(ಚಕ್ರೇಶ್ವರ ಪರೀಕ್ಷಿತ ೨೦)

ನಿನ್ನೆ ಸಂಜೆಯ ಸೈಕಲ್ ಸವಾರಿಗೆ ಪೀಠಿಕೆಯಾಗಿ ಒಂದು ಕತೆ: ತೆನ್ನಾಲಿರಾಮನ ಮೇಲೆ ರಾಜದ್ರೋಹದ ಆರೋಪ ಬಂತು. ಅವನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು, ಆನೆಯಿಂದ ಮೆಟ್ಟಿಸಿ ಕೊಲ್ಲುವ ಆಜ್ಞೆ ಆಯ್ತು. ರಾಜಭಟರು ರಾಮನನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹುಗಿದು ನಿಲ್ಲಿಸಿ, ಆನೆ ತರಲು ಹೋದರು. ಇತ್ತ ಒಬ್ಬ ಗೂನನ ಸವಾರಿ ಬಂತು. ಆತ ಆಶ್ಚರ್ಯದಲ್ಲಿ ಕೇಳಿದ “ಏನಿದು?” ರಾಮ ಅರೆನಿಮೀಲಿತ ನೇತ್ರನಾಗಿ, ಗಂಭೀರಧ್ವನಿ ತೆಗೆದಿದ್ದಾನೆ “ಧ್ಯಾನ ಭಂಗ ಮಾಡಬೇಡ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ನನ್ನ ಬೆನ್ನಹುರಿ ನೇರವಾಗಲಿದೆ!” ಅಪ್ರತಿಭ ಗೂನ ಆ ಸೆಕೆಂಡುಗಳು ಸಲ್ಲುವುದನ್ನು ಕಾದು, ಅವಸರವಸರವಾಗಿ ರಾಮನನ್ನು ಮಣ್ಣಬಂಧನದಿಂದ ಬಿಡಿಸಿದ. ಮತ್ತೆ ತೆನ್ನಾಲಿರಾಮನನ್ನೇ ಕಾಡಿ ಬೇಡಿ ತನ್ನನ್ನು ಕುತ್ತಿಗೆವರೆಗೆ ಹುಗಿಸಿಕೊಂಡನಂತೆ. ರಾಮ ಇನ್ನಷ್ಟು ಕತೆಗಳಿಗಾಗಿ ದೂರ ಓಡಿದ. ಗೂನ ಧ್ಯಾನಸ್ಥನಾಗಿದ್ದಂತೆ ಆನೆ ಬಂದು ಮೆಟ್ಟಿ, ಪಚಕ್ಕಾದ.

ಪುತ್ತೂರು ದಾರಿಯಲ್ಲಿ ಲಂಕಾಮುಖಿಯಾದ ಹನುಮನಂತೆ ಏಕಧ್ಯಾನದಿಂದ ರೊಂಯ್ ರೊಂಯ್ ಸೈಕಲ್ ಮೆಟ್ಟುತ್ತಿದ್ದೆ. ಸಮುದ್ರದಿಂದ ಧುತ್ತೆಂದು ಎದ್ದ ಮೈನಾಕದಂತೆ ವಳಚಿಲ್ ಗುಡ್ಡೆ ಕರೆದಂತಾಯಿತು. ಹನುಮನಿಗೇನೋ ಮೈನಾಕ ವಿರಾಮಧಾಮವಾಗಿ ಆಹ್ವಾನಿಸಿದ್ದಿರಬಹುದು. ಆದರೆ ಇದು, ಏಳು ಹಿಮ್ಮುರಿ ತಿರುವುಗಳ ಭರ್ಜರಿ ಏರು ಸವಾಲು. ಅದನ್ನು ಒಂದೇ ಉಸಿರಿಗೆ ಉತ್ತರಿಸಿ, ಶ್ರೀನಿವಾಸ ಮತ್ತು ಎಕ್ಸ್‍ಪರ್ಟ್ ಸಂಸ್ಥೆಗಳ ನೆಲೆ ಎದುರು ಹಾಯ್ದು, ಮೇರ್ಲಪದವಿಗಾಗಿ ಸಾಗಿ, ಪಾತಾಳಕ್ಕೆ ಧುಮುಕಿ, ಆಕಾಶಕ್ಕೆ ಏರಿ, ಇನ್ನೇನು ನೀರ್ಮಾರ್ಗ – ಬೆಂಜನಪದವು ರಸ್ತೆ ಮುಟ್ಟಬೇಕೆನ್ನುವಲ್ಲಿ ಮೊದಲೇ ಹೇಳಿದ ತೆನ್ನಾಲಿರಾಮನ ಕತೆಗೊಂದು ಪ್ರಾತ್ಯಕ್ಷಿಕೆ ಕಾಣ ಸಿಕ್ಕಿತು.

ಆ ಈ ಕೊನೆಗಳಲ್ಲಿ ಯಾವುದೇ ಮಹೋದ್ದಿಮೆಗಳಿಲ್ಲದ ಈ ಮೂಲೆಯಲ್ಲಿ ಮಾರ್ಗದ ಭೀಕರ ಅಗಲೀಕರಣ ನಡೆದಿದೆ. ದುರುದುಂಡಿ, ಟಿಪ್ಪರ್ ಸರಣಿಗಳು ಎರಡೆರಡು ಗುಡ್ಡಗಳನ್ನು ಬಗಿದು, ದಟ್ಟ ಹಸಿರಿನ ಕಣಿವೆಗಳನ್ನು ನಿಷ್ಕರುಣೆಯಿಂದ ನಿಗಿಯುತ್ತಲೇ ಇವೆ. ಕತೆಗೆ ವಿಪರೀತವಾಗಿ, ಇಲ್ಲಿ ನೆಟ್ಟಗಿದ್ದ ಮರಗಿಡಗಳನ್ನೇ ಕಂಠಮಟ್ಟ ಹುಗಿದು ಹಾಕುತ್ತಿದ್ದಾರೆ. (ಕಣಿವೆಗಳಲ್ಲಿ ಅಸಂಖ್ಯ ಪೂರ್ಣ ಸಮಾಧಿಯೇ ಆಗಿರಬೇಕು.) ಆರ್ಥಿಕ ವರ್ಷದ ಅನುದಾನದ ಮುಗಿತಾಯದ ಅವಸರವೋ, ವಿವೇಚನೆ ಕುರುಡಾಗಿ ಕುಟ್ಟುವುದು ಕೆತ್ತುವುದೇ ಅಭಿವೃದ್ಧಿ ಎಂಬ ಭ್ರಮೆಯೋ ಇಲ್ಲಿ ಕೆಲಸ ಮಾಡುತ್ತಿರಬೇಕು. ಹೀಗೆ ಬುದ್ಧಿಗೂನಾದವರನ್ನು ಮೇ ತಿಂಗಳಲ್ಲಿ ಬರಲಿರುವ ಮತ-ಗಜ ಮೆಟ್ಟಿಕೊಲ್ಲುವ ಸಾಮಾಜಿಕ ನ್ಯಾಯದ ನಿರೀಕ್ಷೆಯಷ್ಟೇ ನನಗುಳಿದಿದೆ.

ನೀರ್ಮಾರ್ಗಕ್ಕಾಗಿ ಮೂಡಬಿದ್ರೆ ಮಾರ್ಗ ಸಂಧಿಸಿದೆ. ಮಂಗಳೂರು ಡೈರಿ ಕಳೆದು ಇನ್ನೇನು ಕುಲಶೇಖರ ಇಗರ್ಜಿ ಏರು ಉತ್ತರಿಸಬೇಕೆನ್ನುವಾಗ, ಅಲ್ಲೇ ಭೂಗತವಾಗಿ ಸಾಗಿದ ರೈಲ್ವೇ ಹಳಿಗಳ ನೆನಪಾಯ್ತು. ನಿನ್ನೆ ಮೊನ್ನೆಯಷ್ಟೇ ಪತ್ರಿಕೆಗಳಲ್ಲಿ: “ಕುಲಶೇಖರ ಗುಹಾಮಾರ್ಗದ ದ್ವಿಪಥ ಕಾರ್ಯ ಮುಗಿತಾಯದ ಹಂತದಲ್ಲಿ, ಪುಟ್ಟ ಕುಲಶೇಖರ ರೈಲ್ವೇ ನಿಲ್ದಾಣದ ರಚನೆ” ಓದಿದ್ದೆ. ನೋಡಿಯೇ ಬಿಡೋಣವೆಂದು ಎಡದ ನಿರ್ಮಾಣಕಾಲದ ಮಣ್ಣ ದಾರಿಯಲ್ಲಿ ದಡಬಡಾಯಿಸಿ ಸ್ವಲ್ಪ ದೂರ ಹೋದೆ. ಅನತಿ ದೂರದಲ್ಲಿ ಬಹು ಆಳದಲ್ಲಿ ಗುಹಾಮಾರ್ಗದ ಇನ್ನೊಂದು ಬಾಯಿ ಕಾಣಿಸಿತು. ಆದರೆ ಕಚ್ಚಾ ಮಾರ್ಗ ತೀವ್ರ ಇಳುಕಲಿನದು. ಅಲ್ಲಿನ ಕೈಮರ ‘ಸೂರ್ಯ ನಗರಕ್ಕೆ ದಾರಿ’ ಎಂದೇ ಹೇಳಿಕೊಂಡರೂ ನಿಜದ ಆಕಾಶ ಆಳ್ವ ಮರೆಯಾಗುವುದರಲ್ಲಿದ್ದ. ಗುಹಾ ಮಾರ್ಗದ ದರ್ಶನವನ್ನು ಇನ್ನೊಂದೇ ದಿನಕ್ಕುಳಿಸಿ, ಮನೆಗೆ ಮರಳಿದೆ.

(ಅನಿರ್ದಿಷ್ಟವಾಗಿ ಮುಂದುವರಿಯಲಿದೆ)