ಅಧ್ಯಾಯ – ಎರಡು ಲೇಹ್-ಲದ್ದಾಕ್ ದಾರಿಯಲ್ಲಿ…)
ವೈಷ್ಣೋದೇವಿ ಮಂದಿರದ ಎತ್ತರದಿಂದ…
ಚಿಕ್ಕ ತಿರುಪತಿ, ದಕ್ಷಿಣದ ಕಾಶಿ… ಎಂದೆಲ್ಲಾ ‘ಭಕ್ತ್ಯುದ್ದಿಮೆ’ ಎಲ್ಲಿನದೋ ಖ್ಯಾತಿಯನ್ನು ಎಲ್ಲಿಗೋ ಆರೋಪಿಸುವುದು ಕೇಳಿದ್ದೇವೆ. ಹಾಗೇ ಮನಾಲಿ ಸಮೀಪಿಸುತ್ತಿದ್ದಂತೇ ಕುಲು ಕಣಿವೆಯಲ್ಲೊಂದು ಶ್ರೀ ದೇವೀ ಮಹಾತೀರ್ಥ ಜತೆಗೇ ಮಾತಾ ವೈಷ್ಣೋ ದೇವಿಯನ್ನು ಸೇರಿಸಿಕೊಂಡಿರುವುದನ್ನು ಕಂಡೆವು, ನಾವಲ್ಲಿ ಟೀಟೀ ಇಳಿದು, ತುಸು ವಿವರದಲ್ಲೇ ನೋಡಿದೆವು. ನಾವು ಬಂದ ದಾರಿಯ ಬಲ ಮಗ್ಗುಲಿನಲ್ಲಿ, ಹಿಂದೆ ಹೇಳಿದಂತೆ ನದಿ, ಸಣ್ಣಪುಟ್ಟ ಮೋಜಿನ ಕೂಟಗಳಿದ್ದರೆ, ಎಡ ಮಗ್ಗುಲಿನಲ್ಲಿ ಸಾಕಷ್ಟು ಎತ್ತರಕ್ಕೆ ಪ್ರಾಕೃತಿಕ ಬಂಡೆಯೇ ಹಬ್ಬಿದೆ. ಅದರಲ್ಲಿ ಯುಗಾಂತರಗಳ ನೀರು, ಶೀತಗಳ ಕೊರೆತದಲ್ಲಿ ಸಣ್ಣ ಪುಟ್ಟ ಪೊಳ್ಳು, ವಕ್ರತೆಗಳು ಮೂಡಿವೆ. ಅದನ್ನು ಸೇರಿಸಿಕೊಂಡು ದೃಢತೆ ಮತ್ತು ನಾಗರಿಕ ಮುಖ ಕೊಟ್ಟು, ಸುಮಾರು ಐವತ್ತಡಿ ಉದ್ದ ಮತ್ತು ನಾಲ್ಕೈದು ಅಂತಸ್ತಿನ ಎತ್ತರಕ್ಕೆ ಹಬ್ಬಿದೆ ದೇವಳ ಸಂಕೀರ್ಣ.
ಮಂದಿರದ ಒಂದು ಅಂತಸ್ತಿನ ಗುಹೆಯಲ್ಲಿರುವ ‘ಶ್ರೀದೇವಿ’ಯ ದರ್ಶಕ್ಕೆ ಭಕ್ತಾದಿಗಳು ಮೊಣಕಾಲೂರಿಯೇ ಹೋಗುವ ಎತ್ತರವಿದೆ. ಉಳಿದಂತೆ ಅಲ್ಲಿ ವಿವಿಧ ಅಂಕಣಗಳಲ್ಲಿ ರಾಮಕೃಷ್ಣ ಪರಮಹಂಸಾದಿಗಳ ಪಟ, ಶಿವ ಮುಂತಾದ ದೇವ ಬಿಂಬಗಳು ವಿಶೇಷ ಅಲಂಕಾರಗಳೊಡನೆ ಮೆರೆದಿವೆ, ಆರಾಧನೆಗಳು ನಡೆದಿವೆ. ಮೆಟ್ಟಿಲ ಸರಣಿ, ಮರದ ಗೋಪುರ, ಮಂಟಪ, ಸೂಕ್ಷ್ಮ ಮರಗೆತ್ತನೆಯ ದ್ವಾರ, ಮಾರಾಟ ಮಳಿಗೆ, ಶೌಚಾದಿ ಆವಶ್ಯಕತೆಗಳನ್ನೆಲ್ಲಾ ಭಾರೀ ಜಾಣ್ಮೆಯಲ್ಲಿ ಮಂದಿರ ಸೇರಿಸಿಕೊಂಡಿದೆ. ಅತ್ಯಂತ ಮೇಲಿನ ಮಾಳಿಗೆಯನ್ನು ಕರ್ಮಶಾಲೆ (ವರ್ಕ್ಶಾಪ್) ಮಾಡಿಕೊಂಡು, ಬಡಗಿ, ಶಿಲ್ಪಿಗಳು ಇನ್ನಷ್ಟು ಸೇರ್ಪಡೆಗಳ ಕುಸುರಿ ನಡೆಸಿರುವುದನ್ನೂ ಕಂಡೆವು. ಕಾಶ್ಮೀರದ ಮೂಲ ವೈಷ್ಣೋದೇವಿ ಮಂದಿರಕ್ಕೆ ಹೋಗುವ ದಾರಿ, ದೇವಿ ಮಹಿಮೆ ಮತ್ತು ಮನುಷ್ಯ ರಚನೆಗಳ ಬಲ ಸೇರಿಯೂ ಈಚೆಗೆ ಕುಸಿದು ಬಿದ್ದ ವಿವರಗಳು ನಮಗೆ ತಿಳಿದೇ ಇದೆ. ಇನ್ನು ಈ ಕುಲು ದೇವಾಲಯ ಸಂಕೀರ್ಣದ ಬಾಳ್ತನ ಹೇಗೋ! ಸಂಕೀರ್ಣದದಿಂದ ತುಸು ಮುಂದೆ ಪ್ರಾಕೃತಿಕ ದರೆ, ಹಸಿರು ಹರಿದುಕೊಂಡು ಕುಸಿದಿರುವುದು ನೋಡಿದರೆ, ಈ ‘ದೇವರ ಕರ್ಮಬಂಧ’ ಎಂದು ಕಾಡುತ್ತದೋ ಎಂದು ಅನ್ನಿಸಿದ್ದು ತಪ್ಪಲ್ಲ!
ಮನಾಲಿ ದಾರಿಯಲ್ಲಿ…
ದೇವೀಮಂದಿರ ಬಿಡುವಾಗ ಗಂಟೆ ಏಳಾಗಿತ್ತು. ಪ್ರಾದೇಶಿಕ ದಿನಮಾನದಂತೆ ಮುಸ್ಸಂಜೆಯ ಬೆಳಕಿತ್ತು. ನಾವು ಮನಾಲಿ ತಲಪುವಾಗ ಗಂಟೆ ಒಂಬತ್ತಾಗಿತ್ತು. ನನ್ನ ಪದವಿಪೂರ್ವ ಮತ್ತು ಸ್ನಾತಕ ವಿದ್ಯಾರ್ಥಿ ಜೀವನದಂದು (೧೯೬೮-೭೨) ಎನ್ಸಿಸಿ ಮೂಲಕ ದುರ್ಗಮ ಮನಾಲಿಗೆ ಹೋಗಿ, ಕಠಿಣ ಪರ್ವತಾರೋಹಣ ಶಿಕ್ಷಣ ಪಡೆಯಬೇಕೆಂದು ಹಪಹಪಿಸಿ, ಅವಕಾಶ ಸಿಗದೆ ನಿರಾಶನಾಗಿದ್ದೆ. ಆದರೆ ಇಂದು, ಪ್ರವಾಸೋದ್ದಿಮೆಯ ಉತ್ತುಂಗದಲ್ಲಿ, ಅರ್ಥಾತ್ (ಹಣ ಕೊಟ್ಟರೆ) ಎಂಥವರನ್ನೂ ಸುಖ ಸುಪ್ಪತ್ತಿಗೆಯಲ್ಲಿ ಕರೆಸಿ ಕೊಳ್ಳುವ ಮನಾಲಿ ತಲಪಿದ್ದೆ. (ವಿಡಿಯೋ ತುಣುಕಿನಲ್ಲಿ ಬಾಲಕೃಷ್ಣರ ಮಾತು ಕೇಳಿ.) ಅದೂ ಕೇವಲ ಲದ್ದಾಕಿಗೆ ಹೋಗುವ ದಾರಿಯಲ್ಲಿ ಕೇವಲ ರಾತ್ರಿ ತಂಗು ನಿಲ್ದಾಣವಾಗಿ ಮಾತ್ರ.
ಮನಾಲಿ ಪೀಠಿಕೆ…
ಪರಿಸರ, ನಗರಯೋಜನೆಗಳ ಹಂಗಿಲ್ಲದೇ ಕಿಕ್ಕಿರಿದ ಗಗನಚುಂಬೀ ಹೋಟೆಲ್ಲುಗಳ ಇಕ್ಕಟ್ಟಿನ ಗಲ್ಲಿಯೊಳಗೆ ನಮ್ಮ ವಾಹನ ನುಸಿದು, ಸಮಿತಾ ಗ್ರ್ಯಾಂಡ್ ಮೆಟ್ಟಿಲಲ್ಲೇ ಇಳಿಸಿತ್ತು. ಹಿತಕರ ಚಳಿ ಇದ್ದು, ವಿರಳವಾಗಿ ಮಂಜು ಸುರಿದಂತಿದ್ದರೂ ‘ಮಾರ್ಕೆಟಿಂಗ್ ಮರುಳ’ರ ಸೇವೆಗೆ ಪ್ರತ್ಯೇಕ ಆಟೋ/ಕಾರ್ ವ್ಯವಸ್ಥೆಯನ್ನೂ ಟ್ರಾವೆಲ್ ಫಾರ್ ಯೂ ಕೊಟ್ಟಿತ್ತು. ನಾನು ಹೋಗಲಿಲ್ಲ. ಹೊಸದೇ ರುಚಿ ವೈವಿಧ್ಯದೊಡನೆ ಸಿಕ್ಕ ಸುಗ್ರಾಸ ಭೋಜನದ ಕೊನೆಯಲ್ಲಿ ಬೆಚ್ಚನ್ನ ಸುಪ್ಪತ್ತಿಗೆಯಲ್ಲಿ ಹುಗಿದುಕೊಂಡವರಿಗೆ, ರಾತ್ರಿ ಕಳೆದದ್ದೇ ತಿಳಿಯಲಿಲ್ಲ!
ಕಿಕ್ಕಿರಿದ ಮನಾಲಿ…
ಬೆಳಿಗ್ಗೆ ಎಂದಿನಂತೆ ಬೇಗನೇ ಹೊರಟ ನಾವು, ನಮ್ಮದೇ ಗಲ್ಲಿಯ ವಿಸ್ತರಣೆಯನ್ನು ತುಸು ನಡೆದು ಶೋಧಿಸಿದ್ದೆವು. ಊರ ಪ್ರವಾಸೀ ಸಂಸ್ಕೃತಿಗೆ ತಕ್ಕಂತೆ ವಿಕಸಿಸಿದ್ದ ತೇಲ್ ಮಾಲೀಶ್ಗಾರರು ಅಲ್ಲಿಲ್ಲಿ ಕೂಗುತ್ತ ಸಾಗಿದ್ದರು. ನಯ, ಆಯ, ಅಳತೆ ಏನೂ ಇಲ್ಲದ ಕೆಟ್ಟ ರಸ್ತೆ. ಆದರೂ ಸಪುರ ಕೊಳವೆಗೆ ದಪ್ಪ ಬ್ರಷ್ ನುಗ್ಗಿಸಿದಂತೆ ಓಡಾಡುತ್ತಿದ್ದ ತರಹೇವಾರಿ ದ್ವಿಚಕ್ರಿಗಳು, ಕಾರು, ವ್ಯಾನು. ಕೆಲವೆಡೆಯಷ್ಟೇ ಬದಿಯಲ್ಲಿದ್ದ ಹರಕು ಮುರುಕು ಚರಂಡಿಯ ನಿರಂತರ ಹರಿವು, ಅಲ್ಲಲ್ಲಿ ರಸ್ತೆಗೂ ವ್ಯಾಪಿಸಿಕೊಳ್ಳುತ್ತ, ಮಡುಗಟ್ಟುತ್ತ ಸಾಗಿತ್ತು. ಅದು ಪರ್ವತನಾಡಿಗೆ ಸಹಜವಾದ ಶುದ್ಧ ನೀರೋ ಊರ ಕೊಳಚೆಯೋ ಎಂದು ಓಡುವ ವಾಹನಗಳು ಪರಿಚಯಿಸುವ ಸಾಧ್ಯತೆ ಹೆಚ್ಚಾದಾಗ, ನಾವು ಬೇಗನೆ ಹೋಟೆಲಿಗೆ ಮರಳಿದೆವು. ದಿನಕ್ಕೊಂದು ಭಿನ್ನ ಸ್ವಾದಿಷ್ಟ ತಿಂಡಿ, ಹಣ್ಣುಗಳನ್ನು ಒಡ್ಡುತ್ತಿದ್ದ ನಮ್ಮ ಪಾಕ ಪ್ರವೀಣರಿಗೆ ಧನ್ಯತೆ ಮುಟ್ಟಿಸಿ, ಪಟ ಸಂಗ್ರಹ ಹೆಚ್ಚಿಸಿಕೊಳ್ಳುವವರಿಗೆ ಜತೆಯಾಗಿ, ಹೊಸದೇ ವಾಹನಗಳ ಬರೋಣ ಕಾದೆವು.
ಕೊಳಚೆ ಮನಾಲಿ….
ಒಟ್ಟಾರೆ ನಮ್ಮ ಪ್ರವಾಸದ ದಾರಿಯ ಬಾಡಿಗೆ ವಾಹನಗಳಿಗೆ ಮೂರು ನಿಬಂಧನೆಗಳಿತ್ತು. ಸಾಮಾನ್ಯ – ದಿಲ್ಲಿ – ಹರ್ಯಾನ – ಹಿಮಾಚಲ ಪ್ರದೇಶದ ಗಡಿ, ಘಟ್ಟ ಅರ್ಥಾತ್ ಮನಾಲಿ ಮತ್ತು ಮುಂದೆ, ಕೊನೆಯದಾಗಿ ವರ್ಗೀಕೃತ – ಲದ್ದಾಕ್ ಮತ್ತು ಶ್ರೀನಗರ. ಆದರೆ ದಿಲ್ಲಿಯಿಂದ (ಬಾಲಕೃಷ್ಣರ ಪೂರ್ವ ಪರಿಚಿತ ಏಜನ್ಸಿ ಮೂಲಕ) ಬಂದಿದ್ದ ಚಾಲಕರು ಲದ್ದಾಕಿನವರೆಗೂ ತಮ್ಮನ್ನೇ ಉಳಿಸಿಕೊಳ್ಳುವಂತೆ ಪೂಸಿ ಹೊಡೆದಿದ್ದರು, ಚಂದೀಗಢದವರೆಗೂ ಆಗಬಹುದೇನೋ ಎಂದು ಅನ್ನಿಸಿತ್ತು, ಆದರೆ ಕುಲುವಿನಲ್ಲಿ ಆ ಮೂವರು, ನಮ್ಮ ಸಸ್ಯಾಹಾರಿ ಮತ್ತು ಅನ್ನ ಪ್ರಧಾನದ ಊಟಕ್ಕೆ ಸೇರದೇ ಹೊರಗುಳಿದರು. ಅಷ್ಟಕ್ಕೆ ಸುಮ್ಮನುಳಿಯದೆ, ಮುಂದೆ ಸಿಕ್ಕ ಮಾಂಸಾಹಾರಿ ಧಾಬಾದಲ್ಲಿ, (ಮೂರೇ ಜನ) ಊಟಕ್ಕೆ ನಿಂತು ದೊಡ್ಡ ತಂಡದ ಸಮಯ ಹಾಳು ಮಾಡಿದ್ದರು. ನ್ಯಾಯವಾಗಿಯೇ ಏಜನ್ಸೀ ಮನಾಲಿಯಲ್ಲಿ ಆ ಮೂವರನ್ನು ಉಚ್ಚಾಟಿಸಿ, ಹೊಸದೇ ಮೂವರನ್ನು ಪರಿಚಯಿಸಿತ್ತು. ಮುಂದೆ ಇವರೂ ಏನೋ ಚಾಲಾಕು ತೋರಿಸಿದ್ದಕ್ಕೆ, ಎರಡೇ ದಿನದಲ್ಲಿ ತಿರಸ್ಕೃತರಾಗಿ, ಲೇಹಿನಲ್ಲಿ ಬದಲೀ ಚಾಲಕರು ನಡೆಸಿದರು. ಕೊನೆಯ ಕಾಶ್ಮೀರ ವಲಯಕ್ಕೆ ನಿಯಮಗಳಾನುಸಾರ ನಾಲ್ಕನೇ ಬಳಗ ಒದಗುವುದಿತ್ತು, ಪ್ರಸಂಗವಶಾತ್ ಅನುಭವಿಸಲು ನಾವಿಬ್ಬರು ಇರಲಿಲ್ಲ.
ಅನಿವಾರ್ಯ ಮಾರ್ಗಕ್ರಮಣದ (ಮನಾಲಿ – ಲೇಹ್ ೪೩೦ ಕಿಮೀ) ಶ್ರಮ ಕಡಿಮೆ ಮಾಡಲು, ಮೂರನೇ ದಿನಕ್ಕೆ ಸಣ್ಣದೇ (೯೫ ಕಿಮೀ) ಗುರಿ ಇಟ್ಟುಕೊಂಡಿದ್ದರು – ಜಿಸ್ಪಾ. ಹಾಗಾಗಿ ವೀಕ್ಷಣಾ ರಂಗೇರಿಸಲೆನ್ನುವಂತೆ, ಮನಾಲಿ ಹೊರವಲಯದ ಹಿಡಿಂಬಾ (ಸುಮಾರು ೨ ಕಿಮೀ) ಮತ್ತು ವಸಿಷ್ಠ (೪ ಕಿಮೀ) ದೇವಾಲಯ, ಮಗ್ಗುಲಿನ ಜಲಪಾತಗಳನ್ನು ನೋಡಲು ಟೀಟೀ ಏರಿದ್ದೆವು. ಮನಾಲಿಯ ಗುಡ್ಡಗಾಡಿನ ಬಸ್ ನಿಲ್ದಾಣದವರೆಗೇನೋ ಹೋದೆವು. ಆದರೆ ಎರಡೂ ದೇವಳಗಳಿಗೆ ಆಟೋರಿಕ್ಷಾಕ್ಕಿಂತ ದೊಡ್ಡ ವಾಹನಗಳು ಹೋಗಲಾರವು ಎಂದು ತಿಳಿಯಿತು. ನಾವು ನಮ್ಮ ಗಂಟು ಗದಡಿಗಳನ್ನು ಟೀಟೀಯಲ್ಲೇ ಬಿಟ್ಟು ಆಟೋ ಹಿಡಿಯಲೂ ಸಿದ್ಧರಾಗಿದ್ದೆವು. ಅಗ ಆಟೋದವರೂ ದೇವಳಗಳನ್ನು ಸಮೀಪಿಸುವಲ್ಲಿನ ನೆಲದ ಸ್ಥಿತಿ ಬಗ್ಗೆ ಧೈರ್ಯ ತೋರಲಿಲ್ಲ. ಮತ್ತೆ ಪಕ್ಕಾ ಪರ್ವತಾರೋಹಣಕ್ಕೆ ನಮ್ಮ ಬಹುತೇಕ ಹಿರಿಯ, ಅದೂ ನಾಗರಿಕರ ತಂಡ ಹೇಳಿದ್ದಲ್ಲ ಎಂಬ ಕಾರಣಕ್ಕೆ ಪೂರ್ಣ ಕೈ ಬಿಟ್ಟೆವು, ಜಿಸ್ಪಾ ಚಲೋ ಮಂತ್ರವನ್ನೇ ನೆಚ್ಚಿದೆವು..
ಭೀಮಪ್ರಿಯೆ ಹಿಡಂಬಿ ಮತ್ತೆ ವಿಶ್ವಾಮಿತ್ರ ವೈರಿ ವಸಿಷ್ಠರ ದರ್ಶನ ತಪ್ಪಿದ್ದಕ್ಕೆ ಮನಸ್ಸು ಕುಗ್ಗಿತ್ತು. ಆದರೆ ಏತನ್ಮಧ್ಯೆ ಹಿಂದಿನ ನಮಗೆ ಎದುರು ಪ್ರವಾಹದಂತೆ ಬರುತ್ತಿದ್ದ ಭಾರೀ ಅಲಂಕಾರ ಮತ್ತು ವಿನ್ಯಾಸಗಳ, ಬಹುತೇಕ ವಾಲ್ವೋ (ಮನಾಲಿ – ದಿಲ್ಲಿ) ನಿಶಾಚರಿ ಬಸ್ಸುಗಳು ಅಲ್ಲಿ ಇಲ್ಲಿ ವಿರಮಿಸಿದ್ದು ಕಾಣ ಸಿಕ್ಕವು. ಅವೂ ಸೇರಿದಂತೆ ಮನಾಲಿ ನಗರದ ಸಂಚಾರ ಗೊಂದಲ, ಕೊಳಚೆ ಗುಡ್ಡೆ ಹಾಗೂ ದುರ್ನಾತಗಳಿಂದ ಬಿಡುಗಡೆಯಾದ್ದಕ್ಕೆ ಸಂತೋಷಿಸಿದೆವು. ಲೇಹ್ ಅಭಿಯಾನದ ಅಂತಿಮ ಚರಣ ಚುರುಕಾಗಿಯೇ ತೊಡಗಿತ್ತು.
ಸೊಲಾಂಗ್ ಪಾಸ್…
ಈ ಋತುಮಾನಕ್ಕೆ ತಕ್ಕಂತೆ ಸುದೂರದಲ್ಲಷ್ಟೇ ಕಾಣುತ್ತಿದ್ದ ಬೆಳ್ಳಿಮುಡಿ (ಹಿಮ) ಬೆಟ್ಟ ಸಾಲು ಹೆಚ್ಚು ಸ್ಪಷ್ಟವಾಗುವಂತೇ ನಮ್ಮ ಓಟವಿತ್ತು, ದಾರಿಯ ಇಕ್ಕೆಲಗಳಲ್ಲಿನ ಮಿಡಿ ಹೊತ್ತ ಸೇಬಿನ ಮರಗಳೂ ಸೇರಿದಂತೆ ವ್ಯಾಪಿಸಿದ್ದ ಹಸಿರು ಉಲ್ಲಾಸದಾಯಿಯಾಗಿತ್ತು, ಅವೆಲ್ಲವನ್ನೂ ಒಂದು ನೋಟಕ್ಕೆ ಹಿಡಿದಿಟ್ಟಂತೆ ಸೊಲಾಂಗ್ ಪಾಸಿನ ಮೋಜಿನ ಮೈದಾನ ಬಂದಾಗ ನಾವೂ ಸಾಕಷ್ಟು ಉದ್ದದ ವಿಹಾರ-ವಿರಾಮವನ್ನೇ ಅನುಭವಿಸಿದೆವು.
ಜಂಪಿಂಗ್…
ಪೈನ್ ಮರಗಳು ಮುತ್ತಿದ ಸಾಮಾನ್ಯ ಗುಡ್ಡದ ಸಾಲು, ತಪ್ಪಲಿನಲ್ಲಿ ಸಾಕಷ್ಟು ವಿಸ್ತಾರಕ್ಕೆ ಹಸಿರು ಹುಲ್ಲು ಹೊದ್ದ ಮೈದಾನ. ವಾಹನ ತಂಗುದಾಣ, ಶೌಚ ಸೌಕರ್ಯಗಳೊಡನೆ, ಸಣ್ಣ ಪುಟ್ಟ ತೀನಿ-ಪಾನೀಯಗಳ ಸಂತೆಯಿತ್ತು. ಉಳಿದಂತೆ ಒಂದು ಮಗ್ಗುಲಿನಲ್ಲಿ ಟ್ರಾಂಪೋಲೀನ್, ಸಣ್ಣ ಮಟ್ಟದ ಭಂಗೀ ಜಂಪ್, ಜಿಪ್ ಲೈನ್, ಯಾಕ್ ಮತ್ತು ಕುದುರೆ ಸವಾರಿ ನಡೆದಿತ್ತು. ಸಕಲ ಸಂಚಾರಿ (ಆಲ್ ಟೆರೇನ್ ವೆಹಿಕಲ್ಸ್) ನಿಲ್ಲಿಸಿಕೊಂಡು ಗಿರಾಕಿ ಕಾದಿದ್ದ ಸವಾರರನ್ನೂ ಕಳೆದಾಚೆಗೆ ತುಸು ಬೋಳುಮೈದಾನ. ಅದರಂಚಿನಿಂದ ತೊಡಗಿ ತೊಟ್ಟಿಲ ಸರಣಿ (ಸೋನ್ಮಾರ್ಗಿನಂತೇ) ಅಗೋಚರ ಬೆಟ್ಟದೆತ್ತರಕ್ಕೆ ಜನರನ್ನು ಒಯ್ದಿತ್ತು. ಆ ಸಾಲಿನಿಂಚ ತುಸು ಆಚೆ ಅಗೋಚರ ಎತ್ತರದಿಂದ, ಮರ ವಿರಳ ಬಾಣೆಯನ್ನೇ ಆಯ್ದುಕೊಂಡಂತೆ, ವಿರಳವಾಗಿ ಗಾಳಿ ಸವಾರರು (ಪ್ಯಾರಾ ಸೇಲರ್ಸ್) ಬರುತ್ತಿದ್ದರು.
ತೇಲಾಟ…
ತೊಟ್ಟಿಲಲ್ಲಿ ಏರಿದ ಕೆಲವರು, ಈ ಋತುಮಾನಕ್ಕೆ ಹೊಂದಿದಂತೆ ಗಾಳಿ ತೇಲಾಟದಲ್ಲಿ ಬುಡಕ್ಕೆ ಮರಳುವುದೂ ನಡೆದಿತ್ತು. ಚಳಿಗಾಲಗಳಲ್ಲಿ ಆ ಇಳುಕಲಿನಲ್ಲಿ ಹಿಮ ಜಾರಾಟವಂತೂ ಧಾರಾಳ ನಡೆಯುತ್ತದಂತೆ. ಹಿಮ ಜಾರಾಟಕ್ಕಿಳಿಯುವವರಿಗೆ ಅಪರ ಧೈರ್ಯ ಬೇಕು, ಅದರಲ್ಲಿ ಸಣ್ಣಪುಟ್ಟ ಏಳು ಬೀಳುಗಳಿದ್ದರೂ ವ್ಯಕ್ತಿ ಸ್ವತಂತ್ರವಾಗಿಯೇ ಇಳಿಯಬೇಕಾಗುತ್ತಿತ್ತು. (ಹಿಂದೆ ಸೋನಾ ಮಾರ್ಗದಲ್ಲಿ ಕಂಡ ಅನುಭವ.) ಸೋಲಾಂಗ್ ಪಾಸ್ ಸೋನ್ಮಾರ್ಗಿನಂತೇ ಚಳಿಗಾಲದ ಹಿಮ ಕವಿದ ದಿನಗಳಲ್ಲಿ ಹಿಮಜಾರಾಟದ ಸ್ಪರ್ಧೆಗಳಿಗೂ ಹೆಸರಾಗಿದೆ
ಗಾಳಿ ತೇಲಾಟಕ್ಕಾದರೆ ಪರಿಣತಿ ಬೇಕೇ ಬೇಕು. ಇಲ್ಲಿ ಜೋಡಿ ಸವಾರಿಗೆ ಒಡ್ಡಿಕೊಳ್ಳುವ ರೆಕ್ಕೆಗಳೇ ಇದ್ದವು, ಪರಿಣತ ಸವಾರ ಬೆಟ್ಟದ ಇಳುಕಲಿನಲ್ಲಿ, ತುಸು ಗಿಡ ಮರಗಳಿಲ್ಲದಲ್ಲಿಂದ ಬೀಸುಗಾಳಿಗೆ ಒಡ್ಡಿಕೊಂಡು ನಾಲ್ಕು ಹೆಜ್ಜೆ ಓಡುವುದರೊಳಗೆ, ತಗುಲಿಸಿಕೊಂಡ ಪ್ಯಾರಾಚೂಟಿನಂತ ವ್ಯವಸ್ಥೆ, ಮಹಾ ಹದ್ದಿನಂತೇ ದೃಢವಾಗಿ ಅಗಲಿಸಿ, ಗಾಳಿ ತೇಲಾಟಕ್ಕೆ ತೊಡಗುತ್ತದೆ. ಮುಂದೆ ಬಿಸಿ ಗಾಳಿಯ ಅಲೆ, ಗಾಳಿಯ ಸುಳಿ ಮತ್ತು ಗುರುತ್ವಾಕರ್ಷಣ ಹೊಂದಾಣಿಕೆಗಳಲ್ಲಿ ಆತ ಏರಿಯೋ, ಸುತ್ತಿಯೋ ಬೇಕೆಂದಲ್ಲಿ ಹಗುರಕ್ಕೆ ಇಳಿಯುವ ಚಂದ ಕನಿಷ್ಠ ನೋಡಿದರೂ ಮನದುಂಬುತ್ತದೆ. (ವಿಡಿಯೋ ನೋಡಿ) ಮಾಮೂಲಿ ಪ್ರವಾಸಿಗಳು ಇಲ್ಲಿ, ಪರಿಣತನ ಮಡಿಲಲ್ಲಿ ಸೂಕ್ತ ಪಟ್ಟಿ ಸಲಕರಣೆಗಳ ಬಂಧನದಲ್ಲಿದ್ದುಕೊಂಡು ಸಂತೋಷವನ್ನು ಧಾರಾಳ ಅನುಭವಿಸಬಹುದು. ೧೯೮೦ರ ದಶಕದ ನನ್ನ ಹ್ಯಾಂಗ್ ಗ್ಲೈಡಿಂಗ್ ಪ್ರಯೋಗಗಳ (ನೋಡಿ: ಹಾರೋಣ ಬಾಆಆಆಆಆಆ) ನೆನಪುಕ್ಕಿ, ನಾನಂತೂ ಕಳೆದುಹೋಗಿದ್ದೆ. ಸಾಕಷ್ಟು ಸಮಯವಿದ್ದಿದ್ದರೆ, ಒಮ್ಮೆ ಪರಿಣತನ ಮಡಿಲಲ್ಲಿ ಇರುಕಿಕೊಂಡಾದರೂ ಅನುಭವಿಸಿಬಿಡುತ್ತಿದ್ದೆ ಎಂದೇ ಅನ್ನಿಸಿತ್ತು. ಒಟ್ಟಾರೆ ನಮ್ಮಲ್ಲಿ ಒಂದಿಬ್ಬರಷ್ಟೇ ಕೇವಲ ತೊಟ್ಟಿಲ ಸವಾರಿಯಲ್ಲಿ ಹೀಗೆ ಹೋಗಿ, ಹಾಗೇ ಮರಳಿರಬೇಕು. ಉಳಿದವರು ಕುರುಕಲು ಮೆದ್ದು, ಸ್ವಂತೀ ಪಟ ಸಂಖ್ಯೆ ಹೆಚ್ಚಿಸಿಕೊಳ್ಳುವುದರಲ್ಲಿ ಸಮಯ ಕಳೆದು, ಟೀಟೀ ಸೇರಿ ಮುಂದಿನ ದಾರಿ ಹಿಡಿದೆವು.
ತಂಗ್ಲಂಗ್ಲಾ ಪಾಸ್…
ಮನಾಲಿಗೂ ಮುನ್ನ, ಘಟ್ಟ ಏರಲು ಹೊರಟಂದು ತೊಡಗಿದ್ದ, ಈ ವಲಯದ ಗುಹಾಸರಣಿಯಲ್ಲಿ ಹನ್ನೆರಡನೆಯದ್ದು ಮತ್ತು ಕೊನೆಯದ್ದು – ‘ಅಟಲ್ ಟನೆಲ್’ ಸಿಕ್ಕಿತು. ಸುಮಾರು ಒಂಬತ್ತು ಕಿಮೀ ಉದ್ದದ ಈ ಜೋಡಿ ಸುರಂಗ ಮಾರ್ಗಕ್ಕೆ ಸಮುದ್ರ ಮಟ್ಟದಿಂದ ಔನ್ನತ್ಯದಲ್ಲಿ ಜಾಗತಿಕ ಪ್ರಥಮದ ಗೌರವವೂ ಇದೆ. ಐತಿಹಾಸಿಕವಾಗಿ ಇಲ್ಲಿನ ಸುರಂಗ ಸರಣಿಯ ಯೋಚನೆ ೧೮೬೦ರ ಬ್ರಿಟಿಷ್ ಸರಕಾರವೇ ಮಾಡಿತ್ತು. ೧೯೪೨ರಲ್ಲಿ ಚಂದ್ರಾ ನದಿಯ ನೀರನ್ನು ಬಿಯಾಸಿಗೆ ಜೋಡಿಸುವ ಯೋಜನೆಯ ಭಾಗವಾಗಿ, ಗುಹಾಸರಣಿ ರೂಪು ತಳೆದಿತ್ತು. ೨೦೦೨ರಲ್ಲಿ ಅಟಲ್ ಬಿಹಾರೀ ವಾಜಪೇಯಿಯವರ ನೇತೃತ್ವದ ಸರಕಾರ ಇದನ್ನು ಏಳು ವರ್ಷಗಳಲ್ಲಿ ಪೂರೈಸುವ ಯೋಜನೆಯೊಡನೆ ಕಾರ್ಯರಂಗಕ್ಕಿಳಿದಿತ್ತು. ಅದರೆ ನಿಜ ಕೆಲಸ (ಎಂಟು ವರ್ಷ ತಡವಾಗಿ) ೨೦೧೦ ರಲ್ಲಿ ಮನಮೋಹನ್ ಸಿಂಗ್ ಸರಕಾರ ಶುರು ಮಾಡಿ, ೨೦೨೦ರಲ್ಲಿ ನರೇಂದ್ರ ಮೋದಿ ಸರಕಾರ ನಾಮಕರಣ ಸಹಿತ ಲೋಕಾರ್ಪಣದ ‘ಖ್ಯಾತಿ’ಯನ್ನು ಪಡೆಯಿತು, ಅಟಲ್ ಗುಹಾ ಮಾರ್ಗದ ಕೊನೆಯಲ್ಲಿ ಹತ್ತು ಮಿನಿಟು ಪಟ ವಿರಾಮ ಅನುಭವಿಸಿದೆವು. ಒಂದು ಮಗ್ಗುಲಲ್ಲಿ ರೊಹ್ತಾಂಗ್ ಪಾಸ್ ಶಿಖರ ಶ್ರೇಣಿ ತಡೆದು, ಆಳದ ಕೊಳ್ಳದಲ್ಲಿ ಹರಿಯುತ್ತಿದ್ದ ಚಂದ್ರ ನದಿಯ ಮೇಲೆ ಹಾಯಿಸಿ ಬೀಸುತ್ತಿದ್ದ ಶೀತಮಾರುತ ನಮ್ಮನ್ನು ಅಲ್ಲಿ ಹೆಚ್ಚು ಹೊತ್ತು ಕಳೆಯದಂತೇ ಓಡಿಸಿತ್ತು.
ಚಿರ್ ಹಿಮಧಾಮ…
ಗಾಳಿ ಸಂವಾದ…
ಸೊಲಾಂಗ್ ಪಾಸ್…
ವ್ಯಾನೇರಿ, ಸಿಕ್ಕ ಪೆಟ್ರೋಲ್ ಬಂಕಿನಲ್ಲಿ ವಾಹನಗಳ ದಾಹ ನಿವಾರಿಸಿಕೊಂಡು, ಇಳಿದಾರಿ ರುದ್ರ ರಮಣೀಯತೆಯ ಭಾಗವಾಗಿ ಹೋದೆವು, ಹಳೆಗಾಲದ ಕುಸಿದ ಸೇತುವೆಯ ಅವಶೇಷಗಳು, ದುರಸ್ತಿ ಮಾಡಲಾಗದೇ ತಿರಸ್ಕೃತಗೊಂಡ ರಸ್ತೆ ತುಣುಕುಗಳು ಕಾಣಿಸುತ್ತಿತ್ತು. ಹಾಗೆಂದು ಕಾಲಕಾಲಕ್ಕೆ ಜೀರ್ಣೋದ್ಧಾರಗೊಂಡಿದ್ದರೂ ನಮ್ಮ ದಾರಿ ಬಹಳ ಒಳ್ಳೇದೇನೂ ಇರಲಿಲ್ಲ. ದಡಬಡ ಪಯಣಕ್ಕೆ ತತ್ಕಾಲೀನ ವಿರಾಮ ಕೊಡುವಂತೆ, ‘ಥಂಡಿ’ ಎನ್ನುವ ಹಳ್ಳಿಯ, ಅಕ್ಷರಶಃ ದಾರಿಬದಿ ಧಾಬಾದಲ್ಲಿ ನಮ್ಮ ಊಟ ಕಾರು ತಂಗಿತ್ತು: ಊಟದ ವಿರಾಮ ಬಂದಿತ್ತು. ಕಾಡು ಕಂಬ, ಸಿಲ್ಪಾಲೀನ್ ಹೊದಿಕೆ (ಶೀತ, ನೀರಿಗೆ) ಮೇಲೆ ತಗಡಿನ ಮುಚ್ಚಿಗೆಯ (ಹಿಮವರ್ಷಕ್ಕೆ) ಥಾಕೂರ್ ಧಾಬಾ ಬೆಚ್ಚಗಿತ್ತು. ಆದರೆ ಅದೂ ಅಭಿವೃದ್ಧಿ ಪಥದಲ್ಲಿದೆ ಎನ್ನುವಂತೆ, ಹಿತ್ತಿಲಲ್ಲೇ ಪಕ್ಕಾ ಕಾಂಕ್ರೀಟಿನ ಹೋಟೆಲ್ ನಿರ್ಮಾಣ ಹಂತದಲ್ಲಿದೆ. (ನಾನು ತಲೆ ತುಸು ಭಾರ ಎನ್ನಿಸಿದ್ದಕ್ಕೆ ಊಟ ಬಿಟ್ಟೆ) ಉಳಿದವರು ವಿರಾಮದಲ್ಲಿ ಊಟ ಮುಗಿಸಿ….
ಥಂಡಿಗೂ ತುಸು ಮುನ್ನ, ನಮ್ಮ ಓಟಕ್ಕೆ ಎದುರಿನಿಂದ ಭಾಗಾ ನದಿ ಹರಿದು ಬಂದಿತ್ತು. ಅಲ್ಲದು ಚಂದ್ರಾದೊಡನೆ ಸಂಗಮಿಸಿ, ‘ಚಂದ್ರಭಾಗಾ’ವಾಗಿ ಅನ್ಯ ದಿಕ್ಕಿಗೆ ಹರಿಯುವುದರ ಮಿಂಚು ನೋಟವಷ್ಟೇ ನಮಗೆ ದಕ್ಕಿತು. ಮುಂದೆ ನಮ್ಮ ದಾರಿಗೆ ಹಳಿ ಬದಲಾವಣೆಯಲ್ಲ, ಹೊಳೆ ಬದಲಾವಣೆಯಾಗಿತ್ತು. ನಾಲ್ಕು ಗಂಟೆಯ ಸುಮಾರಿಗೆ ಸುವಿಸ್ತಾರದ ಭಾಗಾ ನದಿ ಬಯಲಿನ ಜಿಸ್ಪಾ ಎಂಬ ಪುಟ್ಟ ಪೇಟೆಗೆ ದಿನದ ಓಟ ಮುಗಿಸಿದೆವು. ಹೋಟೆಲ್ ಐಬೆಕ್ಸ್ (ಬೆಟ್ಟದಾಡು) ನಮ್ಮ ಬೆಚ್ಚನ್ನ ಗೂಡಿನ ಹೆಸರು, ಬಾಲಕೃಷ್ಣರ ಬಳಗ (ಟ್ರಾವೆಲ್ ಫಾರ್ ಯೂ) ಮುಂದಾಗಿಯೇ ನಮ್ಮೆಲ್ಲ ವಾಸ್ತವ್ಯಗಳನ್ನು ಕಾಯ್ದಿರಿಸಿದ್ದಕ್ಕೇ ತೃಪ್ತರಾಗುವವರಲ್ಲ. ಸ್ವಾಗತ ಕೊಠಡಿಯಲ್ಲಿ ವಿಳಂಬವಾಗದ ಎಚ್ಚರ, ಕೋಣೆ ವಿಲೇವಾರಿಯಲ್ಲಿ ವ್ಯಾಜ್ಯ/ ಗೊಂದಲಗಳೂ ಜಿಡುಕುಗಟ್ಟದ ಹುಶಾರಿ ಇಲ್ಲೂ ಸಮರ್ಥವಾಗಿಯೇ ನಿಭಾಯಿಸಿದರು, ಹಾಗಾಗಿ ಎಲ್ಲರೂ ಬೇಗನೇ ಪುನಶ್ಚೇತನರಾಗಿ (= ವಾಶ್ರೂಂಗೋಗಿ, ರಿಫ್ರೆಶ್ಶಾಗಿ!) ಮುಂದೇನು ಎನ್ನುವ ಕಾಲಕ್ಕೆ….
ತಡ ಸೂರ್ಯಾಸ್ತದ ಲಾಭ ಪಡೆಯಲು, ಭಾಗಾ (ನದಿ) ತೀರ ವಿಹಾರಿಗಳಾದೆವು. ಮೊದಮೊದಲು ಕುರುಚಲು, ಮತ್ತೆ ನೆಲ ಕಚ್ಚಿದಂತ ಹಸಿರ ಜಿಡುಕು, ವಿರಳ ಹಾವಸೆ ಕಳೆದ ಮೇಲೆ ನೀರಂಚಿನವರೆಗೂ ಮರಳು, ನುಣ್ಣಗಾದ ಗುಂಡುಕಲ್ಲುಗಳನ್ನೇ ಗಿಡಿದಂತಿತ್ತು. ತನ್ನ ಉಬ್ಬರದಲ್ಲಿ ಎಷ್ಟೂ ವಿಸ್ತರಿಸಿಕೊಂಡ ನದಿ, ಇಂದು ಸಣ್ಣದಾಗಿ ಸಳಸಳಿಸಿತ್ತು. ಮುನ್ನೆಲೆಯ ಬೋಳು ಬೆಟ್ಟಗಳನ್ನೋ ಹಿನ್ನೆಲೆಯ ಹಿಮಟೊಪ್ಪಿ ಕಳಚದ ಬೆಟ್ಟಗಳನ್ನೋ ಎಷ್ಟು ನೋಡಿದರೂ ಮುಗಿಯಿತೆಂದಿಲ್ಲ. ಎದುರು ದಂಡೆಯ ಬೆಟ್ಟದ ಪಾದದಲ್ಲಿ ಬಿಳಿಬಿಳಿಯ ಹೇನುಗಳಂತೆ ಕುರಿ ಹಿಂಡೊಂದು ನಿಧಾನಕ್ಕೆ ಮೇಯುತ್ತಾ ನಡೆದಿತ್ತು. ನಮ್ಮೂರುಗಳಲ್ಲಾದರೋ ಸಂಜೆಯಾಗುತ್ತಿದ್ದಂತೆ ಜಾನುವಾರುಗಳು ಹಳ್ಳಿ/ ಹಟ್ಟಿಗೆ ಮರಳುವ ಕಲ್ಪನೆ ಸಹಜವಿರುತ್ತಿತ್ತು. ಆದರೆ ಹಿಮಾಲಯದ ಕುರಿಗಾಹಿಗಳಿಗೆ ನಾಗರಿಕತೆಯ ವಿಶೇಷ ಹಂಗಿಲ್ಲವಂತೆ. ಅದಕ್ಕೆ ಸರಿಯಾಗಿ, (ಪಟ ನೋಡಿ) ಎಡ ಮಗ್ಗುಲಲ್ಲಿ ಕಾಣುತ್ತಿದ್ದ ಮನೆ, ಜನವಸತಿ ದೂರವೆನ್ನುವಂತೆ, ಕುರಿಹಿಂಡು ಹಸಿರುಹೊದ್ದಿಕೆಯಲ್ಲೇ ಸಣ್ಣದಾಗಿ ಏರೇರುತ್ತ, ಬೆಟ್ಟದ ಕಿಬ್ಬಿಯಲ್ಲಿ ಇನ್ನೊಂದು ಮಗ್ಗುಲಿಗೆ ಸರಿದು ಮರೆಯಾಯ್ತು, ನಾವು ಬೆಚ್ಚನ್ನ ಉಡುಪುಗಳ ಹೊರೆ ಸಾಕಷ್ಟು ಹೊತ್ತಿದ್ದರೂ ಮುಷ್ಟಿಗಟ್ಟಿದ ಕೈಗಳು ಪ್ಯಾಂಟ್ ಕಿಸೆ ಬಿಡದಂತೇ ಚಳಿ ಕೊರೆದಿತ್ತು. ಕುರಿ ಕಾಡಿಗೆ ಹೋದರೆ, ನಾವು ಹೋಟೆಲಿಗೆ ಮರಳಿದೆವು.
ಕುರಿಗಳು…
ಔನ್ನತ್ಯದ ಸಂಕಟಗಳ ಕುರಿತು ನಮಗೆ ಸಾಕಷ್ಟು ತಿಳಿದಿತ್ತು, ಸಂಘಟಕರೂ ಎಚ್ಚರಿಸಿದ್ದರು. ನಮ್ಮಲ್ಲಿ ಬಹುಮಂದಿ ಅದಕ್ಕೆ (ಮಂತ್ರ?) ಮದ್ದುಗಳೊಡನೆ ಸಜ್ಜಾಗಿಯೇ ಬಂದಿದ್ದರು ಮತ್ತು ಬಳಸುತ್ತಿದ್ದರು. ಆದರೆ ನಾವಿಬ್ಬರು ಸಾಧ್ಯವಾದಷ್ಟೂ ಔಷಧ ದೂರರಾಗಿಯೇ ಉಳಿಯುವ ಸಂಕಲ್ಪ ಉಳಿಸಿಕೊಂಡಿದ್ದೆವು, ರಸ್ತೆ ಪ್ರಯಾಣದ ಎರಡು ಮೂರು ದಿನಗಳ ಅಂತರದಲ್ಲಿ ಲೇಹ್ ಲದ್ದಾಕ್ ಎತ್ತರ ಮುಟ್ಟುವುದರಿಂದ, ದೇಹ ಹೊಂದಿಕೊಂಡೀತೆಂಬ ನಂಬಿಕೆ ಗಟ್ಟಿಯಿತ್ತು. ಆದರೂ ಸಂಜೆಯ ತಿನಿಸು ಪಾನೀಯವಾದ ಮೇಲೆ, ‘ರೀಲು’ ಓಡಿಸುವ ಚಟವಿಲ್ಲದ್ದಕ್ಕೆ, ಸುಮಾರು ಎರಡು ಗಂಟೆ ನಿದ್ರಿಸಿದ್ದೆವು. ಸಕಾಲಕ್ಕೆ ಸಂಘಟಕರು ಎಚ್ಚರಿಸಿದ ತಪ್ಪಿಗೆ, ಊಟದ ಶಾಸ್ತ್ರ ಮುಗಿಸಿ ನಿದ್ರೆ ಮುಂದುವರಿಸಿದೆವು. ಅದು ಕೇವಲ ಚಳಿಯ ಉಪದ್ರವಿದ್ದಿರಲಾರದು ಎಂದು ಈಗ ಅನ್ನಿಸುತ್ತದೆ, ಬಿಡಿ. ಆದರೂ…
ಮರು ಬೆಳಿಗ್ಗೆ ಹೊರಗೆ ಬಿಸಿಲು ಥಳಥಳಿಸಿದ್ದರೂ ವಾತಾವರಣದ ಥಂಡಿಗೆ ಮುದುರಿಕೊಂಡೇ ಹೋಟೆಲಿನ ಸ್ವಾಗತ ಕಚೇರಿಗೆ ಇಳಿದಿದ್ದೆವು. ಹೋಟೆಲಿನ ಯಜಮಾನ, ಮುಖಮಂಟಪದೊಳಗೇ ಇದ್ದ ದೊಡ್ಡ ಭಾಂಡದಿಂದ, ಅದೇನೋ ವನಸ್ಪತಿಯನ್ನು (ಅನಂತರ ಕಂಡಂತೆ, ದಾರಿ ಬದಿಯಲ್ಲಿ ಕಳೆಯಂತೇ ಬೆಳೆದಿದ್ದ ಗಿಡ) ಮುರಿಮುರಿದು ಕೈಯಗ್ಗಿಷ್ಟಿಕೆಗೆ ಹಾಕಿ ವಿಶಿಷ್ಟ ಪರಿಮಳದ ತೆಳು ಹೊಗೆ ಹರಡಿದ. ದೇವಕಿಯ (ಅವಳೇ ಹಿಡಿದ ವಿಡಿಯೋ ನೋಡಿ) ಕುತೂಹಲಕ್ಕೆ, ಅವನದೇ ಭಾಷೆಗಷ್ಟು ಹಿಂದಿ ಬೆರೆಸಿ ಏನೋ ವಿವರಣೆ ಕೊಟ್ಟಂತೆಯೋ ಮಂತ್ರ ಹೇಳುತ್ತಿದ್ದಂತೆಯೇ ಕಚೇರಿಯೊಳ ಸೇರಿಕೊಂಡ. ಅದು ಬೌದ್ಧರ ಆರಾಧನಾ ಕ್ರಮದ ಭಾಗವೂ ಇರಬಹುದು. ಅದು ಕೋಣೆಯ ಶೈಥ್ಯ ತುಸು ಕಡಿಮೆ ಮಾಡಿದಂತನ್ನಿಸಿತು. ಹಾಗೆ ಉತ್ತೇಜಿತರಾದ ನಾವು ಮೊದಲಿಗರಾಗಿ ಕಾಫಿಂಡಿ ಮುಗಿಸಿಕೊಂಡೆವು, ಉಳಿದ ಭಾಗಿಗಳೂ ಅವರ ಗಂಟುಗದಡಿಗಳೂ ಅಡುಗೆಯವರ ‘ಸಂಪತ್ತು’ಗಳೂ ವ್ಯಾನ್, ಕಾರುಗಳಿಗೆ ನಿಧಾನ ಮುತ್ತಿಗೆಯಲ್ಲಿದ್ದಂತೆ, ನಾವಿಬ್ಬರೇ ದಾರಿ ಮಗ್ಗುಲಿನಲ್ಲಿ ವಿರಳವಾಗಿಯೇ ವಿಕಸಿಸಿದ್ದ ಜಿಸ್ಪಾ ಹಳ್ಳಿ ನೋಡಲು ನಡೆದೆವು….
ಸೈಕಲ್ ಹಿಡಿದು ಗೋಬಿ ಬಿತ್ತನೆಗೆ ಹೊರಟಿದ್ದ ರೈತರು, ಹಳೆ ಶೈಲಿಯ ಕಲ್ಲ ಕಟ್ಟಡ, ಸಾಂಪ್ರದಾಯಿಕ ಮನೆ, ಮಳಿಗೆಗಳಲ್ಲೇ ತೃಪ್ತನಾದ ಅಂಗಡಿಯವ, ದೊಡ್ಡ ಕಾಂಡವನ್ನೇ ಕೊರೆದು ಮಾಡಿದ್ದ ಏಣಿ, ಗುಡಾರಗಳ ಬಾಡಿಗೆ ಬಿಡಾರಗಳು, ಬೌದ್ಧ ಸ್ತೂಪ, ಹೋಟೆಲ್ ಸುತ್ತ ಮುತ್ತ ಮೆರೆದ ಹಸಿರು ಹೂ… ಮನದುಂಬುತ್ತಿದ್ದಂತೆ “ಬನ್ನೀ ಹೊರ್ಡೋಣಾ…” ಬಾಲಕೃಷ್ಣರ ಕರೆ ಬಂತು. ದಿಲ್ಲಿ – ಲೇಹ್ ಮಜಲೋಟದ ಕೊನೆಯ ಹಂತ ಪೂರೈಸಲು ವ್ಯಾನೇರಿದೆವು.
ಜಿಸ್ಪಾಲೇಹ್…
ಮತ್ತೆ ಗುಂಡು ಕಲ್ಲುಗಳ ವಿಸ್ತಾರ ರಾಶಿಯಲ್ಲಿ ಮಹಾಗುಪ್ಪೆಗಳ ಸರಣಿಯಂತೇ ಇದ್ದ ನೆಲದಲ್ಲಿ ಅಸಂಖ್ಯ ಹಿಮ್ಮುರಿ ತಿರುವುಗಳು (ಇದನ್ನು ಲದ್ದಾಕೀ ಭಾಷೆಯಲ್ಲಿ ಘಟಾ ಚೌಕ್ ಎಂದನ್ನುತ್ತಾರಂತೆ), ಇಂಗ್ಲಿಷಿನ Z ಮೇಲೆ Z ಪೇರಿಕೆಯಂತೇ ಇದ್ದು ದಾರಿ ನಿಧಾನಕ್ಕೇ ಏರುತ್ತಲೇ ಇತ್ತು. ಆಗ ಚಂದಮಾಮದ ಕತೆಯಲ್ಲಿ ಹೆಣ ಹೊತ್ತ ತ್ರಿವಿಕ್ರಮನ ಮಾರ್ಗಾಯಾಸಕ್ಕೆ ಕತೆ ಹೇಳಿದ ಬೇತಾಳನಂತೇ ನಮ್ಮ ಚಾಲಕ ಸಣ್ಣ ಕತೆ ಹೇಳಿದ…. ಆ ದಾರಿಯ ಒಂದು ಘಟಾ ಚೌಕಿನಲ್ಲಿ (ಹಿಮ್ಮುರಿ ತಿರುವಿನಲ್ಲಿ) ಹಿಂದೊಬ್ಬ ಚಾಲಕ ಅಪಘಾತಕ್ಕೀಡಾಗಿ, ನೀರು ನೀರೆಂದೇ ನರಳಿ ಪ್ರಾಣ ಬಿಟ್ಟನಂತೆ. ಇದನ್ನರಿತ ಮುಂದಿನವರು, ಆತನ ಪ್ರೇತಾತ್ಮ ಶಾಂತಿಗೆ, ಆ ಸ್ಥಳದಲ್ಲಿ ನೀರಿನ ಬಾಟಲಿಗಳನ್ನೇ ಹಾಕುತ್ತಾರಂತೆ. ನಾನಿದನ್ನು ಗಂಭೀರವಾಗಿ ನಂಬದ ಕಾರಣ, ಆ ತಿರುವು ಬಂದಾಗ, ನನಗೆ ಸ್ಪಷ್ಟ ನೋಟ ಅಥವಾ ಪಟ ಹಿಡಿದುಕೊಳ್ಳಲಾಗಲಿಲ್ಲ. ಆದರೆ ಜಾಲಾಟದಲ್ಲಿ ಅಲ್ಲಿನ ವೈವಿಧ್ಯಮಯ ಮತ್ತು ಅಸಂಖ್ಯ ಪಟ, ಚಲಚಿತ್ರಗಳನ್ನು ನೋಡಿ ದಂಗಾಗಿ ಹೋದೆ. ನನ್ನ ಅತೀವ ದುಃಖಕ್ಕೆ, ಆ ಜಾಗ ದಾಟುವಾಗ ನಮ್ಮ ವ್ಯಾನಿನಿಂದಲೂ ಮೂರ್ನಾಲ್ಕು ಭರ್ತಿ ನೀರಿನ (ಪ್ಲ್ಯಾಸ್ಟಿಕ್) ಬಾಟಲಿಗಳು ತೂರಿ ಹೋಗಿದ್ದವು!. ಅನ್ಯ ಚಿತ್ರ, ವಿಡಿಯೋಗಳು ತೋರುವಂತೆ, ಅಲ್ಲಿ ಸಾವಿರಾರು ಬಾಟಲಿಗಳು ಮಾತ್ರವಲ್ಲ, ಮೂಢ ಮತಿಗಳ ಭಾವಕ್ಕೆ ನಿಲುಕಿದಂತೆ ಬೀಡಿ, ಗುಟ್ಕಾ, ಸಾರಾಯಿ, ವಿವಿಧ ಹಣ್ಣು, ತಿನಿಸುಗಳೂ ‘ಪ್ರೇತ ಶಾಂತಿಗೆ’ ಎಂಬಂತೆ ಅಲ್ಲಿ ಬೀಳುತ್ತಲೇ ಇವೆ, ನಿಜ ದೇವಭೂಮಿಯನ್ನು ಮಾಲಿನ್ಯದ ಪ್ರೇತ ಕಾಡುತ್ತಲೇ ಇದೆ. ಇದನ್ನು ಪ್ರತಿಭಟಿಸುವಂತೆ ಆಗಾಗ ಅಲ್ಲಿ ಏಳುವ ಧೂಳೀ ಸುಂಟರಗಾಳಿಗಳು, ಮಳೆಗಳು ಅವನ್ನು ವಿಸ್ತೃತ ಪರಿಸರಕ್ಕೆ ಪಸರಿಸುತ್ತಲೇ ಇವೆ.
ಈ ಘಟಾಚೌಕ್ಗಳ ಸರಣಿಯಲ್ಲಿ ದಾರಿಗಳು ಕುಸಿಯುವುದೂ ಹೊಸ ಜಾಡು ಮೂಡುವುದ್ದೂ ನಿರಂತರ ನಡೆದೇ ಇರುವುದು ಕಾಣುತ್ತಿತ್ತು. ಅಂಥಾ ಒಂದೆಡೆ, ನಿಜ ದಾರಿಯ ಎರಡು ಹಂತಗಳ ನಡುವೆಯೊಂದು ಕಚ್ಚಾ ಕಠಿಣ ಒಳದಾರಿ ಕಾಣಿಸಿತು. ಅದರಲ್ಲೊಬ್ಬ ಖಾಸಾ ವ್ಯಾನ್ ಮಾಲೀಕ ತನ್ನ ಹೆಚ್ಚಿನ ಸಾಮರ್ಥ್ಯದ ವಾಹನವನ್ನು ಚಲಾಯಿಸುವ ಸಾಹಸಕ್ಕಿಳಿದದ್ದನ್ನು ಕಂಡೆವು. ನಾನು ಹಿಂದೆ ಇಂಥವೇ ಸಾಹಸಗಳನ್ನು (ಆಫ್ ರೋಡಿಂಗ್) ಮೋಟಾರ್ ಬೈಕಿನಲ್ಲಿ ಮಾಡಿ ಸುಬ್ರಹ್ಮಣ್ಯದಿಂದ ಮಡಿಕೇರಿಗೆ, ಶಿರಾಡಿ ಘಾಟಿಯ ಕೆಂಪೊಳೆ ಎಂಬಲ್ಲಿಂದ ಯಡಕುಮೇರಿ ರೈಲ್ವೇ ನಿಲ್ದಾಣಕ್ಕೆ…. ಹೋದ ನೆನಪುಗಳು ಗರಿಗೆದರಿಕೊಂಡವು. ಒಳಗೊಳಗೇ “ಶಭಾಸ್ … ಶಭಾಸ್…” ಅಂದುಕೊಳ್ಳುತ್ತಲೇ ಇದ್ದೆ. (ನೋಡಿ: ತಲೆ ನೂರ್ಮಲೆಘಾಟಿ ಮತ್ತು ರೈಲೋಡಿದ ಬೈಕು) ಶಿಸ್ತಿನ ದಾರಿಯಲ್ಲಿ, ಜೂಗರಿಸುತ್ತಾ ಸಾವಕಾಶವಾಗಿ ಏರುತ್ತಿದ್ದ ನಮ್ಮ ವ್ಯಾನಿನ ಉಳಿದವರನ್ನೂ ಈ ಸಾಹಸ ಸೀಟಿನಂಚಿಗೇ ನೂಕಿತ್ತು. ಆದರೆ ಒಮ್ಮೆಲೇ ಆತನ ಕಾರು ಹೇಗೋ ನಿಯಂತ್ರಣ ತಪ್ಪಿ, ಬಲ ಮುಂಚಕ್ರ ಕೊಳ್ಳದಂಚಿನಲ್ಲಿ ಕುಸಿದು ಕುಳಿತರೆ, ಎಡದ ಮುಂಚಕ್ರ ನೆಲ ಬಿಟ್ಟು, ಒಂದಡಿ ಎದ್ದು ಬಿಟ್ಟಿತು. ಒಮ್ಮೆಗೆ ನಾವೆಲ್ಲರೂ “ಅಯ್ಯಯ್ಯೋ…ರಾಮ ರಾಮಾ…” ಉದ್ಗರಿಸಿದ್ದೆವು. ಅದೃಷ್ಟವಶಾತ್ ಕಾರು ಕಣಿವೆಯತ್ತ ಉರುಳಲಿಲ್ಲ.
ಮರೆಯಬೇಡಿ, ನಾವು ಸುದೂರದಲ್ಲಿ ದಡಬಡಿಸುತ್ತ ಸಾಗುತ್ತಿದ್ದ, ಎದುರಿನಿಂದ ಬರುತ್ತಿದ್ದ ವಾಹನಗಳಿಗೆ ಮಾರ್ಗ ಕೊಡಲು ತಿಣುಕಾಡುತ್ತಿದ್ದ ವಾಹನದೊಳಗಿನ ಅಸಹಾಯಕ ಮೂಕಪ್ರೇಕ್ಷಕರು ಮಾತ್ರ. ಆ ಚಾಲಕ ಹೇಗೋ ಕಾರಿನ ಎಡ ದ್ವಾರದಿಂದ ಹೊರಗಿಳಿದ, ಹಾಗೇ ಮಹಿಳೆಯೊಬ್ಬಳನ್ನು ಕೈ ಹಿಡಿದು ಇಳಿಸಿಕೊಂಡ. ಆಗ ಆತನ ಬಗ್ಗೆ ನನಗೆ ತುಸು ಕೋಪವೇ ಬಂದಿತ್ತು. “ಸಾಹಸ ಮಾಡಬೇಕು, ಆದರೆ ಅದಕ್ಕೆ ಸಜ್ಜಾಗದವರ ಸಹವಾಸದಲ್ಲಿ ಅಲ್ಲ. ಆತ ಮುಂಜಾಗ್ರತೆ ವಹಿಸಿದ್ದು ಸಾಲದು” ಎನ್ನುವುದು ನನ್ನ ಆಂತರ್ಯ. ಆದರೆ ನಾವು ಮೇಲಿನ ಹಿಮ್ಮುರಿ ತಿರುವನ್ನೂ ಕಳೆದು, ಬೆಟ್ಟದ ಇನ್ನೊಂದೇ ಮಗ್ಗುಲಿಗೆ ಹೊರಳಿಕೊಳ್ಳುವ ಕಾಲದಲ್ಲಿ, ಇನ್ನೆಲ್ಲಿಂದಲೋ ಒಂದು ಜೀಪು ಆ ಕಾರನ್ನು ಸಮೀಪಿಸಿ, ರಕ್ಷಣಾ ಕಾರ್ಯ ನಡೆಸಿದಂತೆ ಕಂಡಾಗ “ಅಬ್ಬಾ…” ಎಂದು ಎಲ್ಲರೂ ನಿಟ್ಟುಸಿರುಬಿಟ್ಟಿದ್ದೆವು.
(ಮುಂದುವರಿಯಲಿದೆ)
















































































ಲೇಖನ ಓದಿದಮೇಲೆ ಅನ್ನಿಸಿದ್ದು: ನೀವು ದಯವಿಟ್ಟು ತೀರ್ಥಕ್ಷೇತ್ರಗಳಿಗೆ ಹೋಗದಿರುವುದೇ ಲೇಸು- ಆ ಕುರಿತು ನಿಮ್ಮ ವ್ಯಂಗ್ಯವೇ ಹೆಚ್ಚು- ಅಡಿಗರ ಮಾತಿನಲ್ಲಿ “ ಇದನ್ನು ಬಯಸಿರಲಿಲ್ಲ” ನಿಮ್ಮಿಂದ ವಿವರವೂ ಸಿಕ್ಕದು- ಎಂದಿನಂತೆ ಚಾರಣವೋ. ಪ್ರಕೃತಿಯ ತಾಣಗಳಿಗೋ ಹೋಗಿ ಖುಷಿಯಿಂದ ಬರೆಯುತ್ತೀರಿ ( ವ್ಯಂಗ್ಯದ ಲೇಪವಿರುತ್ತದೆ , ಆದರೂ ಸಹಿಸುತ್ತೇವೆ)ಖುಷಿಯಿಂದ ಓದುತ್ತೇವೆ ಚಿಟಕಿ ಹೊಡೆದು ✍
ಶಿವರಾಮ ಕಾರಂತರ ಎರಡನೇ ಅಣ್ಣ – ವಾಸುದೇವ ಕಾರಂತ, ನಿವೃತ್ತ ವಿದ್ಯುತ್ ಇಂಜಿನಿಯರ್, ಮನೆಯಲ್ಲಿ ದೇವರು, ದೇವರನ್ನು ನಂಬುವ, ಬ್ರಾಹ್ಮಣ್ಯದ ರಕ್ಷಣೆ, ಪುನರ್ಜನ್ಮ….. ಹೀಗೆ ಹಲವು ಪುಸ್ತಕಗಳನ್ನು ಬರೆದು, ಅತ್ಯಂತ ಕಡಿಮೆ ಬೆಲೆಯಲ್ಲಿ ತಾವೇ ಪ್ರಕಟಿಸುತ್ತಿದ್ದರು. ಆ ಪುಸ್ತಕಗಳನ್ನು ನಾನು ವೃತ್ತಿಪರನಾಗಿ ಇಪ್ಪತ್ತು ಮೂವತ್ತರ ಸಂಖ್ಯೆಯಲ್ಲಿ ಕೊಂಡು ಮಾರುತ್ತಿದ್ದೆ. ಹಾಗೊಮ್ಮೆ ಬಂದಿದ್ದವರಿಗೆ, ಅಂದೇ ಬೆಂಗಳೂರು ವಿವಿನಿಲಯದ ಹೊಸ ಪ್ರಕಟಣೆಯಾಗಿ ಬಂದಿದ್ದ – ಶಿವರಾಮ ಕಾರಂತರ ಹೊಸ ಪುಸ್ತಕ ಬಾರತೇಯ ಶಿಲ್ಪ’ಕೈಗಿಟ್ಟೆ. ಒಮ್ಮೆ ಪುಟಗಳನ್ನು ಮಗುಚಿ, ವಿವಿಧ ವಿಗ್ರಹಗಳ ಪಟಗಳನ್ನೂ ನೋಡಿ ಒಮ್ಮೆಗೇ ಸಿಡಿದರು “ಇಷ್ಟು ಬರೆಯುವವನಿಗೆ ಅದರ ಹಿಂದಿನ ಶಕ್ತಿಯನ್ನು ತಿಳಿಯುವ…” ಬಿಡಿ. ನನಗೂ ಎಲ್ಲಾ ಕ್ಷೇತ್ರಗಳನ್ನು, ನೋಡುವ, ಹಿಂದಿನ ಪ್ರೇರಣೆಗಳನ್ನು ತಿಳಿದುಕೊಳ್ಳುವ ಉತ್ಸಾಹ ಹಿಂಗದು. ಜನರ ವೈಯಕ್ತಿಕ ನಂಬಿಕೆ ಆಚಾರಗಳ ಕುರಿತು ತಿರಸ್ಕಾರ, ವ್ಯಂಗ್ಯ ಖಂಡಿತಾ ಇಲ್ಲ. ಆದರೆ ಆ ವಿಶ್ವಾಸವನ್ನು ವಾಣಿಜ್ಯ ಸರಕನ್ನಾಗಿಸುವವರ – ಭಕ್ತ್ಯುದ್ದಿಮೆದಾರರ ವಿರುದ್ಧವಷ್ಟೇ ನನ್ನ ಕೋಪ. ನೀವು ಬೇಸರಿಸಬೇಡಿ.
2010 ರಲ್ಲಿ ನಾವು ಮನಾಲಿಗೆ ಹೋಗಿದ್ದು, ಹಿಡಿಂಬಾ ದೇವಾಲಯ ನೋಡಿದ್ದು ಚಂದದ ನೆನಪು. ಹಿಡಿಂಬಾ ದೇವಿ ಅಲ್ಲಿನ ಒಂದು ಬೃಹತ್ ಪೈನ್ ಮರ! ಹಾಗೇ ಘಟೋತ್ಕಜ ಮರ! ಭೀಮ – ಹಿಡಿಂಬರು ಮರಗಳನ್ನೆಲೆಡು ಬಿಸಾಡಿದ ಚಿತ್ರ ಕಣ್ಮುಂದೆ ಬಂದಿತ್ತು.
ಮರದಲ್ಲೇ ದೇವಿಯನ್ನು ಕಾಣುವ ಜನರ ಬಗ್ಗೆ ಮೆಚ್ಚುಗೆಯಾಗಿತ್ತು.
ಕಳೆದವರ್ಷ ಉತ್ತರಾಖಂಡದ ಜಾಗೇಶ್ವರ ಎಂಬಲ್ಲಿಗೆ ಹೋಗಿದ್ದೆ, ಅಲ್ಲೂ ಅರ್ಧನಾರೀಶ್ವರ ಒಂದು ಅವಳಿ ದೇವದಾರು ಮರ! ಗಣಪತಿ – ಸೊಂಡಿಲಿನಂತೆ ಚಾಚಿದ ಕೊಂಬೆಯ ಮರ!
ಮರಗಳಲ್ಲಿ ದೇವರನ್ನು ಕಂಡ ನಮ್ಮ ಹಿರಿಯರ ನಂಬುಗೆಗಳನ್ನು ಹಾಳುಮಾಡಿದಂತೆ ಈಗ ಅದರ ಸುತ್ತ ಕಟ್ಟೆ ಕಟ್ಟಿ ಬೇರಿಗೆ ಉಸಿರುಕಟ್ಟಿಸುತ್ತಿದ್ದಾರೆ