ಭಾರತ ಅ-ಪೂರ್ವ ಕರಾವಳಿಯೋಟ – ೫

ವನಧಾಮಗಳ ವಿಚಾರ ಬರುತ್ತಿದ್ದಂತೆ ನನಗೆ ಮೊದಲು ಹೊಳೆಯುವ ಹೆಸರು – ವನ್ಯ ವಿಜ್ಞಾನಿ ಗೆಳೆಯ, ಉಲ್ಲಾಸ ಕಾರಂತ. ಅ-ಪೂರ್ವ ಕರಾವಳಿಯೋಟದ ಯೋಜನಾ ಹಂತದಲ್ಲೇ ನಾನವರನ್ನು ಸಂಪರ್ಕಿಸಿದ್ದೆ. ಭಾರತದ ವಿವಿಧ ವನಧಾಮಗಳಲ್ಲಿ ಅವರಿಗಿದ್ದ ವಿಸ್ತೃತ ಪರಿಚಯ ಬಲದಲ್ಲಿ ನನಗೆ ನಾಲ್ಕೆಂಟು ಪರಿಚಯ ಪತ್ರಗಳನ್ನೂ ಧಾರಾಳ ಸಲಹೆಗಳನ್ನೂ ನೀಡಿದ್ದರು. ಅದರಲ್ಲೂ ಭಾರತದ ಪ್ರಥಮ ‘ಟೈಗರ್ ಪ್ರಾಜೆಕ್ಟ್’ ತಾಣವೆಂದೇ ಖ್ಯಾತವಾದ ಸುಂದರಬನದಲ್ಲಿ ಹೆಚ್ಚಿನ ವ್ಯವಸ್ಥೆಗಳನ್ನೇ ಕೊಡಿಸುವವರಿದ್ದರು. ಆದರೆ ಅಷ್ಟು ದೊಡ್ಡ ವ್ಯವಸ್ಥೆಗೆ ನಮ್ಮ ಪಾತ್ರತೆಯ ಬಗ್ಗೆ ನನಗೇ ಸಂದೇಹವಿದ್ದುದರಿಂದ ಪೇಚಾಟದಲ್ಲಿದ್ದೆ. ಆಗ ಅದೃಷ್ಟಕ್ಕೆ ನನ್ನ ಇನ್ನೊಂದು ಮುಖದ ಸಂಪರ್ಕ ಒಲಿದು ಬಂತು. ಸ್ವಾಮಿ ಜಗದಾತ್ಮಾನಂದರು ಸುಂದರಬನದ ಮಾಹಿತಿಯೊಡನೆ ಟಿಕೇಟ್ಟೇ ಕೊಟ್ಟಿದ್ದರು. (ವಿವರಗಳಿಗೆ ಹಿಂದಿನ ಅಧ್ಯಾಯ ನೋಡಿ)

 

ಭೌಗೋಳಿಕ ಸ್ಥಾನ ಮಹತ್ವದಿಂದ ಆ ದಿನಗಳಲ್ಲಿ ಕಲ್ಕತ್ತಾದ ಬೆಳಗ್ಗೆ ಬೇಗನಾಗುತ್ತಿತ್ತು. ಆದರೆ ಭಾರತೀಯ ಜಾಯಮಾನದ ನಿಧಾನಕ್ಕೇನು ಮಾಡುತ್ತೀರಿ! ಬೆಳಿಗ್ಗೆ (೨೦-೪-೯೬) ನಾವು ಬೈಕುಗಳನ್ನು ಸಂಘದಲ್ಲೇ ಬಿಟ್ಟು, ಸಮೀಪದ ಉಡುಪಿ ಹೋಟೆಲಿಗೆ ಸಕಾಲದಲ್ಲೇ ಹೋಗಿದ್ದೆವು. ಆದರೆ ಅವರ ಸತಾವಣೆಯಲ್ಲಿ ತಿಂಡಿ ಮುಗಿಸುವಾಗ ಸುಮಾರು ಸಮಯ ಸೋರಿತ್ತು. ಪ್ರವಾಸೀ ನಿಗಮದ ಸ್ಥಳಕ್ಕೆ ಧಾರಾಳ ಸಿಟಿ ಬಸ್ಸುಗಳಿವೆ ಎಂದೇ ಒಂದನ್ನು ಏರಿದ್ದೆವು. ಆದರೆ ಅವುಗಳ ನಿಧಾನಕ್ಕೆ ಹೆದರಿ, ಅರ್ಧದಿಂದಲೇ ಇಳಿದು ಬಾಡಿಗೆ ಕಾರು ಹಿಡಿದೆವು. “ಇಲ್ಲಿನ ಟ್ಯಾಕ್ಸೀ ದರ ಬೆಂಗಳೂರಿನ ರಿಕ್ಷಾಕ್ಕಿಂತ ಚೀಪ್” ಎಂದು ಹಿಂದಿನ ದಿನ ಕುಮಾರಪ್ಪ ಹೇಳಿದ್ದು ನಿಜವೇ ಇತ್ತು. ಆದರೆ ಬಾಡಿಗೆ ಕೊಡುವಾಗ ನಾವು ಚಿಲ್ಲರೆ ಉಳಿಸುವ ಬುದ್ಧಿವಂತಿಕೆಯಲ್ಲಿ ಒಬ್ಬ ನೋಟು, ಇನ್ನೊಬ್ಬ ನಾಣ್ಯ, ಮತ್ತೊಬ್ಬನ ಲೆಕ್ಕ, ಚಾಲಕ ಮರಳಿಸಿದ್ದು ತಟಪಟ ಮಾಡಿ, ಟ್ಯಾಕ್ಸೀ ಬೀಳ್ಕೊಂಡ ಮೇಲೆ ತಿಳಿಯಿತು – ನಾವು ಒಂದು ರೂಪಾಯಿ ಕಳೆದುಕೊಂಡಿದ್ದೆವು! ಅಡಿಗೆ ಬಿದ್ದರೂ ನನ್ನ ಮೀಸೆ ಮರ್ಯಾದೆ ದೊಡ್ಡದು, “ಪಾಪ, ಬಡ ಚಾಲಕ ಬದುಕಿಕೊಳ್ಳಲಿ”!

ಅಂದಿನ ಯಾತ್ರೆಗೆ ಪ್ರವಾಸಿಗರು ಇಪ್ಪತ್ತೇಳೇ ಮಂದಿಯಾದರೂ ‘ನರಭಕ್ಷಕ ಹುಲಿ’ಗಳ ಆವಾಸಕ್ಕೆ ಸಾಹಸಯಾನ ಎಂದು ಗದ್ದಲ ತುಸು ಹೆಚ್ಚೇ ಎಬ್ಬಿಸಿದ್ದರು. ಅದೃಷ್ಟಕ್ಕೆ ನಮ್ಮ ಮಿನಿ ಬಸ್ ಸಮಯಕ್ಕೆ ಬಂತು. ಅದರ ನಿರ್ವಾಹಕ ‘ಬಾಬೂ’ ಮೊದಲ ನೋಟಕ್ಕೆ ಬಹಳ ಚಂದಕ್ಕೇ ಒಪ್ಪಿಸಿಕೊಂಡ. (“ಬೆರ್ರಿ ಗುಡ್ ಮಾರ್ನಿಂಗ್….” ಇತ್ಯಾದಿ ಠಸ್ ಪುಸ್) ಟ್ರಿಪ್ ಶೀಟ್ ಹಿಡಿದು, ಪ್ರಯಾಣಿಕರ ಹೆಸರು ಕೂಗಿ, ಆಸನ ಸಂಖ್ಯೆ ಕೊಡುವಾಗ ಆತ ಮೆತ್ತಿಕೊಂಡ ‘ಮ್ಯಾನರ್ಸ್’ ಎಲ್ಲ ಕರಗಿತ್ತು. ನಾಮ ಪಠಣದ ಯಾವುದೋ ಹಂತದಲ್ಲಿ ಆತ ಅಪರಾಧಿಯನ್ನು ಕಟಕಟೆಗೆ ಕರೆಯುವವನಂತೆ ಮೂರು ಮೂರು ಬಾರಿ “ಮಿಶ್ಟರ್ ಬೋರ್ದನ್” ಕೂಗಿದಾಗ ನನ್ನೊಳಗಿನ ಟ್ಯೂಬ್ ಲೈಟ್ ಝಗ್ಗೆಂದಿತ್ತು. ಆತ ಹದಿನಾರಕ್ಕರದ ನನ್ನ ಹೆಸರಿನ ಬಾಲವನ್ನಷ್ಟೇ ಹಿಡಿದು, ವಕಾರವನ್ನು ಬಕಾರ ಮಾಡಿ ಬಡಿದಿದ್ದ! “ಹಾಂ, ನಾನೇ ಮಿಸ್ಟರ್ ವರ್ಧನ್” ಎಂದೆ. ಆತನ ನಾಲಗೆಗೆ ಅರ ಹಾಕುವಂತೆ “ವ್ವರ್ಧನ್, ನಾಟ್ ಬೋರ್ದನ್! ವ್ವ ಆಸ್ ಇನ್ ವಿವೇಕಾನಂದ” ಸ್ಪಷ್ಟಪಡಿಸಿದೆ. ಪುಣ್ಯಾತ್ಮ ಎಲ್ಲ ಬಲ್ಲವನಂತೆ “ಹೋ ಬೊರ್ದನ್ ಆಸ್ ಇನ್ ಬಿಬೆಕಾನಂದೋ, ನಾಟ್ ಬೊರ್ದನ್…” ಎಂದಾಗ ನಾನು ಸೋಲೊಪ್ಪಿದೆ. ಈತ ಎಷ್ಟು ಉಡಾಫಿ ಎಂದರೆ, ಒಂಟಿಯಾಗಿಯೇ ಬಂದಿದ್ದ ಸುಮಿತ್ರಾ ಬ್ಯಾನರ್ಜಿ ಎನ್ನುವ ಮಹಿಳೆಯನ್ನು, ಆಕೆ ಎಷ್ಟು ಸಲ ತಿದ್ದಿದರೂ ಕೊನೇವರೆಗೂ “ಮಿಸ್ಟರ್ ಬ್ಯಾನರ್ಜೀ” ಎನ್ನುವುದನ್ನು ಬಿಡಲೇ ಇಲ್ಲ!

ಏಳೂವರೆ ಗಂಟೆಗೆ ಸರಿಯಾಗಿಯೇ ಬಸ್ ಹೊರಟಿತ್ತು. ಬಸ್ ಲೆಕ್ಕಕ್ಕೆ ಹವಾನಿಯಂತ್ರಿತ. ನಿಜದಲ್ಲಿ ಆ ಯಂತ್ರ ಕೆಟ್ಟು, ಹೆಚ್ಚುವರಿಯಾಗಿ ಜೋಡಿಸಿದ್ದ ಬಡಕಲು ಪಂಕಾಗಳೂ ಕಳಚಿಬೀಳುವ ಸ್ಥಿತಿಯಲ್ಲಿದ್ದವು. ಅಷ್ಟು ಸಾಲದೆಂಬಂತೆ ಆಸನ ಸಂಖ್ಯೆ ಮೀರಿ ಮೂರ್ನಾಲ್ಕು ಮಂದಿ ‘ನೇಲುವ ಸೀಟ್’ಗೆ ತಗುಲಿಕೊಂಡಾಗ, ಸೆಕೆಯಲ್ಲಿ ಬುಸುಗುಡುತ್ತಿದ್ದ ಜನ ಪ್ರತಿಭಟನೆಯ ಸೊಲ್ಲು ತೆಗೆದಿದ್ದರು. ಆದರೆ ಬಾಬು, ಅವರು ಮುಂದಿನ ಪಯಣದಲ್ಲಿ ನಮಗೆ ಅನಿವಾರ್ಯವಾದ ಸೇವಾ ಸಿಬ್ಬಂದಿ ಎಂದು ತೇಪೆ ಹಾಕಿದ. ಮತ್ತು ಎಡೆ ಸ್ಥಳಗಳಿಗೆಲ್ಲ ‘ಮುಂದಿನ ಪಯಣ’ದ ಅಗತ್ಯಗಳೇ ಆದ ಪಾತ್ರೆ, ದಿನಸಿ, ತರಕಾರಿ ಚೀಲಗಳನ್ನೂ ತುಂಬಿಬಿಟ್ಟ. ಸರಕಾರೀ ವ್ಯವಸ್ಥೆಗಳು ಎಂದೂ ಹೀಗೇ!

ನಮ್ಮ ಮಂಗಳೂರಿನಂತೇ ಕಲ್ಕತ್ತಾಕ್ಕೂ ಬಂದರ್-ನಗರಿ ಎಂದು ಖ್ಯಾತಿಯೇನೋ ಇದೆ. ಆದರೆ ಸ್ಥಿತಿ ಮಾತ್ರ ಅಜಗಜಾಂತರ. ಮಂಗಳೂರಿನ ಬಂದರ್ (ಹಳೆಯದು) ಪುಟ್ಟ ಭೂಭಾಗವೇ ಇರಬಹುದು, ಆದರೆ ಪಶ್ಚಿಮಘಟ್ಟಗಳ ಗಟ್ಟಿ ಪಾದ. ಇದನ್ನು ಬಂದರಾಗಿಸುವಲ್ಲಿ ನೇತ್ರಾವತಿ ಎಂಬ ಬಡಕಲು (ಇಂದು ಚರಂಡಿ) ನದಿ ಸಹಕರಿಸುತ್ತದೆ. ಆದರೆ ಕಲ್ಕತ್ತಾ ಅತ್ತ ಒರಿಸ್ಸಾದ ಅಂಚಿನಿಂದ ಇತ್ತ ಬಾಂಗ್ಲಾ ದೇಶದವರೆಗಿನ ವಿಸ್ತಾರ ಬಹುತೇಕ ಜವುಗು ಪ್ರದೇಶದಲ್ಲಿ ಒಂದು ಹೆಸರು ಮಾತ್ರ. ಅಷ್ಟೂ ಅಗಲದ ಪ್ರದೇಶವನ್ನು ಸುಮಾರು ನಲ್ವತ್ತೈವತ್ತು ಕಿಮೀ ಒಳನಾಡಿನಿಂದಲೇ ತೊಡಗಿದಂತೆ ಗಂಗಾ ಮತ್ತು ಬ್ರಹ್ಮಪುತ್ರಾವೆಂಬ ಮಹಾನದಿಗಳು ಸಮುದ್ರದತ್ತ ನೆಲವನ್ನು ಸೀಳುತ್ತಲೇ ಬಂದಿವೆ. ಅಷ್ಟು ಸಾಲದೆಂಬಂತೆ ಇತ್ತ ಹೊರ ಬದಿಯಿಂದ ಸಮುದ್ರವೂ ಹಾಗೇ ಒಳನುಗ್ಗಿ ಕೋಲಾಹಲ ನಡೆಸಿದೆ. ಇಲ್ಲಿ ನಿರ್ಮಾಣ ಮತ್ತು ನಿರ್ವಾಣಕ್ಕೆ ಹೆಸರೇ ನೀರು! ಪ.ಬಂಗಾಳದ ಕರಾವಳಿಯ ಈ ಮಹಾ ಗೊಂದಲದಲ್ಲಿ ಮೂಲದಲ್ಲಿ ದೊಡ್ಡ ಹೆಸರುಗಳೇ ಆದ ಗಂಗಾ ಮತ್ತು ಬ್ರಹ್ಮಪುತ್ರಾಗಳೂ ತಮ್ಮ ಹೆಸರುಗಳನ್ನೂ ಒಂದು ಲೆಕ್ಕದಲ್ಲಿ ಕಳೆದುಕೊಂಡಿವೆ. ಇಲ್ಲಿನ ಸೀಳುಗಳಲ್ಲಿನ ದೊಡ್ಡ ಕಡಲಮುಖಿ ಹರಿವುಗಳು ಹೂಗ್ಲಿ, ಪದ್ಮಾ, ಮೇಘ್ನಾ, ವಿದ್ಯಾಧರೀ, ಮಾತ್ಲಾ, ಹಳ್ದೀ, ಅರ್ಪಂಗಾಸಿಯಾ ಮುಂತಾದ ಸ್ವತಂತ್ರ ಹೆಸರುಗಳನ್ನು ಹೊತ್ತಿವೆ. ನಿಖರ ಹೆಸರಿಗೂ ಸಿಕ್ಕದ ಅಸಂಖ್ಯ ಜಲಜಾಡುಗಳನ್ನು ‘ಖಾಲಿ’ ಅರ್ಥಾತ್ ಕಾಲುವೆ (ಅವುಗಳ ದಂಡೆಯ ಕೆಲವು ಸ್ಥಳನಾಮಗಳನ್ನು ನೋಡಿ – ಸೋನಾ ಖಾಲಿ, ಗಡ್ಖಾಲಿ, ಪತನ್ ಖಾಲಿ, ಮಧು ಖಾಲಿ…) ಎಂದೇ ಗುರುತಿಸುತ್ತಾರೆ. ಹೀಗೆ ಗಂಗಾ ಬ್ರಹ್ಮಪುತ್ರಾಗಳ ನಿವೇದನೆಯನ್ನು ಸಮುದ್ರ ರಾಜನ ನಿರ್ಬಂಧಗಳು ಪರಿಶೀಲಿಸುವ ಸುವಿಸ್ತಾರ ತಾಣವೇ ಸುಂದರಬನ. ಇಲ್ಲಿ ಉಪ್ಪು ಸಿಹಿ ನೀರುಗಳ ಮಿಶ್ರಣ, ಗೊಸರು ಮಣ್ಣಿನ ನೆಲ ಹಾಗೂ ಕಡಲ ಕೊಲ್ಲಿಯ ಬೀಸುಗಾಳಿಯ ಪ್ರಭಾವಕ್ಕೆ ಸಿಕ್ಕು ವಿಕಸಿಸಿದ ಜೀವಜಾಲ ವಿಶ್ವದಲ್ಲೇ ವಿಶಿಷ್ಟ.

ಮರುಭೂಮಿಗಳ ರೂಪಣೆಯಲ್ಲಿ ಗಾಳಿಯ ಪಾತ್ರವಿದ್ದಂತೇ ಸುಂದರಬನದ ಸರ್ವಶಕ್ತ ಶಿಲ್ಪಿ ನೀರು. ನಿಜದಲ್ಲಿ ನೀರು ನೆಲ ಸೀಳಿ ಹರಿದಿದೆಯೋ ನೀರೇ ಮೆಕ್ಕಲು ಮಣ್ಣು ಹೊತ್ತು ತಂದು ನೆಲ ನಿಲ್ಲಿಸಿದೆಯೋ ಎಂದು ಹೇಳುವುದು ಕಷ್ಟ. ಒಂದು ಕಾಲಕ್ಕೆ ತಾನು ನಿಲ್ಲಿಸಿದ ನೆಲವನ್ನು ಮತ್ತೊಂದು ಕಾಲಕ್ಕೆ ಕೊರೆದು, ಮೆತ್ತಿ, ತೋಡಿ, ತುಂಬಿ ಆಡಿಸುವುದೂ ನೀರೇ. ಈ ನೀರಿನಾಟಕ್ಕೆ ಶಕ್ತ ಪ್ರಾಕೃತಿಕ ಕಡಿವಾಣವಾಗಿ ವಿಕಸಿಸಿದ ಸಸ್ಯ ಸಂಪತ್ತು – ಕಾಂಡ್ಲಾ ಅಥವಾ ಮ್ಯಾನ್ಗ್ರೋವ್. ಇವು ನೆಲ ಜಲಗಳ ಬಂಧವನ್ನು ಏಕಕಾಲಕ್ಕೆ ಒಪ್ಪಿಕೊಳ್ಳುತ್ತ, ಸಿಹಿ ಉಪ್ಪು ನೀರುಗಳ ಮಿಶ್ರಣವನ್ನೂ ಜೀರ್ಣಿಸಿಕೊಳ್ಳುತ್ತ ತನ್ನ ಬೇರಜಾಲ ಬೆಸೆದು ಸಮರ್ಥವಾಗಿ ನೆಲ ನಿಲ್ಲಿಸುತ್ತವೆ, ಅನ್ಯ ಜೀವಜಾಲವನ್ನೂ ಪೋಷಿಸುತ್ತವೆ. ಇಲ್ಲಿರುವ ಮೂರು ನಾಲ್ಕು ಕಾಂಡ್ಲಾ ಉಪಜಾತಿಗಳಲ್ಲಿ ಪ್ರಮುಖ ಜಾತಿಯ ಹೆಸರೇ ‘ಸುಂದರಿ’ಯಾದ್ದರಿಂದ (Sundari Heritiera fomes ಮತ್ತು Sundari Heritiera littoralis) ಇದು ಸುಂದರಬನ. ಈ ಸುಂದರಿ ಮರ ಇಲ್ಲಿನ ಜನಜೀವನಕ್ಕೂ ಬಹೂಪಯೋಗಿಯೇ ಆದ್ದರಿಂದ ಹೆಚ್ಚು ಶೋಷಣೆಗೂ ಒಳಪಟ್ಟಿರುವುದು ಪ್ರತ್ಯೇಕ ದುರಂತ.

ಕಲ್ಕತ್ತಾದ ಮಹಾದಾರಿಗಳು ಕಳೆಯುತ್ತಿದ್ದಂತೆ ನಾವು ಹಿಡಿದದ್ದಾದರೂ ಅಂಥಾ ಒಂದು ಸಮುದ್ರಮುಖಿಯಾದ ನೆಲದ ಮೇಲಿನ ದಾರಿ. ಅಸಂಖ್ಯ ನೀರ ಹರಿವುಗಳು (ಹೆಸರಾಂತವೂ, ಖಾಲಿಯೂ, ಸರೋವರವೂ ಇದ್ದಿರಬಹುದು) ಕೆಲಬಲಗಳಲ್ಲಿ ಸಣ್ಣಪುಟ್ಟ ಸೇತುವೆಗಳ ಅಡಿಯಲ್ಲಿ ಅಡ್ಡಕ್ಕೂ ಹಿಂದೆ ಸರಿಯುತ್ತಲೇ ಇದ್ದವು. ಮಣ್ಣಿನ ದಿಬ್ಬಗಳಲ್ಲಿ ಜನ ಸಣ್ಣದಾಗಿ ಮತ್ತಷ್ಟು ಸೀಳು, ಹರಹು ಮಾಡಿ ಹಸಿರು, ಮೀನು, ಸಿಗಡಿಗಳಂಥ ವೈವಿಧ್ಯಮಯ ಕೃಷಿ ನಡೆಸಿದ್ದೂ ಕಾಣುತ್ತಿತ್ತು. ನೀರು ಪಾರಾಗುವ ಗಂಡಿಗಳಲ್ಲಿ ಬುಟ್ಟಿ, ಬಲೆ ಕಟ್ಟಿ ಮೀನುಗಾರಿಕೆಯೂ ನಡೆದಿತ್ತು. ಜೋಪಡಿಗಳ ಸಮೂಹವೆಂಬಂತಿದ್ದ ಹಳ್ಳಿಗಳು ಸಾಕಷ್ಟಿದ್ದವು. ಅಲ್ಲಿನ ಕಾಲುವೆಗಳಲ್ಲಿ ಬೂದು ಬಣ್ಣದಲ್ಲಿ ತೋರುತ್ತಿದ್ದ ನೀರೆಲ್ಲ ನಮಗೆ ಕೊಳಚೆಯದೇ ಭ್ರಮೆ ಮೂಡಿಸುತ್ತಿತ್ತು. ವಾಸ್ತವದಲ್ಲಿ ಅದು ನಿರಂತರ ಮಣ್ಣು ಕರಡಿದ್ದಕ್ಕೋ, ಬರಿಯ ಮಣ್ಣಪಾತ್ರೆಯ ಪ್ರತಿಫಲನವೋ ನನಗೆ ತಿಳಿದಿಲ್ಲ. ಜೋಪಡಿಗಳ ಸಮೀಪದ ಸಣ್ಣ ತೊರೆಗಳಲ್ಲಿ, ಕೆಲವೆಡೆ ಉದ್ದೇಶಪೂರ್ವಕವಾಗಿ ಮಾಡಿಕೊಂಡ ಪುಟ್ಟ ಹೊಂಡಗಳಲ್ಲೂ ಮಕ್ಕಳು ನೀರಾಟವಾಡುತ್ತಿದ್ದರು. ಇಂದು ಬಹುಕೋಟಿಯ ವಸತಿ ಸಮೂಹದಲ್ಲೂ ಹತ್ತೋ ಇಪ್ಪತ್ತೋ ವಸತಿದಾರರಿಗೆ ಒಂದು ಈಜುಕೊಳವಿದ್ದರೆ ಹೆಚ್ಚು. ಆದರಿಲ್ಲಿನ ಭಾಗ್ಯವೋ ಶಾಪವೋ – ಜೋಪಡಿಗೊಂದು ಈಜುಕೊಳ!!

ನಡುವೆ ಬಸ್ಸು ಓಡುತ್ತಿದ್ದಂತೆ ‘ಸೇವಕರು’ ನಮ್ಮ ರುಚಿ (ಸಸ್ಯ/ಮಾಂಸ) ವಿಚಾರಿಸಿಕೊಂಡು ಉಪಾಹಾರದ ವಿತರಣೆ ನಡೆಸಿದರು. ಪೂರ್ವನಿಶ್ಚಿತ ಹಳ್ಳಿಯೊಂದರಲ್ಲಿ ಅರ್ಧ ಗಂಟೆ ನಿಲ್ಲಿಸಿ, ಬಸ್ಸಿನೊಳಕ್ಕೇ ಚಾ ವಿತರಣೆ ಮಾಡಿದ್ದರು. ರಣ ಬಿಸಿಲಿನಲ್ಲಿ, ದೂಳೀ ಪರಿಸರದಲ್ಲಿ ಇಳಿದು ಅಡ್ಡಾಡುವ ಬಯಕೆ ಹೆಚ್ಚಿನವರಿಗೆ ಇರಲೂ ಇಲ್ಲ. ಒಟ್ಟಾರೆ ಸುಮಾರು ಮೂರೂವರೆ ಗಂಟೆಗಳ ಕಾಲ, ಗುಜರಿ ಬಸ್ಸಿನಲ್ಲಿ, ಗಿಡಿದ ಸಂದಣಿಯಲ್ಲಿ, ಉರಿ ಬೇಸಗೆಯಲ್ಲಿ, ೭೫ ಕಿಮೀಗಳುದ್ದಕ್ಕೆ ದಡಬಡಾಯಿಸಿ ಅಸಂಖ್ಯ ಕುದುರುಗಳ (ನದಿ ದ್ವೀಪ) ಸಂತೆ, ಸಾವಿರಾರು ಪ್ರಾಕೃತಿಕ ನೀರ ಜಾಡಿನ ಜಾಲಗಳ ನಡುವಣ ಒಂದು ಹಳ್ಳಿ ಬಸಂತಿ ಮುಟ್ಟಿದ್ದೆವು.

ಬಸಂತಿ ಸಾಕಷ್ಟು ಸಾಮಾಜಿಕ ಚಟುವಟಿಕೆಗಳಿದ್ದ ಕೇಂದ್ರದಂತೇ ಇತ್ತು. ಆದರೆ ಎಲ್ಲವೂ ತತ್ಕಾಲೀನತೆ, ಜೋಪಡಿಯ ಸ್ಥಿತಿಗಳಲ್ಲೇ ಉಳಿದು ನಡೆದಿರುವುದನ್ನು ನೋಡುವಾಗ ಅಲ್ಲಿನ ಹವಾ ವೈಪರೀತ್ಯದ ಅಂದಾಜು ಆಗುತ್ತದೆ. ಅದನ್ನೇ ಬಸಂತಿಯ ದೋಣಿಗಟ್ಟೆಯೂ ತೋರುತ್ತಿತ್ತು. ಅಂಗಡಿ ಮನೆಗಳ ಕೊಳಚೆ ಗಲ್ಲಿಯಂಥ ದಾರಿಯಲ್ಲೇ ಸುಮಾರು ನೂರಿನ್ನೂರು ಮೀಟರ್ ನಡೆದು ನೀರದಂಡೆ ಸೇರಿದೆವು. ಅಲ್ಲಿ ವಿವಿಧ ಆಳಗಳಿಗೆ ಹೊಂದುವಂತೆ ಬಿದಿರು, ಹಲಗೆಗಳ ಹಲವು ಅಟ್ಟಳಿಗೆಗಳೂ ದೋಣಿ ಕಟ್ಟುವ ಗೂಟಗಳೂ ಮೆರೆದಿದ್ದವು. ಅದು ಕಡಲಿನ ಇಳಿತದ ಸಮಯ. ಹಾಗಾಗಿ ಮುಂದಿನ ಒಂದೂವರೆ ದಿನದ ನಮ್ಮ ತೇಲು ಮನೆ, ಅರ್ಥಾತ್ ಎಂ.ವಿ. ಚಿತ್ರರೇಖಾ ಎಂಬ ಪುಟ್ಟ ಹಡಗು, ನೀರಿನಲ್ಲೂ ಸುಮಾರು ಐವತ್ತು ಮೀಟರ್ ದೂರದಲ್ಲೇ ನಿಂತಿತ್ತು. ನಮ್ಮನ್ನು ಸಾಮಾನು ಸರಂಜಾಮುಗಳ ಸಹಿತ, ಪುಟ್ಟ ದೋಣಿಗಳಿಗೇರಿಸಿ ಹಡಗು ಮುಟ್ಟಿಸಿದರು. ಹಡಗು ಹೊರಟ ಮೇಲೆ ನಿರ್ವಾಹಕ ಬಾಬೂಗೆ ದಿವ್ಯಜ್ಞಾನ ಬಂದಿರಬೇಕು. ಒಮ್ಮೆಗೇ ಹಾಜರಿ ಪಟ್ಟಿ ಹಿಡಿದು, ಮತ್ತದೇ ಗೊಗ್ಗರು ಕಂಠದಲ್ಲಿ “ಮಿಸ್ಟರ್ ಬೊರ್ದನ್, ಮಿಸ್ಟರ್ ಬ್ಯಾನರ್ಜೀ…” ಪಠಿಸಿದ. ಬಸಂತಿಯ ಸಂತೆಯಲ್ಲಿ ಬಸವಳಿದು ಬಸ್ಸಿಳಿದಾಗ, ಮುಂದೆ ನಡೆಯುವಾಗ, ಸಣ್ಣ ದೋಣಿಗಳ ಚೌಕಾಸಿ ನಿಕ್ಕಿಯಾಗುವಾಗಲೆಲ್ಲ ಪ್ರವಾಸಿಗಳು ಕುಶಿ ಬಂದಂತೆ ಜೋಪಡಿ ಅಂಗಡಿಗಳಲ್ಲಿ ಕೋಲ್ಡರಸಿಯೋ ಕುರುಕಲಿಕ್ಕೋ ಕನಿಷ್ಠ ತಲೆ ಹೊಟ್ಟಿಹೋಗುವ ಬಿಸಿಲಿಗೆ ಮರೆ ಹುಡುಕುತ್ತಲೋ ಚದುರಿ ಹೋಗಿದ್ದರು. ಹಾಗಾಗಿ ಸಣ್ಣದೋಣಿ ಏರುವಾಗಲೇ ವಹಿಸಬೇಕಿದ್ದ ಎಚ್ಚರಿಕೆ, ಹಡಗು ಹೊರಡುವ ಮೊದಲಾದರೂ ಹಾಕಬೇಕಿದ್ದ ಹಾಜರಿಯನ್ನು ತಡವಾಗಿ ಮಾಡಿದ್ದ. ಅವನ ಅದೃಷ್ಟಕ್ಕೆ ಎಲ್ಲ ಹಾಜರಿದ್ದರು!

ಚಿತ್ರರೇಖಾ ಮೂರಂತಸ್ತಿನ ಹಡಗು. ನೆಲ ಮಾಳಿಗೆಯಲ್ಲಿ ಯಂತ್ರ, ಅಡುಗೆ ಇತ್ಯಾದಿ. ನಡುವೆ ವಸತಿ ಸೇರಿದಂತೆ ಸಾರ್ವಜನಿಕ ವ್ಯವಸ್ಥೆಗಳು. ಮೇಲೆ ಕೇವಲ ಮಾಡು ಕಟ್ಟಿದ್ದ ಬೋಳು ತಾರಸಿ (ಡೆಕ್). ಬಾಬೂ ತನ್ನ ಅನಧಿಕೃತ ಕಿಸೆಗೆ ದುಡ್ಡು ಜಮಾ ಮಾಡಿಸಿಕೊಂಡು, ಇದ್ದ ಕೆಲವೇ ಹವಾನಿಯಂತ್ರಿತ ಕೋಣೆಗಳನ್ನು ಮೊದಲು ಹಂಚಿಬಿಟ್ಟಿದ್ದ. ಅನಂತರ ಕೇವಲ ತೆರೆಮರೆಯಷ್ಟೇ ಇದ್ದ ನಾಲ್ನಾಲ್ಕು ಆಸನಗಳ ಅಂಕಣಗಳನ್ನು ವಿತರಣೆ ಮಾಡಿದ. ನಮಗೂ ಅಂಥದ್ದೊಂದು ದಕ್ಕಿತು. ಮಂತ್ರಿಪದ, ಅಧ್ಯಕ್ಷಪೀಠ ಮುಂತಾದವಕ್ಕೆ ನಮ್ಮ ಅತಿಗೌರವಾನ್ವಿತ ಪ್ರಜಾಪ್ರತಿನಿಧಿಗಳೇ ಬೀದಿರಂಪ ಮಾಡುವಾಗ ಪುಟಗೋಸಿ ಹಡಗಿನ ಅಂಕಣಗಳ ಬಗ್ಗೆ ಮೌನವಾಗಿರಲಾದೀತೇ? (ಯಥಾ ರಾಜಾ ತಥಾ ಪ್ರಜಾ ಎಂಬಂತೆ) ತಂಡದೊಳಗೆ ಅಪಸ್ವರಗಳೂ ಏರುಧ್ವನಿಯ ಮಾತುಕತೆಗಳೂ ನಡೆದಿತ್ತು. ನಾವು ಮಾತ್ರ ಬಂದ ಉದ್ದೇಶ ಮರೆಯದಂತೆ, ಒಯ್ದಿದ್ದ ಕನಿಷ್ಠ ಹೊರೆಯನ್ನು ನಮಗೆ ಸಿಕ್ಕ ಅಂಕಣದೊಳಗೆಸೆದೆವು. ನಮಗೆ ಹವಾನಿಯಂತ್ರಿತ ಕೋಣೆಗಳನ್ನು ಅಯಾಚಿತವಾಗಿ ಕೊಟ್ಟಿದ್ದರೂ ನಮಗೆ ಮುಕ್ತ ವೀಕ್ಷಣಾ ಸೌಕರ್ಯ ಮುಖ್ಯವಾದ್ದರಿಂದ ವಿಚಾರಣೆಗೂ ಆಸಕ್ತಿ ತೋರದೆ ಡೆಕ್ಕಿಗೇರಿದ್ದೆವು.

ಓರೆಯಲ್ಲಿ ಸುಮಾರು ಹದಿನೈದಡಿಗೂ ಮಿಕ್ಕು ಗೊಸರು ಹಾಸು ಎರಡೂ ಬದಿಗಿತ್ತು. ಮತ್ತೆ ಸುಮಾರು ಅಷ್ಟೇ ನೀರ ಹಾಸಿನ ನಡುವೆ ಗುರುಗುರುಗುಟ್ಟುತ್ತಾ ಹಡಗು ಸಾಗಿತು. ಬೂದು ಬಣ್ಣದ ಗೊಸರು, ಅದರದ್ದೇ ದ್ರಾವಣವೋ ಎನ್ನುವಂತ ನೀರು ಬಿಸಿಲಿಗೆ ಥಳಥಳಿಸಿದರೂ ನೀರಸವಾಗಿ ಕಾಣುತ್ತಿತ್ತು. ಅದಕ್ಕೆ ರಂಗೇರಿಸುವಂತೆ ನೀರಿಗಿಳಿದೋ ಗೊಸರಿನಲ್ಲೋ ಪುಟ್ಟ ದೋಣಿಯಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಕಾಣಿಸುತ್ತಿದ್ದರು, ಬಣ್ಣದುಡುಪಿನ ಬೆಸ್ತ ಮಹಿಳೆಯರು ಏನೋ ಹೆಕ್ಕುವುದನ್ನೂ ಕಂಡೆವು. ಆಳ ಕಡಿಮೆ ಇದ್ದ ಜಾಗಗಳಲ್ಲಿ ಮಕ್ಕಳೂ ಸೇರಿದಂತೆ ಹೆಚ್ಚು ಜನ ಸಣ್ಣ ದೊಡ್ಡ ಬುಟ್ಟಿ ಹಿಡಿದು ನೀರಾಳದಿಂದಲೇ ಏನೋ ಗೋರಿ, ಸೋಸಿ ಸಂಗ್ರಹಿಸಿಕೊಳ್ಳುತ್ತಿದ್ದದ್ದೂ ಇತ್ತು. ಇವೆಲ್ಲ ನೇರ ಹೊಟ್ಟೆ ಸೇರುವ ಮೃದ್ವಂಗಿಯಂಥವೋ ಬರಿದೇ ಚಿಪ್ಪಿನಂಥ ಔದ್ಯಮಿಕ ಕಚ್ಚಾ ವಸ್ತುಗಳೋ ನಮಗೆ ಸ್ಪಷ್ಟವಾಗಲೇ ಇಲ್ಲ. ದೋಣಿಯಲ್ಲಿದ್ದ ಮೈಕನ್ನು ಬಾಬೂ ಅನಗತ್ಯ ಹಾಜರಿ, ತಿಂಡಿ ಊಟದ ಘೋಷಣೆಗಳಿಗೆ ಬಳಸಿದ. ಬದಲಿಗೆ ಜನ, ವನಗಳ ವೈಶಿಷ್ಟ್ಯ ವಿವರಣೆಗೆ ಬಳಸಬೇಕಿತ್ತೆಂದು ಬಯಸಿದವರು ತೀರಾ ಕಡಿಮೆ ಇದ್ದರು. ನಾವು ಉದ್ದೇಶಪೂರ್ವಕವಾಗಿ ಕೇಳಿದರೂ ಅವನ ಸಿಲೆಬಸ್ಸಿನೊಳಗೆ ಅದರ ಪಾಠವೇ ಇರಲಿಲ್ಲ. ಹಡಗು ಮಂದ್ರಗಾನದೊಡನೆ ವಿಹಾರದ ಒಂದೇ ಗತಿಯಯಲ್ಲಿ ಸಾಗಿತ್ತು. ಜನವಸತಿಯಿಲ್ಲದಲ್ಲಿ ಖಾರಿ ದಂಡೆಗಳ ಗರಿಷ್ಠ ಎತ್ತರ ನಮ್ಮ ದೃಷ್ಟಿಗೆ ನಿಲುಕುತ್ತಿರಲಿಲ್ಲ. ಅದಕ್ಕು ಎಷ್ಟೋ ಮುಂದೆ ಬಂದ ಕಾಂಡ್ಲಾ ಮರಗಳು ದಟ್ಟವಾಗಿ ಹಬ್ಬಿಕೊಂಡಿರುತ್ತಿದ್ದವು. ಅವನ್ನು ಬಿಟ್ಟು ಈಚೆಗೆ ಕಾಂಡ್ಲಾ ಮರಗಳ ಉಸಿರಾಟದ ಬೇರುಗಳು ನೀರಿಳಿದ ಗೊಸರ ನೆಲಗಳಲ್ಲಿ ದೊಡ್ಡ ದೊಡ್ಡ ಮೊಂಡು ಮುಳ್ಳುಗಳಂತೆಯೇ ತೋರುತ್ತಿದ್ದವು. ಜನವಸತಿ ದೂರವಾದ ಖಾಲಿಯ ಹಲವು ವಲಯಗಳಲ್ಲಿ ನೀರಿನ ಬೂದು ಬಣ್ಣ ಮಾಯವಾಗಿ ಸ್ಫಟಿಕ ನಿರ್ಮಲ ಜಲವೂ ಕಾಣಿಸಿದ್ದಿತ್ತು. ಸುಂದರಬನದೊಳಗಿನ ಹಳ್ಳಿಗಳಲ್ಲಿ ಜನ ತಮ್ಮ ದೈನಂದಿನ ಅಗತ್ಯಗಳಿಗೆ, ಏನಲ್ಲದಿದ್ದರೂ ವಾಸದ ನೆಲಕ್ಕೆ ಮರಗಳನ್ನು ಕಳೆದು ಹಾಕುವುದು ಸಹಜವೇ ಇದೆ. ಹಾಗೆ ರಕ್ಷಣೆ ಕಳೆದುಕೊಂಡ ದಂಡೆಗಳು ನೀರ ಕೊರೆತಕ್ಕೆ ಬಾಯಿಬಿಟ್ಟು ಜನಜೀವನ ಅಸ್ತವ್ಯಸ್ತವಾಗುವುದೂ ಇದೆ. ಅದಕ್ಕೆಂದೇ ಹೊರಗಿನಿಂದ ತಂದ ಕಲ್ಲು ಕಾಂಕ್ರೀಟಿನಲ್ಲಿ ಕೆಲವೆಡೆ ದಂಡೆ ಗೋಡೆಗಳನ್ನೇ ನಿಲ್ಲಿಸಿದ್ದರು. ಗೋಡೆಗಳು ಹಳ್ಳಿಗರಿಗೆ ಪುಟ್ಟಪಥಗಳೂ ಆಗಿರುತ್ತಿದ್ದವು. ಜನಗಳೆಲ್ಲ ಕನಿಷ್ಠ ಬಟ್ಟೆಯವರು. ಅವರಿಗೆ ದೋಣಿ ಹರಿಗೋಲುಗಳು ಅನಿವಾರ್ಯ ಸಾಧನಗಳು. ನೀರಿನಿಂದಾಚಿನ ಓಡಾಟ ಸಾಗಣೆಗಳೆಲ್ಲ ತಲೆ ಹೊರೆ, ಕಾವಡಿ, ಅಬ್ಬಬ್ಬಾ ಎಂದರೆ ಸೈಕಲ್ಲುಗಳು. ಅವನ್ನು ಮೀರಿದ ‘ಶ್ರೀಮಂತಿಕೆ’ ಎಲ್ಲೂ ಇರಲಿಲ್ಲ, ಇದ್ದರೂ ಮೆರೆಯಲು ಅಲ್ಲಿ ದಾರಿಗಳು ದೀರ್ಘದಂಡ ಬಿದ್ದುಕೊಂಡೂ ಇರಲಾರದು!

ಖಾಲಿಗಳು ಒಂದೆಡೆ ನೂರಡಿ ಅಗಲಕ್ಕಿದ್ದರೆ ಇನ್ನೊಂದೆಡೆ ನಲ್ವತ್ತೈವತ್ತಡಿಗೂ ಇಳಿಯುವುದು, ಸಮುದ್ರವೇ ಬಂತೇನೋ ಎಂಬಷ್ಟು ವಿಸ್ತಾರಕ್ಕೆ ಸರೋವರವೇ ಆಗುವುದೆಲ್ಲ ಅಲ್ಲಿ ಮಾಮೂಲು. ನೀರಿನ ಹರಿವಿನ ಅನುಭವ ಅಥವಾ ನಿಶ್ಚಿತ ದಿಕ್ಕಿನ ಚಲನೆ ನಮಗೆಲ್ಲೂ ಕಾಣಿಸಲೇ ಇಲ್ಲ. ಬಹುಶಃ ಕಡಲ ಭರತ ಕಾಲದಲ್ಲಿ, ಸರೋವರದಂಥ ಸ್ಥಳಗಳಲ್ಲಿ ಸಣ್ಣ ಅಲೆಗಳು ಕಾಣಿಸುವುದಿರಬಹುದು, ಅಲ್ಲದಿದ್ದರೂ ಹಡಗಿನ ಒಲೆತದಲ್ಲಾದರೂ ಅನುಭವಿಸಬಹುದು. ಕಡಲಿನ ಭರತ ಇಳಿತಗಳಂತೇ ವಿವಿಧ ಋತುಮಾನಗಳ ಒತ್ತಡ, ಪ್ರಭಾವದಲ್ಲಿ ಇಲ್ಲಿ ನೀರು ಮಾಯಾರೂಪಿಯೇ ಸರಿ.

ನೀರು ಪೂರ್ಣ ಪಾರದರ್ಶಕವಾದ ಸ್ಥಳಗಳಲ್ಲಿ ಬಿಸಿಲ ಕೋಲು ಖಾರಿಯ ತಳದರ್ಶನ ಮಾಡಿಸುತ್ತದೆ. ಆಗ ಕೆಲವೊಮ್ಮೆ ನಮ್ಮ ಹಡಗಿಗೆ ಆಳ ಸಾಕಾಗದೋ ಎಂಬ ಭ್ರಮೆ ಮೂಡಿದ್ದಿದೆ. ಮತ್ತೆ ಹಲವೆಡೆ ಮೇಲ್ಮೈಯಲ್ಲಿ ದಂಡೆ ನೇರವಿದ್ದರೂ ತಳದ ವಿಚಿತ್ರ ವಿನ್ಯಾಸಗಳನ್ನು ನೋಡುತ್ತಿದ್ದಂತೇ ನಮ್ಮ ಹಡಗು ಯಾಕೆ ಮೇಲಿನಿಂದ ಕಾಣುವ ಎರಡು ದಂಡೆಗಳ ನಡುವೆ ಸಾಗುವುದಿಲ್ಲ ಮತ್ತು ಆಗಿಂದಾಗ್ಗೆ ದೀರ್ಘ ವಕ್ರರೇಖೆಗಳಲ್ಲಿ ಚಲಿಸುತ್ತದೆ ಎನ್ನುವುದೆಲ್ಲ ಸ್ಪಷ್ಟವಾಗುತ್ತಿತ್ತು. ಹಡಗು ಕೆಲವು ಖಾರಿಗಳಲ್ಲಂತು ಒಂದು ಹಂತದಲ್ಲಿ ನಿಂತು, ತಣ್ಣಗೆ ಹಿಮ್ಮುಖ ಮಾಡಿ, ಬೇರೊಂದೇ ಜಾಡು ಹುಡುಕುವುದೂ ಇತ್ತು. ಸರೋವರಗಳಂಥ ಸ್ಥಳಗಳಲ್ಲಿ ಕಾಲಕಾಲಕ್ಕೆ ಜಲಸಾರಿಗೆ ಇಲಾಖೆ ಮೋಜಣಿ ಮಾಡಿ, ದಿಕ್ಸೂಚಿ ಬೆಂಡುಗಳನ್ನು ತೇಲಿಬಿಟ್ಟದ್ದೂ ಕಾಣ ಸಿಕ್ಕಿತ್ತು. ಸುಂದರ ಬನದ ಪರಿಸರಕ್ಕೆ ಕೇವಲ ಹಡಗು ಚಾಲನಾ ಕೌಶಲ ಇದ್ದರೆ ಸಾಲುವುದಿಲ್ಲ. ಅಲ್ಲಿಗೆ ಪೂರ್ವ ನಿಶ್ಚಿತ ನಕ್ಷೆ ಎಂಬುದೂ ಇಲ್ಲ. ಅವನ್ನೆಲ್ಲ ಯಾರಾದರೂ ಧಿಕ್ಕರಿಸಿ ಮುಂದುವರಿದರೆ ಹಡಗು ಹೂತು ನಿಲ್ಲಬಹುದು, ಒಡೆದು ಸೋರಬಹುದು, ಸಮತೋಲನ ತಪ್ಪಿ ಮಗುಚಲೂಬಹುದು. ಇನ್ನು ಬಿರುಸಿನ ಮಳೆಗಾಲ, ಬಂಗಾಳಕೊಲ್ಲಿಯಿಂದ ಅಪ್ಪಳಿಸುವ ತೂಫಾನುಗಳ ಸಮಯವನ್ನು ನಾವು ನೆನೆಸಿಕೊಳ್ಳುವುದೂ ಕಷ್ಟ.

[ಇಂದು ಎಲ್ಲಿಂದೆಲ್ಲಿಗೂ ಉಪಗ್ರಹಾಧಾರಿತ ತಂತ್ರಜ್ಞಾನ ಚುರುಕಾಗಿದೆ. ಹಾಗಾಗಿ ಖಾರಿಗಳ ಆಳ, ಅನುಸರಿಸಬೇಕಾದ ಜಾಡು, ಅಸಂಖ್ಯ ಕವಲುಗಳ ನಡುವೆ ಆಯ್ಕೆಗಳನ್ನು ಗಣಕವೇ ಸಂಶ್ಲೇಷಣೆ ಮಾಡಿ, ಸ್ಪಷ್ಟ “ಮಾಡು” ಅಥವಾ “ಮಾಡದಿರು” ಹೇಳುವ ಸ್ಥಿತಿಯೇ ಇರಬಹುದು, ಬಿಡಿ. ಇನ್ನೊಂದು ಮಾತು: ಇದೇ ೨೦೨೦ರ ಮೇ ತಿಂಗಳಲ್ಲಿ ಬಂಗಾಳ ಕೊಲ್ಲಿಯಿಂದೆದ್ದು ಪ.ಬಂಗಾಳದ ಕರಾವಳಿಯನ್ನು ಅಪ್ಪಳಿಸಿದ ಆಂಫನ್ ತೂಫಾನಿನ ಬಹುಶಕ್ತಿಯನ್ನು ಹ್ರಾಸಗೊಳಿಸಿದ್ದು ಇದೇ ಸುಂದರಬನ. ಇದನ್ನು ಅಧಿಕೃತ ವರದಿಗಳಲ್ಲು ಒಪ್ಪಿಕೊಳ್ಳುವ ಸರಕಾರಗಳು, ಅನ್ಯತ್ರ ಕಡಲಕೊರೆತ ಸುದ್ದಿ ಬಂದಾಗ ಮಾತ್ರ ಬಹಳ ಖರ್ಚಿನ, ಶ್ರಮದ (ಮರಳಚೀಲ, ಕಲ್ಲು, ಟೆಟ್ರಾಪೋಡ್, ಕಾಂಕ್ರೀಟ್ ಗೋಡೆ ಇತ್ಯಾದಿ) ವ್ಯರ್ಥ ಪ್ರಯತ್ನಗಳನ್ನೇ ಮತ್ತೆ ಮತ್ತೆ ಮಾಡುತ್ತಾರೆ ಯಾಕೋ?!!] ಹಡಗು ಸುಮಾರು ಒಂದೂವರೆ ಗಂಟೆಯ ಅವಿರತ ಓಟದಲ್ಲಿ ಖಾರಿ ಜಾಲಗಳಲ್ಲಿ ಅದಲ್ಲ ಇದು, ಇದಲ್ಲ ಇನ್ನೊಂದು ಎಂದು ಬದಲುತ್ತ ಹೋಯ್ತು. ಪುಟ್ಟ ದಿಬ್ಬದಿಂದ ಹಿಡಿದು ಮುಖ್ಯ ನೆಲವೇ ಬಂತೋ ಎನ್ನುವಷ್ಟು ವಿಸ್ತಾರದ ದ್ವೀಪಗಳನ್ನೂ ಹಿಂದಿಕ್ಕಿ, ಒಂದು ನಿರ್ಜನ ದ್ವೀಪದ ಸಮೀಪ ಲಂಗರು ಹಾಕಿತು. ನಮ್ಮ ಹಡಗಿನ ಹಿಂಭಾಗದಲ್ಲಿ ನೇತು ಹಾಕಿದ್ದ ಸಣ್ಣ ದೋಣಿಯನ್ನು ಇಳಿಸಿ, ಕಂತು ಕಂತುಗಳಲ್ಲಿ ನಮ್ಮನ್ನು ಅಲ್ಲಿ ಖಾಲಿಯ ನೀರಿನಾಳದಲ್ಲೇ ಪಾದವೂರಿ ನಿಂತು ದ್ವೀಪದೊಳಕ್ಕೆ ಸಾಗುವ ಗಟ್ಟಿ ಮರದ ದೋಣಿ ಕಟ್ಟೆಗೆ ಇಳಿಸಿದರು. ಅಲ್ಲಿನ ಇಡೀ ವ್ಯವಸ್ಥೆ ಬಲವಾದ ಕಬ್ಬಿಣದ ಪಂಜರದಂತೇ ರೂಪಗೊಂಡಿತ್ತು.

ನಮ್ಮೊಡನೆ ಬಂದಿದ್ದ ಅರಣ್ಯ ರಕ್ಷಕ ಬಲು ಎಚ್ಚರದಿಂದ ಅದರ ಮುಚ್ಚಿಕೊಂಡಿದ್ದ ಬಾಗಿಲ ಬೀಗ ತೆರೆದು, ನಮ್ಮನ್ನು ಸಾಲಾಗಿ ಒಳ ಸಾಗಲು ಬಿಟ್ಟ. ದ್ವೀಪದೊಳಗೆ ನಮ್ಮ ನಡೆಮಡಿಯನ್ನಷ್ಟೇ ಜಲ್ಲಿ ಮರಳುಹಾಕಿ ಬಿಗಿ ಮಾಡಿದ್ದು ಬಿಟ್ಟರೆ ಸುತ್ತಲೂ ಬಿಗಿ ಉಕ್ಕಿನ ಬಲೆ, ಆಚೆ ದಟ್ಟ ಕಾಡು. ಓಣಿಯ ಕೊನೆಯ ದಿಬ್ಬದ ಕೊಡಿಯಲ್ಲಿ ಹತ್ತಿಪ್ಪತ್ತಡಿ ಎತ್ತರದ ಮಚ್ಚಾನ್ ಅಥವಾ ವೀಕ್ಷಣಾ ಅಟ್ಟಳಿಗೆ ಕಟ್ಟಿದ್ದರು. ಅರಣ್ಯ ಇಲಾಖೆಯ ಈ ಸವಲತ್ತು ನಮಗೆ ಸಂಕ್ಷಿಪ್ತವಾಗಿ ಸುಂದರಬನ ವ್ಯಾಘ್ರ ಸಂರಕ್ಷಣಾ ಧಾಮವೂ ಆಗಿರುವ ಸತ್ಯವನ್ನು ಸ್ಪಷ್ಟಗೊಳಿಸಿತ್ತು. ಒಟ್ಟಾರೆ ಯಾನದಲ್ಲಿ ನಾವು ಮೂರು ನಾಲ್ಕು ಮಚ್ಚಾನ್ ಸಂದರ್ಶನ ಮಾಡಿರಬೇಕು. ನಗರದಲ್ಲಿ ಪಂಜರದೊಳಗೆ ವನ್ಯ ಮೃಗಗಳನ್ನಿಟ್ಟು ನೋಡುವುದಕ್ಕೆ (ಪ್ರಾಣಿ ಸಂಗ್ರಹಾಲಯ) ವಿರುದ್ಧವಾದ ಈ ವ್ಯವಸ್ಥೆ ನೋಡಿದ ಮೇಲಷ್ಟೇ ಹೆಚ್ಚಿನವರ ಅರಿವಿಗೆ ಬಂದಿತ್ತು – ಇದು ವನಧಾಮ! (ಆ ದಿನಗಳಲ್ಲಿ ಇಂದು ಬನ್ನೇರುಘಟ್ಟ, ಶಿವಮೊಗ್ಗಗಳಲ್ಲಿರುವಂತೆ ‘ಸಫಾರಿಗಳು’ ಬಹುಮಂದಿಗೆ ಪರಿಚಿತವಾಗಿರಲಿಲ್ಲ!) ಬೆಟ್ಟ, ಕಣಿವೆಗಳಿಂದ, ಝರಿ ಜಲಪಾತಗಳಿಂದ, ಮಹಾಮರ ರಕ್ಕಸಬಳ್ಳಿ ಪೊದರಾದಿ ಸಸ್ಯ ವಿಶೇಷಗಳಿಂದ, ಹಗಲನ್ನು ರಾತ್ರಿ ಮಾಡುವ, ಸಾಮಾನ್ಯ ಸಂಚಾರವನ್ನು ನಿಗೂಢವೂ ದುರ್ಗಮವೂ ಮಾಡುವ ನಮ್ಮ ಪಶ್ಚಿಮಘಟ್ಟಾದಿ ಮುಖ್ಯ ನೆಲದ ಕಾಡುಗಳೆದುರು ಸುಂದರಬನ ಕಾಡೇ ಅಲ್ಲ. ಆದರೆ ಜೀವ ವಿಕಾಸದ ಹೋರಾಟದಲ್ಲಿ ಸುಂದರಬನದ ಸಾಧನೆ ಯಾವ ವನಧಾಮಗಳಿಗೆ ಕಡಿಮೆಯಿಲ್ಲದ್ದೆನ್ನುವುದು ಅಲ್ಲಿನ ಜನಪದಕ್ಕೂ ಅಧ್ಯಯನಶೀಲರಿಗೂ ತಿಳಿದೀತು. ಸಹಜವಾಗಿ ಇಲ್ಲೂ ಜೀವ ಸರಪಳಿಯ ಮೇಲ್ಕೊನೆಯ ಗೊಣಸು ಅಥವಾ ಸಸ್ಯಾಹಾರಿಯಿಂದ ಮಾಂಸಾಹಾರಿಯತ್ತಣ ಏರು ನಡೆಯ ಅಂತಿಮ ಶಿಖರ – ಹುಲಿಗಳು; ಧಾರಾಳವೇ ಇವೆ. ಎಲ್ಲೆಡೆಗಳಂತೆ ಇಲ್ಲೂ ವಿಸ್ತರಿಸುತ್ತಲೇ ಇರುವ ಮನುಷ್ಯ ಆಸೆಗಳು – ಮೀನು, ಚಿಪ್ಪು, ಮರ, ಸೌದೆ, ಜೇನು, ಬೇಟೆ… ಹುಲಿ ಪರಿಸರವನ್ನು ಕೆಡಿಸುವ, ದುರ್ಬಲಗೊಳಿಸುವವೇ ಆಗಿ ಅಸ್ವಾಭಾವಿಕವಾಗಿ ನರಭಕ್ಷಕ ಹುಲಿಗಳ ವಿಕಾಸಕ್ಕೆ ದಾರಿ ಮಾಡಿಕೊಟ್ಟಿದೆ. ಸರಕಾರಗಳ ಆದ್ಯತೆಯ ಪಟ್ಟಿಯಲ್ಲಿ ಸಾಮಾಜಿಕ ಭದ್ರತೆ ಮೊದಲಿರುವ ಅನಿವಾರ್ಯತೆಯಲ್ಲಿ ‘ನರಭಕ್ಷಕ’ ಹುಲಿಗಳನ್ನು ನಿವಾರಿಸುವ ಕೆಲಸ ಇಲ್ಲಿ ಹೆಚ್ಚು ಜಾಗೃತವಾಗಿದೆ.

ಮಚ್ಚಾನ್ ಅಥವಾ ಗಂಟೆಗಟ್ಟಳೆ ಓಡಾಟಗಳಲ್ಲಿ ನಮಗೆ ದರ್ಶನ ಕೊಟ್ಟ ವನ್ಯ ಮೃಗಗಳು ತುಂಬಾ ಕಡಿಮೆ. ಗುರುಗುಟ್ಟುವ ಹಡಗಿನ ಮಂದಿಗೆ, ಅದೂ ಸೆಕೆಗಾಲದ ಮಟಮಟ ಹೊತ್ತುಗಳಲ್ಲಿ ಒಂದೆರಡು ಮಂಗ, ಜಿಂಕೆ, ಕೆಲವು ಹಕ್ಕಿಗಳು ಕ್ಷಣಿಕ ಮತ್ತು ದೂರದರ್ಶನ ಕೊಟ್ಟದ್ದೇ ವಿಶೇಷ ಎನ್ನಬೇಕು. ನಾವಂತೂ ಹಡಗಿನ ಡೆಕ್ಕಿನ ಮೇಲೇ ಓಡಾಡಿಕೊಂಡು, ಅದರ ಮೂಕಿ, ಅಂಚಿನ ಕಟಕಟೆಗಳ ಬಳಿ ಕುರ್ಚಿ ಹಾಕಿ ಕುಳಿತುಕೊಂಡು ಸಮಯ ಕಳೆದದ್ದೇ ಹೆಚ್ಚು. ಹೆಚ್ಚಿನವರು ಅವರವರ ಅಂಕಣಗಳಲ್ಲೇ ತೃಪ್ತರಿದ್ದಂತಿತ್ತು. ಹೀಗೇ ನೋಡಿದ್ದಿರಬಹುದು, ಒಂದೆರಡು ಬಾರಿ ಡೆಕ್ಕಿಗೆ ಬಂದು ಹೋದದ್ದೂ ಇರಬಹುದು. ಬಹುತೇಕ ಮಂದಿ ಬಾಬೂ ಮೈಕ್ ಹಚ್ಚಿ ಹಾಜರಿ ಪಠಣ ಮಾಡಿದಾಗ ಹುಲಿ, ಜಿಂಕೆ ಬಂದಾಗ ನೋಡಿದರಾಯ್ತು ಎನ್ನುವಂತೆ ಹಾಡು, ಹಾಸ್ಯ, ಇಸ್ಪೀಟ್, ಕುರುಕು, ಚಾಗಳಲ್ಲೇ ಕಳೆದಿದ್ದರು. ಪಂಚಮ್ ಖಾಲಿ, ದೇರಾಬಾಟಿ, ದೇವಾಲ್ ಭರಣಿ, ನಾನ್ ಬಾಕಿ, ನೇತಾಯಿ… ಹೀಗೇ ಹಲವು ದ್ವೀಪ-ಹಳ್ಳಿಗಳ ನಾಮಕಾವಸ್ಥೆ ದರ್ಶನವಾಯ್ತು. ಯಾವುದೋ ಕುದುರಿನ ಬಳಿ ಲಂಗರು ಹಾಕಿ ದೋಣಿಯಲ್ಲೇ ಭರ್ಜರಿ ಭೋಜನ ಕೊಟ್ಟರು. ಇನ್ಯಾವುದೋ ಕುದುರುವಿನಲ್ಲಿ ಬಹುಶಃ ಜೇನು ಸಂಘದ ಕೇಂದ್ರವೊಂದಕ್ಕೆ ಸಣ್ಣ ಭೇಟಿ ಕೊಡಿಸಿದ್ದರು. ಅಲ್ಲಿ ಜೇನು ಮೇಣದ ದೊಡ್ಡ ಸಂಸ್ಕರಣ ಹಾಗೂ ಮಾರುಕಟ್ಟೆಯ ವ್ಯವಸ್ಥೆ ನೋಡಿ ಬೆರಗಾಗಿದ್ದೆವು. ನಮ್ಮ ಊರಿನ ಬಹುತೇಕ ಜೇನು ಸಂಗ್ರಹವೆಲ್ಲ ಮಧ್ಯಮ ಗಾತ್ರದ ನೊಣಗಳದ್ದು ಮತ್ತು ಪರಿಷ್ಕಾರವಾದ ಗೂಡಿಟ್ಟು ಮಾಡುವ ಕೃಷಿಮೂಲದ್ದೇ. ಅಂದರೆ ಕಾಲಕಾಲಕ್ಕೆ ಕೇವಲ ಜೇನು ಬಸಿದು, ಎರಿ ಮರು ಬಳಸುತ್ತಲೇ ಇರುತ್ತಾರೆ. ಅಪರೂಪಕ್ಕೆ ಭಾರೀ ಮರ, ಬಂಡೆಗಳ ಅಂಚಿನಲ್ಲಿ ದೊಡ್ಡ ನೊಣಗಳ ಒಕ್ಕಲಿಗೆ ಲಗ್ಗೆ ಹಾಕಿ ಎರಿಗಳನ್ನೇ ಕತ್ತರಿಸಿ ತರುವುದಿದೆ. ಆದರೆ ಮುಂದುವರಿದು ಜೇನು ಬಸಿಯುವುದು ಮಾತ್ರ ಹೆಚ್ಚಾಗಿ ಕೈಯಲ್ಲಿ ಹಿಸುಕುವ ಒರಟು ವಿಧಾನದಿಂದ. ಮತ್ತು ಕೊನೆಯಲ್ಲುಳಿವ ಚರಟನ್ನು ಸಂಸ್ಕರಿಸಿ ಮೇಣ ಸಂಗ್ರಹಿಸುವುದಕ್ಕಿಂತ ಗೊಬ್ಬರ ಮಾಡುವವರೇ ಹೆಚ್ಚು! ಸುಂದರಬನದಲ್ಲಿನ ಜೇನು ಸಂಗ್ರಹವೆಲ್ಲ ಗೂಡಿಗೆ ಪಳಗದ ದೊಡ್ಡ ಜಾತಿಯ ನೊಣಗಳದ್ದೇ. ಸಹಜವಾಗಿ ಜೇನು ಬಸಿದ ಮೇಲುಳಿವ ರಾಶಿ ಎರಿಗಳನ್ನೂ ವ್ಯವಸ್ಥಿತವಾಗಿ ಸಂಸ್ಕರಿಸಿ ಮೇಣಗಳ ಇಟ್ಟಿಗೆಯನ್ನೇ ಮಾಡುವುದನ್ನು ನಾವು ರಾತ್ರಿಗೆ ತಂಗಿದ ವನಧಾಮದ ಕಛೇರಿಯೇ ಉಳ್ಳ ದ್ವೀಪ – ಸಜ್ಜನ್ ಖಾಲಿಯಲ್ಲಿ ಕಂಡೆವು. ಇದರಿಂದ ಮೇಣದ ಸದುಪಯೋಗವಾಗುತ್ತದೆ ಎನ್ನುವುದು ಸರಿ. ಆದರೆ ಮಾವಿನ ಮಿಡಿಗಾಗಿ ಗೆಲ್ಲು ಕತ್ತರಿಸುವ, ಹಕ್ಕಿಯ ಸುಂದರ ಪಟಕ್ಕಾಗಿ ಅದರ ಸಂಸಾರವನ್ನೇ ಕೆಡಿಸಿಬಿಡುವ ಕಲಾಪಕ್ಕಿದು ಖಂಡಿತ ಭಿನ್ನವಲ್ಲ! ಔದ್ಯಮಿಕ ಮಟ್ಟದಲ್ಲಾಗುವಾಗ ಪರಿಸರ ದ್ರೋಹ ಬಹಳ ದೊಡ್ಡ ಮಟ್ಟದಲ್ಲೇ ಆಗುತ್ತದೆ.

ಸಂಜೆ ಇನ್ನೊಂದು ದ್ವೀಪದಲ್ಲೂ ಸ್ವಲ್ಪ ವಿರಾಮ, ಕಾಫಿಂಡಿ. ರಾತ್ರಿ ವನಧಾಮದ ಕಛೇರಿಗೂ ಭೇಟಿ ಕೊಟ್ಟಿದ್ದೆವು. ಅಲ್ಲಿನ ಅಧಿಕಾರಿ ನನ್ನ ಪರಿಚಯ ಕೇಳಿದಾಗ “ಅಯ್ಯೋ ನಿಮಗಾಗಿ ಪ್ರತ್ಯೇಕ ದೋಣಿ ಮುಂತಾದ ವ್ಯವಸ್ಥೆ ಮಾಡಿದ್ದೆವಲ್ಲಾ” ಎಂದಿದ್ದರು. ಸಜ್ಜಂ ಖಾಲಿಯಲ್ಲೇ ಲಂಗರು ಹಾಕಿ ನಮ್ಮನ್ನು ಹಡಗಿನಲ್ಲೇ ನಿದ್ರೆಗೂ ಬಿಟ್ಟರು. ಕಾಂಡ್ಲಾ ಕಾಡಿನ ಮುತ್ತಿಗೆಯಲ್ಲಿ ಸಿಕ್ಕ ಆಕಾಶದ ತುಣುಕಿನಲ್ಲಿ ಉಪಾಧ್ಯರ ಆಕಾಶವೀಕ್ಷಣೆಯ ಉತ್ಸಾಹಕ್ಕೂ ಅಮಾವಾಸ್ಯೆ (೧೮-೪) ಕಳೆದ ಎರಡನೇ ರಾತ್ರಿಯಾದ್ದರಿಂದ ವನ್ಯ ಮೃಗಗಳ ದರ್ಶನಕ್ಕೂ ಹೆಚ್ಚಿನ ಅವಕಾಶ ಏನೂ ಇರಲಿಲ್ಲ. ನಿದ್ರೆಯಂತೂ ಚೆನ್ನಾಗಿಯೇ ಬಂದಿರಬೇಕು.

ಸುಂದರಬನದ ಹೊಸ ಬೆಳಗ್ಗೆ (೨೧-೪-೯೬) ಅಥವಾ ಅರ್ಧ ದಿನದ ಮತ್ತಷ್ಟು ಸುತ್ತಾಟ ಪ್ರತಿ ಕ್ಷಣದಲ್ಲೂ ನಮಗೇನೋ ಹೊಸತು ತೋರಬಹುದು ಎನ್ನುವ ಕುತೂಹಲದ ವೀಕ್ಷಣೆಯೇನೋ ಸರಿಯಾಗಿಯೇ ಮಾಡಿದ್ದೆವು, ಸಂತೋಷವನ್ನೂ ಪಟ್ಟಿದ್ದೆವು. ಆದರೆ ಇಂದು ವಿವರಿಸೋಣವೆಂದರೆ ಕುಸುರಿ ಕೆಲಸಕ್ಕೆ ಬೇಕಾದ ನೆನಪುಗಳೇನೂ ನನ್ನಲ್ಲಿ ಉಳಿದಿಲ್ಲ. ಮತ್ತೆ ಅಲ್ಲಿ ಇಲ್ಲಿನ ಓದಿನ ಬಲದಲ್ಲಿ ಕಾಲ್ಪನಿಕ ವಿವರಣೆಗಳಲ್ಲಿ ಕಾಲಯಾಪನೆ ಮಾಡುವುದಿಲ್ಲ, ನಿಮ್ಮದೇ ಆಯ್ಕೆಯ ಅನ್ಯ ಜಾಲ ಶೋಧಕ್ಕೆ ಬಿಡುತ್ತೇನೆ. ಹೊತ್ತು ಹೊತ್ತಿಗೆ “ಮಿಸ್ಟರ್ ಬರ್ಧನ್ ಗುರ್ಪ್(ಗೆ) ಬೆಜಿಟೇರಿಯನ್” ತಿನಿಸು, ಪಾನೀಯಗಳ ಸರಬರಾಜು ಚೆನ್ನಾಗಿಯೇ ಇದ್ದುದಕ್ಕೆ ಒಟ್ಟಾರೆ ನೌಕಾಯಾನ ‘ಸೂಪರ್’ ಆಗಿಯೇ ಮುಗಿದಿತ್ತು.

ನಮ್ಮ ಡೆಕ್ ಬೈಠಕ್ಕುಗಳಲ್ಲಿ, ಸಾಕಷ್ಟು ಹಿರಿಪ್ರಾಯದ ಓರ್ವ ಫ್ರೆಂಚ್ ಮಹಿಳೆಯ ಪರಿಚಯವಾಯ್ತು. ಆಕೆ ಒಂಟಿ ಪ್ರವಾಸಿಯಾಗಿಯೇ ಸಾಕಷ್ಟು ದೇಶಗಳನ್ನು ಸುತ್ತಿದವಳು. ಮೊದಲು ಮಿತಭಾಷಿಯಾಗಿದ್ದವಳು ಒಂದೂವರೆ ದಿನದಲ್ಲಿ ಹೆಚ್ಚು ಆತ್ಮೀಯಳಾದಳು. ಹಾಗೆ ಒಂದು ಹಂತದಲ್ಲಿ ಆಕೆಗೆ ಕಾಶಿಯಲ್ಲಾದ ಒಂದು ಕಹಿ ಅನುಭವ ಕೇಳಿ, ಅವಳ ಅಸಹಾಯಕತೆಯ ಸ್ಥಾನದಲ್ಲಿ ನಮ್ಮನ್ನೇ ಗುರುತಿಸಿಕೊಂಡು ನಾವು ದಂಗಾಗಿ ಹೋಗಿದ್ದೆವು. ಆಕೆ ಗಂಗೆಯ ಮೇಲೆ ಪೂರ್ವ ನಿಶ್ಚಿತ ದರದೊಡನೇ ದೋಣಿವಿಹಾರಕ್ಕೆ ಹೋಗಿದ್ದಳಂತೆ. ಆದರೆ ದೋಣಿ ಮಾಫಿಯಾ ಇಳಿಯುವಲ್ಲಿ ಅಪಾರ ಹಣ ಸುಲಿಗೆಗಿಳಿದರಂತೆ. ಈಕೆ ಪ್ರತಿಭಟಿಸಿದ್ದಕ್ಕೆ ಸ್ಪಷ್ಟ ಜೀವಭಯವನ್ನೇ ಹುಟ್ಟಿಸಿದ್ದು ಕೇಳಿ ನಮಗೆ ನಾಚಿಕೆಯಾಗಿತ್ತು. ನಮ್ಮೆಲ್ಲ ಸರಕಾರೀ ಧೋರಣೆಗಳು ಲಕ್ಷಿಸುವ ಪ್ರವಾಸೋದ್ಯಮ ಕೇವಲ ಪಂಚತಾರಾತ್ಮಕವಾದದ್ದು! ಅದಲ್ಲ, ಕನಿಷ್ಠ ಖರ್ಚು ಮತ್ತು ಸರಳ ವ್ಯವಸ್ಥೆಗಳಲ್ಲಿ ಗರಿಷ್ಠ ಅನುಭವಿಸಲು ಬಯಸುವವರ ಸಂಖ್ಯೆ ಬಹಳ ದೊಡ್ಡದಿದೆ. ಉದಾಹರಣೆಗೆ ನಮ್ಮದೇ ಮೊದಲು ಪ್ರಾಕೃತಿಕ ಭಾರತ ಸೀಳೋಟ ಮತ್ತೆ ಪ್ರಸ್ತುತ ಅ-ಪೂರ್ವ ಕರಾವಳಿಯೋಟ! ಯೋಗ್ಯ ಪರಿಸರ ನಿರ್ಮಾಣವಾದರೆ ವಿಶ್ವಾದ್ಯಂತ ಸುತ್ತುತ್ತ ಬರಲಿಚ್ಛಿಸುವವರ ಸಂಖ್ಯೆ ಬಹಳ ದೊಡ್ಡದೇ ಇದೆ. ಅಂಥವರನ್ನು ಪೋಷಿಸುವುದು ಎಲ್ಲಾ ರೀತಿಯಲ್ಲೂ ಹೆಚ್ಚು ಆರೋಗ್ಯಕರ ಮತ್ತು ದೀರ್ಘ ಕಾಲೀನ ಆದಾಯದಾಯಿಯೂ ಹೌದು. ಹಡಗಿನಲ್ಲಿ ಮಧ್ಯಾಹ್ನದೂಟ ಕೊಟ್ಟೇ ಬಸಂತಿ ಮುಟ್ಟಿಸಿದ್ದರು. ಮತ್ತದೇ ಗುಜರಿ ಬಸ್, ಮತ್ತದೇ ದಡಬಡ ಓಟದಲ್ಲಿ ಸಂಜೆ ಇಲಾಖೆ ಕಛೇರಿ ಮುಟ್ಟಿದ್ದೆವು. ಮುಂದಕ್ಕೆ ಬಸ್ಸೋ ಟ್ಯಾಕ್ಸಿಯೋ ಎಂದು ಚಿಂತಿತರಾದವರಿಗೆ ಮೆಟ್ರೋ ಇದೆ ಎನ್ನುವ ಹೊಸ ಮಾಹಿತಿ ಸಿಕ್ಕಿ ಗೆಲುವಾದೆವು. ಪ. ಬಂಗಾಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಛೇರಿ ಬಳಿಯೇ ಇದ್ದ ‘ಪಾರ್ಕ್ ಸ್ಟ್ರೀಟ್’ ಎಂಬ ಮೆಟ್ರೋ ದ್ವಾರದ ಮೂಲಕ ಅಧೋಲೋಕವನ್ನು ಸೇರಿದೆವು.ಈ ನಿಲ್ದಾಣ ಹಿಂದೆ ನಾವು ಕಂಡವುಗಳಿಗಿಂತ ಭಾರೀ ದೊಡ್ಡ ವ್ಯವಸ್ಥೆಯದೇ ಆಗಿತ್ತು.

ಅದಕ್ಕೆ ಆರೆಂಟು ವಿವಿಧ ದಿಕ್ಕುಗಳಿಂದ ಬಂದು, ಹೋಗುವ ದ್ವಾರಗಳಿದ್ದವು. ಹಾಗೇ ಜನಗಳ ಸುಲಭ ಮತ್ತು ನಿರಪಾಯ ಸಂಚಾರಕ್ಕಾಗಿ ಹಳಿಸಾಲುಗಳ ಮೇಲೆ ಕೆಳಗೆ ಎನ್ನುವಂತೆ ಮತ್ತಷ್ಟು ಮೇಲ್ಸೇತು, ಕೆಳಸೇತು ಹೊಸೆದು ಹಾಕಿದ್ದರು. ಅವನ್ನು ನಮ್ಮ ಪುರಾಣದ ಅಧೋಲೋಕದ ವಿವಿಧ ಸ್ತರಸೂಚಿಯಾದ – ಅತಳ, ವಿತಳ, ಪಾತಾಳ, ರಸಾತಳಗಳಿಗೆ ಸಮೀಕರಿಸಿಕೊಂಡು ನಾನು ಬಹಳ ಸಂತೋಷಪಟ್ಟೆ. ಅದು ಹೆಚ್ಚೆಚ್ಚು ನನ್ನ ತಲೆ ತಿಂದ ಪರಿಣಾಮವಾಗಿ, ಆ ರಾತ್ರಿ ಮಗ ಅಭಯನಿಗೆ ಪತ್ರಿಸುವಾಗ ಮಂಗಳೂರಿನ ಹಂಪನಕಟ್ಟೆಯ ಗೊಂದಲಕ್ಕೊಂದು ಮೆಟ್ರೋ ನೀಲನಕ್ಷೆಯನ್ನೇ ಬರೆದಿದ್ದೆ! (ಚಿತ್ರ ನೋಡಿ) ಈ ಸಲದ ಮೆಟ್ರೋಯಾನವನ್ನು ಯಾವುದೇ ಹೊಸ ಕತೆಗೆ ಸರಕು ಮಾಡದೇ ಕನ್ನಡ ಸಂಘ ಸೇರಿಕೊಂಡೆವು. ಸಕಾಲದಲ್ಲಿ “ಮುಂದಿನಗಳಲ್ಲಿ ಬೈಕ್ ಯಾನ ಮಾತ್ರ” ಎಂದು ಯೋಚಿಸುತ್ತಾ ಕಲ್ಕತ್ತಾದ ಕೊನೆ ರಾತ್ರಿಯ ನಿದ್ರೆಗೆ ಜಾರಿದೆವು.

(ಮುಂದುವರಿಯಲಿದೆ)