ಗಂಟೆಗಳ ವಿಮಾನವಲ್ಲ, ದಿನಗಳೆವ ದಾರಿ
(ಅಧ್ಯಾಯ ಒಂದು)
ನಿಮಗಾಗಿ ಪ್ರವಾಸ..
ಟ್ರಾವೆಲ್ ಫಾರ್ ಯೂ – ಬಾಲಕೃಷ್ಣರ ನೇತೃತ್ವದ ಸಂಘಟನೆ. ಇದು ಮರುವಳ ನಾರಾಯಣ ಭಟ್ ದಂಪತಿಯ ಪ್ರೇರಣೆಯ ತಂಡದೊಡನೆ, ಸುಮಾರು ಹತ್ತು ದಿನಗಳ ಲೇಹ್-ಲದ್ದಾಕ್ ಪ್ರವಾಸ ಆಯೋಜಿಸಿತ್ತು. ನಾವು (ದೇವಕಿ ಸಹಿತ) ಸೇರಿಕೊಂಡೆವು. ಸುಮಾರು ಮೂರು ತಿಂಗಳ ಕಾಲ ಯೋಜನೆ, ವಾಟ್ಸಪ್ ಗ್ರೂಪಿನ ಚರ್ಚೆ ಮತ್ತು ಅಂತಿಮ ಭಾಗಿಗಳ ಪಟ್ಟಿಯೊಡನೆ ಸಮ್ಮಿಳನವನ್ನೂ ಮಾಡಿದ್ದಕ್ಕೆ ಪ್ರವಾಸ ಬಹಳ ಚಂದವಾಗಿ ನಡೆಯಿತು. ಮಂಗಳೂರು – ದಿಲ್ಲಿ ಮತ್ತೆ ವಾಪಾಸು ಮಾತ್ರ ವಿಮಾನಯಾನ, ವೈಯಕ್ತಿಕ ಕಾರಣಗಳಿಗಾಗಿ ಬೆಂಗಳೂರು ಮತ್ತು ದಿಲ್ಲಿಯಿಂದಲೂ ಕೆಲವರು ಸೇರಿಕೊಂಡದ್ದಿದ್ದರೂ ಒಟ್ಟಾರೆ ಮೂವತ್ತು ಮಂದಿ ಅಪ್ಪಟ ಕನ್ನಡಿಗರೇ ಎಲ್ಲ. ತಂಡದಿಂದ ಕೊನೆಯ ಎರಡು ದಿನ ಕಳಚಿಕೊಂಡು, ಅಂದರೆ ಲೇಹಿನಿಂದಲೇ ಮರಳುವ, ಎರಡು ದಿನ ಸೇರಿಸಿಕೊಂಡು ವೈಷ್ಣೋದೇವಿ ನೋಡಿ ಬರುವ ಅವಕಾಶವೂ ಮುಕ್ತವಿತ್ತು. ಮಂಗಳೂರಿನಿಂದಲೇ ಬಾಲಕೃಷ್ಣ, ಗಣೇಶ್ ಮತ್ತು ಚೇತನ್ ಸಂಘಟಕರಾಗಿಯೂ, ದಿಲ್ಲಿಯಿಂದಲೇ ನಮಗೆ ಒಗ್ಗುವ ತಿಂಡಿ ತೀರ್ಥ ಕೊಡಲೆಂದು ಸಣ್ಣ ಅಡುಗೆ ತಂಡವೂ ಜತೆಗೊಟ್ಟಿತ್ತು.
ಸುಮಾರು ನಲ್ವತ್ತು ಲಕ್ಷ ವರ್ಷಗಳ ಹಿಂದಿನ ಭೂಗೋಳದಲ್ಲಿ, ಇಂದಿನ ರೂಪದಲ್ಲಿರದ ಭಾರತ ಖಂಡ, ವರ್ಷಕ್ಕೆ ಐದೈದು ಸೆಂಟಿಮೀಟರಿನಷ್ಟೇ ಉತ್ತರಕ್ಕೆ ಚಲಿಸಿ (ಖಂಡಾಂತರ ಚಲನೆ) ಯುರೋಪ್ ಖಂಡದೊಡನೆ ಕೂಡಿಕೆಯಾಗಿತ್ತು. ಈ ಮಹಾ ಸಂಗಮದಲ್ಲಿ ಅರಚಿ ಮೇಲೆದ್ದ, ಇನ್ನೂ ಏರುತ್ತಲೇ ಇರುವ ಭೂ ಭಾಗವೇ ಹಿಮಾಲಯ ಪರ್ವತ ಶ್ರೇಣಿ. ಭೂಮಿ ಪ್ರಾಯದ ಗಣನೆಯಲ್ಲಿ ಇದು ತೀರಾ ಕಿರು ಹರಯವೇ ಸರಿ. ಆದರೆ ಯಃಕಶ್ಚಿತ್ ಮನುಷ್ಯ ಜೀವಿಯ ಲೆಕ್ಕದಲ್ಲಿ ಕೆಲವೇ ಸಾವಿರ ವರ್ಷಗಳ ಮತ್ತು ತೀರಾ ಸೀಮಿತ ಪ್ರದೇಶಗಳಲ್ಲಷ್ಟೇ ಒಡ್ಡಿಕೊಂಡ ನೆಲವಿದು. ಭಾರತದ ಪ್ರಾದೇಶಿಕ ಹವಾಭಿನ್ನತೆಗಳ ಅಳತೆಗೋಲಿನಲ್ಲಿ ದಕ್ಷಿಣ ಭಾರತದ ಮಳೆಗಾಲ, ಹಿಮಾಲಯದ ವಲಯಕ್ಕೆ ಬೇಸಗೆ ಎಂಬ ಅರಿವಿನಲ್ಲೇ ನಮ್ಮ ಪ್ರವಾಸ ಆಯೋಜಿಸಿದ್ದೆವು. ಆದರೂ ಸಮುದ್ರ ಮಟ್ಟದ ನಮಗೆ ಅಲ್ಲಿನ ಚಳಿ ಮತ್ತು ಔನ್ನತ್ಯ ಕಾರಣವಾದ ವಾಯು ವಿರಳತೆ ಕಾಡುವ ಕುರಿತು ಮುನ್ನೆಚ್ಚರಿಕೆ ವಹಿಸಿದ್ದೆವು. ನಾವಿಬ್ಬರು ಜೂನ್ ಹದಿನಾರರಂದು ಮಂಗಳೂರು ಬಿಟ್ಟೆವು. ಬೆಂಗಳೂರಿನಲ್ಲಿ ಮಗನ ಮನೆಯಲ್ಲುಳಿದು, ಮರು ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ತಂಡಕ್ಕೆ ಸೇರಿಕೊಂಡೆವು.
ಬೆಂಗಳೂರು ಮಳೆ ವಿರಳದ ದಿನಗಳಲ್ಲಿತ್ತು. ಹಾಗಾಗಿ ನಾವು ವಿಮಾನ ಸೇರುವುದಾಗಲೀ ಉಡ್ಡಯನವಾಗಲೀ ಕಷ್ಟವಾಗಲಿಲ್ಲ. ಆದರೆ ಬೇಗನೆ ಮೋಡಗಡಲಲ್ಲಿ ಪೂರ್ಣ ಮುಳುಗಿ, ನೆಲದ ಎಲ್ಲಾ ನಿಶಾನೆಗಳನ್ನು ಮರೆಮಾಚಿ ಸಾಗುವ ಶ್ವೇತ ಹಂಸವಾಗಿ ಸಾಗಿತು. ಸರಾಸರಿ ೩೫೦೦೦ ಅಡಿ ಎತ್ತರದಲ್ಲಿ, -೫೦ ಡಿಗ್ರಿ ಶೈಥ್ಯದಲ್ಲಿ ಅದು ಸಾಗಿದ್ದರೂ ವಿಮಾನದ ವ್ಯವಸ್ಥೆಯಿಂದ ನಮಗೆ ಔನ್ನತ್ಯದ ಸಂಕಟ, ಚಳಿಯ ಬಾಧೆ ಉಂಟಾಗಲಿಲ್ಲ. ಮೋಡಗಳ ರೂಪದಲ್ಲಿ ಊಹಾ ಮೂರ್ತಿಗಳನ್ನು ಕಾಣುತ್ತ, ವಿಪರೀತ ಬಣ್ಣ, ಬಿಗಿತಗಳ ಗಗನ ಸಖಿಯರ ಓಡಾಟ ನೋಡುತ್ತ, ಅವರು ಮೆರೆದಾಡಿಸುತ್ತಿದ್ದ ದುಬಾರಿ ಬೆಲೆಯ ಜುಜುಬಿ ತಿಂಡಿ ತೀರ್ಥಗಳನ್ನು ನಿರಾಕರಿಸುವಂತೆ ಟ್ರಾವೆಲ್ ಫಾರ್ ಯೂ ಕೊಟ್ಟಿದ್ದ ಸ್ವಾದಿಷ್ಟ ಬುತ್ತಿಯನ್ನು ಚಪ್ಪರಿಸುತ್ತ, ಸುಮಾರು ಎರಡೂ ಕಾಲು ಗಂಟೆ ಕಳೆದೆವು.
ಬೆಂಗಳೂರ ಮೊಸರ ಭಾಂಡದಿಂದ ಎದ್ದವರಿಗೆ, ಹೊಂಜು (ಹೊಗೆ, ದೂಳು, ಮಂಜು) ಮುಸುಕಿದ, ಕಂದು ಆಯತಕಾರದ ಹೊಲ ಮತ್ತು ಹಸುರು ಬಳುಕು ರೇಖೆಗಳ ನಾಲೆ ಕಂಡಾಗ ದಿಲ್ಲಿ ಸಮೀಪಿಸಿದ್ದು ತಿಳಿಯಿತು. ಹೊಲ, ಜಲಜಾಡುಗಳು ವಿರಳವಾಗುತ್ತ, ಕಿಕ್ಕಿರಿದ ನಾಲ್ಕೆಂಟು ಕರಿ ಮಾರ್ಗಗಳು, ವಿಕಾರ ಮೊಳಕೆಗಳಂತ ಬಹುಮಹಡಿ ಸಂಕೀರ್ಣಗಳು ಹೆಚ್ಚುತ್ತಾ ಹೋದಂತೆ ನಾವು ದಿಲ್ಲಿಯಲ್ಲಿಳಿದಿದ್ದೆವು. ಬೆಂಗಳೂರಿನಲ್ಲಿ ಮೂವತ್ತು ಡಿಗ್ರಿ ಎಂದು ಕೇಳಿದ್ದ ಉಷ್ಣತೆ, ಇಲ್ಲಿ ನಲ್ವತ್ತರಲ್ಲಿದೆ ಎಂಬ ಘೋಷಣೆ ಬಂದಾಗ ಒಮ್ಮೆ ಊಫ್ ಎಂದನ್ನಿಸಿದ್ದು ವಿಶೇಷವಲ್ಲ. ಆದರೆ ವಿಮಾನ ಮತ್ತು ನಿಲ್ದಾಣದ ಸಂತುಲಿತ ಹವೆಯ ಆವರಣ ಕಳಚುವ ಮುನ್ನ, ನಮ್ಮನ್ನೇ ಕಾದಿದ್ದ ಮೂರು ಹವಾನಿಯಂತ್ರಿತ ಟೆಂಪೋ ಟ್ರಾವೆಲ್ಲರ್ ಸೇರಿದ್ದರಿಂದ ನಾವು ಸಂತುಷ್ಟರೇ ಇದ್ದೆವು. ಹೆಚ್ಚುವರಿಯಾಗಿ ಸೇರಿಕೊಂಡ ಕಾರಿನಲ್ಲಿದ್ದ ಅಡುಗೆ ತಂಡ ಕೊಟ್ಟ ಸ್ವಾಗತ ಪಾನಕ ಸೀಪುತ್ತ, ನಗರದ ಗದ್ದಲಗಳು ಕೇಳದಂತೆ ನಮ್ಮದೇ ಸಡಗರದ ಮಾತುಗಳೊಡನೆ “ಚಂಡೀಘಡ್ ಚಲೋ” ಎಂದಿದ್ದೆವು.
೨. ಚಂಡೀಘಡದ ದಾರಿಯಲ್ಲಿ…
ನಮ್ಮೀ ಪ್ರವಾಸದ ಪ್ರಧಾನ ಲಕ್ಷ್ಯ – ಲೇಹ್-ಲದ್ದಾಕ್. ದಿಲ್ಲಿಯಿಂದ ಲೇಹಿಗೆ (೯೪೮ ಕಿಮೀ, ಪ್ರಯಾಣಾವಧಿ ಕೇವಲ ಒಂದು ಗಂಟೆ ಹತ್ತು ಮಿನಿಟು) ಹಾಗೆ ಧಾರಾಳ ವಿಮಾನ ಸೌಕರ್ಯಗಳೂ ಇವೆ. ಅದರಿಂದ ಉಳಿಸುವ ಸಮಯ ಮತ್ತು ಶ್ರಮದ ಲೆಕ್ಕ ಹಿಡಿದರೆ, ಕನಿಷ್ಠ ಮೂರು ದಿನಗಳ ಮಾರ್ಗಕ್ರಮಣಕ್ಕೆ ತಗಲುವ ವೆಚ್ಚ ಏನೂ ಅಲ್ಲ. ಆದರೆ ಮಾರ್ಗ ಪಯಣದಲ್ಲಿ ಗಳಿಸುವ ಅನುಭವ ಹೆಚ್ಚು. ಇನ್ನೂ ಮುಖ್ಯವಾಗಿ, ದಿಲ್ಲಿಯಿಂದ (ಸಮುದ್ರ ಮಟ್ಟದಿಂದ ೭೫೩ ಅಡಿ) ಲೇಹ್-ಗಾಗುವಾಗ (ಸಮ ೧೧,೫೬೨) ಒಮ್ಮೆಲೇ ಸಾವಿರಾರು ಅಡಿ ಎತ್ತರ ಗಳಿಸಿ ಅನಿಭವಿಸುವ ಸಂಕಟ ತುಂಬ ದೊಡ್ಡದು. ಅದಕ್ಕೆ ನಮ್ಮ ದೇಹವನ್ನುಪಳಗಿಸಲು ಮಾರ್ಗಯಾನವೇ ಉತ್ತಮವೆಂದು ಸಂಘಟಕರು ಯೋಜಿಸಿದ್ದರು.
ದಿಲ್ಲಿಯ ರಸ್ತೆಗಳ ಜಾಲ ಬೇಧಿಸುವುದು, ವಾಹನ ಸಂಚಾರದ ಗೊಂದಲ ನಿವಾರಿಸುವುದು ಸಾಮಾನ್ಯ ಕೆಲಸವಲ್ಲ. ಆದರೆ ಅಲ್ಲೇ ಹುಟ್ಟಿ, ಪಳಗಿದ ನಮ್ಮೆಲ್ಲ ಚಾಲಕರಿಂದಾಗಿ, ವಾಹನದೊಳಗಿನ ಬಹುಮಂದಿಗೆ ಖಾಸಾ ವಾರ್ತಾಲಾಪ, ಭಜನೆ – ಮಂತ್ರ ಪಠನಾದಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿದಂತಾಯ್ತು, ನನ್ನಂಥ ವಿರಳರಿಗಷ್ಟೇ ಹೊಸ ಪರಿಸರದ ಪರಿಚಯ ತಗ್ಗಿ, ಮಾರ್ಗಯಾನದ ಉದ್ದೇಶ ಸೋತಂತನ್ನಿಸಿತು.
ನಮ್ಮ ಚಾಲಕ ಮಹಾಶಯ (/ಮಾಲಿಕ?) ವಾಹನದ ಆವಶ್ಯಕತೆಗಳನ್ನು ಮೀರಿ, ಹತ್ತು ಲಕ್ಷದವರೆಗೂ ಸೌಂದರ್ಯವರ್ಧನೆಗೆ ವಿನಿಯೋಗಿಸಿದ್ದನೆಂದು ತಿಳಿಯಿತು. ಆದರೆ ಹಾಗೆ ಆತ ಕನ್ನಡಿಗಂಟಿಸಿದ ಸ್ಟಿಕ್ಕರುಗಳು, ಅಲಂಕಾರಿಕ ಚೌಕಟ್ಟುಗಳು, ನೇತಾಡುವ ಮಾಲೆ, ಕುಚ್ಚು, ಅಡ್ಡ ಕೂತ ಬೊಂಬೆಯಾದಿಗಳಲ್ಲಿ ನಿಜ ದೃಶ್ಯ ಮರೆಯಾದದ್ದೇ ಹೆಚ್ಚು. ಆತ ಜರ್ಧಾ ಜಡಿದ ಬಾಯಿ ಶುದ್ಧ ಮಾಡಿಕೊಂಡು, ಹಾದುಹೋಗುತ್ತಿದ್ದ ಪ್ರಾದೇಶಿಕ ವಿವರಗಳನ್ನು ಹೇಳುವಂತಿದ್ದರೆ, ಯಾನ ಹೆಚ್ಚು ಅರ್ಥಪೂರ್ಣವೂ ಆಗುತ್ತಿತ್ತು. (ಇದು ಮುಂದೆ ಬಂದ ಎಲ್ಲ ಟಿಟಿ ಮತ್ತು ಚಾಲಕರುಗಳಿಗೂ ಅನ್ವಯ.) ಅಂಥದ್ದರಲ್ಲಿ ಒಂದೆಡೆ ಮಿಂಚಿಹೋದ ಭಾರೀ ಕಸದ ಗುಡ್ಡೆ, ಮೇಲಾಡುತ್ತಿದ್ದ ಜೆಸಿಬಿಯ (ಚಿತ್ರ ನೋಡಿ) ಕುರಿತು, ವಿಚಾರಿಸಿದಾಗ ತಿಳಿಯಿತು – ಇದು ನಮ್ಮ ಮಂಗಳೂರ ಮಹಾ ಕಸಗುಪ್ಪೆ ಪಚ್ಚನಾಡಿ ಕಣಿವೆಯದೇ ದಿಲ್ಲಿಯ ಬೆಟ್ಟ-ರೂಪ!
ಸುಮಾರು ಎರಡು ಗಂಟೆಯ ಓಟದನಂತರ ಗ್ರ್ಯಾಂಡ್ ಟ್ರಂಕ್ ರಸ್ತೆಯ ಒಂದು ಮಗ್ಗುಲಿನ ರಸೋಯಿ ಧಾಬಾದಲ್ಲಿ ಟಿಟಿಗಳು ಮಧ್ಯಾಹ್ನದ ಊಟಕ್ಕೆ ವಿರಮಿಸಿದೆವು. ಮೂವತ್ತಾರು ವರ್ಷಗಳ ಹಿಂದಿನ ನನ್ನ ಮೋಟಾರ್ ಸೈಕಲ್ ಭಾರತ ಯಾನದ ನೆನಪಿನ ಧಾಬಾಕ್ಕೆ ಹೋಲಿಸಿದರೆ, ಇಂದಿನವು ಭಾರೀ ಪರಿಷ್ಕೃತಗೊಂಡ ಸರಳ ಹೋಟೆಲ್ ವ್ಯವಸ್ಥೆಗಳೇ ಆಗಿವೆ. ಇಲ್ಲಿ ಮುಚ್ಚಿದ ಗೋಡೆ, ಥಳಕು ಪಳಕು ಕಡಿಮೆ. ಆದರೆ ಎತ್ತರದ ಮಾಡು, ಸ್ವಚ್ಛ ನೆಲ, ತಣ್ಣನೆ ಗಾಳಿಯೂಡುವ ಪಂಕಾ, ಶಿಸ್ತಿನಲ್ಲಿ ಅವರದೇ ವೈವಿಧ್ಯಮಯ ಪಕ್ವಾನ್ನಗಳನ್ನು ಬಡಿಸುವ ಮತ್ತು ಸ್ವಚ್ಛ ಮಾಡುವ ಮಂದಿ ಸಾಕಷ್ಟಿದ್ದರು, ರಸೋಯೀ ಧಾಬಾದವರೊಡನೆ ಒಪ್ಪಂದದ ಮೇರೆಗೆ, ನಮ್ಮ ಪಾಕ ಬಳಗ ಒಂದು ಮಗ್ಗುಲಲ್ಲಿ ತಮ್ಮದೇ ಸಣ್ಣ ಪಾಕಶಾಲೆ ಹೂಡಿ ಮಾಡಿದ್ದ ಬಿಸಿ ಪಾಕವಿಶೇಷಗಳನ್ನು, ನಮಗಾಗಿ ಕಾಯ್ದಿರಿಸಿದ ಮೇಜುಗಳಲ್ಲೇ ಬಡಿಸಿದರು, ಬಿಸಿಬಿಸಿ ಕುಚ್ಚಲು ಹಾಗೂ ಬೆಳ್ತಿಗೆ ಅನ್ನಗಳ ಆಯ್ಕೆಯೊಡನೆ ನಮ್ಮೂರಿನದೇ ಹಲವು ರುಚಿಕರ ಖಾದ್ಯಗಳ ಮೇಳ ನಮ್ಮೆಲ್ಲರನ್ನೂ ತಣಿಸಿತು. ದಾರಿಯಲ್ಲೆಳ್ಳೊ ನಮ್ಮ ಒಂದು ಟೀಟೀಗೇನೋ ಯಾಂತ್ರಿಕ ಅಡಚಣೆಯುಂಟಾದ್ದರಿಂದ ಅವರ ಬರೋಣ ತುಸು ತಡವಾಯ್ತು, ಹಾಗೆ ಉಂಟಾದ ವಿಳಂಬ ಸುಧಾರಿಸಿಕೊಂಡು, ಎರಡೂವರೆ ಗಂಟೆಯ ಸುಮಾರಿಗೆ ಮುಂದುವರಿದೆವು.
ಯಮುನಾ ತೀರ ವಿಹಾರಿ ಹರ್ಯಾನದ ಚಂದೀಘರ್, ಇದರ ಅಸಂಖ್ಯ ಪೌರಾಣಿಕ ಮತ್ತು ಐತಿಹಾಸಿಕ ಕಥನಗಳ ಉಡಿಯಲ್ಲೇ ವಿಪುಲ ಆಧುನಿಕ ಔದ್ಯಮಿಕ ಬೆಳವಣಿಗೆಯೂ ಸೇರಿಕೊಂಡಿದೆ. ವಾಸ್ತವದಲ್ಲಿ ದಿಲ್ಲಿಯದೇ ವಿಸ್ತರಣೆ ಎಂದೇ ಹೇಳಬಹುದು. ನಮಗೊದಗಿದ ಮಹಾರಸ್ತೆಯ ಹತ್ತು ಸೀಳುಗಳೂ ಕಿರಿದೇ ಅನ್ನಿಸುವಂತೆ ವಾಹನ ಸಂಚಾರ ನಡೆದಿತ್ತು. ಈ ವಲಯದ ಐತಿಹಾಸಿಕ ಪುಟಗಳನ್ನು ಮಗುಚಿದರೆ, ದೇಶಕ್ಕೇ ದೊಡ್ಡದ್ದೆನ್ನಿಸಿದ್ದ ಮೂರು ಮಹಾಯುದ್ಧಗಳದೇ ದಾಖಲೆಗಳು ದೊಡ್ಡದೇ ಇವೆ. ಅವು ಟೀವೀ ಕಥಾನಕಗಳ ಅತಿರಂಜನೆಯಲ್ಲಿ ಮತ್ತು ಬದಲಿದ ರಾಜಕೀಯ ಅಲೆಯಲ್ಲಿ, ಅಂದು ಅಸ್ತಿತ್ವದಲ್ಲೇ ಇರದ ‘ಹಿಂದೂ’ ಸಂಸ್ಥಾನದ ಮೇಲಿನ ‘ಮುಸ್ಲಿಂ’ರ ದೌರ್ಜನ್ಯ ಎಂದೇ ಬಿಂಬಿತವಾಗುವುದೂ ಇದೆ. ವಾಸ್ತವದಲ್ಲಿ ಅಲ್ಲಿ ಮುಖಾಮುಖಿಯಾದ ವಿಕ್ರಮಾದಿತ್ಯ, ಸದಾಶಿವರಾವ್, ಲೋದಿ, ರಾಣಾ ಪ್ರತಾಪ್, ಅಕ್ಬರ್ ಮೊದಲಾದವರ ಏಕೈಕ ಲಕ್ಷ್ಯವಿದ್ದದ್ದು ಸ್ವರಾಜ್ಯ ವಿಸ್ತರಣೆ, ಪರರಾಜ್ಯ ಲೂಟಿ ಮಾತ್ರ. ಹಾಗೆ ಹೆಸರಾಂತ ಪಾಣಿಪತ್, ತರೈನ್ ಮತ್ತು ಕರ್ನಾಲ್ಗಳನ್ನು ನಾವು ಸಮಯಾಭಾವದ ನೆಪದಲ್ಲಿ, ಮರೆತೇ ಮುಂದುವರಿದೆವು, ಹಾಗೆಂದು ಪೌರಾಣಿಕ ಮಹತ್ವದ್ದನ್ನು ಬಿಡಲುಂಟೇ…
೩. ಕುರುಕ್ಷೇತ್ರ
ದಿಲ್ಲಿಯಿಂದ ಸುಮಾರು ೧೨೩ ಕಿಮೀ ದೂರದ ಕುರುಕ್ಷೇತ್ರ ಮುಟ್ಟುವಾಗ ಸಂಜೆ ಗಂಟೆ ಆರಾಗಿತ್ತು. ಉತ್ತರ ಭಾರತದ ಇಂದಿನ ದಿನಮಾನಗಳಂತೆ ಸೂರ್ಯಾಸ್ತಕ್ಕಿನ್ನೂ ಒಂದೂವರೆ ಗಂಟೆ ಬಾಕಿಯಿತ್ತು. ಚುರುಕಾಗಿಯೇ ಕ್ಷೇತ್ರ ವೀಕ್ಷಣೆಗೆ ತೊಡಗಿದೆವು. ಬಾಲಕೃಷ್ಣರು ಮುತುವರ್ಜಿ ವಹಿಸಿ, ಕ್ಷೇತ್ರ ವಾರ್ತಾಲಾಪಕ್ಕೆಂದೇ ಅಲ್ಲಿನೊಬ್ಬ ಪಂಡಿತನನ್ನೂ ಸೇರಿಸಿಕೊಂಡರು.
ಅಣ್ತಮ್ಮಂದಿರ ಮತ್ತು ಮನೆಯೊಳಗೇ ಬಗೆಹರಿಯಬೇಕಿದ್ದ ಚಿಲ್ಲರೆ ಜಗಳ ಮಹಾಯುದ್ದದ ಆಯಾಮ ಪಡೆದದ್ದಕ್ಕೆ ಒದಗಿದ ನೆಲ ಕುರುಕ್ಷೇತ್ರ. ಮಹಾಭಾರತ, ರಾಮಾಯಣಾದಿ ಎಷ್ಟೂ ಭಾರತೀಯ ಪುರಾಣಗಳನ್ನು ಇಂದಿಗೂ ಬಹುರೂಪದಲ್ಲಿ ಹೊಸತೆನ್ನುವಂತೇ ಅಭಿನಯಿಸಿ, ಚರ್ಚಿಸುತ್ತಲೇ ಇರುವ ಅದ್ವಿತೀಯ ಕಲೆ ಯಕ್ಷಗಾನ – ತಾಳಮದ್ದಳೆ ನಮ್ಮದು. ಅಂಥದ್ದಕ್ಕೆ ಸದಾ ಒಡ್ಡಿಕೊಂಡ ನನಗೆ, ‘ಹರ್ಯಾಣದ ಪಂಡಿತ’ ಕೇವಲ ಭಕ್ತಿಭಾವದ ಪೀಠಿಕೆಗಿಳಿಯುತ್ತಿದ್ದಂತೇ ನಗು ಬಂತು, ಸ್ವತಂತ್ರನಾದೆ.
ನಾವು ಭೇಟಿಕೊಟ್ಟ ಮೊದಲ ವಠಾರ ಜ್ಯೋತಿಸರ್ ಅಥವಾ ಜ್ಯೋತಿ ಸರೋವರ. ಅದು ಯಾವುದೇ ಪ್ರಾಕೃತಿಕ ಅಥವಾ ಚಾರಿತ್ರಿಕ ವಿಶೇಷಗಳನ್ನೂ ಪ್ರಸ್ತುತ ಪಡಿಸದ, ಬಯಲಿನಲ್ಲಿರುವ ಎರಡು ಮೂರು ಅಸಡ್ಡಾಳ ಕೆರೆ, ಕೆಲವು ಸೊಂಪಾದ ಆಲದ ಮರಗಳು ಮಾತ್ರ. ಅವಾದರೂ ಭಾರೀ ಹಳತ್ತು ಅಥಾವಾ ಭಾರೀ ಗಾತ್ರದವೂ ಅಲ್ಲ. ಉಳಿದಂತೆ ಕಾಣುವ ತುಸು ಹಳತ್ತಾದ ರಚನೆಗಳು, ಭಾರತಾದ್ಯಂತ ಮೆರೆಯುತ್ತಿರುವ ಭಕ್ತ್ಯೋದ್ದಿಮೆ (ಹೌದು ಹಣ ಮಾಡುವ ದಂದೆ) ಇಲ್ಲೂ ಹೆಣಗುತ್ತಿರುವುದು ಸ್ಪಷ್ಟವಿದೆ. ಮರಗಳ ಬೇರು ಬೀಳಲುಗಳನ್ನು ಕಟ್ಟಿಟ್ಟು, ಎಡೆಯಲ್ಲಿ ಕಲ್ಲು ತೂರಿ ಶಿವಲಿಂಗವೆಂದೂ ಒಂದಷ್ಟು ಕಾಂಕ್ರೀಟ್ ಸುರಿದು ಮಂಟಪ, ಝರಿ, ಚಮಕಿನ ಬೊಂಬೆಗಳ ಸಂತೆ, ಅಮೃತ ಶಿಲಾ ನೆಲ ಹಾಸು, ಅಂಕಾಡೊಂಕಿ ಕೆರೆಕಟ್ಟೆ, ನಗೆಯುಕ್ಕಿಸುವ ಭಾರೀ ಹನುಮನ ಪ್ರತಿರೂಪ… ಇದು ಭೀಷ್ಮ ಯುದ್ಧಾರಂಭ ಮಾಡಿದ ಕ್ಷೇತ್ರವಂತೆ! ಅಲ್ಲಿನ ಭಾರೀ ಗಾತ್ರದ (ಬಹುಶಃ) ಕಾಂಕ್ರೀಟ್ ವಿಶ್ವರೂಪೀ ಮೂರ್ತಿಯಂತೂ ಸದ್ಯ ನಮ್ಮಲ್ಲೂ ಗಾತ್ರ, ಖರ್ಚುಗಳ ಲೆಕ್ಕದಲ್ಲಿ ಅದ್ವಿತೀಯ ಎನ್ನಿಸಿಕೊಳ್ಳಲು ಹೆಣಗುತ್ತಲೇ ಇರುವ ಆದಿಯೋಗಿ, ಶಿವ, ಲಿಂಗ, ಹನುಮ, ಪರಶುರಾಮ…ಇತ್ಯಾದಿ ಕಣ್ಕಟ್ಟಿನ ಸಂತೆಗೇ ಸಲ್ಲುತ್ತದೆ.
ಮತ್ತೊಂದು ಸಣ್ಣ ಸವಾರಿಯಲ್ಲಿ ಸಿಕ್ಕ ಇಂಥದ್ದೇ ‘ಕ್ಷೇತ್ರ’ ಭೀಷ್ಮರ ಅಂತಿಮ ಇಚ್ಛೆಯನ್ನು ಅರ್ಜುನ ಈಡೇರಿಸಿದ ಸ್ಥಳ. ಅಲ್ಲಿ ಪುಟ್ಟ ಕೆರೆಯಲ್ಲಿ ಬಂಧಿಸಿಟ್ಟಿದ್ದ ‘ಗಂಗೆ’ಯ ಬಣ್ಣ, ಅದರಲ್ಲಿ ತೇಲುತ್ತಿದ್ದ ಕೊಳಕು, ತುಕ್ಕು ಹಿಡಿದ ಶರಶಯ್ಯೆಯ ಪ್ರತಿಕೃತಿ, ಸುತ್ತುವರಿದ ಇಂದಿನ ಹಳ್ಳೀಪಾಡು ಕರುಣಾಜನಕವಾಗಿತ್ತು.
ಮಗುದೊಂದು ಸಣ್ಣ ಸವಾರಿಯಲ್ಲಿ, ಒಂದು ದೇವೀ ಮಂದಿರಕ್ಕೆ ಹೋದೆವು. ಇದನ್ನು ಸ್ಥಳೀಯರು ಶಿವನ ಸುಪ್ರಸಿದ್ಧ ಶಕ್ತಿಸ್ಥಳಗಳಲ್ಲಿ ಒಂದು ಎಂದೇ ಹೇಳಿಕೊಂಡರು. ತಮಾಷೆ ಎಂದರೆ, ಅಂತರ್ಜಾಲ ಭಾರತಾದ್ಯಂತ ಪಟ್ಟಿ ಮಾಡುವ ಮೊದಲ ೨೨ ಶಕ್ತಿಸ್ಥಳಗಳಲ್ಲೂ ಹರ್ಯಾನ ರಾಜ್ಯಕ್ಕೇ ಸ್ಥಾನವಿಲ್ಲ. ದೇವೀ ಮಂದಿರದ ವಠಾರದಲ್ಲಿರುವ ಕೇಶವ ಮಂದಿರಕ್ಕೂ ಭೇಟಿ ಕೊಟ್ಟು ಮುಂದುವರಿದೆವು.
ಗಂಟೆ ಏಳೂಮುಕ್ಕಾಲಾಗಿದ್ದರೂ ಸೂರ್ಯ ಮುಸ್ಸಂಜೆಯಲ್ಲೇ ಸಿಕ್ಕಿಬಿದ್ದಂತಿದ್ದ. ಸಹಜವಾಗಿ ಆ ವಲಯದ ಕೊನೆಯ ಭೇಟಿಯಾಗಿ, ನಾವು ಬ್ರಹ್ಮ ಸರೋವರ ಎಂದೇ ಖ್ಯಾತವಾದ, ಸರ್ವೇಶ್ವರ ಮಹಾದೇವನ ಮಂದಿರಕ್ಕೆ ಹೋದೆವು. ಅರೆಬರೆ ಬೆಳಕು ಮತ್ತು ವಿದ್ಯುದ್ದೀಪದ ಮಾಲೆಗಳಲ್ಲಿ ಕೆರೆ ಸಾಕಷ್ಟು ವಿಸ್ತಾರವೂ ಆಕರ್ಷಕವೂ ಇದ್ದಂತನ್ನಿಸಿತು, ಸ್ಥಳ ಪುರಾಣದಂತೆ, ಒಂದಂಚಿನಲ್ಲಿರುವ ಶಿವಾಲಯದ ಲಿಂಗವನ್ನು ಸಾಕ್ಷಾತ್ ಬ್ರಹ್ಮನೇ ಸ್ಥಾಪಿಸಿದ್ದಂತೆ. ಅದರ ಜೀರ್ಣೋದ್ಧಾರವನ್ನು ಸ್ವತಃ ಕುರು ಮಹಾರಾಜನೇ ಮಾಡಿದ್ದಂತೆ. ಭಾರತ ಯುದ್ಧ ಜಯಿಸಿದ ಯುಧಿಷ್ಟಿರ ಅಲ್ಲಿ ಸ್ಮರಣಿಕೆಗಳನ್ನೂ ನಿಲ್ಲಿಸಿದ್ದಾನಂತೆ. ನಾವು ಹೋದಾಗ, ನಮಗೆ ತತ್ಕಾಲೀನ ತಡೆ ಹಾಕಿ, ನೌಕರನೊಬ್ಬ ಪವರ್ ಸ್ಪ್ರೇ ಬಳಸಿ ದೇವಳದ ಒಳಗಿನ ಮಾಡು, ಗೋಡೆಗಳನ್ನು ತೊಳೆಯುತ್ತಿದ್ದ. ಅಲ್ಲಿನ ನೀರಿನ ಸಮೃದ್ಧಿಗೆ ಬೆರಗಾಗಿ ನಾವು ನಡೆಸಿದ ವಿಚಾರಣೆಯಲ್ಲಿ, ಆ ನೌಕರ ನಿರ್ಭಾವದಲ್ಲಿ, ನೀರು ಭಾಕ್ರಾ ನಂಗಲ್ ಅಣೆಕಟ್ಟಿನ (೧೯೬೩) ಕೃಪೆ ಎಂದ!
ಪುರಾಣ ಪ್ರಪಂಚದಿಂದ ಮುಕ್ತರಾಗಿ ಚಂದೀಗಢ ಪೇಟೆ ತಲಪುವಾಗ ಗಂಟೆ ಹತ್ತತ್ತಿರ ಹತ್ತಾಗಿತ್ತು! ಅಲ್ಲಿ ನಮಗಾಗಿ ಕಾಯ್ದಿರಿಸಿದ್ದ ಶಗುನ್ ಹೋಟೆಲ್ಲೂ ಅಲ್ಲಿಗೆ ಮುಂದಾಗಿ ಬಂದು, ನಮ್ಮವರು ಅಣಿಗೊಳಿಸಿದ್ದ ರುಚಿಕರ ಬಿಸಿಯೂಟವೂ ಕಾದಿದ್ದವು. ಊಟ ಮುಗಿಸಿ, ಮಂಗಳೂರಿನ ದೂರದಿಂದಲೇ ವಿವಿಧ ರೂಪಗಳಲ್ಲಿ ಸಂಚಯಿಸಿಕೊಂಡಿದ್ದ ಕೊಳೆ, ಸುಸ್ತುಗಳ ಶುಶ್ರೂಷೆ ಮಾಡಿ (ಸಿಂಪಲ್ಲಾಗಿ ಹೇಳುವುದಿದ್ದರೆ, ಫ್ರೆಶ್ ಆಗಿ) ಸುಪ್ಪತ್ತಿಗೆ ಸೇರುವಾಗ ಇಂದು ನಾಳೆಯಾಗಿತ್ತು, ನಡು ರಾತ್ರಿ ಕಳೆದಿತ್ತು!
೪. ಚಂದೀಘಡದಿಂದ ಮುಂದೆ….
ಚಂದೀಗಢದ ಶಕುನ (ಶಗುನ್ – ಹೋಟೆಲ್ ಹೆಸರು) ಚೆನ್ನಾಗಿದ್ದುದಕ್ಕೆ, ಹಿಂದಿನ ರಾತ್ರಿ ತಡವಾಗಿ ಮಲಗಿದ್ದರೂ ಐದು ಗಂಟೆಗೂ ಮೊದಲೇ ಸೂರ್ಯೋದಯವಾಗಿತ್ತು. ನಾವಿಬ್ಬರು ರೂಢಿಯಂತೆ ಐದೂವರೆಗೇ ಎದ್ದು, ಸಜ್ಜಾಗಿ, ಹೋಟೆಲಿನೆದುರಿನ ದಾರಿಯಲ್ಲಿ ತುಸು ಶತಪಥ ಕೂಡಾ ಹಾಕಿದ್ದೆವು. ಆದರೂ ವಿಹಾರ ತಂಡದ ಶಿಸ್ತಿನಲ್ಲಿ, ಹೊಟೆಲ್ ಬಿಡುವಾಗ ಗಂಟೆ ಹತ್ತು ಕಳೆದಿತ್ತು!
ಸ್ವತಂತ್ರ ಭಾರತದ, ಪ್ರಥಮ ಪೂರ್ವಯೋಜಿತವಾಗಿ (ಸ್ವಿಸ್-ಫ್ರೆಂಚ್ ವಾಸ್ತುತಜ್ಞ Le Corbusier) ನಿರ್ಮಾಣಗೊಂಡ, ಸುಂದರ ನಗರ ಚಂದೀಗಢ (ಸಮ ೧೦೫೩ ಅಡಿ). ೧೯೫೦ರ ಸುಮಾರಿಗೆ ಪೂರ್ಣಗೊಂಡ ಈ ನಗರ, ಸ್ವತಂತ್ರ ಭಾರತದ ಹೊಸ ಅಭಿವೃದ್ಧಿಗೆ ನಾಂದಿಗೀತೆಯೆಂದೇ ಪ್ರಸಿದ್ಧ. ಆದರೆ ನಾವಲ್ಲಿ ಕೇವಲ ಮಾರ್ಗಾಯಾಸ ಕಳೆಯಲಷ್ಟೇ ತಂಗಿದವರು. ನಗರ ವೀಕ್ಷಣೆಗಿಳಿದರೆ ಒಂದು ದಿನವೂ ಸಾಲದೆಂಬ ಅರಿವಿನೊಡನೆ, ಸದ್ಯದ ಲಕ್ಷ್ಯ ೨೬೫ ಕಿಮೀ ದೂರದ ಮನಾಲಿಯನ್ನು ಸುಖವಾಗಿ ಸಾಧಿಸುವ ಎಚ್ಚರದಲ್ಲಿ ಧಾವಿಸಿದ್ದೆವು. ಮಹಾಮಾರ್ಗದ ಸೀಳುಗಳು ಹತ್ತರಿಂದ ನಾಲ್ಕಕ್ಕೆ ಇಳಿದರೂ ಮಟ್ಟಸ ಮತ್ತು ನುಣ್ಣಗೇ ಇದ್ದುದರಿಂದ ಟೀಟೀಗಳೂ ನಿರಾಯಾಸವಾಗಿಯೇ ಮಿಂಚಿನ ಸೆಳಕುಗಳೇ ಆಗಿದ್ದವು, ದಾರಿ ಮಗ್ಗುಲ ಶಿಸ್ತಿನ ಸಿಪಾಯಿಗಳಂತೇ ಇದ್ದ ಸಾಲು ಮರಗಳು, ಅವುಗಳ ಮರೆಯಿಂದಾಚೆ ಹೊಲ, ಗದ್ದೆಗಳ ಇಣುಕುನೋಟ ರಂಜಿಸಿತು. ಹವಾನಿಯಂತ್ರಿತ ವಾಹನದ ಸುಪ್ಪತ್ತಿಗೆಯಲ್ಲಿ ಕುಳಿತು, ಭಜನೆ, ಸ್ತೋತ್ರ, ಸಿನಿಗೀತೆ ಎಂದೆಲ್ಲಾ ಕೂಟ ಚಟುವಟಿಕೆಗಳೂ ಅರೆಬರೆ ನಡೆದಿದ್ದಂತೆ…..
ಒಂದೆರಡು ಗಂಟೆಗಳ ಓಟದಲ್ಲೇ ನಮ್ಮ ದಿಗಂತದಲ್ಲಿ ಪರ್ವತಾವಳಿ ಉದಿಸಿ, ಬೆಳೆಯತೊಡಗಿದ್ದವು. ಆಧುನಿಕ ದಾಬಾ ಒಂದರಲ್ಲಿ ಪುಟ್ಟ ಚಾ ವಿರಾಮ ಅನುಭವಿಸಿ ಮುಂದುವರಿದೆವು. ಒಟ್ಟಾರೆ ಸುಮಾರು ನಲ್ವತ್ತು ಕಿಮೀ ಕಳೆಯುತ್ತಿದ್ದಂತೆ, ನಾವು ಪೀರ್ ಪಂಜಾಲ್ ಎಂದೇ ಖ್ಯಾತವಾದ ಮಹಾ ಪರ್ವತ ಮಾಲೆಯ ಪಾದ ಮುಟ್ಟಿದ್ದೆವು. ಅಲ್ಲಿನ ಸುಂಕದ ಕಟ್ಟೆ ನಮ್ಮನ್ನು ಏಕಕಾಲಕ್ಕೆ ಹಿಮಾಚಲ ಪ್ರದೇಶಕ್ಕೂ ಸ್ವರ್ಘಾಟ್ ಎಂದೇ ಖ್ಯಾತವಾದ ಘಾಟೀ ದಾರಿಗೂ ಬರಮಾಡಿಕೊಂಡಿತು. ಘಟ್ಟ ಪ್ರದೇಶಗಳ ರೂಢಿಯಂತೇ ಇಲ್ಲಿ ನಮ್ಮ ದಾರಿ ಬಿಯಾಸ್ ನದಿ ತೀರವನ್ನು ಏರು ಮುಖದಲ್ಲಿ ಅನುಸರಿಸಿತ್ತು. ಕೆಲವು ಯುಗಗಳಿಂದ ಪೀರ್ ಪಂಜಾಲ್ ಶ್ರೇಣಿಯ ಪಾದ ತೊಳೆಯುತ್ತಲೇ ಪಾತ್ರೆ ರೂಪಿಸಿಕೊಂಡ ಮಹಾನ್ ಶಕ್ತಿ – ಬಿಯಾಸ್ ನದಿ. ಋತುಮಾನಕ್ಕೆ ತಕ್ಕಂತೆ ಸೊರಗಿದ್ದ ಅದರ ನೀರಿನ ಹರಿವು ಕಾಣಿಸಿದ್ದು ಕಡಿಮೆ. ಆದರೆ ಸೊಕ್ಕಿನ ಕಾಲಗಳಲ್ಲಿ ಅದು ಅವಕಾಶ ಸಿಕ್ಕಲ್ಲೆಲ್ಲ ವಿಸ್ತರಿಸಿಕೊಂಡ ಪಾತ್ರೆಯ ಹರಹು ಬೆರಗು ಹುಟ್ಟಿಸುತ್ತಿತ್ತು.
ಹಿಮಾಲಯ ನೆಲದ ಅಸ್ಥಿರತೆ ಮತ್ತು ಮಾರ್ಗ ನಿರ್ಮಾಣ ತಂತ್ರಜ್ಞಾನದ ಪ್ರಗತಿಯನ್ನು ಏಕಕಾಲಕ್ಕೆ ಸೂಚಿಸುವಂತೆ, ನಮ್ಮ ದಾರಿ ಅಲ್ಲಲ್ಲಿ ಹಳೆ ಮಾರ್ಗವನ್ನು ಸೇರಿ, ಬಿಟ್ಟೋಡಿ ಮಾಡುತ್ತಿತ್ತು. ಶೀಘ್ರದಲ್ಲೇ ತಂತ್ರಜ್ಞಾನದ ಮೇಲುಗೈ ಸಾರುವಂತೆ, ಬೆಟ್ಟದ ಹೊಟ್ಟೆ ಹೊಕ್ಕು ಹೊರಡುವ ಗುಹಾ ಮಾಲೆಗಳನ್ನೇ ಅನಾವರಣಗೊಳಿಸಿತು. ತುಸು ಹಿಂದಿನ ಕಾಲದ ಸುಮಾರು ನೂರೈವತ್ತು ಕಿಮೀ ಉದ್ದದ ಬಳಸಂಬಟ್ಟೆ, ಅದಕ್ಕೆ ತಗಲುತ್ತಿದ್ದ ಸುಮಾರು ನಾಲ್ಕರಿಂದ ಆರು ಗಂಟೆ ಸಮಯವನ್ನು ಇವು ಬಹುತೇಕ ನುಣ್ಣನೆ ಹಾಗೂ ಸುಲಭ ಓಟದ ಮೂವತ್ತು ಮಿನಿಟಿಗೆ ಇಳಿಸಿ ಕೊಟ್ಟಿವೆ. ಹಿಂದೆಲ್ಲ ಪರ್ಯಟನಕಾರರು ಪರ್ವತಮಾಲೆಗಳನ್ನು ದಾಟಲು ಸುಲಭ ಹಾಗೂ ನಿರಪಾಯದ ಶಿಖರಗಳ ನಡುವಿನ ಸಂದುಗಳನ್ನು (ಪಾಸ್) ಆಯ್ದುಕೊಳ್ಳುತ್ತಿದ್ದರು. ಅಂಥವುಗಳಲ್ಲಿ ಒಂದಾದ, ಚಾರಿತ್ರಿಕ ಖ್ಯಾತಿಯೂ ಇರುವ ರೋಹ್ತಾಂಗ್ ಪಾಸನ್ನೇ ಇಂದು ಈ ಗುಹಾಸರಣಿ ನಿವಾರಿಸಿಬಿಟ್ಟಿವೆ.
ಎರಡು ಗಂಟೆಯ ಸುಮಾರಿಗೆ, ಗಿರಿ ಸರಣಿಯ ಇನ್ನೊಂದು ಮಗ್ಗುಲು, ಅಂದರೆ ಕುಲು ಕಣಿವೆಯ ಭಾಗದಲ್ಲಿ ಓಡಿದ್ದಂತೆ ಕಾಣಿಸಿದ ‘ಬೀದಿಬದಿ’ಯ ಒಂದು ಹೋಟೆಲ್ – ಮಹಾಲಕ್ಷ್ಮೀ ಪ್ಯಾಲೇಸ್. ಅಲ್ಲಿಗೆ ಮುಂದಾಗಿ ಹೋಗಿದ್ದ ನಮ್ಮ ಅಡುಗೆ ಕಾರು, ಬಿಸಿಯೂಟ ಸಹಿತ ಕಾದಿತ್ತು. ಇಲ್ಲಿನ ಕಣಿವೆಯ ರೂವಾರಿ ನದಿ – ನನ್ನ ನೆನಪು ಸರಿಯಿದ್ದರೆ, ಚಂದ್ರಾ. ಮುಂದೆ ಇದು ಭಾಗಾ ನದಿಯೊಡಗೂಡಿ, ಚಂದ್ರಭಾಗಾವಾಗಿ ಗಂಗೆಯನ್ನು ಕೂಡಿಕೊಳ್ಳುತ್ತದೆ. ಹೋಟೆಲಿನ ಮಗ್ಗುಲಿನಲ್ಲಿ ನೋಡಿದರೆ, ಹಿಮಾಲಯದ ಬಹುತೇಕ ನದಿಗಳಂತೇ ಇದಕ್ಕೂ ಎಪ್ಪತ್ತೆಂಬತ್ತಡಿ ಆಳದ, ಅಸ್ಥಿರ ಹಾಗೂ ಕಡಿದಾದ ದಂಡೆಯಿತ್ತು. ಆದರೆ ನೇರ ಹೊಳೆ ಪಾತ್ರೆಯಲ್ಲೇ (ಇಂದು ಕಾಣುವಂತೆ ನೀರಿನಿಂದ ತುಸು ದೂರದಲ್ಲಿ) ಅಡಿಪಾಯ ಹಾಕಿ, ದರೆಯನ್ನೂ ಆಧರಿಸಿ, ಬಹು ಅಂತಸ್ತುಗಳನ್ನೇ ಏರಿಸಿಕೊಂಡಿದ್ದ ಮಹಾಲಕ್ಷ್ಮಿ ಮಾರ್ಗಕ್ಕಷ್ಟೇ ಬೀದಿಬದಿ ಹೋಟೆಲ್! ಅದರ ಎರಡನೇ ತಳ ಅಂತಸ್ತಿನಲ್ಲಿ ವ್ಯವಸ್ಥೆಯಾಗಿದ್ದ ನಮ್ಮ ಊಟದ ಮನೆಗಿಳಿದದ್ದೇ ಬಹುಮಂದಿಗೆ ದೊಡ್ಡ ಸಾಹಸ ಅನ್ನಿಸಿತ್ತು. ಅಲ್ಲಿನ ನದಿ, ಆಚಿನ ಬೆಟ್ಟಗಳನ್ನು ನೋಡಿಕೊಂಡು ಊಟ ಮಾಡಿದ್ದು, ಸುಲಭದಲ್ಲಿ ನಮ್ಮನ್ನೇ ಹಾರಿಸಬಹುದಾಗಿದ್ದ ಬೀಸುಗಾಳಿಗೆ ಬಾಲ್ಕನಿಯ ಕಟಕಟೆ ಹಿಡಿದುಕೊಂಡು ಒಡ್ಡಿಕೊಂಡದ್ದು, ಪಟಗ್ರಹಣದ ಎಲ್ಲ ಚಮತ್ಕಾರಗಳನ್ನೂ ಸಾರ್ಥಕಪಡಿಸಿಕೊಂಡದ್ದು ಹೇಳಿ ಮುಗಿಯುವಂಥದ್ದಲ್ಲ, ಬಿಡಿ.
ಚಂದ್ರಾ ನದಿಗುಂಟ ಸಾಗುತ್ತಿದ್ದಂತೇ ಅವಕಾಶವಿದ್ದಲ್ಲೆಲ್ಲ ಸಣ್ಣ ಪುಟ್ಟ ಜನ, ವಹಿವಾಟು ಕಾಣಿಸುತ್ತಿತ್ತು. ಒಂದು ಹಂತದಲ್ಲಿ ನೆಲ ತುಸು ಮಟ್ಟಸವಾಗುತ್ತಿದ್ದಂತೆ, ನದಿಪಾತ್ರೆ ವಿಸ್ತರಿಸಿಕೊಂಡು ಜನಸ್ನೇಹಿಯಾದಂತೆ ತೋರಿತ್ತು. ಅಲ್ಲಿ ಗಾಳಿದುಂಬಿದ ತೆಪ್ಪಗಳಲ್ಲಿ ಸಾಹಸೀ ಮಂದಿ ವೇಗದ ಸವಾರಿ ನಡೆಸಿದ್ದು ಕಂಡಾಗಂತೂ ಹಿಂದೆ ಊರಲ್ಲಿ ನಾವಿಬ್ಬರು ನಡೆಸಿದ ಅಸಂಖ್ಯ ಜಲಸಾಹಸಗಳು ನೆನಪಾಗಿತ್ತು.
ಆದರೆ ಕುಲುಕಣಿವೆಯ ಅತಿಶೀತಲ ನೀರು, ಬಂಡೆಗುಂಡುಗಳ ನಡುವಣ ಧಾವಂತ, ಈ ಪ್ರಾಯದಲ್ಲಿ ಖಂಡಿತಾ ನಮ್ಮ ತುತ್ತಲ್ಲ ಎಂದೇ ಸುಮ್ಮನುಳಿದೆವು. ಮುಂದೆ ಬಿಸಿಗಾಳಿ ಬುಗ್ಗೆಯಲ್ಲಿ ಗಗನಕ್ಕೇರುವ ಕ್ರೀಡೆ, ಹೊಳೆಯಾಚಿನ ಮರಳು ಕಲ್ಲಿನ ಕಚ್ಚಾ ಹಾಸಿನಲ್ಲಿ ಸಾಹಸೀ ಮೋಟಾರ್ ಸೈಕಲ್ ಸವಾರಿ ಇನ್ನೂ ಏನೇನೋ ಗಮ್ಮತ್ತು ಗೌಜಿ ನಡೆದಿತ್ತು. ಜಗತ್ತಿನೆಲ್ಲ ವಿಸ್ಮಯಗಳನ್ನು ಅನುಭವಿಸಲು ಒಂದು ಜೀವನ ತುಂಬಾ ಸಣ್ಣದು ಎಂಬ ಅರಿವಿನೊಡನೆ ಮೌನವಾಗುಳಿದೆವು.
(ಮುಂದುವರಿಯಲಿದೆ)















































0 Comments