(ಪ್ರಾಕೃತಿಕ ಭಾರತ ಸೀಳೋಟ – ೭) ‘ಹೊಟ್ಟೆ ಘಟ್ಟಿಯಿರಬೇಕು, ಘಟ್ಟ ಎದುರಾಗಬೇಕು’ ಸಾಹಸ ಯಾತ್ರೆಗಳಲ್ಲಿ ನನ್ನ ಅಭ್ಯಾಸ. ಬೆಳಿಗ್ಗೆ ನಾಲ್ಕು ಗಂಟೆಗೆ ಹೊರಡಬೇಕಾದರೂ ತಿಂಡಿ ಮಾಡಿಕೊಟ್ಟರೆ, ನಾನು ತಿಂದೇ ಹೊರಡುವವ. ಹಾಗೆಂದು ಒಂದೆರಡು ಗಂಟೆ ತಡವಾದರೆ ಕೈಕಾಲೇನು ಬಿದ್ದು ಹೋಗುವುದೂ ಇಲ್ಲ. ಅಂದು (೬-೫-೯೦) ರಣಥೊಂಬರಾ ಕೋಟೆಯನ್ನು ಬೆಳಿಗ್ಗೆ ನೋಡಿ ಬರುವ ಉತ್ಸಾಹದಲ್ಲಿ ತಿಂಡಿ ತಿಂದಿರಲಿಲ್ಲ. ವಾಪಾಸು ಬಂದು ಮುಂದಿನ ಪ್ರಯಾಣಕ್ಕಿಳಿಯುವಾಗ ಮಾತ್ರ (೧೦.೪೫), ಒಂದೆರಡಲ್ಲ ಮೂರ್ನಾಲ್ಕು ಗಂಟೆಗಳೇ ತಡವಾಗಿತ್ತು. ಮೊದಲು ಸಿಕ್ಕ ಧಾಬಾಕ್ಕೇ ನುಗ್ಗಿದೆವು. ಅವನಲ್ಲಿ ಪೂರ್ವ ಸಿದ್ಧತೆಗಳೇನೂ ಇರಲಿಲ್ಲ. ಹಾಗಾಗಿ ನಾವು ಹಳಸಲು ಎಣ್ಣೇಲಿ ಕರಿದ ಪೂರಿ, ಜಿಡ್ಡು ಬಸಿಯುವ ಪರೋಟಾ ಬಿಟ್ಟು, ರೊಟ್ಟಿ, ಮೊಸರು, ಉಪ್ಪಿನ ಕಾಯಿ ಕೇಳಿದೆವು. “ಬನ್ಜಾಯೆಗಾ” (ಮಾಡ್ಕೊಡಾಣಾ) ಎಂದ. ಆದರೆ ಪುಣ್ಯಾತ್ಮ ಮಾಡಿದ್ದು ಅವನದೇ ಕ್ರಮದಲ್ಲಿ. ಹಿಟ್ಟನ್ನು ಕಲೆಸುವಾಗಲೇ ಧಂಡಿಯಾಗಿ ಎಣ್ಣೆ ಸುರಿದುಬಿಟ್ಟ. ಒಂದೊಂದು ಇಂಚು ದಪ್ಪಕ್ಕೆ ಲಟ್ಟಿಸಿ, ಅದೇನು ತವಾವೋ ಚಪ್ಪಟೆ ಬಾಣಲೆಯೋ ಎನ್ನುವಂತೆ ಎಣ್ಣೇ ಸ್ನಾನ ಮಾಡಿಸಿಯೇ ಕೊಟ್ಟ. ಲೇಟ್ ಫೀ ಪೇಡ್ ಬಿರೇಕ್ ಫಾಸ್ಟ್‍ಗೆ, ಅಡ್ವಾನ್ಸ್ಡ್ ಲಂಚೂ ಸೇರಿಸಿ, ಒಬ್ಬೊಬ್ಬರೂ ಕನಿಷ್ಠ ಆರೆಂಟು ರೊಟ್ಟಿಯಾದರೂ ಹೊಡೀಬೇಕು ಅಂದು ಕೊಂಡಿದ್ದೆವು. ಅವನ ಹಾಳಾದ ರೊಟ್ಟಿ ಒಳ್ಳೇ ರುಚಿಯೂ ಇತ್ತು. ಆದರೆ ಒಂದೂವರೆ ಎರಡಕ್ಕೇ ಎಲ್ಲ ಸುಸ್ತು! ಭಯ್ಯಾಜೀ ಸುಮ್ಮನಿದ್ದ ಮಾತಾಜೀನ (ದೇವಕಿ) “ಆಪ್ ಭೀ ಖಾಯಿಯೇ…” ಎಂದು ರಮಿಸತೊಡಗಿದಾಗ, ಇವಳು ಹೆದರಿ, ‘ರವಿವಾರ ಉಪವಾಸ ವ್ರತ’ ಹೇಳಿಬಿಟ್ಟಳು! (ಮುಂದೆಲ್ಲೋ ಏನೋ ಹಗುರದ್ದು ತಿಂದು ಬದುಕಿದಳೂ ಎನ್ನಿ.)

ನಮ್ಮ ಅಂದಿನದೂ ಸುಲಭ ಲಕ್ಷ್ಯ – ಜೈಪುರ, ಸುಮಾರು ಇನ್ನೂರು ಕಿಮೀ ಒಳಗಿನದು. ಇಂದು ನಕ್ಷೆ ಮೂವತ್ತು ಕಿಮೀ ಉಳಿತಾಯದ ರಾಜ್ಯ ಹೆದ್ದಾರಿ ತೋರಿಸುತ್ತದೆ. ಆದರೆ ಅಂದು ನಾವು ಅನುಸರಿಸಿದ್ದು ‘ಟೊಂಕ್’ ಮೂಲಕ ಹೋಗುವ ರಾಷ್ಟ್ರೀಯ ಹೆದ್ದಾರಿ. (ತಾಪ ೩೭, ತೆ ೨೫% ಔನ್ನತ್ಯ ೧೨೫೦) ಲೆಕ್ಕಕ್ಕೆ ಭಾರತದ ಏಕೈಕ ಮರುಭೂಮಿಯ ರಾಜ್ಯ ರಾಜಸ್ತಾನ. ಆದರೆ ನಮ್ಮ ಓಟ ಬಹುತೇಕ ಮರುಭೂಮಿಯ ಛಾಯೆಯಷ್ಟೇ ಇರುವ ಪೂರ್ವ ಮಗ್ಗುಲಿನದು, ನಸು ಹಸಿರು ಹೊದ್ದ ನೆಲದ್ದು. (ನಿಜ ಮರುಭೂಮಿ ಅನುಭವ ಕಥನಕ್ಕೆ: ಮರುಭೂಮಿಗೇ ಮಾರುಹೋಗಿ) ತುಂಡು ರವಿಕೆಯ ಹೆಂಗಸರು, ಭಾರೀ ಮುಂಡಾಸು ಮತ್ತು ಭರ್ಜರಿ ಮೀಸೆಯ ಬಡಕಲು ಗಂಡಸರು, ವಿಶಿಷ್ಟ ಗಾಡಿಗೆ ಕಟ್ಟಿದ ಒಂಟೆ, ಜಾಲಿ ಮುಳ್ಳಿನ ಪೊದರು, ಮರ ಎಲ್ಲ ಧಾರಳವೇ ಕಾಣ ಸಿಕ್ಕರೂ ನಿಜ ಮರುಭೂಮಿಯ ದರ್ಶನ ಆಗಲಿಲ್ಲ. ಸಣ್ಣ ಸಣ್ಣ ದೂಳೀ ಸುಳಿಗಾಳಿ ಕಂಬಗಳ ದರ್ಶನವಾದರೂ ನಾವು ಹೆದರುವಂಥ ಅನುಭವಗಳೇನೂ ಆಗಲಿಲ್ಲ. ಮತ್ತೆ ಬಿಸಿಲಿನ ಹೊಡೆತದಲ್ಲೂ ಈ ದಾರಿ (ಖಂಡಿತಾ ತಂಪು ಅಲ್ಲ) ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ನಾವು ಹಾಯ್ದು ಬಂದ ಅನುಭವಗಳ ಹೋಲಿಕೆಯಲ್ಲಿ ಹೆಚ್ಚಿನ ಕಷ್ಟದ್ದಾಗಿ ಕಾಣಲಿಲ್ಲ.

ಅದೊಂದೆಡೆ ನಮ್ಮ ಮೂರೂ ಬೈಕುಗಳು ಒಮ್ಮೆಗೇ ಅನೂಹ್ಯ ದೃಶ್ಯ ಕಂಡು, ದಿಕ್ಕೆಟ್ಟು ನಿಧಾನಿಸಿದವು. ಕರಿ ಕರೀ ಬೋಳುಮಂಡೆ, ಗೂನು ಬೆನ್ನಿನ ನೂರಾರು ಮುದುಕರು ದಾರಿಗೇ ಮುತ್ತಿಗೆ ಹಾಕಿದಂತಿತ್ತು. ನಿಜದಲ್ಲಿ, ಮೃತ ಒಂಟೆಯೊಂದು ದಾರಿಯ ಮಗ್ಗುಲಲ್ಲಿ ಬಿದ್ದಿತ್ತು. ಅದಕ್ಕೆ ಮುತ್ತಿದ ಅಕ್ಷರಶಃ ನೂರಾರು ರಣ ಹದ್ದುಗಳು ಪಾಲಿಗಾಗಿ ಸರದಿ ಕಾದಿದ್ದವು. ಮುಂಚೂಣಿಯಲ್ಲಿ ತುರುಸಿನ ಸ್ಪರ್ಧೆಯೂ ನಡೆದಿತ್ತು. ತೆರೆದಂಗಳದಲ್ಲಿನ ಕೋಳಿ, ಬೆಕ್ಕು, ಕರು, ಅಪರೂಪಕ್ಕೆ ಸಣ್ಣ ಮಗುಗಳನ್ನೂ ಇವು ಆಹಾರಕ್ಕಾಗಿ ಹೊತ್ತೊಯ್ಯುತ್ತವೆ ಎಂಬ ರಂಗಿನ ಕತೆಗಳು ನೆನಪಾಗಿ, ಸಣ್ಣ ಭಯದಲ್ಲೇ ಮುಂದುವರಿದೆವು. ರಣಹದ್ದುಗಳು ಬೇಕೋ ಬೇಡವೋ ಎನ್ನುವಂತೆ ಸಣ್ಣದಾಗಿ ಕುಪ್ಪಳಿಸಿ ದಾರಿ ಬಿಟ್ಟುಕೊಟ್ಟವು.

ವಾಸ್ತವದಲ್ಲಿ ೧೯೯೦ರಿಂದಲೇ ರಣ ಹದ್ದುಗಳ ಸಂಖ್ಯೆ ತೀವ್ರ ಕುಸಿಯುತ್ತ ಬಂದಿದೆ. ಕಾರಣ – ಮತ್ತೆ ನಮ್ಮದೇ ವಿವೇಚನಾರಹಿತ ರಾಸಾಯನಿಕ ಬಳಕೆ. ಪೈಸೆ ಖರ್ಚಿಲ್ಲದೇ ಮೃತ ಜಾನುವಾರುಗಳ ಬಹಳ ದೊಡ್ಡ ಮತ್ತು ಚೊಕ್ಕ ಜಾಡಮಾಲಿಗಳಾಗಿದ್ದವು ಈ ರಣಹದ್ದುಗಳು. ಆದರೆ ಹಾಗೆ ಸತ್ತ ಜಾನುವಾರುಗಳಿಗೆ ನಾವು ‘ಅಪಾರ ಬುದ್ಧಿವಂತಿಕೆ’ಯಲ್ಲಿ – ಹಾಲು ಹೆಚ್ಚಿಸಲು, ಪುಷ್ಟಿಗೆ, ಕಾಯಿಲೆಗೆ ಎಂದಿತ್ಯಾದಿ ಮೈಗೂಡಿಸಿದ ‘ಔಷಧ’ಗಳು, ಈ ಹದ್ದುಗಳಿಗೆ ವಿಷವಾಗಿವೆ. ಅಷ್ಟು ಸಾಲದೆಂಬಂತೆ, ಕೆಲವೆಡೆ ಜನ ಸ್ಪಷ್ಟ ವಿಷವನ್ನೇ ಹಾಕಿ ಹದ್ದುಗಳ ‘ಉಪದ್ರ’ ಕಡಿಮೆ ಮಾಡಿದ್ದೂ ಉಂಟು! ಜೀವ ಸರಪಳಿಯ ಈ ಅಮೂಲ್ಯ ಮತ್ತು ಸ್ವಸ್ಥ ಕೊಂಡಿ ಕಳಚುತ್ತಿದ್ದಂತೆ ಕೊಳೆತ ಕಳೇವರಗಳಿಂದ ಕಾಯಿಲೆಗಳು ಹೆಚ್ಚಿದ್ದು, ಹುಚ್ಚು ನಾಯಿಗಳು ಮೆರೆದದ್ದು ಇಂದಿಗೂ ದೊಡ್ಡ ಜನವರ್ಗಕ್ಕೆ ತಿಳಿದೇ ಇಲ್ಲ; ಅಜ್ಞಾನಂ ಪರಮ ಸುಖಂ! ಸಂಜೆ ನಾಲ್ಕಕ್ಕೆ ಜೈಪುರ ತಲಪಿದ್ದೆವು. ಯೋಜನೆಯಂತೇ ಅಲ್ಲಿನ ಯೂತ್ ಹಾಸ್ಟೆಲ್ಲಿಗೆ ಹೋಗಿದ್ದೆವು, ಅವಕಾಶವೂ ಸಿಕ್ಕಿತ್ತು.

ಆದರೆ ಅಲ್ಲೊಂದು ಮದುವೆ ಪಾರ್ಟಿಯ ಗಜಿಬಿಜಿ, ಗದ್ದಲ ನೋಡಿ ಗಾಬರಿಯಾಗಿ, ರೈಲ್ವೇಯವರ ವಿಶ್ರಾಂತಿ ಗೃಹಕ್ಕೋಡಿದೆವು. ಅದೃಷ್ಟಕ್ಕೆ ಕಡಿಮೆ ಖರ್ಚಿನ, ಹೆಚ್ಚು ವ್ಯವಸ್ಥೆಯ ಅತಿಥಿಗೃಹ – ‘ಸ್ವಾಗತಂ’, ಸಿಕ್ಕಿತು. ಗುಲಾಬೀ ನಗರ, ಐತಿಹಾಸಿಕವಾಗಿ ಹಲವು ಕತೆ, ರಚನೆಗಳ ನೆಲೆ ಎಂದಿತ್ಯಾದಿ ಪ್ರಭಾವಳಿಯಿಂದ ಜೈಪುರ ನಗರದರ್ಶನ ನಮ್ಮ ಆದ್ಯತೆಯ ಪಟ್ಟಿಯಲ್ಲಿತ್ತು. ರಾಜಸ್ತಾನ ರಾಜ್ಯ ಪ್ರವಾಸೋದ್ಯಮ ಇಲಾಖೆ ಅರ್ಧ ದಿನದ ಅಂಥ ಒಂದು ಕಲಾಪವನ್ನೂ ನಡೆಸುತ್ತಿತ್ತು. ನಾವು ಮೊದಲು ಮರು ಬೆಳಿಗ್ಗೆಗೆ ಆರು ಸ್ಥಳ ಕಾಯ್ದಿರಿಸಿ, ಸಂಜೆಗೆ ವಿರಮಿಸಿದೆವು. ಮೊದಲ ಬಾರಿಗೆ ಸಿಕ್ಕ ಆರಾಮದಲ್ಲಿ, ಮಾವ ಗೌರೀಶಂಕರರಿಗೆ ಬರೆದ ಪತ್ರದ ಒಂದು ತುಣುಕು: “….

ಪ್ರಯಾಣ, ಸ್ಥಳ ದರ್ಶನ, ಕೊಚ್ಚೆ ಚರಂಡಿಗಳ ಅಂಚಿನಲ್ಲೂ ಇರಬಹುದಾದ ಜೋಪಡಿಗಳ ಊಟ ಉಪಚಾರ ನಂಬಿ, ೧೪ ದಿನ ಕಳೆದು, ಸುಮಾರು ೩೨೦೦ ಕಿಮೀ ದಾರಿ ಸವೆಸಿಯೂ ಉತ್ಸಾಹ ಇಲ್ಲಿನ ಥರ್ಮಾಮೀಟರಿನಂತೇ ಉನ್ನತದಲ್ಲೇ ಇದೆ….”
(ಸಂಜೆ ತಾಪ ೩೨, ತೆ ೩೨% ಔನ್ನತ್ಯ ೨೦೦೦, ದಿನದ ಓಟ ೨೧೭ ಕಿಮೀ)

ಆರು ಗಂಟೆಯೊಳಗೆ ದಾರಿಗೆ ಬೀಳುವುದು ನಿತ್ಯ ಕರ್ಮ. ಆದರೆ ಜೈಪುರದ ಬೆಳಿಗ್ಗೆ ವಿಶಿಷ್ಟ; ಆರಾಮವಾಗಿ ಎದ್ದು (೮-೫-೯೦ ಮಂಗಳವಾರ) ೮ ಗಂಟೆಗೆ ನಗರ ದರ್ಶನದ ಬಸ್ಸೇರಿದ್ದೆವು. ಉಚ್ಚೆ ಹೊಯ್ಯಲಿಕ್ಕೂ ಬೈಕ್ ತೆಗೆಯುತ್ತಿದ್ದವರು ಅರ್ಧ ದಿನ ಬೈಕ್ ಮುಟ್ಟಲೇ ಇಲ್ಲ. ಬಿಸಿಲಿನಲ್ಲಿ ತಲೆಬಿಸಿ, ಸೆಕೆಯಲ್ಲಿ ಮೈ ಧಗೆ ಮತ್ತು ಹರಕು ಮುರುಕು ದಾರಿಗಳಲ್ಲಿ ಉದ್ದಾನುದ್ದ ಬೈಕ್ ಓಡಿಸುತ್ತ ಕುಂಡೆ ಉರಿ – ಎಲ್ಲಕ್ಕು ಅಂದು ಅರ್ಧ ದಿನದ ಶಾಂತಿ. ಸುಖಾಸೀನದ ಬಸ್ಸಿನಲ್ಲಿ, ದಾರಿಯ ವಿಪರೀತಗಳಿಗೆ ನಿರ್ಲಕ್ಷ್ಯರಾಗಿ, ಯಾರದೋ ನಿರ್ದೇಶನದಲ್ಲಿ ಅರಮನೆ, ವಸ್ತುಪ್ರದರ್ಶನ, ಹವಾ ಮಹಲ್, ಜಂತರ್ ಮಂತರ್ ಎಂದಿತ್ಯಾದಿ ಆರಾಮವಾಗಿ ಸುತ್ತಾಡಿ ನೋಡಿದೆವು, ವಿವರಣೆಗಳನ್ನೂ ಕಿವಿ ತುಂಬಿಕೊಂಡೆವು. ಆದರೆ ಇಂದಿಗೂ ಮನದಲ್ಲುಳಿದ (ಅನಾವಶ್ಯಕ?) ವಿವರಗಳು ಎರಡೇ!

ಒಂದು ಆನೆಗಳು – ನಗರದ ಅನೇಕ ಮುಖ್ಯ ಸ್ಥಳಗಳ ನಡುವೆ ‘ಆನೆಯೇರಿ ರಾಜಾ ಶೈಲಿ’ ಹೋಗುವ ವ್ಯವಸ್ಥೆಯಿತ್ತು. ಮರುಭೂಮಿಯ ಮಹಾನಗರದ ಉರಿ ಬಿಸಿಲಿನಲ್ಲಿ, ಪೂರ್ಣ ಡಾಮರು ಕಾಂಕ್ರೀಟುಗಳ ಪರಿಸರದಲ್ಲಿ, ಹೊಗೆ ದೂಳಿನ ವಾತಾವರಣದಲ್ಲಿ ಅವು ಬಳಲುತ್ತಿದ್ದ ಪರಿ ನಿಜಕ್ಕೂ ಹೃದಯವಿದ್ರಾವಕ. ಮತ್ತೊಂದು ಸ್ಮರಣೀಯ ಸಂಗತಿ, ಅಲ್ಲ ಸಂಗಾತಿ – ಇಲಾಖೆಯ ಮಾರ್ಗದರ್ಶಿ. ಹೋದಲ್ಲೆಲ್ಲ ನಮ್ಮ ಹಿತರಕ್ಷಣೆಯ ದೃಷ್ಟಿಯಲ್ಲೆನ್ನುವಂತೆ ಈತ ನಮ್ಮನ್ನು ಸ್ಮರಣಿಕೆ ಇತ್ಯಾದಿ ಖರೀದಿಗಳಿಂದ ದೂರ ಇಟ್ಟಿದ್ದ. ಕೊನೆಯಲ್ಲಿ ನಾವು ನಿರಾಶರಾಗದಂತೆ, ಕೇವಲ ರಫ್ತುಗಾರ ಜವಳಿ ಮಳಿಗೆಯೊಂದಕ್ಕೆ ವಿಶೇಷಾನುಮತಿಯಲ್ಲಿ ಪ್ರವೇಶ ಕೊಡಿಸಿದ. ನಾವು ಮಂಗಳೂರು ಬಿಡುವಂದೇ ಪ್ರವಾಸದಲ್ಲಿ ಅಂದಂದಿನ ಆವಶ್ಯಕತೆಯನ್ನುಳಿದು ಏನೂ ಖರೀದಿಸಬಾರದು ಎಂದೇ ನಿರ್ಧರಿಸಿದ್ದೆವು.

ಆದರೂ ಮಾರ್ಗದರ್ಶಿಯ ಒಳ್ಳೇ ಸಲಹೆಯನ್ನು ಪುರಸ್ಕರಿಸುವಂತೆ ದೇವಕಿ ವ್ರತಭಂಗ ಮಾಡಿ, ವಿಶೇಷ ಸೀರೆ ಖರೀದಿಸಿದ್ದಳು. ಮಂಗಳೂರಿಗೆ ಮರಳಿದ ಮೇಲೆ ತಿಳಿಯಿತು – ಕೊಟ್ಟ ಬೆಲೆ ದುಬಾರಿ ಮತ್ತು ಗುಣಮಟ್ಟ ಖೋಟಾ! ಅನ್ಯರಲ್ಲಿ ಮೋಸ ಹೋಗಬೇಡಿ, ನಮ್ಮಲ್ಲಿಗೆ ಬನ್ನಿ!

ಜೈಪುರದಲ್ಲಿ ಮತ್ತೆ ಅರ್ಧ ದಿನ ಕಳೆಯಲು ನಾವು ಸಿದ್ಧರಿರಲಿಲ್ಲ. ನಮ್ಮ ವನಧಾಮಗಳ ಸಂಕೋಲೆಯಲ್ಲಿ ಮುಂದೆ ಎರಡು ಆಯ್ಕೆಗಳಿದ್ದವು – ಸಾರಿಸ್ಕಾ ಮತ್ತು ಕೇವಲದೇವಾ. ಎರಡೂ ಜೈಪುರದಿಂದ ಸುಮಾರು ಇನ್ನೂರು ಕಿಮೀ ಒಳಗಿನ ಅಂತರದವು. ಸಾರಿಸ್ಕಾದ ಅಂಕಪಟ್ಟಿ ಆ ಕಾಲಕ್ಕೇ ಬಿದ್ದು ಹೋಗಿತ್ತು. ಈಗಂತೂ ಕೇಳುವುದೇ ಬೇಡ. ವರ್ಷಾನುಗಟ್ಟಳೆ ಅರಣ್ಯ ಇಲಾಖೆ ಲೆಕ್ಕ ಪತ್ರಗಳಲ್ಲೇ ಸಾಕಿ, ಹೆಚ್ಚಿಸಿದ ಹುಲಿ ಸಂಖ್ಯೆ ಭಾರೀ ಗಾಳಿಗುಳ್ಳೆ! ಅಲ್ಲಿ ಒಂದೂ ಹುಲಿ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ! ದಾರಿಯಲ್ಲಿ ನಾವಾಗಲೇ ಮೇಲ್ಘಾಟ್ ಮತ್ತು ಶಿವಪುರಿ ವನಧಾಮಗಳಲ್ಲಿ ಕಟ್ಟಿಕೊಂಡ ನಿರಾಶೆಯನ್ನು ರಣಥೊಂಬರಾ ಪೂರ್ಣ ಅಳಿಸಿತ್ತು. ಇನ್ನು ಅದರ ರುಚಿ ಕೆಡಿಸಿಕೊಳ್ಳಬಾರದೆಂದು, ಹಕ್ಕಿಗಳಿಗೇ ಮೀಸಲಾದ ‘ಕೇವಲದೇವಾ ಘಾನಾ ರಾಷ್ಟ್ರೀಯ ಉದ್ಯಾನವನ’ದತ್ತ ಬೈಕ್ ಗುಡುಗುಡಾಯಿಸಿದೆವು.

ಬಾಲ ಯಾನೆ ಬಾಲಕೃಷ್ಣ ಸಣಕಲ. ಸಹಜವಾಗಿ ದಾರಿಯಲ್ಲೆಲ್ಲೋ ಪೋಲಿಸಪ್ಪನಿಗೆ ಸಂಶಯ ಬಂತು, ತನಿಖೆ ಮಾಡಿದ. ಬಹುಶಃ ಈತ ಹೆಸರು ಮತ್ತು ನೋಟಕ್ಕಷ್ಟೇ ಬಾಲ ಎಂದು ಸ್ಪಷ್ಟವಾದ ಮೇಲೆ, ಶುಭಾಶಯ ಹೇಳಿ ಬೀಳ್ಕೊಂಡಿರಬೇಕು. (ಅಲ್ಲದಿದ್ದರೆ, ಬಾಲ ಹೇಳಬೇಕು!) ಇದು ರಾಷ್ಟ್ರೀಯ ಹೆದ್ದಾರಿಯೇ ಆದ್ದರಿಂದ ನಿರ್ಯೋಚನೆಯಲ್ಲಿ ಸಂಜೆಗೆ ಮುಖ್ಯ ಊರು ಭರತ್ ಪುರ ತಲಪಿದ್ದೆವು. ಅಲ್ಲಿನ ಬಲ ಕವಲಿಗೆ ಏಳೇ ಕಿಮೀ ಅಂತರದಲ್ಲಿ ಹಕ್ಕಿಧಾಮದ ಪ್ರವೇಶ ವಲಯ. ಬಿರುಬೇಸಗೆಯಲ್ಲಿ ವಲಸೆ ಹಕ್ಕಿಗಳು ತುಂಬಾ ವಿರಳವೇ. ಹಾಗಾಗಿ ಅಲ್ಲಿನ ರಾಜಸ್ತಾನ ಪ್ರವಾಸೋದ್ಯಮ ಇಲಾಖೆಯ ಅತಿಥಿಗೃಹವೂ ನಮಗೆ ಸುಲಭವಾಗಿ ಸುಖಾಶ್ರಯವನ್ನೇ ಕೊಟ್ಟಿತು. (ರಾತ್ರಿ ತಾ. ೩೩, ತೆ. ೩೦% ಔನ್ನತ್ಯ ೧೦೦೦. ದಿನದ ಓಟ ೧೮೫ ಕಿಮೀ)

ಸುಮಾರು ೨೫೦ ವರ್ಷಗಳ ಹಿಂದೆ ಭರತಪುರವನ್ನು ಕೇಂದ್ರವಾಗಿಟ್ಟುಕೊಂಡು ರಾಜಾ ಸೂರಜ್ ಮಲ್ಲ ಆಳಿದ್ದನಂತೆ. ಆತನ ಮುತ್ಸದ್ಧಿತನದ ಕುರುಹು ಈ ವನಧಾಮದ ಜಲ ಹಾಗೂ ಜವುಗು ನೆಲ. ಬಾಣಗಂಗೆ ನದಿಗೆ ಹಾಕಿದ ಒಡ್ಡು ಇಲ್ಲಿನ ಪ್ರಾಕೃತಿಕ ತಗ್ಗನ್ನು ತುಂಬಿದ ಫಲವಿದು. ವಿಶ್ವದ ಬಹುತೇಕ ಎಲ್ಲ ವಲಸೆ ಹಕ್ಕಿಗಳೂ ಋತುಮಾನದ ಬದಲಾವಣೆಗಳಿಗೆ ಸರಿಯಾಗಿ ಇಲ್ಲಿಗೆ ಬಂದು, ಇದನ್ನು ವಿಶ್ವಖ್ಯಾತವಾಗಿಸಿದೆ. ಸುಮಾರು ೧೯೭೨ರವರೆಗೂ ಹಕ್ಕಿ ಬೇಟೆಗೂ ಕುಖ್ಯಾತವಾಗಿದ್ದ ಈ ಪ್ರದೇಶಕ್ಕೆ ಸರಕಾರ ೧೯೮೨ರಲ್ಲಿ ರಾಷ್ಟ್ರೀಯ ವನಧಾಮದ ಅಂತಸ್ತು ಕೊಟ್ಟು ಬಿಗಿಮಾಡಿದೆ. ಮರು ಮುಂಜಾನೆ, ಅಂದರೆ ೯-೫-೯೦ ಬುಧವಾರ, ಬೆಳಕು ಹರಿಯುವ ಮುನ್ನ ನಾವು ಹಕ್ಕಿಧಾಮದ ಪ್ರವೇಶದ್ವಾರದಲ್ಲಿದ್ದೆವು. ಉದ್ಯಾನವನದೊಳಗೆ ಬಹುತೇಕ ರಸ್ತೆಯ ಜಾಲ ಚೆನ್ನಾಗಿಯೇ ಇದೆ. ಆದರೆ ಪ್ರವಾಸಿಗಳಿಗೆ ಇಲ್ಲಿ ಕೇವಲ ನಡಿಗೆ ಅಥವಾ ಸೈಕಲ್ ಸವಾರಿಗಷ್ಟೇ ಅವಕಾಶ.

ನಾವು ಆರರಿಂದ ಎಂಟು ಗಂಟೆಯವರೆಗೆ ಇದರ ವಿವಿಧ ಕವಲುಗಳನ್ನೆಲ್ಲ ನಡೆದೇ ನೋಡಿ ದಣಿದೆವು. ನೀರು ತುಂಬಾ ಕಡಿಮೆಯಾಗಿ, ಜವುಗು ಪ್ರದೇಶದ ಹುಲ್ಲು ಪೊದರುಗಳೂ ಬಳಲಿ “ನಾವೇನು ತೋರಿಸೋಣ” ಎನ್ನುವಂತಿದ್ದವು. ಇದ್ದ ಕೆಲವೇ ಹಕ್ಕಿ, ಜಿಂಕೆ, ಕಡವೆ, ಹಂದಿಗಳು ದರ್ಶನವನ್ನೇನೋ ಕೊಟ್ಟವು. ಆದರೆ ನಾವ್ಯಾರೂ ಹಕ್ಕಿ ಹವ್ಯಾಸದವರಲ್ಲ. ಅಂದಂದಿನ ನೋಟ, ರೋಮಾಂಚನದೊಡನೆ ಸುಸ್ತಾದ್ದರಲ್ಲೇ ತೃಪ್ತಿ ಕಂಡೆವು. ಅತಿಥಿಗೃಹದ ಮೇಟಿ “ಆಟ್ ಬಜೆ ಬ್ರೇಕ್ ಫಾಸ್ಟ್ ಲಗಾವೂಂಗ ಸಾಬ್” ಎಂದದ್ದನ್ನು ಹೆಚ್ಚು ನೆನೆಯುತ್ತ ವಾಪಾಸು ಬಂದೆವು. ಪುಣ್ಯಾತ್ಮ ನಮ್ಮ ರಣ ಹಸಿವಿಗೆ ಹತ್ತೆಂಟು ಕಟ್ಲೇರಿ ಸದ್ದಿನಲ್ಲಿ ನಾಲ್ಕು ಬ್ರೆಡ್ ಹರಕು, ಉಗುರು ಬೆಚ್ಚನ್ನ ಚಾ ಕೊಟ್ಟ. ಆದರೆ ಇಲಾಖಾ ದರದ ಬಿಲ್ ಆ ಕಾಲಕ್ಕೆ ವಿಪರೀತವೇ ಇದ್ದಿರಬೇಕು: “ರೂ ಐದು, ಶುದ್ಧ ದಂಡ” ಎನ್ನುತ್ತದೆ ನನ್ನ ದಿನಚರಿ ನಮೂದು!

ದಿಲ್ಲಿ ಶಿಖರದಲ್ಲಿದ್ದಂತೆ, ಜೈಪುರ – ಆಗ್ರಾ ತಳದ ಅಡ್ಡ ರೇಖೆಯಂತೆ ಕಾಣುವ ಹೆದ್ದಾರಿಯ ಚಿತ್ರ ಮುಖ್ಯ ಪ್ರವಾಸೀ ತ್ರಿಕೋನ. ನಾವು ತಳ ರೇಖೆಯಲ್ಲಿ ಮುಂದುವರಿದಂತೆ, ಭರತಪುರದಿಂದ ಇಪ್ಪತ್ತೇ ಕಿಮೀಯಲ್ಲಿ ಸಿಕ್ಕ ಮುಂದಣ ದರ್ಶನೀಯ ಸ್ಥಳ – ಫತೇಪುರ ಸಿಕ್ರಿ. ಬಾಬರ್ ಹುಮಾಯೂನರಿಂದಲೇ ರಾಜಧಾನಿ ಆಗ್ರಾದ ನಿಬಿಡತೆಯಿಂದ ದೂರ, ಆಡಳಿತಕ್ಕೆ ಸಮೀಪ ಎಂದೇ ಆಯ್ಕೆಗೊಂಡ ಸ್ಥಳ ಸಿಕ್ರಿ. ಅರೆಬರೆ ಮೊಗಲ್ ಆಧುನಿಕತೆಯನ್ನು ಹೊದೆಸಿದ್ದರು. ಅಕ್ಬರ್ ಅದನ್ನು ತನ್ನ ಮಕ್ಕಳು ಹಾಗೂ ಕೌಟುಂಬಿಕ ವೈಭವಕ್ಕೆ ತಕ್ಕಂತೆ ಅರಮನೆಯುಕ್ತ ಕೋಟೆಯಾಗಿ ಬೆಳೆಸಿದ. ಮತ್ತೆ ಆತ ಗುಜರಾತ್ ಮೇಲಿನ ಮಹಾಯುದ್ಧದಲ್ಲಿ ಸಾಧಿಸಿದ ವಿಜಯದ ನೆನಪಿಗೆ ಫತೇಹ್ ಪುರ್-ಸಿಕ್ರಿ ಎಂದೇ ಹೊಸ ನಾಮಕರಣವನ್ನೂ ಮಾಡಿದನಂತೆ. ಆದರೆ ಇತಿಹಾಸಕ್ಕೆ ಇನ್ನೂ ವಿವರಿಸಲಾಗದ ಸತ್ಯ, ಮುಂದೊಂದು ದಿನ ಅಕ್ಬರ್ ಇದನ್ನು ಸಂಪೂರ್ಣ ತ್ಯಜಿಸಿ, ಹಾಳುಬಿಟ್ಟನಂತೆ. ಅಲ್ಲಿನ ಭಾರೀ ಹುಮಾಯೂನ್ ಸ್ಮರಣ ಕಟ್ಟಡ, ಕೋಟೆಯಾದಿಗಳನ್ನು ನಾವು ಸುಮಾರು ಎರಡು ಗಂಟೆಗಳ ಕಾಲ ಸುತ್ತಾಡಿ, ನಮ್ಮ ದಿನದ ‘ಫತೇಹ್ ಪುರ’ ಹೆಸರನ್ನು ಆಗ್ರಾಕ್ಕೆ ಕೊಡಲು ಮುಂದುವರಿದೆವು.

ಆಗ್ರಾ ತಲಪುವಾಗ ಮಟ ಮಟ ಮಧ್ಯಾಹ್ನ ಹನ್ನೆರಡೂವರೆ. (ತಾ.೩೪ ತೆ. ೩೦%) ಸಣ್ಣದಾಗಿ ಚೌಕಾಸಿ ಮಾಡಿ, ಹೋಟೆಲ್ ಸಾರಂಗಿನಲ್ಲಿ ಹೊರೆ ಇಳಿಸಿ, ಊಟ ಮಾಡಿ, ನೇರ ನಗರ ಸುತ್ತಾಟಕ್ಕೆ ಇಳಿದೆವು. ಆಗ್ರಾದ ಕುರಿತು ಬಂದಿರುವ (ಬರುತ್ತಲೂ ಇರುವ) ಸಮೂಹ ಮಾಧ್ಯಮ ಹಾಗೂ ಪುಸ್ತಕಗಳ ಹೊರೆಯಲ್ಲಿ (ಕುಮಾರವ್ಯಾಸನ ಸ್ಮರಿಸಿ) ‘ತಿಣುಕುವನು ಫಣಿರಾಯ!’ ಹಾಗಾಗಿ ನಾನು ‘ಸಂಶೋಧನೆ’ ಮಾಡಿ ಏನೂ ಬರೆಯುವುದಿಲ್ಲ. ಹಾಗೂ ಏನಾದರೂ ಇದ್ದರೆ ನಮ್ಮ ಚಿತ್ರಗಳಲ್ಲಿ ಕಂಡುಕೊಳ್ಳಿ. ನಾವು ತಾಜ್ ಮಹಲ್ ಮತ್ತು ಸಮೀಪದ ಸಿಕಂದ್ರಾಗಳ ಒಳ- ಹೊರಗೆ ಸುತ್ತಾಡಿ, ರಾತ್ರಿಗೆ ಹೋಟೆಲ್ ಸೇರಿಕೊಂಡೆವು. ಮುಂದೊಂದು ಕಾಲದಲ್ಲಿ ಝೀಟೀವಿ, ೫೬೬ ಕಂತುಗಳ ಸುಂದರ ಮಾಲೆಯಲ್ಲಿ, ‘ಜೋಧಾ ಅಕ್ಬರ್’ ಕೊಟ್ಟಾಗ ನಾನಂತೂ ಈ ಸ್ಥಳಗಳಲ್ಲಿ ಮತ್ತೊಮ್ಮೆ ವಿಹರಿಸಿದ್ದೆ!

(ದಿನದ ಓಟ ೧೦೧ ಕಿಮೀ)
(ಮುಂದುವರಿಯಲಿದೆ)