(ಪ್ರಾಕೃತಿಕ ಭಾರತ ಸೀಳೋಟ – ೫) ಅಂಗಡಿಯಲ್ಲಿ ಹಲವು ನಕ್ಷಾಪುಸ್ತಕಗಳಿಂದ ನಮ್ಮ ಸ್ವಾರ್ಥಾನುಕೂಲಿಯಾದ ಗೀಟುಗಳನ್ನು ಹೆಕ್ಕಿದ ಮಿಶ್ರಣವೇ ನನ್ನ ನಕಾಶೆ. ಆ ಲೆಕ್ಕದಲ್ಲಿ ನಮ್ಮ ಹೊಸದಿನದ (೧-೫-೯೦) ಲಕ್ಷ್ಯ – ರಾಣೀ ರೂಪಮತಿಯ ಅಮರ ಪ್ರೇಮ ಕತೆಗೂ ಸಾಕ್ಷಿಯಾದ ಮಾಂಡವಘಡ್ ಅಥವಾ ಮಾಂಡು. ಹಕ್ಕಿ ಹಾರಿದಂತೆ ಇದು ಮೇಲ್ಘಾಟಿನಿಂದ ಪಡುಬಡಗು ಅಥವಾ ವಾಯವ್ಯಕ್ಕಿತ್ತು. ನನ್ನ ದಾರಿಯ ಅಂದಾಜಿನಂತೆ ನಾನೂರು ಕಿಮೀಯ ಓಟ. ಸಾಲದ್ದಕ್ಕೆ ಮಾಂಡು ಕೋಟೆಯಲ್ಲಿನ ಊಟ, ವಾಸ್ತವ್ಯದ ಅನುಕೂಲಗಳೂ ಅಸ್ಪಷ್ಟವಿದ್ದವು. ಮೇಲ್ಘಾಟಿನ ಪರ್ವತ ಪ್ರದೇಶದ ದಾರಿಗಳಲ್ಲಿ ಹೆಚ್ಚು ಆಯ್ಕೆಗಳಿಲ್ಲ. ಇದ್ದವಕ್ಕೂ ಸಮರ್ಥ ಮಾಹಿತಿದಾರರು ನಮಗೆ ವನಧಾಮದಲ್ಲಿ ಸಿಗಲಿಲ್ಲ. ನಾವು ವಿಚಾರಿಸಿದ ಒಂದಿಬ್ಬರು ಸರಳವಾಗಿ “ಅಸಾಧ್ಯ” ಎಂದುಬಿಟ್ಟರು. ಮತ್ತು ನೇರ ಉತ್ತರಕ್ಕೆ ಹೋಗುವ ಸುಮಾರು ಐವತ್ತರವತ್ತು ಕಿಮೀ ಬಳಸು ದಾರಿಯನ್ನೇ ಹೇಳಿದರು. ಕಾರಣ ಸರಳ – ನಾನು ಕಂಡುಕೊಂಡ ದಿಕ್ಕಿನಲ್ಲಿ ಇದ್ದರೂ ತೀರಾ ಕಚ್ಚಾದಾರಿಯಂತೆ. ಮತ್ತೆ ಹಾಗೆ ಹೋದರೂ ಅಡ್ಡಲಾಗುವ ಮೊದಲು ತಪತೀ, ಅ`ನಂತರ ನರ್ಮದಾ ನದಿಗಳನ್ನು ದಾಟಲು ಸೇತುವೆಗಳೇ ಇಲ್ಲವೆಂದರು. ನಮಗೋ ದಾರಿಯ ಉಳಿತಾಯದಂತೆ, ಬಳಸಂಬಟ್ಟೆ ಹಿಡಿದರೆ ಬೈಕುಗಳಿಗೆ ಪೆಟ್ರೋಲ್ ಕೊರತೆಯಾದೀತು ಎಂಬ ಹೆದರಿಕೆಯೂ ಇತ್ತು.

ಬಂದದ್ದೆಲ್ಲಾ ಬರಲಿ (ಗೋ)ಇಂಧನ ದಯೆ ಒಂದಿರಲಿ ಎಂದುಕೊಳ್ಳುತ್ತ, ಸುಮಾರು ಐದೂಮುಕ್ಕಾಲರ ಬೆಳಿಗ್ಗೆಯೇ ಬೈಕೋಡಿಸಿದೆವು. ಹರಿಸಾಲ್ ಡಾಬಾದಲ್ಲಿ ಚಾ ಕುಡಿಯುವಾಗ, ಅಲ್ಲಿನವರೆದುರು ನಮ್ಮ ಜಾತಕ ಬಿಚ್ಚಿ, ಕವಡೆ ಹಾಕಿದೆವು. ಅವರು ಧೈರ್ಯ ಕೊಟ್ಟರು. ಆ ಪ್ರಕಾರ ಧರಣಿ ಎಂಬಲ್ಲಿ ಎಡ ಹೊರಳಿದೆವು. ಪೂರ್ಣ ಕಚ್ಚಾ ದಾರಿಯಲ್ಲಿ ದೂಳೀಸ್ನಾನ ಮಾಡುತ್ತ ಏಳು ಗಂಟೆಯ ಸುಮಾರಿಗೆ ದೇಡ್ ತಲಾಯಿ ಎಂಬ ಹಳ್ಳಿ ಮುಟ್ಟಿದೆವು. ಅಲ್ಲಿನ ಡಾಬಾದಲ್ಲಿ ಕಾಫಿಂಡಿ ಮುಗಿಸಿ, ಹೆಚ್ಚಿನ ಶಕ್ತಿ ಸಂಚಯಿಸಿಕೊಂಡೆವು. ಮುಂದಿತ್ತು ಸೇತುವೆಯಿಲ್ಲದ ತಪತೀ ನದಿ ‘ಲಂಘನ’. ನದಿ ಸೊಕ್ಕಿನ ದಿನಗಳಲ್ಲಿ ರೂಢಿಸಿಕೊಂಡ ಪಾತ್ರೆ ತುಂಬ ವಿಸ್ತಾರಕ್ಕೇ ಇತ್ತು. ಆದರೆ ಬೇಸಗೆಯ ಬವಣೆಯಲ್ಲಿ ಹದಿನೈದಿಪ್ಪತ್ತಡಿ ಎತ್ತರದ ದಂಡೆಗಳನ್ನು ದೂರ ಮಾಡಿ, ನಡುವೆ ತೆಳ್ಳಗೆ ಹರಿದಿತ್ತು.

ಹಳ್ಳಿಗರು, ಎತ್ತಿನ ಗಾಡಿಗಳು ಎರಡೂ ದಂಡೆಗಳಲ್ಲಿ ಓರೆಯಾಗಿ ಕಡಿದ ಮಾರ್ಗಗಳಲ್ಲಿ ಇಳಿದು, ಕಲ್ಲು ಮತ್ತು ದಪ್ಪ ಮರಳು ಹಾಕಿ ತುಸು ಬಿಗಿ ಮಾಡಿದ ಜಾಡಿನಲ್ಲಿ ನೀರಿಗಿಳಿಯುತ್ತಿದ್ದರು. ಆಯಕಟ್ಟಿನ ಜಾಡು ಹಿಡಿದು ಗರಿಷ್ಠ ಮೊಣಕಾಲಾಳದ ನೀರಿನಲ್ಲಿ ದಾಟುತ್ತಿದ್ದರು. ನಮಗಿಂಥದ್ದರ ಅನುಭವ ಊರಿನಲ್ಲಿ ಸಾಕಷ್ಟು ಇತ್ತು. (ನೋಡಿ: ಚಕ್ರವರ್ತಿಗಳು) ನಾವು ನಿಶ್ಚಿಂತೆಯಲ್ಲೇ ಗಾಡಿ ಜಾಡನ್ನು ಅನುಸರಿಸಿದೆವು. ವಿಸ್ತಾರ ಪಾತ್ರೆಗಿಳಿಯುವಲ್ಲಿ ಸ್ವಲ್ಪ ಹೆಚ್ಚೇ ವಾಲಾಡಿದ್ದೆವು. ಹಾಗಾಗಿ ಮರಳ ಪಥ, ನೀರ ಹರಿವಿನ ಅಡ್ಡಕ್ಕೆ ಮತ್ತು ಎದುರು ದಂಡೆ ಏರುವಲ್ಲಿ ಸಹವಾರರಿಗೆ ನಡಿಗೆ ಕಡ್ಡಾಯವಾಯ್ತು. ನೀರಿನಲ್ಲಿ ಸೆಳವಿರಲಿಲ್ಲ. ನಮ್ಮ ಪುಣ್ಯಕ್ಕೆ ಬಿಸಿಲಿನ ತಾಪಕ್ಕೆ (ತಾಪ ೪೨% ತೇ ೧೬%) ನೀರು ಕುದಿಯುತ್ತಲೂ ಇರಲಿಲ್ಲ! ಎದುರು ದಂಡೆ ಏರುವುದು ಸಣ್ಣ ಸರ್ಕಸ್ಸು. ಪಟ್ಟೆಚಕ್ರದ ಗಾಡಿ ಮತ್ತು ಗೊರಸುಗಳು ಜಾಡನ್ನು ನುಣ್ಣಗೆ ಹುಡಿ ಮಾಡಿದ್ದವು. ಆ ದೂಳೀಹೂಳಿನಲ್ಲಿ ಸರದಿಗೊಬ್ಬೊಬ್ಬರಂತೇ ನಾವು ತಡವರಿಸಿ, ಸಹವಾರರ ಕೈಯಾಸರೆ ಪಡೆದು, ಮೇಲೆ ಬಿದ್ದೆವು. (ಇಂದಿನ ಗೂಗಲ್ ಟಿಪ್ಪಣಿ: ದೇಡ್‍ತಲಾಯಿಯಲ್ಲಿ ತಪತೀ ನದಿಗೆ ೨೦೧೬ರಲ್ಲಿ ಭಾರೀ ಸೇತುವೆಯಾಗಿದೆ!)

ಸುಮಾರು ಇಪ್ಪತ್ತೇಳು ಕಿಮೀ ಈ ಹಳ್ಳಿಗಾಡಿನ ಒಳ ದಾರಿಯಲ್ಲಿ ಉರುಡಿ, ನೂರರ ಸಮೀಪದ ಬಳಸು ದಾರಿ ಮತ್ತು ಸಮಯವನ್ನು ಉಳಿಸಿದ್ದೆವು. ಮುಂದೆ ಸಾಮಾನ್ಯ ಡಾಮರು ದಾರಿಯಲ್ಲೇ ಪಿಪ್ಲೋಡ್, ಸಿಂಗೋಟ್ ಮುಂತಾದ ಪೇಟೆಗಳನ್ನು ನಿಧಾನಕ್ಕೇ ಹಿಂದಿಕ್ಕಿ, ದೊಡ್ಡ ಪಟ್ಟಣ ಖಾಂಡ್ವಾ ತಲಪುವಾಗ ಹನ್ನೊಂದು ಗಂಟೆಯಾಗಿತ್ತು. ಅಂದರೆ ಸುಮಾರು ಐದು ಗಂಟೆಗಳಲ್ಲಿ, ನೂರಾಮೂವತ್ತು ಕಿಮೀ, ಅಂದರೆ ಸರಾಸರಿ ಗಂಟೆಗೆ ೨೬ ಕಿಮೀ ವೇಗದಲ್ಲಿ ದಾರಿ ಸವೆಸಿದ್ದೆವು. ಮುಂದಿನದು ಔರಂಗಾಬಾದ್ – ಇಂದೋರ್ ಹೆದ್ದಾರಿ. ಅದಕ್ಕೂ ಮುಖ್ಯವಾಗಿ ಭಾರತದ ಐದನೇ ಮಹಾನದಿ ಎಂದೇ ಖ್ಯಾತವಾದ ನರ್ಮದೆಯನ್ನು ಆ ವಲಯದ ದಾರಿಗಳೆಲ್ಲ ಸೇತುವೆಯಲ್ಲಿ ದಾಟಲು ಚೂಪು ಪಡೆಯುವ ಏಕೈಕ ದಾರಿ.

ನರ್ಮದಾ ನದಿ ತನ್ನ ಹರಿವಿನ ೯೫% ನೀರನ್ನು ‘ವ್ಯರ್ಥ’ ಸಮುದ್ರಕ್ಕೆ ಸುರಿಯುತ್ತಾಳೆಂದು ಕಡಿವಾಣವಿಕ್ಕಲು ೧೯೪೫ರ ಸುಮಾರಿಗೇ ಮಹಾ ಯೋಜನೆಯೊಂದರ ಬೀಜ ಬಿದ್ದಿತ್ತು. ಪ್ರತಿಭಟನೆ, ವ್ಯಾಜ್ಯಗಳು ಬೆಳೆದಿದ್ದಂತೇ ೧೯೮೭ರಲ್ಲಿ ಯೋಜನೆ ಅನುಷ್ಠಾನಕ್ಕಿಳಿಯತೊಡಗಿತ್ತು. ‘ಸಮಗ್ರ ನರ್ಮದಾ ಕಣಿವೆ ಅಭಿವೃದ್ಧಿ ಯೋಜನೆ’ ಗಾತ್ರದಲ್ಲೂ ಪ್ರತಿಭಟನೆಯಲ್ಲೂ ಇಂದಿಗೂ ವಿಶ್ವ ಪ್ರಥಮ ಸ್ಥಾನದಲ್ಲೇ ಇದೆ ಎಂದು ವಿಕಿಪೀಡಿಯಾ ಸಾರುತ್ತದೆ! ನಮ್ಮದೋ ಸಣ್ಣ ಓಟ ಮತ್ತು ಬೀಸು ನೋಟ. ಅಷ್ಟರೊಳಗೆ ನರ್ಮದಾ ಯೋಜನೆಯ ಚಕ್ರವಾತವನ್ನು ಹಿಡಿದಿಟ್ಟುಕೊಳ್ಳುವ ಮೂರ್ಖತನ ಮಾಡಲಿಲ್ಲ. ಸನವಾಡ್ ಕಳೆದು ಮೋರ್ತಕ್ಕ ಎಂಬಲ್ಲಿ ನರ್ಮದಾ ದಾಟಿದೆವು. ತುಸು ಮುಂದೆ ಹೆದ್ದಾರಿಯನ್ನು ಬಿಟ್ಟು ಎಡಕ್ಕೆ ಹೊರಳಿ, ನರ್ಮದೆಗೆ ಹೆಚ್ಚು ಕಮ್ಮಿ ಸಮಾನಾಂತರದಲ್ಲೋಡುವ ಸಾಮಾನ್ಯ ದಾರಿಯನ್ನು ಹಿಡಿದೆವು.

 

ಬಡಾರೋಹ್ ಎಂಬಲ್ಲಿ ನಮಗೆ ಮಧ್ಯಾಹ್ನದ ಊಟ. ನಮ್ಮ ಮುಂದಿನ ಓಟದ ನಕ್ಷೆ ನೋಡುವಾಗ ನರ್ಮದಾ ನದಿ ಸಮಾನಾಂತರದಲ್ಲೇ ಹರಿದಿತ್ತು. ಆದರೆ ಅದು ನಮಗೆ ನಿಜ ದರ್ಶನ ಕೊಟ್ಟದ್ದು ಮೊದಲು ಮಾಂಡ್ಲೇಶ್ವರಿನಲ್ಲಿ. (ಮೇಲಿರುವ ವಿಡಿಯೋ ನೋಡಿ) ಇದು ಹೋಳ್ಕರ್ ರಾಜಸತ್ತೆಯ ಕಾಲದ ಜ್ಞಾನಕೇಂದ್ರ. ಇಲ್ಲಿನದೇ ಒಂದು ದೇವಳ – ಗುಪ್ತೇಶ್ವರ. ಅಲ್ಲೇ ಶಂಕರಾಚಾರ್ಯರು ಮಂಡನಮಿಶ್ರನನ್ನು ವಾದರಂಗದಲ್ಲಿ ಎದುರಿಸಿದ್ದು ಎನ್ನುತ್ತದೆ ಸ್ಥಳಪುರಾಣ. ಅಲ್ಲಿಂದ ಎಂಟೇ ಕಿಮೀ ಮುಂದೆ, ಅದೇ

ಹೋಳ್ಕರ್ ಸಂಸ್ಥಾನದ ರಾಜಧಾನಿಯೇ ಆಗಿದ್ದ ಮಾಹೇಶ್ವರ್ ಕೂಡಾ ನರ್ಮದಾ ತೀರದಲ್ಲೇ ಇದೆ. ನಮ್ಮ ಓಟ ಸಮಯದೊಂದಿಗೂ ಚೌಕಾಸಿ ನಡೆಸಿದ್ದ ಕಾರಣಕ್ಕೆ, ಮಾಹೇಶ್ವರದಲ್ಲಿ ಮಾತ್ರ ಇಪ್ಪತ್ತು ಮಿನಿಟಿನ ವಿರಾಮ ಅನುಭವಿಸಿದೆವು. ಈ ಎರಡೂರಿನಲ್ಲೊಂದೆಡೆ ಐತಿಹಾಸಿಕ ವಸ್ತುಪ್ರದರ್ಶನವೋ, ಗ್ರಂಥಭಂಡಾರವೋ ಅವಶ್ಯ ನೋಡುವಂತದ್ದು ಇದೆ ಎಂದು ಕೇಳಿದ್ದೆವು. ನೋಡಲು ಸಣ್ಣ ಪ್ರಯತ್ನವನ್ನೂ ಮಾಡಿ, ವಿಫಲರಾದೆವು. (ಮಾಹೇಶ್ವರ್ ಚಂದಕ್ಕೆ ಕೆಳಗಿನ ವಿಡಿಯೋ ನೋಡಿ)

ಧನ್ಮೋಡ್ ಎಂಬಲ್ಲಿ ಮುಂಬೈ – ಇಂದೋರ್ ಮೂಲಕ ಆಗ್ರಾ, ದಿಲ್ಲಿಯನ್ನೇ ಗುರಿ ಮಾಡಿದ್ದ ಮಹಾ ಹೆದ್ದಾರಿಯನ್ನೇ ಸೇರಿದೆವು. ಆ ದಾರಿಯ ವಾಹನ ಪ್ರವಾಹದ ಭರಾಟೆಯನ್ನು ಒಂದೇ ಮಾತಿನಲ್ಲಿ ಹೇಳುತ್ತೇನೆ. ಅದರ ಸೆಳವಿನಲ್ಲಿ ಕೇವಲ ಎಂಟೇ ಕಿಮೀ ಕಳೆಯುವಾಗ ನಮ್ಮಲ್ಲಿ ಹರಿದ ಬೆವರು, ಇಡೀ ದಿನದ ರಣಬಿಸಿಲೋಟಕ್ಕಿಂತಲೂ ಹೆಚ್ಚಿತ್ತು! ಹೌದು, ಉತ್ತರಮುಖಿಗಳಾಗಿ ಅಷ್ಟು ಸಣ್ಣ ದೂರವನ್ನು ನಿರಪಾಯವಾಗಿ ದಾಟ ಬೇಕಾದರೆ ನಮಗೆ ಸಾಕುಬೇಕಾಯ್ತು! (ಮಾರಣೇ ದಿನ ಮತ್ತಿದರಲ್ಲೇ ನೂರಾರು ಕಿಮೀ ಹೋಗಬೇಕೆನ್ನುವುದನ್ನು ಯೋಚಿಸಿಯೂ ತುಸು ಅಧೀರರೇ ಆಗಿದ್ದೆವು.) ಎಡ ಹೊರಳಿ ‘ಕರ್ಕಡ’ ದಾರಿ ಹಿಡಿದೆವು. ಮತ್ತೆ ಕೆಲವು ಕವಲುಗಳನ್ನು ಅನಾವಶ್ಯಕ ಶೋಧಿಸಿ, ಹಳ್ಳಿಗರನ್ನು ವಿಚಾರಿಸಿ, ಕೋಟೆ ಮುಟ್ಟುವಾಗ ದಿನದ ನಮ್ಮ ಶ್ರಮವನ್ನು ಪುರಸ್ಕರಿಸುವಂತೆ, ಐತಿಹಾಸಿಕ ನಗರಿಯನ್ನು ಸೂರ್ಯ ಸಂಜೆ ರಂಗಿನ ಮುನ್ನೆಲೆಯಲ್ಲೇ ಕಾಣಿಸಿದ. (ದಿನದ ಓಟ ೩೪೧ ಕಿಮೀ.)

ವಿಂಧ್ಯ ಪರ್ವತಾವಳಿಯ ಬಹುತೇಕ ಶಿಲಾಮಯ ಪಶ್ಚಿಮ ಕೊನೆ ಈ ಮಾಂಡವಘಡ್ ಅಥವಾ ಮಾಂಡು ಕೋಟೆ. ಇದರ ಪ್ರಾಕೃತಿಕ ದುರ್ಗಮತೆಯನ್ನು ಅನುಲಕ್ಷಿಸಿಯೇ ವಿವಿಧ ಪಾಳೇಪಟ್ಟುಗಳು ಸುಮಾರು ಆರನೇ ಶತಮಾನದ ಕಾಲಕ್ಕೇ ಇದನ್ನು ಸಾಕಷ್ಟು ಚೆನ್ನಾಗಿಯೇ ಬೆಳೆಸಿದ್ದರಂತೆ. ಮಾಳ್ವ, ಖಲ್ಜಿ, ಮೊಘಲ್, ಮರಾಠಾ ಎಂದು ನಿರಂತರ ಅರಸೊತ್ತಿಗೆಗಳ ಮೇಲಾಟಗಳಲ್ಲಿ ಇಲ್ಲಿ ಮೆರೆದ ವೈಭವವೂ ಹರಿದ ರಕ್ತವೂ ಅಪಾರ. ೧೬ನೇ ಶತಮಾನದಲ್ಲಿ ಇಲ್ಲಿ ರಾಜ್ಯವಾಳಿದ ಬಾಜ್ ಬಹಾದೂರ್ ಮತ್ತು ಆತನ ಪ್ರಿಯಪತ್ನಿ ರಾಣಿ ರೂಪಮತಿಯ ಪ್ರೇಮ ಕತೆ ಈ ವಲಯದ ಜನಪದದಲ್ಲಿ ಇಂದಿಗೂ ಜೀವಂತವಾಗಿದೆ. ಒಟ್ಟಾರೆ ಇಲ್ಲಿನ ಇತಿಹಾಸ ಕೆದಕಿದರೂ ಪುಟ ಪುಟಗಳಲ್ಲಿ ಅದೆಷ್ಟು ಯುದ್ಧ, ಪ್ರೀತಿ, ದುರಂತ, ಸಾಹಸ, ರಕ್ತಪಾತ…

ಮಾಂಡುವಿನ ಜಲನಿರ್ವಹಣೆ ನಿಜಕ್ಕೂ ಒಂದು ಅದ್ಭುತ. ಅಕ್ಷರಶಃ ಬೊಟ್ಟು ನೀರು ಹುಟ್ಟದ ನೆಲ. ಅದರಲ್ಲಿ ಕನಿಷ್ಠ ಹದಿನಾಲ್ಕು ಶತಮಾನಗಳ ಉದ್ದಕ್ಕೂ ದೈನಂದಿನ ಸಾವಿರಾರು ಜೀವಗಳ, ಎಲ್ಲ ಬಳಕೆಗೂ (ಅಗತ್ಯಕ್ಕೂ ವೈಭವಕ್ಕೂ) ಒದಗುವಂತೆ, ಸುಸ್ಥಿರ ಮಳೆನೀರ ಸಂಗ್ರಹ ಸಾಧಿಸಿದ ಯಶೋಗಾಥೆ ಇಲ್ಲಿನದು. ವರ್ತಮಾನ ಕಾಲದ ನಾಗರಿಕತೆಯ ಮುಗಿಯದ ಬಾಯಾರಿಕೆಗೆ ಇಲ್ಲಿ ಬಹಳ ದೊಡ್ಡ ಪಾಠವಿದೆ, ಆದರೆ ಅನುಸರಿಸುವವರು ಕಾಣುವುದೇ ಇಲ್ಲ. ಇಂದಲ್ಲಿ ಯಾವುದೇ ನಾಗರಿಕ ಚಟುವಟಿಕೆಗಳಿಲ್ಲ, ಎಲ್ಲ ಶಿಥಿಲ. ಅಲ್ಲಿ ಸರಕಾರೀ ಪ್ರಾಚ್ಯ ಇಲಾಖೆ ಮಾಡಿರುವ ಅರೆಬರೆ ಸೌಕರ್ಯ, ವ್ಯವಸ್ಥೆಗಳಾದರೂ ನೆಚ್ಚಿರುವುದು ಈ ಐತಿಹಾಸಿಕ ನೀರ ಕೋಠಿಗಳನ್ನೇ. ನಮ್ಮ ಉಪಾಧ್ಯರ ಕೋಷ್ಠಕವನ್ನು ನೋಡುವಾಗ ಈ ನೀರ ದಾಸ್ತಾನು ಸ್ಥಳದ ಪ್ರಾಕೃತಿಕ ಸ್ಥಿತಿಯನ್ನೂ ದಟ್ಟವಾಗಿ ಪ್ರಭಾವಿಸುತ್ತದೆ ಎಂಬ ಸಂದೇಹ ನನ್ನಲ್ಲಿ ಮೂಡುತ್ತದೆ. ನೋಡಿ: ರಾತ್ರಿಯ ತಾ. ೩೦ ತೇ ೨೫% . ಅವೇ ಮರು ಬೆಳಗ್ಗೆ ತಾ ೨೪ ತೇ ೩೮%.

ತೋರಿಕೆಗೆ ಕೋಟೆಯಲ್ಲಿ ಶೈಥಿಲ್ಯವೇ ಮೆರೆದಿತ್ತು. ಸರಿ ಇರುವಂತೆ ಕಂಡ ಭಾಗಗಳಲ್ಲೂ ವಿಶೇಷ ಮನುಷ್ಯ ಚಟುವಟಿಕೆಗಳು ಇರಲಿಲ್ಲ. ನಾವಿನ್ನು ರಾತ್ರಿ ವಾಸಕ್ಕೆ ಹೊರಗೆಲ್ಲಾದರೂ ನೋಡಿಕೊಳ್ಳಬೇಕೇ ಎಂದು ಯೋಚಿಸುತ್ತಿದ್ದಾಗಲೇ ಪ್ರಾಚ್ಯ ಇಲಾಖೆಯ ಮೇಟಿ ಪ್ರತ್ಯಕ್ಷನಾದ. ಆತ “ಬೇಕಾದರೆ ನೋಡಿ” ಎಂಬಂತೆ ಇಲಾಖೆ ಮಾಡಿಕೊಂಡ ವಾಸ ವ್ಯವಸ್ಥೆ ತೋರಿಸಿದ. ಹಳೆಯ ಅರಮನೆಯೊಳಗೇ ಸರಳವಾಗಿ ವಿದ್ಯುತ್, ಕೊಳಾಯಿ, ಕಕ್ಕೂಸ್ ವ್ಯವಸ್ಥೆ ಜೋಡಿಸಿದ್ದರು. ಹಳೆಗಾಲದ ಭರ್ಜರಿ ಖೋಲಿಗಳು, ರಾಜ ಮಂಚಗಳು, ಭಾರೀ ವಿದ್ಯುತ್ ಪಂಖಗಳು, ಬಚ್ಚಲಲ್ಲಿ ಪೂರ್ಣ ಆಳು ಗಾತ್ರದ ಅಮೃತಶಿಲೆಯ ಸ್ನಾನ ತೊಟ್ಟಿಗಳು, ಪ್ರತ್ಯೇಕ ಭೋಜನ ಗೃಹ…. ಎಲ್ಲವೂ ಕೇವಲ ಹತ್ತು ರೂಪಾಯಿ ದಿನದ ಬಾಡಿಗೆಗೆ! ನಾವು ಎರಡು ಯೋಚನೆ ಇಲ್ಲದಂತೆ ಒಪ್ಪಿಕೊಂಡೆವು. ಅಷ್ಟೇ ಮಿತ ವೆಚ್ಚದಲ್ಲಿ ನಮ್ಮ ಹೊಟ್ಟೇಪಾಡನ್ನೂ ಆತನೇ ನೋಡಿದ. ಚಾ, ಊಟ, ತಿಂಡಿಗಳನ್ನು ಸಕಾಲಕ್ಕೆ ಮಾಡಿ, ಬಡಿಸಿ, ಶುಚಿ ಮಾಡಿದ್ದೆಲ್ಲ ಅವನೇ. ಮರುದಿನ ಬೆಳಿಗ್ಗೆ ಸುಮಾರು ಮೂರು ಗಂಟೆಗಳ ಕಾಲ ಕೋಟೆ ಸುತ್ತಿಸುವಲ್ಲಿ ಮಾರ್ಗದರ್ಶನವೂ ಅವನದೇ; ಅದ್ಭುತ ‘ಏಕ ವ್ಯಕ್ತಿ ಪ್ರದರ್ಶನ’.

ಮಾಂಡವಗಢದ ರಚನಾ ವೈಭವಗಳನ್ನು ಒಂದು ದಿನದಲ್ಲಿ ನೋಡಿ ಮುಗಿಸುವುದು ಅಸಾಧ್ಯ. ಸಮಯಮಿತಿಯಲ್ಲೇ ನಾವು ನೋಡಿದಷ್ಟೂ ವಿಭಾಗಗಳಲ್ಲಿ ಎಲ್ಲೋ ಕೆಲವು ಯುದ್ಧಕ್ಕೆ ಸಿಲುಕಿ, ಸಿಡಿಲು ಸವಕಳಿಗೆ ಸಿಕ್ಕು ಮುಕ್ಕಾದವಿರಬಹುದು. ಅದಕ್ಕೂ ಮಿಗಿಲಾಗಿ ನನಗೆ ಕಾಣಿಸಿದ್ದು, ನಮ್ಮ ನಿಜ ಸಂಸ್ಕೃತಿಯ ಕುರುಹುಗಳನ್ನು ಗುರುತಿಸಿ, ಕಾಪಿಟ್ಟುಕೊಳ್ಳುವ ಕುರಿತು ಸರಕಾರಗಳ ಭಯಂಕರ ಅನಾದರ. ನಾವು ಹೋಗಿ ಬಂದ ಈ ಮೂವತ್ತು ವರ್ಷಗಳಲ್ಲಿ ಅಲ್ಲಿ ಏನಾದರೂ ಆಗಿದೆಯೇ ಎಂದು ಯೂ ಟ್ಯೂಬ್ ಹುಡುಕಾಡಿದ್ದೆ. ಆಗ ಸಿಕ್ಕಂತೆ ಅವಹೇಳನಕ್ಕೊಂದು, ದರ್ಶನಕ್ಕೊಂದು, ಯಾರೋ ಮಾಡಿದ ಸಣ್ಣ ವಿಡಿಯೋಗಳನ್ನು ಲಗತ್ತಿಸಿದ್ದೇನೆ, ಅವಶ್ಯ ನೋಡಿ.

ಇಂದು ಅಲ್ಲೊಂದಷ್ಟು ಹುಲ್ಲ ಹಾಸು, ಬಡಕಲು ಅಲಂಕಾರಿಕ ಗಿಡ ಮಾತ್ರ ಕಾಣುತ್ತದೆ. ಹಾಳಾದ ಅದ್ಭುತ ರಚನೆಗಳ ಪುನಾರಚನೆ ಬೇಡ, ಇನ್ನಷ್ಟು ಹಾಳಾಗದಂತೆ ರಕ್ಷಣೆಯಾದರೂ ಕೊಡಬಹುದಿತ್ತು. ಎಲ್ಲವನ್ನೂ ಮೋಜಿನ ಭಾಗವಾಗಿಯೇ ಕಾಣುತ್ತ ಹಾಳುಗೆಡಹುವ ಮತ್ತು ಕೊಳಕು ಹೇರುವ ಮೂರ್ಖ ಪ್ರವಾಸಿಗಳಿಗೆ ನಾಲ್ಕು ಬಾರಿಸುವ ಕಾವಲುಗಾರರಾದರೂ ಬೇಕಿತ್ತು!

 

ಮಾಂಡುವಿನ ಭೇಟಿ ನಮಗೆ ಚಿರಸ್ಮರಣೀಯ ಆನಂದವನ್ನೇ ಕೊಟ್ಟಿತು. ಅಲ್ಲಿನ ಊಟ ಉಪಚಾರಗಳಲ್ಲೂ ಸುಖಿಸಿದೆವು. ಮನಸ್ಸಿಲ್ಲದ ಮನಸ್ಸಿನಲ್ಲಿ ಬೆಳಿಗ್ಗೆ (೨-೫-೯೦) ಒಂಬತ್ತು ಗಂಟೆಗೆ ಮುಂದಿನೂರಿಗೆ ಹೊರಟೆವು. ಅಂದಿನ ನಮ್ಮ ಲಕ್ಷ್ಯ ಸುಮಾರು ಮುನ್ನೂರೈವತ್ತು ಕಿಮೀ ದೂರದ ಭೋಪಾಲ್. ಬೇರೊಂದೇ ದಾರಿಯಲ್ಲಿ, ಮೂವತ್ತೇಳೇ ಕಿಮೀ ಅಂತರದಲ್ಲಿ ನಾವು ಮತ್ತದೇ ಮಹಾ ಹೆದ್ದಾರಿ (ಮುಂಬೈ – ದಿಲ್ಲಿ) ಮುಟ್ಟಿದ್ದೆವು. ಇದರ ನಿರೀಕ್ಷೆಯಲ್ಲೇ ಆ ಬೆಳಗ್ಗೆ ನಾವು ಸ್ಪಷ್ಟವಾಗಿ ಕಾರ್ಯಸೂಚಿಯನ್ನು ಹಾಕಿಕೊಂಡಿದ್ದೆವು. ನಮ್ಮ ಮೂರು ಬೈಕುಗಳು ಕನಿಷ್ಠ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ತೀರಾ ಎಡ ಮಗ್ಗುಲಿನಲ್ಲಿ ಒಂದೇ ಸಾಲಿನಲ್ಲಿ ಸಾಗಬೇಕು. ಅನಿವಾರ್ಯವಾದರೆ ಮತ್ತು ಸುಲಭ ಅವಕಾಶವಿದ್ದರಷ್ಟೇ ಎದುರಿನ ಘನ ವಾಹನಗಳನ್ನು ಎಡ ಮಗ್ಗುಲಿನಲ್ಲಿ ಹಿಂದಿಕ್ಕಬೇಕು. ಯಾವ ಕಾರಣಕ್ಕೂ ಬಲಮಗ್ಗುಲಿಗೆ, ಅಂದರೆ ರಸ್ತೆಯ ಮಧ್ಯಕ್ಕೆ ನುಗ್ಗಕೂಡದು.

ಈ ಹೆದ್ದಾರಿ ದೈತ್ಯೋರಗನ ಮೈಯಲ್ಲೇ ನಾವು ಮೊದಲ ಬಾರಿಗೆ ಮೂರು ನಾಲ್ಕು ಜೋಡಿ ಚಕ್ರಗಳ ಮತ್ತು ವಿಚಿತ್ರ ಗಾತ್ರಗಳ ಭಾರೀ ಲಾರಿಗಳನ್ನು ನೋಡಿದ್ದು. ಅವುಗಳು ಹೆಚ್ಚಾಗಿ ಕುಶಿ ಬಂದ ಮಗ್ಗುಲಿನಲ್ಲಿ ಏಕ ಜಾಡು, ಏಕ ವೇಗಗಳಲ್ಲಿ ಓಡುತ್ತಿದ್ದವು. ಅವುಗಳನ್ನು ತಪ್ಪಿಸುವಲ್ಲಿ ಇತರ ಲಾರಿಯಿಂದ ಹಿಡಿದು ಎಲ್ಲ ವಾಹನಗಳೂ ನಗರದೊಳಗಾಡುವ ಆಟೋರಾಕ್ಷಸರಂತೇ ವರ್ತಿಸುತ್ತಿದ್ದವು. ಆ ಗೋಜಲನ್ನು ನಾವು – ಬಡಪಾಯೀ ದ್ವಿಚಕ್ರಿಗಳು, ಅರ್ಥ ಮಾಡಿಕೊಳ್ಳಲು ಹೊರಟರೆ ಅಪಾಯ ತಪ್ಪಿದ್ದಲ್ಲ. ನಮ್ಮ ಭಯಕ್ಕೆ ಪೂರಕವೋ ಎಂಬಂತೆ ಆ ದಾರಿಯಲ್ಲಿ ಅನ್ಯ ದ್ವಿಚಕ್ರವಾಹನಗಳು ತುಂಬ ಕಡಿಮೆಯೇ ಓಡುತ್ತಿದ್ದವು. ನಾವು ಹೋಗುತ್ತಿದ್ದಂತೆ ಒಂದೆರಡು ಭೀಕರ ಅಪಘಾತಗಳನ್ನು ಕಂಡ ಮೇಲಂತೂ ನಮ್ಮ ನಿರ್ಧಾರ ಹೆಚ್ಚು ಅಚಲವಾಯ್ತು. ಉರಿಬಿಸಿಲಿನ ಹೊಡೆತಕ್ಕೆದ್ದ ಝಳದ ಅಲೆಗಳು (ತಾಪ ೪೦, ತೇವ ೨೦%) ಹೆದ್ದಾರಿಯನ್ನು ಕರಿ ಮರುಭೂಮಿಯಂತೇ ಕಾಣಿಸಿತು.

ವಾಹನಗೊಜ್ಜು (ಟ್ರಾಫಿಕ್ ಜ್ಯಾಂ) ಅಡಿಸುಟ್ಟಂತೆ ಉದ್ದಕ್ಕೂ ಟಯರ್ ಕ್ಯಾನ್ವಾಸ್ ಕರಂಚಿದ ವಾಸನೆಗಳನ್ನು ನಾವು ಅನಿವಾರ್ಯವಾಗಿ ಪ್ರಾಣವಾಯುವೇ ಮಾಡಿಕೊಂಡಿದ್ದೆವು! ಉಳಿದಂತೆ ಇಂದೋರಿನಲ್ಲಿ ಚಾ (ಕುಡಿಯುವುದರೊಳಗೆ ಬರೆದ ಕಾರ್ಡನ್ನು…), ದೇವಾಸಿನಲ್ಲಿ ಊಟ, ಅಷ್ಟದಲ್ಲಿ ಮತ್ತೆ ಚಾ (….ಅಷ್ಟದಲ್ಲಿ ಪೋಷ್ಟ ಮಾಡಿದೆ!), ಸೊಹೊರಿನಲ್ಲೂ ಮಗುದೊಂದು ಚಾ ಹಾಕಿದ್ದು ಮುಖ್ಯ ಸಮಾಚಾರಗಳು! ಸಂಜೆ ಐದೂಕಾಲಕ್ಕೆ ಭೋಪಾಲ್ ಪ್ರವೇಶಿಸಿದೆವು. ಪ್ರವಾಸದ ಯೋಜನೆಯ ಹಂತದಲ್ಲೇ ಭೋಪಾಲ ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿತ್ತು. ಮೋಹಿನಿ ಕ್ಷಮಿಸಿ, ಲೋಕಮುಖಕ್ಕೆ ಖ್ಯಾತ ಲೇಖಕಿ ಎಪಿ ಮಾಲತಿ – ನನ್ನ ಸೋದರ ಮಾವ ಎಪಿ ಗೋವಿಂದರ ಹೆಂಡತಿ ಈ ಬೆಸುಗೆ ಹಾಕಿದ್ದರು. ಮಾಲತಿಯ ತಮ್ಮ – ನಾರಾಯಣನಿಗೆ ಹೆಣ್ಣು ಕೊಟ್ಟ ಮಾವ ಕೃಷ್ಣ ಭಟ್ಟರು, ಭೋಪಾಲದಲ್ಲೇ ನೆಲೆಸಿದ್ದರು. ಅವರ ಇಡೀ ಕುಟುಂಬ ತಮ್ಮ ಮನೆ ಹಾಗೂ ಆತಿಥ್ಯವನ್ನು ನಮಗೆ ಮುಕ್ತವಾಗಿಸಿದ್ದರು. ನಮ್ಮ ಯೋಜನೆಯಂತೆ ಮೊದಲು ಅವರ ಮನೆ ತಲಪಬೇಕು. ಅನಂತರ ಚುರುಕಾಗಿ ಹೊರೆಗಳನ್ನೆಲ್ಲ ಇಳಿಸಬೇಕು. ಸಮಯಾನುಕೂಲ ನೋಡಿಕೊಂಡು, ಬೈಕುಗಳನ್ನು ಮಹಾಮಜ್ಜನಕ್ಕೆ ಬಿಡಬೇಕು.

ನಗರದ ಅದರಲ್ಲೂ ಸಂಜೆಯ ಗದ್ದಲಗಳ ನಡುವೆಯೂ ನಾವೆಲ್ಲ ಸಿಕ್ಕ ಸಿಕ್ಕವರನ್ನು ಕೃಷ್ಣ ಭಟ್ಟರ ಮನೆಯ ವಲಯ ಹಾಗೂ ಹೀರೋ ಹೊಂಡಾ ಶೋರೂಮ್ ವಿಚಾರಿಸಿಕೊಳ್ಳುತ್ತ ಸಾಗಿದ್ದೆವು. ನಾಯಕ್‍ಗೆ ಒಬ್ಬ ಹೀರೋಹೊಂಡಾದವನೇ “ಹಿಂಬಾಲಿಸಿ, ತೋರಿಸ್ತೇನೆ” ಎಂದನಂತೆ. ಇವರು ಮಾಂಡು ಭೋಜನಗೃಹ, ನಿಂತಿರುವವ ಮೇಟಿ ನಿರ್ಯೋಚನೆಯಿಂದ ಅವನ ಬೆನ್ನು ಹಿಡಿದರು. ಬಾಲನೂ ನಿಷ್ಠಾವಂತನಂತೇ ಹಿಂಬಾಲಿಸಿದ. ನಾನೂ ಬೆನ್ನು ಹಿಡಿಯುತ್ತಿದ್ದೆನೇನೋ. ಅಷ್ಟರಲ್ಲಿ ನನ್ನ ಒಂದು ಚಕ್ರ “ಠುಸ್” ಎಂದಿತ್ತು; ಪಂಚೇರ್‍! ನನ್ನ ಹಾರ್ನ್, ಬೊಬ್ಬೆಗಳೊಂದೂ ಉಪಾಧ್ಯ, ಬಾಲರಿಗೆ ಮುಟ್ಟಲೇ ಇಲ್ಲ. ನಗರ ಗೊಂದಲದಲ್ಲಿ ಕರಗಿದ ನಾಲ್ವರೂ ನಮ್ಮನ್ನು ಮರೆತೇ ಬಿಟ್ಟರು. ಸರಿ, ನಾನು ಪಕ್ಕದಲ್ಲೇ ಸಿಕ್ಕ ‘ಪ್ಯಾಚಪ್ಪ’ನಲ್ಲಿ ಹುಶಾರಾಗುವಾಗ ಒಂದು ಗಂಟೆಯೇ ಕಳೆದಿತ್ತು, ಕತ್ತಲ ಸೆರಗು ಬೀಸಿತ್ತು. ನಾವು ಶೋರೂಂ ಯೋಚನೆ ಬಿಟ್ಟು, ಕೃಷ್ಣ ಭಟ್ಟರ ಮನೆ ಮುಟ್ಟಿದೆವು. ಎಲ್ಲರ ನಕ್ಷೆಯಲ್ಲೂ ವಿಳಾಸವಿದ್ದ ಫಲವಾಗಿ, ಅರ್ಧ ಗಂಟೆ ಕಳೆದು, ಉಳಿದೆರಡು ಬೈಕುಗಳು ‘ಸ್ನಾನ, ಪೋಡ್ರು’ ಮುಗಿಸಿಕೊಂಡೇ ಬಂದವು. “ಎಲ್ಲ ಸರಿ ಇದ್ದದ್ದಕ್ಕೆ ಆಯ್ತು. ಅಕಸ್ಮಾತ್ ನನ್ನ ಬೈಕ್ ಅಪಘಾತಕ್ಕೀಡಾಗಿದ್ದರೆ…” ಎನ್ನುವ ನನ್ನ ಪ್ರಶ್ನೆಗೆ ಆ ನಾಲ್ವರಲ್ಲಿ ಉತ್ತರವೇ ಇರಲಿಲ್ಲ! (ದಿನದ ಓಟ ೩೦೦ ಕಿಮೀ)

ಕೃಷ್ಣ ಭಟ್ ಕುಟುಂಬದ ಆದರಾತಿಥ್ಯ ಹೇಳಿ ಮುಗಿಯದು. ಸಮೀಪದಲ್ಲೇ ಇದ್ದ ಅವರ ಭಾವನ ಮನೆಯಲ್ಲಿ ನಮಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ನಾವು ಎಲ್ಲಿಂದೆಲ್ಲಿಗೂ ಆತಿಥೇಯರುಗಳಲ್ಲಿ ಶೌಚ, ಸ್ನಾನ ಮತ್ತು ರಾತ್ರಿ ಮಲಗಲು ಜಾಗವನ್ನಷ್ಟೇ ಕೇಳಿದ್ದೆವು. ಆರು ಜನರ ಹೊಟ್ಟೆಪಾಡನ್ನು ಯಾವುದೇ ಮನೆಯವರಿಗೆ, ಅದೂ ಅಕಾಲದಲ್ಲಿ ಪೂರೈಸುವಂತೆ ಕೇಳುವುದು ತಪ್ಪೆಂದು ಗಟ್ಟಿ ನಂಬಿದ್ದೆವು. ಭಟ್ಟರ ಮನೆಯಲ್ಲಿ ಔಪಚಾರಿಕ ಚಾ ತೆಗೆದುಕೊಂಡರೂ ಅವರ ಒತ್ತಾಯ ಮೀರಿ ರಾತ್ರಿಯ ಊಟವನ್ನು ಹೊರಗೇ ಮಾಡಿದ್ದೆವು. ಆದರೆ ಒಂದು ಹೊತ್ತಿಗಾದರೂ ನಮ್ಮಲ್ಲಿಗೆ ಬರಲೇಬೇಕೆಂಬ ಅವರ ಒತ್ತಾಯಕ್ಕೆ ಮಣಿದು, ಮರು ಬೆಳಗ್ಗಿನ (೩-೫-೯೦) ತಿಂಡಿಯನ್ನು ಅವರಲ್ಲಿಯೇ ಮಾಡಿದೆವು.

ಹೊಸ ದಿನವನ್ನು ಭೋಪಾಲ ಕೇಂದ್ರವಾಗಿಟ್ಟುಕೊಂಡು ಸುತ್ತುವುದಕ್ಕೆ ಮೀಸಲಾಗಿಸಿದೆವು. ಮೊದಲು ನಗರದ ಪ್ರಾಣಿ ಸಂಗ್ರಹಾಲಯಕ್ಕೆ ಹೋದೆವು. ಪ್ರಾಣಿ ಸಂಗ್ರಹಾಲಯ ಎಂದರೆ ಪಂಜರಗಳ ಮೆರವಣಿಗೆಯಲ್ಲ ಎನ್ನುವಂತೆ ರೂಪುಗೊಂಡಿತ್ತು ಭೋಪಾಲದ ‘ವನ ವಿಹಾರ.’ ಇದರ ಆಧುನಿಕತೆಯನ್ನು ಪುರಸ್ಕರಿಸುವಂತೆ ‘ರಾಷ್ಟ್ರೀಯ ಉದ್ಯಾನವನ’ದ ವಿಶೇಷಣವೂ ಇದಕ್ಕಿದೆ. ವಾಸ್ತವದಲ್ಲಿ ಸುಮಾರು ನಾಲ್ಕೂವರೆ ಚದರ ಕಿಮೀನಷ್ಟೇ ವ್ಯಾಪ್ತಿಯ ಪ್ರಾಣಿ ಸಂಗ್ರಹಾಲಯವೇ ಇದು. ಕಾರ್ಯಾಚರಣೆ ನಿಲ್ಲಿಸಿದ ಕಲ್ಲ ಕೋರೆಯ ನೆಲದಲ್ಲಿದು ಹರಡಿಕೊಂಡಿದೆ. ಭಾರೀ ಸರೋವರದ ಹಿನ್ನೆಲೆ ಮತ್ತು ವನ್ಯ ಸದೃಶ ಒರಟುತನಗಳಲ್ಲಿರುವ ಮೃಗಗಳು, (ಮೈಸೂರಿನ ಪ್ರಾಣಿ ಸಂಗ್ರಹಾಲಯ ನೋಡಿದ) ನನಗೆ ಹೆಚ್ಚು ಆಪ್ತವಾಗಿಯೇ ತೋರಿದವು. ಹಾಗೇ ಅನಗತ್ಯ ಖ್ಯಾತಿ ಗಳಿಸಿದ ಬಿಳಿಹುಲಿಗಳ ಸಂಸಾರವನ್ನೂ ನಾವು ನೋಡಲು ಮರೆಯಲಿಲ್ಲ. ಮುಂದಿನ ಗುರಿ….

ಭೋಪಾಲದಿಂದ ಸುಮಾರು ಐವತ್ತು ಕಿಮೀ ಅಂತರದ ಸಾಂಚಿ. ದೇಶದ ಬೌದ್ಧ ಸ್ಮಾರಕಗಳಲ್ಲಿ ಸಾಂಚಿಯ ಹೆಸರು ದೊಡ್ಡದು. ಅಲ್ಲಿ ಬುದ್ಧ ಸ್ಮೃತಿಗೆ ಅಶೋಕ ಚಕ್ರವರ್ತಿ ನಿರ್ಮಿಸಿದ ಸ್ತೂಪ, ಅದರ ಮುನ್ನೆಲೆಯ ಅಲಂಕಾರಿಕ ತೋರಣ ದರ್ಶನೀಯವಾಗಿದೆ. ಅದೇ ದಾರಿಯ ಮುಂದುವರಿಕೆಯಲ್ಲಿ ಸುಮಾರು ಇಪ್ಪತ್ತೇ ಕಿಮೀ ಅಂತರದ ವಿದಿಷಾಕ್ಕೂ ಭೇಟಿ ಕೊಟ್ಟೆವು. ಬೆಟ್ವಾ ನದೀ ತೀರದ ವಿದಿಷಾ ಐತಿಹಾಸಿಕ ಕಾಲದ ಬಹು ವ್ಯಾಪಾರಗಳ ಕೇಂದ್ರ. ಅದಿಂದು ಬೌದ್ಧ, ಜೈನರದ್ದೂ ಸೇರಿದಂತೆ ಅನೇಕ ಸಾಂಸ್ಕೃತಿಕ ಅವಶೇಷಗಳ ಕೇಂದ್ರವೇ ಆಗಿದೆ. ಅಲ್ಲೂ ಸಣ್ಣಕ್ಕೆ ಸುತ್ತಾಡಿ ಸಂಜೆಗೆ ಭೋಪಾಲಕ್ಕೇ ಮರಳಿದೆವು.

ಭೋಪಾಲ ಗ್ಯಾಸ್ ದುರಂತದ ಕೇಂದ್ರವನ್ನು ಹೊರಗಿನಿಂದಾದರೂ ನೋಡಬೇಕು, ಬಿವಿ ಕಾರಂತರ ಭಾರತ್ ಭವನಕ್ಕೂ ಭೇಟಿ ಕೊಡಬೇಕು ಎಂದೆಲ್ಲ ಯೋಚಿಸಿದ್ದಷ್ಟೇ ಆಯ್ತು. ಹೀರೋಹೊಂಡಾ ಶೋರೂಮಿನ ಸೇವೆಗೆ ಎರವಾದ ನನ್ನ ಬೈಕಿಗೆ ಕೇವಲ ಇಂಜಿನ್ ಎಣ್ಣೆ ಬದಲಾಯಿಸಿಕೊಂಡೆ. ಅಲ್ಲಿವರೆಗೆ ತೆಗೆದಿದ್ದ ಫೋಟೋಗಳ ರೋಲೆರಡನ್ನು ಬೆಳಗ್ಗೆಯೇ ಸ್ಥಳೀಯ ಸ್ಟುಡಿಯೋ ಒಂದಕ್ಕೆ ಸಂಸ್ಕರಣಕ್ಕೆ ಕೊಟ್ಟು ಹೋಗಿದ್ದೆ. ಸಂಜೆ ಅದರ ಪ್ರಿಂಟ್ ನೋಡುವ ಸಂತಸ. ಅದು ಸುಮಾರು ಏಳೆಂಟು ದಿನಗಳ ನಮ್ಮ ಸಾಧನೆಯ ಕಿರು ಪ್ರದರ್ಶನ. ಇಂದು, ಡಿಜಿಟಲ್ ತಂತ್ರದ ಸುಳಿಯಲ್ಲಿ ಆ ಕಾಯುವಿಕೆ, ಫಲಿತಾಂಶದ ಅನಿಶ್ಚಿತತೆಗಳೆಲ್ಲ ಮರೆಯಾಗಿವೆ. ನಮ್ಮ ಎಳೆವರೆಯದ ಮೊಮ್ಮಗಳೂ ಅಮ್ಮನ ಚರವಾಣಿ ಕಿತ್ತುಕೊಂಡು, ಸ್ವಂತೀ ಒತ್ತಿದ ಮರುಕ್ಷಣದಲ್ಲಿ ಹಿಂದಕ್ಕೊತ್ತಿ, ಹೇಗೆ ಬಂತೆಂದು ಹಲ್ಲು ಕಿಸೀತಾಳೆ. ಬೇರೆಯವರು ತೆಗೆದರೂ ಕೂಡಲೇ ಹಾರಿ ಹೋಗಿ “ಎಲ್ಲಿ ತೋರ್ಸು” ಸಹಜವಾಗಿಯೇ ಕೇಳುತ್ತಾಳೆ!

ಕೊನೆಯ ಮಾತು: ಯೋಜನಾ ಹಂತದಲ್ಲೇ ನಾನು ಎಲ್ಲ ಆತ್ಮೀಯರಿಗೂ ಭೋಪಾಲ ಮತ್ತು ದಿಲ್ಲಿಯ ನಮ್ಮ ಅಂದಾಜು ದಿನಾಂಕಗಳನ್ನು ತಿಳಿಸಿ, ಸಂಪರ್ಕ ಸಾಧಿಸಲು ಅಲ್ಲಿನ ವಿಳಾಸಗಳನ್ನು ಕೊಟ್ಟಿದ್ದೆ. ನನ್ನ ನಿರಾಶೆಗೆ ಕೇವಲ ಒಂದು ಪತ್ರ ಮಾತ್ರ ಬಂದಿತ್ತು. ಇಂದು ಪ್ರತಿಕ್ರಿಯೆಯ ಹಪಹಪಿಗೆ (ಕ್ಷಮಿಸಿ, ಹೊಗಳಿಕೆಯಲ್ಲ) ಫೇಸ್ ಬುಕ್, ಜಾಲತಾಣದಷ್ಟು ಸುಲಭದ ಮಾಧ್ಯಮವಿದ್ದೂ ಜಡವಾಗುವವರನ್ನು ಕಾಣುವಾಗ, ಅಂದು ಪತ್ರ ಬರೆದಾರೆಂದು ನಾನು ನಿರೀಕ್ಷಿಸಿದ್ದು ಶುದ್ಧ ತಪ್ಪು ಎಂದು ಅರಿವಾಗುತ್ತದೆ.

(ದಿನದ ಓಟ ೧೭೮ ಕಿಮೀ)
(ಮುಂದುವರಿಯಲಿದೆ)