ಕಾಡುಬಿದ್ದ ಕೃಷಿಭೂಮಿಗಳನ್ನು ಕಾಡಿಗೇ ಮರಳಿಸುವ ಯೋಜನೆಯ ಪ್ರಥಮ ಹೆಜ್ಜೆ ನಮ್ಮ `ಅಶೋಕವನ’ದ್ದು. (ಡಾ|ಕೃಷ್ಣಮೋಹನ್ ಮತ್ತು ನಾನು ಸ್ವಂತ ಹಣದಲ್ಲಿ ಕೊಂಡ ನೆಲ. ಹೆಚ್ಚಿನ ವಿವರಗಳಿಗೆ ನೋಡಿ: ಅಶೋಕವನ) ನನ್ನ ಪುಸ್ತಕದಂಗಡಿಯನ್ನು ಮುಚ್ಚಿದ ಮೇಲೆ, ಅದೇ ಬಿಸಿಲೆ ವಲಯದಲ್ಲಿ ಹೀಗೇ ಹಡಿಲುಬಿದ್ದ ಇನ್ನಷ್ಟು ಖಾಸಗಿ ಭೂಮಿಗಳನ್ನು, ಇನ್ನಷ್ಟು ವನ್ಯಾಸಕ್ತರ ಮಡಿಲಿಗೆ ಹಾಕಿ, ಸರಕಾರ ಮಾಡದ ವನ್ಯಸಂರಕ್ಷಣೆಯನ್ನು ಸಾಧಿಸುವ ಉತ್ಸಾಹವೂ ನಮ್ಮದಿತ್ತು. ಆದರೆ ಸರಕಾರ `ಎಲಿಫೆಂಟ್ ಕಾರಿಡಾರ್’ ಅರ್ಥಾತ್ ಆನೆಗಳೋಣಿ ಎಂಬ ಹುಸಿ ಯೋಜನೆಯನ್ನು ವದಂತಿಯ ಮಟ್ಟದಲ್ಲಿ ಪ್ರಚುರಿಸಿಬಿಟ್ಟಿತು. ಆ ಯೋಜನೆ ನಿಜವೇ ಆದರೆ ಪುಷ್ಪಗಿರಿ ವನಧಾಮದಿಂದ, ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ – ಮುಖ್ಯವಾಗಿ ಕಾಡಾನೆಗಳಿಗೆ, `ಸಹಜ’ವಾಗಿ ಓಡಾಡಲೊಂದು ಕಾಡಿನ ಹರಹು ಒದಗಿಸುತ್ತಾರೆ. ಅಲ್ಲಿ ಈಗ ಇರುವ ಬೇಲಿ, ಅಗಳು, ವಸತಿ, ಕೃಷಿ ಚಟುವಟಿಕೆಗಳನ್ನು ಸರಕಾರ ತೆರವುಗೊಳಿಸುತ್ತದೆ. ಅಂದರೆ ಕೆಲಕಾಲದಲ್ಲೇ ಅದು ಪ್ರಾಕೃತಿಕವಾಗಿ ಪುನರುತ್ಥಾನ ಕಂಡು – ಕಾಡೇ ಆಗಿ, ಆನೆಗಳಿಗೆ ಓಣಿಯಾಗಿ ರೂಪುಗೊಳ್ಳುತ್ತದೆ.

ಆನೆ ಓಣಿಯ ವನ್ಯ ಸಾಧ್ಯತೆಗಳ ಚರ್ಚೆ ಬಹಳ ದೊಡ್ಡದು, ಇಲ್ಲಿ ಬೇಡ. ಅದರ ಸಾಮಾಜಿಕ ಪ್ರಾಯೋಗಿಕತೆಯ ಕುರಿತೂ ಸ್ಪಷ್ಟ, ಗಂಭೀರ ಚಿಂತನೆಗಳನ್ನು ಸರಕಾರ ನಡೆಸಿಲ್ಲ. ತನ್ನೆಲ್ಲ ಅಲ್ಪಾಯು ಆದರೆ ಮಹಾವೆಚ್ಚದ `ಅಭಿವೃದ್ಧಿ’ ಯೋಜನೆಗಳಂತೇ ಇದನ್ನೂ ಘೋಷಿಸಿಕೊಂಡರು. ಕೆಳ ಮಟ್ಟದ ಅರಣ್ಯ ಇಲಾಖಾ ಅಧಿಕಾರಿಗಳ ಮೂಲಕ “ಪಟ್ಟಾಭೂಮಿಗಳಿಗೆ ಎಕ್ರೆಗೆ ಹತ್ತು ಲಕ್ಷ ರೂಪಾಯಿಗಳಿಗೆ ಕಡಿಮೆಯಾಗದಂತೆ ಪರಿಹಾರ” ಎಂಬ ಮಾತನ್ನೂ ದಟ್ಟವಾಗಿ ತೇಲಿಬಿಟ್ಟರು. ನಮ್ಮ ಅಶೋಕವನವಾದರೋ ಮುಖ್ಯ ದಾರಿಯ ಒತ್ತಿನದೇ ಭೂಮಿ. ನಾವದನ್ನು ಎಕ್ರೆಗೆ ಅರವತ್ತುಸಾವಿರ ರೂಪಾಯಿಯಂತೆ ಖರೀದಿಸಿದ್ದೆವು. ಕೇವಲ ಸವಕಲು ಜಾಡಷ್ಟೇ ಇರುವ ಇಂಥ ಇನ್ನೆಷ್ಟೋ ಖಾಸಗಿ ಹಿಡುವಳಿಗಳನ್ನು ಇನ್ನಷ್ಟು ಕಡಿಮೆ ಬೆಲೆಗಳಲ್ಲಿ ಕೊಳ್ಳುವ ಆಶಯವನ್ನು ಹೊಂದಿದ್ದೆವು. ಗಮನಿಸಿ, ನಮ್ಮದು ಪೂರ್ಣ ಖಾಸಗಿ ಹಣಕಾಸಿನ ವ್ಯವಸ್ಥೆ ಮತ್ತು ವೈಯಕ್ತಿಕವಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಹೂಡಿಕೆ. ಅದಕ್ಕೆ ಸರಕಾರದ `ಎಕ್ರೆಗೆ ಹತ್ತು ಲಕ್ಷಕ್ಕೆ ಕಡಿಮೆಯಿಲ್ಲದ ಆನೆಗಳೋಣಿ’ ಯೋಜನೆ ಅಸಾಧ್ಯ ತಡೆಗೋಡೆಯೇ ಆಯ್ತು! ನಮ್ಮನ್ನು ಬಿಡಿ, ಈ ಕುಹಕವನ್ನು ಸುಮಾರು ಎಂಟು ವರ್ಷಗಳುದ್ದಕ್ಕೂ ನಂಬಿ ದಿನ ತಳ್ಳುತ್ತಿರುವ ಬಡ ಹಿಡುವಳಿದಾರರಿಗಂತೂ ಇದು ಅಕ್ಷರಶಃ ಬಾಯಿಗೆ ಬಿದ್ದ ಬಿಸಿತುಪ್ಪವೇ ಆಗಿದೆ. ಅವರು ಬಹುತೇಕ ಗದ್ದೆಗಳನ್ನು ಹಡಿಲುಬಿಟ್ಟಿದ್ದಾರೆ, ವಾರ್ಷಿಕ ಬೆಳೆಗಳನ್ನು ಮರೆತು ಕಾಯುತ್ತಲೇ ಇದ್ದಾರೆ. (ಅವರನ್ನು ತಣಿಸಲು, ಘೋಷಿಸಿದ ೯೦೦ ಹೆಚ್ಚುವರಿ ಗಡಂಗುಗಳು ಮಾತ್ರ ಚುರುಕಾಗಿಯೇ ಬಂದಾವು!) ಆನೆಗಳು ಆಹಾರ, ನೀರು ಮತ್ತು ಪರ್ಯಾಯ ದಾರಿಗಳನ್ನು ಹುಡುಕುತ್ತ ಕಂದಕಗಳನ್ನು ನಿಗಿಯುತ್ತಿವೆ, ಬೇಲಿಗಳನ್ನು ಕಿತ್ತೊಗೆಯುತ್ತಿವೆ, ಕೃಷಿಯನ್ನು ಧ್ವಂಸವೇ ಮಾಡುತ್ತಿವೆ.

ಮಂಗಳೂರು ಸಮೀಪದ, ನಮ್ಮ ಅಭಯಾರಣ್ಯದ ಒತ್ತಿನ ಕೃಷಿಭೂಮಿ ಎಡೆಂಬಳೆ. ಇದರ ಉಸ್ತುವಾರಿ – ನನ್ನ (ಚಿಕ್ಕಮ್ಮನ ಮಗ) ತಮ್ಮ, ಸತ್ಯನಾರಾಯಣ. ಈತ ಇಂದು ದೊಡ್ಡ ಕಾಡಿನದ್ದೇ ಸಮಸ್ಯೆಯನ್ನು ಇಲ್ಲಿ ಅನುಭವಿಸುತ್ತಿದ್ದಾನೆ! ಅವನ ಸುಮಾರು ಐವತ್ತು ಎಕ್ರೆ ವಿಸ್ತೀರ್ಣದ ಭೂಮಿಯಲ್ಲಿ ಯಾವುದೇ ಗೆಡ್ಡೆ ಮೂಲದ ಹಸಿರು ಉಳಿದಿಲ್ಲ. ಮುಂದುವರಿದು ಉದುರಿದ ತೆಂಗಿನಕಾಯಿ, ನಾಟಿಮಾಡಿದ ಎಲ್ಲಾ ತೆರನ ಎಳೆಯ ಸಸಿಗಳೂ ನಾಶವಾಗುತ್ತಿವೆ. ಸಮಸ್ಯೆ ಆನೆ ಕಾಟಿಗಳದ್ದಲ್ಲ, ಬರಿಯ ಕಾಡು ಹಂದಿಗಳದ್ದು. ಆತ ಅವುಗಳ ನಿವಾರಣೋಪಾಯಗಳನ್ನೆಲ್ಲ ಮೀರಿ, ಈಗ ಸಹವಾಸದ ಹಂತ ಮುಟ್ಟಿದ್ದಕ್ಕೆ ಸಾಕ್ಷಿ – ಈ `ವೈಲ್ಡ್ ಬೋರ್ ಕಾರಿಡಾರ್’! ಹಂದಿ, ಬೀಡಾಡಿ ನಾಯಿ ಮುಂತಾದವಕ್ಕೆ ಕತ್ತರಿ, ವಿಷಾಹಾರ, ಬಾಂಬು, ಬೇಟೆ, ಮುಳ್ಳ ತಂತಿ, ವಿದ್ಯುತ್ ಬೇಲಿ, ಪಾಗಾರ ಎಂಬ ನೂರೆಂಟು ಸಲಹೆಗಳಲ್ಲಿ ಹಲವಂ ಬಲ್ಲವರಿಂದ ತಿಳಿದು, ಕೆಲವಂ ಸ್ವತಃ ಮಾಡಿ, ಸೋತು, ಸತ್ಯ ಕಂಡ ಸಮನ್ವಯದ ದಾರಿ ಹಂದಿ-ದ್ವಾರ. ಕಾಡು ಹಂದಿಗಳು ಇವರ ವಲಯಕ್ಕೆ ಹೊಕ್ಕು ಹೊರಡುವಾಗ ಕನಿಷ್ಠ ಪಾಗಾರಗಳನ್ನಾದರೂ ಉಳಿಸಿಕೊಡಲೆಂದು, ಹೀಗೆ ನಾಲ್ಕೂ ದಿಕ್ಕಿಗೆ ಎಂಟು ದ್ವಾರಗಳನ್ನೇ ಜೋಡಿಸಿಬಿಟ್ಟಿದ್ದಾನೆ!

(೯-೧-೨೦೧೭ರ ಫೇಸ್ ಬುಕ್ ಟಿಪ್ಪಣಿ)