ಜೋಧಪುರದ ಮಹಾನ್ ಮೆಹ್ರಾನ್ ಗಡ್ ಮತ್ತು ಹಣ ಸೊಕ್ಕಿನ ಉಮೇದ್ ಭವನ್

May 26, 2026 | 0 comments

(ರಾಜಸ್ತಾನದ ಪ್ರಸಂಗಗಳು -೩)

೨೦೧೪ರಲ್ಲಿ ಗೆಳೆಯ ಮನೋಹರ ಉಪಾಧ್ಯ ಪತ್ನಿ (ವಿದ್ಯಾ) ಪುತ್ರ (ಸುಧನ್ವ) ಸಹಿತ ಜೋಧ್ ಪುರ, ಜೈ ಸಾಲ್ಮೇರ್ ವಲಯಗಳನ್ನಷ್ಟೇ ಬಹಳ ವಿವರಗಳಲ್ಲಿ ನೋಡಿ ಬಂದರು. ಮತ್ತೆ ನನ್ನ ಒತ್ತಾಯಕ್ಕೆ ಕಟ್ಟುಬಿದ್ದು, ವಿದ್ಯಾ ಅದನ್ನು ಆರು ಭಾಗಗಳ ಕಥನವಾಗಿಸಿ, ನನ್ನ ಜಾಲತಾಣದಲ್ಲಿ ಧಾರಾವಾಹಿಸಿದರು ಕೂಡಾ. (ನೋಡಿ: ಜೈಪುರಕ್ಕೆ ಜೈ, ಆಗ್ರಾವೂ ಸೈ )

 

[ ಥರ್ಡ್ ಕ್ಲಾಸ್ ವೇಟಿಂಗ್… !! 

ಬೆಳಿಗ್ಗೆ ಆರರ ಜೈಪುರ-ಜೋಧಪುರ ರೈಲಿಗಾಗಿ ಧಾವಿಸಿದ್ದೆವು. ಹೋಟೆಲ್ ಅನುಕಂಪದ ಬೆಚ್ಚನೆ ತಲ್ಪದಲ್ಲಿ ರಾತ್ರಿ ಕಣ್ತುಂಬ ನಿದ್ದೆ ತೆಗೆದಿದ್ದೆವು. ಸುಡು ಸುಡು ಚಾ ಏರಿಸಿ, ಬಿಸಿಯುಡುಗೆಗಳಲ್ಲದೆ ಕಾರಿನೊಳಗಿನ ಬಿಸುಪನ್ನೂ ಮೈಗೂಡಿಸಿಕೊಂಡು ನಿಲ್ದಾಣದಲ್ಲಿಳಿದಿದ್ದೆವು. ರೈಲು ಸೇರಿ, ಟಿಕೆಟ್ಟಿನ ವ್ಯವಸ್ಥೆಯಂತೇ ಸಕಾಲದಲ್ಲಿ ಬರುವ ಬಿಸಿ ಬಿಸಿ ತಿಂಡಿಯ ಗಟ್ಟಿ ನಿರೀಕ್ಷೆಯೊಡನೆ ‘ಜೈಪುರದ ಹೆಮ್ಮೆ’ ಎನ್ನಿಸಿಕೊಂಡ ನಿಲ್ದಾಣದಲ್ಲಿ ಕಾಲಿಟ್ಟಾಗ… ನಿಜಕ್ಕೂ ಭಾರತ ಮಹಾನ್ ]

ಸ್ನೇಹದ ಸುಳಿಯಲ್ಲಿ ಸಿಕ್ಕ ಗಿರಿಗಿಟ್ಲೆಗಳು !! 

ಜೈಪುರ – ಜೋಧಪುರದ ರೈಲ್ವೇ ಚೇರ್ ಕಾರ್ ಚೆನ್ನಾಗಿಯೂ ಶಿಸ್ತು ಬದ್ಧವಾಗಿಯೂ ಇದ್ದುದಕ್ಕೆ ಹನ್ನೊಂದು ಗಂಟೆಗೆ ಜೋಧಪುರ ಮುಟ್ಟಿದ್ದೆವು. ನಾವು ರೈಲಿಳಿಯುತ್ತಿದ್ದಂತೆ ಹಸನ್ಮುಖೀ ಅಪರಿಚಿತರೊಬ್ಬರು – ಸುಮಾರಿಗೆ ಅಭಯನ ಸಮವಯಸ್ಕರು, “ಸ್ವಾಗತ್ ಅಭಯ್ ಭಾಯ್…” ಎಂಬಲ್ಲಿಂದ ತೊಡಗಿ, ಒಬ್ಬೊಬ್ಬರಿಗೂ ಒಂದೊಂದು ಗುಲಾಬಿ ಕೊಡುತ್ತಾ ಜೋಧಪುರಕ್ಕೆ ‘ಬರ ಮಾಡಿಕೊಂಡರು.’ “ಮೈ ಉದಯ್…” ರಾಕೇಶನ ಚಡ್ಡಿ ದೋಸ್ತ್ ಎಂದಷ್ಟೇ ಪರಿಚಯಿಸಿಕೊಂಡ ಆತ, ಅಭಯನಿಗೆ ಅಪ್ಪುಗೆ, ರಶ್ಮಿಗೆ ಆತ್ಮೀಯ ಹಸ್ತಾಂದೋಲನ ಕೊಟ್ಟರು. ಪ್ರಾಯದಲ್ಲಿ ಹಿರಿಯರಾದ ನಾವು ಉದಯರಿಗೆ ಸಾಕ್ಷಾತ್ ‘ದಾದಾಜೀ, ಮಾತಾಜೀ’ಯಾಗಿ ಮುಜುಗರದ ಪಾದವಂದನೆಗೇ ಸಿಲುಕಿಕೊಂಡೆವು. ಆಭಾ “ಮೇರೀ ಗುಡಿಯಾ…” ಆಗಿ, ಕೆನ್ನೆಗೊಂದು ಹೂ ಮುತ್ತಿನೊಡನೆ, ಭರ್ಜರಿ ಸಿಹಿ ತಿನಿಸುಗಳ ಕಟ್ಟಿಗೂ ಪಾತ್ರಳಾದಳು.

ಉದಯ್ ನಮ್ಮ ಎಲ್ಲ ಸಂಕೋಚದ ಮಾತುಗಳನ್ನೂ ಉಪೇಕ್ಷಿಸಿ, ಬಹುತೇಕ ಚೀಲಗಳಿಗೆ ಭುಜ-ಬಲರಾಗಿ ಬಾಡಿಗೆ ಕಾರು ಮುಟ್ಟಿಸಿದರು. ‘ಗುಡಿಯಾ’ಳನ್ನು ತನ್ನ ಕಾರಿಗೇ ಸೆಳೆದುಕೊಂಡು, ವಾಸ್ತವ್ಯದ ಹೋಟೆಲ್ – ಚಂದ್ರ ಇನ್, ದಾರಿ ತೋರಿದರು. ಅಲ್ಲಿನ ಔಪಚಾರಿಕತೆಗಳು, ಕೋಣೆಯಲ್ಲಿ ನಮ್ಮ ಪುನಶ್ಚೇತನ ಕ್ರಿಯೆಗಳುದ್ದಕ್ಕೂ ಸಮಯ ಕಾದು, “ಟ್ರೀಟ್ ಕೇಲಿಯೇ…” ಊರಿನ ಅತ್ಯುತ್ತಮ ಸಿಹಿ ತಿಂಡಿಗಳ ಮಳಿಗೆಗೆ ನುಗ್ಗಿಸಿದರು. ಅವರ ವಿವರಣೆಯನ್ನು ಅನುಸರಿಸಿದ್ದೇ ಆದರೆ ನಾವು  ಮಳಿಗೆಯನ್ನೇ ಸೂರೆ ಮಾಡಬೇಕಿತ್ತು. ಅಲ್ಲಿನ ದೃಶ್ಯ ವೈಭವಕ್ಕೇ ಕಂಗಾಲಾದ ನಾವು “ಇಲ್ಲ, ಇಲ್ಲಾ…” ಎನ್ನುತ್ತ ಹೊರಗೋಡಿದ್ದೆವು. ಅದಕ್ಕೆ ನೆಪ ಎಂಬಂತೆ “ಊಟದ ಸಮಯವಾಯ್ತಲ್ಲಾ…” ಎಂದದ್ದಕ್ಕೆ ಉದಯ್  ಹೊಸದೇ ಪಟ್ಟು ಹಾಕಿದರು. ಇನ್ನೊಂದೇ ಉತ್ತಮ ಖಾನಾವಳಿಗೊಯ್ದು ರಾಜಸ್ತಾನೀ ಥಾಲೀಯನ್ನೇ ಆವಾಹಿಸಿದರು. ನಾವು “ಸ್ವಲ್ಪ ಬೇಗವಾದ್ದಕ್ಕೆ ಹಸಿವಿಲ್ಲ, ಸ್ವಲ್ಪ ಸಾಕು…” ಎನ್ನುವುದನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಬದಿಗೊತ್ತಿ, ಭರ್ಜರಿ ಭೋಜನವನ್ನೇ ಮಾಡಿಸಿಬಿಟ್ಟರು. ರಾಜಸ್ತಾನದ ಮೊದಲ ಮಧ್ಯಾಹ್ನ (ಜೈಪುರದಲ್ಲಿ) ನಾವು ಬೇಸ್ತು ಬಿದ್ದು ತಿಂದ ರಾಜಸ್ತಾನೀ ವಿಶೇಷ ತಿನಿಸು  ದಾಲ್-ಭಾಟೀ-ಚುರ್ಮಾ ಸೇರಿದಂತೆ ಮಹಾ ಥಾಲಿಗೂ ಇಲ್ಲಿನದ್ದಕ್ಕೂ ಗುಡ್ಡೆ – ಹಿಮಾಲಯದ ಅಂತರ! ಉದಯ್  ಅಕ್ಷರಶಃ ನಮ್ಮನ್ನು ಸೋಲಿಸಿಯೇ ಬಿಟ್ಟರು! (ತಪ್ಪು ತಿಳಿಯಬೇಡಿ, ಹೋಟೆಲಿನ ಬಿಲ್ಲನ್ನು ಅವರೇ ಕೊಟ್ಟರು)

ಅಪರಾಹ್ನದಲ್ಲಿ ಉದಯ್ ತಮ್ಮ ವೃತ್ತಿಯ ಅನಿವಾರ್ಯತೆಯಲ್ಲಿ ನಮಗೆ ತತ್ಕಾಲೀನ ವಿದಾಯ ಹೇಳಿದರು. ಅದಕ್ಕೂ ಮುನ್ನ, ಮರುದಿನದ ನಮ್ಮ ಜೈಸಲ್ಮೇರ್ ಕೋಟೆ ದರ್ಶನಕ್ಕೆ, ತನ್ನ ಇನ್ನೊಬ್ಬ ಚಡ್ಡಿ ದೋಸ್ತನ ತಮ್ಮನನ್ನು ಮಾರ್ಗದರ್ಶಿಯನ್ನಾಗಿ ನಿಕ್ಕಿ ಮಾಡಿದ್ದನ್ನು ತಿಳಿಸಿದರು. ಮತ್ತೆ ಮೆಹ್ರಾನ್ ಘಡ್ ಕೋಟೆ ಹಾಗೂ ನಗರದ್ದೇ ಉಮೀದ್ ಭವನ್ ಅರಮನೆಗಳನ್ನು ನೋಡಿದ ಮೇಲೆ ತನಗೆ ಫೋನ್ ಮಾಡಲೇಬೇಕೆಂದು ತಾಕೀತು ಮಾಡಿಯೇ ಹೋದರು. ಹೀಗೆ ಉದಯರ ಸ್ನೇಹ ಚಕ್ರವಾತದಲ್ಲಿ ದಿಕ್ಕೆಟ್ಟ ಗಿರಿಗಿಟ್ಲೆಯಾದ ಭರದಲ್ಲಿ ನಾನು ವ್ಯಕ್ತಿ ಪರಿಚಯದ ಸೇತು ಕೊಡುವುದನ್ನೇ ಮರೆತಿದ್ದೆ…

ನಮ್ಮ ರಾಜಸ್ತಾನ ದರ್ಶನದ ವ್ಯವಸ್ಥೆಯನ್ನು ಮಾಡಿದವರು ಜೋಧಪುರ ಮೂಲದ ರಾಕೇಶ್. ಈತ ಅಭಯನ ಪುಣೆ ವಿದ್ಯಾರ್ಥಿ ದಿನಗಳ (ಮೂರು ವರ್ಷ – ಎಫ್.ಟಿ.ಐ.ಐ) ಆತ್ಮೀಯ ಸಹಪಾಠಿ. ಸದ್ಯ ಮುಂಬೈಯಲ್ಲಿದ್ದರೂ ಊರಲ್ಲೇ ಇದ್ದ ಚಡ್ಡೀ ದೋಸ್ತ್ ಉದಯರಿಗೆ ವಹಿಸಿದ್ದರು. ರಾಕೇಶರ ಎರಡನೇ ಜೀವವೇ ಆದ ಉದಯ್, ಜೋಧಪುರದ ಪ್ರತಿಷ್ಟಿತ ಉದ್ಯಮಿ. ಅವರು ನಮ್ಮ ಹೋಟೆಲ್, ಬಾಡಿಗೆ ಕಾರು, ಮೆಹ್ರಾನ್ ಘಡ್ ವೀಕ್ಷಣಾ ವ್ಯವಸ್ಥೆಗಳನ್ನೆಲ್ಲ ಮೊದಲಿಗೆ ಸಜ್ಜುಗೊಳಿಸಿದ್ದರು. ಸಕಾಲಕ್ಕೆ ರೈಲ್ವೇ ನಿಲ್ದಾಣಕ್ಕೇ ಧಾವಿಸಿ, ನಮ್ಮ ಮುಖಪರಿಚಯ ಇಲ್ಲದಿದ್ದರೂ ರೈಲ್ವೇ ರಿಸರ್ವೇಶನ್ ಚಾರ್ಟ್ ನೋಡಿ, ಭೋಗಿ, ಜನಗಳನ್ನು ಅಂದಾಜಿಸಿ, ನಮಗೆ ಅಭೂತ ಸ್ವಾಗತದ ಅಪ್ಪುಗೆ ನೀಡಿದ್ದರು!

ಜೋಧಪುರದ ವೀಕ್ಷಣೆ ಮುಗಿಸಿದ ಆ ಸಂಜೆ ಮಾತಿಗೆ ಕಟ್ಟು ಬಿದ್ದು, ಎಲ್ಲೋ ಮಾರ್ಗದಂಚಿನಿಂದ ಅಭಯ ಉದಯರಿಗೆ ಫೋನಿಸಿದ್ದ. ಹಾಗೇ “ನೀವು ಬರಬೇಡಿ, ನಮಗೇನೂ ಬೇಡ, ಹೋಟೆಲಿಗೆ ಹೋಗಿ ಬಿದ್ದುಕೊಳ್ಳುತ್ತೇವೆ…” ಎಂಬ ಮಾತನ್ನೆಲ್ಲ ತಳ್ಳಿ ಹಾಕಿ, ಕಾರ್ ಚಾಲಕನಿಂದ ಸ್ಥಳ ಪತ್ತೆ ಪಡೆದು, ಕೆಲವೇ ಮಿನಿಟಿನಲ್ಲಿ ಉದಯ್ ಬಂದೇ ಬಂದರು. ಶುಡು ಶುಡು ಕಚೋರಿ, ಚಟ್ನಿಗಳ ತೊಟ್ಟೆ ಹಿಡಿದಿದ್ದರು. ಪಕ್ಕದ ಚಾಯ್ವಾಲಾನ “ಏಕ್ ದಂ ಸೂಪರ್ ಚಾಯ್…” ಮತ್ತೆ ಸೇರಿಕೊಂಡಿತು. ರಾತ್ರಿ ಇನ್ನೊಂದೇ ಜಬರದಸ್ತ್ ಊಟ ಕೊಡಿಸುವ ಅವರ ಹುನ್ನಾರವನ್ನು ನಾವು ಇದ್ದ ಬದ್ದ ದೇವರುಗಳ ಆಣೆ ಹಾಕಿ, ಉಪವಾಸ ಸುಳ್ಳು ಬಿಟ್ಟು ತಪ್ಪಿಸಿಕೊಂಡೆವು. ಆದರೂ ಮರುದಿನದ ನಮ್ಮ ಜೈಸಲ್ಮೇರ್ ದರ್ಶನದಿಂದ ತೊಡಗಿ, ನಾವು ರಾಜಸ್ತಾನದಲ್ಲಿದ್ದಷ್ಟೂ ದಿನ ಉದಯರ ಕಾಳಜಿಪೂರ್ಣ ಫೋನ್ ವಿಚಾರಣೆಗಳು ಬರುತ್ತಲೇ ಇತ್ತು. ಹಾಗೇ ತಲೆದೋರಿದ ಒಂದೆರಡು ಚಿಲ್ಲರೆ ಸಮಸ್ಯೆಗಳಿಗೆ ಅವರ ಯುಕ್ತ ಸ್ನೇಹದ ಸಲಹೆ ಆಸರೆಗಳೂ ಸಿಕ್ಕಿದ್ದು ಮರೆಯಲಾರೆವು.

ಮೆಹ್ರಾನ್ ಘಡದ ಕೋಟೆಯ ಅಂಶ…. 

ಜೋಧಪುರದ ಮೊದಲ ಭೇಟಿ ಮೆಹ್ರಾನ್ ಘಡ್. ಸುಮಾರು ನಾನೂರಡಿ ಎತ್ತರದ, ಅಗಾಧ ಕಲ್ಲಿನ ಗುಡ್ಡೆಯೇ ಇಮ್ಮಡಿಸಿದಂತೆ ಮೇಲೆ ವ್ಯಾಪಿಸಿದೆ ಮೆಹ್ರಾನ್ ಘಡ್ ಕೋಟೆ. ಪ್ರಥಮ ದರ್ಶನದಲ್ಲಿ, ಯಾರೂ “ಅದ್ಭುತ” ಎಂದು ಬಾಯಿ ಕಳೆಯುವಂತೇ ಇದೆ. ಇದರ ಮಹಾಗೋಡೆಗಳಲ್ಲಿ, ಎಂಟಕ್ಕೂ ಮಿಕ್ಕು ಭಾರೀ ಬಾಗಿಲುಗಳಲ್ಲಿ ಎದ್ದು ಕಾಣುವಂತೇ ಸುಮಾರು ಆರ್ನೂರು ವರ್ಷಗಳ ರೋಚಕ ಇತಿಹಾಸ ಅಚ್ಚೊತ್ತಿದೆ. ಓದುವ ಬಗೆಗಣ್ಣಿದ್ದರೆ ಅವು ಅಸಂಖ್ಯ ಯುದ್ಧಗಳ ವಿವರಗಳನ್ನೇ ಬಿತ್ತರಿಸಬಲ್ಲವು. ಹಿಂದೆಂದೂ ಇರದ ಒಕ್ಕೂಟ ಸ್ವರೂಪದಲ್ಲಿರುವ ಇಂದಿನ ಭಾರತಕ್ಕೆ, ಅವು “ವೃಥಾ ಮತಭ್ರಾಂತಿಯಲ್ಲಿ ಚೂರುಚೂರಾಗಬೇಡಿ” ಎಂದು ಹಿತವಚನವನ್ನೇ ಹೇಳಿಯಾವು. ಮಾರ್ಗದರ್ಶಿಯ ವಿವರಣೆಗಳಲ್ಲಿ ಇಂಥಾ ಉದಾತ್ತ ಸೂಚನೆಗಳನ್ನಷ್ಟೇ ಕಂಡುಕೊಳ್ಳುತ್ತಾ ಗಹನವಾಗಿ ಗ್ರಹಿಸಲು ಸಮಯ ಮತ್ತು ನಮ್ಮ ಪೂರ್ವಾಧ್ಯಯನ ಸಾಲದ್ದಕ್ಕೆ ವಿಷಾದಪಡುತ್ತಾ ಸುಮಾರು ಎರಡು ಗಂಟೆ ಸುತ್ತಾಡಿದೆವು.

ಮೆಹ್ರಾನ್ ಘಡದಲ್ಲಿ ನಾನು ದಾಖಲಿಸಿಕೊಂಡ ಚಿತ್ರಗಳನ್ನು ನಿರೂಪಣಾ ಸೌಕರ್ಯಕ್ಕಾಗಿ ಕೋಟೆ, ಅರಮನೆ ಮತ್ತು ನಗರವೆಂದು ಮೂರಾಗಿ ವಿಭಾಗಿಸಿಕೊಂಡಿದ್ದೇನೆ. ಅದರ ಕೋಟೆಯ ಅಂಶದಲ್ಲಿ ಬಾಹ್ಯ ಆಕ್ರಮಣಗಳನ್ನು ನಿರೋಧಿಸುವ ಹಲವು ಸುತ್ತಿನ ಭಾರೀ ಗೋಡೆಗಳು, ಅವುಗಳನ್ನು ಅಧಿಕೃತವಾಗಿ ಮಾತ್ರ ದಾಟಲು ಅವಕಾಶ ಕೊಡುವ ಘನ ಪಡಿಯುಕ್ತ ಮಹಾದ್ವಾರಗಳು ಎದ್ದು ತೋರುತ್ತವೆ. ಗೋಡೆಗಳ ಎತ್ತರದಲ್ಲಿ ಒಳಗಿನವರಿಗೆ ದೃಷ್ಟಿ ಮತ್ತು ರಕ್ಷಣಾತ್ಮಕ ಧಾಳಿಗನುಕೂಲವಾದ ಮರೆ ಮತ್ತು ಕಿಂಡಿ, ಒಳಮೈಯಲ್ಲಿ ಸಂಚಾರ ಮತ್ತು ಪೂರೈಕೆಗೆ ಸೂಕ್ತ ಮೆಟ್ಟಿಲು, ಓಣಿಗಳು ಗಮನಾರ್ಹವಾಗಿವೆ. ಇಂದು ಗೋಡೆಗಳೆತ್ತರದಲ್ಲಿ ಫಿರಂಗಿಗಳ ಸಾಲನ್ನು ಪ್ರದರ್ಶನಕ್ಕೆಂದೇ ನಿಲ್ಲಿಸಿದ್ದರೂ ಅವು ಯುದ್ಧ ಕಾಲದಲ್ಲಿ ಗುಡುಗಿದ ಸದ್ದು, ಎಬ್ಬಿಸಿದ ಹೊಗೆ ಮತ್ತು ವೈರಿ ಸೈನ್ಯಕ್ಕುಂಟು ಮಾಡಿದ ಹಾನಿಯನ್ನು ಎಣಿಸುವಾಗ, ಎಂಥಾ ಹಿಂಸಾವಿರೋಧಿಯೂ ಕ್ಷಣಕಾಲ ಹೆಮ್ಮೆಪಡದಿರುವುದು ಕಷ್ಟ.

ಮಾರ್ಗದರ್ಶಿಯ ಮಾತು ಮತ್ತು ಕೆಲವೆಡೆಗಳಲ್ಲಿ ಹಾಕಿದ ವಿವರಣಾ ಫಲಕಗಳು ಹೇಳಿದಂತೆ, ಕೆಲವೆಡೆಗಳಲ್ಲಿ ಗೋಡೆ ಮತ್ತು ಬಾಗಿಲುಗಳ ಮೇಲೆ ಹೊರಗಿನ ತೋಪು ಧಾಳಿ ಉಂಟು ಮಾಡಿದ ಗಾಯಗಳನ್ನು ಇಂದೂ ಕಾಣಬಹುದು. ಹಾಗೇ ಜರ್ಝರಿತವಾದ ಗೋಡೆ ಬಾಗಿಲುಗಳ ದುರಸ್ತಿಯೊಡನೆ, ಒಂದೆಡೆ ಹೆಚ್ಚುವರಿ ಗೋಡೆ ಸುತ್ತನ್ನೇ ನಿರ್ಮಿಸಿದ್ದು ಕಂಡೆವು. ಗೋಡೆಗಳಿಗೆ ಬಲ ಹೆಚ್ಚುವಂತೆ ಸ್ಪಷ್ಟ ಮೂಲೆ ಅಥವಾ ಏಣುಗಳಿಲ್ಲದಂತೆ ನಿರ್ಮಿಸಿದ್ದಾರೆ. ಓಣಿಗಳು ಸಪುರವಾಗಿಯೂ ಓರೆಯಾಗಿಯೂ ಇರುವುದರಿಂದ ಗೋಡೆ ಹಾಗೂ ದ್ವಾರಗಳ ಮೇಲೆ ಆಕ್ರಮಣಕಾರರು ಭಾರೀ ದಾಳಿ ಮಾಡುವುದೂ ಕಷ್ಟವೆನ್ನುವಂತಿವೆ. ಜತೆಗೇ ಅವುಗಳ ನೆತ್ತಿಯಲ್ಲಿರುವ ರಕ್ಷಕರಿಗೆ ಹೆಚ್ಚಿನ ವ್ಯೂಹಾತ್ಮಕ ಬಲವನ್ನೂ ಕೊಡಬಲ್ಲವು. ಯುದ್ಧ ಅಥವಾ ಮೈತ್ರಿಗಳ ಸೋಂಕಿಲ್ಲದೆ ಕೇವಲ ವೀಕ್ಷಕರಾಗಿ ನಡೆದ ನಮ್ಮಲ್ಲೂ ಅವು ಅಗೋಚರ ಭಯ ಮತ್ತು ವಿವರಿಸಲಾಗದ ಗೌರವವನ್ನು ಹುಟ್ಟಿಸಿದವು.

ಮೆಹ್ರಾನ್ ಘಡದ ಅರಮನೆ ಮತ್ತು ಶೀಷ ಮಹಲ್ …. 

ಒಳಗಿನ ವಸತಿ ಹಾಗೂ ನಿತ್ಯಜೀವನವನ್ನು ಚಂದಗಾಣಿಸಲಿದ್ದ ಅರಮನೆ, ಇಂದು ಹೊಸತೇ ವಿನ್ಯಾಸದಲ್ಲಿ ಪ್ರದರ್ಶನಾಂಕಗಳೇ ಆಗಿವೆ. ತರಹೇವಾರಿ ಪಲ್ಲಕ್ಕಿ, ಅಂಬಾರಿ, ತೊಟ್ಟಿಲು, ಖಡ್ಗ – ಒರೆ, ಎರಡು ಶತಮಾನಗಳ ಹಿಂದೆ ಊರಿಗೆ ಬಂದ ಅಥವಾ ಇನ್ನೆಲ್ಲೋ ಕಂಡ ರೈಲ್ವೇ ನಿಲ್ಡಾಣ ಒಂದರ ಮಾದರಿ….. ಹೀಗೆ ಕೋಣೆಯಿಂದ ಕೋಣೆಗೆ ಹೋದಷ್ಟೂ ಎರಡು ಮಹಡಿಗಳ ಎತ್ತರಕ್ಕೂ ನೋಡಿ ತಿಳಿಯುವ ಸಂಗತಿಗಳು ನೂರಿದ್ದವು. ಸಾಲುಗಟ್ಟಿದಂತೆ ಪಡಿಗಳಿಲ್ಲದ ದ್ವಾರಗಳು, ಸಾಲಂಕೃತ ತೋರಣದ ಕಿಟಕಿಗಳು, ಕುಸುರಿ ಕುಂದಣದ ಪಡಿಗಳು ನೋಡಿದಷ್ಟು ಇದ್ದವು. ಅಲ್ಲಿನ ತೆರೆದ ಮಾಡಿನ ಒಳಾಂಗಣಗಳಿಗೆ ಇಳಿದಲ್ಲಿ, ಕಿಟಕಿ ಬಾಲ್ಕನಿಗಳ ಹೊರಾಲಂಕಾರ ಈ ಕಾಲಕ್ಕೂ ಸುಂದರವಾಗಿ ಉಳಿದು ಬಂದಿರುವುದು ಅನನ್ಯ, ಅದ್ಭುತವೇ ಸರಿ. ಹಾಗೇ ನಾವು ಒಂದು ಅಂಗಳದಲ್ಲಿದ್ದಂತೆ, ಸಾಂಪ್ರದಾಯಿಕ ಮುಂಡಾಸಿನ ವ್ಯಕ್ತಿಯೊಬ್ಬ ಮೇಲಿನೊಂದು ಕಿಟಕಿಯಲ್ಲಿ ಇಣುಕಿದ್ದ. ಆಗ ಒಮ್ಮೆಗೇ ನನ್ನ ಮನೋಭಿತ್ತಿಯಲ್ಲಿ ಕನಿಷ್ಠ ಇನ್ನೂರು ವರ್ಷಗಳ ಹಿಂದಿನೊಬ್ಬ ರಾಜಕಾರ್ಯ ಪ್ರವೀಣನೇ ಪ್ರತ್ಯಕ್ಷನಾದಂತಾಯ್ತು!

ಜೈಪುರದ ನಹಾರ್ ಘಡದಲ್ಲಿ ಶೀಷ ಮಹಲನ್ನು “ಎಲ್ಲೂ ಇಲ್ಲದ್ದು” ಎಂಬಂತೆ ಬಿಂಬಿಸಿ, ದುಬಾರಿ ದರ ವಸೂಲು ಮಾಡಿದ್ದು ಹೇಳಿದ್ದೆ. ಅಂಥದ್ದೇ ಇನ್ನೊಂದನ್ನು ಅದಕ್ಕೂ ಹಿಂದಿನವೇ ಅಮೇರ್ ಅರಮನೆಯಲ್ಲಿ ಉಚಿತವಾಗಿ ನೋಡಿದ್ದನ್ನೂ ಹೇಳಿದ್ದೇನೆ. ಈಗ ಇಲ್ಲೂ (ಮುಂದೆಯೂ ಕೆಲವು ಸಿಕ್ಕವು) ಅಂದರೆ ಮೆಹ್ರಾನ್ ಘಡದ ಅರಮನೆಯಲ್ಲೂ ಶೀಷ ಮಹಲ್, ಒಟ್ಟಾರೆ ಕೋಟೆಯ ಭಾಗವಾಗಿ ಉಚಿತವಾಗಿಯೇ ನೋಡ ಸಿಕ್ಕಿತು. ಎಲ್ಲೆಡೆಗಳಂತೆ ಇಲ್ಲೂ ಸುತ್ತು ಕಟ್ಟಿದ ಕಟಕಟೆಯ ಹಿಂದೆ ನಿಂತು, ದ್ವಾರಗಳಲ್ಲಿ ಇಣುಕಿ ಸಿಕ್ಕಿದ್ದನ್ನು ನೋಡಿ ಸಂತೋಷಿಸಿದೆವು.

ಹಿಂದಿನ ಕಾಲದಲ್ಲಿ ಅರಸ-ಸರಸಿಯರ, ಶ್ರೀಮಂತರ ತೀರಾ ಆಂತರಂಗಿಕ ವಾಸಕ್ಕೆ ಅಗತ್ಯವಾದ ಒಂದೆರಡು ಕೋಣೆಗಳನ್ನು, ವಿದ್ಯುದ್ದೀಪವಿಲ್ಲದ ಕಾಲಧರ್ಮಾನುಸಾರ, ಶೀಷ ಮಹಲ್ ಮಾಡುವುದು ಅನಿವಾರ್ಯವೇ ಇದ್ದಿರಬೇಕು. ಹಗಲಲ್ಲಾದರೂ ಕಿಟಕಿ ಛತ್ತುಗಳ ಮೂಲಕ ಬಾರದ ಬೆಳಕನ್ನು, ಕೋಣೆಯ ಒಳಗೆ ಹತ್ತಿಸಿದ ಎಣ್ಣೆ ದೀಪಗಳಲ್ಲೇ ಉಜ್ವಲಗೊಳಿಸಲು, ಗೋಡೆ ಮಾಡುಗಳಿಗೆಲ್ಲ ಕನ್ನಡಿ ಅಂಟಿಸಿಕೊಂಡವೇ ಶೀಷ ಮಹಲ್ ಅರ್ಥಾತ್ ಕನ್ನಡಿಮನೆ. ಕನ್ನಡಿಗಳಿಗೆ ಅಂಚುಗಟ್ಟಿದಂತೋ ನಡುನಡುವೆ ಸುಂದರ ವಿನ್ಯಾಸ ಮೂಡುವಂತೋ ಅಸಾಧಾರಣ ಪ್ರತಿಫಲನ ಗುಣವುಳ್ಳ ವಿವಿಧ ಮಣಿ ರತ್ನಗಳನ್ನೋ ಚಿನ್ನ ಬೆಳ್ಳಿ ಕುಸುರಿ ಫಲಕಗಳನ್ನೋ ಸಾಮರ್ಥ್ಯಾನುಸಾರ ಬಳಸುವುದೂ ಇದ್ದಿರಬೇಕು. ಆ ದೇಶಗಳು ಯುದ್ಧ ಸೋತ ಕಾಲದಲ್ಲಿ, ವೈರಿ ಪಡೆ ಕೋಶ, ಸ್ವತ್ತುಗಳೊಡನೆ ಇಂಥಾ ರಚನೆಗಳನ್ನೂ ಕೇವಲ ಚಿನ್ನ, ಬೆಳ್ಳಿ, ರತ್ನ, ಮುತ್ತುಗಳಿಗಾಗಿ ಧ್ವಂಸ ಮಾಡುವುದು ಸಹಜವೇ ಇತ್ತು. ಆ ಲೆಕ್ಕದಲ್ಲಿ, ಇಂದು ಊರ್ಜಿತದಲ್ಲಿರುವ ಹಳೆಗಾಲದ ಅಥವಾ ಜೀರ್ಣೊದ್ಧಾರಗೊಂಡು ಪ್ರದರ್ಶನದಲ್ಲಿರುವ ಶೀಷ ಮಹಲ್ಲುಗಳ ಆರ್ಥಿಕ ಹಾಗೂ ಕಲಾತ್ಮಕ ಮೌಲ್ಯ ಮಾಪನ ಮಾಡುವುದು ಸುಲಭ ಕಾರ್ಯವಲ್ಲ. ಜತೆಗೇ ಅವನ್ನೆಲ್ಲ ಸಾಮಾನ್ಯರ ಅವಗಾಹನೆಗೆ ಮುಕ್ತವಾಗಿ ಇಡುವುದೂ ಅಸಾಧ್ಯವೇ ಸರಿ.

ಅರಮನೆಯ ಸಪುರ ಓಣಿ ಅಥವಾ ಏರಿಳಿಯುವ ಸೌಕರ್ಯಗಳೆಲ್ಲ ವಿರಳ ಮಂದಿಯ ದೈನಂದಿನ ಆವಶ್ಯಕತೆಗಳಿಗಾಗಿಯೇ ರೂಪುಗೊಂಡವು. ಅವನ್ನು ಹೊಸ ಜಮಾನದ ಅಗತ್ಯಕ್ಕೆ, ಅಂದರೆ ಹಿಂಡು ಹಿಂಡಾಗಿ ಬರುವ ಪ್ರವಾಸಿಗಳ ಪ್ರದರ್ಶನ ಒಗ್ಗಿಸಿಕೊಳ್ಳುವುದು ತುಸು ತ್ರಾಸದಾಯಿಯೇ ಸರಿ. ಆದರೆ ನಮ್ಮ ಅದೃಷ್ಟಕ್ಕೆ ನಾವು ರಾಜಸ್ತಾನದಲ್ಲಿದ್ದಷ್ಟೂ ದಿನ ಸೂರ್ಯ ಕೆಂಡಾಮಂಡಲ ಕೋಪ ತೋರುವುದು ಬಿಟ್ಟು ಮಂಜಿನ ಮುಸುಕು ಹಾಕಿಕೊಂಡಿದ್ದ. ಸೆಕೆ, ಬೆವರು, ದಾಹ, ಅನ್ಯರ ವಾಸನೆ (ನಮಗೆ ನಾವು ಕಸ್ತೂರಿ ಮೃಗಗಳು, ಬಿಡಿ!) ಎಂದೆಲ್ಲಾ ನಾವು ತ್ರಸ್ತರಾಗಲೇ ಇಲ್ಲ. ಈ ಕೋಟೆ ಎಂದಲ್ಲ, ನಾವು ಹೋದ ಅಷ್ಟೂ ರಾಜಸ್ತಾನೀ ಕೋಟೆಗಳಲ್ಲಿ ಬಹುತೇಕ ಭಾಗಗಳು ವರ್ತಮಾನ ಜನಜೀವನಕ್ಕೆ ಹೊರತಾಗಿವೆ. ಅವುಗಳಲ್ಲೂ ಹೆಚ್ಚು ಉಪಯೋಗಕ್ಕೆ ದಕ್ಕದ ಕೋಣೆ/ ಜಗುಲಿಗಳನ್ನು ಸಣ್ಣ ಮಟ್ಟಿಗೆ ಪ್ರವಾಸಿಗಳ ಶೌಚ, ಚಾ ತಿನಿಸು, ಪುಸ್ತಕ, ಸಾಂಪ್ರದಾಯಿಕ ಜವುಳಿ, ಕುಸುರಿ ವಸ್ತುಗಳ ಮಳಿಗೆಗಳಿಗೆ ಕೊಟ್ಟದ್ದು ಇವೆ. ಹಾಗೇ ಅವನ್ನೆಲ್ಲ ತಕ್ಕಮಟ್ಟಿಗೆ ಶುಚಿ, ಶಿಸ್ತುಗಳಲ್ಲಿ ಕಾಪಾಡಿಕೊಂಡಿದ್ದಾರೆ.

[ ಕುಂಕುಮದಲ್ಲದ್ದಿದ ಹಸ್ತ ಮುದ್ರೆ

ನಾನು ಕಂಡ ಸಿನಿಮಾ ಪದ್ಮಾವತಿಯಲ್ಲಿ, ಸೋತ ಚಿತ್ತೋರ್‍ ಘಡದ ರಾಣೀವಾಸದ ಮಂದಿ, ಆತ್ಮಾಹುತಿಗೆ ಮುನ್ನ, ಸಾಂಕೇತಿಕ (ಕುಂಕುಮ) ರಕ್ತ-ರಂಜಿತ ಹಸ್ತ ಮುದ್ರೆಗಳನ್ನು ಗೋಡೆಯಲ್ಲಿ ಮೂಡಿಸಿದ್ದರು. ಇನ್ನೊಂದೇ (ಬಹುಶಃ ಟೀವೀ ಸರಣಿಯ) ಕಥನದಲ್ಲಿ ಅದೇ ಪದ್ಮಿನಿ, ವಧೂಗೃಹಪ್ರವೇಶದ ವಿಧಿ ಎನ್ನುವಂತೆ, ಖಾಸಾ ಪೂಜಾ ಮಂದಿರದ ಗೋಡೆಯಲ್ಲಿ, ರಾಗ ರಂಜಿತ ಹಸ್ತ ಮುದ್ರೆ ಮೂಡಿಸುತ್ತಾಳೆ. ಮೆಹ್ರಾನ್ ಘಡದ ಎದ್ದು ಕಾಣುವ ಗೋಡೆಯೊಂದರಲ್ಲಿ ಹೀಗೇ ರಕ್ತವರ್ಣ ರಂಜಿತ ಹಸ್ತಮುದ್ರೆಯ ಉಬ್ಬು ಶಿಲ್ಪ ಮೆರೆದಿದೆ. ಏನಿದರ ಔಚಿತ್ಯ? ನನಗೆ ತಿಳಿದಿಲ್ಲ, ಬಲ್ಲವರು ತಿಳಿಸಬೇಕು. ]

ಪಂಚ ತಾರಾ ಸ್ಪರ್ಷದ ಉಮೇದ್ ಭವನ್

ಮೆಹ್ರಾನ್ ಘಡ್ ತೆಕ್ಕೆಯಿಂದ ತಪ್ಪಿಸಿಕೊಂಡು, ಸಂಜೆಗೆ ಜೋಧಪುರ ಪೇಟೆಗೇ ತಾಗಿಕೊಂಡಿರುವ ಮೂರನೇ ವಿಸ್ತರಣೆ, ಅಂದರೆ ಉಮೇದ್ ಭವನ ಅಥವಾ ನಗರದ ಅರಮನೆಗೆ ಹೋದೆವು. ಬ್ರಿಟಿಷ್ ಮಹಾಛತ್ರದಡಿಯಲ್ಲಿ, ಯಥಾನುಶಕ್ತಿ ಅವರ ಪಾದ ಒತ್ತುತ್ತ, ತನ್ನ ಐಶಾರಾಮದ ‘ಗೂಡಂಗಡಿ’ ನಡೆಸಿದ ಅರಸರಲ್ಲಿ ಜೋಧಪುರದ ಅರಸ ಉಮೇದ್ ಸಿಂಗ್ ಕೂಡಾ ಒಬ್ಬ. ಸತತ ಮೂರು ವರ್ಷಗಳಿಂದ ಬರಪೀಡಿತವಾದ ಜೋಧಪುರ ಸಂಸ್ಥಾನದ ಪ್ರಜಾವರ್ಗದ ಮೇಲೆ ಈತ ಅಪಾರ ಕರುಣೆಯಲ್ಲಿ, ಹದಿನಾಲ್ಕು ವರ್ಷಗಳ ದೀರ್ಘ ಕಾಲ ನಡೆಸಿದ ಉದ್ಯೋಗ ಖಾತರಿ ಕಾಮಗಾರಿಯಲ್ಲಿ ಮೇಲೆದ್ದು ನಿಂತ (ಕೆರೆ, ತೋಪುಗಳಲ್ಲ) ಭರ್ಜರಿ ಅರಮನೆಯೇ ಉಮೇದ್ ಭವನ. (ಗಮನಿಸಿ: ಹೀಗೇ ಬರ ಮೈಸೂರಿನ ಪ್ರಜಾಕೋಟಿಯನ್ನು ಕಾಡಿದಾಗ, ಇಲ್ಲಿನ ಅರಸರು ನಿರ್ಮಿಸಿದ್ದು ವಾಣೀವಿಲಾಸ ಸಾಗರ, ಕೃಷ್ಣರಾಜ ಸಾಗರಗಳಂತ ನೀರಾವರಿ ಯೋಜನೆಗಳು!) ಉಮೇದ್ ಭವನ ಇಂದಿಗೂ ಉಮೇದ್ ಸಿಂಗರ ಮೊಮ್ಮಗನ ಆಡಳಿತದಲ್ಲಿದೆ. ಇದರ ಮಹಾವಿಸ್ತಾರದಲ್ಲಿ ಆತನ ವೈಯಕ್ತಿಕ ವಸತಿಯೊಡನೆ, ಮುನ್ನೂರಕ್ಕೂ ಮಿಕ್ಕು ‘ಕೋಣೆ’ಗಳಿರುವ ತಾಜ್ ಪಂಚತಾರಾ ಹೋಟೆಲ್ ಮತ್ತು ಸಾರ್ವಜನಿಕ ಪ್ರದರ್ಶನಾಲಯಗಳೂ ನಡೆಯುತ್ತಿವೆ.

ಉಮೇದ್ ಭವನದ ಪ್ರದರ್ಶನಾಂಕಣ ಹೆಚ್ಚು ರಾಜಭೋಗದ ಪ್ರದರ್ಶನಾಂಕಣವೇ ಸರಿ. ಸಹಜವಾಗಿ ಅದು ಸಾಕಷ್ಟು ಭದ್ರತೆಯೊಡನೆ ಹಲವು (ಹಣಕಾಸಿನ ಲೆಕ್ಕದಲ್ಲಿ) ಬೆಲೆಬಾಳುವ ಪ್ರದರ್ಶಿಕೆಗಳನ್ನು ತೆರೆದಿಟ್ಟಿದೆ. ಆದರೆ ಮೊತ್ತದಲ್ಲಿ ಅದು ಜನ ಸಂಸ್ಕೃತಿಯ ಪ್ರತಿನಿಧಿಯಾಗಿ ಕಾಣದಿದ್ದುದಕ್ಕೋ ಏನೋ ನಾವು ವಿವರಗಳಲ್ಲಿ ನೋಡುವ ಉಮೇದು ಕಳೆದುಕೊಂಡು ಬೇಗ ಹೊರಬಿದ್ದೆವು.

ಮೊದಲೇ ಹೇಳಿದಂತೆ, ಆತ್ಮೀಯ ಉದಯರ ಸಂಜೆ ಉಪಚಾರವನ್ನು ಸ್ವೀಕರಿಸಿ ಹೋಟೆಲ್ ಸೇರಿಕೊಂಡೆವು. ಉಳಿದವರು ರಾತ್ರಿಯೂಟದ ನೆಪಕ್ಕೆ ಆಯ್ದ ತಿನಿಸುಗಳನ್ನು ಕೋಣೆಗೇ ತರಿಸಿಕೊಂಡರು. ಮರುದಿನದ ಕಲಾಪಗಳ ಒತ್ತಡಕ್ಕೆ ಹೆಚ್ಚಿನ ಶಕ್ತಿ ಕೊಡು ತಾಯೀ ಎಂಬ ಪ್ರಾರ್ಥನೆಯೊಡನೆ ನಿದ್ರಾದೇವಿಗೆ ಶರಣಾದೆವು.

(ಮುಂದುವರಿಯಲಿದೆ)

0 Comments

Submit a Comment

Your email address will not be published. Required fields are marked *