೧. ಕಥನಾರಂಭದಲ್ಲಿ

ನೀನಾಸಂ ಮತ್ತು ಸಂಚಿ ಫೌಂಡೇಶನ್ ಸಹಯೋಗದ ವಿಡಿಯೋ ದಾಖಲೀಕರಣದ ಕತೆಗಳು ನಿಮಗೆ ಹೊಸದೇನಲ್ಲ. (ನೋಡಿ: ಸಿನಿಮಾವಲ್ಲ, ದಾಖಲೀಕರಣ) ಅಂಥದ್ದೇ ಯೋಜನೆಯ ಭಾಗವಾಗಿ ೨೦೧೯ರ ಒಂದು ದಾಖಲೀಕರಣಕ್ಕೆ ಜತೆಗೊಟ್ಟ ನನಗೆ, ಅಯಾಚಿತವಾಗಿ ಆ ವರ್ಷದ ನೀನಾಸಂ ರಂಗ ಶಾಲೆಯ ಹೊಸ ವಿದ್ಯಾರ್ಥಿಗಳ ಮೊದಲ ದಿನವನ್ನೂ ನೋಡುವ ಅವಕಾಶ ಒದಗಿತ್ತು. (ನೋಡಿ: ನೀನಾಸಂ ಕಥನ ಮಾಲಿಕೆ…) ಅಂದು ಪ್ರಾಸಂಗಿಕವಾಗಿ, ಆದರೆ ಶುದ್ಧ ಪ್ರಾಯೋಗಿಕವಾಗಿ ಕೆವಿ ಅಕ್ಷರ ಮಾತಾಡುತ್ತಾ (ವಿದ್ಯಾರ್ಥಿಗಳನ್ನು ಉದ್ದೇಶಿಸಿ) “ನೀವೆಲ್ಲ ವರ್ಷದ ಕೊನೆಯಲ್ಲಿ ದಶ ಶಿರನನ್ನು ಮೀರಿಸಿದ ರಂಗಪುರುಷನನ್ನು ಇಲ್ಲಿ ರೂಪಿಸಬೇಕು…” ಎಂದಿದ್ದರು. ಆದರೆ ನಿಮಗೆಲ್ಲ ತಿಳಿದಂತೆ, ‘ಕೋವಿಡ್’ ಮಹಾಮಾರಿಯ ಗೊಂದಲದಲ್ಲಿ ಇಲ್ಲೂ ವಿದ್ಯಾವರ್ಷ ಮೊಟಕುಗೊಂಡಿತ್ತು.ಈಚೆಗೆ ಸರಕಾರದ ಬಿಗಿತಗಳು ಕಡಿಮೆಯಾದ ಮೇಲೆ, ನೀನಾಸಂ ಕಡಿದ ಎಳೆಗಳನ್ನು ಜೋಡಿಸಿ, ಆ ಬಳಗದ ಶಿಕ್ಷಣವನ್ನು ಪೂರ್ಣಗೊಳಿಸಿತ್ತು. ಮತ್ತದನ್ನು ಸಣ್ಣದಾಗಿ ಲೋಕಕ್ಕೆ ಸಾರುವಂತೆ ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ಹೀಗೆ ಮೈದಳೆದ ಸುಮಾರು ಇಪ್ಪತ್ತು ತಲೆಗಳ (ವಿದ್ಯಾರ್ಥಿ ಸಂಖ್ಯೆ) ರಂಗಪುರುಷನ ಎರಡು ಅವತಾರಗಳನ್ನು (ಪರಮಪದ ಸೋಪಾನಪಟ ಮತ್ತು ಮಳ್ಳಗಿಂಪೆಲ್) ಕ್ಯಾಮರಾದಲ್ಲಿ ಹಿಡಿಯಲು, ಅತ್ತ ಬೆಂಗಳೂರಿನಿಂದ ಅಭಯನ ಬಳಗ ಹದಿನೇಳರ ರಾತ್ರಿ ಬಸ್ ಹಿಡಿದಿತ್ತು. ‘ಮಗನನ್ನು ಕರೆದರೆ ಪೋಷಕರು ಮುಫತ್ತು’ ಎಂದು ನೀನಾಸಂ ತಿಳಿದರೂ ಸರಿ, ಎಂದು ಇತ್ತ ಮಂಗಳೂರಿನಿಂದ ನಾವೂ ಹೊರಟೆವು. ಹೊಸ ಎರಡು ನಾಟಕಗಳನ್ನು ಕಣ್ದುಂಬಿಕೊಳ್ಳುವುದರೊಡನೆ, ನಮ್ಮ ತಿರುಗಾಡಿತನಕ್ಕೊಪ್ಪುವಂತೆ (ಹೀರೊ ಹೊಂಡಾ ಸೂಪರ್ ಸ್ಪ್ಲೆಂಡರ್ – ೧೨೫ ಸಿಸಿ) ಬೈಕೇರಿದ್ದೆವು.

೨. ಹೀಗೊಬ್ಬ ಚಾಯ್ವಾಲಾ

ಸೋಮಾರಿ ಅರುಣ ಜಡ ಕಳೆದು, ಲೋಕವನ್ನು ಹುರಿಯಲು ಕಾವೇರಿಸುವ ಮೊದಲು ನಾವು ಪಡುಬಿದ್ರೆಗಾಗಿ ಕಾರ್ಕಳ ಮುಟ್ಟಿದ್ದೆವು. ಕಾರ್ಕಳದ ಹೊರಬಳಸಿನ ರಸ್ತೆಯಲ್ಲಿದ್ದ ಸಣ್ಣ ಹೋಟೆಲಿಗೆ ನುಗ್ಗಿದೆವು. ಬಟವಾಡೆ ಹಿರಿಯ ಎದುರು ನೀರಲೋಟ ಇಟ್ಟು “ಚಾ ಕೊಡಲೇ” ಎಂದರು. ನಾವು ನಗೆ ನುಂಗಿ, “ಬೇರೆ ಏನಿದೆ?” ಎಂದೆವು. ಆತ ಏನೋ ಪುಟ್ಟ ಪಾಕಪಟ್ಟಿ ಗೊಣಗಿ, “ಏನು ಕೊಡಲಿ” ಎಂದರು. ನಮ್ಮದು ಸಾಂಪ್ರದಾಯಿಕ ಪೀಠಿಕೆ “ಬರಲಿ ಎರಡು ಪ್ಲೇಟ್ ಒಡೆ, ಇಡ್ಡಲಿ”. ಆತ ರಾಗರಹಿತವಾಗಿ ಒಡೆ ಆಗಿಲ್ಲವೆಂದು ಮೂರ್ಮೂರು ಪುಟ್ಟ ಇಡ್ಲಿ ಚಟ್ನಿಯಷ್ಟೇ ಕೊಟ್ಟರು. “ಸ್ಸರಿ…” ಎಂದುಕೊಳ್ಳುತ್ತ ಒಂದನ್ನು ಮುರಿದು ನಾವು ಬಾಯಿಗಿಡುವ ಮುನ್ನ, ಆತ ಮತ್ತೆ ಪಲ್ಲವಿಸಿದರು “ಚಾ ಕೊಡಲೇ?” ನಾವು ಇಡ್ಲಿಯ ಜತೆಗೆ ಸ್ವಲ್ಪ ನಗು ನುಂಗುತ್ತ, “ಇನ್ನೇನಿದೆ” ಸವಾಲಿಕ್ಕಿದೆವು. ಆತ ಉಸುರಿದ ಮತ್ತದೇ ಪಟ್ಟಿಯಲ್ಲಿ (ಹಿಂದಿನದ್ದೇ ಇರಬೇಕು) ಬನ್ಸ್ ಬಿಟ್ಟು “ನೀರ್ದೋಸೆ” ಕೇಳಿದೆವು. 

ಒಳಗೆ ಚುಂಯ್ ಮಾಡುತ್ತಿದ್ದ ಯಜಮಾಂತಿ ಸ್ವಲ್ಪ ನಿಧಾನಿಸಿರಬೇಕು. ಆದರೂ ಇಡ್ಲಿಗಳು ಮುಗಿಯುವ ಮೊದಲೇ ನೀರ್ದೋಸೆ ಮೇಜಿಗವತರಿಸಿತ್ತು. ಅದಕ್ಕೂ ಮುಖ್ಯವಾಗಿ ಆತ ಮತ್ತೆ ಪಲ್ಲವಿಸಿದ “ಚಾ ಕೊಡಲೇ?” ನಾವು ಒಳಗೊಳಗೇ ನಗುತ್ತ, ಮತ್ತೆ ಮತ್ತೆ ಚಟ್ನಿ ಕೇಳಿ ಸಾಂಗ ಇಡ್ಡಲಿ ಸಂಹರಿಸಿ, ನೀರ್ದೋಸೆಯಲ್ಲಿ ತಟ್ಟೆ ಒರೆಸುವವರೆಗೂ ಆತನನ್ನು ತಡೆಯಾಜ್ಞೆಯಲ್ಲಿಟ್ಟಿದ್ದೆವು. ಮತ್ತೆ ನಮ್ಮದೇ ಕೊನೇ ಮಾತು ಎಂಬಂತೆ “ಎರಡು ಕಾಪಿಯಲ್ಲಿ ಒಂದು ಚಪ್ಪೆ” ಎಂದೆವು. ಆತ ಗೋಣಿಕ್ಕಿ ಹೋದವ ಎರಡು ಬಿಸಿ ಲೋಟವೇನೋ ತಂದರು. ಆದರೆ ಒಂದು ಸಕ್ಕರೆ ಪಾಕದಂತ ಕಾಫಿ, ಇನ್ನೊಂದು ಚಪ್ಪೆ ಚಾ! ಆಗ ತಿಳಿಯಿತು ಆತನ ‘ಚಾ-ಕಾರ’ ಅವಸರದ್ದಲ್ಲ, ಕಿವಿ ದೂರವಾದ್ದಕ್ಕೆ ನಿರೀಕ್ಷಣಾ ಮುಮ್ಮಾತು. ನಾವೇ ಸುಧಾರಿಸಿಕೊಂಡು, ಮುಂದಿನ ದಾರಿ ಹಿಡಿದೆವು. 

೩. ಕೂಡ್ಲು ತೀರ್ಥದ ದಾರಿಯಲ್ಲಿ 

ಕಾರ್ಕಳದ ಬೆಳವಣಿಗೆಯಾದರೂ ಆಗೀಗ ಕೇಳಿದ್ದೆ. ಆದರೆ ಮುಂದೆ – ಅಜೆಕಾರು, ಮುನಿಯಾಲು, ಮುದ್ರಾಡಿ ಕಳೆದು ಸೀತಾನದಿ ಹಳ್ಳಿಯವರೆಗೂ ದಾರಿಯ ಇಕ್ಕೆಲಗಳಲ್ಲಿ ಆದ, ನಡೆಯುತ್ತಿರುವ ‘ಅಭಿವೃದ್ಧಿಗಳು’ ನನಗೆ ಹೊಸವು. ಇವು ಸಾರ್ವಜನಿಕರ ಉದ್ಯಮಶೀಲತೆಯ ಹೆಚ್ಚಳವೆಂದು ಸಂಭ್ರಮಿಸಬೇಕೋ ಬರಲಿರುವ ಪಾರಿಸರಿಕ ದುರಂತಗಳ ಅಂದಾಜಿನಲ್ಲಿ ಕಳವಳಿಸಬೇಕೋ ಅರ್ಥವಾಗುವುದಿಲ್ಲ. ಇವುಗಳ ಮುನ್ನೆಲೆಯಲ್ಲಿ ಅಥವಾ ಮಹಾಸುಳಿಯಲ್ಲಿ ಸೀತಾನದಿ ಮೂಲದ ಜಲಪಾತ – ಕೂಡ್ಲುತೀರ್ಥ, ಏನಾಗಿರಬಹುದು ಎಂಬ ಕುತೂಹಲ ಒಮ್ಮೆಗೇ ನನ್ನ ತಲೆಯೊಳಗೆ ಕೆರಳಿಕೊಂಡಿತು. ನೋಡಿಯೇ ಬಿಡೋಣವೆಂದು ಸೀತಾನದಿ ಹಳ್ಳಿ ಕಳೆದದ್ದೇ ಬಲಕ್ಕೆ ಸಿಗುವ ಮಹಾದ್ವಾರದಲ್ಲಿ (ಈ ರಚನೆಯೂ ಆರೇ ವರ್ಷ ಪ್ರಾಯದ್ದು) ಕವಲಾದೆವು.ಕೂಡ್ಲು ತೀರ್ಥಕ್ಕೂ ನನಗೂ ನಲ್ವತ್ತು ವರ್ಷಗಳ ನಂಟು. ಅದು (೧೮-೭-೧೯೮೨) ಭಾರೀ ಮಳೆಯ ಒಂದು ದಿನ. ಘಟ್ಟದ ಈ ಮೂಲೆಗೆ ನಮ್ಮ ಹದಿನೈದು ಮಂದಿಯ ಸೈನ್ಯ, ಬೈಕ್, ಜೀಪೆಂದು ಏರಿ ದಾಳಿ ನಡೆಸಿತ್ತು. ತಿಂಗಳೆ ರವೀಂದ್ರ ಹೆಗ್ಗಡೆ ಮತ್ತು ಕೂಡ್ಲು ತೀರ್ಥ ಎಂಬೆರಡು ಹೆಸರಷ್ಟೇ ನನ್ನ ಮಾರ್ಗಸೂಚಿ. 

ಸೀತಾನದಿ ಮಹಾಪ್ರವಾಹದಲ್ಲಿತ್ತು. ಆದರೂ ನಮ್ಮ ದಿಟ್ಟ ಆಸಕ್ತಿಯನ್ನು ಗುರುತಿಸಿದ ಸಾಹಿತ್ಯ, ಸಂಸ್ಕೃತಿಪ್ರಿಯ ರವೀಂದ್ರ ಹೆಗ್ಗಡೆಯವರು, ಸಮರ್ಥ ಮಾರ್ಗದರ್ಶಿಯನ್ನು ಕೊಟ್ಟು ಜಲಪಾತದ ದರ್ಶನ ಮಾಡಿಸಿದ್ದರು. (ನೋಡಿ: ಜಲಪಾತಗಳ ಹುಡುಕಾಟದಲ್ಲಿ) ಅಂದಿನ ಲೆಕ್ಕದಲ್ಲಿ ಕನಿಷ್ಠ ಆರು ಕಿಮೀ ನಡೆದ ನಾನು, ಅನಂತರದ ದಿನಗಳಲ್ಲಿ ಹಲವು ಬಾರಿ, ತರಹೇವಾರಿ ಚಾರಣ, ಸವಾರಿ ಮಾಡಿ ಅಲ್ಲೆಲ್ಲಾ ಓಡಾಡಿದ್ದಿತ್ತು. ಅವುಗಳಲ್ಲಿ ಕೊನೆಯ ಬಾರಿಯ ಸವಾರಿ ಸರ್ಕಸ್ಸೇ ಆದರೂ ನಡಿಗೆ ಕೇವಲ ಒಂದು ಕಿಮೀಗೆ ಇಳಿದಿತ್ತು. ಹಾಗಾಗಿ ಇಂದು ಇನ್ನಷ್ಟು ಸುಲಭವಾಗಿಯೇ ಲಕ್ಷ್ಯ ಸಾಧಿಸುತ್ತೇವೆಂದು ಅಂದುಕೊಂಡಿದ್ದೆ.ಮೊದಲಿಗೆ ಸುಮಾರು ಐದು ಕಿಮೀ ಉತ್ತಮ ಕಾಂಕ್ರೀಟ್ ದಾರಿ. ಅಲ್ಲಿ ತಿಂಗಳೆ ದಾರಿ ಬಿಟ್ಟು ಎಡಕ್ಕೆ ಕವಲಾಗಬೇಕಾದಲ್ಲಿ ಅಭಿವೃದ್ಧಿ ಕಾಮಗಾರಿ ‘ದಾರಿ ಬಂದ್’ ಮಾಡಿತ್ತು. ಅಲ್ಲೇ ಸೂಚಿಸಿದ್ದಂತೆ, ತಿಂಗಳೆ ದಾರಿಯಲ್ಲೇ ಸ್ವಲ್ಪ ಮುಂದುವರಿದು, ತೀರಾ ಕಚ್ಚಾ ದಾರಿಯೊಂದನ್ನು ಹಿಡಿದು ನಡುವೆ ಎಲ್ಲೋ ಕೂಡ್ಲುತೀರ್ಥದ ದಾರಿ ಸೇರಿಕೊಂಡೆವು. ಆದರೆ ದಾರಿಯ ಸ್ಥಿತಿ ಆಕರ್ಷಕವಾಗಿರಲಿಲ್ಲ.

ನಮ್ಮ ಹಿಂದೆ ಬಂದ ಯಾವುದೋ ಕಿರು ಬಸ್ಸಿನ ಮಂದಿ, ಮುಂದಿನ ಆರೇಳು ಕಿಮೀ ನಡೆದೇ ಸುಧಾರಿಸಲು ಇಳಿದೇ ಬಿಟ್ಟರು. ದಾರಿಯೇನೋ ಅಗಲವಾಗಿದ್ದರೂ ಹಾಸಿದ್ದ ದೊಡ್ಡ ಕಲ್ಲಚೂರುಗಳು ಇನ್ನೂ ದಮ್ಮಾಸ್ ಕಂಡಿರಲಿಲ್ಲ. ಅಂಚಿನಲ್ಲಾದರೂ ಬೈಕೋಡಿಸೋಣವೆಂದರೆ ಚರಂಡಿ ಕೆಲಸ ಬಿಡಲಿಲ್ಲ. ನಮ್ಮದೆಷ್ಟಿದ್ದರೂ ಕಿರುವಾಹನ. ಸ್ವಲ್ಪ ಮುಂದೆಲ್ಲಾದರೂ ರಿಯಾಯಿತಿ ಸಿಕ್ಕೀತೋ ಎಂದು ಕತ್ತು ಉದ್ದ ಮಾಡುತ್ತ ಸುಮಾರು ಒಂದು ಕಿಮೀಯಷ್ಟು ಉದ್ದಕ್ಕೆ ಸ್ವಲ್ಪ ಸವಾರಿ, ಸ್ವಲ್ಪ ನಡೆದು ನೋಡಿದ ಮೇಲೆ ಜ್ಞಾನೋದಯವಾಯ್ತು. ಕೂಡ್ಲುತೀರ್ಥ ನಾವು ನೋಡದ್ದೇನಲ್ಲ. ಅಂದಿನ ನಮ್ಮ ಪ್ರಧಾನ ಲಕ್ಷ್ಯವೂ ಅದಲ್ಲ; ಹೆಗ್ಗೋಡು. ಉರಿ ಬಿಸಿಲು ಹಾಗೂ ಕಾಡಿನ ಮುಚ್ಚಿಗೆ ಹರಿದು ರಕ್ತಸಿಕ್ತವಾದ ಜಾಡಿನಲ್ಲಿ ಆರು+ಆರು ಕಿಮೀ ನಡಿಗೆ ಆಕರ್ಷಕ ಅಲ್ಲ, ಸಮಯವೂ ಇಲ್ಲ. ಎಲ್ಲಕ್ಕು ಮುಖ್ಯವಾಗಿ ಹರಕು ಕಲ್ಲಹಾಸಿನ ಮೇಲೆ ಹಠದಲ್ಲಿ ಸವಾರಿ ನಡೆಸಿ, ಚಕ್ರದ ಆರೋಗ್ಯ ಕೆಟ್ಟರೆ, ನಾವು ಎಲ್ಲಿಗೂ ತಲಪಲಾರೆವು. ಹಾಗಾಗಿ ಹಿಮ್ಮುಖರಾದೆವು. 

 

೪. ಆಗುಂಬೆ ಘಾಟ್ ಮತ್ತು ನೂರಡಿ ರಸ್ತೆ

ಕೂಡ್ಲುತೀರ್ಥ ಕೈಕಂಬದಿಂದ ಮೂರ್ನಾಲ್ಕು ಕಿಮೀ ಅಂತರದಲ್ಲೇ ದಾರಿಗೆ ಭಾರೀ ಅಡ್ಡಗೋಡೆಯಂತೇ ನಿಂತಿದೆ ಆಗುಂಬೆ ಘಟ್ಟ. ಅಲ್ಲಿ ಶ್ರೇಣಿಯ ಒಂದು ಸಣ್ಣ ಮೈಯಲ್ಲಿ (ಒಂದೇ ಏಣಿನೊಳಗೆ) ಕಡಿದ ಸಪುರ ದಾರಿ, ಕೇವಲ ಏಳೆಂಟು ಕಿಮೀ ಅಂತರದಲ್ಲಿ, ಹದಿನಾಲ್ಕು ಹಿಮ್ಮುರಿ ತಿರುವುಗಳ ಸುಳಿಯಲ್ಲಿ ಸುಮಾರು ಎರಡೂವರೆ ಸಾವಿರ ಅಡಿ ಔನ್ನತ್ಯವನ್ನು ಸಾಧಿಸುತ್ತದೆ. ಇಲ್ಲಿ ವಾಹನಗಳ ಉದ್ದಕ್ಕೆ ತೀವ್ರ ತಿರುವುಗಳು ಕತ್ತರಿ ಹಾಕಿದರೆ, ಎತ್ತರವನ್ನು ಒಂದು ಬಂಡೆಯ ಮುಂಚಾಚು (‘ಆನೆ ಬಂಡೆ’) ಮೊಟಕುತ್ತದೆ. ಹಾಗಾಗಿ ಹಿಂದೆ ಕಾರ್ಕಳ ಅಥವಾ ಉಡುಪಿಯಿಂದ ತೀರ್ಥಳ್ಳಿಯತ್ತ ಪ್ರಯಾಣದ ಅನಿವಾರ್ಯತೆ ಇದ್ದವರಿಗೆ ಆಗುಂಬೆ ಘಾಟಿಯೊಂದು ಶಾಪ. ನೇರ ತಪ್ಪಲಿನ ಸೋಮೇಶ್ವರ ಅಥವಾ ನೆತ್ತಿಯ ಆಗುಂಬೆ ಬಸ್ ನಿಲ್ದಾಣಕ್ಕೆ ಆಗೀಗ ದೊಡ್ಡ ಬಸ್ಸುಗಳು ಬಂದು, ಜನ ಇಳಿಸಿ ಬಂದ ದಾರಿಯಲ್ಲೇ ಮರಳುತ್ತಿದ್ದವು. ಘಾಟಿ ವಿಭಾಗ ಕೇವಲ ಸಣ್ಣ ವಾಹನ ಹಾಗೂ ಕಿರು ಬಸ್ಸುಗಳಿಗೆ ಮಾತ್ರ. ಜನ ಕೆಲವೊಮ್ಮೆ ಗಂಟೆಗಟ್ಟಳೆ, ತೂಕಡಿಸುವ ಪೇಟೆಯಲ್ಲಿ (ಗೂಡಂಗಡಿ, ಡಬ್ಬಾ ಹೋಟೆಲ್) ತಾಳ್ಮೆಯಿಂದ ಕಾದು, ಕಿರು ಬಸ್ಸುಗಳಿಗೆ ಮುಕುರಿ ಪಾರಾಗಬೇಕಿತ್ತು.  ಆಗುಂಬೆಯ ತಂಪು ಮತ್ತು ಘಾಟಿ ಸರ್ವ-ವಾಹನಯೋಗ್ಯ ಅಲ್ಲ ಎನ್ನುವ ಅಂಶಗಳೇ ಈಚೆಗೆ ಈ ವಲಯದಲ್ಲಿ ಪ್ರವಾಸೋದ್ದಿಮೆಗೆ ಕುಮ್ಮಕ್ಕು ಕೊಟ್ಟಂತಿದೆ. ಸಹಜವಾಗಿ ಎರಡೂ ಕೊನೆಗಳಲ್ಲಿ ಇಂದು ಅಸಂಖ್ಯ ಹೋಟೆಲ್, ಹೋಂ ಸ್ಟೇಗಳು ಬಂದು, ಊರಿನ ಚಹರೆಗಳು ಪೂರ್ಣ ಬದಲಾಗಿವೆ. ಹೀಗೆ ತಿರುಗಾಡಿಗಳ ಹೆಚ್ಚಳದೊಡನೆ ಪಾರಿಸರಿಕ ದೂಷಣೆಯೂ ಹೆಚ್ಚಾದ್ದಕ್ಕೇ ಇರಬೇಕು, ಘಾಟ್ ದಾರಿಯುದ್ದಕ್ಕೆ ಕನಿಷ್ಠ ಮೂರು ನಾಲ್ಕು ಸ್ಥಳಗಳಲ್ಲಾದರೂ ಪೋಲಿಸ್ ಗಸ್ತು ಕಂಡೆವು. ಮುಂದಿನ ಸರದಿ ‘ಅಭಿವೃದ್ಧಿಯದು’!

ಆಧುನಿಕ ತಂತ್ರಜ್ಞಾನದ ಬಲದಲ್ಲಿ ಆಗುಂಬೆ ರಸ್ತೆಯನ್ನು ಅಗಲೀಕರಿಸುವುದರೊಡನೆ, ಶ್ರೇಣಿಯ ಇನ್ನಷ್ಟು ಏಣುಗಳಲ್ಲಿ ಬಿಡಿಸಿಡುವ ಯೋಜನೆ ಘೋಷಣೆಯಾಗಿ ಕೆಲವು ಕಾಲ ಸಂದಿದೆ. ಅದರ ನಿರೀಕ್ಷೆಯಲ್ಲೇ ಎಂಬಂತೆ ತೀರ್ಥಹಳ್ಳಿಯಿಂದ ಆಗುಂಬೆಯವರೆಗಿನ ದಾರಿಯ ಅಗಲೀಕರಣ ಯೋಜನೆ ಮಾತ್ರ ಗಡದ್ದಾಗಿ ಜಾರಿಯಲ್ಲಿದೆ. ಅಂಚಿನ ದರೆಗಳು ನೂರಡಿಯವರೆಗೂ ಹಿಗ್ಗಿ, ಸೇತುವೆಗಳು ತ್ರಿವಿಕ್ರಮರಾಗಿ, ನುಲಿಯುವ ತಿರುವುಗಳು ವಿಲಂಬ ಬಳಸುಗಳಾಗಿ, ಒಡಕು ಕಾಂಕ್ರೀಟ್ ಹರಕುಗಳೆಲ್ಲ ಜಾರುಗುಪ್ಪೆಗಳೇ ಆಗುತ್ತಿವೆ. ಮೈಸೂರು ನಗರದೊಳಗೆ, ಮಹಾರಾಜರ ಕಾಲದಲ್ಲಿ ಅಪೂರ್ವಕ್ಕೆ ಒಂದು ದಾರಿ ಚತುಷ್ಪಥದ ರೂಪ ತಳೆದಿತ್ತಂತೆ. ಬೆರಗಾದ ಅಂದಿನ ಜನ, “ನೂರಡಿ ರಸ್ತೆ’ (ನಿಜದಲ್ಲಿ ಖಂಡಿತಾ ಅಷ್ಟಿಲ್ಲ!) ‘ಡಬ್ಬಲ್ ರೋಡ್’” ಎಂದೇ ಉತ್ಪ್ರೇಕ್ಷಿಸಿದ್ದು ಇಂದಿಗೂ ರೂಢಿಯಲ್ಲಿದೆ. (ಇಂದಿನ ಮೈಸೂರಲ್ಲಿ ನಾಲ್ಕೇನು ಆರು ಸಮದಾರಿಗಳನ್ನೂ ನೋಡಬಹುದು) ಆದರೆ ಈ ಆಗುಂಬೆ ತೀರ್ಥಳ್ಳಿ ರಸ್ತೆ ನಿಜಕ್ಕೂ ನೂರಡಿ ಮಿಕ್ಕು, ವಾಹನ ಸಂಚಾರ ವಿರಳವಾಗಿ, ಚಾಲ್ತಿಯಲ್ಲಿರುವ ಮಿನಿಬಸ್ಸುಗಳು ಸರಾಗ ಅಡ್ಡಡ್ಡ ಓಡಾಡಿದರೂ ಆಶ್ಚರ್ಯವಿಲ್ಲ ಎನ್ನುವಂತೇ ಇವೆ. 

ಆಗುಂಬೆಯಲ್ಲಿ ಇನ್ನು ಸಾದಾ ಹೋಟೆಲುಗಳಿರುವುದು ಕಷ್ಟ! ಪ್ರಸ್ತುತ ‘ಗ್ರ್ಯಾಂಡ್’ ತ್ರಯದಲ್ಲಿ ನಾವು ‘ಶಬರಿ ಗ್ರ್ಯಾಂಡ್’ ಆಯ್ದುಕೊಂಡೆವು. (ಉಳಿದೆರಡು – ಗಣೇಶ ಗ್ರ್ಯಾಂಡ್ ಮತ್ತು ಕೃಷ್ಣ ಗ್ರ್ಯಾಂಡ್!) ಎಷ್ಟಾದರೂ ರಾಮಾಯಣದ ಕಾಲದಲ್ಲೇ ‘ಶಬರಿ’ ರುಚಿ ಶುದ್ಧಿಗೆ ಪರ್ಯಾಯನಾಮ. ಹಾಗೆಂದು ನಾವು ಕೇಳಿ ತರಿಸಿದ ಚಾ ಮೊದಲೇ ಎಂಜಲಾಗಿದ್ದಿರಬಹುದೇ? ಶ್ರೀರಾಮನೇ ಯೋಚಿಸದ ಮೇಲೆ ನಾವೇನು ಅಂದುಕೊಂಡು ಸುಮ್ಮನೆ ಕುಡಿದು ಮುಂದುವರಿದೆವು.

೫, ಗೀಚು ಪುಸ್ತಕದಿಂದ ಕಿತ್ತ ಪುಟ – ಕುಂದಾದ್ರಿ

ಮಂಗಳೂರಿನ ನವ-ಸೈಕ್ಲಿಸ್ಟರು, ಬೆನ್ನಿಗೆ ಸೈಕಲ್ ಬಿಗಿದ ಕಾರೇರಿ ಸೋಮೇಶ್ವರಕ್ಕೆ ಹೋಗುವುದಿದೆ. ಅಲ್ಲಿ ಸೈಕಲ್ ದಾರಿಗಿಳಿಸಿ, ‘ಸ್ಟ್ರಾವಾ ದಾಖಲೆ’ಯ ಉತ್ತಮಿಕೆಗಾಗಿ ಆಗುಂಬೆ ಘಾಟಿಯ ಏರನ್ನು ಮೆಟ್ಟುತ್ತಾರೆ. ಇನ್ನೂ ಹೆಚ್ಚಿನ ದಾಖಲೆಪ್ರಿಯರು ಅಲ್ಲೇ ಮುಂದುವರಿದು ಆರಿಸಿಕೊಳ್ಳುವ ಕಠಿಣಾತಿಕಠಿಣ ಸವಾಲು ಕುಂದಾದ್ರಿ! ನನಗೆ ಕುಂದಾದ್ರಿಯ ಏಕಶಿಲಾ ಬೆಟ್ಟದ ಪ್ರಥಮ ಪರಿಚಯವಾದದ್ದು ೧೯೮೫ರ ಮೋಟಾರ್ ಸೈಕಲ್ ಸವಾರಿಯಲ್ಲಿ. (ನೋಡಿ: ವರಂಗ ಕುಂದಾದ್ರಿ) ಅನಂತರದ ದಿನಗಳಲ್ಲಿ ಬೇರೆ ಬೇರೆ ತಂಡಗಳೊಡನೆ ಬೈಕೋ ಕಾರೋ ಏರಿ ಅಲ್ಲಿಗೆ ನಾನು ಕೊಟ್ಟ ಭೇಟಿಗಳ ಸರಿ ಲೆಕ್ಕ ಹೇಳುವುದು ಕಷ್ಟ. ಆದರೆ ಅಷ್ಟೇ ಸಾಲದು. ಆ ವಲಯದಲ್ಲಿ ವಿಸ್ತೃತವಾಗಿ ನಡೆದಾಡಬೇಕು, ವಿರಾಮದಲ್ಲಿ ಶಿಬಿರಹೂಡಬೇಕು ಎಂಬೆಲ್ಲ ಬಯಕೆಗಳಿಗೆ ಸಮಯ ಕೂಡಿ ಬಂದೇ ಇಲ್ಲ, ಬಿಡಿ. ಕುಂದಾದ್ರಿ ಜೈನರಿಗೆ ಭಕ್ತಿಯ ಕ್ಷೇತ್ರವಾದರೂ ನನಗದು ಇನ್ನೊಂದೇ ಪ್ರಾಕೃತಿಕ ಸಾನ್ನಿಧ್ಯದ ನೆಲೆ. 

ಆಗುಂಬೆ – ತೀರ್ಥಳ್ಳಿ ರಸ್ತೆಯಲ್ಲಿ ಗುಡ್ಡೇಕೇರಿಯಲ್ಲಿ ಬಲಗವಲು ಹಿಡಿದೆವು. ಸುಮಾರು ಐದು ಕಿಮೀ ಓಟದ ನಡುವೆ ಒಂದು ಏರುದಾರಿ ಮುಗಿಯುತ್ತಿದ್ದಂತೆ, ಮತ್ತೆ ಸೋಮೇಶ್ವರದಲ್ಲಿ ತೋರಿದಂತೇ ದಾರಿಗಡ್ಡಲಾಗಿ ಕಾಣಿಸಿದ ಶಿಖರ – ಕುಂದಾದ್ರಿ. ಗೂಗಲ್ ನಕ್ಷೆ ಇಲ್ಲಿನ ವಾಸ್ತವವನ್ನು ಹೆಚ್ಚು ಸ್ಪಷ್ಟಗೊಳಿಸುತ್ತದೆ. ನಮಗೆ ಮೊದಲು ಕಾಣುವ ಮತ್ತು ದಟ್ಟ ಕಾಡಿನ ಹೊದಿಕೆಯಿರುವ ಆ ಶಿಖರವೇ ನಿಜ ಕುಂದಾದ್ರಿ. ನಾವು ಅಷ್ಟೆಲ್ಲಾ ಸಲವೂ ‘ಕುಂದಾದ್ರಿ’ ಎಂದೇ ಅನುಭವಿಸಿದ ಪೂರ್ಣ ಶಿಲಾಶಿಖರ, ಇದರ ಪೂರ್ವ ಮಗ್ಗುಲಿನಲ್ಲಿ ಸಯಾಮೀ ಅವಳಿಯಂತೆ ನಿಂತಿದೆ, ಹೆಸರು ವರ್ಲಿ. ಗುಡ್ಡೇಕೇರಿಯಿಂದ ‘ಕುಂದಾದ್ರಿ’ ಸ್ವಾಗತ ಕಮಾನಿನವರೆಗಿನ ಐದು ಕಿಮೀ ಬಹುತೇಕ ಸಮತಟ್ಟಿನ ರಸ್ತೆ. ಅಲ್ಲಿಂದ ರಸ್ತೆ ಬಂಡೆ ಶಿಖರದ ಪೂರ್ವ ಮಗ್ಗುಲಿಗೆ ಸರಿದು ಒಮ್ಮೆಲೇ ಏರುಮುಖ ಕಾಣಿಸುತ್ತದೆ. ಸುಮಾರು ಹದಿನೆಂಟು ಹಿಮ್ಮುರಿ ತಿರುವುಗಳ ಕಟ್ಟೇರಿನ ರಸ್ತೆ. ಅದು ತೀರಾ ಕಚ್ಚಾ ಸ್ಥಿತಿಯಲ್ಲಿದ್ದಾಗ ನಾನು ಮೊದಲು ಅನುಭವಿಸಿದ್ದೆ. ಇನ್ನೊಮ್ಮೆ ಜಡಿ ಮಳೆಗಾಲದಲ್ಲಿ ಪೂರ್ಣ ಗೊಸರ ಜಾಡಾದಾಗ ಉತ್ತರಿಸಿದ್ದು ಮಾತ್ರವಲ್ಲ, ಶಿಖರದಲ್ಲಿ ಅಸಾಮಾನ್ಯ ಶಿಬಿರಹೂಡಿಯೂ ನಿಂತಿದ್ದೆ (ನೋಡಿ: ತಪೋಮಣೆಯಿಂದ ಸರ್ವಜ್ಞಪೀಠಕ್ಕೆ). ಅಲ್ಲಿನ ದಾರಿ, ಶಿಖರದ ಜಿನಬಸದಿಯೂ ಸೇರಿದಂತೆ ಅನೇಕ ರಚನೆಗಳಿಗೆ ಹಲವು ಅವನತಿ ಹಾಗೂ ಜೀರ್ಣೋದ್ಧಾರಗಳ ಇತಿಹಾಸವಿದೆ. 

ಅದಕ್ಕೆ ಸರಿಯಾಗಿ, ಈ ಬಾರಿ ದಾರಿ ಪೂರ್ಣ ಕಾಂಕ್ರಿಟೀಕರಣಗೊಂಡಿತ್ತು. ದಾರಿಯೇನೋ ಸುಗಮವೇ ಸರಿ. ಆದರೆ ಪ್ರವಾಸಿಗಳು ಕಡಿಮೆ ಇರಬಹುದಾದ ವಾರದ ದಿನವಾದ್ದರಿಂದ (ಗುರುವಾರ) ನಾವಿಬ್ಬರೇ ಹೋಗುವುದು ಕ್ಷೇಮವೇ ಎಂಬ ಸಣ್ಣ ಸಂಶಯದ ಹುಳ ನನ್ನ ತಲೆಯೊಳಗಿತ್ತು. ಆದರೆ ಘಾಟಿ ತೊಡಗುವಲ್ಲೇ ಕರ್ತವ್ಯದ ಮೇಲಿದ್ದ ಪೋಲಿಸ್ ಕಂಡು ನಿಶ್ಚಿಂತನಾದೆ. ಹೆಚ್ಚಿನ ಧೈರ್ಯಕ್ಕೆ ಎದುರಿನಿಂದ ಒಂದು ಸ್ಕೂಟರ್ ಜೋಡಿ (ಮರಳುವಾಗ ಎದುರಿನಿಂದ ಕಾರ್ ಪಾರ್ಟಿಯೂ) ಸಿಕ್ಕಿತ್ತು. 

ಶಿಖರಕ್ಕೂ ಐವತ್ತಡಿ ಮೊದಲೊಂದು ತುಸು ವಿಸ್ತಾರ ತಟ್ಟಿನಲ್ಲಿ ದಾರಿ ಮುಗಿಯುತ್ತದೆ. ಮುಂದಿನ ಹಳೆಗಾಲದ ಮೆಟ್ಟಿಲ ಸಾಲು ಕೇವಲ ಸುಣ್ಣ ಬಣ್ಣವನ್ನಷ್ಟೇ ಕಂಡಿತ್ತು. ಆ ತಟ್ಟಿನಲ್ಲಿದ್ದ ಹಾಳುಬಿದ್ದ ಬಂಗ್ಲೆಯ ರಚನೆಗಳಲ್ಲಿ ಏನೂ ಉತ್ತಮಿಕೆಯಾಗಿಲ್ಲ. ಕುಸಿದಿದ್ದ ಕಿಟಕಿ ಬಾಗಿಲು, ಕಲ್ಲು ಮಣ್ಣನಷ್ಟೇ ತೆರವು ಮಾಡಿ, ಹಿಂದು ಮುಂದಿನ ಬಾಗಿಲ ಕಂಡಿಗಳನ್ನುಳಿದು ಎಲ್ಲವನ್ನೂ ಕಲ್ಲು ಕಟ್ಟಿ ಮುಚ್ಚಿದ್ದರು. ಉಳಿಸಿದ್ದ ಬಾಗಿಲ ಚೌಕಟ್ಟಿಗೆ ಕಬ್ಬಿಣದ ಗೇಟು ಹೊಂದಿಸಿ (ಒಳಗೆ ಖಾಲಿ) ಬೀಗ ಜಡಿದಿದ್ದರು. ಇದು ಪರೋಕ್ಷವಾಗಿ ನಮ್ಮ ‘ಪ್ರವಾಸಿ’ಗಳ ಮನೋಸ್ವಾಸ್ಥ್ಯಕ್ಕೆ ಹಿಡಿದ ಕನ್ನಡಿಯೂ ಹೌದು. (ಸಣ್ಣ ಸಣ್ಣ ಮರೆಗಳಲ್ಲೂ ಅನಾಮಿಕರು ಮೋಜು ನಡೆಸಿದ್ದಕ್ಕೆ ಕುರುಹಾಗಿ ಕಾಂಡೋಮ್, ಬೀರ್ ಬಾಟಲಿಗಳ ಸಂಗ್ರಹ ಸದಾ ಕಾಣಬಹುದು!) ಬಂಗ್ಲೆಯ ಹಿತ್ತಿಲಿನಲ್ಲಿದ್ದ ಅಡ್ಡಾತಿಡ್ಡ ರಚನೆಯ ಶೌಚಾಲಯ ಹೊಸತು. ಅದು ಇಷ್ಟರಲ್ಲಿಯೇ ಅವನತಿಯ ದಾರಿಯಲ್ಲಿದ್ದರೂ ನಮ್ಮ ಮಟ್ಟಿಗೆ ಉಪಯೋಗಕ್ಕೆ ಒದಗಿದ್ದೊಂದು ಆಶ್ಚರ್ಯ. ಅಲ್ಲೇ ಪಕ್ಕದಲ್ಲಿ ನಿಜಶಿಖರಕ್ಕೊಂದು ಕಚ್ಚಾದಾರಿ ಮಾಡಿ, ಗೇಟ್ ಕೂರಿಸಿ ಬೀಗ ಹಾಕಿದ್ದರು. ಬಹುಶಃ ಶಿಖರದ ಅಭಿವೃದ್ಧಿ ಕಾಮಗಾರಿಗಳ ಸಾಮಗ್ರಿ ಸಾಗಣೆಗೆಂದೇ ಮಾಡಿಕೊಂಡದ್ದಿರಬೇಕು. ನಾವು ಮೆಟ್ಟಿಲೇರಿದೆವು. 

ಶಿಖರವಲಯದಲ್ಲಿನ ಶೆಡ್ಡು ಸಾಲು, ಆಧುನಿಕ ಸವಲತ್ತುಗಳ (ನೆಲಹಾಸೂ ಆಸನಸೌಕರ್ಯಗಳೆಲ್ಲ ಥಳಥಳಿಸುವ ಅಮೃತಶಿಲೆ) ವೃತ್ತಾಕಾರದ ವಿಹಾರ ಮಂಟಪ, ಹಳೆಯ ನೀರ ಹೊಂಡ ಹಾಗೂ ಬಂಡೆಯ ಪ್ರಪಾತದಂಚುಗಳಿಗೆ ಕೊಟ್ಟ ರಕ್ಷಣಾ ಬೇಲಿ, ನೀರೆತ್ತಲು ಇಟ್ಟ ಪಂಪು…. ನೋಡಿದಲ್ಲೆಲ್ಲಾ ಅಲ್ಲಿನ ಪ್ರಾಕೃತಿಕ ಸನ್ನಿವೇಶಕ್ಕೆ ಏನೂ ಹೊಂದದ ವಿಕಾರಗಳು ಮೆರೆದಿವೆ. ವರ್ಷದಲ್ಲಿ ಹೆಚ್ಚೆಂದರೆ ನಾಲ್ಕೈದು ದಿನ ನಡೆಯಬಹುದಾದ (ಹಬ್ಬವೋ ಜಾತ್ರೆಯೋ….) ಸಾಮಾಜಿಕ ನಡಾವಳಿಗೆ ಮಾಡಿದ ಈ ‘ಶಾಶ್ವತ ವ್ಯವಸ್ಥೆ’ಗಳು ಸಹಸ್ರಾರು ವರ್ಷಗಳಿಂದ ವಿಜೃಂಭಿಸಿರುವ ಮತ್ತೂ ಮುಂದುವರಿಯುವ ಪ್ರಾಕೃತಿಕ ಶಕ್ತಿಗೆ ಕಸಕ್ಕೆ ಸಮಾನ. ಇನ್ನಾದರೂ ಭಕ್ತರು ಅಲ್ಲಿನ ದೇವಳಕ್ಕೇ ಅಭಿವೃದ್ಧಿ ಚಟುವಟಿಕೆಗಳನ್ನು ಮಿತಿಗೊಳಿಸಿಕೊಳ್ಳುವ ವಿವೇಚನೆ ತಂದು ಕೊಳ್ಳುವುದು ಉತ್ತಮ. ಸಾರ್ವಕಾಲಿಕವಾಗಿ ನಿಲ್ಲಬೇಕೆಂಬ ಬಯಕೆಯಲ್ಲಿ ಸಾರ್ವಜನಿಕ ಸವಲತ್ತುಗಳನ್ನು ಹೇರದಿರುವುದರಲ್ಲೇ ಕ್ಷೇತ್ರದ ನಿಜ ಗೌರವವಿದೆ. 

ವಿಹಾರ ಮಂಟಪ ಆಗಲೇ ಉಧ್ವಸ್ಥವಾಗಿದೆ. ಉಕ್ಕಿನ ಬೇಲಿಗಳು ಹರಿಯತೊಡಗಿವೆ. ಒರತೆಯ ಬಲವೇನೂ ಇಲ್ಲದ (ಮಳೆನೀರು ಹಿಡಿದಿಟ್ಟ) ಮೂರು ಹೊಂಡಗಳನ್ನು ನಂಬಿ ಮಾಡಿದ ಪಂಪು, ಸಂಪು, ಕೊಟ್ಟಿಗೆ ಮತ್ತು ಶೌಚಾಲಯಗಳು ಅತಿ ಬೇಗದಲ್ಲಿ ಶೈಥಿಲ್ಯದ ವೈಭವೀಕರಣಕ್ಕಷ್ಟೇ ಒದಗಿಯಾವು. ದೇವಾಲಯಕ್ಕೆ ಹೊಸದಾಗಿ ಒದಗಿಸಿದ ವರ್ಣಮಯ ಚೌಕುಳಿ ಅಂಗಳ, ಎಲ್ಲೆಡೆ ಮೆತ್ತಿದ ಹತ್ತೆಂಟು ವರ್ಣ ಸಂಯೋಜನೆಗಳು ನನಗಂತೂ ಮಕ್ಕಳ ‘ಗೀಚು ಮತ್ತು ಬಣ್ಣತುಂಬು’ ಪುಸ್ತಕದಿಂದ ಕಿತ್ತಿಟ್ಟ ಹಾಳೆಯಂತೆ ನಗೆ ತರಿಸಿತು. ಮತ್ತೆ ಯಾರಿಗೆ ಗೊತ್ತು, ಬೇಲಿ ಬೋರ್ಡುಗಳನ್ನೂ ಮೀರಿ ಕೊಳಕ್ಕೆ ಕಸ ಮುಟ್ಟಿಸಿದ, ಶೌಚಾಲಯದ ನಲ್ಲಿಗಳ ಬುಡ ಕಿತ್ತವರ ‘ಭಕ್ತಿ’ಗೆ ಈ ವಿಪರೀತಗಳೆಲ್ಲ ಅನುರೂಪವಾಗಿಯೇ ಇವೆಯೋ ಏನೋ! ರಣಗುಡುವ ಬಿಸಿಲಿನಲ್ಲಿ ಚುರುಕಾಗಿ ಎಲ್ಲ ಸುತ್ತಿ ಮತ್ತೆ ಬೈಕೇರಿದೆವು. 

೬. ಮುಂದೂಡಿದ ಭೇಟಿಗಳು

ವಿಖ್ಯಾತ ಉರಗತಜ್ಞ ರೋಮುಲಸ್ ವಿಟೇಕರ್ ಅದು ಮೊದಲು ಮಂಗಳೂರಿಗೆ ಬಂದ ದಿನಗಳು (೧೯೭೦ರ ದಶಕ). ಅವರ ಸಂಗಾತಿ ಇರುಳನೊಬ್ಬನನ್ನು ನನ್ನ ಸ್ಕೂಟರ್ ಬೆನ್ನಿಗೇರಿಸಿಕೊಂಡು ಕಾಳಿಂಗಸರ್ಪದ ಜಾಡು ಹುಡುಕುತ್ತಾ ಸೋಮೇಶ್ವರದವರೆಗೂ ಕರೆತಂದಿದ್ದೆ. (ನೋಡಿ: ಮಂಗಳೂರಿನ ಆದಿ ಉರಗೋದ್ಯಾನ) ಆದರೆ ಮುಂದುವರಿದ ದಿನಗಳಲ್ಲಿ ತಪ್ಪಲಿಗಿಂತಲೂ ಘಟ್ಟದ ಮೇಲಿನ ಪ್ರದೇಶದಲ್ಲೇ ಕಾಳಿಂಗಗಳ ಆವಾಸ ಹೆಚ್ಚೆಂದು ವಿಟೇಕರ್ ಕಂಡುಕೊಂಡರು. ಆಗುಂಬೆ ಪೇಟೆ ಕಳೆದು ಕೆಲವೇ ಅಂತರದಲ್ಲೊಂದು ಉರಗ ಸಂಶೋಧನಾ ಕೇಂದ್ರವನ್ನೇ (ARRS – ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ) ಶುರು ಮಾಡಿದ್ದರು. ೨೦೧೩ರ ಸುಮಾರಿಗೆ ಏಯಾರಾರೆಸಿನ ಒಂದು ದಿನದ ಕಲಾಪದಲ್ಲಿ ಭಾಗಿಯಾಗಿ, ರಾತ್ರಿ ಉಳಿದೂ ಬಂದಿದ್ದೆ. ಏಯಾರಾರೆಸ್ ಕಾಲಾಂತರದಲ್ಲಿ ‘ಮರಿ’ ಹಾಕಿ, ಮೊದಲು ವಿಟೇಕರ್ ಶಿಷ್ಯನೇ ಆಗಿದ್ದ, ನನಗೆ ಪರಿಚಿತರೂ ಆದ ಗೌರೀಶಂಕರ್ ಹತ್ತಿರದಲ್ಲೇ ಎಲ್ಲೋ ತನ್ನದೇ ಇನ್ನೊಂದು ಸಂಶೋಧನಾ ಸಂಸ್ಥೆ ಕಟ್ಟಿದ್ದೂ ನನಗೆ ತಿಳಿದಿತ್ತು. ಅದನ್ನು ಈ ಬಾರಿ ನೋಡಬೇಕೆಂದು ಅಂದುಕೊಂಡಿದ್ದೆ. ಆದರೆ ಕುಂದಾದ್ರಿ ನಮ್ಮ ಸಮಯದ ಅಂದಾಜು ತಪ್ಪಿಸಿತ್ತು. 

ತೀರ್ಥಳ್ಳಿಯ ಎಲ್ಸಿ ಸುಮಿತ್ರ ಹಾಗೂ ಶೃಂಗೇರಿ ಸಮೀಪದ ಶ್ರೀನಿವಾಸಮೂರ್ತಿ ನಮಗೆ ಸಮಾನಾಸಕ್ತಿಯ ಫೇಸ್ ಬುಕ್ ಮಿತ್ರರು. ಇಬ್ಬರನ್ನೂ ನಾವು ಮುಖತಃ ಕಂಡದ್ದಿಲ್ಲ. (ಅಥವಾ ಕಂಡದ್ದು ನನ್ನ ನೆನಪಿನಲ್ಲಿಲ್ಲ!) ಪ್ರಸ್ತುತ ಬೈಕ್ ಸವಾರಿ ತೊಡಗುವಂದು ಸುಮಿತ್ರರನ್ನು ಅವರದೇ ಸುಂದರ ಕೈತೋಟದೊಡನೆ, ಮೂರ್ತಿಯವರನ್ನು ಅವರದೇ ಕೃಶಿ-ಸಾಹಸ ಕಳದಲ್ಲಿ, ಐದು ಮಿನಿಟಿಗಾದರೂ ಭೇಟಿಯಾಗುವ ಆಸೆ ಇಟ್ಟುಕೊಂಡಿದ್ದೆ. ಹಾಗೆಂದು ಅವರು ಕೆಲಸ ಹಾಳು ಮಾಡಿಕೊಂಡು ನಮ್ಮನ್ನು ಕಾಯುವಂತಾಗಬಾರದೆಂಬ ಕಾರಣಕ್ಕೆ, ಇಬ್ಬರಿಗೂ ಯಾವ ಪೂರ್ವಸೂಚನೆಯನ್ನು ಕೊಟ್ಟಿರಲಿಲ್ಲ. ಹಾಗಾಗಿ ಶೃಂಗೇರಿ ದಾರಿಗಿಳಿದು ಶ್ರೀನಿವಾಸಮೂರ್ತಿಯವರನ್ನು ಭೇಟಿಯಾಗುವ ಯೋಚನೆಯನ್ನು ಮುಂದೂಡಿದೆವು. ಆದರೂ ತೀರ್ಥಳ್ಳಿ ಪೇಟೆಯ ಮುಖ್ಯ ಭೂಲಕ್ಷಣ – ಸಿದ್ಧರ ಬೆಟ್ಟ ಕಾಣುವಾಗ ಗಂಟೆ ಒಂದಾಗಿತ್ತು. ತೀರ್ಥಳ್ಳಿಯಿಂದ ಹೆಗ್ಗೋಡು ಸುಮಾರು ಎಂಬತ್ತು ಕಿಮೀ ಅಂದರೆ ಮೂರು ಗಂಟೆಯ ದಾರಿ. ಅದನ್ನು ಮುಗಿಸಿ, ಪ್ರಯಾಣಾಯಾಸ ನೀಗಿ, ನಾಟಕಕ್ಕೆ ಮನಸ್ಸು ಪ್ರಶಸ್ತಗೊಳ್ಳಲು ಹೆಚ್ಚುವರಿ ಒಂದು ಗಂಟೆಯಾದರೂ ಬೇಕು. ಈ ಯೋಚನೆಯೊಡನೆ ಸುಮಿತ್ರರ ಭೇಟಿಯನ್ನೂ ಮುಂದೂಡಿದೆವು. 

ತೀರ್ಥಳ್ಳಿ ಹೊರವಲಯದಲ್ಲಿ ‘ಅಡಿಗಾಸ್ ನ್ಯೂ’ ಹೋಟೆಲ್ ಆಕರ್ಷಿಸಿತು. ಊಟಕ್ಕೆ ನಿಂತೆವು. ಬಿಸಿಬಿಸಿ ಪೂರಿ ಸಹಿತದ ಊಟವನ್ನು ಆಗುಂಬೆ ಪ್ರಭಾವದಲ್ಲಿ ಹೇಳುವುದಿದ್ದರೆ ನಿಜಕ್ಕೂ ಗ್ರ್ಯಾಂಡಾಗಿತ್ತು. ರಣಬಿಸಿಲಿನಲ್ಲಿ ತೀರ್ಥಳ್ಳಿ ಪೇಟೆ ಬಿಟ್ಟು, ಸಾಗರದಾರಿಯನ್ನು ಹಿಡಿದೆವು. ಆದರೆ ಕೌಲೇದುರ್ಗದ ಕೈಕಂಬ ಬಂದಾಗ, ನೆನಪಿನ ಚಿತ್ರ ಸ್ವಲ್ಪ ಕಾಡಿತು. ಕೆಲವರನ್ನು ವಿಚಾರಿಸಿದೆವು, “ದಾರಿ ಯಾವುದಯ್ಯಾ ಹೆಗ್ಗೋಡಿಗೆ?” ಮೊದಲು, ತೀರ್ಥಳ್ಳಿಯ ಸಮೀಪವೇ ಬೇರೊಂದು ಹೆಗ್ಗೋಡು ಇದೆ ಎಂದು ‘ಜನರಲ್ ನಾಲೆಜ್ ಇಂಪ್ರೋವ್’ ಆಯ್ತು. “ಇಲ್ಲ ಇಲ್ಲ, ಕೌಲೇದುರ್ಗದ ದಾರಿ ಹಿಡಿದರೆ, ನೀವು ಹೊಸನಗರಕ್ಕೆ ಲಾಂಚ್ ಕಾಯಬೇಕು” ಎಂದರು ಇನ್ನೊಬ್ಬರು. “ರಿಪ್ಪನ್ ಪೇಟೆ, ಆನಂದಪುರಕ್ಕಾಗಿ ನೇರ ಸಾಗರಕ್ಕೆ (ಭೂಪಟದಲ್ಲಿ) ಏರಿ, ಹೆಗ್ಗೋಡಿಗೆ ಇಳಿಯಿರಿ” ಎಂದರು ಮಗುದೊಬ್ಬರು. ಅದು ‘ಕೊಂಕಣಸುತ್ತಿ ಮೈಲಾರಕ್ಕೆ’ ಜಾಣ್ಣುಡಿಯನ್ನು ನೆನಪಿಸಿತು. ಹಾಗಾಗಿ ನಮ್ಮ ಅಭಿಪ್ರಾಯ ಸಂಗ್ರಹದಲ್ಲಿ ಹುಂಚದಾರಿಯ ವಕಾಲತ್ತಿನವರೂ ಬಂದರು, ಇನ್ನೇನೋ ಸೂಚಿಸಿದವರೂ ಹಾದರು. ನಾವಂತೂ ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಂಡವರಂತೆ, ಅಪ್ಪ ಮಗ ಸೇರಿ ಕತ್ತೆ ಹೊತ್ತವರಂತೆ ಪೂರ್ಣ ಗೊಂದಲಪುರಕ್ಕೇ ಬಿದ್ದೆವು.

ಮೊದಲು ಸಿಕ್ಕ ಕವಲಿನಲ್ಲಿ ಹೊಸನಗರದ ಸೂಚನೆ ಸಿಕ್ಕಿದೇ ಸಾಕೆಂದು ತಿರುಗಿಕೊಂಡೆವು. ಆದರೆ ಮುಂದೆ ಹತ್ತೆಂಟು ಕವಲು, ಅಪೂರ್ಣ ಮಾರ್ಗಸೂಚನೆಗಳು ನಮ್ಮ ಅಂದಾಜಿನೊಡನೆ ಆಟವಾಡುತ್ತಲೇ ಇದ್ದವು. ಹಿಂದೆಲ್ಲಾ ದಾರಿಯ ಸ್ಥಿತಿಗತಿ ನೋಡಿ ಮುಖ್ಯಾಮುಖ್ಯದ ನಿರ್ಧಾರ ಮಾಡುವುದು ಸುಲಭವಿತ್ತು. ಆದರಿಂದು ಎಲ್ಲ ದಾರಿಗಳೂ ಚೆನ್ನಾಗಿಯೇ ಇದ್ದದ್ದಕ್ಕೆ ನಮ್ಮ ಗೊಂದಲ ಹೆಚ್ಚಿತು. ವಿಚಾರಿಸೋಣವೆಂದರೆ ಜನ, ಅಂಗಡಿಗಳು ಸಿಗುತ್ತಿರಲಿಲ್ಲ. ಎಷ್ಟೋ ಕಡೆ ಕಿಲೋ ಕಲ್ಲಿಗೂ ಮಾರ್ಗಸೂಚಕ ಬೋರ್ಡಿಗೂ ಸಾಂಗತ್ಯವೂ ಇರಲಿಲ್ಲ. ಹಾಗೆಂದು ನಾವು ತುರ್ತು ಸ್ಥಿತಿಯಲ್ಲೇನೂ ಇರಲಿಲ್ಲವಾದ್ದರಿಂದ, ಹೊಸ ದಾರಿ ಮತ್ತು ಹೆಸರುಗಳ ಮೋಜು ಅನುಭವಿಸುತ್ತಾ ಸಾಗಿದೆವು. ಖಂಡಾಂತರ ಸಂಚರಿಸುವ ಹಕ್ಕಿಗಳಿಗೆ ತಲೆಯೊಳಗೆ ಜನ್ಮತಃ ದಿಕ್ಸೂಚೀ ಇರುತ್ತದಂತೆ. ನಾನೂ ಸ್ವಲ್ಪ ಹಾಗೇ ಎಂಬ ಭ್ರಮೆ ನನಗಿತ್ತು. ಇಲ್ಲಿ ಅದು ಕಳಚಿ ಹೋಗುವಂತೆ, ಒಂದು ಕವಲು ದಾರಿಯಲ್ಲಿ ನನಗೆ ಆಯ್ಕೆ ಅಸಾಧ್ಯವೇ ಆಯ್ತು. ಅಲ್ಲಿ ಅಂದಾಜಿನ ದಾರಿಯಲ್ಲಿ ಮುಂದೊಂದು ಮನೆ ಸಿಗುವವರೆಗೂ ಹೋದೆವು. ಕೊನೆಗೆ ಬೈಕ್ ಇಳಿದು, ಮನೆ ಬಾಗಿಲು ತಟ್ಟಿ, (ಮನೆಯವರ ಸುಖನಿದ್ರೆ ಹಾಳುಮಾಡಿ?) ನಮ್ಮ ದಾರಿ ಗೊಂದಲ ಬಗೆಹರಿಸಿಕೊಂಡೆವು. ನಾನು ಊಹಿಸಿದ ಎಲ್ಲೂ ಅಲ್ಲದಲ್ಲಿ, ನಗರ – ಹೊಸ ನಗರ ರಸ್ತೆ ತಲಪಿದ್ದೆವು. ಅದು ನಾವು ಕುಂದಾಪುರದ ಕಡೆಯಿಂದ ಸಾಕಷ್ಟು ಬಳಸಿದ ರಸ್ತೆ. ಆದರೂ ಅದುವರೆಗೆ ಪಟ್ಟಪಾಡಿನ ನೆನಪಿನಲ್ಲಿ, “ಹಾಂ ಕಾರಣಗಿರಿ”, “ಅಬ್ಬಾ ಹೊಸನಗರ…” ಎಂದು ದೊಡ್ಡದಾಗಿಯೇ ಹೇಳಿಕೊಳ್ಳುವಂತಾಗಿತ್ತು.

ಬಟ್ಟೆ ಮಲ್ಲಪ್ಪದಲ್ಲೊಂದು ಚಾ ಹಾಕಿ, ಮೂರೂಮುಕ್ಕಾಲಕ್ಕೆ ಹೆಗ್ಗೋಡು ತಲಪಿದೆವು. ಹೊಸದಾಗಿ ಬಂದ ‘ಬಿವಿ ಕಾರಂತ ರಂಗ ಸಂಕೀರ್ಣ’ದಲ್ಲೇ (ನೋಡಿ: ನೀನಾಸಂ ಹೆಗ್ಗೋಡು ವಠಾರಕ್ಕೆ) ಇದ್ದ ಅಭಯನ ಬಳಗದೊಡನೇ ನಮಗೂ ವ್ಯವಸ್ಥೆಯಾಗಿತ್ತು, ಸೇರಿಕೊಂಡೆವು. ಪರ್ಯಾಯ ಸ್ನಾನದಂತೇ ತಣ್ಣೀರ ಸೇಚನ, ಪಾನ ಮತ್ತೆ ಸಣ್ಣ ನಿದ್ರೆ ನಮ್ಮನ್ನು ಹೊಸಬರನ್ನಾಗಿಸಿದವು. ಸಂಜೆ ಐದಕ್ಕೆ ಆಹಾರ್ಯದಲ್ಲಿ (ಭೋಜನಶಾಲೆ) ನಾಗಾಭರಣರ ರವೆ ಇಡ್ಲಿ, ಚಟ್ನಿ, ಕಾಫಿ ನಮ್ಮ ರಂಗದ ಹಸಿವನ್ನು ನಿರಾತಂಕಗೊಳಿಸಿತು.

೭. ಪರಮಪದ ಸೋಪಾನಪಟ

ಸಂಚಿ-ನೀನಾಸಂ ವಿಡಿಯೋ ದಾಖಲೀಕರಣ ಹಾಗೂ ಪ್ರಸರಣ ಯೋಜನೆ ಕಳೆದ ಐದಾರು ವರ್ಷಗಳಿಂದಷ್ಟೇ ನಡೆಯುತ್ತಿದೆ. ಅವೆಲ್ಲವೂ ಅಂತರ್ಜಾಲದ ಸೌಲಭ್ಯದಲ್ಲಿ ವಿಶ್ವ ಕಲಾಸಕ್ತರ ರಸಾಸ್ವಾದನೆಗೆ ಸದಾ ಮುಕ್ತವಾಗಿರುವುದು ನಿಮಗೆ ತಿಳಿದೇ ಇದೆ. (ನೋಡಿ: ಸಂಚಿ ಫೌಂಡೇಶನ್) ಯೋಜನೆಯ ಪ್ರಾಯ ಐದಾರೇ ಇರಬಹುದು. ಆದರೆ ಸಂಗ್ರಹ ಸಾಕಷ್ಟು ದೊಡ್ಡದೇ ಇದೆ. ನೀನಾಸಂ ಹಿಂದೆ ಸ್ಪಷ್ಟ ಯೋಜನೆ ಮತ್ತು ಸಮರ್ಥ ತಂತ್ರಜ್ಞಾನದ ಬಲ ಇಲ್ಲದೆಯೂ ಹಿಡಿದಿಟ್ಟ ಅಸಂಖ್ಯ ಉಪನ್ಯಾಸ, ಸಂವಾದ, ಪ್ರಾತ್ಯಕ್ಷಿಕೆ, ರಂಗಗೀತೆಗಳು ಮತ್ತು ಅನೇಕ (ನೀನಾಸಂ ಹಳೆಯ ಪ್ರಯೋಗಗಳ) ನಾಟಕಗಳು ಸುಮ್ಮನೆ ಮೂಲೆಯಲ್ಲಿ ಬಿದ್ದಿದ್ದವು.

ಸಂಚಿ ಅವುಗಳನ್ನು ಕೇವಲ ‘ಕೊಡವಿ’ ‘ಅಷ್ಟಾದರೂ ಉಂಟಲ್ಲ’ ಎನ್ನುವಂತೆ ಅಂತರ್ಜಾಲಕ್ಕೆ ಏರಿಸಿದೆ. ಸಂಚಿ ತನ್ನ ವರ್ತಮಾನದ ದಾಖಲೀಕರಣಗಳಲ್ಲಿ ಪ್ರೇಕ್ಷಕರಿಗೆ ವಿಡಿಯೋದ ಮಿತಿಗಳನ್ನು ಮೀರಿ, ಅಂದರೆ ಸಿನಿಮಾನುಭವ ಅಲ್ಲದ, ರಂಗಾನುಭವವನ್ನೇ ಕೊಡುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಈ ಯೋಜನೆಯ ಮೊದಲ ನಿರ್ಮಾಣಗಳನ್ನು, ಮುಖ್ಯವಾಗಿ ನಾಟಕ ಪ್ರಯೋಗಗಳನ್ನು ಕೇವಲ ಕ್ಯಾಮರಾಗಳ ಕಣ್ಣಿಗೆಂಬಂತೆ ಪ್ರೇಕ್ಷಕರಿಲ್ಲದ ಖಾಲೀ ಭವನದೊಳಗೇ ಮಾಡಿದ್ದರು. ಇದರಲ್ಲಿ ಕಲಾವಿದರು ರಸಿಕ ಪ್ರತಿಸ್ಪಂದನದ ಕೊರತೆ ಹಾಗೂ ಯಂತ್ರ ನಿಖರತೆಯ ಅಳುಕಿನ ಬಿಗುವುಗಳಲ್ಲಿ ಪ್ರದರ್ಶನಗಳು ತುಸು ಬಳಲುವುದಿತ್ತು. ಅದನ್ನು ನಿವಾರಿಸುವ ಕ್ರಮದಲ್ಲಿ ಈ ಸಲದ ಎರಡೂ ಪ್ರದರ್ಶನಗಳನ್ನು ಸಹಜ ಪ್ರೇಕ್ಷಕರ ಎದುರೇ ವ್ಯವಸ್ಥೆ ಮಾಡಿದ್ದಾಗಿತ್ತು. 

ಹಾಗಾಗಿ….. ಅಭಯನ ಕ್ಯಾಮರಾ ತಂಡ ಹೇಗೆ ಸಜ್ಜಾಗುತ್ತಿದೆ ಎಂಬ ಕುತೂಹಲದಲ್ಲೇ ನಾವು ಗಂಟೆ ಮೊದಲೇ ಶಿವರಾಮ ಕಾರಂತ ರಂಗ ಮಂದಿರದ ಪ್ರೇಕ್ಷಾಂಗಣದೊಳಗೆ ಇಣುಕಿದ್ದೆವು. ನಾವು ತಪ್ಪಿ ಯಾವುದೋ ಗೋಡೌನ್ ನೋಡಿದಂತಾಯ್ತು. ಪ್ರೇಕ್ಷಾಂಗಣದ ಎದುರಿನ ಖಾಲೀ ಜಾಗದಲ್ಲಿ ಮೇಜಿನಮೇಲೆ ಮೇಜು ಒಟ್ಟಿದ್ದರು! ಅರೆಗತ್ತಲಿಗೆ ಕಣ್ಣು ಹೊಂದಿಕೊಂಡಮೇಲೆ, ಮೇಜುಗಳದೇ ಮೂರೋ ನಾಲ್ಕನೆಯದೋ ಅಂತಸ್ತಿನ ಮೇಲೆ, ಎರಡೋ ಮೂರೋ ಮುಕ್ಕಾಲಿಗಳನ್ನಿಟ್ಟು ಕ್ಯಾಮರಾ ಬಳಗ ರಂಗಮಂಚದತ್ತ ಇಣುಕುತ್ತಿದ್ದದ್ದು ಸ್ಪಷ್ಟವಾಯ್ತು. ಅತ್ತ ರಂಗದ ಅರ್ಧಕ್ಕರ್ಧ ಮರೆ ಕಟ್ಟಿತ್ತು, ಆಚೆಗೆ ಕೇವಲ ಬೆಳಕಿನ ಸಾಮ್ರಾಜ್ಯವಿತ್ತು. ಅದನ್ನು ಪ್ರತ್ಯೇಕ ನೋಡಲು, ನಾವು ನೇರ ವೇದಿಕೆಗೇ ಹೋದೆವು. ಅಲ್ಲಿ ಒಂದು ಮೋಟಾರ್ ಸೈಕಲ್ಲನ್ನು ಫಾಸೀ ಶಿಕ್ಷೆಗೆ ಹಾಕಿದ್ದಂತಿತ್ತು! ಅದನ್ನು ಹತ್ತು ದಿಕ್ಕಿನಿಂದ ಹೊಳೆಹೊಳೆಯುವ ದಾರಗಳಲ್ಲಿ ಬಂಧಿಸಿ, ಹಿಂದಿನ ಗೋಡೆಯ ಮಧ್ಯಂತರದಲ್ಲಿ ಅಕ್ಷರಶಃ ನೇತು ಹಾಕಿದ್ದರು. ಅದರ ಮುಂದೆ ಸಣ್ಣದಾಗಿ ರಂಗ ಕಲಾಪಗಳಿಗೆ ವಿರಳ ಸಜ್ಜಿಕೆಗಳೂ ರೂಪುಗೊಂಡಿದ್ದವು. ಉಳಿದಷ್ಟೂ ಸ್ಥಳದಲ್ಲಿ ಎದುರು ಜಮಖಾನ ಹಾಸಿ, ಹಿಂದೆ ಕುರ್ಚಿ ಜೋಡಿಸಿ ಹೊಸತೇ ಪ್ರೇಕ್ಷಾಂಗಣ ಸಜ್ಜುಗೊಳಿಸಿದ್ದರು. “ಬೈಕಿಗೆ ಪರಮಪದ (ತ್ರಿಶಂಕು ಸ್ವರ್ಗ?) ಸಿಕ್ಕಿದೆ, ಕ್ಯಾಮರಾ ತಂಡ ಸೋಪಾನದಾಟದಲ್ಲಿದೆ” ಎಂದು ನಗೆನುಡಿಯುತ್ತಾ ನಾಟಕಾರಂಭದ ಮೂರನೇ ಗಂಟೆ ಕಾದು ಕುಳಿತೆವು….

ಸೋಪಾನಪಟ, ಅಂದರೆ ಹಾವು ಏಣಿ ಆಟದ ಕಳ/ ಹಾಸು. ಆ ಆಟದಲ್ಲಿ ಪರಮಪದಾಕಾಂಕ್ಷೀ ದಿವಾಕರ ಭಟ್ಟನ (ನಾಟಕದ ನಾಯಕಪಾತ್ರ) ಜೀವನದಾಟವನ್ನು ಬಿಡಿಸಿಡುತ್ತ ನಾಟಕ ಹೆಣೆದಿದ್ದಾರೆ ಕೆವಿ ಅಕ್ಷರ. ನಾಯಕನ ದುರ್ಮರಣದೊಡನೆ ತೆರೆದುಕೊಳ್ಳುವ ಕಥಾನಕ, ಹಿನ್ನೋಟದಲ್ಲಿ ವಿಸ್ತರಿಸುತ್ತದೆ. ಮಹತ್ವಾಕಾಂಕ್ಷೆಯ ಏಣಿಗಳನ್ನು ಯೋಗ್ಯತೆಯಲ್ಲೆಂಬಂತೆ ಏರುವ, ತಳಕ್ಕಿಳಿಸುವ ಹಾವುಗಳನ್ನು ದುರದೃಷ್ಟವೆನ್ನುವಂತೆ ಸುಧಾರಿಸುವ ಪ್ರಯತ್ನಗಳ ಚಂದದಲ್ಲಿ, ಕೊನೆಗೆ ನಾಯಕ ಎಲ್ಲಿ ಕಳೆದುಹೋದ (ಹೇಗೆ ಸತ್ತ) ಎನ್ನುವ ಪತ್ತೇದಾರಿಕೆ ಅಮುಖ್ಯವಾಗಿಬಿಡುತ್ತದೆ. ಬದಲಿಗೆ, ಆತನ ವ್ಯವಹಾರ ಚಾತುರ್ಯ, ಸಾಮಾಜಿಕ ಔದಾರ್ಯ, ಕುಟುಂಬಪ್ರೀತಿ, ಕಲಾಸಿದ್ಧಿಗಳ ಬೆಳಕಿನಲ್ಲಿ ಜೀವನ ಹೀಗೆ ಮುಗಿಯಬೇಕಿತ್ತೇ ಎಂಬ ಚಿಂತನೆಯಲ್ಲೇ ನಾನು ಮುಳುಗಿಹೋದೆ. ನಾಟಕದ ನಿರ್ದೇಶನವನ್ನು ಸ್ವತಃ ಅಕ್ಷರ, ಅಧ್ಯಾಪಕ ಬಳಗದ ಮಂಜು ಕೊಡಗು ಅವರ ಸಹಾಯದೊಡನೆ ಮಾಡಿದ್ದಾರೆ. ಶಿಕ್ಷಕ ಬಳಗದವರೇ ಆದ ಅರುಣ್ ಕುಮಾರ್ ಎಂ ಮತ್ತು ಕೆವಿ ಶಿಶಿರ (ಅಕ್ಷರರ ಮಗ) ಸಂಗೀತ ಹಾಗೂ ಸಂಯೋಜನೆಯಲ್ಲೂ ಮಂಜುನಾಥ ಹಿರೇಮಠ ಬೆಳಕಿನ ನಿರ್ವಹಣೆಯಲ್ಲೂ ವಿದ್ಯಾ ಹೆಗಡೆ (ಶ್ರೀಮತಿ ಅಕ್ಷರ) ಮತ್ತು ಗಣೇಶ್ ಮಾಸ್ಟ್ರು ಪಾತ್ರನಿರ್ವಹಣೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಭಿನಯವೂ ಸೇರಿದಂತೆ ಎಲ್ಲ ಅಂಗಗಳನ್ನು ವಿದ್ಯಾರ್ಥಿಗಳು ಸಾಕಷ್ಟು ಸಮರ್ಥವಾಗಿಯೇ ನಿರ್ವಹಿಸಿದರು. ಪೂರ್ಣ ನಾಟಕ ಸದ್ಯದಲ್ಲೇ ಸಂಕಲನ ಮೇಜಿನಿಂದ ಅಂತರ್ಜಾಲದ ವ್ಯಾಪ್ತಿಗೆ ವಿಸ್ತರಿಸಿಕೊಳ್ಳಲಿದೆ. ಅದನ್ನು ವೀಕ್ಷಿಸುವ ನಿಮ್ಮ ಸ್ವಾರಸ್ಯವನ್ನು ಪ್ರಭಾವಿಸಬಾರದೆಂಬ ಎಚ್ಚರದಲ್ಲಿ ನಾನು ಪ್ರದರ್ಶನದ ವಿಮರ್ಶೆಗೆ ಮಾಡುತ್ತಿಲ್ಲ. ‘ಪರಮಪದ ಸೋಪಾನದಾಟ’, ಉಪ ಶೀರ್ಷಿಕೆ – ಆರು ನೋಟಗಳ ಒಂದು ನಿಶಾನಾಟಕ, ಪುಸ್ತಕವಾಗಿಯೂ (ರೂ ಎಂಬತ್ತು) ಅಕ್ಷರ ಪ್ರಕಾಶನದಲ್ಲಿ ಲಭ್ಯ. 

೮. ಇಕ್ಕೇರಿಯ ಮೇಲೆ ದುಂಡೆತ್ತಿ…

ನಾಟಕ ಮುಗಿಸಿದ್ದೇ ಊಟದ ಶಾಸ್ತ್ರ ಮುಗಿಸಿ ಮಲಗಿದ್ದೇನೋ ನಿಜ. ಆದರೆ ನೀನಾಸಂ ವಠಾರದ ಹಿತ್ತಲೆಲ್ಲ ದೀಪದ ಬೆಳಕಿನಲ್ಲಿ ಮೀಯುತ್ತ, ವಿಶಿಷ್ಟವಾಗಿ ಗಿಜಿಗುಡುತ್ತಲೇ ಇತ್ತು. ಯಾಕೆಂದರೆ, ಮರುಸಂಜೆಯ ನಾಟಕ ಅಲ್ಲೇ ಬಯಲಿನಲ್ಲಿ ನಡೆಯಲಿತ್ತು. ಸಂಜೆಯೇ ಅಲ್ಲಿ ಅರೆ ವೃತ್ತಾಕಾರದ ಪ್ರೇಕ್ಷಾಂಗಣ ಕಡಿದಿಟ್ಟದ್ದು ಕಂಡಿದ್ದೆವು. ಅದರ ದೃಷ್ಟಿ ಕೇಂದ್ರದಲ್ಲಿ ಎನ್ನುವಂತೆ ಅಭಿನಯ ವಲಯ ರೂಪುಗೊಳ್ಳುತ್ತಿತ್ತು. ದಿಬ್ಬ, ಹೊಂಡ, ಕಟ್ಟೆ ಮತ್ತು ಸುಮಾರು ಹದಿನೈದಡಿ ಬಾಹುಗಳ ನಕ್ಷತ್ರಾಕಾರದ ಏನೋ ಹಗ್ಗದ ರಚನೆ ಎಲ್ಲಾ ಇತ್ತು. ಅದರ ಬೆಳಕಿನವಲಯಗಳನ್ನು ಸರಿಪಡಿಸಲು ರಾತ್ರಿಯೇ ದುಡಿಯುವುದು ಅನಿವಾರ್ಯವಿತ್ತು. ವಿದ್ಯಾರ್ಥಿಗಳು ಮೊದಲ ನಾಟಕದ ಬಣ್ಣ ಬಿಚ್ಚಿ, ಉಂಡು ಬಂದದ್ದೇ ಕೆಲಸಕ್ಕಿಳಿದಿದ್ದರು. ಎಲ್ಲೆಲ್ಲಿಂದಲೋ ವಯರು ತಂದು, ಲಭ್ಯ ಮರ, ಬೇಲಿ ಬಳಸಿ, ಇಲ್ಲದಲ್ಲಿ ಕಂಬ ಊರಿ, ಸ್ಟ್ಯಾಂಡ್ ನಿಲ್ಲಿಸಿ ವಿವಿಧ ನಮೂನೆಯ ದೀಪ ಕಟ್ಟುವುದು, ಬೆಳಗಿ ಹೊಂದಾಣಿಕೆ ನಡೆಸುವುದು ಮಾಡುತ್ತಿದ್ದರು. (ಬೆಳಗ್ಗೆ ತಿಳಿದಂತೆ, ರಾತ್ರಿ ಎರಡು ಗಂಟೆಯವರೆಗೂ ದುಡಿದಿದ್ದರು!)

ಅಭಯನೊಡನೆ ಈಚಿನೆಲ್ಲ ಕಲಾಪಗಳ (ಪಡ್ಡಾಯಿಯೂ ಸೇರಿದಂತೆ) ಮುಖ್ಯ ಕ್ಯಾಮರಾಮ್ಯಾನ್ ವಿಷ್ಣು, ಮತ್ತು ಸಹಾಯಕನಾಗಿ ಚಿತ್ರೀಕರಣ ಸಾಮಗ್ರಿ ಪೂರೈಕೆದಾರನೇ ಆದ ಗೋಪು ಬಂದಿದ್ದರು. ಮೊದಲು ವಿದ್ಯಾರ್ಥಿ, ಹಿಂಬಾಲಿಸಿದಂತೆ ‘ತಿರುಗಾಟ’ದ ಕಲಾವಿದ ಕೊನೆಯಲ್ಲಿ ಸ್ವಲ್ಪ ಸಮಯ ಅಲ್ಲೇ ಅಧ್ಯಾಪಕನೆಂದು ದುಡಿದ ಅವಿನಾಶ್ ರೈಗೆ ನೀನಾಸಂ ತಾಯಿಮನೆ ಇದ್ದ ಹಾಗಂತೆ. ಅದರ ಮೇಲೆ ಅಭಯನ ಪಡ್ಡಾಯಿ ಚಿತ್ರದ ಪ್ರಮುಖ ನಟನಾಗಿ ಬೆಳೆಸಿಕೊಂಡ ಹೆಚ್ಚಿನ ಪ್ರೀತಿಯಲ್ಲಿ ಆತ ಹೆಚ್ಚುವರಿ ಸ್ವಯಂಸೇವಕನಾಗಿ ಅಭಯನನ್ನು ಸೇರಿಕೊಂಡಿದ್ದರು. ಆ ಬಳಗ ಪ್ರದರ್ಶನದಲ್ಲಿ ಸಂಗ್ರಹಿಸಿದ ಚಿತ್ರ, ಧ್ವನಿಗಳನ್ನು ಗಣಕಕ್ಕಿಳಿಸುವುದು, ಬ್ಯಾಟರಿ ಚಾರ್ಜ್ ಮಾಡುವುದು, ಮರುದಿನದ ಯೋಜನೆ ಇತ್ಯಾದಿಗಳ ರಂಗಿನ ಪಟ್ಟಾಂಗದಲ್ಲಿ, ನಮಗೆ ತೊಂದರೆಯಾಗಬಾರದೆಂದು ಪ್ರತ್ಯೇಕ ಕೋಣೆಯಲ್ಲೇ ಇದ್ದರು. ಆದರೂ ಸನ್ನಿವೇಶ ಮತ್ತು ಪರಿಸರದ ಪ್ರಭಾವಗಳಲ್ಲಿ ನಮಗಿಬ್ಬರಿಗೆ ಬೇಗ ಬೆಳಗಾಗಿತ್ತು. ಹೊರಗೆ ದೀಪದ ಬೆಳಕು ಧಾರಾಳವಿದ್ದರೂ ದಟ್ಟ ಮಂಜು ಕವಿದ ನೀರವತೆ ಆಕರ್ಷಣೀಯವಾಗಿತ್ತು. ಪ್ರಾತರ್ವಿಧಿಗಳನ್ನು ತೀರಿಸಿ, ದಾರಿಗಿಳಿದು, ನೀಲಕಂಠೇಶ್ವರ ದೇವಳದವರೆಗೂ ಪಾದ ಬೆಳೆಸಿ ಮರಳುವಾಗ ಇತರರು ಜಾಗೃತರಾಗಿದ್ದರು. ಅನಂತರ ಪಟ್ಟಾಂಗಕ್ಕೆ ಕೊನೆ ಇರಲಿಲ್ಲ.

ಏಳೆಂಟು ದಶಕಗಳ ಹಿಂದೆ ನೀಲಕಂಠೇಶ್ವರ ನಾಟ್ಯ ಸಂಘ, ಹಳ್ಳಿಯ ಒಂದು ಕೂಟವಾಗಿಯೇ ತೊಡಗಿತ್ತಂತೆ. ಆದರೆ ಕೆವಿ ಸುಬ್ಬಣ್ಣನವರ ಮಾಯಕದಲ್ಲಿ, ಈಚಿನ ಐದಾರು ದಶಕಗಳಲ್ಲಿ ಅದು ರಾಜ್ಯವೇನು, ದೇಶಾದ್ಯಂತ ಬಹು ಸಂಕೀರ್ಣ ಸಂಬಂಧಗಳನ್ನು ಬೆಸೆಯುತ್ತ ಬೆಳೆದು ನಿಂತಿದೆ. ಹಾಗಾಗಿ ಅಲ್ಲಿ ಯಾವುದೇ ನಿತ್ಯದ್ದಲ್ಲದ ಕಲಾಪ ನಡೆಯುವುದಿದ್ದರೂ ಎಲ್ಲೆಲ್ಲಿನದೋ ಮಂದಿ ಪ್ರತ್ಯಕ್ಷರಾಗುವುದು ಹೊಸತಲ್ಲ. ಹಿಂದಿನ ಸಂಜೆಯೇ ಮೈಸೂರಿನಿಂದ ಒಬ್ಬರೇ ಕಾರೋಡಿಸಿಕೊಂಡು ಗಣೇಶ ಅಮೀನಗಢ ಬಂದಿದ್ದರು. ಇವರು ಪ್ರಜಾವಾಣಿಯ ವಕ್ತಾರನಾಗಿ ಮಂಗಳೂರಿನಲ್ಲಿದ್ದಾಗ ನನಗೆ ಪರಿಚಯಕ್ಕೆ ಸಿಕ್ಕವರು. ಅವರ ಹೆಚ್ಚಿನ ಆಸಕ್ತಿಯ ಕ್ಷೇತ್ರ ನಾಟಕ ಎಂದ ಮೇಲೆ ಹೇಳಬೇಕೇ. ಪ್ರತ್ಯೇಕವಾಗಿ ಜಯರಾಮ ಪಾಟೀಲ ದಂಪತಿಯೂ ಮೈಸೂರಿನಿಂದ ಬಂದಿದ್ದರು. ಪಾಟೀಲರು ನನ್ನನ್ನು ಕಾಣುತ್ತಿದ್ದಂತೆ “ಹೋ ಎಲ್ಲಿದ್ದೀರಿ…” ಎಂದೇ ಮಾತಿಗಿಳಿದಿದ್ದರು. ನಾನು ಸಣ್ಣ ಕುಶಾಲಿನಲ್ಲಿ “ನೀವೇ ಕೊಡಿಸಿದ ಕಾರಂತ ಸಂಕೀರ್ಣದಲ್ಲಿ…” ಎಂದಾಗ ಪುಣ್ಯಾತ್ಮ ಮುಜುಗರ ಅನುಭವಿಸಿದ್ದರು. (ನೋಡಿ: ನೀನಾಸಂ, ಕಥನ ಮಾಲಿಕೆ ಇದರ ಎರಡನೇ ಟಿಪ್ಪಣಿ. ಹೆಚ್ಚಿನ ಪರಿಚಯಕ್ಕೆ:ಲಕ್ಷ್ಮೀ ಭಾಗ್ಯ ಇದರ ನಾಲ್ಕನೇ ಟಿಪ್ಪಣಿ) ಇನ್ನಷ್ಟು ಹೊಸ ಪರಿಚಯ, ಮಾತು, ಆಹಾರ್ಯದಲ್ಲಿ ತಿಂಡಿ ತೀರ್ಥ ಮುಗಿಯುವ ಹೊತ್ತಿಗೆ ಗಂಟೆ ಒಂಬತ್ತು ಕಳೆದಿತ್ತು. ನಮಗೆ ಸಂಜೆಯವರೆಗೂ ಹೀಗೇ ಮಾತಾಳಿಗಳಾಗುವುದರಲ್ಲಿ ವಿಶೇಷ ಒಲವಿರಲಿಲ್ಲ.

ಹಾಗಾಗಿ…. ಬೈಕಿದೆ, ಕನಿಷ್ಠ ಅರ್ಧ ದಿನ ಬಿಡುವೂ ಇದೆ ಎಂದುಕೊಂಡು ಹೊರಬಿದ್ದೆವು. ಅವರಿವರಲ್ಲಿ ವಿಚಾರಿಸಿ ಸುಮಾರು ಹದಿನೈದು ಕಿಮೀ ಅಂತರದ ಇಕ್ಕೇರಿ, ಅದರಲ್ಲೂ ಮುಖ್ಯವಾಗಿ ಅಘೋರೇಶ್ವರ ದೇವಳವನ್ನು ಮೊದಲ ಲಕ್ಷ್ಯವನ್ನಾಗಿಸಿಕೊಂಡೆವು. ಮೂಲದಲ್ಲಿ ವಿಜಯನಗರದ ಅಧೀನವಿದ್ದರೂ ಅದರ ಪತನಾನಂತರ ಸ್ವತಂತ್ರವಾಗಿ ಗಟ್ಟಿ ನಿಂತ ಖ್ಯಾತಿ ಇಕ್ಕೇರಿ ಸಾಮ್ರಾಜ್ಯದ್ದು. ಪೋರ್ಚುಗೀಸ್, ಡಚ್, ಬಹಮನಿಯರನ್ನೆಲ್ಲ ಧಿಕ್ಕರಿಸಿ, ಆರ್ತನಾಗಿ ಬಂದ ಶಿವಾಜಿಗೂ ಆಶ್ರಯಕೊಟ್ಟು, ಚೆನ್ನಮ್ಮನಂತ ಧೀರೆಯನ್ನು ಮೆರೆಸಿ ಮಲೆನಾಡಿನಿಂದ ಮಲಯಾಳದವರೆಗೂ ವ್ಯಾಪಿಸಿ, ಸುಮಾರು ಇನ್ನೂರು ವರ್ಷಗಳ ಕಾಲ ಆಡಳಿತ ಸೂತ್ರವನ್ನು ಬಿಗಿ ಹಿಡಿದ ಇತಿಹಾಸ ‘ಎರಡು ಕೇರೀ’ (ಇಕ್ಕೇರಿ) ವಂಶದ್ದು. ಆದರೇನು ಇಂದು ತೋರಿಸಿಕೊಳ್ಳಲು, ಕಳ್ಮನೆ ಹಳ್ಳಿಯ ಬಳಿ ಅರೆಬರೆ ಜೀರ್ಣೋದ್ಧಾರ ಕಂಡ ಅಘೋರೇಶ್ವರ ದೇವಳ ಬಿಟ್ಟರೆ ಏನೂ ಇಲ್ಲ. ಸುಮಾರು ಹದಿನೈದು ಕಿಮೀ ಎಂದುಕೊಂಡು ಓಡುತ್ತಿದ್ದಂತೆ, ಅನಿರೀಕ್ಷಿತವಾಗಿ ‘ವರದಾಮೂಲ’ ಬೋರ್ಡ್ ಕಾಣಿಸಿದಾಗ, ಒಮ್ಮೆ ನನ್ನ ಬೈಕ್ ನಿಧಾನಿಸಿತ್ತು. 

ಸುಮಾರು ಮೂರು ದಶಕಗಳ ಹಿಂದೆ, ಉದಯವಾಣಿಯ ಓದುಗರ ಅಂಕಣದಲ್ಲಿ ನದಿ ನೇತ್ರಾವತಿಯ ಉದ್ಭವ ಗಂಗಾಮೂಲದಲ್ಲೆಂದು ಒಂದು ಚರ್ಚೆ ತೊಡಗಿತ್ತು. ಆಗ ನಾನು, “ಭಾರತೀಯ ಭಾವುಕ ಮನಸ್ಸುಗಳು ಯಾವುದೋ ಒಂದು ನೀರ ಕಣ್ಣನ್ನು ಒಂದು ನದಿಯ ಮೂಲವೆಂದು ಭಾವಿಸುವುದು ತಪ್ಪಲ್ಲ. (ತಲಕಾವೇರಿ, ನರಸಿಂಹ ಪರ್ವತ, ಗೋಮುಖ, ಯಮುನೋತ್ರಿ…) ಆದರೆ ಭೌಗೋಳಿಕವಾಗಿ ಹಲವು ಒರತೆಗಳ ಕೂಟವೇ ನದಿ, ಕಾಡು ಕಣಿವೆಗಳ ಜಲಾನಯನ ಪ್ರದೇಶವೇ ನಿಜವಾದ ನದೀಮೂಲ. ನೀರ ಕಣ್ಣಿಗೆ ಕಟ್ಟೆ ಕಟ್ಟಿ ಭಜನೆ ಕುಟ್ಟುವುದಲ್ಲ, ಕಾಡು ಬೆಟ್ಟಕ್ಕೆ ಕೊಡಿ ಮನುಷ್ಯ ಬಂಧದ ಮುಕ್ತಿ” ಎಂದೇ ವಾದಿಸಿದ್ದೆ. ಈ ವಾದಸುಳಿಯಲ್ಲಿ ವರದಾಮೂಲವೂ ಮೇಲೆದ್ದಿತ್ತು, ಇಂದು ಅದೇ ವರದಾಮೂಲ ನಮ್ಮೆದುರು ನಿಂದಿತ್ತು. ಅದನ್ನು ಹಿಂಬರುವ ದಾರಿಯಲ್ಲಿ ನೋಡೋಣವೆಂದು ಸೀದಾ ಮುಂದುವರಿದೆವು.

ಆವಿನಹಳ್ಳಿಯಲ್ಲಿ ಮತ್ತೆ ಮಾರ್ಗಸೂಚಕ ಫಲಕ ನಮ್ಮ ದಿಕ್ಕೆಡಿಸಿತು. ಆದರೆ ಬೇಗನೆ ಅದು ನಮ್ಮರಿವಿಗೆ ಬಂದದ್ದಕ್ಕೆ, ಕಚ್ಚಾ ಒಳದಾರಿಯೊಂದನ್ನು ಹಿಡಿದು, ಅಘೋರೇಶ್ವರ ದೇವಳಕ್ಕೆ ಹಿತ್ತಿಲ ದಾರಿಯಲ್ಲೇ ಲಗ್ಗೆ ಹಾಕಿದೆವು. ಆಲಯ ಅಂದು ತೊಡಗಿದಂತೆ ನಾಲ್ಕೈದು ದಿನಗಳ ವರ್ಷಾವಧಿ ಜಾತ್ರೆಯ ಸಿದ್ಧತೆಗಳಲ್ಲಿತ್ತು. ವಠಾರದ ಒಳಗೆ ಭಕ್ತಾದಿಗಳ ನೇವರಿಕೆಯಿಂದಲೇ ಹೊಳಪುಗೊಂಡ ನಂದಿ, ದ್ವಾರ ಪಾಲಕ ಆನೆಗಳು, ಭರ್ಜರಿ ಸ್ತಂಭ, ತೊಲೆ, ಛತ್ತುಗಳ ಕೆತ್ತನೆಗಳನ್ನೆಲ್ಲ ನೋಡಿದೆವು. ಮಗ್ಗುಲಿನ ದ್ವಾರದಿಂದಾಚಿನ ಗುಡಿ, ಹೊರಗೋಡೆಗಳ ಮೇಲೆಲ್ಲ ಕಣ್ಣಾಡಿಸಿದೆವು. ಜೀರ್ಣೋದ್ಧಾರವೆಂಬ ‘ಝಿಗ್ ಸಾ ಪಜಲ್’ (ಹರಿದು ಹರಡಿದ ಚಿತ್ರ ಜೋಡಿಸುವ ಆಟ) ಪೂರೈಸುವಲ್ಲಿ, ಸಿಗದ ಎಷ್ಟೋ ತುಣುಕುಗಳ ಜಾಗಕ್ಕೆ ಭಿನ್ನ ತುಣುಕು, ಒರಟಾಗಿ ಕೆತ್ತಿದ ಆಧುನಿಕ ಶಿಲ್ಪ ಹಾಗೂ ಸಾದಾ ಕಲ್ಲ ತುಣುಕೂ ಇಟ್ಟದ್ದಿತ್ತು. ಪಕ್ಕದ ಬಿಡಾರದ ಅಖಿಲಾಂಡೇಶ್ವರಿ ಅಮ್ಮನವರ ಗುಡಿ ಬಾಗಿಲು ಇನ್ನೂ ತೆರೆದೇ ಇರಲಿಲ್ಲ. ಮೂರು ನಾಲ್ಕು ಅರ್ಚಕರ ವೃಂದವೊಂದು ಮುಖ್ಯ ದೇವಳದ ಒಳಗೇ ಗರ್ಭಗುಡಿಯಿಂದ ಹೊರಗೆ, ಏನೋ ವಿಶೇಷ ಹೋಮದ ಸಿದ್ಧತೆಯಲ್ಲಿದ್ದರು. ಜಾತ್ರೆಗೆ ವಿದ್ಯುದ್ದೀಪ ಮಾಲೆ ಏರಿಸುವವರು, ತತ್ಕಾಲೀನ ತೋರಣಗಳೇರಿಸಲು ಕಂಬ ಹುಗಿಯುವವರೂ ಅಷ್ಟೇ ಬಿಝಿಯಾಗಿದ್ದರು. ಎಲ್ಲರಿಗೂ ಸ್ಥಳದ ಭವ್ಯ ಇತಿಹಾಸ, ಸ್ವಸ್ಥ ಮುನ್ನೋಟಗಳಿಗಿಂತ ಹೆಚ್ಚಾಗಿ ತತ್ಕಾಲೀನ ಆದಾಯವೇ ಮುಖ್ಯವಿದ್ದಂತಿತ್ತು. ಸ್ಥಳಪುರಾಣ, ಶಿಲ್ಪಗಳ ವಿವರಣೆಗೆ ಯಾರೂ ನಿಲ್ಲದಿದ್ದರು, “ಜಾತ್ರೆಗೆ ಬನ್ನಿ” ಎನ್ನುವಲ್ಲಿ ಯಾರೂ ಹಿಂದುಳಿಯಲಿಲ್ಲ.

ದೇವಳದ ಹೊರಗಿನ ಹಣ್ಣುಕಾಯಿ ಅಂಗಡಿಯವನಲ್ಲಿ ಇಕ್ಕೇರಿ ಕೋಟೆ ಬಗ್ಗೆ ವಿಚಾರಿಸಿದೆವು. ಆತ ಅರೆಮನಸ್ಸಿನಲ್ಲೇ ದೇವಳದ ಎದುರಿನ ದಾರಿಯತ್ತ ಕೈ ಮಾಡಿದ. ನಾವು ಸಂಶಯದಲ್ಲೇ ಹೊರಟಿದ್ದೆವು. ಸ್ವಲ್ಪ ಮುಂದೆ, ತನ್ನ ಮೊಪೆಡ್ ಮೇಲಿನ ಮೂಟೆ ಜಾರುತ್ತಿದ್ದದ್ದನ್ನು ಸಾವರಿಸಿ ಕಟ್ಟುತ್ತಿದ್ದ ಅಶ್ರಫ್ ಸಾಯ್ಬರನ್ನು ಹೀಗೇ ವಿಚಾರಿಸಿಕೊಂಡೆವು. ಆತ ನಕ್ಕು “ಇದನ್ನು ಯಾರು ಹೇಳಿದ್ದು! ಇದು ಸಿಗಂದೂರು ದಾರಿ. ಇಕ್ಕೇರಿ ಕೋಟೆಗೆ ದೇವಸ್ಥಾನದ ಹಿಂದಿನ ಕಚ್ಚಾದಾರಿಯಲ್ಲೇ ಹೋಗಿ. ಅಲ್ಲಿ ನೋಡುವಂತದ್ದೇನೂ ಉಳಿದಿಲ್ಲ. ಇದ್ದವನ್ನೂ ಕಾಡು ಮುಚ್ಚಿಕೊಂಡಿದೆ. ಮಾರ್ಗದರ್ಶಿ ಇಲ್ಲದೇ ಸುತ್ತಾಡುವುದು ಕಷ್ಟ” ಎಂದರು. ಆದರೂ ಬೈಕ್ ತಿರುಗಿಸಿ, ದೇವಳದ ಹಿಂದಿನ ಕಚ್ಚಾ ದಾರಿಗಿಳಿದೆವು. ಅಲ್ಲೂ ಸಿಕ್ಕವರ ಮರ್ಜಿಗಳಲ್ಲಿ, ಒಂದೆರಡು ಬಾರಿ ಮೇಲೆ ಕೆಳಗೆ ಓಡಾಡಿ ಕೋಟೆ ಜಾಡು ಕಂಡೆವು. ಬೈಕ್ ಅಲ್ಲೇ ಬಿಟ್ಟು ಸುಮಾರು ಅರ್ಧ ಗಂಟೆ ಅದರ ಗುಂಟ ಮುಳ್ಳು ಕಲ್ಲು ತುಳಿದು, ಪೊದರು ಬಳ್ಳಿ ಸುಧಾರಿಸಿಕೊಳ್ಳುತ್ತ ನಡೆದೆವು. 

ಒಂದೆರಡು ಚದರಿ ಬಿದ್ದಿದ್ದ ಕೆತ್ತನೆಯ ಕಲ್ಲ ತೊಲೆಗಳು, ಮೋಟು ಮುರಕಲ್ಲ ಗೋಡೆಗಳನ್ನು ಕಳೆದು, ಬುರುಜಿನಂತ ಒಂದು ದಿಬ್ಬ ಹತ್ತಿ ಕೆರೆ ಇಣುಕಿದಲ್ಲಿಗೆ ಸಾಕೆನ್ನಿಸಿತು. ಹೊರಗೆ ಬಂದಾಗ ಯಾರೋ ಹೇಳಿದ್ದು ನೆನಪಾಯ್ತು “ಅರಸರು ತಮ್ಮ ಸಾಮ್ರಾಜ್ಯದೊಳಗೆ ಯಾವ ಕಾಲಕ್ಕೂ ಒದಗುವಂತೆ ಸಾವಿರದಿನ್ನೂರಕ್ಕೂ ಮಿಕ್ಕು ಜಲಾಶಯ ಮಾಡಿಸಿದ್ದರು.” ಅವುಗಳಲ್ಲಿ ಇಂದು ಕೆಲವನ್ನಷ್ಟೇ ನೋಡಬಹುದು. ಇಂದಿನ ಉಪಯುಕ್ತತೆಯನ್ನೂ ಕಡೆಗಣಿಸಿದ ಸಮಾಜದ ನಡುವೆ, ನಮ್ಮ ಗತವೈಭವದ ಸಾಕ್ಷಿ ಹುಡುಕಾಟಕ್ಕೇನೂ ಅರ್ಥವಿಲ್ಲವೆಂದು ಮರಳಿದೆವು. ಬಿಸಿಲ ಉರಿ, ಕಾಡು ಸುತ್ತಿದ ಶ್ರಮ ಅವಗಣಿಸಿದರೂ ಸಮಯವನ್ನು ಮರೆಯುವಂತಿರಲಿಲ್ಲ. ನಮ್ಮ ಪಟ್ಟಿಯಲ್ಲಿ ಇದ್ದ ‘ಕೆಳದಿ ಮ್ಯೂಸಿಯಂ’ನ್ನು “ಇನ್ನೆಂದಾದರೂ..” ಎಂದುಕೊಂಡು ಹಿಂದಾರಿ ಹಿಡಿದೆವು. ವರದಾಮೂಲದಲ್ಲಿ ಐದೇ ಮಿನಿಟು ನಿಂತಿದ್ದೆವು. ದೇವಳ, ಸಣ್ಣ, ದೊಡ್ಡ ಕೆರೆಗಳು, ಎದುರು ದಂಡೆಯ (ಬಹುಶಃ ಕಲ್ಯಾಣ ಮಂಟಪ) ರಚನೆಗಳು ಎಲ್ಲ ರಸ್ತೆಯ ಮಟ್ಟಕ್ಕಿಂತ ಸ್ವಲ್ಪ ತಗ್ಗಿನಲ್ಲಿದ್ದವು. ಹಾಗಾಗಿ ನಮಗೆ ವಾಹನ ತಂಗುದಾಣದ ಹಕ್ಕಿನೋಟವೇ ಸಾಕಾಯ್ತು. ಮತ್ತೆ ಚಪ್ಪಲಿ ಕಳಚಿಟ್ಟು, ಅಂಗಳಕ್ಕಿಳಿದು, ಕೆರೆನೀರು ತಳಿದು, ದೇವಳದಲ್ಲಿ ಸುಳಿದು ಬರುವಂತ ಶ್ರದ್ಧಾಳುಗಳೇನೂ ನಾವಲ್ಲ. ಹೆಗ್ಗೋಡಿಗೆ ಮರಳಿದೆವು. 

 

೯. ನಾಟಕಮನೆ ಏನೆಲ್ಲ ಸಂಗ್ರಹ!! (ಮಳ್ಳ ಗಿಂಪೆಲ್)

ನಾವು ಐತಿಹಾಸಿಕ ಸುತ್ತು ಮುಗಿಸಿ ಬರುವುದನ್ನೇ ಅವಿನಾಶ್ ರೈ ಕಾದಿದ್ದರು. ‘ನಾದಿರ್ ಶಾ’ ಸಟ್ಟನೆದ್ದು, “ರಜ್ವೀ…” ಎಂದಬ್ಬರಿಸಿದಂತೇ “ಸ್ಸಾರ್….. ನಮ್ಮ ನಾಟಕಗಳಲ್ಲಿ ಮಳೆ ಸದ್ದು ಕೊಡುವ, ತ್ರಿಪುರಾದ ಒಂದು ಜನಪದ ಸಲಕರಣೆ ನಿಮಗೆ ತೋರಿಸಬೇಕು…” ಎಂದು ಹೊರಟೇಬಿಟ್ಟರು. (ಅವಿನಾಶರ ನಾದಿರ್ ಶಾ ಪಾತ್ರ, ಅಂದರೆ ನೋಡಿ: ಗುಣಮುಖ)  ನಾವು ಅವರನ್ನು ರಂಗಮಂದಿರಕ್ಕೆ ಹಿಂಬಾಲಿಸಿದೆವು. ಅದೊಂದು ದಪ್ಪ ಬಿದಿರ ಹಂಡೆ. ಅದರೊಳಗಿನ ಗಂಟುಗಳನ್ನು ತೆಗೆದು, ಏನೋ ಸಣ್ಣ ಒಣ ಬೀಜಗಳನ್ನು ಸಾಕಷ್ಟು ತುಂಬಿ, ಎರಡೂ ಕೊನೆಗಳನ್ನು ಬಂದ್ ಮಾಡಿದ್ದರು. ಅನಂತರ ಆ ಹಂಡೆಯ ತಲೆಯಿಂದ ತಲೆಗೆ, ಎದುರು ಬದಿರಾಗುವಂತೆ ಎರಡು ದೀರ್ಘ ಸುರುಳಿಯಾಕಾರದ, ಸಪುರ ತೂತಗಳ ಸರಣಿ ಮಾಡಿದ್ದರು. ಮತ್ತೆ ಆ ಎಲ್ಲಾ ತೂತುಗಳಲ್ಲಿ ಸಪುರದ ಬಿದಿರ ಸಲಿಕೆಗಳನ್ನು ಇತ್ತಿಂದತ್ತ ತೂರಿ ಗಟ್ಟಿ ಮಾಡಿದ್ದರು. ಅವಿನಾಶ್ ಆ ಬಿದಿರಂಡೆಯನ್ನು ಹಗುರಕ್ಕೆ ವಾಲಿಸುತ್ತಿದ್ದಂತೆ, ಸಲಿಕೆಗಳ ಸಂದಿನ ಬೀಜಗಳ ಓಟದ ಸದ್ದು – ತಟಕಿಕ್ಕುವ ಹನಿಹನಿಯಿಂದ, ಭೋರೆನ್ನುವ ಮಳೆಯೇ. (ನೆನಪಿರಲಿ, ನಾಟಕಗಳಲ್ಲಿ ಇದನ್ನು ಹಿಮ್ಮೇಳದವರು ಮೈಕ್ ಎದುರು ಪ್ರಯೋಗಿಸುತ್ತಾರೆ) ಬಿವಿ ಕಾರಂತರು ಸಾಂಪ್ರದಾಯಿಕ ವಾದ್ಯಗಳ ಮಿತಿಯರಿತದ್ದಕ್ಕೇ ಡಬ್ಬ, ಕರಟ, ಕೋಲು ಮುಂತಾದವನ್ನು ಕುಟ್ಟಿ, ಕೆರೆದು ಧ್ವನಿ ವಿಶೇಷಗಳನ್ನು ತಮ್ಮ ನಾಟಕಗಳಿಗೆ ಹೊಂದಿಸಿಕೊಳ್ಳುತ್ತಿದ್ದದ್ದನ್ನು ಕಂಡಿದ್ದೇವೆ. ಇದೂ ಆ ಪರಂಪರೆಗೆ ಸೇರಿದ್ದು. ಆದರೆ ಇಂದು ಎಂಥಾ ಸದ್ದನ್ನೂ ತಯಾರಿಸಿ ಕೊಡಬಲ್ಲ ‘ಶಬ್ದ ಭಂಡಾರಿ’ಗಳೇ ಮಾರುಕಟ್ಟೆಯಲ್ಲಿದ್ದಾರೆ. ಅದೇ ದುಃಖದಲ್ಲಿ ಎಂಬಂತೆ ಬಿದಿರ ಸಲಕರಣೆ ಈಗ ಕುಟ್ಟೆ ಸುರಿದು ನಶಿಸುತ್ತಿದೆ!

ಅವಿನಾಶ್ ಬಾಲ ಉತ್ಸಾಹದಲ್ಲಿ, “ಇನ್ನು ಒಂದೇ ಒಂದು ವಾದ್ಯ ತೋರಿಸ್ತೇನೆ ಸಾರ್” ಎಂದರು. ಈಗ ಕಪಾಟಿನಿಂದ ಹೊರಬಂದದ್ದು – ತೊಂಬಾಕ್, ಪರ್ಶಿಯಾದ್ದಂತೆ. ಮೂರ್ತಿ ಚಿಕ್ಕದಾದರೂ ಕಿವಿಗಡಚಿಕ್ಕುವ, ತಮಟೆಯಂತ ಧ್ವನಿ ಕೊಡುತ್ತಿತ್ತು. ಈ ವಾದ್ಯದ ಪ್ರಯೋಗ ಪರಿಣಾಮವನ್ನು ‘ಗುಣಮುಖ’ ನಾಟಕದಲ್ಲಿ ಅನುಭವಿಸಬಹುದು. ಜಯರಾಮ ಪಾಟೀಲರು ಬಹಳ ಜವಾಬ್ದಾರಿಯುತ ನ್ಯಾಸಧಾರಿಯಾದ್ದಕ್ಕೇ ತಮ್ಮಲ್ಲುಳಿದಿದ್ದ ಬಿವಿ ಕಾರಂತರ ಅಪೂರ್ವ ಗ್ರಂಥಸಂಗ್ರಹವನ್ನೂ ನೀನಾಸಂಗೆ ಕೊಟ್ಟಿದ್ದರು. ನೀನಾಸಂ ಅದನ್ನೂ ಪ್ರೀತಿಯಲ್ಲೇ ಸೇರಿಸಿಕೊಂಡಿತ್ತು. ಆದರೆ ತಮ್ಮದೇ ಗ್ರಂಥಾಲಯವೂ ಸೇರಿದಂತೆ ಒಟ್ಟು ಸಂಗ್ರಹವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಜೋಡಿಸುವಲ್ಲಿ ದಿಕ್ಕುಗಾಣದೆ ಕಷ್ಟಪಡುತ್ತಿತ್ತು. ಹೆಚ್ಚು ಕಡಿಮೆ ಇದೇ ಸಮಯಕ್ಕೆ ಬೀಯಾರ್ ವೆಂಕಟ್ರಮಣ ಐತಾಳ – ಬಹುಶ್ರುತ ಹಿರಿಯ ರಂಗಕರ್ಮಿ, ನೀನಾಸಂ ಪ್ರಾಂಶುಪಾಲಗಿರಿಯಿಂದ (ನೀನಾಸಂ ರಂಗಶಾಲೆ ಸರಕಾರೀ ಅನುದಾನದೊಡನೆ ನಡೆಯುವುದರಿಂದ ಸರಕಾರೀ ನಿಯಮಗಳಾನುಸಾರ) ವಯೋಸಹಜವಾಗಿ ನಿವೃತ್ತರಾಗಿದ್ದರು. ಸಹಜವಾಗಿ ಅವರು ಸಾಮರ್ಥ್ಯದ ನೆಲೆಯಲ್ಲೇ ಗ್ರಂಥಾಲಯವನ್ನು ವಹಿಸಿಕೊಂಡಿದ್ದಾರೆ ಎಂದು ತಿಳಿಯಿತು.

ನಾವು ಐತಾಳರ ಜ್ಞಾನಯಜ್ಞಕ್ಕೆ ತೊಂದರೆಯಾದೀತೋ ಎಂಬ ಭಯದಲ್ಲೇ ಹೋಗಿದ್ದೆವು. ವೆಂಕಟ್ರಮಣ ಐತಾಳರು ಎಂದಿನ ಪ್ರೀತಿಯಿಂದಲೇ ನಮ್ಮನ್ನು ಬರಮಾಡಿಕೊಂಡರು. ನಾನು ಮೂವತ್ತಾರು ವರ್ಷ ಪುಸ್ತಕ ವ್ಯಾಪಾರಿಯಾಗಿದ್ದೆ. ಆದರೆ ನಾನು ಎಲ್ಲಾ ಪ್ರಕಾರಗಳ ಪುಸ್ತಕಗಳನ್ನು ಪ್ರಾದೇಶಿಕ ಮಾರಾಟಾನುಕೂಲಕ್ಕೆ ತಕ್ಕಂತೆ ಜೋಡಿಸಿಕೊಳ್ಳುತ್ತಿದ್ದೆ. ಆದರೆ ಇಲ್ಲಿ, ವೆಂಕಟ್ರಮಣ ಐತಾಳರು ಜಗತ್ತಿನ ಯಾವುದೇ ರಂಗ ಸಂಶೋಧಕನ ಹುಡುಕಾಟಕ್ಕೆ ಅನುಕೂಲವಾಗುವಂತೆ, ಅಂದರೆ ಗ್ರಂಥಾಲಯ ವಿಜ್ಞಾನದ ಕ್ರಮದಲ್ಲಿ ಕ್ರಮಸಂಖ್ಯೆ ಹಾಗೂ ಪುಸ್ತಕ ದಾಖಲೆಯೊಡನೆ ಜೋಡಿಸಿದ್ದರು. ಅದನ್ನು ನಮ್ಮ ಅರಿವಿಗೆ ಮುಟ್ಟಿಸುವಂತೆ “ಹ್ಹಹ್ಹಾ! ಈಗ ನಿಮ್ಮ ಮಗನ ವಿಭಾಗ – ಸಿನಿಮಾ ಕುರಿತ ಪುಸ್ತಕಗಳಲ್ಲೇ ಇದ್ದೇನೆ. ನೋಡಿ, ಕೋಡಿಂಗಿನ ಕೊನೆಯಲ್ಲಿ ಈ ಸಂಖ್ಯೆ ಕೇವಲ ಚಿತ್ರಕತೆಗಳದ್ದು, ಮತ್ತೀ ಸಂಖ್ಯೆ…” ಎಂದು ಸಣ್ಣದಾಗಿ ವಿವರಿಸಿದರು.

ಈ ಸೂಕ್ಷ್ಮಗಳ ಅರಿವಿಲ್ಲದೆ ಹಿಂದಿನವರು ಮಾಡಿದ್ದ ಕೆಲವು ತಪ್ಪುಗಳನ್ನೂ ಐತಾಳರು ಪರಿಷ್ಕರಿಸುತ್ತಿದ್ದರು. ಸಹಜವಾಗಿ ಅದು ಪುಸ್ತಕಗಳ ಭೌತಿಕ ವಿವರಗಳನ್ನಷ್ಟೇ ಗ್ರಹಿಸಿ, ದಾಖಲಿಸುವ ಗುಮಾಸ್ತಗಿರಿಯಿಂದ ತುಂಬ ಮೇಲಿನದು. ನಾವೋ ಶಕುನದ ಗಿಳಿಯಂತೆ ಕಪಾಟುಗಳ ನಡುವೆ ಓಡಾಡಿ, ಕುಶಿ ಕಂಡ ಪುಸ್ತಕ ಎಳೆದು, ಸುಮ್ಮನೇ ಬೆರಳಾಡಿಸುವಷ್ಟೇ ಸಮಯ ಮತ್ತು ಉತ್ಸಾಹ ಇದ್ದವರು. ಐತಾಳರು ಸೌಜನ್ಯಕ್ಕಾಗಿ ನಮ್ಮ ಜತೆಗಿದ್ದು, ಅವರ ಕೆಲಸಕ್ಕೆ ತೊಂದರೆ ಮಾಡಿಕೊಳ್ಳುವುದು ಬೇಡವೆಂದು ಬೇಗನೆ ಜಾರಿದೆವು. ಬಯಲುರಂಗದ ಚಟುವಟಿಕೆಯಲ್ಲೀಗ ಅಧ್ಯಾಪಕರೂ ಸೇರಿಕೊಂಡಿದ್ದರು. ನೆಲಹಾಸು, ಕಟ್ಟೆಯನ್ನೆಲ್ಲ ಶುದ್ಧ ಮಾಡಿದ್ದರು. ಪ್ರೇಕ್ಷಾಂಗಣಕ್ಕೆ ತೆಳು ನೀರು ಹನಿಸಿ, ಕುರ್ಚಿಗಳನ್ನು ಜೋಡಿಸಿದ್ದರು. ಬಟ್ಟೆ ಒಗೆಯುವ ಕಲ್ಲು, ಡ್ರಮ್ಮಿನಲ್ಲಿ ನೀರು, ಎಂತದೋ ಮಳಿಗೆಯ ಸಾಮಗ್ರಿ, ಹೊಸ ಮಣ್ಣ ದಿಣ್ಣೆ, ಏನೋ ಸೊಪ್ಪು…. ಸಂಜೆಯ ಪ್ರಯೋಗಕ್ಕೆ ಸರದಿಸಾಲು ಹಿಡಿದಿದ್ದವು. ನಡುವೆ ಓಡಾಡುವ ಕೆಲವರು, ಇದ್ದಕ್ಕಿದ್ದಂತೆ ಚರವಾಣಿ, ಎದುರೊಂದು ವ್ಯಕ್ತಿ ಇಲ್ಲದೆಯೂ ಏನೋ ಉದ್ಗಾರ, ಯಾವುದೋ ಮಾತು ಎಸೆದು, ತಮ್ಮ ಪಾತ್ರವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರು! ಪ್ರೇಕ್ಷಾಂಗಣವನ್ನು ಉರಿಬಿಸಿಲು ಆಳುತ್ತಿದ್ದರೂ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಎಲ್ಲವನ್ನೂ ನೋಡುತ್ತ, ಪರ್ಯಾಯಗಳನ್ನು ಸೂಚಿಸುತ್ತ ಕೆಲವರು ಮೇಲ್ವಿಚಾರಣೆ ನಡೆಸುತ್ತಲೂ ಇದ್ದರು. ಅವರಿಗೆ ಅಡ್ಡಿಯಾಗದಂತೆ ನಾವು ಒಂದಷ್ಟು ಸುತ್ತಾಡಿದೆವು.

ಅಂತಿಮವಾಗಿ ನಮ್ಮಿಂದಾಗುವ ದೊಡ್ಡ ಸಹಾಯ – ಸಕಾಲಕ್ಕೆ ಸ್ವಂತದ ಊಟ, ಅನುಸರಿಸಿದಂತೆ ಸಣ್ಣ ವಿಶ್ರಾಂತಿ, ಸಂಜೆಯ ಕಾಫಿ ಮುಗಿಸಿ, ಪ್ರೇಕ್ಷಾಂಗಣದಲ್ಲಿ ಪ್ರಶಸ್ತ ಕುರ್ಚಿ ಅಲಂಕರಿಸಿದೆವು. ಐಸಾಕ್ ಬಾಶೆವಿಸ್ ಸಿಂಗರ್ (ಇಡ್ಡಿಶ್ ಮೂಲ) ಕಥೆ ಆಧರಿಸಿದ ಮಳ್ಳಗಿಂಪೆಲ್ಲನ್ನು (Gimpel the fool) ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗ ಅನುವಾದಿಸಿದ್ದರು. ಅದನ್ನು ನಾಟಕವಾಗಿ ವಿನ್ಯಾಸಗೊಳಿಸಿದ್ದು ಹೆಚ್.ಕೆ ಶ್ವೇತಾರಾಣಿಯಾದರೆ ನಿರ್ದೇಶಿಸಿದವರು ಎಮ್. ವಿನೀತ್ ಕುಮಾರ್. ಸಂಗೀತ ಸಂಯೋಜನೆಯಲ್ಲಿ ಗುರುಗಳಾದ ಅರುಣ್ ಕುಮಾರ್ ಮತ್ತು ಮೇಲ್ವಿಚಾರಣೆಯಲ್ಲಿ ಇನ್ನೋರ್ವ ಗುರು ಮಂಜು ಕೊಡಗು ಸಹಕರಿಸಿದ್ದರು. ಭಾರತಕ್ಕೇ ಭಿನ್ನವಾದ ಪ್ರದೇಶ ಮತ್ತು ಸಂಸ್ಕೃತಿಯೊಡನೆ ವ್ಯವಹರಿಸುವ (ಪ್ರಯೋಗ-ಪಾಠ) ನಾಟಕ ಕಲಾಪವಾಗಿ, ಮಳ್ಳಗಿಂಪೆಲ್ ಪ್ರಯೋಗ ಚೆನ್ನಾಗಿಯೇ ಇತ್ತು. ಆದರೆ ಪರಿಣಾಮದಲ್ಲಿ, ಭ್ರಾಮಕ ಕಲ್ಪನೆಗಳ ಮುಗ್ಧನ (ಗಿಂಪೆಲ್) ಶೋಷಣೆಯ ಕಹಿ ನನ್ನ ಗಂಟಲಲ್ಲುಳಿಯಿತು. ವಾಸ್ತವದಲ್ಲಿ ಇಂಥವು ಅಸಂಭವವೇನಲ್ಲ. ಆದರೆ ಅದಕ್ಕೆ ಕಲಾ ಪ್ರಾತಿನಿಧ್ಯ ಬೇಕೇ? ಯಾವುದಕ್ಕೂ ಈ ಪ್ರಯೋಗದ ದಾಖಲೀಕರಣವೂ ಸದ್ಯದಲ್ಲೇ ಸಂಕಲನದ ಮೇಜು ಕಳೆದು, ಪರಮಪದ ಸೋಪಾನಪಟದೊಡನೆ ಸಂಚಿ-ನೀನಾಸಂ ಸಹಯೋಗದ ಯೂ ಟ್ಯೂಬ್ ವಿಭಾಗದಲ್ಲಿ ಬರಲಿದೆ. ಅವಶ್ಯ ನೀವೇ ನೋಡಿ, ವಿಮರ್ಶಿಸಿ.

ಪ್ರಸ್ತುತ ನಾಟಕೋತ್ಸವ ನಿಜದಲ್ಲಿ ಮೂರು ದಿನಗಳದ್ದಿತ್ತು. ಮೂರನೇ ದಿನದ ಪ್ರಯೋಗ – ಜೋಗಿ ಪ್ರಣಯ, ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆಯದ್ದು; ನೀನಾಸಂನದ್ದಲ್ಲ. ಅದರ ದಾಖಲೀಕರಣ ಸಂಚಿಯ ವ್ಯಾಪ್ತಿಗೆ ಸೇರಿದ್ದಲ್ಲ ಎನ್ನುವುದಕ್ಕೆ ನಮಗೆ ತಿಳಿಸಿರಲಿಲ್ಲ, ಅಷ್ಟೆ. ಅಭಯನ ಬಳಗ ಮಳ್ಳಗಿಂಪೆಲ್ ಪ್ರದರ್ಶನ ಮುಗಿದದ್ದೇ ಅವಸರದಲ್ಲಿ ಊಟ ಮುಗಿಸಿ, ಬಂದಂತೇ ರಾತ್ರಿ ಬಸ್ ಹಿಡಿದು ಬೆಂಗಳೂರಿಸಿದರು. ನಾವು ಕತ್ತಲ ಸವಾರಿಯ ಅಪಾಯ ನಿವಾರಿಸುವುದಕ್ಕಾಗಿ ರಾತ್ರಿಗಷ್ಟೇ ಅಲ್ಲಿ ತಂಗಿದ್ದೆವು. 

೧೦. ಚಂಪಕ ಸರಸಿ ಉರುಫ್ ಮೇರ್ತಿಮಠ

“ನಾನು ಶೈಲೇಂದ್ರ ಬಂದಗದ್ದೇಂತ….” ನಾವು ಮಳ್ಳ ಗಿಂಪೆಲ್ಲನ್ನು ಕಾದಿದ್ದಾಗ, ಪಕ್ಕದಲ್ಲಿ ಬಂದು ಕುಳಿತ ಮಹನೀಯರು ಹೀಗೆ ಪರಿಚಯಿಸಿಕೊಂಡರು. ಪುಣ್ಯಾತ್ಮ ಹಿಂದೆ ಸಂಸ್ಕೃತಿ ಶಿಬಿರದಲ್ಲೂ ಪರಿಚಯಿಸಿಕೊಂಡಿದ್ದರಂತೆ, ನನ್ನ ಮರೆವಿಗೆ ಮದ್ದಿಲ್ಲ! ಅವರು ಕೆಳದಿ ಸಮೀಪದವರು. ನಮ್ಮ ಬೆಳಗ್ಗಿನ ಓಡಾಟ ತಿಳಿದ ಮೇಲೆ, ಆ ಬೆಳಿಗ್ಗೆ ತಮ್ಮಲ್ಲಿಗೇ ಬರಬೇಕಿತ್ತು ಎಂದೂ ಆಶಿಸಿದರು. ಅದಕ್ಕೂ ಮುಖ್ಯವಾಗಿ ನಮ್ಮ ತಿರುಗಾಡಿತನಕ್ಕೆ ಹೊಸತೊಂದು ಎರೆ ಕೊಟ್ಟರು – ಚಂಪಕ ಸರಸಿ. “ಹಿಂದಿರುಗುವ ದಾರಿಯಲ್ಲಿ ಬಟ್ಟೆಮಲ್ಲಪ್ಪದಿಂದ ನೇರ ಆನಂದಪುರಕ್ಕೆ ಹೋಗಿ. ಅಲ್ಲಿಂದ ಒಂದು ಕಿಮೀ ಈ ಕೆರೆ ದೇವಳ…” ಎಂದು ಸಾಕಷ್ಟು ಸೂಚನೆಗಳನ್ನು ಕೊಟ್ಟದ್ದಲ್ಲದೆ, ಅವರ ಚರವಾಣಿಯಲ್ಲಿದ್ದ ಆಕರ್ಷಕ ಒಂದೆರಡು ಚಿತ್ರಗಳನ್ನೂ ತೋರಿಸಿದ್ದರಿಂದ, ಹೊಸದಿನಕ್ಕೆ ನಮ್ಮ ದಿಕ್ಕು ನಿಶ್ಚಿತವಾಗಿತ್ತು.

ನಾವು ರಾತ್ರಿಯೇ ಅಕ್ಷರ ಶಿಶಿರಾದಿಗಳಿಂದ ಬೀಳ್ಕೊಂಡಿದ್ದೆವು. ನಾಗಾಭರಣರಿಗೂ “ಎರಡು ಕಾಫಿಯಲ್ಲೊಂದು ಚಪ್ಪೆಗೂ ನಿಲ್ಲಲ್ಲ” ಎಂದು ಖಾತ್ರಿ ಪಡಿಸಿದ್ದೆವು. ವಠಾರದ ಉಸ್ತುವಾರಿ ಮುಖ್ಯರಾದ ಪ್ರಭಾ ಹಾಗೂ ಕೃಷ್ಣಮೂರ್ತಿಗಳಿಗೆ ತಿಳಿಸಿದ್ದಂತೆ, ಅಂತರದಲ್ಲಿದೆ ಬೆಳಿಗ್ಗೆ ಆರು ಗಂಟೆಗೇ ಕೋಣೆಯ ಬಾಗಿಲೆಳೆದಿಟ್ಟು ಬೈಕ್ ಹೊರಡಿಸಿದ್ದೆವು. ಬೆಳಕು ಅರಳುತ್ತಿದ್ದಂತೆ, ತೆಳು ಮಂಜು ಹರಿದು, ನಸು ಚಳಿಯ ಕುಶಿ ಅಳಿಯುವ ಮೊದಲು ಬಟ್ಟೆಮಲ್ಲಪ್ಪದಲ್ಲಿ ಕಾಫಿಗೆ ನಿಂತೆವು. ಚಟ್ನಿ ಇನ್ನೂ ಕಡೆದಿರಲಿಲ್ಲ, ಒಡೆ ಕರಿದಿರಲಿಲ್ಲ. ಬರಿಯ ಸಾಂಬಾರಿನಲ್ಲೇ ಎರಡೆರಡು ತಟ್ಟೆ ಬಿಸಿ ಇಡ್ಲಿ ಏರಿಸಿ, ಆನಂದ (ವಾಗಿ) ಪುರದತ್ತ ಸಾಗಿದೆವು. ಊರ ಪ್ರವೇಶದಲ್ಲೇ ಯಾವುದೋ ಹೊಸ ಮಳಿಗೆ ‘ಚಂಪಕ ಸರಸಿ’ ಹೆಸರು ಎರವಲು ಪಡೆದದ್ದೇನೋ ಕಾಣಿಸಿತು. ನಿಜ ಐತಿಹಾಸಿಕ ನೆಲೆಯ ದಾರಿ ಸಿಕ್ಕಲಿಲ್ಲ. ಅವರಿವರ ಅಂದಾಜಿಗೆ ಶಿಕಾರಿಪುರ  ದಾರಿಯಲ್ಲಿ ಒಂದು ಕಿಮೀ ಮೇಲೆ ಕೆಳಗೆ ಓಡಾಡಿದ್ದೇ ಬಂತು.

ಕೊನೆಗೆ ನಮ್ಮ ಬಹುತರದ ವಿವರಣೆ ಕೇಳಿದ ಯಾರೋ ಪ್ರಾಯದ ಹೆಂಗಸು “ಅಯ್ಯೋ ಮೇರ್ತಿ ಮಠ ಅನ್ನಿ, ಚಂಪ್ಕಾ ಗಿಂಪ್ಕಾ…” ನಗುತ್ತಾ ತೋರಿದ ತೀರಾ ಕಚ್ಚಾ ಮಣ್ಣದಾರಿಗೆ ನುಗ್ಗಿದೆವು. ನೀರುಳ್ಳಿ ಮೂಟೆಗಳ ದಾಸ್ತಾನಿಟ್ಟಿದ್ದ ಹೊಲದ ಪಕ್ಕದಲ್ಲಾಗಿ ಕುರುಚಲು ಕಾಡಿನ ನಡುವೆ ಅಪ್ಪಟ ಸವಕಲು ಜಾಡು. ಆ ಕೊನೆಯಲ್ಲಿ ಐತಿಹಾಸಿಕ ಪ್ರಾಯದ ಮುರಕಲ್ಲಗೋಡೆಯ ಬಳಿ ಬೈಕಿಳಿದೆವು. ಗೋಡೆಗಿದ್ದ ಓಬವ್ವನ ಕಿಂಡಿಯಲ್ಲಿ ತೂರಿದಾಗ ಈ ಹಳೆಗಾಲದ ಸುಂದರಿ – ಚಂಪಕ ಸರಸಿ, ಅರ್ಥಾತ್ ಸಂಪಿಗೆ ಕೊಳ, ಬೆಳಗ್ಗಿನ ಸೂರ್ಯರಶ್ಮಿಯಲ್ಲಿ ಮಿಂದುಕೊಂಡಿತ್ತು. ಅನಂತರ ಕಂಡಂತೆ ದಾಸಕೊಪ್ಪದ ಮಸೀದಿ ಎದುರಿನಿಂದ, ಇಗರ್ಜಿ ಪಕ್ಕದಿಂದ ಅದಕ್ಕೆ ವಾಹನಯೋಗ್ಯ ಮಣ್ಣದಾರಿಯೂ ಅದಕ್ಕೆ ಇತ್ತು. 

ನಿರ್ಜನ, ನೀರವ, ಹಾಳುಬಿದ್ದ ಸ್ಥಳ ಎನ್ನಲಾಗದಂತೆ, ಶಿವಮೊಗ್ಗದಿಂದ ಬಂದ ಒಂದು ತಂಡ ಅಲ್ಲಿ ಪ್ರಿ-ವೆಡ್ ಶೂಟಿಂಗ್ ನಡೆಸಿತ್ತು. ಭರ್ಜರಿ ಮೂರು ಕಾರಿನಲ್ಲಿ ಆರೆಂಟು ಮಂದಿ ಕ್ಯಾಮರಾ, ಡ್ರೋನ್ ಸಜ್ಜಿತರಾಗಿದ್ದರು. ಅವರ ಟಚ್ಚಿಂಗೂ ಪೊಸಿಶನಿಂಗೂ ಲೈಟಿಂಗೂ ಯಾಕ್ಟಿಂಗೂ ಕ್ಯಾಮರಾ ಸೆಟ್ಟಿಂಗೂಗಳು ನಡೆದೇ ಇತ್ತು. ಅವುಗಳ ಎಡೆ ಎಡೆಯಲ್ಲಿ ನಾವು ಸ್ವಲ್ಪ ಎಕ್ಸ್‍ಕ್ಯೂಸ್ಮಿಗಳನ್ನು ಬಿಟ್ಟು ಕೆರೆಗೆ ಸುತ್ತು ಹಾಕಿ, ಕಲ್ಲ ಸೇತುವಿನಲ್ಲಿ ನಡುಗಡ್ಡೆಯ ಮಂಟಪಕ್ಕೇರಿ, ಅದಕ್ಕೂ ಒಂದು ಪ್ರದಕ್ಷಿಣೆ ಬಂದು, ಶಿವಲಿಂಗದ ದರ್ಶನ ಪಡೆದು, ಕೆರೆಯಿಂದಾಚೆಗಿದ್ದ ಮೂಲ ಲಿಂಗದೇವರನ್ನೂ ಸಂದರ್ಶಿಸಿ ಮುಗಿಸಿಕೊಂಡೆವು. ಹೊರಗೆ ಸುತ್ತಲೂ ಬೋಳು ದೂಳು ಹಾರುವ ಹೊಲ, ಬಿರು ಬೇಸಗೆಯ ದಿನ. ಆದರೂ ಅಷ್ಟು ನೀರ ಸಮೃದ್ಧಿಯ ಕೆರೆ, ಸಣ್ಣ ಜೀರ್ಣೋದ್ಧಾರದಲ್ಲೂ ಅದ್ಭುತ ದೃಶ್ಯಾವಳಿಗಳನ್ನೇ ಆ ರಚನೆಗಳು ನಮಗೆ ಕೊಟ್ಟಿತ್ತು. ಆ ಧನ್ಯತೆಯಲ್ಲೂ ತಗ್ಗಿ, ‘ಓಬವ್ವನಕಿಂಡಿ’ಗಾಗಿ ಬೈಕಿಗೆ ಮರಳಿದೆವು.

ಹದಿನೇಳನೇ ಶತಮಾನದ ಇಕ್ಕೇರಿಯರಸ ವೆಂಕಟಪ್ಪ ನಾಯಕನ ಕೊಡುಗೆಯಂತೆ ಈ ಕೆರೆ ದೇವಳ. ಮೊಗಲರ ತಾಜಮಹಲಿನಂತೇ ಇದಕ್ಕೂ ಪ್ರೇಮ ಕತೆಯ ಸ್ಪರ್ಷವಿದೆ. ಸಾಲದೆಂಬಂತೆ ಸವತಿ ಸಂಘರ್ಷದ ರೋಚಕತೆ, ಇಂದಿನ ಲೆಕ್ಕದಲ್ಲಿ ಹೇಳುವುದಿದ್ದರೆ ಧರ್ಮರಾಜಕಾರಣದ ಕಿಡಿಯೂ ಇದೆ. ಶೈಲೇಂದ್ರ, ಇದರ ಜೀರ್ಣೋದ್ಧಾರ ಹಾಗೂ ಇತಿಹಾಸದ ಕುರಿತು ಹೆಚ್ಚಿನ ಕೆಲಸ ಮಾಡಿದ (ಯಡೆಹಳ್ಳಿ) ಅರುಣ್ ಪ್ರಸಾದ್ ಅವರ ಹೆಸರನ್ನು ತಿಳಿಸಿದ್ದರು. ಅರುಣ್ ಇತಿಹಾಸ, ವದಂತಿಗಳನ್ನು ಹೊಸೆದು ರಮ್ಯ ಪುಸ್ತಕವನ್ನೇ ಪ್ರಕಟಿಸಿದ್ದೂ ನನಗೆ ತಿಳಿಯಿತು. ಆದರೆ ನನ್ನ ಶೋಧ ಹಾಗೂ ಸಂಪರ್ಕ ಪ್ರಯತ್ನಗಳು ಅವನ್ನು ಸಂಗ್ರಹಿಸುವಲ್ಲಿ ಇಂದಿನವರೆಗೆ ಫಲಕಾರಿಯಾಗಿಲ್ಲ. ನಿಮಗೇನಾದರೂ ತಿಳಿದಿದ್ದರೆ ಇಲ್ಲೇ ಹಂಚಿಕೊಳ್ಳಿ.

ದೇವಳ ವಠಾರದ ಪೌಳಿಯ ಮಗ್ಗುಲಿನಲ್ಲಿ ಮತ್ತಷ್ಟು ಸವಕಲು ಜಾಡಿನಲ್ಲಿ ಬೈಕ್ ನುಗ್ಗಿಸಿ, ಪ್ರಿ ವೆಡ್ಡಿನವರ ಕಾರುಗಳು ಬಂದಿದ್ದ ನಿಜ ದಾರಿ ಸೇರಿದೆವು. ಭಾರೀ ಲಾರಿ ಓಡಾಟದ ಲಕ್ಷಣವಿದ್ದ ಕೆಮ್ಮಣ್ಣ ದಾರಿಯ ಅರ್ಧದಲ್ಲೇ ಶೈಲೇಂದ್ರರು ಹೇಳಿದ್ದ ಮುರಕಲ್ಲ ಭಾರೀ ಕೋರೆಯನ್ನೂ ಕಂಡೆವು. ನಿಜ, ಶೈಲೇಂದ್ರರು ಹೇಳಿದಂತೆ ಆ ಮುರಕಲ್ಲ ಸೂರೆ ನಿಲ್ಲದೇ ಚಂಪಕಸರಸಿಯ ಅಭಿವೃದ್ಧಿಗೆ ಅರ್ಥ ಬರುವುದಿಲ್ಲ. ಕೇವಲ ದೇವಾಲಯದ ಶೈಥಿಲ್ಯ ಕಳೆದು, ಸುಂದರೀಕರಣ ಪೂರೈಸುತ್ತ ಕುಳಿತರೆ, ಕೆರೆಯಲ್ಲಿ ನೀರಿಲ್ಲವಾಗುವ ದಿನಗಳು ದೂರವಿಲ್ಲ. (ನೋಡಿ: ಚಂಪಕ ಸರಸಿ)

೧೧. ಸರಸಿನಿಂದೆದ್ದವಳಲ್ಲವೇ ಪದ್ಮಾವತಿ; ಹೊಂಬುಜ 

ಆನಂದಪುರದಿಂದ ತೀರ್ಥಳ್ಳಿ ದಾರಿ ಹಿಡಿದೆವು. ಇಲ್ಲಿ ಪಳಗಿದ ಕಿಲೋ ಕಲ್ಲುಗಳು ರಿಪ್ಪನ್ ಪೇಟೆಯೊಡನೆ ಹುಂಚದ ಇಳಿಯೆಣಿಕೆಯನ್ನು ಕೊಡತೊಡಗಿದವು. ಜೈನಕಾಶಿ ಎಂದೇ ಪ್ರಸಿದ್ಧವಾದ ನಮ್ಮ ಮೂಡಬಿದ್ರೆಯ ಜತೆಜತೆಗೇ ಎನ್ನುವಂತೆ ಈ ಹುಂಚ ಅಥವಾ ಹೊಂಬುಜದ ಜೈನ ಮಠದ ಕುರಿತೂ ನಾನು ಸಾಕಷ್ಟು ಕೇಳಿದ್ದೇನೆ. ಈಗ ದಾರಿಯಲ್ಲೇ ಸಿಕ್ಕುವಾಗ ಬಿಡುವುದುಂಟೇ? ಸಾಕಷ್ಟು ದೊಡ್ಡದೇ ಇರುವ ರಿಪ್ಪನ್ ಪೇಟೆಯನ್ನು ‘ಹಾರಿಸಿ’, ಹುಂಚದಲ್ಲಿ ಒಳ ತಿರುಗಿ, ಮಠದ ವಲಯವನ್ನು ಸೇರಿದೆವು.

ಭಾರತಕ್ಕೆ ನಿಜದಲ್ಲೂ ಬಹಳ ದೊಡ್ಡ ಇತಿಹಾಸವಿದೆ. ಆದರೆ ಅದನ್ನು ಮೀರುವ ಇತಿಹಾಸಪ್ರಜ್ಞೆಯ ಕೊರತೆಯೂ ಇದೆ! ನಮ್ಮ ಬಹುತೇಕ ಐತಿಹಾಸಿಕ ನೆಲೆಗಳಂತೆ, ಹುಂಚದಲ್ಲೂ ಆಧುನಿಕ ಪೇಟೆ ನಿರ್ಲಜ್ಜವಾಗಿ ಮಠಕ್ಕೆ ಮುತ್ತಿಗೆ ಹಾಕಿದೆ. ಸಾಲದೆಂಬಂತೆ ಮಠವೇ ತನ್ನ ಏಳನೇ ಶತಮಾನದಷ್ಟು ಪ್ರಾಚೀನತೆಯನ್ನು ಅವಗಣಿಸಿ, ಪುಟ್ಟ ಮಾನಸ್ತಂಭವನ್ನಷ್ಟೆ ಹೊರಗಿಟ್ಟು, ಸಾಮಾನ್ಯ ವಾಣಿಜ್ಯ ಕಟ್ಟಡದಂಥ ಮುಖಗವುಸು ಹಾಕಿ ಕುಳಿತಿದೆ. ಒಳ ಅಂಗಳಕ್ಕಿಳಿದ ಮೇಲೆ ಪರವಾಗಿಲ್ಲ ಎಂದಷ್ಟೇ ಅನಿಸಿತು. ಇಂದು ಅಲ್ಲಿ ನವ ಶಿಲಾ ಕೆತ್ತನೆಗಳ ಸಹಿತ ಭಾರೀ ಪುನಾರಚನೆ ಕೆಲಸ ನಡೆದಿರುವುದನ್ನು ಕಾಣಬಹುದು. ಕಾಲಮಾನದ ದುಷ್ಟ ಸುಳಿಯಲ್ಲಿ ಈ ಪುನಾರಚನೆ ಪಾರಂಪರಿಕ ರೂಪಕ್ಕೆ ವ್ಯತಿರಿಕ್ತವಾಗದಿದ್ದರೆ ಸಾಕೆಂದು ಆಶಿಸುವುದಷ್ಟೇ ನನಗೆ ಸಾಧ್ಯ.

ದೇವಳದ ಭಕ್ತ ಸಂದೋಹ ವಿರಳವೇ ಇತ್ತು. ನಾವು ವಿರಾಮದಲ್ಲೇ ಅಲ್ಲಿನ ಐತಿಹಾಸಿಕ ರಚನೆಗಳ ಹುಡುಕುನೋಟದಲ್ಲಿದ್ದಂತೆ, ಅತ್ತ ದಾಟುತ್ತಿದ್ದ ಅರ್ಚಕರಲ್ಲೊಬ್ಬರು ನಮಗೆ ಕಿವಿ ಮಾತು ಹೇಳಿದರು. “ಮೊದಲು ಅಮ್ಮನವರ ದರ್ಶನ ಮುಗಿಸಿಕೊಳ್ಳಿ, ಇನ್ನೇನು ಪೂಜೆ ಮುಗಿದುಬಿಟ್ಟರೆ ಗರ್ಭಗುಡಿ ಬಾಗಿಲು ಮುಚ್ಚುತ್ತಾರೆ.” ನಾವೂ ಜಿಂಕ್ ಶೀಟ್ ಗೋಡೆಯ ಮರೆಯಲ್ಲಿದ್ದ ಪ್ರಧಾನ ದೇವಿ – ಪದ್ಮಾವತಿ ಅಮ್ಮನ, ಸಾನ್ನಿಧ್ಯಕ್ಕೆ ಧಾವಿಸಿದೆವು. ಗರ್ಭಗುಡಿಯನ್ನು ಬಹುತೇಕ ಬಿಚ್ಚಿ ಹಾಕಿದ್ದಾರೆ. ಅಮ್ಮನವರ ಪೀಠ ಮತ್ತು ಅರ್ಚಕರ ಮಣೆಯಷ್ಟನ್ನು ಬಿಟ್ಟು ಸುತ್ತಲೂ ಪುನಾರಚನೆಯ ಕೆಲಸ ನಡೆದಿತ್ತು. ದೇವಳದ ಒಳಗೆ ಚಿತ್ರಗ್ರಹಣ ನಿಷೇಧವಿತ್ತು. ಇಲ್ಲವಾದರೆ ಸಹಜ ಸಾಮಾಜಿಕ ಸಾಮರಸ್ಯಕ್ಕೆ ಅಲ್ಲೊಂದು ಸಣ್ಣ ನಿದರ್ಶನವನ್ನು ನಾನು ಸೆರೆ ಹಿಡಿಯಬಹುದಿತ್ತು. ಅರ್ಚಕರ ಬೆನ್ನಿಗೆ ತಾಗಿದಂತೇ ಮೀಸೆಯಿಲ್ಲದೇ ಗಡ್ಡ ಬಿಟ್ಟ (ಬಹುಶಃ ಮುಸ್ಲಿಂ) ಕುಶಲಕರ್ಮಿಯೊಬ್ಬರು ಗಾರೆ ಕೆಲಸ ನಡೆಸಿದ್ದರು! 

ಹಿಂದೆ ವರಂಗದ ಕೆರೆ ದೇವಳದಲ್ಲಿ, ಜೈನ ಅರ್ಚಕರು ಕನ್ನಡದಲ್ಲಿ ಪೂಜಾಸ್ತೋತ್ರ ಹೇಳುವುದು ಕೇಳಿದ್ದೆ. ಆದರಿಲ್ಲಿ ಸಂಸ್ಕೃತವಿತ್ತು ಮತ್ತು ಅದೆಷ್ಟೋ ಸಂಖ್ಯೆಯ ಗುರಿಯಿದ್ದಂತೆ (ಶತನಾಮವೋ ಸಹಸ್ರನಾಮವೋ) ಮರುಕಳಿಸುತ್ತಲೇ ಇತ್ತು. ಅದು ಪೂರ್ಣಗೊಳ್ಳುವುದನ್ನು ಕಾಯದೇ ನಾವು ಮೆಲ್ಲ ಹೊರ ಬಂದೆವು. ಅಲ್ಲೇ “ಭಕ್ತರು ಪ್ರಸಾದ ಸ್ವೀಕರಿಸುವ ಸ್ಥಳ” ಎಂದೊಂದು ಬ್ಯಾನರ್ ಪಕ್ಕದ ಕಟ್ಟಡಕ್ಕೆ ಕೈ ಮಾಡಿತ್ತು. ಮೂಲತಃ ಹೊಟ್ಟೆಪಕ್ಷದವರೇ ಆದ ನಮಗೆ ಬಟ್ಟೆಮಲ್ಲಪ್ಪದ ಇಡ್ಲಿ ಮರೆವಿಗೆ ಸರಿದಿತ್ತು. ಆದರೆ ‘ಭಕ್ತ’ತನ ಒಪ್ಪಿಕೊಳ್ಳಲಾಗದ ಅಳುಕಿನಲ್ಲಿ ಸುಮ್ಮನೆ ಹೊರ ನಡೆದೆವು. ಅದಕ್ಕೆ ಸರಿಯಾಗಿ ಊರಬೀದಿಯಲ್ಲಿ ಮಠದ ಆನೆ ಮಾಹುತನನ್ನು ಹಿಂಬಿಟ್ಟು ಗಂಭೀರವಾಗಿ ನಡೆದು ಬಂತು. ದೇವಳದ ಎದುರು ಒಮ್ಮೆ ನಿಂತು ಹೂಂಕರಿಸಿತ್ತು. ಅದು ದೇವಿಗೆ ನಿಯತ್ತಿನ ನಜರೊಪ್ಪಿಸುವ ಕ್ರಮವೇ ಇದ್ದಂತಿತ್ತು. ಆದರೂ ನಾವು, ಪ್ರಸಾದ ಸ್ವೀಕಾರದ ಕುರಿತ ನಮ್ಮ ನಿಲುವಿನ ಅನುಮೋದನೆಯೆಂದೇ ಭಾವಿಸಿದೆವು.

ಮೊದಲು ನಾವು ದೇವಳದ ಒಳಗಿದ್ದಾಗಲೇ ಮಠದ ಚೌಕೀದಾರನೊಬ್ಬ ನಮ್ಮಲ್ಲಿಗೇ ಬಂದು “ಮಾಸ್ಕ್ ಹಾಕ್ಕೊಳ್ಳಿ” ಎಂದಿದ್ದ. ನಾವು ಆಚೀಚೆ ನೋಡಿ, ಇನ್ಯಾರೂ ಕಟ್ಟಿಕೊಂಡಿರಲಿಲ್ಲವಾದ್ದರಿಂದ ಆತನ ಮಾತನ್ನು ಉಪೇಕ್ಷಿಸಿದ್ದೆವು. ಈಗ ಆತ ಗೇಟಿನ ಬಳಿಯೇ ಇದ್ದ. ಅವನೂ ಮೂಗ್ಮುಚ್ಚ ಕಟ್ಟಿಕೊಂಡಿರಲಿಲ್ಲ. ನಾವು ಆತನ ಮಾತನ್ನು ತಳ್ಳಿಹಾಕಿದ ಗಾಂಭೀರ್ಯದಲ್ಲಿ ಬೈಕ್ ತೆಗೆದೆವು. ಆಗ ಆತ ಒಮ್ಮೆಲೇ ಗುರುತು ಹತ್ತಿದವನಂತೆ ಹತ್ತಿರ ಬಂದು ಹಲ್ಲು ಕಿಸಿದ. “ಓ ನೀವಾಗ್ಲೇ ಆನಂದ್ಪುರದಿಂದ ಬರ್ತಾ ನನ್ನನ್ನ್ ಹಿಂದಾಕಿದ್ರಿ!…” ಎಂದ. ಇರಬಹುದು ಎಂಬಂತೆ ನಾನು ಗೋಣಾಡಿಸಿದೆ. ನಮ್ಮ ಊರು ವಿಚಾರಿಸಿದ. ಮತ್ತೆ ಕ್ಷಮಾಕೋರಿಕೆಯ ಧ್ವನಿಯಲ್ಲಿ “ನೀವಿಬ್ರೂ ಸೀನಿಯರ್ ಸಿಟಿಜನ್ಸೂಂತಷ್ಟೇ ಮಾಸ್ಕ್ ಎಚ್ಚರಿಸಿದ್ದೆ…” ಇನ್ನಷ್ಟು ವಿಶಾಲ ನಗೆ ಕೊಟ್ಟ. ಸಮಾಧಾನಿಸುವವನಂತೆ “ಒಳಗೆ ಪ್ರಸಾದಾ ತೊಗೊಂಡ್ರಾ…” ವಿಚಾರಿಸಿಕೊಂಡ. “ನಾವು ಸುಮ್ಮನೆ ನೋಡಿ ಹೋಗಲು ಬಂದವರು. ಭಕ್ತರಲ್ಲ…” ಎಂದೆವು. ಆತ “ಅಯ್ಯೋ ಅಷ್ಟು ದೂರದಿಂದ ಸುಮ್ಮನೇ ಯಾರಾದರೂ ಬರ್ತಾರಾ, ನೀವೂ ಭಕ್ತರೇ! ಹೋಗಿ, ಇವತ್ತು ದೋಸೆ ಇರಬೇಕು, ತೊಗೊಳಿ…” ನಾವು ಕೇವಲ ನಕ್ಕು, ಬೈಕ್ ಹೊರಡಿಸಿದೆವು.

ಮೂಡಬಿದ್ರೆ ಮಂಗಳೂರಿಗರಿಗೆ ನೆರೆಮನೆ. ನನಗಂತೂ ಅದು ಸಾವಿರ ಕಂಬದ ಬಸದಿಯಿಂದ ತೊಡಗಿ ಕೊಡಂಜೆ ಕಲ್ಲು, ಕೊಡಂಗಲ್ಲು, ಪರ್ವತಾರೋಹಣ ಸಪ್ತಾಹಕ್ಕೊಲಿದ ಮಹಾವೀರ ಕಾಲೇಜು, ವೈವಿಧ್ಯಮಯ ಚಟುವಟಿಕೆಗಳ ಕೇಂದ್ರವಾದ ಆಳ್ವಾ ಸಂಸ್ಥೆಗಳು, ಗೆಳೆಯ ಕೃಷ್ಣಮೋಹನ ಪ್ರಭು, ಕಾಂತಾವರದ ಗುಹೆ, ಬೆಳ್ವಾಯಿಯ ಚಿಟ್ಟೆ ಪಾರ್ಕ್ ಎಂಬಿತ್ಯಾದಿ ನೂರು ಕಾರಣಕ್ಕೆ ಆತ್ಮೀಯವೇ ಇತ್ತು. ಇವೆಲ್ಲವುಗಳಂತೆ ಅಲ್ಲೇ ಸಂಸ್ಥಾ ಹಾಗೂ ವ್ಯಕ್ತಿ ಸಂಬಂಧದಲ್ಲೂ ಆತ್ಮೀಯವಾದ ಇನ್ನೊಂದು ಹೆಸರು ‘ಸೋನ್ಸ್’ (ಡಾ| ಎಲ್.ಸಿ ಸೋನ್ಸ್ ಮತ್ತವರ ಕೃಷಿಕ್ಷೇತ್ರ). ಈಚಿನ ದಿನಗಳಲ್ಲಿ ನನ್ನ ಮೂಡಬಿದ್ರೆ ಓಡಾಟ ಕಡಿಮೆಯಾಗಿ, ಸೋನ್ಸರ ಹೊಸ ಪ್ರಯೋಗವೊಂದನ್ನು ನೋಡಲು ಮತ್ತು ಸ್ವಾಂಗೀಕರಿಸಿಕೊಳ್ಳಲು ಹಿಂದೆ ಬಿದ್ದಿದ್ದೆ. ಆ ಕೊರತೆಯನ್ನು ಈ ಬಾರಿಯ ಹೆಗ್ಗೋಡು ಓಟದಲ್ಲಿ ಅರ್ಧ ದಿನದಷ್ಟಾದರೂ ತುಂಬಿಕೊಳ್ಳಬೇಕೆಂಬ ಚಿಂತನೆಯೂ ತಲೆಯೊಳಗೆ ಅಸ್ಪಷ್ಟವಾಗಿ ರೂಪುಗೊಳ್ಳುತ್ತಲೇ ಇತ್ತು.

ಹೊಂಬುಜ ನೋಡಿ ಮುಗಿಯುವಲ್ಲಿ ಮತ್ತೆ ಸಮಯ ನಮ್ಮ ಕೈ ಬಿಟ್ಟಿತ್ತು. ಹೋಗುವ ದಾರಿಯಲ್ಲಿ ಮುಂದೂಡಿದ್ದ ಎರಡೂ ಭೇಟಿಗಳಿಗೆ ಇನ್ನು ಪ್ರಶಸ್ತ ಸಮಯವಲ್ಲ ಎಂದೂ ಅನ್ನಿಸಿತು. (ಊಟದ ಹೊತ್ತಿಗೆ ಮುಂದಾಗಿ ತಿಳಿಸದೇ ಯಾರ ಮನೆಗೂ ಹೋಗಬಾರದು.) ಹಾಗಾಗಿ ಭಗವತೀ ಘಾಟಿಯ ಪರ್ಯಾಯ ದಾರಿಯನ್ನೂ ಬಿಟ್ಟು, “ಮೂಡಬಿದ್ರೆ ಚಲೋ” ಎಂದು ಬಿಟ್ಟೆ. 

ದಾರಿ ಶೆಟ್ಟಿಹಳ್ಳಿ ವನಧಾಮದ ಸೆರಗಿನಲ್ಲೇ ಓಡಿತ್ತು. ಆದರೆ ತೀರ್ಥಳ್ಳಿಗೂ ಸ್ವಲ್ಪ ಮೊದಲು ಬಲ ಮಗ್ಗುಲಿನ ಎರಡು ಮೂರು ಗುಡ್ಡಗಳ ಉದ್ದಕ್ಕೆ ಪೂರ್ಣ ಕಾಡು ಬೋಳಿಸಿ, ಮರಗಳನ್ನು ಸೈಜುವಾರು ಒಟ್ಟಿಟ್ಟದ್ದು ಕಂಡು ಗಾಬರಿಯಾಯ್ತು. ಆ ಕಾಡಾದರೂ ಬಹುತೇಕ ಅಕೇಸಿಯಾದಂತಿತ್ತು. ಪ್ರಾಕೃತಿಕ ಅರಣ್ಯಕ್ಕೆ ಹಿಂದೆಂದೋ ಎರವಾಗಿದ್ದ ಆ ಭೂಮಿಗೆ ಇದು ಎರಡನೇ ಅವಹೇಳನವಿರಬೇಕು. ಯಾರಿಗೆ ಗೊತ್ತು, ಮೂರನೇ ಅವಕಾಶ ಕೊಡುವಂತೆ ಅಲ್ಲಿ ಬರುವ ಮಳೆಗಾಲದಲ್ಲಿ ಗಿಡ ನೆಡುತ್ತಾರೋ ಎಲ್ಲ ಮಟ್ಟ ಮಾಡಿ ಔದ್ಯಮಿಕ ಕಟ್ಟಡಗಳನ್ನೆಬ್ಬಿಸುತ್ತಾರೋ! ಗುಣಮಣಮಿಲ್ಲದ ಕಾಲಪುರುಷನೇ ಹೇಳಬೇಕು.

ತೀರ್ಥಳ್ಳಿಯನ್ನು ಹಾರಿಸಿದೆ. ಆಗುಂಬೆ ಮುಟ್ಟುವಾಗ ಎಡೆಬಿಡಂಗಿ ಕಾಲ; ಕೇವಲ ಚಾ ಸಾಲದು, ಊಟಕ್ಕೆ ನಿಂತರೆ ಬೇಗಾಯ್ತು! ಏನೋ ಒಂದೆಂದು ಮತ್ತೆ ಶಬರಿ ಗ್ರ್ಯಾಂಡಿನಲ್ಲೇ ನಿಂತೆವು. ನೀರುಳ್ಳಿ ದೋಸೆ, ಕಾಫಿ ಪೂರೈಸಿಕೊಂಡೆವು. ಅನಂತರ ಚಾಲೂಗೊಂಡ ಬೈಕ್ ಘಾಟಿಯಲ್ಲಿ ಸುಳಿದಾಡಿ, ಸೋಮೇಶ್ವರ, ಮುದ್ರಾಡಿ, ವರಂಗ, ಅಜೆಕಾರುಗಳೇನು ಕಾರ್ಕಳದ ದೊಡ್ಡ ಪೇಟೆಯೊಳಗೂ ತಡವರಿಸದೇ ಓಡೋಡಿ ನಿಂತದ್ದು – ಮೂಡಬಿದ್ರೆಯ ಹೊರವಲಯದ ಸೋನ್ಸ್ ಪಾರ್ಮಿನಲ್ಲಿ. 

೧೨. ಸೋನ್ಸರ ಅದ್ಭುತ ಕರ್ಮಭೂಮಿ

ಕನ್ನಡದ ವೈಚಾರಿಕ ಓದುಗರಿಗೆಲ್ಲ ಬಹು ಆಪ್ತರೇ ಆದ (ಕೀರ್ತಿಶೇಷ) ಬಿಜಿಎಲ್ ಸ್ವಾಮಿಯವರ ಶಿಷ್ಯ, (ಇನ್ನೋರ್ವ ಸಸ್ಯಸಂಪದದ ನೇತಾರ ದಿ. ಪಳ್ಳತಡ್ಕ ಕೇಶವ ಭಟ್ಟರ ಸಹಪಾಠಿ,) ಜೀವವಿಜ್ಞಾನದಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ ಪದವಿಗಳನ್ನು (ಡಾಕ್ಟೊರೇಟ್) ಪಡೆದದ್ದಲ್ಲದೆ, ವಿಶೇಷ ವಿದೇಶೀ ಅಧ್ಯಯನಗಳನ್ನೂ ನಡೆಸಿದ ಸಂಪನ್ನರು – ಮೂಡಬಿದ್ರೆಯ ಎಲ್.ಸಿ.ಸೋನ್ಸ್. ಅಷ್ಟೆಲ್ಲ ಬಿರುದುಗಳನ್ನು (ವಿವಿನಿಲಯಗಳಲ್ಲಿ ನಗದುಮಾಡಿಕೊಳ್ಳುವುದು ಬಿಟ್ಟು) ತಮಗೆ ಪರಂಪರೆಯಿಂದ (ಮೂಡು) ಬಿದರೆಯಲ್ಲೇ ಬಂದ ಭೂಮಿಯಲ್ಲಿ ಹೂಡಿ, ಅಪೂರ್ವ ಬಿದಿರುವನಕ್ಕೂ ಕಾರಣರಾಗಿರುವ ಸೋನ್ಸರ ಸಾಧನೆ ನಾನು ಅನ್ಯತ್ರ ಕಂಡಿಲ್ಲ, ಕೇಳಿಲ್ಲ. ಕೃಷಿಯಲ್ಲಿವರು ಕುರುಡು ಪ್ರಾದೇಶಿಕತೆಯನ್ನು (ಅಡಿಕೆಯೊಂದೇ ಬೆಳೆ) ವೈಚಾರಿಕ ಒರೆಗಲ್ಲಿಗೆ ಉಜ್ಜಿ, ಕಲಿಕೆಯ ಪ್ರಾಯೋಗಿಕತೆಯ ಒಪ್ಪಕೊಟ್ಟು, ತನ್ನ ಮಣ್ಣಿನ ಯೋಗ್ಯತೆಗೆ ತಕ್ಕಂತೆ ರೂಪಿಸಿದರು. (ಗುಡ್ಡೆಯಲ್ಲಿ ನೀರಾವರಿ ಕೊಟ್ಟು, ಕಂಪದಲ್ಲಿ ಬಸಿಕಾಲುವೆ ತೋಡಿ ತೋಟ ಮಾಡಲಿಲ್ಲ!) ಅದಕ್ಕೆ ಒಂದು ಸಣ್ಣ ಉದಾಹರಣೆಯಾಗಿ ಕಾಣುವುದು ‘ಸೋನ್ಸರ ಅನಾನಸು’. ಅನಾನಸು ಹಣ್ಣುಗಳಿಗೆ ಇಂದು ಜಿಲ್ಲೆ ಮಾತ್ರವಲ್ಲ, ಮುಂಬೈಯ ದೂರದಲ್ಲೂ ‘ಸೋನ್ಸ್’ ಎನ್ನುವ ಪೂರ್ವಪದ, ಉತ್ತಮ ಗುಣಮಟ್ಟಕ್ಕೊಂದು ಪ್ರಮಾಣವೇ ಆಗಿದೆ. 

‘ಕೃಷ್ಯುತ್ಪನ್ನಗಳ ಮೌಲ್ಯ ವರ್ಧನೆ’ ಎನ್ನುವ ವಿಚಾರ ಈಚೆಗೆ ತುಂಬಾ ಚಾಲ್ತಿಯಲ್ಲಿದೆ. ಆದರೆ ಇದನ್ನು ಕೆಲವು ದಶಕಗಳ ಹಿಂದೆಯೇ ಚಿಂತಿಸಿ, ಯಶಸ್ಸು ಕಂಡದ್ದಲ್ಲದೇ ಸಾರ್ವಜನಿಕರಿಗೂ ತೆರೆದಿಟ್ಟವರು ಸೋನ್ಸ್. ಇವರ ಕೃಷಿಭೂಮಿ ಆಸಕ್ತರಿಗೆ ಮುಕ್ತ ಪ್ರಾತ್ಯಕ್ಷಿಕೆಗಳು. ಬಯಸಿ ಬಂದವರಿಗೆ ಇವರು ಕೊಟ್ಟ ಸಲಹೆ, ಸಸ್ಯಪುನರುತ್ಪಾದನಾ ಸವಲತ್ತುಗಳ ಲೆಕ್ಕ ಇಟ್ಟವರಿಲ್ಲ. ಅಪಾರ ಸಸ್ಯವೈವಿಧ್ಯಕ್ಕೂ ಅವುಗಳ ಬಹುಮುಖೀ ಸಾರ್ಥಕ ಬಳಕೆಗೂ ಸೋನ್ಸ್ ಫಾರ್ಮ್ ಇಂದಿಗೂ ಮಾದರಿ ಹೆಸರು.

ಜೀವನದ ಒಂದು ಮಾರ್ಗದಲ್ಲಿ ಯಶಸ್ಸು ಕಂಡ ಯಾರನ್ನೇ ಸಾರ್ವಜನಿಕವಾಗಿ ಸಮ್ಮಾನಿಸುವ ಸಂದರ್ಭಗಳಲ್ಲಿ, ಸುಳ್ಳೇ ಸದ್ಗುಣ ಆರೋಪಿಸುವುದನ್ನು ಕೇಳುತ್ತಲೇ ಇರುತ್ತೇವೆ. ಅದಕ್ಕೆ ಅಪವಾದವಾಗಿ ನಿಲ್ಲಬಲ್ಲವರು ಸೋನ್ಸರು. ನಾನು ಅಂಗಡಿ ತೆರೆದಂದಿನಿಂದಲೂ ಕಂಡಿದ್ದೇನೆ, ಸೋನ್ಸರ ಕುಟುಂಬ ಇಂಗ್ಲಿಷ್ ಹಾಗೂ ಕನ್ನಡ ಪುಸ್ತಕಗಳಲ್ಲಿ, ಸಾಹಿತ್ಯದಿಂದ ಸಂಶೋಧನೆಯವರೆಗೆ ಯಾವ ತೋರಿಕೆಯಿಲ್ಲದ ದೊಡ್ಡ ಗಿರಾಕಿ. ಮೂಡಬಿದ್ರೆಯ ಸಾಂಸ್ಕೃತಿಕ ವೇದಿಕೆಯಾದ ಸಮಾಜ ಮಂದಿರದ ಉಪನ್ಯಾಸ, ಸಂಗೀತ, ನಾಟಕಾದಿ ಕಲಾ ಚಟುವಟಿಕೆಗಳಿಗೆ ಸೋನ್ಸ್ ನಿರಂತರ ಬುದ್ಧಿಪೂರ್ವಕ (ಆರ್ಥಿಕ ಕೊಡುಗೆಯಿಂದಲೂ) ಘನ ಪೋಷಕರು.

ಸೋನ್ಸ್ ಕವೆಗೋಲು ಹಿಡಿದು ಭೂಗರ್ಭದ ರಹಸ್ಯಗಳನ್ನು ಬೇಧಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ. ಬಾವಿ ತೂತುಬಾವಿಗಳ ತುರ್ತಿನವರಿಗೆ ಇವರು ಕೊಟ್ಟ ಸಲಹೆ ಸಹಕಾರ ಸ್ವಲ್ಪವೇನಲ್ಲ. ಅದೇ ಶಕ್ತಿಯಲ್ಲಿ ಒಮ್ಮೆ ಇವರು ಕಾಂತಾವರದಲ್ಲಿ ಮನುಷ್ಯ ಶೋಧಕ್ಕಿನ್ನೂ ಒಡ್ದಿಕೊಳ್ಳದ ಪ್ರಾಕೃತಿಕ ಗುಹೆಯೊಂದರ ಬಗ್ಗೆ ಕಣಿ ನುಡಿದದ್ದು ನನ್ನ ಕಿವಿ ಮುಟ್ಟಿತ್ತು. ಆ ಕಾಲದಲ್ಲಿ (೧೯೮೦ರ ದಶಕ) ನಮ್ಮ ಆರೋಹಣ ಬಳಗ ಪ್ರಾಕೃತಿಕ ಗುಹಾಶೋಧಗಳನ್ನು ನಡೆಸಿತ್ತು. ಸಹಜವಾಗಿ ಕಾಂತಾವರದ ಗುಹೆಯನ್ನು ಸಾಹಸಮಯವಾಗಿ ಹೊಕ್ಕು, ಪ್ರತ್ಯಕ್ಷ ಸಾಕ್ಷಿಯೊಡನೆ ಸೋನ್ಸರ ಕಣಿಯನ್ನು ಪ್ರಮಾಣಿಸುವ ಅವಕಾಶ ನನ್ನ ತಂಡಕ್ಕೆ ಒದಗಿತ್ತು. ಈ ರೋಮಾಂಚಕ ಅನುಭವವನ್ನು, ನಾನೇ ಅಂದಿನ (೪-೩-೧೯೮೪) ಸುಧಾ ವಾರಪತ್ರಿಕೆಯಲ್ಲಿ ಸಚಿತ್ರ ಲೇಖನವಾಗಿ ಪ್ರಕಟಿಸಿದ್ದೆ. (ಅದನ್ನು ಪರಿಷ್ಕರಿಸಿ ಸದ್ಯದಲ್ಲೇ ನನ್ನ ಜಾಲತಾಣಕ್ಕೆ ಏರಿಸುತ್ತೇನೆ.)

ಗುಹಾಶೋಧಗಳ ಸಂದರ್ಭದಲ್ಲೇ ನನಗೆ ಸೋನ್ಸರ ಇನ್ನೊಂದು ಪ್ರಯೋಗ – ಮನುಷ್ಯ ಪ್ರಯತ್ನವಿಲ್ಲದೇ ಸಸ್ಯ ಪುನರುತ್ಥಾನ, ನೋಡುವ ಅವಕಾಶ ಬಂದಿತ್ತು. ಅವರ ಕೃಷಿಭೂಮಿಯ ಹಿತ್ತಲಿನಲ್ಲೇ (ಬಹುಶಃ) ನಾಲ್ಕೈದು ಎಕ್ರೆ ಮುಳಿಗುಡ್ಡೆಯ ಸಣ್ಣ ಬೋಗುಣಿಯಂಥ ನೆಲ, ಇವರ ವಶದಲ್ಲಿತ್ತು. ಅದು ಸಾಕುಪ್ರಾಣಿಗಳ ಮೇವಿಗೆ ದಕ್ಕದಂತೆ, ಅದನ್ನು ಹುಲ್ಲು ಸೊಪ್ಪು ಸೌದೆ ಎಂದಿತ್ಯಾದಿ ಸಂಗ್ರಾಹಕರಿಗೆ ಸಿಕ್ಕದಂತೆ, ಕೇವಲ ಪೌಳಿಗೋಡೆ ಕಟ್ಟಿ ರಕ್ಷಣೆ ಒದಗಿಸಿದ್ದರು. ಹತ್ತೆಂಟು ವರ್ಷಗಳ ಈ ತಪಸ್ಸಿನ ಫಲ (ಕಾಯುವಿಕೆಗಿಂತ ಅನ್ಯ ತಪವಿಲ್ಲ ಎಂದಿದ್ದಾರೆ ಕುವೆಂಪು) ಎನ್ನುವಂತೆ ಅಲ್ಲಿ ಬಂದಿದ್ದ ಸಹಜ ವನ್ಯ ಸಂಪತ್ತು, ಜಲಸಮೃದ್ಧಿ ಬಹಳ ಆಶ್ಚರ್ಯಕರವಾಗಿತ್ತು. ಅದರ ಪ್ರಭಾವದಲ್ಲೇ ನಾನು ೧೯೯೮ರಲ್ಲಿ ಮುಡಿಪಿನ ಬಳಿ ಒಂದು ಎಕ್ರೆ ಬೋಳುಗುಡ್ಡೆಯನ್ನು ಕೊಂಡು, ‘ಅಭಯಾರಣ್ಯ’ ಎಂದು ಹೆಸರಿಸಿ, ಕಾಪಾಡುವುದು ಸಾಧ್ಯವಾಯ್ತು. ನನ್ನ ಅಭಯಾರಣ್ಯದ ಕಿರು ಔಪಚಾರಿಕ ಘೋಷಣೆಯ ಕಲಾಪಕ್ಕೆ ಸೋನ್ಸ್ ಸ್ವತಃ ಬಂದು ಭಾಗವಹಿಸಿ ನನ್ನ ಸಂತೋಷವನ್ನು ಹೆಚ್ಚಿಸಿದ್ದರು. (ನೋಡಿ: ವನ್ಯ ಪುನರುತ್ಥಾನದಲ್ಲೊಂದು ಸಣ್ಣ ಪ್ರಯತ್ನ)

ಕೃಷಿಮಾರುಕಟ್ಟೆಗಳ ಅಸ್ಥಿರತೆಗೆ ಉತ್ತರವಾಗಿ ಸೋನ್ಸ್ ತಮ್ಮ ಕೃಷ್ಯುತ್ಪನ್ನಗಳ ಮೌಲ್ಯವರ್ಧನೆಯೊಡನೆ, ನೇರ ಗ್ರಾಹಕರನ್ನು ಸಂಪರ್ಕಿಸುವ ಕೈಯನ್ನೂ ಚಾಚಿದ್ದರು. ಮುಂದುವರಿದ ಕಾಲದಲ್ಲಿ, ಸಾರ್ವಜನಿಕರಲ್ಲಿ ನಾವು ತಿನ್ನುವ ಆಹಾರದ ಕುರಿತ ಅರಿವು ಹೆಚ್ಚುತ್ತ ಬಂತು. ಅದಕ್ಕೆ ಇಂದು, ವಿಷ ಮುಕ್ತವಾದ ಕೃಷಿಕ್ಷೇತ್ರದ ಪ್ರತ್ಯಕ್ಷ ದರ್ಶನ, ತಾಜಾ ಅಥವಾ ಮೌಲ್ಯವರ್ಧಿತ ಉತ್ಪನ್ನಗಳ ಖರೀದಿ ಮತ್ತು (ಆರೋಗ್ಯಪೂರ್ಣ ಪರಿಸರದಲ್ಲಿ) ಸೀಮಿತ ವಾಸ್ತವ್ಯಕ್ಕೆ ಅವಕಾಶಗಳನ್ನು ಸೋನ್ಸ್ ತನ್ನ ಕೃಷಿಕ್ಷೇತ್ರದಲ್ಲೇ ಸಾರ್ವಜನಿಕರಿಗೆ ತೆರೆದಿಟ್ಟಿದ್ದಾರೆ. ಹಾಗಾಗಿ… ಮಧ್ಯಾಹ್ನ ಹನ್ನೆರಡೂಮುಕ್ಕಾಲಾಗಿದ್ದರೂ ನಾವು ವಿಶೇಷ ಸಂಕೋಚ ಮಾಡದೇ ನೇರ ಸೋನ್ಸ್ ಕೃಷಿಕ್ಷೇತ್ರದೊಳಗೆ ನುಗ್ಗಿ, ಸ್ವಾಗತ ಕಚೇರಿಯ ಎದುರೇ ನಿಂತೆವು. ಪಕ್ಕದಲ್ಲೇ ಸೋನ್ಸರ ವಾಸದ ಮನೆ. ನಮ್ಮ ಅದೃಷ್ಟಕ್ಕೆ ಶ್ರೀಮತಿ ಸೋನ್ಸರೇ ಎದುರಾಗಿ “ಅಯ್ಯೋ ಎಷ್ಟು ವರ್ಷವಾಯ್ತೂ ನೋಡದೇ…” ಎಂಬ ಉದ್ಗಾರದೊಡನೇ ಸ್ವಾಗತಿಸಿದರು.

ಡಾ| ಸೋನ್ಸ್ ಮತ್ತು ಅವರ ಕಿರಿಯ ಮಗ ಚಪ್ಪರದೊಳಗಿನ ಮಾರಾಟ ಗಲ್ಲಾದಲ್ಲಿದ್ದವರೂ ಆತ್ಮೀಯವಾಗಿಯೇ ಬರಮಾಡಿಕೊಂಡರು. ಗಲ್ಲಾ ಬಿಟ್ಟು ಎದ್ದು, ಪಕ್ಕದಲ್ಲೇ ಇಟ್ಟಿದ್ದ ವಿಶಿಷ್ಟ ಕುರ್ಚಿ ಮೇಜಿನ ಎದುರೇ ಕೂರಿಸಿದರು. ನಾನು ಗಿರಾಕಿಯ ಹಕ್ಕಿನಲ್ಲಿ ಬಾಯಾರಿಕೆಗೆ ಹಣ್ಣಿನ ರಸ ಕೇಳಬೇಕೆಂದಿದ್ದವನನ್ನು ಉಪೇಕ್ಷಿಸಿ, ಆತಿಥೇಯನ ಜಬರದಸ್ತಿನಲ್ಲಿ ದೊಡ್ಡ ದೊಡ್ಡ ಲೋಟಗಳ ತುಂಬಾ ತಾಜಾ ಅನಾನಸಿನ ರಸ ಕೊಟ್ಟರು. ಹೆಚ್ಚು ಕಾಲದ ಬಾಳ್ತನಕ್ಕಾಗಿ ತುಸು ಸಕ್ಕರೆಯಲ್ಲಿ ಸಂಸ್ಕರಿಸಿ, ಬಿಸಿಗೂಡಿನಲ್ಲಿ ಒಣಗಿಸಿ ಗರಿಗರಿಯಾಗಿದ್ದ ಅನಾನಸು ಹೋಳುಗಳನ್ನು ತಿನ್ನಲಿಟ್ಟರು. ಮಾತಿಗಂತೂ ಲಗಾಮೇ ಇರಲಿಲ್ಲ.

ಸೋನ್ಸ್ ಫಾರಂ ಒಂದಕ್ಕೆ ಊಟದ ಬಿಡುವಿನೊಡನೆ ಬಂದಾಗುವುದಿತ್ತು. ನಮ್ಮ ‘ಉಪಚಾರ’ದ ಗಡಿಬಿಡಿಯಲ್ಲಿ ಗಂಟೆ ಒಂದೂ ಕಾಲಾಗಿತ್ತು. ನಾವು ಅವಸರದಲ್ಲಿ ಕುರ್ಚಿ ಬಿಟ್ಟೆದ್ದೆವು. ಒಂದು ದೊಡ್ಡ ಅನಾನಸು, ಒಂದೊಂದು ಜ್ಯಾಮ್ ಮತ್ತು ಒಣ ಹಣ್ಣಿನ ಡಬ್ಬಿ ಕೊಂಡೆವು. ಉಳಿದವನ್ನು ವಿರಾಮದಲ್ಲಿ ನೋಡುತ್ತಾ ಎಂಬತ್ತರ ಮೇಲಿನ ಹರಯದ ದಂಪತಿಯನ್ನು ಬಳಲಿಸದಂತೆ, “ಈಗ ನಿಮ್ಮ ಊಟದ ಬಿಡುವು, ಹೋಗಿ. ನಾವು ತೋಟದ ಸುತ್ತು ತೆಗೆಯಲು ಇನ್ನೊಮ್ಮೆ …..” ಅವರು “ಇಲ್ಲ ಇಲ್ಲ, ನೀವು ನಮ್ಮೀ ತೋಟದ ಮಾರ್ಗದರ್ಶಿ (ಮೂರು ಪುಟದ ಕರಪತ್ರ) ತೊಗೊಳಿ, ಮತ್ತೆ ….” ನಕ್ಷೆಯಲ್ಲಿ ನಮ್ಮ ಸ್ಥಾನ ತೋರಿಸಿ, ಸ್ಥಳಗಳಲ್ಲಿ ಹಾಕಿದ ಬಾಣದ ಗುರುತು ಅನುಸರಿಸಿಕೊಂಡು, ಬೇಕಾದಷ್ಟು ಹೊತ್ತು ತೋಟ ಸುತ್ತಲು ಮುಕ್ತಗೊಳಿಸಿದರು. ನಾವು ಅವರ ‘ವೀಕ್ಷಣಾ ವಾಹನ’, ಜನ ಬಯಸಲಿಲ್ಲ. ಅವರೇ ಮಾತು ಮುಗಿಸುತ್ತಾ “…ನಿಮಗೆ ಸುತ್ತಾಡಿದ್ದು ಸಾಕೆನ್ನಿಸಿದಾಗ, ಗೇಟು ತೆರೆದು ಕೊಡಲು ಕೆಲಸದವನಿಗೆ ಹೇಳಿರ್ತೇವೆ” ಎಂದು ಆಪ್ತವಾಗಿ ಬೀಳ್ಕೊಂಡರು. 

ಸುಮಾರು ಒಂದು ಗಂಟೆಯ ಕಾಲ ಮ್ಯೂಸಿಯಂ (ಅದು ಬಾಗಿಲು ಹಾಕಿತ್ತು) ಹಿತ್ತಿಲಿನಿಂದ ಹೊರಟು, ಮುಖ್ಯವಾಗಿ ಬಿದಿರ ಮೆಳೆಗಳ ತೋಪು ದಾಟಿ, ಅನಾನಸುಗಳ ಹೊಲ ಹಾಯ್ದು, ಇನ್ನೊಂದೇ ಮಗ್ಗುಲಿನ ಅಸಂಖ್ಯ ಸಸ್ಯ ವೈವಿಧ್ಯಗಳ ದಾರಿ ಸವೆಸಿದೆವು. ಮುಕ್ತ ಬಿಸಿಲು ಬಯಸುವ ಅನಾನಸಿನ ಮಡಿಗಳನ್ನು ಬಿಟ್ಟು ಉಳಿದೆಲ್ಲೆಡೆಯೂ ದಾರಿಯಂಚಿನಲ್ಲೂ ಅನ್ಯ ಸಸ್ಯ ವೈವಿಧ್ಯ ಧಾರಾಳ ಇದ್ದವು. ಹಲವು ಸಸ್ಯಗಳ ಮೇಲೆ ಹೆಸರಿನ ಫಲಕಗಳು ನೇತುಬಿದ್ದಿದ್ದವು. ಇಲ್ಲದಿದ್ದಲ್ಲೂ ಅವನ್ನು ನಕ್ಷೆಯ ಬಲದಲ್ಲೇ ತಿಳಿದುಕೊಳ್ಳುವ ಸೌಲಭ್ಯ ಕಲ್ಪಿಸಿದ್ದರು. ಪ್ರಕೃತಿ ವೈವಿಧ್ಯ ಸವಿಯುವಲ್ಲಿ ನಮ್ಮ ಆಸಕ್ತಿ ಪ್ರಶ್ನಾತೀತ, ಆದರೆ ರುಚಿ ನಿರಪೇಕ್ಷ! (ಅಜ್ಞಾನ!!) ಸುಲಭ ಗುರುತಿನ ಪ್ರಾಣಿ, ಹಕ್ಕಿ, ಸಸ್ಯಾದಿಗಳನ್ನಷ್ಟೇ ನಾವು ಹೆಸರಿಸಿಯೇವು, ವಿವರಿಸಿಯೇವು. ಕಂಡ ಎಲ್ಲವನ್ನೂ ಹೆಸರಿಸುವ ಹಠ, ಅನ್ಯರಿಂದ ತಿಳಿದಾಗಲೂ ಉಳಿಸಿಕೊಳ್ಳುವ ನೆನಪು ನಮ್ಮದಲ್ಲ. ಹಾಗಾಗಿ ಉರಿ ಬಿಸಿಲು, ದೂಳೇಳುವ ದಾರಿ, ತಡವಾದ ಊಟಗಳ ಪರಿವೆಯಿಲ್ಲದೆ ಸುಮಾರು ಒಂದು ಗಂಟೆ (ನಿರ್ಜನ) ತೋಟ ಸುತ್ತಿದೆವು. ಅನಂತರ ಸೋನ್ಸ್ ದಂಪತಿಗೆ ಸುಳುಹು ಹತ್ತದಂತೆ (ವಿಶ್ರಾಂತಿಗೆ ಭಂಗ ಬಾರದಂತೆ) ಬೈಕೇರಿದೆವು. ಯೋಜನೆಯಂತೇ ಗೇಟು ಮುಕ್ತವಾದಾಗ ಮೂಡಬಿದ್ರೆ ಪೇಟೆ ಸೇರಿಕೊಂಡೆವು. 

‘ಪಡಿವಾಳ್ಸ್’ ಮೂಡಬಿದ್ರೆಯಲ್ಲಿ ನಮಗೆ ಬಹಳ ಹಿಂದಿನಿಂದಲೂ ಪ್ರಿಯವಾದ ಹೋಟೆಲ್. ಒಂದರಲ್ಲಿ ಜನಪ್ರಿಯತೆಗೆ ತಕ್ಕ ಸ್ಥಳಾವಕಾಶ ಸಾಲದೆಂದೋ ಈಚೆಗೆ ತುಸು ಅಂತರದಲ್ಲಿ ನ್ಯೂ ಪಡಿವಾಳ್ಸನ್ನೂ ತೆರೆದಿದ್ದಾರೆ. ನಾವು ಆಗುಂಬೆಯ ನೀರುಳ್ಳಿ ದೋಸೆ, ಸೋನ್ಸರ ಹಣ್ಣು ಮತ್ತು ರಸ ಸಮ್ಮಾನ ತೃಪ್ತರಾದ ಕಾರಣ ಊಟ ಬಿಟ್ಟು, ಸರಳ ತಿನಿಸುಗಳಲ್ಲೇ ಸುಧಾರಿಸಿದೆವು. ಅದಕ್ಕೂ ಮುಖ್ಯವಾಗಿ ನಮ್ಮ ಮೂಡಬಿದ್ರೆಯ ಗುರಿಕ್ಕಾರ, ಗೆಳೆಯ ಕೃಷ್ಣಮೋಹನ್ ನನ್ನ ಫೋನ್ ಸೂಚನೆಯನ್ನೇ ಗ್ರಹಿಸಿ ಜತೆಗೊಟ್ಟಿದ್ದರು. ೧೯೮೭ರ ಸುಮಾರಿಗೆ ಮಳೆಗಾಲದ ಉಬ್ಬರದಲ್ಲಿ ನಮ್ಮೊಂದು ಬೈಕ್ ಸಾಹಸಯಾನದಲ್ಲಿ ನಾವು ಒಟ್ಟಿಗೇ ಮೊದಲ ಬಾರಿಗೆ ಹೆಗ್ಗೋಡು ಕಂಡಿದ್ದೆವು. ಮುಂದೆ ೧೯೯೧ರ ಸುಮಾರಿಗೆ ಇನ್ನೊಂದೇ ಬೈಕ್ ಸಾಹಸಯಾನದ ಕೊನೆಯಲ್ಲಿ (ನೋಡಿ: ಉತ್ತರ ಕನ್ನಡ ಜಲಪಾತಗಳು) ಹೆಗ್ಗೋಡಿನ ಅಂದಿನ ಸಂಸ್ಕೃತಿ ಶಿಬಿರ ಭಾಗಿಯಾಗಲು ಕೃಷ್ಣಮೋಹನ್ ಒಬ್ಬರನ್ನೆ ನಾವು ಬಿಟ್ಟು ಬಂದಿದ್ದೆವು. ಈ ನೆನಪುಗಳ ಮುನ್ನೆಲೆಯಲ್ಲಿ ನಮ್ಮ ಹೆಗ್ಗೋಡಿನ ಹೊಸ ಭೇಟಿ, ಹೊಸ ನಾಟಕ, ದಾರಿಯ ವಿವರಗಳ ಮಾತು ಮಿಂಚುವುದಷ್ಟೇ ಸಾಧ್ಯವಾಯ್ತು. ಅವರಿಂದ ಬೀಳ್ಕೊಂಡು ಸಾಕಷ್ಟು ಸಂಜೆ ಉಳಿದಂತೇ ಮಂಗಳೂರು ಸೇರಿದ್ದೆವು. ಹಾಗೆಂದು ‘ಅನಿರ್ದಿಷ್ಟಾವಧಿ ಮುಂದೂಡಿದ’ ಕಲಾಪಗಳ ಕುರಿತು ಹಿಂಪಯಣಕ್ಕೆ ಕಾಲಕೋಶ ಇಲ್ಲವಲ್ಲಾ 🙁 

ವಿಸೂ: ಎರಡೂ ನಾಟಕ ಪ್ರದರ್ಶನಗಳ ಚಿತ್ರಗಳ ಕೃಪೆ ಸಂಚಿ ಫೌಂಡೇಶನ್

(ಮುಗಿಯಿತು)

https://koh.qet.mybluehostin.me/Athreebooks