‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’ ಪ್ರಸಾದ್ ರಕ್ಷಿದಿಯವರ ನಾಟಕ, ರಕ್ಷಿದಿಯಲ್ಲೇ ಪ್ರಥಮ ಪ್ರದರ್ಶನ ಎಂದು ತಿಳಿದದ್ದೇ ನಾನು ದೂರ, ಸಮಯಗಳನ್ನು ಅಲಕ್ಷಿಸಿದೆ. ದೇವಕೀ ಸಮೇತನಾಗಿ ಮೊನ್ನೆ (೨೫-೪-೧೯) ಮಧ್ಯಾಹ್ನ ಸುಮಾರು ಒಂದೂಮುಕ್ಕಾಲಕ್ಕೆ ಸಿಕ್ಕ ಮಂಗಳೂರು-ಬೆಂಗಳೂರು ಬಸ್ಸೇರಿ ಹೋದೆ. ಸಂಜೆ ಐದಕ್ಕೆ ನಾವು ಸಕಲೇಶಪುರದಲ್ಲಿ ಇಳಿಯುವುದನ್ನೇ ಕಾದಿದ್ದಂತೆ, ಮೂಡಿಗೆರೆ ಬಸ್ ನಮ್ಮನ್ನು ತುಂಬಿಕೊಂಡಿತು. ಐದೂಮುಕ್ಕಾಲಕ್ಕೆ ರಕ್ಷಿದಿಯಲ್ಲಿದ್ದೆವು. ನಾಟಕ ಒಂಬತ್ತೂಕಾಲರ ಅಂದಾಜಿಗೆ ಮುಗಿದಿತ್ತು. ಮತ್ತೆ ಪ್ರಸಾದರ ಕೃಪೆಯಲ್ಲಿ ಸಕಲೇಶಪುರ, ಬಸ್ಸಿಡಿದು ಅಪರಾತ್ರಿಯಲ್ಲೇ ಮಂಗಳೂರಿಗೆ ಮರಳಿದ್ದೆವು. ಪ್ರತಿಯಾಗಿ ನಾನು ಪ್ರಸಾದರಿಗೆ ಕಳಿಸಿದ ಕೃತಜ್ಞತಾ ಸಂದೇಶದ ಭರತ ವಾಕ್ಯ ಹೀಗಿತ್ತು – ‘ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ಒಂದು ನಾಟಕವೇ ಅಲ್ಲ!’ನನ್ನ ಮಾತಿನ ವಿವರಣೆಯನ್ನು ಬರಿಯ ‘ಪ್ರದರ್ಶನದ ವಿಮರ್ಶೆ’ಯಿಂದ ಮಾಡುವುದಲ್ಲ, ಮಂಗಳೂರಿನಿಂದ ಮಂಗಳೂರಿಗೆ ಆದ ಸಮಗ್ರ ಅನುಭವದೊಡನೇ ಹೇಳಬೇಕಾಗುತ್ತದೆ. ಮೊದಲು ಶಿರಾಡಿ: ಕಳೆದ ಮಳೆಗಾಲದಲ್ಲಿ ಕುಸಿತ ಕಂಡ ಶಿರಾಡಿ ಘಟ್ಟದಲ್ಲಿ, ಇಂದು ಅಲ್ಲಲ್ಲಿ ಕಾಣುವ ‘Go slow’ ಗಳೆಲ್ಲ ಕಂತ್ರಾಟಿನವರ ಧ್ಯೇಯ ವಾಕ್ಯ, `Work in progress’ ಗಳೆಲ್ಲ ಬೋರ್ಡುಗಳಿಗೇ ಸೀಮಿತ. ಕಳೆದ ಮಳೆಗಾಲದ ಬೆನ್ನಿಗೆ ನಡೆದ ತುರ್ತು ಸೇವೆ, ಕೊನೆಯ ಮಳೆಯೊಡನೆ ಪೂರ್ಣ ಸ್ಥಗಿತಗೊಂಡಿದೆ ಮತ್ತು ಹೊಸ ಮಳೆಗಾಲದ ಉತ್ಪಾತಗಳಿಗೆ ಪೀಠಿಕೆಯನ್ನಷ್ಟೇ ಬರೆದು, ಪೂರ್ಣ ನಿದ್ರೆಯಲ್ಲಿದೆ.

ನೇತ್ರಾವತಿ ಜಲಾನಯನ ಪ್ರದೇಶ
ಮಾರನ ಹಳ್ಳಿಯಿಂದ ಮುಂದೆ ಹೆದ್ದಾರಿಯ ಇಕ್ಕೆಲಗಳಲ್ಲಿ ಎತ್ತಿನಹೊಳೆ ಯೋಜನೆಯ ಒಂದು ಅಣೆಕಟ್ಟು ಮತ್ತು ಒಟ್ಟಾರೆ ಕೊಳವೆಜಾಲಗಳ ಸೌಕರ್ಯಕ್ಕೆ ಮಾಡಿದ ಅಗಾಧ ಪ್ರಾಕೃತಿಕ ನಾಶವನ್ನು ಕಾಣುತ್ತೇವೆ. ಇದೂ ಬರಲಿರುವ ಮಳೆಗಾಲದಲ್ಲಿ ಹೆದ್ದಾರಿಗೆ ಹೆಚ್ಚಿನ ಕುತ್ತು ತರುವುದು ಮತ್ತು ನೇತ್ರಾವತಿ ಪಾತ್ರೆಯುದ್ದಕ್ಕೂ ದೀರ್ಘ ಕಾಲೀನ ದುಷ್ಪರಿಣಾಮಗಳನ್ನು ಮಾಡುವುದು ನಿಶ್ಚಿತ.

ಸಣ್ಣದು ಕೊಟ್ಟು, ದೊಡ್ಡದರಲ್ಲಿ ಹಿಡಿಯುತ್ತದೆ (ಮ್ಯಾಕ್ಬೆತ್ ನಾಟಕದಿಂದ) ಸಕಲೇಶಪುರದಿಂದ ನಮ್ಮದು ಪಶ್ಚಿಮಘಟ್ಟದ ಶಿಖರ ಸಾಲಿನ ಒಳ ಮಗ್ಗುಲಿನ ದಾರಿ. ಈ ವಲಯದ ಒಬ್ಬ ಹಳ್ಳಿಗನನ್ನು ಎತ್ತಿನ ಹೊಳೆ ಯೋಜನೆ ಕುರಿತು ಮಾತಾಡಿಸಿದೆ. ಆತ ಎದೆ ತುಂಬಿ ಹಾಡಿದ, “ಎತ್ತಿನೊಳೆಲಿ ನೀರಾಗುತ್ತೋ ಬಿಡತ್ತೋ, ನಂ ಜನಪ್ರತಿನಿಧಿಗಳು ಏಳು ಜನ್ಮದಲ್ಲಿ ಕೊಡಕ್ ಆಗ್ದಿರೋ ಬೆಸ್ಟ್ ದಾರಿಯನ್ನು ಎತ್ತಿನೊಳೆ ಕಂಟ್ರ್‍ಆಕ್ಟರ್ಸ್ ಕೊಟ್ಟಿರೋದಂತೂ ನಿಜ!” ಭಾರೀ ಮರಗಳ ನೆರಳು ಮತ್ತು ಕಾಫೀತೋಟಗಳ ಸಂಗದಲ್ಲಿ ದಾರಿಯ ವೈಯ್ಯಾರ ಸುಂದರ ಅನುಭವ. ಆದರೆ ನಮ್ಮ ಹತ್ತೇ ಕಿಮೀ ಪಯಣದಲ್ಲಿ, ಎರಡು ಕಡೆ ದಾರಿ ಎತ್ತಿನ ಹೊಳೆ ಕಾಮಗಾರಿಯಲ್ಲಿ ತೀರಾ ಕೆಟ್ಟು ಹೋಗಿತ್ತು. ಆಗ ಇನ್ನೊಬ್ಬ ಹಳ್ಳಿಗ “…ಯೋಜನೆ ಮುಂದುವರಿದಂತೆ, ಪೈಪ್ ಲೈನುಗಳು ಬೆಳೆದಂತೆ, ಒಳಗಿನ ಎಲ್ಲ ದಾರಿಗಳದ್ದೂ ಅಲ್ಲಲ್ಲಿ ಕಟ್ಟಿಂಗ್ ಶುರುವಾಗಿದೆ…” ಎಂದು ಸ್ವಲ್ಪ ವಿಷಾದದಲ್ಲೇ ಹೇಳಿದ. ಸೇತುವೆಯೋ ಸುರಂಗವೋ ಮಾಡಿ ಆನೆ ಗಾತ್ರದ ಕೊಳವೆ ಸಾಲುಗಳ ಅಳವಡಿಕೆ ನಡೆದಿತ್ತು. “….ನಿರ್ಮಾಣ ಹಂತದಲ್ಲಿ ಇಂಥವು ಇದ್ದದ್ದೇ ಬಿಡಿ. ಮುಂದೆ ನೋ ಪ್ರಾಬ್ಲೆಂ. ಇನ್ನಾ ಪೈಪೊಳಗೆ ಹೋಗುವುದು ಸ್ಫೋಟಿಸುವ ಅನಿಲ, ಲಾವಾರಸವಾಗುವ ಪೆಟ್ರೋಲಿಯಂ ಉತ್ಪನ್ನವಲ್ಲ, ಬರಿಯ ತಣ್ಣನೆ ನೀರು” ಎನ್ನುತ್ತದೆ ಪುಡಾರಿ ಮಾತು.

ಸ್ವಲ್ಪ ವಿಚಾರ ಮಾಡಿನೋಡಿ. ಎಲ್ಲ ಲೆಕ್ಕಾಚಾರದಂತೇ ನಡೆದರೆ, ಈ ಕೊಳವೆ ಸಾಲಿನಲ್ಲಿ ಶಕ್ತಿ ಸಂಚಯವಾಗುವುದೇ ಭೋರಿಡುವ ಮಳೆಗಾಲದಲ್ಲಿ, ನೆಲವೆಲ್ಲ ಮೆದುಗೊಂಡು ಅಸ್ಥಿರತೆ ಸಹಜವಾದ ದಿನಗಳಲ್ಲಿ. ಆಗ ಒಂದಾನೆ ನುಗ್ಗುವ ಗಾತ್ರದ ಕೊಳವೆಗಳಲ್ಲಿ ಕನಿಷ್ಠ ಇನ್ನೂರಕ್ಕೂ ಮಿಕ್ಕು ಕಿಮೀ ದೂರದ ಊರುಗಳ ಲಕ್ಷ್ಯವಿಟ್ಟುಕೊಂಡ ಒತ್ತಡದಲ್ಲಿ ನೀರು ಸಾಗಬೇಕು. ಸಾಮಾನ್ಯದ ಮಾತಲ್ಲ. ಸಣ್ಣ ಉದಾಹರಣೆಯಾಗಿ ಇವುಗಳ ಅರ್ಧ ಗಾತ್ರದ ಕೊಳವೆ ಸಾಲಿನಲ್ಲಿ, ತುಂಬೆಯಿಂದ ಮಂಗಳೂರಿಗೆ ಬಹುತೇಕ ಸಮತಟ್ಟಿನಲ್ಲಿ ಬರುವ ಕುಡಿನೀರ ಒಂದು ಸೋರಿಕೆಯ ಹಳೇ ಚಿತ್ರ ನೋಡಿ. ಅದಕ್ಕೂ ಮುಖ್ಯವಾಗಿ ನೀರೆಂದು ಹಗುರ ನುಡಿಯುವವರು, ಯಾವುದೇ ಜಲವಿದ್ಯುತ್ ಯೋಜನೆಗಳ ಏಕೈಕ ಶಕ್ತಿಮೂಲವೇ ನೀರು ಎನ್ನುವುದನ್ನು ಮರೆಯಬಹುದೇ! ಆನೆ ಸಸ್ಯಾಹಾರಿ ಎಂದು ಎದುರಾಗುವುದು ಸಾಧ್ಯವೇ? ಇನ್ನೊಂದು ಹೇಳದುಳಿದ ಮಾತು – ‘ಕೊಳವೆ ಸಾಲಿನ ನಿರ್ವಹಣೆ’. ಇದು ಸಣ್ಣ ಮಾತಲ್ಲ, ಬಿರಡೆ ಕಳಚಿದ ಬಾಟ್ಲಿ ಭೂತದಂತೆ ಮತ್ತೆ ಮತ್ತೆ ಕಾಡುವುದು ಖಂಡಿತ.

ಹೆಗ್ಗೋಡಿನ ಆದರ್ಶಕ್ಕೆ ತುಡಿಯುವ ರಕ್ಷಿದಿ

ಪ್ರಸಾದ್ ರಕ್ಷಿದಿ ಸಾಮಾನ್ಯ-ಅಸಾಮಾನ್ಯ ಕೃಷಿಕ. ಇವರದೇನಿದ್ದರೂ ಬಹುತೇಕ ಸ್ವಯಾರ್ಜಿತ ಸಣ್ಣ ಜಮೀನು ಮತ್ತು ಸಣ್ಣ ಕೃಷಿ. ಇವರ ಅಸಾಮಾನ್ಯತೆ ಇರುವುದು, ತನ್ನ ಹೊಟ್ಟೆಪಾಡನ್ನಷ್ಟೇ ನೋಡಿ ಕೂರದೆ, ಸಂಪರ್ಕಕ್ಕೆ ಬಂದೆಲ್ಲ ವಿಚಾರಗಳನ್ನೂ (ಸಾಹಿತ್ಯ, ಕಲೆ, ಧರ್ಮ, ಪರಿಸರ, ರಾಜಕೀಯ….) ತನ್ನ ಚಿಂತನೆಯ ಒರೆಗೆ ಹಚ್ಚಿ, ಸಮಾಜದ ಒಳಿತಿಗೆ ದುಡಿಸುತ್ತ, ಫಲಿತಾಂಶದ ಬಗ್ಗೆ ದಿವ್ಯ ನಿರ್ಲಿಪ್ತಿ ಉಳಿಸಿಕೊಳ್ಳುವಲ್ಲಿ. ಬೆಳ್ಳೇಕೆರೆ ಕರ್ನಾಟಕ ಸಂಘ ಅಥವಾ ರಕ್ಷಿದಿಯ ರಂಗಭೂಮಿ ಎಂದು ತೋರಿಕೆಗೆ ಸಿಗುವ ಮೂರೂ ಚಿಲ್ಲರೆ ಕಟ್ಟಡಗಳು ವಿಶೇಷವೇನೂ ಹೇಳವು. ಬದಲಿಗೆ ನಾಲ್ಕು ದಶಕಕ್ಕೂ ಮಿಕ್ಕು ಇಲ್ಲಿ ನಡೆದ ಸಾಂಸ್ಕ್ರೃತಿಕ ಚಟುವಟಿಕೆಗಳ ಲೆಕ್ಕ, ಅದು ಪ್ರಭಾವಿಸಿದ ಮನಸ್ಸುಗಳ ಲೆಕ್ಕ ತೆಗೆದು ನೋಡಿದರಷ್ಟೇ ಅರಿವಾದೀತು. ಆ ವಿಸ್ತೃತ ಅನುಭವಗಳ ಸಾರದ ಒಂದಂಶವೇ ‘ಆನೆಗಳ ದಾರಿಯಲ್ಲಿ ಅಲ್ಲೋಲ ಕಲ್ಲೋಲ’. ಅದೇ ನಮ್ಮನ್ನು ರಕ್ಷಿದಿಗೆ ಎಳೆದಿತ್ತು.

ಬಸ್ಸಿಳಿದದ್ದೇ ಬಲಬದಿಯ ಹರಕು ಗುಡ್ಡೆಯ ಮೇಲೆ ಬೆಳ್ಳೇಕೆರೆ ಕರ್ನಾಟಕ ಸಂಘದ ರಚನೆಗಳು ಕಾಣಿಸುತ್ತವೆ. ಇಳಿದಾಣದಲ್ಲಿನ ಒಂದು ಸಣ್ಣ ಪೋಸ್ಟರ್ ನಾಟಕ ಪ್ರದರ್ಶನ ಇರುವುದನ್ನು ಖಾತ್ರಿ ಪಡಿಸಿತು. ಉಳಿದಂತೆ ಯಾವುದೇ ಅಲಂಕಾರ, ಗದ್ದಲ, ಜನ, ವಾಹನ ಕಾಣಿಸಲಿಲ್ಲ. ದಾರಿಯಲ್ಲೇ ತುಸು ಮುಂದೆ ಇದ್ದ ಒಂದೇ ಗೂಡಂಗಡಿ/ಚಾ ದುಕಾನಿಗೆ ನಡೆದೆವು. ಪ್ರದರ್ಶನಕ್ಕೆ ಮುನ್ನ ಹೊಟ್ಟೆ ಗಟ್ಟಿ ಮಾಡಿಕೊಳ್ಳೋಣವೆಂದರೆ ಅಲ್ಲಿ ನಮಗೆ ದಕ್ಕಿದ್ದು – ಬೆರಳಿಗೆರಡು ಕೋಡುಬಳೆ, ನಮಗೋಸ್ಕರ ಬಿಸಿ ಮಾಡಿದ ತಣಕಲು ಚಾ. ಎಪ್ಪತ್ತರ ಯಜಮಾನರನ್ನು “ರಾತ್ರಿ ಊಟಕ್ಕೇನಾದರೂ ಕೊಡ್ತೀರಾ” ಎಂದು ಕೇಳಿ ಮುಗಿಯುವ ಮೊದಲು, ಆತ ಏಳು ಕಿಮೀ ಮುಂದಿನೂರು – ಹಾನುಬಾಳಿಗೆ, ಕೈ ತೋರಿಸಿಯಾಗಿತ್ತು.

ಸವಕಲು ಜಾಡಿನಲ್ಲಿ ಗುಡ್ಡೆ ಏರಿದೆವು. ಮೊದಲು ಸಿಕ್ಕಿದ್ದು ಪೂರ್ಣಚಂದ್ರ ತೇಜಸ್ವೀ ನಾಮಾಂಕಿತದ ಪುಟ್ಟ ಸಭಾಭವನ. ಬಾಗಿಲಿನ ಬೀಗ ನೋಡಿ, ಮುಕ್ತ ರಂಗದತ್ತ ನಡೆದೆವು. ದಾರಿಗೆ ಕಾಣುವಂತೆ ದೊಡ್ಡ ಮಾಡಿನ ಬಯಲುರಂಗ, ಕಳಾಹೀನ ಕಪ್ಪು ಸಿಲ್ಪಾಲಿನ್ ಶೀಟ್ ನೇತಾಡಿಸಿಕೊಂಡಿದೆ. ವಾಸ್ತವದಲ್ಲಿ ಅದು ರಂಗದ ಹಿತ್ತಿಲ ನೋಟ. ಎದುರಲ್ಲಿ ಗುಡ್ಡದ ಪ್ರಾಕೃತಿಕ ಇಳಿಜಾರನ್ನೇ ಪ್ರೇಕ್ಷಕರಿಗಾಗಿ ನಾಲ್ಕೆಂಟು ಸೋಪಾನ ಸಾಲು ಮಾಡಿದ್ದರು. ವೇದಿಕೆ ಸರಳವಾಗಿದ್ದರೂ ಯಾವುದೇ ಪ್ರಯೋಗಕ್ಕೆ ಒಡ್ಡಿಕೊಳ್ಳುವಷ್ಟು ವಿಸ್ತಾರವಿದ್ದದ್ದು ಗಮನಾರ್ಹ. ಅಲ್ಲಿ ನಾಲ್ಕೆಂಟು ತರುಣರ ಜತೆ ಸ್ವತಃ ಪ್ರಸಾದ್ ರಂಗಸಜ್ಜಿಕೆಯಲ್ಲಿ ತೊಡಗಿದ್ದರು.

ತೀರಾ ಅನಿರೀಕ್ಷಿತ ಅತಿಥಿಗಳಾದ ನಮ್ಮನ್ನು ಪ್ರಸಾದ್ ಆತ್ಮೀಯವಾಗಿಯೇ ಬರಮಾಡಿಕೊಂಡರು. ಸ್ಥಳ ನ್ಯಾಯಕ್ಕೆ ಸರಿಯಾಗಿ, ಸಮೀಪದಲ್ಲೇ ಇದ್ದ ಅವರ ಮನೆಗೆ ಹೋಗಿ ಉಪಚಾರಗಳನ್ನು ಕೈಗೊಳ್ಳಲೂ ಸೂಚಿಸಿದರು. ನಾವದನ್ನು ಸವಿನಯ ನಿರಾಕರಿಸಿದೆವು. ನಾಟಕ ಶುರುವಾಗುವ ಸಮಯವೇನೋ ಏಳು ಗಂಟೆಯೆಂದೇ ಇದ್ದರೂ “ಗ್ರಾಮೀಣ ವಿರಾಮದಲ್ಲಿ ಅದು ಎಂಟೂ ಆಗಬಹುದು” ಎಂದು ಪ್ರಸಾದ್ ಹೇಳಿದರು. ಅಷ್ಟರಲ್ಲಿ ಕೆಳಗೆ ದಾರಿ ಬದಿಯಲ್ಲಿಟ್ಟಿದ್ದ ವಿದ್ಯುಜ್ಜನಕ ಗುಡುಗುಡಿಸ ತೊಡಗಿದ್ದರಿಂದ, ಪ್ರಸಾದ್ ಧ್ವನಿ ಬೆಳಕುಗಳ ಜಾಡು ಹಸನುಗೊಳಿಸುವಲ್ಲಿ ಕಳೆದುಹೋದರು. ನಾವು ಕಾಲ ಕಳೆಯುವ ಉತ್ಸಾಹದಲ್ಲಿ ಪ್ರಸಾದರ ಕೆಲಸಕ್ಕೆ ಮಾತಿನ ಹೊರೆ ಹೇರಬಾರದೆಂಬ ಎಚ್ಚರದೊಡನೆ, ಹಳ್ಳಿ ನೋಡುವ ನೆಪ ಮಾಡಿಕೊಂಡು ಮೆಲ್ಲ ಜಾರಿದೆವು.

ರಾಧಾತಿಥ್ಯ!
ಬಹುಶಃ ಆ ಗುಡ್ಡೆ-ವಠಾರ ಬೆಳ್ಳೇಕೆರೆ ಜೈ ಕರ್ನಾಟಕ ಸಂಘದ ಸೊತ್ತಾಗಿರಬೇಕು. ಅದರಲ್ಲಿದ್ದ ಮೂರನೇ ಕಟ್ಟಡವೂ ಬೀಗದಲ್ಲಿತ್ತು. ಆದರೆ ಯಾರೋ ದಾನಿಯನ್ನು ಹಿಡಿದು ಈಚೆಗೆ ಕಟ್ಟಿಸಿದ ಅತಿಥಿಗೃಹ ಎಂದೇನೋ ತಿಳಿಯಿತು. ಒಳಗಿನ ಸೌಕರ್ಯಗಳನ್ನು ಇನ್ನೂ ಸೇರಿಸಿದಂತಿರಲಿಲ್ಲ. ರಕ್ಷಿದಿಗೆ ಬರುವ ಪ್ರವಾಸೀ ರಂಗ ತಂಡಗಳು, ಇವರೇ ಸಂಘಟಿಸುವ ವೈಚಾರಿಕ ಕೂಟಗಳು ಮುಂತಾಗಿ ಹೆಚ್ಚು ಜನ, ಕೆಲವು ದಿನ ನಿಲ್ಲುವಂತಿದ್ದರೆ ಇಂಥ ವ್ಯವಸ್ಥೆ ಅಲ್ಲಿಗೆ ತೀರಾ ಅಗತ್ಯವಿತ್ತು. ಇದುವರೆಗೆ ಬಹುಶಃ ಎಲ್ಲಕ್ಕೂ, ಮುಂದೆಯೂ ಸಣ್ಣ ಪುಟ್ಟದ್ದಕ್ಕೆಲ್ಲ ಮುಂದುವರಿಯಬಹುದಾದ ಪ್ರಸಾದರ ಮನೆ ಮತ್ತು ರಾಧೆಯವರ (ಪ್ರಸಾದರ ಶ್ರೀಮತಿ) ಆತಿಥ್ಯಕ್ಕೆ ಇಂಥ ಒಂದು ಬಿಡುಗಡೆ ಅವಶ್ಯವೇ ಸರಿ. [ನಾನು ಪ್ರಸಾದರನ್ನು ಕಂಡ ಕೂಡಲೇ ನಾಟಕ ಮುಗಿದಾಗ ನಮ್ಮನ್ನು ಸಕಲೇಶಪುರಕ್ಕೆ ಕಳಿಸಿಕೊಡಬೇಕೆಂದು ಕೇಳಿಕೊಂಡಿದ್ದೆವು. ಅವರು (ಮತ್ತೆ ರಾಧೆ ಕೂಡಾ) ತೆಗೆದ ಬಾಯಿಗೆ ಹೇಳಿದ್ದು “ಅಯ್ಯೋ, ರಾತ್ರಿ ನಮ್ಮಲ್ಲಿ ಊಟ ಮಾಡಿ, ಉಳಿದು, ಅವಸರವಿದ್ದರೆ, ನಾಳೆ ಫಸ್ಟ್ ಬಸ್ಸಿಗೇ ಹೋಗಿ” ಎಂದಿದ್ದರು.) ನಾನು ಮೊದಲಲ್ಲಿ ಮಾತಿನ ಲಹರಿಗೆ ಮೂರೂ ಚಿಲ್ಲರೆ ಕಟ್ಟಡಗಳೆಂದಿದ್ದರೂ ವಾಸ್ತವದಲ್ಲಿ ಒಂದು ಕಲ್ಲನ್ನೋ ಒಂದು ಹಂಚನ್ನೋ ಪ್ರಾಮಾಣಿಕವಾಗಿ ಸಂಗ್ರಹಿಸಿ, ಸಂಘಟಿಸುವ ಶ್ರಮ ಮತ್ತು ವೆಚ್ಚ ಎಂದೂ ಹಗುರದ್ದಲ್ಲ. ಥಳುಕಿನ ಮಾತು, ಬೂಟಾಟಿಕೆಯ ಪ್ರದರ್ಶನಗಳನ್ನು ಹತ್ತಿರ ಸೇರಿಸದೆ, ನಿರಂತರ ಸಮಾಜಪರ ಚಟುವಟಿಕೆಗಳನ್ನೇ ಬಂಡುವಾಳವಾಗಿಟ್ಟುಕೊಂಡ ಬೆಳ್ಳೇಕೆರೆ ಬಳಗದ ಸಾಹಸ ಖಂಡಿತಕ್ಕೂ ಸಣ್ಣದಲ್ಲ. (ಮತ್ತದಕ್ಕೆ ನನ್ನ ಪ್ರಮಾಣಪತ್ರವೂ ಬೇಕಿಲ್ಲ!)

ಹಳ್ಳಿ ಸ್ವರ್ಗ – ನಿಜಕ್ಕೂ ಹೌದೇ?
ನಾವು ಬಸ್ಸಿಳಿದ ಜಾಗ ನಾಲ್ಕು ದಾರಿಗಳ ಸಂಗಮ. ಮುಖ್ಯ ದಾರಿಗೆ ಇತ್ತ ಸಕಲೇಶಪುರ, ಅತ್ತ ಮೂಡಿಗೆರೆ. ಅದರ ಎಡಗವಲು ರಕ್ಷಿದಿ ಹಳ್ಳಿಯೊಳಕ್ಕೆ ಸಾಗಿದರೆ, ಬಲಗವಲು ಅಗಲಹಟ್ಟಿ, ದಬ್ಬೆಗದ್ದೆ ಇತ್ಯಾದಿ ಗ್ರಾಮೀಣ ವಲಯಗಳನ್ನು ಶೋಧಿಸುತ್ತ ಸಾಗುತ್ತದೆ. ನಾವು ಮೊದಲು ಸ್ವಲ್ಪ ಅಗಲಹಟ್ಟಿ ದಾರಿಯಲ್ಲಿ ನಡೆದೆವು. ಎಲ್ಲ ಕಾಡು. ಹಿಂದೆ ಬರುತ್ತ ಬಲ ಕೆಳಕ್ಕೆ ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಆಕರ್ಷಿಸಿತು. ಹಿತ್ತಿಲ ದ್ವಾರದಲ್ಲೇ ನುಗ್ಗಿದೆವು. ಸುಸ್ಥಿತಿಯ ಮೂರು ಸುತ್ತಿನ ತರಗತಿ ಕೊಠಡಿಗಳು, ಎರಡೆರಡು ವೇದಿಕೆಗಳು, ವಿಸ್ತಾರದ ಅಂಗಳ ಹೊಂದಿದೆ. ಸಾಕಷ್ಟು ವೈಭವದಲ್ಲೇ ನಡೆದ ಲಕ್ಷಣಗಳೇನೋ ಸ್ಪಷ್ಟವಿದ್ದವು. ಆದರೆ ಇಂದಿನ ಶಿಕ್ಷಣ ವಾಣಿಜ್ಯೀಕರಣದ ಹೊಲಸಿನಲ್ಲಿ ಖಂಡಿತವಾಗಿ ಈ ಶಾಲೆಯೂ ನರಳುತ್ತಿರಬೇಕು (ಶಿಕ್ಷಕ ಮತ್ತೆ ವಿದ್ಯಾರ್ಥಿ ಸಂಖ್ಯೆಗಳಲ್ಲಿ ಕುಸಿತ ಮತ್ತು ಶೈಕ್ಷಣಿಕ ವಾತಾವರಣದ ಕೊರತೆ!).

ಹಿಂದೊಂದು ಸಲ ನಾನು ರಕ್ಷಿದಿಯಲ್ಲೇ ಪ್ರಸಾದ್ ಭೇಟಿಯಾಗಿದ್ದಾಗ, ಹೀಗೇ ಮಾತಿಗೆ “ಓ ಆ ಶಾಲೆಯ ಆಚೆಗೇ ನೋಡಿ ಬಿಂದು ಮನೆ” ಎಂದಿದ್ದರು. ಬೆಳ್ಳೇಕೆರೆ ಥಿಯೇಟರಿನ ಪ್ರಭಾವದಲ್ಲಿ ನಾಟಕದ ಹುಚ್ಚು ಹತ್ತಿಸಿಕೊಂಡಿದ್ದ, ಬಡ ತಂದೆ ತಾಯಿಯರ ಕೊನೆಯ ಮಗಳು – ಬಿಂದು ರಕ್ಷಿದಿ. ಸಹಜವಾಗಿ ಈಕೆಯೂ ಕಲಾವಿದೆಯಾದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಆದರೆ “ನೀನು ಕಲಾಕಲಿಕೆಯನ್ನು ಇಲ್ಲಿಗೇ ಮುಗಿಸಬೇಡ” ಎಂದು ಆಕೆಯನ್ನು ನೀನಾಸಂಗೆ ಅಟ್ಟಿದವರು ಇದೇ ಪ್ರಸಾದ್. ಅವಳ ಅಲ್ಲಿನ ಕೆಲವು ನಾಟಕಾಭಿನಯಗಳನ್ನು ಕಂಡೇ ಪ್ರಭಾವಿತನಾದ ಅಭಯ (ನಮ್ಮ ಮಗ), ತನ್ನ ‘ಪಡ್ಡಾಯಿ’ಗೆ (ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ತುಳು ಚಲನಚಿತ್ರ) ಈಕೆಯನ್ನೇ ಆಯ್ದುಕೊಂಡಿದ್ದ. ಅದರಲ್ಲಿ ನಾಯಕ ನಟಿಯಾಗಿ ಬಿಂದು – ಪ್ರೇಕ್ಷಕ, ವಿಮರ್ಶಕರೆಲ್ಲರಿಂದಲೂ ಭಾರೀ ಮೆಚ್ಚುಗೆಯನ್ನಷ್ಟೇ ಗಳಿಸಿದ್ದು ನಿಮಗೆಲ್ಲ ತಿಳಿದೇ ಇದೆ.

[ಸಂಚಿ ಪ್ರತಿಷ್ಠಾನ ಹಾಗೂ ನೀನಾಸಂ ದಾಖಲೀಕರಣ ಯೋಜನೆಯ ಭಾಗವಾಗಿ, ಬಿಂದು ರಕ್ಷಿದಿ ಅಭಿನಯಿಸಿದ ಕೆಲವು ನಾಟಕಗಳನ್ನು ಆಸಕ್ತರು ಅಂತರ್ಜಾಲದಲ್ಲೇ ಪೂರ್ಣ ರೂಪದಲ್ಲಿ ಮತ್ತು ಉಚಿತವಾಗಿ ನೋಡಬಹುದು: ಹೆಸರುಗಳ ಮೇಲೆ ಚಿಟಿಕೆ ಹೊಡೆಯಿರಿ: ತಾರ್ತೂಫ್, ಸಾಫಲ್ಯ, ಕಾಲಂದುಗೆಯ ಕತೆ, ಗುಣಮುಖ]

ಶಾಲೆಯ ಎದುರು ಗೇಟಿನಿಂದ ನಾವು ಹೊರ ಬರುವಾಗ, ಪಕ್ಕದಲ್ಲೇ ಇದ್ದ ಮನೆಯ ಮೇಲೆ ಕಣ್ಣಾಡಿಸಿ, ನಮ್ಮಷ್ಟಕ್ಕೇ ಹೇಳಿಕೊಂಡೆವು “ಪ್ರಸಾದ್ ಹೇಳಿದರು, ಬಿಂದು ಊರಲ್ಲಿಲ್ಲವಂತೆ, ಬೆಂಗಳೂರಿನಲ್ಲೇ ಏನೋ ರಂಗಚಟುವಟಿಕೆಯಲ್ಲಿ ನಿರತಳಂತೆ.” ಆದರೆ ನಮ್ಮ ಮಾತಿನಿಂದಲೇ ಎದ್ದಂತೆ, ಮನೆಯಂಗಳದ ಇನ್ನೊಂದು ಕೊನೆಯಿಂದ ನಮ್ಮನ್ನು ಕಂಡು, ಸ್ವತಃ ಬಿಂದು ಓಡಿ ಬಂದಾಗ, ನಾವೂ ಕುಶಿಪಟ್ಟೆವು. ಮರುದಿನ ಆಕೆಯ ತಂದೆಯ ಐದನೇ ಪುಣ್ಯ ತಿಥಿಯಂತೆ. ಆ ನೆಪದಲ್ಲಿ ಆಗಷ್ಟೇ ಬಂದಿದ್ದಳಂತೆ. ಅವಳ ಸಂಭ್ರಮಕ್ಕೆ ಮಣಿದು, ಕ್ಷಣ ಕಾಲಕ್ಕೆ ನಾವು ಆ ಮನೆಯೊಳ ನುಗ್ಗಿ, ಆಕೆಯ ತಾಯಿ, ಇಬ್ಬರು ಅಕ್ಕಂದಿರು, ಭಾವ, ಮಕ್ಕಳನ್ನೆಲ್ಲ ನೋಡಿ (ಒತ್ತಾಯಪೂರ್ವಕವಾಗಿ ಅನ್ಯ ಉಪಚಾರಗಳನ್ನು ನಿರಾಕರಿಸಿ,) ಹೊರಟೆವು.

ಬಸ್ಸಿಳಿದ ಜಾಗದಿಂದ ಎಡಗವಲು ನಿಜದ ಜನವಸತಿಯ ರಕ್ಷಿದಿ ಹಳ್ಳಿ. ಆ ದಾರಿಗೆ ಕಾಂಕ್ರೀಟ್ ವೈಭವವೇನೋ ಬಂದಿದೆ. ಆದರೆ ನೀರಿನ ಸ್ವಾವಲಂಬನೆ ಕಡಿಮೆಯಿದ್ದಂತೆ ಕಂಡು ಬಂತು. ನಾವು ಹತ್ತಿಪ್ಪತ್ತು ಹೆಜ್ಜೆ ನಡೆಯುವುದರೊಳಗೆ, ಎರಡು ಮನೆಗಳ ಮುಂದೆ ತತ್ಕಾಲೀನ ನೀರ ಟ್ಯಾಂಕ್ ನಿಂತಿದ್ದವು! ಅತ್ತ ಶಾಲೆಯೆದುರು, ಅಷ್ಟೇನೂ ಹಳತಲ್ಲದ ಕುಡಿನೀರು ಯೋಜನೆಯ (೨೦೧೩-೧೪) ಟ್ಯಾಂಕ್, ಮಾರ್ಗದ ಬದಿಯಲ್ಲಿ ಹ್ಯಾಂಡ್ ಪಂಪ್ ಸಹಿತ ಬೋರ್ವೆಲ್, ಸಾಲದೆಂಬಂತೆ ಇನ್ನೂ ಕಾರ್ಯಾರಂಭಿಸದ ‘ಶುದ್ಧ ಕುಡಿಯುವ ನೀರಿನ ಘಟಕ’ ಸಜ್ಜುಗೊಳ್ಳುತ್ತಿರುವುದನ್ನೂ ಕಂಡಿದ್ದೆವು. ಇದು ಸಮೃದ್ಧ ಕಾಡು ತೋಟವೇ ಹೆಚ್ಚಿರುವ, ನೇತ್ರಾವತಿಯ ಜಲಾನಯನ ಪ್ರದೇಶದ ನೀರಿನ ವ್ಯಥೆ!

ಮರೆತು ಹೋಗುವ ಮುನ್ನ
ಘಟ್ಟದಿಂದ ಕೆಳಗೆ ನೇತ್ರಾವತಿ ಹರಿಯುವುದು ನಿಂತು ತಿಂಗಳುಗಳೇ ಕಳೆದಿವೆ. ಎಲ್ಲಿಂದೆಲ್ಲಿಗೂ ನದಿ ಪಾತ್ರೆ ಭಣಭಣ. “ಮಂಗಳೂರಿಗೆ ವಾರದಲ್ಲಿ ನಾಲ್ಕೇ ದಿನ ನೀರು”, ಎಂದ ಮೇಲೆ ನೇತ್ರಾವತಿ ಅವಲಂಬಿಸಿದ ಉಳಿದ ಊರುಗಳ ಸ್ಥಿತಿ ಭಿನ್ನವಿರುವುದು ಅಸಾಧ್ಯ. ಮಂಗಳೂರಿಗೆ ನೀರೊದಗಿಸುವ ತುಂಬೆ ಅಣೆಕಟ್ಟೆಯಿಂದ ಮೇಲಿನ ಕಟ್ಟೆಗಳೆಲ್ಲ ಖಾಲಿ. ಎಲ್ಲಕ್ಕೂ ಹೆಚ್ಚಿನ ನಿರ್ದಯೀ ಪೆಟ್ಟು – ನದಿಯಂಚಿನ ಕೃಷಿಕರು ಕೃಷಿ ಉಳಿಸಿಕೊಳ್ಳಲು ನದಿ ನೀರು ಎತ್ತುವಂತಿಲ್ಲ! ಆದರೂ ಮೊಯ್ಲಿ, ಯಡಿಯೂರಪ್ಪ, ಸದಾನಂದ ಗೌಡ, ಸಿದ್ಧರಾಮಯ್ಯ, ಕುಮಾರಸ್ವಾಮಿಯಾದಿಗಳು, ಪಕ್ಷಾತೀತವಾಗಿ ಒಕ್ಕೊರಲಿನಲ್ಲಿ ಹೇಳುತ್ತಾರೆ “ನೇತ್ರಾವತಿಯನ್ನು ಪೂರ್ವಕ್ಕೆ ಹರಿಸಿಯೇ ಸಿದ್ಧ”!

ನಿರ್ವಹಣೆ ರಾಧೆ ರಕ್ಷಿದಿ

ದಿನದ ದಾರಿಯುದ್ದಕ್ಕೆ ನೀರು ಬತ್ತಿಸಿದ ಸೂರ್ಯ, ಸ್ವಂತ ಬೇಗೆಗೆ ಸಮುದ್ರಕ್ಕೇ ಹಾರಿಕೊಂಡಿದ್ದ! ಕೊನೆಯದಾಗಿ, ರಕ್ಷಿದೀ ರಸ್ತೆಯಲ್ಲೇ ನೂರಿನ್ನೂರಡಿ ಆಚೆ ಇದ್ದ ಪ್ರಸಾದರ ಮನೆಯನ್ನು ದೇವಕಿಗೆ ಹೊರಗಿನಿಂದಲೇ ತೋರಿಸಲು ನಡೆದಿದ್ದೆವು. ಆದರೆ ಅನಿರೀಕ್ಷಿತವಾಗಿ ಪ್ರಸಾದರ ಹೆಂಡತಿ – ರಾಧೆ, ಎದುರಾದರು. ಊರಿಂದ ಅವರ ತಮ್ಮ ಮತ್ತವರ ಮಗಳು ನಾಟಕಕ್ಕೆಂದೇ ಬಂದವರು ಜತೆಗಿದ್ದರು. ಬೆಳಗ್ಗಿನಿಂದಲೇ ನಾಟಕ ಕಲಾವಿದರಲ್ಲಿ ಎಷ್ಟು ಜನ ಅನಿವಾರ್ಯವಾಗಿ ಇವರ ಮನೆಯನ್ನೇ ಆಶ್ರಯಿಸಿದ್ದಿರೋ

ತಿಳಿದಿಲ್ಲ. ನಾಟಕ ಪ್ರದರ್ಶನವೇನೋ ಒಂದೆರಡು ಗಂಟೆಯಲ್ಲಿ ಮುಗಿದೀತು. ಆದರೆ ಇವರ ಆತಿಥ್ಯ ಕನಿಷ್ಠ ಮರು ಬೆಳಗ್ಗಿನವರೆಗೂ ನಡೆಯಲೇ ಬೇಕು. ಏಕಾಂಗಿಯಾಗಿ ಅವೆಲ್ಲವನ್ನೂ ಪೂರೈಸಿ, ಮನೆಗೆ ಬೀಗ ಜಗ್ಗಿದಲ್ಲಿಗೆ ಮುಗಿಯಲಿಲ್ಲ. ಪ್ರಸಾದ್ ಹೊರಲಾಗದೇ ಉಳಿಸಿ ಹೋದ ನಾಟಕದ ಅಗತ್ಯಗಳನ್ನು ಎರಡು ಚೀಲ ತುಂಬಿ, ಹೊತ್ತೇ ಹೊರಟಿದ್ದರು. ಪ್ರದರ್ಶನ ಕಾಲದಲ್ಲೂ ನೇಪಥ್ಯ ಚಟುವಟಿಕೆಗಳು ಇವರನ್ನು ಬಿಟ್ಟದ್ದಿಲ್ಲ. ಅಂಥದ್ದರಲ್ಲೂ ಅವರು ನಮ್ಮನ್ನು ಮನೆಗೊಯ್ದು, ಉಪಚರಿಸುವ ಉತ್ಸಾಹ ತೋರಿದರು. ಕರಪತ್ರದಲ್ಲಿ ಕಾಣಿಸುವುದೇ ‘ಪ್ರಶಸ್ತಿ’ ಎಂದುಕೊಳ್ಳುವವರೂ, ‘ನಿರ್ವಹಣೆ – ರಾಧೆ ರಕ್ಷಿದಿ’, ಎಷ್ಟು ಅರ್ಥಪೂರ್ಣ ಎನ್ನದಿರಲಾರರು! ನಾವು ರಾಧೆಯವರ ಉತ್ಸಾಹವನ್ನು ಸವಿನಯ ತಳ್ಳಿಹಾಕಿ, ಅವರೊಡನೆ ಸಭಾಂಗಣದತ್ತ ನಡೆದೆವು.

ಆನೆಗಳ ಜಾಡಿನಲ್ಲಿ ಅಲ್ಲೋಲ ಕಲ್ಲೋಲ
ಹಾಸನ – ಮಂಗಳೂರು ರೈಲ್ವೇ ಮಾರ್ಗದ ರಚನೆಯಿಂದ (೧೯೭೦ರ ದಶಕ) ತೊಡಗಿ, ರೆಸಾರ್ಟ್‍ಗಳ ಮಝಾಪ್ರಿಯತೆವರೆಗೆ, ಅಂದರೆ ಸುಮಾರು ಐವತ್ತು ವರ್ಷಗಳಲ್ಲಿ ಪಶ್ಚಿಮ ಘಟ್ಟದ ಮೇಲೆ ಮನುಷ್ಯ ಹೇರಿದ ಬದಲಾವಣೆಗಳ, ಬಹುತೇಕ ಅವನತಿಯ ಸಂಕ್ಷಿಪ್ತ ಸಂಗ್ರಹವೇ ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ. ‘ಪ್ರದರ್ಶನಕ್ಕೂ ಮುನ್ನ’ ಮಾತಿನಲ್ಲಿ ಪ್ರಸಾದರೇ ಹೇಳಿಕೊಂಡಂತೆ, ಮೊದಲು ಪರಿಸರ ಹಾನಿಯ ಸಮೀಕ್ಷಾ ಲೇಖನವಾಗಿ (ಪ್ರಜಾವಾಣಿ), ಮುಂದುವರಿದಂತೆ ಪರಿಸರ ಆಂದೋಲನದ ಭಾಗವಾದ ಬೀದಿನಾಟಕವಾಗಿಯೂ ಪ್ರಸ್ತುತಗೊಂಡ, ಕಚ್ಚಾ ಅನುಭವಗಳ ವಿಸ್ತೃತ ಮತ್ತು ಪರಿಷ್ಕೃತ ಮಾಲೆ ಈ ಪ್ರದರ್ಶನ.

ಸರಕಾರೀ ವರದಿಗಳು ಹೇಳುವಂತೆ ‘ಪ್ರಾಕೃತಿಕ ವಿಕೋಪದ ಮಳೆಗಾಲ’ ಮುಗಿದ ಬೆನ್ನಿಗೊಮ್ಮೆ ನಾನೂ ಗೆಳೆಯ ಸುಂದರ ರಾಯರೂ ಬಿಸಿಲೆ ದುಃಸ್ಥಿತಿ ಹಾಗೂ ಎತ್ತಿನಹೊಳೆಯ ವಿಗತಿ ನೋಡಲು ಹೋಗಿದ್ದೆವು. ಆಗ ಎತ್ತಿನಹೊಳೆ ಭಾಗದಲ್ಲಿ ನಮಗೆ ಜತೆಗೊಟ್ಟವರು ಪ್ರಸಾದ್. (ನೋಡಿ: ಬಿಸಿಲೆ ಕುಸಿತ, ಎತ್ತಿನ ಹೊಳೆ ಅವಸ್ಥೆ!) ಮುಂದೆ ಅಭಯ ಒಂದು ಸಾಕ್ಷ್ಯಚಿತ್ರದ ಪೂರ್ವಭಾವೀ ತಯಾರಿಯಲ್ಲಿ ಎತ್ತಿನಹೊಳೆ ವಲಯದಲ್ಲೇ ಕ್ಯಾಮರಾ ಸಹಿತ ಓಡಾಡಿದ. ಆಗ ಇಡೀ ದಿನ ನಮ್ಮೊಡನೆ ಓಡಾಡಿ, ಅಭಯನಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಒದಗಿದ ಇಬ್ಬರಲ್ಲಿ ಒಂದು ಹೆಸರು ಇವರದೇ. (ಇನ್ನೊಂದು ಹೆಸರು ಹೊಂಗಡಳ್ಳದ ಕಿಶೋರ್ ಕುಮಾರ್.) ಎರಡೂ ಭೇಟಿಯಲ್ಲಿ ಪ್ರಸಾದ್ ಅನೌಪಚಾರಿಕವಾಗಿ ಮತ್ತು ಯಾವುದೇ ಮತ ಪ್ರಚಾರಕನ ಠಕ್ಕುಗಳಿಲ್ಲದೆ, ನಮ್ಮೊಡನೆ ಹಂಚಿಕೊಂಡ ಅನುಭವವೇ ಹೆಚ್ಚು ವ್ಯವಸ್ಥಿತವಾಗಿ, ಸುಮಾರು ಒಂದೂವರೆ ಗಂಟೆಯ ರಂಗ ಪ್ರಸ್ತುತಿಯಾಗಿ ಇಲ್ಲಿ ಅಳವಟ್ಟಿತ್ತು.

ಇಂದು ದಾರಿಗಳ ಅತಿಸ್ರಾವದೊಡನೆ, ಚಾರ್ಮಾಡಿಗೆ ಪರ್ಯಾಯವಾಗಿ ಮತ್ತೆ ಮತ್ತೆ ಉಲ್ಲೇಖಗೊಳ್ಳುತ್ತಿದೆ ಭೈರಾಪುರ – ಶಿಶಿಲದ ನಡುವಣ ಶುದ್ಧ ಕಾಡು ಹಾಗೂ ಘಟ್ಟ ಪ್ರದೇಶ. ವಾಸ್ತವದಲ್ಲಿ ಇದು ಮೊದಲು ಪ್ರಸ್ತಾವ ಕಂಡದ್ದೇ ಹಾಸನ – ಮಂಗಳೂರು ರೈಲ್ವೇ ದಾರಿಗಾಗಿ ಎನ್ನುವುದನ್ನು ಪ್ರಸಾದ್ ಬಹಳ ಹಿಂದೆಯೇ ಖಚಿತವಾಗಿ ತಿಳಿದಿದ್ದರು. ಶಿರಾಡಿಗೆ ಹೋಲಿಸಿದರೆ ಭೈರಾಪುರದ ಜಾಡು ನಿಸ್ಸಂದೇಹವಾಗಿ ಆರ್ಥಿಕವಾಗಿ ಹಗುರ ವೆಚ್ಚದ್ದು ಮತ್ತು ಪಾರಿಸರಿಕವಾಗಿ ಕಡಿಮೆ ನಾಶ ಮಾಡುವಂಥದ್ದೇ. (ಹಾಗೆಂದು ಇರುವ ಬಸ್ಸು ಕಾರಿನ ಹತ್ತು ದಾರಿಗಳ ಮೇಲೆ ಇದನ್ನು ಹೊಸದಾಗಿ ತೆರೆಯಬೇಕು ಎನ್ನುವುದಕ್ಕೆ ನಾನು ಬದ್ಧ ವಿರೋಧಿ) ಆದರೆ ಇದನ್ನು ತಿರಸ್ಕರಿಸಿ, ನೂರೆಂಟು ಗುಹೆ, ಸೇತುವೆಗಳ ನಿರ್ಮಾಣದ ಶಿರಾಡಿಯನ್ನು ಆರಿಸಿಕೊಂಡಲ್ಲಿಂದಲೇ (೧೯೬೦-೭೦ರ ದಶಕ) ಸಾರ್ವಜನಿಕ ಕಾಮಗಾರಿಗಳಲ್ಲಿ ‘ಕಂಟ್ರಾಕ್ಟ್ ದಂಧೆ’ ತೊಡಗಿದ್ದನ್ನು ನಾಟಕ ಹೇಳುತ್ತದೆ.

ಜೀವವೈವಿಧ್ಯದ ಬದುಕಿನ ಹಕ್ಕನ್ನು ಕೆಡಿಸಿದ್ದರ ಸಂಕೇತವಾಗಿ ನಾಟಕದ ಮೊದಲಲ್ಲೇ “ಆನೆ ಬಂತು ಆನೆ” ಹುಯ್ಲು ಏಳುತ್ತದೆ. ಪ್ರದರ್ಶನಕ್ಕೊಂದು ಸಹ್ಯ ಸಮಯ ಮಿತಿಯ ಅರಿವಿರುವುದಕ್ಕೇ ಪ್ರಸಾದ್ ಅದನ್ನು ಕೇವಲ ಪುರೋಹಿತಶಾಹಿಯ ಗೇಲಿಯಲ್ಲಿ ತೇಲಿಸಿ ಮುಂದುವರಿಯುತ್ತಾರೆ. ಸುಮಾರು ಹತ್ತು ವರ್ಷಗಳ ಹಿಂದೆ ‘ಗುಂಡ್ಯ ೨೦೦ ಮೆ.ವಾ ವಿದ್ಯುತ್ ಯೋಜನೆ’ಯ ಪೂರ್ವಭಾವೀ ಅನಿವಾರ್ಯತೆಗೆ ಸರಕಾರ ಪರಿಸರ ಸಭೆ ಕರೆದಿತ್ತು. ಅಂದು ಬಂದ (ಯೋಜನಾ ವಿರೋಧೀ) ಜನಾಭಿಪ್ರಾಯದಲ್ಲಿ ಜಾಡು ಕಳೆದುಕೊಂಡ ಆನೆಗಳ ಉಲ್ಲೇಖ ಪ್ರಮುಖವಾಗಿ ಬಂದಿತ್ತು. (ಅನ್ಯ ಕಾರಣಗಳಿಗೆ ವಿದ್ಯುತ್ ಯೋಜನೆ ಬಿದ್ದುಹೋಯ್ತು. ಆದರೆ ಹೋದೆಯಾ ಪಿಶಾಚೀ ಎಂದರೆ, ಕೂಡಲೇ ಬಂದೆ ಗವಾಕ್ಷಿಯಲ್ಲಿ ಎಂದಿತ್ತು ಕುಡಿನೀರ ಕಳ್ಳ ಹೆಸರಿನ ಎತ್ತಿನಹೊಳೆ ಯೋಜನೆ!) ಅದನ್ನೂ ಹಣ ಮಾಡುವ ದಂಧೆಯಾಗಿಸಿದ್ದು ಸರಕಾರದ್ದೇ ಅರಣ್ಯ ಇಲಾಖೆ. ಈ ವಲಯದಲ್ಲೇ ‘ಆನೆ ಕಾರಿಡಾರ್’ (ಆನೆ ಜಾಡು) ಗುರುತಿಸಿ, ಎಕ್ರೆಗೆ ಕನಿಷ್ಠ ಹತ್ತು ಲಕ್ಷ ಪರಿಹಾರಧನ ಕೊಡಿಸ್ತೇವೆ ಎಂದು ಸಣ್ಣ ಅಧಿಕಾರಿ ಮೂಲಕವಷ್ಟೇ ಹೇಳಿಸಿ (ಮೂಗಿಗೆ ತುಪ್ಪ) ರೈತಾಪಿ ಜನರನ್ನು ಬರಿದೇ ಭ್ರಮಾಲೋಕಕ್ಕೆ ತಳ್ಳಿಬಿಟ್ಟರು.

ಇದಕ್ಕೂ ಸ್ವಲ್ಪ ಮೊದಲೇ ಖಾಸಗಿಯಾಗಿ ಆದರೂ ವನ್ಯ ಪರಿಸರ ಉಳಿಸಬೇಕು ಎಂದೇ ನಾವು ಬಿಸಿಲೆ ವಲಯದ ಒಂದು ಪಟ್ಟಾ ಭೂಮಿಯನ್ನು ಖರೀದಿಸಿದ್ದೆವು. (ನೋಡಿ: ಅಶೋಕವನ) ಆಗ ಇದ್ದ ನೆಲದ ಬೆಲೆ ಎಕ್ರೆಗೆ ಸುಮಾರು ನಲ್ವತ್ತು ಸಾವಿರ ರೂಪಾಯಿ ಮಾತ್ರ. ಅನಂತರ ಅದು ಒಮ್ಮೆಗೇ ಹತ್ತು ಲಕ್ಷ ಮೀರಿ ನಿಂತು ಬಿಟ್ಟಿತು. ಇಂದು ಅದು ಇಂದು ಕೃಷಿಭೂಮಿಗಳಲ್ಲಿ ಆನೆ ಮಾತ್ರವಲ್ಲ, ಮೊದಲೇ ಇದ್ದ ಹಂದಿ, ಮಂಗಗಳ ಜೊತೆಗೆ ಕಾಟಿ, ಕಡವೆ, ಕೆಂಜಳಿಲು, ನವಿಲು ಮುಂತಾದವೂ ಖಾಯಂ ನೆಲೆಸಿವೆ. ಜನ ಗದ್ದೆಗಳನ್ನು ಹಡ್ಲು ಬಿಟ್ಟು (ಹತ್ತು ವರ್ಷ ಮೀರಿತು) ಕಾದದ್ದೇ ಬಂತು. “ಆನೆ ಕಾಡ್ರು (ಕಾರಿಡಾರ್) ಇನ್ನಾ ಗೋಷ್ಣೆನೇ ಆಗಿಲ್ವಂತೆ!”

ಕಾಡು ಬೆಟ್ಟ ಹಾಳಾಯ್ತೆಂದರೆ ಕೂಲಿ ಹೆಚ್ಚು ಸಿಗುವಂತಾಯ್ತು, ಉದ್ಯೋಗ ನಿರ್ಮಾಣವಾಯ್ತು, ಸಂಪರ್ಕಗಳು ಹೆಚ್ಚಿದವು ಎಂಬಿತ್ಯಾದಿ ಗಾಳಿಗುಳ್ಳೆಗಳನ್ನು ನಾಟಕ ಒಡೆಯುತ್ತದೆ. ಮಲೆಯ ಮೂಲೆಗಳನ್ನೂ ತೆರೆದಿಟ್ಟ ಮಾರ್ಗ ಸೌಲಭ್ಯ ಹಾಗೂ ಚರವಾಣೀ ಸಂಪರ್ಕ ವ್ಯವಸ್ಥೆ ರೆಸಾರ್ಟ್ ಮೋಜಿನ ಹಾವಳಿ, ತಲೆಹಿಡುಕರು, ಅನಾವಶ್ಯಕ ವಾಹನ ಸಂಚಾರಾದಿ ಅನಿಷ್ಟಗಳನ್ನು ಸೂಚಿಸುವ ದೃಶ್ಯಗಳಾಗಿ ನಾಟಕದಲ್ಲಿ ಮೈದಾಳುತ್ತವೆ. ‘ಅಭಿವೃದ್ಧಿಗಳಿಂದ ಕನಿಷ್ಠ ಜೀವನಶ್ಯಕತೆಗಳಿಗೆ ಯಾವುದೇ ಕೊರತೆಗಳು ಬಂದಾಗ ‘ಬಾಬು’ಗಳು ಪ್ರಾಥಮಿಕವಾಗಿ ಸುಳ್ಳಿನ ಟೊಪ್ಪಿ ಮುಚ್ಚುತ್ತಾರೆ. ಅದನ್ನೂ ಮೀರಿ ತೀವ್ರ ಆಂದೋಲನವೇ ಬಿಗಿದುಕೊಂಡರೆ, ಸಾಕ್ಷಾತ್ ಜನಪ್ರತಿನಿಧಿಯೇ ಅವತರಿಸಿ, ಪರ ವಿರೋಧಿಗಳನ್ನು ಮುಖಾಮುಖಿಗೆ ಬಿಟ್ಟು ಸಮಯ ಕದಿಯುತ್ತಾರೆ. ಹೀಗೆ ಪಾರಿಸರಿಕ ಹಾನಿಯ ಅವಿರತ ಸರಣಿಯೇ ‘ಆನೆಗಳ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ಎಂದರೆ ಅತಿಶಯೋಕ್ತಿಯಾಗದು.

ಪ್ರದರ್ಶನ ಬಹುತೇಕ ಕಟ್ಟೇ ಪುರಾಣಗಳಲ್ಲಿ (ಗೂಡು ಹೋಟೆಲ್, ನಿಲ್ದಾಣ, ಪಾರ್ಕ್ ಮುಂತಾದೆಡೆಯ ತೇಲು ಮಾತುಗಳು), ಮತ್ತು ಸಾಮಾನ್ಯ ನಡೆಗಳಲ್ಲಿ ಕಳೆದುಹೋಗುತ್ತದೆ. ರಂಗದಲ್ಲಿ ಮೂಡುವ ಸನ್ನಿವೇಶಗಳು ಲಾಭ ನಷ್ಟಗಳ ವೈಚಾರಿಕ ಬೆಳವಣಿಗೆಯನ್ನು ಸೂಚಿಸುವುದಿಲ್ಲ, ಕ್ರಿಯಾರೂಪದಲ್ಲಾದರೂ ತಾರ್ಕಿಕ ಕೊನೆಯನ್ನು ಹುಡುಕುವುದಿಲ್ಲ. ಇದಕ್ಕೆ ಸಮಯದ ಮಿತಿ ಒಂದು ಕಾರಣವಿರಬಹುದು. ಅದಕ್ಕೂ ಮುಖ್ಯವಾಗಿ ಪ್ರದರ್ಶನ ಲಕ್ಷ್ಯವಾಗಿರಿಸಿಕೊಂಡ ಪ್ರೇಕ್ಷಾವರ್ಗವೂ ಇರಬಹುದು.

ರಕ್ಷಿದಿಯ ಪ್ರೇಕ್ಷಾವರ್ಗ
ಸುಮಾರು ಏಳರಿಂದ ತೊಡಗಿ, ನಾಟಕ ನಡೆಯುತ್ತಿದ್ದಂತೆಯೂ ಜನ ಬಂದು ಸೇರಿಕೊಳ್ಳುತ್ತಲೇ ಇದ್ದರು. ಇತ್ತ ಸಕಲೇಶಪುರದಿಂದ ಅತ್ತ ಮೂಡಿಗೆರೆಯವರೆಗೂ ಸಮಾಜದ ಎಲ್ಲ ವರ್ಗದ ವಿಚಾರವಂತರು ತಣ್ಣಗೆ ಬಂದು ಸೇರಿಕೊಂಡಿದ್ದರು. ಥೇಟ್ ಹೆಗ್ಗೋಡಿನ ನೀನಾಸಂ ಪ್ರಯೋಗಗಳಿಗೆ ಒದಗುವ ಜನಸ್ಪಂದನದಂತೇ ಎನ್ನಬಹುದು. ನಾಟಕ ಮುಗಿದಾಗ ಜನ ನೋಡಿ ನಾನು ಆಶ್ಚರ್ಯದಿಂದ “ಅಬ್ಬ” ಅಂದಿದ್ದೆ. ಆಗ ಬಿಂದು ರಕ್ಷಿದಿ ತನ್ನ ಹುಟ್ಟು, ರೂಪಣೆಗೆ ಕಾರಣವಾದ ಊರಿನ ಹೆಮ್ಮೆಯಲ್ಲಿ ಹೇಳಿದ ಮಾತು ಸಣ್ಣದಲ್ಲ – “ಮೊದಲೆಲ್ಲ ಯಾವುದೇ ರಂಗ ಚಟುವಟಿಕೆಗಳು, ನೀವು ನೋಡಿದ್ರಲ್ಲಾ – ಕೆಳಗಿನ ಶಾಲೆ, ಅದರ ಅಂಗಳದಲ್ಲೇ ನಡೀತಿತ್ತು. ಅಲ್ಲಿ ಕೆಲವೊಮ್ಮೆ ಜಾಗ ಸಾಲದೆ, ಜನ ಹಂಚಿನ ಮಾಡಿನ ಮೇಲೂ ಏರಿ ಕುಳಿತು ಗಂಭೀರವಾಗಿ ವೀಕ್ಷಿಸುತ್ತಿದ್ದರು!”

ಪ್ರಸಾದ್ ‘ನಾಟಕಕ್ಕೆ ಮುನ್ನ’ ಆಡಿದ ಮಾತಿನಲ್ಲಿ ತಮ್ಮ ಚಟುವಟಿಕೆಗಳು ನಾಲ್ಕು ದಶಕ ಮೀರಿದ್ದನ್ನೂ ಪ್ರದರ್ಶನಗಳು ನೂರೆಂಬತ್ತು ಮೀರಿದ್ದನ್ನೂ ಕೇವಲ ಪ್ರಾಸಂಗಿಕವಾಗಿ ಎಂಬಂತೆ ಹೇಳಿದ್ದರು. ಆ ನೂರೆಂಬತ್ತು ಕೇವಲ ಇಲ್ಲಿನ ನಿರ್ಮಾಣದ ಲೆಕ್ಕ ಮಾತ್ರ. ನೀನಾಸಂ, ತುಮ್ರಿ, ರಂಗಾಯಣ, ಜೈಲಿನವರು, ಸಾಣೇಹಳ್ಳಿ ಮೊದಲಾದ ಹೊರಗಿನ ತಂಡಗಳ ಲೆಕ್ಕ, ಕಮ್ಮಟ ಸಭೆಗಳ ಲೆಕ್ಕ ಬರಲೇ ಇಲ್ಲ ಎನ್ನುವುದನ್ನು ಮರೆಯಬಾರದು. (ನಾವು ಕತ್ತಲೆಗೂ ಮೊದಲೇ ಸ್ಥಳದಲ್ಲಿದ್ದುದರಿಂದ ಕೆಲವರ ಪರಿಚಯಲಾಭ ನಮಗಾಯ್ತು. ಅದರಲ್ಲಿ ಕೆಲವರಿಗೆ ನಾವು ದೂರದಿಂದ ಬಂದವರೆನ್ನುವುದು ಕಾರಣವಾದರೆ, ಮತ್ತೆ ಕೆಲವರಿಗೆ ನನ್ನ ಹುಟ್ಟೂರು ಮಡಿಕೇರಿಯ ಬಾದರಾಯಣ ಸಂಬಂಧವೂ ಇತ್ತು, ಬಿಡಿ.) ಆದರೆ ಪ್ರಸ್ತುತ ನಾಟಕದ ವಿಚಾರಕ್ಕೆ ಸಂಬಂಧಿಸಿದಂತೆ, ಅಂದರೆ ತೀವ್ರ ಪ್ರಾಕೃತಿಕ ಬದಲಾವಣೆಯ ಲಾಭ, ನಷ್ಟಗಳ ಲೆಕ್ಕದಲ್ಲಿ ಎಲ್ಲರೂ ಫಲಾನುಭವಿಗಳೇ ಆಗಿದ್ದರು. ಇದರಿಂದ ಪ್ರದರ್ಶನದ ಮೂಲಕ ಸಣ್ಣ ಪ್ರಚೋದನೆ ಕೊಟ್ಟು, ಅವರವರ ಅನುಭವಕ್ಕೆ ನಿಲುಕಿದಂತೆ ಮನೋಭಿತ್ತಿಯಲ್ಲಿ ನಿಜನಾಟಕವನ್ನು ಭೂಮವಾಗಿ ಬೆಳೆಯಗೊಡುವುದೇ ಪ್ರಸಾದ್ ಉದ್ದೇಶವಿದ್ದಂತಿತ್ತು. ಅದು ತಪ್ಪಲ್ಲ.

ನೀನಾಸಂ ತಿರುಗಾಟಗಳಲ್ಲಿ ಹಿಂದೆ ನಾನು ಕಂಡ, ನಾಟಕ ತ್ರಿವಳಿ ಎಂದು ಕೃತಿಕಾರ ಕೆವಿ ಅಕ್ಷರ ಹೇಳಿಕೊಂಡ – ಸಹ್ಯಾದ್ರಿ ಕಾಂಡ, ಸ್ವಯಂವರಲೋಕ ಮತ್ತು ಸೇತುಬಂಧನ (ಕೊನೆಯ ಎರಡು ನಾಟಕಗಳ ಹೆಸರಿನ ಮೇಲೆ ಚಿಟಿಕೆ ಹೊಡೆದು ಉಚಿತ ನಾಟಕ ನೋಡಬಹುದು) ಹೀಗೇ ಪಾರಿಸರಿಕ ಸಮಸ್ಯೆಯನ್ನೇ ಚರ್ಚಿಸುತ್ತದೆ. ಆದರೆ ಅವು ಉದ್ದಕ್ಕೂ ಸಾಂಸ್ಕೃತಿಕ ಬದುಕಿನ ಮುಖಾಮುಖಿಯಲ್ಲಿ, ನಾಟಕೀಯ ಸನ್ನಿವೇಶಗಳ ಬೆಸುಗೆಯಲ್ಲಿ ಅಬೋಧ ನಗರದವರನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಆನೆಗಳ ಜಾಡಿನಲ್ಲಿ ಅಲ್ಲೋಲ ಕಲ್ಲೋಲ ನನಗೆ ನಾಟಕವಾಗಿ ಕಾಣಲಿಲ್ಲ. ಈ ಕೃತಿಗೆ ಭಿನ್ನ ಲಕ್ಷ್ಯವಿದೆ ಎಂದಿಟ್ಟುಕೊಂಡರೂ ಸಾರ್ವತ್ರಿಕ ಪ್ರದರ್ಶನದ ರಂಗಕ್ಕೆ ನಾಟಕವಾಗಿ ಸಲ್ಲಲಾರದು. ರಕ್ಷಿದಿ ವಲಯದ ಪ್ರೇಕ್ಷಕರಂತೆ ನಾನು ಅಲ್ಲೋಲ ಕಲ್ಲೋಲದ ಸ್ವಾನುಭವಿಯೇನೂ ಅಲ್ಲ. ಆದರೆ ಒಲವು, ಹವ್ಯಾಸ ಮತ್ತು ತುಸು ಲೇಖನ ಕೃಷಿಯ ಬಲದಲ್ಲಿ ಆನೆಗಳ ಜಾಡಿನಲ್ಲಿ ಅಲ್ಲೋಲ ಕಲ್ಲೋಲವನ್ನು ಮನೋಭೂಮಿಕೆಯಲ್ಲಿ ವಿಸ್ತರಿಸಿಕೊಂಡು, ಮೆಚ್ಚಿಕೊಂಡೆ. ಆದರೆ ಅಥವಾ ಹಾಗಾಗಿ ಬೆಳ್ಳೇಕೆರೆ ಥಿಯೇಟರಿನ ನಾಟಕ ನೋಡಬೇಕು ಎನ್ನುವ ಆಶಯ ಬಾಕಿಯೇ ಉಳಿದಿದೆ.

ಏಕವ್ಯಕ್ತಿ ಪ್ರದರ್ಶನ
ನಾಟಕದ ಘೋಷಣಾ ಪತ್ರವೇನೋ ನೇಪಥ್ಯದ ಜವಾಬ್ದಾರಿಗಳಲ್ಲಿ ಹಲವು ಹೆಸರುಗಳನ್ನು ಕಾಣಿಸುತ್ತದೆ. ಆದರೆ ಆಶಯ, ಆಚರಣೆಗಳಲ್ಲಿ ಹಲವು ಅಡೆತಡೆಗಳು ಇದ್ದದ್ದೇ ಎನ್ನುವುದನ್ನು ಸ್ವಲ್ಪ ‘ಪ್ರದರ್ಶನಕ್ಕೆ ಮುನ್ನ’ ಪ್ರಸಾದ್ ಕೊಟ್ಟ ಮಾತಿನಿಂದಲೂ ಮತ್ತೆ ಸ್ವಲ್ಪವನ್ನು ನಾನೇ ಕಂಡುಕೊಂಡೆ. ಪ್ರಸಾದ್ ಇಸ್ಪೇಟ್ ಪ್ಯಾಕಿನ ‘ಜೋಕರ್’ನಂತೆ ಎಲ್ಲ ಕೊರತೆಗಳನ್ನೂ ಸಮರ್ಥವಾಗಿ ತುಂಬಿ ನಿಭಾಯಿಸಿದರು. ಒಂದೆರಡನ್ನಷ್ಟೇ ಉಲ್ಲೇಖಿಸುವುದಾದರೆ: ಸುಮಾರು ಎರಡು ತಿಂಗಳಿನಿಂದ ಕಸರತ್ತು ನಡೆಸುತ್ತಿದ್ದ ತಂಡ ಕೊನೆಗೂ ರೂಪಕ್ಕೆ ಬಂತೆನ್ನುವ ಸ್ಥಿತಿಯಲ್ಲಿ ಓರ್ವ ಪಾತ್ರಧಾರಿ ‘ಚುನಾವಣಾ ಕರ್ತವ್ಯ’ದಲ್ಲಿ ಸಿಕ್ಕಿ ಬಿದ್ದರು. ಪಟ್ಟಿಯಲ್ಲಿ ಅವರ ಹೆಸರಿದ್ದಂತೆ, ವಾಸ್ತವವಾಗಿ ಅಭಿನಯಿಸಿದ್ದು ಪ್ರಸಾದ್. ಧ್ವನಿ ಬೆಳಕಿನ ಪೂರ್‍ವಭಾವೀ ಸಿದ್ಧತೆಗಳೆಲ್ಲ ಯೋಜನೆಯಂತೇ ನಡೆದಿತ್ತು. ಆದರೆ ಅದನ್ನು ನಿರ್ವಹಿಸಬೇಕಾಗಿದ್ದ ಪ್ರಸಾದರ ಮಗ – ಅಕ್ಷರ ರಕ್ಷಿದಿ, ಪ್ರದರ್ಶನದ ದಿನ (ಗುರುವಾರವಾಗಿ), ಬೆಂಗಳೂರಿನ ತಾಬೇದಾರಿಯನ್ನು ಕಳಚಿ ಬರುವುದು ಆಗಲೇ ಇಲ್ಲ. ಅದನ್ನು ಮುಖ್ಯವಾಗಿ ರಾಧೆ ಉದ್ದಕ್ಕೂ ನಡೆಸಿಕೊಟ್ಟರು. ‘ಪರದೆ ಕಟ್ಟುವಲ್ಲಿ’, ಧ್ವನಿ ಬೆಳಕು ಹೊಂದಿಸುವಲ್ಲಿ ನಾವು ಕಂಡ ಪ್ರಸಾದರೇ ಪ್ರದರ್ಶನಾರಂಭದ ಮೂರೂ ಗಂಟೆಗಳನ್ನು ಹೊಡೆದಿದ್ದರು.

ಏಳೂ ಮುಕ್ಕಾಲರ ಸುಮಾರಿಗೆ ಪ್ರಾರಂಭವಾದ ಪ್ರದರ್ಶನ ಒಂಬತ್ತೂ ಕಾಲರ ಸುಮಾರಿಗೆ ಮುಗಿದಿತ್ತು. ಪ್ರಸಾದ್ ಕಾಳಜಿಯ ವಿಸ್ತರಣೆಯೇ ಆದ ರಮೇಶ್ ಎನ್ನುವವರು, ಸಕಲೇಶಪುರದಿಂದ ಸಕುಟುಂಬ ನಾಟಕ ನೋಡಲೆಂದೇ ಬಂದಿದ್ದವರು, ನಮ್ಮನ್ನು ಕೂಡಲೇ ಒಯ್ದು ಸಕಲೇಶಪುರದ ಬಸ್ ನಿಲ್ದಾಣಕ್ಕೆ ಮುಟ್ಟಿಸಿದ್ದರು. ನಿಲ್ದಾಣದ ಹೋಟೆಲಿನಲ್ಲಿ ಹಳಸಿದ ಪಲ್ಯ, ಬಿಸಿನೀರಿಗದ್ದಿದ ಅಕ್ಕಿಯನ್ನು ಏನೇನು ಅನುಸಂಧಾನ ಮಾಡಿದರೂ ಚೂರುಪಾರಷ್ಟೇ ಗಂಟಲಲ್ಲಿಳಿಸಲು ಯಶಸ್ವಿಯಾದೆವು. ಆ ತಪ್ಪಿಗೆ ಒಂದು ಬಸ್ಸನ್ನೂ ಕಳೆದುಕೊಂಡು, ಹತ್ತೂಮುಕ್ಕಾಲಕ್ಕೆ ಸಿಕ್ಕ ಬಸ್ಸೇರಿ, ಅಪರಾತ್ರಿ ಎರಡು ಗಂಟೆಗೆ ಮಂಗಳೂರು ಸೇರಿಕೊಂಡೆವು. ಬೆಳಿಗ್ಗೆ ಆರಾಮವಾಗೆದ್ದರೂ ಸರ್ವ ಪ್ರಥಮವಾಗಿ ಮಾಡಿದ್ದು ಪ್ರಸಾದ್ ರಕ್ಷಿದಿಯವರಿಗೆ ಧನ್ಯವಾದ ಸಮರ್ಪಣೆಯ ಸಂದೇಶ. ಆದರೆ ಕೊನೆಯಲ್ಲಿ ಮಾತ್ರ “ನಿಮ್ಮ ನಿಜವಾದ ನಾಟಕವನ್ನು ನೋಡಲು ಇನ್ನೊಮ್ಮೆ ಬರಬೇಕೆಂದಿದ್ದೇನೆ” ಎಂದೇ ಬರೆದಿದ್ದೆ. ಹೌದು, ‘ಆನೆ ಜಾಡಿನಲ್ಲಿ ಅಲ್ಲೋಲ ಕಲ್ಲೋಲ’ ನಾಟಕ ಅಲ್ಲ; ನಿಸ್ಸಂದೇಹವಾಗಿ ವಿಚಾರ ಪ್ರಚೋದಕ.