ಅಂಬರ ಕೋಟೆಯಲ್ಲಿ ಮೊದಲ ದಿನ

May 14, 2026 | 0 comments

ಭಾವಲಹರಿಯಲ್ಲಿ ಮರೆತ ನಡೆ!!

“ದೂರಾ ಬಲು ದೂರ, ಹೋಗುವ ಬಾರಾ…” ಎಂದು ಪಲ್ಲವಿಸುತ್ತಾ ಎರಡು ಭುಜಗಳಿಗೊಂದೊಂದು ಭಾರದ ಚೀಲ ಜೋತಾಡಿಸಿಕೊಂಡು, ರಿಕ್ಷಾ ನೋಟಕನಾಗಿ ದಬದಬನೆ ಹೆಜ್ಜೆ ಹಾಕಿದ್ದೆ. ತಾನೂ ಎರಡು ಮೂಟೆಯ ಒಜ್ಜೆಯಲ್ಲಿ ಭುಜ ಜಗ್ಗಿಸಿಕೊಂಡು ದೇವಕಿ ಹಿಂಬಾಲಿಸಿದ್ದಳು. ಹಸಿರು ಗಿರಿ ಸಾಲಿನ ಮೇಲೆ, ಹಗುರ ಸವಾರಿ ಹೊರಟ ತೆಳು ಮೋಡಗಳ ಲಹರಿ ಹಿಡಿದು, ಕೈ ಬೀಸಿ ಉಚ್ಚ ಸ್ವರದಲ್ಲಿ “ಓ… ಓ… ಪ್ರಿಯತಮಾ …” ಎಂದಂತೇ ದೂರದಲ್ಲಿ ಕಣ್ಮರೆಯಾಗುತ್ತಿದ್ದ ರಿಕ್ಷಾ ಕರೆಯುತ್ತಿದ್ದೆ. ಅವುಗಳ ಅನ್ಯ ಮನಸ್ಕತೆಯಲ್ಲಿ ಸೋಲುತ್ತಿದ್ದೆ. ಆಗ ಮಂದ ಮಾರುತನಂತೆ ಸ್ಕೂಟರ್ ಏರಿ ಹಾಲಿಗೆ ಹೊರಟಿದ್ದ ಎಳೆ-ಗೆಳೆಯ ಪ್ರವೀಣ ಸಹಾಯಕ್ಕೊದಗಿದ. ಅರಳಿಕಟ್ಟೆ ನೆರಳಲ್ಲೊರಗಿದ ಚಾಲಕನೊಬ್ಬನನ್ನು ನಮ್ಮತ್ತ ಓಡಿಸಿಕೊಂಡು ಬಂದ. ಸಕಾಲದಲ್ಲಿ ಮಂಗಳೂರು ಬಸ್ ನಿಲ್ದಾಣ ಸೇರುವ ತವಕದಲ್ಲಿ, ನಾನು ಅವನಿಗೆ ಹೇಳಿದ ಥ್ಯಾಂಕ್ಸ್ ರಿಕ್ಷಾ ಓಟದೊಡನೆ ತೇಲಿಯೆ ಹೋಗಿತ್ತು.

ವಿದ್ಯುತ್-ರಿಕ್ಷಾದ “ಸೂಯ್…” ನಾದ, ಪಕ್ಕ ವಾದ್ಯಗೋಷ್ಠಿಯಂತೆ ಹೊಸ ಭಾವದ ವಿಸ್ತಾರಕ್ಕೆ ಒಯ್ಯಿತು. ರಿಕ್ಷಾ ಇಳಿವಾಗ, ದೇವಕಿಯ “ಛೇ ನಾಯಿ ಹೇಲಿನ ವಾಸನೆ..” ಗೊಣಗು, ನನ್ನ ಶೃಂಗಾರ ಭ್ರಮಿತ ಮನಸ್ಸನ್ನು ಮುಟ್ಟಲೇ ಇಲ್ಲ. ಭಾವಗಾನದ ಹೊಸ ಚರಣ ಹಿಡಿದು ರಾಗ ತೆಗೆದೆ “ಈ ಭಾರಾ… ಹತ್ತಿಯಂತೆ ಹಗುರಾ…”. ಚೀಲಗಳನ್ನೆಲ್ಲ ತೊಟ್ಟಿಲತೂಗಿನ ಬಸ್ಸಿನ (ವಾಲ್ವೋ) ಮಡಿಲಿಗೆ ತುಂಬಿ, ನಾವೂ ಬಸ್ಸಿನ ಒಳ ಸೇರಿ, ಆರಾಮಾಸನದಲ್ಲಿ ಮೈಚಾಚಿ, ಕಾಲೆಸೆದು, ಮುಕ್ತಾಯದ ಚರಣಕ್ಕೆ ಸಾಹಿತ್ಯ ಹೊಂದಿಸುತ್ತಲಿದ್ದೆ. ಅದು ರೂಪುಪಡೆಯದಂತೆ ದೇವಕಿ, ಮೂಗು ಸಿಂಡರಿಸಿ, ಕಣ್ಣು ಕೆಕ್ಕರಿಸಿ, ಬಸ್ಸಿನ ಚೊಕ್ಕ ನೆಲ ಹಾಸಿನ ಮೇಲೆ ಮೂಡಿದ್ದ ನನ್ನ ‘ಹಸಿ’ ಹೆಜ್ಜೆಗುರುತನ್ನೂ ಬೆಟ್ಟು ಮಾಡಿದಳು. ಮುಂದುವರಿದು ನನ್ನ ಎಡ ಚಪ್ಪಲಿಯ ಅಂಚು ಮೀರಿ ಹೊರಟುಕೊಂಡಿದ್ದ ದುರ್ವಾಸನಾಮಯ ಅವಶೇಷಗಳನ್ನು ದುರುಗುಟ್ಟಿ ನೋಡಿ, ಕರ್ಕಶ ತಾರದಲ್ಲಿ “ಹೇಲಾ ತುಳಿದಿದ್ದಿಽಽ ನೀ…. ನಾಯಿ ಹೇಲಾ ತುಳಿದಿದ್ದೀ…” ಒರಲಿದ್ದಳು.

ಅನಂತರ ಬಸ್ಸಿನ ನೆಲವನ್ನು ಪೇಪರಲ್ಲಿ ಉಜ್ಜಿ, ನನ್ನ ಚಪ್ಪಲಿ ಕಾಲುಗಳನ್ನು ನಿಲ್ದಾಣದ ನಲ್ಲಿಯಲ್ಲಿ ತೊಳೆದು, ವಾಸನಾ ಸಹ್ಯ ಯಾನವನ್ನೇ ಪೂರೈಸಿದೆವು. (ನನ್ನ ತಪ್ಪನ್ನು, ತಡವಾಗಿ ಗುರುತಿಸಿಕೊಂಡ ರಿಕ್ಷಾದವನು ಎಷ್ಟು ಬೈಕೊಂಡನೋ!!) ಅಷ್ಟೇ ಸುಗಮವಾಗಿ ಸಂಜೆ, ಕೆಂಗೇರಿಯಲ್ಲಿ ಕಾರಿನೊಡನೆ ಕಾದಿದ್ದ ಅಭಯ ನಮ್ಮನ್ನು ‘ಅರಮನೆ’ಗೂ ಮುಟ್ಟಿಸಿದ.

ಬೆಂಗಳೂರಿನಲ್ಲೊಂದು ದಿನ…

(ಮರು ಬೆಳಗ್ಗೆ) ಕಳೆದ ವರ್ಷ ಕಂಡ ವಿಷ್ಣುವರ್ಧನ ರಸ್ತೆಯ ಅಗಲೀಕರಣ ನೋಡಿದಂತಾಯ್ತೆಂದು ಉದ್ದಕ್ಕೆ ನಡೆದಿದ್ದೆ. ಇಂದ್ರಪ್ರಸ್ಥವೇ ಮೊದಲಾದ ಹೋಟೆಲಿಗರು ತಮ್ಮ `ಅಂಗಳದ’ (ಸಾರ್ವಜನಿಕ ರಸ್ತೆ) ಶುದ್ಧಿಗಾಗಿ ಹರಿಸಿರುವ ನೀರಿನಲ್ಲಿ ಈಜಿದಂತೆ ದಾಟಿದೆ. ಕೆರೆ, ಕಾವೇರಿಗಳನ್ನೆಲ್ಲ ಮುಗಿಸಿದ ಬೆಂಗಳೂರ ದಾಹಕ್ಕೆ ಎತ್ತಿನಹೊಳೆಯೂ ಹರಿಯಬೇಕಾಗಿದೆ ಎನ್ನುವುದು ಇವರಿಗೆ ತಿಳಿದಂತೆ ಇಲ್ಲ! (ಕೇಳಿದರೆ “ನಾವು ವಾಟರ್ ಬಿಲ್ ಕಟ್ತೇವೆ, ಬಿಟ್ಟಿಯಲ್ಲಾ” ಎಂದೇ ಕುಟುಕಿಯಾರು!) ಬೇಗನೆ ಅರಬ್ಬಿ ಸಮುದ್ರವನ್ನೇ ಇತ್ತ ತರುವುದು ಉತ್ತಮ. ಮುಂದಿನ ಸೇತುವೆಯ ಕೆಳಗೆ ಹೀಗೂ ಹೆಚ್ಚಿದ ಕೊಳಚೆ ಗಂಗೆಯ ಅಬ್ಬಿ ಮತ್ತು ನರಕ ನದಿಯ ಮರಿಗಳು ಯೋಜನಾಗಂಧಿಗಳಾಗಿ ಮೆರೆದಿದ್ದವನ್ನೂ ಕಣ್ಣು ತುಂಬಿಕೊಂಡೆ.

ಮಾರ್ಗದಲ್ಲಿ ಹೇಳಿಕೊಳ್ಳುವ ಯಾವುದೇ ಬದಲಾವಣೆ ಕಾಣಿಸಲಿಲ್ಲ. ಆದರೆ ಎಂದೋ ಕಡಿದು ಕಳೆದ ಸಹಜಾರಣ್ಯಕ್ಕೆ ಬದಲಿ ನೆಡುತೋಪಾಗಿ ಬಂದ ನೀಲಗಿರಿ, ಆಕೆಸಿಯಾ ಎಂಬ ನಿಜ ಪಿಡುಗುಗಳನ್ನು, ಇಂದು `ತುರಹಳ್ಳಿ ರಾಷ್ಟ್ರೀಯ ಅರಣ್ಯ’ದ ಎತ್ತರಕ್ಕೇರಿಸಿ, ಗೋಡೆ ಕಟ್ಟಿ ಇಟ್ಟದ್ದಕ್ಕೆ ನಗುವುದೋ ಅಳುವುದೋ ತಿಳಿಯಲಿಲ್ಲ. ಅಲ್ಲಿ ನಿಜ ವನ್ಯ ಏನಿಲ್ಲದಿದ್ದರೂ ಯಾವ್ಯಾವುದೋ ಕಾರಣಗಳಿಗೆ ಗೋಡೆ ಹಾರುವವರ ಸಾಹಸದಲ್ಲಿ ಗೋಡೆ ಮುಕ್ಕಾಗಿ, ಅವಿನಾಶಿ ನಾಗರಿಕ ಕಸಗಳು ಒಟ್ಟಾಗಿ, ಕೆಲವೆಡೆಗಳಲ್ಲಿ ಆಕ್ರಮಿಕ ರಕ್ಕಸಬಳ್ಳಿಗಳು ಆವರಿಸಿ ಭಯವನ್ನು ಹುಟ್ಟಿಸುತ್ತವೆ. ಬಹುಶಃ ಇದನ್ನು ಹೇಗಾದರೂ ನಿವಾರಿಸುವಲ್ಲಿ ಅನಧಿಕೃತ ಕಿಚ್ಚಿಡುವುದೊಂದೇ ದಾರಿಯೆಂದು ಯಾರೋ ಕಂಡುಕೊಂಡಂತಿತ್ತು.

ಇಂದು ನಮ್ಮ ದೇಶದಲ್ಲಿ ಭಕ್ತಿ ಸಂಕೇತಗಳು (ಬಿಜಿಎಸ್ ದ್ವಾರ – ಸಣ್ಣ ಉದಾಹರಣೆ) ವಾಣಿಜ್ಯ ಗಳಿಕೆಗೆ, ಗಿಡ ಮರ ಬಳ್ಳಿಗಳು ಅಲಂಕಾರಿಕ ಕುಂಡಕ್ಕೆ ಮೀಸಲಾಗುತ್ತಿವೆ. ಜೀವನ ಮೌಲ್ಯಗಳು ಸತ್ತು, ಸದ್ಬುದ್ಧಿ ಆಶಿಸಿದ ವೈಚಾರಿಕರನ್ನು (ಬುದ್ಧ, ಬಸವ, ಏಸು…) ಮೂಕ ಮೂರ್ತಿಗಳನ್ನಾಗಿಸಿ ರಸ್ತೆ ಅಲಂಕಾರಕ್ಕೆ ಬಳಸುವುದಕ್ಕೆ ಕೆಲವು ಸಾಕ್ಷಿ ಸಿಕ್ಕಿದ್ದವು. ನನಗೆ ನಡಿಗೆ ಸಾಕೆನ್ನಿಸಿದಲ್ಲಿ ಸಿಕ್ಕ ಮಹಾವೀರ ಕೆರೆ, ನನ್ನ ಭಾವಗಳದ್ದೆ ಮೊತ್ತವಾಗಿ ಕಾಣಿಸಿದ್ದು ಒಂದು ಆಶ್ಚರ್ಯ. ಕೆರೆಯಲ್ಲುಳಿದ ನೀರು ಕ್ಯಾಮರಾ ಚೌಕಟ್ಟಿನಲ್ಲಿ ಭಾರತದ್ದೇ ಹೊರ ರೇಖೆಯಾಗಿತ್ತು. ಅದರಲ್ಲಿ ಪ್ರತಿಫಲಿಸಿದ್ದ ವಿರಳ ಹಸಿರು ಮತ್ತು ಬಹುಮಹಡಿ ಕಟ್ಟಡಗಳು ಪ್ರಾತಿನಿಧಿಕ ಸತ್ಯವಾದರೆ, ಅಂಚಿನಲ್ಲಿ ಸುರಿದಿದ್ದ ಕಸ-ಕೊಳಕು ವಾಸ್ತವ. ಕೆರೆಗೆ ಹೊಸ ಗಡಿ ನಿರ್ದೇಶಿಸಿದ ಗೋಡೆ, ಇನ್ನೂ ರಾಶಿ ಬಿದ್ದಿರುವ ಕಲ್ಲು ಮರಳಿನಂಥ ನಿರ್ಮಾಣ ಸಾಮಗ್ರಿಗಳು ಭವಿಷ್ಯತ್ತಿನ ಭಯ!

ಇಂಥಾ ಮನಸ್ಥಿತಿಯೊಡನೆ ನನ್ನ ರಾಜಸ್ತಾನದ ಆರು ದಿನಗಳ ನಡೆಯುವುದಿತ್ತು.

ರಾಜಸ್ತಾನ ನನಗೆ ದಕ್ಕಿದ ಮೊದಲ ಚಿತ್ರ

೧೯೬೮ರಲ್ಲಿ ನಾನು ಸರಕಾರೀ ಕಲೆ ಮತ್ತು ವಿಜ್ಞಾನ ಕಾಲೇಜು (ಗ್ಯಾಸ್ ಕಾಲೇಜ್ ಎಂದೇ ಖ್ಯಾತ) ಪದವಿಪೂರ್ವ ವಿದ್ಯಾರ್ಥಿ. ಎನ್ಸಿಸಿಯ ‘ಸೈನ್ಯದೊಡನೆ ಸಹವಾಸ’ (ಆರ್ಮಿ ಅಟ್ಯಾಚ್ಮೆಂಟ್ ಕೋರ್ಸ್) ಎಂಬ ಬೇಸಗೆ ಶಿಬಿರದ ಓರ್ವ ಸದಸ್ಯನಾಗಿ ನಾನು ಮೊದಲ ಬಾರಿಗೆ ರಾಜಸ್ತಾನಕ್ಕೆ ಹೋಗಿದ್ದೆ. ಕರ್ನಾಟಕದ್ದೇ ಮೂವತ್ತು ವಿದ್ಯಾರ್ಥಿಗಳ ದಂಡಿಗೆ ರೈಲಿನಲ್ಲಿ ವಿಶೇಷ ಭೋಗಿಯ ಭಾಗ್ಯ ಸಿಕ್ಕಿತ್ತು. ರೈಲ್ವೇ ಜಾಲ ಕಡಿಮೆಯಿದ್ದ ಕಾಲಧರ್ಮಕ್ಕೆ ಸರಿಯಾಗಿ, ಹೈದರಾಬಾದ್ ಮತ್ತು ಖಾಂಡ್ವಾ ನಿಲ್ದಾಣಗಳಲ್ಲಿ ಅನ್ಯ ರೈಲುಗಳ ಜೋಡಣಾ ವಿಳಂಬ ಸೇರಿ ಮೂರು ದಿನಗಳ ಯಾನ. ಅಜ್ಮೀರ್ ಬಳಿಯ ನಾಸಿರಾಬಾದ್ ಹಳ್ಳಿಯಲ್ಲಿರುವ, ಭಾರತೀಯ ಸೈನ್ಯದ ಏಳನೇ ರಜಪೂತ್ ರೈಫಲ್ಸ್ ಬಳಗದೊಂದಿಗಿನ ಮೂರು ವಾರಗಳ ಸಹವಾಸ ಅವಿಸ್ಮರಣೀಯ ಅನುಭವ.

ರಣಗುಡುವ ಬಿಸಿಲಿಗೆ ಎಳೆಯರು ಬಾಡಬಾರದೆಂಬಂತೆ ಹನ್ನೊಂದು ಗಂಟೆಗೆಲ್ಲಾ ತರಬೇತಿ ಮುಗಿಸಿ, ಬಿಡಾರ ಸೇರಿಸುತ್ತಿದ್ದರು. ಆದಿತ್ಯವಾರಗಳ ಬಿಡುವಿನಲ್ಲಿ ನಮಗೆ ಸಮೀಪದ ಊರು ಸುತ್ತುವ ಅವಕಾಶ ಕೊಟ್ಟಿದ್ದರು. ಗುಜರಿ ಬಸ್ಸಿನ ತಲೆ ಹೊಟ್ಟೆ ಎಂದು ನೋಡದೇ ಗಿಡಿದುಕೊಂಡಿದ್ದ ಭಾರೀ ಮುಂಡಾಸಿನ ಗಂಡಸರು, ಸಣ್ಣ ಕಂಚುಕದಲ್ಲಷ್ಟೇ ಎದೆ ಮುಚ್ಚಿಕೊಂಡ ಹೆಂಗಸರು, ಕುರಿ ಕೋಳಿಗಳೊಂದಿಗೆ ನಾವೂ ನುಸುಳಿಕೊಂಡು ಒಂದೋ ಎರಡೋ ಬಾರಿ ಅಜ್ಮೀರಿಗೆ ಹೋಗಿ ಬಂದಿದ್ದೆವು. ಅಲ್ಲಿ ನೋಡಿದ ಸಿನಿಮಾ (ಹಿಂದೀ ಸಿನಿಮಾ ಹಮ್ರಾಜ್) ಮರೆತರೂ ನೆನಪಿನಲ್ಲೊತ್ತಿದ ‘ನೀಲೆ ಗಗನ್ ಕೆ ತಲೇ…’ ಹಾಡಿನ ಗುಂಗು ಎಂದೂ ಮರೆಯದು. ಅಜ್ಮೀರಿನ ಚಿಸ್ಟೀಯ ದರ್ಗಾ ದರ್ಶಿಸಿ ಹೊರ ಬಂದಾಗ, ಭಾರೀ ಬೆಟ್ಟದ ಮೇಲಿನ ಅದ್ಭುತ ಕೋಟೆ, ನನ್ನ ಸಮಯದ ಮಿತಿಗೆ ಮೀರಿದ್ದೇ ಇತ್ತು. ಅದನ್ನು ಏರಲಾಗದಿದ್ದರೂ ಸದಾ ಕಾಡುವ ಚಿತ್ರವಾಗಿಯೇ ಉಳಿದಿತ್ತು.

ಶಿಬಿರಾವಧಿಯಲ್ಲೇ ಒಮ್ಮೆ ನಮ್ಮನ್ನೆಲ್ಲಾ ಅಧಿಕೃತವಾಗಿಯೇ ಸೈನ್ಯದ ಲಾರಿಗಳಲ್ಲಿ ತುಂಬಿಕೊಂಡು, ಜೋಧಪುರಕ್ಕೆ ಒಯ್ದಿದ್ದರು. ಅಲ್ಲಿ ಭಾರತೀಯ ಸೈನ್ಯದ ವರಿಷ್ಠರ ಸಮ್ಮುಖದಲ್ಲಿ, ನೂರಾರು ಸೈನಿಕರು ಹಾರಿಬಂದ ಹಂಡೆಗಳಂತಹ ವಿಮಾನಗಳಿಂದ, ಪ್ಯಾರಾಚೂಟ್ ಕಟ್ಟಿಕೊಂಡು ತೇಲಾಡಿ ಇಳಿದ ಪ್ರದರ್ಶನವಂತೂ ರೋಮಾಂಚಕಾರಿಯಾಗಿಯೇ ಇತ್ತು. ನಾಸಿರಾಬಾದಿನಿಂದ ಮರಳುವಲ್ಲಿ ನನ್ನ ಕಿಸೆಗಾಸು ಬಹುತೇಕ ಮುಗಿದು ಹೋಗಿತ್ತು. ನನಗೋ ಅನ್ಯರಿಂದ ಸಾಲ ಕೇಳಬಾರದೆಂಬ ತತ್ವ. ಹಾಗಾಗಿ ಇದ್ದ ಹಣದಲ್ಲೊಂದು ಜ್ಯಾಮ್ ಬಾಟಲ್ ಕೊಂಡು, ಸೈನ್ಯದ ಅಡುಗೆಮನೆಯ ಔದಾರ್ಯದಲ್ಲಿ ಇಪ್ಪತ್ತೋ ಮೂವತ್ತೋ ಒಣ ರೊಟ್ಟಿ ಕಟ್ಟಿಸಿಕೊಂಡು, ಮೂರು ದಿನದ ರೈಲ್ ಪಯಣ ಪೂರೈಸಿದ್ದೆ. ಅಂದಿನ ಕೊರಗುಗಳನ್ನು ಅಳಿಸುವಂತೆ, ಇಂದಿನ ಪ್ರವಾಸೀ ವ್ಯವಸ್ಥೆಗಳನ್ನು ಅಭಯ ಕರಾರುವಾಕ್ಕಾಗಿ ಮಾಡಿದ್ದ. ಈಗ ಬನ್ನಿ ಅದರ ಮೊದಲ ದಿನಕ್ಕೆ, ಅಂದರೆ ೨೩-೧೨-೨೪ರ ಚಂದಕ್ಕೆ…

ಬೆಂಗಳೂರಿನಿಂದ ಅಂಬರಕೆ…

ವಿಮಾನ ನಿಲ್ದಾಣಗಳ ಗೋಠಾಳೆ ತಿಳಿದದ್ದಕ್ಕೆ ನಾವು ಬೆಳಿಗ್ಗೆ ನಾಲ್ಕಕ್ಕೆ ಎದ್ದು, ಐದಕ್ಕೆ ಕಾರೇರಿ, ಆರೂವರೆಗೆ ಬೆಂಗಳೂರಿನ (ಅದ್-) ಭೂತ ವ್ಯವಸ್ಥೆಗೆ ಒಪ್ಪಿಸಿಕೊಂಡೆವು. ಕಾವಲಿನವನಿಗೆ ‘ನಾವು ನಾವೇ’ ಎಂದು ಶ್ರುತಪಡಿಸಿ, ಜಾರು-ಪಟ್ಟಿ ಮುಕ್ರಿಗೆ ಜತೆಗಿರಿಸಿಕೊಳ್ಳಲಾಗದ ಗಂಟೊಪ್ಪಿಸಿ, ಪ್ರವೇಶಪತ್ರ ಪಡೆದೆವು. ಮುಂದೆ ಕೈಗಂಟು, ಚರವಾಣಿಗಳ ಜತೆಗೆ ಪ್ಯಾಂಟು ಬೀಳಿಸಿಕೊಳ್ಳದ ಎಚ್ಚರದಲ್ಲಿ ಸೊಂಟಪಟ್ಟಿಯನ್ನೂ ಕಳಚಿಟ್ಟು, ಮೈ ಉಜ್ಜುವವರನ್ನೂ ದಾಟಿದೆವು. ವಿಮಾನ ನಿಲ್ದಾಣದ ತಿಂಡಿ ತೀರ್ಥಗಳೆಲ್ಲಾ ಸಾಮಾನ್ಯರ ಅರ್ಥವ್ಯವಸ್ಥೆಗೆ ಅಜೀರ್ಣಕಾರಿಗಳು. ಅದನ್ನರಿತೇ ರಶ್ಮಿ-ದೇವಕಿ ಕಂಬೈನ್ಸ್ ನಿರ್ಮಾಣದ ರಸಕಾಣಿಕೆ – ಚಪಾತಿ-ಜ್ಯಾಮ್ ಸುರುಳಿ ಮುಕ್ಕಿ, ಕಾರಂಜಿ ನೀರಿಗೆ ಬಾಯಿಕೊಟ್ಟು, ಸಾಗರೋಲ್ಲಂಘನಕ್ಕೆ ಸಜ್ಜಾದ ಹನುಮರಂತೆ ಮುಹೂರ್ತ ಕಾದೆವು, ಸಕಾಲದಲ್ಲಿ…

ಹಾರಂಗಳಕ್ಕಿಳಿಯುವಲ್ಲೊಂದು ತನಿಖೆ, ಬಸ್ಸೇರಿ ಸಾಗಿ, ವಿಮಾನದ ಬುಡದಲ್ಲೊಂದು ತನಿಖೆಯನ್ನೂ ಮುಗಿಸಿಕೊಂಡು, ವಿಮಾನದುದರದಲ್ಲಿ ಸ್ಥಾಪಿತರಾದೆವು. ನಿಗದಿತ ಎಂಟು ಗಂಟೆಗೆ ಸರಿಯಾಗಿಯೇ ನೆಲ ಬಿಟ್ಟೆವು. ವಿಮಾನದ ಕ್ರಮದಂತೆ ಓಣಿಯಲ್ಲಿ ಮೆರವಣಿಗೆ ಬಂದ ‘ಬ್ರೇಕ್ ಫಾಸ್ಟ್’ ನಮ್ಮ ಲೆಕ್ಕಕ್ಕೆ ಸುರಸೆ, ಮೈನಾಕಾದಿ ನಿರಾಕರಣ ಯೋಗ್ಯ ಆಕರ್ಷಣೆಗಳು. ಒಟ್ಟಾರೆ ಮಬ್ಬು, ಮೋಡಗಳ ಸಾಗರದಲ್ಲಿ ತೇಲಿ, ಹತ್ತೂವರೆಗೆ ಜೈಪುರದಲ್ಲಿಳಿದೆವು. ಅಲ್ಲಿ ಅಭಯನ (ಎಫ್ಟಿಐಐ, ಪುಣೆಯ ಸಹಪಾಠೀ) ಮಿತ್ರ ರಾಕೇಶನ ಪರಿಚಯದ ಕಾರ್ ಏಜನ್ಸಿಯ ಚಾಲಕ, ನಮ್ಮನ್ನು ಸ್ವಾಗತಿಸಿದ. ನಾವೋ ಉಳಿಸಿದ ಸಮಯವೇ ಗಳಿಸಿದ ಹಣ ಎಂಬ ತತ್ವದವರು. ಹಾಗಾಗಿ ವಾಸದ ಹೋಟೆಲ್, ಚೇತರಿಕೆಗೆ ಚಾ ಎಂದೆಲ್ಲ ವೇಳೆಗಳೆಯದೆ, ನೇರ ತಿರುಗಾಟಕ್ಕೇ ತೊಡಗಿದೆವು. ಹಗಲಿನ ಕೊನೆಯವರೆಗೂ ನಮ್ಮ ಹೊರೆಗಳೆಲ್ಲ ಕಾರಲ್ಲೇ ಇದ್ದಂತೆ, ಪ್ರೇಕ್ಷಣೀಯ ಪಟ್ಟಿಯನ್ನು ಚಾಲೂ ಮಾಡಿದೆವು.

ಅಂಬರ ಕೋಟೆ

ಚಾಲಕ ಮಹಾಶಯ ಕಾರೋಡಿಸುತ್ತಿದ್ದಂತೇ ನಮ್ಮ ರುಚಿಯರಿಯುವ ಕುತೂಹಲದಲ್ಲೆಂಬಂತೆ ಸಣ್ಣ ವೀಕ್ಷಣ ವಿವರಣೆ ಕೊಡುತ್ತಾ ಸಾಗಿದ. ಗಾಂಧೀ ಮಾರ್ಗ್, ನೆಹ್ರೂ ಮಾರ್ಗ್, ವೃತ್ತಗಳಲ್ಲಿನ ಕೆಲವು ಪ್ರಸಿದ್ಧರ ವಿಗ್ರಹಗಳು, ಮಹಿಳಾ ಕಾಲೇಜು, ವಿಧಾನ ಸೌಧ, ವಿವಿನಿಲಯಗಳನ್ನೆಲ್ಲ ನಾವು ನಿಂತು ನೋಡುವ ಗೋಜಿಗಿಳಿಯದೆ, ದಕ್ಕಿತ್ತೋ ದಕ್ಕಿತ್ತು ಎಂದುಬಿಟ್ಟೆವು. ಚಾಲಕನೇ ಆಯ್ದು, ನಮ್ಮನ್ನು ‘ಪತ್ರಿಕಾ ಗೇಟ್’ ಎಂಬ ಭಾರೀ ತೋರಣಸ್ವರೂಪೀ ರಚನೆಯಿದ್ದ ಪುಟ್ಟ ಉದ್ಯಾನವನದಲ್ಲಿ ಇಳಿಸಿದ. ರಚನೆ ಐತಿಹಾಸಿಕದ್ದೇ ಆದರೂ ಐದು ಮಿನಿಟಿನಲ್ಲಿ ಓಡಾಡಿ ಮುಗಿಸಿದೆವು. ಹಳೆ ನಗರಕ್ಕಿದ್ದ ಐತಿಹಾಸಿಕ ಅಷ್ಟದ್ವಾರಗಳಲ್ಲಿ ಕೆಲವನ್ನು ಬರಿದೇ ದಾಟಿದಂತೇ….

 

‘ಹವಾ ಮಹಲ್’ ಎಂಬ ಅತಿಪ್ರಚುರಿತ ಅರಮನೆಯ ಭಾಗವನ್ನೂ ದಾಟಿದೆವು. ಆ ದಾರಿ ಹಿಂದಿನಗಳ ಏಕೈಕ ರಾಜಮಾರ್ಗ. ಅದಕ್ಕಂಚುಗಟ್ಟಿದಂತಿರುವ ಅರಮನೆಯ ಈ ಭಾಗಕ್ಕೆ ಅಸಂಖ್ಯ, ಅಲಂಕಾರಿಕ ಕಿಟಕಿಗಳನ್ನು ಒದಗಿಸಿದ್ದಾರೆ. ಅದು ರಾಣೀವಾಸಕ್ಕೆ ಉತ್ಸವ ಮೆರವಣಿಗೆಗಳ ವೀಕ್ಷಣೆಗೂ ಅರಮನೆಯ ವಾತಾಯನಕ್ಕೂ (ಹಾಗಾಗಿ ಹವಾ ಮಹಲ್ ಎಂಬ ಹೆಸರು) ವಿಶೇಷ ಅನುಕೂಲವನ್ನೇ ಒದಗಿಸಿತ್ತು. “ಅದನ್ನು ಮೀರಿದಂತೆ ಹವಾಮಹಲ್ ಒಳಗೆ ವಿಶೇಷವೇನೂ ಇಲ್ಲ” ಎಂದು ಅಷ್ಟರಲ್ಲೇ ನಮ್ಮ ರುಚಿಯ ದಿಕ್ಕರಿತ ಚಾಲಕನೇ ತೀರ್ಮಾನಿಸಿದ್ದ. ನಮಗದು ಮಾನ್ಯವೇ ಇತ್ತು.

ಮುಂದುವರಿದಂತೆ ಬಲ ಮಗ್ಗುಲಿನಲ್ಲಿ ಸುವಿಸ್ತಾರ ಸರೋವರ, ಅದರ ನಡುವೆಯೊಂದು ಅರೆಮುಳುಗಿದ ಸುಂದರ ಐತಿಹಾಸಿಕ ಭವನ. ಇದೂ ನಮಗೆ ಚಿತ್ರಗಳಿಂದ ಚಿರಪರಿಚಿತವೇ ಇದ್ದ ‘ಜಲಮಹಲ್’. “ಈಚೆಗೆ ಅದಕ್ಕೆ ಪ್ರವಾಸಿ ಭೇಟಿಗಳನ್ನು ನಿಷೇಧಿಸಿದ್ದಾರೆ. ಬರಿದೇ ದಂಡೆಯಲ್ಲಿ ನಿಂತು ನೋಡುವ ಅವಕಾಶ ಇನ್ನೊಮ್ಮೆ ಕೊಡುತ್ತೇನೆ” ಎಂದ ಚಾಲಕೋವಾಚಕ್ಕೆ ನಾವು ಗೋಣು ಹಾಕಿದೆವು. ಮತ್ತೆ ಸ್ವಲ್ಪೇ ಸಮಯದಲ್ಲಿ ಎಡ ಮಗ್ಗುಲಿನಲ್ಲಿ ಇನ್ನೊಂದೇ ತುಸು ಸಣ್ಣ ಸರೋವರ ಮಿಂಚತೊಡಗಿತ್ತು. ಅದರ ಹಿನ್ನೆಲೆಯಲ್ಲಿ ಕಾಣಿಸಿದ ಗಿರಿದುರ್ಗ, ನಮ್ಮ ಅಂದಿನ ಪ್ರಧಾನ ಲಕ್ಷ್ಯ – ಅಂಬರ್ ಕೋಟ್ ಅರ್ಥಾತ್ ಆಕಾಶ ಭವನವನ್ನೇ ಹೊತ್ತ ಅಮೆರ್ ನಗರ. ಮೊಗಲ್ ಸಾಮ್ರಾಟ ಅಕ್ಬರನ ಹಿಂದೂ ರಾಣಿ ಜೋಧಾಳ ತವರ್ಮನೆ.

 

ಒಮ್ಮೆ ಕಾರಿಳಿದು, ಐದು ಮಿನಿಟಿಗೆಂಬಂತೆ ಪರಿಸರ ಮತ್ತು ದೃಶ್ಯಾವಳಿಗಳನ್ನು ನಮ್ಮ ಚಿತ್ತಭಿತ್ತಿಗೂ ಪಟಗಳಿಗೂ ಧಾರಾಳ ಅಂಟಿಸಿಕೊಂಡೆವು. ನೀರ ಹರಹು, ಐತಿಹಾಸಿಕ ಕಟ್ಟೆಗಳು, ರಚನೆಗಳು, ಜನಜಾತ್ರೆಯನ್ನು ಹುಚ್ಚುಗಟ್ಟಿಸುವ ಪಾರಿವಾಳಗಳು, ವಿಸ್ತಾರವಾಗಿ ಹಬ್ಬಿದ ಗುಡ್ಡೆ ಸಾಲು, ಅದನ್ನಲಂಕರಿಸಿದ ದೃಢ ಕೋಟೆ…. ಬಹು ಸುಂದರ. ಅವಕ್ಕೆಲ್ಲ ಹೆಚ್ಚಿನ ಅರ್ಥಮೌಲ್ಯವನ್ನು ಕೊಡುವ ಸುಪ್ರಸಿದ್ಧ ಜೋಧಾ-ಅಕ್ಬರಳ ತವರು ನೆಲ ಎಂದ ಮೇಲಂತೂ ಕೇಳಬೇಕೇ.

ಕ್ರಿಸ್ಮಸ್ನ ದೀರ್ಘ ರಜಾವಧಿ ಸೇರಿ ವಿಪರೀತ ಜನ, ವಾಹನಗಳ ಸಮ್ಮರ್ದದಲ್ಲಿ ನಮ್ಮ ಕಾರು ತಡವರಿಸುತ್ತ ಸಾಗಿತು. ಮುಖ್ಯ ದಾರಿ ಕಳಚಿಕೊಂಡು ಕೋಟೆಯದೇ ಗಲ್ಲಿಯಂತಾ ದಾರಿಗಿಳಿದ ಮೇಲಂತೂ ಸಂಚಾರಿಗೊಜ್ಜಿನಲ್ಲಿ ನಮ್ಮ ಕಾರು ಒಂದೊಂದಡಿಗೂ ನಾಲ್ಕೈದು ಮಿನಿಟು ಕಳೆಯುವಂಥಾ ದುಸ್ಥಿತಿ ಬಂತು. ಆಗ ಕಾರಿನ ಚಾಲಕನ ಶಿಫಾರಸಿನಂತೆ, ನಾವೊಬ್ಬ ಮಾರ್ಗದರ್ಶಿಯನ್ನು ಹಿಡಿದೆವು. ಆತ ನನ್ನ ಮತ್ತು ದೇವಕಿಯ ಪ್ರಾಯಕ್ಕೆ ಗೌರವ ಕೊಟ್ಟು, ಮಂದ್ರದಲ್ಲಿ “ನಿಮಗೆ ನಡಿಗೆಯಲ್ಲೇ ಗುಡ್ಡೆ ಏರುವುದು ಸಾಧ್ಯವಿದ್ದರೆ…” ಎಂದೇ ಸೊಲ್ಲು ತೆಗೆದ. ಆದರೆ ನಾವೋ ವೀರದಲ್ಲಿ ಕಾರಿಳಿದೇ ಉತ್ತರಿಸಿದೆವು. ಮಾರ್ಗದರ್ಶಿ ಹೆಚ್ಚಿದ ಉತ್ಸಾಹದಲ್ಲಿ “ಈಗ ನಿಮಗೆ ತಪ್ಪಲಿನ ಹೆಚ್ಚಿನ ವಿವರಗಳನ್ನೂ ನೋಡುವ ಅನುಕೂಲವಿದೆ. ಅರಮನೆ ಬೆಟ್ಟದ ಶಿಖರವಲಯದಲ್ಲಿದೆ. ನಾವು ಇಲ್ಲೂ ಅಲ್ಲೂ ಸುತ್ತಾಡಿ ಅರಮನೆಯ ದ್ವಾರಕ್ಕೆ ಮರಳುವ ವೇಳೆಗೆ, ನಿಮ್ಮ ಕಾರು ತೆವಳೀ ತೆವಳೀ ಅಲ್ಲಿಗೆ ಬಂದು, ನಿಮ್ಮನ್ನು ಕಾದಿರುತ್ತದೆ. ಈಗ ಹೀಗೆ ಬನ್ನೀ…” ಎಂದು ದರ್ಶನ ಕಥನಕ್ಕಿಳಿದ.

ಅಡ್ಡಬಿದ್ದ ಕೋಣೆ

[ ಜೈಪುರ ವಿ.ನಿಲ್ದಾಣದಲ್ಲಿ ಹೀಗೊಂದು ಸಾಲಂಕೃತ ಕೋಣೆಯಂತಾ ರಚನೆ ಅಡ್ಡ ಬಿದ್ದಿತ್ತು. ಇಲ್ಲಿನ ವೈಶಿಷ್ಟ್ಯವೆಂದರೆ ಇಲ್ಲಿನ ಎಲ್ಲ ನೇಲು-ಅಲಂಕಾರಗಳೂ ಗುರುತ್ವವನ್ನು ನಿರಾಕರಿಸಿ ಅಡ್ಡಕ್ಕೇ ‘ಒಪ್ಪಿಸಿ’ಕೊಂಡಿದ್ದವು. ಕೆಲವು ರೈಲ್ವೇ ನಿಲ್ದಾಣಗಳು ‘ಭಕ್ತ’ರ ಸ್ವಂತೀ ಚಟ ತೀರಿಸಲು ಮೋದಪ್ಪನ ಪ್ರತಿಕೃತಿಯೊಡನೆ ಆಕರ್ಷಕ ಚೌಕಟ್ಟು ಕೊಡುತ್ತಿರುವುದು ಕೇಳಿದ್ದೆ. ಇದಾದರೋ ಪಟಗ್ರಾಫಿಯ ಮೋಜಿನವರಿಗೆ ಅಡ್ಡ ಬಿದ್ದ ಕೋಣೆಯ ಭ್ರಮೆಯೊಡನೆ, ಸ್ವಂತಿಯೋ ಪಟಗ್ರಾಫಿಯ ಅನ್ಯ ತಂತ್ರಗಳನ್ನೋ ಅಳವಡಿಸಿಕೊಳ್ಳಲು ಒಂದು ಉಚಿತ ಅವಕಾಶ! ]

ತಪ್ಪಲಿನ ಸುತ್ತಾಟದಲ್ಲಿ…

ಶಿಖರವಲಯದಲ್ಲಿ ಅರಮನೆ ಇದೆ. ಅದನ್ನು ಬಿಟ್ಟು, ಬೆಟ್ಟದ ಇತರ ಐತಿಹಾಸಿಕ ರಚನೆಗಳನ್ನೆಲ್ಲ ಇಂದಿನ ಜನಜೀವನ, ಆಧುನಿಕ ಅಗತ್ಯಗಳಿಗೆ ಹೇಗೇಗೋ ಹೊಂದಿಸಿಕೊಂಡು, ಹಲವನ್ನು ನಾಶಮಾಡಿಯೂ ಗಲ್ಲಿ, ಮನೆ, ವಾಣಿಜ್ಯ ವಹಿವಾಟುಗಳೆಂದು ಆಕ್ರಮಿಸಿದೆ. ಹಾಗಿದ್ದೂ ಒಟ್ಟು ವ್ಯವಸ್ಥೆಗೆ ಯೂನೆಸ್ಕೋದ ‘ವಿಶ್ವಮಾನ್ಯತೆ’ ಪಟ್ಟ ದಕ್ಕಿರುವುದು ಅಮೇರಿನ ದೊಡ್ಡಸ್ತಿಕೆಯೇ ಸರಿ. ಸರಕಾರದಿಂದ ಆಧುನಿಕತೆಯ ವಿಕಾರಗಳನ್ನು ಕಳಚುವ ಪ್ರಯತ್ನಗಳು ಭಾರೀ ಗೊಂದಲದಲ್ಲೇ ನಡೆದಿವೆ. ಹಳೆಗಾಲದ ತುಂಡು ಕಲ್ಲ ಚಪ್ಪಡಿಗಳ ಜೋಡಣೆಯ ದಾರಿ ಬಿಗಿ ಮಾಡಿ, ಐತಿಹಾಸಿಕ ಕಟ್ಟಡಗಳನ್ನು ಕೆಲವೆಡೆ ಗಚ್ಚಿನಲ್ಲೂ ಹಲವು ಕಡೆ ಕಾಂಕ್ರಿಟಿನಲ್ಲೂ ದುರಸ್ತಿಯೋ ಸ್ವಲ್ಪ ಮರುನಿರ್ಮಾಣವೋ ಮಾಡಿಕೊಂಡಿದ್ದಾರೆ. ಒಟ್ಟು ಜೈಪುರಕ್ಕೇ ಇರುವ ‘ಪಿಂಕ್ ಸಿಟಿ’ ಖ್ಯಾತಿಯನ್ನು ಊರ್ಜಿತಲ್ಲಿಡುವಂತೆ, ಬಹುತೇಕ ಕಟ್ಟಡಗಳು ಬಳಿದುಕೊಂಡಿರುವ ಬಹುತೇಕ ಏಕವರ್ಣ, ಹಳದಿ/ಕಂದು ಬಣ್ಣಗಳು ಮಾಸಿದಂತಿದ್ದು, ನಿಜದಲ್ಲಿ ವೈಭವವನ್ನೇನೂ ಮೆರೆಸುವುದಿಲ್ಲ. ಗಲ್ಲಿಗಳ ಜಾಲ ಮತ್ತು ಗುಡ್ಡದ ಅರ್ಧದವರೆಗೂ ನಿರುಮ್ಮಳವಾಗಿ ಓಡಾಡುವ ಅಸಂಖ್ಯ ಸ್ಥಳೀಯ ಮತ್ತು ಪ್ರವಾಸೀ ವಾಹನಗಳು ಸಾಮಾನ್ಯರನ್ನು ದಿಕ್ಕೆಡಿಸುತ್ತವೆ. ತೆರೆದ ತೆಳು ಚರಂಡಿಗಳು, ವಿದ್ಯುತ್ ಕಂಬ, ಅಡ್ಡಾದಿಡ್ಡಿ ಎಳೆದ ವಯರು, ಕೇಬಲ್ಲು, ನಲ್ಲಿ, ಮುಂಚಾಚಿಕೆ, ಬೋರ್ಡು, ಕಳೆಗಿಡ, ಅಂಡಲೆವ ಜಾನುವಾರು, ಸೆಗಣಿ, ಮೂತ್ರ… ಐತಿಹಾಸಿಕಕ್ಕೆ ಕೊಳೆಗೇರಿಯ ವೈಭವವನ್ನೇ ಕೊಟ್ಟಿದೆ! ಐತಿಹಾಸಿಕ ಅಮೇರ್ ತುಂಬಾ ಬಳಲಿದೆ.

ಐತಿಹಾಸಿಕ ರಚನೆಗಳ ವಿಪುಲತೆಯನ್ನು ನಗಣ್ಯ ಮಾಡಿ, ಹಬ್ಬಿಕೊಂಡ ಆಧುನಿಕ ರಚನೆ ಮತ್ತು ಗಲ್ಲಿಗಳ ಗೊಂದಲ ಬಿಡಿಸಿ, ಮಾರ್ಗದರ್ಶಿ ಹೆಕ್ಕಿಕೊಟ್ಟ ಮೂರು ಮುಖ್ಯ ಸಂಗತಿಗಳನ್ನು ಸೂಕ್ಷ್ಮದಲ್ಲಿ ಹೇಳುತ್ತೇನೆ. ಮಾರ್ಗದರ್ಶಿಯಾದರೂ ನಮ್ಮ ಅಗತ್ಯಕ್ಕೆ ತಕ್ಕಂತೆ, ಟೂಟೀಪೂಟೀ ಇಂಗ್ಲಿಷಿನಲ್ಲಿ, ಮತ್ತು ಕಿರಿದರಲ್ಲೇ ಸ್ಥಳ ಪುರಾಣ ಬಿತ್ತರಿಸುತ್ತಿದ್ದ. ಆದರೂ ನಾನು ವೀಕ್ಷಣೆಯ ಅವಧಿ ಹೆಚ್ಚಿಸಿಕೊಳ್ಳುವಂತೆ ಮಾತಿಗೆ ಹೆಚ್ಚು ಕಿವಿಗೊಡುತ್ತಿರಲಿಲ್ಲ. ಬದಲಿಗೆ ಗುಂಪಿನ ದೃಷ್ಟಿ ಬಂಧ ಕಳಚಿಕೊಳ್ಳದೆ, ನನ್ನ ಕುತೂಹಲ ಎಳೆದಂತೆ ಸುತ್ತಾಡುತ್ತಿದ್ದೆ. ಭವ್ಯವಾಗಿಯೇ ಕಾಣಿಸಿದ ರಾಧಾಕೃಷ್ಣ ದೇವಾಲಯದಲ್ಲಿ (ಜಗತ್ ಶಿರೋಮಣಿ ಅಥವಾ ಮೀರಾ ಮಂದಿರ) ನಾನು ಪಾದರಕ್ಷೆ ಕಳಚುವ ರಗಳೆ ತಪ್ಪಿಸಿಕೊಂಡು, ಇತರರ ಪಾದರಕ್ಷಾ ರಕ್ಷಕನಾಗಿ ಹೊರಗುಳಿದೆ. ಉಳಿದವರೂ ಭಕ್ತಿರಸ ದೂರರೇ. ಹಾಗಾಗಿ ಐದೇ ಮಿನಿಟಿನಲ್ಲಿ ದೇವಳದ ಒಳಾವರಣವಷ್ಟು ನೋಡಿ ಹೊರ ಬಂದರು. ಜೈನ ದೇವಳಕ್ಕೆ ಎಲ್ಲರೂ ಹೊರಗಿನಿಂದಲೇ ‘ನಮಸ್ಕಾರ’ ಹಾಕಿದೆವು. ಪನ್ನ ಮೀನಾಳ ಕುಂಡ – ಮೆಟ್ಟಿಲ ಸಾಲುಗಳೇ ಸುತ್ತುವರಿದ ಕೆರೆ, ನಿಜಕ್ಕೂ ಆಕರ್ಷಕವಾಗಿಯೇ ಇತ್ತು. ಅದರ ಮೆಟ್ಟಿಲ ಜಾಲವನ್ನು ಹತ್ತಿಳಿದು, ನೀರನ್ನೊಮ್ಮೆ ಮುಟ್ಟಿಯಾದರೂ ಆನಂದಿಸುವ ಆಸೆಯನ್ನು ಹತ್ತಿಕ್ಕಿ ಮುಂದುವರಿದೆವು.

ಅಮೇರ್ ಕೋಟೆಯ ಕೊರಗು!

[“ನನ್ನ ವೀಕ್ಷಣಾ ಗೋಪುರಕ್ಕೆ ಆಂಟೆನಾ ಚುಚ್ಚಿ, ಕಳೆ ಬೆಳೆಯಲು ಬಿಟ್ಟು, ಬುಡದಲ್ಲಿ ಓವರ್ ಹೆಡ್ ಟ್ಯಾಂಕ್ ಕುಕ್ಕಿ, ಲಾಯದಲ್ಲಿ ಬೈಕ್ ಸಾಲು ಹಚ್ಚಿದ ‘ವರ್ತಮಾನ’ಕ್ಕೆ ಐತಿಹಾಸಿಕ ಮಹತ್ವದ ಮರೆವು ಆವರಿಸಿರಬೇಕು. ಭವಿಷ್ಯದಲ್ಲಿ ಇಲ್ಲಿನ ಬೋಳು ತಾರಸಿಗಳು, ವಿಹಾರ ಮಂಟಪಗಳಿಗೆ ಇನ್ನೇನು ಕಾದಿದೆಯೋ…” ]

ಜೋಧಾ ಮನೆ ಅರಮನೆಯಿಂದ ಹೊರಗೆ?

ಅಮೇರ್ ಕೋಟೆಗುಡ್ಡೆಯಲ್ಲಿ ಅರಮನೆ ಹಂತಕ್ಕೆ ಮೆಟ್ಟಿಲ ಓಣಿಯಲ್ಲಿ ಏರುತ್ತಿದ್ದೆವು. ಕೈ ತಾಂಗು ಕಟ್ಟೆಯ ಹೊರವಲಯದಲ್ಲಿ ಎಂದಿನಂತೇ ಸಾರ್ವಜನಿಕ ಕಸದಕುಪ್ಪೆ ಮೆರೆದಿತ್ತು. ಅದನ್ನೂ ಮೀರಿ, ಮುಳ್ಳಪೊದರುಗಳ ಮರೆಯಲ್ಲಿದ್ದ ಶಿಥಿಲ ಕಟ್ಟಡದತ್ತ ಬೆರಳು ಮಾಡಿದ ಮಾರ್ಗದರ್ಶಿ “ಜೋಧಾಳ ಮನೆ…” ಎಂದ. ಆ ಅರೆಬರೆ ದೃಶ್ಯಕ್ಕೆ ಕನಿಷ್ಠ ಪಟಗ್ರಹಣದ ಯೋಗ್ಯತೆಯೂ ಉಳಿದಿರಲಿಲ್ಲ. ಆದರೆ ಅದು ನನ್ನ ಅಂತಃಪಟದಲ್ಲಿ, ಹಿಂದೆ ನಾನು ಬಹುವಾಗಿ ಮೆಚ್ಚಿಕೊಂಡ ಟೀವೀ ಧಾರಾವಾಹಿ (ಹಿಂದಿ) ಜೋಧಾ ಅಕ್ಬರ್ ಕಥಾನಕದ ಮರು ಪ್ರಸಾರಕ್ಕೇ ಚಾಲನೆಯನ್ನು ಕೊಟ್ಟದ್ದಂತೂ ನಿಜ. (ಯೂ ಟ್ಯೂಬಿನಲ್ಲಿ ಅವಶ್ಯ ನೋಡಿ) ಅದು ನಿಜವೇ ಇದ್ದರೆ, ಬಗೆಹರಿಯದ ನನ್ನ ಸಂದೇಹಕ್ಕೆ ಈಗ ನೀವೇ ಸಮಾಧಾನ ಹೇಳಬೇಕು – ಅರಮನೆ ವಠಾರದಿಂದಲೇ ಹೊರಗೆ ರಾಜಕುಮಾರಿ ನಿವಾಸವೇ?

ಭಾರೀ ಅರಮನೆ ಗೋಡೆಯ ಸಮಕ್ಷಮದಲ್ಲಿ ಮೆಟ್ಟಿಲ ಸರಣಿ ಮುಗಿದಿತ್ತು. ಅಲ್ಲಿ ಬಲ ಬದಿಯ ಇರುಕಲು ಓಣಿಯಲ್ಲಿ ಬಸವನಹುಳು ವೇಗದಲ್ಲಿ ಬರುತ್ತಿದ್ದ ವಾಹನ ಮಾಲೆ, ಎಡಕ್ಕಿದ್ದ ಸಣ್ಣ ತಟ್ಟನ್ನೇ ತಂಗುದಾಣ ಮಾಡಿಕೊಳ್ಳುವ ಸಂಕಟದಲ್ಲಿದ್ದವು. ಅದೃಷ್ಟಕ್ಕೆ ವಾಹನಗಳ ನಿಷ್ಕ್ರಮಣಕ್ಕೆ ತಟ್ಟಿನ ಇನ್ನೊಂದು ಕೊನೆಯ ಬೇರೊಂದು ಓಣಿಯನ್ನು ಮೀಸಲಿಟ್ಟಿದ್ದರು. ಆಮೇಲೆ ತಿಳಿದಂತೆ, ಗುಡ್ಡೆಯ ತಳದಲ್ಲಿ ನಮ್ಮನ್ನು ಬಿಟ್ಟ ಕಾರು, ಅಂಗುಲಂಗುಲ ಚಲಿಸುತ್ತ ಅಲ್ಲಿಗೆ ಮುಟ್ಟುವಾಗ ಬಹುತೇಕ ನಮ್ಮ ಅರಮನೆ ವೀಕ್ಷಣೆಯೇ ಮುಗಿದಿತ್ತು!

ಜನಪದ ಗಾಯಕರು

೧೯೮೦ರ ದಶಕದ ಸ್ಪಿಕ್ ಮೆಕೆಯಿಂದ ಹಿಡಿದು ಮೊನ್ನೆ ಅಸೀಮದವರೆಗೂ ಮಂಗಳೂರಿನಲ್ಲೇ ನಾನು ರಾಜಸ್ತಾನದ ಲೋಕ ಸಂಗೀತ್ ಅರ್ಥಾತ್ ಜನಪದ ಗಾಯನವನ್ನು ಸಾಕಷ್ಟು ಕೇಳಿದ್ದೇನೆ. ಇನ್ನು ಪ್ರವಾಸಿಯಾಗಿ ರಾಜಸ್ತಾನಕ್ಕೇ ಹೋದ ಮೇಲೆ ಕೇಳಬೇಕೇ. ಕೋಟೆ, ಸರೋವರ, ಹೋಟೆಲ್ ಎಂದು ಹೋದಲ್ಲೆಲ್ಲ, ಭರ್ಜರಿ ಮೀಸೆ ಹೊತ್ತು, ಬಣ್ಣದ ದಿರಿಸುಗಳಲ್ಲಿ ಮೆರೆಯುತ್ತ, ಒಂಟಿಯಾಗಿ ರಾವಣಹತ್ತಾ ಕೊಯ್ಯುತ್ತಲೋ, ಮೇಳದಲ್ಲಿ ಪೇಟಿ, ಧೋಲಕ್, ಕರತಾಳ್ ಸಾಂಗತ್ಯದಲ್ಲೋ ಸಾಕಷ್ಟು ಗಾಯಕರನ್ನು ಕಂಡೆವು. ಇವರ್ಯಾರೂ ನೇರ ಬೇಡುವುದಿಲ್ಲ, ಪ್ರವಾಸಿಗಳನ್ನು ಕಾಡುವುದೂ ಇಲ್ಲ. ಬದಲಿಗೆ ಸಾಕಷ್ಟು ಪ್ರವಾಸಿಗಳೇ ಅವರ ಗಾನಗುಂಗಿನಲ್ಲೋ, ದಿರಿಸಿನ ಅನುಕರಣೆಯೊಡನೆ ಪಟದ ತೋರಿಕೆಯಲ್ಲೋ ಮೆರೆದು, ಕಾಸು ಕೊಡುವುದು ಕಂಡಿದ್ದೇನೆ. ಅಮೇರ್ ಕೆರೆ ದಂಡೆಯ ಗಾಯಕನೊಬ್ಬ, ಹೆಚ್ಚುವರಿ ನಾಗರ ಹಾವನ್ನೂ ಇಟ್ಟುಕೊಂಡು ಆಡಿಸುತ್ತಿದ್ದ. ಅಷ್ಟಾಗಿಯೂ…

ಉಚ್ಛಕಂಠದ ಗಾಯನದೊಡನೆ, ಅರಸಿಕನನ್ನೂ ಬಡಿದೆಬ್ಬಿಸಿ ನಾಲ್ಕು ಹೆಜ್ಜೆ ಹಾಕುವ ಉಮೇದನ್ನು ಒಮ್ಮೆ ಮೂಡಿಸುವ ಈ ಲೋಕ ಸಂಗೀತಗಳು ಬೇಗನೆ ಬಿಡಿಚಲೂ ಹಿಡಿಸುತ್ತವೆ. ರಾಜಸ್ತಾನದ ಜನಪದ ಗಾಯನದಲ್ಲಿ ಅನ್ಯ ಶೈಲಿಗಳ ಪರಿಚಯ ನನಗಿಲ್ಲ. ಅದೇ ನಮ್ಮ ರಾಜ್ಯದ ಕುರಿತಾಡುವುದಾದರೆ ಜನಪದ ಗಾಯನ ಶೈಲಿಗಳು ವಿಪುಲವೂ ವೈವಿಧ್ಯಮಯವಾಗಿಯೂ ಇವೆ. ಆದರೆ ಅವನ್ನು ಹೀಗೆ ಜನಪ್ರಿಯವಾಗಿ ಮೆರೆಸುವ ಪರಿ ಮಾತ್ರ ನಮ್ಮವರಿಗೆ ಇನ್ನೂ ಬಂದಂತಿಲ್ಲ!

ಅಮೇರ್ ಅರಮನೆಯ ವೈಭವ

ಎಲ್ಲಾ ದುರ್ಗಮ ಕೋಟೆಗಳ ರಚನೆಗೆ ಸರಿಯಾಗಿ ಅಮೇರ್ ಅರಮನೆಯ ಮಹಾದ್ವಾರವೂ ಭಾರೀ ಗೋಡೆಗಳ ತಿರುವಿನ ಮರೆಯಲ್ಲೇ ಇವೆ. ಒಳಗದು ಮೂರು ಸ್ತರಗಳ ಅಂಗಳದೊಡನೆ ಗುಡ್ಡೆಯ ಶಿಖರವಲಯವನ್ನು ಆವರಿಸಿಕೊಂಡಿದೆ. ಮೊದಲ ಹಂತದ ಅಂಗಳ  ಸಾಕಷ್ಟು ವಿಸ್ತಾರವಾಗಿಯೇ ಇತ್ತು. ಹಳೆಗಾಲದಲ್ಲಿ ವಿಶೇಷ ಆಚರಣೆಗಳಂದು ಅಲ್ಲಿ ಜನಸಾಮಾನ್ಯರು ಸೇರಲು ಸಾಕಷ್ಟು ಸ್ಥಳಾವಕಾಶವಿತ್ತು. ಹಾಗೆ ಇಂದು ತೋರುವ ರೂಕ್ಷ ಮಂಟಪಗಳು ಹಿಂದೆ ಅಲಂಕಾರಗಳ ಹೊರೆಯಲ್ಲಿ ನಡೆಸಿರಬಹುದಾದ ರಂಜನಾ ಕಲಾಪಗಳನ್ನೂ ಉನ್ನತವರ್ಗದ ಪ್ರವಚನಗಳನ್ನೂ ಬಗೆಗಣ್ಣಿನಲ್ಲಿ ಕಂಡುಕೊಂಡು ಮುಂದುವರಿದೆವು.

ಅಂಗಳವನ್ನು ಸುತ್ತುವರಿದಂತೆ ಇರುವ ಅಸಂಖ್ಯ ಕಟ್ಟಡಗಳು ಆನೆ, ಕುದುರೆಗಳೇ ಮೊದಲಾದ ಸಾಕುಪ್ರಾಣಿಗಳ ಕೊಟ್ಟಿಗೆಯಿಂದ ತೊಡಗಿ, ಗುದಾಮು, ಕೆಳವರ್ಗದವರ ವಸತಿಗಳಿಗೆಲ್ಲಾ ಒದಗುತಿತ್ತಂತೆ. ನಾವು ಅಲ್ಲಿದ್ದಂತೇ ವಾತಾವರಣದ ನಿರಂತರ ಮಬ್ಬು, ಕೆಲವು ಮಿನಿಟುಗಳ ಕಾಲ ವಿರಳ ಹನಿಗಳಾಗಿ ಧರೆಗಿಳಿಯಿತು. ನಾವೇನೋ ಕಟ್ಟಡಗಳ ಮರೆ ಸೇರಿಕೊಂಡೆವು. ಆದರೆ ಹಿಂಬಿಟ್ಟ ನಮ್ಮ ಕಾರಿನ ಮೇಲೆ ಕಟ್ಟಿದ ಚೀಲಗಳ ಕುರಿತು ತುಸು ಆತಂಕ ಮೂಡಿತ್ತು. ಮಾರ್ಗದರ್ಶಿ ಇಂಥಾ ಮಳೆ ಮಾಮೂಲು, ದೊಡ್ಡದಾಗುವ ಆತಂಕವೇನಿಲ್ಲ ಎಂದೇ ಸಮಾಧಾನಿಸಿದ. ಅನಂತರ ತಿಳಿಯಿತು, ನಮ್ಮ ಕಾರು ತಂಗಿದಲ್ಲಿನ ಪುಟ್ಟ ಮರ, ನಮ್ಮ ಚೀಲಗಳಿಗೆ ಹನಿಯೂ ಸೋಂಕದಂತೆ ಕೊಡೆ ಹಿಡಿದಿತ್ತು!

ಎರಡನೇ ಹಂತ ರಾಜರುಗಳ ಬಹುವಲ್ಲಭೆಯರಿಗೂ ದಾಸೀವರ್ಗಕ್ಕೂ ಮೀಸಲು. ಇಲ್ಲಿನ ಅಂಗಳದ ವ್ಯಾಪ್ತಿ ಸಣ್ಣ. ಬಹುತೇಕ ಮುಕ್ತ ಸ್ನಾನಾನುಕೂಲ, ಸುತ್ತಣ ಬಾಲ್ಕನಿಗಳಲ್ಲಿನ ವೀಕ್ಷಣಾ  ಅವಕಾಶ ಆ ಕಾಲದ ರಸಿಕತೆಗೆ ಹಿಡಿದ ಕನ್ನಡಿಯಂತೇ ಭಾಸವಾಯ್ತು. ಅದನ್ನು ದೃಢಪಡಿಸುವಂತೆ, ಮಾರ್ಗದರ್ಶಿ ಅಭಯನಲ್ಲಷ್ಟೇ ಆಪ್ತವಾಗಿ ಹೇಳಿದ “ಇಲ್ಲಿನ ಗೋಡೆಗಳ ಮೇಲೆಲ್ಲ ಅಸಂಖ್ಯ ನಗ್ನಸ್ತ್ರೀಯರ ಮತ್ತು ಕಾಮಕಲೆಯ ಚಿತ್ರಗಳೇ ತುಂಬಿದ್ದವು. ಸಾರ್ವಜನಿಕ ವೀಕ್ಷಣೆಯ ಮುಜುಗರ ತಪ್ಪಿಸಲು, ಇಂದಿನ ಸರಕಾರ ಅವಕ್ಕೆ ಸುಣ್ಣ ಬಳಿದು ಮರೆಮಾಡಿವೆ…”.

ಮೂರನೇ ಹಂತ ರಾಜವರ್ಗದ ಅಂತಃಪುರ ಮತ್ತು ನಿಜ ವಾಸಗೃಹ. ಎಲ್ಲಾ ಕಟ್ಟಡಗಳ ಗೋಡೆಗಳಲ್ಲಿ ಔಚಿತ್ಯವರಿತು ಮೆರೆಯುವ ವಿವಿಧ ವರ್ಣಚಿತ್ರಗಳೂ ಉಬ್ಬು ಚಿತ್ರಗಳೂ ನಿಜ ಬೆಳ್ಳಿ, ಚಿನ್ನ, ಅಮೂಲ್ಯ ಹರಳುಗಳೊಡನೆಯೇ ಮೆರೆದಿದ್ದವಂತೆ. ಇಂದು ಆ ವಲಯದ ಕೇಂದ್ರದಲ್ಲಿ, ಸಾಕಷ್ಟು ಸುಸ್ಥಿತಿಯಲ್ಲಿ ಉಳಿದಿರುವ ಒಂದಷ್ಟು ವಲಯಕ್ಕೆ ಮಾತ್ರ ‘ಶೀಷಮಹಲ್’ (ಕನ್ನಡಿಮನೆ) ಎಂದೇ ಗುರುತಿಸಿದ್ದಾರೆ. ಅದರ ಸುತ್ತು ಬೇಲಿ ಕಟ್ಟಿ, ಪಹರೆಯವರನ್ನಿಟ್ಟು, ಸಾರ್ವಜನಿಕರಿಗೆ ಸುತ್ತಣ ದ್ವಾರಗಳಿಂದಷ್ಟೇ ವೀಕ್ಷಣಾ ಅವಕಾಶ ಕಲ್ಪಿಸಿದ್ದಾರೆ. ವಿದ್ಯುದ್ದೀಪಗಳ ಕಲ್ಪನೆಯೂ ಇಲ್ಲದ ಕಾಲದಲ್ಲಿ ಹಗಲಿನ ತುಸು ಬೆಳಕು ಅಥವಾ ರಾತ್ರಿಯ ಎಣ್ಣೆ ದೀಪಗಳ ಮಂಕು, ಆ ಗೋಡೆಗಳಲ್ಲಿ ಹುದುಗಿರುವ ಕನ್ನಡಿಗಳಿಂದ ಪ್ರಖರಗೊಂಡು ಚಿತ್ರ, ಶಿಲ್ಪ, ವರ್ಣ ವೈವಿಧ್ಯವನ್ನು ಮೆರೆಸುವುದರೊಡನೆ ಜೀವನಾನುಕೂಲಕ್ಕೂ ಒದಗುತ್ತಿದ್ದ ಸನ್ನಿವೇಶ ಕಲ್ಪಿಸಿಯೇ ರೋಮಾಂಚಿತರಾದೆವು. ಉಳಿದಂತೆ…

ರಾಜವಾಸದ ಉನ್ನತ ವಲಯದ ರಚನೆಗಳಲ್ಲಿ ಧಾರಾಳ ಓಡಾಡಿದೆವು. ಪ್ರತಿ ಕಿಂಡಿ, ಬಾಲ್ಕನಿಗಳಲ್ಲಿ ಇಣುಕಿದಷ್ಟೂ ಮುಗಿಯದ ದೃಶ್ಯ ವೈಭವ. ಅವಕ್ಕೆಲ್ಲ ಯಾರ ಎಷ್ಟೂ ಮಾತುಗಳು ಬಡವಾಗುವುದರಿಂದ, ನಾನು ವಿಸ್ತರಿಸುವ ಸಾಹಸ ಮಾಡುವುದಿಲ್ಲ. ಲಗತ್ತಿಸಿದ ಚಿತ್ರ, ಚಲಚಿತ್ರಗಳನ್ನು, ಜತೆಗೆ ನನಗೆ ದಕ್ಕಿದಂತೆ ಕೊಟ್ಟ ಅಡಿಬರಹಗಳನ್ನು ನೋಡಿ ಆನಂದಿಸಿ.

ವಂಚಕರಿದ್ದಾರೆ ಜಾಗ್ರತೆ!

ಅಮೇರ್ ಕೋಟೆ ವೀಕ್ಷಣೆ ಮುಗಿಸಿ ಕಾರೇರಿದ್ದೆವು. ಅಸಾಧ್ಯ ಚಕ್ರವ್ಯೂಹದಿಂದ ಹೊರಬಂದು, ಇನ್ನೊಂದೇ ಗಲ್ಲಿ ರಸ್ತೆಯಲ್ಲಿ ಅಂಗುಲಂಗುಲವಾಗಿ ತಪ್ಪಲಿಗೆ ಇಳಿಯುತ್ತಿದ್ದಂತೆ, ಒಂದೆಡೆ ಮಾರ್ಗದರ್ಶಿಯ ಸೂಚನೆ ಮತ್ತು ಕಾರ್ ಚಾಲಕನ ಪೂರ್ಣ ಸಹಕಾರದೊಡನೆ (ಕಾರು ತಂಗಬೇಕಲ್ಲಾ!) ನಾವೊಂದು ‘ಅಪೂರ್ವ ಅನುಭವ’ಕ್ಕಾಗಿ ಕಾರಿಳಿದೆವು. ಹಳಗಾಲದ ಕಟ್ಟಡ ಒಂದರ ಇಳಿಸಿದ ಮಾಡಿನಡಿಯಲ್ಲಿ ಈ ವ್ಯಕ್ತಿ ನಮ್ಮನ್ನೇ ಕಾದಂತೆ ನಿಂತಿದ್ದ. ಆತನೇ ಹೇಳಿಕೊಂಡಂತೆ, ಆತ ರಜಪುತಾನೀ ಜನಪದ ವಸ್ತ್ರ ಕಲೆಯ ಸ್ವಯಂಸೇವಕನಂತೆ. ಪ್ರಚಾರ ಅಥವಾ ವಾಣಿಜ್ಯ ವಹಿವಾಟು ನಡೆಸಬಾರದೆಂದು ‘ಕೇಂದ್ರ ಸರಕಾರ’ವೇ ಅನುದಾನ ಮತ್ತು ಅನುಮತಿ ಕೊಟ್ಟು ನಿಲ್ಲಿಸಿತ್ತಂತೆ. ಹಾಗಾಗಿ ಎಂಬಂತೆ, ನಾನು ಈ ಪಟ ತೆಗೆದದ್ದನ್ನೂ ಆತ ಸೌಮ್ಯವಾಗಿಯೇ ಆಕ್ಷೇಪಿಸಿದ!

ಮೊದಲು ಒಂದೆರಡು ಮಿನಿಟಿನಲ್ಲಿ ಸಸ್ಯ ಹಾಗೂ ಖನಿಜಾಧಾರಿತವಾಗಿ ತಾವು ತಯಾರಿಸಿಟ್ಟ ಬಣ್ಣವನ್ನು ಕೈಯಾರೆ ಬಟ್ಟೆಯ ಮೇಲೆ ಛಾಪಿಸುವ ವಿಧಾನದ ಪ್ರಾತ್ಯಕ್ಷಿಕೆ ಕೊಟ್ಟ. ಅನಂತರ ತಾವು ಹೀಗೆ ತಯಾರಿಸಿದ ಸೀರೆ/ಬಟ್ಟೆಗಳಿಗೆ ಇರುವ ಅಪಾರ ಬೇಡಿಕೆಯನ್ನು ಸುಧಾರಿಸುವ ಸಲುವಾಗಿ ‘ವ್ಯಕ್ತಿಗೊಂದೇ ಬಟ್ಟೆ’ ಮಾರುವ ಮಳಿಗೆಗೆ ಪ್ರವೇಶ ಕೊಟ್ಟ. ಭರ್ಜರಿ ಜವುಳಿ ತುಂಬಿದ ಆ ಕಿಷ್ಕಿಂದೆಯೊಳಗೆ ಮೂರ್ನಾಲ್ಕು ಗಿರಾಕಿ, ಒಬ್ಬಿಬ್ಬ ಮಾರುವವರೂ ವ್ಯವಹಾರ ನಡೆಸಿದ್ದರು. ಆದರೆ ನನ್ನ ಮತ್ತು ದೇವಕಿಯ ಪ್ರಥಮ ಜೈಪುರ ದರ್ಶನದ ಅನುಭವ (೧೯೯೦- ಜೈಪುರಕ್ಕೆ ಜೈ ಆಗ್ರಾವೂ ಸೈ) ಥಟ್ಟನೆ ನೆನಪಿಗೆ ಬಂತು…

ಮೂರೂವರೆ ದಶಕಗಳ ಹಿಂದೆ, ನಮ್ಮ ಬೈಕುಗಳನ್ನು ಸರ್ವಿಸಿಗೆ ಇಟ್ಟು, ನಾವು ಪ್ರವಾಸೋದ್ಯಮ ಇಲಾಖೆಯ ‘ಜೈಪುರ ದರ್ಶನ’ದ ಬಸ್ಸೇರಿದ್ದೆವು. ಅದರ ಮಾರ್ಗದರ್ಶಿ ಇಂಥದ್ದೇ ‘ಅಪೂರ್ವ ಅನುಭವ’ದ ಕತೆ ಹೇಳಿ, ನಮ್ಮ ದರ್ಶನ-ಸಮಯವನ್ನು ಒಂದೆಡೆ ಮಾರುಕಟ್ಟೆಗೆ ಒತ್ತೆ ಇಟ್ಟಿದ್ದ. ಅನನುಭವದಲ್ಲಿ ನಾವು “ನಂಬಿ ಕೆಟ್ಟವರಿಲ್ಲವೋ…” ಎಂದು ಒಂದು ಸೀರೆಯನ್ನು ಭಾರೀ ಚೌಕಾಸಿಯೊಡನೆ ಖರೀದಿಸಿದ್ದೂ ಇತ್ತು. ಆದರೆ ದೀರ್ಘ ಯಾನ ಮುಗಿಸಿ, ಮಂಗಳೂರಿಗೆ ಮರಳಿ ಕಟ್ಟು ಬಿಚ್ಚಿದಾಗಲೇ ತಿಳಿದದ್ದು – ನಾವು ನಿಕ್ಕಿ ಮಾಡಿದ್ದೊಂದು, ಆತ ಕಟ್ಟಿಕೊಟ್ಟದ್ದು (ಕಳಪೆ) ಬೇರೊಂದು!

ಪ್ರಸ್ತುತ ಮಳಿಗೆಯೊಳಗೆ ಒಮ್ಮೆ ಕಣ್ಣಾಡಿಸಿ ನಾವು ಹೊರನಡೆಯುತ್ತಿದ್ದಂತೆ, ಇಡೀ ಮಳಿಗೆಯನ್ನೇ ಮಾರಲು ಸಿದ್ಧರಿದ್ದ ‘ಸೇವಾಪರಾಯಣ’ರು, ಒಂದೂ ಕೊಳ್ಳದ ನಮಗೆ ಧಾರಾಳ ಆಶೀರ್ವಚನ ಕೊಟ್ಟರು!! ಬಹುಶಃ ಹಿಂದಾಗಡೀಂದ ಅಲ್ಲಿಗೇ ಕಮಿಶನ್ ಕೇಳಿ ಹೋದ ನಮ್ಮ ಮಾರ್ಗದರ್ಶಿಗೂ ಸಹಕರಿಸಿದ ಕಾರ್ ಚಾಲಕನಿಗೂ ಪ್ರತ್ಯೇಕ ಮಾತುಗಳೂ ಸಂದಿರಬೇಕು!

ಊಟಕ್ಕಿಳಿದಲ್ಲಿ ಬೇಸ್ತು – ರಾಜಸ್ತಾನೀ ಥಾಲೀ

ನಮ್ಮ ಚಾಲಕ ದಡೂತಿ ದೇಹದ, ಹಿರಿಯ ನಾಗರಿಕ, ಮಾತಿನಲ್ಲಿ ಮಿದುವಾದರೂ ಅನುಭವಿ ಮತ್ತು ಸಮರ್ಥ. ನಾವು ವಿಮಾನವಿಳಿದದ್ದೇ ಒಂದು ಚಾ ಕುಡಿಯಲೂ ನಿಲ್ಲದೆ, ಸ್ಥಳ ವೀಕ್ಷಣೆಗೆ ಧಾವಿಸಿದ್ದನ್ನು ಆತ ಶಾಂತವಾಗಿಯೇ ಒಪ್ಪಿಕೊಂಡಿದ್ದ. ನಮ್ಮ ಅಂಬರ್ ಕೋಟೆಯ ವೀಕ್ಷಣೆ ಮುಗಿಸಿ ಕಾರೇರಿದಾಗ ಅಪರಾಹ್ನ ಮೂರೂವರೆ ಗಂಟೆಯೇ ಆಗಿತ್ತು. ಒಮ್ಮೆಲೇ ಭಾರೀ ಹಸಿವು ಕಾಡಿತ್ತು. ನಮ್ಮ ಇಚ್ಛೆಯರಿತ ಚಾಲಕ, ಗಲ್ಲಿ ಗಲ್ಲಿ ಸುತ್ತಿ ಮುಟ್ಟಿಸಿದ ಉತ್ತಮ ಹೋಟೆಲ್ ಅನಿರೀಕ್ಷಿತವಾಗಿ ಅಂದು ರಜೆಯಲ್ಲಿತ್ತು! “ಕೊಯಿ ಬಾತ್ ನಹೀ…” ಎನ್ನುತ್ತ ಆತ ಮತ್ತಷ್ಟು ಸುತ್ತಾಡಿಸಿ, ತೋರಿಕೆಗೆ ಚೆನ್ನಾಗಿಯೇ ಕಾಣಿಸಿದ ‘ಪರಂಪರ’ ಹೋಟೆಲಿಗೆ ಮುಟ್ಟಿಸಿದ. ನಮ್ಮದೋ ಹೋಟೆಲಿಡೀ ತಿನ್ನುವ ಹಸಿವು. ಸಾಲದ್ದಕ್ಕೆ ಗೆಳೆಯ ರಾಕೇಶ್, “ಕಲ್ಲು ಮತ್ತು ಆಹಾರ ವೈವಿಧ್ಯ ರಾಜಸ್ತಾನದ ವಿಶೇಷ” ಎಂದ ಮಾತೂ ಅಭಯನ ನೆನಪಿನಲ್ಲಿತ್ತು. ಹಾಗಾಗಿ ಭಯ್ಯಾ (ಮಾಣಿ) ತಂದ ಪಾಕಪಟ್ಟಿಯನ್ನು ದೂರ ನೂಕಿ, ಎಲ್ಲ ವೈವಿಧ್ಯವನ್ನೂ ಒಳಗೊಂಡ “ಪಾಂಚ್ ರಾಜಸ್ತಾನೀ ಥಾಲೀ…” ಎಂದೇ ಹುಕುಮಿದ. ಆದರೆ ಆಭಾಳ ಸಾಮರ್ಥ್ಯ ಮತ್ತು ಕೋಲಗಳನ್ನು (ಅದಾಗದು, ಇದಾಗದು ಎಂಬ ಕೊಸರಾಟ ಎನ್ನಿ) ತಡವಾಗಿ ಅಂದಾಜಿಸಿದ ಹೆಂಗಸರಿಬ್ಬರು, ಎರಡು ಮಿನಿಟು ಬಿಟ್ಟು “ನೈ ನೈ ಭಯ್ಯಾ…” ಎಂದು ಬೇಡಿಕೆಯನ್ನು ನಾಲ್ಕು ಥಾಲಿಗಿಳಿಸಿದರು. ಆಭಾಳಿಗೆ ಬೇಕಾದ ಚೂರುಪಾರುಗಳನ್ನು ಎಲ್ಲರ ದೊಡ್ಡ ಊಟದಿಂದ ಹೆಕ್ಕಿದರಾಯ್ತು ಎಂಬ ಅಂದಾಜು ಸರಿಯೇ ಇತ್ತು.

ಥಾಲಿಯ ದಾರಿ ಕಾಯುತ್ತಾ ಅಭಯ ಪಾಕಪಟ್ಟಿಯ ಪುಟ ತಿರುವಿದ. ಅದರಲ್ಲಿ ಥಾಲಿಯ ನಮೂದೇ ಇರಲಿಲ್ಲ. ಭಯ್ಯಾನಿಗೆ ಬುಲಾವ್ ಹೋಯ್ತು. ಆತ “ಹೋ ಜಾಯೇಗಾ…” ಎಂದು ತೇಲಿಸುವಾಗ ದರ ವಿಚಾರಣೆ ಮಾಡಿದ. ಥಾಲಿಯೊಂದಕ್ಕೆ ರೂ ೭೫೦ ಎಂದು ಸ್ಪಷ್ಟವಾದಾಗ ಅಭಯನಿಗೆ ಸಹಿಸದಾಯ್ತು. “ನೈ, ಥಾಲೀ ಕ್ಯಾನ್ಸಲ್ ಕರೋ…” ಎಂದವನೇ ಪಾಕಪಟ್ಟಿಯನ್ನು ತೆರೆದು, ಅಗತ್ಯದವನ್ನಷ್ಟೇ ಬಿಡಿಬಿಡಿಯಾಗಿ ಹೇಳುತ್ತೇನೆಂದ. ಆಗ ಭಯ್ಯಾ ನಾಟಕೀಯವಾಗಿ ಎರಡು ಹೆಜ್ಜೆ ಹಿಂದೆ ಸರಿದು, ವಿನಯದಲ್ಲಿ ಕೈಕಟ್ಟಿ ತಲೆ ತುಸು ವಾರೆ ಮಾಡಿ, ನಮ್ಮೆಲ್ಲರನ್ನೂ ಉದ್ದೇಶಿಸಿದಂತೆ ರಾಜಸ್ತಾನೀ ಉಚ್ಚಾರಣೆ ಹಿಂದಿಯಲ್ಲಿ “ಣಾಣೀಗ ರಜ್ಪುತಾಣೀ ಥಾಳಿಯಳ್ಳಿ ಏಣೇಣಿರುತ್ತದೆ….” ಎಂದು ಶುರು ಹಚ್ಚಿ ಥಾಳೀ ಪುರಾಣ (ಕೊ)ಒರೆದ. ಕೊನೆಯಲ್ಲಿ ಅಡುಗೆಮನೆಯ ಸ್ಥಿತಿಯನ್ನು ಪರಾಂಬರಿಸಿ ಬರುವವನಂತೆ ನೇಪಥ್ಯ ಸೇರಿದ. ವಿವರಣೆಯಾದರೋ ಅಜೀರ್ಣ ಪೀಡಿತರಿಗೂ ಲಾಲಾರಸ ಉಕ್ಕುವಂತೆಯೂ ಬರಗೆಟ್ಟವರಿಗೆ ನಾಮವಿಶೇಷಣದಲ್ಲೇ ಹೊಟ್ಟೆ ಬಿರಿಯುವಂತೆಯೂ ಇತ್ತು.

ನಾಲ್ಕೂ ಮಂದಿ ತಲೆಘಟ್ಟಿಸಿ, ಅಲ್ಲಲ್ಲ ವಿಚಾರ ಮಥನ ನಡೆಸಿ ಮತ್ತೆ ಆತನನ್ನು ಆವಾಹಿಸಿದೆವು. ಈಗ ಹೆಚ್ಚು ದೃಢವಾಗಿ “ಆದರೂ ನಮಗೆ ಥಾಲೀ ಬೇಡಾ…” ಎನ್ನುತ್ತಿದ್ದಂತೆ ಆತ ಮಾತು ಕಡಿದು ಹೇಳಿದ, “ಥಾಲೀ ಥಯ್ಯಾರ್ ಹೋಗ್ಯಾ…” ರದ್ದು ಅಸಾಧ್ಯ. ಹಿಂಬಾಲಿಸಿತ್ತು ನಾಲ್ಕು ಭಾರೀ ತಟ್ಟೆಗಳು. ರಂಗು, ರಸ, ಪರಿಮಳಗಳೆಲ್ಲ ಮೇಳೈಸಿದಂತೇ ತುಂಬಿಕೊಂಡು, ಪಕ್ಕದಲ್ಲೂ ಒಂದಷ್ಟು ಗಿಂಡಿಗಳನ್ನು ಮೇಳೈಸಿಕೊಂಡು ನಮ್ಮೆದುರು ಪ್ರತಿಷ್ಠಾಪನೆಗೊಂಡವು. ಅಭಯ ಇನ್ನೂ ಪ್ರತಿಭಟಿಸುವ ಯೋಚನೆಯಲ್ಲಿದ್ದ. ಆದರೆ ಆಶ್ಚರ್ಯಕರವಾಗಿ ಭಯ್ಯಾ ಮುಖಚಹರೆ ಬದಲಿಸದೆ, ಧ್ವನಿ ಏರಿಸದೆ, “ದರದ ಬಗ್ಗೆ ಮತ್ತೆ ಮಾತಾಡೋಣ, ಸದ್ಯ ನಿಶ್ಚಿಂತರಾಗಿ ಊಟ ಮಾಡಿ…” ಎಂದಷ್ಟೇ ಉಸುರಿ ಮಾಯವಾದ. ವಿಚಾರಿಸದೇ ಆದೇಶ ಕೊಟ್ಟ ನಮ್ಮದೇ ತಪ್ಪು, ಹಸಿದ ಹೊತ್ತು ಮತ್ತು ನಮ್ಮ ಪರದೇಶಿತ್ವಗಳ ಜಿಜ್ಞಾಸೆಯಲ್ಲಿ ನಾವು ಮೌನವಾಗಿಯೇ ಸೋತೆವು. ಪೆಟ್ಟು ತಿನ್ನುವುದಕ್ಕಿಂತ ಊಟ ತಿನ್ನುವುದು ಲೇಸೆಂಬ ಅರಿವೂ ಮೂಡಿತು. ರುಚಿಗೆ ಮೋಸವಿರಲಿಲ್ಲ. ಧಾಲಿಗೆ ರೂ. ೬೫೦ರ ಬಿಲ್ ಬಂದಾಗ, ಮಾತಿಲ್ಲದೇ ತೆತ್ತು ಹೊರಬಂದೆವು!

(ದಯವಿಟ್ಟು ಗಮನಿಸಿ: ಹಸಿವಿನ ಭರದಲ್ಲಿ ನಮ್ಮ ಪೂರ್ಣ ಥಾಲಿಯ ಪಟ ತೆಗೆಯಲು ಬಿಟ್ಟುಹೋಯ್ತು)

ಜೈಪುರದರಮನೆ, ಗೋಪಾಲ್ಜೀ ಮಂದಿರ

ನಾಲ್ಕು ಕಳೆದಿತ್ತು. ಅಷ್ಟರಲ್ಲೇ ನಮ್ಮ ಸಾಮಾನ್ಯ ಆಸಕ್ತಿಯನ್ನು ಕಂಡುಕೊಂಡಿದ್ದ ಚಾಲಕನಿಗೆ, “ಉಳಿದ ಸಮಯಕ್ಕೇನಾದರೂ…” ತೋರಿಸಲು ಸೂಚಿಸಿದೆವು. ಆತ “ನಗರದ ಅರಮನೆ ಐದಕ್ಕೆ ಮುಚ್ಚುತ್ತೋ…” ಎಂದೇ ಅಳುಕುತ್ತಾ ಕಾರೋಡಿಸಿದ. ತಲಪಿದಾಗ ನಮ್ಮ ಅದೃಷ್ಟ ಖೊಟ್ಟಿಯಾಗಲಿಲ್ಲ, ಅರಮನೆ ವೀಕ್ಷಣೆ ಸಂಜೆ ಏಳೂವರೆಯವರೆಗೂ ಮುಕ್ತವಿತ್ತು.

ನನಗೆ ತಿಳಿದಂತೆ, ರಾಜಸ್ತಾನದ ಬಹುತೇಕ ಐತಿಹಾಸಿಕ ಕೋಟೆ, ಅರಮನೆಗಳು ಇನ್ನೂ ಖಾಸಗಿ ಸೊತ್ತುಗಳಾಗಿಯೇ ಉಳಿದಿವೆ. ಅಲ್ಲೂ ಕೆಲವಲ್ಲಿ ಆಂಶಿಕವಾಗಿ ರಾಜವಂಶಸ್ಥರ ವಸತಿ ಇದ್ದರೂ ದೊಡ್ಡ ಭಾಗಗಳನ್ನು, ಬಹುಶಃ ಅವರೇ ಟಿಕೆಟ್ ಸಹಿತ ಸಾರ್ವಜನಿಕ ವೀಕ್ಷಣೆಗೆ ತೆರೆದಿಟ್ಟು, ಆದಾಯದ ದಾರಿ ಕಂಡುಕೊಂಡಿದ್ದಾರೆ. ಇದು ಪರೋಕ್ಷವಾಗಿ ಪ್ರದರ್ಶನಗಳ ಗುಣಮಟ್ಟವನ್ನು (ಸರಕಾರೀ ಇಲಾಖೆಗಳ ಉಡಾಫೆ ಮುಕ್ತವಾಗಿ) ಚೆನ್ನಾಗಿಯೇ ಉಳಿಸಿದೆ. ಜೈಪುರದ ಅರಮನೆಯ ಒಂದಂಶದಲ್ಲಿ ಸರಕಾರೀ ಕಚೇರಿಗಳಿವೆ (ಬಾಡಿಗೆಗೆ?). ಉಳಿದ ಭಾಗಗಳಲ್ಲಿ ಐತಿಹಾಸಿಕ ವಸ್ತು, ಚಿತ್ರ, ವಿಗ್ರಹಗಳ ಪ್ರದರ್ಶನಾಲಯ ಹರಡಿಕೊಂಡಿದೆ. ಅಲ್ಲಿನ ಗಣಕೀಕೃತ ಟಿಕೆಟ್ ವಿಭಾಗ, ಆ ಅರಮನೆಯಲ್ಲದೆ, ಊರಾಚೆಗೂ ವಿಸ್ತರಿಸಿದ ಅದೇ ಆಡಳಿತದ ಇನ್ನಷ್ಟು ಪ್ರದರ್ಶನ ಕೇಂದ್ರಗಳನ್ನೂ ವಿವಿಧ ಸ್ತರ ಮತ್ತು ದರಗಳ ಪ್ರವೇಶ ಹಾಸಲಿನ ಸೂಚನೆಯೊಡನೆ ಕಾಯ್ದಿರಿಸುವ ಅವಕಾಶನ್ನು ತೆರೆದಿಟ್ಟಿತ್ತು. ಅವುಗಳಲ್ಲಿ ದೇಶೀಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಶೇಕಡಾ ಐವತ್ತರ ರಿಯಾಯಿತಿಯೂ ಇತ್ತು. ಒಂದೇ ಬೇಸರದ ಮತ್ತು ತೀರಾ ನಾಚಿಕೆಗೇಡಿನ ಸಂಗತಿ – ಆ ದರಗಳು ವಿದೇಶಿಯರಿಗಾಗುವಾಗ ದುಪ್ಪಟ್ಟು ಮಾತ್ರವಲ್ಲ, ವಯೋಮಿತಿಯ ರಿಯಾಯಿತಿಯನ್ನೂ ವಂಚಿಸಿತ್ತು! ನಾವು ನಗರ ಅರಮನೆ ವೀಕ್ಷಣೆಯ ಟಿಕೆಟ್ ಮಾತ್ರ ಕೊಂಡೆವು. (ಅಭಯ, ರಶ್ಮಿಯರಿಗೆ ತಲಾ ರೂ ಮುನ್ನೂರು. ಉಳಿದ ಮೂವರಿಗೆ ತಲಾ ರೂ ನೂರೈವತ್ತು)

ಅರಮನೆ ಸಾಕಷ್ಟು ವಿಸ್ತಾರವಿತ್ತು. ಪ್ರದರ್ಶಿಕೆಗಳು ಮತ್ತು ವ್ಯವಸ್ಥೆ ಆಕರ್ಷಕವಾಗಿಯೂ ಚೊಕ್ಕವೂ ಇದ್ದವು. ಆದರೆ ನಮ್ಮ ಆರು ದಿನಗಳ ‘ರಾಜಸ್ತಾನ ಧಾವಂತ’ದಲ್ಲಿ, ನೋಡಲು ಇಂಥ ಇನ್ನಷ್ಟು ಪ್ರದರ್ಶನಾಲಯಗಳೂ ಇವೆ ಎಂಬ ಎಚ್ಚರದಲ್ಲಿ, ನಾವು ಸೂಕ್ಷ್ಮ ವೀಕ್ಷಣೆಯಲ್ಲಿ ಸಮಯ ಕಳೆಯಲಿಲ್ಲ. ಕೆಲವನ್ನಾದರೂ ಪಟಗಳಲ್ಲಿ ದಾಖಲಿಸಿಕೊಂಡು ವಿರಾಮದಲ್ಲಿ ಅನುಭವಿಸೋಣವೆಂದರೆ, ಅಲ್ಲಿ ಪಟಗ್ರಹಣಕ್ಕೆ ಅವಕಾಶವೇ ಇರಲಿಲ್ಲ. ಸುಮಾರು ಒಂದೂವರೆ ಗಂಟೆಯ ಸುತ್ತಾಟದಲ್ಲಿ ನಾವು ಅರಮನೆ ಮುಗಿಸಿದ್ದೆವು. ಇಂದು ಒಟ್ಟಾರೆ ಪ್ರವಾಸವನ್ನು ಪರಿಭಾವಿಸಿದಾಗ, ನಮ್ಮ ನಡೆ ಸರಿಯೇ ಇತ್ತು ಎಂದನ್ನಿಸುತ್ತದೆ. ಕಾರಣ ಇಷ್ಟೇ –  ನಾವು ಮೊದಲು ನೋಡಿದ ಅಮೇರ್ ಕೋಟೆ/ಅರಮನೆಯಿಂದ ತೊಡಗಿ ಕೊನೆಯ ಉದಯಪುರದ ಅರಮನೆಯವರೆಗೂ ಒಟ್ಟಾರೆ ಪ್ರದರ್ಶಿಕೆಗಳು (ಸಂಖ್ಯೆಯಲ್ಲಿ, ಸೂಕ್ಷಗಳಲ್ಲಿ ಹೆಚ್ಚು ಕಡಿಮೆ ಇರಬಹುದು) ಬಹುತೇಕ ಒಂದೇ ಇವೆ. ಹಾಗಾಗಿ ಒಟ್ಟಾರೆ ವೀಕ್ಷಕ-ವಿವರಣೆಯನ್ನು ನಾನು ಮುಂದಿನ ಕಥನಗಳಲ್ಲಿ ಪಟಗಳೊಡನೆ ಸ್ವಲ್ಪ ಮಟ್ಟಿಗೆ ತುಂಬಿಕೊಡುವ ಪ್ರಯತ್ನ ಮಾಡುತ್ತೇನೆ.

ಅರಮನೆಯ ಹೊರವಲಯದ ಗೋಪಾಲ್ಜೀ ಮಂದಿರ ನೋಡಲು ಮರೆಯಬೇಡಿ ಎಂಬ ಕಾರ್ ಚಾಲಕ ಹೇಳಿದ್ದ. ಹಾಗೆ ಜಾತ್ರೆಗಳ ಸಂತೆಯಂತೇ ಇದ್ದ ಪುಟ್ಟ ಪೇಟೆ-ಗಲ್ಲಿಗಿಳಿದೆವು. ಅಲ್ಲಿನೊಂದು ಚಪ್ಪರದಡಿಯಲ್ಲಿ ಯಾರೋ ಯಾಕೋ ಪ್ರಸಾದ ರೂಪದ ತಿನಿಸನ್ನೇನೋ (ಖೀರು?) ಹಂಚುತ್ತಿದ್ದರು. ನಾವು ‘ಪರ್ಶಾದ್’ ಮೋಹಕ್ಕೆ ಬೀಳದೇ ಭಕ್ತ ಮಂದೆಯ ತಿಮಕನ್ನು ಹಾಯ್ದು, ಎರಡೋ ಮೂರೋ ದ್ವಾರ ದಾಟಿ, ಮಂದಿರದ ಕೇಂದ್ರ ಭಾಗವನ್ನು ತಲಪಿದ್ದೆವು. ದೇವಳದ ವಠಾರವೇನೋ ಸಾಕಷ್ಟು ದೊಡ್ಡದೇ ಇದ್ದಂತಿತ್ತು. ಆದರೆ ಕತ್ತಲಿನಲ್ಲಿ ಒಟ್ಟಾರೆ ಮಂದಿರ, ಗೋಪುರಗಳ ರೂಪವೋ ಭವ್ಯತೆಯೋ ಅರಿವಿಗೆ ದಕ್ಕಲಿಲ್ಲ. ತತ್ಕಾಲೀನ ಆರಾಧನಾ ಕೇಂದ್ರದಂತೇ ತೋರುತ್ತಿದ್ದ ಗರ್ಭಗುಡಿ, ಏನೋ ಆರಾಧನಾ ವಿಧಿಯಂತೆ (ನೈವೇದ್ಯ?) ತೆರೆಯ ಮರೆಯಲ್ಲಿತ್ತು. ಹೊರಗೆ ತುಂಬಿದ್ದ ಅಸಂಖ್ಯ ಭಕ್ತ ವೃಂದ ಅಬ್ಬರದ ಭಜನೆಯಲ್ಲಿತ್ತು. ನಾವು ದೂರದಿಂದಲೇ ತೆರೆ ಸರಿದದ್ದು, ‘ದರ್ಶನ ವಿಧಿ’ಗೆ ಮಂದೆಯಲ್ಲಿ ಹೊಸದೇ ಸಂಚಲನವಾದ್ದನ್ನು ನೋಡುವಷ್ಟಕ್ಕೇ ತೃಪ್ತರಾಗಿ ಮರಳಿದೆವು.

ಅನುಕಂಪ, ಫರ್ನ್, ಸ್ಕೈ ಲಕ್ಷುರಿ, ರಾವತ್….

ನಮ್ಮ ರಾಜಸ್ತಾನದ ದಿನಗಳು ಕ್ರಿಸ್ಮಸ್ ರಜಾದಿನಗಳೊಡನೆ ತಾಕಲಾಡುತ್ತಿದ್ದುದರಿಂದ ಹೆಚ್ಚು ಸೌಕರ್ಯದೊಡನೆ ಕಡಿಮೆ ದರದ ಹೋಟೆಲ್ ನಿಶ್ಚೈಸುವಲ್ಲಿ ಅಭಯ ಸಾಕಷ್ಟು ಅಂತರ್ಜಾಲಾವಧಿ ಕಳೆದಿದ್ದ. ಹಾಗೆ ನಮಗೆ ಜೈಪುರದಲ್ಲಿ ದಕ್ಕಿದ ಹೋಟೆಲ್ ಗ್ರ್ಯಾಂಡ್ ಅನುಕಂಪ. ಅದರ ಫರ್ನ್ ವಸತಿ ವಿಭಾಗದಲ್ಲಿ, ಅಂದರೆ ಹತ್ತನೇ ಮಾಳಿಗೆಯ ಎರಡು ಕೋಣೆ ಸೇರುವಾಗ ಗಂಟೆ ಆರರ ವಲಯದಲ್ಲಿದ್ದರೂ ನಿಸ್ಸಂದೇಹವಾಗಿ ಗಾಢ ರಾತ್ರಿಯೇ ಆವರಿಸಿತ್ತು.

ಕೋಣೆಗಳಲ್ಲೇ ಚಾ/ಕಾಫಿ ಕಾಯಿಸಿಕೊಳ್ಳುವ ವ್ಯವಸ್ಥೆ ಮತ್ತು ಬಿಸಿನೀರ ಸ್ನಾನ ಚೆನ್ನಾಗಿತ್ತು. ಅಲ್ಲಿದ್ದ ಏಸಿ ಮತ್ತು ಪುಟ್ಟ ಫ್ರಿಜ್ ಕಾಲ ಮತ್ತು ಅಭಿರುಚಿಗಳ ಮಾನದಲ್ಲಿ ನಮಗೆ ನಿಷ್ಪ್ರಯೋಜಕವಾಗುಳಿದವು. ರಾತ್ರಿಯೂಟದ ಮಾತು ಬಂದಾಗ ನಾನು ಮಧ್ಯಾಹ್ನದ ಹೊಟ್ಟೆ ಹೊರೆ ಇಳಿಯದ ಕಾರಣ ನಿರಾಹಾರಿಯಾದೆ. ಉಳಿದವರು ಹೋಟೆಲಿನದೇ ತಿನಿಸು ವಿಭಾಗ – ಸ್ಕೈ ಲಕ್ಷುರಿ ರೆಸ್ಟ್ರೋದಿಂದ ಕೋಣೆಗೇ ತರಿಸಿಕೊಂಡ ಪಾಕಗಳು ಚೆನ್ನಾಗಿಯೇ ಇದ್ದುವಂತೆ. ದಿನವಿಡೀ ನಮ್ಮನ್ನು ಸತಾಯಿಸಿದ್ದ ಚಳಿ, ಕೋಣೆಯ ನೆಲದಲ್ಲೂ ಕೊರೆಯುತ್ತಿತ್ತು. ಅದನ್ನು ನಿವಾರಿಸುವಂತೆ ಒದಗಿಸಿದ್ದ (ಪ್ಲ್ಯಾಸ್ಟಿಕ್) ಮಿದು ಹಾವುಗೆ, ಹುಗಿದುಹೋಗುವ ಹಾಸುಗೆ, ಹೊರೆಯಾಗದೇ ಹೊಂಗನಸಿಗೊಯ್ಯುವ ದಪ್ಪನ್ನ ಹೊದ್ದಿಕೆಗಳಲ್ಲಿ ನಮ್ಮ ದಿವಾ ರಾತ್ರಿಗೆ ಸಂದು ಹೋಯ್ತು.

(ಮುಂದುವರಿಯಲಿದೆ)

0 Comments

Submit a Comment

Your email address will not be published. Required fields are marked *