ನೀನಾಸಂ ಕಲೆಗಳೊಡನೆ ಮಾತುಕತೆ, ೨೦೨೪, ಅಕ್ಟೋಬರ್ ೨ರಿಂದ ೬, ಐದು ದಿನಗಳ ಕಾಲ ಸಮೃದ್ಧವಾಗಿಯೇ ನಡೆಯಿತು. ನೀನಾಸಂ ಕೆವಿ ಸುಬ್ಬಣ್ಣನವರ ಕ್ರತುಶಕ್ತಿಯೊಡನೆ ಹೊಸಗಾಳಿಗೆ ತೆರೆದುಕೊಂಡ (೧೯೪೯) ಲೆಕ್ಕಕ್ಕೆ ಇದು ವಜ್ರಮಹೋತ್ಸವದ ವರ್ಷ. ನೀನಾಸಂನ ಮಜಲೋಟದ ಮೊದಲ ಐವತ್ತಾರು ವರ್ಷವನ್ನು ಕೆವಿ ಸುಬ್ಬಣ್ಣನವರು ನಡೆಸಿದಂತೇ ಇಂದಿನ ದಂಡಧಾರಿ, ಕೆವಿ ಅಕ್ಷರ ಕೂಡಾ ಕೇವಲ ದಿನಗಣನೆಗೆ ಹುಚ್ಚುಗಟ್ಟುವವರಲ್ಲ. ಮಾತಿನ ಚಂದಕ್ಕಷ್ಟೇ ೭೫ನೇ ವರ್ಷವನ್ನು ಉಲ್ಲೇಖಿಸಿ, ‘ನೀನಾಸಂ ಕಲೆಗಳ ಸಂಗಡ ಮಾತುಕತೆ’ಯ ೨೦೨೪ನ್ನು ನಿಜ ಮೌಲ್ಯಯುತ ಕಲಾಪಗಳಿಗೇ ಮೀಸಲಿಟ್ಟರು. ಹೇರಿಕೆಯಿಲ್ಲದ ಶಿಸ್ತು, ಮುಜುಗರಕ್ಕೀಡುಮಾಡದ ಪ್ರೀತಿ, ಅಗತ್ಯಕ್ಕೆ ಕೊರೆಯಾಗದ ಸರಳತೆ, ಸಾತತ್ಯದ ಹೊರೆಯಿಲ್ಲದ ಲವಲವಿಕೆಯಲ್ಲಿ ಅದು ಅರ್ಥಪೂರ್ಣವಾಗಿ ನಡೆಯಿತು. ಎಂದಿನಂತೆ ಈ ಬಾರಿಯೂ ಮಂಗಳೂರಿನಿಂದ ಹೊರಟ ನಮಗೆ (ನಾನು, ದೇವಕಿ) ಮಾತ್ರ ವಿಶೇಷ ಎನ್ನುವಂತೆ, ಬೆಂಗಳೂರಿನಿಂದ ಅಭಯ, ರಶ್ಮಿ, ಆಭಾರೂ (ಮಗ, ಸೊಸೆ, ಮೊಮ್ಮಗಳು) ಬಂದು ಜತೆಗೊಟ್ಟು ಸಂತೋಷ ಹೆಚ್ಚಿಸಿದರು.
ಕಾಲತಪ್ಪಿದ ಮಳೆಗಾಲವನ್ನು ಒಪ್ಪಿಕೊಂಡು, ಶಿಬಿರದ ಮುನ್ನಾ ದಿನವೇ ಅಲ್ಲಿರುವಂತೆ ನಾವು ಅಕ್ಟೋಬರ್ ಒಂದರ ಬೆಳಿಗ್ಗೆ ಕಾರೋಡಿಸಿದೆವು. ಎಂಟೂವರೆಯ ಸುಮಾರಿಗೆ ಮೂಡಬಿದ್ರೆಯಲ್ಲಿ ಕಾಫಿಂಡಿ ಮುಗಿಸಿ, ಕಾರ್ಕಳಕ್ಕಾಗಿ ಭಗವತಿ ಘಾಟಿಯತ್ತ ತಿರುಗಿದೆವು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಮಾಳ ಚೌಕಿಯಲ್ಲಿ ‘ಪ್ರವೇಶ ಪತ್ರ’ ಪಡೆದು, ನಿಧಾನ ನೋಟದಲ್ಲೇ ಕಾಡು ಸೀಳುತ್ತ ಸಾಗಿದೆವು. ವಾಹನ ಸಂಚಾರ ವಿರಳವೇ ಇತ್ತು. ಕುದುರೆಮುಖ ಗಣಿಗಾರಿಕೆಗಾಗಿಯೇ ಸುಮಾರು ಐವತ್ತು ವರ್ಷಗಳ ಹಿಂದಷ್ಟೇ ನೂತನವಾಗಿ ನಿರ್ಮಾಣಗೊಂಡ ಇತಿಹಾಸ ಈ ದಾರಿಯದ್ದು. ಹಾಗಿದ್ದೂ ಸೇತು, ದರೆ, ಮರಗಳ ಕುಸಿತ ಎಂದೂ ಇದನ್ನು ವಿಶೇಷ ಕಾಡಿದ್ದಿಲ್ಲ. ಇದಕ್ಕೆ ಕಾರಣರಾದ ಗಡಿ ರಸ್ತೆ ನಿರ್ಮಾಣ ಸಂಸ್ಥೆಯನ್ನು (ಬೀಯಾರ್ವೋ) ನೆನೆಯುತ್ತ, ಅದನ್ನು ಕೆಡಿಸುವಂತೆ ಅಗಲೀಕರಣದ ಶಾಪ ಇದಕ್ಕೆ ತಟ್ಟದಿರಲಿ ಎಂದೂ ಹಾರೈಸುತ್ತ ಸಾಗಿದೆವು. ದಕ ಗಡಿ ಕಟ್ಟೆಯಲ್ಲಿ ಎಡ ಹೊರಳಿ, ಶೃಂಗೇರಿಮುಖಿಗಳಾದೆವು.
ಇಂದು ಸರ್ವವ್ಯಾಪಿಯಾದ ನಾಗರಿಕ ಕಸ ಚೆಲ್ಲಾಟ, ಉದ್ಯಾನ ವ್ಯಾಪ್ತಿಯಲ್ಲಿ ತುಂಬಾ ವಿರಳವಿತ್ತು. ಇದು ಅನುಮತಿ ಪತ್ರದಲ್ಲಿರುವ ಸ್ಪಷ್ಟ ವಿಧಿನಿಷೇಧಗಳ ವಿವರಣೆ ಮತ್ತು ಬೈಕೇರಿ ಕಣ್ಗಾವಲು ನಡೆಸುವ ಕಾವಲುಗಾರರ ಶ್ರಮದ ಸಾಧನೆಯೇ ಇರಬೇಕು. ಉದ್ಯಾನದ ಇನ್ನೊಂದು ಕೊನೆ – ಕೆರೆಕಟ್ಟೆಯಲ್ಲಿ, ‘ಪ್ರವೇಶ ಪತ್ರ’ ಮರಳಿಸುವಾಗ, ಪಹರೆಯವರಿಗೆ ನಮ್ಮ ಮೆಚ್ಚುಗೆಯನ್ನು ತಿಳಿಸಿದೆವು. ಅವರು ಮೊದಲು ಅದನ್ನು ಸವಿನಯ ಒಪ್ಪಿಸಿಕೊಂಡರು. ಮಾತು ಮುಂದುವರಿದಾಗ, ಇಂದು ಎಲ್ಲ ಜನಹಿತ ಕಾರ್ಯಕ್ರಮಗಳಲ್ಲಿ ಕೇಳುವ ಕೊರಗನ್ನೇ ಪುನರುಚ್ಚರಿಸಿದ್ದರು “ನಮ್ಮಲ್ಲಿ ಸಾಕಷ್ಟು ಸ್ಟಾಫ್ ಇಲ್ಲಾ ಸಾರ್. ಸವಲತ್ತುಗಳದ್ದೂ ಕೊರತೆ ತುಂಬಾ ದೊಡ್ಡದಿದೆ ಸಾರ್….”
ಫೇಸ್ ಬುಕ್ ಗೆಳೆತನದಲ್ಲಿ ನನ್ನ ಮನದಾಳವನ್ನು ದೊಡ್ಡದಾಗಿ ಕಲಕಿದ ಜೀವನ ಕಥನ ಮುಂಡುಗೋಡು (ಶೃಂಗೇರಿ ಸಮೀಪದ ಹಳ್ಳಿ) ಶ್ರೀನಿವಾಸ ಮೂರ್ತಿಯವರದು. ಅವರ ಜೀವನದ ಐವತ್ತಾರು ವರ್ಷಗಳನ್ನು, ಕೆಲವೇ ಮಾತಿನಲ್ಲಿ ಸಂಗ್ರಹಿಸುತ್ತಿದ್ದೇನೆ, ಕ್ಷಮೆಯಿರಲಿ. (ಹೆಚ್ಚಿನ ವಿವರದ ಕುತೂಹಲಿಗಳು ಅವರದೇ ಗೋಡೆ ನೋಡಬಹುದು : https://www.facebook.com/srinivasa.murthy.18488) ಶ್ರೀನಿವಾಸ ಮೂರ್ತಿ ಮಲೆನಾಡಿನ ಒಂದು ಕಾಡುಮೂಲೆಯ, ಸಣ್ಣ ಹಿಡುವಳಿಯ, ತೀರಾ ಬಡ ಕೃಷಿ ಕುಟುಂಬದ, ಆರು ಮಕ್ಕಳಲ್ಲಿ ನಾಲ್ಕನೆಯವರು (ವಯಸ್ಸಿನಲ್ಲಿ ಕಿರಿದಂತರದ ಮೂರು ಅಕ್ಕಂದಿರು, ಹಿಂಬಾಲಿಸಿದಂತೆ ತಮ್ಮ, ತಂಗಿ). ಮೂರ್ತಿಯವರಿನ್ನೂ ಹತ್ತು ಹನ್ನೆರಡರ ಹರಯದಲ್ಲಿದ್ದಾಗ, ಇವರ ತಂದೆ ತಾಯಿಯರು ಆಘಾತಕರ ಆಕಸ್ಮಿಕದಲ್ಲಿ ಇವರನ್ನೆಲ್ಲ ಅನಾಥರನ್ನಾಗಿಸಿ ತೀರಿಕೊಂಡರು. ತುಂಡು ಕೃಷಿಭೂಮಿ, ಜೋಪಡಿಯಂಥ ಮನೆ, ಹಸಿವೂ ಸೇರಿದಂತೆ ಅನೇಕ ಕಿತ್ತು ತಿನ್ನುವ ಸಂಕಟಗಳ ನಡುವೆ ವಿಧಿ, ದೇವರೆಂದು ಕೈ ಕಟ್ಟಿ ಕೂರದೇ, ದುಡಿಮೆಗೆ ಹೆದರದೇ ‘ಮನೆ’ ಕಟ್ಟಿದರು. ಸಿಕ್ಕ ಸಣ್ಣ ಪುಟ್ಟ ಸಹಾಯಗಳನ್ನು ವಿನಯದಲ್ಲಿ ಬಳಸಿಕೊಂಡು, ಪ್ರಾಮಾಣಿಕತೆಗೆ ಎರವಾಗದೇ ಕೃಷಿಯನ್ನೇ ನೆಚ್ಚಿ ಎಲ್ಲರಿಗೂ ಗೌರವಯುತ ಬಾಳು ದೊರಕುವಂತಾದ್ದರಲ್ಲಿ ಮೂರ್ತಿಯವರ ಪಾತ್ರ ತುಂಬ ದೊಡ್ಡದು. ಹೀಗೆ ಅಯಾಚಿತ ದೊರಕಿದ ಅಪಾರ ಲೋಕಾನುಭವಕ್ಕೆ, ಅಷ್ಟೇ ಓದಿನ ಒಪ್ಪಕೊಟ್ಟು ಫೇಸ್ ಬುಕ್ಕಿನಲ್ಲಿ ಟಿಪ್ಪಣಿಸುತ್ತಿದ್ದ ವಿಚಾರವಂತ ಶ್ರೀನಿವಾಸಮೂರ್ತಿ ಸಹಜವಾಗಿ ನನಗೆ ಗೆಳೆಯರಾಗಿದ್ದರು.
ಒಂದು ಹಂತದ ಆರ್ಥಿಕ ಕಷ್ಟ ಪರಂಪರೆ ಮುಗಿಸಿಕೊಂಡಿದ್ದ ಮೂರ್ತಿಯವರ ಬಾಳಿನಲ್ಲಿ ಈಚೆಗೆ ಕಾಣಿಸಿಕೊಂಡ ಹೊಸದೇ ಸಮಸ್ಯೆ ಆರೋಗ್ಯದ್ದು. ದುಶ್ಚಟ ದೂರ, ನಿರೋಗಿ ಮತ್ತು ದೃಢಕಾಯದ ಶ್ರೀನಿವಾಸಮೂರ್ತಿಯವರಿಗೆ ಕ್ಯಾನ್ಸರ್ ಬಡಿದಿತ್ತು. ಅಲ್ಲೂ ಸ್ವಾಭಿಮಾನಕ್ಕೆ ಕುಂದು ಬರದಂತೆ, ಅವರದನ್ನು ಮಿತ್ರಬಳಗಕ್ಕೆ ತಿಳಿಸಲೇ ಇಲ್ಲ. ಈಗ ಸ್ವಸಾಮರ್ಥ್ಯದಲ್ಲೇ ಉಡುಪಿ-ಕೋಟಾ ಮತ್ತು ಬೆಂಗಳೂರುಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದು, ಗುಣಮುಖರಾಗಿ, ಇಂದು ಚೇತರಿಕೆಯ ಹಾದಿಯಲ್ಲಿದ್ದಾರೆ. ಬದುಕಿನ ಆಕಸ್ಮಿಕದಲ್ಲಿ ಎಂದೂ ತೀವ್ರ ಸಂಕಟಗಳನ್ನು ಕಾಣದ ನಮ್ಮಂಥವರಿಗೆ ಶ್ರೀನಿವಾಸ ಮೂರ್ತಿಯವರ ಜೀವನ ಬಹು ದೊಡ್ಡ ಪ್ರೇರಣೆ. ಹಾಗಾಗಿ ಅವರನ್ನೊಮ್ಮೆ ಕಣ್ಣಾರೆ ಕಾಣುವ ಭಾಗ್ಯಕ್ಕೆ ಆಶಿಸಿದ್ದೆ. ಆ ಪ್ರಯತ್ನದಲ್ಲಿ, ಅವರೇ ಕೊಟ್ಟ ಸೂಚನೆಗಳನ್ನು ಅನುಸರಿಸಿ…
ಶೃಂಗೇರಿ – ಜಯಪುರ ರಸ್ತೆಯಲ್ಲಿ ಸುಮೂರು ಒಂಬತ್ತು ಕಿಮೀಗೇ ಸಿಗುವ ಅವರ ಮುಡುಬಾದ ಮನೆಗೆ ನಾವು ಹನ್ನೊಂದು ಗಂಟೆಗೆ ತಲಪಿದೆವು. ತೋಟದ ಅನಿವಾರ್ಯ ಕಲಾಪಗಳಿಗೆ ಬಂದಿದ್ದ ಕೂಲಿಕಾರರು ಕೆಲಸ ನಡೆಸಿದ್ದರು. ದಂಪತಿಯ ಮಗಳು – ಇಂಜಿನಿಯರಿಂಗ್ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿನಿ, ಎಂದಿನಂತೇ (ಕಾರ್ಕಳ ಸಮೀಪದ) ನಿಟ್ಟೆಯಲ್ಲೇ ಇದ್ದಳು. ಎರಡನೆಯಾತ – ಮಗ, ಪದವಿಪೂರ್ವ ವಿದ್ಯಾರ್ಥಿ, ಎಂದಿನಂತೇ ಶೃಂಗೇರಿಯ ಕಾಲೇಜಿಗೆ ಹೋಗಿದ್ದ. ಮತ್ತೆ, ಮೂರ್ತಿಯವರ ವಿಶ್ರಾಂತಿಗೆ ತೊಂದರೆಯಾಗದಂತೆ, ಶ್ರೀಲಕ್ಷ್ಮೀಮೂರ್ತಿಯವರಿಗೆ ಆತಿಥ್ಯದ ಹೊರೆ ಬೀಳದಂತೆ, ಸುಮಾರು ಒಂದು ಗಂಟೆಯ ಕಾಲವಷ್ಟೇ ಮಾತುಕತೆ, ಮನೆಯಂಗಳದಿಂದಲೇ ಅವರ ಕಾಯಕ ಕ್ಷೇತ್ರದ ನೋಟವನ್ನಷ್ಟೇ ಪಡೆದು ವಿದಾಯ ಹೇಳಿದೆವು. (ಇಂದು ಶ್ರೀನಿವಾಸ ಮೂರ್ತಿಯವರು ಕೀರ್ತಿಶೇಷರು)
ನಿರಾಶಾ ಸರಣಿ…..
ಯಾವುದೇ ಮಾರ್ಗಗಳು ನಮ್ಮ ಓಟದಲ್ಲಿ ಬಿಡಿಸಿಕೊಳ್ಳುವ ತಾಳೇ ಪಟ್ಟಿಗಳಲ್ಲ. ಹೊಸ ಹೊಸಾ ಕತೆ ಬಿತ್ತರಿಸುವ ಸೆಲುಲಾಯ್ಡ್ (ಸಿನಿಮಾ) ಸುರುಳಿಗಳು. ಹಾಗಾಗಿ ನಾನು ಮಂಗಳೂರಿನಿಂದ ನೇರ ಓಟದಲ್ಲಿ ಸುಮಾರು ನಾಲ್ಕೂವರೆ ಗಂಟೆಯ ಹೆಗ್ಗೋಡು ದಾರಿಗೆ ಹನ್ನೊಂದು ಗಂಟೆಯ ಅವಕಾಶವನ್ನೇ ಕಲ್ಪಿಸಿಕೊಂಡಿದ್ದೆ. ಆ ಹೆಚ್ಚುವರಿ ಅವಧಿಯನ್ನು ಸಾರ್ಥಕಗೊಳಿಸಲು, ಗೂಗಲ್ ನಕ್ಷೆಯಲ್ಲಿ ಹುಡುಕಾಡಿದ್ದೆ. ಆಗ ತುಂಗಾ ತೀರದಲ್ಲಿ ಕುತೂಹಲ ಮೂಡಿಸಿದ ಹೆಸರು – ಭೀಮನಸೇತು ಕಟ್ಟೆ. ಅದರ ಕುರಿತು ಗೆಳೆಯ ಅನಿಲ್ ಶಾಸ್ತ್ರಿ “ಭೀಮನ್ ಕಟ್ಟೇಲಿ ಕಾಷ್ಠ ಶಿಲ್ಪಗಳಿವೆ…” ಎಂದೂ ಶಿಫಾರಸು ಮಾಡಿದರು. ಮತ್ತೆ ಕೇಳಬೇಕೇ …
ಶೃಂಗೇರಿಯಲ್ಲಿ ನಿಲ್ಲದೇ ಕೊಪ್ಪದ ಕವಲನ್ನು ಬಲಕ್ಕೇ ಬಿಟ್ಟು, ಕಮ್ಮರಡಿಗಾಗಿ ಆಗುಂಬೆ-ತೀರ್ಥಳ್ಳಿ ರಸ್ತೆ ಸೇರಿದೆವು. ಮತ್ತೆ ಬೀಳಲುಕೊಪ್ಪದಲ್ಲಿ ಬಲ ಹೊರಳಿ ಭೀಮನಕಟ್ಟೇ ಮಠ ಸೇರುವಾಗ ಗಂಟೆ ಒಂದೂವರೆ ಕಳೆದಿತ್ತು. ಅಲ್ಲಿ ನಮಗೆರಡು ಬಗೆಯ ನಿರಾಶೆ ಕಾದಿತ್ತು. ಮೊದಲನೆಯದಾಗಿ ಭೀಮನಕಟ್ಟೇ ಮಠ ಅಪ್ಪಟ ಸಾಂಪ್ರದಾಯಿಕ ಮಾಧ್ವ ಮಠ. ಅಲ್ಲಿ ಯಾವುದೇ ಕೆತ್ತನೆ ಅಥವಾ ಪ್ರಾಕೃತಿಕ ವಿಶೇಷಗಳೂ ಇರಲಿಲ್ಲ. ಇನ್ನೂ ದೊಡ್ಡ ನಿರಾಶೆ – ನಿಜದಲ್ಲಿ ನಮಗೆ ನಿರೀಕ್ಷೆಯೇ ಇಲ್ಲದ ಮಠದ ಊಟ! ಮಠದ ಸ್ವಾಗತಕಾರ, ನಮ್ಮ ಹುಟ್ಟಿಗಂಟಿದ ಜಾತಿಯನ್ನು ಹೇಗೋ ಗುರುತಿಸಿಕೊಂಡು “ನೀವು ಅರ್ಧ ಗಂಟೆ ಮೊದಲು ಬಂದಿದ್ದರೆ ಬ್ರಾಹ್ಮಣ ಭೋಜನಕ್ಕೆ ಸೇರಿಕೊಳ್ಳಬಹುದಿತ್ತು….” ಎಂದರು. ಮಠದ ಗುರುಗಳು ಪ್ರವಾಸದಲ್ಲಿದ್ದರು. ನಾವು ಇಷ್ಟೇ ಲಭ್ಯ ಎಂದುಕೊಂಡು ಖಾಲೀ ಪೀಠದ ಚಿತ್ರಕ್ಕೆ ತೃಪ್ತರಾದೆವು. ಮಠದ ಆವರಣದೊಳಗೇ ಇದ್ದ ಒಂದು ಮನೆಯ ಸುಂದರ ಬಾಹ್ಯರೇಖೆ, ಅದಕ್ಕೊಪ್ಪುವಂತೆ ರೂಪಿಸಿದ್ದ ಬಾವಿ (ಹರಿವಾಣ, ಪಂಚಿಪಾತ್ರೆ ಮತ್ತು ಉದ್ಧರಣೆಯ ಭಾರೀ ಪ್ರತಿರೂಪಗಳು) ನಮಗೆ ದಕ್ಕಿದ ಬೋನಸ್ಸು!
ಭೀಮಸೇತು ಮಠದ ಕುಂದದಲ್ಲಿ ಅಂಟಿಸಿದ್ದ ಪಾರಂಪರಿಕ ಪಟ್ಟಿ, (ಸ್ಥಳಪುರಾಣವೂ ಹೌದು) ಅದನ್ನು ಪಾಂಡವರ ವನವಾಸ ಕಾಲದ ದೂರ್ವಾಸ ಪ್ರಕರಣಕ್ಕೆ ಮುಟ್ಟಿಸಿತ್ತು. ಅದರ ಆಧಾರದಲ್ಲಿ ಅಲ್ಲೇ ಪಕ್ಕಕ್ಕಿದ್ದ ಇನ್ನೊಂದು ಪ್ರಾಚೀನ ಶಿವ ದೇವಾಲಯಕ್ಕೂ ನಾವು ಭೇಟಿ ಕೊಟ್ಟಿದ್ದೆವು. ಅದು ಜೀರ್ಣಾವಸ್ಥೆಯಲ್ಲಿದ್ದರೂ ನಿತ್ಯ ಪೂಜೆ ಉಳಿಸಿಕೊಂಡಿತ್ತು. ಅಲ್ಲಿನ ಶಿಥಿಲ ಶಿಲ್ಪ ಸಾರುವ ಕಥಾನಕಗಳನ್ನು ನಾನು ವಿರಾಮದಲ್ಲಿ ಗ್ರಹಿಸುವ ಬಯಕೆಯಲ್ಲಿ ಕ್ಯಾಮರಾ ತೆಗೆದಿದ್ದೆ. ಆದರೆ ದೇವಸ್ಥಾನದ ಕೀರ್ತಿಯಲ್ಲದಿದ್ದರೂ ದುರವಸ್ಥೆ ಲೋಕ ಜಾಹೀರು ಆಗದಂತೆ, ವ್ಯವಸ್ಥಾಪಕರು ಗೋಡೆಗಂಟಿಸಿದ್ದ “ಪಟ, ವಿಡಿಯೋ ನಿಷೇಧಿಸಲಾಗಿದೆ” ಫಲಕ ಅಣಕಿಸಿತು. ಅದು ಆ ವಲಯದ ಇತರ ತಾಣಗಳನ್ನು ದರ್ಶಿಸುವ ನಮ್ಮ ಉತ್ಸಾಹಕ್ಕೇ ತಣ್ಣೀರೆರಚಿತು. ನಾವು ಮುಂದಿನ ದಾರಿ ಹಿಡಿದೆವು. ತೀರ್ಥಳ್ಳಿಯಲ್ಲಿ ಊಟ ಮುಗಿಸಿ….
೨೦೨೧ರಲ್ಲಿ ನಾನು, ದೇವಕಿ ಬೈಕೇರಿ ಹೆಗ್ಗೋಡಿನಿಂದ ಮರಳುವಾಗ, ಆನಂದಪುರದ ಚಂಪಕಸರಸಿ ಮತ್ತು ಹುಂಚದ ಪದ್ಮಾವತಿ ದೇವಳಕ್ಕೆ ಭೇಟಿ ಕೊಟ್ಟದ್ದು ನಿಮಗೆ ತಿಳಿದೇ ಇದೆ. (ನೋಡಿ: https://athreebook.com/2021/04/07/rangapurusha-drama/) ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಎರಡು ಕೊರತೆಗಳು ತಲೆದೋರಿದ್ದವು. ನಾನು ಅವನ್ನು ಈ ಬಾರಿ ತುಂಬಿಕೊಳ್ಳುವ ಅಂದಾಜು ಹಾಕಿದ್ದೆ. ಆ ಪ್ರಕಾರ ಮೊದಲು….
ರಿಪ್ಪನ್ ಪೇಟೆಗಾಗಿ ಹುಂಚ ಪೇಟೆ ತಲಪಿದೆವು. ನನ್ನ ಯಾವುದೇ ಪೂಜಾ ಸ್ಥಳ ಭೇಟಿಗೆ ಕುತೂಹಲದ ಮುಖವಿದೆ, ಭಕ್ತಿಯದ್ದಲ್ಲ. ಹಾಗಾಗಿ ಹಿಂದೆ ನೋಡಿಯಾಗಿದ್ದ ಪದ್ಮಾವತಿ ದೇವಳದ ಹಿತ್ತಿಲಿನ ದಾರಿ ಹಿಡಿದೆವು. ಆ ಉತ್ತಮ ದಾರಿ, ಲಘು ಏರಿನ ಪುಟ್ಟ ಗುಡ್ಡೆ ನೆತ್ತಿಯ ಸುವಿಸ್ತಾರ ಬೋಳು ಮೈದಾನಕ್ಕೆ ಸೇರಿಸಿತು. ಅಲ್ಲಿ ಕೇಂದ್ರದಲ್ಲಿದ್ದ ರಚನೆ ಪದ್ಮಾವತಿ ದೇವಿಯ ಮೂಲಸ್ಥಾನವಂತೆ. ಆದರೆ ಅದರ ಪ್ರಾಚೀನತೆ ಆಧುನಿಕ ಆವರಣದಲ್ಲಿ ಪೂರ್ಣ ಕಣ್ಮರೆಯಾಗಿತ್ತು. ಒಂದು ಮಾನಸ್ತಂಭ ಎರಡು ಕಿರು ಗುಡಿಗಳಿದ್ದವು. ಅಂಗಳದ ಮೂಲೆಗಳಲ್ಲಿ ನಿಜ ಪ್ರಾಚೀನದ, ಬಹುತೇಕ ಭಿನ್ನಗೊಂಡ ಭಾರೀ ಶಿಲಾ ರಚನೆಗಳು ಗುಡ್ಡೆ ಬಿದ್ದಿದ್ದವು. (ಪದ್ಮಾವತಿ ದೇವಸ್ಥಾನದ ಜೀರ್ಣಗೊಂಡ ಬಿಂಬಗಳಿರಬೇಕು) ಯಾವುದೇ ಮಾಹಿತಿ ಇರದ ಒಬ್ಬ ಕಾವಲುಗಾರನನ್ನು ಬಿಟ್ಟು, ವಠಾರ ನಿರ್ಜನವಿತ್ತು. ಅಲ್ಲಿಂದ ತುಸುವೇ ಕೆಳಗಿನ್ನೊಂದು ತಟ್ಟಿನಲ್ಲಿ ನಿಂತಿದ್ದ, ಸಾಕಷ್ಟು ಆಧುನಿಕ ಕಟ್ಟಡವೂ (ಬಹುಶಃ ಪರ್ವ ಕಾಲಗಳ ಯಾತ್ರೀ ನಿವಾಸ) ನಿರ್ಜನವೇ ಇತ್ತು. ಒಟ್ಟಾರೆ ನನ್ನ ಪ್ರಾಕೃತಿಕ ಅಥವಾ ಐತಿಹಾಸಿಕ ಕುತೂಹಲಕ್ಕಲ್ಲಿ ಯಾವುದೇ ಮೇವಿರಲಿಲ್ಲ. ನಿರಾಶೆಯಲ್ಲಿ ಮುಂದಿನ ದಾರಿ ಹಿಡಿದೆವು.
ಎರಡನೇ ಕೊರತೆ ಪೂರೈಕೆಗೆ ಆನಂದಪುರದತ್ತ ಧಾವಿಸಿದೆವು. ಹಿಂದಿನ ಸಲ ಹೆಗ್ಗೋಡಿನಲ್ಲಿ ಭೇಟಿಯಾಗಿದ್ದ ಶೈಲೇಂದ್ರ ಬಂದಗದ್ದೆಯವರ ಸೂಚನೆಯ ಮೇರೆಗಷ್ಟೇ ನಾನು ಚಂಪಕ ಸರಸಿ ನೋಡಿದ್ದೆ, ಇಲ್ಲಿ ಟಿಪ್ಪಣಿಸಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ, ವಾಸ್ತವದಲ್ಲಿ ಆ ಪುಟ್ಟ ಸರಸಿಯನ್ನು ಶುದ್ಧ ಮಾಡಿ, ಸಾರ್ವಜನಿಕರ ಗಮನಕ್ಕೆ ತಂದು, ಐತಿಹ್ಯಕ್ಕೆ ತನ್ನ ಕಲ್ಪಕತೆಯನ್ನು ಸೇರಿಸಿ ಪುಸ್ತಕವನ್ನೂ ರಚಿಸಿ ಪ್ರಚುರಿಸಿದವ, ಆನಂದಪುರದವರೇ ಆದ ಅರುಣ್ ಪ್ರಸಾದರ ಗೆಳೆತನದ ಸುಳಿಗೆ ನಾನು ಸಿಲುಕಿಕೊಂಡೆ. ಅರುಣ್ ಪ್ರಸಾದ್ ಲೋಕಮುಖಕ್ಕೆ ಆನಂದಪುರದಲ್ಲಿ ಗ್ರಾಹಕ ತೃಪ್ತಿಗೆ ಹೆಸರಾಂತ ಹೊಂಬುಜ ರೆಸಿಡೆನ್ಸಿ, ಮಲ್ಲಿಕಾ ವೆಜ್ ಮತ್ತು ಕೃಷ್ಣಸರಸ ಕನ್ವೆನ್ಷನ್ ಹಾಲ್ಗಳ ಮಾಲಿಕ. ಇವರ ಕೌಟುಂಬಿಕ ಹಿನ್ನೆಲೆ ಮತ್ತು ಬೆಳೆದು ಬಂದ ಪರಿ ಬಲು ರೋಚಕ. ಅವನ್ನೆಲ್ಲ ಮೀರಿ, ಆನಂದಪುರವನ್ನು ಕೇಂದ್ರವಾಗಿಟ್ಟುಕೊಂಡು, ಸಾಗರ, ಶಿವಮೊಗ್ಗಗಳನ್ನು ಒಳಗೊಂಡಂತೆ ಇವರು ಸಂಗ್ರಹಿಸಿದ, ಚರ್ಚಿಸಿದ ವ್ಯಕ್ತಿ, ಸ್ಥಳ ಪುರಾಣಗಳು, ಸಾಹಿತ್ಯ ಪ್ರೇಮ ಬಹುವ್ಯಾಪಕವಾಗಿಯೇ ಇದೆ. ಇದಕ್ಕೆ ಎಷ್ಟೂ ಸಾಕ್ಷಿಯನ್ನು ಅವರ ಜಾಲತಾಣ, ಯೂಟ್ಯೂಬ್ ಮತ್ತು ಫೇಸ್ ಬುಕ್ ಒದಗಿಸುತ್ತವೆ.
ಅರುಣ್ ಹಿಂದೆಯೇ ಅವರ ‘ಚಂಪಕ ಸರಸು’ ಪುಸ್ತಕವನ್ನು ಉಡುಗೊರೆಯಾಗಿ ಕಳಿಸಿ, ಮುಖತಃ ಭೇಟಿ ಕೋರಿದ್ದರು. ನಾನವರ ಧಾರಾಳತನಕ್ಕೆ ಅಂಜಿದ್ದರಿಂದ, ಈ ದಾರಿಯಲ್ಲಿ ಪೂರ್ವಸೂಚನೆಯಿಲ್ಲದೇ ಭೇಟಿ ಕೊಟ್ಟು, ಒಂದು ಕಾಫಿಯಲ್ಲಿ ಸುಧಾರಿಸುವ ಯೋಜನೆ ಹಾಕಿದ್ದೆ. ಸಂಜೆ ನಾವು ಆನಂದಪುರ ತಲಪಿದಾಗ, ನಮ್ಮ ದುರದೃಷ್ಟಕ್ಕೆ, ಅರುಣ್ ಪ್ರಸಾದ್ ಅನ್ಯ ಕಾರ್ಯ ಒತ್ತಡದಲ್ಲಿ ಹೊರಗೆಲ್ಲೋ ಹೋಗಿದ್ದರು. ನಾವು ಅವರ ಕಚೇರಿಯಲ್ಲಿ ಪರಿಚಯದ ಕುರುಹು ಬಿಟ್ಟು, ಮಲ್ಲಿಕಾ ವೆಜ್ಜಿನ ಉತ್ತಮ ಕಾಫಿಗಷ್ಟೇ ಗಿರಾಕಿಗಳಾಗಿ ಪಯಣ ಮುಂದುವರಿಸಿದೆವು.
ಮೂರು ವರ್ಷದ ಹಿಂದೆ ನಾವು ಚಂಪಕ ಸರಸು ನೋಡಿ ಬಂದ ಮೇಲೆ, ಆ ಕೆರೆ ಮತ್ತು ವಠಾರ ಖ್ಯಾತ ಸಿನಿತಾರೆ ಯಶಸ್ ಔದಾರ್ಯದಲ್ಲಿ ತುಸು ಜೀರ್ಣೋದ್ಧಾರಗೊಂಡ ಸುದ್ಧಿ ಅರುಣ್ ಪ್ರಸಾದ್ ಟಿಪ್ಪಣಿಗಳಲ್ಲಿ ಓದಿಕೊಂಡಿದ್ದೆವು. ಅದನ್ನಷ್ಟು ಕಣ್ತುಂಬಿಕೊಳ್ಳಲು ಅತ್ತ ಹೋದೆವು. ವಿಪರೀತ ಹಳ್ಳ ಬಿದ್ದ ಮಣ್ಣರಸ್ತೆಯಲ್ಲಿ ದಡಬಡಿಸಿ ‘ಮಹಾಂತಿನ ಮಠ’ದ ವಠಾರ ಸೇರುತ್ತಿದ್ದಂತೆ ಮಳೆ ಮೇಳೈಸಿತು. “ಕೊಡೆ ಹಿಡಿದು ಸರೋವರ ನೋಡುವುದೇ…” ಎಂಬ ನಮ್ಮ ಕೊರಗು ಕೇಳಿದಂತೆ ಮಳೆ ತುಸು ಹಿಂಜರಿಯಿತು. ನಾವು ಅವಸರವಸರವಾಗಿಯೇ ಸರೋವರದ ಭೇಟಿ ಮುಗಿಸಿಕೊಂಡೆವು. ಮೇಗಳಪುರದವನು ಹೆಚ್ಚುವರಿ ಬ್ಯಾಂಡು, ಬೆಳಕು ಸಂಚಯಿಸುತ್ತಿದ್ದಂತೆ ಅಕಾಲಿಕ ಕಾವಳವೂ ಹೆಚ್ಚಿತ್ತು. ಇನ್ನು ತಡ ಮಾಡಿದರೆ ಭಾರೀ ಮಳೆಯೊಡನೆ ಮುತ್ತುವ ಕತ್ತಲೆಯಲ್ಲೂ ಸಿಕ್ಕಿಕೊಳ್ಳುವ ಭಯ ನಮ್ಮನ್ನು ಕಾಡಿತು. ಹಾಗಾಗಿ ಮತ್ತೆ ಹೊಂಬುಜ ರೆಸಿಡೆನ್ಸಿಯತ್ತ ಹೋಗಿ ಅರುಣ್ ಪ್ರಸಾದರನ್ನು ಭೇಟಿಯಾಗುವ ಯೋಚನೆ ಬಿಟ್ಟು, ಉಳ್ಳೂರಿನ ಒಳದಾರಿಯಲ್ಲಿ ಹೆಗ್ಗೋಡಿನತ್ತ ಪೇರಿಕಿತ್ತೆವು. ಬಿಡಿ ಹನಿಗಳ ನಡುವೆ ದಾರಿ ಬಿಡಿಸಿಕೊಳ್ಳುತ್ತಾ ಕೊನೆಯ ಸುಮಾರು ಇಪ್ಪತ್ತು ಕಿಮೀ ‘ಓಡೋಡಿ’ ಎನ್ನುವಂತೇ ನೀನಾಸಂ ವಠಾರದಲ್ಲಿ ಕಾರಿಳಿಯುತ್ತಿದ್ದಂತೆ, ಭಾರೀ ಮಳೆ ಅಪ್ಪಳಿಸಿತ್ತು. ನೀನಾಸಂನ ಸ್ವಾಗತಕಾರಿಣಿ ಪ್ರಭಾ ಅವರು “ನಿನ್ನೆಯೂ ಹೀಗೇ….” ಎಂದು ಧ್ವನಿ ಏರಿಸಿ ‘ಮಾತು ಕತೆ- ೨೦೨೪’ಕ್ಕೆ ಪೀಠಿಕೆ ಹಾಕುತ್ತಿದ್ದಾಗ, ನಾವು ಮನದೊಳಗೇ ಸುಕ್ಷೇಮ ಗುರಿ ತಲಪಿದ್ದನ್ನು ಸಂಭ್ರಮಿಸಿದ್ದೆವು.
ಮುಂಜಾನೆದ್ದು ಮೀಸೆಯಜ್ಜಾ….
೧೯೭೦ರ ದಶಕದಿಂದೀಚೆಗೆ ನೀನಾಸಂ ರಂಗಶಿಕ್ಷಣ ಮತ್ತು ಶಿಬಿರಗಳನ್ನು ನಡೆಸುತ್ತ ಬಂದಂತೆ, ಅನಿವಾರ್ಯತೆಗೆ ಕೆಲವು ಸರಳ ಕಟ್ಟಡಗಳನ್ನು (ಇದ್ದದ್ದೂ ಹೊಸದಾಗಿ ಕಟ್ಟಿದ್ದೂ) ಹೊಂದಿಸಿಕೊಳ್ಳುತ್ತ ಬಂದಿದೆ. ಅವು ಹಾಗೇ ಐದಾರು ದಶಕಗಳ ಬಳಕೆ ಮತ್ತು ಪ್ರಾಕೃತಿಕ ಸವಕಳಿಯಲ್ಲಿ ಬಳಲಿ, ಈಚೆಗೆ ಕೆಲವು ಮುಚ್ಚುವ ಸ್ಥಿತಿಯನ್ನೂ ಮುಟ್ಟಿವೆ. ಹಾಗಾಗಿ ಶಿಬಿರಾವಧಿಯಲ್ಲಿ ಹೆಚ್ಚುವರಿ ವಸತಿ ಸೌಕರ್ಯಕ್ಕೆ ಆಸುಪಾಸಿನ ಹೋಂ ಸ್ಟೇ, ಸಾಗರದ ಹೋಟೆಲುಗಳನ್ನು ನೀನಾಸಂ ಶಿಫಾರಸು ಮಾಡುತ್ತಿತ್ತು. ಆದರೆ ನನಗೆ ಹೋಟೆಲ್ಲಿನ ವಾಣಿಜ್ಯ ಶಿಸ್ತಿಗಿಂತ, ನೀನಾಸಂ ವಠಾರದ ಸರಳ ವ್ಯವಸ್ಥೆ ಮತ್ತು ವ್ಯಕ್ತಿ ಪರಿಸರ ಹೆಚ್ಚು ಹಿಡಿಸುತ್ತಿತ್ತು. ೨೦೧೯ರಲ್ಲಿ ನಾನಿಲ್ಲಿನ ಒಂದೆರಡು ದಿನಗಳ ವಾಸಕ್ಕೆ ಬಂದಿದ್ದಾಗ, ರಸ್ತೆ ಬದಿಯ ಕೊನೆಯ ಮನೆಯನ್ನೇ ಕೊಟ್ಟಿದ್ದರು. ಅದರಲ್ಲಿ ಆರೇಳು ಮಂಚಗಳ ವ್ಯವಸ್ಥೆ ಇತ್ತು. ಆ ಮನೆಗೆ ಬಹುಕಾಲ ಯು.ಆರ್. ಅನಂತಮೂರ್ತಿಯವರನ್ನು ಉಳಿಸಿಕೊಂಡ ಖ್ಯಾತಿ ಇತ್ತು. ಸಹಜವಾಗಿ ಅನಂತ-ಅಭಿಮಾನಿ ಬಳಗ ಅದನ್ನು ಪ್ರೀತಿಯಿಂದಲೇ ‘ಅಜ್ಜರ ಮನೆ’ ಎಂದೇ ಗುರುತಿಸುತ್ತದೆ. ಆದರೆ ಈಗ ಆ ಮನೆ ಹಾಳು ಬಿದ್ದಿದೆ. ಹಾಗಾಗಿ ನಮಗೆ ಸ್ವಾಗತ ಕಚೇರಿಯ ಪಕ್ಕದ ಇನ್ನೊಂದೇ ವ್ಯವಸ್ಥೆಯನ್ನು ಕೊಟ್ಟಿದ್ದರು. ಹಿಂದೆ ಇದನ್ನು ಹೆಚ್ಚಾಗಿ ಕಿರಂ ನಾಗರಾಜರು ಬಳಸಿದ್ದರಿಂದ, ಇದು ಕಿರಂ ಮನೆ! ಇದರದು ಎರಡೇ ಮಂಚಗಳ ಮಿತಿ. ಹಾಗಾಗಿ ಈ ಬಾರಿ ಶಿಬಿರಾರ್ಥಿಯಾಗಿ ಬಂದ ಮಗ ಅಭಯನ ಕುಟುಂಬದ ಸಹವಾಸವನ್ನು ತಪ್ಪಿಸಿತು. ಅವರು (ಸೊಸೆ ರಶ್ಮಿ ಮತ್ತು ಮೊಮ್ಮಗಳು ಆಭಾ) ಸಾಗರದ ಹೋಟೆಲನ್ನೇ ಆಶ್ರಯಿಸಿದರು. ಹೋಟೆಲ್ಲಿನಲ್ಲಿ ಹಲವು ಹಿರಿಯ ಸಂಪನ್ಮೂಲ ವ್ಯಕ್ತಿಗಳೂ ನಿರ್ದಿಷ್ಟ ಕಲಾಪಗಳಿಗಷ್ಟೇ ಬಂದು ಹೋಗುವ ಅತಿಥಿಗಳೂ ಉಳಿದುಕೊಂಡಿದ್ದರು. ಉಳಿದಂತೆ ಬಹುತೇಕ ಶಿಬಿರಾರ್ಥಿಗಳು ನೀನಾಸಂ ವಠಾರದ ಪಕ್ಕದ ಶಾಲೆಯಲ್ಲೂ ಬೀಡುಬಿಟ್ಟಿದ್ದರು. ಆದರೆ ಎಲ್ಲರಿಗೂ ಶಿಬಿರಾವಧಿಯ ಹಿಂದಿನ ದಿನದಿಂದ,, ಮುಕ್ತಾಯದ ಮರು ದಿನದವರೆಗೂ ಕಾಲಕಾಲಕ್ಕೆ ಕಾಫಿ, ತಿಂಡಿ, ಊಟಗಳನ್ನು, ನೀನಾಸಂನದ್ದೇ ‘ಆಹಾರ್ಯ’ ಅರ್ಥಾತ್ ಕ್ಯಾಂಟೀನ್, ತುಂಬ ರುಚಿಕರವಾಗಿಯೂ ವ್ಯವಸ್ಥಿತವಾಗಿಯೂ ಕೊಟ್ಟಿತು.
ನಮ್ಮಿಬ್ಬರ ಶಿಬಿರ ದಿನಗಳು ಬೆಳಿಗ್ಗೆ ಐದೂವರೆಗೇ ಶುರುವಾಗುತ್ತಿತ್ತು. ಪ್ರಾತರ್ವಿಧಿಗಳನ್ನು ಮುಗಿಸಿ, ದಾರಿಗಿಳಿಯುವಾಗ ಸೂರ್ಯ ತೆಳು ಮಂಜಿನ ಮಂಪರುಗಣ್ಣು ಹೊತ್ತು, ಲೋಕ ಕಾಣುತ್ತಿದ್ದ. ನಾವು ದಿನಕ್ಕೊಂದು ದಾರಿ ಹಿಡಿದು, ಕನಿಷ್ಥ ನಾಲ್ಕು ಕಿಮೀಗೆ ಕಡಿಮೆಯಿಲ್ಲದಂತೆ ಆರೂ ದಿನ ನಡೆದು ಹಳ್ಳಿ ಪರಿಸರ ಪರಿಚಯಿಸಿಕೊಂಡೆವು. ಭಾರೀ ಮರ, ಸಾಮಾನ್ಯರ ಅಡಿಕೆ ಸಲಿಕೆಯ ಸೇತು, ತುಸು ಉತ್ತಮರ ಉಕ್ಕಿನ ಸೇತು ಎಂದು ಅನೇಕ ದೃಶ್ಯ ವೈವಿಧ್ಯಗಳ ರಾಶಿಯಿಂದ ಮೂರೇ ಅಣಿಮುತ್ತುಗಳನ್ನು ಇಲ್ಲಿ ಪೋಣಿಸುತ್ತೇನೆ.
೧. ನನಗೆ ಪೂರ್ವಪರಿಚಿತರೇ ಆದ ಮೇಲುಕೋಟೆಯ ಸುಮನಸ್ ಕೌಲಗಿ, ತನ್ನಿಬ್ಬರು ಸಹೋದ್ಯೋಗಿಗಳೊಡನೆ ಶಿಬಿರಾರ್ಥಿಯಾಗಿ ಬಂದಿದ್ದರು. ಅವರಿಗೆ ನಮ್ಮ ಬೆಳಗ್ಗಿನ ಕಲಾಪ ತಿಳಿಯುವಾಗ ನಾಲ್ಕು ದಿನ ಕಳೆದುಹೋಗಿತ್ತು. ಹಾಗಾಗಿ ಕೊನೆಯ ಎರಡು ದಿನಕ್ಕೆ ಮಾತ್ರ, ಸುಮನಸ್ ಮತ್ತವರ ಓರ್ವ ಸಹೋದ್ಯೋಗಿ ಶಿವು ನಮಗೆ ಜತೆಯಾಗಿದ್ದರು. ಇಲ್ಲಿ ಸೂಕ್ಷ್ಮವಾಗಿಯಾದರೂ ಕೌಲಗಿ ಕುಟುಂಬದ ಪರಿಚಯ ಕೊಡುವುದು ಅವಶ್ಯ. ೧೯೬೦ರಲ್ಲಿ ಸುರೇಂದ್ರ ಕೌಲಗಿ (೧೯೩೪-೨೦೧೭), ಸುಮನಸರ ಅಜ್ಜ, ಅಪ್ಪಟ ಗಾಂಧೀವಾದಿ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್ ಹೆಸರಿನಲ್ಲಿ, ನಿಜ ಜನ ಸೇವೆಗೆ ಧುಮುಕಿದ್ದರು. ಅವರ ಹತ್ತು ಹಲವು ಗ್ರಾಮ-ಸ್ವರಾಜ್ ಕೈಂಕರ್ಯದಲ್ಲಿ ಪರಿಸರ ರಕ್ಷಣೆ ಮತ್ತು ವನವರ್ಧನೆಯೂ ದೊಡ್ಡದೇ. ಅದನ್ನು ಅದೇ ನಿಷ್ಠೆ ಮತ್ತು ವರ್ತಮಾನದ ಅಗತ್ಯಗಳಿಗೆ ಹೊಂದಿಸಿಕೊಂಡು ಮಗ – ಸಂತೋಷ್ ಕೌಲಗಿಯವರೂ ಮೊಮ್ಮಗ ಸುಮನಸ್ ಕೌಲಗಿಯವರೂ ನಡೆಸುತ್ತಿದ್ದಾರೆ. ಶಿವು ಜನಪದ ಸೇವಾ ಟ್ರಸ್ಟಿನ ಶಿಕ್ಷಕವೃಂದದಲ್ಲಿ ಒಬ್ಬರಾಗಿ ದುಡಿದಿದ್ದಾರೆ. ಅವರೀರ್ವರಿಗೆ ಹೆಗ್ಗೋಡು ವಲಯದಲ್ಲಿ ನಡೆದಿರುವ ನೆಲಪ್ರೀತಿಯ ಸಣ್ಣ ನಿದರ್ಶನವನ್ನು ಕೊಡುವಂತೆ, ಒಂದು ಬೆಳಗ್ಗಿನ ನಮ್ಮ ನಡೆ ಅಖಿಲೇಶ್ ಚಿಪ್ಪಳಿಯವರ ‘ಉಷಾಕಿರಣ’ಕ್ಕೇ ಹೋಗಿತ್ತು. (ಇದರ ಕುರಿತು ವಿವರಗಳನ್ನು ಕಲೆಗಳ ಸಂಗಡ ಮಾತುಕತೆ-೨೩ರ ಟಿಪ್ಪಣಿಗಳಲ್ಲೇ ಓದಿಕೊಳ್ಳಿ)
೨. ಅದೊಂದು ಅಮುಖ್ಯ ಕಾಂಕ್ರೀಟ್ ರಸ್ತೆ. ಒಂದು ಹಂತದಲ್ಲಿ ಅದು ಕಚ್ಚಾದಾರಿಯಾಗಿ, ಬಳಕೆ ಕಡಿಮೆಯಾಗುತ್ತಾ ಮುಂದುವರಿಯಿತು. ಹಾಗೇ ಎಡ ಮಗ್ಗುಲಿನಿಂದ ಕಾಡೂ ಯುಪಟೋರಿಯಮ್ ದಾರಿಗೆ ಮುತ್ತಿಗೆ ಹಾಕಿದಂತಿತ್ತು. ಆದರೆ ಬಲ ಮಗ್ಗುಲಿನಲ್ಲಿ ಉದ್ದಕ್ಕೆ ಹಸಿರು ಬಲೆಯ ಬೇಲಿ, ಮತ್ತೂ ಒಳ ಮಗ್ಗುಲಿನಲ್ಲಿ ವಿದ್ಯುತ್ ಬೇಲಿಯ ರಕ್ಷಣೆಯಲ್ಲಿ ಹುಲುಸಾಗಿಯೇ ಅಡಿಕೆ, ಬಾಳೆಯ ಕೃಷಿ ಶೋಭಿಸಿತ್ತು. ಮುಂದಿದ್ದ ನಾನು “ಇನ್ನು ಬಂದ ದಾರಿಲೇ ವಾಪಾಸ್….” ಮಾತು ತುಂಡಾಗಿತ್ತು. ಕೇವಲ ಹತ್ತಡಿ ಮುಂದೆ. ಬಲಿತ ಮರಿಯಾನೆಯಂತೇ ಇದ್ದ ಕಾಟಿಯೊಂದು ದಿಢೀರನೆ ದಾರಿಗಡ್ಡ ಹಾರಿ, ಕಾಡಿನಲ್ಲಿ ಮರೆಯಾಯ್ತು. ನಾನು ಎರಡು ಹೆಜ್ಜೆ ಹಿಂದೆ ಹಾರಿ, ತಪ್ಪಿದ್ದ ಉಸಿರು ಹೆಕ್ಕಿಕೊಂಡೆ. ಆದರೆ ಕಾಟಿಗಳು ನನಗಿಂತಲೂ ಹೆಚ್ಚು ಹೆದರಿದ್ದಿರಬೇಕು. ಮೊದಲನೆಯದನ್ನು ಹಿಂಬಾಲಿಸಿ ಇತ್ತ ಇನ್ನೊಂದು ಕಾಟಿ ಓಡಿದರೆ, ಬೇಲಿಯ ಒಳ ಭಾಗದಲ್ಲಿ ಮತ್ತೂ ಮೂರು ಕಾಟಿಗಳು (ಒಂದು ಕರು) ತೋಟದೊಳಕ್ಕೇ ದೌಡಾಯಿಸಿದವು. ನಾವು ಕ್ಷೇಮವಾಗಿಯೇ ಹಿಂದೆ ಬಂದರೂ ಕೃಷಿಕರ ಸಂಕಟವನ್ನು ಕಣ್ಣಾರೆ ನೋಡಿದ ಹಾಗಾಗಿತ್ತು.
೩. ಒಂದು ದಾರಿಯುದ್ದದಲ್ಲಿ ಇಪ್ಪತ್ತು – ಮೂವತ್ತಡಿಗೊಂದರಂತೆ ಮೋದಿಜಿಯವರ ಜಲಜೀವನ್ ಮಿಶನ್ನಿನ ಗೋರಿಕಲ್ಲುಗಳನ್ನು ನೋಡಿದೆವು. ತುಸು ಹೊಟ್ಟೆಕಿಚ್ಚಿನಿಂದಲೇ ಅಲ್ಲಿನೊಂದು ಮನೆಯವರಲ್ಲಿ ವಿಚಾರಿಸಿದೆ. “ನಮಗೆ ಹಳೆ ಸಂಪರ್ಕದ್ದೇ ನೀರು. ಹುಗಿದ ಹೊಸಾ ಕೊಳವೆ, ಪ್ರತಿ ಮನೆಯ ಎದುರಿಗೆ ಥಳಥಳಿಸುವ ನಲ್ಲಿ, ಬೆಂಬಲಕ್ಕೆ ಹಳದಿ ಬಣ್ಣದ ಮೇಲೆ ಸುಂದರ ಹಸಿರಕ್ಕರದ ಶಿಲಾಶಾಸನ, ತಳದಲ್ಲಿ ಕೊಡ/ಬಕೆಟ್ ಇಡಲು ನೀಲಿ ಬಣ್ಣದ ಇಟ್ಟಿಗೆ ಎಲ್ಲಾ ಅಲಂಕಾರಕ್ಕೆ ಮಾತ್ರ, ವರ್ಷದ ಮೇಲೂ ನೀರು ಒಂದು ಹನಿ ಬಂದಿಲ್ಲ” (೨೦೨೬ರ ಇಂದಿಗೂ ಬಂದಿಲ್ಲ!) ಯೂ ಬಂದೇ ಇಲ್ಲ.” ನನ್ನ ಹೊಟ್ಟೆಕಿಚ್ಚು ಆರಿತು; ಮಂಗಳೂರಿನಲ್ಲೂ ನೀರಿಲ್ಲದ ಈ ನಾಟಕಕ್ಕೆ ವರ್ಷ ಎರಡೇ ಆಯ್ತು.
ಶಿಬಿರ ಕಲಾಪಗಳು…
ನೀನಾಸಂ ಹವಾ
ಮೊದಲ ದಿನ ಶಿಬಿರಾರ್ಥಿಗಳ ಬರೋಣ ಹಾಗೂ ನೋಂದಣಿಯ ಕಾರಣದಿಂದ ಶಿಬಿರ ಕಲಾಪಗಳು ಹತ್ತೂವರೆಯ ಸುಮಾರಿಗೆ ಶುರುವಾಗಿತ್ತು. ಉಳಿದಂತೆ ಎಲ್ಲ ದಿನಗಳಲ್ಲೂ ಆಪ್ತ ರಂಗಭೂಮಿಯಲ್ಲೇ ಕಲಾಪಗಳು ೯-೩೦ರಿಂದ ೧೧, ಚಾ ವಿರಾಮ, ೧೧.೩೦ರಿಂದ ೧-೦೦, ಭೋಜನ ವಿರಾಮ, ೨-೩೦ ರಿಂದ ೪-೦೦, ಚಾ ವಿರಾಮ ಮತ್ತು ೪-೩೦ರಿಂದ ೬-೦೦ ಎಂದೇ ಚಂದಕ್ಕೆ ನಡೆದವು. ಐದೂ ದಿನಗಳಲ್ಲಿ ಕಾಲಕಾಲಕ್ಕೆ ಕಲಾಪ ಪಟ್ಟಿ ಹೊಂದಿಸುತ್ತ, ಸ್ಪಷ್ಟ ಸೂಚನೆಗಳನ್ನೂ ಕೊಡುತ್ತ, ಬಹುತೇಕ ನಿರ್ವಹಣೆಗಳನ್ನೂ ನಡೆಸಿದ ತರುಣ – ಮಾಧವ ಚಿಪ್ಪಳಿ. ಆಗೀಗ ಅನೌಪಚಾರಿಕವಾಗಿಯೇ ಮುಂದೆ ನಿಂತು, ಅತಿಥಿ ಪರಿಚಯವೋ ವಿಷಯ ಪ್ರವೇಶಿಕೆಯೋ ಚರ್ಚೆ ನಿರ್ವಹಣೆಯೋ ಕೊನೆಗೆ ಸಾಕ್ಷಿಪ್ರಜ್ಞೆಯೇ ಆಗಿಯೋ ಬಹುತೇಕ ಮಾಧವರ ಬೆನ್ನ ಬಲಕ್ಕಿದ್ದ ಕೆಲವರನ್ನಾದರೂ ನಾನು ಹೆಸರಿಸುವುದಾದರೆ ಟಿಪಿ ಅಶೋಕ, ಕೆವಿ ಅಕ್ಷರ, ಜಸವಂತ ಜಾಧವ್, ವಿವೇಕ ಶಾನಭಾಗ್, ಬೀಯಾರ್ ವೆಂಕಟ್ರಮಣ ಐತಾಳ, ಎಂ ಗಣೇಶ್, ಮಂಜು ಕೊಡಗು, ದೀಪಾ ಗಣೇಶ್, ಶ್ರೀರಾಮ ಭಟ್, ಗೋಪಾಲ ಗುರು, ಸುಂದರ್ ಸರುಕೈ, ಸುನೀಲ್ ಶಾನುಭಾಗ್ ಮುಂತಾದವರು.
ಬಹುತೇಕ ಕಲಾಪಗಳು ನಿಗದಿತ ವೇಳೆಯನ್ನು ಮೀರಿಯೇ ಬೆಳೆಯುತ್ತಿದ್ದವು. ಅಲ್ಲೆಲ್ಲ ನಿರ್ವಾಹಕರು ಹೇಳುತ್ತಿದ್ದ ಮಾತು ಒಂದೇ – ಸಾರ್ವಜನಿಕ ಸಮಕ್ಷಮದಲ್ಲಿ ಮುಗಿಯದ ಮಾತು, ಸಂದೇಹಗಳನ್ನು ಹೊರಗೂ ಆಸಕ್ತರ ಕೂಟಗಳಲ್ಲಿ ಧಾರಾಳ ಮುಂದುವರಿಸಬಹುದು. ನಿಜ, ಎಲ್ಲ ವಿರಾಮದ ವೇಳೆಗಳಲ್ಲೂ ವಠಾರ ಹಾಗೂ ವಾಸ್ತವ್ಯದ ಎಲ್ಲ ನೆಲೆಗಳಲ್ಲೂ ಐದೂ ದಿನ ಸಮಯದ ಪರಿವೆ ಇಲ್ಲದೇ ಸಾಹಿತ್ಯ ಸಲ್ಲಾಪ, ಇಷ್ಟರ ಭೇಟಿ, ಚಿತ್ರಕೂಟಗಳು, ಕಲಾಪ್ರೇಮದೊಡನೆ ಮೈತ್ರಿಯ ಹೊಸ ಅಧ್ಯಾಯಗಳು ತೆರೆಯುತ್ತಲೇ ಹೋದವು. ಎಲ್ಲಕ್ಕೂ ಪೂರಕವಾಗಿ ಪ್ರಸಕ್ತ ಸಾಲಿನ ರಂಗಶಿಕ್ಷಣದ ವಿದ್ಯಾರ್ಥಿಗಳು, ತಿರುಗಾಟದ ಕಲಾವಿದರು ಮತ್ತು ಎಲ್ಲೆಲ್ಲಿಂದಲೋ ಬಂದ ಮೂವತ್ತರಿಂದ ಎಪ್ಪತ್ತರ ಹರಯದವರೆಗಿನ ಹಳೆ ವಿದ್ಯಾರ್ಥಿಗಳು ಮನೆಯ ಮಕ್ಕಳಂತೇ ಸೇರಿ ಎಲ್ಲವೂ ನಿರಾಯಾಸವಾಗಿ, ತಂತಾನೇ ನಡೆದಂತಿರುತ್ತಿತ್ತು. ಎಲ್ಲಕ್ಕೂ ಮುಖ್ಯವಾಗಿ ಇಲ್ಲಿ ಯಾರಿಗೂ ಸಮವಸ್ತ್ರ, ಗುರುತಿನ ಚೀಟಿ, ವಿಧಿ ನಿಷೇಧಗಳ ಬಾಧೆ ಇರಲೇ ಇಲ್ಲ.
ದಿನದ ಕೊನೆಯ ಕಲಾಪವಾಗಿರುತ್ತಿದ್ದ ಮಹಾನಾಟಕ ಮಾತ್ರ ಶಿವರಾಮ ಕಾರಂತ ರಂಗಮಂದಿರದಲ್ಲಿ ನಡೆಯುತ್ತಿತ್ತು. ಇದು ಶಿಬಿರಾರ್ಥಿಗಳಿಗೆ ಉಚಿತ, ಹೊರಗಿನವರಿಗೆ ಟಿಕೆಟ್ ಸಹಿತ. ಹಗಲೆಲ್ಲ ಜೂಗರಿಸುತ್ತಿದ್ದ ರಂಗಮಂದಿರದ ಪರಿಸರ ಐದೂ ಸಂಜೆಗಳಲ್ಲಿ ಅತ್ಯಾಶ್ಚರ್ಯಕರವಾಗಿ ಎಲ್ಲೆಲ್ಲಿನ ಜನ ವಾಹನ ಸೇರಿ, ಕಾಲಿಡಲು ಜಾಗವಿಲ್ಲದಂತಾಗುತ್ತಿತ್ತು. ಮಂದಿರದೊಳಗೆ ಆಸನಗಳ ದುಪ್ಪಟ್ಟು ಮಂದಿ ನೆಲದಲ್ಲೂ ಇಡಿಕಿರಿದು ತುಂಬಿ, ರಂಗಕ್ರಿಯೆಯಲ್ಲಿ ಸಂಪೂರ್ಣ ಮುಳುಗುವುದನ್ನಂತೂ ಕಂಡೇ ಅನುಭವಿಸಬೇಕು. ಅಲ್ಲಿ ಮೊದಲೆರಡು ದಿನ ಪ್ರಸ್ತುತ ಸಾಲಿನ ತಿರುಗಾಟದ ನಾಟಕಗಳಾದ ಮಾಲತಿ ಮಾಧವ ಮತ್ತು ಅಂಕದ ಪರದೆಗಳ ಪ್ರಥಮ ಪ್ರಯೋಗ ನಡೆಯಿತು. ಅವೆರಡನ್ನು ಮುಂದೆ ತಂತಮ್ಮ ಊರುಗಳಲ್ಲಿ ಮತ್ತೊಮ್ಮೆ, ಮಗುದೊಮ್ಮೆ ನೋಡುವ ಆಶಯವನ್ನು ಹಲವರು ಹೊರುತ್ತಿದ್ದುದೂ ಇತ್ತು. ಮೂರನೇ ದಿನ ಹೆಗ್ಗೋಡು ಗ್ರಾಮಸ್ಥರ ಸುಬ್ಬಣ್ಣ ಸ್ಮೃತಿ ದಿನದ (ಜುಲೈ ೧೬) ಪ್ರಯೋಗವಾದ ಹಬ್ಬದ ಹನ್ನೆರಡನೇ ರಾತ್ರಿಯ ಮರು ಪ್ರದರ್ಶನ ಸಿಕ್ಕಿತ್ತು. ನಾಲ್ಕನೇ ದಿನದಂದು ಮೈಸೂರಿನ ಟ್ಸಂಕಲ್ಪ ತಂಡದ ಜತೆಗಿರುವನು ಚಂದಿರ ನಾಟಕವಾದರೆ, ಕೊನೇ ದಿನಕ್ಕೆ ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪೆನಿಯ ರಸರಂಗವೆಂಬ ನೃತ್ಯ ಪ್ರಯೋಗ.
ಶಿಬಿರದ ಅನುದ್ದಿಷ್ಟ ಕಲಾಪಗಳಲ್ಲಿ ಸ್ಮರಿಸಲೇಬೇಕಾದ ಒಂದು ಚೇತೋಹಾರಿ ಅನುಭವ ಕೋಲಾಟದ್ದು. ಇದು ಮೊದಲ ದಿನ ಒಂದುಳಿದು, ನಾಲ್ಕೂ ಬೆಳಗ್ಗೆಗಳಲ್ಲಿ, ಹೆಚ್ಚು ಕಡಿಮೆ ಒಂದೂವರೆ ಗಂಟೆಯುದ್ದಕ್ಕೆ ನಡೆಯುತ್ತಿತ್ತು. ಲೆಕ್ಕಕ್ಕೆ ಇದು ರಂಗಶಿಕ್ಷಣದ ವಿದ್ಯಾರ್ಥಿಗಳಿಗೆ ಕಲಿಕೆಯ ಒಂದು ಭಾಗ ಮತ್ತು ನಿತ್ಯದ ಇತರ ಕಲಿಕೆಗಳಿಗೆ ದೇಹ ಹುರಿಗಟ್ಟುವ ಕಸರತ್ತು. ಆದರೆ ಶಿಬಿರಾವಧಿಯಲ್ಲಿ ಅದೇ ವಿದ್ಯಾರ್ಥಿಗಳು ಒಬ್ಬಿಬ್ಬರು ಗೋಣಿ ತುಂಬಾ ಕೋಲುಗಳನ್ನು ತಂದು, ಕಾರಂತ ರಂಗಮಂದಿರದ ಎದುರಿನ ಅಂಗಳದ ಅಂಚಿನಲ್ಲಿಟ್ಟು, ಚಪ್ಪಲಿ ಬಿಟ್ಟು, ಕೋಲು ಕುಟ್ಟುತ್ತಿದ್ದರು. ಮತ್ತವರು ತಾರ ಸ್ವರದಲ್ಲಿ “ಗೆಜ್ಜೇ ಮಾತಾಡುತಾವೋ ಬೆಳ್ಳೀಯ ಕೋಲೂ ಮಾತಾಡುತಾವೋ…” ಎಂದು ರಾಗ ತೆಗೆಯುತ್ತಿದ್ದಂತೆ. ಅಲಾರಾಂನ್ನೂ ಸೋಲಿಸಿ ಹಾಸುಗೆಗಳಲ್ಲಿ ಹುಗಿದುಕೊಂಡವರೂ ದಡಬಡಿಸಿ ಎದ್ದು, “ರಾತ್ರೀ ನಾಟ್ಕಾ ಅಂದಾಗಾ ಮಧ್ಯಾನಾನೇ…” ಎಂದು ತಮ್ಮದೇ ರಾಗ ತೆಗೆಯುತ್ತಾ ಓಡೋಡಿ ಬಂದು ಸೇರಿಕೊಳ್ಳುತ್ತಿದ್ದರು. ಹಳೇ ವಿದ್ಯಾರ್ಥಿಗಳು, ಶಿಬಿರಾರ್ಥಿಗಳಲ್ಲಿ ಯಾರೂ ಅಂದರೆ, ದೇಹ ದಡ್ಡುಗಟ್ಟಿದವರೂ ಕೂದಲು ಹಣ್ಣಾದವರೂ ಲಯಜ್ಞಾನ ಶೂನ್ಯರೂ ಧಾರಾಳ ಸೇರಿಕೊಳ್ಳುವುದಿತ್ತು. ಯಾರದ್ದೋ ಕಾಲು ತುಳಿದು, ಇನ್ಯಾರದೋ ಕೈಗೆ ಕುಟ್ಟಿ, ಓಲಾಡುತ್ತಾ “ಸುತ್ತಾ ಮುತ್ತಾ ಯಾರೂ ಇಲ್ಲಾ…” ಎಂದು ರಾಗ ತೆಗೆಯುತ್ತಿದ್ದರು. ಈ ಬಾರಿ ಕುಣಿ-ಉತ್ಸಾಹಿಗಳು, ಒಮ್ಮೆ ಚಾ ವಿರಾಮದಲ್ಲಿ ಖಾಲೀ ಚಪ್ಪಾಳೆ ತಟ್ಟಿಕೊಂಡು ಕುಣಿದದ್ದೂ ಇನ್ನೊಮ್ಮೆ ಟಾಸೆ ಬೊಟ್ಟಿ, ಗಲಗಲ ತಲೆ ಕೊಡಹುತ್ತಾ ಹುಲಿ ಹೆಜ್ಜೆ ಹಾಕಿದ್ದೂ ನಡೆಯಿತು.
ನಾವು ನೀನಾಸಂ ಪ್ರವೇಶಿಸುತ್ತಿದ್ದಂತೆ ಚಚ್ಚಿದ ಮಳೆ ತುಸು ಹೊತ್ತು ಕಳೆದ ಮೇಲೆ ಯುದ್ಧವಿರಾಮ ಘೋಷಿಸಿತ್ತು. ಅದಕ್ಕೂ ಮೊದಲೇ ಸ್ವಾಗತ ಕಚೇರಿಯ ಮಗ್ಗುಲ ಗೋಡೆಯ ಮೇಲೆ ಮಂಡಲ ಮೂಡಿಸುತ್ತಿದ್ದವರು ಹೊಸ ಹುರುಪಿನಲ್ಲಿ ಕೊನೆಯ ಸ್ಪರ್ಷ ಕೊಡತೊಡಗಿದರು. ಉಳಿದಂತೆ, ಒಟ್ಟಾರೆ ಕಿರಂ ಮನೆ ಹಾಗೂ ವಠಾರದ ಪೌಳಿಯ ಮೇಲೆಲ್ಲ, ಸುಮಾರು ಸೊಂಟದೆತ್ತರದಲ್ಲಿ, ಸರಳ ರೇಖೆಗಳಲ್ಲೇ ಆದರೂ ಅನಂತ ಭಾವಬಿನ್ನಾಣಗಳ ಸಾಲು ಚಿತ್ರಗಳ ಸೊಗಸು ಗಮನಿಸಿದವರಿಗಷ್ಟೇ ದಕ್ಕುವಂತಿದ್ದವು. ಬಿವಿ ಕಾರಂತ ಭವನದ ಕೆಳ ತೊಟ್ಟಿಯ ಗೋಡೆಗಳನ್ನು ಪೂರ್ತಿ ಆವರಿಸಿದ ವರ್ಣ ವಿನ್ಯಾಸವನ್ನು, ನೀನಾಸಂನ ಹಳೇ ವಿದ್ಯಾರ್ಥಿ ಮತ್ತು ಇಂದಿನ ಹಿರಿಯ ನಿರ್ದೇಶಕರಲ್ಲೊಬ್ಬರಾದ ಇಕ್ಬಾಲ್ ಮಾಡಿದ್ದೆಂದು ಸ್ವಾಗತಕಾರಿಣಿ ಪ್ರಭಾ ವಿಶೇಷ ಪರಿಚಯ ಮಾಡಿಕೊಟ್ಟಿದ್ದರು. ಕಳೆದ ವರ್ಷಗಳಲ್ಲಿ ಅಂಗಳದಲ್ಲಿ ಹರಡಿಕೊಂಡಂತಿದ್ದ ಹಲ ನಮೂನೆಯ ಕಸದಿಂದ ರಸ ಸಾರುವ ಶಿಲ್ಪಗಳು, ದಿನಕ್ಕೊಂದು ವಿನ್ಯಾಸ ಬದಲಿಸುತ್ತಿದ್ದ ರಂಗೋಲಿಗಳೆಲ್ಲ ಈ ವರ್ಷದ ಮಳೆಕಾಟಕ್ಕೆ ಹೆದರಿ ಮೂಡಿರಲಾರದು ಎಂದುಕೊಂಡೆ.
ಅಕ್ಷರ-ವಿದ್ಯಾರ ಮೊಮ್ಮಗ (ಶಿಶಿರ-ನೇಹಾರ ಮಗ) – ಆದ್ಯ, ಸಿದ್ಧಾರ್ಥ ಭಟ್ಟರ ಮಗ – ಶ್ರೀಧರನೂ ಸೇರಿದಂತೆ, ಕೆಲವು ಪುಟ್ಟ ಮಕ್ಕಳ ಸೈನ್ಯಕ್ಕೆ ನಮ್ಮ ಮೊಮ್ಮಗಳು – ಆಭಾ ಕೂಡಾ ಸೇರಿಕೊಂಡಿದ್ದಳು. ಇವರು ಕೂಟಕಟ್ಟಿ ಕಾಲಕಾಲಕ್ಕೆ ಊಟತಿಂಡಿಗಳಿಗೆ ಹಾಜರಾಗುತ್ತ, ನೀನಾಸಂ ವಠಾರದೊಳಗೇ ತಮ್ಮದೇ ಆಟ ನಡೆಸಿದ್ದರು. ಟಯರುಯ್ಯಾಲೆಯಲ್ಲಿ ಜೀಕುವ, ಪುಟ್ಟ ದರೆ ಏರಿಳಿವ, ಹುಸಿ ಹುರುಡುವ, ಬಣ್ಣದ ಮನೆಯಲ್ಲಿ ಚಿತ್ರ ಬರೆಯುವ, ಆಗೊಮ್ಮೆ ಈಗೊಮ್ಮೆ ಪೋಷಕರ ನೆನಪಾದಾಗ ಗದ್ದಲವಿಲ್ಲದೇ ಸಭೆಗಳಿಗೂ ಪ್ರವೇಶ ನಿರ್ಗಮನ ಮಾಡುತ್ತಾ ಸಂಭ್ರಮಿಸಿದರು. ಅವರು ತಮ್ಮದೇ ಆಟಗಳ ಅಮಲಿನಲ್ಲಿ ಶಿಬಿರದ ಕಲಾಪಗಳಂತಿರಲಿ, ಬಹುತೇಕ ದೊಡ್ಡ ನಾಟಕ, ನೃತ್ಯಗಳನ್ನೂ ತಪ್ಪಿಸಿಕೊಂಡರು ಎನ್ನಲೇ? ಅಥವಾ ಉಪೇಕ್ಷಿಸಿದರು ಎನ್ನಲೇ? ವಠಾರದ ಖಾಯಂ ಸದಸ್ಯರಿಗೂ ಬಹುತೇಕ ಶಿಬಿರವಾಸಿಗಳಿಗೂ ಮಕ್ಕಳ ಸೈನ್ಯ ಬೇಗನೇ ಪರಿಚಿವಾದ್ದರಿಂದ, ಒಬ್ಬರಲ್ಲ ಒಬ್ಬರ ಕಣ್ಗಾವಲು ನಡೆಯುತ್ತಿದ್ದುದರಿಂದ, ಗಂಭೀರ ಮಾತುಕತೆಗಳಲ್ಲಿ ಕಳೆದುಹೋಗುತ್ತಿದ್ದ ಪೋಷಕರೂ ನಿಶ್ಚಿಂತವಾಗಿರುತ್ತಿದ್ದರು.
ಎರಡು ವರ್ಷಗಳಿಂದೀಚೆಗೆ, ಏಪ್ರಿಲ್ ತಿಂಗಳಲ್ಲಿ ಸುಂದರ ಸರುಕೈ ನೀನಾಸಂನಲ್ಲಿ ಮಕ್ಕಳಿಗಾಗಿ ವಿಶೇಷ ಶಿಬಿರ ನಡೆಸುತ್ತಿದ್ದಾರೆ. ಅದರ ನೆನಪಿನಲ್ಲಿ, ಕಳೆದ ಬಾರಿಯೇ ಶಿಬಿರಕ್ಕೆ ಬಂದಿದ್ದ ಕೆಲವು ಮಕ್ಕಳ ಉತ್ಸಾಹ ಕಂಡು ಸುಂದರ್, ಬಿಡು ಸಮಯಗಳಲ್ಲಿ ಅವರೊಡನೆ ಪ್ರತ್ಯೇಕ ಚಟುವಟಿಕೆ ನಡೆಸಿದ್ದೂ ನಾನು ನೋಡಿದ್ದೆ. ಮುಂದುವರಿದು ಅವರೇ “ಬೇಕಿದ್ದರೆ ಬರುವ ವರ್ಷದ ಮಾತುಕತೆಗಳಲ್ಲಿ ಇಂಥದ್ದೊಂದನ್ನು ಸಮಸಮವಾಗಿ ಪ್ರತ್ಯೇಕ ಮೂಲೆಯಲ್ಲಿ ನಡೆಸಲೂಬಹುದ್” ಎಂದದ್ದು ನನ್ನ ಸ್ಮೃತಿಪಟಲದಲ್ಲಿತ್ತು. ಅದನ್ನು ನವೀಕರಿಸಿಕೊಂಡೇ ನಾನು ನಮ್ಮ ಮೊಮ್ಮಗಳು, ಗೆಳೆಯ ಇಸ್ಮಾಯಿಲ್ಲರ ಮಗಳು – ರಾಬಿಯಾಳೂ ಬರಲೇಬೇಕೆಂದು ಆಗ್ರಹಿಸಿದ್ದೆ. ಸುಂದರ್ ಮರೆತರೋ ಸಂಘಟನೆಯ ಹೊರೆ ಅಸಾಧ್ಯ ಮಾಡಿತೋ ನನಗೆ ತಿಳಿದಿಲ್ಲ. ಅದು ಸಾಧ್ಯವಾಗಿದ್ದರೆ, ಶಿಬಿರ ಇನ್ನೂ ಕಳೆಗಟ್ಟುತ್ತಿತ್ತು.
ಕವಿತೆ, ಕಾವ್ಯಗಳ ಅನುಸಂಧಾನ
ಶಿಬಿರದ ಮೊದಲ ದಿನ ಒಂಬತ್ತೂವರೆ ಗಂಟೆಗೆ ಆಪ್ತ ರಂಗಭೂಮಿ ತುಂಬಿತ್ತು (ಸುಮಾರು ಮುನ್ನೂರು ಮಂದಿ). ಮಂಕಾಗಿಯೇ ಇದ್ದ ಖಾಲೀ ವೇದಿಕೆಯ ಬಲಮೂಲೆಯ ಮಾತಿನಮಣೆಗೆ ನೀನಾಸಂ ಅಧ್ಯಕ್ಷ – ಸಿದ್ಧಾರ್ಥ ಭಟ್ ಬಂದು, ನಾಲ್ಕೇ ಮಾತುಗಳಲ್ಲಿ ಎಲ್ಲರಿಗೂ ಸ್ವಾಗತ ಬಯಸಿದರು. ಕೊನೆಯಲ್ಲಿ ಅವರ ಆಹ್ವಾನದಂತೆ, ಸಭೆಯಿಂದಲೇ ಬಂದ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಮತ್ತು ಮುಂಬೈಯ ಹಿರಿಯ ರಂಗಕರ್ಮಿ ಸುನೀಲ್ ಶಾನಭಾಗ್ ಎಡ ಮೂಲೆಯಲ್ಲಿಟ್ಟಿದ್ದ ದೀಪೋಜ್ವಲನ ಮಾಡಿ ಮರಳಿದರು. ಆ ಬೆಳಕಿನ ನಾಂದಿ ಹಿಗ್ಗಿದಂತೆ, ವೇದಿಕೆ ತುಸುವೇ ಬೆಳಗುತ್ತ, ಹಿಂತೆರೆಯ ಸರಳ ಚಿತ್ರವನ್ನು ಸ್ಫುಟಗೊಳಿಸಿತು. ನೇಪಥ್ಯದಿಂದ ಶ್ರುತಿಯ ಮಧುರ ಮೊರೆತ ಕೇಳತೊಡಗಿತು. ಅದು ತೆರೆಯ ಅರ್ಧವನ್ನು ತನ್ನ ಭಾವ ಬಳುಕಿನಲ್ಲೇ ತುಂಬಿದಂತಿದ್ದ ಓರ್ವ ವ್ಯಕ್ತಿ ಹಿಡಿದ ತಂತೀವಾದ್ಯಕ್ಕೇ ಜೀವಬಂದಂತಿತ್ತು. ಆ ಮೊರೆತದ ನುಡಿಗಳೇ ಪಸರಿಸಿದಂತೆ ‘ಕಲೆಗಳ ಸಂಗಡ’ ಎಂಬ ಅಕ್ಷರಗಳು ತೆರೆಯಲ್ಲಿ ಚದುರಿಬಿದ್ದಿದ್ದವು. ಹಿಂತೆರೆಯ ಇನ್ನರ್ಧದಲ್ಲಿ ಹಕ್ಕಿಯ ರೂಪೊಂದು ವ್ಯಕ್ತಿಯ ಭಾವಬಿನ್ನಾಣಕ್ಕೆ ಬೆರಗುವಟ್ಟು ನಿಂತಿತ್ತು. ನಾದದ ಮುಂದುವರಿಕೆಯಾಗಿ ಬಂದ ಮತ್ತಷ್ಟು ಅಕ್ಷರಗಳು, ಹಕ್ಕಿಯ ಬಾನಿಗೆ ‘ಮಾತು’ ಆಗಿ, ನೆಲಕ್ಕೆ ‘ಕತೆ’ಯಾಗಿ ಹೊಸೆದುಕೊಂಡಿತ್ತು. ಕ್ಷಣಾರ್ಧದಲ್ಲಿ ಹಿಂತೆರೆಯ ಎರಡೂ ಮಗ್ಗುಲುಗಳಿಂದ, ಹತ್ತಿಪ್ಪತ್ತು ವಿದ್ಯಾರ್ಥಿಗಳು ಸದ್ದಿಲ್ಲದೆ ವೇದಿಕೆಗೆ ಬಂದರು. ಉತ್ಸವದ ಸರಳ ತೊಡುಗೆಗಳಲ್ಲಿದ್ದ ಅಷ್ಟೂ ಮಂದಿ ನಮ್ಮೆಲ್ಲರ ನಿರೀಕ್ಷೆಗಳ ಏಕಧ್ವನಿಯಂತೆ “ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸಾ….”ದ ವಚೋವಿಲಾಸವನ್ನು ಅರ್ಥಭಾವಗಳ ಬೆಸುಗೆ ಹಾಕಿ ಒಪ್ಪಿಸಿದರು. ಹೀಗೆ ಐದು ದಿನಗಳ ಕಲೆಗಳ ಸಂಗಡ ಮಾತುಕತೆಯ ನಾಂದೀ ಕಲಾಪ ಸಂಪನ್ನಗೊಂಡಿತ್ತು.
ದಿನದ ಮೊದಲ ಅವಧಿಯ ಉಳಿದ ಸಮಯದಲ್ಲಿ, ಶಿಬಿರಾರ್ಥಿಗಳೂ ಸೇರಿದಂತೆ ಎಲ್ಲರೂ ತಂತಮ್ಮ ಚುಟುಕು ಪರಿಚಯವನ್ನು ಕೊಟ್ಟರು. ಅದು ಕನ್ನಡದ ನುಡಿ ವೈವಿಧ್ಯಗಳೊಡನೆ (ಡೈಲೆಕ್ಟ್ಸ್), ಅನ್ಯ ಭಾಷಿಕರೂ ಇರುವುದನ್ನ ತಿಳಿಸಿತು. ಪರೋಕ್ಷವಾಗಿ ಕಲೆಗಳು ಭಾಷಾತೀತ ಎನ್ನುವುದನ್ನೂ ಸಾರಿದವು. ಜತೆಗೆ ಅವರ ಒಂದೆರಡೇ ವಾಕ್ಯಗಳ ಸ್ವಪರಿಚಯದಲ್ಲೂ ಬಹು ದೊಡ್ಡ ಬೌದ್ಧಿಕ ವೈವಿಧ್ಯ ಅಲ್ಲಿ ಮೇಳೈಸಿದ್ದನ್ನೂ ಮನದಟ್ಟು ಮಾಡಿಸಿತು. ಚಾ ವಿರಾಮವನ್ನು ಹಿಂಬಾಲಿಸಿದ ಎರಡನೇ ಅವಧಿಯಲ್ಲಿ, ನಾಗೇಶ ಹೆಗಡೆಯವರು ‘ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ’ ಎನ್ನುವ ವಿಷಯವನ್ನು ಚಿತ್ರ, ಕಿರು ಚಲಚಿತ್ರಗಳ ಉದಾಹರಣೆಗಳೊಡನೆ ಮಂಡಿಸಿದರು. ಅಷ್ಟೇ ಸಮರ್ಥವಾಗಿ ಸಭಿಕರ ಸಂದೇಹಗಳಿಗೂ ಪರಿಹಾರದ ಪ್ರಯತ್ನ ಮಾಡಿದರು.
ಕ್ಷುದ್ರ ಪಕ್ಷ ರಾಜಕಾರಣದ ಮಹಾ ಉರಿ ಇಂದು ದೇಶವನ್ನೇ ಸುಟ್ಟು ಒಂದೇ ರಾಮತತ್ವವನ್ನು ಸತ್ಯಗೊಳಿಸಲು ಹೆಣಗುತ್ತಿದೆ. ವಾಸ್ತವದಲ್ಲಿ ವಿದ್ವಾಂಸ ಎಕೆ ರಾಮಾನುಜನ್ ಸಂಶೋಧಿಸಿದಂತೆ, ಮಹಾಕವಿ ವಾಲ್ಮೀಕಿಯಿಂದ ತೊಡಗಿ ನಿರಕ್ಷರಿ ಜನಪದರವರೆಗೂ ಭಿನ್ನ ದೇಶ, ಭಾಷಾ ಮತ್ತು ಸಂಸ್ಕೃತಿಗಳಲ್ಲೂ ವ್ಯಾಪಿಸಿದಂತೆ ಮುನ್ನೂರಕ್ಕೂ ಮಿಕ್ಕು ರಾಮಾಯಣಗಳಿವೆ. ಅವುಗಳಲ್ಲಿ ಒಂದಾದ ಕುವೆಂಪು ರಾಮಾಯಣ ದರ್ಶನಂನ ಸಣ್ಣ ತುಣುಕು – ದಶಾನನ ಸ್ವಪ್ನಸಿದ್ಧಿ. ಮೂಲ ಕಾವ್ಯವನ್ನೇ ವಾಚಿಕಕ್ಕೆ ಬಳಸುವುದರೊಡನೆ, ಅದರದ್ದೇ ಲಯಕ್ಕೆ ನಾಟಕೀಯತೆ, ಅಭಿನಯಗಳನ್ನು ಬೆಸೆದ ಈ ಅದ್ಭುತ ಪ್ರಯೋಗವನ್ನು ಅಪರಾಹ್ನದ ಮೊದಲ ಅವಧಿಯಲ್ಲಿತ್ತು. ಭಳಿರೇ ವಿಚಿತ್ರಂ ಬಳಗದ ಪ್ರಯೋಗದ ಮುಖ್ಯ ಭೂಮಿಕೆಯಲ್ಲಿ ಅವಿನಾಶ್ ರೈ ಮತ್ತು ಶ್ವೇತಾ ಅರೆಹೊಳೆ ಹೊಳೆದರು. ಸಹನಟರಾಗಿ ಚೈತ್ರ ಕೋಟ್ಯಾನ್ ಮತ್ತು ಚರಿತ್ ಸುವರ್ಣ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮಂಜು ಕೊಡಗು, ಸಂಗೀತದಲ್ಲಿ ಅರುಣ್ ಕುಮಾರ್ ಮತ್ತು ಭರತ್ ಜಿವಿ, ಬೆಳಕಿನಲ್ಲಿ ವಿನೀತ್ ಕುಮಾರ್ ಮತ್ತು ಮಂಜು ಹಿರೇಮಠ ಸಹಕರಿಸಿದರು. ಪ್ರಸ್ತುತಿಯ ಕೊನೆಯಲ್ಲಿ ಬೀಯಾರ್ ವೆಂಕಟ್ರಮಣ ಐತಾಳರ ಸಾರಥ್ಯದಲ್ಲಿ ತಂಡದೊಡನೆ ಸಂವಾದವೂ ನಡೆಯಿತು.
ಅಪರಾಹ್ನದ ಎರಡನೇ ಅವಧಿಯ ಕಾವ್ಯಾನುಸಂಧಾನಕ್ಕೆ ಇಬ್ಬರು ವಿದ್ವಾಂಸರು ಬಂದಿದ್ದರು. ಮೊದಲಿಗೆ ಮಲ್ಲಪ್ಪ ಬಂಡಿಯವರು ಮಧುರ ಚೆನ್ನರ ಕುರಿತು ಮಾತಾಡಲು ಸಲಿಗೆಯ ಸಲ್ಲಾಪ ಮತ್ತು ನನ್ನ ನಲ್ಲ ಎಂಬ ಎರಡು ಕವನಗಳನ್ನು ಆಯ್ದುಕೊಂಡಿದ್ದರು. (ನೋಂದಣಿ ಕಾಲಕ್ಕೇ ಎಲ್ಲ ಶಿಬಿರಾರ್ಥಿಗಳಿಗೆ ಕೊಟ್ಟಿದ್ದ ಚೀಲದಲ್ಲಿ ಲೇಖನ ಸಾಮಗ್ರಿಗಳೊಡನೆ ಐದೂ ದಿನಗಳ ನೇರ ಆಕರಗಳ ಯಥಾ ಪ್ರತಿಗಳನ್ನೂ ಒದಗಿಸಿದ್ದರು) ಬಂಡಿಯವರು ಚೆನ್ನರನ್ನು ಎಲ್ಲರೊಪ್ಪಿದಂತೇ ಭಕ್ತ ಕವಿ, ಅನುಭಾವೀ ಕವಿ ಎನ್ನುವುದರೊಡನೆ ಪಾಶ್ಚಾತ್ಯ ಕಾವ್ಯಲೋಕದ ಪ್ರಭಾವಲಯ ವಿದೂರ ಎಂದೂ ವಿಶ್ಲೇಷಿಸಿದರು.
ಎರಡನೆಯವರಾಗಿ ಜನಾ ತೇಜಶ್ರೀ, ಪುತಿನ ಅವರ ಮಲೆದೇಗುಲ ಸಂಕಲನದ ಶೀರ್ಷಿಕೆಗಳೇ ಇಲ್ಲದ ೫೪ ಕಿರು ಕವನಗಳಲ್ಲಿ ಎರಡನ್ನು ಆಯ್ದುಕೊಂಡಿದ್ದರು. ಒಟ್ಟಾರೆ ಕವನಗಳಿಂದಲೇ ದೂರ ಉಳಿಯುವ ನನ್ನನ್ನೂ ತೇಜಶ್ರೀಯವರ ವಿಶ್ಲೇಷಣೆ ಆಕರ್ಷಿಸಲು ಎರಡು ಕಾರಣಗಳಿದ್ದವು. ೧. ಮೇಲುಕೋಟೆ ಮೂಲದ ಪುತಿನ ಅವರನ್ನು ಬಹುಮಂದಿ, ಅಲ್ಲಿನ ಆರಾಧ್ಯ ದೈವ ಚೆಲುವ ನಾರಾಯಣನಿಗೆ ತೆತ್ತುಕೊಂಡ ಕವಿ/ ಭಕ್ತ ಕವಿ ಎನ್ನುವ ಮಾತನ್ನು ತೇಜಶ್ರೀ ನಿರಾಕರಿಸಿದರು. ಅದರಲ್ಲೂ ಮುಖ್ಯವಾಗಿ, “ಪುತಿನ, ‘ಮಲೆ ದೇಗುಲ’ದಲ್ಲಿ ಮೇಲುಕೋಟೆಯ ಬೆಟ್ಟದ ಮೇಲಿರುವ ದೇವ ಬಿಂಬವನ್ನು ವೈಭವೀಕರಿಸುತ್ತಿಲ್ಲ. ಅವರು ಬೆಟ್ಟ/ ಪ್ರಕೃತಿಯಲ್ಲೇ ದೇವತ್ವವನ್ನು ಕಾಣುತ್ತಿದ್ದಾರೆ” ಎಂಬ ಅರ್ಥದ ಮಾತು, ಪರ್ವತಾರೋಹಿಯಾಗಿ ನನಗೆ ತುಂಬ ಹಿಡಿಸಿತು! ೨. “ದುಷ್ಟ ಮರ್ದನ ಕೃಷ್ಣ ಅಥವಾ ಆತನ ಕಪ್ಪು ಬಣ್ಣವನ್ನು ಪುತಿನ ಋಣಾತ್ಮಕ ವ್ಯಕ್ತಿತ್ವವಾಗಿ ಕಾಣಲಿಲ್ಲ. ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಳ್ಳುವ ಶಕ್ತಿ ಎಂದೇ ಕಂಡರು” ಎನ್ನುವ ಮಾತು. ಮೈಸೂರಿನಲ್ಲಿದ್ದ ನನ್ನ ತಂದೆಗೆ (ಜಿಟಿ ನಾರಾಯಣ ರಾವ್) ಪುತಿನ ಅವರೊಡನೆ ಭಾರೀ ಆತ್ಮೀಯ ಒಡನಾಟವಿತ್ತು. ತಂದೆಯ ವಿಜ್ಞಾನ ಸಾಹಿತ್ಯದಲ್ಲಿ ‘ಕೃಷ್ಣ ವಿವರ’ ತುಂಬ ಮಹತ್ವದ ಕೃತಿಯೂ ಹೌದು. (ಇಂಗ್ಲಿಷಿನ ಬ್ಲ್ಯಾಕ್ ಹೋಲಿಗೆ ನೀಚಾರ್ಥ ಸೂಚಿಸುವ ಕಪ್ಪು ರಂಧ್ರ/ ಕುಹರ ಮೊದಲಾದವನ್ನು ನಿರಾಕರಿಸಿ, ಭಾರತೀಯ ಸಂದರ್ಭಕ್ಕೆ ಧ್ವನಿಪೂರ್ಣವಾಗಿ ಕೃಷ್ಣ ವಿವರ ಎಂದು ಟಂಕಿಸಿದ್ದು ಜಯಂತ ನಾರಳೀಕರ್) ವಿಶ್ವದ ಎಲ್ಲ ಗ್ರಹತಾರೆಗಳ ಅಂತಿಮ ಅವಸ್ಥೆಯಲ್ಲಿ ಬೃಹತ್ತೂ ಮಹತ್ತೂಗಳನ್ನು ಸ್ವಾಹಾ ಮಾಡುವ ಅದ್ವಿತೀಯ ಶಕ್ತಿ ಕೃಷ್ಣ ವಿವರ.
ಎರಡನೇ ದಿನದ ಅಪರಾಹ್ನದ ಎರಡನೇ ಅವಧಿಯಲ್ಲಿ ಲಲಿತಾ ಸಿದ್ಧಬಸವಯ್ಯನವರ ಮೂರು ಕವನಗಳೊಂದಿಗೆ ಬಂದವರು ರಾಜೇಂದ್ರ ಚೆನ್ನಿ. ಕವಿ ದೇವರನ್ನು ಪ್ರೀತಿಯಲ್ಲೇ ಅಪ್ಪಟ ಮಾನವಕೃತ ಎಂದೇ ಕಂಡ ಕವನ – ಧನ್ಯವಾದಗಳು, ನನಗೆ ಹಿಡಿಸಿತು. ಮತ್ತೊಂದು ಕವನ – ಇರುಮುಡಿ, ಅಂದರೆ ಸ್ಪಷ್ಟವಾಗಿ ಶಬರಿಮಲೆ ಅಯ್ಯಪ್ಪನ ಕುರಿತದ್ದೇ ಇದೆ. ೧೯೮೭ರಷ್ಟು ಹಿಂದೆಯೇ ದೇವಕೀ ಸಮೇತನಾಗಿ ನಾನು, (ಪುತಿನ ಹೇಳಿದಂತೆ) ಶಬರಿಯ ಮಲೆ ದೇಗುಲವನ್ನು ನೋಡಲು ಹೋಗಿದ್ದೆ. ಪಂಬಾದಲ್ಲಿ ಉಳಿದು, ಬೆಳಿಗ್ಗೆ ನೀಲಿಮಲೈನ್ನು ನಡೆದು, ಎತ್ತರಿಸಿದ ದೇವಳ ವಠಾರಕ್ಕೆ ಹಿಂದಿನ ಮೆಟ್ಟಿಲಿನಿಂದ ಏರಿ, ಮುಚ್ಚಿದ್ದ ಗುಡಿಗಳನ್ನು ಸುತ್ತಾಡಿ ನೋಡುವಲ್ಲಿ ನಮ್ಮನ್ನು ಯಾರೂ ಆಕ್ಷೇಪಿಸಲಿಲ್ಲ. ಇದನ್ನೆಲ್ಲ ಅಂದೇ ನನ್ನ ಚಕ್ರವರ್ತಿಗಳು ಪುಸ್ತಕದಲ್ಲೂ ದಾಖಲಿಸಿದ್ದೆ (ನೋಡಿ: https://athreebook.com/2014/06/12/shabarimale-trip/) ಮುಂದೊಂದು ಕಾಲದಲ್ಲಿ (೨೦೦೦ದ ದಶಕ) ಸಿನಿತಾರೆ ಜಯಮಾಲಾರ ಭೇಟಿ ಅನಾವಶ್ಯಕವಾಗಿ ವಿವಾದಾತ್ಮಕವಾಗಿತ್ತು. ಬಹುಶಃ ಅದು ತಲೆಯಲ್ಲಿಟ್ಟುಕೊಂಡೇ ಲಲಿತಾ ಸಿದ್ಧಬಸವಯ್ಯನವರು ಹಿಂದಿನ ಕವನದ ಭಾವವನ್ನು ಹೆಚ್ಚು ಸ್ಪಷ್ಟಗೊಳಿಸುವಂತೆ ಮಾತೃವಾತ್ಸಲ್ಯದಲ್ಲಿ ಕೀಟಲೆ ಮಾಡಿದ ಪರಿ ನನಗೆ ತುಂಬಾ ಹಿಡಿಸಿತು.
ಶಿಬಿರದ ಭಾಗವಾಗಿ, ಆಪ್ತರಂಗಭೂಮಿಯಲ್ಲೇ ಪ್ರಯೋಗ ಕಂಡ ಕಲಾಪ್ರಸ್ತುತಿಗಳಲ್ಲಿ…
೧. ಬಿ ಲವೆಡ್ – ಸಪನ್ ಶರಣ್ ನಿರ್ದೇಶಿತ, (ಅವರದೇ) ತಮಾಷಾ ಥಿಯೇಟರ್, ಮುಂಬೈಯ ನಾಟಕ. ಇದು ಭಾಷಾ ಬಳಕೆಯಲ್ಲಿ ಮಡಿವಂತಿಕೆಯನ್ನೇನೂ ಇಟ್ಟುಕೊಳ್ಳದೇ ಭಾವಗಳ ಸ್ಫೋಟಕ್ಕೆ ಒದಗಿದಂತೆ ಇಂಗ್ಲಿಷ್ ಮತ್ತು ಹಿಂದಿಗಳಲ್ಲಿ ನಡೆಯುತ್ತದೆ. ಮತ್ತೆ ನಾಟಕದ ವಸ್ತುವಿನ ಗುಣಕ್ಕೆ ಒಗ್ಗುವಂತೆ ಚಟುವಟಿಕೆಗಳೂ ತೀವ್ರ ನಡೆಯಲ್ಲೇ ಇದ್ದವು. ನಾಟಕದ ವಸ್ತು – ಬಹು-ಲೈಂಗಿಕತೆಯ ಘಟನೆಗಳು. ಹೆಣ್ಣಾಗಿ ಹುಟ್ಟಿ ಗಂಡಾಗಿ ತೋರಿಕೊಳ್ಳುವ, ಗಂಡಾಗಿ ಹುಟ್ಟಿ ಹೆಣ್ಣಾಗಿ ವೈಯಾರಿಸುವ, ಸಲಿಂಗಕಾಮ, ದಾಂಪತ್ಯವಿದ್ದಂತೇ ಒಪ್ಪಿಗೆಯ ಅನ್ಯ ಲೈಂಗಿಕ ಸಂಬಂಧವೇ (ವೇಶ್ಯಾ ಸಂಪರ್ಕವಲ್ಲ) ಮೊದಲಾದ ಮನೋವೃತ್ತಿಗಳ (ಇಂಗ್ಲಿಷಿನಲ್ಲಿ ಹೇಳುವಂತೆ Queer) ಅಭಿವ್ಯಕ್ತಿಯನ್ನು ದಿಟ್ಟವಾಗಿ, ಪರಿಣಾಮಕಾರಿಯಾಗಿ, ಸಾರ್ವಜನಿಕ ವೇದಿಕೆಗೆ ಹೊರೆಯಾಗದ ಎಚ್ಚರದೊಡನೆ ಪ್ರಸ್ತುತಪಡಿಸಿತು. ಕಾಮದ ವಿಚಾರ ಬಂದಾಗ, ಕನ್ನಡದ ಸಂದರ್ಭದಲ್ಲಿ ನಾಟಕ, ಸಿನಿಮಾ ಮತ್ತು ಬಹುತೇಕ ಜನಪದ ರಂಗಕಲೆಗಳು ಇನ್ನೂ ಮಡಿವಂತಿಕೆಯನ್ನು ಕಾಪಾಡಿಕೊಂಡಿವೆ. ತಮ್ಮ ಪ್ರಸ್ತುತಿಗಳಲ್ಲಿ ಪಾತ್ರಧಾರೀ ಪುರುಷ ಮತ್ತು ಸ್ತ್ರೀಗಳ ದೈಹಿಕ ಮಾತ್ರವಲ್ಲ, ಬಹುತೇಕ ವಾಚಿಕವನ್ನೂ ಸೂಚ್ಯದ ಮಟ್ಟದಲ್ಲೇ ಕಾಪಾಡಿಕೊಂಡಿದೆ. ಆದರೆ ಇಂದು ಯಾರೂ ನೋಡುವ (ನೋಡಲು ಅವಕಾಶವಿರುವ) ಬಹುತೇಕ ಅಂತರ್ಜಾಲ ಕಥನಗಳು, ವಿದೇಶೀ ಸಿನಿಮಾಗಳು, ಮನೆಮಂದಿಯೆಲ್ಲಾ ಕೂತು ನೋಡುವ ಅನೇಕ ಹಿಂದೀ ಸೀರಿಯಲ್ಲುಗಳೂ ಕಳಚಿಕೊಂಡಿರುವಂತೇ ‘ಮಡಿ’ಯನ್ನು ಬಿ-ಲವೆಡ್ ಕೂಡಾ ಬಿಟ್ಟದ್ದು ಒಳ್ಳೆಯ ಪರಿಣಾಮವನ್ನೇ ಬೀರಿತು.
ವಿಸೂ: ಇದರ ಕುರಿತು ನನಗೆ ಯಾವ ಚಿತ್ರಿಕೆಗಳನ್ನೂ ಸಂಗ್ರಹಿಸುವುದು ಸಾಧ್ಯವಾಗಲಿಲ್ಲ. ಬದಲಿಗೆ ಈ ನಾಟಕದ ಕುರಿತೇ ನಿರ್ದೇಶಕಿ ಸಪನ್ ಸರಣ್ ಅನ್ಯ ಸಂದರ್ಬದಲ್ಲಿ ಆಡಿದ ಮಾತು ಇಲ್ಲಿದೆ:
https://www.google.com/search?q=Sapan%20saran%20Plays…
೨. ಸಿನಿಮಾಗಳ ಎಲ್ಲ ಪ್ರಕಾರಗಳಲ್ಲಿ (ಕಥಾ, ಸಾಕ್ಷ್ಯ…) ಆದಿವಾಸಿಗಳನ್ನು ಬಿಂಬಿಸುವ ಕುರಿತು ಮುಂಬೈಯಿಂದ ಬಂದಿದ್ದ ನಿರಂಜನ ಕೂಜೂರು (ಒರಿಯಾ ಮೂಲದ ಒಂದು ಆದಿವಾಸೀ ಸಮುದಾಯದ ಸದಸ್ಯನೂ ಹೌದು) ರಶ್ಮಿದೇವಿ ಮತ್ತು ಸ್ವಾತಿ ದಂಡೇಕರ್ ಸೋದಾಹರಣ ಚರ್ಚೆ ನಡೆಸಿದರು. ಇಂದು ದೃಶ್ಯ ಮಾಧ್ಯಮ ಪಕ್ಕಾ ವಾಣಿಜ್ಯ ವಹಿವಾಟಾಗಿರುವುದರಿಂದ, ‘ಗೆಲ್ಲುವ ಕುದುರೆ’ಗಳನ್ನೇ ಓಡಿಸುವ ಹುಚ್ಚಿನಲ್ಲಿ ಮಾನವೀಯ ಮೌಲ್ಯಗಳನ್ನು ಅವಹೇಳನ ಮಾಡುತ್ತಿದೆ. ಆದರೆ ಇವರ ಪ್ರಸ್ತುತಿಯಲ್ಲಿ ಮುಖ್ಯ ಮಾತು ನಿರಂಜನರಾಡಿದಂತೆಯೂ ಇನ್ನಿಬ್ಬರು ಸಹಮತವನ್ನಷ್ಟೇ ಕೊಟ್ಟಂತೆಯೂ ಕೇಳಿತು. ಅವೆಲ್ಲವೂ ದೃಶ್ಯ ನಿದರ್ಶನಗಳ ಕೊರತೆಯಿಂದ ನನಗೆ ನೀರಸವೆನ್ನಿಸಿತು,
೩. ಉತ್ತರಾದಿ ಅಥವಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ, ವಿರಳ ಬಳಕೆಯ ವಾದ್ಯ ರುದ್ರವೀಣೆ. ಅದನ್ನು ಎಳೆಹರಯದಲ್ಲೇ ಸಿದ್ಧಿಸಿಕೊಂಡ ಹಿರಿಯ ಕಲಾವಿದೆ, (ನಮ್ಮ ಶಿರಸಿಯವರೇ ಆದ) ಜ್ಯೋತಿ ಹೆಗಡೆ (೧೯೬೩). ಜ್ಯೋತಿಯವರು ಸಹವಾದನದಲ್ಲಿ ಸ್ವಂತ ಶಿಷ್ಯೆ ಮೃಣಾಲಿನಿ ಮತ್ತು ಪಖಾವಾಜಿನಲ್ಲಿ ಸುಖದ್ ಮುಂಡೆಯವರೊಡನೆ ಸಣ್ಣ ಬೈಠಕ್ಕನ್ನು ಮೊದಲಿಗೆ ಕೊಟ್ಟರು. ಹಿಂಬಾಲಿಸಿದಂತೆ ಜ್ಯೋತಿಯವರೊಡನೆ ಸಂವಾದವೂ ನಡೆಯಿತು. ಕಲಾವಿದರ ಪರಿಚಯ ಮತ್ತು ಸಂವಾದವನ್ನು ದೀಪಾ ಗಣೇಶ್ ನಡೆಸಿಕೊಟ್ಟರು. ನಾನು ಸಾಹಿತ್ಯಾನುಯಾಯಿ ಸಂಗೀತವನ್ನೇ ಹೆಚ್ಚು ಆನಂದಿಸುತ್ತೇನೆ, ವಾದ್ಯಸಂಗೀತ ಅಷ್ಟಕ್ಕಷ್ಟೇ. ಆದರೂ ಜ್ಯೋತಿಯವರ ಸುಮಾರು ಒಂದೂವರೆ ಗಂಟೆಯ ಕಚೇರಿಯಲ್ಲಿ (ಅವರೇ ಹೇಳಿಕೊಂಡಂತೆ) ಬೃಂದಾವನ ಸಾರಂಗಿ ಮತ್ತು ಮಧುವಂತೀ ರಾಗಗಳ ಪ್ರಸ್ತುತಿ ಕುತೂಹಲಕಾರಿಯಾಗಿಯೇ ಇತ್ತು. ಆದರೆ ಸಂವಾದಕ್ಕೆ ಬಂದಾಗ, ಜ್ಯೋತಿಯವರು ಎಲ್ಲೋ ಮೊಂಡುವಾದ ಹೂಡಿದಂತನ್ನಿಸಿತು. ರುದ್ರವೀಣೆಯ ಮೂಲದ ಕುರಿತು ಪ್ರಶ್ನೆ ಬಂದಾಗ, ಅವರು ಗುರುವಾಕ್ಯವೇ ತನಗೆ ಪ್ರಮಾಣ ಎಂದರು. ಮುಂದುವರಿದು ಆ ಕುರಿತು ಗುರುಗಳಲ್ಲಿ ತಾನು ವೈಚಾರಿಕ ಚರ್ಚೆ ನಡೆಸಿಲ್ಲ ಎಂದೂ ತಿಳಿಸಿದರು. ಹಾಗಿದ್ದೂ ಅನ್ಯ ಸಂಶೋಧಕರ ವಾದಗಳನ್ನು ಅಲ್ಲಗಳೆದದ್ದು ತೀರಾ ಅನಪೇಕ್ಷಿತ. ಅದರಲ್ಲೂ ಅವರು ಒತ್ತು ಕೊಟ್ಟು ವಿದೇಶೀ ಸಂಶೋಧಕರನ್ನು ಖಂಡಿಸಿದಾಗ, ಇಂದು ದೇಶವನ್ನೇ ಕಾಡುತ್ತಿರುವ ಸಾಂಸ್ಕೃತಿಕ ರಾಜಕಾರಣದ ಕರಿನೆರಳು ಇಣುಕಿದಂತೇ ಭಾಸವಾಯ್ತು. (ಜಾನ್ ಹಿಗ್ಗಿನ್ಸ್ ಕೃಷ್ಣಾ ನೀ ಬೇಗನೆ ಬಾರೋ ಎಂದರೆ ಪುರಸ್ಕರಿಸುತ್ತೇವೆ. ಟಿ.ಎಂ. ಕೃಷ್ಣ ಇಸ್ಲಾಂ ಗೀತೆಗಳನ್ನು ಹಾಡಿದರೆ ಬಹಿಷ್ಕಾರದ ಮಾತಾಡುತ್ತೇವೆ!)
೪. ಮೂರು ನಾಲ್ಕು ದಶಕಗಳ ಹಿಂದೆಯೇ ನಾನು ಬೆಂಗಳೂರಿನ ಪ್ರಭಾತ್ ಕಲಾವಿದರ ಸಿಂಡ್ರೆಲ್ಲಾದ ರಂಗಪ್ರಸ್ತುತಿಯನ್ನು ನೋಡಿ ಬೆರಗುವಟ್ಟಿದ್ದೆ. ಅವರು ತಾಳ ಭಾವಗಳ ಮೇಳವಾದ ನಮ್ಮ ಸಾಂಪ್ರದಾಯಿಕ ಸಂಗೀತ ನೃತ್ಯಗಳನ್ನು, ನಾಟಕೀಯ ದೃಶ್ಯ ಸಂಯೋಜನೆಗಳೊಡನೆ, ಪೌರಾಣಿಕ, ಐತಿಹಾಸಿಕ ಮತ್ತು ಮಕ್ಕಳ ಕಥಾಭಿನಯಕ್ಕೆ ಅಳವಡಿಸಿ ಕೊಡುತ್ತಿದ್ದ ರಂಗ ಪ್ರಸ್ತುತಿಗಳನ್ನು ಕರ್ನಾಟಕವೇನು, ವಿಶ್ವವೇ ಕೊಂಡಾಡಿದೆ. ಅದರ ಮುಂದಿನ ಮಜಲು…
“ಆಯ್ಕೆ ನಿಮ್ಮದು ಪ್ರಯೋಗ ನಮ್ಮದು” ಎಂಬ ಕಠಿಣ ಸವಾಲನ್ನು ಉತ್ತರಿಸುತ್ತಾ ದೇಶ ವಿದೇಶಗಳಲ್ಲೂ ಜಯಭೇರಿ ಬಾರಿಸುತ್ತಲೇ ಇರುವ ಇನ್ನೊಂದೇ ಬೆಂಗಳೂರಿನ ಬಳಗ – ಅಭಿನವ ನೃತ್ಯಶಾಲೆ. ಇದರ ಜೀವಾಳವೂ ಮಹಾಗುರುಗಳೂ – ನಿರುಪಮಾ ಮತ್ತು ರಾಜೇಂದ್ರ ದಂಪತಿ. ಇವರು ಶಿಬಿರದ ಒಂದು ಅವಧಿಯಲ್ಲಿ ‘ಅಭಿಜಾತ ನಾಟ್ಯದಲ್ಲಿ ಕಥಾಭಿನಯ’ ಎಂಬ ವಿಷಯದ ಮೇಲೆ ಸೋದಾಹರಣ ಗೋಷ್ಠಿ ನಡೆಸಿದರು. ಪೌರಾಣಿಕ, ಐತಿಹಾಸಿಕ, ರಮ್ಯ ವಿಷಯಗಳಿಂದಾಚೆಗೂ ತಮ್ಮ ಸಾಂಪ್ರದಾಯಿಕ ಕಲೆಗಳು (ಕಥಕ್ ಮತ್ತು ಭರತನಾಟ್ಯ) ಹೇಗೆ ಪರಿಣಾಮಕಾರಿಯಾಗಿ ವ್ಯಾಪಿಸಿಕೊಳ್ಳುತ್ತವೆ ಎನ್ನುವುದನ್ನು, ಯಶಸ್ವಿಯಾಗಿ ಮಾಡಿತೋರಿಸಿದ ಖ್ಯಾತಿ ಇವರದು. ಅದರಲ್ಲೂ ನಿರುಪಮಾ ಉದಾಹರಿಸಿದ ಕನ್ನಡ ಚಲನಚಿತ್ರದ ಇತಿಹಾಸ, ಉದ್ಯಮಿ ರತನ್ ಟಾಟಾರ ಜೀವನ ಸಾಧನೆಗಳು ನಿಜಕ್ಕೂ ಅನುಪಮ. ಅವರು ನೀನಾಸಂ ಶಿಬಿರಕ್ಕಾಗಿ ತಂದ ಪೂರ್ಣ ಪ್ರಮಾಣದ ನೃತ್ಯ ಪ್ರಯೋಗ – ರಸರಂಗವನ್ನು, ಅದೇ ಸಂಜೆ, ಮಹಾ ಪ್ರದರ್ಶನವಾಗಿ ಶಿವರಾಮ ಕಾರಂತ ರಂಗಮಂದಿರದಲ್ಲಿ ನೋಡುವ ಅವಕಾಶವೂ ನಮಗೊದಗಿತು.
೭. ರಂಗ ಪ್ರದರ್ಶನಗಳು, ಪ್ರತಿಕ್ರಿಯೆಗಳು
ಮೊದಲ ಸಂಜೆಯ ನಾಟಕ – ಮಾಲತಿ ಮಾಧವ, ಭವಭೂತಿಯ ಸಂಸ್ಕೃತ ನಾಟಕದ ಕನ್ನಡ ರೂಪ ಮತ್ತು ನಿರ್ದೇಶನ – ಕೆವಿ ಅಕ್ಷರ. ಕೆಲವು ವರ್ಷಗಳ ಹಿಂದೆ ಹೆಗ್ಗೋಡಿನ ಊರವರ ವಾರ್ಷಿಕ ನಿರ್ಮಾಣವಾಗಿ ಬಂದಿದ್ದ ಈ ನಾಟಕ, ಈಗ ತಿರುಗಾಟಕ್ಕಾಗಿ ಹೊಸದೇ ರೂಪದಲ್ಲಿ, ಹೆಚ್ಚುವರಿ ಸಂಗೀತದೊಡನೆ ಬಂದಿದೆ. ನಾಟಕಗಳಲ್ಲಿ (ಸಿನಿಮಾದಂತಲ್ಲದೆ) ತಯಾರಿ ಮತ್ತು ಕಲಾವಿದರು ಅದದೇ ಇದ್ದರೂ ಪ್ರತಿ ಪ್ರದರ್ಶನವೂ ಸೃಜನಶೀಲತೆಯ ಹೊಸತೇ ಪ್ರಯೋಗ ಎನ್ನುವ ಮಾತಿದೆ. ಆ ಲೆಕ್ಕದಲ್ಲಿ ಮೂಲದಲ್ಲೇ (ಹವ್ಯಾಸಿಗಳು, ಬಹುಸಂಖ್ಯಾತರು, ಒಂದೇ ನೆಲದಲ್ಲಿ ಮತ್ತು ಒಂದೆರಡೇ ಪ್ರದರ್ಶನಕ್ಕೆ ಸಜ್ಜುಗೊಂಡ) ಊರ ಪ್ರಯೋಗಕ್ಕೂ ಈಗ ಸಜ್ಜುಗೊಂಡಿರುವ (ಎಲ್ಲ ಹೊಸಬರೇ ಆದ, ವೃತ್ತಿಪರ, ಸಿಮಿತ ಸಂಖ್ಯೆಯ, ನೂರೆಂಟು ಊರು ಸುತ್ತಲೆಂದೇ ಸಜ್ಜುಗೊಂಡ) ತಿರುಗಾಟದ ಪ್ರಯೋಗಕ್ಕೂ ಆಡು-ಆನೆಯ ಅಂತರವಿದೆ. ನನ್ನೀ ಬರಹ ಬರುವ ವೇಳೆಗಾಗಲೇ ಹೊರ ಊರುಗಳಲ್ಲಿ ನಾಲ್ಕಾರು ಪ್ರದರ್ಶನ ಕೊಡುತ್ತ ನಡೆದಿರುವ ತಿರುಗಾಟ ನಿಮ್ಮೂರಿಗೆ ಬಂದಾಗ ನೋಡುವ ಸಂತಸ ನಿಮ್ಮದಾಗಲಿ. ಅದಕ್ಕೆ ಪೂರ್ವಾಗ್ರಹ ಬರದಂತೆ, ನನ್ನ ಸಮೀಕ್ಷೆಯನ್ನು ಇಷ್ಟಕ್ಕೇ ಮಿತಗೊಳಿಸುತ್ತೇನೆ. ಆದರೆ ಮರುದಿನ ಶಿಬಿರಾರ್ಥಿಗಳು ಕೊಟ್ಟ ಅಭಿಪ್ರಾಯಗಳು, ನಿಮ್ಮ ವೀಕ್ಷಣೆಗೆ ದಿಕ್ಸೂಚಿಯಾಗಲೆಂಬ ಹಾರೈಕೆಯೊಡನೆ ಸಂಗ್ರಹಿಸಿದ್ದೇನೆ:
* ಹೆಸರೇ ಹೇಳುವಂತೆ (ಮತ್ತು ಪ್ರಧಾನ ಪಾತ್ರಗಳೂ ಆದ) ಮಾಲತಿ-ಮಾಧವರ ಪರಿಣಯಕ್ಕೆ ರಂಗ ಪಠ್ಯವನ್ನು ಸೀಮಿತಗೊಳಿಸಬೇಕಿತ್ತು. ಉಳಿದೆರಡು ಪ್ರೇಮಪ್ರಕರಣಗಳನ್ನೂ ಪರಿಣಯಕ್ಕೆ ಮುಟ್ಟಿಸುವುದರಿಂದ, ವೀಕ್ಷಕ ಕುತೂಹಲ ಮೊನಚು ಕಳೆದುಕೊಂಡಿದೆ, ಪ್ರದರ್ಶನಾವಧಿ ದೀರ್ಘವಾಗಿದೆ.
* ಸಾಮಾಜಿಕ ವರ್ತಮಾನದ ಪ್ರಕ್ಷುಬ್ದತೆಯನ್ನು ಪರಿಗಣಿಸಿದರೆ ಕಥಾ ಆಯ್ಕೆ ಅಪ್ರಸ್ತುತ ಅನ್ನಿಸಿತು.
* ಬೌದ್ಧ ಸನ್ಯಾಸಿನಿಯರಿಗೆ ಯಾಕೀ ಕಲ್ಯಾಣ ಉತ್ಸಾಹ?
* ಗಂಭೀರವಲ್ಲದ ಪ್ರಸಂಗದ ಉತ್ತಮ ಪ್ರಯೋಗ (Less profound but well performed)
* ಪ್ರಾಚೀನ ವಸ್ತುವನ್ನು ಆಧುನಿಕ ರಂಗಕ್ಕಳವಡಿಸುವ ಯತ್ನ.
*ಇಷ್ಟಲ್ಲದೆ…. ಶಿಬಿರದ ಒಂದು ಅವಧಿಗೆಂದೇ ಆಹ್ವಾನಿತರಾಗಿದ್ದ ಸಂಸ್ಕೃತ ವಿದ್ವಾಂಸ ಮೃಣಾಲ್ ಕೌಲ್, ಪೂರಕವಾಗಿ ಸುಂದರ್ ಸರುಕೈ ಒಟ್ಟಾರೆ ಭವಭೂತಿ ನಾಟಕಗಳ ಪೂರ್ವಾಪರಗಳ ವಿಮರ್ಶೆ, ಚರ್ಚೆಯನ್ನು ಚೆನ್ನಾಗಿಯೇ ನಡೆಸಿಕೊಟ್ಟರು.
ಎರಡನೇ ಸಂಜೆಯ ನಾಟಕ – ಅಂಕದ ಪರದೆ, ಅಭಿರಾಮ್ ಭಡ್ಕಮ್ಕರ್ ಅವರ ಮರಾಠೀ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಿಸಿದ್ದು. ಇದೂ ಈ ವರ್ಷದ ತಿರುಗಾಟ ತಂಡದ ಬತ್ತಳಿಕೆಯ ಎರಡನೇ ಅಸ್ತ್ರ. ಇಲ್ಲಿ ಮೂಲ ರಂಗ ಶೈಲಿಯ ರುಚಿಕೊಡಲೆಂಬಂತೆ, ಮರಾಠೀ ನಿರ್ದೇಶಕ ವಿದ್ಯಾನಿಧಿ ವನಾರಸೆಯವರು (ಪ್ರಸಾದ್) ತಾಲೀಮು ನಡೆಸಿದ್ದಾರೆ. ಮಾಲತಿ ಮಾಧವದ ಹಲವು ಸಂದೇಹಗಳಿಗೆ ಸಮಾಧಾನ ಕೊಡುವಂತೆ, ಅಂಕದ ಪರದೆ ಸರಿದು ತೋರುವ ವಸ್ತು ಅತ್ಯಾಧುನಿಕವಾದದ್ದು. ವರ್ತಮಾನದ ವಿಕೇಂದ್ರಿತ ಕುಟುಂಬ ವ್ಯವಸ್ಥೆಯಲ್ಲಿ ಅತಂತ್ರರಾಗುತ್ತಿರುವ ವೃದ್ಧರಿಗೆ ಇಲ್ಲೊಂದು ಸುಂದರ ಮುಖ ಒದಗಿದೆ. ತಿರುಗಾಟದ ತರುಣ ಕಲಾವಿದರ ವೃತ್ತಿ ಪರಿಣತಿಗೆ ಸವಾಲು ಎನ್ನುವಂತೆ. ನಾಟಕದ ಹೆಚ್ಚಿನ ಪಾತ್ರಗಳು ವೃದ್ಧರವು ಮತ್ತು ಸಹಜವಾಗಿ ನಾಟಕದ ಗತಿಯೂ ನಿಧಾನದ್ದೇ ಇದೆ. ಒಂದೇ ಮಾತಿನಲ್ಲಿ ಹೇಳುವುದಿದ್ದರೆ, ಕಲಾವಿದರು ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎನ್ನುವುದಕ್ಕೆ, ಮರುದಿನದ ಪ್ರತಿಕ್ರಿಯಾ ಅವಧಿಯಲ್ಲಿ ಬಂದ ಹೊಗಳಿಕೆಗಳೇ ಸಾಕ್ಷಿ. ಉಳಿದಂತೆ ಪ್ರತಿಕ್ರಿಯೆಗಳಲ್ಲಿ
* ನಾಟಕ ನಿಜ ಬದುಕಿಗೆ ನೇರ ಕನ್ನಡಿ ಹಿಡಿಯಬಾರದು ಎನ್ನುವ ಮಾತು ಬಂದರೂ ದೃಢವಾಗಿ ನಿಲ್ಲಲಿಲ್ಲ.
* ವೃದ್ಧಾಶ್ರಮಗಳು ಅಪ್ಪಟ ನಗರ ಸಂಸ್ಕೃತಿಯವರಿಗೆ ಮೀಸಲು. ಅಂದರೆ ಯೋಗ್ಯ ಹಣಕಾಸಿನ ಅನುಕೂಲವಿರುವ ಅಲ್ಪಸಂಖ್ಯಾತರನ್ನಷ್ಟೇ ತಣಿಸುತ್ತಿವೆ. ಬಹುಸಂಖ್ಯಾತರಾದ ರೈತ, ಕಾರ್ಮಿಕ, ಆರ್ಥಿಕವಾಗಿ ಕೆಳವರ್ಗದವರಿಗೆ ಗಗನ ಕುಸುಮವಾಗಿಯೇ ಇದೆ.
*ಪ್ರತಿಕ್ರಿಯಾ ಕಲಾಪಗಳನ್ನು ಹಿಂಬಾಲಿಸಿದ ಅವಧಿಯಲ್ಲೇ…
ಅಭಿರಾಮ ಭಡ್ಕಮ್ಕರ್ ಇಂದಿನ ಮರಾಠೀ ರಂಗಭೂಮಿಯ ಕುರಿತು ವಿಸ್ತೃತ ಮಾತುಗಳನ್ನು ಆಡಿದರು, ಪ್ರಶ್ನೋತ್ತರಗಳಿಗೂ ತೆರೆದುಕೊಂಡರು. ಅದಕ್ಕೆ ಸಾಕ್ಷಿಯಾಗಿ, ಅಂಕದ ಪರದೆಯ ಅನುವಾದಕ ಜಯಂತ ಕಾಯ್ಕಿಣಿ, ನಿರ್ದೇಶಕ ವಿದ್ಯಾನಿಧಿ ವನಾರಸೆಯವರೂ ಕಿರುನುಡಿಗಳನ್ನು ಸೇರಿಸಿದರು.
ಮೂರನೇ ಸಂಜೆಯ ನಾಟಕ – ಹಬ್ಬದ ಹನ್ನೆರಡನೆಯ ರಾತ್ರಿ, ವಿಲಿಯಂ ಶೇಕ್ಸ್ಪಿಯರನ ಮೂಲಕ್ಕೆ ಕನ್ನಡದ ತೊಡವು ಕೊಟ್ಟವರು ಎನ್ನೆಸ್ ಲಕ್ಷ್ಮೀನಾರಾಯಣ ಭಟ್ಟ. ಇದು ಹೆಗ್ಗೋಡು ಊರಲ್ಲಿನ ವೃತ್ತಿರಂಗದ ಅನೇಕ ಮುಖಗಳಿಂದ ಬಂದ ಹವ್ಯಾಸಿಗಳು, ಕೆವಿ ಸುಬ್ಬಣ್ಣನವರ ವಾರ್ಷಿಕ ಸ್ಮರಣೆಯ ದಿನಕ್ಕೆ (ಜುಲೈ ೧೬) ಪ್ರಥಮ ಪ್ರದರ್ಶನ ಕೊಟ್ಟ ನಿರ್ಮಾಣ. ನಿರ್ದೇಶಕ -ನಟರಾಜ ಹೊನ್ನವಳ್ಳಿ. ಕ್ರಿಸ್ತನ ದೇಹ ತ್ಯಾಗದ ವಾರ್ಷಿಕ ಸ್ಮರಣೆ – ಕ್ರಿಸ್ಮಸ್, ಲೆಕ್ಕದಲ್ಲಿ ಗಂಭೀರವಾಗಿ ಕಳೆದ ಹನ್ನೊಂದು ದಿನಗಳನ್ನು ಹಿಂಬಾಲಿಸಿ ಬರುವ ಗೌಜಿ ಗಮ್ಮತ್ತಿಗೆ ಹೊಂದಿಸಿದ ಪ್ರಹಸನ. ಪ್ರಯೋಗದ ಚಂದ ನೋಡಿಯೇ ಪ್ರತಿಕ್ರಿಯೆಯಲ್ಲಿ ಒಬ್ಬರು ಘೋಷಿಸಿಯೂ ಬಿಟ್ಟರು….
* ಪ್ರಪಂಚದಲ್ಲಿ ರಂಗ ಶಾಲೆಗಳು ಎಷ್ಟೂ ಇರಬಹುದು. ಆದರೆ ಕೇವಲ ಅದರ ಪ್ರಭಾವದೊಡನೆ, ವ್ರತದಂತೆ ವರ್ಷಕ್ಕೊಂದಾದರೂ ರಂಗಪ್ರಯೋಗವನ್ನು ಕೊಡುತ್ತ ಬಂದಿರುವ ಇನ್ನೊಂದು ಊರು ನಮಗೆ ತಿಳಿದಿಲ್ಲ. ಹೆಗ್ಗೋಡು ಯಾವುದೋ ಒಂದು ಹಳ್ಳಿಯಲ್ಲ, ರಂಗಗ್ರಾಮ!
* ಪ್ರತಿಕ್ರಿಯೆಗಳನ್ನು ಹಿಂಬಾಲಿಸಿದ ಅವಧಿಯಲ್ಲಿ ಎಚ್.ಎಸ್. ಶಿವಪ್ರಕಾಶ್ ಕನ್ನಡದ ಶೇಕ್ಸ್ಪಿಯರ್ ಕುರಿತ (ಅನುವಾದ) ಮೋಹವನ್ನು ತುಂಬ ಚೆನ್ನಾಗಿ ಸಂಗ್ರಹಿಸಿ ಕೊಟ್ಟರು. ೧೯೭೪ರ ಅಂದಾಜಿನಂತೆ ಭಾರತೀಯ ಭಾಷೆಗಳಲ್ಲಿ ಬಂದ ಶೇಕ್ಸ್ಪಿಯರ್ ನಾಟಕಗಳು ೨೧೪ ಇದ್ದರೆ, ಕನ್ನಡದ ಪಾಲು ೬೭! ವಾಸ್ತವದಲ್ಲಿ ಶೇಕ್ಸ್ಪಿಯರ್ ಒಂದನ್ನುಳಿದು, ತನ್ನೆಲ್ಲಾ ನಾಟಕಗಳ ಕತೆ, ದೇಶ, ಕಾಲ ಮತ್ತು ಭಾಷೆಯನ್ನು ಅನ್ಯ ಮೂಲಗಳಿಂದಲೇ ಪಡೆದಿದ್ದ. ಅವನು ಅವುಗಳನ್ನು ತನ್ನ ಸಮಕಾಲೀನ ದೇಶ, ಭಾಷೆಗೇ (ಎಲಿಜಬೇತನ್ ಇಂಗ್ಲಿಷ್) ರೂಪಾಂತರಿಸಿದ್ದ. ಆದರೆ ಕನ್ನಡದ ಅನುವಾದಗಳಲ್ಲಿ ಭಾಷೆ, ಕಾಲ ಮತ್ತು ಆನ್ವಯಿಕ ರೂಪಾಂತರಗಳೂ (adaptation) ಬಹುರೂಪವನ್ನೇ ಪಡೆದಿವೆ. ಆ ಪ್ರಯೋಗಗಳಲ್ಲಿ ಕುವೆಂಪು, ಮಾಸ್ತಿಯಂತ ದೊಡ್ಡ ಹೆಸರುಗಳೂ ಹಿಂದುಳಿದಿಲ್ಲ. ಆದರೆ ಅವಕ್ಕೆ ಪ್ರಯೋಗದ ಯಶಸ್ಸು ದಕ್ಕಿದ್ದು ಕಡಿಮೆ. ಇಲ್ಲಿ ಪ್ರಾಸಂಗಿಕವಾಗಿ (ನಮ್ಮ ಮಗ) ಅಭಯಸಿಂಹನ, ರಾಷ್ಟ್ರಪ್ರಶಸ್ತಿ ಪುರಸ್ಕೃತ ತುಳು ಸಿನಿಮಾ – ಪಡ್ಡಾಯಿಯ ಉಲ್ಲೇಖ ಬಂದದ್ದು, ಸಭೆಯಲ್ಲೇ ಇದ್ದ ಅವನಿಗೂ ನಮಗೂ ಕೋಡು ಮೂಡಿಸಿತ್ತು!! (ಶಿವಪ್ರಕಾಶರಿಗೆ ಪಡ್ಡಾಯಿ ತಿಳಿದಿರಲಿಲ್ಲ)
ನಾಲ್ಕನೆಯ ಸಂಜೆಯ ನಾಟಕ – ಜತೆಗಿರುವನು ಚಂದಿರ. ಇದು ಮೂಲದಲ್ಲಿ ರಶ್ಯನ್ ಕತೆಗಳನ್ನಾಧರಿಸಿ, ಇಂಗ್ಲಿಷಿನಲ್ಲಿ ನಾಟಕವಾಗಿಯೂ ಮುಂದೆ ಸಂಗೀತಮಯ ಸಿನಿಮಾವಾಗಿಯೂ ರೂಪಾಂತರಗೊಂಡು ವಿಶ್ವಖ್ಯಾತಿಯನ್ನೇ ಗಳಿಸಿದ Fiddler on the roof. ಸಾಕಷ್ಟು ಹಿಂದೆಯೇ ಜಯಂತ ಕಾಯ್ಕಿಣಿ ಸಿನಿಮಾದ ಪಟ ಕತೆಯನ್ನು, ಭಾರತದ ದೇಶವಿಭಜನೆಯ ಸನ್ನಿವೇಶಕ್ಕೆ ಅಳವಡಿಸಿ, ಕನ್ನಡಕ್ಕೆ ತಂದಿದ್ದರು. ಮತ್ತು ಆ ಕಾಲದಲ್ಲೇ ಅದು ಭಾಸ್ಕರ ಚಂದಾವರ್ಕರ್ ನಿರ್ದೇಶನದ ನೀನಾಸಂ ತಿರುಗಾಟದ ಒಂದು ಪ್ರಯೋಗವಾಗಿ ಬಹಳ ಯಶಸ್ಸನ್ನೇ ಕಂಡಿತ್ತು. ಮುಂದೂಂದು ಕಾಲದಲ್ಲಿ ಅದನ್ನು ತನ್ನದೇ ಬಳಗ ಮತ್ತು ನಿರ್ದೇಶನದ ಭಾಗವಾಗಿ ಪ್ರಯೋಗಿಸಿದವರು ಹುಲಗಪ್ಪ ಕಟ್ಟೀಮನಿ. ಅವರು ಈಚೆಗೆ ಮತ್ತದನ್ನೇ ತನ್ನ ಹೊಸ ತಂಡ – ಸಂಕಲ್ಪ, ಮೈಸೂರಿನ ನಿರ್ಮಾಣವಾಗಿ ಎತ್ತಿಕೊಂಡು ಇನ್ನೊಂದೇ ಬಹು ಜನಪ್ರೀತಿಯ ಕೊಯ್ಲು ನಡೆಸಿದ್ದಾರೆ. ಹಾಗೇ ಮೂರೂ ಸಂಜೆಯ ನಾಟಕಗಳಿಗೆ ಶಿವರಾಮ ರಂಗ ಮಂದಿರ ಲೆಕ್ಕದಿಂದಲೂ ಹೆಚ್ಚಿಗೇ ಪ್ರೇಕ್ಷಕರನ್ನು ಕಂಡಿತ್ತು. ‘ಜತೆಗಿರುವನು…’ ಸಂಜೆಯಂತೂ ಭವನ ಅಕ್ಷರಶ: ಸಾಸಿವೆ ಉದುರಿಸಿದರೂ ನೆಲ ಮುಟ್ಟದಂತೆ ತುಂಬಿ ಪ್ರೇಕ್ಷಕರನ್ನು ತಣಿಸಿತ್ತು. ಆದರೂ ನೀನಾಸಂ ಶಿಬಿರದಲ್ಲಿ ಹರಿತಗೊಂಡ ಮನಸ್ಸುಗಳು ಮರುಮುಂಜಾನೆಯ ಪ್ರತಿಕ್ರಿಯಾ ಅವಧಿಯಲ್ಲಿ…
*ವಿವಿಧ ಸನ್ನಿವೇಶಗಳಿಗೆ ಅಳವಡಿಸಿದ ಹಳೇ ಹಿಂದೀ ಹಾಡುಗಳೆನೋ ಮಧುರವೇ ಇದ್ದವು. ಆದರೆ ಬದಲಿಗೆ ಸ್ವತಃ ಕವಿಯೂ ಆದ ಜಯಂತರಿಂದಲೇ ಕನ್ನಡ ಹಾಡುಗಳನ್ನು ಬರೆಸಿ ಅಳವಡಿಸಿದ್ದರೆ ಹೆಚ್ಚು ಚೆನ್ನಾಗಿರುತ್ತಿತ್ತು.
*ಸ್ವತಃ ಖ್ಯಾತ ನಿರ್ದೇಶಕರೇ ಆದ ಇಕ್ಬಾಲ್, ಮೊದಲು ಕುಶಾಲಿಗೆನ್ನುವಂತೆ ಪಾತ್ರಧಾರಿಗಳೂ ಸೇರಿದಂತೆ ತಂಡದಲ್ಲಿ ಒಬ್ಬನೂ ಮುಸ್ಲಿಂ ಇಲ್ಲದಿರುವುದನ್ನು ಗುರುತಿಸಿದರು. ಅನಂತರ ನಮಾಜ್ ಮತ್ತು ಕೊನೆಯಲ್ಲಿ ದೀಪ ಹಚ್ಚುವ ಕ್ರಮಗಳೆರಡೂ ಇಸ್ಲಾಂನದ್ದಲ್ಲ ಎಂಬ ಸಣ್ಣ ತಿದ್ದುಪಡಿಯನ್ನೂ ಸೂಚಿಸಿದರು. ಅವರೇ ಹೇಳಿದ ಮಾತು “ನಾಟಕ ನೇರ ಮೆದುಳಿಗೇ ಕೈ ಹಾಕಬಾರದು…” ಎನ್ನುವುದನ್ನು ಇನ್ಯಾರೋ…
*”ಮೆಲೋಡ್ರಾಮಾ ಹೆಚ್ಚಾಯ್ತು” ಎಂದದ್ದು ನನಗೂ ಸರಿ ಕಾಣಿಸಿತು.
(ಗಮನಿಸಿ: ಕೊನೆಯ ಸಂಜೆಯ ಪ್ರಯೋಗ – ನೃತ್ಯಪ್ರಯೋಗ ರಸರಂಗದ ಕುರಿತು ಈಗಾಗಲೇ ಹೇಳಿದ್ದಾಗಿದೆ. ಮತ್ತು ಅದು ಪೂರ್ವಭಾವಿಯಾಗಿ ಪ್ರಾತ್ಯಕ್ಷಿಕೆಯ ಹಂತದಲ್ಲೇ ಚರ್ಚೆಗೊಳಪಟ್ಟದ್ದರಿಂದ ಪ್ರತ್ಯೇಕ ಪ್ರತಿಕ್ರಿಯೆಯ ಉಪಚಾರ ಸಲ್ಲಲಿಲ್ಲ)
೮. ಆನೆ ಡಾಕ್ಟರ್ ಮತ್ತು ಇತರ ಕಥೆಗಳು
ಶಿಬಿರದ ನೋಂದಣಿ ಅವಧಿಯಲ್ಲಿ ಪ್ರತಿ ವರ್ಷದಂತೇ ನಾಲ್ಕು ಮಾಹಿತಿಪೂರ್ಣ ಮತ್ತು ಸುಂದರ ಕರ ಪತ್ರ, ಎಂಟು ಹತ್ತು ಪುಟಗಳಷ್ಟು ಹಲವು ಮೂಲಗಳಿಂದ ಆಯ್ದ ಕವನಗಳ ಯಥಾಪ್ರತಿ, ಟಿಪ್ಪಣಿ ಪುಸ್ತಕ, ಪೆನ್ನುಗಳ ಜತೆಗೆ ಕೆಲವು ಕವನ ಮತ್ತು ಕಥಾ ಸಂಕಲನಗಳ ಪುಸ್ತಕಗಳನ್ನೂ ಸುಂದರ ನಾರಿನ ಚೀಲದಲ್ಲಿ ತುಂಬಿ ಕೊಡುತ್ತಿದ್ದರು. ನನ್ನ ಸಿಮಿತ ಓದಿನ ಅರಿವಿನಲ್ಲಿ ಎಲ್ಲ ಪುಸ್ತಕಗಳನ್ನೂ ನಿರುಪಯುಕ್ತ ಸಂಗ್ರಹ ಹೆಚ್ಚದಂತೆ ಚೀಲ, ಟಿಪ್ಪಣಿ ಪುಸ್ತಕ ಪೆನ್ನುಗಳನ್ನೂ ಬಿಟ್ಟಿದ್ದೆ. ಆದರೆ ಮೊದಲ ದಿನಗಳಲ್ಲೇ ಟಿ.ಪಿ. ಅಶೋಕರು, ಪರೀಕ್ಷೆಗೆ ಮುನ್ನ ಇಂಪಾರ್ಟೆಂಟ್ ಚಾಪ್ಟರ್ ಹೇಳುವ ಮೇಷ್ಟ್ರಂತೇ “ನಿಮಗೆ ಕೊಟ್ಟ ಆನೆ ಡಾಕ್ಟರ್ ಕತೆಯನ್ನು ಕೂಡಲೇ ಓದಿಕೊಳ್ಳಿ. ಶಿಬಿರದ ಕೊನೆಯ ದಿನ ಉಪಯೋಗಕ್ಕೆ ಬರುತ್ತದೆ…” ಎಂದಿದ್ದರು. ಹಾಗಾಗಿ ನಾನು ಆ ಒಂದು ಪುಸ್ತಕವನ್ನು ಮತ್ತೆ ಕೇಳಿ ಪಡೆದಿದ್ದೆ. ಇದು ಮೂಲದಲ್ಲಿ ಜೆಯ ಮೋಹನ್ ಅವರ ಹನ್ನೆರಡು ತಮಿಳು ಕತೆಗಳ ಸಂಕಲನ. ಅದರ ಇಂಗ್ಲಿಷ್ ಅನುವಾದ (ಅನು: ಪ್ರಿಯಂವದಾ) – Stories of the True. ಹೆಸರೇ ಹೇಳುವಂತೆ ಇದು ಹಲವು ನಿಜಜೀವರ ಕಥಾನಿರೂಪಣೆ. ಇಂಗ್ಲಿಷ್ ಸಂಕನದಿಂದ ಎಸ್. ನಾರಾಯಣನ್ ಐದನ್ನಷ್ಟೇ ಆಯ್ದು ಕನ್ನಡಿಸಿದ್ದು ಆನೆ ಡಾಕ್ಟರ್… ಸಂಕಲನದಲ್ಲಿ ಹೆಚ್ಚುವರಿಯಾಗಿ ಪ್ರಿಯಂವದಾ ಮತ್ತು ಸುಚಿತ್ರಾ ರಾಮಚಂದ್ರನ್ ಮಾಡಿದ ಜೆಯ ಮೋಹನ್ ಸಂದರ್ಶನದ ಅನುವಾದವೂ ಇದೆ. (ಪ್ರಕಾಶಕರು – ಬಹುವಚನ, ಬೆಲೆ ರೂ ೧೮೦) ಸಂಕಲನದ ಮೊದಲ ಕತೆಯೇ ಆನೆ ಡಾಕ್ಟರ್. ಕತೆಯನ್ನು ತೆರೆದದ್ದಷ್ಟೇ ಗೊತ್ತು…
ಕತೆಯ ನಿರೂಪಕ ಓರ್ವ ಸರಕಾರೀ ಅರಣ್ಯಾಧಿಕಾರಿ, ನಾಯಕ ಓರ್ವ ಪಶುವೈದ್ಯ, ಹೆಸರೇ ಹೇಳುವಂತೆ ಆನೆ ಡಾಕ್ಟರ್ ( ನಿಜ ವ್ಯಕ್ತಿ ಪಶುವೈದ್ಯ ವಿ. ಕೃಷ್ಣಮೂರ್ತಿ). ಹೊಟ್ಟೇಪಾಡಿನ ನೌಕರಿಗೆ ಬಂದ ಅಧಿಕಾರಿಗೂ ವೃತ್ತಿಗೇ ತೆತ್ತುಕೊಂಡ ವೈದ್ಯನಿಗೂ ಇರುವ ಮನೋಸ್ತರಗಳ ಸುಂದರ ಚಿತ್ರಣವೇ ಕತೆಯ ವಸ್ತು. ಇದು ನನ್ನ ವನ್ಯಾಸಕ್ತಿಗೂ ಇಲಾಖಾ ನೌಕರರ ಕುರಿತ ತಿರಸ್ಕಾರಕ್ಕೂ ಒಳ್ಳೆಯ ಉಣಿಸಾಗಿ, ನನ್ನನ್ನು ಪೂರ್ಣ ಆವರಿಸಿಕೊಂಡಿತು. ನಿಜ ಜೀವನದ ಆನೆ ಡಾಕ್ಟರ್, ನಾನು ಕೇಳದ, ಪಟದಲ್ಲೂ ಕಾಣದ ವ್ಯಕ್ತಿ. ಆದರೆ ಅವರು ಕತೆಯಲ್ಲಿ ಬೆಳೆಯುತ್ತಿದ್ದಂತೆ, ನನ್ನ ಮನೋಭೂಮಿಕೆಯಲ್ಲಿ ಬಹಳ ವಿವರಗಳಲ್ಲೇ ಮೂರ್ತಗೊಂಡ ಏಕೈಕ ರೂಪ, ದಕ್ಷಿಣ ಏಶ್ಯಾದ ಆನೆ ಪಂಡಿತ ಎಂದೇ ಖ್ಯಾತಿ ಗಳಿಸಿದ್ದ ಕೆ,ಎಂ ಚಿಣ್ಣಪ್ಪರದು (೧೯೪೦ -೨೦೨೪). ಈ ಆನೆ ಡಾಕ್ಟರ್ ಮತ್ತು ಆನೆ ಪಂಡಿತ ಸಾಮ್ಯವನ್ನು ಸ್ಪಷ್ಟಪಡಿಸಲೆಂದೇ ಮೂರೇ ವಾಕ್ಯಖಂಡದಲ್ಲಿ ಚಿಣ್ಣಪ್ಪರನ್ನು ಪರಿಚಯಿಸಿ ಮುಂದುವರಿಯುತ್ತೇನೆ.
ಎಳೆ ಹರಯದಲ್ಲಿ, ಸಣ್ಣ ಶೈಕ್ಷಣಿಕ ವಿದ್ಯಾರ್ಹತೆಯೊಡನೆ ಅರಣ್ಯ ಇಲಾಖೆಗೆ ಸೇರಿಕೊಂಡವರು ಕೆ.ಎಂ. ಚಿಣ್ಣಪ್ಪ. ದೀರ್ಘದೇಹಿಯಾದ ಇವರು, ಯೋಗ್ಯ ಗುರುಬಲದಲ್ಲಿ, ಅಪಾರ ಧೈರ್ಯ ಮತ್ತು ನಿಸ್ವಾರ್ಥ ವನ್ಯಪ್ರೀತಿಯೊಡನೆ ಪರಿಚಯಕ್ಕೆ ಬಂದವರಲ್ಲೆಲ್ಲ ಬಹು ಎತ್ತರಕ್ಕೇ ಬೆಳೆದವರು. ಚಿಣ್ಣಪ್ಪ ಸಂತೆ ಮಾಳದಂತಿದ್ದ ನಾಗರಹೊಳೆಯನ್ನು ಅಂತಾರಾಷ್ಟ್ರೀಯ ಮಟ್ಟದ ವನಧಾಮವನ್ನಾಗಿ ರೂಪಿಸಿದರು. ಅವರ ಆತ್ಮ ಕತೆ – ಕಾಡಿನೊಳಗೊಂದು ಜೀವ – ನಿರೂಪಣೆ ಟಿ.ಎಸ್ ಗೋಪಾಲ್, (ನವಕರ್ನಾಟಕ ಪ್ರಕಾಶನ) ರೋಚಕ ಕಾದಂಬರಿಯಂತೇ ಓದಿಸಿಕೊಳ್ಳುತ್ತದೆ. ಚಿಣ್ಣಪ್ಪರನ್ನು ನಡೆದಾಡುವ ವನ್ಯಕೋಶ ಎಂದೇ ಗುರುತಿಸುವುದಿತ್ತು. ಅವರದು ಪುಸ್ತಕ ಪಾಂಡಿತ್ಯವಲ್ಲ, ಕ್ಷೇತ್ರ ಕಾರ್ಯದಿಂದ ಮೂರ್ತಗೊಂಡ ಅನುಭವ ದೀಪಿಕೆ. ವನ್ಯದ ಕುರಿತಂತೆ ಅವರ ಬುದ್ಧಿ-ಭಾವಗಳ ಸಮನ್ವಯಕ್ಕೆ ಎರಡು ಉದಾಹರಣೆಗಳು…
ಚಿಣ್ಣಪ್ಪರ ವೃತ್ತಿ ಜೀವನದ ಶಿಸ್ತಿಗೆ ಬೇಸತ್ತ ಕಳ್ಳಬೇಟೆಯವರು, ದುಷ್ಟ ರಾಜಕಾರಣದಲ್ಲಿ ಇವರ ವಿರುದ್ಧ ಭಾರೀ ದಾಂಧಲೆಯನ್ನೇ ಎಬ್ಬಿಸಿದ್ದರು. ಚಿಣ್ಣಪ್ಪರ ಖಾಸಗಿ ಮನೆ ಮತ್ತು ಪುಟ್ಟ ತೋಟಗಳನ್ನು ಲೂಟಿ ಮಾಡಿ, ಕಿಚ್ಚಿಕ್ಕಿದರು. ಮತ್ತೆ ಅಲ್ಲಿ ಸಿಗದ ಚಿಣ್ಣಪ್ಪರನ್ನು ಹುಡುಕಿಕೊಂಡು ವನಧಾಮಕ್ಕೇ ಧಾಳಿಯಿಟ್ಟರು. ಆಗ ಚಿಣ್ಣಪ್ಪ ಯಾವುದೇ ನಾಗರಿಕ ಸಂಘಟನೆಗಳ (ಪೋಲಿಸ್, ನ್ಯಾಯಾಲಯ…) ಮೊರೆಹೊಗದೇ ಏಕಾಂಗಿಯಾಗಿ ಕಾಡನ್ನೇ ನೆಚ್ಚಿದ್ದರು. ರಾತೋರಾತ್ರಿ ಸ್ಪಷ್ಟ ಬೆಳಕಿನ ಆಸರೆ ಮತ್ತು ನಾಗರಿಕ ಭ್ರಮೆಗಳು ಹೇಳುವ ಆತ್ಮ ರಕ್ಷಣಾ ಆಯುಧಗಳೂ ಇಲ್ಲದೇ ಕಾಡುಹೊಕ್ಕಿದ್ದರು. ಪರಿಸ್ಥಿತಿ ತಿಳಿಯಾದಾಗ ಕೂದಲೂ ಕೊಂಕದೆ ವಾಪಾಸಾದರು.
ಚಿಣ್ಣಪ್ಪರ ವನ್ಯ ಸಂರಕ್ಷಣಾ ಸಾಧನೆಯನ್ನು ಅಪಾರ ಗೌರವಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿ, ಅವರ ಆತ್ಮಕತೆಯನ್ನು ತಮ್ಮ ಪುಸ್ತಕ ಪ್ರಕಾಶನದ ಮೂಲಕವೇ ಪ್ರಕಟಿಸಿದ್ದರು. ಆಗ ಪುಸ್ತಕಕ್ಕೆ ಸುಂದರ ಮುಖಪುಟ ರೂಪಿಸುವ ಉತ್ಸಾಹದಲ್ಲಿ, ತೇಜಸ್ವಿ ಅರಿವು ಮಾಸಿ, ಬಳಸಿದ್ದು ಆಫ್ರಿಕನ್ ಆನೆ. ಸಹಜವಾಗಿ ಪುಸ್ತಕ ಅನಾವರಣಗೊಂಡ ಕಾಲಕ್ಕೆ, ಚಿಣ್ಣಪ್ಪರ ಕೋಪಾಟೋಪವನ್ನು ತಣಿಸಲು ತೇಜಸ್ವಿಗೆ ಸಾಕುಬೇಕಾಗಿತ್ತು! ಚಿಣ್ಣಪ್ಪರ ಆನೆ ಗೌರವ ಅಸಾಧಾರಣವಾದದ್ದು. ಆದ್ದರಿಂದಲೇ ಅವರು ಬುದ್ಧಿ ಬಲಿತ ಮೇಲೆ ಎಂದೂ ಆನೆಯನ್ನು ಸವಾರಿಗೆ ಬಳಸಿದ್ದೇ ಇಲ್ಲ. ಅದಕ್ಕೊಂದು ದೊಡ್ಡ ಉದಾಹರಣೆ ಚಿಣ್ಣಪ್ಪರ ನಾಮ್ದಫಾ ಹುಲಿ ಸಂರಕ್ಷಣಾ ವನದ ಭೇಟಿ. ಆ ಸಾಹಸಯಾನಕ್ಕೆ ಅವರಿಗೆ ಮೂರ್ನಾಲ್ಕು ತರುಣ ಗೆಳೆಯರೂ ಜತೆಗೊಟ್ಟಿದ್ದರು. ಭಾರತದ ಪೂರ್ವೋತ್ತರ ಮೂಲೆಯ ಅರುಣಾಚಲ ಪ್ರದೇಶದ ನಾಮ್ದಫಾಕ್ಕೆ ಇರುವುದು ಒಂದೇ ದಾರಿ. ಅದು ದಟ್ಟ ಅರಣ್ಯ ಆವರಿಸಿದ. ಭಾರೀ ನದಿ ಪಾತ್ರೆ (ಬ್ರಹ್ಮಪುತ್ರದ ಒಂದು ಉಪನದಿ). ಅದರಲ್ಲೂ ವಾಹನ ಯೋಗ್ಯ ರಸ್ತೆ ಬಿಟ್ಟು, ಕನಿಷ್ಠ ಎರಡೋ ಮೂರೋ ದಿನ ಕಠಿಣ ನಡಿಗೆಯಲ್ಲಷ್ಟೇ ಹೋಗಬಹುದಾದ ಸವಕಲು ಜಾಡು. ಚಿಣ್ಣಪ್ಪರ ಅರವತ್ತು ಮೀರಿದ ಪ್ರಾಯ ಮತ್ತು ವಯೋ ಸಹಜ ಸೊಂಟ ನೋವು ಅರಿತಿದ್ದ ಯುವ ಮಿತ್ರರು ಆನೆ ಸವಾರಿಗೆ ಒತ್ತಾಯಿಸಿದ್ದರು. ಚಿಣ್ಣಪ್ಪ ಮಾತ್ರ ಆನೆ ಸವಾರಿಯನ್ನು ಸ್ಪಷ್ಟ ಮಾತುಗಳಲ್ಲಿ ತಳ್ಳಿ ಹಾಕಿದ್ದರು. ತುಸು ನಿಧಾನವಾದರೂ ಅಪಾರ ನೋವು ನುಂಗಿದರೂ ಆನೆಯ ಗೌರವ ಕಾಪಾಡಿಯೇ ನಾಮ್ದಫಾ ಸಾಧಿಸಿದ್ದರು! ಇನ್ನು ಚರ್ಚೆಗೆ ಎತ್ತಿಕೊಂಡ ಕಥಾ ಸಂಕಲನದ ಕುರಿತು…
ಆನೆ ಡಾಕ್ಟರ್ ಕತೆ ಅಧಿಕಾರ ಮತ್ತು ಯೋಗ್ಯತೆಯ ಅಂತರವನ್ನು ತುಂಬ ನವಿರಾಗಿ ಚಿತ್ರಿಸಿದೆ. ಕಚೇರಿಯ ಕಡತ ವಿಲೇವಾರಿಯೇ ಅರಣ್ಯಾಧಿಕಾರವಲ್ಲ ಎನ್ನುವುದನ್ನು ನಿರೂಪಕನ ಅರಣ್ಯ ಸುತ್ತಾಟದ ಒಲವು ಪರೋಕ್ಷವಾಗಿ ಹೇಳುತ್ತದೆ. ಆತ ಪಶುವೈದ್ಯನ ಕಲಾಪಗಳನ್ನು ನೋಡನೋಡುತ್ತಾ ಪರಿವರ್ತನೆಗೊಳ್ಳುವುದು ಸ್ಪಷ್ಟಪಡಿಸುತ್ತದೆ. ಮುಂದುವರಿದು ಆತ ತನ್ನ ಮಾನಕದಲ್ಲಿ ಅವರಿಗೆ ಅತೀವ ಗೌರವ, ಅಂದರೆ ಯಾವುದೋ ರಾಷ್ಟ್ರ ಪ್ರಶಸ್ತಿ, ಸಲ್ಲಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿರುತ್ತಾನೆ. ಆದರೆ ಆ ಪಶುವೈದ್ಯರಲ್ಲಿ, ಕೊಳೆತ ಆನೆ ಬೆದಕುವ, ಕುಂಟುವ ಮರಿಯಾನೆಗೆ ಪರಿಹಾರ ದಕ್ಕಿಸುವ, ‘ಕ್ರೂರ’ ಸೀಳುನಾಯಿಯನ್ನು ಪುರಸ್ಕರಿಸುವ, ಅನಾರೋಗ್ಯದ ನೆಪ ಮುಂದೆ ಮಾಡುವ ಹಸಿವು ಪೀಡಿತರನ್ನು ಸುಧಾರಿಸುವ, ಮುಗ್ಧ ಮಕ್ಕಳ ಬಾಲ್ಯಕ್ಕೆ ಸಣ್ಣ ಸಂತೋಷ ಕೊಡುವ…. ಒಟ್ಟಾರೆ ಮನುಷ್ಯ ನಿರ್ಮಿತ ಕಂಟಕಗಳನ್ನು ನಿವಾರಿಸಿ, ಪ್ರಾಕೃತಿಕ ಸತ್ಯವನ್ನು ದೃಢಪಡಿಸುವ ತುಡಿತ ಒಂದೇ ಕಾಣುತ್ತದೆ. ಇದು ಸಾಮಾಜಿಕವಾಗಿ ಅದೆಷ್ಟೇ ಉನ್ನತವೆಂದು ಕಾಣುವ ಪ್ರಶಸ್ತಿಗಳಿಗೂ ನಿಲುಕದ ಸ್ತರ. ಸಹಜವಾಗಿ ಅರಣ್ಯಾಧಿಕಾರಿಯ ಪ್ರಯತ್ನ ಮತ್ತು ಸೋಲಿನ ಅರಿವಾದಾಗ ಆನೆ ಡಾಕ್ಟರ್ ಒಮ್ಮೆಗೆ ಕೋಪಗೊಳ್ಳುತ್ತಾರೆ. ಆದರೆ ಬೇಗನೇ ಮೂಗುಬಿಡಲಾಗದ ದುರ್ನಾತವೋ ಮೈಮೇಲೇರಿ ಬರುವ ಮ್ಯಾಗಟ್ಟುಗಳೋ ಸ್ವಂತ ಜೀವವನ್ನೇ ಸಣ್ಣದಾಗಿಸುವ ಪರಿಸ್ಥಿತಿಗಳನ್ನೋ ನಿರುಮ್ಮಳವಾಗಿ ಎದುರಿಸಿದ ಮನೋಸ್ಥಿತಿಗೆ ಬಂದಾಗ ಓದುಗರ ಕಣ್ಣು ಹನಿಯುತ್ತದೆ, ಹೃದಯ ತುಂಬುತ್ತದೆ.
ನೀನಾಸಂ ಕಲೆಗಳೊಡನೆ ಮಾತುಕತೆ -೨೪ ಶಿಬಿರದ ಕೊನೆಯ ಕಲಾಪವಾಗಿ ಆನೆ ಡಾಕ್ಟರ್ ಕಥಾವಾಚನವಿತ್ತು. ಇದಕ್ಕೆ ಟಿಪಿ ಅಶೋಕರು ವ್ಯಾಪಕವಾದ ಮತ್ತು ತುಂಬ ಅರ್ಥಪೂರ್ಣವಾದ ಪ್ರವೇಶಿಕೆಯನ್ನೇ ಒದಗಿಸಿದರು. ಹದಿಹರಯದಲ್ಲೇ ಆಪ್ತ ಮಿತ್ರನ ಸಾವು, ಹಿಂಬಾಲಿಸಿದಂತೆ ಸ್ವಂತ ತಂದೆತಾಯಿಯರ ಆತ್ಮಹತ್ಯೆ, ಜೆಯ ಮೋಹನರನ್ನು (ಆನೇ ಡಾಕ್ಟರ್ ಲೇಖಕ) ಹೆಚ್ಚು ಕಡಿಮೆ ಆತ್ಮ ಹತ್ಯೆಯ ಅಂಚಿಗೇ ನೂಕಿತ್ತು. ಆಗ ಸಿಕ್ಕ ಯಃಕಶ್ಚಿತ್ ಹುಳವೊಂದರ ಜೀವನಾಸಕ್ತಿಯ ಅರಿವು, ಇವರಲ್ಲಿ ‘ಈಸಬೇಕು, ಇದ್ದು ಜೈಸಬೇಕು’ ಎಂಬ ಛಲ ಮೂಡಿಸಿತ್ತು. ಅದಕ್ಕೆ ಕಲಿಕೆ ಮತ್ತು ಲೋಕಾನುಭವಗಳ ವಿಸ್ತೃತ ನೆಲ, ಪೋಷಕಾಂಶಗಳನ್ನು ಕೊಟ್ಟು ಜೆಯ ಮೋಹನ್ ರಚಿಸಿದ ಕೃತಿಗಳು ನಂಬಿದರೆ ನಂಬಿ, ಮುನ್ನೂರನ್ನೂ ಮೀರಿವೆ. ಹಾಗೆ ಮೂಡಿದ ಕತೆ, ಕಾದಂಬರಿ, ಅನುವಾದ, ವಿಮರ್ಶೆಗಳೇ ಮೊದಲಾದ ಪುಸ್ತಕಗಳನ್ನು ಮೋಹನರಷ್ಟು ವೇಗದಲ್ಲಿ ತಂದವರೂ ಇನ್ನೊಬ್ಬರಿಲ್ಲ. ತಮಿಳುನಾಡಿನ ಮಲಯಾಳೀ ಜೆಯ ಮೋಹನ್, ಮುಖ್ಯವಾಗಿ ತಮಿಳಿನಲ್ಲೂ ಮತ್ತೆ ಮಲಯಾಳದಲ್ಲೂ ಕೃತಿರಚನೆ ಮಾಡಿದ್ದಾರೆ. ವಿಕಿಪೀಡಿಯಾ ಅವರ ಕೃತಿಗಳನ್ನು ಸಂಕ್ಷೇಪಿಸುತ್ತಾ ದಾಖಲಿಸುವ ಲೆಕ್ಕವನ್ನೇ ನೋಡಿ… ಒಂಬತ್ತು ಕಾದಂಬರಿಗಳು, ಹತ್ತು ಸಂಪುಟಗಳಲ್ಲಿ ಸಣ್ಣ ಕತೆ ಮತ್ತು ನಾಟಕಗಳು, ಹದಿಮೂರು ವಿಮರ್ಶಾ ಕೃತಿಗಳು, ವಿವಿಧ ಸಾಹಿತಿಗಳ ಜೀವನ ಚರಿತ್ರೆಗಳದೇ ಐದು ಸಂಪುಟಗಳು, ಭಾರತೀಯ ಮತ್ತು ಪಾಶ್ಚಾತ್ಯ ಸಾಹಿತ್ಯ ಪರಿಚಯಗಳ ಆರು ಸಂಪುಟಗಳು, ಹಿಂದೂ ಮತ್ತು ಕ್ರಿಶ್ಚಿಯನ್ ತತ್ವಶಾಸ್ತ್ರಗಳದ್ದೇ ಮೂರು ಸಂಪುಟಗಳಲ್ಲದೆ ಅನ್ಯ ಸಂಪಾದಕತ್ವದ ಸಂಕಲನಗಳಿಗೆ ಕೊಟ್ಟ ಅಸಂಖ್ಯ ಬರಹ, ಅನುವಾದ ಮತ್ತು ಸಿನಿಮಾ ಸಾಹಿತ್ಯಗಳು. ಇವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಮಹಾಕಾದಂಬರಿ (೨೬ ಸಂಪುಟಗಳು) ವಿಷ್ಣುಪುರಂ. ಇವರು ಹತ್ತು ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ ‘ವೆಣ್ ಮುರಸು’ (ಬಿಳಿಯ ಡೋಲು) ಎಂಬ ಇನ್ನೊಂದು ಮಹಾಕಾದಂಬರಿ, ಮೂವತ್ತು ಸಂಪುಟಗಳ, ಅಂದರೆ ಸುಮಾರು ೨೫,೦೦೦ ಪುಟಗಳಲ್ಲಿ ಮಹಾಭಾರತವನ್ನೇ ವಸ್ತುವಾಗಿ ಬಳಸಿಕೊಂಡಿದೆ. ಇಷ್ಟಾಗಿಯೂ…
ಜೆಯ ಮೋಹನರ ಲೋಕಧೋರಣೆ ತೀರಾ ಉದಾರವಾದದ್ದು. ಅದನ್ನು ಆನೆ ಡಾಕ್ಟರ್ ಮತ್ತು ಇತರ ಕತೆಗಳು ಸಂಕಲನದ ಕೊನೆಯಲ್ಲಿ ಬರುವ ಸಂದರ್ಶನ ಸ್ಪಷ್ಟವಾಗಿಯೇ ಹೇಳುತ್ತದೆ. ಪ್ರಸ್ತುತ ಸಂಕಲನದ ಇತರ ನಾಲ್ಕು ಕತೆಗಳೂ ಅದಕ್ಕೆ ನಿದರ್ಶನದಂತೇ ನಿಲ್ಲುತ್ತವೆ. ಎರಡನೇ ಕತೆ – ಊಟದ ಲೆಕ್ಕ, ಜೋಪಡಿ ಹೋಟೆಲಿಗನೊಬ್ಬನ ಮಹಾ ಔದಾರ್ಯವನ್ನು ಪರಿಚಯಿಸುತ್ತದೆ. ನನಗೆ ಇದು ಮಂಗಳೂರಿನ ಕೀರ್ತಿಶೇಷ ಹೋಟೆಲಿಗ ‘ಕಂಕನಾಡಿ ರಾಮಪ್ಪ’ರನ್ನು ನೆನಪಿಸಿತು. ಮೂರನೇ ಕತೆ – ಒಂದೇ ಜಗತ್ತು, ಗ್ಯಾರಿ ಡೇವಿಸ್ ಎಂಬ ವಿಶ್ವಪ್ರಜೆ ಹಾಗೂ ನಾರಾಯಣಗುರು ಪಂಥದ ನಿತ್ಯಚೈತನ್ಯ ಎಂಬ ವಿಶಿಷ್ಟ ಅಧ್ಯಾತ್ಮಿಕ ಗುರುವನ್ನು ಪರಿಚಯಿಸುತ್ತದೆ. ನಾಲ್ಕನೆಯ ಕತೆ – ಧರ್ಮ, ಇದರಲ್ಲಿ ತೋರಿಕೆಗೆ ಲೇಖಕ – ಪ್ರಕಾಶಕನ ವಿಷಮ ಸಂಬಂಧ ಪರಿಹಾರಗೊಂಡ ಕಥನವಿದೆ. ಇದು ಪರೋಕ್ಷವಾಗಿ ಜೆಯ ಮೋಹನ ಸ್ವಂತ ಕೃತಿಗಳ ಕುರಿತು ಇಟ್ಟುಕೊಂಡಿರುವ ಉದಾರ ಭಾವಕ್ಕೂ ಹಿಡಿದ ಕನ್ನಡಿಯಂತಿದೆ. ಅವರು ತಮ್ಮ ಲೇಖನ ಶಕ್ತಿಯನ್ನು ವಾಣಿಜ್ಯ ವಹಿವಾಟಾಗಿ ಗಣಿಸಿಲ್ಲ. ಅವರ ಬಹುತೇಕ ಕೃತಿಗಳು ಓದುಗರಿಗೆ ಅಂತರ್ಜಾಲದಲ್ಲಿ ಉಚಿತವಾಗಿಯೇ ಲಭ್ಯವಂತೆ! ಕೊನೆಯ ಕತೆ – ತಾಯಿಯ ಪಾದ, ಕೌಟುಂಬಿಕ ಸಂಬಂಧಗಳ ಭಾವನಾಸಂಕೀರ್ಣತೆಯನ್ನು ವಿಸ್ತರಿಸಿದೆ. ಹೀಗೆ ಜೆಯ ಮೋಹನರ ಕಥಾ ಹಂದರದಲ್ಲಿ ಅವರ ಆತ್ಮಕತೆಯ ಸಾರವೇ ಫಲವಾಗಿ ಸವಿಯುವ ಅವಕಾಶವನ್ನು ಆನೆ ಡಾಕ್ಟರ್ ಮತ್ತಿತರ ಕತೆಗಳು ನಿಸ್ಸಂದೇಹವಾಗಿ ಕೊಡುತ್ತದೆ.
ನೀನಾಸಂ ಶಿಬಿರದಲ್ಲಿ ಆನೆ ಡಾಕ್ಟರ್ ಮತ್ತು ಇತರ ಕತೆಗಳ – ಕಥಾ ಪ್ರಸ್ತುತಿಯನ್ನು ಸೌಮ್ಯ ಭಾಗವತ್ ಮತ್ತು ಶ್ರೀಕಾಂತ್ ನಡೆಸಿದರು. ಕಥೆಯಲ್ಲೇ ಬರುವ ನಿರೂಪಣೆ, ಸಂವಾದಗಳನ್ನು ಸೂಕ್ತ ಸ್ವರಭಾರಗಳೊಡನೆ, ಸೀಮಿತ ಆಂಗಿಕ ಮತ್ತು ಮುಖಭಾವಗಳೊಡನೆ ಇಬ್ಬರೂ ಹಂಚಿಕೊಂಡು ತುಂಬ ಮನೋಜ್ಞವಾಗಿ ಪ್ರಸ್ತುತಪಡಿಸಿದರು.
೯. ಶಿಬಿರದ ಉಳಿಕೆ, ಸಮಾರೋಪ
ಕ್ಷಮಾಯಾಚನೆಯೊಡನೇ ಬರಕೊಳ್ಳುತ್ತಿದ್ದೇನೆ – ನಾನು (ಮುದ್ದಣನ) ಮನೋರಮೆ ಪಕ್ಷದವನು – ಪದ್ಯಂ ವಧ್ಯಂ. ಹಾಗಾಗಿ ಹಿಂದಿನ ಕಂತುಗಳ ಪ್ರಕಟಣೆಯ ಅವಸರದಲ್ಲಿ, ಹೇಳದುಳಿದ ಇನ್ನಿಬ್ಬರು ಕಾವ್ಯ ವಿಶ್ಲೇಷಣಕಾರರಲ್ಲಿ ಮೊದಲಿಗರು
೧. ಕಮಲಾಕರ ಕಡವೆ: ಇವರ ಅಸಂಖ್ಯ ಅನುವಾದಗಳನ್ನು ನಾನು ಫೇಸ್ ಬುಕ್ಕಿನಲ್ಲಿ ನೋಡುತ್ತ ಬಂದಿದ್ದೇನೆ. ಶೈಕ್ಷಣಿಕ ಆಕಸ್ಮಿಕದಲ್ಲಿ ನಾನು ಸ್ನಾತಕ (ಕನ್ನಡ ಕೂಡಾ) ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಇಂಗ್ಲಿಷ್ ಸಾಹಿತ್ಯದ್ದೇ ವಿದ್ಯಾರ್ಥಿ. ಈ ತಪ್ಪಿನಲ್ಲಿ ಹಲವು ಕವಿ, ಕಾವ್ಯಗಳ ಅವಸರದ ಓದು, ಅಪರೂಪಕ್ಕೆ ಇಣುಕು ನೋಟಗಳು ನನಗೆ ದಕ್ಕಿದ್ದಿದೆ. ಆ ಬಲದಲ್ಲಿ ನಾನು ಕಡವೆಯವರನ್ನು ವಿಶೇಷ ಅರ್ಥಮಾಡಿಕೊಳ್ಳದಿದ್ದರೂ ಧಾರಾಳ ಮೆಚ್ಚಿಕೊಂಡು ಬಂದಿದ್ದೇನೆ. ಶಿಬಿರದ ಅವರ ಕಲಾಪದಲ್ಲೂ ಅವರ ಓದು ಮತ್ತು ಜಿಜ್ಞಾಸೆಯನ್ನು ಗಮನವಿಟ್ಟೇ ಕೇಳಿದ್ದೇನೆ, ದಕ್ಕಿಸಿಕೊಂಡದ್ದು ಕಡಿಮೆ.
೨. ಪೂರ್ವ ನಿಗದಿಯಂತೇ ಅಲ್ಲಮನ ವಚನಗಳ ವಿಶ್ಲೇಷಣೆಯನ್ನು ಕೊಡಲು ಮನು ದೇವದೇವನ್ ನೀನಾಸಂ ವಠಾರಕ್ಕೂ ಬಂದಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಎಂಬಂತೆ ಅವರಿಗೇನೋ ಕೌಟುಂಬಿಕ ತುರ್ತು ಬಂದು, ಕಲಾಪಕ್ಕೆ ನಿಲ್ಲದೇ ವಾಪಾಸಾಗಿದ್ದರು. ಆ ಅವಧಿ ವ್ಯರ್ಥವಾಗದಂತೆ ತುಂಬಿಕೊಟ್ಟವರು (ನಿರ್ವಾಹಕ ಮಾಧವ ಚಿಪ್ಪಳಿ ಹೇಳಿದಂತೆ) “ನಿಲಯ ಕಲಾವಿದರು” – ಕೆವಿ ಅಕ್ಷರ. ಇವರು ಗೋಪಾಲಕೃಷ್ಣ ಅಡಿಗರ ಕಾವ್ಯಕಾರಣದ ಕುರಿತು ವಿಶ್ಲೇಷಣೆ ಹಾಗೂ ವಿಸ್ತೃತ ಚರ್ಚೆಯನ್ನೂ ನಡೆಸಿದರು.
ಸುನೀಲ್ ಶಾನಭಾಗರು (೧೯೫೬ – ), ಹುಟ್ಟಿನಲ್ಲಿ ಕರ್ನಾಟಕದ ಕೊಡಗಿನ ಕುವರ. ಆದರೆ ಕಲಿಕೆ ಮತ್ತು ನಾಲ್ಕೈದು ದಶಕಗಳ ವೃತ್ತಿ ರಂಗಕರ್ಮದಲ್ಲಿ ಮುಂಬೈಯವರು. ಪ್ರತಿಭೆ ಮತ್ತು ಪರಿಶ್ರಮದಿಂದ ಸ್ವಂತದ ‘ಅರ್ಪಣ’ ನಾಟಕ ಕೂಟವಲ್ಲದೆ, ದೇಶ ವಿದೇಶಗಳಲ್ಲೂ ಹಲವು ಭಾಷೆಗಳಲ್ಲೂ ರಂಗಪ್ರವೀಣರಾಗಿ ಮೆರೆದವರು. ನಿರ್ದೇಶನ, ನಾಟಕಗಳ ರಚನೆ, ಅನುವಾದ, ಚಿತ್ರ ನಿರ್ಮಾಣ ಮೊದಲಾದ ಚಟುವಟಿಕೆಗಳಿಂದ ಇವರು ಅಂತಾರಾಷ್ಟ್ರೀಯ ಮಟ್ಟದ ಯಶಸ್ಸನ್ನು ಕಂಡ ರಂಗಕರ್ಮಿ. ನೀನಾಸಂ ಕಲೆಗಳ ಸಂಗಡ ಮಾತುಕತೆ -೨೦೨೪ಕ್ಕೆ (ನಾಗೇಶ ಹೆಗಡೆಯವರೊಂದಿಗೆ ಕೈ ಸೇರಿಸಿ) ದೀಪೋಜ್ವಲನದಿಂದ ಔಪಚಾರಿಕ ಚಾಲನೆಕೊಟ್ಟವರು ಸುನೀಲ್ ಶಾನಭಾಗ್. ‘ಬಿ ಲವ್ಡ್’ ಪ್ರದರ್ಶನದ ಕೊನೆಯಲ್ಲಿ ತಾನು ಅದೇ ತಮಾಷಾ ಥಿಯೇಟರಿಗೇ ನಿರ್ದೇಶಿಸಿ ಕೊಟ್ಟ ಬೇರೊಂದು ನಾಟಕದ ಮಧುರ ಸ್ಮೃತಿ ಹಂಚಿಕೊಂಡಿದ್ದರು. ಈ ಸಾಲಿನ ತಿರುಗಾಟದ ನಾಟಕವಾಗಿ ಹೊರಟ ‘ಅಂಕದ ಪರದೆ’ಯ ಮೂಲ ಮರಾಠೀ ಲೇಖಕ (ಭಡ್ಕಮ್ಕರ್) ಮತ್ತು ನಿರ್ದೇಶಕರೊಡನೆ (ವನಾರಸೆ) ಚರ್ಚೆಗಳಿಗೂ ದೊಡ್ಡ ಸಂಪನ್ಮೂಲ ವ್ಯಕ್ತಿಯಾಗಿಯೇ ತೊಡಗಿಕೊಂಡಿದ್ದರು. ಒಟ್ಟಾರೆ ಐದೂ ದಿನಗಳ ಕಲಾಪಗಳಲ್ಲಿ, ತನ್ನ ಕನ್ನಡ ಭಾಷಾ ಮಿತಿಯನ್ನು ಸುಧಾರಿಸಿಕೊಂಡು, ಅಭಿವ್ಯಕ್ತಿಗಷ್ಟೇ ಇಂಗ್ಲಿಷ್ ಬಳಸಿಕೊಂಡು, ಸಾಕಷ್ಟು ಧನಾತ್ಮಕ ಹೊಳಹು, ಚರ್ಚೆಗಳನ್ನು ನಡೆಸಿದ್ದರು. ಹಾಗಾಗಿ ಅವರ ಶಿಬಿರ ಸಮಾರೋಪ ಮಾತುಗಳು. ಒಟ್ಟಾರೆ ಭಾರತೀಯ ರಂಗಭೂಮಿಯ ಇತಿ ಮಿತಿಗಳ ವ್ಯಾಪ್ತಿಯ ಸ್ಪಷ್ಟ ಪ್ರಬಂಧವೇ ಆಗಿತ್ತು. ಅದನ್ನು ಸಂಗ್ರಹಿಸಿ ಗ್ರಹಿಸುವ ಮತ್ತು ಇಲ್ಲಿ ಬಿತ್ತರಿಸುವ ಸಾಮರ್ಥ್ಯ ನನಗಿಲ್ಲ. ಆದರೆ ಈಗಾಗಲೇ ನೀನಾಸಂ-ಸಂಚಿ ಒಪ್ಪಂದದಂತೆ ಬಂದಿರುವ ಎಲ್ಲ ನೀನಾಸಂ ನಾಟಕ, ರಂಗಗೀತೆಗಳು, ತಾಳಮದ್ದಳೆ, ಜನಪದ ಪ್ರಸ್ತುತಿಗಳು, ವಿಶೇಷ ಭಾಷಣಗಳು, ಚರ್ಚೆಗಳಂತೇ ಸುನೀಲ ಶಾನಭಾಗರ ಮಾತೂ ಸದ್ಯೋ ಭವಿಷ್ಯತ್ತಿನಲ್ಲಿ ಯೂ ಟ್ಯೂಬಿನಲ್ಲಿ ಅವಶ್ಯ ಬರಲಿದೆ, ನೆನಪಿಟ್ಟು ಕೇಳುವ ಸಂತೋಷ ನಿಮ್ಮದಾಗಲಿ.
ಸುನೀಲ್ ಶಾನಭಾಗರ ಮಾತು ಮುಗಿಯುತ್ತಿದ್ದಂತೆ, ಹಿಂದಿನ ವರ್ಷಗಳಲ್ಲೆಲ್ಲ ಮಾಡಿದಂತೇ ಕೆವಿ ಅಕ್ಷರ ಮೈಕಿಗೆ ಬಂದು “ನಿಮಗೆಲ್ಲ ತಿಳಿದಂತೆ ನಾವು ಔಪಚಾರಿಕ ಉದ್ಘಾಟನೆ ಮಾಡದಂತೇ ಔಪಚಾರಿಕ ವಂದನಾರ್ಪಣೆ/ ಸಮಾರೋಪ ಕಲಾಪಗಳನ್ನೂ ಮಾಡುವುದಿಲ್ಲ. ಶಿಬಿರದ ಕುರಿತು ನಿಮ್ಮ ಯಾವುದೇ ಭಾವನೆಗಳು, ಅಂದರೆ, ನಾಟಕಗಳ ಪ್ರತಿಕ್ರಿಯೆಗಳ ಕಾಲದಲ್ಲಿ ಹೇಳಿದಂತೇ (ವಿಮರ್ಶೆಯ ಸೌಜನ್ಯ ಮೀರದೇ) ಅನಿಸಿಕೆಗಳನ್ನೂ ನಿರ್ದಾಕ್ಷಿಣ್ಯವಾಗಿ ವಾಟ್ಸಪ್ಪೋ ಮಿಂಚಂಚೆಯೋ ಪತ್ರವೋ ವಿಸ್ತೃತ ಲೇಖನಗಳ ಮೂಲಕವಾದರೂ ಅವಶ್ಯ ಬರೆಯಿರಿ. ಪ್ರತಿಯೊಂದನ್ನೂ ನಾವು ಅವಶ್ಯ ಓದುತ್ತೇವೆ, ಅನುಕೂಲವಿರುವವನ್ನು ಖಂಡಿತವಾಗಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಶಿಬಿರ ಭಾಗಿಯಾದ ಕುರಿತ ಪ್ರಮಾಣ ಪತ್ರದ ಆವಶ್ಯಕತೆಯಿರುವವರು ಕಚೇರಿಯಿಂದ ಸಂಗ್ರಹಿಸಿಕೊಳ್ಳಿ. ಹೋಗಿ ಬನ್ನಿ”
ಅಕ್ಷರರ ಕರೆಯ ಮೇರೆಗೆ ಮತ್ತು ನನ್ನ ಎಂದಿನ ತೆವಲಿನಲ್ಲಿ ಈ ಒಂಬತ್ತು ಕಂತುಗಳನ್ನು ಬರೆದ ಬಲದಲ್ಲಿ ಒಂದು ಸಣ್ಣ ಸಲಹೆ:
ಯಾವುದೇ ಸಾರ್ವಜನಿಕ ಕಲಾಪಗಳಲ್ಲಿ ಇಂದು ಮೆರೆದಿರುವ ಚರವಾಣಿಯ ಅತಿ ಬಳಕೆಗೆ ನನ್ನದೂ ಬದ್ಧವಿರೋಧ ಇದೆ. ಮೊದಲನೇದಾಗಿ ಅವು ಕಲಾವಿದ ಮತ್ತು ಸಹ ಪ್ರೇಕ್ಷಕರ ಏಕಾಗ್ರತೆಗೆ, ದೃಷ್ಟಿಗೆ ಭಂಗ ತರುತ್ತವೆ. ಮತ್ತೆಷ್ಟೋ ಬಾರಿ ಚರವಾಣಿ ಬಳಕೆದಾರ, ಸಭೆಗೆ ತಾನು ಅಪ್ರಸ್ತುತನಾಗುವುದರೊಂದಿಗೆ, ಅವಮಾನವನ್ನೂ ಮಾಡುತ್ತಿರುತ್ತಾನೆ. ಇವನ್ನೆಲ್ಲ ಗಮನದಲ್ಲಿಟ್ಟೇ ನೀನಾಸಂ ತನ್ನೆಲ್ಲ ಸಭೆಗಳಲ್ಲಿ, ಬಿಗುವಾಗಿ ಚರವಾಣಿ ವಿರೋಧಿಸುವುದು ಸರಿಯಾಗಿಯೇ ಇದೆ. ಆದರೆ ಅದು ವೈಯಕ್ತಿಕವಾಗಿ ನನಗೆ (ನನ್ನಂಥವರಿಗೆ?) ಕೈ ಕಟ್ಟುತ್ತಿದೆ. ನಾನು ಯಾವುದೇ ಸಭೆಗಳಲ್ಲಿ ಚರವಾಣಿ ಕರೆ, ಸಂದೇಶ ರವಾನೆ ಮಾಡುವುದಿಲ್ಲ, ಸ್ವೀಕರಿಸುವುದೂ ಇಲ್ಲ. ನನ್ನ ಪಟಗ್ರಹಣವಾದರೂ ಮಿಂಚಿನ ಬೆಳಕಿಲ್ಲದೆ, ಹಿಂದೆ ಕುಳಿತವರಿಗೆ ತೊಂದರೆಯಾಗದಂತೇ ನಡೆಯುತ್ತವೆ. ಚಿತ್ರ ಗ್ರಹಣ ನನ್ನ ರಸಗ್ರಹಣದ ವಿಸ್ತೃತ ಭಾಗ. ಅವು ನನಗೆ ವಿರಾಮದಲ್ಲಿ ಮರುಮಥನಕ್ಕೆ ಮತ್ತು ಬರವಣಿಗೆಗೆ ಊರುಗೋಲುಗಳಾಗಿ ಒದಗುತ್ತವೆ. ನಿಮಗೆಲ್ಲ ತಿಳಿದಂತೆ ನಾನು ಬರಹಗಳನ್ನು ವೈಯಕ್ತಿಕ ಮಿತಿಯ ಕಾಲದ ದಾಖಲೆಯಾಗಿಯೂ ಸಾರ್ವಜನಿಕ ಪ್ರೇರಣಾದಾಯಿಯಾಗಿಯೂ ರೂಪಿಸಿಕೊಂಡು ಬಂದಿದ್ದೇನೆ. ನೀನಾಸಂ ಜಾಲತಾಣದ ಚಿತ್ರಗಳು (ಹಾಗೇ ಸಂಚಿ ಮೂಲಕ ಬರುವ ಪೂರ್ಣ ಪ್ರಸ್ತುತಿಗಳೂ) ನನ್ನಂತವರ ವರ್ತಮಾನದ ತುರ್ತುಗಳಿಗೆ ಒದಗುವುದಿಲ್ಲ. ಧೂಮಪಾನಿಗಳಿಗೆ ಕೆಲವೆಡೆ ‘Smokers Corner’ಗಳು ಇದ್ದಂತೆ, ರಂಗ ಕಲಾಪಗಳ ಸಭಾ ವ್ಯವಸ್ಥೆಯಲ್ಲಿ, ನನ್ನಂಥ ಕೆಲವರಿಗಾದರೂ ವಿಶೇಷ ಅವಕಾಶ ಮಾಡಿಕೊಡುವುದು ಅವಶ್ಯ.
ನೀನಾಸಂ ೨೦೨೪ರ ಶಿಬಿರ ಘೋಷಣೆಯಾದಂದೇ (ಸುಮಾರು ನಾಲ್ಕೈದು ವಾರಗಳ ಮೊದಲೇ) ನಾವಿಬ್ಬರು ಮಗನ ಕುಟುಂಬಕ್ಕೆ ನಮ್ಮೊಡನೆ ಶಿಬಿರದಲ್ಲಿ ಭಾಗವಹಿಸುವಂತೆ ತುಸು ಒತ್ತಾಯವನ್ನೇ ಹೇರಿದ್ದೆವು. ಅದರಲ್ಲಿ ನಮ್ಮ ಸಣ್ಣ ಸ್ವಾರ್ಥ – ಮೊಮ್ಮಗಳು ಆಭಾಳ ಹೆಚ್ಚಿನ ಒಡನಾಟ. ವಾಸ್ತವದಲ್ಲಿ ಅವರಿಗೂ ಇಂಥದ್ದೊಂದು ಬಿಡುವು ಬೇಕಿತ್ತು; ಒಪ್ಪಿಕೊಂಡರು. ಏತನ್ಮಧ್ಯೆ ನೀನಾಸಂ – ಸಂಚಿ ನಾಟಕಗಳ ದಾಖಲೀಕರಣದ ದಿನಾಂಕ ಸೆಪ್ಟೆಂಬರ್ ೨೮ಕ್ಕೇ ಬಂದಿತ್ತು. ಅದಕ್ಕೆ ಅಭಯ ತನ್ನ ಕ್ಯಾಮರಾ ಸಿಬ್ಬಂದಿಗಳೊಡನೆ ಬಂದು, ಹೋಗಿದ್ದ. ಬೇಸರವಿಲ್ಲದೇ ಮತ್ತೆ ಮೂರೇ ದಿನಗಳ ಅಂತರದಲ್ಲಿ, ಇನ್ನೊಮ್ಮೆ ಹೆಗ್ಗೋಡಿಗೆ, ಕುಟುಂಬದೊಡನೆ ಬಂದಿದ್ದ. ಸಂಚಿಯ ಇನ್ನೋರ್ವ ವಿಶ್ವಸ್ಥ – ನಮ್ ಇಸ್ಮಾಯಿಲ್, ಕೂಡಾ ಅಭಯನ ಸೂಚನೆಯನ್ನು ಒಪ್ಪಿಕೊಂಡು, ತನ್ನ ಕುಟುಂಬವನ್ನೂ (ಪತ್ನಿ ತಾಹಿರಾ ಮತ್ತು ಮಗಳು ರಾಬಿಯಾ) ಹೊರಡಿಸಿಕೊಂಡು ಅಭಯನಿಗೆ ಜತೆಗೊಟ್ಟಿದ್ದರು. ಆದರೆ ಅವರಾರು ಮಂದಿಗೆ ನೀನಾಸಂ ಸಾಗರದ ಹೋಟೆಲ್ಲಿನಲ್ಲೆ ವ್ಯವಸ್ಥೆ ಮಾಡಿತ್ತು. ಇದರಲ್ಲಿ ಬಳಲಿದ್ದು ನಮ್ಮಿಬ್ಬರ ಸಣ್ಣ ಸ್ವಾರ್ಥ! ಉಳಿದಂತೆ, ಆಭಾಳಿಗೆ ಮಹಾ ನಗರದ ಒತ್ತಡದಿಂದ ಬಿಡುಗಡೆ ಸಿಕ್ಕಿದ್ದು ನಮಗೂ ತುಂಬ ಸಂತೋಷಕೊಟ್ಟಿತು. ಆಕೆ ಬೆಳಿಗ್ಗೆ ಅಪ್ಪಮ್ಮರೊಡನೆ ಬಂದು ನೀನಾಸಂ ವಠಾರಕ್ಕೆ ಕಾಲಿಟ್ಟರೆ, ಮತ್ತೆ ರಾತ್ರಿ ಹೋಟೆಲಿಗೆ ಹೊರಡುವವರೆಗೆ ಯಾರ ಅಂಕೆಗೂ ಸಿಗಲೇ ಇಲ್ಲ. ನೀನಾಸಂ ಬಳಗದ ಕೆಲವು ಸಮಾನ ವಯಸ್ಕ ಮಕ್ಕಳೊಡನೆ, ವಠಾರದೊಳಗೇ (ಎಲ್ಲರ ಪರೋಕ್ಷ ಕಣ್ಗಾವಲಿನಲ್ಲೇ) ತಮ್ಮದೇ ಆಟ, ಊಟಗಳಲ್ಲಿ ಮುಳುಗಿ ಹೋಗಿದ್ದರು. ಶಿಬಿರದ ಕೊನೇ ದಿನಕ್ಕೆ ಮಾತ್ರ ಆ ಎರಡು ಕುಟುಂಬಗಳಿಗೆ ನಿಲ್ಲುವುದಾಗಲಿಲ್ಲ. ಅವರು ಮರುದಿನದ ವೃತ್ತಿ-ಕರ್ಮಕ್ಕೆ ಸಜ್ಜುಗೊಳ್ಳಲು, ಆದಿತ್ಯವಾರ ಬೆಳಿಗ್ಗೆಯೇ ಬೆಂಗಳೂರಿಸಿದರು.
ಅರುಣೋದಯದಲ್ಲಿ ದಕ್ಕಿದ ಪ್ರಸಾದ!
ನಾವಿಬ್ಬರು ಆರೇಳು ದಿನ ಮನೆಯಿಂದ ದೂರವಿರುವ ಕಾರಣಕ್ಕೆ, ಶೀಘ್ರ ಮರಳುವ ದಾರಿಯನ್ನೇ ಅಂದಾಜಿಸಿಕೊಂಡಿದ್ದೆವು. ಆದರೆ ಬರುವ ದಾರಿಯಲ್ಲಿ, ಆನಂದ ಪುರದ ಅರುಣ್ ಪ್ರಸಾದರನ್ನು ಮೊದಲ ಬಾರಿಗೆಂಬಂತೆ ಮುಖತಃ ಭೇಟಿ ಮಾಡದ ಕೊರತೆ ಕಾಡುತ್ತಿತ್ತು. ನಾವು ಹೆಗ್ಗೋಡು ತಲಪಿದಂದೇ ಅರುಣ್ ಬೇರೆ ಕರೆ ಮಾಡಿ, “ನೀವೇನಾದರೂ ಮಾಡಿ. ಈ ಬಾರಿ ನನ್ನನ್ನು ನೋಡದೇ ಮಂಗಳೂರಿಗೆ ಹೋಗಂಗೇ ಇಲ್ಲಾ” ಎಂದು ಭಯೋತ್ಪಾದನೆಯನ್ನೇ ಮಾಡಿದ್ದರು! ಹಾಗಾಗಿ ಶಿಬಿರದ ಕೊನೇ ದಿನ, ನಾನೇ ಅವರಿಗೆ ಕರೆ ಮಾಡಿ, ಅನುಕೂಲ ಕೇಳಿ, ಮರುದಿನ ಬೆಳಿಗ್ಗೆ “ತಿಂಡಿಗೆ ನಿಮ್ಮಲ್ಲಿ…” ಎಂದಂತೆ…
ಸೋಮವಾರ ಕತ್ತಲು ಹರಿಯುವ ಮುನ್ನ ಪ್ರಾತರ್ವಿಧಿಗಳನ್ನೆಲ್ಲ ಮುಗಿಸಿ, ಗಂಟು ಮೂಟೆ ಕಾರಿಗೆ ಹೇರಿ, ಕಿರಂ ಮನೆ ಬಾಗಿಲು ಮುಚ್ಚಿದ್ದೆವು. ಹಳೆಗಾಲದ ಆರ್ಥಿಕ ಮಿತಿ ಮತ್ತು ಸರಳ ಆವಶ್ಯಕತೆಗಳಿಗಷ್ಟೇ ರೂಪುಗೊಂಡ ಮನೆ, ಹಲವು ದಶಕಗಳ ಕಾಲಗತಿಯಲ್ಲಿ ಸಾಕಷ್ಟು ಜೀರ್ಣಗೊಂಡಿತ್ತು. ಆದರೂ ನಮ್ಮ ಆರು ರಾತ್ರಿಗಳನ್ನು ಬೆಚ್ಚಗಿಟ್ಟದ್ದಕ್ಕೆ ಕೃತಜ್ಞತೆಯನ್ನೂ, ನೀನಾಸಂನ ಆಶಯದಂತೆ ಬೇಗನೇ ಹಳತು ಕಳೆದು, ಹೊಸತು ಬರುವಂತಾಗಲಿ ಎಂದು ಹಾರೈಕೆಯನ್ನೂ ಹೊತ್ತು ದಾರಿಗಿಳಿದೆವು. ಹೊಸನಗರ – ಸಾಗರ ದಾರಿಯ ಉಳ್ಳೂರು ಕವಲಿನ ಚಾ ದುಕಾನಿಗೊಂದು ಬೋಣಿ ಕೊಟ್ಟು, ಆನಂದಪುರ ದಾರಿ ಹಿಡಿದೆವು. ಏಳೂವರೆಗೆ ಆನಂದಪುರದ ಪ್ರವೇಶದ್ವಾರವೇ ಆದ ಯಡೇಹಳ್ಳಿ ವೃತ್ತದ ಒಂದು ಮಗ್ಗುಲಿನಲ್ಲಿ ಪೂರ್ಣ ವ್ಯಾಪಿಸಿದ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್, ಹೊಂಬುಜ ರೆಸಿಡೆನ್ಸಿ ಮತ್ತು ಮಲ್ಲಿಕಾ ವೆಜ್ ರೆಸ್ಟುರಾ ಸಂಕೀರ್ಣಗಳ ಎದುರು ಕಾರಿಳಿದೆವು. ಇವುಗಳ ಮಾಲಿಕ…
ಅರುಣಪ್ರಸಾದ್ ನಮ್ಮ ನಿರೀಕ್ಷೆಯಲ್ಲೇ ಹೊಂಬುಜ ರೆಸಿಡೆನ್ಸಿಯ ಮಗ್ಗುಲಿನ ಅವರದೇ ಓಣಿಯೊಳಗೆ, ಆಪ್ತಸಖ ಶಂಭೂರಾಮನ (ಶ್ವಾನ ಮಹಾಶಯ) ಜತೆ ಮುಂಜಾನೆಯ ಶತಪಥದಲ್ಲಿದ್ದರು. ಮಹಾಕಾಯ, ಬೆಟ್ಟವೇ ಅಲುಗಿದಂತೆ, ಹರ್ಷವೇ ಮೈವೆತ್ತಂತೆ ನಗುತ್ತಾ ಸ್ವಾಗತಿಸಿದರು. ಅವರ ಖಾಸಾ ಕಛೇರಿಯೊಳಗೇ ಕೂರಿಸಿ, ಪ್ರೀತಿಯ ವಿನೀತತೆಯಲ್ಲಿ ಪಾಕಪಟ್ಟಿಯನ್ನೇ ಒಪ್ಪಿಸಿ, ನಮ್ಮ ತಿಂಡಿತೀರ್ಥದ ವ್ಯವಸ್ಥೆ ಮಾಡಿದರು. ಇಡ್ಲಿ, ವಡೆ, ಬನ್ಸ್, ಕಾಫಿಗಳು ಅವರ ಗುಣ ಹಾಗೂ ರುಚಿಶುದ್ಧಿಗೆ ಕಳಶವಿಟ್ಟಂತೇ ಇದ್ದವು. ಉದ್ದಕ್ಕೂ ಬೇಗಡೆ ಮಾತುಗಳಿಲ್ಲದೇ ನಮ್ಮನ್ನು ಮಾತನಾಡಿಸಿದರು. ಐದು ದಿನಗಳ ‘ಮಾತುಕತೆ’ಯದೇ ಶಿಬಿರದಲ್ಲಿ ಬಾಯಿ ಬಿಡದವರನ್ನು ಸೋಲಿಸುವಂತೆ ಧಾರಾಳ ಕೇಳಿದರು, ಅಗತ್ಯವಿದ್ದಲ್ಲಿ ತಮ್ಮದ್ದನ್ನು ತೋಡಿಕೊಂಡರು. ಹತ್ತಿಪ್ಪತ್ತು ಮಿನಿಟಿಗೆಂದು ಹೋಗಿದ್ದ ನಮಗೆ ಒಂದೂವರೆ ಗಂಟೆ ಕಳೆದದ್ದು ತಿಳಿಯಲೇ ಇಲ್ಲ. ಅರುಣ್ ಪ್ರಸಾದರದು ಬಹುಮುಖೀ ಆಸಕ್ತಿ. ಹಾಗೆ ಸಂಗ್ರಹಗೊಂಡ ಮಾಹಿತಿಗಳನ್ನು ತನ್ನ ಮಿತಿಯೊಳಗೆ ಸಮಾಜಮುಖಿಯಾಗಿ ಹಂಚುವಲ್ಲೂ ಅಷ್ಟೇ ಉತ್ಸಾಹ. ಹಾಗಾಗಿ ನಾವು ಬಂದಾಗಲೇ ನಮ್ಮನ್ನು ಕೇಳಿಕೊಂಡು ಅವರು ಚಾಲೂ ಮಾಡಿದ ವಿಡಿಯೋ ಕ್ಯಾಮರಾ ನಾವು ಹೊರಡುವವರೆಗೂ ಒಂದು ಮಾತು, ಒಂದು ಹಾವಭಾವ ತಪ್ಪಿಹೋಗದಂತೆ ದಾಖಲಿಸಿಕೊಂಡಿರಬೇಕು. ಮುಂದೆ ಅವನ್ನು ಅವರೇ ಸಂಕಲಿಸಿ, ಈಗಾಗಲೇ ಎರಡು ಕಂತುಗಳನ್ನು ಪ್ರಕಟಿಸಿದ್ದಾರೆ. ಇನ್ನೂ ಮೂರು ಕಂತುಗಳು ಬರಲಿವೆಯಂತೆ. ಆಸಕ್ತರು ಅರುಣ್ ಪ್ರಸಾದ್ ಅವರ ಗೋಡೆಗೆ ಹೋಗಿ ನೋಡಬಹುದು. ಹಾರ, ಸ್ಮರಣಿಕೆಗಳನ್ನು ಒಪ್ಪದ ನಮ್ಮನ್ನು ಸೋಲಿಸಿ, ಕೇವಲ ದಾರಿ ಖರ್ಚಿಗೆಂಬಂತೆ ಕೊಟ್ಟ ಮೆಸ್ಸೂರ್ ಪಾಕ್ ಮತ್ತು ಖರ್ಜೂರಾ ಹಿಡಿದುಕೊಂಡು ಮುಂದಿನ ದಾರಿಗಿಳಿದೆವು. “ಇನ್ನು ಸೀದಾ ಮಂಗಳೂರು”, ಎಂದೂ ನಮ್ಮಷ್ಟಕ್ಕೇ ಹೇಳಿಕೊಂಡೆವು.
ಸುಮಿತ್ರರಿಗೆ ಹಾಯ್ ಹೇಳದೇ….
ಮತ್ತದೇ ದಾರಿ, ವಾರದ ಹಿಂದೆ ಹಿಂದಿಕ್ಕಿದ ಊರುಗಳನ್ನು ಬರಮಾಡಿಕೊಳ್ಳುತ್ತ ಹೋದೆವು. ರಿಪ್ಪನ್ ಪೇಟೆ, ಹುಂಚದ ಕಟ್ಟೆ, ಕೊಣಂದೂರು…. ಕಿಲೋ ಕಲ್ಲುಗಳು ತೀರ್ಥಳ್ಳಿಯ ಇಳಿ ಲೆಕ್ಕ ಶುರು ಮಾಡಿದ್ದವು, ಆಗ ಸಹಜವಾಗಿ ನೆನಪಿನ ಮುನ್ನೆಲೆಗೆ ಬಂದವರು ಎಲ್.ಸಿ. ಸುಮಿತ್ರ. ನಮಗವರಲ್ಲೊಂದು ವೈಯಕ್ತಿಕ ಮಾಹಿತಿ ಬೇಕಿತ್ತು. ಆದರೆ ಸೂಚನೆ ಇಲ್ಲದೇ ಅವರ ಖಾಸಗಿತನಕ್ಕೆ ಹೊರೆಯಾಗಬಾರದೆಂದು, ತೀರ್ಥಳ್ಳಿಯ ಹೊರವಲಯದಲ್ಲೇ ನಿಂತು, ಚರವಾಣಿ ಕರೆ ಮಾಡಿದೆ. ಅವರು ಮರುದಿನದ ಬೆಂಗಳೂರು ಯಾನಕ್ಕೆ ಸಜ್ಜಾಗುತ್ತಿದ್ದರೂ ನಮ್ಮನ್ನು ಮನೆಗೇ ಕರೆದರು. ನಾವು “ಐದೇ ಮಿನಿಟು…” ಕೇಳಿಕೊಂಡಿದ್ದರೂ ಸುಮಿತ್ರಾ ಶ್ರೀಕಂಠಮೂರ್ತಿ ದಂಪತಿ, ಅಗತ್ಯದ ಮಾಹಿತಿಯೊಡನೆ ನಮಗೆ ಸೇಬು, ಚಾ ಉಪಚಾರ ಮಾಡದೇ ಬಿಡಲಿಲ್ಲ. ಈ ಬಾರಿ ದಾರಿಗಿಳಿಯುವಾಗ ಹೆಚ್ಚು ದೃಢವಾಗಿಯೇ “ಇನ್ನು ಸೀದಾ ಮಂಗಳೂರು” ಎಂದರೂ ಅದು ನಿರ್ಧಾರಕ್ಕಿಂತ ಹೆಚ್ಚಿಗೆ ಮರುಕಳಿಸಿದ ಪಲ್ಲವಿಯಂತೇ ಕೇಳಿಸಿತ್ತು.
ಕಾಳಿಂಗಾ…
ತೀರ್ಥಳ್ಳಿ – ಆಗುಂಬೆ ರಸ್ತೆ ಹಿಡಿದೆವು. ಹಿಂದಿದ್ದ ಸಪುರ ಓಣಿಯಂಥಾ ರಸ್ತೆ, ಹಳ್ಳಿಗೆರಡು ಬೆನ್ನು ಹುರಿ ಮುರಿಯುವ ವೇಗ ತಡೆಗಳನ್ನು ವಿಮಾನಪಥವನ್ನೇ ಇಳಿಸಿಟ್ಟಿದ್ದರು. ಐತಿಹಾಸಿಕ ಚಹರೆಗಳನ್ನು ಕಳೆದುಕೊಂಡ ನೀರಸ ಮಾರ್ಗದಲ್ಲಿ ವೇಗವರ್ಧನನಾಗಿದ್ದರೂ ಮನಸ್ಸಿನಲ್ಲಿ ಆಗುಂಬೆಗೆ ಬರಲಿರುವ ವಿಪತ್ತುಗಳ ಎಣಿಕೆ ನಡೆದಿತ್ತು. ಸರಣಿಯಲ್ಲಿ ಒಮ್ಮೆಗೇ ಪುಟಿದೆದ್ದ ಹೆಸರು ಗೌರೀಶಂಕರ್. ೧೯೮೦ರ ದಶಕದಲ್ಲಿ ಹಾವುಸ್ನೇಹೀ ಹುಡುಗರಿಂದ ತೊಡಗಿದ ಮಂಗಳೂರಿನ ಉರಗೋದ್ಯಾನ, ಪಿಲಿಕುಳದಲ್ಲಿ ವಿಸ್ತೃತವಾಗಿಯೇ ನೆಲೆಸಿದ್ದು ನಿಮಗೆ ತಿಳಿದೇ ಇದೆ. (ನೋಡಿ: https://athreebook.com/2013/02/25/aadi-uragodyana/) ಅಲ್ಲಿಗೆ ಪ್ರಾಥಮಿಕವಾಗಿ ಹಾವು ನೋಡಿಕೊಳ್ಳಲೆಂದು ನೇಮನಗೊಂಡವರು ಗೌರೀಶಂಕರ್. ಅವರು ಮುಂದೆ ಕಾಳಿಂಗ ಸರ್ಪದ ಸಂಶೋಧಕನಾಗಿ ವಿಕಸಿಸಿ, ವಿಟೇಕರರ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದವರೆಗೂ (ಏಯಾರೆಸ್) ಬೆಳೆದರು. ಮುಂದಿನ ದಿನಗಳಲ್ಲಿ ಏಯಾರೆಸ್ಸಿನಲ್ಲಿ ಅವರಿಗೆ ಮತಬೇಧ ಬಂದಾಗ, ಗೌರೀಶಂಕರ್ ಆಗುಂಬೆ ವಲಯದೊಳಗೇ ತನ್ನದೇ ಪ್ರತ್ಯೇಕ ಕಾಳಿಂಗ ಸಂಶೋಧನಾ ಕೇಂದ್ರ ಸಂಘಟಿಸಿದ್ದೂ ನನಗೆ ತಿಳಿದಿತ್ತು; ನೋಡಲಾಗಿರಲಿಲ್ಲ. ಇಂದು ನೋಡುವ ಯೋಚನೆ ಮೂಡುತ್ತಿದ್ದಂತೆ, ಅವರಿವರಲ್ಲಿ ವಿಚಾರಿಸಿ ಕಾರು ನಿಲ್ಲಿಸಿದ ಸ್ಥಳ – ಗುಡ್ಡೆಕೇರಿ.
“ಇಲ್ಲಲ್ಲ, ತುಸು ಹಿಂದಿನ ಕಲ್ಕೋಡು ಕವಲಿಗೆ ಹೋಗಿ” ಮಾರ್ಗಸೂಚನೆ ಸಿಕ್ಕಿತು. ನಾವು ಅಲ್ಲಿಗೆ ಹೋಗುವುದಕ್ಕೆ ಸರಿಯಾಗಿ, ಅತ್ತ ತೀರ್ಥಳ್ಳಿಯಿಂದಲೇ ಬೈಕೇರಿ ಬರುತ್ತಿದ್ದ ಪ್ರಶಾಂತ್, ಗೌರೀಶಂಕರರ ಆಪ್ತ ಸಹೋದ್ಯೋಗಿಯೇ ಸಿಕ್ಕಿದರು. ನಾನವರಿಗೆ ಹೊಸ ಪರಿಚಯದವನೇ ಆದರೂ ಹಾರ್ದಿಕವಾಗಿ ಸ್ವಾಗತಿಸಿದರು. ಮುಂದೆ ಅವರ ಬೈಕನ್ನು ಹಿಂಬಾಲಿಸುತ್ತ ಎರಡು ಕಿಮೀ ಡಾಮರ್, ಒಂದು ಕಿಮೀ ತೀರಾ ಕಚ್ಚಾ ರಸ್ತೆಯಲ್ಲೂ ಹೋದೆವು. ದಾರಿ ಕಗ್ಗಾಡ ಕಣಿವೆ ಮೂಲೆಗೆ ಇಳಿದಿಳಿದು ಮುಟ್ಟಿದಾಗ ಎದುರಾದ ಒಂದು ಬೋರ್ಡ್ ಹೆದರಿಸಿತು ‘ಮುಂದಿನ ದಾರಿ ಜೀಪುಗಳಿಗೆ ಮಾತ್ರ’! ಪಕ್ಕದಲ್ಲೇ ಕಲಾತ್ಮಕ ತೋರಣಗಲ್ಲುಗಳು ‘ಕಾಳಿಂಗ ಮನೆ’ಗೆ ಸ್ವಾಗತಿಸಿದವು. ಕಾರು ಬಿಟ್ಟು, ನೂರಿನ್ನೂರು ಕಚ್ಚಾ ಮೆಟ್ಟಿಲಿಳಿದು, ‘ಕಾಳಿಂಗ- ಮಳೆಕಾಡು ಪರಿಸರ ಸಂಶೋಧನಾ ಕೇಂದ್ರ’ವನ್ನು (ಕೇಸಿಯಾರೀ) ಸೇರಿದ್ದೆವು.
ಗೌರೀಶಂಕರ್ ಕಾರ್ಯನಿಮಿತ್ತ ಬೆಂಗಳೂರಿಸಿದ್ದರು. ಹಾಗೆಂದು ನಮಗೇನೂ ಕೊರತೆಯಾಗದಂತೆ, ಪ್ರಶಾಂತ್ ಕೇಂದ್ರದ ವಸತಿ – ವಠಾರವನ್ನೆಲ್ಲ ಸುತ್ತಾಡಿ ತೋರಿಸಿದರು. ಮೂಲತಃ ಅದು ಮುಖ್ಯವಾಗಿ ಸುಮಾರು ನಾಲ್ಕು ಎಕ್ರೆ ವಿಸ್ತೀರ್ಣದ ಅಡಿಕೆ ತೋಟ. ಎಡೆ ಬೆಳೆಗಳಾದ ಬಾಳೆ, ಒಳ್ಳೆಮೆಣಸು, ಗೆಡ್ಡೆ… ಇತ್ಯಾದಿಯೂ ಇದ್ದದ್ದೇ. ತೋಟವನ್ನು ಸುತ್ತುವರಿದಂತೆ ದಟ್ಟ ಕಾಯ್ದಿರಿಸಿದ ಕಾಡಿದೆ. ಸಂಶೋಧನಾ ಕೇಂದ್ರ ತನ್ನ ಆತ್ಮನಿರ್ಭರತೆಗಾಗಿ ತೋಟವನ್ನು ಉಪೇಕ್ಷಿಸದೆ, ಸಾವಯವ ತತ್ವದಡಿಯಲ್ಲಿ ಪೋಷಿಸಿಕೊಂಡೇ ಬಂದಿದೆ. ಆ ತೋಟ, ಸುತ್ತುವರಿದ ಕಾಡು, ಕಣ್ಣಳವಿಯ ಪ್ರಶಾಂತ ಕೆರೆ, ತುಸು ಆಚೆ ಇದ್ದ ನಿತ್ಯ ಹರಿವಿನ ಹೊಳೆ, ಪ್ರಾಣಿ, ಪಕ್ಷಿ ವೈವಿಧ್ಯಗಳನ್ನೆಲ್ಲ ಲೆಕ್ಕ ಹಾಕಿದರೆ ಕೇಸೀಯಾರೀ ವನ್ಯಾರಾಧಕರಿಗೆ ಹೇಳಿ ಮಾಡಿಸಿದ ತಪೋವನ. ವಸತಿ ವಠಾರದ ಒಂದು ಅಂಚಿನಲ್ಲಿ ಗುಡಾರಗಳ ಸರಣಿ ಹಾಕುವಂತೆ ಉದ್ದದ ಮಾಡು, ಸಾರ್ವಜನಿಕ ಶೌಚ ವ್ಯವಸ್ಥೆಯೊಡನೇ ಸಜ್ಜುಗೊಂಡಿದೆ. ಸದ್ಯ ಅಲ್ಲಿ ಎರಡು ಮೂರು ಗುಡಾರಗಳು ಅರಳಿಕೊಂಡಿದ್ದುದರಿಂದ “ಅತಿಥಿಗಳಿದ್ದಾರೆ” ಎಂದೇ ಅಂದಾಜಿಸಿದೆವು. ತುಸು ಆಚೆಗೆ ಓರ್ವ ವಿದೇಶೀ ಸಂಶೋಧಕಿ. ಸಹಜ ವಿಹಾರದಲ್ಲಿದ್ದ ಹಸಿರು ಹಾವೊಂದನ್ನು ಗುರುತಿಸಿ, ವರ್ತನೆಯನ್ನು ಅನುಸರಿಸಿದ್ದದನ್ನೂ ಕಂಡೆವು. ವಠಾರದಲ್ಲಿ ಉಳಿದಂತೆ ಕೆಲವು ದೃಢ ಮತ್ತು ಬಹು ಸುಂದರ ಅಟ್ಟಳಿಗೆ ಮನೆಗಳು, ವಿಚಾರಕೂಟಗಳಿಗೆ ವಿಸ್ತಾರ ಭವನಗಳೂ, ಊಟ ವಿಶ್ರಾಂತಿಗಳಿಗೆ ಪ್ರತ್ಯೇಕ ವ್ಯವಸ್ಥೆಗಳೂ ಚೆನ್ನಾಗಿಯೇ ಇವೆ. ಅವುಗಳಲ್ಲಿ ಕೆಲವನ್ನು ಹೊರ ಊರಿನ ಉದಾರ ಉದ್ಯಮಿಗಳು ರಚಿಸಿ ಕೊಟ್ಟಿದ್ದಾರಂತೆ. ಅದರ ಪೂರ್ಣ ನಿರ್ವಹಣೆಯನ್ನು ಮಾಡುವ ಕೇಸೀಯಾರೀ, ಬರುವ ಆದಾಯದಲ್ಲಿ ವೆಚ್ಚ ಕಳೆದು, ಒಂದಂಶವನ್ನಷ್ಟೇ ಪ್ರಾಯೋಜಕರಿಗೆ ಕೊಟ್ಟರಾಯ್ತಂತೆ.
ಪ್ರಶಾಂತ್ ನಮ್ಮನ್ನು ಒಂದು ರಾತ್ರಿಗಾದರೂ ಉಳಿಯಲು, ಕನಿಷ್ಠ ಮಧ್ಯಾಹ್ನದ ಊಟಕ್ಕಾದರೂ ನಿಲ್ಲಲು ಒತ್ತಾಯಿಸಿದ್ದರು. ಆದರೆ ನಾವು ಇನ್ನೊಮ್ಮೆ ಉಳಿಯುವ ತಯಾರಿಯೊಡನೇ ಬಂದು, ವಲಯವೆಲ್ಲ ಸುತ್ತಿ, ಸಂಶೋಧನಾ ಕಲಾಪಗಳ ವಿವರಗಳನ್ನೂ ತಿಳಿದುಕೊಳ್ಳುವ ಭರವಸೆ ಮಾತ್ರ ಕೊಟ್ಟೆವು. ಪ್ರಶಾಂತ್ ಕೊಟ್ಟ ಅಷ್ಟಮಿ ಉಂಡೇ ಮತ್ತು ಲಿಂಬೆ ಪಾನಕಕ್ಕೇ ತೃಪ್ತರಾಗಿ ವಾಪಾಸು ಹೊರಟೆವು. ಪಲ್ಲವಿ ಮರುಕಳಿಸಲೇಬೇಕಲ್ಲಾ -“ಇನ್ನು ಸೀದಾ ಮಂಗಳೂರು.”
ಆಗುಂಬೆ ಪೇಟೆಯಲ್ಲಿ ನಿಲ್ಲದೇ ಮುಂದುವರಿದೆವು. ಒಂದು ಕಿಮೀ ಅಂತರದಲ್ಲಿ, ಬಲಕ್ಕಿದ್ದ ಒನಕೆ ಅಬ್ಬಿಗೆ ಹೋಗುವ ದಾರಿಯೊಡನೆ ನಮ್ಮ ಹಿಂದಿನ ಅನೇಕ ವನ್ಯಪರ ವಿಹಾರಗಳೇನೋ ನೆನಪಾದವು. ಆದರೆ ಈಚಿನ ದಿನಗಳಲ್ಲಿ ಅನಾಗರಿಕ ಪ್ರವಾಸಿಗಳ ದುರ್ಬಳಕೆಯಲ್ಲಿ ಅದು ಬಳಲಿದ್ದಕ್ಕೆ ಇಲಾಖೆ ಸರಪಳಿ ಎಳೆದು ಖಾಯಂ ಬೀಗವನ್ನೇ ಜಡಿದಿತ್ತು. ಇಂದು ಗೇಟಿನ ಒಳಕ್ಕೆ ಕಾಡು ಮುತ್ತಿ ದಾರಿಯ ಕುರುಹೇ ಅಳಿಸಿರುವುದು ಸರಿಯೇ ಇದೆ. ಭಗವತೀ ಘಾಟಿಯ ಹನುಮಾನ್ ಗುಂಡಿಯದ್ದೂ ಇದೇ ಕತೆ. ನಮ್ಮ ಬಿಸಿಲೆ ಘಾಟಿಯ ಬೀಟೀ ಸ್ಪಾಟ್ಗೂ ಹೀಗೇ ಬೇಗನೆ ಬೀಗ ಬೀಳಲಿ ಎಂದು ಹಾರೈಸುತ್ತಿದ್ದಂತೆ…
ಇಲಾಖಾ ಸರ್ಕಸ್ಸುಗಳು
ಆಗುಂಬೆ ಅರಣ್ಯ ಇಲಾಖೆಯ ಗೇಟ್ ಬಳಿ ಕಾರಿಳಿದು, ಅಲ್ಲಿಂದಲೇ ಬಲ ಮಗ್ಗುಲಿನ, ಪುಟ್ಟ ಕೆರೆಯ ಸುಂದರೀಕರಣವನ್ನು ನೋಡಿದಾಗ ನಗದಿರಲಾಗಲಿಲ್ಲ. ಸುತ್ತುವರಿದ ಅಲಂಕಾರಿಕ ಗಿಡಗಳು, ಅಲಂಕಾರಿಕ ಪುಟ್ಟ ಸೇತುವೆ, ವಿಹರಿಸಲು ನಡೆಮಡಿ, ಮೂರು ಚೊಂಬು ನೀರಿನಲ್ಲೆರಡು ದೋಣಿ, ಪ್ರವೇಶ ದರ ಐದು ರೂಪಾಯಿ, ದೋಣಿಗೆ ಪ್ರತ್ಯೇಕ ನೂರೇ ರೂಪಾಯಿ… ಏನು ದರಿದ್ರ ಬಂದಿದೆ ಇಲಾಖೆಗೆ! ಇಲಾಖೆಯ ‘ಉದ್ಯಾನ’ವನ್ನು ಸುತ್ತುವರಿದ ಮಹಾಮರಗಳು ಅಣಕಿಸುತ್ತಿದ್ದಂತೆ, ಕಡಲೂರಿನ ಹಮ್ಮಿನಲ್ಲಿ ‘ದೋಣಿ ಸವಾರಿ’ ಕರೆಗೆ ಗಹಗಹಿಸಿ ನಕ್ಕು, ಇನ್ನೇನು ಕಾರು ಹತ್ತುವವರಿದ್ದೆವು. ಆಗ ಇಲಾಖೆ ಗೇಟ್ ಪಕ್ಕದಲ್ಲಿ, ಇದುವರೆಗೆ ನಾನು ಅಷ್ಟಾಗಿ ಗಮನಿಸದ ಒಂದು ಪಕ್ಕಾ ಡಾಮರ್ ದಾರಿ ಕಾಡು ಹೊಕ್ಕಿರುವುದು ಕುತೂಹಲ ಕೆರಳಿಸಿತು. ವಿಚಾರಿಸಿದೆ….
ಅರಣ್ಯ ಇಲಾಖೆಯ ಗಾರ್ಡ್ “ಆ ಕೊನೇಲಿ ಮೈಕ್ರೋವೇವ್ ಟವರಿದೆ. ಅಲ್ಯಾರೂ ಇಲ್ಲ…” ಎಂದ. ಅರಣ್ಯ ಇಲಾಖೆಯ ಹಂಗಿಲ್ಲ ಎಂಬ ಧೈರ್ಯದಲ್ಲಿ ನಮಗೆ ಟವರ್ ನೋಡುವ ಉಮೇದು ಬಂತು. ಆದರೆ ಗಾರ್ಡ್ “…ಮುಂದೆ ಮರಬಿದ್ದದೆ… ಪೊದರು ಮುಚ್ಚಿದೆ,… ಜಿಗಣೆ ವಿಪರೀತ…” ಎಂದೆಲ್ಲ ನಿರುತ್ತೇಜನದ ಮಾತು ಬೆಳೆಸಿದ್ದ. “ಅವೆಲ್ಲ ನಾವು ಕಾಣದ್ದೇನೂ ಅಲ್ಲಾ…” ಅಂತ ಕೆಳ ಧ್ವನಿಯಲ್ಲಿ ಅವನನ್ನು ಸಮಾಧಾನಿಸಿ, ಕಡಿದಾದ ಓರೆ ದಾರಿಯಲ್ಲಿ ನಡೆದೇ ಬಿಟ್ಟೆವು. ಮುಂದೆ ಮರವೇನೂ ಬಿದ್ದುಕೊಂಡಿರಲಿಲ್ಲ. ತುರುಚಂಗೀ ಪೊದರುಗಳೇನೋ ಮಾರ್ಗದ ಅಂಚುಗಳಲ್ಲಿ ದಟ್ಟವಾಗಿಯೇ ಇದ್ದವಾದರೂ ಡಾಮರ್ ಮಾರ್ಗ ತೆರವಾಗಿಯೇ ಇತ್ತು. ಆ ಕೊನೆಯಲ್ಲಿ ಮಾತ್ರ ಜಾಗೃತ ನಾಗರಿಕರೆಲ್ಲ ಕೆರಳಿ ಕೆಂಡಾಮಂಡಲರಾಗಬೇಕೋ ನಾಚಿ ನರಳಬೇಕೋ ಎನ್ನುವಷ್ಟು ದೊಡ್ಡ ಸಾರ್ವಜನಿಕ ಸೊತ್ತು ಹಾಳು ಸುರಿದಿತ್ತು,….
ಮೂರು ನಾಲ್ಕು ದಶಕಗಳ ಹಿಂದೆ, ತಪ್ಪಲಿನ ಸೋಮೇಶ್ವರಕ್ಕೆ ಆಗುಂಬೆ ಘಟ್ಟ ಬೆನ್ನು ಹಾಕಿ ಕುಳಿತ ಮಹಾದೈತ್ಯನಂತೇ ಕಾಣುತ್ತಿತ್ತು. ಅದರಲ್ಲಿ ನೆತ್ತಿಯಿಂದ ಹಿಂಕತ್ತಿನವರೆಗೂ ದಟ್ಟ ಕೂದಲನ್ನು ಬೈತಲೆ ಸೀಳಿದಂತೆ ಕಾಡು ಕೀಸಿ, ತಂತಿ ಹೊತ್ತ ಟೆಲಿಫೋನ್ ಕಂಬ ಸಾಲು ಇಳಿದಿತ್ತು. ಕಾಲಧರ್ಮಾನುಸಾರ ಇಂದು ಕಂಬ ವಯರು ಕಳಚಿ, ಬೈತಲೆಯಲ್ಲಿ ಪೊದರು ಬೆಳೆದಿರಬಹುದು. ಆದರೆ ಮಹಾದೈತ್ಯನ ನೆತ್ತಿಯನ್ನೇ ಮಟ್ಟ ಮಾಡಿ, ವಿಸ್ತಾರವಾಗಿ ಕಾಡು ಕೀಸಿ, ಭಾರೀ ಸ್ತಂಭ ನಿಲ್ಲಿಸಿದ್ದಾರೆ. ಒತ್ತಿನಲ್ಲಿ ಯಂತ್ರ, ಬ್ಯಾಟರಿ ಸರಣಿ, ಸ್ವಿಚ್ ಕೋಣೆ, ಗುದಾಮು, ಸಿಬ್ಬಂದಿಯ ಊಟ, ವಸತಿ. ಶೌಚ, ನೀರು ಎಂದೆಲ್ಲಾ ಸವಲತ್ತುಗಳನ್ನು ಒಂದು ಮಾಳಿಗೆಯಷ್ಟು ಎತ್ತರದ ಭರ್ಜರಿ ಬಂಗ್ಲೆಯಲ್ಲಿ ರೂಪಿಸಿದ್ದಾರೆ. ಮತ್ತೆ ಎಲ್ಲ ಸುತ್ತುವರಿದಂತೆ ಅಷ್ಟೇ ಮಜಬೂತಾದ ಪಾಗಾರ, ಗೇಟೂ ಕೊಟ್ಟಿದ್ದಾರೆ. ಆದರೆ…. ಇಂದು ಗೇಟೂ ಬಾಗಿಲೂ ಕಿಟಕಿ ಪಡಿಗಳು ಒಂದೂ ಇರಬೇಕಾದಲ್ಲಿಲ್ಲ. ಅದೃಷ್ಟಕ್ಕೆಂಬಂತೆ ಮರುಪ್ರಸರಣ ಯಂತ್ರದ (ರಿಪೀಟರ್) ಕೋಣೆಯೊಂದನ್ನು ಬಿಟ್ಟು ಎಲ್ಲವೂ ಹಾಳು ಸುರಿಯುತ್ತಿದೆ. ಅಲ್ಲಿ ನೇತು ಬಿದ್ದಿದ್ದ ೨೦೧೭ರ ಕ್ಯಾಲೆಂಡರ್ ನಾಗರಿಕತೆ ನಿಂತ ದೂರ ಸಾರುವಂತಿತ್ತು. ಅಬೋಧ ಮಂದಿಯೇನಾದರೂ ಅಲ್ಲಿಗೆ ಬಂದರೆ ವಿಕಾರ ಪರಿಸರ ನೋಡಿ, ಯಂತ್ರದ ನಿರಂತರ ಗೊಂಯ್ಗುಟ್ಟುವಿಕೆ ಕೇಳಿ ಹಾಡೇ ಹಗಲಿನಲ್ಲೂ ಭೂತಬಾಧೆ ಎಂದು ಹೆದರಿ ಸತ್ತರೆ ವಿಶೇಷವಿಲ್ಲ.
ಹಿಂದೆ ಬಂದ ಮೇಲೆ, ನಾನು ಅರಣ್ಯದವನಿಗೆ ಸಣ್ಣ ವರದಿ ಕೊಟ್ಟೆ. ಆತ ಲೊಚಗುಟ್ಟಿದ “ಈಗ ಬೀಯೆಸ್ಸೆನ್ನೆಲ್ ಯಾರಿಗ್ ಬೇಕು ಸಾರ್. ಎಲ್ಲೋ ಮರಗಿರ ಬಿದ್ದು ಎಲೆಕ್ಟಿಕ್ ವಯರ್ ಕಟ್ಟಾದರೆ ಆಗುಂಬೆ ಕಡೆಯಿಂದ ಜನ ಬಂದು ರಿಪೇರೀ ಮಾಡ್ತಾರೆ, ಅಷ್ಟೇ…” ನಾವು ಸೂರ್ಯಾಸ್ತ ಕಟ್ಟೆಯತ್ತ ಕಾರು ಒಯ್ದೆವು. ಅಲ್ಲಿ ಹಿಂದೆ ಸೂರ್ಯಾಸ್ತ ನೋಡುವವರ ಸೌಕರ್ಯಕ್ಕೆ ಎಂಬಂತೆ ದರೆ ಮೈಯಲ್ಲಿ ಶಿಖರದೆತ್ತರಕ್ಕೆ ಮೆಟ್ಟಿಲ ಸಾಲು ಕಟ್ಟಿದ್ದರು. ಇಂದು ಅದಕ್ಕೊಂದು ಗೇಟೂ ಬೀಗಾ ಮಾಡಿದ್ದಾರೆ. ಸಹಜವಾಗಿ ಮೆಟ್ಟಿಲ ಸಾಲು ಪೊದರು ಬೆಳೆದು ಮುಚ್ಚಿಯೇ ಹೋಗಿದೆ. ದಾರಿಯಂಚಿನ ಕಟಕಟೆಯ ಸಿಮೆಂಟ್ ಜಲ್ಲಿ ಮುಕ್ಕಾಗಿ ತೋರುತ್ತಿದ್ದ ಬಡ ಸರಳುಗಳು ತುಕ್ಕಾಗಿ ‘ಪ್ರವಾಸೋದ್ಯಮ ನೀತಿ’ಗೆ ಭಾಷ್ಯ ಬರೆದಿದ್ದವು. ಗಂಟೆ ಹನ್ನೆರಡೂವರೆ ಕಳೆದದ್ದು ನೋಡಿ, ಕಾರು ಹೊರಡಿಸುವಗಾಗ ಪಲ್ಲವಿ ಮರೆಯದಿದ್ದರೂ “ಊಟಕ್ಕೆಲ್ಲೀ…” ರಾಗ ಸೇರಿತ್ತು.
ಮಾಯದಂತಾ ಮಳೇ ಬಂದಿತ್ತಾ….
ಸೋಮೇಶ್ವರದಲ್ಲಿ ನೀರುದೋಸೆ ಪರಿಮಳ ಬಂದಂತಾದಾಗ “ಸ್ವಲ್ಪ ತಡವಾದರೂ ಸರಿ, ಊಟ ಮಂಗಳೂರಲ್ಲೇ” ಎಂದುಕೊಂಡೆವು. ನಡ್ಪಾಲಿನಲ್ಲಿ ಕೂಡ್ಲುತೀರ್ಥ ಸೆಳೆದಂತಾಯ್ತು. ಆದರೆ “ಕಳೆದ ವರ್ಷವಷ್ಟೇ ನೋಡಿದ್ದಲ್ವಾ” ಎಂದು ಸಮಾಧಾನ ಪಟ್ಟುಕೊಂಡು ಮುಂದುವರಿದೆವು. ಆದರೆ ಹೆಬ್ರಿಗೂ ಮುನ್ನ ಭರ್ಜರಿ ಹೋಟೆಲ್ – ಸೀತಾನದಿಯ, ಸುವಿಸ್ತಾರ ಅಂಗಳ “ಬಾ ಎಂದಾಗ” ಹೊಟ್ಟೆಯದ್ದೇ ಮೇಲುಗೈಯಾಯ್ತು. ಸುಡು ಬಿಸಿಲಿಗೆ ಕಾರು ಬಳಲದಂತೆ ಇದ್ದೊಂದು ಪೊದರು ಮರದ ನೆರಳಿಗೇ ನುಗ್ಗಿಸಿ ಒಳ ಹೋದೆವು. ಆದರೆ ನಮ್ಮ ಊಟ ಮುಗಿಯುವ ಹೊತ್ತಿಗೆ, ಯಾವ ಸೂಚನೆಯೂ ಕೊಡದೇ “ಮಾಯದಂತಾ ಮಳೆ ಬಂದಿತ್ತಾ… ಸೀತಾನದಿಯ ದಂಡೇಗೇ…” ಭರ್ಜರಿ ಮಳೆಯಲ್ಲಿ ನಾವು ಹೇಗೋ ಕಾರಿಗೆ ತೂರಿಕೊಂಡು, “ನಿಜಕ್ಕೂ ಮಂಗಳೂರಿಗೇ..” ಎಂದು ಗುನುಗುತ್ತಾ ಹೊರಟೆವು. ಮುದ್ರಾಡಿಯತ್ತ ತಿರುಗಿ ಕಬ್ಬಿನಾಲೆ ಕಾಡು ದಾಟುವಾಗಂತೂ ಗಿರಬಡಿದ ಮಳೆಗೆ ನಮ್ಮ ರಾಗವೇ ಬದಲಾಗಿತ್ತು, “ದಾರಿ ಕಾಣದಾಗಿದೆ ರಾಘವೇಂದ್ರನೇಏಏಏಏ”! ಹೆದ್ದೀಪ ಹಚ್ಚಿ, ವೈಪರ್ ಸೂಪರ್ ಸ್ಪೀಡಿನಲ್ಲಿಟ್ಟು, ಒಳಗೆ ಮಂಜುಗಟ್ಟದಂತೆ ಏಸಿ ಹೊಂದಿಸಿ, ಕೊಂಬೆಯೋ ಮರವೋ ತಲೆಮೇಲೆ ಬೀಳದಿದ್ದರೆ ಸಾಕೆಂದು ಹಾರೈಸುತ್ತ ನಿಧಾನಕ್ಕೆ ಸಾಗಿದೆವು. ಯಾರೋ ಬೈಕಿನವನು ಹೆಂಡತಿ ಮಗು ಸಹಿತ ಮಳೆಯಲ್ಲಿ ತೊಳಲುತ್ತ ಸಾಗಿದ್ದ. ನಮಗೊಮ್ಮೆ ಸಂಕಟವೂ ಆಯ್ತು, ಸಂದೇಹವೂ ಮೂಡಿತು. ನಾವು ಪ್ರಾಮಾಣಿಕವಾಗಿಯೇ ಆತನ ಮಗು, ಹೆಂಡತಿಯನ್ನು ಕಾರಿನ ರಕ್ಷಣೆಗೆ ಸೇರಿಸಿಕೊಳ್ಳಬಹುದು, ಆದರೆ ಆತ ಪೂರ್ಣ ಅಪರಿಚಿತರಾದ ನಮ್ಮನ್ನು ಯಾಕೆ ನಂಬಬೇಕು? ನಾವು ಸುಮ್ಮನೇ ಮುಂದುವರಿದೆವು. ವರಂಗದಿಂದ ಮುಂದೆ ಮಳೆಯೇ ಮಾಯವಾದ ಮೇಲೆ ನಿರುಮ್ಮಳವಾಗಿ, ನಿರಾಯಾಸವಾಗಿ ಸಂಜೆ ಮಂಗಳೂರಿನ ಮನೆ ತಲಪಿದೆವು.








































































































