(ಪ್ರಾಕೃತಿಕ ಭಾರತ ಸೀಳೋಟ – ೩) ವಿಜಯಪುರ – ಹಲವು ಪಾಳೇಪಟ್ಟುಗಳ ಮಿಶ್ರಣದೊಡನೆಯೂ ಸುಮಾರು ಹನ್ನೊಂದನೇ ಶತಮಾನದಲ್ಲಿ, ಚಾಲುಕ್ಯರ ಆಡಳಿತದಲ್ಲಿ ಗಟ್ಟಿಯಾಗಿ ರೂಪು ಪಡೆದ ನಗರ. ಮುಘಲ್, ಬಹಮನೀ, ಆದಿಲ್ ಶಾಹೀ, ಹೈದರಾಬಾದ್ ನಿಜಾಂ, ಮರಾಠ, ಬ್ರಿಟಿಶ್…… ಆಡಳಿತಗಳ ಸುಳಿಗಳಲ್ಲಿ ಬೆಳೆದಿದೆ, ಬಳಲಿದೆ. ಅದರಲ್ಲಿ ಢಾಳಾಗಿ ಕಾಣುವ ಕೆಲವು ಸಾಕ್ಷಿಗಳನ್ನಾದರೂ ನೋಡಲು ನಾವು (೨೭-೪-೯೦ರ) ಬೆಳಗ್ಗೆ ಐದೂವರೆ ಗಂಟೆಗೇ ಹೊರಟೆವು. ಮುಂದೆ ಮೊಪೆಡ್ಡಿನಲ್ಲಿ ಜೋಶಿಯವರ ‘ಶಿಷ್ಯ’ ಸಿದ್ಧಣ್ಣ ಬಿರಾದಾರ್. ಹಿಂದೆ ಖಾಲೀ ಬೈಕುಗಳಲ್ಲಿ ನಾವಾರು. ಅಪೂರ್ಣಗೊಂಡ ಮಹಲ್ಲಿನ ಹನ್ನೆರಡು ಕಮಾನುಗಳು (ಬಾರಾ ಕಮಾನ್), ಒಂದು ಭಾರೀ ಬುರುಜು (ಉಪ್ಲಿ ಬುರ್ಜ್), ಕೋಟೆಯ ಹಲವು ಫಿರಂಗಿಗಳ ಸಾಂಗತ್ಯದಲ್ಲಿ ತೋಪುಗಳ ರಾಜ ಎಂದೇ ಖ್ಯಾತವಾದ ಮಾಲಿಕ್ ಎ ಮೈದಾನ್, ತಾಜ್ ಮಹಲ್ಲಿಗೆ ಪ್ರೇರಣೆಯಾದ ಇಬ್ರಾಹಿಂ ರೋಜಾ, ಜುಮ್ಮಾ ಮಸೀದಿ ಸುತ್ತಿದೆವು. ನೋಡದೇ ಬಿಟ್ಟರೆ ಬಿಜಾಪುರ ನೋಡಿದ್ದೇ ಸುಳ್ಳೆನ್ನುವ ಗೋಲ್ ಗುಂಬಜ್‍‍ಗಂತೂ ಅವಶ್ಯ ಹೋಗಿದ್ದೆವು. ಅಲ್ಲಿನ ಶಬ್ದ ಮಾಲಿನ್ಯಕ್ಕೆ ಮೌನವಾಗಿ ಕಿವಿಕೊಟ್ಟೆವು. ಎಡೆಯಲ್ಲೆಲ್ಲೋ ಹೋಟೆಲಿನಲ್ಲಿ ತಿಂಡಿ ಮಾಡಿಕೊಂಡೆವು. ವಿವಿಧ ರಾಜಾಡಳಿತಗಳ ಕಾಲದಲ್ಲಿ ನಿರ್ಮಾಣಗೊಂಡು ಬೇಸಗೆಯ ಉತ್ತುಂಗದಲ್ಲೂ ಭರ್ತಿ ನೀರಿದ್ದ ಭಾರೀ ಬಾವಿಗಳಿಗೆ ಪ್ರತಿನಿಧಿ ಎನ್ನುವಂತೆ ಒಂದನ್ನೂ (ತಾಸ್ ಬಾವಡೆ) ಕಂಡೆವು. ಅನ್ಯ ಮಾರ್ಗಗಳಲ್ಲಿ ಗೆದ್ದು ಬರುವ ನಮ್ಮ ‘ಪ್ರಜಾಪ್ರತಿನಿಧಿ’ಗಳು ವಿವೇಚನೆ ಬೆಳೆಯುವ ಮೊದಲು ಕಿಸೆ ತುಂಬ ಹಣ ಸಿಕ್ಕ ಬಾಲರಂತಿರುವುದಕ್ಕೆ ಇದೂ ಸಾಕ್ಷಿ. ಸ್ವೇಚ್ಛಾಚಾರವೇ ಸ್ವಾತಂತ್ರ್ಯ ಎಂದು ಭಾವಿಸಿದ ಈ ಜನ ಐತಿಹಾಸಿಕ ಬಾವಡಿಗಳನ್ನು ಪೂರ್ಣ ಅವಗಣನೆಗೆ ಈಡು ಮಾಡಿ, ಒಳಗೂ ಸುತ್ತಮುತ್ತವೂ ಕಸ ಪೇರಿ, ನೀರು ಕೊಳೆತೇ ಹೋಗಿತ್ತು. ಆದರೂ ಅದರ ರಚನೆಯ ದೃಢತೆ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ.

ಒಂಬತ್ತು ಗಂಟೆಯ ಸುಮಾರಿಗೆ ನಮಗೆ ಬಿಜಾಪುರಕ್ಕೆ ವಿದಾಯ ಹೇಳುವ ಸಮಯ ಬಂದಿತ್ತು. ‘ಕಿರಿದರೊಳ್ ಪಿರಿದು ದರ್ಶನ’ವನ್ನೇ ಕೊಡಿಸಿದ ಜೋಶಿಯವರನ್ನು ಮುಖತಃ ನೋಡದೇ ಹೋಗಲು ನಮಗೆ ಮನಸ್ಸಾಗಲಿಲ್ಲ. ಅವರು ಸಮೀಪದ (ಆರು ಕಿಮೀ) ಹಳ್ಳಿಯೊಂದರಲ್ಲಿ ಏನೋ ಶಿಬಿರ ವಾಸ ಹಾಗೂ ಕಾರ್ಯದಲ್ಲೇ ಮುಳುಗಿದ್ದರು. ನಮ್ಮ ಸವಾರಿಯನ್ನು ಮೊದಲು ಅಲ್ಲಿಗೇ ಬೆಳೆಸಿದೆವು. ಜೋಷಿಯವರ ಕೆಲಸಕ್ಕೆ ತೊಂದರೆಯಾಗದಂತೆ ಎರಡೇ ಮಿನಿಟಿನ ನಮ್ಮ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸಿಯೇ ಮುಂದುವರಿದೆವು. ನಮ್ಮ ಬಿಜಾಪುರದ ಎಲ್ಲಕ್ಕೂ ಮೂಲ ಪ್ರೇರಕರಾಗಿದ್ದ ಎಂಸಿ ರಾಮು ಅವರ ಬಗ್ಗೆ ಇಲ್ಲಿ ಒಂದು ಹೆಚ್ಚಿನ ಮಾತು ಸೇರಿಸಲೇಬೇಕು. ರಾಮು ಮುಂದೊಂದು ಕಾಲದಲ್ಲಿ ಮಂಗಳೂರನ್ನು ಬಿಟ್ಟು ಬಿಜಾಪುರವನ್ನೇ ಕಾರ್ಯಕ್ಷೇತ್ರವಾಗಿ, ಜೋಶಿಯವರ ಪೂರ್ಣಾವಧಿ ಸಹಕಾರಿಯಾಗಿ ವಲಸೆ ಹೋಗಿದ್ದರು, ಯಶಸ್ವಿಯೂ ಆಗಿದ್ದರು. ಆದರೆ ಪ್ರಸ್ತುತ ಕಥನದಲ್ಲಿ ಅವರಿಗೂ ನಮ್ಮ ಕೃತಜ್ಞತೆಯನ್ನು ಮುಟ್ಟಿಸಲಾಗುತ್ತಿಲ್ಲ ಎನ್ನುವುದಕ್ಕೆ ನಮಗೆ ವಿಷಾದಗಳಿವೆ. ಕಾಲಮಹಿಮೆಯಲ್ಲಿ ಈಚೆಗೆ ಕೀರ್ತಿಶೇಷರಾದ ರಾಮುವನ್ನು ನಾವಿಂದು ಹಾರ್ದಿಕವಾಗಿ ಸ್ಮರಿಸಬಲ್ಲೆವು ಅಷ್ಟೆ.

ಶೋಲಾಪುರದ ದಾರಿಗಿಳಿಯುವಾಗ ಬಿಸಿಲ ಝಳ ಏರಿತ್ತು. ಬಿಸಿಗಾಳಿಯ ಹೊಡೆತಕ್ಕೆ ಮುಖ ಕರಂಚುವುದನ್ನು ತಡೆಯಲು ನಮ್ಮಲ್ಲಾಗಲೇ ಕೆಲವರು ತೆಳು ಶಾಲು, ಕರವಸ್ತ್ರಗಳನ್ನು ಎರಡು ಕಣ್ಣಷ್ಟೇ ಬಿಟ್ಟು ಮುಖಕ್ಕೆ ಸುತ್ತಿಕೊಳ್ಳತೊಡಗಿದ್ದೆವು. (ಕೊರೊನಾ ಪರಿಣಾಮದಲ್ಲಿ ಇಂದು ಎಲ್ಲರೂ ಎಲ್ಲೆಲ್ಲೂ ವ್ಯವಸ್ಥಿತ ಮುಖಗವುಸುಗಳನ್ನೇ ಬಳಸುವ ಸ್ಥಿತಿ ಬಂದಿರುವುದನ್ನು ಹೇಗೆ ಗ್ರಹಿಸಬೇಕೋ ತಿಳಿಯುತ್ತಿಲ್ಲ.) ದಾರಿಯೋ ರಿಪೇರಿ, ಏಕ ಮುಖ ಸಂಚಾರ, ದ್ವಿಪಥಗಳ ರಚನೆಯ ಗೊಂದಲಗಳ ಬೀಡು. ನಿಧಾನವಾದರೂ ಓಟಕ್ಕೆ ಪೂರ್ಣ ತಡೆ ಬೀಳಲಿಲ್ಲ, ಅಷ್ಟೆ.

ಲಾರಿ ಬಸ್ಸುಗಳು ಎದುರು ಸಿಕ್ಕಾಗ, ಅನ್ಯ ನಿಧಾನಿಗಳನ್ನು ಹಿಂದಿಕ್ಕಬೇಕಾದಾಗ ತಾಳ್ಮೆ ಕಳೆದುಕೊಳ್ಳದೇ ಸಾಗಿದೆವು. ಅಂತರ-ರಾಜ್ಯ ಗಡಿ ರೇಖೆಯೇ ಆದ ಭೀಮಾನದಿ ದಾಟುವಲ್ಲಿ ಚಾ ವಿರಾಮ ಅನುಭವಿಸಿ, ಮಧ್ಯಾಹ್ನಕ್ಕೆ ಶೋಲಾಪುರವನ್ನೇ ಮುಟ್ಟಿದೆವು. ಊಟದ ವೇಳೆಗೆ ತುಸು ಬೇಗನೇ ಮುಟ್ಟಿದ್ದೆವು. ಆದರೆ ನಿಧಾನವಾಗಿ ಊಟ, ವಿಶ್ರಾಂತಿ ಎಂದೆಲ್ಲ ಬಿಸಿಲ ಉರಿ ಬಾಡುವಂತೆ ತುಸು ಹೆಚ್ಚೇ ಸಮಯ ಕಳೆದೆವು. ಮುಖಕ್ಕೆ ಕಟ್ಟುವ ಬಟ್ಟೆಯನ್ನು ಮತ್ತೆ ಮತ್ತೆ ಚಂಡಿ ಮಾಡಿಕೊಳ್ಳುವುದು, ಮುಕ್ಕಾಲು – ಒಂದು ಗಂಟೆಗೊಮ್ಮೆ ಸಿಕ್ಕ ಮರವೋ ಇನ್ನೊಂದೋ ನೆರಳಿನಲ್ಲಿ ಹತ್ತಿಪ್ಪತ್ತು ಮಿನಿಟು ವಿರಮಿಸುತ್ತ ಸಾಗಿದೆವು.

ಉಸ್ಮಾನಾಬಾದ್ ದಾಟಿ ಮುಂದುವರಿದಂತೆ ಜಡಿಮಳೆ ಬಂತು. ಅದೃಷ್ಟವಶಾತ್ ಸಕಾಲಕ್ಕೆ ನಮಗೊಂದು ಮುದ್ರಣಾಲಯದ ದೊಡ್ಡ ಶೆಡ್ಡು ಆಶ್ರಯ ಕೊಟ್ಟಿತು. ಆದರೆ ಆ ದಿನದ ನಮ್ಮ ಲಕ್ಷ್ಯ – ಔರಂಗಾಬಾದ್ ತಲುಪಲು ಅವಶ್ಯವಿದ್ದ ಸಮಯವನ್ನು ತುಂಬ ಹಾಳು ಮಾಡಿತು. ನಾವು ಯೋಜನೆಯ ಹಂತದಲ್ಲೇ ನಿರ್ಧರಿಸಿದ್ದೆವು – ಬೆಳಕು ಹರಿಯುವ ಮೊದಲು ಹೊರಡಬೇಕು, ಕಾವಳ ಮುಸುಕುವ ಮೊದಲು ತಂಗಬೇಕು. ಹಾಗೆ ಅಂದು ಔರಂಗಾಬಾದಿಗೂ ಸುಮಾರು ನೂರನಲ್ವತ್ತು ಕಿಮೀ ಮೊದಲಿನ ತುಸು ದೊಡ್ಡ ಊರು ಬೀಡ್‍. ಅಲ್ಲಿನ ಹೋಟೆಲ್ ನೀಲ್ ಕಮಲ್ ಹೆಸರಷ್ಟೇ ದಿನಚರಿಯಲ್ಲಿದೆ. ಊರಿನ ನೆನಪುಗಳೊಂದೂ ತಲೆಯಲ್ಲಿಲ್ಲ!
(ದಿನದ ಓಟ ೩೧೮ ಕಿಮೀ)

ಮಂಗಳೂರಿನ ಅಂದಾಜಿನಲ್ಲಿ ನಮ್ಮ ಬೈಕುಗಳಿಗೆ ಮೊದಲ ಮಹಾಮಜ್ಜನವನ್ನು (ವಾಶ್ ಆಂಡ್ ಶರ್ವಿಶ್) ದೊಡ್ಡ ನಗರವಾದ ಔರಂಗಾಬಾದಿಗೇ ಇಟ್ಟುಕೊಂಡಿದ್ದೆವು. ಮೊದಲ ಹಂತದ ಓಟದ ಲೆಕ್ಕಕ್ಕೆ ಅದು ಸಾವಿರದಿನ್ನೂರು ಕಿಮೀ ಒಳಗಿನದ್ದು. ಕಂಪೆನಿ ಶಿಫಾರಸಾದರೋ ಎರಡು ಸಾವಿರ ಕಿಮೀಗೆ. ಆದರೆ ನಮ್ಮ ದಾರಿಯಲ್ಲಿ ಮುಂದೆ ತುಸು ದೀರ್ಘ ಕಾಲಕ್ಕೆ ದೊಡ್ಡ ನಗರ ಇರಲಿಲ್ಲ. ಮತ್ತೆ ಕಾಡು ಕಚ್ಚಾ ಪರಿಸರಗಳೂ ಹೆಚ್ಚಿದ್ದಂತಿತ್ತು. ಹಾಗಾಗಿ ಔರಂಗಾಬಾದ್ ಬೇಗ ತಲಪುವ ಉದ್ದೇಶದಲ್ಲಿ ಭೀಡ್‍ನ್ನು ಬೆಳಗ್ಗೆ (೨೮-೪-೯೦) ಐದು ಗಂಟೆಗೇ ಬಿಟ್ಟೆವು.

ಉತ್ತರಕ್ಕೆ ಸರಿಯುತ್ತಿದ್ದಂತೆ ನಾವು ತಿನಿಸು ಪಾನೀಯಗಳಿಗೆ ನಮ್ಮೂರಿನ ರೂಢಿಯಂತೆ ದೊಡ್ಡ ಬೋರ್ಡು ಮತ್ತು ವ್ಯವಸ್ಥೆಯ ಭ್ರಮೆ ಬಿಟ್ಟು ಡಾಬಾಗಳನ್ನು ನಂಬುತ್ತಿದ್ದೆವು. ಎಲ್ಲಿಂದೆಲ್ಲಿಗೂ ಮಾರ್ಗಬದಿಯಲ್ಲಿ ಕೇವಲ ತನ್ನ ಗ್ರಾಮ್ಯ ಇರವಿನಿಂದಲೇ ಹಳ್ಳಿಯನ್ನೂ  ಜನಬಳಕೆಯನ್ನೂ ಸಾರುವ ಡಾಬಾಗಳನ್ನು ನೆಚ್ಚಿದ್ದೆವು. ಇವು ಹೆಚ್ಚಾಗಿ ಮೈದಾನದಂತ ಅಂಗಳದ ವಿರಳ ಮರಗಳ ನೆರಳಿನಲ್ಲಿ, ಹತ್ತೆಂಟು ಚಾರ್ಪಾಯ್ ಟೇಬಲ್ಲ್ ಬಿಸಾಡಿ, ಎಷ್ಟೋ ಬಾರಿ ಬೋರ್ಡೂ ಇಲ್ಲದೇ ಹಿನ್ನೆಲೆಯಲ್ಲಿ ಮುಗುಮ್ಮಾಗಿ ನೆಲೆಸಿರುತ್ತವೆ. ಅವಕ್ಕೆ ತಂಗಿರುವ ಒಂದೆರಡು ಲಾರಿ, ವಾಹನಗಳೋ ಚಾರ್ಪಾಯ್ ಮೇಲೆ ಮೈಚಾಚಿ ಚಾಯ್ ಚಪಾತಿ ಅಲ್ಲದಿದ್ದರೆ ಸಣ್ಣ ನಿದ್ರೆ ಸವಿಯುವ ಮಂದಿಯೋ ಸಜೀವ ಜಾಹೀರಾತುಗಳು! ಜೋಪಡಿಯಲ್ಲೂ ಮುಂದೆ ಕಾಣುವುದು ಪಾಕ ಯಜ್ಞದ ಕುಂಡ; ಚೂಲಾ ಅಥವಾ ಭಾರೀ ಬಾಣಲೆಯೋ ಹಂಚೋ ಹೇರಿಕೊಂಡು ಧಗಧಗಿಸುವ ಒಲೆ. ಇವರದು ಮುಚ್ಚುಮರೆಯಿಲ್ಲದ ಪಾಕ ವ್ಯವಸ್ಥೆ. ಕೃತಕ ಪರಿವೇಶಗಳಿಲ್ಲದೆ ಕಡಿಮೆ ಬೆಲೆಗೆ, ಯಾವ ಹೊತ್ತಿಗೂ ಆರೋಗ್ಯಪೂರ್ಣ ಹೊಟ್ಟೆ ತುಂಬಿಕೊಳ್ಳಲು ನಾವು ಹೆಚ್ಚು ನೆಚ್ಚಿದ್ದು ಡಾಬಾಗಳನ್ನೇ!

ಭೀಡ್‍ನಿಂದ ಮುಂದಿನ ದಾರಿ ದೊಡ್ಡ ಅಧ್ವಾನ. ಸಪುರ, ಡಾಮರ್ ಕಿತ್ತದ್ದು ಮಾತ್ರವಲ್ಲ, ಬರಿಯ ಮಣ್ಣ ಹಾಸಿನ ಶಿಕ್ಷೆಯನ್ನೂ ಅನುಭವಿಸಿದ್ದೆವು. ಕಣ್ತಪ್ಪಿ ಹೊಂಡಾ ಹಾರಿದಾಗಲೋ ದೂಳು ಹೂತು ಜೋಲಿ ಹೊಡೆದಾಗಲೋ ಮತ್ತೆ ಮತ್ತೆ ಹೇಳಿಕೊಂಡದ್ದಿತ್ತು “ಅಬ್ಬ ನಿನ್ನೆ ರಾತ್ರಿ ಇದರಲ್ಲಿ ಮುಂದುವರಿಯುವ ತಪ್ಪು ಮಾಡಲಿಲ್ಲ.” ಸುಮಾರು ನಲ್ವತ್ತು ಕಿಮೀ ಕಳೆದಾಗ, ವಿಶ್ರಾಂತಿಯ ನೆಪಕ್ಕಾಗಿ ಗಿಯೋರಾಂ ಎನ್ನುವಲ್ಲೆಲ್ಲೋ ನಾವು ಒಂದು ಡಾಬಾಕ್ಕೆ ನುಗ್ಗಿದೆವು. ಬೆಳಗ್ಗಿನ ‘ಚಾಯ್ ಪಾನಿ’ಯಷ್ಟೇ ಹೇಳಿ ಹತ್ತು ಮಿನಿಟು ಕಳೆದೆವು. ಅಂಗಳದಲ್ಲೇ ಇದ್ದ ಕೈ ಪಂಪಿನಿಂದ ಮೊದಲು ಧಾರಾಳ ನೀರನ್ನು ನಮ್ಮ ಮುಖಕ್ಕೆ, ಮುಖಮುಚ್ಚಕ್ಕೂ ಹೊಡೆದುಕೊಂಡೆವು, ಗಂಟಲಿಗೆ ಸುರಿದುಕೊಂಡೆವು, ಮತ್ತು ನಮ್ಮ ನೀರಂಡೆಗೆ ತುಂಬಿಕೊಂಡೆವು. ಡಾಬಾವಾಲನೇನೋ ನಮ್ಮೆದುರೇ ಶುಡುಶುಡಾಗಿ ರೋಟಿ, ಪೂರಿ, ಸಬ್ಜಿ, ದಾಲ್, ಚಾಯ್ ಇತ್ಯಾದಿ ತಿಂಡಿ ತೀರ್ಥಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ‘ತೇಲ್ ಕಮ್ (ಎಣ್ಣೆ ಕಮ್ಮಿ), ಮಿರ್ಚೀ ಕಮ್ (ಖಾರ ಕಮ್ಮಿ), ಬಿನಾ ಚೀನೀ (ಸಕ್ಕರೆ ಹಾಕದ)…” ರೂಪಿಸಿಯೇ ಕೊಡಲು ಸಿದ್ಧನಿದ್ದ. ಆದರೆ ನಮ್ಮ ಔರಂಗಾಬಾದ್ ತಲಪುವ ಅವಸರಕ್ಕೆ ಕೇವಲ ‘ಚಾಯ್ಪಾನಿ’ಯಷ್ಟೇ ಸೇವಿಸಿ ಸವಾರಿ ಮುಂದುವರಿಸಿದೆವು.

ಎಂಟು ಗಂಟೆಯ ಸುಮಾರಿಗೆ ಆ ನೂರಾ ನಲ್ವತ್ತು ಕಿಮೀ ಉದ್ದದ ಹಿಂಸೆಯನ್ನು ಮುಗಿಸಿ, ಔರಂಗಾಬಾದ್ ತಲಪಿದೆವು. ಈ ದಾರಿಯ ನಡುವೆಯೆಲ್ಲೋ ನಾವು ಗೋದಾವರಿ ನದಿಯನ್ನು ದಾಟಿದ್ದೆವು. ಅದನ್ನು ಇಂದು ನೆನೆಸುವಾಗ, ಓಹ್ “ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್” ಎಂಬ ಕವಿರಾಜಮಾರ್ಗಕಾರನ ಉಕ್ತಿ ಬಲದಲ್ಲಿ ಅದುವರೆಗೂ ಕನ್ನಡ ನೆಲದಲ್ಲೇ ಇದ್ದೆವು!

ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ – ವೈ.ಎಚ್.ಎ.ಐ ಭಾರತಾದ್ಯಂತ ತನ್ನ ವಸತಿನಿಲಯಗಳ ಜಾಲವನ್ನೇ ಹೊಂದಿದೆ. ಅದು ತನ್ನ ಸದಸ್ಯರಿಗೆ ಸ್ವತಂತ್ರವಾಗಿ ಚಾರಣಾದಿ ಸಾಹಸ ಚಟುವಟಿಕೆಗಳನ್ನು ನಡೆಸುತ್ತದೆ. ಹಾಗೆ ನಾವು ಈಚೆಗೆ ಮೈಸೂರು ಶಾಖೆಯ ಸದಸ್ಯರಾಗಿ, ಮೇಘಾಲಯದ ಪ್ರಾಕೃತಿಕ ವಿಶೇಷಗಳನ್ನು ಸುತ್ತಿದ್ದನ್ನು ನೀವೆಲ್ಲ ಓದಿದ್ದೀರಿ ಎಂದೇ ಭಾವಿಸುತ್ತೇನೆ. (ಇಲ್ಲವಾದರೆ ನೋಡಿ: ಮೇಘಾಲಯದ ಗಿರಿಕೊಳ್ಳಗಳಲ್ಲಿ) ಉಳಿದಂತೆ ಈ ಹಾಸ್ಟೆಲ್ಲುಗಳು ಸ್ಥಳಾವಕಾಶ ಇದ್ದಲ್ಲಿ, ಯಾವುದೇ ಪ್ರವಾಸಿಗೆ (ಸದಸ್ಯನಲ್ಲದೆಯೂ) ತೀರಾ ಸುಲಭವಾದ ಬಾಡಿಗೆಗೆ, ಸರಳವಾದ ವಸತಿ ಸೌಕರ್ಯವನ್ನೂ ಕೊಡುತ್ತವೆ. ಇದು ತಿಳಿದೇ ನಾವು ಔರಂಗಾಬಾದಿನಲ್ಲಿ ನೇರ ಯೂಥ್ ಹಾಸ್ಟೆಲ್ಸಿಗೆ ಹೋದೆವು. ಅದರ ಶಿಸ್ತಿನಂತೆ ಪುರುಷ, ಸ್ತ್ರೀ ವಿಂಗಡಣೆಯಲ್ಲಿ ನಮಗೆ ಅವಕಾಶವೂ ಸಿಕ್ಕಿತು. ನಾವು ಬೈಕಿನ ಹೊರೆಗಳನ್ನಲ್ಲಿ ಇಳಿಸಿ, ಪಕ್ಕದ ಹೋಟೆಲಿನಲ್ಲಿ ಅವಸರದ ಕಾಫಿಂಡಿ ಮುಗಿಸಿದೆವು.

ಔರಂಗಾಬಾದಿನ ಹೀರೋಹೊಂಡಾ ಪ್ರತಿನಿಧಿ – ಗುಣ್‍ಪ್ರೀತ್ ಏಜನ್ಸೀಸ್, ನಮ್ಮ ತರಾತುರಿಯನ್ನು ಸಹೃದಯತೆಯಿಂದಲೇ ಮನ್ನಿಸಿತು. ಸುಮಾರು ಮೂರೇ ಗಂಟೆ ಅವಧಿಯಲ್ಲಿ ಮೂರೂ ಬೈಕ್‍ಗಳನ್ನು ಶುದ್ಧೀಕರಿಸಿ, ಬಲಗೊಳಿಸಿ ಕೊಟ್ಟರು. ಸಣ್ಣ ಸ್ಪಷ್ಟೀಕರಣ – ನಾವು ಬೈಕ್ ತಯಾರಕರಲ್ಲಿ ಮಾತ್ರ ಸವಲತ್ತುಗಳನ್ನು ಹಕ್ಕಿನಲ್ಲಿ ಕೇಳಿದ್ದೆವು. ಅವರು ಒಪ್ಪದ್ದನ್ನು, ಕೇವಲ ಕಮಿಶನ್ ಬಲದಲ್ಲಿ ನಡೆಯುವ ಶಾಖೆಗಳಿಗೆ ಹೇರಲು ನಾವು ಸಿದ್ಧರಿರಲಿಲ್ಲ. ಎಲ್ಲ ಕಡೆಯೂ ನಾವು ಪಾವತಿ ಕೊಟ್ಟೇ ಸೇವೆ ಪಡೆದಿದ್ದೇವೆ. (ಇದಕ್ಕೊಂದೇ ಅಪವಾದ – ಹಿಂದಿನ ಅಧ್ಯಾಯದಲ್ಲಿ ಹೇಳಿದಂತೆ, ಹುಬ್ಬಳ್ಳಿಯ ಛಡ್ಡಾ ಏಜನ್ಸೀಸ್!)

ಹನ್ನೆರಡೂವರೆ ಗಂಟೆಯ ಮಟಮಟ ಮಧ್ಯಾಹ್ನ (ತಾಪಮಾನ ೩೫% ತೇ. ೧೮%) ಬೈಕ್ ಸಿಕ್ಕಿದ್ದೇ ನಾವು ಎಲ್ಲೋರಾ ಗುಹೆಗಳ ದಾರಿ ಹಿಡಿದೆವು. ಮೂವತ್ತೈದು ಕಿಮೀ ಅಂತರದ ಎಲ್ಲೋರಾ ತಲಪಿದ್ದೇ ಮೊದಲು ಊಟದ ಚಿಂತೆ ಪರಿಹರಿಸಿಕೊಂಡೆವು. ಅನಂತರ ಚರಣಂದ್ರಿ ಪರ್ವತ ಎಂದೇ ಹೆಸರಾಂತ ಅಖಂಡ ಶಿಲಾ ಹಾಸಿನ ಪಶ್ಚಿಮ ಮುಖದಲ್ಲಿರುವ ಗುಹಾಲಯಗಳ ಸುತ್ತಾಟಕ್ಕಿಳಿದೆವು.

ಎಲ್ಲೋರಾದಲ್ಲಿ ಸುಮಾರು ೬ರಿಂದ ೧೦ನೇ ಶತಮಾನದವರೆಗೂ ಹಿಂದೂ ಜೈನ ಮತ್ತು ಬೌದ್ಧ ಮತಾವಲಂಬೀ ಹಲವು ರಾಜ ಮನೆತನಗಳು (ತ್ರೈಕುಟಕ, ವಾಕುಟಕ, ಚಾಲುಕ್ಯ, ರಾಷ್ಟ್ರಕೂಟ, ಯಾದವ….) ಒಟ್ಟು ಸುಮಾರು ನೂರರವರೆಗೂ ಗುಹಾಲಯಗಳನ್ನು ಕೊರೆಸಿದ್ದಾರೆ. ಅಧ್ಯಯನಗಳು ಹೇಳುವಂತೆ, ಅಷ್ಟೂ ಭಿನ್ನ ಕಾಲ, ಧರ್ಮ ಹಾಗೂ ರಾಜಸತ್ತೆಗಳು ಅಲ್ಲಿ ತಂತಮ್ಮ ವಿಶ್ವಾಸದ ಅಭಿವ್ಯಕ್ತಿಗಿಳಿದರೂ ಅನ್ಯ ಮತ ಅಸಹಿಷ್ಣುತೆ ಮೆರೆದುದಿಲ್ಲವಂತೆ. ಆ ಗುಹಾಲಯಗಳೆಲ್ಲ ಜನಮನದಿಂದ ದೂರವಾಗಿ, ಕಾಡು ಪ್ರವಾಹ ಮುಂತಾದ ಪ್ರಾಕೃತಿಕ ಶಕ್ತಿಗಳಿಂದ ಆವೃತವಾಗಿದ್ದವನ್ನು, ಕ್ರಮವಾಗಿ ಆಧುನಿಕ ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟವರು ಬ್ರಿಟಿಷರು. ಹಾಗೆ ಅಂದು ಲಭ್ಯವಿದ್ದ ಮೂವತ್ತೂ ಗುಹೆಗಳನ್ನು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡಿ ನೋಡಿದೆವು. ಕ್ಷಮಿಸಿ, ಇಂದು ಅದರ ವಿವರಗಳು ಅಥವಾ ನಾವೇ ತೆಗೆದ ಪಟಗಳನ್ನು ನೋಡಿಯೂ ‘ಇದು ಇಂಥದ್ದೇ’ ಎಂದು ಹೇಳುವ ಸ್ಥಿತಿಯಲ್ಲಿ ನಾನಿಲ್ಲ. (ಇಲ್ಲಿ ಪಟಗಳನ್ನಾದರೂ ಕೇವಲ ಆಲ್ಬಂಗೆ ತುಂಬಿದ ಕ್ರಮದಲ್ಲೇ ಹಾಕುತ್ತಿದ್ದೇನೆ – ಶೀರ್ಷಿಕೆ ಕೊಡಲಾರೆ!) ಹಾಗೂ ಕೊರತೆ ಬಂದವಕ್ಕೆ ಮತ್ತು ಇಂದಿನ (೨೦೧೮) ಚಂದದ ರೂಪಕ್ಕೆ ಯೂಟ್ಯೂಬಿನಲ್ಲಿ ಎಷ್ಟೂ ಚಿತ್ರ, ವಿಡಿಯೋಗಳಿವೆ. ಒಂದನ್ನು ಮಾತ್ರ ನಾನು ಲಗತ್ತಿಸಿದೇನೆ – ನೋಡಿ ಸಂತೋಷಿಸಿ.

ಹುಚ್ಚು ದೊರೆ ಎಂದೇ ಖ್ಯಾತನಾದ ತುಗ್ಲಕ್ ದೇಶದ ರಾಜಧಾನಿಯಾಗಿ ದಿಲ್ಲಿಯ ಸ್ಥಾನ ತುಂಬ ದುರ್ಬಲ ಎಂದೇ ಭಾವಿಸಿದ. ಭೌಗೋಳಿಕವಾಗಿ ಹಿಂದೂಸ್ತಾನದ ಕೇಂದ್ರವೆಂದು ಆತ ಅಂದಾಜಿಸಿ, ಸ್ಥಳಾಂತರವನ್ನೂ ನಡೆಸಿ ಸೋತ ಸ್ಥಳ – ದೇವಗಿರಿ, ಆತ ಮರುನಾಮಕರಿಸಿದಂತೆ ದೌಲತಾಬಾದ್, ಎಲ್ಲೋರದ ಅರ್ಧ ದಾರಿಯಲ್ಲೇ ಇತ್ತು. ಸಂಜೆ ಔರಂಗಾಬಾದಿಗೆ ಹಿಂದಿರುಗುವ ದಾರಿಯಲ್ಲಿ ನಾವು ದೇವಗಿರಿ ದುರ್ಗಕ್ಕೂ ಭೇಟಿ ಕೊಟ್ಟೆವು. ಹೆಸರೇ ಹೇಳುವಂತೆ ಅದು ಬೆಟ್ಟದ ಮೇಲಿನ ಕೋಟೆ. ಸುಮಾರು ಐವತ್ತು ಮಿನಿಟಿನಲ್ಲಿ, ನೇರ ಏರಿನಲ್ಲಿ ಇನ್ನೂರೈವತ್ತಕ್ಕೂ ಮಿಕ್ಕ ಮೆಟ್ಟಿಲುಗಳನ್ನೇರಿ ಶಿಖರ ಸಾಧಿಸಿದೆವು. (ಉಪಾಧ್ಯರ ಲೆಕ್ಕಾಚಾರ: ಶಿಖರ ಸಮುದ್ರ ಮಟ್ಟದಿಂದ ೩೦೦೦ ಅಡಿ, ನೆಲ ಮಟ್ಟದಿಂದ ೭೦೦ ಅಡಿ)

ಅಲ್ಲಿನ ತುಂಬಾ ನವಿಲುಗಳ ವಿಹಾರ ಆ ದಿನಗಳಲ್ಲಿ ನಮಗೆ ವಿಶೇಷ ಆನಂದವನ್ನೇ ಉಂಟು ಮಾಡಿದ್ದನ್ನು ನಾನು ತಾಯಿಗೆ ಬರೆದ ಕಾಗದಲ್ಲಿ ಬರೆದಿದ್ದೆ. ಇಂದು ನವಿಲುಗಳು ನಮ್ಮ ನಗರಗಳ ಕಸತೊಟ್ಟಿಗಳಲ್ಲಿ ಕಾಗೆಗಳಿಗೆ ಸ್ಪರ್ಧೆ ಕೊಡುತ್ತಿರುವ ಕಾಲಕ್ಕೆ, ವಿಷಾದದ ನಗೆಯಷ್ಟೇ ಬರುತ್ತದೆ.

ದೇಶದ್ದೇ ರಾಜಧಾನಿ ಎಂಬ ಉದ್ದೇಶದಲ್ಲಿ ಅಲ್ಲಿನ ರಕ್ಷಣಾತ್ಮಕ ರಚನೆಗಳನ್ನು ಬಹಳ ಗಹನವಾಗಿಯೇ ಮಾಡಿದ್ದರು. ಇಳಿದಾರಿಯಲ್ಲಿ ನಾವು ಅಲ್ಲಿನ ಇನ್ನೊಂದೇ ಗೋಪ್ಯ ಹಾಗೂ ಗಾಢಾಂಧಕಾರದ ಮಾರ್ಗವನ್ನು ಸ್ಥಳೀಯ ಮಾರ್ಗದರ್ಶಿಯ ಸಹಾಯದಲ್ಲಿ ಅನುಭವಿಸಿದೆವು. ಸಂಪೂರ್ಣ ಅಪರಿಚಿತ ಪರಿಸರದಲ್ಲಿ ಮಾರ್ಗದರ್ಶಿ ಎನ್ನುವವನ ಮಾತು ಮತ್ತು ದೀವಟಿಗೆಯನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡದ್ದು ಇಂದು ಅಪಾಯಕಾರಿಯಾಗಿಯೇ ಕಾಣುತ್ತದೆ! ದೌಲತಾಬಾದ್ ಇಳಿದು ಬೈಕ್ ಸೇರುವಾಗ ಕತ್ತಲಾಗಿತ್ತು. ದೌಲತಾಬಾದಿನ ಇಂದಿನ ಚಂದವನ್ನೂ ನನ್ನದಲ್ಲದ ಈ ವಿಡಿಯೋದಲ್ಲಿ ನೋಡಿ ಆನಂದಿಸಿ.

 

ಔರಂಗಾಬಾದ್ ಯೂತ್ ಹಾಸ್ಟೆಲ್ಲಿನ ವಸತಿಯ ಕುರಿತು ದೇವಕಿ ನನ್ನಮ್ಮನಿಗೆ ಬರೆದ ಪತ್ರದಲ್ಲಿ, “ಗಂಡಸರು ಬೇರೆ ಹೆಂಗಸರು ಬೇರೆ. ಎದುರೆದುರು ದೊಡ್ಡಾ ಕೋಣೆಗಳಲ್ಲಿ ಸಾಲಾಗಿ ಮಂಚ ಹಾಸಿಗೆಗಳನ್ನು ಹಾಕಿರುತ್ತಾರೆ. ಹಾಗೆ ನಾನೊಬ್ಬಳೇ, ನನ್ನ ಜತೆಗೆಲ್ಲ ದೊರೆಸಾನಿಗಳೇ! ನೀರು ಬೇಕಾದಷ್ಟಿಲ್ಲ. ಕೊಳಕು ಒಡನಾಡಿಗಳು. ಒರಸಿದ ಟಿಷ್ಯೂ ಪೇಪರ್ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಅಂತೂ ಮಲಗಿದರೆ ಸೊಳ್ಳೆಯೋ ಸೊಳ್ಳೆ. ಪರದೆ ಕಟ್ಟಿದರೂ ಜೇನು ನೊಣದಂತೆ ಮುತ್ತುತ್ತವೆ. ರಾತ್ರಿ ಇಡಿ ನಿದ್ರೆ ಇಲ್ಲ. ಗಂಡಸರ ಕೋಣೆಯಲ್ಲಿ ರಷ್ ಇರಲಿಲ್ಲವಂತೆ, ಸುಖವಾಗಿ ನಿದ್ರಿಸಿದರಂತೆ.”

(ದಿನದ ಓಟ ೨೦೫ ಕಿಮೀ)
(ಮುಂದುವರಿಯಲಿದೆ)