಗಳಷ್ಟು ಕಾಲ ಸಿನೆಮಾದಲ್ಲಿ ಏನೇನಾಯಿತೆಂದು ಕನ್ನಡದಲ್ಲಿ ವಿವರವಾಗಿ, ರೋಚಕವಾಗಿ ಹೇಳಿದ್ದರಂತೆ. ಕಿನ್ನಿಕಂಬಳದಲ್ಲಿ ಸಾಮಾನ್ಯರು ಮಾತನಾಡುತ್ತಿದ್ದ ಮೂರು ರೀತಿಯ ತುಳು, ಎರಡು ರೀತಿಯ ಕೊಂಕಣಿ, ಎರಡು ರೀತಿಯ ಮರಾಠಿ, ದಕ್ಖನಿ ಉರ್ದು, ಎರಡು ರೀತಿಯ ಬ್ಯಾರಿ ಭಾಷೆಗಳಲ್ಲಿ ಸರಾಗವಾಗಿ ಮಾತನಾಡುತ್ತಿದ್ದರಂತೆ. ಪುತ್ತೂರಿನ ಅವರ ಅಕ್ಕನ ಮನೆಗೆ ಹೋಗಿ ಬಂದ ಮೇಲೆ ಅಲ್ಲಿಯ ತುಳು ಭಾಷೆಗಳ ವೈಚಿತ್ರ್ಯವನ್ನು ಉದಾಹರಣೆ ಸಹಿತ ಹೇಳುತ್ತಿದ್ದರಂತೆ. ಮಂಗಳೂರಿನಲ್ಲಿ ಕಲಿಯುತ್ತಿದ್ದಾಗ ತಮಿಳು, ಮಲಯಾಳ, ಹಿಂದುಸ್ತಾನಿ ಭಾಷೆಗಳನ್ನೂ ಕಲಿತಿದ್ದರಂತೆ. ಪುರುಷೋತ್ತಮ ಕಾಮತ್‌ ಅವರು ದೇವರಾಯರ ಕಥೆ ಹೇಳುತ್ತಿದ್ದರೆ ಕಲಿಯುಗ ದ್ವಾಪರವಾಗುತ್ತಿದ್ದ ಹಾಗಿರುತ್ತಿತ್ತು.

1936ರಲ್ಲಿ ಕಿನ್ನಿಕಂಬಳ ಶಾಲೆಗೆ ಪ್ರೈಮರಿ ಮಾಸ್ತರರಾಗಿ ಬಂದವರು ಸದಾಶಿವರಾಯರು. ಅವರಿಗೆ ಕರ್ನಾಟಕ ಸಂಗೀತದ ಪರಿಚಯವಿತ್ತು. ಸದಾಶಿವರಾಯರು ದೇವರಾಯರಿಗಿಂತ ಹತ್ತು ವರ್ಷ ದೊಡ್ಡವರು. ಅವರಿಬ್ಬರಿಗೂ ಗಾಢ ಮೈತ್ರಿ ಬೆಳೆಯಿತು. ದೇವರಾಯರು ಅವರಿಂದ ಒಂದೆರಡು ವರ್ಷ ಕಾಲ ಸಂಗೀತ ಕಲಿಯುತ್ತಿದ್ದರಂತೆ. ಪುರುಷೋತ್ತಮರ ನೆನಪಿನಂತೆ ಆ ತೆಲುಗು ಪದ್ಯಗಳಿಗೆ ಪ್ರಾಥಮಿಕ ಶಾಲೆಯಲ್ಲಿ ಮಾಡುತ್ತಿದ್ದಂತೆ ಅಣಕು ಪದ್ಯಗಳನ್ನು ಮಾಡಿ ನಗಿಸುತ್ತಿದ್ದರಂತೆ. ‘ರಾ ರಾ ರಾಮ ರಘು ಕುಲ ಸೋಮ’ವನ್ನು ದಕ್ಖನಿ ಉರ್ದುವಿಗೆ ಭಾಷಾಂತರಿಸಿ ಇದು ಈಗ ಹಿಂದುಸ್ತಾನಿ ಸಂಗೀತವಾಯಿತು ಎಂದು ಹೇಳುತ್ತಿದ್ದರಂತೆ.

ಬಾಗಲೋಡಿ ದೇವರಾಯರಿಗೂ ನನಗೂ ನೇರ ಸಂಪರ್ಕವಾದುದೂ ಒಂದು ಕಥೆ. ಮದರಾಸಿನ ಕ್ರಿಶ್ಚಿಯನ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದ ದೇವರಾಯರು ವಾರ್ಷಿಕ ರಜೆಯ ಸಮಯದಲ್ಲಿ ಕಿನ್ನಿಕಂಬಳದ ಅವರ ಮನೆಗೆ ಬರುತ್ತಿದ್ದರು. ಬರುವಾಗಲೆಲ್ಲಾ ಒಂದಷ್ಟು ಪುಸ್ತಕಗಳನ್ನು ತರುವುದನ್ನು ಗಮನಿಸುತ್ತಿದ್ದೆವು. ಮನೆ ಸೇರಿಕೊಂಡು ಪುಸ್ತಕಗಳಲ್ಲಿ ಮುಳುಗಿರುವಾಗ ನಮ್ಮ ಪಾಲಿಗೆ ಇದ್ದೂ ಇಲ್ಲದ ಹಾಗಿರುತ್ತಿದ್ದರು. ಅಂದರೆ ಅವರು ಜನ ಸಂಪರ್ಕಕ್ಕೆ ಮನೆಯ ಹೊರಗೆ ಬರುತ್ತಿರಲಿಲ್ಲ. ಈ ಮಧ್ಯೆ ನನಗೆ ಜನಿವಾರ ಹಾಕಿದರು. ನಮ್ಮ ಅಮ್ಮ ಹೊರಗಾದುದರಿಂದ ನನ್ನ ಅಣ್ಣ ನನಗೆ ಜನಿವಾರ ಹಾಕಿದ. ಆ ಸಮಾರಂಭಕ್ಕೆ ಮನೆಯ ಹತ್ತು ಜನರಲ್ಲದೆ ಬೇರೆ ಯಾರೂ ವಿಶೇಷವಾಗಿ ಬರಲಿಲ್ಲ. ನನ್ನ ಉಪನಯನವಾದ ಕೆಲ ದಿನಗಳ ಅನಂತರ ಬಾಗಲೋಡಿ ದೇವರಾಯರು ಊರಿಗೆ ಬಂದಿರುವುದು ತಿಳಿಯಿತು. ನನ್ನ ಹೊಸ ಜನಿವಾರದ ಪ್ರದರ್ಶನಕ್ಕಾಗಿ ದೇವರಾಯರ ಮನೆಗೆ ಹೋಗಿ ಅವರನ್ನು ಭೇಟಿಯಾದೆ. ‘ಪದುಮನಾಭನಲಿ ಏನು ವಿಶೇಷ ‘ ಎಂದು ವಿಚಾರಿಸಿದರು. (ವಿಶೇಷದ ಶಷಸ ಗಳ ವ್ಯತ್ಯಾಸ ತಿಳಿಯದಿದ್ದಾಗ ಕೃಷ್ಣರಾಯರು ಅದನ್ನು ನನಗೆ ತಿಳಿ ಹೇಳಿದುದು ದೇವರಾಯರಿಗೆ ಗೊತ್ತಿತ್ತು).’ವಿಶೇಷವಿದೆ ಮೊನ್ನೆ ನಾನು ಎರಡನೆಯ ಹುಟ್ಟು ಪಡೆದು ಬ್ರಾಹ್ಮಣನಾದೆ’ ಎಂದು ತಾಳಮದ್ದಳೆಯ ಅರ್ಥದ ಧಾಟಿಯಲ್ಲಿ ಹೇಳಿದೆ. ಅದನ್ನು ಕೇಳಿ ಅವರು ನಕ್ಕು. . .’

“ನ ಜಟಾಹಿ ನ ಗೊತ್ತೇನ ನ ಜಚ್ಚಾ ಹೋತಿ ಬಮ್ಮಣೋ
ಯಮ್ಹಿ ಸಚ್ಚಂಚ ಧಮ್ಮೋಚ ಸೋ ಸುಖೀ ಸೋಚ ಬಮ್ಮಣೋ”
ಅಂದು ರಾಗವಾಗಿ ಹಾಡಿದರು.

ಇದು ಯಾವ ಭಾಷೆ ಅರ್ಥವೇನು ಎಂದು ಕೇಳಿದೆ. ಇದು ಪಾಲಿ ಭಾಷೆ, ಅಂದರೆ ಉತ್ತರ ಭಾರತದಲ್ಲಿಯ ಮಗಧ ಬಿಹಾರದ ಹಳೆಯ ಭಾಷೆ, ಈ ಮಾತು ಸಾವಿರಾರು ವರ್ಷಗಳ ಹಿಂದೆ ಅಲ್ಲಿದ್ದ ಭಗವಾನ್‌ ಬುದ್ಧ ಹೇಳಿದ್ದು. ಅದರ ಅರ್ಥವೇನೆಂಬ ಪ್ರಶ್ನೆಗೆ ಹೊರಗಿನ ವೇ‍‍ಭೂಷಣಗಳಿಂದ ಬ್ರಾಹ್ಮಣನಾಗುವುದಿಲ್ಲ, ಸತ್ಯ, ಧರ್ಮಗಳು ಬ್ರಾಹ್ಮಣನ ಗುರುತು’ ಎಂದರು. ನಾನು ‘ಬತ್ತಲೆ ನಿಂತಿಹ ಬುದ್ಧ ದೇವರು ನನಗೂ ಗೊತ್ತು. ಬುದ್ಧ ದೇವರು ಏನು ಪುಸ್ತಕ ಬರೆದಿದ್ದಾರೆ’ ಎಂದು ಕೇಳಿದೆ. ಅದಕ್ಕೆ ದೇವರಾಯರು ಗಹ ಗಹಿಸಿ ನಕ್ಕು ‘ನಿನ್ನ ಬುದ್ಧ ಬೇರೆ, ಈ ಭಗವಾನ್‌ ಬುದ್ಧ ಬೇರೆ. ಈ ಮಾತನ್ನು ಧಮ್ಮ ಪದ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ’ ಎಂದರು. ನಿಮ್ಮಲ್ಲಿ ಆ ಪುಸ್ತಕವಿದೆಯೇ ನನಗೆ ಓದಲು ಕೊಡುತ್ತೀರಾ ಎಂದು ಬೇಡಿದೆ. ಉತ್ತರವಾಗಿ ಅವರು ‘ನಿನಗೆ ನಾಗರಿ ಓದಲು ಗೊತ್ತೇ’ ಎಂದರು. ‘ನಾಗರಿ ಅಂದರೇನು’ ಎನ್ನುವ ನನ್ನ ಪ್ರಶ್ನೆಗೆ ‘ನಾಗರಿ ಅಂದರೆ ಸಂಸ್ಕೃತವನ್ನು ಬರೆಯುವ ಲಿಪಿ’ ಎಂದು ವಿವರಿಸಿದರು. ಅದು ನನಗೆ ಗೊತ್ತು ನನ್ನ ಹೆಸರನ್ನು ನಾಗರಿಯಲ್ಲಿ ಪದ್ಮನಾಭ ಎಂದು ಬರೆಯಲು ದ್ಮ ಬರೆಯಲು ಬಹಳ ಕಷ್ಟವಾಯಿತು ಕೊನೆಗೆ ಗೊತ್ತಾಯಿತು ಎಂದೆ. ಸರಿ ಹಾಗಿದ್ದರೆ ಈ ಚಿಕ್ಕ ಪುಸ್ತಕದಲ್ಲಿ ಒಂದು ನೂರು ಬುದ್ಧ ವಚನಗಳಿವೆ. ಅದನ್ನು ಓದು, ಎರಡು ದಿನದಲ್ಲಿ ತಿರುಗಿ ಕೊಡು, ಅರ್ಥವಾಗದಿದ್ದರೆ ಕೇಳು ಎಂದು ಸಾಧಾರಣ ಹದಿನಾರು ಪುಟಗಳ ಪುಸ್ತಕವೊಂದನ್ನು ಕೊಟ್ಟರು.

ಮನೆ ಮುಟ್ಟುತ್ತಲೇ ಅಪ್ಪನಿಂದ ಒಂದೂವರೆ ಆಣೆ ಕೇಳಿ ಪಡೆದು ಅಂಗಡಿಗೆ ಹೋಗಿ ನಲುವತ್ತು ಪುಟಗಳ ಎಕ್ಸರ್ಸೈಜ್‌ ಪುಸ್ತಕ ತಂದು ಪೆನ್ಸಿಲಿನಿಂದ ಆ ಪುಸ್ತಕದ ಪ್ರತಿ ಮಾಡಿದೆ. ಒಂದೂವರೆ ದಿವಸಗಳ ಶ್ರಮದಿಂದ ಮಾಡಿದ ಪ್ರತಿಯಲ್ಲಿ ನಾಗರಿ ಲಿಪಿಯೊಡನೆ ಕನ್ನಡ ಲಿಪಿಯೂ ಬೆರೆತಿತ್ತು. ಯಾವ ಭಾಷೆಯನ್ನೂ ತಮಗೆ ಬೇಕಾದ ಲಿಪಿಯಲ್ಲಿ ಬರೆಯಬಹುದು, ಭಾಷೆಗೆ ಲಿಪಿಯ ಬಂಧನವಿಲ್ಲ ಎಂಬ ಜ್ಞಾನೋದಯವಾದದ್ದು ಹೀಗೆ. ಪುಸ್ತಕ ಮುಗಿಯುತ್ತಾ ಬಂದಂತೆ ನನಗೆ ಪಾಲಿ ಭಾಷೆ ಅರ್ಥವಾಗಲು ಪ್ರಾರಂಭವಾಯಿತು. ಜನಪದ ಶಬ್ದಗಳ ಸುಧಾರಿತ ಆವೃತ್ತಿಯೇ ಸಂಸ್ಕೃತ ಶಬ್ದಗಳು ಅಥವಾ ಸಂಸ್ಕೃತ ಶಬ್ದಗಳ ಜನಪದ ರೂಪವೇ ಪಾಲಿ ಶಬ್ದಗಳು ಎಂಬ ಸೂತ್ರ ತಿಳಿಯಿತು. ದೇವರಾಯರಿಗೆ ಪುಸ್ತಕ ಹಿಂದಿರುಗಿಸುವಾಗ ಪಾಲಿ ಭಾಷೆಯ ಮೇಲೆಯೂ ಪ್ರೀತಿ ಹುಟ್ಟಿತು. ನಾಲಿಗೆಗೆ ಭಾರವಾಗದ, ಅಲ್ಪ ಶ್ರಮದ ಸೌಲಭ್ಯ ಎಂಬ ಗುಣವೇ ಸಾಮಾನ್ಯ ಜನ ಭಾಷೆಯ ಶಕ್ತಿ ಎಂದು ತಿಳಿಯಿತು. ದೇವರಾಯರು ಮಂಗಳೂರಿಗೆ ಹಿಂದಿರುಗಲು ಹೊರಟು ತಯಾರಾಗುತ್ತಿದ್ದುದರಿಂದ ಪ್ರಶ್ನೋತ್ತರಗಳಿಗೆ ವೇಳೆ ಇರಲಿಲ್ಲ. ಹೀಗೆ ದೇವರಾಯರು ನನ್ನ ಪಾಲಿನ ಪಾಲಿ ಗುರುವಾದರು.

ನಾನು ನಾಲ್ಕನೆಯ ಫಾರ್ಮಿನಲ್ಲಿದ್ದಾಗ ನಮ್ಮ ಊರಿನ ಸುಬ್ಬ ರಾವ್‌ ಅವರ ಮನೆಯಲ್ಲಿದ್ದ ಒಂದು ಜೀರ್ಣ ಪುಸ್ತಕ ಭಂಡಾರ ನನಗೆ ದೊರಕಿತು. ಹೆಚ್ಚಿನ ಪುಸ್ತಕಗಳು ಹುಳುಗಳ ಆಹಾರವಾಗಿದ್ದುದರಿಂದ ಒಂದು ಕೋಣೆಯಲ್ಲಿ ಬಿಡಿಸಿ ಇಟ್ಟಿದ್ದರು. ‘ಭಿ. ಪ. ಕಾಳೆಯವರ ಕಳವೋ,ಕೊಲೆಯೋ ಅಥವಾ ಧೀರೇಂದ್ರ, ತುಬ್ಬುಗಾರ ಸುಬ್ಬಣ್ಣ, ದೇವೀ ಚೌಧರಾಣಿ, ಆನಂದಮಠ, ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥರ ಮಾಧವ ಕರುಣಾ ವಿಲಾಸ, ಛತ್ರಪತಿ ಶಿವಾಜಿಯ ಸಾಹಸ ಗಾಥೆಗಳು, ತಣ್ಣೀರು ಬಾವಿಯ ಸುಬ್ಬ ರಾಯರು ಪ್ರತಿ ಮಾಡಿದ ತೊರವೆ ರಾಮಾಯಣ, ಜೈಮಿನಿ ಭಾರತ, ಅಷ್ಟಾಂಗ ಹೃದಯ ಮೊದಲಾದ ತಾಳೆಗರಿಯ ಪುಸ್ತಕಗಳು, ಮತ್ತು ಇಂಗ್ಲಿಶ್‌ನಲ್ಲಿ ಬರೆದ ವಿಜ್ಞಾನ ಪುಸ್ತಕಗಳು ಅಲ್ಲಿದ್ದವು. 1890 ರಲ್ಲಿ ಪ್ರಕಟವಾದ Inventions and Writings of Nikola Tesla ಎಂಬ ಪುಸ್ತಕ. D Van Nostrand Company, New York ನಿಂದ ಪ್ರಕಾಶಿತವಾದುದು ಆ ವಿಜ್ಞಾನ ಪುಸ್ತಕಗಳಲ್ಲಿ ಮುಖ್ಯವಾಗಿ ಕಾಣಿಸಿತು. ದಪ್ಪವಾಗಿದ್ದ ಆ ಪುಸ್ತಕದ ಕೊನೆಯ ಅರ್ಧದಷ್ಟು ಆಗಲೇ ಹುಳುಗಳಿಗೆ ಆಹಾರವಾಗಿತ್ತು. ಉಳಿದ ಮೊದಲ ಪುಟಗಳನ್ನು ಓದಿ ತಿಳಿದುಕೊಳ್ಳುವುದು ನನ್ನ ಇಂಗ್ಲಿಶ್‌ ಜ್ಞಾನ ಬೆಳೆಸಿಕೊಳ್ಳುವವರೆಗೆ ಸಾಧ್ಯವಿರಲಿಲ್ಲ. ಇಂಗ್ಲಿಶ್‌ನಲ್ಲಿ ಬರೆದ ವಿಜ್ಞಾನ ತಿಳಿಯಬೇಕಿದ್ದರೆ ಭಾಷಾ ಜ್ಞಾನ ಅತ್ಯಗತ್ಯವೆಂದು ಅರಿವಾಯಿತು. ಆ ಸಮಯದಲ್ಲಿ ಬಾಗಲೋಡಿ ದೇವರಾಯರು ಅಸೌಖ್ಯದ ಕಾರಣದಿಂದ ಕಿನ್ನಿಕಂಬಳದಲ್ಲಿಯೇ ಬಂದು ಇರುವುದಾಯಿತು. ಮದರಾಸಿನ ವಿದ್ಯಾಭ್ಯಾಸದ ಅನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಗ್ಲಿಶ್‌ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾಗಲೇ IFS ಎಂಬ ಕೇಂದ್ರ ಸರಕಾರದ ವಿದೇಶಾಂಗ ಸೇವೆಗೆ ಆಯ್ಕೆಯಾಗಿ ದೆಹಲಿಗೆ ಹೋದರು. ಅಲ್ಲಿಯ ತರಬೇತಿಯ ಕೊನೆಗೆ ರಶ್ಯಾದಲ್ಲಿ ಭಾರತದ ರಾಯಭಾರಿ ಕಚೇರಿಗೆ ಕಳಿಸಿದರು. ರಶ್ಯಾದ ಥಂಡಿ, ದೇವರಾಯರ ಆಹಾರ ನಿಯಮಗಳು ಕಾರಣವಾಗಿ ಬೆನ್ನೆಲುಬಿನ ಕ್ಷಯಕ್ಕೆ ತುತ್ತಾದರು. ಮುಂಬಯಿಗೆ ಜರ್ಜರಿತ ದೇಹದವರಾಗಿ ಬಂದಿಳಿದ ದೇವರಾಯರನ್ನು ಅವರ ಅಣ್ಣ, ತಂದೆಯವರು, ಮುಂಬಯಿಯಲ್ಲಿ ವಾಸಿಸುತ್ತಿದ್ದ ಕಿನ್ನಿಕಂಬಳದ ಕೃಷ್ಣರಾಯರ ಶಿಷ್ಯರು, ಸದಾಶಿವರಾಯರ ಅಣ್ಣನ ಮಗ ವೆಂಕಟರಾಯರಾದಿಯಾಗಿ ನೋಡಿಕೊಳ್ಳಬೇಕಾಯಿತು. ಡಾ. ತಲವಾಲಕರರ ಆಸ್ಪತ್ರೆಯಲ್ಲಿ ಅವರ ಬೆನ್ನು ಹುರಿಯ ಶಸ್ತ್ರ ಚಿಕಿತ್ಸೆ ನಡೆಯಿತು. ಮಹಾಬಲ ಶೆಟ್ಟರು, ಕಾಂತಪ್ಪ ಶೆಟ್ಟರು ಹಗಲು ರಾತ್ರಿ ಅವರನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರು. ಯಶಸ್ವೀ ಶಸ್ತ್ರ ಚಿಕಿತ್ಸೆಯ ಕೆಲ ತಿಂಗಳುಗಳ ಅನಂತರ ದೇವರಾಯರನ್ನು ವಿಮಾನದಲ್ಲಿ ಕಿನ್ನಿಕಂಬಳಕ್ಕೆ ತರಲಾಯಿತು. ಮುಂದೆ ಸಾಧಾರಣ ಮೂರು ವರ್ಷಗಳಷ್ಟು ಕಾಲ ಅವರು ಅವರ ತಂಗಿ, ಚಿಕ್ಕಮ್ಮ ಮತ್ತು ಅಪ್ಪನ ಆರೈಕೆಯಲ್ಲಿಯೇ ಇರಬೇಕಾಯಿತು. ಕತ್ತು ಅಲುಗಾಡದಂತೆ ಕಾಲರ್‌ಗಳನ್ನು ಅಳವಡಿಸಲಾಗಿತ್ತು. ಕಿನ್ನಿಕಂಬಳದ ವೈದ್ಯರು ಅವರನ್ನು ಆಗಾಗ ಬಂದು ನೋಡುತ್ತಿದ್ದರು. ನಮ್ಮಿಂದ ಅವರಿಗೆ ತೊಂದರೆಯಾಗದಂತೆ ನೋಡಿಕೊಂಡು ಬರುವುದು ನಮಗೆ ಅಷ್ಟು ಸುಲಭವಾಗಿರಲಿಲ್ಲ.

ಅಷ್ಟು ದೊಡ್ಡವರಲ್ಲಿ ನಾನು ಅಜ್ಞಾನಿ ಏನು ಕೇಳಲಿ ಎಂಬ ಅಳುಕು ಒಂದು ಕಡೆಯಾದರೆ, ನಾನು ನೋಡಿಯೂ ತಿಳಿದು ಕೊಳ್ಳಲಾಗದ ವಿಜ್ಞಾನದ ಪುಸ್ತಕಗಳ ಆಕರ್ಷಣೆ ಇನ್ನೊಂದು ಕಡೆ. ಕೊನೆಗೂ ಹುಚ್ಚು ಧೈರ್ಯ ಮಾಡಿ ಅವರನ್ನು ನೋಡುವ ಪ್ರಯತ್ನ ಮಾಡಿದೆ. ನಿಕೋಲಾ ಟೆಸ್ಲಾನ ಪುಸ್ತಕದ ಪ್ರವೇಶಿಕೆಯಲ್ಲಿದ್ದ ಆತನ ಜೀವನ ಚರಿತ್ರೆಯ ಎರಡು ಮೂರು ಪುಟಗಳನ್ನು ಕಷ್ಟಪಟ್ಟು ಸಾಧ್ಯವಾದಷ್ಟು ಅರ್ಥಮಾಡಿಕೊಂಡು ಪ್ರತಿ ಮಾಡಿಕೊಂಡು ದೇವರಾಯರಲ್ಲಿಗೆ ಹೋದೆ. ನನ್ನ ಸಮಸ್ಯೆಯನ್ನು ವಿವರಿಸಿ ನನ್ನ ಕಾಪಿ ಪುಸ್ತಕವನ್ನು ಅವರಿಗೆ ತೋರಿಸಿದೆ. ನನ್ನ ಬ್ರಹ್ಮ ಲಿಪಿಯನ್ನು ಮಲಗಿದಲ್ಲಿಂದಲೇ ಕಷ್ಟದಿಂದಲೇ ಓದಿ very good, ಟೆಸ್ಲಾ ಬಹಳ ದೊಡ್ಡ ವಿಜ್ಞಾನಿ. ಈ ಪುಸ್ತಕ ನೀನು ಓದಲೇ ಬೇಕು ಎಂದು ಹೇಳಿದರು.

ವಿಜ್ಞಾನ ಅರ್ಥವಾಗಬೇಕಾದರೂ ನಿನ್ನ ಇಂಗ್ಲಿಶ್ ಭಾಷೆಯನ್ನು ಬಲ ಪಡಿಸಿಕೊಳ್ಳಬೇಕು, ನಿನ್ನ ಇಂಗ್ಲಿಶ್ ಭಾಷೆ ಸಶಕ್ತವಾಗಿದ್ದರೆ ವಿಜ್ಞಾನ ಪುಸ್ತಕದ ಇಂಗಿತ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ ಎಂದರು. ಹೇಗೆ ಮಾಡಬೇಕೆಂಬ ಪ್ರಶ್ನೆಗೆ ಸಾಧ್ಯವಾದಷ್ಟು ಇಂಗ್ಲಿಶ್ ಪುಸ್ತಕಗಳನ್ನು ಓದು. ಒಂದು ಚಿಕ್ಕ ಇಂಗ್ಲಿಶ್ ಇಂಗ್ಲಿಶ್ ಕನ್ನಡ ಡಿಕ್ಷನರಿಯನ್ನು ಸಂಪಾದಿಸು. ಅರ್ಥ, ಉಚ್ಚಾರ ತಿಳಿಯಲಿಲ್ಲವಾದರೆ ಅಪ್ಪಯ್ಯನಲ್ಲಿ (ಕೃಷ್ಣ ರಾಯರಲ್ಲಿ) ಕೇಳು ಎಂದು ಕಲಿಯುವ ಕ್ರಮ ಕಲಿಸಿದರು. ನಿಮ್ಮಲ್ಲಿ ಏನಾದರೂ ಪುಸ್ತಕವಿದೆಯೇ ಎಂದುದಕ್ಕೆ, ಇದೆ ನೋಡು ಎಂದು ಬರ್ನಾರ್ಡ್‌ ಶಾನ ಏಂಡ್ರೋಕ್ಲೇ ಏಂಡ್‌ ದ ಲಯನ್‌ ನಾಟಕ ಓದಲು ಕೊಟ್ಟರು. ಏಂಡ್ರೋಕ್ಲೇ ನನಗೆ ಪರಿಚಯದವನೇ ಆಗಿದ್ದುದರಿಂದ ನಾಟಕ ತಿಳಿಯಬಹುದೆಂದು ಯೋಚಿಸಿದರೆ ನನ್ನ ಅಜ್ಞಾನ ನಿವಾರಣೆಯಾಗಲೇ ಇಲ್ಲ. ಎರಡು ದಿನಗಳ ಮೇಲೆ ಹಿಂದಿರುಗಿಸಿದರೆ ಶಾನ ನಾಟಕಗಳ ವಿಸ್ತಾರವಾದ ಮುನ್ನುಡಿ ನಾಟಕಕ್ಕಿಂತಲೂ ಹೆಚ್ಚು ಬೋಧಪ್ರದವಾಗಿರುತ್ತದೆ. ತತ್ಕಾಲಕ್ಕೆ ಇಂತಹದು ಬೇಡ ಬೇರೇನು ಸಿಗುತ್ತದೋ ನೋಡು ಎಂದರು.

ಕೆಲ ಕಾಲದ ಮೇಲೆ ನನ್ನ ಅಕ್ಕನ ಗಂಡ ಊರಿಗೆ ಬಂದಾಗ ಬೆಣ್ಣೆ ಹೊಡೆದು ಎರಡು ರುಪಾಯಿ ಹನ್ನೆರಡಾಣೆಗೆ Chambers Compact Dictionaryಯನ್ನು ಸಂಪಾದಿಸಿದೆ. ಮುಂದಿನ ಎರಡು ವರ್ಷ ಅಕ್ಷರಶಃ ಎಡೆ ಬಿಡದೆ ಇಂಗ್ಲಿಶ್‌ ಸಾಹಿತ್ಯದ ಅಭ್ಯಾಸ ಮಾಡಿ ಸಿಕ್ಕಿದ ಪುಸ್ತಕಗಳನ್ನು ಓದಿದ ಅನಂತರ ಸುಬ್ಬ ರಾವ್‌ ಅವರ ಮನೆಯಲ್ಲಿದ್ದ ಪುಸ್ತಕಗಳನ್ನು ಓದಿ ಅರ್ಥಮಾಡಲು ಸಾಧ್ಯವಾಯಿತು. ಟೆಸ್ಲಾರ ಸಾಧನೆಗಳ ಪುಸ್ತಕ ನನಗೆ ಹೊಸದೊಂದು ಸಾಧನೆಯ ದಾರಿ ದೊರಕಿಸಿತು. ಆ ಪುಸ್ತಕವನ್ನು ಓದಿ ತಿಳಿಯುವುದೇ ನನ್ನ ಮೊದಲ ಗುರಿಯಾಗಿತ್ತು. ಅಷ್ಟು ಕಾಲದ ಮೇಲೆ ಅದು ಸಾಧಿಸಿತು. ಆ ಪುಸ್ತಕ ಕಳೆದು ಹೋದರೂ ಅರುವತ್ತೈದು ವರ್ಷಗಳ ಹಿಂದೆ ಆಶ್ಚರ್ಯ ಪ್ರೀತಿಗಳಿಂದ ಓದಿದ ಆ ಪುಸ್ತಕದ ಕೆಲವು ಪುಟಗಳ ನೆನಪು ಇಂದಿಗೂ ಇದೆ. ಟೆಸ್ಲಾನಂತಹ ಅವಧೂತ ವಿಜ್ಞಾನಿಯ ಕಿರು ಪರಿಚಯದಿಂದ ಮೊದಲ್ಗೊಂಡ ಆ ಜೀರ್ಣವಾದ ಅರ್ಧ ಪುಸ್ತಕದ ಪ್ರೀತಿ ಇನ್ನೂ ಹಸಿಯಾಗಿಯೇ ಇದೆ. ಇಂಟರ್‌ನೆಟ್‌ ಆರ್ಕೈವ್‌ನಲ್ಲಿ ಈ ಪುಸ್ತಕ ನೋಡಿದಾಗ ನನಗೆ ಮನಸ್ಸು ತುಂಬಿ ಬಂತು. ಆ ಗ್ರಂಥ ಇಂದಿಗೂ ಪ್ರಸ್ತುತವಾಗಿರುವುದನ್ನು ನೋಡಿ ಸಂತೋಷವಾಯಿತು.

ದೇವರಾಯರ ಕಥೆಗಳ ಪುಸ್ತಕ ಹುಚ್ಚ ಮುನಸೀಫ ಮತ್ತು ಇತರ ಕಥೆಗಳಿಗೆ ರಾಜ್ಯ ಪ್ರಶಸ್ತಿ ದೊರಕಿದ ಸುದ್ದಿ ಬಂದಿದ್ದರೂ ಅದನ್ನು ನಾನು ಓದಿದ್ದು ಬಹಳ ದಿನಗಳ ಮೇಲೆ. ಆದರೆ ದೇವರಾಯರು ಆರಾಧನಾ ಬರೆಯುತ್ತಿದ್ದಾಗ ನಾನು ಕಿನ್ನಿಕಂಬಳದಿಂದ ಮಂಗಳೂರಿಗೆ ನಿತ್ಯ ಪ್ರಯಾಣಿಕನಾಗಿದ್ದೆ. ಆರಾಧನಾದ ಪ್ರೂಫ್‌ ಪ್ರತಿಗಳನ್ನು ಅಚೀಚೆಗೆ ಸಾಗಿಸುವ ಕೆಲಸ ಮಾಡುತ್ತಿದ್ದೆ. ಉಡುಪರ ವಸಂತ ಪ್ರೇಮಿ ಮಂಡಲಿಗೆ ರಾಯರ ಕರಡು ಪತ್ರಗಳನ್ನು ಸಾಗಿಸುವುದು, ಅಲ್ಲಿನ ಪತ್ರಗಳನ್ನು ಕಿನ್ನಿಕಂಬಳಕ್ಕೆ ಒಯ್ಯುವುದು ನನ್ನ ಕೆಲಸವಾಯಿತು. ಆದುದರಿಂದ ಆರಾಧನಾ ಕಥೆಯ ಮೊದಲ ನಿರೀಶ್ವರ ಆವೃತ್ತಿ ಮತ್ತು ಮುದ್ರಿತ ದೇವತಾನುಗ್ರಹದ ಆವೃತ್ತಿಗಳನ್ನು ಓದಿದ ಕೆಲವೇ ಕೆಲವರಲ್ಲಿ ನಾನೂ ಒಬ್ಬ. ದೇವರಾಯರನ್ನು ನೋಡಲು ಕಿನ್ನಿಕಂಬಳಕ್ಕೆ ಹಲವರು ಬರುತ್ತಿದ್ದರು. ಅವರಲ್ಲಿ ಮುಖ್ಯರು ವನಸುಮದ ಕರ್ತೃ ಸೇತು ಮಾಧವ ರಾಯರು, ಜಿ.ಟಿ. ನಾರಾಯಣರಾಯರು, ಉಡುಪಿಯ ಕಾಲೇಜಿನ ಪ್ರೊಫೆಸರರು ಕು.ಶಿ. ಹರಿದಾಸ ಭಟ್ಟರು, ಜನಾರ್ದನ ಎನ್ನುವವರು, ಎಲ್ಲಾ ದೊಡ್ಡ ಮನುಷ್ಯರು. ನಾವು ಹಳ್ಳಿಯ ಹುಡುಗರು ಅವರನ್ನೆಲ್ಲ ಆಶ್ಚರ್ಯದಿಂದ ನೋಡುತ್ತಿದ್ದೆವು.

ಮಂಗಳಾ ದೇವಿ ದೇವಸ್ಥಾನದ ತೆಂಕಣ ಪೌಳಿಯಲ್ಲಿ ನಡೆದ ರಾಯರ ಮದುವೆಯ ಊಟ ಮಾಡಿದವರಲ್ಲಿ ನಾನೂ ಒಬ್ಬ. ದೇವರಾಯರು ನೆಲದ ವರೆಗೆ ಬಗ್ಗಲು ಸಾಧ್ಯವಾಗದ ಕಾರಣ ಗುರು ಹಿರಿಯರನ್ನೆಲ್ಲ ದೇವಸ್ಥಾನದ ನಡೆಯ ಜಗಲಿಯ ಉನ್ನತ ಪದಕ್ಕೇರಿಸಿ ತಾವು ಕೆಳಗೆ ನಿಂತು ನಮಸ್ಕಾರ ಮಾಡಿದುದು ಇನ್ನೂ ನೆನಪಿದೆ. ನಾನು ದೇವರಾಯ ದಂಪತಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದುದನ್ನು ಅವರು ಬಹುಶಃ ನೋಡಿರಲಿಕ್ಕಿಲ್ಲವಾದರೂ ನನ್ನನ್ನು ನೋಡಿದಷ್ಟು ಸರ್ತಿ ಕೂಡಲೇ ಗುರುತಿಸಿ ಮಾತನಾಡಿಸುತ್ತಿದ್ದರು.

* * * *

ದೇವರಾಯರನ್ನು ಅವರ ಮದುವೆಯಲ್ಲಿ ನೋಡಿದ ಮೇಲೆ ಇನ್ನೊಮ್ಮೆ ನೋಡಿದ್ದು 1963ರಲ್ಲಿ. ಇಟೆಲಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಅವರು ಸಪತ್ನೀ ಪುತ್ರರಾಗಿ ಬೊಂಬಾಯಿಗಾಗಿ ಭಾರತಕ್ಕೆ ಹಿಂದೆ ಬರುತ್ತಿದ್ದರು. ನಾನೂ ಆಗ ಬೊಂಬಾಯಿಯಲ್ಲಿದ್ದುದರಿಂದ ಕಟೀಲಿನ ವೆಂಕಟರಾಯರು (ಡಾ. ಲಲಿತಾ ರಾಯರ ಗಂಡ) ಅವರನ್ನು ವಿಮಾನ ನಿಲ್ದಾಣದಿಂದ ಬೊಂಬಾಯಿ ಸಯಾನಿನಲ್ಲಿರುವ ತನ್ನ ಮನೆಗೆ ಕರೆತರುತ್ತಿದ್ದಾರೆಂದು ತಿಳಿಯಿತು. ಇನ್ನೂ ಪೂರಾ ಬೆಳಕಾಗದ ಮುಂಜಾನೆ ದೇವರಾಯರು ಮನೆಯ ಮುಂದೆ ಕಾರಿನಿಂದ ಇಳಿಯುತ್ತಿದ್ದಂತೆ ನನ್ನನ್ನು ಗುರುತಿಸಿ ”ಪದುನಾಭನಲಿ ಏನು ವಿಶೇಷ” ಎಂದು ಎಲ್ಲವನ್ನೂ ನೆನಪಿಸಿದರು. ಆ ದಿನ ಸಂಜೆಗೆ ನಮಗೆಲ್ಲಾ ಇಟಲಿಯ ಚರ್ಚುಗಳ ಕಲಾ ವೈಭವದ ಮೇಲೆ ತಾಸುಗಟ್ಟಲೆ ವಿವರಿಸಿದರು. ಅವರ ಪುಟ್ಟ ಮಗು ಅರ್ಮಾಂಡೋ, ಅರ್ಮಾಂಡೋ ಎಂದು ಕೇಳುತ್ತಿದ್ದುದು ಇಟಲಿಯಲ್ಲಿದ್ದ ಅವರ ಸಹಾಯಕನನ್ನು ಎಂದು ಹೇಳಿದರು. ಮರುದಿನ ಮುಂಜಾನೆ ಡಾ. ಲಲಿತಾ ರಾಯರ ಅಣ್ಣ ತಮ್ಮಂದಿರನ್ನೂ ವೆಂಕಟರಾಯರ ತಮ್ಮಂದಿರನ್ನೂ ನಮ್ಮ ಕೆಲ ಮಿತ್ರರನ್ನೂ ಒಬ್ಬೊಬ್ಬರನ್ನಾಗಿ ಮಾತನಾಡಿಸಿ ತಮ್ಮ ಯೋಚನೆಯ ಅಂತಸ್ತಿನ ಪರಿಚಯವಾಗುವಂತೆ ಮಾಡಿದರು. ಕೆಲ ದಿನಗಳ ಮೇಲೆ ಡಾ. ಲಲಿತಾ ರಾಯರ ತಮ್ಮ ಮಣಿ ಶಾಸ್ತ್ರಿಯವರಿಗೆ, ದೇವರಾಯರ ಹೆಂಡತಿಯ ತಂಗಿ ಶಾಂತಿಯನ್ನು ಮದುವೆ ಮಾಡಿಕೊಡುವುದಾಗಿ ನಿಶ್ಚಯವಾಯಿತು. ಆ ಕಾಲದ ಸಾಮಾಜಿಕ ಅಡೆತಡೆಗಳನ್ನು ದಾಟುವುದರಲ್ಲಿ ದೇವರಾಯರ ಪಾತ್ರ ಹಿರಿದು.

ನೈಜೀರಿಯದಿಂದ ಹಿಂತಿರುಗಿದಾಗ ಅಲ್ಲಿನ ಸಾಮಾನ್ಯ ಜನರು ನಮ್ಮಲ್ಲಿಯಂತೆ ಚೌಕಾಶಿ ವ್ಯಾಪಾರದಿಂದ ಸಂತೋಷ ಪಡೆಯುತ್ತಿದ್ದುದನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ನೇಪಾಲದಿಂದ ಬಂದಾಗ ಅಲ್ಲಿನ ಬೌದ್ಧ ಮತ್ತು ಹಿಂದು ಸಂಸ್ಕೃತಿಗಳ ಮುಖಾಮುಖಿಯ ಚರಿತ್ರೆಯನ್ನು ಚರಿತ್ರಕಾರನಂತೆ ವಿಶದೀಕರಿಸುತ್ತಿದ್ದರು. ಈ ಭೇಟಿಯ ನಂತರ ಕೆಲ ಸುಸಂಧಿಗಳನ್ನು ಬಿಟ್ಟರೆ ದೇವರಾಯರನ್ನು ಮರೆತೇ ಬಿಟ್ಟೆನೋ ಅನ್ನುವಂತಾಯಿತು. ನನ್ನ ಲೋಕ ಸಂಚಾರ ಮತ್ತು ಅವರ ಲೋಕ ಸಂಚಾರದ ಕಕ್ಷೆಗಳು ಒಂದನ್ನೊಂದು ಹೆಚ್ಚಾಗಿ ಹಾದು ಹೋಗಲೇ ಇಲ್ಲ.

ಎಂಬತ್ತರ ದಶಕದಲ್ಲಿ ನಾನು ನನ್ನ ಮನೆಯನ್ನು ಬೆಂಗಳೂರಿಗೆ ಬದಲಿಸಿ ಕೊಳ್ಳುತ್ತಿರುವಾಗ ಪುನಃ ದೇವ ಸ್ಮೃತಿಯಾಯಿತು. ಇದಕ್ಕೆ ಕಾರಣ ‘ಮಲ್ಲಿಗೆ’ ಮಾಸಿಕ ದಲ್ಲಿ ಪ್ರಕಟವಾದ ಗಿರಡ್ಡಿ ಗೋವಿಂದ ರಾಜರು ಆರಿಸಿದ್ದ ಮರೆಯಲಾರದ ಹಳೆಯ ಕಥೆಗಳಲ್ಲಿ ಪ್ರಕಟವಾದ ದೇವರಾಯರ ಕಥೆ ‘ಹುಚ್ಚ ಮುನಸೀಫ’. ಅದಕ್ಕೆ ನಮ್ಮ ಪ್ರತಿಕ್ರಿಯೆಗಿಂತಲೂ ಹೆಚ್ಚಾಗಿ ಅವರ ಅಳಿಯ ಬರೆದ ಪತ್ರಕ್ಕೆ ಪ್ರತಿಕ್ರಿಯೆ ಮುಖ್ಯ ಪ್ರೇರಣೆಯಾಗಿ ದೇವರಾಯರು ಇನ್ನಷ್ಟು ಕಥೆಗಳನ್ನು ಬರೆಯುವಂತಾಯಿತು. ಸುಧಾ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಹೊಸ ಕಥೆಗಳನ್ನು ತಪ್ಪದೆ ಓದಿ ಸಂತೋಷಪಡುತ್ತಿದ್ದೆವು. ಅದೂ ಅಲ್ಲದೆ ಅವರ ಮೊದಲ ಕಥೆಗಳ ಮರು ಓದು ಕೂಡಾ ನಡೆಯಿತು.

ಇದೇ ಸಂದರ್ಭದಲ್ಲಿ ದೇವರಾಯರು ಕೆಲಸದಿಂದ ನಿವೃತ್ತರಾಗಿ ಬೆಂಗಳೂರಿಗೆ ಬಂದು ಇಂದಿರಾನಗರದಲ್ಲಿ ಪತ್ತುಮುಡಿಯವರ ಮನೆಯಲ್ಲಿ ಕೆಲ ಕಾಲ ಇರುವುದಕ್ಕೆ ಬಂದರು. ಅವರ ಫೋನ್‌ ನಂಬರು ನನಗೆ ದೊರಕಿತು. ಅವರಲ್ಲಿ ಮಾತನಾಡಿದಾಗ ಕೂಡಲೇ ಗುರುತು ಹಿಡಿದು ಮರುದಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಯಾವುದೋ ಕಾರ್ಯಕ್ರಮಕ್ಕೆ ತಾವು ಬರುತ್ತಿರುವುದಾಗಿಯೂ, ಸಾಧ್ಯವಿದ್ದರೆ ಅಲ್ಲಿ ಸಿಗಬಹುದೇ ಎಂದು ಕೇಳಿದರು. ಖಂಡಿತವಾಗಿ ಬರುತ್ತೇನೆಂದು ಹೇಳಿ ಮರುದಿನ ಅವರನ್ನು ಭೇಟಿಯಾದೆ. ಕಾರ್ಯಕ್ರಮದ ನಂತರ ಮಾತನಾಡುತ್ತಾ ಅವರ ಮನೆಯ ವಿಳಾಸವನ್ನು ಹೇಳಿ ಅನುಕೂಲವಾದಾಗ ಬಂದು ನೋಡುವಂತೆ ಹೇಳಿದರು. ಕೆಲದಿನಗಳು ಕಳೆದು ಹೋದಾಗ ಕಥೆಗಳ ವಿಷಯ ಮಾತನಾಡುತ್ತಾ ಬರವಣಿಗೆಯನ್ನು ಪುನರಾರಂಭಿಸಿದ ಸಂದರ್ಭವನ್ನು ಹೇಳಿದರು. ಬಂಗಾಲದ ಸೇನ ವಂಶದ ಮೂಲ ಪುರುಷರು ನೇತ್ರಾವತಿಯ ತಟದವರೆಂಬ ಕಥೆ ಹೇಳಿದರು. ಮಾಯಿಲರ ಕೋಟೆಗಳು, ಪಣೆ ಅಂದರೆ ಹಣೆ ಮಂಗಳೂರು ಲಲಾಟಪುರವಾಗಿ ದೂರ ಪೂರ್ವದ ದೇಶಗಳಲ್ಲೂ ಭಾರತದ ಸಂಸ್ಕೃತಿಯ ಮುದ್ರೆಯೊತ್ತಿದ ಸನ್ನಿವೇಶಗಳ ಮೇಲೆ ಬರೆಯುವ ಆಸೆ ತೋರಿಸಿದರು. ಅವಳಿ ವೀರರ ಕಥೆಗಳು ವಿಶ್ವದ ಕಥೆಗಳಲ್ಲಿ ಇರುವ ವಿಚಾರಗಳನ್ನು ಹೇಳಿ ಅವಳಿಗಳು ಒಬ್ಬರಿಗೊಬ್ಬರು ಪೂರಕರಾಗಿರುವ ಗುಟ್ಟನ್ನು ಉಲ್ಲೇಖಿಸಿ ಇದೆಲ್ಲವನ್ನೂ ವಿವರವಾಗಿ ಬರೆಯುವ ಇಂಗಿತವನ್ನು ತೋರಿಸಿದರು. ನನ್ನಲ್ಲಿ ಮಾತನಾಡುತ್ತಿದ್ದರೆ ನಮ್ಮ ಹುಟ್ಟೂರಿಗೆ ಹೋದ ಭಾಸವಾಗುತ್ತದೆ ಎಂದು ಒಂದಿಷ್ಟು ತುಳು, ಕೊಂಕಣಿಗಳಲ್ಲಿ ಮಾತನಾಡಿದರು. ಮಾತು ಬೆಳೆಯುತ್ತಿದ್ದಂತೆ ಅವರ ಇತ್ತೀಚಿನ ಹೊಸ ಕಥೆಗಳನ್ನು ಒಂದು ಸಂಕಲನವಾಗಿ ಪ್ರಕಟಿಸುವ ಆಶೆಯನ್ನು ಹೇಳಿದರು. ನಾನು ಧಾರವಾಡದ ನನ್ನ ಗುರುತಿನ ಮನೋಹರ ಗ್ರಂಥಮಾಲೆಯವರಿಗೆ ಪತ್ರ ಬರೆದು ವಿಚಾರಿಸುವುದಾಗಿ ಹೇಳಿದೆ. ಅದೇ ದಿನ ಪತ್ರ ಬರೆದರೆ ಮನೋಹರ ಗ್ರಂಥಮಾಲೆಯ ರಾಮಜೋಶಿ ಫೋನಿಸಿ ತಾನು, ಜಡಭರತರು ಮತ್ತು ಕೀರ್ತಿ ಕುರ್ತಕೋಟಿಯವರು ಅದೇ ದಿನ ಹೊರಟು ಮರುದಿನವೇ ಬೆಂಗಳೂರಿಗೆ ಬರುವುದಾಗಿ ಹೇಳಿದರು. ಕೂಡಲೇ ದೇವರಾಯರನ್ನು ಸಂಪರ್ಕಿಸಿ ಮರುದಿನ ಸಂಜೆ ಮೂರು ಗಂಟೆಗೆ ನಾವು ಬರುವುದಾಗಿ ಹೇಳಿದೆ. ಹಾಗೆ ನಾವು ನಾಲ್ವರು ಹೋದಾಗ ಪ್ರೀತಿಯಿಂದ ಬರಮಾಡಿಕೊಂಡು ಹೆಚ್ಚಿನ ಕಥೆಗಳು ಆಗಲೇ ಸುಧಾ, ಪ್ರಜಾವಾಣಿ ಮತ್ತು ಮಲ್ಲಿಗೆಯಲ್ಲಿ ಪ್ರಕಟವಾಗಿರುವುದಾಗಿ ಕೆಲ ಕಥೆಗಳ ಮುದ್ರಿತ ಪ್ರತಿಗಳು ಮಾತ್ರ ಅವರಲ್ಲಿರುವುದಾಗಿಯೂ ಹೇಳಿದರು. ಅವರ ಒಂದೇ ಷರತ್ತೆಂದರೆ ಆ ಪುಸ್ತಕಕ್ಕೆ ಗಿರಡ್ಡಿ ಗೋವಿಂದರಾಜರಿಂದ ಮುನ್ನುಡಿ ಬರೆಸಬೇಕು ಎಂಬುದಾಗಿತ್ತು. ಗಿರಡ್ಡಿಯವರು ಮನೋಹರ ಗ್ರಂಥಮಾಲೆಯ ಅಟ್ಟದ ಸದಸ್ಯರೇ ಆಗಿದ್ದುದರಿಂದ ಅದೇನೂ ಸಮಸ್ಯೆಯಲ್ಲ ಎಂದು ತಿಳಿದು ಸಂತೋಷಪಟ್ಟರು. ದುರದೃಷ್ಟದಿಂದ ರುದ್ರಪ್ಪನ ರೌದ್ರ ಮತ್ತು ಇತರ ಕಥೆಗಳು ಪುಸ್ತಕ ರೂಪದಲ್ಲಿ ಪ್ರಕಟವಾಗುವುದನ್ನು ನೋಡಲು ಅವರು ಉಳಿಯಲಿಲ್ಲ. ಇಂದಿರಾ ನಗರದಲ್ಲಿ ನಮ್ಮನ್ನು ಗೇಟಿನ ವರೆಗೆ ಬಂದು ಕಳುಹಿಹೋದುದು ನನ್ನ ಅವರ ಕೊನೆಯ ಭೇಟಿಯಾಗಬಹುದೆಂದು ನಾನು ನೆನಸಿರಲೇ ಇಲ್ಲ. ಅವರು ಬರೆಯದ ಕಥೆಗಳು ಹಾಗೆಯೇ ಅಳಿದು ಹೋದವು. ನಮ್ಮನ್ನು ಬೀಳ್ಕೊಡುವ ಅವರ ಚಿತ್ರ ನನ್ನ ಮನಸ್ಸಿನಲ್ಲಿ ಹಾಗೆಯೇ ಇದೆ.

ನನಗೆ ತಿಳಿದಂತೆ ದೇವರಾಯರ ಹೆಚ್ಚಿನ ಕಥೆಗಳು ಅವರಿಗೂ ನಮಗೂ ಪರಿಚಯದ ಕಿನ್ನಿಕಂಬಳದ ಹತ್ತು ಸಮಸ್ತರ ಕಥೆಗಳು. ಬೇರೆ ಮೂಲದ ಕಥೆಗಳಿದ್ದಾಗಲೂ ನಡೆಯುತ್ತಿದ್ದುದೆಲ್ಲಾ ಕಿನ್ನಿಕಂಬಳದ ಸನ್ನಿವೇಶಗಳು. ಸಂಕಪ್ಪ ರೈ, ರುದ್ರಪ್ಪನಾಗಿ, ಗುರುಪುರದ ಮಾಧವ ಭಟ್ಟರು ಹುಲಿ ಜೋಯಿಸರಾಗಿ, ಬಾವು ಬ್ಯಾರಿ ಶುದ್ಧ ಫಟಿಂಗನಾಗಿ, ಸತ್ತಾರ್‌ ಸಾಹೇಬರು ಮಗ್ಗದ ಸಾಹೇಬರಾಗಿ, ವೆಂಕಟೇಶರು ಭೀಮಸೇನ ಪಿಪೀಲಿಕರಾಗಿ, ಕೇಳುನಂಬಿಯಾರ್‌ ಕೇಳು ಜನಮೇಜಯರಾಗಿ, ಮೃಷ್ಟಾನ್ನದ ಬಂಧುಗಳು ಪಾಣೆಮಂಗಳೂರಿನ ಮಾಯಿಲ ನಂದರಿಂದ ಪ್ರೇರಿತರಾದ ಜುಮಾದಿ ಬಂಟರಾಗಿ, ಎಲ್ಲರೂ ನಮ್ಮ ಮಧ್ಯದಲ್ಲಿದ್ದ ಅಸಾಮಾನ್ಯ ಸಾಮಾನ್ಯರು. ಎಲ್ಲರ ಬದುಕುಗಳೂ ಅದ್ಭುತವಾದ ಕಥೆಗಳು. ಅವುಗಳನ್ನು ಕೇಳುವ ಕಿವಿ ಬೇಕು, ನೋಡುವ ಕಣ್ಣಿರಬೇಕು, ಬರೆಯುವ ಕೈಗಳಿರಬೇಕು.

ಕೆ.ಪಿ.ರಾವ್‌
06 Sept, 2017