(ಪೂರ್ವಾರ್ಧ)

‘ಪುರಾಣ ಜಪ’ದಲ್ಲಿ ನನಗೆ ದೊಡ್ಡ ಕುಖ್ಯಾತಿ ಇದೆ. ಅಂತರ್ಜಾಲದಲ್ಲಿ ಯಾರೇನು ಕಥಿಸಿದರೂ ಕೆಲವೊಮ್ಮೆ ತಡವಾಗಿ ನನಗೇ ಮುಜುಗರವುಂಟಾಗುವಂತೆ “ನಾನೂ…..” ಬರೆಯುತ್ತಲೇ ಇರುತ್ತೇನೆ, ಪ್ರಕಟಿತ ಲೇಖನಗಳಿಗೆ ಸೇತು ತುರುಕುತ್ತಿರುತ್ತೇನೆ. ಇದರ ಪುಣ್ಯ ಫಲವಾಗಿ, ಇಪ್ಪತ್ತೆಂಟು ವರ್ಷಗಳ ಹಿಂದೆ ನಾನು, ದೇವಕಿಯೂ ನೋಡಿದ ಕೇದಾರ, ಆಗ ನೋಡಲಾಗದ ಬದರೀ ಕ್ಷೇತ್ರಗಳಿಗೆ ಹೊರಟು ನಿಂತ ಯಾತ್ರಾ ತಂಡದಲ್ಲಿ ಸೇರಿಹೋಗಿದ್ದೆವು. ಸನ್ನಿವೇಶವನ್ನು ಕಿರಿದರಲ್ಲಿ ಹೇಳುವುದಿದ್ದರೆ…..

ಅದೊಂದು ಅಪರಾಹ್ನ, ಸೈಕಲ್ ಗೆಳೆಯ ಹರಿಪ್ರಸಾದ್ ಶೇವಿರೆಯಿಂದ ಅನಿರೀಕ್ಷಿತ ಚರವಾಣಿ ಬಂತು, “ನಮ್ಮ ಕೇದಾರ ಬದರೀ ಯಾತ್ರೆಗೆ ನೀವಿಬ್ಬರು ಅತಿಥಿಗಳಾಗಿ ಬರಬೇಕು.” ಯಾವ ಮುನ್ಸೂಚನೆ ಇಲ್ಲದ, ನಿಶ್ಶರ್ತ, ನಿಃಶುಲ್ಕ, ಪ್ರೀತಿಯೊಂದೇ ಆಧಾರವಾದ ಕರೆ, ಅದೂ ನಮ್ಮದೇ ಬಯಕೆಯ ಮೂರ್ತ ರೂಪ! ಹರಿಪ್ರಸಾದರ ಅಣ್ಣ – ಅನಂತಕೃಷ್ಣರಾವ್ (ಎಕೆ ರಾವ್), ಮೂಡಬಿದ್ರೆಯ ಮುಂಚೂಣಿಯ ಗೇರು ಉದ್ಯಮಿ. (ನೋಡಿ: ಗೇರು ಬೀಜದ ಅನುಬಂಧ). ಇವರು ಕಳೆದ ಐದು ವರ್ಷಗಳಿಂದ ವರ್ಷಕ್ಕೊಮ್ಮೆ ಎಂಬಂತೆ, ತೀರ್ಥಯಾತ್ರಾಸೇವೆ ನಡೆಸುತ್ತಿದ್ದಾರೆ. ಹಿಮಾಲಯದ ತೀರ್ಥ ಕ್ಷೇತ್ರಗಳನ್ನು ಆಯ್ದ ಬಂಧು ಮಿತ್ರರೊಡನೆ, ಪೂರ್ಣ ಸ್ವಂತ ವ್ಯವಸ್ಥೆ ಮತ್ತು ಖರ್ಚಿನಲ್ಲಿ ದರ್ಶಿಸಿ ಬರುತ್ತಲೇ ಇದ್ದಾರೆ. ಅವರ ಉದ್ಯಮದಲ್ಲೂ ಈ ಪ್ರವಾಸಗಳಲ್ಲೂ ಕಿರಿಯ ಮತ್ತು ಸಕ್ರಿಯ ಪಾಲುದಾರ ಹರಿಪ್ರಸಾದ್. (ಐದು ವರ್ಷಗಳ ಹಿಂದೆ, ಇವರು ಎರಡು ಬಸ್ ತುಂಬುವಷ್ಟು ಜನ ಕಟ್ಟಿಕೊಂಡು ಕೇದಾರ ಬದರಿ ನೋಡಿದ್ದನ್ನು ಹರಿಪ್ರಸಾದರಿಗೆ ಎಷ್ಟು ಹೇಳಿದರೂ ಸಾಲದು!) ಹಾಗೆ ಈ ಬಾರಿಯೂ ಸಾಕಷ್ಟು ಮುನ್ಸೂಚನೆ ಕೊಟ್ಟು, ಕೇದಾರ – ಬದರಿ – ಹರಿದ್ವಾರ ಯೋಜಿಸಿದ್ದರು. ಆದರೆ ಕಡೇ ಗಳಿಗೆಯಲ್ಲೆಂಬಂತೆ ಕೆಲವರು ಹಿಂದೆ ಸರಿದಿದ್ದರು. ಕೊರತೆ ತುಂಬಲು ಹರಿಗೆ ಸೂಚಿಸಿದಾಗ, ‘ಸಿಕ್ಕಿಬಿದ್ದವರು’ ನಾವು. ಹೊರಡಲು ಏಳೆಂಟು ದಿನಗಳ ಅವಕಾಶವಿದ್ದರೂ ನನಗೆ ಸೂಚನೆ ಮತ್ತು ನಿರ್ಧಾರಕ್ಕೆ ಸಮಯವಿದ್ದದ್ದು ಕೇವಲ ಅರ್ಧ ಗಂಟೆ. ದೇವಕಿ ತಂಗಿ ಮನೆಯ ಪೂಜೆ (೨೦/೧೦), ರಾಕೇಶ್ ರೈ ಅಡ್ಕ ಬಳಗದ ದೀವಟಿಗೆ ಪ್ರಯೋಗ (೨೦/೧೦), ಮಂಗಳೂರು ವಿವಿನಿಲಯದ ಯಕ್ಷ-ಕಮ್ಮಟ (೨೪/೧೦), ಇನ್ನೂ ಏನೇನೋ ನಗಣ್ಯ ಮಾಡಿ, ಶುಕ್ರವಾರದಿಂದ ಶುಕ್ರವಾರದ (ಅಕ್ಟೋಬರ್ ೧೯- ೨೬, ೨೦೧೮) ಯಾತ್ರೆಗೆ ಸೈ ಎಂದಿದ್ದೆವು; ಬೆಟ್ಟ, ಕಾಡು ನನಗೆ ಎಂದಿದ್ದರೂ ಆದ್ಯತೆಯಲ್ಲಿ ಪ್ರಥಮ – ವೈಲ್ಡ್ ಲೈಫ್ ಫಸ್ಟ್!

ಹತ್ತೊಂಬತ್ತರ ಸಂಜೆ ಏಳಕ್ಕೆ ಸರಿಯಾಗಿ ಹರಿ, ಬಾಡಿಗೆ ಕಾರೇರಿ, ಇನ್ನಿಬ್ಬರು ತಂಡದ ಸದಸ್ಯರನ್ನು ಸೇರಿಕೊಂಡು ನಮ್ಮನೆಗೇ ಬಂದಿದ್ದರು. ಅವರಲ್ಲೊಬ್ಬರು – ಪುತ್ತೂರಿನ ಕೃಷಿಕ (ನವನೀತ ನರ್ಸರಿಯ ಪಾಲುದಾರ), ಗಣ್ಯ ಪುರೋಹಿತ, ಶ್ರೀವತ್ಸ ಕೆದಿಲಾಯ. ಇವರು ಎಕೆ ರಾಯರ ಧಾರ್ಮಿಕ ನಂಬುಗೆಗಳಿಗೆ ಗುರು ಸಮಾನರಾಗಿ, ಹೆಚ್ಚಿನೆಲ್ಲ ಯಾತ್ರೆಗಳಿಗೂ ಆಧಾರಸ್ತಂಭವಾಗಿಯೇ ಸಹಯೋಗ ಕೊಟ್ಟವರು. ಇನ್ನೊಬ್ಬರು – ತಂಡದ ಹಿರಿಯ ಸದಸ್ಯ (ಎಪ್ಪತ್ತರ ಹರಯ), ಸಣ್ಣ ಮಟ್ಟಿನ ಕೃಷಿಕ, ಅರ್ಚಕ ರಘುಪತಿ ಎರ್ಕಡಿತ್ತಾಯರು. ಮಂಗಳೂರು ವಿಮಾನ ನಿಲ್ದಾಣ ನಮ್ಮ ಯಾತ್ರಾ ಸಂಭ್ರಮಕ್ಕೋ ಎಂಬಂತೆ ವಿಶೇಷ ದೀಪಾಲಂಕಾರ ಹೊತ್ತಿತ್ತು. ನಿಜದಲ್ಲಿ ಹಾಗಲ್ಲ, ನಾಡಹಬ್ಬ ನವರಾತ್ರಿಯ ಅಲಂಕಾರ ಎಂದರೂ ನಮ್ಮ ಯಾತ್ರೆಗೆ ವಿಜಯ ದಶಮಿಯೇ ನಾಂದಿಯಾದದ್ದಂತೂ ನಿಶ್ಚಯ.

ಎಕೆ ರಾಯರನ್ನು ನಾನು ಮುಖತಃ ಕಂಡದ್ದೂ ಇಲ್ಲ, ಔಪಚಾರಿಕವಾಗಿ ದೂರವಾಣಿಯಲ್ಲಾದರೂ ಮಾತಾಡಿಸಿದ್ದೂ ಇಲ್ಲ. ಹರಿಯ ಜತೆಗೆ ಅವರ ಗೇರು ಉದ್ಯಮ – ವಿಜಯಲಕ್ಷ್ಮಿ ಗೇರು ಉದ್ದಿಮೆ, ನೋಡಲು ಹೋದಂದು, ರಾಯರು ವ್ಯವಹಾರದ ಸಲುವಾಗಿ ವಿದೇಶದಲ್ಲಿದ್ದರು. ಹಾಗಾಗಿ ಪ್ರಸ್ತುತ ಯಾತ್ರೆ ಮತ್ತು ಇತರ ಸಹಯಾತ್ರಿಗಳ ಕುರಿತು ಹರಿಯನ್ನು ವಿಚಾರಿಸಿದ್ದೆ. ಅವರು “ಕಾದು ನೋಡಿ, ನಿಮಗೆ ಸರ್ಪರೈಸ್ ಇದೆ” ಎಂದಷ್ಟೇ ಹೇಳಿದ್ದರು. ವಿಮಾನ ನಿಲ್ದಾಣಕ್ಕೆ ನಮ್ಮ ಬೆನ್ನಿಗೇ ಎಂಬಂತೆ ಆಕಾಶವಾಣಿಯ ನಿವೃತ್ತ ಉದ್ಘೋಷಕಿ, ಇನ್ನೂ ಮುಖ್ಯವಾಗಿ ನನಗೆ ಕಳೆದ ಮೂರ್ನಾಲ್ಕು ದಶಕಗಳ ಸುಪರಿಚಿತೆ – ನಾರಾಯಣೀ ದಾಮೋದರ್ ಮತ್ತು ಬಳಗ ಬಂದಾಗ ನಿಜಕ್ಕೂ ದೊಡ್ಡ `ಸರ್ಪ್ರೈಸ್’ಏ ಆಗಿತ್ತು. ನಾರಾಯಣಿಯವರ ಮಗ – ರೋಹಿತ್ (ದಂತವೈದ್ಯ), ನನ್ನ ಕಣ್ಣೆದುರೇ ವೈದ್ಯಕೀಯ ವಿದ್ಯೆ ಮತ್ತು ವೃತ್ತಿಗಳಲ್ಲಿ ಬೆಳೆದು ನಿಂತವನು, ನನ್ನಂಗಡಿಯ ಒಳ್ಳೆಯ ಗ್ರಾಹಕ, ಸಪತ್ನೀಕನಾಗಿ ಬಂದಿದ್ದ. ಸಂಬಂಧ ಜಾಲದ ಚೋದ್ಯದಲ್ಲಿ ರೋಹಿತನ ಪತ್ನಿ – ಅಪರ್ಣಾ ರಾವ್, ಎಕೆ ರಾಯರ ಹಿರಿಮಗಳು! ಅಪರ್ಣಾ (ಅಪ್ಪೂ) ಮೂಡಬಿದ್ರೆಯ ಬ್ಯಾಂಕ್ ಅಧಿಕಾರಿಣಿ. ಈ ಯಾತ್ರೆಗೆ ಆಕೆ ‘ಮಗಳ ಹಕ್ಕಿ’ನಲ್ಲಿ ತನ್ನದೇ ಬ್ಯಾಂಕಿನ ಆತ್ಮೀಯ ಹಿರಿಯ ಅಧಿಕಾರಿ, ಹುಬ್ಬಳ್ಳಿ ಮೂಲದ ಶ್ರೀಧರ ಜೋಷಿ ಕುಟುಂಬವನ್ನು ಆಹ್ವಾನಿಸಿದ್ದರು. ಶ್ರೀಧರ ಹೆಂಡತಿ ಶಾಲಿನಿ ಜೋಷಿ – ಸ್ವಂತ ಕಿರು ಉದ್ದಿಮೆಗಾರ್ತಿ ಮತ್ತು ಮಗ ಸೌರಭ್ ಜೋಷಿ – ಪ್ರೌಢಶಾಲಾ ವಿದ್ಯಾರ್ಥಿಯರನ್ನು ಕೂಡಿಕೊಂಡೇ ಬಂದಿದ್ದರು. ನಮ್ಮ ತಂಡದ ಸೇನಾನಿ – ಎ.ಕೆ. ರಾಯರು, ತನ್ನ ಜತೆಗೆ ಮೂವರನ್ನು ಕೂಡಿಕೊಂಡು ಮೂಡಬಿದ್ರೆಯಿಂದ ಕೊನೆಯಲ್ಲಿ ಬಂದರು. ಮುದ್ದಿನ ಮಗ ದುರ್ಗಾಪ್ರಸಾದ – ಪ್ರೌಢಶಾಲಾ ವಿದ್ಯಾರ್ಥಿ, ಸೌರಭ್ ಜೋಶಿಗೆ ಒಳ್ಳೆಯ ಜತೆಗಾರ. ಅಲ್ಲದೆ, ಅವರ ಆತ್ಮೀಯ ವರ್ಗದಲ್ಲೊಬ್ಬರಾದ, ಕಾರ್ಕಳ ದೇವಳ ಒಂದರ ಅರ್ಚಕ – ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಇಂದುಮತಿಯವರನ್ನೂ ಕರೆತಂದಿದ್ದರು. ಹದಿನಾರನೇ ಸದಸ್ಯ – ನರೇಂದ್ರನಾಥ್ ಉಡುಪ, ನಾರಾಯಣಿಯವರ ತಮ್ಮ, ಫಿಲಿಪ್ಸ್ ಕಂಪೆನಿಯ ನಿವೃತ್ತ ಅಧಿಕಾರಿ, ಬೆಂಗಳೂರಿನಲ್ಲಿ ನಮ್ಮನ್ನು ಸೇರಿಕೊಳ್ಳುವವರಿದ್ದರು.

ಇಂಡಿಗೋ ಸಂಸ್ಥೆಯ ವಿಮಾನ ಸಮಯಕ್ಕೆ ಸರಿಯಾಗಿಯೇ (ಐವತ್ತೇ ಮಿನಿಟಿನ ಹಾರಾಟ) – ಅಂದರೆ ಒಂಬತ್ತರ ಸುಮಾರಿಗೆ, ನಮ್ಮನ್ನು ಬೆಂಗಳೂರು ಮುಟ್ಟಿಸಿತು. ಅಲ್ಲಿ ಯೋಜನೆಯಂತೇ ನರೇಂದ್ರನಾಥ ಉಡುಪರು ನಮ್ಮನ್ನು ಸೇರಿಕೊಂಡರು. ನಮ್ಮ ಮುಂದಿನ ಗುರಿ ದಿಲ್ಲಿ, ಹಾರಾಟ ಜೆಟ್ ಏರ್ವೇಸ್ ಸಂಸ್ಥೆಯದು. ಅದು ‘ಇಂದಿನ ಅಪರಾತ್ರಿ’ ಎಂದರೂ ಸರಿ, ‘ನಾಳಿನ ಮುಂಜಾನೆ’ ಎಂದರೂ ನಡೆದೀತು ಎನ್ನುವಂತೆ, ಎರಡು ಗಂಟೆಯ ಸುಮಾರಿಗಿತ್ತು. ಹಾಗೆ ಒದಗಿದ ತುಸು ಉದ್ದದ ಬಿಡುವನ್ನು ನಾವು ಭೋಜನ ವಿರಾಮವೆಂದೇ ಅನುಭವಿಸಿದೆವು. ನಮಗೆ ಹೋಗುವ ದಾರಿಯಲ್ಲಿ ಎರಡು (ಬೆಂಗಳೂರು ಮತ್ತು ದಿಲ್ಲಿ), ಬರುವ ದಾರಿಯಲ್ಲಿ ಒಂದು (ಮುಂಬೈ) ನಿಲ್ದಾಣಗಳಲ್ಲಿ ಇಂಥ ಬಿಡುವು ಇತ್ತು. ಅಲ್ಲೆಲ್ಲ ನಮ್ಮ ಕೈಚೀಲಗಳನ್ನುಳಿದ ಸಾಮಾನುಗಳೆಲ್ಲ ನಮ್ಮ ಸಂಪರ್ಕಕ್ಕೆ ಸಿಗದೇ ವಿಮಾನದಿಂದ ವಿಮಾನಕ್ಕೆ ನೇರ ವರ್ಗಾವಣೆಗೊಳ್ಳುತ್ತಿತ್ತು. ನಮ್ಮದೇನಿದ್ದರೂ ಹಗುರ ಮರು ತನಿಖಾ ವಿಧಿಗಳನ್ನು ಎದುರಿಸುತ್ತ, ನಿಲ್ದಾಣದ ಒಳಗಿಂದೊಳಗೇ ಬದಲೀ ‘ಕಟ್ಟೆ’ಗಳನ್ನು ಹಿಡಿಯುವುದಷ್ಟೇ ಇತ್ತು. ಹೋಗುವ ದಾರಿಯಲ್ಲಿ ನಮ್ಮ ಹಾರು ಸರಣಿ ಮೂರು –

೧ ಮಂಗಳೂರು – ಬೆಂಗಳೂರು, ೨ ಬೆಂಗಳೂರು – ದಿಲ್ಲಿ ಮತ್ತು ೩. ದಿಲ್ಲಿ – ಡೆಹ್ರಾಡೂನ್. ಅದೇ ಮರಳುವಲ್ಲಿ ಡೆಹ್ರಾಡೂನ್ – ಮುಂಬೈ ಮತ್ತು ಮುಂಬೈ – ಮಂಗಳೂರು, ಎರಡೇ. ವಿಮಾನಗಳ ಹಾರಾಟದ ಅವಧಿ ಕಡಿಮೆಯಾದರೂ ಔಪಚಾರಿಕ ವಿಧಿಗಳು ಬಹಳ ಬಿಗಿ ಮತ್ತು ಕೇಳುವ ಸಮಯವೂ ದೊಡ್ಡದು. ಇನ್ನು ಹವಾಮಾನ, ಹಾರುನೆಲದ (ರನ್ವೇ) ಬಿಡುವು ಮತ್ತು ಯಂತ್ರದ ಸಕ್ಷಮತೆ ಚೂರು ಹೆಚ್ಚುಕಮ್ಮಿಯಾದರೂ ಹೊರಡುವ ಅಥವಾ ತಲಪುವ ವೇಳಾಪಟ್ಟಿ ಏರುಪೇರಾಗುತ್ತಿರುತ್ತದೆ. ಹಾಗಾಗಿ ಎಲ್ಲ ನಿಲ್ದಾಣಗಳೂ ಯಾತ್ರಿಗಳ ಬಿಡುವನ್ನು ಸದುಪಯೋಗಗೊಳಿಸಲು ಸುಸಜ್ಜಿತವೇ ಇರುತ್ತವೆ. ಶೌಚಾಲಯ, ಕ್ಯಾಂಟೀನುಗಳಿಂದ ಹಿಡಿದು ಸೂಪರ್ ಬಜಾರಿನವರೆಗೂ ಇಲ್ಲಿ ಸಿಕ್ಕದಿರುವುದು ಇಲ್ಲ. ಆದರೆ..ರೆ.. ದರ ಮಾತ್ರ ಒಂದಕ್ಕೆ ಹತ್ತು! (ಹಿಂಬರುವಾಗ ಮುಂಬೈ ನಿಲ್ದಾಣದಲ್ಲಿ ಒಂದು ಲೋಟ ಚಾ ಬೆಲೆ ರೂ ತೊಂಬತ್ತಾದರೆ, ಕಾಫಿ ನೂರಾ ತೊಂಬತ್ತು!!) ಇವನ್ನು ಮುಂಗಂಡೇ ತಂಡದಲ್ಲಿ ಅಪರ್ಣ ರಾವ್ ಬಳಗ ಆ ರಾತ್ರಿಯ ಊಟಕ್ಕೂ ಒಟ್ಟಾರೆ ಯಾತ್ರೆಯ ಎಡೆ ಹೊತ್ತಿನ ಹೊಟ್ಟೆಪಾಡಿಗೂ ಬಹಳ ಮುತುವರ್ಜಿಯಿಂದ ಕೆಲಸ ಮಾಡಿತ್ತು ಮತ್ತು ಅವೆಲ್ಲವನ್ನೂ ಕೈಚೀಲದ ಮಿತಿಯೊಳಗೆ ಉದ್ದಕ್ಕೂ ನಿಭಾಯಿಸಿದ್ದರು. ವಾಸ್ತವದಲ್ಲಿ ಯಾತ್ರೆ ಮುಗಿದಾಗ, ಅಪ್ಪೂ ಬಳಗ ತಂದಿದ್ದ ಹತ್ತೆಂಟು ಕಿರು ತಿನಿಸುಗಳೂ ಮಿಕ್ಕಿದ್ದವು. ಮತ್ತೂ ವಿಶೇಷವಾಗಿ ರುಚಿ ನೋಡಲೂ ಆಗದೇ ಉಳಿದಿದ್ದ ಜೋಳದ ರೊಟ್ಟಿ, ಚಟ್ನಿ, ಖಡಕ್ ಮೊಸರಂತೂ ನಮ್ಮ ತಂಡದ ಸಾಮರ್ಥ್ಯವನ್ನೇ ಅಣಕಿಸುವಂತೆ ವಾಪಾಸು ಮನೆಗೆ ಹೋಗಬೇಕಾಗಿತ್ತು!

ಬೆಂಗಳೂರು ವಿಮಾನ ನಿಲ್ದಾಣದ ದೀರ್ಘ ಓಣಿ ಒಂದರಲ್ಲಿ ಬುತ್ತಿ ಬಿಚ್ಚಿ ರೊಟ್ಟಿ, ವಿವಿಧ ಬಗೆಯ ಪಲ್ಯಗಳನ್ನು ಸವಿದೆವು. ವಿರಾಮದಲ್ಲಿ ‘ದಿಲ್ಲಿ ಕಟ್ಟೆ’ ಸೇರಿಕೊಂಡೆವು. ಬಂದ ದಾರಿಯ ಹೋಲಿಕೆಯಲ್ಲಿ ದಿಲ್ಲಿಯ ಅಂತರ ಹೆಚ್ಚಿದ್ದರೂ ವಿಮಾನಕ್ಕದು ಎರಡೇ ಗಂಟೆಯ ದಾರಿ. ಆರೆಂಟು ಗಂಟೆಯ ಬಸ್ ಪ್ರಯಾಣದಲ್ಲಿನ ನಿರ್ವಾಹಕ, ಹೆಚ್ಚೆಂದರೆ ಎರಡು ಬಾರಿ “ಟಿಕೆಟ್” ಎಂದಾನು. ಉಳಿದಂತೆ ನಮ್ಮ ತಂಟೆಗೆ ಬರುವುದಿಲ್ಲ. ಗಗನ ಸಖ/ಖಿಯರು ಹಾಗಲ್ಲ, ಸ್ವಾಗತ ವಿದಾಯಗಳ ಠಕ್ಕಿನ ನಡುವೆ ಸಮಯ ಸಣ್ಣದೇ ಇದ್ದರೂ ಯಾನಿಗಳನ್ನು ತುಸು ಹೆಚ್ಚೇ ‘ಮುದ್ದು’ ಮಾಡುತ್ತಾರೆ. ಇದರಿಂದ ನಾವು ನಿದ್ರೆ, ಎಚ್ಚರಗಳ ತಾಕಲಾಟ ಮುಗಿಸುವುದರೊಳಗೆ, ಅಂದರೆ ಬೆಳಗ್ಗೆ ನಾಲ್ಕು ಗಂಟೆಯ ಸುಮಾರಿಗೆ, ದಿಲ್ಲಿ ಸೇರಿದ್ದೆವು. ಇಲ್ಲಿ ಮತ್ತೆ ಸುಮಾರು ಮೂರು ಗಂಟೆಯ ವಿರಾಮ. ಕೊನೆಯ ಕಂತಿನ ವಿಮಾನ – ಡೆಹ್ರಾಡೂನಿಗೆ, ಕೇವಲ ಮುಕ್ಕಾಲು ಗಂಟೆಯ ಅವಧಿಯದ್ದು. ಅದೂ ಸಕಾಲಕ್ಕೇ ಮುಗಿದಿತ್ತು. ವಿಮಾನ ನಿಲ್ದಾಣಗಳಲ್ಲಿ ಪಾಯಖಾನೆಗಳು ಅಸಂಖ್ಯ ಮತ್ತು ಅತಿ ಎನ್ನುವಷ್ಟು ಸ್ವಚ್ಛವೂ ಇರುತ್ತವೆ. ಸಹಜವಾಗಿ ನಮ್ಮ ಪ್ರಾತರ್ವಿಧಿಗಳನ್ನೆಲ್ಲ ಯಥಾನುಕೂಲ ದಿಲ್ಲಿ, ಡೆಹ್ರಾಡೂನ್ ವಿಮಾನ ನಿಲ್ದಾಣಗಳಲ್ಲೇ ಮುಗಿಸಿಕೊಂಡೇ ಹೊರಬಿದ್ದೆವು.

ಎಕೆ ರಾಯರ ಪ್ರವಾಸೀ ಯೋಜನೆಗಳ ಪ್ರತ್ಯಕ್ಷ ಬಲ ಹರಿಪ್ರಸಾದ್, ಪರೋಕ್ಷ ಸಹಾಯ – ಮಂಗಳೂರಿನ ವಿಕ್ರಂ ಟ್ರಾವೆಲ್ಸ್. (ಮೂರು ವರ್ಷಗಳ ಹಿಂದೆ ನನಗೂ ದೇವಕಿಗೂ ಜಮ್ಮು ಕಾಶ್ಮೀರ ತೋರಿಸಿದ್ದು ಇದೇ ವಿಕ್ರಂ ಟ್ರಾವೆಲ್ಸ್! ಒಂಬತ್ತು ಭಾಗಗಳ ಆ ಕಥನವನ್ನು ಓದುವ ಆಸಕ್ತರಿಗೆ ಇಲ್ಲಿ ಮೊದಲ ಮೆಟ್ಟಿಲನ್ನಷ್ಟೇ ಕಾಣಿಸಿದ್ದೇನೆ, ಉಳಿದವನ್ನು ಅಲ್ಲೇ ಕಂಡುಕೊಳ್ಳಿ: ಜಮ್ಮು ಕಾಶ್ಮೀರ ಪ್ರವಾಸ ಕಥನ) ನಮ್ಮ ಡೆಹ್ರಾಡೂನ್ ಬರೋಣವನ್ನು ವಿಕ್ರಂ ಟ್ರಾವೆಲ್ಸ್ ವ್ಯವಸ್ಥೆಯ ೨೯ ಆಸನಗಳ ಕಿರು ಬಸ್ – ಕೊನಾರ್ಕ್, (ಈಶ್ವರ್ ಸಿಂಗ್?) ಥಾಪಾ ಸಾರಥ್ಯದೊಡನೆ ಕಾದುಕೊಂಡಿತ್ತು. ಉತ್ತರಾಖಂಡದ ಗಟ್ಟಿ ಚಹರೆಯ ಥಾಪಾರಿಗೆ ಪ್ರಾಯ ಐವತ್ತರ ಗಡಿ ದಾಟಿತ್ತು ಎನ್ನುವುದಕ್ಕಿಂತ, ಲೋಕಾನುಭವ ಅಷ್ಟು ಪಕ್ವವಿತ್ತು ಎಂದೇ ಹೇಳಬೇಕು. ಹಿಮಾಲಯದ ಭೂ ಮತ್ತು ಹವಾ ಅಸ್ಥಿರತೆಯಲ್ಲಿ ಕೆಲವೊಮ್ಮೆ ವಾಹನಗಳು ಕೆಲವು ಗಂಟೆಗಳಿಂದ ದಿನಗಳ ತನಕವೂ ದಿಗ್ಬಂಧನಕ್ಕೊಳಗಾಗುವುದು ನಮಗೆ ಕೇಳಿಯಷ್ಟೇ ಗೊತ್ತು.

ಆದರೆ ಥಾಪಾರಿಗೆ ಅನುಭವಿಸಿಯೂ ಗೊತ್ತಿದ್ದಿರಬೇಕು. ಆತನ ಸೀಟಿನ ಹಿಂದೆ ಮಡಚಿಟ್ಟ ರಜಾಯಿ, ಆತ ಬಸ್ಸಿನಲ್ಲೇ ಮಲಗುತ್ತಿದ್ದದ್ದಕ್ಕೆ ಸಾಕ್ಷಿ. ಎಲ್ಲೋ ಒಮ್ಮೆ ನಮಗೆ ತಪ್ಪಿ ಕಾಣಿಸಿದ ಪುಟ್ಟ ಗ್ಯಾಸ್ ಒಲೆ ಮತ್ತು ಪಾತ್ರೆ, ಆತ ಸ್ವಯಂಪಾಕಕ್ಕೂ ಸಜ್ಜಾಗಿದ್ದದ್ದನ್ನೇ ಸಾರಿತ್ತು. ಆತ ಏಕಾಂಗಿಯಾಗಿ ಚಾಲನೆಯನ್ನು ನಡೆಸಿದಷ್ಟೇ ದಕ್ಷವಾಗಿ, ಬಸ್ಸಿನ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಕಾಳಜಿ ವಹಿಸುತ್ತಿದ್ದ. ಸಾಕಷ್ಟು ತಿರುಗಾಡೀ ಅನುಭವದ ಹರಿ ಹೇಳುತ್ತಿದ್ದರು “ತನ್ನ ವಾಹನದ ದಿನಾಂತ್ಯದ ಕೊಳೆಯನ್ನು ಕಳೆದು, ಪ್ರತಿ ಬೆಳಗ್ಗೆ ಶುಚಿ ಬಸ್ಸನ್ನೇ ಕೊಟ್ಟ ಇನ್ನೊಬ್ಬ ಚಾಲಕ ನಾ ಕಂಡಿಲ್ಲ!” ನಾವು ಕುರಿತು ಕೇಳಿದಾಗ, ಆತ ನಾಲ್ಕು ಮಕ್ಕಳ ತುಂಬು ಸಂಸಾರಿ ಎಂದೇನೋ ತಿಳಿಯಿತು. ಉಳಿದಂತೆ ಚಟರಹಿತ, ಬಿಗುಬಾಯಿಯ (ಮೌನಿ) ಥಾಪಾನ ವೈಯಕ್ತಿಕತೆ ನಮ್ಮನ್ನೆಲ್ಲೂ ಸೋಂಕಲೇ ಇಲ್ಲ. ನಿಜದಲ್ಲಿ ಆತ ಉಂಡದ್ದೆಲ್ಲಿ, ವಿರಮಿಸಿದ್ದೆಲ್ಲಿ ಎಂದೂ ನಮಗೆ ತಿಳಿಯಲಿಲ್ಲ. ದಾರಿಗಳ ದುಸ್ಥಿತಿ, ಅಗಲ ಕಿರಿದು, ಅಂಕುಡೊಂಕು, ಇತರ ವಾಹನಗಳ ಕಿರಿಕಿರಿ, ಕೊನೆಗೆ ಒದಗಿದ ಒಂದು ಸಣ್ಣ ಅವಘಡದಲ್ಲೂ ಆತ ತೋರಿದ ತಾಳ್ಮೆ, ನಿಭಾಯಿಸಿದ ಜಾಣ್ಮೆ ಅಸಾಧಾರಣ. (ವಿವರ ಮುಂದೆ ಹೇಳುತ್ತೇನೆ.) ವಾರಪೂರ್ತಿ ಮಾರ್ಗಸಂಪರ್ಕವಿದ್ದಲ್ಲೆಲ್ಲ ನಮ್ಮನ್ನು (ದಾರಿ ಅನುಮತಿಸಿದಷ್ಟು!) ಸುಕೋಮಲವಾಗಿ ಮೆರೆಯಿಸಿ, ಮತ್ತೆ ಡೆಹ್ರಾಡೂನಿಗೇ ಸಕಾಲದಲ್ಲಿ ಮುಟ್ಟಿಸಿದ ಶ್ರೇಯಸ್ಸಿಗೆ ಪೂರ್ಣಪಾತ್ರ – ಥಾಪಾಜೀ.

ಡೂನ್ ಅಂದರೆ ಬೆಟ್ಟಗಳಿಂದ ಸುತ್ತುವರಿದ ಕಣಿವೆಯಂತೆ. ಮಾತಿನ ಅಲಂಕಾರದಲ್ಲಿ ಮಡಿಕೇರಿಯ ಹಾಗೆ ಅನ್ನಿಸಿದರೂ ನಿಜದಲ್ಲಿ ದಿಗಂತದಲ್ಲಷ್ಟೇ ಬೆಟ್ಟ ಕಾಣಿಸುತ್ತಿದ್ದ ಬಯಲು ಸೀಮೆಯಂತದ್ದೇ ವಿಸ್ತಾರದ ಸ್ಥಳ ಆ ನಿಲ್ದಾಣ. ಡೆಹ್ರಾಡೂನಿನ ಮೂಲ ಜಮೀನುದಾರ (ಯಾರೋ ಒಬ್ಬ ಗುರು), ಆಶ್ರಯ ಬಯಸಿ ಬಂದವರಿಗೆ, ಕಣಿವೆಯ ಕಾಡನ್ನು (ಈಗಿನ ರಾಜಾಜಿ ವನಧಾಮದ ಭಾಗ) ಕಡಿದುಕೊಂಡು, ಡೇರಾ (ಗುಡಾರ, ವಾಸ್ತವ್ಯ ಹೂಡಲು) ಹಾಕಿಕೊಳ್ಳಲು, ಕುಶಿಯಿಂದ (ಜಾಲಿ) ದಾನ (ಗ್ರಾಂಟ್) ಮಾಡಿದ್ದಕ್ಕೇ ಊರು- ಡೇರಾಡೂನ್ ಅಥವಾ ಡೆಹ್ರಾಡೂನ್, ಅದರೊಳಗಿನದೇ ನಿಲ್ದಾಣದ ನೆಲೆ ಜಾಲಿ ಗ್ರಾಂಟ್! ಬೆಳಗ್ಗಿನ ಮಂಜು ಹರಿದಿದ್ದರೂ ಬಿಡದ ಹಿತವಾದ ಚಳಿಯನ್ನು ನಮ್ಮ ಬೆನ್ನಿಗಿದ್ದ ಸೂರ್ಯ ಕಾಯಿಸಿ ಕೊಡುತ್ತಿದ್ದ. ನಾವು ಆತುರಾತುರವಾಗಿ ಗಂಟುಮೂಟೆಗಳನ್ನು ಬಸ್ಸಿನ ಡಿಕ್ಕಿಗೆ ತುಂಬಿ, ಎಂಟೂವರೆಯ ಸುಮಾರಿಗೆ ಮಾರ್ಗಕ್ರಮಣಕ್ಕಿಳಿದಿದ್ದೆವು. ತಿಂಡಿ, ಊಟ, ವಿಶ್ರಾಂತಿಗೆಂದು ವಿಶೇಷ ಸಮಯ ಕಳೆಯದೆ, ಕೇದಾರನಾಥದ ತಪ್ಪಲಿನ ಸೆರ್ಸೀಯನ್ನು (ಸುಮಾರು ೨೫೦ ಕಿಮೀ) ಸಂಜೆಗೂ ಮೊದಲು ತಲಪುವ ಗುರಿ ನಮಗಿತ್ತು.

ಉತ್ತರಾಖಂಡ ಹಿಮಾಲಯದ್ದೇ ರಾಜ್ಯ. ಸೂಕ್ಷ್ಮದಲ್ಲಿ ಇಲ್ಲಿನ ಉನ್ನತ ಶ್ರೇಣಿಯನ್ನು ಹಿಮಾಲಯವೆಂದೂ ತಪ್ಪಲಿನ ಸಮ- ಶ್ರೇಣಿಯನ್ನು ಶಿವಾಲಿಕ್ ಪರ್ವತಗಳೆಂದೂ ಕರೆಯುವುದು ರೂಢಿ. ಪಶ್ಚಿಮ ಘಟ್ಟಕ್ಕೆ ಹೋಲಿಸಿದರೆ ಹಿಮಾಲಯ ಬಹಳ ಕಿರಿಯ ವಯಸ್ಸಿನ ಪರ್ವತಶ್ರೇಣಿ. ಇದು ಇನ್ನೂ ಖಂಡಾಂತರ ಚಲನೆಯ ಆಂತರಿಕ ಒತ್ತಡದಿಂದ ಬೆಳೆಯುತ್ತಲೇ ಇರುವುದರಿಂದ ಭಾರೀ ಕಡಿದು ಮತ್ತು ಅಸ್ಥಿರ. ಇಲ್ಲಿ ಎತ್ತೆತ್ತರಕ್ಕೆ ಹೋದಂತೆ ಹಿಮದ ಪ್ರಭಾವವೂ ಸೇರಿ ಮನುಷ್ಯ ಜೀವನ ಬಿಡಿ, ಬರಿಯ ಓಡಾಟವೂ ಮರಣಾಂತಿಕವೇ ಆದರೆ ವಿಶೇಷವಲ್ಲ. ಈ ವಲಯದ ಜನ ಮತ್ತು ಬಹುತೇಕ ದಾರಿಗಳೂ ಸಹಜವಾಗಿ ಹೆಚ್ಚು ಕಾಲ ಬಾಳಬೇಕೆಂಬ ಆಸೆಯಲ್ಲಿ ಆಶ್ರಯಿಸುತ್ತವೆ, ನೀರ ಹರಿವಿನ ಸಾಮೀಪ್ಯವನ್ನೇ ಅನುಸರಿಸುತ್ತವೆ. ನಮ್ಮ ದಾರಿಯಾದರೂ ಹರಿದ್ವಾರವನ್ನು ದಕ್ಷಿಣಕ್ಕೇ ಬಿಟ್ಟು, ಹೃಷಿಕೇಶವನ್ನು ಹೊರವಲಯದಲ್ಲೇ ಸುತ್ತಿ ಸಾಗಿದ್ದೆಲ್ಲಾ ಗಂಗಾನದಿ ಅಥವಾ ಅದರ ಉಪನದಿಗಳ ಎದುರು ಮುಖದಲ್ಲೇ. ಹಾಗಾಗಿ ವಿವಿಧ ನಮೂನೆಯ ಸೇತುವೆ, ಅಣೆಕಟ್ಟೆಗಳೇ ಮೊದಲಾದ ಮನುಷ್ಯ ರಚನೆಗಳೂ ಅವುಗಳ ಪರಿಣಾಮಗಳೂ ಕಾಣುತ್ತಲೇ ಇದ್ದವು. ದಾರಿ ಕಳೆಯುವಲ್ಲಿ ಎಲ್ಲೂ ಸಾಕನ್ನಿಸದಷ್ಟು ಸುಂದರ ದೃಶ್ಯಗಳೂ ಭಯಾನಕ ಆಳಗಳೂ ತುದಿಗಾಣದ ಎತ್ತರಗಳೂ ಹೊಗಲಾಗದ ಕಾಡುಗಳೂ ಕೊನೆಯಿಲ್ಲದ ಕುಸಿತಗಳೂ ಮತ್ತು ಕೊನೆಯಲ್ಲಿ ಎಲ್ಲವನ್ನೂ ಮತ್ತೆ ಮತ್ತೆ ನಮ್ಮನುಕೂಲಕ್ಕೆ ತರುವ ಮನುಷ್ಯ ಪ್ರಯತ್ನಗಳೂ ನಮ್ಮನ್ನು ಉದ್ದೇಶಪೂರ್ವಕವಾಗಿ ಬಿಡುಗಣ್ಣರನ್ನಾಗಿಸಿದ್ದವು.

ನಮ್ಮೂರಿನ ತೊರೆ ನದಿಗಳ ‘ಕೂಡಲು’ ಅಥವಾ ಸಂಗಮಗಳನ್ನು ಇಲ್ಲಿ ಪ್ರಯಾಗ್ ಎಂದೇ ಗುರುತಿಸುತ್ತಾರೆ. ಹಾಗೆ ನಮಗೆ ಮೊದಲು ಸಿಕ್ಕ ಸಂಧಿಸ್ಥಾನ ದೇವಪ್ರಯಾಗ. ಅಲ್ಲಿನ ಎಡದ ಭಾಗೀರಥಿ ಪಾತ್ರೆಯನ್ನು (ಅದರ ಕೊನೆಯಲ್ಲಿದೆ ಗಂಗೋತ್ರಿ, ಗೋಮುಖ) ನಿರಾಕರಿಸಿ, ಬಲದ ಅಲಕನಂದಾ ದಂಡೆಯಲ್ಲಿ ಮುಂದುವರಿಯಿತು ನಮ್ಮ ಪಯಣ. ಭಾರತಾದ್ಯಂತ ಹೆಸರಿನ ಸಾಮ್ಯತೆಯ ಹಲವು ಉದಾಹರಣೆಗಳಿದ್ದಂತೆ, ಇಲ್ಲೂ ಒಂದು ಶ್ರೀನಗರವಿದೆ. ಅದನ್ನೂ ಕಳೆದು ಬಂದದ್ದು ರುದ್ರಪ್ರಯಾಗ್. ಇದು ಖ್ಯಾತ ಬೇಟೆಗಾರನಾಗಿಯೂ ವನ್ಯ ಸಂರಕ್ಷಣೆಯ ಪ್ರಾಥಮಿಕ ಅಧ್ವರ್ಯುವಾಗಿಯೂ ಐತಿಹಾಸಿಕ ಪುರುಷನೇ (ಆ ಕಾಲದ ಜನಪದರಿಗೆ ದೇವನೂ!) ಆಗಿಹೋದ ಜಿಂ ಕಾರ್ಬೆಟ್ಟನ ನಿಜ ಕಥನದ ಕೃತಿಯೊಂದರಲ್ಲಿ (ಕೊಂಡು ಓದಿ: ರುದ್ರಪ್ರಯಾಗದ ನರಭಕ್ಷಕ – ಅನುವಾದ: ಪೂರ್ಣಚಂದ್ರ ತೇಜಸ್ವಿ) ಬಹುಖ್ಯಾತಿಯನ್ನೇ ಗಳಿಸಿದೆ. ಇಲ್ಲಿ ನಾವು ಎಡಗವಲಿನ ಮಂದಾಕಿನಿಯನ್ನು ಆಯ್ದುಕೊಂಡೆವು. ಬಲಗವಲಿನ ಅಲಕನಂದಾ ಪಾತ್ರೆಯ ದಾರಿ ಬದರೀನಾಥಕ್ಕೆ. ಅದು ನಮ್ಮ ಎರಡು ದಿನದನಂತರದ ಲಕ್ಷ್ಯ.

ಪರ್ವತಗಟ್ಟಳೆ ಮಣ್ಣು, ಅಷ್ಟೇ ಉರುಟುರುಟು ಮಹಾ ಬಂಡೆಗಳನ್ನು ನೇರಾನೇರ ಸಡಿಲವಾಗಿ ರಾಶಿ ಮಾಡಿಟ್ಟಂತ ಸ್ಥಿತಿ ಈ ಪರ್ವತಗಳದ್ದು. ಅವುಗಳ ಮಗ್ಗುಲುಗಳಲ್ಲೇ ಕಡಿದು ಮಾಡಿದ ಇಲ್ಲಿನ ಎಲ್ಲ ಮಾರ್ಗಗಳು ಸಪುರ ಮತ್ತು ಬಹುತೇಕ ದುಃಸ್ಥಿತಿಯಲ್ಲೇ ಇವೆ. ಇಂದು ಕೇದಾರ (ಹೆದ್ದಾರಿ ಸಂ ೧೦೭), ಬದರಿಯಂಥ (ಹೆ.ಸಂ ೭) ಬಹು ಬೇಡಿಕೆಯ ಮಾರ್ಗಗಳನ್ನು ರಾಷ್ಟ್ರೀಯ ಹೆದ್ದಾರಿ ಸ್ಥಾನಕ್ಕೇರಿಸಿಟ್ಟಿದ್ದಾರೆ. ಪ್ರಾಥಮಿಕ ಸ್ಥಿತಿಯನ್ನೇ ಉಳಿಸಿಕೊಳ್ಳಲಾಗದ ಕಷ್ಟ ಇಲ್ಲಿನದು. ಚತುಷ್ಪಥವಿರಲಿ, ಸ್ವಸ್ಥ ದ್ವಿಪಥವನ್ನಾದರೂ ಕೊಡುವಂತೆ ಈ ದಾರಿಗಳು ಅಗಲೀಕರಣಕ್ಕೊಳಪಡುತ್ತಲೇ ಇವೆ. ಸಹಜವಾಗಿ ಭೂಕುಸಿತಗಳು ಒಣದಿನಗಳಲ್ಲೂ ಆಗುತ್ತಲೇ ಇವೆ. ಅಸಂಖ್ಯ ದುರುದುಂಡಿ, ಕಲ್ಲುಕುಟ್ಟಿ, ಕಾಂಕ್ರೀಟ್ ಕಲಸಿ, ಟಿಪ್ಪರ್, ಜೀಪ್ ದಾರಿಯುದ್ದಕ್ಕೂ ಕಾರ್ಯನಿರತವಾಗಿರುವುದನ್ನೂ ಅಲ್ಲಲ್ಲಿ ದುರಸ್ತಿದಾರರ ಶಿಬಿರಗಳನ್ನೂ ನಾವು ಕಾಣುತ್ತಿದ್ದೆವು. ಅಂಥಾ ಒಂದು ಶಿಬಿರದಲ್ಲಿ, ಭೂಕುಸಿತದಲ್ಲಿ ಜರ್ಝರಿತವಾದ ಕೆಲವು ವಾಹನಗಳನ್ನೂ ಕಸದಂತೆ ಗುಪ್ಪೆ ಹಾಕಿದ್ದು ಕಂಡದ್ದು ನೆನಪಿಸಿಕೊಂಡರೆ, ನಮ್ಮ ಅದೃಷ್ಟವನ್ನು ಹೊಗಳಲೇಬೇಕು. ಎರಡು ಮೂರು ಕಡೆ ಪೂರ್ಣ ದಾರಿ ಮುಚ್ಚಿದಂತ ತತ್ಕಾಲೀನ ಜರಿತಗಳಿದ್ದಾಗ, ಯಂತ್ರಗಳು ತುರ್ತಾಗಿ ಬಿಡಿಸಿಕೊಡುವ ಕೆಲಸದಲ್ಲಿ ಯಂತ್ರಗಳು ನಿರತವಾಗಿದ್ದಾಗ ನಮ್ಮದೂ ಸೇರಿದಂತೆ ಎರಡೂ ಬದಿಗಳಲ್ಲಿ ಸಾಲೋ ಸಾಲು ವಾಹನಗಳು ಶಾಂತವಾಗಿ ಕಾಯಲೇಬೇಕಾಗುತ್ತಿತ್ತು.

ಅಲ್ಲಿನ ದಾರಿಗಳಿಗೆ ನಮ್ಮ ಮಿನಿ ಬಸ್ಸೂ ದೊಡ್ಡದೇ. ಹಾಗಾಗಿ ಕೆಲವು ಜಾಗಗಳಲ್ಲಿ ನಮಗೆ ಎದುರಾಗಿ ಲಾರಿ, ಬಸ್ಗಳು ಬಂದಾಗ ಥಾಪಾ ಪಡುತ್ತಿದ್ದ ಕಷ್ಟ ಕಂಡೇ ಅನುಭವಿಸಬೇಕು. ದರೆಯ ಬದಿಗೆ ಹೆಚ್ಚು ಸರಿದರೆ ಚಕ್ರ ಚರಂಡಿಗಿಳಿಯಲೂಬಹುದು, ದರೆಯಿಂದ ಮುಂಚಾಚಿಕೊಂಡ ಬಂಡೆ ಬಡಿಯಲೂಬಹುದು. ಇನ್ನು ಕಣಿವೆ ಬದಿಗೆ ಸರಿಯುವುದೆಂದರೆ ಕೇವಲ ಅದೃಷ್ಟದ ಆಟ. ಕಟ್ಟಿದ ಬೇಲಿ, ಗೋಡೆ ಜರಿದುಹೋಗಿ ಬೋಳುಬೋಳೇ ನಿಂತ ಅಂಚುಗಳಲ್ಲಿ ನಮ್ಮ ಬಸ್ಸು ಮಾರ್ಗ ಚೌಕಾಸಿಗೆ ನಿಂತಾಗ, ದುರ್ಬಲ ಹೃದಯಿಗಳು ಅಕ್ಷರಶಃ ಕಣ್ಮುಚ್ಚಿಕೊಳ್ಳುತ್ತಿದ್ದರು. ಹೆದರಿಕೆ ತಡೆಯಲಾರದೆ, ಬಸ್ ಮಗುಚಿದರೂ ಅದೆಷ್ಟು ಆಳಕ್ಕೆ ಉರುಳಬೇಕಾದೀತು ಎಂದು ಕಿಟಕಿಯಿಂಡ ಕಳ್ಳದೃಷ್ಟಿ ಬೀರಿ, ಮರವಟ್ಟು, ರಾಮಜಪಕ್ಕಿಳಿದದ್ದೂ ಇತ್ತು. ಒಂದೇ ವಾಹನ ದಾಟಬಹುದಾದ ಸಪುರ ಜಾಗಗಳಲ್ಲಿ ಕೆಲವೊಮ್ಮೆ ನಾವು ಎದುರು ವಾಹನದೊಡನೆ ಸಂಧಾನ ಮಾಡಿಕೊಳ್ಳುವುದು ಇರುತ್ತಿತ್ತು. ಅಂಥಲ್ಲಿ ಏಕಾಂಗವೀರ ಥಾಪಾ ಕೆಲವೊಮ್ಮೆ ದಾರಿಗಿಳಿದು, ನೇರ ಕಣ್ಣಂದಾಜು ಹಾಕಿ, ಬಸ್ ಹಿಂದೆ ಮುಂದೆ ಮಾಡುವುದೂ ಇತ್ತು. ನಮ್ಮವರು ಬಸ್ಸೊಳಗೇ ಕುಳಿತು ಬಹುತೇಕ ಭಯದಲ್ಲೇ ರೈಟ್, ಸ್ಟಾಪ್ ಹೇಳುವುದೂ ಇತ್ತು. ಅದು ಮಾರ್ಗದ ಪ್ರಪಾತದ ಅಂಚಿಗೇ ಸರಿಯುವಲ್ಲಂತೂ ಕೆಲವೊಮ್ಮೆ ನಮ್ಮಲ್ಲಿ ಕಣ್ಣು ಮುಚ್ಚಿ ಕುಳಿತವರೂ “ಸಾಕು, ಸ್ಟಾಪ್, ರೋಕೋ” ಎಂದು ಬೊಬ್ಬೆ ಹೊಡೆದದ್ದೂ ಇದೆ. ಸ್ಥಿತಪ್ರಜ್ಞ ಥಾಪಾ ಮಾತ್ರ ಒಂದು ಗೊಣಗು, ಒಂದು ನಗೆಯನ್ನೂ ಬೀರದೆ, ತನ್ನದೇ ನಿರ್ಧಾರಗಳಲ್ಲಿ ಅಟಲನಾಗಿ ಬಸ್ಸನ್ನು ಪಾರುಗಾಣಿಸುತ್ತಿದ್ದ.

ಇಪ್ಪತ್ತೆಂಟು ವರ್ಷಗಳ ಹಿಂದೆ ನಾವು ಇದೇ ರಸ್ತೆಯಲ್ಲಿ ಗೌರೀಕುಂಡ ಎನ್ನುವ ಸ್ಥಳದವರೆಗೂ ಬೈಕ್ ಓಡಿಸಿದ್ದೆವು. ಮುಂದೆ ಕೇದಾರಕ್ಕೆ ಸಾಮಾನ್ಯ ಯಾತ್ರಿಗಳಿಗೆ ಸುಮಾರು ಹದಿನಾಲ್ಕು ಕಿಮೀ ಕಠಿಣ ಏರು ಜಾಡೊಂದೇ ಮಾರ್ಗ. ಕಾಲಬಲ ನೆಚ್ಚದವರಿಗೆ ಢೋಲಿ (ದೊಡ್ಡ ಬುಟ್ಟಿಯಲ್ಲಿ ಕೂರಿಸಿದ ಮನುಷ್ಯನನ್ನು ಮನುಷ್ಯನೇ ಬೆನ್ನು ಕೊಟ್ಟು ಹೊರುವ ಅಮಾನುಷ ಕ್ರಿಯೆ), ಹೇಸರಗತ್ತೆ ಸವಾರಿ ಬಿಟ್ಟು ಹೆಚ್ಚಿನ ಅವಕಾಶಗಳಿರಲಿಲ್ಲ. ಎಲ್ಲೋ ವಿರಳವಾಗಿ, ಅತಿಗಣ್ಯ ವ್ಯಕ್ತಿ ಅಥವಾ ಸನ್ನಿವೇಶಗಳಲ್ಲಷ್ಟೇ ಸೈನ್ಯದ ಹೆಲಿಕಾಪ್ಟರ್ ಬಳಕೆಯಾಗುತ್ತಿತ್ತು. ಈಚಿನ ವರ್ಷಗಳಲ್ಲಿ, ಐದು ವರ್ಷಗಳ ಹಿಂದಿನ ಪ್ರವಾಹದ ಪರಿಣಾಮವೂ ಸೇರಿದಂತೆ, ನಡಿಗೆಯ ಜಾಡು ಬದಲಿದೆ. ಮತ್ತೆ ಅಸಂಖ್ಯ ಖಾಸಗಿ ಕಂಪೆನಿಗಳು, ತಪ್ಪಲಿನ ಹಳ್ಳಿಗಳಲ್ಲಿ ಅವರವೇ ಉಡ್ಡಯನ ನೆಲ, ಸಿಬ್ಬಂದಿ ಸಜ್ಜುಗೊಳಿಸಿ, ತರಹೇವಾರಿ ಯೋಜನೆಗಳೊಡನೆ ಸಾಮಾನ್ಯರಿಗೂ ಹೆಲಿಕಾಪ್ಟರ್ ಸವಾರಿಯನ್ನು ಒದಗಿಸುತ್ತಿದ್ದಾರೆ. (ಎರಡು ದಿನದ ಹೆಲಿ-ಯಾತ್ರೆಯಲ್ಲಿ, ಸಾಕಷ್ಟು ವಿರಾಮ, ಊಟ, ವಾಸದೊಡನೆ ಯಮುನೋತ್ರಿ, ಗಂಗೋತ್ರಿ, ಕೇದಾರ ಮತ್ತು ಬದರೀ ಎಂದು ಚತುರ್ಧಾಮಗಳನ್ನೇ ಕಾಣಿಸುವವರೂ ಇದ್ದಾರೆ. ಮತ್ತು ವಿವಿಧ ಕಂಪೆನಿಗಳ ನಡುವೆ ಸ್ಪರ್ಧಾತ್ಮಕ ದರಗಳೂ ಇರಬಹುದು) ಹಾಗೆ ಕೇದಾರವನ್ನು ಲಕ್ಷ್ಯವಾಗಿರಿಸಿಕೊಂಡು ಹೆಲಿಕಾಪ್ಟರ್ ಸೇವೆ ಕೊಡುವಲ್ಲಿ ದೊಡ್ಡ ಕೇಂದ್ರ ಫಟಾ ಗ್ರಾಮದ, ಸೆರ್ಸಿ ಹಳ್ಳಿಯಲ್ಲಿತ್ತು (ಗಮನಿಸಿ ಇದು ಉತ್ತರಾಖಂಡದ ಸೆರ್ಸಿ, ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯಲ್ಲ!).

ನಾವು ಕಂಡಂತೆ ಸೆರ್ಸಿಯಲ್ಲಿ ಎರಡೆರಡು ಹೆಲಿಕಾಪ್ಟರ್ ಹಾರಿಸುತ್ತಿದ್ದ, ಮೂರು ಖಾಸಗಿ ಸಂಸ್ಥೆಗಳು ಚಟುವಟಿಕೆಯಿಂದಿದ್ದವು. ಅವೆಲ್ಲವೂ ಕೇದಾರದ ದೇವಳದ ಸಮೀಪ ಮಾತ್ರ ಸರಕಾರ ನಿರ್ಮಿಸಿದ ಒಂದೇ ಇಳಿದಾಣ ಬಳಸಬೇಕಿತ್ತು. ಹಾಗಾಗಿ ಅವೆಲ್ಲಕ್ಕೂ ನಿರ್ದಿಷ್ಟ ಏರು, ಹಾರು ಮತ್ತು ಇಳಿ ಜಾಡುಗಳನ್ನೂ ಸಮಯವನ್ನೂ ನಿಗದಿಸಿದ್ದರು. ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಕತ್ತಲು, ಹಿಮಪಾತ, ಮಂಜಿನಾವರಣಗಳಲ್ಲಿ ಹೆಲಿ-ಹಾರಾಟವನ್ನು ಸ್ಥಗಿತಗೊಳಿಸುತ್ತಲೂ ಇದ್ದರು. ನಮ್ಮವರು ಮುಂಗಡವಾಗಿ ‘ಹಿಮಾಲಯನ್ ಹೆಲಿ ಸರ್ವಿಸಸ್’ನಲ್ಲಿ ಅಂದು (೨೦-೧೦-೧೮) ಸಂಜೆಗೇ ಹಾರುವ ಅವಕಾಶವನ್ನೂ ರಾತ್ರಿಗೆ ಮೇಲುಳಿಯುವ ಯೋಜನೆಯನ್ನೂ ಹಾಕಿಕೊಂಡಿದ್ದರು. ಆದರೆ ನಾವು ಸೆರ್ಸಿ ತಲಪುವಾಗ ಕತ್ತಲಾಗಿತ್ತು. ಅನಿವಾರ್ಯವಾಗಿ ಮರುದಿನದ ಹೆಲಿ-ಸೇವೆಗೆ ಹೆಸರು ಗಟ್ಟಿ ಮಾಡಿ, ಸಿಕ್ಕ ಸಾಮಾನ್ಯ ವಸತಿಗೃಹವನ್ನು ಒಪ್ಪಿಕೊಂಡೆವು.

ಸೆರ್ಸಿ ಬೆಟ್ಟಗಾಡಿನ ಪುಟ್ಟ ಕೃಷಿ ಪ್ರಧಾನ ಹಳ್ಳಿ. ಮೊದಲೆಲ್ಲ ಸೋನ್ ಪ್ರಯಾಗ್ ಅಥವಾ ಗೌರೀಕುಂಡ ಲಕ್ಷ್ಯದಲ್ಲಿ ಧಾವಿಸುವ ವಾಹನಗಳ ಖಯಾಲಿ ನಂಬಿ ಚಾ, ಗುಟ್ಖಾಚೀಟಿ ಮಾರುವ ಜೋಪಡಿಗಳನ್ನಷ್ಟೇ ಬೆಳೆಸಿಕೊಂಡದ್ದಿರಬಹುದು. ಚಾರಣಿಗರ ಕೊನೆಯಿಂದ ದೂರ, ಆದರೆ ಕೇದಾರದ ತಪ್ಪಲಿಗೆ ಸಮೀಪವೆಂದೇ ಹೆಲಿ ಸೇವಾಸಂಸ್ಥೆಗಳು ಸೆರ್ಸಿಯನ್ನು ಹೆಚ್ಚಾಗಿ ಆಯ್ದುಕೊಂಡದ್ದಿರಬೇಕು. ಸಹಜವಾಗಿ ಇಂದು ಆಸುಪಾಸಿನಲ್ಲಿ ಆಧುನಿಕ ಸೇವಾ ಸವಲತ್ತುಗಳ ಸಹಿತ, ತರಹೇವಾರು ವಸತಿ ಸೌಕರ್ಯಗಳು ರೂಪುಗೊಂಡಿವೆ. ಮಾರ್ಗ ತುಸು ಅಗಲವಿದ್ದಲ್ಲೆಲ್ಲ, ಎಲ್ಲೆಲ್ಲಿನ ವಾಹನಗಳು ಜನ ಇಳಿಸಿ, ಕನಿಷ್ಠ ಎಂಟು ಹತ್ತು ಗಂಟೆಗಾದರೂ ತಂಗುವುದು ಅನಿವಾರ್ಯವಾಗಿದೆ. ನಾವು ನಮ್ಮ ಹೆಲಿಪ್ಯಾಡಿನ ಸನಿಹದಲ್ಲೇ ನಾಲ್ನಾಲ್ಕು ಹಾಸಿಗೆಗಳ ಸರಳ ವಸತಿಯನ್ನು ಹಿಡಿದಿದ್ದೆವು. ಬಹುತೇಕ ಏಕವ್ಯಕ್ತಿ ಸಂಚಾಲಿತ ಇನ್ನೊಂದೇ ದಾಬಾದ ರೋಟಿ, ಆಲು ಪರಾಟ, ಮೊಸರು, ಚಾಗಳಲ್ಲಿ ಹೊಟ್ಟೆಯ ಅಗತ್ಯಗಳನ್ನು ಪೂರೈಸಿಕೊಂಡೆವು. ಹೆದ್ದಾರಿಗೆ ತೆರೆದುಕೊಂಡ ‘ಹೋಟೆಲ್’ ತಳದಲ್ಲೇ ಕೆಳಗಿನ ಗದ್ದೆಗೆ ತೆರೆದಂತೆ ಆ ವ್ಯವಾಹಾರಸ್ಥರ ಮನೆಗಳಿದ್ದವು. ಸ್ನಾನದ ತುರ್ತಿನವರಿಗೆ ಯಜಮಾನ ಮನೆಯಿಂದಲೇ ಬಕೆಟ್ಟಿನಲ್ಲಿ ಬಿಸಿ ನೀರು ಹೊತ್ತು ತರುತ್ತಿದ್ದ. ಹಾಸಿಗೆ ಮತ್ತು ಹೊದಿಕೆಯ ಕುರಿತಂತೆ ಹಿಮಾಲಯದ ವಲಯದಲ್ಲೆಲ್ಲಾ (ಹರಿದ್ವಾರವೂ ಸೇರಿದಂತೆ) ಸೆಕೆಯೂರಿನ ನಾವು ಏನು ಸಿದ್ಧತೆ ಮಾಡಿಕೊಂಡು ಹೋದರೂ ಸೋಲುವುದೇ ಸರಿ. ಅಲ್ಲಿನವರು ಒದಗಿಸುವ ಹಾಸುಗಳು, ಮುಖ್ಯವಾಗಿ ಹೊದ್ದುಕೊಳ್ಳಲು ಕೊಡುವ ಭಾರೀ ರಜಾಯಿಗಳನ್ನು (ಹಲವು ಪದರದ ಹೊದಿಕೆ, ರಗ್ಗು ಎನ್ನಿ) ಸರಿಯಾಗಿ ತೊಳೆದಿದ್ದಾರಾ, ಇದರ ಕಾಲು ಯಾವುದು, ತಲೆ ಯಾವುದು ಎಂದೆಲ್ಲಾ ತನಿಖೆ, ಯೋಚನೆ ಮಾಡದೆ ಬಳಸುವುದೊಂದೇ ದಾರಿ! ಇಲ್ಲದಿದ್ದರೆ ಕೆಲವೊಂದು ಕಾಲದ ಚಳಿಯಲ್ಲಿ, ದೂರು ಕೊಡಲು ಮರು ಬೆಳಿಗ್ಗೆಯನ್ನೇ ನೀವು ಕಾಣದಾಗಬಹುದು!!

ಇಂದು ಸೆರ್ಸಿಯ ಉದಯರಾಗ, ಅಷ್ಟೇ ಏಕೆ, ಪ್ರಶಾಂತ ಹಗಲುಗಳೆಲ್ಲಾ ಹೆಲಿಕಾಪ್ಟರುಗಳ ಗುಡುಗಾಟದಲ್ಲಿ ಕಳೆದುಹೋಗುತ್ತವೆ. ಕೇದಾರಕ್ಕೆ ಹಾರಾಟದ ಅವಧಿ ಏಳೆಂಟು ಮಿನಿಟಿನದು ಮಾತ್ರ. ಅವಕ್ಕೆ ಒಮ್ಮೆಗೆ ಚಾಲಕನಲ್ಲದೆ ಸಾಮಾನ್ಯ ತೂಕದ ಆರು ಜನ ಮತ್ತು ಅವರ ಸೀಮಿತ ಸಾಮಾನು (ಇಪ್ಪತ್ತು ಕಿಲೋ) ಹೊರುವಷ್ಟೇ ತಾಕತ್ತು. ಪ್ರಾಕೃತಿಕ ಆಕಸ್ಮಿಕಗಳು ಮತ್ತು ಭಯೋತ್ಪಾದನೆಗಳ ದಟ್ಟ ನೆರಳಿನಲ್ಲಿ ಪೂರ್ವಭಾವೀ ತನಿಖೆ, ತಯಾರಿ ಸ್ವಲ್ಪ ರಗಳೆಯದೇ. ಇಂಥವೆಲ್ಲ ಸುಧಾರಿಸಲು ನಮ್ಮ ‘ಹಿಮಾಲಯನ್ ಸಂಸ್ಥೆ’ಯಲ್ಲಿ ಎರಡು ಹೆಲಿಕಾಪ್ಟರ್ಗಳಿದ್ದರೂ ಸಿಬ್ಬಂದಿಗಳು ಕನಿಷ್ಠ ಇಪ್ಪತ್ತು ಮಂದಿಯಾದರೂ ಇದ್ದಿರಬೇಕು. ಅಷ್ಟಿದ್ದೂ ಅಲ್ಲಿ ನಮಗೂ ಮೊದಲೇ ನೆರೆದಿದ್ದ ಗಿರಾಕಿಸಂದೋಹವನ್ನು ಸುಧಾರಿಸುವಲ್ಲೇ ಅವರಿಗೆ ದಿನದ (೨೧-೧೦-೧೮) ಮೊದಲರ್ಧ ಕಳೆದು ಹೋಗುವ ಅಂದಾಜಿತ್ತು. ನಮಗೆ ಮಧ್ಯಾಹ್ನ ಹನ್ನೆರಡಕ್ಕೆ ಹಾಜರಾಗಲು ಸೂಚಿಸಿದ್ದರು. ಈ ಬಿಡುವನ್ನು ಸದುಪಯೋಗಗೊಳಿಸುವಂತೆ ಮರು ಬೆಳಿಗ್ಗೆ ನಾವು ಕೆಲವರು ದಾರಿಗುಂಟ ಒಂದಷ್ಟು ನಡೆದು ನೋಡಿದೆವು. ಬೆಟ್ಟದ ಮೇಲಂಚಿನ ಹಳ್ಳಿಯನ್ನಷ್ಟು ಸುತ್ತಿಯೂ ಪರಿಚಯಿಸಿಕೊಂಡೆವು.

ಐದು ವರ್ಷಗಳ ಹಿಂದೆ ಕೇದಾರದಲ್ಲಾದ ‘ಪ್ರಾಕೃತಿಕ’ ವಿಪರೀತದ ಹಿನ್ನೆಲೆಯಲ್ಲಿ ಮನುಷ್ಯನ ದುರಾಸೆಯನ್ನೂ ವಿಚಾರವಂತರು ಧಾರಾಳ ಗುರುತಿಸಿದ್ದಾರೆ. ಅವುಗಳಲ್ಲಿ ಒಂದು ಅಸಂಖ್ಯ ಮಿನಿ ಜಲವಿದ್ಯುದಾಗಾರದ ಅಣೆಕಟ್ಟೆಗಳು. ಅಂಥ ಒಂದು ನೆಲೆ (ಲ್ಯಾಂಕೋ ಕಂಪೆನಿ) ಸೆರ್ಸೀ ತಪ್ಪಲಿನಲ್ಲೂ ಮಂದಾಕಿನಿಯನ್ನು ಅಟಕಾಯಿಸಿದ್ದು ನಾವು ದೂರದಿಂದಲೇ ಕಂಡೆವು. ಇದು, ಹಿಂದಿನ ದಿನವೂ ಕಂಡ ಇನ್ನಷ್ಟು ಯೋಜನೆಗಳು ಕೇದಾರದಿಂದ ಕೆಳದಂಡೆಯಲ್ಲೇನೋ ಇವೆ. ಆದರೆ ಒಟ್ಟು ಪಾರಿಸರಿಕ ಅಸಮತೋಲನವನ್ನು ಲೆಕ್ಕ ಹಾಕುವಾಗ, ಮುಂದೊಂದು ಕಾಲದಲ್ಲಿ ಇನ್ನಷ್ಟೂ ದೊಡ್ಡ ಪ್ರಾಕೃತಿಕ ದುರಂತ ಸಂಭವಿಸುವುದೇ ಆದರೆ ಇವುಗಳ ಪಾಲು ತುಂಬ ದೊಡ್ಡದೇ ಇರುತ್ತದೆ ಎನ್ನುವುದರಲ್ಲಿ ಏನೂ ಸಂದೇಹವಿಲ್ಲ. ಬೆಟ್ಟದ ಬಹು ಎತ್ತರಕ್ಕೂ ಸಪುರ ಸಪುರದ ಗದ್ದೆಗಳು ಹಬ್ಬಿದ್ದವು. ಅಂಥ ಕೆಲವಲ್ಲಿ ಒಂಟಿ ಎತ್ತಿನ ನೇಗಿಲಹೂಟೆ ಕೊಡುವುದೂ ಕಷ್ಟ. ಮನೆಯ ಜಾನುವಾರಿಗೆ ದೊಡ್ಡ ಹಸಿಹುಲ್ಲ ಮೂಟೆ ಮಾಡಿ, ಬೆನ್ನಿಗೇರಿಸಿ ಹೊರಟ ಮಹಿಳೆಯೊಬ್ಬಳನ್ನು ಹೀಗೇ ಮಾತಾಡಿಸಿದೆವು. ಮನೆಯ ಜನಗಳೇ ನೇಗಿಲೆಳೆಯುವುದಿದೆ ಎಂದೇ ತಿಳಿಸಿದಳು. ಭತ್ತ, ಜೋಳ, ರಾಗಿ, ಆಲೂಗೆಡ್ಡೆ, ಎಲೆಕೋಸು. ವಿವಿಧ ಸೊಪ್ಪುಗಳು ಎಂದು ವಾರ್ಷಿಕ ಬೆಳೆಗಳ ಪಟ್ಟಿ ಬೆಳೆದಿತ್ತು. ಬಹುವಾರ್ಷಿಕ ಬೆಳೆಗಳಲ್ಲಿ ಅಷ್ಟೇನೂ ಸಿಹಿ ಇರದ ಮೋಸುಂಬಿ ಧಾರಾಳವೇ ಕಾಣಿಸಿತು. (ಬೆಳಿಗ್ಗೆ ಮಾರ್ಗದಲ್ಲಿ ನಡೆದು ಹೋದಾಗಲೇ ಅಲ್ಲೊಂದು ದಾಬಾದ ಎದುರು ಇದೇ ಮೋಸುಂಬಿಗಳ ಆರೇಳು ಮೂಟೆಗಳನ್ನೇ ನಾವು ಕಂಡಿದ್ದೆವು. ನಾವು ಬಿಡಿ ಹಣ್ಣನ್ನು ಬಯಸಿದ್ದೆವು. ಆಗ ಅಂಗಡಿಯಾತನೇ ಹೇಳಿದ್ದ “ಇವು ಅಂಥ ಸಿಹಿಯವೇನೂ ಅಲ್ಲ, ಇಲ್ಲಿ ಮಾರಾಟವೇ ಆಗುವುದಿಲ್ಲ. ಎಲ್ಲ ದೊಡ್ಡ ಊರಿಗೆ, ಸಗಟು ಮಾರಾಟ ಮಾತ್ರ.” ಆದರೂ ನಮಗೆ ರುಚಿ ನೋಡಲು ಗೋಣಿ ತಪ್ಪಿಸಿ ಎರಡನ್ನು ಉಚಿತವಾಗಿಯೇ ಕೊಟ್ಟಿದ್ದ!) ಗದ್ದೆಗಳ ಎಡೆಯಲ್ಲೇ ಅಲ್ಲಲ್ಲಿ, ಮನೆಗಳೂ ಇದ್ದವು. ಸಾಂಪ್ರದಾಯಿಕ ರಚನೆಗಳು ವಿರಳ ಮತ್ತು ಇದ್ದರೂ ಬಳಕೆದೂರವಾಗಿವೆ. ಒರಟಾಗಿ ಕಡಿದ ಕಲ್ಲ ತುಣುಕುಗಳ ಗೋಡೆ ಮಾಡಿನ ಸಾಂಪ್ರದಾಯಿಕ ಮನೆಗಳು, ಭೂಕಂಪನದ ಕಾಲದಲ್ಲಿ ಸಾವುನೋವು ಹೆಚ್ಚಿಸುವುದು ಈಗ ಎಲ್ಲರೂ ತಿಳಿದ ವಿಚಾರವೇ ಇದೆ.

ಸ್ಥಳೀಯ ಆಡಳಿತ ಮನೆಗಳಿಗೆ ಬಹು ಎತ್ತರದ ಝರಿಯಿಂದ ನಲ್ಲಿ ನೀರಿನ ಬಂದೋಬಸ್ತು ಮಾಡಿದಂತಿತ್ತು. ಬಹುಶಃ ಝರಿಯ ಕೆಳ ಪಾತ್ರೆಯ ನೀರು ಕೃಶಿಗೊದಗುವುದಿರಬೇಕು. ಜನ ಸಂಚಾರದ ಮುಖ್ಯ ಹುಣಿಗೆ (ಗದ್ದೆಯ ದಂಡೆ) ಕಾಂಕ್ರೀಟ್, ಒಂದೆರಡು ತೊರೆ ದಾಟುವಲ್ಲಿ ಭದ್ರ ಕಾಲುಸೇತುವೆ, ಏಕಮುಖ ಇಳಿಜಾರಿದ್ದಲ್ಲಿ ಕಲ್ಲುಕಟ್ಟಿದ ಮೆಟ್ಟಿಲ ಸಾಲುಗಳನ್ನೆಲ್ಲ ನೋಡಿದೆವು. ಇವೆಲ್ಲ ಪ್ರಾಕೃತಿಕ ಸಹನೀಯ ಮಿತಿಯನ್ನು ನೋಡಿಕೊಂಡೇ ಮಾಡಿದಂತಿತ್ತು. ಬದಲಿಗೆ, ಎಲ್ಲ ಮನೆಯಂಗಳಕ್ಕೂ ವಾಹನಯೋಗ್ಯ ಮಾರ್ಗ, ವಿಸ್ತಾರ ಮನೆಯಂಗಳ, ಜೋಡೆತ್ತಿನ ಹೂಟೆಗೊದಗುವಷ್ಟು ಹರಹಿನ ಗದ್ದೆ ಎಂದೆಲ್ಲ ಅಗೆತ ಹೆಚ್ಚಿದರೆ ನೆಲ ತಡೆಯದು. ಈ ಅರಿವು ಅಲ್ಲಿನ ಜನಪದದಲ್ಲಿ ಗಟ್ಟಿಯಿರುವವರೆಗೆ ಜೀವಾಪಾಯ ಕಡಿಮೆಯೇ ಉಳಿದೀತು ಎಂದು ನನ್ನ ಈಚಿನ ಕೊಡಗು, ಕೇರಳ ಭೂಕುಸಿತಗಳ ಅನುಭವ ನುಡಿಯಿತು. (ನೋಡಿ: ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ )

ಹೆದ್ದಾರಿ ಬಿಟ್ಟು ಬಂದು ಊರು ಸುತ್ತುವ ನಮ್ಮನ್ನು ನೋಡಿ ಕುಶಿಪಟ್ಟ ಹಳ್ಳಿಗರು, ಓರ್ವ ಹುಡುಗಿಯನ್ನು ಕೊಟ್ಟು ನಮಗೆ ಅವರ ‘ಕಾಳೀಮಂದಿರ’ದ ದರ್ಶನ ಮಾಡಿಸಿದರು. ಭದ್ರ ಪಾಗಾರ, ಸ್ವಾಗತ ಕಮಾನು, ಕಲ್ಲ ಚಪ್ಪಡಿಗಳು ಹಾಸಿದ ಬಯಲು ಆಲಯವದು. ಒಂದಂಚಿನಲ್ಲಿ ಗಂಟೆ, ಝರಿ ವಸ್ತ್ರ ಹೇರಿದ ‘ಸಾನ್ನಿಧ್ಯ’ ಸಾರುವ ಕಟ್ಟೆ ಇದ್ದರೂ ದೇವಬಿಂಬ ಕಾಣಿಸಲೇ ಇಲ್ಲ. ಚಪ್ಪಡಿಗಳ ಸಂದುಗಳಲ್ಲಿ ಬೇರು ಬಿಟ್ಟ ಚೆಂಡು ಹೂವಿನ ಗಿಡಗಳು ಅದೊಂದು ವಿಚಿತ್ರ ಉದ್ಯಾನ ಎಂಬ ಭ್ರಮೆಯನ್ನೇ ಹುಟ್ಟಿಸಿತ್ತು. ಆದರೆ ಆ ಹುಡುಗಿ ಅಲ್ಲಿನೊಂದು ಚಪ್ಪಡಿಯನ್ನು ತೋರಿಸಿ, ಪರ್ವ ಕಾಲದಲ್ಲಿ ಸಮುದಾಯದ ಪೂಜಾರಿ, ಅದನ್ನೆತ್ತಿ ಅಡಿಯಲ್ಲಿರುವ ದೇವಬಿಂಬಕ್ಕೆ ಪೂಜೆ, ಉತ್ಸವಕ್ಕವಕಾಶ ಕಲ್ಪಿಸುತ್ತಾನೆ ಎಂದು ತಿಳಿಸಿ ಒಗಟು ಪರಿಹರಿಸಿದಳು.

ಹನ್ನೊಂದು ಗಂಟೆಯ ಸುಮಾರಿಗೆ ನಾವು ಹೆಲಿಪ್ಯಾಡ್ ಸೇರಿದೆವು. ಹೆಲಿಕಾಪ್ಟರಿಗೆ ಏರುವ ವ್ಯಕ್ತಿಗೆ ತೂಕಮಿತಿ ಇರಲಿಲ್ಲ. ಆದರೆ ವ್ಯಕ್ತಿ ಹೊರುವ ಕೈಚೀಲ ಮಾತ್ರ ಇಪ್ಪತ್ತು ಕಿಗ್ರಾಂ ಮೀರದಷ್ಟೇ ಇರಬೇಕಿತ್ತು. ಹಾಗಾಗಿ ಅದು ಒಳ್ಳೇ ಬಿಸಿಲ ಹೊತ್ತಾದರೂ ನಾವು ನಮ್ಮ ಚಳಿ ಬಟ್ಟೆಗಳನ್ನೆಲ್ಲ ಮೈಯ ಮೇಲೇ ತೊಟ್ಟುಕೊಂಡು, ತೂಕ ತನಿಖೆಗೆ ಒಡ್ಡಿಕೊಂಡೆವು! ಚೀಲಗಳಲ್ಲೂ ಕಡಿಮೆ ತೂಕ ಹೊತ್ತವರಿಗೆಲ್ಲ ತಂಡದ ತಿನಿಸಿನ ಕಟ್ಟುಗಳನ್ನು ಹಂಚಿಕೊಟ್ಟು, ನ್ಯಾಯವಾಗಿ ಗರಿಷ್ಠ ಸೌಕರ್ಯ ಮಾಡಿಕೊಂಡೆವು. ಉಳಿದಂತೆ ಎಲ್ಲ ವಿಮಾನ ನಿಲ್ದಾಣದ ತನಿಖಾ ಕ್ರಮಗಳು (ಗುರುತಿನ ಕಾರ್ಡು, ದೇಹ ಸವರು, ಲೋಹ ಗುರುತಿಸು) ಇಲ್ಲೂ ನಡೆಯುತ್ತವೆ. ಆರಾರು ಮಂದಿಯ ಗುಂಪು ಮಾಡಿ, ಅವರೊಳಗೂ ವಿವಿಧ ತೂಕಗಳವರ ಕೂರುವ ಸ್ಥಾನಗಳನ್ನು ಹೆಲಿಕಾಪ್ಟರಿನ ಸಮತೋಲನಕ್ಕಾಗಿ ಬಿಗಿಯಾಗಿಯೇ ನಿರ್ದೇಶಿಸುತ್ತಾರೆ. ಅವಕ್ಕಿರುವ ಎರಡು ಸಾಲು ಸೀಟುಗಳಲ್ಲಿ ಎದುರು ಬಲಪಕ್ಕದಲ್ಲಿ ಚಾಲಕನಿರುತ್ತಾನೆ. ಹೆಲಿಕಾಪ್ಟರ್ ನೆಲಮುಟ್ಟಿ ನಿಂತ ಕೂಡಲೇ ನಾಲ್ಕು ಸಿಬ್ಬಂದಿ ಅದರ ಚಾಲಕನದ್ದಲ್ಲದ ಇತರ ದ್ವಾರಗಳಿಗೆ ಧಾವಿಸಿ, ತೆರೆದು ಬಂದವರನ್ನು ಇಳಿಸಿಕೊಳ್ಳುತ್ತಾರೆ. ಮರುಕ್ಷಣದಲ್ಲಿ ಮೊದಲೇ ಸಜ್ಜುಗೊಳಿಸಿ ನಿಲ್ಲಿಸಿದ್ದ ಹೊಸ ಯಾನಿಗಳನ್ನು ಬಳಿಗೆ ಕರೆಯುತ್ತಾರೆ. ಚಾಲಕನ ಪಕ್ಕದ ಸಣ್ಣ ಸೀಟಿನಲ್ಲಿ ಸಣ್ಣಕ್ಕಿರುವ ಇಬ್ಬರು, ಹಿಂದಿನ ಉದ್ದದ ಏಕ ಸೀಟಿಗೂ ಎಡ ಮತ್ತು ಬಲ ಬಾಗಿಲಿನಿಂದ ಇಬ್ಬಿಬ್ಬರನ್ನು ಹತ್ತಿಸಿ, ಕೂರಿಸಿ, ಸೀಟ್ ಪಟ್ಟಿ ಬಿಗಿದು, ಬಾಗಿಲುಗಳನ್ನು ಜಡಿಯುತ್ತಾರೆ. ಇಷ್ಟರೊಳಗೆ ನಾಲ್ಕನೆಯವನು ಯಾನಿಗಳ ಕೈಚೀಲಗಳನ್ನು ಪ್ರತ್ಯೇಕ ಇಳಿಸಿ, ತುಂಬಿದ್ದಾಗಿರುತ್ತದೆ. ಈ ಚುರುಕಿನ ನಿರ್ವಹಣೆ ಅವರಿಗೆ ದುಬಾರಿ ಇಂಧನದ ವೆಚ್ಚವನ್ನು ಉಳಿಸಲು ತೀರಾ ಅವಶ್ಯ. ಯಾನಿಗಳಿಗೆ ಹಾರಾಟದ ಸಮಯದಲ್ಲೂ ನಿರ್ಬಂಧಗಳು ಬಿಗಿಯಾಗಿಯೇ ಇರುತ್ತವೆ. ಅವನ್ನೆಲ್ಲ ಸುಧಾರಿಸಿಕೊಂಡು, ಉಡ್ಡಯನ ಉಲ್ಲಾಸ ಗಳಿಸುವ ಲೆಕ್ಕದಲ್ಲಿ ನನಗೆ ಹಗ್ಗ ಸೇತಿನಲ್ಲಿ ಜಾರುವ ತೊಟ್ಟಿಲ ಸರಣಿಯ ಅನುಭವವೇ ಹೆಚ್ಚು ಸಂತೋಷದಾಯಿ ಎಂದನ್ನಿಸಿತು.

ಆಟೋಟ ಸ್ಪರ್ಧೆಯಲ್ಲಿ ನೂರು ಮೀಟರ್ ಓಟಕ್ಕೆ ನಿಂತ ಹುರಿಯಾಳುಗಳಂತಿದ್ದ ನಮ್ಮನ್ನು ಹೆಲಿಕಾಪ್ಟರ್ ಬಂದ ಹೆಚ್ಚು ಕಮ್ಮಿ ಅರ್ಧ ಮಿನಿಟಿನ ಅವಧಿಯಲ್ಲಿ ಹೊತ್ತು ಸಾಗಿತ್ತು. ಸಣ್ಣದಾಗಿ ಉಡ್ಡಯನ ಕಟ್ಟೆಯಿಂದ ಗಗನಕ್ಕೇರಿದರೂ ಮತ್ತೆ ಮಂದಾಕಿನಿಯ ಕಣಿವೆಗೇ ಧುಮುಕಿದಂತೆ ಅದು ಇಳಿದಿತ್ತು. ಸೆರ್ಸಿಯಿಂದಲೂ ಕೆಳಪಾತ್ರೆಯಲ್ಲಿ ಮಂದಾಕಿನಿಯನ್ನು ಅಡ್ಡ ಹಾಯ್ದು ಎದುರು (ಪೂರ್ವ) ದಂಡೆಯ ಬೆಟ್ಟ ಸಾಲಿನ ಬಳಿ ಉತ್ತರಕ್ಕೆ ಹೊರಳುತ್ತ ಏರುತ್ತದೆ. ಮುಂದೆ ಶಿಖರಸಾಲಿನ ಒಳಮಗ್ಗುಲಲ್ಲೇ ಸ್ಥಿರವಾಗಿ ಉತ್ತರಮುಖಿಯಾಯ್ತು.

ಹೊಳೆಯ ಈ ಮಗ್ಗುಲು ಯಾವುದೇ ಮನುಷ್ಯ ಸಂಪರ್ಕದ ಕುರುಹುಗಳನ್ನು ಕಾಣಿಸಲಿಲ್ಲ. ಕಣಿವೆಯ ಆಳದ ಮಂದಾಕಿನಿಯನ್ನೇ ಬಹುತೇಕ (ಎದುರೀಜಿನಲ್ಲಿ ಎಂಬಂತೆ) ಅನುಸರಿಸುತ್ತಿದ್ದುದರಿಂದ, ಅದರ ವೈಭವ ಮತ್ತು ಸೊಕ್ಕುಗಳ ಪರಿಣಾಮ ಅನಾವರಣಗೊಳ್ಳುತ್ತಲೇ ಇತ್ತು. ಪಶ್ಚಿಮ ಮಗ್ಗುಲಿನಲ್ಲಿ ಸೋನ್ಪ್ರಯಾಗ್, ಗೌರೀಕುಂಡದವರೆಗೆ ವಾಹನ ಮಾರ್ಗ ವಿರಳ ಮರಗಿಡಗಳಲ್ಲಿ ಕಣ್ಣಾಮುಚ್ಚಾಲೆ ಆಡುತ್ತ ಸಾಗಿತ್ತು. ಮತ್ತೆ ಚಾರಣದ ಜಾಡು. ಅವಕಾಶವಿದ್ದಲ್ಲೆಲ್ಲ ಶಿಖರಗಳಿಗೆ ಹೇರಿದ ವಿವಿಧ ಗಾತ್ರದ ಮಾಲೆಗಳಂತೇ ತೋರುವ ಸೋಪಾನ ಗದ್ದೆಗಳು, ಪೇಟೆ, ವಸತಿಗಳದ್ದೆಲ್ಲ ಚಿತ್ರವತ್ತಾದ ದೃಶ್ಯ. ನಾಗರಿಕತೆ ಇದ್ದಂತೇ ಅತ್ತ ಫಲ ಸ್ವರೂಪಿಯಾದ ಭೂಕುಸಿತಗಳ ಅವಶೇಷಗಳೂ ಆ ಮಗ್ಗುಲಲ್ಲೆ ಜಾಸ್ತಿ ಇತ್ತು. ಕೇದಾರ ಸಮೀಪಿಸಿದಂತೆ, ಮಂದಾಕಿನಿಯ ಪಾತ್ರೆಯಲ್ಲಿ ಐದು ವರ್ಷಗಳ ಹಿಂದಿನ ದುರಂತದ ರೇಖೆಗಳೂ ಸ್ಪಷ್ಟವಾದವು. ಹೆಲಿಕಾಪ್ಟರ್ ವೇಗ ಹೆಚ್ಚಿರುವುದರಿಂದ ನಮಗೆ ನಿಜ ಗಾಳಿಯ ತುಯ್ತ, ಶೀತದ ಅನುಭವವಾಗುವುದಿಲ್ಲ. ಆದರೂ ಕೆಲವು ಬೆಟ್ಟದ ಏಣುಗಳನ್ನು ಹಾಯುವಾಗಲೋ ಕಣಿವೆಗಳಿಂದೆದ್ದ ಸುಳಿಯಲ್ಲೋ ಎಂಬಂತೆ ಸಣ್ಣದಾಗಿ ಕುಸಿದಂತೆ, ತೂಗಿದಂತೆಲ್ಲ ಅನುಭವವಾಯ್ತು. ಅಪರಾಹ್ನ ಒಂದು ಗಂಟೆಯ ಸುಮಾರಿಗೆ ನಮ್ಮ ಇಡೀ ತಂಡ ಕೇದಾರನಾಥದ ವಠಾರ ತಲಪಿತ್ತು.

ಸೂರ್ಯ ನಗುತ್ತಿದ್ದರೂ ಉಣ್ಣೆ ಕೈಗವುಸು ಹಾಕಿದ ಮುಷ್ಟಿಗಳನ್ನು ನಮಗೆ ಕಿಸೆಯೊಳಗಿಟ್ಟುಕೊಳ್ಳುವುದು ಹಿತವೆನಿಸುವಷ್ಟು ಚಳಿಯಿತ್ತು! ಮೂರೂ ದಿಕ್ಕಿನಲ್ಲೂ ಭಾರೀ ಬೆಟ್ಟಗಳ ಕೋಟೆ. ಅದರಲ್ಲೂ ಉತ್ತರದ್ದಕ್ಕೆ ಥಳಥಳಿಸುವ ಬೆಳ್ಳಿ (ಹಿಮದ) ಹೊದಿಕೆ. ಈ ಬೋಗುಣಿಯ ತಳದ ಅಂಚುಗಳಲ್ಲಿ ಎಂದೂ ತೆಗೆದು ಮುಗಿಯದ ಭಾರೀ ಕಲ್ಲು, ಮಣ್ಣಿನ ರಾಶಿ. ದೃಷ್ಟಿ ಕೇಂದ್ರಕ್ಕೆ ಸರಿದಂತೆ ಎರಡೆರಡು ಸಾಲಿನ ಕಲ್ಲು ಕಾಂಕ್ರೀಟುಗಳ ತಡೆಗೋಡೆ, ಹಲವು ಪದರಗಳ ಉಕ್ಕಿನ ಬೇಲಿಗಳು ಎಂದೂ ಉರುಳಿ ಬರಬಹುದಾದ ಬಂಡೆ, ಹಿಮ ಕಲಸಿದ ಕೆಸರು ತಡೆಯುವಂತಿದ್ದವು. ಉಳಿದಂತೆ ದೇವಳವನ್ನು ಬೋಗುಣಿಯ ಹಿಂದಿನ ಅಂಚೆಂಬಂತೆ ಗ್ರಹಿಸಿ ತೀರ್ಥಕ್ಷೇತ್ರವನ್ನು ಹೆಚ್ಚು ನಾಗರಿಕ ಮಾಡುವ ಕೆಲಸ ಭರದಿಂದ ನಡೆದಿತ್ತು. ಯಾರೋ ಹೇಳಿದಂತೆ, ದುರಂತದ ಅವಶೇಷಗಳನ್ನು ಉಳಿದಿರಬಹುದಾದ ಜೀವ ರಕ್ಷಣೆಯ ಮಿತಿಯಲ್ಲಷ್ಟೇ ಶೋಧಕ್ಕೊಳಪಡಿಸಿದ್ದರಂತೆ. ಉಳಿದಂತೆ ಅಲ್ಲಿನ ನೆಲ, ಕ್ಷೇತ್ರ ಪುನಾರಚನೆಯ ಲಕ್ಷ್ಯವನ್ನಿಟ್ಟುಕೊಂಡು, ಮಟ್ಟಕ್ಕೆಳೆದ ಅಸಂಖ್ಯ (ಮನುಷ್ಯ, ಹೇಸರಗತ್ತೆಯಾದಿ) ಅಜ್ಞಾತ, ಗತ ಜೀವಗಳ ಗೋರಿ.

ಇಲ್ಲಿಗೆ ನಾನು ದೇವಕಿ (ಮತ್ತು ನಾಲ್ವರು ಮಿತ್ರರೊಡನೆ) ಇಪ್ಪತ್ತೆಂಟು ವರ್ಷಗಳ ಹಿಂದೆ ಬಂದಾಗ ಚಿರಿಪಿರಿ ಮಳೆ ಕಾಡಿತ್ತು. ಲೆಕ್ಕಕ್ಕೆ ಸಿಗದಷ್ಟು ಜನ, ಸವಾರಿಗೆ ಸಜ್ಜಾದ ಹೇಸರಗತ್ತೆ, ಢೋಲಿ, ಒತ್ತಾಯಿಸುವ ಮಂದಿಗಳದೇ ಒಂದು ಸಂತೆ. ಕತ್ತೆಗಳ ಲದ್ದಿ, ಮಣ್ಣು, ನಾಗರಿಕ ಕೊಳಚೆ ಎಲ್ಲ ಕಲಸಿದ ತಚಿಪಿಚಿ ಮೆಟ್ಟಿಕೊಂಡು, ಗುಂಡು ಕಲ್ಲುಗಳ ಅಸಮ ನೆಲದಲ್ಲಿ ತಡಬಡಾಯಿಸಿಕೊಂಡು, ತತ್ಕಾಲೀನ ದಾಬಾ, ಅಂಗಡಿಗಳ ರಾಶಿಗಳ ಸಂದಿನಲ್ಲಿ ತಳ್ಳಾಡಿಸಿಕೊಂಡು ದೇವಳ ದರ್ಶಿಸಿದ್ದೆವು. ಆದರಿಂದು ಹೇಸರಗತ್ತೆಗಳೇ ಇಲ್ಲ, ಢೋಲಿ ಮತ್ತು ಜನರೂ ವಿರಳ. ಸ್ಪಷ್ಟ ನಿರ್ದೇಶಿಸಿದ ಜಾಗಗಳಲ್ಲಿ, ಸದ್ಯ ತತ್ಕಾಲೀನ ಗುಡಾರಗಳಲ್ಲಿ ಕೆಲವು ಅಂಗಡಿ, ದಾಬಾಗಳು ಇವೆ. ಜಿಯೆಂವೀಎನ್ (ಗಢವಾಲ್ ಮಂಡಲ್ ವಿಕಾಸ್ ನಿಗಮ್) ಮಾತ್ರ ಭದ್ರ ಹೋಟೆಲ್ ಮತ್ತು ಯಾತ್ರಿಗಳಿಗೆ ವಸತಿ ಸಾಲುಗಳನ್ನು ಚಂದಕ್ಕೆ ಪೂರೈಸಿಕೊಂಡಿತ್ತು. ದೀರ್ಘ ಕಾಲೀನ ಮಹಡಿ ಕಟ್ಟಡಗಳು, ಮರ ಕಬ್ಬಿಣದ ಹಾಳೆಗಳ ವಸತಿ ನಿಲಯಗಳೂ ಗುಡಾರಗಳೂ ದೃಢ ಕಾಂಕ್ರೀಟ್ ತಳಪಾಯದ ಮೇಲೇ ಮೂಡಿದ್ದವು. ಸಾರ್ವಜನಿಕ ಸಂಚಾರಕ್ಕಂತೂ ಕಲ್ಲ ಚಪ್ಪಡಿಗಳನ್ನು ಬೆಸೆದ ವಿಸ್ತಾರ ಕಾಂಕ್ರೀಟ್ ನಡೆಮಡಿ, ಬಿಗಿಯಾದ ಕಗ್ಗಲ್ಲ ಮೆಟ್ಟಿಲುಗಳು, ಬೇಲಿ, ಚೊಕ್ಕ ಕಸತೊಟ್ಟಿಗಳು, ಅಡ್ಡ ಹಾಯುವ ಮಂದಾಕಿನಿಗೂ ಭದ್ರ ಸೇತುವೆ. ಹೊಳೆ ಪಾತ್ರೆಯಲ್ಲೂ ಬಹ್ವಂಶ ಹೂಳು, ಬಂಡೆಗುಂಡುಗಳನ್ನು ನಿವಾರಿಸಿ, ಬಿಗುಗೊಳಿಸಿದ್ದಂತಿತ್ತು. ದಂಡೆಗಳನ್ನು ತಳಮಟ್ಟದಲ್ಲಿ ಭಾರೀ ಕಾಂಕ್ರೀಟ್ ಹಾಸಿನಲ್ಲಿ ಬಲಪಡಿಸಿ, ಮೇಲೇರಿದಂತೆ ಹಲವು ಸ್ತರಗಳ ಗೋಡೆಗಳಿಂದಲೂ ನಿರ್ಬಂಧಿಸಿ, ಈ ವಲಯದಲ್ಲಾದರೂ ಎಂಥಾ ಪ್ರವಾಹವನ್ನು ಸ್ಥಿರಪಾತ್ರೆಯಲ್ಲುಳಿಸುವ ಪ್ರಯತ್ನ ನಡೆದಿತ್ತು. ಎಲ್ಲೂ ಅವ್ಯವಸ್ಥೆಗೆ ಅವಕಾಶ ಇದ್ದಂತಿರಲಿಲ್ಲ. ಬಂದ ಮತ್ತು ಬರುತ್ತಿರುವ ರಚನೆಗಳೆಲ್ಲ ದೊಡ್ಡ ಯೋಜನೆಯೊಂದರ ಭಾಗವಾಗಿಯೇ ಕಾಣುತ್ತಿತ್ತು. ಇನ್ನು ಕಾಲವೇ ಹೇಳಬೇಕು!

ದೇವಳದ ಅಂಗಳ ಬಹಳ ವಿಸ್ತಾರವಾಗಿ, ಶುಚಿಯಾಗಿತ್ತು. ಶೋಭಾಯಮಾನ ಪರ್ವತಗಳ ಮುನ್ನೆಲೆಯಲ್ಲಿ ನನಗಂತೂ ದೇವಳವೇ ಸಾಕ್ಷಾತ್ ಶಿವನಂತೆ ಕಂಗೊಳಿಸಿದ್ದಕ್ಕೆ ಹೊರಗೇ ಉಳಿದುಬಿಟ್ಟೆ. ಉಳಿದೆಲ್ಲರೂ ಪಾದರಕ್ಷೆಗಳನ್ನು ಕಳಚಿ ಒಳಗಿನ ದೇವಬಿಂಬದ (ಕಾಶಿ, ಗೋಕರ್ಣಗಳಂತೇ ಇಲ್ಲೂ ನಿರ್ದಿಷ್ಟ ರೂಪವಿಲ್ಲದ ಉಲ್ಕಾಶಿಲೆಯೆಂದೂ ಗುರುತಿಸಲ್ಪಡುವ ಲಿಂಗ) ದರ್ಶನಕ್ಕಾಗಿ ಪ್ರಧಾನ (ದಕ್ಷಿಣ) ದ್ವಾರದಿಂದ ನುಗ್ಗಿದರು. ನಾನು ಬೋಳು ಅಂಗಳದಲ್ಲಿ ನಿಂತು, ಇಡಿಯ ವಲಯವನ್ನು ಆವರಿಸಿದ ಹಿಮವತ್ಪರ್ವತಗಳ ವೈಭವವನ್ನು ಮನಸ್ಸಿಗಿಳಿಸಿಕೊಳ್ಳುತ್ತ ಕಳೆದುಹೋದೆ. ಡೆಹ್ರಾಡೂನ್ ವಿಮಾನ ನಿಲ್ದಾಣದದಿಂದ ಹೊರಗೆ ಬರುವಾಗ ಉತ್ತರ ದಿಗಂತದಲ್ಲಿ, ಮೋಡ-ಹಿಮಗಳ ಸಂಯೋಜನೆಯಲ್ಲೇ ಬೆಳ್ಳಿ ಪರ್ವತಾಗ್ರಗಳು ನಮ್ಮನ್ನು ಸ್ವಾಗತಿಸಿದಂತನ್ನಿಸಿತ್ತು. ಮುಂದೆ ಸೆರ್ಸಿಯ ದಾರಿಯಲ್ಲಿ ಇಳಿ-ಸೂರ್ಯನ ಪ್ರಭಾವದಲ್ಲಿ ಹಸಿರುಹೊದ್ದ ಬೆಟ್ಟಗಳು ಕಪ್ಪಾಗತೊಡಗಿದ್ದಾಗ, ಯಾವುದೋ ಒಂದು ತಿರುವಿನಾಚೆ ಒಮ್ಮೆಲೇ ತೂಗು ಕಣ್ಣಿನ ನಮ್ಮೆಲ್ಲರನ್ನೂ ಝಿಗ್ಗನೆಬ್ಬಿಸಿತ್ತು ಒಂದು ಹಿಮ ಶಿಖರ. ಮುಂದೆ ಮೂರೂ ದಿನ (ಕೇದಾರ, ಬದರಿಗಳಲ್ಲಿ) ನಾವು ವೈವಿಧ್ಯಮಯ ಹಿಮ ಶಿಖರ, ವ್ಯವಸ್ಥೆಗಳನ್ನು ವಿವಿಧ ಬೆಳಕು, ಪ್ರಾಕೃತಿಕ ಸತ್ಯಗಳಲ್ಲಿ ಕಾಣುತ್ತಲೇ ಇದ್ದೆವು. ಮನುಷ್ಯ ಮಿತಿಯಲ್ಲಿ ಅವುಗಳಲ್ಲಿ ಎಲ್ಲೋ ಕೆಲವಕ್ಕೆ ನೀಲಕಂಠ, ಕೇದಾರ, ಕಾಮೆಟ್ ಎಂದಿತ್ಯಾದಿ ಹೆಸರಿಸಿದ್ದಿರಬಹುದು. ಅವನ್ನು ಮರೆತೂ ಅವು ಉಂಟು ಮಾಡುವ ಬೆರಗಿಗೆ, ಯೋಚನಾಸರಣಿಗೆ ಕೊನೆ ಮೊದಲಿಲ್ಲ. ಹಾಗೇ ಜ್ವಾಲೆಯನ್ನು ಮೋಹಿಸುವ ಪತಂಗದಂತೆ ಅವುಗಳನ್ನು ಸಮೀಪಿಸಿ, ಎಲ್ಲ ನೋವು ಜೀವನಷ್ಟಗಳನ್ನು ಅನುಭವಿಸಿಯೂ ಶಿಖರ ಸಾಧನೆಗಳ ನಲಿವುಗಳನ್ನು ಹಂಚಿದವರ ಕಥನಗಳಿಗೂ ಆದಿ ಅಂತ್ಯಗಳಿಲ್ಲ. (ಪುಸ್ತಕಗಳು ಹೇಗೂ ಧಾರಾಳ ಇವೆ. ಇಂದು ಯೂ ಟ್ಯೂಬಿನಲ್ಲಿ, ಮೊಗೆದಷ್ಟೂ ಮುಗಿಯದ ವಿಡಿಯೋ ಕಥನಗಳೂ ಇವೆ. ಒಂದು ಸ್ಯಾಂಪಲ್ಲಿನಂತೆ, ನನ್ನನ್ನು ಸುಮಾರು ಅರ್ಧ ಗಂಟೆಯ ಕಾಲ ಕುರ್ಚಿಗಂಟಿಸಿಟ್ಟ ಕೆ-೨ ಶಿಖರದ ಒಂದು ಕಥನವನ್ನು ಇಲ್ಲಿ ನೀವು ನೋಡಬಹುದು.

ಇಷ್ಟರಲ್ಲಿ ನನ್ನನ್ನು ವಾಸ್ತವಕ್ಕೆಳೆದದ್ದು ಹಗುರಕ್ಕೆ ತೊಡಗಿದ ಹಿಮಪಾತ! ಒಳಗೆ ಹೋದವರು ಬಹುಶಃ ನನ್ನಷ್ಟೇ ಭಕ್ತಿಪಾರವಶ್ಯದಲ್ಲಿದ್ದಿರಬೇಕು. ಹೇಗೂ ಭಕ್ತಗಣ ವಿರಳವಾದ ದಿನವಾದ್ದರಿಂದ, ಒಳಗೆ ಸಾಕಷ್ಟು ಸಮಯ ಇದ್ದು, ಇಷ್ಟಾನುಸಾರ ಆರಾಧಿಸಿ, ಪೂರ್ವ ದ್ವಾರದಿಂದ ಹೊರಬಂದರು. ಹಿಮಾಲಯದ ಹವಾ ಲಕ್ಷಣಕ್ಕನುಸಾರವಾಗಿ ಒಮ್ಮೆಲೇ ಜೀವಕೋಟಿಯ ಚೈತನ್ಯದಾಯೀ ಸೂರ್ಯನನ್ನು ಮಂಕಾಡಿಸಿ, ನಸುಗಾಳಿಗೆ ತೆಳು ಅವಲಕ್ಕಿ ತೇಲಿಬಿಟ್ಟಂತೆ ಹಿಮಪಾತ ನಡೆದಿತ್ತು. ಇದರೊಡನೆ ಚಳಿಯ ತೀವ್ರತೆ ಹೆಚ್ಚಿತ್ತು. ನಾನು ಒತ್ತಿನ ಕಾರ್ಯಾಲಯದ ಜಗುಲಿ ಏರಿ ನಿಂತುಕೊಂಡೆ. ವಿಸ್ತಾರ ಅಂಗಳದಲ್ಲಿ ಅಲ್ಲಿ ಇಲ್ಲಿ ಕುಳಿತಿದ್ದ ಒಂದೆರಡು ಸಾಧುಗಳು, ತಮ್ಮದೇ ಕಬ್ಬಿಣದ ಅಗ್ಗಿಷ್ಟಿಕೆಗಳನ್ನಿಟ್ಟು ಸಣ್ಣ ಸೌದೆಬೆಂಕಿಯನ್ನೇ ಎಬ್ಬಿಸುತ್ತಿದ್ದವರು ಈಗ ಅದನ್ನು ಉಜ್ವಲಗೊಳಿಸಿದರು. ಎಷ್ಟೋ ಭಕ್ತಾದಿಗಳು ಆ ಬಿಸುಪಿನ ಆಕರ್ಷಣೆಯಲ್ಲಿ ಸಾಧುಗಳ ‘ಪಾವತಿ ಆಶೀರ್ವಾದ’ಕ್ಕೆ ಸಿಕ್ಕುವ ತಮಾಷೆಯೂ ನಡೆಯಿತು. ದೇವಳದ ಪ್ರದಕ್ಷಿಣೆಯ ಸುತ್ತಿನಲ್ಲಿ, ಪ್ರವಾಹದ ಸಂದರ್ಭದಲ್ಲಿ ಹಿತ್ತಿಲಲ್ಲಿ ಬಂದು ನಿಂತ ಭಾರೀ ಬಂಡೆಯನ್ನೂ ಎಲ್ಲರೊಡನೆ ನಾನೂ ನೋಡಿ ಬಂದೆ. ಅಲ್ಲಿ ಭಕ್ತ ಮನಸ್ಸುಗಳು, ‘ಪ್ರಳಯ’ವೆಬ್ಬಿಸಿ ಎಲ್ಲ ತೊಳೆದ ಶಿವನೇ ತನ್ನ ಆಲಯವನ್ನು ಕಾಪಾಡಿಕೊಳ್ಳಲು ಈ ಬಂಡೆ ನಿಯೋಜಿಸಿದನೆಂಬುದು ಪವಾಡದ ಆಯಾಮವನ್ನೇ ಪಡೆದಂತ್ತಿತ್ತು. ಅ ಭಾರೀ ಬಂಡೆ ಆಗಲೇ ಹರಿದ್ರಾ ಕುಂಕುಮ ಶೋಭಿತವಾಗಿ, ಆರತಿ ಕಾಣುತ್ತಿತ್ತು!

ಕಂದುತ್ತಿದ್ದ ಬೆಳಕು, ಏರುತ್ತಿದ್ದ ಚಳಿಯೊಡನೆ ಹೆಲಿ-ಸೇವೆ ಸ್ಥಗಿತಗೊಂಡದ್ದೂ ಆಯ್ತು. ಮತ್ತೆ ನಮ್ಮ ಯೋಜನೆಯಾದರೂ ಒಂದು ರಾತ್ರಿ ಕ್ಷೇತ್ರದಲ್ಲಿ ತಂಗುವುದೇ ಆದ್ದರಿಂದ ಪ್ರಥಮಾದ್ಯತೆಯಲ್ಲಿ, ಸಮೀಪದಲ್ಲೇ ಒಳ್ಳೆಯ ವಾಸಸ್ಥಾನ ಹುಡುಕಿಕೊಂಡೆವು. ದೇವಳದ ಅಂಗಳದ ಮೂಲೆಯಲ್ಲೇ ಬಂದಿದ್ದ ಹೊಸ ಮಹಡಿ ಕಟ್ಟಡದಲ್ಲಿ ಎಂಟೆಂಟು ಮಂಚ, ಹಾಸಿಗೆ, ರಜಾಯಿಗಳ ಎರಡು ಕೋಣೆಯ ವ್ಯವಸ್ಥೆಯಾಗುವುದರಲ್ಲಿ ಗಂಟೆ ನಾಲ್ಕಾಗಿತ್ತು. ಸೆರ್ಸಿಯಲ್ಲಿ ದಾರಿಯುದ್ದಕ್ಕೆ ನಡೆದವರು, ಊರು ಸುತ್ತಿದವರು, ಎಲ್ಲ ಬಿಟ್ಟು ಉದ್ದ ನಿದ್ರೆ ಮಾಡಿ ತಡವಾಗಿ ಎದ್ದವರು ಎಂದೆಲ್ಲ ವಿವಿಧ ಹೊತ್ತುಗಳಲ್ಲಿ ಆಲುಪರಾಟವನ್ನೇನೋ ಮನಸಾರೆ ತಿಂದಿದ್ದೆವು. ಆದರೆ ಈಗ ಯಾರ ಹೊಟ್ಟೆಯಲ್ಲೂ ಅದರ ಯಾವುದೇ ಲಕ್ಷಣ ಉಳಿದಂತಿರಲಿಲ್ಲ. ಗದಗುಟ್ಟುತ್ತ, ಮತ್ತೆ ಹೆಲಿಪ್ಯಾಡಿನತ್ತ ನಡೆದು, ಜಿಎಂವಿಎನ್ ಹೋಟೆಲಿಗೆ ಶರಣಾದೆವು. ಅದೃಷ್ಟಕ್ಕೆ ಹೋಟೆಲಿನವರು ಕೈ ತೊಳೆಯಲೂ ಬಿಸಿನೀರು ಕೊಟ್ಟು, ಆಗ ತಾನೇ ಮಾಡಿದ ಬಿಸಿಬಿಸಿ ಅನ್ನ ಸಹಿತವಾಗಿ ಸಾಕಷ್ಟು ಒಳ್ಳೆಯ ಊಟವನ್ನೇ ಕೊಟ್ಟರು. ಸಂತೋಷದಿಂದ ತಿಂದು ಮುಗಿಸುವುದರೊಳಗೆ……

ಅಂದು ನಾವು ಕೇದಾರಕ್ಕೆ ಪ್ರವೇಶಿಸುತ್ತಿದ್ದಂತೆ, ಬಲ (ಪೂರ್ವ) ಮಗ್ಗುಲಿನ ಅರ್ಧ ಬೆಟ್ಟದೆತ್ತರದಲ್ಲಿ ಕಾಣುತ್ತಿದ್ದ ಭೈರವನಾಥ ದೇವಾಲಯಕ್ಕೆ ಹರಿಯೊಡನೆ ನಾವಿಬ್ಬರು ಏರಿ ಹೋಗುವ ಅಂದಾಜು ಮಾಡಿದ್ದೆವು. ಮತ್ತೂ ಸಮಯ ಉಳಿದರೆ, ಒಟ್ಟಾರೆ ಊರಿನ ಧ್ವಂಸ ಮತ್ತು ಜೀರ್ಣೋದ್ಧಾರದ ವಿವರಗಳನ್ನೆಲ್ಲ ಚಿತ್ರಸಹಿತ ದಾಖಲಿಸುವ ಹೊಳಹೂ ನಮ್ಮಲ್ಲಿತ್ತು. ಆದರೆ ಊಟ ಮುಗಿಸಿ, ಕೈ ತೊಳೆಯುವುದರೊಳಗೆ ಹೆಚ್ಚು ಘನವಾದ ಹಿಮಪಾತ ಅವತರಿಸಿತ್ತು. ಹರಯದ ಬಿಸಿಯ ಯಾರೋ ಮೂರು ನಾಲ್ಕು ತರುಣರು – ಸಾಕಷ್ಟು ಬಿಸಿಯುಡುಪುಗಳ ಬಲದಲ್ಲೂ ಇದ್ದವರು, ನಾವು ವಿದೇಶದ ಚಿತ್ರಗಳಲ್ಲೆಲ್ಲ ಕಂಡಂತೆ, ಒಮ್ಮೆಗೆ ಹಿಮದುಂಡೆಗಳನ್ನು ಮಾಡಿ ಎರಚಾಡಿ ಆಟ ಆಡಲೂ ತೊಡಗಿದ್ದರು; ಆದರೆ ಹೆಚ್ಚು ಹೊತ್ತಲ್ಲ! ನಾವಂತೂ ಒತ್ತಿನ ಚಾಯ್ವಾಲಾನಲ್ಲಿ ಡಬ್ಬಲ್ ಚಾ ಏರಿಸಿದೆವು. ಸಾಕಾಗಲಿಲ್ಲ ಎನ್ನುವಾಗ, ಹೋಟೆಲಿನವರು ಇನ್ನೊಂದು ಮಗ್ಗುಲಿನಲ್ಲಿನ ಮಹಡಿದ್ದ ಜಗುಲಿಯಲ್ಲಿ, ಎಲ್ಲರಿಗಾಗುವಂತೆ ಸಣ್ಣ ಶಿಬಿರಾಗ್ನಿಯನ್ನು ಎಬ್ಬಿಸಿದರು. ನಾವೆಲ್ಲ ಅದಕ್ಕೆ ಮುಗಿಬಿದ್ದೆವು. ಒಮ್ಮೆ ಕಣ್ಣು ಬಿಡಲಾಗದಂಥ ಹೊಗೆ, ಇನ್ನೊಮ್ಮೆ ಮೈ ಉರಿ ಹತ್ತುವಂಥ ಜ್ವಾಲೆ, ಮಗುದೊಮ್ಮೆ ಮೂಳೆಗಳ ಕಣಕಲಾಟ ಕೇಳಿಸುವಂಥ ಕುಳಿರ್ಗಾಳಿ ಎಂದೆಲ್ಲ ಸ್ವಲ್ಪ ಹೊತ್ತು ಏಗಾಡುತ್ತಿದ್ದಂತೆ, ಹಿಮಪಾತ ಮತ್ತೆ ತೆಳುವಾಯ್ತು. ಜತೆಗೇ ಸಾಯಂಸಂಧ್ಯಾದೇವಿಯ ಅವತರಣಕ್ಕೆ ಮುಹೂರ್ತವೂ ಬಂದಂತಿತ್ತು. ಇನ್ನು ಮೊದಲು ಅಂದಾಜಿಸಿದ ಪಟ್ಟಿಯ ಕತೆ ಹೇಳಬೇಕೇ? ಗವುಸಿನೊಡನೆ ಮುಷ್ಟಿಗಟ್ಟಿ, ದಪ್ಪ ವಾಯುನಿರೋಧೀ ಮೇಲಂಗಿಯ ಕಿಸೆಯಾಳದಲ್ಲಿ ಹುಗಿದ ಕೈಯನ್ನು, ಹೊರತೆಗೆದು, ಹಿಮವರ್ಷದ ಪಟ ಕ್ಲಿಕ್ಕಿಸುವಷ್ಟೂ ನನ್ನಲ್ಲಿ ಉತ್ಸಾಹ ಉಳಿದಿರಲಿಲ್ಲ. ಈಗ ಸಂತೋಷದಲ್ಲೇ ಹೇಳುತ್ತೇನೆ – ಹವಾಮಾನ ಅವಕಾಶವನ್ನೇ ವಂಚಿಸಿಬಿಟ್ಟಿತ್ತು!

ಪೂರ್ಣ ಕತ್ತಲಾವರಿಸುವ ಮುನ್ನ, ಹಿಮಪಾತ ನಿಂತಿತು. ಎಲ್ಲರೂ ಬೇಗನೆ ಕೋಣೆ ಸೇರಿಕೊಂಡೆವು. ನೇರ ಹಿಮಕರಗಿ ಬರುತ್ತಿದ್ದ ಮಂದಾಕಿನಿ ನಮ್ಮ ಕೋಣೆಯ ಹಿತ್ತಲಿನಲ್ಲೇ ಕಲಕಲನೆ ನಗುತ್ತಿದ್ದಳು. ಸಾಲದ್ದಕ್ಕೆ ಅವಳ ಸಖ – ಶೀತಲ ಮಾರುತ, ಹಿತ್ತಿಲಿನ ಕಕ್ಕೂಸಿಗಿದ್ದ ಗಾಜು ಕಳಚಿದ ಕಿಟಕಿಯಲ್ಲಿ ಕೋಣೆಯೊಳಗೆಲ್ಲ ವ್ಯಾಪಿಸಿ ನಲಿದ. ಅನಿರ್ದಿಷ್ಟಾವಧಿಗೆ ನಮ್ಮ ಪ್ರಾಕೃತಿಕ ಆವಶ್ಯಕತೆಗಳಿಗೂ ನಿರ್ಬಂಧ ಸಂಕಲ್ಪಿಸಿ, ಕಕ್ಕೂಸ್ ಬಾಗಿಲು ಬಿಗಿಯುವ ಕಾಳಜಿವಹಿಸಿದೆವು. ಸಮಯದ ಲೆಕ್ಕದಲ್ಲಿ ಇನ್ನೂ ಸಂಜೆ ಆರೂವರೆಯೋ ಏಳೋ ಆಗಿದ್ದರೂ ಒಬ್ಬೊಬ್ಬರೇ ಎಲ್ಲರೂ ಹಾಸಿಗೆ ರಜಾಯಿಗಳ ಆಳದಲ್ಲಿ ಹುಗಿದುಹೋದೆವು. ಹಾಗೆಂದು ಉಷ್ಣವಲಯದ ಬಿಸಿಯಲ್ಲಿ ಕುಳಿತೋದುವ ನೀವು ನಮ್ಮ ಬೆಚ್ಚನ್ನ ನಿದ್ರೆ, ಸುಂದರ ಸ್ವಪ್ನಗಳ ಕಲ್ಪನೆ ಕಟ್ಟಿಕೊಳ್ಳಬೇಡಿ. ಅಲ್ಲಿನ ಅಸಾಧ್ಯ ಚಳಿ (ಅನಂತರ ತಿಳಿಯಿತು, ರಾತ್ರಿ ಒಂದು ಹಂತದಲ್ಲಿ ಕೇದಾರದ ತಾಪಮಾನ -೭ಡಿಗ್ರಿ ಮುಟ್ಟಿತ್ತಂತೆ) ನಮಗೆ ಸುಖ ನಿದ್ರೆ ಕೊಡಲೇ ಇಲ್ಲ. ಬೇಗ ಮಲಗಿದ ಮಾನಸಿಕ ಹೊರೆಯ ಮೇಲೆ, ಕೆಟ್ಟ ನಿದ್ರೆಯ ಒಂದೊಂದೇ ಮೂಟೆ ಪೇರಿಸುತ್ತ, ಅತಿ ದೀರ್ಘ ರಾತ್ರಿಯನ್ನು, ನಿಧಾನ ಚಲಿಸುವ ಸಮಯದ ಗಾಡಿಯಲ್ಲಿ ಕಳೆದೆವು.

ಬೆಳಿಗ್ಗೆ ವಾತಾವರಣ ತಿಳಿಯಾಗಿತ್ತು. ತಂಡದಲ್ಲಿ ಬಹುಮಂದಿ ಕೇದಾರನಾಥನ ಪ್ರಾತಃ ಸೇವೆ ಸಂಕಲ್ಪಿಸಿದ್ದರು. ಅಂಥವರಿಗೆ ನಮ್ಮ ಕಟ್ಟಡಗಳ ಉಸ್ತುವಾರಿ, ತನ್ನ ಬಿಡಾರದಲ್ಲೇ ನೀರು ಬಿಸಿ ಮಾಡಿ ಕೊಟ್ಟು ಪುಣ್ಯ ಕಟ್ಟಿಕೊಂಡ. ಬೆಳ್ಳಿ ಶಿಖರಗಳಲ್ಲಿ ವರ್ಣಕುಂಚಗಳು ಆಡುತ್ತಿದ್ದಂತೆ ಹೆಲಿ-ಸೇವೆಯೂ ಶುರುವಾಗಿತ್ತು. ನಮ್ಮಲ್ಲಿನ ಒಂದಷ್ಟು ಮಂದಿ ಮತ್ತೆ ಮಂದಿರಕ್ಕೆ ಧಾವಿಸಿ, ಕೇದಾರನಾಥನಿಗೆ ವಿದಾಯ ನಮನ ಮಾಡಿ ಬಂದರು. ಇನ್ನು “ಎಲ್ಲ ಬದಲುವುದರೊಳಗೆ….” ಎಂಬ ಪಲ್ಲವಿ ತಲೆಯೊಳಗಾಡುತ್ತಿದ್ದಂತೆ, ಚಾ ಸೇವನೆಯ ಔಪಚಾರಿಕತೆಯನ್ನೂ ನಗಣ್ಯ ಮಾಡಿ, ಹೆಲಿಪ್ಯಾಡಿಗೆ ಧಾವಿಸಿದೆವು. ಚುರುಕಾಗಿಯೇ ಅವಕಾಶ ಸಿಕ್ಕು, ಸೆರ್ಸಿ ತಲಪಿಬಿಟ್ಟೆವು. ಅಲ್ಲಿ ಹೆಚ್ಚು ವ್ಯವಸ್ಥಿತವಾದ ಇನ್ನೊಂದೇ ಹೋಟೆಲಿನಲ್ಲಿ ಉಪಾಹಾರ, ಮೇಲೆ ಸ್ನಾನ ಬಾಕಿಯುಳಿಸಿಕೊಂಡವರ ಪೂರೈಕೆಗಳಲ್ಲಿ ಧಾರಾಳ ಸಮಯ ಕಳೆದು, ತುಸು ತಡವಾಗಿಯೇ ಬದರಿಯತ್ತ ಹೊರಟೆವು.

(ಕಥನದ ಉತ್ತರಾರ್ಧ ಇನ್ನೆರಡು ದಿನಗಳಲ್ಲಿ)