(ಭಾಗ ೧)

ನಾನು ನೀನು ಸೇರಿಕೊಂಡೂ….
ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆ ಗಂಟೆಗೆ ನಾನೂ ದೇವಕಿಯೂ ಬೈಕೇರಿ ಮಂಗಳೂರು ಬಿಟ್ಟೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಿದ್ದವು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆಂದು ಹಿಡಿದುಕೊಂಡ ಬಟ್ಟೆಬರಿಗಳು ಬೈಕಿನ ದೊಡ್ಡ ಡಬ್ಬಿ ತುಂಬಿ, ದೇವಕಿಯ ಬೆನ್ನಿನ ಚೀಲಕ್ಕೂ ಸೇರಿಕೊಂಡಿತ್ತು. ನಾವು ನೆನೆದರೂ ಅವು ಒದ್ದೆಯಾಗಬಾರದು ಎಂಬ ಹೆಚ್ಚಿನ ಎಚ್ಚರದಲ್ಲಿ, ನಸು ಚಳಿಗೆ ನಡುಕ ಹುಟ್ಟುವ ವೇಗದಲ್ಲೇ ಮೂಡಬಿದ್ರೆ ಸೇರಿಕೊಂಡೆವು. ಪಡಿವಾಳ ಹೋಟೆಲಿನಲ್ಲಿ ಕಾಫಿಂಡಿ ಮುಗಿಸುವುದರೊಳಗೆ ಆಗಸವೂ ಮುಖ ತೊಳೆದುಕೊಂಡಿತ್ತು. ಹೊಸ ಹುರುಪಿನಲ್ಲಿ ಬೈಕ್ ಗೇರಿಸಿದೆವು.

 

ಚಿಟ್ಟೆಯದು – ಸಂಗ್ರಹ ಮತ್ತು ಪ್ರಸಾರ
ಮೂಡಬಿದ್ರೆ – ಕಾರ್ಕಳ ದಾರಿಯ ಅಗಲೀಕರಣದ ಕಾರ್ಯ ನಡೆದಿತ್ತು. ಕಣ್ಣೆದುರು ಒರೆಸಿ ಹೋಗುತ್ತಿದ್ದ ಹಸಿರ ಸಿರಿಯಿದ್ದರೆ, ನೆನಪಿನಲ್ಲಿ ಮುನ್ನೆಲೆಗೆ ಬಂದವರು ಸ್ಥಳೀಯ ಪರಿಸರ ಪ್ರೇಮಿ – ಸಮ್ಮಿಳನ ಶೆಟ್ಟಿ. ಅವರು ಜೀವವೈವಿಧ್ಯದ ಬಯಕೆಯಲ್ಲಿ ತನಗೆ ಪರಂಪರೆಯಿಂದ ಇಲ್ಲೇ ಬೆಳ್ವಾಯಿಯಲ್ಲಿ ಬಂದ ಆರೇಳು ಎಕ್ರೆ ಕೃಷಿಭೂಮಿಯನ್ನು (ಮುಖ್ಯವಾಗಿ ಅಡಿಕೆ) ಎಲ್ಲಾ ತೆರನ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳಿಂದ ಮುಕ್ತಗೊಳಿಸಿದ್ದರು. ಮತ್ತೆ ಸಹಜವಾಗಿ ಬಂದ ‘ಕಳೆ ಗಿಡ’ಗಳಿಗೆ ಇನ್ನಷ್ಟು ವೈವಿಧ್ಯ ಸೇರಿಸಿ, ಸಾಂಪ್ರದಾಯಿಕ ಕೃಷಿಕರು ಹೇಳುವಂತೆ ತೋಟವನ್ನು “ಹಾಳು ಬೀಳಿಸಿ”, ಚಿಟ್ಟೆ ಉದ್ಯಾನವನ್ನೇ ಮಾಡಿದ್ದರು. (ವಿವರಗಳಿಗೆ ನೋಡಿ: ಪಾತರಗಿತ್ತಿಯರ ಸಮ್ಮಿಲನ) ಬೆಳ್ವಾಯಿಯ ಮುಖ್ಯ ಮಾರ್ಗದಿಂದ ಒಂದೇ ಕಿಮೀ ಅಂತರದಲ್ಲಿರುವ ಶೆಟ್ಟರ ಚಿಟ್ಟೆ ಉದ್ಯಾನದ ಕಂಪು, ಇಂದು ವೈವಿಧ್ಯಮಯ ಚಿಟ್ಟೆಗಳನ್ನು ಮಾತ್ರವಲ್ಲ, ಸಾಕಷ್ಟು ಪರಿಸರ ಪ್ರೇಮಿಗಳನ್ನೂ ಆಕರ್ಷಿಸುತ್ತಿದೆ. ಚಿಟ್ಟೆ ಉದ್ಯಾನದ ಕವಲು ಬರುತ್ತಿದ್ದಂತೆ ನನ್ನ ಚಿಂತನಾಲಹರಿಯ ಹೊಸ ಕವಲು ಅತ್ತ ಎಳೆದೊಯ್ದಿತ್ತು.

‘ಅಶೋಕವನ’ದಿಂದ ತೊಡಗಿದ ‘ಖಾಸಗಿ ವನಧಾಮ’ದ ಕಲ್ಪನೆಗೆ ಈಗ ಗೆಳೆಯ ಅನಿಲ್ ಯುಕೆ, ಸುಬ್ರಹ್ಮಣ್ಯ ಉರಾಳಾದಿಗಳು ಸೇರಿಕೊಂಡಿರುವುದು ನಿಮಗೆಲ್ಲ ತಿಳಿದೇ ಇದೆ. (ತಿಳಿದಿಲ್ಲವರು ಇಲ್ಲಿ ಓದಿಕೊಳ್ಳಿ) ಅದರ ಕುರಿತು ಸಮ್ಮಿಳನ ಶೆಟ್ಟಿಯವರನ್ನು ಹೆಚ್ಚಿಗೆ ಜಾಗೃತಗೊಳಿಸುವ ಉತ್ಸಾಹ ನನ್ನದು. ಸಮ್ಮಿಳನರ ತೋಟದ ಮನೆಯಲ್ಲಿ ಮಂಗಳೂರು ವಿವಿನಿಲಯದ ಕೆಲವು ಸಂಶೋಧನಾ ವಿದ್ಯಾರ್ಥಿಗಳಷ್ಟೇ ಇದ್ದರು. ಆದರೆ ಸನಿಹದಲ್ಲೇ ಪ್ರತ್ಯೇಕ ಮನೆಯಲ್ಲಿದ್ದ ಶೆಟ್ಟರು, ನನ್ನ ಚರವಾಣಿ ಕರೆಗೆ ಸ್ಪಂದಿಸಿ, ಕೂಡಲೇ ಬಂದರು. ಕಾರಿಳಿಯುತ್ತಿದ್ದಂತೇ “ಇದು ಚಿಟ್ಟೆ ಹೆಚ್ಚು ಆಕ್ಟಿವ್ ಆಗಿರುವ ಸೀಸನ್ ಅಲ್ಲಾ ಸಾರ್ ಆದರೂ…” ಎಂದು ತುಳುಕುವ ಪ್ರೀತಿ ಉತ್ಸಾಹಗಳಲ್ಲಿ ಉದ್ಯಾನ ಸುತ್ತಿಸಲು ಹೊರಡುವವರಿದ್ದರು. ನಾನವರನ್ನು ತಡೆದು, ಹೊಸ ವಿಚಾರವನ್ನು ಐದು ಮಿನಿಟಿನ ಸಂವಾದದಲ್ಲಿ ಹಂಚಿಕೊಳ್ಳುವಷ್ಟಕ್ಕೇ ಮುಗಿಸಿದೆ. ನಾವು ಅವಸರದಲ್ಲೇ “ಉದ್ಯಾನ ನೋಡಲು ಇನ್ನೊಮ್ಮೆ ಬರ್ತೇವೆ…” ಎಂದು ಹೊರಡುತ್ತಿದ್ದಂತೆ ಸಹಜವಾಗಿ ಶೆಟ್ರ ಪ್ರಶ್ನೆ ಬಂತು “ಈರ್ ದೂರಾ?” (ನೀ ಹೊರಟಿದ್ದೀಗ ಇದು ಎಲ್ಲಿಗೀ?)

ಹೊರಟದ್ದೆಲ್ಲಿಗೇಂದ್ರೇ….
ಹೆಗ್ಗೋಡು – ನೀನಾಸಂ ನಾಟಕ ಶಾಲೆ, ‘ತಿರುಗಾಟ’ವೆಂಬ ನಾಟಕ ಮೇಳ, ಅಕ್ಷರ ಪ್ರಕಾಶನ ಎಂದಿತ್ಯಾದಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾಪಗಳಿಂದ ವಿಶ್ವಖ್ಯಾತವೇ ಇದೆ. ಅದು ತನ್ನ ಬಹುಮುಖೀ ಚಟುವಟಿಕೆಗಳಿಗೆ ಕಳಶಪ್ರಾಯವಾಗಿ, ವರ್ಷಕ್ಕೊಮ್ಮೆ ಕೆಲವು ದಿನಗಳ ‘ಜಾತ್ರೆ’ಯೊಂದನ್ನೂ ನಡೆಸುತ್ತದೆ. ಸುಮಾರು ಎರಡೂವರೆ ದಶಕಗಳ ಇತಿಹಾಸವಿರುವ ಈ ಜಾತ್ರೆ, ಕಾಲಕಾಲಕ್ಕೆ ಸಿನಿಮಾ ರಸಗ್ರಹಣ, ಸಂಸ್ಕೃತಿ ಶಿಬಿರ ಎಂದೆಲ್ಲ ಹೆಸರು ಕೊಟ್ಟವರು, ಈ ಬಾರಿ – ಕಲೆಗಳ ಸಂಗಡ ಮಾತುಕತೆ, ಎಂದೇ ಘೋಷಿಸಿದ್ದರು. ನವೆಂಬರ್ ಐದರಿಂದ ಒಂಬತ್ತರವರೆಗಿನ (ಐದು ದಿನಗಳು) ಆ ಶಿಬಿರಕ್ಕೆ ನಾವು ಶಿಬಿರಾರ್ಥಿಗಳಾಗಿ ಹೊರಟಿದ್ದೆವು. ಜತೆಗೇ ಮಾರ್ಗಕ್ರಮಣದಲ್ಲಿ ಇನ್ನಷ್ಟು ಅನುಭವ ಸಂಗ್ರಹಿಸಿಕೊಳ್ಳುವ ಯೋಚನೆಯಿದ್ದುದಕ್ಕೆ ಬೈಕ್ ಹಿಡಿದಿದ್ದೆವು. ಅದಕ್ಕೆ ಅನುರೂಪವಾಗಿ ಮೊದಲಲ್ಲೇ ಹತ್ತು ಹೂವಿಗೆ ಹಾರುವ ಚಿಟ್ಟೆಗಳ ಉದ್ಯಾನವೇ ಸಿಕ್ಕಿತ್ತು! ಹಾಗಾದರೆ ಮುಂದಿನ ಹೂವೂ….

ತಾವರೆಕೊಳ
ಬರಿಯ ಹೂವಲ್ಲ, “ಸಹ್ಯಾದ್ರಿ ಘಟ್ಟ ಮಾಲೆಯ, ಪೆರ್ಲಗುಡ್ಡೆ ಎಂಬ ಪುಟ್ಟ ಹೂವಿನ ಸಂಚಯಿತ ಮಧುವೇ ಆದ – ಪದ್ಮಾಂಬುಧಿ”! ನಾನು ೧೯೮೩-೮೪ರಲ್ಲಿ ಪ್ರಥಮ ಬಾರಿಗೆ ಕಂಡು ಬೆರಗಾದ ಕೆರೆ ಬಸದಿ/ದೇವಳ – ವರಂಗವನ್ನು ವರ್ಣಿಸಿದ್ದೇ ಹೀಗೆ. (ಪೂರ್ಣ ಓದಿಗೆ: ವರಂಗದಿಂದ ಒನಕೆ ಅಬ್ಬಿಗೆ ) ಇದು ಕಾರ್ಕಳ – ಆಗುಂಬೆ ದಾರಿಯಲ್ಲಿ ಸಿಗುವ ಪುಟ್ಟ ಹಳ್ಳಿ. ಇಲ್ಲಿ ದಾರಿಯ ಬಲಬದಿಯಲ್ಲಿ ಜೈನ ಮಠ, ದೇವಾಲಯ ಮತ್ತು ಕೆರೆ ದೇವಳವಿದೆ. ಈ ದಾರಿಯಲ್ಲಿ ನಾನು ಅತ್ತ ಇತ್ತ ದಾಟಿದಾಗೆಲ್ಲ ಒಂದು ಇಣುಕು ನೋಟವನ್ನಾದರೂ ಹಾಕದೆ ಮುಂದುವರಿಯಲಾಗದ ಸ್ನಿಗ್ಧ ಸೌಂದರ್ಯ ವರಂಗದ ಕೆರೆ ದೇವಳದ್ದು. ಈ ಬಾರಿಯೂ ಐದೇ ಮಿನಿಟಿಗೆಂದು ಅಲ್ಲಿ ನಿಂತೆವು.

ಜೈನ ಮಠದ ಗದ್ದೆಯ ಕೊಯ್ಲಾಗಿರಲಿಲ್ಲ, ಜನ ವಾಹನಗಳು ಇಳಿಯದಂತೆ ಬೇಲಿ ಹಾಕಿದ್ದರು. ದೇವಳದ ಪಕ್ಕದಲ್ಲೇ ಬೈಕಿಳಿದು, ಒತ್ತಿನ ಕಾಲ್ದಾರಿಯಲ್ಲಿ ನಡೆದು ಕೆರೆಯಂಚು ಸೇರಿದೆವು. ಅಂಬಿಗ ಆಗಲೇ ಮೂರ್ನಾಲ್ಕು ಮಂದಿ ಭಕ್ತರನ್ನು ದೋಣಿಗೇರಿಸಿದ್ದರೂ ದೂರದಿಂದಲೇ ನಮ್ಮನ್ನು ಕಂಡದ್ದಕ್ಕೆ ಕಾದಿದ್ದ. ಆದರೆ ನಮ್ಮ ‘ದೇವರು’ ಅಲ್ಲಿ ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕಿದ ಬಿಂಬಗಳಲ್ಲ. ಅವು ಶಿಲ್ಪಗಳಾಗಿ ನೋಡುವಂಥವೇ ಇವೆ. ಆದರೆ ಅವನ್ನಾವರಿಸಿದ ಸರಳ ಸುಂದರ ಮಂದಿರ, ಸುತ್ತಣ ಪುಟ್ಟ ಅಂಗಳ, ದೊಡ್ಡ ಸುತ್ತಿನ ತಾವರೆಕೊಳ, ಹಸಿರ ಹಿನ್ನೆಲೆಯೊದಗಿಸುವ ಪಶ್ಚಿಮ ಘಟ್ಟ, ಕಿರೀಟವಿಟ್ಟಂತೆ ನೀಲಾಗಸ ಒಟ್ಟಾಗಿ ಕಾಣುತ್ತಿತ್ತು ನಮ್ಮ ನಿತ್ಯ ನೂತನ ದೇವರು. ನಾವು ಅಂಬಿಗನಿಗೆ “ಇಲ್ಲ, ಬರುವುದಿಲ್ಲ, ಪದ್ಮಾವತಿ ದರ್ಶನ ಹಿಂದೆ ಹಲವು ಬಾರಿ ಮಾಡಿದ್ದೇವೆ…” ಎಂದೆ. ದೋಣಿಯವ ತುಸು ನಿರಾಶೆಯಲ್ಲೇ ದಂಡೆ ಒದ್ದು, ಜಲ್ಲೆ ಎತ್ತಿಕೊಂಡ. ಆದರೆ ದೋಣಿಯಲ್ಲಿದ್ದ ಸಣ್ಣ ಕುಟುಂಬದ ಯಜಮಾನರು, “ಸರೀರೀ. ಆದರೆ ದೇವೀ ಇನ್ನೊಮ್ಮೆ ನೋಡಬ್ಯಾಡ್ರೀ ಅಂತಾಳಾ…” ಎಂದರು. ನಾವು ಬರಿದೇ ನಗೆ ಕೊಟ್ಟು ಸುಧಾರಿಸಿದೆವು.

ದೋಣಿಗರು ಚೆಲ್ಲಿದ ಸ್ವಲ್ಪ ಹುರಿಗಾಳಿಗೆ ಮುತ್ತಿಗೆ ಹಾಕಿದ ಮೀನುಗಳು ಚದುರುತ್ತಿದ್ದಂತೆ, ತಾವರೆ ಎಲೆಗಳ ನಡುವಣ ಸಣ್ಣ ತೆರವಿನಲ್ಲಿ ದೋಣಿ ಜಲ್ಲೆಯ ಹಗುರ ನೂಕಿಗೆ, ಕಿರು ತರಂಗಗಳ ತಳಮಳವನ್ನಷ್ಟೇ ಕಾಣಿಸುತ್ತಾ ದೇವಳದತ್ತ ಸಾಗಿತ್ತು. ಆ ಕೊನೆಯಲ್ಲಿ ದೋಣಿ ನಿಂತಲ್ಲಿಂದ ಅಂಗಳಕ್ಕೇರಲು ನಾಲ್ಕೂ ದಿಕ್ಕುಗಳಲ್ಲಿ ಮೆಟ್ಟಿಲ ಸಾಲು ಮತ್ತು ದೇವಳದ ನಾಲ್ಕೂ ಮುಖಗಳಲ್ಲಿ ಬಾಗಿಲೊಡೆದು ನಿಂತ ಭಿನ್ನ ದೇವ ಬಿಂಬಗಳು (ಪದ್ಮಾವತಿ ಮತ್ತು ಭಿನ್ನ ತೀರ್ಥಂಕರರವು) ಭಕ್ತಾದಿಗಳನ್ನು ಕಾದೇ ಇದ್ದವು. ಮತ್ತೆ ಅವುಗಳಿಗೆ ಹಿಂದೆ ನಾನು ಕೇಳಿದಂತೆ, ಇಂದೂ ಕನ್ನಡದಲ್ಲೇ ಆರತಿ ಪದವೂ ನಡೆದಿರಬಹುದು. ನಾವಿಬ್ಬರು ಮಾತ್ರ ದೊಡ್ಡ ಕಲ್ಲುಗಳ ಮೆಟ್ಟಿಲ ಮೇಲೆ ಮಿನಿಟೆರಡು ಕುಳಿತು, ವಿರಳ ಹಕ್ಕಿಯುಲಿಗೆ ಕಿವಿಯಾದೆವು, ನೀರ ತೀಡಿ ಸುಳಿಯುತ್ತಿದ್ದ ತಂಪು ಗಾಳಿಗೆ ಗಾರೆದ್ದ ಮುಖ ಒಡ್ಡಿ ಹಸಿಯಾದೆವು. ಮೇಲೆ ಬರುತ್ತಿದ್ದಂತೆ ಹೊಂಬಣ್ಣದ ತೆನೆ ತೂಗಿನ ಹಿನ್ನೆಲೆಗಿದ್ದ ಮಠ, ದೇವಳಗಳೂ ನಮಗೆ ಅಷ್ಟೇ ಆಪ್ತ ಸುಖಕೊಟ್ಟವು. ಆದರೆ ನಾವು ಹೋಗುವಾಗ ಧಾವಂತದಲ್ಲಿ ಗಮನಿಸದ ಕಾಲ್ದಾರಿಯಂಚಿನ ನಾಗರಿಕ (?) ಕಸದ ಗುಪ್ಪೆ ನಮ್ಮ ಕಣ್ಣ ಕಿಸರಾಯ್ತು. ಜತೆಗೇ ಕಾಲ ಬದಲಿರುವ ಮತ್ತು ಬದಲುತ್ತಲೇ ಇರುವ ವಾಸ್ತವದೊಡನೆ ನಮ್ಮನ್ನು ಎಚ್ಚರಿಸಿತು – ಸಾಗಲಿರುವ ದಾರಿ ದೀರ್ಘವೇ ಇದೆ!

ಮಿತ್ರ ಭೇಟಿ
ಮುಂದೆ ಎರಡೇ ಕಿಮೀಯಲ್ಲೊಂದು ಬಲವಾದ ಕೈಕಂಬ – ಪೇಟೆ ಮುದ್ರಾಡಿ. ಇಲ್ಲಿ ಎಡ ಕವಲು ‘ಹೆಬ್ರಿ’ಗಾದರೆ ಬಲದ್ದು ಸೋಮೇಶ್ವರ – ಆಗುಂಬೆಗೆ. ನನ್ನ ಲೆಕ್ಕಕ್ಕೆ ಮುದ್ರಾಡಿಯೂ ಮುಖ್ಯವೇ. ಅದರಷ್ಟಕ್ಕೆ ಏನೂ ಅಲ್ಲದ ಹಳ್ಳಿಗೆ, ಕನಿಷ್ಠ ಕರಾವಳಿಯ ವಲಯಕ್ಕಾದರೂ ಪರಿಚಿತವನ್ನಾಗಿಸಿದ ಖ್ಯಾತಿ – ಹರಿದಾಸ, ಜಿನದಾಸ, ಸಾಹಿತಿ (ಅವರ ಒಂದು ಪುಸ್ತಕಕ್ಕೆ ನಾನು ವಿತರಣೆಯ ಕೆಲಸವನ್ನೂ ಮಾಡಿದ್ದೆ), ಕವಿ, ಯಕ್ಷ-ತಾಳಮದ್ದಳೆಗಳ ಕಲಾವಿದ, ಶಾಲಾ ಅಧ್ಯಾಪಕ ಅಂಬಾತನಯ ಮುದ್ರಾಡಿಯವರಿಗೇ ಸೇರುತ್ತದೆ. ಮತ್ತೆ…

ಬಲಗವಲಿನ ಒಂದು ಕಿಮೀನಲ್ಲಿಂದು ದೇವೀ ಕ್ಷೇತ್ರವಿದೆ. ಅಲ್ಲೋರ್ವ ದರ್ಶನ ಪಾತ್ರಿ – ‘ಮೋಹನ್’ (ಇಂದಿಲ್ಲ), ಸಣ್ಣದಾಗಿ ಪ್ರಚಾರದಲ್ಲಿದ್ದರು. ಆದರೆ ನನ್ನ ಲೆಕ್ಕಕ್ಕೆ ಅವರ ಓರ್ವ ಮಗ – ಸುಕುಮಾರ ಮುದ್ರಾಡಿ, ಇಂದು ಹೆಚ್ಚು ಪ್ರಚಾರದಲ್ಲಿದ್ದಾರೆ. ಸುಕುಮಾರ್ ಹವ್ಯಾಸೀ ನಾಟಕ ಕಲಾವಿದನಾಗಿ (ಸಣ್ಣ ಮಟ್ಟಿನ ಲೇಖಕನೂ ಹೌದು) ಚಿಗುರಿ, ಆಧುನಿಕ ರಂಗ ಪ್ರಯೋಗಗಳನ್ನು ನಡೆಸಿ, ಇಂದು ‘ನಾಟ್ಕದ ಮನೆ’ ಎಂಬ ರಂಗ ಮಂದಿರವನ್ನೇ ಕಟ್ಟಿದ್ದಾರೆ. ಅಲ್ಲಿಗೆ ಎಲ್ಲೆಲ್ಲಿನ ನಾಟಕಗಳನ್ನು ಕರೆಸಿ, ಉತ್ಸವಗಳನ್ನು ನಡೆಸಿ, ಅಪ್ಪಟ ಗ್ರಾಮೀಣ ಪ್ರದೇಶಕ್ಕೆ ತುಂಬ ಎತ್ತರಕ್ಕೇ ಬೆಳೆದಿದ್ದಾರೆ. ಅವರ ಕೆಲವು ನಾಟಕ ಪ್ರದರ್ಶನಗಳಿಗೆ ನಾನು ಮಂಗಳೂರಿನ ದೂರದಿಂದಲೂ ಹೋದದ್ದಿದೆ. ಅವರ ಚಟುವಟಿಕೆಯಲ್ಲಿ ನಾನು ಉಲ್ಲೇಖಿಸಲೇ ಬೇಕಾದ ಎರಡು ಅಂಶ – (ನಮ್ಮ ಮಗ) ಅಭಯಸಿಂಹನಿಗೆ, ನಾಟ್ಕದ ಮನೆಯ ವಾರ್ಷಿಕ ಗೌರವ ಪ್ರಶಸ್ತಿ ಸಿಕ್ಕಿದ್ದು ಮತ್ತು ಆಂಧ್ರದ ಬಹುದೊಡ್ಡ ಕುಟುಂಬ ಕಂಪೆನಿಯೊಂದರ ನಾಟಕವನ್ನು ನನಗೂ ನೋಡುವ ಭಾಗ್ಯ ಕಲ್ಪಿಸಿದ್ದು. (ಆ ಕಂಪೆನಿಯನ್ನು ಮಂಗಳೂರಿಗೆ ಕರೆಸಿದವರಿಲ್ಲ) ಅವೆಲ್ಲ ಏನೇ ಇದ್ದರೂ…

ಸದ್ಯ ನಾವು “ಒಂದು ಗಳಿಗೆ” ಎಂದು ಮುದ್ರಾಡಿಯಲ್ಲಿ ನಿಂತದ್ದು ಫೇಸ್ ಬುಕ್ಕಿನ ಗೆಳೆತನದ ಸೆಳೆತಕ್ಕೆ ಎಂದರೆ ಅತಿಶಯೋಕ್ತಿಯಲ್ಲ. ನನ್ನ ಬಹು ದೀರ್ಘ ಕಾಲೀನ ಗೆಳೆಯ ದೇವು ಹನೆಹಳ್ಳಿಯ ಸೋದರ – ಕೆ.ಎಸ್. ಕಲ್ಕೂರ ಇಲ್ಲಿದ್ದಾರೆ. ನನಗವರ ಮುಖ ಪರಿಚಯದ ನೆನಪಿಲ್ಲ. ಕೇವಲ ನನ್ನ ಫೇಸ್ ಬುಕ್ ನಮೂದುಗಳ ಜಾಡು ಹಿಡಿದ ಅವರು ಪ್ರತಿ ಬಾರಿಯೂ “ನನ್ನಲ್ಲಿ ಒಂದು ಗಳಿಗೆ…” ಎಂದು ದೂರಿಡುವುದಿತ್ತು. ಅವರದು ಮುದ್ರಾಡಿಯ ಏಕಮಾತ್ರ ಔಷಧ ಅಂಗಡಿಯಾದ್ದರಿಂದ (ಆತ್ರೇಯ) ಚುರುಕಾಗಿಯೇ ಸಿಕ್ಕರು. ಅವರೊಡನೆ ಮಾತಾಡುತ್ತಿದ್ದಂತೆ, ಆಕಸ್ಮಿಕವಾಗಿ ಅಲ್ಲಿಗೆ ಇನ್ನೇನೋ ಕೆಲಸದ ಮೇಲೆ ಬಂದಿದ್ದ ‘ನಾಟ್ಕದ ಮನೆ’ಯ ಸುಕುಮಾರರೂ ಸಿಕ್ಕಿದ್ದು ನನಗೆ ಒಂದೇ ಕಲ್ಲಿಗೆ ಎರಡು ಹಕ್ಕಿ! ಎಲ್ಲರಿಗೂ ಶುಭವಿದಾಯ ಹೇಳಿ ಮತ್ತೆ ಬೈಕ್ ಗುಡುಗುಡಾಯಿಸಿದೆವು.

ಪ್ರವಾಸೋದ್ದಿಮೆಯ ಗಿರದಲ್ಲಿ ಕೂಡ್ಲು ತೀರ್ಥ
‘ಕೋವಿಡ್’ ಮಹಾಮಾರಿಯ ಕಾಲದಲ್ಲಿ ನೀನಾಸಂ ರಂಗಶಾಲೆಯ ೨೦೧೯ರ ವಿದ್ಯಾವರ್ಷ ಮೊಟಕುಗೊಂಡಿತ್ತು. ಸರಕಾರದ ಬಿಗಿತಗಳು ಕಡಿಮೆಯಾದ ಮೇಲೆ, ನೀನಾಸಂ ಕಡಿದ ಎಳೆಗಳನ್ನು ಜೋಡಿಸಿ (೨೦೨೧), ಆ ಬಳಗದ ಶಿಕ್ಷಣವನ್ನು ಪೂರ್ಣಗೊಳಿಸಿತ್ತು. ಮತ್ತದನ್ನು ಸಣ್ಣದಾಗಿ ಲೋಕಕ್ಕೆ ಸಾರುವಂತೆ, ಎರಡು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. (ನೋಡಿ: ರಂಗ ಪುರುಷನ ಸಾಕ್ಷಾತ್ಕಾರ… ) ಅದನ್ನು ನೋಡಲು ಅಂದೂ ನಾವಿಬ್ಬರು ಹೀಗೇ ಬೈಕೇರಿ, ಇದೇ ದಾರಿಯಲ್ಲಿ ಹೋಗಿದ್ದೆವು. ಆಗ ಮುದ್ರಾಡಿಯಿಂದ ಮುಂದೆ, ಕೂಡ್ಲು ತೀರ್ಥವನ್ನು, ಬಹು ವರ್ಷಗಳ ಮೇಲೆ ಕಣ್ದುಂಬಿಕೊಳ್ಳುವ ಉತ್ಸಾಹದಲ್ಲಿ ನುಗ್ಗಿ, ಸೋತು ಮರಳಿದ್ದೆವು. ಅದನ್ನು ಈ ಬಾರಿ ಈಡೇರಿಸಿಕೊಳ್ಳುವಂತೆ ಕವಲೊಡೆಯುವ ಸ್ಥಳ – ನಡ್ಪಾಲಿನಲ್ಲಿ, ವಿಚಾರಿಸಿಯೇ ಮುಂದುವರಿದೆವು.

ಬಹಳ ಹಿಂದೆ ಆ ದಾರಿ (೧೯೭೦ರ ದಶಕ) ಆ ವಲಯದ ಹಿರಿಯ ಮನೆ – ತಿಂಗಳೆಯನ್ನೇ ಮುಖ್ಯವಾಗಿ ಲಕ್ಷಿಸಿದಂತಿತ್ತು. ಆಗ ತಿಂಗಳೆ ಕವಲಿನವರೆಗೆ (ನೆಲ್ಲಿಕಟ್ಟೆ) ಬಹುತೇಕ ಸಮತಟ್ಟಾಗಿಯೂ ಪ್ರಾಥಮಿಕ ಜಲ್ಲಿ ಹಾಸನ್ನೂ ಕಂಡಿತ್ತು. ಅಲ್ಲಿಂದ ಎಡ ಮುರಿವ ಕೂಡ್ಲು ತೀರ್ಥದ ದಾರಿ ಕೆಲವು ವಿಪರೀತದ ಏರಿಳಿತದ ಕಚ್ಚಾ ಮಾರ್ಗ. ಅದರಲ್ಲೂ ಅಡ್ಡೈಸುತ್ತಿದ್ದ ಕೊಲ್ಲಂಗಾರು ಹಳ್ಳ ಹಾಗೂ ಸೀತಾನದಿಯ ವಿಶಾಲ ಪಾತ್ರೆಗಳನ್ನು ಮೊಣಕಾಲಾಳದ ನೀರ ಸೆಳೆತ ಧಿಕ್ಕರಿಸಿ, ಗುಂಡುಕಲ್ಲುಗಳೊಡನೆ ಉರುಡುತ್ತ ದಾಟಬೇಕಿತ್ತು. ಅಲ್ಲೂ ಮಳೆಗಾಲದ ಆಸುಪಾಸಿನಲ್ಲಿ ನಡಿಗೆಯೊಂದೇ ಮಂತ್ರ. ಹೊಳೆ ದಾಟುವುದು ಅನಿವಾರ್ಯವಾದ ಒಂದೆರಡು ಕಡೆ ಮಾತ್ರ ಗ್ರಾಮೀಣರು ಮಾಡಿಕೊಂಡ ಗುರ್ಜಿ, ಬಳ್ಳಿ, ಕಾಡುಮರಗಳ ತತ್ಕಾಲೀನ ಸೇತುಗಳು ಒದಗುತ್ತಿದ್ದವು. ಮುಂದುವರಿದ ದಿನಗಳಲ್ಲಿ ಎರಡೂ ಹೊಳೆಗಳಿಗೆ ಪಾದಚಾರಿ ಮತ್ತು ದ್ವಿಚಕ್ರ ವಾಹನಗಳಿಗೊದಗುವಂತೆ ಸಪುರದ ಕಾಂಕ್ರೀಟಿನ ಸೇತುವೆ ಬಂದಿತ್ತು. ಆದರೆ ಇಂದು ಎಲ್ಲೂ ನದಿಗಿಳಿಯುವ ಪ್ರಸಂಗವಿಲ್ಲ. ಕೊನೆಯ ಸುಮಾರು ಮೂರು ಕಿಮೀ ದಾರಿ ಮಾತ್ರ ಕಚ್ಚಾ ಸ್ಥಿತಿಯಲ್ಲಿರುವಂತೆ ಎಲ್ಲೆಡೆ ಒಳ್ಳೆಯ ಡಾಮರ್ ಅಥವಾ ಕಾಂಕ್ರೀಟಿನ ಹಾಸು ಬಂದಿದೆ. ಉಳಿದ ಕಚ್ಚಾ ದಾರಿಯಲ್ಲೂ ಭಾರೀ ಏರಿಳಿತಗಳೇನೂ ಇಲ್ಲದಿರುವುದರಿಂದ ನಾವು ನಿರಾತಂಕವಾಗಿ ಪೂರೈಸಿ, ದಾರಿಯ ಕೊನೆ – ಕೂಡ್ಲು ತೋಟ, ಸೇರಿದೆವು. ಮುಂದೆ….

ಬೆಟ್ಟದ ಕಿಬ್ಬಿಯೊಳಗಿರುವ ಜಲಪಾತದ ತಳಕ್ಕೆ ಚಾರಣ – ಅಂದೂ ಇಂದೂ ಕಡ್ಡಾಯವೇ ಇದೆ. ಸಣ್ಣ ವ್ಯತ್ಯಾಸ – ಅಂದು ನಮ್ಮ ವಾಹನಗಳನ್ನು ಸ್ಥಳೀಯ ರೈತರ ಕೃಪೆಗೆ ಬಿಟ್ಟು ಹೋಗಬೇಕಿತ್ತು. ಆಗ ಒಂದೆರಡು ಬಾರಿ ಬೈಕುಗಳಿಂದ ಪೆಟ್ರೋಲ್ ಕದ್ದದ್ದೂ ನಮ್ಮ ಅರಿವಿಗೆ ಬಂದಿತ್ತು. ಈಗ ಅಲ್ಲಿನ ಕೃಷಿ ವಲಯದಿಂದಾಚೆಗೆ ಅರಣ್ಯ ಇಲಾಖೆ, ವಾಹನಗಳಿಗೆ ತಂಗಲು ವಿಸ್ತಾರದ ತಟ್ಟು ಮಾಡಿ, ಸ್ವಾಗತ ಕಚೇರಿಯೂ ಸೇರಿದಂತೆ ಒಂದೆರಡು ಕಟ್ಟಡಗಳನ್ನೇ ಮಾಡಿ ಬೀಡುಬಿಟ್ಟಿದೆ. ಚಾರಣಿಗರಿಗೆ ತಲಾ ನೂರು ರೂಪಾಯಿಯ ಪ್ರವೇಶಧನವನ್ನೂ ವಿಧಿಸುತ್ತದೆ. ನಾವು ತೆತ್ತು, ನಡೆದೆವು.

ಕೂಡ್ಲುತೋಟದ ಸಣ್ಣ ತಟ್ಟನ್ನು ಭಾರೀ ಎತ್ತರದ ಬೆಟ್ಟ ಸಾಲು ಕವುಚಿದ U ಆಕಾರದಲ್ಲಿ ಆವರಿಸಿದೆ. ಅದರ ಮುಚ್ಚಿದ ಒಳಮೂಲೆಯಲ್ಲಿ (ಸುಮಾರು ಒಂದು ಕಿಮೀ ಅಂತರ) ಧುಮುಕುವ ಸೀತಾನದಿಯ ಒಂದು ಎಳೆಗೆ ಸ್ಥಳ ಮಹಿಮೆಯಲ್ಲಿ ‘ಕೂಡ್ಲುತೀರ್ಥ’ ಎಂದೇ ಹೆಸರು. (ಸಂತೋಷಕುಮಾರ್ ಗುಲ್ವಾಡಿ ಕಾಲದ ‘ತರಂಗ’ ಇದನ್ನು ಚಂದ ಮಾಡಲು ಹೋಗಿ ‘ಸೀತಾ ಫಾಲ್ಸ್’ ಎಂದದ್ದು ಇಂದು ಜನಪ್ರಿಯವೇ ಆಗಿರುವುದು ವಿಷಾದಕರ) ಜಲಪಾತದಿಂದ ಮುಂದೆ ಬಂದ ಈ ತೊರೆ ಕೂಡ್ಲು ತೋಟದ ತಟ್ಟಿಗೆ ದಕ್ಷಿಣದ ಅಂಚನ್ನು ನಿರ್ಧರಿಸಿದೆ. ಜಲಪಾತ ನೋಡ ಬಯಸುವವರು ಮಳೆಗಾಲವಲ್ಲದಿದ್ದರೆ ಹೊಳೆ ಪಾತ್ರೆಯಲ್ಲಿ (ತುಸು ಕಷ್ಟ) ಅಥವಾ ಎದುರು ದಂಡೆಯ ಸವಕಲು ಜಾಡಿನಲ್ಲಿ ನಡೆಯಬೇಕು. ನನ್ನ ಮೊದಲ ಭೇಟಿಯ ಕಾಲದಲ್ಲಿ (ಸುಮಾರು ೧೯೭೦ ರ ದಶಕ) ಇಂಥ ಯಾವ ಮಾಹಿತಿಯೂ ಇಲ್ಲದ್ದಕ್ಕೆ ಜಡಿ ಮಳೆಗಾಲದಲ್ಲೇ ಹೋಗಿದ್ದೆ. (ನೋಡಿ: ಎದೆ ನಡುಗಿಸಿದ ಕೂಡ್ಲು ತೀರ್ಥ ) ಆಗ ಹೊಳೆಯ ಅಬ್ಬರದ ನೋಟವಂತೂ ಎಂಟೆದೆಯವರನ್ನೂ ನಡುಗಿಸುವಂತಿತ್ತು. ಆದರೆ ನಿತ್ಯದ ಅನಿವಾರ್ಯತೆಗೆ ಅಲ್ಲಿನ ಕೃಷಿಕರೇ ಮಾಡಿಕೊಂಡ ‘ಅಟ್ಟೆ ಬೂರುದ ಕಟ್ಟೆ’ ಎಂಬ ಅದ್ಭುತ (ಹೊಳೆಯ ಆಯಕಟ್ಟಿನ ಜಾಗದ ಎರಡೂ ದಂಡೆಗಳ ದೃಢ ಮರಗಳಿಗೆ ಕಾಡಿನ ಬಳ್ಳಿಗಳನ್ನೇ ಬಿಗಿದು ಮಾಡಿದ ತೂಗು ಸೇತುವೆ) ನಮ್ಮನ್ನು ಪಾರುಗಾಣಿಸಿತ್ತು. ಆದರೆ ಇಂದು….

ಇಲಾಖೆಯ ದೊಡ್ಡ ಹಣ ಕಾಡಿನ ಮೂಲೆಯಲ್ಲಿ ತೊಡಗಿದ್ದಕ್ಕೆ ಗ್ರಾಮೀಣ ಕಸುಬು ನಶಿಸಿದೆ; ಬಳ್ಳಿ ಸೇತು ಮಾಡುವವರು ಇಲ್ಲ. ಇತ್ತ ಪ್ರವಾಸೋದ್ದಿಮೆಯ ಗಿರದಲ್ಲಿ ಎಲ್ಲೆಲ್ಲಿನ ವಾಹನ, ಜನರನ್ನು ಕೂಡ್ಲು ತೋಟದವರೆಗೆ ಸೆಳೆದಿದ್ದಾರೆ. ಎದುರು ದಂಡೆಯ ಜಾಡಿನಲ್ಲೂ ಹಲವು ಕಡೆ ಕಾಂಕ್ರೀಟ್ ಮೆಟ್ಟಿಲುಗಳನ್ನು ಮಾಡಿದ್ದರೂ ಬಹುತೇಕ ಭಗ್ನಾವಶೇಷಗಳಾಗಿ ಉಳಿದಿವೆ. ಎಲ್ಲಕ್ಕು ಮುಖ್ಯವಾಗಿ ಎರಡನ್ನು ಸಂಪರ್ಕಿಸುವ ಸೇತುವೆ ಮಾಡಿಯೇ ಇಲ್ಲ! ನಾವು ಪಾದ ಮುಳುಗಿಸಿಯೇ ಹೊಳೆ ದಾಟಿ, ಲಂಬಿಸಿದ ಮಳೆಗಾಲಕ್ಕೆ ತಕ್ಕುದಾಗಿ ನಲಿವ ಜಿಗಣೆಗಳನ್ನು ನಗಣ್ಯ ಮಾಡಿ, ಭಗ್ನಸೋಪಾನವೋ ಬೇರಗಟ್ಟೆಯೋ ಬಂಡೆ ತುಂಡೋ ಮೆಟ್ಟುತ್ತ, ಆಕಾಶ ಎತ್ತಿ ಹಿಡಿದ ಮಹಾಮರಗಳ ಸುತ್ತ ಮುತ್ತ ಸುಳಿದು ಜಲಪಾತದ ಮಡಿಲು ಸೇರಿಕೊಂಡೆವು. ಅಲ್ಲಿನ ಅನುಭವಕ್ಕೆ ಎಷ್ಟು ಮಾತು ಕೊಟ್ಟರೂ ಸಾಲದು ಎನ್ನುವ ಕಾರಣಕ್ಕೆ, ನಾನು ಬಡ ಉಪಾಧಿಗಳಾಗಿ ಕೆಲವು ಚಿತ್ರ ಮತ್ತು ಚಲಚಿತ್ರ ತುಣುಕುಗಳನ್ನಷ್ಟೇ ಲಗತ್ತಿಸುತ್ತೇನೆ.

ಜಲಪಾತದ ಬಳಿ ನಾವು – ಮುದಿಯರು, ವಿಶೇಷ ಭಾವ ಬೆರಗುಗಳನ್ನು ಪ್ರದರ್ಶಿಸದೇ ತಾಂಗಿಣ, ತೋಂಗಿಣ ಹಾಕುವುದನ್ನು ಈರ್ವರು ಯುವಕರು ಆಶ್ಚರ್ಯದಲ್ಲೇ ಗಮನಿಸಿದರು, ಪರಿಚಯಿಸಿಕೊಂಡರು, ನಮ್ಮ ಒಂದೆರಡು ಚಿತ್ರಗಳಿಗೂ ಸಹಕರಿಸಿದರು. ಅವರ ಕುರಿತು ವಿಚಾರಿಸಿದಾಗ ನಮಗೂ ಆಶ್ಚರ್ಯವೇ ಆಯ್ತು. ಒಬ್ಬ – ಬಿಹಾರಿ, ಸದ್ಯ ಬೆಂಗಳೂರಿನಲ್ಲಿ ಗಣಕೋದ್ಯಮಿಯಾಗಿದ್ದರೂ ರಜಾದಿನಗಳಲ್ಲಿ ಒಂಟಿ ಬೈಕ್ ವಿಹಾರಿ. ಇನ್ನೊಬ್ಬ ಶಿವಮೊಗ್ಗ ಮೂಲದ ವಿದ್ಯಾರ್ಥಿ, ಒಂಟಿ ತಿರುಗಾಡಿತನದಲ್ಲೇ ಕುಶಿ ಕಾಣುವವ. ಇಬ್ಬರೂ ಯಾವುದೇ ಪೂರ್ವ ಪರಿಚಯ, ಯೋಜನೆ ಇಲ್ಲದೇ ‘ನಿನ್ನೆಯ ದಿನ’ ಉಡುಪಿಯ ಕಡಲ ಕಿನಾರೆಯಲ್ಲಿ ಪರಿಚಯ ಬಂಧಕ್ಕೆ ಬಿದ್ದಿದ್ದರು. ಹಾಗೇ “ನಾಳೆ ಏನು” ಎಂಬ ಮಾತಿನಲ್ಲೂ ಸಹಮತ ಬಂದಾಗ, ಒಂದೇ ಬೈಕೇರಿ, ಕೂಡ್ಲು ತೀರ್ಥಕ್ಕೆ ಬಂದಿದ್ದರು! ನಮ್ಮ ಸರಸ ಸಂಭಾಷಣೆಗಳು ತೀರ್ಥದಿಂದ ಮರಳುವ ದಾರಿಯುದ್ದಕ್ಕೂ, ಬೈಕೇರಿದ ಮೇಲೆ ನಾಡ್ಪಾಲ್ವರೆಗೂ ಹರಿದಿತ್ತು. ಬೀಳ್ಕೊಡುವ ಮುನ್ನ ಆ ಕನ್ನಡಿಗನ ಹುಟ್ಟುಹಬ್ಬ ನಿನ್ನೆಯಷ್ಟೇ ಕಳೆದಿತ್ತೆಂದು ತಿಳಿದಾಗ, ದೇವಕಿ ಸಂಚಿಯಲ್ಲಿ ಮೊಮ್ಮಗಳಿಗೆಂದು ಹೊತ್ತಿದ್ದ ಸಿಹಿ ತೆಗೆದು ತಿನ್ನಿಸಿ ಸಂಭ್ರಮಿಸಿದ್ದೂ ಆಯ್ತು. (“Sorry ಆಭಾ, ನಿಂಗೆರಡು ಸ್ವೀಟ್ ಕಡಿಮೆ ಆಯ್ತೂ!” – ಅಜ್ಜೋವಾಚ) ನಾವು ವಿಶೇಷ ಬಯಸದೆಯೂ ಅವರು ನಮ್ಮ ಸಂಪರ್ಕ ವಿವರಗಳನ್ನೆಲ್ಲ ತೆಗೆದುಕೊಂಡು, ವಿರಾಮದಲ್ಲಿ ಪಟಗಳನ್ನು ಕಳಿಸುವ, ನನ್ನ ಜಾಲತಾಣ ಶೋಧಿಸುವ ಮಾತುಗಳನ್ನೂ ಆಡಿದ್ದರು. ಕಾಲ ಮಹಿಮೆಯಂತೆ ಮತ್ತೆ ಇಂದಿನವರೆಗೂ ಅವರಿಂದ ಪಟಗಳಾಗಲೀ ನನ್ನ ಜಾಲತಾಣ ನೋಡಿದ್ದಕ್ಕೆ ಪ್ರತಿಕ್ರಿಯೆಯಾಗಲೀ ಬಂದೇ ಇಲ್ಲ! ಕೂಡಿ ಇದ್ದದ್ದಷ್ಟೇ ಸತ್ಯ, ಉಳಿದವು ಮಿಥ್ಯ!

ಕತ್ತಲೆಯಲ್ಲೇ ‘ಮನೆ’ ಸೇರಿದೆವು
ತೀರ್ಥ ದರ್ಶನ ಮುಗಿಸಿ ಬೈಕಿಗೆ ಬರುವಾಗಲೇ “ತೀರ್ಥದ ಹನಿಗಳು ಇಷ್ಟು ದೂರಕ್ಕಾ…” ಎಂದು ಒಮ್ಮೆಗೆ ಆಶ್ಚರ್ಯಮೂಡಿಸುವಂತೆ ಮಳೆ ಹನಿದಿತ್ತು. ಆತುರಾತುರವಾಗಿ ಬೈಕನ್ನು ಜೋಪಡಿಯೊಂದರ ಮರೆಗೆ ನೂಕಿದ್ದಷ್ಟೇ ಆಯ್ತು. ಐದೇ ಮಿನಿಟಿನಲ್ಲಿ ಮೋಡ ನಕ್ಕು ಚದುರಿತು, ನಾವು ನಿಟ್ಟುಸಿರು ಬಿಟ್ಟು ಬೈಕೋಡಿಸಿದ್ದೆವು. ಸೋಮೇಶ್ವರ ಹಾಗೂ ಘಾಟಿಯ ಹದಿಮೂರೂ ಹಿಮ್ಮುರಿ ತಿರುವುಗಳಲ್ಲಿ ಮಿಂಚಿದೆವು. ‘ಕುಖ್ಯಾತ ಸನ್ಸೆಟ್ ಪಾಯಿಂಟ್’ನಲ್ಲಿ, ಅನಾಗರಿಕ ಮಂದಿ ಅಪಾತ್ರ ಪ್ರಾಣಿದಯೆಯಲ್ಲಿ ಬಿಸ್ಕೆಟ್, ಹುರಿಗಾಳು, ಕಡ್ಲೆ, ಚಿಪ್ಸು, ಜೂಸು ಮುಂತಾದವುಗಳನ್ನು ಚೆಲ್ಲುತ್ತಾರೆ. ಹಾಗೆ ಕುಲಗೆಟ್ಟ ಊರ ಮಂಗಗಳೊಂದಿಗೆ (ಬಾನೆಟ್ ಮೆಕಾಕ್), ಈಗ ದೀರ್ಘ ಅಜ್ಞಾತವಾಸ ಕಳೆದು ಸಿಂಹಬಾಲದ ಮಂಗಗಳೂ (ಲಯನ್ ಟೇಲ್ಡ್…) ಸ್ಪರ್ಧಿಸುವುದನ್ನು ಹೊಸದಾಗಿ ನೋಡಲೂ ನಿಲ್ಲಲಿಲ್ಲ. ನಮ್ಮ ಕೂಡ್ಲುತೋಟ ವನವಾಸದ ಹಸಿವು ನೀಗಲೆಂದೇ ಕಾದಿದ್ದ ಆಗುಂಬೆಯ ‘ಶಬರಿ’ ಸೇರುವಾಗ ಗಂಟೆ ಎರಡೂ ಮುಕ್ಕಾಲು ಕಳೆದಿತ್ತು. ತಪ್ಪು ತಿಳಿದೀರಿ, ಇದು ಜೋಪಡಿಯಲ್ಲ, ಶಬರಿ ಗ್ರ್ಯಾಂಡ್! ಇಲ್ಲಿನ ತಿನಿಸಾದರೂ ಎಂಜಲ ಬೋರೆ ಹಣ್ಣುಗಳಲ್ಲ, ಎಲ್ಲ ಅಪ್ಪಟ ನಾಗರಿಕ ರುಚಿಯವೇ!

ಅವಸರದ ಊಟ ಮುಗಿಸಿ ಮತ್ತೆ ದಾರಿಗೆ ಬಿದ್ದೆವು! ನಿಲ್ಲದ ಓಟದಲ್ಲಿ ತೀರ್ಥಳ್ಳಿ ಕಳೆದು, ಹೊಸನಗರದ ದಿಕ್ಕು ಹಿಡಿದೆವು. ಮಳೆ ಮೋಡಗಳೇನೋ “ಗಿರಾಕಿ ತಪ್ಪಿಸಿಕೊಂಡ” ಎಂದು ದೂರಾದವು. ಆದರೆ ಸೂರ್ಯ ನಮ್ಮನ್ನು ಅಣಕಿಸುವಂತೆ ಭರದಿಂದ ಪಶ್ಚಿಮಕ್ಕಿಳಿಯ ತೊಡಗಿದ್ದ. ಹಿಲ್ಕುಂಜಿಯಲ್ಲಿ ಎಡ ಹೊರಳಿ, ಬಿದನೂರರಸರ ಕೋಟೆಯ – ನಗರದಲ್ಲಿ, ಎಡ ಹೊರಳಿ, ನಿಟ್ಟೂರ ದಾರಿ ಅನುಸರಿಸಿದೆವು. ಕಿಲೋ ಕಲ್ಲುಗಳ ಮೋಸ, ಸೋರುವ ಸಮಯದ ಸಂಚು, ಮುಸುಕುವ ಕಾಡಿನ ವಂಚನೆ ಎಂದೇನೇನೋ ನೆಪಗಳನ್ನು ಚರ್ಚಿಸಿದರೂ ಚಾ ವಿರಾಮವನ್ನು ಅನುಭವಿಸುವಷ್ಟು ಧೈರ್ಯ ನಮಗಿರಲಿಲ್ಲ. ಸಂಪೆಕಟ್ಟೆಯಲ್ಲಿ ಕೇವಲ ಅರೆಗಳಿಗೆ ನಿಂತು, ಎಡಕ್ಕಿದ್ದ ಕೊಡಚಾದ್ರಿ ಶಿಖರಕ್ಕೇರುವ ದಾರಿಯ ಅನೇಕ ಹಳೆ ನೆನಪುಗಳನ್ನು ಸ್ಮರಿಸಿ ನಿಟ್ಟೂರ ದಾರಿಯಲ್ಲಿ ಮುಂದುವರಿದೆವು. (ವಿವರಗಳಿಗೆ ಇಲ್ಲಿದೆ ಕೊಡಚಾದ್ರಿಯ ಸುತ್ತ ಮುತ್ತ  ಮತ್ತು ಸರ್ವಜ್ಞ ಪೀಠದಲ್ಲಿ ).

ನಿಟ್ಟೂರಿಗೂ ಆರು ಕಿಮೀ ಮೊದಲೇ ಸಿಗುವ ಅಡಗೋಡಿ ವೃತ್ತದಲ್ಲಿ ಬಲ ಹೊರಳಿದ ಮೇಲೆ ನಮ್ಮದೇನಿದ್ದರೂ ನೇರ ಶರಾವತಿ ಸಾಗರದ ಜಪ. ಸುಮಾರು ಹನ್ನೆರಡು ಕಿಮೀ ಉದ್ದದ ಹಳೆಗಾಲದ ಡಾಮರ್ ಒರಟು ಮಾರ್ಗ. ಬಹುತೇಕ ನಿರ್ಜನ ಕಾಡು. ದಡಬಡಿಸುತ್ತಾ ಸುಮಾರು ಅರೆವಾಸಿ ಸಾಗಿದ್ದಂತೆ, ಎದುರಿನಿಂದ ಒಟ್ಟೊಟ್ಟಿಗೇ ನಾಲ್ಕೈದು ಕಾರು, ಬೈಕ್, ವ್ಯಾನ್ ಗಳು ಬಂದವು. ಆಗ ನೆನಪಿನ ಬಲದಲ್ಲಿ “ಅಯ್ಯೋ ಬಾರ್ಜ್ ತಪ್ಪಿತು” (ಪುಟ್ಟ ಹಡಗು) ಅಂದುಕೊಂಡರೂ ಸಾವಕಾಶವಾಗಿಯೇ ಮುಂದುವರಿದೆವು. ಐದೂ ಮುಕ್ಕಾಲರ ಸುಮಾರಿಗೆ ನಾವು ದೋಣಿಗಟ್ಟೆ ಸೇರುವಾಗ, ಶರಾವತಿ ಸಾಗರದ ಎದುರು ದಂಡೆಯನ್ನು ಬಾರ್ಜ್, ಪಶ್ಚಿಮ ದಿಗಂತ ರೇಖೆಯನ್ನು ಸೂರ್ಯನೂ ಸಮೀಪಿಸಿದ್ದರು. ಆದರೆ ಬಾರ್ಜ್ ದಿನದ ಸೇವೆ ಮುಗಿಸಿಲ್ಲ ಎಂದು ನಮಗೆ ಧೈರ್ಯ ಕೊಡುವಂತೆ ಅಲ್ಲಿ ಇನ್ನೂ ಮೂರ್ನಾಲ್ಕು ಕಾರು, ಬೈಕುಗಳೂ ಕಾದಿದ್ದವು.

ಶರಾವತಿ ಜಲಾನಯನ ಪ್ರದೇಶದ ಮುಳುಗಡೆಯಾಗಿ ಅರ್ಧ ಶತಮಾನ ಕಳೆದ ಮೇಲೂ (ಮೂರನೇ ತಲೆಮಾರೇ ಬಂದರೂ) ದಿಢೀರ್ ದ್ವೀಪವಾಸಕ್ಕೆ ಬಿದ್ದ ಮಂದಿಯ ಕನಿಷ್ಠ ಸಾರಿಗೆ ಸೌಕರ್ಯವನ್ನು ಯಾವ ಸರಕಾರಗಳೂ ಕಾಳಜಿ ವಹಿಸಿ ಪೂರೈಸಿಯೇ ಇಲ್ಲ. ಶರಾವತಿ ಸಾಗರ (ಹಿನ್ನೀರು) ಸುಮಾರು ಎಂಬತ್ತು ಕಿಮೀ ಉದ್ದಕ್ಕೆ, ಗರಿಷ್ಠ ಎನ್ನುವಲ್ಲಿ ಹದಿನೈದು ಕಿಮೀ ಅಗಲಕ್ಕೆ ವ್ಯಾಪಿಸಿದೆ. ಅದರಲ್ಲಿ ಜನ ಆ ದಂಡೆ ಈ ದಂಡೆ ಮಾಡಲು ಸರಕಾರ ಒದಗಿಸಿದ ಏಕೈಕ ದೋಣಿ ಸೇವೆ ಹೊಳೆ ಬಾಗಿಲು – ಕಳಸವಳ್ಳಿಯ ನಡುವಣದು. ಅದು ಸಿಗಂದೂರಿನ ಜನಪ್ರಿಯತೆಯ ಒತ್ತಡಕ್ಕೆ ಸಿಕ್ಕು ದೋಣಿ ಸಂಖ್ಯೆಯನ್ನು ಹೆಚ್ಚಿಸಿಕೊಂಡದ್ದೂ ಆಗಿದೆ. ಉಳಿದಂತೆ ಜೂಗರಿಸುತ್ತಾ ಸುಮಾರು ಹದಿನೈದು ವರ್ಷಗಳ ಹಿಂದಷ್ಟೇ ಅರಸಿನಮಕ್ಕಿಯಲ್ಲೊಂದು, ಐದಾರು ವರ್ಷಗಳ ಹಿಂದೆ ಮುಪ್ಪಾನೆಯಲ್ಲೂ ಒಂದು ಬಾರ್ಜ್ ಸೇವೆ ಒದಗಿಸಿದ್ದಾರೆ. (ನೋಡಿ: ತುಮರಿಯ ದಾರಿಯಲ್ಲಿ…) ದೋಣಿ ಅತಂತ್ರವಾದರೆ ಎರಡು ದಂಡೆಗಳ ಒಂದೆರಡು ಕಿಮೀ ಅಂತರಕ್ಕೆ ನೂರಾರು ಕಿಮೀ ಬಳಸಂಬಟ್ಟೆ ಹಿಡಿಯುವ ಸಂಕಟ ಇಲ್ಲಿ ಎಂದೂ ತಪ್ಪಿದ್ದಲ್ಲ. ಇದನ್ನು ಅನುಭವಿಸಿದ ಎಷ್ಟೋ ಮಂದಿ ಜೀವಮಾನವಿಡೀ “ಶರಾವತಿ ಸಾಗರಕ್ಕೊಂದು ಸೇತುವೆ ಕೊಡಿ” ಎಂದು ಹಂಬಲಿಸಿಯೇ ದಿನ ಮುಗಿಸಿದ ಕರುಣ ಕತೆಗಳು ಸ್ವಲ್ಪವೇನಿಲ್ಲ. ಅವೆಲ್ಲವುಗಳ ಪರಿಣಾಮ ಎನ್ನುವಂತೆ, (ಸರಕಾರೀ ವೇಗ ಗೊತ್ತಲ್ಲ) ಈಗ ಕೆಲವು ವರ್ಷಗಳಿಂದ ಅತ್ತ ಹೊಳೆಬಾಗಿಲಿನಲ್ಲೂ ಇತ್ತ ಅರಸಿನಮಕ್ಕಿಯಲ್ಲೂ ಮಹಾ ಸೇತುಗಳ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಎಂದು ಪೂರ್ಣಗೊಳ್ಳುವುದೋ ಗೊತ್ತಿಲ್ಲ.

ತ್ತಲಿನೊಡನೆ ತುಸು ಚಳಿಯೂ ಸೇರಿಕೊಂಡಿತ್ತು. ಅಲ್ಲಿ ಸೇತುವೆ ಕಾರ್ಮಿಕರ ಜೋಪಡಿಗಳು ಬಿಟ್ಟು ಬೇರೇನೂ (ತಿಂಡಿ ತೀರ್ಥಗಳ ವ್ಯವಸ್ಥೆ) ಇರಲಿಲ್ಲ. ನಾವು ಒಯ್ದಿದ್ದ ನೀರಿನ ಕೊನೆ ಗುಟುಕು ಮುಗಿಸಿ, ಬೆಚ್ಚನ್ನ ಉಡುಪುಗಳಲ್ಲಿ ಸಜ್ಜಾಗಿ, ದೋಣಿ ಕಾದು, ಹಸಿರುಮಕ್ಕಿ ಸೇರಿಕೊಂಡೆವು. ಆ ಮಗ್ಗುಲಿನಲ್ಲಿ ಜನಜೀವನವೂ ಸಹಜವಾಗಿ ಕವಲು ದಾರಿಗಳೂ ಹೆಚ್ಚೇ ಇದ್ದವು. ಆದರೆ ಸಣ್ಣ ಅಂತರದ (ಸುಮಾರು ಹದಿನಾರು ಕಿಮೀ) ಹೆಗ್ಗೋಡನ್ನು ಅವರಿವರಲ್ಲಿ ವಿಚಾರಿಸಿಕೊಳ್ಳುತ್ತ ಸೇರುವುದು ನಮಗೆ ಕಷ್ಟವಾಗಲಿಲ್ಲ. ರಾತ್ರಿ ಏಳೂವರೆ ಗಂಟೆಗೆ, ಅಂದರೆ ಮಂಗಳೂರು ಬಿಟ್ಟಲ್ಲಿಂದ ಸರಿಯಾಗಿ ಹನ್ನೆರಡು ಗಂಟೆಯಲ್ಲಿ ನಮ್ಮ ಬೈಕ್ ಯಾನ, ನೀನಾಸಂನ ಶಿವರಾಮ ಕಾರಂತ ರಂಗಮಂದಿರದ ಎದುರು ಸುಖಮುಖವಾಗಿ ಮುಗಿದಿತ್ತು.

(ಮುಂದುವರಿಯಲಿದೆ)