ಬಾಣಲೆಯಿಂದ ಬೆಂಕಿಗೆ ಬೀಳುತ್ತಿರುವ ಲದ್ದಾಕ್

Aug 14, 2026 | 0 comments

(ಲೇಹ್ ಲದ್ದಾಕ್ ದಾರಿಯಲ್ಲಿ ಅಧ್ಯಾಯ ನಾಲ್ಕು)

ಕಾರ್ಡೂಂಗ್ – ಸಂದು ಮತ್ತು ನುಬ್ರಾ ಕಣಿವೆ

ಪ್ರವಾಸದ ಆರನೇ ದಿನಾಂತ್ಯಕ್ಕೆ ನಮ್ಮ ಲಕ್ಷ್ಯ ನುಬ್ರಾ ಕಣಿವೆ. ಆದರೆ ಪ್ರಧಾನ ಆಕರ್ಷಣೆ ದಾರಿಯಲ್ಲಿ ಉನ್ನತ ಶಿಖರ ಶ್ರೇಣಿಯೊಂದನ್ನು ಪಾರುಗಾಣಿಸುವ ಪರ್ವತ ಸಂದು – ಕಾರ್ಡೂಂಗ್ಲಾ. ಮಾರ್ಗ ಬಹುತೇಕ ನುಣ್ಣಗೇ ಇದ್ದರೂ ಕಾರು/ಟೀಟಿಗಳಂತ ಸಣ್ಣ ವಾಹನಗಳಿಗೂ ಬಹುತೇಕ ಒಮ್ಮುಖ ಯಾನಾವಕಾಶ ಕೊಡುವಷ್ಟು ಸಪುರ. ಪ್ರವಾಸೀ ವಾಹನಗಳ ಸಾಲು ತುಂಬ ದೊಡ್ಡದೇ ಇದ್ದರೂ ಎದುರು ಸಂಚಾರ ವಿರಳವೇ ಇದ್ದದ್ದು ನಮ್ಮ ಅದೃಷ್ಟ. ಅಪರೂಪಕ್ಕೆ ಅನ್ಯ ವಾಹನಗಳು ಎದುರಾದಾಗ ಪಾರಾಗುವ ತಿಣುಕಾಟ ಕಷ್ಟದ್ದೇ. ಅದನ್ನು ಹೆಚ್ಚಿಸುವಂತೆ…

ದೇಶಾದ್ಯಂತ (ಹೆಚ್ಚಾಗಿ) ಯುವಜನರು, ಅನುಕೂಲದ ಋತುಗಳಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಹಿಮಾಲಯ ಪರ್ವತ ಶ್ರೇಣಿಗಳಿಗೆ ಮುತ್ತಿಗೆ ಹಾಕುತ್ತಿರುತ್ತಾರೆ. ಅಂಥವರ ಸಾಹಸೀ ಪ್ರವೃತ್ತಿಗೆ ಹೊಂದುವಂತೆ ದಿಲ್ಲಿ, ಮನಾಲಿಗಳಂತ ಕೇಂದ್ರಗಳಲ್ಲಿ, ವಿಶೇಷ ಸಜ್ಜಾದ ವಾಹನಗಳು, ಮುಖ್ಯವಾಗಿ ಮೋಟಾರ್ ಬೈಕ್ಗಳನ್ನು ಬಾಡಿಗೆಗೆ ಕೊಡುವುದರಿಂದ ತೊಡಗಿ ಪೂರ್ಣ ನಿರ್ವಹಿಸುವ ಸಂಸ್ಥೆಗಳು ಸಾಕಷ್ಟಿವೆ. ಹೀಗೆ ಬರುವ ಮೋಬೈಕ್ವಾಲಾರು ಹೆಚ್ಚಾಗಿ ಹತ್ತಿಪ್ಪತ್ತರ ಗುಂಪುಗಳಲ್ಲೇ ಇರುತ್ತಾರೆ. ಕಾರ್ಡೂಂಗ್ಲಾದ ಸಪುರ ದಾರಿಯಲ್ಲಿ ನಮಗಂಥವರನ್ನು ನಿಭಾಯಿಸುವ ಕಷ್ಟವೂ ಸಿಗುತ್ತಿತ್ತು. ಅವರಲ್ಲಿ ಬಹುಮಂದಿ ಅವರ ಊರುಗಳಲ್ಲಿ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಿಂಚಿನೋಟ ಮಾಡಿದ ಹುಲಿಗಳೇ ಇರಬಹುದು. ಆದರೆ ಮಹಾ ಹಿಮಾಲಯ ಬೀರುವ ದೃಶ್ಯ ಒತ್ತಡಕ್ಕೆ ಬೆದರಿದ ಇಲಿಗಳಂತೇ ವರ್ತಿಸುತ್ತಾರೆ. ಆ ತಂಡಗಳು ನಿಧಾನಿಗಳಾದರೆ ಹಿಂದಿಕ್ಕುವ, ಚುರುಕಿನದ್ದಾದರೆ ದಾರಿ ಕೇಳುವಾಗಿನ ಅವರ ಓಲಾಟ, ಜಾರಿಕೆಗಳು ನಮಗೆ ಬಹಳ ಕಷ್ಟದ್ದು. ಹೆಚ್ಚಿನ ಸವಾರರು ತಮ್ಮ ತಂಡದ ನಡುವೆ ಇತರ ವಾಹನಗಳನ್ನು ಬಹಳ ಹೊತ್ತು ಸುಧಾರಿಸಿಕೊಳ್ಳಲಾರರು. ಒಂದೆರಡು ನಿದರ್ಶನಗಳನ್ನೇ ಕೊಡುವುದಾದರೆ…

ತಂಡಕ್ಕೆ ಸೇರಿಕೊಳ್ಳುವ ಆತುರದಲ್ಲಿ ಸವಾರನೊಬ್ಬ ಒಮ್ಮೆಗೆ ನಮ್ಮ ವಾಹನದ ಎಡ ಮಗ್ಗುಲಿನ ಸಂದಿನಲ್ಲಿ ನುಗ್ಗಿದ್ದ. ನಮ್ಮ ಪಳಗಿದ ಚಾಲಕ, ಕಷ್ಟದಲ್ಲೇ ಅವನಿಗೆ ದಾರಿ ಮಾಡಿಕೊಟ್ಟ. ಜತೆಗೇ ಸಮಾಧಾನದಲ್ಲಿ ಕಿವಿ ಮಾತು ಹೇಳಿದ “ಅಣ್ಣಯ್ಯಾ ನೀವು ಈ ದಾರಿಯಲ್ಲಿ ರಾಂಗ್ ಸೈಡ್ ನುಗ್ಗಬಾರದು”. ಒಂದೆಡೆ, ಸಮ್ಮಿಂದ ಮೂರ್ನಾಲ್ಕು ವಾಹನದಷ್ಟು ಮುಂದಿದ್ದ ಒಂದು ಕಾರು, ಹದ ಮೀರಿ ಅಂಚಿನಲ್ಲಿ ಕುಸಿದು ಕೂತಿದ್ದ ಕಲ್ಲ ರಾಶಿಗೇ ನುಗ್ಗಿಬಿಟ್ಟಿತ್ತು. ಅದರ ಬೆನ್ನು ಬಿದ್ದ ಬೈಕ್ ಅದೃಷ್ಟದಲ್ಲೇ ಸುಧಾರಿಸಿಕೊಂಡು ಮುಂದೋಡಿತ್ತು. ನಮಗೆಲ್ಲ ಒಮ್ಮೆ ಉಸಿರು ಸಿಕ್ಕಿತ್ತು. ಕಾರಿಗೆ ಸಣ್ಣ ಹಾನಿಯಾದರೂ ಆತನೂ ತಿದ್ದಿಕೊಂಡು ಮುಂದುವರಿದಾಗ ನಿಟ್ಟುಸಿರು ಬಿಟ್ಟಿದ್ದೆವು. ಇನ್ನೊಂದೆಡೆ, ಮಾರ್ಗ ಕೊಚ್ಚಿ ಹೋದಲ್ಲಿ, ನೂರಿನ್ನೂರು ಮೀಟರ್ ಉದ್ದಕ್ಕೆ ನೀರು, ಮಣ್ಣು, ಗುಂಡುಕಲ್ಲುಗಳ ಕೊಚ್ಚೆಯಲ್ಲೇ ಸವಾರಿ ಅನಿವಾರ್ಯವಿತ್ತು, ಅಂಥಲ್ಲಿ ನಮ್ಮೆದುರಿನ ವಾಹನದವರು (ಮುಖ್ಯವಾಗಿ ಬೈಕಿನವರು) ಪರದಾಡುವಾಗ, ಕೆಲವೊಮ್ಮೆ ಬೈಕುಗಳ ಸಹವಾರರು ಇಳಿದು ನೂಕುವಾಗ, ನಮ್ಮ ವಾಹನ ಚಾಲಕ ಮೌನಿಯಾಗಿ,  ಅಂತರ ಹೆಚ್ಚೇ ಉಳಿಸಿಕೊಂಡು, ಕೆಲವೊಮ್ಮೆ ನಿಂತು ತಾಳ್ಮೆಯ ಸಮಯ ಕೊಡುತ್ತಿದ್ದ. ಒಮ್ಮೆ ನಮ್ಮ ಹಿಂದೊಬ್ಬ ಬೈಕಿಗ, ದಾರಿಯಲ್ಲೇ ಅಡ್ಡ ಬಿದ್ದ ಸದ್ದು ಕೇಳಿತು. ಅದನ್ನು ಹಿಂಗನ್ನಡಿಯಲ್ಲಿ ಕಂಡ ನಮ್ಮ ಚಾಲಕ, ಕೂಡಲೇ ನಮ್ಮ ವಾಹನ ನಿಲ್ಲಿಸಿ, ಅವನಿಗೆ ಸಹಾಯ ಹಸ್ತ ಕೊಟ್ಟದ್ದು ನಿಜಕ್ಕೂ ದೊಡ್ಡ ಗುಣ. ಹೀಗೇ ಸುಮಾರು ನಲ್ವತ್ತು ಕಿಮೀ ಓಟ ಮುಗಿಯುತ್ತಿದ್ದಂತೆ…

ಬೆಳ್ಳಿ ಶಿಖರಗಳೇ ತಗ್ಗಿ, ಬಯಲಾದಂತೆ ಇನ್ನೊಂದೇ ಮಗ್ಗುಲಿನ ಕಣಿವೆಯನ್ನು ತೆರೆದಿಟ್ಟ ಸಂದು – ಕಾರ್ಡೂಂಗ್ಲಾ ಪಾಸ್ ಮುಟ್ಟಿದ್ದೆವು (ಸಮ ೧೮೩೮೦ ಅಡಿ, ಸಮಯ ೧೦.೪೫). ಕೊನೆಯ ಕೆಲವು ಕಿಮೀ ಸೇರಿದಂತೆ ಉದ್ದಕ್ಕೂ ಗಿರಿದೈತ್ಯರು ಮೈ ಕೊಡಹಿದಂತೆ ಸುರಿದು ಬಂದು, ಮಾರ್ಗದಲ್ಲಿ ಅಂಚುಗಟ್ಟಿದ ಮಣ್ಣು, ಕಲ್ಲು, ಹಿಮ ಎಂದೂ ನಮ್ಮನ್ನೂ ಆವರಿಸಿಕೊಳ್ಳುವ ಭಯ ಹುಟ್ಟಿಸುತ್ತಿತ್ತು. ವಾಹನ ಬಿಟ್ಟಿಳಿದಾಗ, ಹಾಸಿಗೆ ಮಾಡುವವನ ಬಿಲ್ಲು ಸಿಡಿಸಿದ ಹತ್ತಿ ಹಳಕುಗಳಂತೆ ಹಿಮಪಾತವಾಗುತ್ತಿತ್ತು. ಭರಗುಟ್ಟುತ್ತಿದ್ದ ಶೀತಲಗಾಳಿ ಮಂಜಿನ ಹಳಕುಗಳನ್ನು ವಿರಳವಾಗಿ ಹೊಸೆದು ಎರಚಿದಂತೇ ದಪ್ಪ ಹನಿಗಳೂ ಟಪಟಪಾಯಿಸುತ್ತಿದ್ದವು. ಮಂಜು ಮೀಯುವುದೋ ಮಳೆಗೆ ಕೊಡೆ ಅರಳಿಸುವುದೋ ಅರ್ಥವಾಗದ ಗೊಂದಲ. ಚಳಿ ನಿರೋಧಕಗಳನ್ನು ಹೆಚ್ಚೆಚ್ಚು ಆಪ್ತವಾಗಿ ತಬ್ಬಿಕೊಳ್ಳುತ್ತ, ಆಚೀಚೆ ಓಡಾಡಿದೆವು. ಜೈಕಾರಗಳು, ಅಲ್ಲಿದ್ದ ಎರಡು ಮೂರು ಸ್ಥಿರ ಸ್ಮರಣ ಫಲಕಗಳಿಗೆ ಮುತ್ತಿಗೆ ಹಾಕಿ ಸ್ವಂತೀ ಗುಂಪೀ ಪಟ ತೆಗೆಯುವ ಸಂಭ್ರಮ, ಅವಿರತ ವಾಹನಗಳ ಗದ್ದಲ ಹಳೆಗಾಲದ ಸಂತೆಗದ್ದಲಕ್ಕ್ ಕಡಿಮೆಯಿರಲಿಲ್ಲ. ಮಾರ್ಗದ ಮೇಲೆ ನೀರಾದ ಮಂಜು, ಅಂಚುಗಳ ಕೆಸರನ್ನು ಮೆಟ್ಟಿದೆವು. ಹೊರ ಅಂಚುಗಳಿಗೆ ಸರಿದಂತೆ ಪದತಲದಲ್ಲಿ ಚರಪರಗುಟ್ಟುವ ಬರ್ಫದ ಚಕ್ಕೆಗಳು, ಅದರಡಿಯಲ್ಲಿ ಹುಗಿದು ಕುಳಿತು ಅಡಿಮಗುಚುವ ಕಲ್ಲುಗುಂಡುಗಳನ್ನೂ ಸಂಭ್ರಮದಲ್ಲೇ ಅನುಭವಿಸಿದೆವು. ನಾನು ಒಂದೆರಡು ಮಿನಿಟು, ಜರ್ಕಿನ್ ಜಗ್ಗುತ್ತ, ಕೊಡೆ ಅತ್ತಿತ್ತ ಓಲಾಡಿಸುತ್ತ, ಕೆಸರು, ಸ್ಮರಣಿಕಾ ಚಿತ್ರ ಎಂದು ಹತ್ತಿಪ್ಪತ್ತು ಹೆಜ್ಜೆ ಪರದಾಡಿದೆ. ಪಯಣದ ಜಡವೋ, ತಲೆ ಸಿಡಿತವೋ ತಡೆಯಲಾಗದ ಚಳಿಯೋ ಎಂದು ಅರಿವಾಗದೇ ಮತ್ತೆ ವ್ಯಾನೇರಿ ಮುದುರಿಕೊಂಡೆ. (ಅಂದು, ನನ್ನನ್ನು ಔನ್ನತ್ಯ ಸಂಕಟ ಕಾಡದು, ಎಂಬ ಆತ್ಮಗರ್ವ ಕಾಡಿದ್ದಿರಬೇಕು!)

ಕಾರ್ಡೂಂಗ್ಲಾ ಜಗತ್ತಿನ ಅತ್ಯುನ್ನತ ವಾಹನಯೋಗ್ಯ ರಸ್ತೆ ಎಂದೇ ಈಚಿನವರೆಗೂ ಪ್ರಸಿದ್ಧವಿತ್ತು. ಆದರೀಗ ಲದ್ದಾಕ್ ವಲಯದ ಇನ್ನೊಂದೇ ಗಿರಿ ಸಂದು – ಉಮಿಲಿಂಗ್-ಲಾ (ಸಮ ೧೯,೦೨೪ ಡಿ) ಪಟ್ಟ ಕಸಿದುಕೊಂಡಿದೆ. ಅಲ್ಲಿನ ನುಡಿಯಲ್ಲಿ ‘ಲಾ’ ಎಂದರೆ ಬೆಟ್ಟದ ಸಂದು ಅರ್ಥಾತ್ Passಏ! ತಂಗ್ಲಿಂಗ್-ಲಾ, ಚಾಂಗ್-ಲಾ, ಸರ್ಸೆ-ಲಾ… ಮುಂತಾದ ಅಸಂಖ್ಯ ಲಾ-ಗಳ ನೆಲವೆ ಲ-ದ್ದಾಕ್! ಅನ್ಯ ಭಾಷಿಕರ ರೂಢಿಯಲ್ಲಿ ಅದಕ್ಕೆ ಇಂಗ್ಲಿಷಿನ ‘ಪಾಸ್’ ಸೇರಿಹೋಗಿದೆ. ನಮ್ಮಲ್ಲಿ ಎಷ್ಟೋ ಮಂದಿ ‘ಡೋರ್ಬಾಗ್ಲು’ ಎನ್ನುವಂತೇ ಚಾಲ್ತಿಯಲ್ಲಿ ಕಾರ್ಡೂಂಗ್ಲಾ ಪಾಸ್, ಉಮ್ಲಿಂಗ್ಲಾ ಪಾಸ್ ನಡೆದಿದೆ,  ಡೋಂಟ್ವರೀ ಮಾಡ್ಕೋಬೇಡಿ!

ಐದಾರು ಮಿನಿಟಿನೊಳಗೆ ಎಲ್ಲರೂ ಒದ್ದೆ, ಚಳಿಯಲ್ಲಿ ಮುದ್ದೆಯಾಗಿ ವ್ಯಾನೇರಿದ್ದೆವು. ಗಾಢವಾಗುತ್ತಿದ್ದ ಮಂಜಿನ ಮುಸುಕಿನಲ್ಲಿ ಸುತ್ತಣ ದೃಶ್ಯವೈಭವದ ಭ್ರಮೆ ಬಿಟ್ಟು, ಮುಂದಿನ ದಾರಿ ಕಂಡರೆ ಸಾಕೆನ್ನುತ್ತ, ಹಳದಿ ಹೆದ್ದೀಪ ಬೆಳಗಿಕೊಂಡು ನುಬ್ರಾ ಕಣಿವೆಯ ಮಗ್ಗುಲಿನ ಇಳಿದಾರಿ ಹಿಡಿದೆವು. ಹಿಮಾಲಯದ ಹಲವು ಮುಖಗಳಲ್ಲಿ ಒಂದಾದ ಲದ್ದಾಕ್ ಅಂದರೆ ಶೀತಲ ಮರುಭೂಮಿ ಎಂಬ ಹೇಳಿಕೆಗೆ ಉತ್ತಮ ಉದಾಹರಣೆ ನುಬ್ರಾ ಕಣಿವೆ. ಇಲ್ಲಿ ಅತೀವ ಶೀತದೊಡನೇ ಬಹುಭಾಗ ಒಣಒಣ, ಭಣಭಣ ಮರಳಿನದ್ದೇ ಕಾರುಭಾರು. ಇಲ್ಲಿನ ಪರ್ವತ ಸಾಲು ವಿರಳ ಮಳೆ, ಬಡಕಲು ಝರಿ, ಹೊಳೆಗಳಿಂದ ರೂಪುಗೊಂಡದ್ದಕ್ಕಿಂತ ಹೆಚ್ಚು ಅದೇ ಪ್ರಕೃತಿಯ ಇತರ ಕಲಾಪಗಳಾದ ಭೂಕಂಪ, ಬಿಸಿಲು, ಗಾಳಿ ಮತ್ತು ಹಿಮದ ಭಾರ. ದಾರಿಯ ಎರಡೂ ಮಗ್ಗುಲಿನಲ್ಲಿ ಆಗಸದೆತ್ತರಕ್ಕೇ ಮಲೆತು ನಿಂತ ಬೆಟ್ಟ ಕೋಡುಗಳ ನಡುವೆ ನುಸಿದು ಸಾಗಿದಂತಿತ್ತು. ಅವುಗಳ ಮೈಯಲ್ಲಿನ ಏಣು, ಕೊರಕಲು, ಕಣಿವೆಗಳಲ್ಲಿ ಇಳಿದ ಧಾರೆಗಳಲ್ಲಿ ಕೆಲವು ಮೇಲಿನೆತ್ತರಗಳಲ್ಲಿ (ಬೇಸಗೆಯಾದ್ದರಿಂದ) ಬರ್ಫದ ಬಿಳಿ ಮಿಂಚುತ್ತಿತ್ತು. ಉಳಿದಂತೆ ಹಲವು ವರ್ಣಛಾಯೆಗಳ ಮತ್ತು ಗಾತ್ರಗಳ ಮಣ್ಣು ಕಲ್ಲುಗಳೇ ಇದ್ದು, ತತ್ಕಾಲೀನ ಸ್ಥಿರತೆಯಲ್ಲೂ ಜಲಪಾತದ ಭ್ರಮೆ ಹುಟ್ಟಿಸುತ್ತಿತ್ತು. ಕಣಿವೆಯಾಳದಲ್ಲಿ ಅವು ಮೂಡಿಸಿದ ಸಮಭೂಮಿಯ ತಗ್ಗಿನಲ್ಲೇ ಅಂಕುಡೊಂಕಿನ ಜಾಡು ಮೂಡಿಸಿಕೊಂಡು, ತೆಳುವಾಗಿ ಹರಿದಿದೆ ಶ್ಯೋಕ್/ ಶಯಾಕ್, ಅರ್ಥಾತ್ ಶೋಕ ನದಿ. ಹೀಗೆ ತುಸು ನೀರು ಹಸಿರು ರೂಢಿಸಿದ್ದನ್ನೇ ಬಳಸಿಕೊಂಡು ವಿಕಸಿಸಿದ ಅನ್ಯ ಜೀವಾವಾಸಗಳ ಭಾಗವಾಗಿ ಮನುಷ್ಯ ಕೃಷಿ, ಸಾಕುಪ್ರಾಣಿಗಳೊಡನೆ ನೆಲೆ ನಿಂತದ್ದೇ ನುಬ್ರಾ ಹಳ್ಳಿ/ ಪೇಟೆ.

ಮರಳುಗಾಡನ್ನು ಪ್ರವೇಶಿಸುವ ವಲಯದಲ್ಲೆ ಜಗತ್ತಿನ ಅತ್ಯುನ್ನತ ಜಿಪ್ ಲೈನುಗಳಲ್ಲಿ ಒಂದು ಎಂದೇ ಖ್ಯಾತವಾದ (ಉತ್ಪ್ರೇಕ್ಷೆ ಇರಬಹುದು) ಒಂದು ಮೋಜಿನಾಟದ ನೆಲೆ ಕಾಣಿಸಿತ್ತು. ನಾವು ನೋಡುತ್ತಿದ್ದಂತೆ, ಎದುರಿನ ಬೆಟ್ಟದೆತ್ತರದ  ಉಡಾವಣಾ ನೆಲೆಯಲ್ಲಿ, ಉಕ್ಕಿನ ಮಿಣಿಗೆ ತಗುಲಿಕೊಂಡ ಅಸ್ಪಷ್ಟ ಚುಕ್ಕಿಯೊಂದು. ಝಿರ್ರೆಂದು ಜಾರುತ್ತಾ ಕಣಿವೆಯ ತಳ ಸಮೀಪಿಸಿತ್ತು. ಹೆಚ್ಚು ಕಮ್ಮಿ ಒಂದೂವರೆ ಕಿಮೀ ಉದ್ದಕ್ಕೆ ಜಾರಿಯಿಳಿದ ಆ ಚುಕ್ಕಿ ಸಮೀಪಿಸಿದಾಗ ಕಾಣಿಸಿದ್ದು ಸಣ್ಣ ಓಲಾಟದ, ಹರ್ಷೋದ್ಗಾರದ ಮಾನವ ಮೂಟೆ! ನಮ್ಮಿಂದ ಐವತ್ತರವತ್ತಡಿ ಆಚಿನ ತಗ್ಗಿಗೆ ಆತ ಝಿರ್ರೆಂದು ಮಿಂಚಿದ್ದ. ಅಲ್ಲಿನ ಟಿಕೆಟ್ ಅಡ್ಡೆಯಿಂದ ಉಡಾವಣಾ ನೆಲೆಗೊಯ್ಯುವಲ್ಲಿ, ಇಳಿದಾಣದಿಂದ ವಾಪಾಸು ತರುವಲ್ಲಿ ವಾಹನಗಳು ಚುರುಕಾಗಿಯೇ ಇದ್ದವು. ಅಲ್ಲಿನ ಪ್ರವಾಸೀ ವಾಹನ, ಜನ ಜಂಗುಳಿ, ಹೆಚ್ಚಿನ ಆಕರ್ಷಣೆಯಾಗಿ ನಡೆಯುತ್ತಿದ್ದ ಸಕಲ ಸಂಚಾರಿ ವಾಹನಗಳ (ಏಟೀವಿ) ಭರಾಟೆಗಳೆಲ್ಲ ನಮ್ಮಲ್ಲಿನ ಸಾಹಸಪ್ರಿಯರುಗಳಿಗೆ ಪಂಥಾಹ್ವಾನಂತೇ ಇತ್ತು. ಆದರೆ ಪ್ರಕಟಿಸಲಾಗದ ಅಳುಕಿದೊಂದು ನೆಪ ಹುಡುಕಿದಂತೆ “ಒಮ್ಮೆ ಹಾರಲು ಎರಡೂವರೆ ಸಾವಿರಾ…” ಎಂದು ಉದ್ಗರಿಸಿ ಮುಂದುವರಿದೆವು! ಬಾಲ್ಯದಲ್ಲಿ ಓದಿದ್ದ ಕತೆಯ ನರಿಯಣ್ಣ ಸುಮ್ಮನೇ ಹೇಳಲಿಲ್ಲ “ಎಟುಕದ ದ್ರಾಕ್ಷಿ ಬಹಳ ಹುಳೀ”.

ಮುಂದೆ ದಾರಿ ಮಗ್ಗುಲಲ್ಲೇ ಸಿಕ್ಕ ಪುಟ್ಟ ಧಾಬಾದಲ್ಲಿ ಸುಡು ಸುಡು ಚಾ, ಚುರುಮುರಿ ತಿಂದು, ಕಾರ್ಡೂಂಗ್ಲಾ ಪ್ರಭಾವದಿಂದ ಚೇತರಿಸಿಕೊಂಡೆವು. ಅಲ್ಲಿ ಸಿಕ್ಕ ಬೌದ್ಧರ ಇನ್ನೊಂದೇ ಮಹಾ ಮಠ – ಡಿಸ್ಕೆಟ್ ನೋಡಲು ಸಣ್ಣ ಕವಲು ಹಿಡಿದೆವು. ಬೆಟ್ಟಸಾಲಿನ ಸುವಿಸ್ತಾರ ಮೈಯಲ್ಲಿ, ಅಷ್ಟೇ ವ್ಯಾಪಕವಾಗಿ ಮತ್ತು ಹಲವು ಹಂತಗಳಲ್ಲಿ ಬೆಳೆದು ನಿಂತಿದ್ದ ಡಿಸ್ಕೆಟ್ ಮಠದ ದೃಶ್ಯಗಳು ಮನೋಹರವಾಗಿದ್ದವು. ಎಲ್ಲರಂತೆ ನಾನ್ನೂ ವಾಹನವಿಳಿದು, ಮಠದ ಪ್ರಾಥಮಿಕ ಹಂತದ ಹೊರವಲಯಕ್ಕೇ ಸೀಮಿತನಾದೆ. ಅಲ್ಲಿ ಸ್ಥಾಪಿಸಿದ್ದ ನೂರೆಂಟು ಅಡಿ ಎತ್ತರದ ಮೈತ್ರೇಯ ಬುದ್ಧನ (ರಿಂಗ್ಪೋಚೆ = ಕಿರೀಟಿ ಬುದ್ಧ) ಸುತ್ತ ವಿರಾಮದಲ್ಲಿ ನಡೆದು, ಹಕ್ಕಿ ನೋಟ ಮತ್ತು ಪಟ ಸಂಗ್ರಹಕ್ಕೇ ತೃಪ್ತನಾದೆ. ವ್ಯಾನ್ ನಮ್ಮನ್ನು ವಿಸ್ತರಿಸುತ್ತಲಿದ್ದ ನುಬ್ರಾ ಕಣಿವೆಯಲ್ಲೇ ಮುಂದಕ್ಕೊಯ್ದು, ಶಯಾಕ್ ನದಿ ತೀರದ ಮರಳ ಹಾಸಿನ ಮೋಜಿನ ಕಟ್ಟೆಯ ತೀರದಲ್ಲೇ ಇಳಿಸಿತು.

ಪ್ರವಾಸೋದ್ದಿಮೆಯ ಜನಪ್ರಿಯತೆಗೆ ಅಗತ್ಯವಾದ ಕೆಲವು ಸವಲತ್ತುಗಳೂ ಆಟಗಳೂ ಅಲ್ಲಿ ವ್ಯಾಪಿಸಿದ್ದವು. ನೀರು ಹೆಚ್ಚಿದ್ದ ಕಾಲದಲ್ಲಿ ನಡೆಯುವ ಒರಟು ತೆಪ್ಪ ಸವಾರಿಗೆ (ವೈಟ್ ವಾಟರ್ ರ್ಯಾಫ್ಟಿಂಗ್) ಅನುಕೂಲವಾಗುವಂತೆ ಕಾಂಕ್ರೀಟ್ ದಂಡೆ, ಅಡ್ಡ ಹಾಯಲು ಪುಟ್ಟ ಎರಡು ಸೇತುವೆ, ಶೌಚಗಳನ್ನು ಚೆನ್ನಾಗಿಯೇ ನಿರ್ಮಿಸಿದ್ದರು. ಶೌಚಾಲಯದ ವಿಶೇಷ ಮನವಿಯನ್ನು (ಚಿತ್ರ ನೋಡಿ)

ಮೆಚ್ಚಿಕೊಂಡ ದೇವಕಿ ಅದನ್ನು ನನ್ನ ಗಮನಕ್ಕೆ ತಂದಿದ್ದಳು. ಉಳಿದಂತೆ ತಿಂಡಿ, ತೀರ್ಥಗಳ ಮಳಿಗೆಗಳಲ್ಲಿ ಗರಂಗೊಂಡು ಬಿಲ್ಗಾರಿಕೆ, ಏರ್ ಗನ್ ಪರೀಕ್ಷಾ ಕಣಗಳಲ್ಲಿ ಪರೀಕ್ಷೆ ಕೊಡಬಹುದಿತ್ತು. ಐವತ್ತು ನೂರರ ಸಂಖ್ಯೆಯಲ್ಲೇ ಕಾದಿದ್ದ ಎರಡು ಡುಬ್ಬದ ಒಂಟೆಯೋ, ಕುದುರೆಯೋ, ಯಾಕ್-ನಲ್ಲೋ ಸವಾರಿ ನಡೆಸಬಹುದಿತ್ತು. ಪುಟ್ಟದಾಗಿ ಗುಡಾರ ಹಾಕಿದ್ದ ಲದ್ದಾಕ್ ಸಾಂಸ್ಕೃತಿಕ ಕೇಂದ್ರವನ್ನೂ ಸಣ್ಣ ಪ್ರವೇಶಧನದೊಡನೆ ನೋಡಬಹುದಿತ್ತು. ಬಾಡಿಗೆಗೆ ಸಿಗುತ್ತಿದ್ದ ಲದ್ದಾಕೀ ವೇಷಭೂಷಣ ಧರಿಸಿಸಿ, ಪ್ರಾಣಿ ಸವಾರಿ  ಮಾಡಿ, ಹಾಗೇ ಸ್ವಂತೀ ಗುಂಪೀ ಪಟಗ್ರಹಣ ಮಾಡುತ್ತಾ ಸಾಕಷ್ಟು ‘ಮರುಭೂಮಿ’ಯಲ್ಲಿ ಕಾಲಾಡಿಸಿ, ಮುಸ್ಸಂಜೆಗೆ ಮತ್ತೆ ವ್ಯಾನೇರಿದೆವು.

ನುಬ್ರಾದ ಹಸಿರು ವಲಯ ಪ್ರವೇಶಿಸುತ್ತಿದ್ದಂತೆ ಆ ಅತಂತ್ರ ನೆಲದ ಗಲ್ಲಿ ಗಲ್ಲಿ ವ್ಯಾಪಿಸಿದ, ತರಹೇವಾರಿ ವಸತಿ ನಿಲಯಗಳ ಜಾಲ ನೋಡಿ, ನಾನಂತೂ ಹೈರಾಣಾಗಿ ಹೋದೆ (ಒಂದು ಕೈಕಂಬದ ಚಿತ್ರ ನೋಡಿ).

ಆ ರಾಶಿಯಲ್ಲೂ ಒಂದು ಗಲ್ಲಿಯ, ಎರಡು ಭಿನ್ನ ನೆಲಗಳಲ್ಲಿ ಹಂಚಿಕೊಂಡಿದ್ದ, ಸುದೃಢ ಮತ್ತು ಬೆಚ್ಚನ್ನ ಗುಡಾರಗಳ ವಠಾರ – ನುಬ್ರಾ ಡಿಲೈಟ್, ನಮ್ಮನ್ನು ಹಾರ್ದಿಕವಾಗಿ ಬರಮಾಡಿಕೊಂಡಿತು. ಮೊದಲ ಗುಡಾರವೇ ನಮ್ಮದು. ಹಿತ ಬೆಳಕಿನಲ್ಲಿ ಸೊಳ್ಳೆ ಪರದೆ ಆವೃತ್ತ ಪುಟ್ಟ ಕೂರುವ ಸ್ಥಳ, ಜೋಡಿ ಹಾಸುಗೆಯ ಬೆಚ್ಚನ್ನ ಹೊದಿಕೆಗಳ ಮಲಗು ಕೋಣೆ, ಕೊನೆಯಲ್ಲಿ ಎಲ್ಲ ಆಧುನಿಕ ಸವಲತ್ತುಗಳೂ ಇದ್ದ ಶೌಚ, ನಮ್ಮ ಒಂದು ರಾತ್ರಿಯ ವಾಸವನ್ನು ನಿಜಕ್ಕೂ ಸ್ಮರಣೀಯವಾಗಿಸಿತು. ಊರ ಮಿತಿಯಲ್ಲಿ ರಾತ್ರಿ ಹನ್ನೊಂದರಿಂದ ಮುಂಜಾನಿನವರೆಗೆ ವಿದ್ಯುತ್ ಪೂರೈಕೆ ಇಲ್ಲ, ಬೆಳಗ್ಗಿನ ಸೀಮಿತಾವಧಿಗೆ ಮಾತ್ರ ನಲ್ಲಿಯಲ್ಲಿ ಬಿಸಿ ನೀರು ಎಂಬ ಅನಿವಾರ್ಯ ನಿಯಮಗಳು ನಮಗೆ ಕೊರತೆಯಾಗಿ ಕಾಣಿಸಲೇ ಇಲ್ಲ.

ಆ ವಸತಿ ಗುಡಾರ ಸಮೂಹದ ಹಿನ್ನೆಲೆಯ ಕಾಂಕ್ರೀಟ್ ಕಟ್ಟಡದಲ್ಲೇ (ಬಹುಶಃ ಬಾಡಿಗೆ ಕೋಣೆಗಳೂ ಇದ್ದಿರಬೇಕು) ನಮ್ಮ ಅಡುಗೆ ಬಳಗ ನೆಲೆಸಿದ್ದರು.

 

ನುಬ್ರಾಕ್ಕೆ ನಾವು ವಿದಾಯ ಹೇಳುವವರೆಗೂ ಕಾಲಕಾಲಕ್ಕೆ ಬಿಸಿಬಿಸಿ ತಿನಿಸು ಪಾನೀಯಗಳ ಕೊರತೆಯಾಗದಂತೆ ನೋಡಿಕೊಂಡರು. ಗುಡಾರ ವಠಾರದ ಪುಟ್ಟ ಅಂಗಳ, ನಮ್ಮ ಈ ಪ್ರವಾಸದ ಮೊದಲ (ನಮ್ಮ ಲೆಕ್ಕಕ್ಕೆ ಕೊನೆಯದೂ) ಸ್ನೇಹ ಸಮ್ಮಿಳನಕ್ಕೂ ಶಿಬಿರಾಗ್ನಿಯ ಮೋಜಿಗೂ ಒದಗಿತ್ತು. ದೀಪವಾರುವ ಎಷ್ಟೋ ಮೊದಲು ಎಲ್ಲರೂ ನಿದ್ರೆಗೆ ಶರಣಾಗಿದ್ದೆವು.

ಲದ್ದಾಕೀ ಸಂಸ್ಕೃತಿಯೂ ಭಾರತೀಯವೇ

ಹೊಸ ಬೆಳಿಗ್ಗೆಯಲ್ಲಿ ನಾವು ಕಾರ್ಡೂಂಗ್ಲಾದ ಎತ್ತರದ ಯಾತನೆ ಕಳೆದು (ನುಬ್ರಾ ಸುಮಾರು ೨೦೦೦ ಅಡಿ ತಗ್ಗಿನಲ್ಲಿದೆ), ಸುಖ ನಿದ್ರೆಯಲ್ಲಿ ನವಚೇತನವನ್ನೇ ಹರಿಸಿತ್ತು. ಎಂದಿನಂತೆ ನಾವಿಬ್ಬರು, ಸಣ್ಣ ಪ್ರಯತ್ನದಲ್ಲಿ ಹಳ್ಳಿ ದರ್ಶನಕ್ಕೆ ನಡೆದೆವು. ಆ ನಸುಕಿನಲ್ಲೇ ಬಡವೆಯೊಬ್ಬಳು ಕಷ್ಟದ ಸೌದೆ ಸಂಗ್ರಹ ನಡೆಸಿದ್ದಳು. ಅಮ್ಮನನ್ನು ಬಿಟ್ಟಿರಲಾರದ ಅವಳ ಕೂಸು ಪುಟ್ಟ ಎರಡು ಪಿಳಪಿಳ ಕಣ್ಣುಗಳಷ್ಟೇ ಆಗಿ ಬೆಂಬಲಕ್ಕೆ ‘ಒದಗಿತ್ತು’! ಪಕ್ಕದ ಪುಟ್ಟ ಕಲ್ಲು ಪಾಗಾರದೊಳಗೆ ಏನೋ ಗೆಡ್ಡೆ ತರಕಾರಿ ಕೃಷಿಯ ಹಸಿರು ವ್ಯಾಪಿಸಿತ್ತು. ಇನ್ಯಾರೋ ಒಬ್ಬಳು, ಹಟ್ಟಿಯಿಂದ ದನವನ್ನು ಮೈದಾನಕ್ಕಟ್ಟಿ ಬರುತ್ತಿದ್ದವಳನ್ನು ದೇವಕಿ ನಿಲ್ಲಿಸಿ, ಸಂದರ್ಶನ ಪ್ರಯತ್ನಕ್ಕಿಳಿದಳು. ಆದರೆ ಬಹು ಬೇಗನೇ ಇಬ್ಬರಿಗೂ ‘ಭಾಷೆ ಇಲ್ಲ’ ಎಂಬ ತೀರ್ಮಾನದಲ್ಲಿ ಕೈ ಚೆಲ್ಲಿದಳು.

ನಮ್ಮ ಎರಡು ಗುಡಾರ ವಲಯಗಳ ನಡುವೆ ಎನ್ನುವಂತೆ, ಸಣ್ಣದಾಗಿ ಕಲ್ಲು ಕಟ್ಟಿದ ಚರಂಡಿಯಲ್ಲಿ ಎಲ್ಲಿನದೋ ಶುದ್ಧ ನೀರು ಸಳಸಳ ಹರಿದಿತ್ತು. ಅದರ ಬಗಲಲ್ಲೇ ನೀರಿಗೆ ಕೈಯನ್ನೂ ಹಾಕ ಬಾರದೆಂಬ ಅರ್ಥದ ಬೋರ್ಡು ಊರಿದ್ದು, ನನಗೆ ಅರ್ಥವಾಗಲಿಲ್ಲ. ಮೆಟಾಯಾಂಬು (ಮೆಟಾದ ಯಾಂತ್ರಿಕ ಬುದ್ಧಿಮತ್ತೆ) ಅದು ಹೊಳೆಯದೇ ಶುದ್ಧ ನೀರಾದರೂ ಕೃಷಿ ಬಳಕೆಗಷ್ಟೇ (ಕುಡಿಯಲು ಅಲ್ಲ) ಮೀಸಲಾದ ಕಾಲುವೆಯೇ ಇರಬೇಕೆಂದಿತು. ನಾವು ಆಚೆ ಹೋಗಿ ಈಚೆ ಬರುವಾಗ, ಸಾರ್ವಜನಿಕ ಕೆಲಸಗಾತಿಯಂತೆ ಕಾಣುವ ಒಬ್ಬಳು, ಚರಂಡಿಯ ಮೇಲಂಚಿನಲ್ಲೇ ನಿಂತು, ಎಲೆ-ಗುದ್ದಲಿಯಲ್ಲಿ (ಲಾಂಗ್ ಹ್ಯಾಂಡಲ್ ಸ್ಪೇಡ್) ನೀರ ಹರಿವಿಗೆ ಅಡ್ಡಿಯಾಗಿ ಜರುಗಿದ್ದ ಕಲ್ಲನ್ನು ಬಿಗಿ ಪಡಿಸುತ್ತಿದ್ದಳು.

ನಮ್ಮ ಗಲ್ಲಿ ಮುಖ್ಯ ದಾರಿ ಸೇರುವಲ್ಲೊಂದು ಕೈಕಂಬದ ಹಿನ್ನೆಲೆಯಲ್ಲಿ ದೊಡ್ಡ ಸ್ತೂಪ ನಿಂತಿತ್ತು. ಅದರಿಂದ ಮುಖ್ಯ ದಾರಿಯಗುಂಟ ಸುಮಾರು ಐವತ್ತಡಿ ಉದ್ದದ ‘ಹರಕೆ ಕಲ್ಲು’ಗಳ ಕಟ್ಟೆ ಬೆಳೆದು, ಇನ್ನೊಂದು ಸ್ತೂಪಕ್ಕೆ ಮುಗಿದಿತ್ತು. ಅಲ್ಲಿನ ಕೈಕಂಬ ಬಡಕಲಾಗಿದ್ದರೂ ಆ ಪ್ರದೇಶದ ಕನಿಷ್ಠ ತೊಂಬತ್ತೈದು ಊಟ, ವಸತಿ ವ್ಯವಸ್ಥೆಗಳಿಗೆ (ವಿಭಾಗವಾರು) ಸಾಕ್ಷೀ ಕಂಬವಾಗಿ ಕಾಣಿಸಿ, ನಮಗೆ ಇನ್ನಿಲ್ಲದ ಆತಂಕವನ್ನೇ ಮೂಡಿಸಿತು. ಬರುವ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚುವಾಗ ಈ ನೆಲ, ನೀರು, ಪರಿಸರ ತಡೆದೀತೇ?

ಮುಂದೊಂದು ಗಲ್ಲಿಯಲ್ಲಿ ದೃಢವಾಗಿಯೇ ಕಲ್ಲಿನಲ್ಲಿ ಕಟ್ಟಿದ ಸರಳ ಮಸೀದಿ ಕಾಣಿಸಿತು. ಅದರ ಮುಖ್ಯ ಮಾಡಿನ ಶೀಟುಗಳಷ್ಟೇ ಹಸುರು ಬಣ್ಣದವು. ಉಳಿದಂತೆ ಗುಮ್ಮಟ, ಪಾಗಾರ, ಗೇಟು, ಸರಳ ಅಲಂಕಾರಗಳಲ್ಲೆಲ್ಲೂ ಹಸುರು ಬಣ್ಣವಿರಲಿಲ್ಲ. ಇನ್ನೂ ಆಶ್ಚರ್ಯಕರವಾಗಿ ಅದರ ಗುಮ್ಮಟದ ಕಳಶದಲ್ಲೂ, ಗೇಟಿನಲ್ಲೂ ಹಾರಿಸಿದ್ದ ಧ್ವಜ ಕೆಂಬಣ್ಣದು; ಹಸುರಲ್ಲ! ನಮ್ಮ ಊರುಗಳ ಮುಸ್ಲಿಂ ಆರಾಧನಾ ಕೇಂದ್ರಗಳ ಕಣ್ಣು ಕುಕ್ಕುವ ಗಾಢ ಹಸುರು ಎಲ್ಲೂ ಇರಲಿಲ್ಲ. ಇದರ ನೆಪದಲ್ಲಿ ನಾನು ತುಸು ಗೂಗಲ್ ಸುತ್ತಿದಾಗ ತಿಳಿದ ವಿಚಾರವೆಂದರೆ….

ಲದ್ದಾಕಿನ ಜನ ಸಂಖ್ಯೆ ೨೦೨೫ರ ಅಂದಾಜಿನಂತೆ ೩,೦೪,೦೦೦. ಇದರಲ್ಲಿ ೪೬% ಮುಸ್ಲಿಂ (ಮುಖ್ಯವಾಗಿ ಶಿಯಾಗಳು), ೪೦% ಬೌದ್ಧರು (ಟಿಬೆಟನ್), ೧೨% ಹಿಂದೂಗಳು ಮತ್ತು ಉಳಿದ ೨%ನಲ್ಲಿ ಸಿಖ್, ಜೈನ್, ಕ್ರಿಶ್ಚಿಯನ್, ಇತರರು. ೧೯೭೦ರ ಸುಮಾರಿಗೆ ಜಮ್ಮು ಕಾಶ್ಮೀರಗಳ ಆಡಳಿತದ ಶೋಷಣೆಯಿಂದ ಬೇಸತ್ತ ಲದ್ದಾಕ್ ವಲಯದ ಪ್ರತಿಭಟನೆಗಳು ಮಂಗಳೂರಿನ ದೂರಕ್ಕೂ ಮುಟ್ಟಿತ್ತು. ಆಗ ಅದನ್ನು ತಿಳಿಯುವ ಹಂಬಲದಲ್ಲೇ ಕರಕಷ್ಟದ ಪ್ರಯಾಣ ಮಾಡಿ ಬಂದಿದ್ದ ಗೆಳೆಯರಾದ  ನಟೇಶ್ ಉಲ್ಲಾಳ್ ಮತ್ತು ಒಂದಿಬ್ಬರು ನಮ್ಮೊಡನೆ ಹಂಚಿಕೊಂಡ ಕರುಣ ಕತೆ ನೆನಪಾಗುತ್ತದೆ. ಅಲ್ಲಿಂದ ಇಂದಿನವರೆಗೂ ಲದ್ದಾಕಿಗಳ ಸಂಕಟ ವಿಕಸಿಸಿದ ಪರಿಯನ್ನು ಆಸಕ್ತರು ಅಂತರ್ಜಾಲದಲ್ಲಿ ಎಷ್ಟೂ ನೋಡಬಹುದು.

ಲದ್ದಾಕಿನ ಇಂದಿನ ಮುಸ್ಲಿಂ ಸಂಖ್ಯಾ ಬಾಹುಳ್ಯಕ್ಕೆ ಜಮ್ಮು ಕಾಶ್ಮೀರದ ಬಲವಂತದ ಮತಾಂತರವನ್ನೇ ಕಾರಣವೆನ್ನುತ್ತಾರೆ ಸಂಶೋಧಕರು. ಅದನ್ನು ಅವಗಣಿಸಿದರೂ ಇಲ್ಲಿನ ಪ್ರಧಾನ ಸಂಸ್ಕೃತಿ ಬೌದ್ಧರದೇ. ಈ ಗೋಠಾಳೆಗಳ ಕುರಿತು ಏನೂ ತಿಳಿದುಕೊಳ್ಳದ ನಮ್ಮ ಪ್ರವಾಸಿ ಸಂಗಾತಿಗಳು, ಕೆಲವೆಡೆ ತೆಗೆದ ಅಪಸ್ವರಗಳು, ನನ್ನನ್ನು ಬಹಳ ನೋಯಿಸಿತು. ನಾವು ಕಂಡಂತೆ ಕಾಳೀ ಮಂದಿರ, ಹೆಚ್ಚಿನೆಲ್ಲ ಬೌದ್ಧ ರಚನೆಗಳು ಬೆಟ್ಟದ ಕೊಡಿಗಳಲ್ಲೇ ಇವೆ. ಆದರೂ ಎಲ್ಲೋ ಒಂದು ಪುಟ್ಟ ಗುಡ್ಡದ ಎತ್ತರದಲ್ಲಿ, ಸಣ್ಣ ಮಸೀದಿ ಕಾಣಿಸಿದಾಗ, ನಮ್ಮಲ್ಲಿ ಯಾರೋ ವ್ಯಂಗ್ಯದಲ್ಲಿ ಉದ್ಗರಿಸಿದ್ದರು “ಆ ದುರ್ಗಮ ಸ್ಥಿತಿಯಲ್ಲೂ ಮಸೀದಿ ನಿಲ್ಲಿಸುವ ‘ಅವರ’ ಹಠ ನೋಡಿ!”

ಹಿಂದುತ್ವ ವಾದಿಗಳ ಸರಕಾರ, ಇಂದು ಲದ್ದಾಕನ್ನು ಜಮ್ಮುವಿನ ಕರಾಳ ಹಸ್ತದಿಂದ ಬಿಡಿಸಿದ್ದು ನಿಜ. ಆದರೆ ಅದನ್ನು ಕುಟಿಲತೆಯಲ್ಲಿ ಹಿಂದುತ್ವದ ಪ್ರಣಾಳಿಕೆಗೆ ಒಗ್ಗಿಸುವ ಕಲಾಪಗಳು ಸುಮಾರು ಮೂರು ದಶಕಗಳಿಂದಲೇ ನಡೆಯುತ್ತಿದೆ. ಇದು ಲದ್ದಾಕೀ ಸಂಸ್ಕೃತಿಗೆ, ಮುಖ್ಯವಾಗಿ ಅಲ್ಲಿನ ಪರಿಸರಕ್ಕೇ ಪೂರಕವಾಗಿಲ್ಲ. ಇದಕ್ಕೆ ಸಣ್ಣ ಉದಾಹರಣೆ ಲೇಹ್ ನಗರದಲ್ಲಿ ವ್ಯಾಪಕವಾಗಿ ಕಾಣಿಸಿದ ಸಿಂಧೂ ಮಹಾ ಕುಂಭ್ ಮೇಳದ ಪ್ರಚಾರ ಸತ್ರ. ಪಶ್ಚಿಮ ಏಷ್ಯಾದವರು, ಇಂದಿನ ಭಾರತವೆಂಬ ಪರ್ಯಾಯ ದ್ವೀಪಕ್ಕೆ, ಒಂದು ಭೌಗೋಳಿಕ ಗಡಿಯಾಗಿ ಸಿಂಧೂ ನದಿಯನ್ನೇ ಇಟ್ಟುಕೊಂಡಿದ್ದರು. ಸಿಂಧೂವಿನ ಆಚಿನದ್ದು ಎಂಬುದೇ ರೂಪಾಂತರದಲ್ಲಿ ಹಿಂದೂಸ್ಥಾನ, ಇಂಡಿಯ ಆಗಿತ್ತು. ಈ ಅಂಕಿತ ನಾಮವನ್ನು ಈ ಭೂಖಂಡದ ವೈವಿಧ್ಯಮಯ ಸಂಸ್ಕೃತಿಗಳನ್ನೇ ಅಲ್ಲಗಳೆಯುವಂತೆ ಇಂದು ನಡೆದಿರುವುದು ಕೇವಲ ‘ಹಿಂದುತ್ವದ’ ಸಾಮ್ರಾಜ್ಯಶಾಹೀ ರಾಜಕೀಯ. ಅದರ ಅಂಗವಾಗಿ…

ಸುಮಾರು ಮೂರು ದಶಕಗಳ ಹಿಂದೆಯೇ, ಭಾಜಪದ ಲಾಲ್ಕೃಷ್ಣ ಅಡ್ವಾಣಿ ಹೊರಡಿಸಿದ ‘ಸಿಂಧೂ ದರ್ಶನ ಯಾತ್ರೆ’ಯ ಲಕ್ಷ್ಯ ಲೇಹಿನ ಸಿಂಧೂ ನದಿ ತೀರ. ಹಿಂಬಾಲಿಸಿದ ಸರಕಾರಗಳು ಆ ‘ಅಪದ್ಧ’ವನ್ನು, ಅಮರನಾಥ, ಮುಕ್ತಿನಾಥಾದಿಗಳ ಭೇಟಿಯಂತೇ ವಾರ್ಷಿಕ ವಿಧಿಯ ರೀತಿಯಲ್ಲಿ ಪ್ರೋತ್ಸಾಹಿಸುತ್ತಲೇ ಬಂದಿವೆ. ಈ ವರ್ಷ ಅದಕ್ಕೆ ಹೆಚ್ಚಿನ ಆಯಾಮವನ್ನು ಕೊಡುವಂತೆ, ಮೋದಿ ಸರಕಾರ, ‘ಸಿಂಧೂ ಮಹಾ ಕುಂಭ ಮೇಳ’ವೆಂಬ ಇನ್ನೊಂದೇ ವರ್ಷಾವಧಿ ಆಚರಣೆಗಿಳಿದಿದೆ. (ಪ್ರಥಮ ಮೇಳ ಈಗಾಗಲೇ ಜುಲೈ ೨೨ ರಿಂದ ೨೭ರವರೆಗೆ ಪೂರ್ಣಗೊಂಡಿದೆ) ಲೇಹ್ ಹೊರವಲಯದ ಸಣಕಲು ಸಿಂಧೂ ನದಿಯಲ್ಲಿ ನೀರು ಬತ್ತಿಯೇ ಹೋಗಲಿ, ಮಹಾಪ್ರವಾಹವೇ ಬರಲಿ, ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹಣದ ಹುಚ್ಚು ಹೊಳೆ ವರ್ಷ ವರ್ಷಾ ಹರಿಯುವುದು ‘ಸಂಪ್ರದಾಯ’ವೇ ಆಗಲಿದೆ. ಒಣ ಭಣ ಮೇಜಿನ ಮೇಲಿನ ನೀರಿನ ಬೊಟ್ಟಿನಲ್ಲಿ ಕೈಯಾಡಿಸುವ

 

ಮಕ್ಕಳಾಟವಾಗಬಾರದು. ಭಾಷೆ, ಧರ್ಮ, ಪ್ರವಾಸ, ಆಡಳಿತ, ಅಧಿಕಾರ…. ಮುಂತಾದ ಮೌಲ್ಯಗಳೆಲ್ಲ ಉದ್ಯಮೀಕರಣದ ಮಹಾ ಅಲೆಯಲ್ಲಿ ಕೊಚ್ಚಿ ಹೋಗಲಿವೆ. ಇನ್ನು ತುಸು ಹೆಚ್ಚಿನ ವಿವರವನ್ನು ಮುಂದೆ ಪ್ರಾಸಂಗಿಕವಾಗಿ ಬರೆಯುತ್ತೇನೆ.

ನುಬ್ರಾ ಕಣಿವೆಗೆ ಲದ್ದಾಕಿನ ಹೂಗಳ ಕಣಿವೆ ಎಂದೂ ಹೇಳುವುದಿದೆ. ನಮ್ಮ ಗುಡಾರ ವಸತಿಯ ಕೈತೋಟದ ನಾಕೆಂಟು (ಕೃಷಿತ) ಮತ್ತೆ ಒಟ್ಟಾರೆ ಲದ್ದಾಕಿನ ಎಲ್ಲೆಡೆ ಕಾಣಿಸಿದ ‘ಕಳೆ ಗಿಡ’ಗಳು ಇಲ್ಲೂ ಹೂವಿನ ಅಲಂಕಾರದಲ್ಲಿದ್ದವು, ವಿಶೇಷ ಹೇಳುವಂಥವೇನೂ ಕಾಣಲಿಲ್ಲ. ಆ ವಲಯಗಳಲ್ಲಿ ಬಹುವಾಗಿ ಬೆಳೆಸುವ/ ಬೆಳೆವ ಅಡಿಕೆ ಅಥವಾ ಬಿದಿರ ಕಂಬಗಳಂತೇ ಕಾಣುವ ಮರಗಳು ಇಲ್ಲೂ ಇದ್ದವು. ಈ ವಲಯದ ವನ್ಯಜೀವಿ ವಿಶೇಷಗಳು ನಮಗೆ ಕೇವಲ ಇಲಾಖೆಯ ಪ್ರಚಾರ ಬೋರ್ಡುಗಳಲ್ಲಷ್ಟೇ ಕಾಣಿಸಿದವು (ಬೆಟ್ಟದಾಡು, ನರಿ, ಚಿರತೆ….). ಇಲ್ಲಾ ಎನ್ನಲಾಗದಂತೆ ಎಲ್ಲೋ ಒಂದು ಕಾಗೆ ಕಾಣಿಸಿತ್ತು. ನಾವು ನುಬ್ರಾ ಬಿಡುವ ಕಾಲಕ್ಕೆ ಎತ್ತರದ ವಿದ್ಯುತ್ ಸರಿಗೆಯ ಮೇಲೆ ಕುಳಿತಿದ್ದ ಯುರೇಶಿಯನ್ ಮ್ಯಾಗ್ಪೈ (ಅಧಾರ ಮೆಟಾಯಾಂಬು), ಬಿಸಿಲೇರದೇ ಹಾಡು ಹೊರಡುವುದಿಲ್ಲ ಎಂದು ಮೌನದಲ್ಲೇ ನಮಗೆ ವಿದಾಯ ಹೇಳಿತ್ತು.

ಅಂದಿನ (೨೩-೬-೨೬ ಮಂಗಳವಾರ) ನಮ್ಮ ಅಧಿಕೃತ ಕಲಾಪ ಪಟ್ಟಿ ಹೇಳಿದಂತೆ ಹಂಡರ್ ಎಂಬ ಹಳ್ಳಿಯ ಭೇಟಿ, ಅಲ್ಲಿನ ಜನಜೀವನದ ಅಲ್ಪ ಪರಿಚಯ ಪಡೆಯುವುದೆಂದೇ ಇತ್ತು. ಎಂದಿನಂತೇ ರುಚಿಕರ ತಿಂಡಿ ತೀರ್ಥಗಳನ್ನು ಸವಿದು ಹಳ್ಳಿ ನೋಡುವ ಉತ್ಸಾಹದಲ್ಲೇ ವ್ಯಾನೇರಿದ್ದೆವು. ಆದರೆ ಹಳ್ಳಿ ಭೇಟಿಯನ್ನು ವಿಶೇಷ ವಿವರಣೆಗಳೇನೂ ಇಲ್ಲದೆ ಬಿಟ್ಟು, “ಚಲೋ ಪ್ಯಾಂಗಾಂಗ್ ಸರೋವರ” ಮಾತ್ರ ಕೇಳಿತ್ತು.

 

ಅಭಿನವ ಕಡಲು – ಪ್ಯಾಂಗಾಂಗ್ ಸರೋವರ

ನುಬ್ರಾ ಕಣಿವೆಯ ಕೊನೆಗೆಂಬಂತೆ ಬೀಯಾರ್ವೋ ಶಿಬಿರ ಕಾಣಿಸಿತ್ತು. ಮುಂದುವರಿದಂತೆ  ನೀರಿಲ್ಲದ ವಿಸ್ತಾರ ಗುಂಡು ಕಲ್ಲುಗಳದೇ ಹರಹಿನಲ್ಲಿ ನಿಧಾನಕ್ಕೇ ಸಾಗಿದ್ದ ವಾಹನಗಳ ಸಾಲು, ಒಮ್ಮೆ ಅತ್ತ ಒಮ್ಮೆ ಇತ್ತ ಮೋರೆ ತಿರುವುತ್ತ ನೆಲೆ ಹುಡುಕುವ ನೂರಾರು ಕಾಲುಗಳ (ಕಂಬಳಿ, ಕರಿಮಣಿ…) ಹುಳುವಿನಂತೇ ಕಾಣುತ್ತಿತ್ತು. ಅನಿವಾರ್ಯವಾಗಿ ಕೆಲವೆಡೆ ಬೆಟ್ಟಗಳ ನೇರ ನೆರಳಿಗೆ ಬಂದಲ್ಲಿ. ಬಹಳ ಮೇಲಿನಿಂದ ಸುರಿದಿಳಿದ ಮರಳೋ ಮತ್ತೆ ಕಲ್ಲುಗಳದೇ ರಾಶಿಯೋ ‘ಉಪನದಿ’ಗಳಂತೇ ಕಾಣುತ್ತಿತ್ತು. ಕೆಲವೆಡೆ ಭಾರೀ ಬಂಡೆಗೋಡೆಯನ್ನೇ ಅಕರಾಳ ವಿಕರಾಳವಾಗಿ ಕಡಿದು ದಾರಿಗೆ ಅವಕಾಶ ಮಾಡಿಕೊಟ್ಟಂತಿತ್ತು. ಇನ್ನೂ ಹಲವೆಡೆ ಸಡಿಲ ಗುಂಡು ಕಲ್ಲುಗಳೇ ಪ್ರಾಕೃತಿಕ ವ್ಯವಸ್ಥೆಯಲ್ಲಿ ತುದಿ ಕಾಣದಂತೆ ನೂರಾರು ಅಡಿ ಎತ್ತರಕ್ಕೆ ಪೇರಿಕೊಂಡು ನಿಂತಂತೇ ಇತ್ತು. ಇಂಥಲ್ಲೆಲ್ಲ ಎಂದೂ ಯಾವುದೇ ಎತ್ತರದಲ್ಲೂ ಪ್ರಾಣಿ ಪಕ್ಷಿಗಳ (ಬೆಟ್ಟದಾಡು…) ಚಟುವಟಿಕೆಯಿಂದಲೋ ಹವಾಮಾನದ ಸುಳಿಯಿಂದಲೋ (ಮಳೆ, ಗಾಳಿ, ಹಿಮ…) ಒಂದು ಗೋಲಿಗಾತ್ರದ ಕಲ್ಲು ನೆಲೆ ತಪ್ಪಿದರೂ ಉಂಟಾಗುವ ಸರಣಿ ಕುಸಿತದಲ್ಲಿ ತಳಕ್ಕೆ ಕವುಚಿ ಬೀಳುವ ಭೂಭಾಗದ ಕುರಿತು ಯಾವ ಅಂದಾಜೂ ನಡೆಯದು. ಆ ಕ್ಷಣದಲ್ಲಿ ಅಲ್ಲಿ ಜನ, ವಾಹನ ಇಲ್ಲದಿರಲಿ ಎಂದು ನಾವು ಕೇವಲ ಆಶಿಸಬಹುದು. ಮುಂದೊಂದೆಡೆ…..

ಹೊಸ ವಿಸ್ತಾರ ಸೇತುವೆ ಆಚೆಯೊಂದು ಆಕರ್ಷಕ ಹೋಟೆಲ್/ಮಳಿಗೆ ನಮಗೆ ಟೀ ವಿರಾಮವನ್ನು ಕೊಟ್ಟಿತ್ತು. ಅಲ್ಲಿ ಇನ್ನೂ ಕೆಳಸ್ತರದಲ್ಲಿ, ಹಿಂದೆ ಬರುತ್ತಿದ್ದ ದಾರಿಗೆ ಈ ದಡ ಆ ದಡ ಕಾಣಿಸುತ್ತಿದ್ದ ಸೇತುವೆಯೊಂದು ಸುಸ್ಥಿಯಲ್ಲೇ ನಿಂತಿತ್ತು. ಬಹುಶಃ ಅಕಾಲಿಕ ಪ್ರವಾಹ ಸೇತುವೆಯ ಇಕ್ಕೆಲಗಳಲ್ಲಿದ್ದಿರಬಹುದಾಗ ಮಳಿಗೆ, ದಾರಿಗಳನ್ನಷ್ಟೇ ಕೊಚ್ಚಿ ಕಳೆದಿರಬೇಕು. ಹೊಸ ಅಂಗಳದ ತೀರಾ ಅಂಚಿಗೆ, ಅಂದರೆ ಪುಡಿ ಕಲ್ಲುಗಳ ಕಡಿದಾದ ಬೆಟ್ಟದ ಅಡಿಗೇ ಜನ ವಾಹನ ಹೋಗದಂತೆ ಬೇಲಿ ಹಾಕಿದ್ದರು. ಪುಡಿ ಕಲ್ಲುಗಳ ಮಟ್ಟಿಗೆ ಅದು ಸರಿಯೇ ಆದರೆ ಬೆಟ್ಟವೇ ಮೈಚಾಚಿ ಮಲಗಲು ಇಳಿದರೆ? ನಾವು ಈ ಕ್ಷಣವಷ್ಟೇ ಸತ್ಯ ಎಂಬ ಅರಿವಿನೊಡನೆ, ಸಾಕಷ್ಟು ಚುರುಕಾಗಿಯೇ ಕುರುಕಲು, ಚಾಯ್ ಸಮಾರಾಧನೆ ಮುಗಿಸಿಕೊಂಡು ಮುಂದುವರಿದೆವು. ಕೆಲ ದೂರ ಹೊಳೆಯ ದಂಡೆ ಹಾಗೂ ಬೆಟ್ಟದ ಬುಡಗಳ ನಡುವೆ ಚೌಕಾಸಿ ಮಾಡಿ ಪಡೆದ ಜಾಡು. ಹೊಳೆ ದೂರಾದಂತೆ ಮತ್ತೆ ಗುಂಡು ಕಲ್ಲುಗಳ ವಿಸ್ತಾರ ಹರಹುಗಳು. ಇಲ್ಲಿ ಸೈನ್ಯದ ಪುಟ್ಟ ಲಾರಿಗಳ ಸಾಲೂ ಪ್ರವಾಸೀ ವಾಹನ ಸಮ್ಮರ್ದಕ್ಕೆ ಸೇರಿಕೊಳ್ಳುತ್ತಿದ್ದವು. ನಮ್ಮ ಮಧ್ಯಾಹ್ನದೂಟದ ವೇಳೆ ಮೀರಿಯೇ ಸಾಗಿದ್ದಂತೇ…

ಆ ಬಂಜರು ಹಾಸಿನಲ್ಲೂ ಒಂದು ಧಾಬಾ ಸಿಕ್ಕಾಗ, ನಾವು “ಊಟಾ…” ಎಂದದ್ದು ಗಂಟಲಲ್ಲೇ ಉಳಿಯಿತು. ಅಂದು ನಮ್ಮ ದುರದೃಷ್ಟಕ್ಕೆ, ಲದ್ದಾಕ್ ಬಂದ್ ಘೋಷಣೆಯ ಕಾರಣದಲ್ಲಿ ಧಾಬಾ ಮುಚ್ಚಿತ್ತು. ಮುಂದೆ ನಮ್ಮ ದಾರಿ ಇನ್ನೊಂದರೊಡನೆ ಸಂಗಮಿಸಿ, ತುಸು ಉತ್ತಮಗೊಳ್ಳುವುದರೊಡನೆ ಸುಂದರ ಹೊಳೆ ತೀರವನ್ನೇ ಸೇರಿತ್ತು. ಅಲ್ಲೊಂದು ಪುಟ್ಟ ಹಳ್ಳಿಯೇನೋ ಇತ್ತು. ಆದರೆ ಅಲ್ಲಿನ ಸಾರ್ವಜನಿಕ ಸೌಲಭ್ಯಗಳೂ ಲದ್ದಾಕ್ ಬಂದ್ ಸುಳಿಯಲ್ಲಿದ್ದಾಗ, ನಮಗೆ ಫಕ್ಕನೆ ಹೊಳೆದದ್ದು ಹೊಳೆ ತೀರ. ಶುಭ್ರ ಶೀತಲ ಕಲಕಲ ನಾದೆಯ ಸಹಕಾರದಲ್ಲಿ, ಬಿಸಿಲಿದ್ದರೂ ತೀಡುತ್ತಿದ್ದ ತಂಗಾಳಿ ಸೇವೆಯಲ್ಲಿ, ಹಸಿರು ಹೂಗಳ ಸಾನ್ನಿಧ್ಯದಲ್ಲಿ, ಶುಭ್ರ ಬಂಡೆಗಳಾಸನದಲ್ಲಿ ನಮ್ಮ ಊಟಕ್ಕೆ ವನಭೋಜನದ ರಂಗೇ ಬಂದಿತ್ತು. ಅಲ್ಲೇ ಮೇಯ್ದುಕೊಂಡಿದ್ದ ದನಗಳು ಬಂದು, ನಮ್ಮ ಉಳಿಕೆ ಪಳಿಕೆಗಳನ್ನು ‘ಸ್ವೀಕರಿಸಿ’ದ ಲೆಕ್ಕದಲ್ಲಿ ಗೋಗ್ರಾಸ ಕೊಟ್ಟ ಪುಣ್ಯವೂ ದಕ್ಕಿತ್ತು ಎಂದರೆ ತಪ್ಪಾಗದು! ಮುಂದುವರಿದ ಓಟದಲ್ಲಿ…

ಡುಬುಕ್ ಎಂಬಲ್ಲಿನ ಭಾರೀ ಸೇನಾ ಕೇಂದ್ರ ಹಾದು, ನಾಲ್ಕು ಗಂಟೆಯ ಸುಮಾರಿಗೆ ದಿಬ್ಬವೊಂದರ ಆಚೆಗೆ, ಪುಟ್ಟ ನೀರ ನೀಲಿಮೆ ಹೊಳೆದಾಗ ಎಲ್ಲರೂ ಒಕ್ಕೊರಳಾದೆವು “ಪ್ಯಾಂಗಾಂಗ್ ಲೇಕ್…” ದಾರಿಯಲ್ಲಿ ಸಿಕ್ಕ ಒಂದೆರಡು ಹೊಳೆಗಳನ್ನು ಬಿಟ್ಟರೆ, ಬಹುತೇಕ ಬಂಡೆಗಾಡಿನ ಸವಾರಿಯ ಗುದ್ದು, ತೊಳಲಾಟಗಳಲ್ಲಿ ಬಳಲಿದ್ದ ದೇಹ ಮತ್ತು ಮನಸ್ಸಿಗೆ ಇಲ್ಲಿ ನಿರಾಳತೆ ಮೂಡಿ, ಥ್ರೀ ಈಡಿಯಟ್ಸ್ ಸಿನಿಮಾದ ಘೋಷ “ಆಲ್ ಈಸ್ ವೆಲ್ಲ್…” ಎನ್ನುವಂತೇ ಅಯ್ತು. ಆಗಸ ಮತ್ತು ಸರೋವರ ಒಂದಕ್ಕೊಂದು ಕನ್ನಡಿಯಾಗಿ, ವಿಸ್ತರಿಸುತ್ತಿದ್ದಂತೇ ಕಣಿವೆಯೂ ವಿಸ್ತಾರಕ್ಕೆ ತೆರೆದುಕೊಂಡಿತು. ಇತ್ತಣಿಂದ ಸುತ್ತುವರಿದಂತೆ ಎದುರು ದಂಡೆಯಲ್ಲೂ ಸಾಲಾಗಿ, ಪದರ ಪದರವಾಗಿ ನಿಂತ ಪುಟ್ಟ ಗುಡ್ಡ ಸಾಲು, ಹಿನ್ನೆಲೆಯ ರಜತಗಿರಿಗಳು ಮತ್ತೂ ಮೇಲಕ್ಕೆ ಅಂಚುಗಟ್ಟಿದ ತೆಳು ಮೋಡಗಳ ಭಿನ್ನ ವರ್ಣ ಛಾಯೆಗಳು ಪ್ರಕೃತಿಯ ಅನನುಕರಣೀಯ ಮತ್ತು ಅತ್ಯುತ್ತಮ ಕಲಾಭಿತ್ತಿಯಂತೇ ಮೆರೆದಿತ್ತು. ಕಚ್ಚಾ ದಾರಿ ಬೆಟ್ಟದಿಳುಕಲಿನಲ್ಲಿ, ವಸತಿ ಸಾಲುಗಳನ್ನೆಲ್ಲ ಹಿಂಬಿಟ್ಟು, ನಮ್ಮನ್ನು ನೇರ ಸರೋವರದ ಅಂಚಿನ ತಂಗುದಾಣಕ್ಕೇ ಮುಟ್ಟಿಸಿತು. ಪ್ರಖರ ಬಿಸಿಲನ್ನು ಮರೆಸುವ ತಂಪುಗಾಳಿಯ ನಡುವೆ ಅಪೂರ್ವದೊಡನೆ ಒಂದಾಗುವ ಉತ್ಸಾಹದಲ್ಲಿ ನಾವೆಲ್ಲ ನೀರ ಅಂಚಿಗೇ ನಡೆದೆವು,

ವಾಹನಗಳ ನಿಷೇಧಕ್ಕಾಗಿಯೇ ಸಣ್ಣದಾಗಿ ಮರಳು, ಕಲ್ಲುಗುಂಡುಗಳ ದಿಣ್ಣೆ ಸಾಲು ಮಾಡಿದ್ದರು. ಅದು ಕಳೆದದ್ದೇ ಪಟಗ್ರಾಹಿಗಳ ಹರಕೆಗೇ ನಿಲ್ಲಿಸಿದ್ದ ‘ಐ ಲವ್ ಪ್ಯಾಂಗಾಂಗ್’ ವರ್ಣಸಂಕೇತ ಬಿಟ್ಟರೆ ಇನ್ಯಾವುದೇ ಮೋಜುಮಸ್ತಿಯ ಕಲಾಪಗಳಿಗೆ ದಂಡೆ ತೆರೆದಂತಿರಲಿಲ್ಲ. ಮುಂದುವರಿದಂತೆ, ಪ್ರಾಕೃತಿಕ ಕಲೆಯನ್ನು ಪುರಸ್ಕರಿಸಿ, ಅಂದರೆ ಇಂಟರ್ಲಾಕ್, ಕಾಂಕ್ರೀಟ್ ಸೋಂಕಿಸದೇ ಹೇಗಿದೆಯೋ ಹಾಗೇ ಚಾಚಿಕೊಂಡ ಸರಸಿಯ ನೀರ ಬೆರಳುಗಳು, ಸಣ್ಣ ಸಣ್ಣ ಹಿನ್ನೀರ ಕೊಳಗಳನ್ನು ಬಳಸಿ ನಡೆಯುವ ಅವಕಾಶ ಮುದ ನೀಡಿತು. ಇದ್ದುದರಲ್ಲಿ ತುಸು ವಿಸ್ತಾರ ನೀರಂಚಿನಿಂದ ತುಸು ಮೇಲೆ, ಹುಚ್ಚುಗಟ್ಟುವ ಪ್ರವಾಸಿಗಳ ಮೋಜಿಗೆಂಬಂತೆ, ಆರೆಂಟು ತ್ರೀ ಈಡಿಯಟ್ಸ್ ಸಿನಿಮಾದ ಅಂಡಾಸನ, ಹಳದಿ ಸ್ಕೂಟರ್, ಬೈಕ್ ಗಳನ್ನು ಒಂದು ಸಾಲಿನಲ್ಲಿ ದೃಢವಾಗಿ ನಿಲ್ಲಿಸಿಕೊಟ್ಟಿದ್ದರು. ಸಹಜವಾಗಿ ಸಿನಿಮಾದ ಪಾತ್ರಗಳನ್ನು ತಮ್ಮ ಮೇಲೆ ಆವಾಹಿಸಿಕೊಂಡು ಮೆರೆಯುವವರ ಸಂಖ್ಯೆಗೇನೂ ಕೊರತೆಯಿರಲಿಲ್ಲ. ಉಳಿದಂತೆ, ವಾಹನ ತಂಗುದಾಣದಷ್ಟು ಹಿಂದೆಯೇ ವ್ಯವಸ್ಥಿತ ಶೌಚಾಲಯ, ಕುಡಿನೀರ ವ್ಯವಸ್ಥೆಯೊಡನೆ ಎಲ್ಲ ‘ಪ್ರವಾಸೀ ಸವಲತ್ತುಗಳಿಗೂ’ ತಡೆ ಹಾಕಿದಂತಿತ್ತು. ಇಂಥಲ್ಲೆಲ್ಲ ಪ್ರಮುಖ ಕಸೋತ್ಪಾದನೆ ಮೂಲವೇ ಆದ ತಿನಿಸು ಪಾನೀಯಗಳ ಮಳಿಗೆ ಅಥವಾ ಜನರ ಸುಳಿವೂ ಇರಲಿಲ್ಲ. ತುಂಬ ಒಳ್ಳೆಯ ಕ್ರಮ, ಮುಂದೆಯೂ ಉಳಿದೀತೇ, ಗೊತ್ತಿಲ್ಲ. ನಾವು ನಿಜ ಸಮುದ್ರ ತೀರಗಳಲ್ಲಿ ಅನುಭವಿಸಲಾಗದ ಶುದ್ಧ ನೀರು, ಹವೆ, ಗದ್ದಲಮುಕ್ತ ಪರಿಸರ ಅಲ್ಲಿತ್ತು. ತೆಳು ತರಂಗಗಳ ಅಭಿನವ ಕಡಲ ಕಿನಾರೆಯಲ್ಲಿ ನಿಂತೋ ಕಾಲಾಡಿಸಿಯೋ ನೀರಿನ ರುಚಿ ಚಪ್ಪರಿಸಿಯೋ (ಉಪ್ಪು) ಮನಸಾ ತೃಪ್ತರಾದೆವು. ನಿಮಗೆಲ್ಲ ತಿಳಿದಂತೇ…

ಕೋಟ್ಯಂತರ ವರ್ಷಗಳ ಹಿಂದಿನ ಭೂಖಂಡಗಳ ಚಲನೆಯ ಫಲವಾಗಿ ಎದ್ದ ಹಿಮಾಲಯ ಶಿಖರ ಶ್ರೇಣಿಯದೇ ಕವಲಿದು. ಇಲ್ಲಿಂದ ಹರಿದ ತೊರೆ, ನದಿಗಳೇನೋ ಸಿಂದೂ, ಗಂಗಾ, ಬ್ರಹ್ಮಪುತ್ರಾ… ಹೆಸರಾಂತು, ಜನೋಪಯೋಗಕ್ಕೆ ಸಿಕ್ಕು ಪ್ರಚಾರ ಪಡೆದವು. ಆದರೆ ಭೂ ಬಂಧಿಗಳಾದ ಕೆಲವೇ ನೀರ ಮೂಲಗಳಲ್ಲಿ (ಮೊದಲು ಹೇಳಿದ ಸೂರಜ್ ತಾಲಿನಂತೇ) ಈ ಪ್ಯಾಂಗಾಂಗ್ ಸರೋವರ ಒಂದು. ಔನ್ನತ್ಯ (ಸಮ ೧೩,೮೬೨ ಅಡಿ) ಮತ್ತು ವಿಸ್ತಾರದಲ್ಲಿ (ಸುಮಾರು ೧೩೪ ಕಿಮೀ ಉದ್ದ ೫ ಕಿಮೀ ಅಗಲ) ಎಲ್ಲಕ್ಕಿಂತ ಮುಂದು. ಇದರ ರಾಜಕೀಯ ಪಾಲುಪಟ್ಟಿಯಲ್ಲಿ ಭಾರತದ್ದು ಕೇವಲ ಮೂರನೇ ಒಂದು ಭಾಗ, ಉಳಿದದ್ದು ಚೀನಾದ್ದು. ಪ್ಯಾಂಗಾಂಗ್ ಪ್ರಾಕೃತಿಕವಾಗಿ ತಳದಲ್ಲಿ ಪರಸ್ಪರ ಸಂಪರ್ಕವಿರುವ ಐದು ಸರೋವರಗಳ ಸಂಕೀರ್ಣವಂತೆ. ಇಲ್ಲಿ ಯುಗಯುಗಳಿಂದ ಋತುಮಾನಕ್ಕೆ ತಕ್ಕಂತೆ, ಸುತ್ತಣ ಹಿಮ ಕರಗಿ ಮತ್ತು ವಿರಳ ಮಳೆ ಸುರಿದು, ಬಂಡೆ, ಮಣ್ಣುಗಳ ಸತ್ವ ಸಹಿತ ಸಂಗ್ರಹವಾದರೂ ಉಕ್ಕಿ ಹರಿದದ್ದಿಲ್ಲ. ಅನ್ಯ ಋತುಗಳ ಬಿಸಿಲ ಹೊಡೆತಕ್ಕೆ ಆವಿಯಾಗಿ ಖಾಲಿ ಮಾಡುವ ಅಂಶಕ್ಕೆ ಮುಂದಿನ ಹಿಮ, ಮಳೆ ಸೇರುತ್ತಿರುತ್ತದೆ. ಹೀಗೆ ಸಾಂದ್ರಗೊಂಡ ಸುತ್ತಣ ನೆಲದ ಸತ್ವ ಒಟ್ಟಾರೆ ನೀರಿಗೆ (ನಿಜ ಕಡಲಿನಂತೇ) ಉಪ್ಪಿನ ರುಚಿ ಕೊಟ್ಟಿದೆ; ಬಂಧಿಯಾದ ಸಮುದ್ರದ ತುಣುಕೋ ಎಂದು ಭ್ರಮಿಸುವಂತಾಗುತ್ತದೆ.

ಸೂರ್ಯನಾರಾಯಣ ಚೌಕಿಯಲ್ಲಿ (ಯಕ್ಷಗಾನದ ಬಣ್ಣದ ಮನೆ) ಬಣ್ಣ ಒರೆಸಿಕೊಳ್ಳುತ್ತಿದ್ದಂತೆ, ಶೀತಗಾಳಿಯ ಪ್ರಭಾವ ಹೆಚ್ಚತೊಡಗಿತು. ನಮ್ಮೆಲ್ಲರನ್ನೂ ತುಂಬಿಕೊಂಡ ವ್ಯಾನುಗಳು, ತುಸು ಮೇಲಿನ ಓಣಿಗಳಲ್ಲೆಲ್ಲೋ ನಿಕ್ಕಿಯಾಗಿದ್ದ ವಸತಿ ಸೌಕರ್ಯಕ್ಕೆ ಮುಟ್ಟಿಸಿದವು. ಸರಳವಾಗಿ ಪ್ಲೈವುಡ್ ಕ್ಯಾನ್ವಾಸ್ ಬಳಸಿ ನಿರ್ಮಾಣಗೊಂಡ ಸಾಲೋ ಸಾಲು ಕೋಣೆಗಳು, ಗಾಳಿ/ಚಳಿಗೆ ಉತ್ತಮ ಬೆಚ್ಚನ್ನ ಗೂಡುಗಳು. ಲದ್ದಾಕ್ ಎಂಬ ಸಾಗರದಲ್ಲಿ ಚದುರಿದ ನುಬ್ರಾದಂತದ್ದೇ ಇನ್ನೊಂದು ದ್ವೀಪ –  ಪ್ಯಾಂಗಾಂಗ್. ಇಲ್ಲೂ ಬಿಸಿನೀರು, ವಿದ್ಯುತ್ ಬೆಳಕು ಮುಂತಾದ ಆಧುನಿಕ ಆವಶ್ಯಕತೆಗಳು ಪೂರ್ಣ ಸಜ್ಜಾಗಿಲ್ಲ.

ನಾನು ಸಕಾಲಕ್ಕೆ ಒದಗಿದ ಬಿಸಿಬಿಸಿ ತಿನಿಸು (ನೀರುಳ್ಳಿ ಬಜ್ಜಿ?), ಚಾ ಸೇವಿಸಿದೆ. ಮತ್ತೆ ಕೋಣೆಯೊಳಗೆ ಸೇರಿಕೊಂಡೂ ತೊಟ್ಟ ಬಿಸಿಯುಡುಪುಗಳು ಸಾಲದೆನ್ನಿಸಿತು. ಅತಿಚಳಿ ನೀರಿನಲ್ಲಿ ಕೈಕಾಲು ಮುಖ ತೊಳೆಯುವುದನ್ನೂ ಮನ್ನಾ ಮಾಡಿ, ಮಜಬೂತಾಗಿದ್ದ ಹಾಸುಗೆ, ದಪ್ಪನ್ನ ಹೊದಿಕೆಗಳ ನಡುವೆ ಬಿಲ ಕಂಡುಕೊಂಡೆ. ಚಂದೀಘರ್ ಬಿಟ್ಟಲ್ಲಿಂದ ಅಷ್ಟೂ ದಿನ ಇದ್ದು, ಬಿಟ್ಟು ಕಾಡಿದ್ದ ತಲೆಭಾರವೋ ನೋವೋ ಈಗ ತುಸು ಏರು ಶ್ರುತಿಯಲ್ಲೇ ಮಿಡಿಯುವುದಕ್ಕೆ, ದೇವಕಿ ಹೊರ ಹೋಗಿದ್ದರೆ ನಾನು ಸ್ವರ ಸೇರಿಸುತ್ತಿದ್ದೆನೋ ಏನೋ – ಚಳಿ ಚಳಿ ತಾಳೆನು… ಆಹಾ ಊಹೂ…

ಸಹಜಾರೋಗ್ಯದಲ್ಲಿದ್ದ ದೇವಕಿ ಇತರರೊಡನೆ ಪಟ್ಟಾಂಗ, ಓಡಾಟಗಳಲ್ಲಿ ತೊಡಗಿಕೊಂಡಿದ್ದಳು, ಕುಗ್ಗಲಿಲ್ಲ. ಚಾ ತಿನಿಸು ಮುಗಿದ ಮೇಲೂ ದಿನದ ಬೆಳಕುಳಿದದ್ದು ನೋಡಿ ಕೆಲವರು ಮತ್ತೆ ಸರೋವರದ ತಟಕ್ಕೆ ನಡೆದು ಹೋಗಿ ಬಂದದ್ದೂ ಕೇಳಿದೆ. ತುಸು ಆಚಿನ ಸಾಲುಗಳಲ್ಲೆಲ್ಲೋ ಬೀಡುಬಿಟ್ಟ ಒಂದು ಮೋಟಾರ್ ಬೈಕ್ ಗ್ಯಾಂಗ್ ಹರ್ಷೋದ್ಗಾರಗಳೊಡನೆ ಶಿಬಿರಾಗ್ನಿಗೆ ಸಜ್ಜಾಗುತ್ತಿದ್ದದ್ದು ಕೇಳುತ್ತಿತ್ತು. ಎಷ್ಟೋ ಹೊತ್ತಿಗೆ ನಮ್ಮವರದೇ ಊಟದ ಕರೆ ಬಂದಾಗ, ನಾನು ನಿರಶನದೊಡನೆ ದಂತಧಾವನವನ್ನೂ ನಿರಾಕರಿಸಿ, ನಿದ್ರಾನುಸಂಧಾನದ ಪ್ರಯತ್ನ ನಡೆಸುತ್ತಲೇ ಇದ್ದೆ. ದೇವಕಿ ಊಟ ಮುಗಿಸಿ ಬಂದು “ಬಿಸಿ ಬಿಸಿ ಸಾರಾದರೂ ಕುಡೀ ಬಹುದಿತ್ತು…” ಎಂದು ತುಸು ಆತಂಕದಲ್ಲೇ ಕಿವಿಮಾತು ಹೇಳಿ, ಪ್ರಯೋಜನ ಕಾಣದೇ ಮಲಗಿದಳು. ಮೋಟಾರ್ ಬೈಕ್ ಗ್ಯಾಂಗ್ ಶಿಬಿರಾಗ್ನಿ ಗದ್ದಲ (ಅದೃಷ್ಟಕ್ಕೆ ಕಿವಿ ಹೊಟ್ಟಾಗಿಸುವ ಮೈಕ್ ಇರಲಿಲ್ಲ!) ವಲಯದ ದೀಪ ಆರುವವರೆಗೂ ನಡೆದಿತ್ತು. ಆದರೆ ನನ್ನ ಮತ್ತು ನಿದ್ರೆಯ ಒಪ್ಪಂದಕ್ಕೆ ಅನುಮೋದನಾ ಮುದ್ರೆ ರಾತ್ರಿಯಿಡೀ ಬೀಳಲೇ ಇಲ್ಲ ….

 

(ಮುಂದುವರಿಯಲಿದೆ)

0 Comments

Submit a Comment

Your email address will not be published. Required fields are marked *