ನಮ್ಮ ಮನೆಯ ಹಿತ್ತಿಲಿಗೇ ಇತ್ತು ಸುಬ್ಬಯ್ಯ ಹೆಗ್ಗಡೆ ಕಾಂಪೌಂಡ್ – ಸುಮಾರು ಒಂದೂ ಮುಕ್ಕಾಲೆಕ್ರೆ ವಿಸ್ತೀರ್ಣದ ವಠಾರ. ಹಳೆಗಾಲದ ವಸತಿ ರಚನೆಗಳು, ಕೆಲವು ಬಿಡಾರ ಮತ್ತು ಕೃಷಿಯ ಶಿಸ್ತೇನೂ ಇಲ್ಲದ ತೆಂಗು, ಹಲಸು, ಸಾಗುವಾನಿ, ಮುಳ್ಳುಪೊಂಗಾರೆ, ಅನಾಮಧೇಯ ಬಳ್ಳಿ ಪೊದರುಗಳ ಹಸಿರಿನದ್ದೇ ಸಾಮ್ರಾಜ್ಯ. ನಮ್ಮ ಒಲವಿಗೆ ಪೂರಕವೆಂಬಂತೆ ನಗರದೊಳಗೇ ಒದಗಿದ್ದ ವನ್ಯ ಪರಿಸರ. ಆರೇಳು ವರ್ಷಗಳಿಂದೀಚೆಗೆ ಅವೆಲ್ಲ ಒಂದು ಮುಷ್ಟಿಗೆ ಸೇರಿ, ಒಕ್ಕಲೆದ್ದು, ವಸತಿ ಹಾಗೂ ಹಸಿರಳಿಯಿತು. ನಮ್ಮ ಗಡಿಯತ್ತ ಸುಮಾರು ಹದಿನೈದಡಿ ಹಳೆ ನೆಲವನ್ನು ದಿಬ್ಬದಂತೇ ಉಳಿಸಿ, ಸಮತಳದ ಬಯಲು ಮೂಡಿ ಬೋರ್ಡು ಹಚ್ಚಿದರು – ‘ಭಂಡಾರಿಯವರ ವರ್ಟಿಕಾ’; ಐವತ್ತಕ್ಕೂ ಮಿಕ್ಕ ಬಹುಮಹಡಿಗಳ ಮಹಲಿನ ನಿವೇಶನ. ಹಾಗೆ ಮೊದಲ ಹಂತದ ನೆಲ ಮುಕ್ಕಿದವರಿಗೆ ಸಿಕ್ಕ ಸಣ್ಣ ಕಸ – ಒಂದು ಸಾಗುವಾನಿ ಮರದ ಬೇರಬೊಡ್ಡೆ, ನಾನು ಕೆತ್ತಿ ರೂಪಿಸಿದ ‘ಲಲಿತ ನಟನಾ ಶಿಲ್ಪ ಅಷ್ಟಪದಿ’. ಅದಕ್ಕೂ ಪೂರ್ವದಲ್ಲಿ ನಮ್ಮ ವಠಾರದಲ್ಲೇ ಅನಿವಾರ್ಯವಾಗಿ ತೆಗೆಸಿದ ತೆಂಗಿನ ಮರಗಳ ಕಾಂಡದಲ್ಲಿ ಮೂಡಿದ ‘ಕಲ್ಪವೃಕ್ಷದಲ್ಲಿ ಚತುರ್ಮುಖಗಳು’ ಮತ್ತು ಅದನ್ನು ಹಿಂಬಾಲಿಸಿದ ಸೀತಾಫಲದ ಮರದ ಶಿಲ್ಪ – ‘ಅವತರಿಸಿದ ಗೌರೀಶಂಕರ’ಗಳನ್ನೂ ಕೆತ್ತಿದ ಅನುಭವಗಳ ಬಲದಲ್ಲಿ ಎರಡು ವರ್ಷಗಳ ಹಿಂದೆ ನಾನು ಹಿಡಿದ ಇನ್ನೊಂದೇ ಕೆತ್ತನೆಯ ಯೋಜನೆ ….

ಅಕೇಸಿಯಾದಲ್ಲಿ ಜೀವವಾಹಿನಿ

ಮೂರ್ನಾಲ್ಕು ವರ್ಷಗಳ ಹಿಂದೆ ನಮ್ಮ ‘ಅಭಯಾರಣ್ಯ’ದಲ್ಲಿ (ಮುಡಿಪು ಬಳಿಯ ನಮ್ಮದೇ ಒಂದು ಎಕ್ರೆ – ಪ್ರಾಕೃತಿಕ ಪುನರುತ್ಥಾನ ಪ್ರಯೋಗ ಭೂಮಿ) ದೊಡ್ಡ ಅಕೇಶಿಯಾ ಮರವೊಂದು ಗಾಳಿಗೆ ಅಡಿ ಮಗುಚಿತು. ಅದನ್ನು ಕೂಲಿಕೊಟ್ಟು ಹದಿನೇಳು ತುಂಡಾಗಿಸಿ ಮನೆಗೆ ಸಾಗಿಸಿಕೊಂಡೆ. ಒಂದೆರದು ವರ್ಷ ಕಳೆದ ಮೇಲೆ ಅದರದೇ ಒಂದು ದಿಮ್ಮಿ ಹಿಡಿದು ಹೊಸದೇ ಕೆತ್ತನೆಗೆ ತೊಡಗಿದೆ. ಮರದ ಕಾಂಡಗಳನ್ನು ತೋಡಿ ದೋಣಿ ಮಾಡುವುದಕ್ಕೆ ಇಂಗ್ಲಿಷಿನಲ್ಲಿ ಡಗ್ ಔಟ್ ಎನ್ನುತ್ತಾರೆ. ಹಾಗೆ ನಾನೂ ಸರಳ ದೋಣಿಯ ಶಿಲ್ಪವನ್ನು ಲಕ್ಷ್ಯವಾಗಿರಿಸಿಕೊಂಡೆ. ಅಕೇಸಿಯಾ ಭಾರೀ ಗಟ್ಟಿ ಮರ. ಮತ್ತೆ ನನ್ನದೋ ಹವ್ಯಾಸೀ ಕೈ. ಕೆಲಸ ನಡೆದಂತೆ ತಪ್ಪಾಯ್ತೋ ಒರಟಾಯ್ತೋ ಹೇಳಲಾರೆ, ಉಳಿಯ ಕಾವು, ಬಾಯಿ ಮಾತ್ರವಲ್ಲ ಒಮ್ಮೆ ತಗಡೂ ತುಂಡಾದದ್ದಿತ್ತು. ಕೆಲವೊಮ್ಮೆ ಸುತ್ತಿಗೆ ಪೆಟ್ಟು ಗುರಿ ತಪ್ಪಿ ನನ್ನ ಕೈಗೆ ಬಿದ್ದರೂ ಅದೃಷ್ಟಕ್ಕೆ ಮೂಳೆ ಮುರಿಯಲಿಲ್ಲ.

ಉಳಿಯ ಜಾಡನ್ನು ಕೆಲವೆಡೆ ಮರದ ಸಹಜ ನಾರಿನ ಓಟ ದಿಕ್ಕು ತಪ್ಪಿಸುವುದಿತ್ತು. ಅದನ್ನು ನಿವಾರಿಸುವಂತೆ ಮೊದಲು ಕಾಂಡದ ಎರಡೂ ತುದಿಗಳನ್ನು ‘V’ ಆಕಾರಕ್ಕೂ ತಳವನ್ನು ಸಪಾಟಾಗಿಸಲೂ ಗರಗಸ ಹಿಡಿದೆ. ಗರಗಸವಾದರೂ ಬರಿದೇ ಹಿಂದೆ – ಮುಂದೆ ಮಾಡಿದರಾಗಲಿಲ್ಲ, ಕೈ ಪಳಗಿರಲೇಬೇಕು! ನನ್ನ ಅಪರಿಣತಿಯಲ್ಲಿ ಆಗಾಗ ಗರಗಸ ತನ್ನ ಜಾಡಿನಲ್ಲಿ ಕಚ್ಚಿ ಕೂರುತ್ತಿತ್ತು. ದಿಮ್ಮಿಗೆ ಕೀಲು ಹಾಕಿ ಸಡಿಲ ಮಾಡಿಕೊಂಡು, ಆಗೀಗ ಅನಾವಶ್ಯಕ ಎಂದು ಕಾಣಿಸಿದ್ದನ್ನು ಕೆತ್ತಿ ಹಾಕಿ ಮುಂದುವರಿದೆ. ಇವೆಲ್ಲದರ ಫಲವಾಗಿ ಕೊನೆಯಲ್ಲಿ ಅಂದಾಜು ಮೀರಿ ದಕ್ಕಿದ ಓರೆಕೋರೆಯನ್ನೇ ನನ್ನದೆಂದುಕೊಂಡೆ. ಅಳತೆಯ ಗೀಟುಗಳೆಲ್ಲ ಸರಕಾರೀ ಲೆಕ್ಕವಾಗಿತ್ತು. ಆದರೂ ಸೀತೆ, ಲಕ್ಷ್ಮಣ ಹಾಕಿದ ಗೀಟನ್ನು ಮೀರಿದ್ದಲ್ಲದಿದ್ದರೆ ರಾವಣ ಸಂಹಾರವಾಗುವುದಿತ್ತೇ? ಇಲ್ಲೂ ಏನೋ ಮಹತ್ತು ಸಾಧಿಸುವ ಭಂಡತೆಯಲ್ಲಿ ಮುಂದುವರಿದೆ.

 

ಒಂದು ಕೊನೆಯಲ್ಲಿ ದೋಣಿಗೆ ಚೂಪು ಮುಖ, ಇನ್ನೊಂದರಲ್ಲಿ ಚುಕ್ಕಾಣಿ ನೆಲೆ ಎಂಬಂತೆ ಸಪಾಟು ಮಾಡಿಕೊಂಡೆ. ಉಳಿದಂತೆ ಉದ್ದಕ್ಕೂ ಎರಡು ಮಗ್ಗುಲುಗಳಲ್ಲಿ ಗೋಡೆಯ ಅಂಶ ಉಳಿಸುತ್ತ, ಕಾಂಡದ ಆಳಕ್ಕೆ ಚಕ್ಕೆ ಎಬ್ಬಿಸುತ್ತಾ ಇಳಿದೆ. ನೇರ ಕಡಿ, ಓರೆ ಕೆತ್ತು, ಎರಡು ಮೂರಿಂಚು ಆಳದವರೆಗೆ ಸರಿ. ಮುಂದೆ ಕಷ್ಟ ಹೆಚ್ಚಿತು. ಆಗ ಮೂತಿಯ ಬಳಿ ಪುಟ್ಟ ಜಗುಲಿ, ನಡುವೆ ಹಾಯಿ ಕಟ್ಟೆ, ಅಡ್ಡ ಮಲಗಿದ ಕಂಬ, ದ್ವಾರ, ಮೀನು ತುಂಬುವ ಹಂಡೆ, ಇಳಿಸಿಕೊಳ್ಳಲು ದಂಬೆ, ಸುರಂಗ ಓಣಿ, ಏರು ಮೆಟ್ಟಿಲ ಸಾಲು, ಎಂದೇನೇನೋ ಉಪಕಲ್ಪನೆಗಳೊಡನೆ  ತೋಡುವ ಕೆಲಸ ಕಡಿಮೆ ಮಾಡಿಕೊಂಡೆ. ಅದರ ಗೋಡೆಯಂತೇ ಒಂದು ಅಂದಾಜಿಗೆ ದೋಣಿಯ ನೆಲ ನಿಶ್ಚಯಿಸಿ ನಿಲ್ಲಿಸಿದೆ.

ದೋಣಿಯ ಒಳ ಆಳವನ್ನು ಇಬ್ಬಾಗಿಸುವಂತೆ ಗೋಡೆಯ ಉದ್ದಕ್ಕೊಂದು ಪ್ಲ್ಯಾಸ್ಟಿಕ್ ವಯರ್ ಅಂಟಿಸಿದೆ. ಅದರ ಮೇಲೆ ಬಿಗಿಯಾಗಿ ಕೂರುವಂತೆ ಹಾರ್ಡ್ ಬೋರ್ಡ್ ತುಣುಕುಗಳನ್ನು ಹೊಂದಿಸಿ ಡೆಕ್ (ಮಾಳಿಗೆ) ಮೂಡಿಸಿದೆ. ಹಾಯಿ ಕಟ್ಟೆಗೊಂದು ಅಡಿಕೆ ಸಲಿಕೆಯ ಕೂವೆ ಮರ, ಬೇರೊಂದು ಹಲಸಿನ ತುಣುಕಿನಲ್ಲಿ ಮೂರು ಮುಳ್ಳಿನ ಪುಟ್ಟ ಲಂಗರು, ಚುಕ್ಕಾಣಿಗೆ ಒಳಗಿನಿಂದ ನಿಯಂತ್ರಣ ಚಕ್ರ ಮತ್ತು ಹೊರಗಿನಿಂದ ಹಲಗೆ ರೂಪಿಸುವಷ್ಟರಲ್ಲಿ ರೋಸಿಹೋಗಿತ್ತು. “ಅಬ್ಬ, ಇನ್ನೇನಿದ್ದರೂ ನಯಸಾಣೆ ಮಾತ್ರ” ಅಂದುಕೊಂಡದ್ದೇ ಬಂತು. ಆದರೆ ಹಾಗಾಗಲಿಲ್ಲ…

ದೋಣಿಯ ಮೂತಿಯಲ್ಲಿ ಗರಗಸ ಮಾಡಿದ್ದ ಘಾಸಿ ಮತ್ತು ಅಕೇಸಿಯಾ ಮೋಪಿನ ಸಹಜ ಬಿರಿಯುವ ಗುಣ ರಗಳೆ ಮಾಡಿತು. ಅವುಗಳಿಗೆ ತಿದ್ದುಪಡಿಕೊಟ್ಟು ಮಾನವಮುಖದ ರೂಪಕ್ಕಿಳಿಸಿದೆ. ದೋಣಿಯನ್ನು ನೀರಿಗಿಳಿಸಿ ಪರೀಕ್ಷಿಸುವ ಚಪಲ ಬಿಟ್ಟು, ಉಳಿದ ಹೊರಮೈಯಲ್ಲೂ ಕುಶಿ ಬಂದಂತೆ ಉಬ್ಬುಚಿತ್ರಗಳನ್ನು ಕೆತ್ತಿದೆ. ಅರಳಿ ಎಲೆ, ಖರ್ಜೂರದ ಮರ, ಆನೆ, ಹುಲಿ, ಮೀನು, ಸರ್ಪ, ಹಕ್ಕಿಗಳೆಲ್ಲ ಪ್ರತ್ಯಕ್ಷವಾದವು. ಇನ್ನೇನು ಕಪ್ಪೆಗೆ ಮುಗಿಯುತ್ತದೆನ್ನುವ ಹಂತದಲ್ಲಿ…

ಉಪ ಕತೆ – ಎರಡು ಅವಸ್ಥೆಗಳ ಕಪ್ಪೆ

ಹಿಂದೊಮ್ಮೆ ಬೀಟೀ ಮರದ ತುಂಡೊಂದನ್ನು ತೀರಾ ಒಡ್ಡೊಡ್ಡಾಗಿ ಕಪ್ಪೆ ಶಿಲ್ಪ ಮಾಡಿದ್ದೆ. ‘ಅಶೋಕವನ’ದಲ್ಲಿ ಕಪ್ಪೆಗೂಡಿನ ಲೋಕಾರ್ಪಣ ನಿಕ್ಕಿಯಾದ ಕಾಲಕ್ಕೆ ಅದನ್ನೇ ತುಸು ಪರಿಷ್ಕರಿಸಿ, ಕಪ್ಪೆ ವಿಜ್ಞಾನಿ ಕೆವಿ ಗುರುರಾಜರಿಗೆ ಸ್ಮರಣಿಕೆಯಾಗಿ ಕೊಟ್ಟೆ. (ನೋಡಿ: ಬಿಸಿಲೆಯಲ್ಲಿ ಹೊಸ ಬೆಳಕು – ಕಪ್ಪೆಗೂಡು) ಆದರಿಲ್ಲಿ ದೋಣಿಯ ದೊಡ್ಡ ಮೈಗೆ ಹೊಂದಿದಂತೆ ಮೂಡಬೇಕಿದ್ದದ್ದು ಕೇವಲ ಕಪ್ಪೆಯ ಉಬ್ಬುಶಿಲ್ಪ. ಹಾಗೆ ಕಪ್ಪೆಯ ಬಲ ಹಿಂಗಾಲು ಕೆತ್ತುತ್ತಿದ್ದಾಗ, ನನ್ನ ಅಂದಾಜಿನ ಕೊರತೆಯಲ್ಲಿ ದೋಣಿಯ ಗೋಡೆ ಹರಿದು ತೂತ ಬಿತ್ತು. ಮೊದಲು ಒಟ್ಟಾರೆ ಆ ಭಾಗವನ್ನೇ ಚೌಕಾಕಾರದಲ್ಲಿ ತೆಗೆದು, ಹೊಸದೇ ಕಪ್ಪೆ ಕೆತ್ತಿ ಕೂರಿಸುತ್ತೇನೆಂದೇ ಬೇರೊಂದು ಮರದ ತುಣುಕು ಹಿಡಿದಿದ್ದೆ. ಆದರೆ ಕೆಲಸ ತುಸು ಮುಂದುವರಿದಾಗ ಸಪಾಟು ಶಿಲ್ಪ ದೋಣಿಯ ಓರೆ ಮೈಗೆ ಹೊಂದುವುದಿಲ್ಲವೆಂದು ಅನಿಸಿತು. ಆಗ ಅದನ್ನು ಹಾಗೇ ಬಿಟ್ಟು, ಬೇರೊಂದೇ ತುಣುಕಿನಲ್ಲಿ ಕೇವಲ ಕಪ್ಪೆ ಕಾಲನ್ನಷ್ಟೇ ಕೆತ್ತಿ, ಅಂಟಿಸಿ, ದೋಣಿ ಕೆಲಸವನ್ನು ಮುಗಿಸಿದೆ. ಹಾಗೆಂದು ಸುಮಾರಾಗಿ ರೂಪುಗೊಂಡಿದ್ದ ಸ್ವತಂತ್ರ ಕಪ್ಪೆ ಶಿಲ್ಪವನ್ನು ಬಿಡಲಾದೀತೇ! ಈಚೆಗೆ (ಕೆಳಗೆ ಹೇಳಿದಂತೆ) ‘ಐಸಿರಿ’ ನಾಮಫಲಕ ಕೆತ್ತುವ ಕಾಲಕ್ಕೆ ಗಳಿಸಿದ ಹೆಚ್ಚಿನ ಚಳಕದಲ್ಲಿ ಎರಡನೆಯ ಕಪ್ಪೆಯನ್ನು ಪರಿಷ್ಕರಿದ್ದೇನೆ, ಗಮನಿಸಿ.

ಜೀವಾನಿ

ಕ್ರಿಶ್ಚಿಯನ್ ಪುರಾಣದಲ್ಲಿ ನೋವಾಸ್ ಆರ್ಕ್ ಪ್ರಸಿದ್ಧವೇ ಇದೆ. ಅದೊಂದು ಮಹಾ ಹಡಗು. ಬರಲಿದ್ದ ಮಹಾಪ್ರಳಯ ಕಾಲದಲ್ಲಿ ಜೀವವೈವಿಧ್ಯವನ್ನು ರಕ್ಷಿಸುವ ಉದ್ದೇಶದಿಂದ ನೋವಾ ಎಂಬಾತ ಕಟ್ಟಿದ್ದು. ಆತನಿಗೆ ನೌಕೆಯಲ್ಲಿ ಸಮಗ್ರ ಜೀವವೈವಿಧ್ಯದ ಪ್ರಾತಿನಿಧಿಕ ಜೋಡಿಗಳನ್ನು ತುಂಬಿಕೊಂಡು, ಪ್ರಳಯೋತ್ತರ ದಿನಗಳಿಗೆ ಮುಟ್ಟಿಸುವ ಉದಾತ್ತ ಕಲ್ಪನೆಯಿತ್ತು. ಹಾಗೇ ಇಂದು ಅಭಿವೃದ್ಧಿಯ ಹುಚ್ಚು ಅಲೆಯ ವಿರುದ್ಧ ನನ್ನೀ ದೋಣಿಯೂ ಜೀವವೈವಿಧ್ಯದ ಉಳಿವನ್ನು ಸಾರುವ ಸಂಕೇತ ಮಾಡಿಕೊಂಡೆ. ಇದರ ಹಂಡೆ, ವೈವಿಧ್ಯಮಯ ಜೀವರಸಗಳ ಅಕ್ಷಯ ಪಾತ್ರೆ. ದೋಣಿ ಸಾಗಿದಂತೆ ಸಿಗುವ ಹೊಸ ಅಥವಾ ಬರಡು ನೆಲಗಳಲ್ಲಿ ಅದು ಉಕ್ಕಿ, ದಂಬೆಯಲ್ಲಿ ಹರಿದು, ಸಮೃದ್ಧಿ ಕಾಣಿಸುತ್ತದೆ ಎನ್ನುವ ಆಶಯವುಳ್ಳ ಜೀವವಾಹಿನಿ. ಈ ಸಂದೇಶ ದೋಣಿಯ ಪುಟ್ಟ ತೋರಣಕ್ಕೆ ಹೊಂದುವಂತೆ (ಐದಕ್ಕರದಿಂದ ಮೂರಕ್ಕರಕ್ಕೆ) ಹೃಸ್ವಗೊಳಿಸಿ, ‘ಜೀವಾನಿ’ ಎಂಬ ಹೆಸರನ್ನೂ ಕೆತ್ತಿ ಮುಗಿಸಿದೆ.

ನಾಮಫಲಕಗಳ ಉಪ ಕಥನ

‘ಜೀವಾನಿ’ಯ ಪರಿಕರಗಳಿಗೆಂದು ನನ್ನಲ್ಲಿದ್ದ ಹಳೆ ಪಕಾಸು ರೀಪುಗಳ ಗೋಜಲಿನಲ್ಲಿ ಕೈಯಾಡಿಸುವಾಗ ಬಹುತೇಕ ಕುಂಬಾಗಿದ್ದ ಶಿಥಿಲವಾಗಿದ್ದ ಪಕಾಸು ತುಂಡೊಂದು ಸಿಕ್ಕಿತ್ತು. ಅದರಲ್ಲಿ ಆಭಾಳ ಹೆಸರು ಹುದುಗಿದ್ದಂತೇ ತೋರಿತು. ಉಳಿ ಸುತ್ತಿಗೆ ಹಿಡಿದು ಚಕ್ಕೆ ಚೂರುಗಳನ್ನು ಹಾರಿಸಿದೆ. ಒಂದು ಮಗ್ಗುಲಿನಲ್ಲಿ ಎರಡಕ್ಕರದ ಕನ್ನಡಿತಿ – ‘ಆಭಾ’, ಇನ್ನೊಂದು ಮಗ್ಗುಲಿನಲ್ಲಿ ಐದಕ್ಕರದ ಇಂಗ್ಲಿಷ್ ವಿದ್ಯಾರ್ಥಿನಿ – `Aabha’. ಅಂದಾಜು ಗೀರು ಗಾಯಗಳು ಸ್ಪಷ್ಟ ಅಕ್ಷರಗಳಾಗುವಲ್ಲಿ ಹಿಂದೆಂದೋ ಪಕಾಸಿಗೆ ಬಡಿದ ಆಣಿಯ ತೂತ, ಮಳೆ ಬಿಸಿಲಿಗೆ ಸಿಕ್ಕಿ ಕುಂಬಾದ ಅಂಶಗಳು ರಗಳೆ ಮಾಡಿದವು. ಅವನ್ನು ನಿವಾರಿಸುತ್ತ, ಎರಡು ಮಗ್ಗುಲುಗಳ ಅಕ್ಷರಗಳ ಭಿನ್ನ ಗಾತ್ರ ಮತ್ತು ಬಾಗು ಬಳಕುಗಳನ್ನು ಪರಸ್ಪರ ಬೆಸೆಯುತ್ತ ಹೋದಂತೆ ನಾನು ನಿರೀಕ್ಷಿಸದೇ ಇದ್ದ ಈ ಸುಂದರ ರೂಪ ಅರಳಿತ್ತು!

ಆ ಸುಮಾರಿಗೆ ರಜೆಯಲ್ಲಿ ಆಭಾ ಏನೋ ಬಂದಳು. ಆದರೆ ಇಂದು ಮಕ್ಕಳಿಗೆ ಒದಗುವ ಕೌಟುಂಬಿಕ ಸಂಸ್ಕಾರ, ಶಾಲಾಶಿಕ್ಷಣ ಮತ್ತು ಚರವಾಣಿ ಟೀವೀ ಮೂಲದ ಅಂತರ್ಜಾಲದ ಮಾಯಾಸುಳಿಗಳು ಜನ್ಮಜಾತ ಕುತೂಹಲವನ್ನು ಪ್ರಚೋದಿಸುತ್ತಿಲ್ಲ, ಬತ್ತಿಸುತ್ತಿವೆ. ನಮ್ಮ ಪರಿಸರಕ್ಕೆ ಅಪ್ರಸ್ತುತವಾದ ಕಥನಗಳು ಅವರ ಏಕಾಗ್ರತೆಯನ್ನು ದಿಕ್ಕಾಪಾಲು ಮಾಡಿದೆ. ಆಭಾಳಿಗೆ ತುಸು ನಾಟಕೀಯವಾಗಿಯೇ ನಾಮಫಲಕ ಕೊಟ್ಟೆ. ಆಕೆ ಮುಗ್ಧತೆಯಲ್ಲೇ ರೂಢಿಯಂತೆ “ವೊವ್, ಥ್ಯಾಂಕ್ಸ್, ಲವ್ಯೂ ಅಜ್ಜಾ…” ಕ್ಕೆ ಮುಗಿಸಿದಳು. ಮತ್ತೆ ಎಷ್ಟೊತ್ತಿಗೋ ಆಕೆಯ ಆಟಕ್ಕೆ ಜತೆಗೊಟ್ಟ ಎದುರು ಮನೆಯ, ತುಸು ದೊಡ್ಡ ಹುಡುಗ – ಸೋಹಂಗೆ, ಅದನ್ನು ತೋರಿಸಿ ಜಂಭ ಕೊಚ್ಚಿಕೊಳ್ಳಲೂ ಬಳಸಿದಳು. ಆದರೆ ಮರಳಿ ಬೆಂಗಳೂರಿಗೆ ಹೋಗುವ ಕಾಲದಲ್ಲಿ ಆಪ್ತ ಆಸ್ತಿಯಂತೆ ಗ್ರಹಿಸಿ ಒಯ್ಯಲೇ ಇಲ್ಲ. (ಹಾಗಾಗಿ ಅದು ನನ್ನಲ್ಲೇ ಉಳಿದಿದೆ.) ಪರೋಕ್ಷ ಪರಿಣಾಮದಲ್ಲಿ…

ಎದುರು ಮನೆಯ ಹುಡುಗ – ಸೋಹಂ (ಎರಡನೇ ತರಗತಿ), ತನಗೂ ಅಂತದ್ದೊಂದು ನಾಮಫಲಕ ಬೇಕೆಂದು ಬೇಡಿಕೆ ಇಟ್ಟ. ಸೋಹಂನ ಅಜ್ಜ, ಚಿಕ್ಕಜ್ಜ ಹೆಚ್ಚೇನು ಕುಲವೇ ವೃತ್ತಿನಿರತ ಅಕ್ಕಸಾಲಿಗಳದು (ಜೀವನ್ ಜ್ಯೋತಿ ಜ್ಯುವೆಲ್ಲರ್ಸ್). ಸಹಜವಾಗಿ ಅವರು ಉತ್ತಮ ಕರಕುಶಲಿಗಳೇ ಇರುತ್ತಾರೆ. ಹಾಗಾಗಿ ನಾನು ಬೇರೊಂದು ದಪ್ಪದ ಹಲಿಗೆ ತುಂಡಿನ ಎರಡು ಮಗ್ಗುಲಿನಲ್ಲಿ ಕಚ್ಚಾ ಕೆತ್ತನೆಯನ್ನಷ್ಟೇ ಮಾಡಿಕೊಟ್ಟೆ. ಹುಡುಗ ಅದನ್ನು ಸ್ವಂತ ಪರಿಶ್ರಮದಲ್ಲಿ, ಅಲ್ಲದಿದ್ದರೆ ಹಿರಿಯರ ಸಹಕಾರದಲ್ಲಿ ಚಂದ ಮಾಡಿಕೊಳ್ಳಲಿ ಎಂದು ಆಶಿಸಿದೆ. ಆದರೆ ತಿಂಗಳೆರಡು ಕಳೆದ ಮೇಲೆ ಹೀಗೇ ಒಮ್ಮೆ ವಿಚಾರಿಸಿದ್ದೆ. ಸೋಹಂ ಕೊರಡನ್ನು ಪ್ರೀತಿಯಲ್ಲೇ ಉಳಿಸಿಕೊಂಡಿದ್ದ, ಕೆಲಸ ಮಾತ್ರ ಮಾಡಿರಲೇ ಇಲ್ಲ

ದೇವಕಿಯ ತಂಗಿ, ಹಳ್ಳಿಮೂಲೆಯ ವತ್ಸಲಳಿಗೆ (ಪತಿ – ನೂಜಿಲ ರಾಮಕೃಷ್ಣ ಭಟ್) ಎರಡು ಮಕ್ಕಳು – ಅಲಕಾ ಮತ್ತು ಅಕ್ಷರ. ಇಂದು ಅಲಕಾಳಿಗೂ (ಪತಿ – ಆಕಾಶ್ ಕೊಡೆಂಕಿರಿ) ಎರಡು ಮಕ್ಕಳು – ಅಧಿತ್ರಿ, ಅಧೃತಿ. ಈ ನಾಲ್ಕೂ ಮಂದಿ ಭೂಮಿಗಿಳಿಯುವಲ್ಲಿ ನಮ್ಮ ‘ನಗರ ಮನೆ’ಯ ಅನಿವಾರ್ಯತೆಯನ್ನು ನಾವು ಪ್ರೀತಿಯಲ್ಲೇ ನಡೆಸಿಕೊಟ್ಟಿದ್ದೆವು. ಆ ನಡುವೆ ಎಲ್ಲೋ ನನ್ನ ತೆವಲಿಗೆ, ಅಧಿತ್ರಿಗೂ ಒಂದು ದ್ವಿಭಾಷಾ ನಾಮ ಫಲಕ ಮಾಡಿಕೊಟ್ಟೆ. ನನ್ನ ಅದೃಷ್ಟಕ್ಕೆ, ಆಕೆ ಅದನ್ನು ತುಂಬ ಹಚ್ಚಿಕೊಂಡಿದ್ದಾಳೆ ಎಂಬ ವರದಿ ಕೇಳಿ ಧನ್ಯನಾದೆ. ಈಚೆಗೆ ಹೀಗೇ ದೇವಕಿಯ ಅಕ್ಕನ ಓರ್ವ ಮೊಮ್ಮಗಳು – ಐಸಿರಿಗೂ ಒಂದು ನಾಮಫಲಕ ಕೆತ್ತಿದ್ದೇನೆ. ಕೊಟ್ಟು ಪ್ರತಿಕ್ರಿಯೆ ನೋಡಬೇಕಷ್ಟೆ.

ಇದು ‘ಭಾರತ’

ಹಲವು ದೇವಳಗಳ (ಬಿಜಾಪುರದ ಮಸೀದಿಯೊಂದರಲ್ಲೂ) ಅಖಂಡ ಶಿಲಾ ಕೆತ್ತನೆಗಳಲ್ಲಿ ಜಾಲರಿ, ಸರಪಳಿಗಳ ರಚನೆಗಳನ್ನು ನಾನು ಕಂಡಿದ್ದೇನೆ. ಅವನ್ನೇ ನಾನು ನಾಮಫಲಕಗಳನ್ನು ರೂಪಿಸುವಲ್ಲಿ ಸಣ್ಣದಾಗಿ ಅನುಕರಿಸಿದ್ದೆ. ಅದನ್ನು ದೊಡ್ಡದರಲ್ಲಿ ಮೂಡಿಸುವ ನನ್ನ ಹುಕಿಗೆ ಮತ್ತೆ ಹಿತ್ತಲಿನ ಸುಬ್ಬಯ್ಯ ಹೆಗ್ಡೆ ಕಾಂಪೌಂಡಿನ ಇನ್ನೊಂದೇ ಬೊಡ್ಡೆ ಅವಕಾಶ ಒದಗಿಸಿತು. ಹಿಂದೆ ಹೇಳಿದಂತೆ, ಬಹುಮಹಡಿ ಕಟ್ಟಡದ ಮಹಾಯೋಜನೆಯ ಮುಖ್ಯ ತಟ್ಟು ನಮ್ಮ ಪೌಳಿಯಿಂದ ಸುಮಾರು ಹದಿನೈದಡಿ ಅಂತರದಲ್ಲಿ  ಮತ್ತು ಮೂವತ್ತಡಿ ಆಳದಲ್ಲಿ ಇತ್ತು. ಈಚೆಗೆ ಅವರ ನೆಲಮುಕ್ಕ ಅರ್ಥಾತ್ ಹಿತಾಚಿ (ಪರಿಸರ ಪಿಶಾಚಿ?) ಬಾಕಿಯುಳಿದ ದಿಬ್ಬವನ್ನು ಬಗಿದು, ಹೊಸದೇ ಪೌಳಿ ರಚನೆಗೆ ಇಳಿದಿತ್ತು. ಆಗ ಹಳೆಗಾಲದ ಒಂದು ಹಲಸಿನ ಮರದ ಬೇರಗಡ್ಡೆಯೂ (ಕಾಂಡ ಹಿಂದೇ ಹೋಗಿದೆ) ಕಲ್ಲು ಮಣ್ಣಿನೊಡನೆ ಉರುಳಿದ್ದನ್ನು ದೇವಕಿಯ ಹದ್ದಿನ ಕಣ್ಣು ಗುರುತಿಸಿತು. ಮರವಲ್ಲದಿದ್ದರೂ ಬೇರು ‘ಉಳಿಸು’ವ (ವಾಸ್ತವದಲ್ಲಿ ಉಳಿಯನ್ನು ತೊಡಗಿಸುವ) ಖಯಾಲಿಯಲ್ಲಿ ನಾವು ಕೇಳಿದೆವು, ಅವರು ಸಂತೋಷದಲ್ಲಿ ಕೊಟ್ಟೇಬಿಟ್ಟರು.

ಆ ಬೊಡ್ಡೆ ಸತ್ತು ಆರೇಳು ವರ್ಷಗಳಾಗಿರಬೇಕು. ಅದು ಚೂರುಚೂರೇ ಮಳೆಗಾಲದಲ್ಲಿ  ಕೊಳೆತು, ಉಳಿಗಾಲದಲ್ಲಿ ಒಣಗಿ, ಹುಳಬಾಧೆಯಲ್ಲಿ ಕೊರೆದು, ಈಗ ಮಣ್ಣು ಕಲ್ಲುಗಳೊಡನೆ ಹಿತಾಚಿಯ ಉರುಡಾಟದಲ್ಲಿ ಯಾಕೂ ಬೇಡದ ಭಾರೀ ಮಣ್ಣ ಗಟ್ಟಿಯಂತೇ ಕಾಣಿಸಿತು. ಅದನ್ನು ಎರಡು ಕೂಲಿಗಳ ಸಹಕಾರದಲ್ಲಿ ಕಾರಿಗೆ ಏರಿಸಿಕೊಂಡು ತಂದೆ.  ಅಂಗಳದಲ್ಲಿ ಹೊತ್ತು ಹಾಕಿ, ರಭಸದ ನೀರ ಪೆಟ್ಟು, ನೆಲ ಉಜ್ಜುವ ಬ್ರಷ್ ಪ್ರಯೋಗಿಸಿ ಬೊಡ್ಡೆಯನ್ನು ಅನಾವರಣಗೊಳಿಸಿದೆ. ಅದು ಬಿಸಿಲಿಗೆ ಒಣಗಿದ ಮೇಲೆ ನನ್ನ ‘ಕಮ್ಮಟ’ಕ್ಕೆ ಉರುಳಿಸಿಕೊಂಡು, ಅದರ ಮೇಲ್ಪದರದ ಒಣ ಹಪ್ಪಳದಂತ ಅಂಶಗಳಿಗೆ ಉಳಿ ಪೆಟ್ಟು ಕೊಟ್ಟು, ಅರ ಉಜ್ಜಿದೆ. ಇರುಕುಗಳಲ್ಲಿದ್ದು ‘ಞಕ್’ ಆಗುತ್ತಿದ್ದ ಬೆಂಡಿನಂಥ ಅಂಶವೋ, ಕಲ್ಲಚೂರುಗಳನ್ನೋ ಹರಿತಗೊಳಿಸಿದ ಸ್ಕ್ರೂಡ್ರೈವರ್ರೋ ಪುಟ್ಟಚೂರಿಯಲ್ಲೋ ಒಕ್ಕಿ ತೆಗೆದೆ. ಗಡುಸಾದ ಕೆಂಪು ತಿರುಳು ಸಿಕ್ಕಲ್ಲಿ, ಉಳಿಯ ಹರಿತವನ್ನು ನಿಯಂತ್ರಿಸಿದೆ. ನೆಲದಿಂದ ಕಿತ್ತು ಸಿಂಬಿಯಾಗಿದ್ದ ದಪ್ಪ ಬೇರುಗಳ ಕೊನೆಯನ್ನು ಕತ್ತರಿಸಿ, ಉರುಟುಗೊಳಿಸಿದೆ. ಹೀಗೆ ಬೊಡ್ಡೆ ತುಸು ಹಸನಾದಂತೆ, ಅದರ ಬಾಹ್ಯ ರೇಖೆ, ಕಲೆ, ಕುಹರಗಳು ಸ್ಫುಟಗೊಂಡಂತೆ ನನ್ನ ಬಗೆಗಣ್ಣಿಗೆ ಅಥವಾ ನಗೆಗಣ್ಣಿಗೆ ಕಾಣುತ್ತಿದ್ದ ರೂಪಗಳು….

ದಿವಾನಿನಲ್ಲಿ ಎಡತೋಳು ಚಾಚಿ ಕುಳಿತ ಸುಖಪುರುಷನಂತೆ, ಬೆನ್ನಲ್ಲಿ ಒರಗಿದ ಕಬಂಧನಂತೆ, ಗುತ್ತಿಯ ಮೇಲೆ ಕುಳಿತ ಹೆಳವನಂತೆ, ಕಣ್ಣರಳಿಸಿ, ಕಿವಿ ನಿಮಿರಿಸಿದ ಮೃಗದಂತೆ ಬೊಡ್ಡೆಯ ಭಂಗಿಗಳು ಅಸಂಖ್ಯ. ನನ್ನ ಕೆಲಸ ನಡೆದಿದ್ದಂತೇ ದಿನಕ್ಕೊಂದು ದಿಕ್ಕಿನಿಂದ ಪಟ ತೆಗೆದು, ಫೇಸ್ ಬುಕ್ಕಿನಲ್ಲಿ ಹಾಕುತ್ತಲಿದ್ದೆ. ಆಗ ಗೆಳೆಯರು ಹರಿಸಿದ ಕಲ್ಪನಾಲಹರಿಯೂ ಸ್ವಲ್ಪವೇನೂ ಅಲ್ಲ – ದೈತ್ಯ ಪಾದದ ಪಳೆಯುಳಿಕೆ, ಆನೆಯ ಸೊಂಡಿಲು, ದಂತ, ಒಂಟೆಯ ಮುಸುಡು, ಅಲ್ಲಲ್ಲ ಒಂಟಾನೆ (ಸಿಂಹುಲಿ ಇದ್ದಂತೆ), ರಾಜಠೀವಿಯಲ್ಲಿ ಕುಳಿತ ಸಿಂಹ, ಸಿಂಡ್ರೆಲ್ಲಾಳ ಬೂಟು…. ಇತ್ಯಾದಿ. ಈ ಸಂವಾದ ನನ್ನ ಕೆತ್ತುವ ಹುಚ್ಚಿಗೆ ಹೆಚ್ಚಿನ ಕುಮ್ಮಕ್ಕು ನೀಡುತ್ತಿತ್ತು. ಅವನ್ನೂ ಮೀರಿದ ಸಂತೋಷ ಕೊಟ್ಟದ್ದು ಅಭಯನ ಗೆಳೆಯರೊಬ್ಬರು (ದಿವ್ಯ ರಾಜೇಶ್) ಕೊಟ್ಟ ಈ ವಿಡಿಯೋ ಸೇತು. ಇಲ್ಲಿನ ಕಲಾವಿದೆ – ಕೆನಡಾದ ಡೆಬ್ರ ಬೆರ್ನಿಯರ್, ಮುಖ್ಯವಾಗಿ ಹರಿನೀರಲ್ಲಿ ಬಂದ, ಬಹುತರದಲ್ಲಿ ಸವಕಳಿಗೀಡಾದ ಮರಗಳನ್ನು (ಡ್ರಿಫ್ಟ್ ವುಡ್) ಭಾವದೃಷ್ಟಿಯಲ್ಲಿ ಕಂಡು, ನಿಜ ನೋಟಕ್ಕೆ ಅರಳಿಸಿದ ನೂರಕ್ಕೂ ಮಿಕ್ಕ ಶಿಲ್ಪಗಳು – ಪರಮಾದ್ಭುತ.

ತೀವ್ರ ಬೆಳೆಯುತ್ತಿರುವ ಸಾಮಾಜಿಕ ವಾತಾವರಣದ ಹೊಲಸನ್ನು ಮರೆಯುವಂತೆ, ನನ್ನ ಕೈಗೆಟಕಿದ ಬೊಡ್ಡೆಯನ್ನಾದರೂ ಅರ್ಥಪೂರ್ಣ ಬಂಧವಾಗಿಸುವ ಕೆಲಸದಲ್ಲಿ ಮುಳುಗಿಹೋದೆ. ಅನ್ಯ ಕೆಲಸಗಳು ಬಾಧಿಸದೇ ಇದ್ದ ದಿನಗಳಲ್ಲಂತೂ ಬೆಳಿಗ್ಗೆ ಎಂಟೂವರೆ, ಒಂಬತ್ತು ಗಂಟೆಗೆ ಕಾರ ಕೊಟ್ಟಿಗೆಯ ಕಿಟಕಿಗಳ ಬೆಳಕ ಮೂಲೆಯಲ್ಲಿ ಕುಟ್ಟಲು ಕೂರುತ್ತಿದ್ದೆ. ಸ್ವಲ್ಪ ಸಮಯ ನನ್ನ ಸೆಕೆ ಕಳೆಯುತ್ತ, ಕೆಲಸದಲ್ಲೆದ್ದ ದೂಳು ದೂರ ಹಾರುವಂತೆ ಬೆನ್ನ ಬದಿಗೆ ಹಳೆಯ ಪೆಡೆಸ್ಟಲ್ ಫ್ಯಾನ್ ಇಟ್ಟುಕೊಂಡಿದ್ದೆ. ಅದಕ್ಕೂ ತಾಳ್ಮೆ ತಪ್ಪಿರಬೇಕು, ಕೆಲವು ದಿನಗಳಲ್ಲೇ ಸ್ತಬ್ದವಾಯ್ತು. ಅದನ್ನು ರಿಪೇರಿ ಮಾಡಿಸುವ ಚಿಂತೆ ಬಿಟ್ಟು (ಸಮಯ ಹಾಳಾಗಬಾರದಲ್ಲಾ!) ಬೆವರು ಹರಿಸುತ್ತ ಕುಟ್ಟಪ್ಪ ಕೊರೆಯಪ್ಪ ಉಜ್ಜಪ್ಪರನ್ನು ಮುಂದುವರಿಸಿದ್ದೆ. ನಡು ನಡುವೆ ಮಡದಿ ದೇವಕಿ “ಚಾ, ಸ್ನಾನಾ, ಊಟಾ, ಕಾಫೀ, ವಾಕಿಂಗೂ….” ಬೊಬ್ಬೆ ಹಾಕದಿದ್ದರೆ ನಾನು, ಲಹರಿ ಸಿಳ್ಳೆಗಾನದೊಡನೆ ಮರಕುಟ್ಟುವುದರಲ್ಲಿ ಕಳೆದೇ ಹೋಗುತ್ತಿದ್ದೆನೇನೋ. ಹೀಗೆ ಹೆಚ್ಚು ಕಮ್ಮಿ ಎರಡು ತಿಂಗಳ ಪ್ರೀತಿಯ ಕಾಯಕದ ಕೊನೆಯಲ್ಲಿ ರೂಪುತಳೆದಿತ್ತು – ವಿವಿಧತೆಯಲ್ಲಿ ಏಕತೆ!

ನಿಜ ಕಾಂಡದ ಮೋಟನ್ನು ಬುಡವಾಗಿಸಿ, ಮೂರು ಗುಪ್ಪೆಗಳ ಕಾಲು ಮಾಡಿದ್ದೆ. ಮೇಲುಳಿದ  ಅಂಶದಲ್ಲಿ ಹಲವು ಬಳ್ಳಿಯೋ ಬೇರೋ ಹಗ್ಗಗಳೋ ಗಾಢ ಹೆಣಿಗೆಯಲ್ಲಿರುವ ಅಂದಾಜು ರೇಖೆಗಳನ್ನೆಳೆದೆ. ಮತ್ತೆ ಅವನ್ನನುಸರಿಸಿ ಚಕ್ಕೆ ಹಾರಿಸುತ್ತಾ ಸಾಗಿದೆ. ಧಾರೆಗಳು ಕವಲಾದಂತೆ, ಒಂದನ್ನೊಂದು ಹೆಣೆದುಕೊಂಡಂತೆ, ಹೇಗೆಂದರೆ ಹಾಗೆ ಬಳುಕಿದಂತೆಲ್ಲಾ ರೂಪಿಸಿದೆ.  ಅಲ್ಲಿಲ್ಲಿ ದೊಡ್ಡ ಸೆರೆಗಳನ್ನು ತೆರೆದು, ಅವು ಈ ಮೈಯಿಂದ ಆ ಮೈಗೂ ಹೊಕ್ಕು ಹೊರಟಂತೆಯೂ ರೂಪಿಸಿದೆ. ಅಂಥಲ್ಲಿ ಹೆಚ್ಚಾಗಿ ಮೊದಲು ಭೈರಿಗೆ ಹಾಕಿ ದಿಕ್ಕು ಸ್ಪಷ್ಟ ಮಾಡಿಕೊಳ್ಳುತ್ತಿದ್ದೆ ಮತ್ತೆ ವಿಸ್ತರಿಸುತ್ತಿದ್ದೆ. ಮುಖ್ಯವಾಗಿ ಬೊಡ್ಡೆಯ ಏಕಬಂಧದಿಂದ ಯಾವುದೇ ಧಾರೆ ಕಳಚಿಹೋಗದಂತೆ, ಆದಿ ಅಂತ್ಯ ಇಲ್ಲದಂತಾ ಹದ ಉಳಿಸಿಕೊಂಡೆ. ಸೀಳಿ ಹೋದ ಪಕ್ಕೆ ಮತ್ತು ಸಿಗಿದ ಬೇರ ಕೊನೆಗಳಲ್ಲೂ ಗಟ್ಟಿ ಭಾಗಗಳನ್ನು ಉಳಿಸಿ, ಅದರ ಓರೆಕೋರೆಗಳಿದ್ದಂತೆ ನಯಗೊಳಿಸಿದೆ. ಇಲ್ಲೂ ಲಟಪಟತ್ವದಲ್ಲಿ ‘ಕಸ’ (ಅನಾವಶ್ಯಕ ಭಾಗ) ಕಳಚುತ್ತಾ (ಹಿಂದೆ ‘ಜೀವಾನಿ’ಯಲ್ಲಿ ಹೇಳಿದಂತೇ) ಎರಡು ಬಾರಿ ಉಳಿಗಳನ್ನು ಕಮ್ಮಾರಸಾಲೆಗೆ ಒಯ್ದು ಆರೈಕೆ ಮಾಡಿಸಿಕೊಂಡು ಬರುವುದೂ ಆಗಿತ್ತು. ಒಳಒಳಗಿನ ಚಕ್ಕೆ ಎಬ್ಬಿಸುವ ಉತ್ಸಾಹದಲ್ಲಿ ಬೆರಳು ಅರಚಿಕೊಳ್ಳುವುದು, ಚೂರಿಯೋ ಉಳಿಯೋ ಜಾರಿದಾಗ ಕೈಯಲ್ಲಿ ಮೂಡುವ ಗೀರು ಗಾಯಗಳು, ಅದೃಷ್ಟಕ್ಕೆ ಗಂಭೀರವಾಗಲಿಲ್ಲ!

ವಿವಿಧ ಧಾರೆಗಳ ಮೊತ್ತ ಅತ್ಯುನ್ನತಿಯಲ್ಲಿ ಒಂದು ಹಸ್ತದ ರೂಪು ಪಡೆಯಿತು. ಅದರ ಉದ್ದದ ಕೊನೆಯನ್ನು ಚಾಚಿದ ತೋರು ಬೆರಳಿನಂತೆಯೂ ತುಸು ತಗ್ಗಿನ ಕೊನೆಯನ್ನು ವಿಸ್ತರಿಸಿದ ಹೆಬ್ಬೆರಳಿನಂತೆಯೂ ರೂಪಿಸಿದಾಗ ಎಡ ಹಸ್ತವೇ ಆಯ್ತು. ಹಾಗೆ ಮೂಡಿದ ಅಂಗೈ ಭಾಗದಲ್ಲಿನ ಅಂಶಗಳಿಗೆ ತುಸುವೇ ಡೆಂಟ್‍ಫಿಲ್ (ರಾಸಾಯನಿಕ ಅಂಟು) ತುಂಬಿ ಮಡಚಿದ ಮೂರು ಬೆರಳುಗಳಂತೆ ಕಾಣಿಸಿದೆ. ಅಲ್ಲಿಗೆ ಅಷ್ಟೂ ವಿವಿಧ ಧಾರೆಗಳು ಏಕತೆಯನ್ನು ಸಾರುವ ಶಿಲ್ಪವಾಗಿ ವಿಕಸಿಸಿತ್ತು. ಆದರೆ ಬೊಡ್ಡೆ ಸ್ವಂತ ಕಾಲ ಮೇಲೆ ನಿಲ್ಲಲೊಂದು ಊರುಗೋಲಿನ ಅನಿವಾರ್ಯವಿತ್ತು. ಅದಕ್ಕೆ ಪ್ರತ್ಯೇಕ ಹಲಸಿನ ಕೊಂಬೆಯೊಂದನ್ನು ಬಳಸಿದೆ. ಆ ಸ್ತಂಭವನ್ನು ತುಸು ವಾಚ್ಯವಾಗುವಂತೆ ‘ಸಂವಿಧಾನ’ ಎಂದೇ ರೂಪಿಸಿದ್ದೇನೆ. ಬೊಡ್ಡೆ ಹಾಗೂ ಊರುಗೋಲನ್ನು L ಪಟ್ಟಿಯಿಂದ ಒಂದಾಗಿಸಿ, ತಳಕ್ಕೆ ಪುಟ್ಟ ಚಕ್ರಗಳಿರುವ ಎರಡು ಹಲಿಗೆಗಳ ವಿಶಿಷ್ಟ ಮಣೆಯ ಬಂಧವೂ ಕೊಟ್ಟು ಮುಗಿಸಿದೆ.

ಏಕದಿಂದ ಅನೇಕ

ಮರದ ‘ಜಾಲರಿ’ಯ ಯಶಸ್ಸಿನೊಡನೆ ಸರಪಳಿ ಮಾಡುವ ಕೆಲಸಕ್ಕಿಳಿದೆ. ಇದಕ್ಕೆ ಮೊದಲು ಒದಗಿದ ಮೂಲ ಸಾಮಗ್ರಿ – ಸಣ್ಣ ರಕ್ತಚಂದನದ ಕೊರಡು. ದೇವಕಿ ತವರ್ಮನೆಯಿಂದ ಭಾರೀ ಹಿಂದೆಯೇ ತಂದು, ಏನೂ ಮಾಡದೆ ಮೂಲೆ ಸೇರಿದ್ದ ಆ ಕೊರಡಿನ ಅದರ ತೊಗಟೆ ಕೀಸಿ, ಸಣ್ಣಪುಟ್ಟ ಮೋಟು ತಗ್ಗುಗಳಿಗೆ ಅರ ಹಾಕಿದೆ. ಅದು ಸುಮಾರು ೨೦ ಇಂಚು ಉದ್ದ, ಹತ್ತಿಂಚು ಸುತ್ತಳತೆಯ ಮೂಲ ರೂಪ. ಅರ ಹಾಕಿದಾಗ ಅದರಲ್ಲಿ ಸಿಕ್ಕ ಅಪ್ಪಟ ಕೆಂಬಣ್ಣದ ಹುಡಿಯಂತೂ ನನಗೆ ಕೊನೆಯಲ್ಲಿ ಚೆಂಬೊನ್ನಿನ ವಿಜಯ ಮಾಲೆಯೇ ಬರಲಿದೆ ಎಂದನ್ನಿಸಿತ್ತು. ಹಾಗಾಗಿ….

ಸೂಕ್ಷ್ಮ ಲೆಕ್ಕಾಚಾರ ಹಾಕಿ, ಕೊರಡಿನ ನಾಲ್ಕೂ ಮಗ್ಗುಲುಗಳಲ್ಲಿ ಸುಮಾರು ಮುಕ್ಕಾಲು ಇಂಚು ಅಂತರದ ಜೋಡಿ ರೇಖೆಗಳನ್ನೆಳೆದೆ. ಮತ್ತೆ ಅವುಗಳಲ್ಲಿ ಒಂದು ಜೋಡಿಯನ್ನು ಮಾತ್ರ ಆಧಾರವಾಗಿ ಕಲ್ಪಿಸಿಕೊಂಡು, ಸರಪಳಿಯ ಗೊಣಸುಗಳ (ಮುಕ್ಕಾಲಿಂಚು ತೋರ ದಕ್ಕುವಂತಾ ಬಳೆಗಳ ರೂಪ) ಚಿತ್ರಕ್ಕಿಳಿದೆ. ಒಂದು ನೀಟ, ಒಂದು ಅಡ್ಡ. ಅಲ್ಲೂ ಮೊದಲ ಗೊಣಸಿನ ಅರ್ಧದಿಂದ ಎರಡನೇದು, ಮತ್ತದರ ಅರ್ಧದಿಂದ ಮೂರನೇದು…. (ರೇಖಾಚಿತ್ರ ಗಮನಿಸಿ)  ಕೆಲಸ ಸುಲಭ ಮಾಡಿಕೊಳ್ಳಲು ಮೊದಲಲ್ಲೇ ಉದ್ದದ ಎಲ್ಲಾ ಅರ್ಧ ಕತ್ತರಿಕೆಗಳಿಗೆ ಉಳಿ ಹಾಕಿದೆ. ಮತ್ತೆ ಅಡ್ಡದ ಅರ್ಧ ಕತ್ತರಿಕೆಗಳಿಗೆ ಗರಗಸ ಪ್ರಯೋಗಿಸಿದೆ. ಒಂದು ಹಂತದಲ್ಲಿ ಗೊಣಸುಗಳ ನಡುವಿನ ಪರಸ್ಪರ ಪ್ರತ್ಯೇಕತೆಯನ್ನು ಸಪುರ ಉಳಿಯಲ್ಲಿ ಕೆತ್ತಲಾರಂಭಿಸಿದ್ದೆ. ಆ ಹಂತದಲ್ಲಿ ಕೊರಡಿನ ಉದ್ದಕ್ಕೂ ತಿರುಳನ್ನು ಕಾಂಡಕೊರಕ ಕೀಟ ತಿಂದು ಉಂಟು ಮಾಡಿದ್ದ ಟೊಳ್ಳು ಪ್ರಕಟವಾಯ್ತು. ನಾಂದಿಯಲ್ಲಿ ಶುಭಶಕುನ ನಂಬಿದ್ದಕ್ಕೆ ಒಳ್ಳೇ ಮಂಗಳಾರತಿ! ನಿರಾಶೆಯಲ್ಲೇ…

ಎರಡನೇ ಪ್ರಯತ್ನಕ್ಕೆ ನಮ್ಮದೇ ಅಕೇಸಿಯಾ ಕುಂಟೆಯಲ್ಲೊಂದನ್ನು ಆರಿಸಿಕೊಂಡೆ. ಇದ್ದುದರಲ್ಲಿ ಸಣ್ಣ, ಅಂದರೆ ಸುಮಾರು ೨೧ ಇಂಚು ಸುತ್ತಳತೆ ಹಾಗೂ ಮೂರಡಿ ಉದ್ದದ ಕುಂಟೆ. ಹಳೆಯ ಲೆಕ್ಕದಂತೇ ಅಂದಾಜು ಗೀಟುಗಳನ್ನೆಳೆದು, ಉಳಿ, ಗರಗಸ ಪ್ರಯೋಗಿಸಿ ಒಂದು ಹಂತಕ್ಕೆ ಬಂದಾಗ ನನ್ನ ಪ್ರಾಯೋಗಿಕ ಅನುಭವದ ಕೊರತೆ ಸ್ಪಷ್ಟವಾಯ್ತು. ಉರುಟು ಬಳೆಗಳನ್ನೇ ನನ್ನ ಕೆಲವೇ ಶಸ್ತ್ರಗಳಲ್ಲಿ ಕೊರೆದು ಸ್ವತಂತ್ರಗೊಳಿಸುವುದು ಅಸಾಧ್ಯವೇ ಇತ್ತು. ಯೋಜನೆಯಲ್ಲೇ ರಾಜೀ ಮಾಡಿಕೊಂಡೆ. ಬುಡದಿಂದ ತಲೆಯವರೆಗೆ ನಾಲ್ಕು ಬಳೆಗಳದ್ದೇ ಒಂದು ಕಾಂಡ. ಅದರಲ್ಲಿ ಪ್ರತಿ ಬಳೆಗೊಂದು ಬಳೆ ಮತ್ತು ಎರಡರ ನಡುವಿಗೊಂದು ಬಳೆಯಂತೆ ಏಳು ಬಳೆಗಳು ರೂಪುಗೊಂಡವು. ಮರ ಮುರಿದು ಹೋಗದಂತೆ ಆ ಬಳೆಗಳನ್ನು ಪ್ರತ್ಯೇಕಿಸುವುದು, ಹಾಗೆ ಉಂಟಾದ ವಿಕಾರವನ್ನು ಕಡಿಮೆ ಮಾಡುವುದು ಮತ್ತು ಅವುಗಳ ಪೂರ್ಣ ಆವೃತ್ತಕ್ಕೆ ಅವಕಾಶ ಕಲ್ಪಿಸುವುದು ತುಂಬಾ ತಾಳ್ಮೆ ಕೇಳುವ ಕೆಲಸ. ಹಾಗೂ ಎರಡು ಮೂರು ಬಳೆಗಳು ಎಲ್ಲೋ ಒಂದು ಕಡೆ ಬಿರಿದದ್ದಿದೆ. ಅವಕ್ಕೆಲ್ಲ ಅನಿವಾರ್ಯವಾಗಿ ಫೆವಿಕಾಲಿನ ಅಂಟು ಕೊಟ್ಟು ಮುಗಿಸಿದೆ.

 

ಎರಡರ ಫಲಶ್ರುತಿ

ನನ್ನ ಕಲ್ಪನೆಯಲ್ಲಿ, ಹಲಸಿನ ಬೊಡ್ಡೆಯ ಶಿಲ್ಪದ ಧಾರೆಗಳು ನಮ್ಮ ದೇಶದ ವಿವಿಧ ವಲಯ, ವರ್ಣ, ಧರ್ಮ, ಭಾಷೆ, ಲಿಂಗ, ವಯಸ್ಸು, ವಿದ್ಯೆ…. ಎಂಬಿತ್ಯಾದಿ ವೈವಿಧ್ಯವನ್ನು ಪ್ರತಿನಿಧಿಸುತ್ತವೆ. ಅವುಗಳ ಮೂಲ, ಕವಲು, ಸಮ್ಮಿಲನ, ಗಾತ್ರ, ಬಂಧ, ನಶಿಸಿದ ಕೊನೆಗಳು, ಹೊಕ್ಕು ಹೊರಟ ಸಂದುಗಳೆಲ್ಲ ಪರಸ್ಪರ ಹೊಂದಿಕೊಂಡು ಏರಿ, ಅತ್ಯುನ್ನತಿಯಲ್ಲಿ ಒಂದು ಎನ್ನುವುದನ್ನೇ ಚಾಚಿಕೊಂಡ ತೋರು ಬೆರಳು ಸಾರುತ್ತದೆ. ಅದು ಭಾರತ. ಈ ಬಹುತ್ವದ ಐಕ್ಯಕ್ಕೆ ಸಮರ್ಥ ಊರುಗೋಲು – ನಮ್ಮ ಸಂವಿಧಾನ. ಹಾಗೇ….

ಇಂದಿನ ಭಾರತವೆಂಬ ಪರ್ಯಾಯ ದ್ವೀಪ ಹಲವು ತುಣುಕುಗಳಲ್ಲಿ, ಇಲ್ಲೇ ವಿಕಸಿಸಿದ ಪುಡಿ ಪಾಳೇಗಾರರಿಂದ ತೊಡಗಿ ಮಹಾನ್ ಚಕ್ರವರ್ತಿಗಳವರೆಗೂ ಆಳಿಸಿಕೊಂಡಿದೆ. ಹೊರಗಿನಿಂದ ಬಂದ ಆಕ್ರಮಣಕಾರಿಗಳ ಶೋಷಣೆಗೂ ಗುರಿಯಾದದ್ದಿದೆ. ಹಾಗೆ ಕಾಲಕಾಲಕ್ಕೆ ಗಡಿರೇಖೆಗಳು ಏನೇ ಬರೆದರೂ ಅವೆಲ್ಲವುಗಳ ನಾಡಿ ಒಂದು ಎನ್ನುವುದನ್ನು ಪರೋಕ್ಷವಾಗಿ ಮನಗಾಣಿಸಿದವರು ಬ್ರಿಟಿಷರು. ಸ್ವತಂತ್ರ ಭಾರತ ಅದೇ ಪ್ರಥಮ ಎನ್ನುವಂತೆ ರೂಪುಗೊಂಡಿತು. ಹೀಗೆ ಸಿದ್ಧಿಸಿದ ‘ಏಕ’ದ ನಿಜ ಸ್ವಾರಸ್ಯವಿರುವುದು, ಆರೋಗ್ಯವಿರುವುದು, ಪರಸ್ಪರ ಸಹಿಷ್ಣುವಾದ ‘ಅನೇಕ’ದಲ್ಲಿ ಎನ್ನುವುದನ್ನು ನನ್ನ ಒಂದೇ ಕೊರಡಿನಲ್ಲಿ ಮೂಡಿದ ಹನ್ನೊಂದು ಬಳೆಗಳ ಶಿಲ್ಪ ಸಂಕೇತಿಸುತ್ತದೆ. ನೆನಪಿರಲಿ, ಯಾವುದೇ ಬಳೆ ಇನ್ನೊಂದರ ಪ್ರತಿಕೃತಿಯಲ್ಲ ಮತ್ತು ತನ್ನಲ್ಲೇ ಸುರೂಪಿಯೂ ಆಗಬೇಕಿಲ್ಲ. ಹಾಗೆಂದು ಅವನ್ನು ಕಳಚುವುದು ಅಥವಾ ಕುಶಿ ಬಂದಂತೆ ಕುಣಿಸುವುದೂ ತಪ್ಪು. ವಿವಿಧತೆಯಲ್ಲಿ ಏಕತೆ ತಂದ ಬಂಧದ್ದೇ ಇನ್ನೊಂದು ರೂಪ ಏಕತೆಯಲ್ಲಿ ಅನೇಕತೆ!

ಅಬದ್ಧ ಬೊಡ್ಡೆ, ಅಕೇಸಿಯಾ ಕುಂಟೆಯನ್ನು ಏನೋ ಮಾಡಿ ಶಿಲ್ಪದ ಸ್ತರಕ್ಕೇರಿಸಿದ ತೃಪ್ತಿ ನನ್ನದು. ಅವನ್ನು ಇಲ್ಲಿಗೇ ಬಂದು ಅಥವಾ ಕಾಲಕಾಲಕ್ಕೆ ನಾನು ಹಾಕಿದ ಚಿತ್ರಗಳನ್ನು ನೋಡಿ ಹಲವರು “ಕೆತ್ತನೆಯನ್ನು ಇನ್ನೂ ಪರಿಷ್ಕರಿಸುವ, ತುಸುವೇ ರಾಸಾಯನಿಕ ಹೊದಿಕೆಗಳನ್ನು ಕೊಟ್ಟು ಬೆಳಗಿಸುವ” ಸಲಹೆಗಳನ್ನು ಒಳ್ಳೆಯ ಮನಸ್ಸಿನಲ್ಲೇ ಕೊಡುವುದಿದೆ. ಹೌದು, ಧಾರೆ ಅಥವಾ ಬಳೆಗಳನ್ನು ಇನ್ನಷ್ಟು ಉರುಟು, ನಯ, ವಾರ್ನಿಷ್, ಪಾಲಿಶ್ ಕೊಡಬೇಕೆಂದು ನನಗೂ ಅನ್ನಿಸುವುದಿದೆ. ಆದರೆ ಮೂಲದಲ್ಲಿ ನಾನು ಯಂತ್ರಗಳನ್ನು ಉಪೇಕ್ಷಿಸಿದಂತೇ, ಕೆಲಸದ ಯಾಂತ್ರಿಕತೆಯನ್ನೂ (ಮಾಡಿದ್ದನ್ನೇ ಮಾಡುವುದು) ಪ್ರೀತಿಸದಿರುವುದರಿಂದ ಎಲ್ಲೋ ಒಂದು ಹಂತಕ್ಕೆ “ಇಷ್ಟು ಸಾಕು” ಎಂದು ಕೈಬಿಡುತ್ತೇನೆ. (ಮುಂದೊಂದು ಕಾಲದಲ್ಲಿ, ನನಗೇ ‘ಒಳ್ಳೇ ಬುದ್ಧಿ’ ಬಂದು ಮತ್ತೆ ಕೈಗೆತ್ತಿಕೊಂಡರೆ ಪ್ರಶ್ನಿಸಬೇಡಿ!) ಕಾರಣ ಸರಳ – ಇವನ್ನು ನಾನು ಯಾರದೇ ದಾಕ್ಷಿಣ್ಯಕ್ಕೋ ಪ್ರದರ್ಶನಕ್ಕೋ ಮಾರಾಟಕ್ಕೋ ಮಾಡುವುದಲ್ಲವಲ್ಲ. ಇದೇನಿದ್ದರೂ ಪೂರ್ಣ ಸ್ವಾಂತ ಸುಖಾಯ! “ಹಾಗಿದ್ದರೆ ಈ ಚಿತ್ರ ಮತ್ತು ಬರವಣಿಗೆಯ ಪ್ರಕಟಣೆಗಳು ಯಾಕೆ” ಎಂದೂ ನೀವು ಕೇಳಬಹುದು. ಅದಕ್ಕೆ ನನ್ನೆಲ್ಲ ಚಾರಣ, ಉದ್ಯಮ, ಪರಿಸರ ಮುಂತಾದ ಚಟುವಟಿಕೆಗಳ ಹಿಂದಿರುವ ಉದ್ದೇಶವನ್ನೇ ಮತ್ತೆ ಹೇಳಬೇಕಾಗುತ್ತದೆ. ಕೇವಲ ಹೊಟ್ಟೆಪಾಡು, ಸುಲಭ ಹಣ, ಶ್ರಮವಿಲ್ಲದೇ ಸುಖ ಎಂದೆಲ್ಲಾ ಬಯಸುವ ಮಂದಿಯನ್ನು ನನ್ನ ಮಿತಿಯಲ್ಲಿ ಎಚ್ಚರಿಸುವುದು ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ದುಡಿಯುವ ಇತರ ಬಹುಮಂದಿಯ ಉಪಯೋಗಕ್ಕೆ, ನನ್ನ ಸಣ್ಣ ಅನುಭವ ಮೆಟ್ಟಿಲಾಗಿಯೋ ಪ್ರೇರಕವಾಗಿಯೋ ಮುಕ್ತವಿರಲಿ ಎಂಬ ಭಾವ!