ಚಕ್ರೇಶ್ವರ ಪರೀಕ್ಷಿತ – ೧೯

ಸಂಜೆಯ ಸೈಕಲ್ ಸವಾರಿ ತೊಕ್ಕೋಟಿಗೆ ಹೋಯ್ತು. ತೊಕ್ಕೋಟಿನ ರೈಲ್ವೇ ಮೇಲ್ಸೇತು ದಾಟಿದ್ದೇ ಬಲದ ಪೆರ್ಮನ್ನೂರಿಗಿಳಿದೆ. ಬಂದ ದಿಕ್ಕಿಗೇ ಮರಳಿದಂತೆ, ರೈಲ್ವೇ ಹಳಿಯ ಸಮಾನಾಂತರದ ದಾರಿಯನ್ನೇ ಆಯ್ದುಕೊಳ್ಳುತ್ತ ಹೋದೆ. ಸವೇರಪುರ್ಬುಗಳ (ನೋಡಿ: `ಸ್ವಚ್ಛತೆ’ಯ ಹಾದಿಯಲ್ಲಿ ನೇತ್ರಾವತಿಯ ನಾಡಿ ಮಿಡಿದು) ಮನೆಯ ಬಳಿ ಮತ್ತೆ ನೇತ್ರಾವತಿ ದರ್ಶನ.

ನೇತ್ರಾವತಿ, ಫಲ್ಗುಣಿಗಳು ಸಂಗಮಿಸಿ ಕಡಲಿಗೆ ನುಗ್ಗುವ ಗಡಿಬಿಡಿಯಲ್ಲಿ ಉಳ್ಳಾಲದ ನೆಲವನ್ನು ಸಾಕಷ್ಟು ಅಡ್ಡ, ನೀಟ ಸೀಳುಗಳನ್ನಾಗಿಸಿದೆ. ಹೀಗುಂಟಾದ ದೊಡ್ಡ ಹೋಳುಗಳ ಜನಜೀವನವನ್ನು ಪರಸ್ಪರ ಬೆಸೆಯುವಲ್ಲಿನ ಅಸಂಖ್ಯ ಸೇತುಗಳು, ಮೈಕುಣಿಸುವ ದಾರಿ, ಇಂಚು ಆಕಾಶವನ್ನೂ ಬಿಡದಂತೆ ವ್ಯಾಪಿಸಿದ ತೆಂಗಿನ ಚಪ್ಪರ, ಭೂಮಿ ಕಡಲ ಮೈತ್ರಿ ದಿನಕ್ಕೆರಡು ಬಾರಿ ನೆನಪಿಸುವಂತೆ ಉಬ್ಬುವ, ತಗ್ಗುವ ಹಿನ್ನೀರ ಹರಹು, ಬಂಧುರವಾಗಿ ಬೆಸೆದ ಜನಜೀವನ ಇವಕ್ಕೆಲ್ಲ ಮಾತಿನ ನ್ಯಾಯ ಎಂದೂ ದಕ್ಕದು; ಅನುಭವಿಸಬೇಕು. (ಮಾಧ್ಯಮಗಳ ‘ಅತಿ-ರಂಗು’ ನೋಡಿ ಹೊರಗಿನ ಯಾರೋ ನನ್ನಲ್ಲಿ ಮೂರ್ಖ ಪ್ರಶ್ನೆ ಹಾಕಿದ್ದರು “ಈಗ ಮಂಗಳೂರು ಶಾಂತವೋ?”)

ಕಡಲ ಸಾಮೀಪ್ಯ ವಲಯದ ಋತುಮಾನಗಳ ತೀವ್ರತೆ, ಜೀವನ ನಿರ್ವಹಣೆಯ ಕಷ್ಟಗಳ ಯಾವುದೇ ಸೋಂಕಿಲ್ಲದ ನಾನು ನದಿಯ ಮುಖ್ಯಧಾರೆಯದ್ದೋ ಸೀಳೊಂದರ ನಾಲೆಯದ್ದೋ ನೀರ ಸಾಮಿಪ್ಯವನ್ನು ಬಿಡದೇ ಸೈಕಲ್ ವಿಹಾರ ಎನ್ನುವಂತೆ ಅಳಿವೆ ಬಾಗಿಲನ್ನೇ ಸೇರಿದೆ. ಇಲ್ಲಿನ ಕಲ್ಲರಚನೆ ಕಳೆದ ಮಳೆಗಾಲದಲ್ಲಿ ನಡುಮುರಿದುಕೊಂಡಿತ್ತು. ‘ಸಮುದ್ರಕ್ಕೆ ಉಪ್ಪು ಹೊರುವವರು’ ಮತ್ತದೇ ಕೆಲಸ ನಡೆಸಿದ್ದರು. ಪ್ರಾಕೃತಿಕ ಶಕ್ತಿಯ ಪಾರಮ್ಯ ಮರೆತು, ಸ್ಪಷ್ಟ ಕಸ ಕೊಳಕು ಇದ್ದಂತೆ, ಇನ್ನಷ್ಟು ಕಲ್ಲು, ಮಣ್ಣು, ಸಿಮೆಂಟೆಂದು ಎರಡೆರಡು ದುರುದುಂಡಿಗಳು ಹೇರುತ್ತಲೇ ಇದ್ದವು. ಅಲ್ಲಿ ಮಲ್ಪೆಯಲ್ಲಿ, ಇಂಥದ್ದೇ ರಚನೆಗೊಂದಷ್ಟು ಬಣ್ಣ, ಆಟಿಕೆ ಹೇರಿ ‘ಸೀ ವಾಕ್’ ಎಂಬ ಜನಮರುಳು ನಡೆಸಿದ್ದಾರೆ. ಇತ್ತ ನೇತ್ರಾವತಿಯ ಬೆಂಗ್ರೆ ಬದಿಯಲ್ಲೂ ಸರ್ಕಸ್ ನಡೆಸಿ ‘ಸನ್ ಸೆಟ್ ಪಾಯಿಂಟ್’ ಎಂದು ಸುಳ್ಳೇ ದಾಖಲಿಸಿದ್ದಾರೆ. ಉಳ್ಳಾಲದ ಈ ಕೊನೆಯಲ್ಲೂ ಹಾಗೇ ಇನ್ನೇನೋ ಒಂದು

‘ಬಣ್ಣದ ತಗಡು’ ರೂಪುಗೊಂಡರೆ ಏನೂ ಆಶ್ಚರ್ಯವಿಲ್ಲ. ಕಾರ್ಗಾಲದಲ್ಲಿ ಇಲ್ಲಿ ಮುಪ್ಪುರಿಗೊಳ್ಳುವ ಪ್ರಾಕೃತಿಕ ಮೇಳ (ಜಡಿಗುಟ್ಟುವ ಮಳೆ, ಉಬ್ಬರಿಸುವ ಹೊಳೆ, ಅಬ್ಬರಿಸುವ ಕಡಲು) ನಿರ್ದಯೆಯಲ್ಲಿ ಏನೇ ಮಾಡಲಿ, ‘ಮಾಡಿಕೊಂಡವರು’ ನಗುತ್ತಿರುತ್ತಾರೆ!

ಸಂಜೆರವಿ ಮೋಡಗಳ ಹಿಂದೆ ಸರಿಯುತ್ತಿದ್ದಂತೆ, ನಾನು ಮನೆಯತ್ತ ಸಾರಿದೆ.

(ಅನಿರ್ದಿಷ್ಟವಾಗಿ ಮುಂದುವರಿಯಲಿದೆ)