(ಪ್ರಾಕೃತಿಕ ಭಾರತ ಸೀಳೋಟ – ೪)

ಪ್ರವಾಸ ಕಥನವೆಂದರೆ ತಿರುಗಾಡೀ ದಿನಚರಿಯ ಪುಟವಲ್ಲ, ಭೇಟಿ ಕೊಟ್ಟ ಸ್ಥಳಗಳ ಪುರಾಣವಲ್ಲ, ಓಡಿದ ದಾರಿಯಲ್ಲ, ಕಂಡ ಚಿತ್ರವಲ್ಲ, ತಿನಿಸುಗಳ ಪಟ್ಟಿಯಲ್ಲ, ….ಅಲ್ಲ, ಅಲ್ಲ! ಅಷ್ಟನ್ನೇ ಕೊಟ್ಟರೆ ಒಳ್ಳೆಯ ಮಾಹಿತಿ, ವರದಿ ಆಗಬಹುದು. ಒಂದು ಕಾಲಕ್ಕೆ ಅಂಥವು ಅವಶ್ಯವಿದ್ದದ್ದೂ ಸರಿಯೇ (ಹ್ಯೂಯೆನ್‍ತ್ಸಾಂಗ್). ಆದರೆ ಇಂದು ಅಂತರ್ಜಾಲದಲ್ಲಿ ಮಾಹಿತಿಗಳ ಮಹಾಪೂರವೇ ಇದೆ, ವಿದ್ಯುನ್ಮಾನದ ಸಾಧ್ಯತೆಯಲ್ಲಿ ನಿಜಧ್ವನಿ, ಯಥಾವತ್ತು ಚಲಚಿತ್ರಗಳೇ ಧಾರಾಳ ಲಭ್ಯವಿದೆ. ಹಾಗಾಗಿ ಪ್ರಾಸಂಗಿಕವಾಗಿ ನಾನು ಅಲ್ಲಗಳೆದವನ್ನೆಲ್ಲ ಸೇರಿಸಿಕೊಂಡರೂ ಇನ್ನು ಹೆಚ್ಚಿನ ಲಕ್ಷ್ಯವನ್ನು ಸಾಧಿಸಬೇಕೆನ್ನುವುದು ನನ್ನ ಪ್ರವಾಸ ಕಥನಗಳ ತುಡಿತ. ಅಂದರೆ ನಿಷ್ಪಕ್ಷ ವರದಿಗಿಂತ, ಪ್ರವಾಸಿಯ ಪ್ರಾಮಾಣಿಕ ಪ್ರತಿಕ್ರಿಯೆ, ಅದಕ್ಕೆ ಯುಕ್ತ ಅಭಿವ್ಯಕ್ತಿ ಮೂಡಿಸುವುದರಲ್ಲಿ ನಾನು ಹೆಚ್ಚು ಆಸಕ್ತ. ಅಂಥಾ ಒಂದು ದೊಡ್ಡ ಹೆಸರಿನ ಉದಾಹರಣೆ ಕೊಡುವುದಾದಲ್ಲಿ – ಕಾಳಿದಾಸನ ಮೇಘದೂತ. ಪ್ರಸ್ತುತ ಭಾರತ ಸೀಳೋಟದಲ್ಲಿ ನನಗೆ ಮೂವತ್ತು ವರ್ಷಗಳ ಮರವೆಯಿರುವುದರಿಂದ ಬೇಕೆಂದರೂ ಪಟ್ಟಿ ಕೊಡಲಾರೆ. ಆದರೆ ಕಾಲ ಸಂದರೂ ಅಚ್ಚಳಿಯದುಳಿಸಿದ ಭಾವನೆಗಳನ್ನು ಹಂಚಿಕೊಳ್ಳಲು ಈ ಪರದಾಟ ನಡೆಸಿದ್ದೇನೆ. ಕಥನದ ಮಿತಿಯನ್ನು ಮೀರಿದ ನಿಮ್ಮ ನಿರೀಕ್ಷೆಗಳೇನಿದ್ದರೂ ದಯವಿಟ್ಟು (ಗೂಗಲ್, ಯೂಟ್ಯೂಬ್, ವಿಕಿಪೀಡಿಯಾ..) ಅಂತರ್ಜಾಲಿಗರಾಗಿ!

ಔರಂಗಾಬಾದ್ ನಮ್ಮ ಬಿಜಾಪುರದಂತೆ ಐತಿಹಾಸಿಕವಾಗಿಯೂ ಪ್ರಮುಖ ನಗರ. ಆದರೆ ನಾವು ಮುಖ್ಯವಾಗಿ ‘ಪಂಚಕ್ಕಿ’ ಎಂದೇ ಖ್ಯಾತವಾದ, ಅಲ್ಲಿನ ಜಲಗಿರಣಿಯನ್ನು ನೋಡುವ ಉತ್ಸಾಹ ತಾಳಿದ್ದೆವು. ೧೭ನೇ ಶತಮಾನದ ಸೂಫಿ ಸಂತ – ಬಾಬಾ ಶಾ ಮುಸಾಫಿರನ ದರ್ಗಾದ ಭಾಗವಾಗಿ ಈ ಗಿರಣಿಯನ್ನು ರೂಪಿಸಿದ್ದಾರೆ. ಸುಮಾರು ಎಂಟು ಕಿಮೀ ದೂರದ ಹರ್ಸೂಲ್ ಹೊಳೆಯ ಎತ್ತರದಿಂದ ಇಲ್ಲಿಗೆ ಕೊಳವೆಗಳಲ್ಲಿ ನೀರು ತಂದು, ಅರೆಕಲ್ಲುಗಳನ್ನು ತಿರುಗಿಸಿ, ಧಾನ್ಯಗಳ ಹಿಟ್ಟು ಮಾಡುತ್ತಿದ್ದದ್ದು ಇಂದಿಗೂ ಚಾಲನೆಯಲ್ಲಿದೆ. ಹಾಗೆ ಬರುವ ನೀರಿನ ಇತರ ಉಪಯೋಗಗಳೂ ಕುತೂಹಲಕರವೇ ಇದೆ. (ವಿವರಗಳಿಗೆ ವಿಕಿಪೀಡಿಯಾ ನೋಡಿ) ಪಂಚಕ್ಕಿ ವರ್ತಮಾನದ ಗಿರಣಿಗಳ ಸಾಮರ್ಥ್ಯಕ್ಕೆ ಸಾಟಿಯಲ್ಲದಿದ್ದರೂ ಸಂದ ಕಾಲದ ‘ಜೀವಂತ’ ಪ್ರತಿನಿಧಿಯಾಗಿ ಉಳಿದಿದೆ ಎನ್ನುವುದೇ ದೊಡ್ಡ ದರ್ಶನೀಯ ಸಂಗತಿ. ಬೆಳಿಗ್ಗೆ (೨೯-೪-೯೦) ದರ್ಗಾ ಬಾಗಿಲು ತೆರೆಯುವ ಸಮಯ (ಸುಮಾರು ಎಂಟು ಗಂಟೆ) ಹೊಂದಿಸಿಕೊಂಡು, ನೋಡಿದೆವು. ವಾಸ್ತವದಲ್ಲಿ ಈ ಜನಪದ ತಂತ್ರಜ್ಞಾನಕ್ಕೆ ಆಧುನಿಕ ಸವಲತ್ತುಗಳ ಕಸಿ ಮಾಡಿ, ಹೆಚ್ಚಿನ ಸಾಮರ್ಥ್ಯದೊಡನೆ ಇಂದಿಗೂ ಬೆಟ್ಟ ಗುಡ್ಡಗಳ ನಾಡಿನಲ್ಲಿ (ಮುಖ್ಯವಾಗಿ ಹಿಮಾಲಯ ವಲಯದ ಹಳ್ಳಿಗಳಲ್ಲಿ) ಬಳಸುತ್ತಿದ್ದಾರೆ. (ವಿಡಿಯೋ ನೋಡಿ) ಇವು ಪೂರ್ಣ ಪರಿಸರ ಸ್ನೇಹಿ ಮತ್ತು ಚಾಲನಾ ಖರ್ಚಿಲ್ಲದ ತಂತ್ರಜ್ಞಾನ.

ಸ್ವತಂತ್ರ ಅಸ್ತಿತ್ವ ಮತ್ತು ಪ್ರಭಾವ ಇರುವ ಸ್ಥಳಗಳೂ ‘ದಕ್ಷಿಣದ ಕಾಶಿ’, ‘ಭಾರತದ ರೋಮ್’, ‘ಫುಟ್ ಬಾಲಿಗರ ಮೆಕ್ಕಾ’ ಎಂದಿತ್ಯಾದಿ ವಿಶೇಷಣಗಳನ್ನು ರೂಢಿಸಿಕೊಂಡಿರುವುದನ್ನು ಧಾರಾಳ ಕೇಳುತ್ತೇವೆ. ಹಾಗೇ ಔರಂಗಾಬಾದಿನಲ್ಲಿನ ಬೀಬೀ ಕಾ ಮಕ್ಬಾರಾ ‘ದಖ್ಖನೀ ತಾಜ್’ ಎಂದೂ ಖ್ಯಾತವಾಗಿದೆ. (ಬಿಜಾಪುರದ ಇಬ್ರಾಹಿಂ ರೋಜಾ ಕೂಡಾ ತಾಜ್ ಮಹಲ್ ಸ್ಮರಿಸುತ್ತದೆ!) ಮಕ್ಬಾರಾ ಸುಂದರವಾಗಿಯೇ ಇದೆ. ವಾಸ್ತವದಲ್ಲಿ ಇದನ್ನು ಸುಮಾರು ಮೂವತ್ತು ವರ್ಷಗಳ ಹಿರಿಯ – ತಾಜ್ ಮಹಲ್ಲಿಗೆ, ಸೆಡ್ಡು ಹೊಡೆಯುವಂತೇ ರಚಿಸುವ ಉದ್ದೇಶವಿತ್ತಂತೆ. ಆದರೆ ನಿರ್ಮಾಪಕ ಬಾದುಷಾ ಔರಂಗಜೇಬ್ ಅವರಂಗೀ ಜೇಬು ಮಾತ್ರ ತುಸು ಸಣ್ಣದಾಯ್ತಂತೆ! ಪಟ್ಟಣದ ಹೊರವಲಯದ ಶಿಲಾ ಗುಡ್ಡಗಳಲ್ಲೂ ಎಲ್ಲೋರ, ಐಹೊಳೆಗಳಂತೆ ಕೆತ್ತಿ ಮಾಡಿದ ಹನ್ನೆರಡು ಗುಹಾಲಯಗಳು ಇವೆ. ಇವು ಕೂಡಾ ಎಲ್ಲೋರದಂತೆ ಆರು ಏಳನೇ ಶತಮಾನದ ಆಸುಪಾಸಿನವೇ ಆದರೂ ಕೇವಲ ಬೌದ್ಧ ಮತಕ್ಕಷ್ಟೇ ಸಂಬಂಧಿಸಿದವಂತೆ. ಅವನ್ನೂ ನೋಡುವುದರೊಂದಿಗೆ ನಾವು ನಗರ ಸುತ್ತಾಟವನ್ನು ಮುಗಿಸಿದೆವು. ಕಾಫಿಂಡಿ ಮುಗಿಸಿ, ಯೂತ್ ಹಾಸ್ಟೆಲ್ಸಿಗೆ ವಿದಾಯ ಹೇಳುವಾಗ ನಿರೀಕ್ಷೆಯಂತೆ ಸೂರ್ಯ ಕೆಂಡಾಮಂಡಲನೇ ಆಗಿದ್ದ. ಪ್ರಸ್ತುತ ಪ್ರವಾಸದ ಪ್ರಥಮ ಯೋಚನೆಯಿಂದ ಹೊರಡುವ ದಿನದವರೆಗೂ ನಾನು ನಿತ್ಯ ಪತ್ರಿಕೆಗಳಲ್ಲಿ ಮುಖ್ಯವಾಗಿ ಗಮನಿಸುತ್ತಿದ್ದದ್ದು ಉತ್ತರ ಭಾರತದ ಉಷ್ಣಾಂಶ. ಮುಖ್ಯ ಕಾರಣ, ಬೇಸಗೆಯ ಉತ್ತುಂಗದಲ್ಲೇ ನಮ್ಮ ದಾರಿ ಮರುಭೂಮಿಯನ್ನೂ ಹಾದು ಹೋಗುವುದಿತ್ತು. ನನ್ನ ತಿಳುವಳಿಕೆಯಂತೆ ರಾಜಸ್ತಾನ ಮರುಭೂಮಿಯೇ ಆದರೂ ಬಿಸಿಲಿನ ತಿಳುವಳಿಕೆಯಲ್ಲಿ ಅಲ್ಲಿನ ಜನಪದ ಹೆಚ್ಚು ಪರಿಣತರು. ಅದಕ್ಕೇ ಎಂಬಂತೆ “ಬಿಸಿಲಿನ ಝಳಕ್ಕೆ ಸಾವು” ವರದಿಗಳು ಹೆಚ್ಚಾಗಿ ಮಹಾರಾಷ್ಟ್ರ, ಮಧ್ಯಪ್ರದೇಶಗಳಿಂದಲೇ ಬರುತ್ತಿತ್ತು.

ನಮ್ಮ ದಾರಿಯ ಹತ್ತಿರದಲ್ಲೇ ಸಿಗುವ ಒಂದೂರಿನ ಹೆಸರಂತೂ ಜಲ್ನಾ ಅರ್ಥಾತ್ ಉರಿದು ಹೋಗು! ಹಾಗೇ ಇನ್ನೊಂದು – ಜಲ್ಗಾಂ. ಇದನ್ನು ನಮ್ಮಲ್ಲೆ ಇರುವಂತೆ ನೀರ್ನಳ್ಳಿ ಎಂದೇ ಅರ್ಥೈಸುವವರಿರಬಹುದು. ಆದರೆ ಆ ವಲಯದ ಬಿಸಿಲತಾಪದ ನೆನಪಲ್ಲಿ ನಾನಂತೂ ಉರಿಗ್ರಾಮ, ಕೊಳ್ಳಿಹಳ್ಳಿ ಎಂದೇ ಹೇಳಿಯೇನು! ಏನೇ ಇರಲಿ, ನಾವು ಅತೀವ ಜಾಗರೂಕರಾಗಿಯೇ ಯೋಜನೆ ರೂಪಿಸಿದ್ದೆವು, ಅನುಷ್ಠಾನವನ್ನೂ ಮಾಡಿದ್ದೆವು. ಹಾಗಾಗಿ ಔರಂಗಬಾದ್ ಬಿಡುವಾಗ ಏರು ಬಿಸಿಲಿದ್ದರೂ ನಮ್ಮ ಅಂದಿನ ಓಟದ ಲಕ್ಷ್ಯ ಸಣ್ಣದಿತ್ತು – ಸುಮಾರು ನೂರು ಕಿಮೀ ದೂರದ ಅಜಂತಾ. ದಾರಿ ಬದಿಯ ನೆರಳುಗಳಲ್ಲಿ ವಿಶ್ರಾಂತಿಗಳನ್ನು ಹೆಚ್ಚಿಸಿಕೊಂಡೇ ಸವಾರಿ ನಡೆಸಿದ್ದೆವು. ದಾರಿ ಸುಂದರವಾಗಿಯೇ ಇದ್ದರೂ ಸುಮಾರು ಎರಡೂವರೆ ಗಂಟೆ ಪ್ರಯಾಣದಲ್ಲಿ ಕೇವಲ ಅರವತ್ತೈದು ಕಿಮೀ ದೂರದ ಸಿಲ್ಲೋಡ್ ತಲಪಿ ಊಟಕ್ಕೆ ನಿಂತೆವು. ಅಪರಾಹ್ನದ ಒಂದೂವರೆ ಗಂಟೆಯದ್ದಂತೂ ಪ್ರಯಾಣ ಎನ್ನುವುದಕ್ಕಿಂತ ಪ್ರಯಾಸ ಎನ್ನಬಹುದು. ಅಜಂತಾ ಸೇರುವಾಗ, ಭಕ್ತಿವಿನಾ ಕೊಂಡ ಹಾಯುವವರ ಸ್ಥಿತಿ ನಮ್ಮದಾಗಿತ್ತು. (ಅಪರಾಹ್ನ ಗಂಟೆ ಮೂರು, ತಾಪ ೩೯, ತೇ ೨೦%)

ಅಜಂತಾವೂ ಬಹುತೇಕ ನಾವು ಕಂಡ ಔರಂಗಾಬಾದ್, ಎಲ್ಲೋರಾದಿ ಗುಹಾಲಯಗಳದ್ದೇ ಇತಿಹಾಸವನ್ನೂ ಖ್ಯಾತಿಯನ್ನೂ ಹೊಂದಿದೆ. ಸುಮಾರು ಎರಡು ಗಂಟೆಯಲ್ಲಿ ವಿರಾಮದ ವೀಕ್ಷಣೆ ನಡೆಸಿದೆವು. ಇದರ ಸುಂದರ ಮತ್ತು ಹೆಚ್ಚು ವರ್ತಮಾನದ ದೃಶ್ಯಾವಳಿಗೂ ಲಗತ್ತಿಸಿದ ವಿಡಿಯೋ ನೋಡಿಕೊಳ್ಳಿ.

ಅಜಂತಾದಲ್ಲೊಂದು ಸರಕಾರೀ ವಿಶ್ರಾಂತಿಗೃಹವಿತ್ತು, ಖಾಲಿಯೂ ಇತ್ತು. ಆದರೆ ನಮಗದರ ಬಾಡಿಗೆದರ ಯಾಕೋ ಹೆಚ್ಚು ಅನ್ನಿಸಿತು. ಕ್ಷೇತ್ರಕ್ಕೆ ಬಂದವರ ಅನಿವಾರ್ಯತೆಯನ್ನು ಸರಕಾರ ದುರ್ಬಳಸಿಕೊಳ್ಳುತ್ತಿದೆ ಎಂದೇ ಅನ್ನಿಸಿತು. ನಾವು ಹೇಗೂ ದೀರ್ಘ ಓಟಕ್ಕೇ ಇಳಿದವರಾದ್ದರಿಂದ, ಅಷ್ಟೇನೂ ಪ್ರಸಿದ್ಧವಲ್ಲದ ಮುಂದಿನೂರು ಅರಸಿದೆವು. ಏಳು ಕಿಮೀ ಅಂತರದ ಫರ್ದಾಪುರದಲ್ಲೂ ಅಂಥದ್ದೇ ಬಂಗ್ಲೆ ಕಾಣಿಸಿತು. ಬಾಡಿಗೆ ದರ ಇಲ್ಲೂ ಹಾಗೇ ಇದ್ದರೂ ಅಲ್ಲಿ ನಾವು ಅನಿವಾರ್ಯತೆಯನ್ನು ಒಪ್ಪಿಕೊಂಡೆವು, ಉಳಿದೆವು. ಬಂಗ್ಲೆಯ ಸೌಕರ್ಯಗಳು ನಿರಾಶೆಪಡಿಸಲಿಲ್ಲ. ನಮಗೆ ವಿಶ್ರಾಂತಿ ತುಸು ಹೆಚ್ಚೇ ಸಿಕ್ಕಿದ್ದರಿಂದ, ನಾನು ಅಲ್ಲಿಂದಲೇ ತಾಯಿಗೆ ಬರೆದ ತುಸು ಉದ್ದದ ಪತ್ರದ ಭಾಗವನ್ನೇ ಉದ್ಧರಿಸುತ್ತೇನೆ.

“ಪ್ರಿಯ ಅಮ್ಮಾ, ನಮಗೆ ಪ್ರವಾಸದಲ್ಲಿ ದಿನ ಕಳೆಯುವುದು ತಿಳಿಯುತ್ತಲೇ ಇಲ್ಲ. ನಾವು ಬಿಸಿ ಹವೆಗೆ ಹೆದರಿದ್ದು ಅತಿಯಾಯ್ತು. ಅಂದ ಮಾತ್ರಕ್ಕೆ ನಿರ್ಲಕ್ಷಿಸುತ್ತಿದ್ದೇವೆ ಎಂದಲ್ಲ. ರಾತ್ರಿ ಸ್ನಾನ ಮಾಡಿ, ಬಟ್ಟೆ ಒಗೆದು ಹರಗಿ, ಮಲಗಿದರೆ, ಬೆಳಿಗ್ಗೆ ಗರಿಗರಿಯಾಗಿರುತ್ತದೆ. ಯಾನಕ್ಕೂ ಮೊದಲು ಮುಖ ಕೈಗಳಿಗೆ ಎಣ್ಣೇ ವ್ಯಾಸಲೀನ್ ಬಳಿದುಕೊಂಡು ಹೊರಡುತ್ತಿದ್ದೇವೆ. ನನಗೆ ಪೂರ್ಣ ತೋಳಿನ ಅಂಗಿ, ಕೈಗವುಸು, ಹೆಲ್ಮೆಟ್, ಕೂಲಿಂಗ್ ಗ್ಲಾಸ್ ಇದ್ದರೆ ದೇವಕಿ ತಲೆಗೆ ಹ್ಯಾಟು ಹಾಕಿ, ಮೇಲೆ ದುಪ್ಪಟ್ಟಾ ಕುತ್ತಿಗೆ ಮುಖದ ಬಹುಭಾಗವನ್ನು ಆವರಿಸುವಂತೆ ಸುತ್ತಿ, ಕೈಗಳ ಮೇಲೆ ಬಿಟ್ಟುಕೊಳ್ಳುತ್ತಾಳೆ. ಕೂಲಿಂಗ್ ಗ್ಲಾಸ್ ಹಾಕುತ್ತಾಳೆ. ಎರಡು ಲೀಟರಿನ ಎರಡೂ ಅಂಡೆಗಳ ನೀರನ್ನು ದಿನದಲ್ಲಿ ಎರಡು ಮೂರು ಬಾರಿ ಮರುಪೂರಣ ಮಾಡಬೇಕಾಗುತ್ತದೆ. ಆದರೂ ಉಚ್ಚೆ ಬಲು ಕಡಿಮೆ. ಊಟ ತಿಂಡಿ ನಮ್ಮ ಮಟ್ಟಿಗೆ ಸಹಜವಾಗಿದೆ. ಉಳಿದವರು ಅನ್ನ, ಮೊಸರು ಎಂದು ಪರಡಲು ಶುರು ಮಾಡಿದ್ದಾರೆ. ಆದರೆ ಯಾರದೂ ಉತ್ಸಾಹ ಕುಂದಿಲ್ಲ. ಹುಬ್ಬಳ್ಳಿ ರಿಪೇರಿಯ ಮೇಲೆ ಬೈಕುಗಳ ಆರೋಗ್ಯವೂ ಕಾಡಿಲ್ಲ. ನಮ್ಮ ನಿರೀಕ್ಷೆಗಳೆಲ್ಲ ಅದ್ಭುತವಾಗಿ ನಿಜವಾಗುತ್ತಲೇ ಸಾಗಿವೆ.

“ಮೊನ್ನೆಯ ಉಸ್ಮಾನಾಬಾದಿನ ಚಾ, ಶೋಲಾಪುರದ ಊಟ, ಔರಂಗಾಬಾದಿನ ಊಟಕ್ಕೆಲ್ಲ ನಮಗೆ ಸಿಕ್ಕವು ದಕಜಿಲ್ಲೆಯವರದೇ  ಹೋಟೆಲುಗಳು. ನಾವು ಅವರನ್ನು ‘ಶೆಟ್ರೋ ಭಟ್ರೋ’ ಕೇಳಲಿಲ್ಲ. ದೂರದ ನೆಲಗಳಲ್ಲಿ ಕೇಳುವ ಕನ್ನಡ ಮಾತಿಗೆ, ಊರಿನವರು ಎಂದು ತಿಳಿದಷ್ಟಕ್ಕೇ ಭಾರೀ ಬಂಧುಗಳೇ ಎನ್ನುವ ಭಾವನೆ ಸ್ಫುರಿಸುವುದು ಆಶ್ಚರ್ಯವಾದರೂ ನಿಜ. “ಹುಬ್ಳಿಯಿಂದೀಚೆಗೆ ನೆಲ ಒಂದೇ ತರ ಬಟಾಬಯಲು, ರಣ ಬಿಸಿಲಿಗೆ ದೂಳು ಹಾರುವ, ಹೆಚ್ಚು ಕಡಿಮೆ ಮರುಭೂಮಿ ಎನಿಸುವ ನೆಲ. ಆದರೆ ನೀರಾವರಿ ಇದ್ದಲ್ಲಿ ಕಬ್ಬು, ಹತ್ತಿಯಂಥ ಹಣದ ಬೆಳೆ ಕೊಡುವ, ಫಲವಂತಿಕೆಯ ಸಂಕೇತವೇ ಆದ ಕಪ್ಪು ಮಣ್ಣು. ತಂದ ನಗದು ರೂ ಒಂದು ಸಾವಿರ ನಮ್ಮಿಬ್ಬರಿಗೆ (ಬೈಕ್ ಸೇರಿ) ಕರಗಿ ಕರಗಿ ಬಹುಶಃ ನಾಳೆ ಮೊದಲ ಟ್ರಾವೆಲ್ಲರ್ಸ್ ಚೆಕ್ ನಗದು ಮಾಡುವ ಅವಕಾಶ ಬರುತ್ತದೆ. ಮೊನ್ನೆಯಿಂದ ಅಲ್ಲಿ ಇಲ್ಲಿ ವಹಿವಾಟಿನಲ್ಲೇ ಒಂದನ್ನು ನಗದೀಕರಿಸುವಲು ನೋಡಿ ವಿಫಲನಾದೆ. ನಾಳೆ ಬುಲ್ಡಾನ್ ಅಥವಾ ಕಾಮ್ ಗಾಂವಿನಲ್ಲಿ ಅಂಚೆ ಸಾಹಿತ್ಯ ಖರೀದಿಯೊಡನೆ ಬ್ಯಾಂಕಿಗೂ ಭೇಟಿ ಕೊಡುವ ಅಂದಾಜು ಉಂಟು. ಅಲ್ಲಿವರೆಗೆ ಇಷ್ಟೇ – ಇಂತು ನಿನ್ನ ದೇವಶೋಕ. ೨೯-೪-೯೦ ರಾತ್ರಿ ೯-೧೫. ನಾಳೆ ಬೆಳಿಗ್ಗೆ ೪.೩೦ಕ್ಕೆ ಅಲಾರಾಂ ಇಟ್ಟಿದ್ದೇನೆ. ಗುಡ್ ನೈಟ್.” (ದಿನದ ಓಟ ೧೩೪ ಕಿಮೀ)

ಔರಂಗಾಬಾದಿನವರೆಗೂ ಬಹುತೇಕ ನೇರ ಉತ್ತರಕ್ಕಿದ್ದ ನಮ್ಮ ದಿಕ್ಸೂಚಿ ಈಗ ಪೂರ್ವಕ್ಕೆ ವಾಲಿತ್ತು. ಸಾತ್ಪುರ ಪರ್ವತ ಶ್ರೇಣಿಯ ಮೇಲ್ಘಾಟ್ ವನಧಾಮ ನಮ್ಮ ಅಂದಿನ (೩೦-೪-೯೦ ಸೋಮವಾರ) ಲಕ್ಷ್ಯ. ತುಸು ದಕ್ಷಿಣಕ್ಕಿಳಿದು ಮತ್ತೆ ಬುಲ್ಡಾನಾ, ಕಾಂಗಾಂವ್‍ಗಾಗಿ ನೂರೆಂಬತ್ತಾರು ಕಿಮೀ ಓಟದ ಅಂದಾಜು. ಉದ್ದಕ್ಕೂ ದಹಿಸುವ ಸೂರ್ಯನನ್ನು ಸಹಿಸಿ, ಹತ್ತೂವರೆಗೇ ಅಕೊಟ್ ತಲಪಿಕೊಂಡೆವು.

ಸರಕಾರೀ ಇಲಾಖೆಗಳು ಸಾಮಾನ್ಯರನ್ನು ಹಿಂಸೆಗೊಳಪಡಿಸುವಂತೆ, ಅಪ್ರಾಯೋಗಿಕ ಆದರೆ ಕಟ್ಟುನಿಟ್ಟಾದ ಔಪಚಾರಿಕತೆಗಳನ್ನು ಇರಿಸಿಕೊಳ್ಳುತ್ತವೆ. ಉದಾಹರಣೆಗೆ ನಮ್ಮದೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ನೋಡಿ. ಅದರ ಮುಖ್ಯ ಕಛೇರಿ – ಘಟ್ಟದ ತಪ್ಪಲಿನ ಕಾರ್ಕಳದಲ್ಲಿದೆ. ಅದರ ಉಪ ಕಛೇರಿ ಐವತ್ತೊಂದು ಕಿಮೀ ಘಟ್ಟದ ಮೇಲಿನ ಕುದುರೆಮುಖ ನಗರದಲ್ಲಿದೆ. ಅದರ ಏಕೈಕ ಸಾರ್ವಜನಿಕ ವಾಸಾನುಕೂಲ – ಭಗವತೀ ಪ್ರಕೃತಿ ಶಿಬಿರ, ಎರಡಕ್ಕೂ ಕ್ರಮವಾಗಿ ನಲ್ವತ್ತು ಮತ್ತು ಹತ್ತು ಕಿಮೀ ನಡುವೆ ಇದೆ. ಭಗವತೀ ಶಿಬಿರವಾಸಕ್ಕೆ ಹೋಗುವವರು ಕಾರ್ಕಳದಲ್ಲಿ ಅನುಮತಿ ಪತ್ರ (ನಲ್ವತ್ತು ಕಿಮೀ ಅತ್ತ) ಮಾಡಿಸಿ, ಕುದುರೆಮುಖದಲ್ಲಿ ಪಾವತಿ ಕೊಟ್ಟು (ಹತ್ತು ಕಿಮೀ ಇತ್ತ) ದಕ್ಕಿಸಿಕೊಳ್ಳಬೇಕಾದ ಸಂಕಟ. ಪ್ರಸ್ತುತ ಅಕೊಟ್, ಮಹಾರಾಷ್ಟ್ರ ಜಿಲ್ಲೆಯದೇ ಭಾಗವಾದ ಮೇಲ್ಘಾಟ್ ವನಧಾಮಕ್ಕೆ ಪ್ರವೇಶಿಕೆಯಂತೇ ಇರುವ ಊರು. ವನಧಾಮ ಪ್ರವೇಶಕ್ಕೆ ಅಲ್ಲೇನಾದರೂ ಔಪಚಾರಿಕತೆಗಳೋ ಕಿವಿಮಾತೋ ಸಿಕ್ಕೀತೆಂದು ಮೊದಲು ಅಲ್ಲಿನ ಅರಣ್ಯಾಧಿಕಾರಿಯನ್ನು ಭೇಟಿಯಾದೆವು. ಸಮಯ ಹಾಳು ಮಾಡಿದ್ದಷ್ಟೇ ಬಂತು. ಆ ಅಧಿಕಾರಿಯ ದೊಡ್ಡ ಜವಾಬ್ದಾರಿ ಹೊಣೆ ಜಾರಿಸುವುದೇ ಆಗಿತ್ತು. ಅನಂತರ ಬ್ಯಾಂಕ್, ಅಂಚೆ ಕೆಲಸ ಮತ್ತು ಊಟವನ್ನು ಬೇಗವೇ ಮುಗಿಸಿಕೊಂಡೆವು.

ಅಕೋಟಿನಿಂದ ಮೇಲ್ಘಾಟ್ ನಮ್ಮ ಅಂದಾಜಿನಂತೆ ಸುಮಾರು ಎಂಬತ್ತು ಕಿಮೀ. (ಮೂವತ್ತು ವರ್ಷಗಳ ಪರಿಷ್ಕಾರದಲ್ಲಿ, ಅಂದರೆ ಇಂದು ಗೂಗಲ್ ನಕ್ಷೆ ನೆಚ್ಚುವುದಿದ್ದಲ್ಲಿ ೫೨ ಕಿಮೀ ಮಾತ್ರ.) ಅದು ಸಾತ್ಪುರ ಘಟ್ಟಗಳಲ್ಲಿ, ಬಹುತೇಕ ನಿರ್ಜನ ವಲಯಗಳಲ್ಲೇ ಸುಳಿದಾಡುವ ಕಾಡುದಾರಿ. ಹಾಗಾಗಿ ನಾವು ಹೆಲ್ಮೆಟ್ಟೂ ತೂತ ಬೀಳುವಂಥ ಬಿಸಿಲಿದ್ದರೂ ನಿಯತ ವಿಶ್ರಾಂತಿಗಳನ್ನಷ್ಟೆ ನೆಚ್ಚಿ, ಹನ್ನೆರಡೂ ಮುಕ್ಕಾಲಕ್ಕೇ ದಾರಿಗಿಳಿದೆವು. ಉದ್ದಕ್ಕೂ ಹಾಳು ದಾರಿ. ಹಲವೆಡೆಗಳಲ್ಲಿ ಕಿಮೀಗಟ್ಟಳೆ ಜಲ್ಲಿಯನ್ನೂ ಕಿತ್ತುಕೊಂಡ ಮಣ್ಣ ಹಾಸಿನದ್ದೇ ಕಾರುಬಾರು. ಮೊದಲ ಸುಮಾರು ೨೩ ಕಿಮೀ ತಪ್ಪಲಿನ ಬಯಲುಗಳಲ್ಲಿ. ಅನಂತರ ಘಟ್ಟ, ಕಾಡಿನ ದಾರಿ. ಅದು ಪ್ರಧಾನವಾಗಿ ಒಣ ಎಲೆ ಉದುರಿಸುವ ಸಾಗುವಾನಿ ಮರಗಳದೇ ಬೀಡು. ನಮ್ಮ ಪಶ್ಚಿಮ ಘಟ್ಟದ್ದರಂತೆ ದಟ್ಟ ಹಾಗೂ ನಿಗೂಢದ್ದಲ್ಲ. ಅವೆಲ್ಲ ಬೇಸಗೆಗೆ ಸಹಜವಾಗಿ ಎಲೆ ಉದುರಿಸಿ, ಚದುರಿದ ಬೋಳು ಬೋದಿಗೆಗಳಂತೇ ಕಾಣುತ್ತಿತ್ತು. ಗಾರುಬಿದ್ದ ನೆಲ, ಒಣಗಿದ ಮುಳ್ಳ ಕಂಟಿಗಳು, ಎಲ್ಲವನ್ನೂ ಆವರಿಸುವಂತೆ ಬಿದ್ದ ತರಗೆಲೆಗಳು. ಕಾಡು, ಬೆಟ್ಟ ಎಂದೇ ನಾವು ಕಟ್ಟಿಕೊಂಡ ತಂಪಿನ ಕಲ್ಪನೆಯೆಲ್ಲ ಹುಸಿಯಾಗಿತ್ತು.

ತಪತೀ ನದಿಯ ಒಂದು ಒಣ ಕಿರು ಹಳ್ಳದ ದಂಡೆಯಲ್ಲಿ ಸಾಗುವ ಹಂತಕ್ಕೆ ಬಂದಲ್ಲಿ ಅರಣ್ಯ ಇಲಾಖೆಯ ಒಂದು ತನಿಖಾಠಾಣೆ ಸಿಕ್ಕಿತು. ಅದು ಕಳೆದ ಮೂರು ಕಿಮೀಗೆ ಪುಟ್ಟ ಡಾಬಾವನ್ನಷ್ಟೇ ಸಾಕಿದ್ದ ಕೈಕಂಬ. ಮುಖ್ಯ ದಾರಿ ಹರಿಸಾಲ್ ಎಂದಿತ್ಯಾದಿ ಮುಂದುವರಿದಿದ್ದರೆ, ನಾವು ಬಲ ಹೊರಳಿದೆವು. ಮುಂದೆಲ್ಲೋ ಇದ್ದ ಕವಲಿನಲ್ಲಿ ನಮಗೆ ದಿಕ್ಕು ಹೇಳುವವರಿರಲಿಲ್ಲ. ಅಂದಾಜಿನಲ್ಲಿ ನುಗ್ಗಿದ್ದು, ನಮ್ಮ ಪುಣ್ಯಕ್ಕೆ ಎರಡು ಕಿಮೀ ಅಂತರದಲ್ಲೇ ಅರಣ್ಯ ಇಲಾಖೆಯ ನಾಟಾ ಸಂಗ್ರಹದ ಕುರುಡುಕೊನೆ ತೋರಿಸಿ ಮರಳಿಸಿತು. ಹಾಗೂ ವನಧಾಮದ ಶಿಬಿರಸ್ಥಾನವನ್ನು ಸಂಜೆ ಐದು ಗಂಟೆಗೆ ಸೇರಿದೆವು. ದಾರಿಯೊಳಗಿನ ಸುಭಗತೆಗಾಗಿ ಅಡ್ಡಾತಿಡ್ಡಾ ಓಡಿಸಿದ್ದು, ನಾಟಾ ಸಂಗ್ರಹ ಕಂಡುಕೊಂಡದ್ದು ಎಲ್ಲ ಸೇರಿ ಭರ್ತಿ ೧೧೬ ಕಿಮೀ ದಾರಿ ಸವೆಸಿದ್ದೆವು!

೧೯೭೪ರಲ್ಲಿ ಅಸ್ತಿತ್ವ ಕಂಡುಕೊಂಡ ವನಧಾಮಕ್ಕೆ ಹದಿನಾರರ ಹರಯಕ್ಕೆ ಒಪ್ಪುವ ಶೋಭೆ ಮಾತ್ರ ಇರಲೇ ಇಲ್ಲ. ಅದರ ಅವ್ಯವಸ್ಥೆಯಲ್ಲೂ ನಮಗೇನೋ ವ್ಯವಸ್ಥೆ ಕೊಟ್ಟಿತು. ಅನ್ಯ ನಾಕೆಂಟು ಪ್ರವಾಸಿಗಳೂ ಇದ್ದರು. ಆ ವಲಯದ ಬೇಸಗೆಯಲ್ಲಿ ಹಗಲಿನ ಝಳಕ್ಕೆ ವನ್ಯಮೃಗಗಳ ಸಂಚಾರವೇ ಸ್ಥಗಿತಗೊಳ್ಳುತ್ತದಂತೆ. ಹಾಗಾಗಿ ಇಲಾಖೆ ನಿಶಾಚರಿ ವನ್ಯ ದರ್ಶನ ಮಾಡಿಸುತ್ತಿತ್ತು. ಬಹುಶಃ ಮಿನಿ ಲಾರಿಯಂತದ್ದೇನೋ ವಾಹನದಲ್ಲಿ ಒಟ್ಟು ಸುಮಾರು ಹದಿನೈದಿಪ್ಪತ್ತು ಮಂದಿ, ಅಂಚುಗಳನ್ನು ಹಿಡಿದುಕೊಂಡು ನಿಂತಿದ್ದೆವು. ವಾಹನ ಕಾಡಿನ ಕಚ್ಚಾ ಮಾರ್ಗಗಳಲ್ಲಿ, ದಡಬಡ ಮಾಡುತ್ತ, ಹೊಗೆ ಕಾರುತ್ತ, ದೂಳೆಬ್ಬಿಸುತ್ತ ಸುಮಾರು ನಲ್ವತ್ತು ಕಿಮೀ ಸುತ್ತಿಸಿತ್ತು, ಅಲ್ಲಲ್ಲ ಸುಸ್ತಿಸಿತ್ತು. ಚಾಲಕ ಗೂಡಿನ ತಲೆಯ ಮೇಲೆ ಸ್ವತಂತ್ರವಾಗಿ ಒಂದು ವಿದ್ಯುತ್ ಹೆದ್ದೀಪವನ್ನಿರಿಸಿದ್ದರು. ಮಾರ್ಗದರ್ಶೀ ಇಲಾಖಾ ನೌಕರನೊಬ್ಬ ಅದರ ಪಕ್ಕದಲ್ಲಿ ಕುಳಿತುಕೊಂಡು, ಬೆಳಕಿನ ಕೋಲನ್ನು ಅತ್ತಿತ್ತ ತಿರುಗಿಸುತ್ತ ವನ್ಯಜೀವಿಗಳನ್ನು ಹುಡುಕುತ್ತಿದ್ದ. ನಮ್ಮ ಅದೃಷ್ಟಕ್ಕೆ ಕಣ್ಣು ಕೊಟ್ಟ ಒಂದೆರಡು ಕಾಡುಕುರಿ, ನರಿ, ಕಡವೆ, ಕೊನೆಗೊಂದು ಗೂಬೆಗಳನ್ನೇ ರಂಗುಮಾಡಿದ. ಅದಕ್ಕೂ ಮಿಗಿಲಾಗಿ ಯಾರೋ ಬಂದಾಗ ಅಡ್ಡಾದಿಡ್ಡಿ ಓಡಿದ ಕಾಟಿ, ಇನ್ಯಾರೋ ಬಂದಾಗ ದಿಟ್ಟಿಸಿ ನೋಡಿದ ಹುಲಿಯ ರಂಜನೀಯ ಕತೆಗಳನ್ನು ಹೇಳಿ, ಇಲಾಖೆಯ ಋಣ ತೀರಿಸಿದ ಎಂದೇ ಹೇಳಬೇಕು!

(ದಿನದ ಓಟ ೩೦೭ ಕಿಮೀ. ತಾ ೨೪, ತೇ ೨೪% ಔನ್ನತ್ಯ ೨೦೦೦ ಅಡಿ)
(ಮುಂದುವರಿಯಲಿದೆ)