ಉಡುಪಿ ಇಂದ್ರಾಳಿ ಸಮೀಪದ ಜಗನ್ನಾಥರಿಗೆ (ವೃತ್ತಿತಃ ಏನೋ ವರ್ಕ್ ಶಾಪ್ ಮಾಲಿಕ) ಮೂಡಬಿದ್ರೆಯ ಸೋನ್ಸರೊಂದಿಗೆ ಒಳ್ಳೆಯ ಸ್ನೇಹಾಚಾರವಿತ್ತು. ಅವರಂತೆ ಇವರೂ ಹವ್ಯಾಸೀ ಡೌಸರ್. ಜಗನ್ನಾಥರ ಇನ್ನೋರ್ವ ಗೆಳೆಯ ಕೃಷ್ಣ ಭಟ್. ಭಟ್ಟರು ಜಿಲ್ಲೆಗೆ ಬರುತ್ತಿದ್ದ ವಿದೇಶೀಯರೂ ಸೇರಿದಂತೆ ಜನಪದ ತಜ್ಞರಿಗೆ ಕ್ಷೇತ್ರಕಾರ್ಯದಲ್ಲಿ ಸಹಾಯಕನಾಗಿ, ದುಭಾಷಿಯಾಗಿ ಕೆಲಸ ಮಾಡುತ್ತ ಅಪಾರ ಅನುಭವ ಗಳಿಸಿದ್ದವರು. ಸಹಜವಾಗಿ ಅವರಿಗೂ ನನ್ನಲ್ಲಿ ಒಳ್ಳೆಯ ಸ್ನೇಹಾಚಾರವಿತ್ತು. ಜಗನ್ನಾಥರ ಆಸಕ್ತಿ ಸಹಸ್ರದಲ್ಲಿ ಧ್ಯಾನ, ಪಿರಮಿಡ್ ಶಕ್ತಿ, ಅಂಜನ, ಆರ, ಜೀವಚೈತನ್ಯ, ರೇಕಿ, ನಿಧಿಶೋಧ ಮುಂತಾದ ಅಲೌಕಿಕ, ಅಧ್ಯಾತ್ಮಿಕ ತಂತ್ರಗಳೂ ಇದ್ದವು. ಜಗನ್ನಾಥರಿಗೆ ಇವಕ್ಕೆ ಬೇಕಾದ ಪುಸ್ತಕಗಳಲ್ಲಿ ಹಲವು ಕಾಲಕಾಲಕ್ಕೆ ನನ್ನಲ್ಲೇನೋ ಖರೀದಿಗೆ ಸಿಗುತ್ತಿತ್ತು. ಆದರೆ ಅವನ್ನು ಗಟ್ಟಿಯಾಗಿ ಓದಿ ಹೇಳುವ ಮತ್ತು ಅರ್ಥೈಸಿಕೊಡುವ ಜವಾಬ್ದಾರಿ ಕೃಷ್ಣಭಟ್ಟರದ್ದಾಗಿತ್ತು.

ಜಗನ್ನಾಥ್ ೧೯೮೦ರ ದಶಕದಲ್ಲಿ (ಭಟ್ಟರ ಸಲಹೆಯೊಡನೆ) ಮಣಿಪಾಲದ ‘ಮಂಕಿ’ಯಲ್ಲಿ ಸ್ವಲ್ಪ ಪಾಳು ಜಾಗ ಕೊಂಡರು. ಅದು ಪದವಿನ (=ಗುಡ್ಡೆಯ ಮಟ್ಟಸ ನೆತ್ತಿ) ಅಂಚಿನ ಒಂದು ಏಣು ಮತ್ತು ಪಕ್ಕದ ಒಂದು ಸಣ್ಣ ಕಣಿವೆ. ಅದರಲ್ಲೆಲ್ಲ ಮುರಕಲ್ಲಿನ ಬಂಡೆ ಗುಂಡುಗಳು, ಅದರ ಹರಳುಗಳದೇ (ಚರಳು) ಎಂಬಂತೆ ನೆಲ. ಅಲ್ಲಿ ಹಸುರೆಂದರೆ ಕೇಪಳೆ ಪೊದರು, ಮುಳಿಹುಲ್ಲು, ಚೂರಿಮುಳ್ಳು ಮತ್ತು ನಾಚಿಕೆಮುಳ್ಳು. ಪದವಿನ ಮಳೆಗಾಲದ ಪ್ರವಾಹಕ್ಕೆ ಇದು ಪಾತ್ರೆ. ಆಗ ಇಲ್ಲಿ ರೂಪುಗೊಳ್ಳುತ್ತಿದ್ದ ಸುಮಾರು ಇಪ್ಪತ್ತಡಿಯ ಜಲಪಾತಕ್ಕೆ ಆಸುಪಾಸಿನ ಕೆಲವು ಮಂದಿ ಬರುವುದಿತ್ತಂತೆ. ಅವರು ಜಲಧಾರೆಗೊಡ್ಡಿಕೊಂಡು ಮಾಡುತ್ತಿದ್ದ ಮೋಜಿನಾಟಕ್ಕೂ ಸ್ಥಳನಾಮಕ್ಕೂ ಅನ್ಯರು ಸಂಬಂಧ ಕಲ್ಪಿಸುವುದು ಬೇಡವೆಂದು, ಈಚೆಗೆ ಮಂಕಿಯನ್ನು ಮಂಚಿ ಎಂದೂ ಹೇಳುತ್ತಾರಂತೆ.
ಜಗನ್ನಾಥ್ ಪದವಿನಂಚಿನಲ್ಲಿ ಅಡ್ಡಗಟ್ಟೆ ಕಟ್ಟಿ, ನೀರಿನ ದಿಕ್ಕು ತಪ್ಪಿಸಿ ಜಲಪಾತ ನಿಲ್ಲಿಸಿದರು. (ಇಂದಿನ ಲೆಕ್ಕದಲ್ಲಿ ಹೇಳುವುದಿದ್ದರೆ, ಪದವಿನ ಕಸ, ಕೊಳಚೆಗಳನ್ನೇ ತಪ್ಪಿಸಿಕೊಂಡರು.) ಅನಂತರ ನೀರು ಬಿದ್ದು ಪೊಳ್ಳಾದ ಜಾಗದ ಪೊದರು, ಕಸ ಬಿಡಿಸುವಾಗ ಸಣ್ಣದೊಂದು ಗುಹೆ ತೆರೆದುಕೊಂಡಿತು. ಉತ್ಸಾಹ ಹೆಚ್ಚಿ ಮತ್ತಷ್ಟು ಆಸುಪಾಸಿನ ಪೊಳ್ಳು ಸೆರೆಗಳನ್ನು ಬಿಡಿಸಿ, ಸಣ್ಣ ಮಟ್ಟದ ಗುಹಾಜಾಲವನ್ನೇ ಅನಾವರಣಗೊಳಿಸಿದ್ದರು. ಅವರಿಗೆ ಸ್ಥಳದ ನೈಜತೆ ಉಳಿಸಿಕೊಳ್ಳುವುದರೊಡನೆ, ತನ್ನ ಹವ್ಯಾಸಕ್ಕೆ ರೂಢಿಸಿಕೊಳ್ಳುವ ಉತ್ಸಾಹ ಬಂತು. ಹಾಗಾಗಿ ಮನುಷ್ಯನಿಗೆ ಸುಲಭ ಸಾಧ್ಯವಾದ, ಸ್ವಲ್ಪ ಮಟ್ಟಿಗೆ ದ್ವಾರದಂತೆ ಮತ್ತೆ ಒಳಗೆ ಕೈಕಾಲು ಬಿಡಿಸುವಷ್ಟು ಅವಕಾಶವಿರುವ ಒಂದು ಗುಹೆಯನ್ನು ಉಳಿಸಿಕೊಂಡು, ಉಳಿದೆಲ್ಲವುಗಳ ಬಾಯಿಗೆ ಕಾಡುಕಲ್ಲು ತುಂಬಿ ಬಂದ್ ಮಾಡಿಸಿದರು. ಉಳಿಸಿಕೊಂಡ ಗುಹೆಯನ್ನು ಸ್ವಂತಕ್ಕೆ ಧ್ಯಾನಕೇಂದ್ರವಾಗಿ ರೂಪಿಸಿಕೊಳ್ಳಲು ಎದುರು ಕಲ್ಲಗೋಡೆಯೊಂದಿಗೆ ಬಾಗಿಲು, ಜಾಲರಿ ಕಿಟಕಿ ಕೂರಿಸಿ, ಹೊರಗಿನಿಂದ ಬಂದೋಬಸ್ತು ಮಾಡಿದರು. ಒಳಗೆ ತತ್ಕಾಲೀನ ವಾಸಕ್ಕೆ ಒದಗುವಂತೆ ಕನಿಷ್ಠ ಸೌಕರ್ಯಗಳನ್ನು ಜೋಡಿಸಿಕೊಂಡಿದ್ದರು. ಹಾಗೇ ಹೊರಗೆ ನೀರಿಗಾಗಿ ಒಂದು ಬಾವಿಯನ್ನೂ ತೋಡಿಸಿಕೊಂಡರು. ಇಷ್ಟಾದರೂ ಅವರಿಗೆ ಉಳಿಸಿಕೊಂಡ ಗುಹೆಯಾಳ ಅಥವಾ ಸಾಧ್ಯತೆಗಳನ್ನು ಶೋಧಿಸಲು ಭಯವಿತ್ತು. ಆಗ ಅವರಿಗೆ ನಮ್ಮ ಬಳಗದ ಗುಹಾಶೋಧಗಳ ನೆನಪಾಗಿ, ಕೃಷ್ಣ ಭಟ್ಟರ ಮೂಲಕ ಕರೆಕೊಟ್ಟರು. ಅದನ್ನುತ್ತರಿಸುವಂತೆ ಒಂದು ಆದಿತ್ಯವಾರ ಬೆಳಿಗ್ಗೆ ಆರೋಹಣದ ನಾವು ನಾಲ್ವರು ಉಡುಪಿಗೆ ಹೋಗಿ ನಿಂತದ್ದು ಕೃಷ್ಣ ಭಟ್ಟರ ಎದುರು. ಆಗ ನನ್ನ ಬೈಕಿನಲ್ಲಿ ಬೆನ್ನಿಗೆ ಬಿದ್ದವ ನೆವಿಲ್ ರಾಡ್ರಿಗಸ್. ನೆವಿಲ್ ಹವ್ಯಾಸದಲ್ಲಿ ಈ ವಲಯದ ರೈಟ್ ಸೋದರ – ಸಾಮಾನ್ಯರ ವಿಮಾನ ಜನಕ!

ಬಾಲ್ಯದಲ್ಲಿ ವಿಮಾನ ಮಾದರಿಗಳ ತಯಾರಿಯಿಂದ ತೊಡಗಿ, ತಾರುಣ್ಯದಲ್ಲಿ ಸ್ವಶಿಕ್ಷಣ ಮತ್ತು ವಿನ್ಯಾಸದಲ್ಲಿ ಹ್ಯಾಂಗ್ ಗ್ಲೈಡರ್, ಪವರ್ ಗ್ಲೈಡರ್ಗಳನ್ನು ಕಟ್ಟಿ, ಪಳಗಿಸಿ, ಅದನ್ನೇ ಜೀವನವೃತ್ತಿಯಾಗಿಯೂ ಅನುಸರಿಸಲು ಇನ್ನಿಲ್ಲದಂತೆ ಹೆಣಗಿದ ಸಾಹಸಿ. ಆತನ ಮಂಗಳೂರು – ಮಣಿಪಾಲ ಪವರ್ ಗ್ಲೈಡರ್ ಹಾರಾಟವಂತೂ ಈ ವಲಯಕ್ಕೆ ನಿಸ್ಸಂದೇಹವಾಗಿ ಪ್ರಥಮ (ಸುಮಾರು ೧೯೯೦ರ ದಶಕದಲ್ಲಿರಬೇಕು) ಮತ್ತು ಈವರೆಗೆ ಮುರಿಯದ ದಾಖಲೆ! ಇನ್ನೊಂದು ಬೈಕ್ ಸವಾರ ಕೇದಗೆ ಅರವಿಂದ ರಾವ್ ಓದಿನ ಯೋಗ್ಯತೆಯಲ್ಲಿ (ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ) ಯಾವುದೋ ಶಿಕ್ಷಣ ಸಂಸ್ಥೆ/ ವಿವಿನಿಲಯ ಸೇರಿ ಅಧ್ಯಾಪನ, ಸಂಶೋಧನೆ ಎಂಬ ನಾಟಕಗಳನ್ನಾಡುತ್ತ ಸುಖಲೋಲುಪನಾಗುವುದು ಬಿಟ್ಟು, ಸ್ವೋದ್ಯೋಗದ ಮೂಲಕ ತಾಬೇದಾರಿಯನ್ನು ತಿರಸ್ಕರಿಸಿ ನಿಂತ ಸಾಹಸಿ. ಕಮಲಜಿತ್ ಲ್ಯಾಬೊರೇಟರಿಯಿಂದ ತೊಡಗಿ ಇಂದು ‘ನೋವಾ ಮೆಡಿ ಟೆಕ್’ ಹೆಸರಿನ, ಕೆಲವು ಶಾಖೆಗಳ ವೈದ್ಯಕೀಯ ಪರೀಕ್ಷಾ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದಾರೆ. ಆರೋಹಣದ ಮೊದಲ ವರ್ಷಗಳ ಸಾಹಸ ಯಾನಗಳೆಲ್ಲ ಅರವಿಂದ ಯಾನೆ ಜಂಕೂಸ್ ‘ಜಂಕೂಸ್’ ಇಲ್ಲದೇ ನಡೆದದ್ದೇ ಇಲ್ಲ ಎಂದರೆ ತಪ್ಪಾಗದು. ಪ್ರಸ್ತುತ ಗುಹಾನ್ವೇಷಣೆಯಲ್ಲಿ ಇವರು ನಮ್ಮ ಚಿತ್ರಗ್ರಾಹಿಯೂ ಹೌದು. (ಹೆಚ್ಚಿನ ವಿವರಗಳಿಗೆ ನನ್ನ ಜಾಲತಾಣ ನೋಡಿ, ಮುಖ್ಯವಾಗಿ ‘ದಕ್ಷಿಣ ಭಾರತದಲ್ಲಿ ಚಕ್ರವರ್ತಿಗಳು’) ಅವರ ಬೆನ್ನೇರಿ ಬಂದವ ಶಾಂತಾರಾಮ – ನನ್ನ ಅಂಗಡಿಯ ಉತ್ಸಾಹಿ ಸಹಾಯಕ.

ಕೃಷ್ಣಭಟ್ಟರ ಸ್ಕೂಟರ್ ಬೆನ್ನಿಗೇರಿ ಬಂದ ಜಗನ್ನಾಥರು ನೇರ ‘ಮಂಕೀವಾಸ’ಕ್ಕೆ (ಮಂಚಿಯ ವಾಸಯೋಗ್ಯವಾದ ಗುಹೆಗೆ) ಮಾರ್ಗದರ್ಶಿಸಿದರು. ಅಲ್ಲಿ ಮೊದಲಿಗೆ ನಾವು ಶೋಧಿಸುವಂತದ್ದು ಏನೂ ಕಾಣಲಿಲ್ಲ. ಜಗನ್ನಾಥ್ ಭಾವಿಸಿದಂತೆ ಸಣ್ಣ ಮರೆಯಾಚೆ ಇದ್ದಿರಬಹುದಾದ ಗುಹೆಯ ಶೋಧ ಮಾಡುವುದೆಂದರೆ, ಕೃತಕ ಗುಹೆ ಕೆತ್ತುವುದೇ ಆಗಬಹುದು ಎಂದೇ ಹೇಳಿದೆವು. ಅಷ್ಟಕ್ಕೆ ಅವರಿಬ್ಬರು ನಿರಾಶರಾಗಲಿಲ್ಲ. “ಬದಲಿಗೆ ಇನ್ನೂ ರೋಚಕವಾದದ್ದನ್ನೇ ತೋರಿಸುತ್ತೇವೆ” ಎಂದು ನಮ್ಮನ್ನು ಮಣಿಪಾಲ ಪದವಿನ ತಪ್ಪಲಿನಲ್ಲೇ ಮಂಕೀಗಿಂತ ತುಸು ಪೂರ್ವಕ್ಕೆ ಕರೆದೊಯ್ದರು. ಅದೇ ದುಗ್ಗುಳಮಾಟೆ ಎಂಬ ಗುಹಾಜಾಲ. (ಇಂದಿನ ಮಣಿಪಾಲದಲ್ಲಿ ‘ದಶರಥ ನಗರ’ದ ಅಂಚಿನ ‘ಅರ್ಬಿ’ ಇರಬೇಕು).

ಅದೊಂದು ದಟ್ಟ ಕಾಡು ಸುತ್ತುವರಿದಿರುವ ಸಣ್ಣ ಕಣಿವೆ. ಕೆಳ ಮೂಲೆಯಲ್ಲಿ ಸುಮಾರು ನಲ್ವತ್ತಡಿ ಆಳದಲ್ಲೊಂದು ಕಮರಿ. ಅದರ ತಗ್ಗಿನ ಅಂಚಿನಿಂದ ಪುಟ್ಟ ತೊರೆಯೊಂದು ಹೊರ ಹರಿದಿತ್ತು. ನಾವು ತೊರೆಯ ಅಂಚಿನಗುಂಟ ನಡೆದು ಕಮರಿಯ ತಳ ಸೇರಿದೆವು. ಅಲ್ಲೊಂದು ವಿಸ್ತಾರ ಕಮಾನಿನಂತಹ ಗುಹಾಮುಖ. ಹೊರಗೊಂದು ಪುಟ್ಟ ಕೆರೆ. ಗುಹೆಯ ಒಳಗಿನಿಂದ ಹರಿದು ಬರುತ್ತಿದ್ದ ತೊರೆ, ಕೆರೆಯನ್ನು ತುಂಬಿ ಕೋಡಿ ಹರಿದಿತ್ತು. ಗುಹಾದ್ವಾರದಲ್ಲಿ ಎರಡು ಕಡೆವ ಕಲ್ಲುಗಳಿದ್ದವು. ಪುಣ್ಯ ಕಾಲದಲ್ಲಿ ಅಲ್ಲಿಗೆ ಭಕ್ತರು ಬಂದು, ಕೆರೆಯಲ್ಲಿ ತೀರ್ಥಸ್ನಾನ ಮಾಡಿ, ಅಟ್ಟು, ಉಂಡು ಹೋಗುವುದು ಸಂಪ್ರದಾಯವಂತೆ. ಈ ಮಾಟೆಯೊಳಗೆ ಅಸಾಧಾರಣ ಜಲಾಶಯವೋ ಅನ್ಯ ಪ್ರಾಕೃತಿಕ ವಿಶೇಷವೋ ಮನುಷ್ಯವಾಸದ ಕುರುಹೋ ಗುಪ್ತ ನಿಧಿಯೋ ಇರಬಹುದೇ ಎಂದು ಪತ್ತೆ ಮಾಡುವ ಸಾಹಸಕ್ಕೆ ನಾವು ಸಜ್ಜಾದೆವು.

ಆತಿಥೇಯರಾದ ಜಗನ್ನಾಥ ಮತ್ತು ಕೃಷ್ಣಭಟ್ಟರು ನಮ್ಮ ಅನಾವಶ್ಯಕ ಹೊರೆಗಳೊಡನೆ ಹೊರಗೆ ಉಳಿದಂತೆ ನಾವು ನಾಲ್ವರು ದುಗ್ಗುಳಮಾಟೆ ಪ್ರವೇಶಿಸಿದೆವು. ಎಂದಿನಂತೆ ಆದಷ್ಟು ಮೈಮುಚ್ಚುವ ಉಡುಗೆ, ಬೆಳಕಿಗೆ ಟಾರ್ಚ್, ಪರಸ್ಪರ ರಕ್ಷಾ-ಬಂಧಕ್ಕೂ ಅಳತೆಗೂ ಒದಗುವಂತೆ ಉದ್ದದ ಹಗ್ಗ, ಆತ್ಮ ರಕ್ಷಣೆಗೆ ಕತ್ತಿ, ಎಲ್ಲಕ್ಕೂ ಮಿಗಿಲಾಗಿ ಕಣ್ಣು, ಕಿವಿ, ಮೂಗುಗಳ ಮಹದೆಚ್ಚರದೊಡನೆ ನಿಧಾನಕ್ಕೆ ಒಳ ನಡೆದೆವು. ಹೊರವಲಯದಲ್ಲಿ ಬಾವಲಿ ಹಾರಾಟ ವಿರಳವಿದ್ದರೂ ಒಳಗೆ ಹೋದಂತೆ ಹೆಚ್ಚುವ ನಿರೀಕ್ಷೆ ಇತ್ತು, ಸಿಕ್ಕಿತ್ತು. ವರ್ಷಪೂರ್ತಿ ಕೆರೆಯಲ್ಲಿ ನೀರುಳಿಯುತ್ತದಂತೆ. ಸಹಜವಾಗಿ ಅಲ್ಲಿ ಇಂಚುದ್ದದಿಂದ ಗೇಣುದ್ದದವರೆಗೆ ಮೀನುಗಳಾಡುವುದೂ ಮನೋಹರವಾಗಿತ್ತು. ಕಣ್ಣನ್ನು ಕತ್ತಲೆಗೂ ಮೂಗನ್ನು ಅಧಿಕ ತೇವಾಂಶ ಹಾಗೂ ಬಾವಲಿ ಮೂರಿಗೆ ಹೊಂದಿಸಿಕೊಳ್ಳುತ್ತಿದ್ದೆವು. ಆದರೆ ಅವುಗಳ ಜತೆಗೇ ಹಿಂದೆ ಯಾವ ಗುಹೆಯಲ್ಲೂ ಸಿಗದ ಜಿರಳೆ ವಾಸನೆ ಬಂದಂತಾಯ್ತು! ಪೂರಕವಾಗಿ ಒಂದೆರಡು ಕಡೆ ಗುಹೆಯ ಮೂಲೆಯಲ್ಲಿ ಜಿರಳೆಗಳು ಕಾಣಿಸಿದ್ದನ್ನೂ ಅಂದು ಸಣ್ಣ ಆಶ್ಚರ್ಯದೊಡನೆ ಗ್ರಹಿಸಿದ್ದೆವು. ಆದರೆ ಇಂದು ಸಖೇದ ಯೋಚಿಸುವಂತಾಗಿದೆ. ಇಂದಂತೂ (ಮಣಿಪಾಲದ ವಿಸ್ತರಣೆ -) ದಶರಥ ನಗರ ಬಹುತೇಕ ಇದರ ನೆತ್ತಿಯವರೆಗೂ ವ್ಯಾಪಿಸಿದೆ. ಅಂದರೆ ನಲ್ವತ್ತು ವರ್ಷಗಳ ಹಿಂದೆಯೇ ನಾಗರಿಕ ಕೊಳಚೆ ನೀರು ದುಗ್ಗುಳ ತೀರ್ಥದ ಮೂಲವನ್ನು ಭೂಗರ್ಭದಲ್ಲಿ ಕಲುಷಿತಗೊಳಿಸಲು ಶುರು ಮಾಡಿತ್ತೇ? ಹಾಗಿದ್ದರೆ ಇಂದು, ದುಗ್ಗುಳ ಮಾಟೆ ಮತ್ತದರ ತೀರ್ಥದ ಪಾವಿತ್ರ್ಯ ಇನ್ನೆಷ್ಟು ಹಾಳಾಗಿರಬಹುದು?

ಗುಹೆ ಸುಮಾರು ಹತ್ತಡಿ ಅಗಲಕ್ಕಿತ್ತು, ನೆಲ – ತಗ್ಗು, ದಿಣ್ಣೆ ಕೊರಕಲು. ನಡುವೆ ಸುಮಾರು ಎರಡಡಿ ಅಗಲಕ್ಕೆ, ಹಾವಾಡುವ ಕಿರುತೊರೆ. ಅದರ ಪ್ರಭಾವದಲ್ಲಿ ನೆಲ, ಗೋಡೆ ಮುಟ್ಟಿದಲ್ಲೆಲ್ಲ ತಚಪಿಚ ಕೆಸರು. ಹೊರಗಿನ ಬಿಸಿಲ ಕಾವಿಗೆ ಒಳಗಿನ ತೇವಾಂಶ ಸೇರಿ ನಮ್ಮ ಮೈಯಲ್ಲಿ ಬೆವರ ತೊರೆಯೇ ಹರಿದಿತ್ತು. ನಾನು ಬೇಗನೇ ಕನ್ನಡಕವನ್ನು ಕಳಚಬೇಕಾಯ್ತು. ಗುಹೆಯ ಮಾಡು ಅತ್ಯುನ್ನತಿಯಲ್ಲಿ ಏಳೆಂಟಡಿ ಎತ್ತರಕ್ಕಿತ್ತು. ನೋಟಕ್ಕೆ ಒಣಗಿದ ಜೇನುಹುಟ್ಟಿನಂತೇ ಇದ್ದರೂ ವಿರಳವಾಗಿ ತಟಕಿಕ್ಕುವ ನೀರು ನೋಡುವಾಗ, ಎಂದೂ ನಮ್ಮನ್ನು ಕವಿದು ಬೀಳಬಹುದಾದ ಆಪತ್ತಿನಂತೆಯೂ ಇತ್ತು. ತೊರೆಯ ಬಲದಂಡೆಯಿಂದ ಹೊರಟವರು, ಅದರ ತಿರುವಿಗೆ ವಿರುದ್ಧವಾಗಿ ಎಡ ದಂಡೆಗೆ ಕುಪ್ಪಳಿಸಿ ಮುಂದುವರಿದೆವು.
ಸುಮಾರು ಮೂವತ್ತಡಿ ಒಳ ಹೋಗುತ್ತಿದ್ದಂತೆ ಗುಹೆ ತೊರೆಯ ಗಾತ್ರಕ್ಕೆ (ಅಗಲ ಮತ್ತು ಎತ್ತರ) ಕಿರಿದುಗೊಳ್ಳತೊಡಗಿತು. ತಲೆ ತಗ್ಗಿಸಿ, ಮುಂದೆ ನಡು ಬಗ್ಗಿಸಿಯೂ ನಡೆದೆವು. ಅನಂತರ, ಮೊದಲು ಮೈಗೆ ಕೆಸರು ಹತ್ತದಂತೆ, ಬೂಟಿನೊಳಗೆ ನೀರು ಸೇರದಂತೆ ವಹಿಸಿದ ಎಚ್ಚರವನ್ನೆಲ್ಲ ಬಿಟ್ಟು ತೊರೆಗೇ ಇಳಿದೆವು. ಮುಕ್ಕಾಲಡಿ ಆಳದ ನೀರಲ್ಲಿ ತಳಬುಳುಂಕಾಡಿಸುತ್ತ ಬಲು ಎಚ್ಚರದ ಹೆಜ್ಜೆಯ ಮೇಲೆ ಹೆಜ್ಜೆ ಬೆಳೆಸಿದೆವು. ಇನ್ನು ಗುಹೆ ಕೇವಲ ನೀರ ಮಾಟೆ ಎಂಬ ಮಟ್ಟಕ್ಕಿಳಿಯುವಲ್ಲಿಗೆ ಬಹುತೇಕ ಸಾರ್ವಜನಿಕ ಪ್ರವೇಶಾಂಕಣ ಮುಗಿದಿತ್ತು. ನಾವು ವಾಚು, ಹಣ ಮುಂತಾದವುಗಳ ಬಂದೋಬಸ್ತು ಮಾಡಿ, ಸಚೇಲ ‘ತೀರ್ಥಸ್ನಾನ’ಕ್ಕೇ ಸಜ್ಜಾದೆವು. ಮೇಲೆ ಸುಮಾರು ಒಂದು ಒಂದೂವರೆ ಅಡಿ ತೆರವಿದ್ದಂತೆ, ನಾಲ್ಗಾಲು, ಮೊಣಕೈ ತೆವಳು ಅನುಸರಿಸಿದೆವು. ಅದುವರೆಗೆ ಬೆವೆತಿದ್ದ ಮೈಗೆ ಇಲ್ಲಿ ಅಯಾಚಿತವಾಗಿ ಸಿಕ್ಕ ನೀರ ಸಾಂತ್ವನ ಅಪ್ಯಾಯಮಾನವಾಗಿತ್ತು. ಬಾಲ್ಯದ ಕೆಸರಾಟಗಳಲ್ಲೂ ಇಷ್ಟು ನಿರ್ಯೋಚನೆಯ ಸುಖ ಸಿಕ್ಕಿದ್ದಿಲ್ಲ ಎನ್ನಬೇಕು. ಪರಸ್ಪರ ಒಂದು ಎರಡಡಿಯಷ್ಟೇ ನಿಯತಾಂತರವನ್ನು ಕಾಯ್ದುಕೊಂಡು ಎಲ್ಲರೂ ಸಾಲು ಹಿಡಿದಿದ್ದೆವು. ಗುಹೆ ಮತ್ತಷ್ಟು ಕಿರಿದಾಗುತ್ತಿದ್ದಂತೆ, ನೀರ ಹರಿವೂ ತೆಳುವಾಯ್ತು. ಅದಕ್ಕೆ ಹೊಂದುವಂತೆ ಹೊಟ್ಟೆಯನ್ನೇ ಎಳೆದೆವು. ಅದುವರೆಗೆ ದೇಹ ಎಷ್ಟು ತಗ್ಗಿದ್ದರೂ (ಜಂಬದ) ಕೋಳಿಯಂತೆ ತಲೆ ಎತ್ತಿ ಹಿಡಿದಿದ್ದೆವು.

ಈಗ ಅಲ್ಲಿ ಇಲ್ಲಿ ಮೇಲಿನ ಕಲ್ಲ ಮೊಳಕೆಗಳು ತಿವಿಯುವಾಗ ತೊರೆ ನೀರು ಬಾಯಿಗೇ ಬಂತು. ಆದರೇನು ಮುಂದಿನ ಇಣುಕು ನೋಟ ಆಶಾದಾಯಕವಾಗಿಯೇ ಇತ್ತು. ಮತ್ತು ನಮಗೆ ಅಂಬರೀಷ ಗುಹೆಯ ಅನುಭವದ ಬಲವೂ ಸುಲಭದಲ್ಲಿ ಬಿಟ್ಟು ಕೊಡದ ಹಠ ಬೆಳೆಸಿತ್ತು. ತಲೆಯನ್ನು ಅಡ್ಡ ಹಾಕಿ ತೆವಳಿದೆವು. ಒಂದು ಕಣ್ಣು, ಕಿವಿ, ಮೂಗು ನೀರಲ್ಲಿ ಮುಳುಗಿದ್ದಂತೆ, ಒಕ್ಕಣ್ಣ ನೋಟದಲ್ಲಿ ಪರಿಸ್ಥಿತಿ ಅಂದಾಜಿಸಿಕೊಳ್ಳುತ್ತ, ಒಂದು ಕಟವಾಯಿಯಲ್ಲೇ ಉಸಿರಾಡುತ್ತ ಮೂರು ನಾಲ್ಕಡಿ ಪ್ರಗತಿ ಸಾಧಿಸಿದೆವು. ಇದು ಹೇಳಿದಷ್ಟು ಸರಳವಲ್ಲ. ನಾವು ಕೈ ಕಾಲುಗಳನ್ನು ಆಡಿಸುವುದಾಗಲೀ ದೇಹ ತಳ್ಳುವುದಾಗಲೀ ಬಹಳ ಎಚ್ಚರದ ಮತ್ತು ನಿಧಾನದ ಕ್ರಿಯೆಗಳು. ಇಲ್ಲವಾದರೆ ಅಲ್ಲಿನ ಪ್ರಾಕೃತಿಕ ಸಮತೋಲನ ತಪ್ಪಿ ಏನೂ ಆಗಬಹುದಿತ್ತು.

ಈ ಹಂತದಲ್ಲಿ ಜಲಸಂದಿಗೆ ಯಾರೋ ಕೆಲವು ಮುಳ್ಳ ಪೊದರುಗಳನ್ನು ನುಗ್ಗಿಸಿ ಇಟ್ಟಂತಿತ್ತು. ಬಹುಶಃ ಬಾವಲಿ ಬೇಟೆಗಾರರ ಕಿತಾಪತಿಯೇ ಇರಬೇಕು. ಸೂಳೆಪದವು (ಈಶ್ವರಮಂಗಲ) ಬಾವಲಿ ಮಾಟೆಯಲ್ಲಿ ಇದರ ವಿವರಗಳನ್ನು ಕೇಳಿದ್ದೆ. ಮೊದಲು ಗುಹೆಯ ಕಿರು ಕವಲುಗಳಲ್ಲಿ ಬಾವಲಿಗಳು ತಪ್ಪಿಸಿಕೊಳ್ಳದಂತೆ ಮುಳ್ಳು ಒಡ್ಡಿ ಬಂದ್ ಮಾಡುತ್ತಾರಂತೆ. ಅನಂತರ ಗುಹಾಮುಖದಲ್ಲಿ ದೊಡ್ಡ ಬಲೆ ಕಟ್ಟಿ, ಒಳ ಕೊನೆಯಲ್ಲಿ ಹೊಗೆ ಹಾಕುತ್ತಾರಂತೆ. ಬಾವಲಿಗಳು ಹೊರಗೆ ಹಾರುವ ಧಾವಂತದಲ್ಲಿ ಬಲೆಗೆ ಸಿಕ್ಕಿಕೊಳ್ಳುತ್ತವಂತೆ. ಹಾಗೇ ಇಲ್ಲೂ ಮಾಡಿದ್ದಿರಬೇಕು. (ಭೂಗರ್ಭದಲ್ಲಿ ಮುಳ್ಳಪೊದರಿರುವುದು ಅಸಾಧ್ಯ) ನಾವು ಅವುಗಳನ್ನೆಲ್ಲ ಎಚ್ಚರಿಕೆಯಿಂದ ಕಳಚಿ, ನಿರಪಾಯ ಮೂಲೆಗೆ ತಳ್ಳಿ, ಮುಂದುವರಿದೆವು.
ಅರೆ-ಜಲಂತರ್ಗಾಮಿತ್ವ ಸುಮಾರು ಮೂರು ನಾಲ್ಕಡಿ ಉದ್ದಕ್ಕೆ ಸೀಮಿತವಿತ್ತು. ಒಟ್ಟಾರೆ ಸುಮಾರು ಹದಿನೈದಡಿ ತೆವಳಿದ ಮೇಲೆ ಮೂರು ನಾಲ್ಕು ಮಂದಿ ಸರಿಯಾಗಿ ತಲೆ ಎತ್ತಿ ಕುಳಿತುಕೊಳ್ಳುವಷ್ಟು ಗುಹೆ ವಿಸ್ತರಿಸಿಕೊಂಡಿತು. ಅದರ ಕೊನೆಯಲ್ಲಿ ನಮ್ಮನ್ನು ಪುರಸ್ಕರಿಸುವಂತೆ ಸುಮಾರು ಎರಡಡಿ ಎತ್ತರದ ಪುಟ್ಟ ಜಲಪಾತವೇ ಕಾದಿತ್ತು. ಅದರ ಶಬ್ದ ಸೊಕ್ಕು ನಮ್ಮೆಲ್ಲ ಮಾತುಗಳನ್ನೇ ನುಂಗುವಂತಿತ್ತು. ಜಲಪಾತದಿಂದ ಮೇಲಕ್ಕೆ ಗುಹೆ ನಾವು ಬಂದ ಜಾಡಿಗಿಂತಲೂ ಸಪುರವಾಗಿತ್ತು. ಹಾಗೆಂದು ನಮ್ಮ ಪ್ರಯತ್ನದ ಕೊರತೆಯಾಗಬಾರದಲ್ಲ. ಎಚ್ಚರದಲ್ಲಿ ನಮ್ಮಲ್ಲೊಬ್ಬ ಅದಕ್ಕೂ ನುಗ್ಗಿದ್ದ. ಆಗ ನಾವು ನಿರೀಕ್ಷಿಸದ ಹೊಸದೇ ಸಮಸ್ಯೆ ಮೂಡಿತು. ನುಗ್ಗಿದವನ ದೇಹ ನೀರ ಹರಿವಿಗೆ ಅಣೆಕಟ್ಟು ಹಾಕಿದಂತಾಗಿ ಅತ್ತ ನೀರೇರತೊಡಗಿತು, ಇತ್ತ ಜಲಪಾತವೇ ಸ್ತಬ್ದವಾಯ್ತು. ಇದು ಅಲ್ಲಿನ ವಸ್ತುಸ್ಥಿತಿಗೆ ವಿರುದ್ಧವಾದ ಪ್ರಕ್ರಿಯೆ. ಮೊದಲೇ ತಚಪಿಚವಿರುವ ಗುಹೆಯ ಮಾಡು ಗೋಡೆ ಪ್ರವಾಹದ ತಟವಟಕ್ಕೆ ಕುಸಿಯಬಹುದಿತ್ತು. ಹಾಗಾಗಿ ಶೋಧ ನಿಲ್ಲಿಸಿದೆವು. ನುಗ್ಗಿದಷ್ಟೇ ತಾಳ್ಮೆಯಿಂದ ಹಿಂದೆ ಸರಿದು ಮತ್ತೆ ಗುಹಾಮುಖಕ್ಕೆ ಬಂದೆವು. ಈಗ ನಮ್ಮ ಕಣ್ಣುಗಳು ಕತ್ತಲೆಗೆ ಹೆಚ್ಚು ಹೊಂದಿದ್ದವು. ಹಾಗಾಗಿ ಪ್ರವೇಶಾಂಕಣದಲ್ಲೇ ಮೊದಲು ನಾವು ಕಾಣದ ಇನ್ನೊಂದೇ ನೀರ ಮಾಟೆ ಕಾಣಿಸಿತು. ಆದರೆ ಅದರ ದ್ವಾರದಲ್ಲೇ ಹೊಸದಾಗಿ ಮಣ್ಣು ಕುಸಿದ ಲಕ್ಷಣ ಕಂಡು ಬಂದದ್ದಕ್ಕೆ ಶೋಧ ಪ್ರಯತ್ನ ನಡೆಸಲಿಲ್ಲ.
ತೊರೆಯ ಇನ್ನೊಂದು ದಂಡೆಯಲ್ಲಿ ಕಣಿವೆಯ ಗೋಡೆ ಸ್ವಲ್ಪ ಜರಿದಿತ್ತು. ಅದರಿಂದ ಕಮರಿಯ ಮೇಲಿದ್ದ ಮಹಾ ಮರವೊಂದರ ತೋರದ ಬೇರೊಂದು ಪೂರ್ಣ ಬಯಲಾಗಿ, ಮರದ ಭವಿಷ್ಯವನ್ನೇ ಡೋಲಾಯಮಾನವಾಗಿಸಿತ್ತು. ಅದರ ಆಸುಪಾಸಿನಲ್ಲಿ ನೋಡುವಾಗ ಆ ಕುಸಿತಕ್ಕೆ ಕಾರಣವೆಂಬಂತೆ ಅಲ್ಲೂ ಇದ್ದ ಒಂದು ನೀರ ಮಾಟೆ ಕಾಣಿಸಿತು. ಕುಸಿತದಿಂದ ಅದರ ಪ್ರವೇಶದ ಸುತ್ತೆಲ್ಲ ಮೊಣಕಾಲಾಳದ ಗೊಸರಿದ್ದುದಕ್ಕೆ ನಾವು ಮುಂದುವರಿಯಲಿಲ್ಲ.
ಕಮರಿಯ ಇನ್ನೊಂದೇ ಮಗ್ಗುಲಿನಲ್ಲಿ ಇನ್ನೊಂದು ತೊರೆ ಭಾರೀ ಮರವನ್ನು ದ್ವಾರಪಾಲನೆಗೇ ಇಟ್ಟುಕೊಂಡಿತ್ತು. ಮರದ ಒಂದಷ್ಟು ಬೇರುಗಳಂತೂ ಗುಹಾಮುಖಕ್ಕಿಳಿಸಿದ ಪರದೆಯಂತೇ ಇಳಿಬಿದ್ದಿತ್ತು. ಅವು ಒಳಗಿನಿಂದ ಬರುತ್ತಿದ್ದ ನೀರನ್ನ ಸೋಸಿ ಹೊರ ಬಿಡುತ್ತಿತ್ತು. ಆ ಪರದೆಯನ್ನು ಸರಿಸಿ ನಮ್ಮ ಶೋಧಾಯಾತ್ರೆ ಅದರೊಳಗೆ ಸುಮಾರು ಮೂವತ್ತಡಿಗಳವರೆಗೂ ಹೋಯ್ತು. ಸ್ಪಷ್ಟವಾಗಿ ಎಡಕ್ಕೊಮ್ಮೆ ಮತ್ತೆ ಬಲಕ್ಕೊಮ್ಮೆ ತಿರುಗಿದ್ದೆವು. ಆ ಕೊನೆಯಲ್ಲೊಮ್ಮೆ ಗುಹೆ ನಮಗೆಲ್ಲ ಬೆನ್ನುಬಾಗಿಸಿ ಕೂರುವಷ್ಟು ಹೆಚ್ಚುವರಿ ಅವಕಾಶವೇನೋ ಕೊಟ್ಟಿತು. ಆದರೆ ಮುಂದಿನ ಜಾಡು ಮಾತ್ರ ತೀರಾ ಸಡಿಲವಾಗಿದ್ದ ಬಂಡೆಗಳ ಒಟ್ಟಣೆಯ ನಡುವೆ ತೆವಳುದಾರಿ ಎಂದೇ ತೋರಿದ್ದಕ್ಕೆ ಹಿಂದೆ ಸರಿದೆವು. ಮೊದಲ ತೀರ್ಥಗುಹೆಗೆ ಹೋಲಿಸಿದರೆ ಇದು ಬರಿಯ ಕಿಷ್ಕಿಂಧೆ.
ನಾವು ಅಲ್ಲಿನೆಲ್ಲ ಸಾಧ್ಯತೆಗಳನ್ನು ಮುಗಿಸಿ, ನಿರಾಳವಾಗಿ ಹೊರಟು ನಿಂತಾಗ, ಅದುವರೆಗೆ ತಾಳ್ಮೆಯಿಂದ ಕಾದಿದ್ದ ನಮ್ಮಿಬ್ಬರು ಪ್ರೇರಕರೇ ಕಣ್ಣರಳಿಸಿ ನೋಡುವಂತಿದ್ದೆವು! ಕೆಸರು ಮೆತ್ತಿಕೊಂಡು, ನೀರು ಬಸಿಯುವ ಬಟ್ಟೆ. ಅದೂ ಮುಳ್ಳೋ ಕಲ್ಲೋ ಸಿಕ್ಕಿ ಕೆಲವೆಡೆ ಹರಿದಿತ್ತು. ಅದೃಷ್ಟಕ್ಕೆ ನಮ್ಮ ತರಚಲು ಗಾಯಗಳ ಜಿನುಗು ರಕ್ತ ಆ ಗೊಂದಲದಲ್ಲಿ ನೋಟಕರ ಕಣ್ಣು ತಪ್ಪಿಸಿತ್ತು. ನಾನು ತೊರೆಯಿಂದೆದ್ದವ ಅಂಗಿ ತೋಳಿನೊಳಗೇನೋ ಮುಲುಗುತ್ತಿದೆ ಎಂದು ಗುಂಡಿ ತೆರೆದಾಗಂತೂ ಪವಾಡಪುರುಷನೇ ಆಗಿಬಿಟ್ಟೆ; ದೊಡ್ಡ ಒಂದು ಮೀನು ಪುಳಕ್ಕೆಂದು ಮರಳಿ ತೊರೆ ಸೇರಿತ್ತು!
ಶುಚಿ ಎನ್ನುವುದು ನಾಗರಿಕ ಭ್ರಮೆ! ನಾವೂ ನಾಗರಿಕರೆ ಆದ ತಪ್ಪಿಗೆ ಮಂಕೀವಾಸಕ್ಕೆ ಮರಳಿದ್ದೇ ಮೈಮೇಲೆ ಕನಿಷ್ಠ ಬಟ್ಟೆ ಉಳಿಸಿಕೊಂಡು ಎಲ್ಲವನ್ನೂ ಬಿಚ್ಚಿ, ತೊಳೆದು, ಒಣ ಹಾಕಿದೆವು. ಮತ್ತೆ ದುಗ್ಗುಳಮಾಟೆಯ ತೀರ್ಥಸ್ನಾನದ ‘ಪಾವಿತ್ರ್ಯ’ವನ್ನು ಮಂಕೀವಾಸದ ನೀರಿನ ಸ್ನಾನದಲ್ಲಿ ಕಳೆದುಕೊಂಡೆವು.

ಹೊತ್ತು ಹೋಗುವುದಕ್ಕೆ ಎನ್ನುವಂತೆ, ಜಗನ್ನಾಥರು ಕೊಟ್ಟ ಪಿಕ್ಕಾಸಿ ಹಿಡಿದು, ಅವರೇ ಮುಚ್ಚಿಸಿದ್ದ ಒಂದು ಗುಹೆಯ ಬಾಯಿಯನ್ನು ಮೆಲ್ಲಗೆ ಬಿಡಿಸಿದೆವು. ಸ್ವಲ್ಪ ಮಣ್ಣು, ಪುಡಿ ಕಲ್ಲುಗಳನ್ನು ಹೊರಗೆಳೆದು ಹಾಕಿದಾಗ ನಾವು ನುಸುಳಬಹುದಾದ ಪ್ರಾಕೃತಿಕ ಅವಕಾಶ ಸ್ಪಷ್ಟವಾಯ್ತು. ಅದರ ಒಳಗೆ ‘ಅಪೂರ್ವ’ದ ದರ್ಶನವೇನಾದರೂ ಇದ್ದರೆ ತಾನು ಮೊದಲು ನೋಡುತ್ತೇನೆ ಎಂಬ ಉತ್ಸಾಹದಲ್ಲಿ ನೆವಿಲ್ ನುಗ್ಗಿದ.

ಶುದ್ಧ ತೆವಳು ಜಾಡು. ಮೊದಲ ಮೂರ್ನಾಲ್ಕು ಅಡಿ ಸಣ್ಣ ಇಳಿಜಾರು. ಮತ್ತೆ ತದ್ವಿರುದ್ಧವಾಗಿ ನಾಲ್ಕಡಿ ಏರು. ನೆವಿಲ್ ಸಿಲುಕಿಕೊಂಡರೆ ಕಾಲು ಹಿಡಿದು ಹಿಂದಕ್ಕೆಳೆಯುವಂತೆ ಉಳಿದವರಲ್ಲಿ ಒಬ್ಬರು ಆಪ್ತವಾಗಿಯೇ ಅನುಸರಿಸಿದ್ದೆವು. ಎಷ್ಟು ಆಪ್ತತೆ ಎಂದರೆ, ಮುಂದಿನವ ಅನಿರೀಕ್ಷಿತವಾಗಿ ‘ಮುನ್ನೂಕಲು’ ಕಾಲು ಚಾಚಿದರೆ, ಹಿಂದಿನವನ ‘ಮುಸುಡಿಗೆ ಒತ್ತ’ ಖಾತ್ರಿ ಇತ್ತು! ಹಾಗೆ ಕೊನೆಯಲ್ಲಿ ಸಿಕ್ಕ ಸುಮಾರು ಎರಡಡಿ ಆಳದ ತೆಮರಿನಿಂದಾಚೆಗೆ ಕೊಸರಾಡುವುದೂ ಕಷ್ಟವೆನ್ನುವ ಸ್ಥಿತಿ ಬಂತು. ನೆವಿಲ್ ಹಿಂದೆ ಸರಿದ. ಆತನ ಟಾರ್ಚ್ ದುಗ್ಗುಳ ಮಾಟೆಯಲ್ಲೇ ಮುಕ್ಕಾಲು ಶಕ್ತಿ ಕಳೆದುಕೊಂಡಿತ್ತು. ಹಾಗೆ ಆತನ ಕಾಣ್ಕೆಯನ್ನು ಅರವಿಂದ ಕೆದಕಿ ಕೇಳಿದಾಗ “ಎಂಥದ್ದೂ ಕ್ಲಿಯರಿಲ್ಲ ಮಾರಾಯಾ. ಪೂರಾ ಪುಡಿ ಕಲ್ಲು ಮತ್ತೆ ಎಂಥದ್ದೋ ತೋರಕ್ಕೆ, ಮರದ ಬೇರಿರಬೇಕು….” ಎಂದು ಹಾರಿಕೆ ನುಡಿಯಾಡಿದ. ಅವನ ಹಿಂದೆಯೇ ಹೋಗಿ ಬಂದಿದ್ದ ಶಾಂತಾರಾಮ “…ಆದರೆ ಆ ಬೇರಿನಂತದ್ದು ಸಣ್ಣದಾಗಿ ಮಿಸುಕಾಡಿದಂತೆ ಕಾಣುತ್ತಿತ್ತು…” ಎಂದಾಗ ಅರವಿಂದರಿಗೆ ತಡೆಯಲಿಲ್ಲ. ಸ್ವತಃ ನುಗ್ಗಿ ಮತ್ತಷ್ಟೇ ಚುರುಕಾಗಿ ಹಿಂದೆ ಬಂದದ್ದೇ ಘೋಷಿಸಿದರು “ಒಬ್ಬರಿಗೂ ಮಂಡೆ ಶುದ್ಧಯಿಲ್ಲ, ಅದು ಹೆಬ್ಬಾವು.”

ಕೃಷಿ ಹಿನ್ನೆಲೆಯಿಂದ ಬಂದ ಮತ್ತು ಜೀವವಿಜ್ಞಾನದ ಕಲಿಕೆಯೂ ಇದ್ದ ಅರವಿಂದರಿಗೆ ಹೆಬ್ಬಾವನ್ನು ಗುರುತಿಸಿದಷ್ಟೇ ಧೈರ್ಯವಾಗಿ ನಿಭಾಯಿಸುವುದೂ ಗೊತ್ತಿತ್ತು. ಆದರೆ ಅವರ ಉದ್ದೇಶ ಕ್ಯಾಮರಾ ಹಿಡಿದು ಇನ್ನೊಮ್ಮೆ ನುಗ್ಗಿ ಚಿತ್ರ ಹಿಡಿಯುವುದಾಗಿತ್ತು. ಹಾಗೆಂದು ಕ್ಯಾಮರಾ ನೋಡಿದರೆ, ದುಗ್ಗುಳ ಮಾಟೆಯ ಪ್ರಯೋಗಗಳಲ್ಲೇ ಅದರ ಬ್ಯಾಟರಿ ವೀಕಾಗಿ ಹೋಗಿತ್ತು. ಆಗ ಜಗನ್ನಾಥರು ಜಾಗೃತರಾದರು. ತಮ್ಮ ನೆಲದ ಮೂಲವಾಸಿಯನ್ನು ಚಿತ್ರದಲ್ಲಾದರೂ ಹಿಡಿದಿಟ್ಟುಕೊಳ್ಳುವ ಬಯಕೆಗೆ ಕೃಷ್ಣ ಭಟ್ಟರನ್ನೆಬ್ಬಿಸಿದರು. ಅವರು ಕೂಡಲೇ ಮಣಿಪಾಲಕ್ಕೆ ತಮ್ಮ ಸ್ಕೂಟರ್ ಓಡಿಸಿ, ಹೊಸ ಬ್ಯಾಟರಿ ಕೊಂಡು ಬಂದರು. ಒಟ್ಟಾರೆ ಸುಮಾರು ಅರ್ಧ ಗಂಟೆಯೊಳಗೇ ಅರವಿಂದರು ಪುನಃ ತೆವಳಿದರು. ಆದರೆ ಅಷ್ಟು ಹೊತ್ತಿನಲ್ಲಿ, ನಮ್ಮ ಗದ್ದಲಗಳಿಂದ (ಅಗೆತ, ತೆವಳು, ದೀಪ) ಜಾಗೃತವಾದ ಹೆಬ್ಬಾವು ಇನ್ನಷ್ಟು ಒಳ ಸರಿದಿತ್ತು. ಹಾಗೆಂದು ಇವರ ಪ್ರಯತ್ನವನ್ನು ಪೂರ್ಣ ತೆಗೆದುಹಾಕದಂತೆ, ಕೇವಲ ಮುಖ ದರ್ಶನವನ್ನಷ್ಟೇ ಕೊಟ್ಟಿತು.

ಇಷ್ಟೆಲ್ಲ ಮುಗಿಯುವಾಗ ಗಂಟೆ ಮೂರಾಗಿತ್ತು. ಬೆಳಗ್ಗಿನ ತಿಂಡಿಯಾದ ಮೇಲೆ ಅದುವರೆಗೆ ನಾವು ಕೇವಲ ನೀರಾಹಾರಿಗಳಾಗಿದ್ದೆವು. ಆದರೆ ಆತಿಥೇಯರಿಗೆ ನಮ್ಮ ಹೊಟ್ಟೆ ತಾಳ ಕುಟ್ಟುವುದು ಕೇಳಿರಬೇಕು. ಮಂಕೀವಾಸದ ತತ್ಕಾಲೀನ ವ್ಯವಸ್ಥೆಯಲ್ಲೂ ನಮ್ಮನ್ನು ತೃಪ್ತಿಪಡಿಸಿದ್ದರು. (ಕ್ಷಮಿಸಿ, ವಿವರಗಳನ್ನು ಮರೆತಿದ್ದೇನೆ.) ಹೀಗೆ ಹಸಿವೆ ಹಿಂಗಿ, ಸ್ನಾನ, ಒಣಗಿದ ಬಟ್ಟೆಯಲ್ಲೇ ನಾವು ಪುನಶ್ಚೇತನರೂ ಆದದ್ದು ಕಂಡು ಭಟ್ಟರಿಗೂ ಹೊಸ ಉತ್ಸಾಹ ಬಂತು. ಅವರು ಬೇರೊಂದು ಹೊಸದೇ ಗುಹೆ ತೋರಿಸುವೆವೆಂದು ಹೇಳಿದ ಮೇಲೆ ನಾವು ನೋಡಲು ನಿರಾಕರಿಸುವುದುಂಟೇ!

ಮಣಿಪಾಲದಿಂದ ಬಡಗುಬೆಟ್ಟಿನತ್ತ ಹೋಗುವ ದಾರಿ ಹೆಚ್ಚು ಕಡಿಮೆ ಕುರುಚಲೂ ಇಲ್ಲದ ಅಪ್ಪಟ ಮುರಕಲ್ಲ ಪದವು. ಆ ಎತ್ತರದಲ್ಲೇ ಒಂದಷ್ಟು ಅಗಲಕ್ಕೆ ನೆಲ ಸುಮಾರು ನಾಲ್ಕಡಿ ಆಳಕ್ಕೆ ತಗ್ಗಿದಂತೇ ಇರುವ ಭಾರೀ ಗುಹೆ. ಅಂದು ಅದರ ಪ್ರಾಥಮಿಕ ಪರಿಚಯ ಮಾಡಿಕೊಂಡೆವು. ಮುಂದೆ ಇನ್ನೊಂದು ಸಾಕಷ್ಟು ದೊಡ್ಡ ತಂಡವನ್ನೇ ಕಟ್ಟಿಕೊಂಡು ಬಂದಾಗ ಹೆಚ್ಚು ವಿವರಗಳಲ್ಲೇ ನೋಡಿದ್ದೆವು.

ಮಂಗಳಗಂಗೋತ್ರಿಯ ಭೂವಿಜ್ಞಾನದ ಅಧ್ಯಾಪಕರೋರ್ವರಿಗೆ ನಾನೊಮ್ಮೆ ಮುರಕಲ್ಲ ಗುಹಾಶೋಧಗಳ ಕುರಿತು ತಿಳಿಸಿದ್ದೆ. ಅರ್ಥಹೀನ ಕತೆಗಳ ಕಂತೆ ಸಿಗುತ್ತದೆ, ವೈಜ್ಞಾನಿಕ ಅಧ್ಯಯನದ್ದು ಕಾಣಲೇ ಇಲ್ಲ ಎಂದೂ ಕೊರಗಿದೆ. ಅವರು ಒಮ್ಮೆ ನಮ್ಮೊಡನೆ ಸ್ವತಃ ಬಂದು ನೋಡುವ ಉತ್ಸಾಹ ತೋರಿದರು. ಆ ಸುಮಾರಿಗೆ ಮಂಚಿಯ ಬಳಿ ಯಾರೋ ಮನೆಯ ನೀರಿಗೆಂದು ಬಾವಿ ತೆಗೆಸುವಾಗ ತಳ ಕುಸಿದು, ಪ್ರಾಕೃತಿಕ ಗುಹೆ ತೆರೆದುಕೊಂಡ ಸುದ್ಧಿ ಕೇಳಿದ್ದೆ. ವಿವಿನಿಲಯದ ಅಧ್ಯಾಪಕರನ್ನೂ ಗೆಳೆಯರ ಬಳಗದೊಡನೆ ಸೇರಿಸಿಕೊಂಡೇ ಹೋಗಿದ್ದೆ. ಬಾವಿ ತೋಡಿದವರು, ಶುದ್ಧ ಗಾಳಿಯ ಕುರಿತು ಅವರದೇ ಏನೋ ವ್ಯವಸ್ಥೆ ಮಾಡಿಕೊಂಡು ಆಗಲೇ ಗುಹಾ ತನಿಖೆ ಮುಗಿಸಿಕೊಂಡಿದ್ದರು. ನಾವು ಕುತೂಹಲಕ್ಕಷ್ಟೇ ಅವರದೇ ಎರಡೇಣಿ ಬಳಸಿ (ಮೊದಲು ಬಾವಿಗೆ, ಅನಂತರ ಗುಹೆಗೆ) ಇಳಿದು ನೋಡಿದ್ದೆವು. ಗುಹೆ ಆ ಮೊದಲು ಹೊರಗಿನ ವಾತಾವರಣಕ್ಕೆ ತೆರೆದುಕೊಂಡಂತಿರಲಿಲ್ಲ. ಹಾಗಾಗಿ ಬಾವಲಿ ಅಥವಾ ‘ಕತೆ ಹೇಳುವ’ ಜೈವಿಕ ಅವಶೇಷಗಳು ನಮಗೆ ಕಾಣಿಸಲಿಲ್ಲ. ಪಾಪ ಮನೆಯವರಿಗೆ ಮಾತ್ರ ಹನ್ನೆರಡಡಿ ತೋಡಿದ ಕೂಲಿ ವ್ಯರ್ಥವಾದದ್ದು ಒಂದು ವ್ಯಥೆ. ಇನ್ನೂ ಹೆಚ್ಚಿನ ದುಃಖ, ಒತ್ತಿನಲ್ಲಿದ್ದ ಹಳೆಗಾಲದ ಮನೆಯೂ ಅರೆವಾಸಿ ಆ ಭಾರೀ ಪ್ರಾಕೃತಿಕ ಪೊಳ್ಳಿನ ಮೇಲೇ ನಿಂತಿತ್ತು. ಅಧ್ಯಾಪಕ ಮಿತ್ರ ನನಗಿಂತ ಹೆಚ್ಚು ಏನೆಲ್ಲ ಗ್ರಹಿಸಿದರೋ ಇಂದು ನೆನಪಾಗುತ್ತಿಲ್ಲ. (ಆ ಮನೆಯವರು ಮುಂದೇನು ಮಾಡಿದರೆಂದೂ ತಿಳಿದಿಲ್ಲ).  ಬಡಗುಬೆಟ್ಟು ಗುಹೆಗೆ ಹೋಗುವಾಗಲೂ ಅಧ್ಯಾಪಕ ಮಿತ್ರರಿಗೆ ತಿಳಿಸಿದ್ದೆ. ಅವರು ಬರಲಿಲ್ಲ, ಕೇವಲ ಮಾದರಿ ಸಂಗ್ರಹಿಸಿ ತರಲು ಸೂಚನೆಗಳನ್ನು ಮಾತ್ರ ಕೊಟ್ಟರು. ಗುಹೆಯ ಎತ್ತರ ಎಲ್ಲೂ ನಾಲ್ಕಡಿ ಮೀರದಿದ್ದರೂ ಅಗಲ, ಒಳಗಿನ ಕವಲುಗಳು, ವಿಸ್ತೀರ್ಣ ಧಾರಾಳವಿತ್ತು. ಆ ವಲಯದಲ್ಲಿ ಚರಾವಿಗೆ ಬಿಟ್ಟ ಜಾನುವಾರುಗಳಿಗೆ ಅದು ಮಧ್ಯಾಹ್ನದ ಉರಿಬಿಸಿಲಿಗೆ ಪ್ರಕೃತಿಯೇ ಮಾಡಿಕೊಟ್ಟ ನೆರಳ ಕಟ್ಟೆಯೇ ಆಗಿತ್ತು. ನಾವು ಮುತುವರ್ಜಿ ವಹಿಸಿ, ಅಳತೆ ಪಟ್ಟಿ ಹಿಡಿದು, ಒಳಗೆ ನಿಯತ ಅಂತರಗಳಲ್ಲಿ ನೆಲದ ಮೇಲ್ಮೈ ಮಣ್ಣು, ಕಲ್ಲುಗಳ ಮಾದರಿ ಸಂಗ್ರಹಿಸಿಕೊಂಡು ತಂದು ಅವರಿಗೆ ಕೊಟ್ಟಿದ್ದೆವು. ಅವರಿಂದ ತುಂಬ ಸಮಯ ಏನೂ ಪ್ರತಿಕ್ರಿಯೆ ಬರಲಿಲ್ಲ. ಮತ್ತೆ ನನ್ನ ಒತ್ತಡಕ್ಕೆಂಬಂತೆ “ಏನೂ ಇಲ್ಲ” ಎಂದು ಕೈಯಾಡಿಸಿಬಿಟ್ಟರು!
ಅನ್ಯ ಸಂದರ್ಭಗಳಲ್ಲಿ ಸಾಹಿತ್ಯ, ಜೀವಶಾಸ್ತ್ರ, ಪತ್ರಿಕೋದ್ಯಮ ವಿಭಾಗಗಳ ಅನೇಕ ಮಂದಿಯನ್ನೂ ಅವರ ವಿಷಯ ಪ್ರಾವೀಣ್ಯಕ್ಕೆ ಪುರಸ್ಕಾರವಾದೀತು, ಸಾಮಾಜಿಕ ಜಾಗೃತಿಗೆ ಅಧಿಕೃತತೆ ಬಂದೀತು ಎಂಬೆಲ್ಲ ಭ್ರಮೆಗಳೊಡನೆ ನಾನು ಜತೆಗೊಯ್ದದ್ದಿತ್ತು. ಆದರೆ ಅವರಲ್ಲಿ ಬಹು ಮಂದಿ ಹೊಟ್ಟೆಪಾಡಿಗಷ್ಟೇ ಪಾಂಡಿತ್ಯ, ಅಂದರೆ ಪ್ರಮಾಣಪತ್ರಕ್ಕಾಗಿ ಓದು ಮಾಡಿದ್ದವರು. ಒಂದೋ ಓದಿನ ವಿಜ್ಞಾನ ಪ್ರಮಾಣಿಸದ ಮೂತ್ರ ಕುಡಿವವರು, ಇಲ್ಲಾ ಅಂಧವಾಗಿ ಆಹಾರಕ್ಕೆ ಸ್ಯಾನಿಟೈಜರ್ ಬೆರೆಸಿ, ಉಸಿರಾಟಕ್ಕೆ ಅಂಡೆ ಕಟ್ಟಿಕೊಂಡ ಪಿರ್ಕಿಗಳು. ಸ್ವಂತ ಬಿಡಿ, ಸಾಮಾಜಿಕ ಬದುಕಿನ ಕತ್ತಲಮೂಲೆಗಳಿಗಾದರೂ ಬೆಳಕು ಬೀರಲಾಗದ ದುರ್ಬಲರು, ಹೊಟ್ಟು ಗುಹೆಗಳು.
(ಸುಧಾ ೧೦-೪-೧೯೮೮ರ ಸುಧಾದಲ್ಲಿ ಪ್ರಕಟವಾದ ನನ್ನದೇ ಲೇಖನದ ಪರಿಷ್ಕೃತ, ವಿಸ್ತೃತರೂಪ)