(ಚಕ್ರೇಶ್ವರ ಪರೀಕ್ಷಿತ ೨೩)
ದೈನಂದಿನ ಸೈಕಲ್ ಸರ್ಕೀಟಿನ ಸಂಗ್ರಹ

ಛಲ ಬಿಡದ ತ್ರಿವಿಕ್ರಮನಂತೆ ಸರ್ಕೀಟಿಗೆ ಸಜ್ಜುಗೊಂಡು ನಾನು ಸೈಕಲ್ ಕೊಟ್ಟಿಗೆಗೆ ಹೋದೆ. ಸೈಕಲ್ ಕತ್ತಲ ಮೂಲೆಯಲ್ಲಿ ಶೀರ್ಷಾಸನ ಮಾಡಿತ್ತು. ದೀಪ ಹಾಕಿ, ಕೀಲೆಣ್ಣೇ ಬಿಟ್ಟು ಸಮಾಧಾನಿಸಿದೆ. ಹೊರಗೆ ಆಕಾಶರಾಯ ಉತ್ತರಿಸಿದ “ಟ-ಠ-ಡ-ಢ-ಣ!” ಅರ್ಥವಾಗಲಿಲ್ವಾ – ಇಂದು ಸರ್ಕೀಟಿಗೆ ರಜೆ. ಅ(ಹ)ವಮಾನ ಶಾಸ್ತ್ರಿಗಳು ಹೇಳಿದ್ದು ನಿಜವಾದರೆ ಇನ್ನೆಂದು ಸೈಕಲ್ ಸರ್ಕಿಟೋ ತಿಳಿದಿಲ್ಲ 🙁 (೭-೬-೨೦೧೫)

ವರುಣನ ಮೇಲೆ ತರಣಿ ವಿಜಯ ನೋಡಿ ನಾನು ನಿನ್ನೆ ಸೈಕಲ್ ಏರಿದ್ದೆ. ಲೇಡಿಹಿಲ್, ಕೊಟ್ಟಾರ, ಕೂಳೂರಿಗಾಗಿ ತಣ್ಣೀರುಬಾವಿಯತ್ತ ಹೊರಳಿದೆ. ಅದುವರೆಗೆ `ಮೊದಲ ಮಳೆ’ ಅನೇಕ ಕಡೆ ಚರಂಡಿ ಉಕ್ಕಿಸಿ ಕೊಟ್ಟ ಬೆದರಿಕೆಗಳ ಉತ್ತರಕ್ರಿಯೆಯಾಗಿ ಪೌರ ಕಾರ್ಮಿಕರು ಅರೆಮನಸ್ಕತೆಯಲ್ಲಿ ಕಳೆ ಕಿತ್ತು, ಇಲ್ಲದ ಚರಂಡಿ ಬಿಡಿಸುತ್ತಿದ್ದದ್ದು ಗಮನಿಸಿದ್ದೆ. ಆದರಿಲ್ಲಿ, ಕೂಳೂರು ಸಂಕ ಕಳೆದು ತಿರುಗಿದ್ದೇ ಎಡಕ್ಕೆ ರಸ್ತೆ ಹಾಗೂ ಫಲ್ಗುಣಿ ನದಿಯ ನಡುವೆ ಇರುವ ಸಣ್ಣ ಹರಹಿನಲ್ಲಿ – ಯಾವುದೇ ಸಾರ್ವಜನಿಕ ನೇರ ಉಪಯುಕ್ತತೆ ಇಲ್ಲದ ಜಾಗದಲ್ಲಿ, ಹಿತಾಚಿಯೊಂದು ಹುಲ್ಲು ಪೊದರು ಕಳೆದು, ನದಿ ಎತ್ತಿ ಹಾಕಿದ ಕೊಳಕು ಮತ್ತು ಮರಳಿಗರು ಮಾಡಿದ ಅಪರಾತಪರಾಗಳನ್ನು ಭಾರೀ ತುರ್ತಿನಲ್ಲಿ ಮಟ್ಟ ಹಾಕುತ್ತಿತ್ತು. ನಗರದ ಸಾರ್ವಜನಿಕ ಕ್ಷೇಮಕ್ಕೆ ಮೀರಿದ ಆದ್ಯತೆ ಇಲ್ಲೇನು ಬಂತೋ ತಿಳಿಯಲಿಲ್ಲ. ನೇರ ಎಣ್ಣೆ ವಿತರಣ ಕೇಂದ್ರದ ಕಡಲ ಕಿನಾರೆಗೆ ಹೋದೆ. ನೀರಿಗೆ ನಿಲುಕದ ದೂರದಲ್ಲಿ ನಿಂತು ಉಬ್ಬರದ ಅಲೆಗಳ ಅಟಾಟೋಪ ಚಿತ್ರ ಹಿಡಿಯುತ್ತಿದ್ದೆ. ಮೂರು ಲಲನಾಮಣಿಗಳು ಹಲ್ಲು ಕಿರಿಯುತ್ತಾ ಬಂದು ಚರವಾಣಿ ಆಂಗ್ರೇಜಿಯಲ್ಲಿ ನನ್ನ ಕ್ಯಾಮರಾದಲ್ಲಿ ನನ್ನ ಚಿತ್ರ ಕ್ಲಿಕ್ಕಿಸಿಕೊಡುವ ಉತ್ಸಾಹ ತೋರಿದರು, ನಾನು “no thanks.” ಮತ್ತೆ ನಿಜ ಉದ್ದೇಶಕ್ಕಿಳಿದು, ಮರಳ ಹಾಸಿನಲ್ಲಿ ಒಂದು ಸುತ್ತು ಸೈಕಲ್ ಸವಾರಿ ಕೇಳಿದರು. ಅವರ ಪರಿಣತಿ ತಿಳಿಯದೆ, ಕಚ್ಚುಗಾಲಿ ಮತ್ತು ಸರಪಳಿಗೆ ಉಪ್ಪುನೀರು ಹಾಗೂ ಮರಳ ಸೋಂಕಿನ ಭಯವಿದ್ದುದರಿಂದ ನಾನು “no, it can’t be.” ಅತ್ತ ಡಾಮರು ರಸ್ತೆ ತೋರಿ ಬೇಡಿಕೆ ಬಲಪಡಿಸಿದರು. ನಾನು “sorry, no time” ಎಂದವನೇ ಜಾಗ ಖಾಲಿ ಮಾಡಿದೆ.

ಸುಲ್ತಾನ್ ಬತೇರಿಯತ್ತಣ ದೋಣಿಕಟ್ಟೆಯ ಬಳಿ ಹೋದೆ. ಸಮುದ್ರದ ಭರತಕ್ಕೆ ಮಳೆಗಾಲದ ನದಿ ಹರಿವು ಸೇರಿ ನೀರು ಭಯ ಹುಟ್ಟಿಸುವ ನಿಶ್ಚಲತೆಯಲ್ಲಿ ತುಂಬಿಕೊಂಡಿತ್ತು. ಪೊದರು ಕಂಟಿಗಳಲ್ಲೆಲ್ಲ ಸಿಕ್ಕಿಕೊಂಡಿದ್ದ ಥರ್ಮೋಕೋಲಾದಿ ಅಸಂಖ್ಯ ತೇಲು ಕಸಗಳು ಎದ್ದೆದ್ದು ನದಿಯ ಮೇಲ್ಮೈಯಲ್ಲಿ ವಿಹಾರ ಹೊರಟಿರುವುದನ್ನು ಕಂಡೆ. ಹೊಳೆಕರೆಯಲ್ಲಿನ ತರುಣನಿಗೆ ಅದನ್ನು ತೋರಿ, ನಾನು ಕೆಣಕಿ ಕೇಳಿದೆ. ಅದಕ್ಕೆ ಆತ “ಹಾಂ, ಭಾರತವಿನ್ನು ಸ್ವಚ್ಛವಾಗಬೇಕಾದರೆ ಕಸಗಳೇ ಮುಂದಾಗಬೇಕೋ ಏನೋ.”

ತಿಂಗಳ ಹಿಂದಿನ ಸುಂಟರಗಾಳಿಗೆ ಅರಣ್ಯ ಇಲಾಖೆಯ ಅಣಕದ ಜೋಪಡಿ ವಠಾರ, ತನ್ನ ಭಂಗಗೊಂಡ ಮುಖಕ್ಕೆಲ್ಲ ಸಿಮೆಂಟ್ ಸಾರಣೆ ನಡೆದಿತ್ತು. ತುಸು ಮುಂದುವರಿದಾಗ ಇಲ್ಲೊಂದು ಹಿತಾಚಿ ದಾರಿಯಂಚಿನಲ್ಲಿ ಆಗಲೇ ನೂರಾರು ಮೀಟರ್ ಉದ್ದಕ್ಕೆ ಭರದಿಂದ ಅಡಿಪಾಯ ತೋಡಿ ಮುಂದುವರಿದಿತ್ತು. ಈಚೆ ಕೊನೆಯಿಂದ ಅದನ್ನನುಸರಿಸಿದಂತೆ ಸರಳ ಮಂಚ ಹೊಸೆದು, ಕಾಂಕ್ರೀಟ್ ಸುರಿದು ಭಾರೀ ಪಾಗಾರಕ್ಕೆ ನೆಲೆಗಟ್ಟು ಸಜ್ಜಾಗುತ್ತಿತ್ತು. ಕಾಮಗಾರಿಯ ಉಸ್ತುವಾರಿ ಜನದ ಬಳಿ ಏನಿದೆಂದು ಕೇಳಿದೆ.

ರಾಜಕಾರ್ಯ ದುರಂಧರ ಉತ್ಸಾಹದಲ್ಲಿ ಪುಟಿಯುತ್ತಿದ್ದ. “ಗೋಲ್ಫಿಗೆ! ಜನ ಗೊತ್ತಿಲ್ಲದೆ ಸಣ್ಣದಾಗಿ ವಿರೋಧಿಸಿದ್ದರು. ನಮ್ಮ ಡೀಸೀ ಸಾಹೇಬ್ರೇ ಬಂದು ಅಲ್ಲಿನ ಮೂರು ಮನೆಗೇನೂ ತೊಂದ್ರೆಯಿಲ್ಲಾಂತ ಹೇಳಿದ್ದಾರೆ. ನೋಡಿ, ಇದ್ರಲ್ಲಿ ಪೊಲೂಸನ್ ಇಲ್ಲ. ಪಾಗಾರ ನೋಡಿ ಹೀಗೆ ಹೋಗಿ, ಹಾಗೆ ತಿರುಗಿ……” ಎಂದು ಆತ ಗೋಡೆ ಸಾಗುವ ದಿಕ್ಕು ತೋರಿಸುವಾಗ ಮತ್ತೂ ಮೂರು ನಾಲ್ಕು ಕಿಮೀ ಆಚಿನ ಅಳಿವೆ ಬಾಗಿಲಿನವರೆಗಿನ ಮರಳ ಕಿನಾರೆಯೆಲ್ಲಾ ಇಲ್ಲಿನ ಜನಗಳ ಆಟ, ವಿಹಾರಗಳಿಗೆ ಖಾಯಂ ನಿಷೇಧಿಸಲ್ಪಡುವುದು ಸ್ಪಷ್ಟವಾಯ್ತು. ಇದ್ಯಾವುದರ ಪರಿವೆಯಿಲ್ಲದಂತೆ, ಇಂದು ಆಡಿದ್ದೇ ಬಂತು ಎಂಬಂತೆ, ಆಚಿನ ಮರಳ ಹಾಸಿನ ಮೇಲೆ ಆಡುತ್ತಿದ್ದ ಹರಕುಚಡ್ಡಿ ಹುಡುಗರು ಒಮ್ಮೆಗೇ “ಗೋಲ್” ಎಂದು ಬೊಬ್ಬೆ ಹಾಕಿ ಸಂಭ್ರಮಿಸಿದರು. ಅಂಕಾಡೊಂಕಿ ಕೋಲುಗಳನ್ನು ಹುಗಿದು, ಹತ್ತೆಂಟು ಹರಕು ಕುಂಬು ಮೀನಬಲೆ ಜೈಂಟ್ ಹಾಕಿ ನಿಲ್ಲಿಸಿದ್ದ ಸಣ್ಣ ಚೌಕಟ್ಟಿನೊಳಗೆ, ನಾಲ್ಕು ಪ್ಯಾಚಿನ ಕಾಲ್ಚೆಂಡು ತೂರಿತ್ತು. ನವಮಂಗಳೂರು ಬಂದರ, ಆ ಈ ಬೃಹತ್ ಉದ್ದಿಮೆಗಳು ಬರಲಿದ್ದಾಗ ಸರಕಾರ ಅಲ್ಲಿನ ಬಡ ಒಕ್ಕಲುಗಳ ಅಂಗಳಕ್ಕೆ ಸ್ಥಿರ ಮರುವಸತಿಯ ರಂಗುರಂಗಿನ ಚೆಂಡೊಂದನ್ನು ಹಾಕಿತ್ತು. ಅವರು ಅದನ್ನು ಮೇಜಿಂದ ಮೇಜಿಗೆ ಒದೆಸಿ, ಆಗೀಗ ಎದೆಗೊಟ್ಟು ನೂಕಿಸಿ, ಯಾರದ್ದೋ ಕಾಲಸಂದಿನಲ್ಲಿ ನೂರಿಸಿ, ಮತ್ಯಾರೋ ತಲೆಘಟ್ಟಿಸಿದ್ದಕ್ಕೆ ಚಿಮ್ಮಿಸಿಕೊಂಡೆಲ್ಲಾ ಬರುತ್ತಿದ್ದಾಗ ಡೀಸೀಸಾಹೇಬ್ರ ಮಾತಿನಿಂದ ಬೆಂಗರೆಯಲ್ಲಿ ಸೆಲ್ಫ್ ಗೋಲಾಗಿತ್ತು. ಇವರಿಗೆ ಪಟ್ಟಾ ಇಲ್ಲ, ಮತ್ತೆ ಎತ್ತಂಗಡಿಯಷ್ಟೇ ಸಿದ್ಧಿ! ಋತುರಾಜ ಮೋಡದರಳೆಯನ್ನು ಮಂಗಳೂರತ್ತ ಮುದ್ದೆ ಮಾಡಿಟ್ಟಿದ್ದ, ಕಡಲಿನತ್ತ ಉದ್ದುದ್ದಕ್ಕೆ ಹಿಂಜಿ ಬತ್ತಿ ಹೊಸೆದಿದ್ದ. ಅದರ ಮರೆಯಲ್ಲಿ ಹಣಿಕುತ್ತಾ ದಿನದುದ್ದದ ನಡಿಗೆಗೆ ಬಳಲಿ ಕೆಂಪಾಗುತ್ತಾ ಆಧಾರ ಕೋಲನ್ನು ಸಮುದ್ರ ನೀಲಿಮೆಗೆ ಕುಟ್ಟುತ್ತಾ ಸೂರ್ಯ ಪಡುಬಿಡಾರ ಸೇರುವವನಿದ್ದ. ನಾನೂ ಗೃಹಾಭಿಮುಖನಾದೆ. ಬೆಂಗ್ರೆ ದಾರಿಯ ಮಧ್ಯಂತರದಲ್ಲಿರುವ ಒಂದು ವಾಹನ ವಿರಾಮದಾಣದತ್ತ ಬರುವಾಗ, ಮರಳ ಹಾಸಿನಲ್ಲಿ ವರ್ಣಧ್ವಜ ನಿಲ್ಲಿಸಿದ ಪುಟ್ಟ ಓಟದ ಕಣ, ಆಚೆ ಭಾರೀ ಲಾರಿ ಕಾಣಿಸಿತು. ಬೆಂಗಳೂರಿನ ಯಾರೋ ಉದ್ಯಮಿಯಂತೆ. ಲಾರಿಯಲ್ಲಿ ಮೂರು ವಿಧದ ಸಕಲ ಸಂಚಾರಿ ವಾಹನ ತಂದು, ಆಸಕ್ತರಿಗೆ ಸವಾರಿಯೋಗ ಕಲ್ಪಿಸಿದ್ದ! ಅದು ಸರಿಯಾಗಿಯೇ ಇತ್ತು. ಆದರೆ ಉದ್ದಿಮೆ (ಗಾಲ್ಫ್ ಮೈದಾನ) ಮತ್ತು ಆಡಳಿತಗಳ (ನಗರದ ಮಳೆಗಾಲದ ಸಿದ್ಧತೆ) ವ್ಯತ್ಯಾಸ ಗೊತ್ತಿಲ್ಲದ ಅಥವಾ ಗೊತ್ತಿದ್ದೂ ಪ್ರಜಾಕೋಟಿಯನ್ನು ವಂಚಿಸುವ ಜನಸೇವಕರನ್ನು ನೆನೆದು ಹೆದರಿಹೋದೆ. “ಪಣಂಬೂರಿನ (ಕಿನಾರೆಯಲ್ಲಿ ಏಳುತ್ತಿರುವ ಭರ್ಜರಿ) ಹೋಟೆಲಿನಲ್ಲಿ ಉಂಡು, ಅರಣ್ಯ ಇಲಾಖೆಯ ಅಣಕದ ಜೋಪಡಿಗಳಲ್ಲಿ ಗುಂಡು, ಬೆಂಗ್ರೆ ಬಾಲರು ಒಡ್ಡುವ ಕಡ್ಡಿಗಳಲ್ಲಿ ಕುಟ್ಟಬಹುದಿತ್ತು ಗಾಲ್ಫ್ ಚೆಂಡು. ಆದರೆ ಮರಳ ಹಾಸಿನಲ್ಲಿ ಕಾಲೆಳೆಯುವ ಸಂಕಟಾ…” ಎನ್ನುವಾಗ ಇದು ಕಾಣಿಸಿದರೆ ಮುಗೀತು. ಅತ್ತ ಏರಲರಿಯದ, ಏರಿದರೂ ಕೆಲಸವರಿಯದ ಎರಡೆರಡು ಹಾವರ್ ಕ್ರಾಫ್ಟಿನ ಲೆಕ್ಕಕ್ಕೆ, ಹೊಸತಾಗಿ ಡಜನ್ ಸಕಲ ಸಂಚಾರಿಯೂ ತುರ್ತಾಗಿ ಬಂದು ಸೇರುವಂತೆ ನಾಳೆಯೇ ಹೊರಟೀತು ಟೆಂಡರ್! ನಾನು ದಿಕ್ಕೆಟ್ಟವಂತೆ ಸೈಕಲ್ ಮೆಟ್ಟಿ ಮನೆ ಸೇರಿದೆ. (೧೦-೬-೨೦೧೫)

ಛತ್ರಿಗಳು:

ಮೊನ್ನೆ, ಸೈಕಲ್ ಸರ್ಕೀಟಿಗೆ ಸಂಜೆ ಮಳೆಯಿರಲಾರದೆಂದು ಕಾದೆ, ಬಿಡದೆ ಬಂತು. ನಿನ್ನೆ ಬೆಳಿಗ್ಗೆಯೇ ಒಂದು ಗಂಟೆಯಾದರೂ ಹೋಗುವುದೆಂದು ನಿರ್ಧರಿಸಿದ್ದೆ, ಮಳೆ ಪಟ್ಟು ಹಿಡಿದು ಬಂತು. ಅದು ತಡ ಸಂಜೆಗಷ್ಟೇ ಸಡಿಲುವಾಗ ನನ್ನ ಉಮೇದು ಇಳಿದಿತ್ತು. ಇಂದು ಬೆಳಿಗ್ಗೆ ಮತ್ತೆ ಮಳೆ. ಕಾಲವೇ ಅದರದ್ದು ಎಂದು ತತ್ತ್ವ ಬಿಡುವುದರಲ್ಲಿದ್ದೆ, ಸಂಜೆ ಮಳೆ ಬಿಟ್ಟಿತು. ಸರಿ, ಕಂಕನಾಡಿಗಾಗಿ ಗುಜ್ಜರಕೆರೆಗೆ ಹೋದೆ. ಕೆರೆಯೊಳಗಿನ ಕಳೆಗಿಡಗಳನ್ನು ಅರೆಬರೆ ತೆಗೆದ ದೋಣಿಯಲ್ಲಿದ್ದ ಯಂತ್ರ ಸನ್ಯಾಸ ಸ್ವೀಕರಿಸಿತ್ತು. ಗಿಂಡಿ ಮಾಣಿಯಂತೆ ಹರಿಗೋಲೊಂದು ಮೆಟ್ಟಿಲ ದಂಡೆಯ ಮೇಲೆ ಚಿಂತಾಕ್ರಾಂತವಾಗಿ ಒರಗಿತ್ತು. ಜನ, ಕೆಲಸ ನಿಲ್ಲಿಸಿ ಕೆಲಕಾಲವಾದಂತಿತ್ತು. ಯೋಜನೆ ಹಾಕಿದವರು, ಉದ್ಘಾಟನಾ ಗಮ್ಮತ್ತಿನಲ್ಲಿ ಒದರಾಡಿದವರು, ಅದು ಸರಿಯಾದರೆ ತಮ್ಮದು, ಹಾಳಾಗಿಯೇ ಉಳಿದರೆ ಊರಿನವರದು ಸ್ವಾರ್ಥಿಗಳ ಪಟಾಲಮ್ಮೆಲ್ಲ ಅಲ್ಲಿ ತೇಲಾಡಿದ ಮಾತುಗಳು ಗ್ಯಾಸ್ ತುಂಬಿದ ಬುಗ್ಗೆಗಳು ಎಂದು ಭಾವಿಸಿದ್ದರೆ ನನಗೇನು ಬಿತ್ತು ಎಂದು ಹೊರಟೆ.

ಮಾರ್ಗನ್ಸ್ ಗೇಟ್, ಮಹಾಕಾಳಿಪಡ್ಪು, ಹೆದ್ದಾರಿ, ಗುರುವನಕ್ಕಾಗಿ ಬಜಾಲ್ ದಾರಿ ಹಿಡಿದೆ. ಹರಕು ಡಾಮರು, ಕೆರೆಯಾದ ಗಲ್ಲಿದಾರಿ, ಯೋಜನಾರಹಿತ ನಗರಾಭಿವೃದ್ಧಿಯಲ್ಲಿ ರೂಪುಗೊಂಡ ಅಂಕಾಡೊಂಕಿಗೆ ಕಾಂಕ್ರೀಟು ಸುರಿದು ದಾರಿ ಎನಿಸಿದ್ದೆಲ್ಲಾ ದಾಟಿ ರೈಲ್ವೇ ಹಳಿ ಸಮೀಪಿಸಿದೆ. ವಾಹನಗಳು ಕಂಬಿಯಡಿ ನುಸಿಯುವ ಬಿಲದ್ವಾರದ ಕಾಮಗಾರಿ ಜಗತ್ತಿನ ಎಲ್ಲಾ ಸಮಯ ನಮ್ಮದೇ ಎನ್ನುವಂತೆ ವಲಯದೆಲ್ಲಾ ಅವ್ಯವಸ್ಥೆಗಳ ಏಕೈಕ ರೂವಾರಿಯಂತೆ ನೀರು ತುಂಬಿಕೊಂಡು ಬಿದ್ದಿತ್ತು. ನಿಜದ ಮಳೆ ಓ ಅಲ್ಲಿ ಬಂದರೆ, ಇಲ್ಲಿ ಸಬೂಬುಗಳ ಕೊಡೆ ಬಿಡಿಸುವ ಜಾಣರಿರಬಹುದು ಎಂದುಕೊಂಡೆ. ಪಡೀಲಿಗೆ ಹೋಗಿ, ಮರೋಳಿ ಚಡಾವೇರಿ, ಕೈಕಂಬ, ನಂತೂರು, ಕದ್ರಿಗಾಗಿ ಮನೆ ಸೇರಿಕೊಂಡೆ. ಕೊಡೆ ಎಂದಾಗ ನಿನ್ನೆ ಪಿಲಿಕುಳದಲ್ಲಿ ರಂಗುರಂಗಿನ ಕೊಡೆಯರಳಿಸಿದ್ದು ನೆನಪಾಯ್ತು. “ಕೊಡೆ ಎಂಬರ್ ಆತಪತ್ರಮಂ” ಕಾಲ ಹೋಗಿದೆ, ಈಗಿನ ಚಾಲ್ತಿ ಪದ ಛತ್ರಿ, ಭಾವಾರ್ಥ ವಂಚಕ 🙂 (೧೫-೬-೨೦೧೫)

ಮಳೆಗಾಲದಲ್ಲಿ ನಗುವ ಸೂರ್ಯನನ್ನು ನಂಬಬಾರದು – ಎಂದುಕೊಂಡೇ ಬಿಜೈ, ಕುಂಟಿಕಾನ, ದೇರೆಬೈಲಿಗಾಗಿ ಹೋಗಿ ಆಕಾಶಭವನ ದಾರಿಗಿಳಿದೆ. ಮಂಜಲಕಟ್ಟೆ ಎಂಬಲ್ಲಿ ಬಲ ಹೊರಳಿ ಕಾಂಕ್ರೀಟಿನ ತೀವ್ರ ಇಳಿಜಾರಿನಲ್ಲಿ ಹುಶಾರಾಗಿಯೇ ಹೋದೆ. ಹಿಂದೆ ಇಲ್ಲಿ ಅರೆಬರೆ ಡಾಮರು ದಾರಿಯಿದ್ದಾಗ ನಾನು ದೇವಕಿ ಜಂಟಿ ಸೈಕಲ್ ಸೇರಿ ನೂಕಿದ್ದು ನೆನಪಾಯ್ತು. ಅಂದು, ಕೊಟ್ಟಾರ ಚೌಕಿಯಿಂದ ಈ ದಿಕ್ಕಿಗೆ ನುಗ್ಗಿದ ಇನ್ನೂರು ಮುನ್ನೂರು ಮೀಟರಿನಲ್ಲೇ ಡಾಮರ್ ದಾರಿ ಮುಗಿದಿತ್ತು. ಮತ್ತೆ ಪಕ್ಕಾ ಗೊಸರ ಹಡ್ಲುಗಳ ನಡುವೆ ತೂಗಾಡುವ ಮಣ್ಣ ದಾರಿ. ಇಂದು ಅದೆಲ್ಲ ಕಾಶ್ಮೀರದ ದಾಲ್ ಲೇಕಿನ ನಡುವಣ ಓಣಿಯಂತಾಗಿತ್ತು. ಅಂದೂ ಇದ್ದ ಒಂಡೆರಡು ಭಾರೀ ಮನೆ ಬಿಟ್ಟರೆ ಉಳಿದೆಲ್ಲ ನಿವೇಶನದ ಪಾಗಾರಗಳು ಕಾಣುತ್ತಿತ್ತು, ನೆಲವೆಲ್ಲ ಕೆರೆಯಾಗಿತ್ತು. ಅಂದರೆ ಇಲ್ಲೂ ದೋಣಿ-ಓಣಿಯಲ್ಲಿ ಬಂದು, ಡಿಂಗಿ-ಗಡಿಯನ್ನು ಕಳೆದು, ಅಡಿಗಟ್ಟೆಯಲ್ಲಿಟ್ಟು, ಮೇಲಿನ ಮನೆಗೆ ಹೋಗುವುದಿರಬಹುದೇ? ರಮ್ಯ ಕಲ್ಪನೆಗೆ ಭಂಗವುಂಟು ಮಾಡುವಂತೆ ಎದುರಿನಿಂದ ಸಾಹಸೀ ಮೋಟಾರ್ ಸೈಕಲ್ ಸವಾರರೊಬ್ಬರು ದಡಬಡ-ಗುಳುಬುಳಾಯಿಸುತ್ತ ಬಂದೇ ಬಿಟ್ಟರು.

ನನ್ನಲ್ಲೂ ವೀರಾವೇಶ ಬಂತು – ನನ್ನ ಪರ್ವತಾರೋಹಿ (ಎಂಟೀಬಿ) ಸೈಕಲ್ ಎಂದರೇನು ಎಂದು ಹೊರಡುವವನಿದ್ದೆ. ಮನೆಯ ಸೈಕಲ್ ಕೊಟ್ಟಿಗೆಯಲ್ಲಿ ಕಳೆದ ತಿಂಗಳಷ್ಟೇ ಸುಮಾರು ಐದು ಸಾವಿರ ರೂಪಾಯಿ ದಂಡ ಕೊಟ್ಟಾಗ ಗುಜರಿಯಾಗಿ ಬಂದು ಬಿದ್ದ ಎರಡು ರಿಮ್ಮು, ಚೈನು, ಗೇರ್ ಶಿಫ್ಟರ್, ಗೇರ್ ವೀಲ್ ನೆನಪಾಯ್ತು. ತಣ್ಣಗೆ ಹಿಂದೆ ಸರಿದು ಬೇರೆ ಗಲ್ಲಿ ಗಲ್ಲಿ ಸುತ್ತಿ ಕಾವೂರು-ಕೂಳೂರು ರಸ್ತೆ ಸೇರಿದೆ. ಕಾವೂರು ವೃತ್ತಕ್ಕೆ ಬರುವಾಗ ಆಕಾಶ ಪನ್ನೀರು ಎರಚಿದಂತೆ ನಾಲ್ಕು ಹನಿ ಹಾಕಿತ್ತು. ಒಂದು ಗಳಿಗೆ ಅಲ್ಲಿ ಕಟ್ಟಡದ ಮರೆಗೆಂದು ಹೋದೆ. ಆ ವಲಯದಲ್ಲಿ ನನ್ನನ್ನು ಆಗಾಗ ನೋಡಿ ಸದರವಾದ `ಕಬ್ಬಿಣಹಾಲಿ’ನವನು “ಅಜ್ಜೇರ್ ಇನಿ ಬಾರ್ಗಾ..” ಎಂದು ಟಿಪ್ಪಣಿ ಹಾಕಿದ್ದು ಕೇಳಿ, ತಲೆ ಎತ್ತಿ ನೋಡಿದೆ; ಎಂಥದ್ದೋ ಬಾರ್! ಅಣ್ಣಾವ್ರ ಇಷ್ಟೈಲಿನಲ್ಲಿ “ಮಳೆಯಾದರೇನು, ಬಿಸಿಲಾದರೇನು, ನನಗೇ ನೀನಿಲ್ಲವೇನೂ…” ಹಾಡಿಕೊಂಡು ಏಕ್ದಂ ಪೆಡಲ್ ತುಳಿದೆ. ಬೊಂದೆಲ್, ಪದವಿನಂಗಡಿ, ಮೇರಿ ಹಿಲ್, ಯೆಯ್ಯಾಡಿ, ಆಕಾಶವಾಣಿ ಹಿತ್ತಿಲಿಗಾಗಿ ಹೆದ್ದಾರಿಯಲ್ಲಿ ನಂತೂರು, ಕದ್ರಿ, ಪಿಂಟೋರವರ ಓಣಿ – ನಿಂತದ್ದು ಅಭಯಾದ್ರಿ (೧೬-೬-೨೦೧೫)

ಅಲೆಗಳ ಅಬ್ಬರದಲ್ಲಿ ಕೇಳಿಸಿದ ಖಬರ್ದಾರ್!:

ನಿನ್ನೆ ಮುಂಬೈ ತೊಳೆದು ಸುಸ್ತಾದ ಮಳೆ ಇಂದು ಮಂಗಳೂರಿನ ದಿನಗೂಲಿಗೆ ಚಕ್ಕರ್. ಸಂಜೆಮುಂದೆ ಕಿರಿಯ ಗೆಳೆಯ ಅಭಿ ಭಟ್ “ನೀರ್ಮಾರ್ಗಕ್ಕೆ ಬರ್ತೀರಾ ಸಾರ್” ಚರವಾಣಿಸಿದ. “ಇಲ್ಲ, ಚಿತ್ರಾಪುರ, ಸುರತ್ಕಲ್ ಕಡಲ ಕೊರೆತದ ವರದಿ ಓದಿದೆ, ಅತ್ತ ಹೋಗುವಂದಾಜು.” ಆತ ತಿದ್ದಿಕೊಂಡ “ಕೂಳೂರಲ್ಲಿ ಸಿಗ್ತೇನೆ” ಅಂದ. ನಾನು ನನ್ನದೇ ಸಮಯದಲ್ಲಿ ಹೊರಡುತ್ತಿದ್ದಂತೆ ಪುನಃ ಅಭಿ “ಹ್ಹೆಹ್ಹೆ, ನಾ ತಣ್ಣೀರ್ಬಾವಿಲಿದ್ದೇನೆ. ನೀವು ಹೊರಟಾಗ ನಂಗೊಂದು ಎಸ್ಸೆಮ್ಮೆಸ್.” ನಾನು ದಾರಿಗಿಳಿಯುವ ಹೊತ್ತಿಗೆ ಮತ್ತೆ ಅಭಿ “ಹ್ಹೆಹ್ಹೆ, ನಾ ಕೊಡಿಕಲ್ ಸುತ್ತಿ ಸೇತುವೆ ಬಳಿ ಇರ್ತೇನೆ.” ಪುಣ್ಯಾತ್ಮ ಪುಟಿಯುವ ಶಕ್ತಿಯಲ್ಲಿ ನಾನಿನ್ನು ತಡ ಮಾಡಿದರೆ, “ಜಗತ್ತು ಸುತ್ತಿ ಬರ್ತೇನೆ” ಎಂದು ಹೇಳಿದರೂ ಹೇಳಿದ ಎಂದುಕೊಂಡು ನಾನು ದಮ್ಮು ಕಟ್ಟಿ ಬಿಜೈ, ಕುಂಟಿಕಾನ, ಕೊಟ್ಟಾರಕ್ಕಾಗುವಾಗ ಅಭಿ ಸಿಕ್ಕ. ಕೂಳೂರು, ಪಣಂಬೂರು ಕಿನಾರೆ ದಾರಿಗೆ ಹೊರಳಿ ಮತ್ತೆ ಮೀನುಗಾರಿಕಾ ದಾರಿ ಹಿಡಿದು ಬೈಕಂಪಾಡಿ, ಚಿತ್ರಾಪುರ, ಸುರತ್ಕಲ್ ದೀಪ ಸ್ತಂಭದವರೆಗೂ ಅವಿರತ ತುಳಿದೆವು. ನೀರಹೊಗೆ ಹೊಡೆದು, ಯಕ್ಷ-ರಕ್ಕಸನ ಅಬ್ಬರದಲೆಗಳು ಕುಣಿಯುವಲ್ಲಿ ರಂಗದಂಚು ಮುಟ್ಟಿದ್ದರೂ ಜನ ಸೊತ್ತಿಗೆ ಹಾನಿ ಮಾಡಿದಂತಿರಲಿಲ್ಲ. ತಾನೇ ನಿರ್ಮಿಸಿಕೊಂಡ ಬಂಡೆದಂಡೆಯನ್ನಷ್ಟೇ ಉಜ್ಜುಜ್ಜಿ ಮರಳುತ್ತಿತ್ತು. “ಈ ಬಂಡೆಯಷ್ಟೇ ಸಹಜವಾಗಿ ನಾನು ಕೊಟ್ಟ ಮರಳಿನ ಕಿನಾರೆಯನ್ನೂ ಉಳಿಸಿಕೊಳ್ಳಿ. ದಿಕ್ಕೆಟ್ಟ ಅಭಿವೃದ್ಧಿಗಳಲ್ಲಿ `ಕಡಲ ಕೊರೆತ’ ಎಂದು ನನ್ನನ್ನು ದೂರಬೇಡಿ. ಮತ್ತಷ್ಟೇ ಬುದ್ಧಿಗೇಡಿಗಳಂತೆ ಸುಂದರ ಕಿನಾರೆಗಳು ಕೊಳಕು ಕಲ್ಲುಗಳ ನಿರಂತರ ಹೂಳುನೆಲವಾಗದಂತೆ ನೋಡಿಕೊಳ್ಳಿ.” ಇದು ಅಲೆಗಳಲ್ಲಿದ್ದ ಎಚ್ಚರಿಕೆಯ ನುಡಿ. ಇದೇ ಸಂದೇಶವನ್ನು ಕೇವಲ ಹದಿನಾಲ್ಕು ಮಿನಿಟುಗಳ ಸುಂದರ ಸಾಕ್ಷ್ಯ ಚಿತ್ರವನ್ನಾಗಿಸಿದ್ದಾರೆ ವಿಶ್ವಖ್ಯಾತ ಪರಿಸರ ಚಿತ್ರಕಾರ ಶೇಖರ್ ದತ್ತಾತ್ರಿ. ಅವಶ್ಯ ನೋಡಿ: ಇದರ ಎರಚಾಟದ ಬಲದಲ್ಲೇ ಗಟ್ಟಿಗೊಂಡ ಸಪುರ ಮರಳ ದಂಡೆಯ ಚಂದ ಅಭಿಯನ್ನು ಆ ಉದ್ದಕ್ಕೂ ಒಂದು ಸವಾರಿಗೆ ಕರೆಯಿತು. ಆದರೆ ಆ ಅಬ್ಬರದಲ್ಲೂ ಇದ್ದ ಎಚ್ಚರದ ಸಾಹಿತ್ಯವನ್ನು ಆತ ಉಪೇಕ್ಷಿಸಲಿಲ್ಲ. ಸೂರ್ಯ ಇಣುಕುತ್ತಿದ್ದಂತೆ ಬಂದ ದಾರಿಯಲ್ಲೇ ನಂನಮ್ಮ ಗೂಡು ಸೇರಿಕೊಂಡೆವು. (೨೦-೬-೧೫)

ಮಂಗಳೂರಿಗೆ ನಿರ್ಜಲಯೋಗ!:

ಅಭಿ ಚುಟುಕು ಸಂದೇಶ ಕಳಿಸಿದ್ದ – `ನಂತೂರಿನಲ್ಲಿದ್ದೇನೆ’. ನಾನು ಐದು ಮಿನಿಟು ತಡವಾಗಿ ಸೇರಿಕೊಂಡೆ. ಮತ್ತೆ ಪೆಡಲಿನ ನಿರಂತರ ತುಳಿಕೆಗೆ, ಕುಲಶೇಖರದ ಇಳಿಜಾರಿನಲ್ಲಿ ತುಸು ಬಿಡುವು. ಮತ್ತೆ ಮಂಗಳೂರು ಡೈರಿಯಾಚೆಯೂ ಸ್ವಲ್ಪ ಜೂಊಊಊಂ. ಮೂಡಬಿದ್ರೆ ದಾರಿ ಬಿಟ್ಟು ಬಲಕ್ಕೆ – ಕಲ್ಪಣೆ-ಬೆಂಜನಪದವು ದಾರಿ. ನೀರುಮಾರ್ಗ ಕಳೆದು ತುಸು ಇಳಿಜಾರು, ಬಲಕ್ಕೆ ಮೇರ್ಲ ಪದವು ಕವಲು. ಮುಂದಂತೂ `ಭಂಗೀ ನೆಗೆತ’ದವನ ವೇಗದಲ್ಲಿ ಇಳಿದೇ ಇಳಿದೆವು. ಹೀಗೆ ಬಳುಕುತ್ತಾ ಹಾಗೆ ಮಾಲುತ್ತಾ ಹಿಂದೊಮ್ಮೆ ಸೇತುವೆ ಕೆಲಸ ನಡೆದಿದ್ದು, ನಾನು ಮಣ್ಣದಾರಿಯಲ್ಲಿ ಸೈಕಲ್ ಏರಿಸಲು ಹೋಗಿ ಪಲ್ಟಿ ಹೊಡೆದ ಜಾಗದವರೆಗೂ ಇಳಿದೆವು. ಸೇತುವೆ ಪೂರ್ಣಗೊಂಡಿತ್ತು. ಮುಂದಿನ ಏರನ್ನು ಅಭಿ ಏರಿಸುವ ಚಂದಕ್ಕೆ ವಿಡಿಯೋ ನೋಡಿ:

ರಾಜೇಶ್ವರಿ ಶಾಲೆ ಬಳಿ ಬಲದ ಅಡ್ಯಾರ್ ಕವಲು ಬಿಟ್ಟು ಮೇರ್ಲಪದವಿಗಾಗಿ, ಎರಡು ಪ್ರಚಾರ-ಭಯಂಕರ ವಿದ್ಯಾಸಂಸ್ಥೆಗಳ ನಡುವೆ ಹಾಯ್ದು, ಹೆದ್ದಾರಿ ಇಣುಕುವ ಘಾಟೀ ದಾರಿಯಂಚಿಗೆ ಬಂದು ನಿಂತೆವು. ಸೈಕಲ್ ಬಿಟ್ಟು ದಾರಿ ಬದಿಯ ಬಂಡೆ ಏರಿ ಒಂದು ಕ್ಷಣ ಹಕ್ಕಿನೋಟ ಹರಿಸಿದೆವು. ಚಾಚಿ ಬಿದ್ದ ಕೆನ್ನೀರಿನ ನೇತ್ರಾವತಿ ಪಾತ್ರೆಗುಂಟ ಅಡ್ಯಾರಿನ ಕಡೆಯಿಂದ ಇತ್ತ ಮಳೆರಾಯನ ಭಾರೀ ಆಕ್ರಮಣ ನಡೆಯುವ ಲಕ್ಷಣ ಕಂಡು ದಡಬಡ ಇಬ್ಬರೂ ಬಂಡೆಯಿಳಿದು ನಿಂತೆವು. ಬಂತಯ್ಯಾ ಗಾಳಿ, ಹುಚ್ಚು ಗೂಳಿ! ನಾವು ಬಂಡೆ ಮರೆಯಲ್ಲಿದ್ದರೂ ಸೈಕಲ್ಲನ್ನು ಒತ್ತಿ ಹಿಡಿದರೂ ಎಲ್ಲ ಹಾರಿಸಿ ಬಿಡುವಂಥಾ ರೋಷ. ಹಿಂಬಾಲಿಸಿದಂತೆ ಜಗತ್ತಿನ ಅತಿ ದೊಡ್ಡ ಜಲಪಾತವೇ ದಿಕ್ಕು ತಪ್ಪಿ ನಮ್ಮ ಮೇಲೆ ಪ್ರೀತಿ ತೋರಿದಂತೆ ಮಳೆ!! ಸಚೇಲ ಸ್ನಾನ ಮಾಡುತ್ತ ನಿಲ್ಲುವುದೇ ಮುಂದುವರಿಯುವುದೇ ಗೊಂದಲ. ಪದವಿನ ಎತರಕ್ಕಿಂತಲೂ ತಗ್ಗಿನಲ್ಲಿ ಪೆಟ್ಟು ಕಡಿಮೆಯಿರಬಹುದೆಂದು ಸೀಟಿಗೇರಿ, ಬಹಳ ಎಚ್ಚರದಿಂದ ಬಿರಿ ಬಿಗಿ ಹಿಡಿದು ಸವಾರಿ ಹೊರಟೆವು. ಅದುವರೆಗೆ ಹಣೆಯಲ್ಲಿ ಹರಳುಗಟ್ಟಿದ್ದ ಬೆವರುಪ್ಪು ನೀರಿನೊಡನೆ ಕಣ್ಣಿಗಿಳಿಯುವುದು, ಕನ್ನಡಕದ ಹಿಂದೆ ಮಂಜಿನ ಮಸುಕು, ಎಡೆಯುಳಿಸದ ಹನಿಗಳ ಹೊಡೆತ, ಎಚ್ಚರದಿಂದಲೇ ಆದರೂ ಓಡಾಡುವ ಕಾರು ರಿಕ್ಷಾ, ಎಲ್ಲಕ್ಕೂ ಮುಖ್ಯವಾಗಿ ಕೆನ್ನೀರ ಪ್ರವಾಹದೊಡನೆ ಹಿಮ್ಮುರಿ ತಿರುವಗಳನ್ನು ನಿಭಾಯಿಸುವಾಗ ಸವಾರಿ ಅಂದಾಜು ದಾರಿಯನ್ನೇ ಮೀರಿದರೆ ಎನ್ನುವ ಭಯ; ಸೀಟಿಳಿದೇ ಬಿಟ್ಟೆ! ಅಭಿ – ಎಳೆಯ, ಎಚ್ಚರದಲ್ಲೇ ಪೂರ್ಣ ಸವಾರಿಯಲ್ಲೇ ಹೆದ್ದಾರಿ ತಲಪಿದ. ಅಲ್ಲಿನ ಬಸ್ ನಿಲ್ದಾಣದಲ್ಲಿ ಹತ್ತು ಮಿನಿಟು ನಿಲ್ಲುವುದರೊಳಗೆ ಮಳೆ ಬರಲೇ ಇಲ್ಲವೆನ್ನುವಷ್ಟು ಸ್ವಚ್ಛ ಸ್ಥಿತಿ.

ಅಡ್ಯಾರ್ ಕಟ್ಟೆಯಲ್ಲಿ ಕಡವಿನ ಬಳಿ ಒಂದು ಇಣುಕುನೋಟ ಹಾಕಿದೆವು. ಜನ ಕಾದಿದ್ದರು, ಮಳೆಗಾಳಿಯ ಪ್ರತಾಪ ಪೂರ್ಣ ತಗ್ಗುವುದನ್ನು ಆ ದಂಡೆಯಲ್ಲಿ ಇನ್ನೂ ದೋಣಿ ನಿರೀಕ್ಷಿಸುತ್ತಲೇ ಇದ್ದಂತಿತ್ತು. ಆದರೆ ಮನುಷ್ಯ ಕರ್ಮದ ಕೆನೆ – ರಾಶಿ ರಾಶಿ ಪ್ಲ್ಯಾಸ್ಟಿಕ್, ಥರ್ಮಕೋಲ್ ಮುಂತಾದವು ಬಹು ಅಲ್ಪಾಂಶ ಕಟ್ಟೆಯ ಮರೆಯಲ್ಲಿ ತಂಗಿದ್ದು ನೋಡಿ, “ಜೈ ಸ್ವಚ್ಛ ಬಾರತ್” ಒಂದು ಘೋಷ ಹಾಕಿ ಹೊರಟೆವು. ಚತುಷ್ಪಥದ ಅದ್ಭುತ ಸಮತಳ ಹೆದ್ದಾರಿಯುದ್ದಕ್ಕೆ ಪ್ರತಿ ಐವತ್ತು, ನೂರಡಿಯಲ್ಲಿ ಹೊಂಡವಿಲ್ಲದಿದ್ದರೂ ವಿಸ್ತಾರ ಕೊಳಗಳನ್ನು ರೂಪಿಸಿಕೊಟ್ಟಿತ್ತು. ಚತುಷ್ಚಕ್ರ ವಾಹನಗಳಿಗೆ ಕಂಬುಳಕೋಣಗಳ ಉತ್ಸಾಹ. ಅತ್ತಣ ದಾರಿಯ ನೀರ ಅಲೆ ಇತ್ತಣ ದಾರಿಗೆ ಹೊಡೆಯುವ ರಭಸಕ್ಕೆ ಆಕಸ್ಮಿಕವಾಗಿ ದ್ವಿಚಕ್ರವಾಹನದವರು ಸಿಕ್ಕರೆ ಪತನ ಹೊಂದುವುದು ನಿಶ್ಚಯ. ಆದರೆ ಅವನ್ನೆಲ್ಲ ಮೀರುವಂತೆ……

ಕಣ್ಣೂರ ಬಳಿ, ಹೊಸ ರೆನಾಲ್ಟ್ ಮಳಿಗೆ ಸಜ್ಜುಗೊಳ್ಳುತ್ತಿರುವಲ್ಲಿ, ದಾರಿಯಿಂದಲೂ ಆಚೆಗೆ ಭಾರೀ ಸದ್ದಿನೊಡನೆ ಆಗಸದೆತ್ತರಕ್ಕೆ ಭಾರೀ ನೀರು ಚಿಮ್ಮುತ್ತಿರುವುದು ಕಂಡು ಒಮ್ಮೆ ನಮಗೂ ಗಾಬರಿ. ಹೋಗಿ ನೋಡಿದರೆ ತುಂಬೆಯಿಂದ ಮಂಗಳೂರಿಗೆ ಹರಿಯುವ ಭಾರಿ ಕೊಳವೆಸಾಲು ಮುರಿದು ಹೋಗಿತ್ತು. ಅಲ್ಲೊಬ್ಬ ಇಲಾಖಾ ನೌಕರ ಚರವಾಣಿ ಹಿಡಿದು ಅತ್ತಣ ಯಾರಿಗೋ ಬೊಬ್ಬಿರಿಯುತ್ತಿದ್ದ. “ಬೆಳಿಗ್ಗೆಯೇ ಸಣ್ಣ ಲೀಕ್ ಇತ್ತು. ಮಳೆ ನೋಡಿ, ನಾಳೇ ಮಾಡುವುದು ಎಂದುಕೊಂಡಿದ್ದೆ. ಆದರೀಗ ಒಮ್ಮೆಗೇ ಜೋರಾಗಿದೆ. ಅಲ್ಲ ಮತ್ತೆ ಹಳೆಗಾಲದ ವ್ಯವಸ್ಥೆಯ ಕೊಳವೆ ಸಾಲಿನ ಮೇಲೆ ಇಷ್ಟೊಂದು ಮಣ್ಣು, ಕಟ್ಟಡ ಸಾಮಗ್ರಿ ಹೇರಿದರೆ ಇನ್ನೇನಾಗಬೇಕು?” ಅತ್ತ ಒಂದು ಪೈಸೆ ಸಾರ್ವಜನಿಕ ಉಪಯುಕ್ತತೆ ಇಲ್ಲದ ಯೋಗ ದಿನಾಚರಣೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹುಚ್ಚು ಹೊಳೆ ಹರಿಸಿ, ಮಾಧ್ಯಮಗಳಲ್ಲಿನ ರಮ್ಯ ಬೆಳಕಿನಲ್ಲಿ ಕಳೆದು ಹೋಗಿರುವವರು ಉತ್ತರಿಸಿಯಾರೇ? ನೀರು ನಿಲ್ಲಿಸಿಯಾರೇ? ಎಲ್ಲಕ್ಕು ಮುಖ್ಯವಾಗಿ ಸಕಾಲಿಕ ದುರಸ್ತಿ ನಡೆಸಿಯಾರೇ!! ನನ್ನ ಸರ್ವಾಂಗ ಪ್ರಶ್ನೆಯನ್ನು ನಾನೇ ನುಂಗಿಕೊಂಡು ಸೈಕಲ್ ಏರಿದೆ. ಪಡೀಲು, ಮರೋಳಿ, ನಂತೂರ್ – ಅಭಿ ಸುರತ್ಕಲ್ಲಿನತ್ತ, ನಾನು ಮನೆಯತ್ತ. (೨೨-೬-೧೫)

ಅರ್ಧ ಶತಕ ಮೀರಿದೋಟ:

ವೇಣು `ವಾದನ’ವಾಯ್ತು “ಚಂದ್ರಖಾನೀ ಕಣಿವೆಯ ಚಾರಣಕ್ಕೆ ಹೋಗಿ ತಿಂಗಳ ಕಾಲ ಸೈಕಲ್-ದೂರನಾಗಿದ್ದೆ. ಇವತ್ತೂ….” ವೇಣುವಿನೋದ್ ವಿಜಯವಾಣಿ ಪತ್ರಕರ್ತ, ಶುಕ್ರವಾರ ಅವರಿಗೆ ವಾರದ ರಜಾ. ಅಭಿಭಟ್ಟ್ ವಿದ್ಯಾರ್ಥಿ, ಪರೀಕ್ಷೋತ್ತರ ರಜೆಯಲ್ಲಿ ಎಲ್ಲಿಗೂ ಸೈ! ಬೆಳಿಗ್ಗೆ ಎಂಟೂ ಮುಕ್ಕಾಲಕ್ಕೆ ಅವರಿಬ್ಬರು ಸುರತ್ಕಲ್ಲಿನಿಂದ ಸೈಕಲ್ ಮೆಟ್ಟಿಕೊಂಡೇ ಬಂದು ನನಗೆ ಪಂಪ್ವೆಲ್ಲಿನಲ್ಲಿ ಸಿಕ್ಕಿದರು. “ದರ್ಶನಗಳು ಎರಡು. ಉಳ್ಳಾಲ-ಉಚ್ಚಿಲದ ಕಡಲ ಕೊರೆತ ಅಥವಾ ಕೊಣಾಜೆ-ಪಾವೂರಿಗಾಗಿ ನೇತ್ರಾವತಿಯಡ್ಡಕ್ಕೆ ದೋಣಿ ಸವಾರಿ” ಆಯ್ಕೆ ಇಟ್ಟೆ. ಎರಡನೆಯದ್ದನ್ನು ಆಯ್ದರು. ತೊಕ್ಕೊಟ್ಟು, ಕುತ್ತಾರ್, ದೇರಳಕಟ್ಟೆಗಾಗುವಾಗ ಮಾತಿನಲ್ಲಿ ನನ್ನ `ಅಭಯಾರಣ್ಯ’ದ ಉಲ್ಲೇಖ ಬಂತು. ಅದು ನೋಡಬೇಕಲ್ಲಾಂದ್ರು. ಸರಿ, ನಾಟೇಕಲ್ಲಿನಲ್ಲಿ ಬಲ ಹೊರಳಿ, ಮಂಜನಾಡಿ, ಮೊಂಟೆಪದವಿಗಾಗಿ ನನ್ನ ಚಿಕ್ಕಮ್ಮನ ತೋಟದ ಮನೆ – ಎಡೆಂಬಳೆ ಸೇರಿದೆವು.

ತಮ್ಮ – ಸತ್ಯನಾರಾಯಣನ, ಕುಬ್ಜವೃಕ್ಷ ಸಂಗ್ರಹ, (ಮಳೆ ಕಡಿಮೆಯಾಗಿ) ನಿನ್ನೆಯಷ್ಟೇ ತುಂಬಿದ ಕೆರೆ ನೋಡಿ, ಆತಿಥ್ಯ ವನ್ಯ ಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ) ಸೇರಿದೆವು. ಅದುವರೆಗೆ ಮೋಡದ ಮುಸುಕೆಳೆದು ಕೂತಿದ್ದ ಮಳೆ ನಮ್ಮನ್ನು ಅಲ್ಲಿ ಹತ್ತು ಮಿನಿಟಿಗೆ `ಕಾಡ್ಮನೆ’ ಜಗುಲಿ ಹತ್ತಿಸಿತ್ತು. ಮತ್ತೆ ದಾರಿಗಿಳಿದವರು `ಹೊಸಮನೆ’ಯ ಹೊಂಡಕ್ಕಿಳಿದು, ನಡುಪದವಿಗೇರಿ, ಫಜೀರು, ಪಾವೂರು, ಇನೋಳಿಗಾಗಿ ನೇತ್ರಾವತಿ ದಂಡೆ ಸೇರಿದೆವು. ಇಷ್ಟರಲ್ಲಿ ಮಳೆಯ ಅಡಗಿ-ಹಿಡಿವಾಟದಲ್ಲಿ ಅಲ್ಲಿ ಇಲ್ಲಿ ನಿಂತು, ಎಲ್ಲ ಚೂರುಪಾರು ಚಂಡಿಯಾಗಿದ್ದೆವು. ಹಾಗಾಗಿ ಡಾಮರು ದಾರಿ ಮುಗಿದಲ್ಲಿಂದ (ಕೊನೆಯ ಬಸ್ ನಿಲ್ದಾಣ) ಸುಮಾರು ಒಂದೂವರೆ ಕಿಮೀಯ ಕಚ್ಚಾ ದಾರಿಯ ಕೆಸರ ಹೊಂಡದ ಬುಳುಂಕ್, ಚರಳುಕಲ್ಲ ಗುಪ್ಪೆಯ ಚರಕ್ ಹೆದರಿಸಲಿಲ್ಲ. ಸ್ವೀಕರಿಸಿ, ತೋಟದ ಒಳಗಿನ ದಾರಿಗೆ ನುಗ್ಗಿಸಿದೆವು ಸೈಕಲ್. ದಾರಿ ಮುಚ್ಚಿದ್ದ ಕೊಂಬೆ ಸರಕ್, ಕುಂಬು ಕೋಲು ಲಟಕ್, ಕೆಸರ ಹೊಂಡ ಪಚಕ್ ಎನ್ನುವುದರೊಳಗೆ ತೀವ್ರ ತಿರುವೇರಿನಲ್ಲಿ ಹಿಂದಿನ ಚಕ್ರ ಪುಸುಕ್! ಅಲ್ಲಲ್ಲಿ ನೂಕಿ, ಕೆರೆಯ ಸರಣಿ ನೋಡಿ, ಅಭಯಾರಣ್ಯ (ಆಸಕ್ತರು ಓದಿ: ಕೆನ್ನೀರ ನೇತ್ರಾವತಿ ಪೂರ್ಣಪಾತ್ರೆಯಲ್ಲಿದ್ದಳು. ನಾವು ತುಸು ಕಾದು, ಬಂದ ಮೋಟಾರ್ಯುಕ್ತ ದೋಣಿಯಲ್ಲಿ ಅರ್ಕುಳ ಕಂಡೆವು. ಮತ್ತೇನಿದ್ದರೂ ತಾಳ್ಮೆಯ ಪೆಡಲ ಸೇವೆ ಬಯಸುವ ಹೆದ್ದಾರಿಯಾದ್ದರಿಂದ ಅಡ್ಯಾರು, ಕಣ್ಣೂರು, ಪಡೀಲು. ಮತ್ತವರ ದಾರಿ ಮರೋಳಿ ನಂತೂರಿಗಾಗಿ ಸುರತ್ಕಲ್ಲಾದರೆ, ನನ್ನದು ಮರಳಿ ಪಂಪ್ವೆಲ್ಲಾಗಿ ಪಿಂಟೋರವರ ಓಣಿ! ಸುರತ್ಕಲ್ಲಿನಿಂದ ಓಡುತ್ತಿದ್ದ ವೇಣುವಿನ ಸ್ಟ್ರಾವಾ ಮಾಪಕ ದೋಣಿ ಕಾಯುವಲ್ಲಿಗೆ ಅರ್ಧ ಶತಕ ಹೊಡೆದಿತ್ತು. ಮೊದಲ ಲೆಕ್ಕದಲ್ಲಿ ಚೂರು ಕಳೆದು, ಉಳಿದ ದಾರಿಯನ್ನು ಸೇರಿಸಿ ನಾನು ನನ್ನ ಪ್ರಾಯದ ಲೆಕ್ಕ (೬೩) ಹೊಡೆದಿದ್ದರೆ, ಅವರು ಎಂಬತ್ತು ಕಳೆದೂ ಕುಂದಿರಲಿಲ್ಲ – “ನಾಳೆ ಎಲ್ಲಿಗೆ ಸಾರ್ ಸರ್ಕೀಟ್?” (೨೬-೬-೧೫)

ಸರಳ ಸತ್ಯಗಳು:

“ಮಂಗ್ಳೂರಿಂದ ಸೈಕಲ್ಲೇ ಬಂದದ್ದಾ” ಮುಕ್ಕಚ್ಚೇರಿಯಲ್ಲಿ ಕಡಲಕೊರೆತದಲ್ಲಿ ಮಗುಚಲಿದ್ದ ಗಾಳಿ ಮರದ ಮರೆಯಲ್ಲಿ ಕಡಲಿಗೆ ಗಾಳ ಎಸೆದ ಸಲೀಂ ಕೇಳಿದ. ನಾನು ಹೌದು ಎಂದದ್ದರ ಬೆನ್ನಿಗೆ “ಸೈಕಲ್ಲಿಗೆಷ್ಟು?” ಸುಮಾರು ಇಪ್ಪತ್ತು ಸಾವಿರ ಎಂದಿದ್ದೆ. ಕಲಕು ಸಾಗರದಲ್ಲಿ ಮೀನು ಹಿಡಿಯಲು ಹೊಸ ಎರೆ ಕಟ್ಟಿ ಎಸೆದ ಸಲೀಂ ಇದ್ದಕ್ಕಿದ್ದಂತೆ ಗಟ್ಟಿಯಾಗಿಯೇ ಉದ್ಗರಿಸಿದ “ಛೆ, ಸ್ವಲ್ಪ ಹೆಚ್ಚು ಕೊಟ್ಟು ಬೈಕ್ ತಗೀಬಹುದಿತ್ತಲ್ಲಾ!” ಕಾಸೂ ಖರ್ಚಿಲ್ಲದೆ ಇದ್ದ ಚಬುಕಿನ ವನ ಬೋಳಿಸಿ, ಅಲ್ಲೇ ಆಚೆ ಬೆಂಗರೆಯಲ್ಲಿ ಕೋಟ್ಯಂತರ ರೂಪಾಯಿ ಹೂಡಿದ ವೃಕ್ಷವನ ಬಂದ ಹಾಗೆ ಎಂದು ತಲೆ ಚಚ್ಚಿಕೊಳ್ಳುವ ಪರಿಸ್ಥಿತಿ ನನ್ನದು. ಬಂದ ದಾರಿಯನ್ನು ಸ್ವಲ್ಪ ನೆನೆಸಿಕೊಂಡೆ: ಎಂದಿನಂತೆ ಸಂಜೆ ಪೆಡಲುತ್ತಾ ಪಂಪ್ವೆಲ್, ತೊಕ್ಕೊಟ್ಟು ಕಳೆದು ಉಳ್ಳಾಲದತ್ತ ಹೊರಳಿದ್ದೆ. ಅಬ್ಬಕ್ಕ ವೃತ್ತದಲ್ಲಿ ನೇರ ಹೊರಟವನಿಗೆ ಎದುರಾದದ್ದು ಅಪಾರ ಕಸದ ಹೊರೆ. ಎಲ್ಲ ಕಾಣುವಂತೆ ಗುಜರಿಯವರು, ಕಾಗೆ, ನಾಯಿ, ರಿಕ್ಷಾಟೆಂಪೋ, ಕಡೆಗೆ ಭಾರೀ ಲಾರಿಗೂ ಸುಧಾರಿಸಲಾಗದ ಭಾರೀ ಗುಡ್ಡೆ. ಸಾಮಾಜಿಕ ಸ್ವಾಸ್ಥ್ಯ ಹೆಚ್ಚಿಸಲು ಒತ್ತಿನಲ್ಲೇ ತಲೆ ಎತ್ತಿದ್ದ ಆಧುನಿಕ ಶೌಚಾಲಯ ಕೂಡಾ ಸೌಲಭ್ಯಗಳ ದುರ್ಬಳಕೆಯ ಒತ್ತಡದಲ್ಲಿ ಕುಸಿದು ಕುಳಿತ ದುರ್ಭರ ಪ್ರಸಂಗ.

ಅದೇ ದಾರಿಯ ಕೊನೆ – ಕೋಟೆಪುರ, ನೇತ್ರಾವತಿಯ ಅಳಿವೆಗೆ ಹೋದೆ. ಸಮುದ್ರ ಕೊರೆತ ತಡೆಯಲು ಉದ್ದಕ್ಕೂ ರಾಶಿ ಹಾಕಿದ ಬಂಡೆ ಸಾಲಿನಿಂದ ನೇರ ಕಡಲ ದರ್ಶನವಾಗುತ್ತಿರಲಿಲ್ಲ. ಆದರೆ ಎರಡು ದಿನದಿಂದ ಕ್ಷೀಣಿಸಿರುವ ಮಳೆಯ ವಿರಹದಲ್ಲಿ ಕಡಲು ಬಂಡೆ ರಾಶಿಯ ಆಚೆ ಬುಡದಲ್ಲೇ ಮೊಕ್ಕಾಂ ಹೂಡಿ, ಮಿನಿಟಿಗೊಮ್ಮೆ ತಲೆ ಚಚ್ಚಿಕೊಳ್ಳುತ್ತಲೇ ಇತ್ತು – ಧುಡುಂ, ಧುಡುಂ! ಆ ಸಾಲಿನ ಕೊನೆಯ ಕಟ್ಟಡ ಉಳ್ಳಾಲದ ಕೊಳಚೆನೀರಿನ ಸಂಸ್ಕರಣ ಕೇಂದ್ರ ಇದ್ದಂತಿತ್ತು. ಅದರ ಯೋಗ್ಯತೆಗೆ ಕನ್ನಡಿಯಾಗಬಹುದಾದ ಒತ್ತಿನ ನೇತ್ರಾವತಿ ಋತುಮಾನದ ಸೊಕ್ಕಿನಲ್ಲಿದ್ದುದರಿಂದ ನಾನು ಮೂಗು ತೂರಲಿಲ್ಲ. ಅದರಿಂದಲೂ ಆಚೆ ಸುಮಾರು ಒಂದು ಕಿಮೀ ಉದ್ದಕ್ಕೆ ನದಿ-ಸಮುದ್ರಗಳ ನಡುವಣ ಸಪುರ ರೇಖೆಯಂತೆ ಚಾಚಿದ್ದ ಮರಳ ದಿಬ್ಬ ಛಿನ್ನಭಿನ್ನವಾಗಿತ್ತು. ದಾರಿಯ ಕೊನೆಯಲ್ಲೇ ಕೆಲವು ದಿನಗಳ ಹಿಂದಷ್ಟೇ ಸಮುದ್ರ ಬಂಡೆರಾಶಿಯ ಬಿಂಕ ಮುರಿದಿತ್ತು. ಅದರ ಹಿಮ್ಮೈಯ ಮರಳನ್ನು ಯಾರೋ ಕೂಲಿಕಾರರು ನಿರ್ವಿಕಾರವಾಗಿ ದೊಡ್ಡ ಚೀಲಗಳಲ್ಲಿ ತುಂಬಿ, ಕೈಗಾಡಿಗೆ ಹೇರಿ, ತುಸು ಆಚಿನ ಕಡಲಕೊರೆತದ ಗಾಯಕ್ಕೆ `ಮದ್ದುಮಾಡುವ’ ಕೆಲಸದಲ್ಲಿದ್ದರು! ಪಾಪ ಎಷ್ಟಿದ್ದರೂ `ಪಂಡಿ ಬೇಲೆ’ (ಹೇಳಿದ ಕೆಲಸ) ಅಲ್ಲವೇ.

ಹಿಮ್ಮುರಿ ತಿರುವು ಹೊಡೆದು ಮತ್ತೆ ಅಬ್ಬಕ್ಕ ವೃತ್ತಕ್ಕಾಗಿ ರೈಲ್ವೇ ನಿಲ್ದಾಣ ದಾರಿ ಹಿಡಿದೆ. ಒಂಬತ್ತು ಕೆರೆ ವಲಯದಲ್ಲಿ ಎಡಕ್ಕೆ ಮೂವತ್ತೈವತ್ತು `ಮೂರು ಸೆಂಟ್ಸ್ ಮನೆ’ಗಳು ವಸತಿಯೋಗವಿಲ್ಲದೆ ವರ್ಷಾನುಗಟ್ಟಳೆಯಿಂದ ಹಾಳು ಸುರಿಯುತ್ತಿರುವುವನ್ನು ಸಂತೈಸಲು ಕಾಡಿನ ಸೆರಗು ಶ್ರಮಿಸುತ್ತಿತ್ತು. ಸೋಮೇಶ್ವರದ ರುದ್ರಪಾದೆಯನ್ನು ಸೇರಿದ್ದೆ. ಅಲ್ಲಿ ಕಾರು ಬೈಕುಗಳಲ್ಲಿ ಬಂದ ನಾಗರಿಕರು ಸಿಮೆಂಟಾಸನ, ವಿರಾಮ ಮಂಟಪ, ಮನೋಹರ ದೀಪಸ್ತಂಭ, ಸುಂದರ ಮೆಟ್ಟಿಲ ಸಾಲುಗಳಲ್ಲಿ ವಿಹರಿಸುತ್ತ, ಪ್ಲ್ಯಾಸ್ಟಿಕ್ ತಟ್ಟೆ, ಚಮಚ, ಲೋಟ, ಬಾಟಲುಗಳಲ್ಲಿ ಚರುಮುರಿ, ಗೋಬಿಮಂಚೂರಿ, ಜೂಸು, ಚಾ ಸವಿದು ಕಸ ಹೆಕ್ಕುವ ಪಂಚಾಯತ್ತಿನ ಕ್ಷಮತೆಯನ್ನು ಪರೀಕ್ಷೆಗೊಡ್ಡುತ್ತಲಿದ್ದರು.

ಮರಳುವ ದಾರಿಯಲ್ಲಿ ಮುಕ್ಕಚ್ಚೇರಿ ಬಳಿ ಎಡದ ದಾರಿ ನನ್ನನ್ನು ಆಕರ್ಷಿಸಿತ್ತು. ನೇರ ಕುರುಡುಕೊನೆ ಸೇರಿದೆ. ಸೈಕಲ್ ಬಿಟ್ಟು ಕಲ್ಲ ರಾಶಿ ಏರಿ, ಇಣುಕಿದೆ. ಇತ್ತ ದೇವರು ದೊಡ್ಡವನು ಎಂದು ದಿನಕ್ಕೆಷ್ಟೋ ಬಾರಿ ಬೊಬ್ಬೆ ಹಾಕುವ ಹಸಿರು ಬಣ್ಣದ ಮಂದಿರ. ಅದಕ್ಕೆ ತಾಗಿದಂತೇ ರಾಶಿಬಿದ್ದ ಬಂಡೆಯ ಸಾಲಿನ ಬುಡದಲ್ಲೇ “ಧೊಡ್ಡಂ ಧೊಡ್ಡಂ” ಎನ್ನುವ ಕಡಲು. ತಿರುಗಿ ಹೊರಟವನನ್ನು ಸಪುರದ ಇನ್ನೊಂದೇ ಬಲಗವಲು ಕರೆಯಿತು. ರಸ್ತೆಯ ನುಣುಪು ಕಳೆದು, ಜಲ್ಲಿಯೂ ಕಿತ್ತು, ಕೊನೆಗೆ ಹೊಯ್ಗೆ ಜಾಡು ಚಕ್ರವನ್ನು ಹೂತು ಹಾಕುವವೆರೆಗೂ ಹೋದೆ. ಮತ್ತೆ ಕಡಲಮುಖಿಯಾಗಿ, ಗಾಳಿತೋಪಿನ ನಡುವೆ ಸೈಕಲ್ ನೂಕಿದೆ. ಅಲ್ಲಿ ರುದ್ರಪಾದೆಯಂಥ ಸಹಜವೋ ಲಾರಿಕ್ರೇನುಗಳ ಜೋಡಿಸಿದ ಅಸಹಜವೋ ಬಂಡೆರಾಶಿ ಇಲ್ಲ. ಕೆಲವು ಗಾಳಿ ಮರಗಳಷ್ಟೇ ಕಡಲ ಒಡಲ ಸೇರಿದಂತಿತ್ತು. ಆಗ ನೇತ್ರಾವತಿಯ ಅಳಿವೆಯ ಬಳಿ (ಕೋಟೆಪುರ) ಬಂಡೆಗುದ್ದಿ, ಹಿಮ್ಮೈಗೆ ಸಿಡಿಯುತ್ತಿದ್ದ ಸೀರ್ಪನಿಗಳು, ಬಂಡೆಗಳಿಗೆಲ್ಲ ನೈಜ ಗಿಳಿಹಸಿರ ಹೊದಿಕೆ ಹೊಚ್ಚಿ ಕೊಟ್ಟ ಸಂದೇಶ ಸ್ಫುಟವಾಯ್ತು. ಹೌದಲ್ಲಾ ಇಲ್ಲೆಲ್ಲ ಗಾಳಿಮರದಿಂದಲೂ ತಗ್ಗಿನ, ಆದರೆ ಬೇರಜಾಲದಲ್ಲಿ ಬಹಳ ಬಿಗುವಿನ ಕಾಂಡ್ಲಾವನವಿದ್ದಿದ್ದರೆ ಹೇಗಿತ್ತು ಎಂಬ ಯೋಚನೆ ನನ್ನ ತಲೆಯಲ್ಲಿ ಬಲಗೊಳ್ಳತೊಡಗಿತ್ತು. ಹಿಂದೆ ರುದ್ರಪಾದೆಯಲ್ಲಿ ಕುಶಲ ವಿಚಾರಿಸಲು ಬಂದ ಮಳೆಯಿಂದ ಕಳೆದ ಹದಿನೈದು ಮಿನಿಟು ಕತ್ತಲನ್ನು ಅವಸರಿಸುತ್ತಿದ್ದುದರಿಂದ ಮಾತಿಲ್ಲದೆ ಹೆದ್ದಾರಿಗಿಳಿದು ಮನೆ ಸೇರಿದೆ. (೧-೭-೨೦೧೫)

ಹಾವಿಗೊಂದು ಓಣಿ?:

ವಾರ ಕಳೆದು ಸೈಕಲ್ ಹೊರಡಿಸಿದ್ದೆ. ಬಾಹುಬಲಿ ನೋಡಿ ಬಂದಿದ್ದ `ಮೈತಿದಿಪಾಪು’ ಕೇಳಿದಳು “ಎಲ್ಲಿಗೆ?” “ಮನೆಯಿಂದ ಮನೆಗೆ!” ದಾರಿಯ ತಿರುವು ಎಳೆದಂತೆ, ಇಳಿಜಾರು ದೂಡಿದಂತೆ, ಏರು ಸವಾಲಿಕ್ಕಿದಂತೆ, ದಮ್ಮಿದ್ದಷ್ಟು, ಕಾಲು ಸೋಲದಷ್ಟು ಪೆಡಲ್ ತುಳಿಯುತ್ತಲೇ ಇರುತ್ತೇನೆ. ಕಾಂಕ್ರೀಟ್ ರಸ್ತೆಗಳ ಸಂದಿನಲ್ಲಿ ಕರ್ಣರಥವಾಗದ ಎಚ್ಚರದಲ್ಲಿ, ಕನ್ನೆಕಪೋಲದಂಥ ದಾರಿಯಲ್ಲಿ ನಾಲ್ಕಿಂಚು ತಗ್ಗಿನ ಆಳುಗುಂಡಿಗಳನ್ನು ಭಕ್ತಿಯಲ್ಲಿ ಬಲವಂದು, ವಟವೃಕ್ಷಗಳ (ಆಟೋರಿಕ್ಷಾ) ಫಿತೂರಿಗೆ ಬಲಿಯಾಗದೆ, ಹಿಂದಿನಿಂದ ಬೊಬ್ಬಿರಿವ ರಕ್ಕಸನಿಗೆ (ಬಸ್ಸುಗಳು) ರಸ್ತೆಯಂಚು ಹಾರದೆ, ಜನರ ಹಿಂದಿನಿಂದ ಜಾನುವಾರಿನ ಮುಂದಿನಿಂದ ಹಾಯದೆ ಸೂರ್ಯನ ಮೇಲೊಂದು ಕಣ್ಣಿಟ್ಟು ಸರ್ಕೀಟ್ ಮುಗಿಸುತ್ತೇನೆ….. ಯೋಚನೆ ಹರಿದಿದ್ದಂತೆ ಬಿಜೈ, ಕದ್ರಿಗುಡ್ಡೆ, ಯೆಯ್ಯಾಡಿ, ಪದವಿನಂಗಡಿ, ಬೊಂದೇಲ್, ಕಾವೂರು, ಕೂಳೂರು ಸೇರಿದ್ದಾಗಿತ್ತು. ಇನ್ನೂ ಸಮಯವಿದೆಯಲ್ಲಾಂತ ಫಲ್ಗುಣಿ ನದಿ ಹಾಯ್ದು, ಅದರದೇ ಮೇಲ್ದಂಡೆ ದಾರಿ ಹಿಡಿದೆ.

ಎಮ್ಮಾರ್ಪೀಯೆಲ್ಲಿನ ಮೂರು ಸಾಲು ಕೊಳವೆ ಈಗಾಗಲೇ ಎಡಮಗ್ಗುಲಿನಲ್ಲಿ ಕಾರ್ಯ ನಿರತವಾಗಿವೆ. ಇನ್ನಷ್ಟು (ಒಟ್ಟು ಒಂಬತ್ತೆಂದು ಯಾರೋ ಹೇಳಿದರು) ಬರಲು ಭರ್ಜರಿ ಸಿದ್ಧತೆಗಳು ನಡೆಯುತ್ತಿರುವುದನ್ನು ನಾನು ಕೆಲವು ಕಾಲದಿಂದ ನೋಡುತ್ತಲೇ ಇದ್ದೇನೆ. ದಾರಿಯ ಸುಮಾರು ಮಧ್ಯಂತರದಲ್ಲಿ, ಹೊಳೆ ಬದಿಯ ಪೊದರನ್ನು ನಾಲ್ಕೈದು ಮಂದಿ ಕುತೂಹಲದಲ್ಲಿ ದೃಷ್ಟಿಸುವುದು ಕಂಡು ನಾನೂ ನಿಂತೆ. ದೊಡ್ಡ ಹೆಬ್ಬಾವೊಂದು ದಾರಿಯ ಅಂಚಿನಲ್ಲೇ ಜಡವಾಗಿ ಬಿದ್ದುಕೊಂಡಿತ್ತು. ಅಲ್ಲಿದ್ದೊಬ್ಬ ಕೊಳವೆಸಾಲಿನ ಸೆಕ್ಕುರಿಟ್ಟಿ (ಸೆಕ್ಕೆರೆಟ್ಟಿರಿ – ಈತನ ದೂರದ ಸಂಬಂಧಿ!)

ಟೀವೀ-೯ರ `ಒಡೆದುಹೋಗುವ ಸುದ್ದಿ’ಯಂತೆ ಹಿಂದಿಯಲ್ಲಿ ಬಂದವರಿಗೆಲ್ಲ ಅದರ ಪ್ರವರ ಒಪ್ಪಿಸುತ್ತಿದ್ದ. ಸಾರಾಂಶ – ಬೆಳಿಗ್ಗೆ ಹತ್ತು ಗಂಟೆಯಿಂದಲೇ ಈತ ಅದನ್ನು ಗಮನಿಸಿದ್ದಾನೆ. ಸಂದ ಸುಮಾರು ಏಳು ಗಂಟೆಗಳಲ್ಲಿ ಅದು ಎರಡು ಬಾರಿ ದಾರಿ ದಾಟಲು ಹೊರಟಿದೆ. ಸೆಕ್ಕುರಿಟ್ಟಿ ಅಪಾರ ಪ್ರಾಣಿದಯೆಯಲ್ಲಿ ಅದು ಧಾವಿಸುವ ವಾಹನಗಳಡಿಯಲ್ಲಿ ಅಪ್ಪಚ್ಚಿಯಾಗದಂತೆ ಬಾಲ ಹಿಡಿದು ಎಳೆದು ಇಲ್ಲಿ ಹಾಕಿದ್ದನಂತೆ. ದೃಶ್ಯಕ್ಕೆ ತೆರೆ ಎಳೆಯುವಂತೆ ಪಿರಿಪಿರಿ ಮಳೆ ಬಂತು. ನಡೆದೋ ವಾಹನಗಳನ್ನು ತಡೆದೋ ನೋಡುತ್ತ ನಿಂತವರು, ತಲೆಗೊಂದು ಅಭಿಪ್ರಾಯ ಕೊಡುವವರು, ಚರವಾಣಿಯ ಚಿತ್ರ ತೆಗೆವವರು ಎಲ್ಲ ಚದರಿದರು. ಸೆಕ್ಕುರಿಟ್ಟಿ ಕೊಡೆ ಬಿಡಿಸಿ ಸಮೀಪದ ಝಿಂಗ್ಶೀಟ್ ಕೊಟ್ಟಿಗೆಯತ್ತ ಓಡಿದ. ನಾನು ಮಾತ್ರ ಮಳೆಕೋಟು ಹಾಕಿ ಸುಮಾರು ಹತ್ತು ಮಿನಿಟು ಕಾದು ನೋಡಿದೆ. ಹಾವೆಲ್ಲಾದರೂ ಮತ್ತೆ ದಾರಿ ದಾಟುವ ಪ್ರಯತ್ನ ಮಾಡುವುದಿದ್ದರೆ, ಧಾವಿಸುವ ವಾಹನಗಳನ್ನು ತಡೆಯುವ ಯೋಚನೆ ನನಗಿತ್ತು; ಹಾಗೇನೂ ಆಗಲಿಲ್ಲ. ಮಳೆ ನಿಲ್ಲುತ್ತಿದ್ದಂತೆ ಸೆಕ್ಕುರಿಟ್ಟಿ ಮತ್ತೆ ಬಂದ. ಮತ್ತೆ ನಡೆಯುವವರು, ವಾಹನ ನಿಲ್ಲಿಸಿ ಹಣಿಕುವವರು….. ನಾನು ಮಳೆಕೋಟು ಬೆನ್ನಚೀಲಕ್ಕೆ ಸೇರಿಸಿ, ಮನೆ ದಾರಿ ಹಿಡಿದೆ. ಮತ್ತೆ `ಮೈತಿದಿಪಾಪು’ ಸಿಕ್ಕಿದ್ದರೆ “ಹೆಬ್ಬಾವು ನೋಡಲು ಹೋಗಿದ್ದೆ” ಎಂದು ಹೇಳಲು ಉತ್ಸುಕನಾಗಿದ್ದೆ J (೧೨-೭-೧೫)

ಲಜ್ಜೆಗೇಡಿ ಆಡಳಿತ:

ಶೇಡಿಗುಡ್ಡೆ, ಲೇಡಿಹಿಲ್, ಕೊಟ್ಟಾರ, ಕೂಳೂರು, ನವಮಂಗಳೂರು ಎಂದು ಸೈಕಲ್ ಮೆಟ್ಟುತ್ತಲೇ ಇದ್ದೆ. ತಲೆಯೊಳಗೆ ತಣ್ಣೀರು ಬಾವಿಯ ಗಾಲ್ಫ್ ಮೈದಾನದ ಕೆಲಸ ಸ್ಥಗಿತಗೊಂಡದ್ದು, ಕೂಳೂರು ಸಂಕದ ಬಂದೋಬಸ್ತು ತೊಡಗಿದ್ದು ತಿರುಗುತ್ತಾ ಇತ್ತು. ಎಂಸಿಎಫಿನೊಳಗಿಂದ ಹಾದು ಬರುವ ರೈಲ್ವೇ ಹಳಿಗಳ ಬಳಿ ಸರ್ವೀಸ್ ರಸ್ತೆ ಎರಡೂ ಬದಿಯಲ್ಲಿ ಬುಲ್ಡೋಜ್ ಮಾಡಿದ್ದರು. ಸೈಕಲ್ ಎತ್ತಿ ದಾಟಿಸಿ, ಮುಂದುವರಿದು ಪಣಂಬೂರು ಕಡಲತಡಿಗೇ ಹೋದೆ. ಅಲ್ಲಿ ಮಾತ್ರ ನಿರ್ಲಜ್ಜವಾಗಿ ರೂಪುಗೊಳ್ಳುತ್ತಿರುವ ಹೋಟೆಲ್ ಕಡಲಿನತ್ತ ಭಾರೀ ಅಂಗಳ ಸಿಗುವಂತೆ ಭಾರೀ ಪಾಗಾರ ಎಬ್ಬಿಸಿ, ಒಳಗೆಲ್ಲ ಕೆಮ್ಮಣ್ಣು ತುಂಬುವ ಕೆಲಸ ನಡೆದಿತ್ತು. ಸಾರ್ವಜನಿಕಕ್ಕೆ ಭಾರೀ ಮಾಡಿ/ಮಾಡದಿರಿ ಹೇಳುವ ಸರಕಾರ ಇಲ್ಲಿ ಚಡ್ಡಿ ಜಾರಿಸಿ ಕುಳಿತಿತ್ತು.

ಬಂದರಿನ ಪಶ್ಚಿಮ ಪಾಗಾರದ ಹೊರವಲಯದಲ್ಲಿನ ಡಾಮರು ರಸ್ತೆಯಲ್ಲಿ ಉದ್ದಕ್ಕೆ ಪೆಡಲ್ ಹೊಡೆದೆ. ಬಂದರಿನ ಜಲದ್ವಾರದ ಉತ್ತರ ದಂಡೆಯ ನೀರತಡೆಯತ್ತ ತಿರುಗಿಕೊಂಡೆ. ಅಲೆಯಪ್ಪಳಿಸುತ್ತಿದ್ದ ಜಾರುವ ಬಂಡೆರಾಶಿಯ ಮೇಲೂ ಕೆಲವರು ಕಸರತ್ತು ಮಾಡಿಕೊಂಡು ಗಾಳ ಹಾಕುವುದರಲ್ಲಿ ತಲ್ಲೀನರಾಗಿದ್ದರು. ನೈತಿಕವಾಗಿ ಜಾರುವ ನೆಲೆಯಲ್ಲಿ ಪ್ರವಾಸೋದ್ಯಮದ ಗಾಳ ಎಸೆಯುವವರಿಗಿಂತ ಉತ್ತಮ ಎಂದುಕೊಂಡು ಬೈಕಂಪಾಡಿಯತ್ತ ಮುಂದುವರಿದೆ. ಪಣಂಬೂರು ರೈಲ್ವೇ ನಿಲ್ದಾಣದಲ್ಲಿ ನುಸುಳಿ ನೇರ ಹೆದ್ದಾರಿಗೇ ಹೋದೆ. ಇನ್ನೂ ಕೆಲಸ ಪೂರ್ಣಗೊಳ್ಳದ ಎರಡನೇ ರೈಲ್ವೇ ಮೇಲ್ಸೇತು ಗೊಂದಲದಲ್ಲಿ ಉಡುಪಿ ದಾರಿಯ ವಾಹನ ಸಾಲು ಗಂಧಮಾದನ ಪರ್ವತದಲ್ಲಿ ಭೀಮನನ್ನು ಅಡ್ಡಗಟ್ಟಿದ ಹನುಮನ ಬಾಲವಾಗಿತ್ತು. ನಾನು ಭೀಮಗರ್ವ ತೋರದೆ, ಸೈಕಲ್ ಸರಳತೆಯಲ್ಲಿ ಎಡೆಯಲ್ಲಿ ತೂರಿ, ಖಾಲಿಯಿದ್ದ ಮಂಗಳೂರು ದಾರಿ ಹಿಡಿದೆ. ಕೂಳೂರು ಸಮೀಪಿಸುತ್ತಿದ್ದಂತೆ ಮೊನ್ನೆಯ ಹೆಬ್ಬಾವಿನ ನೆನಪು ಬಂದದ್ದಕ್ಕೆ ಸುಮ್ಮನೆ ಅಲ್ಲಿವರೆಗೂ ಹೋಗಿದ್ದೆ. ಹಾವಂತೂ ಇರುವ ಸಾಧ್ಯತೆ ಇರಲಿಲ್ಲ. ಅಂದು ಪರಿಚಿತನಾದ ಸೆಕ್ಕುರಿಟ್ಟಿಯೂ ಇರಲಿಲ್ಲ. ಹಾಗೇ ಹಿಂತಿರುಗಿ ಕೂಳೂರು, ಕೊಟ್ಟಾರ, ಕುಂಟಿಕಾನ, ಬಿಜೈಗಾಗಿ ಮನೆ ಸೇರಿಕೊಂಡೆ. ಕವಿದ ಮೋಡ ಎಲ್ಲೂ ದ್ರವಿಸದೆ, ಬೆನ್ನಚೀಲದೊಳಗೆ ಬಿಟ್ಟಿ ಸವಾರಿ ಪಡೆದ ಮಳೆಕೋಟು ನಕ್ಕಿತ್ತು! (೧೪-೭-೨೦೧೫)

(ಅನಿಯತವಾಗಿ ಮುಂದುವರಿಯಲಿದೆ)