ಅಧ್ಯಾಯ ಒಂದು: ನೇತ್ರಾವತಿಯಿಂದ ಕನ್ಯಾಕುಮಾರಿಗೆ
ನನ್ನ ತಮ್ಮ ಅನಂತನ ಹೆಂಡತಿ, ರುಕ್ಮಿಣಿಮಾಲಾ ಚರವಾಣಿಸಿ “ನಾರಾಯಣ ಭಟ್ರ ಬಳಗ, ಮಂಗಳೂರಿನಿಂದಲೇ ಎಂಟು ದಿನಗಳ (೨೦೨೫ರ ಆಗಸ್ಟ್ ೫ ರಿಂದ ೧೩) ದ. ಭಾರತ ತೀರ್ಥಯಾತ್ರೆ ಹೊರಡುತ್ತಿದೆ. ನಾವಿಬ್ಬರು ಹೊರಟಿದ್ದೇವೆ, ನೀವ್ಯಾಕೆ…” ನಾವು ಕೂಡಲೇ ಮುಂಗಡ ಕೊಟ್ಟು, ನಲ್ವತ್ತರಲ್ಲಿ ಎರಡಾಗಿ ಸೇರಿಕೊಂಡೆವು. ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ (ನಿವೃತ್ತ) ಮರುವಳ ನಾರಾಯಣ ಭಟ್ಟರ ಪ್ರೇರಣೆ ಮತ್ತು ಬಹಳ ದೊಡ್ಡ ಬೆಂಬಲದಲ್ಲಿ, ಈ ಪ್ರವಾಸವನ್ನು ವೃತ್ತಿ ಪರವಾಗಿ ನಡೆಸಿದವರು ಟ್ರಾವೆಲ್ ಫಾರ್ ಯೂ ಸಂಸ್ಥೆ, ಬೆಂಗಳೂರು. ಇದು ಕಡಬ ಮೂಲದ ಬಾಲಕೃಷ್ಣ ಮತ್ತು ಊರ ಕೆಲವು ಗೆಳೆಯರ ಪಾಲುದಾರಿಕೆ ಸಂಸ್ಥೆ. ನಮ್ಮ ಪ್ರಯಾಣದುದ್ದಕ್ಕೆ ಬಾಲಕೃಷ್ಣರಿಗೆ ಸಮರ್ಥ ಸಹಾಯಕರಾಗಿ ದುಡಿದ ಮನೋಜ್ ಮತ್ತು ಚೇತನ್ ಕೂಡಾ ಕಡಬದವರೇ. ಶಿಕ್ಷಕ, ಉದ್ಯಮಿ, ಕೃಷಿಕ, ವೈದ್ಯ, ತಂತ್ರಜ್ಞಾನಿ, ಗೃಹಿಣಿ, ವಿದ್ಯಾರ್ಥಿ ಎಂದಿತ್ಯಾದಿ ವೃತ್ತಿ ಜೀವನದ ಹಲವು ಮುಖಗಳಿಂದಲೂ ಇಪ್ಪತ್ತರಿಂದ ಎಂಬತ್ತರ ಹರೆಯದ ವಯೋ ವೈವಿಧ್ಯದಿಂದಲೂ ಒಂದಾಗಿದ್ದ ಬಹುಮಂದಿಗೆ ಇದ್ದ ಮುಖ್ಯ ಲಕ್ಷ್ಯ – ಐತಿಹಾಸಿಕ ಪುಣ್ಯ ಕ್ಷೇತ್ರಗಳ ಸಂದರ್ಶನ; ತೀರ್ಥಯಾತ್ರೆ ಮಾತ್ರ. ಆದರೆ….
ಬಹುತೇಕ ಪ್ರಾಚೀನ ತೀರ್ಥ ಕ್ಷೇತ್ರಗಳು ಕಟ್ಟಿಕೊಡುವ ಕಥನಗಳು, ವಾಸ್ತವದ ಪ್ರಾಕೃತಿಕ ಅಥವಾ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಸಾಮಾನ್ಯರಿಗೆ ಎತ್ತಿ ತೋರುವ ಸುಲಭೋಪಾಯಗಳು ಎಂದೇ ನನ್ನ ನಂಬಿಕೆ. ಉದಾಹರಿಸಲು ಹೊರಟರೆ ಹಿಮಾಲಯದ ಚತುರ್ಧಾಮಗಳು, ತಿರುಪತಿ ಶ್ರೀಶೈಲಾದಿ ಬೆಟ್ಟಗಳು, ಕಾರಿಂಜ, ನರಹರಿಯಾದಿ ಮಹಾಬಂಡೆಗಳು, ವೈಷ್ಣೋದೇವಿ ಕಮಲಶಿಲೆಯಾದಿ ಗುಹೆಗಳು, ಕಾವೇರಿ ವರದಾದಿ ನದಿಮೂಲಗಳು, ಶಬರಿಮಲೈ ಮಲೆಮಹದೇಶ್ವರಾದಿ ಕಾಡುಗಳು…. ಒಂದೇ ಎರಡೇ! ಹಾಗೆಂದು ಪ್ರಸ್ತುತ ಪ್ರವಾಸೀ ತಂಡದ ಬಹುದೊಡ್ಡ ಗುಣವೆಂದರೆ, ಹೆಚ್ಚಿನವರ ಮತ ನಿಷ್ಠೆಯಲ್ಲಿ, ಅನ್ಯಮತ ಖಂಡನೆಯ ಹೂಟ ಸೇರಿಕೊಂಡಿಲ್ಲ. ಅವರು ‘ಪುಣ್ಯ’ ಸಂಗ್ರಹಿಸಿದಂತೇ ಜತೆಗೊಟ್ಟ ನಾವು ಯಾತ್ರಾ ಸಂಘಟನೆಯ ಶ್ರಮವಿಲ್ಲದೆ ಕ್ಷೇತ್ರ ಮತ್ತು ನಡವಳಿಕೆಗಳ ‘ಸಂದರ್ಶನ ಲಾಭ’ ಮಾಡಿಕೊಂಡೆವು.
ಆಗಸ್ಟ್ ಐದರ ಬೆಳಿಗ್ಗೆ ಸಕಾಲಕ್ಕೇ (೬.೨೫) ಇತ್ತಲೆ ಹಾವಿನಂತೆ, ಅಂದರೆ ಎರಡೂ ಕೊನೆಗಳಲ್ಲಿ ಚಾಲಕರಿದ್ದ ವಂದೇ ಭಾರತ ಎಕ್ಸ್-ಪ್ರೆಸ್ ರೈಲು ಮಂಗಳೂರಿನಿಂದ ತಿರುವನಂತಪುರಕ್ಕೆ ಹೊರಟಿತು. ಹೊಸ ರೂಪ, ರಂಗು, ಪೂರ್ಣ ಹವಾನಿಯಂತ್ರಿತ, ಒಳಗಿಂದೊಳಗೇ ಉದ್ದಕ್ಕೂ ನಡೆದಾಡುವ ಅವಕಾಶ. (ಮೆಟ್ರೋದಂತೆ) ಕೇಂದ್ರ ನಿಯಂತ್ರಣದಿಂದ ನಿಲ್ದಾಣಗಳಲ್ಲಷ್ಟೇ ತೆರೆದು ಮುಚ್ಚುವ ಬಾಗಿಲು, ಪ್ರತಿ ಭೋಗಿಯೊಳಗೂ ಇರುವ ಪರದೆಗಳಲ್ಲಿ ಪ್ರಕಟಣೆ, ಕಾಲಕಾಲಕ್ಕೆ ರೈಲಿನ ವೇಗದ ಪರಿಚಯ, ಸ್ಪಷ್ಟ ಘೋಷಣೆ….. ಏನುಂಟು ಏನಿಲ್ಲ ಎನ್ನುವ ವ್ಯವಸ್ಥೆಗೆ ಹೆಸರು – ವಂದೇ ಭಾರತ್. ಇದೂ ‘ರಾಜಧಾನೀ, ವಿಸ್ಟಾಡೋಂ…’ ವ್ಯವಸ್ಥೆಗಳಂತೆ ಕಾಲಕಾಲಕ್ಕೆ ಉಚಿತವಾಗಿ ತಿಂಡಿತೀರ್ಥಗಳೊಡನೆ, ಶುಚಿ ವಿನಯ ಸಹಿತ ಯಾತ್ರಿಗಳನ್ನು ಅತಿಯಾಗಿ ಮುದ್ದು ಮಾಡುತ್ತದೆ. ಸಹಜವಾಗಿ ದರ ಪಟ್ಟಿಯಲ್ಲಿದು ಶ್ರೀಸಾಮಾನ್ಯನಿಂದ (ರೂ ೨೧೫) ಸುಮಾರು ಎಂಟು ಪಟ್ಟು ಮೇಲಿನದು (ರೂ ೧೬೪೩). ಅಷ್ಟಾಗಿಯೂ….
“ರೈಲು ಆರೂವರೆಗೆ ಹೊರಟರೂ ತಿಂಡಿ ಬರುವಾಗ ಎಂಟೊಂಬತ್ತು ಗಂಟೆಯಾಗುತ್ತೇ…” ಎಂದು ಬಾಲಕೃಷ್ಣ (ಟ್ರಾವೆಲ್ ಫಾರ್ ಯೂ ಸಂಸ್ಥೆಯ ಮಾಲಿಕ), ಹೆಚ್ಚು ರುಚಿಕರ ತಿಂಡಿಯನ್ನು ನಮಗೆ ಮೊದಲೇ ವಿತರಿಸಿದ್ದರು. ಪರಿಸರದ ಸದ್ದು, ವಾಸನೆಗಳಿಂದ, ‘ಕೆಳವರ್ಗ’ದವರ ನೂಕು ನುಗ್ಗಲುಗಳಿಂದ ದೂರಾದ ನಾವು, ಪೂರ್ಣ ಮುಚ್ಚಿದ ಕಿಟಕಿಗಳಲ್ಲಿ ಸುಂದರ ಮೂಕಿ ಚಲಚಿತ್ರದಂತೆ ಸರಿಯುತ್ತಿದ್ದ ಹಸಿರು, ಜಲಸಮೃದ್ಧಿಯ ಚಿತ್ರಗಳನ್ನಷ್ಟೇ ಕಾಣುತ್ತಿದ್ದೆವು. ಯೋಜನೆಯಂತೆ ಸುಮಾರು ೬೫೦ ಕಿಮೀ ಉದ್ದದ ಈ ಓಟಕ್ಕೆ ತಗಲುವ ಸಮಯ ಕೇವಲ ಒಂಬತ್ತೇ ಗಂಟೆಗಳು. ಇದು ಸೀಮಿತ ನಿಲುದಾಣಗಳಲ್ಲಿ (ಕಾಸರಗೋಡು, ಕಣ್ಣೂರು, ಕೋಝಿಕೋಡ್….) ಎರಡು ಮಿನಿಟಿಗಿಂತ ಹೆಚ್ಚು ವೇಳೆಗಳೆಯದೆ, ಸರಾಸರಿಯಲ್ಲಿ ಗಂಟೆಗೆ ನೂರು ಕಿಮೀ ವೇಗವನ್ನು ಮೀರಿಯೇ ಓಡಿತ್ತು. ನಡುವೆ ಬಂದ ಭಾರೀ ಮಳೆಯಿಂದ ಹಳಿಗೆ ನುಗ್ಗಿದ ಕೆಸರು ನೀರಿನಿಂದಾಗಿ ನಾವು ಕೇವಲ ಮುಕ್ಕಾಲು ಗಂಟೆ ವಿಳಂಬದಲ್ಲಿ (೩.೪೫ ಗಂಟೆ), ನಿರಾಯಾಸವಾಗಿ ತಿರುವನಂತಪುರ ಮುಟ್ಟಿದ್ದೆವು.
ಸ್ವಯಂಚಲೀ ಭದ್ರ-ಕೋಠಿ
ತಿರುವನಂತಪುರದ ದೇವಾಧಿದೇವ ಅನಂತಪದ್ಮನಾಭ ಅಕ್ಷರಶಃ ಅಗಣಿತ ಸಿರಿವಂತ. ಆತನ ಗುಪ್ತ ಮತ್ತು ಭದ್ರ ಭಂಡಾರಕ್ಕೆ ಆಪ್ತ ಭಕ್ತರೇ ಕನ್ನ ಹಾಕಿದ ಸುದ್ಧಿ ಊರೆಲ್ಲಾ ಹರಡಿತ್ತು. ಆಗ ಸರಕಾರ ಪ್ರವೇಶಿಸಿ, ಒಂದನ್ನಷ್ಟೇ ವ್ಯವಸ್ಥಿತವಾಗಿ ತೆರೆದು, ಎಣಿಸಿ ಲೋಕವನ್ನೇ ಬೆರಗುಗೊಳಿಸಿದ್ದು ನಿಮಗೆಲ್ಲ ತಿಳಿದೇ ಇದೆ. ಹಿಂಬಾಲಿಸಿದಂತೆ ಅದೇ ದೇವಳದ ಇತರ ಗುಪ್ತ ಖಜಾನೆಗಳಿಗೆ ಭದ್ರತೆ ಹೆಚ್ಚಿಸಿದರೆನ್ನುವುದನ್ನು ನಾವು ಕೇಳಿದ್ದಲ್ಲದೆ, ಸಂಜೆ ದೇವ ದರ್ಶನಕ್ಕೆ ಹೋದಾಗ ಕಣ್ಣಾರೆ ಕಂಡೆವು ಕೂಡಾ. ಆದರೆ…
ತಿರುವನಂತಪುರದ ರೈಲ್ವೇ ನಿಲ್ದಾಣದಲ್ಲಿ, ಹೀಗೊಂದು ಸಾರ್ವಜನಿಕ ಗೂಡು, ಪೂರ್ಣ ಸ್ವಯಂಚಲಿಯಾಗಿ ಸಾರ್ವಜನಿಕ ಸೊತ್ತುಗಳ ಭದ್ರತೆಗೆ ದುಡಿಯುತ್ತಿರುವುದನ್ನು ನಾನಂತು ಇದೇ ಮೊದಲೆಂಬಂತೆ ಕಂಡೆ. ಗಲ್ಲಿಗೊಂದರಂತೆ ಸಾರ್ವಜನಿಕರಿಗೆ ಹಣ ಒದಗಿಸಲು ಸಜ್ಜಾಗಿರುವ ಎಟಿಯೆಮ್ಮುಗಳಂತೇ ಇದನ್ನು ಜನ ತಮ್ಮ ಚರವಾಣಿಯ ರಹಸ್ಯ ಸಂಖ್ಯೆಗಳ ಮೂಲಕ ತೆರೆದು, ತಮ್ಮ ಗಂಟು ಗದಡಿಗಳನ್ನು ಇಟ್ಟು, ಮುಚ್ಚಿ, ನಿಶ್ಚಿಂತರಾಗಿ ತೆರಳುವುದು ನನಗಂತೂ ಆಶ್ಚರ್ಯವನ್ನೇ ಉಂಟು ಮಾಡಿತು.
ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ
ತಿರುವನಂತಪುರ ರೈಲ್ವೇ ನಿಲ್ದಾಣದಲ್ಲೇ ನಮ್ಮನ್ನು ಸ್ವಾಗತಿಸಲು ‘ಕೆಂಪು ಗುಬ್ಬಿ’ (ರೆಡ್ ಸ್ಪ್ಯಾರೋ) – ನಲ್ವತ್ತೆರಡು ಸುಖಾಸನಗಳುಳ್ಳ, ಹವಾನಿಯಂತ್ರಿತ ಬಸ್ ಬಂದಿತ್ತು. “ಹೊರೆ ಕಡಿಮೆ ಇದ್ದಷ್ಟೂ ಪ್ರವಾಸ ಸರಾಗ” (Less luggage more comphort) ಎಂಬ ಲೋಕೋಕ್ತಿ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಂತಿಲ್ಲ. ಎಂಟು ದಿನಗಳ ಲೆಕ್ಕದಲ್ಲಿ ತಮಗೆ ಹೊರಲಾಗದ ಉಡುಪು ತೊಡವುಗಳನ್ನು ಭೂತಾಕಾರದ ಗಾಲಿಗಾಡಿಗಳಿಗೇ ತುಂಬಿ ತಂದಿದ್ದರು. ಕೆಲವರಷ್ಟೇ ಆತ್ಮನಿರ್ಭರರಾಗಿ, “ನನ್ನ ಹೊರೆ ನನ್ನ ಭುಜ” ಎನ್ನುವಂತಿದ್ದರು. ಆದರೆ ಅಸಹನೆಯ ಒಂದು ಸುಳುಹೂ ಕೊಡದಂತೆ ಬಾಲಕೃಷ್ಣರ ಬಳಗ ಮತ್ತು ಬಸ್ಸಿನ ಸಹಾಯಕರು ಎಲ್ಲವನ್ನೂ ಒಪ್ಪವಾಗಿ ಬಸ್ಸಿನ ಹೊಟ್ಟೆಗೆ ತುಂಬಿ, ಆಸನಗಳಲ್ಲಿ ನಮ್ಮನ್ನೇರಿಸಿಕೊಂಡು ಹೋಟೆಲ್ ‘ಜಿಂಜರ್’ ಮುಟ್ಟಿಸಿದರು. ಎಲ್ಲರೂ ದಡಬಡ ಪುನಶ್ಚೇತನಗೊಂಡು, ಪುರದೊಡೆಯ ಅನಂತಪದ್ಮನಾಭನ ದರ್ಶನಕ್ಕೆ ‘ವಿಶೇಷವಾಗಿ’ ಸಜ್ಜುಗೊಂಡು ಮತ್ತೆ ಬಸ್ಸೇರಿದೆವು…..
ಇಂದು ಕೇರಳದಿಂದ ತೊಡಗಿದಂತೆ ಬಹುತೇಕ ದಕ್ಷಿಣ ಭಾರತದ ದೇವಸ್ಥಾನಗಳೆಲ್ಲ ಸಂವಿಧಾನವನ್ನು ಗೌರವಿಸುವ ಅನಿವಾರ್ಯತೆಯಲ್ಲಿ, ಜಾತಿ ಮತ್ತು ಲಿಂಗ ಭೇದಗಳನ್ನು ಕಳಚಿಕೊಂಡಿವೆ. ಆದರೆ ಅವುಗಳನ್ನು ಪರೋಕ್ಷವಾಗಿ ಗುರುತಿಸಿ, ಅಂಕಿತದಲ್ಲಿಟ್ಟುಕೊಳ್ಳುವಂತೆ ಮುಖ್ಯವಾಗಿ ವಸ್ತ್ರ ಸಂಹಿತೆಯೂ ಸೇರಿದಂತೆ ಅನೇಕ ತರತಮ ಮತ್ತು ನಿಯಮಗಳನ್ನು ಹೇರುತ್ತಿವೆ. ಇವು ಭಕ್ತಿಯನ್ನು ಪೂರ್ಣ ವಾಣಿಜ್ಯೀಕರಿಸುತ್ತಿವೆ. ಗಂಡಸರ ಅರೆಬೆತ್ತಲೆ, ಹೆಂಗಸರ ಸೀರೆ ಕುಪ್ಪಸ, ದೇವಬಿಂಬ ಅಥವಾ ಸೇವೆಗಳಿಗೆ ವಿಚಿತ್ರ ಸಮಯಪಟ್ಟಿಗಳು, ದರ ಪಟ್ಟಿಗಳು, ಅವಕ್ಕೆ ಹೊಂದುವಂತೆ ಭಾರೀ ಸರತಿಸಾಲಿನ ಬೇಲಿಗಳು ಪ್ರಾಥಮಿಕವಾಗಿ ಕಾಡುತ್ತವೆ. ಹೀಗಿದ್ದೂ ದರೋಡೆಕೋರ ಚಿನ್ನದ ಕಿರೀಟ ಕೊಡುವುದಿದ್ದರೆ ಬಾರಾ ಖೂನ್ ಮಾಫ್! (ಜನಾರ್ದನ ರೆಡ್ಡಿ ಮತ್ತು ತಿರುಪತಿ ನೆನಪಿಸಿಕೊಳ್ಳಿ) ದುಡ್ಡಿನ ದೊಡ್ಡಪ್ಪ ಕೈ ಮುಕ್ತಮಾಡಿದರೆ ನೇರ ದೇವಬಿಂಬದೆದುರು ಸ್ಥಾಪನೆಗೊಳ್ಳುವ ಅವಕಾಶಗಳು ಇಲ್ಲೆಲ್ಲ ಧಾರಾಳ ಇವೆ. (ಉಚಿತಕ್ಕೆ ಕಿಮೀಗಟ್ಟಳೆ ಸಾಲು, ಗಂಟೆಗಟ್ಟಳೆ ವಿಳಂಬ. ಅದೇ ಐವತ್ತರಿಂದ ಐದು ಸಾವಿರದವರೆಗೆ ಕಾಸು ಬಿಚ್ಚಿದರೆ, ವಿಶೇಷ, ಅತಿವಿಶೇಷವೇ ಮೊದಲಾದ ದ್ವಾರಗಳು ತೆರೆದುಕೊಳ್ಳುತ್ತವೆ, ಮಿನಿಟುಗಳಲ್ಲಿ ದರ್ಶನ, ಆರತಿ, ತೀರ್ಥ, ಪ್ರಸಾದ ಪಡೆದು ಬರಬಹುದು. ಬೇಡರ ಕಣ್ಣಪ್ಪನೋ ಕುಚೇಲನೋ ಕತೆಯ ರಂಜನೆಗಷ್ಟೇ ಸರಿ.
ಇಂದು ಐದು ರೂಪಾಯಿಯ ಪಟದಿಂದ ತೊಡಗಿ ಕೋಟ್ಯಂತರ ಬೆಲೆ ಬಾಳುವ ಸುವರ್ಣ ಪುತ್ಥಳಿಯವರೆಗೂ ಯಾವುದೇ ದೇವಬಿಂಬಗಳು ಬೀದಿಗಳಲ್ಲಿ ಬಿಕರಿಗಿವೆ. ಅವುಗಳಿಗೂ ದೈವೀ ಶಕ್ತಿಯನ್ನು ಆರೋಪಿಸುವ ಪುರೋಹಿತರುಗಳೂ ಇದ್ದಾರೆ. ಆದರೆ ಮೂಲಮೂರ್ತಿಯೆಂದೇ ಭಾವಿಸಿ, ಎಲ್ಲೆಲ್ಲಿಂದಲೋ ಕಷ್ಟಪಟ್ಟು ಬಂದ ಭಕ್ತನಿಗೆ ವಿರಾಮದಲ್ಲಿ ನೋಡಲು ಸಮಯ, ಬೆಳಕು, ಸ್ವಚ್ಛತೆ, ಶಾಂತಪರಿಸರಗಳೆಲ್ಲವನ್ನೂ ವ್ಯವಸ್ಥೆ ವಂಚಿಸುತ್ತಿದೆ. ಹಾಗೇ ಸಿಕ್ಕ ಅಲ್ಪಾವಧಿಯ ದರ್ಶನವನ್ನಾದರೂ ಸಾರ್ವಕಾಲಿಕ ಆಪ್ತವಾಗಿಸಿಕೊಳ್ಳೋಣವೆಂದರೆ ನೂರೆಂಟು ನಿಷೇಧಗಳು. ಎಲ್ಲಾ ತೆರನ ದೃಶ್ಯಗ್ರಹಣ ಸಲಕರಣೆಗಳ ನಿಷೇಧದ ಮೇಲೆ, ಗರ್ಭಗುಡಿ ದ್ವಾರದಲ್ಲಿ ಹತ್ತಿಪ್ಪತ್ತು ಸೆಕೆಂಡುಗಳಿಗಿಂತ ಹೆಚ್ಚಿಗೆ ನಿಂತರೆ ಧ್ವನಿ ಏರಿಸುತ್ತಾರೆ; ಸಂಸ್ಕಾರ ಚಕ್ರದಲ್ಲಿ ಭಯಾಧಾರಿತ ಭಕ್ತಿಯ ಪ್ರಾಚೀನಯುಗಕ್ಕೇ ತಳ್ಳಿಬಿಡುತ್ತಾರೆ! ನಿಷೇಧ ಪ್ರಕಟಣೆ ಸ್ಪಷ್ಟವಿಲ್ಲದ ಬೇರೊಂದೆಡೆ, ಧಡೂತಿ ಅರ್ಚಕನೋರ್ವ ನನ್ನ ಚರವಾಣಿ ಕಸಿದುಕೊಳ್ಳಲೇ ಮುಂದಾಗಿದ್ದ. ಬಹುಶಃ ನನ್ನ ಮೀಸೆ ಸಹಿತ ಸ್ಪಷ್ಟ ನಿರಾಕರಣ ಮತ್ತು ಪ್ರಾಯದ ಹಿರಿತನ ನನ್ನನ್ನು ಬಚಾವ್ ಮಾಡಿರಬೇಕು. ಹೀಗಾಗಿ….
ತಿರುವನಂತಪುರದ ರಂಗನಾಥ ದೇವಳದ ಹೊರವಲಯದಲ್ಲೇ ನಮ್ಮ ಬಳಗದ ಬಹುಮಂದಿ ಪಾದರಕ್ಷೆಗಳಂತೇ ಎಲ್ಲ ವಿದ್ಯುನ್ಮಾನ ಸಲಕರಣೆಗಳನ್ನೂ ಹೋಟೆಲಿನಲ್ಲೇ (ಅಲ್ಲದಿದ್ದರೆ ಬಸ್ಸಿನಲ್ಲೇ) ಬಿಟ್ಟಿದ್ದೆವು. (ಹಾಗಾಗಿ ಪಟ, ಚಲಚಿತ್ರಗಳಿಲ್ಲ! ಲಗತ್ತಿಸಿದ ಒಂದು ದೇವಳದ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಪ್ರತಿಕೃತಿಯ ಬಿಂಬ ಮತ್ತು ಗರ್ಭಗುಡಿಯ ವಾಸ್ತವದ ಬಿಂಬಗಳು ಅಂತರ್ಜಾಲದ ಕೃಪೆ) ಗಂಡಸರು ಮೇಲುಡುಪುಗಳನ್ನು ಪೂರ್ಣ ತ್ಯಜಿಸಿ, ಬಿಳಿ ಪಂಚೆಗಳಲ್ಲಿದ್ದರೆ, ಹೆಂಗಸರು ಸೀರೆ-ರವಕೆ (ಅಲ್ಲದಿದ್ದರೆ ಸಲ್ವಾರ್ ಮೇಲೊಂದು ಶಾಲು ಸುತ್ತಿ, ಎದೆಗಿನ್ನೊಂದು ಶಾಲು ಹೊದ್ದುಕೊಂಡೇ) ಬಂದಿದ್ದೆವು. ಕೊಳಕು ಪೇಟೆ ಬೀದಿಗಳಲ್ಲಿ ನಡೆದು, ದೇವಳದ ತುಕ್ಕು ಹಿಡಿದ ಸರತಿ ಬೇಲಿಗಳಲ್ಲಿ ವ್ಯರ್ಥ ಹತ್ತೆಂಟು ಬಾರಿ ಮೇಲೆ-ಕೆಳಗೆ, ಅಡ್ಡಾದಿಡ್ಡೀ ಸುತ್ತಿ, ಎಲ್ಲಂದರಲ್ಲಿ ಜಿಡ್ಡು, ಕುಂಕುಮ ಮೆತ್ತಿದ ಶಿಲಾ ಕಂಬ ಭಿತ್ತಿಗಳನ್ನು ತಡವಿ, ಗರ್ಭ ಗುಡಿಯ ಮೂರೂ ದ್ವಾರಗಳನ್ನು ಬಹುತೇಕ ಎಡವಿಕೊಂಡೇ ದಾಟಿ ಮುಗಿಸಿದೆವು. ಮೊದಲೇ ಓದಿದ್ದಲ್ಲದೆ, ಬಾಲಕೃಷ್ಣರ ವಿವರಣೆಗಳನ್ನೂ ಮೂರ್ನಾಲ್ಕು ಬಾರಿ ಕೇಳಿ, ಮನದಲ್ಲಿ ಮೂಡಿದ್ದ ಭ್ರಮಾಚಿತ್ರವನ್ನೇ ವಾಸ್ತವದ ಕತ್ತಲ ಕೂಪದಲ್ಲಿ, ಮಂಕು ಎಣ್ಣೆದೀಪ ಹಾಗೂ ಹೊಗೆಯ ವಾತಾವರಣದಲ್ಲಿ ಕಂಡಂತೆ ಭ್ರಮಿಸಿದೆವು. ಮುಗ್ಧ ಭಕ್ತ ಮನಸ್ಸುಗಳಂತೂ “ಆಹ್ ಪಾದ ಪಂಕಜಗಳು…. ಸುಂದರ ನಾಭೀನಾಳ ಸ್ಥಿತ ಬ್ರಹ್ಮಾ….. ಕರಾಗ್ರ ಪೋಷಿತ ಮಹಾದೇವಾ….” ಎಂದು ಭ್ರಮಿಸಿಯೇ ಆನಂದಿಸಿದವು. (ಲಗತ್ತಿಸಿದ ಎರಡು ದೇವಬಿಂಬಗಳ ಪಟಗಳು ಅಂತರ್ಜಾಲದ ಕೃಪೆ) ದೇವಾಲಯದಿಂದ ಹೊರ ಬೀಳುವಾಗ ಕತ್ತಲಾಗಿತ್ತು.
ಭಾರತ ಭೂಪಟದಲ್ಲಿ ಭೌಗೋಳಿಕವಾಗಿ ಸಪುರವಾಗಿ ತೋರುವ ಕೇರಳ, ವಾಸ್ತವದಲ್ಲಿ ದಾರಿಗಳನ್ನೂ ಸಪುರಕ್ಕೇ ಉಳಿಸಿಕೊಂಡಿದೆ, ತನ್ನ ಆಹಾರ ಸಂಸ್ಕೃತಿಯನ್ನೂ ಸಂಕುಚಿತವಾಗಿಯೇ ಕಾಪಾಡಿಕೊಂಡಿದೆ. (ವ್ಯತಿರಿಕ್ತವಾಗಿ ತಮಿಳ್ನಾಡು – ಊಟ ತಿಂಡಿಗಳಲ್ಲಿ ಬಹಳ ಪರಿಷ್ಕಾರ ಮತ್ತು ಉದಾರಿ!) ಕೇರಳ, ಮುಂದೆ ತಮಿಳ್ನಾಡು ಕೂಡಾ ಮಧ್ಯಾಹ್ನಕ್ಕೇನೋ ಪರಿಷ್ಕಾರದ ಊಟ ಕೊಡುತ್ತವೆ. ಆದರೆ ಅಲ್ಲಿ ರಾತ್ರಿಗಾಗುವಾಗ, ಸಂಜೆಯ ವೈವಿಧ್ಯಮಯ ತಿಂಡಿಗಳ ಅವಧಿಯನ್ನೇ ವಿಸ್ತರಿಸುತ್ತವಂತೆ. ನಮ್ಮ ತಂಡ ತಲೆ ಲೆಕ್ಕದಲ್ಲಿ ಒಮ್ಮೆಗೇ ನಲ್ವತ್ತೈದಕ್ಕೆ ಕಡಿಮೆಯಿಲ್ಲದಂತೆ (ಬಸ್ ಚಾಲಕ ಮತ್ತು ಸಹಾಯಕರನ್ನು ಸೇರಿಸಿ) ‘ಧಾಳಿಯಿಟ್ಟು’, ಆಯ್ಕಾ ವಿಧಾನದಲ್ಲಿ ಹತ್ತಿಪ್ಪತ್ತು ವೈವಿಧ್ಯಗಳನ್ನು ಬಯಸುವಾಗ ಸಾಮಾನ್ಯ ಹೋಟೆಲುಗಳು ಸಾಕಾಗುವುದಿಲ್ಲ. ಇಲ್ಲೆಲ್ಲ ನಮ್ಮ ಪ್ರವಾಸೀ ಯಜಮಾನ – ಬಾಲಕೃಷ್ಣರ ವಿಸ್ತೃತ ಅನುಭವ ಸರಿಯಾದ ಹೋಟೆಲನ್ನೇ ಆರಿಸುತ್ತಿತ್ತು. ಹಾಗೆ ಅವರಾರಿಸಿದ ದೊಡ್ಡ ಹೋಟೆಲಿನಲ್ಲಿ ರಾತ್ರಿಯ ಉಪಾಹಾರ ಮುಗಿಸಿಯೇ ನಾವು ವಾಸದ ಹೋಟೆಲು ಸೇರಿಕೊಂಡೆವು.
ಶುಚಿಗೊಂಡ ಇಂದ್ರ
ಬೆಳಿಗ್ಗೆ ಆರೂವರೆಯ ಸುಮಾರಿಗೆ ಶುಂಠಿ (ಹೋಟೆಲ್) ಖಾಲೀ ಮಾಡಿ, ಕೆಂಪು ಗುಬ್ಬಿ (ಬಸ್) ಏರಿ ಡಬ್ಬಲ್ ಮಿಸ್ಸಿನತ್ತ (ಕನ್ಯಾ+ಕುಮಾರಿ) ಹೊರಟೆವು. ಬಾಲಕೃಷ್ಣ ಎಲ್ಲೋ ‘ಬೆಳಗ್ಗಿನ ಚಾ’ ಶಾಸ್ತ್ರ ಮಾಡಿಸಿದರೂ “ತಿಂಡಿಗೆ ತಮಿಳ್ನಾಡು…” ಎಂದಿದ್ದರು. ಹೆದ್ದಾರಿ ವಿಸ್ತರಣೆಗೊಪ್ಪದ ಕೇರಳದ ಜಿಗುಟು ಮತ್ತು ದಾರಿಯುದ್ದಕ್ಕೂ ಹಬ್ಬಿಕೊಂಡ ಮನೆ, ವ್ಯವಹಾರ ಮಳಿಗೆಗಳ ನಿತ್ಯದ ಗೊಂದಲಗಳು ನಮ್ಮನ್ನು ಸಾಕಷ್ಟು ನಿಧಾನಿಸಿದವು. ಆದರೂ ಒಂಬತ್ತು ಗಂಟೆಯ ಸುಮಾರಿಗೆ ನಾಗರಕೋಯಿಲಿನಲ್ಲಿ ಸಿಕ್ಕ (ಹೋಟೆಲ್) ಗೌರೀಶಂಕರ ನಮ್ಮ ಉದರಂಭರಣವನ್ನು ಚೆನ್ನಾಗಿಯೇ ಮಾಡಿದ. ಅನಂತರದ ನಮ್ಮ ಮೊದಲ ಕಟ್ಟೆಪೂಜೆ ಶುಚೀಂದ್ರದಲ್ಲಿತ್ತು.
ಅಹಲ್ಯಾ ಪ್ರಕರಣದಲ್ಲಿ ಅಪರಾಧಿಯಾದ ದೇವೇಂದ್ರ ಶುಚಿಯಾದ ಅರ್ಥಾತ್ ಶಾಪವಿಮೋಚನೆಗೊಂಡ ಸ್ಥಳವಾಗಿ ಇದು ಶುಚೀಂದ್ರ. ಊರ ಪ್ರವೇಶದಲ್ಲೇ ಸಿಕ್ಕ ತೆಪ್ಪಕೂಟ್ (ಬಹುಶಃ ದೇವರ ನೌಕಾಯಾನದ ಕೆರೆಯೂ ಹೌದು) ಎಂಬ ಕೆರೆ ಅದನ್ನೇ ಸೂಚಿಸುತ್ತದೆ. ದೇವರಾಜನ ಪಾಪಕ್ಕೂ ‘ಕ್ಲೀನ್ ಚಿಟ್’ ಕೊಡುವ ಅಪಾರ ಮಹಿಮೆ ಇಲ್ಲಿನ ಪ್ರಧಾನ ಆರಾಧ್ಯ ದೈವ – ತಾಣುಮಾಲಯನ್, ಅಂದರೆ ತ್ರಿಮೂರ್ತಿಗಳೇ ಒಂದಾಗಿ ಮೈದಳೆದ ಲಿಂಗದಲ್ಲಿದೆಯಂತೆ (ಸ್ಥಾಣು>ತಾಣು – ಶಿವ, ಮಾಲ್ – ವಿಷ್ಣು, ಆಯನ್ – ಬ್ರಹ್ಮ = ತಾಣುಮಾಲಯನ್, ಥ್ರೀ ಇನ್ ಒನ್ ಲಿಂಗ!). ಜತೆಗೇ ಭೀಮಗಾತ್ರದ ಆಂಜನೇಯ, ಭಾರೀ ಪ್ರಾಚೀನದ ಬನ್ನಿ ಮರ, ಅಪೂರ್ವ ವಾಸ್ತು, ಏಕಶಿಲಾ ಮಹಾಬೋದಿಗೆಗಳು, ಅಸಂಖ್ಯ ಮಂಟಪಗಳು, ಅನೇಕಾನೇಕ ದೇವಬಿಂಬಗಳು… ಶಿಲ್ಪಕಲಾ ಕೌಶಲ್ಯದೊಂದಿಗೇ ಭಾವುಕ ಮನಸ್ಸುಗಳಿಗೂ ದರ್ಶನ, ಸೇವೆಗಳ ಪಟ್ಟಿಯೂ ದೊಡ್ಡದೇ ಇತ್ತು.
ಶುಚೀಂದ್ರದಲ್ಲೂ ವಸ್ತ್ರ-ಸಂಹಿತೆ ಗಂಡಸರನ್ನು ಅರೆಬೆತ್ತಲಾಗಿಸಿದರೂ ಮಹಿಳೆಯರಿಗೆ, ಚಿತ್ರಗ್ರಹಣಕ್ಕೆ (ಮುಖ್ಯ ಗರ್ಭಗುಡಿಯೊಂದನ್ನುಳಿದು) ಉದಾರವಾಗಿತ್ತು. ಸರತಿ ಸಾಲಿನ ಬೇಲಿಗಳ ಜಾಲ ಒಡ್ಡದೇ ನಮ್ಮ ವಿರಾಮದ ಭೇಟಿಗೆ ಅನುಕೂಲವೂ ಆಯ್ತು. ದೇವಳದ ಸ್ಥಳ ಪುರಾಣ ಮತ್ತು ಚಾರಿತ್ರಿಕ ರಚನಾ ವೈಭವಗಳು ಇಂದಿಗೂ ಬಹು ಜನಪ್ರಿಯ, ಸಹಜವಾಗಿ ಬಹು ದೊಡ್ಡ ಆದಾಯಮೂಲವೂ ಇರಬೇಕು. ಆದರೆ ಇವು ಎಂದಲ್ಲ, ಪ್ರಸ್ತುತ ನಮ್ಮ ಯಾತ್ರೆಯುದ್ದಕ್ಕೆ ಸಿಕ್ಕ ಸ್ಥಳಗಳೆಲ್ಲೆಡೆಯೂ ನಿರ್ವಹಣೆಯಲ್ಲಿನ ಉಡಾಫೆ ಮಾತ್ರ ತುಂಬ ನೋವುಂಟು ಮಾಡುತ್ತಿದ್ದವು. ಅವು ಒಟ್ಟಾರೆ ಊರಿನ ಸಾರ್ವಜನಿಕ ಜೀವನ ನಿರ್ವಹಣೆಗೆ ಏನೂ ಕೊಟ್ಟಿಲ್ಲವೇ ಎಂಬ ಸಂದೇಹ ಮನಸ್ಸನ್ನು ಬಹುವಾಗಿ ಕಾಡುತ್ತದೆ. (ಇವಕ್ಕೆ ಅಪವಾದವೆಂಬಂತೆ ಇಂದು ನನಗೆ ಕಾಣುವ ಏಕೈಕ ವ್ಯವಸ್ಥೆ ವೆಂಕಟೇಶ್ವರನ ನೆಲೆ – ತಿರುಮಲೆ! ಆಸಕ್ತರು ಆರು ಭಾಗಗಳ ನನ್ನ ಕಥನಧಾರೆಗೆ ಹೀಗೆ ಪ್ರವೇಶಿಸಬಹುದು) ಸಾರಥಿ ನಮ್ಮನ್ನೆಲ್ಲ ಸಮೀಪದ ಮುಂದಿನೂರಿಗೆ ಸಾಗಿಸಿದ.
ಭಾರತ ಭೂಶಿರ
ಅಕ್ಷರಶಃ ಭಾರತ ಭೂಶಿರದ ಉನ್ನತ ಅಂಚುಗಳಲ್ಲೇ ಕನ್ಯಾಕುಮಾರಿ ಪೇಟೆ ಮುಕುರಿಕೊಂಡಿದೆ. ಮಧ್ಯಾಹ್ನ ಹನ್ನೆರಡೂವರೆಯ ಸುಮಾರಿಗೆ ಅಲ್ಲಿನ ಮಹಾಗಲ್ಲಿಗೆ ನಮ್ಮ ಗಜಗಾತ್ರದ ಕೆಂಪು ಗುಬ್ಬಿ ನುಗ್ಗಿ, ನಮ್ಮನ್ನು ಸಾಮಾನು ಸಹಿತ ಇಳಿಸಿದ್ದು ಮತ್ತು ಮರುದಿನ ಸಂಗ್ರಹಿಸಿದ್ದು ನಿಜಕ್ಕೂ ಸಾಹಸವೇ ಸರಿ. ಒತ್ತೊತ್ತಾಗಿ ಗಿಡಿದುಕೊಂಡ ಬಹುಮಹಡಿ ಕಟ್ಟಡಗಳ ನಡುವೆ ಒಂದಾದ ‘ಸೀ ಲ್ಯಾಂಡ್’ ನಮ್ಮ ಒಂದು ದಿನಕ್ಕೆ ಸುಖನಿವಾಸ. ಹಾಗೆಂದು “ಉಸ್ಸಪ್ಪಾ…” ಎಂದು ಹವಾನಿಯಂತ್ರಿತ ಸುಂದರ ಕೋಣೆಯನ್ನಾವರಿಸಿ, ಬಿಸಿ ಕೆಟಲಿನಲ್ಲಿ ಚಾ/ಕಾಫಿ ಕಾಸಿ ಸೀಪುತ್ತಾ, ಒಂದೂವರೆ ಅಡಿ ದಪ್ಪದ ಸುಪ್ಪತ್ತಿಗೆಯ ಮೇಲೆ ಬಿದ್ದುಕೊಂಡು, ಟೀವೀ ಚಾನೆಲ್ಲುಗಳಲ್ಲಿ ಕಳೆದುಹೋಗಲು ಅಲ್ಲಿ ಸಮಯ ಇರಲಿಲ್ಲ. ತೀರಾ ಸರಳ ಆವಶ್ಯಕತೆಗಳನ್ನಷ್ಟೇ ಕೈಚೀಲದಲ್ಲಿಟ್ಟುಕೊಂಡು, ನೇರ ಕಡಲ ಕಿನಾರೆಗೇ ಇಳಿವ ಇನ್ನೊಂದೇ ಮಹಾಗಲ್ಲಿಯಲ್ಲಿ ಪಾದ ಬೆಳೆಸಿದೆವು. ಎಲ್ಲೆಂದರಲ್ಲಿ ಮುಖ್ಯವಾಗಿ ಕಡಲ ಕೊಡುಗೆಗಳಾದ ಶಂಖ, ಚಿಪ್ಪು, ಕವಡೆಯಾದಿ ನೂರೆಂಟು ಸ್ಮರಣಿಕೆಗಳ ಜೋಪಡಿಯಿಂದ ಹಿಡಿದು ತುಸು ದೊಡ್ಡ ಅಡ್ಡಾದಿಡ್ಡಿ ಮಳಿಗೆಗಳು, ಬಗೆ ತರದ ತಿಂಡಿ ತೀರ್ಥಗಳ ಅಡ್ಡಾಗಳು. ಅದೇ ಊರ ದೇವಿ ಕನ್ಯಾಕುಮಾರಿ ದೇವಳಕ್ಕೂ ವಿವೇಕಾನಂದ ಹಾಗೂ ತಿರುವಳ್ಳುವರ್ ಪ್ರತಿಮೆಗಳಿಗೊಯ್ಯುವ ದೋಣಿಗಟ್ಟೆಗೂ ಗಾಂಧೀ, ಕಾಮರಾಜ್, ಸುನಾಮೀ ಮೊದಲಾದ ಸ್ಮಾರಕಗಳ ದರ್ಶನಕ್ಕೂ ನೇರ ಕಡಲ ಸಂಪರ್ಕಕ್ಕೂ ದಾರಿಯೂ ಹೌದು. ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ಧರ್ಮ, ಅಸ್ಮಿತೆಗಳ ಹೋರಾಟದಲ್ಲಿದ್ದಾಗ, ಸ್ವಾಮಿ ವಿವೇಕಾನಂದರು ಹಸಿದಹೊಟ್ಟೆ ತುಂಬಿಸುವುದಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟಿದ್ದರಂತೆ. ಹಾಗಾಗಿ ಎಂಬಂತೆ ಮೊದಲು ನಾವು ಮೊದಲು ಹೋಟೆಲ್ ಶರವಣದ ಭರ್ಜರಿ ಭೋಜನಕ್ಕೆ ಶರಣಾದೆವು. ಅನಂತರ….
ವಿವೇಕಾನಂದ ಸ್ಮಾರಕ ಶಿಲೆಗೆ ಹೋಗುವ ದೋಣಿಗಟ್ಟೆಗೆ ನಡೆದೆವು. ಮೊದಲ ನೋಟದಲ್ಲೇ ಭಯಭೀತಗೊಳಿಸುವಂತೆ ಪ್ರಚಂಡ ಗಾಳಿ, ಕಡಲ ಮೊರೆತ ಕಿವಿಗಪ್ಪಳಿಸಿತು. ಬಹುದೂರದವರೆಗೂ ಕಾಣುವಂತೆ ಹರಡಿಕೊಂಡ ಅಸಂಖ್ಯ ನೈಜ ಶಿಲಾ ಚೂಪು, ದಿಣ್ಣೆಗಳನ್ನು ಮೂರು ಸಾಗರಗಳ (ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರ) ಅಲೆಗೈಗಳು ನಿರಂತರ ತಟ್ಟಿ ತಡವಿ ತೊಳೆಯುತ್ತಲೇ ಇದ್ದವು. ಆ ಮಹಾ ಕಲ್ಲೋಲದ ಲಯಕ್ಕನುಗುಣವಾಗಿ ತೂಗಾಡುತ್ತ, ದೋಣಿಗಟ್ಟೆಯಲ್ಲಿ ತಂಗಿತ್ತೊಂದು ಯಾಂತ್ರೀಕೃತ, ವಿಸ್ತಾರ ತಳದ, ಪುಟ್ಟ ದೋಣಿ. ನಾವು ನೂರಿನ್ನೂರು ಮೀಟರ್ ಮೊದಲೇ ಸಿಗುವ ಆವರಣದ ದ್ವಾರದಲ್ಲಿ ಟಿಕೆಟ್ ಖರೀದಿಸಿ, ನಮ್ಮ ನಿರಪಾಯಕಾರಿತ್ವವನ್ನು ಪ್ರಮಾಣಿಸಿ, ಸರತಿಸಾಲಿನ ಬೇಲಿಯಲ್ಲೋಡಿ, ಯಥೇಚ್ಛ ಬಿದ್ದಿದ್ದ ತೇಲಂಗಿಗಳನ್ನು ತಗುಲಿಸಿಕೊಂಡು ದೋಣಿಯನ್ನೇನೋ ಸಮೀಪಿಸಿದೆವು. ದೋಣಿಯ ಎರಡೂ ಕೊನೆಗಳನ್ನು ತೋರ ಮಿಣಿಗಳಿಂದ ಬಂದರುಗಟ್ಟೆಗೆ ಬಂಧಿಸಿದ್ದರು. ಆದರೂ ಮಗ್ಗುಲಿಗೆ ಕಟ್ಟಿದ ಹಳೆ ಟಯರುಗಳನ್ನು ಞರಕ್ಕಾಡಿಸುತ್ತಾ ನಮ್ಮ ಅಡಿ ತಪ್ಪಿದರೆ ಬಂದರುಗಟ್ಟೆಗೆ ಅರೆದು ಚೂರ್ಣವಾಗಿಸುವಂತೆ ಭಯಹುಟ್ಟಿಸುತ್ತ ತುಯ್ದಾಡುತ್ತಲೇ ಇತ್ತು. ಮನಸ್ಸು ಗಟ್ಟಿ ಮಾಡಿ, ಸಹಾಯಕ್ಕೆ ನಿಂತಿದ್ದ ಪರಿಣತ ನಾವಿಕರ ಕೈಯಾಸರೆಯಲ್ಲಿ, ನಮ್ಮ ಬಳಗ ಸೇರಿದಂತೆ ನೂರಾರು ಮಂದಿ ದೋಣಿ ತುಂಬಿದೆವು. ಮರುಕ್ಷಣದಲ್ಲಿ ಕಣ್ಣಿ ಕಳಚಿದ ಕರುವಿನಂತೆ ನಾವೆ, ಅಪಾಯಕಾರೀ ಬಂಡೆಗಳ ನಡುವಣ ಸುರಕ್ಷಿತ ಜಾಡಿನಲ್ಲಿ ಜೋಕಾಲಿಯಾಡಿಸುತ್ತ, ಎರಡೇ ಮಿನಿಟುಗಳ ಯಾನದಲ್ಲಿ ಎಲ್ಲರನ್ನೂ ವಿವೇಕಾನಂದ ಸ್ಮಾರಕ ಶಿಲೆಯ ಮೇಲಿಳಿಸಿತು.
ತೇಲಂಗಿ ಕಳಚಿ, ಪಾದರಕ್ಷೆಗಳನ್ನೂ ನಿಗದಿತ ಕೋಣೆ ಸೇರಿಸಿ (ಎಲ್ಲಂದರಲ್ಲಿ ಎಸೆದವರೂ ಧಾರಾಳ ಇರುವುದನ್ನು ಚಿತ್ರ ಹೇಳುತ್ತದೆ), ವಿವೇಕಾನಂದ ಸ್ಮಾರಕ ಮಂದಿರದ ವೀಕ್ಷಣೆಗಿಳಿದೆವು. ಮೊದಲಲ್ಲಿ ಅದರ ನಿರ್ಮಾಣದ ಚಿತ್ರ-ಕತೆ ತುಸು ಅನುಭವಿಸಿ, ಸೋಪಾನಗಳೆತ್ತರದಲ್ಲಿ ಮಂದಿರದ ಒಳ ಹೊಕ್ಕು ಪ್ರಶಾಂತತೆಯನ್ನು ಗೌರವಿಸಿ, ಹೊರ ಸುತ್ತಿನ ಓಣಿಗಳಲ್ಲಿ ಓಡಾಡಿ, ಹಿತಮಿತವಾಗಿದ್ದ ಪುಸ್ತಕ ಸ್ಮರಣಿಕೆಗಳ ಮಳಿಗೆಗಳನ್ನು ದರ್ಶಿಸಿ, (ಕೊಂಡವರು ಇಲ್ಲವೆಂದರೂ ತಪ್ಪಿಲ್ಲ!) ಸಾಗರಮುಖಿ ನೆಲ ಹಾಸೊಂದರ ಮೇಲೆ ರೇಖಿಸಿದ್ದ ವಿವಿಧ ದಿನಮಾನಗಳ ಸೂರ್ಯೋದಯ ಸೂಚಿ ಹಾಗೂ ಶಿಲಾಸ್ಮಾರಕದ ಸಿಹಿನೀರ ಅಗತ್ಯಕ್ಕೆ ಒದಗುವ ಮಳೆ ನೀರ ಸಂಗ್ರಹದ ಜಾಣ್ಮೆಗಳನ್ನು ಮೆಚ್ಚಿಕೊಂಡೆವು. ಮುಂದೆ…
ಸಮೀಪದ ಇನ್ನೊಂದು ಬಂಡೆಯನ್ನು ಈಚೆಗೆ ತಿರುವಳ್ಳುವರ್ ಸ್ಮಾರಕ ಮಾಡಿದ್ದಕ್ಕೂ ಭೇಟಿ ಕೊಟ್ಟೆವು. ವಿವೇಕಾನಂದ ಶಿಲೆಯಿಂದ ಅದಕ್ಕೆ ದಾಟಲು ವಿಶೇಷ ಉಕ್ಕಿನ ಸೇತು ಮಾಡಿದ್ದಾರೆ. ಅದರ ರಚನೆಯೋ ಪರಿಷ್ಕರಣವೋ ನಡೆದೇ ಇತ್ತು. ಸೇತುವೆಯ ನಡು ಹಾಸಿನುದ್ದಕ್ಕಿರುವ ಗಾಜಿನ ನಡೆ ಮತ್ತದರಿಂದ ಆಳದಲ್ಲಿ ಕಾಣುವ ಪುಡಿ ಬಂಡೆಗಳ ಮೇಲಿನ ಕಡಲ ಹೊಯ್ದಾಟ ನಿಸ್ಸಂದೇಹವಾಗಿ ರೋಮಾಂಚನಕಾರಿ. ಅತ್ತ ಭಾರೀ ಪೀಠದ ಮೇಲೆ ನಿಂತ ತಿರುವಳ್ಳುವರ್ ಪ್ರತಿಮೆಯ ಪಾದದವರೆಗೂ ಏರಿಳಿದು ಬಂದೆವು. ಹೋದಂತೇ ದೋಣಿಯಲ್ಲಿ ಮರಳಿದೆವು. (ಆಸಕ್ತರು ಹೆಚ್ಚಿನ ವಿವರಗಳನ್ನು ನಾನೇ ಲಗತ್ತಿಸಿದ ಕೆಲವು ಪಟಗಳಲ್ಲೂ ಅಂತರ್ಜಾಲದಲ್ಲೂ ಧಾರಾಳ ಪಡೆದುಕೊಳ್ಳಬಹುದು)
ದಂಡೆಯ ಮುಖ್ಯ ಓಣಿಯೊಂದು ಕನ್ಯಾಕುಮಾರಿ ದೇವಳಕ್ಕೆ ತೆರೆದುಕೊಂಡಿತ್ತು. ಮಹಾದ್ವಾರದ ರಚನೆಯಲ್ಲಿ ಈ ದೇವಳವೂ ರಾಜ್ಯದ ಬಹುತೇಕ ದೊಡ್ಡ ದೇವಾಲಯಗಳಂತೇ ಭವ್ಯವಾಗಿಯೇ ಕಾಣಿಸಿತು. (ಅದರ ಹಿತ್ತಿಲ ಪೌಳಿ ಕಡಲ ಕೊರೆತದಲ್ಲಿ ಕಂಡಿದ್ದ ಸಣ್ಣ ಕುಸಿತವನ್ನು ನಾವು ವಿವೇಕಾನಂದ ಶಿಲೆಯಿಂದಲೇ ಗುರುತಿಸಿದ್ದೆವು.) ಸ್ಥಳ ಪುರಾಣ ಹೇಳುವಂತೆ, ಸ್ವತಃ ತನ್ನ ಮದುಮಗನನ್ನೇ ಕಾಣದೆ ಶಿಲೆಯಾದ ಕನ್ಯಾಕುಮಾರಿ (ಪಾರ್ವತಿ), ದರ್ಶನಕ್ಕೆ ಬಂದ ಭಕ್ತರಿಗೆ ಕಂಕಣಯೋಗ ಕರುಣಿಸುವುದು, ವಿಗ್ರಹದ ಕಣ್ಣಿನಲ್ಲಿ ಅಳವಡಿಸಿದ ಹರಳಿನ ಮಹಿಮೆ ಕಡಲಸವಾರರನ್ನೂ ದಿಕ್ಕೆಡಿಸುವುದು ಕಥಾರಂಜನೆಗೆ ಸರಿ. ಆದರೂ ಒಳಗೆ ಹೀಗೇ ಹೋಗಿ, ಹಾಗೇ ಬರುವ ನನ್ನ ಉತ್ಸಾಹಕ್ಕೆ, ಅಲ್ಲಿನ ವಸ್ತ್ರ ಸಂಹಿತೆ ತಡೆಯೊಡ್ಡಿತು. ಮೂರನೇ ಗಲ್ಲಿಯಲ್ಲಿ ಮುಂದುವರಿದಂತೆ….
ನೇರ ಕಡಲ ನೀರನ್ನೇ ಸ್ಪರ್ಷಿಸುವ ಮೆಟ್ಟಿಲುಗಳು ಸೇರಿದಂತೆ ಒಟ್ಟಾರೆ ಅಲ್ಲಿನ ವ್ಯವಸ್ಥೆ ಜನಸ್ನೇಹಿಯಾಗಿರಲಿಲ್ಲ. ಉಳಿದಂತೆ ನಮ್ಮೂರಿನ (ಅವಿಭಜಿತ ದಕ ಜಿಲ್ಲೆ) ಯಾವುದೇ ಮೀನುಗಾರಿಕೆ ಕಿನಾರೆಗಳಂತೆ ಅಲ್ಲಲ್ಲಿ ಹಾಳು ಸುರಿದುಕೊಂಡು, ಅಲೆಗೈಗಳಿಗೆ ನಿಲುಕದಲ್ಲಿ ಕೊಳಚೆಯೂ ಸೇರಿಕೊಂಡಿತ್ತು. ಇಂದು ನಾವು ಅಲ್ಲಿದ್ದುದಕ್ಕಿಂತ ಹೆಚ್ಚಿನ ನೆನಪು ಉಳಿಸುವುದು, ಬಾಲಕೃಷ್ಣರು ಅಲ್ಲೇ ನಮ್ಮೆಲ್ಲರನ್ನು ಒಟ್ಟೈಸಿ ತೆಗೆಸಿದ ಸಮೂಹ ಸ್ಮರಣಚಿತ್ರ!
ದಶಕಗಳ ಹಿಂದೆ ಅಪ್ಪಳಿಸಿದ ಸುನಾಮೀ ಸ್ಮರಣೆಗೊಂದು ಉದ್ಯಾನವೆಂದು ಅಷ್ಟು ಕಾಂಕ್ರೀಟ್, ಅಂತರ್ಲಾಕು ವ್ಯರ್ಥ ಮಾಡಿ, ನೆಲಕ್ಕೆ ಅಸಹಜ ಹುಲ್ಲ ಹಾಸು, ಒಂಡೆರಡು ಮುಳ್ಳುಗಿಡ ಬೆಳೆಸಿದ್ದರು. ಆಯ್ತಪ್ಪ ನೋಡೋಣವೆಂದು ಅತ್ತ ಕಾಲಿಟ್ಟದ್ದಕ್ಕೆ, ಕಾವಲಿನಾಕೆಯಿಂದ ಆಶೀರ್ವಚನ ಪಡೆದು ದೂರ ಸರಿದೆವು. ಪಕ್ಕದ ಗಾಂಧೀ ಸ್ಮಾರಕಕ್ಕೆ ಭೇಟಿ ಕೊಟ್ಟೆವು. ಅಲ್ಲಿನ ಕಾವಲಿನವರು ಪ್ರವೇಶಧನದ ಮೇಲೆ, ಚಪ್ಪಲಿ ಕಾಸನ್ನು ಅನಧಿಕೃತವಾಗಿ ಒಂದಕ್ಕೆ ಹತ್ತರಷ್ಟು ವಸೂಲು ಮಾಡಿ, ಏನೋ ಕೃಪೆ ಮಾಡಿದವರ ಗತ್ತು ತೋರಿದರು. ಒಳಗಿನ ಭಣಗುಟ್ಟುವ ದೊಡ್ಡ ಪ್ರದರ್ಶನಾಂಗಣದಲ್ಲಿ ಹಳೆಗಾಲದ ಒಂದಷ್ಟು ಕಪ್ಪು-ಬಿಳುಪಿನ ಚಿತ್ರಗಳಷ್ಟೇ ಇವೆ. ಸ್ಮಾರಕದ ವಠಾರದ ಒಂದಂಚಿನಲ್ಲಿ ಕೂರಿಸಿದ ಆಳುಗಾತ್ರವನ್ನೂ ಮೀರಿದ ಗಾಂಧಿ – ಪಟೇಲ್ ವಿಗ್ರಹಗಳನ್ನು, ಅನಿವಾರ್ಯವಾಗಿ ಬರಿಗಾಲಿನಲ್ಲಿ ನೋಡಲು ಹೋಗಿ ಮುಳ್ಳು ಚುಚ್ಚಿಸಿಕೊಂಡದ್ದೇ ಲಾಭ. ಚಪ್ಪಲಿ ಮರುಸಂಗ್ರಹಿಸುವಾಗ “ಚಪ್ಪಲಿ ಜೋಡಿಗೆ ಒಂದು ರೂಪಾಯಿ ಎಂದು ಬೋರ್ಡಿದ್ದರೂ ಹತ್ತು ರೂಪಾಯಿ ಸಂಗ್ರಹಿಸುವ ಸುಳ್ಳರು ಗಾಂಧಿ ಸ್ಮಾರಕಕ್ಕೆ ಅವಮಾನ” ಎಂದು ದೇವಕಿ ಇಂಗ್ಲಿಷ್-ಹಿಂದಿ ಮಿಶ್ರಣದಲ್ಲಿ ಮಂಗಳಾರತಿ ಎತ್ತಿದ್ದಳು. ನಮ್ಮ ಅದೃಷ್ಟಕ್ಕೆ ಕಾವಲಿನವರಿಗೆ ತಮಿಳಿನಾಚೆ ಬೇರೆ ಭಾಷಾಜ್ಞಾನವಿರಲಿಲ್ಲ! ಗಾಂಧಿ ಮಗ್ಗುಲಿನಲ್ಲೇ ಇದ್ದ ಕಾಮರಾಜ ನಾಡಾರ್ ಸ್ಮಾರಕ ನಮಗೆ ಯಾವ ಸಂಕಟವನ್ನೂ ಉಂಟು ಮಾಡದಂತೆ ಬೀಗಮುದ್ರೆಯಲ್ಲಿತ್ತು. ತಾವೇನು ಕಡಿಮೆಯಿಲ್ಲ ಎನ್ನುವಂತೆ, ಯಾವುದೋ ಸ್ವಾಮಿಯ ಹೆಸರಿನಲ್ಲೊಂದು ಭಾರೀ ಕಾಂಕ್ರೀಟ್ ತೋರಣವನ್ನೂ ಕಂಡೆವು. ಅಲ್ಲಿ ಮುಂದೆ ಇನ್ನೇನು ಭವನ ಬರುತ್ತದೋ ‘ಸಿವನೇ ಬಲ್ಲ’!! ಇಂಥಾ ಎಲ್ಲ ಸ್ಮಾರಕಗಳಿಗೆ ಸುರಿದ ಸಾರ್ವಜನಿಕ ಹಣವನ್ನು, ಅಲ್ಲೇ ಆ ವ್ಯಕ್ತಿಗಳುಪದೇಶಿಸಿದ ಆದರ್ಶಗಳಿಗೆ ವಿನಿಯೋಗಿಸಿದ್ದರೆ, ಇಂದು ಕನ್ಯಾಕುಮಾರಿ ಪೇಟೆ ಅಥವಾ ಸಾಮಾನ್ಯ ಜನತೆ ಖಂಡಿತವಾಗಿಯೂ ಹೆಚ್ಚು ಸುಖಿಗಳಾಗುತ್ತಿದ್ದರು. ತನ್ನ ಉಪಯುಕ್ತತೆಯನ್ನು ತಾನೇ ದುಡಿದು ಸುಧಾರಿಸಿಕೊಳ್ಳದ ಸ್ಮಾರಕಗಳು ಖಂಡಿತವಾಗಿಯೂ ತಿರಸ್ಕಾರಕ್ಕಷ್ಟೇ ಸರಿ.
ಕೋಟ್ಯಂತರ ವರ್ಷಗಳ ಪ್ರಾಕೃತಿಕ ಇತಿಹಾಸದ ಒಂದು ಮುಖ್ಯ ಪಾಠಶಾಲೆ ಕನ್ಯಾಕುಮಾರಿ ಭೂಶಿರ. ಅಲ್ಲಿ ಒಂದೆರಡು ಶತಮಾನಗಳ ಮಾನವ ಇತಿಹಾಸದ ನೆಪದಲ್ಲಿ (ನಮ್ಮರಿವಿಗೆ ಬರುವ ಮುನ್ನ ಆಗಿಹೋದ) ವಿವೇಕಾನಂದ ಸ್ಮಾರಕವನ್ನಾದರೂ ಕ್ಷಮಿಸಬಹುದು. ಆದರೆ ಅದನ್ನು ಮೀರಿಸುವಂತೆ, ತಮಿಳು-ಪ್ರಜ್ಞೆಯ ಅಪಬಳಕೆಯಾಗಿ ಬಂದಿರುವ ತಿರುವಳ್ಳುವರ್ ವಿಗ್ರಹ ಮತ್ತು ಪೂರಕ ರಚನೆಗಳು ತೀರಾ ಅಕ್ಷಮ್ಯ. ಇವುಗಳನ್ನು ಪೂರ್ವಾದರ್ಶಗಳಾಗಿ ಇಟ್ಟುಕೊಂಡು, ಅಲ್ಲಿನ್ನೂ ಸಾಕಷ್ಟಿರುವ ಖಾಲೀ ಕೋಡುಗಲ್ಲುಗಳ ಮೇಲೆ, ತಳದ ಶಿಲಾಹಾಸಿನ ಮೇಲೆ ಮುಂದೆ ಹೊಸದೇ ಸ್ಮಾರಕಗಳು, ಸೇತುಗಳು ಮೂಡ ತೊಡಗಿದರೆ… ಎಂಬ ಕಲ್ಪನೆಯಂತೂ ಇನ್ನಿಲ್ಲದ ಭಯ ಹುಟ್ಟಿಸುತ್ತದೆ.
ಶರವಣದಲ್ಲಿ ರಾತ್ರಿಯ ಉಪಾಹಾರ ಮುಗಿಸಿ ವಸತಿ ಸೇರಿಕೊಂಡೆವು. ಮರುದಿನ (ಹಿಂದಿನ ರಾತ್ರಿ ಘೋಷಿಸಿದ್ದಂತೆ) ಬೆಳಿಗ್ಗೆ ೫.೪೫ಕ್ಕೆ ಹೋಟೆಲಿನ ತಾರಸಿ ದ್ವಾರದ ಬೀಗ ತೆರೆದಾಗ, ನಾವೆಲ್ಲರೂ ತಾರಸಿಗೆ ಧಾವಿಸಿದ್ದೆವು. ಕಡಲ ಮೊರೆತದ ಶ್ರುತಿಗೆ ವಿರಳ ಹಕ್ಕಿಗಳುಲಿಯೊಡನೆ ಉದಯರವಿಯ ರಂಗಿನೋಕುಳಿ ಕಣ್ತುಂಬಿಕೊಳ್ಳುವ ಉತ್ಸಾಹ ನಮ್ಮದು. ಮಸಕು ಬೆಳಕಿನಲ್ಲಿ ವಿವೇಕಾನಂದ ಶಿಲೆಯಿದ್ದರೆ, ಹೆಚ್ಚುಗಾರಿಕೆ ಮೆರೆಯಲೆಂದೇ ಬಂದ ತಿರುವಳ್ಳುವರ್ ವಿಗ್ರಹ, ನೋಟಕರಿಲ್ಲದ ಭಾಗ್ಯದಲ್ಲೂ ರಾತ್ರಿಯಿಡೀ ಉಜ್ವಲ ಬೆಳಕ ಸ್ನಾನ ನಡೆಸಿತ್ತು. ಊರಿನ ಬೀದಿ, ಚಿಕ್ಕ ದೊಡ್ಡ ಕಟ್ಟಡಗಳೆಲ್ಲ ಯಥಾನುಶಕ್ತಿ ಆಕಾಶಕ್ಕೆ ಬೆಳಕನ್ನು ಊಡುತ್ತಲೇ ಇದ್ದವು. ಅರ್ಧ ಗಂಟೆ ಮೊದಲಿನಿಂದಲೇ ಯಾವುದೋ ಮಂದಿರ ಏನೋ ಸ್ತೋತ್ರ ಮಾಲಿಕೆಯನ್ನು ಮೈಕಾಸುರನಿಗೆ ಕೊಟ್ಟು ತಾರಧ್ವನಿಯಲ್ಲಿ ಬಿತ್ತರಿಸುತ್ತಿತ್ತು. ಆದರೂ ನಮ್ಮಂತೇ ಅಸಂಖ್ಯ ಜನ ಮರುಳಿನಲ್ಲಿ, ಊರಿನೆಲ್ಲಾ ಎತ್ತರದ ತಾಣಗಳಲ್ಲಿ, ಕೊನೆಗೆ ಕಡಲ ಕೊರೆತ ತಡೆಯಲು ರಚಿಸಿದ್ದ ಗೋಡೆಯುದ್ದಕ್ಕೂ ಕತ್ತು ಉದ್ದ ಮಾಡಿ ನೆರೆದಿತ್ತು. ಆದರೆ… ಆದರೆ ಮೋಡ ಕವಿದ ವಾತಾರಾವಣ ಉದಯರವಿಯನ್ನು ನುಂಗಿತ್ತು. ನಮ್ಮ ವಸತಿಯ ಎದುರಿನ ಚಾ ದುಕಾನಿನಲ್ಲಿ (ಅತಿ ಸಿಹಿಯಿಂದ) ನಾಲಿಗೆ ಹೇಸಿಗೆ ಮಾಡಿಕೊಂಡು, ಮುಂದಿನೂರಿಗೆ ರಥ ಏರಿದೆವು.
(ಮುಂದುವರಿಯಲಿದೆ)
























0 Comments