ಮಡಿಕೇರಿಯ ಉದಾಹರಣೆಗಳು

ಹುಟ್ಟಿನ ಆಕಸ್ಮಿಕದೊಡನೆ ಬಹುತೇಕರ ಅಪ್ಪ, ಅಮ್ಮ, ಅಣ್ಣ, ಅಜ್ಜಿ ಇತ್ಯಾದಿ ಅನೇಕ ಭೌತಿಕ ಸ್ಥಾನಗಳೂ ಅವಕ್ಕೆ ಸೇರಿದ ಭಾವನಾತ್ಮಕ ಜವಾಬ್ದಾರಿಗಳೂ ಸಾಮಾಜಿಕ ರೂಢಿಯಂತೆ ಸೇರಿಕೊಳ್ಳುತ್ತವೆ. ಅವನ್ನು ಬಿಟ್ಟು, ವ್ಯಕ್ತಿತ್ವವನ್ನು ರೂಪಿಸುವ ಪ್ರಭಾವಗಳನ್ನು ಸೋದಾಹರಣವಾಗಿ ಕಾಣಿಸುವ ಉದ್ದೇಶಕ್ಕೇ ಮೀಸಲಾದ ಮಾಲೆ – ಜಾತಿ ಮತಗಳ ಚಕ್ರಸುಳಿ ಮೀರಿ. ಇಲ್ಲಿ ‘ಜಾತಿ ಮತ’ ಎನ್ನುವುದನ್ನು ಸಾಮಾಜಿಕ, ಆರ್ಥಿಕ, ಭಾಷಿಕ ಎಂಬಿತ್ಯಾದಿ ತೋರಿಕೆಯ ರೂಢಿಗಳನ್ನೆಲ್ಲ ಒಳಗೊಂಡಿದೆ.

ವಿಚಾರ ಸರಣಿಯನ್ನು ಶಾಬ್ದಿಕ ಕಸರತ್ತು ಮಾಡುವ ಬದಲು, ನಿದರ್ಶನಗಳ ಕಥನವನ್ನಾಗಿಸಿದ್ದೇನೆ. ಹಾಗೆ ಮಾಡುವಲ್ಲಿ ವಿವಾದ ಮೂಲವೂ ಆಗಬಹುದಾದ ಅನ್ಯರ ವರ್ತನೆಗಳ ಮೇಲೆ ಊಹಾಗೋಪುರ ಕಟ್ಟುವುದರ ಬದಲು, ಆತ್ಮಕಥನದ ದಾರಿಯನ್ನೇ ಹಿಡಿದಿದ್ದೇನೆ. ಪ್ರಸ್ತುತ ಐವತ್ತು ಕಿರು ಟಿಪ್ಪಣಿಗಳಲ್ಲಿ ನನ್ನ ವಿದ್ಯಾರ್ಥಿದಿನಗಳನ್ನು, ಅದರಲ್ಲೂ ಬಹುತೇಕ ಇದುವರೆಗೆ ನಾನು ಬರಹಕ್ಕಿಳಿಸದ ಅನುಭವಗಳನ್ನು ಆಯ್ದುಕೊಂಡಿದ್ದೇನೆ. ನನ್ನ ವಿದ್ಯಾದಿನಗಳೆಲ್ಲ (೧೯೫೨-೧೯೭೪) ತಂದೆಯ ವೃತ್ತಿಯ ಊರುಗಳನ್ನೇ ಅನುಸರಿಸಿಕೊಂಡು ಬಂತು. ಆ ಲೆಕ್ಕದಲ್ಲಿ ನನ್ನ ನೆನಪಿಗೆ ಸಿಗುವ ಮೊದಲ ಊರು – ಮಡಿಕೇರಿ.

೧. ಸತ್ಯಾನ್ವೇಷೀ (ಅಪರಿಚಿತದೊಡನೆ ಸಂಧಾನ)

ನನ್ನ ಪ್ರಾಥಮಿಕ ಶಾಲಾ ದಿನಗಳು ಮಡಿಕೇರಿಯಲ್ಲಾಯ್ತು (೧೯೫೦ರ ದಶಕ). ನಮ್ಮ ಗೌಳೀ ಬೀದಿ ಮನೆಗೆ ಸಮೀಪದಲ್ಲಿದ್ದ ಯಾವುದೋ ಕ್ರಿಶ್ಚಿಯನ್ ಶಿಶುವಿಹಾರವೇ ನನ್ನ ಮೊದಲ ಸಾರ್ವಜನಿಕ ರಂಗ ಪ್ರವೇಶ. ಅಲ್ಲಿನ ಒಂದು ಕತೆಯಲ್ಲಿ ಎಷ್ಟು ಅಂಶ ನನ್ನ ನೆನಪು ಮತ್ತು ಎಷ್ಟು ಹಿರಿಯರಿಂದ ಕೇಳಿ ಕೇಳಿ ಗಟ್ಟಿಯಾದ ಚಿತ್ರ ಎಂದು ಸ್ಪಷ್ಟ ನಾನು ಹೇಳಲಾರೆ. ಶಾಲೆಯಲ್ಲೊಬ್ಬ ಪಾದ್ರಿ ಇದ್ದರು. ನನಗವರ ನಿಲುವಂಗಿ ಬಗ್ಗೆ ಸಂದೇಹ ಬಂತು. ಒಂದು ದಿನ ಅವರು ಮಕ್ಕಳ ಮಧ್ಯೆ ಸಂಚರಿಸುವಾಗ ನಾನು ಅಂಗಾತ ಮಲಗಿ ಪರೀಕ್ಷೆ ಮಾಡಿಯೇಬಿಟ್ಟೆ. ಫಲಿತಾಂಶವನ್ನು ಮನೆಗೆ ಬಂದದ್ದೇ ಅಮ್ಮನಲ್ಲಿ ಘೋಷಿಸಿದ್ದೆ – “ಪಾದ್ರಿ ನಿಲುವಂಗಿ ಒಳಗೆ ಪ್ಯಾಂಟ್ ಹಾಕ್ತಾರೆ!

೨. ರ್‍‍ಯಾಂಕ್ ಕೊಡು ದೇವರೇ (ಪವಾಡದ ಪರಿಚಯ)

ನನಗೆ ಐದು ವರ್ಷವಾಗುವ ಕಾಲಕ್ಕೆ ನಾವು ಸರಕಾರೀ ಕಾಲೇಜ್ ಸಮೀಪದಲ್ಲಿನ ಸ್ವಂತ ಮನೆಗೆ ಹೋಗಿದ್ದೆವು (ಅಶೋಕನಿಲಯ). ಅಲ್ಲಿಗೆ ಸಮೀಪದ ಸಂತ ಜೋಸೆಫರ ಹುಡುಗಿಯರ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಓದಿದ್ದೆ. ಶಾಲಾ ರಸ್ತೆಯ ಬಲಭಾಗದಲ್ಲಿ ಶಾಲಾ ಕಟ್ಟಡಗಳು ಹರಡಿದ್ದರೆ, ಎಡ ಬದಿಯಲ್ಲಿ ಅವರದೇ ಪ್ರಾರ್ಥನಾ ಮಂದಿರ (ಚಾಪೆಲ್) ಇತ್ತು. ಬಿಡುವೇಳೆಗಳಲ್ಲಿ ಹೆಚ್ಚಿನ ಮಕ್ಕಳು ಜಾತಿ, ಮತಗಳ ತಲೆಬಿಸಿಯಿಲ್ಲದೇ ಅದಕ್ಕೆ ಹೋಗಿ ಅವರವರ ಭಾವಕ್ಕೆ ನಿಲುಕಿದಂತೆ ಪ್ರಾರ್ಥನೆ ಮಾಡಿ ಬರುತ್ತಿದ್ದರು. ನಾನೂ ಎಷ್ಟೋ ಬಾರಿ ಹೋಗಿದ್ದೆ. ಅಲ್ಲಿ ಯಾವುದೇ ನಿರ್ವಾಹಕ, ನಿರ್ಬಂಧ ಇರಲಿಲ್ಲ. ಬಾಗಿಲ ಬಳಿ ಇರುತ್ತಿದ್ದ ಕರಡಿಗೆಗೆ ಕೈ ಹಾಕಿ, ‘ಪವಿತ್ರಜಲ’ವನ್ನು ಇತರರು ಮಾಡುವಂತೆ ಹಣೆಗೋ ಕತ್ತಿಗೋ ಒತ್ತಿಕೊಳ್ಳುವುದಿತ್ತು. ಒಳ ಹೋಗಿ ಸುಮ್ಮನೆ ಓಣಿಯಲ್ಲಿ ಸುತ್ತು ಹಾಕಿಯೋ ಮೊಣಕಾಲು ಹಾಕಿಯೋ ನಿಂತಂತೇ ಕಣ್ಮುಚ್ಚಿಯೋ ಕೈ ಮುಗಿದೋ ಬರುವುದಿತ್ತು. ಪರೀಕ್ಷಾ ದಿನಗಳಲ್ಲಂತೂ ಹೆಚ್ಚಿನೆಲ್ಲ ಮಂದಿ ಚಾಪೆಲ್ ಭೇಟಿಗೆ ಹೆಚ್ಚುವರಿ ಸಮಯ ಹೊಂದಿಸಿಕೊಂಡೇ ಶಾಲೆಗೆ ಬರುತ್ತಿದ್ದರು. ಚಾಪೆಲ್ಲಿನಲ್ಲಿ ಮೊಣಕಾಲು ಹಾಕುವುದರಿಂದ ರ್‍ಯಾಂಕ್ ಬರುವುದಿದ್ದರೆ ಯಾಕೆ ಬೇಡ?

೩. ಅಂಡು ಹರಿದ ಚಡ್ಡಿಯ ಕಿಸೆ (ಹಂಚಿ ಉಣ್ಣುವ ದೊಡ್ಡತನ)

ಮಡಿಕೇರಿಯ ಕಾನ್ವೆಂಟ್ ಶಾಲೆಗೆ ನಡೆಯುವಲ್ಲಿ ನನಗೆ ಪ್ರಾಧ್ಯಾಪಕ ಅಬ್ದುಲ್ಲ ಕುಟ್ಟಿಯವರ ಮಗ ಅಕ್ಬರ್ ಜತೆಗಿರುತ್ತಿದ್ದ. ಮನೆಯಲ್ಲಿ ಆತ ಎರಡು ಹುಡುಗಿಯರ ಕೊನೆಯಲ್ಲಿ ಬಂದ ಮುದ್ಮಗ. ನಾನೋ ಶಿಸ್ತಿನ ಓವರ್ ಡೋಸಿನ ಬಾಲಕ! ಸಹಜವಾಗಿ ಅಕ್ಬರ್‍ನ ಗತ್ತು, ವರ್ತನೆ ನನಗೆ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಆದರೂ ಒಟ್ಟಿಗೇ ನಡೆಯುತ್ತಿದ್ದೆವು. ನಮ್ಮ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಎರಡು ಭಾರೀ ಅತ್ತಿ ಮರಗಳು ಸಿಕ್ಕುತ್ತಿದ್ದವು. ಅಲ್ಲಿ ಉದುರಿದ್ದೋ ಇಲ್ಲಾ ನಾವೇ ಕಲ್ಲೋ ಕೋಲೋ ಬಿಸಾಡಿ ಉದುರಿಸಿದ್ದೇ ಒಂದೆರಡು ಹಣ್ಣಾದರೂ ಸಂಪಾದಿಸಲೇಬೇಕಿತ್ತು. ಅವನ್ನು ಚಡ್ಡಿಗೆ ಒರೆಸಿ, ಕೈಯಲ್ಲಿ ಹಿಸುಕಿ, ರೆಕ್ಕೆ ಹುಳುಗಳನ್ನು ಊದಿ, ಹಣ್ಣು ಸವಿಯುತ್ತಿದ್ದೆವು. ಆ ಹುಳು ತಿಂದರೆ ಕಣ್ಣಿಗೆ ಒಳ್ಳೆಯದು ಎನ್ನುವ ನಂಬಿಕೆ ನಮ್ಮೊಳಗಿದ್ದರೂ ನನಗೆ ಧೈರ್ಯವಿರಲಿಲ್ಲ.

ಅಷ್ಟರೊಳಗೆ ಕೆಳಗಿನ ದಾರಿಯಿಂದ ಕಡ್ಲೆವಾಸು ಬಂದು ನಮ್ಮನ್ನು ಸೇರಿಕೊಳ್ಳುತ್ತಿದ್ದ. “ಹೈಶಾ! (ಐಶಾ… ಅಕ್ಬರನ ಒಬ್ಬ ಅಕ್ಕ) ನನಗೊಂದು ಐಸ್ಕ್ಯಾಂಡೀ ಕೊಟ್ಳು” ಎಂದು ವಾಸು ಅಕ್ಬರನನ್ನು ಕೆಣಕುವುದಿತ್ತು. ಇವನ ಪ್ರತ್ಯಸ್ತ್ರ “ವಾಸು ವಾಸು ಕಡ್ಲೆ ಹೂಸು.” ವಾಸುವಿನ ಅಪ್ಪ ಮಡಿಕೇರಿ ಬಸ್ ನಿಲ್ದಾಣದಲ್ಲಿ ಕಡ್ಲೆ ಮಾರುವವ. ಅವನತ್ತೆ – ರುಕ್ಮಿಣಿ, ನಮ್ಮ ಮನೆಗೆಲಸದಾಕೆ. ವಾಸು ಕೆಲವೊಮ್ಮೆ ಅಂಡು ಹರಕು ಚಡ್ಡಿಯಲ್ಲೂ ಶಾಲೆಗೆ ಬರುವುದಿತ್ತು. ಆದರೂ ಆತನ ಕಿಸೆ ತೂತಲ್ಲಾ ಎನ್ನುವುದಷ್ಟೆ ನಮ್ಮ ಸಮಾಧಾನ. ಯಾಕೆಂದರೆ, ಆತ ಕಿಸೆಯಲ್ಲಿ ತರುತ್ತಿದ್ದ ನಾಲ್ಕು ಕಡ್ಲೆಯಲ್ಲಿ ನಮಗೆರಡಾದ್ರೂ ಕೊಡುತ್ತಿದ್ದ! (ಇಂದಿನ ಯೋಚನೆ: ಅದು ಅವನ ಬೆಳಗ್ಗಿನ ತಿಂಡಿ ಇದ್ದಿರಬಹುದೇ?!)

೪. ಕಳ್ಳಾ ಪೋಲಿಸ್ (ಸಾಮಾಜಿಕ ಸ್ತರ)

ಅಂದಿನ ಮಡಿಕೇರಿಯಲ್ಲಿ ಊರಿಗೆ ದೊಡ್ಡ ಪುಸ್ತಕ ಮತ್ತಿತರ ಸಾಮಗ್ರಿಗಳ ಮಳಿಗೆ – ಚಂದ್ರ ಸ್ಟೋರ್ಸ್. ಆ ಸ್ಥಿತಿವಂತರ ಮಗ ಪ್ರಕಾಶ. ಅವನ ಗೆಳೆಯರಾದರೋ ಆ ಕಾಲದಲ್ಲೇ ಬಹುಮಹಡಿ ಹೋಟೆಲ್ – ಪಾಪ್ಯುಲರ್ ರೆಸ್ಟೋರೆಂಟಿನವರ ಮಗ ವಿವೇಕ ಕಾಮತ್ ಮತ್ತು ಆತನ ಬಂಧು – ಅಗಲ ಕಿವಿಯ ಅಚ್ಯುತ! ಕರಾವಳಿ ಕಡೆಯಿಂದ ಬಂದಿದ್ದ ಮುರಳೀಧರ ಚಂದಕ್ಕೆ ಹಾಡುತ್ತಿದ್ದ. ಧಾರವಾಡದಿಂದ ಬಂದಿದ್ದು, ರ್‍‍ಯಾಂಕ್ ಗಳಿಕೆಯಲ್ಲೂ ಮುಂದಿದ್ದವಳು ಪ್ರತಿಭಾ ತಟ್ಟಿ. ಇವರೆಲ್ಲ ನನಗೆ ಸ್ವಲ್ಪ ಅಳುಕಿನಂತರದ ಸಹಪಾಠಿಗಳು.

ಶಾಲೆಯ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಹುಡುಗರ ದೊಡ್ಡ ಆಟ – ಕಳ್ಳ ಪೋಲಿಸ್. ಅದರಲ್ಲಿನ ಮುಖ್ಯ ಕಲಾಪ ಒಬ್ಬ ‘ಕಳ್ಳ’ನ ಆಯ್ಕೆ. ಉಳಿದೆಲ್ಲರು ಪೋಲಿಸರು. ಮೂರೆಣಿಕೆಯಲ್ಲಿ ತಪ್ಪಿಸಿ ಓಡುವ ಕಳ್ಳನನ್ನು ಬೆನ್ನಟ್ಟಿ, ಶಾಲೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ‘ಜೈಲ್’ಗೆ ಎಳೆದೊಯ್ಯುವ ಸಾಹಸವೇ ಆಟ. ಎಲ್ಲ ಪ್ರದರ್ಶನ ಕಲೆಗಳಲ್ಲೂ ಹೆಚ್ಚು ಜನರನ್ನು ಮುಟ್ಟುವ ಪಾತ್ರ ಖಳನಾಯಕನದ್ದು. ಹಾಗೆ ಇಲ್ಲೂ ಎಲ್ಲರಿಗೆ ‘ಕಳ್ಳ’ ಆಗಿ, ತಮ್ಮ ಸಾಮರ್ಥ್ಯ ಮೆರೆಸುವುದಕ್ಕೇ ಹೆಚ್ಚು ಒಲವು. ಪ್ರಕಾಶ ಪ್ರಾಯಕ್ಕೆ ಮೀರಿದ ಠೊಣಪ, ಅಡ್ಡ ಹೆಸರೇ – ದೊಳ್ಳಪ್ರಕಾಶ! ಓಟ ಕಷ್ಟ. ವಾಸುವಿನಂತ ಬಡ ದೇಹಿ, ನನ್ನಂತ ಸಾಮಾನ್ಯ ದೇಹಿಗಳನ್ನು ಉಳಿದವರು ಹಿಡಿದರೆ ಸಾಕು, ದೊಳ್ಳಪ್ರಕಾಶ ಅನಾಮತ್ತಾಗಿ ಎತ್ತಿ ಜೈಲಿಗೆ ಸೇರಿಸಿಬಿಡುತ್ತಿದ್ದ. ಅದೇ ಅವನು ಕಳ್ಳನಾದರೆ, ಶಾಲೆಯ ಜಗುಲಿಗಳಲ್ಲಿ, ಮೆಟ್ಟಿಲ ಸಾಲುಗಳಲ್ಲಿ, ಅನ್ಯರ ಆಟ ಓಡಾಟಗಳ ಎಡೆಯಲ್ಲಿ ಎಳೆದಾಟ, ಉರುಡಾಟಗಳಲ್ಲಿ ನಾವು ಹೈರಾಣಗುತ್ತಿದ್ದೆವು. ಹಾಗೂ ಹೀಗೂ ಜೈಲು ಮುಟ್ಟುವ ಮೊದಲು ಶಾಲಾ ಗಂಟೆ ಮೊಳಗಿ ಪೋಲಿಸರನ್ನು ಸೋಲಿಸಿಬಿಡುತ್ತಿತ್ತು.
ಕೊಬ್ಬಿದ ಕಳ್ಳ, ಅವನ ಪರವಾದ ವ್ಯವಸ್ಥೆಯಲ್ಲಿ ಸಾರ್ವಜನಿಕ ಸೋಲು ಇಂದಿಗೂ ಪ್ರಸ್ತುತ ಅನ್ನಿಸುವುದಿಲ್ಲವೇ?

೫. ಹಬೀಬ್ ಉಪಚಾರ (ಸಂಕಟ ಬಂದರೆ…)

ನನ್ನಿಂದ ಆರು ವರ್ಷಕ್ಕೆ ಸಣ್ಣವ ಆನಂದ. ಅವನಿಗೆ ಒಂದು ವರ್ಷಕ್ಕೆ ತಂಗಿಯಾಗಿ ಹುಟ್ಟಿದವಳು ಇಂದಿರ. ಶಿಶುವಿಗೆ ಎರಡೋ ಮೂರೋ ತಿಂಗಳು ಕಳೆದ ಒಂದು ಬೆಳಿಗ್ಗೆ ಅಸ್ಪಷ್ಟವಾಗಿ ತಿಳಿಯಿತು, ಆಕೆ (ನ್ಯುಮೋನಿಯಾ) ತೀರಿಹೋಗಿದ್ದಾಳೆ, ಅಂದರೆ ಇನ್ನು ನಮ್ಮೊಡನಿರುವುದಿಲ್ಲ. ಅದಕ್ಕೂ ಮುಖ್ಯವಾಗಿ ನನಗೆ ತಿಳಿದದ್ದು (ಎಂದು ಭಾವಿಸುತ್ತೇನೆ) ಅಂದು ಅವಸರವಸರವಾಗಿ ಪ್ರಾತರ್ವಿಧಿಗಳನ್ನು ತೀರಿಸಿ ಶಾಲೆಗೆ ಹೊರಡುವ ಜಂಝಡವಿಲ್ಲ. ದುಃಖದ ಸಂಗತಿ ಎಂದರೆ ಅಮ್ಮ ಬೆಳಗ್ಗಿನ ತಿಂಡಿ ಮಾಡುವ ಯೋಚನೆಯಲ್ಲೂ ಇರಲಿಲ್ಲ. ಆಗ ಸೇರಿದ್ದ ಕೆಲವು ಬಂಧುಮಿತ್ರರ ನಡುವೆ ಬಂದು ನನ್ನ ಕೈ ಹಿಡಿದವನು ಹಬೀಬ್. ನಮ್ಮ ಕೆಳ ಪಕ್ಕದ ಮನೆಯ ಪೋಸ್ಟ್ ಮಾಸ್ಟರ್ ಗಫೂರ್ ಖಾನ್ ಅವರ ಮೂರೋ ನಾಲ್ಕನೆಯದೋ ಮಗ ಹಬೀಬ್. ಈತ ನನಗಿಂತ ನಾಲ್ಕೈದು ವರ್ಷಕ್ಕಷ್ಟೇ (೧೧-೧೨ರ ಹರಯ) ದೊಡ್ಡವನು. ಅವನ ಮನೆಯವರ ಸೂಚನೆ ಮತ್ತು ನಮ್ಮನೆಯ ಅನುಮೋದನೆ ಇದ್ದಿರಬಹುದು. ಹಬೀಬ್ ನನ್ನನ್ನು ಸಮಾಧಾನಿಸುವಂತೆ ಸುಮಾರು ಅರ್ಧ ಕಿಮೀ ಆಚೆಗಿದ್ದ ತ್ಯಾಂಪ ಪೂಜಾರಿಯ ಸರಸ್ವತಿ ಹೋಟೆಲಿಗೆ ಕರೆದೊಯ್ದ. ಅದು ಆ ವಲಯಕ್ಕಿದ್ದ ಏಕೈಕ ಅಂಗಡಿ/ ಹೋಟೆಲ್ – ಅಪ್ಪಟ ಗೂಡಂಗಡಿ. ಅಲ್ಲಿ ಹಬೀಬನ ವಿವೇಚನೆ ಹೋಟೆಲಿನ ಶುಚಿತ್ವ ನೋಡಿತೋ ‘ಭಟ್ಟ’ರ ಕುಟ್ಟಿಗೆ ‘ಶೂದ್ರ’ನ ಪಾಕ ಬೇಡವೆಂದುಕೊಂಡಿತೋ (ಅಥವಾ ಸರಳವಾಗಿ ಸಸ್ಯಾಹಾರಿ – ಮಾಂಸಾಹಾರಿ) ನನಗೆ ತಿಳಿದಿಲ್ಲ. ಅಲ್ಲಿನ ಗೂಡಂಗಡಿಯಿಂದ ದೊಡ್ಡ ಪೊಟ್ಟಣ ಹುರಿಗಡ್ಲೆ, ಬಾಳೆ ಹಣ್ಣು ಕೊಡಿಸಿ, ಆರೆಂಜ್ ಸೋಡಾ ಕುಡಿಸಿದ! ನನ್ನ ತಂದೆ ಅಥವಾ ಮನೆಯ ಯಾವುದೇ ಸದಸ್ಯರ ನಿಲುವುಗಳು ಉದಾತ್ತವೇ ಇದ್ದರೂ ಸುತ್ತಣ ಮನೆಗಳವರಿಗೆ ನಮ್ಮದು ‘ಮಡಿ ಬ್ರಾಹ್ಮಣ’ರ ಮನೆ!

ಬಳ್ಳಾರಿ ದಿನಗಳು

೬.. ಗಾಯತ್ರೀ ದೇವಿ ಭರತ್ ಸೇಟ್ (ಮಾನವಪ್ರೀತಿ)

ಭಾರತ – ಚೀನಾ ಯುದ್ಧ ಕಾಲದಲ್ಲಿ (೧೯೬೨) ‘ರಾಷ್ಠ್ರ ರಕ್ಷಣೆಯ ಕರೆ’ಗೆ ಓಗೊಟ್ಟು ತಂದೆ ಪೂರ್ಣಾವಧಿ ಎನ್ಸಿಸಿ ಅಧಿಕಾರ ಸ್ವೀಕರಿಸಿದರು. ಸಂಸಾರ (ಐದು ಮಂದಿ) ಸಹಿತ ಮಡಿಕೇರಿ ಬಿಟ್ಟು ಬಳ್ಳಾರಿಯಲ್ಲಿ ನೆಲೆಸಿದರು. ನಗರ ಕೇಂದ್ರದಿಂದ ಸುಮಾರು ಎರಡು-ಮೂರು ಕಿಮೀ ದೂರದ ಕಂಟೋನ್ಮೆಂಟಿನ ಬಾಡಿಗೆ ಮನೆ. ಸುಮಾರು ಒಂದು ಎಕ್ರೆಯಷ್ಟು ವಿಸ್ತಾರದ, ಬಹುತೇಕ ಖಾಲೀ ವಠಾರದ ಕೇಂದ್ರದಲ್ಲಿದ್ದ ಭಾರೀ ಮನೆಯ ಒಂದು ಮಗ್ಗುಲು ಮಾತ್ರ. ಇನ್ನೊಂದು ಮಗ್ಗುಲಿನಲ್ಲಿದ್ದವರು ಭರತ್ ಸೇಟ್ – ಗಾಯತ್ರೀದೇವಿ ಸಂಸಾರ (ನಾಲ್ಕು ಮಂದಿ). ವಠಾರದ ಯಜಮಾಂತಿ – ಧನಮ್ಮ ನಾಯ್ಡು (ವಿಧವೆ), ಒಂದು ಕಾಲದ ಸಿರಿವಂತೆ. ಆಕೆ ನಿರುದ್ಯೋಗೀ (ಸೋಂಭೇರಿ) ಮೂವರು ಪ್ರೌಢ ಮಕ್ಕಳು ಮತ್ತು ಮುದುಕಿ ಅಮ್ಮನೊಡನೆ ಹಿತ್ತಲಿನ ಸಣ್ಣ ಔಟ್ ಹೌಸಿನಲ್ಲಿದ್ದಳು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದದ್ದಕ್ಕೋ ಏನೋ ಮಹಾ ಜಗಳಗಂಟಿ. ವಠಾರದೊಳಗೆ ಸ್ವಲ್ಪ ದೂರದಲ್ಲೇ ಇದ್ದ ಇನ್ನೆರಡು ಮನೆಗಳನ್ನೂ ಬಾಡಿಗೆಗೆ ಬಿಟ್ಟಿದ್ದಳು.

ಗಾಯತ್ರಿದೇವಿ ಮತ್ತೆರಡು ಸಣ್ಣ ಮಕ್ಕಳು ಸ್ನೇಹಶೀಲರು, ಸೌಮ್ಯಭಾವದವರು. ನನ್ನಮ್ಮ ವಿದ್ಯಾರ್ಥಿ ದಿನಗಳಲ್ಲಿ ಹಿಂದಿ ಪರೀಕ್ಷೆಗಳನ್ನು ಕಟ್ಟಿ ಗಳಿಸಿದ್ದ ಸಂವಾದ ಪಾಂಡಿತ್ಯಕ್ಕೆ ಗಾಯತ್ರಿಯವರ ಸಾಹಿತ್ಯ ಪ್ರೀತಿ ಸೇರಿಕೊಂಡಿತ್ತು. ಅಮ್ಮನ ಭಕ್ತಿ ಮಿಶ್ರಿತ ಶ್ಲೋಕ, ಕೀರ್ತನೆಗಳಿಗೆ ಗಾಯತ್ರಿಯವರ ಭಾವಗಾನದ ಪಲುಕುಗಳು ಒಪ್ಪ ಕೊಡುತ್ತಿದ್ದವು. ಅವರು ಬೆಳಿಗ್ಗೆ ತಮ್ಮ ಮುದ್ದು ಮಕ್ಕಳಿಗೆ ಹಾಡಿಕೊಳ್ಳುತ್ತಿದ್ದ “ಉಠೋ ಬಾಲಕೋಂ ಹುವಾ ಸವೇರಾ…. ಚಿಡಿಯಾನೇ ಕುಹು ಬೋಲ್ ರಹೀ ಹೇಂ …” ಐವತ್ತೆಂಟು ವರ್ಷಗಳೇ ಕಳೆದ ಇಂದಿಗೂ ನನ್ನ ಸುಂದರ ಸುಪ್ರಭಾತಗಳಲ್ಲಿ ಆಗಾಗ ಅನುರಣನಗೊಳ್ಳುತ್ತಲೇ ಇರುತ್ತದೆ. ಅವರು ಆಗೊಮ್ಮೆ ಈಗೊಮ್ಮೆ ಅಮ್ಮನಿಗೆ ಕೊಡುತ್ತಿದ್ದ ಪೂರೀ ಖೀರು, ಭಕ್ಷ್ಯಗಳ ಸವಾಲಿಗೆ ಅಮ್ಮನ ಅಷ್ಟೇ ಪ್ರೀತಿಯ ದೋಸೆ, ರಸಾಯನ, ಪಾಯಸದ ಉತ್ತರ ಇದ್ದೇ ಇರುತ್ತಿತ್ತು.

ಬಳ್ಳಾರಿ ವಾಸದ ನಮ್ಮ ಎರಡು ವರ್ಷದಲ್ಲಿ, ಅತ್ತ ಪುತ್ತೂರಿನಲ್ಲಿ ಒಮ್ಮೆ ನನ್ನ ಒಬ್ಬ ಚಿಕ್ಕಮ್ಮನ ಮತ್ತೊಮ್ಮೆ ಒಬ್ಬ ಸೋದರಮಾವನ ಮದುವೆಗೆ ದಿನ ಕೂಡಿ ಬಂದಿತ್ತು. ಅಪ್ಪಮ್ಮ ಹೋಗುವುದು ಅನಿವಾರ್ಯ. ಆನಂದ ಅನಂತರು ಇನ್ನೂ ಶಿಶುವಿಹಾರ ಮಟ್ಟದವರಾದ್ದರಿಂದ ಹೋಗುವುದು ನಿಶ್ಚಯವಿರುತ್ತಿತ್ತು. ನಾನೋ ಸುಳುಹು ಸಿಕ್ಕಷ್ಟಕ್ಕೇ ಇದ್ದ ಒಳ್ಳೇ ಚಡ್ಡಿಗೆ ಅಡ್ಡಡ್ಡ ಇಸ್ತ್ರಿ ಹಾಕಿ ತಯಾರಾಗುವುದಿತ್ತು. ಆದರೆ ತಂದೆಯ ಶಿಸ್ತಿನ ಬಿಗಿ ಬಿಡುತ್ತಿರಲಿಲ್ಲ. ‘ದೊಡ್ಡ ತರಗತಿ’ಯಲ್ಲಿರುವವ (ಆರೋ ಏಳನೆಯದೋ ತರಗತಿ) ಶಾಲೆ ತಪ್ಪಿಸುವುದು ಉಂಟೇ?! ಪಿತೃವಾಕ್ಯ ಪರಿಪಾಲನೆಗಾಗಿ ನಾನೊಬ್ಬನೇ ಮೂರು ನಾಲ್ಕು ದಿನಗಳಿಗೆ ಹಿಂದುಳಿಯುತ್ತಿದ್ದೆ.

ಹಿತ್ತಲಿನ ಅಡುಗೆ, ಬಚ್ಚಲು ಮನೆಗಳ ವಿಭಾಗವನ್ನಷ್ಟೇ ನನಗೆ ಬಿಟ್ಟುಕೊಟ್ಟು ಹೋಗಿ ಬಂದಿದ್ದರು. ನನ್ನ ಅಡುಗೆ ಪರಿಶ್ರಮದ ಬಗ್ಗೆ ಅಮ್ಮನಿಗೆ ವಿಶ್ವಾಸವಿತ್ತು. ಅದನ್ನು ಹೆಚ್ಚು ನಿಜ ಮಾಡುವಂತೆ, ಆ ದಿನಗಳಲ್ಲಿ ನಾನು ಹೆಚ್ಚು ಕೆಲಸ ಮಾಡಿದ್ದು ಅಡುಗೆಮನೆಯಲ್ಲೇ! ಬೆಳಗ್ಗೆ ಎನ್ಸಿಸಿ ಕಛೇರಿಗೆ ಹೋಗುವ ದಾರಿಯಲ್ಲಿ ನನ್ನನ್ನು ನೋಡಿ ಹೋಗಲು ಬರುತ್ತಿದ್ದ ಮುಖ್ಯ ಗುಮಾಸ್ತೆ ರೇವಣ್ಕರ್ ಅವರಿಗೆ ಅಯಾಚಿತ ಕಾಫಿ ಮಾಡಿಕೊಡುತ್ತಿದ್ದೆ. ರಾತ್ರಿಗಳಲ್ಲಿ ನನ್ನ ಧೈರ್ಯಕ್ಕೆಂದು ಬಂದು, ಹೊರ ಜಗುಲಿಯಲ್ಲಿ ಮಲಗಿ ಹೋಗುತ್ತಿದ್ದ ಕಛೇರಿ ಅಟೆಂಡರ್ ಕೃಷ್ಣಪ್ಪನಿಗೆ ಚಪಾತಿ ತಿನ್ನಿಸುತ್ತಿದ್ದೆ. ಚಟ್ನಿ, ಪಲ್ಯವೆಲ್ಲ ನಮಗೆ ರೂಢಿಯಿರಲಿಲ್ಲ. ಬದಲಿಗೆ “ಅಶೋಕ ರೊಟ್ಟಿ ಮುಳುಗಿಸುವಷ್ಟು ಜೇನು, ತುಪ್ಪ ಪ್ಯೂನಿಗೆ ಕೊಟ್ಟ” ಎನ್ನುವುದು ನಮ್ಮ ಕುಟುಂಬ ವಲಯದಲ್ಲಿ ದೊಡ್ಡ ಹಾಸ್ಯಪ್ರಸಂಗವೇ ಆಗಿತ್ತು! (ಇಂದಿನ ಭಾಷೆಯಲ್ಲಿ ಹೇಳುವುದಿದ್ದರೆ ವೈರಲ್ ಆಗಿತ್ತು!) ನಾನು ಅತಿ ಉಮೇದಿನಲ್ಲಿ ಗುಲಾಬ್ ಜಾಮೂನ್ ಮಾಡಲೂ ಹೊರಟಿದ್ದೆ. ಆಗೆಲ್ಲ ರೆಡಿಮಿಕ್ಸ್ ಪರಿಚಯ ಇರಲಿಲ್ಲ. ನಾನು ಹಾಲಿನಿಂದ ಖೋವಾ ಮಾಡಲು ಹೋಗಿ, ಸುಟ್ಟ ಹಿತ್ತಾಳೆ ಪಾತ್ರೆಯನ್ನು ಅಮ್ಮ ಕೊನೆಯವರೆಗೂ ನೆನಪಿಸಿಕೊಳ್ಳುತ್ತಿದ್ದಳು!

ನನ್ನ ಪ್ರಯೋಗಗಳನ್ನು ಮೀರಿ, ಆ ದಿನಗಳಲ್ಲಿ ನಿಜಕ್ಕೂ ನನ್ನ ಹೊಟ್ಟೆ ಗಟ್ಟಿ ಇರುವಂತೆ ಪೂರ್ಣ ಸ್ವಯಂಪ್ರೇರಣೆಯಲ್ಲಿ ನೋಡಿಕೊಂಡವರು ಗಾಯತ್ರೀ ದೇವಿ. ನನ್ನ ಅಭಿಮಾನಕ್ಕೆ ಧಕ್ಕೆ ಬಾರದಂತೆ, ಮುಂದೆ ಅಮ್ಮನಿಗೂ ಸಂಕೋಚವಾಗದಂತೆ ಅವರ ಪಾಕವಿಶೇಷಗಳು ನನ್ನನ್ನು ತಣಿಸಿದ್ದವು.

೭. ಆದಿಯಲಿ ವಂದಿಪೆನು ಮೊಯ್ನುದ್ದೀನನಿಗೆ (ಹಂಚಿಕೊಳ್ಳುವ ಉತ್ಸಾಹ)

ಬಳ್ಳಾರಿಯಲ್ಲಿ ತಂದೆ ಹೊಸದಾಗಿ ಎನ್ಸಿಸಿ ಬಟಾಲಿಯನ್ ಕಚೇರಿ ಶುರು ಮಾಡಿದ್ದರು (೧೯೬೩). ಅವರು ಅಧಿಕೃತವಾಗಿ ಆಯ್ದುಕೊಂಡ ನೌಕರರಲ್ಲಿ ಅಟೆಂಡರ್ ಮೊಯ್ನುದ್ದೀನ್ ಒಬ್ಬ. ತಂದೆಯ ಕಚೇರಿ ನಮ್ಮ ಮನೆಯಿಂದ ಎರಡು ವಠಾರ ಆಚೆಗಿತ್ತು. ಮೊಯ್ನುದ್ದೀನ್ ಪ್ರತಿ ಸಂಜೆ ಮೂರು ಗಂಟೆಯ ಸುಮಾರಿಗೆ ಸೈಕಲ್ಲೇರಿ ನಮ್ಮಲ್ಲಿಗೆ ಬಂದು, ತಾಯಿ ಮಾಡಿಕೊಡುತ್ತಿದ್ದ ಕಾಫಿಯನ್ನು ತಂದೆಗೆ ಒಯ್ಯುತ್ತಿದ್ದ. ಆತ ಬಂದಲ್ಲಿಂದ ತಾಯಿ ಫ್ಲಾಸ್ಕ್ ಕೊಡುವವರೆಗೆ ಸುಮಾರು ಹತ್ತು ಮಿನಿಟಿನ ಬಿಡುವಿರುತ್ತಿತ್ತು. ಆ ವೇಳೆಯಲ್ಲಿ ನಾನೂ ಮನೆಯಲ್ಲಿದ್ದಾಗ, (ಶಾಲಾ ರಜಾದಿನಗಳು) ಮೊಯ್ನುದ್ದೀನ್ ಸ್ವಂತ ಉಮೇದಿನಲ್ಲಿ ನನಗೆ ಸೈಕಲ್ ಕಲಿಸಿದ.

ನನ್ನನ್ನು ಸೀಟಿನ ಮೇಲೆ ಕೂರಿಸಿ, ಹ್ಯಾಂಡಲ್ ಹಿಡಿಸಿ, ಪೆಡಲಿಕೆಗೆ ಬಿಟ್ಟು, ಹಿಂದಿನಿಂದ ಸೀಟಿನ ಬಳೆ ಹಿಡಿದು ಓಡಿ ಬರುತ್ತಿದ್ದ. ಕಚೇರಿಯ ದುಡಿಮೆ, ಬಳ್ಳಾರಿಯ ಉರಿ ಬಿಸಿಲು, ಕಚ್ಚಾದಾರಿ ಮತ್ತು ತಗ್ಗುದಿಣ್ಣೆಯ ವಿಸ್ತಾರ ಅಂಗಳಗಳನ್ನೆಲ್ಲ ನಿರ್ಲಕ್ಷಿಸಿ, ‘ಸಾಹೇಬ್ರ ಮಗ’ನಿಗೆ ಗಾಯವಾಗದ ಎಚ್ಚರವಹಿಸುತ್ತಿದ್ದ. ಸೈಕಲ್ ವಾಲಿದಾಗ ಆಸರೆ ಕೊಟ್ಟು, ತಪ್ಪುಗಳನ್ನು ನಯವಾಗಿ ತಿದ್ದಿ, ಹತ್ತಿ ಇಳಿಯಲು ದೃಢವಾಗಿ ನಿಂತು, ಎರಡು ಮೂರು ಅವಧಿಗಳಲ್ಲೇ ನನ್ನನ್ನು ಸವಾರಿ ಮಟ್ಟದಲ್ಲಿ ಸ್ವತಂತ್ರಗೊಳಿಸಿಬಿಟ್ಟ. ಮಣ್ಣಂಗಳದಲ್ಲಿ ಭರತ್ ಲಾಲ್ ಸೇಟರ ಲಾರಿ ಚಕ್ರಗಳು ಮಾಡಿದ ಚರಂಡಿಗಳಲ್ಲಿ ಜಾರಿ ಉರುಳುವುದು, ಮ್ಯಾಂಗನೀಸ್ ದಿಬ್ಬಗಳ ಅಂಚಿನಲ್ಲಿ ಜಾರಿ ತೂರಾಡುವುದು, ಜಾಲಿ ಮುಳ್ಳು ಹೊಡೆದು ಚಕ್ರ ಢಮಾರೆನ್ನಿಸಿದ್ದೆಲ್ಲ ಅವನ ಲೆಕ್ಕ, ನಾನಂತು ಅನುಭವದ ಮೆಟ್ಟಿಲುಗಳಲ್ಲಿ ಮೇಮೆ ಮೇಲೆ.

ಕೌಲ್ ಬಜಾರಿನ ಮಿಲ್ಲಿಗೆ ಗೋಧಿ, ಅಕ್ಕಿ ಒಯ್ದು ಹಿಟ್ಟು ಮಾಡಿಸಿ ತರಲು ಅಮ್ಮ ನನಗೆ ಬಾಡಿಗೆ ಸೈಕಲ್ ಲಂಚ ಕೊಡಬೇಕಾಗುತ್ತಿತ್ತು. ಆಗ ಮೊಯ್ನುದ್ದೀನ್ ಇಲ್ಲದಿದ್ದರೂ ಕಲ್ಲೋ ಕಟ್ಟೆಯನ್ನೋ ನಂಬಿ ಸೈಕಲ್ಲೇರಿ, ಇಳಿದು ಮಾಡುತ್ತಿದ್ದೆ. ಅದರಲ್ಲಿ ಒಂದೋ ಎರಡೋ ಬಾರಿ ಬಿದ್ದಾಗೆಲ್ಲ ಮೊಣಕಾಲು ಗಾಯ ಮಾಮೂಲಾಗುತ್ತಿತ್ತು. ಅದಕ್ಕೆ ಪ್ರಥಮ ಚಿಕಿತ್ಸೆ ಏನೋ ಮನೆಯಲ್ಲೇ ಆಗುತ್ತಿತ್ತು. ಆದರೆ ಶಾಲೆಯಲ್ಲಿ ಕಬಡ್ಡಿಯೋ ಮರಕೋತಿಯೋ ಆಡಿ, ಗಾಯವನ್ನು ಭೀಕರವಾಗಿ ಊರ್ಜಿತದಲ್ಲಿ ಇಟ್ಟುಕೊಳ್ಳುತ್ತಿದ್ದೆ. ರಕ್ತ, ಕೀವು ರಂಪವಾಗಿ, ಗಳಲೆ ಬಂದು ನಡೆಯಲು ಕಷ್ಟವಾದಾಗ ಮತ್ತೆ ಮೊಯ್ನುದ್ದೀನ್ ಸೈಕಲ್ಲೇರಿ ಬರುತ್ತಿದ್ದ. ನನ್ನನ್ನು ಸೈಕಲ್ಲಿನಲ್ಲಿ ಕೂರಿಸಿಕೊಂಡು ಸಂತ ಮೇರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಕೊಡಿಸಿ, ಸುಮಾರು ಎರಡು ಕಿಮೀ ಅಂತರದ ಸಂತ ಜಾನರ ಪ್ರೌಢ ಶಾಲೆಗೆ ಬಿಟ್ಟು ಬರುತ್ತಿದ್ದ. ಸಂಜೆ ಮನೆಗೂ ಕರೆತರುತ್ತಿದ್ದ. (ಸಾರ್ವಜನಿಕ ವಾಹನವಾಗಿ ಸೈಕಲ್ ರಿಕ್ಷಾ ಮತ್ತು ಜಟ್ಕಾಗಳು ವಿರಳ ಸಂಖ್ಯೆಯಲ್ಲಿದ್ದವು.) ನನ್ನ ಸೈಕಲ್ ಕಲಿಕೆಗೆ ಅಯಾಚಿತವಾಗಿ ಅಡಿಪಾಯವಿಕ್ಕಿದ ಮೊಯ್ನುದ್ದೀನ್, ಇಂದಿನ ನನ್ನ ಸೈಕಲ್ ಸಾಹಸಗಳಿಗೆ ಆದಿಮೂರ್ತಿ. ಗುರು ಮೊಯ್ನುದ್ದೀನನಿಗೆ ವಂದನೆಗಳು. (ವಿ.ಸೂ: ನನ್ನ ಸೈಕಲ್ಲಿನ ಮೊದಲ ದಿನಗಳ ಹೆಚ್ಚಿನ ಓದಿಗೆ)

೮. ಜಾಯ್ಸನ್ ವಿಲ್ಸನ್ ಎಕ್ಸ್‍ಪ್ರೆಸ್ (ಗೆಳೆತನದ ಪರಿಗಳು)

ನಿತ್ಯದಲ್ಲಿ ನಾನು ಹೊರ ಕೋಟೆಯೊಳಗಿನ ಸಂತ ಜಾನರ ಪ್ರೌಢಶಾಲೆಗೆ ನಡೆದು ಹೋಗುತ್ತಿದ್ದೆ. ಮನೆ ಎದುರಿನ ದಾರಿಯಾಚೆ ಸಮರೇಖೆಯಲ್ಲೆಂಬಂತೆ ಮೀಟರ್ ಗೇಜ್ ರೈಲೋಡುತ್ತಿತ್ತು. (ನಾವಿದ್ದ ಕಾಲದಲ್ಲೇ ಅದು ಬ್ರಾಡ್ ಗೇಜಿಗೆ ಪರಿವರ್ತನೆಗೊಂಡಿತು.) ಹಳಿ ಪಕ್ಕದ ಸವಕಲು ಜಾಡಿನಲ್ಲಿ ಕೋಟೆ ದ್ವಾರ. ಮುಂದೆ ಡಾಮರು ಮಾರ್ಗದಲ್ಲಿ ಹೊರ ಕೋಟೆ ಪ್ರವೇಶಿಸಿ, ಪಾಲಿಟೆಕ್ನಿಕ್ ಕಳೆದು ಶಾಲೆ ಸೇರುತ್ತಿದ್ದೆ. ಹಾಗೇ ವಾಪಾಸು.

ಸೈಕಲ್ ಮಂತ್ರ ಸಿದ್ಧಿಸಿದ ಮೇಲೆ ‘ನನಗೊಂದು ಸೈಕಲ್ ಬಂದರೆ’ ಕನಸಿನಲ್ಲೇ ನಡೆಯುತ್ತಿದ್ದೆ. ಮಾರ್ಗದಾಚೆ ತಗ್ಗಿಗಿಳಿವ ಮತ್ತೆ ರೈಲ್ವೇ ದಿಬ್ಬಕ್ಕೇರುವ ಸವಕಲು ಜಾಡಿನಲ್ಲಿ, ಅಡ್ಡ ಸಿಗುತ್ತಿದ್ದ ಎರಡೋ ಮೂರೋ ಪುಟ್ಟ ಸೇತುವೆಗಳಲ್ಲಿ, ದಾರಿ ಅಡ್ಡ ಹಾಯುವ ಸಮಸೇತಿನಲ್ಲೆಲ್ಲ ಸೈಕಲ್ ಇಳಿಯದೇ ನಿಭಾಯಿಸುವ ಹೊಳಹುಗಳೇ ಕಾಡುತ್ತಿದ್ದವು. ನನ್ನ ಅದೃಷ್ಟಕ್ಕೆ, ನಾವಲ್ಲಿದ್ದ ಎರಡನೇ ವರ್ಷದಲ್ಲಿ ‘ಧನಮ್ಮ ವಠಾರ’ದ ಒಂದು ಮನೆಗೆ ಕ್ರಿಶ್ಚಿಯನ್ ಕುಟುಂಬವೊಂದು ಬಾಡಿಗೆಗೆ ಬಂತು. ಅಲ್ಲಿನ ಅವಳಿ ಮಕ್ಕಳು – ವಿಲ್ಸನ್ ಮತ್ತು ಜಾಯ್ಸನ್, ಜಾನ್ಸ್ ಶಾಲೆಯಲ್ಲೇ ಸಣ್ಣ ತರಗತಿಯವರು. ಅವರಪ್ಪ ಧಾರಾಳಿ (ನನ್ನ ಬಾಲ ಮನಸ್ಸಿನ ತೀರ್ಮಾನ!), ಮಕ್ಕಳಿಗೆ ಶಾಲೆಗೆ ಹೋಗಲು ಒಂದು ದೊಡ್ಡದೇ ಸೈಕಲ್ ಕೊಡಿಸಿದ್ದರು. ಸೋದರರು ಜೀವದಲ್ಲಿ ಸಣ್ಣಕ್ಕಿದ್ದರೂ ಭಾರೀ ಚಾಲಾಕಿಗಳು. ಇಬ್ಬರಿಗೂ ಸೀಟಿನ ಮೇಲೆ ಕುಳಿತರೆ ಪೆಡಲು ಎಟಕುತ್ತಿರಲಿಲ್ಲ. ಆದರೇನು, ಒಬ್ಬ ಎದುರ ಸರಳಿನ ಮೇಲೆ ಆಚೀಚೆ ಕುಣಿಯುತ್ತ ಸೈಕಲ್ ಮೆಟ್ಟಲು ತೊಡಗಿದರೆ, ಇನ್ನೊಬ್ಬ ಹಗುರಾಗಿ ಕ್ಯಾರಿಯರಿಗೆ ಹಾರಿ ಕುಳಿತು ಜತೆಗೊಡುತ್ತಿದ್ದ. ಅಸಾಧ್ಯ ಸನ್ನಿವೇಶಗಳಲ್ಲಿ ಹಿಂದಿನವ ಧುಮುಕಿ, ಸೈಕಲ್ ನೂಕುತ್ತಲೂ ಇದ್ದ. ಅವರೆದುರು ನಾನು ದೀರ್ಘದೇಹಿ, ದೃಢಕಾಯ. ಅವರ ಸೈಕಲ್ ನನಗೆ ಹೇಳಿ ಮಾಡಿಸಿದಂತಿತ್ತು. ನಾನು ಅವಳಿ ಸೋದರರನ್ನು ಬೇಗ ಒಲಿಸಿಕೊಂಡೆ. ಮತ್ತೆ ಹೆಚ್ಚು ಕಮ್ಮಿ ನಿತ್ಯ ನಮ್ಮದು ತ್ರಿವಳಿ ಸವಾರಿ! ರೈಲ್ವೇ ಹಳಿಯ ಪಕ್ಕದ ಜಾಡಿನ ನನ್ನ ಕನಸುಗಳೆಲ್ಲ ನನಸಾದವು. ಕೋಟೆ ದ್ವಾರದಿಂದ ಪಾಲಿಟೆಕ್ನಿಕ್ ವರೆಗಿನ ಏರು ದಾರಿಯ ನಡುವೆಯೆಲ್ಲೋ ನನಗೆ ತುಳಿಯುವುದು ಕಷ್ಟವಾಗುವಾಗ, ಕ್ಯಾರಿಯರಿನವ ಕೈಬಲ ಕೊಡಲು ಸಂಕೋಚಿಸುತ್ತಿರಲಿಲ್ಲ. ಮನೆಗೆ ಮರಳುವ ದಾರಿಯಲ್ಲಂತೂ ನಮ್ಮದು ‘ಜಾಯ್ಸನ್ ವಿಲ್ಸನ್ ಎಕ್ಸ್‍ಪ್ರೆಸ್’, ಚಾಲಕ ಅಶೋಕವರ್ಧನ.

೯. ಬಳ್ಳಾರಿ ಕೋಟೆಗೆ ಡೇವಿಡ್ ಲಗ್ಗೆ (ಸಮಾನ ಮನಸ್ಕತೆ)

ಹೊಸಪೇಟೆ – ಬಳ್ಳಾರಿ ದಾರಿ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣ ಹಾಯ್ದು, ಹೊರಕೋಟೆಯೊಳಗೆ ಸುಳಿದು ಬಳ್ಳಾರಿ ನಗರ ಸೇರುತ್ತಿದ್ದ ದಿನಗಳವು. ಹೊರ ಕೋಟೆಯ ಸರಕಾರೀ ಕಚೇರಿ, ಮನೆಗಳು, ವಾಣಿಜ್ಯ ಮಳಿಗೆಗಳ ಹಿತ್ತಲಿನಲ್ಲೆಂಬಂತೆ ನಿಜ ಕೋಟೆಯ ಭಾರೀ ಏಕಶಿಲಾ ಬೆಟ್ಟವಿತ್ತು. ಅದರ ಭಾರೀ ಬಂಡೆಗಳ ಗುಪ್ಪೆಯನ್ನು ಎರಡನೇ ಸುತ್ತಿನ ಕೋಟೆಗೋಡೆ ಆವರಿಸಿತ್ತು. ಪಾಲಿಟೆಕ್ನಿಕ್ ಎದುರಿನ ಅಡ್ಡ ದಾರಿ ಮುಗಿದಲ್ಲಿಗೆ ಕೋಟೆ ಏರುವ ಮೆಟ್ಟಿಲುಗಳು ತೊಡಗುತ್ತಿದ್ದವು. ಯಾವುದೇ ಔಪಚಾರಿಕ ಅಲಂಕಾರಗಳಿಲ್ಲದೇ ಸುಮಾರು ಐವತ್ತರವತ್ತು ಮೆಟ್ಟಿಲುಗಳು ಹಾಸು ಬಂಡೆಯನ್ನು ಏರುತ್ತವೆ. ಆ ಕೊನೆಯಲ್ಲೊಂದು ಪ್ರವೇಶ ದ್ವಾರ ಇತ್ತು. ಮೆಟ್ಟಿಲ ಸಾಲಿನ ಪಕ್ಕದಲ್ಲೇ ಹಾಸು ಬಂಡೆಯ ಉಬ್ಬು ತಗ್ಗುಗಳನ್ನನುಸರಿಸಿ ಅಂಕುಡೊಂಕಿನ ಮಳೆ ನೀರ ಸವಕಲು ಓಣಿಯೊಂದು ಕೆಳಗಿನವರೆಗೂ ಹರಿದಿದೆ. ಮಳೆ ಬಂದಾಗಷ್ಟೇ ಅದರಲ್ಲಿ ನೀರು. ಉಳಿದಂತೆ ಊರಮಕ್ಕಳ ರೋಮಾಂಚಕಾರಿ ಜಾರುಬಂಡೆ. ನಾನೂ ಅದರಲ್ಲಿ ಜಾರಾಟವಾಡುವ ಆಸೆಯನ್ನು ಕೆಲವು ಬಾರಿ ಪೂರೈಸಿಕೊಂಡಿದ್ದೇನೆ. ಆದರೆ ಮಹಾದ್ವಾರ ದಾಟಿ, ಕೋಟೆ ಸುತ್ತಿ ಬರುವ ಕುತೂಹಲ ತೀರಿಸಿಕೊಳ್ಳಲು ಧೈರ್ಯ ಬಂದಿರಲಿಲ್ಲ. ಕೋಟೆ ಪುಂಡ ಪೋಕರಿಗಳ ಬೀಡೆಂದೇ ಕುಖ್ಯಾತವಾಗಿತ್ತು!

ಒಮ್ಮೆ ಯಾವುದೋ ಚಿತ್ರೀಕರಣದ ತಂಡ ಕೋಟೆಗೆ ಲಗ್ಗೆಯಿಟ್ಟಿತ್ತು. ಶಾಲೆಯ ಮಧ್ಯಾಹ್ನದ ಊಟದ ಬಿಡುವಿನಲ್ಲಿ, ನಾನು ಚಿತ್ರೀಕರಣ ನೋಡುವ ಆಸೆಗೆ ಅಲ್ಲಿಗೆ ಓಡಿದ್ದೆ. ದ್ವಾರದಲ್ಲಿ ಚಿತ್ರೀಕರಣ ತಂಡದ ಕಾವಲುಗಾರ ತಡೆದ. ನಾನು ಎಲ್ಲೋ ಗೋಡೆಯನ್ನೇರಿಯೋ ಮಳೆ ನೀರಗಂಡಿ ಹೊಕ್ಕೋ ಒಳ ಸೇರಿದ್ದೆ. ಅದು ನಾನು ಮೊದಲ ಬಾರಿಗೆ ನೋಡಿದ ಚಿತ್ರೀಕರಣ; ಭಯಂಕರ ಬೋರು! ಆ ನೆಪದಲ್ಲಿ ಕೋಟೆಯನ್ನಾದರೂ ಸುತ್ತಿ ನೋಡುವ ಯೋಚನೆ ಚಿಗುರಿದರೂ ಶಾಲೆಯ ಗಂಟೆ ಬಾಡಿಸಿತು.

ಬಹುಶಃ ನಾವಲ್ಲಿದ್ದ ಎರಡನೇ ವರ್ಷದಲ್ಲಿ ಡೇವಿಡ್ ಎಂಬೊಬ್ಬ ಹುಡುಗ ಶಾಲೆಗೆ ಸೇರಿಕೊಂಡ. ಅವನು ಮಡಿಕೇರಿಯ ದೊಳ್ಳ ಪ್ರಕಾಶನದ್ದೇ ಪ್ರತಿರೂಪ – ಮಹಾಕಾಯ. ಆದರೆ ಆತನ ವೈವಿಧ್ಯಮಯ ಕಲಿಕೆಯ ಉತ್ಸಾಹ ಬಹುಬೇಗನೆ ನನ್ನನ್ನು ಆಕರ್ಷಿಸಿತು. ನನ್ನ ಕಾಗದ ಮಡಚೋಣ ಲೇಖನದಲ್ಲಿನ ಹಾರುವ ದೋಣಿಯನ್ನು ನನಗೆ ಕಲಿಸಿದವನು ಡೇವಿಡ್. ಅವನ ಮನೆಯೂ ಕಂಟೋನ್ಮೆಂಟ್ ವಲಯದಲ್ಲೇ ಇತ್ತು. ಒಂದು ದಿನ ಎರಡು ಎಂದರೆ ತಂಡ ಎಂಬ ಧೈರ್ಯದಲ್ಲಿ ಕೋಟೆಗೇ ಲಗ್ಗೆ ಹಾಕಿದೆವು. ಅದು ಅರ್ಧ ದಿನವಷ್ಟೇ ಶಾಲೆ ಇದ್ದ ಶನಿವಾರದ ಮಟಮಟ ಮಧ್ಯಾಹ್ನವೇ ಇದ್ದಿರಬೇಕು.

ಕೋಟೆ ಬೆಟ್ಟ ದಕ್ಷಿಣೋತ್ತರವಾಗಿ ಹಬ್ಬಿದಂತಿದೆ. ಅದರ ಪೂರ್ವ ಮಗ್ಗುಲಿನಲ್ಲಿ ನಮ್ಮ ಶಾಲೆ, ದಕ್ಷಿಣ ಮೈಯಲ್ಲಿ ಏರುವ ಮೆಟ್ಟಿಲ ಸಾಲು, ಪಶ್ಚಿಮ ಮಗ್ಗುಲಿನಲ್ಲಿ ನೀರಿದ್ದ ಕಂದಕ ಮತ್ತು ಆಚೆಗೆ ನಮ್ಮ ಮನೆಗಳ ವಲಯ. ಒಳಗೆ ಭಾರೀ ಸುತ್ತುವಂತದ್ದೇನೂ ಕಾಣಲಿಲ್ಲ. ಕೆಲವು ಕಲ್ಲ ಹೊಂಡಗಳಲ್ಲಿದ್ದ ನಿಂತ ನೀರು, ಹಸಿರುಗಟ್ಟಿ ಭಯ ಹುಟ್ಟಿಸಿದವು. ಕಲ್ಲ ತೊಲೆ, ಚಪ್ಪಡಿಗಳ ಅನೇಕ ಮಂಟಪಗಳಿದ್ದವು. ಎಲ್ಲೋ ಒಂದೆಡೆ ಒಬ್ಬ ತಿರುಗೂಳಿಯಂತವನು ಮಲಗಿಕೊಂಡಿದ್ದ. ನಾವು ದೂರದಿಂದಲೇ ಅವನನ್ನು ನಿವಾರಿಸಿ, ಕೋಟೆಯ ಪಶ್ಚಿಮ ಮೈಯತ್ತ ಸರಿದೆವು. ಆ ದಿಕ್ಕಿನ ಗೋಡೆ ಐತಿಹಾಸಿಕ ಕಾಲದಲ್ಲೇ ಉಧ್ವಸ್ಥಗೊಂಡಂತ್ತಿತ್ತು. ಅದನ್ನು ವಿಶೇಷ ಶ್ರಮವಿಲ್ಲದೆ ದಾಟಿ ಇಳಿಜಾಡು ಹಿಡಿದೆವು. ಆ ಮೈಯ ತಪ್ಪಲಿನಲ್ಲಿ ಮಾತ್ರ ಮೂಲ ಕಂದಕ ಇನ್ನೂ ಸ್ವಲ್ಪ ನೀರುಳಿಸಿಕೊಂಡು ಪರಿಸರವನ್ನು ತಂಪಾಗಿಟ್ಟಿತ್ತು. ಬೆಟ್ಟದ ಸಾಮಾನ್ಯ ಇಳಿಜಾರಿನಲ್ಲಿಳಿದು, ನೀರವಲಯಕ್ಕಿಂತಲೂ ಉತ್ತರಕ್ಕೆ ಕಂದಕದ ದಂಡೆ ಸಾಧಿಸಿದ್ದೆವು.

ಬಳ್ಳಾರಿ ಕೋಟೆಗುಡ್ಡಕ್ಕೆ ಸಂಬಂಧಿಸಿದ ವಿಕಿಪೀಡಿಯಾದ ಕತೆ ತುಂಬ ರೋಚಕವಿದೆ. ಮೊದಲು ಮೇಲಿನ ಕೋಟೆಗೆ ವಿಜಯನಗರಾಶ್ರಿತ ಪಾಳೇಗಾರ ಹನುಮಪ್ಪ ನಾಯಕ (೧೬ನೇ ಶತಮಾನ) ಮತ್ತೆ ಕೆಳ ಕೋಟೆಗೆ ಹೈದರಾಲಿ (೧೮ನೇ ಶತಮಾನ) ನಿರ್ಮಾತೃಗಳಂತೆ. ಕೆಳಕೋಟೆಯ ನಿರ್ಮಾಣದೊಂದಿಗೆ ಮೇಲಿನದನ್ನೂ ಸೇರಿಸಿಕೊಂಡು ಪರಿಷ್ಕರಣೆಯ ಜವಾಬ್ದಾರಿ ಹೊತ್ತವ ಓರ್ವ (ಅನಾಮಧೇಯ) ಫ್ರೆಂಚ್ ಇಂಜಿನಿಯರ್. ಆದರೆ ಪೂರ್ಣಗೊಂಡ ಕೆಲಸ ರಾಜಪರೀಕ್ಷೆಯಲ್ಲಿ ಅನುತ್ತೀರ್ಣವಾಯ್ತಂತೆ. ಕೋಟೆ ಗುಡ್ಡೆಯ ಮುಂದುವರಿಕೆಯಂತೇ ಉತ್ತರಕ್ಕಿರುವ ಕುಂಬಾರಗುಡ್ಡ, ಪ್ರಾಕೃತಿಕವಾಗಿ ಹೆಚ್ಚು ಎತ್ತರದ್ದು. ಅಂದರೆ ಯುದ್ಧ ಕಾಲದಲ್ಲಿ ಅದು ವೈರಿಗಳಿಗೆ ಆಯಕಟ್ಟಿನದ್ದೇ ಆಗುತ್ತದೆ. ಇದನ್ನು ಅವಗಣಿಸಿದ್ದಕ್ಕೆ ಫ್ರೆಂಚ್ ಇಂಜಿನಿಯರನ ತಲೆದಂಡವೇ ಆಯ್ತಂತೆ (೧೭೬೯). ಕೊನೆಯಲ್ಲಿ ವಿಕಿಪೀಡಿಯಾವೇ ವರ್ತಮಾನದ ವಿಪರ್ಯಾಸವನ್ನು ಹೀಗೆ ದಾಖಲಿಸುತ್ತದೆ: ಆ ಫ್ರೆಂಚ್ ಇಂಜಿನಿಯರನ ಸ್ಮಾರಕ, ಇಂದು ‘ಮುಸ್ಲಿಂ ಸಂತನ ಗೋರಿ’ ಅನ್ನಿಸಿಕೊಂಡು ಆರಾಧನೆಗೊಳಗಾಗಿದೆ!

ವಿಜಯನಗರದ ಪತನದೊಡನೆ ಬಳ್ಳಾರಿ ಕೋಟೆ ಬಿಜಾಪುರದ ಸುಲ್ತಾನರಿಗಾಯ್ತು. ಮುಂದೆ ಹಾದು ಹೋಗುತ್ತಿದ್ದ ಶಿವಾಜಿ ವಶಪಡಿಸಿಕೊಂಡ. ಮತ್ತೆ ಆದವಾನಿಯ ಬಸಲತ್ ಜಂಗ್ ಹಿಡಿದುಕೊಂಡ. ಆದರೆ ಸ್ವಲ್ಪೇ ಕಾಲದಲ್ಲಿ ಜಂಗನ ಪ್ರಾತಿನಿಧಿಕ ಪಾಳೇಗಾರ ದಂಗೆ ಎದ್ದ. ಸಹಾಯಕ್ಕೆ ಹೈದರಾಲಿಯ ಮೊರೆಹೋದ. ಹೈದರಾಲಿ ಒಮ್ಮೆಗೆ ಆದವಾನಿಯವನನ್ನು ಸೋಲಿಸಿದ. ಮತ್ತೆ ಪಾಳೇಗಾರನನ್ನೂ ಮಟ್ಟ ಹಾಕಿ ಕೋಟೆಯನ್ನು ತನ್ನದೇ ಮಾಡಿಕೊಂಡ. ಟಿಪ್ಪುವಿನ ಪತನದೊಡನೆ ಬ್ರಿಟಿಷ್ ಮತ್ತು ಸ್ವತಂತ್ರ ಭಾರತದ ಅಂಗವೂ ಆದದ್ದು ಇತಿಹಾಸದ ವಿದ್ಯಾರ್ಥಿಗಳಿಗೆಲ್ಲ ತಿಳಿದದ್ದೇ ಇದೆ. ಆದರೆ ಬರೆಯದ ಬಳ್ಳಾರಿ ಕೋಟೆಯ ಇತಿಹಾಸದಲ್ಲಿ ಕೊನೇ ನಮೂದು ನಾವು ದಾಖಲಿಸಿದ್ದೆವು – ಡೇವಿಡ್ಡನ ಸಾಂಗತ್ಯದಲ್ಲಿ ಅಶೋಕನ ವಿಜಯ! (ಅದು ಕೊನೆಯದ್ದಲ್ಲ ಎನ್ನುವ ಎಂಟೆರ್ದೆಗಾರರು ಇದ್ದರೆ, ಸ್ವಾನುಭವವನ್ನು ಇಲ್ಲಿ ಸವಿವರ ಬರೆದು ಪ್ರಮಾಣಿಸತಕ್ಕದ್ದು – ಹುಶ್ಶಾರ್!)

೧೦. ಭಟ್ರ ಊಟ ಮತ್ತು ಕೊಳೆತ ಮೆಣ್ಸು (ಒಳದಾರಿಗಳ ಶೋಧ)

ಶಾಲೆಗೆ ಮೊದಲಲ್ಲಿ ನಾನು ಬುತ್ತಿಯೂಟ ಒಯ್ಯುತ್ತಿದ್ದೆ. ಶಾಲೆ ತನ್ನ ಗ್ರಂಥಾಲಯದ ಓದುವ ವಿಭಾಗವನ್ನು ಮಧ್ಯಾಹ್ನ ನಮ್ಮಂಥವರಿಗೆ ಮುಕ್ತವಾಗಿಟ್ಟಿತ್ತು. ಆದರೆ ನನಗೆ ಇತರರ ಅಡುಗೆಗಳ ವಾಸನೆ, ಮಿಗಿಲಾಗಿ ಮೇಜಿನ ಮೇಲೆ ಚೆಲ್ಲಾಡಿದ ತಿನಿಸುಗಳ ಉಳಿಕೆ ಹೇಸಿಗೆ ತರಿಸುತ್ತಿತ್ತು. ಶಾಲೆ ಕೋಟೆಯ ಭಾಗವೇ ಆದ್ದರಿಂದ ಅಂಚುಗಳಲ್ಲಿ ಸಹಜ ಭಾರೀ ಬಂಡೆ, ಕಹಿಬೇವಿನ ಮರ ಸೇರಿದಂತೆ ನೆರಳಿನಾಶ್ರಯಗಳು ಕೆಲವಿದ್ದವು. ಬಂಡೆಗಳಲ್ಲಿ ಕ್ರಿಸ್ತವತರಣದ ವಿಭಿನ್ನ ಉಬ್ಬು ಚಿತ್ರ, ವಿಗ್ರಹ ನೆಲೆಯಾದದ್ದೂ ಇತ್ತು. ನಾನು ಕೆಲ ಸಮಯ ಅವುಗಳ ನೆರಳಿನಲ್ಲಿ ಕುಳಿತು ಬುತ್ತಿಯುಣ್ಣುತ್ತಿದ್ದೆ. ಬುತ್ತಿಯೂಟದ ಶಾಸ್ತ್ರ ಮಾಡುತ್ತಿದ್ದ ಕೆಲ ಸಹಪಾಠಿಗಳು, ಶಾಲೆ ಗೇಟಿನ ಹೊರಕ್ಕೋಡಿ ಏನೇನೋ ‘ಸುವಸ್ತು’ಗಳನ್ನು ಕೊಂಡು, ಮೆಲುಕಾಡಿಸುತ್ತಾ ಬರುತ್ತಿದ್ದರು. ಗೊತ್ತಲ್ಲಾ, ಎಲ್ಲೆಡೆಗಳಂತೆ ಅಲ್ಲೂ ಒಂದೆರಡು ಕೈಗಾಡಿ ಇರುತ್ತಿತ್ತು. ಅವುಗಳಲ್ಲಿ ಐಸ್ ಕ್ಯಾಂಡೀ, ಕಡಲೆ, ಚಾಕಲೇಟು, ಬೋರೇ ಹಣ್ಣು, ಕಬ್ಬಿನ ಜಲ್ಲೆ ಮುಂತಾದವುಗಳ ಚಿಲ್ಲರೆ ವಹಿವಾಟು ಬಿರುಸಿನಲ್ಲೇ ನಡೆಯುತ್ತಿತ್ತು. ಅವುಗಳಲ್ಲಿ ನೀರುಳ್ಳೀ ಪರಿಮಳದ ಚರಮುರಿ ಮೇಲೆ ಉಪ್ಪಿನಲ್ಲಿ ಕೊಳೆತ ಮೆಣ್ಸು ಸದಾ ನನ್ನ ಕುತೂಹಲ ಮತ್ತು ರಸನೆಗಳನ್ನು ಕೆರಳಿಸುತ್ತಿತ್ತು. ಕೊಡುವವನ ನೈರ್ಮಲ್ಯ, ತಿನಿಸುಗಳ ಗುಣಮಟ್ಟ ಕೇಳಬೇಡಿ. ತಂದೆಯ ಕಠೋರ ಶಿಸ್ತು ಸಂಹಿತೆಯಲ್ಲಿ (ಆರೋಗ್ಯದ ದೃಷ್ಟಿ ಮಾತ್ರ) ಅವೆಲ್ಲ ನಮ್ಮಂತವರಿಗಲ್ಲ ಎಂದೇ ಪಾಠವೂ ಆಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ‘ಪಾಕೆಟ್ ಮನಿ’ ಎಂಬ ಶಬ್ದದ ಅಸ್ತಿತ್ವವೇ ನನಗೆ ತಿಳಿದಿರಲಿಲ್ಲ. ನಾನು ಸಹಪಾಠಿಗಳೊಡನೆ ಕಬಡ್ಡಿಯೋ ಮರಕೋತಿ ಆಟಕ್ಕೋ ಸೀಮಿತನಾಗುತ್ತಿದ್ದೆ. ಆಟದ ಬಿರುಸಿನಲ್ಲಿ ಬೆವರು, ಮಣ್ಣು, ಗಾಯಗಳೆಲ್ಲ ಮರೆತೇ ಹೋಗುತ್ತಿತ್ತು. ರಾತ್ರಿ ಅಮ್ಮನಿಗೆ ಮಾತ್ರ ಕೆಲವು ಸಲ ತಲೆನೋವು ಹಿಡಿಸುತ್ತಿದ್ದೆ – ಗಾಯ, ಮೈ ಕೈ ನೋವು, ಹೊಟ್ಟೆನೋವು…. ಹೆಚ್ಚಾಗಿ ಕುಂಟುನೆಪಗಳು. ನಡೆದು ಬರಲು ಉದಾಸೀನವಾದಾಗ ಸಣ್ಣ ಗಾಯದ ನೋವೂ ಉಲ್ಬಣಿಸುತ್ತಿತ್ತು, ಇಲ್ಲದ ಹೊಟ್ಟೆನೋವೂ ವಕ್ಕರಿಸುವುದಿತ್ತು. ಹಿಂದಿನಿಂದ ನನಗೆ ನಾಲ್ಕು ಬಯ್ದರೂ ರಿಕ್ಷಾದವನಿಗೆ ಅಮ್ಮ ಬಾಡಿಗೆ ಕೊಡುತ್ತಾಳೆ ಎಂಬ ಭಂಡತನದಲ್ಲಿ ಬಾಡಿಗೆಯ ಸೈಕಲ್ ರಿಕ್ಷಾ ಹಿಡಿದು ಮನೆ ಸೇರುವುದೂ ಇತ್ತು.

ಇಷ್ಟರಲ್ಲಿ ತಂದೆಗೆ ನಮ್ಮ ಶಾಲೆ ಪಕ್ಕದ ಪಾಲಿಟೆಕ್ನಿಕ್ಕಿನ ಕ್ಯಾಂಟೀನ್ ಭಟ್ಟರು ಮನೆಯಲ್ಲಿ ಊಟ ಕೊಡುತ್ತಾರೆಂದು ತಿಳಿಯಿತು. ಸಹಜವಾಗಿ ನನ್ನನ್ನು ಅಲ್ಲಿಗೆ ದಾಖಲಿಸಿದರು. ಕೋಟೆಗೇರುವ ಓಣಿಯಲ್ಲೆ ಅವರ ಮನೆ ಇತ್ತು. ಭಟ್ಟರಿಗೆ ಆ ದೂರದಲ್ಲೂ ತಮ್ಮೂರಿನವರು (ಅವರು ಉಡುಪಿ ಮೂಲದವರು), ಜಿಲ್ಲೆಗೆ ದೊಡ್ಡವರು (ಎನ್ಸಿಸಿಯಲ್ಲಿ) ಮತ್ತು ಬ್ರಾಹ್ಮಣರು ಎಂದೆಲ್ಲ ಸೇರಿ ತುಂಬ ಅಭಿಮಾನ. ಒಳ್ಳೇ ಊಟ ಮತ್ತು ಧಾರಾಳವಾಗಿ ಕೊಡುತ್ತಿದ್ದರು. ದಿನದ ಲೆಕ್ಕದಲ್ಲಿ ಊಟಕ್ಕೆ ದರ ನಿಗದಿಸಿ, ಲೆಕ್ಕಾಚಾರವನ್ನು ನಮಗೇ ಬಿಟ್ಟರು. ತಂದೆಯ ಸೂಚನೆಯಂತೆ ನಾನೇ ಊಟದ ಲೆಕ್ಕ ಬರೆದು, ತಿಂಗಳ ಕೊನೆಯಲ್ಲಿ ಪಾವತಿ ಮುಟ್ಟಿಸುತ್ತಿದ್ದೆ. ಇದು ಕೆಲವು ಸಮಯ ಚೆನ್ನಾಗಿಯೇ ನಡೆಯಿತು. ಅಷ್ಟರಲ್ಲಿ ಭಟ್ಟರು ಕ್ಯಾಂಟೀನ್ ಬಿಟ್ಟು ನಮ್ಮ ಶಾಲೆಯ ಬಳಿಯೇ ಸ್ವತಂತ್ರ ಹೋಟೆಲ್ ಇಟ್ಟರು. ಅಲ್ಲಿ ಸಾರ್ವಜನಿಕಕ್ಕೇ ಊಟ ಕೊಡುತ್ತಿದ್ದುದರಿಂದ ನನ್ನ ಖಾತೆ ಅಲ್ಲಿಗೇ ವರ್ಗಾವಣೆಯಾಯ್ತು.

ಭಟ್ಟರ ‘ಜನತಾ ಹೋಟೆಲ್’ನಲ್ಲಿ ಬಾಲ ಬುದ್ಧಿಗೆ ಸಂತುಲಿತ ಊಟಕ್ಕಿಂತ ಮೂಗರಳಿಸುವ ಮಸಾಲೆ ದೋಸೆ, ಚಪ್ಪರಿಸುವ ಗುಲಾಬ್ ಜಾಮೂನ್ ಆಕರ್ಷಣೆ ಹೆಚ್ಚಾಯ್ತು. ಮತ್ತದು ಊಟದ ಮೊತ್ತಕ್ಕಿಂತ ಕಡಿಮೆ ದರದಲ್ಲೇ ದಕ್ಕುತ್ತಿತ್ತು. ವಾರದಲ್ಲಿ ಎರಡು ಮೂರು ದಿನ ಊಟ ಬಿಟ್ಟು ದೋಸೆ ಜಾಮೂನಿಗೆ ಜಾರುತ್ತಿದ್ದೆ. ಜಾಣತನ ಎರಡು ಲೆಕ್ಕ ಬರೆಯಲು ಕಲಿಸಿತು. ತಂದೆಯ ಲೆಕ್ಕದಲ್ಲಿ ಎಲ್ಲವೂ ಊಟ. ಭಟ್ಟರಿಗೆ ನಿಜದ ಲೆಕ್ಕ, ಪ್ರಾಮಾಣಿಕ ಪಾವತಿ. ಹೀಗೆ ತಿಂಗಳಿಗೊಮ್ಮೆ ಉಳಿಸಿದ ಹಣವೇ ನನ್ನ ಗಳಿಸಿದ ಹಣ. ಮತ್ತೆ ವಿನಿಯೋಗದ ಪರಿ ಹೇಳಬೇಕೇ – ತಿಂಗಳಲ್ಲಿ ಒಂದೆರಡು ದಿನವಾದರೂ ಚರಮುರಿ ಮತ್ತು ಕೊಳೆತ ಮೆಣ್ಸಿನ ಮಝಾ ಉಡಾಯಿಸಿದೆ!

೧೧. ಮೂರ್ತಿ ಶೆಟ್ಟಿ ಮತ್ತು ಹಗರಿಬೊಮ್ಮನ ಹಳ್ಳಿ (ಅವಕಾಶಗಳ ಸೃಷ್ಟಿ)

ತಂದೆಯೊಡನೆ ಅಕಾಲಿಕ ಎನ್ಸಿಸಿ ಶಿಬಿರ ಸಾಹಸಯಾನದ ರುಚಿ ಕಂಡ ನನಗೆ ಸದಾ ದೊಡ್ಡವನಾಗಿ ಅಪ್ಪನ ಬೂಟಿನಲ್ಲಿ ಕಾಲು ತೂರುವ ಕನಸಿತ್ತು. ಸಂತ ಜಾನ್ಸ್ ಶಾಲೆಯಲ್ಲಿ ಕಿರಿಯರ ವಿಭಾಗದ ಎನ್ಸಿಸಿ (ಜೂನಿಯರ್ ಡಿವಿಜನ್ ಎನ್ಸಿಸಿ) ಇರಲಿಲ್ಲ. ಎರಡನೇ ವರ್ಷದಲ್ಲಿ ಲೆಕ್ಕದ (ಚಂದ್ರಶೇಖರ?) ಮಾಸ್ಟ್ರು ಹಾಗೂ ಇನ್ನೊಬ್ಬರು (ಪದ್ಮನಾಭ?) ಸೇರಿ ಶಾಲೆಯಲ್ಲಿ ‘ಸೀ ಸ್ಕೌಟ್’ ಶುರು ಮಾಡಿದರು. ಸಮುದ್ರ ಬಿಟ್ಟು, ಸರಿಯಾದ ಒಂದು ಕೆರೆಗೂ ಗತಿಯಿಲ್ಲದ, ಬಹುತೇಕ ಮರುಭೂಮಿಯಂತ ಬಳ್ಳಾರಿಯಲ್ಲಿ ಕಡಲ ಚಮೂ! ಅದು ಎನ್ಸಿಸಿಯಷ್ಟು ಶ್ರೀಮಂತವಲ್ಲ, ವೈವಿಧ್ಯಮಯ ಕಲಾಪಗಳ ಪಟ್ಟಿಯೂ ಇರಲಿಲ್ಲ. ಪಠ್ಯ ಮೀರಿದ ಚಟುವಟಿಕೆಗಳ ಹಪಹಪಿಯಲ್ಲಿದ್ದ ನಾನು ಕೂಡಲೇ ಸೇರಿಕೊಂಡೆ. ಅಗಲ ಕಾಲರಿನ ಬಿಳೀ ಶರಟು, ಕ್ಯಾನ್ವಾಸ್ ಶೂ ಎಂದೇನೋ ಸಮವಸ್ತ್ರಸಂಹಿತೆ ಹೇಳಿದರು, ಆದರೆ ಪೂರೈಕೆ ನಿಮ್ಮದೇ ಎಂದಿದ್ದರು. ಅದರಲ್ಲೆಲ್ಲ ನಾನು ಭಾರೀ ಚುರುಕು – ಮನೆಯಲ್ಲಿ ಏನು ಸುಳ್ಳು ಬಿಟ್ಟೆನೋ, ಎಲ್ಲರಿಗೂ ಮೊದಲಿಗನಾಗಿ ಮಾಡಿಸಿಕೊಂಡೆ. ವಾರಕ್ಕೊಮ್ಮೆಯೋ ಎರಡು ಬಾರಿಯೋ ತರಗತಿಗಳ ಹಿತ್ತಲಿನಲ್ಲೇ ಕೂಟ ಕಲಾಪ ನಡೆಸಿದರು – ಎನ್ಸಿಸಿಯದೇ ಕವಾಯತು, ಕಟ್ಟು ಮಾತ್ರ ಸಡಿಲು. ಹುಡುಗರಿಗೆ ಆಸಕ್ತಿ ಹೆಚ್ಚಿಸಲು ಎಂಬಂತೆ, ಬೇಗನೇ ಹಗರಿ ಬೊಮ್ಮನಹಳ್ಳಿಯ ಕೆರೆಯಲ್ಲೊಂದು ಶಿಬಿರ ವ್ಯವಸ್ಥೆ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿದ್ದರು.

ತಂದೆಯ ಕೆಲವು ಎನ್ಸಿಸಿ ಶಿಬಿರಗಳನ್ನು ಅಪ್ರಾಪ್ತ ವಯಸ್ಸಿನಲ್ಲೇ ಅನುಭವಿಸಿ ಬೆಳೆದವನು ನಾನು. ಅವೆಲ್ಲ ಕನಿಷ್ಠ ಹತ್ತು ದಿನಗಳ ಶಿಬಿರಗಳು. ಅವಕ್ಕೆ ತಂದೆ ಮಾಡಿಕೊಳ್ಳುತ್ತಿದ್ದ ತಯಾರಿಗಳನ್ನು ಈಗ ನನ್ನ ಒಂದು ದಿನದ ಶಿಬಿರಕ್ಕೆ ಅಳವಡಿಸಿಕೊಳ್ಳಲು ಹೊರಟಿದ್ದೆ. ಆ ಕಾಲದ ದೊಡ್ಡ ಹೊರೆ ಚೀಲವೆಂದರೆ ‘ಹೋಲ್ಡಾಲ್’. ಸರಳವಾಗಿ ಹೇಳುವುದಿದ್ದರೆ, ಆರಡಿ ಮೂರಡಿ ಉದ್ದಗಲ ಮತ್ತು ಆರೆಂಟು ಇಂಚು ದಪ್ಪದ ಕ್ಯಾನ್ವಾಸ್ ಚೀಲ. ಅದರೊಳಗೆ ತೆಳು ಹಾಸಿಗೆ, ದಿಂಬು ಸೇರಿದಂತೆ ಎಲ್ಲ ಅಗತ್ಯದ ಸಾಮಾನನ್ನೂ ಸಮ ಮಟ್ಟದಲ್ಲಿ ತುಂಬಿ, ಸುರುಳಿ ಮಾಡಿ ಎರಡು ಬೆಲ್ಟ್ ಬಿಗಿದರೆ ಆಯ್ತು. ಯುದ್ಧ ಕಾಲದ ಸೈನಿಕ, ಕರ್ತವ್ಯನಿರತ ಅಗ್ನಿಶಾಮಕ ಸಿಬ್ಬಂದಿ, ಕರೆ ಬಂದ ಕೆಲವೇ ಮಿನಿಟುಗಳಲ್ಲಿ ಪೂರ್ಣ ಸಜ್ಜಿತರಾಗಿ ಕಾರ್ಯರಂಗಕ್ಕೆ ಧುಮುಕುವುದು ಕೇಳಿದ್ದೇನೆ. ನನ್ನ ಸಿದ್ಧತೆಯಾದರೂ ಕಡಿಮೆಯದ್ದಾಗಿರಲಿಲ್ಲ. ಆದರೆ….ರೆ… ಮಾಸ್ಟ್ರು ದಿನವನ್ನು ಮುಂದೂಡುತ್ತಲೇ ಹೋದರು. ವಾರ ಹತ್ತು ದಿನಗಳ ಮುನ್ಸೂಚನೆ ಕೊಡುವುದು, ಮೂರು ನಾಲ್ಕು ದಿನವಿದ್ದಂತೆ ಮುಂದೂಡುವುದು ನಡೆದೇ ಇತ್ತು. ಕಡೇಗೆ ಎನ್ನುವಂತೆ, ಒಂದು ದಿನ ನನ್ನ ಲೆಕ್ಕಕ್ಕೆ ಗಟ್ಟಿಯಾಯ್ತು. ಶನಿವಾರ ಬೆಳಗ್ಗಿನ ಮೊದಲ ರೈಲಿನಲ್ಲಿ ಎಲ್ಲರೂ ಬಳ್ಳಾರಿ ನಿಲ್ದಾಣದಿಂದ ಹಗರಿ, ಮಾರಣೇ ದಿನ ಸಂಜೆ ವಾಪಾಸ್. ಆ ರೈಲು ಹೊಸಪೇಟೆಯಿಂದ ಬರುವುದಾದ್ದರಿಂದ ನಾನೊಬ್ಬ ಮಾತ್ರ ಕಂಟೋನ್ಮೆಂಟ್ ನಿಲ್ದಾಣದಿಂದ ಏರಿ, ಬಳ್ಳಾರಿ ನಿಲ್ದಾಣದಲ್ಲಿ ಸೇರಿಕೊಳ್ಳುವುದೂ ಸ್ಪಷ್ಟವಾಗಿತ್ತು.

ಶನಿವಾರ ಬೆಳಗ್ಗೆ ಬಹುಶಃ ತಂದೆಯೇ ಕಂಟೋನ್ಮೆಂಟ್ ನಿಲ್ದಾಣಕ್ಕೆ ನನ್ನ ಭಾರೀ ಹೋಲ್ಡಾಲ್ ಹೊತ್ತು ಬಂದು, ಬಳ್ಳಾರಿ ಟಿಕೆಟ್ಟಿನೊಡನೆ ಸ್ವಲ್ಪ ಹಣವನ್ನೂ ಕೈಯಲ್ಲಿಟ್ಟು ಕಳಿಸಿದರು. ಬಳ್ಳಾರಿ ನಿಲ್ದಾಣದಲ್ಲಿ ಹಬ್ಬದ ವಾತಾವರಣ ನಿರೀಕ್ಷಿಸಿದ್ದೆ. ಆದರೆ ಎದುರುಗೊಂಡವ ಸಹಪಾಠಿ ಕೃಷ್ಣಮೂರ್ತಿ ಶೆಟ್ಟಿ. ಅದೂ ಹಿಂದಿನ ಸಂಜೆ ಮತ್ತೆ ಶಿಬಿರ ಮುಂದೂಡಿದ್ದ ಸುದ್ದಿಯನ್ನು ನನಗೆ ಮುಟ್ಟಿಸಲು ಕಾದಿದ್ದ. ಶೆಟ್ಟಿಗೂ ನನ್ನಷ್ಟೇ ನಿರಾಸೆಯಾಗಿತ್ತು. ನಾವಿಬ್ಬರು ಚುರುಕಾಗಿಯೇ ಮಾತಾಡಿ ಹೊಸತೇ ಕಾರ್ಯಾಚರಣೆ ರೂಪಿಸಿದೆವು. ಆ ಪ್ರಕಾರ ನಮ್ಮಲ್ಲಿದ್ದ ಕಾಸಿನಲ್ಲಿ ರೈಲ್ ಟಿಕೇಟ್ ಖರೀದಿಸಿ, ಇನ್ನೇನು ಹೊರಡಲಿದ್ದ ರೈಲಿನಲ್ಲೇ “ಹಗರಿ ಚಲೋ” ಎಂದಿದ್ದೆವು.

ಶೆಟ್ಟಿಯ ಅಪ್ಪ ಹಗರಿಯಲ್ಲಿ ಮ್ಯಾಂಗನೀಸ್ ಅದಿರು ಸಾಗಣೆಯ ಮೇಲ್ವಿಚಾರಕ. ರೈಲಿಳಿದದ್ದೇ ಅವರ ವಿಸ್ತಾರ ದಾಸ್ತಾನು ನೆಲೆಗೆ ನಡೆದು, ತತ್ಕಾಲೀನ ತಟ್ಟಿ ಕಚೇರಿಯಲ್ಲಿ ನನ್ನ ಭಾರೀ ಚೀಲವನ್ನು ಕಷ್ಟದಲ್ಲೇ ಹೊತ್ತು ಹಾಕಿದೆವು. ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಮೂಲ ಹಗರಿ ಜಲಾಶಯ. ಅದನ್ನು ನೋಡಿದೆವು. ನಾನು ಕಿಸೆಯಲ್ಲಿ ಕಾಸು ಕುಣಿಯುತ್ತಿತ್ತು. ದಾರಿಯಲ್ಲೊಂದು ದೊಡ್ಡ ಕಲ್ಲಂಗಡಿ ಹಣ್ಣು ಖರೀದಿಸಿದೆ. ಅದನ್ನು ತಟ್ಟಿ-ಭವನಕ್ಕೆ ತಂದು ಇಬ್ಬರೂ ತಿಂದೆವು. ನನಗೆ ಅಮ್ಮ ಕನಿಷ್ಠ ಮೂರು ಹೊತ್ತಿಗಾಗುವಷ್ಟು ಚಪಾತಿ ಕಟ್ಟಿಕೊಟ್ಟಿದ್ದಳು. ಅದನ್ನೂ ಒಮ್ಮೆಗೇ ಹಂಚಿಕೊಂಡು ತಿಂದು ಮುಗಿಸಿದೆವು. ಮುಂದೇನೂ ಕೆಲಸವಿಲ್ಲವೆಂದು ಕಾಣಿಸಿತು. ಅದಕ್ಕೆ ಸರಿಯಾಗಿ ಕಚೇರಿ ಗುಮಾಸ್ತೆ, ಬಳ್ಳಾರಿಗೆ ಹೊರಟ ಲಾರಿಯೊಂದಕ್ಕೆ ನಮ್ಮಿಬ್ಬರನ್ನು ಏರಿಸಿಬಿಟ್ಟ. ಹನ್ನೊಂದು – ಹನ್ನೆರಡು ಗಂಟೆಯ ಸಮಯಕ್ಕೆ ಬಳ್ಳಾರಿಯ ಹೃದಯ – ಬ್ರೂಸ್ ಪೇಟೆಯಲ್ಲಿದ್ದೆವು. ಅಲ್ಲೇ ಒಂದು ಸಿನಿಮಾ ಮಂದಿರ ಕಾಣಿಸಿತು. ಕಿಸೆಯಲ್ಲಿ ಕಾಸು ಕುಣಿಯುತ್ತಿತ್ತು – ಸಿನಿಮಾಕ್ಕೆ ನುಗ್ಗಿದೆವು. ಭಾಷೆ ಏನು, ಕತೆ ಏನು ಒಂದೂ ನೆನಪಿಲ್ಲ. ಸಂಜೆ ಚಿತ್ರ ಮುಗಿದ ಮೇಲೆ ಹೋಲ್ಡಾಲ್ ಎಳೆದುಕೊಂಡು ಹೊರ ಬಂದೆ. ಆ ಕ್ಷಣಕ್ಕೆ ನನ್ನ ಅದೃಷ್ಟ ಖುಲಾಯಿಸಿತ್ತು. ಎನ್ಸಿಸಿ ಕಚೇರಿಯ ಕಾರು, ಮುಖ್ಯ ಗುಮಾಸ್ತೆ ರೇವಣ್ಕರ್ ಸಹಿತ ಏನೋ ಕೆಲಸಕ್ಕೆ ಪೇಟೆಗೆ ಬಂದು ವಾಪಾಸಾಗುವ ದಾರಿಯಲ್ಲಿ ನನ್ನನ್ನು ಕಂಡು ಮನೆಗೊಯ್ದು ಬಿಟ್ಟರು. ಅಮ್ಮನ ಬಳಿ, ತಿಳುವಳಿಕೆ ಇಲ್ಲದೇ ನಾನೂ ಶೆಟ್ಟಿಯೂ ಹಗರಿಗೆ ಹೋಗಿದ್ದೆವು ಎಂದೇ ತಿಳಿಸಿದೆ. ಮುಂದುವರಿದು, ಅಲ್ಲಿ ಶಿಬಿರ ರದ್ದಾದ್ದು ತಿಳಿಯಿತು. ಆದರೂ ಜಲಾಶಯ ನೋಡಿ, ಶೆಟ್ಟಿಯ ಕೃಪೆಯಲ್ಲಿ ಮರಳಿದ್ದೆವು, ಎಂದು ಮುಗಿಸಿದ್ದೆ. ನನ್ನ ದುರಾದೃಷ್ಟ ರಾತ್ರಿ, ತಂದೆ ಕಚೇರಿಯಿಂದ ಮರಳಿದಾಗ ಕಾಡಿತು. ರೇವಣ್ಕರ್ ನಾನು ಸಿನಿಮಾದಿಂದ ಹೊರ ಬರುತ್ತಿದ್ದದ್ದನ್ನು ನೋಡಿದ್ದರು, ಕಚೇರಿಯಲ್ಲಿ ತಂದೆಗೆ ಹೇಳಿದ್ದರು. ತಂದೆಯ ವಿಚಾರಣೆ, ಶಿಕ್ಷಾರೂಪದಲ್ಲಿ ಒಂದೆರಡು ಪೆಟ್ಟೂ ನನಗೆ ಬಿದ್ದಿರಬೇಕು, ನೆನಪು ಮಾಸಿದೆ, ಬಿಡಿ.

ಫಕ್ಕನೆ ಐದಾರು ದಶಕಗಳ ಹಿಂದೆ ಹೋಗಿ, ಕಾಲದ ಕೈಗೂಸುಗಳೇ ಆದ ಮಾಸ್ಟರುಗಳನ್ನೋ (ಬಾಲ ಕುತೂಹಲವನ್ನು ಹತ್ತಿಕ್ಕಿದ್ದಕ್ಕೆ), ಪೋಷಕರನ್ನೋ (ಎಳೆಯನ ನಿರಾಶೆ ಗ್ರಹಿಸದೇ ಶಿಕ್ಷಿಸಿದ್ದಕ್ಕೆ) ದೂಷಿಸುವ ಪ್ರಯತ್ನ ಇದಲ್ಲ. ಇದು ಕೇವಲ ನನ್ನ ಮನೋವಿಕಾಸದ ಜಾಡು ಎಂದಷ್ಟೇ ತಿಳಿದರೆ ಸಾಕು. ಮುಂದೊಂದು ಕಾಲದಲ್ಲಿ ನನಗೆ ಅಭಯ ಹುಟ್ಟಿದಾಗ ತಂದೆ ಹೇಳಿಕೊಂಡದ್ದಿತ್ತು “ಮಗನಿಂದ ಮಗನಿಗೆ ನಾನು ಹೆಚ್ಚು ಸುಸಂಸ್ಕೃತನಾದೆ. ನಾನು ನಿನಗೇನಾಗಿದ್ದೆನೋ ಅದು ನೀನು ಅಭಯನಿಗೆ ಆಗಬೇಡ.”

೧೨. ತಿರುಪತಿಗೋಗಿ ತಿಮ್ಮಪ್ಪ ನೋಡದವರು! (ಕಂಡದ್ದೇ ಸತ್ಯವಲ್ಲ)

ಮಡಿಕೇರಿಯಲ್ಲಿದ್ದಾಗ ಆನಂದನಿಗೆ ಸಿಡುಬು ಬಂದಿತ್ತು (೧೯೫೦ನೇ ದಶಕದ ಕೊನೆಯ ಭಾಗ). ಆಗ ಚಿಕ್ಕಜ್ಜಿ ಹುಡುಗನಿಗೆ ತಿರುಪತಿ ತಿಮ್ಮಪ್ಪನ ದರ್ಶನದ ಹರಕೆ ಹೊತ್ತಿದ್ದರು. ತಂದೆ ದೇವರು ಮತ್ತು ಪ್ರವಾಸ ತನ್ನ ವೈರಿಗಳೆಂದೇ ಭಾವಿಸಿದ್ದರು. ಆದರೆ ಯಾರೋ ಬಳ್ಳಾರಿಯಿಂದ ತಿರುಪತಿ ಹತ್ತಿರವೆಂದು ತಿಳಿಸಿದಾಗ, ಅಮ್ಮನ ಬಾಧ್ಯತೆಯನ್ನು ಪೂರೈಸುವುದಕ್ಕಾಗಿ, ನಮ್ಮೆಲ್ಲರನ್ನೂ ಕೂಡಿಕೊಂಡು ತಿರುಪತಿ ಯಾತ್ರೆ ನಡೆಸಿದರು.

ಬಸ್ಸಿನಲ್ಲಿ ಹೋಗಿ, ದೇವಳದ ವ್ಯವಸ್ಥೆಯ ಪುಟ್ಟ ಮನೆಯಲ್ಲಿ ಎರಡು ರಾತ್ರಿ ಉಳಿದು, ಎಲ್ಲ ನೋಡಿ ಮರಳಿದ್ದು ನನಗಂತೂ ‘ಪುಣ್ಯಯಾತ್ರೆ’ಯಾಗಿಯೂ ಕುಶಿ ಕೊಟ್ಟಿತ್ತು. ಅಲ್ಲಿ ಅಮ್ಮ ನನಗೆ ಕೊಡಿಸಿದ್ದ ಚಿನ್ನದ ಗಿಲೀಟಿನ ವೆಂಕಟೇಶ್ವರ ಮೂರ್ತಿ ಮುಂದೆ ಬಹುಕಾಲ ನನಗೆ ಮಾನಸಿಕ ಆರಾಧ್ಯಮೂರ್ತಿಯೇ ಆಗಿತ್ತು. ಅದರ ಬಣ್ಣ ಮೊದಲು ಕಳಚಿತೋ ನನ್ನ ಭಕ್ತಿಭಾವವೋ ಇಂದು ಹೇಳಲಾರೆ. ಆದರೆ ಒಂದು ಪ್ರಾಕೃತಿಕ ಸತ್ಯವಾಗಿ ತಿರುಮಲೆಯ ಗಿರಿಶ್ರೇಣಿ, ಒಂದು ಅಗಾಧ ಸಾಮಾಜಿಕ ಸಂಘಟನೆಯಾಗಿ ದೇವಳದ ವ್ಯವಸ್ಥೆ ಸದಾ ನನ್ನ ಮನಸ್ಸಿನಲ್ಲಿ ಉಳಿದೇ ಇತ್ತು. ಹಾಗಾಗಿ ಈಚಿನ ದಿನಗಳಲ್ಲಿ ನಾನು ದೇವಕಿ ಇಬ್ಬರೇ ಮತ್ತೆ ತಿರುಪತಿಗೆ ಹೋಗಿ ಬಂದೆವು. ಈ ಬಾರಿ ಎರಡೂ ಮೆಟ್ಟಿಲ ಸಾಲುಗಳನ್ನು ನಡೆದೇ ಅನುಭವಿಸಿದೆವು, ಎರಡು ರಾತ್ರಿಗಳ ಲೆಕ್ಕದಲ್ಲಿ ಅಲ್ಲಿನ ಪುಟ್ಟ ಮನೆಯಲ್ಲಿ ಉಳಿದು, ಎಲ್ಲವನ್ನು ನೋಡಿದರೂ ಬದಲಾದ ಮನೋಸ್ಥಿತಿಗನುಗುಣವಾಗಿ ‘ದೇವದರ್ಶನ’ ತಪ್ಪಿಸಿಕೊಂಡೆವು!

೧೩. ಮರಕೋತಿ ಹೋಗಿ ಟಾರ್‍ಜಾನ್ (ಸಾಹಸ ದರ್ಶನ)

ಬಳ್ಳಾರಿಯಲ್ಲಿ ನಮ್ಮನೆಯ ಪಕ್ಕದ ವಠಾರದಲ್ಲೊಂದು ಭರ್ಜರಿ ಬಂಗ್ಲೆ, ಯಜಮಾನ ಆಗರ್ಭ ಸಿರಿವಂತ – ಬಾಬೂ ನಾಯ್ಡು. ಅವರ ಬಳಿ ಸ್ವಂತ ಉಪಯೋಗಕ್ಕೆ ಸಿನಿಮಾ ಪ್ರೇಷಕವಿತ್ತು (ಪ್ರೊಜೆಕ್ಟರ್). ಅವರು ವರ್ಷದಲ್ಲಿ ಕೆಲವು ಸಲ ತಮ್ಮ ಮಹಾಮನೆಯ ಮುಖಮಂಟಪ ಅಂಗಳದಲ್ಲಿ ಬಿಳಿ ಪರದೆ, ಸಿನಿ-ಪ್ರೇಷಕ ಹೊಂದಿಸಿ, ಇಷ್ಟ ಮಿತ್ರರನ್ನು ಆಮಂತ್ರಿಸಿ ವಿಶೇಷ ಸಿನಿಮಾ ಪ್ರದರ್ಶನ ಮಾಡುತ್ತಿದ್ದರು. ನಾನು ಕಂಡಂತೆ, ಅದರಲ್ಲಿ ಮುಖ್ಯವಾಗಿ ಸಮೀಪದ ಸಂತ ಮೇರಿ ಕಾನ್ವೆಂಟಿನ ಕ್ರಿಸ್ತ ಸೋದರಿಯರೂ ಮತ್ತು ಅಲ್ಲಿನ ವಸತಿ ವಿಭಾಗದ ಮಕ್ಕಳೂ ಬರುತ್ತಿದ್ದರು. ತಂದೆಯ ಅಧಿಕಾರದ ಪರಿಚಯದಲ್ಲಿ ನಮಗೂ ಕರೆ ಬರುತ್ತಿತ್ತು. ತಂದೆ ಭಾಗವಹಿಸಿದ್ದು ನೆನಪಿಲ್ಲ, ನಾನಂತೂ ಅಲ್ಲಿನ ಖಾಯಂ ಪ್ರೇಕ್ಷಕರಲ್ಲೊಬ್ಬ. ಅವರು ಏನೆಲ್ಲ ಸಿನಿಮಾ ತೋರಿಸಿದ್ದಿರಬಹುದು. ಆದರೆ ಇಂದಿಗೂ ನನ್ನ ನೆನಪಿನಲ್ಲುಳಿದಿರುವುದು ಮತ್ತು ಗಾಢವಾಗಿ ಪ್ರಭಾವಿಸಿದ್ದು ಒಂದು ಸರಣಿ – ‘ವಾನರಗಳ ಒಡನಾಡಿ ಟಾರ್ಜಾನ್ ಸಾಹಸಗಳು’. ಶಾಲೆಯಲ್ಲಿ ಮರಳ ಹಾಸಿನ ಮೇಲಿನ ಮರಗಳಲ್ಲಿ ಮರಕೋತಿ ಆಟವಾಡುತ್ತಿದ್ದವನಿಗೆ ಇದು ಕಾಡಿನ ಕುರಿತು ಹೆಚ್ಚಿನ ಕುಮ್ಮಕ್ಕು ಕೊಟ್ಟಿರಬೇಕು.

೧೪. ಸಾಯೀಬಾಬ ಮತ್ತು ಬದಲಾಗಲಿಲ್ಲ ಜಿಟಿಎನ್

ಧನಮ್ಮ ವಠಾರದ ಇನ್ನೊಂದು ಸ್ವತಂತ್ರ ಮನೆಯ ಬಾಡಿಗೆದಾರರು ಕರಾವಳಿ ಮೂಲದ ವೈದ್ಯರು. ಸಹಜವಾಗಿ ನಮ್ಮ ಕುಟುಂಬಕ್ಕೂ ಆತ್ಮೀಯರೇ ಆದರು. ಅವರು ಸತ್ಯ ಸಾಯೀಬಾಬಾನ ನಿಷ್ಠಾವಂತ ಭಕ್ತರು. ಬಳ್ಳಾರಿಗೆ ಪುಟ್ಟಪರ್ತಿ ಸುಮಾರು ನೂರೆಂಬತ್ತು ಕಿಮೀ ದಾರಿ. ವೈದ್ಯರು ಬಿಡುವಿನ ದಿನಗಳಲ್ಲಿ ಸ್ವಂತ ಕಾರಿನಲ್ಲಿ ಹಲವು ಸಲ ಪುಟ್ಟಪರ್ತಿಗೆ ಭೇಟಿಕೊಟ್ಟಿದ್ದರು. ಅವರು ತಂದೆಗೆ ಮಾತಿಗೊಮ್ಮೆ (ಪರೋಕ್ಷವಾಗಿ ತಂದೆಯ ದೇವವಿರೋಧಕ್ಕೆ ಸವಾಲೆನ್ನುವಂತೆ), “ಒಮ್ಮೆ ಸ್ವಾಮಿಯ ದರ್ಶನ ಮಾಡಲು ಬನ್ನಿ” ಎಂದು ಒತ್ತಾಯಿಸುತ್ತಲೇ ಇದ್ದರು. ಕೊನೆಗೊಮ್ಮೆ ಕುಟುಂಬ ಪ್ರವಾಸ ಎನ್ನುವಂತೆ, ಅವರ ಕಾರಿನಲ್ಲಿ ನಾವೆಲ್ಲ ಪುಟ್ಟಪರ್ತಿಗೆ ಹೋಗಿದ್ದೆವು. ದಾರಿಯಲ್ಲಿ ಎರಡು ಮೂರು ಕಡೆ ಹಳ್ಳಿಗರು ಅಡ್ಡ ಹಗ್ಗ ಹಿಡಿದು ನಿಂತು, ಬಲವಂತದ ಸುಂಕ ವಸೂಲು ಮಾಡುತ್ತಿದ್ದದ್ದು ನನಗೆ ಹೊಸ ಸಂಗತಿ.

ಬಾಬಾ ಪವಾಡದ ಮೊದಲ ದಿನಗಳು. ಪುಟ್ಟಪರ್ತಿಯಲ್ಲಿ ಪ್ರಶಾಂತಿ ನಿಲಯದ ಪ್ರಾರ್ಥನಾ ಮಂದಿರ ಹಾಗೂ ಕೆಲವೇ ವಸತಿ ಸೌಕರ್ಯಗಳು ವಿಕಸಿಸಿದ್ದವು. (ತಂದೆಗೆ ಪೂರ್ವಪರಿಚಿತರೇ ಆದ, ಅನರ್ಥಕೋಶ ಖ್ಯಾತಿಯ – ನಾ ಕಸ್ತೂರಿ, ಬಾಬಾ ಬಳಗದಲ್ಲಾಗಲೇ ಒಂದಾಗಿದ್ದವರು ಭೇಟಿಯಾದ್ದು, ನನ್ನ ಜ್ಞಾನ ಪರಿಧಿ ವಿಸ್ತರಿಸಿದಾಗ ಮಹತ್ವದ್ದಾಗಿ ಕಂಡಿತು.) ನಾವು ಪುಟ್ಟಪರ್ತಿಯಲ್ಲಿ ಬಹುಶಃ ಒಂದು ರಾತ್ರಿ ಸೇರಿದಂತೆ ಎರಡು ಹಗಲು ಕಳೆದದ್ದು ನನ್ನ ಸ್ಮರಣಕೋಶದ ಇನ್ನೊಂದೇ ರಮ್ಯ ಪುಟ. ಪ್ರಾರ್ಥನಾ ಮಂದಿರದ ವಿಸ್ತಾರ ಮಣ್ಣಿನ ಅಂಗಳದಲ್ಲಿ ಹರಡಿದಂತೆ ತುಂಬ ಪುಟ್ಟ ಪುಟ್ಟ ಮರಗಳಿದ್ದವು. ಅವುಗಳ ಬುಡಗಳನ್ನೆಲ್ಲ ಅಂಗಳಕ್ಕೆ ಸಮತಟ್ಟು ಮಾಡಿ ಮರಳು ಹರಡಿದ್ದರು. ಆ ಒಂದು ಮರದಡಿಯಲ್ಲಿ ನಮ್ಮ ಮೊಕ್ಕಾಂ. ನಾವೇ ಒಯ್ದ ಸೀಮೆ ಎಣ್ಣೆ ಸ್ಟವ್ ಪಾತ್ರೆ ಪರಡಿ ಹರಡಿಕೊಂಡು ಅಡುಗೆ, ಊಟ, ವಿಶ್ರಾಂತಿ. ಇಡೀ ಅಂಗಳದಲ್ಲಿ ನೂರಾರು ಗುಂಪುಗಳು ಹೀಗೇ ಹರಡಿಕೊಂಡು ಚಂದ್ರ ತಾರೆಯರನ್ನೇ ಮುಡಿದ ಛತ್ತಿನಡಿಯಲ್ಲಿ ನಿದ್ರೆ ಮಾಡಿದ್ದು ನನಗೆ ಅಪೂರ್ವ ಅನುಭವ. ಬೆಳಗ್ಗೆ ಸಮೀಪದ ಚಿತ್ರಾವತಿ ನದಿಗೆ ಹೋಗುವ ಕಚ್ಚಾದಾರಿಯ ಪಕ್ಕದ ಕಾಡು ಗುಡ್ಡೆಯಲ್ಲಿ, ಕಲ್ಲು, ಮುಳ್ಳುಪೊದರು ಮತ್ತು ಪೂರ್ವಸೂರಿಗಳ ಶೇಷದ ನಡುವೆ ನಮ್ಮ ‘ಮಲ-ವಂತಿಗೆ’ ಸಲ್ಲಿಸಲು ಜಾಗ ಹುಡುಕಿದ್ದು, ತೆಳು ಕೊಳಚೆ ನೀರಿನ ಚಿತ್ರಾವತಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದು ಮರೆಯುವಂತದ್ದಲ್ಲ. ಅನಂತರ ಮಂದಿರ, ಅಂಗಳದಲ್ಲೆಲ್ಲ ಶಿಸ್ತಾಗಿ ಕುಳಿತ ಭಕ್ತಗಡಣದ ಕರ್ಣಾನಂದಕರ ಭಜನೆ, ಅದರ ಯಾವುದೋ ಹಂತದಲ್ಲಿ ಶಿಖರ ಪ್ರಾಯವಾಗಿ (ನಾಟಕೀಯವಾಗಿ?) ಒಮ್ಮೆಗೇ ಬಾಬಾ ಪ್ರಕಟವಾದ್ದು – ನನಗಂದು ಅದ್ಭುತ, ರೋಮಾಂಚಕ ಅನುಭವವೇ ಆಗಿತ್ತು. ಮತ್ತೆ ಭಜಕರ ನಡುವೆ ಬಾಬಾ ಕುಶಿವಾಸೀ ನಿಧಾನಕ್ಕೆ ನಡೆದು ಬರುವಾಗ, ಭಕ್ತಾದಿಗಳು ಬಿಗಿ ಶಿಸ್ತು ಸಂಹಿತೆಯ ಅಗೋಚರ ಶೃಂಖಲೆಯಲ್ಲಿ ಸಿಕ್ಕಿ, ಪಾದಸ್ಪರ್ಷಿಸಲಾಗದೆ ನರಳುತ್ತಿದ್ದದ್ದು ನನಗೂ ದುಃಖ ತರಿಸಿತ್ತು. ಬಾಬಾ ಆಗಾಗ ತನ್ನ ಕಿರೀಟಸದೃಶ ಕೇಶಗುಮ್ಮಟದಲ್ಲಿ ಭಾವಪೂರ್ಣವಾಗಿ ಬೆರಳಾಡಿಸುತ್ತಾ ಫಕ್ಕನೆ ಒಬ್ಬೊಬ್ಬರನ್ನು ಆಪ್ತ ಸಂದರ್ಶನಕ್ಕೆ ಆಯ್ದ ಸೂಚನೆ ನೀಡಿದಾಗ, ಭಕ್ತರ ಮೊಗದ ಧನ್ಯತೆಯ ಭಾವ ನನಗೆ ಕಣ್ಣಿಗೆ ಕಟ್ಟಿದಂತಿದೆ.

ನಮ್ಮ ಆತಿಥೇಯ ವೈದ್ಯರಿಗೆ ಹಿಂದೆ ಎರಡು ಮೂರಿ ಬಾರಿ ಆಪ್ತ ಸಂದರ್ಶನದ ಭಾಗ್ಯ ಒದಗಿತ್ತಂತೆ. ಆದರೆ ಈ ಬಾರಿ ಅವರು ನಿರೀಕ್ಷಿಸಿದಂತೆ, ನನ್ನ ತಂದೆಗೆ ಅವಕಾಶ ಸಿಗಲೇ ಇಲ್ಲ. ಸುಂದರ ಪ್ರಯಾಣ ಮತ್ತು ಶಿಬಿರವಾಸದ ನೆನಪಷ್ಟೇ ಉಳಿಸಿಕೊಂಡು ಬಳ್ಳಾರಿಗೆ ಮರಳಿದೆವು. (ಬಾಬಾ ನನ್ನಪ್ಪ ಸಮಪ್ರಾಯದವರು!) ಅಕಸ್ಮಾತ್ ಬಾಬಾ ಸಂದರ್ಶನ ಸಿಕ್ಕಿಬಿಟ್ಟಿದ್ದರೆ? ಎಂದು ಈಚಿನ ದಿನಗಳಲ್ಲಿ ಯೋಚಿಸಿದಾಗೆಲ್ಲ ನನಗೆ ಹುಳಿ ನಗೆ ಬರುತ್ತದೆ. ಮರಳಿ ಬಂದ ಮೇಲೆ ತಂದೆ ತನ್ನ ನಿಷೇಧದ ಪಟ್ಟಿಗೆ ‘ದೇವಮಾನವ’ರನ್ನೂ ಸೇರಿಸಿಕೊಂಡರು. ಅಮ್ಮ ಆತ್ಮಸಂತೋಷಕ್ಕಾಗಿ ದೈವೀಶಕ್ತಿ ಆರೋಪಿಸಿಕೊಂಡ ಯಾರಲ್ಲೂ ಯಾವುದರಲ್ಲೂ ಭಕ್ತಿ ಭಾವ ತಳೆಯಬಲ್ಲವಳು. ಆದರದು ಅವೈಚಾರಿಕ ಮೋಹವಾಗುತ್ತಿರಲಿಲ್ಲ. ಮನೆಯ ಅಮ್ಮನ ಪೂಜಾಸಂಪುಟದಲ್ಲಿ ಬಾಬಾನ ಪಟವೂ ಸೇರಿಕೊಂಡಿತ್ತು.

ತಂದೆ ಯಾವುದೇ ವಿಚಾರಗಳಲ್ಲಿ ನನಗೆ ನೇರ ಉಪದೇಶ ಮಾಡಿದ್ದಿಲ್ಲ. ಅಮ್ಮನಾದರೂ ತನ್ನ ಪೂಜೆ ಪ್ರಾರ್ಥನೆಗಳಿಗೆ ನಮ್ಮನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು, ಜುಲುಮೆ ಮಾಡುತ್ತಿರಲಿಲ್ಲ. ಹಾಗಾಗಿ ನನ್ನ ಬಾಲ ಮನಸ್ಸು ಸ್ವತಂತ್ರವಾಗಿ ಓಲಾಡುತ್ತ ತತ್ಕಾಲೀನವಾಗಿ ಬಾಬಾನನ್ನು ತಿರುಪತಿ ತಿಮ್ಮಪ್ಪನಿಗೂ ಹೆಚ್ಚಿನ ಎತ್ತರದಲ್ಲೇ ಕೂರಿಸಿತ್ತು. ತುಸು ಮುಂದುವರಿದ ದಿನಗಳಲ್ಲಿ ಇಡಿಯ ಭಕ್ತಿ-ಭಾವ ಒಂದು ಸುಂದರ ಕಟ್ಟುಕತೆಯಾಗಿ, ಮನದ ಕಸಬುಟ್ಟಿಯನ್ನು ಸೇರಿಕೊಂಡಿತು. ಆದರೆ ಬಾಬಾ ಭಜನೆಗಳು, ಮುಂದೆ ಆಕಾಶವಾಣಿ ಪ್ರಸರಿಸಲು ತೊಡಗಿದಾಗ, ಇಂದೂ ಕೇಳಿದರೆ ನಾನು ತಲೆದೂಗುವವನೇ. ಅವು ಪ್ರಚೋದಿಸುವ ಕೇವಲ ಭಾವಗಾಯನದ ಗುಂಗು ಇಂದಿಗೂ ನನಗೆ ಪ್ರಿಯವಾಗಿಯೇ ಉಳಿದಿವೆ.

೧೫. ಅಪೂರ್ವ ಪರಿಚಯ – ಜಂಬೂನಾಥೇಶ್ವರ ಕೆಚಪ್ (ಸಾಹಸ-ಪ್ರವಾಸ)

ಮಡಿಕೇರಿಯಲ್ಲಿದ್ದ ಕಾಲದಲ್ಲಿ ನಡೆದ ಒಂದು ಎನ್ಸಿಸಿ ಶಿಬಿರದಲ್ಲಿ ನಾನು (ನಾಲ್ಕೈದರ ಬಾಲಕ) ತಂದೆಯದೇ ಗುಡಾರದಲ್ಲಿದ್ದುಕೊಂಡು, ಹಗಲು ಶಿಬಿರ ವಲಯದೊಳಗೆ ಕುಶಿವಾಸೀ ಅಡ್ಡಾಡಿ ಸಂತೋಷಪಟ್ಟಿದ್ದೆ. ಅಲ್ಲಿ ರಾತ್ರಿಯ ಸಾಂಸ್ಕೃತಿಕ ಕಲಾಪದ ಭಾಗವಾಗಿ ಕ್ಯಾಡೆಟ್ ಯಕ್ಷಗಾನ ನೋಡಿ ಮರಳುವಾಗ, ಗುಡಾರದ ಗೂಟಗಳಿಗೆ ತೊಡರಿ ಬಿದ್ದದ್ದೂ ಮಧುರಸ್ಮೃತಿಯೇ ಆಗುಳಿದಿದೆ ಎಂದರೆ ನಗುತ್ತೀರೋ ಏನೋ.

ಬಳ್ಳಾರಿಯಲ್ಲಿದ್ದಾಗ ಅಂಥದ್ದೇ ಒಂದು (ಕಾಲೇಜು ಹುಡುಗರ) ವಾರ್ಷಿಕ ಶಿಬಿರ ಹೊಸಪೇಟೆಯ ಶಾಲಾ ಕಟ್ಟಡದಲ್ಲಿ ನಡೆದಿತ್ತು. ಆಗ ತಂದೆ ಹೆಚ್ಚಿನ ಅನುಭವಕ್ಕಾಗಿ ನನ್ನನ್ನು ಕ್ಯಾಡೆಟ್ಟುಗಳೊಡನೇ ಸ್ವತಂತ್ರ ವಾಸಕ್ಕೆ ಬಿಟ್ಟು ಮರೆತಂದಿದ್ದರು! ಊಟ ತಿಂಡಿಗೆ ಹುಡುಗರೊಂದಿಗೆ ನಾನೂ ಸರದಿ ಸಾಲು ಹಚ್ಚುತ್ತಿದ್ದೆ. ಉಳಿದಂತೆ ಶಿಬಿರ ಸಾಮಗ್ರಿಗಳಿಗೆ ಪೇಟೆ ಸುತ್ತುವ ಎನ್ಸಿಸಿ ಲಾರಿಯಲ್ಲಿ ಬೇಕಾಬಿಟ್ಟಿ ಸುತ್ತಾಡಿದ್ದೆ. ಊರುಪೂರಾ ಕಬ್ಬು ಹೊತ್ತು ತಿರುಗಾಡುವ ಲಾರಿ, ಗಾಡಿಗಳಿಂದ ಕಣ್ತಪ್ಪಿಸಿ ಒಂದೊಂದು ಜಲ್ಲೆ ಪೀಕಿಸಿ, ಕಚ್ಚಿ ಕಚ್ಚಿಯೇ ಸಿಪ್ಪೆ ಸುಲಿದು, ಜಗಿದುಗಿದದ್ದಕ್ಕೆ ಲೆಕ್ಕವಿಲ್ಲ. ಇದರ ಪರಿಣಾಮವಾಗಿ ಬಾಯಿಯಲ್ಲಾದ ಗೀರು ಗಾಯಗಳು, ಲೆಕ್ಕದ ಊಟ ತಿಂಡಿ ಮಾಡುವಾಗ ಉರಿದು ಸತಾಯಿಸುತ್ತಿದ್ದವು!

ಕ್ಯಾಡೆಟ್ಟುಗಳ ಜತೆ ಫಯರಿಂಗ್ ರೇಂಜಿಗೆ ಹೋಗುತ್ತಿದ್ದೆ. ಅಲ್ಲಿ ಹಾಜರಿ ಪಟ್ಟಿ, ಬಿಗಿ ಲೆಕ್ಕ ಇಟ್ಟು ಪ್ರತಿ ಕ್ಯಾಡೆಟ್ ಐದೋ ಹತ್ತೋ ಗುಂಡು ಹಾರಿಸುವುದು ಕಡ್ಡಾಯವಿತ್ತು. ಆದರೆ ಕೆಲವರು ನಾಲ್ಕೈದು ಹೊಡೆಯುವುದರೊಳಗೇ ರೈಫಲ್ ಎದೆಗೆ ಗುದ್ದಿಸಿಕೊಂಡು ನೋವು ಭಯಗಳಿಂದ ಹಿಂಜರಿಯುವುದಿತ್ತು. ಅಂಥವರ ‘ಖಾತೆ ಪೂರೈಸುವ’ ಹಲವು ಅವಕಾಶಗಳನ್ನು ಉಸ್ತುವಾರಿ ಅಧಿಕಾರಿಗಳು ನನಗೆ (ಸಾಹೇಬ್ರ ಮಗ!) ಉದಾರವಾಗಿ ಕೊಡುತ್ತಿದ್ದರು. ನನಗೆ ಗುಂಡು ಹಾರಿಸಲು ಗುಂಡಿಗೆಯೇನೋ ಗಟ್ಟಿಯಿತ್ತು, ಗುರಿ ಮಾತ್ರ ಅಷ್ಟಕ್ಕಷ್ಟೇ.

ಶಿಬಿರದ ಭಾಗವಾಗಿ ಬೇರೆ ಬೇರೆ ದಿನಗಳಲ್ಲಿ ಸಣ್ಣ ಸಣ್ಣ ಗುಂಪುಗಳಿಗೆ ಚಾರಣ (ರೂಟ್ ಮಾರ್ಚ್) ಇರುತ್ತಿತ್ತು. ಅಂಥ ಎರಡನ್ನು ಪೂರೈಸಿದ ರಮ್ಯ ನೆನಪು ನನ್ನದು. ಒಂದು, ಹೊಸಪೇಟೆ ನಗರದ ಹೊರವಲಯದಲ್ಲಿರುವ ಉನ್ನತ ಬೆಟ್ಟ ಜಂಬುನಾಥೇಶ್ವರ ವಿಜಯ! (ಇದೇ ಹೆಸರಿನಲ್ಲಿ ಆ ಕಾಲದಲ್ಲಿ ನಾನೊಂದು ಲೇಖನವನ್ನು ಬರೆದಿದ್ದೆ!) ಬೆಟ್ಟದ ಸುಮಾರು ಅರ್ಧ ಭಾಗದವರೆಗೆ, ಅಂದರೆ ಜಂಬುನಾಥನ ದೇವಳದವರೆಗೆ ಕಚ್ಚಾ ಮೆಟ್ಟಿಲುಗಳಿದ್ದವು. ಮತ್ತೆ ಶಿಖರದತ್ತ ಕೇವಲ ಜಾನುವಾರುಗಳ ಸವಕಲು ಜಾಡು. ಶಿಖರದಿಂದಾಚಿನ ಕೊಳ್ಳದಲ್ಲಿ ವಿಸ್ತಾರವಾಗಿ ಹರಡಿದೆ ತುಂಗಭದ್ರಾ ಅಣೆಕಟ್ಟಿನ ಹಿನ್ನೀರ ಜಲಾಶಯ. ಅತ್ತ ಇಳಿಯುವುದೇ ನಮ್ಮ ಲಕ್ಷ್ಯ. ತೀವ್ರ ಇಳುಕಲಿನ, ಸರಿಯಾದ ಜಾಡೂ ಇಲ್ಲದ ನೆಲದಲ್ಲಿ, ಕಲ್ಲು ಚರಳ ಜಾರಾಟದಲ್ಲಿ, ಮುಳ್ಳಪೊದರುಗಳ ಗೀರಾಟದಲ್ಲಿ ಬುಡ ಮುಟ್ಟಿದ್ದೊಂದು ಸ್ವತಂತ್ರ ಸಾಹಸ. ಅಲ್ಲಿಗೆ ಬಳಸು ಮಾರ್ಗದಲ್ಲಿ ಬಂದಿದ್ದ ಎನ್ಸಿಸಿ ಲಾರಿ ಎಲ್ಲರಿಗೂ ತಿಂಡಿ ತೀರ್ಥ ಕೊಟ್ಟು ಸಮ್ಮಾನಿಸಿತ್ತು.

ನಿಶ್ಚಲ ಜಲಧಿ ಪಾರದರ್ಶಕವಾಗಿತ್ತು. ಜಲಾಶಯ ಆ ವಲಯದಲ್ಲಿ ಬಹುತೇಕ ನಮ್ಮ ಪಾದ – ಮೊಣಕಾಲಷ್ಟೇ ಮುಳುಗುವ ಆಳವಿತ್ತು. (ಅಲ್ಲಿ ದಂಡೆಯಲ್ಲೊಂದು ಬಹುತೇಕ ಹಾಳುಬಿದ್ದ ಐಬಿ ಇತ್ತು) ತಳದಲ್ಲಿ ಆ ವಲಯಕ್ಕೆ ಸಹಜವಾದ ಮುಷ್ಟಿಗಾತ್ರದ ಮ್ಯಾಂಗನೀಸ್ ಕಲ್ಲುಗಳು ಬಿಗಿಯಾಗೇನೋ ಕುಳಿತಿದ್ದವು. ಆದರೆ ಮಳೆಗಾಲದ ಪ್ರವಾಹದಲ್ಲಿ ಬಂದ ನುಣ್ಣನೆ ದೂಳು ಅವಕ್ಕೆ ಬಿಗಿ ಮಕ್ಮಲ್ಲಿನ ಹೊದಿಕೆಯಂತೇ ಅಂಟಿಕೊಂಡಿದ್ದು, ವಿಪರೀತ ಜಾರುತ್ತಿತ್ತು. ನಮ್ಮ ನೀರಿನ ಮೋಹದಲ್ಲಿ ಎಲ್ಲರೂ ಬೇಗನೆ ಜಾರಾಟಕ್ಕೆ ಹೊಂದಿಕೊಂಡೆವು. ಚಾರಣದ ಉದ್ದಕ್ಕೆ ಚುರುಕಾಯಿಸಿದ ‘ಬಳ್ಳಾರಿ ಬಿಸಿಲಿ’ನ ಉರಿ ತಣಿಸಿದೆವು, ಬಸಿದ ಬೆವರು, ಉರುಡಿದ್ದಕ್ಕೆ ಹೊತ್ತ ದೂಳು ಗೀರುಗಾಯಗಳನ್ನೆಲ್ಲ ತೊಳೆದುಕೊಂಡು ಸಂಭ್ರಮಿಸಿದ್ದೆವು.

ಇನ್ನೊಂದು ಚಾರಣ ಸುಮಾರು ಏಳೆಂಟು ಕಿಮೀ ಅಂತರದ ಹಾಳು ಹಂಪಿಗೆ. ಇಂದಿನ ಹಂಪಿಯಲ್ಲಿ ಸಂಶೋಧನಾತ್ಮಕ ಉತ್ಖನದಿಂದ ಲಭ್ಯವಾದ ವಿಶೇಶ ವೀಕ್ಷಣಾವಕಾಶಗಳೇನೂ ಆ ಕಾಲದಲ್ಲಿ ಇರಲಿಲ್ಲ. ಸ್ವಲ್ಪವೇ ಸುತ್ತಾಡಿ, ವಿರೂಪಾಕ್ಷ ದೇವಳದ ಭಾಗವೇ ಆದ ಹೊರ ಮಂಟಪದಲ್ಲಿ ರಾತ್ರಿಗೆ ಉಳಿದಿದ್ದೆವು. ಅಲ್ಲಿಗೆ ಲಾರಿಯಲ್ಲಿ ಸಕಲ ಸರಂಜಾಮು ಸಜ್ಜಿತರಾದ ನಳ ವಲಲರು ಬಂದಿದ್ದರು. ಮಂಟಪದ ಒಂದು ಮೂಲೆಯಲ್ಲಿ ಸೌದೆ ಒಲೆ ಹೂಡಿ, ಐತಿಹಾಸಿಕ ಕಲ್ಲಿನ ಕಾಲುವೆಯ ನೀರನ್ನೇ ಬಳಸಿ, ನಮಗೆ ಮೂರೂ ಹೊತ್ತಿಗೆ ಅಮೃತವನ್ನೇ ಕೊಟ್ಟರು. ವಿಶೇಷವಾಗಿ ಉಲ್ಲೇಖಿಸುವುದಿದ್ದರೆ, ಅದೇ ಮೊದಲು ನಾನು ಕೇಳಿದ ಮತ್ತು ರುಚಿನೋಡಿದ ಟೊಮೆಟೋ ಕೆಚಪ್! ಇಂದಿಗೂ ಎಷ್ಟೇ ಸುಪ್ರಸಿದ್ಧ ವ್ಯಾಪಾರೀನಾಮೆಯ ಟೊಮೆಟೋ ಕೆಚಪ್ ತಿನ್ನುವಾಗಲೂ ನೆನೆವುದೆನ್ನ ಮನಂ ಹಂಪೀಪಾಕಮಂ. ರಾಶಿ ಟೊಮೆಟೋ ನೀರುಳ್ಳೀ ಕೊಚ್ಚಿ, ಒಲೆಯ ಮೇಲಿನ ದೊಡ್ಡ ಬಾಣಲೆಯಲ್ಲಿ ಮೂಡಿಸಿದ ಅದ್ಭುತವನ್ನು ಮರೆತೇನೆಂದರೂ ಮರೆಯಲಿ ಹ್ಯಾಂಗ!

೧೬. ದೊಂಗಲುನ್ನಾರು ಜಾಗ್ರತ! (ಮುನ್ನೆಚ್ಚರಿಕೆ)

ಬಳ್ಳಾರಿ ತಂದೆಗೇನೋ ಬಿಡುವಿರದ ವೃತ್ತಿರಂಗ. ತಾಯಿಗೆ ಮಾತ್ರ ಮೂವರು ಪುತ್ರರ ನಿಭಾವಣೆಯ ಏಕತಾನತೆಯ ಗೃಹಬಂಧ. ಮನೆಯೊಳಗೆ ಬೆವರು ಆವಿಯಾಗುವ ಧಗೆ. ಹೊರಗೆ ರಣಗುಡುವ ಬಿಸಿಲು, ವಿಸ್ತಾರ ಅಂಗಳವಿದ್ದರೂ ವಿರಳ ಜಾಲಿಮರಗಳ ಮರುಭೂಮಿ. ಹಿತ್ತಿಲಿಗೆ ಕಾಲಿಕ್ಕಿದರೆ ಜಗಳಗಂಟಿ ಯಜಮಾಂತಿ – ಧನಮ್ಮ. ಮತ್ತುಳಿದದ್ದು ನಿಮಗೆ ಈಗಾಗಲೇ ಪರಿಚಿತವಾದ ಎರಡು ಕುಟುಂಬ – ಅವರವರ ದೈನಂದಿನ ದಂದುಗದಲ್ಲಿ ಮುಳುಗಿಹೋದವರು. ಬಳ್ಳಾರಿ ದೊಡ್ಡ ಊರೇ ಆದರೂ ನೆಂಟರು, ಮಿತ್ರರು, ಒಂದು ಪ್ರೇಕ್ಷಣೀಯವಿಲ್ಲದೆ ಭಣ ಭಣ. ಸಹಜವಾಗಿ ಮಕ್ಕಳಿಗೆ ದೊಡ್ಡ ರಜೆಗಳು ಬರುತ್ತಿದ್ದಂತೆ, ತಂದೆ ನಮ್ಮ ನಾಲ್ವರನ್ನೂ ಪುತ್ತೂರಿಗೆ, ರವಾನಿಸುತ್ತಿದ್ದರು.
ನಾಲ್ವರ ಬಟ್ಟೆಬರಿಯಲ್ಲದೇ ಸಾಕಷ್ಟು ತಿಂಡಿ ತೀರ್ಥದ ಹೊರೆ. ತಂದೆಯ ನಾಯಕತ್ವವಿಲ್ಲದೇ ಅಷ್ಟನ್ನೂ ಎಳೆದುಕೊಂಡು, ಮೂವರು ಅಬೋಧಗಳನ್ನು ನೂಕಿಕೊಂಡು, ಇಪ್ಪತ್ನಾಲ್ಕು ಗಂಟೆಯ ಮಜಲೋಟ ಅಮ್ಮನಿಗೆ ಸಣ್ಣ ಕೆಲಸವಲ್ಲ. ಅದು ಚರವಾಣಿಯಿರಲಿ, ದೂರವಾಣಿಯೂ ಸುಲಭ ಬಳಕೆಯ ದಿನಗಳಲ್ಲ. ಹಾಗಾಗಿ ತಂದೆ ಹತ್ತು ಹದಿನೈದು ದಿನಕ್ಕೆ ಮೊದಲೇ ಬೆಂಗಳೂರಿನಲ್ಲಿದ್ದ ತಮ್ಮನಿಗೆ (ಜಿಟಿ ಕೃಷ್ಣಮೂರ್ತಿ, ಕೆನರಾ ಬ್ಯಾಂಕ್), ಸುದ್ದಿ ಮುಟ್ಟಿಸಿ, ‘ಏಕಸದಸ್ಯ ಸಾಗ್‍ಹಾಕೂ ಸಮಿತಿ’ ಗಟ್ಟಿ ಮಾಡುತ್ತಿದ್ದರು.

ಬಳ್ಳಾರಿ – ಗುಂತಕಲ್ ಮಾರ್ಗದ ಸಂಜೆಯ ರೈಲು ನಮ್ಮ ಮೊದಲ ಮಜಲು. ರೈಲಿನ ಫಸ್ಟ್ ಕ್ಲಾಸ್ ವಿಭಾಗದ ಸ್ವತಂತ್ರ ಬಾಗಿಲಿನ ಅಂಕಣ ನಮ್ಮನ್ನು ಕಾದಿರುತ್ತಿತ್ತು. ತಂದೆ ಏರಿಸಿ ಬಿಡುತ್ತಿದ್ದರು. ರೈಲಿನ ಏಕತಾಳದಲ್ಲಿ ರಾತ್ರಿಯ ನಿದ್ರೆಯನ್ನು ಕಳೆದು, ಬೆಳಗ್ಗೆ ಬೇಗನೆ ಪ್ರಾತರ್ವಿಧಿಗಳನ್ನೂ ಮುಗಿಸಿ, ಮತ್ತೆ ಹನ್ನೆರಡು ಗಂಟೆಯ ಬಸ್ಸು ಪ್ರಯಾಣಕ್ಕೆ ಸಜ್ಜಾಗಿರುತ್ತಿದ್ದೆವು. ಮೂರ್ತಿ ನಮ್ಮನ್ನು ಕಲಾಸೀಪಾಳ್ಯದ ನಿಲ್ದಾಣಕ್ಕೊಯ್ದು, ಮಂಗಳೂರು ಬಸ್ ಏರಿಸಿ ಬಿಡುತ್ತಿದ್ದ. ಮತ್ತೆ ಮೈಸೂರು, ಮಡಿಕೇರಿಗಳೊಡನೆ ಯಾವ ಸಂಬಂಧವೂ ಇಟ್ಟುಕೊಳ್ಳದೇ ಮುಸ್ಸಂಜೆಗೆ ಪುತ್ತೂರು. ಅಮ್ಮ ಬಳ್ಳಾರಿಯಲ್ಲಿ ಒಳಗಿನಿಂದ ಹಾಕಿದ ಬೋಲ್ಟ್, ತೆರೆಯುತ್ತಿದ್ದದ್ದು ಮರು ಬೆಳಿಗ್ಗೆ ಮೂರ್ತಿಯ ಮುಖ ಕಂಡ ಮೇಲೆ. ಕಾರಣ: ಭೋಗಿಗಳೊಳಗೆ ಇಲಾಖೆಯೇ ಅಲ್ಲಲ್ಲಿ ಘೋಷಿಸಿಕೊಂಡಿತ್ತು – “ದೊಂಗಲುನ್ನಾರು ಜಾಗ್ರತ!” (ಕಳ್ಳರಿದ್ದಾರೆ ಜಾಗ್ರತೆ) ತಿಂಡಿ ತೀರ್ಥಗಳಲ್ಲಿ ನಾವು ಸ್ವಯಂಪೂರ್ಣರು. ಕಾರಣ: ಹೋಟೆಲ್ ಅಥವಾ ಮಾರಿಕೊಂಡು ಬರುವ ತಿಂಡಿ ತೀರ್ಥಗಳೆಲ್ಲ ಅನಾರೋಗ್ಯಕರ.

೧೭. ದೇಶಭಕ್ತಿ ಎಂಬುದು ಲೊಳಲೊಟ್ಟೆ!

ದೇಶದಲ್ಲಿ ಎರಡನೇ ಹಂತದ ಸೈನಿಕರನ್ನು ಸಿದ್ಧಪಡಿಸುವಂತೇ ಎನ್ಸಿಸಿ ರೂಪುಗೊಂಡಿದೆ. ಹಾಗೆ ತರಬೇತಿ ಕೊಡುವ ಪೂರ್ಣಕಾಲೀನ ಸೈನ್ಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸೇತು – ಅಂಶಕಾಲಿಕ ಎನ್ಸಿಸಿ ಅಧಿಕಾರಿಗಳಾಗಿ ತರಬೇತಾದ ಅಧ್ಯಾಪಕರು. ಚೀನಾ ದಾಳಿಯ (೧೯೬೨) ತುರ್ತಿನಲ್ಲಿ ಸೈನಿಕ ವರ್ಗವೆಲ್ಲ, ಎನ್ಸಿಸಿಯಂಥ ನಾಗರಿಕವಲಯದ ಜವಾಬ್ದಾರಿಗಳನ್ನು ಕಳಚಿಕೊಂಡು ಮೂಲ ಸೇನಾ ಜವಾಬ್ದಾರಿಗಳತ್ತ ಹೋಗಬೇಕಾಯ್ತು. ಜತೆಗೇ ಯುದ್ಧ ತೀವ್ರತೆಯನ್ನು ಗಮನಿಸಿ, ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಎನ್ಸಿಸಿ ತರಬೇತಿಯನ್ನು ಕಡ್ಡಾಯಗೊಳಿಸಿದರು. ಆಗ ಸೈನ್ಯಾಧಿಕಾರಿಗಳಿಲ್ಲದೆ ಉಂಟಾದ ಖಾಲಿಯನ್ನೂ ಹೆಚ್ಚುವರಿ ವಿದ್ಯಾರ್ಥಿಗಳ ಸೇರ್ಪಡೆಯಿಂದಾದ ಒತ್ತಡವನ್ನೂ ನಿಭಾಯಿಸಲು ಅಂಶಕಾಲಿಕ ಎನ್ಸಿಸಿ ಅಧಿಕಾರಿಗಳನ್ನು ಪೂರ್ಣಕಾಲಿಕವಾಗಿಸುವ ಅವಕಾಶ ತೆರೆದುಕೊಂಡಿತು. ಹಾಗೆ ದೇಶಪ್ರೇಮದ ಹೆಸರಿನಲ್ಲಿ, ಅಧ್ಯಾಪನ ವೃತ್ತಿಯನ್ನು ಬಿಟ್ಟು, ಪೂರ್ಣಕಾಲಿಕ ಎನ್ಸಿಸಿ ಅಧಿಕಾರಿಗಳಾಗಿ ಹೋದವರಲ್ಲಿ ನನ್ನ ತಂದೆಯೂ ಒಬ್ಬರು. ಅವರ ಒಪ್ಪಂದದ ಅವಧಿ ಕನಿಷ್ಠ ಮೂರು ವರ್ಷಗಳದ್ದಿತ್ತು. ಆದರೆ….

೯೬೩ರಲ್ಲಿ ಬಳ್ಳಾರಿ ಸೇರಿ, ಹೊಸದಾಗಿ ಎನ್ಸಿಸಿ ಬಟಾಲಿಯನ್ ಸಂಘಟಿಸಿ, ಕಚೇರಿ, ಸಿಬ್ಬಂದಿ ಸಂಘಟನೆಗಳನ್ನೆಲ್ಲ ತಂದೆ ಸಮರ್ಥವಾಗಿಯೇ ನಡೆಸಿದರು. (ವಿವರಗಳಿಗೆ ಓದಿ: ‘ಎನ್.ಸಿ.ಸಿ ದಿನಗಳು’.) ಆ ಶ್ರಮದೊಡನೆ, ಎರಡೇ ವರ್ಷಗಳಲ್ಲಿ ತಂದೆಗೆ ‘ಸೈನ್ಯ’ವೂ ಬಹುತೇಕ ಭ್ರಷ್ಟ-ಸಹನೆಯ ಭಾರತೀಯ ಸಮಾಜದಿಂದ ಏನೇನೂ ಭಿನ್ನವಲ್ಲ ಎಂಬ ಸತ್ಯದ ಅರಿವಾಯ್ತು. ಯಃಕಶ್ಚಿತ್ ಮೂರು ರೂಪಾಯಿಯ ಸಾಗಣೆ ವೆಚ್ಚಕ್ಕೆ ಹದಿನೈದು ರೂಪಾಯಿ ಪಾವತಿ ರಸೀದಿ ಮುಂದೆ ಮಾಡುವ ಸುಬೇದಾರನಿಂದ, ಹೊಸದಾಗಿ ಬಂದ ನೂರಾರು ರಗ್ಗುಗಳನ್ನು ‘ಗುಜರಿ’ ಎಂದು ಬರೆದು ಲಕ್ಷಾಂತರ ನುಂಗುವ ‘ಪರಮ ವೀರ’ನವರೆಗೆ ಕಂಡರು. ದೇಶರಕ್ಷಣೆಯಲ್ಲಿ ಹಸಿವು ನೀರಡಿಕೆಗಳನ್ನೂ ಮರೆಯುವ ಖ್ಯಾತಿಯ ವೀರರು, ರಜಾದಿನದಲ್ಲಿ ಒಂದು ಗಂಟೆ ಪೆರೇಡು ನಡೆಸಿಕೊಟ್ಟದ್ದಕ್ಕೆ, ಹಿಂಬಾಲಿಸಿದ ಕೆಲಸದ ದಿನವನ್ನು ರಜಾದಿನವಾಗಿಸಲು ಹಕ್ಕೊತ್ತಾಯ ನಡೆಸುವುದನ್ನು ಅನುಭವಿಸಿದರು. ಭಾರೀ ಆದರ್ಶದ ಕಲ್ಪನೆಯೊಡನೆ ಅಂಶಕಾಲಿಕತೆಯಿಂದ ಪೂರ್ಣಾಧಿಕಾರಕ್ಕೆ ಬರುವಾಗ ಕನಿಷ್ಠ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಅದನ್ನು ಆರ್ಥಿಕ ನಷ್ಟದೊಡನೆ ಮೀರಿ, ತಂದೆ ಎರಡೇ ವರ್ಷಕ್ಕೆ ರಾಜೀನಾಮೆ ಕೊಟ್ಟರು. ಮೊದಲಲ್ಲೇ ಸರಕಾರ ಕೊಟ್ಟ ಆಶ್ವಾಸನೆಯ ಬಲದಲ್ಲಿ ಮತ್ತೆ ಅಧ್ಯಾಪನ ಹುದ್ದೆಗೆ ಮರಳಿದರು. ತೀವ್ರ ಹತಾಶೆಯೊಡನೆ ಬಳ್ಳಾರಿ ಬಿಟ್ಟು ಬೆಂಗಳೂರು ಸೇರಿದೆವು.

(ಮುಂದುವರಿಯಲಿದೆ)